Politics ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
Politics ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಸೋಮವಾರ, ಜೂನ್ 10, 2024

ಕರ್ನಾಟಕಕ್ಕೆ ನಾಲ್ಕು ಮಂತ್ರಿ ಸ್ಥಾನ ನೀಡಿ, ಬಿಜೆಪಿ ಹೈಕಮಾಂಡ್ ಏನು ಸಂದೇಶ ನೀಡಲು ಹೊರಟಿದೆ?

ಶ್ರೀ ನರೇಂದ್ರ ಮೋದಿ ಅವರು 09-06-2024 ರಂದು ಮೂರನೇ ಬಾರಿ ಭಾರತದ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು, ಜತೆಯಲ್ಲಿ ಕರ್ನಾಟಕದ ಮಾಜಿ ಮುಖ್ಯ ಮಂತ್ರಿ ಜೆಡಿಎಸ್‌ನ  ಹೆಚ್‌ ಡಿ ಕುಮಾರಸ್ವಾಮಿ, ಪ್ರಹ್ಲಾದ್‌ ಜೋಷಿ, ವಿ ಸೋಮಣ್ಣ, ಶೋಭಾ ಕರಂದ್ಲಾಜೆ ಹಾಗೂ ರಾಜ್ಯಸಭೆ ಸದಸ್ಯೆ ನಿರ್ಮಲಾ ಸೀತಾರಾಮನ್‌ ಸಚಿವರಾಗಿದ್ದಾರೆ. ನಿರ್ಮಲಾ ಸೀತಾರಾಮನ್‌ ಹೊರತು ಪಡಿಸಿ, ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ವಿಂಗಡಿಸಿ ನೋಡೋದಾದ್ರೆ, ಉತ್ತರ ಕರ್ನಾಟಕದಿಂದ ಕೇವಲ ಒಬ್ಬರಿಗೆ ಮಾತ್ರ ಮತ್ತು ದಕ್ಷಿಣ ಕರ್ನಾಟಕ ದಿಂದ ಮೂವರಿಗೆ ಮಂತ್ರಿಯಾಗುವ ಅವಕಾಶ ದೊರೆತಿದೆ. NDA ಪಾಲುದಾರರಾಗಿರುವುದರಿಂದ ಸಹಜವಾಗಿ ಜೆಡಿಎಸ್‌ನ  ಹೆಚ್‌.ಡಿ.ಕುಮಾರಸ್ವಾಮಿಗೆ ಮಂತ್ರಿ ಪದವಿ ಅನಾಯಾಸವಾಗಿ ಒಲಿದು ಬಂದಿದೆ. ಪ್ರಹ್ಲಾದ್‌ ಜೋಷಿ ಒಬ್ಬ ಅನುಭವಿ ರಾಜಕಾರಣಿ ಯಾಗಿರುವುದರಿಂದ ಅವರನ್ನ ಮತ್ತೊಮ್ಮೆ ಕ್ಯಾಬಿನೆಟ್ ಮಂತ್ರಿಯನ್ನಾಗಿ ಮಾಡಿದ್ದಾರೆ. ಯಡಿಯೂರಪ್ಪರ ಬಳಗದಲ್ಲಿ ಗುರುತಿಸಿಕೊಂಡಿದ್ದ ಶೋಭಾ ಕರಂದ್ಲಾಜೆ ಅವರು ಉಡುಪಿ ಚಿಕ್ಕಮಗಳೂರು ಕ್ಷೇತ್ರದಿಂದ, ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಬಂದು ಮತ್ತೊಮ್ಮೆ ಸಂಸದರಾಗಿ ಆಯ್ಕೆಯಾಗಿ ಸಚಿವರಾಗಿದ್ದಾರೆ. ಅಚ್ಚರಿಯ ಸನ್ನಿವೇಶದಲ್ಲಿ ವಿ. ಸೋಮಣ್ಣನವರು ರಾಜ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಹೈಕಮಾಂಡಿನ ಸಂದೇಶದಂತೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ವರುಣ ಮತ್ತು ಚಾಮರಾಜನಗರ ಕ್ಷೇತ್ರಗಳಲ್ಲಿ ನಿಂತು ಸೋತಿದ್ದ ಇವರು ಇದೀಗ ತುಮಕೂರು ಲೋಕಸಭೆಯಿಂದ ಸಂಸದರಾಗಿ ಆಯ್ಕೆಯಾಗಿ ಸಚಿವರಾಗಿದ್ದಾರೆ. 

    ಮೋದಿ ನೇತೃತ್ವದ ಎನ್ಡಿಎ ಸರಕಾರ ಮೂರನೆ ಬಾರಿ ಅಧಿಕಾರಕ್ಕೇರಿ, ಈಗ ಸೋಲು ಗೆಲುವಿನ ಲೆಕ್ಕಾಚಾರ ಬಿಜೆಪಿ ಪಾಳಯದಲ್ಲಿ ನಡೆಯುತ್ತಿದೆ.    ಕಳೆದ ಬಾರಿ 25 ಕ್ಷೇತ್ರ ಗೆದ್ದು ಅತಿ ಹೆಚ್ಚು ಗಳಿಸುವ ವಿಶ್ವಾಸ ಹೊಂದಿದ್ದ  ಕರ್ನಾಟಕದಲ್ಲಿ ಈ ಬಾರಿ ಸೀಟ್ ಗಳು ಕಡಿಮೆಯಾಗಿದ್ದು ಬಿಜೆಪಿ ಹೈಕಮಾಂಡಿಗೆ ತೀವ್ರ ಬೇಸರವನ್ನುಂಟು ಮಾಡಿದೆ. ಉತ್ತರ ಕರ್ನಾಟಕದ 12 ಲೋಕಸಭೆ ಕ್ಷೇತ್ರಗಳಲ್ಲಿ ಬಿಜೆಪಿಗೆ ಒಲಿದಿರುವುದು ಕೇವಲ ಆರು. ದಕ್ಷಿಣ ಕರ್ನಾಟಕದ 16 ಲೋಕಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಕೂಟ ಗೆದ್ದಿರುವುದು, ಬರೋಬ್ಬರಿ 13 ಕ್ಷೇತ್ರಗಳು. 

ಉತ್ತರ ಕರ್ನಾಟಕದಲ್ಲಿ ಬಿಜೆಪಿ ಹೇಳಿಕೊಳ್ಳುವಂತಹ ಸಾಧನೆ ಮಾಡಿಲ್ಲ, ಸುಲಭವಾಗಿ ಗೆಲ್ಲಬಹುದಾಗಿದ್ದ, ದಾವಣಗೆರೆ, ಚಿಕ್ಕೋಡೀ, ಬೀದರ್, ಬಳ್ಳಾರಿ, ಕೊಪ್ಪಳ ಕ್ಷೇತ್ರಗಳು ತಪ್ಪಿ ಹೋಗಿದೆ. ಕರ್ನಾಟಕದಲ್ಲಿ ಪ್ರತಿಬಾರಿ ಅಧಿಕಾರಕ್ಕೆ ಬಂದಾಗ ಲಿಂಗಾಯತ ಸಮುದಾಯಕ್ಕೆ ಅತಿ ಹೆಚ್ಚು ಪ್ರಾತಿನಿಧ್ಯ ಕೊಟ್ಟಿದ್ದರೂ ಸಹ ಸ್ಥಳೀಯ ನಾಯಕತ್ವ ಹೇಳಿಕೊಳ್ಳುವಂತಹ ಕೆಲಸ ಮಾಡಲಿಲ್ಲ ಎಂದು ಬಿಜೆಪಿ ಪಾಳಯದಲ್ಲಿ ಸುದ್ದಿ ಹರಿದಾಡುತ್ತಿದೆ. ಜೆಡಿಎಸ್ ಮೈತ್ರಿಯಿಂದಾಗಿ ಬಿಜೆಪಿಗೆ ಅತೀವ ಲಾಭವಾಗಿದೆ ಆದರೆ, ಈ ಬಾರಿ ಬೆಂಬಲಿಸುತಿದ್ದ ಲಿಂಗಾಯತರು ಬಿಜೆಪಿಯ ಕೈ ಹಿಡಿಯಲಿಲ್ಲ ಎನ್ನುವುದಕ್ಕಿಂತ, ಸ್ಥಳೀಯ ನಾಯಕರು ಒಗ್ಗಟ್ಟಾಗಿ ಕೆಲಸ ಮಾಡಲಿಲ್ಲ ಎನ್ನುವ ಬೇಸರ ಹೈಕಮಾಂಡಿನಲ್ಲಿದೆ. 

ಹಾವೇರಿಯಿಂದ ಬಸವರಾಜ ಬೊಮ್ಮಾಯಿ ಗೆದ್ದರೂ, ಪಕ್ಕದ ದಾವಣಗೆರೆ ಕ್ಷೇತ್ರ ಉಳಿಸಿಕೊಳ್ಳಲಾಗಲಿಲ್ಲ. ಜಗದೀಶ ಶೆಟ್ಟರ್ ಬೆಳಗಾವಿ ಗೆದ್ದರೂ ಪಕ್ಕದ ಚಿಕ್ಕೋಡಿ ಗೆಲ್ಲಿಸಿಕೊಡಲಾಗಲಿಲ್ಲ, ಹೀಗಾಗಿ ಇವರಿಬ್ಬರಿಗೆ ಮಂತ್ರಿ ಪದವಿ ತಪ್ಪಿರಬಹುದು ಎಂದು ಊಹಿಸಲಾಗುತ್ತಿದೆ. ಅದೂ ಅಲ್ಲದೆ, ಇವರಿಬ್ಬರೂ ಮುಖ್ಯಮಂತ್ರಿಯಾಗಿ ಕೆಲಸಮಾಡಿರುವುದರಿಂದ ಬಿಎಸ್ ವೈ ವಿರೋಧಿ ಎಂದೇ ಗುರುತಿಸಿಕೊಂಡಿರುವ ಸೋಮಣ್ಣನಂತಹ ಲಿಂಗಾಯಿತ ನಾಯಕನಿಗೆ ಮಣೆ ಹಾಕಿದ್ದಾರೆ. ಬಿಎಸ್ ವೈ ಅವರ ಮಗ ಬಿ.ವೈ.ರಾಘವೇಂದ್ರ ಮೂರನೇ ಬಾರಿಗೆ ಸಂಸದರಾಗಿರುವುದರಿಂದ ಅವರಿಗೆ ಮಂತ್ರಿ ಪದವಿ ಸಿಗಬಹುದು ಎನ್ನುವ ಲೆಕ್ಕಾಚಾರವಿತ್ತು. ವಿಜಯೇಂದ್ರ ಕರ್ನಾಟಕದ ಅಧ್ಯಕ್ಷರಾಗಿರುವುದರಿಂದ, ರಾಘವೇಂದ್ರ ಅವರನ್ನ ಪರಿಗಣಿಸಲಿಲ್ಲ. 

    ಕರ್ನಾಟಕದಲ್ಲಿ ಬಿಜೆಪಿಯ ಹಿಡಿತ ಕಡಿಮೆಯಾಗಿದೆ ಎನ್ನುವ ಮುನ್ಸೂಚನೆ ಬಿಜೆಪಿ ಹೈಕಮಾಂಡಿಗೆ ಮೊದಲೇ ದೊರಕಿತ್ತು. ಪಂಚ ಗ್ಯಾರಂಟಿಯಿಂದಾಗಿ  ಕಾಂಗ್ರೆಸ್ ಪಾಳಯ 18-20 ಸೀಟ್ ಗಳನ್ನ ಗಳಿಸುವ ವಿಶ್ವಾಸ ಹೊಂದಿತ್ತು. ಈ ಸೂಚನೆ ಮೊದಲೆ ಸಿಕ್ಕಿದ್ದರಿಂದ  ಬಿಜೆಪಿ ಹೈಕಮಾಂಡ್, ಜೆಡಿಎಸ್ ಜತೆಗೆ ಮೈತ್ರಿ ಮುಂದಾಯಿತು. ಜೆಡಿಎಸ್ ಮೈತ್ರಿಯಿಂದಾಗಿ, ಒಕ್ಕಲಿಗರು ಸಂಪೂರ್ಣವಾಗಿ ಬಿಜೆಪಿಯನ್ನು ಬೆಂಬಲಿಸಿದ್ದಾರೆ, ಇದಕ್ಕೆ ಪುಷ್ಟಿ ನೀಡುವಂತೆ ಒಕ್ಕಲಿಗ ಬೆಲ್ಟ್ ನಲ್ಲಿ ಕಾಂಗ್ರೆಸ್ ಗೆದ್ದಿರುವುದು ಕೇವಲ ಎರಡು ಕ್ಷೇತ್ರಗಳು. 

    ಈಬಾರಿ ಲೋಕಸಭೆ ಚುನಾವಣೆಯಲ್ಲಿ ಲಿಂಗಾಯತರಿಗೆ - 9, ಒಕ್ಕಲಿಗರಿಗೆ - 3, ಬ್ರಾಹ್ಮಣರಿಗೆ - 2, ಪರಿಶಿಷ್ಟ ಜಾತಿಯವರಿಗೆ - 4  ವಾಲ್ಮೀಕಿ ಜನಾಂಗದವರಿಗೆ - 2, ಬಂಜಾರ,   ಕ್ಷತ್ರಿಯ, ಬಲಿಜ, ಬಂಟ್ಸ್ ಮತ್ತು ಬಿಲ್ಲವ ಸಮುದಾಯಕ್ಕೆ ತಲಾ 1 ಟಿಕೆಟ್ ನೀಡಲಾಗಿದೆ. ಈ ಸಾರಿ ಕಂಪ್ಲೀಟ್ ಸ್ವೀಪ್ ಮಾಡಬೇಕೆಂದು, ಯಡಿಯೂರಪ್ಪ ಹೇಳಿದವರಿಗೆ ಪಕ್ಷ ಟಿಕೆಟ್ ಕೊಟ್ಟರೂ ಸಹ, ಈ ಬಾರಿ 17ಕ್ಕೆ ಕುಸಿದಿರುವುದರಿಂದ ತೀವ್ರ ಅಸಮಧಾನಗೊಂಡಿರುವ ಬಿಜೆಪಿಯ ಹೈಕಮಾಂಡ್, ಮುಂಬರುವ ಚುನಾವಣೆಗಳಲ್ಲಿ ಇದೇ ರೀತಿ ಕೆಲಸ ಮಾಡಿದರೆ, ಈಗಿರುವ ಸ್ಥಳೀಯ ನಾಯಕತ್ವವನ್ನ ಬದಲಾಯಿಸಬೇಕಾಗಬಹುದು ಎಂದು ಯಡಿಯೂರಪ್ಪ ಬಳಗಕ್ಕೆ ಬಲವಾದ ಸಂದೇಶ ರವಾನಿಸಿದ್ದಾರೆ ಎಂದು ವಿಶ್ಲೇಷಿಸಲಾಗುತ್ತದೆ. 

    ಇವೆಲ್ಲಾ ಏನೇ ಇದ್ದರೂ, ಚುನಾವಣೆ ಎಂದ ಮೇಲೆ ಸೋಲು ಗೆಲುವು ಇದ್ದಿದ್ದೆ. ಜಾತಿ ಲೆಕ್ಕಾಚಾರಕ್ಕಿಂತ, ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗುವ ಗುಣವನ್ನ ಎಲ್ಲಾ ನಾಯಕರು ರೂಡಿಸಿಕೊಳ್ಳಬೇಕಿದೆ. ಮುಂಬರುವ ಚುನಾವಣೆಗಳಿಗೆ ಈಗಿನಿಂದಲೇ ಕಾರ್ಯತಂತ್ರ ರೂಪಿಸುವುದು ಅಗತ್ಯ. ಕಾಂಗ್ರೆಸ್ಸಿನ ಗ್ಯಾರಂಟಿಯ ಹೊಡೆತದಿಂದ ಬಚಾವಾಗುವ ಸನ್ನಿವೇಶ ಸೃಷ್ಟಿಯ ಅಗತ್ಯತೆ ಇದೆ. ಕೇವಲ ಮೋದಿ ಅಲೆ, ಮೋದಿ ಮುಖ ನೋಡಿ ಜನ ಓಟ್ ಹಾಕುತ್ತಾರೆ ಎನ್ನುವ ಭ್ರಮೆಯಿಂದ ಹೊರಬಂದು ಎಲ್ಲಾ ನಾಯಕರು ಪಕ್ಷ ಕಟ್ಟುವ ಕೆಲಸ ಮಾಡಬೇಕಾಗುತ್ತದೆ. ಕಾಂಗ್ರೆಸ್ಸಿನ ಪ್ರತಿಯೊಂದು ತಪ್ಪನ್ನ ಹುಡುಕಿ ಜನರ ಮುಂದೆ ಕೊಂಡೋಯ್ದರೆ, ಮುಂದಿನ ವಿಧಾನಸಭೆ ಚುನಾವಣೆಗೆ ಹೋರಾಡಲು ಸಾಧ್ಯವಾಗುತ್ತದೆ. ಇಲ್ಲದೆ ಇದ್ದರೆ, ಕಾಂಗ್ರೆಸ್ಸಿನ ಅಹಿಂದ ರಾಜಕಾರಣ ಮತ್ತು ಹೊಸ ಗ್ಯಾರಂಟಿಗಳ ಅಲೆಯಲ್ಲಿ ಕೊಚ್ಚಿಹೋಗುವುದು ನಿಶ್ಚಿತ. ಸೋಲಿನ ಬೇಗುದಿ, ಕಾಂಗ್ರೆಸ್ ನಲ್ಲಿಯೂ ಜೋರಾಗಿಯೆ ಇದೆ.  ಖರ್ಗೆ ಮತ್ತು ರಾಹುಲ್ ಗಾಂಧಿ ಇಬ್ಬರೂ ಸಹ ಡಿಕೆಶಿ ಮತ್ತು ಸಿದ್ದರಾಮಯ್ಯನವರ ಮೇಲೆ ಬೇಸರಿಸಿಕೊಂಡಿದ್ದಾರೆ. ಅಲ್ಲೂ ನಾಯಕತ್ವ ಬದಲಾದರೂ ಅಚ್ಚರಿಯಿಲ್ಲ. 


ಗುರುವಾರ, ಜೂನ್ 6, 2024

ಕೈ ಪಾಲಾದ ಕಲ್ಯಾಣ ಕರ್ನಾಟಕ



 2024ರ ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.  ಕಳೆದ ಬಾರಿ ಮಾತ್ರ ಬಿಜೆಪಿ ಪಕ್ಷ ಪ್ರಾಬಲ್ಯ ಸಾಧಿಸಿತ್ತು, ಈ ಬಾರಿ ಕಾಂಗ್ರೆಸ್ಸಿನ ಅದೃಷ್ಟ ಖುಲಾಯಿಸಿದೆ. ಈ ಕ್ಷೇತ್ರಗಳ ಇತಿಹಾಸವನ್ನು ಒಮ್ಮೆ ಅವಲೋಕಿಸಿದರೆ, ಕಲ್ಯಾಣ ಕರ್ನಾಟಕದ ಐದು ಲೋಕಸಭಾ ಕ್ಷೇತ್ರಗಳು ಮುಂಚೆಯಿಂದಲೂ ಕಾಂಗ್ರೆಸ್ಸಿನ ಭದ್ರಕೋಟೆಯಾಗಿಯೇ ಇತ್ತು. ಈ ಎಲ್ಲಾ ಕ್ಷೇತ್ರಗಳಲ್ಲಿ ಹನ್ನೆರೆಡಕ್ಕೂ ಹೆಚ್ಚುಬಾರಿ ಕಾಂಗ್ರೆಸ್ ಜಯಗಳಿಸಿದೆ.  ಇಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಮುಸ್ಲಿಂ, ಕುರುಬ ಮತ್ತು ಹಿಂದುಳಿದ ವರ್ಗದವರ ಮತಗಳೇ ನಿರ್ಣಾಯಕ. 

    ಈ ಜಿಲ್ಲೆಗಳಲ್ಲಿ ಪರಿಶಿಷ್ಟ ಜಾತಿ (SC), ವರ್ಗ(ST), ಹಿಂದುಳಿದ ವರ್ಗ (OBC) ಮತ್ತು ಅಲ್ಪಸಂಖ್ಯಾತರಾದ ಮುಸ್ಲಿಂ ಸಮುದಾಯದವರೇ ಅಧಿಕವಾಗಿದ್ದಾರೆ. ಈ ಸಮುದಾಯಗಳು ಆರ್ಥಿಕವಾಗಿ ಹಿಂದುಳಿರುವುದರಿಂದ ಬೆಂಗಳೂರು. ಕರಾವಳಿ ಮಲೆನಾಡು ಕಡೆ ದುಡಿಯುವುದಕ್ಕೆ ಹೋಗುವಂತಹವರು. ಹೀಗಾಗಿ ಇಲ್ಲಿನ ಹೆಚ್ಚಿನ ಮಕ್ಕಳು ತುಮಕೂರಿನ ಸಿದ್ದಗಂಗ ಮಠದಲ್ಲಿ ಉಚಿತ ಶಿಕ್ಷಣ ಪಡೆಯುತಿದ್ದಾರೆ. ಅತ್ಯಂತ ಮುಗ್ಧ ಜನರು ಇವರು, ಯಾರಾದರು ಆಸೆ ತೋರಿಸಿದರೆ ಅದಕ್ಕೆ ಮಾರು ಹೋಗುವಂತಹ ಮುಗ್ಧರು. ಹೀಗಿರುವಾಗ, ಇಷ್ಟು ವರ್ಷಗಳ ಕಾಲ ಗೆದ್ದ ಕಾಂಗ್ರೆಸ್ ಅಭ್ಯರ್ಥಿಗಳು  ಇವರನ್ನು ವೋಟಿಗಾಗಿ ಬಳಸಿಕೊಂಡಿದ್ದಾರೆ ವಿನಹ ಅಭಿವೃದ್ದಿ ಪಡಿಸುವಂತಹ ಕೆಲಸಕ್ಕೆ ಹೋಗಿಲ್ಲ. ಈ ಬಾರಿ ಕಾಂಗ್ರೆಸ್ಸಿನ ಗ್ಯಾರಂಟಿಗಾಗಿ ಜನ ಮರುಳಾಗಿರುವುದ್ದಾರೆ.

    ಮೈಸೂರು, ಬೆಂಗಳೂರು, ಮಲೆನಾಡು ಮತ್ತು ಕರಾವಳಿಗೆ ಹೋಲಿಸಿದರೆ ಕಲ್ಯಾಣ ಕರ್ನಾಟಕದ ಜಿಲ್ಲೆಗಳು ಆರ್ಥಿಕವಾಗಿ ಪ್ರಬಲವಾಗಿಲ್ಲ. ಶೈಕ್ಷಣಿಕವಾಗಿ ಸಹ ಹಿಂದುಳಿವೆ. ಬಿಸಿಲ ನಾಡು ಬರಪ್ರದೇಶ ಎಂದೇ ಹೆಸರುವಾಸಿ, ತುಂಗಭದ್ರ ಎಡದಂಡೆ ಮತ್ತು ಬಲದಂಡೆ ಕಾಲುವೆಗಳು, ಕೃಷ್ಣಾ ನದಿ ಹರಿಯುವ ಪ್ರದೇಶದ ಹಳ್ಳಿಗಳು ಬಿಟ್ಟರೆ ಮಿಕ್ಕೆಲ್ಲ ಪ್ರದೇಶ ಮಳೆಯಾಧಾರಿತ. ಅಲ್ಲಿನ ಜನರು ಬಹುತೇಕ ಬಡವರು,  ಬಳ್ಳಾರಿ ಮತ್ತು ಹೊಸಪೇಟೆ ಮಾತ್ರ ಸ್ವಲ್ಪ ಮುಂದುವರಿದಿದೆ ಎನ್ನಬಹುದು ಬಿಟ್ಟರೆ, ಮಿಕ್ಕೆಲ್ಲ ಜಿಲ್ಲೆಗಳು ಅತೀ ಹಿಂದುಳಿವೆ. ಇನ್ನೂ ಸಹ ಈ ಭಾಗವನ್ನು ಅಭಿವೃದ್ದಿ ಪಡಿಸಲಿಕ್ಕೆ ಸಾಧ್ಯವಾಗಿಲ್ಲ. ಇಲ್ಲಿನ ಪೂರ್ವಜರು ಹೈದರಬಾದಿನ ನಿಜಾಮರ ಆಡಳಿತ ಕಾಲದಲ್ಲಿ ರಜಾಕರ ದಾಳಿಗೆ ನೊಂದು ಬೆಂದವರು. 

    ಚುನಾವಣೆ ರಾಜಕೀಯ ಎಂದ ಮೇಲೆ ಪ್ರತಿಯೊಂದು ಜಾತಿ ಸಮುದಾಯ ಮತಗಳು ಸಹ ನಿರ್ಣಾಯಕವಾಗುತ್ತವೆ. ಬುದ್ದಿವಂತರು ವಿವೇಚಿಸಿ ಮತನೀಡುತ್ತಾರೆ, ಕೆಲವರು ಜಾತಿ ಅಥವ ಹಣದ ಆಮಿಷಕ್ಕೆ ಒಳಗಾಗುತ್ತಾರೆ. ಒಂದು ಕ್ಷೇತ್ರದಲ್ಲಿ ಎರಡು ಪಕ್ಷದವರು ಒಂದೇ ಜಾತಿಯವರಾದರೂ ಸಹ, ಮುಂಬರುವ ದಿನಗಳಲ್ಲಿ ಯಾವ ಪಕ್ಷದಿಂದ ಅವರ ಸಮುದಾಯಕ್ಕೆ ಬೆಂಬಲ ಸಿಗಬಹುದು ಎನ್ನುವ ಲೆಕ್ಕಾಚಾರ ನಡೆಯುತ್ತದೆ. ಉದಾ: ಪರಿಶಿಷ್ಟ ಜಾತಿ (SC), ವರ್ಗ(ST), ಜನರು ಯಡಿಯೂರಪ್ಪ ದೇವೆಗೌಡರಿಗಿಂತ, ಸಿದ್ದರಾಮಯ್ಯ, ಖರ್ಗೆ ಮೇಲೆ ನಂಬಿಕೆ ಜಾಸ್ತಿ. ಹಾಗೆಯೇ ಅಂದಾಜು 15% ಇರುವ ಮುಸ್ಲಿಂ ಸಮುದಾಯ ಪಕ್ಕಾ ಕಾಂಗ್ರೆಸ್ಸಿಗೆ ಹಾಕುವುದು ನಿಶ್ಚಿತ. ಅದೇ ರೀತಿ 50 ರಿಂದ 60% ಪರಿಶಿಷ್ಟ ಜಾತಿ (SC), ವರ್ಗ(ST),  ಖಂಡಿತ ಕಾಂಗ್ರೆಸಿಗೆ ಹಾಕುತ್ತಾರೆ. ಸದ್ಯದ ಪರಿಸ್ಥಿತಿಯಲ್ಲಿ ಕುರುಬರ ಓಟುಗಳು ಸಹ ಕಾಂಗ್ರೆಸ್ಸಿಗೆ. ಇನ್ನು ಕಾಂಗ್ರೆಸಿನ ಪಂಚ ಗ್ಯಾರಂಟಿ ಕೆಲವರಿಗೆ ಪಥ್ಯವಾಗಿದೆ. ವಸ್ತು ಸ್ಥಿತಿ ಹೀಗಿರುವಾಗ ಕಾಂಗ್ರೆಸ್ಸಿಗೆ ಈ ಭಾಗ ಕೈಹಿಡಿದಿರುವುದು ಸ್ಪಷ್ಟವಾಗುತ್ತಿದೆ.

ಬೀದರ್ ಲೋಕಸಭಾ ಕ್ಷೇತ್ರ:

ಈ ಕ್ಷೇತ್ರದಲ್ಲಿ ೧೦ ಬಾರಿ ಕಾಂಗ್ರೆಸ್, ೭ ಬಾರಿ ಬಿಜೆಪಿ,  ಗೆಲುವು ಸಾಧಿಸಿದೆ. ಎಂದಿನಂತೆ, ಕಾಂಗ್ರೆಸ್ ದಲಿತ, ಹಿಂದುಳಿದ ಮತ್ತು ಮುಸ್ಲಿಂ ಮತಗಳ ಮೇಲೆ ಹೆಚ್ಚು ಅವಲಂಬಿತವಾಗಿತ್ತು. ಬಿಜೆಪಿ ಹೆಚ್ಚಾಗಿ ಲಿಂಗಾಯತ ಮತಗಳನ್ನೇ ನೆಚ್ಚಿಕೊಂಡಿದ್ದರು ಸಹ ಈಶ್ವರ್ ಖಂಡ್ರೆ ಯವರ ಸತತ ಪರಿಶ್ರಮದಿಂದ ಈ ಬಾರಿ ಬಿಜೆಪಿಗೆ ಸೋಲಾಯಿತು. ಈ ಬಾರಿ ಆಳಂದದಲ್ಲಿ ಮಾತ್ರ ಬಿಜೆಪಿಗೆ ಮುನ್ನೆಡೆ ದೊರೆತಿದೆ ಮಿಕ್ಕೆಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ. ಕಾಂಗ್ರೆಸ್ಸಿನ ಸಾಗರ್ ಈಶ್ವರ್ ಖಂಡ್ರೆ ಅವರು ಬಿಜೆಪಿಯ ಭಗವಂತ್ ಖೂಬಾ ವಿರುದ್ಧ 1 ಲಕ್ಷದ 28 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. 

ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಲಿಂಗಾಯತರು 4,66,000 ಮಂದಿ ಇದ್ದರೆ, SC, ST ಸಮುದಾಯದ ಮತದಾರರು 4,26,000 ಮಂದಿ ಇದ್ದಾರೆ. ಇನ್ನು ಮುಸ್ಲಿಂ - 2,31,000, ಲಂಬಾಣಿ - 1,50,000, ಕುರುಬ - 97,000, ಮರಾಠ - 1,60,000 ಹಾಗೂ ಇತರೇ ಸಮುದಾಯದ ಮತಾದರರು 3,13,787 ಮಂದಿ ಇದ್ದಾರೆ.

ಗುಲ್ಬರ್ಗ ಲೋಕಸಭಾ ಕ್ಷೇತ್ರ:- . 

ಈವರೆಗೆ ನಡೆದಿರುವ 18 ಚುನಾವಣೆಗಳಲ್ಲಿ ಕಾಂಗ್ರೆಸ್ 15 ಬಾರಿಗೆ ಗೆದ್ದಿದೆ. 90ರ ದಶಕದಲ್ಲಿ ಒಮ್ಮೆ ಜನತಾ ದಳ, ಎರಡು ಬಾರಿ ಬಿಜೆಪಿ ಇಲ್ಲಿ ಜಯ ಕಂಡದ್ದು ಬಿಟ್ಟರೆ ಇಲ್ಲಿ ಕೈ ಪಾಳಯದ್ದೇ ಮೇಲುಗೈ. ಪರಿಶಿಷ್ಟ ಜಾತಿ (SCಗಳು):  24%, ಪರಿಶಿಷ್ಟ ಪಂಗಡಗಳು (STಗಳು): 3%, ಮುಸ್ಲಿಂ: 24%. ಹಿಂದುಳಿದ ವರ್ಗ: 27%, ಇತರೆ 22%.  ಈ ಲೆಕ್ಕಾಚಾರ ನೋಡಿದರೆ, ಕಾಂಗ್ರೆಸ್ಸಿಗೆ ಗೆಲುವು ಸುಲಭ ಮತ್ತು ಸಹಜ.

ಕಾಂಗ್ರೆಸ್ಸಿನ ರಾಧಾಕೃಷ್ಣ ದೊಡ್ಡಮನಿ ಅವರು ಬಿಜೆಪಿಯ ಡಾ. ಉಮೇಶ್ ಜಾಧವ್ ವಿರುದ್ಧ ಕೇವಲ 27 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. 

ನಿರ್ಣಾಯಕ ಪಾತ್ರವಹಿಸಿದ ಮುಸ್ಲಿಂ ಮತದಾರರು ಮಾತ್ರ

ಜಾಧವ್​ ವಿರುದ್ಧ ಗೆಲ್ಲಲು ಕಾರಣವಾಗಿದ್ದು, ಕಲಬುರಗಿ ಉತ್ತರ ಕ್ಷೇತ್ರ. ಕಾಂಗ್ರೆಸ್ ಶಾಸಕಿ ಕನೀಜ್ ಫಾತಿಮಾ (ಮುಸ್ಲಿಂ ನಾಯಕ ಮತ್ತು ಮಾಜಿ ಸಚಿವ ದಿವಂಗತ ಕಮರ್-ಉಲ್-ಇಸ್ಲಾಂ ಅವರ ಪತ್ನಿ) ಪತ್ರಿನಿಧಿಸುವ ಕಲಬುರಗಿ ಉತ್ತರ ಕ್ಷೇತ್ರವೊಂದರಲ್ಲೇ ಕಾಂಗ್ರೆಸ್‌ ಬರೋಬ್ಬರಿ 51,729 ಮತಗಳ ಭಾರೀ ಮುನ್ನಡೆ ತಂದುಕೊಂಡಿದೆ. ಈ ಮೂಲಕ ಮೂಲಕ ಉಳಿದ ಕ್ಷೇತ್ರಗಳಲ್ಲಿ ಆಗಿರುವ ನಷ್ಟವನ್ನು ಸರಿದೂಗಿಸಲು ಈ ಕ್ಷೇತ್ರ ನೆರವಾಯಿತು. ಮುಸ್ಲೀಮ್ ಬಾಹುಳ್ಯವಿರುವ ಕ್ಷೇತ್ರದಲ್ಲಿ ಡಾ.ಜಾಧವ್ ಇಲ್ಲಿ 70,313 ಮತಗಳನ್ನ ಪಡೆದರೆ, ದೊಡ್ಡಮನಿ ಬರೋಬ್ಬರಿ 1,22,042 ಮತಗಳನ್ನು ಪಡೆದರು. ದೊಡ್ಡ ಅಂತರವೇ ಅವರ ಗೆಲುವಿಗೆ ಕಾರಣವಾಯಿತು.

ರಾಯಚೂರು ಲೋಕಸಭಾ ಕ್ಷೇತ್ರ 

ಈ ಕ್ಷೇತ್ರದಲ್ಲಿ 14 ಬಾರಿ ಕಾಂಗ್ರೆಸ್, 2 ಬಾರಿ ಬಿಜೆಪಿ, 1 ಬಾರಿ ಪಕ್ಷೇತರ, 1 ಬಾರಿ ಜನತಾದಳ ಗೆಲುವು ಸಾಧಿಸಿದೆ.  ಪರಿಶಿಷ್ಟ ಜಾತಿ – 18%, ಪರಿಶಿಷ್ಟ ಪಂಗಡ – 19%, ಲಿಂಗಾಯತ – 16%,  ಕುರುಬ ಸಮುದಾಯ – 13% ಮುಸ್ಲಿಂ – 15% ಇತರೆ – 19%.  ಇಲ್ಲಿಯೂ ಸಹ ಕೈ ಪಾಳಯದ್ದೇ ಮೇಲುಗೈ. ಅಹಿಂದ ಓಟ್ ಗಳನ್ನ ನೆಚ್ಚಿಕೊಂಡಿದ್ದ ಕಾಂಗ್ರೆಸ್ಸಿಗೆ ಗೆಲುವು ಇಲ್ಲಿ ಸಹಜ. ಕಾಂಗ್ರೆಸ್ಸಿನ ಕುಮಾರ್ ನಾಯಕ್ ಅವರು ಬಿಜೆಪಿಯ ರಾಜಾ ಅಮರೇಶ್ವರ ನಾಯಕ್  ವಿರುದ್ಧ  79 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. 

ಕೊಪ್ಪಳ ಲೋಕಸಭಾ ಕ್ಷೇತ್ರ 

ಈ ಕ್ಷೇತ್ರದಲ್ಲಿ 10 ಬಾರಿ ಕಾಂಗ್ರೆಸ್, 3 ಬಾರಿ ಬಿಜೆಪಿ, 1 ಬಾರಿ ಪಕ್ಷೇತರ, 2 ಬಾರಿ ಜನತಾದಳ  ಗೆಲುವು ಸಾಧಿಸಿದೆ. ಲಿಂಗಾಯತ 27%, ಕುರುಬ 21%, SC 21%, ಮುಸ್ಲಿಂ –  10% , ಇತರೆ – 21%. ಇಲ್ಲಿಯೂ ಸಹ ಕೈ ಪಾಳಯದ್ದೇ ಮೇಲುಗೈ. ಅಹಿಂದ ಓಟ್ ಗಳನ್ನ ನೆಚ್ಚಿಕೊಂಡಿದ್ದ ಕಾಂಗ್ರೆಸ್ಸಿಗೆ ಗೆಲುವು ಇಲ್ಲಿ ಸಹಜವಾಗಿ ದೊರೆತಿದೆ. ಎರಡು ಬಾರಿ ಬಿಜೆಪಿಯಿಂದ ವಿಜಯಿಯಾಗಿದ್ದ ಕರಡಿ ಸಂಗಣ್ಣರಿಗೆ ಈ ಸಾರಿ ಟಿಕೆಟ್ ನೀಡದೆ ಇರುವುದು ಸಹ ಬೀಜೆಪಿ ಸೋಲಲು ಒಂದು ಕಾರಣ ಎಂದು ಹೇಳಲಾಗಿದೆ. ಕಳೆದ ವಿಧಾನಸಭಾ ಚುನಾವಣೆ ಫಲಿತಾಂಶ ನೋಡಿದರೆ 8 ವಿಧಾನಸಭಾ ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಜಯ ಸಾಧಿಸಿದ್ದರೆ, ಗಂಗಾವತಿಯಲ್ಲಿ ಕೆಆರ್‌ಪಿಪಿಯಿಂದ ಗಾಲಿ ಜನಾರ್ದನ ರೆಡ್ಡಿ ಹಾಗೂ ಕುಷ್ಟಗಿಯಿಂದ ಬಿಜೆಪಿಯ ದೊಡ್ಡನಗೌಡ ಪಾಟೀಲ್‌ ಗೆದ್ದಿದ್ದಾರೆ.

ಕಾಂಗ್ರೆಸ್ಸಿನ ರಾಜಶೇಖರ್‌ ಹಿಟ್ನಾಳ್‌ ಅವರು ಬಿಜೆಪಿಯ ಡಾ ಬಸವರಾಜ ಕೆ ಶರಣಪ್ಪ ವಿರುದ್ಧ 46 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಕರಡಿ ಸಂಗಣ್ಣರಿಗೆ ಈ ಸಾರಿ ಟಿಕೆಟ್ ನೀಡಿದ್ದಿದ್ದರೆ, ಬಹುಶಃ ಬಿಜೆಪಿಯು ಸುಲಭವಾಗಿ ಗೆಲ್ಲುತಿತ್ತು ಎಂದೆನಿಸುತ್ತದೆ.

ಬಳ್ಳಾರಿ  ಲೋಕಸಭಾ ಕ್ಷೇತ್ರ 

 ಈ ಕ್ಷೇತ್ರದಲ್ಲಿ 15 ಬಾರಿ ಕಾಂಗ್ರೆಸ್, 4 ಬಾರಿ ಬಿಜೆಪಿ, ಗೆಲುವು ಸಾಧಿಸಿದೆ. ಈ ಬಾರಿ ಕಾಂಗ್ರೆಸ್ಸಿನ ತುಕಾರಾಂ ಅವರು ಬಿಜೆಪಿಯ ಶ್ರೀರಾಮುಲು ವಿರುದ್ಧ 98 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಬಳ್ಳಾರಿ ಕ್ಷೇತ್ರವೂ ಸಹ ಕಾಂಗ್ರೆಸ್ಸಿನ ಭದ್ರ ಕೋಟೇಯಾಗಿತ್ತು. ರೆಡ್ಡಿ ಸಹೋದರರ ನಂತರ ಈ ಕ್ಷೇತ್ರದಲ್ಲಿ ಬಿಜೆಪಿಯು ಪ್ರಾಬಲ್ಯವನ್ನು ಮೆರೆದಿದೆ.  

ಮುಸ್ಲಿಂ, ಬಲಿಜ, ಲಿಂಗಾಯತ ಮತ್ತು ಪರಿಶಿಷ್ಟ ಜಾತಿ ಸಮುದಾಯದವರು ನಿರ್ಣಾಯಕರಾಗಿದ್ದಾರೆ.

1999 ರಲ್ಲಿ ನಡೆದ ಚುನಾವಣೆ ಸಂದರ್ಭದಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರವು ಇಡೀ ದೇಶದ ಗಮನ ಸೆಳೆದಿತ್ತು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸೋನಿಯಾ ಗಾಂಧಿ ಹಾಗೂ ಬಿಜೆಪಿಯಿಂದ ಸುಷ್ಮಾ ಸ್ವರಾಜ್ ಸ್ಪರ್ಧಿಸಿದ್ದರು. ಸೋನಿಯಾ ಗಾಂಧಿಯವರು ತಮ್ಮ ಪ್ರತಿಸ್ಪರ್ಧಿ ಬಿಜೆಪಿ ಪಕ್ಷದ ಸುಷ್ಮಾ ಸ್ವರಾಜ್ ಅವರನ್ನು 56,100 ಮತಗಳ ಅಂತರದಿಂದ ಸೋಲಿಸಿದ್ದರು.

ಬಿಜೆಪಿಗೆ 2004ರಲ್ಲಿ ಮೊಟ್ಟ ಮೊದಲ ಬಾರಿಗೆ ಈ ಕ್ಷೇತ್ರದಲ್ಲಿ ಜಿ ಕರುಣಾಕರ ರೆಡ್ಡಿ ಅವರಿಗೆ ಜಯ ಲಭಿಸಿದ ಬಳಿಕ, 2009ರಲ್ಲಿ ಬಿಜೆಪಿಯ ಜೆ ಶಾಂತಾ ಸಂಸದೆಯಾಗಿ ಆಯ್ಕೆಯಾದರು. 2014ರಲ್ಲಿ ಲೋಕಸಭೆಗೆ ಸ್ಪರ್ಧಿಸಿದ ಬಿ ಶ್ರೀರಾಮುಲು ಅವರು ಸಂಸದರಾದರು. 2019ರಲ್ಲಿ ದೇವೆಂದ್ರಪ್ಪ ಬಿಜೆಪಿಯಿಂದ ಆಯ್ಕೆಯಾಗಿದ್ದಾರೆ.  ಜನಾರ್ದನ ರೆಡ್ಡಿ ಅವರ ಬೆಂಬಲದ ಮಧ್ಯೆಯೂ ಬಿಜೆಪಿ ಈ ಬಾರಿ ಸೋತಿದೆ.

ಶುಕ್ರವಾರ, ಏಪ್ರಿಲ್ 4, 2014

ಬುದ್ದಿಜೀವಿಗಳೋ ಬುದ್ದುಜೀವಿಗಳೋ?




ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಆಯ್ಕೆಯಾದರೆ ಭಾರತದಲ್ಲಿ ಸರ್ವಾಧಿಕಾರ ಸೃಷ್ಟಿಯಾಗುತ್ತದೆ ಎಂದು ಸಾಹಿತಿ ಯು.ಆರ್. ಅನಂತಮೂರ್ತಿ ಹೇಳಿದ್ದಾರೆ. ಅಲ್ಲಾ ಸ್ವಾಮಿ, ರಾಜ್ಯ ಸರ್ಕಾರದಲ್ಲಿ ಒಬ್ಬ ಮಂತ್ರಿ ಯನ್ನು ಸೇರಿಸಿಕೊಳ್ಳುವುದಕ್ಕೆ, ಲೋಕಸಭೆ ಅಭ್ಯರ್ಥಿ ಆಯ್ಕೆ ಪಟ್ಟಿ ಅಂತಿಮ ಮಾಡಲು, ದೆಹಲಿ ವಿಮಾನ ವೇರಿ ಮೇಡಂ ಮನೆ ಮುಂದೆ ರಾಜ್ಯ ನಾಯಕರು ಅಪ್ಪಣೆಗಾಗಿ ಕಾಯುತ್ತಾರಲ್ಲ ಇದು ಯಾವ ಧೋರಣೆ?

ಕಳೆದ ೬೦ ವರ್ಷ ಕೇಂದ್ರದಲ್ಲಿ ಆಡಳಿತ ನಡೆಸಿದ ಕಾಂಗ್ರೇಸ್ ಪಕ್ಷ ಇಷ್ಟು ದಿನದವರೆಗೂ ನಡೆಸಿದ್ದು ಏನು? ಕಾಂಗ್ರೆಸ್ ನ ಹಿರಿಯ ಮುಖಂಡ ಜಾಫರ್ ಶರೀಫ್ ಗೆ ಟಿಕೆಟ್ ಕೊಡದೆ ಸತಾಯಿಸಿದ್ದು ಯಾವ ಸರ್ವಾಧಿಕಾರ ಧೋರಣೆ ಸ್ವಾಮಿ?

ಸ್ವಾಮಿ ಕಾರ್ನಾಡ್ ರೇ, ರಾಜಕೀಯ ಪಕ್ಷಗಳಿಂದ ರಾಜ್ಯ, ದೇಶದಲ್ಲಿ ಜಾತಿ ಧರ್ಮ ದ ಆಧಾರದಲ್ಲಿ ಓಲೈಕೆ ನಡೀತಾಯಿದೆ, ಅದೇಸಮಯದಲ್ಲಿ ನೀವು ಹೇಳ್ತಿದೀರ,  "ನಂದನ್ ನೀಲೇಕಣಿ ನಮ್ಮ ಸಂಭಂಧಿಕ ಅದಕ್ಕೆ ಅವರ ಪರ ಪ್ರಚಾರ ನಡೆಸ್ತಿದೀನಿ" ಅಂತೀರಿ, ಇದು ಸ್ವಜನ ಪಕ್ಷಪಾತ ವಲ್ಲದೆ ಇನ್ನೇನು?

"ಸ್ವಂತ ಶಕ್ತಿ" ಯಿಂದ ೭೦೦೦ ಕೋಟಿ ಆಸ್ತಿ ಮಾಡಿರುವ ನಂದನ್ ನೀಲೇಕಣಿ, ಅಷ್ಟು ಹಣ ಇಟ್ಕೊಂಡು ಏನು ಮಾಡ್ತಾರೆ? ಯಾವುದಾದರು ಜನಪರ ಕಾರ್ಯಕ್ರಮ ಅಷ್ಟೊಂದು ಹಣವನ್ನು ಬಳಸುವುದಕ್ಕೆ ನೀವ್ಯಾಕೆ ಸಲಹೆ ಕೊಡೋದಿಲ್ಲ?
ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ರೈತ ವಿಠ್ಠಲ್ ಅರಭಾವಿ  ಚೆನ್ನಾಗಿ ಕುಡಿದು ಆತ್ಮ ಹತ್ಯೆ ಮಾಡಿಕೊಂಡ, ಅದಕ್ಕೆ ಸರ್ಕಾರಕ್ಕೆ ಯಾವುದೇ ಸಂಭಂದ ವಿಲ್ಲ ಅಂತ ಉಡಾಫೆಯಾಗಿ ಮಾತಾಡ್ತಾರೆ. ಪರಮೇಶ್ವರ್ ರವರು ದೇವೇಗೌಡ ಯಾವಾಗ ವಿಷ ಕುಡಿದು ಸಾಯ್ತಾರೆ ಅಂತ ಕಾಯ್ತಾಇದ್ದೇನೆ? ಅಂತ ಕೀಳು ಮಟ್ಟದಲ್ಲಿ ಮಾತಾಡ್ತರೆ ಇದೆಲ್ಲ ವನ್ನು ಖಂಡಿಸೋದಿಕ್ಕೆ ನಿಮಗೆ ಏನಾಗಿದೆ?

ಅಳುವ ಗಂಡಸರನ್ನು ನಗುವ ಹೆಂಗಸರನ್ನು ನಂಬಬಾರದು ಸಿದ್ಧರಾಮಯ್ಯನವರು ಹೆಚ್ ಡಿಕೆ ಗೆ ಲೇವಡಿ ಮಾಡಿದ್ದಾರೆ, ಇಂತಹ ಹೇಳಿಕೆಗೆ ನಿವ್ಯಾಕೆ ಅವರಿಗೆ ತಿಳಿ ಮಾತು ಹೇಳಲಿಲ್ಲ? ಈ ದೇಶದ ಹೆಂಗಸರು ಪ್ರತಿನಿತ್ಯ ಅಳುತ್ತಾ ಇರಬೇಕು ಎಂಬುದು ಅವರ ಅಭಿಪ್ರಾಯವಾಗಿದೆ ಎಂದು ಹೆಚ್ಡಿಕೆ ಟೀಕಿಸಿದ್ದಾರೆ.

ರಾತ್ರಿ 1 ಗಂಟೆಯವರೆಗೆ ಬಾರ್ ಮತ್ತು ಪಬ್ ತೆರೆಯಲು ಅವಕಾಶ ನೀಡಲಾಗಿದೆ, ಹಾಗಾದ್ರೆ ಕುಡಿಯುವುದನ್ನು ಪ್ರೋತ್ಸಾಹಿಸುವ ಸರ್ಕಾರ, ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸದ ಸರ್ಕಾರ ಜನಸಾಮಾನ್ಯರ ಸರ್ಕಾರವೇ?
ಅನಂತ್ ಕುಮಾರ್ ಬೆಂಗಳೂರಿಗಾಗಿ ಯಾವುದೇ ಕೆಲಸ ಮಾಡಿಲ್ಲ ಅಂತೀರಾ? ಹಾಗಾದ್ರೆ ಕಳೆದ ೧೦ ವರ್ಷ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಯುಪಿಯೆ ಸರ್ಕಾರ ಬೆಂಗಳೂರಿಗಾಗಿ ಏನು ಮಾಡಿದೆ ?

ಬೆಲೆ ಏರಿಕೆ ಹಾಗೂ ಆರ್ಥಿಕ ಸಮಸ್ಯೆಗಳಿಂದ ಜನಸಾಮಾನ್ಯರು ತತ್ತರಿಸಿದಾಗ, ನೀವು ಏನು ಮಾಡ್ತಾ ಯಿದ್ದಿರಿ? ನಿಮ್ಮ ಬುದ್ದಿ ಜೀವಿ ಬತ್ತಳಿಕೆಯಿಂದ ಕೇಂದ್ರ ಸರ್ಕಾರಕ್ಕೆ ಯಾಕೆ ಸಲಹೆ ಕೊಡಲಿಲ್ಲ?

ಪಾಕಿಸ್ತಾನ ಸೇನೆಯು ಭಾರತೀಯ ಸೈನಿಕರ ಶಿರಚ್ಛೇದ ಮಾಡಿದಾಗ, ಏನು ಮಾಡ್ತಾಯಿದ್ದಿರಿ? ಒಂದಾದರು ಹೇಳಿಕೆ ಕೊಟ್ಟು ಖಂಡಿಸಿದಿರಾ? ರಾಷ್ಟ್ರ ಸಾರ್ವಭೌಮತ್ವಕ್ಕೆ ಧಕ್ಕೆ ಯಾದಾಗ ಒಂದಾದರು ಪ್ರತಿಭಟನೆ ಮಾಡಿದ್ದೀರಾ ಸ್ವಾಮಿ?

ಯಾರನ್ನು ಕುಲಪತಿಯನ್ನಾಗಿ ನೇಮಕ ಮಾಡಬೇಕು, ಯಾರನ್ನು ಮಾಡಬಾರದು ಎಂಬ ಬಗ್ಗೆ ನನಗೆ ತಿಳಿದಿದೆ. ನೇಮಕಾತಿ ವಿಚಾರಕ್ಕೆ ಸಂಬಂಧಿಸಿದಂತೆ ಶೋಧನಾ ಸಮಿತಿ ರಚಿಸಿದ್ದೇ ನಾನು. ಹೊರಗಿನವರನ್ನು ಕುಲಪತಿಗಳನ್ನಾಗಿ ನೇಮಕ ಮಾಡಬಾರದು ಎಂದೇನೂ ನಿಯಮವಿಲ್ಲ. ಇದೆಲ್ಲ ನನ್ನ ಅಧಿಕಾರಕ್ಕೆ ಸಂಬಂಧಿಸಿದ್ದು ನನ್ನ ಅಧಿಕಾರವನ್ನು ಪ್ರಶ್ನಿಸಲು ಸಾಹಿತಿ ಯು.ಆರ್.ಅನಂತಮೂರ್ತಿ ಯಾರು ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಹೇಳಿದಾಗ, ನಿಮ್ಮ ಮೆಚ್ಚಿನ ರಾಜಕೀಯ ಪಕ್ಷದ ಯಾವ ರಾಜಕಾರಣಿ ನಿಮ್ಮ ಪರವಾಗಿ ಮಾತಾಡಿದರು ಸ್ವಾಮಿ?

ನಿಮ್ಮ ಚಿಕಿತ್ಸೆಗಾಗಿ ಸುಮಾರು 11 ಲಕ್ಷ ರೂಪಾಯಿ ಈಗಾಗಲೇ ವೆಚ್ಚವಾಗಿದೆ. ಅಷ್ಟೊಂದು ದೊಡ್ಡ ಮೊತ್ತವನ್ನು ತಾವು ಭರ್ತಿ ಮಾಡಲು ಅಸಾಧ್ಯವೆಂದು ಹೇಳಿ, ಸರಕಾರದ ವತಿಯಿಂದ ಬಿಲ್ ಪಾವತಿ ಮಾಡುವಂತೆ ತಮ್ಮ ಕುಟುಂಬವು ರಾಜ್ಯ ಸರಕಾರಕ್ಕೆ ಮನವಿ ಮಾಡಿದೆ. ಯಾವುದೇ ಸಂಕೋಚ ವಿಲ್ಲದೆ ರಾಜ್ಯ ಸರ್ಕಾರದ ಮುಂದೆ ಕೈಯೊಡ್ಡು ತ್ತೀರಲ್ಲ, ಕರ್ನಾಟಕ ಜನ ಸಾಮಾನ್ಯರ ತೆರಿಗೆ ಹಣವನ್ನು ಸುಖಾ ಸುಮ್ಮನೆ ಕೊಡೋದಿಕ್ಕೆ ಹಣ ವೇನು ಆಕಾಶ ದಿಂದ ರಾಜ್ಯ ಸರ್ಕಾರದ ಖಜಾನೆ ಗೆ ಬಂದು ಬೀಳುತ್ತಾ?   ಕೆಲವೊಮ್ಮೆ ಅನ್ನಿಸುತ್ತೆ, ಸರ್ಕಾರದಿಂದ ಇಂತಹ ಹಲವಾರು ಪ್ರಯೋಜನ ಪಡೆಯಲು ತಾವು ಕಾಂಗ್ರೆಸ್ ಓಲೈಕೆ ಮಾಡೋದಿಕ್ಕೆ ನಿಂತ್ಕೋತೀರೋ ಏನೋ ಅಂತ.

ಕರ್ನಾಟಕದಲ್ಲಿ ಕನ್ನಡ ಬಾವುಟ, ಕನ್ನಡ ಹೆಸರಿನ ಫಲಕ ಗಳು, ಕನ್ನಡ ಮಾಧ್ಯಮ ಶಿಕ್ಷಣದ ಬಗ್ಗೆ ಕೋರ್ಟ್ ಗಳು ನಮಗೆ ವಿರುದ್ಧ ವಾದ ತೀರ್ಪು ಕೊಟ್ಟಿವೆ, ಸಾಹಿತಿಗಳಾದ ನಿಮಗೆ ಕನ್ನಡಿಗರ ಇಚ್ಚಾ ಶಕ್ತಿ, ಬದ್ಧತೆ ಯನ್ನು ಕಾಪಾಡುವ ಬಗ್ಗೆ ಕನಿಷ್ಟ ಒಂದು ಮಾತು ಇದುವರೆವಿಗೂ ನಿಮ್ಮಿಂದ ಬಂದಿಲ್ಲ, ನಿಮ್ಮ ಹಿತಾಸಕ್ತಿ ಏನು ಅಂತ ರಾಜ್ಯದ ಜನರಿಗೆ ಚೆನ್ನಾಗಿ ಅರ್ಥ ವಾಗಿದೆ ಸ್ವಾಮಿ.

http://www.vijaykarnatakaepaper.com/Details.aspx?id=12273&boxid=3293218


ಶುಕ್ರವಾರ, ಸೆಪ್ಟೆಂಬರ್ 2, 2011

ಮರೆತುಹೋದ ಶಾಸ್ತ್ರೀಯನ್ನು ನೆನಪಿಸಿದ ಅಣ್ಣಾ ಹಜಾರೆ

ಅಣ್ಣಾ ಹಜಾರೆ ಹೆಸರು ಕೇಳದ ಭಾರತೀಯ ಇಲ್ಲ ಹಾಗೂ ಇನ್ನು ಮುಂದೆ ಭಾರತೀಯರಿಗೆ ಆ ಹೆಸರು ಹೊಸದು ಅಲ್ಲ ಮತ್ತು ಹೊಸ ಮುಖವೂ ಅಲ್ಲ. 74ರ ಹರೆಯದ ಗಾಂಧೀವಾದಿ ಇಡೀ ದೇಶದ ಜನರನ್ನು ಒಗ್ಗೂಡಿಸಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ ಖ್ಯಾತಿ ಅವರದು. ಭ್ರಷ್ಟಾಚಾರ ವಿರೋಧಿ ಕಾಯ್ದೆಯಾದ ಜನ ಲೋಕಪಾಲ ಮಸೂದೆ ಜಾರಿಗೆ ಒತ್ತಾಯಿಸಿ ಹೋರಾಟ ನಡೆಸಿದ ಅಣ್ಣಾರಲ್ಲಿ ಹಲವರು ಒಬ್ಬ ನಿಷ್ಕಳಂಕ ಸಮಾಜ ಸುಧಾರಕನನ್ನು ಕಂಡಿದ್ದಾರೆ ಮತ್ತು ಅವರು ಮಾಡಿದ ಹೋರಾಟ ಎರಡನೇ ಸ್ವಾತಂತ್ರ್ಯ ಹೋರಾಟವೆಂದೇ ಎಂದು ಪರಿಗಣಿಸಿದ್ದಾರೆ.

ಅಣ್ಣಾ ಅವರ ಸರಳಾತಿ ಸರಳ ಜೀವನ, ನಿಷ್ಕಳಂಕ ವ್ಯಕ್ತಿತ್ವ, ಪ್ರಾಮಾಣಿಕತೆ, ನೇರವಂತಿಕೆ, ತ್ಯಾಗ ಅಹಿಂಸಾ ಮನೋಭಾವ, ಅವರ ದಿರಿಸು, ಅವರ ನೋಟ, ಅವರ ದೇಶಪ್ರೇಮ, ಇಂದಿನ ದಿನ ಮರೆತೇಹೋಗಿರುವ ಭಾರತದ ಮಾಜಿ ಪ್ರಧಾನಿ ದಿವಂಗತ ಲಾಲ್ ಬಹಾದೂರ್ ಶಾಸ್ತ್ರಿಯ(1904-1966)ವರನ್ನು ಕಣ್ಣಮುಂದೆ ತಂದು ನಿಲ್ಲಿಸುತ್ತದೆ. ಶಾಸ್ತ್ರೀಯವರು 'ಜೈ ಜವಾನ್ ಜೈ ಕಿಸಾನ್' ಅಂದಿದ್ದರೆ, ಅಣ್ಣಾ ಕೂಡ 'ರೈತರಿಲ್ಲದಿದ್ದರೆ ಈ ದೇಶವೇ ಇಲ್ಲ' ಎಂಬ ಸಂದೇಶ ಇಡೀ ದೇಶಕ್ಕೆ ರವಾನಿಸಿದ್ದಾರೆ.. ಶಾಸ್ತ್ರೀಜಿಯಂಥ ವ್ಯಕ್ತಿಯೊಬ್ಬರು ನಮ್ಮ ಕಣ್ಣಮುಂದಿರುವುದು ನಿಜಕ್ಕೂ ನಮ್ಮ ಸೌಭಾಗ್ಯವೇ ಸರಿ.

ಕೆಲ ದಿನಗಳ ನಂತರ ಅಥವಾ ಕೆಲ ವರ್ಷಗಳ ನಂತರ ಲಾಲ್ ಬಹಾದೂರ್ ಶಾಸ್ತ್ರಿಯವರು ಜನಮಾನಸದಿಂದ ಮರೆತುಹೋದಂತೆ ಅಣ್ಣಾ ಹಜಾರೆಯವರು ಕೂಡ ಮರೆತುಹೋದರೆ ಆಶ್ಚರ್ಯವಿಲ್ಲ. ಶಾಸ್ತ್ರೀಜಿಯವರ ಜನುಮದಿನ ಮಹಾತ್ಮಾ ಗಾಂಧೀಜಿಯವರ ಜನುಮದಿನದಂದೇ ಇದೆ ಎಂದು ಎಷ್ಟು ಜನರಿಗೆ ಗೊತ್ತಿದೆ? ಗೊತ್ತಿದ್ದರೂ ಎಷ್ಟು ಜನ ಅಷ್ಟೇ ಶ್ರದ್ಧೆಯಿಂದ ಆಚರಿಸುತ್ತಾರೆ? ಭ್ರಷ್ಟಾಚಾರದ ವಿರುದ್ಧ ಇಡೀ ದೇಶವನ್ನು ಬಡಿದೆಬ್ಬಿಸಿರುವ ಅಣ್ಣಾ ಹಜಾರೆ ವಿಷಯದಲ್ಲಿ ಹಾಗಾಗದಿರಲಿ ಎಂಬುದಷ್ಟೇ ನಮ್ಮ ಆಶಯ

ಶಾಸ್ತ್ರೀಜಿಯವರು ಒಬ್ಬ ಬಡ ಶಾಲಾ ಶಿಕ್ಷಕನ ಮಗನಾಗಿ ಜನಿಸಿ, ಚಿಕ್ಕವಯಸ್ಸಿನಲ್ಲಿ ತನ್ನ ತಂದೆಯವರನ್ನು ಕಳೆದುಕೊಂಡು, ಭ್ರಷ್ಟಾಚಾರ ರಹಿತ ಹಾಗೂ ವಿಶ್ವಾಸ ದ್ರೋಹ ಮಾಡದೆ ಸಂಪೂರ್ಣ ಜೀವನವನ್ನು ಕಳೆದರು. ಒಂದು ಸಾರಿ ವಾರಣಾಸಿಯಲ್ಲಿನ ಗಂಗಾನದಿಯ ದಡದಲ್ಲಿನ ಜಾತ್ರೆಯನ್ನು ನೋಡಲು ಸ್ನೇಹಿತರ ಜತೆ ಹೋಗಿದ್ದರು. ವಾಪಸ್ಸು ಬರುವಾಗ ದೋಣಿಯವನಿಗೆ ಹಣ ಕೊಡಲು ಕೈಯಲ್ಲಿ ಕಾಸಿರಲಿಲ್ಲ. ಸ್ನೇಹಿತರಿಂದ ಕಾಸು ಪಡೆದು ಪ್ರಯಾಣಿಸುವ ಬದಲು ನದಿಯೊಳಗೆ ಧುಮುಕಿ ಈಜಿ ಆಚೆ ದಡವನ್ನು ಸೇರಿದರು. ಶಾಸ್ತ್ರೀಜಿಯವರು ಜೀವನದುದ್ದಕ್ಕೂ ಇಂತಹ ಸರಳತೆಯನ್ನು ನಿರ್ವಹಿಸುತಿದ್ದುದನ್ನು ನಾವು ಕಾಣಬಹುದು.

ಅಣ್ಣಾ ಹಜಾರೆಯವರು ಒಂದು ಸಾರಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದರು. ಆದರೆ ನಂತರ ಮನಸು ಬದಲಾಯಿಸಿ, 15 ವರ್ಷ ಭಾರತೀಯ ಸೈನ್ಯದಲ್ಲಿ ಲಾರಿ ಚಾಲಕನಾಗಿ ಕಾರ್ಯನಿರ್ವಹಿಸಿ ತಮ್ಮ ಜೀವನವನ್ನು ದೇಶ ಸೇವೆಗೆ ಮುಡುಪಾಗಿಟ್ಟಿದ್ದರು. ತಮ್ಮ ನಿವೃತ್ತಿ ಜೀವನದ ನಂತರ ತಮ್ಮ ಸ್ವಂತ ಊರಾದ ಮಹರಾಷ್ಟ್ರದ ಬರ ಪೀಡಿತ ಗ್ರಾಮವಾದ ರಾಲೆಗಾಂವ್ ಸಿದ್ದಿಗೆ ಹೋಗಲು ನಿರ್ಧರಿಸಿದ್ದರು. ತದನಂತರ ರಾಲೆಗಾಂವ್ ಸಿದ್ದಿ ಗ್ರಾಮವನ್ನು ಅಹಮದ್ ನಗರ ಜಿಲ್ಲೆಯಲ್ಲಿ ಮಾದರಿ ಗ್ರಾಮವನ್ನಾಗಿ ಮಾಡಿದರು.

ಕುಡಿತ, ಬಡತನ, ಅನಕ್ಷರತೆಯ ದಾಸ್ಯಕ್ಕೆ ಸಿಲುಕಿ ನರುಳುತ್ತಿದ್ದ ಅಲ್ಲಿಯ ಜನರೊಳಗೆ, ಸಾಕ್ಷರತೆ, ನೈರ್ಮಲ್ಯ, ಮೌಲ್ಯಗಳನ್ನು ತುಂಬಿದ್ದಲ್ಲದೇ ಕುಡಿತದ ಚಟ ಇರುವವರನ್ನು ನಯದಿಂದ ತಿದ್ದಿ, ಬಗ್ಗದವರನ್ನು ಶಿಕ್ಷೆಯಿಂದ ದಾರಿಗೆ ತಂದು ಆದರ್ಶ ಗ್ರಾಮವನ್ನಾಗಿಸಲು ದುಡಿದವರು. ಈಗ ಈ ಪುಟ್ಟ ಗ್ರಾಮ ದೇಶದಲ್ಲೇ ಶ್ರೀಮಂತ ಹಾಗೂ ಮಾದರಿ ಗ್ರಾಮವಾಗಿ ಪ್ರಚಲಿತಗೊಂಡಿದೆ. ಸೌರಶಕ್ತಿಯ ಬಳಕೆಯ ಮೂಲಕ ಇಂಧನ ಉಳಿತಾಯದಂತಹ ಸದುದ್ದೇಶಗಳನ್ನು ಪ್ರೇರೇಪಿಸಿದ ಈ ಸಮಾಜ ಸೇವಕ ಸದಾ ದೇಶದ ಸರ್ವತೋಮುಖ ಏಳಿಗೆಯನ್ನು ಬಯಸಿದವರು

ಶಾಸ್ತ್ರೀಜಿಯವರು ಗಾಂಧಿ ಟೋಪಿ, ಜುಬ್ಬಾ ಮತ್ತು ಧೋತಿ ಧರಿಸಿದರೆ ಅಣ್ಣಾರವರು ಸಹ ಇದೇ ಮಾದರಿಯ ಉಡುಗೆಯನ್ನು ಧರಿಸುತ್ತಾರೆ. ಇತ್ತೀಚೆಗಿನ ಅವರ ಎರಡನೇ ಉಪವಾಸ ಸತ್ಯಾಗ್ರಹದಲ್ಲಿ ಅದೂ ಇಂದಿನ ಐಪಾಡ್, ಲ್ಯಾಪ್ಟಾಪ್ ಮತ್ತು ಲಕ್ಶುರಿ ಸಾಧನಗಳ ನವಯುಗದಲ್ಲಿ ಗಾಂಧಿ ಟೋಪಿ ಒಂದು ಹೊಸ ಫ್ಯಾಶನ್ ಆಗಿ ಯುವ ಜನತೆ ಮತ್ತು ಮಕ್ಕಳಲ್ಲಿ ಕಾಣಿಸಿದೆ. ಎರಡು ವಿಶಿಷ್ಟ ರೀತಿಯ ಪ್ರತಿಭಟನೆಗಳು ಈ ದೇಶದ ಜನತೆಯನ್ನು ಒಗ್ಗೂಡಿಸಿದೆ

"ಜೈ ಜವಾನ್ ಜೈ ಕಿಸಾನ್" ಘೋಷಣೆಯ ಸೃಷ್ಟಿಕರ್ತ ಶಾಸ್ತ್ರೀಜಿ 1965ರಲ್ಲಿ ಪಾಕಿಸ್ತಾನದೊಂದಿಗೆ ಯುದ್ಧ ಸಮಯದಲ್ಲಿ ಭಾರತದ ಆಹಾರ ಉತ್ಪಾದನೆ ಹೆಚ್ಚಿಸುವ ಅಗತ್ಯವಿದೆ ಎಂದು ಒತ್ತು ನೀಡಿದ್ದರು. ಸೆಪ್ಟೆಂಬರ್ 23, 1965ರಲ್ಲಿ ಕದನ ವಿರಾಮ ಘೊಷಣೆ ನಂತರ, ಶಾಸ್ತ್ರೀಜಿ ಮತ್ತು ಪಾಕಿಸ್ತಾನದ ಅಧ್ಯಕ್ಷ ಮಹಮ್ಮದ್ ಅಯೂಬ್ ಖಾನ್ ಜನವರಿ 10, 1966ರಂದು ಶಾಂತಿ ಒಪ್ಪಂದ ಘೋಷಣೆ ಮಾಡಿ ತಾಷ್ಕೆಂಟ್ ನಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ್ದರು.

ಅದೇ ರೀತಿ, ಅಣ್ಣಾ ನಾಲ್ಕು ದಶಕಗಳಿಂದ ಹೆಚ್ಚು ಬೆಳಕಿಗೆ ಬಾರದೆ ಭ್ರಷ್ಟಾಚಾರ ವಿರೋಧಿ ಜನ ಲೋಕಪಾಲ ಮಸೂದೆಯ ಬಗ್ಗೆ ಭಾರತೀಯರಲ್ಲಿ ಅರಿವು ಮೂಡಿಸಿದರು. ಆದರೆ ಸತತ 8 ವ್ಯರ್ಥ ಪ್ರಯತ್ನಗಳ ಹೊರತಾಗಿಯೂ ಮತ್ತು ಪ್ರತಿಬಾರಿ ಮಂಡನೆಗೆ ಒಂದೊಂದು ಹೊಸ ರೀತಿಯ ಆವೃತ್ತಿ ಸಿದ್ದವಾದರೂ ಸಂಸತ್ತಿನಲ್ಲಿ ಮನ್ನಣೆ ಸಿಗಲಿಲ್ಲ. ಜೂನ್ 2011ರಲ್ಲಿ ಅಣ್ಣಾ ತಮ್ಮ ಮೊದಲ ಉಪವಾಸ ಸತ್ಯಾಗ್ರಹದಲ್ಲಿ ಮಸೂದೆಗೆ ಅಂತಿಮ ಕರಡು ರೂಪಿಸುವ ಕೆಲಸ ಮಾಡಲು ಜಂಟಿ ಸಮಿತಿಯನ್ನು ರಚಿಸಲು ಸರ್ಕಾರವನ್ನು ಒತ್ತಾಯಿಸಿದರು.

ಸಿವಿಲ್ ಸೊಸೈಟಿಯ ಬೇಡಿಕೆಗಳಿಗೆ ಕೇಂದ್ರ ಬಗ್ಗದಿದ್ದರಿಂದ ಅಣ್ಣಾ ಮತ್ತೆ ಉಪವಾಸ ಸತ್ಯಾಗ್ರಹ ಕುಳಿತರು. ಕೊನೆಗೆ ತಮ್ಮ ಹೋರಾಟದಲ್ಲಿ ಬಾಗಶಃ ಜಯಗಳಿಸಿದ್ದು ಇರುವ ಅನೇಕ ಇತಿಮಿತಿಗಳ ನಡುವೆಯೂ ಸರಕಾರ, ಅಣ್ಣಾ ಮತ್ತು ಅವರ ತಂಡದ ಬೇಡಿಕೆಗಳನ್ನು ಮಸೂದೆಯಲ್ಲಿ ಜಾರಿಗೊಳಿಸಲು ಒಪ್ಪಿಸುವಂತೆ ಮಾಡಿದ್ದಾರೆ.

ದೇಶದ ಪಿತಾಮಹ ಮಹಾತ್ಮ ಗಾಂಧೀಜಿಯವರು ಆರಂಭಿಸಿದ ಅಹಿಂಸಾ ಮಾರ್ಗದಲ್ಲಿ ಶಾಸ್ತ್ರೀಜಿ ಮತ್ತು ಅಣ್ಣಾರವರು ನಂಬಿಕೆ ಇಟ್ಟಿದ್ದರು, ಎಂದು ಇವರು ನಡೆಸಿದ ಚಳವಳಿ ಮುಖಾಂತರ ನಮಗೆ ಗೊತ್ತಾಗುತ್ತದೆ. ಗಾಂಧಿಯವರ 1921ರ ಅಸಹಕಾರ ಚಳವಳಿಯಲ್ಲಿ ಶಾಸ್ತ್ರೀಜಿಯವರು ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದರು. ನಿಷೇದಾಜ್ಞೆ ಸ್ಥಳದಲ್ಲಿ ಮೆರವಣಿಗೆಯಲ್ಲಿ ಬಾಗವಹಿಸಿದ್ದ ಅವರನ್ನು ಬಂಧಿಸಲಾಗಿತ್ತು. ಬಂಧಿತರಾದ ಅವರನ್ನು ಚಿಕ್ಕ ವಯಸ್ಸಿನ ಬಾಲಕ ಎಂದು ಬಿಡುಗಡೆ ಮಾಡಿದರು. ನಂತರ 1930ರಲ್ಲಿ ಮಹಾತ್ಮ ಗಾಂಧಿಯವರ ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿ ತಮ್ಮ ಜೀವನವನ್ನು ಸ್ವಾತಂತ್ರ್ಯ ಹೋರಾಟಕ್ಕೆ ಮುಡುಪಾಗಿಟ್ಟರು. ಆಗ ಅವರಿಗೆ 2 ವರ್ಷ 6 ತಿಂಗಳು ಜೈಲುವಾಸವಾಗಿತ್ತು.

ಆದರೆ, ಅಣ್ಣಾ ರಾಮಲೀಲಾ ಮೈದಾನದಲ್ಲಿ ತಮ್ಮ 12 ದಿನದ ಉಪವಾಸ ಸತ್ಯಾಗ್ರಹದ ಸರ್ಕಾರದ ವಿರುದ್ಧ ಪ್ರತಿಭಟನೆ ಸಂದರ್ಭದಲ್ಲಿ ರಾಷ್ಟ್ರವ್ಯಾಪಿ ತಮ್ಮ ಅನುಯಾಯಿಗಳನ್ನು ನಿಯಂತ್ರಿಸುವ ಮೂಲಕ ಶಾಂತಿ ಕಾಪಾಡುವಲ್ಲಿ ಯಶಸ್ವಿಯಾದರು. ದೇಶದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿಯ ಜನರೂ ಈ ಗಾಂಧೀವಾದಿ ತೋರಿಸಿಕೊಟ್ಟ ಮಾರ್ಗದಲ್ಲಿ ನಡೆದು ಅವರ ಕಾರ್ಯಕ್ಕೆ ಕೈ ಜೋಡಿಸಿದರು.

ಈ ಮೇಲಿನ ಕೆಲ ಹೋಲಿಕೆಗಳ ನಂತರವೂ ಅಣ್ಣ ಮತ್ತು ಶಾಸ್ತ್ರೀಜಿ ದೇಶದ ಜನರಿಂದ ಎರಡು ವಿಭಿನ್ನ ಪ್ರತಿಕ್ರಿಯೆಗಳು ಎದುರಿಸಿರಬಹುದಾಗಿದೆ ಎಂದು ನಂಬಬಹುದು. ಆಧುನಿಕ ಮಾಧ್ಯಮ ಮತ್ತು ತಂತ್ರಜ್ಞಾನದ ಸಹಾಯದಿಂದ ಅಣ್ಣಾ ಸಾಮೂಹಿಕವಾಗಿ ರಾಷ್ಟ್ರವ್ಯಾಪ್ತಿ ತಲುಪಿದ್ದಾರೆ. ಜನರು ಅಣ್ಣಾ ಹಜಾರೆಯವರನ್ನು ಪೂಜಿಸಲು ಪ್ರಾರಂಭಿಸಿದ್ದು, ಅನೇಕರು ಅಣ್ಣಾ ಹಜಾರೆಗಾಗಿ ಒಂದು ದೇವಾಲಯವನ್ನು ನಿರ್ಮಿಸಲು ಮುಂದಾಗಿದ್ದಾರೆ. ಇದಕ್ಕೆ ಅಣ್ಣಾ ಅವಕಾಶ ನೀಡುವುದಿಲ್ಲ ಅನ್ನುವುದು ಎರಡನೇ ವಿಚಾರ. ಕೆಲ ವರದಿಗಳ ಪ್ರಕಾರ ಅಣ್ಣಾರವರ 12 ದಿನದ ಸುದೀರ್ಘ ಉಪವಾಸದ ಘಟನೆಯನ್ನು ಮುಂಬೈನಲ್ಲಿ ಗಣೇಶ ಪೂಜಾ ಸಮಯದಲ್ಲಿ ನಿರೂಪಣಾ ವಿಷಯವಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ.


ಆದರೆ, ಶಾಸ್ತ್ರೀಜಿಯವರ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ ಹಾಗು ದೇಶದ ಪ್ರಗತಿಗಾಗಿ ಅವರ ಅತ್ಯುನ್ನತ ಕೊಡುಗೆಯ ಹೊರತಾಗಿಯೂ, ಇತರೆ ಸ್ವಾತಂತ್ರ್ಯ ಹೋರಾಟಗಾರರು ಅಥವ ಕೆಲ ರಾಜಕಾರಣಿಗಳು ಪಡೆದ ಮನ್ನಣೆಯನ್ನು ಲಾಲ್ ಬಹಾದುರ್ ಶಾಸ್ತ್ರೀಜಿಯವರೂ ಪಡೆಯಲಿಲ್ಲ ಎನ್ನುವುದು ವಿಷಾದದ ಸಂಗತಿ.


ಅಕ್ಟೋಬರ್ 2ರ ಗಾಂಧಿ ಜಯಂತಿ ಆಚರಿಸುವ ಸಂದರ್ಭದಲ್ಲಿ ಬಹುತೇಕ ಜನರು ಶಾಸ್ತ್ರೀಜಿಯವರನ್ನು ನೆನಪಿಸಿಕೊಳ್ಳುವ ಗೊಡವೆಗೇ ಹೋಗುವುದಿಲ್ಲ. ಗಾಂಧೀಜಿಯವರ ಖ್ಯಾತಿ ಮತ್ತು ಜನಪ್ರಿಯತೆ ಅವರನ್ನು ಮಸುಕಾಗಿಸಿಬಿಟ್ಟಿದೆ. ಒಮ್ಮೆ CNN-IBN ಸಂಪಾದಕ ಹಾಗು ಮುಖ್ಯಸ್ಥ ರಾಜದೀಪ್ ಸರ್ದೇಸಾಯಿ " ಒಂದು ರೀತಿಯಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನವನ್ನು ಗಾಂಧಿಯವರ ಜತೆ ಹಂಚಿಕೊಳ್ಳುತ್ತಿರುವುದು ದುಃಖದ ಸಂಗತಿ. ಮಹಾತ್ಮರವರ ನೆರಳಿನಲ್ಲಿ ಬದುಕುವುದು ಬಹು ಕಷ್ಟ" ಎಂದು ಟ್ವೀಟ್ ಮಾಡಿದ್ದರು.
***********************
೦೨.೦೯.೨೦೧೧ ರಂದು ದಟ್ಸ್ ಕನ್ನಡ ದಲ್ಲಿ ಪ್ರಕಟವಾಗಿದ್ದ ನನ್ನ ಅನುವಾದಿತ ಲೇಖನ
ಮೂಲ ಲೇಖಕರು: ನೈರಿತಾ ದಾಸ್

ಗುರುವಾರ, ನವೆಂಬರ್ 25, 2010

ಇದು ಯಾರು ಬರೆದ ಕಥೆಯೊ!

"ಏನ್ರೀ ಸಿದ್ದಣ್ಣ ಎಲ್ರಿ ನಿನ್ನೆ ಕಾಣಲೆ ಇಲ್ಲ ಏನು ಅಷ್ಟೊಂದು ಕೆಲಸನ? ಏನ್ ಸಮಚಾರ?".
"ಅಯ್ಯೊ ಏರ್ಪೋಟಿಗೆ ಹೋಗಿದ್ದೆ ಸಾರ್".
"ಏರ್ಪೋಟಿಗೆ ಯಾಕ್ರಿ ಹೋಗಿದ್ರಿ, ಯಾರ್ನಾದ್ರು ರಿಸೀವ್ ಮಾಡಿಕೊಳ್ಳೋಕೆ ಹೋಗಿದ್ರ? "
"ಅದೇ ನಮ್ಮ್ ಸಿಯೆಮ್ ಬರ್ತಾರೆ ಅಂತ ಶೋಭಾಯಾತ್ರೆ ಗೆ ತಯಾರಿ ಮಾಡಿದ್ದೆ. ಆದರೆ ಆಯಪ್ಪ ಹೊಸ ಏರ್ಪೋಟ್ಗೆ ಬರದೆ, ಹಳೆ ಏರ್ಪೋಟಿಗೆ ಬಂದ್ರು. ಅಲ್ಲಿ ಬೇರೆಯಾತ್ರೆ ನೆ ಮಾಡಿದ್ರು."
"ಕೊನೆಗೂ ಸೀಟು ಉಳಿಸಿ ಕೊಂಡು ಬಂದ್ರಲ್ಲ, ಬಿಡಪ್ಪ ಅವರನ್ನು ಅವರಪಾಡಿಗೆ ಸ್ವಲ್ಪ ಕೆಲಸ ಮಾಡಿಕೊಂಡು ಇರಲಿ. ಇನ್ಮುಂದೆ ಶೋಭಾಯಾತ್ರೆ, ಸ್ವಜನ ಪಕ್ಷಪಾತ ಏನು ಮಾಡಲ್ಲಂತೆ"
"ಅಲ್ಲ ಸಾರ್ ನಿನ್ನೆ ಪೇಪರ್ ನಲ್ಲಿ ಯಡ್ಯೂರಪ್ಪ ನವರ ಅತ್ತಿಗೆ ಒಂದು ಮಾತು ಹೇಳಿದ್ದಾರೆ " ತಿಂದೇ ಇರೋರು ಯಾರವರೆ, ಇವತ್ತು ಯಾರ್ಯಾರು ಆರೋಪ ಮಾಡ್ತಾವ್ರೊ ಅವರೆಲ್ಲ ನಿಯತ್ತನವರ? ಅವರಿಗೊಂದು ನ್ಯಾಯನ, ನಮಗೊಂದು ನ್ಯಾಯಾನ" ಆಮೇಲೆ ಇನ್ನೊಬ್ರು ಹೇಳಿದ್ದಾರೆ ಬೇರೆಯವರೆಲ್ಲ ಬೇನಾಮಿ ಹೆಸರಲ್ಲಿ ಇವರೆಲ್ಲ ಆಸ್ತಿ ಮಾಡ್ತಾರೆ, ಇವರು ಡೈರೆಕ್ಟಾಗಿ ಮಾಡಿದ್ದಾರೆ. ಅಷ್ಟೆ ವ್ಯತ್ಯಾಸ, ಆರೋಪ ಮಾಡುವವರಿಗೆ ನೈತಿಕತೆ ಇದೆಯಾ. ಅಕ್ರಮ ಸಂಭಂದ, ಅಕ್ರಮ ಸಂತಾನ ಇಟ್ಕೊಂಡು ಅದೂ ಅಲ್ಲದೆ ಬೇಕಾದ ಸಂಖ್ಯೆಯ ಶಾಸಕರಿಲ್ಲದೆ ಇದ್ರು ವಾಮ ಮಾರ್ಗ ದಲ್ಲಿ ಅಧಿಕಾರ ಹಿಡಿದು ರಾಜ್ಯಭಾರ ಮಾಡಿದ್ರು, ಮತ್ತೆ ಇವತ್ತು ಸರಕಾರ ಕೆಡವೋಕೆ ಎಷ್ಟೆಲ್ಲ ಸರ್ಕಸ್ ಮಾಡ್ತಾರೆ ಇವ್ರಗೆ ಯಾವ ನೈತಿಕತೆ ಯಿದೆ ಸಾರ್"
"ಅಲ್ರೀ ಸಿದ್ದಣ್ಣ, ಕೊನೆಗೂ ಯಡಿಯೂರಪ್ಪ ನವರನ್ನು ಸಮರ್ಥನೆ ಮಾಡ್ತೀರಲ್ರಿ, ಕುರ್ಚಿ ಬೇಕು ಅಂತ ಜಿಗಣೆ ತರಹ ಕಚ್ಚಿಕೊಂಡು ಕೂತಿದಾರಲ್ವ. ನಾನು ತಪ್ಪು ಮಾಡಿದ್ದೀನಿ ಅಂತ ಅವರೆ ಒಪ್ಪಿ ಕೊಂಡಿರಬೇಕಾದ್ರೆ ಪ್ರಾಯಶಿತಕ್ಕೊಸ್ಕರ ರಾಜಿನಾಮೆ ಕೊಡಬಹುದಲ್ವ. ಇವರಿಗೆ ಯಾವ ನೈತಿಕತೆ ಇದೆ. ನಿಯತ್ತಾದ ಮನುಷ್ಯ ಸುರೇಶ್ ಕುಮಾರ್ ಇದ್ದರು ಅವರು ಸಿಎಮ್ ಆಗಿದ್ದಿದ್ದರೆ ಏನಾಗ್ತಿತ್ತು. ಎಲ್ಲರು ಬಾಯ್ಮುಚ್ಚಿಕೊಂಡು ಕೂತಿರ್ತಿದ್ದ್ರು, ಈಗೇನು ವಿರೋಧ ಪಕ್ಷದವರು ಸುಮ್ಮನೆ ಇರ್ತಾರ, ಅವರು ಕುರ್ಚಿಯಿಂದ ಇಳಿಯೋತನಕ ಏನಾದ್ರು ತೊಂದರೆ ಕೊಡೋದು ತಪ್ಪಲ್ವಲ್ಲ. ನಮ್ಮ ಕರ್ಮ ಇವರ ಎಲ್ಲ ರಾಜಕೀಯ ದೊಂಬರಾಟ ಗಳನ್ನು ನಾವು ನೋಡ್ತಾಯಿರಬೇಕು. ಹೋಗ್ರಿ ಸಾಕು ಈ ಹೊಲಸು ರಾಜಕೀಯ."
"ಇಷ್ಟಕ್ಕೆ ಬೇಜಾರು ಮಾಡಿಕೊಂಡರೆ ಹೆಂಗೆ ಸಾರ್, ಬೇರೆ ಏನು ದಾರಿ ಯಿದೆ. ಸಾಯೊವರೆಗು ಇದನ್ನೆಲ್ಲ ನೋಡಿ ಅನುಭವಿಸಬೇಕು ಅದು ನಮ್ಮ ಕರ್ಮ ಅಲ್ವಾ ಮತ್ತೆ". "ನನಗೊಂದು ಐಡಿಯ ಬಂದಿದೇರಿ, ಮತಚಲಾವಣೆ ಸಂಧರ್ಬದಲ್ಲಿ ಒಬ್ಬರು ಮಿಲ್ಟ್ರಿ ಕ್ಯಾಂಡಿಡೇಟ್ ಗೆ ಮತ ಹಾಕೊದಿಕ್ಕೆ ಒಂದು ಅವಕಾಶ ಕೊಡಬೇಕು, ನಮಗೆ ಈ ರಾಜಕೀಯದವರು ಬೇಡ ಮಿಲ್ಟ್ರಿ ಯವರು ಬೇಕು ಅಂತ ಯಾರು ಬಯಸುತ್ತಾರೊ ಅವರು ಅದನ್ನು ಆಯ್ಕೆ ಮಾಡಬಹುದು, ಏನಂತೀರಾ"
"ಸಾರ್ ಒಳ್ಳೆ ಐಡಿಯ. ನನಗೊಂದು ಇನ್ನು ಒಂದು ಒಳ್ಳೆ ಐಡಿಯ ಬರ್ತಾ ಯಿದೆ"
"ಏನಪ್ಪಾ ಅದು"
"ಇನ್ಫೊಸಿಸ್, ವಿಪ್ರೊ, ಆಮೇಲೆ ಬೇರೆ ಬಹುರಾಷ್ಟ್ರಿಯ ಕಂಪನಿಯವರು ನಮ್ಮ ಸರ್ಕಾರಿ ಕಂಪನಿ ಗಳಿಗಿಂತ ಅವರ ಚೆನ್ನಾಗಿ ಕಂಪನಿಗಳನ್ನು ನಡೆಸಿ ಒಳ್ಳೆ ಹೆಸರು ಮತ್ತು ಲಾಭ ಮಾಡ್ತಾ ಯಿದ್ದಾರೆ, ಇಂತಹ ಕಂಪನಿಗಳನ್ನು ಅದರಲ್ಲಿ ಯಾಕೆ ಸೇರಿಸಬಾರದು, ಒಳ್ಳೇ ಆಡಳಿತ ಕೊಡಬಹುದಲ್ವ"
"ನಿಮ್ಮ ಐಡಿಯ ಆಗಲೆ ಅನ್ ಅಫಿಸಿಯಲ್ ಆಗಿ ವರ್ಕ್ ಔಟ್ ಆಗ್ತಾಯಿದೆ.
"ನಿಜವಾಗ್ಲುನ? ಎಲ್ಲಿ ಸಾರ್"
"ಅದೇ ಸೆಂಟ್ರಲ್ ಗೌರ್ನ್ಮೆಂಟ್ ನಲ್ಲಿ, ಆಗಲೆ ಸೆಂಟ್ರಲ್ ನಲ್ಲಿ ಕಳೆದ ೬ ವರ್ಷಗಳಿಂದ ನಡಿತಾ ಯಿದೆ"
"ಅದು ಹೆಂಗೆ, ಅಲ್ಲಿರೋದು ಕಾಂಗ್ರೆಸ್ ಗೌರ್ನ್ಮೆಂಟ್, ಮನಮೋಹನಸಿಂಗ್ ಪಿಎಮ್ "
"ಅದೊಂದು ದೊಡ್ಡ ಕಥೆ ಯಿದೆ, ಅಲ್ಲಲ್ಲಿ ಗುಸು ಗುಸ್ ಕೇಳಿದ್ದು. ನಾನು ಹೇಳಲ್ಲರಿ ಅದರ ಒಳ ಅರ್ಥ ನೀವೆ ಅರ್ಥ ಮಾಡ್ಕೋಬೇಕು"
"ಸಾರ್ ಹುಳ ಬಿಟ್ರಲ್ಲ ನೀವು, ಸ್ವಲ್ಪ ಬಿಡಿಸಿ ಹೇಳಿ"
" ಜನತಾ ಪಕ್ಷದ ಸುಬ್ರಮಣ್ಯ ಸ್ವಾಮಿ ಯವರನ್ನು ಕೇಳಿ, ಮತ್ತೆ ಅರ್ ಎಸ್ ಎಸ್ ನ ಸುದರ್ಶನ್ ಅವರನ್ನು ಕೇಳಿದರೆ ಎಲ್ಲ ಹೇಳ್ತಾರೆ"
"ಬಿಡಿ ಸಾ ಅದೆಲ್ಲ ದೊಡ್ಡವರ ವಿಚಾರ, ನಮಗ್ಯಾಕೆ. ಇವತ್ತು ಯಾವ ಹಗರಣ ಬಯಲಿಗೆ ಬರುತ್ತೊ ಆ ದೇವರಿಗೆ ಗೊತ್ತು, ನಮ್ಮ ಕುಮಾರಸ್ವಾಮಿ ಇನ್ನು ಏನು ಹುಡುಕ್ತಾ ಯಿದ್ದಾರೊ, ಏನು ಕಥೆಯೊ"
"ಒಂದು ವಿಷಯ ಗೊತ್ತ ನಿಮಗೆ, ಇಷ್ಟು ದಿನ ಇಲ್ಲದೆ ಇದ್ದ ಹಗರಣ ಗಳ ಕ್ಯಾತೆ, ಈಗ ಒಮ್ಮಿಂದೊಮ್ಮಲೆ ಹ್ಯಾಗೆ ಹೊರಗೆ ಬರ್ತಾಯಿದೆ ಗೊತ್ತಾ"
"ಗೊತ್ತು ಸಾರ್, ಶಾಸಕರ ಬಂಡಾಯ ಆಯ್ತು ಸರಕಾರ ಬೀಳಿಸಲಿಕ್ಕೆ ಅದು ವರ್ಕ್ ಔಟ್ ಆಗಲಿಲ್ಲ. ಅದಕ್ಕೆ ಈ ಹೊಸ ಬಾಂಬು ಗಳು, ಇನ್ನೊಂದು ವಿಶಯ ಗೊತ್ತಾ. ನಿಮಗೆ ಶಮಿಕಾ. ಕೆ. ಸ್ವಾಮಿ ಗೊತ್ತಾ.
"ಇಲ್ವಲ್ಲ"
"ನಟಿ ರಾಧಿಕಾ ಅವರ ಮಗಳು, ಹೆಸರಲ್ಲಿ ಕೆ, ಸ್ವಾಮಿ ಅಂದರೆ ಏನು ಗೊತ್ತಾ? ಅದು ಬಿಡಿ. ಇವತ್ತು ಮಂಗಳೂರಿನ ಬಿ.ಜೇ.ಪಿ ಜಿಲ್ಲಾಧ್ಯಕ್ಷರು ಹೊಸ ಬಾಂಬ್ ಹಾಕಿದ್ದಾರೆ, ರಾಧಿಕಾ ಕುಮಾರಸ್ವಾಮಿ ಹೆಸರಲ್ಲಿ ಬೇನಾಮಿ ಯಾಗಿ ೩೦ ಕೋಟಿ ಆಸ್ತಿ ಇದೆ ಅಂತ. ಇನ್ನು ಎಲ್ಲೆಲ್ಲಿ ಬೇನಾಮಿ ಯಾಗಿ ಏನು ಇಟ್ಟಿದ್ದಾರೊ ದೇವರಿಗೆ ಗೊತ್ತು. ನೀವು ಹೇಳಿದಂಗೆ ರಾಜಕೀಯ ಹೊಲಸು ಸಾರ್, ಕೊನೆಗೆ ಒಂದು ಮಾತು, ನಮ್ಮ ಮಾಧ್ಯಮ ಗಳಿಗೆ ಕಳೆದ ಹದಿನೈದು ದಿನ ಗಳಿಂದ ಬೇರೆ ಸುದ್ದಿನೆ ಇರಲಿಲ್ಲ ಸಾರ್, ಬರೀ ಹಗರಣದ ಸುದ್ದೀನೆ ಜತೆಗೆ ಯಡ್ಡಿ ಉಳಿತಾರ ಹೊಗ್ತಾರಾ? ರಾಜಕೀಯ ದವರೆಗೆ ಇಲ್ಲದ ಟೆನ್ಶನ್ ನಮ್ಮ ಮಾದ್ಯಮದವರಿಗೆ ಇತ್ತು, ಅವರು ಬದಲಾಗಲ್ಲ ಇವರು ಬದಲಾಗಲ್ಲ. ಎಲ್ಲ ನಮ್ಮ ಕರ್ಮ. ಇದು ಯಾರು ಬರೆದ ಕಥೆಯೊ ನಮಗಾಗಿ ಬಂದ ವ್ಯಥೆಯೊ!.

ಭಾನುವಾರ, ಸೆಪ್ಟೆಂಬರ್ 5, 2010

ರಾಜ್ಯ "ಅಪಾಲರು"

ಮಾನ್ಯರೆ,
ಕೆಳಗಡೆ ಇರುವ ಸುದ್ದಿಗಳು ನಮ್ಮ ಸನ್ಮಾನ್ಯ ರಾಜ್ಯಪಾಲರಾದ ಹೆಚ್.ಆರ್.ಭಾರದ್ವಾಜ್ ಕುರಿತಾದದ್ದು. ಸರಕಾರಕ್ಕೆ ಮಾರ್ಗದರ್ಶನ ನೀಡುವ ಬದಲು ಸಂಘರ್ಷಕ್ಕೆ ಈಡು ಮಾಡಿರುವ ಪ್ರಸಂಗಗಳೆ ಜಾಸ್ತಿ. ಇವರ ಧೀರ್ಘಾಡಳಿತದ ಅನುಭವ ರಾಜ್ಯದ ಜನ ಸಾಮನ್ಯರಿಗೆ ಅನುಕೂಲವಾಗುವಂತಿದ್ದರೆ ಹೇಗಿರುತಿತ್ತು? ರಾಜ್ಯದಲ್ಲಿ ಕಣ್ಣಾಮುಚ್ಚಾಲೆ ಆಡುತ್ತಿರುವ ವಿದ್ಯುತ್ ಸಮಸ್ಯೆಗೆ ಪರಿಹಾರ ಕೊಡಿಸುವುದಾಗಿರಲಿ, ನೆರೆ ಸಂತ್ರಸ್ತರಿಗೆ ಕೇಂದ್ರದಿಂದ ಸಹಾಯ ತರುವುದಾಗಲಿ, ರಾಜ್ಯಕ್ಕೆ ಅನುಕೂಲವಾದ ರೈಲ್ವೆ ಯೋಜನೆ ಗಳನ್ನು ತರುವುದಾಗ್ಲಿ, ಸದ್ಯಕ್ಕೆ ಕಾವೇರಿ ಜಲಾನಯನದಲ್ಲಿ ಅತಿ ಕಡಿಮೆ ಮಳೆಯಾಗಿರುವುದರಿಂದ ತಮಿಳು ನಾಡಿಗೆ ನೀರು ಬಿಡುವುದಕ್ಕೆ ಆಗದೆ ಇರುವ ಪರಿಸ್ಥಿತಿ ಇದೆ, ಅದನ್ನು ತಮಿಳು ನಾಡಿಗೆ ಮನವರಿಕೆ ಮಾಡಿಕೊಡಬಹುದಲ್ವ. ಮಹಾದಾಯಿ ಯೋಜನೆಯಿಂದ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಿಗೆ ಕುಡಿಯುವ ನೀರಿನ ಅನುಕೂಲ ವಾಗುತ್ತದೆ, ಅದನ್ನು ಗೋವಾ ಸರ್ಕಾರಕ್ಕೆ ತಿಳಿ ಹೇಳಿ ಯೋಜನೆಗೆ ಅಸ್ತು ಮಾಡಿಸಬಹುದಾಗಿತ್ತು. ಹೇಳುತ್ತಾ ಹೋದರೆ ನೂರೆಂಟು ಸಮಸ್ಯೆಗಳಿವೆ, ಅದು ಬಿಟ್ಟು, ಈ ತರಹ ಉಪಯೊಗ ವಿಲ್ಲದ ವಿಷಯಗಳಿಗೆ ನಿಮ್ಮ ಸಮಯವನ್ನು ವ್ಯಯಿಸಿದರೆ ಆಗುವ ನಷ್ಟ ಯಾರಿಗೆ? ನಮಗೆ ಸ್ವಾಮಿ, ರಾಜ್ಯದ ಜನಕ್ಕೆ.
ನೀವೇನಂತೀರಾ?

ರಂಗನಾಥ.

23 ಆಗಸ್ಟ್ 2010: ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಜಾರಿಗೆ ಮುಂದಾಗಿರುವ ಆಡಳಿತಾರೂಢ ಭಾರತೀಯ ಜನತಾ ಪಕ್ಷದ ಒಡೆದು ಆಳುವ ನೀತಿಯಾಗಿದೆ ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಮತ್ತೊಮ್ಮೆ ಆಕ್ರೋಶ ವ್ಯಕ್ತಪಡಿಸಿದ್ದು, ಗೋ ಹತ್ಯೆ ನಿಷೇಧ ವಿಧೇಯಕಕ್ಕೆ ಅಂಕಿತ ಹಾಕುವುದು, ಬಿಡುವುದು ರಾಷ್ಟ್ರಪತಿಗೆ ಬಿಟ್ಟ ವಿಚಾರ ಎಂದು ಸ್ಪಷ್ಟಪಡಿಸಿದ್ದಾರೆ.
ಮೈಸೂರು, ಆ. 22: ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ವಿ.ಜಿ.ತಳವಾರ್‌ರನ್ನು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಬಹಿರಂಗವಾಗಿ ತರಾಟೆಗೆ ತೆಗೆದುಕೊಂಡ ಘಟನೆ ಇಂದಿಲ್ಲಿ ನಡೆಯಿತು. ತಮ್ಮ ಅಧಿಕಾರವಧಿಯಲ್ಲಿ ಅಕ್ರಮ ನೇಮಕಾತಿ ನಡೆಸಿರುವರೆನ್ನಲಾದ ವಿಶ್ರಾಂತ ಕುಲಪತಿ ಡಾ.ವಿ.ಜೆ.ಶಶಿಧರ ಪ್ರಸಾದ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಕುರಿತು ರಾಜ್ಯಪಾಲರ ಆದೇಶಕ್ಕೆ ವಿರುದ್ಧವಾಗಿ ಕುಲಪತಿ ಮಾತನಾಡಿದ್ದಾರೆ ಎಂಬುದೇ ಘಟನೆಗೆ ಕಾರಣ.
ಗುರುವಾರ, 29 ಜುಲೈ 2010 : ರಾಜ್ಯ ಸರಕಾರ ತರಲು ಉದ್ದೇಶಿಸಿರುವ ಗೋ ಹತ್ಯೆ ನಿಷೇಧ ಮಸೂದೆಗೆ ಅಂಕಿತ ಹಾಕಲು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ನಿರಾಕರಿಸಿದ್ದಾರೆ. 
ಬುಧವಾರ, 21 ಜುಲೈ 2010:ಗೋಹತ್ಯೆ ನಿಷೇಧ ಕಾಯ್ದೆ ಸೇರಿದಂತೆ ಒಟ್ಟು 12 ಮಸೂದೆಗಳು ನನಗೆ ಇನ್ನೂ ತಲುಪಿಲ್ಲ, ನನ್ನ ಬಳಿ ಬಂದ ನಂತರ ಅಧ್ಯಯನ ನಡೆಸಿ ಅವುಗಳನ್ನು ಅಂಗೀಕರಿಸುವ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ರಾಜ್ಯಪಾಲರು ಸ್ಪಷ್ಟಪಡಿಸಿದ್ದಾರೆ.
ಶನಿವಾರ, 17 ಜುಲೈ 2010: ರಾಜ್ಯ ಸರಕಾರ ಹಾಗೂ ನಾಡಿನ ಹಿತದೃಷ್ಟಿಯಿಂದ ಭ್ರಷ್ಟ ಸಚಿವರನ್ನು ಸಂಪುಟದಿಂದ ಕೈ ಬಿಡಬೇಕು ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಮತ್ತೊಮ್ಮೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ನೇರವಾಗಿ ತಾಕೀತು ಮಾಡಿದ್ದಾರೆ.
ಗುರುವಾರ,15 ಜುಲೈ 2010: ರಾಜ್ಯಪಾಲರು ಕಾಂಗ್ರೆಸ್ ಏಜೆಂಟ್‌ರಂತೆ ವರ್ತಿಸುತ್ತಿದ್ದಾರೆ ಎಂಬ ಬಿಜೆಪಿ ನಾಯಕರ ಟೀಕೆಗಳಿಗೆ ಅಚ್ಚರಿಯ ಪ್ರತಿಕ್ರಿಯೆ ನೀಡಿರುವ ಎಚ್.ಆರ್. ಭಾರದ್ವಾಜ್, ಈ ಕುರಿತು ನನಗೆ ಹೆಮ್ಮೆಯಿದೆ ಎಂದು ಹೇಳಿಕೊಂಡಿದ್ದಾರೆ. ಎಚ್.ಆರ್. ಭಾರದ್ವಾಜ್ ಸಂವಿಧಾನದ ಕಾವಲುಗಾರನಂತೆ ವರ್ತಿಸುವ ಬದಲು ಕಾಂಗ್ರೆಸ್ ಏಜೆಂಟರಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಆಡಳಿತ ಪಕ್ಷ ಬಿಜೆಪಿ ಆರೋಪಿಸಿತ್ತು. ಇದಕ್ಕೆ ದೆಹಲಿಯಲ್ಲಿ ಪ್ರತಿಕ್ರಿಯಿಸಿದ ಅವರು, 'ಹೌದು, ನಾನು ಕಾಂಗ್ರೆಸ್ಸಿಗ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತಿದೆ' ಎಂದಿದ್ದಾರೆ.
ಗುರುವಾರ, 15 ಜುಲೈ 2010: ದೇಶದ ಆರ್ಥಿಕ ಭದ್ರತೆ ಗಮನದಲ್ಲಿಟ್ಟುಕೊಂಡು ಪೆಟ್ರೋಲಿಯಂ ಉತ್ಪನ್ನ ಬೆಲೆ ಏರಿಕೆ ಮಾಡಿರುವುದರಲ್ಲಿ ತಪ್ಪಿಲ್ಲ ಎಂದು ಕೇಂದ್ರ ಸರಕಾರದ ನಿಲುವನ್ನು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಸಮರ್ಥಿಸಿಕೊಂಡಿದ್ದಾರೆ.
ಗುರುವಾರ, 9 ಜುಲೈ 2009: ರಾಜ್ಯಪಾಲನಾಗಿ ಸಂವಿಧಾನ ರಕ್ಷಿಸುವುದು ತಮ್ಮ ಮುಖ್ಯವಾದ ಹೊಣೆಗಾರಿಕೆಯಾಗಿದೆ ಎಂದು ರಾಜ್ಯದ ನೂತನ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಹೇಳಿದ್ದಾರೆ.
ಮಂಗಳವಾರ, 6 ಜುಲೈ 2010: ತಮ್ಮ ಬಗ್ಗೆ ಅನೇಕ ಟೀಕೆಗಳು ಬರುತ್ತಿವೆ. ಕೆಲವರು ತಮ್ಮನ್ನು ಕಾಂಗ್ರೆಸ್ ಏಜೆಂಟ್, ಪ್ರತಿಪಕ್ಷದ ವಕ್ತಾರನಂತೆ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸುತ್ತಿದ್ದು, ಇದಕ್ಕೆಲ್ಲ ತಾನು ಸೊಪ್ಪು ಹಾಕುವುದಿಲ್ಲ ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ತಿರುಗೇಟು ನೀಡಿದ್ದಾರೆ.
ಶುಕ್ರವಾರ, 2 ಜುಲೈ 2010: ರಾಜಕಾರಣಿಗಳು ಜನಸೇವೆ ಮಾಡಬೇಕೆ ವಿನಃ, ವ್ಯವಹಾರವನ್ನಲ್ಲ. ವ್ಯವಹಾರ ಮಾಡಲು ಬೇರೆ ಜನರಿದ್ದಾರೆ ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಮತ್ತೊಮ್ಮೆ ಕೆಲವು ಸಚಿವರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ಶನಿವಾರ, 19 ಜೂನ್ 2010: ಗೋ ಹತ್ಯೆ ನಿಷೇಧ ಮಸೂದೆ ಅಂಗೀಕಾರವಾಗಿಲ್ಲ: ಭಾರದ್ವಾಜ್
 1 ಜೂನ್ 2010: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಮತ್ತು ಜನರ ಮೂಲಭೂತ ಹಕ್ಕುಗಳನ್ನು ರಕ್ಷಿಸುವುದು ನಮ್ಮ ಕರ್ತವ್ಯ ಎಂದಿರುವ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರು ಸರ್ಕಾರ ತನ್ನ ಜವಾಬ್ದಾರಿ ಮರೆತು ನಡೆದರೆ ಸಂವಿಧಾನದಲ್ಲಿನ ರಾಜ್ಯಪಾಲರ ತಾಖತ್ತು ಏನೆಂಬುದನ್ನು ತೋರಿಸಬೇಕಾದೀತು ಎಂದು ಪರೋಕ್ಷವಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆಬುಧವಾರ,
19 ಮೇ 2010: ರಾಜ್ಯದ ವಿಶ್ವವಿದ್ಯಾನಿಲಯಗಳ ಕ್ಯಾಂಪಸ್‌ಗಳಲ್ಲಿ ರಾಜಕೀಯದ ರೋಗ ಬಡಿದಿದ್ದು, ಅದನ್ನು ತಾವು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಗುಡುಗಿದ್ದಾರೆ.
ಸೋಮವಾರ, 17 ಮೇ 2010: ಸಚಿವ ಸಂಪುಟದ ಸಹೋದ್ಯೋಗಿಗಳನ್ನು ಹದ್ದು ಬಸ್ತಿನಲ್ಲಿಟ್ಟುಕೊಂಡು ಅವರ ನಡತೆ ಸರಿಯಾಗಿರುವಂತೆ ನೋಡಿಕೊಳ್ಳಬೇಕೆಂದು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ನೀತಿಪಾಠ ಹೇಳಿದ್ದಾರೆ.
ಶನಿವಾರ, 8 ಮೇ 2010: ರಾಜ್ಯದಲ್ಲಿ ಹಲವಾರು ಸಮಸ್ಯೆಗಳಿದ್ದು ಅದರಿಂದಾಗಿ ಜನ ಸಂಕಷ್ಟದಲ್ಲಿದ್ದಾರೆ. ಆದರೆ ಜನಪ್ರತಿನಿಧಿಗಳು ಹಗರಣಗಳಲ್ಲಿ ತೊಡಗಿ ಜನರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಶನಿವಾರ ಆರೋಪಿಸಿದ್ದಾರೆ.
ಮಂಗಳವಾರ, 9 ಫೆಬ್ರವರಿ 2010: ಸೋಮಣ್ಣ ಅವರು ಬೇರೆ ಪಕ್ಷದಿಂದ ವಲಸೆ ಬಂದವರು ಮತ್ತು ಸಕ್ರಿಯ ರಾಜಕಾರಣದಲ್ಲಿದ್ದಾರೆ. ಹಾಗಾಗಿ ಅವರನ್ನು ವಿಧಾನಪರಿಷತ್ತಿಗೆ ಅವರನ್ನು ನಾಮಕರಣಗೊಳಿಸಲು ನನ್ನ ಮನಸ್ಸು ಒಪ್ಪುತ್ತಿಲ್ಲ ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಸರಕಾರದ ಶಿಫಾರಸನ್ನು ತಿರಸ್ಕರಿಸಿದ್ದರು
ಸೋಮವಾರ, 1 ಫೆಬ್ರವರಿ 2010: ಬಾಬರಿ ಮಸೀದಿ ಧ್ವಂಸ ಪ್ರಕರಣದಿಂದಾಗಿ ಇಡೀ ವಿಶ್ವದಲ್ಲಿಯೇ ಭಾರತೀಯರು ತಲೆ ತಗ್ಗಿಸುವಂತಾಗಿದೆ ಎಂದಿರುವ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಇತ್ತೀಚೆಗೆ ರಾಜ್ಯದಲ್ಲಿ ಮರುಕಳಿಸುತ್ತಿರುವ ಚರ್ಚ್ ದಾಳಿ ಪ್ರಕರಣಗಳ ಬಗ್ಗೆ ಕಿಡಿಕಾರಿದರು.
ಬೆಂಗಳೂರು, ಸೆ. 6 : ರಾಜ್ಯದ ಕೆಲ ಜಿಲ್ಲೆಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ರಾಜ್ಯಪಾಲ ಎಚ್ ಆರ್ ಭಾರದ್ವಾಜ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಗತ್ಯ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಹಿತರಕ್ಷಣೆಗಾಗಿ ದಿಟ್ಟ ನಿಲುವು ತಾಳುವುದಾಗಿ ಹೇಳಿದ್ದಾರೆ.

Click below headings