ಶುಕ್ರವಾರ, ಫೆಬ್ರವರಿ 20, 2026

ಮೊಳಕಾಲ್ಮೂರು ತಾಲೂಕಿಗೆ ಅಭಿವೃದ್ಧಿಯ ಬೆಳಕು ಯಾವಾಗ?

 


ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕು ಪ್ರಸಿದ್ಧ ರೇಷ್ಮೆ ಸೀರೆಗಳ ತವರೂರಾಗಿದ್ದರೂ, ಅಭಿವೃದ್ಧಿಯ ದೃಷ್ಟಿಯಿಂದ ಹಿಂದುಳಿದ ತಾಲೂಕುಗಳ ಪಟ್ಟಿಯಲ್ಲಿದೆ. ರಾಜ್ಯದಲ್ಲಿನ ಪ್ರಾದೇಶಿಕ ಅಸಮಾನತೆ, ವಿಶೇಷವಾಗಿ ಉತ್ತರ ಕರ್ನಾಟಕದ ಹಿಂದುಳಿದಿರುವಿಕೆಯನ್ನು ಅಧ್ಯಯನ ಮಾಡಲು 2000ದಲ್ಲಿ ಡಾ. ಡಿ.ಎಂ. ನಂಜುಂಡಪ್ಪನವರ ನೇತೃತ್ವದಲ್ಲಿ ಉನ್ನತಾಧಿಕಾರ ಸಮಿತಿ ರಚಿಸಲಾಯಿತು. ವರದಿ 2002ರಲ್ಲಿ ಸಲ್ಲಿಕೆಯಾಯಿತು. ವರದಿ ಸಲ್ಲಿಸಿ ಇಷ್ಟುವರ್ಷವಾದರೂ ಮೊಳಕಾಲ್ಮೂರುವಿನ ಅಭಿವೃದ್ದಿ ಮರೀಚಿಕೆಯಾಗಿರುವುದು ರಾಜಕಾರಣಿಗಳ ಇಚ್ಚಾಶಕ್ತಿ ಕೊರತೆ ಎನ್ನುವುದು ತಾಲೂಕಿನ ಎಲ್ಲರಿಗೂ ತಿಳಿದಿರುವ ವಿಷಯ. ರಾಜಕಾರಣಿಗಳಿಗೆ ತಾಲೂಕಿನ ಅಭಿವೃದ್ದಿ ಬಗ್ಗೆ ದೂರದೃಷ್ಟಿ ಇಲ್ಲದೆ ಇರುವುದರಿಂದ ತಾಲೂಕ್ ಅಭಿವೃದ್ದಿ ಹೊಂದಲು ಸಾಧ್ಯವಾಗುತ್ತಿಲ್ಲ.  



ತಾಲೂಕಿನ ಪ್ರಮುಖ ಸಮಸ್ಯೆಗಳು:


೧. ಭೌಗೋಳಿಕ ಮತ್ತು ಹವಾಮಾನ ವೈಪರೀತ್ಯ (ಬರಪೀಡಿತ ಪ್ರದೇಶ):

 * ಮಳೆಯ ಕೊರತೆ: ಮೊಳಕಾಲ್ಮೂರು ತಾಲೂಕು ಭೌಗೋಳಿಕವಾಗಿ ಮಳೆನೆರಳಿನ ಪ್ರದೇಶದಲ್ಲಿದೆ. ಇಲ್ಲಿ ವಾರ್ಷಿಕ ಮಳೆ ಪ್ರಮಾಣ ಬಹಳ ಕಡಿಮೆ. ಇದರಿಂದಾಗಿ ಕೃಷಿ ಚಟುವಟಿಕೆಗಳಿಗೆ ತೀವ್ರ ಹಿನ್ನಡೆಯಾಗಿದೆ.

 * ಬಯಲುಸೀಮೆ ಮತ್ತು ಕಲ್ಲುಬಂಡೆಗಳು: ಇಲ್ಲಿನ ಭೂಪ್ರದೇಶವು ಹೆಚ್ಚಾಗಿ ಕಲ್ಲು ಬಂಡೆಗಳಿಂದ ಕೂಡಿದ್ದು, ಕೃಷಿಗೆ ಯೋಗ್ಯವಾದ ಫಲವತ್ತಾದ ಭೂಮಿಯ ಕೊರತೆಯಿದೆ.

೨. ನೀರಿನ ತೀವ್ರ ಅಭಾವ:

 * ಶಾಶ್ವತ ನೀರಾವರಿ ಇಲ್ಲದಿರುವುದು: ತಾಲೂಕಿನಲ್ಲಿ ಯಾವುದೇ ದೊಡ್ಡ ನದಿಗಳು ಹರಿಯುವುದಿಲ್ಲ. ದಶಕಗಳಿಂದಲೂ ಭದ್ರಾ ಮೇಲ್ದಂಡೆ ಯೋಜನೆಯ ನಿರೀಕ್ಷೆಯಲ್ಲೇ ಜನರಿದ್ದಾರೆ. ಕೃಷಿಗೆ ಸಂಪೂರ್ಣವಾಗಿ ಮಳೆ ಅಥವಾ ಬೋರ್‌ವೆಲ್‌ಗಳನ್ನೇ ಆಶ್ರಯಿಸಬೇಕಿದೆ.   

 * ಅಂತರ್ಜಲ ಕುಸಿತ: ಮಳೆ ಇಲ್ಲದ ಕಾರಣ ಅಂತರ್ಜಲ ಪಾತಾಳಕ್ಕೆ ಇಳಿದಿದೆ. ಸಾವಿರ ಅಡಿ ಕೊರೆದರೂ ನೀರು ಸಿಗುವುದು ಕಷ್ಟವಾಗಿದೆ.

 * ಫ್ಲೋರೈಡ್ ಯುಕ್ತ ನೀರು: ಲಭ್ಯವಿರುವ ಕುಡಿಯುವ ನೀರಿನಲ್ಲಿ ಫ್ಲೋರೈಡ್ ಅಂಶ ಹೆಚ್ಚಾಗಿದ್ದು, ಇದು ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಿದೆ.

೩. ಕೃಷಿ ಸಂಕಷ್ಟ:

 * ಸಕಾಲಕ್ಕೆ ಮಳೆಯಾಗದ ಕಾರಣ ರೈತರು ಪ್ರತಿವರ್ಷ ನಷ್ಟ ಅನುಭವಿಸುವಂತಾಗಿದೆ. ಆಧುನಿಕ ಕೃಷಿ ಪದ್ಧತಿಗಳ ಅಳವಡಿಕೆ ಕಡಿಮೆಯಿದೆ.

೪. ನೇಕಾರರ ಸಮಸ್ಯೆಗಳು:

 * ಕಚ್ಚಾ ವಸ್ತುಗಳ ಬೆಲೆ ಏರಿಕೆ: ಮೊಳಕಾಲ್ಮೂರು ರೇಷ್ಮೆ ಸೀರೆಗಳಿಗೆ ಜಾಗತಿಕ ಮನ್ನಣೆ ಇದ್ದರೂ, ಇಲ್ಲಿನ ನೇಕಾರರ ಬದುಕು ಹಸನಾಗಿಲ್ಲ. ರೇಷ್ಮೆ ನೂಲಿನ ಬೆಲೆ ಏರಿಕೆ ಮತ್ತು ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳ ಹಾವಳಿಯಿಂದಾಗಿ ನೇಕಾರರಿಗೆ ತಕ್ಕ ಪ್ರತಿಫಲ ಸಿಗುತ್ತಿಲ್ಲ. ಇದರಿಂದಾಗಿ ಅನೇಕರು ಕುಲಕಸುಬನ್ನು ಬಿಡುತ್ತಿದ್ದಾರೆ.

೫. ಭೌಗೋಳಿಕ ಪ್ರತ್ಯೇಕತೆ (ಗಡಿ ಭಾಗದ ನಿರ್ಲಕ್ಷ್ಯ):

 * ಇದು ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿರುವ ತಾಲೂಕು. ರಾಜ್ಯ ರಾಜಧಾನಿ ಬೆಂಗಳೂರಿನಿಂದ ಹಾಗೂ ಜಿಲ್ಲಾ ಕೇಂದ್ರ ಚಿತ್ರದುರ್ಗದಿಂದಲೂ ಸಾಕಷ್ಟು ದೂರದಲ್ಲಿರುವುದರಿಂದ, ಆಡಳಿತಾತ್ಮಕವಾಗಿ ಮತ್ತು ಅಭಿವೃದ್ಧಿ ಯೋಜನೆಗಳ ಅನುಷ್ಠಾನದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ.

೬. ಗುಳೆ ಹೋಗುವಿಕೆ (ವಲಸೆ):

 * ಊರಿನಲ್ಲಿ ಉದ್ಯೋಗವಿಲ್ಲದೆ, ಕೃಷಿ ಮಾಡಲು ನೀರಿಲ್ಲದೆ, ಜನರು ಹೊಟ್ಟೆಪಾಡಿಗಾಗಿ ಬೆಂಗಳೂರು ಅಥವಾ ಇತರ ದೊಡ್ಡ ನಗರಗಳಿಗೆ ಕೂಲಿ ಅರಸಿ ಗುಳೆ ಹೋಗುವುದು ಸಾಮಾನ್ಯವಾಗಿದೆ. ಯುವಜನತೆ ಊರು ಬಿಡುತ್ತಿರುವುದರಿಂದ ಸ್ಥಳೀಯ ಅಭಿವೃದ್ಧಿ ಕುಂಠಿತವಾಗಿದೆ.

೭. ಕೈಗಾರಿಕೆಗಳ ಕೊರತೆ:

 * ಕೃಷಿ ಆಧಾರಿತ ಅಥವಾ ಜವಳಿ ಆಧಾರಿತ ಬೃಹತ್ ಕೈಗಾರಿಕೆಗಳು ಇಲ್ಲಿ ಸ್ಥಾಪನೆಯಾಗಿಲ್ಲ. ಇದರಿಂದಾಗಿ ಸ್ಥಳೀಯ ಮಟ್ಟದಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿಲ್ಲ.

    ಮೊಳಕಾಲ್ಮೂರು ಪಟ್ಟಣಕ್ಕೆ ರೈಲು ಸಂಪರ್ಕವಿದ್ದರೂ ಇದು ತಾಲೂಕಿನ ಪ್ರಮುಖಭಾಗವಾದ ರಾಂಪುರವನ್ನು ಸಂಪರ್ಕಿಸುವುದಿಲ್ಲ. ಸುಮಾರು ಎಪ್ಪತ್ತಕ್ಕೂ ಹೆಚ್ಚು ಹಳ್ಳಿಗಳನ್ನು ಸಂಪರ್ಕಿಸುವ ರಾಂಪುರ ಪಟ್ಟಣವು ರೈಲ್ವೆ ಸೌಲಭ್ಯದಿಂದ ವಂಚಿತವಾಗಿದೆ. ರಾಂಪುರವು ಅತಿ ವೇಗವಾಗಿ ಬೆಳೆಯುತ್ತಿರುವ ಊರಾಗಿದ್ದು ಈ ಭಾಗದಲ್ಲಿ ಪ್ರಮುಖ ವಾಣಿಜ್ಯಕೇಂದ್ರವಾಗಿ ಗುರುತಿಸಲ್ಪಟ್ಟಿದೆ. ಇಲ್ಲಿ ಇಂದಿಗೂ ಸರ್ಕಾರಿ ಪ್ರೌಡಶಾಲೆ, ಸರ್ಕಾರಿ ಪದವಿ ಕಾಲೇಜು ಇಲ್ಲ. 

ಮೈಸೂರು ರಾಜ್ಯವನ್ನು 'ಮಾದರಿ ಸಂಸ್ಥಾನ'ವನ್ನಾಗಿ ರೂಪಿಸಿದ ಕೀರ್ತಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಸಲ್ಲುತ್ತದೆ. ಅವರ ಆಳ್ವಿಕೆಯಲ್ಲಿ ಕೇವಲ ಬೃಹತ್ ಅಣೆಕಟ್ಟುಗಳು ಅಥವಾ ಶಿಕ್ಷಣ ಸಂಸ್ಥೆಗಳು ಮಾತ್ರ ನಿರ್ಮಾಣವಾಗಲಿಲ್ಲ; ಬದಲಾಗಿ, ಹಳ್ಳಿಗಳ ಮೂಲೆಯಲ್ಲಿ ನಶಿಸಿಹೋಗುತ್ತಿದ್ದ ಸಾಂಪ್ರದಾಯಿಕ ಕಲೆಗಳಿಗೂ ಹೊಸ ಜೀವ ಕಳೆ ನೀಡಲಾಯಿತು. ಅದರಲ್ಲಿ ಚಿತ್ರದುರ್ಗ ಜಿಲ್ಲೆಯ ಹೆಮ್ಮೆಯ ಮೊಳಕಾಲ್ಮೂರು ಕೈಮಗ್ಗ ಉದ್ಯಮ ಪ್ರಮುಖವಾದುದು. ಸಾಂಪ್ರದಾಯಿಕ ನೇಕಾರರು ತಮ್ಮ ಹಳೆಯ ಶೈಲಿಯ ನೇಯ್ಗೆಯನ್ನು ಮುಂದುವರಿಸಲು ಮಹಾರಾಜರು ಬೆನ್ನೆಲುಬಾಗಿ ನಿಂತರು. ಅವರಿಗೆ ಬೇಕಾದ ಕಚ್ಚಾ ಸಾಮಗ್ರಿ ಮತ್ತು ಮಾರುಕಟ್ಟೆಯ ಸೌಲಭ್ಯಗಳನ್ನು ಒದಗಿಸಿಕೊಡುವ ಮೂಲಕ, ಮೊಳಕಾಲ್ಮೂರು ರೇಷ್ಮೆ ಸೀರೆಗಳು ದೇಶಾದ್ಯಂತ ಗುರುತಿಸಿಕೊಳ್ಳುವಂತೆ ಮಾಡಿದರು. ಅಂದು ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಸರ್ ಎಂ.ವಿ. ಅವರು ಹಾಕಿಕೊಟ್ಟ ಈ ಬಲಿಷ್ಠ ಅಡಿಪಾಯದಿಂದಾಗಿಯೇ ಇಂದು ಮೊಳಕಾಲ್ಮೂರು ಸೀರೆಗಳು ಭೌಗೋಳಿಕ ಸೂಚ್ಯಂಕ (GI Tag) ಮಾನ್ಯತೆಯನ್ನು ಪಡೆದು ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾಗಿವೆ.

  


 ಮೊಳಕಾಲ್ಮೂರು ರೇಷ್ಮೆ ಸೀರೆಗಳಿಗೆ ಪ್ರಸಿದ್ಧಿ ಯಾಗಿರು ವುದರಿಂದ, ನೇಕಾರರನ್ನು ಪ್ರೋತ್ಸಾಹಿಸಲು 'ಜವಳಿ ಪಾರ್ಕ್' ಅಥವಾ ಮಿನಿ ಟೆಕ್ಸ್‌ಟೈಲ್ ಪಾರ್ಕ್ ಸ್ಥಾಪನೆಯ ಪ್ರಸ್ತಾಪಗಳಿವೆ. ನೇಕಾರರಿಗೆ ವಿಶೇಷ ಪ್ಯಾಕೇಜ್ ಮತ್ತು ಮಾರುಕಟ್ಟೆ ಸೌಲಭ್ಯ ದೊರೆಯಬೇಕು ಹಾಗೂ ಗುಳೆ ಹೋಗುವುದನ್ನು ತಡೆಯಲು ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯಾಗಬೇಕು.  

    ಭದ್ರಾ ಮೇಲ್ದಂಡೆ ಯೋಜನೆ (Upper Bhadra Project) ಬಯಲು ಸೀಮೆಯ ಜನರ ಬಹುಕಾಲದ ಕನಸು. ಆದರೆ ಯೋಜನೆ ಆರಂಭವಾಗಿ ಎರಡು ದಶಕಗಳೇ ಕಳೆಯುತ್ತ ಬಂದರೂ ಯೋಜನೆ ಮಾತ್ರ ಪೂರ್ಣಗೊಂಡಿಲ್ಲ. ಮೊಳಕಾಲ್ಮೂರು ಅಭಿವೃದ್ಧಿ ಹೊಂದಬೇಕಾದರೆ ಪ್ರಮುಖವಾಗಿ ಧೀರ್ಘಕಾಲಿಕ ನೀರಾವರಿ ಯೋಜನೆ ಜಾರಿಯಾಗಬೇಕಿದೆ, ಮೊಳಕಾಲ್ಮೂರಿನ ಪ್ರಮುಖ ಕೆರೆಗಳಿಗೆ ನೀರು ತುಂಬಿಸಿದರೆ ಅಂತರ್ಜಲ ಮಟ್ಟ ಸುಧಾರಿಸಿ, ಕುಡಿಯುವ ನೀರು ಮತ್ತು ಕೃಷಿಗೆ ಅನುಕೂಲವಾಗಲಿದೆ.

    ತುಂಗಭದ್ರಾ ನದಿ ಹಿನ್ನೀರಿನಿಂದ ಅಥವಾ ಶಾಶ್ವತ ಮೂಲಗಳಿಂದ ತಾಲೂಕಿನ ಫ್ಲೋರೈಡ್ ಪೀಡಿತ ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಪೈಪ್‌ಲೈನ್ ಅಳವಡಿಕೆ ಮತ್ತು ಶುದ್ಧ ನೀರಿನ ಘಟಕಗಳ ಸ್ಥಾಪನೆ ಪ್ರಗತಿಯಲ್ಲಿದೆ. ಶುದ್ದ ಕುಡಿಯುವ ನೀರು ತಾಲೂಕಿನ ಎಲ್ಲಾ ಗ್ರಾಮಗಳಿಗೆ ತಲುಪಬೇಕಿದೆ. ಆದರೆ ಸದ್ಯದ ಯೋಜನೆ, ಕೆಲ ಊರುಗಳಿಗೆ ಮಾತ್ರ ತಲುಪುವಂತಿದೆ. ಜನಪ್ರತಿನಿಧಿಗಳು ಇದರ ಕುರಿತು ಯೋಚಿಸುತ್ತಿಲ್ಲ.


ಲೇಖಕರು:

ಪಿ.ಎಸ್.ರಂಗನಾಥ

ರಾಂಪುರ

#ಮೊಳಕಾಲ್ಮೂರು #molakalmuru #chitradurga #rampura #577540 #kannada #karnataka #psranganath #psr #ರಾಂಪುರ #ashoka_siddapura #devasamudra #jatingarameshwara #jatinga_rameshwara 

ಶನಿವಾರ, ಫೆಬ್ರವರಿ 7, 2026

ಮಸ್ಕತ್ ಕನ್ನಡ ಶಾಲೆಯ ಶಿಕ್ಷಕಿಯರಿಗೆ ‘ಗಡಿನಾಡ ಚೇತನ ಪ್ರಶಸ್ತಿ’ಯ ಗರಿ: ಅನಿವಾಸಿ ಕನ್ನಡಿಗರ ಸಾಧನೆಗೆ ಸಂದ ಗೌರವ

    ವಿದೇಶದಲ್ಲಿ ಉದ್ಯೋಗಕ್ಕಾಗಿ ನೆಲೆನಿಂತಾಗ, ಮಕ್ಕಳು ಮಾತೃಭಾಷೆ ಕಲಿಕೆಯಿಂದ ವಂಚಿತರಾಗುವುದು ಸಹಜ. ಮನೆಯಲ್ಲಿ ಕನ್ನಡ ಮಾತೃಭಾಷೆಯಾಗಿದ್ದರೆ, ಕನ್ನಡ ಮಾತನಾಡುವುದನ್ನ ಸಹಜವಾಗಿ ಕಲಿಯಬಹುದು, ಆದರೂ  ಕನ್ನಡ ಓದುವುದು ಮತ್ತು ಬರೆಯುವುದರಿಂದ ಮಕ್ಕಳು ವಂಚಿತರಾಗುವ ಅವಕಾಶವೇ ಹೆಚ್ಚು. ಇಂತಹ ಸಂಧರ್ಭಗಳಲ್ಲಿ ಹೆತ್ತವರು ಆಸಕ್ತಿಯಿಂದ ಮಕ್ಕಳಿಗೆ ಕನ್ನಡ ಓದುವುದು ಮತ್ತು ಬರೆಯುವುದನ್ನ ಕಲಿಸಿದರೆ ಅವರಿಗೆ ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ನೆಲೆನಿಂತಾಗ ಕನ್ನಡ ಉಪಯೋಗಕ್ಕೆ ಬರುವ ಸಾದ್ಯತೆ ಇರುತ್ತದೆ.

    ಮಸ್ಕತ್ ನ  ಶಾಲೆಗಳಲ್ಲಿ ಇಂಗ್ಲೀಶ್, ಹಿಂದಿ, ಸಂಸ್ಕೃತ ಮತ್ತು ಅರೇಬಿಕ್ ಭಾಷೆಯ ಜತೆಗೆ ಕೆಲವೆಡೆ, ಫ್ರೆಂಚ್ ಮತ್ತು ಸ್ಪಾನಿಶ್ ಭಾಷೆಯನ್ನು ಕಲಿಸುತ್ತಾರೆ. ಆದರೆ ಮಸ್ಕತ್ ನಲ್ಲಿರುವ ಭಾರತೀಯ ಶಾಲೆಗಳಲ್ಲಿ ಕನ್ನಡಿಗ ವಿಧ್ಯಾರ್ಥಿಗಳ ಸಂಖ್ಯೆ ಬಹಳ ಕಡಿಮೆಯಿರುವುದರಿಂದ, ಇಲ್ಲಿನ ಶಾಲೆಗಳಲ್ಲಿ ಕನ್ನಡ ಕಲಿಸಲು ಆಡಳಿತ ಮಂಡಳಿಗಳು ಆಸಕ್ತಿ ತೋರುವುದಿಲ್ಲ. ಈ ಸಮಸ್ಯೆಯನ್ನು ಮನಗಂಡ ಆಸಕ್ತ ಕನ್ನಡ ಅಭಿಮಾನಿಗಳು ಸುಮಾರು 2006 ನೇ ಇಸವಿಯಲ್ಲಿ ಕನ್ನಡ ಶಾಲೆಯೊಂದನ್ನು ಪ್ರಾರಂಭಿಸಿ  ಮಕ್ಕಳಿಗಾಗಿ ಕನ್ನಡ ಕಲಿಸುವ ತರಗತಿಗಳನ್ನು ನಡೆಸುತಿದ್ದಾರೆ. ಇಲ್ಲಿ ಪೋಷಕರೇ ಶಿಕ್ಷಕರು. ಯಾವುದೇ ಶುಲ್ಕ ಮತ್ತು ಸಂಭಾವನೆಯಿಲ್ಲದೆ ಕೇವಲ ಸೇವಾ ಮನೋಭಾವನೆ ಯಿಂದ ಸ್ವಯಂ ಪ್ರೇರಿತರಾಗಿ ಮಕ್ಕಳಿಗೆ ಕನ್ನಡ ಕಲಿಸುತಿದ್ದಾರೆ. ಈ ವ್ಯವಸ್ಥೆಯಿಂದ ಕನ್ನಡ ಕಲಿತ ಮಕ್ಕಳು, ಮುಂದಿನ ದಿನಗಳಲ್ಲಿ ಕನ್ನಡನಾಡಿನಲ್ಲಿ ಭಾಷಾ ಸಮಸ್ಯೆಯನ್ನು ಎದುರಿಸುವುದಿಲ್ಲ, 

    2006 ನೇ ಇಸವಿಯಲ್ಲಿ ಶ್ರೀ ಯೋಗಾನಂದ ಹೊಳಲ್ಕೆರೆ ಇವರ ಮುಂದಾಳತ್ವದಲ್ಲಿ ಕನ್ನಡ ತರಗತಿಗಳಿಗೆ ಚಾಲನೆ ನೀಡಲಾಯಿತು. ಪ್ರಥಮ ವರ್ಷ ಸುಮಾರು ನೂರು ವಿದ್ಯಾರ್ಥಿಗಳು ಕನ್ನಡ ಕಲಿಯಲು ನೊಂದಾಯಿಸಿದ್ದರು. ಅಂದು ಪ್ರಾರಂಭಿಸಲಾಗಿದ್ದ ಶಾಲೆಯಲ್ಲಿ ಇಂದಿಗೆ ಸಾವಿರಾರು ಮಕ್ಕಳು ಕನ್ನಡ ಕಲಿತಿರುವುದು ನಮ್ಮೆಲ್ಲರಿಗೆ ಹೆಮ್ಮೆಯ ವಿಷಯ. 

    ಕಡಲಾಚೆಯ ಮಸ್ಕತ್‌ನಲ್ಲಿ ಕನ್ನಡದ ದೀಪವನ್ನು ಬೆಳಗಿಸುತ್ತಿರುವ ನಮ್ಮ ಹೆಮ್ಮೆಯ ಶಿಕ್ಷಕಿಯರ ಸೇವೆಯನ್ನು ಗುರುತಿಸಿ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ‘ಗಡಿನಾಡ ಚೇತನ ಪ್ರಶಸ್ತಿ’ ನೀಡಿ ಗೌರವಿಸಿರುವುದು ಅತ್ಯಂತ ಶ್ಲಾಘನೀಯ. "ಎಲ್ಲೆ ಇರು ಹೇಗೆ ಇರು  ಎಂದೆಂದಿಗೂ ನೀ ಕನ್ನಡವಾಗಿರು" ಎಂಬ ಕವಿವಾಣಿಯನ್ನು ಅಕ್ಷರಶಃ ಪಾಲಿಸುತ್ತಿರುವ ಮಸ್ಕತ್‌ನ ಅನಿವಾಸಿ ಕನ್ನಡಿಗರ ಸಾಧನೆ ಇಂದು ಸಮಸ್ತ ಕನ್ನಡಿಗರಿಗೂ ಹೆಮ್ಮೆಯ ವಿಷಯವಾಗಿದೆ. 


*ಎರಡು ದಶಕಗಳ ಅವಿರತ ಕಾಯಕ*

ತಾಯ್ನಾಡಿನಿಂದ ಸಾವಿರಾರು ಮೈಲಿ ದೂರವಿದ್ದರೂ, ಕನ್ನಡದ ಮೇಲಿನ ಅಭಿಮಾನ ಮಾತ್ರ ಕಡಿಮೆಯಾಗಿಲ್ಲ ಎಂಬುದಕ್ಕೆ ಮಸ್ಕತ್‌ನ ಕನ್ನಡ ಶಾಲೆಯೇ ಸಾಕ್ಷಿ. ಕಳೆದ ಎರಡು ದಶಕಗಳಿಂದ ಯಾವುದೇ ಅಡೆತಡೆಯಿಲ್ಲದೆ, ನಿರಂತರವಾಗಿ ಇಲ್ಲಿನ ಅನಿವಾಸಿ ಕನ್ನಡಿಗ ಮಕ್ಕಳಿಗೆ ಕನ್ನಡವನ್ನು ಕಲಿಸಲಾಗುತ್ತಿದೆ. ಆಧುನಿಕತೆಯ ಭರಾಟೆಯಲ್ಲಿ ಮಾತೃಭಾಷೆ ಮರೆಯಾಗುತ್ತಿರುವ ಈ ಕಾಲಘಟ್ಟದಲ್ಲಿ, ಪರದೇಶದಲ್ಲಿ ಹುಟ್ಟಿ ಬೆಳೆಯುತ್ತಿರುವ ಮಕ್ಕಳಿಗೆ 'ಅ ಆ ಇ ಈ' ಕಲಿಸಿ, ಕನ್ನಡ ಸಂಸ್ಕೃತಿಯ ಪರಿಚಯ ಮಾಡಿಕೊಡುತ್ತಿರುವ ಈ ಕಾರ್ಯ ನಿಜಕ್ಕೂ ಒಂದು ತಪಸ್ಸು.


*ಪ್ರಚಾರದ ಹಂಗಿಲ್ಲದ ನಿಸ್ವಾರ್ಥ ಸೇವೆ.*

ಈ ಶಾಲೆಯ ಮತ್ತು ಇಲ್ಲಿನ ಶಿಕ್ಷಕವೃಂದದ ವಿಶೇಷತೆಯೆಂದರೆ ಅವರ 'ನಿಸ್ವಾರ್ಥ ಮನೋಭಾವ'. ಯಾವುದೇ ಪ್ರಚಾರದ ಹಂಗಿಲ್ಲದೆ, ಹಣದ ಅಥವಾ ಪ್ರತಿಫಲದ ನಿರೀಕ್ಷೆಯಿಲ್ಲದೆ ಕೇವಲ ಕನ್ನಡದ ಮೇಲಿನ ಪ್ರೀತಿಯಿಂದ ಈ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಮಸ್ಕತ್‌ನಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರೇ ಸ್ವಯಂಪ್ರೇರಿತರಾಗಿ ಶಿಕ್ಷಕರಾಗಿ ದುಡಿಯುತ್ತಿರುವುದು ಅವರ ಭಾಷಾಭಿಮಾನಕ್ಕೆ ಹಿಡಿದ ಕನ್ನಡಿಯಾಗಿದೆ.


*ಗಡಿನಾಡ ಚೇತನ ಪ್ರಶಸ್ತಿಯ ಮೆರುಗು*

ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ಇಂತಹ ಎಲೆಮರೆ ಕಾಯಿಯಂತಿದ್ದ ಸಾಧನೆಯನ್ನು ಗುರುತಿಸಿರುವುದು ಸ್ವಾಗತಾರ್ಹ. ಶಿಕ್ಷಕಿಯರಿಗೆ ನೀಡಿರುವ  *‘ಗಡಿನಾಡ ಚೇತನ ಪ್ರಶಸ್ತಿ’* ಯು ಕೇವಲ ಒಬ್ಬ ವ್ಯಕ್ತಿಗೆ ಸಿಕ್ಕ ಗೌರವವಲ್ಲ, ಬದಲಾಗಿ ಇದು ಇಡೀ ಮಸ್ಕತ್ ಕನ್ನಡಿಗರ ಸಮುದಾಯಕ್ಕೆ ಸಿಕ್ಕ ಮನ್ನಣೆಯಾಗಿದೆ. ಈ ಪ್ರಶಸ್ತಿಯು ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ಸಾಹದಿಂದ ಕನ್ನಡ ಸೇವೆಯನ್ನು ಮಾಡಲು ಪ್ರೇರಣೆ ನೀಡಲಿದೆ.

✍️ಪಿ.ಎಸ್.ರಂಗನಾಥ

ಮಸ್ಕತ್, ಒಮಾನ್ ರಾಷ್ಟ್ರ

ಶುಕ್ರವಾರ, ಫೆಬ್ರವರಿ 6, 2026

ಮಸ್ಕತ್ ನಲ್ಲಿ ತುಳು ಚಿತ್ರರಸಿಕರ ಮನಗೆದ್ದ "ಬೆಲ್ಲದ ಗಟ್ಟಿ" (Bellada Gatti) ತುಳು ಚಲನಚಿತ್ರ

ಕೌಟುಂಬಿಕ, ಸಾಮಾಜಿಕ, ಕುತೂಹಲ ಮೂಡಿಸುವ ಥ್ರಿಲ್ಲರ್ ಅಂಶಗಳೊನ್ನಳೊಗೊಂಡ ತುಳು ಚಲನಚಿತ್ರ "ಬೆಲ್ಲದ ಗಟ್ಟಿ" ಒಮಾನ್ ರಾಷ್ಟ್ರದ ಮಸ್ಕತ್ ನಲ್ಲಿ ಶುಕ್ರವಾರ 06/02/2026 ರಂದು ಪ್ರೀಮಿಯರ್ ಶೋ ದಲ್ಲಿ ತುಳು ಚಿತ್ರ ಪ್ರೇಮಿಗಳಿಂದ ಚಿತ್ರಮಂದಿರ ಭರ್ತಿಯಾಗಿ ಅದ್ಭುತ ಪ್ರದರ್ಶನ ಕಂಡು ಬಂತು. 

      ಇಪ್ಪತ್ತು ವರ್ಷಗಳ ಹಿಂದಿನ ಕಾಲಘಟ್ಟದಲ್ಲಿ ನಡೆಯುವ ಈ ಚಿತ್ರದಲ್ಲಿ, ಹಲವಾರು ವಿಷಯಗಳನ್ನು ಪ್ರಸ್ತಾಪಿಸಲಾಗಿದೆ. ತುಳುನಾಡಿನ ಸುಂದರ ಬದುಕು, ಕರಾವಳಿ ದೈವಗಳು, ಕೌಟುಂಬಿಕ ಜೀವನ, ಕರಾವಳಿಯ ಸುಂದರ ಪ್ರಕೃತಿ, ಎಲ್ಲವನ್ನು ಚಿಕ್ಕದಾಗಿ ಮತ್ತು ಚೊಕ್ಕದಾಗಿ ನಿರ್ದೇಶಕರು ಕಟ್ಟಿಕೊಟ್ಟಿದ್ದಾರೆ.  ಚಿತ್ರಕಥೆಗೆ ತಕ್ಕಂತೆ ಹಿನ್ನೆಲೆ ಸಂಗೀತ ಮತ್ತು ಸುಮಧುರ ಹಾಡುಗಳು ಚೆನ್ನಾಗಿ ಮೂಡಿ ಬಂದಿವೆ. ಚಿತ್ರದ ಪ್ರಮುಖ ಘಟನೆಗಳ ಸನ್ನಿವೇಶಗಳಲ್ಲಿ ಬರುವ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಪ್ರೇಕ್ಷಕರನ್ನು ಹಿಡಿದಿಡುತ್ತದೆ. ಕರಾವಳಿಯ ಸುಂದರ ದೃಶ್ಯಗಳು ಚಿತ್ರದ ಛಾಯಾಗ್ರಹಣವೂ ಇನ್ನೊಂದು ಪ್ಲಸ್ ಪಾಯಿಂಟ್.  ಊರಿನಿಂದ ದೂರ ಇರುವ ಜನರು, ಆ ದೃಶ್ಯಗಳನ್ನು ನೋಡುವಾಗ ತಮ್ಮ ಹುಟ್ಟೂರನ್ನು ನೆನಪಿಸುವಂತೆ ಮಾಡುವಲ್ಲಿ ಛಾಯಾಗ್ರಾಹಕರು ಯಶಸ್ವಿಯಾಗಿದ್ದಾರೆ.

        ಚಿತ್ರದ ಚಿತ್ರಕಥೆ ಬಹಳ ಗಟ್ಟಿಯಾಗಿದ್ದು, ಪ್ರೇಕ್ಷಕರನ್ನು ಹಿಡಿದಿಡುವಂತಿದೆ. ಇಪ್ಪತ್ತು ವರ್ಷಗಳ ಹಿಂದಿನ ಕಾಲಘಟ್ಟದ ಕಥಾಹಂದರ ಹೊಂದಿರುವ ಈ ಸಿನಿಮಾ, ಒಂದು ಸಾಂಪ್ರದಾಯಿಕ ಕುಟುಂಬದಲ್ಲಿ ನಡೆಯುವ ಅನಿರೀಕ್ಷಿತ ಘಟನಾವಳಿಗಳನ್ನು ಅನಾವರಣಗೊಳಿಸುತ್ತದೆ.  ಕರಾವಳಿ ಸಿಹಿ ತಿನಿಸು ‘ಬೆಲ್ಲದಗಟ್ಟಿ’ ಈ ಕಥೆಯ ತಿರುವು. ಗರ್ಭಿಣಿ ಜಾನಕಿ ಹಸಿವಾದಾಗ ಆಸೆಯಿಂದ ತಿಂದ ಆ ಒಂದು ಬೆಲ್ಲದಗಟ್ಟಿ ಇಡೀ ಮನೆಯ ಶಾಂತಿಯನ್ನು ಕದಡುತ್ತದೆ. ಮಾವನ ತಪ್ಪು ಕಲ್ಪನೆ ಹಾಗೂ ಸೊಸೆ ಜಲಜಾಳ ನಡುವಿನ ಮಾತಿನ ಚಕಮಕಿ ದೊಡ್ಡ ಸಂಘರ್ಷಕ್ಕೆ ನಾಂದಿ ಹಾಡುತ್ತದೆ. ಮುಂಚಿನಿಂದಲೂ ಸೊಸೆ ಜಲಜಾಳ ಬಗ್ಗೆ ಮಾವನಿಗೆ ಅಸಹನೆ ಇರುತ್ತದೆ. 

    ದೈವದ ಹೆಸರಿನಲ್ಲಿ ಮಾವ ಮಾಡಿದ ಒಂದು ಸಣ್ಣ ತಪ್ಪು, ಇಡೀ ಮನೆಯ ವಾತಾವರಣವನ್ನೇ ಬದಲಿಸಿಬಿಡುತ್ತದೆ. ಈ ಘಟನೆಯ ನಂತರ ಜಾನಕಿಯ ವರ್ತನೆಯಲ್ಲಿ ವಿಪರೀತ ಬದಲಾವಣೆಗಳಾಗುತ್ತವೆ. ಅವಳ ವಿಚಿತ್ರ ನಡವಳಿಕೆಯಿಂದ ಕುಟುಂಬವು ಸಂಕಷ್ಟಕ್ಕೆ ಸಿಲುಕುತ್ತದೆ. ನಂತರ ನಡೆಯುವ ಘಟನೆಗಳು ಕಥೆಗೆ ಹೊಸ ಆಯಾಮ ನೀಡುತ್ತವೆ. ಕೊನೆಗೆ, ತನ್ನ ತಪ್ಪಿನ ಅರಿವಾಗುವ ಮಾವನಿಗೆ "ಮಗಳು ಮತ್ತು ಸೊಸೆ ಇಬ್ಬರೂ ಒಂದೇ" ಎಂಬ ಸತ್ಯ ದರ್ಶನವಾಗುತ್ತದೆ. "ಪರರ ಮನೆಯಿಂದ ಬಂದ ಸೊಸೆಯನ್ನು ಮಗಳಂತೆ ಕಾಣಬೇಕು, ಅವಳ ತವರು ಮನೆಯನ್ನು ಹೀಯಾಳಿಸುವುದು ತಪ್ಪು" ಎಂಬ ಉದಾತ್ತ ಸಂದೇಶದೊಂದಿಗೆ ಚಿತ್ರ ಮುಕ್ತಾಯವಾಗುತ್ತದೆ.

        ಥ್ರಿಲ್ಲರ್ ಜತೆಗೆ, ಚಿತ್ರದಲ್ಲಿ ಲಘು ಹಾಸ್ಯವೂ ಇದೆ.  ಹದಿ ಹರೆಯದ ಯುವಕ ಯುವತಿಯರ ಸನ್ನಿವೇಶ ಮತ್ತು  ನಿರ್ದೇಶಕ ರಾಜಾ ಕಟಪಾಡಿ ಯವರು, ಮಾತು ಬರದ ಮೂಗನಂತೆ ನಟಿಸಿರುವ ದೃಶ್ಯಗಳು ಹಾಸ್ಯದ ಹೊನಲನ್ನು ಹರಿಸುತ್ತವೆ. ಹಾಡುಗಳು ಸಹ ಸುಮಧರವಾಗಿ ಮೂಡಿ ಬಂದಿದೆ. ಚಿತ್ರದ ನಟ ನಟಿಯರು, ಪೋಷಕ ಕಲಾವಿದರು ಎಲ್ಲರೂ ಸ್ಥಳೀಯ ಕಲಾವಿದರು ಎನ್ನುವುದು ವಿಶೇಷ, ಪ್ರತಿಯೊಬ್ಬರೂ ಚಿತ್ರದಲ್ಲಿ ಮನಮುಟ್ಟುವಂತೆ ನಟಿಸಿದ್ದಾರೆ, ತೆರೆ ಮೇಲೆ ಪ್ರತಿ ಪಾತ್ರವು ತುಂಬಾ ಸರಳವಾಗಿ ನೈಜವಾಗಿ ಮೂಡಿ ಬರಲು ನಿರ್ದೇಶಕರು ಚಿತ್ರದ ಪ್ರಮುಖ ಪಾತ್ರದಾರಿಗಳಿಂದ ಕಥೆಗೆ ಬೇಕಾದ ನಟನೆಯನ್ನು ತೆಗೆಸಿದ್ದಾರೆ. ಪ್ರಮುಖ ಪಾತ್ರಧಾರಿಗಳ ಪ್ರಭುದ್ದತೆಯನ್ನು ಪ್ರತಿ ದೃಶ್ಯಗಳಲ್ಲಿ ಕಾಣಬಹುದು. ನಿರ್ಮಾಪಕ ರಾಮಕೃಷ್ಣ ಸುಜೀರ್ ಬಾರ್ದಿಲ ಅವರು ಚಿತ್ರಕ್ಕೆ ಬಂಡವಾಳ ಹೂಡಿದ್ದು ಮಾತ್ರವಲ್ಲದೆ, ಭಟ್ಟರ ಪಾತ್ರದಲ್ಲಿ ಅನುಭವ ನಟರಂತೆ ಅದ್ಭುತವಾಗಿ ನಟಿಸಿದ್ದಾರೆ. 

        ವಿದ್ಯಾವಂತ ಯುವಕರು ಊರಿನಲ್ಲಿ ದುಡಿಯಲು ಸಾಧ್ಯವಿಲ್ಲ ಎಂದು ಹುಟ್ಟಿದ ಊರನ್ನ ಬಿಟ್ಟು ಮುಂಬಯಿಗೆ ಹೋಗಿ, ಅಲ್ಲಿ ಹೋಟೆಲ್ ಬಾರ್ ಗಳಲ್ಲಿ ದುಡಿದು ಉತ್ತಮವಾಗಿ ಹಣ ಸಂಪಾದಿಸುತ್ತಾರೆ. ಅವರ ಜೀವನವನ್ನು ನೋಡಿ ಬೇರೆಯವರು ಸಹ ಊರನ್ನು ಬಿಟ್ಟು ಮುಂಬಯಿಗೆ ಹೋಗಿ ಹಣ ಸಂಪಾದಿಸಲು ಪ್ರೇರೆಪಿಸುತ್ತದೆ, ಆದರೆ ಸ್ವಂತ ಊರಿನಲ್ಲಿ ರಾಜನಂತೆ ಬದುಕುವ ನೆಮ್ಮದಿ ಪರ ಊರಿನಲ್ಲಿ ಇಲ್ಲ ಎನ್ನುವ ಸ್ಮೂಕ್ಷ ಸಂದೇಶವನ್ನು ನಿರ್ದೇಶಕರು ನೀಡಿದ್ದಾರೆ. ಒಟ್ಟಾರೆ ಚಿತ್ರವು ತುಂಬಾ ಚೆನ್ನಾಗಿ ಮೂಡಿ ಬಂದಿದ್ದು, ಚಿತ್ರ ರಸಿಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಬರಹ: ಪಿ.ಎಸ್.ರಂಗನಾಥ

ಮಸ್ಕತ್, ಒಮಾನ್ ರಾಷ್ಟ್ರ


Click below headings