ನಾನು ಕಳೆದ ಎರಡು ದಶಕಗಳಿಂದ ಗಲ್ಫ್ ರಾಷ್ಟಗಳಲ್ಲಿ ಉದ್ಯೋಗ ಮಾಡುತ್ತಾ ನೆಲೆಸಿದ್ದೇನೆ. ಅರಬ್ಬರೊಂದಿಗೆ ವ್ಯವಹರಿಸುವಾಗ, ಅವರ ಅರೇಬಿಕ್ ಭಾಷೆಯಲ್ಲಿ ನಮ್ಮ ಭಾರತೀಯ ಭಾಷೆಗಳ ಕೆಲವು ಶಬ್ದಗಳಿರುವುದನ್ನು ನಾನು ಗಮನಿಸಿದ್ದೇನೆ. ಇತ್ತೀಚೆಗೆ ಶಾಪಿಂಗ್ ಮಾಲ್ ಒಂದರಲ್ಲಿ ಸ್ಥಳೀಯ ವ್ಯಕ್ತಿಯೊಬ್ಬರು ಅಲ್ಲಿದ್ದ ಯುವಕನ ಬಳಿ 'ವೇನ್ ಸುಕ್ಕರ್' (ಸಕ್ಕರೆ ಎಲ್ಲಿದೆ?) ಎಂದು ಕೇಳುತ್ತಿದ್ದರು. ಕೆಲವೊಮ್ಮೆ ವಿದೇಶಿಯರು ನಮ್ಮ ಶಬ್ದಗಳನ್ನು ಅವರ ಧೈನಂದಿನ ಚಟುವಟಿಕೆಗಳಲ್ಲಿ ಬಳಸುವುದನ್ನ ಕೇಳುವುದಿಕ್ಕೆ ಖುಷಿ ಎನಿಸುತ್ತದೆ. ಆ ಕ್ಷಣದಲ್ಲಿ ನಮ್ಮ ಭಾರತ ದೇಶ ಜಗತ್ತಿಗೆ ಹಲವಾರು ಕೊಡುಗೆಗಳನ್ನ ನೀಡಿರುವುದು ಮನಸ್ಸಿನಲ್ಲಿ ಹಾಡು ಹೋಯಿತು.
ಸಕ್ಕರೆ ಪದದ ಮೂಲ ಸಂಸ್ಕೃತ:
ಈ ಸಕ್ಕರೆ ಪದದ ಮೂಲ ಸಂಸ್ಕೃತದ 'ಶರ್ಕರ' ಯಿಂದ ಬಂದಿದೆ,
ಶರ್ಕರಾ (Sharkara) - ಅಂದರೆ ಪುಡಿಮಾಡಿದ ಅಥವಾ ಹರಳು ಸಕ್ಕರೆ. ಪರ್ಶಿಯನ್ ಭಾಷೆಯಲ್ಲಿ 'ಶಕರ್' (Shakar) ಆಯಿತು, ನಂತರ ಅರೇಬಿಕ್‌ನಲ್ಲಿ 'ಸುಕ್ಕರ್' (Sukkar) ಎಂದು ಬದಲಾಯಿತು. ಇಟಾಲಿಯನ್‌ನಲ್ಲಿ 'Zucchero', ಫ್ರೆಂಚ್‌ನಲ್ಲಿ 'Sucre' ಮತ್ತು ಇಂಗ್ಲಿಷ್‌ನಲ್ಲಿ 'Sugar' ಎಂದಾಯಿತು. ಅಷ್ಟೇ ಅಲ್ಲದೆ ಬಾರತೀಯ ಬಾಷೆಗಳಲ್ಲಿ ಸಕ್ಕರೆ ಶಬ್ದವನ್ನು ಅಲ್ಪ ಸ್ವಲ್ಪ ಬದಲಾವಣೆ ಮಾಡಿ ಉಪಯೋಗಿಸುತ್ತಿರುವುದು ನಮಗೆಲ್ಲರಿಗೂ ತಿಳಿದಿದೆ.
ಸಕ್ಕರೆಯ ಭಾಷಾ ಪ್ರಯಾಣ ಹೀಗಿದೆ:
ಸಂಸ್ಕೃತ (ಶರ್ಕರ) → ಪರ್ಶಿಯನ್ (ಶಕರ್) → ಅರೇಬಿಕ್ (ಸುಕ್ಕರ್) → ಲ್ಯಾಟಿನ್ (ಸಕ್ಕರಮ್) → ಇಂಗ್ಲಿಷ್ (ಶುಗರ್).
ಸಕ್ಕರೆ: ಜಗತ್ತಿಗೆ ಸಿಹಿ ಕೊಡುಗೆ ನೀಡಿದ ಭಾರತ
ಯುರೋಪಿಯನ್ನರು ಸಕ್ಕರೆ ಬಳಸಲು ಅರಬ್ಬರ ಪಾತ್ರ ಬಹಳ ಮಹತ್ವದ್ದಾಗಿದೆ. ಅರಬ್ಬರು ಮತ್ತು ಭಾರತೀಯರ ನಡುವೆ ಸಾವಿರಾರು ವರ್ಷಗಳಿಂದ ಸಮುದ್ರ ಮಾರ್ಗದ ವ್ಯಾಪಾರ ನಡೆಯುತ್ತಿರುವುದರಿಂದ ಅರಬ್ಬರು ಸಕ್ಕರೆಯನ್ನು ಬಾರತದಿಂದ ಖರೀದಿಸಿ ಉಪಯೋಗಿಸುತ್ತಿದ್ದರು. ಅಷ್ಟೇ ಅಲ್ಲದೆ, ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾ, ಯುರೋಪ್ ರಾಷ್ಟ್ರಗಳಿಗೂ ಮಾರುತಿದ್ದರು. ಅರೇಬಿಕ್ ಭಾಷೆಯಲ್ಲಿ ಕೆಲ ಸಾಂಬಾರ ಪದಾರ್ಥಗಳು ಮತ್ತು ದಿನಸಿ ವಸ್ತುಗಳ ಹೆಸರುಗಳು ಭಾರತೀಯ ಮೂಲದ್ದೇ ಆಗಿವೆ. ಸಾವಿರಕ್ಕೂ ಹೆಚ್ಚು ವರ್ಷಗಳ ಹಿಂದೆಯೇ ಅರೇಬಿಕ್‌ನಲ್ಲಿ ಇದು 'ಸುಕ್ಕರ್' ಎಂದು ಕರೆಯಲ್ಪಡುತ್ತಿತ್ತು.
ಕ್ರಿ.ಶ. 7ನೇ ಶತಮಾನದಲ್ಲಿ ಚೀನಾದ ಚಕ್ರವರ್ತಿ ಟೈಜಾಂಗ್ ಭಾರತಕ್ಕೆ ತನ್ನ ದೂತರನ್ನು ಕಳುಹಿಸಿ ಸಕ್ಕರೆ ತಯಾರಿಸುವ ಕಲೆ ಕಲಿಯಲು ಆದೇಶಿಸಿದ್ದನಂತೆ. ಅವರು ಕಲಿತು ಬಂದ ನಂತರ ಚೀನಾದಲ್ಲಿ ಸಕ್ಕರೆ ವ್ಯಾಪಕವಾಗಿ ತಯಾರಾಗಲು ಶುರುವಾಯಿತು.
ಮಧ್ಯಕಾಲೀನ ಯುಗದಲ್ಲಿ ಅರಬ್ಬರು ಮತ್ತು ಪರ್ಶಿಯನ್ನರ ಮೂಲಕ ಯುರೋಪಿಯನ್ನರಿಗೆ ಸಕ್ಕರೆಯ ಪರಿಚಯವಾಯಿತು. ಆರಂಭದಲ್ಲಿ ಇದು ತುಂಬಾ ದುಬಾರಿಯಾಗಿದ್ದುದರಿಂದ ಇದನ್ನು 'ಬಿಳಿ ಚಿನ್ನ' (White Gold) ಎಂದು ಕರೆಯಲಾಗುತ್ತಿತ್ತು ಮತ್ತು ಇದನ್ನು ಕೇವಲ ರಾಜಮನೆತನದವರು ಮಾತ್ರ ಬಳಸುತ್ತಿದ್ದರು.
ಸಕ್ಕರೆಯ ಉದ್ಯಮದ ಮಹತ್ವವನ್ನು ಅರಿತ ಯುರೋಪಿನ ರಾಷ್ಟ್ರಗಳು 15ನೇ ಮತ್ತು 16ನೇ ಶತಮಾನಗಳಲ್ಲಿ ಕಬ್ಬಿನ ಕೃಷಿಯನ್ನು ತಮ್ಮ ವಸಾಹತು ಪ್ರದೇಶಗಳಾದ ಕ್ಯಾರಿಬಿಯನ್ ದ್ವೀಪಗಳು, ಬ್ರೆಜಿಲ್ ಮತ್ತು ಇತರ ಉಷ್ಣಪ್ರದೇಶಗಳಲ್ಲಿ ಆರಂಭಿಸಿದರು. ಇದರಿಂದ ಸಕ್ಕರೆ ತಯಾರಿಕೆ ಉದ್ಯಮ ಅತಿ ವೇಗವಾಗಿ ಬೆಳೆಯಿತು. ಕಾಲಕ್ರಮೇಣ ಸಕ್ಕರೆ ಶ್ರೀಮಂತರಿಗೆ ಮಾತ್ರವಲ್ಲದೆ ಸಾಮಾನ್ಯ ಜನರಿಗೂ ಲಭ್ಯವಾಯಿತು.
ಗುಪ್ತ ಸಾಮ್ರಾಜ್ಯದ ಅವಧಿಯಲ್ಲಿ ಸುಧಾರಣೆ ಕಂಡಿದ್ದ ಸಕ್ಕರೆ ತಯಾರಿಸುವ ಪ್ರಕ್ರಿಯೆ:
ಪ್ರಪಂಚದಲ್ಲೇ ಮೊಟ್ಟಮೊದಲ ಬಾರಿಗೆ ಕಬ್ಬಿನ ಹಾಲಿನಿಂದ ಸಕ್ಕರೆಯ ಹರಳುಗಳನ್ನು ತಯಾರಿಸುವ ತಂತ್ರಜ್ಞಾನವನ್ನು ಭಾರತೀಯರು ಅಭಿವೃದ್ಧಿಪಡಿಸಿದ್ದರು. ಕ್ರಿ.ಪೂ. 5ನೇ ಶತಮಾನದ ಹೊತ್ತಿಗೆ ಭಾರತದಲ್ಲಿ ಸಕ್ಕರೆ ತಯಾರಿಕೆ ಪ್ರಚಲಿತದಲ್ಲಿತ್ತು. ಗುಪ್ತ ಸಾಮ್ರಾಜ್ಯದ ಅವಧಿಯಲ್ಲಿ (ಕ್ರಿ.ಶ. 350) ಸಕ್ಕರೆಯನ್ನು ಹರಳು ರೂಪಕ್ಕೆ ತರುವ ಪ್ರಕ್ರಿಯೆ ಹೆಚ್ಚಿನ ಸುಧಾರಣೆ ಕಂಡಿತ್ತು ಮತ್ತು ಈ ಸಮಯದಲ್ಲಿ ಸಕ್ಕರೆ ತಯಾರಿಕೆಯ ತಂತ್ರಜ್ಞಾನವು ಅತ್ಯುನ್ನತ ಮಟ್ಟ ತಲುಪಿತ್ತು. ಕಬ್ಬಿನ ರಸವನ್ನು ಗಟ್ಟಿ ಮಾಡಿ ಅದನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡುವ ಪ್ರಕ್ರಿಯೆ ಭಾರತದಲ್ಲಿ ಶುರುವಾಯಿತು. ಇದನ್ನು 'ಖಂಡ' ಎಂದು ಕರೆಯುತ್ತಿದ್ದರು, ಇದೇ ಇಂದಿನ ಇಂಗ್ಲಿಷ್ ಪದ 'Candy' ನ ಮೂಲ.
ಸಕ್ಕರೆಗೆ ಮಾರುಹೋಗಿದ್ದ ಗ್ರೀಕರು:
ಅಲೆಕ್ಸಾಂಡರ್ ಮತ್ತು ಆತನ ಸೈನ್ಯ ಕ್ರಿ.ಪೂ. 326ರಲ್ಲಿ ಭಾರತಕ್ಕೆ ಬಂದಾಗ ಇಲ್ಲಿ ಬಳಕೆಯಲ್ಲಿದ್ದ ಸಕ್ಕರೆಯನ್ನು ಕಂಡು ಆಶ್ಚರ್ಯಚಕಿತರಾಗಿದ್ದರು. ಅಲೆಕ್ಸಾಂಡರ್‌ನ ನೌಕಾಪಡೆಯ ಮುಖ್ಯಸ್ಥ ನಿಯಾರ್ಕಸ್ (Nearchus) ತನ್ನ ದಾಖಲೆಗಳಲ್ಲಿ ಹೀಗೆ ಬರೆದಿದ್ದಾನೆ: "ಭಾರತದಲ್ಲಿ ಜೇನುನೊಣಗಳ ಸಹಾಯವಿಲ್ಲದೆಯೇ ಜೇನನ್ನು ನೀಡುವ ಒಂದು ಅದ್ಬುತ ಎಂದು ವರ್ಣಿಸಿದ್ದ.
ಯುರೋಪಿಯನ್ನರು ಕಬ್ಬನ್ನು ಮೊಟ್ಟಮೊದಲ ಬಾರಿಗೆ ನೋಡಿದ್ದು ಆಗಲೇ ಎಂದು ವರ್ಲ್ಡ್ ಹಿಸ್ಟರಿ ಎನ್ಸೈಕ್ಲೋಪೀಡಿಯಾ ತಿಳಿಸುತ್ತದೆ. ಅಂದಿನ ಕಾಲಕ್ಕೆ ಗ್ರೀಕರಿಗೆ ಕೇವಲ ಜೇನುತುಪ್ಪ ಮಾತ್ರ ಸಿಹಿ ಯಾದ ವಸ್ತುವೆಂದು ತಿಳಿದಿತ್ತು. ಹಾಗಾಗಿ, ಕಬ್ಬಿನ ಹಾಲಿನಿಂದ ತಯಾರಿಸಿದ ಈ ವಸ್ತುವನ್ನು ಅವರು 'ಜೇನು ಕಲ್ಲು ' (Stone Honey) ಎಂದು ಕರೆದಿದ್ದರು. ಆಶ್ಚರ್ಯ ಎಂದರೆ, ಸಕ್ಕರೆಯನ್ನು ಒಂದು ಅದ್ಭುತ ಔಷಧ ವೆಂದು ಪರಿಗಣಿಸಿದ್ದು. ಗ್ರೀಕರು ಆರಂಭದಲ್ಲಿ ಸಕ್ಕರೆಯನ್ನು 'ಇಂಡಿಯನ್ ಸಾಲ್ಟ್' (Indian Salt) ಎಂದು ಕರೆಯುತ್ತಿದ್ದರು. ಹಲವು ಶತಮಾನಗಳವರೆಗೆ ಯುರೋಪ್‌ನಲ್ಲಿ ಸಕ್ಕರೆಯು ಕೇವಲ ಒಂದು ದುಬಾರಿ ಔಷಧಿಯಾಗಿ ಮಾತ್ರ ಬಳಕೆಯಲ್ಲಿತ್ತು.
ಹಿಂದಿಯಲ್ಲಿ 'ಚೀನಿ':
ಹಿಂದಿಯಲ್ಲಿ ಸಕ್ಕರೆಯನ್ನು 'ಚೀನಿ' (Cheeni) ಎಂದು ಕರೆಯಲು ಕಾರಣವೆಂದರೆ, 7ನೇ ಶತಮಾನದಲ್ಲಿ ಚೀನಾದವರು ಭಾರತದ ಈ ತಂತ್ರಜ್ಞಾನವನ್ನು ಕಲಿತು, ಅದನ್ನು ಮತ್ತಷ್ಟು ಸಂಸ್ಕರಿಸಿ ಸ್ಪಟಿಕದಂತಹ ಬಿಳಿ ಸಕ್ಕರೆಯನ್ನು ತಯಾರಿಸಿದರು. ಇದು ಭಾರತಕ್ಕೆ ಮರಳಿ ಬಂದಾಗ, ಚೀನಾದಿಂದ ಬಂದಿದ್ದರಿಂದ ಇದಕ್ಕೆ 'ಚೀನಿ' ಎಂದು ಹೆಸರಾಯಿತು. ಹೀಗಾಗಿ ಉತ್ತರ ಬಾರತದವರು ಚೀನಿ ಎಂದು ಇಂದಿಗೂ ಬಳಸುತ್ತಿದ್ದಾರೆ.
ಭಾರತವು ಕಬ್ಬಿನಿಂದ ಸಕ್ಕರೆ ತಯಾರಿಸುವುದನ್ನು ಕಂಡುಹಿಡಿದಿದ್ದರೂ, ಅದು ಹೆಚ್ಚಾಗಿ ಬೆಲ್ಲ ಅಥವಾ ಕಂದು ಬಣ್ಣದ ಪುಡಿಯ ರೂಪದಲ್ಲಿತ್ತು.
ವಿವಿಧ ಭಾಷೆಗಳಲ್ಲಿ ಸಕ್ಕರೆ:
ಅರೇಬಿಕ್: سُكَّر (ಸುಕ್ಕರ್)
ಆರ್ಮೇನಿಯನ್: շաքար (ಶಾಕರ್)
ಕ್ರೊಯೇಷಿಯನ್: šećer (ಶೆಚರ್)
ಜೆಕ್: cukr (ಚುಕರ್)
ಡ್ಯಾನಿಶ್: sukker (ಸುಕ್ಕರ್)
ಡಚ್: suiker (ಸೈಕರ್)
ಹಿಂದಿ: चीनी (ಚೀನಿ)
ಫಿನ್ನಿಶ್: sokeri (ಸೊಕೆರಿ)
ಫ್ರೆಂಚ್: sucre (ಸುಕ್ರೆ)
ಜರ್ಮನ್: Zucker (ಜುಕರ್)
ಗ್ರೀಕ್: ζάχαρη (ಜಾಖರಿ)
ಇಟಾಲಿಯನ್: zucchero (ಝುಕೇರೋ)
ನಾರ್ವೇಜಿಯನ್: sukker (ಸುಕ್ಕರ್)
ಪೋಲಿಷ್: cukier (ಚುಕಿಯರ್)
ಪೋರ್ಚುಗೀಸ್: açúcar (ಅಜುಕ್ಕರ್)
ರೋಮೇನಿಯನ್: zahăr (ಜಾಹರ್)
ರಷ್ಯನ್: сахар (ಸಾಖರ್)
ಸ್ಪ್ಯಾನಿಷ್: azúcar (ಅಜುಕ್ಕರ್)
ಸ್ವೀಡಿಷ್: socker (ಸೊಕ್ಕರ್)
ಟರ್ಕಿಶ್: şeker (ಶೆಕರ್)
ಉಕ್ರೇನಿಯನ್: цукор (ಚುಕೋರ್)
ನಮ್ಮ ಸಕ್ಕರೆ ಶಬ್ದವು ವಿವಿಧ ಭಾಷೆಗಳಲ್ಲಿ ಹೇಗೆಲ್ಲ ರೂಪಾಂತರ ಗೊಂಡಿದೆ ಎಂದು ಮೇಲಿನ ಶಬ್ದಗಳನ್ನು ಗಮನಿಸಿದಿರೆ ತಿಳಿಯುತ್ತದೆ.
ಭಾರತೀಯರು ಜಗತ್ತಿಗೆ ನೀಡಿದ ಶ್ರೇಷ್ಠ ಕೊಡುಗೆಗಳಲ್ಲಿ ಸಕ್ಕರೆಯೂ ಒಂದು. ಇಂದು ಇದು ಜಗತ್ತಿನ ಬೃಹತ್ ಉದ್ಯಮ ವಾಗಿ ಬೆಳೆದಿರುವದಕ್ಕೆ ಬಾರತೀಯರು ಕಾರಣ ಎನ್ನುವದು ಹೆಮ್ಮೆ ಎನಿಸುತ್ತದೆ.
ಬರಹ: ಪಿ.ಎಸ್. ರಂಗನಾಥ
ಮಸ್ಕತ್, ಒಮಾನ್ ರಾಷ್ಟ್ರ.
.jpeg)
.jpeg)


.jpeg)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ