oman ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
oman ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶನಿವಾರ, ಮೇ 2, 2026

ಅರಬ್ ಮಣ್ಣಿನಲ್ಲಿ ಅರಳಿದ ಭಾರತೀಯ ಮಾಧುರ್ಯ: ಯೆಮೆನ್ ಮಾವಿನ ಕಥೆ

ಹಣ್ಣುಗಳ ರಾಜ ಹೆಸರಾಗಿರುವ ಮಾವಿನ ಹಣ್ಣಿನ ರುಚಿಗೆ ಮನಸೋತವರು ಯಾರಿಲ್ಲ ಹೇಳಿ? ಮಾವಿನ ಹಣ್ಣಿನ ಸೀಸನ್ ಬಂದೊಡನೆ ಪ್ರತಿ ಊರಿನಲ್ಲೂ ಮಾವಿನ ಹಣ್ಣಿನ ಹಬ್ಬ ಅಂತ ಹೇಳಬಹುದು, ಮಾರುಕಟ್ಟೆಯ ಬೀದಿಬೀದಿಗಳಲ್ಲೂ ತರಹೇವಾರಿ ಮಾವಿನ ಹಣ್ಣನ್ನು ಮಾರುತ್ತಾರೆ. ಅಷ್ಟೇ ಅಲ್ಲದೆ ಹಲವಾರು ದೇಶಗಳಿಗೆ ನಮ್ಮ ಭಾರತದಿಂದ  ಹಣ್ಣುಗಳು ರಫ್ತಾಗುತ್ತವೆ. ಕೋಟ್ಯಾಂತರ ರೂಪಾಯಿಗಳ ವ್ಯವಹಾರ ನಡೆಯುತ್ತದೆ. ಪ್ರಪಂಚದಲ್ಲಿ ಅತಿ ಹೆಚ್ಚು ಮಾವಿನ ಹಣ್ಣುಗಳನ್ನು ಬೆಳೆಯುವ ದೇಶದಲ್ಲಿ ಭಾರತವು ಮೊದಲನೆಯ ಸ್ಥಾನದಲ್ಲಿದೆ.


ಒಮಾನ್ ನಲ್ಲಿ ನೆಲೆಸಿರುವ ನಾವು ಪ್ರತಿ ವರ್ಷದ ಮಾವಿನ ಹಣ್ಣಿನ ಸೀಸನ್ ನಲ್ಲಿ ಭಾರತದಿಂದ ರಫ್ತು ಮಾಡಲ್ಪಟ್ಟ  ಹಣ್ಣುಗಳನ್ನು ಖರೀದಿಸಿ ತಿನ್ನುವುದು ರೂಡಿ. ಸುಮಾರು ಹದಿನಾರು ವರ್ಷಗಳ ಹಿಂದೆ  ಮಸ್ಕತ್ ಗೆ ಮೊದಲು ಬಂದಾಗ, ಮಾರುಕಟ್ಟೆಯಲ್ಲಿ ದೊರೆಯುತಿದ್ದ ಅತಿ ಹೆಚ್ಚು ಬೆಲೆಯ ಮಾವಿನ ಹಣ್ಣಗಳನ್ನು ಕೊಳ್ಳಲು ಹಿಂದೆ ಮುಂದೆ ಯೋಚಿಸುತಿದ್ದೆವು. ಸಾಮಾನ್ಯವಾಗಿ ಭಾರತದಿಂದ ಆಮದಾಗುವ ವಸ್ತುಗಳು ಇಲ್ಲಿ ಹೆಚ್ಚಿನ ಬೆಲೆಗೆ ಮಾರಲ್ಪಡುತ್ತವೆ. ವ್ಯಾಪಾರಿಗಳು ಮತ್ತು ದಲ್ಲಾಳಿಗಳ ಲಾಭಾಂಶ, ಸಾಗಣೆ ವೆಚ್ಚ ಇತ್ಯಾದಿ ಸೇರಿ, ವಸ್ತುಗಳ ಬೆಲೆ ದುಪ್ಪಟ್ಟಾಗುವುದು ಸಹಜ. ಊರಿನಲ್ಲಿ ನೂರು ರೂಪಾಯಿಗೆ ದೊರೆಯುವ ವಸ್ತುಗಳು ಇನ್ನೂರಕ್ಕೂ ಹೆಚ್ಚಿನ ಬೆಲೆಗೆ ಮಾರುತ್ತಾರೆ.  ಒಮಾನಿನ ಮಾರ್ಕೆಟ್ ಗಳಲ್ಲಿ ನಾವು ಯಾವುದೇ ವಸ್ತುಗಳನ್ನು ಖರೀದಿಸುವಾಗ, ಭಾರತ ಮೂಲದ ಆಹಾರ ಪದಾರ್ಥಗಳಿಗೆ ಯಾವಾಗಲು ಮೊದಲ ಪ್ರಾಶಸ್ತ್ಯ ನೀಡುತ್ತೇವೆ. ಕೇಜಿಗೆ ಬೆಲೆ ದುಪ್ಪಟ್ಟಾದರು ನೂರಾರು ರೂಪಾಯಿ ಕೊಟ್ಟು ಹಲವಾರು ಬಾರಿ ಹೀಗಾಗಿ ನಮ್ಮೆಲ್ಲರ ಅಚ್ಚು ಮೆಚ್ಚಿನ ಮಾವಿನ ಹಣ್ಣನ್ನು ಪ್ರತಿ ಸೀಸನ್ ನಲ್ಲಿ ಖರೀದಿಸಿ ತಂದು, ಅದರ ಸ್ವಾದವನ್ನು ಅನುಭವಿಸುತ್ತಿರುತ್ತೇವೆ. ಒಮ್ಮೊಮ್ಮೆ, ತುಂಬಾ ಇಷ್ಟ ಪಟ್ಟು, ಜಾಸ್ತಿ ದುಡ್ಡು ಕೊಟ್ಟು ತಂದ ಹಣ್ಣುಗಳಲ್ಲಿ ಕೆಲವೊಂದು ತಳಿಗಳು ನೋಡಲು ಸುಂದರವಾಗಿದ್ದರೂ ಅಷ್ಟೊಂದು ರುಚಿ ನೀಡುತ್ತಿರುತ್ತಿಲ್ಲ. ಹೀಗಾಗಿ ಒಳ್ಳೆ ರುಚಿಯಾದ ಹಣ್ಣಿಗಾಗಿ ವಿವಿಧ ತಳಿಗಳನ್ನು ಟ್ರೈ ಮಾಡುವುದು ನಮ್ಮ ಅಭ್ಯಾಸ. ಒಮ್ಮೆ ಟ್ರೈ ಮಾಡೋಣ ಎಂದು  ಯೆಮೆನ್ ಮಾವಿನ ಹಣ್ಣನ್ನು ಖರೀದಿಸಿ ತಂದು ರುಚಿ ನೋಡಿದೆವು. ಅಬ್ಬಾ! ಆ ಹಣ್ಣಿನ ರುಚಿಗೆ ನಾನೊಬ್ಬನೆ ಮಾತ್ರವಲ್ಲ, ಮನೆಯಲ್ಲಿ ಎಲ್ಲರೂ ಮನಸೋತು ಹೋದೆವು.  ಬಾಯಲ್ಲಿ ಇಟ್ಟ ತಕ್ಷಣ ಆ ಮಾವು ಕರಗಿ ಹೋಗುವಂತಹ ಅನ್ಬುಭವ. ಜೇನುತುಪ್ಪದಂತಹ ಸಿಹಿ, ಜೊತೆಗೆ ಬಾಯಲ್ಲಿ ಉಕ್ಕುವ ರಸ. ಮಾವಿನ ಹಣ್ಣಿನಲ್ಲಿ ನಾರೇ ಇರಲಿಲ್ಲ. ಚಾಕುವಿನಿಂದ ಹಣ್ಣನ್ನು ಕತ್ತರಿಸಿದಾಗ ಅದು ಬೆಣ್ಣೆಯನ್ನು ಕತ್ತರಿಸಿದ ಅನುಭವ ನೀಡಿತ್ತು. ಆಗ ನನಗನಿಸಿದ್ದು, ನಾವ್ಯಾಕೆ ಇಷ್ಟು ದಿನ ಈ ಹಣ್ಣನ್ನು ತಿನ್ನಲೇ ಇಲ್ಲವಲ್ಲ ಅಂತ! ಈ ಹಣ್ಣಿನ ರುಚಿಗೆ ಮಾರು ಹೋಗದವರು ಯಾರು ಇಲ್ಲ. ಮಾರ್ಕೆಟ್ ನಲ್ಲಿ ಯೆಮೆನ್ ಮಾವಿನ ಹಣ್ಣುಗಳು ಬಂದೊಡನೆ, ಅತಿ ಶೀಘ್ರವಾಗಿ ಖಾಲಿಯಾಗಿ ಬಿಡುತ್ತವೆ. ನನ್ನ ಸ್ನೇಹಿತರೂ ಸಹ ಇದೇ ಮಾತನ್ನು ಹೇಳುತಿದ್ದರು. 


*ಮರುಭೂಮಿಯಲ್ಲಿ ಕೃಷಿ*:

ಹಳ್ಳ ಕೊಳ್ಳ, ನದಿ, ಹೊಲ,ಗದ್ದೆ, ಕೆರೆ ಕಟ್ಟೆ, ಹಸಿರು ಹೊದ್ದ ಬೆಟ್ಟಗಳು ಹೀಗೆ ನಿತ್ಯವೂ ಹಸಿರನ್ನು ನೋಡಿ ಬೆಳೆದ ನಮಗೆ, ಗಲ್ಫ್ ರಾಷ್ಟ್ರಗಳಲ್ಲಿ ಬಹುತೇಕ ಕಡೆ ಮರುಭೂಮಿ, ಬೊಳು ಬೋಳಾಗಿರುವ ಬೆಟ್ಟ ಗುಡ್ಡಗಳು, ಸುಣ್ಣದ ಕಲ್ಲಿನ ಪದರಗಳನ್ನು ಒಳಗೊಂಡ ಭೂ ಪ್ರದೇಶ, ಜಾಲಿ ಮುಳ್ಳು ಬಿಟ್ಟರೆ ಬೇರೇನು ಬೆಳೆಯದ ಭೂಮಿ, ಕಣ್ಣು ಹಾಯಿಸಿದಷ್ಟೂ ದೂರ ಮರಳಿನ ದಿಬ್ಬಗಳು ಹೀಗೆ ಈ ಎಲ್ಲವೂ ನಮ್ಮನ್ನು ಉಲ್ಲಾಸ ಕಳೆದುಕೊಳ್ಳುವಂತೆ ಮಾಡುತ್ತವೆ. ಆದರೆ ವಾದಿಗಳ (ನದಿಗಳು) ಸುತ್ತ ಮುತ್ತಲಿನ ಪ್ರದೇಶಗಳು, ತೋಟಗಳು ಮತ್ತು ಹೊಲಗಳನ್ನು ನೋಡಿದೊಡನೆ ಮನಸ್ಸಿಗೆ ಉತ್ಸಾಹ ತುಂಬುತ್ತವೆ. ತಿಂಗಳಿಗೆ ಒಂದೆರೆಡು ಬಾರಿ ಇಂತಹ ಪ್ರದೇಶಗಳಿಗೆ ಹೋಗಿ ಧೈನಂದಿನ ಏಕತಾನತೆಯನ್ನು ದೂರಮಾಡಿಕೊಂಡು ಮನಸ್ಸನ್ನು ಸಂತೈಸಿಕೊಂಡು ಹಿಂತಿರುವುದು ಇಲ್ಲಿ ನೆಲೆಸೆರಿವು ನಮ್ಮಂತ ವಲಸಿಗರಿಗೆ ಇದು ಸಾಮಾನ್ಯದ ಸಂಗತಿ. ಈ ಮಣ್ಣಿನ ವೈಶಿಷ್ಟ್ಯವೇನೋ ಗೊತ್ತಿಲ್ಲ, ವಾದಿಗಳ (ನದಿಗಳು) ಸುತ್ತ ಮುತ್ತಲಿನ ಪ್ರದೇಶಗಳು, ತೋಟಗಳು ಮತ್ತು ಹೊಲಗಳಲ್ಲಿ ಖರ್ಜೂರದ ಮರಗಳು ಯಥೇಚ್ಚವಾಗಿ ಬೆಳೆದಿರುತ್ತವೆ, ಅಲ್ಲಲ್ಲಿ ಮಾವಿನ ಮರಗಳು, ನಿಂಬೆ ಹಣ್ಣಿನ ಮರಗಳು, ಸೀಬೆ ಹಣ್ಣಿನ ಗಿಡಗಳು, ಕರಿಬೇವಿನ ಸೊಪ್ಪಿನ ಗಿಡ, ನುಗ್ಗೆಕಾಯಿ ಗಿಡಗಳು, ಸಪೋಟ ಗಿಡಗಳು ಇತ್ಯಾದಿ ಮರಗಳು ಸ್ವಾಭಾವಿಕವಾಗಿ ಬೆಳೆಯುತ್ತವೆ. ಇವೆಲ್ಲವನ್ನೂ ನೋಡುವುದು ಮನಸ್ಸಿಗೆ ಮುದ ನೀಡುತ್ತವೆ.



ಈ ಮರುಭೂಮಿಯಲ್ಲೂ ವಿವಿಧ ಹಣ್ಣಿನ ಗಿಡಗಳು ಬೆಳೆಯುವುದಕ್ಕೆ ಕಾರಣ ನಮ್ಮ ಭಾರತ ದೇಶ ಎಂದು ಹೇಳಬಹುದು. ಅನಾದಿಕಾಲದಿಂದಲೂ ನಮ್ಮ ಭಾರತ ಮತ್ತು ಅರಬ್ ರಾಷ್ಟ್ರಗಳ ಮಧ್ಯೆ ವ್ಯಾಪಾರ ವಹಿವಾಟು ನಡೆಯುತಿತ್ತು. ಇಲ್ಲಿ ದೊರೆಯುತ್ತಿದ್ದ ಖರ್ಜೂರ, ಸಾಂಭ್ರಾಣಿ, ನಿಂಬೆಹಣ್ಣು, ಮುತ್ತು ರತ್ನಗಳು ಇತ್ಯಾದಿಗಳನ್ನ ಭಾರತಕ್ಕೆ ರಫ್ತುಮಾಡಿ ಅಲ್ಲಿಂದ ಆಹಾರ ಪದಾರ್ಥಗಳನ್ನು ಆಮದು ಮಾಡಿಕೊಳ್ಳುತಿದ್ದರು. ಹೀಗಾಗಿ ಅಲ್ಲಿಂದ ತರಲಾಗಿದ್ದ ಹಲವಾರು ಧಾನ್ಯಗಳು, ಹಣ್ಣುಗಳ ಬೀಜಗಳನ್ನು ಇಲ್ಲಿ ಬೆಳೆಸಲು ಪ್ರಯತ್ನಿಸಲಾಗಿದೆ. ಈ ಮಣ್ಣಿನ ಗುಣಕ್ಕೆ ಅನುಗುಣವಾಗಿ ವಿವಿಧ ಹಣ್ಣು, ತರಕಾರಿಗಳನ್ನು ಬೆಳೆಯಲು ಪ್ರಾರಂಭಿಸಲಾಗಿದೆ. ಇತ್ತೀಚೆಗಂತೂ ಆಧುನಿಕ ಕೃಷಿ ಪದ್ದತಿಯಲ್ಲಿ ತರಹೇವಾರಿ ಹಣ್ಣುಗಳು, ತರಕಾರಿಗಳು, ಸೊಪ್ಪುಗಳನ್ನು ಒಮಾನಿನಲ್ಲಿ ಬೆಳೆಯಲಾಗುತ್ತಿದೆ. ಕೇವಲ ಇಲ್ಲಿನ ಮಾರುಕಟ್ಟೆಗೆ ಮಾತ್ರವಲ್ಲದೆ, ಪಕ್ಕದ ಅರಬ್ ರಾಷ್ಟ್ರಗಳಿಗೂ ರಫ್ತು ಮಾಡಲಾಗುತ್ತಿದೆ. 

*ಯೆಮೆನ್ ಮಾವಿಗೂ ನಮ್ಮ ಭಾರತಕ್ಕೂ ಅವಿನಾಭಾವ ಸಂಬಂಧವಿದೆ!:-*

ಈ ಯೆಮೆನ್ ಮಾವಿನ ಹಣ್ಣುಗಳು ಮೂಲತಃ ಭಾರತದಿಂದಲೇ ಯೆಮೆನ್‌ಗೆ ಹೋಗಿ ಅಲ್ಲಿನ ಹವಾಮಾನಕ್ಕೆ ತಕ್ಕಂತೆ ವಿಶಿಷ್ಟ ರುಚಿ ಪಡೆದುಕೊಂಡಿವೆ ಎಂಬ ವಿಷಯ ತಿಳಿದಾಗ ಭಾರತೀಯರು ಹೆಮ್ಮೆ ಪಡುತ್ತಾರೆ. ಇತಿಹಾಸದ ದಾಖಲೆಗಳ ಪ್ರಕಾರ, ಸುಮಾರು 200 ವರ್ಷಗಳ ಹಿಂದೆ, ಯೆಮೆನ್‌ನ  ಲಾಹಜ್ (Lahj)  ಪ್ರಾಂತ್ಯದ ಸುಲ್ತಾನರಾದ ಅಹ್ಮದ್ ಬಿನ್ ಅಬ್ದುಲ್ ಕರೀಮ್ ಅಲ್-ಅಬ್ದಾಲಿ (Ahmed bin Abdul Karim) ಮತ್ತು ಅವರ ಉತ್ತರಾಧಿಕಾರಿಗಳು ಭಾರತದೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು. ಈ ಸುಲ್ತಾನರೇ ಲಾಹಜ್‌ನಲ್ಲಿ ಕೃಷಿಯನ್ನು ಅಭಿವೃದ್ಧಿಪಡಿಸಲು ಭಾರತದಿಂದ ವಿವಿಧ ಮಾವಿನ ತಳಿಗಳನ್ನು ತರಿಸಿ ನೆಟ್ಟರು ಎಂದು ಹೇಳಲಾಗಿದೆ. ಮೊದಲು ಈ ಸಸಿಗಳನ್ನು ಲಾಹಜ್‌ನ ಪ್ರಸಿದ್ಧ ಅಲ್-ಹುಸೇನಿ ತೋಟಗಳಲ್ಲಿ (Al-Husseini Gardens) ನೆಟ್ಟರು. ಅಂದಿನಿಂದ ಲಾಹಜ್ ಯೆಮೆನ್‌ನ "ಹಸಿರು ಓಯಸಿಸ್" ಎಂದು ಪ್ರಸಿದ್ಧವಾಯಿತು. ಇಂದಿಗೂ ಯೆಮೆನ್‌ನ ಅತ್ಯುತ್ತಮ ತಳಿಗಳಾದ ತೈಮೂರ್ ಮತ್ತು ಅಲ್ಫಾನ್ಸೋ ಅಲ್ಲಿ ಬೆಳೆಯುತ್ತಿರುವುದಕ್ಕೆ ಅಂದು ಸುಲ್ತಾನರು ಭಾರತದಿಂದ ತಂದ ತಳಿಗಳೇ ಅಡಿಪಾಯವಾಗಿವೆ. ಈ ಸುಲ್ತಾನರ ಪ್ರಯತ್ನದಿಂದಾಗಿ ಇಂದು ಯೆಮೆನ್‌ನ ಮಾವುಗಳು ಅರಬ್ ದೇಶಗಳಲ್ಲಿ ಅತ್ಯಂತ ಜನಪ್ರಿಯವಾಗಿವೆ.  ಅಂದು ಸುಲ್ತಾನರು ಅಕ್ಕರೆಯಿಂದ ನೆಟ್ಟ ಆ ಗಿಡಗಳೇ ಇಂದು ಯೆಮೆನ್ ಅನ್ನು "ಮಾವುಗಳ ನಾಡು" ಎಂಬಂತೆ ಮಾಡಿದೆ. ಯೆಮೆನ್ ಮಾತ್ರವಲ್ಲದೆ, ನೆರೆಯ ಒಮನ್ ರಾಷ್ಟ್ರಕ್ಕೂ ಸಹ ಮಾವು ಭಾರತದಿಂದಲೇ ಪರಿಚಯವಾಗಿತ್ತು. 11ನೇ ಶತಮಾನದ ಸುಮಾರಿಗೆ ನಭಾನಿ ಸುಲ್ತಾನರ (Nabhani Sultans) ಕಾಲದಲ್ಲಿ ಮಾವು ಬಂದಿತ್ತು ಎಂದು ಹೇಳಲಾಗುತ್ತದೆ. ಯೆಮೆನ್‌ನಲ್ಲಿ ಮಾವನ್ನು ಸ್ಥಳೀಯವಾಗಿ 'ಅಂಬಾ' (Amba) ಎಂದು ಕರೆಯುತ್ತಾರೆ. ಇದನ್ನು ಕೇಳಿದಾಗ ನಮಗೆ ಸಂಸ್ಕೃತದ 'ಆಮ್ರ' ಅಥವಾ ಹಿಂದಿಯ 'ಆಮ್' ನೆನಪಾಗದೆ ಇರಲು ಸಾಧ್ಯವೇ ಇಲ್ಲ! ಹೆಸರಿನಲ್ಲೂ ನಮ್ಮ ನಂಟು ಹಾಗೆಯೇ ಉಳಿದುಕೊಂಡಿದೆ.

*ಯೆಮೆನ್ ಮಾವುಗಳ ವೈವಿಧ್ಯತೆ:* ಯೆಮೆನ್‌ನಲ್ಲಿ ಬರೋಬ್ಬರಿ 50ಕ್ಕೂ ಹೆಚ್ಚು ತಳಿಗಳಿವೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ, ತೈಮೂರ್,  'ಖಲ್ಬ್ ಅಲ್-ತೋರ್' ಮಾವು, ಅಬೂ ಸಿನಾರಾ, ಅಬೂ ಸಿನಾರಾ


*ತೈಮೂರ್:*  ದುಂಡನೆಯ ಬೃಹತ್ ಗಾತ್ರದ ಈ ಹಣ್ಣನ್ನು ಕೈಯಲ್ಲಿ ಹಿಡಿದಾಗ ಅದರ ಭಾರವೇ ನಮಗೊಂದು ತೂಕದ ಅನುಭವ ನೀಡುತ್ತದೆ. ಸುಮಾರು ನಾಲ್ಕೈದು ಹಣ್ಣುಗಳಿಗೆ ಒಂದು ಕೇಜಿ ತೂಕ ಬರುತ್ತದೆ.  ಆದರೆ ಈ ಹಣ್ಣಿನ ಅಸಲಿ ಮ್ಯಾಜಿಕ್ ಇರುವುದು ಅದನ್ನು ಕತ್ತರಿಸಿದಾಗ!  ಮಾವಿನ ಹಣ್ಣು ಎಂದರೆ ಸಾಮಾನ್ಯವಾಗಿ ನಾರು (fiber) ಇರುತ್ತದೆ, ಆದರೆ ಈ ಹಣ್ಣು ಬೆಣ್ಣೆಯಂತಹ ಮೃದುತ್ವವನ್ನು ಹೊಂದಿದೆ. ಯಾವುದೇ ನಾರಿನ ಕಿರಿಕಿರಿಯಿಲ್ಲದ ಈ ಮೃದುತ್ವವೇ ಇದರ ದೊಡ್ಡ ಪ್ಲಸ್ ಪಾಯಿಂಟ್. ಹಣ್ಣಿನ ತುಂಡನ್ನು ಬಾಯಲ್ಲಿಟ್ಟರೆ ಸಾಕು, ಅದು ಐಸ್ ಕ್ರೀಂನಂತೆ ಕರಗಿ ಹೋಗುತ್ತದೆ. ಜೇನುತುಪ್ಪದಂತಹ ತೀವ್ರವಾದ ಸಿಹಿ ಮತ್ತು ಬಾಯಲ್ಲಿ ಉಕ್ಕುವ ರಸದ ಸಮ್ಮಿಲನ ಅದ್ಭುತ. ಇದನ್ನು ತಿಂದಾಗಲೇ "ವಿಶ್ವದ ಅತ್ಯುತ್ತಮ ಮಾವುಗಳಲ್ಲಿ ಒಂದು" ಎಂಬ ಕೀರ್ತಿ ಈ ಹಣ್ಣಿಗೆ ಏಕೆ ಬಂದಿದೆ ಎಂಬುದು ನಮಗೆ ಅರ್ಥವಾಗುತ್ತದೆ.


*ಖಲ್ಬ್ ಅಲ್-ತೋರ್:*  ತೈಮೂರ್ ಪಕ್ಕದಲ್ಲೇ ಕಣ್ಣು ಸೆಳೆಯುವ ಮತ್ತೊಂದು ತಳಿ ಅರಬ್ ಮೂಲದ 'ಖಲ್ಬ್ ಅಲ್-ತೋರ್' (Bull's Heart). ನೋಡಲು ಅಚ್ಚುಕಟ್ಟಾದ ಹೃದಯದ ಆಕಾರದಲ್ಲಿರುವ ಈ ಹಣ್ಣುಗಳು ಗಾತ್ರದಲ್ಲಿ ಬಹಳ ದೊಡ್ಡವು. 

ಈ ಯೆಮೆನ್ ಮಾವಿನಹಣ್ಣುಗಳ ವಿಶೇಷತೆ ಏನೆಂದರೆ ಇವುಗಳಲ್ಲಿರುವ ಅತೀವವಾದ ರಸದ ಅಂಶ. ಅತ್ಯಂತ ರಸಭರಿತವಾಗಿರುವ ಕಾರಣದಿಂದಲೇ ಇವುಗಳನ್ನು ಜ್ಯೂಸ್ ಅಥವಾ ಶೇಕ್ ತಯಾರಿಸಲು  ಬಳಸುತ್ತಾರೆ. ಯೆಮೆನ್ ಮಾವುಗಳು ನೈಸರ್ಗಿಕವಾಗಿ ಹಣ್ಣಾಗುತ್ತವೆ ಮತ್ತು ಯಾವುದೇ ರಾಸಾಯನಿಕಗಳಿಲ್ಲದೆ ಸಿಗುತ್ತವೆ ಎಂಬ ನಂಬಿಕೆ ಭಾರತೀಯ ಗ್ರಾಹಕರಲ್ಲಿದೆ. ಹೀಗಾಗಿ, ಗಲ್ಫ್ ರಾಷ್ಟ್ರಗಳಲ್ಲಿ ಭಾರತೀಯ ಮಾವು ಸಿಗದ ಸಮಯದಲ್ಲಿ ಯೆಮೆನ್ ಮಾವಿಗೆ ಮೊದಲ ಆದ್ಯತೆ ನೀಡುತ್ತಾರೆ. ಕೆಲವೊಮ್ಮೆ ಭಾರತೀಯ ಮಾವುಗಳಿಗಿಂತ ಯೆಮೆನ್ ಮಾವುಗಳು ಗಲ್ಫ್ ಮಾರುಕಟ್ಟೆಯಲ್ಲಿ ತುಸು ದುಬಾರಿಯಾಗಿದ್ದರೂ, ಅದರ ರುಚಿಗಾಗಿ ಭಾರತೀಯರು ಇದನ್ನು ಖರೀದಿಸಲು ಹಿಂಜರಿಯುವುದಿಲ್ಲ. ಯೆಮೆನ್ ಮಾವುಗಳು ಸಾಮಾನ್ಯವಾಗಿ ಜನವರಿಯಿಂದ ಆಗಸ್ಟ್ ತಿಂಗಳವರೆಗೆ ಲಭ್ಯವಿರುತ್ತವೆ.  ಮುಖ್ಯವಾಗಿ ಯೆಮೆನ್‌ನಲ್ಲಿ ಬೆಳೆದರೂ, ಇವುಗಳನ್ನು ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಮತ್ತು ಒಮಾನ್‌ನಂತಹ ಮಧ್ಯಪ್ರಾಚ್ಯದ ಮಾರುಕಟ್ಟೆಗಳಲ್ಲಿ ವ್ಯಾಪಕವಾಗಿ ಮಾರಾಟ ಮಾಡಲಾಗುತ್ತದೆ. 


ಮತ್ತೆ ಕೆಲ ತಳಿಗಳಿವೆ ಅದರಲ್ಲಿ ಅಬೂ ಸಿನಾರಾ ಹಣ್ಣುಗಳು ತೆಳುವಾದ ಸಿಪ್ಪೆಯಿಂದ ಕೂಡಿದ್ದು ಇದು ವಿಶಿಷ್ಟ ರುಚಿಯನ್ನು ಹೊಂದಿದೆ. ಅಲ್ಫಾನ್ಸೋ ಮಾವಿನಹಣ್ಣು ಭಾರತ ಮೂಲದ್ದಾದರೂ ಯೆಮೆನ್ ಮಣ್ಣಿನಲ್ಲಿ ಈಗ ಯಶಸ್ವಿಯಾಗಿ ಬೆಳೆಯುತ್ತಿದೆ. ಮತ್ತೊಂದು ತಳಿಯಾದ ಸುಡಾನಿ ಹಣ್ಣು ತನ್ನದೇ ಆದ ವಿಶಿಷ್ಟ ಸುವಾಸನೆಗೆ ಪ್ರಸಿದ್ಧವಾಗಿದೆ. 

ಮಾವು ಮೂಲತಃ ನಮ್ಮ ಭಾರತದ್ದೇ ಆಗಿರಬಹುದು, ಆದರೆ ಯೆಮೆನ್  ದೇಶದಲ್ಲಿ ತನ್ನದೇ ಆದ ವಿಶಿಷ್ಟ ಶೈಲಿಯಲ್ಲಿ ಬೆಳೆಸಿ ಅದಕ್ಕೊಂದು ಹೊಸ ಆಯಾಮ ನೀಡಿದೆ. ನೀವು ಎಂದಾದರೂ ಗಲ್ಫ್ ರಾಷ್ಟ್ರಗಳಿಗೆ ಹೋದರೆ ಅಥವಾ ಮಾರುಕಟ್ಟೆಯಲ್ಲಿ ಯೆಮೆನ್ ಮಾವು ಕಂಡರೆ ಖಂಡಿತಾ ಮಿಸ್ ಮಾಡಬೇಡಿ. ಅದು ಕೇವಲ ಹಣ್ಣಲ್ಲ, ಎರಡು ಸಂಸ್ಕೃತಿಗಳನ್ನು ಜೋಡಿಸುವ ಒಂದು 'ಸಿಹಿ' ಕೊಂಡಿ!


ಬರಹ:

ಪಿ.ಎಸ್.ರಂಗನಾಥ

ಮಸ್ಕತ್, ಒಮಾನ್ ರಾಷ್ಟ್ರ


ಸೋಮವಾರ, ಡಿಸೆಂಬರ್ 22, 2025

​ಮಸ್ಕತ್‌ನಲ್ಲಿ ಅರಳಿದ ಸಾಹಿತ್ಯದ ಕಂಪು: ಮನಮಿಡಿದ "ಶಿಶಿರ ಕಾವ್ಯ ಸಂಜೆ" ✨


​ಮಸ್ಕತ್‌ನಲ್ಲಿ ಅರಳಿದ ಸಾಹಿತ್ಯದ ಕಂಪು: ಮನಮಿಡಿದ "ಶಿಶಿರ ಕಾವ್ಯ ಸಂಜೆ" ✨

ಮೊನ್ನೆ ಶುಕ್ರವಾರದ ಸಂಜೆ ಮಸ್ಕತ್‌ನಲ್ಲಿ ಕಳೆದ ಆ ಕ್ಷಣಗಳನ್ನು ನೆನೆಸಿಕೊಂಡರೆ ಈಗಲೂ ಮನಸ್ಸು ಹಗುರವೆನಿಸುತ್ತದೆ. ಅದು ಕೇವಲ ನಾಲ್ಕು ಗೋಡೆಗಳ ಮಧ್ಯೆ ನಡೆದ ಕಾರ್ಯಕ್ರಮವಾಗಿರಲಿಲ್ಲ; ಅದು ನೂರಾರು ಮನಸ್ಸುಗಳು, ಭಾವನೆಗಳು ಮತ್ತು ಸಂಬಂಧಗಳು ಒಂದಾದ ಅಪರೂಪದ 'ಭಾವಸಂಗಮ'.

ಆ ಕಾರ್ಯಕ್ರಮ ಮುಗಿಸಿ ಮನೆಗೆ ಬಂದ ಮೇಲೂ, ಆ ಕವಿತೆಗಳ ಸಾಲುಗಳು ಮತ್ತು ಅಲ್ಲಿನ ಆಪ್ತವಾದ ವಾತಾವರಣ ನನ್ನ ಮನಸ್ಸಿನಲ್ಲೇ ಉಳಿದುಬಿಟ್ಟಿದೆ. ನಿಜ ಹೇಳಬೇಕೆಂದರೆ,  ಕೆಲಸದ ಒತ್ತಡದಲ್ಲೋ ಇರುವ ನಮಗೆ, ನಮ್ಮವರ ಜೊತೆ ಕಳೆಯುವ ಇಂತಹ ಕೆಲವೇ ಗಂಟೆಗಳು ಬದುಕಿಗೆ ಹೊಸ ಚೈತನ್ಯ ನೀಡುತ್ತವೆ.

ಕರ್ನಾಟಕ ಜಾನಪದ ಪರಿಷತ್ (ಒಮಾನ್ ಘಟಕ)ದ ಅಧ್ಯಕ್ಷರಾದ ಶ್ರೀ ಶಿವಾನಂದ ಕೋಟ್ಯಾನ್ ಅವರ ಪ್ರೀತಿಯ ಕರೆಯ ಮೇರೆಗೆ ನಡೆದ **"ಶಿಶಿರ ಕಾವ್ಯ ಸಂಜೆ"**ಯಲ್ಲಿ ಪಾಲ್ಗೊಂಡಾಗ ಸಿಕ್ಕ ಆನಂದವನ್ನು ಪದಗಳಲ್ಲಿ ಹಿಡಿದಿಡುವುದು ಕಷ್ಟ. ಅಲ್ಲಿ ಕವಿಗಳಿದ್ದರು, ಕವಿತೆಗಳಿದ್ದವು, ಮುಕ್ತ ನಗು ಇತ್ತು, ಮತ್ತು ಎಲ್ಲಕ್ಕಿಂತ ಮಿಗಲಾಗಿ "ನಾವೆಲ್ಲರೂ ಒಂದು" ಎನ್ನುವ ಕೌಟುಂಬಿಕ ವಾತಾವರಣವಿತ್ತು. 



ನಮ್ಮವರ ಪ್ರತಿಭೆ ಕಂಡು ಮೂಕವಿಸ್ಮಿತನಾದೆ! 🖊️

ನಿಜ ಹೇಳಬೇಕೆಂದರೆ, ನಮ್ಮ ಮಸ್ಕತ್‌ನಲ್ಲಿ ಇಷ್ಟೊಂದು ಜನ ಕವನ, ಕಾವ್ಯ ಮತ್ತು ಚುಟುಕು ಪ್ರೇಮಿಗಳಿದ್ದಾರೆ ಎಂದು ತಿಳಿದದ್ದೇ ಈ ಕಾರ್ಯಕ್ರಮದಿಂದ! 

 ಶ್ರೀ  ಶಿವಾನಂದ ಕೋಟ್ಯಾನ್ ಅವರ ಬಗ್ಗೆ ಮೊದಲು ಹೇಳಲೇಬೇಕು. ಅವರು ಕೇವಲ ಒಂದು ಸಂಸ್ಥೆಯ ಅಧ್ಯಕ್ಷರಾಗಿ ಅಲ್ಲ, ಒಬ್ಬ ಮನೆಯ ಹಿರಿಯನಂತೆ ನಿಂತು ಈ "ಶಿಶಿರ ಕಾವ್ಯ ಸಂಜೆ"ಯನ್ನು ರೂಪಿಸಿದ್ದರು. ಇಂತಹದೊಂದು ಸುಂದರ ವೇದಿಕೆಯನ್ನು ಸೃಷ್ಟಿಸಿ, ನಮ್ಮಲ್ಲಿ ಸುಪ್ತವಾಗಿದ್ದ ಹಿತ್ಯಾಸಕ್ತಿಯನ್ನು ಬಡಿದೆಬ್ಬಿಸಿದ ಅವರಿಗೆ ನನ್ನ ಹೃದಯಾಂತರಾಳದ ಧನ್ಯವಾದಗಳು.

 ಮಸ್ಕತ್‌ನಂತಹ ಕಡಲಾಚೆಯ ನಾಡಿನಲ್ಲಿ ಇಷ್ಟೊಂದು ಜನ ಸಾಹಿತ್ಯ ಪ್ರೇಮಿಗಳು, ಕವಿಗಳು ನಮ್ಮ ಮಧ್ಯೆಯೇ ಇದ್ದಾರೆ ಎಂಬುದು ಒಂದು ದೊಡ್ಡ ಅಚ್ಚರಿ ಮತ್ತು ಖುಷಿಯ ವಿಷಯ!


ಕಾರ್ಯಕ್ರಮದ ಪ್ರತಿಕ್ಷಣವೂ ನನಗನ್ನಿಸಿದ್ದು ಇದು - "ಇದು ನಮ್ಮವರ ನಡುವೆ ನಡೆಯುತ್ತಿರುವ ಸಂಭ್ರಮ" ಎಂದು. ಅಕ್ಷಯ್ ಮೂಡುಬಿದಿರೆ ಅವರ ನಿರೂಪಣೆಯಲ್ಲಿ ಒಂದು ರೀತಿಯ ಆತ್ಮೀಯತೆ ಇತ್ತು. ಅವರು ಮಾತಾಡುತ್ತಿದ್ದರೆ ಅದೊಂದು ಕಾರ್ಯಕ್ರಮ ಎನ್ನುವುದಕ್ಕಿಂತ, ಆತ್ಮೀಯ ಗೆಳೆಯನೊಬ್ಬ ಮನದ ಮಾತುಗಳನ್ನು ಹಂಚಿಕೊಂಡಂತೆಯೇ ಭಾಸವಾಯಿತು.


ಕವಿಮನಸ್ಸುಗಳ ಅನಾವರಣ 🎙️

ಸಾಹಿತ್ಯವೆಂಬುದು ಕೇವಲ ಪುಸ್ತಕದ ಮಾತಲ್ಲ, ಅದು ಬದುಕಿನ ಪ್ರತಿಬಿಂಬ ಎಂಬುದನ್ನು ಅಲ್ಲಿ ನೆರೆದಿದ್ದ ಕವಿಮನಸ್ಸುಗಳು ಸಾಬೀತುಪಡಿಸಿದವು:

ಹಿರಿಯ ಕವಿಗಳಾದ ಶ್ರೀ ಶಿವಪ್ರಕಾಶ್ ಅವರು ತಮ್ಮ ಅನುಭವದ ಮಾತುಗಳಿಂದ ಸಾಹಿತ್ಯ ಸಂಜೆಗೆ ಮೆರಗು ನೀಡಿ ಸಾಹಿತ್ಯದ ಮಹತ್ವವನ್ನು ಒತ್ತಿ ಹೇಳಿ, ಬರಹಗಾರರಿಗೆ ಅಮೂಲ್ಯವಾದ ಸಲಹೆ ನೀಡುತ್ತ.  ಯಾರ ಪ್ರಶಂಸೆಗಾಗಿ ಬರೆಯಲು ಹೋಗಬೇಡಿ  "ಯಾರ ಮೆಚ್ಚುಗೆಯನ್ನೂ ನಿರೀಕ್ಷಿಸಬೇಡಿ, ನಿಮ್ಮ ಆತ್ಮತೃಪ್ತಿಗಾಗಿ ಬರೆಯಿರಿ." ಎಂದು ಕಿವಿ ಮಾತುಹೇಳಿದರು. ಎಷ್ಟು ಸತ್ಯ ಅಲ್ವಾ? 

ಹಾಗೆಯೇ ಶ್ರೀ ಸುರೇಶ್ ಅವರು ಮಸ್ಕತ್‌ನ ಸಂಜೆಯನ್ನೂ ಆ ಶಿಶಿರ ಕಾಲದ ಸೌಂದರ್ಯಕ್ಕೆ ಹೋಲಿಸಿ ವರ್ಣಿಸಿದ್ದು ಅದ್ಭುತವಾಗಿತ್ತು.




ನನ್ನ ಮನಸ್ಸನ್ನು ತುಂಬಾ ಕಾಡಿದ್ದು ಮತ್ತು ಕಣ್ಣಾಲಿಗಳನ್ನು ಒದ್ದೆ ಮಾಡಿದ್ದು ಶ್ರೀಮತಿ ಪ್ಲೇವಿಯ ಅವರ ಮಾತುಗಳು. ತಮ್ಮ ಜೀವನದ ಹೋರಾಟವನ್ನು ಅವರು ಹಂಚಿಕೊಂಡ ರೀತಿ ಎಲ್ಲರನ್ನೂ ಭಾವುಕರನ್ನಾಗಿಸಿತು. ನೋವು ಮತ್ತು ನಗು ಎರಡೂ ಸಾಹಿತ್ಯದ ಭಾಗ ಎಂಬುದಕ್ಕೆ ಆ ಸಂಜೆಯೇ ಸಾಕ್ಷಿ.

​ತುಳು ಮತ್ತು ಕನ್ನಡ ಕವಿತೆಗಳ ಮೂಲಕ ಇಡೀ ಸಭೆಯನ್ನು ನಗೆಗಡಲಲ್ಲಿ ತೇಲಿಸಿದ ಕೀರ್ತಿ ನಮ್ಮ ಆರ್. ಕೆ  ನಿರಂಜನ್ ಅವರಿಗೆ ಸಲ್ಲಬೇಕು.


ಎಪ್ಪತ್ಮೂರು ವಾವಸ್ಸಿನ ಯುವಕ ವಾಲ್ಟ್ ರ್ ಅವರು ತಮ್ಮ ಹಾಸ್ಯಗಳ ಮೂಲಕ ಸಭಿಕರನ್ನು ನಗೆಗಡಲಲ್ಲಿ ತೇಲಿಸಿದರು. 


ಪ್ರಮೋದ್ ಮುದೋಳ್ ಅವರು ತಮ್ಮ ಪತ್ನಿಯ ಕವಿತೆಯನ್ನು ಓದುತ್ತಾ, ತಮ್ಮ ದಾಂಪತ್ಯದ ಆರಂಭದ ದಿನಗಳನ್ನು ಮೆಲುಕು ಹಾಕಿದ ರೀತಿ ತುಂಬಾನೇ ಮುದ್ದಾಗಿತ್ತು. ಸಭಿಕರ ಮುಖದಲ್ಲಿ ಅರಳಿದ ಆ ಮುಗುಳ್ನಗುವೇ ಅದಕ್ಕೆ ಸಾಕ್ಷಿ.


ವಿದೂಷಿ ತೀರ್ಥ ಕಟೀಲ್ ಅವರು ಪ್ರಧಾನಿ ಮೋದಿ ಅವರನ್ನು ಕಂಡ ಆ ಸಂಭ್ರಮವನ್ನು ವಿವರಿಸಿದಾಗ, ನಮಗೂ ಆ ಪುಳಕ ಅನುಭವಕ್ಕೆ ಬಂತು. ಇನ್ನು ಪ್ರಮೋದ್ ಮುದೋಳ್ ಅವರು ತಮ್ಮ ದಾಂಪತ್ಯದ ಸುಂದರ ದಿನಗಳನ್ನು ನೆನೆಯುತ್ತಾ ಪತ್ನಿಯ ಕವಿತೆ ಓದಿದ್ದು ತುಂಬಾ ಮುದ್ದಾಗಿತ್ತು. ರೋಹಿತ್ ಮಂಜೇಶ್ವರ, ಸವಿತಾ ಚೇತನ್, ದೀಪಿಕಾ ಪ್ರಸಾದ್, ರಾಮಕೃಷ್ಣ ಸುಜಿರ್... ಹೀಗೆ ಪ್ರತಿಯೊಬ್ಬರೂ ತಮ್ಮ ಮನದಾಳವನ್ನು ಅಕ್ಷರಗಳ ರೂಪದಲ್ಲಿ ಹರಿಸಿದರು.


ನಾನು ಸಹ ಹನಿಗವಿತೆಗಳನ್ನ ವಾಸಿಸುವ ಮೂಲಕ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸುವ ಕಿರು ಪ್ರಯತ್ನ ಮಾಡಿದೆ. 


ಇದೇ ವೇದಿಕೆಯಲ್ಲಿ ನಮ್ಮ ‌ಒಮಾನ್ ಕನ್ನಡಿಗರ ಸಾಹಿತ್ಯ ಬಳಗದ ವತಿಯಿಂದ ರೂಪುಗೊಂಡ  ಕರ್ನಾಟಕ ರಾಜ್ಯೋತ್ಸವ ವಿಶೇಷಾಂಕ ಈ-ಮ್ಯಾಗ್ಜೀನ್ ಲೋಕಾರ್ಪಣೆಗೊಂಡಿದ್ದು ಸಂಭ್ರಮವನ್ನು ಇಮ್ಮಡಿಗೊಳಿಸಿತು.



 

ಕೊನೆಯಲ್ಲಿ ನನಗನ್ನಿಸಿದ್ದು ಇಷ್ಟೇ - ❤️ 

ನಾವು ಎಲ್ಲೇ ಇರಲಿ, ನಮ್ಮ ಭಾಷೆ ಮತ್ತು ಸಾಹಿತ್ಯ ನಮ್ಮನ್ನು ಒಂದುಗೂಡಿಸುತ್ತದೆ. ಇಂತಹ ಕಾರ್ಯಕ್ರಮಗಳು ಕೇವಲ ಸಾಹಿತ್ಯಕ್ಕೆ ಸೀಮಿತವಾಗದೆ, ನಮ್ಮಂತಹ ಅನಿವಾಸಿ ಕನ್ನಡಿಗರಿಗೆ ಒಂದು 'ತವರು ಮನೆ'ಯ ಅನುಭವ ನೀಡುತ್ತವೆ.

 ​"ಶಿಶಿರ ಕಾವ್ಯ ಸಂಜೆ"  ಇಂತಹ ಸಂಜೆಗಳು ಪದೇ ಪದೇ ಬರುತ್ತಿರಲಿ, ನಮ್ಮ ಮನಸುಗಳು ಹೀಗೆಯೇ ಅಕ್ಷರಗಳ ಮೂಲಕ ಬೆಸೆಯುತ್ತಿರಲಿ. ಎಂದು ಆಶಿಸುತ್ತೇನೆ.

ಕರ್ನಾಟಕ ಜಾನಪದ ಸಾಹಿತ್ಯ ಪರಿಷತ್ ಒಮಾನ್ ನ ಅಧ್ಯಕ್ಷರಾದ ಶ್ರೀಯುತ ಶಿವಾನಂದ್ ಅವರು ಕವಿಗಳಿಗೆ ಒಂದು ಉತ್ತಮ ವೇದಿಕೆ ನೀಡಿದ್ದಕ್ಕೆ ಅವರಿಗೆ ನನ್ನ ತುಂಬು ಹೃದಯದ ಧನ್ಯವಾದಗಳು  

ಮಸ್ಕತ್ ನಲ್ಲಿ ನೆಲೆಸಿರುವ ಸಾಹಿತ್ಯ ಆಸಕ್ತರಿಗೆ ಒಂದು ಒಳ್ಳೆಯ ವೇದಿಕೆ. ಇಂಥಾ ಕಾರ್ಯಕ್ರಮಗಳು ಆಗಾಗ ನಡೆಯುತ್ತಲೇ ಇರಲಿ. ಹೆಚ್ಚಿನ ಸಾಹಿತ್ಯ ಆಸಕ್ತರು ತಮ್ಮ ಮನಸಿನ ಭಾವನೆಗಳನ್ನು ಹೇಳಿಕೊಳ್ಳುವ ಸಮಾನಮನಸ್ಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಲಿ. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲರಿಗೂ ಧನ್ಯವಾದಗಳು 🙏 


​ಎಲ್ಲರಿಗೂ ಶುಭವಾಗಲಿ! 🙏🏻

ಪ್ರೀತಿಯಿಂದ,


ಪಿ.ಎಸ್ ರಂಗನಾಥ 

ಮಸ್ಕತ್ ಒಮಾನ್ 

ಬುಧವಾರ, ಸೆಪ್ಟೆಂಬರ್ 27, 2023

ಕೃಷಿ ಸ್ವಾವಲಂಬನೆಯತ್ತ ಅರಬ್ ರಾಷ್ಟ್ರಗಳು



ಅರಬ್ ರಾಷ್ಟ್ರಗಳಾದ ಸೌದಿ ಅರೇಬಿಯಾ, ಕುವೈತ್, ಕತಾರ್, ಒಮಾನ್, ಬಹರೈನ್, ಯುಏಇ ಮತ್ತಿತರ ರಾಷ್ಟ್ರಗಳು ನಮ್ಮ ಭಾರತದಂತೆ ವೈವಿಧ್ಯಮಯ ಭೂಪ್ರದೇಶವನ್ನು ಹೊಂದಿಲ್ಲ ಇಲ್ಲಿನ ಬಹುತೇಕ ಜಾಗ ಮರುಭೂಮಿಯಿಂದ ಆವೃತವಾಗಿದೆ, ಮಳೆ ಬಹಳ ವಿರಳ, ನದಿ ಸರೋವರಗಳು ಇಲ್ಲಿ ಬಹಳ ಕಡಿಮೆ.  ಏಳೆಂಟು ತಿಂಗಳು ಬೇಸಿಗೆ ಕಾಲ, ಆ ಸಮಯದಲ್ಲಿ ಅತಿ ಹೆಚ್ಚು ಎಂದರೆ 40-55 ಡಿಗ್ರಿ .ಸೆಲ್ಶಿಯಸ್ ನಷ್ಟು ತೀಕ್ಷ್ಣವಾದ ಬಿಸಿಲು. ಇಂತಹ ವೈರುಧ್ಯಮಯವಾದ ವಾತಾವರಣದಲ್ಲಿ ಬೆಳೆ ಬೆಳೆಯುವುದು ಬಹಳ ಕಷ್ಟ. ಇಲ್ಲಿ ತೈಲ ಆವಿಷ್ಕಾರ ವಾಗುವವರೆಗೂ ನೂರಾರು ವರ್ಷಗಳಿಂದ ಇಲ್ಲಿನ ಜನರು ಭಾರತದಂತಹ ರಾಷ್ಟ್ರಗಳನ್ನ ಅಗತ್ಯ ವಸ್ತುಗಳಿಗಾಗಿ  ಅವಲಂಬಿಸಿದ್ದರು. ಆದರೆ, ಇಪ್ಪತ್ತನೇ ಶತಮಾನದಲ್ಲಿ ತೈಲದ ಆವಿಷ್ಕಾರದ ನಂತರ ಇಲ್ಲಿಯ ಬದುಕಿನ ಚಿತ್ರಣ ಸಂಪೂರ್ಣವಾಗಿ ಬದಲಾಗಿದೆ. ತೈಲದ ಬೇಡಿಕೆ ದಿನೇ ದಿನೇ ಹೆಚ್ಚಿದಂತೆಲ್ಲ ತೈಲ ಉತ್ಪಾದನೆ ಹೆಚ್ಚಾಯಿತು. ಈ ತೈಲ ಮಾರಿ ಬಂದ ಹಣದಲ್ಲಿ ಇಲ್ಲಿನ ಮೂಲ ಭೂತ ಸೌಕರ್ಯಗಳನ್ನ ಅಭಿವೃದ್ದಿ ಪಡಿಸಿದ್ದಲ್ಲದೆ, ದೇಶಕ್ಕೆ ಬೇಕಾದ ಎಲ್ಲ ರೀತಿಯ ಸುಸಜ್ಜಿತ ವ್ಯವಸ್ಥೆಗಳನ್ನ ನಿರ್ಮಿಸಿ ಕೊಳ್ಳುತ್ತ ಬಂದಿದ್ದಾರೆ. ಜನರಿಗೆ ಬೇಕಾದ ಎಲ್ಲಾ ರೀತಿಯ ಅಗತ್ಯ ಉತ್ಪನ್ನಗಳನ್ನು  ಪ್ರಪಂಚದ ಮೂಲೆ ಮೂಲೆಗಳಿಂದ ಮಾತ್ರವಲ್ಲದೆ ಅಮೇರಿಕ, ಆಸ್ಟ್ರೇಲಿಯಾ, ಯೂರೋಪ್ ರಾಷ್ಟ್ರಗಳ ಉತ್ತಮ ಗುಣಮಟ್ಟದ ಹಣ್ಣು ತರಕಾರಿ, ದಿನಸಿ ವಸ್ತುಗಳನ್ನು ಆಮದು ಮಾಡಿಕೊಳ್ಳುತಿದ್ದಾರೆ. ಇಲ್ಲಿನ ಸೂಪರ್ ಮಾರ್ಕೆಟ್ ಗಳು, ಮಾಲ್ ಗಳಲ್ಲಿ ದೇಶ ವಿದೇಶಗಳ ವಸ್ತುಗಳು ದೊರೆಯುತ್ತಿವೆ.

 

ಅರಬ್ ರಾಷ್ಟ್ರಗಳಲ್ಲಿ ಕೇವಲ ಮರುಭೂಮಿ ಮತ್ತು ತೈಲ ನಿಕ್ಷೇಪಗಳು ಮಾತ್ರವಲ್ಲದೆ ಕೆಲ ಪ್ರದೇಶಗಳಲ್ಲಿ ಫಲವತ್ತಾದ ಕೃಷಿ ಭೂಮಿಗಳು ಸಹ ಇವೆ. ಹೀಗಾಗಿ ಅಲ್ಲಿನ ಹವಾಮಾನಕ್ಕೆ ತಕ್ಕಂತೆ ಬೆಳೆಯುವ ಬೆಳೆಗಳನ್ನು ಬೆಳೆಯುತಿದ್ದಾರೆ. ಕೆಲೆವೆಡೆ ಕೃಷಿ ಭೂಮಿ ಸೇರಿದಂತೆ, ಹೈನುಗಾರಿಕೆ, ಕೋಳಿ ಸಾಕಾಣಿಕೆ ಕೇಂದ್ರಗಳಲ್ಲಿ ಅತ್ಯುನ್ನತ ತಂತ್ರಜ್ನಾನವನ್ನು ಉಪಯೋಗಿಸುತಿದ್ದಾರೆ. ಇವೆಲ್ಲವನ್ನ ಕಣ್ಣಾರೆ ನೋಡಿದಾಗ ಕೃಷಿಯನ್ನು ಹೀಗೂ ಮಾಡಬಹುದಾ ಎಂದು ಆಶ್ಚರ್ಯವಾಗುತ್ತದೆ.

 ಮರುಭೂಮಿಯಲ್ಲಿ ಅದ್ಭುತವಾದ ಬೆಳೆ ತೆಗೆಯುತ್ತಿರುವ ಸೌದಿ ಅರೇಬಿಯಾ

ಸೌದಿ ಅರೇಬಿಯಾದ ಭೂಪ್ರದೇಶದ ಸುಮಾರು 1.5% ಮಾತ್ರ ಕೃಷಿ ಮಾಡಲು ಯೋಗ್ಯವಾಗಿದೆ. ಹೀಗಾಗಿ ದೇಶದ ಅಗತ್ಯ ಆಹಾರ ಪೂರೈಕೆಯ 80% ಕ್ಕಿಂತ ಹೆಚ್ಚು ಆಮದು ಮಾಡಿಕೊಳ್ಳುತ್ತಿದೆ. ಆದರೆ ಮುಂದೊಂದು ದಿನ ಜಾಗತಿಕ ಆಹಾರ ಪೂರೈಕೆ ಜಾಲದಲ್ಲಿ ಏನಾದರು ಕುಸಿತ ಕಂಡರೆ ದೇಶ ಅಪಾಯಕ್ಕೆ ಸಿಲುಕುವ ಸಂಭವನೀಯತೆ ಹೆಚ್ಚಿರುತ್ತದೆ. ಹೀಗಾಗಿ ಜಾಗತಿಕ ಆಹಾರ ಪೂರೈಕೆ ಜಾಲದ ಸಂಭವನೀಯ ಅಪಾಯಗಳನ್ನು ಮನಗಂಡು ಆಹಾರ ಭದ್ರತೆ ಗಾಗಿ ಅತ್ಯುನ್ನತ ವಿದೇಶಿ ತಂತ್ರಜ್ನಾನವನ್ನು ಉಪಯೋಗಿಸಿ ಮರುಭೂಮಿಯನ್ನು ಕೃಷಿಭೂಮಿಯನ್ನಾಗಿ ಸೌದಿ ಅರೇಬಿಯಾ ಪರಿವರ್ತಿಸುತ್ತಿದೆ.  ಇದರ ಪರಿಣಾಮ ಕೆಲೆವೆಡೆ ನೂರಾರು ಕಿ.ಮಿ.ಗಳಷ್ಟು ಉದ್ದಕ್ಕೂ ಕೃಷಿ ಚಟುವಟಿಕೆಯನ್ನು ಇಂದು ಕಾಣಬಹುದಾಗಿದೆ. ಇದರಿಂದಾಗಿ ಆಹಾರಕ್ಕಾಗಿ ಸಂಪೂರ್ಣ ಸುಸ್ಥಿರ ಸ್ವಾವಲಂಬನೆಯತ್ತ ಹೆಜ್ಜೆಹಾಕುತ್ತಿದೆ.

 

ತುಬರ್ಜಲ್  ಎನ್ನುವ ಪ್ರದೇಶದಲ್ಲಿ ಲಕ್ಷಾಂತರ ಎಕರೆ ಮರುಭೂಮಿ ಇಂದು ಕೃಷಿಭೂಮಿಯಾಗಿ ಪರಿವರ್ತಿತ ಗೊಂಡಿದೆ. 300 ರಿಂದ 500 ಮೀಟರ್ ತ್ರಿಜ್ಯದ ವೃತ್ತಾಕಾರದಲ್ಲಿ ಈ ಕೃಷಿ ಭೂಮಿಗಳಿವೆ. ಗೂಗಲ್ ಮ್ಯಾಪ್ ನಲ್ಲಿ ನೋಡಿದರೆ ಚುಕ್ಕಿಗಳಂತೆ ಕಾಣುವ ಈ ಪ್ರದೇಶ ಸಾವಿರಾರು ಚದರ ಕಿ.ಮಿ. ನಷ್ಟು ಹರಡಿಕೊಂಡಿದೆ ಎಂದರೆ ನಂಬಲು ಸಾಧ್ಯವಾಗುವುದಿಲ್ಲ. ಇಲ್ಲಿ ಕೃಷಿ ಚಟುವಟಿಕೆಗೆ ಬೇಕಾದ ನೀರಿಗಾಗಿ ಬೋರ್ ವೆಲ್ ಗಳನ್ನು ಕೊರೆಯಲಾಗಿದೆ. ಇದರಿಂದ ಭೂಮಿಯ ಆಳದಲ್ಲಿರುವ ನೀರನ್ನು ತೆಗೆದು 300 ಮೀಟರ್ ರಿಂದ 500 ಮೀಟರ್ ತ್ರಿಜ್ಯದಲ್ಲಿ ವೃತ್ತಾಕಾರದ ಸಿಂಪರಣಾ ವ್ಯವಸ್ಥೆಯ ಮುಖಾಂತರ ಅಥವಾ ಸೆಂಟರ್-ಪಿವೋಟ್ ನೀರಾವರಿ ಪದ್ದತಿಯಿಂದ ಬೆಳೆಗಳಿಗೆ ನೀರನ್ನು ಪೂರೈಸಲಾಗುತ್ತಿದೆ. ಅಷ್ಟೇ ಅಲ್ಲದೆ ಹನಿ ನೀರಾವರಿ ಪದ್ದತಿ, ಸ್ಪ್ರಿಂಕ್ಲರ್ ಇನ್ನು ಮುಂತಾದ ತಂತ್ರಜ್ನಾನವನ್ನು ಉಪಯೋಗಿಸಿ ಬೆಳೆಗಳಿಗೆ ನೀರುಣಿಸುತಿದ್ದಾರೆ. ಬಹುತೇಕ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಇಲ್ಲಿ ಉಪಯೋಗಿಸುವುದರಿಂದ ಹೆಚ್ಚಿನ ಕೃಷಿ ಕಾರ್ಮಿಕರ ಅಗತ್ಯತೆ ಕಂಡು ಬರುತ್ತಿಲ್ಲ. ನೀರಿನ ಬಳಕೆಯೂ ಇಲ್ಲಿ ಕಡಿಮೆ. ಇಲ್ಲಿ, ವಿವಿಧ ರೀತಿಯ ಹಣ್ಣು, ಹೂವು ತರಕಾರಿ, ಖರ್ಜೂರ, ಧವಸ ಧಾನ್ಯಗಳಾದ ಗೋಧಿ, ಬಾರ್ಲಿಯನ್ನು ಬೆಳೆಯಲಾಗುತ್ತಿದೆ. ಇಲ್ಲಿ ಬೆಳೆಯುವ 100% ಎಲ್ಲಾ ಕೃಷಿ ಉತ್ಪನ್ನಗಳು ದೇಶದೊಳಗೆ ಸರಬರಾಜಾಗುತಿದ್ದು, ಹೆಚ್ಚುವರಿ ಉತ್ಪನ್ನಗಳನ್ನ ಪಕ್ಕದ ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತಿದೆ. ಸಾಂಪ್ರದಾಯಿಕ ಕೃಷಿಯ ಜತೆಗೆ, ನೂತನ ತಂತ್ರಜ್ನಾನಗಳಾದ ಹೈಡ್ರೋಪೋನಿಕ್ಸ್ ಮತ್ತು ಏರೋಪೋನಿಕ್ಸ್ ಅನ್ನು ಕೆಲೆವೆಡೆ ಅಳವಡಿಸಿಕೊಂಡು ಕೃಷಿಮಾಡಲಾಗುತ್ತಿದೆ.

 ಒಮಾನ್ ರಾಷ್ಟ್ರವೂ ಸಹ ಕೃಷಿ ಸ್ವಾವಲಂಬನೆಯತ್ತ ದಾಪುಗಾಲು ಹಾಕುತ್ತಿದೆ.

 ಒಮಾನ್ ನಲ್ಲಿಯೂ ಸಹ ವಿವಿಧ ತರಹದ ಹೂ, ಹಣ್ಣು ಸೊಪ್ಪುಗಳನ್ನ ಬೆಳೆಯಲಾಗುತ್ತಿದೆ. ಇಲ್ಲಿಯೂ ಲಕ್ಷಾಂತರ ಎಕರೆಯಷ್ಟು ಕೃಷಿ ಭೂಮಿಯಿದೆ. ಈ ತೋಟಗಳಲ್ಲಿ ಗೋಧಿ, ಬಾರ್ಲಿ, ಖರ್ಜೂರ, ಬಾಳೆಹಣ್ಣು, ಮಾವಿನಹಣ್ಣು, ಸೀಬೆ ಹಣ್ಣು, ಸಪೋಟ, ಪಪ್ಪಾಯ, ಕಲ್ಲಂಗಡಿ ಹಣ್ಣು, ದಾಳಿಂಬೆ, ಕರಭೂಜ, ಸೋರೆಕಾಯಿ, ಕುಂಬಳ್ಕಾಯಿತೆಂಗಿನಕಾಯಿ, ಕೊತ್ತಂಬರಿ, ಪುದಿನ, ಲೆಟ್ಟ್ಯೂಸ್, ಬದನೆಕಾಯಿ, ಟೊಮಾಟೋ, ಕ್ಯಾಪ್ಸಿಕಮ್, ನಿಂಬೆಹಣ್ಣು, ನುಗ್ಗೆಕಾಯಿ, ಆಲೂಗಡ್ಡೆ ಮುಂತಾದವಗಳನ್ನು ಇಲ್ಲಿ ಬೆಳೆಯುತ್ತಾರೆ. ಉತ್ಸಾಹಿ ಒಮಾನಿ ಕೃಷಿಕರು ವಿವಿಧ ರೀತಿಯ ಪ್ರಯೋಗಗಳನ್ನ ನಡೆಸುತ್ತಿರುವುದು ವಿಶೇಷ. ಮಲೆನಾಡಿನಲ್ಲಿ ಬೆಳೆಯುವ ಹಲಸಿನ ಹಣ್ಣನ್ನು ಸಹ ಇಲ್ಲಿ ಬೆಳೆದು ಯಶಸ್ಸು ಕಂಡಿದ್ದಾರೆ. ಅಷ್ಟು ಮಾತ್ರವಲ್ಲದೆ ಅಂಜೂರದ ಹಣ್ಣುಗಳು, ಏಪ್ರಿಕಾಟ್ಗಳು, ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ಸಹ ಬೆಳೆಯುತ್ತಿರುವುದು ವಿಶೇಷವಾಗಿದೆ, ಯಾಕೆಂದರೆ ಇಲ್ಲಿನ ವಾತಾವರಣ ಅತಿ ಬಿಸಿಲಿನಿಂದ ಕೂಡಿದ್ದು, ಇಂತಹ ಅತಿ ಕಡಿಮೆ ಮಳೆ ಪ್ರದೇಶದಲ್ಲಿ ಇಂತಹವುಗಳನ್ನ ಬೆಳೆಯಲು ಸಾಧ್ಯವಾಗಿದ್ದೆ ವಿಶೇಷವೆಂದೇ ಹೇಳಬೇಕು.

 

ಕೆಲೆವೆಡೆ ಹನಿ ನಿರಾವರಿ ಪದ್ದತಿ, ಸ್ಪ್ರಿಂಕ್ಲರ್ ವ್ಯವಸ್ಥೆ, ವೃತ್ತಾಕಾರದ ಸಿಂಪರಣಾ ವ್ಯವಸ್ಥೆಯ ಜತೆಗೆ ಕೆಲೆವೆಡೆ ಹೈಡ್ರೋಪೋನಿಕ್ಸ್ ಮತ್ತು ಏರೋಪೋನಿಕ್ಸ್ ನಂತಹ ತಂತ್ರಜ್ನಾನಗಳನ್ನು ಉಪಯೋಗಿಸಲಾಗುತ್ತಿದೆ. ಇಲ್ಲಿ ಗಮನಿಸಬೇಕಾದ ಇನ್ನೊಂದು ವಿಷಯವೇನೆಂದರೆ, ತಂತ್ರಜ್ನಾನವನ್ನು ಉಪಯೋಗಿಸಿ ಈ ರಾಷ್ಟ್ರಗಳಲ್ಲಿ ಬೆಳೆಯುವ ಕೃಷಿ ಉತ್ಪನ್ನಗಳು ಅತ್ಯುತ್ತಮ ಗುಣಮಟ್ಟದ್ದಾಗಿವೆ.

 

ಒಮಾನ್ ರಾಷ್ಟ್ರದ ಬೆಟ್ಟ ಗುಡ್ಡಗಾಡು ಪ್ರದೇಶಗಳ ಬುಡದಲ್ಲಿ ವರ್ಷಪೂರ್ತಿ ನೈಸರ್ಗಿಕವಾಗಿ ಹರಿಯುವ ಸಾವಿರಾರು ನೀರಿನ ಝರಿಗಳಿವೆ, ಈ ನೀರನ್ನು ಕೃಷಿಗಾಗಿ ಬಳಕೆ ಮಾಡಲಾಗುತ್ತಿದ್ದು, ಮಿಕ್ಕ ಕೆಲೆವೆಡೆ ಬೋರ್ ವೆಲ್ ಗಳನ್ನು ಕೊರೆದು ಕೃಷಿಗಾಗಿ ನೀರನ್ನು ಬಳಸಿಕೊಳ್ಳಲಾಗುತ್ತಿದೆ. ದುಬೈ ನಿಂದ ಒಮಾನ್ ರಾಷ್ಟ್ರದ ಮಸ್ಕತ್ ಗೆ ರಸ್ತೆಯಲ್ಲಿ ಪ್ರಯಣಿಸುವಾಗ ರಸ್ತೆಯ ಇಕ್ಕೆಲಗಳಲ್ಲಿ ನೂರಾರು ಕಿ.ಮಿ. ದೂರದಷ್ಟು ಹಚ್ಚ ಹಸಿರಿನಿನ ತೋಟಗಳನ್ನು ಕಾಣಬಹುದು, ಇದೇ ರೀತಿ ಸಲಾಲ್ಹ, ಸೂರ್, ನಿಜ್ವ ಮುಂತಾದ ಪ್ರದೇಶಗಳಲ್ಲಿಯೂ ಸಹ ಹೊಲಗದ್ದೆಗಳಿವೆ. ಸಲಾಲ್ಹ ಪ್ರದೇಶವಂತೂ ನಮ್ಮ ಸಹ್ಯಾದ್ರಿ ತಪ್ಪಲಿನ ಒಂದು ಪಟ್ಟಣದಂತೆ ಇದೆ. ರಾಜಧಾನಿ ಮಸ್ಕತ್ ಸೇರಿದಂತೆ ಇತರೆ ನಗರಗಳಾದ ಸಲಾಲ್ಹ, ಸೋಹಾರ್, ಸೂರ್ ಮುಂತಾದೆಡೆ ಮುಖ್ಯರಸ್ತೆ ಬದಿಯಲ್ಲಿರುವ ಹಚ್ಚ ಹಸಿರಿನ ಉದ್ಯಾನವನಗಳು, ಕೈತೋಟಗಳು, ಗಿಡ ಮರಗಳನ್ನು ನೋಡಿದೊಡನೆ, ಪ್ರವಾಸಿಗರಿಗೆ ಆಶ್ಚಯವಾಗುವುದು ಖಂಡಿತ. ಒಮಾನಿನ ಕೆಲೆವೆಡೆ ಮಣ್ಣು ಫಲವತ್ತಾಗಿದೆ, ಇಲ್ಲಿನ ಗಿಡ ಮರಗಳಿಗೆ ಸೂಕ್ತ ಪ್ರಮಾಣದ ನೀರನ್ನು ಪೂರೈಸಿದರೆ, ಗಿಡ ಮರಗಳು ಸೊಂಪಾಗಿ ಬೆಳೆಯುತ್ತವೆ. ಮನೆಮುಂದಿನ ಜಾಗಗಳಲ್ಲಿ ಬಹುತೇಕ ಜನರು ವಿವಿಧ ರೀತಿಯ ತರಕಾರಿಗಳನ್ನು ಬೆಳೆಯುವುದಲ್ಲದೆ, ಅಲಂಕಾರಿಕ ಗಿಡಗಳನ್ನು ಬೆಳೆಸುತ್ತಾರೆ.

 

ಈ ಅರಬ್ ರಾಷ್ಟ್ರಗಳಲ್ಲಿ ತ್ಯಾಜ್ಯನೀರನ್ನ ಸಂಸ್ಕರಿಸಿ ಆ ನೀರನ್ನು ಈ ಉದ್ಯಾನವನಗಳಿಗೆ ಸರಬರಾಜು ಮಾಡಲಾಗುತ್ತದೆ. ಹನಿ ನೀರಾವರಿ ಪದ್ದತಿ, ಸ್ಪ್ರಿಂಕ್ಲರ್ ಪದ್ದತಿ ಮುಖಾಂತರ ಗಿಡಗಳಿಗೆ ಅಗತ್ಯವಾದ ನೀರನ್ನು ಪೂರೈಸಲಾಗುತ್ತಿದೆ. ಇಲ್ಲಿನ ತ್ಯಾಜ್ಯ ನೀರು ಸಂಸ್ಕರಣ ಘಟಕಗಳಿಂದ ಉತ್ಪಾದನೆಯಾಗುವ ತ್ಯಾಜ್ಯವನ್ನು ಸಂಸ್ಕರಿಸಿ ಗೊಬ್ಬರವನ್ನಾಗಿ ಪರಿವರ್ತಿಸಿ ಉದ್ಯಾನವನಗಳಿಗೆ ಪೂರೈಸಲಾಗುತ್ತಿದೆ.

 

ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ಪಡೆಯುವುದರ ಜತೆಗೆ ಕೃಷಿ ಕ್ಷೇತ್ರವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಾತ್ಮಕವಾಗಿಸಲು ಕೆಲಸ ಮಾಡುವುದು ಮಾತ್ರವಲ್ಲದೆ, ಕೃಷಿಯನ್ನು ಸಹ ಒಂದು ಉದ್ಯಮವನ್ನಾಗಿ ಪರಿಗಣಿಸಿ, ಕೃಷಿ ಚಟುವಟಿಕೆಗೆ ಬೇಕಾದ ಅಗತ್ಯವಾದ ಸೌಕರ್ಯಗಳನ್ನು ಅರಬ್ ರಾಷ್ಟ್ರಗಳು ಕಲ್ಪಿಸಿಕೊಡುತ್ತಿವೆ.  ಕೃಷಿ ವಲಯದಲ್ಲಿ ಹೂಡಿಕೆ ಮಾಡುವ ಸಲುವಾಗಿ ವಿದೇಶಿ ಹೂಡಿಕೆದಾರರನ್ನು ಪ್ರೋತ್ಸಾಹಿಸಲು ಕೃಷಿ ಉಪಕರಣಗಳ ಆಮದು ಸುಂಕ  ವಿನಾಯಿತಿ, ಕಡಿಮೆ ಬಡ್ಡಿದರದ ಸಾಲ ಇತ್ಯಾದಿ ಸೌಕರ್ಯಗಳನ್ನು ನೀಡಲಾಗಿದೆ. ಕೃಷಿಯ ಜತೆಗೆ ಅತ್ಯಾಧುನಿಕ ತಂತ್ರಜ್ನಾನದ ಸುಸಜ್ಜಿತ ಹೈನುಗಾರಿಕೆ ಫಾರಂಗಳು, ಕೋಳಿ ಸಾಕಾಣಿಕೆ ಕೇಂದ್ರಗಳು ಸಾಕಷ್ಟಿವೆ. ಇಲ್ಲಿ ಉತ್ಪಾದನೆಯಾಗುವ ಉತ್ತಮ ಗುಣಮಟ್ಟದ ಹಾಲು, ಮೊಸರು, ಬೆಣ್ಣೆ, ತುಪ್ಪ ದೇಶದೆಲ್ಲೆಡೆ ಬಳಕೆಯಾಗುವುದಲ್ಲದೆ ಇತರೆ ರಾಷ್ಟ್ರಗಳಿಗೂ ಸಹ ರಫ್ತು ಮಾಡಲಾಗುತ್ತಿದೆ.

 ಇಲ್ಲಿನ ಮಣ್ಣಿನಲ್ಲಿ ಬೆಳೆಯುವ ಕೃಷಿ ಉತ್ಪನ್ನಗಳ ಜತೆಗೆ ನಾಗರೀಕರ ಅಗತ್ಯಕ್ಕೆ ತಕ್ಕಂತೆ ಬೇಕಾದ ಕುರಿ ಕೋಳಿ ಮುಂತಾದವುಗಳನ್ನ ಇಲ್ಲಿ ಬೆಳೆಸಿ  ಸ್ವಾವಲಂಬನೆಯತ್ತ ಹೆಜ್ಜೆ ಹಾಕುತ್ತಿರುವುದು ಒಂದು ಉತ್ತಮ ಬೆಳವಣಿಗೆ. ಯಾವುದೇ ಒಂದು ರಾಷ್ಟ್ರ, ಆಹಾರದಂತಹ ವಿಷಯದಲ್ಲಿ ಬೇರೆಯವರ ಅವಲಂಬನೆಯಲ್ಲಿರುವುದು ಸರಿಯಲ್ಲ. ಈಗ ಸಾಕಷ್ಟು ಹಣ ಇದೆ ಎಂದು ಬೇಕಾದದ್ದನ್ನು ರಫ್ತು ಮಾಡಿಕೊಂಡು ಜೀವಿಸುವುದು ಸಹ ಉತ್ತಮ ನಿರ್ಧಾರವಲ್ಲ, ಮುಂದಿನ ಕನಿಷ್ಟ ಐವತ್ತು ವರ್ಷಗಳಿಗೆ ಮತ್ತು ಮುಂದಿನ ಪೀಳಿಗೆಗೆ ಬೇಕಾದ ಸೂಕ್ತ ಯೋಜನೆಗಳನ್ನ ಹಾಕಿಕೊಂಡು ಮುಂದಡಿಯಿಡುವುದು ಉತ್ತಮ ಲಕ್ಷಣ. ಆ ನಿಟ್ಟಿನಲ್ಲಿ, ಅರಬ್ ರಾಷ್ಟ್ರಗಳು ಮುಂದಾಲೋಚನೆಯಿಂದ ಸ್ವಾವಲಂಬನೆಯತ್ತ ಎಚ್ಚರಿಕೆಯ ಹೆಜ್ಜೆಇಡುತ್ತಿರುವುದು ಇತರೆ ರಾಷ್ಟ್ರಗಳಿಗೆ ಒಂದು ಪಾಠ ಎಂದು ಹೇಳಬೇಕು.

ಬರಹ:- ಪಿ.ಎಸ್.ರಂಗನಾಥ

ಮಸ್ಕತ್ - ಒಮಾನ್ ರಾಷ್ಟ್ರ

ಗುರುವಾರ, ಆಗಸ್ಟ್ 17, 2023

ಯುಏಇ ರಾಷ್ಟ್ರದ ಒಳಗೆ ಒಮಾನ್, ಒಮಾನ್ ಒಳಗೆ ಯುಏಇ


ನಮ್ಮ ಕರ್ನಾಟಕದ ಹಳ್ಳಿಯೊಂದು ಮಹಾರಾಷ್ಟ್ರದ ರಾಜ್ಯದ ಒಳಗೆ ಇದೆ ಎಂದರೆ ನಿಮಗೆ ಆಶ್ಚರ್ಯ ಆಗಬಹುದಲ್ಲವೆ. ಅದು ಹೇಗೆ ಎಂದರೆ, ಹಳ್ಳಿ ಕರ್ನಾಟಕದ್ದೇ ಆದರೂ ಹಳ್ಳಿಯ ಸುತ್ತಮುತ್ತಲಿನ ಭೂಪ್ರದೇಶ ಮಹಾರಾಷ್ಟ್ರ ರಾಜ್ಯಕ್ಕೆ ಸೇರಿದ್ದು. ವಿದ್ಯುತ್ ಸೌಲಭ್ಯ ಸಹ ಮಹಾರಾಷ್ಟ್ರ ನೀಡುತ್ತದೆ. ಆದರೆ ಆ ಹಳ್ಳಿ ಮಾತ್ರ ಕರ್ನಾಟಕ ರಾಜ್ಯದ ನಿಯಂತ್ರಣದಲ್ಲಿದೆ. ರಾಜ್ಯಗಳ ಗಡಿ ಗುರುತಿಸುವ ಸಂಧರ್ಭದಲ್ಲಿ ಅಲ್ಲಿನ ಜನ ಕರ್ನಾಟಕದೊಂದಿಗೆ ಇರಲು ಬಯಸಿದ್ದರಿಂದ ಅಂದಿನಿಂದ ಆ ಹಳ್ಳಿ ಕರ್ನಾಟಕದಲ್ಲಿದೆ. ಆ ಹಳ್ಳಿಯ ಹೆಸರೇ ಚೋಂಡೀ ಮುಖೇಡ್. ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ವ್ಯಾಪ್ತಿಯಲ್ಲಿ ಈ ಪ್ರದೇಶವಿದೆ. ಇದನ್ನು ಕರ್ನಾಟಕದ ಭೂಪ್ರದೇಶ ದ್ವೀಪ ಎಂದು ಕರೆಯುತ್ತಾರೆ.

 

ಇಂತಹದೇ ಇನ್ನೊಂದು ವಿಶೇಷ ಸಂಗತಿ ಅರಬ್ ರಾಷ್ಟ್ರಗಳಾದ ಒಮಾನ್ ಮತ್ತು ಯುನೈಟೆಡ್ ಅರಬ್ ಸಂಸ್ಥಾನ (ಯುಏಇ) ದಲ್ಲಿದೆ. ಆದರೆ ಇಲ್ಲಿ ವಿಷಯ ಸ್ವಲ್ಪ ಸಂಕೀರ್ಣ. ಅದು ಏನಪ್ಪ ಎಂದರೆ, ಯುಏಇ ದೇಶದೊಳಗೆ ಒಮಾನ್ ದೇಶದ ಪ್ರದೇಶ, ಆ ಪ್ರದೇಶದೊಳಗೆ ಮತ್ತೆ ಯುಏಇ ಯ ಒಂದು ಗ್ರಾಮ. ಇಲ್ಲಿನ ಆ ಎರಡು ಪ್ರದೇಶಗಳ ಜನರ ಭಾವನೆಗಳು ಮತ್ತು ನಿರ್ಧಾರಕ್ಕೆ ಬೆಲೆ ಕೊಟ್ಟು ಎರಡು ದೇಶಗಳ ಸರ್ಕಾರಗಳು ಆ ಎರಡು ಹಳ್ಳಿಗಳ ಜನರನ್ನು ಅವರ ಇಚ್ಚೆಯಂತೆಯೇ ಇರಲು ಅವರನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ಇನ್ನೊಂದು ವಿಶೇಷವೆಂದರೆ, ಇಲ್ಲಿ ಯಾವುದೇ ತರಹದ ಅಂತರಾಷ್ಟ್ರಿಯ ಗಡಿಗಳು ಇಲ್ಲ. ಪ್ರಪಂಚದಲ್ಲಿ ಈ ತರಹದ ಭೂ ಪ್ರದೇಶದ ದ್ವೀಪಗಳು ಬಹಳ ಅಪರೂಪ. ನೆದರ್ಲ್ಯಾಂಡ್ ಮತ್ತು ಬೆಲ್ಜಿಯಮ್ ರಾಷ್ಟ್ರಗಳಲ್ಲಿ ಸಹ ಈ ತರಹದ ಪ್ರದೇಶವಿದೆ. ಒಂದು ದೇಶದ ಭೂಭಾಗವನ್ನು ಇನ್ನೊಂದು ದೇಶವು ಸುತ್ತುವರಿದಿದ್ದರೆ ಮತ್ತು ಆ ಭಾಗವನ್ನು ಮತ್ತೊಂದು ದೇಶವು ಸುತ್ತುವರಿದಿದ್ದರೆ ಅದನ್ನು ಎಕ್ಸ್‌ಕ್ಲೇವ್‌ ಮತ್ತು ಎನ್‌ಕ್ಲೇವ್‌ ಎಂದು ಕರೆಯುತ್ತಾರೆ.

     ಇಂತಹ ವಿಶಿಷ್ಟವಾದ ಪ್ರದೇಶಗಳ ಹೆಸರು  "ಮಾಧಾ" ಮತ್ತು "ನಹ್ವಾ". ಮಾಧಾ ಒಮಾನ್ ರಾಷ್ಟ್ರಕ್ಕೆ ಸೇರಿದ್ದಾದರೆ, ನಹ್ವಾ ಯುನೈಟೆಡ್ ಅರಬ್ ಎಮಿರೇಟ್ಸ್ ಗೆ ಸೇರಿದೆ. ಇನ್ನು ಮಾದಾ ಪ್ರದೇಶದ ಜನರು ತಮ್ಮ ರಾಷ್ಟ್ರವಾದ ಒಮಾನಿನ ರಾಜಧಾನಿಯನ್ನು ಸಂಪರ್ಕಿಸಲು ಯುಏಇ ನ ಮುಖಾಂತರ ಹೋಗಬೇಕು. ಅದೇ ರೀತಿ  "ನಹ್ವಾ" ಪ್ರದೇಶದ ಜನರು ಯುಏಇಯನ್ನು ಸಂಪರ್ಕಿಸಲು ಒಮಾನಿನ ಮುಖಾಂತರ ಸಂಚರಿಸಬೇಕು.

     ಈ ತರಹ ಜನ ಯಾಕೆ ಆಯ್ದುಕೊಂಡರು ಎನ್ನುವ ಹಿನ್ನೆಲೆ ಹೀಗಿದೆ; 1930 ರ ದಶಕದ ಕೊನೆಯಲ್ಲಿ ಅಥವಾ 1940 ರ ದಶಕದ ಆರಂಭದಲ್ಲಿ, ಮುಸಂದಮ್ ಪರ್ಯಾಯದ್ವೀಪವನ್ನು ಆಳಿದ ನಾಲ್ಕು ಪ್ರಮುಖ ಕುಟುಂಬಗಳ ನಾಯಕರು (ರಾಸ್ ಅಲ್ ಖೈಮಾದ ಅಲ್ ಖಾಸಿಮಿ, ಶಾರ್ಜಾದ ಅಲ್ ಖಾಸಿಮಿ, ಫುಜೈರಾದ ಅಲ್ ಶಾರ್ಕಿ ಮತ್ತು ಒಮಾನ್‌ನ ಬು ಸೈದ್ ಮನೆತನ) ಒಂದು ದಿನ ಇಲ್ಲಿನ ಹಲವಾರು ಹಳ್ಳಿಗಳ ಜನರನ್ನು ಸಬೆಗೆ ಕರೆದು ನೀವು ಯಾವ ಶೇಖ್‌ ಪ್ರಭುತ್ವ ದ ಆಳ್ವಿಕೆಯಲ್ಲಿ ಇರಲು ಬಯಸುತ್ತೀರಿ ಎಂಬ ಪ್ರಶ್ನೆಯನ್ನು ಮುಂದಿಟ್ಟರು. ಮಾಧಾ ಸುತ್ತಲಿನ ಎಲ್ಲಾ ಇತರ ಹಳ್ಳಿಗಳು ಮತ್ತು ಪಟ್ಟಣಗಳು  ಶಾರ್ಜಾ, ಫುಜೈರಾ ಮತ್ತು ರಾಸ್ ಅಲ್ ಖೈಮಾದ ಆಡಳಿತ ಕುಟುಂಬಗಳ ಜತೆ ಇರಲು ಇಚ್ಚಿಸಿದರು, ಆದರೆ ಮಾಧಾ ಪ್ರದೇಶದ ಜನರು ಒಮಾನಿನ ಸುಲ್ತಾನರ ಜತೆ ಇರಲು ಒಪ್ಪಿಗೆ ಸೂಚಿಸಿದರು. ಆ ದಿನಗಳಲ್ಲಿ ಒಮಾನ್ ಶ್ರೀಮಂತ ರಾಷ್ಟ್ರವಾಗಿತ್ತು, ಆಫ್ರಿಕದ ಜಂಜೀಬಾರ್ ಸೇರಿದಂತೆ ಅರಬ್ಬಿ ಸಮುದ್ರದ ಬಹುತೇಕ ಬಂದರುಗಳು ಒಮಾನಿ ಸುಲ್ತಾನರ ವಶದಲ್ಲಿತ್ತು. ಹೀಗಾಗಿ ಸಶಕ್ತ ಸರ್ಕಾರವನ್ನು ಹೊಂದಿರುವ ಒಮಾನ್ ಸುಲ್ತಾನರು ಇಲ್ಲಿಯ ಜನರಿಗೆ ಅಗತ್ಯವಾದ ರಕ್ಷಣೆ ಜತೆಗೆ ನೀರಿನ ಸೌಕರ್ಯವನ್ನು ನೀಡುವರು ಎನ್ನುವ ದೃಢ ನಂಬಿಕೆಯಿಂದ ಮಾಧಾ ಜನತೆ ಒಮಾನ್ ಅನ್ನು ಆಯ್ಕೆ ಮಾಡಿದರು. ಇನ್ನು ಇದೇ ಪ್ರಾಂತ್ಯದ ಒಳಗಿರುವ ಇನ್ನೊಂದು ಗ್ರಾಮ "ನಹ್ವಾ" ದ ಜನತೆಯು ಯುಏಇಯ ಜತೆಗೆ ಇರಲು ಇಷ್ಟಪಟ್ಟರು, ಅದರಂತೆ ಶಾರ್ಜಾದ ಅಲ್ ಖಾಸಿಮಿಯವರ ಆಡಳಿತಕ್ಕೆ ಈ ಗ್ರಾಮವು ಒಳಪಟ್ಟಿತು.

 

ಸುಮಾರು ನಲವತ್ತು ವರ್ಷಗಳ ನಂತರ, ಬ್ರಿಟಿಷ್ ಪ್ರತಿನಿಧಿಯಾದ ಜೂಲಿಯನ್ ಎಫ್. ವಾಕರ್  ಈ ಎಲ್ಲಾ ಪ್ರಾಂತ್ಯಗಳ ಪ್ರತಿನಿಧಿಗಳು, ಸ್ಥಳೀಯ ಬುಡಕಟ್ಟು ಪ್ರದೇಶದ ಜನರು ಮತ್ತು ನಡುವಿನ ಧೀರ್ಘವಾದ ಸಮಾಲೋಚನೆಗಳ ನಂತರ 1969 ರಲ್ಲಿ ಅಂತರಾಷ್ಟ್ರೀಯ ಗಡಿಯನ್ನು ನಿರ್ಧರಿಸಲಾಯಿತು. ಅಂದಿನಿಂದ ಈ ಎಲ್ಲಾ ಪ್ರಾಂತ್ಯಗಳನ್ನು ಆ ರಾಷ್ಟ್ರಗಳು ಅಭಿವೃದ್ದಿ ಪಡಿಸುತ್ತಿವೆ. ಈ ಪ್ರದೇಶಗಳ ಪ್ರವೇಶದ ಸ್ಥಳದಲ್ಲಿ ಆಯಾ ರಾಷ್ಟ್ರಗಳ ಪೋಲೀಸ್ ಚೆಕ್ಪೋಸ್ಟ್ ಗಳಿವೆ. ಒಮಾನ್ ರಾಷ್ಟ್ರವು, "ನ್ಯೂ ಮಾಧಾ" ಎನ್ನುವ ಒಂದು ಪಟ್ಟಣವನ್ನು ನಿರ್ಮಿಸಿ ಅಲ್ಲಿ ಸಾಕಷ್ಟು ಅಭಿವೃದ್ದಿಕಾರ್ಯಗಳನ್ನ ಕೈಗೊಂಡಿದೆ. ರಸ್ತೆಗಳು, ಶಾಲೆ, ಅಂಚೆ ಕಛೇರಿ, ಈದ್ ಮೈದಾನ, ಪೋಲೀಸ್ ಸ್ಟೇಷನ್, ಒಮಾನಿ ಬ್ಯಾಂಕ್, ವಿದ್ಯುತ್ ಮತ್ತು ನೀರು ಸರಬರಾಜು, ಏರ್‌ಸ್ಟ್ರಿಪ್ ಅನ್ನು ನಿರ್ಮಿಸಿದೆ. ಅಂದಾಜು 3000 ರಷ್ಟು ಜನಸಂಖ್ಯೆ ಇದೆ.ಮಾಧಾ ಒಳಗಿನ ಯುಏಇ ನಿಯಂತ್ರಣದಲ್ಲಿರುವ ನಹ್ವಾ ಪ್ರದೇಶದಲ್ಲಿ ಜನಸಂಖ್ಯೆ ಆಸುಪಾಸು 500 ರಷ್ಟಿದೆ. ಅಲ್ಲಿ ಯುಏಇ ರಾಷ್ಟ್ರವು ಅಲ್ಲಿನ ಜನರಿಗೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನ ನೀಡಿದೆ

     ಈ ವಿಶಿಷ್ಟವಾದ "ಮಾಧಾ ಮತ್ತು ನಹ್ವ" ಪ್ರದೇಶಕ್ಕೆ ವಾರಾಂತ್ಯಗಳಲ್ಲಿ ಸಾಕಷ್ಟು ಪ್ರವಾಸಿಗರು ಭೇಟಿ ನೀಡುತ್ತಾರೆ. ಬೆಟ್ಟಗಳಿಂದ ಆವೃತ್ತವಾದ ಒಮಾನಿನ ಮಾಧಾ ಪ್ರದೇಶದಲ್ಲಿ ಹೇರಳವಾದ ಖರ್ಜೂರದ ತೋಟಗಳಿವೆ. ಇಲ್ಲಿ ಕೆಲವು ನೀರಿನ ಬುಗ್ಗೆಗಳಿವೆ, ದಿನಪೂರ್ತಿ ನೈಸರ್ಗಿಕವಾಗಿ ಭೂಮಿಯಿಂದ ನೀರು ಹೊರಬರುತ್ತಿರುತ್ತದೆ. ಹದಿನೇಳನೇ ಶತಮಾನದಲ್ಲಿ ಒಮಾನಿ ಯಾರುಬಿ ಸುಲ್ತಾನಿಗಳು ನಿರ್ಮಿಸಿದ ಕೋಟೆ ಯೊಂದಿದೆ. ಸರೂಜ್ ಅಣೆಕಟ್ಟೆಯು ಈ ಪ್ರದೇಶದ ಪ್ರಮುಖ ಆಕರ್ಷಣೆ.

     ಇಲ್ಲಿನ ಪ್ರಮುಖ ನಾಯಕರಾಗಿದ್ದ ಮುಹಮ್ಮದ್ ಬಿನ್ ಸಲೇಮ್ ಅಲ್ ಮದನಿಯವರು ನಿರ್ಮಿಸಿದ ವಸ್ತುಸಂಗ್ರಹಾಲಯವು ಇದ್ದು, ಇದರಲ್ಲಿ ಪುರಾತನ ಕಾಲದ ವಸ್ತುಗಳನ್ನು ಸಂಗ್ರಹಿಸಿಡಲಾಗಿದೆ. ಹತ್ತನೇ ಶತಮಾನದ AD ವರೆಗಿನ ಹಲವಾರು ದಾಖಲೆಗಳು, ಹಸ್ತಪ್ರತಿಗಳು ಅಲೆಕ್ಸಾಂಡರ್ ದಿ ಗ್ರೇಟ್ ಆಳ್ವಿಕೆಯಲ್ಲಿ ಬಳಸಲಾದ ಗ್ರೀಕ್ ಬೆಳ್ಳಿ ನಾಣ್ಯ, ಎರಡೂ ಬದಿಗಳಲ್ಲಿ ಕಲ್ಲಿನಿಂದ ಮಾಡಿದ ನಕ್ಷತ್ರವನ್ನು ಹೊಂದಿರುವ ಅತ್ಯಂತ ಚಿಕ್ಕ ನಾಣ್ಯ , ಮತ್ತು ಉಮಯ್ಯದ್ ಮತ್ತು ರಾಜ್ಯ ಯುಗಗಳಲ್ಲಿ ಮುದ್ರಿಸಲಾದ ನಾಣ್ಯಗಳು, ಶಿಲಾ ಶಾಸನಗಳು, ಬಾಣಗಳ ತುಣುಕುಗಳು, ಈಟಿಗಳು, ಇತರ ಪುರಾತನ ಆಯುಧಗಳು, ಗಡಿಯಾರಗಳು, ಕುಂಬಾರಿಕೆಯ ಮಡಿಕೆ ಬಿಂದಿಗೆ, ನಾಣ್ಯ ಮತ್ತು ಕೃಷಿ ಉಪಕರಣಗಳನ್ನು ಒಳಗೊಂಡಂತೆ ಕ್ರಿಸ್ತ ಪೂರ್ವಕಾಲದ ಹಿಂದಿನ ಹಲವಾರು ವಸ್ತುಗಳು ಮತ್ತು ಪ್ರಾಚೀನ ವಸ್ತುಗಳನ್ನು ವಸ್ತುಸಂಗ್ರಹಾಲಯದಲ್ಲಿ ಕಾಣಬಹುದು.


 ಬರಹ:- ಪಿ.ಎಸ್.ರಂಗನಾಥ

ಮಸ್ಕತ್ - ಒಮಾನ್ ರಾಷ್ಟ್ರ

ಬುಧವಾರ, ಜುಲೈ 12, 2023

*ಕೊಲ್ಲಿ ರಾಷ್ಟ್ರಗಳಲ್ಲಿ ಮೇ ತಿಂಗಳಿನಿಂದ ಸೆಪ್ಟೆಂಬರ್ ವರೆಗೂ ಬೇಸಿಗೆ!!!*


ಕೊಲ್ಲಿ ರಾಷ್ಟ್ರಗಳಲ್ಲಿ ಈಗ ಬೇಸಿಗೆಯ ಸಮಯ. ಮೇ ತಿಂಗಳ ಮೊದಲ ವಾರದಿಂದ ಏರಿಕೆಯಾದ ತಾಪಮಾನ ಸೆಪ್ಟೆಂಬರ್ ವರೆಗೂ ಇಳಿಯುವುದೇ ಇಲ್ಲ. ಜಾಗತಿಕ ಹವಮಾನ ಬದಲಾವಣೆಯಿಂದ ಆಗುತ್ತಿರುವ ಪರಿಣಾಮವೋ ಗೊತ್ತಿಲ್ಲ, ಈ ಬಾರಿ ಮಾತ್ರ ಭಯಂಕರ ಬಿಸಿಲು.  ಮನೆಯಲ್ಲಿರುವ ಏಸಿಗಳು ಸರಿಯಾಗಿ ಕೆಲಸ ಮಾಡ್ತಿಲ್ಲ ಅನ್ನುವಷ್ಟರ ಮಟ್ಟಿಗೆ ಇಲ್ಲಿ ಬಿಸಿಲಿನ ಝಳವಿದೆ.

ಈ ಬಿಸಿಲಿನಿಂದ ಪಾರಾಗಲು ಏಸಿಯ ಮೊರೆ ಹೋಗಲೇ ಬೇಕು, ಹೀಗಾಗಿ ಪ್ರತಿಯೊಬ್ಬರ ಮನೆಯಲ್ಲೂ ನಾಲ್ಕೈದು ಏಸಿಗಳು ಇರುತ್ತವೆ. ಕಾರ್, ಬಸ್, ಅಂಗಡಿ, ಮಾಲ್ ಗಳು, ರೆಸ್ಟೋರೆಂಟ್ ಗಳು ಎಲ್ಲಿಯೇ ಹೋದರು ಏಸಿ ಖಂಡಿತ ಇರುತ್ತದೆ. ಬೇಸಿಗೆಯಲ್ಲಿ ಏಸಿ ಇಲ್ಲದೆ ಇಲ್ಲಿ ಕೆಲಸಮಾಡಲು ಸಾಧ್ಯವೇ ಇಲ್ಲ. ಆರೇಳು ತಿಂಗಳುಗಳ ಕಾಲ ಏಸಿಯಿಂದ  ಬರುವ ತಂಪಾದ ಗಾಳಿಯೊಂದಿಗೆ ಜೀವನ ನಡೆಸಲೇ ಬೇಕು.

ಭಾರತದಲ್ಲಿ ಬಹಳಷ್ಟು ಜನರಿಗೆ ಕೊಲ್ಲಿ ರಾಷ್ಟ್ರಗಳಲ್ಲಿ ಎಷ್ಟು ಬಿಸಿಲು ಇರುತ್ತೆ? ಅದು ಎಷ್ಟು ತಿಂಗಳುಗಳವರೆಗೂ ಇರುತ್ತೆ, ಬೇಸಿಗೆಕಾಲ, ಮಳೆಗಾಲ, ಚಳಿಗಾಲ ಯಾವಾಗ ಪ್ರಾರಂಭ ಎಂದು ಗೊತ್ತಿರುವುದಿಲ್ಲ. ಇಲ್ಲಿರುವುದು ಎರಡೇ ಕಾಲ ಎಂದರೆ ನಂಬ್ತೀರಾ? ಖಂಡಿತಾ ಇಲ್ಲ.

ಅದು ಹೇಗೆ ಸಾಧ್ಯ, ಆಂಗ್ಲರ ಪದ್ಧತಿಯ ಪ್ರಕಾರ ನಾಲ್ಕು ಕಾಲಗಳು ಇರಬೇಕಲ್ಲವೇ? ಎಂದು ನಮ್ಮ ಮೆದುಳು ನಾಲ್ಕು ಕಾಲಗಳ ಬಗ್ಗೆ ಯೋಚಿಸಲಾರಂಬಿಸುತ್ತದೆ. 1) ಸ್ಪ್ರಿಂಗ್ (spring) ಅಥವಾ ವಸಂತ, 2) ಸಮ್ಮರ್ (summer) ಅಥವಾ ಬೇಸಿಗೆ ಕಾಲ, 3) ಆಟಂ (autumn) ಅಥವಾ ಶರದೃತು ಹಾಗೂ 4) ವಿಂಟರ್ (winter) ಅಥವಾ ಚಳಿಗಾಲ. ವಾಸ್ತವವಾಗಿ, ಈ ಗಲ್ಫ್ ರಾಷ್ಟ್ರಗಳಲ್ಲಿ ಇರುವುದು ಒಂದು ಬೇಸಿಗೆ ಕಾಲ ಮತ್ತೊಂದು ಚಳಿಗಾಲ. ಇಲ್ಲಿ ಮಳೆಗಾಲ ಇಲ್ಲವೇ ಇಲ್ಲ.

 

ನಮ್ಮ ಭಾರತ ದೇಶದಲ್ಲಿ ಬೇಸಿಗೆ ಕಾಲ ಮುಗಿದ ನಂತರ ಮುಂಗಾರು ಶುರುವಾಗುತ್ತದೆ ಮುಂಗಾರು ಮುಗಿದ ನಂತರ ಚಳಿಗಾಲ ನಂತರ ಬೇಸಿಗೆ ಕಾಲ. ಆದರೆ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಚಳಿಗಾಲದ ನಂತರ ಬೇಸಿಗೆ ಪ್ರಾರಂಭವಾದರೆ, ಅದು ಕೊನೆಗೊಳ್ಳುವುದು ಮತ್ತೊಮ್ಮೆ ಚಳಿಗಾಲ ಪ್ರಾರಂಭವಾಗುವವರೆಗೆ. ಅಂದರೆ ಇಲ್ಲಿ ಮುಂಗಾರು ಇಲ್ಲವೇ ಇಲ್ಲ. ಏಪ್ರಿಲ್ ನಿಂದ ಬೇಸಿಗೆ ಕಾಲ ಶುರುವಾಗಿ ಸೆಪ್ಟೆಂಬರ್ ಅಂತ್ಯದವರೆಗೂ ಬೇಸಿಗೆ ಇರುತ್ತದೆ. ಮೇ ತಿಂಗಳಿನಿಂದ ಸೆಪ್ಟೆಂಬರ್ ರವರೆಗೂ ಭಯಂಕರ ಸುಡು ಬಿಸಿಲು, ದುಬೈ, ಅಬುಧಾಬಿ, ಒಮಾನ್, ಕುವೈತ್, ಇರಾಕ್, ಬಹರೈನ್, ಸೌದಿ ಅರೇಬಿಯಾ, ಯೆಮನ್ ಕತಾರ್ ಮತ್ತಿತರ ರಾಷ್ಟ್ರಗಳಲ್ಲಿ ತಾಪಮಾನ ಒಮ್ಮೊಮ್ಮೆ 50ಡಿಗ್ರಿ  ದಾಟುತ್ತದೆ.

 

ನಮ್ಮ ಕಡೆ ಜೂನ್ ತಿಂಗಳು ಬಂತೆಂದರೆ, ಮಳೆಗಾಲ ಪ್ರಾರಂಭವಾಗುತ್ತದೆ.  ಮಳೆಗಾಲದಲ್ಲಿ ಬಯಲುಸೀಮೆಯಲ್ಲಿ ಒಮ್ಮೊಮ್ಮೆ ಮಳೆ ಬರುವುದು ತಡವಾದರೂ, ವಾತಾವರಣ ತಂಪಾಗಿರುತ್ತದೆ. ಬೇಸಿಗೆಯಲ್ಲಿದ್ದಷ್ಟು ಬಿಸಿಲಿನ ತಾಪಮಾನ ಇರುವುದಿಲ್ಲ. ಆದರೆ ಗಲ್ಫ್ ರಾಷ್ಟ್ರಗಳಲ್ಲಿ ಇದೇ ಸಮಯದಲ್ಲಿ ಭಯಾನಕ ಬಿಸಿಲು. ಸರಿ ಸುಮಾರು ಆರು ತಿಂಗಳುಗಳ ಕಾಲ ಬೇಸಿಗೆಯ ವಾತಾವರಣ ಮತ್ತು ಡಿಸೆಂಬರ್ ಮತ್ತು ಜನವರಿಯಲ್ಲಿ ಚಳಿಗಾಲವಿರುತ್ತದೆ. ಇನ್ನು ಅಕ್ಟೋಬರ್, ನವೆಂಬರ್, ಫೆಬ್ರವರಿ ಮತ್ತು ಮಾರ್ಚ್ ನಲ್ಲಿ ಅಂತ ಚಳಿಯೂ ಇಲ್ಲ ಮತ್ತು ಹೆಚ್ಚಿನ ಬಿಸಿಲು ಸಹ ಇರುವುದಿಲ್ಲ. ಆದರೆ ಸೌದಿ ಅರೇಬೀಯಾದ ಕೆಲ ಪ್ರದೇಶ, ಮತ್ತು ಇರಾಕ್ ಕುವೈತ್ ನಂತಹ  ದೇಶಗಳಲ್ಲಿ ಡಿಸೆಂಬರ್ ಮತ್ತು ಜನವರಿಯಲ್ಲಿ ಮಡುಗಟ್ಟುವ ಚಳಿಯಿರುತ್ತದೆ. ಈ ಚಳಿಗೆ ಹೋಲಿಸಿದರೆ ಯುಏಇ, ಒಮಾನ್ ಮತ್ತು ಯೆಮನ್ ಮತ್ತಿತರ ದೇಶಗಳಲ್ಲಿ ಅಂತಹ ಚಳಿಯಿರುವುದಿಲ್ಲ.

 ನಮ್ಮ ದೇಶದಲ್ಲಿನ ಕೆಲರಾಜ್ಯಗಳಲ್ಲಿ ಕೆಲವೊಮ್ಮೆ ಮುಂಗಾರಿನಲ್ಲಿ ನಿರೀಕ್ಷಿಸಿದಷ್ಟು ಮಳೆ ಬರದೆ ಇದ್ದಾಗ ಬರಗಾಲ ಘೋಷಿಸುವ ಪದ್ದತಿಯಿದೆ.  ಈ ಗಲ್ಫ್ ರಾಷ್ಟ್ರಗಳಲ್ಲಿ ಅಪರೂಪಕ್ಕೆ ಒಮ್ಮೆ ಮಳೆ ಬರುತ್ತದೆ, ಹಾಗಂತ ಬರಗಾಲ ಅಥವ ಬರ ಪೀಡಿತ ಪ್ರದೇಶ ಎಂದು ಇಲ್ಲಿ ಘೋಷಿಸುವುದಿಲ್ಲ.  ಮಳೆಯಿಂದ ಬೆಳೆ ಬೆಳೆಯುವ ಪದ್ದತಿ ಇಲ್ಲ. ಜನಕ್ಕೆ ಬೇಕಾದ ಆಹಾರ ಪದಾರ್ಥಗಳನ್ನು ಭಾರತ ಸೇರಿದಂತೆ ಇತರೆ ಹೊರ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಈ ಆಮದು ಮಾಡಿಕೊಳ್ಳುವುದು ಇಂದು ನಿನ್ನೆಯಿಂದಲ್ಲ, ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿದೆ.  ಈಗ ಕಾಲ ಬದಲಾಗಿದೆ, ಗಲ್ಫ್ ರಾಷ್ಟ್ರಗಳಲ್ಲಿ ಸಿಗುವ ತೈಲವನ್ನು ಮಾರಿ ಬಂದ ಹಣದಿಂದ ಈ ದೇಶಗಳಿಗೆ ಬೇಕಾದ ಅಗತ್ಯ ವಸ್ತುಗಳನ್ನು ಇತರೆ ರಾಷ್ಟ್ರಗಳಿಂದ ಖರೀದಿಸುತ್ತಾರೆ. ವಿಶ್ವದ ಶ್ರೀಮಂತ ಮತ್ತು ಅಭಿವೃದ್ದಿ ಹೊಂದಿದ ರಾಷ್ಟ್ರಗಳ ಸಾಲಿನಲ್ಲಿ ಈ ಅರಬ್ ರಾಷ್ಟ್ರಗಳು ಇವೆ.

 ಮಧ್ಯಪ್ರಾಚ್ಯ ರಾಷ್ಟ್ರಗಳು ಬಹುತೇಕ ಮರುಭೂಮಿ ಪ್ರದೇಶವನ್ನು ಹೊಂದಿವೆ. ಸಾಮಾನ್ಯವಾಗಿ ಮರುಭೂಮಿಗಳಲ್ಲಿ ಬಹಳ ಕಡಿಮೆ ಮಳೆ ಬೀಳುತ್ತದೆ. ಇಲ್ಲಿ ಅರಣ್ಯ ಪ್ರದೇಶ ಬಹಳ ಕಡಿಮೆ. ಹಾಗೂ ಈ ಕೊಲ್ಲಿ ಪ್ರದೇಶ ಟ್ರಾಪಿಕ್ ಆಫ್ ಕ್ಯಾನ್ಸರ್ ಅಕ್ಷಾಂಶ ದಲ್ಲಿದೆ, ಇದು ಹೆಚ್ಚಿನ ಒತ್ತಡದ ವಲಯವಾಗಿರುವುದರಿಂದ ಸ್ವಾಭಾವಿಕವಾಗಿ ಮೋಡಗಳ ಕೊರತೆ ಇರುತ್ತದೆ, ಅತಿ ಕಡಿಮೆ ಮೋಡಗಳು ಇರುವುದರಿಂದ ಸೂರ್ಯನ ಶಾಖ ನೇರವಾಗಿ ಇಲ್ಲಿನ ಭೂಭಾಗದಲ್ಲಿ ಬೀಳುತ್ತದೆ, ಆದ್ದರಿಂದ ಬೇಸಿಗೆಯಲ್ಲಿ ಈ ಸ್ಥಳ ಅತ್ಯಂತ ಬಿಸಿ ಯಾಗಿರುತ್ತದೆ ಎನ್ನುವ ವಾದವಿದೆ. ವಾತಾವರಣದಲ್ಲಿ ಹೆಚ್ಚಿನ ಮಟ್ಟದ ಆರ್ದ್ರತೆಯೂ ಇರುವುದರಿಂದ, ಜನರಿಗೆ ಅತಿಯಾದ ಸೆಖೆಯ ಅನುಭವಾಗುತ್ತದೆ. ಆರ್ದ್ರತೆಯ ಕಾರಣದಿಂದ ಮೈಯಿಂದ  ತುಂಬ ಜಾಸ್ತಿ ಬೆವರು ಹೊರಬರುತ್ತದೆ. ಮಧ್ಯಪ್ರಾಚ್ಯದ ಹೆಚ್ಚಿನ ಭಾಗವು ಮತ್ತು ಮೆಡಿಟರೇನಿಯನ್‌ನ ಪ್ರದೇಶವು ವಿಶಿಷ್ಟವಾದ ಶುಷ್ಕ ಬೇಸಿಗೆಯ ಹವಾಮಾನವನ್ನು ಹೊಂದಿದೆ. ಇದೇ ರೀತಿಯ ಹವಾಮಾನ ಪಶ್ಚಿಮ ಆಸ್ಟ್ರೇಲಿಯಾ, ದಕ್ಷಿಣ ಅಮೆರಿಕಾ ಮತ್ತು ದಕ್ಷಿಣ ಆಫ್ರಿಕಾದ ಪಶ್ಚಿಮ ಭಾಗಗಳೊಂದಿಗೆ ಮತ್ತು ವಿಶೇಷವಾಗಿ ಯುನೈಟೆಡ್ ಸ್ಟೇಟ್ಸ್‌ನ ಪಶ್ಚಿಮ ಕರಾವಳಿಗಳಲ್ಲಿ ಕಾಣಬಹುದು.

ಪಿ.ಎಸ್.ರಂಗನಾಥ

ಮಸ್ಕತ್ಒಮಾನ್ ರಾಷ್ಟ್ರ

#Oman #Kannada #Karnataka #kannadiga #Dubai #gulf #Dolphin #Muscat #bengaluru


ಪ್ರವಾಸಿಗರಿಗೆ ಥ್ರಿಲ್ ನೀಡುವ ಒಮಾನಿನ ಡಾಲ್ಫಿನ್ ಗಳು



ಒಮಾನಿನ ಕಡಲ ತೀರ ಸಾಕಷ್ಟು ಆಕರ್ಷಕ ಸಮುದ್ರ ಜೀವಿಗಳಿಗೆ ನೆಲೆಯಾಗಿದೆ, ಇಲ್ಲಿನ ಅರಬ್ಬಿ ಸಮುದ್ರದಲ್ಲಿ ವೈವಿಧ್ಯಮಯ ಜೀವರಾಶಿಗಳಾದ, ತಿಮಿಂಗಿಲಗಳು, ಡಾಲ್ಫಿನ್‌ಗಳು, ಆಮೆಗಳು, ಎಲ್ಲಾ ರೀತಿಯ ಮೀನುಗಳು ಮತ್ತು ಉಷ್ಣವಲಯದ ಮೀನುಗಳು ಹೇರಳವಾಗಿವೆ. ಆಮೆಗಳು ಮತ್ತು ಡಾಲ್ಫಿನ್‌ಗಳು ನೋಡುವುದಕ್ಕಾಗಿಯೇ ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರು ಆಗಮಿಸುವುದು ಇಲ್ಲಿನ ವಿಶೇಷ.  ಒಮಾನಿನಲ್ಲಿ ಡಾಲ್ಫಿನ್ ವೀಕ್ಷಣೆ ಮತ್ತು ಆಮೆಗಳ ವೀಕ್ಷಣೆ ಜನಪ್ರಿಯ ಚಟುವಟಿಕೆಯಾಗಿವೆ. ಒಮಾನ್ ರಾಷ್ಟ್ರವು ಸುಂದರವಾದ ಮರುಭೂಮಿ ಭೂಪ್ರದೇಶದ ಹೊಂದಿರುವುದರ ಜತೆಗೆ ಸುಂದರವಾದ ಕಡಲತೀರಗಳನ್ನು ಹೊಂದಿದ್ದು ಕೆಲವೆಡೆ ಸ್ಫಟಿಕದಷ್ಟೆ ಸ್ಪಷ್ಟವಾಗಿ ಕಾಣುವ ನೀರನ್ನು ಹೊಂದಿರುವ ಈ ಸುಂದರ ಕಡಲ ತೀರಗಳು ದೇಶಿಯ ಮತ್ತು ವಿದೇಶಿ ಪ್ರವಾಸಿಗರನ್ನು ಬಹಳಷ್ಟು ಆಕರ್ಷಿಸುತ್ತವೆ. ಸುಮಾರು 3165 ಕಿ.ಮಿ (1967 ಮೈಲು) ಉದ್ದದ ಕರಾವಳಿ ಪ್ರದೇಶವನ್ನು ಒಮಾನ್ ರಾಷ್ಟ್ರ ಹೊಂದಿದೆ. ಈ ಸಮುದ್ರದಲ್ಲಿ ಅಳಿವಿನಂಚಿನಲ್ಲಿರುವ  ಹಂಪ್‌ಬ್ಯಾಕ್ ತಿಮಿಂಗಿಲಗಳ ಜತೆಗೆ ಪಿಗ್ಮಿ ಬ್ಲೂ ವೇಲ್‌ಗಳು, ಬ್ರೈಡ್‌ನ ತಿಮಿಂಗಿಲಗಳು, ಸ್ಪರ್ಮ್ ತಿಮಿಂಗಿಲಗಳು, ಕಿಲ್ಲರ್ ವೇಲ್ಸ್ , ರಿಸ್ಸೋಸ್ ಡಾಲ್ಫಿನ್‌ಗಳು, ಸ್ಪಿನ್ನರ್ ಡಾಲ್ಫಿನ್‌ಗಳು, ಬಾಟಲ್‌ನೋಸ್ ಡಾಲ್ಫಿನ್‌ಗಳು, ಇಂಡೋ-ಪೆಸಿಫಿಕ್ ಹಂಪ್‌ಬ್ಯಾಕ್ಡ್ ಡಾಲ್ಫಿನ್‌ಗಳು ಇವೆ.

 

ಒಮಾನ್ ರಾಷ್ಟ್ರಕ್ಕೆ ಪ್ರವಾಸ ಬಂದವರು ಭೇಟಿ ನೀಡುವ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಇಲ್ಲಿನ ಪ್ರಸಿದ್ದ "ಡಾಲ್ಫಿನ್ ವಾಚಿಂಗ್"  ಖಂಡಿತಾ ಇರುತ್ತದೆ. ಪ್ರವಾಸಿಗಳು ಅಷ್ಟೇ ಅಲ್ಲದೆ, ವಲಸೆ ಉದ್ಯೋಗಿಗಳ ಬಂಧು ಬಳಗ ಮತ್ತಿತರ ಅಥಿತಿಗಳು ತಪ್ಪದೇ ಇಲ್ಲಿಗೆ ಭೇಟಿ ನೀಡುವುದು ಇಲ್ಲಿನ ವಿಶೇಷ. ಅತ್ಯಂತ ಬುದ್ಧಿವಂತ ಪ್ರಾಣಿಗಳಲ್ಲಿ ಒಂದಾದ ಡಾಲ್ಫಿನ್‌ಗಳು ಒಮಾನ್‌ನ ಕರಾವಳಿ ಪ್ರದೇಶದಲ್ಲಿ ಯಥೇಚ್ಚವಾಗಿ ಕಂಡುಬರುತ್ತವೆ. ಈ ಡಾಲ್ಫಿನ್‌ಗಳನ್ನು ನೋಡಲು, ಇಲ್ಲಿನ ಕೆಲ ಕಂಪನಿಗಳು ಪ್ರವಾಸಗಳನ್ನು ಆಯೋಜಿಸುತ್ತಾರೆ. ಮುಸಂದಮ್, ಮಸ್ಕತ್ ಮತ್ತು ದಮಾನಿಯತ್ ಪ್ರದೇಶಗಳು ಡಾಲ್ಫಿನ್ ವೀಕ್ಷಣೆಗೆ ಜನಪ್ರಿಯವಾಗಿವೆ. ಈ ಪ್ರವಾಸದ ಸಮಯದಲ್ಲಿ ಡಾಲ್ಫಿನ್‌ಗಳನ್ನು ನೋಡುವುದರ ಜೊತೆಗೆ ಒಮಾನಿನ ಕರಾವಳಿಯ ರಮಣೀಯ ಸೌಂದರ್ಯವನ್ನು ವೀಕ್ಷಿಸಬಹುದು.ಡಾಲ್ಫಿನ್ ವೀಕ್ಷಣೆ ಜತೆಗೆ ಸ್ನಾರ್ಕ್ಲಿಂಗ್, ಸರ್ಫಿಂಗ್ ಹೀಗೆ ಹಲವಾರು ವಿವಿಧ ರೀತಿಯ ಆಟಗಳನ್ನು ಇಲ್ಲಿನ ಆಯೋಜಕರು ಆಯೋಜಿಸುತ್ತಾರೆ.

 

ದುಬೈ, ಮಲೇಶಿಯ, ಅಂತಹ ಅಂತರಾಷ್ಟ್ರೀಯ ನಗರಗಳಲ್ಲಿ ಡಾಲ್ಫಿನ್ ಗಳ ವೀಕ್ಷಣೆ ಒಂದು ಚಟುವಟಿಕೆಯಾಗಿದೆDolphinarium ಒಂದು ಸ್ಟೇಡಿಯಂ ಮಾದರಿಯಲ್ಲಿ ದೊಡ್ಡಾದ ಈಜುಕೊಳದಲ್ಲಿ ಸಾಕಿ ಪಳಗಿಸಿರುವ ಡಾಲ್ಫಿನ್ ಗಳ ಜತೆ ವಿವಿಧ ರೀತಿಯ ಆಟಗಳನ್ನು ಪ್ರದರ್ಶಕರು ಪ್ರಸ್ತುತ ಪಡಿಸುತ್ತಾರೆ. ವೀಕ್ಷರನ್ನು ರಂಜಿಸಲು ಈ ಡಾಲ್ಫಿನ್ ಗಳಿಗೆ ಸೂಕ್ತ ತರಬೇತಿಗಳನ್ನು ನೀಡಿರುತ್ತಾರೆ. ಸರ್ಕಸ್ ನಲ್ಲಿ ಕುಳಿತುಕೊಂಡು ನೋಡಿದ ಹಾಗೆ ಈ ಪ್ರದರ್ಶನ ವಿರುತ್ತದೆ. ಆದರೆ ಒಮಾನಿನ ಡಾಲ್ಫಿನ್ ವೀಕ್ಷಣೆ ನೈಸರ್ಗಿಕವಾದದ್ದು, ಇಲ್ಲಿ ಈ ಜೀವಿಗಳಿಗೆ ಯಾವುದೇ ರೀತಿಯ ಹಿಂಸೆಯನ್ನು ನೀಡಲಾಗುವುದಿಲ್ಲ. ಅವುಗಳಿರುವೆಡೆಗೆ ಪ್ರವಾಸಿಗರು ಪ್ರಯಾಣಿಸುವ ದೋಣಿ ಸಾಗುತ್ತದೆ. ಅವುಗಳ ಆಟವನ್ನು ನೋಡಿದ ನಂತರ ದೋಣಿಯು ತನ್ನ ಮೂಲಸ್ಥಾನಕ್ಕೆ ಹಿಂತಿರುಗುತ್ತದೆ.

 

ಡಾಲ್ಫಿನ್‌ ವೀಕ್ಷಣೆ ಇಷ್ಟೊಂದು ಪ್ರಖ್ಯಾತಿ ಪಡೆಯಲು ಕಾರಣವೇನೆಂದರೆ, ಒಮಾನಿನ ಸಮುದ್ರದಲ್ಲಿ ಹೇರಳವಾಗಿ ಕಾಣ ಸಿಗುವ ವಿವಿಧ ಪ್ರಾಕಾರದ  ಡಾಲ್ಫಿನ್‌ ಗಳು ಮುಂಜಾನೆ ಹೊತ್ತಿನಲ್ಲಿ ಸಮುದ್ರದ ಮೇಲ್ಭಾಗಕ್ಕೆ ಬಂದು ಎತ್ತರಕ್ಕೆ ನೆಗೆಯುವುದು, ಗುಂಪು ಗುಂಪಾಗಿ ಈಜುವುದು, ಲಾಂಗ್ ಜಂಪ್ ಮಾಡುವುದು ಇತ್ಯಾದಿ, ಹೀಗೆ ತನ್ನ ವಿವಿಧ ಆಟಗಳನ್ನು ನೈಸರ್ಗಿಕವಾಗಿ ಪ್ರದರ್ಶಿಸುವ ಪರಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಪ್ರವಾಸಿಗರು ಸಾಗುವ ದೋಣಿಯ ಪಕ್ಕದಲ್ಲಿಯೇ ಈ ಎಲ್ಲ ಆಟಗಳನ್ನು ನೋಡಬಹುದು. ಅವುಗಳ ಚಮತ್ಕಾರಿಕ ಪ್ರದರ್ಶನಗಳನ್ನು ನೋಡುವುದೇ ಒಂದು ಥ್ರಿಲ್. ಮಕ್ಕಳಿಗೆ ಈ ಡಾಲ್ಫಿನ್ ಗಳ ಆಟ ಬಹಳ ಇಷ್ಟವಾಗುತ್ತವೆ.

 

ಪ್ರವಾಸಿಗಳನ್ನು ಕೊಂಡೋಯ್ಯುವ ದೋಣಿಗಳ ಚಾಲಕರು ಹೇಳುವ ಪ್ರಕಾರ, ಪ್ರವಾಸಿಗರಿಗೆ ಡಾಲ್ಫಿನ್ ನೋಡುವ ಅದೃಷ್ಟ ವಿದ್ದರೆ  ಒಮ್ಮೊಮ್ಮೆ ನೂರಾರು ಡಾಲ್ಫಿನ್ ಗಳನ್ನು ನೋಡಬಹುದು. ಒಂದೊಂದು ಸಾರಿ ಅವುಗಳನ್ನು ಹುಡುಕಲು ನಾವು ಒಂದು ಗಂಟೆಯವರೆಗೆ ಸಮುದ್ರದೊಳಗೆ ಪ್ರಯಾಣಿಸಬೇಕಾಗಬಹುದು. ಕೆಲವೊಮ್ಮೆ ಒಂದು ಡಾಲ್ಫಿನ್ ಸಹ ನೋಡಲು ಸಿಗುವುದಿಲ್ಲ.  ಇದರ ಅರ್ಥ ಡಾಲ್ಫಿನ್ ಗಳು ಇರುವುದಿಲ್ಲ ಅಂತಲ್ಲ, ಆದರೆ ಸಮುದ್ರದ ಮೇಲೆ ಡಾಲ್ಫಿನ್ ಗಳು ಬರುವುದು ಕಡಿಮೆ. ಹೀಗೆ ಗುಂಪು ಗುಂಪಾಗಿ ಸಿಗುವ ಡಾಲ್ಫಿನ್ ಗಳು ಒಂದು ಇದ್ದಕಡೆ ಇನ್ನೊಂದು ದಿನ ಇರುವುದಿಲ್ಲ. ಪ್ರವಾಸ ಆಯೋಜಕರಿಗೆ ಇದು ಸ್ವಲ್ಪ ತಲೆನೋವಿನ ವಿಷಯವಾದರೂ, ದೋಣಿಗಳ ಚಾಲಕರು ತಾವು ಕಂಡ ಡಾಲ್ಫಿನ್ ಗಳು ಇರುವ ಸ್ಥಳವನ್ನು ಬೇರೆ ದೋಣಿಯವರಿಗೆ ತಿಳಿಸುತ್ತಾರೆ, ಪ್ರವಾಸಿಗರನ್ನು ಹೊತ್ತ ದೋಣಿಗಳು ಅವರು ತಿಳಿಸಿದ ಜಾಗಕ್ಕೆ. ಲಗ್ಗೆ ಇಡುತ್ತಾರೆ. ಪ್ರವಾಸ ಹೊರಡುವ ಸಮಯದಲ್ಲಿ, ಮುಂಜಾಗ್ರತೆಗಾಗಿ, ಅದೃಷ್ಟವಿದ್ದರೆ ಡಾಲ್ಫಿನ್ ಗಳನ್ನು ನೋಡಬಹುದು ಅಥವ ಇಲ್ಲ ಎನ್ನುವುದರ ಬಗ್ಗೆ ಮುಂಚೆಯೇ ಪ್ರವಾಸಿಗರಿಗೆ ತಿಳಿಸುತ್ತಾರೆ. ಈ ರೀತಿಯ ಒಂದು ಎಚ್ಚರಿಕೆ ಮಾತುಗಳು ಆಯೋಜಕರನ್ನು ಇಕ್ಕಟ್ಟಿಗೆ ಸಿಲುಕಿಸುವ ಸಂಭವ ಕಡಿಮೆ. ಡಾಲ್ಫಿನ್ ವೀಕ್ಷಿಸಲು ಉತ್ತಮ ಸಮಯವೆಂದರೆ ಅಕ್ಟೋಬರ್ ಮತ್ತು ಮೇ ನಡುವೆ. ಮೋಡ ಕವಿದ ದಿನಗಳಲ್ಲಿ ಅವುಗಳನ್ನು ಗುರುತಿಸುವ ಅಥವಾ ನೀರಿನಿಂದ ಜಿಗಿಯುವ ಸಾಧ್ಯತೆ ಕಡಿಮೆ, ಆದ್ದರಿಂದ ಪ್ರಕಾಶಮಾನವಾದ, ಬಿಸಿಲಿನ ದಿನಗಳಲ್ಲಿ ಡಾಲ್ಫಿನ್ ವೀಕ್ಷಿಸಲು ಶಿಫಾರಸು ಮಾಡಲಾಗುತ್ತದೆ.  ಬಿಬಿಸಿ ನ್ಯೂಸ್ ಸೇರಿದಂತೆ ಹಲವಾರು ಅಂತರಾಷ್ಟ್ರೀಯ ಚಾನೆಲ್ ಗಳು ಈ ಡಾಲ್ಫಿನ್ ಗಳ ಕುರಿತು ಡಾಕ್ಯುಮೆಂಟರಿಗಳನ್ನು ಮಾಡಿವೆ.

 

ಒಮಾನಿನ ಸಮುದ್ರ ತೀರದಲ್ಲಿ ಕಾಣ ಸಿಗುವ ಡಾಲ್ಫಿನ್‌ಗಳ ಪ್ರಕಾರಗಳು:

೧) ಹಿಂದೂ ಮಹಾಸಾಗರದ ಡಾಲ್ಫಿನ್‌ಗಳು,

೨) ಇಂಡೋ-ಪೆಸಿಫಿಕ್ ಹಂಪ್‌ಬ್ಯಾಕ್ ಡಾಲ್ಫಿನ್‌ಗಳು,

೩) ರಿಸ್ಸೋಸ್ ಡಾಲ್ಫಿನ್‌ಗಳು,

೪) ಬಾಟಲ್‌ ನೋಸ್ ಡಾಲ್ಫಿನ್‌ಗಳು,

೫) ಇಂಡೋ-ಪೆಸಿಫಿಕ್ ಬಾಟಲ್‌ನೋಸ್ ಡಾಲ್ಫಿನ್‌ಗಳು,

೬) ಒರಟಾದ-ಹಲ್ಲಿನ ಡಾಲ್ಫಿನ್‌ಗಳು,

೭) ಪ್ಯಾಂಟ್ರೊಪಿಕಲ್ ಸ್ಪಾಟೆಡ್ ಡಾಲ್ಫಿನ್‌ಗಳು,

೮) ಸ್ಟ್ರೈಪ್ದ್ ಡಾಲ್ಫಿನ್ ಗಳು

೯) ಸ್ಪಿನ್ನರ್ ಡಾಲ್ಫಿನ್ ಗಳು ಮತ್ತು

೧೦)ಉದ್ದ ಕೊಕ್ಕಿನ ಸಾಮಾನ್ಯ ಡಾಲ್ಫಿನ್ ಗಳು.

ಬರಹ:- ಪಿ.ಎಸ್.ರಂಗನಾಥ

ಮಸ್ಕತ್, ಒಮಾನ್ ರಾಷ್ಟ್ರ

#Oman #Kannada #Karnataka #kannadiga #Dubai #gulf #Dolphin #Muscat #bengaluru

Click below headings