History ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
History ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಗುರುವಾರ, ಮಾರ್ಚ್ 19, 2026

ಕಾಣೆಯಾದ ಕೋಳಿ ಮತ್ತು ಪತ್ತೆಯಾದ ಭೂಗರ್ಭ ನಗರ ಡೆರಿಂಕ್ಯುನ ವಿಸ್ಮಯಕಾರಿ ಕಥೆ!

ನಮ್ಮ ದೇಶದ ಒಂದಲ್ಲ ಒಂದು ಕಡೆ ಪುರಾತನ ಕಾಲದ ವಸ್ತುಗಳು, ಆಭರಣಗಳು, ವಿಗ್ರಹಗಳು ಇತ್ಯಾದಿಗಳು ದೊರೆಯುತ್ತಿರುತ್ತವೆ, ಕಳೆದ ಮೂರು ದಶಕಗಳ ಹಿಂದೆ ತಲಕಾಡಿನಲ್ಲಿ ಮರಳಿನಲ್ಲಿ ಹೂತು ಹೋಗಿದ್ದ ದೇವಾಲಯವೂ ಪತ್ತೆಯಾಗಿತ್ತು. ವಿಜಯನಗರದ ಹಂಪೆಯಲ್ಲೂ ಇಂದಿಗೂ ಸಹ ಒಂದಲ್ಲ ಒಂದು ಅಚ್ಚರಿಯ ಅಂಶಗಳು ದೊರಕುತ್ತಿವೆ. ಹಂಪೆ, ಮಸ್ಕಿ, ಬ್ರಹ್ಮಗಿರಿ, ಹೀಗೆ ಹಲವಾರು ಕಡೆ ಉತ್ಖನನ ನಡೆಸಿದಾಗ ಇನ್ನೂ ಅಚ್ಚರಿಯ ಅಂಶಗಳು ದೊರಕಿವೆ. ೧೦೦೦೦ ವರ್ಷಗಳ ಹಿಂದಿನ ಜನ ವಸತಿ ಪ್ರದೇಶ, ೪೦೦೦ ವರ್ಷಗಳ ಹಿಂದಿನ ಮನುಷ್ಯನ ಅಸ್ಥಿಪಂಜರ, ಹೀಗೆ ಕೆಲವೊಮ್ಮೆ ಅಚ್ಚರಿಯ ಅಂಶಗಳು ಪತ್ತೆಯಾಗುತ್ತಿರುತ್ತವೆ. 

    ಇತ್ತೀಚೆಗೆ ಗದಗ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಮನೆಯೊಂದನ್ನು ಕಟ್ಟಲು ಅಡಿಪಾಯ ತೆಗೆಯುವಾಗ ಬಂಗಾರದ ಒಡವೆಗಳು ದೊರೆತಿದ್ದವು,  ಹಿಂದೆಯೂ ಕೆಲ ರೈತರಿಗೆ ಹೊಲ ಊಳೂವಾಗ ನಿಧಿ ಸಿಕ್ಕಿರುವ ಘಟನೆಗಳು ನಡೆದಿವೆ.  ಚರಿತ್ರೆಯ ಹಲವಾರು ಸಂಗತಿಗಳು ಭೂಗರ್ಭದಲ್ಲಿ ಹೂತು ಹೊಗಿರುವುದು ನಮಗೆಲ್ಲ ಗೊತ್ತಿರುವ ಸಂಗತಿ.

    1963ರಲ್ಲಿ ಟರ್ಕಿಯಲ್ಲಿ ನಡೆದ ಒಂದು ಸಣ್ಣ ದುರಸ್ತಿ ಕಾರ್ಯವು ಇಡೀ ಮಾನವ ಇತಿಹಾಸದ ಒಂದು ಮರೆಯಾದ ಪುಟವನ್ನೇ ತೆರೆಯುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಒಂದು ಅಚ್ಚರಿಯ ಘಟನೆಯಿಂದ  ಭೂಗರ್ಭದಲ್ಲಿ ಹೂತು ಹೋಗಿದ್ದ ಡೆರಿಂಕ್ಯೂ ನಗರದ ಕುರಿತಾಗಿ ಮಾಹಿತಿ ದೊರಕಿತು. ಈ ಕುರಿತಾದ ಆಸಕ್ತಿದಾಯಕ ಲೇಖನ ಇಲ್ಲಿದೆ.

ಟರ್ಕಿಯ ಕಪ್ಪಡೋಕಿಯಾ ಎಂಬಲ್ಲಿ. ಒಬ್ಬ ಸಾಮಾನ್ಯ ರೈತನಿಗೆ ವಿಚಿತ್ರ ಸಮಸ್ಯೆಯೊಂದು ಎದುರಾಗಿತ್ತು. ಮನೆಯ ನೆಲಮಹಡಿಯ ಒಂದು ಭಾಗದಲ್ಲಿ ಕೋಳಿಗಳನ್ನು ಸಾಕುತಿದ್ದ. ಒಂದು ಸಾರಿ ಕೋಳಿಗೆ ಕಾಳುಗಳನ್ನು ಹಾಕುವಾಗ, ಕೋಳಿಗಳ ಸಂಖ್ಯೆಯಲ್ಲಿ ವ್ಯತ್ಯಾಸ ಕಂಡು ಬಂತು, ಇದೇನು ಒಂದು ಕೋಳಿ ಕಡಿಮೆಯಾಗಿದೆಯಲ್ಲ ಎಂದು ಯೋಚಿಸಿದ. ಹೀಗೆ ಹಲವಾರು ಬಾರಿ ಕೋಳಿಗಳು ಇದ್ದಕಿದ್ದಂತೆ ಮಾಯವಾಗುತಿದ್ದವು.  ವಿಚಿತ್ರವೇನೆಂದರೆ ಅವು ಮನೆಯಿಂದ ಹೊರಗೆ ಹೋಗುತ್ತಿರಲಿಲ್ಲ, ಆದರೂ ಒಳಗೆಲ್ಲೂ ಕಾಣಿಸುತ್ತಿರಲಿಲ್ಲ. ಇದೆಂತ ಮಾಯಾಜಾಲ ಎಂದು ಆಲೋಚಿಸಿ ಸುಮ್ಮನಾಗಿಬಿಟ್ಟಿದ್ದ.

    ಮನೆ ತುಂಬಾ ಹಳೆಯದಾಗಿತ್ತು, ಅಲ್ಲಲ್ಲಿ ಗೋಡೆಯ ಮಣ್ಣು ಕೆಳಗೆ ಬೀಳುತಿತ್ತು, ಹಾಗೂ ಗೋಡೆಯಲ್ಲಿ ಕೆಲಕಡೆ ಸಂದುಗಳಿದ್ದವು. ಅವೆಲ್ಲವನ್ನು ಸರಿಪಡಿಸೋಣ ಎಂದು ಕೆಲಕಾಲದ ನಂತರ ದುರಸ್ತಿ ಕಾರ್ಯವನ್ನು ಕೈಗೆತ್ತಿಕೊಳ್ಳುತ್ತಾನೆ. ಒಂದೊಂದು ಭಾಗವನ್ನು ಸರಿಪಡಿಸುತ್ತ ಬರುವಾಗ, ಒಂದು ರಂಧ್ರ ಸ್ವಲ್ಪ ದೊಡ್ಡದಾಗಿತ್ತು. ಅದಕ್ಕೆ ಕೆಸರಿನ ಬುರುದೆಯನ್ನು ಮೆತ್ತಲು ಹೋದಾಗ ಅಗತ್ಯಕ್ಕಿಂತ ಹೆಚ್ಚಿನ ಮಣ್ಣು ಬೇಕಾಗುತಿತ್ತು. ಇದೇನಿಂದು ಎಂದು ಆಶ್ಚರ್ಯದಿಂದ, ಆ ಭಾಗವನ್ನು ಒಡೆಯಲು ಪ್ರಾರಂಭಿಸುತ್ತಾನೆ. ಆ ಕಿಂಡಿಯನ್ನು ಸ್ವಲ್ಪ ದೊಡ್ಡದಾಗಿ ಮಾಡುತ್ತಾನೆ. ಕೈ ಹಾಕಿ ನೊಡಿದರೆ ಆ ಕಡೆ ಟೊಳ್ಳು. ನಂತರ ಒಂದು ಉದ್ದನೆಯ ಕೋಲನ್ನು ಹಾಕುತ್ತಾನೆ. ಆ ಕೋಲು ಸಂಪೂರ್ಣವಾಗಿ ಒಳ ಹೋಗುತ್ತದೆ. ಆ ಕೋಲನ್ನು ತಿರುಗಿಸಿ ನೋಡಿದರೆ, ಒಳಗಡೆ ಒಂದು ಖಾಲಿ ಕೋಣೆ ಎಂಬಂತೆ ಕಾಣುತ್ತದೆ. ಆಗ ಆ ರಂಧ್ರವನ್ನು  ದೊಡ್ಡದಾಗಿ ತೆರೆದಾದ ಮೇಲೆ  ಆ ಬದಿಯಲ್ಲಿ ನೋಡಿದರೆ  ಒಂದು ಸುರಂಗ ಮಾರ್ಗ ಕಾಣಿಸುತ್ತದೆ. ಅವನಿಗೆ ಇನ್ನೂ ಆಶ್ಚರ್ಯವಾಯಿತು. ಮನೆಯ ಒಳಗಡೆ ಮತ್ತೊಂದು ಮಹಡಿ ಅಥವ ಕೋಣೆಗಳಿರುವುದು ಮನೆಯಲ್ಲಿದ್ದ ಯಾರಿಗೂ ಗೊತ್ತಿರಲಿಲ್ಲ. ಒಳ ಹೊಕ್ಕು ನೋಡಿದರೆ, ಅವನ ಕಣ್ಣನ್ನ ಅವನೇ ನಂಬಲಾಗಲಿಲ್ಲ. ಈ ಜಾಗದಲ್ಲಿ ಇಂತಹ ದೊಡ್ಡ ಪ್ರದೇಶವನ್ನು ನೋಡುತಿದ್ದಂತೆ ಅವನಿಗೆ ಮಹದಾಶ್ಚರ್ಯವಾಗಿತ್ತು, ಅದು ಒಂದು ಕೋಣೆ, ಸುರಂಗ, ಅಥವ ಒಂದು ಮಹಡಿಯಾಗಿರಲಿಲ್ಲ, ಹತ್ತಾರು ಕೋಣೆಗಳು, ಸುರಂಗ ದಾರಿಗಳು ಕಂಡು ಬಂದವು. ಆ ಮನೆ ಹಲವಾರು ಅಂತಸ್ತಿನ ಒಂದು ಅರಮನೆಯಂತೆ ಭಾಸವಾಯಿತು. 

ಸುದ್ದಿ ಜನರಿಗೆ ಒಬ್ಬರಿಂದ ಒಬ್ಬರಿಗೆ ಹರಡುತ್ತ ಹೋಯಿತು. ಆ ರೈತ ಕೊನೆಗೆ ವಿಷಯವನ್ನು ಸ್ಥಳೀಯ ಆಡಳಿತಾಧಿಕಾರಿಗಳಿಗೆ ಮುಟ್ಟಿಸುತ್ತಾನೆ. ಅವರು ಟರ್ಕಿಶ್ ಪುರಾತತ್ವ ಮತ್ತು ಪ್ರಾಚೀನ ವಸ್ತುಗಳ ಇಲಾಖೆಯ ಅಧಿಕಾರಿಗಳ ತಂಡ ಸಮೇತ ಅಲ್ಲಿಗೆ ಆಗಮಿಸಿ ಎಲ್ಲವನ್ನು ಪರಿಶೀಲಿಸುತ್ತಾರೆ. ಅವರಿಗೂ ಸಹ ಆಶ್ಚರ್ಯವಾಗುತ್ತದೆ. ಇದು ಭೂಮಿಯ ಆಳದಲ್ಲಿರುವ ಒಂದು ಪಟ್ಟಣ ಪ್ರದೇಶ ಎಂದು ಅಂದಾಜಿಸುತ್ತಾರೆ. ಸರ್ಕಾರದ ಅನುಮತಿಯನ್ನು ಪಡೆದು ಆ ಸ್ಥಳವನ್ನು ತಮ್ಮ ಸುಪರ್ದಿಗೆ ಪಡೆದು ಪ್ರತಿಯೊಂದನ್ನೂ ಪರಿಶೀಲಿಸುತ್ತಾರೆ. 


*ಭೂಗರ್ಭದ ಎಂಜಿನಿಯರಿಂಗ್ ಅದ್ಭುತ:*

ತಜ್ಞರು ಈ ಜಾಗದಲ್ಲಿ ಉತ್ಖನನ ಕಾರ್ಯ ಪ್ರಾರಂಭಿಸಿದರು. ಅಲ್ಲಿ ದೊರೆತ ವಸ್ತುಗಳನ್ನು ಪರಿಶೀಲಿಸಿದಾಗ ಬೆಚ್ಚಿಬೀಳಿಸುವ ಸತ್ಯಗಳು ಹೊರಬಂದವು. ಅಲ್ಲಿ ಸಾವಿರಾರು ಜನ ವಾಸ ಮಾಡಿರುವ ಕುರುಹುಗಳು ಪತ್ತೆಯಾದವು. ಒಳಗಡೆ ಹೋದಂತೆಲ್ಲ, ಭೂಗರ್ಭದಲ್ಲಿ ಅಡಗಿ ಹೋದ ನಗರವೇ ಅವರ ಮುಂದೆ ನಿಂತಿತ್ತು. ಇತಿಹಾಸದ ಗರ್ಭದಲ್ಲಿ ಅಡಗಿದ ಮಹಾನಗರ. ಡೆರಿಂಕುಯು ಕೇವಲ ಒಂದು ಗುಹೆಯಲ್ಲ; ಇದು ಎಂಜಿನಿಯರಿಂಗ್ ಲೋಕಕ್ಕೆ ಇಂದಿಗೂ ಸವಾಲಾಗಿರುವ ಒಂದು ವ್ಯವಸ್ಥಿತ ನಗರ ಅದಾಗಿತ್ತು.

ಭೂಮಿಯ ಮೇಲ್ಮೈಯಿಂದ ಸುಮಾರು 280 ಅಡಿ ಆಳದವರೆಗೆ ಇದ್ದ ಈ ಪ್ರದೇಶದಲ್ಲಿ ಒಟ್ಟು 18 ಮಹಡಿಗಳ ಬೃಹದಾಕಾರ ನಿರ್ಮಾಣ ಆ ಪ್ರದೇಶದಲ್ಲಿತ್ತು, ವಾಯು ಸಂಚಾರಕ್ಕಾಗಿ, ಸಾವಿರಾರು ಕಡೆ  ಸಣ್ಣ ಗಾಳಿ ರಂಧ್ರಗಳನ್ನು ನಿರ್ಮಿಸಲಾಗಿತ್ತು. ವಾಸದ ಕೋಣೆಗಳು, ಪ್ರಾರ್ಥನಾ ಮಂದಿರಗಳು, ವೈನ್ ಸಂಗ್ರಹಣಾ ಕೊಠಡಿಗಳು, ಪ್ರಾಣಿಗಳ ಕೊಟ್ಟಿಗೆಗಳು ಮತ್ತು ಕಾರಾಗೃಹಗಳೂ ಇದ್ದವು. ಸುಮಾರು 20,000 ಜನರು ಆರಾಮವಾಗಿ ವಾಸಿಸಬಹುದಾದ ಬೃಹತ್ ನಗರವಾಗಿತ್ತು. ಇಲ್ಲಿ ಕೇವಲ ವಾಸದ ಕೋಣೆಗಳಿರಲಿಲ್ಲ; ಪ್ರಾರ್ಥನಾ ಮಂದಿರಗಳು, ವೈನ್ ಸಂಗ್ರಹಣಾ ಕೊಠಡಿಗಳು, ಪ್ರಾಣಿಗಳ ಕೊಟ್ಟಿಗೆಗಳು ಮತ್ತು ಕಾರಾಗೃಹಗಳೂ ಇದ್ದವು!


*18 ಹಂತಗಳ ರಚನೆ*: ಭೂಮಿಯ ಮೇಲ್ಮೈಯಿಂದ ಸುಮಾರು **280 ಅಡಿ** ಆಳದವರೆಗೆ ಹರಡಿರುವ ಈ ನಗರವು ಸುಮಾರು 18 ಅಂತಸ್ತುಗಳನ್ನು ಹೊಂದಿದ್ದು, ಪ್ರತಿಯೊಂದು ಅಂತಸ್ತೂ ನಿರ್ದಿಷ್ಟ ಉದ್ದೇಶಕ್ಕಾಗಿ ಬಳಕೆಯಾಗುತ್ತಿತ್ತು:

* ಮೇಲಿನ ಅಂತಸ್ತುಗಳು: ಇಲ್ಲಿ ಮುಖ್ಯವಾಗಿ ವಾಸದ ಮನೆಗಳು ಮತ್ತು ಪಶುಗಳ ಕೊಟ್ಟಿಗೆಗಳಿದ್ದವು. ಇದರಿಂದ ಪ್ರಾಣಿಗಳ ವಾಸನೆ ಸುಲಭವಾಗಿ ಹೊರಹೋಗುತ್ತಿತ್ತು.

* ಮಧ್ಯದ ಅಂತಸ್ತುಗಳು: ಇಲ್ಲಿ ಅಡುಗೆಮನೆಗಳು, ಧಾನ್ಯದ ಉಗ್ರಾಣಗಳು, ಮತ್ತು ದ್ರಾಕ್ಷಾರಸ (Wine) ತಯಾರಿಸುವ ಘಟಕಗಳಿದ್ದವು.

* ಕೆಳಗಿನ ಅಂತಸ್ತುಗಳು: ಇಲ್ಲಿ ಚರ್ಚ್‌ಗಳು, ಧಾರ್ಮಿಕ ಶಾಲೆಗಳು ಮತ್ತು ಸಭೆ ನಡೆಸುವ ಸ್ಥಳಗಳಿದ್ದವು. ಇವು ಅತ್ಯಂತ ಸುರಕ್ಷಿತ ಪ್ರದೇಶಗಳಾಗಿದ್ದವು.

* ವಾಯು ಸಂಚಾರ:  ಭೂಮಿಯ ಆಳಕ್ಕಿಳಿದಂತೆ, ಗಾಳಿಯ ಸಂಚಾರ ಕಡಿಮೆ ಯಿರುತ್ತದೆ, ಆಮ್ಲಜನಕ ಸಮಸ್ಯೆ ಕಾಡುವುದು ಸಹಜ. ಇಂತಹ ಸಮಸ್ಯೆಗೆ ಪರಿಹಾರವನ್ನು ಕಂಡುಕೊಂಡಿದ್ದರು, ಭೂಮಿಯ 280 ಅಡಿ ಆಳದಲ್ಲಿ ಸಾವಿರಾರು ಜನರಿಗೆ ಉಸಿರಾಡಲು ಗಾಳಿ ಮತ್ತು ಕುಡಿಯಲು ನೀರು ಒದಗಿಸುವುದು ಸುಲಭದ ಮಾತಲ್ಲ. ಎಂಟನೇ ಹಂತದವರೆಗೆ ತಾಜಾ ಗಾಳಿ ಒಳಗೆ ಬರಲು ಸುಮಾರು 15,000 ಕ್ಕೂ ಹೆಚ್ಚು ಸಣ್ಣ ಕಿಂಡಿಗಳು (ಸುಮಾರು 10 ಸೆಂ.ಮೀ ಅಗಲ) ಕೊರೆದಿದ್ದರು. 

* ನೀರಿನ ವ್ಯವಸ್ಥೆ:  ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ, ನಗರದ ಒಳಗೇ ಗುಪ್ತ ಬಾವಿಗಳಿನ್ನೂ ಸಹ ಅಗೆದಿದ್ದರು. ಹೊರಗಿನಿಂದ ಒಳಗೆ ನೀರು ಬರಲು ವ್ಯವಸ್ಥೆ ಇದ್ದರೂ ಸಹಿತ, ಮುಂಜಾಗ್ರತೆಗಾಗಿ ಈ ಗುಪ್ತ ಬಾವಿಗಳನ್ನು ಕೊರೆದಿದ್ದರು. ಒಂದುವೇಳೆ, ಶತ್ರುಗಳು ಹೊರಗಿನ ನೀರಿನ ಮೂಲಕ್ಕೆ ವಿಷ ಬೆರೆಸಿದರೂ, ನಗರದ ಒಳಗಿದ್ದವರಿಗೆ ನೀರಿನ ತೊಂದರೆಯಾಗುತ್ತಿರಲಿಲ್ಲ. 

*ಕಲ್ಲಿನಲ್ಲಿ ಅರಳಿದ ನಗರ: ಭೂವಿಜ್ಞಾನದ ಕೊಡುಗೆ:*

ಮೇಲೆ ವಿವರಿಸಿದ ಎಲ್ಲಾ ಸೌಲಭ್ಯಗಳನ್ನು ಅದೂ ಭೂಗರ್ಭದಲ್ಲಿ ಹೇಗೆ ನಿರ್ಮಿಸಲಾಯಿತು ಎಂದು ವಿಜ್ನಾನಿಗಳು ನಿರಂತರವಾಗಿ ಸಂಶೋಧನೆ ನಡೆಸುತ್ತಾರೆ. ಮೊದಲಿಗೆ ಆ ಪ್ರದೇಶದ ಪರಿಸರ, ಅಲ್ಲಿ ಹಿಂದೆ ನಡೆದಿದ್ದ ನೈಸರ್ಗಿಕ ಪ್ರಕ್ರಿಯೆಗಳು ಎಲ್ಲವನ್ನು ಸೂಕ್ಷ್ಮವಾಗಿ ಅವಲೋಕನ ನಡೆಸಿದಾಗ, ಮೊದಲ ಕಂಡುಬಂದಿದ್ದು ಅಲ್ಲಿನ ಭೂರಚನೆ. ಕಪ್ಪಡೋಕಿಯಾ ಪ್ರದೇಶದ ವಿಶೇಷತೆಯೆಂದರೆ ಅಲ್ಲಿನ  ಜ್ವಾಲಾಮುಖಿ ಭಸ್ಮ (Volcanic Tuff). ಈ ಜ್ವಾಲಾಮುಖಿಯ ಬೂದಿ ಕಾಲಕ್ರಮೇಣ ಕಲ್ಲಿನಂತಾಗಿವೆ. ಆರಂಭದಲ್ಲಿ  ಈ ಕಲ್ಲುಗಳು ಮೃದುವಾಗಿದ್ದು, ಗಾಳಿಗೆ ಒಡ್ಡಿಕೊಂಡ ನಂತರ ಇವು ಗಟ್ಟಿಯಾಗುತ್ತವೆ. ಈ ವಿಶಿಷ್ಟ ಭೂಗುಣದಿಂದಾಗಿಯೇ ಪ್ರಾಚೀನ ಜನರಿಗೆ ಇಂತಹ ಬೃಹತ್ ಭೂಗರ್ಭ ನಗರವನ್ನು ನಿರ್ಮಿಸಲು ಸಾಧ್ಯವಾಯಿತು.  ಚೂಪಾದ ಕಲ್ಲು ಅಥವ ಹುಳಿ( ಚಿಸೆಲ್) ಮತ್ತು ಸುತ್ತಿಗೆ ಇದ್ದರೆ ಸಾಕು, ಸಲೀಸಾಗಿ ಈ ಕಲ್ಲುಗಳನ್ನು ಕತ್ತರಿಸಬಹುದು.

*ರಕ್ಷಣೆ ಮತ್ತು ಯುದ್ಧತಂತ್ರ*:

ಅಂದಿನ ಕಾಲದಲ್ಲಿ ಆಕ್ರಮಣಕಾರರಿಂದ ರಕ್ಷಿಸಿಕೊಳ್ಳಲು ಕೋಟೆ ಕೊತ್ತಲುಗಳನ್ನು ನಿರ್ಮಿಸಿಕೊಳ್ಳುವುದು ಸಾಮಾನ್ಯವಾಗಿತ್ತು. ಇದೇ ತಂತ್ರವನ್ನು ಇಲ್ಲಿ ನೆಲೆಸಿದ್ದ ಅಂದಿನ ಕಾಲದ ಜನರು ತಮ್ಮ ರಕ್ಷಣೆಗಾಗಿ ಪ್ರಮುಖವಾಗಿ ಶತ್ರುಗಳ ಆಕ್ರಮಣದಿಂದ ತಪ್ಪಿಸಿಕೊಳ್ಳಲು ಭೂಮಿಯ ಅಡಿಯಲ್ಲಿ ಇಡೀ ಜಗತ್ತನ್ನೇ ಸೃಷ್ಟಿಸಿಕೊಂಡಿದ್ದರೆಂದು ಸಂಶೋಧನೆ ಮೂಲಕ ಗೊತ್ತಾಯಿತು. ಇಲ್ಲಿನ ಭೌಗೋಳಿಕ ಪರಿಸರ ಅಥವಾ ಭೂರಚನೆ ಅವರಿಗೆ ಇಂತಹ ರಕ್ಷಣಾತ್ಮಕ ನಗರವನ್ನು ಕಟ್ಟಿಕೊಳ್ಳಲು ನೆರವು ನೀಡಿದೆ ಎನ್ನಬಹುದು.  ಈ ನಗರದ ಅತ್ಯಂತ ಆಕರ್ಷಕ ಭಾಗವೆಂದರೆ ಅದರ ಭದ್ರತೆ.

ಕಲ್ಲಿನ ಬಾಗಿಲುಗಳು: 

ಇಲ್ಲಿನ ರಕ್ಷಣಾ ವ್ಯವಸ್ಥೆ ಎಷ್ಟು ಅದ್ಭುತವಾಗಿತ್ತೆಂದರೆ, ಒಳಗಿನಿಂದ ಮಾತ್ರ ತೆರೆಯಬಹುದಾದ ಬೃಹತ್ ಗುಂಡಿನಾಕಾರದ ಕಲ್ಲುಗಳನ್ನು ದಾರಿಗಳನ್ನು ಮುಚ್ಚಲು ಬಳಸಲಾಗುತ್ತಿತ್ತು. ಪ್ರತಿಯೊಂದು ಅಂತಸ್ತನ್ನು ಸುಮಾರು 500 ಕೆ.ಜಿ. ತೂಕದ ಬೃಹತ್ ಚಕ್ರಾಕಾರದ ಕಲ್ಲಿನ ಬಾಗಿಲುಗಳಿಂದ ಮುಚ್ಚಬಹುದಾಗಿತ್ತು. 

ಕಿರಿದಾದ ಸುರಂಗಗಳು: 

ಸುರಂಗಗಳು ಬಹಳ ಕಿರಿದಾಗಿದ್ದವು, ಇದರಿಂದ ಶತ್ರು ಸೈನಿಕರು ಗುಂಪಾಗಿ ಒಳಬರಲು ಸಾಧ್ಯವಿರಲಿಲ್ಲ; ಒಬ್ಬೊಬ್ಬರಾಗಿ ಬರಬೇಕಿತ್ತು, ಇದರಿಂದ ಕಾವಲು ಕಾಯುತಿದ್ದ ರಕ್ಷಕರಿಗೆ ಆಕ್ರಮಣಕಾರರನ್ನು ಎದುರಿಸುವುದು ಸುಲಭವಾಗುತ್ತಿತ್ತು. ಓಬವ್ವನ ಕಿಂಡಿಯಲ್ಲಿ ಒಬ್ಬೊಬ್ಬರೆ ಒಳ ಬರುವಂತಹ ರೀತಿಯಲ್ಲಿ ಅತಿ ಕಿರಿದಾದ ಮಾರ್ಗಗಳಿದ್ದವು, ಆದರೆ, ಬಗ್ಗಿಕೊಂಡು ನುಸುಳಿ ಬರುವಂತೆ ಅಲ್ಲ. 

ಈ ನಗರವನ್ನೆನೂ ಕೆಲವೇ ವರ್ಷಗಳಲ್ಲಿ ನಿರ್ಮಿಸಲಾಗಿರಲಿಲ್ಲ. ನೂರಾರು ವರ್ಷಗಳ ಕಾಲ ಹಂತಹಂತವಾಗಿ ಈ ನಗರವನ್ನು ನಿರ್ಮಾಣ ಮಾಡಿದ್ದರು. ಮೊದಲಿಗೆ ಕ್ರಿ.ಪೂ. 2000ರ ಕಾಲಕ್ಕೆ ಸೇರಿದ ಹಿಟ್ಟೈಟ್ ಜನಾಂಗದವರು ಈ ಕಟ್ಟಡದ ಕೆಲಸವನ್ನು ಶುರು ಮಾಡಿದ್ದರು. ತದನಂತರ ಫ್ರಿಜಿಯನ್‌ ಸಮುದಾಯದವರು (ಕ್ರಿ. ಪೂರ್ವ 1600 -1200)ಮುಂದುವರಿಸಿಕೊಂಡು ಹೋಗಿದ್ದಾರೆ. ತದನಂತರ ಹಲವಾರು ನಾಗರೀಕತೆಯ ಜನಾಂಗದವರು ಇದನ್ನು ಅಭಿವೃದ್ದಿ ಪಡಿಸಿರಬಹುದು ಎಂದು ಅಂದಾಜಿಸಲಾಗಿದೆ. ಒಟ್ಟಿನಲ್ಲಿ ಸಾವಿರಾರು ವರ್ಷಗಳ ಹಿಂದೆ ಹಿಟ್ಟೈಟ್‌ಗಳು ಮತ್ತು ಫ್ರಿಜಿಯನ್‌ ಸಮುದಾಯಗಳು (Hittites and Phrygians) ಈ ನಗರವನ್ನು ನಿರ್ಮಿಸಿರಬಹುದು ಎನ್ನಲಾಗಿದೆ. 

ರೋಮನ್ ಆಳ್ವಿಕೆಯ ಆರಂಭಿಕ ಶತಮಾನಗಳಲ್ಲಿ (2 ಮತ್ತು 3ನೇ ಶತಮಾನ), ಕ್ರಿಶ್ಚಿಯನ್ ಧರ್ಮವನ್ನು ಹೆಚ್ಚಾಗಿ ಕಾನೂನುಬಾಹಿರ ಅಥವಾ ಅನುಮಾನದಿಂದ ನೋಡಲಾಗುತ್ತಿತ್ತು. ಟರ್ಕಿ ದೇಶದ ಕಪ್ಪಡೋಸಿಯಾ  ರೋಮನ್ ಪ್ರಾಂತ್ಯವಾಗಿದ್ದರಿಂದ, ಸ್ಥಳೀಯ ಮತಾಂತರಿಗಳು ರೋಮನ್ ಸಾಮ್ರಾಜ್ಯದ ಕಿರುಕುಳದಿಂದ ತಪ್ಪಿಸಿಕೊಳ್ಳಲು ಡೆರಿಂಕ್ಯೂ ದಂತಹ ಭೂಗತ ನಗರಗಳಲ್ಲಿ ಬಚ್ಚಿಟ್ಟುಕೊಂಡು ಜೀವಿಸಲು ಪ್ರಾರಂಭಿಸಿದರು,  ಇದಕ್ಕೆ ಪುರಾವೆಯೆಂಬಂತೆ, ಪುರಾತತ್ತ್ವಜ್ಞರು ಸಂಶೋಧನೆ ನಡೆಸುವಾಗ ಸುರಂಗಗಳ ಒಳಗೆ ರೋಮನ್ ಯುಗದ ನಾಣ್ಯಗಳು ಮತ್ತು ಎಣ್ಣೆ ದೀಪಗಳು ದೊರಕಿವೆ, ಇದು ರೋಮನ್ ಸಾಮ್ರಾಜ್ಯದ ಉತ್ತುಂಗದಲ್ಲಿದ್ದಾಗ ಇಲ್ಲಿನ ಜನರು ಈ ಜಾಗದಲ್ಲಿ ವಾಸಿಸುತ್ತಿದ್ದರು ಅಥವಾ ಅಡಗಿಕೊಂಡಿದ್ದರು. ಇದೇ ಸಮಯದಲ್ಲಿ ಇಲ್ಲಿ ವಾಸವಿದ್ದ ಜನರು ರಕ್ಷಣಾತ್ಮಕ ವ್ಯವಸ್ಥೆಯನ್ನು ಇನ್ನೂ ಕಠಿಣಗೊಳಿಸಿದರು. ನಂತರ,  ಅರಬ್-ಬೈಜಾಂಟೈನ್ ಯುದ್ಧಗಳ(ಕ್ರಿ.ಶ. 780–1180)  ಸಮಯದಲ್ಲಿ ಅರಬ್ ದಾಳಿಗಳಿಂದ ಇಲ್ಲಿ ವಾಸಿಸುತಿದ್ದ ನಿವಾಸಿಗಳನ್ನು ರಕ್ಷಿಸಲು ಇದೇ ಸುರಂಗಗಳನ್ನು ಇನ್ನಷ್ಟು ವಿಸ್ತರಿಸಲಾಯಿತು. ಅದೇ ಸಮಯದಲ್ಲಿ ಸುಮಾರು 20,000 ಜನಸಂಖ್ಯೆಯ ಗರಿಷ್ಠ ಜನಸಂಖ್ಯೆಯನ್ನು ತಲುಪಿತು ಎಂದು ಅಂದಾಜಿಸಲಾಗಿದೆ.

*ಪ್ರಾಚೀನ ಭಾರತೀಯ ನಂಟು ಮತ್ತು ಇತಿಹಾಸ*

ಈ ನಗರದ ಮೇಲಿನ ಹಂತಗಳಲ್ಲಿ ಕ್ರಿ.ಪೂ. 2000ರ ಕಾಲದ **ಹಿಟ್ಟೈಟ್ (Hittites)** ಸಂಸ್ಕೃತಿಯ ಕುರುಹುಗಳು ಸಿಕ್ಕಿವೆ. ಇತಿಹಾಸಕಾರರ ಪ್ರಕಾರ, ಈ ಹಿಟ್ಟೈಟ್‌ಗಳು ಇಂಡೋ-ಯೂರೋಪಿಯನ್ ಮೂಲದವರಾಗಿದ್ದು, ಹಿಟ್ಟೈಟ್‌ ಸಮುದಾಯ ಮತ್ತು ಪ್ರಾಚೀನ ಭಾರತದ ನಡುವೆ ಆಳವಾದ ಸಂಪರ್ಕವಿದೆ, ಏಕೆಂದರೆ ಅವರು ಋಗ್ವೇದದಂತಹ ಪವಿತ್ರ ಹಿಂದೂ ಗ್ರಂಥಗಳಲ್ಲಿ ಉಲ್ಲೇಖಿಸಲಾದ ಆರ್ಯರೊಂದಿಗೆ ಸಂಬಂಧಿಸಿದ ವಿಶಾಲ ಇಂಡೋ-ಯೂರೋಪಿಯನ್ ವಲಸೆಯ ಭಾಗವಾಗಿದ್ದರು. ಇವರು ಸಹ ಭಾರತೀಯರಂತೆ ಬಹುದೇವತ ಆರಾಧಕರಾಗಿದ್ದರು. ಕಳೆದ ಶತಮಾನದಲ್ಲಿ ನಡೆದ ಸಂಶೋಧನೆ ಪ್ರಕಾರ ಇವರು ಸರ್ವ ಧರ್ಮ ಸಹಿಷ್ಣುಗಳಾಗಿದ್ದರು. ಜಾತ್ಯಾತೀತ ಮೌಲ್ಯಗಳಿಗೂ ಸಹ ಒತ್ತು ಕೊಟ್ಟಿದ್ದರು. ನಮ್ಮಲ್ಲಿನ ಹಬ್ಬಗಳು, ಜಾತ್ರೆಗಳು ಹೇಗೆ ಪ್ರಕೃತಿಗೆ ಸಂಭಂಧಿಸಿದವಾಗಿದ್ದವೋ ಅದೇ ರೀತಿ ಅವರು ಸಹ ಸುಗ್ಗಿ, ಹೊಸ ವರ್ಷ, ಇತ್ಯಾದಿಗಳನ್ನು ಆಚರಿಸುತಿದ್ದರು.  ಕೆಲ ಹಬ್ಬಗಳ ಆಚರಣೆಯಲ್ಲಿ ದೇವರುಗಳನ್ನು ಹೊತ್ತು ಮೆರವಣಿಗೆಯಲ್ಲಿ ಸಾಗುತಿದ್ದರಂತೆ. ಭಾರತದಲ್ಲಿದ್ದಂತೆ ರಾಜಾಡಳಿತ ಅಲ್ಲಿಯೂ ಇತ್ತು,  ಜನರ ಆಪೇಕ್ಷೆ, ಇಚ್ಚೆ, ಕಷ್ಟ ನಷ್ಟಗಳ ಬಗ್ಗೆ ಅರಿವಿಟ್ಟುಕೊಂಡು ಆಡಳಿತ ನಡೆಸುತಿದ್ದರು. ಇವರ ಮೇಲೆ ಆಕ್ರಮಣಗಳು ಹೆಚ್ಚಾದಂತೆ, ಇವರ ಅರಸೊತ್ತಿಗೆ ನಶಿಸಿಹೋಯಿತು. ನಂತರ ಬಂದ ಹಲವಾರು ಶತ್ರುಗಳು  ಈ ಭಾಗವನ್ನು ಆಕ್ರಮಿಸಿಕೊಂಡಿದ್ದರೂ ಬಹುಕಾಲ ಮುಂದುವರೆಯಲಿಲ್ಲ.

    ಮುಂದೆ ಅಲ್ಲಿ ನೆಲೆಕಂಡುಕೊಂಡ  ಫ್ರಿಜಿಯನ್‌ ಸಮುದಾಯವು ಸಹ ಇನ್ನೊಂದು ಇಂಡೋ-ಯೂರೋಪಿಯನ್ ಗುಂಪಾಗಿದ್ದರು. ಈ ನಗರದಲ್ಲಿನ ಕೆಳಗಿನ ಹಂತಗಳು ಲೋಹ ಯುಗದಲ್ಲಿ ಫ್ರಿಜಿಯನ್‌ಗಳಿಂದ ನಿರ್ಮಾಣ ಮುಂದುವರಿದಿದ್ದನ್ನು ಸೂಚಿಸುತ್ತವೆ.  ಇವರು ಸಹ ಇಂಡೋ ಆರ್ಯನ್ ಮೂಲದವರಾಗಿದ್ದರಿಂದ ಭಾರತೀಯ ಪೂರ್ವಜರಿಗೂ ಇವರಿಗೂ, ವಾಸ್ತುಶಿಲ್ಪ ಕೌಶಲ್ಯ ಸೇರಿದಂತೆ ಹಲವಾರು ವಿಚಾರಗಳಲ್ಲಿ ಮತ್ತು ವಿಷಯಗಳಲ್ಲಿ ಹೋಲಿಕೆಗಳಿದ್ದವು. 

*ಮರುಹುಟ್ಟು*:

1920ರ ದಶಕದ ಗ್ರೀಕೊ-ಟರ್ಕಿಷ್ ಯುದ್ಧದ ನಂತರ ಈ ನಗರದ ರಹಸ್ಯಗಳು ಜನರ ನೆನಪಿನಿಂದ ಮರೆಯಾಗಿದ್ದವು. ಆದರೆ 1963ರ ಆ ರೈತನ "ಕೋಳಿ ಕಳೆದುಹೋದ" ಘಟನೆಯಿಂದಾಗಿ ಈ ಅದ್ಭುತ ಪ್ರಪಂಚಕ್ಕೆ ಮತ್ತೆ ಜೀವ ಬಂದಿತು. 1985ರಲ್ಲಿ ಯುನೆಸ್ಕೋ (UNESCO)  ಇದನ್ನು **ವಿಶ್ವ ಪರಂಪರೆ ತಾಣ** ಎಂದು ಘೋಷಿಸಿದೆ. ನಮ್ಮ ಕಾಲದ ತಂತ್ರಜ್ಞಾನವಿಲ್ಲದ ಆ ಕಾಲದಲ್ಲಿ, ಕೇವಲ ಕೈ ಉಪಕರಣಗಳಿಂದ ಇಂತಹ ಬೃಹತ್ ನಗರವನ್ನು ನಿರ್ಮಿಸಿದ್ದು ಮಾನವನ ಬುದ್ಧಿಶಕ್ತಿಗೆ ಹಿಡಿದ ಕನ್ನಡಿಯಾಗಿದೆ, ಮಾನವ ಇತಿಹಾಸದ ಅದ್ಭುತಗಳಲ್ಲಿ ಒಂದಾಗಿ ಉಳಿದಿದೆ.. ಡೆರಿಂಕ್ಯು ನಗರ ನಮಗೆ ಕಲಿಸುವ ಪಾಠವೇನೆಂದರೆ ಮನುಷ್ಯನಿಗೆ ಬದುಕುವ ಛಲವಿದ್ದರೆ ಭೂಮಿಯ ಆಳದಲ್ಲೂ ಸ್ವರ್ಗವನ್ನು ಸೃಷ್ಟಿಸಬಲ್ಲ. 

ಟರ್ಕಿಯ ಕಪ್ಪಡೋಕಿಯಾದ ಪ್ರಮುಖ ಆಕರ್ಷಣೆಗಳು:

ಇಂದು ಈ ಪ್ರದೇಶ ಪ್ರವಾಸಿಗರ ಪ್ರಮುಖ ಭೇಟಿಯ ತಾಣವಾಗಿ ಮಾರ್ಪಟ್ಟಿದೆ. ಟರ್ಕಿಗೆ ಭೇಟಿ ನೀಡುವ ಲಕ್ಷಾಂತರ ವಿದೇಶಿ ಪ್ರವಾಸಿಗರು ಈ ತಾಣಕ್ಕೆ ಭೇಟಿ ನೀಡುತ್ತಾರೆ.   


೧) ಹಾಟ್ ಏರ್ ಬಲೂನ್ ಸವಾರಿ: ಮುಂಜಾನೆಯ ಸೂರ್ಯೋದಯದ ಸಮಯದಲ್ಲಿ ನೂರಾರು ಬಲೂನ್‌ಗಳು ಬಂಡೆಗಳ ಮೇಲೆ ಹಾರಾಟ ನಡೆಸುವುದು ಪ್ರಮುಖ ಆಕರ್ಷಣೆಯಾಗಿದೆ.






೨) ಗೋರೆಮ್ ಓಪನ್ ಏರ್ ಮ್ಯೂಸಿಯಂ: ಬಂಡೆಗಳನ್ನು ಕೊರೆದು ನಿರ್ಮಿಸಲಾದ ಚರ್ಚ್‌ಗಳು ಮತ್ತು ಹಳೆಯ ಕಾಲದ ಹಸಿಚಿತ್ರಗಳನ್ನು ಇಲ್ಲಿ ನೋಡಬಹುದು.




೩) ಭೂಗರ್ಭ ನಗರಗಳು (Underground Cities): ಡೆರಿಂಕುಯು (Derinkuyu) ಮತ್ತು ಕೈಮಾಕ್ಲಿ (Kaymakli) ಭೂಮಿಯ ಆಳದಲ್ಲಿರುವ ಈ ಪ್ರಾಚೀನ ನಗರಗಳಿಗೆ ಭೇಟಿ ನೀಡಬಹುದು.


೪) ಗುಹೆ ಹೋಟೆಲ್‌ಗಳು ( Cave Hotels): ಬಂಡೆಗಳನ್ನು ಕೊರೆದು ನಿರ್ಮಿಸಲಾದ ಮನೆಗಳಲ್ಲಿ ತಂಗುವ ವಿಶಿಷ್ಟ ಅನುಭವವನ್ನು ನೀವು ಇಲ್ಲಿ ಹೊಂದ ಬಹುದು.







೫) ಪಾರಿವಾಳಗಳ ಕಣಿವೆ (Pigeon Valley) & ಲವ್ ವ್ಯಾಲಿ: ವಿಶಿಷ್ಟವಾದ ಕಲ್ಲುಗಳ ರಚನೆಗಳು ಮತ್ತು ಹೈಕಿಂಗ್‌ಗೆ ಸೂಕ್ತ ಸ್ಥಳ, ಹೈಕಿಂಗ್ ಪ್ರಿಯರಿಗೆ ಇದು ಹೇಳಿ ಮಾಡಿಸಿದ ಸ್ಥಳವಾಗಿದೆ. 





ಭೇಟಿ ನೀಡಲು ಉತ್ತಮ ಸಮಯ:

ವಸಂತ (ಏಪ್ರಿಲ್-ಜೂನ್) ಮತ್ತು ಶರತ್ಕಾಲ (ಸೆಪ್ಟೆಂಬರ್-ಅಕ್ಟೋಬರ್) ಹವಾಮಾನವು ಹಿತಕರವಾಗಿರುತ್ತದೆ, ಇದು ಬಲೂನ್ ಸವಾರಿಗೆ ಉತ್ತಮ ಸಮಯ. 


ತಲುಪುವುದು ಹೇಗೆ?:

ಕೈಸೇರಿ (Kayseri) ಅಥವಾ ನೆವ್ಸೆಹಿರ್ (Nevşehir) ವಿಮಾನ ನಿಲ್ದಾಣಗಳ ಮೂಲಕ ಕಪ್ಪಡೋಕಿಯಾವನ್ನು ಸುಲಭವಾಗಿ ತಲುಪಬಹುದು. ಇಸ್ತಾಂಬುಲ್‌ನಿಂದ ಇಲ್ಲಿಗೆ ಪ್ರಯಾಣಿಸಲು ವಿಮಾನ ಅಥವಾ ಬಸ್ ವ್ಯವಸ್ಥೆಯಿದೆ.

ಬರಹ: ಪಿಎಸ್.ರಂಗನಾಥ

ಮಸ್ಕತ್, ಒಮಾನ್ ರಾಷ್ಟ್ರ.






ಶುಕ್ರವಾರ, ಜನವರಿ 17, 2025

ಗ್ಯಾಂಬಿಯಾ ಎನ್ನುವ ಎನ್ ಕ್ಲೇವ್ ರಾಷ್ಟ್ರ


ಕೆಲದಿನಗಳ ಹಿಂದೆ ನಮ್ಮ ಆಫೀಸಿನ ಕೆಲಸಕ್ಕೆ ಸಂಭಂಧಿಸಿದಂತೆ  ಆಫ್ರಿಕಾದ ಗ್ಯಾಂಬಿಯಾ ದೇಶದಿಂದ ಅಥಿತಿಯೊಬ್ಬರು ನನ್ನನ್ನು ಭೇಟಿ ಮಾಡಲು ಬಂದಿದ್ದರು.  ಬಿಜಿನೆಸ್ ಗೆ ಸಂಭಂಧಿಸಿದಂತೆ ಮಾತುಕತೆಗಳು ಮುಗಿದಾದ ಮೇಲೆ, ಅವರ ಗ್ಯಾಂಬಿಯಾ ದೇಶದ ಕುರಿತಾಗಿ ತಿಳಿದುಕೊಳ್ಳಲು ಅವರೊಂದಿಗೆ ಮಾತುಕತೆ ನಡೆಸಿದೆ. ಅ ಸಂವಾದದಲ್ಲಿ ಹಲವಾರು ಕುತೂಹಲಕಾರಿ ವಿಷಯಗಳನ್ನು ತಿಳಿದುಕೊಳ್ಳುವಂತಾಯಿತು.

ಯೂರೋಪಿನ ವಸಾಹತುಶಾಹಿಗಳು ಪ್ರಪಂಚದ ಹಲವು ದೇಶಗಳನ್ನ ವಸಾಹತುಗಳನ್ನಾಗಿ ಮಾಡಿಕೊಂಡು, ಅಲ್ಲಿ ಸಾರ್ವಭೌಮತ್ವ ಸ್ಥಾಪಿಸಿ, ಅಧಿಕಾರ ನಡೆಸಿದ್ದಲ್ಲದೆ, ಸ್ಥಳೀಯವಾಗಿ ದೊರೆಯುವ ಹೇರಳವಾದ ಸಂಪತ್ತನ್ನ ತಮ್ಮ ದೇಶಗಳಿಗೆ ಸಾಧಿಸಿದ್ದಲ್ಲದೆ, ತಮ್ಮ ಭಾಷೆ, ವಿಚಾರ, ಸಂಸ್ಕೃತಿ ಇತ್ಯಾದಿಗಳನ್ನ ಈ ದೇಶಗಳಲ್ಲಿ ಹೇರಿದ್ದು ನಮಗೆಲ್ಲ ಗೊತ್ತಿರುವ ಇತಿಹಾಸ. ಇದೆಲ್ಲದರ ಜತೆಗೆ ಬ್ರಿಟೀಷರು ಮತ್ತು ಐರೋಪಿನ ರಾಷ್ಟ್ರಗಳ ಕುತಂತ್ರಿತನಕ್ಕೆ ಹಲವಾರು ದೇಶಗಳು ಒಡೆದು ಚೂರಾಗಿವೆ.


ಗ್ಯಾಂಬಿಯಾ ಎನ್ನುವ ರಾಷ್ಟ್ರ ಪಶ್ಚಿಮ ಆಫ್ರಿಕಾದ ಸೆನೆಗಲ್ ಬಳಿ ಇದೆ, ಇದೊಂದು ಚಿಕ್ಕ ಎನ್ ಕ್ಲೇವ್ ರಾಷ್ಟ್ರ, ಈ ದೇಶದ ಸುತ್ತಲೂ ಮತ್ತೊಂದು ದೇಶವಾದ ಸೆನೆಗಲ್ ಆವರಿಸಿದೆ ಎಂದು ಅಥಿತಿಗಳು ಹೇಳಿದರು. ಕುತೂಹಲ ಜಾಸ್ತಿಯಾಯಿತು. ಮಾತುಕತೆ ಮುಂದುವರಿಸಿದೆವು, ಹಲವಾರು ಕುತೂಹಲಕಾರಿ ವಿಷಯಗಳು ಈ ಮಾತುಕತೆಯಲ್ಲಿ ತಿಳಿದುಬಂತು. ಗ್ಯಾಂಬಿಯ ಎಷ್ಟು ಚಿಕ್ಕ ದೇಶ ಎಂದರೆ, ಇದರ ಅಗಲ ಕೇವಲ 30 ಕಿಲೋಮೀಟರ್ ಗಳು ಇದ್ದರೆ, ಉದ್ದ 300 ಕಿಲೋಮೀಟರ್ ಗಳು ಮಾತ್ರ. ಇವರ ದೇಶದ ಉತ್ತರ, ಪೂರ್ವ ಮತ್ತು ದಕ್ಷಿಣ ದಿಕ್ಕುಗಳಲ್ಲಿ ಸೆನೆಗಲ್ ದೇಶದಿಂದ ಸುತ್ತವರಿದಿದ್ದು ಪಶ್ಚಿಮಕ್ಕೆಅಟ್ಲಾಂಟಿಕ್ ಮಹಾಸಾಗರವಿದೆ. 

ಈ ರಾಷ್ಟ್ರ ಎನ್ಕ್ಲೇವ್ ಹೇಗಾಯ್ತು ಅಂತ ಕೇಳಿದ್ದಕ್ಕೆ, ಈ ಪ್ರದೇಶವನ್ನು ಬ್ರಿಟೀಷರು ಆಳಿದ್ದರಂತೆ,  ಸುತ್ತುವರೆದಿರುವ ಸೆನೆಗಲ್ ರಾಷ್ಟ್ರವನ್ನು ಫ್ರೆಂಚರು ಆಳಿದ್ದರು. 1960 ರಲ್ಲಿ ಫ್ರಾನ್ಸ್‌ನಿಂದ ಸೆನೆಗಲ್ ಸ್ವತಂತ್ರ ವಾಯಿತು ನಂತರ 1965ರಲ್ಲಿ ಗ್ಯಾಂಬಿಯಾ ದೇಶ ಬ್ರಿಟಿಷರ ಆಡಳಿತದಿಂದ  ಸ್ವತಂತ್ರ ವಾಯಿತು. ಹೀಗಾಗಿ ಅವೆರೆಡು ಬೇರೆ ಬೇರೆ ದೇಶಗಳಾಗಿ ಹಾಗೆಯೇ ಉಳಿದು ಹೋಗಿವೆ.  ಎರಡು ದೇಶ ಒಂದುಗೂಡಲು ಸಾಧ್ಯವಾಗಲಿಲ್ಲವೇ ಎಂದು ಕೇಳಿದ್ದಕ್ಕೆ, 1981 ರಲ್ಲಿ ಆ ಪ್ರಯತ್ನ ನಡೆಯಿತು ಆದರೆ ಅದು ಸಫಲವಾಗಲಿಲ್ಲ ಎಂದರು. 

ಬ್ರಿಟೀಷರು ಮತ್ತು ಫ್ರೆಂಚರ ಆಳ್ವಿಕೆಯಿಂದಾಗಿ ಎರಡು ಬೇರೆ ದೇಶಗಳಾಗಿವೆಯೇ ವಿನಃ, ಮೂಲತಃ ಗ್ಯಾಂಬಿಯಾ ಮತ್ತು ಸೆನೆಗಲ್ ದೇಶದ ಜನರುಗಳು ಒಂದೇ ಬುಡಕಟ್ಟಿನವರು, ಸಾಂಸ್ಕೃತಿಕವಾಗಿ ಒಂದೇ ರೀತಿ ಇದ್ದಾರೆ. ಆಚಾರ ವಿಚಾರ ಎಲ್ಲದರಲ್ಲೂ ಹೋಲಿಕೆಯಿದೆ. ಎರಡೂ ಕಡೆ ಸಂಭಂದಿಕರು ಇದ್ದಾರೆ. ಎರಡು ದೇಶಗಳು ಒಂದಾಗಲು, ರಾಜಕೀಯ ಇಚ್ಛಾಶಕ್ತಿಯಿಂದ ಮಾತ್ರ ಸಾಧ್ಯ.ವಿದೆ. ಎರಡು ದೇಶಗಳ ನಡುವೆ ಅಧಿಕೃತ ಭಾಷೆಗಳನ್ನು ಹೊರತುಪಡಿಸಿ ಯಾವುದೇ ವ್ಯತ್ಯಾಸವಿಲ್ಲ. ಸೆನೆಗಲ್‌ನಲ್ಲಿ ಫ್ರೆಂಚ್ ಮತ್ತು ಗ್ಯಾಂಬಿಯಾದಲ್ಲಿ ಇಂಗ್ಲಿಷ್ ಆಡಳಿತ ಭಾಷೆಯಾಗಿದೆ. ಜನರು ಒಂದೇ, ದೇಶೀಯ ಭಾಷೆ ಒಂದೇ, ಆಹಾರವೂ ಒಂದೇ, ಧರ್ಮಗಳು ಒಂದೇ, ಆಚಾರವಿಚಾರವು ಒಂದೇ.
ಈ ದೇಶದ ಮಧ್ಯಭಾಗದಲ್ಲಿ ಗ್ಯಾಂಬಿಯಾ ನದಿ ಹರಿಯುತ್ತದೆ.  ಇಂಗ್ಲಿಷ್ ಇಲ್ಲಿನ ಭಾಷೆ. ಕೃಷಿ ಇಲ್ಲಿನ ಆರ್ಥಿಕತೆಯ ಬೆನ್ನೆಲುಬು.  ನೆಲಗಡಲೆಯನ್ನು ಇಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ಇದನ್ನು ಅತಿ ಹೆಚ್ಚಾಗಿ ರಫ್ತು ಮಾಡಲಾಗುತ್ತದೆ. ಬಂಜುಲ್ (Banjul) ಈ ದೇಶದ ರಾಜಧಾನಿ. 96.4% ಜನ ಇಸ್ಲಾಂ ಅನ್ನು, (Islam) 3.5% ಕ್ರಿಶ್ಚಿಯಾನಿಟಿ (Christianity) ಯನ್ನು ಮತ್ತು 0.1% ಜನರು ಇತರೆ ಧರ್ಮವನ್ನು ಅನುಸರಿಸುತ್ತಾರೆ.

ಇಂಗ್ಲಿಷ್ ಗ್ಯಾಂಬಿಯಾದ ಅಧಿಕೃತ ಭಾಷೆಯಾಗಿದ್ದು ಇದನ್ನು  ಶಿಕ್ಷಣ ಮತ್ತು ಸರ್ಕಾರದ ದಾಖಲೆಗಳಲ್ಲಿ ಬಳಸಲಾಗುತ್ತದೆ. ಇತರ ಭಾಷೆಗಳಲ್ಲಿ ಮಂಡಿಂಕಾ, ವೋಲೋಫ್, ಫುಲಾ, ಸೇರರ್, ಸೋನಿಂಕೆ, ಕ್ರಿಯೋ, ಜೋಲಾ ಮತ್ತು ಇತರ ಸ್ಥಳೀಯ ಭಾಷೆಗಳು ಸಹ ಇಲ್ಲಿ ಉಪಯೋಗದಲ್ಲಿವೆ. ಆಫ್ರೀಕಾದ ಇತರೆ ದೇಶಗಳಲ್ಲಿದ್ದಂತೆ ಫ್ರೆಂಚ್ ಭಾಷೆಯ ಜ್ಞಾನವು ಸಹ ಜನರಿಗೆ ಇದೆ. ದೇಶದ 38% ಜನರು ಮಂಡಿಂಕಾವನ್ನು ಮೊದಲ ಭಾಷೆಯಾಗಿ ಮಾತನಾಡುತ್ತಾರೆ, 21% ಪುಲಾರ್, 18% ವೊಲೊಫ್, 9% ಸೋನಿಂಕೆ, 4.5% ಜೊಲಾ, 2.4% ಸೆರೆರ್, 1.6% ಮಂಜಾಕ್ ಮತ್ತು ಬೈನೌಕ್, ಪೋರ್ಚುಗೀಸ್ ಕ್ರಿಯೋಲ್ 1%, ಮತ್ತು ಇಂಗ್ಲಿಷ್ 0.5%. ಹಲವು ಇತರೆ ಭಾಷೆಗಳನ್ನು ಸಹ ಜನರು  ಮಾತನಾಡುತ್ತಾರೆ.

ಇಲ್ಲಿನ ಸರಾಸರಿ ತಾಪಮಾನವು 29 ° C ಮತ್ತು 34 ° C ನಡುವೆ ಇರುತ್ತದೆ. ವರ್ಷಪೂರ್ತಿ ಇಲ್ಲಿ ಬೇಸಿಗೆ ಅಂತ ಹೇಳಬಹುದು. ಸೂರ್ಯನ ಬಿಸಿಲು ವರ್ಷಪೂರ್ತಿ ಇರುತ್ತದೆ. ಬೇಸಿಗೆಯ  ತಿಂಗಳುಗಳಲ್ಲಿ, ಸೆಖೆ ಜಾಸ್ತಿ, ಆರ್ದ್ರತೆಯ ವಾತಾವರಣ ಜಾಸ್ತಿ. ಮಳೆ ಮತ್ತು ಚಳಿಗಾಲದಲ್ಲಿ,  ಆರ್ದ್ರತೆ ಕಡಿಮೆ ಇರುತ್ತದೆ, ಮಳೆ ಬಂದರೆ ಬಂತು ಇಲ್ಲದೆ ಇದ್ರೆ ಇಲ್ಲ ಎನ್ನಬಹುದು. ಪ್ರವಾಸಿಗರು ಭೇಟಿ ನೀಡಲು ಚಳಿಗಾಲದ ಸಮಯ ಸೂಕ್ತವಾಗಿದೆ. 
ಯುರೋಪಿಯನ್ನರ ಪ್ರಾಬಲ್ಯ:
ಯುರೋಪಿಯನ್ನರು ಇಲ್ಲಿಗೆ ಆಗಮಿಸುವ ಮುಂಚೆ, ಸ್ಥಳೀಯ ರಾಜವಂಶಗಳು ಇಲ್ಲಿ ಆಡಳಿತ ನಡೆಸುತಿದ್ದವು. ಹನ್ನೊಂದನೇ ಶತಮಾನದಲ್ಲಿ ಇಲ್ಲಿಗೆ ಇಸ್ಲಾಂ ಆಗಮನವಾಗುತ್ತದೆ. ಅಂದಿನ ತಕ್ರೂರ್ ರಾಜ ವಂಶ ಇಸ್ಲಾಂ ಧರ್ಮವನ್ನು ಸ್ವೀಕರಿಸಿ, ಪ್ರಜೆಗಳನ್ನು ಮತಾಂತರಿಸುತ್ತಾರೆ. ಅರೇಬಿಕ್ ಶಾಲೆಗಳನ್ನು ತೆರೆಯಲಾಗುತ್ತದೆ. ಶರಿಯಾ ಕಾನೂನು ಜಾರಿಗೆ ಬಂದು ಇಲ್ಲಿ ಶರಿಯಾ ನ್ಯಾಯಾಲಯ ಆರಂಭಗೊಳ್ಳುತ್ತವೆ. ಕ್ರಿ.ಶ. 1455 ರಲ್ಲಿ, ಪೋರ್ಚುಗೀಸರು ಗ್ಯಾಂಬಿಯಾವನ್ನು ಆಕ್ರಮಿಸುತ್ತಾರೆ. ಇಲ್ಲಿನ ಕಡಲತೀರದಲ್ಲಿ ನೆಲೆ ನಿಂತು ಸಮುದ್ರ ವ್ಯಾಪಾರವನ್ನು ನಿಯಂತ್ರಿಸಲು ಪ್ರಯತ್ನಿಸುತ್ತಾರೆ. ಪೋರ್ಚುಗೀಸರು ಗ್ಯಾಂಬಿಯಾಗೆ ಪ್ರವೇಶಿಸಿದ ಮೊದಲ ಯುರೋಪಿಯನ್ನರಾಗಿದ್ದರು ಸಹ, ಅಲ್ಲಿ ಹೇಳಿಕೊಳ್ಳುವಂತಹ ಗಮನಾರ್ಹವಾದ ವ್ಯಾಪಾರ ವಹಿವಾಟು ಅವರಿಗೆ ನಡೆಸಲಾಗಲಿಲ್ಲ. ಪರಿಣಾಮವಾಗಿ ಇಲ್ಲಿ ಹರಿಯುವ ಗ್ಯಾಂಬಿಯಾ ನದಿಯ ಮೇಲಿನ ವ್ಯಾಪಾರ ವಹಿವಾಟು ನಡೆಸುವ ಹಕ್ಕುಗಳನ್ನು ಇಂಗ್ಲಿಷ್ ವ್ಯಾಪಾರಿಗಳಿಗೆ ಮಾರುತ್ತಾರೆ. ತದನಂತರ ಇಲ್ಲಿನ ಕೆಲ ದ್ವೀಪಗಳನ್ನು ಯುರೋಪಿನ ಕೆಲ ರಾಷ್ಟ್ರಗಳು ಖರೀದಿಸುತ್ತವೆ. 

17 ನೇ ಶತಮಾನದ ಕೊನೆಯಲ್ಲಿ ಮತ್ತು 18 ನೇ ಶತಮಾನದುದ್ದಕ್ಕೂ, ಸೆನೆಗಲ್ ನದಿ ಮತ್ತು ಗ್ಯಾಂಬಿಯಾ ನದಿಯ ಪ್ರದೇಶಗಳಲ್ಲಿ ರಾಜಕೀಯ ಮತ್ತು ವಾಣಿಜ್ಯ ಪ್ರಾಬಲ್ಯಕ್ಕಾಗಿ ಬ್ರಿಟಿಷ್ ಸಾಮ್ರಾಜ್ಯ ಮತ್ತು ಫ್ರೆಂಚ್ ಸಾಮ್ರಾಜ್ಯವು ನಿರಂತರವಾಗಿ ಹೋರಾಟ ನಡೆಸಿದವು. 1758 ರಲ್ಲಿ ಸೆನೆಗಲ್ ಅನ್ನು ವಶಪಡಿಸಿಕೊಂಡ ನಂತರ ಅಗಸ್ಟಸ್ ಕೆಪ್ಪೆಲ್ ನೇತೃತ್ವದ ಪಡೆ ಗ್ಯಾಂಬಿಯಾವನ್ನು ಆಕ್ರಮಿಸಿತು. 1783ರಲ್ಲಿ ನಡೆದ  ವರ್ಸೈಲ್ಸ್ ಒಪ್ಪಂದ ಪ್ರಕಾರ,  ಗ್ರೇಟ್ ಬ್ರಿಟನ್‌ ಗ್ಯಾಂಬಿಯಾ ನದಿ ಮತ್ತು ಸುತ್ತಲಿನ ಭೂಪ್ರದೇಶ ಬ್ರಿಟೀಷರ ಆಳ್ವಿಕೆಗೆ ಒಳಪಡುತ್ತದೆ. ಗ್ಯಾಂಬಿಯಾ ನದಿಯ ಉತ್ತರದಲ್ಲಿರುವ ಅಲ್ಬ್ರೆಡಾದಲ್ಲಿ ಒಂದು ಸಣ್ಣ ಎನ್‌ಕ್ಲೇವ್ ಅನ್ನು ಫ್ರೆಂಚರು ಉಳಿಸಿಕೊಳ್ಳುತ್ತಾರೆ.  ಅಂತಿಮವಾಗಿ ಈ ದ್ವೀಪ ಒಳನಾಡನ್ನು 1856 ರಲ್ಲಿ ಯುನೈಟೆಡ್ ಕಿಂಗ್‌ಡಮ್‌ಗೆ ನೀಡಲಾಗುತ್ತದೆ.


ಆಫ್ರಿಕಾದ ಗುಲಾಮ ವ್ಯಾಪಾರ:
ಯುರೋಪಿಯನ್ನರು ಆಫ್ರಿಕಾ ಮತ್ತು ಇಂಡಿಯಾ ದಂತಹ ಪ್ರದೇಶಗಳಿಗೆ ವ್ಯಾಪಾರಕ್ಕಾಗಿ ಬಂದವರು ಇಲ್ಲಿ ಮಾಲೀಕರಾಗಿದ್ದಲ್ಲದೆ ಸ್ಥಳೀಯರನ್ನು ತಮ್ಮ ಫಿರಂಗಿ ಮತ್ತು ಬಂದೂಕುಗಳನ್ನು ಜನರ ಮುಂದಿರಿಸಿ ಆಳ್ವಿಕೆ ನಡೆಸಲು ಪ್ರಾರಂಭಿಸಿತ್ತಾರೆ.  ಮೂರ್ನಾಲ್ಕು ದಶಕಗಳ ಅಲ್ಪ ಸಮಯದಲ್ಲಿ ಇಡೀ ಆಫ್ರಿಕಾಖಂಡ ಯೂರೋಪಿಯನ್ನರ ವಸಾಹತುಗಳಾಗಿಬಿಟ್ಟಿತು. ಸ್ಥಳೀಯರನ್ನು ಗುಲಾಮರನ್ನಾಗಿ ಮಾಡಿಕೊಂಡು ವಸಾಹತುಶಾಹಿಗಳು ಆಫ್ರಿಕಾ ದೇಶದ ಅಗಾಧ ಖನಿಜ ಸಂಪತ್ತನ್ನು ಲೂಟಿ ಹೊಡೆಯುತ್ತಿದ್ದರು. ಮುಖ್ಯವಾಗಿ ತಾಮ್ರ, ಹತ್ತಿ, ರಬರ್, ಪಾಮ್ ಎಣ್ಣೆ, ಕೋಕೋ, ವಜ್ರ, ಟೀ ಮತ್ತು ಟಿನ್ ಲೋಹ, ಚಿನ್ನ - ಇವುಗಳ ನಿಧಿಯಾಗಿತ್ತು ಆಫ್ರಿಕಾ ಖಂಡ. ಒಂದು ಕೋಟಿಗೂ ಹೆಚ್ಚು ಆಫ್ರಿಕನ್ನರು ಅಲ್ಲೇ ಗುಲಾಮರಾಗಿ ದುಡಿದರು. ಸುಮಾರು ಅಷ್ಟೇ ಜನರು ಬೇರೆ ದೇಶಗಳಿಗೆ ಗುಲಾಮರಾಗಿ ಮಾರಲ್ಪಟ್ಟರು! ಗ್ಯಾಂಬಿಯಾ, ಸೆನೆಗಲ್ ನಂತಹ ರಾಷ್ಟ್ರಗಳು ಸಹ ಹೊರತಾಗಿರಲಿಲ್ಲ. ಸ್ಥಳೀಯರನ್ನು ಯುರೋಪ್ ಅಮೇರಿಕ ಮುಂತಾದ ರಾಷ್ಟ್ರಗಳಿಗೆ ಮಾರಲಾಯಿತು. ಲಕ್ಷಾಂತರ ಜನರನ್ನ ಸ್ಥಳೀಯವಾಗಿ ದುಡಿಸಿಕೊಂಡರು. 

1807 ರಲ್ಲಿ, ಬ್ರಿಟೀಷರು ತಮ್ಮ  ಸಾಮ್ರಾಜ್ಯದಾದ್ಯಂತ ಗುಲಾಮರ ವ್ಯಾಪಾರವನ್ನು ರದ್ದುಗೊಳಿಸಿದರು. ಆದರೂ ವ್ಯಾಪಾರಿಗಳು ಕದ್ದು ಮುಚ್ಚಿ ಗುಲಾಮರ ವ್ಯಾಪಾರವನ್ನು ಮಾಡುತಿದ್ದರು. ಅಟ್ಲಾಂಟಿಕ್‌ ಸಮುದ್ರದಲ್ಲಿ ಹಡಗುಗಳಲ್ಲಿ  ಜನರನ್ನು ಸಾಗಿಸುತಿದ್ದರು. ಇಂತಹ ಹಡಗುಗಳನ್ನ ಬ್ರಿಟೀಷರ ರಾಯಲ್ ನೇವಿಯವರು ತಡೆದು, ತಪಾಸಣೆ ನಡೆಸಿ  ಗುಲಾಮರ ಹಡಗುಗಳನ್ನು ಗ್ಯಾಂಬಿಯಾಕ್ಕೆ ಮರಳಿ ಕಳುಹಿಸುತಿದ್ದರಂತೆ. ಬ್ರಿಟಿಷರು 1816 ರಲ್ಲಿ ಬಾಥರ್ಸ್ಟ್ (ಈಗ ಬಂಜುಲ್)ನಲ್ಲಿ ಮಿಲಿಟರಿ ಪೋಸ್ಟ್ ಅನ್ನು ಸ್ಥಾಪಿಸಿ, ಗುಲಾಮರ ಸಾಗಾಟವನ್ನು ತಡೆಹಿಡಿಯಲು ಪ್ರಯತ್ನಿಸಿದರು. ಹಡಗುಗಳಲ್ಲಿದ್ದ ಜನರನ್ನು ಬಿಡುಗಡೆಗೊಳಿಸಿ ಮ್ಯಾಕ್‌ಕಾರ್ಥಿ ಎನ್ನುವ ದ್ವೀಪದಲ್ಲಿ ಅವರಿಗೆ ಹೊಸ ಬದುಕನ್ನು ಕಟ್ಟಿಕೊಳ್ಳಲು ಅವಕಾಶ ನೀಡಿದ್ದರು.

ಗ್ಯಾಂಬಿಯಾಗೇ 1965ರಲ್ಲಿ ಸ್ವಾತಂತ್ರ್ಯ:
1960ರಲ್ಲಿ ಫ್ರಾನ್ಸ್‌ನಿಂದ ಸೆನೆಗಲ್ ಸ್ವತಂತ್ರವಾಗಿತ್ತು,  ಹೀಗಾಗಿ, ಬ್ರಿಟೀಷರು ತಾವು ಆಳುತಿದ್ದ ಗ್ಯಾಂಬಿಯಾ ದೇಶಕ್ಕೂ 18 ಫೆಬ್ರವರಿ 1965 ರಂದು ಸ್ವಾತಂತ್ರ್ಯವನ್ನು ನೀಡುತ್ತಾರೆ. 1965 ರಿಂದ 1994 ರವರೆಗೆ, ಪೀಪಲ್ಸ್ ಪ್ರೋಗ್ರೆಸ್ಸಿವ್ ಪಾರ್ಟಿಯ (ಪಿಪಿಪಿ) ದವ್ಡಾ ಜವರ (Dawda Jawara) ಅವರು ದೇಶವನ್ನು ಆಳುತ್ತಾರೆ. ಈ ಸಮಯದಲ್ಲಿ ಯಾವುದೇ ವಿಪಕ್ಷವಿಲ್ಲದೆ ಎಲ್ಲಾ ಪಕ್ಷದವರು ಸೇರಿ (multi-party liberal democracy) ಆಳ್ವಿಕೆ ನಡೆಸುತ್ತಾರೆ. ಈ ಸಮಯದಲ್ಲಿ ಯಾವುದೇ ಚುನಾವಣೆ ನಡೆಯುವುದಿಲ್ಲ. 

1981 ಆಂತರಿಕ ದಂಗೆ:
ಪ್ರಮುಖ ರಾಜಕಾರಣಿಗಳ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಮತ್ತು ದೇಶದಲ್ಲಿ ದುರ್ಬಲಗೊಂಡ ಆರ್ಥಿಕತೆ ಇದರಿಂದ ಬೇಸತ್ತ ಜನತೆಯಿಂದ 29 ಜುಲೈ 1981 ರಂದು ಆಂತರಿಕ ದಂಗೆ ನಡೆಯುತ್ತದೆ.  ಅಧ್ಯಕ್ಷ ಜವಾರಾ ಅವರು ಪಕ್ಕದ ರಾಷ್ಟ್ರ ವಾದ ಸೆನೆಗಲ್ ನ ಮಿಲಿಟರಿ ಸಹಾಯವನ್ನು ಕೋರುತ್ತಾರೆ. ಆಗಸ್ಟ್ 6 1981ರಲ್ಲಿ , ಸುಮಾರು 2,700 ಸೆನೆಗಲೀಸ್ ಸೈನಿಕರನ್ನು  ನಿಯೋಜಿಸಲಾಗುತ್ತದೆ, ಬಂಡಾಯವೆದ್ದ ಪಡೆಯನ್ನು ಸೆನೆಗಲ್ ಸೈನಿಕರ ಜತೆಗೂಡಿ ಸೋಲಿಸಲಾಗುತ್ತದೆ, ದಂಗೆ ಮತ್ತು ನಂತರದ ಹಿಂಸಾಚಾರದ ಸಮಯದಲ್ಲಿ 500 ರಿಂದ 800 ಜನರು ಕೊಲ್ಲಲ್ಪಡುತ್ತಾರೆ.  ನಂತರ, ಸೆನೆಗಲ್ ಮತ್ತು ದಿ ಗ್ಯಾಂಬಿಯಾ ರಾಷ್ಟ್ರಗಳು, ಒಕ್ಕೂಟದ ಒಪ್ಪಂದಕ್ಕೆ ಸಹಿ ಹಾಕುತ್ತವೆ. ಸೆನೆಗಾಂಬಿಯಾ ಒಕ್ಕೂಟ ವೇರ್ಪಡುತ್ತದೆ. ಒಂದೇ ಮಿಲಿಟರಿ ಆರ್ಮಿ, ದೇಶದ ಆರ್ಥಿಕತೆ ಬಲನೀಡುವುದು, ಎರಡು ರಾಷ್ಟ್ರಗಳಿಗೂ ಒಂದೇ ಕರೆನ್ಸಿ ನೋಟು ಮತ್ತು ನಾಣ್ಯ ಬಳಸುವ, ಹೀಗೆ ಹಲವಾರು ವಿಷಯಗಳ ಕುರಿತು ಒಪ್ಪಂದ ವೇರ್ಪಡುತ್ತದೆ.  ಕೇವಲ ಏಳು ವರ್ಷಗಳ ನಂತರ, ಗ್ಯಾಂಬಿಯಾ 1989 ರಲ್ಲಿ ಒಕ್ಕೂಟದಿಂದ ಶಾಶ್ವತವಾಗಿ ಹೊರಬಂದು, ಉಭಯ ರಾಷ್ಟ್ರಗಳ ಒಪ್ಪಂದ ಮುರಿದು ಬೀಳುತ್ತದೆ..

1994 ಮಿಲಿಟರಿ ದಂಗೆ:
1994 ರಲ್ಲಿ, ಮಿಲಿಟರಿ ದಂಗೆ ನಡೆಯುತ್ತದೆ. ಆರ್ಮ್ಡ್ ಫೋರ್ಸಸ್ ಪ್ರಾವಿಶನಲ್ ರೂಲಿಂಗ್ ಕೌನ್ಸಿಲ್ (AFPRC) ಎಂದು ಕರೆಯಲಾಗುವ "ಮಿಲಿಟರಿ ಅಧಿಕಾರಿಗಳ ಆಯೋಗ" ಅಧಿಕಾರಕ್ಕೆ ಬರುತ್ತದೆ.  ಎರಡು ವರ್ಷಗಳ ನೇರ ಆಡಳಿತದ ನಂತರ, ಹೊಸ ಸಂವಿಧಾನವನ್ನು ಬರೆಯಲಾಯಿತು.  1996 ರಲ್ಲಿ, AFPRC ನ ನಾಯಕ ಯಾಹ್ಯಾ ಜಮ್ಮೆ (Yahya Jammeh) ಅಧ್ಯಕ್ಷರಾಗಿ ಆಯ್ಕೆಯಾಗಿ 2016 ರ ಚುನಾವಣೆಯವರೆಗೂ ಸರ್ವಾಧಿಕಾರಿ ಶೈಲಿಯಲ್ಲಿ ಆಡಳಿತ ನಡೆಸುತ್ತಾರೆ. ಚುನಾವಣೆಯಲ್ಲಿ ಆಡಮಾ ಬಾರೋ (Adama Barrow) ವಿಜಯಿಯಾಗಿ ಇಲ್ಲಿಯವರೆಗೂ (2024) ಅವರೇ ಅಧಿಕಾರ ನಡೆಸುತಿದ್ದಾರೆ.  

ಪ್ರಮುಖ ಪ್ರವಾಸಿ ತಾಣಗಳು:
1. ಬಂಜುಲ್ ರೋಮನ್ ಕ್ಯಾಥೋಲಿಕ್ ಕ್ಯಾಥೆಡ್ರಲ್ (Banjul Roman Catholic Cathedral), 2. ಕಚಿಕಲ್ಲಿ ಕ್ರೊಕೊಡೈಲ್ ಪೂಲ್ (Kachikally Crocodile Pool): ಮೊಸಳೆ ಕೊಳ, 3. ಬಿಜಿಲೋ ರಾಷ್ಟ್ರೀಯ ಉದ್ಯಾನವನ (Bijilo National Park), 4. ಬಿಜಿಲೋ ಮಂಕಿ ಪಾರ್ಕ್ (Bijilo Monkey Park), 5. ಗ್ಯಾಂಬಿ ನದಿ (River Gambie), 6. ಬಿಜಿಲೋ ಫಾರೆಸ್ಟ್ ಪಾರ್ಕ್ (Bijilo Forest Park), 7. ಸ್ಟೋನ್ ಸರ್ಕಲ್ಸ್ ಆಫ್ ಗ್ಯಾಂಬಿಯಾ (Stone Circles of Gambia), 8. ಗ್ಯಾಂಬಿಯಾದ ರಾಷ್ಟ್ರೀಯ ವಸ್ತುಸಂಗ್ರಹಾಲಯ (National Museum of the Gambia), 9. ಆರ್ಕ್  22 (Arch 22) ಕಮಾನು, 10. ಬಕೌ ಕ್ರಾಫ್ಟ್ ಮಾರುಕಟ್ಟೆ (Bakau craft market)


ಭಾರತದೊಂದಿಗಿನ ಭಾಂದವ್ಯ:
ಗ್ಯಾಂಬಿಯಾ ಮತ್ತು ಭಾರತದೊಂದಿಗಿನ ಭಾಂದವ್ಯ ಉತ್ತಮವಾಗಿದೆ. ಎರಡೂ ರಾಷ್ಟ್ರಗಳು ಬ್ರಿಟೀಷರ ಆಳ್ವಿಕೆಗೆ ಒಳಪಟ್ಟಿದ್ದರಿಂದ ಭಾವನಾತ್ಮಕವಾಗಿ ಭಾರತೀಯರ ಕುರಿತು ಇಲ್ಲಿನ ಜನರಿಗೆ ಒಲವಿದೆ. ಭಾರತದಿಂದ ಹಲವಾರು ಸಾಮಗ್ರಿಗಳನ್ನು ಇಲ್ಲಿಗೆ ರಫ್ತು ಮಾಡಲಾಗುತ್ತಿದೆ. ಗ್ಯಾಂಬಿಯಾಕ್ಕೆ ಭಾರತ ಆರ್ಥಿಕ ಸಹಾಯ ಸಹ ನೀಡಿದೆ. 

ಗಾಂಬಿಯಾಕ್ಕೆ ಭಾರತವು ರಫ್ತು ಮಾಡುವ ಪ್ರಮುಖ ಸರಕುಗಳೆಂದರೆ ಹತ್ತಿ ನೂಲು, ಬಟ್ಟೆಗಳು, ಮೇಕಪ್‌ ಸಾಧನಗಳು , ಸೌಂದರ್ಯವರ್ಧಕಗಳು, ಶೌಚಾಲಯ ಸಾಮಗ್ರಿಗಳು, ಔಷಧಗಳು, ಕಬ್ಬಿಣ ಮತ್ತು ಉಕ್ಕಿನ ಉತ್ಪನ್ನಗಳು. ಗ್ಯಾಂಬಿಯಾದಿಂದ ಭಾರತವು ಆಮದು ಮಾಡಿಕೊಳ್ಳುವ ಪ್ರಮುಖ ಸರಕುಗಳೆಂದರೆ ಕಚ್ಚಾ ಗೋಡಂಬಿ ಮತ್ತು ಹತ್ತಿ.

ಸುಮಾರು 3000 ಭಾರತೀಯ ನಾಗರಿಕರು (2023 ರ ಹೊತ್ತಿಗೆ, ) ಗ್ಯಾಂಬಿಯಾದಲ್ಲಿ ವಾಸಿಸುತಿದ್ದು, ಅವರು ಪ್ರಾಥಮಿಕವಾಗಿ ವ್ಯಾಪಾರ ಮತ್ತು ನಿರ್ಮಾಣ ಕ್ಷೇತ್ರ ಸೇರಿದಂತೆ ಖಾಸಗಿ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ದೇಶಕ್ಕೆ ನಮ್ಮ ಭಾರತದ ಹರಿಯಾಣದ ಔಷಧೀಯ ಸಂಸ್ಥೆಯಾದ ಮೇಡನ್ ಫಾರ್ಮಾದಿಂದ ಸರಬರಾಜು ಮಾಡಲಾಗಿದ್ದ ಕೆಮ್ಮು-ಶೀತ ಸಿರಪ್ ಸೇವಿಸಿದ  66 ಮಕ್ಕಳ ಸಾವಾಗಿತ್ತು. ಆಗ ಗ್ಯಾಂಬಿಯಾ ದೇಶದ ಬಗ್ಗೆ ನಮ್ಮ ಭಾರತದ ಮಾಧ್ಯಮಗಳಲ್ಲಿ ಸುದ್ದಿ ಹರಿದಾಡಿತ್ತು. 

ಭಾರತದಲ್ಲಿ ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ 700ಕ್ಕೂ ಹೆಚ್ಚು ಗ್ಯಾಂಬಿಯನ್ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಭಾರತದಲ್ಲಿರುವ ಗ್ಯಾಂಬಿಯಾದ ಹೈ ಕಮಿಷನರ್ H.E ಮುಸ್ತಫಾ ಜವಾರ ಅವರು ಇತ್ತೀಚೆಗೆ, ಮಂಗಳೂರಿನ ಯೆನೆಪೊಯ ವಿಶ್ವವಿದ್ಯಾಲಯದೊಂದಿಗೆ ಎಂಒಯುಗೆ ಸಹಿ ಹಾಕಿದರು. 28 ​​ಗ್ಯಾಂಬಿಯನ್ ವಿದ್ಯಾರ್ಥಿಗಳು ಇಲ್ಲಿ ಅಧ್ಯಯನ ಮಾಡಲಿದ್ದಾರೆ.




ಶುಕ್ರವಾರ, ನವೆಂಬರ್ 29, 2024

ಅಜ಼ರ್ಬೈಜಾನ್ ನ ಪುರಾತನ ಹಿಂದೂ ದೇವಾಲಯ


ಬರಹ: ಪಿ.ಎಸ್.ರಂಗನಾಥ, 

ಮಸ್ಕತ್, ಒಮಾನ್ ರಾಷ್ಟ್ರ.

ಅಜ಼ರ್ಬೈಜಾನ್ ಎನ್ನುವ ಮುಸ್ಲಿಂ ದೇಶದಲ್ಲಿ ಪುರಾತನ ಹಿಂದೂ ದೇವಾಲಯವೊಂದಿದೆ. ವಿಶೇಷ ಏನೆಂದರೆ, ಶತಶತಮಾನಗಳಿಂದ ಈ ದೇವಸ್ಥಾನ ಇನ್ನೂ ಹಾಗೆಯೇ ಉಳಿದುಕೊಂಡು ಬಂದಿದೆ. ಇನ್ನೊಂದು ವಿಶೇಷವೇನೆಂದರೆ, ಈ ಪ್ರದೇಶ UNESCO  ವಿಶ್ವದ ಪಾರಂಪಾರಿಕ ತಾಣಗಳ ಪಟ್ಟಿಯಲ್ಲಿ ಸೇರಿರುವುದು. ಅಜ಼ರ್ಬೈಜಾನ್  ದೇಶಕ್ಕೆ ಭೇಟಿ ನೀಡುವ ಅತಿ ಹೆಚ್ಚಿನ ಪ್ರವಾಸಿಗರು ತಪ್ಪದೇ ಭೇಟಿ ನೀಡುವ ಪ್ರದೇಶ ಇದು. ಅತೆಷ್ಗಾ ಎನ್ನುವ ಈ ದೇವಾಲಯವನ್ನು ಅಗ್ನಿ ದೇವಾಲಯ (Fire temple) ಎಂದು ಕರೆಯುತ್ತಾರೆ. ಈ ಸ್ಥಳವನ್ನು ಕೇವಲ ಹಿಂದೂ ಮಾತ್ರವಲ್ಲದೆ, ಸಿಖ್ಖರು, ಜೋರಾಷ್ಟ್ರಿಯನ್ ಪಾರ್ಸಿಗಳು ಸಹ ಪವಿತ್ರ ಸ್ಥಳವೆಂದು ಪರಿಗಣಿಸಿ ಅಂದಿನ ಕಾಲದಲ್ಲಿ ಪೂಜಿಸುತಿದ್ದರು. ದೇವಾಲಯದ ಈ ಪ್ರಾಂಗಣದಲ್ಲಿ ಗಣೇಶ ಮತ್ತು ನಟರಾಜನ ವಿಗ್ರಹವಿದೆ. ವಿಗ್ರಹಗಳ ಜತೆಯಲ್ಲಿ 14 ಸಂಸ್ಕೃತ (ದೇವನಾಗರಿ), ಎರಡು ಪಂಜಾಬಿ (ಗುರುಮುಖಿ) ಮತ್ತು ಒಂದು ಪರ್ಷಿಯನ್ ಶಿಲಾ ಶಾಸನಗಳಿವೆ. ಒಂದು ಶಾಸನದಲ್ಲಿ ಮೊದಲ ಸಾಲು  ಶ್ರೀ ಗಣೇಶಾಯ ನಮಃ ಎಂದು ಪ್ರಾರಂಭವಾಗುತ್ತದೆ. ಇನ್ನೊಂದು ಶಾಸನದಲ್ಲಿ ಸಂಸ್ಕೃತದಲ್ಲಿ ಭಗವಾನ್ ಶಿವನ ಕುರಿತಾಗಿ ಬರೆದ ಸಾಲುಗಳಿವೆ.  ಮತ್ತೊಂದು ಶಾಸನವು ಜ್ವಾಲಾದೇವಿ ಕುರಿತಾಗಿ ಬರೆಯಲಾಗಿದೆ.  

  


 ಈ ದೇವಾಲಯವನ್ನು ಅಗ್ನಿ ದೇವಾಲಯ (Fire temple) ಎಂದು ಯಾಕೆ ಕರೆಯುತ್ತಾರೆ ಎಂದರೆ, ಇಲ್ಲಿರುವ ಸಪ್ತ ರಂಧ್ರಗಳಲ್ಲಿ ಸಹಸ್ರಾರು ವರ್ಷಗಳಿಂದ ಸತತವಾಗಿ ಬೆಂಕಿಯುರಿಯುತ್ತಿದೆ.  ಜೋರಾಷ್ಟ್ರಿಯನ್ ಪಾರ್ಸಿಗಳು ಮತ್ತು ಹಿಂದುಗಳು ಪವಿತ್ರವೆಂದು ಭಾವಿಸಿರುವ ಅಗ್ನಿಯನ್ನು ಪಾರ್ಸಿಗಳು ಮತ್ತು ಹಿಂದುಗಳು ಶತಮಾನಗಳಿಂದ ಪೂಜಿಸಿಕೊಂಡು ಬಂದಿದ್ದಾರೆ. ಬೆಂಕಿಯುಗುಳುವ ಈ ರಂಧ್ರಗಳಿರುವ ಜಾಗವನ್ನು ಇಲ್ಲಿನ ಭಾಷೆಯಲ್ಲಿ ಬಾಕು ಅತೆಷ್ಗಾ (Ateshgah of Baku) ಎಂದು ಹೇಳುತ್ತಾರೆ. ಪರ್ಷಿಯನ್ ಭಾಷೆಯಲ್ಲಿ ‘ಅತೇಶ್’ ಎಂದರೆ ಬೆಂಕಿ ಮತ್ತು ‘ಗಾಹ್’ ಎಂದರೆ ಹಾಸಿಗೆ ಎಂದರ್ಥ. ಅತೇಶ್ಗಾ ಒಂದು ಕಾಲದಲ್ಲಿ ನೈಸರ್ಗಿಕ ಅನಿಲ ಕ್ಷೇತ್ರವನ್ನು ಹೊಂದಿತ್ತು, ಈ ನೈಸರ್ಗಿಕ ಅನಿಲವೇ ಈ ಬೆಂಕಿಗೆ ಕಾರಣವಾಗಿದೆ. ಈ ಸ್ಥಳವನ್ನು ಪವಿತ್ರವೆಂದು ಪರಿಗಣಿಸಲಾಗಿದೆ ಎಂದು 7 ನೇ ಶತಮಾನದ ಅರ್ಮೇನಿಯನ್ ಭೂಗೋಳಶಾಸ್ತ್ರಜ್ಞ ಅನನಿಯಾ ಶಿರಕಾಟ್ಸಿ ಅವರ ಪುಸ್ತಕ ಅಶ್ಖರತ್ ಸುಯಟ್ಸ್  ದಾಖಲಿಸಿದ್ದಾರೆ. ದೇವಾಲಯವಿರುವ ಪಟ್ಟಣವನ್ನು ಸುರಖಾನಿ ಎಂದು ಕರೆಯಲಾಗುತ್ತದೆ, ಇದರರ್ಥ ಟಾಟ್ ಭಾಷೆಯಲ್ಲಿ 'ರಂಧ್ರವಿರುವ ಕಾರಂಜಿ ಎಂದು.  ಟಾಟ್ ಭಾಷೆಯು ಕ್ಯಾಸ್ಪಿಯನ್ ಸಮುದ್ರದ ಸುತ್ತಲಿನ ಟಾಟ್ ಜನರು ಮಾತನಾಡುವ ಪರ್ಷಿಯನ್ ಭಾಷೆಯಾಗಿದೆ. 

 


   ಇನ್ನು ಶಾಸನಗಳ ಬಗ್ಗೆ ಹೇಳುವುದಾದರೆ, ಅಬ್ರಹಾಂ ವ್ಯಾಲೆಂಟೈನ್ ವಿಲಿಯಮ್ಸ್ ಜಾಕ್ಸನ್ ಅವರ ಪುಸ್ತಕವಾದ "ಫ್ರಮ್  'ಕಾನ್ಸ್ಟಾಂಟಿನೋಪಲ್  ಟು ದ ಹೋಮ್ ಆಫ್ ಓಮರ್ ಖಯ್ಯಾಮ್" (From Constantinople to the home of Omar Khayyam)  ಪ್ರಕಾರ, ಶಾಸನಗಳನ್ನು 1668 ಮತ್ತು 1816 AD ನಡುವೆ ಕೆತ್ತಿಸಲಾಗಿದೆ. ಆರ್ಮೇನಿಯನ್ ವಿದ್ವಾಂಸರ ಪ್ರಕಾರ  ಈ ದೇವಾಲಯ ಪ್ರಾಕಾರವು ಎರಡನೇ ಶತಮಾನದಲ್ಲಿ ಪರ್ಶಿಯನ್ ದೊರೆಗಳ ಕಾಲಮಾನದಲ್ಲಿ ನಿರ್ಮಿಸಿರಬಹುದು ಎಂದು ಹೇಳಲಾಗಿದೆ. ಪರ್ಶಿಯನ್  ಸಸಾನಿಯನ್ ಸಾಮ್ರಾಜ್ಯದ ಸ್ಥಾಪಕ ಮೊದಲನೇ ಅರ್ದಾಶಿರ್ (180-242 AD) ಈ ಕಟ್ಟಡವನ್ನು ನಿರ್ಮಿಸಿರಬಹುದೆಂದು ಹೇಳಿದ್ದಾರೆ. ಅಜ಼ರ್ಬೈಜಾನ್ ದೇಶವು ಅಂದಿನ ಸಿಲ್ಕ್ ರೋಡ್ ನ ಭಾಗವಾಗಿದ್ದರಿಂದ ದಕ್ಷಿಣ ಏಶಿಯಾದ ಹಿಂದೂ ವ್ಯಾಪಾರಿಗಳು ಮುಂದೆ ಇದನ್ನ ಅಭಿವೃದ್ದಿ ಪಡಿಸಿ ಜ್ವಾಲಾದೇವಿಯನ್ನು ಆರಾಧಿಸುತಿದ್ದರು. ಜ್ವಾಲಾ ದೇವಿಯೆಂದು ಕರೆಯಲು ಕಾರಣವೇನೆಂದರೆ, ಶತಶತಮಾನಗಳಿಂದ ಇಲ್ಲಿನ ಸಪ್ತ ರಂಧ್ರಗಳು ಸತತವಾಗಿ ಬೆಂಕಿಯುಗುಳುತ್ತಿವೆ. ಇಲ್ಲಿ ದೊರೆಯುತ್ತಿರುವ ನೈಸರ್ಗಿಕ ಅನಿಲದಿಂದ ಒಂದು ದಿನವೂ ಈ ಬೆಂಕಿಯು ಆರುವುದಿಲ್ಲ.

    ಇಸ್ಲಾಂ ಧರ್ಮ ಪರ್ಶಿಯಾಗೆ ಏಳನೇ ಶತಮಾನದಲ್ಲಿ ಆಗಮಿಸಿತು, ಅಲ್ಲಿಯವರೆಗೂ ಈ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪಾರ್ಸಿಗಳು ವಾಸಿಸುತಿದ್ದರು. ಕ್ರಮೇಣ ಇಸ್ಲಾಂ ಧರ್ಮದ ಪ್ರಾಬಲ್ಯ ಹೆಚ್ಚುತಿದ್ದಂತೆ ಪಾರ್ಸಿಗಳು ಕಡಿಮೆಯಾದರೂ ಸಹ ಹತ್ತನೇ ಶತಮಾನದವರೆಗೂ ಈ ಸ್ಥಳದ ಸುತ್ತಮುತ್ತ ವಾಸಿಸುತಿದ್ದರು ಎಂದು ಇಲ್ಲಿನ ಅನೇಕ ದಾಖಲೆಗಳಲ್ಲಿ ಪ್ರಸ್ತಾಪಿಸಲಾಗಿದೆ. ಈ ಪ್ರಾಂತ್ಯದಲ್ಲಿ ಮುಸ್ಲಿಮರ ಪ್ರಾಬಲ್ಯ ಹೆಚ್ಚಿದಂತೆ, ಅಳಿದುಳಿದ ಜೋರಾಷ್ಟ್ರಿಯನ್ ಪಾರ್ಸಿಗಳು ಭಾರತದ ಕಡೆ ವಲಸೆ ಬಂದರು. ಏಳೆಂಟು ಶತಮಾನಗಳು ಪಾರ್ಸಿಗಳು ಈ ಕಡೆ ಮರಳಿ ಬಂದ ಬಗ್ಗೆ ಯಾವುದೇ ದಾಖಲೆಗಳು ಇಲ್ಲದೆ ಇದ್ದರೂ, ಹದಿನೇಳನೇ ಶತಮಾನದ ಅಂತ್ಯ ಭಾಗದಲ್ಲಿ ಮತ್ತೆ ಈ ಪ್ರಾಂತ್ಯಕ್ಕೆ ಬರಲಾರಂಭಿಸಿದರು. ಪಾಶ್ಚಿಮಾತ್ಯ ದೇಶಗಳಿಗೆ ಸಂಪರ್ಕಿಸುವ ಸಿಲ್ಕ್ ರೂಟ್ ನ ಭಾಗವಾಗಿದ್ದ ಈ ಪ್ರದೇಶಕ್ಕೆ ಹಿಂದೂ ಮತ್ತು ಸಿಖ್ ವ್ಯಾಪಾರಿಗಳು ವ್ಯಾಪಾರಕ್ಕಾಗಿ ಬರಲಾರಂಭಿಸಿದರು. 1683 ರಿಂದ 1880 ರವರೆಗೂ ದೊರೆತ ಹಲವಾರು ದಾಖಲೆಗಳಲ್ಲಿ ಈ ಉಲ್ಲೇಖವಿದೆ. ಭಾರತದಲ್ಲಿದ್ದ ಪಾರ್ಸಿಗಳು 1880 ರವರೆಗೆ ಭಾರತದಿಂದ ಪಾರ್ಸಿ ಪುರೋಹಿತರನ್ನು ಈ ಪ್ರದೇಶಕ್ಕೆ ಕಳುಹಿಸಿದ್ದರು ಎನ್ನುವ ಪುರಾವೆ ದೊರೆತಿದೆ. 1925 ರಲ್ಲಿ, ಡಾ. ಸರ್ ಜೀವಂಜಿ ಜಮ್ಶೆಡ್ಜಿ ಮೋದಿ ಎಂಬ ಪಾರ್ಸಿ ಪಾದ್ರಿಯು ಅತೇಶ್ಗಾಗೆ ಭೇಟಿ ನೀಡಿ, ಈ ದೇವಾಲಯವು ಹಿಂದೂ ಧಾರ್ಮಿಕ ಲಕ್ಷಣಗಳನ್ನು ಹೊಂದಿದೆ ಎಂದು ತೀರ್ಮಾನಿಸಿದ್ದರು. 

    ಇಲ್ಲಿ ಯಥೇಚ್ಚವಾಗಿ ದೊರೆಯುತಿದ್ದ ನೈಸರ್ಗಿಕ ಅನಿಲಕ್ಕಾಗಿ, ಅಂದಿನ ರಷ್ಯಾ ಒಕ್ಕೂಟವು ಇಲ್ಲಿ ನೈಸರ್ಗಿಕ ಅನಿಲ ಸ್ಥಾವರವನ್ನು ನಿರ್ಮಿಸಿ ದಶಕಗಳ ಕಾಲ ಸತತವಾಗಿ ಅನಿಲವನ್ನು ಹೊರ ತೆಗೆದರು. 1969 ರವರೆಗೆ ನೈಸರ್ಗಿಕವಾಗಿ ಉರಿಯುತ್ತಿದ್ದ ಜ್ವಾಲೆಯು ಸೋವಿಯೆಟ್ ರಷ್ಯಾದ ಅತಿರೇಕದಿಂದ ಬರಿದಾಯಿತು. ಈಗ ಬಾಕು ನಗರದಿಂದ ಗ್ಯಾಸ್ ಪೈಪ್‌ಲೈನ್‌ ಮುಖಾಂತರ ಉರಿಯುತ್ತಿರುವ ಬೆಂಕಿಗೆ ಇಂಧನವನ್ನು ಸರಬರಾಜು ಮಾಡಲಾಗುತ್ತಿದೆ.  ಅತೇಶ್ಗಾವನ್ನು 1998 ರಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾಣವನ್ನಾಗಿ ಪಟ್ಟಿಮಾಡಿದೆ.


ದೇಶದ ಭೌಗೋಳಿಕ ವಿವರ: 

ಈ ರಾಷ್ಟ್ರವನ್ನು ಅಧಿಕೃತವಾಗಿ  ಅಜೆರ್ಬೈಜಾನ್ ಗಣರಾಜ್ಯ ( Republic of Azerbaijan) ಎಂದು ಕರೆಯಲಾಗುತ್ತದೆ. ಅಜರ್ಬೈಜಾನ್ ಪಶ್ಚಿಮ ಏಷ್ಯಾ ಮತ್ತು ಪೂರ್ವ ಯುರೋಪ್ ಗಳ ಸಮ್ಮಿಲನದ ಜಾಗದಲ್ಲಿ ಇರುವ ಒಂದು ದೇಶ. ಪೂರ್ವಕ್ಕೆ ಕ್ಯಾಸ್ಪಿಯನ್ ಸಮುದ್ರ, ಉತ್ತರಕ್ಕೆ ರಷ್ಯಾ, ಪಶ್ಚಿಮಕ್ಕೆ ಟರ್ಕಿ ಮತ್ತು ಅರ್ಮೇನಿಯ, ಈಶಾನ್ಯಕ್ಕೆ ಜಾರ್ಜಿಯ ಮತ್ತು ದಕ್ಷಿಣಕ್ಕೆ ಇರಾನ್ ದೇಶ ದೊಂದಿಗೆ ಗಡಿಯನ್ನು ಹೊಂದಿದೆ.  ಸೋವಿಯೆಟ್ ರಷ್ಯದ ಒಂದು ಭಾಗವಾಗಿದ್ದ ಈ ರಾಷ್ಟ್ರ 1991ರಲ್ಲಿ ಸ್ವತಂತ್ರವಾಯಿತು. ಈ ದೇಶದ ವಿಸ್ತೀರ್ಣ ಹೇಳಬೇಕೆಂದರೆ, ಉತ್ತರ ದಕ್ಷಿಣವಾಗಿ 385 ಕಿಮೀ ಪೂರ್ವ ಪಶ್ಚಿಮವಾಗಿ 475 ಕಿಮೀ ಇರುವ ಇದರ ಒಟ್ಟು ವಿಸ್ತೀರ್ಣ 86,600 ಚ.ಕಿಮೀ. ಭೌಗೋಳಿಕವಾಗಿ ರಷ್ಯಾ, ಟರ್ಕಿ ಮತ್ತು ಇರಾನ್ ದೇಶಗಳಿಂದ ಆವರಿಸಲ್ಪಟ್ಟಿರುವ ಈ ದೇಶವು, ಸಾಂಸ್ಕೃತಿಕವಾಗಿ ಈ ದೇಶಗಳ ಸಂಸ್ಕೃತಿಯನ್ನು ಮೇಳೈಸಿಕೊಂಡಿದೆ. ಅಂದಾಜು ಒಂದು ಕೋಟಿ ಜನಸಂಖ್ಯೆ ಯನ್ನು ಈ ದೇಶಹೊಂದಿದೆ, ದೇಶದ ಬಹುಪಾಲು ಜನರು ಇಸ್ಲಾಂ ಧರ್ಮವನ್ನ ಪಾಲಿಸುತ್ತಾರೆ.  ಬಹಳಷ್ಟು ಜನರು ಟರ್ಕಿ ಮೂಲದವರು, ತಲಾ ಶೇ.8 ರಷ್ಟು ಜನರು ರಷ್ಯ ಮತ್ತು ಆರ್ಮೇನಿಯ ಮೂಲದವರು. ಜನಸಂಖ್ಯೆಯಲ್ಲಿ ಶೇ. 52 ಭಾಗ ಗ್ರಾಮೀಣದವರು. ಈ ದೇಶವು ಅರೆ ಮರುಭೂಮಿಯ ವಾಯುಗುಣವನ್ನು ಹೊಂದಿದೆ. ಬೇಸಿಗೆ ಅತಿ ಉಷ್ಣದಿಂದ ಕೂಡಿದ್ದು ಚಳಿಗಾಲವು ತಂಪಾಗಿರುತ್ತದೆ. ಕುವೈತ್ ಇರಾಕ್, ಇರಾನ್ ದೇಶಗಳು ಇಂತಹದ್ದೇ ವಾಯುಗುಣವನ್ನು ಹೊಂದಿವೆ. ಕುರಾ ಮತ್ತು ಅರಾಸ್ ನದಿಗಳು ಇಲ್ಲಿನ ಪ್ರಮುಖ ನದಿಗಳು. 

ಭಾಷೆ: 

ಅಜೆರ್ಬೈಜಾನ್‌ನ ಪ್ರಾಥಮಿಕ ಮತ್ತು ಅಧಿಕೃತ ಭಾಷೆ ಅಜೆರ್ಬೈಜಾನಿ ಆಗಿದೆ, ಇದು ತುರ್ಕಿಶ್ ಭಾಷೆ ಎಂದೇ ಹೇಳಬಹುದು ಅಷ್ಟರ ಮಟ್ಟಿಗೆ ಇದು ಆಧುನಿಕ ತುರ್ಕಿಕ್ ಭಾಷೆಗೆ ಬಹುತೇಕ ಹೋಲುತ್ತದೆ. ಟರ್ಕಿ ದೇಶದ ಜತೆಗೆ ನಿಕಟ ಸಂಬಂಧವನ್ನು ಈ ದೇಶ ಹೊಂದಿದೆ. ಈ ಅಜೆರ್ಬೈಜಾನಿ ಭಾಷೆಯು ಟರ್ಕಿಶ್, ತುರ್ಕಮೆನ್ ಮತ್ತು ಗಗೌಜ್ ಸೇರಿದಂತೆ ನೈಋತ್ಯ ತುರ್ಕಿಕ್ ಭಾಷಾ ಕುಟುಂಬದ ಒಗುಜ್ ಶಾಖೆಯ ಒಂದು ಕುಡಿ ಎಂದು ಹೇಳಬಹುದು.

ಅಜೆರ್ಬೈಜಾನ್‌ನ  ಪ್ರವಾಸಿ ಸ್ಥಳಗಳು:

ಅಜೆರ್ಬೈಜಾನ್‌ನಲ್ಲಿ ಬಹಳಷ್ಟು ಪ್ರವಾಸಿತಾಣಗಳಿವೆ. ಮಧ್ಯಪ್ರಾಚ್ಯದ ರಾಷ್ಟ್ರಗಳಿಗೆ ಅತಿ ಹತ್ತಿರವಾಗಿರುವುದರಿಂದ, ಬಹುತೇಕ ಜನರು ಸಾರ್ವಜನಿಕ ರಜಾದಿನಗಳಲ್ಲಿ ಇಲ್ಲಿಗೆ ಭೇಟಿ ನೀಡುತ್ತಾರೆ.  ಡಿಸೆಂಬರ್ ನಿಂದ ಮಾರ್ಚ್ ತಿಂಗಳಿನವರೆಗೆ ಅಜ಼ರ್ಬೈಜಾನ್ ದೇಶದ ಶಹದಾಗ್ ಮತ್ತು ಗಬಾಲಾದಂತಹ ಸ್ಥಳಗಳು ಹಿಮಾವೃತ್ತವಾಗುತ್ತವೆ. ಅತಿ ಹೆಚ್ಚು ಪ್ರವಾಸಿಗರು ಈ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡುತ್ತಾರೆ. 


ಬಾಕು:  

ಅಜೆರ್ಬೈಜಾನ್ ದೇಶದ ರಾಜಧಾನಿ ಬಾಕು. ಅಜೆರ್ಬೈಜಾನ್‌ನಲ್ಲಿ ನೋಡಲು ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿದೆ. ಈ ನಗರವು  ಕ್ಯಾಸ್ಪಿಯನ್‌ ಸಮುದ್ರ(Caspian Sea) ಹಾಗೂ ಕಾಕಸಸ್ ಪರ್ವತ ಪ್ರದೇಶದ ಅತ್ಯಂತ ದೊಡ್ಡ ನಗರವೂ ಹೌದು. ಇಲ್ಲಿಯ ಜನಸಂಖ್ಯೆ ಅಂದಾಜು ೨೦ ಲಕ್ಷ. ಈ ನಗರವು ದೇಶದ ಅತಿದೊಡ್ಡ ನಗರವಾಗಿದ್ದು ವಾಣಿಜ್ಯ ಮತ್ತು ವಿದ್ಯಾಕೇಂದ್ರವಾಗಿದೆ, ಆಧುನಿಕತೆಯನ್ನು ಒಪ್ಪಿಕೊಂಡಿರುವ ಈ ನಗರ, ಯುರೋಪಿನ ನಗರಗಳನ್ನ ಹೋಲುತ್ತದೆ.  ಇಲ್ಲಿನ ವಿಶೇಷವೇನೆಂದರೆ ಆಧುನಿಕ ಗಗನಚುಂಬಿ ಕಟ್ಟಡಗಳ ಜತೆಗೆ ಶತಶತಮಾನಗಳ ಹಳೆಯ ಕಟ್ಟಡಗಳನ್ನ ಹಳೆಯ ನಗರ (Icherisheher) ನೋಡಬಹುದು. ಬೆಂಕಿಯನ್ನು ಹೋಲುವಂತೆ ನಿರ್ಮಿಸಿರುವ ಪ್ರಸಿದ್ಧ ಫ್ಲೇಮ್ ಟವರ್‌ ಗಳು ಇಲ್ಲಿನ ಪ್ರವಾಸಿಗರ ಪ್ರೇಕ್ಷಣೀಯ ತಾಣವಾಗಿದೆ. 900 ಕ್ಕೂ ಹೆಚ್ಚು ಕಲಾಕೃತಿಗಳನ್ನು ಒಳಗೊಂಡಿರುವ ಮ್ಯೂಸಿಯಂ ಆಫ್ ಕಾಂಟೆಂಪರರಿ ಇದರ ಜೊತೆಯಲ್ಲಿ, ನಗರದಲ್ಲಿ ಅನೇಕ ಪ್ರೇಕ್ಷಣೀಯ ಸ್ಥಳಗಳಾದ, ಮೇಡನ್ ಟವರ್, ಶಿರ್ವಾನ್ ಶಾಸ್ ಅರಮನೆ, ಕಾರವಾನ್‌ಸೆರೈ, ಮೆಮೊರಿ ಅಲ್ಲೆ ಶೆಹಿಡ್ಲರ್ ಖಿಯಾಬಾನಿ, ನಿಜಾಮಿ ಸ್ಟ್ರೀಟ್, ಫೌಂಟೇನ್ ಸ್ಕ್ವೇರ್, ನಿಜಾಮಿ ಗಂಜಾವಿ ಸ್ಮಾರಕ, ರಸುಲ್-ಝಾಡೆ ಸ್ಟ್ರೀಟ್, ನ್ಯಾಷನಲ್ ಕಾರ್ಪೆಟ್ಸ್ ಮ್ಯೂಸಿಯಂ. ಬಾಕು ಹೈಲ್ಯಾಂಡ್ ಪಾರ್ಕ್, ಫ್ಲೇಮ್ ಟವರ್ಸ್ ಮತ್ತು ಹೇದರ್ ಅಲಿಯೆವ್ ಸೆಂಟರ್‌ ಹೀಗೆ ಹಲವಾರು ಸ್ಥಳಗಳಿವೆ.


ಗೋಬಸ್ತಾನ್ ರಾಷ್ಟ್ರೀಯ ಉದ್ಯಾನ (Gobustan National Park): 

ಬಾಕುವಿನ ನೈಋತ್ಯಕ್ಕೆ ಸುಮಾರು 64 ಕಿಮೀ ದೂರದಲ್ಲಿರುವ ಈ ರಾಷ್ಟ್ರೀಯ ಉದ್ಯಾನವನವು ತನ್ನ ಶಿಲಾಯುಗದ ಕಲ್ಲಿನ ಕೆತ್ತನೆಗಳು ಮತ್ತು ಮಣ್ಣಿನ ಜ್ವಾಲಾಮುಖಿಗಳಿಗೆ ಹೆಸರುವಾಸಿಯಾಗಿದೆ.

 - ಪೆಟ್ರೋಗ್ಲಿಫ್ಸ್: 10,000 B.C ವರೆಗಿನ 6,000 ಕ್ಕೂ ಹೆಚ್ಚು ಕಲ್ಲಿನ ಕೆತ್ತನೆಗಳು ಪ್ರಾಚೀನ ಮಾನವ ಜೀವನ ಮತ್ತು ವನ್ಯಜೀವಿಗಳ ಚಿತ್ರಣಗಳನ್ನು ಒಳಗೊಂಡಿವೆ.

 - ಮಡ್ ಜ್ವಾಲಾಮುಖಿಗಳು: ಅಜೆರ್ಬೈಜಾನ್ ಪ್ರಪಂಚದಲ್ಲೇ ಅತಿ ಹೆಚ್ಚು ಮಣ್ಣಿನ ಜ್ವಾಲಾಮುಖಿಗಳನ್ನು ಹೊಂದಿದೆ, ಇದು ಅನನ್ಯ ಭೌಗೋಳಿಕ ಅನುಭವವನ್ನು ನೀಡುತ್ತದೆ.




ಶೆಕಿ (Sheki):  

ಗ್ರೇಟರ್ ಕಾಕಸಸ್ ಪರ್ವತಗಳ ತಪ್ಪಲಿನಲ್ಲಿ ನೆಲೆಗೊಂಡಿರುವ ಒಂದು ಆಕರ್ಷಕ ಪಟ್ಟಣ, ಶ್ರೀಮಂತ ಇತಿಹಾಸ ಮತ್ತು ಸುಂದರವಾದ ವಾಸ್ತುಶಿಲ್ಪಕ್ಕೆ ಈ ಪ್ರಾಂತ್ಯ ಹೆಸರುವಾಸಿಯಾಗಿದೆ. ಇಲ್ಲಿರುವ ಶೆಕಿ ಖಾನ್ ಅರಮನೆ ಸಂಕೀರ್ಣವಾದ ಬಣ್ಣದ ಗಾಜು ಮತ್ತು ಟೈಲ್ ಕೆಲಸದಿಂದ ಅಲಂಕರಿಸಲ್ಪಟ್ಟ 18 ನೇ ಶತಮಾನದ ಅದ್ಭುತ ಅರಮನೆ. ಸಾಮಾನ್ಯವಾಗಿ ಪುರಾತನ ನಗರಗಳಲ್ಲಿ, ಸ್ಥಳೀಯ ಕರಕುಶಲ ವಸ್ತುಗಳ ಪ್ರದರ್ಶನ, ಮಾರಾಟ ಸಾಮಾನ್ಯವಾಗಿರುತ್ತದೆ. ಇಲ್ಲಿ ಸಾಂಪ್ರದಾಯಿಕ ಜವಳಿ, ಕುಂಬಾರಿಕೆ ಮತ್ತು ತಾಮ್ರದ ಸಾಮಾನುಗಳನ್ನು ಉತ್ಪಾದಿಸುವುದನ್ನ ಕಾಣಬಹುದು. 



ಗಾಂಜಾ (Ganja): 

ಅಜರ್‌ಬೈಜಾನ್‌ನ ಎರಡನೇ ಅತಿದೊಡ್ಡ ನಗರ, ಪುರಾತನ ಇತಿಹಾಸ ಮತ್ತು ಸಂಸ್ಕೃತಿಯನ್ನು ಇಲ್ಲಿ ನೋಡಬಹುದು. ಪ್ರಸಿದ್ಧ ಪರ್ಷಿಯನ್ ಕವಿ ನಿಜಾಮಿ ಗಂಜಾವಿಗೆ ಸಮರ್ಪಿತವಾಗಿರುವ ನಿಜಾಮಿ ಸಮಾಧಿ (Nizami Mausoleum) ಇಲ್ಲಿದೆ. ಈ ಸಮಾಧಿಯು ಸುಂದರ ವಾಸ್ತುಶಿಲ್ಪವನ್ನು ಹೊಂದಿದೆ. ಈ ನಗರದಲ್ಲಿರುವ ಜಾವದ್ ಖಾನ್ ಸ್ಟ್ರೀಟ್ (Javad Khan Street) ನಲ್ಲಿ ಕೆಫೆಗಳು, ಅಂಗಡಿಗಳು ಮತ್ತು ಐತಿಹಾಸಿಕ ತಾಣಗಳಿವೆ. ಸ್ಥಳೀಯ ಸಂಸ್ಕೃತಿಯಲ್ಲಿ ಅಡ್ಡಾಡಲು ಮತ್ತು ಅರಿತುಕೊಳ್ಳಲು ಈ ಜಾಗ ಸೂಕ್ತವಾಗಿದೆ.

ಕುಬಾ (Quba): 

ಅಜರ್‌ಬೈಜಾನ್‌ನ ಉತ್ತರ ಭಾಗದಲ್ಲಿರುವ ಒಂದು ಸುಂದರವಾದ ಪಟ್ಟಣ, ಇಲ್ಲಿ ಸುಂದರವಾದ ನಯನ ಮನೋಹರವಾದ ಪ್ರಕೃತಿ ಮತ್ತು ಸಾಂಸ್ಕೃತಿಕ ಮಹತ್ವಕ್ಕೆ ಹೆಸರುವಾಸಿಯಾಗಿದೆ. ಇಸ್ಲಾಮಿಕ್ ವಾಸ್ತುಶಿಲ್ಪವನ್ನು ಪ್ರತಿಬಿಂಬಿಸುವ ಸುಂದರವಾದ ಕುಬಾ ಮಸೀದಿ, ಪಟ್ಟಣದ ಕೇಂದ್ರ ಭಾಗದಲ್ಲಿದೆ. 1918ರ ನರಮೇಧದ ಬಲಿಯಾದವರ ನೆನಪಿಗಾಗಿ ನಿರ್ಮಿಸಲಾಗಿರುವ, ಕುಬಾ ಜಿನೊಸೈಡ್ ಮೆಮೋರಿಯಲ್ ಸ್ಮಾರಕ ಸಂಕೀರ್ಣ (Quba Genocide Memorial Complex) ಸ್ಮಾರಕ, ಇಲ್ಲಿ ಐತಿಹಾಸಿಕ ಮಹತ್ವದ ವಿಷಯಗಳ ಕುರಿತು ಆಸಕ್ತಿಯಿರುವವರು ಈ ಸ್ಮಾರಕಕ್ಕೆ ಭೇಟಿ ನೀಡುತ್ತಾರೆ. 

ಗಬಾಲಾ (Gabala) : 

ನೈಸರ್ಗಿಕ ಸೌಂದರ್ಯ ಮತ್ತು ಹೊರಾಂಗಣ ಚಟುವಟಿಕೆಗಳಿಗೆ ಹೆಸರುವಾಸಿಯಾದ ಜನಪ್ರಿಯ ರೆಸಾರ್ಟ್ ಪ್ರದೇಶ, ಬಾಕುದಿಂದ ಸುಮಾರು 225 ಕಿಮೀ ವಾಯುವ್ಯದಲ್ಲಿದೆ. ಟುಫಾಂಡಗ್ ಮೌಂಟೇನ್ ರೆಸಾರ್ಟ್ (Tufandag Mountain Resor) ನಲ್ಲಿ ಚಳಿಗಾಲದ ಸಮಯದಲ್ಲಿ ಸ್ಕೀಯಿಂಗ್ ಕ್ರೀಡೆಯನ್ನಾಡಬಹುದು ಮತ್ತು ಬೇಸಿಗೆಯಲ್ಲಿ ಹೈಕಿಂಗ್ ಮಾಡುವುದಕ್ಕೆ ಸೂಕ್ತ ಪ್ರದೇಶ, ಇಲ್ಲಿರುವ ಪರ್ವತಗಳ ಅದ್ಭುತ ನೋಟವನ್ನು ಸವಿಯುವುದೇ ಒಂದು ಖುಷಿ. ಪ್ರವಾಸಿಗರಿಗೆ ಮತ್ತೊಂದು ಆಕರ್ಷಣೀಯ ಸ್ಥಳ ಗಬಾಲಾ ಶೂಟಿಂಗ್ ಕ್ಲಬ್, ಇಲ್ಲಿ  ಶೂಟಿಂಗ್ ಕ್ರೀಡೆಗಳನ್ನಾಡಲು ಆಧುನಿಕ ಸೌಲಭ್ಯಗಳನ್ನ ರೂಪಿಸಲಾಗಿದೆ

ನಫ್ತಾಲನ್(Naftalan) : 

ಬಾಕುವಿನ ಪಶ್ಚಿಮಕ್ಕೆ ಸುಮಾರು 300 ಕಿಮೀ ದೂರದಲ್ಲಿರುವ ಚಿಕಿತ್ಸಕ ತೈಲ ಸ್ನಾನಗಳಿಗೆ ಪ್ರಸಿದ್ಧವಾದ ವಿಶಿಷ್ಟ ಸ್ಪಾ ಪಟ್ಟಣ. ನಮ್ಮ ಕೇರಳದ ಆಯುರ್ವೇದ ತೈಲ ಮಸಾಜ್ ನಂತೆ ಇಲ್ಲಿನ ಅನೇಕ ರೆಸಾರ್ಟ್ ಗಳಲ್ಲಿ  ವಿಶೇಷವಾಗಿ ಚರ್ಮ ಮತ್ತು ಕೀಲು ಸಮಸ್ಯೆಗಳಿಗೆ ನಫ್ತಾಲನ್ ಆಯಿಲ್ ಟ್ರೀಟ್ಮೆಂಟ್ ನೀಡಲಾಗುತ್ತದೆ.  

ಖಿನಾಲುಗ್ (Khinalug) : 

2,300 ಮೀಟರ್ ಎತ್ತರದಲ್ಲಿರುವ ಅಜೆರ್ಬೈಜಾನ್‌ನ ಅತಿ ಎತ್ತರದ ಮತ್ತು ಅತ್ಯಂತ ದೂರದ ಪರ್ವತ ಹಳ್ಳಿಗಳಲ್ಲಿ ಒಂದಾಗಿದೆ. ಹಳ್ಳಿಯು ಸುತ್ತಮುತ್ತಲಿನ ಪರ್ವತಗಳು ಮತ್ತು ಕಣಿವೆಗಳ ರಮಣೀಯ ದೃಶ್ಯಗಳು ಕಣ್ಮನ ಸೆಳೆಯುತ್ತವೆ.  ಪ್ರವಾಸಿಗರು ಸ್ಥಳೀಯ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಆತಿಥ್ಯದ ಅನುಭವವನ್ನು ಪಡೆಯಬಹುದು. 

 ಲಾಹಿಜ್ (Lahij) : 

ಕುಶಲಕರ್ಮಿಗಳ ಕರಕುಶಲತೆಗೆ ಹೆಸರುವಾಸಿಯಾದ ಐತಿಹಾಸಿಕ ಪರ್ವತ ಗ್ರಾಮ, ವಿಶೇಷವಾಗಿ  ಕರಕುಶಲತೆ ರೂಪಿಸುವ ತಾಮ್ರದ ಸಾಮಾನುಗಳನ್ನು ಇಲ್ಲಿ ನೋಡಬಹುದು. ಸ್ಥಳೀಯ ಕುಶಲಕರ್ಮಿಗಳು ತಮ್ಮ ಕೈಯಾರೆ ಸುಂದರವಾಗಿ ವಸ್ತುಗಳನ್ನು ಉತ್ಪಾದಿಸುವುದನ್ನ ಇಲ್ಲಿ ವೀಕ್ಷಿಸಬಹುದು. ಗ್ರಾಮವು ಸಾಂಪ್ರದಾಯಿಕ ವಾಸ್ತುಶೈಲಿ ಮತ್ತು ಸ್ಥಳೀಯ ಕಲ್ಲಿನಿಂದ ನಿರ್ಮಿಸಲಾದ ಅನನ್ಯ ಮನೆಗಳನ್ನು ಒಳಗೊಂಡಿದೆ. ಗ್ರಾಮದ ಬೀದಿಗಳು ಸಹ ಅಷ್ಟೇ ಸುಂದರವಾಗಿವೆ.

ಕ್ಯಾಸ್ಪಿಯನ್ ಸಮುದ್ರ (The Caspian Sea): 

ಈ ಸಮುದ್ರ ಮಿಕ್ಕ ಸಮುದ್ರಗಳಂತಲ್ಲ. ಇದು ಒಳನಾಡಿನ ಜಲರಾಶಿ, ಅಥವ ಒಳನಾಡಿನ ಜಲ ದ್ವೀಪ ಎನ್ನಬಹುದು. ಈ ಸಮುದ್ರದ ಸುತ್ತಲೂ ಭೂ ಪ್ರದೇಶವಿದೆ. ಈ ಸಮುದ್ರ ಮಿಕ್ಕ ಸಮುದ್ರಗಳಂತೆ ಒಂದನ್ನೊಂದು ಸೇರುವುದಿಲ್ಲ. ಸುಂದರವಾದ ಕಡಲತೀರಗಳು, ಕರಾವಳಿಯುದ್ದಕ್ಕೂ ವಿವಿಧ ರೆಸಾರ್ಟ್‌ಗಳು ಬೀಚ್ ಪ್ರೇಮಿಗಳು ಮತ್ತು ಜಲ ಕ್ರೀಡೆಗಳ ಉತ್ಸಾಹಿಗಳಿಗೆ ಕೈಬೀಸಿ ಕರೆಯುತ್ತವೆ. 

ಅಜರ್‌ಬೈಜಾನ್‌ನ ಸಂಸ್ಕೃತಿ, ಇತಿಹಾಸ ಮತ್ತು ನೈಸರ್ಗಿಕ ಸೌಂದರ್ಯದ ಕುರಿತು ಈ ಮೇಲೆ ತಿಳಿಸಿದ ಪ್ರವಾಸಿ ಆಕರ್ಷಣೆಗಳು ಇಲ್ಲಿರುವ ವೈವಿಧ್ಯಮಯ ಪರಿಸರ, ವಾತವರಣದ ಕುರಿತು  ಪ್ರವಾಸಿಗರನ್ನ ಸೆಳೆಯುತ್ತವೆ.


ಭಾನುವಾರ, ಮಾರ್ಚ್ 24, 2024

ಅನ್ಯಗ್ರಹ ದಂತೆ ಇರುವ ಸೊಕೊಟ್ರಾ ದ್ವೀಪ (Socotra, Yemen)

ಪ್ರಪಂಚದಲ್ಲಿ ಪ್ರತಿಯೊಂದು ಪ್ರದೇಶವು ತನ್ನದೇ ಆದ ವೈಶಿಷ್ಟ್ಯ ವನ್ನು ಹೊಂದಿರುತ್ತದೆ. ಕೆಲ ಜಾಗದಲ್ಲಿನ ವಿಶಿಷ್ಟತೆ ಬೇರೆಲ್ಲಿಯೂ ಇರುವುದಿಲ್ಲ. ಇಂತಹ ಹಲವಾರು ಪ್ರದೇಶಗಳು ಪ್ರಪಂಚದಲ್ಲಿ ಬಹಳಷ್ಟಿವೆ. ಒಮಾನ್ ರಾಷ್ಟ್ರದ ದಕ್ಷ್ಣಿಣ ದಿಕ್ಕಿನಲ್ಲಿರುವ ಸೊಕೊಟ್ರಾ ದ್ವೀಪವು  ತನ್ನದೇ ಆದ ವೈಶಿಷ್ಟತೆಯನ್ನು ಹೊಂದಿದೆ. ಭೂಮಿಯ ಮೇಲಿನ ಅನ್ಯಲೋಕದ ಸ್ಥಳದಂತೆ ಮತ್ತು ಇದು ಯಾವುದೋ ವೈಜ್ಞಾನಿಕ ಕಾಲ್ಪನಿಕ ಚಲನಚಿತ್ರದಂತೆ ಈ ಪ್ರದೇಶವಿರುವುದು ವಿಶೇಷ. ಭೂಮಿಯ ಮೇಲೆ ಈ ತರಹದ ಸ್ಥಳ ಇದೆಯಾ ಎಂದು ಬಹಳಷ್ಟು ಜನ ಆಶ್ಚರ್ಯ ಪಟ್ಟಿದ್ದಾರೆ.  ಈ ದ್ವೀಪಕ್ಕೆ ಸಂಸ್ಕೃತದಲ್ಲಿ ಸುಖಧಾರ ದ್ವೀಪ ಎಂದು ಕರೆಯಲಾಗುತ್ತದೆ. ಅರೇಬಿಕ್ ಪ್ರಕಾರ ಸೊಕೋಟ್ರಾ ಶಬ್ದವು ಎರಡು ಪದಗಳಿಂದ ರೂಪುಗೊಂಡಿದೆ. ಒಂದು ಸೂಕ್ ಮತ್ತೊಂದು ಕೊಟ್ರಾ. ಸೂಕ್ ಎಂದರೆ ಬಜಾರ್. ಕೊಟ್ರಾ ಎಂದರೆ, ಡ್ರಾಗನ್ ಬ್ಲಡ್ ಟ್ರೀಯಿಂದ ತೊಟ್ಟಿಕ್ಕುವ ಅಂಟು ಅಥವ ರಸ ಎನ್ನುವ ಅರ್ಥವಿದೆ.

 


ಭೌಗೋಳಿಕ ವಿವರ:

ಭೌಗೋಳಿಕವಾಗಿ ನೋಡುವುದಾದರೆ, ಹಿಂದೂ ಮಹಾಸಾಗರದಲ್ಲಿನ ಯೆಮೆನ್ ಗಣರಾಜ್ಯದ ಭಾಗವಾಗಿರುವ ಈ ದ್ವೀಪ, ಆಫ್ರಿಕಾದ ಖಂಡದ ಸೋಮಾಲಿಯಾ ದೇಶದ ತುತ್ತ ತುದಿಯಿಂದ ಪೂರ್ವಕ್ಕೆ 240 ಕಿಲೋಮೀಟರ್ (150 ಮೈಲಿ) ಮತ್ತು ಅರೇಬಿಯನ್ ಪೆನಿನ್ಸುಲಾದ ಯೆಮನ್ ರಾಷ್ಟ್ರದ ದಕ್ಷಿಣಕ್ಕೆ 380 ಕಿಲೋಮೀಟರ್ ದೂರದಲ್ಲಿದೆ. ಈ ದ್ವೀಪವು ಸರಿಸುಮಾರು 132 ಕಿಲೋಮೀಟರ್ ಉದ್ದ ಮತ್ತು 49.7 ಕಿಲೋಮೀಟರ್ ಅಗಲವನ್ನು ಹೊಂದಿದೆ.  ಒಟ್ಟು 3796 ಚದರ ಕಿಲೋಮೀಟರ್ ವಿಸ್ತೀರ್ಣವಿದೆ. ಭೌಗೋಳಿಕವಾಗಿ ಈ ಸ್ಥಳವನ್ನು ಮೂರು ಮುಖ್ಯ ವಲಯಗಳಾಗಿ ವಿಂಗಡಿಸಬಹುದು, ಕರಾವಳಿ ಬಯಲು ಪ್ರದೇಶ, ಸುಣ್ಣಕಲ್ಲಿನ ಪ್ರಸ್ಥಭೂಮಿ (limestone plateau) ಮತ್ತು ಹಜೀರ್ / ಹಗ್ಗಿಯರ್ ಪರ್ವತಗಳು (Hajhir / Hagghier mountains). ಯಮೆನ್, ಒಮಾನ್, ಸೌದಿ ಅರೇಬಿಯಾದ ದೇಶಗಳು ಹತ್ತಿರದಲ್ಲಿರುವುದರಿಂದ ಈ ದ್ವೀಪ ಅರೆ ಮರುಭೂಮಿಯ ಹವಾಮಾನವನ್ನು ಹೊಂದಿದೆ ಮತ್ತು ಸರಾಸರಿ ತಾಪಮಾನವು 25 ಡಿಗ್ರಿಗಳಿಗಿಂತ ಹೆಚ್ಚಾಗಿರುತ್ತದೆ. ಅಲ್ಪ ಪ್ರಮಾಣದಲ್ಲಿ ಮಳೆ ಇಲ್ಲಿ ಬೀಳುತ್ತದೆ. ಭಾರತದಂತೆ, ಜೂನ್ ನಿಂದ ಸೆಪ್ಟೆಂಬರ್ ರವರೆಗೂ ಇಲ್ಲಿ ಮುಂಗಾರು ಇರುತ್ತದೆ.

 


ಇಲ್ಲಿನ ಮೂಲನಿವಾಸಿಗಳು ಸೊಕೋಟ್ರಿ ಎನ್ನುವ ಸ್ಥಳೀಯ ಭಾಷೆಯಲ್ಲಿ ಮಾತನಾಡುತಿದ್ದಾರೆ. ಅಂದಾಜು ಎರಡು ಸಾವಿರ ವರ್ಷಕ್ಕೂ ಹೆಚ್ಚಿನ ಇತಿಹಾಸ ಈ ಭಾಷೆಗೆ ಇದೆ. ಈ ಭಾಷೆಗೆ ಯಾವುದೇ ಲಿಪಿಯಿಲ್ಲ. ಇಲ್ಲಿನ ಪ್ರಮುಖ ಪಟ್ಟಣ "ಹದಿಬು". ಜನಸಂಖ್ಯೆ 60000. ಇಲ್ಲಿನ ಜನಾಂಗದ ಬಗ್ಗೆ ಹೇಳುವುದಾದರೆ, ಪ್ರಧಾನವಾಗಿ ಸೊಕೊಟ್ರಿ ಗಳು ಬಹುಸಂಖ್ಯಾತರು, ಮಿಕ್ಕುಳಿದಂತೆ ಅಲ್ಪಸಂಖ್ಯಾತ ಯೆಮೆನಿಗಳು, ಹದರೆಮ್ ಮತ್ತು ಮೆಹ್ರಿಸ್ ಜನಾಂಗದ ಜನರು ಇಲ್ಲಿದ್ದಾರೆ. ಈ ದ್ವೀಪವು ಗಲ್ಫ್ ಆಫ್ ಏಡೆನ್ ಬಳಿ ಆಯಕಟ್ಟಿನ ಸ್ಥಳದಲ್ಲಿದ್ದರೂ, ಸಮುದ್ರ ಪ್ರಯಾಣದ ನ್ಯಾವಿಗೇಶನ್ ಗೆ ಸಂಭಂಧಿಸಿದ ಸಮಸ್ಯೆಗಳಿಂದ ಸೊಕೊಟ್ರಾ ಎಂದಿಗೂ ಪ್ರಮುಖ ವ್ಯಾಪಾರ ಕೇಂದ್ರವಾಗಲಿಲ್ಲ. ಮುಂಗಾರಿನಲ್ಲಿ ಕಡಲ ತೀರಕ್ಕೆ ಅಪ್ಪಳಿಸುವ ರಭಸದ ಅಲೆಗಳಿಂದಾಗಿ ಇಲ್ಲಿನ ಸಮುದ್ರ ತೀರಗಳು ಹಡಗುಗಳನ್ನು ಲಂಗರು ಹಾಕುವುದಿಕ್ಕೆ ಯೋಗ್ಯವಾಗಿರಲಿಲ್ಲ.

 


* ಇಲ್ಲಿನ ವಿಶೇಷ:* ಸೊಕೊಟ್ರಾವು ಕಠಿಣ ಹವಾಮಾನವನ್ನು ಹೊಂದಿದೆ. ಅತ್ಯಂತ ಬಿಸಿ ಮತ್ತು ಶುಷ್ಕ ವಾತಾವರಣವಿರುವುದರಿಂದ ಈ ದ್ವೀಪವು ತುಂಬಾ ವಿಶಿಷ್ಟ ವಾಗಿದೆ. ಇಲ್ಲಿ ಕಂಡು ಬರುವ  ವಿಭಿನ್ನ ಸಸ್ಯ ಮತ್ತು ಪ್ರಾಣಿಗಳ ಜೀವ ವೈವಿಧ್ಯಗಳ ಕಾರಣದಿಂದಾಗಿ ಪ್ರಪಂಚದ ವಿಚಿತ್ರವಾದ ಪ್ರದೇಶ ಎಂದು ಇದನ್ನು ಗುರುತಿಸಲಾಗಿದ್ದು, ಇಲ್ಲಿ ಕಾಣ ಸಿಗುವ ಪ್ರಾಣಿ, ಪಕ್ಷಿ  ಹೂಗಳು ಮತ್ತು ಇಲ್ಲಿರುವ ಸಸ್ಯ ರಾಶಿಗಳ ಮೂರನೇ ಒಂದು ಭಾಗವು  ಪ್ರಪಂಚದ ಇತರ ಭಾಗದಲ್ಲಿ ಕಾಣಸಿಗುವುದಿಲ್ಲ ಎನ್ನುವುದು ಇಲ್ಲಿನ ವಿಶೇಷ. ಈ ಜಾಗ 825 ಸಸ್ಯ ಪ್ರಭೇದಗಳಿಗೆ ನೆಲೆಯಾಗಿದೆ, ಅವುಗಳಲ್ಲಿ 308 (37%) ಸ್ಥಳೀಯವಾಗಿವೆ. ಈ ಜಾತಿಯ ಗಿಡಗಳು ಭೂಮಿಯ ಮೇಲೆ ಎಲ್ಲಿಯೂ ಕಂಡುಬರುವುದಿಲ್ಲ. ಭೂಮಿಯ ಮೇಲೆ ಅನ್ಯಲೋಕದ ಸ್ಥಳವೆಂದೇ ಇದನ್ನು ಗುರುತಿಸಲಾಗುತ್ತಿದೆ. ವಿಶ್ವದ ಅತ್ಯುತ್ತಮ ಅಲೋವೇರ, ಅಂಬರ್, ಕಸ್ತೂರಿ, ಮುತ್ತುಗಳು ಮತ್ತಿತರ ವಸ್ತುಗಳು ಇಲ್ಲಿ ದೊರಕುತ್ತವೆ.  ಕ್ರಿ.ಪೂ 2400 ವರ್ಶಗಳ  ಹಿಂದಿನಿಂದಲೂ  ಸೊಕೊಟ್ರಾ ದ್ವೀಪವು ಸುಗಂಧ ದ್ರವ್ಯ, ಮಿರ್ಹ್ ಮತ್ತು ಅಲೋವೇರ ಮಾತ್ರವಲ್ಲದೆ ಡ್ರ್ಯಾಗನ್‌ ಬ್ಲಡ್ ಮರ ದಿಂದ ಒಸರುವ ಅಂಟನ್ನು ರಫ್ತು ಮಾಡುತಿದ್ದ ಬಗ್ಗೆ ದಾಖಲೆಗಳು ಲಭ್ಯವಿದೆ.  ಡ್ರ್ಯಾಗನ್‌ ಬ್ಲಡ್ ಟ್ರೀ ಮತ್ತು ಸೊಕೊಟ್ರಾದ ಮರುಭೂಮಿ ಗುಲಾಬಿ ಸೇರಿದಂತೆ ವಿಶಿಷ್ಟ ಸಸ್ಯ ಮತ್ತು ಪ್ರಾಣಿಗಳಿಗೆ ಈ ದ್ವೀಪವು ನೆಲೆಯಾಗಿದೆ. ಸಾಂಪ್ರದಾಯಿಕ ಔಷಧಿಗಳಲ್ಲಿ ಚರ್ಮದ ಚಿಕಿತ್ಸೆಯಾಗಿ ಬಳಸಲಾಗುವ ಉತ್ತಮ ಗುಣಮಟ್ಟದ ಅಲೋ ವೆರಾ ಗಿಡಗಳು ನೈಸರ್ಗಿಕವಾಗಿ ಇಲ್ಲಿ ಬೆಳೆಯುತ್ತಿವೆ. ಭೂಮಿಯ ಮೇಲೆ ಕೆಲವೇ ಕೆಲವು ದ್ವೀಪಗಳು ಮಾತ್ರ ಹೆಚ್ಚಿನ ಸಂಖ್ಯೆಯ ಸ್ಥಳೀಯ ಪ್ರಭೇದಗಳನ್ನು ಹೊಂದಿವೆ, ಅವು, "ಸೊಕೋಟ್ರ",  "ಹವಾಯಿ" ಮತ್ತು "ಗ್ಯಾಲಪಗೋಸ್" ದ್ವೀಪಗಳು.

 




ಡ್ರ್ಯಾಗನ್‌ ಬ್ಲಡ್ ಟ್ರೀ:- ಗೇಮ್ ಆಫ್ ಥ್ರೋನ್ಸ್ ನಲ್ಲಿ ಕಂಡು ಬರುವ ಮರಗಳು ಇವೆಯಲ್ಲ, ಅದೇ ತರಹ ಮರಗಳು ಈ ದ್ವೀಪದಲ್ಲಿವೆ. ಅದನ್ನ ಡ್ರ್ಯಾಗನ್‌ ಬ್ಲಡ್ ಟ್ರೀ  ಎಂದು ಕರೆಯುತ್ತಾರೆ. ಸಸ್ಯಶಾಸ್ತ್ರದ ವೈಜ್ನಾನಿಕ ಹೆಸರು Dracaena cinnabari ಎನ್ನುತ್ತಾರೆ. ಈ ಜಾತಿಯ ಮರ ಬೇರೆಲ್ಲಿಯೂ ಬೆಳೆಯುವುದಿಲ್ಲ.  ಈ ಗಿಡದಿಂದ ತೊಗಟೆಯಿಂದ ಒಸರುವ ರಸವು ಔಷದೀಯ ಗುಣ ಮತ್ತು ಮಾಂತ್ರಿಕ ಶಕ್ತಿಯನ್ನು ಹೊಂದಿದೆ ಎಂದು ಸ್ಥಳೀಯರು ನಂಬುತ್ತಾರೆ.  ಮಧ್ಯ ಪ್ರಾಚೀನಯುಗದಲ್ಲಿ ಡ್ರಾಗನ್ ಮರದ ರಕ್ತದಂತಹ ಕೆಂಪು ರಸವನ್ನು ಮಾಂತ್ರಿಕ ಮತ್ತು ರಸಾಯನ ಶಾಸ್ತ್ರದ ವಿದ್ಯೆಯಲ್ಲಿ ಬಳಸಲಾಗುತ್ತಿತ್ತು. ಇಲ್ಲಿನ ದಂತಕಥೆಯ ಪ್ರಕಾರ, ಯುದ್ದದಲ್ಲಿ ಆಗುವ ಗಾಯಗಳನ್ನು ಅತಿ ಬೇಗ ವಾಸಿಮಾಡಿಕೊಳ್ಳುವುದಕ್ಕಾಗಿ ಡ್ರಾಗನ್ ಮರದಿಂದ ಒಸರುವ ಈ ಅಂಟಿನಂತಹ ರಾಳವನ್ನು ಗ್ಲಾಡಿಯೇಟರ್ ಗಳು ಮೈಮೇಲೆ ಉಜ್ಜಿಕೊಳ್ಳುತಿದ್ದರಂತೆ. ಹಿಂದಿನ ಕಾಲದಿಂದಲೂ ಈ ಮರಕ್ಕೆ ಅಮೂಲ್ಯವಾದ ಸ್ಥಾನವಿದ್ದು, ಇಂದಿಗೂ ಇದು ಪ್ರಾಶಸ್ತ್ಯವನ್ನು ಪಡೆದಿದೆ. ಈ ಮರಗಳಲ್ಲಿ ದೊರಕುವ ಅಂಟು, ಹಡಗು ನಿರ್ಮಾಣಕ್ಕೆ ಉಪಯೋಗಿಸಲಾಗುತಿತ್ತಂತೆ, ಈ ಅಂಟಿಗಾಗಿ ಮಧ್ಯಪ್ರಾಚ್ಯ ರಾಷ್ಟ್ರಗಳು ಸೇರಿದಂತೆ ವಿವಿಧ ದೇಶಗಳಿಂದ ಬೇಡಿಕೆಯಿತ್ತು.

 

ಸಾಂಭ್ರಾಣಿ: ಈ ಪ್ರದೇಶದಲ್ಲಿ ಸಾಂಭ್ರಾಣಿ ಮರಗಳು ಇವೆ. ನಮ್ಮ ಲೋಭಾನದ ಅಂಟು ಈ ಮರಗಳಿಂದ ಉತ್ಪತ್ತಿಯಾಗುತ್ತದೆ. ಅದನ್ನು ಇಲ್ಲಿನ ಜನರು ಸಂಗ್ರಹಿಸಿ ಮಾರುತಿದ್ದರಂತೆ. ದೇಶ ವಿದೇಶಗಳಿಂದ ಈ ಪ್ರದೇಶ ದಿಂದ ಹಾದು ಹೋಗುವಾಗ, ಇಲ್ಲಿ ಉತ್ತಮ ದರ್ಜೆಯ ಲೋಭಾನ ಸೇರಿದಂತೆ ಇನ್ನಿತರೆ ವಸ್ತುಗಳ ಮಾರಾಟ ಇಲ್ಲಿ ನಡೆಯುತಿತ್ತು.

 

UNESCO ವಿಶ್ವ ಪರಂಪರೆಯ ತಾಣ: ಈ ದ್ವೀಪದಲ್ಲಿರುವ ವಿಶಿಷ್ಟ ಸಸ್ಯ ಪ್ರಭೇದಗಳು, ಪ್ರಾಣಿ ಪಕ್ಷಿಗಳ ಸಂಕುಲವನ್ನು ಸಂರಕ್ಷಿಸಲು  2008 ರಲ್ಲಿ ವಿಶ್ವ ಪಾರಂಪಾರಿಕ ತಾಣಗಳ ಪಟ್ಟಿಯಲ್ಲಿ ಗುರುತಿಸಲಾಗಿದೆ. 

 


ಭಾರತದೊಂದಿಗಿನ ನಂಟು:

ಈ ದ್ವೀಪಕ್ಕೆ ಸಂಸ್ಕೃತದಲ್ಲಿ ಸುಖಧಾರ ದ್ವೀಪ ಎಂದು ಕರೆಯಲಾಗುತ್ತದೆ, ಕಾಲಕ್ರಮೇಣ ಬಳಕೆಯಲ್ಲಿ ಇಂದು ಅಪಭ್ರಂಶವಾಗಿ ಸೊಕೋಟ್ರಾ ವಾಗಿದೆ. ಸಂಶೋಧಕ ಪೀಟರ್ ಡಿ ಗೀಸ್ಟ್ ನೇತೃತ್ವದಲ್ಲಿ, ಇಲ್ಲಿ ಸಂಶೋದನೆ ನಡೆಸಿದಾಗ ಪ್ರಾಚೀನ ಭಾರತೀಯ ಬ್ರಾಹ್ಮಿ ಮತ್ತು ಖರೋಷ್ಟಿ ಲಿಪಿಗಳಲ್ಲಿನ  ಬರಹಗಳುಳ್ಳ ವಸ್ತುಗಳು ಇಲ್ಲಿ ದೊರೆತಿವೆ.  ಇವು ಎರಡನೇ ಶತಮಾನದಿಂದ ನಾಲ್ಕನೇ ಶತಮಾನದವರೆಗಿನ ಹಿಂದಿನ ಅವಧಿಯವು ಎಂದು ಹೇಳಲಾಗುತ್ತಿದೆ. ಅವರ ಸಂಶೋಧನೆಯ ಪ್ರಕಾರ, ದ್ವೀಪಕ್ಕೆ ಭೇಟಿ ನೀಡಿದ ವಸಾಹತುಗಾರರು, ನಾವಿಕರು ಮತ್ತು ವ್ಯಾಪಾರಿಗಳು ಇಲ್ಲಿನ ಗುಹೆಗಳಲ್ಲಿ ಆಶ್ರಯ ಪಡೆದಿರುವ ಸಾಧ್ಯತೆಗಳಿವೆ  ಎನ್ನಲಾಗಿದೆ. ಈ ಬರಹಗಳಲ್ಲಿ ಗುಹೆಯಲ್ಲಿ ಆಶ್ರಯ ಪಡೆದಿದ್ದ ವಿವಿಧ ನಾವಿಕರು ಮತ್ತು ವಸಾಹತುಗಾರರ ಹೆಸರುಗಳನ್ನು ಒಳಗೊಂಡಿವೆ ಎಂದು ಅನ್ವೇಷಿಸಿದ್ದಾರೆ. ಇವರೆಲ್ಲರ ಹೆಸರು ಮತ್ತು ಊರು ಅಖಂಡ ಭಾರತ ದೇಶಕ್ಕೆ ಸಂಭಂಧಿಸಿದಾಗಿದೆ. ಇಲ್ಲಿನ ಕ್ಯಾಂಬೆ ಕೊಲ್ಲಿಯಲ್ಲಿ ದೊರೆತ ಒಂದು ಬರಹದಲ್ಲಿ,  ಹಸ್ತಕವಪ್ರದ ವಿಷ್ಣುಸೇನ ಎನ್ನುವ ಹೆಸರನ್ನು ಬ್ರಾಹ್ಮಿ ಲಿಪಿಯಲ್ಲಿ ಕೆತ್ತಲಾಗಿದೆ. ಇನ್ನೊಂದು ಬರಹದಲ್ಲಿ ಉಪಶೀಲ ಎನ್ನುವ ಗಾಂಧಾರದ (ಇಂದಿನ ಅಫ್ಘಾನಿಸ್ತಾನ) ವ್ಯಕ್ತಿಯ ಹೆಸರನ್ನು ಖರೋಷ್ಟಿ ಲಿಪಿಯಲ್ಲಿ ಕೆತ್ತಲಾಗಿದೆ.

 


ಭಾರತ, ಆಫ್ರಿಕ ಮತ್ತು ಅರೇಬಿಯಾದ ಕಡಲು ಮಾರ್ಗದ ಆಯಕಟ್ಟಿನ ಜಾಗದಲ್ಲಿ ಈ ಪ್ರದೇಶವಿದ್ದಿದ್ದರಿಂದ ಇಲ್ಲಿ ಭಾರತೀಯ ವ್ಯಾಪಾರಿಗಳು ಸಾವಿರಾರು ವರ್ಷಗಳ ಹಿಂದೆಯೇ ಈ ಪ್ರದೇಶದ ಮುಖಾಂತರ ಹಾದು ಹೋಗುತಿದ್ದರು ಮತ್ತು ಕೆಲವರು ಇಲ್ಲಿ ನೆಲೆಸಲು ಪ್ರಾರಂಭಿಸಿದ್ದರು. ಹಾಗೆಯೇ, ಭಾರತೀಯ ವ್ಯಾಪಾರಿಗಳು ಪಾಶ್ಚಿಮಾತ್ಯ ರಾಷ್ಟ್ರಗಳೊಂದಿಗೆ ವ್ಯಾಪಾರ ವಹಿವಾಟು ನಡೆಸಲು ಅಂದಿನ ಅಖಂಡ ಭಾರತದ ಉತ್ತರದ ವ್ಯಾಪಾರಿಗಳು ಒಳನಾಡಿನಿಂದ ಗುಜರಾತಿನ ಕರಾವಳಿಯಲ್ಲಿರುವ ಭರೂಚ್ ನಗರದಿಂದ ಅರಬ್ಬಿ ಸಮುದ್ರ ಮಾರ್ಗವಾಗಿ ಪಯಣಿಸುತಿದ್ದರೆನ್ನುವುದಕ್ಕೆ ಇಲ್ಲಿ ದೊರೆತ ದಾಖಲೆಗಳು ಬಲವಾದ ಪುರಾವೆ ನೀಡುತ್ತವೆ. ಇದಕ್ಕೆ ಪೂರಕವೆಂಬಂತೆ ಹರಪ್ಪ ಮೆಹಂಜಾದಾರೋ ಸಮಯದಿಂದಲೂ ಅರಬ್ ರಾಷ್ಟ್ರಗಳೊಂದಿಗೆ ಭಾರತೀಯರು ವ್ಯಾಪಾರ ವಹಿವಾಟು ನಡೆಸುತಿದ್ದ ದಾಖಲೆಗಳು ಒಮಾನ್ ನಲ್ಲಿ ದೊರೆತಿವೆ.

 


ದ್ವೀಪದಲ್ಲಿನ ಹೋಕ್ ಗುಹೆಯಲ್ಲಿ 4 ನೇ ಶತಮಾನದ ವಿಗ್ರಹಗಳು ದೊರೆತಿವೆ. ಈ ಗುಹೆಯಲ್ಲಿ ಸಿಕೋಟ್ರಿ ಮಾತ ಎನ್ನುವ ದೇವರನ್ನು ಪೂಜಿಸುತಿದ್ದರು. ಭಾರತೀಯ ನಾವಿಕರು ಮತ್ತು ವ್ಯಾಪಾರಿಗಳು, ಸಮುದ್ರ ಮಾರ್ಗದಿಂದ ಹಾದು ಹೋಗುವಾಗ, ಯಾವುದೇ ಅಡಚಣೆಗಳು ಎದುರಾಗದಿರಲಿ ಎಂದು ಇಲ್ಲಿ ಪ್ರಾರ್ಥಿಸುತಿದ್ದರು. ಚಿಕ್ಕದಾದ ಮರದ ಹಡಗನ್ನು ಪೂಜಿಸಿ ದೇವತೆಯ ಪಾದದಲ್ಲಿಟ್ಟು ನಮಸ್ಕರಿಸುತಿದ್ದರಂತೆ. ಈಗ ಗುಜರಾತಿನಲ್ಲಿ ಕಂಡು ಬರುವ ಸಿಕೋಟ್ರಿ ಮಾತಾ ಎನ್ನುವ ದೇವಸ್ಥಾನಗಳು ಈ ಸೊಕೋಟ್ರಾ ದಲ್ಲಿ ಪ್ರಾರಂಭಿಸಿದ ನಂಬಿಕೆಯಿಂದ ಪೂಜಿಸಲ್ಪಡುತ್ತಿವೆ ಎಂದು ಹೇಳಲಾಗುತ್ತಿದೆ. ಈ ದೇವತೆ, ನಾವಿಕರು ಮತ್ತು ವ್ಯಾಪಾರಿಗಳಿಗೆ ರಕ್ಷಣೆ ನೀಡುತಿದ್ದಳಂತೆ.

 

ಸಾವಿರಾರು ವರ್ಷಗಳ ಹಿಂದಿನಿಂದಲೂ ಭಾರತದೊಂದಿಗಿನ ಸಂಭಂದದ ಕುರಿತಾಗಿ ಹೇಳುವಾಗ, ಒಂದು ಮಹತ್ವದ ವಿಷಯ ಪ್ರಸ್ತಾಪಿಸಬೇಕು. ನಾವು ಧೈನಂದಿನ ಅಡುಗೆಯಲ್ಲಿ ಬಳಸುವ ತುಪ್ಪವನ್ನು ಇಲ್ಲಿಗೆ ಪರಿಚಯಿಸಿದವರು ಭಾರತೀಯರು. ಇಂದು ಅತಿ ಹೆಚ್ಚು, ಉತ್ಕೃಷ್ಟ ಮಟ್ಟದ ತುಪ್ಪ ಇಲ್ಲಿ ತಯಾರಾಗಿ ಪಕ್ಕದ ರಾಷ್ಟ್ರಗಳಿಗೆ ಇಲ್ಲಿಂದ ರಫ್ತು ಮಾಡಲಾಗುತ್ತದೆ.

 


ಪೋರ್ಚೂಗೀಸರ ಆಕ್ರಮಣ:  ಭಾರತದ ಸಂಪತ್ತಿನ ಬಗ್ಗೆ ಇದ್ದ ರೋಚಕ ವಿಷಯಗಳಿಂದ ಆಕರ್ಷಿತರಾಗಿದ್ದ ಪೋರ್ಚುಗೀಸರು, ನಾವಿಕ ವಾಸ್ಕೋಡಗಾಮನ ಮುಖಾಂತರ ಭಾರತಕ್ಕೆ ಸಮುದ್ರ ಮಾರ್ಗವನ್ನ ಕಂಡುಹಿಡಿಯುತ್ತಾರೆ, ನಂತರ, ತಮ್ಮ ದೊಡ್ಡ ಸೈನ್ಯದೊಂದಿಗೆ ಆಫ್ರಿಕಾದಿಂದ ಹಿಡಿದು, ಯಮೆನ್, ಒಮಾನ್, ಪಾಕಿಸ್ತಾನ್, ಭಾರತದ ಕರಾವಳಿ ಪ್ರದೇಶಗಳನ್ನು ತಮ್ಮ ವಶಕ್ಕೆ ಪಡೆಯುತ್ತ ಹೋಗುತ್ತಾರೆ. ಹಿಂದೂ ಮಹಾಸಾಗರ, ಅರಬ್ಬಿ ಸಮುದ್ರದ ಕಡಲುಮಾರ್ಗಗಳ ಮೇಲೆ ಸಂಪೂರ್ಣ ಹಿಡಿತವನ್ನು ಅವರು ಹೊಂದುತ್ತಾರೆ.

     1507 ರಲ್ಲಿ, ಅಫೊನ್ಸೊ ಡಿ ಅಲ್ಬುಕರ್ಕ್ ಅವರೊಂದಿಗೆ ಟ್ರಿಸ್ಟಾವೊ ಡ ಕುನ್ಹಾ ನೇತೃತ್ವದಲ್ಲಿ ಪೋರ್ಚುಗೀಸ್ ನೌಕಾಪಡೆಯು ಸೊಕೊಟ್ರಾ ದಲ್ಲಿ ಇಳಿದು ಅಲ್ಲಿ ಆಳ್ವಿಕೆ ನಡೆಸುತಿದ್ದ ಮೆಹರಾ ಸುಲ್ತಾನರ ವಿರುದ್ಧ ಯುದ್ಧ ಮಾಡಿ ಜಯಿಸಿದ ನಂತರ ಆ ಬಂದರನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುತ್ತಾರೆ. ಭಾರತಕ್ಕೆ ಹೋಗುವ ಮಾರ್ಗದಲ್ಲಿ ಈ ಆಯಕಟ್ಟಿನ ಸ್ಥಳದಲ್ಲಿ ತಮ್ಮ ರಕ್ಷಣಾ ನೆಲೆಯನ್ನು ಸ್ಥಾಪಿಸುವುದು ಅವರ ಉದ್ದೇಶವಾಗಿತ್ತು. ಆದರೆ ಇಲ್ಲಿನ ಸೂಕ್ತ ಬಂದರಿನ ಕೊರತೆ, ಕಠಿಣ ಹವಮಾನ ಮತ್ತು ಬರಡು ಭೂಮಿಯಂತಹ ಪ್ರದೇಶ, ಇವೆಲ್ಲದರ ಕಾರಣದಿಂದ ಇವರ ರಕ್ಷಣಾ ಪಡೆಯು ಕ್ಷಾಮ ಮತ್ತು ಅನಾರೋಗ್ಯಕ್ಕೆ ತುತ್ತಾಯಿತು. ಇಲ್ಲಿ ಲಾಭಕ್ಕಿಂತ, ನಷ್ಟವೇ ಜಾಸ್ತಿಯೆಂದು, ಪೋರ್ಚುಗೀಸರು 1511 ರಲ್ಲಿ ದ್ವೀಪವನ್ನು ತ್ಯಜಿಸುತ್ತಾರೆ.  ಆಗ ಮೆಹರಾ ಸುಲ್ತಾನರು, ದ್ವೀಪದ ನಿಯಂತ್ರಣವನ್ನು ಮರಳಿ ತಮ್ಮ ವಶಕ್ಕೆ ಪಡೆದುಕೊಳ್ಳುತ್ತಾರೆ.

     ಬ್ರಿಟೀಷರ ಆಳ್ವಿಕೆ: ಭಾರತವನ್ನು ವಸಾಹತುವನ್ನಾಗಿ ಬ್ರಿಟೀಷರು ತಮ್ಮ ಕೈವಶ ಮಾಡಿಕೊಂಡಿದ್ದಾಗ, ಹಲವು ಬಾರಿ ಈ ದ್ವೀಪವನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳಲು ಪ್ರಯತ್ನಿಸಿದರು 1834 ರಲ್ಲಿ ಬ್ರಿಟಿಷರು ದ್ವೀಪವನ್ನು ಖರೀದಿಸಲು ಪ್ರಯತ್ನಿಸಿ ವಿಫಲರಾಗುತ್ತಾರೆ. ಅಲ್ಲಿನ ಸುಲ್ತಾನ ಮಾರಾಟಕ್ಕೆ ಒಪ್ಪುವುದಿಲ್ಲ. ಕೊನೆಗೆ 1880 ರ ದಶಕದಲ್ಲಿ, ಇಲ್ಲಿನ ಸುಲ್ತಾನನು, ಬ್ರಿಟಿಷ್ ರಕ್ಷಣೆಯನ್ನು ಪಡೆಯಲು  ಒಪ್ಪಿ ಕರಾರು ಮಾಡಿಕೊಳ್ಳುತ್ತಾನೆ. ಹತ್ತೊಂಬತ್ತನೇ ಶತಮಾನಕ್ಕೂ ಮೊದಲು, ಭಾರತ, ಫೂರ್ವ ಆಫ್ರಿಕ ದೇಶಗಳು ಮತ್ತು ಅರಬ್ ರಾಷ್ಟ್ರಗಳನ್ನು ಸಂಪರ್ಕಿಸಲು ಆಫ್ರಿಕಾ ಖಂಡವನ್ನು ಸುತ್ತಿ ಬಳಸಿ ಭಾರತವನ್ನು ತಲುಪಬೇಕಾಗುತಿತ್ತು. ಕಡಿಮೆ ಸಮಯ ಮತ್ತು ಇಂಧನವನ್ನು ಉಳಿಸುವ ನಿಟ್ಟಿನಲ್ಲಿ  ಈಜಿಪ್ಟ್ ರಾಷ್ಟ್ರದ ಬಳಿ ಸೂಯೆಜ್ ಕಾಲುವೆಯನ್ನು ನಿರ್ಮಿಸಲಾಯಿತು. ಯಾವಾಗ ಸೂಯೇಜ್ ಕಾಲುವೆ ನಿರ್ಮಾಣವಾಯಿತೋ, ಆಗ ಈ ಸೊಕೊಟ್ರಾ  ದ್ವೀಪದ ಮೇಲೆ ಬ್ರಿಟೀಷರು ಹಿಡಿತ ಸಾಧಿಸಿದರು. ಭಾರತಕ್ಕೆ ಸಮುದ್ರ ಮಾರ್ಗವಾಗಿ ತೆರಳುವ ಹಡಗುಗಳನ್ನು ನಿಯಂತ್ರಿಸಲು ದ್ವೀಪವು ನಿರ್ಣಾಯಕ ಪಾತ್ರವಹಿತ್ತದೆ. ಭಾರತದ ಪಶ್ಚಿಮ ಕರಾವಳಿಯಲ್ಲಿ ಮುಂಬಯಿ ಪಟ್ಟಣ ಪ್ರಮುಖ ಲ್ಯಾಂಡಿಂಗ್ ಬಂದರು ಆಗಿದ್ದರಿಂದ, ಸೊಕೊಟ್ರಾ ಬಾಂಬೆ ಪ್ರೆಸಿಡೆನ್ಸಿಯ ಭಾಗವಾಯಿತು ಮತ್ತು ಅಲ್ಲಿಂದ ಬ್ರಿಟಿಷ್ ಭಾರತದ ಭಾಗವಾಗಿ ಆಡಳಿತ ನಡೆಸಲಾಯಿತು. ಇದು 1937 ರವರೆಗೂ ಬಾಂಬೆ ಪ್ರೆಸಿಡೆನ್ಸಿಯ ಭಾಗವಾಗಿತ್ತು. ತದ ನಂತರ, ಈ ದ್ವೀಪವನ್ನು  ಪ್ರತ್ಯೇಕಿಸಿ ಗಲ್ಫ್ ಆಫ್ ಏಡೆನ್ ಪ್ರೊಟೆಕ್ಟರೇಟ್ ಅಡಿಯಲ್ಲಿ ಇರಿಸಲಾಯಿತು. ಭಾರತದಿಂದ ಬ್ರಿಟೀಷರು ಹೊರಟು ಹೋದ ಮೇಲೆ, ಈ ದ್ವೀಪವು ಸಹ ಸ್ವತಂತ್ರಗೊಂಡಿತು.

     ರಷಿಯನ್ನರ ಪ್ರಾಬಲ್ಯ: ಬ್ರಿಟಿಷ್ ಆಳ್ವಿಕೆಯ ಅಂತ್ಯವಾದ ನಂತರ, ಯೆಮನ್ ರಾಷ್ಟ್ರದಲ್ಲಿ ಶೀತಲ ಸಮರ ಪ್ರಾರಂಭ ವಾಯಿತು. ಕೊರಿಯಾ ದೇಶದಂತೆ, ಇಲ್ಲಿಯೂ ದೇಶ ಉತ್ತರ ಯಮೆನ್ ಮತ್ತು ದಕ್ಷಿಣ ಯಮೆನ್ ಎಂದು ಎರಡು ಭಾಗಗಳಾಗಿ ವಿಭಜಿಸಲ್ಪಟ್ಟಿತು. ಎರಡು ಕಡೆಯೂ ವಿಭಿನ್ನ ರಾಜಕೀಯ ಶಕ್ತಿಗಳು ಅಧಿಕಾರ ಪಡೆದವು. . ದಕ್ಷಿಣ ಯೆಮೆನ್, ಸೊಕೊಟ್ರಾ ದ್ವೀಪದ ಜೊತೆಗೆ ಸೋವಿಯತ್ ಪ್ರಭಾವಕ್ಕೆ ಒಳಪಟ್ಟಿತು. ಮಾರ್ಕ್ಸ್‌ವಾದಿಗಳು ಅಧಿಕಾರ ವಹಿಸಿಕೊಂಡಂತೆ, ಪೀಪಲ್ಸ್ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಯೆಮೆನ್ ಅನ್ನು ಘೋಷಿಸಲಾಯಿತು - ವಿಶ್ವದ ಏಕೈಕ ಅರಬ್ ಕಮ್ಯುನಿಸ್ಟ್ ರಾಜ್ಯ ವೆನ್ನುವ ಹೆಸರು ಪಡೆಯಿತು. ರಷಿಯನ್ ರು ಇಲ್ಲಿಗೆ ಬರಲು ಪ್ರಮುಖ ಕಾರಣ, ಈ ಪ್ರದೇಶದಲ್ಲಿದ್ದ ತೈಲ ನಿಕ್ಷೇಪಗಳು ಹಾಗೂ ಪ್ರಪಂಚದ ಪ್ರಮುಖ ಸಮುದ್ರ ಮಾರ್ಗವೆಂದು ಗುರುತಿಸಿದ್ದ ಕಾರಣದಿಂದ ಈ ಮಾರ್ಗದಲ್ಲಿ ಸಂಚರಿಸುವ ಹಡಗುಗಳ ಮೇಲೆ ಕಣ್ಣಿಡಲು ತಮ್ಮ ರಕ್ಷಣಾ ನೆಲೆಯನ್ನು ಇಲ್ಲಿ ಸ್ಥಾಪಿಸಿದರು. ತದನಂತರ ದ್ವೀಪವನ್ನು ಮುಕ್ತ ಜಗತ್ತಿಗೆ ನಿರ್ಭಂದ ಹೇರಿ, ಇದರ ಬಳಕೆಯನ್ನು ಕೇವಲ ಸೋವಿಯತ್ ಮತ್ತು ದಕ್ಷಿಣ ಯೆಮೆನ್ ಮಿಲಿಟರಿಗೆ ಮಾತ್ರ ಸೀಮಿತಗೊಳಿಸಲಾಗುತ್ತದೆ.

 


ಯಮೆನ್ ಗಣ ರಾಜ್ಯ:

ಈ ಮೊದಲು ವಿಭಜನೆಗೊಂಡಿದ್ದ  ಯೆಮೆನ್ ರಾಷ್ಟ್ರ, 1990 ರಲ್ಲಿ ಸೋವಿಯತ್ ರಾಷ್ಟ್ರಗಳ ಒಕ್ಕೂಟದ ಪತನದ ನಂತರ,  ಪುನರ್ ಏಕೀಕರಣ ಗೊಂಡಿತು. ಪುನರೇಕೀಕರಣದ ನಂತರ ಮಾತ್ರ ದ್ವೀಪವನ್ನು ಮತ್ತೊಮ್ಮೆ ಜಗತ್ತಿಗೆ ತೆರೆಯಲಾಯಿತು. ಅಂದಿನಿಂದ ಈ ದ್ವೀಪ, ಪ್ರವಾಸಿಗರನ್ನು,  ಸಂಶೋಧಕರು ಮತ್ತು ಮಾನವಶಾಸ್ತ್ರಜ್ಞರು ಭೇಟಿ ನೀಡಿ ಸಂಶೋಧನೆ ನಡೆಸುತಿದ್ದಾರೆ. ಅದ್ಭುತವಾದ ಸಮುದ್ರ ತೀರಗಳು, ವಿಶಿಷ್ಟ ಜಾತಿಯ ಗಿಡಮರಗಳು ಮತ್ತು ದೊಡ್ಡ ದಾದ ಅತಿ ಸುಂದರ ಕಣಿವೆ ಪ್ರದೇಶಗಳು ಇಲ್ಲಿದ್ದರೂ, ಯಮೆನ್ ನಲ್ಲಿನ ರಾಜಕೀಯ ಅನಿಶ್ಚಿತತೆ, ಆಂತರಿಕ ಯುದ್ದಗಳು  ಮತ್ತು ಪಕ್ಕದ ಸೋಮಾಲಿಯಾ ಕಡಲ್ಗಳ್ಲರ ಹಾವಳಿಯಿಂದ ಪ್ರವಾಸೋಧ್ಯಮದಿಂದ ಈ ದ್ವೀಪವು ಜನರಿಂದ ದೂರವೇ ಉಳಿದಿದೆ. ಅಭಿವೃದ್ದಿಯು ಮರೀಚಿಕೆಯಾಗಿದೆ.







ಬರಹ:-

ಪಿ.ಎಸ್.ರಂಗನಾಥ

ಮಸ್ಕತ್ - ಒಮಾನ್ ರಾಷ್ಟ್ರ

Photo Credit:  Original Owners, Google

Article is just for knowledge sharing only.

#socotra #oman #muscat #kannada #PSR #PS_Ranganatha #ಸೊಕೊಟ್ರಾ #Bangalore #Karnataka #India #Yemen #muscat #sohar #salalah #sur #nizwa #sanaa  

Click below headings