ಬುಧವಾರ, ಅಕ್ಟೋಬರ್ 31, 2012

"ಅಮ್ಮಾ!!!!!!!, ಅಪ್ಪಾ ಯಾವಾಗ ಸಾಯ್ತಾರೆ?"



ಬಹಳದಿನಗಳಿಂದ ಕಾಯಿಲೆ ಬಿದ್ದಿದ್ದ ಪಾರ್ವತವ್ವ ಮನೆಯ ಒಂದು ಕೋಣೆಯಲ್ಲಿ ಮಂಚದ ಮೇಲೆ ಮಲಗಿದ್ದಳು, ಸುಸ್ತಾಗಿ ಮಲಗಿದ್ದರಿಂದ ಹಾಗು ಸಾಯಂಕಾಲದ ಹೊತ್ತು ಕಾಫಿ ಕುಡಿಯುವ ಅಭ್ಯಾಸ ವಿದ್ದುದ್ದರಿಂದ ತನ್ನ ಸೊಸೆಯನ್ನು "ಸ್ವಲ್ಪ ಕಾಫಿ ಕೊಡವ್ವ" ಅಂತ ಒಂದೆರಡು ಬಾರಿ ಕೇಳಿದ್ದಳು.  ಆದರೆ ಟಿವಿ ನೋಡುವುದರಲ್ಲಿ ಮುಳುಗಿ ಹೋಗಿದ್ದ ಸೊಸೆ ರಾಧಿಕಾಳಿಗೆ ಅತ್ತೆಯ ಮಾತನ್ನು ಕಿವಿಗೆ ಹಾಕಿ ಕೊಳ್ಳಲಿಲ್ಲ. ಆದರೆ ರೋಸಿಹೋದ ಅತ್ತೆ , ಏನ್ ಕಾಲ ಬಂತಪ್ಪ, ಸಂಜೆ ಹೊತ್ತಾದ್ರು ದೇವರಿಗೆ ದೀಪ ಹಚ್ಚೋದಿಲ್ಲ, ಊದುಬತ್ತಿ ಹಚ್ಚೋದಿಲ್ಲ, ಅಡಿಗೆ ತಯಾರಿ ಮಾಡೋದಿಲ್ಲ. ಮಧ್ಹ್ಯಾನ ಮಾಡಿದ್ದೆ ರಾತ್ರಿಗೆ ಊಟಕ್ಕೆ ಇಡುತ್ತಾರಲ್ಲಪ್ಪ. ಈ ಪರಿ ಸೋಂಬೇರಿತನ ಬೆಳೆಸಿಕೊಂಡರೆ ಮನೆಯಲ್ಲಿ ದರಿದ್ರ ತುಂಬಿಕೊಳ್ಳದೆ ಇನ್ನೇನಾಗುತ್ತೆ ಅಂತ ಬೈಯೋದಿಕ್ಕೆ ಶುರು ಮಾಡಿದಳು. ದಿನಾಲು ಅತ್ತೆಯ ಬೈಗುಳ ಕೇಳಿದ್ದ ಸೊಸೆ ಅದಕ್ಕೆ ಪ್ರತ್ಯುತ್ತರ ವಾಗಿ "ನಿನ್ನಂತ ಕಾಯಿಲೆ ಬಿದ್ದವರು ಮನೇಲಿ ಇದ್ರೆ, ಇರೋ ಬರೋ ದುಡ್ಡನ್ನು ತಗೊಂಡೋಗಿ ಆಸ್ಪತ್ರೆಗೆ ಇಟ್ರೆ ಮನೇಲಿ ದರಿದ್ರ ಬರದೆ ಇನ್ನೇನಾಗುತ್ತೆ? ನಿನ್ನ ಗೋಳು ನೋಡಿ ನೋಡಿ ಸಾಕಾಗಿದೆ, ಕುಂತ್ರೂ ತಪ್ಪು, ನಿಂತ್ರೂ ತಪ್ಪು, ಏನು ಮಾಡಿದ್ರು ತಪ್ಪು ಯಾವಾಗ ನೆಗೆದು ಬಿದ್ದು ಸಾಯ್ತಿಯೋ" ಎಂದು ಬಡಬಡಿಸುತಿದ್ದಳು. ಅಲ್ಲಿಯೆ ಆಟ ವಾಡುತಿದ್ದ ಮಗ ಗೋಕುಲ್ ಗೆ ತನ್ನ ತಾಯಿ ಮತ್ತು ಅಜ್ಜಿ ಯ ಮಾತುಗಳನ್ನು ಪ್ರತಿನಿತ್ಯ ಕೇಳಿ ಕೇಳಿ ಅವನಿಗೆ ಕಂಠಪಾಟ ವಾಗಿಬಿಟ್ಟಿದ್ದವು.

ಅಂದು ಭಾನುವಾರವಾದ್ದರಿಂದ ವಸಂತ್ ಬಹಳ ಹೊತ್ತಿನ ತನಕ ಮಲಗಿದ್ದ, ಮಗ ಗೋಕುಲ್ ತಾಯಿಯೊಂದಿಗೆ ಜಗಳವಾಡುತ್ತ ಅಳುತಿದ್ದ, ಅವನ ಗಲಾಟೆ ಕೇಳಿ ವಸಂತ್ "ಏನದು, ಯಾಕೆ ಗಲಾಟೆ ಮಾಡ್ತಾಯಿದ್ದೀರ, ಇವತ್ತು ಭಾನುವಾರ ಆದರು ಸ್ವಲ್ಪ ನೆಮ್ಮದಿ ಯಾಗಿ ನಿದ್ದೆ ಮಾಡೋಕೆ ಬಿಡೋದಿಲ್ಲೇನು?" ಎಂದು ಗದರಿದ. ರಾಧಿಕ ಗಂಡನ ಮಾತು ಕೇಳಿ ಮಗನಿಗೆ "ನೋಡು ಕಂದ ಜೋರಾಗಿ ಅಳಬೇಡ, ಅಪ್ಪ ಎದ್ದು ಬಂದರೆ ಹೊಡಿತಾರೆ ಆದ್ದರಿಂದ ಸುಮ್ನೆ ಇರು ಅಂತ ಹೇಳಿದಳು"

ಸ್ವಲ್ಪ ಹೊತ್ತಿನ ನಂತರ ಅವನ ಗಲಾಟೆ ಕಡಿಮೆ ಯಾಗಿ ಆಟ ಆಡೊದಿಕ್ಕೆ ಶುರು ಮಾಡಿದ. ಹಾಗೆ ಆಟದ ಸಾಮಾನು ಜೋಡಿಸೋದು ಮತ್ತೆ ಬೀಳಿಸೋದು ಸಾಮನುಗಳು ಬಿದ್ದದ್ದು ನೋಡಿ ಖುಶಿ ಯಿಂದ ಜೋರಾಗಿ ಕಿರುಚಿ ಸಂತೋಷ ಪಡ್ತಾಯಿದ್ದ. 

ಅಡಿಗೆ ಮನೆಯಲ್ಲಿದ್ದ ರಾಧಿಕಾಳಿಗೆ ಮಗ ಕಿರುಚಿ ಗಲಾಟೆ ಮಾಡೋದು ನೋಡಿ "ಗೋಕುಲ್, ಜಾಸ್ತಿ ಕಿರುಚಬೇಡ ಕಣಪ್ಪ ಅಪ್ಪ ಮಲಗಿದ್ದಾರೆ ಅವರಿಗೆ ತೊಂದರೆ ಯಾಗುತ್ತೆ" ಎಂದಾಗ. "ಹೌದಾ ಹಾಗಾದರೆ ಟಿವಿ ಆನ್ ಮಾಡ್ಕೊಡು, ಟಿವಿ ನೋಡ್ತಿನಿ". "ಆದರೆ ಜಾಸ್ತಿ ಸೌಂಡ್  ಹಾಕಬಾರದು" ಅಂತ ಹೇಳಿ ಟಿವಿ ಆನ್ ಮಾಡಿ ಕೊಟ್ಟಳು. ಹಾಗೆ ಟಿವಿ ನೋಡುತ್ತ ಇರುವಾಗ ಕೆಲ ದೃಶ್ಯಗಳು ಅವನನ್ನು ನಗೆ ಗಡಲಿನಲ್ಲಿ ತೇಲಿಸಿದವು. ಅವುಗಳನ್ನು ನೋಡಿ ಜೋರಾಗಿ ನಗತೊಡಗಿದ್ದ.

ನಿರ್ಮಲ ಮನಸ್ಸಿನ ಮಕ್ಕಳಿಗೆ ಪ್ರತಿ ವಿಷಯದಲ್ಲೂ ಖುಷಿ ಯನ್ನು ಕಾಣುತ್ತಾರೆ. ಆ ಗಳಿಗೆ ಯನ್ನು ಸಂತೋಷದಿಂದ ಅನುಭವಿಸುತ್ತಾರೆ. ಮಕ್ಕಳೇ ಹಾಗೆ ಅಲ್ಲವೆ? ಟಿವಿಯ ಶಬ್ದ ಮತ್ತು ಮತ್ತೆ ಮಗನ ಗಲಾಟೆ ಕೇಳಿದ ವಸಂತ್ "ಏನೇ ಮತ್ತೆ ಶಬ್ದ?" ಗಂಡನ ಧ್ವನಿ ಕೇಳಿದ ರಾಧಿಕ ಸರ್ರನೆ ಬಂದು ಟಿವಿ ಬಂದ್ ಮಾಡಿ "ಎಷ್ಟು ಸಾರಿ ನಿಂಗೆ ಹೇಳೋದು ಸುಮ್ನೆ ಮನೇಲಿ ಇರಲ್ಲ ಏನಾದ್ರು ಗಲಾಟೆ ಮಾಡ್ತಾಯಿರ್ತಿಯ, ಅಪ್ಪನಿಗೆ ನಿದ್ರೆ ಮಾಡೋದಿಕ್ಕೆ ತೊಂದರೆಯಾಗುತ್ತೆ ಅಂತ ಆಗಿನಿಂದ ಹೇಳ್ತಾಯಿದೀನಿ ಆದರೆ ನೀನು ನನ್ನ ಮಾತೇ ಕೇಳ್ತಾಯಿಲ್ಲ" ಎಂದಳು.

ಟಿವಿ ಆಫ್ ಮಾಡಿದ್ದರಿಂದ, ಮಗನ ಮುಖ ಕಪ್ಪಿಟ್ಟಿತು. " ಏನಮ್ಮ ನೀನು, ಆಗಿನಿಂದ ಗಲಾಟೆ ಮಾಡಬೇಡ, ಆಟ ಆಟಬೇಡ, ಶಬ್ದ ಮಾಡ ಬೇಡ, ಅಪ್ಪ ನಿಗೆ ತೊಂದರೆ ಯಾಗುತ್ತೆ ಅಂತ ಹೇಳ್ತಿಯಾ, ಈ ಅಪ್ಪ ನಿಂದ, ಸಂತೋಷವಾಗಿ ನಾನು ಏನು ಮಾಡೋಕೂ ನೀನು ಬಿಡಲ್ಲ.
ಅಮ್ಮಾ!!!!!!!, ಅಪ್ಪಾ ಯಾವಾಗ ಸಾಯ್ತಾರೆ?
ಮಗನ ಮಾತು ಕೇಳಿ ರಾಧಿಕಾಳ ಕೈಯಲ್ಲಿದ್ದ ಸೌಟು ಕೆಳಗೆ ಬಿದ್ದಿತ್ತು. ಗರ ಬಡಿದಳಂತೆ ಕೆಳಗೆ ಬಿದ್ದಳು. ಮಲಗಿದ್ದ ವಸಂತ ಮಗನ ಮಾತು ಕೇಳಿ ದಡಾರನೆ ಎದ್ದು ಕುಳಿತ.


1 ಕಾಮೆಂಟ್‌:

Click below headings