ಗುರುವಾರ, ಸೆಪ್ಟೆಂಬರ್ 2, 2010

ಮುದ್ದಿನ ಮಗ

ತಂದೆ ಮಗನ ಮಧುರ ಸಂಬಂಧಗಳು ಸುಪ್ತವಾಗಿರುತ್ತವೆ. ಅದು ಈಚೆ  ಬರಬೇಕಾದರೆ ಸನ್ನಿವೇಶಗಳ ಬೆಂಬಲ ಅಗತ್ಯ ಎಂದು ಸಾರಿಹೇಳುವ ಸಣ್ಣಕಥೆ.
..

೨೬.೧೨.೨೦೦೮ ರಂದು ದಟ್ಸ್ ಕನ್ನಡ ದಲ್ಲಿ  ಪ್ರಕಟವಾಗಿದ್ದ ನನ್ನ ಮತ್ತೊಂದು ಸಣ್ಣಕಥೆ.
ಪ್ರೋತ್ಸಾಹ:  ಶ್ಯಾಮ್ ಸುಂದರ್ -  ದಟ್ಸ್ ಕನ್ನಡ
ರಾತ್ರಿ ಒಂಬತ್ತರ ಸಮಯ, ಟಿವಿ ಯಲ್ಲಿ ಒಂದು ಧಾರವಾಹಿ ಆಗ ತಾನೆ ಶುರುವಾಗಿತ್ತು ಅದನ್ನು ನೋಡೊಣ ಎಂದು ನೆಟ್ಟಕಲ್ಲಪ್ಪನವರು ತಮ್ಮ ಕೆಲಸಗಳನ್ನು ಮುಗಿಸಿ ಟಿವಿ ಮುಂದೆ ಕುಳಿತಿದ್ದರು. ಸ್ವಲ್ಪ ಹೊತ್ತಾಗುವರಲ್ಲಿ ಮೊಬೈಲ್ ಫೋನ್ ರಿಂಗಾಯ್ತು. ರಿಂಗ್ ಸದ್ದು ಕೇಳಿದೊಡನೆ ಅತ್ತಿತ್ತ ಮೊಬೈಲ್ ಕಡೆ ಹುಡುಕಾಡಿದರು. ಕೈಗೆ ಸಿಗದೆ ಇದ್ದರಿಂದ ಮೇಲೆ ಎದ್ದು ಸದ್ದು ಕೇಳಿಸಿದ ಕಡೆಗೆ ಧಾವಿಸಿದರು. ಮುಂಚೆಯಿಂದಲು ಮೊಳಕಾಲು ನೋವಿದ್ದರಿಂದ ಏಳುವಾಗ ಅದರ ತೀವ್ರತೆ ಜಾಸ್ತಿಯಾಗಿ ಯಾತನೆ ಜಾಸ್ತಿಯಾಯಿತು. ಮನಸ್ಸಿನಲ್ಲೆ ಅದನ್ನು ಶಪಿಸುತ್ತ ಮೊಬೈಲ್ ನ್ನು ತೆಗೆದುಕೊಂಡು ಮಾತಾಡತೊಡಗಿದರು. ಅವರ ಮಗ ಮಂಜುನಾಥ ಅಮೇರಿಕ ದಿಂದ ಫೊನ್ ಮಾಡಿದ್ದ.

"ಯಾಕೆ ಪಪ್ಪ ಫೋನ್ ತಗೊಳ್ಳೊಕೆ ತಡ ಮಾಡಿದ್ರಿ, ತುಂಬಾ ಸಾರಿ ಹೇಳಿದ್ದಿನಿ ನಿಮಗೆ ಯಾವಗ್ಲು ಫೊನ್ ಜೇಬಲ್ಲಿ ಇಟ್ಕೊಂಡಿರಿ ಅಂತ. ಆದರೆ ನನ್ನ ಮಾತು ನೀವು ಕೇಳೊದೆ ಇಲ್ಲ. ಅದಿರಲಿ ನಿಮ್ಮ ಆರೊಗ್ಯ ಹೇಗಿದೆ ಹಾಗು ಕಾಲು ನೊವು ಹೇಗಿದೆ?"

ಇವರಿಗೆ ಅವನು ಹೇಳಿದ್ದು ಸರಿಯಾಗಿ ಕೇಳಿಸಲಿಲ್ಲ, "ಮಗಾ ಮಾತುಗಳು ಸರಿಯಾಗಿ ಕೆಳಿಸ್ತಾಇಲ್ಲ ಡಿಸ್ಟರ್ಬನ್ಸ್ ಜಾಸ್ತಿ ಇದೆ, ಇನ್ನೊಂದು ಸಾರಿ ಹೇಳು ಪುಟ್ಟ".

"ಓ.. ಹೌದಾ, ಸಾರಿ ಪಪ್ಪ ನಾನು ಇಂಟರ್ನೆಟ್ [^] ಇಂದ ಮಾತಾಡ್ತಾಯಿದೀನಿ ಸ್ವಲ್ಪ ಟೈಮ್ ಡಿಲೆ ಇದೆ, ಬೇರೆ ಏನು ವಿಶೇಷ? ನಿಮ್ಮ ಆರೊಗ್ಯ ಹೇಗಿದೆ?

"ಚೆನ್ನಾಗಿದ್ದಿನಿ, ಈ ಕಾಲು ನೋವು ಬಿಟ್ರೆ ಬೇರೆ ಏನು ತೊಂದರೆ ಇಲ್ಲ. ಆದರೆ ಎರಡು ದಿನ ದಿಂದ ಕೆಲಸದ ಹುಡುಗಿ ಕೆಲಸಕ್ಕೆ ಬೇರೆ ಬರ್ತಾಇಲ್ಲ. ಅವಳು ಇಲ್ಲದೆ ಇರೊದ್ರಿಂದ ಸ್ವಲ್ಪ ತೊಂದರೆ ಯಾಗ್ತಾಇದೆ".

"ಯಾಕೆ? ಎನಾಯ್ತು?"

"ಅವಳಿಗೆ ಯಾರೊ ಚೆನ್ನಾಗಿ ಕಿವಿಲಿ ಊದಿದ್ದಾರೆ, ಈಗ ಕೊಡುವ ಸಂಬಳದಷ್ಟು ಎರಡು ಪಟ್ಟು ಕೊಡಬೇಕಂತೆ. ಮಗ ಅಮೇರಿಕದಲ್ಲಿ ಕೆಲಸ ಮಾಡ್ತಾಯಿದ್ದಾನೆ, ಎಷ್ಟು ಬೇಕಾದ್ರು ಡಿಮ್ಯಾಂಡ್ ಮಾಡಬಹುದು ಅಂದುಕೊಂಡಿದಾಳೆ. ಅಷ್ಟೊಂದು ಕೊಡೋಕೆ ಅಗಲ್ಲ ಅಂದಿದ್ದಕ್ಕೆ ಕೆಲಸ ಬಿಟ್ಟು ಹೋಗಿದ್ದಾಳೆ, ಅದೆಲ್ಲ ಇರಲಿ, ಹೇಳು ಮತ್ತೆ ನೀನು ಹೇಗಿದಿಯಾ, ಮೀನಾಕ್ಷಿ ಹೇಗಿದಾಳೆ?"

"ನಾವೆಲ್ಲ ಚೆನ್ನಾಗಿದ್ದಿವಿ, ಪಪ್ಪ ದುಡ್ಡು ಹೋದರೆ ಹೋಗಲಿ, ಇಷ್ಟು ದಿನ ನಿಮ್ಮ ಸೇವೆ ಮಾಡಿದ್ದಾಳೆ, ಸ್ವಲ್ಪ ಹೆಚ್ಚು ಕಮ್ಮಿ ಮಾಡಿ ಕೊಟ್ಟಿದ್ರೆ ಆಗ್ತಾ ಇತ್ತು."

"ಪುಟ್ಟ ನೀನು ಅದರ ಬಗ್ಗೆ ಯೋಚನೆ ಮಾಡಬೇಡ ನಾನು ಬೇರೆ ಯಾರನ್ನಾದ್ರು ಹುಡುಕುತ್ತಿನಿ ಬಿಡು, ಎಲ್ಲಿ ತನಕ ಬಂತು ನಿನ್ನ ಪ್ರಾಜೆಕ್ಟ್, ಯಾವಾಗ ಊರಿಗೆ ಬರ್ತಿರ."

"ಇನ್ನೂ ಒಂದು ವರ್ಷ ಆಗಬಹುದು."

"ಏನು ಇನ್ನು ಒಂದು ವರ್ಷನಾ? ಯಾಕೊ ರಾಜಾ ನಾನು ಒಂಟಿಯಾಗಿ ಸಾಯಿಬೇಕ? ತಂದೆ ಬಗ್ಗೆ ಮಮಕಾರ ಇಲ್ವ ನಿಂಗೆ?"

"ಛೆ! ಬಿಡ್ತು ಅನ್ನಿ. ನೀವು ಬೇರೆ ಇಲ್ಲಿಗೆ ಬರಲ್ಲ ಅಂತಿದೀರ, ಮೀನಾಕ್ಷಿಯನ್ನು ಮನೆಯಲ್ಲಿ ಬಿಡ್ತಿನಿ ಅಂದ್ರೆ ಬೇಡ ಅಂತಿರಾ? ಬೇರೆ ನಾನೇನು ಮಾಡ್ಲಿ. ಕೆಲಸ ಬಿಟ್ಟು ಊರಿಗೆ ನಾನು ಬರಬೇಕು ಅಷ್ಟೆ. ಅದೊಂದೇ ಬಾಕಿ ಉಳಿದಿರೋದು."

"ನೊಡೊ ಮೊದಲಿನಿಂದನೂ ನಾನು ನಿನಗೆ ಹೇಳ್ತಾ ಇದೀನಿ, ಇಲ್ಲೆ ಏನಾದ್ರು ಮಾಡಿಕೊಂಡಿರು ಅಂತ. ನೀನು ಬೇರೆ ನನ್ನ ಮಾತು ಕೇಳ್ತಾ ಇಲ್ಲ, ನಿಮ್ಮ ಅಮ್ಮ ಹೋದ ಮೇಲೆ ನನ್ನ ಬದುಕು ತುಂಬಾ ಕಷ್ಟ ಆಗಿಹೋಗಿದೆ. ಒಂಟಿ ಜೀವನ ಬೇಡ ಅಂತ ಅನ್ನಿಸುತ್ತಿದೆ. ಇಷ್ಟು ದಿನ ನಿನ್ನ ಅಮ್ಮ ನನ್ನ ಜತೆಲಿದ್ದಾಗ ಏನು ಅನ್ನಿಸುತ್ತಿರಲಿಲ್ಲ. ಈಗ ನೀನು ಸಹ ನನ್ನ ಜತೆಲಿ ಇಲ್ಲ. ಇಷ್ಟೆಲ್ಲ ಕಷ್ಟ ಯಾಕೆ ಅಂತ ಅನ್ನಿಸುತ್ತಿದೆ" ಮನ ನೊಂದು ಹೇಳುವಾಗ ಗದ್ಗದಿತರಾದರು. ಆಗ ಮಗ ಅವರನ್ನು ಸಮಧಾನಿಸತೊಡಗಿದ. ಅವರು ತುಂಬಾ ಪ್ರೀತಿಸಿದ ಮಡದಿ ಅವರಿಂದ ದೂರವಾಗಿ ಬರೋಬ್ಬರಿ ಒಂದು ವರ್ಷವಾಗಿತ್ತು. ದುಃಖದಲ್ಲಿದ್ದ ಅವರು ಮತ್ತೆ ಮಾತನ್ನು ಮುಂದುವರಿಸಲು ಪ್ರಯತ್ನಿಸಿದರು.

"ನೋಡಿ ಪಪ್ಪ ಇನ್ನು ಒಂದೆರಡು ವರ್ಷದಲ್ಲಿ ನಿಮ್ಮ ಜತೆ ಬಂದಿರುತ್ತಿನಿ. ಅಷ್ಟರತನಕ ನೀವು ಸಹಕರಿಸಿಕೊಂಡು ಹೋದರೆ ನನಗೆ ತುಂಬಾ ಸಹಾಯ ಆಗುತ್ತೆ. ಒಂದು ಕೆಲಸ ಮಾಡಿ, ಚಿಕ್ಕಪ್ಪನ ಮನೆಲಿ ಇರೊದಿಕ್ಕೆ ವ್ಯವಸ್ಥೆ ಮಾಡಿಕೊಂಡರೆ ಹೇಗನ್ನಿಸುತ್ತೆ ನಿಮಗೆ. ಚಿಕ್ಕಪ್ಪ ಚಿಕ್ಕಮ್ಮ ನಿಮ್ಮನ್ನು ಚೆನ್ನಾಗಿ ಗಮನಿಸುತ್ತಾರೆ, ನಾನು ಸಹ ಮಾತನಾಡಿ ಅವರಲ್ಲಿ ವಿನಂತಿಸಿಕೊಳ್ತಿನಿ."

ಅವರು ಒಂದು ನಿಮಿಷ ಯೋಚಿಸಿ, "ಪುಟ್ಟಾ ಅವರಿಗೆ ನಾನು ಹೇಗೆ ಹೊರೆಯಾಗಲಿ? ಮಗ ಮಗಳು ಜತೆ ತುಂಬ ಪ್ರೀತಿಯಿಂದ ಜೀವನ ನಡೆಸುತಿದ್ದಾರೆ. ಅವರ ಮದ್ಯೆ ಹೋಗಿ ಇದ್ರೆ ಏನು ಚೆನ್ನಾಗಿರುತ್ತೆ. ಮೊದಲಿನಿಂದಲು ಅವರ ಜತೆ ಇದ್ದಿದ್ರೆ ಅದಕ್ಕೆ ಒಂದು ಅರ್ಥ ಇರುತಿತ್ತು. ಕೊನೆಗಾಲದಲ್ಲಿ ಅವರ ಹತ್ತಿರ ಹೋದ್ರೆ ಏನು ತಿಳ್ಕೊಳಲ್ಲ? ನಾನು ಕೆಲಸದ ಮೇಲೆ ಆ ಊರು ಈ ಊರು ಅಂತ ಸುತ್ತಾಡಿಕೊಂಡು ಮನೆಯಿಂದ ಬೇರೆ ಬಂದೆ. ಈಗ ಯಾರು ಇಲ್ಲ ಅಂತ ಅವನ ಹತ್ತಿರ ಹೋದ್ರೆ ಎನು ಚೆನ್ನಾಗಿರುತ್ತೆ? ಹೋಗ್ಲಿ ಬಿಡು, ಅದೆಲ್ಲ ಯೋಚನೆ ಮಾಡಿದ್ರೆ ಮನಸ್ಸು ಕೆಡಿಸಿಕೊಬೇಕು ಅಷ್ಟೆ. ದೇವರಿದ್ದಾನೆ ಅವನೆ ಎಲ್ಲ ನೋಡ್ಕೊತ್ತಾನೆ."

"ಪಪ್ಪ, ಒಂದು ಒಳ್ಳೆ ವೃದ್ದಾಶ್ರಮದಲ್ಲಿ ವ್ಯವಸ್ಥೆ ಮಾಡ್ತಿನಿ ಬಿಡಿ. ಯಾವ ತೊಂದರೆ ಇಲ್ಲದೆ ಹಾಗೆ ನೋಡ್ಕೊತೀನಿ. ನಾನು ವಾಪಸು ಬಂದಾಗ ನಿಮ್ಮನ್ನು ಮತ್ತೆ ಮನೆಗೆ ಕರ್ಕೊಂಡು ಬರ್ತಿನಿ. ಈಗೆಲ್ಲ 5 ಸ್ಟಾರ್ ಕ್ವಾಲಿಟಿ ಇರೋ ವೃದ್ದಾಶ್ರಮಗಳಿವೆ. ಅದರ ಬಗ್ಗೆ ವಿಚಾರಿಸಿ ನಿಮಗೆ ಮತ್ತೆ ಹೇಳ್ತಿನಿ."

ಮಗನ ಮಾತು ಕೇಳಿ ಸುಮ್ಮನಾದರು. ಕೆಲ ಕ್ಷಣ ಏನು ಹೇಳಬೇಕು ಅಂತ ಗೊತ್ತಾಗಲಿಲ್ಲ. "ಒಳ್ಳೆ ನಿರ್ಧಾರ ತಗೊಂಡಿದ್ದೀಯ. ನಿನಗೆ ಯಾವ ಕೊರತೆ ಬರದಂತೆ ಬೆಳೆಸಿದ ಹಾಗೆ, ನನಗೂ ಸಹ ಯಾವುದೇ ಕೊರತೆ ಬರಬಾರದು ಅಂತ ವೃದ್ಧಾಶ್ರಮಕ್ಕೆ ಸೇರಿಸೊದು ಒಂದು ಒಳ್ಳೆ ನಿರ್ಧಾರ. ದೇವರು ನಿನಗೆ ಒಳ್ಳೆದು ಮಾಡಲಿ".

"ಪಪ್ಪ ಅಲ್ಲಿ ನಿಮಗೆ ಎಲ್ಲ ರೀತಿಯ ಸೌಕರ್ಯ ಇರುತ್ತೆ, ಒಳ್ಳೆ ಆಹ್ಲಾದಕರ ವಾತವರಣ, ಆರೊಗ್ಯಕರವಾದ ಊಟದ ವ್ಯವಸ್ಥೆ, ಓದುವುದಿಕ್ಕೆ ಲೈಬ್ರರಿ, ಒಬ್ಬ ಡಾಕ್ಟರ್ ಸಹ ಇರ್ತಾರೆ, ನಿಮ್ಮ ಆರೊಗ್ಯದ ಬಗ್ಗೆ ಚಿಂತೆ ಮಾಡೊ ಅಗತ್ಯ ಇರುವುದಿಲ್ಲ. ಒಂದು ಸಾರಿ ನೋಡಿಕೊಂಡು ಬನ್ನಿ. ನಿಮಗೆ ಇಷ್ಟ ಆಯಿತು ಅಂದರೆ ಮುಂದಿನ ವ್ಯವಸ್ಥೆ ಬಗ್ಗೆ ನಾನು ನೋಡ್ಕೊತೀನಿ. ಅಮೇಲೆ ನಾನು ಇಲ್ಲಿ ಒಂದೆರಡು ವರ್ಷ ಆರಾಮವಾಗಿ ಇರಬಹುದು".

ಮಗನ ಮಾತು ಕೇಳಿ ಅವರಿಗೆ ಮತ್ತೆ ಉತ್ತರ ಕೊಡಲು ಮಾತು ಬರಲಿಲ್ಲ. ಕನಸು ಮನಸಿನಲ್ಲೆಂದು ಮಗನ ಬಾಯಲ್ಲಿ ಈ ಮಾತು ಬರುತ್ತೆ ಅಂತ ಅವರೆಂದು ಯೋಚಿಸಿರಲಿಲ್ಲ. ಪ್ರತಿಯೊಂದು ವಿಷಯದಲ್ಲಿ ಕಾಳಜಿ ವಹಿಸಿ ಬೆಳೆಸಿದ ಮಗ ಇಂದು ತನ್ನ ತಂದೆಯನ್ನು ವೃಧ್ದ ಅನಾಥಾಶ್ರಮದಲ್ಲಿ ಇರಿಸೋದಿಕ್ಕೆ ಯೊಚನೆ ಮಾಡ್ತಾ ಇದ್ದಾನೆ. ಆದರೆ ಅವನು ನನ್ನ ಭಾವನೆಗಳನ್ನು ಅರ್ಥಮಾಡಿಕೊಳ್ಳಲಿಲ್ಲವಲ್ಲ ಅನ್ನುವ ಯೋಚನೆಯಿಂದ ಹೇ ದೇವರೆ ಎಂಥ ಕಾಲ ಬಂತಪ್ಪ ಎಂದು ಬೇಸರಿಸಿಕೊಂಡರು, ಮಗ ಹಲೋ ಹಲೋ ಎನ್ನುವ ಕೇಳಿಸುತ್ತಲೆ ಇತ್ತು ಆದರೆ ಬೇರೆ ಏನು ಉತ್ತರಿಸದೆ ಫೋನ್ ಡಿಸ್ಕನೆಕ್ಟ್ ಮಾಡಿದರು.

ತುಂಬಾ ದುಖಿಃತರಾಗಿ ಅವರು ಮಲಗುವ ಕೋಣೆಗೆ ಹೋದರು. ಮನ ನೊಂದಿತ್ತು. ಮುಖದಲ್ಲಿ ಅಳು ತೋರ್ಪಡಲಿಲ್ಲ. ಅದರೆ ಸದ್ದಿಲ್ಲದೆ ಕಣ್ಣಿಂದ ನೀರು ಹೊರ ಬಂದಿತ್ತು. ಹೊರ ಜಗತ್ತಿನ ಪರಿವೆ ಇರಲಿಲ್ಲ. ಫೊನ್ ರಿಂಗ್ ಆಗುತ್ತಲೆ ಇತ್ತು. ಅವರು ನೋಡಬೇಕು ಅಂದಿದ್ದ ಟಿವಿ ಧಾರವಾಹಿ ತನ್ನ ಪಾಡಿಗೆ ತಾನು ಓಡುತಲಿತ್ತು. ಭಾರವಾದ ಮನಸ್ಸಿನಿಂದ ಹೆಜ್ಜೆ ಇಡುತ್ತ, ಕೋಣೆಯಲ್ಲಿದ್ದ ತಮ್ಮ ಪತ್ನಿ ನಾಗಮ್ಮನ ಫೋಟೊದ ಹತ್ತಿರ ಕುಳಿತರು. ನಾಗಮ್ಮನವರ ಮುಗುಳ್ನಗೆಯ ಫೋಟೊ ಅದು. ಇವರನ್ನು ನೋಡಿ ನಗುತ್ತಿರುವಂತೆ ಭಾಸವಾಗುತಿತ್ತು.

"ನಗುತಾ ಇದ್ದಿಯಾ ನಾಗಿ? ನಗು, ಚೆನ್ನಾಗಿ ನಗು. ನನ್ನ ಅವಸ್ಥೆ ನೊಡಿ ನಗು. ನನಗಿಂತ ಬೇಗ ನೀನು ದೇವರ ಹತ್ತಿರ ಸೇರಿಕೊಂಡುಬಿಟ್ಟೆ ಈಗ ನನ್ನ ಪರಿಸ್ಥಿತಿ ನೋಡಿ ನಗುತ್ತಾ ಇದ್ದೀಯಾ? ನೀನೆಂದಾರು ಯೋಚನೆ ಮಾಡಿದ್ಯ ಈ ತರಹ ಪರಿಸ್ಥಿತಿ ಬರುತ್ತೆ ಅಂತ. ನೋಡು ನನ್ನ ಕೈಲಿ ನಂಬೋಕೆ ಆಗ್ತಾಇಲ್ಲ. ನಾನು ಬೆಳಿಸಿದ ಮಗ, ನಮ್ಮ ಸಂಪ್ರದಾಯ, ನಮ್ಮ ಸಂಸ್ಕೃತಿ ದಾಟಿ ಯೋಚನೆ ಮಾಡೊದಿಲ್ಲ ಅಂದುಕೊಂಡಿದ್ದೆ. ಆದರೆ ಇಂದು........?

ಒಂದು ಕ್ಷಣ ಯೋಚನೆ ಮಾಡು, ಅಂದು ಅವನು ಶಾಲೆಗೆ ಬಸ್ಸಲ್ಲಿ ಹೊಗಿ ಬರೊದಿಕ್ಕೆ ತೊಂದರೆಯಾಗುತ್ತೆ ಅಂತ ಶಾಲೆ ಹತ್ತಿರಾನೆ ಬಾಡಿಗೆ ಮನೆ ಮಾಡಿದ್ವಿ. ಕೊನೆಗೆ ಇಂಜಿನೀಯರಿಂಗ್ ಮಾಡೊದಿಕ್ಕೆ ಸೂರತ್ಕಲ್ ನಲ್ಲಿ ಸೀಟ್ ಸಿಕ್ಕಾಗ, ಅವನಿಗೆ ಹಾಸ್ಟೆಲ್ ಊಟದಿಂದ ಆರೊಗ್ಯ ಎಲ್ಲಿ ಹಾಳಗುತ್ತೊ? ಸಹವಾಸ ದೋಷದಿಂದ ಏನು ತೊಂದರೆ ಯಾಗುತ್ತೊ ಅಂತ, ಮತ್ತೆ ರ್‍ಯಾಗಿಂಗ್ ಪಿಡುಗು ಅವನಿಗೆ ಎಲ್ಲಿ ಮಾರಕ ವಾಗುತ್ತೊ ಅನ್ನುವ ಭಯದಿಂದ ಅಲ್ಲೆ ಒಂದು ಚಿಕ್ಕ ಮನೆ ಮಾಡಿ ನಿಮ್ಮಿಬ್ಬರನ್ನು ವಾಸ ಮಾಡೊದಿಕ್ಕೆ ಅನುಕೂಲ ಮಾಡಿ ಕೊಟ್ಟು ನಾನು ತಿಂಗಳಿಗೆ 2 ಬಾರಿ ಓಡಾಡ್ತಾಯಿದ್ದೆ. ಅದನ್ನೆಲ್ಲಮರೆತು ಬಿಟ್ನಾ? ಹುಷಾರಿಲ್ಲದಿದ್ದಾಗ ಅವನನ್ನು ಎತ್ತಿ ಕೊಂಡು ಎಷ್ಟು ಆಸ್ಪತ್ರೆ [^] ಅಲೆದಿಲ್ಲ. ಅವನನ್ನು ಮಗನಂತೆ ಭಾವಿಸದೆ ಸ್ನೇಹಿತನಂತೆ ಕಂಡೆ, ವಿಚಿತ್ರ ಎಂದರೆ ಅದೆಲ್ಲ ಅವನು ಮರೆತುಬಿಟ್ಟಿದ್ದಾನೆ.

ಈಗ ನೀನು ಹೇಳ್ತಾ ಇರೊದು ನನಗೆ ನೆನಪಾಗ್ತಾಯಿದೆ. ಪಾಪ ನೀನು ಎಷ್ಟೊಂದು ಹೇಳಿದೆ ಒಂದು ಹೆಣ್ಣು ಮಗು ಆಗಲಿ ಅಂತ, ಕೊನೆಗಾಲದಲ್ಲಿ ಅಯ್ಯೋ ಪಾಪ ಅಂತ ಅಳೊದಿಕ್ಕೆ ಆ ಹೆಣ್ಣಾದ್ರು ಜತೇಲಿ ಇರುತ್ತೆ ಅಂತ. ಒಂದೇ ಮಗು ಇರಲಿ ಅಂತ ನಾನು ಆದರ್ಶಕ್ಕೆ ಕಟ್ಟು ಬಿದ್ದು ಇನ್ನೊಂದು ಮಗುವನ್ನೇ ಮಾಡಿಕೊಳ್ಳಲಿಲ್ಲ. ಆದರೆ ಇಂದು ಆ ನನ್ನ ಒಣ ಸಿದ್ದಾಂತ ಯಾವ ಪ್ರಯೋಜನಕ್ಕೆ ಬಂತು? ಮಗನಿಗೋಸ್ಕರ ನನ್ನಲ್ಲೇ ನಾನು ಸಾಕಷ್ಟು ಬದಲಾವಣೆ ಮಾಡಿಕೊಂಡು ಅವನ ಭವಿಷ್ಯ ಚೆನ್ನಾಗಿರಲಿ ಅಂತ ಆಸೆ ಪಟ್ಟೆ. ಆದರೆ ಇಂದು ಆದದ್ದೇನು?

ಈ ಹಾಳದ್ದು ಮಂಡಿನೊವು ಹಾಗು ನಿಶ್ಯಕ್ತಿ ನನ್ನ ಪ್ರಾಣವನ್ನು ತಿಂತಾಯಿದೆ. ಇನ್ನು ನಾನು ಯಾರಿಗೋಸ್ಕರ ಬದುಕಬೇಕು ನೀನೆ ಹೇಳು. ನೀನಾದ್ರು ಆಸರೆಯಾಗಿರ್ತಿಯ ಅಂದ್ಕೊಂಡಿದ್ದೆ ಆದರೆ ನೀನೆ ಬೇಗ ಹೋಗಿಬಿಟ್ಟೆ. ಅವನು ನನಗೆ ಕೊನೆಪಕ್ಷ ನಾನು ಬಂದು ನಿಮಗೆ ಆಸರೆಯಾಗಿರ್ತೇನೆ ಅಂತ ಭರವಸೆ ಕೊಟ್ಟಿದ್ರೆ ಚೆನ್ನಾಗಿರ್ತಾಯಿತ್ತು. ಆ ಆಸೆಯಲ್ಲಿ ಕಾಲ ತಳ್ಳುತ್ತಿದ್ದೆ. ಅತ್ಯಂತ ದುಃಖಕರವಾದ ಸಂಗತಿಯೇನಂದರೆ ಯಾರು ಇಲ್ಲದೆ ಅನಾಥನಂತೆ ನನ್ನನ್ನು 5 ಸ್ಟಾರ್ ತರಹ ಇರೋ ವೃದ್ಧಾಶ್ರಮದಲ್ಲಿ ಇರೋದಿಕ್ಕೆ ವ್ಯವಸ್ಥೆ ಮಾಡ್ತಾನಂತೆ. ಅವನ ತರಹ ನಾನು ಸ್ವಾರ್ಥಿಯಾಗಿದ್ರೆ ನಾನು ಇನ್ನೊಂದು ಮಗುವನ್ನು ಮಾಡ್ಕೋಬಹುದಿತ್ತಲ್ವ. ಒಬ್ಬನೇ ಮಗ ಪ್ರೀತಿಯಿಂದ ಬೆಳೀಲಿ, ಅವನ ಜೀವನ ಚೆನ್ನಾಗಿರಲಿ ಅಂತ ಅವನ ಬಗ್ಗೇನೆ ಯೋಚನೆ ಮಾಡಿದೆ ಹೊರತು ನನ್ನ ಬಗ್ಗೆ ಯೋಚನೆ ಮಾಡಲಿಲ್ಲ. ಕೈಯಲ್ಲಿ ಹಣ ಇದೆ, ಇರೋದಿಕ್ಕೆ ಮನೆಯಿದೆ ಆದರೆ ನನ್ನವರು ಅಂತ ಈಗ ಜತೇಲಿ ಯಾರು ಇಲ್ಲವಲ್ಲ ನಾಗಿ. ಏನು ಮಾಡಲಿ ಹೇಳು ನನಗೆ ಬೇರೆ ಏನು ತೋಚ್ತಾಯಿಲ್ಲ ಎಂದು ರೋಧಿಸುತ್ತಿದ್ದರು. ಅವರ ರೋಧನೆಯನ್ನು ಕಾಣಲು ಯಾರು ಇರಲಿಲ್ಲ. ಏಕಾಂಗಿತನ ಅವರನ್ನು ವಿಪರೀತ ರೋಧನೆಗೆ ಗುರಿ ಮಾಡಿತ್ತು. ಆ ವೇಳೆಯಲ್ಲಿ ಜತೆಯಲ್ಲಿ ಯಾರಾದರೂ ಇದ್ದಿದ್ದರೆ ಇವರ ಸ್ಥಿತಿ ಕಂಡು ಬೇರೆಯವರು ತಮ್ಮೆಲ್ಲ ಕೆಲಸ ಕಾರ್ಯಗಳನ್ನು ಬಿಟ್ಟು ನಾನು ನಿಮ್ಮ ಮಗನ ತರಹ ಕೊನೆವರೆಗೂ ಇರುತ್ತೀನಿ ಎಂದು ಹೇಳುತಿದ್ದರೇನೋ. ಆದರೆ ಹಾಗೆ ಹೇಳಲು ಅಲ್ಲಿ ಯಾರು ಇರಲಿಲ್ಲ.

ಅದೇ ಸಮಯದಲ್ಲಿ ಡೋರ್ ಬೆಲ್ ಸದ್ದಾಯಿತು. ಇಷ್ಟೊತ್ತಿನಲ್ಲಿ ಅದ್ಯಾರು ಬಂದಿರಬಹುದು ಎಂದು ತಮ್ಮಲ್ಲೆ ತಾವು ಪ್ರಶ್ನಿಸಿದರು. ಅಲ್ಲಿಂದ ಹೊರಡುವುದಿಕ್ಕೆ ಮೇಲೆ ಏಳುವಾಗ ಕಾಲುನೋವು ಮತ್ತೆ ಬಾಧಿಸಿತು. ಅದೇ ಸಮಯಕ್ಕೆ ಅದ್ಯಾರೊ ಡೋರ್ ಬೆಲ್ ಅನ್ನು ಸತತವಾಗಿ ಬಾರಿಸುತಿದ್ದರು. ಯಾರೂ ಸಹ ಎಂದೂ ಈ ತರಹ ಬಾರಿಸಿರಲಿಲ್ಲ. ಇಲಿಯೊಂದು ಬೆಕ್ಕಿನಿಂದ ತಪ್ಪಿಸಿಕೊಳ್ಳಲು ಕಿರ್ರ್ ಕಿರ್ರ್ ಶಬ್ದ ಮಾಡುತ್ತ ಓಡುತಿತ್ತು, ಆಗಲೇ ಬೆಕ್ಕು ಒಂದು ಪಟ್ಟು ಹಾಕಿ ಪರಚಿ ಗಾಯಮಾಡಿತ್ತು. ಮನೆಯಲ್ಲಿ ಟೀವಿ ಶಬ್ದ, ಕಾಲಿಂಗ್ ಬೆಲ್ ಸದ್ದು, ಬೆಕ್ಕು ಇಲಿಯ ಗಲಾಟೆ ಈ ಹೊತ್ತಿನಲ್ಲಿ ಅವರಿಗೆ ತಲೆನೋವು ಬರುವುದೊಂದೆ ಬಾಕಿ. ಮನಸ್ಸಿನಲ್ಲೆ ಗೊಣಗುತ್ತ ಈ ಸಮಯದಲ್ಲಿ ಮನೆಯಲ್ಲಿ ಯಾರಾದ್ರು ಇದ್ದಿದ್ರೆ ಚೆನ್ನಾಗಿರುತ್ತಿತ್ತು. ಆದರೆ ಏನು ಮಾಡುವುದು ನಾನು ಮಾಡಿದ ಕರ್ಮ ಅನುಭವಿಸಬೇಕಲ್ವ ಎಂದುಕೊಂಡು ಬೇಸರದಿಂದ ಬಾಗಿಲನ್ನು ತೆರೆಯಲು ಹೊರಟರು. ಬಾಗಿಲು ತೆಗೆಯುವ ಮುನ್ನ ಪಕ್ಕದ ಕಿಟಕಿಯಿಂದ ಯಾರು ಎಂದು ನೋಡಿದರು. ಮುಖ ಸರಿಯಾಗಿ ಕಾಣಿಸಲಿಲ್ಲ.

"ಯಾರು ಅದು ಇಷ್ಟೊತ್ತಿನಲ್ಲಿ? ಬೆಲ್ ಯಾಕೆ ಅಷ್ಟೊಂದು ಸಾರಿ ಹೊಡೀತಿದ್ರಿ. ಒಂದೆರಡು ಸಾರಿ ಮಾಡಿದ್ರೆ ಆಗಲ್ವೆ. ಯಾರು ಅದು? ಏನಾಗ್ಬೆಕಿತ್ತು?

ಆ ವ್ಯಕ್ತಿ "ಸಾರ್ ನಾನು ಮಂಜು ಫ್ರೆಂಡ್, ಊರಿಗೆ ಬಂದಿದ್ದೆ ಹಾಗೆ ನಿಮ್ಮನ್ನು ನೋಡಿಕೊಂಡು ಹೋಗೊಣ ಎಂದು ಬಂದೆ."

"ಓ ಹೌದಾ, ಇರಿ ಒಂದ್ನಿಂಷ" ಎಂದು ಹೇಳಿ ಬಾಗಿಲು ತೆಗೆದು "ಬನ್ನಿ ಒಳಗೆ" ಮನೆ ಒಳಗೆ ಆಹ್ವಾನಿಸಿದರು. ಮುಖ ನೋಡಿದ್ರೆ ಅವರಿಗೆ ಆಶ್ಚರ್ಯವಾಯಿತು, ತಮ್ಮ ಕಣ್ಣನ್ನೇ ತಾವೇ ನಂಬದಾದರು. ಎದುರಿಗಿರುವ ವ್ಯಕ್ತಿಯನ್ನು ಹೋಗಿ ಮುಟ್ಟಿ ನೋಡಿದರು ಕನಸು ಕಾಣುತಿಲ್ಲವೆಂದು ಖಾತರಿ ಮಾಡಿಕೊಂಡು, ಬಾಚಿ ತಬ್ಬಿಕೊಂಡು ಮುತ್ತಿಟ್ಟರು.

"ಯಾಕೊ ಇಷ್ಟೊಂದು ಹಿಂಸೆ ಕೊಟ್ಟುಬಿಟ್ಟೆ. ಯಾಕೊ ನನ್ನನ್ನು ಗೋಳು ಹೊಯ್ಕೊಂಡೆ. ಈ ಇಳಿವಯಸ್ಸಿನಲ್ಲಿ ನನ್ನತ್ರ ತಮಾಷೆ ಮಾಡಬೇಕು ಅಂತ ಅನ್ನಿಸುತ್ತ? ಮೀನಾಕ್ಷಿ ಏನಮ್ಮಾ ನೀನು ಸಹ ಇವನ ಜತೆ ಸೇರಿಕೊಂಡು ಬಿಟ್ಟಿಯಾ? ನಿಮ್ಮನ್ನು ನೋಡಿದ ಮೇಲೆ ನನ್ನ ಹೃದಯಭಾರವೆಲ್ಲ ಇಳಿದು ಹೋಯಿತು ಕಣಮ್ಮಾ."

"ಇಲ್ಲ ಮಾವ ಮೊದಲಿನಿಂದಲೂ ನಿಮಗೆ ಸರ್ ಪ್ರೈಸ್ ಕೊಡೋಣ ಎಂದು ಹೇಳಿ ನನ್ನ ಹತ್ತಿರ ಪ್ರಾಮಿಸ್ ತಗೊಂಡಿದ್ದರು, ಇಲ್ಲಿಗೆ ಬಂದ ಮೇಲೆ ಸೈಬರ್ ಕೆಫೆಗೆ ಹೋಗಿ ಅಲ್ಲಿಂದ ಇಂಟರ್ನೆಟ್ ಕಾಲ್ ಮಾಡಿದ್ದ್ರು. ನಾನು ಎಷ್ಟು ಬೇಡ ಅಂತ ಹೇಳಿದ್ರು ನನ್ನ ಮಾತು ಕೇಳಲಿಲ್ಲ."

ಮಂಜು ತಂದೆಯ ಮುಖವನ್ನೆ ದಿಟ್ಟಿಸಿ ನೊಡುತಿದ್ದ. ಕಣ್ಣುಗಳು ಕೆಂಪಗಾಗಿದ್ದವು, ಮುಖದಲ್ಲಿ ನೊವಿನ ಗೆರೆಗಳು ಎದ್ದು ಕಾಣುತಿದ್ದವು. ಆ ನೋವಿನಲ್ಲಿ ಸಹ ಮಗನನ್ನು ನೋಡಿದ ಮೇಲೆ ಅವರಲ್ಲಿ ಮೂಡಿದ್ದ ಚಿಂತೆಯ ಗೆರೆಗಳು ಒಂದೊಂದಾಗಿ ಮಾಯವಾಗುತಿತ್ತು. ತಂದೆಯ ಮುಖದಲ್ಲಿ ಆದ ಬದಲಾವಣೆ ಕಂಡು ಗದ್ಗದಿತನಾದ ಮಂಜು "ಪಪ್ಪ ನಿಮ್ಮ ಮಗ ಕಣಪ್ಪ ನಾನು, ನಾನು ಹೇಗೆ ಬದಲಾಗುತ್ತಿನಿ ಹೇಳಿ? ಪ್ರಾಜೆಕ್ಟ್ ಒಂದು ವರ್ಷದಲ್ಲಿ ಮುಗಿಯುತ್ತೆ ಅಂದುಕೊಂಡಿದ್ದೆ, ಆದರೆ ಅಲ್ಲಿಗೆ ಹೋದ ಮೇಲೆ ಅಲ್ಲಿ ಆದದ್ದೆ ಬೇರೆ. ತುಂಬಾ ದಿನದಿಂದಲೂ ವಾಪಾಸು ಬರೋಣ ಕಾಯ್ತಾ ಇದ್ದೆ, ಆದರೆ ಪ್ರಾಜೆಕ್ಟ್ ಮುಗಿಯುವುದಿಕ್ಕೆ ತುಂಬಾ ತೊಂದರೆಗಳು ಇದ್ದವು, ಅದನ್ನೆಲ್ಲ ಬಗೆಹರಿಸಿಕೊಂಡು ಬರೋದಿಕ್ಕೆ ತಡವಾಯಿತು. ನಿಮ್ಮ ಮನಸ್ಸನ್ನು ತುಂಬಾ ನೋಯಿಸಿದ್ದಕ್ಕೆ ಕ್ಷಮಿಸಿಬಿಡಿ ಪಪ್ಪ. ನಿಮ್ಮ ಬಲವಂತಕ್ಕೆ ತಾನೆ ನಾನು ಮೀನಾಕ್ಷಿಯನ್ನು ಕರೆದುಕೊಂಡು ಹೋಗಿದ್ದು. ಹಾಗೇ ನಿಮ್ಮೊಬ್ಬರನ್ನೆ ಬಿಟ್ಟು ಹೋಗೊದಿಕ್ಕೆ ಖಂಡಿತ ಮನಸಿರಲಿಲ್ಲ. ಇನ್ನೆಂದೂ ನಿಮ್ಮನ್ನು ಬಿಟ್ಟು ಎಲ್ಲೂ ಹೋಗಲ್ಲ ಪಪ್ಪ. ನಿಮ್ಮ ಕಷ್ಟ ನನಗೆ ಅರ್ಥ ಆಗುತ್ತೆ" ಎಂದು ಮಂಜು ಹೇಳುತಿದ್ದರೆ ಮತ್ತೆ ಮಗನನ್ನು ತಬ್ಬಿಕೊಂಡು.

"ಕ್ಷಮೆಯನ್ನು ನಾನು ಕೇಳ್ಬೇಕು ಪುಟ್ಟ, ನಿನ್ನನ್ನು ಅರ್ಥ ಮಾಡಿಕೊಳ್ಳದೆ ನಿನ್ನ ಬಗ್ಗೆ ತಪ್ಪು ತಪ್ಪಾಗಿ ಯೋಚನೆ ಮಾಡಿಬಿಟ್ಟೆ ಮಗು" ಎಂದರು. ಮನಸ್ಸಿನಲ್ಲಿ ಮಗನನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಕ್ಕೆ ತಮ್ಮ ಬಗ್ಗೆ ತಮಗೆ ನಾಚಿಕೆಯಾಗಿತ್ತು. ತಮ್ಮ ಮಗನ ಬಗ್ಗೆ ಇದ್ದ ಹೆಮ್ಮೆ ಇಮ್ಮಡಿಯಾಗಿತ್ತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Click below headings