ಗುರುವಾರ, ಸೆಪ್ಟೆಂಬರ್ 2, 2010

“ಹೌದಲ್ವಾ ನಾವು ಎಂಥಾ ತಪ್ಮಾಡ್ತಾಯಿದೀವಿ“


ದಟ್ಸ ಕನ್ನಡದ ಶ್ಯಾಮ್ ಸುಂದರ ಸರ್ ಅವರ ಪ್ರೋತ್ಸಾಹ ದಿಂದ ನನ್ನ ಮೊದಲ ಕಥೆ ದಟ್ಸ ಕನ್ನಡ.ಕಾಂ ನಲ್ಲಿ ಪ್ರಕಟವಾಯಿತು. ನನ್ನ ಬರಹದ ಪಯಣ ಹೀಗೆ ಮುಂದುವರಿಯಲಿ ಎಂದು ನನ್ನ ಸ್ವಂತ ಬ್ಲಾಗ್ ಒಂದನ್ನು ಪ್ರಾರಂಬಿಸಲಿಚ್ಚಿಸಿದೆ. ಅದರ ಫಲ ಈ “ತುಂತುರು”
ದಟ್ಸ್ ಕನ್ನಡ ದಲ್ಲಿ ಪ್ರಕಟವಾದ ನನ್ನ ಮೊದಲ ಕಥೆ ಯನ್ನು ಈ ಕೆಳಗೆ ಮರು ಪ್ರಕಟಿಸುತಿದ್ದೇನೆ.
ಹೌದಲ್ವಾ ನಾವು ಎಂಥಾ ತಪ್ಮಾಡ್ತಾಯಿದೀವಿ
ಅದೊಂದು ಸರಳ ಸಾಹಿತ್ಯ ಸಮಾರಂಭ. ಆ ಊರಿನ ಕೆಲ ಸಾಹಿತ್ಯಾಸಕ್ತರು, ಪ್ರೌಢಶಾಲೆಯ ಕನ್ನಡ ಪಂಡಿತರು, ಪಕ್ಕದ ಊರಿನ ಕೆಲ ಸಾಹಿತ್ಯಾಸಕ್ತರು, ತಾಲೂಕಿನಲ್ಲಿ ಹೆಸರು ಮಾಡಿದ ಕೆಲ ಸಾಹಿತಿಗಳು ಆಗಮಿಸಿದ್ದರು. ಸುಮಾರು ಜನರು ತುಂಬಿದ್ದ ಆ ಸಮಾರಂಭವನ್ನು ಅದೇ ಊರಿನಲ್ಲಿದ್ದ ರಂಗಮಂಟಪದಲ್ಲಿ ಅಲ್ಲಿಯ ಪಿಯುಸಿ ಕಾಲೇಜಿನ ಪ್ರಾಂಶುಪಾಲರು ಆಯೊಜಿಸಿದ್ದರು. ಆದಿನದ ವಿಶೇಷವೆಂದರೆ ಎಸ್.ಎಲ್. ಭೈರಪ್ಪ ನವರ ಆವರಣ ಕಾದಂಬರಿಯ ಬಗ್ಗೆ ಚರ್ಚೆ. ಪ್ರೇಕ್ಷಕರಾಗಿ ಶಾಲಾಕಾಲೇಜಿನ ಬಹುತೇಕ ಶಿಕ್ಷಕರೆಲ್ಲರು ಆಗಮಿಸಿದ್ದರು. ಅದರಲ್ಲಿ ಕನ್ನಡ ಮೇಷ್ಟ್ರಾದ ಚನ್ನಬಸವಯ್ಯ ಮತ್ತು ವಿಜ್ಞಾನದ ಮೇಷ್ಟ್ರು ರಾಜಶೇಖರಪ್ಪನವರು ಸಹ ಬಂದಿದ್ದರು. ಚರ್ಚೆ ಬಹು ಗಂಭೀರವಾಗಿ ನಡೆಯುತಿತ್ತು. ಕೆಲವೊಂದು ಸಾರಿ ವಾದವಿವಾದಗಳು ತಾರಕಕ್ಕೇರುವ ಸಮಯದಲ್ಲಿ ಕೆಲ ಹಿರಿಯರು ಯಾವುದೇ ಅತಿರೇಕ ಸಂಭವಿಸದಂತೆ ಎಲ್ಲರನ್ನು ಶಾಂತಗೊಳಿಸಿ ಅವರವರ ವಾದ ಮಂಡಿಸಲು ಅವಕಾಶ ಮಾಡಿಕೊಡುತ್ತಿದ್ದರು.
ಚರ್ಚೆ ಹೀಗೆ ಸಾಗುವಷ್ಟರಲ್ಲಿ ರಾಜಶೇಖರ್ ಮೇಷ್ಟ್ರು ಅವರ ವಾದ ಮಂಡಿಸುವ ಸಮಯ ಬಂತು. ಅವರು ತಮಗನಿಸಿದ್ದನ್ನು ಹೇಳುವುದಕ್ಕೆ ಹೊರಟಿದ್ದಾಗ, ಅವರು ಕೈಯಲ್ಲಿ ಹಿಡಿದುಕೊಂಡಿದ್ದ ಮೈಕ್ ಕೆಟ್ಟುಹೋಯಿತು. ಸೂಜಿಮೊನೆ ಕೆಳಗೆಬಿದ್ದಾಗ ಶಬ್ದ ಕೇಳುವಷ್ಟು ನಿಶ್ಯಬ್ದ ಸಭಾಂಗಣದಲ್ಲಿತ್ತು. ಮೈಕ್ ಕಿರಿಕಿರಿ ಶುರುವಾದ ಮೇಲೆ ಜನರ ಮಾತುಗಳು ಜತೆಗೆ ಕೆಲವರಲ್ಲಿ ಅಸಹನೆ ಶುರುವಾಯಿತು. ಎಲ್ಲರ ಗಮನ ಮೈಕ್-ಸೆಟ್ ಒದಗಿಸಿದ್ದ ತಿಪ್ಪೆಸ್ವಾಮಿ ಕಡೆಗೆ, ಆದರೆ ಅವರು ಅದೇನೊ ಕೆಲಸ ಅಂತ ಆಗತಾನೆ ಹೊರಗಡೆ ಹೋಗಿದ್ದರು. ಅಲ್ಲೆ ಮೂಲೆಲಿ ನಿಂತುಕೊಂಡಿದ್ದ ಅವರ ಮಗ ಪ್ರಕಾಶ, ಈ ಚರ್ಚೆಗೆ ತನಗೆ ಎನೂ ಸಂಬಂಧವಿಲ್ಲದಂತೆ ನಿಂತುಕೊಂಡಿದ್ದ.
ಅವನಿಗೆ ಈ ಸಾಹಿತ್ಯ, ಚರ್ಚೆ ಅದೇನೋ ಅರ್ಥವಾಗುತ್ತಿರಲಿಲ್ಲ. ಅಲ್ಲಿದ್ದ ಚನ್ನಬಸವಯ್ಯ ಮೇಷ್ಟ್ರು “ಲೇ ಪ್ರಕಾಶ ನಿಮ್ಮಪ್ಪ ಎತ್ಲಾಗೋದ್ನಲೆ? ಹೋಗಿ ಹುಡುಕ್ಕೊಂಡು ಬಾ” ಎಂದು ಹೇಳಿದಾಗ, ಅವನು ಮರುಮಾತಾಡದೆ ತಲೆ ಬಗ್ಗಿಸಿಕೊಂಡು ಮೈಕ್ ಸೆಟ್ ಕಡೆ ಬಂದ. ಅವನು ಈ ಕಡೆ ಬರುವುದು ನೋಡಿ “ಲೇ ನಿನಗೇ ಹೇಳಿದ್ದು, ನಿಮ್ಮಪ್ಪನ್ನ ಕರಕೊಂಡು ಬಾ ಅಂತ” ಅದಕ್ಕೆ ಉತ್ತರವಾಗಿ ಪ್ರಕಾಶ “ಸಾರ್ ನಾನೆ ನೋಡ್ತಿನಿ ಬಿಡಿ” ಅಂತ ಹೇಳಿ ಕೆಲ ನಿಮಿಷಗಳಲ್ಲಿ ವೈರ್ ಗಳನ್ನು ಚೆಕ್ ಮಾಡಿ ಅದನ್ನು ಸರಿಮಾಡಿ, ಮೈಕ್ ಟೆಸ್ಟಿಂಗ್ 123 ಅಂತ ಕಿರುಚಿದ. ಸರಿಯಾಗಿ ಕೇಳಿಸುತ್ತಾ ಇದೆ ಅಂತ ಖಾತರಿ ಮಾಡಿಕೊಂಡು ರಾಜಶೇಖರ್ ಮೇಷ್ಟ್ರಿಗೆ “ಮಾತಾಡಿ ಸಾರ್” ಅಂದು ಕೊಟ್ಟ. ಚರ್ಚೆ ಮುಂದುವರಿಯಿತು. ಆದರೆ ಚನ್ನಬಸವಯ್ಯ ಮೇಷ್ಟ್ರಿಗೆ “ನನ್ನ ಮಾತು ಕೇಳಲಿಲ್ವಲ್ಲ” ಅನ್ನುವ ಅಸಮಾಧಾನವಿತ್ತು. ಒಟ್ಟಿನಲ್ಲಿ ತೊಂದರೆ ನಿವಾರಣೆಯಾಯಿತಲ್ಲ ಎಂದು ಅಂದುಕೊಂಡು ಸುಮ್ಮನಾದರು.
ಕೆಲವರು ಅವನ ಕಾರ್ಯಕ್ಷಮತೆಯನ್ನು ಮೆಚ್ಚಿ ಶಹಬ್ಬಾಸ್ಗಿರಿಯನ್ನು ಕೊಟ್ಟರು. ಪ್ರಕಾಶನಿಗೆ ಒಳಗೊಳಗೆ ಖುಷಿಯಾಯಿತು. ಮೇಷ್ಟ್ರುಗಳ ಮುಂದೆ ಮತ್ತು ಅಲ್ಲಿನ ಹಿರಿಯರ ಮುಂದೆ ಹೊಗಳಿಸಿಕೊಂಡಿದ್ದಕ್ಕೆ ಉಬ್ಬಿ ಹೋಗಿದ್ದ. ಆ ಖುಷಿಯಲ್ಲಿ ಸಮಾರಂಭ ಮುಗಿದಮೇಲೆ ಆ ಊರಿನ ಟೆಂಟ್ ನಲ್ಲಿ ಹಾಕಿದ್ದ ಕನ್ನಡ ಸಿನಿಮಾ ನೊಡುವುದಕ್ಕೆ ಹೋಗಿದ್ದ.
ಭಾನುವಾರ ರಜೆ ಮುಗಿದು ಸೋಮವಾರ ಎಂದಿನಂತೆ ಶಾಲೆ ಪ್ರಾರಂಭವಾದಾಗ ಎಲ್ಲರಂತೆ ಶಾಲೆಗೆ ಹೋಗಿದ್ದ. ಬೆಳಗಿನ 3 ಪಿರಿಯುಡ್ ಮುಗಿದು 4ನೇ ಪಿರಿಯಡ್ ಕನ್ನಡ ಪಾಠಕ್ಕೆ ಚನ್ನಬಸವಯ್ಯ ಮೇಷ್ಟ್ರು ಬಂದರು. ತಮ್ಮ ಪಾಡಿಗೆ ತಾವು ಪಾಠ ಮಾಡುತ್ತ ಇದ್ದರು. ಇದ್ದಕ್ಕಿದ್ದ ಹಾಗೆ ಅವರ ಗಮನ ಮೂಲೆಲಿ ಇದ್ದ ಪ್ರಕಾಶನ ಕಡೆಗೆ ಹೋಯಿತು. ಅವನು ಬಾಗಿಲಿಂದ ಆಚೆಗೆ ಕಾಣುತ್ತಿದ್ದ ಮರದ ಮೇಲೆ ಇರುವ ಮಂಗಗಳ ಕಡೆ ನೋಡುತ್ತ ಇದ್ದ. ಬೋರ್ಡ್ ಅನ್ನು ಒರೆಸಲು ಉಪಯೋಗಿಸುವ ಡಸ್ಟರ್ ತೆಗೆದುಕೊಂಡು ಅವನ ಮುಖದ ಮೇಲೆ ಹೊಡೆದರು. ಬಾಹ್ಯಲೋಕದಲ್ಲಿ ವಿಹರಿಸುತ್ತಿದ್ದ ಪ್ರಕಾಶ ಮುಖದ ಮೇಲೆ ಡಸ್ಟರ್ ಬಿದ್ದಾಗ ಎಚ್ಚೆತ್ತುಕೊಂಡ. ತಟ್ಟನೆ ಅವರು ಮಾಡುತಿದ್ದ ಪಾಠಕ್ಕೆ ಸಂಬಂಧಿಸಿದಂತೆ ಒಂದು ಪ್ರಶ್ನೆಯನ್ನು ಕೇಳಿದರು.
ಪಾಠದ ಕಡೆಗೆ ಗಮನಕೊಡದಿದ್ದ ಅವನು ಪ್ರಶ್ನೆಗೆ ಎಲ್ಲಿಂದ ಉತ್ತರ ಕೊಟ್ಟಾನು? ಪೆಕರು ಪೆಕರಾಗಿ ನೋಡುತ್ತ ನಿಂತು ಬಿಟ್ಟ. ಅವರಿಗೆ ಬಂದ ಕೋಪದಲ್ಲಿ “ನೀನು ಮೈಕ್-ಸೆಟ್ ರಿಪೇರ್ ಮಾಡೊಕೆ, ಕನೆಕ್ಷನ್ ಕೋಡೊಕೆ ಲಾಯಕ್ಕು ನಿಮಗೆಲ್ಲ ಓದು ಯಾಕೆ ಬೇಕು, ಓದು ಬಿಡಿಸಿ, ಕೆಲಸಕ್ಕೆ ಇಟ್ಟುಕೊಳ್ಳಿ ಅಂತ ನಿಮ್ಮಪ್ಪನಿಗೆ ಹೇಳ್ತಿನಿ ಇರು” ಎಂದು ಸಿಟ್ಟಿನ ಭರದಲ್ಲಿ ಮಾತಾಡಿದರು. ಕೆಲ ನಿಮಿಷಗಳ ತನಕ ಅವರ ಬಯ್ಗುಳ ಹಾಗೆ ಮುಂದುವರಿದಿತ್ತು. ಬೆಳಿಗ್ಗೆಯಿಂದ ಎಲ್ಲರೊಂದಿಗೆ ಖುಷಿಯಾಗಿ ನಗುನಗುತ್ತ ಆಡಿಕೊಂಡು ಇದ್ದವನಿಗೆ ಮೇಷ್ಟ್ರು ಹೇಳಿದ ಮಾತು ಕೇಳಿ ಅವಮಾನ ಆಯಿತು. ಮಧ್ಹ್ಯಾನ ಮನೆಗೆ ಹೋಗಿ ಊಟ ಮಾಡಿಕೊಂಡು ಬಂದು ಮತ್ತೆ ಮಧ್ಹ್ಯಾನದ ಶಾಲೆಗೆ ಹಾಜರಾಗಿದ್ದ. ಅಷ್ಟೊತ್ತಿಗೆ ಅದನ್ನೆಲ್ಲ ಮರೆತು ಮತ್ತೆ ಆಟ ಪಾಠದಲ್ಲಿ ತಲ್ಲೀನನಾಗಿದ್ದ.
ಕೆಲ ವಾರದ ನಂತರ ಹತ್ತಿರದ ಬಳ್ಳಾರಿಯಲ್ಲಿ ಅಮೀರ್ ಖಾನ್ ನಟಿಸಿದ “ತಾರೆ ಜಮೀನ್ ಪರ್” ಚಿತ್ರ ಪ್ರದರ್ಶಿತವಾಗುತ್ತಿತ್ತು. ಹೆಚ್ಚು ಜನಪ್ರಿಯವಾಗಿದ್ದ ಚಿತ್ರ ದೇಶದೆಲ್ಲೆಡೆ ಚರ್ಚಿತವಾಗುತಿತ್ತು. ಈ ವೇಳೆ ಶಾಲೆಯ ಆಫೀಸ್ ರೂಮಿನಲ್ಲಿಯು ಸಹ ಈ ಚಿತ್ರದ ಬಗ್ಗೆ ಚರ್ಚೆ ನಡೆಯುತಿತ್ತು. ಕೊನೆಗೆ ರಾಜಶೇಖರಪ್ಪ ಮತ್ತು ಚನ್ನಬಸವಯ್ಯ ಮೇಷ್ಟ್ರುಗಳು ಒಮ್ಮತದ ನಿರ್ಧಾರಕ್ಕೆ ಬಂದು ತಾವಿಬ್ಬರು ಭಾನುವಾರ ಬಳ್ಳಾರಿಗೆ ಹೋಗಿ ಚಿತ್ರ ನೋಡಿಕೊಂಡು ಬರುವುದೆಂದು ನಿರ್ಧರಿಸಿದರು. ಅಂದುಕೊಂಡಂತೆ ಅವರಿಬ್ಬರು ಬಳ್ಳಾರಿಗೆ ಚಿತ್ರ ನೋಡಲು ಹೊರಟರು.
ಆ ದಿನ ಚಿತ್ರ ನೋಡುತ್ತಿದ್ದಂತೆ ಅವರಲ್ಲಿ ಗಾಢವಾದ ಪರಿಣಾಮ ಬೀರಲಾರಂಭಿಸಿತು, ಬಹುತೇಕ ಅವರಿಬ್ಬರಿಗೆ ಅನಿಸಿದ್ದು ಅದರಲ್ಲಿ ಬರುವ ಆ ಶಿಕ್ಷಕ ಪಾತ್ರಧಾರಿಗಳು ಹಾಗು ಇವರ ಮಧ್ಯೆ ಸಾಮ್ಯತೆ ಇದೆಯಂತ. ಶಾಲೆಯಲ್ಲಿ ಸಹ ಹಾಗೆ ನಡೆದುಕೊಳ್ಳುತಿದ್ದೇವೆ ಅನ್ನೋ ಭಾವನೆ ಅವರಲ್ಲಿ ಉದ್ಭವಿಸಿತ್ತು. ಅಷ್ಟು ವರ್ಷಗಳ ಅವರ ಅನುಭವದಲ್ಲಿ ಅವರೆಂದು ಅಮೀರ್ ಖಾನ್ ತರಹ ಯೋಚಿಸಿರಲಿಲ್ಲ ಹಾಗು ನಡೆದುಕೊಂಡಿರಲಿಲ್ಲ. ಚೆನ್ನಾಗಿ ಓದದ ಮಕ್ಕಳನ್ನು ತುಂಬಾ ತಾತ್ಸಾರದಿಂದ ನಡೆಸಿಕೊಳ್ಳುತಿದ್ದರು. ಅವರ ಪಾಠ ಏನಿದ್ದರೂ ಬುದ್ದಿವಂತ ಮಕ್ಕಳಿಗೆ ಮಾತ್ರ ಅನ್ನುವ ರೀತಿಯಲ್ಲಿ ವರ್ತಿಸುತ್ತಿದ್ದರು. ಚಿತ್ರ ನೋಡುತಿದ್ದಂತೆ ಅವರಲ್ಲಿ ಪಶ್ಚಾತ್ತಾಪದ ಭಾವನೆ ವ್ಯಕ್ತವಾಗಿತ್ತು. ಶಾಲಾ ಮಕ್ಕಳಿಗೆ ಯಾವ್ಯಾವ ರೀತಿಯಲ್ಲಿ ಬೈದಿದ್ದು ಎಂದು ಒಂದು ಸಾರಿ ನೆನೆಸಿಕೊಂಡರು.
ಕ್ಷೌರಿಕ ಈರಣ್ಣನ ಮಗನಾದ ಬಸವರಾಜನಿಗೆ “ನೀನು ನಿಮ್ಮಪ್ಪನಂಗೆ ಗಡ್ಡ ಕೆರೆಯೋಕೆ ಹೋಗು, ಕೊನೆ ಪಕ್ಷ ಹೊಟ್ಟೆಗೆ ಹಿಟ್ಟಾದ್ರು ದಕ್ಕುತ್ತೆ.”
ಡಾಕ್ಟರ್ ಶಿವರುದ್ರಪ್ಪನವರ ಮಗನಿಗೆ “ನಿಮ್ಮಪ್ಪ ನೋಡೊ ಎಷ್ಟು ಕಷ್ಟಪಟ್ಟು ಓದಿಕೊಂಡು ಡಾಕ್ಟರ್ ಆಗಿದ್ದಾರೆ ಅವರ ಮಗ ಅಂತ ಹೇಳೊದಿಕ್ಕೆ ನಾಚಿಕೆ ಯಾಗಬೇಕು ನಿಂಗೆ.”
ರೈತರ ಮಕ್ಕಳಿಗೆ “ನೀವು ಸಗಣಿ ಕಸ ಬಳಿಯೋಕೆ, ಹಸು, ಎಮ್ಮೆ, ದನ ಕಾಯಿಸೋಕೆ ಲಾಯಕ್ಕು.”
ಹೋಟೆಲ್ ಗೋವಿಂದಪ್ಪನವರ ಮಗನಿಗೆ “ನಿನಗೆಲ್ಲ ವಿದ್ಯೆ ಯಾಕೆ, ಹೋಗಿ ಎಂಜಲು ಲೋಟ ತಟ್ಟೆ ತೊಳೆದು ವ್ಯಾಪಾರ ಮಾಡಿಕೊಂಡಿರೋಗು.”
ಮಕ್ಕಳನ್ನು ಬಾಸುಂಡೆ ಬರುವ ಹಾಗೆ ಹೊಡೆದಿದ್ದು, ಶಾಲೆಯ ಗೋಡೆಗೆ ಆಣಿಸಿಕೊಂಡು ನಿಲ್ಲುವ ಶಿಕ್ಷೆ ಕೊಟ್ಟಿದ್ದು, ಶಾಲೆಯ ಸುತ್ತ ಓಡುವ ಶಿಕ್ಷೆ, ಮುಂಗೈ ಬೆರಳುಗಳ ಮೇಲೆ ಬೆತ್ತದಿಂದ ಹೊಡೆದಿದ್ದು. ಹೀಗೆ ಒಂದೇ… ಎರಡೆ… ಎಲ್ಲ ರೀತಿಯಿಂದಲೂ ಮಕ್ಕಳನ್ನು ಗೋಳು ಹೊಯ್ದುಕೊಳ್ಳುತ್ತಿದ್ದರು. ಒಂದೊಂದು ವಿಷಯಗಳನ್ನು ನೆನೆಸಿಕೊಂಡು ಹೋಗ್ತಾ ಇದ್ದರೆ, ಅವರಿಗೆ ಅವರ ಬಗ್ಗೆ ಅಸಹ್ಯ ಹುಟ್ಟಿಸುತಿತ್ತು. ಅಷ್ಟೆಲ್ಲ ಓದಿಕೊಂಡಿದ್ದು, ದೊಡ್ಡ ದೊಡ್ಡ ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದು, ದೇಶದ ಬಗ್ಗೆ ಚರ್ಚೆ ನಡೆಸಿದ್ದು, ದೊಡ್ಡ ದೊಡ್ಡವರ ಸ್ನೇಹ ಗಳಿಸಿದ್ದು, ಎಲ್ಲ ವ್ಯರ್ಥ ಅನ್ನೋ ಭಾವನೆ ಬರತೊಡಗಿತು. ತಾವು ಇಷ್ಟು ದಿನ ಎಂಥ ತಪ್ಪು ಮಾಡುತ್ತ ಇದ್ದೀವಿ ಅನ್ನೊ ಯೋಚನೆ ಅವರಲ್ಲಿ ಕಾಡುವುದಕ್ಕೆ ಶುರುವಾಯಿತು. ಚಲನಚಿತ್ರ ಮುಗಿಯುವುದೊರಳಗೆ ಅವರಲ್ಲಿ ಯಾವುದೋ ಒಂದು ರೀತಿಯ ಬದಲಾವಣೆ ಬಂದಿತ್ತು.
ಚಿತ್ರ ಮುಗಿದ ನಂತರ ಅವರಿಬ್ಬರು ಮತ್ತೆ ಅವರ ಊರಿಗೆ ಹೊರಡಲು ಅನುವಾದರು. ಬಸ್ಟಾಂಡ್ ತನಕ ಚಿತ್ರದ ಕುರಿತು ಮಾತನಾಡುತ್ತ ಹೊರಟರು. ಹಾಗೆ ಸಾಗುತ್ತಿರುವಾಗ ಚನ್ನಬಸವಯ್ಯನವರು “ಮೇಷ್ಟ್ರೆ ನೀವು ಊರಿಗೆ ಹೋಗಿಬಿಡಿ, ನಾನು ಇಲ್ಲೆ ಇರುವ ನಮ್ಮ ಸಂಬಂಧಿಕರ ಮನೆಗೆ ಹೋಗಿ ಬರ್ತಿನಿ, ನಿಮಗೆ ಅಭ್ಯಂತರ ವಿಲ್ಲದಿದ್ದರೆ” ಎಂದಾಗ, ಅದಕ್ಕೆ ಪ್ರತಿಯಾಗಿ ಅವರು ನಸುನಗುತ್ತಾ, “ಇಲ್ಲ ಹಾಗೇನು ಇಲ್ಲ, ನೀವು ಹೋಗಿಬನ್ನಿ ನಾನು ಊರಿಗೆ ಹೋಗ್ತಿನಿ” ಎಂದು ಬಸ್ಟಾಂಡ್ ಕಡೆ ಹೊರಟರು.
INTERMISSION
ಎಂದು ಪರದೆಯ ಮೇಲೆ ಅಕ್ಷರಗಳು ಬೀಳುತಿದ್ದಂತೆ, ಚಿತ್ರಮಂದಿರದ ಒಳಗಡೆ ಇರುವ ದೀಪಗಳು ಉರಿದವು. ಜನರೆಲ್ಲ ವಿರಾಮದ ಸಮಯಕ್ಕೆ ಕಾದವರಂತೆ, ಕೆಲವರು ತಿನ್ನುವುದಕ್ಕೆ, ತಂಪಾದ ಪಾನಿಯಗಳನ್ನು ಕುಡಿಯುವುದಕ್ಕೆ, ಮತ್ತೆ ಕೆಲವರು ತಮ್ಮ ಬಹಿರ್‍ದೆಸೆ ತೀರಿಸುವುಕೊಳ್ಳೊದಿಕ್ಕೆ ಒಂದೇಸಮನೆ ಹೊರಬಂದರು. 10 ನಿಮಿಷ ವಿರಾಮದ ನಂತರ ಚಿತ್ರ ಮತ್ತೆ ಶುರುವಾಯಿತು.
ಎಲ್ಲರನ್ನು ಒಂದೇ ಸಮನೆ ನೋಡಿಸಿಕೊಂಡು ಹೋಗುತಿದ್ದ ಚಿತ್ರ ಮುಗಿಯುವ ಹಂತಕ್ಕೆ ಬಂದಿತ್ತು. ಬಹುತೇಕ ಜನರಿಗೆ ಇನ್ನು ಸ್ವಲ್ಪ ಹೊತ್ತು ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಅಂತ ಅನಿಸುತ್ತಿತ್ತು. ಬಾಗಿಲಿಂದ ತುಂಬಾ ಜನ ಒಟ್ಟೊಟ್ಟಾಗಿ ಹೊರಬರುತ್ತಿದ್ದಾಗ ನೂಕು ನುಗ್ಗಲಿನಲ್ಲಿ ಒಬ್ಬರಿಗೊಬ್ಬರು ತಗುಲಿಸಿಕೊಂಡು, ತಳ್ಳಾಡಿಕೊಂಡು ಹೊರಬರುವ ಸಾಹಸ ಮಾಡುತ್ತಿದ್ದರು. ಆ ತಳ್ಳಾಟದಲ್ಲಿ ಆ ಇಬ್ಬರು ವ್ಯಕ್ತಿಗಳಲ್ಲಿ ಒಬ್ಬರು ತಮಗರಿವಿಲ್ಲದಂತೆ ಕಾಲು ತುಳಿದು, ಕ್ಷಮಿಸಿ ಎಂದು ಹೇಳುತ್ತಿದ್ದಂತೆ, ಇದ್ಯಾವುದು ಪರಿಚಿತರ ಧ್ವನಿ ಇದ್ದಂತೆ ಇದೆಯಲ್ಲ ಎಂದು ಮುಖ ನೋಡಿದರೆ, ಮೇಷ್ಟ್ರು ರಾಜಶೇಖರ್ ಮತ್ತು ಚನ್ನಬಸವಯ್ಯನವರು.
“ಏನ್ರೀ ಯಾರೊ ಮನೆಗೆ ಹೊಗ್ತಿನಿ ಅಂತ ಹೇಳಿದ್ರಿ, ಮತ್ತೆ ಸಿನಿಮಾ ನೋಡೊಕೆ ಬಂದಿದ್ದಿರಾ?” ಎಂದಾಗ “ಇಲ್ಲಾ ಸಾರ್ ಎನೋ ಚೆನ್ನಾಗಿದೆಯಲ್ಲ ಅಂತ ನೋಡೋಣ ಅಂತ ಬಂದೆ, ಹೌದು ತಾವು ಊರಿಗೆ ಹೊಗ್ತಿನಿ ಅಂತೇಳಿ ಬಸ್ಟಾಂಡ್ ಕಡೆ ಹೊದ್ರಲ್ವ? ಮತ್ತೇನ್ ಈ ಕಡೆ” ಎಂದು ಅವರಿಗೆ ಮರು ಪ್ರಶ್ನೆ ಹಾಕಿದಾಗ, “ಅಯ್ಯೊ ಬಿಡಿ ಮಾರಯ್ರೆ ನಿಮ್ಮದು ಯಾವ ತರಹ ಗೋಳೊ ಅದೇ ಗೋಳು ನಂದು ಸಹ ಬನ್ನಿ ಹೋಗೊಣ” ಎಂದು ಬಸ್ಟಾಂಡ್ ಕಡೆ ಹೊರಟರು.
*********
ಚನ್ನಬಸವಯ್ಯ ಮೇಷ್ಟ್ರು ಮರುದಿನ ಶಾಲೆಗೆ ಹೋದಾಗ ಪ್ರತಿ ವಿಭಾಗಕ್ಕೆ ಪಾಠ ಮಾಡುವ ಮೊದಲು ಹೇಳಿದ್ದು, “ಮಕ್ಕಳೆ, ಮೊದಲು ತಾವೆಲ್ಲರು ನನ್ನನ್ನು ಕ್ಷಮಿಸಬೇಕು, ಯಾವುದ್ಯಾವುದೊ ಕಾರಣಕ್ಕೆ ನಿಮಗೆಲ್ಲ ಬೈದಿದ್ದೀನಿ, ಹೊಡೆದಿದ್ದಿನಿ, ಹೊರಗಡೆ ಹಾಕಿದ್ದೀನಿ, ಶಿಕ್ಷೆ ಕೊಟ್ಟಿದ್ದೀನಿ, ನನಗೆ ಹೇಗೆ ಅನ್ನಿಸುತ್ತೊ ಹಾಗೆ ನಿಮ್ಮನ್ನು ದಂಡಿಸಿದ್ದಿನಿ. ಆದರೆ ಅದನ್ನೆಲ್ಲ ಮಾಡಿದ್ದು ನಿಮ್ಮ ಒಳ್ಳೆಯದಕ್ಕೆ ಹೊರತು ನಿಮ್ಮನ್ನು ಅವಮಾನ ಮಾಡಬೇಕು ಅಂಥ ಅಲ್ಲ. ನೀವು ಓದಿ ವಿದ್ಯಾವಂತರಾಗಿ ಒಳ್ಳೆ ನೌಕರಿ ಮಾಡಿಕೊಂಡು ಚೆನ್ನಾಗಿರಲಿ ಎಂದು ಮಾತ್ರ.”
ಮಾತು ನಿಲ್ಲಿಸಿ ಅದೇನನ್ನೊ ಯೋಚಿಸುತ್ತ “ನಿಮ್ಮಲ್ಲಿ ನಾನು ಗಮನಿಸಿರೋದು ಏನಂದ್ರೆ ನನಗಿಸಿದ ಹಾಗೆ ನೀವೆಲ್ಲ ತುಂಬಾ ಬುದ್ದಿವಂತರು, ನನ್ನ ಪ್ರಕಾರ ನಿಮ್ಮತ್ರ ಎನಾದರೊಂದು ಪ್ರತಿಭೆ ಇದ್ದೇ ಇರುತ್ತೆ ಅನ್ನೊ ಭಾವನೆ. ಆದರೆ ಸೂಕ್ತವಾಗಿ ಬಳಸಿಕೊಳ್ಳೊದಿಕ್ಕೆ ಆಗ್ತಾ ಇಲ್ಲ. ವಿದ್ಯೆಯ ಜತೆಗೆ ಪ್ರತಿಭೆಯನ್ನು ಉಪಯೋಗಿಸಿಕೊಳ್ಳುವ ಜಾಣ್ಮೆ ಬೇಕು. ಅದನ್ನು ಬುದ್ದಿವಂತಿಕೆಯಿಂದ ಉಪಯೋಗಿಸಿಕೊಳ್ಳಿ, ಖಂಡಿತವಾಗಿ ವಿದ್ಯೆ ಇದ್ದರೆ ಅದನ್ನು ಸಾಧಿಸಿಕೊಳ್ಳೊದು ಅಷ್ಟು ಕಷ್ಟ ಅಲ್ಲ. ಪ್ರತಿಭೆಯನ್ನು ಯಾವುದೇ ಕಾರಣಕ್ಕೆ ನಶಿಸಿ ಹೊಗೋದಿಕ್ಕೆ ಬಿಡಬೇಡಿ. ನಿಮ್ಮ ತಂದೆ ತಾಯಿಯವರ ಹತ್ತಿರ ಈ ಬಗ್ಗೆ ನಾವು ಸಹ ಮಾತಾಡ್ತಿವಿ, ಜತೆಗೆ ವಿದ್ಯಾಭ್ಯಾಸದ ಬಗ್ಗೆ ಗಮನವಹಿಸಿ ಚೆನ್ನಾಗಿ ಓದಿಕೊಂಡು ವಿದ್ಯಾವಂತರಾಗಿ ಜೀವನದಲ್ಲಿ ಮುಂದೆ ಬನ್ನಿ.” ಈ ತರಹ ಪ್ರತಿ ತರಗತಿಯಲ್ಲಿ ಹಿತವಚನ ಹೇಳುತ್ತಿದ್ದರು.
ಸಂಜೆ ವೇಳೆಗೆಲ್ಲ ಶಾಲೆಯ ತುಂಬಾ ಇದೇ ವಿಷಯ ಚರ್ಚೆ ಯಾಗುತಿತ್ತು. ಈ ವಿಷಯ ಮುಖ್ಯೋಪಾಧ್ಯಾಯರ ಕಿವಿಗೆ ಸಹ ಬಿತ್ತು. ಅವರು ಸಾಯಂಕಾಲ ತಮ್ಮ ಕೋಣೆಗೆ ಚನ್ನಬಸವಯ್ಯ ಮೇಷ್ಟ್ರನ್ನು ಕರೆಯಿಸಿ ಈ ಬಗ್ಗೆ ವಿಚಾರಿಸಿದರು. “ಯಾಕೆ ಮೇಷ್ಟ್ರೆ? ನಿಮ್ಮಲ್ಲಿ ತುಂಬಾ ಬದಲಾವಣೆ ಕಾಣ್ತಾ ಇದೆ, ಏನಾಯ್ತು? ನಾನು ಸಹ ಶಾಲೆಯಲ್ಲಿ ತಾವು ಆಡಿದ ಮಾತುಗಳನ್ನು ಕೇಳಿದ್ದೇನೆ. ನಿಮ್ಮಲ್ಲಿ ಯಾವುದೊ ವಿಷಯ ಗಂಭೀರವಾಗಿ ಕಾಡುತ್ತಯಿದೆ. ನಿನ್ನೆ ಸಿನಿಮಾಗೆ ಹೋಗಿದ್ರಂತೆ ಅಷ್ಟೊಂದು ಚೆನ್ನಾಗಿದೆಯಾ ಆ ಸಿನಿಮಾ.”
ಚನ್ನಬಸವಯ್ಯನವರು ನಗುತ್ತ “ಹೌದು ಸಾರ್, ತುಂಬಾ ಚೆನ್ನಾಗಿದೆ, ನಮ್ಮ ಶಿಕ್ಷಕ ವರ್ಗದವರೆಲ್ಲರು ಹಾಗು ಪ್ರತಿಯೊಬ್ಬ ತಂದೆ ತಾಯಿಗಳು ನೋಡಬೇಕು, ಶಿಕ್ಷಕರಾದ ನಮಗೆ ಅದು ತುಂಬಾ ಪಾಠ ಕಲಿಸಿಕೊಡುತ್ತೆ. ನಾವು ಜೀವನದಲ್ಲಿ ಕಲಿಯೋದು ತುಂಬಾ ಇದೆ, ನಾವು ಇನ್ನೂ ವಿದ್ಯಾರ್ಥಿಗಳು, ಗುರುಗಳು ಆಗೊದಿಕ್ಕೆ ಸಾಕಷ್ಟು ಸಮಯ ಬೇಕು. ನನಗೆ ಅನಿಸಿದ ಹಾಗೆ ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ನಡವಳಿಕೆಯನ್ನು ನಾವು ಬದಲಿಸಿಕೊಳ್ಳಬೇಕು. ಕ್ಷಮಿಸಿ, ನಾವು ಅನ್ನೋದಿಕ್ಕಿಂತ ನಾನು ಅನ್ನೋದೆ ಹೆಚ್ಚು ಸೂಕ್ತ. ನಾನು ಅನ್ನೋ ಅಹಂ, ನಾನು ಶಿಕ್ಷಕ ಅನ್ನೊ ಗರ್ವ, ನಾನೆ ಎಲ್ಲರಿಗಿಂತ ಹೆಚ್ಚು ಅನ್ನೋ ಭಾವನೆ ನಮ್ಮಲ್ಲಿರೋದ್ರಿಂದನೆ ನಮ್ಮ ಶಾಲಾ ಮಕ್ಕಳಿಗೆ ನಾವುಗಳು ಕಲಿಸಿಕೊಡೋದು ಅಷ್ಟರಲ್ಲೆ ಇದೆ. ಈ ವಿಚಾರದಲ್ಲಿ ನಾವು ಮಕ್ಕಳಿಗೆ ತುಂಬಾ ಮೋಸ ಮಾಡ್ತಾ ಇದೀವಿ ಅಂತ ಅನ್ನಿಸುತ್ತೆ. ಪ್ರತಿಯೊಬ್ಬ ಮನುಷ್ಯ ನಾನು ಒಬ್ಬ ವಿದ್ಯಾರ್ಥಿ ಅನ್ನೋ ಭಾವನೆ ಅತ್ಯವಶ್ಯ ಅನ್ನೋದು ನನ್ನ ಅಭಿಪ್ರಾಯ.”
“ಅದೆಲ್ಲ ಸರಿ, ಯಾಕೆ ಇಷ್ಟೊಂದು ಉದ್ವೇಗಕ್ಕೆ ಒಳಗಾಗಿ ಮಾತಾಡ್ತ ಇದೀರ?”
ಸ್ವಲ್ಪ ಮೌನ.. ಹೇಗೆ ಹೇಳಬೇಕಂಬುದೆ ಅವರಿಗೆ ತೋಚಲಿಲ್ಲ. ಕೊನೆಗೆ ಪಶ್ಚತ್ತಾಪದಿಂದ “ಎರಡು ವರ್ಷದ ಹಿಂದೆ, ನನ್ನ ಮಗನಿಗೆ ಒಂದು ಮಾತು ಹೇಳಿದ್ದೆ. ಎಸ್.ಎಸ್.ಎಲ್.ಸಿ.ಯಲ್ಲಿ ಚೆನ್ನಾಗಿ ಮಾರ್ಕ್ಸ್ ತಗೊಂಡು ಬಂದರೆ ಮಾತ್ರ ಮನೆ ಒಳಗೆ ಬಾ. ಇಲ್ಲದೆ ಇದ್ರೆ ಬರಬೇಡ ಅಂತ. ಆದರೆ ಮಾರ್ಕ್ಸ್ ಜಾಸ್ತಿ ಬರಲಿಲ್ಲ, ಅವನು ಭಯದಿಂದ ಅಂದು ಮನೆ ಬಿಟ್ಟು ಹೋದವನು ಇನ್ನೂ ಮನೆಗೆ ಬಂದಿಲ್ಲ. ಎಲ್ಲಿದ್ದಾನೊ? ಏನು ಮಾಡ್ತಾಯಿದ್ದಾನೊ? ಏನೋ ಒಂದು ಗೊತ್ತಿಲ್ಲ. ಅದಕ್ಕೆ ನಾನೇ ಕಾರಣ ಸಾರ್” ಎಂದು ಕಣ್ಣೀರು ಹಾಕಿ ಮಗುವಿನಂತೆ ಅಳುತ್ತ ಗೋಳಾಡುತಿದ್ದರು. ಆ ಪ್ರಸಂಗವನ್ನು ನೋಡಿ ಮುಖ್ಯೋಪಾದ್ಯಾಯರಿಗೆ ಕರಳು ಚುರುಕ್ಕೆಂದಿತು. ಕೊನೆಗೆ ಮನಸ್ಸಿನಲ್ಲೆ ” ಹೌದಲ್ವಾ ನಾವು ಎಂಥ ತಪ್ಪು ಮಾಡ್ತಾ ಇದೀವಿ” ಎಂದು ಅಂದುಕೊಂಡರು.
*******
ಕೆಲದಿನಗಳ ನಂತರ ಶಿಕ್ಷಕ ವರ್ಗದವರೆಲ್ಲ ಸೇರಿ, ಊರಿನ ಕೆಲ ಹಿರಿಯರು, ವಿದ್ಯಾವಂತರು, ಕೆಲ ಸಾಹಿತಿಗಳ ನೆರವಿನೊಂದಿಗೆ ಒಂದು ವಿಚಾರವೇದಿಕೆಯನ್ನು ಏರ್ಪಡಿಸಿ, ಅದರಲ್ಲಿ ಶಿಕ್ಷಣದ ಗುಣಮಟ್ಟ, ವಿದ್ಯಾರ್ಥಿಗಳಲ್ಲಿ ಕಲಿಕೆ ಉತ್ಸಾಹ, ಶಿಕ್ಷಕರಲ್ಲಿ ಕಲಿಸುವ ರೀತಿ, ಹೀಗೆ ನಾನಾ ರೀತಿಯ ವಿಷಯಗಳ ಬಗ್ಗೆ ಚರ್ಚೆ ನಡೆಸಿದರು. ಅದರ ಫಲಿತಾಂಶವನ್ನು ಶಾಲೆಯಲ್ಲಿ ಅಳವಡಿಸಿ, ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಪ್ರಯತ್ನಿಸಿದರು. ಕೊನೆಗೂ ಪ್ರತಿಯೊಬ್ಬರ ಮನದಲ್ಲಿ ಮನೆ ಮಾಡಿದ್ದ ವಿಷಯ “ಹೌದಲ್ವಾ ನಾವು ಎಂಥ ತಪ್ಪು ಮಾಡ್ತಾ ಇದೀವಿ” ಅನ್ನೋದು ಹೋಗಿ ನಾವು ಎಷ್ಟೊಂದು ಬದಲಾಗ್ತಾ ಇದೀವಿ ಅನ್ನೋ ಭಾವನೆ ಜಾಗೃತವಾಗುತ್ತ ಹೋಯಿತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Click below headings