ಶುಕ್ರವಾರ, ಜನವರಿ 30, 2026

​ಜೀವನದಲ್ಲಿ ಯಶಸ್ವಿಯಾಗಲು ಭಂಡ ಧೈರ್ಯವೂ ಬೇಕು.



​ನಮ್ಮ ದೈನಂದಿನ ಜೀವನದಲ್ಲಿ ನಾವು ಸಾವಿರಾರು ಜನರನ್ನು ಭೇಟಿ ಮಾಡುತ್ತೇವೆ. ಕೆಲವರನ್ನು ನೋಡಿದಾಗ, ಅವರ ಮಾತುಗಾರಿಕೆ ಅಥವಾ ಅವರು ನಡೆದುಕೊಳ್ಳುವ ರೀತಿ ಕಂಡು "ಅಬ್ಬಾ! ಅವರದ್ದೇನು ವ್ಯಕ್ತಿತ್ವ!" ಎಂದು ನಾವು ಅಚ್ಚರಿಪಡುತ್ತೇವೆ. ಅವರ ಪ್ರಭಾವಶಾಲಿ ವ್ಯಕ್ತಿತ್ವಕ್ಕೆ ನಾವು ಮಾರುಹೋಗುತ್ತೇವೆ ಮತ್ತು ಅಂತಹ ಆತ್ಮವಿಶ್ವಾಸ ನಮ್ಮಲ್ಲಿಲ್ಲವಲ್ಲ ಎಂದು ಕೆಲವೊಮ್ಮೆ ಬೇಸರಿಸಿಕೊಳ್ಳುತ್ತೇವೆ. ಕೆಲವರಿಗೆ ಇಂತಹ ಆಕರ್ಷಕ ವ್ಯಕ್ತಿತ್ವವು ಹುಟ್ಟಿನಿಂದಲೇ ಬಂದ ವರದಂತಿರಬಹುದು. ಅವರು ಬೆಳೆದ ಪರಿಸರ, ಪೋಷಕರು, ಗುರು-ಹಿರಿಯರ ಮಾರ್ಗದರ್ಶನ ಹಾಗೂ ಅವರ ಮನೆತನದ ಸಂಸ್ಕಾರಗಳು ಅವರ ವ್ಯಕ್ತಿತ್ವದ ಮೇಲೆ ಗಾಢವಾದ ಪ್ರಭಾವ ಬೀರಿರುತ್ತವೆ. ಆದರೆ, ಆತ್ಮವಿಶ್ವಾಸ ಎಂಬುದು ಕೇವಲ ಹುಟ್ಟಿನಿಂದ ಬರುವ ಗುಣವಲ್ಲ; ಅದನ್ನು ಹಂತ ಹಂತವಾಗಿ ಯಾರು ಬೇಕಾದರೂ ಬೆಳೆಸಿಕೊಳ್ಳಬಹುದು.


​ಎಂತಹದ್ದೇ ಕಠಿಣ ಸಂದರ್ಭ ಎದುರಾದರೂ ಎದೆಗುಂದದೆ, "ನಾನು ಇದನ್ನು ಸಾಧಿಸಿಯೇ ತೀರುತ್ತೇನೆ" ಎಂಬ ಭಂಡ ಧೈರ್ಯದ ಮನಸ್ಥಿತಿಯನ್ನು ಬೆಳೆಸಿಕೊಳ್ಳಲು ಆತ್ಮವಿಶ್ವಾಸವೇ ಮೂಲಾಧಾರ. ಈ ಶಕ್ತಿಯನ್ನು ನಮ್ಮಲ್ಲಿ ವೃದ್ಧಿಸಿಕೊಳ್ಳಲು ಅನುಸರಿಸಬೇಕಾದ ಪ್ರಮುಖ ಹಂತಗಳು ಇಲ್ಲಿವೆ:



​೧. ಮುಜುಗರ ಮತ್ತು ನಾಚಿಕೆಯಿಂದ ಮುಕ್ತಿ

​ಆತ್ಮವಿಶ್ವಾಸದ ಹಾದಿಯಲ್ಲಿ ಮೊದಲ ಅಡೆತಡೆಯೆಂದರೆ ಅದು ಮುಜುಗರ. ನಾಲ್ಕು ಜನರ ಮುಂದೆ ಮಾತನಾಡಲು ಅಥವಾ ಹೊಸದೇನನ್ನಾದರೂ ಪ್ರಯತ್ನಿಸಲು ನಾವು ನಾಚಿಕೆಪಡುತ್ತೇವೆ. ಆದರೆ, ಸಾಧನೆಯ ಹಾದಿಯಲ್ಲಿ ಸಾಗಲು ಮೊದಲು ಈ ಮುಜುಗರದ ಸ್ವಭಾವವನ್ನು ಬಿಡಲೇಬೇಕು. ನಾವು ಇತರರ ಬಗ್ಗೆ ಏನು ಯೋಚಿಸುತ್ತೇವೆ ಎನ್ನುವುದಕ್ಕಿಂತ, ಇತರರು ನಮ್ಮ ಬಗ್ಗೆ ಏನು ಯೋಚಿಸಬಹುದು ಎಂಬ ಭಯವೇ ನಮ್ಮನ್ನು ಕಟ್ಟಿಹಾಕುತ್ತದೆ. ಈ ಸಂಕೋಲೆಯನ್ನು ಕತ್ತರಿಸಿದಾಗ ಮಾತ್ರ ನಮ್ಮ ನಿಜವಾದ ಸಾಮರ್ಥ್ಯ ಹೊರಬರಲು ಸಾಧ್ಯ.


​೨. ಸಣ್ಣ ಸವಾಲುಗಳು ಮತ್ತು ಗೆಲುವಿನ ರುಚಿ

​ಒಮ್ಮೆಲೇ ದೊಡ್ಡ ಶಿಖರವನ್ನು ಏರಲು ಸಾಧ್ಯವಿಲ್ಲ. ಆದ್ದರಿಂದ, ಜೀವನದಲ್ಲಿ ಸಣ್ಣ ಸಣ್ಣ ರಿಸ್ಕ್‌ಗಳನ್ನು ಅಥವಾ ಸವಾಲುಗಳನ್ನು ತೆಗೆದುಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಈ ಸಣ್ಣ ಪ್ರಯತ್ನಗಳಲ್ಲಿ ನೀವು ಗೆಲುವು ಸಾಧಿಸಿದಾಗ, ನಿಮ್ಮ ಮನಸ್ಸಿಗೆ "ನನ್ನಿಂದಲೂ ಸಾಧ್ಯ" ಎಂಬ ಭರವಸೆ ಸಿಗುತ್ತದೆ. ಇದು ನಿಮ್ಮಲ್ಲಿ ಅದ್ಭುತವಾದ ಆತ್ಮವಿಶ್ವಾಸವನ್ನು ತುಂಬುತ್ತದೆ. ಇದರೊಂದಿಗೆ ಸದಾ ಹೊಸ ವಿಷಯಗಳನ್ನು ಕಲಿಯುವ ಹಂಬಲವನ್ನು ಜೀವಂತವಾಗಿರಿಸಿಕೊಳ್ಳಿ.


​೩. ಭಯವನ್ನು ಮೆಟ್ಟಿ ನಿಲ್ಲುವ ಧೈರ್ಯ

​ಭಯವಿಲ್ಲದ ಮನುಷ್ಯನೇ ಇಲ್ಲ. ಆದರೆ ವಿಜೇತರು ಭಯಕ್ಕೆ ಶರಣಾಗುವುದಿಲ್ಲ. ಯಾವುದೇ ಕೆಲಸ ಮಾಡುವಾಗ ಸ್ವಲ್ಪ ಭಯವಿರುವುದು ಸಹಜ, ಆದರೆ ಆ ಭಯವನ್ನು ಬದಿಗಿಟ್ಟು ಕೆಲಸವನ್ನು ಸಂಪೂರ್ಣವಾಗಿ ಮಾಡಬೇಕು. ಯಾವಾಗ ನಾವು ಭಯಪಡುವ ಕೆಲಸವನ್ನೇ ಧೈರ್ಯದಿಂದ ಮಾಡುತ್ತೇವೆಯೋ, ಆಗ ಆ ಭಯವೇ ನಮ್ಮನ್ನು ಬಿಟ್ಟು ಓಡಿಹೋಗುತ್ತದೆ. ಇದನ್ನೇ "ಭಂಡ ಧೈರ್ಯ" ಎನ್ನುವುದು.


​೪. ಸಕಾರಾತ್ಮಕ ಆತ್ಮವಿಮರ್ಶೆ (Positive Self-Talk)

​ನಮ್ಮ ಬಗ್ಗೆ ನಾವು ಏನು ಅಂದುಕೊಳ್ಳುತ್ತೇವೆ ಎಂಬುದು ಬಹಳ ಮುಖ್ಯ. ದಿನವೂ ಕನ್ನಡಿಯ ಮುಂದೆ ನಿಂತು ನಿಮ್ಮೊಂದಿಗೆ ನೀವೇ ಸಕಾರಾತ್ಮಕವಾಗಿ ಮಾತನಾಡಿಕೊಳ್ಳಿ. "ನಾನು ಸಮರ್ಥನಿದ್ದೇನೆ", "ಇಂದು ನಾನು ಉತ್ತಮವಾಗಿ ಕೆಲಸ ಮಾಡುತ್ತೇನೆ" ಎಂಬ ಮಾತುಗಳು ನಿಮ್ಮ ಮನೋಬಲವನ್ನು ಹೆಚ್ಚಿಸುತ್ತವೆ. ಇದರ ಜೊತೆಗೆ ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಕಡೆಗೆ ಗಮನ ನೀಡಿ; ಅಂದರೆ ಸ್ವಯಂ ಕಾಳಜಿಗೆ (Self-care) ಪ್ರಾಮುಖ್ಯತೆ ಕೊಡಿ. ಆರೋಗ್ಯವಂತ ದೇಹದಲ್ಲಿ ಆರೋಗ್ಯವಂತ ಮನಸ್ಸಿದ್ದರೆ ಆತ್ಮವಿಶ್ವಾಸ ತಾನಾಗಿಯೇ ವೃದ್ಧಿಸುತ್ತದೆ.


​೫. ತಪ್ಪುಗಳಿಂದ ಕಲಿಯುವ ಗುಣ

​ಅಪರಾಧ ಮಾಡುವುದು ಮಾನವ ಸಹಜ ಗುಣ, ಆದರೆ ಅದನ್ನೇ ನೆಪ ಮಾಡಿಕೊಂಡು ಕುಳಿತುಕೊಳ್ಳುವುದು ತಪ್ಪು. ನಾವು ಮಾಡಿದ ತಪ್ಪುಗಳಿಂದ ಪಾಠ ಕಲಿಯಬೇಕು. ಅಕಸ್ಮಾತ್ ತಪ್ಪು ಸಂಭವಿಸಿದಾಗ ಅದನ್ನು ಮರೆಮಾಚುವ ಬದಲು, ಆತ್ಮವಿಶ್ವಾಸದಿಂದ ಆ ತಪ್ಪನ್ನು ಒಪ್ಪಿಕೊಂಡು ಮುಂದೆ ಸಾಗೋಣ. ತಪ್ಪುಗಳನ್ನು ಒಪ್ಪಿಕೊಳ್ಳುವವನು ಮಾತ್ರ ಅದನ್ನು ತಿದ್ದಿಕೊಳ್ಳಲು ಸಾಧ್ಯ. ಸಮಸ್ಯೆಗಳು ಬಂದಾಗ ಭಯಪಡುವ ಬದಲು ಅವುಗಳನ್ನು ಬಗೆಹರಿಸಲು ಪ್ರಯತ್ನಿಸುವುದು ನಿಮ್ಮನ್ನು ಒಬ್ಬ ಸಮರ್ಥ ವ್ಯಕ್ತಿಯನ್ನಾಗಿ ರೂಪಿಸುತ್ತದೆ.


​೬. ಸಕಾರಾತ್ಮಕ ಜನರ ಒಡನಾಟ

​ನಮ್ಮ ಸುತ್ತಮುತ್ತಲಿನ ಜನರ ಪ್ರಭಾವ ನಮ್ಮ ಮೇಲೆ ಅಧಿಕವಾಗಿರುತ್ತದೆ. ಸದಾ ನಕಾರಾತ್ಮಕವಾಗಿ ಮಾತನಾಡುವವರ ಜೊತೆಗಿದ್ದರೆ ನಮ್ಮ ಆತ್ಮವಿಶ್ವಾಸ ಕುಗ್ಗುತ್ತದೆ. ಆದ್ದರಿಂದ, ಸದಾ ಪ್ರೋತ್ಸಾಹ ನೀಡುವ ಮತ್ತು ಪಾಸಿಟಿವ್ ಆಗಿರುವ ಜನರ ಜೊತೆ ಸಮಯ ಕಳೆಯಬೇಕು.

ಆತ್ಮವಿಶ್ವಾಸ ಎನ್ನುವುದು ಒಂದು ದಿನದಲ್ಲಿ ಬರುವ ಮಂತ್ರವಲ್ಲ. ಇದು ನಿರಂತರ ಪ್ರಯತ್ನದಿಂದ ಸಿದ್ಧಿಸುವ ಕಲೆ. ಎಲ್ಲಕ್ಕಿಂತ ಮಿಗಿಲಾಗಿ, ಇಡೀ ಜಗತ್ತು ನಮ್ಮನ್ನು ನಂಬುವ ಮೊದಲು ನಮ್ಮ ಮೇಲೆ ನಮಗೆ ಅಚಲವಾದ ನಂಬಿಕೆ ಇರಬೇಕು. ನಮ್ಮ ಮೇಲೆ ನಮಗೆ ನಂಬಿಕೆ ಇದ್ದರೆ, ಜಗತ್ತಿನ ಯಾವುದೇ ಶಕ್ತಿ ನಮ್ಮನ್ನು ತಡೆಯಲು ಸಾಧ್ಯವಿಲ್ಲ. ಮೇಲೆ ತಿಳಿಸಿದ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ, ನಮ್ಮ ವ್ಯಕ್ತಿತ್ವವೂ ಇತರರಿಗೆ ಮಾದರಿ ಯಾಗುವುದರಲ್ಲಿ ಸಂಶಯವಿಲ್ಲ.

ಬರಹ: ಪಿ.ಎಸ್.ರಂಗನಾಥ.

ಮಸ್ಕತ್, ಒಮಾನ್ ರಾಷ್ಟ್ರ


ಬುಧವಾರ, ಜನವರಿ 28, 2026

ಸಕ್ಕರೆಯ ಸಿಹಿ ಪಯಣ: ಭಾರತದಿಂದ ಜಗತ್ತಿನ ಮನೆಮನದವರೆಗೆ

ನಾನು ಕಳೆದ ಎರಡು ದಶಕಗಳಿಂದ ಗಲ್ಫ್ ರಾಷ್ಟಗಳಲ್ಲಿ ಉದ್ಯೋಗ ಮಾಡುತ್ತಾ ನೆಲೆಸಿದ್ದೇನೆ. ಅರಬ್ಬರೊಂದಿಗೆ ವ್ಯವಹರಿಸುವಾಗ, ಅವರ ಅರೇಬಿಕ್ ಭಾಷೆಯಲ್ಲಿ ನಮ್ಮ ಭಾರತೀಯ ಭಾಷೆಗಳ ಕೆಲವು ಶಬ್ದಗಳಿರುವುದನ್ನು ನಾನು ಗಮನಿಸಿದ್ದೇನೆ. ಇತ್ತೀಚೆಗೆ ಶಾಪಿಂಗ್ ಮಾಲ್ ಒಂದರಲ್ಲಿ ಸ್ಥಳೀಯ ವ್ಯಕ್ತಿಯೊಬ್ಬರು ಅಲ್ಲಿದ್ದ ಯುವಕನ ಬಳಿ 'ವೇನ್ ಸುಕ್ಕರ್' (ಸಕ್ಕರೆ ಎಲ್ಲಿದೆ?) ಎಂದು ಕೇಳುತ್ತಿದ್ದರು. ಕೆಲವೊಮ್ಮೆ ವಿದೇಶಿಯರು ನಮ್ಮ ಶಬ್ದಗಳನ್ನು ಅವರ ಧೈನಂದಿನ ಚಟುವಟಿಕೆಗಳಲ್ಲಿ ಬಳಸುವುದನ್ನ ಕೇಳುವುದಿಕ್ಕೆ ಖುಷಿ ಎನಿಸುತ್ತದೆ. ಆ ಕ್ಷಣದಲ್ಲಿ ನಮ್ಮ ಭಾರತ ದೇಶ ಜಗತ್ತಿಗೆ ಹಲವಾರು ಕೊಡುಗೆಗಳನ್ನ ನೀಡಿರುವುದು ಮನಸ್ಸಿನಲ್ಲಿ ಹಾಡು ಹೋಯಿತು.   














ಸಕ್ಕರೆ ಪದದ ಮೂಲ ಸಂಸ್ಕೃತ:

ಈ ಸಕ್ಕರೆ ಪದದ ಮೂಲ ಸಂಸ್ಕೃತದ 'ಶರ್ಕರ' ಯಿಂದ ಬಂದಿದೆ,

ಶರ್ಕರಾ (Sharkara)  - ಅಂದರೆ ಪುಡಿಮಾಡಿದ ಅಥವಾ ಹರಳು ಸಕ್ಕರೆ. ಪರ್ಶಿಯನ್ ಭಾಷೆಯಲ್ಲಿ 'ಶಕರ್' (Shakar) ಆಯಿತು, ನಂತರ ಅರೇಬಿಕ್‌ನಲ್ಲಿ 'ಸುಕ್ಕರ್' (Sukkar) ಎಂದು ಬದಲಾಯಿತು. ಇಟಾಲಿಯನ್‌ನಲ್ಲಿ 'Zucchero', ಫ್ರೆಂಚ್‌ನಲ್ಲಿ 'Sucre' ಮತ್ತು ಇಂಗ್ಲಿಷ್‌ನಲ್ಲಿ 'Sugar' ಎಂದಾಯಿತು. ಅಷ್ಟೇ ಅಲ್ಲದೆ ಬಾರತೀಯ ಬಾಷೆಗಳಲ್ಲಿ ಸಕ್ಕರೆ ಶಬ್ದವನ್ನು ಅಲ್ಪ ಸ್ವಲ್ಪ ಬದಲಾವಣೆ  ಮಾಡಿ ಉಪಯೋಗಿಸುತ್ತಿರುವುದು ನಮಗೆಲ್ಲರಿಗೂ ತಿಳಿದಿದೆ.  

ಸಕ್ಕರೆಯ ಭಾಷಾ ಪ್ರಯಾಣ ಹೀಗಿದೆ: 

ಸಂಸ್ಕೃತ (ಶರ್ಕರ) → ಪರ್ಶಿಯನ್ (ಶಕರ್) → ಅರೇಬಿಕ್ (ಸುಕ್ಕರ್) → ಲ್ಯಾಟಿನ್ (ಸಕ್ಕರಮ್) → ಇಂಗ್ಲಿಷ್ (ಶುಗರ್).

ಸಕ್ಕರೆ: ಜಗತ್ತಿಗೆ ಸಿಹಿ ಕೊಡುಗೆ ನೀಡಿದ ಭಾರತ 

ಯುರೋಪಿಯನ್ನರು ಸಕ್ಕರೆ ಬಳಸಲು ಅರಬ್ಬರ ಪಾತ್ರ ಬಹಳ ಮಹತ್ವದ್ದಾಗಿದೆ. ಅರಬ್ಬರು ಮತ್ತು ಭಾರತೀಯರ ನಡುವೆ ಸಾವಿರಾರು ವರ್ಷಗಳಿಂದ ಸಮುದ್ರ ಮಾರ್ಗದ ವ್ಯಾಪಾರ ನಡೆಯುತ್ತಿರುವುದರಿಂದ  ಅರಬ್ಬರು ಸಕ್ಕರೆಯನ್ನು ಬಾರತದಿಂದ ಖರೀದಿಸಿ ಉಪಯೋಗಿಸುತ್ತಿದ್ದರು. ಅಷ್ಟೇ ಅಲ್ಲದೆ,  ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾ, ಯುರೋಪ್ ರಾಷ್ಟ್ರಗಳಿಗೂ ಮಾರುತಿದ್ದರು. ಅರೇಬಿಕ್ ಭಾಷೆಯಲ್ಲಿ ಕೆಲ ಸಾಂಬಾರ ಪದಾರ್ಥಗಳು ಮತ್ತು ದಿನಸಿ ವಸ್ತುಗಳ ಹೆಸರುಗಳು ಭಾರತೀಯ ಮೂಲದ್ದೇ ಆಗಿವೆ. ಸಾವಿರಕ್ಕೂ ಹೆಚ್ಚು ವರ್ಷಗಳ ಹಿಂದೆಯೇ ಅರೇಬಿಕ್‌ನಲ್ಲಿ ಇದು 'ಸುಕ್ಕರ್' ಎಂದು ಕರೆಯಲ್ಪಡುತ್ತಿತ್ತು. 

ಕ್ರಿ.ಶ. 7ನೇ ಶತಮಾನದಲ್ಲಿ ಚೀನಾದ ಚಕ್ರವರ್ತಿ ಟೈಜಾಂಗ್ ಭಾರತಕ್ಕೆ ತನ್ನ ದೂತರನ್ನು ಕಳುಹಿಸಿ ಸಕ್ಕರೆ ತಯಾರಿಸುವ ಕಲೆ ಕಲಿಯಲು ಆದೇಶಿಸಿದ್ದನಂತೆ. ಅವರು ಕಲಿತು ಬಂದ  ನಂತರ ಚೀನಾದಲ್ಲಿ ಸಕ್ಕರೆ ವ್ಯಾಪಕವಾಗಿ ತಯಾರಾಗಲು ಶುರುವಾಯಿತು. 

ಮಧ್ಯಕಾಲೀನ ಯುಗದಲ್ಲಿ ಅರಬ್ಬರು ಮತ್ತು ಪರ್ಶಿಯನ್ನರ  ಮೂಲಕ ಯುರೋಪಿಯನ್ನರಿಗೆ ಸಕ್ಕರೆಯ ಪರಿಚಯವಾಯಿತು. ಆರಂಭದಲ್ಲಿ ಇದು ತುಂಬಾ ದುಬಾರಿಯಾಗಿದ್ದುದರಿಂದ ಇದನ್ನು 'ಬಿಳಿ ಚಿನ್ನ' (White Gold) ಎಂದು ಕರೆಯಲಾಗುತ್ತಿತ್ತು ಮತ್ತು ಇದನ್ನು ಕೇವಲ ರಾಜಮನೆತನದವರು ಮಾತ್ರ ಬಳಸುತ್ತಿದ್ದರು.

ಸಕ್ಕರೆಯ ಉದ್ಯಮದ ಮಹತ್ವವನ್ನು ಅರಿತ ಯುರೋಪಿನ ರಾಷ್ಟ್ರಗಳು 15ನೇ ಮತ್ತು 16ನೇ ಶತಮಾನಗಳಲ್ಲಿ ಕಬ್ಬಿನ ಕೃಷಿಯನ್ನು ತಮ್ಮ ವಸಾಹತು ಪ್ರದೇಶಗಳಾದ ಕ್ಯಾರಿಬಿಯನ್ ದ್ವೀಪಗಳು, ಬ್ರೆಜಿಲ್ ಮತ್ತು ಇತರ ಉಷ್ಣಪ್ರದೇಶಗಳಲ್ಲಿ ಆರಂಭಿಸಿದರು. ಇದರಿಂದ ಸಕ್ಕರೆ ತಯಾರಿಕೆ ಉದ್ಯಮ ಅತಿ ವೇಗವಾಗಿ ಬೆಳೆಯಿತು. ಕಾಲಕ್ರಮೇಣ ಸಕ್ಕರೆ ಶ್ರೀಮಂತರಿಗೆ ಮಾತ್ರವಲ್ಲದೆ ಸಾಮಾನ್ಯ ಜನರಿಗೂ ಲಭ್ಯವಾಯಿತು.

ಗುಪ್ತ ಸಾಮ್ರಾಜ್ಯದ ಅವಧಿಯಲ್ಲಿ ಸುಧಾರಣೆ ಕಂಡಿದ್ದ ಸಕ್ಕರೆ ತಯಾರಿಸುವ ಪ್ರಕ್ರಿಯೆ: 

ಪ್ರಪಂಚದಲ್ಲೇ ಮೊಟ್ಟಮೊದಲ ಬಾರಿಗೆ ಕಬ್ಬಿನ ಹಾಲಿನಿಂದ ಸಕ್ಕರೆಯ ಹರಳುಗಳನ್ನು ತಯಾರಿಸುವ ತಂತ್ರಜ್ಞಾನವನ್ನು ಭಾರತೀಯರು ಅಭಿವೃದ್ಧಿಪಡಿಸಿದ್ದರು. ಕ್ರಿ.ಪೂ. 5ನೇ ಶತಮಾನದ ಹೊತ್ತಿಗೆ ಭಾರತದಲ್ಲಿ ಸಕ್ಕರೆ ತಯಾರಿಕೆ ಪ್ರಚಲಿತದಲ್ಲಿತ್ತು. ಗುಪ್ತ ಸಾಮ್ರಾಜ್ಯದ ಅವಧಿಯಲ್ಲಿ (ಕ್ರಿ.ಶ. 350) ಸಕ್ಕರೆಯನ್ನು ಹರಳು ರೂಪಕ್ಕೆ ತರುವ ಪ್ರಕ್ರಿಯೆ ಹೆಚ್ಚಿನ ಸುಧಾರಣೆ ಕಂಡಿತ್ತು ಮತ್ತು ಈ ಸಮಯದಲ್ಲಿ ಸಕ್ಕರೆ ತಯಾರಿಕೆಯ ತಂತ್ರಜ್ಞಾನವು ಅತ್ಯುನ್ನತ ಮಟ್ಟ ತಲುಪಿತ್ತು. ಕಬ್ಬಿನ ರಸವನ್ನು ಗಟ್ಟಿ ಮಾಡಿ ಅದನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡುವ ಪ್ರಕ್ರಿಯೆ ಭಾರತದಲ್ಲಿ ಶುರುವಾಯಿತು. ಇದನ್ನು 'ಖಂಡ' ಎಂದು ಕರೆಯುತ್ತಿದ್ದರು, ಇದೇ ಇಂದಿನ ಇಂಗ್ಲಿಷ್ ಪದ 'Candy' ನ ಮೂಲ.

ಸಕ್ಕರೆಗೆ ಮಾರುಹೋಗಿದ್ದ ಗ್ರೀಕರು:

ಅಲೆಕ್ಸಾಂಡರ್ ಮತ್ತು ಆತನ ಸೈನ್ಯ ಕ್ರಿ.ಪೂ. 326ರಲ್ಲಿ ಭಾರತಕ್ಕೆ ಬಂದಾಗ ಇಲ್ಲಿ ಬಳಕೆಯಲ್ಲಿದ್ದ ಸಕ್ಕರೆಯನ್ನು ಕಂಡು ಆಶ್ಚರ್ಯಚಕಿತರಾಗಿದ್ದರು. ಅಲೆಕ್ಸಾಂಡರ್‌ನ ನೌಕಾಪಡೆಯ ಮುಖ್ಯಸ್ಥ ನಿಯಾರ್ಕಸ್ (Nearchus) ತನ್ನ ದಾಖಲೆಗಳಲ್ಲಿ ಹೀಗೆ ಬರೆದಿದ್ದಾನೆ: "ಭಾರತದಲ್ಲಿ ಜೇನುನೊಣಗಳ ಸಹಾಯವಿಲ್ಲದೆಯೇ ಜೇನನ್ನು ನೀಡುವ ಒಂದು ಅದ್ಬುತ ಎಂದು ವರ್ಣಿಸಿದ್ದ. 

ಯುರೋಪಿಯನ್ನರು ಕಬ್ಬನ್ನು ಮೊಟ್ಟಮೊದಲ ಬಾರಿಗೆ ನೋಡಿದ್ದು ಆಗಲೇ ಎಂದು ವರ್ಲ್ಡ್ ಹಿಸ್ಟರಿ ಎನ್ಸೈಕ್ಲೋಪೀಡಿಯಾ ತಿಳಿಸುತ್ತದೆ. ಅಂದಿನ ಕಾಲಕ್ಕೆ ಗ್ರೀಕರಿಗೆ ಕೇವಲ ಜೇನುತುಪ್ಪ ಮಾತ್ರ ಸಿಹಿ ಯಾದ ವಸ್ತುವೆಂದು ತಿಳಿದಿತ್ತು. ಹಾಗಾಗಿ, ಕಬ್ಬಿನ ಹಾಲಿನಿಂದ ತಯಾರಿಸಿದ ಈ ವಸ್ತುವನ್ನು ಅವರು 'ಜೇನು ಕಲ್ಲು ' (Stone Honey) ಎಂದು ಕರೆದಿದ್ದರು. ಆಶ್ಚರ್ಯ ಎಂದರೆ, ಸಕ್ಕರೆಯನ್ನು ಒಂದು ಅದ್ಭುತ ಔಷಧ ವೆಂದು ಪರಿಗಣಿಸಿದ್ದು. ಗ್ರೀಕರು ಆರಂಭದಲ್ಲಿ ಸಕ್ಕರೆಯನ್ನು 'ಇಂಡಿಯನ್ ಸಾಲ್ಟ್' (Indian Salt) ಎಂದು ಕರೆಯುತ್ತಿದ್ದರು.  ಹಲವು ಶತಮಾನಗಳವರೆಗೆ ಯುರೋಪ್‌ನಲ್ಲಿ ಸಕ್ಕರೆಯು ಕೇವಲ ಒಂದು ದುಬಾರಿ ಔಷಧಿಯಾಗಿ ಮಾತ್ರ ಬಳಕೆಯಲ್ಲಿತ್ತು.

ಹಿಂದಿಯಲ್ಲಿ  'ಚೀನಿ':

ಹಿಂದಿಯಲ್ಲಿ ಸಕ್ಕರೆಯನ್ನು 'ಚೀನಿ' (Cheeni) ಎಂದು ಕರೆಯಲು ಕಾರಣವೆಂದರೆ, 7ನೇ ಶತಮಾನದಲ್ಲಿ ಚೀನಾದವರು ಭಾರತದ ಈ ತಂತ್ರಜ್ಞಾನವನ್ನು ಕಲಿತು, ಅದನ್ನು ಮತ್ತಷ್ಟು ಸಂಸ್ಕರಿಸಿ ಸ್ಪಟಿಕದಂತಹ ಬಿಳಿ ಸಕ್ಕರೆಯನ್ನು ತಯಾರಿಸಿದರು. ಇದು ಭಾರತಕ್ಕೆ ಮರಳಿ ಬಂದಾಗ, ಚೀನಾದಿಂದ ಬಂದಿದ್ದರಿಂದ ಇದಕ್ಕೆ 'ಚೀನಿ' ಎಂದು ಹೆಸರಾಯಿತು. ಹೀಗಾಗಿ ಉತ್ತರ ಬಾರತದವರು ಚೀನಿ ಎಂದು ಇಂದಿಗೂ ಬಳಸುತ್ತಿದ್ದಾರೆ. 

ಭಾರತವು ಕಬ್ಬಿನಿಂದ ಸಕ್ಕರೆ ತಯಾರಿಸುವುದನ್ನು ಕಂಡುಹಿಡಿದಿದ್ದರೂ, ಅದು ಹೆಚ್ಚಾಗಿ ಬೆಲ್ಲ ಅಥವಾ ಕಂದು ಬಣ್ಣದ ಪುಡಿಯ ರೂಪದಲ್ಲಿತ್ತು.

ವಿವಿಧ ಭಾಷೆಗಳಲ್ಲಿ ಸಕ್ಕರೆ:

ಅರೇಬಿಕ್: سُكَّر (ಸುಕ್ಕರ್)

ಆರ್ಮೇನಿಯನ್: շաքար (ಶಾಕರ್)

ಕ್ರೊಯೇಷಿಯನ್: šećer (ಶೆಚರ್)

ಜೆಕ್: cukr (ಚುಕರ್)

ಡ್ಯಾನಿಶ್: sukker (ಸುಕ್ಕರ್)

ಡಚ್: suiker (ಸೈಕರ್)

ಹಿಂದಿ: चीनी (ಚೀನಿ)

ಫಿನ್ನಿಶ್: sokeri (ಸೊಕೆರಿ)

ಫ್ರೆಂಚ್: sucre (ಸುಕ್ರೆ)

ಜರ್ಮನ್: Zucker (ಜುಕರ್)

ಗ್ರೀಕ್: ζάχαρη (ಜಾಖರಿ)

ಇಟಾಲಿಯನ್: zucchero (ಝುಕೇರೋ)

ನಾರ್ವೇಜಿಯನ್: sukker (ಸುಕ್ಕರ್)

ಪೋಲಿಷ್: cukier (ಚುಕಿಯರ್)

ಪೋರ್ಚುಗೀಸ್: açúcar (ಅಜುಕ್ಕರ್)

ರೋಮೇನಿಯನ್: zahăr (ಜಾಹರ್)

ರಷ್ಯನ್: сахар (ಸಾಖರ್)

ಸ್ಪ್ಯಾನಿಷ್: azúcar (ಅಜುಕ್ಕರ್)

ಸ್ವೀಡಿಷ್: socker (ಸೊಕ್ಕರ್)

ಟರ್ಕಿಶ್: şeker (ಶೆಕರ್)

ಉಕ್ರೇನಿಯನ್: цукор (ಚುಕೋರ್)

ನಮ್ಮ ಸಕ್ಕರೆ ಶಬ್ದವು ವಿವಿಧ ಭಾಷೆಗಳಲ್ಲಿ ಹೇಗೆಲ್ಲ ರೂಪಾಂತರ ಗೊಂಡಿದೆ ಎಂದು ಮೇಲಿನ ಶಬ್ದಗಳನ್ನು ಗಮನಿಸಿದಿರೆ ತಿಳಿಯುತ್ತದೆ.   

ಭಾರತೀಯರು ಜಗತ್ತಿಗೆ ನೀಡಿದ ಶ್ರೇಷ್ಠ ಕೊಡುಗೆಗಳಲ್ಲಿ ಸಕ್ಕರೆಯೂ ಒಂದು. ಇಂದು ಇದು ಜಗತ್ತಿನ ಬೃಹತ್ ಉದ್ಯಮ ವಾಗಿ ಬೆಳೆದಿರುವದಕ್ಕೆ ಬಾರತೀಯರು ಕಾರಣ ಎನ್ನುವದು ಹೆಮ್ಮೆ ಎನಿಸುತ್ತದೆ.    

ಬರಹ: ಪಿ.ಎಸ್. ರಂಗನಾಥ 

ಮಸ್ಕತ್, ಒಮಾನ್ ರಾಷ್ಟ್ರ.

ಶನಿವಾರ, ಜನವರಿ 24, 2026

ಬದಲಾಗುತ್ತಿರುವ ಅರಬ್ ರಾಷ್ಟ್ರಗಳ ಉದ್ಯೋಗ ನೀತಿ: ವಿದೇಶಿಗರಿಗೆ ಉದ್ಯೋಗದ ಹಾದಿ ಕಠಿಣ

 


ದಶಕಗಳಿಂದ ಗಲ್ಫ್ ರಾಷ್ಟ್ರಗಳಲ್ಲಿರುವ ಹೇರಳ ಉದ್ಯೋಗ ಅವಕಾಶ ಮತ್ತು ಅಧಿಕ ವರಮಾನದ ಆಕರ್ಷಣೆಯಿಂದ ಬಹಳಷ್ಟು ಜನರು ಗಲ್ಫ್ ರಾಷ್ಟ್ರಗಳಿಗೆ ಉದ್ಯೋಗ ಅರಸಿ ಹೋಗುತಿದ್ದರು. ಆದರೆ ಮುಂಬರುವ ದಿನಗಳಲ್ಲಿ ಈ ಅವಕಾಶ ಕಡಿಮೆಯಾಗುವ ಸಂಭವ ಜಾಸ್ತಿ ಅಂತ ಹೇಳಬಹುದು. ಗಲ್ಫ್ ಸಹಕಾರ ಮಂಡಳಿ (GCC) ರಾಷ್ಟ್ರಗಳಾದ ಸೌದಿ ಅರೇಬಿಯಾ, ಯುಎಇ, ಕುವೈತ್, ಒಮಾನ್, ಕತಾರ್ ಮತ್ತು ಬಹ್ರೇನ್‌ ದೇಶಗಳು ಕಳೆದ ಕೆಲವು ವರ್ಷಗಳಲ್ಲಿ ತಮ್ಮ ಆರ್ಥಿಕ ಮತ್ತು ಸಾಮಾಜಿಕ ನೀತಿಗಳಲ್ಲಿ ಮಹತ್ವದ ಬದಲಾವಣೆಗಳನ್ನು ತಂದಿದ್ದು, ಉದ್ಯೋಗಗಳಲ್ಲಿ ತಮ್ಮ ದೇಶದ ಪ್ರಜೆಗಳಿಗೆ ಮೊದಲ ಆದ್ಯತೆ ನೀಡುತ್ತಿವೆ. ಸ್ಥಳೀಯರಿಗೆ ಉದ್ಯೋಗ ಮೀಸಲಾತಿಯನ್ನು ಗಣನೆಗೆ ತೆಗೆದುಕೊಂಡು ತಮ್ಮ ಆರ್ಥಿಕತೆಯನ್ನು ಪುನಾರಚಿಸುತ್ತಿವೆ.

ದಶಕಗಳಿಂದ ವಿದೇಶಿ ಕಾರ್ಮಿಕರ ಸ್ವರ್ಗವಾಗಿದ್ದ ಈ ನೆಲದಲ್ಲಿ, ಈಗ 'Workforce Nationalization' (ಉದ್ಯೋಗ ರಾಷ್ಟ್ರೀಕರಣ) ಅಲೆಯು ಜೋರಾಗಿದೆ.  ಪ್ರತಿಯೊಂದು ಗಲ್ಫ್ ರಾಷ್ಟ್ರವು ನಿರ್ದಿಷ್ಟ ವಲಯಗಳಲ್ಲಿ ಸ್ಥಳೀಯರಿಗೆ ಮಾತ್ರ ಉದ್ಯೋಗ ಮೀಸಲಿಡಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಇದರಿಂದಾಗಿ ಖಾಸಗಿ ಕಂಪನಿಗಳು ಇಂತಿಷ್ಟು ಪ್ರಮಾಣದಲ್ಲಿ ಸ್ಥಳೀಯರನ್ನು ಉದ್ಯೋಗದಲ್ಲಿ ನೇಮಿಸಿಕೊಂಡು ವ್ಯವಹಾರಗಳನ್ನು ನಡೆಸಲೇಬೇಕು. ಇಲ್ಲವಾದರೆ, ಕೆಲವು ರಾಷ್ಟ್ರಗಳಲ್ಲಿ ದಂಡ ತೆರಬೇಕು, ಸರ್ಕಾರದ ಸೌಲಭ್ಯಗಳನ್ನು ನಿಲ್ಲಿಸಲಾಗುತ್ತದೆ. ಹೊಸ ಬಿಜಿನೆಸ್ ಮಾಡಲು ಲೈಸೆನ್ಸ್ ಸಿಗುವುದಿಲ್ಲ. ಇರುವ ಲೈಸೆನ್ಸ್ ಅನ್ನು ನವೀಕರಣಗೊಳಿಸುವುದಿಲ್ಲ. ಹೀಗೆ ವಿವಿಧ ರೀತಿಯ ನಿರ್ಬಂಧಗಳನ್ನು ಹೇರಲಾಗುತ್ತಿದೆ.

ಗಲ್ಫ್ ರಾಷ್ಟ್ರ ಗಳು ಖಾಸಗಿ ಮತ್ತು ಸರ್ಕಾರಿ ವಲಯದ ಉದ್ಯೋಗಗಳಲ್ಲಿ ನಿರ್ದಿಷ್ಟ ಪ್ರಮಾಣದ ಹುದ್ದೆಗಳನ್ನು ತಮ್ಮ ದೇಶದ ಸ್ಥಳೀಯ ನಾಗರಿಕರಿಗೆ (Locals)  ಮೀಸಲಿರಿಸುವುದೇ ಈ ನೀತಿಯ ಉದ್ದೇಶ. ಇದನ್ನು ಸಾಮಾನ್ಯವಾಗಿ 'Workforce Nationalization' ಎಂದು ಕರೆಯಲಾಗುತ್ತದೆ.

ಈ ಬದಲಾವಣೆಗೆ ಪ್ರಮುಖ ಕಾರಣಗಳು:

ಸ್ಥಳೀಯರಲ್ಲಿ ಹೆಚ್ಚುತ್ತಿರುವ ನಿರುದ್ಯೋಗ:

ಗಲ್ಫ್ ದೇಶಗಳಲ್ಲಿ ಯುವಜನತೆಯ ಸಂಖ್ಯೆ ಹೆಚ್ಚಾಗಿದ್ದು, ಅವರಿಗೆ ಸೂಕ್ತ ಉದ್ಯೋಗ ಒದಗಿಸುವುದು ಅಲ್ಲಿನ ಸರ್ಕಾರಗಳಿಗೆ ಸವಾಲಾಗಿದೆ. ಪದವೀಧರರ ಸಂಖ್ಯೆ ಏರಿಕೆಯಾಗುತ್ತಿರುವುದರಿಂದ, ವಿದೇಶಿಯರ ಮೇಲಿನ ಅವಲಂಬನೆ ಕಡಿಮೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ.

ತೈಲ ಅವಲಂಬನೆ ಕಡಿಮೆ ಮಾಡುವುದು:

ಕೇವಲ ತೈಲ (Oil) ಆದಾಯದ ಮೇಲೆ ಅವಲಂಬಿತವಾಗದೆ, ಆರ್ಥಿಕತೆಯನ್ನು ವೈವಿಧ್ಯಮಯಗೊಳಿಸಲು (Economic Diversification) ಈ ದೇಶಗಳು ಮುಂದಾಗಿವೆ. ಇದರ ಭಾಗವಾಗಿ ಸ್ಥಳೀಯ ಮಾನವ ಸಂಪನ್ಮೂಲವನ್ನು ಬಲಪಡಿಸಲಾಗುತ್ತಿದೆ.

ಹಣದ ಹೊರಹರಿವು ತಡೆಯುವುದು:

ವಿದೇಶಿ ಉದ್ಯೋಗಿಗಳು ತಾವು ದುಡಿದ ಹಣದಲ್ಲಿ ಬಹುಪಾಲನ್ನು ತಮ್ಮ ತಾಯ್ನಾಡಿಗೆ ಕಳುಹಿಸುತ್ತಾರೆ (Remittance). ಸ್ಥಳೀಯರಿಗೆ ಉದ್ಯೋಗ ನೀಡುವುದರಿಂದ ಆ ಹಣ ದೇಶದ ಆರ್ಥಿಕತೆಯಲ್ಲೇ ಉಳಿಯುತ್ತದೆ ಎಂಬುದು ಸರ್ಕಾರದ ಲೆಕ್ಕಾಚಾರ.

ಈ ಎಲ್ಲಾ ಕಾರಣಗಳಿಂದ ಪ್ರತಿಯೊಂದು ಗಲ್ಫ್ ರಾಷ್ಟ್ರವು ತನ್ನದೇ ಆದ ಹೆಸರಿನಲ್ಲಿ ಈ ಮೀಸಲಾತಿ ನೀತಿಯನ್ನು ಜಾರಿಗೊಳಿಸಿದೆ:

ಸೌದಿ ಅರೇಬಿಯಾ ('ನಿತಾಖತ್' (Nitaqat) / ಸೌದೀಕರಣ - Saudization):

ಇಲ್ಲಿನ 'ನಿಜಾಖತ್' (Nitaqat) ವ್ಯವಸ್ಥೆಯು ಅತ್ಯಂತ ಕಠಿಣವಾಗಿದೆ. ಅನೇಕ ವಲಯಗಳಲ್ಲಿ (ಉದಾಹರಣೆಗೆ: ಮೊಬೈಲ್ ಅಂಗಡಿಗಳು, ಎಚ್‌ಆರ್, ಸೆಕ್ಯುರಿಟಿ, ಡ್ರೈವಿಂಗ್) 100% ಸೌದಿ ಪ್ರಜೆಗಳನ್ನೇ ನೇಮಿಸಬೇಕೆಂಬ ನಿಯಮವಿದೆ.

* ಮೀಸಲಾತಿ ಇರುವ ಪ್ರಮುಖ ಉದ್ಯೋಗಗಳು ಯಾವುದು ಎಂದರೆ

* ಮಾನವ ಸಂಪನ್ಮೂಲ (HR) ವಿಭಾಗದ ಹುದ್ದೆಗಳು.

* ಶಾಂಪಿಂಗ್ ಮಾಲ್‌ಗಳ ಮ್ಯಾನೇಜರ್‌ಗಳು.

* ಸೆಕ್ಯುರಿಟಿ ಗಾರ್ಡ್‌ಗಳು (ಭದ್ರತಾ ಸಿಬ್ಬಂದಿ).

* ಹೋಟೆಲ್ ರಿಸೆಪ್ಷನಿಸ್ಟ್‌ಗಳು.

* ಮೊಬೈಲ್ ಫೋನ್ ಮಾರಾಟ ಮತ್ತು ರಿಪೇರಿ ಅಂಗಡಿಗಳು.

* ಲೆಕ್ಕಪತ್ರ ನಿರ್ವಹಣೆ (Accounting) ಮತ್ತು ಕ್ಲರ್ಕ್ ಹುದ್ದೆಗಳು.

* ಚಾಲಕರು (ಖಾಸಗಿ ವಾಹನ ಮತ್ತು ಟ್ಯಾಕ್ಸಿ).

ಸೌದಿ ಅರೇಬಿಯಾದ ವಿಷನ್ 2030ರ ಪ್ರಕಾರ, ಸ್ಥಳೀಯರ ನಿರುದ್ಯೋಗ ದರವನ್ನು 11.6% ರಿಂದ 7% ಕ್ಕೆ ಇಳಿಸುವ ಗುರಿ ಹೊಂದಲಾಗಿದೆ. ಈಗಾಗಲೇ ಖಾಸಗಿ ವಲಯದಲ್ಲಿ ಸೌದಿ ಪ್ರಜೆಗಳ ಸಂಖ್ಯೆ 22 ಲಕ್ಷ ದಾಟಿದೆ.

ಯುಎಇ (ಎಮಿರಾಟೈಸೇಶನ್ - Emiratization):

ಯುಎಇ ಸರ್ಕಾರವು 'ನಾಫಿಸ್' (Nafis) ಎಂಬ ಯೋಜನೆಯಡಿ ಖಾಸಗಿ ಕಂಪನಿಗಳಿಗೆ ಸ್ಥಳೀಯರನ್ನು ನೇಮಿಸಿಕೊಳ್ಳಲು ಕಟ್ಟುನಿಟ್ಟಿನ ಗುರಿಗಳನ್ನು (Quota) ನೀಡಿದೆ. ಗುರಿ ತಲುಪದ ಕಂಪನಿಗಳಿಗೆ ಭಾರೀ ದಂಡ ವಿಧಿಸಲಾಗುತ್ತಿದೆ.

ನಿಯಮಗಳು: 50ಕ್ಕಿಂತ ಹೆಚ್ಚು ಉದ್ಯೋಗಿಗಳಿರುವ ಕಂಪನಿಗಳು ಪ್ರತಿ ವರ್ಷ ತಮ್ಮ ನುರಿತ ಉದ್ಯೋಗಿಗಳ ಪೈಕಿ 2% ರಷ್ಟು ಎಮಿರಾತಿ (ಸ್ಥಳೀಯ) ಪ್ರಜೆಗಳನ್ನು ನೇಮಿಸಿಕೊಳ್ಳಲೇಬೇಕು. 2026ರ ವೇಳೆಗೆ ಇದನ್ನು 10% ಕ್ಕೆ ಏರಿಸುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ.

 ದಂಡ:  ಕಂಪನಿಗಳು ಒಂದು ವೇಳೆ ಈ ನೇಮಕಾತಿ ಮಾಡಿಕೊಳ್ಳಲು ಸಾಧ್ಯವಾಗದೆ ಹೋದರೆ, ನೇಮಕ ಮಾಡದ ಪ್ರತಿ ಹುದ್ದೆಗೆ ತಿಂಗಳ ಲೆಕ್ಕದಲ್ಲಿ ಲಕ್ಷಾಂತರ ರುಪಾಯಿ ದಂಡ ವಿಧಿಸಲಾಗುತ್ತದೆ.

ಕುವೈತ್ (ಕುವೈತೈಸೇಶನ್ - Kuwaitization):

ಸರ್ಕಾರಿ ವಲಯದಲ್ಲಿ ವಿದೇಶಿಯರ ಸಂಖ್ಯೆಯನ್ನು ಗಣನೀಯವಾಗಿ ಕಡಿಮೆ ಮಾಡಲು ಮತ್ತು ನಿರ್ದಿಷ್ಟ ವಯಸ್ಸಿನ ನಂತರ ವಿದೇಶಿಯರ ವೀಸಾ ನವೀಕರಿಸದಿರಲು ಕುವೈತ್ ನಿರ್ಧರಿಸಿದೆ. ಕುವೈತ್‌ನಲ್ಲಿ ಸರ್ಕಾರಿ ವಲಯದಿಂದ ವಿದೇಶಿಯರನ್ನು ಸಂಪೂರ್ಣವಾಗಿ ತೆಗೆದುಹಾಕುವ ಪ್ರಕ್ರಿಯೆ ನಡೆಯುತ್ತಿದೆ. ಪದವಿ (Degree) ಇಲ್ಲದ ಮತ್ತು 60 ವರ್ಷ ಮೇಲ್ಪಟ್ಟ ವಿದೇಶಿ ನೌಕರರ ವೀಸಾ ನವೀಕರಣವನ್ನು ಕುವೈತ್ ಕಠಿಣಗೊಳಿಸಿದೆ ಅಥವಾ ನಿಲ್ಲಿಸಿದೆ. ಇದರಿಂದ ಸಾವಿರಾರು ಹಿರಿಯ ನೌಕರರು ತಾಯ್ನಾಡಿಗೆ ಮರಳುವಂತಾಗಿದೆ.

ಒಮಾನ್ (ಒಮಾನೈಸೇಶನ್ - Omanization):

ಒಮಾನ್ ರಾಷ್ಟ್ರದಲ್ಲಿ ಸರ್ಕಾರಿ ವಲಯದಲ್ಲಿ ಶೇ.85 ಕ್ಕೂ ಹೆಚ್ಚು ಹುದ್ದೆಗಳಲ್ಲಿ ಈಗ ಒಮಾನಿಗಳೇ ಇದ್ದಾರೆ. ಮುಂಬರುವ ದಿನಗಳಲ್ಲಿ ಇದು ನೂರು ಪ್ರತಿಶತ ಸಾಧಿಸುವತ್ತ ಹೆಜ್ಜೆ ಹಾಕಲಿದೆ. ಖಾಸಗಿ ವಲಯಗಳಲ್ಲಿ ಸ್ಥಳೀಯರಿಗೆ ಹೆಚ್ಚು ಉದ್ಯೋಗಾವಕಾಶ ಸಿಗಬೇಕೆನ್ನುವ ಉದ್ದೇಶದಿಂದ ಒಮಾನೈಸೇಶನ್ (Omanisation) ಶೇಕಡಾವಾರು ಪ್ರಮಾಣವು ವಲಯದಿಂದ ವಲಯಕ್ಕೆ ಬದಲಾಗುತ್ತದೆ. ಬ್ಯಾಂಕಿಂಗ್‌ನಲ್ಲಿ 60%, ಸಾರಿಗೆ ಮತ್ತು ಲಾಜಿಸ್ಟಿಕ್ಸ್‌ನಲ್ಲಿ 21% ಕೈಗಾರಿಕೆಯಲ್ಲಿ 35%, ಹೋಟೆಲ್‌ಗಳಲ್ಲಿ 30% ಹಾಗೂ ಚಿಲ್ಲರೆ ವ್ಯಾಪಾರದಲ್ಲಿ 20% ರಷ್ಟು ಸ್ಥಳೀಯರಿಗೆ ಮೀಸಲಾತಿ ನೀಡಲೇ ಬೇಕೆನ್ನುವ ಉದ್ದೇಶ ಸರ್ಕಾರಕ್ಕಿದೆ. ವಿಷನ್ 2040 ರ ಗುರಿಗಳನ್ನು ಬೆಂಬಲಿಸಲು, ಸಾರಿಗೆಯಂತಹ ನಿರ್ದಿಷ್ಟ ಸಚಿವಾಲಯಗಳು ಐಟಿ ಮತ್ತು ನಾಯಕತ್ವದ ಪಾತ್ರಗಳಲ್ಲಿ ಹೆಚ್ಚಿನ ದರಗಳನ್ನು ತಲುಪಲು ನೀತಿಗಳನ್ನು ಜಾರಿಗೊಳಿಸುತ್ತಿವೆ ಮತ್ತು ಒಮಾನಿ ಪ್ರಾತಿನಿಧ್ಯದಲ್ಲಿ ಗಣನೀಯ ಹೆಚ್ಚಳವನ್ನು ಗುರಿಯಾಗಿಸಿಕೊಂಡಿವೆ.

ಒಮಾನ್ ರಾಷ್ಟ್ರದಲ್ಲಿ ವಿದೇಶಿಗರಿಗೆ ನಿಷೇಧಿತ ಉದ್ಯೋಗಗಳು:

ಒಮಾನ್ ಕಾರ್ಮಿಕ ಸಚಿವಾಲಯವು ಸುಮಾರು 207 ಕ್ಕೂ ಹೆಚ್ಚು ಉದ್ಯೋಗಗಳನ್ನು ವಿದೇಶಿಯರಿಗೆ ನಿಷೇದ ಹೇರಲಾಗಿದೆ. ಚಾಲಕರು (ಟ್ಯಾಂಕರ್ ಮತ್ತು ಟ್ರಕ್). ದಿನಸಿ ಅಂಗಡಿಗಳ ಸೇಲ್ಸ್‌ಮನ್‌ಗಳು. ಇನ್ಶೂರೆನ್ಸ್ ಏಜೆಂಟ್‌ಗಳು. ಫೈನಾನ್ಸ್ ಕ್ಲರ್ಕ್‌ಗಳು. ಹೀಗೆ ವಿವಿಧ ಹುದ್ದೆಗಳಿಗೆ ವೀಸಾ ನಿರಾಕರಿಸಲಾಗಿದೆ.

ಮೇಲಿನ ಅಂಕಿ ಅಂಶಗಳು ಮತ್ತು ಪಟ್ಟಿಗಳನ್ನು ನೋಡಿದರೆ, ಸಾಮಾನ್ಯ ಕೌಶಲ್ಯದ (Blue-collar jobs) ಉದ್ಯೋಗಗಳು ಕ್ಷೀಣಿಸುತ್ತಿವೆ ಎಂದು ಸ್ಪಷ್ಟವಾಗುತ್ತದೆ. ಆದರೆ, ಕೆಳಗಿನ ಕ್ಷೇತ್ರಗಳಲ್ಲಿ ಇನ್ನೂ ವಿಪುಲ ಅವಕಾಶಗಳಿವೆ:

 * ವೈದ್ಯಕೀಯ ಕ್ಷೇತ್ರ (ವೈದ್ಯರು, ನರ್ಸ್‌ಗಳು).

 * ಉನ್ನತ ತಂತ್ರಜ್ಞಾನ (AI, ಕೋಡಿಂಗ್, ಸೈಬರ್ ಸೆಕ್ಯುರಿಟಿ).

 * ನಿರ್ಮಾಣ ವಲಯದ ನುರಿತ ಇಂಜಿನಿಯರ್‌ಗಳು.

 ಈ ಮೇಲಿನ ಬದಲಾವಣೆಗಳ ಹಿಂದೆ ಬಲವಾದ ಆರ್ಥಿಕ ಕಾರಣಗಳಿವೆ:

ಹಣದ ಉಳಿತಾಯ: ಗಲ್ಫ್ ದೇಶಗಳಿಂದ ಪ್ರತಿ ವರ್ಷ ಕೋಟ್ಯಂತರ ಡಾಲರ್ ಹಣ ಹೊರದೇಶಗಳಿಗೆ (Remittance) ಹೋಗುತ್ತದೆ. ಉದಾಹರಣೆಗೆ, ಭಾರತಕ್ಕೆ ಬರುವ ಒಟ್ಟು ವಿದೇಶಿ ಹಣದಲ್ಲಿ ಸುಮಾರು 50% ರಷ್ಟು ಗಲ್ಫ್ ರಾಷ್ಟ್ರಗಳಿಂದಲೇ ಬರುತ್ತದೆ. ಸ್ಥಳೀಯರಿಗೆ ಉದ್ಯೋಗ ನೀಡುವುದರಿಂದ ಈ ಹಣವನ್ನು ತಮ್ಮ ದೇಶದ ಆರ್ಥಿಕತೆಯಲ್ಲೇ ಉಳಿಸಿಕೊಳ್ಳುವುದು ಅವರ ಉದ್ದೇಶ.

 ಜನಸಂಖ್ಯಾ ಸಮತೋಲನ: ಕೆಲವು ಗಲ್ಫ್ ರಾಷ್ಟ್ರಗಳಲ್ಲಿ (ಉದಾ: ಕತಾರ್, ಯುಎಇ) ಸ್ಥಳೀಯರಿಗಿಂತ ವಿದೇಶಿಯರ ಸಂಖ್ಯೆಯೇ ಹೆಚ್ಚಿದೆ. ಇದನ್ನು ಸರಿದೂಗಿಸಲು ಈ ಮೀಸಲಾತಿ ಅನಿವಾರ್ಯವಾಗಿದೆ.

 ಭಾರತೀಯರ ಮೇಲಾಗುವ ಪರಿಣಾಮಗಳು:-

 ಭಾರತೀಯರು, ವಿಶೇಷವಾಗಿ ಕನ್ನಡಿಗರು (ಕರಾವಳಿ ಭಾಗದವರು) ಹೆಚ್ಚಿನ ಸಂಖ್ಯೆಯಲ್ಲಿ ಗಲ್ಫ್‌ನಲ್ಲಿ ನೆಲೆಸಿದ್ದಾರೆ. ಈ ನೀತಿಯಿಂದಾಗಿ ಹಲವಾರು ಜನರು ಉದ್ಯೋಗ ಕಳೆದುಕೊಳ್ಳುತಿದ್ದಾರೆ.

 * ಕಡಿಮೆ ಕೌಶಲ್ಯದ ಉದ್ಯೋಗಗಳಿಗೆ ಕುತ್ತು: ಚಾಲಕರು, ಗುಮಾಸ್ತರು, ಸೇಲ್ಸ್ ಮ್ಯಾನ್‌ಗಳು, ರಿಸೆಪ್ಷನಿಸ್ಟ್ ಮುಂತಾದ ಕಡಿಮೆ ಮತ್ತು ಮಧ್ಯಮ ಕೌಶಲ್ಯದ ಉದ್ಯೋಗಗಳು ಈಗ ಸ್ಥಳೀಯರ ಪಾಲಾಗುತ್ತಿವೆ.

 * ವೀಸಾ ನಿಯಮಗಳಲ್ಲಿ ಬಿಗುವು: ಹೊಸ ವೀಸಾಗಳನ್ನು ಪಡೆಯುವುದು ಮತ್ತು ಹಳೆಯ ವೀಸಾಗಳನ್ನು ನವೀಕರಿಸುವುದು ಈಗ ದುಬಾರಿ ಮತ್ತು ಕಷ್ಟಕರವಾಗಿದೆ.

 * ಅನಿಶ್ಚಿತತೆ: ದಶಕಗಳಿಂದ ಅಲ್ಲೇ ನೆಲೆಸಿರುವ ಕುಟುಂಬಗಳಿಗೆ ಭವಿಷ್ಯದ ಬಗ್ಗೆ ಆತಂಕ ಶುರುವಾಗಿದೆ.

 ಮುಂದಿನ ದಾರಿ ಏನು?

ಗಲ್ಫ್ ದೇಶಗಳ 'ಉದ್ಯೋಗ ಮೀಸಲಾತಿ' ನೀತಿಯು ಭಾರತೀಯ ಉದ್ಯೋಗಾಕಾಂಕ್ಷಿಗಳಿಗೆ ಎಚ್ಚರಿಕೆಯ ಗಂಟೆಯಾಗಿದೆ. ಸ್ಥಳೀಯರು ಸಹ ಉನ್ನತ ವಿದ್ಯಾಭ್ಯಾಸಗಳನ್ನು ಪಡೆಯುತಿದ್ದಾರೆ. ಮುಂಬರುವ ದಿನಗಳಲ್ಲಿ ತಂತ್ರಜ್ನಾನ ಕ್ಷೇತ್ರದಲ್ಲಿ ಮೀಸಲಾತಿ ಬರುವ ದಿನಗಳು ದೂರವಿಲ್ಲ. ಈಗಾಗಲೇ ಒಮಾನಿನ ತೈಲ ಕಂಪನಿಗಳಲ್ಲಿ ಬಹುತೇಕ ಸ್ಥಳೀಯರೇ ಕೆಲಸ ಮಾಡುತಿದ್ದಾರೆ. ಗಲ್ಫ್ ರಾಷ್ಟ್ರಗಳ ಈ ನಿರ್ಧಾರವು ಅವರ ದೇಶದ ಹಿತದೃಷ್ಟಿಯಿಂದ ಅನಿವಾರ್ಯವಾಗಿದೆ. ಹಾಗಂತ ಗಲ್ಫ್ ಬಾಗಿಲು ಸಂಪೂರ್ಣ ಮುಚ್ಚಿದೆ ಎಂದರ್ಥವಲ್ಲ. ನುರಿತ ಕೆಲಸಗಾರರಿಗೆ ಬೇಡಿಕೆ: ಇಂಜಿನಿಯರ್‌ಗಳು, ವೈದ್ಯರು, ಐಟಿ ತಜ್ಞರು, ಮತ್ತು ತಾಂತ್ರಿಕ ಕೌಶಲ್ಯವುಳ್ಳವರಿಗೆ (Skilled Labour) ಈಗಲೂ ಅಲ್ಲಿ ವಿಪುಲ ಅವಕಾಶಗಳಿವೆ.  ಅಲ್ಲಿ ಉದ್ಯೋಗ ಅರಸುವವರು ಕೇವಲ ಸಾಂಪ್ರದಾಯಿಕ ಕೆಲಸಗಳನ್ನು ಅವಲಂಬಿಸದೆ, ಆಧುನಿಕ ತಂತ್ರಜ್ಞಾನ ಮತ್ತು ವಿಶೇಷ ಕೌಶಲ್ಯಗಳನ್ನು ಕಲಿಯುವುದು ಅತ್ಯಗತ್ಯ. ಗಲ್ಫ್ ರಾಷ್ಟ್ರಗಳಲ್ಲಿನ 'ಉದ್ಯೋಗ ಮೀಸಲಾತಿ' ಒಂದು ತಾತ್ಕಾಲಿಕ ಅಲೆಯಲ್ಲ, ಇದೊಂದು ಕಾಯಂ ಬದಲಾವಣೆ. ಇದನ್ನು ಸವಾಲಾಗಿ ಸ್ವೀಕರಿಸಿ, ಭಾರತೀಯ ಯುವಕರು ತಮ್ಮ ಕೌಶಲ್ಯಗಳನ್ನು ಹೆಚ್ಚಿಸಿಕೊಂಡರೆ ಮಾತ್ರ ಮುಂದಿನ ದಿನಗಳಲ್ಲಿ ಗಲ್ಫ್ ಮಾರುಕಟ್ಟೆಯಲ್ಲಿ ಸ್ಪರ್ಧಿಸಲು ಸಾಧ್ಯ. 

ಲೇಖಕರು:

ಪಿ.ಎಸ್. ರಂಗನಾಥ

ಮಸ್ಕತ್ಒಮಾನ್ ರಾಷ್ಟ್ರ

ಗುರುವಾರ, ಜನವರಿ 15, 2026

ಮಸ್ಕತ್ ತಲುಪಿದ ಭಾರತದ ಹೆಮ್ಮೆಯ INSV ಕೌಂಡಿನ್ಯಾ ನೌಕೆ






ನಮ್ಮ ಭಾರತದ ಐಎನ್‌ಎಸ್‌ವಿ ಕೌಂಡಿನ್ಯಾ ಹಡಗು ಒಮಾನ್ ರಾಷ್ಟ್ರದ ರಾಜಧಾನಿ ಮಸ್ಕತ್ ಅನ್ನು ದಿನಾಂಕ 14, ಜನೆವರಿ 2026  ರಂದು ತಲುಪಿದೆ.  ಭಾರತದ ಪ್ರಾಚೀನ ಶಿಲ್ಪತಂತ್ರಗಳೊಂದಿಗೆ ನಿರ್ಮಿಸಲ್ಪಟ್ಟ ಹಡಗು ಇದಾಗಿದೆ. ಈ ಹಡಗಿಗೆ ಯಾವುದೇ ಎಂಜಿನ್ ಇಲ್ಲದೆ, ಲೋಹದ ಮೊಳೆಗಳನ್ನು ಬಳಸದೆ ತಯಾರಿಸಲಾಗಿರುವುದು ಇದರ ವಿಶೇಷ. 

ಡಿಸೆಂಬರ್ 29, 2025 ರಂದು ಗುಜರಾತಿನ ಪೋರಬಂದರ್‌ನಿಂದ ಒಮಾನ್ ನ ಮಸ್ಕತ್‌ವರೆಗೆ ಐತಿಹಾಸಿಕ ಸಮುದ್ರಯಾನ ಕೈಗೊಂಡಿದ್ದ INSV ಕೌಂಡಿನ್ಯ, ಗಾಳಿಯ ಪರಿಸ್ಥಿತಿಯನ್ನು ಅವಲಂಬಿಸಿ ಸುಮಾರು 15 ದಿನಗಳು ಅಥವಾ "ಸುಮಾರು ಎರಡು ವಾರಗಳಲ್ಲಿ" ಪೂರ್ಣಗೊಳ್ಳಬಹುದು ಎಂದು ಅಂದಾಜಿಸಲಾಗಿತ್ತು. ಆರಂಭಿಕ ಅಂದಾಜಿಗಿಂತ ಸುಮಾರು ಮೂರು ದಿನ ತಡವಾಗಿ 18 ದಿನಗಳ ಪ್ರಯಾಣದ ನಂತರ ಜನವರಿ 14, 2026 ರಂದು ಮಸ್ಕತ್ ತಲುಪಿತು. 

ಯಾವುದೇ ಇಂಜಿನ್ ಬಳಸದೆ ಕೇವಲ ಗಾಳಿ ಮತ್ತು ನೌಕಾಯಾನದ ಪರದೆಗಳ (Sails) ಸಹಾಯದಿಂದ ಸಾಗಿದ ಈ ನೌಕೆಯು, "ವಿರುದ್ಧ ದಿಕ್ಕಿನ ಗಾಳಿ, ಗಾಳಿಯಿಲ್ಲದ ಶಾಂತ ಸ್ಥಿತಿ (Dead calms), ಭೋರ್ಗರೆಯುವ ಅಲೆಗಳು ಮತ್ತು ಆಧುನಿಕ ಹಡಗು ಸಂಚಾರ ಮಾರ್ಗಗಳ" ಅಡಚಣೆ ಸೇರಿದಂತೆ ಹಲವು ಸವಾಲುಗಳನ್ನು ಈ ನೌಕೆಯು ಎದುರಿಸಬೇಕಾಯಿತು.  ಇವೆಲ್ಲದರ ನಡುವೆಯೂ ನೌಕೆಯ ಸಿಬ್ಬಂದಿ ಯಶಸ್ವಿಯಾಗಿ ಈ ಮಾರ್ಗವನ್ನು ಕ್ರಮಿಸುವ ಮೂಲಕ, ಮುಕ್ತ ಸಾಗರ ಪ್ರಯಾಣದಲ್ಲಿ ಪ್ರಾಚೀನ ಭಾರತೀಯ ಹಡಗು ನಿರ್ಮಾಣ ಕಲೆ ಮತ್ತು ನೌಕಾಯಾನ ಜ್ಞಾನದ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.

ಈ ಹಡಗಿಗೆ ಕೌಂಡಿನ್ಯ ಎಂದು ಹೆಸರಿಡಲು ಕಾರಣ ಏನು?

ಆಗ್ನೇಯ ಏಷ್ಯಾ ಮತ್ತು ಚೀನೀ ದಾಖಲೆಗಳ ಪ್ರಕಾರ, ಭಾರತದಿಂದ ಸಮುದ್ರಯಾನ ಮಾಡಿ ಹೋಗಿ ಈಗಿನ ಕಾಂಬೋಡಿಯಾ (ಆಗಿನ ಫುನನ್ ಸಾಮ್ರಾಜ್ಯ) ಪ್ರದೇಶದಲ್ಲಿ ಹಿಂದೂ ಸಂಸ್ಕೃತಿಯನ್ನು ಪ್ರಚುರ ಮಾಡಿದ ಭಾರತದ ವೀರ. ಇವರು ಅಲ್ಲಿನ ನಾಗಾ ರಾಜಕುಮಾರಿಯಾದ 'ಸೋಮಾ'ಳನ್ನು ವಿವಾಹವಾಗಿ ಆ ಪ್ರದೇಶದಲ್ಲಿ ದೊಡ್ಡ ಸಾಮ್ರಾಜ್ಯವನ್ನು ಕಟ್ಟಿದರು ಎಂದು ಹೇಳಲಾಗುತ್ತದೆ. ನೌಕಾಯಾನ ಮತ್ತು ಸಮುದ್ರಯಾನದಲ್ಲಿ ಇವರ ಸಾಹಸ ಅಪ್ರತಿಮವಾದುದು. ಕೌಂಡಿನ್ಯನು ಜಾಗತಿಕ ಐತಿಹಾಸಿಕ ಪ್ರಭಾವ ಹೊಂದಿರುವ ಮೊದಲನೆಯ ಭಾರತೀಯ ನಾವಿಕ ಎಂದು ಪರಿಗಣಿಸಲಾಗಿದೆ.



ಈ ಹಡಗು ಒಮಾನ್ ದೇಶಕ್ಕೆ ಸಂಚರಿಸಲು ಕಾರಣವೇನೆಂದರೆ, 

ಒಮಾನ್ ರಾಷ್ಟ್ರವು ಅರಬ್ ರಾಷ್ಟ್ರಗಳನ್ನು ಮತ್ತು ಭಾರತವನ್ನು ಸಂಪರ್ಕಿಸುವ ಅತ್ಯಂತ ಪ್ರಮುಖ ಕೊಲ್ಲಿ ಪ್ರದೇಶವಾಗಿದೆ. ಈ ಎರಡು ದೇಶಗಳಿಗೆ ಸುಮಾರು ಐದು ಸಾವಿರ ವರ್ಷಗಳ ವ್ಯಾವಹಾರಿಕ ಸಂಭಂದವಿರುವುದು ಇತಿಹಾಸದಲ್ಲಿ ದಾಖಲಾಗಿದೆ. ಭಾರತೀಯ ವ್ಯಾಪಾರಿಗಳು ಮತ್ತು ನೌಕಾಯಾನಿಗಳು ಈ ಸಾಗಣಾ ಮಾರ್ಗಗಳನ್ನು ಬಳಸಿಕೊಂಡು ಪಶ್ಚಿಮ ಏಷ್ಯಾ, ಆಫ್ರಿಕಾ ಮತ್ತು ದಕ್ಷಿಣ ಪೂರ್ವ ಏಷ್ಯಾ ದೇಶಗಳೊಂದಿಗೆ ಮಸಾಲೆ, ಜವಳಿ ಇತ್ಯಾದಿ ವ್ಯಾಪಾರವನ್ನು ಈ ಸಮುದ್ರಮಾರ್ಗಗಳ ಮೂಲಕ ಮಾಡುತ್ತಿದ್ದರು. ಹೀಗಾಗಿ ಈ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ನೌಕೆಯ ವಿನ್ಯಾಸ:

ಈ ವಿನ್ಯಾಸವು ಮುಖ್ಯವಾಗಿ ಅಜಂತಾ ಗುಹೆಚಿತ್ರಗಳಲ್ಲಿ ತೋರಿಸಲಾದ ಹಡಗುಗಳನ್ನು ಆಧರಿಸಿದೆ. ಜೊತೆಗೆ ಪ್ರಾಚೀನ ಗ್ರಂಥಗಳು ಮತ್ತು ವಿದೇಶಿ ಪ್ರಯಾಣಿಕರ ದಾಖಲಾತಿಗಳ ವಿವರಣೆಗಳನ್ನು ಅಧರಿಸಿ ಇದನ್ನು ನಿರ್ಮಿಸಲಾಗಿದೆ. ಸುಮಾರು 2000 ವರ್ಷಗಳ ಹಳೆಯ 'ಟಂಕಾ' ವಿಧಾನದಲ್ಲಿ ಈ ನೌಕೆಯನ್ನು ಕಟ್ಟಲಾಗಿದೆ. ಇದರಲ್ಲಿ ಒಂದೇ ಒಂದು ಕಬ್ಬಿಣದ ಮೊಳೆ, ಲೋಹದ ತುಣುಕುಗಳನ್ನು ಬಳಸಿಲ್ಲ! ಮರದ ಹಲಗೆಗಳನ್ನು ತೆಂಗಿನ ನಾರಿನಿಂದ ಹೊಲಿದು ಜೋಡಿಸಲಾಗಿದೆ.ಹೀಗಾಗಿ Hand-stitched Wooden Ship ಈ ಹಡಗನ್ನು ಹೊಲಿದ ಹಡಗು ಎಂದು ಕರೆಯಲಾಗುತ್ತದೆ. ಈ ಹಡಗು ನಮ್ಮ ಪೂರ್ವಜರ ತಂತ್ರಜ್ನಾನಕ್ಕೆ ಸಾಕ್ಷಿ. ಹಡಗಿನ ಒಳಭಾಗವನ್ನು ಮುಚ್ಚಲು ಮತ್ತು ಸಮುದ್ರಯಾನಕ್ಕೆ ಯೋಗ್ಯವಾಗಿಸಲು ನೈಸರ್ಗಿಕ ರಾಳ, ಹತ್ತಿ ಮತ್ತು ಎಣ್ಣೆಗಳನ್ನು ಬಳಸಲಾಗಿದೆ. 

ಈ ಹಡಗಿನ ಹಾಯಿಗಳಲ್ಲಿ (Sails) ನಮ್ಮ ಮೈಸೂರು ಅರಸರ ಲಾಂಛನ ಹಾಗೂ ಕರ್ನಾಟಕ ಸರ್ಕಾರದ ರಾಜ್ಯ ಲಾಂಛನವಾಗಿರುವ ಎರಡು ತಲೆಯ ಪಕ್ಷಿ 'ಗಂಡಭೇರುಂಡ'ದ ಚಿತ್ರವನ್ನು ಮುದ್ರಿಸಲಾಗಿದೆ. ಭಾರತದ ಪ್ರಾಚೀನ ಕಡಲ ಸಂಪ್ರದಾಯವನ್ನು ಜಗತ್ತಿಗೆ ತೋರಿಸುವ ಈ ಹಡಗಿನಲ್ಲಿ, ಕನ್ನಡ ನಾಡಿನ ವೈಭವ ಸಮುದ್ರದಾಚೆಗೂ ತಲುಪಿರುವುದು ನಮ್ಮ ಕನ್ನಡಿಗರಿಗೆ ನಿಜಕ್ಕೂ ಹೆಮ್ಮೆಯ ವಿಚಾರ.

ಐತಿಹಾಸಿಕ ಮಹತ್ವ: ಗಂಡಭೇರುಂಡವು ಎರಡು ತಲೆಗಳನ್ನು ಹೊಂದಿರುವ ಒಂದು ಪೌರಾಣಿಕ ಪಕ್ಷಿಯಾಗಿದ್ದು, ಇದು ಕ್ರಿ.ಶ. ಸುಮಾರು 450ರ ಅವಧಿಯ ಕದಂಬ ರಾಜವಂಶದ ಶಕ್ತಿಯುತ ರಾಜಲಾಂಛನವಾಗಿತ್ತು. ಕದಂಬರು ಶತಮಾನಗಳ ಕಾಲ ಕೊಂಕಣ ಮತ್ತು ಕರ್ನಾಟಕದ ಕರಾವಳಿ ತೀರಗಳನ್ನು ತಮ್ಮ ಆಡಳಿತಕ್ಕೆ ಒಳಪಡಿಸಿಕೊಂಡಿದ್ದರು.

ಗಮನಿಸಬೇಕಾದ ಅಂಶ:  ಗಂಡಭೇರುಂಡವು ವಿಜಯನಗರ ಸಾಮ್ರಾಜ್ಯ ಮತ್ತು ಮೈಸೂರು ಒಡೆಯರ ಕಾಲದಲ್ಲೂ ಪ್ರಮುಖ ಲಾಂಛನವಾಗಿತ್ತು, ಆದರೆ ಇದರ ಅತ್ಯಂತ ಹಳೆಯ ಬಳಕೆಯು ಕದಂಬರ ಕಾಲಕ್ಕೆ ಸೇರಿದ್ದಾಗಿದೆ ಎಂಬುದು ಇಲ್ಲಿನ ವಿಶೇಷ.

ಪ್ರಯಾಣದಲ್ಲಿ ಎದುರಾದ ಹಲವಾರು ಸವಾಲುಗಳು: 

ಭಾರತದ ಪೋರಬಂದರ್‌ನಿಂದ ಓಮನ್‌ನ ಮಸ್ಕತ್‌ವರೆಗೆ ಸಾಗುವ ಹಾದಿಯಲ್ಲಿ INSV ಕೌಂಡಿನ್ಯ ನೌಕೆಯು ಹವಾಮಾನ ಮತ್ತು ಭೌಗೋಳಿಕ ಪರಿಸ್ಥಿತಿಗಳಿಂದಾಗಿ ಹಲವಾರು ಸವಾಲುಗಳನ್ನು ಎದುರಿಸಿತು. 

ಗಾಳಿಯ ಸಮಸ್ಯೆ: ಈ ನೌಕೆಯು ಸಂಪೂರ್ಣವಾಗಿ ಗಾಳಿಯ ಮೇಲೆ ಅವಲಂಬಿತವಾಗಿದ್ದರಿಂದ (ಯಾವುದೇ ಎಂಜಿನ್ ಇರಲಿಲ್ಲ), ಪ್ರಯಾಣದ ಆರಂಭದ 48 ಗಂಟೆಗಳಲ್ಲಿ ಸರಿಯಾದ ದಿಕ್ಕಿನ ಗಾಳಿ ಇಲ್ಲದೆ ತೊಂದರೆ ಎದುರಿಸಿತು. ನಂತರದ ದಿನಗಳಲ್ಲಿ ಗಾಳಿಯೇ ಇಲ್ಲದ "ಸ್ತಬ್ಧ ಸ್ಥಿತಿ" (Dead calms/Glassy seas) ಉಂಟಾಗಿ ನೌಕೆಯು ಸಮುದ್ರದಲ್ಲಿ ಚಲಿಸದೆ ಒಂದೇ ಕಡೆ ನಿಲ್ಲುವಂತಾಗಿತ್ತು.

ಭಾರಿ ಮಳೆ: ಪ್ರಯಾಣದ 13ನೇ ದಿನದ ಸುಮಾರಿಗೆ ನೌಕೆಯು ಭಾರಿ ಮಳೆಯನ್ನು ಎದುರಿಸಿತು. ಇದರಿಂದ ನೌಕೆಯಲ್ಲಿದ್ದ ವಸ್ತುಗಳೆಲ್ಲವೂ ತೇವವಾಗಿದ್ದವು (Damp).

ಅಲೆಗಳ ಅಬ್ಬರ: ಸಮುದ್ರದ ಅಲೆಗಳು ಜೋರಾಗಿದ್ದರಿಂದ ನೌಕೆಯು ಸುಮಾರು 50 ಡಿಗ್ರಿಗಳಷ್ಟು ಅಕ್ಕಪಕ್ಕಕ್ಕೆ ಅಲುಗಾಡುತ್ತಿತ್ತು (Heavy rolling). ಇದು ಸಿಬ್ಬಂದಿಗೆ ದೈಹಿಕವಾಗಿ ಸಾಕಷ್ಟು ಸವಾಲಾಗಿತ್ತು.

Sea-sickness: ಸತತವಾಗಿ ಅಲೆಗಳ ಮೇಲೆ ಸಾಗುತ್ತಿದ್ದರಿಂದ ಸಿಬ್ಬಂದಿ ಸಮುದ್ರದ ಬೇನೆಗೆ (ವಾಂತಿ, ತಲೆಸುತ್ತು) ಒಳಗಾಗಿದ್ದರು.

ಆಧುನಿಕ ಸವಾಲುಗಳು: ನೌಕೆಯು ಅರಬ್ಬಿ ಸಮುದ್ರದ ಅತ್ಯಂತ ಜನದಟ್ಟಣೆಯ ಹಡಗು ಮಾರ್ಗಗಳಲ್ಲಿ (Shipping lanes) ಸಾಗಬೇಕಾಯಿತು. ಅಲ್ಲಿ ಬೃಹತ್ ಆಯಿಲ್ ಟ್ಯಾಂಕರ್‌ಗಳು ಮತ್ತು ಕಂಟೈನರ್ ಹಡಗುಗಳ ನಡುವೆ ಸಣ್ಣದಾದ ಈ ಮರದ ನೌಕೆಯನ್ನು ಸುರಕ್ಷಿತವಾಗಿ ಮುನ್ನಡೆಸುವುದು ದೊಡ್ಡ ಸವಾಲಾಗಿತ್ತು.

ಇವೆಲ್ಲದರ ಸವಾಲಿನ ನಡುವೆ ಈ ನಮ್ಮ ದೇಶದ ಹೆಮ್ಮೆಯ ಹಡಗು ವಿದೇಶಕ್ಕೆ ತಲುಪಿ, ಅಂದಿನ ಕಾಲದ ನಮ್ಮ ಪೂರ್ವಜರ ತಂತ್ರಜ್ನಾನವನ್ನು ಇಂದಿನಕಾಲದ ಜನಮಾನಸಕ್ಕೆ ಪರಿಚಯಿಸುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಬಹುದು. 













ಬರಹ: ಪಿ.ಎಸ್.ರಂಗನಾಥ

ಮಸ್ಕತ್, ಒಮಾನ್ ರಾಷ್ಟ್ರ


#insv #koundinya #muscat #kannada #oman #ranganatha #psranganatha #modi #siddaramaiah #karwar #kadamba #mysore #bangalore #bengaluru 

ಸೋಮವಾರ, ಜನವರಿ 5, 2026

ಮಸ್ಕತ್‌ನಲ್ಲಿ "ಕರ್ನಾಟಕ ರಾಜ್ಯೋತ್ಸವ ವಿಶೇಷಾಂಕ - ೨೦೨೫" ಲೋಕಾರ್ಪಣೆ

 ಮಸ್ಕತ್‌ನಲ್ಲಿ "ಕರ್ನಾಟಕ ರಾಜ್ಯೋತ್ಸವ ವಿಶೇಷಾಂಕ - ೨೦೨೫" ಲೋಕಾರ್ಪಣೆ: ಅರಬ್ಬರ ನಾಡಿನಲ್ಲಿ ಮೊಳಗಿದ ಕನ್ನಡದ ನಾದ


 ಪರದೇಶದಲ್ಲಿದ್ದರೂ ತಾಯ್ನುಡಿಯ ಮೇಲಿನ ಮಮತೆ, ಸಾಹಿತ್ಯದ ಮೇಲಿನ ಒಲವು ಕಿಂಚಿತ್ತೂ ಕುಂದಿಲ್ಲ ಎಂಬುದಕ್ಕೆ ಸಾಕ್ಷಿಯಾಗಿ, ಒಮಾನ್‌ನ ಮಸ್ಕತ್ ನಗರದಲ್ಲಿ ಕನ್ನಡ ಸಾಹಿತ್ಯದ ಕಂಪು ಹರಡಿತು. ಇತ್ತೀಚೆಗೆ ಕರ್ನಾಟಕ ಜಾನಪದ ಪರಿಷತ್ (ಒಮಾನ್ ಘಟಕ) ವತಿಯಿಂದ ಆಯೋಜಿಸಲಾಗಿದ್ದ "ಶಿಶಿರ ಕಾವ್ಯ ಸಂಜೆ" ಕಾರ್ಯಕ್ರಮದಲ್ಲಿ "ಕರ್ನಾಟಕ ರಾಜ್ಯೋತ್ಸವ ವಿಶೇಷಾಂಕ - ೨೦೨೫" ಕೃತಿಯನ್ನು ಅತ್ಯಂತ ಸಡಗರದಿಂದ ಲೋಕಾರ್ಪಣೆ ಮಾಡಲಾಯಿತು.

ಸಾಹಿತ್ಯದ ನವರತ್ನಗಳ ಸಂಗಮ

ಈ ವಿಶೇಷ ಸಂಚಿಕೆಯು ಒಮಾನ್ ಕನ್ನಡಿಗರ ಸಾಹಿತ್ಯ ಬಳಗದ ಹೆಮ್ಮೆಯ ಪ್ರಕಟಣೆಯಾಗಿದ್ದು, ಬಳಗದ ಸಂಚಾಲಕರಾದ ಶ್ರೀ ಪಿ.ಎಸ್. ರಂಗನಾಥ್ ಅವರ ಸಂಪಾದಕತ್ವದಲ್ಲಿ ಮೂಡಿಬಂದಿದೆ. ಈ ಕೃತಿಯಲ್ಲಿ ಒಮಾನ್‌ನಲ್ಲಿ ನೆಲೆಸಿರುವ ಸುಮಾರು 30ಕ್ಕೂ ಹೆಚ್ಚು ಕನ್ನಡಿಗ ಬರಹಗಾರರು ತಮ್ಮ ಭಾವನೆಗಳಿಗೆ ಅಕ್ಷರ ರೂಪ ನೀಡಿದ್ದಾರೆ. ಕಥೆಗಳು, ಮನಮುಟ್ಟುವ ಕವನಗಳು, ವೈಚಾರಿಕ ಲೇಖನಗಳು ಹಾಗೂ ಚುರುಕಾದ ಚುಟುಕುಗಳನ್ನೊಳಗೊಂಡ ಈ ಸಂಚಿಕೆಯು ಓದುಗರಿಗೆ ಸಾಹಿತ್ಯದ ರಸದೌತಣವನ್ನು ಬಡಿಸಲಿದೆ.

ಮುಂದುವರಿದ ಸಾಹಿತ್ಯ ಯಾನ

ಒಮಾನ್ ಕನ್ನಡಿಗರ ಸಾಹಿತ್ಯ ಬಳಗವು ಈ ಹಿಂದೆಯೇ "ಅರಬ್ಬರ ನಾಡಿನಲ್ಲಿ ಕನ್ನಡಿಗರು" ಮತ್ತು "ಬಿಯಾಂಡ್ ದ ಹೊರೈಜನ್" (Beyond the Horizon) ಎಂಬ ಎರಡು ಅದ್ಭುತ ಕೃತಿಗಳನ್ನು ಹೊರತಂದು ಸಾಹಿತ್ಯ ಪ್ರೇಮಿಗಳ ಅಪಾರ ಜನಮನ್ನಣೆ ಗಳಿಸಿತ್ತು. ಆ ಯಶಸ್ವಿ ಪಯಣದ ಮುಂದುವರಿದ ಭಾಗವಾಗಿ ಇಂದು ಈ "ರಾಜ್ಯೋತ್ಸವ ವಿಶೇಷಾಂಕ" ಲೋಕಾರ್ಪಣೆಯಾಗಿದೆ.

ಹೊಸ ಚಿಗುರು - ಹಳೆ ಬೇರು

ಈ ಸಂಚಿಕೆಯ ವಿಶೇಷತೆಯೆಂದರೆ ಇಲ್ಲಿ ಹಿರಿಯ ಅನುಭವಿ ಬರಹಗಾರರ ಜೊತೆಗೆ ಹೊಸ ಪ್ರತಿಭೆಗಳಿಗೂ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಯುವ ಬರಹಗಾರರು ಹಿರಿಯರ ಮಾರ್ಗದರ್ಶನದಲ್ಲಿ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವುದು ಕನ್ನಡದ ಭವಿಷ್ಯದ ದೃಷ್ಟಿಯಿಂದ ಆಶಾದಾಯಕ ಸಂಗತಿಯಾಗಿದೆ.

 "ವಿದೇಶಿ ಮಣ್ಣಿನಲ್ಲಿ ಕೆಲಸದ ಒತ್ತಡದ ನಡುವೆಯೂ ಕನ್ನಡದ ಕಹಳೆಯನ್ನು ಊದುತ್ತಿರುವ ಈ ಬರಹಗಾರರ ಶ್ರಮ ಶ್ಲಾಘನೀಯ. ಈ ಸಂಚಿಕೆಯು ಕೇವಲ ಒಂದು ಪುಸ್ತಕವಲ್ಲ, ಅದು ಅನಿವಾಸಿ ಕನ್ನಡಿಗರ ನಾಡು-ನುಡಿಯ ಪ್ರೇಮದ ಪ್ರತೀಕ."

ಒಟ್ಟಾರೆಯಾಗಿ, ಮಸ್ಕತ್‌ನ "ಶಿಶಿರ ಕಾವ್ಯ ಸಂಜೆ" ಕೇವಲ ಕಾವ್ಯದ ಗಮಲನ್ನು ಹರಡಿದ್ದಲ್ಲದೆ, ಒಂದು ಮೌಲ್ಯಯುತ ಸಾಹಿತ್ಯ ಕೃತಿಯನ್ನು ಕನ್ನಡಿಗರ ಕೈಗಿಡುವ ಮೂಲಕ ಸಾರ್ಥಕವಾಯಿತು. ಕನ್ನಡದ ಕಂಪನ್ನು ವಿಶ್ವದಾದ್ಯಂತ ಪಸರಿಸುತ್ತಿರುವ ಒಮಾನ್ ಕನ್ನಡಿಗರ ಸಾಹಿತ್ಯ ಬಳಗದ ಈ ಪ್ರಯತ್ನಕ್ಕೆ ಸರ್ವತ್ರ ಪ್ರಶಂಸೆ ವ್ಯಕ್ತವಾಗಿದೆ.











ಸೋಮವಾರ, ಡಿಸೆಂಬರ್ 22, 2025

​ಮಸ್ಕತ್‌ನಲ್ಲಿ ಅರಳಿದ ಸಾಹಿತ್ಯದ ಕಂಪು: ಮನಮಿಡಿದ "ಶಿಶಿರ ಕಾವ್ಯ ಸಂಜೆ" ✨


​ಮಸ್ಕತ್‌ನಲ್ಲಿ ಅರಳಿದ ಸಾಹಿತ್ಯದ ಕಂಪು: ಮನಮಿಡಿದ "ಶಿಶಿರ ಕಾವ್ಯ ಸಂಜೆ" ✨

ಮೊನ್ನೆ ಶುಕ್ರವಾರದ ಸಂಜೆ ಮಸ್ಕತ್‌ನಲ್ಲಿ ಕಳೆದ ಆ ಕ್ಷಣಗಳನ್ನು ನೆನೆಸಿಕೊಂಡರೆ ಈಗಲೂ ಮನಸ್ಸು ಹಗುರವೆನಿಸುತ್ತದೆ. ಅದು ಕೇವಲ ನಾಲ್ಕು ಗೋಡೆಗಳ ಮಧ್ಯೆ ನಡೆದ ಕಾರ್ಯಕ್ರಮವಾಗಿರಲಿಲ್ಲ; ಅದು ನೂರಾರು ಮನಸ್ಸುಗಳು, ಭಾವನೆಗಳು ಮತ್ತು ಸಂಬಂಧಗಳು ಒಂದಾದ ಅಪರೂಪದ 'ಭಾವಸಂಗಮ'.

ಆ ಕಾರ್ಯಕ್ರಮ ಮುಗಿಸಿ ಮನೆಗೆ ಬಂದ ಮೇಲೂ, ಆ ಕವಿತೆಗಳ ಸಾಲುಗಳು ಮತ್ತು ಅಲ್ಲಿನ ಆಪ್ತವಾದ ವಾತಾವರಣ ನನ್ನ ಮನಸ್ಸಿನಲ್ಲೇ ಉಳಿದುಬಿಟ್ಟಿದೆ. ನಿಜ ಹೇಳಬೇಕೆಂದರೆ,  ಕೆಲಸದ ಒತ್ತಡದಲ್ಲೋ ಇರುವ ನಮಗೆ, ನಮ್ಮವರ ಜೊತೆ ಕಳೆಯುವ ಇಂತಹ ಕೆಲವೇ ಗಂಟೆಗಳು ಬದುಕಿಗೆ ಹೊಸ ಚೈತನ್ಯ ನೀಡುತ್ತವೆ.

ಕರ್ನಾಟಕ ಜಾನಪದ ಪರಿಷತ್ (ಒಮಾನ್ ಘಟಕ)ದ ಅಧ್ಯಕ್ಷರಾದ ಶ್ರೀ ಶಿವಾನಂದ ಕೋಟ್ಯಾನ್ ಅವರ ಪ್ರೀತಿಯ ಕರೆಯ ಮೇರೆಗೆ ನಡೆದ **"ಶಿಶಿರ ಕಾವ್ಯ ಸಂಜೆ"**ಯಲ್ಲಿ ಪಾಲ್ಗೊಂಡಾಗ ಸಿಕ್ಕ ಆನಂದವನ್ನು ಪದಗಳಲ್ಲಿ ಹಿಡಿದಿಡುವುದು ಕಷ್ಟ. ಅಲ್ಲಿ ಕವಿಗಳಿದ್ದರು, ಕವಿತೆಗಳಿದ್ದವು, ಮುಕ್ತ ನಗು ಇತ್ತು, ಮತ್ತು ಎಲ್ಲಕ್ಕಿಂತ ಮಿಗಲಾಗಿ "ನಾವೆಲ್ಲರೂ ಒಂದು" ಎನ್ನುವ ಕೌಟುಂಬಿಕ ವಾತಾವರಣವಿತ್ತು. 



ನಮ್ಮವರ ಪ್ರತಿಭೆ ಕಂಡು ಮೂಕವಿಸ್ಮಿತನಾದೆ! 🖊️

ನಿಜ ಹೇಳಬೇಕೆಂದರೆ, ನಮ್ಮ ಮಸ್ಕತ್‌ನಲ್ಲಿ ಇಷ್ಟೊಂದು ಜನ ಕವನ, ಕಾವ್ಯ ಮತ್ತು ಚುಟುಕು ಪ್ರೇಮಿಗಳಿದ್ದಾರೆ ಎಂದು ತಿಳಿದದ್ದೇ ಈ ಕಾರ್ಯಕ್ರಮದಿಂದ! 

 ಶ್ರೀ  ಶಿವಾನಂದ ಕೋಟ್ಯಾನ್ ಅವರ ಬಗ್ಗೆ ಮೊದಲು ಹೇಳಲೇಬೇಕು. ಅವರು ಕೇವಲ ಒಂದು ಸಂಸ್ಥೆಯ ಅಧ್ಯಕ್ಷರಾಗಿ ಅಲ್ಲ, ಒಬ್ಬ ಮನೆಯ ಹಿರಿಯನಂತೆ ನಿಂತು ಈ "ಶಿಶಿರ ಕಾವ್ಯ ಸಂಜೆ"ಯನ್ನು ರೂಪಿಸಿದ್ದರು. ಇಂತಹದೊಂದು ಸುಂದರ ವೇದಿಕೆಯನ್ನು ಸೃಷ್ಟಿಸಿ, ನಮ್ಮಲ್ಲಿ ಸುಪ್ತವಾಗಿದ್ದ ಹಿತ್ಯಾಸಕ್ತಿಯನ್ನು ಬಡಿದೆಬ್ಬಿಸಿದ ಅವರಿಗೆ ನನ್ನ ಹೃದಯಾಂತರಾಳದ ಧನ್ಯವಾದಗಳು.

 ಮಸ್ಕತ್‌ನಂತಹ ಕಡಲಾಚೆಯ ನಾಡಿನಲ್ಲಿ ಇಷ್ಟೊಂದು ಜನ ಸಾಹಿತ್ಯ ಪ್ರೇಮಿಗಳು, ಕವಿಗಳು ನಮ್ಮ ಮಧ್ಯೆಯೇ ಇದ್ದಾರೆ ಎಂಬುದು ಒಂದು ದೊಡ್ಡ ಅಚ್ಚರಿ ಮತ್ತು ಖುಷಿಯ ವಿಷಯ!


ಕಾರ್ಯಕ್ರಮದ ಪ್ರತಿಕ್ಷಣವೂ ನನಗನ್ನಿಸಿದ್ದು ಇದು - "ಇದು ನಮ್ಮವರ ನಡುವೆ ನಡೆಯುತ್ತಿರುವ ಸಂಭ್ರಮ" ಎಂದು. ಅಕ್ಷಯ್ ಮೂಡುಬಿದಿರೆ ಅವರ ನಿರೂಪಣೆಯಲ್ಲಿ ಒಂದು ರೀತಿಯ ಆತ್ಮೀಯತೆ ಇತ್ತು. ಅವರು ಮಾತಾಡುತ್ತಿದ್ದರೆ ಅದೊಂದು ಕಾರ್ಯಕ್ರಮ ಎನ್ನುವುದಕ್ಕಿಂತ, ಆತ್ಮೀಯ ಗೆಳೆಯನೊಬ್ಬ ಮನದ ಮಾತುಗಳನ್ನು ಹಂಚಿಕೊಂಡಂತೆಯೇ ಭಾಸವಾಯಿತು.


ಕವಿಮನಸ್ಸುಗಳ ಅನಾವರಣ 🎙️

ಸಾಹಿತ್ಯವೆಂಬುದು ಕೇವಲ ಪುಸ್ತಕದ ಮಾತಲ್ಲ, ಅದು ಬದುಕಿನ ಪ್ರತಿಬಿಂಬ ಎಂಬುದನ್ನು ಅಲ್ಲಿ ನೆರೆದಿದ್ದ ಕವಿಮನಸ್ಸುಗಳು ಸಾಬೀತುಪಡಿಸಿದವು:

ಹಿರಿಯ ಕವಿಗಳಾದ ಶ್ರೀ ಶಿವಪ್ರಕಾಶ್ ಅವರು ತಮ್ಮ ಅನುಭವದ ಮಾತುಗಳಿಂದ ಸಾಹಿತ್ಯ ಸಂಜೆಗೆ ಮೆರಗು ನೀಡಿ ಸಾಹಿತ್ಯದ ಮಹತ್ವವನ್ನು ಒತ್ತಿ ಹೇಳಿ, ಬರಹಗಾರರಿಗೆ ಅಮೂಲ್ಯವಾದ ಸಲಹೆ ನೀಡುತ್ತ.  ಯಾರ ಪ್ರಶಂಸೆಗಾಗಿ ಬರೆಯಲು ಹೋಗಬೇಡಿ  "ಯಾರ ಮೆಚ್ಚುಗೆಯನ್ನೂ ನಿರೀಕ್ಷಿಸಬೇಡಿ, ನಿಮ್ಮ ಆತ್ಮತೃಪ್ತಿಗಾಗಿ ಬರೆಯಿರಿ." ಎಂದು ಕಿವಿ ಮಾತುಹೇಳಿದರು. ಎಷ್ಟು ಸತ್ಯ ಅಲ್ವಾ? 

ಹಾಗೆಯೇ ಶ್ರೀ ಸುರೇಶ್ ಅವರು ಮಸ್ಕತ್‌ನ ಸಂಜೆಯನ್ನೂ ಆ ಶಿಶಿರ ಕಾಲದ ಸೌಂದರ್ಯಕ್ಕೆ ಹೋಲಿಸಿ ವರ್ಣಿಸಿದ್ದು ಅದ್ಭುತವಾಗಿತ್ತು.




ನನ್ನ ಮನಸ್ಸನ್ನು ತುಂಬಾ ಕಾಡಿದ್ದು ಮತ್ತು ಕಣ್ಣಾಲಿಗಳನ್ನು ಒದ್ದೆ ಮಾಡಿದ್ದು ಶ್ರೀಮತಿ ಪ್ಲೇವಿಯ ಅವರ ಮಾತುಗಳು. ತಮ್ಮ ಜೀವನದ ಹೋರಾಟವನ್ನು ಅವರು ಹಂಚಿಕೊಂಡ ರೀತಿ ಎಲ್ಲರನ್ನೂ ಭಾವುಕರನ್ನಾಗಿಸಿತು. ನೋವು ಮತ್ತು ನಗು ಎರಡೂ ಸಾಹಿತ್ಯದ ಭಾಗ ಎಂಬುದಕ್ಕೆ ಆ ಸಂಜೆಯೇ ಸಾಕ್ಷಿ.

​ತುಳು ಮತ್ತು ಕನ್ನಡ ಕವಿತೆಗಳ ಮೂಲಕ ಇಡೀ ಸಭೆಯನ್ನು ನಗೆಗಡಲಲ್ಲಿ ತೇಲಿಸಿದ ಕೀರ್ತಿ ನಮ್ಮ ಆರ್. ಕೆ  ನಿರಂಜನ್ ಅವರಿಗೆ ಸಲ್ಲಬೇಕು.


ಎಪ್ಪತ್ಮೂರು ವಾವಸ್ಸಿನ ಯುವಕ ವಾಲ್ಟ್ ರ್ ಅವರು ತಮ್ಮ ಹಾಸ್ಯಗಳ ಮೂಲಕ ಸಭಿಕರನ್ನು ನಗೆಗಡಲಲ್ಲಿ ತೇಲಿಸಿದರು. 


ಪ್ರಮೋದ್ ಮುದೋಳ್ ಅವರು ತಮ್ಮ ಪತ್ನಿಯ ಕವಿತೆಯನ್ನು ಓದುತ್ತಾ, ತಮ್ಮ ದಾಂಪತ್ಯದ ಆರಂಭದ ದಿನಗಳನ್ನು ಮೆಲುಕು ಹಾಕಿದ ರೀತಿ ತುಂಬಾನೇ ಮುದ್ದಾಗಿತ್ತು. ಸಭಿಕರ ಮುಖದಲ್ಲಿ ಅರಳಿದ ಆ ಮುಗುಳ್ನಗುವೇ ಅದಕ್ಕೆ ಸಾಕ್ಷಿ.


ವಿದೂಷಿ ತೀರ್ಥ ಕಟೀಲ್ ಅವರು ಪ್ರಧಾನಿ ಮೋದಿ ಅವರನ್ನು ಕಂಡ ಆ ಸಂಭ್ರಮವನ್ನು ವಿವರಿಸಿದಾಗ, ನಮಗೂ ಆ ಪುಳಕ ಅನುಭವಕ್ಕೆ ಬಂತು. ಇನ್ನು ಪ್ರಮೋದ್ ಮುದೋಳ್ ಅವರು ತಮ್ಮ ದಾಂಪತ್ಯದ ಸುಂದರ ದಿನಗಳನ್ನು ನೆನೆಯುತ್ತಾ ಪತ್ನಿಯ ಕವಿತೆ ಓದಿದ್ದು ತುಂಬಾ ಮುದ್ದಾಗಿತ್ತು. ರೋಹಿತ್ ಮಂಜೇಶ್ವರ, ಸವಿತಾ ಚೇತನ್, ದೀಪಿಕಾ ಪ್ರಸಾದ್, ರಾಮಕೃಷ್ಣ ಸುಜಿರ್... ಹೀಗೆ ಪ್ರತಿಯೊಬ್ಬರೂ ತಮ್ಮ ಮನದಾಳವನ್ನು ಅಕ್ಷರಗಳ ರೂಪದಲ್ಲಿ ಹರಿಸಿದರು.


ನಾನು ಸಹ ಹನಿಗವಿತೆಗಳನ್ನ ವಾಸಿಸುವ ಮೂಲಕ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸುವ ಕಿರು ಪ್ರಯತ್ನ ಮಾಡಿದೆ. 


ಇದೇ ವೇದಿಕೆಯಲ್ಲಿ ನಮ್ಮ ‌ಒಮಾನ್ ಕನ್ನಡಿಗರ ಸಾಹಿತ್ಯ ಬಳಗದ ವತಿಯಿಂದ ರೂಪುಗೊಂಡ  ಕರ್ನಾಟಕ ರಾಜ್ಯೋತ್ಸವ ವಿಶೇಷಾಂಕ ಈ-ಮ್ಯಾಗ್ಜೀನ್ ಲೋಕಾರ್ಪಣೆಗೊಂಡಿದ್ದು ಸಂಭ್ರಮವನ್ನು ಇಮ್ಮಡಿಗೊಳಿಸಿತು.



 

ಕೊನೆಯಲ್ಲಿ ನನಗನ್ನಿಸಿದ್ದು ಇಷ್ಟೇ - ❤️ 

ನಾವು ಎಲ್ಲೇ ಇರಲಿ, ನಮ್ಮ ಭಾಷೆ ಮತ್ತು ಸಾಹಿತ್ಯ ನಮ್ಮನ್ನು ಒಂದುಗೂಡಿಸುತ್ತದೆ. ಇಂತಹ ಕಾರ್ಯಕ್ರಮಗಳು ಕೇವಲ ಸಾಹಿತ್ಯಕ್ಕೆ ಸೀಮಿತವಾಗದೆ, ನಮ್ಮಂತಹ ಅನಿವಾಸಿ ಕನ್ನಡಿಗರಿಗೆ ಒಂದು 'ತವರು ಮನೆ'ಯ ಅನುಭವ ನೀಡುತ್ತವೆ.

 ​"ಶಿಶಿರ ಕಾವ್ಯ ಸಂಜೆ"  ಇಂತಹ ಸಂಜೆಗಳು ಪದೇ ಪದೇ ಬರುತ್ತಿರಲಿ, ನಮ್ಮ ಮನಸುಗಳು ಹೀಗೆಯೇ ಅಕ್ಷರಗಳ ಮೂಲಕ ಬೆಸೆಯುತ್ತಿರಲಿ. ಎಂದು ಆಶಿಸುತ್ತೇನೆ.

ಕರ್ನಾಟಕ ಜಾನಪದ ಸಾಹಿತ್ಯ ಪರಿಷತ್ ಒಮಾನ್ ನ ಅಧ್ಯಕ್ಷರಾದ ಶ್ರೀಯುತ ಶಿವಾನಂದ್ ಅವರು ಕವಿಗಳಿಗೆ ಒಂದು ಉತ್ತಮ ವೇದಿಕೆ ನೀಡಿದ್ದಕ್ಕೆ ಅವರಿಗೆ ನನ್ನ ತುಂಬು ಹೃದಯದ ಧನ್ಯವಾದಗಳು  

ಮಸ್ಕತ್ ನಲ್ಲಿ ನೆಲೆಸಿರುವ ಸಾಹಿತ್ಯ ಆಸಕ್ತರಿಗೆ ಒಂದು ಒಳ್ಳೆಯ ವೇದಿಕೆ. ಇಂಥಾ ಕಾರ್ಯಕ್ರಮಗಳು ಆಗಾಗ ನಡೆಯುತ್ತಲೇ ಇರಲಿ. ಹೆಚ್ಚಿನ ಸಾಹಿತ್ಯ ಆಸಕ್ತರು ತಮ್ಮ ಮನಸಿನ ಭಾವನೆಗಳನ್ನು ಹೇಳಿಕೊಳ್ಳುವ ಸಮಾನಮನಸ್ಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಲಿ. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲರಿಗೂ ಧನ್ಯವಾದಗಳು 🙏 


​ಎಲ್ಲರಿಗೂ ಶುಭವಾಗಲಿ! 🙏🏻

ಪ್ರೀತಿಯಿಂದ,


ಪಿ.ಎಸ್ ರಂಗನಾಥ 

ಮಸ್ಕತ್ ಒಮಾನ್ 

ಶುಕ್ರವಾರ, ಜೂನ್ 13, 2025

ಸುಡು ಬಿಸಿಲಿನ ಸೌದಿ ಅರೇಬಿಯಾದಲ್ಲೂ ಇದೆ ತಂಪಾದ ಗಿರಿಶಿಖರಗಳು

ಸುಡು ಬಿಸಿಲಿನ ಸೌದಿ ಅರೇಬಿಯಾದಲ್ಲೂ ಇದೆ ತಂಪಾದ ಗಿರಿಶಿಖರಗಳು

ಬರಹ:- ಪಿ.ಎಸ್.ರಂಗನಾಥ, ಮಸ್ಕತ್, ಒಮಾನ್ ರಾಷ್ಟ್ರ.


ಸೌದಿ ಅರೇಬಿಯಾದ ಹೆಚ್ಚಿನ ಭಾಗ ಮರುಭೂಮಿಯಿಂದ ಕೂಡಿದ್ದು ಇಲ್ಲಿ ಅತಿ ಹೆಚ್ಚಿನ ಬಿಸಿಲಿನ ತಾಪಮಾನವಿರುವುದು ಬಹಳಷ್ಟು ಜನರಿಗೆ ಗೊತ್ತಿದೆ. ಪ್ರಪಂಚದ ಅತ್ಯಂತ ದೊಡ್ಡದಾದ ರಬ್ ಅಲ್ ಖಾಲಿ (ಎಂಪ್ಟಿ ಕ್ವಾರ್ಟರ್) ಎಂದು ಕರೆಯಲ್ಪಡುವ ಮರುಭೂಮಿ ಈ ದೇಶದಲ್ಲಿದೆ. ಈ ವಿಶಾಲವಾದ ಮರುಭೂಮಿಯು ದೇಶದ ಹವಾಮಾನ ಮತ್ತು ಪರಿಸರ ವ್ಯವಸ್ಥೆಗಳ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ. ಸೌದಿ ಅರೇಬಿಯಾ ದೇಶವು ಅತ್ಯಂತ ಧೀರ್ಘವಾದ, ಬೇಸಿಗೆಕಾಲ ಮತ್ತು ಅತಿ ಕಡಿಮೆ ಅವಧಿಯ ತಂಪಾದ ಮತ್ತು ಸ್ವಲ್ಪ ಆರ್ದ್ರ ಚಳಿಗಾಲದ ಕಠಿಣ ಮರುಭೂಮಿ ಹವಾಮಾನವನ್ನು ಹೊಂದಿದೆ.  ಇಂತಹ ಕಠಿಣ ಹವಮಾನದಿಂದ ದೇಶವನ್ನು ಸಂರಕ್ಷಿಸಿಕೊಳ್ಳಲು, ಇಲ್ಲಿನ ಸರ್ಕಾರವು ಅರಣ್ಯೀಕರಣ, ಸುಧಾರಿತ ಭೂ ನಿರ್ವಹಣಾ ಪದ್ಧತಿಗಳು ಅಳವಡಿಸಿಕೊಳ್ಳುತ್ತಿದೆ. ಬೇಸಿಗೆಯಲ್ಲಿನ ಸುಡು ಬಿಸಿಲಿನಿಂದ ತಪ್ಪಿಸಿಕೊಳ್ಳಲು ಏರ್ ಕಂಡೀಶನರ್ ಗಳಿಲ್ಲದೆ ಜೀವನ ನಡೆಸುವುದು ಬಹಳ ಕಷ್ಟ. ಇಂತಹ ಭೀಕರ ಮರಳುಗಾಡಿನ ಪ್ರದೇಶದಲ್ಲೂ ತಂಪಾದ ಹವಮಾನ ಪ್ರದೇಶಗಳಿರುವುದು ಇಲ್ಲಿನ ವಿಶೇಷ. ಆದರೆ ಇಲ್ಲಿಯೂ ಸಹ ತಂಪಾಗಿರುವ ಪ್ರದೇಶಗಳಿರುವುದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಇಲ್ಲಿನ ತಂಪಾದ ಹವಮಾನವನ್ನು ಅನುಭವಿಸಲು ಬೇಸಿಗೆ ಸೇರಿದಂತೆ, ವಿವಿಧ ರಜಾದಿನಗಳಲ್ಲಿ ಲಕ್ಷಾಂತರ ಜನರು ಈ ಪ್ರದೇಶಗಳಿಗೆ ಪ್ರವಾಸಕ್ಕೆ ಬರುತ್ತಾರೆ.

 ತುರೈಫ಼್, ಬ್ಲಾಹಮ್ರ್,  ಬಿಲ್ಸಮ್ರ್ ಕೇಂದ್ರ, ಅಲ್ ಬಹಾ, ಅಭಾ, ಅಸೀರ್ ಪ್ರಾಂತ್ಯ ಸೇರಿದಂತೆ ಕೆಲ ಪ್ರದೇಶಗಳಲ್ಲಿ ಈ ಹಿಮಪಾತವಾಗಿದೆ ಎಂದರೆ ನಂಬಲಾಗದು. ವಿಮಾನದಲ್ಲಿ ಪ್ರಯಾಣಿಸುವಾಗ ಮೋಡಗಳು ಪಕ್ಕದಲ್ಲಿ ಸಾಗುವಂತಹ ಅದ್ಭುತ ವಿಹಂಗಮ ದೃಶ್ಯವನ್ನು, ಇಲ್ಲಿ ಸ್ವತಃ ಕಾಣಬಹುದು. ಪಶ್ಚಿಮ ಘಟ್ಟದಲ್ಲಿನ ತಿರುವಿನ ರಸ್ತೆಯಲ್ಲಿ ಪ್ರಯಾಣಿಸುವ ಅನುಭವ, ಕೇಬಲ್ ಕಾರ್ ಪ್ರಯಾಣ, ಸುಂದರ ಉಧ್ಯಾನವನಗಳು,  ಒಂದಾ ಎರಡಾ!  ಅಲ್ಲ, ಹತ್ತು ಹಲವಾರು ಅದ್ಭುತ ಪ್ರವಾಸಿತಾಣಗಳು ಇಲ್ಲಿವೆ.  ಈ ಎಲ್ಲಾ ಸ್ಥಳಗಳು ಬೇಸಿಗೆ ವಿಶ್ರಾಂತಿ ಧಾಮಗಳಾಗಿ ಅದ್ಭುತವಾಗಿ ಅಭಿವೃದ್ದಿ ಹೊಂದಿದ್ದು. ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರು ಇಲ್ಲಿಗೆ ಬೇಟಿ ನೀಡುತ್ತಾರೆ. 

ಈ ಲೇಖನದಲ್ಲಿ ಸೌದಿ ಅರೇಬಿಯಾದಲ್ಲಿನ ತಂಪಾದ ಪ್ರದೇಶಗಳ ಕುರಿತು ಒಂದು ಒಳನೋಟ ಇಲ್ಲಿದೆ. 

*1). ಅಭಾ(Abha) - ಆಸಿರ್ ಪ್ರಾಂತ್ಯ(Aseer Region):* 

ಸೌದಿ ಅರೇಬಿಯಾದ ನೈಋತ್ಯ ಭಾಗದಲ್ಲಿರುವ ಅಭಾ ಪ್ರದೇಶವು ಆಸಿರ್ ಪ್ರಾಂತ್ಯದಲ್ಲಿದೆ. ಇದು ಅಲ್-ಹಿಜಾಜ್ ಪರ್ವತದ ಮೇಲಿದ್ದು ಸುತ್ತಲೂ ಬೆಟ್ಟಗಳಿಂದ ಆವೃತವಾಗಿದೆ. ಈ ಸ್ಥಳವು ಸಮುದ್ರ ಮಟ್ಟದಿಂದ ಸುಮಾರು 2,200 ಮೀಟರ್ ಎತ್ತರದಲ್ಲಿರುವುದರಿಂದ ಇಲ್ಲಿನ ಹವಾಮಾನವು ಬೇಸಿಗೆಯಲ್ಲಿಯೂ ಸಹ ತಂಪಾಗಿರುತ್ತದೆ. ಬೇಸಿಗೆಯಲ್ಲಿ ಇಲ್ಲಿಗೆ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಈ ಪ್ರಾಂತ್ಯದಲ್ಲಿ ಹಲವಾರು ಪ್ರವಾಸಿ ತಾಣಗಳಿವೆ. 

.

*ಆಸೀರ್ ಪ್ರಾಂತ್ಯದಲ್ಲಿನ ಪ್ರಮುಖ ಆಕರ್ಷಣೆಗಳು:*

ಅಭಾ: ಅಸೀರ್ ಪ್ರಾಂತ್ಯದ ರಾಜಧಾನಿ, ಈ ನಗರವು ಆಧುನಿಕ ಸೌಕರ್ಯಗಳನ್ನು ಒಳಗೊಂಡಿದ್ದರೂ, ಪುರಾತನ ಸಾಂಪ್ರದಾಯಿಕ ಶೈಲಿಯನ್ನು ಬಿಟ್ಟುಕೊಟ್ಟಿಲ್ಲ. 

ಅಭಾ ಸರೋವರ(Abha Dam Lake): ಈ ಸರೋವರದಲ್ಲಿ ದೋಣಿ ವಿಹಾರ ಮಾಡಲು ವ್ಯವಸ್ಥೆ ಮಾಡಲಾಗಿದೆ, ಇದೊಂದು ಪ್ರಶಾಂತ ಸರೋವರವಾಗಿದ್ದು ವಿಶ್ರಾಂತಿ ಸಮಯವನ್ನು ಇಲ್ಲಿ ಆರಾಮವಾಗಿ ಕಳೆಯಬಹುದು.

ಅಭಾ ಕೇಬಲ್ ಕಾರ್ (New Abha Cable Car):  ಈ ಕೇಬಲ್ ಕಾರ್ ಮೂಲಕ ಸಂಚರಿಸುತ್ತ, ಇಲ್ಲಿಯ ಸುತ್ತಮುತ್ತಲಿನ ಪರ್ವತಗಳ ವಿಹಂಗಮ ನೋಟವನ್ನು ಕಣ್ತುಂಬಿಕೊಳ್ಳಬಹುದು.

ಅಲ್ ಮುಫ್ತಾಹಾ ಕಲಾ ಗ್ರಾಮ(Al Muftaha Art Village): ಈ ಸ್ಥಳದಲ್ಲಿ ಇಲ್ಲಿನ ಸ್ಥಳೀಯ ಕಲೆ ಮತ್ತು ಕರಕುಶಲ ವಸ್ತುಗಳ ಪ್ರದರ್ಶನವಿರುವ ವಸ್ತು ಸಂಗ್ರಹಾಲಯವಿದೆ. ಇಲ್ಲಿ ಸೌದಿ ಅರೇಬಿಯಾದ ಪುರಾತನ ಮನೆಗಳನ್ನ ನೋಡಬಹುದು. ಈ ವಸ್ತು ಸಂಗ್ರಹಾಲಯವನ್ನು ನೋಡುತಿದ್ದರೆ,  ಯುರೋಪಿನ ಪುರಾತನ ಶೈಲಿಯ ಸಂಗ್ರಹಾಲಯವನ್ನು ನೋಡುತಿದ್ದೇವೆಯಾ ಎನ್ನುವುದು ಭಾಸವಾಗುತ್ತದೆ.

ಆಸೀರ್ ರಾಷ್ಟ್ರೀಯ ಉದ್ಯಾನವನ (Asir National Park): ಇದೊಂದು ಸಂರಕ್ಷಿತ ಅರಣ್ಯ ಪ್ರದೇಶವಾಗಿದೆ. ವನ್ಯಜೀವಿ ವೀಕ್ಷಣೆ,  ಟ್ರೆಕಿಂಗ್ ಕ್ಯಾಂಪಿಂಗ್, ಬೆಟ್ಟಗಳ ನಡುವೆ ಹಾದುಹೋಗುವ ಮೋಡಗಳ ವೀಕ್ಷಣೆ ಗಾಗಿ ಈ ಸ್ಥಳ ಪ್ರಸಿದ್ದ.  ಪರ್ವತಗಳ ಕಣಿವೆಗಳ ಮಧ್ಯೆಯಿರುವ ಅರಣ್ಯದಲ್ಲಿನ ಟ್ರೆಕಿಂಗ್ ಗಾಗಿರುವ ಕಾಲ್ನಡಿಗೆಯ ಹಾದಿಗಳು ಅದ್ಭುತ ಅನುಭವವನ್ನು ನೀಡುತ್ತವೆ. 



ರಿಜಲ್ ಅಲ್ಮಾ ಗ್ರಾಮ (Rijal Almaa Village): ಯುನೆಸ್ಕೋ ವಿಶ್ವ ಪರಂಪರೆಯ ತಾಣ, ಇಲ್ಲಿನ ವಿಶಿಷ್ಟ ವಾಸ್ತುಶಿಲ್ಪ ಮತ್ತು ಸಾಂಪ್ರದಾಯಿಕ ಶೈಲಿಗೆ ಈ ಗ್ರಾಮ ಹೆಸರುವಾಸಿಯಾಗಿದೆ. ಅಭಾದಿಂದ ಪಶ್ಚಿಮಕ್ಕೆ ಸುಮಾರು 50 ಕಿ.ಮೀ ದೂರದಲ್ಲಿದೆ. ಈ ಗ್ರಾಮವು 900 ವರ್ಷಗಳಿಗೂ ಹಳೆಯದಾಗಿದೆ. 


ಅಲ್ ಹಬಾಲಾ ಗ್ರಾಮ (Al Habala Village Hanging Village): ಈ ಸ್ಥಳದಲ್ಲಿನ ಬೆಟ್ಟಗಳು, ವಿಶಿಷ್ಟವಾದ ಬಂಡೆಗಳು, ಕಣಿವೆಗಳ ರಮ್ಯ ನೋಟವನ್ನು ಅನುಭವಿಸುತ್ತ  ಈ ಸ್ಥಳವನ್ನು ಕೇಬಲ್ ಕಾರ್ ಮೂಲಕ ಪ್ರವೇಶಿಸಬಹುದು.  ಇಲ್ಲಿನ ಪ್ರಕೃತಿಯ ನೋಟ ಪ್ರವಾಸಿಗರನ್ನ ಬೆರಗುಗೊಳಿಸುತ್ತದೆ.

ಜಬಲ್ ಸಾವ್ಡಾ (Jabal Sawda):  ಆಸಿರ್ ಪರ್ವತ ಶ್ರೇಣಿಯಲ್ಲಿನ ವಿಹಂಗಮ ನೋಟಗಳನ್ನು ಅನುಭವಿಸಲು ಈ ಸ್ಥಳವು ಸೂಕ್ತವಾಗಿದೆ. ಟ್ರೆಕಿಂಗ್ ಮಾಡಲು ಇಲ್ಲಿ ಅವಕಾಶವಿದೆ. 

ವಾಟರ್ ಫಾಲ್ ಪಾರ್ಕ್ (Waterfall Park): ಇದೊಂದು ಸುಂದರವಾದ ಉದ್ಯಾನವನವಾಗಿದ್ದು, ಕೃತಕ  ಜಲಪಾತ,  ಕಾರಂಜಿಗಳು ಮತ್ತು ಮಕ್ಕಳು ಆಟವಾಡಲು ಈ ಉದ್ಯಾನವನ ಸೂಕ್ತವಾಗಿದೆ.

ಮೇಲಿನ ಸ್ಥಳಗಳ ಜತೆಗೆ ಇಲ್ಲಿನ, ಐತಿಹಾಸಿಕ ಶಾದಾ ಅರಮನೆ, ಅಸೀರ್ ಪ್ರಾದೇಶಿಕ ವಸ್ತುಸಂಗ್ರಹಾಲಯಗಳನ್ನು ನೋಡಬಹುದು, ಈ ಪ್ರದೇಶದ ಇತಿಹಾಸ ಮತ್ತು ಸಂಸ್ಕೃತಿಯ ಒಳನೋಟಗಳನ್ನು ಅರಿಯಲು ಈ ಸ್ಥಳ ಸೂಕ್ತವಾಗಿದೆ.



*2). ತೈಫ್* :- ಈ ತೈಫ್ ನಗರವನ್ನು ಗುಲಾಬಿ ನಗರ ಎಂದು ಕರೆಯುತ್ತಾರೆ.

ಸರಾವತ್ ಪರ್ವತಗಳ ಇಳಿಜಾರುಗಳಲ್ಲಿ ನೆಲೆಗೊಂಡಿರುವ ಈ ಸ್ಥಳವು ಸುಂದರವಾದ ಗುಲಾಬಿ ತೋಟಗಳು, ತಾಜಾ ಗಾಳಿ ಮತ್ತು ಪರ್ವತ ನೋಟಗಳಿಗೆ ಹೆಸರುವಾಸಿಯಾಗಿದೆ. ಇದು ಜನಪ್ರಿಯ ಬೇಸಿಗೆಯ ವಿಹಾರ ತಾಣವಾಗಿದೆ. ಈ ಪ್ರಾಂತ್ಯವು ತಂಪಾದ ಹವಾಮಾನಕ್ಕೆ ಹೆಸರುವಾಸಿಯಾಗಿದ್ದು, ಸೌದಿ ಅರೇಬಿಯಾದ ಇತರೆ ಪ್ರದೇಶಗಳಲ್ಲಿನ ಜನರು ಬೇಸಿಗೆಯ ಬಿಸಿಲನ್ನು ತಪ್ಪಿಸಿಕೊಳ್ಳಲು ಈ ಸ್ಥಳಕ್ಕೆ ಸ್ಥಳೀಯರು ಭೇಟಿ ನೀಡುತ್ತಾರೆ.  ಸೌದಿ ಅರೇಬಿಯಾದ ಬೇಸಿಗೆಯ ತಾಣವೆಂದು ಗುರುತಿಸಲಾಗಿದೆ.

ತೈಫ್ ನಗರವು ಜೆದ್ದಾ ದಿಂದ 175 ಕಿಲೋಮೀಟರ್ ಮತ್ತು ರಿಯಾದ್ ನಿಂದ 785 ಕಿಲೋಮೀಟರ್ ದೂರವಿದೆ. ತೈಫ್ ತನ್ನ ಪರಿಮಳಯುಕ್ತ ಗುಲಾಬಿಗಳು ಮತ್ತು ಸುಗಂಧ ದ್ರವ್ಯ ಕಾರ್ಖಾನೆಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿನ ಪ್ರಮುಖ ಆಕರ್ಷಣೆಗಳನ್ನು ನೋಡುವುದಾದರೆ, ಅಲ್ ಹದಾ ಪರ್ವತ, ಅದರ ಉದ್ದವಾದ ಕೇಬಲ್ ಕಾರ್ ಸವಾರಿ, ಗುಲಾಬಿ ತೋಟಗಳು ಮತ್ತು ಕಾಲ್ನಡಿಗೆಯ ಹಾದಿಗಳು, ಜೊತೆಗೆ ವಾಟರ್ ಪಾರ್ಕ್ ಮತ್ತು ಟೊಬೊಗನ್ ಸ್ಲೈಡ್ ಅನ್ನು ಹೊಂದಿರುವ ಅಲ್ ಕರ್ ಪ್ರವಾಸಿ ಗ್ರಾಮ ಇಲ್ಲಿವೆ. 

*3). ತುರೈಫ್* : ಐತಿಹಾಸಿಕ  ಅತ್-ತುರೈಫ್ ಸೌದಿಯ ಉತ್ತರ ಭಾಗದ ಈ ಪ್ರದೇಶ ಅತ್ಯಂತ ತಂಪಾದ ಪ್ರದೇಶವಾಗಿದೆ. ಜೋರ್ಡಾನ್ ದೇಶದ  ಉತ್ತರ ಗಡಿ ಪ್ರಾಂತ್ಯದ ಗಡಿಯ ಬಳಿಯಿದೆ. ಜೆದ್ದಾದಿಂದ 1600 ಕಿಲೋಮೀಟರ್ ಮತ್ತು ರಿಯಾದ್ 1400 ಕಿಲೋಮೀಟರ್ ದೂರವಿದೆ.  ಈ ಪ್ರದೇಶವನ್ನು ಮೊದಲ ಸೌದಿ ರಾಜ್ಯ (1727-1818)  ಎಂದು ಗುರುತಿಸಲಾಗುತ್ತಿದೆ. ಸಾಂಪ್ರದಾಯಿಕ ನಜ್ದಿ ಶೈಲಿಯಲ್ಲಿ ಮಣ್ಣಿನ ಇಟ್ಟಿಗೆಯಿಂದ ರಚಿಸಲಾದ ಇಲ್ಲಿರುವ ರಾಜಮನೆತನದ ಕೋಟೆಯು ಪ್ರಮುಖ ಆಕರ್ಷಣೆಯಾಗಿದೆ. 2010 ರಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿ ಘೋಷಿಸಲ್ಪಟ್ಟಿತು, ಚಳಿಗಾಲದ ಅತಿ ಕಡಿಮೆ (−12.0 °C (10.4 °F)) ತಾಪಮಾನವನ್ನು ಈ ಪಟ್ಟಣದಲ್ಲಿ ಕಾಣಬಹುದು.  




*4). ಅಲ್ ಬಹಾ (Al Baha)*:

 ಅಲ್ ಬಹಾ ವನ್ನು ಸೌದಿ ಅರೇಬಿಯಾದ ಹಿಡನ್ ಪ್ಯಾರಡೈಸ್ (hidden paradise)  ಎಂದು ಕರೆಯುತ್ತಾರೆ. ಇಲ್ಲಿ ಹಲವಾರು ಸುಂದರ ಉಧ್ಯಾನವನಗಳಿವೆ. ಕಾಡುಗಳು, ಕಣಿವೆಗಳು, ಹಳ್ಳಕೊಳ್ಳಗಳು,  ಪ್ರಾಚೀನ ಹಳ್ಳಿಗಳು, ಈ ಪ್ರದೇಶದಲ್ಲಿವೆ. ಕೆಲವೊಮ್ಮೆ ಇಲ್ಲಿ ಹಿಮಪಾತವು ಆಗುತ್ತದೆ. ವಿಶೇಷವೇನೆಂದರೆ ವರ್ಷಪೂರ್ತಿ ತಂಪಾದ ಹವಮಾನ ಇಲ್ಲಿರುರುತ್ತದೆ. ಹೀಗಾಗಿ ಎಲ್ಲೆಲ್ಲೀ ಹಚ್ಚ ಹಸಿರನ್ನಕಾಣಬಹುದು. 

ಪ್ರವಾಸಿಗಳು ನೋಡಲು ಹಲವಾರು ಸ್ಥಳಗಳಿವೆ. ರಘದನ್ ಫಾರೆಸ್ಟ್ ಪಾರ್ಕ್, ಐನ್ ವಿಲೇಜ್, ಖೈರಾ ಫಾರೆಸ್ಟ್, ಹಲವಾರು ಉದ್ಯಾನವನಗಳು, ಪಿಕ್ನಿಕ್ ತಾಣಗಳು ಮತ್ತು ನಯನ ಮನೋಹರ ಹಚ್ಚ ಹಸಿರಿನ ಅರಣ್ಯ ಪ್ರದೇಶಗಳು. ಹಸಿರು ಹೊದ್ದ ಬೆಟ್ಟಗುಡ್ಡಗಳು, ಹೀಗೆ ವಿವಿಧ ರೀತಿಯ ಪ್ರವಾಸಿ ಸ್ಥಳಗಳು ಇಲ್ಲಿವೆ.




5). ಅಲ್ ಜೌಫ್ - ಆಲಿವ್ ರಾಜಧಾನಿ (Al Jouf – The Olive Capital)

ಉತ್ತರ ಸೌದಿ ಅರೇಬಿಯಾದಲ್ಲಿರುವ ಅಲ್ ಜೌಫ್ ಸ್ಥಳವು, ಆಲಿವ್ ತೋಟಗಳು, ಹಸಿರಿನ ವಾತಾವರಣ ಮತ್ತು ತಂಪಾದ ಹವಮಾನಕ್ಕೆ ಹೆಸರುವಾಸಿಯಾದ ಪ್ರದೇಶವಾಗಿದೆ. ಇಲ್ಲಿನ ಸಕಾಕಾ ನಗರ, ಕೃಷಿ ತೋಟಗಳಿಂದ ಆವೃತವಾಗಿದ್ದು, ಬೇರೆಲ್ಲೆಡೆಗಿಂತ ತಂಪಾದ ಹವಾಮಾನ ಇಲ್ಲಿರುತ್ತದೆ.

ಇಲ್ಲಿ ಆಲೀವ್ ಅನ್ನು ಹೆಚ್ಚಾಗಿ ಬೆಳೆಯುವದರಿಂದ ಚಳಿಗಾಲದಲ್ಲಿ ವರ್ಷಕ್ಕೊಮ್ಮೆ ಆಲಿವ್ ಉತ್ಸವವನ್ನು ಆಚರಿಸಲಾಗುತ್ತದೆ. ಈ ಪ್ರದೇಶದಲಿ ನಡೆಯುವ ಅತಿದೊಡ್ಡ ಉತ್ಸವಗಳಲ್ಲಿ ಒಂದಾಗಿದೆ. ಪುರಾತನ ಜಾಬಲ್ ಕೋಟೆ (Zaabal Castle) ಯಿಂದ ಸುತ್ತಮುತ್ತಲಿನ ಹಸಿರು ತುಂಬಿದ ಸುಂದರವಾದ ತೋಟಗಳನ್ನು ನೋಡಬಹುದು



6.) ತಬೂಕ್  (Tabuk):- ಸೌದಿ ಅರೇಬಿಯಾದ ವಾಯುವ್ಯ ಭಾಗದ ಜೋರ್ಡಾನ್ ಗಡಿಯಲ್ಲಿದೆ. ಈ ಪ್ರದೇಶಕ್ಕೆ  ಸುಮಾರು ಐದು ಸಾವಿರವರ್ಷಗಳ ಇತಿಹಾಸವಿದೆ. ಇದೊಂದು ಪುರಾತನ ನಗರವಾಗಿದೆ.  ಚಳಿಗಾಲದಲ್ಲಿ ಮೈಕೊರೆಯುವ ಚಳಿ ಈ ಭಾಗದಲ್ಲಿರುತ್ತದೆ. ಬೇಸಿಗೆಕಾಲದಲ್ಲಿ ಬೆಳಿಗ್ಗೆ ಸುಡು ಬಿಸಿ ವಾತಾವಾರಣವಿದ್ದರೂ, ಸಂಜೆಯ ವಾತಾವರಣ ಹಿತದಾಯಕವಾಗಿರುತ್ತದೆ. 

 ಅತ್ಯಂತ ಧೀರ್ಘ ಇತಿಹಾಸವಿರುವ ಈ ತಾಣ ಪ್ರಾಚೀನ ಪುರಾತತ್ತ್ವ ಶಾಸ್ತ್ರದ ಸ್ಥಳಗಳನ್ನು ಹೊಂದಿದೆ. ಪ್ರವಾದಿ ಮೋಸೆಸ್ ಅವರು ಹತ್ತಾರು ವರ್ಷಗಳ ಕಾಲ ಈ ಸ್ಥಳದಲ್ಲಿ ವಾಸಿಸಿದ್ದರೆಂದು ಹೇಳಲಾಗಿದೆ. ಈ ಪ್ರಾಂತ್ಯವು ಕೆಂಪು ಸಮುದ್ರದ ಕರಾವಳಿ ತೀರವನ್ನು ಹೊಂದಿದೆ. ಹಲವಾರು ಸುಂದರವಾದ ಪಟ್ಟಣಗಳು ಈ ಪ್ರಾಂತ್ಯದಲ್ಲಿದೆ. ಕರಾವಳೀ ತೀರ ಮಾತ್ರವಲ್ಲದೆ, ಮರುಭೂಮಿ, ಎತ್ತರದ ಪರ್ವತಗಳು ಈ ಪ್ರಾಂತ್ಯದಲ್ಲಿವೆ. ತಬೂಕ್ ಪಟ್ಟಣದ ಮಧ್ಯಭಾಗದಲ್ಲಿರುವ ತಬೂಕ್ ಕೋಟೆಯು,  ಕ್ರಿ.ಪೂ 3500 ರ ಹಿಂದಿನ ಕೋಟೆಯಾಗಿದೆ ಎಂದು ಹೇಳುತ್ತಾರೆ.



 7). ಜಜಾನ್ ಹೈಲ್ಯಾಂಡ್ಸ್ (Jazan highlands) :

ಯೆಮೆನ್ ಗಡಿಯ ಸಮೀಪವಿರುವ ಈ ಪ್ರದೇಶವು ಆಶ್ಚರ್ಯಗಳಿಂದ ತುಂಬಿದೆ. ಕರಾವಳಿ ಬಿಸಿ ಮತ್ತು ಆರ್ದ್ರತೆಯಿಂದ ಕೂಡಿದ್ದರೂ, ಜಜಾನ್ ಹೈಲ್ಯಾಂಡ್ಸ್, ವಿಶೇಷವಾಗಿ ಫೈಫಾ ಪರ್ವತಗಳು ಮುಂಗಾರಿನಲ್ಲಿ ಹಸಿರಿನಿಂದ ಮೈದುಂಬಿ ಕೊಂಡಿರುತ್ತವೆ ಅಷ್ಟೇ ಅಲ್ಲದೆ ಮಳೆಗಾಲದ ಮಂಜನ್ನೂ  ಇಲ್ಲಿ ನೋಡಬಹುದು. ಇಲ್ಲಿರುವ ತೋಟಗಳನ್ನು ನೋಡುತಿದ್ದರೆ, ಇದೇನಿದು ಅರೇಬಿಯಾ ದೇಶವೋ, ಅಥವಾ ಆಗ್ನೇಯ ಏಷ್ಯಾದ ಒಂದು ಪ್ರಾಂತ್ಯವೋ ಎನ್ನುವಂತೆ  ಭಾಸವಾಗುತ್ತದೆ.

ಬನಿ ಮಲಿಕ್ ಮತ್ತು ಅಲ್-ಡೇಯರ್ ಇಲ್ಲಿರುವ ಹಚ್ಚ ಹಸಿರಿನ ಪರ್ವತ ಪ್ರದೇಶದ ಹಳ್ಳಿಗಳು, ಕಾಫಿ ತೋಟಗಳು ಮತ್ತು ಸಾಂಪ್ರದಾಯಿಕ ಜೀವನಕ್ಕೆ ಹೆಸರುವಾಸಿಯಾಗಿವೆ.  ಮಳೆಗಾಲದ ಸಮಯದಲ್ಲಿ ಬೆಟ್ಟಗಳು ಹಸಿರಿನಿಂದ ಕಂಗೊಳಿಸುತ್ತವೆ.

8) ಹೇಲ್ (Hail):-  ಇದು ವಾಯುವ್ಯ ಸೌದಿ ಅರೇಬಿಯಾದಲ್ಲಿರುವ ಶಮ್ಮಾರ್ ಪರ್ವತಗಳಾದ ಅಜಾ ಮತ್ತು ಸಲ್ಮಾ ನಡುವೆ ಇರುವ ಒಂದು ನಗರ. ರಿಯಾದ್ ನಿಂದ ಸುಮಾರಿ 571 ಕಿಲೋಮೀಟರ್ ದೂರದಲ್ಲಿದೆ. ದಕ್ಷಿಣದ ಎತ್ತರದ ಪ್ರದೇಶಗಳು ಅಥವಾ ಉತ್ತರದ ಗಡಿಗಳಷ್ಟು ತಂಪಾಗಿಲ್ಲದಿದ್ದರೂ, ಉತ್ತರದಲ್ಲಿ ನೆಲೆಗೊಂಡಿರುವ ಹೈಲ್, ಇತರ ಮರುಭೂಮಿ ಪ್ರದೇಶಗಳಿಗೆ ಹೋಲಿಸಿದರೆ ಹೆಚ್ಚು ಸಮಶೀತೋಷ್ಣ ಹವಾಮಾನ ಇಲ್ಲಿರುತ್ತದೆ.


ಈ ತಾಣವು,  ಐತಿಹಾಸಿಕ, ನೈಸರ್ಗಿಕ ಮತ್ತು ಆಧುನಿಕ ಆಕರ್ಷಣೆಗಳ ಮಿಶ್ರಣದ ಅನುಭವನ್ನು ನೀಡುತ್ತದೆ. ಪ್ರಮುಖ ತಾಣಗಳಲ್ಲಿ ಅಲ್-ಕಿಶ್ಲಾ ಅರಮನೆ, ಆರಿಫ್ ಕೋಟೆ, ಅಲ್-ರಾಜಿ ಮಸೀದಿ ಮತ್ತು ಲವೇರಾ ಥೀಮ್ ಪಾರ್ಕ್ ಸೇರಿವೆ. ಪ್ರಕೃತಿ ಪ್ರಿಯರು ಅಲ್ ಸಮ್ರಾ ಪರ್ವತ, ಹತಿಮಾ ಜ್ವಾಲಾಮುಖಿ ಕುಳಿ ಮತ್ತು ಹತ್ತಿರದ ಅಲ್ ನಫುದ್ ಮರುಭೂಮಿಯನ್ನು ಅನ್ವೇಷಿಸಬಹುದು.

9) ಅಲ್ ಉಲಾ (AlUla):


ಅಲ್ಉಲಾ ನಗರವು, ಸೌದಿ ಅರೇಬಿಯಾದ ಮದೀನಾ ಪ್ರಾಂತ್ಯದಲ್ಲಿರುವ ಒಂದು ಪ್ರಾಚೀನ ಅರೇಬಿಯನ್ ಓಯಸಿಸ್ ನಗರ ಮತ್ತು ಗವರ್ನರೇಟ್ ಆಗಿದ್ದು, ಇದು ಮದೀನಾ ನಗರದ ವಾಯುವ್ಯಕ್ಕೆ 350 ಕಿಲೋಮೀಟರ್ ದೂರದಲ್ಲಿದೆ. ಈ ಪ್ರಾಂತ್ಯವು, ಇಲ್ಲಿನ ತಂಪಾದ ಹವಾಮಾನಕ್ಕೆ ಹೆಸರುವಾಸಿಯಾಗಿದೆ. ಇಲ್ಲಿನ ಕಡಿಮೆ ತಾಪಮಾನ ದಿಂದಾಗಿ, ಚಳಿಗಾಲದಲ್ಲಿ ನಡೆಯುವ ಹಲವಾರು ವಿಶಿಷ್ಟ ಹಬ್ಬಗಳು ಮತ್ತು ಹೊರಾಂಗಣ ಕಾರ್ಯಕ್ರಮಗಳಿಂದಾಗಿ ಈ ತಾಣವು ಜನಪ್ರಿಯವಾಗಿದೆ.

ಅಲ್ ಉಲಾ ಐತಿಹಾಸಿಕ ತಾಣಗಳಿಂದ ಹಿಡಿದು ನೈಸರ್ಗಿಕ ಅದ್ಭುತಗಳು ಮತ್ತು ಆಧುನಿಕ ವಾಸ್ತುಶಿಲ್ಪದ ಅದ್ಭುತಗಳವರೆಗೆ ವೈವಿಧ್ಯಮಯ ಆಕರ್ಷಣೆಗಳನ್ನು ಇಲ್ಲಿ ನೋಡಬಹುದು



ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಹೆಗ್ರಾ, ಪ್ರಾಚೀನ ಸಮಾಧಿಗಳು, ಎಲಿಫೆಂಟ್ ರಾಕ್, ಆನೆಯನ್ನು ಹೋಲುವ ಮರಳುಗಲ್ಲಿನ ರಚನೆ, ಮತ್ತು ಬೃಹತ್ ಮರುಭೂಮಿ ಬಂಡೆಯ ಮುಖದಲ್ಲಿ ನಿರ್ಮಿಸಲಾದ ಸಂಗೀತ ಕಚೇರಿ ಸಭಾಂಗಣವಾದ ಮರಾಯಾ, ಇವೆಲ್ಲವೂ ಪ್ರವಾಸಿಗರು ಭೇಟಿ ಮಾಡಬಹುದಾದ ಕೆಲ ಪ್ರಮುಖ ಪ್ರವಾಸಿ ಆಕರ್ಷಣೆಗಳು. ಇದಲ್ಲದೆ, ಪುರಾತನ ನಗರ, ಶರಾನ್ ನೇಚರ್ ರಿಸರ್ವ್ ಮತ್ತು ಜಬಲ್ ಇಕ್ಮಾ ಗೆ ಸಹ ಭೇಟಿ ನೀಡಬಹುದು.




Click below headings