ಪ್ರತಿಯೊಂದು ಕ್ರೀಡಾತಂಡಕ್ಕೂ ಒಬ್ಬೊಬ್ಬ ಮೆಂಟರ್ ಇರುತ್ತಾರೆ. ಅವರ ಮುಖ್ಯ ಪಾತ್ರವೇನೆಂದರೆ, ತಂಡಕ್ಕೆ ಮಾರ್ಗದರ್ಶನ ಮತ್ತು ಸಲಹೆಯನ್ನು ನೀಡುವುದು, ತಮ್ಮ ಅನುಭವ ಮತ್ತು ನೈಪುಣ್ಯತೆಯನ್ನ ತಂಡದ ಕ್ರೀಡಾಳುಗಳಿಗೆ ನೀಡುತ್ತ ತಂಡವನ್ನ ಗೆಲುವಿನ ಹಂತಕ್ಕೆ ಕೊಂಡೊಯ್ಯುವುದು. ಅವರು ಕ್ರೀಡಾಳುಗಳಿಗೆ ಸ್ಪೂರ್ತಿ ತುಂಬುವ ಪರಿ, ತಂಡವನ್ನ ಮುನ್ನೆಡೆಸುವ ರೀತಿ, ಮಾರ್ಗದರ್ಶನ ನೀಡುವ ವಿಧಾನ, ಇವರ ವಿವಿಧ ರೀತಿಯ ಪ್ರಯತ್ನಗಳು ತಂಡದ ಗೆಲುವಿನಲ್ಲಿ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಇದೇ ರೀತಿಯ ಕಾರ್ಯತಂತ್ರಗಳನ್ನ ಕಾರ್ಪೋರೇಟ್ ಕಂಪನಿಗಳಲ್ಲಿ ಉದ್ಯೋಗಿಗಳ ಸಾಮರ್ಥ್ಯ ಹೆಚ್ಚಿಸಲು ಮತ್ತು ಉದ್ಯೋಗಿಗಳು ಇನ್ನೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು, ಕೆಲ ತರಬೇತಿ ಕಾರ್ಯಾಗಾರಗಳನ್ನ ಹಮ್ಮಿಕೊಳ್ಳುತ್ತಾರೆ. ಇಲ್ಲಿ ನೀಡುವ ತರಬೇತಿಗಳಿಂದ ಕಂಪನಿಯ ಉತ್ಪಾದಕತೆಯೂ ಹೆಚ್ಚಾಗುತ್ತದೆ ಮತ್ತು ಉದ್ಯೋಗಿಗಳಲ್ಲಿ ಹೊಸ ಉತ್ಸಾಹವನ್ನು ಮೂಡಿಸುತ್ತದೆ. ಉದ್ಯೋಗಿಗಳ ವೈಯುಕ್ತಿಕ ಮಟ್ಟದಲ್ಲಿ ನೋಡುವುದಾದರೆ, ಈ ತರಬೇತಿ ಕಾರ್ಯಾಗಾರಗಳು ಸಂವಹನ ಕೌಶಲ್ಯವನ್ನು ಹೆಚ್ಚಿಸುತ್ತದೆ, ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸುತ್ತದೆ, ಕಠಿಣ ಸಮಯದಲ್ಲಿ ಪರಿಸ್ಥಿತಿ ನಿಭಾಯಿಸುವಂತಹ ಸಾಮರ್ಥ್ಯವನ್ನು ನೀಡುತ್ತದೆ. ಉದ್ಯೋಗಿಗಳ ಪರಸ್ಪರ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಅರಿತುಕೊಂಡು ಸಹಕರಿಸಲು ಅನುವು ಮಾಡಿಕೊಡುತ್ತದೆ. ನಿರ್ಧಾರ ತೆಗೆದುಕೊಳ್ಳುವ ಕೌಶಲ್ಯಗಳು. ತನ್ನ ತಂಡವನ್ನು ಸೂಕ್ತ ರೀತಿಯಲ್ಲಿ ನಿಭಾಯಿಸುವುದು. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅನುಸರಿಸುವ ಮಾರ್ಗೋಪಾಯಗಳು ಹೀಗೆ ವಿವಿಧ ರೀತಿಯ ತರಬೇತಿಗಳನ್ನ ಇಂತಹ ಕಾರ್ಯಗಾರಗಳಿಂದ ಪಡೆದುಕೊಳ್ಳಬಹುದು. ಇದು ಕಂಪನಿಗಳಲ್ಲಿ ನಡೆಸಿಕೊಡಲ್ಪಡುವ ಕಾರ್ಯಾಗಾರಗಳು, ಆದರೆ ಸಾಮಾನ್ಯ ಮನುಷ್ಯರಿಗೆ ತನ್ನ ಉತ್ತಮ ಜೀವನ ರೂಪಿಸಿಕೊಳ್ಳಲು, ತಮ್ಮ ಪ್ರಯತ್ನದಲ್ಲಿ ಯಶಸ್ಸು ಪಡೆಯಲು, ಇಂತಹ ಕಾರ್ಯಗಾರಗಳ ಅವಕಾಶ ಬಹಳ ಕಡಿಮೆ. ಇಂತಹ ಕಾರ್ಯಾಗಾರಗಳನ್ನ ನಡೆಸುವ ಸಂಸ್ಥೆಗಳು ಮತ್ತು ತರಬೇತಿ ನೀಡುವ ಜನರನ್ನ ಹುಡುಕಿ ಅವರಿಗೆ ಹಣ ಕೊಟ್ಟು ಇಂತಹ ಕಾರ್ಯಗಾರಗಳಿಗೆ ಸೇರಿಕೊಳ್ಳಬೇಕು ಇಲ್ಲವೇ ಸಂಭಂಧಿಸಿದ ಮಾಹಿತಿ ಪಡೆಯಲು ಪುಸ್ತಕಗಳನ್ನ ಓದಬೇಕು, ವೀಡಿಯೋಗಳನ್ನ ನೋಡಬೇಕು, ಜತೆಗೆ ನಮ್ಮಲ್ಲಿರುವ ಹೆಚ್ಚುಗಾರಿಕೆ ಮತ್ತು ಕೊರತೆಗಳ ಅರಿತುಕೊಳ್ಳಲು ಆತ್ಮ ವಿಮರ್ಶೆಗೆ ಒಳಪಡಿಸಿಕೊಂಡು, ತೆರೆದ ಮನಸ್ಸಿನಿಂದ ಬದಲಾವಣೆಗೆ ನಮ್ಮನ್ನ ಒಡ್ಡಿಕೊಳ್ಳಬೇಕು. ಯಶಸ್ಸಿಗೆ ಬೇಕಾದ ಅಂಶಗಳನ್ನು ಶ್ರದ್ದೆಯಿಂದ ಮತ್ತು ಶಿಸ್ತಿನಿಂದ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುನ್ನೆಡೆದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಜತೆಗೆ ಮಾರ್ಗದರ್ಶಕರ ನೆರವು ಇದ್ದರೆ, ಇನ್ನೂ ಒಂದು ಹಂತ ಮೇಲೇರುವುದು ಅನುಮಾನವಿಲ್ಲ.
ಚಿಕ್ಕವರಿದ್ದಾಗಿನಿಂದ ದೊಡ್ಡವರಾಗುವವರೆಗೂ ನಮ್ಮ ಬೆಳವಣಿಗೆಯ ಎಲ್ಲಾ ಹಂತದಲ್ಲೂ ಒಬ್ಬರಲ್ಲ ಒಬ್ಬ ಗುರುಗಳು ನಮಗೆ ದೊರಕುತ್ತಾರೆ. ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು ಎಂದು ನಮಗೆಲ್ಲರಿಗೂ ಗೊತ್ತಿದೆ, ಮನೆಯಲ್ಲಿ ತಂದೆ ತಾಯಿ ಮತ್ತು ಮನೆಯ ಹಿರಿಯರ ನಂತರ ಶಾಲೆ, ಕಾಲೇಜು ಗಳಲ್ಲಿ ಪಠ್ಯ ಭೋಧಿಸುವ ಗುರುಗಳು ಮತ್ತು ಕಛೇರಿಯಲ್ಲಿ ಹಿರಿಯ ಸಹದ್ಯೋಗಿಗಳು ಹೀಗೆ ವಿವಿಧ ಹಂತದಲ್ಲಿ ನಮ್ಮ ಬೆಳವಣಿಗೆಗೆ ಇವರೆಲ್ಲ ಗಣನೀಯವಾದ ಕೊಡುಗೆಯನ್ನು ನೀಡುತ್ತಾರೆ. ನಮ್ಮ ಏಳಿಗೆಗೆ ಮತ್ತು ಜೀವನ ಹಲವಾರು ಘಟ್ಟಗಳಲ್ಲಿ ಮಾರ್ಗದರ್ಶಕರ ಮಾತುಗಳು ಬಹಳ ಮುಖ್ಯವಾಗುತ್ತದೆ. ಆದರೆ ದೊಡ್ಡವರಾದಂತೆ, ನಮ್ಮ ಮನದಲ್ಲಿ ಅಹಂ ಬೆಳೆಯುತ್ತದೆ, ಚಿಕ್ಕವಯಸ್ಸಿನಲ್ಲಿ ಗುರು ಹಿರಿಯರ ಮಾರ್ಗದರ್ಶನದಲ್ಲಿ ಬೆಳೆದ ನಾವು ಒಂದು ಹಂತಕ್ಕೆ ಬೆಳೆದ ಮೇಲೆ ಇನ್ನೊಬ್ಬರ ಮಾತು ಯಾಕೆ ಕೇಳಬೇಕು ಎನ್ನುವ ಭಾವನೆಯೂ ನಮ್ಮ ಮನಸ್ಸಿನಲ್ಲಿ ಮೂಡುತ್ತ ಹೋಗುತ್ತದೆ. ಈ ಅಹಂ (ಈಗೋ) ನಿಂದ ನಮಗೆ ಬಹಳ ನಷ್ಟವಿದೆ, ಜತೆಗೆ ನಮ್ಮ ಬೆಳವಣಿಗೆ ವಿಚಾರಕ್ಕೆ ಅಡ್ಡಿಯನ್ನುಂಟು ಮಾಡುತ್ತದೆ ಎನ್ನುವುದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಈ ಅಹಂನಿಂದ ಹೊಸ ವಿಷಯ ತಿಳಿದುಕೊಳ್ಳುವ ಮತ್ತು ಕಲಿತುಕೊಳ್ಳುವ ಮನೋಭಾವ ನಿಧಾನವಾಗಿ ನಮ್ಮ ಮನದಿಂದ ಹೊರಟು ಹೋಗುತ್ತದೆ. ಚಿಕ್ಕವರಿದ್ದಾಗ ನಮಗೆ ಬುದ್ದಿ ಹೇಳಲು ಗುರುಹಿರಿಯರಿದ್ದರು, ಆದರೆ ದೊಡ್ಡವರಾದಾಗ ನಮ್ಮಲ್ಲಿರುವ ಈಗೋ (ಅಹಂ) ದಿಂದ ಎಲ್ಲರನ್ನ ದೂರ ಮಾಡಿಕೊಂಡು ಒಂಟಿಯಾಗಿ ಬದುಕಲು ಪ್ರಾರಂಭಿಸುತ್ತೇವೆ. ಆದರೆ ಸಂಕಷ್ಟ ಎನ್ನುವ ಪರಿಸ್ಥಿತಿ ಬಂದಾಗ ಒಂಟಿಯಾಗಿದ್ದರೆ ಬಹಳ ಒದ್ದಾಡುತ್ತೇವೆ, ಇಂತಹ ಸಂಧರ್ಭ ನಿಭಾಯಿಸಲು ಸಾಧ್ಯವಾಗದಿದ್ದಾಗ, ಕೆಲ ದುರ್ಬಲ ಮನಸ್ಸಿನವರು ಆತ್ಮಹತ್ಯೆಯ ದಾರಿಹಿಡಿಯುತ್ತಾರೆ. ಹೀಗಾಗಿ ಆ ಸಮಯದಲ್ಲಿ ಪರಿಸ್ಥಿತಿ ನಿಭಾಯಿಸಲು ಮತ್ತು ನಮಗೆ ಮಾನಸಿಕ ಸ್ಥೈರ್ಯ ತುಂಬಲು ಒಬ್ಬ ಸ್ನೇಹಿತ, ಒಬ್ಬ ಗುರು ಮತ್ತು ಒಬ್ಬ ಮಾರ್ಗದರ್ಶಕ ಖಂಡಿತ ಬೇಕು. ಕೇವಲ ಸಂಕಷ್ಟ ಪರಿಸ್ಥಿತಿ ನಿಭಾಯಿಸಲು ಮಾತ್ರವಲ್ಲ, ನಮ್ಮ ಜೀವನ ರೂಪಿಸಿಕೊಳ್ಳಲು ಸಹ ಇಂತಹವರ ನೆರವು ಬೇಕೇ ಬೇಕು. ನಮಗೆ ಸೂಕ್ತವಾದ ವಿದ್ಯೆ ಪಡೆಯಲು. ಉದ್ಯೋಗ ಪಡೆಯಲು, ಸಂಗಾತಿ ದೊರಕಲು, ಮನೆ ಕಟ್ಟಲು ಜಾಗ ಖರೀದಿಸುವುದು, ಮನೆಕಟ್ಟುವುದು, ಹೀಗೆ ವಿವಿಧ ಸಮಯ ಸಂಧರ್ಭದಲ್ಲಿ ನಮಗೆ ಸೂಕ್ತ ಮಾಹಿತಿ ಮತ್ತು ಮಾರ್ಗದರ್ಶನ ನೀಡಲು, ಗುರುಹಿರಿಯರು, ಅನುಭವಸ್ಥರು, ಮಾರ್ಗದರ್ಶಕರ ಮೊರೆ ಹೋಗಬೇಕು. ನಮ್ಮ ಜೀವನ ಮತ್ತು ನಮ್ಮ ಏಳಿಗೆಗೂ ಗುರುಗಳು ಮತ್ತು ಮಾರ್ಗದರ್ಶಕರು (ಮೆಂಟರ್ಗಳು) ಬೇಕು. ಇವರ ಸೂಕ್ತ ಮಾರ್ಗದರ್ಶನ ನಮ್ಮ ಬೆಳವಣಿಗೆಗೆ ಬಹಳಷ್ಟು ಪರಿಣಾಮ ಬೀರುತ್ತದೆ. ಇಂದು ಬಹಳಷ್ಟು ಪ್ರಮುಖ ವ್ಯಕ್ತಿಗಳು, ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ಪಡೆಯಲು ಯಾರಾದರೊಬ್ಬ ಅನುಭವಸ್ಥರನ್ನ ತಮ್ಮ ಮಾರ್ಗದರ್ಶಕರನ್ನಾಗಿ ಗುರುತಿಸಿಕೊಂಡಿರುತ್ತಾರೆ. ಅವರ ಸಲಹೆಗಳನ್ನ ಸ್ವೀಕರಿಸಿ ಮುಂದುವರೆಯುವುದರ ಕುರಿತು ಮಾಧ್ಯಮಗಳ ವರದಿಗಳಲ್ಲಿ ನಾವು ಕಾಣಬಹುದು.
ನಮ್ಮ ಸುತ್ತಮುತ್ತಲಿನ ಜನರು, ನಮ್ಮ ಬಂಧು ಬಳಗದಲ್ಲಿ, ನಮ್ಮ ಸ್ನೇಹಿತರ ವಲಯದಲ್ಲಿ ಪ್ರತಿಯೊಂದು ವಿಷಯದಲ್ಲಿ ಒಬ್ಬರಲ್ಲ ಒಬ್ಬರು ಪರಿಣಿತರಿರುತ್ತಾರೆ, ಜ್ನಾನವನ್ನು ಹೊಂದಿರುತ್ತಾರೆ, ಸಾಧಕ ಭಾದಕಗಳ ಅರಿವಿಟ್ಟುಕೊಂಡಿರುತ್ತಾರೆ. ಕೆಲವರು ತಮ್ಮ ಪ್ರಯತ್ನಗಳಿಂದ ಲಾಭ ನಷ್ಟಗಳ ಅನುಭವ ಪಡೆದಿರುತ್ತಾರೆ. ಇವರ ಅರಿವಿನ ಉಪಯೋಗವನ್ನ ನಾವು ಪಡೆದುಕೊಳ್ಳಬೇಕು. ವಿವಿಧ ವಲಯದಲ್ಲಿ ಕೆಲಸ ಮಾಡುವವರ ಜತೆಗಿನ ಸ್ನೇಹ, ಒಂದಲ್ಲ ಒಂದು ಸಮಯದಲ್ಲಿ ನಮ್ಮ ಅನುಕೂಲಕ್ಕೆ ಬರುತ್ತದೆ. ಈವತ್ತು ಹಲವಾರು ವಿಷಯಗಳು ಬಹಳ ಸಂಕೀರ್ಣ ರೂಪ ಪಡೆದುಕೊಳ್ಳುತ್ತಿವೆ, ಆ ವಿಷಯಗಳ ಬಗೆಗಿನ ಜ್ನಾನ ನಮಗೆ ಕಡಿಮೆಯಿರುವುದರಿಂದ ಮೋಸ ಹೋಗುವ ಸಂಭವ ಜಾಸ್ತಿಯಿರುತ್ತದೆ. ಇಂತಹವರ ಜತೆ ಸ್ನೇಹ ಬೆಳೆಸುವುದರಿಂದ ಸ್ವಲ್ಪನಾದರೂ ಲಾಭವಾಗುವುದರಲ್ಲಿ ಅನುಮಾನವಿಲ್ಲ. ನಮ್ಮ ಜೀವನ ರೂಪಿಸಿಕೊಳ್ಳುವುದಕ್ಕೆ, ನಮ್ಮ ಪ್ರಯತ್ನದ ಯಶಸ್ಸಿಗೆ, ನಮ್ಮ ಉನ್ನತಿಗೆ ಮತ್ತು ಇತ್ಯಾದಿಗಳ ಅಗತ್ಯತೆಗೆ ಬೇರೆಯವರ ಮಾರ್ಗದರ್ಶನ ಪಡೆಯುವುದು ತಪ್ಪಿಲ್ಲ. ನಮ್ಮ ಈಗೋ ಬಿಟ್ಟು ಕೇಳುವುದರಿಂದ ನಮಗೆ ಲಾಭವೇ ಹೊರತು ನಷ್ಟವೇನಿಲ್ಲ.
ಪ್ರತಿ ವಿಷಯದಲ್ಲಿ ಮಾರ್ಗದರ್ಶಕರ ಅವಲಂಬನೆಯಿಂದ ನಮ್ಮ ಸ್ವಂತ ಬುದ್ದಿ ಕಳೆತುಕೊಳ್ಳುತ್ತೇವೆಯೋ ಎನ್ನುವ ವಾದವೂ ಇದೆ. ಅದೇನೇ ಇರಲಿ ಒಬ್ಬರ ಅನುಭವ ಅದು ಕೆಟ್ಟದ್ದಾಗಿರಬಹುದು ಅಥವ ಒಳ್ಳೆಯದಾಗಿರಬಹುದು, ಕೇಳಿ ತಿಳಿದುಕೊಳ್ಳುವುದರಲ್ಲಿ ನಷ್ಟ ವೇನಿದೆ? ಇನ್ನೊಬ್ಬರ ನೆರವಿಲ್ಲದೆ ನಮ್ಮ ಸ್ವಂತ ಪ್ರಯತ್ನದಿಂದ ನಾವು ಸಹ ಲಾಭ ನಷ್ಟ ಅಥವ ಒಳ್ಳೆಯ ಮತ್ತು ಕೆಟ್ಟ ಅನುಭವವನ್ನು ನಾವೇ ಸ್ವತಃ ಅನುಭವಿಸಬಹುದು ಅಥವ ಅನುಭವಸ್ಥರಿಂದ ಕೇಳಿ ತಿಳಿದುಕೊಳ್ಳಬಹುದು. ಕೆಲವರು ತಮ್ಮ ಹಲವು ಮತ್ತು ವಿವಿಧ ಪ್ರಯತ್ನಗಳಿಂದ ಸೋತು, ನಿರಾಶರಾಗಿರುತ್ತಾರೆ, ಅಂತಹವರ ಮಾರ್ಗದರ್ಶನ ನಮ್ಮ ಆತ್ಮವಿಶ್ವಾಸವನ್ನ ಕುಗ್ಗಿಸಬಹುದು. ನಮ್ಮ ಆಸೆ ಆಕಾಂಕ್ಷೆಗಳಿಗೆ ತಣ್ಣೀರೆರಚಬಹುದು. ಆದರೆ, ಅವರ ಪ್ರಯತ್ನಗಳ ಕುರಿತು ವಿಶ್ಲೇಷಿಸಿ ಲಾಭ ಮತ್ತು ನಷ್ಟದ ರಿಸ್ಕ್ ಇಟ್ಟುಕೊಂಡು ಧೃಡ ಮನಸ್ಸಿನಿಂದ ಮುನ್ನೆಡೆಯುವುದು ಸಹ ಒಂದು ಅನುಭವಕ್ಕೆ ನಾವು ಸಾಕ್ಷಿಯಾಗಬಹುದು. ಅದರ ಫಲಿತಾಂಶ ಕೆಟ್ಟದಾಗಿರಬಹುದು, ಒಳ್ಳೆಯದಾಗಿರಬಹುದು, ಲಾಭದ್ದಾಗಿರಬಹುದು ಅಥವ ನಷ್ಟದ್ದಾಗಿರಬಹುದು. ಏನೇ ಆದರೂ ಒಂದು ಎಕ್ಸ್ ಪೀರೆಯನ್ಸ್ ಅನ್ನು ಖಂಡಿತ ನಾವು ಪಡೆಯುತ್ತೇವೆ. ಇದನ್ನ ಮನದಲ್ಲಿಟ್ಟುಕೊಂಡು ನಿಂತ ನೀರಾಗದೆ ಮುನ್ನೆಡೆಯಬೇಕು. ಉದಾಹರಣೆಗೆ, ಒಂದು ಸ್ವಂತ ಉದ್ಯಮ ಪ್ರಾರಂಭಿಸುತ್ತೇವೆ ಎಂದಿಟ್ಟುಕೊಳ್ಳೋಣ. ಉದ್ಯಮದ ಬಗ್ಗೆ ಅನುಭವ ವಿಲ್ಲದ ನಮಗೆ ಅದಕ್ಕೆ ಬೇಕಾದ ತಯಾರಿ ನಡೆಸಲು ಕೆಲ ಉದ್ಯಮಿಗಳ ಜತೆ ಚರ್ಚಿಸಿ ಮುಂದಡಿ ಇಡಬೇಕು.
ಈ ರೀತಿ ಬೇರೆಯವರಿಂದ ಮಾರ್ಗದರ್ಶನ ಪಡೆದು ಯಶಸ್ಸುಗಳಿಸಿದ ಮೇಲೆ, ನಾವು ಗಳಿಸಿದ ಅನುಭವವನ್ನ ಇನ್ನೊಬ್ಬರಿಗೆ ಧಾರೆಯೆರೆಯುವುದು ಸಹ ಒಂದು ಸಮಾಜಸೇವೆ. ನಾವು ಬೆಳೆದರೆ ಮಾತ್ರ ಸಾಲದು, ಬೇರೆಯವರನ್ನ ಬೆಳೆಸುವ ಔದಾರ್ಯಗುಣವನ್ನ ನಾವು ಹೊಂದಬೇಕು. ಬರೀ ಪಡೆದುಕೊಳ್ಳುವುದರಿಂದ ನಾವು ಸ್ವಾರ್ಥಿಗಳಾಗುತ್ತೇವೆ, ನಮಗೆ ಗೊತ್ತಿರುವ ವಿದ್ಯೆ, ಅನುಭವವನ್ನು ಇನ್ನೊಬ್ಬರಿಗೆ ತಿಳಿಸಿಕೊಡುವುದರಿಂದ ನಮ್ಮ ಬಗ್ಗೆ ಉತ್ತಮ ಅಭಿಪ್ರಾಯ ನಮ್ಮ ಬಂಧು ಮಿತ್ರರು, ಸಹದ್ಯೋಗಿಗಳಲ್ಲಿ ಮೂಡಿ ನಮ್ಮ ಮೇಲಿನ ಗೌರವ ಭಾವನೆ ಹೆಚ್ಚಾಗುವುದರಲ್ಲಿ ಸಂಶಯವಿಲ್ಲ.
ಬರಹ: ಪಿ.ಎಸ್.ರಂಗನಾಥ
ಮಸ್ಕತ್, ಒಮಾನ್