Site Seeing ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
Site Seeing ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶುಕ್ರವಾರ, ಜನವರಿ 17, 2025

ಗ್ಯಾಂಬಿಯಾ ಎನ್ನುವ ಎನ್ ಕ್ಲೇವ್ ರಾಷ್ಟ್ರ


ಕೆಲದಿನಗಳ ಹಿಂದೆ ನಮ್ಮ ಆಫೀಸಿನ ಕೆಲಸಕ್ಕೆ ಸಂಭಂಧಿಸಿದಂತೆ  ಆಫ್ರಿಕಾದ ಗ್ಯಾಂಬಿಯಾ ದೇಶದಿಂದ ಅಥಿತಿಯೊಬ್ಬರು ನನ್ನನ್ನು ಭೇಟಿ ಮಾಡಲು ಬಂದಿದ್ದರು.  ಬಿಜಿನೆಸ್ ಗೆ ಸಂಭಂಧಿಸಿದಂತೆ ಮಾತುಕತೆಗಳು ಮುಗಿದಾದ ಮೇಲೆ, ಅವರ ಗ್ಯಾಂಬಿಯಾ ದೇಶದ ಕುರಿತಾಗಿ ತಿಳಿದುಕೊಳ್ಳಲು ಅವರೊಂದಿಗೆ ಮಾತುಕತೆ ನಡೆಸಿದೆ. ಅ ಸಂವಾದದಲ್ಲಿ ಹಲವಾರು ಕುತೂಹಲಕಾರಿ ವಿಷಯಗಳನ್ನು ತಿಳಿದುಕೊಳ್ಳುವಂತಾಯಿತು.

ಯೂರೋಪಿನ ವಸಾಹತುಶಾಹಿಗಳು ಪ್ರಪಂಚದ ಹಲವು ದೇಶಗಳನ್ನ ವಸಾಹತುಗಳನ್ನಾಗಿ ಮಾಡಿಕೊಂಡು, ಅಲ್ಲಿ ಸಾರ್ವಭೌಮತ್ವ ಸ್ಥಾಪಿಸಿ, ಅಧಿಕಾರ ನಡೆಸಿದ್ದಲ್ಲದೆ, ಸ್ಥಳೀಯವಾಗಿ ದೊರೆಯುವ ಹೇರಳವಾದ ಸಂಪತ್ತನ್ನ ತಮ್ಮ ದೇಶಗಳಿಗೆ ಸಾಧಿಸಿದ್ದಲ್ಲದೆ, ತಮ್ಮ ಭಾಷೆ, ವಿಚಾರ, ಸಂಸ್ಕೃತಿ ಇತ್ಯಾದಿಗಳನ್ನ ಈ ದೇಶಗಳಲ್ಲಿ ಹೇರಿದ್ದು ನಮಗೆಲ್ಲ ಗೊತ್ತಿರುವ ಇತಿಹಾಸ. ಇದೆಲ್ಲದರ ಜತೆಗೆ ಬ್ರಿಟೀಷರು ಮತ್ತು ಐರೋಪಿನ ರಾಷ್ಟ್ರಗಳ ಕುತಂತ್ರಿತನಕ್ಕೆ ಹಲವಾರು ದೇಶಗಳು ಒಡೆದು ಚೂರಾಗಿವೆ.


ಗ್ಯಾಂಬಿಯಾ ಎನ್ನುವ ರಾಷ್ಟ್ರ ಪಶ್ಚಿಮ ಆಫ್ರಿಕಾದ ಸೆನೆಗಲ್ ಬಳಿ ಇದೆ, ಇದೊಂದು ಚಿಕ್ಕ ಎನ್ ಕ್ಲೇವ್ ರಾಷ್ಟ್ರ, ಈ ದೇಶದ ಸುತ್ತಲೂ ಮತ್ತೊಂದು ದೇಶವಾದ ಸೆನೆಗಲ್ ಆವರಿಸಿದೆ ಎಂದು ಅಥಿತಿಗಳು ಹೇಳಿದರು. ಕುತೂಹಲ ಜಾಸ್ತಿಯಾಯಿತು. ಮಾತುಕತೆ ಮುಂದುವರಿಸಿದೆವು, ಹಲವಾರು ಕುತೂಹಲಕಾರಿ ವಿಷಯಗಳು ಈ ಮಾತುಕತೆಯಲ್ಲಿ ತಿಳಿದುಬಂತು. ಗ್ಯಾಂಬಿಯ ಎಷ್ಟು ಚಿಕ್ಕ ದೇಶ ಎಂದರೆ, ಇದರ ಅಗಲ ಕೇವಲ 30 ಕಿಲೋಮೀಟರ್ ಗಳು ಇದ್ದರೆ, ಉದ್ದ 300 ಕಿಲೋಮೀಟರ್ ಗಳು ಮಾತ್ರ. ಇವರ ದೇಶದ ಉತ್ತರ, ಪೂರ್ವ ಮತ್ತು ದಕ್ಷಿಣ ದಿಕ್ಕುಗಳಲ್ಲಿ ಸೆನೆಗಲ್ ದೇಶದಿಂದ ಸುತ್ತವರಿದಿದ್ದು ಪಶ್ಚಿಮಕ್ಕೆಅಟ್ಲಾಂಟಿಕ್ ಮಹಾಸಾಗರವಿದೆ. 

ಈ ರಾಷ್ಟ್ರ ಎನ್ಕ್ಲೇವ್ ಹೇಗಾಯ್ತು ಅಂತ ಕೇಳಿದ್ದಕ್ಕೆ, ಈ ಪ್ರದೇಶವನ್ನು ಬ್ರಿಟೀಷರು ಆಳಿದ್ದರಂತೆ,  ಸುತ್ತುವರೆದಿರುವ ಸೆನೆಗಲ್ ರಾಷ್ಟ್ರವನ್ನು ಫ್ರೆಂಚರು ಆಳಿದ್ದರು. 1960 ರಲ್ಲಿ ಫ್ರಾನ್ಸ್‌ನಿಂದ ಸೆನೆಗಲ್ ಸ್ವತಂತ್ರ ವಾಯಿತು ನಂತರ 1965ರಲ್ಲಿ ಗ್ಯಾಂಬಿಯಾ ದೇಶ ಬ್ರಿಟಿಷರ ಆಡಳಿತದಿಂದ  ಸ್ವತಂತ್ರ ವಾಯಿತು. ಹೀಗಾಗಿ ಅವೆರೆಡು ಬೇರೆ ಬೇರೆ ದೇಶಗಳಾಗಿ ಹಾಗೆಯೇ ಉಳಿದು ಹೋಗಿವೆ.  ಎರಡು ದೇಶ ಒಂದುಗೂಡಲು ಸಾಧ್ಯವಾಗಲಿಲ್ಲವೇ ಎಂದು ಕೇಳಿದ್ದಕ್ಕೆ, 1981 ರಲ್ಲಿ ಆ ಪ್ರಯತ್ನ ನಡೆಯಿತು ಆದರೆ ಅದು ಸಫಲವಾಗಲಿಲ್ಲ ಎಂದರು. 

ಬ್ರಿಟೀಷರು ಮತ್ತು ಫ್ರೆಂಚರ ಆಳ್ವಿಕೆಯಿಂದಾಗಿ ಎರಡು ಬೇರೆ ದೇಶಗಳಾಗಿವೆಯೇ ವಿನಃ, ಮೂಲತಃ ಗ್ಯಾಂಬಿಯಾ ಮತ್ತು ಸೆನೆಗಲ್ ದೇಶದ ಜನರುಗಳು ಒಂದೇ ಬುಡಕಟ್ಟಿನವರು, ಸಾಂಸ್ಕೃತಿಕವಾಗಿ ಒಂದೇ ರೀತಿ ಇದ್ದಾರೆ. ಆಚಾರ ವಿಚಾರ ಎಲ್ಲದರಲ್ಲೂ ಹೋಲಿಕೆಯಿದೆ. ಎರಡೂ ಕಡೆ ಸಂಭಂದಿಕರು ಇದ್ದಾರೆ. ಎರಡು ದೇಶಗಳು ಒಂದಾಗಲು, ರಾಜಕೀಯ ಇಚ್ಛಾಶಕ್ತಿಯಿಂದ ಮಾತ್ರ ಸಾಧ್ಯ.ವಿದೆ. ಎರಡು ದೇಶಗಳ ನಡುವೆ ಅಧಿಕೃತ ಭಾಷೆಗಳನ್ನು ಹೊರತುಪಡಿಸಿ ಯಾವುದೇ ವ್ಯತ್ಯಾಸವಿಲ್ಲ. ಸೆನೆಗಲ್‌ನಲ್ಲಿ ಫ್ರೆಂಚ್ ಮತ್ತು ಗ್ಯಾಂಬಿಯಾದಲ್ಲಿ ಇಂಗ್ಲಿಷ್ ಆಡಳಿತ ಭಾಷೆಯಾಗಿದೆ. ಜನರು ಒಂದೇ, ದೇಶೀಯ ಭಾಷೆ ಒಂದೇ, ಆಹಾರವೂ ಒಂದೇ, ಧರ್ಮಗಳು ಒಂದೇ, ಆಚಾರವಿಚಾರವು ಒಂದೇ.
ಈ ದೇಶದ ಮಧ್ಯಭಾಗದಲ್ಲಿ ಗ್ಯಾಂಬಿಯಾ ನದಿ ಹರಿಯುತ್ತದೆ.  ಇಂಗ್ಲಿಷ್ ಇಲ್ಲಿನ ಭಾಷೆ. ಕೃಷಿ ಇಲ್ಲಿನ ಆರ್ಥಿಕತೆಯ ಬೆನ್ನೆಲುಬು.  ನೆಲಗಡಲೆಯನ್ನು ಇಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ಇದನ್ನು ಅತಿ ಹೆಚ್ಚಾಗಿ ರಫ್ತು ಮಾಡಲಾಗುತ್ತದೆ. ಬಂಜುಲ್ (Banjul) ಈ ದೇಶದ ರಾಜಧಾನಿ. 96.4% ಜನ ಇಸ್ಲಾಂ ಅನ್ನು, (Islam) 3.5% ಕ್ರಿಶ್ಚಿಯಾನಿಟಿ (Christianity) ಯನ್ನು ಮತ್ತು 0.1% ಜನರು ಇತರೆ ಧರ್ಮವನ್ನು ಅನುಸರಿಸುತ್ತಾರೆ.

ಇಂಗ್ಲಿಷ್ ಗ್ಯಾಂಬಿಯಾದ ಅಧಿಕೃತ ಭಾಷೆಯಾಗಿದ್ದು ಇದನ್ನು  ಶಿಕ್ಷಣ ಮತ್ತು ಸರ್ಕಾರದ ದಾಖಲೆಗಳಲ್ಲಿ ಬಳಸಲಾಗುತ್ತದೆ. ಇತರ ಭಾಷೆಗಳಲ್ಲಿ ಮಂಡಿಂಕಾ, ವೋಲೋಫ್, ಫುಲಾ, ಸೇರರ್, ಸೋನಿಂಕೆ, ಕ್ರಿಯೋ, ಜೋಲಾ ಮತ್ತು ಇತರ ಸ್ಥಳೀಯ ಭಾಷೆಗಳು ಸಹ ಇಲ್ಲಿ ಉಪಯೋಗದಲ್ಲಿವೆ. ಆಫ್ರೀಕಾದ ಇತರೆ ದೇಶಗಳಲ್ಲಿದ್ದಂತೆ ಫ್ರೆಂಚ್ ಭಾಷೆಯ ಜ್ಞಾನವು ಸಹ ಜನರಿಗೆ ಇದೆ. ದೇಶದ 38% ಜನರು ಮಂಡಿಂಕಾವನ್ನು ಮೊದಲ ಭಾಷೆಯಾಗಿ ಮಾತನಾಡುತ್ತಾರೆ, 21% ಪುಲಾರ್, 18% ವೊಲೊಫ್, 9% ಸೋನಿಂಕೆ, 4.5% ಜೊಲಾ, 2.4% ಸೆರೆರ್, 1.6% ಮಂಜಾಕ್ ಮತ್ತು ಬೈನೌಕ್, ಪೋರ್ಚುಗೀಸ್ ಕ್ರಿಯೋಲ್ 1%, ಮತ್ತು ಇಂಗ್ಲಿಷ್ 0.5%. ಹಲವು ಇತರೆ ಭಾಷೆಗಳನ್ನು ಸಹ ಜನರು  ಮಾತನಾಡುತ್ತಾರೆ.

ಇಲ್ಲಿನ ಸರಾಸರಿ ತಾಪಮಾನವು 29 ° C ಮತ್ತು 34 ° C ನಡುವೆ ಇರುತ್ತದೆ. ವರ್ಷಪೂರ್ತಿ ಇಲ್ಲಿ ಬೇಸಿಗೆ ಅಂತ ಹೇಳಬಹುದು. ಸೂರ್ಯನ ಬಿಸಿಲು ವರ್ಷಪೂರ್ತಿ ಇರುತ್ತದೆ. ಬೇಸಿಗೆಯ  ತಿಂಗಳುಗಳಲ್ಲಿ, ಸೆಖೆ ಜಾಸ್ತಿ, ಆರ್ದ್ರತೆಯ ವಾತಾವರಣ ಜಾಸ್ತಿ. ಮಳೆ ಮತ್ತು ಚಳಿಗಾಲದಲ್ಲಿ,  ಆರ್ದ್ರತೆ ಕಡಿಮೆ ಇರುತ್ತದೆ, ಮಳೆ ಬಂದರೆ ಬಂತು ಇಲ್ಲದೆ ಇದ್ರೆ ಇಲ್ಲ ಎನ್ನಬಹುದು. ಪ್ರವಾಸಿಗರು ಭೇಟಿ ನೀಡಲು ಚಳಿಗಾಲದ ಸಮಯ ಸೂಕ್ತವಾಗಿದೆ. 
ಯುರೋಪಿಯನ್ನರ ಪ್ರಾಬಲ್ಯ:
ಯುರೋಪಿಯನ್ನರು ಇಲ್ಲಿಗೆ ಆಗಮಿಸುವ ಮುಂಚೆ, ಸ್ಥಳೀಯ ರಾಜವಂಶಗಳು ಇಲ್ಲಿ ಆಡಳಿತ ನಡೆಸುತಿದ್ದವು. ಹನ್ನೊಂದನೇ ಶತಮಾನದಲ್ಲಿ ಇಲ್ಲಿಗೆ ಇಸ್ಲಾಂ ಆಗಮನವಾಗುತ್ತದೆ. ಅಂದಿನ ತಕ್ರೂರ್ ರಾಜ ವಂಶ ಇಸ್ಲಾಂ ಧರ್ಮವನ್ನು ಸ್ವೀಕರಿಸಿ, ಪ್ರಜೆಗಳನ್ನು ಮತಾಂತರಿಸುತ್ತಾರೆ. ಅರೇಬಿಕ್ ಶಾಲೆಗಳನ್ನು ತೆರೆಯಲಾಗುತ್ತದೆ. ಶರಿಯಾ ಕಾನೂನು ಜಾರಿಗೆ ಬಂದು ಇಲ್ಲಿ ಶರಿಯಾ ನ್ಯಾಯಾಲಯ ಆರಂಭಗೊಳ್ಳುತ್ತವೆ. ಕ್ರಿ.ಶ. 1455 ರಲ್ಲಿ, ಪೋರ್ಚುಗೀಸರು ಗ್ಯಾಂಬಿಯಾವನ್ನು ಆಕ್ರಮಿಸುತ್ತಾರೆ. ಇಲ್ಲಿನ ಕಡಲತೀರದಲ್ಲಿ ನೆಲೆ ನಿಂತು ಸಮುದ್ರ ವ್ಯಾಪಾರವನ್ನು ನಿಯಂತ್ರಿಸಲು ಪ್ರಯತ್ನಿಸುತ್ತಾರೆ. ಪೋರ್ಚುಗೀಸರು ಗ್ಯಾಂಬಿಯಾಗೆ ಪ್ರವೇಶಿಸಿದ ಮೊದಲ ಯುರೋಪಿಯನ್ನರಾಗಿದ್ದರು ಸಹ, ಅಲ್ಲಿ ಹೇಳಿಕೊಳ್ಳುವಂತಹ ಗಮನಾರ್ಹವಾದ ವ್ಯಾಪಾರ ವಹಿವಾಟು ಅವರಿಗೆ ನಡೆಸಲಾಗಲಿಲ್ಲ. ಪರಿಣಾಮವಾಗಿ ಇಲ್ಲಿ ಹರಿಯುವ ಗ್ಯಾಂಬಿಯಾ ನದಿಯ ಮೇಲಿನ ವ್ಯಾಪಾರ ವಹಿವಾಟು ನಡೆಸುವ ಹಕ್ಕುಗಳನ್ನು ಇಂಗ್ಲಿಷ್ ವ್ಯಾಪಾರಿಗಳಿಗೆ ಮಾರುತ್ತಾರೆ. ತದನಂತರ ಇಲ್ಲಿನ ಕೆಲ ದ್ವೀಪಗಳನ್ನು ಯುರೋಪಿನ ಕೆಲ ರಾಷ್ಟ್ರಗಳು ಖರೀದಿಸುತ್ತವೆ. 

17 ನೇ ಶತಮಾನದ ಕೊನೆಯಲ್ಲಿ ಮತ್ತು 18 ನೇ ಶತಮಾನದುದ್ದಕ್ಕೂ, ಸೆನೆಗಲ್ ನದಿ ಮತ್ತು ಗ್ಯಾಂಬಿಯಾ ನದಿಯ ಪ್ರದೇಶಗಳಲ್ಲಿ ರಾಜಕೀಯ ಮತ್ತು ವಾಣಿಜ್ಯ ಪ್ರಾಬಲ್ಯಕ್ಕಾಗಿ ಬ್ರಿಟಿಷ್ ಸಾಮ್ರಾಜ್ಯ ಮತ್ತು ಫ್ರೆಂಚ್ ಸಾಮ್ರಾಜ್ಯವು ನಿರಂತರವಾಗಿ ಹೋರಾಟ ನಡೆಸಿದವು. 1758 ರಲ್ಲಿ ಸೆನೆಗಲ್ ಅನ್ನು ವಶಪಡಿಸಿಕೊಂಡ ನಂತರ ಅಗಸ್ಟಸ್ ಕೆಪ್ಪೆಲ್ ನೇತೃತ್ವದ ಪಡೆ ಗ್ಯಾಂಬಿಯಾವನ್ನು ಆಕ್ರಮಿಸಿತು. 1783ರಲ್ಲಿ ನಡೆದ  ವರ್ಸೈಲ್ಸ್ ಒಪ್ಪಂದ ಪ್ರಕಾರ,  ಗ್ರೇಟ್ ಬ್ರಿಟನ್‌ ಗ್ಯಾಂಬಿಯಾ ನದಿ ಮತ್ತು ಸುತ್ತಲಿನ ಭೂಪ್ರದೇಶ ಬ್ರಿಟೀಷರ ಆಳ್ವಿಕೆಗೆ ಒಳಪಡುತ್ತದೆ. ಗ್ಯಾಂಬಿಯಾ ನದಿಯ ಉತ್ತರದಲ್ಲಿರುವ ಅಲ್ಬ್ರೆಡಾದಲ್ಲಿ ಒಂದು ಸಣ್ಣ ಎನ್‌ಕ್ಲೇವ್ ಅನ್ನು ಫ್ರೆಂಚರು ಉಳಿಸಿಕೊಳ್ಳುತ್ತಾರೆ.  ಅಂತಿಮವಾಗಿ ಈ ದ್ವೀಪ ಒಳನಾಡನ್ನು 1856 ರಲ್ಲಿ ಯುನೈಟೆಡ್ ಕಿಂಗ್‌ಡಮ್‌ಗೆ ನೀಡಲಾಗುತ್ತದೆ.


ಆಫ್ರಿಕಾದ ಗುಲಾಮ ವ್ಯಾಪಾರ:
ಯುರೋಪಿಯನ್ನರು ಆಫ್ರಿಕಾ ಮತ್ತು ಇಂಡಿಯಾ ದಂತಹ ಪ್ರದೇಶಗಳಿಗೆ ವ್ಯಾಪಾರಕ್ಕಾಗಿ ಬಂದವರು ಇಲ್ಲಿ ಮಾಲೀಕರಾಗಿದ್ದಲ್ಲದೆ ಸ್ಥಳೀಯರನ್ನು ತಮ್ಮ ಫಿರಂಗಿ ಮತ್ತು ಬಂದೂಕುಗಳನ್ನು ಜನರ ಮುಂದಿರಿಸಿ ಆಳ್ವಿಕೆ ನಡೆಸಲು ಪ್ರಾರಂಭಿಸಿತ್ತಾರೆ.  ಮೂರ್ನಾಲ್ಕು ದಶಕಗಳ ಅಲ್ಪ ಸಮಯದಲ್ಲಿ ಇಡೀ ಆಫ್ರಿಕಾಖಂಡ ಯೂರೋಪಿಯನ್ನರ ವಸಾಹತುಗಳಾಗಿಬಿಟ್ಟಿತು. ಸ್ಥಳೀಯರನ್ನು ಗುಲಾಮರನ್ನಾಗಿ ಮಾಡಿಕೊಂಡು ವಸಾಹತುಶಾಹಿಗಳು ಆಫ್ರಿಕಾ ದೇಶದ ಅಗಾಧ ಖನಿಜ ಸಂಪತ್ತನ್ನು ಲೂಟಿ ಹೊಡೆಯುತ್ತಿದ್ದರು. ಮುಖ್ಯವಾಗಿ ತಾಮ್ರ, ಹತ್ತಿ, ರಬರ್, ಪಾಮ್ ಎಣ್ಣೆ, ಕೋಕೋ, ವಜ್ರ, ಟೀ ಮತ್ತು ಟಿನ್ ಲೋಹ, ಚಿನ್ನ - ಇವುಗಳ ನಿಧಿಯಾಗಿತ್ತು ಆಫ್ರಿಕಾ ಖಂಡ. ಒಂದು ಕೋಟಿಗೂ ಹೆಚ್ಚು ಆಫ್ರಿಕನ್ನರು ಅಲ್ಲೇ ಗುಲಾಮರಾಗಿ ದುಡಿದರು. ಸುಮಾರು ಅಷ್ಟೇ ಜನರು ಬೇರೆ ದೇಶಗಳಿಗೆ ಗುಲಾಮರಾಗಿ ಮಾರಲ್ಪಟ್ಟರು! ಗ್ಯಾಂಬಿಯಾ, ಸೆನೆಗಲ್ ನಂತಹ ರಾಷ್ಟ್ರಗಳು ಸಹ ಹೊರತಾಗಿರಲಿಲ್ಲ. ಸ್ಥಳೀಯರನ್ನು ಯುರೋಪ್ ಅಮೇರಿಕ ಮುಂತಾದ ರಾಷ್ಟ್ರಗಳಿಗೆ ಮಾರಲಾಯಿತು. ಲಕ್ಷಾಂತರ ಜನರನ್ನ ಸ್ಥಳೀಯವಾಗಿ ದುಡಿಸಿಕೊಂಡರು. 

1807 ರಲ್ಲಿ, ಬ್ರಿಟೀಷರು ತಮ್ಮ  ಸಾಮ್ರಾಜ್ಯದಾದ್ಯಂತ ಗುಲಾಮರ ವ್ಯಾಪಾರವನ್ನು ರದ್ದುಗೊಳಿಸಿದರು. ಆದರೂ ವ್ಯಾಪಾರಿಗಳು ಕದ್ದು ಮುಚ್ಚಿ ಗುಲಾಮರ ವ್ಯಾಪಾರವನ್ನು ಮಾಡುತಿದ್ದರು. ಅಟ್ಲಾಂಟಿಕ್‌ ಸಮುದ್ರದಲ್ಲಿ ಹಡಗುಗಳಲ್ಲಿ  ಜನರನ್ನು ಸಾಗಿಸುತಿದ್ದರು. ಇಂತಹ ಹಡಗುಗಳನ್ನ ಬ್ರಿಟೀಷರ ರಾಯಲ್ ನೇವಿಯವರು ತಡೆದು, ತಪಾಸಣೆ ನಡೆಸಿ  ಗುಲಾಮರ ಹಡಗುಗಳನ್ನು ಗ್ಯಾಂಬಿಯಾಕ್ಕೆ ಮರಳಿ ಕಳುಹಿಸುತಿದ್ದರಂತೆ. ಬ್ರಿಟಿಷರು 1816 ರಲ್ಲಿ ಬಾಥರ್ಸ್ಟ್ (ಈಗ ಬಂಜುಲ್)ನಲ್ಲಿ ಮಿಲಿಟರಿ ಪೋಸ್ಟ್ ಅನ್ನು ಸ್ಥಾಪಿಸಿ, ಗುಲಾಮರ ಸಾಗಾಟವನ್ನು ತಡೆಹಿಡಿಯಲು ಪ್ರಯತ್ನಿಸಿದರು. ಹಡಗುಗಳಲ್ಲಿದ್ದ ಜನರನ್ನು ಬಿಡುಗಡೆಗೊಳಿಸಿ ಮ್ಯಾಕ್‌ಕಾರ್ಥಿ ಎನ್ನುವ ದ್ವೀಪದಲ್ಲಿ ಅವರಿಗೆ ಹೊಸ ಬದುಕನ್ನು ಕಟ್ಟಿಕೊಳ್ಳಲು ಅವಕಾಶ ನೀಡಿದ್ದರು.

ಗ್ಯಾಂಬಿಯಾಗೇ 1965ರಲ್ಲಿ ಸ್ವಾತಂತ್ರ್ಯ:
1960ರಲ್ಲಿ ಫ್ರಾನ್ಸ್‌ನಿಂದ ಸೆನೆಗಲ್ ಸ್ವತಂತ್ರವಾಗಿತ್ತು,  ಹೀಗಾಗಿ, ಬ್ರಿಟೀಷರು ತಾವು ಆಳುತಿದ್ದ ಗ್ಯಾಂಬಿಯಾ ದೇಶಕ್ಕೂ 18 ಫೆಬ್ರವರಿ 1965 ರಂದು ಸ್ವಾತಂತ್ರ್ಯವನ್ನು ನೀಡುತ್ತಾರೆ. 1965 ರಿಂದ 1994 ರವರೆಗೆ, ಪೀಪಲ್ಸ್ ಪ್ರೋಗ್ರೆಸ್ಸಿವ್ ಪಾರ್ಟಿಯ (ಪಿಪಿಪಿ) ದವ್ಡಾ ಜವರ (Dawda Jawara) ಅವರು ದೇಶವನ್ನು ಆಳುತ್ತಾರೆ. ಈ ಸಮಯದಲ್ಲಿ ಯಾವುದೇ ವಿಪಕ್ಷವಿಲ್ಲದೆ ಎಲ್ಲಾ ಪಕ್ಷದವರು ಸೇರಿ (multi-party liberal democracy) ಆಳ್ವಿಕೆ ನಡೆಸುತ್ತಾರೆ. ಈ ಸಮಯದಲ್ಲಿ ಯಾವುದೇ ಚುನಾವಣೆ ನಡೆಯುವುದಿಲ್ಲ. 

1981 ಆಂತರಿಕ ದಂಗೆ:
ಪ್ರಮುಖ ರಾಜಕಾರಣಿಗಳ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಮತ್ತು ದೇಶದಲ್ಲಿ ದುರ್ಬಲಗೊಂಡ ಆರ್ಥಿಕತೆ ಇದರಿಂದ ಬೇಸತ್ತ ಜನತೆಯಿಂದ 29 ಜುಲೈ 1981 ರಂದು ಆಂತರಿಕ ದಂಗೆ ನಡೆಯುತ್ತದೆ.  ಅಧ್ಯಕ್ಷ ಜವಾರಾ ಅವರು ಪಕ್ಕದ ರಾಷ್ಟ್ರ ವಾದ ಸೆನೆಗಲ್ ನ ಮಿಲಿಟರಿ ಸಹಾಯವನ್ನು ಕೋರುತ್ತಾರೆ. ಆಗಸ್ಟ್ 6 1981ರಲ್ಲಿ , ಸುಮಾರು 2,700 ಸೆನೆಗಲೀಸ್ ಸೈನಿಕರನ್ನು  ನಿಯೋಜಿಸಲಾಗುತ್ತದೆ, ಬಂಡಾಯವೆದ್ದ ಪಡೆಯನ್ನು ಸೆನೆಗಲ್ ಸೈನಿಕರ ಜತೆಗೂಡಿ ಸೋಲಿಸಲಾಗುತ್ತದೆ, ದಂಗೆ ಮತ್ತು ನಂತರದ ಹಿಂಸಾಚಾರದ ಸಮಯದಲ್ಲಿ 500 ರಿಂದ 800 ಜನರು ಕೊಲ್ಲಲ್ಪಡುತ್ತಾರೆ.  ನಂತರ, ಸೆನೆಗಲ್ ಮತ್ತು ದಿ ಗ್ಯಾಂಬಿಯಾ ರಾಷ್ಟ್ರಗಳು, ಒಕ್ಕೂಟದ ಒಪ್ಪಂದಕ್ಕೆ ಸಹಿ ಹಾಕುತ್ತವೆ. ಸೆನೆಗಾಂಬಿಯಾ ಒಕ್ಕೂಟ ವೇರ್ಪಡುತ್ತದೆ. ಒಂದೇ ಮಿಲಿಟರಿ ಆರ್ಮಿ, ದೇಶದ ಆರ್ಥಿಕತೆ ಬಲನೀಡುವುದು, ಎರಡು ರಾಷ್ಟ್ರಗಳಿಗೂ ಒಂದೇ ಕರೆನ್ಸಿ ನೋಟು ಮತ್ತು ನಾಣ್ಯ ಬಳಸುವ, ಹೀಗೆ ಹಲವಾರು ವಿಷಯಗಳ ಕುರಿತು ಒಪ್ಪಂದ ವೇರ್ಪಡುತ್ತದೆ.  ಕೇವಲ ಏಳು ವರ್ಷಗಳ ನಂತರ, ಗ್ಯಾಂಬಿಯಾ 1989 ರಲ್ಲಿ ಒಕ್ಕೂಟದಿಂದ ಶಾಶ್ವತವಾಗಿ ಹೊರಬಂದು, ಉಭಯ ರಾಷ್ಟ್ರಗಳ ಒಪ್ಪಂದ ಮುರಿದು ಬೀಳುತ್ತದೆ..

1994 ಮಿಲಿಟರಿ ದಂಗೆ:
1994 ರಲ್ಲಿ, ಮಿಲಿಟರಿ ದಂಗೆ ನಡೆಯುತ್ತದೆ. ಆರ್ಮ್ಡ್ ಫೋರ್ಸಸ್ ಪ್ರಾವಿಶನಲ್ ರೂಲಿಂಗ್ ಕೌನ್ಸಿಲ್ (AFPRC) ಎಂದು ಕರೆಯಲಾಗುವ "ಮಿಲಿಟರಿ ಅಧಿಕಾರಿಗಳ ಆಯೋಗ" ಅಧಿಕಾರಕ್ಕೆ ಬರುತ್ತದೆ.  ಎರಡು ವರ್ಷಗಳ ನೇರ ಆಡಳಿತದ ನಂತರ, ಹೊಸ ಸಂವಿಧಾನವನ್ನು ಬರೆಯಲಾಯಿತು.  1996 ರಲ್ಲಿ, AFPRC ನ ನಾಯಕ ಯಾಹ್ಯಾ ಜಮ್ಮೆ (Yahya Jammeh) ಅಧ್ಯಕ್ಷರಾಗಿ ಆಯ್ಕೆಯಾಗಿ 2016 ರ ಚುನಾವಣೆಯವರೆಗೂ ಸರ್ವಾಧಿಕಾರಿ ಶೈಲಿಯಲ್ಲಿ ಆಡಳಿತ ನಡೆಸುತ್ತಾರೆ. ಚುನಾವಣೆಯಲ್ಲಿ ಆಡಮಾ ಬಾರೋ (Adama Barrow) ವಿಜಯಿಯಾಗಿ ಇಲ್ಲಿಯವರೆಗೂ (2024) ಅವರೇ ಅಧಿಕಾರ ನಡೆಸುತಿದ್ದಾರೆ.  

ಪ್ರಮುಖ ಪ್ರವಾಸಿ ತಾಣಗಳು:
1. ಬಂಜುಲ್ ರೋಮನ್ ಕ್ಯಾಥೋಲಿಕ್ ಕ್ಯಾಥೆಡ್ರಲ್ (Banjul Roman Catholic Cathedral), 2. ಕಚಿಕಲ್ಲಿ ಕ್ರೊಕೊಡೈಲ್ ಪೂಲ್ (Kachikally Crocodile Pool): ಮೊಸಳೆ ಕೊಳ, 3. ಬಿಜಿಲೋ ರಾಷ್ಟ್ರೀಯ ಉದ್ಯಾನವನ (Bijilo National Park), 4. ಬಿಜಿಲೋ ಮಂಕಿ ಪಾರ್ಕ್ (Bijilo Monkey Park), 5. ಗ್ಯಾಂಬಿ ನದಿ (River Gambie), 6. ಬಿಜಿಲೋ ಫಾರೆಸ್ಟ್ ಪಾರ್ಕ್ (Bijilo Forest Park), 7. ಸ್ಟೋನ್ ಸರ್ಕಲ್ಸ್ ಆಫ್ ಗ್ಯಾಂಬಿಯಾ (Stone Circles of Gambia), 8. ಗ್ಯಾಂಬಿಯಾದ ರಾಷ್ಟ್ರೀಯ ವಸ್ತುಸಂಗ್ರಹಾಲಯ (National Museum of the Gambia), 9. ಆರ್ಕ್  22 (Arch 22) ಕಮಾನು, 10. ಬಕೌ ಕ್ರಾಫ್ಟ್ ಮಾರುಕಟ್ಟೆ (Bakau craft market)


ಭಾರತದೊಂದಿಗಿನ ಭಾಂದವ್ಯ:
ಗ್ಯಾಂಬಿಯಾ ಮತ್ತು ಭಾರತದೊಂದಿಗಿನ ಭಾಂದವ್ಯ ಉತ್ತಮವಾಗಿದೆ. ಎರಡೂ ರಾಷ್ಟ್ರಗಳು ಬ್ರಿಟೀಷರ ಆಳ್ವಿಕೆಗೆ ಒಳಪಟ್ಟಿದ್ದರಿಂದ ಭಾವನಾತ್ಮಕವಾಗಿ ಭಾರತೀಯರ ಕುರಿತು ಇಲ್ಲಿನ ಜನರಿಗೆ ಒಲವಿದೆ. ಭಾರತದಿಂದ ಹಲವಾರು ಸಾಮಗ್ರಿಗಳನ್ನು ಇಲ್ಲಿಗೆ ರಫ್ತು ಮಾಡಲಾಗುತ್ತಿದೆ. ಗ್ಯಾಂಬಿಯಾಕ್ಕೆ ಭಾರತ ಆರ್ಥಿಕ ಸಹಾಯ ಸಹ ನೀಡಿದೆ. 

ಗಾಂಬಿಯಾಕ್ಕೆ ಭಾರತವು ರಫ್ತು ಮಾಡುವ ಪ್ರಮುಖ ಸರಕುಗಳೆಂದರೆ ಹತ್ತಿ ನೂಲು, ಬಟ್ಟೆಗಳು, ಮೇಕಪ್‌ ಸಾಧನಗಳು , ಸೌಂದರ್ಯವರ್ಧಕಗಳು, ಶೌಚಾಲಯ ಸಾಮಗ್ರಿಗಳು, ಔಷಧಗಳು, ಕಬ್ಬಿಣ ಮತ್ತು ಉಕ್ಕಿನ ಉತ್ಪನ್ನಗಳು. ಗ್ಯಾಂಬಿಯಾದಿಂದ ಭಾರತವು ಆಮದು ಮಾಡಿಕೊಳ್ಳುವ ಪ್ರಮುಖ ಸರಕುಗಳೆಂದರೆ ಕಚ್ಚಾ ಗೋಡಂಬಿ ಮತ್ತು ಹತ್ತಿ.

ಸುಮಾರು 3000 ಭಾರತೀಯ ನಾಗರಿಕರು (2023 ರ ಹೊತ್ತಿಗೆ, ) ಗ್ಯಾಂಬಿಯಾದಲ್ಲಿ ವಾಸಿಸುತಿದ್ದು, ಅವರು ಪ್ರಾಥಮಿಕವಾಗಿ ವ್ಯಾಪಾರ ಮತ್ತು ನಿರ್ಮಾಣ ಕ್ಷೇತ್ರ ಸೇರಿದಂತೆ ಖಾಸಗಿ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ದೇಶಕ್ಕೆ ನಮ್ಮ ಭಾರತದ ಹರಿಯಾಣದ ಔಷಧೀಯ ಸಂಸ್ಥೆಯಾದ ಮೇಡನ್ ಫಾರ್ಮಾದಿಂದ ಸರಬರಾಜು ಮಾಡಲಾಗಿದ್ದ ಕೆಮ್ಮು-ಶೀತ ಸಿರಪ್ ಸೇವಿಸಿದ  66 ಮಕ್ಕಳ ಸಾವಾಗಿತ್ತು. ಆಗ ಗ್ಯಾಂಬಿಯಾ ದೇಶದ ಬಗ್ಗೆ ನಮ್ಮ ಭಾರತದ ಮಾಧ್ಯಮಗಳಲ್ಲಿ ಸುದ್ದಿ ಹರಿದಾಡಿತ್ತು. 

ಭಾರತದಲ್ಲಿ ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ 700ಕ್ಕೂ ಹೆಚ್ಚು ಗ್ಯಾಂಬಿಯನ್ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಭಾರತದಲ್ಲಿರುವ ಗ್ಯಾಂಬಿಯಾದ ಹೈ ಕಮಿಷನರ್ H.E ಮುಸ್ತಫಾ ಜವಾರ ಅವರು ಇತ್ತೀಚೆಗೆ, ಮಂಗಳೂರಿನ ಯೆನೆಪೊಯ ವಿಶ್ವವಿದ್ಯಾಲಯದೊಂದಿಗೆ ಎಂಒಯುಗೆ ಸಹಿ ಹಾಕಿದರು. 28 ​​ಗ್ಯಾಂಬಿಯನ್ ವಿದ್ಯಾರ್ಥಿಗಳು ಇಲ್ಲಿ ಅಧ್ಯಯನ ಮಾಡಲಿದ್ದಾರೆ.




ಶುಕ್ರವಾರ, ನವೆಂಬರ್ 29, 2024

ಅಜ಼ರ್ಬೈಜಾನ್ ನ ಪುರಾತನ ಹಿಂದೂ ದೇವಾಲಯ


ಬರಹ: ಪಿ.ಎಸ್.ರಂಗನಾಥ, 

ಮಸ್ಕತ್, ಒಮಾನ್ ರಾಷ್ಟ್ರ.

ಅಜ಼ರ್ಬೈಜಾನ್ ಎನ್ನುವ ಮುಸ್ಲಿಂ ದೇಶದಲ್ಲಿ ಪುರಾತನ ಹಿಂದೂ ದೇವಾಲಯವೊಂದಿದೆ. ವಿಶೇಷ ಏನೆಂದರೆ, ಶತಶತಮಾನಗಳಿಂದ ಈ ದೇವಸ್ಥಾನ ಇನ್ನೂ ಹಾಗೆಯೇ ಉಳಿದುಕೊಂಡು ಬಂದಿದೆ. ಇನ್ನೊಂದು ವಿಶೇಷವೇನೆಂದರೆ, ಈ ಪ್ರದೇಶ UNESCO  ವಿಶ್ವದ ಪಾರಂಪಾರಿಕ ತಾಣಗಳ ಪಟ್ಟಿಯಲ್ಲಿ ಸೇರಿರುವುದು. ಅಜ಼ರ್ಬೈಜಾನ್  ದೇಶಕ್ಕೆ ಭೇಟಿ ನೀಡುವ ಅತಿ ಹೆಚ್ಚಿನ ಪ್ರವಾಸಿಗರು ತಪ್ಪದೇ ಭೇಟಿ ನೀಡುವ ಪ್ರದೇಶ ಇದು. ಅತೆಷ್ಗಾ ಎನ್ನುವ ಈ ದೇವಾಲಯವನ್ನು ಅಗ್ನಿ ದೇವಾಲಯ (Fire temple) ಎಂದು ಕರೆಯುತ್ತಾರೆ. ಈ ಸ್ಥಳವನ್ನು ಕೇವಲ ಹಿಂದೂ ಮಾತ್ರವಲ್ಲದೆ, ಸಿಖ್ಖರು, ಜೋರಾಷ್ಟ್ರಿಯನ್ ಪಾರ್ಸಿಗಳು ಸಹ ಪವಿತ್ರ ಸ್ಥಳವೆಂದು ಪರಿಗಣಿಸಿ ಅಂದಿನ ಕಾಲದಲ್ಲಿ ಪೂಜಿಸುತಿದ್ದರು. ದೇವಾಲಯದ ಈ ಪ್ರಾಂಗಣದಲ್ಲಿ ಗಣೇಶ ಮತ್ತು ನಟರಾಜನ ವಿಗ್ರಹವಿದೆ. ವಿಗ್ರಹಗಳ ಜತೆಯಲ್ಲಿ 14 ಸಂಸ್ಕೃತ (ದೇವನಾಗರಿ), ಎರಡು ಪಂಜಾಬಿ (ಗುರುಮುಖಿ) ಮತ್ತು ಒಂದು ಪರ್ಷಿಯನ್ ಶಿಲಾ ಶಾಸನಗಳಿವೆ. ಒಂದು ಶಾಸನದಲ್ಲಿ ಮೊದಲ ಸಾಲು  ಶ್ರೀ ಗಣೇಶಾಯ ನಮಃ ಎಂದು ಪ್ರಾರಂಭವಾಗುತ್ತದೆ. ಇನ್ನೊಂದು ಶಾಸನದಲ್ಲಿ ಸಂಸ್ಕೃತದಲ್ಲಿ ಭಗವಾನ್ ಶಿವನ ಕುರಿತಾಗಿ ಬರೆದ ಸಾಲುಗಳಿವೆ.  ಮತ್ತೊಂದು ಶಾಸನವು ಜ್ವಾಲಾದೇವಿ ಕುರಿತಾಗಿ ಬರೆಯಲಾಗಿದೆ.  

  


 ಈ ದೇವಾಲಯವನ್ನು ಅಗ್ನಿ ದೇವಾಲಯ (Fire temple) ಎಂದು ಯಾಕೆ ಕರೆಯುತ್ತಾರೆ ಎಂದರೆ, ಇಲ್ಲಿರುವ ಸಪ್ತ ರಂಧ್ರಗಳಲ್ಲಿ ಸಹಸ್ರಾರು ವರ್ಷಗಳಿಂದ ಸತತವಾಗಿ ಬೆಂಕಿಯುರಿಯುತ್ತಿದೆ.  ಜೋರಾಷ್ಟ್ರಿಯನ್ ಪಾರ್ಸಿಗಳು ಮತ್ತು ಹಿಂದುಗಳು ಪವಿತ್ರವೆಂದು ಭಾವಿಸಿರುವ ಅಗ್ನಿಯನ್ನು ಪಾರ್ಸಿಗಳು ಮತ್ತು ಹಿಂದುಗಳು ಶತಮಾನಗಳಿಂದ ಪೂಜಿಸಿಕೊಂಡು ಬಂದಿದ್ದಾರೆ. ಬೆಂಕಿಯುಗುಳುವ ಈ ರಂಧ್ರಗಳಿರುವ ಜಾಗವನ್ನು ಇಲ್ಲಿನ ಭಾಷೆಯಲ್ಲಿ ಬಾಕು ಅತೆಷ್ಗಾ (Ateshgah of Baku) ಎಂದು ಹೇಳುತ್ತಾರೆ. ಪರ್ಷಿಯನ್ ಭಾಷೆಯಲ್ಲಿ ‘ಅತೇಶ್’ ಎಂದರೆ ಬೆಂಕಿ ಮತ್ತು ‘ಗಾಹ್’ ಎಂದರೆ ಹಾಸಿಗೆ ಎಂದರ್ಥ. ಅತೇಶ್ಗಾ ಒಂದು ಕಾಲದಲ್ಲಿ ನೈಸರ್ಗಿಕ ಅನಿಲ ಕ್ಷೇತ್ರವನ್ನು ಹೊಂದಿತ್ತು, ಈ ನೈಸರ್ಗಿಕ ಅನಿಲವೇ ಈ ಬೆಂಕಿಗೆ ಕಾರಣವಾಗಿದೆ. ಈ ಸ್ಥಳವನ್ನು ಪವಿತ್ರವೆಂದು ಪರಿಗಣಿಸಲಾಗಿದೆ ಎಂದು 7 ನೇ ಶತಮಾನದ ಅರ್ಮೇನಿಯನ್ ಭೂಗೋಳಶಾಸ್ತ್ರಜ್ಞ ಅನನಿಯಾ ಶಿರಕಾಟ್ಸಿ ಅವರ ಪುಸ್ತಕ ಅಶ್ಖರತ್ ಸುಯಟ್ಸ್  ದಾಖಲಿಸಿದ್ದಾರೆ. ದೇವಾಲಯವಿರುವ ಪಟ್ಟಣವನ್ನು ಸುರಖಾನಿ ಎಂದು ಕರೆಯಲಾಗುತ್ತದೆ, ಇದರರ್ಥ ಟಾಟ್ ಭಾಷೆಯಲ್ಲಿ 'ರಂಧ್ರವಿರುವ ಕಾರಂಜಿ ಎಂದು.  ಟಾಟ್ ಭಾಷೆಯು ಕ್ಯಾಸ್ಪಿಯನ್ ಸಮುದ್ರದ ಸುತ್ತಲಿನ ಟಾಟ್ ಜನರು ಮಾತನಾಡುವ ಪರ್ಷಿಯನ್ ಭಾಷೆಯಾಗಿದೆ. 

 


   ಇನ್ನು ಶಾಸನಗಳ ಬಗ್ಗೆ ಹೇಳುವುದಾದರೆ, ಅಬ್ರಹಾಂ ವ್ಯಾಲೆಂಟೈನ್ ವಿಲಿಯಮ್ಸ್ ಜಾಕ್ಸನ್ ಅವರ ಪುಸ್ತಕವಾದ "ಫ್ರಮ್  'ಕಾನ್ಸ್ಟಾಂಟಿನೋಪಲ್  ಟು ದ ಹೋಮ್ ಆಫ್ ಓಮರ್ ಖಯ್ಯಾಮ್" (From Constantinople to the home of Omar Khayyam)  ಪ್ರಕಾರ, ಶಾಸನಗಳನ್ನು 1668 ಮತ್ತು 1816 AD ನಡುವೆ ಕೆತ್ತಿಸಲಾಗಿದೆ. ಆರ್ಮೇನಿಯನ್ ವಿದ್ವಾಂಸರ ಪ್ರಕಾರ  ಈ ದೇವಾಲಯ ಪ್ರಾಕಾರವು ಎರಡನೇ ಶತಮಾನದಲ್ಲಿ ಪರ್ಶಿಯನ್ ದೊರೆಗಳ ಕಾಲಮಾನದಲ್ಲಿ ನಿರ್ಮಿಸಿರಬಹುದು ಎಂದು ಹೇಳಲಾಗಿದೆ. ಪರ್ಶಿಯನ್  ಸಸಾನಿಯನ್ ಸಾಮ್ರಾಜ್ಯದ ಸ್ಥಾಪಕ ಮೊದಲನೇ ಅರ್ದಾಶಿರ್ (180-242 AD) ಈ ಕಟ್ಟಡವನ್ನು ನಿರ್ಮಿಸಿರಬಹುದೆಂದು ಹೇಳಿದ್ದಾರೆ. ಅಜ಼ರ್ಬೈಜಾನ್ ದೇಶವು ಅಂದಿನ ಸಿಲ್ಕ್ ರೋಡ್ ನ ಭಾಗವಾಗಿದ್ದರಿಂದ ದಕ್ಷಿಣ ಏಶಿಯಾದ ಹಿಂದೂ ವ್ಯಾಪಾರಿಗಳು ಮುಂದೆ ಇದನ್ನ ಅಭಿವೃದ್ದಿ ಪಡಿಸಿ ಜ್ವಾಲಾದೇವಿಯನ್ನು ಆರಾಧಿಸುತಿದ್ದರು. ಜ್ವಾಲಾ ದೇವಿಯೆಂದು ಕರೆಯಲು ಕಾರಣವೇನೆಂದರೆ, ಶತಶತಮಾನಗಳಿಂದ ಇಲ್ಲಿನ ಸಪ್ತ ರಂಧ್ರಗಳು ಸತತವಾಗಿ ಬೆಂಕಿಯುಗುಳುತ್ತಿವೆ. ಇಲ್ಲಿ ದೊರೆಯುತ್ತಿರುವ ನೈಸರ್ಗಿಕ ಅನಿಲದಿಂದ ಒಂದು ದಿನವೂ ಈ ಬೆಂಕಿಯು ಆರುವುದಿಲ್ಲ.

    ಇಸ್ಲಾಂ ಧರ್ಮ ಪರ್ಶಿಯಾಗೆ ಏಳನೇ ಶತಮಾನದಲ್ಲಿ ಆಗಮಿಸಿತು, ಅಲ್ಲಿಯವರೆಗೂ ಈ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪಾರ್ಸಿಗಳು ವಾಸಿಸುತಿದ್ದರು. ಕ್ರಮೇಣ ಇಸ್ಲಾಂ ಧರ್ಮದ ಪ್ರಾಬಲ್ಯ ಹೆಚ್ಚುತಿದ್ದಂತೆ ಪಾರ್ಸಿಗಳು ಕಡಿಮೆಯಾದರೂ ಸಹ ಹತ್ತನೇ ಶತಮಾನದವರೆಗೂ ಈ ಸ್ಥಳದ ಸುತ್ತಮುತ್ತ ವಾಸಿಸುತಿದ್ದರು ಎಂದು ಇಲ್ಲಿನ ಅನೇಕ ದಾಖಲೆಗಳಲ್ಲಿ ಪ್ರಸ್ತಾಪಿಸಲಾಗಿದೆ. ಈ ಪ್ರಾಂತ್ಯದಲ್ಲಿ ಮುಸ್ಲಿಮರ ಪ್ರಾಬಲ್ಯ ಹೆಚ್ಚಿದಂತೆ, ಅಳಿದುಳಿದ ಜೋರಾಷ್ಟ್ರಿಯನ್ ಪಾರ್ಸಿಗಳು ಭಾರತದ ಕಡೆ ವಲಸೆ ಬಂದರು. ಏಳೆಂಟು ಶತಮಾನಗಳು ಪಾರ್ಸಿಗಳು ಈ ಕಡೆ ಮರಳಿ ಬಂದ ಬಗ್ಗೆ ಯಾವುದೇ ದಾಖಲೆಗಳು ಇಲ್ಲದೆ ಇದ್ದರೂ, ಹದಿನೇಳನೇ ಶತಮಾನದ ಅಂತ್ಯ ಭಾಗದಲ್ಲಿ ಮತ್ತೆ ಈ ಪ್ರಾಂತ್ಯಕ್ಕೆ ಬರಲಾರಂಭಿಸಿದರು. ಪಾಶ್ಚಿಮಾತ್ಯ ದೇಶಗಳಿಗೆ ಸಂಪರ್ಕಿಸುವ ಸಿಲ್ಕ್ ರೂಟ್ ನ ಭಾಗವಾಗಿದ್ದ ಈ ಪ್ರದೇಶಕ್ಕೆ ಹಿಂದೂ ಮತ್ತು ಸಿಖ್ ವ್ಯಾಪಾರಿಗಳು ವ್ಯಾಪಾರಕ್ಕಾಗಿ ಬರಲಾರಂಭಿಸಿದರು. 1683 ರಿಂದ 1880 ರವರೆಗೂ ದೊರೆತ ಹಲವಾರು ದಾಖಲೆಗಳಲ್ಲಿ ಈ ಉಲ್ಲೇಖವಿದೆ. ಭಾರತದಲ್ಲಿದ್ದ ಪಾರ್ಸಿಗಳು 1880 ರವರೆಗೆ ಭಾರತದಿಂದ ಪಾರ್ಸಿ ಪುರೋಹಿತರನ್ನು ಈ ಪ್ರದೇಶಕ್ಕೆ ಕಳುಹಿಸಿದ್ದರು ಎನ್ನುವ ಪುರಾವೆ ದೊರೆತಿದೆ. 1925 ರಲ್ಲಿ, ಡಾ. ಸರ್ ಜೀವಂಜಿ ಜಮ್ಶೆಡ್ಜಿ ಮೋದಿ ಎಂಬ ಪಾರ್ಸಿ ಪಾದ್ರಿಯು ಅತೇಶ್ಗಾಗೆ ಭೇಟಿ ನೀಡಿ, ಈ ದೇವಾಲಯವು ಹಿಂದೂ ಧಾರ್ಮಿಕ ಲಕ್ಷಣಗಳನ್ನು ಹೊಂದಿದೆ ಎಂದು ತೀರ್ಮಾನಿಸಿದ್ದರು. 

    ಇಲ್ಲಿ ಯಥೇಚ್ಚವಾಗಿ ದೊರೆಯುತಿದ್ದ ನೈಸರ್ಗಿಕ ಅನಿಲಕ್ಕಾಗಿ, ಅಂದಿನ ರಷ್ಯಾ ಒಕ್ಕೂಟವು ಇಲ್ಲಿ ನೈಸರ್ಗಿಕ ಅನಿಲ ಸ್ಥಾವರವನ್ನು ನಿರ್ಮಿಸಿ ದಶಕಗಳ ಕಾಲ ಸತತವಾಗಿ ಅನಿಲವನ್ನು ಹೊರ ತೆಗೆದರು. 1969 ರವರೆಗೆ ನೈಸರ್ಗಿಕವಾಗಿ ಉರಿಯುತ್ತಿದ್ದ ಜ್ವಾಲೆಯು ಸೋವಿಯೆಟ್ ರಷ್ಯಾದ ಅತಿರೇಕದಿಂದ ಬರಿದಾಯಿತು. ಈಗ ಬಾಕು ನಗರದಿಂದ ಗ್ಯಾಸ್ ಪೈಪ್‌ಲೈನ್‌ ಮುಖಾಂತರ ಉರಿಯುತ್ತಿರುವ ಬೆಂಕಿಗೆ ಇಂಧನವನ್ನು ಸರಬರಾಜು ಮಾಡಲಾಗುತ್ತಿದೆ.  ಅತೇಶ್ಗಾವನ್ನು 1998 ರಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾಣವನ್ನಾಗಿ ಪಟ್ಟಿಮಾಡಿದೆ.


ದೇಶದ ಭೌಗೋಳಿಕ ವಿವರ: 

ಈ ರಾಷ್ಟ್ರವನ್ನು ಅಧಿಕೃತವಾಗಿ  ಅಜೆರ್ಬೈಜಾನ್ ಗಣರಾಜ್ಯ ( Republic of Azerbaijan) ಎಂದು ಕರೆಯಲಾಗುತ್ತದೆ. ಅಜರ್ಬೈಜಾನ್ ಪಶ್ಚಿಮ ಏಷ್ಯಾ ಮತ್ತು ಪೂರ್ವ ಯುರೋಪ್ ಗಳ ಸಮ್ಮಿಲನದ ಜಾಗದಲ್ಲಿ ಇರುವ ಒಂದು ದೇಶ. ಪೂರ್ವಕ್ಕೆ ಕ್ಯಾಸ್ಪಿಯನ್ ಸಮುದ್ರ, ಉತ್ತರಕ್ಕೆ ರಷ್ಯಾ, ಪಶ್ಚಿಮಕ್ಕೆ ಟರ್ಕಿ ಮತ್ತು ಅರ್ಮೇನಿಯ, ಈಶಾನ್ಯಕ್ಕೆ ಜಾರ್ಜಿಯ ಮತ್ತು ದಕ್ಷಿಣಕ್ಕೆ ಇರಾನ್ ದೇಶ ದೊಂದಿಗೆ ಗಡಿಯನ್ನು ಹೊಂದಿದೆ.  ಸೋವಿಯೆಟ್ ರಷ್ಯದ ಒಂದು ಭಾಗವಾಗಿದ್ದ ಈ ರಾಷ್ಟ್ರ 1991ರಲ್ಲಿ ಸ್ವತಂತ್ರವಾಯಿತು. ಈ ದೇಶದ ವಿಸ್ತೀರ್ಣ ಹೇಳಬೇಕೆಂದರೆ, ಉತ್ತರ ದಕ್ಷಿಣವಾಗಿ 385 ಕಿಮೀ ಪೂರ್ವ ಪಶ್ಚಿಮವಾಗಿ 475 ಕಿಮೀ ಇರುವ ಇದರ ಒಟ್ಟು ವಿಸ್ತೀರ್ಣ 86,600 ಚ.ಕಿಮೀ. ಭೌಗೋಳಿಕವಾಗಿ ರಷ್ಯಾ, ಟರ್ಕಿ ಮತ್ತು ಇರಾನ್ ದೇಶಗಳಿಂದ ಆವರಿಸಲ್ಪಟ್ಟಿರುವ ಈ ದೇಶವು, ಸಾಂಸ್ಕೃತಿಕವಾಗಿ ಈ ದೇಶಗಳ ಸಂಸ್ಕೃತಿಯನ್ನು ಮೇಳೈಸಿಕೊಂಡಿದೆ. ಅಂದಾಜು ಒಂದು ಕೋಟಿ ಜನಸಂಖ್ಯೆ ಯನ್ನು ಈ ದೇಶಹೊಂದಿದೆ, ದೇಶದ ಬಹುಪಾಲು ಜನರು ಇಸ್ಲಾಂ ಧರ್ಮವನ್ನ ಪಾಲಿಸುತ್ತಾರೆ.  ಬಹಳಷ್ಟು ಜನರು ಟರ್ಕಿ ಮೂಲದವರು, ತಲಾ ಶೇ.8 ರಷ್ಟು ಜನರು ರಷ್ಯ ಮತ್ತು ಆರ್ಮೇನಿಯ ಮೂಲದವರು. ಜನಸಂಖ್ಯೆಯಲ್ಲಿ ಶೇ. 52 ಭಾಗ ಗ್ರಾಮೀಣದವರು. ಈ ದೇಶವು ಅರೆ ಮರುಭೂಮಿಯ ವಾಯುಗುಣವನ್ನು ಹೊಂದಿದೆ. ಬೇಸಿಗೆ ಅತಿ ಉಷ್ಣದಿಂದ ಕೂಡಿದ್ದು ಚಳಿಗಾಲವು ತಂಪಾಗಿರುತ್ತದೆ. ಕುವೈತ್ ಇರಾಕ್, ಇರಾನ್ ದೇಶಗಳು ಇಂತಹದ್ದೇ ವಾಯುಗುಣವನ್ನು ಹೊಂದಿವೆ. ಕುರಾ ಮತ್ತು ಅರಾಸ್ ನದಿಗಳು ಇಲ್ಲಿನ ಪ್ರಮುಖ ನದಿಗಳು. 

ಭಾಷೆ: 

ಅಜೆರ್ಬೈಜಾನ್‌ನ ಪ್ರಾಥಮಿಕ ಮತ್ತು ಅಧಿಕೃತ ಭಾಷೆ ಅಜೆರ್ಬೈಜಾನಿ ಆಗಿದೆ, ಇದು ತುರ್ಕಿಶ್ ಭಾಷೆ ಎಂದೇ ಹೇಳಬಹುದು ಅಷ್ಟರ ಮಟ್ಟಿಗೆ ಇದು ಆಧುನಿಕ ತುರ್ಕಿಕ್ ಭಾಷೆಗೆ ಬಹುತೇಕ ಹೋಲುತ್ತದೆ. ಟರ್ಕಿ ದೇಶದ ಜತೆಗೆ ನಿಕಟ ಸಂಬಂಧವನ್ನು ಈ ದೇಶ ಹೊಂದಿದೆ. ಈ ಅಜೆರ್ಬೈಜಾನಿ ಭಾಷೆಯು ಟರ್ಕಿಶ್, ತುರ್ಕಮೆನ್ ಮತ್ತು ಗಗೌಜ್ ಸೇರಿದಂತೆ ನೈಋತ್ಯ ತುರ್ಕಿಕ್ ಭಾಷಾ ಕುಟುಂಬದ ಒಗುಜ್ ಶಾಖೆಯ ಒಂದು ಕುಡಿ ಎಂದು ಹೇಳಬಹುದು.

ಅಜೆರ್ಬೈಜಾನ್‌ನ  ಪ್ರವಾಸಿ ಸ್ಥಳಗಳು:

ಅಜೆರ್ಬೈಜಾನ್‌ನಲ್ಲಿ ಬಹಳಷ್ಟು ಪ್ರವಾಸಿತಾಣಗಳಿವೆ. ಮಧ್ಯಪ್ರಾಚ್ಯದ ರಾಷ್ಟ್ರಗಳಿಗೆ ಅತಿ ಹತ್ತಿರವಾಗಿರುವುದರಿಂದ, ಬಹುತೇಕ ಜನರು ಸಾರ್ವಜನಿಕ ರಜಾದಿನಗಳಲ್ಲಿ ಇಲ್ಲಿಗೆ ಭೇಟಿ ನೀಡುತ್ತಾರೆ.  ಡಿಸೆಂಬರ್ ನಿಂದ ಮಾರ್ಚ್ ತಿಂಗಳಿನವರೆಗೆ ಅಜ಼ರ್ಬೈಜಾನ್ ದೇಶದ ಶಹದಾಗ್ ಮತ್ತು ಗಬಾಲಾದಂತಹ ಸ್ಥಳಗಳು ಹಿಮಾವೃತ್ತವಾಗುತ್ತವೆ. ಅತಿ ಹೆಚ್ಚು ಪ್ರವಾಸಿಗರು ಈ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡುತ್ತಾರೆ. 


ಬಾಕು:  

ಅಜೆರ್ಬೈಜಾನ್ ದೇಶದ ರಾಜಧಾನಿ ಬಾಕು. ಅಜೆರ್ಬೈಜಾನ್‌ನಲ್ಲಿ ನೋಡಲು ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿದೆ. ಈ ನಗರವು  ಕ್ಯಾಸ್ಪಿಯನ್‌ ಸಮುದ್ರ(Caspian Sea) ಹಾಗೂ ಕಾಕಸಸ್ ಪರ್ವತ ಪ್ರದೇಶದ ಅತ್ಯಂತ ದೊಡ್ಡ ನಗರವೂ ಹೌದು. ಇಲ್ಲಿಯ ಜನಸಂಖ್ಯೆ ಅಂದಾಜು ೨೦ ಲಕ್ಷ. ಈ ನಗರವು ದೇಶದ ಅತಿದೊಡ್ಡ ನಗರವಾಗಿದ್ದು ವಾಣಿಜ್ಯ ಮತ್ತು ವಿದ್ಯಾಕೇಂದ್ರವಾಗಿದೆ, ಆಧುನಿಕತೆಯನ್ನು ಒಪ್ಪಿಕೊಂಡಿರುವ ಈ ನಗರ, ಯುರೋಪಿನ ನಗರಗಳನ್ನ ಹೋಲುತ್ತದೆ.  ಇಲ್ಲಿನ ವಿಶೇಷವೇನೆಂದರೆ ಆಧುನಿಕ ಗಗನಚುಂಬಿ ಕಟ್ಟಡಗಳ ಜತೆಗೆ ಶತಶತಮಾನಗಳ ಹಳೆಯ ಕಟ್ಟಡಗಳನ್ನ ಹಳೆಯ ನಗರ (Icherisheher) ನೋಡಬಹುದು. ಬೆಂಕಿಯನ್ನು ಹೋಲುವಂತೆ ನಿರ್ಮಿಸಿರುವ ಪ್ರಸಿದ್ಧ ಫ್ಲೇಮ್ ಟವರ್‌ ಗಳು ಇಲ್ಲಿನ ಪ್ರವಾಸಿಗರ ಪ್ರೇಕ್ಷಣೀಯ ತಾಣವಾಗಿದೆ. 900 ಕ್ಕೂ ಹೆಚ್ಚು ಕಲಾಕೃತಿಗಳನ್ನು ಒಳಗೊಂಡಿರುವ ಮ್ಯೂಸಿಯಂ ಆಫ್ ಕಾಂಟೆಂಪರರಿ ಇದರ ಜೊತೆಯಲ್ಲಿ, ನಗರದಲ್ಲಿ ಅನೇಕ ಪ್ರೇಕ್ಷಣೀಯ ಸ್ಥಳಗಳಾದ, ಮೇಡನ್ ಟವರ್, ಶಿರ್ವಾನ್ ಶಾಸ್ ಅರಮನೆ, ಕಾರವಾನ್‌ಸೆರೈ, ಮೆಮೊರಿ ಅಲ್ಲೆ ಶೆಹಿಡ್ಲರ್ ಖಿಯಾಬಾನಿ, ನಿಜಾಮಿ ಸ್ಟ್ರೀಟ್, ಫೌಂಟೇನ್ ಸ್ಕ್ವೇರ್, ನಿಜಾಮಿ ಗಂಜಾವಿ ಸ್ಮಾರಕ, ರಸುಲ್-ಝಾಡೆ ಸ್ಟ್ರೀಟ್, ನ್ಯಾಷನಲ್ ಕಾರ್ಪೆಟ್ಸ್ ಮ್ಯೂಸಿಯಂ. ಬಾಕು ಹೈಲ್ಯಾಂಡ್ ಪಾರ್ಕ್, ಫ್ಲೇಮ್ ಟವರ್ಸ್ ಮತ್ತು ಹೇದರ್ ಅಲಿಯೆವ್ ಸೆಂಟರ್‌ ಹೀಗೆ ಹಲವಾರು ಸ್ಥಳಗಳಿವೆ.


ಗೋಬಸ್ತಾನ್ ರಾಷ್ಟ್ರೀಯ ಉದ್ಯಾನ (Gobustan National Park): 

ಬಾಕುವಿನ ನೈಋತ್ಯಕ್ಕೆ ಸುಮಾರು 64 ಕಿಮೀ ದೂರದಲ್ಲಿರುವ ಈ ರಾಷ್ಟ್ರೀಯ ಉದ್ಯಾನವನವು ತನ್ನ ಶಿಲಾಯುಗದ ಕಲ್ಲಿನ ಕೆತ್ತನೆಗಳು ಮತ್ತು ಮಣ್ಣಿನ ಜ್ವಾಲಾಮುಖಿಗಳಿಗೆ ಹೆಸರುವಾಸಿಯಾಗಿದೆ.

 - ಪೆಟ್ರೋಗ್ಲಿಫ್ಸ್: 10,000 B.C ವರೆಗಿನ 6,000 ಕ್ಕೂ ಹೆಚ್ಚು ಕಲ್ಲಿನ ಕೆತ್ತನೆಗಳು ಪ್ರಾಚೀನ ಮಾನವ ಜೀವನ ಮತ್ತು ವನ್ಯಜೀವಿಗಳ ಚಿತ್ರಣಗಳನ್ನು ಒಳಗೊಂಡಿವೆ.

 - ಮಡ್ ಜ್ವಾಲಾಮುಖಿಗಳು: ಅಜೆರ್ಬೈಜಾನ್ ಪ್ರಪಂಚದಲ್ಲೇ ಅತಿ ಹೆಚ್ಚು ಮಣ್ಣಿನ ಜ್ವಾಲಾಮುಖಿಗಳನ್ನು ಹೊಂದಿದೆ, ಇದು ಅನನ್ಯ ಭೌಗೋಳಿಕ ಅನುಭವವನ್ನು ನೀಡುತ್ತದೆ.




ಶೆಕಿ (Sheki):  

ಗ್ರೇಟರ್ ಕಾಕಸಸ್ ಪರ್ವತಗಳ ತಪ್ಪಲಿನಲ್ಲಿ ನೆಲೆಗೊಂಡಿರುವ ಒಂದು ಆಕರ್ಷಕ ಪಟ್ಟಣ, ಶ್ರೀಮಂತ ಇತಿಹಾಸ ಮತ್ತು ಸುಂದರವಾದ ವಾಸ್ತುಶಿಲ್ಪಕ್ಕೆ ಈ ಪ್ರಾಂತ್ಯ ಹೆಸರುವಾಸಿಯಾಗಿದೆ. ಇಲ್ಲಿರುವ ಶೆಕಿ ಖಾನ್ ಅರಮನೆ ಸಂಕೀರ್ಣವಾದ ಬಣ್ಣದ ಗಾಜು ಮತ್ತು ಟೈಲ್ ಕೆಲಸದಿಂದ ಅಲಂಕರಿಸಲ್ಪಟ್ಟ 18 ನೇ ಶತಮಾನದ ಅದ್ಭುತ ಅರಮನೆ. ಸಾಮಾನ್ಯವಾಗಿ ಪುರಾತನ ನಗರಗಳಲ್ಲಿ, ಸ್ಥಳೀಯ ಕರಕುಶಲ ವಸ್ತುಗಳ ಪ್ರದರ್ಶನ, ಮಾರಾಟ ಸಾಮಾನ್ಯವಾಗಿರುತ್ತದೆ. ಇಲ್ಲಿ ಸಾಂಪ್ರದಾಯಿಕ ಜವಳಿ, ಕುಂಬಾರಿಕೆ ಮತ್ತು ತಾಮ್ರದ ಸಾಮಾನುಗಳನ್ನು ಉತ್ಪಾದಿಸುವುದನ್ನ ಕಾಣಬಹುದು. 



ಗಾಂಜಾ (Ganja): 

ಅಜರ್‌ಬೈಜಾನ್‌ನ ಎರಡನೇ ಅತಿದೊಡ್ಡ ನಗರ, ಪುರಾತನ ಇತಿಹಾಸ ಮತ್ತು ಸಂಸ್ಕೃತಿಯನ್ನು ಇಲ್ಲಿ ನೋಡಬಹುದು. ಪ್ರಸಿದ್ಧ ಪರ್ಷಿಯನ್ ಕವಿ ನಿಜಾಮಿ ಗಂಜಾವಿಗೆ ಸಮರ್ಪಿತವಾಗಿರುವ ನಿಜಾಮಿ ಸಮಾಧಿ (Nizami Mausoleum) ಇಲ್ಲಿದೆ. ಈ ಸಮಾಧಿಯು ಸುಂದರ ವಾಸ್ತುಶಿಲ್ಪವನ್ನು ಹೊಂದಿದೆ. ಈ ನಗರದಲ್ಲಿರುವ ಜಾವದ್ ಖಾನ್ ಸ್ಟ್ರೀಟ್ (Javad Khan Street) ನಲ್ಲಿ ಕೆಫೆಗಳು, ಅಂಗಡಿಗಳು ಮತ್ತು ಐತಿಹಾಸಿಕ ತಾಣಗಳಿವೆ. ಸ್ಥಳೀಯ ಸಂಸ್ಕೃತಿಯಲ್ಲಿ ಅಡ್ಡಾಡಲು ಮತ್ತು ಅರಿತುಕೊಳ್ಳಲು ಈ ಜಾಗ ಸೂಕ್ತವಾಗಿದೆ.

ಕುಬಾ (Quba): 

ಅಜರ್‌ಬೈಜಾನ್‌ನ ಉತ್ತರ ಭಾಗದಲ್ಲಿರುವ ಒಂದು ಸುಂದರವಾದ ಪಟ್ಟಣ, ಇಲ್ಲಿ ಸುಂದರವಾದ ನಯನ ಮನೋಹರವಾದ ಪ್ರಕೃತಿ ಮತ್ತು ಸಾಂಸ್ಕೃತಿಕ ಮಹತ್ವಕ್ಕೆ ಹೆಸರುವಾಸಿಯಾಗಿದೆ. ಇಸ್ಲಾಮಿಕ್ ವಾಸ್ತುಶಿಲ್ಪವನ್ನು ಪ್ರತಿಬಿಂಬಿಸುವ ಸುಂದರವಾದ ಕುಬಾ ಮಸೀದಿ, ಪಟ್ಟಣದ ಕೇಂದ್ರ ಭಾಗದಲ್ಲಿದೆ. 1918ರ ನರಮೇಧದ ಬಲಿಯಾದವರ ನೆನಪಿಗಾಗಿ ನಿರ್ಮಿಸಲಾಗಿರುವ, ಕುಬಾ ಜಿನೊಸೈಡ್ ಮೆಮೋರಿಯಲ್ ಸ್ಮಾರಕ ಸಂಕೀರ್ಣ (Quba Genocide Memorial Complex) ಸ್ಮಾರಕ, ಇಲ್ಲಿ ಐತಿಹಾಸಿಕ ಮಹತ್ವದ ವಿಷಯಗಳ ಕುರಿತು ಆಸಕ್ತಿಯಿರುವವರು ಈ ಸ್ಮಾರಕಕ್ಕೆ ಭೇಟಿ ನೀಡುತ್ತಾರೆ. 

ಗಬಾಲಾ (Gabala) : 

ನೈಸರ್ಗಿಕ ಸೌಂದರ್ಯ ಮತ್ತು ಹೊರಾಂಗಣ ಚಟುವಟಿಕೆಗಳಿಗೆ ಹೆಸರುವಾಸಿಯಾದ ಜನಪ್ರಿಯ ರೆಸಾರ್ಟ್ ಪ್ರದೇಶ, ಬಾಕುದಿಂದ ಸುಮಾರು 225 ಕಿಮೀ ವಾಯುವ್ಯದಲ್ಲಿದೆ. ಟುಫಾಂಡಗ್ ಮೌಂಟೇನ್ ರೆಸಾರ್ಟ್ (Tufandag Mountain Resor) ನಲ್ಲಿ ಚಳಿಗಾಲದ ಸಮಯದಲ್ಲಿ ಸ್ಕೀಯಿಂಗ್ ಕ್ರೀಡೆಯನ್ನಾಡಬಹುದು ಮತ್ತು ಬೇಸಿಗೆಯಲ್ಲಿ ಹೈಕಿಂಗ್ ಮಾಡುವುದಕ್ಕೆ ಸೂಕ್ತ ಪ್ರದೇಶ, ಇಲ್ಲಿರುವ ಪರ್ವತಗಳ ಅದ್ಭುತ ನೋಟವನ್ನು ಸವಿಯುವುದೇ ಒಂದು ಖುಷಿ. ಪ್ರವಾಸಿಗರಿಗೆ ಮತ್ತೊಂದು ಆಕರ್ಷಣೀಯ ಸ್ಥಳ ಗಬಾಲಾ ಶೂಟಿಂಗ್ ಕ್ಲಬ್, ಇಲ್ಲಿ  ಶೂಟಿಂಗ್ ಕ್ರೀಡೆಗಳನ್ನಾಡಲು ಆಧುನಿಕ ಸೌಲಭ್ಯಗಳನ್ನ ರೂಪಿಸಲಾಗಿದೆ

ನಫ್ತಾಲನ್(Naftalan) : 

ಬಾಕುವಿನ ಪಶ್ಚಿಮಕ್ಕೆ ಸುಮಾರು 300 ಕಿಮೀ ದೂರದಲ್ಲಿರುವ ಚಿಕಿತ್ಸಕ ತೈಲ ಸ್ನಾನಗಳಿಗೆ ಪ್ರಸಿದ್ಧವಾದ ವಿಶಿಷ್ಟ ಸ್ಪಾ ಪಟ್ಟಣ. ನಮ್ಮ ಕೇರಳದ ಆಯುರ್ವೇದ ತೈಲ ಮಸಾಜ್ ನಂತೆ ಇಲ್ಲಿನ ಅನೇಕ ರೆಸಾರ್ಟ್ ಗಳಲ್ಲಿ  ವಿಶೇಷವಾಗಿ ಚರ್ಮ ಮತ್ತು ಕೀಲು ಸಮಸ್ಯೆಗಳಿಗೆ ನಫ್ತಾಲನ್ ಆಯಿಲ್ ಟ್ರೀಟ್ಮೆಂಟ್ ನೀಡಲಾಗುತ್ತದೆ.  

ಖಿನಾಲುಗ್ (Khinalug) : 

2,300 ಮೀಟರ್ ಎತ್ತರದಲ್ಲಿರುವ ಅಜೆರ್ಬೈಜಾನ್‌ನ ಅತಿ ಎತ್ತರದ ಮತ್ತು ಅತ್ಯಂತ ದೂರದ ಪರ್ವತ ಹಳ್ಳಿಗಳಲ್ಲಿ ಒಂದಾಗಿದೆ. ಹಳ್ಳಿಯು ಸುತ್ತಮುತ್ತಲಿನ ಪರ್ವತಗಳು ಮತ್ತು ಕಣಿವೆಗಳ ರಮಣೀಯ ದೃಶ್ಯಗಳು ಕಣ್ಮನ ಸೆಳೆಯುತ್ತವೆ.  ಪ್ರವಾಸಿಗರು ಸ್ಥಳೀಯ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಆತಿಥ್ಯದ ಅನುಭವವನ್ನು ಪಡೆಯಬಹುದು. 

 ಲಾಹಿಜ್ (Lahij) : 

ಕುಶಲಕರ್ಮಿಗಳ ಕರಕುಶಲತೆಗೆ ಹೆಸರುವಾಸಿಯಾದ ಐತಿಹಾಸಿಕ ಪರ್ವತ ಗ್ರಾಮ, ವಿಶೇಷವಾಗಿ  ಕರಕುಶಲತೆ ರೂಪಿಸುವ ತಾಮ್ರದ ಸಾಮಾನುಗಳನ್ನು ಇಲ್ಲಿ ನೋಡಬಹುದು. ಸ್ಥಳೀಯ ಕುಶಲಕರ್ಮಿಗಳು ತಮ್ಮ ಕೈಯಾರೆ ಸುಂದರವಾಗಿ ವಸ್ತುಗಳನ್ನು ಉತ್ಪಾದಿಸುವುದನ್ನ ಇಲ್ಲಿ ವೀಕ್ಷಿಸಬಹುದು. ಗ್ರಾಮವು ಸಾಂಪ್ರದಾಯಿಕ ವಾಸ್ತುಶೈಲಿ ಮತ್ತು ಸ್ಥಳೀಯ ಕಲ್ಲಿನಿಂದ ನಿರ್ಮಿಸಲಾದ ಅನನ್ಯ ಮನೆಗಳನ್ನು ಒಳಗೊಂಡಿದೆ. ಗ್ರಾಮದ ಬೀದಿಗಳು ಸಹ ಅಷ್ಟೇ ಸುಂದರವಾಗಿವೆ.

ಕ್ಯಾಸ್ಪಿಯನ್ ಸಮುದ್ರ (The Caspian Sea): 

ಈ ಸಮುದ್ರ ಮಿಕ್ಕ ಸಮುದ್ರಗಳಂತಲ್ಲ. ಇದು ಒಳನಾಡಿನ ಜಲರಾಶಿ, ಅಥವ ಒಳನಾಡಿನ ಜಲ ದ್ವೀಪ ಎನ್ನಬಹುದು. ಈ ಸಮುದ್ರದ ಸುತ್ತಲೂ ಭೂ ಪ್ರದೇಶವಿದೆ. ಈ ಸಮುದ್ರ ಮಿಕ್ಕ ಸಮುದ್ರಗಳಂತೆ ಒಂದನ್ನೊಂದು ಸೇರುವುದಿಲ್ಲ. ಸುಂದರವಾದ ಕಡಲತೀರಗಳು, ಕರಾವಳಿಯುದ್ದಕ್ಕೂ ವಿವಿಧ ರೆಸಾರ್ಟ್‌ಗಳು ಬೀಚ್ ಪ್ರೇಮಿಗಳು ಮತ್ತು ಜಲ ಕ್ರೀಡೆಗಳ ಉತ್ಸಾಹಿಗಳಿಗೆ ಕೈಬೀಸಿ ಕರೆಯುತ್ತವೆ. 

ಅಜರ್‌ಬೈಜಾನ್‌ನ ಸಂಸ್ಕೃತಿ, ಇತಿಹಾಸ ಮತ್ತು ನೈಸರ್ಗಿಕ ಸೌಂದರ್ಯದ ಕುರಿತು ಈ ಮೇಲೆ ತಿಳಿಸಿದ ಪ್ರವಾಸಿ ಆಕರ್ಷಣೆಗಳು ಇಲ್ಲಿರುವ ವೈವಿಧ್ಯಮಯ ಪರಿಸರ, ವಾತವರಣದ ಕುರಿತು  ಪ್ರವಾಸಿಗರನ್ನ ಸೆಳೆಯುತ್ತವೆ.


ಭಾನುವಾರ, ಡಿಸೆಂಬರ್ 3, 2023

ಜರ್ಮನಿಯ ಹೈಡೆಲ್ ಬರ್ಗ್ ಮತ್ತು ರೀನ್ ವ್ಯಾಲಿ

 ಜರ್ಮನಿಯ ಸುಂದರ ಪ್ರವಾಸಿ ತಾಣಗಳಾದ ಹೈಡೆಲ್ ಬರ್ಗ್ ಮತ್ತು ರೀನ್ ವ್ಯಾಲಿ

Photo Courtesy: Google
ಹೈಡೆಲ್ ಬರ್ಗ್ ಮತ್ತು ರೀನ್ ವ್ಯಾಲಿ ಜರ್ಮನಿಯ ಸುಂದರ ಪ್ರವಾಸಿ ತಾಣಗಳಲ್ಲಿ ಪ್ರಮುಖ ಸ್ಥಾನ ಪಡೆದಿವೆ. ಫ್ರಾಂಕ್ ಫರ್ಟ್ ಗೆ ಭೇಟಿ ನೀಡಿದವರು ಒಂದು ದಿನ ಬಿಡುವು ಮಾಡಿಕೊಂಡು ಈ ಪ್ರದೇಶಗಳಿಗೆ ಹೋಗಿಬರುವುದು ಸಾಮಾನ್ಯ. ಫ್ರಾಂಕ್ ಫರ್ಟ್  ನಗರದಿಂದ  ಸುಮಾರು ಒಂದೂವರೆ ಗಂಟೆಗಳ ಪ್ರಯಾಣ ಅಷ್ಟೇ. ಒಮ್ಮೆ ನಮ್ಮ ಒಮಾನ್ ಕಂಪನಿಯ ಕೆಲಸದ ನಿಮಿತ್ತ ಜರ್ಮನಿಗೆ ತೆರಳಿದ್ದೆ. ಪ್ರತಿ ಬಾರಿ ಜರ್ಮನಿಯ  ಟ್ರಿಪ್ ನಲ್ಲಿ ಹೊಸ ಸ್ಥಳಗಳಿಗೆ ಭೇಟಿ ನೀಡುವುದು ವಾಡಿಕೆ. ಫ್ರಾಂಕ್ ಫರ್ಟ್ ನಿಂದ ಒಂದು ದಿನದೊಳಗೆ ಪ್ರವಾಸಕ್ಕಾಗಿ ಹೋಗಿ ಬರುವ ಸ್ಥಳಗಳನ್ನು ಹುಡುಕುತಿದ್ದಾಗ ಕಂಡಿದ್ದೇ ಈ ಹೈಡೆಲ್ಬರ್ಗ್ ಮತ್ತು ರೀನ್ ವ್ಯಾಲಿ. ಈ ಸ್ಥಳಗಳ ಕುರಿತು ಮಾಹಿತಿ ಪಡೆದಿದ್ದ ನಾನು, ಇವುಗಳನ್ನು ನೋಡುವ ಸಲುವಾಗಿಯೇ ಎರಡು ದಿನ ಹೆಚ್ಚುವರಿಯಾಗಿ ತಂಗಿದ್ದೆ. ಫ್ರಾಂಕ್ ಫರ್ಟ್ ನ ರೈಲ್ವೇ ನಿಲ್ದಾಣದ ಬಳಿ ಬಹಳಷ್ಟು ಟೂರ್ ಆಪರೇಟರ್ ಗಳು ಇದ್ದಾರೆ, ಅವರ ಬಳಿ ಮಾತನಾಡಿ ಹೈಡೆಲ್ ಬರ್ಗ್ ಮತ್ತು ರೀನ್ ವ್ಯಾಲಿ ಟೂರ್ ಗೆ  ಬುಕ್ ಮಾಡಿದ್ದೆ. ಮೊದಲ ದಿನ ಹೈಡೆಲ್ ಬರ್ಗ್ ಟೂರ್ ಎರಡನೇ ದಿನ ರೀನ್ ವ್ಯಾಲಿ.  ಒಂದು ಮಿನಿ ಬಸ್ ನಲ್ಲಿ ಸುಮಾರು ಹದಿನೈದು ಜನ  ವಿವಿಧ ದೇಶಗಳ ಪ್ರವಾಸಿಗರೊಟ್ಟಿಗೆ ಈ ಸ್ಥಳಗಳನ್ನು ನೋಡಿದೆ. ತುಂಬಾ ಸುಂದರವಾದ ಕಣ್ಮನ ಸೆಳೆಯುವ ದೃಶ್ಯಗಳು ಈ ಸ್ಥಳದಲ್ಲಿವೆ. 
Photo Courtesy: Google

ಹೈಡೆಲ್ಬರ್ಗ್ ಪ್ರದೇಶ ಜರ್ಮನಿಯ ಪುರಾತನವಾದ ಸ್ಥಳ. ನೈಋತ್ಯ ಜರ್ಮನಿಯ ನೆಕರ್ ನದಿಯ ಬದಿಯಲ್ಲಿದೆ ಈ ನಗರ.  ಈ ನಗರಕ್ಕೆ ರೊಮ್ಯಾಂಟಿಕ್ ನಗರ, ಸಾಹಿತ್ಯಕ ನಗರ ಎಂದು ಕರೆಯುತ್ತಾರೆ. ಇದಕ್ಕೆ ಪೂರಕವೆಂಬಂತೆ, ನೂರಾರು ಪ್ರೇಮಿಗಳು ಸುಂದರ ಸಂಜೆಯನ್ನು ಇಲ್ಲಿ ಕಳೆಯಲು ಬಯಸುತ್ತಾರೆ. 1386 ರಲ್ಲಿ ಪ್ರಾರಂಭವಾದ ಜರ್ಮನಿಯ ಅತ್ಯಂತ ಹಳೆಯ ವಿಶ್ವವಿದ್ಯಾಲಯ ಹಾಗೂ 1421ರಲ್ಲಿ ಪ್ರಾರಂಭವಾದ ಗ್ರಂಥಾಲಯ ಇಲ್ಲಿದೆ. ಶೈಕ್ಷಣಿಕ ನಗರವಾದದ್ದರಿಂದ ಯುರೋಪಿನ ವಿವಿಧ ನಗರಗಳಿಂದ ಇಲ್ಲಿಗೆ ಉನ್ನತ ವಿದ್ಯಾಭ್ಯಾಸ ಪಡೆಯಲು ಇಂದಿಗೂ ಬರುತ್ತಾರೆ. 

Photo Courtesy: Google

ರಮಣೀಯ ಪ್ರದೇಶವಾದ ಈ ಕಣಿವೆ ಜಾಗದಲ್ಲಿ ಹರಿಯುವ ನೆಕ್ಟರ್ ನದಿಯ ಮೇಲೆ ನಿರ್ಮಿಸಿರುವ ಹಳೆಯ ಬ್ರಿಡ್ಜ್ ನೋಡಲು ತುಂಬಾ ಸುಂದರವಾಗಿದೆ. ನದಿ ದಂಡೆಯ ಎರಡು ಬದಿಯಿರುವ ನಗರ, ಕ್ಯಾಸೆಲ್, ಎರಡು ಕಡೆ ಬೆಟ್ಟಗಳನ್ನು ಮತ್ತು  ಈ ನದಿಯಲ್ಲಿ ಸಂಚರಿಸುವ ಬೋಟ್ ಗಳನ್ನು ನೋಡಬಹುದು. ಈ ಪ್ರದೇಶ ಒಮ್ಮೆಗೆ ನಮ್ಮನ್ನ ನೂರಾರು ವರ್ಷಗಳ ಹಿಂದಕ್ಕೆ ಕರೆದೊಯ್ಯುತ್ತದೆ. ಬ್ರಿಡ್ಜ್ ನಿಂದ ಇಳಿದು ನಗರದ ಪುರಾತನ ಹಾಗೂ ಹೃದಯಭಾಗಕ್ಕೆ ಬೇಟಿ ನೀಡಬಹುದು. ಅಲ್ಲಿ ಕ್ಯಾಸೆಲ್, ಹಳೆಯ ಚರ್ಚ್, ನೂರಾರು ವರ್ಷಗಳ ಪುರಾತನ ಕಟ್ಟಡಗಳು, ಸುಂದರವಾದ ಬೀದಿಗಳು, ಮರದ ಚೌಕಟ್ಟಿನ ಮನೆಗಳು ಹೀಗೆ  ಎಲ್ಲವನ್ನು ನೋಡಬಹುದು. 

Photo Courtesy: Google

ಈ ನಗರದ ಕಾಲು ಭಾಗ ಜನಸಂಖ್ಯೆ ವಿದ್ಯಾರ್ಥಿಗಳಿಂದ ತುಂಬಿದೆ. ವಿಶ್ವದ ಅತಿದೊಡ್ಡ ವೈನ್ ಸಂಗ್ರಹಿಸುವ ಬ್ಯಾರೆಲ್ ಒಂದು ಇಲ್ಲಿನ ಸಂಗ್ರಹಾಲಯದಲ್ಲಿದ್ದು, 130 ಓಕ್ ಮರಗಳಿಂದ ಇದನ್ನು ತಯಾರಿಸಲಾಗಿದೆ ನಿಖರವಾಗಿ 221,726 ಲೀಟರ್ ವೈನ್ ಅನ್ನು ಸಂಗ್ರಹಿಸುವ ಸಾಮರ್ಥ್ಯವನ್ನು ಹೊಂದಿದೆ.

ಹಿಟ್ಲರ್ ನ ನಾಜಿ ಪಕ್ಷದ ಕಾರ್ಯ ಚಟುವಟಿಕೆ ಈ ಭಾಗದಲ್ಲಿ ಹೆಚ್ಚಾಗಿತ್ತು ಎಂದು ಹೇಳುತ್ತಾರೆ, ಎರಡನೇ ಪ್ರಪಂಚ ಯುದ್ದದ ಸಮಯದಲ್ಲಿ ಜರ್ಮನಿಯ ವಿವಿಧ ನಗರಗಳು ಬಾಂಬ್ ದಾಳಿಯಿಂದ ದ್ವಂಸಗೊಂಡರೂ ಇಲ್ಲಿ ಹೆಚ್ಚಿನ ಅನಾಹುತ ಆಗಿರಲಿಲ್ಲ, ಇದು ಕಣಿವೆ ಪ್ರದೇಶವಾಗಿದ್ದು, ಇಲ್ಲಿಂದ ಹೊರ ಹೋಗುವುದು ಮತ್ತು ಬರುವುದು ಅಷ್ಟು ಸುಲಭವಾಗಿರಲಿಲ್ಲ ಎಂದು ಹೇಳುತ್ತಾರೆ. ಈ ನಗರ ಕೇವಲ ಪ್ರವಾಸಿ ತಾಣ ಮತ್ತು ಶೈಕ್ಷಣಿಕ ನಗರ ವಾಗಿರದೆ,  ಕೈಗಾರಿಕ ನಗರವಾಗಿಯೂ ಬೆಳೆದಿದೆ. ಅಂತರಾಷ್ಟ್ರೀಯ ಕಂಪನಿಗಳು ಇಲ್ಲಿವೆ. ಈ ಸುಂದರವಾದ ನಗರದ ವಿವಿಧ ಸ್ಥಳಗಳನ್ನು ನೋಡಿ ಕಣ್ತುಂಬಿಕೊಂಡು ಸಂಜೆ ವೇಳೆ ವಾಪಾಸು ಫ್ರಾಂಕ್ ಫರ್ಟ್ ಗೆ ಮರಳಿದೆವು.

Photo Courtesy: Google

ಮರುದಿನ ಮತ್ತೊಂದು ಪ್ರವಾಸಿತಾಣ, ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳಲ್ಲಿ ಸ್ಥಾನಪಡೆದಿರುವ ವಿಶ್ವಪ್ರಸಿದ್ದ ರೀನ್ ಕಣಿವೆಗೆ ಭೇಟಿ ನೀಡಿದ್ದೆವು. ಈ ಸ್ಥಳವಂತೂ ತುಂಬಾ ಸುಂದರ. ಇಲ್ಲಿ ಬೆಟ್ಟಗಳ ನಡುವೆ ಪ್ರಶಾಂತವಾಗಿ ರೀನ್ ನದಿ ಹರಿಯುತ್ತದೆ. ರೀನ್ ಅಥವ ರೈನ್ ನದಿ ಯುರೋಪಿನ ಪ್ರಮುಖ ನದಿಗಳಲ್ಲಿ ಒಂದಾಗಿದೆ. ಆಗ್ನೇಯ ಸ್ವಿಜರ್ ಲ್ಯಾಂಡ್ ನ ಆಲ್ಪ್ಸ್‌ನಲ್ಲಿರುವ ಗ್ರಾಬುಂಡೆನ್‌ನ ಸ್ವಿಸ್ ಕ್ಯಾಂಟನ್‌ನಲ್ಲಿ ನದಿಯು ಹುಟ್ಟುತ್ತದೆ.  ಅದರ ನಂತರ ಅದು ಜರ್ಮನಿ, ಬೆಲ್ಜಿಯಂ, ಫ್ರಾನ್ಸ್, ನೆದರ್ಲ್ಯಾಂಡ್ ದೇಶಗಳಲ್ಲಿ ಹರಿಯುತ್ತದೆ. ತನ್ನ ಹರಿವಿನ ಗುಂಟ ಹಲವಾರು ನದಿಗಳು ಇದರೊಳಗೆ ಸೇರಿಕೊಳ್ಳುತ್ತವೆ, ತನ್ನ ವ್ಯಾಪ್ತಿ ಮತ್ತು ಪಾತ್ರವು ದೊಡ್ಡದಾಗುತ್ತ ಹೋಗುತ್ತದೆ. ಸಮುದ್ರ ಮಾರ್ಗದ ಮುಖಾಂತರ ಸರಕು ಸರಂಜಾಮುಗಳನ್ನು ಹೊತ್ತ ಹಡಗು ಗಳು ಸಂಚಾರ ಮಾಡುವುದನ್ನು ನಾವು ಕಂಡಿದ್ದೇವೆ, ಆದರೆ ಈ ರೀನ್ ನದಿಯಲ್ಲಿ ನೂರಾರು ಮೀಟರ್ ಉದ್ದದ ಹಡಗು ಗಳಲ್ಲಿ ದೊಡ್ಡ ಪ್ರಮಾಣದ ಕಂಟೈನರ್ ಗಳು, ಕಲ್ಲಿದ್ದಲು, ಸ್ಟೀಲ್ ಮುಂತಾದ  ಸರಕು ಸಾಮಗ್ರಿಗಳನ್ನು ಸಾಗಾಣಿಕೆ ಮಾಡಲಾಗುತ್ತಿದೆ. ಈ ನದಿಯಲ್ಲಿ ಸರಕು ಸಾಗಾಣಿಕೆ ನೂರಾರು ವರ್ಷಗಳಿಂದ ನಡೆಯುತ್ತಿದೆ. ಯುರೋಪಿನ ವಾಣಿಜ್ಯ ಚಟುವಟಿಕೆಗಳಿಗೆ ಈ ನದಿ ಪ್ರಮುಖ ಪಾತ್ರವಹಿಸುತ್ತದೆ. ವಿವಿಧ ನಗರಗಳಲ್ಲಿ ದೊಡ್ಡ ದೊಡ್ಡ ಹಡಗುಗಳು ಈ ನದಿಯಲ್ಲಿ ಸಂಚರಿಸುತ್ತವೆ. 

Photo Courtesy: Google

ಈ ಕಣಿವೆ ಪ್ರದೇಶದಲ್ಲಿ ನೂರಾರು ದ್ರಾಕ್ಷಿತೋಟಗಳು ಇವೆ,  ಸುಂದರವಾದ ಚಿಕ್ಕ ಪಟ್ಟಣಗಳು ಮತ್ತು ಹಳ್ಳಿಗಳು ಇಲ್ಲಿವೆ. ನೂರಾರು ವರ್ಷಗಳ ಹಿಂದಿನ ಕೋಟೆ ಮತ್ತು ಕ್ಯಾಸೆಲ್ ಗಳನ್ನು ಇಲ್ಲಿ ನೋಡಬಹುದು. ವೈನ್ ಪ್ರಿಯರಿಗೆ ಇದು ಹೇಳಿ ಮಾಡಿಸಿದ ಸ್ಥಳ, ಸ್ಥಳೀಯವಾಗಿ ತಯಾರಾಗುವ ವಿವಿಧ ವೈನ್‌ಗಳ ರುಚಿ ನೋಡಬಹುದು. ಈ ರೀನ್ ನದಿಯಲ್ಲಿ ಪ್ರವಾಸಿಗರ ದೋಣಿ ವಿಹಾರಕ್ಕಾಗಿಯೇ ಸಿದ್ದಪಡಿಸಿದ ಆಧುನಿಕ ಮತ್ತು ಸುಸಜ್ಜಿತ ದೋಣಿಗಳು ಇಲ್ಲಿವೆ.  ಸುಮಾರು ಒಂದು ಗಂಟೆಗೂ ಹೆಚ್ಚಿನ ಸಮಯ ದೋಣಿಯಲ್ಲಿ ಸುತ್ತಾಡಿ ಕಣಿವೆಯ ನಯನ ಮನೋಹರ ದೃಶ್ಯಗಳನ್ನು ಸವಿಯಬಹುದು. ನಮ್ಮ ಪ್ರವಾಸಿ ಗೈಡ್, ಇಲ್ಲಿನ ಹಲವಾರು ಸ್ಥಳಗಳಿಗೆ ಕರೆದುಕೊಂಡು ಹೋಗಿ ನಮ್ಮನ್ನು ಸುತ್ತಾಡಿಸಿದ. ಎರಡು ದಿನದಲ್ಲಿ, ಎಷ್ಟು ಸಾಧ್ಯವಾಗಬಹುದೋ ಅಷ್ಟು ಸ್ಥಳಗಳನ್ನ ನೋಡಿ, ಸುಂದರವಾದ ನೆನಪುಗಳನ್ನು ಹೊತ್ತು  ಜರ್ಮನಿಯಿಂದ ಮರಳಿದೆ.

ಬರಹ:- ಪಿ.ಎಸ್.ರಂಗನಾಥ,

ಮಸ್ಕತ್ - ಒಮಾನ್ ರಾಷ್ಟ್ರ.

https://epaper.udayavani.com/3796056/Desi-Swara/02-Dec-2023#page/1/1

#oman #germany # hiderlberg #rheinvalley #kannada # bangalore #muscat #karnataka






ಬುಧವಾರ, ನವೆಂಬರ್ 1, 2023

ನಾ ಕಂಡ ಐತಿಹಾಸಿಕ ಜರ್ಮನಿಯ ಡ್ರೆಸ್ಡೆನ್ ನಗರ

ನನ್ನ ಮೊದಲ ಯುರೋಪ್ ಪ್ರವಾಸ ಪ್ರಾರಂಭವಾಗಿದ್ದು 2014 ರಲ್ಲಿ, ಅಲ್ಲಿಂದ ಇಲ್ಲಿವರೆಗೂ ಮೂರು ಬಾರಿ ಜರ್ಮನಿ, ಫ್ರಾನ್ಸ್ ರಾಷ್ಟ್ರಗಳಿಗೆ ಭೇಟಿ ನೀಡಿದ್ದೇನೆ. ಇದಕ್ಕೂ ಮೊದಲು ಮಧ್ಯಪ್ರಾಚ್ಯರಾಷ್ಟಗಳನ್ನು ಹೊರತು ಪಡಿಸಿ ಕೆನಡಾ, ತೈವಾನ್, ಚೈನಾ ರಾಷ್ಟ್ರಗಳಿಗೆ ಭೇಟಿ ನೀಡಿದ್ದೇನೆ. ಆದರೆ, ಹೆಚ್ಚಾಗಿ ನನ್ನನ್ನ ಆಕರ್ಷಿಸಿದ್ದು ಯುರೋಪ್ ರಾಷ್ಟಗಳು. ಯಾಕೆಂದರೆ ಅಲ್ಲಿನ ಐತಿಹಾಸಿಕ ನಗರಗಳು, ಅಲ್ಲಿ ಆಳ್ವಿಕೆ ನಡೆಸಿದ್ದ ರಾಜಮನೆತನಗಳು, ಈ ಹಿಂದೆ ನಡೆದಿದ್ದ ಯುದ್ಧಗಳು, ಶತಮಾನಗಳ ಹಿಂದೆ ನಡೆದ ಕೈಗಾರಿಕಾ ಕ್ರಾಂತಿಯ ಕುರುಹುಗಳು, ಆ ನಗರಗಳಲ್ಲಿರುವ ಪಾರಂಪಾರಿಕ ಕಟ್ಟಡಗಳು ಅದರ ಹಿಂದಿರುವ  ಇತಿಹಾಸದ ಹಿನ್ನೆಲೆ, ಹೀಗೆ ಎಲ್ಲವನ್ನು ಅರಿಯುವ ಒಂದು ಕುತೂಹಲ. ಈ ಎರಡನೇ ಪ್ರಪಂಚ ಯುದ್ದದ ಸಮಯದಲ್ಲಿ ಜರ್ಮನಿಯ ಹಲವು ನಗರಗಳ ಮೇಲೆ ಹೆಚ್ಚಿನ ಬಾಂಬ್ ದಾಳಿ ನಡೆಸಿದ್ದರು. ಅದರಲ್ಲಿ ಪ್ರಮುಖವಾದ ಒಂದು ನಗರ ಈ ಡ್ರೆಸ್ಡೆನ್ ನಗರ, ಈ ಹಿಂದೆ  ಜರ್ಮನಿ ರಾಷ್ಟ್ರ ಏಕೀಕರಣದ ಮುಂಚೆ ಪೂರ್ವ ಜರ್ಮನಿಯ ಭಾಗವಾಗಿತ್ತು. ಈ ಕಾರಣದಿಂದ ಒಮ್ಮೆ ಪೂರ್ವ ಜರ್ಮನಿಯ ಸಾಕ್ಸೋನಿ ರಾಜ್ಯದ ರಾಜಧಾನಿ ಡ್ರೆಸ್ಡೆನ್  ಪ್ರವಾಸ ಕೈಗೊಂಡಿದ್ದೆ. ಎಲ್ಬೆ ನದಿಯ ದಂಡೆಯ ಮೇಲೆ ಈ ನಗರ ಹರಡಿಕೊಂಡಿದೆ, ಉತ್ತರಕ್ಕೆ ಸುಮಾರು 30 ಕಿಲೋಮೀಟರ್ ಜೆಕ್ ಗಣರಾಜ್ಯದೊಂದಿಗೆ ಗಡಿಯನ್ನು ಹಂಚಿಕೊಂಡಿದೆ. ಈ ಪ್ರದೇಶವು ಸಾಕ್ಸೋನ್ ಪ್ರಾಂತ್ಯದ ಆಡಳಿತಗಾರರ ಅಧಿಕಾರ ಕೇಂದ್ರವಾಗಿತ್ತು. ಯುರೋಪಿನ ನಗರಗಳಲ್ಲಿ ಸುಂದರವಾದ ಒಂದು ಪಟ್ಟಣ ಇದು. ಸಾಕ್ಸೋನ್ ಪ್ರಾಂತ್ಯದ ಆಡಳಿತಗಾರರು ನದಿ ತೀರದಲ್ಲಿ ಅರಮನೆಗಳು ಮತ್ತು ಗಗನ ಚುಂಬಿ ಚರ್ಚು ಕಟ್ಟಡಗಳನ್ನು ನಿರ್ಮಿಸುವುದರತ್ತ ತಮ್ಮ ಹೆಚ್ಚಿನ ಗಮನವನ್ನು ಹರಿಸಿದ್ದರು. ಇವರ ಕಾಲದಲ್ಲಿ ಈ ಪ್ರಾಂತ್ಯ ಸುಂದರವಾದ ಚಿತ್ರಕಲೆ, ವಾಸ್ತುಶಿಲ್ಪ, ಶಿಲ್ಪಕಲೆ ಮತ್ತು  ಪ್ರಾಚೀನ ವಸ್ತುಗಳ ಸಂಗ್ರಹಗಳ ಬೀಡಾಗಿತ್ತು ಎಂದು ಇತಿಹಾಸಕಾರರು ದಾಖಲಿಸಿದ್ದಾರೆ

2ನೇ ಪ್ರಪಂಚ ಯುದ್ದದ ದಾಳಿಯಿಂದ ಅಪಾರವಾದ ಹಾನಿಗೊಳಗಾದರೂ, ದೂಳಿನಿಂದ ಎದ್ದು ನಿಂತ ಜರ್ಮನಿಯ ಡ್ರೆಸ್ಡೆನ್ ನಗರ

ಎರಡನೇ ಪ್ರಪಂಚ ಯುದ್ದದ ವೇಳೆ ಜರ್ಮನಿಯ ಬಹುತೇಕ ನಗರಗಳು ತೀವ್ರವಾದ ಬಾಂಬ್ ದಾಳಿಗೆ ಒಳಗಾಗಿದ್ದವು. ಡ್ರೆಸ್ಡೆನ್ ನಗರ ಒಂದರ ಮೇಲೆಯೇ ಸುಮಾರು 800 RAF ಬ್ರಿಟಿಷ್ ವಿಮಾನಗಳು 1800 ಟನ್‌ಗಳಿಗಿಂತ ಹೆಚ್ಚು ಬಾಂಬ್‌ಗಳನ್ನು ಎಸೆದಿದ್ದವು ನಂತರದ ದಿನಗಳಲ್ಲಿ 520 ಕ್ಕೂ ಹೆಚ್ಚು USAAF ಬಾಂಬರ್‌ಗಳು ವಿವಿಧ ಪ್ರದೇಶಗಳಲ್ಲಿ ಬಾಂಬ್ ದಾಳಿ ಮಾಡಿದ್ದರು. ಇಂತಹ ಭಯಂಕರ ದಾಳಿಯಲ್ಲಿ ಅಂದಾಜು 25 ಸಾವಿರ ಜನರು ಅಸುನೀಗಿದ್ದಲ್ಲದೆ ಹಲವಾರು ಪಾರಂಪಾರಿಕ ಕಟ್ಟಡಗಳು ತೀವ್ರವಾಗಿ ಹಾನಿಗೊಳಗಾಗಿದ್ದವು. ಹಿಟ್ಲರ್ ಸಾವಿನವರೆಗೂ ಜರ್ಮನಿಯ ವಿವಿಧ ಪ್ರದೇಶಗಳ ಮೇಲೆ ಬ್ರಿಟೀಷ್ ಮಿತ್ರಪಡೆಗಳಿಂದ ತೀವ್ರವಾದ ದಾಳಿ ನಡೆದಿತ್ತು. ಈ ದಾಳಿಯಿಂದ ಹಾನಿಗೊಳಗಾಗಿದ್ದ ಕಟ್ಟಡಗಳು ದಶಕಗಳ ಕಾಲ ಹಾಗೆಯೇ ಉಳಿದಿದ್ದವು. ಯುದ್ದದ ನಂತರ ಜರ್ಮನಿ ರಾಷ್ಟ್ರ ಪೂರ್ವ ಮತ್ತು ಪಶ್ಚಿಮ ಜರ್ಮನಿ ಎಂದು ವಿಭಜನೆಯಾಯಿತು.  ಹಿಟ್ಲರ್ ಸಾವಿನ ನಂತರ, ಯುನೈಟೆಡ್ ಸ್ಟೇಟ್ಸ್, ಯುನೈಟೆಡ್ ಕಿಂಗ್‌ಡಮ್ ಮತ್ತು ಫ್ರಾನ್ಸ್ ಈ ಮೂರು ಮಿತ್ರರಾಷ್ಟ್ರಗಳ ಸಹಯೋಗದಲ್ಲಿ 12 ರಾಜ್ಯಗಳಿರುವ ಪಶ್ಚಿಮ ಜರ್ಮನಿ  ಅಥವ Federal Republic of Germany (FRG) ಎನ್ನುವ ರಾಷ್ಟ್ರವನ್ನಾಗಿ 23 May 1949 ರಲ್ಲಿ ಸ್ಥಾಪಿಸಿದ್ದರು. ಇತ್ತ ಪೂರ್ವ ಜರ್ಮನಿಯಲ್ಲಿ  ಕಮ್ಯುನಿಸ್ಟ್ ಪರ ಒಲವಿದ್ದ ಸ್ಥಳೀಯ ನಾಯಕರ ಸಹಾಯದಿಂದ ಸೋವಿಯತ್ ರಷ್ಯಾದ ಪಡೆಗಳು ಪೂರ್ವದ ರಾಜ್ಯಗಳನ್ನ ನಿಯಂತ್ರಣದಲ್ಲಿಟ್ಟುಕೊಂಡು ಪೂರ್ವ ಜರ್ಮನಿಯೆನ್ನುವ ಇನ್ನೊಂದು ರಾಷ್ಟವನ್ನು 7 October 1949ರಲ್ಲಿ ಕಟ್ಟಿದ್ದರು.  ಈ ವಿಭಜನೆಯ ನಂತರ ಪಶ್ಚಿಮ ಜರ್ಮನಿ ಆಗಾಧವಾದ ಬೆಳವಣಿಗೆಯನ್ನು ಕಂಡರೆ, ಕಮ್ಯುನಿಸ್ಟ್ ಆಡಳಿತವಿದ್ದ ಪೂರ್ವ ಜರ್ಮನಿ, ಅಭಿವೃದ್ದಿಯಲ್ಲಿ ಹಿಂದುಳಿದಿತ್ತು. ಪೂರ್ವ ಜರ್ಮನಿಯ ಸರ್ಕಾರ ದಾಳಿಗೊಳಗಾಗಿದ್ದ ನಗರಗಳನ್ನು ಪುನರ್ ನಿರ್ಮಾಣಮಾಡಲು ಆಮೆಗತಿಯಲ್ಲಿ ಸಾಗುತಿತ್ತು. ಹಣಕಾಸಿನ ಕೊರತೆ, ನಿರುದ್ಯೋಗ ಸಮಸ್ಯೆ ಆ ಸರ್ಕಾರವನ್ನು ಕಾಡುತಿತ್ತು. ಬದಲಾಗಿ ಕಮ್ಯುನಿಸ್ಟ್ ಸರ್ಕಾರದ ನೀತಿಗಳು ಪೂರ್ವ ಜರ್ಮನಿಯ ಅಭಿವೃದ್ದಿಗೆ ಅಡ್ಡಗಾಲು ಹಾಕಿತ್ತು.  ಕಾಲಕ್ರಮೇಣ ಪೂರ್ವ ಜರ್ಮನಿಯ ಬಹುತೇಕ ಜನರು ಪಶ್ಚಿಮಕ್ಕೆ ವಲಸೆ ಹೋಗಲು ಶುರು ಮಾಡಿದರು. ಈ ವಲಸೆ ದಿನೇ ದಿನೇ ಹೆಚ್ಚುತಿತ್ತು.  ಕ್ರಮೇಣ ಪೂರ್ವ ಜರ್ಮನಿಯ ಜನರು ಏಕೀಕರಣದತ್ತ ಒಲವು ತೋರಿದರು. ಬಹಳಷ್ಟು ಕಡೆ ಪ್ರತಿಭಟನೆಗಳು ನಡೆದವು, ಈ ಬಗ್ಗೆ ನ್ಯಾಟೋ ಮತ್ತು ಸೋವಿಯಟ್ ಒಕ್ಕೂಟದ ನಡೆದ ಹಲವಾರು ಮಾತುಕತೆಗಳು ವಿಫಲಕಂಡವು. ಸೋವಿಯಟ್ ಒಕ್ಕೂಟ ಯಾವಾಗ ಕುಸಿತ ಕಾಣಲು ಪ್ರಾರಂಭಿಸಿತೋ ಆಗ ಮತ್ತೊಮ್ಮೆ ಮಾತುಕತೆಗಳು ಶುರುವಾಗಿ ಕೊನೆಗೆ ವಿಭಜಿತ ಜರ್ಮನಿಯು 3 October 1990ರಂದು ಪುನರ್ ಏಕೀಕರಣಗೊಂಡಿತು.  

ಈ ನಲವತ್ತು ವರ್ಷಗಳ ಅವಧಿಯಲ್ಲಿ ಪೂರ್ವ ಜರ್ಮನಿ ಅಭಿವೃದ್ದಿಯಲ್ಲಿ ಬಹಳಷ್ಟು ಹಿಂದುಳಿದಿತ್ತು. ಆ ಪ್ರದೇಶಗಳನ್ನು ಅಭಿವೃದ್ದಿ ಪಡಿಸಲು ಪಶ್ಚಿಮ ಜರ್ಮನಿಯ ಜನರು ಹೆಚ್ಚಿನ ತೆರಿಗೆಯನ್ನು ಪಾವತಿಸುವ ಯೋಜನೆಯನ್ನು ಜಾರಿಗೆ ತಂದು ಆ ಆದಾಯವನ್ನೆಲ್ಲ ಪೂರ್ವ ಜರ್ಮನಿಯ ಪುನರ್ ನಿರ್ಮಾಣಕ್ಕೆ ವಿನಿಯೋಗಿಸಿದರು. ತಮ್ಮದೇ ಜರ್ಮನ್ನರ ಅಭಿವೃದ್ದಿಗಾಗಿ ಆ ಜನರು ಯಾವುದೇ ಅಡ್ಡಿ ಆಂತಂಕ ವ್ಯಕ್ತಪಡಿಸದೆ ಸಂಪೂರ್ಣ ಸಹಕಾರ ನೀಡಿ ದೇಶದ ಪೂರ್ವಭಾಗವನ್ನು ಪುನರ್ ನಿರ್ಮಾಣ ಮಾಡಲು ಕೈಜೋಡಿಸಿದ್ದರು. ಯಾವಾಗ ಪಶ್ಚಿಮ ಜರ್ಮನಿಯ ಜನರ ತೆರಿಗೆ ಹಣ ಇದಕ್ಕೆ ವಿನಿಯೋಗವಾಯಿತೋ ಸರ್ಕಾರದಿಂದ ವಿಶೇಷ ಯೋಜನೆಗಳನ್ನು ಜಾರಿಗೆ ತಂದು ಜರ್ಮನಿಯ ಆ ಗತ ವೈಭವವನ್ನು ಮರಳಿ ಬರುವಂತೆ ಮಾಡಲಾಯಿತು. ನಮ್ಮ ಪ್ರವಾಸಿ ಗೈಡ್, ಬಾಂಬ್ ದಾಳಿಯಿಂದ ಹಾನಿಗೊಳಗಾಗಿದ್ದ ಆ ನಗರದ ಹಳೇ ಫೋಟೋ ಗಳನ್ನು ತೋರಿಸಿ ನಂತರ, ಮತ್ತೆ ಪುನರ್ ನಿರ್ಮಾಣ ಗೊಂಡ ಪಾರಂಪಾರಿಕ ಕಟ್ಟಡಗಳನ್ನು ತೋರಿಸುತಿದ್ದ, ನಮಗೆ ಬಹಳ ಆಶ್ಚರ್ಯವಾಗುತಿತ್ತು. ಜರ್ಮನ್ನರು ತುಂಬಾ ಆಸ್ಥೆಯಿಂದ ತಮ್ಮ ನಗರಗಳನ್ನು ಮತ್ತೆ ಕಟ್ಟಿದ್ದರು. ಬಹಳಷ್ಟು ವಿವರಣೆ ನೀಡುತ್ತಾ ನಮ್ಮನ್ನ ಡ್ರೆಸ್ಡೆನ್ ನಗರದ ಪ್ರಮುಖ ಸ್ಥಳಗಳಿಗೆ ಕರೆದೋಯ್ದಿದ್ದ. 

ಈ ನಗರದಲ್ಲಿ ಹಲವಾರು ಪ್ರವಾಸಿ ಆಕರ್ಷಣೆಯ ಸ್ಥಳಗಳಿವೆ. ಅವುಗಳಲ್ಲಿ ಪ್ರಮುಖವಾದ ಸ್ಥಳಗಳು ಈ ಕೆಳಗಿನಂತಿವೆ.  

1. ಫ್ರೌನ್‌ಕಿರ್ಚೆ ಮತ್ತು ನ್ಯೂಮಾರ್ಕ್ ಸ್ಕ್ವೇರ್ (Frauenkirche and Neumarkt Square):

ಪ್ರೊಟೆಸ್ಟಂಟ್ ಚರ್ಚ್ ಅನ್ನು 1726 ಮತ್ತು 1743 ರ ನಡುವೆ ನಿರ್ಮಿಸಲಾಯಿತು, 1945 ರಂದು ನಡೆದ ದಾಳಿಗೆ ತೀವ್ರವಾಗಿ ಹಾನಿಗೊಳಗಾಗಿತ್ತು. 1990 ರಿಂದ ಪುನರ್ನಿರ್ಮಾಣ ಕಾರ್ಯರಂಭ ಮಾಡಲಾಯಿತು. ಸುತ್ತಮುತ್ತಲಿನ ನ್ಯೂಮಾರ್ಕ್ ಚೌಕದಲ್ಲಿ, ವಿಶಿಷ್ಟವಾದ ಬರೊಕ್ ಗೇಬಲ್ಡ್ ಮನೆಗಳನ್ನು ವಿಭಾಗವಾರು ಪುನರ್ನಿರ್ಮಿಸಲಾಯಿತು. ಅರ್ಧ ಶತಮಾನಕ್ಕೂ ಹೆಚ್ಚು ಸಮಯದ ನಂತರ, ನಗರ ಪುರಾತನ ಕೇಂದ್ರ ಪ್ರದೇಶಕ್ಕೆ ಗತವೈಭವ ಮರಳಿ ದೊರೆಯಿತು. 

2. ಪ್ರೊಸೆಶನ್ ಆಫ್ ಪ್ರಿನ್ಸೆಸ್: (Procession of Princes):

ಅರಮನೆಯ ಹಿಂದಿನ ಪ್ರದೇಶದಿಂದ ನ್ಯೂಮಾರ್ಕ್ಟ್ ಮತ್ತು ಸ್ಕ್ಲೋಸ್ಪ್ಲ್ಯಾಟ್ಜ್ ಚೌಕಗಳನ್ನು ಸಂಪರ್ಕಿಸುವ ಈ ಒಂದು ರಸ್ತೆಯಿದೆ.  ಜಾಗವಿದೆ ಸಂಪರ್ಕಿಸುತ್ತದೆ ಇಲ್ಲಿನ 101-ಮೀಟರ್ ಭಿತ್ತಿಚಿತ್ರವು ಹೌಸ್ ಆಫ್ ವೆಟ್ಟಿನ್‌ನ ಆಡಳಿತಗಾರರನ್ನು ಆರೋಹಿತವಾದ ಮೆರವಣಿಗೆಯಲ್ಲಿ ಹೋಗುತ್ತಿರುವುದನ್ನು ತೋರಿಸುತ್ತದೆ. ಈ ಭಿತ್ತಿಚಿತ್ರವನ್ನು ಮ್ಯೂರೆಲ್ ಕಲೆಗಾರಿಕೆಯಿಂದ ಮೀಸೆನ್ ಪಿಂಗಾಣಿಯ ತುಣುಕುಗಳನ್ನು ಗೋಡೆಗೆ ಟೈಲ್ಸ್ ನಂತೆ ಅಂಟಿಸಲಾಗಿದೆ. ಈ ಒಂದು ಭಿತ್ತಿಚಿತ್ರ ನೋಡಲು ತುಂಬಾ ಸುಂದರವಾಗಿದೆ

3. ರಾಯಲ್ ಪ್ಯಾಲೇಸ್ (Royal Palce):

 ಈ ನವೋದಯ ಕಟ್ಟಡವನ್ನು 15 ನೇ ಶತಮಾನದಲ್ಲಿ ಸ್ಯಾಕ್ಸನ್ ಪ್ರಾಂತ್ಯದ ರಾಜಕುಮಾರರು ಮತ್ತು ರಾಜರ ಅಧಿಕಾರದ ಹೊಸ ಕೇಂದ್ರವಾಗಿ ನಿರ್ಮಿಸಲಾಯಿತು. ಎರಡನೆಯ ಮಹಾಯುದ್ಧದ ದಾಳಿಯಲ್ಲಿ, ಹಾನಿಗೊಳಗಾದ  ನಂತರ, 1985 ರಲ್ಲಿ ಕಟ್ಟಡವನ್ನು  ವಸ್ತುಸಂಗ್ರಹಾಲಯ ಸಂಕೀರ್ಣವಾಗಿ ಪುನರ್ನಿರ್ಮಿಸಿ ಪ್ರಾರಂಭಿಸಲಾಯಿತು.


4. ಸ್ಯಾನ್ಕಿಸ್ಸಿಮೇ ಟ್ರಿನಿಟಾಟಿಸ್ ಕ್ಯಾಥೆಡ್ರಲ್ (Sanctissimae Trinitatis Cathedral):-

ಕ್ಯಾಥೋಲಿಕ್ ಕೋರ್ಟ್ ಚರ್ಚ್ ಎಂದೂ ಕರೆಯಲ್ಪಡುವ ಈ ಕ್ಯಾಥೆಡ್ರಲ್ ಪಾರಂಪಾರಿಕ ಕಟ್ಟಡ ಸ್ಕ್ಲೋಸ್‌ಪ್ಲಾಟ್ಜ್ ಮತ್ತು ಥಿಯೇಟರ್‌ಪ್ಲಾಟ್ಜ್ ನಡುವೆ ಇದೆ ಮತ್ತು ಇದು ಸ್ಯಾಕ್ಸೋನಿಯ ಅತಿದೊಡ್ಡ ಚರ್ಚ್ ಕಟ್ಟಡವಾಗಿದೆ. ಇದನ್ನು 1738 ಮತ್ತು 1754 ರ ನಡುವೆ ಬರೊಕ್ ಶೈಲಿಯಲ್ಲಿ ಚಿಯಾವೆರಿ ನಿರ್ಮಿಸಿದರು. 1980 ರಿಂದ ಇದು ಡ್ರೆಸ್ಡೆನ್-ಮಿಸೆನ್ ಡಯಾಸಿಸ್ನ ಕ್ಯಾಥೆಡ್ರಲ್ ಆಗಿದೆ.

5. ಸೆಂಪರ್ ಒಪೇರಾ ಹೌಸ್ (Semper Opera and Theaterplatz)

1838 ಮತ್ತು 1841 ರ ನಡುವೆ ಈ ಒಪೆರಾ ಹೌಸ್ ಅನ್ನು ನಿರ್ಮಿಸಲಾಯಿತು. 1945 ರಲ್ಲಿ ಡ್ರೆಸ್ಡೆನ್ ಬಾಂಬ್ ದಾಳಿಗೆ ಬಲಿಯಾಯಿತು. ಸೆಂಪರ್ ಒಪೇರಾ ಹೌಸ್ ಅನ್ನು ವಿಶ್ವದ ಅತ್ಯಂತ ಸುಂದರವಾದದ್ದು ಎಂದು ಪರಿಗಣಿಸಲಾಗಿದೆ ಮತ್ತು ಡ್ರೆಸ್ಡೆನ್‌ನ ಮುಖ್ಯ ಸ್ಥಳಗಳಲ್ಲಿ ಇದು ಒಂದಾಗಿದೆ.



6. ಜ್ವಿಂಗರ್ ಅರಮನೆ (Zwinger and Old Masters Picture Gallery)

ಬರೊಕ್ ಅವಧಿಯ ಅಂತ್ಯದ ಅತ್ಯಂತ ಮಹತ್ವದ ಕಟ್ಟಡ. ವಾಸ್ತುಶಿಲ್ಪ, ಶಿಲ್ಪಕಲೆ ಮತ್ತು ಚಿತ್ರಕಲೆಗಳು ಎಲ್ಲವೂ ಸಮ್ಮಿಳಿನಗೊಂಡ ಸುಂದರವಾದ ಕಟ್ಟಡ. 1710 ಮತ್ತು 1728 ರ ನಡುವೆ ಈ ಅರಮನೆಯನ್ನು ಕಟ್ಟಲಾಗಿದೆ.  

ಇಂದು ಈ  ಕಟ್ಟಡವು ಓಲ್ಡ್ ಮಾಸ್ಟರ್ಸ್ ಪಿಕ್ಚರ್ ಗ್ಯಾಲರಿ, ರಾಯಲ್ ಕ್ಯಾಬಿನೆಟ್ ಆಫ್ ಮ್ಯಾಥಮೆಟಿಕಲ್ ಮತ್ತು ಫಿಸಿಕಲ್ ಇನ್ಸ್ಟ್ರುಮೆಂಟ್ಸ್ ಮತ್ತು ಪಿಂಗಾಣಿ ಸಾಮಗ್ರಿಗಳ ಸಂಗ್ರಹವನ್ನು ಹೊಂದಿದೆ.

7. ಬ್ರೂಲ್ಸ್ ಟೆರೇಸ್ (Stroll along Brühl's Terrace) 

ಡ್ರೆಸ್ಡೆನ್‌ನಲ್ಲಿರುವ ಎಲ್ಬೆ ನದಿಯ ದಂಡೆಗಳ ಮೇಲೆ 1739 ಮತ್ತು 1748 ರ ನಡುವೆ ಅತ್ಯಂತ ವಾಸ್ತುಶಿಲ್ಪೀಯವಾಗಿ ಸುಂದರವಾದ ಈ ಭಾಗವನ್ನು ಖಾಸಗಿ ಉದ್ಯಾನಗಳಾಗಿ ನಿರ್ಮಿಸಲಾಯಿತು. ಇದನ್ನು "ಯುರೋಪ್‌ನ ಬಾಲ್ಕನಿ" ಎಂದು ಕರೆಯಲಾಗುತ್ತದೆ. ಮತ್ತು ಟೆರೇಸ್ನಿಂದ ಆರ್ಟ್ ಅಕಾಡೆಮಿ, ಡ್ರೆಸ್ಡೆನ್ ಕೋಟೆ ಮತ್ತು ಆಲ್ಬರ್ಟಿನಮ್ ಅನ್ನು ಪ್ರವೇಶಿಸಬಹುದು.

8. ಗೋಲ್ಡನ್ ಹಾರ್ಸ್ಮನ್ (Golden Horseman)

ಡ್ರೆಸ್ಡೆನ್‌ನ ಅತ್ಯಂತ ಪ್ರಸಿದ್ಧವಾದ ಈ ಸ್ಮಾರಕವನ್ನು 1732-1734 ರ ನಡುವೆ  ನಿರ್ಮಿಸಲಾಯಿತು. ಅಗಸ್ಟಸ್ ದಿ ಸ್ಟ್ರಾಂಗ್ ಎಂದು ಕರೆಯಲ್ಪಡುವ ಎಲೆಕ್ಟರ್ ಫ್ರೆಡ್ರಿಕ್ ಆಗಸ್ಟ್ I, ಪುರಾತನ ವಸ್ತ್ರವನ್ನು ಧರಿಸಿ ಕುದುರೆಯ ಮೇಲೆ  ಸವಾರಿ ಮಾಡುವುದನ್ನು ತೋರಿಸುತ್ತದೆ. ಈ ಪ್ರತಿಮೆಯನ್ನು ಸ್ಮಿತ್ ಲುಡ್ವಿಗ್ ವೈಡೆಮನ್ ಎನ್ನುವವರು ತಯಾರಿಸಿದ್ದರಂತೆ. ಗೋಲ್ಡನ್ ಹಾರ್ಸ್‌ಮ್ಯಾನ್ ಅನ್ನು ಹಲವಾರು ಬಾರಿ ಪುನಃಸ್ಥಾಪಿಸಲಾಗಿದೆ. ಈ ವಿಗ್ರಹವು ಸರಿಸುಮಾರು 500 ಗ್ರಾಂ ಚಿನ್ನದ ಲೇಪನವನ್ನು ಹೊಂದಿದೆ. 

9. ಗ್ರಾಸರ್ ಗಾರ್ಟನ್ (Grosser Garten) 

ಥಿಯೇಟರ್‌ಪ್ಲಾಟ್ಜ್‌ನ ಆಗ್ನೇಯಕ್ಕೆ 3.5 ಕಿಮೀ ದೂರದಲ್ಲಿರುವ ಗ್ರಾಸರ್ ಗಾರ್ಟನ್, ಡ್ರೆಸ್ಡೆನ್‌ನಲ್ಲಿನ ಅತಿದೊಡ್ಡ ಹಸಿರು ಉದ್ಯಾನವನ. 17 ನೇ ಶತಮಾನದಲ್ಲಿ ಈ ಉದ್ಯಾನವನ್ನು ನಿರ್ಮಾಣ ಮಾಡಲಾಗಿತ್ತು. ಬೇಸಿಗೆ ಕಾಲದಲ್ಲಿ ಈಗ ಸಂಗೀತ ಕಚೇರಿಗಳು, ವಿವಿಧ ಪ್ರದರ್ಶನಗಳು ಮತ್ತು ಪಟಾಕಿ ಪ್ರದರ್ಶನಗಳನ್ನು ಇಲ್ಲಿ ಆಯೋಜಿಸಲಾಗುತ್ತಿದೆ.


ಈ ನಗರದಲ್ಲಿ ಇನ್ನು ಹಲವಾರು ವೈಶಿಷ್ಟ್ಯವಿರುವ ಸ್ಮಾರಕಗಳು, ಪಾರಂಪಾರಿಕ ಕಟ್ಟಡಗಳು ಐತಿಹಾಸಿಕ ಸ್ಮಾರಕಗಳು ಸುಂದರವಾದ ಎಲ್ಬೆ ನದಿ ಇತ್ಯಾದಿ ಇದೆ. ಜರ್ಮನಿಯ ಪ್ರವಾಸಕ್ಕೆ ಹೋದರೆ ಒಂದೆರೆಡು ದಿನ ಆರಾಮವಾಗಿ ಇಲ್ಲಿ ಸಮಯ ಕಳೆಯಬಹುದು. 





ಬುಧವಾರ, ಸೆಪ್ಟೆಂಬರ್ 27, 2023

ಸುಝೋ: ಚೀನಾದ ವೆನಿಸ್

ನಾನು ಕೆಲಸ ಮಾಡುವ ಒಮಾನ್ ರಾಷ್ಟ್ರದ ಆಫೀಸಿನ ಬಿಜಿನೆಸ್ ಗೆ ಸಂಭಂದ ಪಟ್ಟಂತೆ ಒಮ್ಮೆ ಚೈನಾ ಪ್ರವಾಸಕ್ಕೆ ಹೋಗಿದ್ದೆ. ಈ ಪ್ರವಾಸದಲ್ಲಿ ಪ್ರಮುಖ ನಗರಗಳಾದ ಬೀಜಿಂಗ್, ಶಾಂಘೈ ಮತ್ತು ಸುಝೋ ನಗರಗಳಲ್ಲಿ ಭೇಟಿ ನೀಡುವ ಅವಕಾಶ ಒದಗಿಬಂದಿತ್ತು. ಒಟ್ಟು ಒಂದು ವಾರದ ಕೆಲಸ. ಮಸ್ಕತ್ ಗೆ ವಾಪಾಸು ಹಿಂದಿರುಗುವ ದಿನ ನಮ್ಮ ಆಥಿತೇಯ ಕಂಪನಿಯವರು ಪ್ರಾಚೀನ ಐತಿಹಾಸಿಕ ನಗರವಾದ ಸುಝೋ ನಗರದ ಪ್ರವಾಸವನ್ನು ಆಯೋಜಿಸಿದ್ದರು. ಸುಝೋ ನಗರ ಚೀನಾದ ಅತಿ ಪುರಾತನವಾದ ಸಾಂಸ್ಕೃತಿಕ ನಗರ. ಪೂರ್ವ ಚೀನಾದ ಜಿಯಾಂಗ್ಸು ಪ್ರಾಂತ್ಯದಲ್ಲಿ ಈ ನಗರವಿದೆ. ಕ್ರಿ.ಪೂ.514ರಲ್ಲಿ ಈ ನಗರವನ್ನು ನಿರ್ಮಾಣಮಾಡಿದ್ದರು ಎಂದು ಹೇಳಲಾಗುತ್ತಿದೆ. 15ನೇ ಶತಮಾನದ ಅಂತ್ಯದಿಂದ 19 ನೇ ಶತಮಾನದವರೆಗೆ, ಸುಝೋ ನಗರ ಚೀನಾದ ಆರ್ಥಿಕ, ಸಾಂಸ್ಕೃತಿಕ ಮತ್ತು ವಾಣಿಜ್ಯ ಕೇಂದ್ರವಾಗಿತ್ತು. ಈ ನಗರ ಇಂದಿಗೂ ಪ್ರವಾಸಿಗರ ನೆಚ್ಚಿನ ತಾಣ. ಇಲ್ಲಿನ ಐತಿಹಾಸಿಕ ಪುರಾತನ ನೀರಿನ ಕಾಲುವೆಗಳು, ಕಲ್ಲಿನ ಸೇತುವೆಗಳು, ಪಗೋಡಗಳು ಮತ್ತು ಸುಂದರ  ಉದ್ಯಾನವನಗಳು ಪ್ರಮುಖ ಪ್ರವಾಸಿ ಆಕರ್ಷಣೆಗಳು.

 

ಈ ನಗರವನ್ನು ಸಾಮಾನ್ಯವಾಗಿ "ವೆನಿಸ್ ಆಫ್ ದಿ ಈಸ್ಟ್" ಅಥವಾ "ವೆನಿಸ್ ಆಫ್ ಚೀನಾ" ಎಂದು ಕರೆಯಲಾಗುತ್ತದೆ. ಇದಕ್ಕೆ ಕಾರಣವೇನೆಂದರೆ, ಯುರೋಪಿನ ವೆನೀಸ್ ನಗರದಲ್ಲಿರುವಂತೆ ಇಲ್ಲಿಯೂ ಸಹ ಭಾಗಶಃ ನಗರ ನೀರಿನೊಳಗೆ ಇದೆ. ಇಲ್ಲಿನ ಕಾಲುವೆಗಳಲ್ಲಿ  ಸಂಚರಿಸಲು ದೋಣಿಗಳ ವ್ಯವಸ್ಥೆಯಿದೆ. ಕಾಲುವೆಯ ಇಕ್ಕೆಲಗಳಲ್ಲಿ ಮನೆಗಳಿವೆ, ಅಂಗಡಿಗಳಿವೆ, ಹೋಟೇಲ್ ರೆಸ್ಟಾರೆಂಟ್ ಗಳಿವೆ. ಈ ಪ್ರದೇಶದ ಸೌಂದರ್ಯವನ್ನು ಅನುಭವಿಸಲು  ದೋಣಿಯಲ್ಲಿಯೇ ಪ್ರಯಾಣಿಸಬೇಕು. ನಮ್ಮ ಪ್ರವಾಸದ ಸಮಯದಲ್ಲಿ ಈ ಕಾಲುವೆಯಲ್ಲಿ ನಾವು ಪ್ರಯಾಣಿಸುವಾಗ, ಇದರ ಕುರಿತು ಹಲವಾರು ಕುತುಹಲಕಾರಿ ವಿಷಯಗಳನ್ನು ತಿಳಿದುಕೊಂಡೆವು. ಈ ಕಾಲುವೆಗಳೆಲ್ಲ ದೊಡ್ಡದಾದ ಗ್ರ್ಯಾಂಡ್ ಕೆನಾಲ್ ಅನ್ನು ಸಂಪರ್ಕಿಸುತ್ತವೆ. ಸುಝೋ ನಗರದ ಕೆಲ ಭಾಗ ಈ ಬೃಹತ್ ನೀರಿನ ಕಾಲುವೆ ಆಕ್ರಮಿಸಿದೆ. ಈ ಕಾಲುವೆಗೆ ಸುಧೀರ್ಘವಾದ ಇತಿಹಾಸವಿದೆ. ಶತಶತಮಾನಗಳ ಹಿಂದೆ ಸುಲಭವಾಗಿ ಸರಕು ಸರಂಜಾಮುಗಳನ್ನು ಸರಬರಾಜು ಮಾಡಲು ಈ ಕಾಲುವೆಯನ್ನು ಕಟ್ಟಲಾಗಿದೆ ಎಂದು ಹೇಳುತ್ತಾರೆ. ಆದರೆ ಕೆಲವರ ಪ್ರಕಾರ ಅಂದಿನ ರಾಜಪರಿವಾರದವರಿಗೆ ನೂರಾರು ಕಿ.ಮಿ. ದೂರದ ಊರುಗಳಿಗೆ ರಸ್ತೆ ಮೂಲಕ ಪ್ರಯಾಣದಲ್ಲಿ ಕುದುರೆ, ಎತ್ತಿನಗಾಡಿ ಮುಂತಾದವುಗಳಲ್ಲಿ ಪ್ರಯಾಣಿಸಿದರೆ ವಿಪರೀತವಾದ ಮೈ ನೋವು ಬರುತಿತ್ತು, ಸುಸ್ತಾಗುತಿತ್ತು. ಇಂತಹ  ಧೀರ್ಘವಾದ ಪ್ರಯಾಣವನ್ನು ರಾಜಪರಿವಾರದ ಅದರಲ್ಲೂ ರಾಜ, ರಾಣಿ, ರಾಜಕುಮಾರಿ ಮತ್ತಿತರು ಕಾಲುವೆ ಮುಖಾಂತರ ಸುಲಭವಾಗಿ ಪ್ರಯಾಣ ಮಾಡಲು ನಿರ್ಮಿಸಲಾಯಿತು ಎಂದು ಹೇಳುತ್ತಾರೆ. ಅದೇನೆ ಇರಲಿ, ಈ ಕಾಲುವೆಯ ಉಪಯೋಗದಿಂದ ಚೀನಾದ ಆರ್ಥಿಕ ಪರಿಸ್ಥಿತಿ ತುಂಬಾ ಬಲಗೊಂಡಿತ್ತು ಎಂದು ಹಲವಾರು ಕಾಲಘಟ್ಟದಲ್ಲಿ ದಾಖಲಾಗಿದೆ.

 

ಈ ಕಾಲುವೆಯ ಉದ್ದ ಸುಮಾರು 1776 km (ಕಿ.ಮಿ) ನಷ್ಟು (ಬೀಜಿಂಗ್‌ನಿಂದ ಝೆಜಿಯಾಂಗ್ ಪ್ರಾಂತ್ಯದವರೆಗೆ), ಉದ್ದವಿದೆ. ಇದು ವಿಶ್ವದ ಅತಿ ಉದ್ದದ ದೊಡ್ಡ ಕಾಲುವೆಯಾಗಿದ್ದು, ಮಾನವ ನಿರ್ಮಿತ ಕೃತಕ ನದಿಯಾಗಿದೆ. ಬೀಜಿಂಗ್‌ನಿಂದ ಪ್ರಾರಂಭಿಸಿ,  ಟಿಯಾಂಜಿನ್ ಮತ್ತು ಹೆಬೈ, ಶಾಂಡೊಂಗ್, ಜಿಯಾಂಗ್ಸು ಮತ್ತು ಝೆಜಿಯಾಂಗ್ ಪ್ರಾಂತ್ಯಗಳ ಮೂಲಕ ಹಾಂಗ್‌ಝೌ ನಗರದವರೆಗೆ ಸಂಪರ್ಕ ಕಲ್ಪಿಸುತ್ತದೆ. ಕ್ರಿ.ಪೂ. 5 ನೇ ಶತಮಾನದಲ್ಲಿ ಇದನ್ನು ಮೊದಲು ಕಟ್ಟಲು ಪ್ರಾರಂಭಿಸಿದರು, ನಂತರ ಕ್ರಿ.ಶ. 581–618 ರಲ್ಲಿ ಮತ್ತು ಕ್ರಿ.ಶ. 1271–1633, ಹೀಗೆ ವಿವಿಧ ಕಾಲಘಟ್ಟದಲ್ಲಿ ಇಲ್ಲಿನ ರಾಜಮನೆತನಗಳು ಇದನ್ನು ವಿಸ್ತರಿಸುತ್ತ ಬಂದಿದ್ದಾರೆ.  ಈ ಕಾಲುವೆ  ಯುನೆಸ್ಕೋ (UNESCO) ವಿಶ್ವ ಪರಂಪರೆಯ ತಾಣವಾಗಿದೆ. ಈ ಕಾಲುವೆಯಲ್ಲಿ ಪ್ರಮುಖವಾಗಿ ಆಹಾರಧಾನ್ಯಗಳನ್ನು ಸಾಗಿಸಲಾಗುತಿತ್ತು. ಸೇನಾ ತುಕಡಿಗಳನ್ನು ಒಂದುಕಡೆ ಇನ್ನೊಂದು ಕಡೆಗೆ ಸಾಗಿಸಲು ಸಹ ಇದನ್ನ ಬಳಸುತಿದ್ದರು.  ಈ ಕಾಲುವೆಯಲ್ಲಿ ಸಂಚರಿಸಲು, ಅಂದಿನ ಕಾಲದಲ್ಲಿಯೇ ತಂತ್ರಜ್ನಾನವನ್ನು ಉಪಯೋಗಿಸಿ ಪ್ರಯಾಣಕ್ಕೆ ಸೂಕ್ತವಾದ ದೋಣಿಗಳನ್ನು ನಿರ್ಮಿಸುತಿದ್ದರು. ಸಾಗಾಣೆದಾರರು ಅಂದಿನ ಆಡಳಿತಗಾರರಿಗೆ, ಸುಂಕವನ್ನ ನೀಡಬೇಕಿತ್ತು. ಇದೊಂದು ಉತ್ತಮವಾದ ಆದಾಯವಾಗಿತ್ತು. ಈ ಸಾಗಾಟದ ಸಮಯದಲ್ಲಿ ದರೋಡೆಕೋರರು, ಲೂಟಿಕೋರರು ದಾಳಿಯಿಡುತಿದ್ದರಂತೆ, ಅವರಿಂದ ರಕ್ಷಿಸಲು ಅಲ್ಲಲ್ಲಿ ಸೈನಿಕರ ತುಕಡಿಗಳನ್ನ ನಿಯೋಜಿಸುತಿದ್ದರು. ಆದರೂ ಸಂಧರ್ಭ ನೋಡಿ, ಈ ದಾಳಿಕೋರರು ಆಹಾರಧಾನ್ಯಗಳು ಸೇರಿದಂತೆ ಮತ್ತಿತರ ವಸ್ತುಗಳನ್ನ ದರೋಡೆ ಮಾಡುತಿದ್ದರು.

 

ಒಂದು ಕಾಲದಲ್ಲಿ ಪ್ರತಿವರ್ಷ 8000 ಕ್ಕೂ ಹೆಚ್ಚಿನ ದೋಣಿಗಳು ಸಂಚರಿಸುತಿದ್ದ 1776 km (ಕಿ.ಮಿ) ಉದ್ದದ ಈ ಐತಿಹಾಸಿಕ ಕಾಲುವೆ ಕಾಲನ ಹೊಡೆತಕ್ಕೆ ಸಿಕ್ಕಿ, ಇಂದು ಹಾಳಾಗಿದೆ. ಕೆಲೆವೆಡೆ ಇದರ ಗುರುತುಗಳೇ ನಾಶವಾಗಿವೆ. ಕೆಲೆವೆಡೆ ಕಾಲುವೆ ಮುಚ್ಚಿ ಹೋಗಿದೆ. ಇಂದಿನ ಆಧುನಿಕ ಯುಗದಲ್ಲಿ ರಸ್ತೆ ರೈಲು ಮಾರ್ಗವನ್ನು ಯಥೇಚ್ಚವಾಗಿ ಉಪಯೋಗಿಸುತ್ತಿರುವುದರಿಂದ, ಎಲ್ಲೆಲ್ಲಿ ಅತಿ ಹೆಚ್ಚು ನೀರು ಇದೆಯೋ ಮತ್ತು ಸಂಪರ್ಕಯೋಗ್ಯವಿದೆಯೋ ಆ ಕಾಲುವೆ/ನದಿ ಮಾತ್ರ ಬಳಕೆಯಲ್ಲಿದೆ, ಮಿಕ್ಕಿದ್ದು ಹೂಳು ತುಂಬಿ ಮುಚ್ಚಿ ಹೋಗಿದೆ. ಕೆಲೆವೆಡೆ ಗುರುತೇ ಸಿಗದಷ್ಟು ಹಾಳಾಗಿದೆ. 12ನೇ ಶತಮಾನದ ಪ್ರಸಿದ್ದ ಪ್ರವಾಸಿಗ ಮಾರ್ಕೋಪೋಲೋ ಸೇರಿದಂತೆ ವಿವಿಧ ವಿದೇಶಿ ಪ್ರವಾಸಿಗರು ಈ ಐತಿಹಾಸಿಕ ಕಾಲುವೆ ಕುರಿತು ದಾಖಲಿಸಿದ್ದಾರೆ.

 

ಸುಝೋದಲ್ಲಿ, ಈ ಕಾಲುವೆ ಪ್ರಯಾಣದ ನಂತರ ವಿವಿಧ ಪ್ರವಾಸಿತಾಣಗಳಿಗೆ ನಮ್ಮ ಕರೆದುಕೊಂಡು ಹೋದರು. ಎಲ್ಲ ಸ್ಥಳಗಳು ಒಂದಕ್ಕಿಂತ ಒಂದು ಅದ್ಭುತವಾಗಿದ್ದವು. ಈ ಎಲ್ಲಾ ಸ್ಥಳಗಳು ನೂರಾರು ವರ್ಷಗಳ ಹಿಂದೆ ಕಟ್ಟಿದಂತಹವು. ಅವುಗಳನ್ನ ಇಂದಿಗೂ ಮೂಲ ಸ್ವರೂಪದಲ್ಲಿಯೇ ಉಳಿಸಿಕೊಂಡಿರುವುದು ಇಲ್ಲಿನ ವೈಶಿಷ್ಟ್ಯ. ಸುಝೋ ನಗರದ ಈ ಸ್ಥಳಗಳನ್ನ ನೋಡಿದೊಡನೆ, ಪುರಾತನ ಚೀನಾದ ನಗರವೊಂದನ್ನು ನೋಡಿದಂತಹ ಅನುಭವವಾಗುತ್ತದೆ.

 

*ಪ್ಯಾನ್ಮೆನ್ (ಪ್ಯಾನ್ ಗೇಟ್)*. ಪ್ಯಾನ್ಮೆನ್ ಎನ್ನುವ ಈ ರಮಣೀಯ ಪ್ರದೇಶವನ್ನು ಶಾಸ್ತ್ರೀಯ ಉದ್ಯಾನಗಳ ವಾಸ್ತುಶಿಲ್ಪದ ರಚನೆಯನ್ನು ಬಳಸಿಕೊಂಡು ಕೆಲವು ಐತಿಹಾಸಿಕ ತಾಣಗಳ ಆಧಾರದ ಮೇಲೆ ನಿರ್ಮಿಸಲಾಗಿದೆ. ಇಲ್ಲಿ  "ಮೂರು ಸುಂದರ ದೃಶ್ಯಾವಳಿಗಳನ್ನು" ನೋಡಬಹುದು. 1) ಪನ್ಮೆನ್ ಗೇಟ್, 2) ವೂ ಮೆನ್ ಸೇತುವೆ ಮತ್ತು 3) ರುಯಿಗುವಾಂಗ್ ಪಗೋಡಾ. ಪ್ಯಾನ್ಮೆನ್ ಗೇಟ್ ಸುಝೌನಲ್ಲಿ 2500 ವರ್ಷಗಳ ಇತಿಹಾಸವನ್ನು ಹೊಂದಿರುವ ಪ್ರಸಿದ್ಧ ಐತಿಹಾಸಿಕ ಹೆಗ್ಗುರುತಾಗಿದೆ. ಇಂದಿಗೂ ಪ್ರಾಚೀನ ಕೋಟೆಗಳಲ್ಲಿ ಒಂದಾಗಿ ಇದು ಉಳಿದಿದೆ.  ಆಕರ್ಷಕವಾದ "ವು ಮೆನ್" ಸೇತುವೆಯು ಸುಝೌದಲ್ಲಿ ಅತಿ ಎತ್ತರವಾದ ಪುರಾತನ ಸೇತುವೆಯಾಗಿದೆ.  ಇದು ಸಾಂಗ್ ರಾಜವಂಶದ (ಕ್ರಿ.ಶ. 960-1279) ಸಮಯದಲ್ಲಿ ನಿರ್ಮಾಣ ಮಾಡಲಾಗಿದೆ. ಏಳು ಅಂತಸ್ತಿನ ಪಗೋಡವನ್ನು ಮರದ ವೇದಿಕೆಗಳೊಂದಿಗೆ ಇಟ್ಟಿಗೆಯಿಂದ ನಿರ್ಮಿಸಲಾಗಿದ್ದು, ಇಲ್ಲಿನ ಕಿರಿದಾದ ಮೆಟ್ಟಿಲುಗಳ ಮೇಲೆ ಹತ್ತಿದ ನಂತರ, ಸುಝೋ ನಗರದ ಹೃದಯಭಾಗವನ್ನು ನೋಡಬಹುದು. ಹಚ್ಚ ಹಸಿರಿನ ಸುಂದರವಾದ ಉದ್ಯಾನವನಗಳು, ನೀರಿನ ಕಾಲುವೆಗಳು ಇತ್ಯಾದಿಗಳನ್ನ ಕಣ್ತುಂಬಿಕೊಳ್ಳಬಹುದು.

 

*ಟೈಗರ್ ಹಿಲ್:* ಟೈಗರ್ ಹಿಲ್ ಸುಝೋ ನಗರದ ಒಂದು  ಪ್ರವಾಸಿಗರ ಆಕರ್ಷಣೆಯಾಗಿದೆ. ಇದಕ್ಕೆ 2500 ವರ್ಷಗಳ ಇತಿಹಾಸವಿದೆ. ಇಲ್ಲಿಯೂ ಸಾಕಷ್ಟು  ಪುರಾತನ ವಾಸ್ತುಶಿಲ್ಪಗಳನ್ನು ನೋಡಬಹುದು. 2500 ವರ್ಷಗಳ ಹಿಂದೆ ಇಲ್ಲಿನ ಒಂದು ಯುದ್ದದಲ್ಲಿ ಈ ಪ್ರಾಂತ್ಯದ ರಾಜನೊಬ್ಬ  ಮರಣಹೊಂದುತ್ತಾನೆ. ಅವನ ಮಗ "ಫೂ ಚಾಯ್",  ಅವನನ್ನು ಸರ್ಜಿಂಗ್ ಸೀ ಹಿಲ್‌ ಎನ್ನುವ ಈ ಪ್ರದೇಶದಲ್ಲಿ ಸಮಾಧಿ ಮಾಡುತ್ತಾನೆ. ಮೂರು ದಿನಗಳ ನಂತರ ಇಲ್ಲಿಗೆ  ಬಿಳಿ ಹುಲಿಯೊಂದು  ಬಂದಿತು ಎಂಬ ಐತಿಹ್ಯವಿದೆ. ಆದ್ದರಿಂದ ಜನರು ಅಂದಿನಿಂದ ಅದನ್ನು ಟೈಗರ್ ಹಿಲ್ ಎಂದು ಮರುನಾಮಕರಣ ಮಾಡಿದ್ದಾರೆ.

 



*ಹನ್ಶನ್ ದೇವಾಲಯ:* ಹನ್ಶನ್ ದೇವಾಲಯ, ಸುಝೌನಲ್ಲಿರುವ ಬೌದ್ಧ ದೇವಾಲಯವಾಗಿದೆ. ಲಿಯಾಂಗ್ ರಾಜವಂಶದಲ್ಲಿ (A.D. 502-557) ಮೊದಲು ನಿರ್ಮಿಸಲಾದ ದೇವಾಲಯಕ್ಕೆ ಟ್ಯಾಂಗ್ ರಾಜವಂಶದ ಕವಿ-ಸನ್ಯಾಸಿಯ ಹೆಸರನ್ನು ಇಡಲಾಗಿದೆ. ಇಲ್ಲಿ ಹಿಂದೂ ಧರ್ಮದ ಪದ್ದತಿಯಂತೆ ಮೂರ್ತಿ ಪೂಜೆಯನ್ನ ಕಾಣಬಹುದು. ಬುದ್ದನಿಗೆ ದೂಪ, ಫಲ ಪುಷ್ಫ ಇತ್ಯಾದಿಗಳನ್ನ ಅರ್ಪಿಸುತ್ತಾರೆ. ದೇವಾಲಯದ ಪ್ರಾಂಗಣ, ಗಂಟೆ, ಗರ್ಭಗುಡಿ, ಎಲ್ಲವೂ ಭಾರತದಲ್ಲಿನ ದೇವಾಲಯದಂತೆ ಚೈನೀಸ್ ಶೈಲಿಯಲ್ಲಿ ಕಟ್ಟಿರುವುದು ವಿಶೇಷ. ಚೀನಾದಲ್ಲಿ ಕಮ್ಯುನಿಸ್ಟ್ ಸರ್ಕಾರ ಆಡಳಿತಕ್ಕೆ ಬಂದಾಗ, ಈ ಪುರಾತನ ದೇವಾಲಯ ಸೇರಿದಂತೆ ದೇಶದ ಎಲ್ಲಾ ದೇವಾಲಯ, ಚರ್ಚ್ ಮತ್ತು ಮಸೀದಿಗಳನ್ನ 1950 ರಿಂದ 1979ರವರೆಗೆ ಕಾಲ ಮುಚ್ಚಿದ್ದರು.

 

ಸುಝೌವನ್ನು *"ಉದ್ಯಾನಗಳ ನಗರ"* ಎಂದು ಸಹ ಕರೆಯಲಾಗುತ್ತದೆ. 16ನೇ ಶತಮಾನದಲ್ಲಿ 170 ಉದ್ಯಾನಗಳು ಈ ನಗರದಲ್ಲಿವಂತೆ. ಈಗ ಅಂದಾಜು 50 ಖಾಸಗಿ ಮತ್ತು ಸರ್ಕಾರಿ ಉದ್ಯಾನವನಗಳಿವೆ. ಈ ಎಲ್ಲಾ ಉದ್ಯಾನವನಗಳನ್ನು ತೋಟಗಾರಿಕೆಯ ವಿಶ್ವ ಇತಿಹಾಸದಲ್ಲಿ ಶ್ರೇಷ್ಠ ಮೇರುಕೃತಿಗಳು ಎಂದು ಗುರುತಿಸಲಾಗಿದೆ. ಅವುಗಳಲ್ಲಿ ಒಂಬತ್ತು ಉದ್ಯಾನವನಗಳನ್ನು ವಿಶ್ವ ಸಾಂಸ್ಕೃತಿಕ ಪರಂಪರೆಗಳಲ್ಲಿ ಪಟ್ಟಿ ಮಾಡಲಾಗಿದೆ. ಚೀನೀ ಉದ್ಯಾನ ಸಂಸ್ಕೃತಿಯ ಹೆಮ್ಮೆಯೆಂದು ಗುರುತಿಸಲ್ಪಡುವ  ಹಂಬಲ್ ಅಡ್ಮಿನಿಸ್ಟ್ರೇಟರ್ಸ್ ಗಾರ್ಡನ್ ಮತ್ತು ಲಿಂಗರಿಂಗ್ ಗಾರ್ಡನ್  ಇಂದಿಗೂ ಪ್ರವಾಸಿಗರ ಮೆಚ್ಚಿನ ತಾಣಗಳಾಗಿವೆ.

 

*ಹಂಬಲ್ ಅಡ್ಮಿನಿಸ್ಟ್ರೇಟರ್ಸ್ ಗಾರ್ಡನ್* ಅನ್ನು ಕ್ರಿ.ಶ 1509 ರಲ್ಲಿ ನಿರ್ಮಿಸಲಾಯಿತು.  ಇದು ಸುಝೋದಲ್ಲಿನ ಅತಿದೊಡ್ಡ ಶಾಸ್ತ್ರೀಯ ಸಾಂಪ್ರದಾಯಿಕ ಉದ್ಯಾನವನವಾಗಿದೆ. ಇಡೀ ಉದ್ಯಾನವು ನೀರಿನ ಕೊಳ, ಕಾಲುವೆಗಳಿಂದೆ, ಆಕರ್ಷಕ ಕಲ್ಲು ಬಂಡೆಗಳು, ಮಂಟಪಗಳು, ವಿವಿಧ ರೀತಿಯ ಸುಂದರವಾದ ಹೂವಿನ ಗಿಡಗಳು, ಆಕರ್ಷಕ ಮರಗಿಡಗಳಿಂದ ಕೂಡಿದ ಇಲ್ಲಿನ ದೃಶ್ಯಾವಳಿ ಮನಸ್ಸಿಗೆ ಮುದ ನೀಡುತ್ತವೆ. ಅಂಕುಡೊಂಕಾದ ಹಾದಿಯಲ್ಲಿ ನಡೆಯುತ್ತಾ ಮುಂದೆ ಹೋದಂತೆ , ಪ್ರತಿಯೊಂದು ಹೆಜ್ಜೆಗೂ ವಿಭಿನ್ನ ದೃಶ್ಯಾವಳಿಗಳು ಗೋಚರಿಸುತ್ತವೆ.  ರಮಣೀಯ ಮತ್ತು ಶಾಂತಿಯುತ, ಉದ್ಯಾನದಲ್ಲಿ  ಪ್ರತಿಯೊಂದು ವಸ್ತುವೂ  ಹಿಂದಿನ ಕಥೆಯನ್ನು ಹೇಳುತ್ತದೆ.

 

*ಲಿಂಗರಿಂಗ್ ಗಾರ್ಡನ್* (ಲಿಯುವಾನ್ ಗಾರ್ಡನ್) ಚೀನಾದಲ್ಲಿ ಅತಿ ದೊಡ್ಡ ಪ್ರಮಾಣದ ಕ್ಲಾಸಿಕಲ್ ಖಾಸಗಿ ಉದ್ಯಾನವಾಗಿದ್ದು, 23300 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿದೆ, ಇದು ಕ್ವಿಂಗ್ ರಾಜವಂಶದ ಶೈಲಿಯ ವಿನ್ಯಾಸವನ್ನು ಪ್ರತಿನಿಧಿಸುತ್ತದೆ.  ಸೊಗಸಾದ ವಾಸ್ತುಶಿಲ್ಪ ಕಲೆ, ಭವ್ಯವಾದ ಸಭಾಂಗಣಗಳು ಮತ್ತು ಸುಂದರವಾದ ಗಾರ್ಡೆನ್ ಅಂಗಳಗಳಿಗೆ ಹೆಸರುವಾಸಿಯಾಗಿದೆ. ಈ ಗಾರ್ಡನ್ ಅನ್ನು ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದೆ. ಪೂರ್ವದಲ್ಲಿ ಮುಖ್ಯವಾಗಿ ವಾಸ್ತುಶಿಲ್ಪ, ಮಧ್ಯದಲ್ಲಿ ವಿಶಾಲವಾದ ಉದ್ಯಾನವನ, ಪಶ್ಚಿಮವು ಕಲ್ಲು ಬಂಡೆಗಳಿಂದ ಕೂಡಿದ ಮತ್ತು ಉತ್ತರಕ್ಕೆ ಗ್ರಾಮೀಣ ದೃಶ್ಯಾವಳಿಗಳು ಕಾಣುವಂತೆ ವಿನ್ಯಾಸಗೊಳಿಸಲಾಗಿದೆ.

 

*ರೇಷ್ಮೆ ನಗರಿ:-* ಸಾವಿರಾರು ವರ್ಷಗಳಿಂದ, ಸುಝೋ ನಗರದ ಜನರು ಅದ್ಭುತವಾದ ರೇಷ್ಮೆಬಟ್ಟೆಗಳನ್ನುತಯಾರಿಸುವ ಕೌಶಲ್ಯಗಳನ್ನು ಕರಗತ ಮಾಡಿಕೊಂಡಿದ್ದರು ಎಂದು ಹೇಳಲಾಗುತ್ತಿದೆ. 4700 ವರ್ಷಗಳ ಹಿಂದೆ ಇಲ್ಲಿ ರೇಷ್ಮೆ ಉಪಯೋಗದಲ್ಲಿತ್ತು ಎಂದು ಉತ್ಖನನದ ವೇಳೇ ದೊರೆತ ಅವಶೇಷಗಳಿಂದ ಸಾಬೀತು ಪಡಿಸಲಾಗಿದೆ. ಹೀಗಾಗಿ ಸುಝೋ ನಗರವನ್ನು ಸಿಲ್ಕ್ ಸಿಟಿ ಎಂದು ಕರೆಯುವುದಲ್ಲದೆ ಇಲ್ಲಿ ಸಿಲ್ಕ್ ರೋಡ್ ಇತ್ತು ಎಂದು ಹೇಳಲಾಗುತ್ತಿದೆ. 1991 ರಲ್ಲಿ ನಿರ್ಮಿಸಲಾದ ಸುಝೋ ಸಿಲ್ಕ್ ಮ್ಯೂಸಿಯಂ ಚೀನಾದಲ್ಲಿ ರೇಷ್ಮೆಯ ಕುರಿತಾದ ಮೊದಲ ವಸ್ತು ಸಂಗ್ರಹಾಲಯವಾಗಿದೆ. ಇಲ್ಲಿ ಚೀನಾದ 7000 ವರ್ಷಗಳ ರೇಷ್ಮೆ ಇತಿಹಾಸವನ್ನು ತಿಳಿದುಕೊಳ್ಳಬಹುದು, ರೇಷ್ಮೆ ಹುಳುಗಳ ಜೀವನ, ಸಾಂಪ್ರದಾಯಿಕ ರೇಷ್ಮೆ ನೇಯ್ಗೆ ಕೌಶಲ್ಯವನ್ನು ವೀಕ್ಷಿಸಬಹುದು.

 

ಹೀಗೆ ಚೀನಾದ ಪ್ರವಾಸದ ವೇಳೆ ಹಲವಾರು ವಿಷಯಗಳನ್ನು ತಿಳಿದುಕೊಳ್ಳುವ ಅವಕಾಶ ನಮಗೆ ಒದಗಿಬಂತು.  ಚೀನಾದ ಹಳೆಯ ಚಲನ ಚಿತ್ರಗಳಲ್ಲಿ ಚೈನಾದ ಸಾಂಪ್ರದಾಯಿಕ  ಊರುಗಳು, ಕಟ್ಟಡಗಳನ್ನು ನೋಡಿದ್ದ ನಮಗೆ ಪ್ರತ್ಯಕ್ಷವಾಗಿ ಸುಝೋದಲ್ಲಿ ಅಂತಹ ಸ್ಥಳಗಳನ್ನು ಕಾಣುವಂತಾಯಿತು. ಒಂದೆಡೆ ಗಗನಚುಂಬಿ ಆಧುನಿಕ ಕಟ್ಟಡಗಳು, ಮೆಟ್ರೋ ಟ್ರೈನ್, ಮೋನೋ ರೈಲ್, ಎಕ್ಸ್ಪ್ರೆಸ್ ಹೆದ್ದಾರಿ, ದೊಡ್ಡದಾದ ಫ್ಲೈ ಓವರ್ ಗಳು ಮತ್ತೊಂದೆಡೆ ಸಾಂಪ್ರದಾಯಿಕ ಶೈಲಿಯ ಪುರಾತನ ನಗರ ಜೀವನವನ್ನು ಕಣ್ತುಂಬಿಕೊಳ್ಳುವ ಅನುಭವಾಯಿತು.

 

ಬರಹ:- ಪಿ.ಎಸ್.ರಂಗನಾಥ

ಮಸ್ಕತ್ - ಒಮಾನ್ ರಾಷ್ಟ್ರ

 

 

 































Click below headings

Articles (42) oman (28) Story (23) Poems (14) History (12) Tour (11) Site Seeing (9) ಸುದ್ದಿ ಸ್ವಾರಸ್ಯ (7) ಹಾಸ್ಯ (7) Politics (6) Article (3) Health Tips (2)