ಶುಕ್ರವಾರ, ಜುಲೈ 3, 2026

ಕಾಯಕವೇ ಕೈಲಾಸ ವೆನ್ನುವ ಚೀನೀಯರು

ಬರಹ: ಪಿಎಸ್.ರಂಗನಾಥ,  
ಮಸ್ಕತ್, ಒಮಾನ್ ರಾಷ್ಟ್ರ

ಚೈನಾ ದೇಶಕ್ಕೆ ಇದುವರೆಗೂ ಮೂರು ಬಾರಿ ಭೇಟಿ ನೀಡಿದ್ದೇನೆ, ಹತ್ತಕ್ಕೂ ಹೆಚ್ಚು ನಗರಗಳನ್ನು ಸುತ್ತಿದ್ದೇನೆ. ಈಗಾಗಲೇ ಎಂಟತ್ತು ದೇಶಗಳಿಗೆ ಪ್ರವಾಸ ಹೋಗಿ ಬಂದಿರುವ ನನಗೆ ಈ ದೇಶ ಮಾತ್ರ ಪ್ರತಿಬಾರಿಯೂ ಅಚ್ಚರಿ ನೀಡುತ್ತದೆ. ಒಂದಲ್ಲ ಒಂದು ಆಶ್ಚರ್ಯಕರ ಸಂಗತಿ ನನ್ನನ್ನು ಕಾಡುತ್ತದೆ. ಪ್ರತಿ ಬಾರಿ ಬಂದಾಗಲೂ ಅಲ್ಲಿನ ಸ್ಥಳೀಯರೊಂದಿಗೆ ಹಲವಾರು ವಿಚಾರಗಳಲ್ಲಿ ಚರ್ಚಿಸುತ್ತೇನೆ, ಮಾಹಿತಿ ಪಡೆಯುತ್ತೇನೆ, ಈ ಚರ್ಚೆಯ  ಸಂಧರ್ಭದಲ್ಲಿ ಏನಾದರು ಒಂದು ಹೊಸ ವಿಷಯ ಅರಿವಿಗೆ ಬರುತ್ತಲೇ ಇರುತ್ತದೆ. ಇಲ್ಲಿನ ವಿಷಯಗಳ ಕುರಿತಾಗಿ ಒಂದು ಪುಸ್ತಕವನ್ನೇ ಬರೆಯಬಹುದು.  

ನನ್ನ ಮನಸ್ಸಿಗೆ ಯಾವಾಗಲು ಕಾಡುವುದು ಇಲ್ಲಿನ ಅಭಿವೃದ್ದಿ ವಿಷಯ ಮಾತ್ರ. ಈ ವಿಚಾರದಲ್ಲಿ ಕಮ್ಯುನಿಸ್ಟ್ ಆಡಳಿತದ ಚೈನಾ ದೇಶದವರು ನಮಗಿಂತ ಮೂವತ್ತು ವರ್ಷಗಳಿಗೂ ಮುಂದಿದ್ದಾರೆ ಎಂದರೆ ಅತಿಶಯೋಕ್ತಿಯೇನಲ್ಲ. ಬೀಜಿಂಗ್, ಶಾಂಘೈ, ಸುಜೋ, ಏಚಿಂಗ್, ಡೇಚಿಂಗ್, ಗಾಂಗ್ ಜಾವ್, ವೆನ್ಜೋ, ಷೆನ್ಜೆನ್, ಹೀಗೆ  ಅಲ್ಲಿನ ಯಾವುದೇ ನಗರವನ್ನು ನೋಡಿ, ಒಂದಂಕ್ಕಿಂತ ಒಂದು ನಗರವು ಅಭಿವೃದ್ದಿ ಮತ್ತು ಬೆಳವಣಿಗೆ ವಿಚಾರದಲ್ಲಿ ಸ್ಪರ್ಧೆಯಲ್ಲಿದ್ದಾವೇನೊ ಎನ್ನುವಷ್ಟರ ಮಟ್ಟಿಗೆ ಮುಂದುವರೆಯುತ್ತಿವೆ. ಅದು ಮೂಲಭೂತ ಸೌಕರ್ಯ ಆಗಿರಬಹುದು, ತಂತ್ರಜ್ನಾನ ವಿಷಯ ಇರಬಹುದು, ಉತ್ಪಾದನೆ ಸಾಮರ್ಥ್ಯ ಇರಬಹುದು, ಶಿಕ್ಷಣ, ಹೀಗೆ ಯಾವುದೇ ವಿಷಯ ತೆಗೆದುಕೊಂಡರೂ ನಮಗಿಂತ ಹತ್ತಾರು ಹೆಜ್ಜೆ ಮುಂದಿದ್ದಾರೆ. ಅಲ್ಲಿ ಧರ್ಮ ಮತ್ತು ರಾಜಕೀಯ ವಿಚಾರಗಳಿಗೆ ಕೊನೆ ಸ್ಥಾನವಿದೆ. ಯಾರೂ ಅದರ ಕುರಿತು ತಲೆಕೆಡಿಸಿಕೊಳ್ಳುವುದಿಲ್ಲ, ತಾವಾಯಿತು ತಮ್ಮ ಕೆಲಸವಾಯಿತು ಅಂತ ತಮ್ಮ ಪಾಡಿಗೆ ಇದ್ದು ಬಿಡುವ ಜನರು ಇವರು. ಜನರನ್ನು ರೋಬೋಟ್ ಗಳ ತಯಾರು ಮಾಡಿದ್ದಾರೆ ಎನ್ನುವಷ್ಟರ ಮಟ್ಟಿಗೆ ಬೇರೆ ವಿಷಯಗಳಲ್ಲಿ ತಲೆನೇ ಕೆಡಿಸಿಕೊಳ್ಳುವುದಿಲ್ಲ. 

ಚೈನಾದೇಶದ ಹಲವಾರು ವಿಷಯಗಳ ಬಗ್ಗೆ ನಾವು ಪೂರ್ವಾಗ್ರಹ ಪೀಡಿತರಾಗಿ ಮಾತನಾಡುತ್ತೇವೆ.  ಇದಕ್ಕೆ ಕಾರಣ ಬಲು ಸ್ಪಷ್ಟ, ಮಾರುಕಟ್ಟೆಯಲ್ಲಿ ಕಡಿಮೆ ದರದಲ್ಲಿ ದೊರೆಯುವ ವಸ್ತುಗಳ ಗುಣಮಟ್ಟದ ಆಧಾರದ ಮೇಲೆ ನಾವು ಚೀನಿಯರನ್ನು ಆ ರೀತಿ ನೋಡುತ್ತ ಬಂದಿದ್ದೇವೆ. ಸಾಮಾನ್ಯವಾಗಿ ನಾವು ವಸ್ತುವಿನ ಗುಣಮಟ್ಟಕ್ಕಿಂತ, ಅದರ ಬೆಲೆಗೆ ಅಧಿಕ ಪ್ರಾಮುಖ್ಯತೆ ಕೊಡುತ್ತೇವೆ, ಹೀಗಾಗಿ ನಮ್ಮ ಮನಸ್ಥಿತಿಯನ್ನು ಗಮನಿಸಿ ವ್ಯಾಪಾರಿಗಳು ಚೈನಾದಿಂದ ಅಗ್ಗದ ಸಾಮಾನುಗಳನ್ನು ಲೋಡುಗಟ್ಟಲೆ ಭಾರತಕ್ಕೆ ತಂದು ಸುರಿಯುತ್ತಾರೆ. ಅವುಗಳ ಕಳಪೆ ಗುಣಮಟ್ಟಕ್ಕೆ ಬಹುದಿನ ಬಾಳಿಕೆ ಬರುವುದಿಲ್ಲ. ಕೆಲದಿನಗಳಲ್ಲಿಯೇ ವಸ್ತುಗಳು ಹಾಳಾಗುತ್ತವೆ. ಕೊನೆಗೆ ನಾವು ದೂಷಿಸುವುದು ಚೈನಾದ ವಸ್ತುಗಳನ್ನೆ ಹೊರತು, ನಮ್ಮ ಮನಸ್ಥಿತಿಯನ್ನಲ್ಲ. ಚೈನಾದಲ್ಲಿ ಕಾಸಿಗೆ ತಕ್ಕಂತೆ ಕಜ್ಜಾಯ ದೊರಕುತ್ತದೆ, ಒಂದೇ ವಸ್ತುವನ್ನು ಮೂರ್ನಾಲ್ಕು ತರಹದ ಕ್ವಾಲಿಟಿಯಲ್ಲಿ ಉತ್ಪಾದಿಸುತ್ತಾರೆ. ಉತ್ತಮ ಗುಣಮಟ್ಟದ ವಸ್ತುವಿಗೆ ಅಧಿಕ ಬೆಲೆ, ಕಡಿಮೆ ಗುಣಮಟ್ಟದ ಸಾಮಗ್ರಿಗೆ ಕಡಿಮೆ ಬೆಲೆ. ಎಲ್ಲರಂತೆಯೂ ನಾನು ಸಹ ಚೈನಾದವರ ಗುಣಮಟ್ಟದ ಕುರಿತಾಗಿ ಅಂತಹ ಒಳ್ಳೆಯ ಅಭಿಪ್ರಾಯ ಹೊಂದಿರಲಿಲ್ಲ. ಆದರೆ ಅಲ್ಲಿಗೆ ಭೇಟಿ ನೀಡಲಾರಂಬಿಸಿದ ಮೇಲೆ ಅಲ್ಲಿನ ವಸ್ತುಸ್ಥಿತಿಯನ್ನು ಕಂಡು ನನ್ನ ಅಭಿಪ್ರಾಯವೇ ಬದಲಾಯಿತು. 

2010 ರಲ್ಲಿ ಕೆನಡ ದೇಶಕ್ಕೆ ಹದಿನೈದು ದಿನಗಳ ಒಂದು ತರಬೇತಿ ಕಾರ್ಯಾಗಾರಕ್ಕೆ ಹೋಗಿದ್ದೆ, ಆ ನಮ್ಮ ತಂಡದಲ್ಲಿ ಅಮೇರಿಕ, ಆಫ್ರಿಕ, ಯುರೋಪ್, ಮಧ್ಯಪ್ರಾಚ್ಯ,  ಚೀನಾ  ಸೇರಿದಂತೆ ವಿವಿಧ ದೇಶಗಳಿಂದ ಜನರು ಬಂದಿದ್ದರು. ಆ ಕಾರ್ಯಾಗಾರಕ್ಕೆ ಚೈನ ದೇಶದ ಪ್ರಜೆಯೊಬ್ಬ ನಮ್ಮ ತಂಡದಲ್ಲಿ ಜತೆಯಾಗಿ ಬಂದಿದ್ದ. ಬಿಡುವಿನ ಸಮಯದಲ್ಲಿ ಅವನೊಂದಿಗೆ ಆಗಾಗ್ಗೆ ಚರ್ಚೆ ನಡೆಸುತಿದ್ದೆ. ಎಂದಿನ ವರಸೆಯಂತೆ ಅವನ ಕಾಲೆಳೆಯೆಲು ಪ್ರಾರಂಭಿಸಿದೆ. ರೀ ಸ್ವಾಮಿ, ನಿಮ್ಮ ಚೈನಾ ವಸ್ತುಗಳು ಕಳಪೆ ಗುಣಮಟ್ಟದ್ದು, ಅತಿ ಕಡಿಮೆ ಬೆಲೆಯಲ್ಲಿ ವಸ್ತುಗಳನ್ನು ಉತ್ಪಾದಿಸಿ ವಿಶ್ವಾದ್ಯಂತ ಮಾರುಕಟ್ಟೆಯನ್ನು ಪ್ರವೇಶಿಸುತ್ತೀರಿ, ನಿಮಗೆ ಅಂತರಾಷ್ಟ್ರೀಯ ಮಟ್ಟದ ಸ್ಟಾಂಡರ್ಡ್ಸ್ ಗೊತ್ತಿಲ್ಲ,...   ಹೀಗೆ ಅವನ ಕಾಲೆಳೆಯುತಿದ್ದೆ. ಅವನು ಅದೆಲ್ಲವನ್ನು ನಗುತ್ತಲೇ ಅಲ್ಲಗೆಳೆಯುತಿದ್ದ. ತನ್ನ ದೇಶವನ್ನು ಸಮರ್ಥಿಸಿಕೊಳ್ಳುತಿದ್ದ.  ನಾನು ಉಳಿದು ಕೊಂಡಿದ್ದ ಐಷಾರಾಮಿ ಹೋಟೆಲ್ ನ ಹಲವಾರು ವಸ್ತುಗಳನ್ನ ತೋರಿಸಿ, ಇದೆಲ್ಲ ಚೈನಾದಿಂದ ತರಿಸಿಕೊಂಡಿದ್ದು, ಬೇಕಾದರೆ ಇದರೆ ಮೇಲೆ ಇರುವ ಮೇಡ್ ಇನ್ ಚೈನಾ ಎನ್ನುವ ಲೇಬೆಲ್ ತೋರಿಸುತ್ತೇನೆ ಎಂದು, ಅಲ್ಲಿದ್ದ ಅನೇಕ ವಸ್ತುಗಳನ್ನ ತೋರಿಸುತ್ತಲೇ ಇದ್ದ. ಅದಕ್ಕೆ ನಾನು, ನಿಮ್ಮ ದೇಶದ ವಸ್ತುಗಳು ಬಹಳ ಅಗ್ಗ ಮಾರಾಯಾ, ಅದಕ್ಕೆ ತರಿಸಿಕೊಳ್ತಿದ್ದಾರೆ, ಅದೇನು ದೊಡ್ಡವಿಷಯವೆ ಅಲ್ಲ ಎಂದೆ. ಆಗ ಅವನು, ಆಯ್ತು ನಿನಗೆ ಮೂರು ದಿನ ಸಮಯ ಕೊಡ್ತೀನಿ, ನಿಮ್ಮ ಭಾರತ ದೇಶದ ವಸ್ತುಗಳನ್ನ ಈ ನಮ್ಮ ಕಾರ್ಖಾನೆ, ಕಛೇರಿ ಮತ್ತು ಹೋಟೆಲ್ ನಲ್ಲಿ ತೋರಿಸು ಎಂದು ಹೇಳಿದ. ನನ್ನ ದುರಾದೃಷ್ಟಕ್ಕೆ ಹೇಳಿಕೊಳ್ಳುವಂತಹ ವಸ್ತುಗಳು ಸಿಗಲಿಲ್ಲ. ಅವನು ತೋರಿಸಿದ ವಸ್ತುಗಳೆಲ್ಲವೂ ಉತ್ತಮ ಗುಣಮಟ್ಟದ್ದೇ ಆಗಿದ್ದವು. ಆದರೂ ನನ್ನ ಮನಸ್ಸು ಚೈನಾದ ವಸ್ತುಗಳ ಗುಣಮಟ್ಟವನ್ನು ಒಪ್ಪಿಕೊಳ್ಳಲೇ ಇಲ್ಲ. 

2012 ರಲ್ಲಿ ಚೈನಾ ದೇಶಕ್ಕೆ ಮೊದಲ ಭೇಟಿ ನೀಡಿದಾಗ ನನ್ನ ಮನಸ್ಥಿತಿ ಸ್ವಲ್ಪ ಬದಲಾಗಲು ಪ್ರಾರಂಭವಾಯಿತು. ಆ ಒಂದು ವಾರದ ಅವಧಿಯಲ್ಲಿ ಹಲವಾರು ಕಾರ್ಖಾನೆಗಳಿಗೆ ಭೇಟಿ ನೀಡಿದೆ, ಕೆಲ ಕಾರ್ಖಾನೆಗಳು ಅಂತರಾಷ್ಟಿಯ ಮಟ್ಟಕ್ಕೆ ಸರಿದೂಗುವಂತಹ ಉತ್ಪಾದನ ತಂತ್ರಜ್ನಾನವನ್ನು ಅಳವಡಿಸಿಕೊಂಡಿದ್ದವು. ಕಾರ್ಮಿಕರಿಗೂ ಸಹ ಅದೇ ರೀತಿ ತರಬೇತಿಯನ್ನು ನೀಡಲಾಗಿತ್ತು. ಕೆಲವು ಕಡೆಯಂತೂ ಗುಣಮಟ್ಟದ ವಿಚಾರದಲ್ಲಿ ರಾಜಿ ಮಾಡಿಕೊಳ್ಳದೆ ಅತ್ಯುತ್ತಮ ಗುಣಮಟ್ಟದ ವಸ್ತುಗಳನ್ನೇ ಉತ್ಪಾದಿಸುತಿದ್ದರು.  ಈ ನನ್ನ ಮೊದಲ ಭೇಟಿಯಲ್ಲಿ, ಚೈನಾದ ಬೀಜಿಂಗ್, ಶಾಂಘೈ, ಸುಜೋ ನಗರಗಳಿಗೆ ಭೇಟಿ ನೀಡಿದ್ದೆ. ಅಲ್ಲಿನ ಗಗನಚುಂಬಿ ಕಟ್ಟಡಗಳು, ವಿಶಾಲವಾದ ರಸ್ತೆಗಳು, ಎಲ್ಲೆಲ್ಲೂ ಸ್ವಚ್ಚತೆಯಿಂದ ಕೂಡಿದ ರಸ್ತೆ ಮತ್ತು ಬೀದಿಗಳು, ನಗರ ಸೌಂದರ್ಯವನ್ನು ಹೆಚ್ಚಿಸಲು ರಸ್ತೆಯ ಇಕ್ಕೆಲಗಳಲ್ಲಿ ಚೆಂದರ ಮರಗಿಡಗಳು, ಹೂದೋಟಗಳು, ಮೆಟ್ರೋ ಟ್ರೈನ್ ಗಳು, ಮೋನೋ ರೈಲು, ಬುಲೆಟ್ ಟ್ರೈನ್, ಇವೆಲ್ಲವನ್ನು ನೋಡುತಿದ್ದಂತೆ, ಮನಸ್ಸು ಸಂಪೂರ್ಣವಾಗಿ ಬದಲಾಯಿತು. ಯಾವುದೇ ಅಂತರಾಷ್ಟ್ರೀಯ ನಗರಗಳಿಗೂ ಕಡಿಮೆಯಿಲ್ಲದಂತೆ ಇಲ್ಲಿನ ನಗರ ಪ್ರದೇಶಗಳನ್ನು ಅಭಿವೃದ್ದಿ ಪಡಿಸಿರುವುದು ಕಂಡು ಮಹದಾಶ್ಚರ್ಯವಾಯಿತು. ಕೇವಲ ನಲವತ್ತು ವರ್ಷಗಳ ಅವಧಿಯಲ್ಲಿ ಈ ಬೃಹತ್ ಪ್ರಮಾಣದ ಅಭಿವೃದ್ದಿಯನ್ನು ಕಂಡಿವೆ ಎಂದು ಸ್ಥಳೀಯರು ಹೇಳುತ್ತಾರೆ. ಇತ್ತೀಚೆಗೆ 2024 ಮತ್ತು 2026 ರಲ್ಲೂ ಭೇಟಿ ನೀಡಿದ್ದೇನೆ.  ಹಲವಾರು ನಗರಗಳನ್ನು ವಾರಗಟ್ಟಲೆ ಸುತ್ತಿದ್ದೇನೆ. ಯಾವ ಪ್ರಯಾಣವೂ ನಮಗೆ ಸುಸ್ತು ಅನಿಸಲಿಲ್ಲ. ಗಂಟೆಗೆ 300 ಕಿ.ಮಿ ಕ್ಕೂ ಹೆಚ್ಚಿನ ವೇಗದಲ್ಲಿ ಓಡಾಡುವ ಹಲವಾರು ಬುಲೆಟ್ ಟ್ರೈನ್ ಗಳಲ್ಲಿ ತಿರುಗಾಡಿದ್ದೇನೆ. ನಿಜಕ್ಕೂ ಒಂದಕ್ಕಿಂತ ಒಂದು ಅದ್ಭುತ ಅನುಭವ. ಇಲ್ಲಿನ ಪ್ರಮುಖ ರೈಲ್ವೇ ನಿಲ್ದಾಣಗಳು ಯಾವುದೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಿಗಿಂತ ಕಮ್ಮಿಯಿಲ್ಲ. ಎಲ್ಲವೂ ಸುಸಜ್ಜಿತವಾಗಿವೆ, ಅದ್ಭುತವಾಗಿವೆ, ಸ್ವಚ್ಚತೆಯಿಂದ ಕೂಡಿವೆ. ನನ್ನ ಅನುಭವಕ್ಕೆ ಬಂದಂತೆ ಯಾವ ಟ್ರೈನ್ ಸಹ ತಡವಾಗಿ ಬರುವುದಿಲ್ಲ. ನಿಗದಿತ ಸಮಯಕ್ಕೆ ಬರುತ್ತವೆ, ನಿಗದಿತ ಸಮಯಕ್ಕೆ ಹೊರಡುತ್ತವೆ ಮತ್ತು ನಿಗದಿತ ಸಮಯಕ್ಕೆ ತಲುಪುತ್ತವೆ.  ಎಲ್ಲವನ್ನೂ ನೋಡುತಿದ್ದಂತೆ, ಇದೇನು ಮಾರಾಯಾ, ಇವರೇನು ಮನುಷ್ಯರಾ? ಇಲ್ಲವೇ ಯಂತ್ರಗಳಾ? ಎಲ್ಲಾ ವಿಷಯದಲ್ಲೂ ಅಚ್ಚುಕಟ್ಟು, ಅತಿಯಾದ ದುಡಿಮೆ, ಅವೆಲ್ಲವನ್ನೂ ನೋಡುತಿದ್ದಂತೆ ನಮ್ಮ ಬಗ್ಗೆ ನಾವೇ ಹಳಿದುಕೊಳ್ಳುವಂತಾಗಿತ್ತು. 

ಇಲ್ಲಿನ ಪ್ರಜೆಗಳು, ಶಿಸ್ತು ಮತ್ತು ನಾಗರಿಕ ಪ್ರಜ್ನೆ ವಿಚಾರದಲ್ಲಿ ನಮಗಿಂತ ಹತ್ತಾರು ಹೆಜ್ಜೆಗಳು ಮುಂದಿದ್ದಾರೆ. ಇಲ್ಲಿನ ಮರಗಳನ್ನು ಕಂಡೂ ನಾವು ತಮಾಷೆ ಮಾಡುತ್ತಿರುತ್ತೇವೆ, ಮರಗಳು ನೆಟ್ಟಗೆ ಬೆಳೆಯಬೇಕೆಂದು ತ್ರಿಕೋನ ಮಾದರಿಯಲ್ಲಿ ಸಪೋರ್ಟ್ ನೀಡುತ್ತಾರೆ. ಮರಗಳು ಅಂಕುಡೊಂಕಾಗಿ ಬೆಳೆಯದಂತೆ ನೋಡಿಕೊಳ್ಳುತ್ತಾರೆ. ಮರಗಳಿಗೆ ಈ ರೀತಿ ಶಿಸ್ತನ್ನು ಕಲಿಸುವಾಗ ಇನ್ನು ಜನರಿಗೆ ಕಲಿಸದೆ ಬಿಡುತ್ತಾ ಈ ಕಮ್ಯುನಿಸ್ಟ್ ಸರ್ಕಾರ ಎಂದು ನಗಾಡಿದ್ದೆವು. 

*ಕಾಯಕವೇ ಕೈಲಾಸ:* 

ಇಲ್ಲಿ ಸರ್ಕಾರವೂ ಸೇರಿದಂತೆ, ಪ್ರಜೆಗಳಲ್ಲೂ ಸಹ ಕಾಯಕವೇ ಕೈಲಾಸ, ಎನ್ನುವ ಮನೋಭಾವ.  ಚೀನಾದ ಪ್ರಜೆಗಳು ವಿಶ್ವದಲ್ಲೇ ಅತಿ ಹೆಚ್ಚು ಶ್ರಮಜೀವಿಗಳು ಎಂದು ಗುರುತಿಸಿಕೊಳ್ಳುತ್ತಾರೆ. ಅವರ ಕಠಿಣ ಪರಿಶ್ರಮವೇ ಇಂದಿನ ಚೀನಾದ ಬೃಹತ್ ಆರ್ಥಿಕ ಬೆಳವಣಿಗೆಗೆ ಮುಖ್ಯ ಕಾರಣ. ಅವರ ದೈನಂದಿನ ಚಟುವಟಿಕೆಗಳು ಅತ್ಯಂತ ಶಿಸ್ತುಬದ್ಧ ಹಾಗೂ ಬಿಡುವಿಲ್ಲದಂತಿರುತ್ತವೆ. ಬೆಳಿಗ್ಗೆಯಿಂದ ಸಂಜೆವರೆಗೂ ಕೆಲಸ ಮಾಡುತ್ತಿರುತ್ತಾರೆ, ಮಿಕ್ಕ ಸಮಯದಲ್ಲಿ, ಕುಟುಂಬ ನಿರ್ವಹಣೆ ಜತೆಗೆ,  ತಮ್ಮ ಉತ್ತಮ ಆರೋಗ್ಯಕ್ಕಾಗಿ, ದೈಹಿಕ ಚಟುವಟಿಕೆಗಳು, ವಾಕಿಂಗ್, ಯೋಗ, ಧ್ಯಾನ, ಸಂಗೀತ, ನೃತ್ಯ ಇತ್ಯಾದಿಗಳಿಗೆ ಮೀಸಲಿಡುತ್ತಾರೆ. ವಾರಕ್ಕೊಮ್ಮೆ ಹೆತ್ತವರನ್ನು ನೋಡಿಕೊಳ್ಳಲು ಊರಿಗೆ ಹೋಗುತ್ತಾರೆ.

Click below headings