ಬರಹ: ಪಿ.ಎಸ್.ರಂಗನಾಥ,
ಮಸ್ಕತ್, ಒಮಾನ್ ರಾಷ್ಟ್ರ.
ಅಜ಼ರ್ಬೈಜಾನ್ ಎನ್ನುವ ಮುಸ್ಲಿಂ ದೇಶದಲ್ಲಿ ಪುರಾತನ ಹಿಂದೂ ದೇವಾಲಯವೊಂದಿದೆ. ವಿಶೇಷ ಏನೆಂದರೆ, ಶತಶತಮಾನಗಳಿಂದ ಈ ದೇವಸ್ಥಾನ ಇನ್ನೂ ಹಾಗೆಯೇ ಉಳಿದುಕೊಂಡು ಬಂದಿದೆ. ಇನ್ನೊಂದು ವಿಶೇಷವೇನೆಂದರೆ, ಈ ಪ್ರದೇಶ UNESCO ವಿಶ್ವದ ಪಾರಂಪಾರಿಕ ತಾಣಗಳ ಪಟ್ಟಿಯಲ್ಲಿ ಸೇರಿರುವುದು. ಅಜ಼ರ್ಬೈಜಾನ್ ದೇಶಕ್ಕೆ ಭೇಟಿ ನೀಡುವ ಅತಿ ಹೆಚ್ಚಿನ ಪ್ರವಾಸಿಗರು ತಪ್ಪದೇ ಭೇಟಿ ನೀಡುವ ಪ್ರದೇಶ ಇದು. ಅತೆಷ್ಗಾ ಎನ್ನುವ ಈ ದೇವಾಲಯವನ್ನು ಅಗ್ನಿ ದೇವಾಲಯ (Fire temple) ಎಂದು ಕರೆಯುತ್ತಾರೆ. ಈ ಸ್ಥಳವನ್ನು ಕೇವಲ ಹಿಂದೂ ಮಾತ್ರವಲ್ಲದೆ, ಸಿಖ್ಖರು, ಜೋರಾಷ್ಟ್ರಿಯನ್ ಪಾರ್ಸಿಗಳು ಸಹ ಪವಿತ್ರ ಸ್ಥಳವೆಂದು ಪರಿಗಣಿಸಿ ಅಂದಿನ ಕಾಲದಲ್ಲಿ ಪೂಜಿಸುತಿದ್ದರು. ದೇವಾಲಯದ ಈ ಪ್ರಾಂಗಣದಲ್ಲಿ ಗಣೇಶ ಮತ್ತು ನಟರಾಜನ ವಿಗ್ರಹವಿದೆ. ವಿಗ್ರಹಗಳ ಜತೆಯಲ್ಲಿ 14 ಸಂಸ್ಕೃತ (ದೇವನಾಗರಿ), ಎರಡು ಪಂಜಾಬಿ (ಗುರುಮುಖಿ) ಮತ್ತು ಒಂದು ಪರ್ಷಿಯನ್ ಶಿಲಾ ಶಾಸನಗಳಿವೆ. ಒಂದು ಶಾಸನದಲ್ಲಿ ಮೊದಲ ಸಾಲು ಶ್ರೀ ಗಣೇಶಾಯ ನಮಃ ಎಂದು ಪ್ರಾರಂಭವಾಗುತ್ತದೆ. ಇನ್ನೊಂದು ಶಾಸನದಲ್ಲಿ ಸಂಸ್ಕೃತದಲ್ಲಿ ಭಗವಾನ್ ಶಿವನ ಕುರಿತಾಗಿ ಬರೆದ ಸಾಲುಗಳಿವೆ. ಮತ್ತೊಂದು ಶಾಸನವು ಜ್ವಾಲಾದೇವಿ ಕುರಿತಾಗಿ ಬರೆಯಲಾಗಿದೆ.
ಈ ದೇವಾಲಯವನ್ನು ಅಗ್ನಿ ದೇವಾಲಯ (Fire temple) ಎಂದು ಯಾಕೆ ಕರೆಯುತ್ತಾರೆ ಎಂದರೆ, ಇಲ್ಲಿರುವ ಸಪ್ತ ರಂಧ್ರಗಳಲ್ಲಿ ಸಹಸ್ರಾರು ವರ್ಷಗಳಿಂದ ಸತತವಾಗಿ ಬೆಂಕಿಯುರಿಯುತ್ತಿದೆ. ಜೋರಾಷ್ಟ್ರಿಯನ್ ಪಾರ್ಸಿಗಳು ಮತ್ತು ಹಿಂದುಗಳು ಪವಿತ್ರವೆಂದು ಭಾವಿಸಿರುವ ಅಗ್ನಿಯನ್ನು ಪಾರ್ಸಿಗಳು ಮತ್ತು ಹಿಂದುಗಳು ಶತಮಾನಗಳಿಂದ ಪೂಜಿಸಿಕೊಂಡು ಬಂದಿದ್ದಾರೆ. ಬೆಂಕಿಯುಗುಳುವ ಈ ರಂಧ್ರಗಳಿರುವ ಜಾಗವನ್ನು ಇಲ್ಲಿನ ಭಾಷೆಯಲ್ಲಿ ಬಾಕು ಅತೆಷ್ಗಾ (Ateshgah of Baku) ಎಂದು ಹೇಳುತ್ತಾರೆ. ಪರ್ಷಿಯನ್ ಭಾಷೆಯಲ್ಲಿ ‘ಅತೇಶ್’ ಎಂದರೆ ಬೆಂಕಿ ಮತ್ತು ‘ಗಾಹ್’ ಎಂದರೆ ಹಾಸಿಗೆ ಎಂದರ್ಥ. ಅತೇಶ್ಗಾ ಒಂದು ಕಾಲದಲ್ಲಿ ನೈಸರ್ಗಿಕ ಅನಿಲ ಕ್ಷೇತ್ರವನ್ನು ಹೊಂದಿತ್ತು, ಈ ನೈಸರ್ಗಿಕ ಅನಿಲವೇ ಈ ಬೆಂಕಿಗೆ ಕಾರಣವಾಗಿದೆ. ಈ ಸ್ಥಳವನ್ನು ಪವಿತ್ರವೆಂದು ಪರಿಗಣಿಸಲಾಗಿದೆ ಎಂದು 7 ನೇ ಶತಮಾನದ ಅರ್ಮೇನಿಯನ್ ಭೂಗೋಳಶಾಸ್ತ್ರಜ್ಞ ಅನನಿಯಾ ಶಿರಕಾಟ್ಸಿ ಅವರ ಪುಸ್ತಕ ಅಶ್ಖರತ್ ಸುಯಟ್ಸ್ ದಾಖಲಿಸಿದ್ದಾರೆ. ದೇವಾಲಯವಿರುವ ಪಟ್ಟಣವನ್ನು ಸುರಖಾನಿ ಎಂದು ಕರೆಯಲಾಗುತ್ತದೆ, ಇದರರ್ಥ ಟಾಟ್ ಭಾಷೆಯಲ್ಲಿ 'ರಂಧ್ರವಿರುವ ಕಾರಂಜಿ ಎಂದು. ಟಾಟ್ ಭಾಷೆಯು ಕ್ಯಾಸ್ಪಿಯನ್ ಸಮುದ್ರದ ಸುತ್ತಲಿನ ಟಾಟ್ ಜನರು ಮಾತನಾಡುವ ಪರ್ಷಿಯನ್ ಭಾಷೆಯಾಗಿದೆ.
ಇನ್ನು ಶಾಸನಗಳ ಬಗ್ಗೆ ಹೇಳುವುದಾದರೆ, ಅಬ್ರಹಾಂ ವ್ಯಾಲೆಂಟೈನ್ ವಿಲಿಯಮ್ಸ್ ಜಾಕ್ಸನ್ ಅವರ ಪುಸ್ತಕವಾದ "ಫ್ರಮ್ 'ಕಾನ್ಸ್ಟಾಂಟಿನೋಪಲ್ ಟು ದ ಹೋಮ್ ಆಫ್ ಓಮರ್ ಖಯ್ಯಾಮ್" (From Constantinople to the home of Omar Khayyam) ಪ್ರಕಾರ, ಶಾಸನಗಳನ್ನು 1668 ಮತ್ತು 1816 AD ನಡುವೆ ಕೆತ್ತಿಸಲಾಗಿದೆ. ಆರ್ಮೇನಿಯನ್ ವಿದ್ವಾಂಸರ ಪ್ರಕಾರ ಈ ದೇವಾಲಯ ಪ್ರಾಕಾರವು ಎರಡನೇ ಶತಮಾನದಲ್ಲಿ ಪರ್ಶಿಯನ್ ದೊರೆಗಳ ಕಾಲಮಾನದಲ್ಲಿ ನಿರ್ಮಿಸಿರಬಹುದು ಎಂದು ಹೇಳಲಾಗಿದೆ. ಪರ್ಶಿಯನ್ ಸಸಾನಿಯನ್ ಸಾಮ್ರಾಜ್ಯದ ಸ್ಥಾಪಕ ಮೊದಲನೇ ಅರ್ದಾಶಿರ್ (180-242 AD) ಈ ಕಟ್ಟಡವನ್ನು ನಿರ್ಮಿಸಿರಬಹುದೆಂದು ಹೇಳಿದ್ದಾರೆ. ಅಜ಼ರ್ಬೈಜಾನ್ ದೇಶವು ಅಂದಿನ ಸಿಲ್ಕ್ ರೋಡ್ ನ ಭಾಗವಾಗಿದ್ದರಿಂದ ದಕ್ಷಿಣ ಏಶಿಯಾದ ಹಿಂದೂ ವ್ಯಾಪಾರಿಗಳು ಮುಂದೆ ಇದನ್ನ ಅಭಿವೃದ್ದಿ ಪಡಿಸಿ ಜ್ವಾಲಾದೇವಿಯನ್ನು ಆರಾಧಿಸುತಿದ್ದರು. ಜ್ವಾಲಾ ದೇವಿಯೆಂದು ಕರೆಯಲು ಕಾರಣವೇನೆಂದರೆ, ಶತಶತಮಾನಗಳಿಂದ ಇಲ್ಲಿನ ಸಪ್ತ ರಂಧ್ರಗಳು ಸತತವಾಗಿ ಬೆಂಕಿಯುಗುಳುತ್ತಿವೆ. ಇಲ್ಲಿ ದೊರೆಯುತ್ತಿರುವ ನೈಸರ್ಗಿಕ ಅನಿಲದಿಂದ ಒಂದು ದಿನವೂ ಈ ಬೆಂಕಿಯು ಆರುವುದಿಲ್ಲ. ಇಸ್ಲಾಂ ಧರ್ಮ ಪರ್ಶಿಯಾಗೆ ಏಳನೇ ಶತಮಾನದಲ್ಲಿ ಆಗಮಿಸಿತು, ಅಲ್ಲಿಯವರೆಗೂ ಈ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪಾರ್ಸಿಗಳು ವಾಸಿಸುತಿದ್ದರು. ಕ್ರಮೇಣ ಇಸ್ಲಾಂ ಧರ್ಮದ ಪ್ರಾಬಲ್ಯ ಹೆಚ್ಚುತಿದ್ದಂತೆ ಪಾರ್ಸಿಗಳು ಕಡಿಮೆಯಾದರೂ ಸಹ ಹತ್ತನೇ ಶತಮಾನದವರೆಗೂ ಈ ಸ್ಥಳದ ಸುತ್ತಮುತ್ತ ವಾಸಿಸುತಿದ್ದರು ಎಂದು ಇಲ್ಲಿನ ಅನೇಕ ದಾಖಲೆಗಳಲ್ಲಿ ಪ್ರಸ್ತಾಪಿಸಲಾಗಿದೆ. ಈ ಪ್ರಾಂತ್ಯದಲ್ಲಿ ಮುಸ್ಲಿಮರ ಪ್ರಾಬಲ್ಯ ಹೆಚ್ಚಿದಂತೆ, ಅಳಿದುಳಿದ ಜೋರಾಷ್ಟ್ರಿಯನ್ ಪಾರ್ಸಿಗಳು ಭಾರತದ ಕಡೆ ವಲಸೆ ಬಂದರು. ಏಳೆಂಟು ಶತಮಾನಗಳು ಪಾರ್ಸಿಗಳು ಈ ಕಡೆ ಮರಳಿ ಬಂದ ಬಗ್ಗೆ ಯಾವುದೇ ದಾಖಲೆಗಳು ಇಲ್ಲದೆ ಇದ್ದರೂ, ಹದಿನೇಳನೇ ಶತಮಾನದ ಅಂತ್ಯ ಭಾಗದಲ್ಲಿ ಮತ್ತೆ ಈ ಪ್ರಾಂತ್ಯಕ್ಕೆ ಬರಲಾರಂಭಿಸಿದರು. ಪಾಶ್ಚಿಮಾತ್ಯ ದೇಶಗಳಿಗೆ ಸಂಪರ್ಕಿಸುವ ಸಿಲ್ಕ್ ರೂಟ್ ನ ಭಾಗವಾಗಿದ್ದ ಈ ಪ್ರದೇಶಕ್ಕೆ ಹಿಂದೂ ಮತ್ತು ಸಿಖ್ ವ್ಯಾಪಾರಿಗಳು ವ್ಯಾಪಾರಕ್ಕಾಗಿ ಬರಲಾರಂಭಿಸಿದರು. 1683 ರಿಂದ 1880 ರವರೆಗೂ ದೊರೆತ ಹಲವಾರು ದಾಖಲೆಗಳಲ್ಲಿ ಈ ಉಲ್ಲೇಖವಿದೆ. ಭಾರತದಲ್ಲಿದ್ದ ಪಾರ್ಸಿಗಳು 1880 ರವರೆಗೆ ಭಾರತದಿಂದ ಪಾರ್ಸಿ ಪುರೋಹಿತರನ್ನು ಈ ಪ್ರದೇಶಕ್ಕೆ ಕಳುಹಿಸಿದ್ದರು ಎನ್ನುವ ಪುರಾವೆ ದೊರೆತಿದೆ. 1925 ರಲ್ಲಿ, ಡಾ. ಸರ್ ಜೀವಂಜಿ ಜಮ್ಶೆಡ್ಜಿ ಮೋದಿ ಎಂಬ ಪಾರ್ಸಿ ಪಾದ್ರಿಯು ಅತೇಶ್ಗಾಗೆ ಭೇಟಿ ನೀಡಿ, ಈ ದೇವಾಲಯವು ಹಿಂದೂ ಧಾರ್ಮಿಕ ಲಕ್ಷಣಗಳನ್ನು ಹೊಂದಿದೆ ಎಂದು ತೀರ್ಮಾನಿಸಿದ್ದರು.
ಇಲ್ಲಿ ಯಥೇಚ್ಚವಾಗಿ ದೊರೆಯುತಿದ್ದ ನೈಸರ್ಗಿಕ ಅನಿಲಕ್ಕಾಗಿ, ಅಂದಿನ ರಷ್ಯಾ ಒಕ್ಕೂಟವು ಇಲ್ಲಿ ನೈಸರ್ಗಿಕ ಅನಿಲ ಸ್ಥಾವರವನ್ನು ನಿರ್ಮಿಸಿ ದಶಕಗಳ ಕಾಲ ಸತತವಾಗಿ ಅನಿಲವನ್ನು ಹೊರ ತೆಗೆದರು. 1969 ರವರೆಗೆ ನೈಸರ್ಗಿಕವಾಗಿ ಉರಿಯುತ್ತಿದ್ದ ಜ್ವಾಲೆಯು ಸೋವಿಯೆಟ್ ರಷ್ಯಾದ ಅತಿರೇಕದಿಂದ ಬರಿದಾಯಿತು. ಈಗ ಬಾಕು ನಗರದಿಂದ ಗ್ಯಾಸ್ ಪೈಪ್‌ಲೈನ್ ಮುಖಾಂತರ ಉರಿಯುತ್ತಿರುವ ಬೆಂಕಿಗೆ ಇಂಧನವನ್ನು ಸರಬರಾಜು ಮಾಡಲಾಗುತ್ತಿದೆ. ಅತೇಶ್ಗಾವನ್ನು 1998 ರಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾಣವನ್ನಾಗಿ ಪಟ್ಟಿಮಾಡಿದೆ.
ದೇಶದ ಭೌಗೋಳಿಕ ವಿವರ:
ಈ ರಾಷ್ಟ್ರವನ್ನು ಅಧಿಕೃತವಾಗಿ ಅಜೆರ್ಬೈಜಾನ್ ಗಣರಾಜ್ಯ ( Republic of Azerbaijan) ಎಂದು ಕರೆಯಲಾಗುತ್ತದೆ. ಅಜರ್ಬೈಜಾನ್ ಪಶ್ಚಿಮ ಏಷ್ಯಾ ಮತ್ತು ಪೂರ್ವ ಯುರೋಪ್ ಗಳ ಸಮ್ಮಿಲನದ ಜಾಗದಲ್ಲಿ ಇರುವ ಒಂದು ದೇಶ. ಪೂರ್ವಕ್ಕೆ ಕ್ಯಾಸ್ಪಿಯನ್ ಸಮುದ್ರ, ಉತ್ತರಕ್ಕೆ ರಷ್ಯಾ, ಪಶ್ಚಿಮಕ್ಕೆ ಟರ್ಕಿ ಮತ್ತು ಅರ್ಮೇನಿಯ, ಈಶಾನ್ಯಕ್ಕೆ ಜಾರ್ಜಿಯ ಮತ್ತು ದಕ್ಷಿಣಕ್ಕೆ ಇರಾನ್ ದೇಶ ದೊಂದಿಗೆ ಗಡಿಯನ್ನು ಹೊಂದಿದೆ. ಸೋವಿಯೆಟ್ ರಷ್ಯದ ಒಂದು ಭಾಗವಾಗಿದ್ದ ಈ ರಾಷ್ಟ್ರ 1991ರಲ್ಲಿ ಸ್ವತಂತ್ರವಾಯಿತು. ಈ ದೇಶದ ವಿಸ್ತೀರ್ಣ ಹೇಳಬೇಕೆಂದರೆ, ಉತ್ತರ ದಕ್ಷಿಣವಾಗಿ 385 ಕಿಮೀ ಪೂರ್ವ ಪಶ್ಚಿಮವಾಗಿ 475 ಕಿಮೀ ಇರುವ ಇದರ ಒಟ್ಟು ವಿಸ್ತೀರ್ಣ 86,600 ಚ.ಕಿಮೀ. ಭೌಗೋಳಿಕವಾಗಿ ರಷ್ಯಾ, ಟರ್ಕಿ ಮತ್ತು ಇರಾನ್ ದೇಶಗಳಿಂದ ಆವರಿಸಲ್ಪಟ್ಟಿರುವ ಈ ದೇಶವು, ಸಾಂಸ್ಕೃತಿಕವಾಗಿ ಈ ದೇಶಗಳ ಸಂಸ್ಕೃತಿಯನ್ನು ಮೇಳೈಸಿಕೊಂಡಿದೆ. ಅಂದಾಜು ಒಂದು ಕೋಟಿ ಜನಸಂಖ್ಯೆ ಯನ್ನು ಈ ದೇಶಹೊಂದಿದೆ, ದೇಶದ ಬಹುಪಾಲು ಜನರು ಇಸ್ಲಾಂ ಧರ್ಮವನ್ನ ಪಾಲಿಸುತ್ತಾರೆ. ಬಹಳಷ್ಟು ಜನರು ಟರ್ಕಿ ಮೂಲದವರು, ತಲಾ ಶೇ.8 ರಷ್ಟು ಜನರು ರಷ್ಯ ಮತ್ತು ಆರ್ಮೇನಿಯ ಮೂಲದವರು. ಜನಸಂಖ್ಯೆಯಲ್ಲಿ ಶೇ. 52 ಭಾಗ ಗ್ರಾಮೀಣದವರು. ಈ ದೇಶವು ಅರೆ ಮರುಭೂಮಿಯ ವಾಯುಗುಣವನ್ನು ಹೊಂದಿದೆ. ಬೇಸಿಗೆ ಅತಿ ಉಷ್ಣದಿಂದ ಕೂಡಿದ್ದು ಚಳಿಗಾಲವು ತಂಪಾಗಿರುತ್ತದೆ. ಕುವೈತ್ ಇರಾಕ್, ಇರಾನ್ ದೇಶಗಳು ಇಂತಹದ್ದೇ ವಾಯುಗುಣವನ್ನು ಹೊಂದಿವೆ. ಕುರಾ ಮತ್ತು ಅರಾಸ್ ನದಿಗಳು ಇಲ್ಲಿನ ಪ್ರಮುಖ ನದಿಗಳು.
ಭಾಷೆ:
ಅಜೆರ್ಬೈಜಾನ್‌ನ ಪ್ರಾಥಮಿಕ ಮತ್ತು ಅಧಿಕೃತ ಭಾಷೆ ಅಜೆರ್ಬೈಜಾನಿ ಆಗಿದೆ, ಇದು ತುರ್ಕಿಶ್ ಭಾಷೆ ಎಂದೇ ಹೇಳಬಹುದು ಅಷ್ಟರ ಮಟ್ಟಿಗೆ ಇದು ಆಧುನಿಕ ತುರ್ಕಿಕ್ ಭಾಷೆಗೆ ಬಹುತೇಕ ಹೋಲುತ್ತದೆ. ಟರ್ಕಿ ದೇಶದ ಜತೆಗೆ ನಿಕಟ ಸಂಬಂಧವನ್ನು ಈ ದೇಶ ಹೊಂದಿದೆ. ಈ ಅಜೆರ್ಬೈಜಾನಿ ಭಾಷೆಯು ಟರ್ಕಿಶ್, ತುರ್ಕಮೆನ್ ಮತ್ತು ಗಗೌಜ್ ಸೇರಿದಂತೆ ನೈಋತ್ಯ ತುರ್ಕಿಕ್ ಭಾಷಾ ಕುಟುಂಬದ ಒಗುಜ್ ಶಾಖೆಯ ಒಂದು ಕುಡಿ ಎಂದು ಹೇಳಬಹುದು.
ಅಜೆರ್ಬೈಜಾನ್‌ನ ಪ್ರವಾಸಿ ಸ್ಥಳಗಳು:
ಅಜೆರ್ಬೈಜಾನ್‌ನಲ್ಲಿ ಬಹಳಷ್ಟು ಪ್ರವಾಸಿತಾಣಗಳಿವೆ. ಮಧ್ಯಪ್ರಾಚ್ಯದ ರಾಷ್ಟ್ರಗಳಿಗೆ ಅತಿ ಹತ್ತಿರವಾಗಿರುವುದರಿಂದ, ಬಹುತೇಕ ಜನರು ಸಾರ್ವಜನಿಕ ರಜಾದಿನಗಳಲ್ಲಿ ಇಲ್ಲಿಗೆ ಭೇಟಿ ನೀಡುತ್ತಾರೆ. ಡಿಸೆಂಬರ್ ನಿಂದ ಮಾರ್ಚ್ ತಿಂಗಳಿನವರೆಗೆ ಅಜ಼ರ್ಬೈಜಾನ್ ದೇಶದ ಶಹದಾಗ್ ಮತ್ತು ಗಬಾಲಾದಂತಹ ಸ್ಥಳಗಳು ಹಿಮಾವೃತ್ತವಾಗುತ್ತವೆ. ಅತಿ ಹೆಚ್ಚು ಪ್ರವಾಸಿಗರು ಈ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡುತ್ತಾರೆ.
ಬಾಕು:
ಅಜೆರ್ಬೈಜಾನ್ ದೇಶದ ರಾಜಧಾನಿ ಬಾಕು. ಅಜೆರ್ಬೈಜಾನ್‌ನಲ್ಲಿ ನೋಡಲು ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿದೆ. ಈ ನಗರವು ಕ್ಯಾಸ್ಪಿಯನ್ ಸಮುದ್ರ(Caspian Sea) ಹಾಗೂ ಕಾಕಸಸ್ ಪರ್ವತ ಪ್ರದೇಶದ ಅತ್ಯಂತ ದೊಡ್ಡ ನಗರವೂ ಹೌದು. ಇಲ್ಲಿಯ ಜನಸಂಖ್ಯೆ ಅಂದಾಜು ೨೦ ಲಕ್ಷ. ಈ ನಗರವು ದೇಶದ ಅತಿದೊಡ್ಡ ನಗರವಾಗಿದ್ದು ವಾಣಿಜ್ಯ ಮತ್ತು ವಿದ್ಯಾಕೇಂದ್ರವಾಗಿದೆ, ಆಧುನಿಕತೆಯನ್ನು ಒಪ್ಪಿಕೊಂಡಿರುವ ಈ ನಗರ, ಯುರೋಪಿನ ನಗರಗಳನ್ನ ಹೋಲುತ್ತದೆ. ಇಲ್ಲಿನ ವಿಶೇಷವೇನೆಂದರೆ ಆಧುನಿಕ ಗಗನಚುಂಬಿ ಕಟ್ಟಡಗಳ ಜತೆಗೆ ಶತಶತಮಾನಗಳ ಹಳೆಯ ಕಟ್ಟಡಗಳನ್ನ ಹಳೆಯ ನಗರ (Icherisheher) ನೋಡಬಹುದು. ಬೆಂಕಿಯನ್ನು ಹೋಲುವಂತೆ ನಿರ್ಮಿಸಿರುವ ಪ್ರಸಿದ್ಧ ಫ್ಲೇಮ್ ಟವರ್ ಗಳು ಇಲ್ಲಿನ ಪ್ರವಾಸಿಗರ ಪ್ರೇಕ್ಷಣೀಯ ತಾಣವಾಗಿದೆ. 900 ಕ್ಕೂ ಹೆಚ್ಚು ಕಲಾಕೃತಿಗಳನ್ನು ಒಳಗೊಂಡಿರುವ ಮ್ಯೂಸಿಯಂ ಆಫ್ ಕಾಂಟೆಂಪರರಿ ಇದರ ಜೊತೆಯಲ್ಲಿ, ನಗರದಲ್ಲಿ ಅನೇಕ ಪ್ರೇಕ್ಷಣೀಯ ಸ್ಥಳಗಳಾದ, ಮೇಡನ್ ಟವರ್, ಶಿರ್ವಾನ್ ಶಾಸ್ ಅರಮನೆ, ಕಾರವಾನ್‌ಸೆರೈ, ಮೆಮೊರಿ ಅಲ್ಲೆ ಶೆಹಿಡ್ಲರ್ ಖಿಯಾಬಾನಿ, ನಿಜಾಮಿ ಸ್ಟ್ರೀಟ್, ಫೌಂಟೇನ್ ಸ್ಕ್ವೇರ್, ನಿಜಾಮಿ ಗಂಜಾವಿ ಸ್ಮಾರಕ, ರಸುಲ್-ಝಾಡೆ ಸ್ಟ್ರೀಟ್, ನ್ಯಾಷನಲ್ ಕಾರ್ಪೆಟ್ಸ್ ಮ್ಯೂಸಿಯಂ. ಬಾಕು ಹೈಲ್ಯಾಂಡ್ ಪಾರ್ಕ್, ಫ್ಲೇಮ್ ಟವರ್ಸ್ ಮತ್ತು ಹೇದರ್ ಅಲಿಯೆವ್ ಸೆಂಟರ್ ಹೀಗೆ ಹಲವಾರು ಸ್ಥಳಗಳಿವೆ.
ಗೋಬಸ್ತಾನ್ ರಾಷ್ಟ್ರೀಯ ಉದ್ಯಾನ (Gobustan National Park):
ಬಾಕುವಿನ ನೈಋತ್ಯಕ್ಕೆ ಸುಮಾರು 64 ಕಿಮೀ ದೂರದಲ್ಲಿರುವ ಈ ರಾಷ್ಟ್ರೀಯ ಉದ್ಯಾನವನವು ತನ್ನ ಶಿಲಾಯುಗದ ಕಲ್ಲಿನ ಕೆತ್ತನೆಗಳು ಮತ್ತು ಮಣ್ಣಿನ ಜ್ವಾಲಾಮುಖಿಗಳಿಗೆ ಹೆಸರುವಾಸಿಯಾಗಿದೆ.
- ಪೆಟ್ರೋಗ್ಲಿಫ್ಸ್: 10,000 B.C ವರೆಗಿನ 6,000 ಕ್ಕೂ ಹೆಚ್ಚು ಕಲ್ಲಿನ ಕೆತ್ತನೆಗಳು ಪ್ರಾಚೀನ ಮಾನವ ಜೀವನ ಮತ್ತು ವನ್ಯಜೀವಿಗಳ ಚಿತ್ರಣಗಳನ್ನು ಒಳಗೊಂಡಿವೆ.
- ಮಡ್ ಜ್ವಾಲಾಮುಖಿಗಳು: ಅಜೆರ್ಬೈಜಾನ್ ಪ್ರಪಂಚದಲ್ಲೇ ಅತಿ ಹೆಚ್ಚು ಮಣ್ಣಿನ ಜ್ವಾಲಾಮುಖಿಗಳನ್ನು ಹೊಂದಿದೆ, ಇದು ಅನನ್ಯ ಭೌಗೋಳಿಕ ಅನುಭವವನ್ನು ನೀಡುತ್ತದೆ.
ಶೆಕಿ (Sheki):
ಗ್ರೇಟರ್ ಕಾಕಸಸ್ ಪರ್ವತಗಳ ತಪ್ಪಲಿನಲ್ಲಿ ನೆಲೆಗೊಂಡಿರುವ ಒಂದು ಆಕರ್ಷಕ ಪಟ್ಟಣ, ಶ್ರೀಮಂತ ಇತಿಹಾಸ ಮತ್ತು ಸುಂದರವಾದ ವಾಸ್ತುಶಿಲ್ಪಕ್ಕೆ ಈ ಪ್ರಾಂತ್ಯ ಹೆಸರುವಾಸಿಯಾಗಿದೆ. ಇಲ್ಲಿರುವ ಶೆಕಿ ಖಾನ್ ಅರಮನೆ ಸಂಕೀರ್ಣವಾದ ಬಣ್ಣದ ಗಾಜು ಮತ್ತು ಟೈಲ್ ಕೆಲಸದಿಂದ ಅಲಂಕರಿಸಲ್ಪಟ್ಟ 18 ನೇ ಶತಮಾನದ ಅದ್ಭುತ ಅರಮನೆ. ಸಾಮಾನ್ಯವಾಗಿ ಪುರಾತನ ನಗರಗಳಲ್ಲಿ, ಸ್ಥಳೀಯ ಕರಕುಶಲ ವಸ್ತುಗಳ ಪ್ರದರ್ಶನ, ಮಾರಾಟ ಸಾಮಾನ್ಯವಾಗಿರುತ್ತದೆ. ಇಲ್ಲಿ ಸಾಂಪ್ರದಾಯಿಕ ಜವಳಿ, ಕುಂಬಾರಿಕೆ ಮತ್ತು ತಾಮ್ರದ ಸಾಮಾನುಗಳನ್ನು ಉತ್ಪಾದಿಸುವುದನ್ನ ಕಾಣಬಹುದು.
ಗಾಂಜಾ (Ganja):
ಅಜರ್‌ಬೈಜಾನ್‌ನ ಎರಡನೇ ಅತಿದೊಡ್ಡ ನಗರ, ಪುರಾತನ ಇತಿಹಾಸ ಮತ್ತು ಸಂಸ್ಕೃತಿಯನ್ನು ಇಲ್ಲಿ ನೋಡಬಹುದು. ಪ್ರಸಿದ್ಧ ಪರ್ಷಿಯನ್ ಕವಿ ನಿಜಾಮಿ ಗಂಜಾವಿಗೆ ಸಮರ್ಪಿತವಾಗಿರುವ ನಿಜಾಮಿ ಸಮಾಧಿ (Nizami Mausoleum) ಇಲ್ಲಿದೆ. ಈ ಸಮಾಧಿಯು ಸುಂದರ ವಾಸ್ತುಶಿಲ್ಪವನ್ನು ಹೊಂದಿದೆ. ಈ ನಗರದಲ್ಲಿರುವ ಜಾವದ್ ಖಾನ್ ಸ್ಟ್ರೀಟ್ (Javad Khan Street) ನಲ್ಲಿ ಕೆಫೆಗಳು, ಅಂಗಡಿಗಳು ಮತ್ತು ಐತಿಹಾಸಿಕ ತಾಣಗಳಿವೆ. ಸ್ಥಳೀಯ ಸಂಸ್ಕೃತಿಯಲ್ಲಿ ಅಡ್ಡಾಡಲು ಮತ್ತು ಅರಿತುಕೊಳ್ಳಲು ಈ ಜಾಗ ಸೂಕ್ತವಾಗಿದೆ.
ಕುಬಾ (Quba):
ಅಜರ್‌ಬೈಜಾನ್‌ನ ಉತ್ತರ ಭಾಗದಲ್ಲಿರುವ ಒಂದು ಸುಂದರವಾದ ಪಟ್ಟಣ, ಇಲ್ಲಿ ಸುಂದರವಾದ ನಯನ ಮನೋಹರವಾದ ಪ್ರಕೃತಿ ಮತ್ತು ಸಾಂಸ್ಕೃತಿಕ ಮಹತ್ವಕ್ಕೆ ಹೆಸರುವಾಸಿಯಾಗಿದೆ. ಇಸ್ಲಾಮಿಕ್ ವಾಸ್ತುಶಿಲ್ಪವನ್ನು ಪ್ರತಿಬಿಂಬಿಸುವ ಸುಂದರವಾದ ಕುಬಾ ಮಸೀದಿ, ಪಟ್ಟಣದ ಕೇಂದ್ರ ಭಾಗದಲ್ಲಿದೆ. 1918ರ ನರಮೇಧದ ಬಲಿಯಾದವರ ನೆನಪಿಗಾಗಿ ನಿರ್ಮಿಸಲಾಗಿರುವ, ಕುಬಾ ಜಿನೊಸೈಡ್ ಮೆಮೋರಿಯಲ್ ಸ್ಮಾರಕ ಸಂಕೀರ್ಣ (Quba Genocide Memorial Complex) ಸ್ಮಾರಕ, ಇಲ್ಲಿ ಐತಿಹಾಸಿಕ ಮಹತ್ವದ ವಿಷಯಗಳ ಕುರಿತು ಆಸಕ್ತಿಯಿರುವವರು ಈ ಸ್ಮಾರಕಕ್ಕೆ ಭೇಟಿ ನೀಡುತ್ತಾರೆ.
ಗಬಾಲಾ (Gabala) :
ನೈಸರ್ಗಿಕ ಸೌಂದರ್ಯ ಮತ್ತು ಹೊರಾಂಗಣ ಚಟುವಟಿಕೆಗಳಿಗೆ ಹೆಸರುವಾಸಿಯಾದ ಜನಪ್ರಿಯ ರೆಸಾರ್ಟ್ ಪ್ರದೇಶ, ಬಾಕುದಿಂದ ಸುಮಾರು 225 ಕಿಮೀ ವಾಯುವ್ಯದಲ್ಲಿದೆ. ಟುಫಾಂಡಗ್ ಮೌಂಟೇನ್ ರೆಸಾರ್ಟ್ (Tufandag Mountain Resor) ನಲ್ಲಿ ಚಳಿಗಾಲದ ಸಮಯದಲ್ಲಿ ಸ್ಕೀಯಿಂಗ್ ಕ್ರೀಡೆಯನ್ನಾಡಬಹುದು ಮತ್ತು ಬೇಸಿಗೆಯಲ್ಲಿ ಹೈಕಿಂಗ್ ಮಾಡುವುದಕ್ಕೆ ಸೂಕ್ತ ಪ್ರದೇಶ, ಇಲ್ಲಿರುವ ಪರ್ವತಗಳ ಅದ್ಭುತ ನೋಟವನ್ನು ಸವಿಯುವುದೇ ಒಂದು ಖುಷಿ. ಪ್ರವಾಸಿಗರಿಗೆ ಮತ್ತೊಂದು ಆಕರ್ಷಣೀಯ ಸ್ಥಳ ಗಬಾಲಾ ಶೂಟಿಂಗ್ ಕ್ಲಬ್, ಇಲ್ಲಿ ಶೂಟಿಂಗ್ ಕ್ರೀಡೆಗಳನ್ನಾಡಲು ಆಧುನಿಕ ಸೌಲಭ್ಯಗಳನ್ನ ರೂಪಿಸಲಾಗಿದೆ
ನಫ್ತಾಲನ್(Naftalan) :
ಬಾಕುವಿನ ಪಶ್ಚಿಮಕ್ಕೆ ಸುಮಾರು 300 ಕಿಮೀ ದೂರದಲ್ಲಿರುವ ಚಿಕಿತ್ಸಕ ತೈಲ ಸ್ನಾನಗಳಿಗೆ ಪ್ರಸಿದ್ಧವಾದ ವಿಶಿಷ್ಟ ಸ್ಪಾ ಪಟ್ಟಣ. ನಮ್ಮ ಕೇರಳದ ಆಯುರ್ವೇದ ತೈಲ ಮಸಾಜ್ ನಂತೆ ಇಲ್ಲಿನ ಅನೇಕ ರೆಸಾರ್ಟ್ ಗಳಲ್ಲಿ ವಿಶೇಷವಾಗಿ ಚರ್ಮ ಮತ್ತು ಕೀಲು ಸಮಸ್ಯೆಗಳಿಗೆ ನಫ್ತಾಲನ್ ಆಯಿಲ್ ಟ್ರೀಟ್ಮೆಂಟ್ ನೀಡಲಾಗುತ್ತದೆ.
ಖಿನಾಲುಗ್ (Khinalug) :
2,300 ಮೀಟರ್ ಎತ್ತರದಲ್ಲಿರುವ ಅಜೆರ್ಬೈಜಾನ್‌ನ ಅತಿ ಎತ್ತರದ ಮತ್ತು ಅತ್ಯಂತ ದೂರದ ಪರ್ವತ ಹಳ್ಳಿಗಳಲ್ಲಿ ಒಂದಾಗಿದೆ. ಹಳ್ಳಿಯು ಸುತ್ತಮುತ್ತಲಿನ ಪರ್ವತಗಳು ಮತ್ತು ಕಣಿವೆಗಳ ರಮಣೀಯ ದೃಶ್ಯಗಳು ಕಣ್ಮನ ಸೆಳೆಯುತ್ತವೆ. ಪ್ರವಾಸಿಗರು ಸ್ಥಳೀಯ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಆತಿಥ್ಯದ ಅನುಭವವನ್ನು ಪಡೆಯಬಹುದು.
ಲಾಹಿಜ್ (Lahij) :
ಕುಶಲಕರ್ಮಿಗಳ ಕರಕುಶಲತೆಗೆ ಹೆಸರುವಾಸಿಯಾದ ಐತಿಹಾಸಿಕ ಪರ್ವತ ಗ್ರಾಮ, ವಿಶೇಷವಾಗಿ ಕರಕುಶಲತೆ ರೂಪಿಸುವ ತಾಮ್ರದ ಸಾಮಾನುಗಳನ್ನು ಇಲ್ಲಿ ನೋಡಬಹುದು. ಸ್ಥಳೀಯ ಕುಶಲಕರ್ಮಿಗಳು ತಮ್ಮ ಕೈಯಾರೆ ಸುಂದರವಾಗಿ ವಸ್ತುಗಳನ್ನು ಉತ್ಪಾದಿಸುವುದನ್ನ ಇಲ್ಲಿ ವೀಕ್ಷಿಸಬಹುದು. ಗ್ರಾಮವು ಸಾಂಪ್ರದಾಯಿಕ ವಾಸ್ತುಶೈಲಿ ಮತ್ತು ಸ್ಥಳೀಯ ಕಲ್ಲಿನಿಂದ ನಿರ್ಮಿಸಲಾದ ಅನನ್ಯ ಮನೆಗಳನ್ನು ಒಳಗೊಂಡಿದೆ. ಗ್ರಾಮದ ಬೀದಿಗಳು ಸಹ ಅಷ್ಟೇ ಸುಂದರವಾಗಿವೆ.
ಕ್ಯಾಸ್ಪಿಯನ್ ಸಮುದ್ರ (The Caspian Sea):
ಈ ಸಮುದ್ರ ಮಿಕ್ಕ ಸಮುದ್ರಗಳಂತಲ್ಲ. ಇದು ಒಳನಾಡಿನ ಜಲರಾಶಿ, ಅಥವ ಒಳನಾಡಿನ ಜಲ ದ್ವೀಪ ಎನ್ನಬಹುದು. ಈ ಸಮುದ್ರದ ಸುತ್ತಲೂ ಭೂ ಪ್ರದೇಶವಿದೆ. ಈ ಸಮುದ್ರ ಮಿಕ್ಕ ಸಮುದ್ರಗಳಂತೆ ಒಂದನ್ನೊಂದು ಸೇರುವುದಿಲ್ಲ. ಸುಂದರವಾದ ಕಡಲತೀರಗಳು, ಕರಾವಳಿಯುದ್ದಕ್ಕೂ ವಿವಿಧ ರೆಸಾರ್ಟ್‌ಗಳು ಬೀಚ್ ಪ್ರೇಮಿಗಳು ಮತ್ತು ಜಲ ಕ್ರೀಡೆಗಳ ಉತ್ಸಾಹಿಗಳಿಗೆ ಕೈಬೀಸಿ ಕರೆಯುತ್ತವೆ.
ಅಜರ್‌ಬೈಜಾನ್‌ನ ಸಂಸ್ಕೃತಿ, ಇತಿಹಾಸ ಮತ್ತು ನೈಸರ್ಗಿಕ ಸೌಂದರ್ಯದ ಕುರಿತು ಈ ಮೇಲೆ ತಿಳಿಸಿದ ಪ್ರವಾಸಿ ಆಕರ್ಷಣೆಗಳು ಇಲ್ಲಿರುವ ವೈವಿಧ್ಯಮಯ ಪರಿಸರ, ವಾತವರಣದ ಕುರಿತು ಪ್ರವಾಸಿಗರನ್ನ ಸೆಳೆಯುತ್ತವೆ.