ಮಂಗಳವಾರ, ಮೇ 28, 2024

ಭಾರತದಾಚೆಗೂ ಇರುವ ರಾಮಾಯಣ, ಮಹಾಭಾರತದ ಕುರುಹುಗಳು

 ಈವತ್ತಿನ ಬಹಳಷ್ಟು ಯುವ ಜನರಿಗೆ ಭಾರತ ದೇಶದ ಸುತ್ತಮುತ್ತಲಿನ ದೇಶಗಳು, ಒಂದು ಕಾಲದಲ್ಲಿ ಭಾರತದ ಭಾಗವಾಗ್ತಿತ್ತು ಎಂದರೆ ಹೌದಾ!!! ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ನಮ್ಮ ಶಾಲೆಗಳಲ್ಲಿ ಪಾಕಿಸ್ತಾನ, ಬಾಂಗ್ಲದೇಶ ಭಾರತದಿಂದ ವಿಭಜನೆ ಗೊಂಡಿದ್ದರ ಬಗ್ಗೆ ಕಲಿಸುತ್ತಿರುವುದರಿಂದ, ಈ ವಿಭಜನೆ ಬಗ್ಗೆ ಗೊತ್ತಿದೆ, ಆದರೆ ಬ್ರಿಟೀಷರ ಮುಂಚೆಯೇ ನಮ್ಮ ಕೈ ಜಾರಿ ಹೋಗಿದ್ದ ದೇಶಗಳ ಬಗ್ಗೆ ಬಹಳಷ್ಟು ಜನಕ್ಕೆ ಮಾಹಿತಿಯಿಲ್ಲ. ಕೆಲವರ ಪ್ರಕಾರ, ಭಾರತ ಎನ್ನುವ ದೇಶವೇ ಇರಲಿಲ್ಲ. ಸುಮಾರು ಐದುನೂರಕ್ಕೂ ಹೆಚ್ಚು ಸಂಸ್ಥಾನಗಳೇ ಇದ್ದವು, ಅವೆಲ್ಲವನ್ನು ಒಟ್ಟು ಗೂಡಿಸಿ ಭಾರತ ಎನ್ನುವ ದೇಶವನ್ನು ರಚಿಸಿದ್ದು ಬ್ರಿಟೀಷರು. ಹಾಗೂ ಇಡೀ ಭಾರತವನ್ನು ಒಟ್ಟು ಮಾಡಿ ಆಳಲು ಪ್ರಯತ್ನಿಸಿದ್ದು ದೆಹಲಿ ಸುಲ್ತಾನರು ಮತ್ತು ಮೊಘಲರು ಎಂದು ಪ್ರತಿಪಾದಿಸುವ ಮಂದಿ ಕಡಿಮೆ ಏನಿಲ್ಲ. 18ನೇ ಶತಮಾನದ ಮಧ್ಯದ ವರೆಗೂ ಅಖಂಡ ಭಾರತವು ಹಿಮಾಲಯದಿಂದ ಹಿಂದೂ ಮಹಾಸಾಗರದವರೆಗೆ ಮತ್ತು ಇರಾನ್‌ನಿಂದ ಇಂಡೋನೇಷ್ಯಾದವರೆಗೆ ವಿಸ್ತರಿಸಿತ್ತು. ಬ್ರಿಟಿಷರು ಭಾರತ ಬಿಟ್ಟು ಹೋಗುವ ಮೊದಲು ತಮ್ಮ ಆಳ್ವಿಕೆಯ ಕೊನೆಯ 61 ವರ್ಷಗಳಲ್ಲಿ 7 ಬಾರಿ ಭಾರತವನ್ನು ವಿಭಜನೆ ಮಾಡಿದ್ದಾರೆ

    ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ನಮ್ಮ ಭಾರತ ದೇಶ, ನಾಡು, ನುಡಿ, ಭಾಷೆ, ಆಚಾರ, ವಿಚಾರ, ಸಂಸ್ಕೃತಿ ಹೀಗೆ ಹಲವಾರು ವಿಚಾರಗಳಲ್ಲಿ ನಮ್ಮ ಒಂದೊಂದು ಪ್ರಾಂತ್ಯವನ್ನು ಮತ್ತು ಜನರನ್ನು ಬೆಸೆದಿದೆ. ಭೌಗೋಳಿಕ ಸಂಸ್ಥಾನದ ಗಡಿ ರೇಖೆಗಳಿಗಿಂತ, ಭಾರತದ ಸಾಂಸ್ಕೃತಿಕ, ಆಧ್ಯಾತ್ಮಿಕ, ಧಾರ್ಮಿಕ ವಿಷಯಗಳಿಗೆ ಗಡಿ ರೇಖೆಗಳಿರಲಿಲ್ಲ ಎನ್ನುವುದು ಭಾರತೀಯ ಸಂಸ್ಕೃತಿಯನ್ನು ಅರಿತವರಿಗೆ ತಿಳಿದಿದೆ. ರಾಮಾಯಣ, ಮಹಾಭಾರತ ಈ ಮಹಾಕೃತಿಗಳ ಕುರಿತು ಉತ್ತರದ ಕಾಶ್ಮಿರದಿಂದ  ದಕ್ಷಿಣದ ಕನ್ಯಾಕುಮಾರಿ, ಮತ್ತು ಫೂರ್ವದ ಅಸ್ಸಾಂ ನಿಂದ ಪಶ್ಚಿಮದ ಗುಜರಾತ್ ನವರೆಗೂ, ಭಾರತದ ಎಲ್ಲೆಡೆ ಯಿರುವ ಪ್ರತಿಯೊಬ್ಬರಿಗೂ ಗೊತ್ತಿರುವುಂತಹದ್ದು. ಮಹಾಕಾವ್ಯಗಳಲ್ಲಿ ದಾಖಲಾಗಿರುವ ಘಟನೆಗಳು, ಸ್ಥಳಗಳು ಇಂದಿಗೂ ಭಾರತದಲ್ಲಿ ಕುರುಹುಗಳು ಲಭ್ಯವಿದೆ. ನಮ್ಮ ಅಕ್ಕ ಪಕ್ಕದ ರಾಷ್ಟ್ರಗಳಲ್ಲಿ ರಾಮಾಯಣ, ಮಹಾಭಾರತಕ್ಕೆ ಸಂಭಂದ ಪಟ್ಟಂತ ಮಾಹಿತಿ ಮತ್ತು ಸಂಸ್ಕೃತದ ಪ್ರಭಾವದ ಕುರಿತು ಒಂದು ಕಿರು ಮಾಹಿತಿ ಈ ಲೇಖನದ ಮುಖಾಂತರ ಓದುಗರಿಗೆ ತಲುಪಿಸುವ ಒಂದು ಕಿರು ಪ್ರಯತ್ನ.  

ಅಫ್ಘನಿಸ್ಥಾನ್:

ಎರಡು ದಶಕಗಳ ಹಿಂದೆ ಅಫ್ಘಾನಿಸ್ತಾನದ ಕಂದಹಾರ್‌ ನಲ್ಲಿ ವಿಮಾನ ಅಪಹರಣ ವಾದಾಗ, ಬಹಳಷ್ಟು ಜನರಿಗೆ ಕಂದಹಾರ್ ಎಂದರೆ ಗಾಂಧಾರ ಎನ್ನುವುದು ತಿಳಿಯಿತು. ನಮ್ಮ ಗಾಂಧಾರ ಅಫ್ಘನಿಸ್ತಾನದ ಕಂದಹಾರ್ ಹೇಗಾಯ್ತು ಎನ್ನುವುದು ಶಾಲೆಗಳಲ್ಲಿ ಯಾರೂ ಕಲಿಸಿಕೊಡಲೇ ಇಲ್ಲ. ಮಹಾಭಾರತದ ಐತಿಹಾಸಿಕ ಸ್ಥಳಗಳ ಕುರಿತು ಸಂಶೋಧನೆ ನಡೆದಾಗ, ಇಂತಹ ಹಲವಾರು ಸತ್ಯಗಳು ಹೊರಜಗತ್ತಿಗೆ ಗೊತ್ತಾಯಿತು. ಅಫ್ಘಾನಿಸ್ತಾನಕ್ಕೆ "ಉಪಗಣಸ್ಥಾನ" ಎನ್ನುವ ಹೆಸರು ಇತ್ತೆಂದು ಹೇಳುತ್ತಾರೆ 

ತುರ್ಕಮೆನಿಸ್ತಾನ್

ಇಂದಿನ ತುರ್ಕಮೆನಿಸ್ತಾನ್ ರಾಷ್ಟ್ರವನ್ನು, ಮಹಾಭಾರತದಲ್ಲಿ ತುಷಾರ ಎಂದು ಕರೆಯಲಾಗಿದೆ.  ಮಹಾಭಾರತದಲ್ಲಿ ತುಷಾರರನ್ನು (ಮ್ಲೇಚ್ಚರು) "ರಾಜ ಯಯಾತಿಯ" ಶಾಪಗ್ರಸ್ತ ಪುತ್ರರಲ್ಲಿ ಒಬ್ಬರಾದ ಅನುದೃಹ್ಯವಿನ ವಂಶಸ್ಥರು ಎಂದು ಎಂದು ಹೇಳಲಾಗಿದೆ.  ಯಯಾತಿಗೆ ಐದು ಜನ ಮಕ್ಕಳು. ಯದು, ಪುರು, ತುರ್ವಸು, ದೃಹ್ಯ ಮತ್ತು ಅನುದೃಹ್ಯ.  ಶುಕ್ರಾಚಾರ್ಯರಿಂದ ಪಡೆದ ಶಾಪದ ಫಲವಾಗಿ ಅಕಾಲಿಕ ವೃದ್ಧಾಪ್ಯ ಯಯಾತಿಗೆ ಪ್ರಾಪ್ತವಾಗುತ್ತದೆ. ಆಗ ಶಾಪ ವಿಮೋಚನೆ ಯಾಚಿಸಿದ ಯಯಾತಿಗೆ, ಶುಕ್ರಾಚಾರ್ಯರು " ಯಾರಾದರೂ ತಮ್ಮ ಯೌವನವನ್ನು ಕೊಡುವುದಾದರೆ ನೀನು ಮತ್ತೆ ಯೌವನವನ್ನು ಪಡೆಯಬಹುದು" ಎಂಬುದಾಗಿ ತಿಳಿಸುತ್ತಾರೆ. ಭೋಗ ಜೀವನದ ಹಸಿವು ಆರದಿದ್ದ ಯಯಾತಿ ತನ್ನ ಎಲ್ಲಾ ಮಕ್ಕಳಲ್ಲಿ ಯೌವನಕ್ಕಾಗಿ ಯಾಚಿಸುತ್ತಾನೆ. ಐವರು ಮಕ್ಕಳಲ್ಲಿ ನಾಲ್ಕು ಜನ ತಿರಸ್ಕರಿಸಿದ ಹಿನ್ನೆಲೆಯಲ್ಲಿ, ಪುರುವು ತನ್ನ ಯೌವನವನ್ನು ತಂದೆಯೊಂದಿಗೆ ವಿನಿಮಯ ಮಾಡಿಕೊಳ್ಳಲು ಒಪ್ಪಿಕೊಂಡಾಗ ಅತ್ಯಂತ ಆನಂದ ಭರಿತನಾದ ಯಯಾತಿ ಅವನಿಂದ ಯೌವನ ಪಡೆಯುತ್ತಾನೆ. ಭೋಗ ಜೀವನಕ್ಕೆ ಕೊನೆ ಇಲ್ಲ ಎಂದು ಅರಿತ ಯಯಾತಿ ಪುನಃ ತನ್ನ ಮಗನಿಗೆ ಯೌವನ ಮರಳಿಸಿ ಅವನಿಗೆ ಪಟ್ಟಕಟ್ಟಿ ಅನೇಕ ವರಗಳನ್ನು ಕೊಟ್ಟು ತಾನು ತಪಸ್ಸಿಗೆ ಹೋಗುತ್ತಾನೆ.  ಇತರ ನಾಲ್ಕು ಮಕ್ಕಳನ್ನು ಶಪಿಸಿ ಅವರಿಗೆ ರಾಜತ್ವವನ್ನು ನಿರಾಕರಿಸುತ್ತಾನೆ. ಪುರುವಿನ ವಂಶಸ್ಥರೇ ಪೌರವರು, ಯಯಾತಿಯ ಮೂಲ ಸಾಮ್ರಾಜ್ಯವನ್ನು ಆನುವಂಶಿಕವಾಗಿ ಪಡೆದರು ಮತ್ತು ನಂತರ ಕುರು ಮತ್ತು ಪಾಂಚಾಲ ರಾಜ್ಯಗಳನ್ನು ರಚಿಸಿಕೊಂಡು ಆಳುತ್ತಾರೆ. ಈವತ್ತಿನ ಠಾಕೂರ್, ಥಕ್ಕರ್, ತಖರ್, ಠಾಕೆರೆ,  ಠಾಕ್ರೆ,  ಮುಂತಾದ ವಿವಿಧ ಪ್ರಾದೇಶಿಕ ಪದಗಳು ಮತ್ತು ತುಷಾರ//ತುಖಾರ ರಿಂದ ಹುಟ್ಟಿಕೊಂಡಿರಬಹುದು ಎಂದು ಹೇಳಲಾಗುತ್ತದೆ.  ಈ ಪ್ರಾಂತ್ಯ ಕ್ರಿ.ಶ 1 ರಿಂದ- ಕ್ರಿ.ಶ  3 ನೇ ಶತಮಾನದವರೆಗೂ ಕುಶಾನರ ಹಿಡಿತದಲ್ಲಿತ್ತು. 

ಮಾರಿಶಸ್ ದ್ವೀಪ:

ರಾಮಾಯಣದಲ್ಲಿ ಪ್ರಸ್ತಾಪವಾಗಿರುವ ಆ ಮಾರೀಚ ದ್ವೀಪವೇ ಈಗಿನ ಮಾರಿಶಸ್‌. ಮಾಯಾ ಸುವರ್ಣ ಮೃಗದ ರೂಪ ಧರಿಸಿ ಸೀತಾಪಹರಣಕ್ಕೆ ನೆರವಾಗಬೇಕೆಂದು ರಾವಣನು ತನ್ನ ಮಾವ ಮಾರೀಚನನ್ನು ಒತ್ತಾಯಿಸುತ್ತಾನೆ. ರಾಮ- ಸೀತೆ, ಲಕ್ಷ್ಮಣರು ವನವಾಸದಲ್ಲಿದ್ದಾಗ ಮಾರೀಚನು ಸೀತೆಯ ಕುಟೀರದ  ಮುಂದೆ ಮಾಯಾಜಿಂಕೆ ರೂಪದಲ್ಲಿ ಸುಳಿದಾಡತೊಡಗಿ ಸೀತೆಯ ಮನಸೂರೆಗೊಳ್ಳುತ್ತಾನೆ. ಪತ್ನಿಯ ಆಸೆಗಾಗಿ ಈ ಮಾಯಾಮೃಗದ ಬೆನ್ನತ್ತಿ ಹೋದ ರಾಮ ಕೊನೆಗೆ ಬೇಸತ್ತು ಕೊಂದುಹಾಕುತ್ತಾನೆ. ಮರಣಾವಸ್ಥೆಯಲ್ಲಿದ್ದ ಮಾರೀಚನು ರಾಮನಿಗೆ ತನ್ನನ್ನು ಸಾಗರಕ್ಕೆ ಎಸೆಯುವಂತೆಯೂ ಸಾಗರದಲ್ಲಿ ತನ್ನ ದೇಹ ಬೀಳುವ ಭಾಗದಲ್ಲಿ ಉಂಟಾಗುವ ಭೂಮಿಗೆ ತನ್ನ ಹೆಸರಿಡಬೇಕೆಂದು ಪ್ರಾರ್ಥಿಸುತ್ತಾನೆ. ಶ್ರೀ ರಾಮಚಂದ್ರನಿಂದ ಅನುಗ್ರಹಿಸಿದ ಬಳಿಕ ಮಾರೀಚ ಕೊನೆಯುಸಿರೆಳೆಯುತ್ತಾನೆ. 

ಗಲ್ಫ್ ರಾಷ್ಟ್ರಗಳು: 

ಆತ್ಮೀಯ ಗೆಳೆಯರಾದ ಸುರೇಶ್ ಜಿ ಹುಳ್ಳೇನಹಳ್ಳಿಯವರು, ನಮ್ಮ ಗಲ್ಫ್ ರಾಷ್ಟ್ರಗಳ ಕುರಿತಾದ  ಒಂದು ಮಾಹಿತಿ ನೀಡಿದ್ದಾರೆ. ಅದೇನೆಂದರೆ, ಶ್ರೀ ರಾಮ ವಾನರ ಸೈನ್ಯದೊಂದಿಗೆ ಲಂಕೆಗೆ ಹೋಗಲು ಸಮುದ್ರದಲ್ಲಿ ಸೇತುವೆ ನಿರ್ಮಾಣ ಕಾರ್ಯ ಕೈಗೊಂಡಾಗ ಸೇತುವೆ ನಿಲ್ಲದೆ ಕುಸಿಯುತ್ತಿರುತ್ತದೆ. ಆಗ ಶ್ರೀ ರಾಮ ಸಮುದ್ರ ರಾಜನನ್ನು ಪ್ರಾರ್ಥಿಸಿ ತಪಸ್ಸು ಮಾಡುತ್ತಾನೆ, ಸಮುದ್ರ ರಾಜ ಒಳಿಯುವುದಿಲ್ಲ. ಕೋಪಗೊಂಡ ಶ್ರೀ ರಾಮ ತಮ್ಮ ಲಕ್ಷ್ಮಣನ  ಅಣತಿಯಂತೆ ಸಮುದ್ರವನ್ನು ನಿರ್ನಾಮ ಮಾಡಲು ಧನಸ್ಸನ್ನು ಎದೆಗೆ ಏರಿಸುತ್ತಾನೆ, ಭಯಗೊಂಡ ಸಮುದ್ರ ರಾಜ ಓಡಿ ಬಂದು  ಶ್ರೀ ರಾಮನಿಗೆ ಶರಣಾಗುತಾನೆ. ಶಾಂತನಾದ ಶ್ರೀ ರಾಮ ಸಮುದ್ರ ರಾಜನನ್ನು ಕೇಳುತ್ತಾನೇ, ಒಮ್ಮೆ ಎದೆಗೆ ಏರಿಸಿದ ಬಾಣವನ್ನು ಹಿಂತಿರುಗಿ ಬತ್ತಳಿಕೆಯಲ್ಲಿ ಇಡುವುದಿಲ್ಲ ನೀನೆ ಹೇಳು ಇದನ್ನು ಎಲ್ಲಿ ಪ್ರಯೋಗಿಸಲಿ ಎಂದು ಕೇಳುತ್ತಾನೆ. ಆಗ ಸಮುದ್ರರಾಜ ತನಗೆ ಪಶ್ಚಿಮ ದಿಕ್ಕಿನಲ್ಲಿ ತುಂಬ ತೊಂದರೆ ಕೊಡುವ ರಾಕ್ಷಸರ ಬಗ್ಗೆ ತಿಳಿಸಿ ಅವರನ್ನು ನಾಶ ಮಾಡು ಎಂದು ಭಿನ್ನವಿಸುತ್ತಾನೆ, ಅದೇ ರೀತಿ ಶ್ರೀ ರಾಮ ಪ್ರಾಯೋಗಿಸಿದ ಬಾಣ ಪಶ್ಚಿಮ ದಿಕ್ಕಿನಲ್ಲಿ ಇದ್ದ ಈಗಿನ ಗಲ್ಫ್ ದೇಶಗಳ ಮೇಲೆ ಪ್ರಯೋಗವಾಗುತ್ತೆ ಮತ್ತು ಇಲ್ಲಿ ಎಲ್ಲವು ಸರ್ವ ನಾಶ ವಾಗುತ್ತೆ. ಬಹುಶಃ ಇದೇ ಕಾರಣದಿಂದ ಈ ಪ್ರದೇಶ ಮರುಭೂಮಿಯಾಗಿದೆಯೇನೋ?  ಮತ್ತು ಸಮುದ್ರ ನೀರು ಕಮ್ಮಿಯಾಗಿ ಭೂ ಪ್ರದೇಶ ಮೇಲೆ ಬರಲು ಇದೂ ಒಂದು ಕಾರಣ ಎಂದು ಅಭಿಪ್ರಾಯಪಡುತ್ತಾರೆ.

ಸೊಕೊಟ್ರಾ ದ್ವೀಪ:

ಅವರು ನೀಡಿದ ಇನ್ನೊಂದು ಮಾಹಿತಿ, ಸೊಕೊಟ್ರಾ ದ್ವೀಪ ಬಗ್ಗೆ. ಒಮಾನ್ ರಾಷ್ಟ್ರದ ದಕ್ಷ್ಣಿಣ ದಿಕ್ಕಿನಲ್ಲಿರುವ  ಈ ದ್ವೀಪಕ್ಕೆ ಸಂಸ್ಕೃತದಲ್ಲಿ ಸುಖಧಾರ ದ್ವೀಪ ಎಂದು ಕರೆಯಲಾಗುತ್ತದೆ. ಭೌಗೋಳಿಕವಾಗಿ ನೋಡುವುದಾದರೆ, ಹಿಂದೂ ಮಹಾಸಾಗರದಲ್ಲಿನ ಯೆಮೆನ್ ಗಣರಾಜ್ಯದ ಭಾಗವಾಗಿರುವ ಈ ದ್ವೀಪ, ಆಫ್ರಿಕಾದ ಖಂಡದ ಸೋಮಾಲಿಯಾ ದೇಶದ ತುತ್ತ ತುದಿಯಿಂದ ಪೂರ್ವಕ್ಕೆ 240 ಕಿಲೋಮೀಟರ್ (150 ಮೈಲಿ) ಮತ್ತು ಅರೇಬಿಯನ್ ಪೆನಿನ್ಸುಲಾದ ಯೆಮನ್ ರಾಷ್ಟ್ರದ ದಕ್ಷಿಣಕ್ಕೆ 380 ಕಿಲೋಮೀಟರ್ ದೂರದಲ್ಲಿದೆ. ಸುಖಧಾರೆ ಎನ್ನುವ ರಾಕ್ಷಸ ನನ್ನು ಶ್ರೀ ರಾಮ ಲಕ್ಷ್ಮಣರು ಯುದ್ದವೊಂದರಲ್ಲಿ ಸೋಲಿಸಿ. ಮರಣಾನಂತರ ಸಮುದ್ರದೊಳಗೆ ಎಸೆಯುತ್ತಾರೆ. ಈ ರೀತಿ ಎಸೆಯಲ್ಪಟ್ಟ ರಕ್ಕಸ ನಿಂದ ನಿರ್ಮಿತವಾದ ದ್ವೀಪವೇ ಸುಖದಾರೆ ಎನ್ನಲಾಗುತ್ತದೆ.

ಕಿರ್ಗಿಸ್ತಾನ್:

ಇಂದಿನ ಕಿರ್ಗಿಸ್ತಾನ್ ಪ್ರದೇಶ ಮಹಾಭಾರತದಲ್ಲಿ "ಉತ್ತರಕುರು" ಪ್ರಾಂತ್ಯ ಎಂದು ಉಲ್ಲೇಖಿಸಲ್ಪಟ್ಟಿದೆ.  ಯುಧಿಷ್ಠಿರನ ರಾಜಸೂಯ ಯಾಗಕ್ಕಾಗಿ ಉತ್ತರದ ಸೇನಾ ಕಾರ್ಯಾಚರಣೆಯಲ್ಲಿ ಅರ್ಜುನನು ಉತ್ತರ ಕುರುವಿನಿಂದ ಗೌರವವನ್ನು ಪಡೆದನು ಎಂದು ಮಹಾಭಾರತದಲ್ಲಿ ಉಲ್ಲೇಖಿಸಲಾಗಿದೆ.  ಕುಮಾರವ್ಯಾಸ ಭಾರತದಲ್ಲಿಯೂ ಸಹ ಈ ಕುರಿತು ಮಾಹಿತಿಯಿದೆ.

ಅದೇ ರೀತಿ ಪಕ್ಕದಲ್ಲಿರುವ  ಉತ್ತರ ಮಾದ್ರ ಎನ್ನುವ ಪ್ರದೇಶ ಇಂದು ಕಿರ್ಗಿಸ್ತಾನ್ ನಲ್ಲಿ ವಿಲೀನವಾಗಿದೆ.

ಟಿಬೆಟ್: 

ಮಹಾಭಾರತದ ಕುರುಕ್ಷೇತ್ರದ ಯುದ್ದ ಸೋಲಿನ ನಂತರ ರೂಪತಿ ಅಥವ ರುಪಾಟಿ ಎನ್ನುವ  ಕೌರವ ಸೈನ್ಯದ ಒಬ್ಬ ಸೇನಾಧಿಪತಿ ತನ್ನ ಸೈನ್ಯದ ಸಮೇತ ಟಿಬೆಟ್ ಕಡೆ ಹೊರಟುಹೋಗುತ್ತಾನೆ. ಅಂದು ಅಲ್ಲಿಗೆ ವಲಸೆ ಹೋದ ಜನರೇ ಟಿಬೆಟಿಯನ್ನರು ಎಂದು ನಂಬಲಾಗಿದೆ. ಕ್ರಿ.ಪೂ 150 ರ ಸಮಯದಲ್ಲಿ ಭಾರತದಲ್ಲಿ ಆಳ್ವಿಕೆಯಲ್ಲಿದ್ದ ಮಗಧ ಸಾಮ್ರ್ಯಾಜ್ಯದ ಒಬ್ಬ ರಾಜಕುಮಾರನನ್ನ ರಾಜತಾಂತ್ರಿಕ ಕಾರಣಗಳಿಂದ ಗಡಿಪಾರು ಮಾಡಲಾಗುತ್ತದೆ. ಆ ಸಮಯದಲ್ಲಿ ಆತ  ಟಿಬೆಟ್‌ಗೆ ಪಲಾಯನ ಮಾಡಿದನೆಂದು ನಂಬಲಾಗಿದೆ. ಟಿಬೆಟಿಯನ್ನರು ಅವನನ್ನು ನ್ಯಾ-ಟ್ರಿ ತ್ಸೆನ್ಪೋ ಎಂದು ನಾಮಕರಣ ಮಾಡುತ್ತಾರೆ. ಮುಂದೆ ಆತನನ್ನು ತಮ್ಮ ರಾಜನನ್ನಾಗಿ ಮಾಡಿದರು. ಹೀಗೆ ಅಲ್ಲಿಂದ ಟಿಬೆಟಿಯನ್ ರಾಜವಂಶ ಪ್ರಾರಂಭವಾಯಿತು.  ಟಿಬೆಟಿಯನ್ ವಿದ್ವಾಂಸರಾದ ಬು-ಸ್ಟನ್ ಎನ್ನುವವರು ಇದನ್ನು ಪ್ರತಿಪಾದಿಸಿದ್ದಾರೆ, ಅಷ್ಟು ಮಾತ್ರವಲ್ಲದೆ, ದಲಾಯಿಲಾಮ ರವರು 2009 ರಲ್ಲಿ ಭಾರತಕ್ಕೆ ಧನ್ಯವಾದ ಅರ್ಪಿಸುವ ಪತ್ರದಲ್ಲಿ ಈ ಮಾಹಿತಿಯನ್ನು ಉಲ್ಲೇಖಿಸಿದ್ದಾರೆ.

ಕಾಂಬೋಡಿಯಾ:

ಕಾಂಬೋಡಿಯಾ ಕಾಂಬೋಜ್ ಎಂಬ ಸಂಸ್ಕೃತ ಹೆಸರಿನಿಂದ ಬಂದಿದೆ. ಮಹಾಭಾರತದ ಸಮಯದಲ್ಲಿ ಭಾರತದ ಪಶ್ಚಿಮಕ್ಕೆ ಇದ್ದ ಕಾಂಬೋಜ ದೇಶ ದಿಂದ ಬಂದ ಕಂಬು ಎನ್ನುವ ಸನ್ಯಾಸಿಯೋರ್ವರು ಇಲ್ಲಿ ನೆಲೆಸಿದ್ದರಂತೆ. ಹೀಗಾಗಿ ಇದು ಕಾಂಬೋಜ ಪ್ರದೇಶ ಎಂದು ಗುರುತಿಸಲ್ಪಟ್ಟಿದೆ, ನಂತರ ಕಾಂಬೋಡಿಯಾ ಎಂದಾಗಿದೆ.

ನೇಪಾಳ: 

ನೇಪಾಳ ವನ್ನು ಪ್ರಾಚೀನ ಕಾಲದಲ್ಲಿ ದೇವಧರ್ ಎಂದು ಕರೆಯಲಾಗುತ್ತಿತ್ತು.  ಸೀತಾಮಾತೆ ಜನಿಸಿದ್ದು ಇಂದು ನೇಪಾಳದಲ್ಲಿರುವ ಜನಕಪುರದಲ್ಲಿ. ಚಕ್ರವರ್ತಿ ಅಶೋಕ ಮತ್ತು ಸಮುದ್ರಗುಪ್ತನ ಆಳ್ವಿಕೆಯಲ್ಲಿ ನೇಪಾಳ ಭಾರತದ ಅವಿಭಾಜ್ಯ ಅಂಗವಾಗಿತ್ತು. 1904ರಲ್ಲಿ ಬ್ರಿಟಿಷರು ನೇಪಾಳವನ್ನು ಪ್ರತ್ಯೇಕ ದೇಶವನ್ನಾಗಿ ವಿಭಜನೆ ಮಾಡಿದರು.

ಶ್ರೀಲಂಕಾ:- 

ಶ್ರೀಲಂಕಾ ಬಗ್ಗೆ ಎಲ್ಲರಿಗೂ ಗೊತ್ತಿರುವುಂತಹದ್ದು. ರಾಮಾಯಣ ಕಾಲದಲ್ಲಿ ಲಂಕೆಯನ್ನು ಆಳುತ್ತಿದ್ದು ರಾವಣ.  ಸೀತಾ ಮಾತೆಯನ್ನು ಲಂಕೆಯ ಆಶೋಕವನದಲ್ಲಿ ಬಂಧಿಸಿಟ್ಟಿದ್ದು ನಮಗೆಲ್ಲರಿಗೂ ತಿಳಿದಿದೆ.

ಇಂಡೋನೇಷ್ಯಾ:

ಇಂಡೋನೇಷ್ಯಾದ ಪುರಾತನ ಹೆಸರು ದೀಪಂತರ ಭಾರತ. ದೀಪಂತರ ಭಾರತ ಎಂದರೆ ಭಾರತದಾದ್ಯಂತ ಸಾಗರ ಎನ್ನುವ ಅರ್ಥ ಬರುವುದು. ಪುರಾಣಗಳಲ್ಲಿ ಈ ಬಗ್ಗೆ ಮಾಹಿತಿಯಿದೆ.

ಇರಾನ್:

ಮಹಾಭಾರತದ ಯುದ್ದಾನಂತರ ಯಾದವರು ಇರಾನ್ ಮತ್ತು ಇಸ್ರೇಲ್ ಕಡೆ ವಲಸೆ ಹೋದರು ಎಂದು ಹೇಳುತ್ತಾರೆ. ಇರಾನಿನ ಸುಸ ಎಂಬ ಪ್ರದೇಶದಲ್ಲಿ ಪಾರ್ಥಿಯನ್ ಕಾಲಾವಧಿಯ( ಕ್ರಿ.ಪೂ 247- ಕ್ರಿ.ಶ.-224)  ಶ್ರೀ ಕೃಷ್ಣನ ವಿಗ್ರಹಗಳು ಪತ್ತೆಯಾಗಿವೆ. ಈ ಪಾರ್ಥಿಯನ್ ಎನ್ನುವ ರಾಜವಂಶ ಐದು ನೂರುವರ್ಷಗಳ ಕಾಲ ಇರಾನ್ ಅನ್ನು ಆಳಿತ್ತು. ಪಾರ್ಥಿಯನ್ ಗೂ ಪಾರ್ಥಗೂ ಹೋಲಿಕೆ ಇದೆ ಎಂದು ಹೇಳಬಹುದು. ಅರ್ಜುನನಿಗೆ ಪಾರ್ಥ ಎಂದು ಕರೆಯುತ್ತೇವೆ, ಆತನ ಸಾರಥಿಯಾಗಿದ್ದ ಕೃಷ್ಣನಿಗೆ, ಪಾರ್ಥಸಾರಥಿ ಎಂದು ಹೇಳುತ್ತೇವೆ ಯಲ್ಲವೇ, ಹಾಗಾಗಿ ಪಾರ್ಥಿಯನ್ ಎಂಬ ಹೆಸರಿಗೂ ಸಾಮ್ಯತೆ ಇರಬಹುದು. ಆರ್ಯನ್ನರ ಪ್ರದೇಶವು ಇರಾನ್ ಎಂದು ಕೆಲವರು ಹೇಳುತ್ತಾರೆ. ಅದರ ಬಗ್ಗೆ ಹಲವಾರು ಚರ್ಚೆಗಳು, ವಾದಗಳು ನಡೆದಿವೆ. ಪ್ರಾಚೀನ ಪರ್ಶಿಯಾ ಭಾಷೆಯಲ್ಲಿ ಹಲವಾರು ಸಂಸ್ಕೃತ ಶಬ್ದಗಳ ಹೋಲಿಕೆಯಿದೆ. ಎಲ್ಲಾ  ಮುಸ್ಲಿಂ ರಾಷ್ಟ್ರಗಳು ಇಸ್ಲಾಮಿಕ್ ಕ್ಯಾಲೆಂಡರ್ ಅನ್ನು ಉಪಯೋಗಿಸುತ್ತಾರೆ. ಇಸ್ಲಾಮಿಕ್ ಕ್ಯಾಲೆಂಡರ್ ಸಹ ಇತರೆ ದೇಶಗಳು ಉಪಯೋಗಿಸುವ ಗ್ರೆಗೋರಿಯನ್ ಕ್ಯಾಲೆಂಡರ್ ಅನ್ನು ಹೋಲುವ 12 ತಿಂಗಳುಗಳನ್ನು ಒಳಗೊಂಡಿದೆ. ಆದಾಗ್ಯೂ, ಇದು ಸಾಮಾನ್ಯ ಕ್ಯಾಲೆಂಡರ್‌ನಲ್ಲಿರುವ 365-366 ದಿನಗಳಿಗಿಂತ ಭಿನ್ನವಾಗಿ 354-355 ದಿನಗಳನ್ನು ಒಳಗೊಂಡಿದೆ. ಇಸ್ಲಾಮಿಕ್ ಹೊಸ ವರ್ಷವು ಮೊಹರಂನೊಂದಿಗೆ ಪ್ರಾರಂಭವಾಗುತ್ತದೆ. ಆದರೆ, ಈ ಮೊಹರಂ ಹಬ್ಬ ಪ್ರತಿವರ್ಷ ಒಂದೇ ಸಮಯದಲ್ಲಿ ಬರುವುದಿಲ್ಲ. ಪ್ರತಿ ವರ್ಷ ಮೂರು ವರ್ಷಕ್ಕೊಮ್ಮೆ ಒಂದೊಂದು ತಿಂಗಳು ಮುಂಚಿತವಾಗಿ ಬರುತ್ತದೆ.  ಒಮ್ಮೆ, ಜೂನ್ ನಲ್ಲಿ ಬಂದರೆ, ಮುಂದಿನ ಮೂರು ವರ್ಷದ ನಂತರ ಮೇ ನಲ್ಲಿ ಬರುತ್ತದೆ, ಅದರ ಮೂರುವರ್ಷಗಳ ನಂತರ ಏಪ್ರಿಲ್ ನಲ್ಲಿ ಬರುತ್ತದೆ.

    ಇರಾನಿ ಜನತೆ ಇಸ್ಲಾಂ ಕ್ಯಾಲೆಂಡರ್ ಉಪಯೋಗಿಸಿದರು ಸಹ ಪ್ರಾಚೀನ ಪರ್ಶಿಯನ್ ಕ್ಯಾಲೆಂಡರ್ ನಂತೆ, ನೌರುಜ್ ಎನ್ನುವ ಪರ್ಷಿಯನ್ ಹೊಸ ವರ್ಷವನ್ನು ತಪ್ಪದೆ ಆಚರಿಸುತ್ತಾರೆ. ಇರಾನ್‌ನಲ್ಲಿ ವರ್ಷದ ಪ್ರಮುಖ ಹಬ್ಬವಾಗಿದೆ. ಪರ್ಷಿಯನ್ ಭಾಷೆಯಲ್ಲಿ ನೌರುಜ್ ಎಂದರೆ 'ಹೊಸ ದಿನ'. ಭಾರತದಲ್ಲಿ ಹೊಸ ವರ್ಷ ಯುಗಾದಿ ಹಬ್ಬವನ್ನು ನಾವು ಪ್ರತಿವರ್ಷ ಮಾರ್ಚ್ ತಿಂಗಳ ಆಸು ಪಾಸಿನಲ್ಲಿ ಆಚರಿಸುವಂತೆಯೇ ಇರಾನಿಯನ್ನರು ತಮ್ಮ ಹೊಸವರ್ಷವನ್ನು ಮಾರ್ಚ್ 20 ಅಥವಾ 21 ರಂದು ಆಚರಿಸುತ್ತಾರೆ. ಚಳಿಗಾಲವು ವಸಂತಕಾಲಕ್ಕೆ ಬದಲಾಗುವ ದಿನ, ಮತ್ತು ಇದು ಹೊಸ ಆರಂಭದಂತೆ ಭಾಸವಾಗುವುದರಿಂದ "ನೌರುಜ್" ಇರಾನಿಯನ್ನರಿಗೆ ಪ್ರಮುಖ ಹಬ್ಬ. ಇದಕ್ಕಾಗಿಯೇ ನಾಲ್ಕು ದಿನಗಳ ಸಾರ್ವಜನಿಕ ರಜಾದಿನಗಳು ನೀಡಲಾಗುತ್ತದೆ. ಶಾಲಾ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ಎರಡು ವಾರಗಳವರೆಗೆ ರಜೆಯನ್ನು ನೀಡುತ್ತಾರೆ. ನೌರುಜ್ ಎನ್ನುವುದು ನವ ಮತ್ತು ರೋಜು ಎನ್ನುವ ಎರಡು ಶಬ್ದಗಳಿಂದ ರೂಪುಗೊಂಡಿದೆ. ನವ ಎಂದರೆ ಹೊಸದು, ರೋಜು ಎನ್ನುವುದು ದಿನ. ತೆಲುಗಿನಲ್ಲಿಯೂ ಸಹ ರೋಜು ಅಂದರೆ ದಿನ ಎಂದರ್ಥ.

ಇವೆಲ್ಲವನ್ನು ಗಮನಿಸಿದರೆ, ಸನಾತನ ಸಂಸ್ಕೃತಿ, ಸಂಸ್ಕೃತ ಭಾಷೆ ಭಾರತದಾಚೆಗೂ ಇತ್ತು ಎನ್ನುವ ವಿಚಾರ ಸ್ಪಷ್ಟವಾಗುತ್ತದೆ. ಬದಲಾದ ಕಾಲಘಟ್ಟದಲ್ಲಿ ಇಂದು ಬೇರೆ ಬೇರೆ ಧರ್ಮ, ಆಚಾರವಿಚಾರಗಳನ್ನು ಜನರು ಅಳವಡಿಸಿಕೊಂಡು ಮುನ್ನೆಡೆಯುತಿದ್ದಾರೆ.

ಸಂಸ್ಕೃತ ಮತ್ತು ಪರ್ಷಿಯನ್ ಭಾಷೆಯ ಕೆಲ ಶಬ್ದಗಳಲ್ಲಿನ ಸಾಮ್ಯತೆಗಳು

ಸಂಸ್ಕೃತ ಪರ್ಷಿಯನ್ 

ಭ್ರಾತಾ ಬಿರಾದರ್ 

ತೀವ್ರ ತೇಜ್ 

ಶ್ವೇತ /ಶ್ವೇತ್ ಸಫೇದ್ / ಸೇಫ್ಡ್

ದ್ವಾರ್ /ದ್ವಾರ ದರ್ /ದಾರ್

ನಾಮ ನಾಮ್

ತಾರಾ ಸಿತಾರಾ 

ಸ್ಥಾನ ಸ್ತಾನ್ 

ವರ್ಷ ಬಾರಿಶ್

ಛಾಯಾ ಸಾಯಾ

ಬಾಹು ಬಾಜು

ಯುವ ಜವಾನ್

ಇಸ್ರೇಲ್:

ಇಸ್ರೇಲ್ ರಾಷ್ಟ್ರವನ್ನು ಕ್ರಿ.ಪೂ  200 ರ ಸಮಯದಲ್ಲಿ ಕಾನಾನ್ಯರು ಆಳುತಿದ್ದರು. ಈ ಕಾನಾನ್ಯ ಎನ್ನುವ ಹೆಸರು ಬಂದಿದ್ದು, ಕೃಷ್ಣನ  ಕನ್ನಯ್ಯ ಎನ್ನುವ ಹೆಸರಿನಿಂದ. ಉತ್ತರಭಾರತದಲ್ಲಿ ಕೃಷ್ಣನಿಗೆ ಕನ್ನಯ್ಯ, ಕಿಶನ್ ಎಂದು ಕರೆಯುತ್ತಾರೆ. ಹೀಗಾಗಿ ಯಾದವರೇ ಕಾನಾನ್ಯರು ಯಾಕಾಗಿರಬಾರದು? ಇದಕ್ಕೆ ಪೂರಕವೆಂಬಂತೆ ಅಲ್ಲಿ ಕಿಶೋನ್ ಎನ್ನುವ ನದಿ ಇದೆ. ಬಾಲ್ಗಾದ್ ಎಂಬ ನಗರವೂ ಇದೆ. ಇದು ಪ್ರಾಚೀನ ಇಸ್ರೇಲ್ ನಲ್ಲಿ ಕಾನಾನ್ಯರ ನಗರವಾಗಿತ್ತು.  ಇತಿಹಾಸಕಾರ ಪ್ರೊಫೆಸರ್ ಪಿ.ಎನ್ ಓಕ್ ಇಸ್ರೇಲ್ ನ ಕಾನಾನ್ಯರು ಹಾಗೂ ಬಾಲ್ ಗಡ್ ನಗರಕ್ಕೂ ಭಾರತದಲ್ಲಿ ಅವತಾರ ಪುರುಷನೆಂದೇ ನಂಬಲಾಗುವ ಶ್ರೀಕೃಷ್ಣನಿಗೂ ಇರಬಹುದಾದ ನಂಟಿನ ಬಗ್ಗೆ ಹೇಳಿದ್ದಾರೆ. 

ಯುರೋಪ್:

ಪ್ರಾಚೀನ ಯುರೋಪಿಯನ್ ಜನರು, ಅದರಲ್ಲೂ ಸೆಲ್ಟ್ಸ್ ಮತ್ತು ಜರ್ಮನ್ನರು ತಮ್ಮನ್ನು ದನುವಿನ ಮಕ್ಕಳೆಂದು ಹೇಳಿಕೊಂಡಿದ್ದಾರೆ. ಜರ್ಮನಿಯಲ್ಲಿ ದನು ಎಂದರೆ ದೇವತೆಗಳ ತಾಯಿ ಎಂದರ್ಥ ಹಾಗೂ ನದಿ ದೇವತೆ ಎಂದೂ ಅರ್ಥವಂತೆ. ಯುರೋಪಿನಲ್ಲಿ ಹರಿಯುವ ಡ್ಯಾನುಬ್ ನದಿಯೂ ಇದಾಗಿದೆ. ಸಪ್ತರ್ಷಿಗಳಲ್ಲಿ ಒಬ್ಬರಾದ ಕಶ್ಯಪ ಮಹರ್ಷಿಗಳಿಗೆ ದಕ್ಷನ ಹದಿಮೂರು ಪುತ್ರಿಯರಾದ ದಿತಿ, ಅದಿತಿ, ದನು, ಕಲಾ, ಗನಾಯು, ಕ್ರೋಧಾ, ಪ್ರಾಧಾ, ವಿನತೆ, ಕಪಿಲಾ, ಮುನಿ, ಕದ್ರು, ಸುರಸೆ ಮತ್ತು ಇಲೆ ಯರು ಇವರೆಲ್ಲರನ್ನು ಕೊಟ್ಟು ಮದುವೆ ಮಾಡಿರುತ್ತಾರೆ. ದನುವಿನಿಂದ ದಾನವರು ಹುಟ್ಟಿದರು. ಬಹುಶಃ ಇವರ ಸಂತಾನವೇ ಯುರೋಪಿಯನ್ನರು ಯಾಕಾಗಿರಬಾರದು.  ಕಾಕತಾಳೀಯವೆಂಬಂತೆ, ಜರ್ಮನ್ ಭಾಷೆಯಲ್ಲಿ ಬಹಳಷ್ಟು ಸಂಸ್ಕೃತ ಶಬ್ದಗಳಿವೆ, ಇಂಗ್ಲೀಷಿನಲ್ಲಿಯೂ ಹಲವಾರು ಸಂಸ್ಕೃತ ಶಬ್ದಗಳಿವೆ. 

ಸಂಸ್ಕೃತ ಮತ್ತು ಆಂಗ್ಲ ಭಾಷೆಯ ಕೆಲ ಶಬ್ದಗಳಲ್ಲಿನ ಸಾಮ್ಯತೆಗಳು

ಸಂಸ್ಕೃತ ಆಂಗ್ಲ ಭಾಷೆ

ಶ್ರೀ ಸರ್

ನಾಮ ನೇಮ್‌

ಕಫ ಕಾಫ್‌

ಮಾನವ ಮ್ಯಾನ್‌

ಮಿಥ್ಯ ಮಿಥ್‌

ಮಾತೃ ಮದರ್‌

ಪಿತೃ ಫಾದರ್‌ 

ಭ್ರಾತೃ  ಬ್ರದರ್‌

ನವ ನ್ಯೂ 

ತ್ರಿ ತ್ರೀ 

ಶರಣಂ ಸರೆನ್‌ಡರ್‌ 

ದಶ ಡೆಸಿ/ಡೆಕಾ

ಯುವ ಯೂತ್‌ 

ಶರ್ಕರ ಸುಕ್ರೊಸ್‌-ಶುಗರ್‌, 

ಮಾಧ್ಯಮ ಮೀಡಿಯಮ್‌

ಸ್ಥಾನ ಸ್ಟೇಶನ್

    ಹೀಗೆ ಅನೇಕ ಸಂಸ್ಕೃತ- ಆಂಗ್ಲ ಭಾಷೆಗಳ ಪದಗಳಲ್ಲಿ ಬಹಳಷ್ಟು ಸಾಮ್ಯತೆಗಳಿರುವುದನ್ನು ನಾವು ಕಾಣಬಹುದು. ಯೂರೋಪಿನ ಭಾಷೆಗಳ ಮೇಲೆ ಸಂಸ್ಕೃತ ಭಾಷೆಯ ಪ್ರಭಾವವಾಗಲು, ಬಹುಶಃ ಪ್ರಾಚೀನ ಭಾರತದಿಂದ ಯೂರೋಪಿನ ಕಡೆ ವಲಸೆ ಹೋದ ವೈದಿಕ ಸಂಸ್ಕೃತ ಭಾಷೆ ಮಾತನಾಡುತ್ತಿದ್ದ ಒಂದು ಗುಂಪು ಕಾರಣವಾಗಿರಬಹುದು. 


ಭಾರತದ ಸುತ್ತಮುತ್ತ ಇರುವ ಪಾಕಿಸ್ತಾನ್, ಅಫ್ಘನಿಸ್ಥಾನ್, ಕಿರ್ಗಿಸ್ತಾನ್, ತುರ್ಕಮೆನಿಸ್ತಾನ್, ಕಜಕಸ್ಥಾನ್, ಉಜ಼್ಬೇಕಿಸ್ತಾನ್,  ಈ ರಾಷ್ಟ್ರಗಳ ಹೆಸರಿನಲ್ಲಿ ಸ್ಥಾನ ಇದೆಯಲ್ಲ, ಇದರ ಮೂಲ ಸಂಸ್ಕೃತ ಭಾಷೆ, ಸ್ಥಾನ ಎಂದರೆ ಸ್ಥಳ ಎನ್ನುವ ಅರ್ಥ. ಸ್ಥಾನ ಎನ್ನುವುದು ಸ್ಟೇಶನ್ ಎಂದು ಆಂಗ್ಲಭಾಷೆಯಲ್ಲಿ ಬದಲಾವಣೆಗೊಂಡಿದೆ. ಪೋಲೀಸರು ಇರುವ ಸ್ಥಳ, ಪೋಲೀಸ್ ಸ್ಟೇಶನ್, ರೈಲು ಗಾಡಿಗಳು ನಿಲ್ಲುವ ಸ್ಥಳ ರೈಲ್ವೇ ಸ್ಟೇಶನ್, ಇತ್ಯಾದಿ.

    ಪ್ರಸ್ತುತ ದೇಶಗಳ ಹೆಸರು, ಹಿಂದೊಮ್ಮೆ ಸಂಸ್ಕೃತದ ಹೆಸರುಗಳನ್ನು ಹೊಂದಿದ್ದವು, ಉದಾಹರಣೆಗೆ, ಲಾವಾ ದ್ವೀಪ (ಲಾವೋಸ್), ವರುಣ್ ದ್ವೀಪ (ಬೋರ್ನಿಯೊ), ಶ್ಯಾಮ್ ದೇಶ್ (ಥೈಲ್ಯಾಂಡ್), ಚಂಪಾ ದೇಶ್ (ವಿಯೆಟ್ನಾಂ), ಬ್ರಹ್ಮ ದೇಶ್ (ಬರ್ಮಾ/ ಮ್ಯಾನ್ಮಾರ್), ಭು ಉತ್ತನ್ ( ಭೂತಾನ್) ಮತ್ತು ಮಲಯ ದ್ವೀಪ್ (ಮಲೇಷ್ಯಾ).  ಸಿಂಗಪುರ.  ಒಂದು ಮೂಲ ಹೆಸರು, ಕಾಲಕ್ರಮೇಣ ವಿಭಿನ್ನ ರೂಪ ಪಡೆಯುವುದು ನಮಗೆ ಗೊತ್ತಿದೆ, ಮಂಗಳೂರಿನಲ್ಲಿ ಹಂಪನಕಟ್ಟೆ ಎನ್ನುವ ಸ್ಥಳವಿದೆ. ನೂರುವರ್ಷಗಳ ಹಿಂದೆ ಅದು ಅಪ್ಪಯ್ಯನಕಟ್ಟೆ ಎಂದಾಗಿತ್ತು, ಇತ್ತೀಚೆಗೆ ದೊರೆತ ಶಾಸನ ಒಂದರಿಂದ ಈ ಮಾಹಿತಿ ತಿಳಿಯಿತು. ಬಯಲು ಸೀಮೆಯಲ್ಲಿ ಸ್ವಲ್ಪ ಎನ್ನುವುದಕ್ಕೆ ರವೊಷ್ಟು ಎನ್ನುತ್ತಾರೆ, ಅದರ ಅರ್ಥ ರವೆಯಷ್ಟು, ಆಡುಮಾತಿನಲ್ಲಿ ಅದು ರವೊಷ್ಟು ಎನ್ನುವ ಅರ್ಥ ಪಡೆದಿದೆ. ವಿಜಾಪುರ/ಬಿಜಾಪುರದ ಹೆಸರು ವಿಜಯಪುರ ಎನ್ನುವುದಾಗಿತ್ತು, ಆಡು ಬಳಕೆಯಲ್ಲಿ ಅದು ವಿಜಾಪುರ/ಬಿಜಾಪುರ ಎಂದಾಗಿದೆ. ಹೀಗೆ ಹುಡುಕುತ್ತ ಹೋದಂತೆಲ್ಲ ಸಹಸ್ರಾರು ಶಬ್ದಗಳು ಅದರ ಮೂಲ ಸ್ವರೂಪದಿಂದ ಬದಲಾಗಿರುವುದು ಕಂಡು ಬರುತ್ತದೆ. 

    ಇತಿಹಾಸ ಎಂದರೆ ದಾಖಲೆ ಪುರಾವೆಗಳು ಇರಲೇ ಬೇಕೆಂದು ಎನ್ನುವುದನ್ನು ಬ್ರಿಟೀಷರು ಪ್ರತಿಪಾದಿಸಿ, ಅದನ್ನೇ ನಮ್ಮ ಜನರ ತಲೆಯಲ್ಲಿ ತುಂಬಿ ಹೋಗಿದ್ದಾರೆ. ಅದನ್ನೇ ನಾವು ಅನುಸರಿಸುತ್ತ, ಈ ನೆಲದ ಮೂಲ ಇತಿಹಾಸವನ್ನು ಮರೆಯುವ ಪ್ರಯತ್ನವನ್ನ ನಾವು ಮಾಡುತ್ತಿರುವುದು ವಿಷಾದನೀಯ. ಅದೃಷ್ಟವಶಾತ್ ಸನಾತನ ಧರ್ಮದಲ್ಲಿ ಸಾವಿರಾರು ವರ್ಷಗಳ ಹಿಂದಿನ ವೇದ ಉಪನಿಷತ್ ಗಳು, ರಾಮಾಯಣ ಮಹಾಭಾರತ, ಪುರಾಣ ಕಥೆಗಳು ಇತ್ಯಾದಿಗಳನ್ನ ಶ್ರುತಿ ಮತ್ತು ಸ್ಮೃತಿ ವಿಧಾನದ ಮೂಲಕ ತಲುಪಿಸುವ ವ್ಯವಸ್ಥೆಯನ್ನ ಮಾಡಿದ್ದರಿಂದ, ಸಹಸ್ರಾರು ತಲೆಮಾರುಗಳಿಂದ ಇಂದಿನ ತಲೆಮಾರಿನವರಿಗೆ ಮಾಹಿತಿ ಲಭ್ಯವಾಗುತ್ತಿದೆ.

ಬರಹ:- ಪಿ.ಎಸ್.ರಂಗನಾಥ,
ಮಸ್ಕತ್ - ಒಮಾನ್ ರಾಷ್ಟ್ರ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Click below headings