ಶುಕ್ರವಾರ, ಆಗಸ್ಟ್ 9, 2024

ಜೀವನದಲ್ಲಿ ರಿಸ್ಕ್ ತೆಗೆದುಕೊಳ್ಳದಿದ್ದರೆ ಹೇಗೆ?


 ನಮ್ಮ ಹೆತ್ತವರು, ಬಂಧು ಬಳಗ, ಸ್ನೇಹಿತರು, ಆತ್ಮೀಯರು, ಹಿತೈಷಿಗಳು ಹೀಗೆ ಹಲವಾರು ಜನ ನಮಗೆ ಕಂಫರ್ಟ್ ಝೋನ್ ನಲ್ಲಿ ಬದುಕುವುದನ್ನ ಅಭ್ಯಾಸ ಮಾಡಿಸುತ್ತಾರೆ. ಉದಾಹರಣೆಗೆ, ಸರ್ಕಾರಿ ಉದ್ಯೋಗ ಪಡೆಯಲೇಬೇಕು, ಸಾಫ್ಟ್ ವೇರ್ ಉದ್ಯೋಗ ಬೇಕು, ಬೆಂಗಳೂರಿನಲ್ಲಿಯೇ ಜೀವನ ರೂಪಿಸಕೊಳ್ಳಬೇಕು, ಹುಟ್ಟಿದ ಊರಿನಲ್ಲಿಯೇ ಬದುಕು ಕಟ್ಟಿಕೊಳ್ಳಬೇಕು. ಅಪ್ಪ ಬಿಜಿನೆಸ್ ನಲ್ಲಿ ಸಕ್ಸೆಸ್ ಆಗಿದ್ದಾನೆ, ಈಗಾಗಲೇ ಒಂದು ನಿಯಮಿತ ಆದಾಯ ಬರುತ್ತಿದೆ, ಅದನ್ನ ಬಿಟ್ಟು ಬೇರೆ ಉದ್ಯೋಗ ಆಯ್ಕೆ ಮಾಡಿಕೊಳ್ಳಬಾರದು, ಹೊಸ ಕೆಲಸ ಏನೋ ಹೆಂಗೋ, ಸುಮ್ಮನೆ ರಿಸ್ಕ್ ಏಕೇ? ಹಾಗಾಗಿ ಯಾವುದೇ ರಿಸ್ಕ್ ಇಲ್ಲದೇ ಅದೇ ಬಿಜಿನೆಸ್ ಅನ್ನು ಮಗ ಮುಂದುವರೆಸಬೇಕು.

     ಹೀಗೆ ನಮಗಿರುವ ಕಂಫರ್ಟ್ ಝೋನ್ ಅನ್ನು ಬಿಟ್ಟು ಹೊರ ಬರಬಾರದು ಎಂದು ಸುತ್ತಮುತ್ತಲಿನವರು ಎಚ್ಚರಿಸುತ್ತಿರುತ್ತಾರೆ ಮತ್ತು ಬಹಳಷ್ಟು ಜನ ಯೋಚಿಸುತ್ತಾರೆ . ಹೀಗೆ ನಮಗೆ ಈ ಕಂಫರ್ಟ್ ಝೋನ್ ಎನ್ನುವ ಬೇಲಿಯನ್ನು ಹಾಕಿಕೊಂಡು ಕುಳಿತರೆ, ಮುಂದೆ ನಾವು ಅಭಿವೃದ್ದಿ ಹೊಂದುವುದು ಹೇಗೆ, ಹೊಸತನ್ನ ಯೋಚಿಸುವುದು, ಕಲಿಯುವುದು ಹೇಗೆ? ಹೊಸ ವಿಷಯ ತಿಳಿದುಕೊಳ್ಳುವುದು ಹೇಗೆ? ಒಂದು ವಿಷಯವನ್ನ ನಾವೆಲ್ಲರೂ ಅರ್ಥಮಾಡಿಕೊಳ್ಳಬೇಕಿದೆ ನಮ್ಮ ಯಶಸ್ಸಿಗೆ ಒಂದು ಚಿಕ್ಕ ರಿಸ್ಕ್ ಅತ್ಯಗತ್ಯ. ಬರೀ ಕಂಫರ್ಟ್ ಝೋನ್ ಮತ್ತು ಸೇಫ್ ಆಗಿರಬೇಕು ಅಂತ ಯೋಚಿಸಿದರೆ, ಜೀವನದ ಹಲವಾರು ಮಜಲುಗಳನ್ನ ನಾವು ಮಿಸ್ ಮಾಡಿಕೊಳ್ಳುವುದು ಖಂಡಿತ. ಹಾಗಂತ, ಬರೀ ರಿಸ್ಕ್ ತೆಗೆದುಕೊಂಡು ಜೀವನ ನಡೆಸುವುದು ಸಹ ಬಹಳ ಅಪಾಯಕಾರಿ. ನಮ್ಮ ಇತಿಮಿತಿಯನ್ನ ಅರಿತು ಅದಕ್ಕಿಂತ ಸ್ವಲ್ಪ ಹೆಚ್ಚಿನ ರಿಸ್ಕ್ ತೆಗೆದುಕೊಳ್ಳುವುದು ಉತ್ತಮ. ರಿಸ್ಕ್ ತೆಗೆದುಕೊಳ್ಳುವುದರಿಂದ ಸವಾಲುಗಳನ್ನ ಎದುರಿಸುವ ಸಾಮರ್ಥ್ಯ ನಮ್ಮಲ್ಲಿ ಬೆಳೆಯುತ್ತದೆ. ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಕಷ್ಟ ನಷ್ಟಗಳನ್ನ ಸರಿದೂಗಿಸಿಕೊಂಡು ಹೋಗುವ ಆತ್ಮ ಸ್ಥೈರ್ಯ ನಮ್ಮಲ್ಲಿ ಬೆಳೆಯುತ್ತದೆ.

     ಭಾರತದಲ್ಲಿನ ವಿಮಾನ ಪ್ರಯಾಣದಲ್ಲಿ ಕ್ರಾಂತಿಯನ್ನುಂಟು ಮಾಡಿದ ಏರ್ ಡೆಕ್ಕನ್ ಸಂಸ್ಥಾಪಕ ಕ್ಯಾಪ್ಟನ್ ಗೋಪಿನಾಥ್ ಅವರ ಬಗ್ಗೆ  ಬಹಳಷ್ಟು ಜನಕ್ಕೆ ಗೊತ್ತಿಲ್ಲ. ಅವರ ಜೀವನ ನೂರಾರು ಜನರಿಗೆ ಪ್ರೇರಣೆಯಾಗಿದೆ. ಅವರ ಕುರಿತಾದ ಎರಡು ಸಿನಿಮಾಗಳು ತೆರೆ ಕಂಡಿವೆ. ರಿಸ್ಕ್ ತೆಗೆದುಕೊಂಡು ಯಶಸ್ಸು ಕಂಡ ಹಲವರಲ್ಲಿ ಅವರೂ ಒಬ್ಬರು. ಅವರು ಬಡ ಶಾಲಾ ಶಿಕ್ಷಕನ ಮಗನಾಗಿ ಹುಟ್ಟಿದ್ದರು. ಪ್ರಾಥಮಿಕ ಮತ್ತು ಮಾಧ್ಯಮಿಕ  ಶಿಕ್ಷಣವನ್ನು ಅವರ ಗ್ರಾಮದಲ್ಲಿ ಪಡೆದ ನಂತರ ಬಿಜಾಪುರದಲ್ಲಿನ ಸೈನಿಕ ಶಾಲೆಯಲ್ಲಿ ತಮ್ಮ ಮುಂದಿನ  ಶಾಲಾ ಶಿಕ್ಷಣವನ್ನು ಮುಂದುವರೆಸುತ್ತಾರೆ. ನಂತರ  ನ್ಯಾಶನಲ್ ಡಿಫೆನ್ಸ್ ಅಕಾಡೆಮಿಯಲ್ಲಿ ಪದವಿಯನ್ನು  ಪಡೆಯುತ್ತಾರೆ.  ತದನಂತರ, ಎಂಟು ವರ್ಷಗಳ ಅವಧಿಗೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಾರೆ. ಅಲ್ಲಿಂದ ನಿವೃತ್ತರಾಗಿ, ಹಾಸನ ಜಿಲ್ಲೆಯೊಂದರ ಹಳ್ಳಿಯಲ್ಲಿ ಕೃಷಿಕರಾಗಿ ಜೀವನ ನಡೆಸುತ್ತಾರೆ. ಕಲ್ಲು ಬಂಡೆಗಳಿಂದ ಆವೃತ್ತವಾಗಿದ್ದ ಬಂಜರು ಭೂಮಿಯಲ್ಲಿ ಕೃಷಿ ಮಾಡಿ - ಸುಸ್ಥಿರ ಫಾರ್ಮ್ ಅನ್ನು ಅಭಿವೃದ್ದಿ ಪಡಿಸುತ್ತಾರೆ, ನಂತರದ ದಿನಗಳಲ್ಲಿ ಹಾಸನದಲ್ಲಿ ಎನ್‌ಫೀಲ್ಡ್ ಡೀಲರ್‌ಶಿಪ್ ಅನ್ನು ಪಡೆದು ಶೋ ರೂಮ್ ಅನ್ನು ತೆರೆಯುತ್ತಾರೆ. ಒಂದೆರೆಡು ವರ್ಷದ ನಂತರ, ಪಕ್ಕದಲ್ಲೊಂದು ಉಡುಪಿ ಹೋಟೆಲ್ ಅನ್ನು ಪ್ರಾರಂಭಿಸುತ್ತಾರೆ. ಅಲ್ಲಿ ಯಶಸ್ಸನ್ನು ಕಂಡು ಅಲ್ಲಿಗೆ ಸುಮ್ಮನಿರದೆ, ಮಕ್ಕಳ ವಿದ್ಯಭ್ಯಾಸಕ್ಕಾಗಿ ಮುಂದಾಲೋಚನೆ ಮಾಡಿ ಬೆಂಗಳೂರಿಗೆ ಸೇರುತ್ತಾರೆ. ಅಲ್ಲಿ ಸ್ನೇಹಿತರ ಜತೆ ಸೇರಿ, ಹೆಲಿಕ್ಯಾಪ್ಟರ್ ಅನ್ನು ಬಾಡಿಗೆ ಕೊಡುವ ಬಿಜಿನೆಸ್ ಅನ್ನು ಪ್ರಾರಂಭಿಸಿ, ಒಂದೆರೆಡು ವರ್ಷಗಳ ಕಾಲ ಯಾವುದೇ ಲಾಭವಿಲ್ಲದೆ ಸಂಸ್ಥೆಯನ್ನು ನಡೆಸುತ್ತಾರೆ, ಏವಿಯೇಶನ್ ಉದ್ಯಮಕ್ಕಾಗಿ ಸರ್ಕಾರದಿಂದ ಹಲವಾರು ಲೈಸೆನ್ಸ್ ಗಳು, ವಿದೇಶಿ ಹೆಲಿಕ್ಯಾಪ್ಟರ್ ಅನ್ನು ಭೋಗ್ಯಕ್ಕೆ ಪಡೆಯುವ ಪ್ರಕ್ರಿಯೆಗೆ ಸಮಯ ಕಳೆದು ಹೋಗುತ್ತದೆ. ಧೃತಿಗೆಡದೆ ಸಂಸ್ಥೆಯನ್ನ ನಡೆಸಿ, ಹೆಲಿಕ್ಯಾಪ್ಟರ್ ಅನ್ನು ಜನರು ಬಾಡಿಗೆಗೆ ಪಡೆಯಲು ಹಲವಾರು ದಾರಿಗಳನ್ನ ಕಂಡುಕೊಂಡು, ಯಶಸ್ವಿಯಾಗಿ, ಒಂದರಿಂದ ನಾಲ್ಕೈದು ಹೆಲಿಕ್ಯಾಪ್ಟರ್ ಗಳನ್ನ ಬಾಡಿಗೆಗೆ ಬಿಡುವ ಮಟ್ಟಕೆ ಬೆಳೆಯುತ್ತಾರೆ. ಅಲ್ಲಿಗೆ ಅವರ ಸಾಧನೆ ಮುಗಿಯುವುದಿಲ್ಲ. ವಿಮಾನವನ್ನು ತರುತ್ತಾರೆ. ಜನರಿಗೆ ಕೇವಲ ಐದುನೂರು ರೂಪಾಯಿಯಲ್ಲಿ ವಿಮಾನ ಪ್ರಯಾಣ ಮಾಡುವ ಅವಕಾಶ ಕೊಡುತ್ತಾರೆ. ಮುಂದೆ ಅವರ ಡೆಕ್ಕನ್ ಏವಿಯೇಶನ್ ಸಂಸ್ಥೆ ದೊಡ್ಡ ಮಟ್ಟಕ್ಕೆ ಬೆಳೆದು ನಂಬರ್ 2 ಸ್ಥಾನ ಪಡೆಯುತ್ತದೆ. ಹದಿನೈದು ವರ್ಷಗಳ ಹಿಂದೆ ಆ ಸಂಸ್ಥೆಯನ್ನು 700  ಕೋಟಿಗೆ ವಿಜಯ್ ಮಲ್ಯಗೆ ಮಾರುತ್ತಾರೆ. ನಂತರ ಡೆಕ್ಕನ್ ಕಾರ್ಗೋ ಸಂಸ್ಥೆ ಸ್ಥಾಪಿಸಿ, ಅದರಲ್ಲೂ ಯಶಸ್ಸನ್ನ ಕಾಣುತ್ತಾರೆ. ಹಠ ಬಿಡದೆ ತ್ರಿವಿಕ್ರಮನಂತೆ ಒಂದಾದ ಮೇಲೋಂದು ರಿಸ್ಕ್ ತೆಗೆದುಕೊಂಡು, ನೂರಾರು ಕೋಟಿಯ ಮಾಲೀಕರಾಗಿದ್ದಾರೆ ಎಂದರೆ ಎಲ್ಲರೂ ಆಶ್ಚರ್ಯ ಪಡುತ್ತಾರೆ. ಅವರ ಅನೇಕ ಸಾಹಸಗಳು, ವೈಫಲ್ಯಗಳು ಇಂದು ಉದ್ಯಮಕ್ಕೆ ಇಳಿಯುವ ಪ್ರತಿಯೊಬ್ಬರಿಗೂ ಒಂದೊಂದು ಪಾಠದಂತಿವೆ.

     ನನ್ನ ಸ್ನೇಹಿತನೊಬ್ಬ ಇಪ್ಪತ್ತು ವರ್ಷದ ಹಿಂದೆ, ಮೈಸೂರಿನಲ್ಲಿ ಸರ್ಕಾರಿ ಉದ್ಯೋಗ ಮಾಡುತಿದ್ದ. ಅವನಿಗೆ ಆ ದಿನನಿತ್ಯದ ರೂಟೀನ್ ಕೆಲಸ ಬೇಸರವಾಗಿ, ಹೊಸ ತಾಂತ್ರಿಕ ವಿಷಯವನ್ನು ಕಲಿಯಲು ಕೋರ್ಸ್ ಮಾಡಿದ. ಕೋರ್ಸ್ ಮುಗಿದ ನಂತರ, ಸರ್ಕಾರಿ ಕೆಲಸದ ಸಂಭಳದ ದುಪ್ಪಟ್ಟು ಹಣ ಬರುವ ಖಾಸಗಿ ಉದ್ಯೋಗ ದೊರೆಯಿತು. ಎಲ್ಲ ಲೆಕ್ಕಾಚಾರ ಮಾಡಿ, ಕೊನೆಗೊಂದು ದಿನ ಸರ್ಕಾರಿ ಉದ್ಯೋಗಕ್ಕೆ ರಾಜೀನಾಮೆ ನೀಡಿ, ಬೆಂಗಳೂರಿಗೆ ಬಂದು ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ. ಅವನ ಕೆಲಸದ ಅಬುಭವಕ್ಕೆ ತಕ್ಕಂತೆ ಒಂದು ವರ್ಷದ ನಂತರ ಅಮೇರಿಕದಲ್ಲಿ ಉದ್ಯೋಗ ದೊರೆಯಿತು. ಅಲ್ಲಿ ಸುಮಾರು ಹತ್ತು ವರ್ಷಗಳ ಕಾಲ ಅಲ್ಲಿ ಉದ್ಯೋಗ ಮಾಡಿ ಸಾಕಷ್ಟು ಹಣ ಸಂಪಾದಿಸಿ ಬೆಂಗಳೂರಿಗೆ ಮರಳಿದ, ಬೆಂಗಳೂರಿನಲ್ಲಿ ಮನೆಯೊಂದನ್ನ ಕಟ್ಟಿದ.  ನಂತರ ಹೊಸದೊಂದು ಕೆಲಸಕ್ಕೆ ಸೇರಿ, ಸಂತೋಷದಿಂದ ಜೀವನ ನಡೆಸುತಿದ್ದಾನೆ. ಈ ಇಪ್ಪತ್ತು ವರ್ಷಗಳಲ್ಲಿ ಅವನು ಸಂಪಾದಿಸಿದ ಹಣ ಕಡಿಮೆ ಏನಿಲ್ಲ, ಅರವತ್ತು ವರ್ಷದವರೆಗೂ  ಸರ್ಕಾರಿ ಉದ್ಯೋಗ ಮಾಡಿ ನಿವೃತ್ತಿ ಹೊಂದಿದರೂ ಅಷ್ಟೊಂದು ಹಣ ಅವನಿಗೆ ದೊರೆಯುತ್ತಿರಲಿಲ್ಲ. ಅವನು ಜೀವನದಲ್ಲಿ ರಿಸ್ಕ್ ತೆಗೆದುಕೊಂಡು ಮುಂದೆ ಬಂದ. ಬೇರೆಯವರಿಗೆ ಅವಕಾಶವಿದ್ದರೂ, ರಿಸ್ಕ್ ತೆಗೆದುಕೊಳ್ಳಲು ಸಿದ್ದವಿರುವುದಿಲ್ಲ.

         ಮ್ಯೂಚುಯಲ್ ಫಂಡ್ಸ್, ಶೇರ್ ಮಾರ್ಕೆಟ್ಟಿನ ವ್ಯವಹಾರ ರಿಸ್ಕ್ ವ್ಯವಹಾರ. ಇದ್ದುದರಲ್ಲಿ ಮ್ಯೂಚುಯಲಿ ಫಂಡ್ಸ್ ಪರವಾಯಿಲ್ಲ ಎಂದು ಹೇಳಬಹುದು. ಈ ರಿಸ್ಕ್ ಎನ್ನುವ ಪದ ಕೇಳಿ, ನನ್ನಂತೆ ಬಹಳಷ್ಟು ಜನ ಈ ವ್ಯವಹಾರದಲ್ಲಿ ಹಣ ತೊಡಗಿಸದೆ ಸುಮ್ಮನಿದ್ದಾರೆ. ಆದರೆ, ಕೆಲವರು ಬಹಳಷ್ಟು ದುಡ್ಡು ಸಂಪಾದಿಸಿರುವುದು ಗುಪ್ತ ಸಂಗತಿಯೇನಲ್ಲ. ನಲವತ್ತು ವಯಸ್ಸಿಗೆ ರಿಟೈರ್ ಮೆಂಟ್ ತೆಗೆದುಕೊಂಡು ಮನೆಯಲ್ಲಿ ಕುಳಿತು ಪ್ರತಿತಿಂಗಳು ಸಾವಿರಾರು ರೂಪಾಯಿಯನ್ನ ಡಿವಿಡೆಂಟ್ ರೂಪದಲ್ಲಿ ಪಡೆಯುವವರೇನು ಕಮ್ಮಿಯಿಲ್ಲ. ನನ್ನ ಸ್ನೇಹಿತರೊಬ್ಬರು, ಎಂಟತ್ತು ವರ್ಷಗಳ ಹಿಂದೆ ಅಂದಾಜು ಹತ್ತು ಲಕ್ಷರೂಪಾಯಿಯನ್ನ ಈ ವ್ಯವಹಾರದಲ್ಲಿ ತೊಡಗಿಸಿದ್ದರು, ಇಂದು ಸುಮಾರು ಐವತ್ತು ಲಕ್ಷ ರೂಪಾಯಿಯಷ್ಟು ಆದಾಯ ಅವರದಾಗಿದೆ. ಲಕ್ಷಾಂತರ ಜನರು ಈ ಶೇರು ವ್ಯವಹಾರದಿಂದ ಕೋಟ್ಯಾದೀಶರೂ ಆಗಿದ್ದಾರೆ ಮತ್ತು ದಿವಾಳಿಯು ಆಗಿದ್ದಾರೆ. ರಿಸ್ಕ್ ಜತೆಗೆ ಬುದ್ದಿವಂತಿಕೆ ಇದ್ದರೆ, ಈ ವ್ಯವಹಾರದಲ್ಲಿ ಲಾಭ ಖಂಡಿತ ಸಾಧ್ಯ. 

 

ನನ್ನ ಆತ್ಮೀಯರೊಬ್ಬರು, ಮಸ್ಕತ್ ನಲ್ಲಿ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಒಬ್ಬ ಇಂಜಿನಿಯರ್ ಆಗಿ ಕೆಲಸಕ್ಕೆ ಸೇರಿದ್ದರು. ಹತ್ತು ವರ್ಷಗಳ ಸೇವೆಯ ನಂತರ ತಮ್ಮದೇ ಆದ ಕನ್ಸಲ್ಟೆನ್ಸಿ ಉದ್ಯಮವೊಂದನ್ನ ತೆರೆಯುತ್ತಾರೆ. ಇಂದು ಆ ಸಂಸ್ಥೆಯಲ್ಲಿ  ನೂರಾರು ಇಂಜಿನಿಯರ್ ಗಳಿಗೆ ಉದ್ಯೋಗ ನೀಡಿದ್ದಾರೆ. ಭಾರತ, ಆಫ್ರಿಕ, ಯುಏಇ ಯಲ್ಲಿ ವಿಭಾಗಗಳನ್ನ ತೆರೆದಿದ್ದಾರೆ. ಅವರಿಗೆ ದೊರೆತ ಒಂದು ಸವಾಲನ್ನು ಅವಕಾಶವನ್ನಾಗಿ ಮಾರ್ಪಡಿಸಿಕೊಂಡೂ ಇಂದು ಒಬ್ಬ ಯಶಸ್ವಿ ಉದ್ಯಮಿಯಾಗಿ ಹೊರಹೊಮ್ಮಿದಾರೆ. ಅವರೇನಾದರು ರಿಸ್ಕ್ ತೆಗೆದುಕೊಳ್ಳದೆ ಕಂಪನಿಯನ್ನ ಸ್ಥಾಪಿಸದೇ ಇದ್ದಿದ್ದರೆ ಇಂದು ಅವರೊಬ್ಬ ಯಶಸ್ಸು ಗಳಿಸಲು ಸಾಧ್ಯವಾಗುತ್ತಿರಲಿಲ್ಲ. ನೂರಾರು ಜನರಿಗೆ ಕೆಲಸಕೊಡಲು ಸಾಧ್ಯವಾಗುತ್ತಿರಲಿಲ್ಲ. ಅವರೆಲ್ಲರ ಮನೆಯೂ ಬೆಳಗಲು ಸಾಧ್ಯವಾಗುತ್ತಿರಲಿಲ್ಲ.

         ಕೆಲವರು ಚಿಕ್ಕದೊಂದು ಉದ್ಯಮವೊಂದನ್ನ ನಡೆಸಿಕೊಂಡು ಹೋಗುತ್ತಿರುತ್ತಾರೆ. ನಿರೀಕ್ಷೀತ ಆದಾಯಕ್ಕಿಂತ ಹೆಚ್ಚಿನ ಲಾಭ ಬಂದರೆ, ಯಾರು ಸುಮ್ಮನಿರುತ್ತಾರೆ ಹೇಳಿ. ಅದನ್ನ ಇನ್ನೂ ದೊಡ್ಡದಾದ ಉದ್ಯಮವನ್ನಾಗಿ ರೂಪಿಸಲು ಪ್ರಯತ್ನಿಸುತ್ತಾರೆ. ಕೆಲ ಬುದ್ದಿವಂತರು, ತಮ್ಮ ಮೊದಲಿನ ಆದಾಯಕ್ಕೆ ಕುತ್ತುಬಾರದಂತೆ ಹೊಸದಾದ ಬಿಜಿನೆಸ್ ಅನ್ನು ರೂಪಿಸಿಕೊಳ್ಳುತ್ತಾರೆ. ಎಲ್ಲಾ ರಿಸ್ಕ್ ಅನ್ನು ಲೆಕ್ಕಾಚಾರ ಮಾಡಿಯೇ ಮುಂದುವರೆಯುವವರು ಚಾಣಾಕ್ಷರು. ಈವತ್ತು, ಕರ್ನಾಟಕದಲ್ಲಿ ಎಲ್ಲೆಡೆಯೂ ಕಾಣಸಿಗುವ ಮಾರ್ವಾಡಿ ಸಮುದಾಯ ನೋಡಿ. ಒಂದು ಚಿಕ್ಕ ಅಂಗಡಿಯಿಂದ ಶುರು ಮಾಡಿ, ಈವತ್ತು ಕೋಟಿಗಟ್ಟಲೆ ವ್ಯವಹಾರ ಮಾಡುವ ಮಟ್ಟಕ್ಕೆ ಬೆಳೆದಿದ್ದಾರೆ. ಅವರು ಬಾಡಿಗೆಗೆ ಪಡೆದ ಅಂಗಡಿಗಳನ್ನ ಇಂದು ಅವರೇ ಖರೀದಿಸುವ ಹಂತಕ್ಕೆ ಅವರು ಬೆಳೆದಿದ್ದಾರೆ. ಅವರು ಬೆಳೆದಂತೆ, ನಾವು ಬೆಳೆಯುವುದಕ್ಕೆ ಸಾಧ್ಯವಿಲ್ಲ ಅಂತಲ್ಲ, ಆದರೆ ನಾವು ರಿಸ್ಕ್ ತೆಗೆದುಕೊಳ್ಳುವುದಕ್ಕೆ ಹಿಂಜರಿಯುತ್ತೇವೆ. 

 ತೊಂಬತ್ತರ ದಶಕದ ಮಧ್ಯಭಾಗದಲ್ಲಿ, ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗಕ್ಕೆ ಸೇರಿದ ನಾನು, ಸುಮಾರು ಹತ್ತು ವರ್ಷಗಳ ಕಾಲ ದುಡಿದರೂ ಹೆಚ್ಚಿನದ್ದನ್ನೇನು ಸಂಪಾದಿಸಲಾಗಲಿಲ್ಲ. ದುಡಿದ್ದಿದ್ದೆಲ್ಲ ಖರ್ಚಾಗುತಿತ್ತು, ಭವಿಷ್ಯಕ್ಕೆ ಅಂತ ಉಳಿತಾಯ ಮಾಡುವುದು ಬಹಳ ಕಷ್ಟವಾಗುತಿತ್ತು. ವಿದೇಶದಲ್ಲಿ ಉದ್ಯೋಗ ಮಾಡುತ್ತಿರುವವರನ್ನ ಈಗಾಗಲೇ ನೋಡಿದ್ದರಿಂದ ವಿದೇಶದಲ್ಲಿ ಉದ್ಯೋಗ ಮಾಡುವ ಆಸೆ ಮನದಲ್ಲಿ ಹುಟ್ಟಿತ್ತು. ಆದರೆ, ಹೊಸದಾಗಿ ರಿಸ್ಕ್ ತೆಗೆದುಕೊಳ್ಳಲು ಬಹಳ ಯೋಚಿಸುತಿದ್ದೆ. ಕೊನೆಗೊಂದು ದಿನ ನಿರ್ಧಾರ ಮಾಡಿ ಸುಮಾರು ಎರಡು ವರ್ಷಗಳ ಕಾಲ ವಿದೇಶದಲ್ಲಿ ಉದ್ಯೋಗಕ್ಕಾಗಿ ಪ್ರಯತ್ನಿಸಿ, ಕೊನೆಗೆ ಅದರಲ್ಲಿ ಸಫಲನಾದೆ. 2007 ರಲ್ಲಿ ವಿದೇಶಕ್ಕೆ ಉದ್ಯೋಗಕ್ಕಾಗಿ ಬಂದವನು, ಸುಮಾರು ಹದಿನೇಳು ವರ್ಷಗಳ ಕಾಲ ಅಲ್ಲಿ ಉದ್ಯೋಗ ಮಾಡುತ್ತ ಬಂದಿದ್ದೇನೆ. ಯಾವುದೇ ಬಂಡವಾಳ ಉಪಯೋಗಿಸದೇ ಕೇವಲ ವಿದ್ಯೆ, ಅನುಭವ, ನ್ಯಾಯ ನಿಷ್ಟೆಯಿಂದ ಸನ್ಮಾರ್ಗದಲ್ಲಿ ದುಡಿದು ನನ್ನ ಜೀವನವನ್ನ ರೂಪಿಸಿಕೊಂಡೆ.

ಹಣ ಮಾಡುವುದೇ ಉದ್ದೇಶವಾದರೆ, ಲಂಚ ಭ್ರಷ್ಟಾಚಾರ, ಅನೈತಿಕ ಚಟುವಟಿಕೆ, ಅಕ್ರಮಗಳು ಕಡಿಮೆ ಏನಿಲ್ಲ. ಒಬ್ಬ ಸರ್ಕಾರಿ ಉದ್ಯೋಗಿ, ಒಬ್ಬ ರಾಜಕಾರಣಿ ಕೋಟ್ಯಾಂತರ ಆಸ್ತಿ ಮಾಡಿದ್ದಾನೆ ಎಂದರೆ, ಅದರ ಮೂಲವನ್ನು ಎಲ್ಲರೂ ಊಹಿಸಬಹುದು. ಹತ್ತು ತಲೆಮಾರು ಕುಳಿತು ತಿನ್ನುವಷ್ಟು ಆಸ್ತಿಮಾಡಿದವರು ನಮ್ಮ ದೇಶದಲ್ಲಿ ಕಡಿಮೆ ಏನಿಲ್ಲ.  ಒಬ್ಬ ಬಿಜಿನೆಸ್ ಮ್ಯಾನ್ ಸಹ ಅನೈತಿಕ ಮಾರ್ಗದಲ್ಲಿ ದುಡಿಯಬಹುದು. ಅಕ್ರಮವನ್ನೂ ಮಾಡಬಹುದು. ಬಡ್ಡಿಗೆ ಸಾಲಕೊಟ್ಟು ಹಣಮಾಡುವವರು ಕಡಿಮೆ ಏನಲ್ಲ. ಇದ್ಯಾವುದೂ ಯಶಸ್ಸಂತು ಖಂಡಿತ ಅಲ್ಲ.

 

ಯಶಸ್ಸು ಕೇವಲ ಕೆಲವೇ ಕೆಲ ಜನರ ಸ್ವತ್ತಲ್ಲ. ಯಶಸ್ಸು ಎಲ್ಲರಿಗೂ ದಕ್ಕುತ್ತದೆ, ಅವಕಾಶ ನಮ್ಮ ಮನೆ ಬಾಗಿಲಿಗೆ ಬರುತ್ತದೆ ಎಂದು ಕಾಯುವುದಕ್ಕಿಂತ ಬದಲಾಗಿ ನಾವೇ ಅವಕಾಶ ಸೃಷ್ಟಿಸಿ ಕೊಳ್ಳುವ ಪ್ರಯತ್ನ ಮಾಡಬೇಕು. ನ್ಯಾಯ ನೀತಿ ಧರ್ಮದಿಂದ ದುಡಿಯಬೇಕು ಅಂದರೆ, ಜೀವನದಲ್ಲಿ ಸ್ವಲ್ಪ ಮಟ್ಟಿನ ರಿಸ್ಕ್ ಅಗತ್ಯ.  ಕಂಫರ್ಟ್ ಝೋನ್ ನಿಂದ ಹೊರಬಂದು ಸ್ವಲ್ಪ ವಿಭಿನ್ನ ಪ್ರಯತ್ನ ಮಾಡಿ ಯಶಸ್ಸುಗಳಿಸುವುದರ ಬಗ್ಗೆ ಯೋಚಿಸಬೇಕು.

 

ರಿಸ್ಕ್ ತೆಗೆದುಕೊಳ್ಳುವುದರಿಂದ ದೊರೆಯುವ ಪ್ರಯೋಜನಗಳು.

1.  ಸಾಧನೆಯ ಭಾವವನ್ನು ಅನುಭವಿಸುವಿರಿ

ಮೊದಲು ರಿಸ್ಕ್ ತೆಗೆದು ಕೊಳ್ಳುವ ಸಮಯದಲ್ಲಿ ಸ್ವಲ್ಪ ಹೆದರಿಕೆಯಾಗುವುದು ಸಹಜ. ನಿಖರವಾಗಿ ಯೋಜಿಸಿದಂತೆ ನಡೆಯದಿದ್ದರೂ ಸಹ, ನಿಮಗೊಂದು ಅನುಭವವಾಗುತ್ತದೆ.  ನಿಮ್ಮ ಧೈರ್ಯ ಮತ್ತು ಆ ಪ್ರಯತ್ನಕ್ಕಾಗಿ ನಿಮ್ಮ ಬಗ್ಗೆ ನೀವು ಹೆಮ್ಮೆ ಪಡುತ್ತೀರಿ. ಅದರಿಂದಾಗುವ ಲಾಭ ಅಥವ ನಷ್ಟ ನಿಮಗೊಂದು ಪಾಠ ಕಲಿಸುತ್ತದೆ.

 

2. ರೆಕಾರ್ಡ್ ಬ್ರೇಕ್ ಮಾಡ್ತೀರಿ ಗೊತ್ತಾ

ಕೆಲವೊಮ್ಮೆ, ನಾವು ನಮ್ಮ ಬಗ್ಗೆ ನಂಬಿಕೆಗಳು ಅಥವಾ ಊಹೆಗಳೊಂದಿಗೆ ಬೆಳೆಯುತ್ತೇವೆ. ಉದಾಹರಣೆಗೆ ನಾಲ್ಕು ಜನ ನಮ್ಮ ಬಗ್ಗೆ ಏನು ತಿಳಿದುಕೊಳ್ಳುತ್ತಾರೆ ಅಥವ ಏನೋ ಒಂದು ಹಿಂಜರಿಕೆಯ ಭಾವನಮ್ಮನ್ನ ಕಾಡಲು ಪ್ರಾರಂಭಿಸುತ್ತದೆ.  ಈ ಭಯದಿಂದ ರಿಸ್ಕ್ ತೆಗೆದುಕೊಳ್ಳುವುದನ್ನ ನಾವು ನಿಲ್ಲಿಸುತ್ತೇವೆ. ಆದರೆ ಈ ಊಹೆ ಮತ್ತು ಹಳೆಯ ನಂಬಿಕೆಗಳ ಬಗ್ಗೆ ಪ್ರಶ್ನಿಸುವುದನ್ನು ನಿಲ್ಲಿಸುತ್ತೇವೆ. ಒಂದೊಮ್ಮೆ ಆತ್ಮ ವಿಶ್ವಾಸ ದಿಂದ ಮುಂದೆ ಹೆಜ್ಜೆ ಇಟ್ಟು, ಯಶಸ್ಸು ದೊರೆತಮೇಲೆ,  ಈ ಊಹಾ ಪೋಹಗಳು, ಹಳೆಯ ನಂಬಿಕೆಗಳು, ನಕರಾತ್ಮಕ ಆಲೋಚನೆಗಳು, ಮೂಲೆ ಸೇರುವುದು ನಿಶ್ಚಿತ.  ನಿಮ್ಮ ಬಗ್ಗೆ ನಿಮಗೆ ಹೆಮ್ಮೆ ಮೂಡುವುದು ಸಹಜ.

ಹಳೆ ರೆಕಾರ್ಡ್ ಬ್ರೇಕ್ ಮಾಡಿದೆವು ಎನ್ನುವ ತೃಪ್ತ ಭಾವನೆ ನಿಮ್ಮಲ್ಲಿ ಮೂಡುತ್ತದೆ.

 

3. ನಿಮ್ಮ ಬಗ್ಗೆ ನೀವು ಇನ್ನಷ್ಟು ಕಲಿಯುವಿರಿ

ನೀವು ಏನು ಮಾಡಲು ಇಷ್ಟ ಪಡುತ್ತೀರಿ? ನಿಮ್ಮನ್ನು ಯಾವುದು ಸಂತೋಷಗೊಳಿಸುತ್ತದೆ? ನಿಮ್ಮ ಮೌಲ್ಯಗಳು ಯಾವುವು? ನೀವು ಯಾರು ಮತ್ತು ನಿಮ್ಮ ನಡವಳಿಕೆಯನ್ನು ಯಾವುದು ಪ್ರೇರೇಪಿಸುತ್ತದೆ? ಹೀಗೆ ನೀವು ಇನ್ನಷ್ಟು ತಿಳಿದುಕೊಳ್ಳುತ್ತೀರಿ. ಹೊಸ ಸವಾಲುಗಳು ನಿಮ್ಮನ್ನು ಮೆಚ್ಚಿಸಲು ಮತ್ತು ಬೆಳೆಯಲು ಅವಕಾಶವನ್ನು ನೀಡುತ್ತವೆ.

 

4. ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ

ಪ್ರತಿ ಹೊಸ ಸವಾಲು ಮತ್ತು ಅಪಾಯದೊಂದಿಗೆ ಮುಂದೆ ಹೆಜ್ಜೆ ಇಟ್ಟಾಗ,  ಸಂದರ್ಭಗಳನ್ನು ನಿಭಾಯಿಸುವ ನಿಮ್ಮ ಸ್ವಂತ ಸಾಮರ್ಥ್ಯವನ್ನು ನೀವು ಮನವರಿಕೆ ಮಾಡಿಕೊಳ್ಳುತ್ತೀರಿ. ಇದು ನಿಮ್ಮಲ್ಲಿ ಹೆಚ್ಚು ಆತ್ಮವಿಶ್ವಾಸವನ್ನು ತುಂಬುತ್ತದೆ. ಎಲ್ಲ ಸಂಧರ್ಭಕ್ಕೆ  ಹೊಂದಿಕೊಳ್ಳುವ ವ್ಯಕ್ತಿಯನ್ನಾಗಿ ಮತ್ತು ಉತ್ತಮ ನಾಯಕನನ್ನಾಗಿ ಮಾಡುತ್ತದೆ. ಈ ಎಲ್ಲಾ ಅನುಭವ ನಿಮ್ಮ ನಿರ್ಧಾರ-ಮಾಡುವ ಕೌಶಲ್ಯಗಳ ಮೇಲೆ ಧನಾತ್ಮಕ ಪರಿಣಾಮವನ್ನು ಬೀರಬಹುದು.

 

5. ಹೊಸ ಅವಕಾಶಗಳನ್ನು ತೆರೆಯುತ್ತದೆ

ನಿಮ್ಮ ಆರಾಮ ವಲಯ (ಕಂಫರ್ಟ್ ಝೋನ್) ದಿಂದ ಹೊರಬರುವುದು ವೃತ್ತಿಪರವಾಗಿ ಮತ್ತು ವೈಯಕ್ತಿಕವಾಗಿ ಎಲ್ಲಾ ರೀತಿಯ ಹೊಸ ಅವಕಾಶಗಳಿಗೆ ಕಾರಣವಾಗಬಹುದು. ನಿಮ್ಮ ಸ್ವಂತ ವ್ಯವಹಾರವನ್ನು ತೆರೆಯುವುದು ಅಥವಾ ನಿಮ್ಮ ಉದ್ಯಮದಲ್ಲಿ ಟ್ರೆಂಡ್‌ಸೆಟರ್ ಆಗುವುದನ್ನು ನೀವು ಕಂಡುಕೊಳ್ಳಬಹುದು.

 

6. ವ್ಯಕ್ತಿತ್ವವನ್ನು ರೂಪಿಸುತ್ತದೆ.

ರಿಸ್ಕ್ ತೆಗೆದುಕೊಳ್ಳುವುದರಿಂದ, ಪ್ರತಿಕೂಲ ಫಲಿತಾಂಶಗಳು ಮತ್ತು ಹಿನ್ನಡೆಗಳನ್ನು ಹೇಗೆ ನಿರ್ವಹಿಸುವುದು ಎಂಬುವ ಪಾಠವನ್ನು ಕಲಿಯುತ್ತೀರಿ.  ಪ್ರತಿಕೂಲ ಪರಿಸ್ಥಿತಿಯಲ್ಲಿ, ಸಮಚಿತ್ತದಿಂದ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬಹುದು,  ಏನೇ ಸಂಭವಿಸಿದರೂ ಅಭಿವೃದ್ಧಿ ಹೇಗೆ ಹೊಂದಬಹುದು ಮತ್ತು ಯಶಸ್ಸಿಗೆ ವಿವಿಧ ಮಾರ್ಗಗಳನ್ನು ಹುಡುಕುವಲ್ಲಿ ಹೇಗೆ ಹೆಚ್ಚು ಪ್ರವೀಣರಾಗಬಹುದು ಎಂದು ನಿಮಗೆ ನಿಧಾನಕ್ಕೆ ತಿಳಿಯುತ್ತ ಹೋಗುತ್ತದೆ.

 

7. ವಿಷಾದವಿಲ್ಲ

ಲೆಕ್ಕಹಾಕಿದ ರಿಸ್ಕ್ (ಅಪಾಯಗಳು) ತೆಗೆದುಕೊಳ್ಳುವುದರಿಂದ ಯಾವಾಗಲೂ ಧನಾತ್ಮಕ ಫಲಿತಾಂಶಗಳನ್ನ ನಿರೀಕ್ಷಿಸಲು ಸಾಧ್ಯವಾಗದಿದ್ದರೂ ಸಹ ಆ ರಿಸ್ಕ್ ನಿಂದ ಆಗುವ ಪಾಠವನ್ನ ನಾವು ಕಲಿಯಬಹುದು, ಮುಂದಿನ ಅಧ್ಯಾಯಕ್ಕೆ ಅದೊಂದು ಅನುಭವ ಎಂಬುದನ್ನ ಮರೆಯಬಾರದು. ಒಂದು ಅಧ್ಯಯನದ ಪ್ರಕಾರ, ರಿಸ್ಕ್ ತೆಗೆದುಕೊಳ್ಳದೆ ಇರುವವರಿಗಿಂತ, ರಿಸ್ಕ್ ತೆಗೆದುಕೊಳ್ಳುವವರು ಸಾಮಾನ್ಯವಾಗಿ ತಮ್ಮ ಜೀವನದಲ್ಲಿ ಹೆಚ್ಚು ತೃಪ್ತರಾಗಿರುತ್ತಾರೆ ಮತ್ತು ಸಂತೋಷವಾಗಿರುತ್ತಾರೆ.

 ಪಿ.ಎಸ್.ರಂಗನಾಥ

ಲೇಖಕರು,

12 ಕಾಮೆಂಟ್‌ಗಳು:

  1. ದಿಟ್ಟತನ, ಸ್ವಾಭಿಮಾನ, ಕೆಚ್ಚೆದೆಯಿಂದ ಬದುಕ ಬೇಕೆಂದರೆ ಕಂಡಿತಾ ಸಮಸ್ಯೆಗಳನ್ನು ಮತ್ತು ಕಷ್ಟವನ್ನು / ರಿಸ್ಕ್ ಎದುರಿಸಲೇ ಬೇಕಾಗುತ್ತದೆ. ಏಕಾಂಗಿಯಾಗಿ ಕಷ್ಟವನ್ನು ಎದುರಿಸುವ ಮತ್ತು ಕೊನೆಯ ಅದರ ಫಲ, ಇದು ಕಂಡಿತಾ ಜೀವನದಲ್ಲಿ ಸುಖ, ನೆಮ್ಮದಿ ಮತ್ತು ಮನಸ್ಸಿಗೆ ಪ್ರಫುಲ್ಲತೆಯನ್ನು ಕೊಟ್ಟು ಮತ್ತೆ ಹೆಚ್ಚಿನದನ್ನು ಮಾಡಲು ಉತ್ತೇಜಸುತ್ತದೆ.

    ಅನೇಕರು ತಮ್ಮ ದ್ಯೇಯವನ್ನು ಸಾರ್ಥಕಗೊಳಿಸಲು ಸುಳ್ಳು ಮೋಸ ವಂಚನೆಯಿಂದ ವಾಮ ಮಾರ್ಗ ಹಿಡಿದು ಅದರಲ್ಲೂ ಯಶಸ್ಸು ಕಂಡು ಮೇಲೇರಿರುವರಿದ್ದಾರೆ ಆದರೆ ನೀವು ಹೇಳಿದ ಹಾಗೆ ಅದು ನೆಮ್ಮದಿಯನ್ನು ತರದು. ಮನುಷ್ಯನಿಗೆ ಮನಃ ಸಾಕ್ಷಿ ಎನ್ನುವ ಒಬ್ಬ ವ್ಯಕ್ತಿ ನಮ್ಮ ಅಂತರಂಗದಲ್ಲೇ ಇಣುಕಿ ನೋಡುತ್ತಿರುತ್ತಾನೆ, ಅವನನ್ನು ಯಾಮಾರಿಸುವುದು ಬಲು ಕಷ್ಟ. ಆ ವ್ಯಕ್ತಿಯನ್ನು ತೃಪ್ತಿ ಪಡಿಸಿ ನೇರವಾದ, ಸ್ವಚ್ಛ ಮಾರ್ಗದಲ್ಲಿ ಸಾಗಿ ಸಫಲತೆಯನ್ನು ಪಡೆದರೆ ಸಿಗುವ ಆನಂದ ನೆಮ್ಮದಿ ಮತ್ತೆ ಎಲ್ಲಿಯೂ ಸಿಗದು. ಅಂತವರನ್ನು ಸಮಾಜವು ಗುರುತಿಸಿದರು ಗುರುತಿಸದೆ ಇದ್ದರು ಅವರಿಗೆ ಬೇಸರ ಇರುವುದಿಲ್ಲ, ಅವರು ಅವರ ಆತ್ಮ ತೃಪ್ತಿಗಾಗಿಯೇ ದಣಿಯುತ್ತಾರೆ ಮತ್ತು ಯಶಸ್ಸು ಗಳಿಸುತ್ತಾರೆ.

    ನೀವು ಹೇಳಿದ ರೀತಿ ಮನುಷ್ಯ ರಿಸ್ಕ್ ತೆಗೆದುಕೊಳ್ಳಲೆ ಬೇಕು, ಇತೀಚಿನ ದಿನಗಳಲ್ಲಿ ಸ್ವಚ್ಛ ಬದುಕು ನಡೆಸುವುದೇ ಒಂದು ದೊಡ್ಡ ರಿಸ್ಕ್. ಈ ರಿಸ್ಕಕನ್ನು ಎಲ್ಲರು ಎದುರಿಸುತ್ತಿದ್ದಾರೆ, ಕೆಲ ಜನ ತೊಂದರೆ ಏಕೆ ಎಂದೋ, ಸುಲಭವಾಗಿ ಗಳಿಸುವ ಎಂದೋ ವಾಮ ಮಾರ್ಗಕ್ಕೆ ಒರಳಿಬಿಡುತ್ತಾರೆ. ಅದಕ್ಕೆ ಸಮಾಜವೇ ಕಾರಣ ಇರಬಹುದು, ಪ್ರತಿ ವ್ಯಕ್ತಿ ಸಿದ್ದಾಂತ ಅಳವಡಿಕೊಂಡರೆ ಆಗ ವಾಮ ಮಾರ್ಗ ಮುಚ್ಚುವುದು.

    ರಿಸ್ಕ್ ನಿಜಕ್ಕೂ ಅನುಭವಿಸಿ ತಿಂದರೆ ಅದು ರಸ್ಕ್, ಅನುಭವವಿಸದೆ ಗುಂಡಾಡಿ ಗುಂಡನ ಹಾಗೆ ಬೇರೆಯವರ ದುಡುಮೆಯನ್ನು ಕಬಳಿಸಿ ತಿಂದರೆ ವಿಷವೇ ಸರಿ.

    ಚಿಂತನೆಗೆ ದೂಡುವ ನಿಮ್ಮ ಲೇಖನ ತುಂಬ ಚೆನ್ನಾಗಿ ಮೂಡಿ ಬದಿದೆ ಸಾರ್ 🙏🙏🙏

    ಪ್ರತ್ಯುತ್ತರಅಳಿಸಿ
  2. ಅಪ್ಪ ಹಾಕಿದ ಆಲದ ಮರಕ್ಕೆ ಜೋತು ಬೀಳುವವರ ಸಂಖ್ಯೆ ಕಡಿಮೆಯೇನಿಲ್ಲ. ಜೀವನದಲ್ಲಿ ರಿಸ್ಕ್ ತೆಗೆದುಕೊಂಡು ಸಾಧನೆ ಮಾಡಿದವರ ಸಂಖ್ಯೆಗೂ ಕಡಿಮೆಯಿಲ್ಲ. ನಾವು ಮತ್ತ ನೀವುಗಳು ಮಾಡಿದ ಆ ಆರಾಮ ವಲಯ ಬಿಟ್ಟು ಹೊರಬಂದ ನಿರ್ಧಾರಗಳೇ ಈ ರಿಸ್ಕ್ ನಮ್ಮನ್ನು ಈ ಮಟ್ಟಕ್ಕೆ ಏರಿಸಿದೆ. ಅಂದು ನಾನು ಭಾರತ ಸರ್ಕಾರದ ರಿಸ್ಕ್ ಇಲ್ಲದ ನೌಕರಿ ಯನ್ನು ತೊರೆದು ಗುರುತು ಪರಿಚಯವಿಲ್ಲದ ಲೋಕಕ್ಕೆ ಬರೀ ನಮ್ಮ ಅರ್ಹತೆ, ಅನುಭವ ಆತ್ಮವಿಶ್ವಾಸವನ್ನು ಗಂಟು ಮೂಟೆ ಕಟ್ಟಿಕೊಂಡು ಬಂದು ಎಷ್ಟೊ ವರ್ಷಗಳಾಯಿತು. ಸಾಧನೆ ತುಂಬಾ ಇದೆ. ಎಷ್ಟೆ ಜನರಿಗೆ ನಮ್ಮಿಂದಾದ ಸಹಾಯ ಹಸ್ತ ನೀಡಲು ಆಂದು ತೆಗೆದುಕೊಂಡ ರಿಸ್ಕ್ ನಿಜವಾಗಿ ಕೆಲಸ ಮಾಡಿದೆ. ಬರೀ ಆರಾಮ ವಲಯದಲ್ಲೆ ಇದ್ದಿದ್ದರೆ ಅದೇ ಆಲದ ಮರದಲ್ಲಿ ನಾವಿರುತ್ತಿದ್ದೆವು ಅಷ್ಟೆ. ಅಂತ ಇಂತಾ ನಮ್ಮ ಸಾಧನೆ ಅಪರಿಮಿತ ಪರ ನಾಡಿನಲ್ಲಿ ಎಲ್ಲರ ಸ್ನೇಹ ಮತ್ತು ಸಂಪತ್ತು ಗಳಿಸಿ ಇಂದು ಪುನಃ ಅದೆ ಆರಾಮ ವಲಯಕ್ಕೆ ಕಾಲಿಡುತಿದ್ದೇವೆ. ನಿಮ್ಮ ಈ ಲೇಖನ ಖಂಡಿತ ಆರಾಮ ವಲಯದಿಂದ ರಿಸ್ಕ್ ತೆಗೆದುಕೊಳ್ಳಲಿಚ್ಚಿಸುವ ನಮ್ಮ ನಿಮ್ಮ ನಿಮ್ಮಂತಹ ಮನಸ್ಸಿರುವವರಿಗೆ ಇದೂಂದು ಧೈರ್ಯ ಮತ್ತು ದಾರಿದೀಪವಾಗಲಿ. ಮೋಹನ್ ನಿಮ್ಮ ಮಿತ್ರ

    ಪ್ರತ್ಯುತ್ತರಅಳಿಸಿ

  3. ಲೇಖನ ತುಂಬಾ ಪರಿಣಾಮಕಾರಿಯಾಗಿದೆ ಮತ್ತು ಸಂಗ್ರಹ ಯೋಗ್ಯ ಬರಹ.
    ಮೊದಲು ಓದುತ್ತ ಹೋದಂತೆಲ್ಲ, ಬರೀ ಹಣಗಳಿಸೋದೆ ಜೀವನದ ಮುಖ್ಯ ಗುರಿ ಎಂದು ಭಾವಿಸಿದ್ದೆ, ಆದರೆ ಕ್ಲೈಮಾಕ್ಸ್ ಬೇರೆಯದೇ ಇದೆ.

    ಪ್ರತ್ಯುತ್ತರಅಳಿಸಿ
  4. ಲೇಖನ ತುಂಬಾ ಚೆನ್ನಾಗಿದೆ. ಲೈಫ್ ಅಲ್ಲಿ ರಿಸ್ಕ್ ಬೇಕೇ ಬೇಕು. ನಮ್ಮನ್ನೆಲ್ಲ ಎಚ್ಚರಿಸುವ ಲೇಖನ

    ಪ್ರತ್ಯುತ್ತರಅಳಿಸಿ
  5. ಹೌದು ಸರ್
    ಇಂದಿನ ಮಕ್ಕಳಿಗೆ ನಾವು ಯಾವಾಗಲೂ , ಬಹಳ ಜೋಪಾನ, ಯಾವುದೇ ಕಷ್ಟ ಪಡಬೇಡ, ಸುಖವಾಗಿರು ಎಂದು ಹೇಳ್ತೇವೆ. ಕಷ್ಟ ಪಡುವುದನ್ನು ಹೇಳಿದರೆ ಏನಾದರೂ ಸಾಧನೆ ಬರುತ್ತದೆ.
    ಇವರ ಸಾಧನೆ ಅಪ್ರತಿಮ, ಮತ್ತು ಅನುಕರಣೆಯ.
    ಅದ್ಭುತ ಲೇಖನ, ಅಭಿನಂದನೆಗಳು ರಂಗನಾಥ ಸರ್

    ಪ್ರತ್ಯುತ್ತರಅಳಿಸಿ
  6. The article is very nice🙏

    The risk and rewards are directly proportional. The higher the risk the higher will be the reward.

    Without risk there will not be any returns. The person should take calculative risk looking at the circumstances.

    In every step of our life there is risk associated with it. i.e., walking on the road, climbing stairs, taking the decision in the work place etc.

    Considering the risk associated with our routine activities, we will not stop our routine activities. We judge the risk and lead our life taking suitable risk mitigation for the same and life goes on.

    ಪ್ರತ್ಯುತ್ತರಅಳಿಸಿ
  7. ತುಂಬಾ ಚೆನ್ನಾಗಿ ಇದೆ ಎಲ್ಲರಿಗೂ ಉತ್ಸಾಹ ನೀಡುವಂತ ಅದ್ಭುತವಾದ ಬರವಣಿಗೆ ಸರ🙏🙏

    ಪ್ರತ್ಯುತ್ತರಅಳಿಸಿ
  8. 👌👍💐 ಲೇಖನ ತುಂಬಾ ಅರ್ಥಪೂರ್ಣವಾಗಿ ಮೂಡಿ ಬಂದಿದೆ.ಓದುಗರಿಗೆ ಸ್ಪರ್ದಾ ಮನೋಭಾವನೆ ಬರುತ್ತದೆ.🤝💐

    ಪ್ರತ್ಯುತ್ತರಅಳಿಸಿ
  9. ರಂಗನಾಥ್ ಸರ್, ನಿಮ್ಮ ಲೇಖನವನ್ನು ಓದಿದ ತರುವಾಯ ಮೂರು ವಾಕ್ಯಗಳು ತಟ್ಟನೇ ನೆನಪಿಗೆ ಬರುತ್ತಿವೆ, ಮೊದಲನೆಯದಾಗಿ ಇಂಗ್ಲೀಷಿನ ಜನಜನಿತ ನುಡಿಗಟ್ಟು "ರಿಸ್ಕ್ ಅಂಡ್ ರಿವಾರ್ಡ್ ಗೊ ಹ್ಯಾಂಡ್ ಇನ್ ಹ್ಯಾಂಡ್" ಎನ್ನುವುದು, ಎರಡನೆಯದು "ಧೈರ್ಯಂ ಸರ್ವತ್ರ ಸಾಧನಂ" ಎನ್ನುವ ಆರ್ಷೇಯ ಸೂತ್ರವಾಣಿ, ಮೂರನೆಯದು "ನಡೆಯುವವನು ಎಡವುತ್ತಾನೆ" ಎನ್ನುವ ಕನ್ನಡ ಗಾದೆ ಮಾತು. ಈ ಮೂರೂ ವಾಕ್ಯಗಳೂ ರಿಸ್ಕ್ ಮತ್ತು ಅದರಿಂದ ಉಂಟಾಗುವ ಪರಿಣಾಮಗಳ ಬಗ್ಗೆ ವಿವರಿಸುತ್ತವೆ.

    ಹೌದು, ರಿಸ್ಕ್ ತೆಗೆದುಕೊಳ್ಳದೆ ಫಲಾಫಲಗಳ ನಿರೀಕ್ಷೆ ಮಾಡಲಾಗದು, ಮಾಡಕೂಡದು. ಇದು ಗೀತೆಯ ದೈವವಾಣಿಯ ಅಪಭ್ರಂಶ ರೂಪದಂತೆ ಅನ್ನಿಸಿದರೂ, ಸಮುದ್ರದ ಆಳಕ್ಕೆ ಇಳಿದವನಿಗೆ ಮಾತ್ರ ಮುತ್ತು ದೊರೆಯುವ ಸಾಧ್ಯತೆಗಳಿರುತ್ತವೆ. ಸಮದ್ರತಟದಲ್ಲಿ ಹಾಯಾಗಿ ಕುಳಿತು, ಸಮುದ್ರದ ಬೆಚ್ಚನೆಯ ನೀರಿನಲ್ಲಿ ಕಾಲು ಕುಲುಕುವವನು ಮುತ್ತಿನ ಕನಸು ಕಾಣಬಹುದಷ್ಟೇ ಎನ್ನುವುದು, ಅನುಭವಸ್ಥರಿಗೆ ಸುಲಭದಲ್ಲಿ ವೇದ್ಯವಾಗುವ ಮಾತು.

    ಜೀವನದಲ್ಲಿ ಬಹಳಷ್ಟು ಜನ ರಿಸ್ಕ್ ತೆಗೆದುಕೊಳ್ಳುತ್ತಾರೆ. ರಿಸ್ಕ್ ಎನ್ನುವುದು ಬಹುಮುಖಗಳನ್ನು ಧರಿಸಿ ಬರುವ ಬಹುರೂಪಿಯೇ ಸರಿ. ಜೂಜಾಟ ಆಡುವವರು, ಲಾಟರಿ ಟಿಕೆಟ್ ತೆಗೆದುಕೊಳ್ಳುವವರು, ಕುದುರೆಯ ಬಾಲಕ್ಕೆ ಜೋತು ಬಿದ್ದವರು ಹೀಗೆ ಲೋಕ ಬದುಕಿನ ಹಲವು ಮುಖವಾಡಗಳ ಜನ ಕೂಡಾ ರಿಸ್ಕ್ ತೆಗೆದುಕೊಳ್ಳುತ್ತಾರೆ, ತಮ್ಮ ಅದೃಷ್ಟವನ್ನು ಪಣಕ್ಕಿಟ್ಟು, ಕಷ್ಟಪಟ್ಟು ಗಳಿಸಿದ ಹಣವನ್ನು ವ್ಯಸನಗಳಿಗೆ ವ್ಯಯಿಸುತ್ತಾರೆ. ಆದರೆ ಇಂತಹ ರಿಸ್ಕ್ ಗಳನ್ನು "ಮೂರ್ಖತನ" ಎನ್ನದೆ ರಿಸ್ಕ್ ಎಂದು ಕರೆಯಲಾಗದು. ಚಟಗಳ ರೇಸ್ ನಲ್ಲಿ ರಿಸ್ಕ್ ತೆಗೆದುಕೊಂಡು ಸಫಲರಾದರೂ, ಆ ರಿಸ್ಕ್ ನಿಮ್ಮನ್ನು ಮುಂದಿನ ಆಟ, ಮುಂದಿನ ಓಟ ಅಥವಾ ಮುಂದಿನ ಖರೀದಿಯವರೆಗೆ ಖುಷಿಯಾಗಿ ಇಡಬಲ್ಲದಲ್ಲದೆ, ಶಾಶ್ವತ ಮನಃಶಾಂತಿಯ ಕಡೆ, ಉಳಿಯುವಂತಹ ಗಳಿಕೆಯ ಕಡೆ ನಿಮ್ಮನೆಂದೂ ಕೊಂಡೊಯ್ಯಲಾರದು.

    ನೀವೂ ನನ್ನ ತವರು ಜಿಲ್ಲೆಯವರೇ, ನಮ್ಮ ಬಯಲು ಸೀಮೆಯ ರೈತಾಪಿವರ್ಗ ತೆಗೆದುಕೊಳ್ಳುವ ರಿಸ್ಕ್ ಮಾತ್ರ ಅಗಾಧವಾದದ್ದು. ಮಳೆಯನ್ನು ನಂಬಿಕೊಂಡು ಕೃಷಿ ಬದುಕನ್ನು ಕಟ್ಟಿಕೊಂಡಿರುವ ಈ ವರ್ಗ, ಪ್ರತೀ ವರ್ಷ ಪ್ರಕೃತಿಯೊಡನೆ ರಿಸ್ಕ್ ತೆಗೆದುಕೊಳ್ಳುತ್ತದೆ ಮತ್ತು ಬಹಳಷ್ಟು ವರ್ಷ ಸೋತು ಸುಣ್ಣವಾಗುತ್ತದೆ. ಈ ದೃಷ್ಟಿಕೋನದಿಂದ, ಭಾರತ ದೇಶದ, ಮಳೆಯನ್ನು ಆಶ್ರಯಿಸಿದ ರೈತರನ್ನು, ಜಗತ್ತಿನ ಅತಿ ದೊಡ್ಡದಾದ ರಿಸ್ಕ್ ತೆಗೆದುಕೊಳ್ಳುವ ಜನಾಂಗದ ಲಿಸ್ಟ್ ನಲ್ಲಿ ಪ್ರಥಮ ಸ್ಥಾನದಲ್ಲಿ ನಮೂದಿಸಬೇಕು ಎನ್ನುವುದು ನನ್ನ ಆಗ್ರಹ.

    ನಮ್ಮಲ್ಲಿ ತಮ್ಮ ಜಾತಕಫಲ, ಹಸ್ತರೇಖೆ, ಗೋಚಾರ ಫಲ, ಸಂಖ್ಯಾಶಾಸ್ತ್ರಗಳನ್ನು ನಂಬಿಕೊಂಡು ರಿಸ್ಕ್ ತೆಗೆದುಕೊಳ್ಳುವ ಮಂದಿಗೂ ಕೊರತೆಯೇನಿಲ್ಲ. ತಮ್ಮ ಬದಲಾದ ಗ್ರಹಚಾರದಿಂದ ಉಜ್ವಲ ಭವಿಷ್ಯ ಕಾದಿದೆ ಎನ್ನುವುದನ್ನು "ಭವಿಷ್ಯದ ದಲ್ಲಾಳಿ"ಗಳಿಂದ ಮನಗಂಡ ಇಂತಹವರು ರಿಸ್ಕ್ ತೆಗೆದುಕೊಂಡು ನಷ್ಟ ಅನುಭವಿಸಿದ ಕಥೆಗಳೂ ನಮ್ಮಲ್ಲಿ ಹೇರಳ ಪ್ರಮಾಣದಲ್ಲಿ ಇವೆ.


    ಹಾಗಾಗಿ ರಿಸ್ಕ್ ತೆಗೆದುಕೊಳ್ಳುವ ಸಂದರ್ಭದಲ್ಲಿ ವ್ಯಕ್ತಿಯೋರ್ವನಿಗೆ ಹಲವು ಅಗತ್ಯದ ಗುಣಗಳು ಇರಲೇ ಬೇಕಾಗುತ್ತದೆ. ರಿಸ್ಕ್ ತೆಗೆದುಕೊಳ್ಳುವ ವ್ಯಕ್ತಿ ಪ್ರಥಮವಾಗಿ, ತನ್ನಲ್ಲಿ ತಾನು ಭಯಂಕರ ವಿಶ್ವಾಸ ಹೊಂದಿರಬೇಕು. ಆತ ತನ್ನ ಸಾಮರ್ಥ್ಯದಲ್ಲಿ, ಶ್ರಮದಲ್ಲಿ, ಸನ್ನಡತೆಯಲ್ಲಿ, ಕೌಶಲ್ಯದಲ್ಲಿ, ಅಲುಗದ ಆತ್ಮವಿಶ್ವಾಸ ಹೊಂದಿರಬೇಕು. ರಿಸ್ಕ್ ತೆಗೆದುಕೊಳ್ಳುವ ವ್ಯಕ್ತಿ ತನ್ನ ಸ್ವಸಾಮರ್ಥ್ಯಕ್ಕೆ ಅನುಗುಣವಾದ ರಿಸ್ಕ್ ತೆಗೆದುಕೊಳ್ಳಬೇಕೇ ಹೊರತು, ಬೇರೆ ಯಾರನ್ನೋ ನಂಬಿ ಖಂಡಿತಾ ರಿಸ್ಕ್ ತೆಗೆದುಕೊಳ್ಳಬಾರದು. ತಾವು ತೆಗೆದುಕೊಂಡ ರಿಸ್ಕ್ ಪ್ರತಿಕೂಲ ಪರಿಣಾಮ ಬೀರಿದರೆ ನೆಲಕ್ಕೆ ಬೀಳುವ ತನ್ನನ್ನು ಸ್ನೇಹಿತರು, ಬಂಧುಗಳು, ಮನೆಯವರು ಕೈ ಹಿಡಿದು ಎತ್ತುತ್ತಾರೆ ಎನ್ನುವ ಭ್ರಮೆಯನ್ನು ಆತ ಖಂಡಿತಾ ಪಾಲನೆ ಮಾಡಬಾರದು. ರಿಸ್ಕ್ ಕಾರಣದಿಂದಾಗಿ ಕೆಳಗೆ ಬಿದ್ದರೂ, ಸ್ವಪ್ರಯತ್ನದಿಂದ ಮತ್ತೆ ಎದ್ದು ಮೇಲೆ ಬರುತ್ತೇನೆ ಎನ್ನುವ ಫೀನಿಕ್ಸ್ ಪಕ್ಷಿಪ್ರಜ್ಞೆ ಆತನಲ್ಲಿ ಸದಾ ಜಾಗೃತವಾಗಿ ಇರಬೇಕು.

    ಇಂದು ಭೂಮಂಡಲದ ಅನೇಕ ದೇಶಗಳಲ್ಲಿ ಗುಜರಾತಿನ ವ್ಯಾಪಾರಿವರ್ಗ ವಿಸ್ತರಿಸಿದೆ. ಅದರಲ್ಲೂ ಮುಖ್ಯವಾಗಿ ಕಛ್ ಪ್ರಾಂತ್ಯದ ಜನ ಆಫ್ರಿಕಾ ಖಂಡ, ಮಧ್ಯಪ್ರಾಚ್ಯ ಮುಂತಾದ ಹಲವು ದೇಶ, ಖಂಡಗಳಲ್ಲಿ ತಮ್ಮ ವ್ಯವಹಾರಗಳ ಸಾಮ್ರಾಜ್ಯಗಳನ್ನು ಕಟ್ಟಿದ್ದಾರೆ, ಅವಿರತ ಅವುಗಳ ವಿಸ್ತರಣೆ ಮಾಡುತ್ತಿದ್ದಾರೆ. ಸರಿ ಸುಮಾರು ಹದಿನೇಳನೇ ಶತಮಾನದ ಅಂತ್ಯದಲ್ಲಿ ಪ್ರಾರಂಭವಾದ, ಈ ಕಛ್ ಮೂಲದ ವ್ಯಾಪಾರಿಗಳ ಸಾಮೂಹಿಕ ವಲಸೆಗಳ ಹಿಂದೆ ಅಂದಿನ ಆರ್ಥಿಕ, ಸಾಮಾಜಿಕ, ರಾಜಕೀಯ, ಭೌಗೋಳಿಕ ಕಾರಣಗಳು ಪ್ರಮುಖ ಎನ್ನಬಹುದಾದರೂ, ಅಂದು ಅಪಾರ ಪ್ರಮಾಣದ ರಿಸ್ಕ್ ತೆಗೆದುಕೊಂಡ ಗುಜರಾತಿ ವಣಿಕವರ್ಗದ ಇಂದಿನ ಪೀಳಿಗೆಗಳು, ಎರಡೂ ಕೈಗಳಲ್ಲಿ ಆ ರಿಸ್ಕ್ ಪ್ರತಿಫಲದ ಸುಖವನ್ನು ಕೆನೆಮೊಸರು ಮತ್ತು ಮರಳು ತುಪ್ಪದೊಂದಿಗೆ ಸವಿಯುತ್ತಿದ್ದಾರೆ. ಒಂದು ತಲೆಮಾರು ತೆಗೆದುಕೊಂಡ ರಿಸ್ಕ್ ಮುಂದಿನ ತಲೆಮಾರುಗಳನ್ನು ಸುಖದ ಸುಪ್ಪತ್ತಿಗೆಯಲ್ಲಿ ಓಲಾಡಿಸುತ್ತಿರುವುದನ್ನು ನಾವು ಕಾಣುತ್ತೇವೆ. ಇಂತಹುದೇ ಕಥೆ ಏಷ್ಯಾಖಂಡದ ನಂಬರ್ ಒನ್ ಶ್ರೀಮಂತ ಮುಖೇಶ್ ಅಂಬಾನಿ ಪರಿವಾರದಲ್ಲಿಯೂ ಇದೆ.

    ಪ್ರತ್ಯುತ್ತರಅಳಿಸಿ
  10. ನಿಮ್ಮ ಉದ್ಯೋಗ ಪರ್ವದ ಕಥೆ ನನ್ನ ಉದ್ಯೋಗ ಪರ್ವದ ಕಥೆಗೆ ಸಮಾನಾಂತರವಾಗಿ ಓಡುತ್ತಿರುವುದನ್ನು ಗುರುತಿಸಿದ್ದೇನೆ. ಕೇಂದ್ರ ಸರ್ಕಾರಿ ಸ್ವಾಮ್ಯದ ಕಂಪನಿಯೊಂದರಲ್ಲಿ ಮ್ಯಾನೇಜರ್ ಹುದ್ದೆಯಲ್ಲಿದ್ದ ನಾನು ರಿಸ್ಕ್ ತೆಗೆದುಕೊಂಡು ಗಲ್ಫ್ ಕಡೆ ಮುಖ ಮಾಡಿ ಇಪ್ಪತ್ತೊಂದು ವಸಂತಗಳೇ ಕಳೆದಿವೆ; ನನ್ನ ಹಳೇ ಕೆಲಸದಲ್ಲಿ ಮುಂದುವರೆದಿದ್ದರೆ, ಈ ವರ್ಷದ ಫೆಬ್ರುವರಿ ಒಂದರಂದು, ಸುಮಾರು ಮೂರು ಸಾವಿರ ಕೋಟಿ ಕಂಪನಿಯ ಚೇರ್ಮನ್ ಆಗಿರುತ್ತಿದ್ದೆ; ಆದರೆ 2003ರಲ್ಲಿ ನಾನು ತೆಗೆದುಕೊಂಡ ರಿಸ್ಕ್ ಬಗ್ಗೆ ನನ್ನಲ್ಲಿ ವಿಷಾದವಿಲ್ಲ, ಬದಲಾಗಿ ಹೆಮ್ಮೆಯಿದೆ. "ಏನನ್ನಾದರೂ ಪಡೆಯಲು ಮತ್ತೇನನ್ನಾದರೂ ಕಳೆದುಕೊಳ್ಳಬೇಕು" ಎನ್ನುವ ಮಾತು ನನ್ನ ಮಟ್ಟಿಗೆ ನಿಜವಾಗಿದೆ.

    ರಿಸ್ಕ್ ಎನ್ನುವುದು ಏಕತಾನತೆಯ ಜೀವನದಲ್ಲಿ ಒಗ್ಗರಣೆ ಕೊಡುವ ಕೆಲಸ ಮಾಡುತ್ತದೆ; ಒಂದೇ ವೃತ್ತದಲ್ಲಿ ತಿರುಗುವ ಗಾಣದೆತ್ತುಗಳಿಗೆ ಪರ್ಯಾಯ ವೃತ್ತವನ್ನೋ, ಸರಳರೇಖೆಯನ್ನೋ ಪ್ರಧಾನ ಮಾಡುತ್ತದೆ. ಏನಿಲ್ಲವೆಂದರೂ, "ನಾವೂ ನಮ್ಮ ಜೀವನದಲ್ಲಿ ರಿಸ್ಕ್ ತೆಗೆದುಕೊಂಡಿದ್ದೇವೆ" ಎಂದು ಮೊಮ್ಮಕ್ಕಳಿಗೆ ಹೇಳುವ ಒಂದು ನೈತಿಕ ಸ್ಥೈರ್ಯವನ್ನು, ಬಾಳಸಂಜೆಯಲ್ಲಿ ಕಟ್ಟಿ ಕೊಡುತ್ತದೆ.

    ರಿಸ್ಕ್ ಮನುಷ್ಯನ, ಬದಲಾದ ಪರಿಸ್ಥಿತಿಗಳಿಗೆ ಹೊಂದಿಕೊಂಡು ಹೋಗುವ ಸ್ಥಿತಿಸ್ಥಾಪಕತ್ವ ಗುಣವನ್ನು "ಆಮ್ಲಪರೀಕ್ಷೆ"ಗೆ ಒಡ್ಡುತ್ತದೆ. ದೇಹವನ್ನು ಸುಸ್ಥಿರವಾಗಿ ಇಡಲಿಕ್ಕೆ ಇರುವ ಯೋಗೋಪಾಯಗಳ ಹಾಗೆ ಮನಸ್ಸನ್ನು ಆರೋಗ್ಯಕರವಾಗಿ ಇಡಲಿಕ್ಕೆ ನಮ್ಮ ಸಾಮರ್ಥ್ಯಕ್ಕೆ ಅನುಗುಣವಾದ ರಿಸ್ಕ್ ಗಳೂ ಬೇಕು ಎನ್ನುವವನು ನಾನು. ಒಂದೇ ಬಾವಿಯ ಕಪ್ಪೆಯಾಗುವುದಕ್ಕಿಂತ ಮತ್ತೊಂದು, ಮಗದೊಂದು ಬಾವಿಗಳ ಕಪ್ಪೆಯಾಗಿ ಜೀವಿಸಿದಲ್ಲಿ, "ಜಗತ್ತಿನಲ್ಲಿ ಮೂರು ಬಾವಿಗಳು ಇವೆ" ಎನ್ನುವ ಅರಿವು ಉಂಟಾಗಿ ಏಕಭಾವಿ ಧ್ಯಾನದಿಂದ ಹೊರಬರುವುದೂ ತನ್ನಷ್ಟಕ್ಕೆ ತಾನೇ ಒಂದು ಅರಿವಿನ ಪ್ರಜ್ಞೆ, ಅಲ್ಲವೇ?

    ಹಾಗೆ ನೋಡಿದರೆ ಈ ಜಗತ್ತಿನಲ್ಲಿ ರಿಸ್ಕ್ ಇಲ್ಲವೇ ಇಲ್ಲ ಎನ್ನುವ ಯಾವ ಸಂಗತಿಗಳೂ ಇಲ್ಲ. ಸುಮಾರು ಎರಡು ವರ್ಷಗಳ ಕಾಲ ನಾವು ಪ್ರತೀ ಬಾರಿ ಒಳಕ್ಕೆ ಎಳೆದುಕೊಳ್ಳುವ ಗಾಳಿ ಮೃತ್ಯುವಾಗಬಹುದಾದ ರಿಸ್ಕ್ ನಡುವೆಯೇ ಕೊರೋನಾ ಕಳೆದು ಹೋಯಿತು. ಜಿಮ್ ಮಾಡಲು ಹೋದವರಿಗೆ ಹೃದಯಾಪಘಾತವಾದ ಸುದ್ದಿಗಳನ್ನು ನೀವು ಕೇಳಿಯೇ ಇರುತ್ತೀರಿ. ಹಾಗಾಗಿ ನೀವು ಜೀವನದಲ್ಲಿ ರಿಸ್ಕ್ ತೆಗೆದುಕೊಳ್ಳಿ ಅಥವಾ ನಿಮ್ಮ "ಅನುಕೂಲಕರ ವರ್ತುಲ"ದಲ್ಲಿ ಇದ್ದು ಬಿಡಿ, "ಸಾವು" ಎನ್ನುವ ರಿಸ್ಕ್ ನಿಮ್ಮ ಬೆನ್ನ ಹಿಂದಿನ ನೆರಳಾಗಿ ಸುಳಿಯುತ್ತಲೇ ಇರುತ್ತದೆ. "ಸಾವು" ಎನ್ನುವ ಈ ರಿಸ್ಕ್ ತೆಗೆದುಕೊಳ್ಳದಿರಲು ನಿಮಗೆ ಆಯ್ಕೆಗಳೇ ಇರುವುದಿಲ್ಲ.

    ರಿಸ್ಕ್ ತೆಗೆದುಕೊಳ್ಳುವ ಮನಃಸ್ಥಿತಿಗೂ, ವ್ಯಕ್ತಿಯ ವಯೋಮಾನಕ್ಕೂ ಅವಿನಾವ ಭಾವ ಸಂಬಂಧವಿದೆ. ಸಾಮಾನ್ಯ ರೂಪದಲ್ಲಿ, ಜೀವನದಲ್ಲಿ ಒಂದು ಹಂತ ಮುಟ್ಟಿದ ಬಳಿಕ ಆ ವ್ಯಕ್ತಿಯಲ್ಲಿ "ರಿಸ್ಕ್ ಅಪೆಟೈಟ್" ಕಡಿಮೆಯಾಗುತ್ತಾ ಹೋಗುತ್ತದೆ. ಈ ಮೊದಲು ಕಣ್ಣು ಮುಚ್ಚಿಕೊಂಡು ತೆಗೆದುಕೊಳ್ಳುತ್ತಿದ್ದ ರಿಸ್ಕ್ ಗಳನ್ನು, ದಿನಗಟ್ಟಲೆ ಯೋಚಿಸಿದ ನಂತರವೂ ತೆಗೆದುಕೊಳ್ಳಲಾಗುವುದಿಲ್ಲ. ಇಂತಹ ಮಾತಿಗೆ ಅಪವಾದಗಳೂ ಇಲ್ಲವೆನ್ನುವ ಹಾಗಿಲ್ಲ; ತಮ್ಮ ಇಳಿವಯಸ್ಸಿನಲ್ಲಿ ಬಿಲಿಯ ಡಾಲರ್ ಗಳ ಕಂಪನಿ ಕಟ್ಟಿದ ವ್ಯಕ್ತಿಗಳಿದ್ದಾರೆ; ಇಳಿವಯಸ್ಸಿನಲ್ಲಿ ಅಪರಮಿತ ದೈಹಿಕ ಮತ್ತು ಮಾನಸಿಕ ಸಾಧನೆಗಳನ್ನು ಮೆರೆದ ಮಹನೀಯರಿದ್ದಾರೆ. ಹಾಗಾಗಿ ರಿಸ್ಕ್ ಎನ್ನುವುದು ವ್ಯಕ್ತಿವಿಶೇಷದ "ಜನ್ಮಜನ್ಯ ಸ್ವಭಾವ"ವಾಗಿ ಬರುವುದನ್ನು ನಾವು ನೋಡುತ್ತೇವೆ. ಹಲವರಿಗೆ ಸವಾಲಿಗಳಿಲ್ಲದ ಜೀವನ ಬೋರ್ ಎನಿಸಿದರೆ ಬಹಳಷ್ಟು ಜನಕ್ಕೆ ಜೀವನ ಒಡ್ಡುವ ಸವಾಲುಗಳು ಅವರು ಕಂಗೆಟ್ಟು ಹೋಗುವುದಕ್ಕೆ ಕಾರಣೀಭೂತವಾಗುತ್ತವೆ.

    ರಂಗನಾಥ್ ಸರ್, ಬಹಳ ಗುಣಾತ್ಮಕವಾದ, ಚಿಂತನೆಗಳಿಗೆ ಮನಸ್ಸನ್ನು ದೂಡುವ ಲೇಖನವನ್ನು ಒಕ್ಕಣಿಸಿದ್ದೀರಿ, ಈ ಕಾರಣಕ್ಕೆ ನಿಮಗೆ ಅನಂತಾನಂತ ಧನ್ಯವಾದಗಳು🙏🏻🙏🏻

    ಎನ್.ಸಿ. ಶಿವಪ್ರಕಾಶ್
    ಮಸ್ಕತ್, ಒಮಾನ್

    ಪ್ರತ್ಯುತ್ತರಅಳಿಸಿ

Click below headings