ಶನಿವಾರ, ಮೇ 30, 2026

ಚಾಣಾಕ್ಷ ರಾಜಕಾರಣಿ ಸಿದ್ದರಾಮಯ್ಯ

ನಾನು ಸಿದ್ದರಾಮಯ್ಯರವರ ವಿರೋಧಿಯೂ ಅಲ್ಲ,
ಅಭಿಮಾನಿಯೂ ಅಲ್ಲ, ಒಬ್ಬ ಸಾಮಾನ್ಯ ಪ್ರಜೆಯಾಗಿ ನನ್ನ ಮನಸ್ಸಿನ ಭಾವನೆಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. 
ನಾನು ಕಂಡಂತೆ ಸಿದ್ದರಾಮಯ್ಯ ತುಂಬಾ ಚಾಣಾಕ್ಷ ವ್ಯಕ್ತಿ. ಯಾವುದನ್ನು ಹೇಗೆ ಪಡೆಯಬೇಕು, ಯಾವ ರೀತಿ ಪಡೆಯಬೇಕು ಎಂದು ತುಂಬಾ ಬುದ್ಧಿವಂತಿಕೆಯಿಂದ ನಿಭಾಯಿಸತಕ್ಕಂತಹ ವ್ಯಕ್ತಿ. 

ಕೆಲವೊಮ್ಮೆ ಉಡಾಫೆ ಇಂದ ಮಾತಾನಾಡುವುದು, ಹುಂಬನಂತೆ ವರ್ತಿಸುವುದು, ದರ್ಪ, ಗತ್ತು ಗೈರತ್ತಿನಿಂದ‌ ಮಾತನಾಡುವುದು ಇವೆಲ್ಲವೂ ಅವರ ವ್ಯಕ್ತಿತ್ವದಲ್ಲಿ ಕಾಮನ್. ಅದೇ ಗತ್ತು ಗೈರತ್ತು ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರ ಬಳಿ ಇರುವುದಿಲ್ಲ, ವಿಧೇಯ ವಿದ್ಯಾರ್ಥಿಯಂತೆ ವಿನಯತೆಯಿಂದ ನಡೆದುಕೊಳ್ತಾರೆ. 

Do you know Kannada ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಕೇಳುತ್ತಾರೆ ಎಂದರೆ, ಅದರ ಉದ್ದೇಶ ಸ್ಪಷ್ಟ. ಯಾವಾಗ ಏನು,‌ ಎಲ್ಲಿ ಹೇಗೆ ಮಾತನಾಡಬೇಕು ಎಂದು‌ ತಿಳಿದಿರುವ ಅತ್ಯಂತ ಚಾಣಾಕ್ಷ ರಾಜಕಾರಣಿ. 

11/07/2021 ರಂದು ವಿಶ್ವವಾಣಿ ಕ್ಲಬ್ ಹೌಸ್ ಸಂವಾದದಲ್ಲಿ ಅಂದು ಸಿದ್ದರಾಮಯ್ಯರವರ ಜೊತೆ ಸಂವಾದ ಇತ್ತು. ಆ ಸಂವಾದದಲ್ಲಿ, ಅವರು ಬೆಳೆದು ಬಂದ ಹಾದಿ ಬಗ್ಗೆ ಸವಿಸ್ತಾರವಾಗಿ ಹೇಳುತ್ತಾ ಬಂದರು. ಸುದೀರ್ಘವಾಗಿ ಎರಡುವರೆ ಗಂಟೆಗಳ ಕಾಲ ತಮ್ಮ ಅನುಭವವನ್ನು ಹಂಚಿಕೊಂಡರು. ನಂತರ ಪ್ರಶ್ನೋತ್ತರ ಕಾರ್ಯಕ್ರಮ ಇತ್ತು, ಶೋತೃಗಳು ಪ್ರಶ್ನೆ ಕೇಳುವ ಅವಕಾಶ ಇತ್ತು.

 ನಾನು ಸಹ ಒಂದು ಪ್ರಶ್ನೆಯನ್ನು ಕೇಳಿದೆ. ಶ್ರೀ ದೇವೇಗೌಡ ಅವರು ಪ್ರಧಾನ ಮಂತ್ರಿಯಾದ ನಂತರ ತಾವು ಮುಖ್ಯಮಂತ್ರಿಯಾಗಲು ಬಯಸಿದ್ದಿರಿ. ಆದರೆ ಅದೇ ಸಮಯದಲ್ಲಿ ಹಲವಾರು ಸೀನಿಯರ್ ರಾಜಕಾರಣಿಗಳು ಇದ್ದರು. ಆದರೂ ಅವರೆಲ್ಲರ ಮಧ್ಯೆ ತಾವು ಮುಖ್ಯಮಂತ್ರಿಯಾಗಲು ಹಟ ಹಿಡಿದಿದ್ದು ಏಕೆ ಎಂದು ಪ್ರಶ್ನೆ ಮಾಡಿದೆ.

ಅದಕ್ಕೆ ವಿಚಲಿತರಾಗದೆ ಉತ್ತರ‌ ನೀಡಿದ ಶ್ರೀ ಸಿದ್ದರಾಮಯ್ಯ‌ ನವರು, ದೇವೇಗೌಡರು ಪ್ರಧಾನ ಮಂತ್ರಿಯಾದ ನಂತರ ಬಹುತೇಕ ಶಾಸಕರೆಲ್ಲರೂ ನನ್ನ ಬೆಂಬಲವಾಗಿ ನಿಂತುಕೊಂಡಿದ್ದರು ಸುಮಾರು 87 ಜನ ಶಾಸಕರು ನಾನು ಮುಖ್ಯಮಂತ್ರಿಯಾಗಲು ಬಯಸಿದ್ದರು. ಅದು ಅಲ್ಲದೆ ಮಂತ್ರಿಗಳಾದ ಜಾಲಪ್ಪನವರು ಮತ್ತಿತರರು, ನಾನು ಹಿಂದುಳಿದ ವರ್ಗಕ್ಕೆ ಸೇರಿದವನು, ನನ್ನಂತವರಿಗೆ ಅವಕಾಶ ಕೊಡಬೇಕು ಎಂದು ಒತ್ತಾಯ ಮಾಡಿದರು.ಆ ಒಂದು ಕಾರಣದಿಂದ ನಾನು ಮುಖ್ಯಮಂತ್ರಿ ಆಗುವ ವ್ಯಕ್ತಪಡಿಸಿ ನನ್ನ ಹಕ್ಕನ್ನು ಮಂಡಿಸಿದೆ ಎಂದು ಉತ್ತರ ನೀಡಿದರು.

ಇಂತಹ ಸಮಯದಲ್ಲಿ ಬೇರೆ ಯಾರೇ‌ ಆಗಿದ್ದರೂ, ಮೊದಲು ಸೀನಿಯರ್ ಲೀಡರ್ ಗಳಿಗೆ ಅವಕಾಶ ಕೊಡುವ ಬಗ್ಗೆ ಮಾತನಾಡುತಿದ್ದರು. ಆದರೆ, ಸಿದ್ದರಾಮಯ್ಯ ನವರಂತಹ ಮಹತ್ವಾಕಾಂಕ್ಷಿ ರಾಜಕಾರಣಿ, ಅವಕಾಶ ಬಂದಾಗ ಕಣ್ಣು‌ಮುಚ್ಚಿಕೂರುವ ರಾಜಕಾರಣಿ ಅಲ್ಲ ಅಂತ ಅಂದು ಪ್ರಪಂಚಕ್ಕೆ ತೋರಿಸಿಬಿಟ್ಟರು. 

ಧರ್ಮ ಸಿಂಗ್ ಮುಖ್ಯಮಂತ್ರಿಯಾಗಿ ಅಧಿಕಾರ ಹಿಡಿಯುವ ಸಂಧರ್ಭದಲ್ಲಿಯೂ ಸಹ, ತಾವು‌ ಮುಖ್ಯಮಂತ್ರಿ ಯಾಗಬೇಕು ಎಂದು‌ ಹಠ ಹಿಡಿದಿದ್ದರು,‌ ಆದರೆ ದೇವೆಗೌಡರು ತಮ್ಮದೇ ಆದ ಕಾರಣಗಳಿಂದ ಧರ್ಮ ಸಿಂಗ್ ಅವರನ್ನು ಮುಖ್ಯಮಂತ್ರಿ ಮಾಡಲು ಕಾಂಗ್ರೆಸ್ ಗೆ ಬೆಂಬಲ ನೀಡಿದ್ದರು.

ತಾವು ಅಂದುಕೊಂಡಿದ್ದನ್ನ ಸಾಧಿಸಬೇಕು ಎನ್ನುವ ಉದ್ದೇಶದಿಂದ ಎಂತಹ ನಿರ್ಧಾರವನ್ನು ತೆಗೆದುಕೊಳ್ಳಲು ಹಿಂದೆ ಮುಂದೆ ನೋಡಲ್ಲ. ಅವರು ನಂಬಿಕೊಂಡಿದ್ದೆ ಸರಿ, ಅವರು ಮಾಡಿದ್ದೆ ಸರಿ ಎನ್ನುವ ಮನೋಭಾವ. ಸಿದ್ದರಾಮಯ್ಯನವರದ್ದು. ಹಠ ಹಿಡಿದು ತಮಗೆ ಬೇಕಾಗಿದ್ದನ್ನ ಪಡೆದೇ ತೀರುತ್ತಾರೆ.

೨೦೧೩ ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕಾರಣ ರಾಜ್ಯದ ಜನತೆಗೆ ಗೊತ್ತು, ಯಡಿಯೂರಪ್ಪ ಮತ್ತು ಶ್ರೀರಾಮುಲು ಇಬ್ಬರೂ ಬಿಜೆಪಿಯನ್ನು ಬಿಟ್ಟು ಬೇರೆ ಬೇರೆ ಪಕ್ಷಗಳನ್ನು ಕಟ್ಟಿ ಬಿಜೆಪಿಯ ವೋಟ್ ಬ್ಯಾಂಕನ್ನು ಹೊಡೆದಿದ್ದರ ಪರಿಣಾಮ ಕಾಂಗ್ರೆಸ್ ಗೆ ಬಹುಮತ ಸಾಧ್ಯವಾಯಿತು.

ಆದರೆ ಅವರು ತಿಳಿದುಕೊಂಡಿರುವುದು, ಗಣಿ ರೆಡ್ಡಿಗಳ ವಿರುದ್ಧ ತಾವು ಮಾಡಿದ ಹಲವಾರು ಹೋರಾಟಗಳಿಂದ ಅಧಿಕಾರಕ್ಕೆ ಬರುವಂತಾಯಿತು ಎಂದು. ಇಂತಹುದೇ, ಹಲವಾರು ವಿಚಾರಗಳನ್ನು ಅವರು ನಂಬಿಕೊಂಡಿದ್ದಾರೆ.

ಅವಕಾಶ ಇದ್ದಾಗ ಯಾಕೆ ಬಿಡಬೇಕು ಎನ್ನುವುದು ಇವರ ಧರ್ಮ. ಅದೆಂತಹದೇ ಕಷ್ಟ ಆದರೂ ಹಠ ಹಿಡಿದು ಅದನ್ನ ಸಾಧಿಸಿಕೊಳ್ಳುವ ಜಾಯಮಾನ ಇವರದ್ದು. ತನ್ನ ಸಂಘಟನಾ ಶಕ್ತಿಯನ್ನ ದೇವೇಗೌಡರಿಗೆ ತೋರಿಸಲು ಅಹಿಂದ ಚಳುವಳಿಯನ್ನು ಹುಟ್ಟುಹಾಕಿ ಅದರಿಂದ ದೊಡ್ಡದಾದ ಮೈಲೇಜ್ ಪಡೆದು ಒಂದು ಬಾರಿ ಮುಖ್ಯಮಂತ್ರಿಯಾಗಿದ್ದಲ್ಲದೆ ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಅವಕಾಶವನ್ನ ಪಡೆದುಕೊಂಡರು.

ಎರಡನೇ ಬಾರಿಗೆ ಮುಖ್ಯಮಂತ್ರಿಯಾಗುವ ಅವಕಾಶವೇನಿತ್ತು, ಆದರೂ ಹಠ ಬಿಡದ ಛಲದಿಂದ ಆ ಕುರ್ಚಿ ಮೇಲೆ ಕುಳಿತಿಯೇ ಬಿಟ್ಟರು. ಇವತ್ತು ಕುರ್ಚಿ ಬಿಟ್ಟು ಕೊಟ್ಟಿದ್ದಾರೆ. ಅದಕ್ಕೂ ಒಂದು ಲೆಕ್ಕಾಚಾರ ಇದ್ದೇ ಇರುತ್ತೆ. ​ಕಾರಣ ಸಿಂಪಲ್: ಇವತ್ತು ಕಾಂಗ್ರೆಸ್ ಸರ್ಕಾರಕ್ಕೆ ಅದರಲ್ಲೂ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಜನರ ಬೆಂಬಲ ಕಡಿಮೆಯಾಗ್ತಾ ಇದೆ. ಇವರ ಸ್ಕೀಮ್‌ಗಳಿಂದ ಜನರು ರೋಸಿಹೋಗಿದ್ದಾರೆ. ಅಭಿವೃದ್ಧಿ ಕಾರ್ಯಗಳು ಯಾವುದು ನಡೆಯುತ್ತಿಲ್ಲ. ಇದೆಲ್ಲವನ್ನು ಮನಗಂಡು ಇವರು ಕುರ್ಚಿಯಿಂದ ಕೆಳಗೆ ಇಳಿದಿದ್ದಾರೆ ಹೊರತು ಬೇರೆ ಯಾವುದೇ ಕಾರಣ ಅಲ್ಲ. ಕಳೆದ ಬಾರಿ ಚುನಾವಣೆಯಲ್ಲಿ ಸೋತಂತೆ ಇವರು ಐದು ವರ್ಷ ಮುಂದುವರೆದಿದ್ದರೆ, ಈ ಸಾರಿಯೂ ಸಹ ಸೋತು ಹೋಗುತ್ತಿದ್ದರು. ಅಂತಹ ಮುಜುಗರ ತಪ್ಪಿಸಿಕೊಳ್ಳಲು ಇವರು ರಾಜೀನಾಮೆ ಕೊಟ್ಟಿದ್ದಾರೆ ಹೊರತು ಅದರ ಹಿಂದೆ ಬೇರೆ ಯಾವ ಕಾರಣವೂ ಇಲ್ಲ. ಇದು ಸಹ ಕಾಂಗ್ರೆಸ್ ವರಿಷ್ಠರಿಗೆ ಗೊತ್ತಿದೆ.

ಎಂಟು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಮತ್ತು ೧೬ ಸಾರಿ ಬಜೆಟ್ ಮಂಡನೆ ಮಾಡಿದ್ದಾರೆ. ಆದರೆ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಕರ್ನಾಟಕ ರಾಜ್ಯಕ್ಕೆ ಅಭಿವೃದ್ಧಿಯ ಕೊಡುಗೆ ಏನೂ ಇಲ್ಲ. ಭಾಗ್ಯಗಳು ಮತ್ತು ಗ್ಯಾರಂಟಿ ಸ್ಕೀಮ್‌ಗಳಿಂದಲೇ ಇವರ ಜನಪ್ರಿಯತೆ ಇದೆ ಹೊರತು, ಅಭಿವೃದ್ಧಿ ವಿಷಯಗಳಲ್ಲಿ  ನೂರ್ಕಾಲ ನೆನಪಿನಲ್ಲಿ ಇಟ್ಟುಕೊಳ್ಳುವಂತಹ ಯಾವುದೇ ಕೆಲಸಗಳನ್ನು ಅವರು ಮಾಡಿಲ್ಲ‌ ಎಂದು ಜನರ ಭಾವನೆ. 

 ಗ್ಯಾರಂಟಿ ಭಾಗ್ಯಗಳು ಇಂದು ಇರುತ್ತವೆ, ನಾಳೆ ಹೋಗುತ್ತವೆ. ಆದರೆ ಸರ್ಕಾರಗಳು, ಜನಗಳು ನೆನಪಿನಲ್ಲಿ ಇಟ್ಟುಕೊಳ್ಳುವಂತಹ ಕೆಲಸವನ್ನು ಅವರು ಮಾಡಬೇಕಿತ್ತು ಎಂದು ನನ್ನ ಭಾವನೆ.

​ಅಭಿವೃದ್ಧಿ ವಿಷಯಕ್ಕೆ ಬಂದಾಗ ನೂರೆಂಟು ಕೆಲಸಗಳು ಮಾಡುವಷ್ಟಿದೆ, ಆದರೆ ಇವರು ಅದ್ಯಾವುದನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ. ​ಉತ್ತರ ಕರ್ನಾಟಕದ ಜಿಲ್ಲೆಗಳು ಇಂದಿಗೂ ಅಭಿವೃದ್ಧಿ ಹೊಂದಲು ಸಾಧ್ಯವಾಗಲಿಲ್ಲ, ಅಲ್ಲಿಗೆ ದೀರ್ಘಾವಧಿ ಯೋಜನೆಗಳನ್ನು ಇವರು ತರಲೇ ಇಲ್ಲ.‌ಪಕ್ಕ ರಾಜ್ಯದ ಚಂದ್ರಬಾಬು ನಾಯ್ಡು ಅವರು ಧೀರ್ಘಾವದಿ ಯೋಜನೆಗಳನ್ನು ಅನುಷ್ಠಾನಗೊಳಿಸುವುದರಲ್ಲಿ‌ ಎತ್ತಿದ ಕೈ., ಅದೇ ರೀತಿ ಸ್ಟಾಲಿನ್ ಕುರಿತಾದ ಮಾತು ಇದೆ.

ಇಂದು ಸಿದ್ದರಾಮಯ್ಯ ರಾಜೀನಾಮೆ ಕೊಟ್ಟಿದ್ದಾರೆ, ಅದರ ಹಿಂದೆಯೂ ದೊಡ್ಡದಾದ ಲೆಕ್ಕಾಚಾರ ಇದ್ದೇ ಇರುತ್ತದೆ. ಮುಂದಿನ ದಿನಗಳಲ್ಲಿ ಖಂಡಿತ ಗೊತ್ತಾಗುತ್ತದೆ, ಕಾದು ನೋಡಬೇಕು.

ಮಂಗಳವಾರ, ಮೇ 26, 2026

ಒಮಾನ್ ಕನ್ನಡಿಗ ಶ್ರೀ ಪಿ.ಎಸ್. ರಂಗನಾಥ ಅವರಿಗೆ ಪ್ರತಿಷ್ಠಿತ 'ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ' ಗೌರವ




ಸಾಹಿತ್ಯ ಕ್ಷೇತ್ರ ಮತ್ತು ಸಾಮಾಜಿಕ ಕ್ಷೇತ್ರದಲ್ಲಿನ ಸೇವೆಗಾಗಿ ಒಮಾನ್ ಕನ್ನಡಿಗ ಶ್ರೀ ಪಿ.ಎಸ್. ರಂಗನಾಥ್ ಅವರಿಗೆ ಪ್ರತಿಷ್ಠಿತ *ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ* ಯನ್ನು ದಿನಾಂಕ 23/05/2026 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನ ಮಾಡಲಾಯಿತು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಗೌರವಾನ್ವಿತ ನ್ಯಾಯಮೂರ್ತಿ ರಾಜೇಂದ್ರ ಬದಾಮಿಕರ್.ಮಾಜಿ ನ್ಯಾಯಮೂರ್ತಿಗಳು, ಕರ್ನಾಟಕ ಉಚ್ಚ ನ್ಯಾಯಾಲಯ

​ನಾಡೋಜ ಡಾ. ಮಹೇಶ್ ಜೋಶಿ ದೂರದರ್ಶನದ ಮಾಜಿ ಹೆಚ್ಚುವರಿ ಮಹಾ ನಿರ್ದೇಶಕರು, 

​ವಿದ್ಯಾ ವಾಚಸ್ಪತಿ ಡಾ. ಅರಳುಮಲ್ಲಿಗೆ ಪಾರ್ಥಸಾರಥಿಯವರು,  ​ಡಾ. ಹೆಚ್.ಎಲ್.ಎನ್. ರಾವ್, ಸ್ಥಾಪಕ ಅಧ್ಯಕ್ಷರು, ಆರ್ಯಭಟ ಸಾಂಸ್ಕೃತಿಕ ಸಂಸ್ಥೆ ಇವರು ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನಮಾಡಲಾಯಿತು.


ವಿದೇಶದಲ್ಲಿ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಬೆಳೆಸುವಲ್ಲಿ ಅವರ ಸಮರ್ಪಣಾ ಭಾವವನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಸಾಹಿತ್ಯ ಕ್ಷೇತ್ರದಲ್ಲಿ ಮಾತ್ರವಲ್ಲದೆ ಎಲೆಮರೆಯ ಕಾಯಿಯಂತೆ ಸಮಾಜ ಸೇವೆಯಲ್ಲೂ ಇವರು ತಮ್ಮ ಕೈಲಾದ ಸೇವೆ ಸಲ್ಲಿಸುತಿದ್ದಾರೆ.


*ಮಧ್ಯಪ್ರಾಚ್ಯದಲ್ಲಿ ಎರಡು ದಶಕಗಳ ಪಯಣ*

ಕರ್ನಾಟಕದ ಮೂಲದವರಾದ ಶ್ರೀ ರಂಗನಾಥ್ ಅವರು ಕಳೆದ 20 ವರ್ಷಗಳಿಂದ ಮಧ್ಯಪ್ರಾಚ್ಯದಲ್ಲಿ ನೆಲೆಸಿದ್ದಾರೆ. ಕುವೈತ್, ಮತ್ತು ದುಬೈ ನಲ್ಲಿ ತಮ್ಮ ವೃತ್ತಿಜೀವನವನ್ನು ರೂಪಿಸಿಕೊಂಡ ಅವರು, ಪ್ರಸ್ತುತ ಒಮಾನ್ ರಾಷ್ಟ್ರದಲ್ಲಿ ಕೆಲಸ ಮಾಡುತ್ತಿದ್ದಾರೆ.

ತಾಯ್ನಾಡಿನಿಂದ ಸಾವಿರಾರು ಮೈಲಿ ದೂರದಲ್ಲಿದ್ದರೂ, ಕನ್ನಡ ಭಾಷೆ ಮತ್ತು ಸಾಹಿತ್ಯದ ಮೇಲಿನ ಅವರ ಪ್ರೀತಿ ಕಿಂಚಿತ್ತೂ ಕಡಿಮೆಯಾಗಿರಲಿಲ್ಲ. 

ಹವ್ಯಾಸವಾಗಿ ಆರಂಭಿಸಿದ ಅವರ ಲೇಖನಗಳು, ಕಥೆಗಳು ಮತ್ತು ಕವನಗಳು ವಿವಿಧ ಕನ್ನಡ ದಿನಪತ್ರಿಕೆಗಳು ಮತ್ತು ನಿಯತಕಾಲಿಕೆಗಳಲ್ಲಿ ಪ್ರಕಟಗೊಳ್ಳುವ ಮೂಲಕ ಓದುಗರ ಗಮನ ಸೆಳೆದಿವೆ.

*ಸಾಹಿತ್ಯ ಸೇವೆಗೆ ಸಂದ ಗೌರವ*

ಆರ್ಯಭಟ ಕಲ್ಚರಲ್ ಆರ್ಗನೈಸೇಶನ್‌ನಿಂದ ನೀಡಲಾಗುವ ಈ ಪ್ರಶಸ್ತಿಯು, ಭಾರತೀಯ ಸಂಸ್ಕೃತಿ, ಕಲೆ ಮತ್ತು ಸಮಾಜಸೇವೆಯಲ್ಲಿ ಅಸಾಧಾರಣ ಕೊಡುಗೆ ನೀಡಿದ ಸಾಧಕರಿಗೆ ಸಲ್ಲುವ ಅತ್ಯುನ್ನತ ಗೌರವವಾಗಿದೆ. ಭಾರತೀಯ ಸಂಸ್ಕೃತಿಯನ್ನು ಜಾಗತಿಕ ಮಟ್ಟದಲ್ಲಿ ಪಸರಿಸುವಲ್ಲಿ ಶ್ರೀ ರಂಗನಾಥ್ ಅವರ ಪಾತ್ರವನ್ನು ಈ ಪ್ರಶಸ್ತಿ ಸಮಿತಿಯು ಶ್ಲಾಘಿಸಿದೆ. ವಲಸೆ ಬದುಕಿನ ಅನುಭವಗಳನ್ನು ಕನ್ನಡ ಸಾಹಿತ್ಯದ ಮೂಲಕ ಅಭಿವ್ಯಕ್ತಗೊಳಿಸುತ್ತಿರುವ ಇವರ ಸಾಧನೆಗೆ ಈ ಪ್ರಶಸ್ತಿ ಗರಿಮೆ ತಂದುಕೊಟ್ಟಿದೆ.

 *ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿಯ ಬಗ್ಗೆ:*

ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿಯು ಪ್ರತಿ ವರ್ಷ ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿದ ವ್ಯಕ್ತಿಗಳನ್ನು ಗುರುತಿಸಿ ಗೌರವಿಸುತ್ತದೆ. ಭಾರತೀಯ ಪರಂಪರೆಯನ್ನು ಜಾಗತಿಕವಾಗಿ ಎತ್ತಿಹಿಡಿಯುವ ಮತ್ತು ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ ಸಾಧಕರನ್ನು ಪ್ರೋತ್ಸಾಹಿಸುವುದು ಈ ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ. ಈ ವರ್ಷ *51ನೇ ಆವೃತ್ತಿಯ ಪ್ರಶಸ್ತಿ ಪ್ರದಾನ ಸಮಾರಂಭವು 23 ಮೇ 2026ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಿತು.

*ವೃತ್ತಿಯಲ್ಲಿ ಅಭಿಯಂತರ, ಪ್ರವೃತ್ತಿಯಲ್ಲಿ ಸಾಹಿತಿ:*

ಪಿ.ಎಸ್. ರಂಗನಾಥ್ ಅವರು ಕಳೆದ 16 ವರ್ಷಗಳಿಂದ ಒಮಾನ್‌ನ ಮಸ್ಕತ್‌ನಲ್ಲಿ ವಿದ್ಯುತ್ ನಿಯಂತ್ರಕ ಉಪಕರಣಗಳ ತಯಾರಿಕಾ ಸಂಸ್ಥೆಯೊಂದರಲ್ಲಿ ಕಾರ್ಯನಿರ್ವಾಹಕ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅದಕ್ಕೂ ಮುನ್ನ ದುಬೈ ಮತ್ತು ಕುವೈತ್‌ನಲ್ಲಿಯೂ ಸೇವೆ ಸಲ್ಲಿಸಿದ್ದಾರೆ. 

ವೃತ್ತಿಯಲ್ಲಿ ಅಭಿಯಂತರರಾದರೂ ಇವರೊಬ್ಬ ಹವ್ಯಾಸಿ ಬರಹಗಾರರು. ಇವರು ಬರೆದ ಹಲವಾರು ಕಥೆಗಳು, ಕವನಗಳು, ವಿಷಯಾಧರಿತ ಲೇಖನಗಳು ಮತ್ತು ಪ್ರವಾಸಿ ಲೇಖನಗಳು ವಿವಿಧ ದಿನಪತ್ರಿಕೆ, ಮಾಸ ಪತ್ರಿಕೆ ಮತ್ತು ಆನ್ ಲೈವ್ ವೆಬ್ ತಾಣಗಳಲ್ಲಿ ಪ್ರಕಟ ಗೊಂಡಿವೆ.

*ಹೊರನಾಡಿನಲ್ಲಿ ಕನ್ನಡ ಕಂಪು:*

ಕೇವಲ ಬರಹಕ್ಕೆ ಸೀಮಿತವಾಗದ ರಂಗನಾಥ್ ಅವರು, ಗಲ್ಫ್ ರಾಷ್ಟ್ರಗಳಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಬೆಳೆಸುವಲ್ಲಿ ಮುಂಚೂಣಿಯಲ್ಲಿದ್ದಾರೆ.

ಒಮಾನ್ ನಲ್ಲಿ ನೆಲೆಸಿರುವ ಕನ್ನಡಿಗರನ್ನು ಪ್ರೋತ್ಸಾಹಿಸಿ ಅವರಿಂದ ಲೇಖನಗಳನ್ನು ಬರೆಸುವಲ್ಲಿ ಇವರ ಶ್ರಮ ಅಪಾರ. ೨೦೨೫ ರಲ್ಲಿ  ಒಮಾನ್ ಕನ್ನಡಿಗರ  ಕರ್ನಾಟಕ ರಾಜ್ಯೋತ್ಸವ ವಿಶೇಷಾಂಕ  ಶ್ರೀ ಪಿ.ಎಸ್. ರಂಗನಾಥ್ ಅವರ ಸಂಪಾದಕತ್ವದಲ್ಲಿ ಮೂಡಿಬಂದಿದೆ. ಈ ಕೃತಿಯಲ್ಲಿ ಒಮಾನ್‌ನಲ್ಲಿ ನೆಲೆಸಿರುವ ಸುಮಾರು 30ಕ್ಕೂ ಹೆಚ್ಚು ಕನ್ನಡಿಗ ಬರಹಗಾರರು ತಮ್ಮ ಭಾವನೆಗಳಿಗೆ ಅಕ್ಷರ ರೂಪ ನೀಡಿದ್ದಾರೆ. ಕಥೆಗಳು, ಮನಮುಟ್ಟುವ ಕವನಗಳು, ವೈಚಾರಿಕ ಲೇಖನಗಳು ಹಾಗೂ ಚುರುಕಾದ ಚುಟುಕುಗಳನ್ನು ಈ  ಸಂಚಿಕೆಯು ಒಳಗೊಂಡಿದೆ. 

*ಪ್ರಮುಖ ಕೃತಿಗಳು:* ಒಮಾನ್ ಕನ್ನಡಿಗರ ಅನುಭವಗಳನ್ನೊಳಗೊಂಡ *ಅರಬ್ಬರ ನಾಡಿನಲ್ಲಿ ಕನ್ನಡಿಗರು*' ಪುಸ್ತಕ ಹಾಗೂ ಅದರ ಇಂಗ್ಲಿಷ್ ಆವೃತ್ತಿ *ಬಿಯಾಂಡ್ ದ ಹೊರೈಜನ್*' (Beyond the Horizon) ಮತ್ತು  *ಸಿಂಚನ*'ಕಥಾಸಂಕಲನ ಇವರ ಸಾಹಿತ್ಯ ಬದ್ಧತೆಗೆ ಸಾಕ್ಷಿ.

*ಸಂಘಟನೆ ಮತ್ತು ಸೇವೆ:* 

ಕಳೆದ ಎರಡು ದಶಕ ಗಳಿಂದ  ಕೊಲ್ಲಿ ರಾಷ್ಟ್ರಗಳಲ್ಲಿ ಕಳೆದಿರುವ ಶ್ರೀಯುತರು ಜತೆಗೆ ವಿವಿಧ ಸಂಘಟನೆಗಳ ಮುಖಾಂತರ ಸಾಮಾಜಿಕ ಸೇವೆಯನ್ನು ಸಲ್ಲಿಸುತಿದ್ದಾರೆ. ಈ ಹಿಂದೆ ಒಂದು ಬಾರಿ ಒಮಾನ್ ರಾಷ್ಟ್ರದ ಭಾರತೀಯ ಸಾಮಾಜಿಕ ವೇದಿಕೆಯ ಕರ್ನಾಟಕ ವಿಭಾಗದಲ್ಲಿ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಗಲ್ಫ್ ಕನ್ನಡಿಗರ ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.




#aryabhata_award #P_S_Ranganatha #Oman_kannadiga #Omankannadiga #Omankannadigaru #Muscat #Oman #Kannada #Karnataka #577540 #Rampura #Chitradurga #Molakalmuru #Bellary

ಮಂಗಳವಾರ, ಮೇ 12, 2026

ದಾಬಸ್ ಪೇಟೆ ಎಂದು‌ ಹೆಸರು‌ ಬರಲು ಕಾರಣವೇನು? ಗೊತ್ತಾ?


ಕೆಲವೊಂದು ಊರಿನ ಹೆಸರುಗಳು ಬಹಳ ವಿಚಿತ್ರವಾಗಿರುತ್ತವೆ, ಅದರ ಹಿನ್ನೆಲೆ ಗೊತ್ತಿರದ ನಾವು ಇದೇನಿದು ಎಂತಹ ವಿಚಿತ್ರ ಹೆಸರನ್ನಿಟ್ಟದ್ದಾರಲ್ಲ‌ ಅಂತ ನಮಗೆ ಅನಿಸುವುದು ಸಹಜ.‌ ಆದರೆ ಅದರ ಹಿನ್ನೆಲೆ ಅರಿತಾದ ಮೇಲೆ, ಈ ಹೆಸರಿಗೂ ಒಂದು ಇತಿಹಾಸ ಇದೆಯಾ ಅಂತ ಅನಿಸುತ್ತದೆ.

​ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನಲ್ಲಿರುವ ದಾಬಸ್ ಪೇಟೆ. ಇಂದು ಕೇವಲ ಒಂದು ಪ್ರಮುಖ ಸಾರಿಗೆ ಜಂಕ್ಷನ್ ಆಗಿ ಉಳಿದಿಲ್ಲ. ಇದು ಕರ್ನಾಟಕದ ವೇಗವಾಗಿ ಬೆಳೆಯುತ್ತಿರುವ ಕೈಗಾರಿಕಾ ಹಬ್ ಮತ್ತು ಐತಿಹಾಸಿಕ ಪರಂಪರೆಯ ಸಂಗಮ ಕ್ಷೇತ್ರವಾಗಿರುವುದು ವಿಶೇಷ.

​ಈ ಪ್ರದೇಶದ ಮೂಲ ಹೆಸರು "ಸೋಂಪುರ". ಇಂದಿಗೂ ಇಲ್ಲಿನ ಕೈಗಾರಿಕಾ ಪ್ರದೇಶವನ್ನು 'ಸೋಂಪುರ ಕೈಗಾರಿಕಾ ಪ್ರದೇಶ' ಎಂದೇ ಕರೆಯಲಾಗುತ್ತದೆ. ಆದರೆ, ಈ ಊರಿಗೆ 'ದಾಬಸ್  ಪೇಟೆ' ಎಂಬ ಹೆಸರು ಬರಲು ಕಾರಣ ಬ್ರಿಟಿಷ್ ಅಧಿಕಾರಿ ಮೇಜರ್ ಜನರಲ್ ರಿಚರ್ಡ್ ಸ್ಟೀವರ್ಟ್ ಡಾಬ್ಸ್ (Richard Stewart Dobbs). ಹಾಗೆ ನೋಡಿದರೆ ಇಂಗ್ಲೀಷ್ ಭಾಷೆಯಲ್ಲಿ ಡಾಬ್ಸ್‌ಪೇಟೆ ,(Dobbspet) ಎಂದಾಗಿತ್ತು, ಜನರ ಆಡುಮಾತಿನಲ್ಲಿ ಇಂದು ದಾಬಸ್ ಪೇಟೆ ಯಾಗಿದೆ


ರಿಚರ್ಡ್ ಸ್ಟೀವರ್ಟ್ ಡಾಬ್ಸ್ (10 ಮೇ 1808 – 26 ಸೆಪ್ಟೆಂಬರ್ 1888) ಅವರು ಬ್ರಿಟಿಷ್ ಭಾರತದ ಆಡಳಿತದಲ್ಲಿ ಸೇವೆ ಸಲ್ಲಿಸಿದ ಪ್ರಮುಖ ಬ್ರಿಟಿಷ್ ನಾಗರಿಕ ಅಧಿಕಾರಿಯಾಗಿದ್ದರು. 1834ರಿಂದ 1861ರವರೆಗೆ ಮೈಸೂರು ಸಂಸ್ಥಾನದ ಚಿತ್ರದುರ್ಗ ವಿಭಾಗದ ಪ್ರಥಮ ಸೂಪರಿಂಟೆಂಡೆಂಟ್ ಆಗಿ ಕಾರ್ಯನಿರ್ವಹಿಸಿದರು. ಆ ಕಾಲದಲ್ಲಿ ತುಮಕೂರು ಈ ವಿಭಾಗದ ಪ್ರಧಾನ ಕಚೇರಿಯಾಗಿತ್ತು. ನಂತರ ಅವರು ಮದ್ರಾಸ್ ಸ್ಥಳೀಯ ಪದಾತಿ ದಳದ 9ನೇ ರೆಜಿಮೆಂಟ್‌ನಲ್ಲಿ ಮೇಜರ್ ಜನರಲ್ ಹುದ್ದೆಯನ್ನು ಅಲಂಕರಿಸಿದರು.

​ಡಾಬ್ಸ್ ಅವರ ಸೇವೆ: 1834 ರಿಂದ ಸುಮಾರು 20 ವರ್ಷಗಳ ಕಾಲ ತುಮಕೂರು ಜಿಲ್ಲೆಯ ಕಲೆಕ್ಟರ್ ಆಗಿ ಸೇವೆ ಸಲ್ಲಿಸಿದ ಡಾಬ್ಸ್, ತಮ್ಮ ಆಡಳಿತಾವಧಿಯಲ್ಲಿ ಈ ಭಾಗದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದರು.

​ಅಂದು ಈ ಭಾಗವು ಕಾಡು ಹಾದಿಯಂತಿದ್ದಾಗ, ಸಂಚಾರದ ಅನುಕೂಲಕ್ಕಾಗಿ ರಸ್ತೆಗಳ ನಿರ್ಮಾಣ, ಕುದುರೆ ಲಾಯಗಳು ಮತ್ತು ಬಾವಿಗಳನ್ನು ತೋಡಿಸಿದರು. ಪ್ರಯಾಣಿಕರ ವಿಶ್ರಾಂತಿಗಾಗಿ ಅವರು ನಿರ್ಮಿಸಿದ 'ಬಂಗಲೆ' ಈ ಪ್ರದೇಶವು ಪ್ರಮುಖ ತಂಗುದಾಣವಾಗಿ ಬೆಳೆಯಲು ಕಾರಣವಾಯಿತು.

​ರಿಚರ್ಡ್ ಡಾಬ್ಸ್ ಅವರು ಕೇವಲ ಅಧಿಕಾರಿಯಾಗಿರದೆ, ಸ್ಥಳೀಯರ ಕಷ್ಟಗಳಿಗೆ ಸ್ಪಂದಿಸುವ ಜನಪರ ನಾಯಕರಾಗಿದ್ದರಂತೆ ಎಂದು ಇತಿಹಾಸದಲ್ಲಿ ದಾಖಲಾಗಿದೆ. ​ಥಾಮಸ್ ಮನ್ರೋ ಜಾರಿಗೆ ತಂದ 'ರೈತರಿಗೆ ಅನುಕೂಲವಾಗುವ' ವ್ಯವಸ್ಥೆಯನ್ನು ಡಾಬ್ಸ್ ಇಲ್ಲಿ ಸಮರ್ಥವಾಗಿ ಅನುಷ್ಠಾನಗೊಳಿಸಿದರು. ಇದರಿಂದ ಮಧ್ಯವರ್ತಿಗಳ ಕಾಟ ತಪ್ಪಿ, ರೈತರು ನೇರವಾಗಿ ಸರ್ಕಾರಕ್ಕೆ ಕಂದಾಯ ಪಾವತಿಸುವಂತಾಯಿತು.

ಡಾಬ್ಸ್ ಅವರ ಆಡಳಿತಾವಧಿಯಲ್ಲಿ ಚಿತ್ರದುರ್ಗ–ತುಮಕೂರು ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೃತ್ತಿಪರ ದರೋಡೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಯಿತು.  ದರೋಡೆಕೋರ ಗುಂಪುಗಳನ್ನು ಬಂಧಿಸುವಲ್ಲಿ ಅವರು ಯಶಸ್ಸು ಸಾಧಿಸಿದ್ದಾಗಿ ದಾಖಲಿಸಲಾಗಿದೆ.

ಅವರು ಶಿಕಾರಿಯಲ್ಲಿಯೂ ಅಪಾರ ಆಸಕ್ತಿ ಹೊಂದಿದ್ದರು. ದೇವರಾಯನದುರ್ಗ ಬೆಟ್ಟ ಹಾಗೂ ಅದರ ಸುತ್ತಲಿನ ಕಾಡು ಪ್ರದೇಶಗಳಲ್ಲಿ ಅವರು ಆಗಾಗ ಬೇಟೆಯಾಡುತ್ತಿದ್ದರು. ತಮ್ಮ ಬರಹಗಳಲ್ಲಿ ದೇವರಾಯನದುರ್ಗ ಪ್ರದೇಶದಲ್ಲಿ ಹುಲಿಗಳು, ಜಿಂಕೆಗಳು (ಅಂದು ಬ್ರಿಟಿಷರು “ಎಲ್ಕ್” ಎಂದು ಕರೆಯುತ್ತಿದ್ದರು) ಮತ್ತು ಕೃಷ್ಣಮೃಗಗಳು ಸಮೃದ್ಧವಾಗಿದ್ದವು ಎಂದು ಉಲ್ಲೇಖಿಸಿದ್ದಾರೆ. ತುಮಕೂರು ಮಾರುಕಟ್ಟೆಯಲ್ಲಿ ನಾಲ್ಕು ಆಣೆಗಳಿಗೆ ಸಂಪೂರ್ಣ ಕೃಷ್ಣಮೃಗವನ್ನು ಖರೀದಿಸಬಹುದಾಗಿತ್ತು ಎಂಬುದನ್ನೂ ಅವರು ದಾಖಲಿಸಿದ್ದಾರೆ. ದೇವರಾಯನದುರ್ಗದ ಸುತ್ತಮುತ್ತ ಕೃಷ್ಣಮೃಗಗಳು ಅಷ್ಟೊಂದು ಹೆಚ್ಚಾಗಿದ್ದವು ಎಂದರೆ, ಒಬ್ಬ ಬ್ರಿಟಿಷ್ ಅಧಿಕಾರಿ ಕೆಲವೇ ದಿನಗಳಲ್ಲಿ ಸುಮಾರು 200 ಕೃಷ್ಣಮೃಗಗಳನ್ನು ಬೇಟೆಯಾಡಿದ್ದಾನೆ ಎಂದು ಅವರು ಬರೆದಿದ್ದಾರೆ.

ಆ ಕಾಲದಲ್ಲಿ ಆ ಪ್ರದೇಶದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗಿದ್ದ ಕಾರಣ, ಅವುಗಳನ್ನು ಬಲೆಗೆ ಬೀಳಿಸುವ ಹೊಸ ವಿಧಾನವನ್ನೂ ಡಾಬ್ಸ್ ರೂಪಿಸಿದ್ದರು ಎಂದು ಹೇಳಲಾಗಿದೆ. ನಿರಂತರ ಬೇಟೆಯ ಪರಿಣಾಮವಾಗಿ ಹುಲಿಗಳು ಮತ್ತು ಚಿರತೆಗಳ ಸಂಖ್ಯೆ ಕಡಿಮೆಯಾಗಿದ್ದು, ಅದರ ಪರಿಣಾಮವಾಗಿ ಕಾಡುಹಂದಿಗಳ ಸಂಖ್ಯೆ ಹೆಚ್ಚಾಗಿ ಕಬ್ಬಿನ ತೋಟಗಳಿಗೆ ಹಾನಿಯುಂಟಾಯಿತು ಎಂಬುದನ್ನೂ ಅವರು ವಿವರಿಸಿದ್ದಾರೆ. ತುಮಕೂರು ನಗರದಿಂದ ಸುಮಾರು ನಾಲ್ಕು ಮೈಲು ದೂರದಲ್ಲಿ ಕೊಲ್ಲಲ್ಪಟ್ಟ ಒಂದು ಹುಲಿಯ ಚರ್ಮವನ್ನು ಸುಲಿದು, ಸ್ಕಾಟ್ಲೆಂಡ್‌ನಲ್ಲಿದ್ದ ಕುಟುಂಬ ಸ್ನೇಹಿತರಿಗೆ ಉಡುಗೊರೆಯಾಗಿ ಕಳುಹಿಸಲಾಗಿತ್ತು. 

ದೇವರಾಯನದುರ್ಗ ಬೆಟ್ಟದ ಮೇಲ್ಭಾಗದಲ್ಲಿ ಡಾಬ್ಸ್ ನಿರ್ಮಿಸಿದ್ದ ಬಂಗಲೆಯನ್ನು ನಂತರ ಪೊಲೀಸ್ ವೈರ್‌ಲೆಸ್ ಸಂವಹನ ಕೇಂದ್ರವಾಗಿ ಬಳಸಲಾಯಿತು.


ಡಾಬ್ಸ್ ಅವರು ನಿವೃತ್ತಿಯ ನಂತರ ತಮ್ಮ ತಾಯ್ನಾಡಾದ ಐರ್ಲೆಂಡ್‌ಗೆ ಮರಳಿದರೂ, ಅವರ ನೆನಪಿಗಾಗಿ ಸ್ಥಳೀಯರು ಒಂದು ದೊಡ್ಡ ಕಲ್ಲನ್ನು ಸ್ಥಾಪಿಸಿ ಅದನ್ನು ಗೌರವದಿಂದ ಕಾಣುತ್ತಿದ್ದರು. ಇದನ್ನು ಸ್ಥಳೀಯರು "ಡಾಬ್ಸ್ ಗುಂಡು" ಅಥವಾ "ಡಾಬ್ಸ್ ಸಮಾಧಿ" ಎಂದು ಕರೆಯುತ್ತಿದ್ದರು (ವಾಸ್ತವವಾಗಿ ಅವರ ನಿಧನವಾದದ್ದು ಐರ್ಲೆಂಡ್‌ನಲ್ಲಿ). 1990ರ ದಶಕದಲ್ಲಿ ರಾಷ್ಟ್ರೀಯ ಹೆದ್ದಾರಿ 4ರ ವಿಸ್ತರಣೆಯ ಸಂದರ್ಭದಲ್ಲಿ ಈ ಸ್ಮಾರಕವು ತೆರವುಗೊಂಡಿತು.

ರಿಚರ್ಡ್ ಸ್ಟೀವರ್ಟ್ ಡಾಬ್ಸ್ ಅವರು 1834ರ ಏಪ್ರಿಲ್ 18ರಂದು ಜೇನ್ ಮಾರ್ಗರೇಟ್ ಕ್ಯಾಥ್‌ಕಾರ್ಟ್ (15 ಏಪ್ರಿಲ್ 1811 – 24 ಜನವರಿ 1892) ಅವರನ್ನು ವಿವಾಹವಾದರು. ಈ ದಂಪತಿಗೆ ಒಟ್ಟು ಹನ್ನೊಂದು ಮಕ್ಕಳು ಜನಿಸಿದರು — ಎಂಟು ಗಂಡು ಮಕ್ಕಳು ಹಾಗೂ ಮೂವರು ಹೆಣ್ಣು ಮಕ್ಕಳು.

ಡಾಬ್ಸ್ ಅವರ ಮೃತದೇಹವನ್ನು ಐರ್ಲೆಂಡ್‌ನ ಕೌಂಟಿ ವಿಕ್ಲೋದಲ್ಲಿರುವ ಗ್ರೇಸ್ಟೋನ್ಸ್‌ನ ರೆಡ್‌ಫೋರ್ಡ್ ಸಮಾಧಿಸ್ಥಳದಲ್ಲಿ ಸಮಾಧಿ ಮಾಡಲಾಗಿದೆ.

​ದಾಬಾಸ್ ಪೇಟೆಯ ಭೌಗೋಳಿಕ ಮಹತ್ವವನ್ನು ಹೆಚ್ಚಿಸುವುದು ಸಮೀಪದಲ್ಲಿರುವ ಶಿವಗಂಗೆ ಬೆಟ್ಟ.



​ದಕ್ಷಿಣ ಕಾಶಿ: ಶಿವಗಂಗೆಯನ್ನು 'ದಕ್ಷಿಣ ಕಾಶಿ' ಎಂದು ಕರೆಯಲಾಗುತ್ತದೆ. ದಾಬಸ್ ಪೇಟೆಯಿಂದ ಕೇವಲ 6 ಕಿ.ಮೀ ದೂರದಲ್ಲಿರುವ ಈ ಕ್ಷೇತ್ರವು ಧಾರ್ಮಿಕ ಮತ್ತು ಚಾರಣದ ದೃಷ್ಟಿಯಿಂದ ಅತ್ಯಂತ ಪ್ರಸಿದ್ಧ.

​ಇಲ್ಲಿನ ಗವಿ ಗಂಗಾಧರೇಶ್ವರ ದೇವಾಲಯ ಮತ್ತು 'ತುಪ್ಪವನ್ನು ಹಚ್ಚಿದರೆ ಬೆಣ್ಣೆಯಾಗುವ' ಪವಾಡ ಇಂದಿಗೂ ಪ್ರವಾಸಿಗರನ್ನು ಆಕರ್ಷಿಸುತ್ತದೆ.

​ಇಂದು ದಾಬಸ್ ಪೇಟೆ ತನ್ನ ಹಳೆಯ ಕೃಷಿ ಪ್ರಧಾನ ಮುಖವನ್ನು ಕಳಚಿ, ಬೃಹತ್ ಕೈಗಾರಿಕಾ ವಲಯವಾಗಿ ರೂಪಾಂತರಗೊಂಡಿದೆ.

​ಕೈಗಾರಿಕಾ ಪ್ರದೇಶ (KIADB): ಇಲ್ಲಿನ ಸೋಂಪುರ ಕೈಗಾರಿಕಾ ಪ್ರದೇಶದಲ್ಲಿ ನೂರಾರು ಸಣ್ಣ ಮತ್ತು ಬೃಹತ್ ಕೈಗಾರಿಕೆಗಳಿವೆ. ವಿಶೇಷವಾಗಿ ಇಂಜಿನಿಯರಿಂಗ್, ಕೆಮಿಕಲ್ಸ್ ಮತ್ತು ಟೆಕ್ಸ್ಟೈಲ್ ಘಟಕಗಳು ಇಲ್ಲಿ ಹೆಚ್ಚಾಗಿವೆ.

​ ಈ ಪಟ್ಟಣವು NH-48 (ಬೆಂಗಳೂರು-ಪುಣೆ) ಮತ್ತು NH-648 (ದೊಡ್ಡಬಳ್ಳಾಪುರ-ಹೊಸೂರು) ರಸ್ತೆಗಳನ್ನು ಸಂಪರ್ಕಿಸುವ ಮಹತ್ವದ ಕೊಂಡಿಯಾಗಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹತ್ತಿರವಿರುವುದು ಈ ಪ್ರದೇಶದ ಆರ್ಥಿಕತೆಗೆ ದೊಡ್ಡ ಬಲ ನೀಡಿದೆ.

​ದಾಬಸ್ ಪೇಟೆ ಎನ್ನುವುದು ಕೇವಲ ಹೆದ್ದಾರಿಯ ನಡುವಿನ ಒಂದು ಜಂಕ್ಷನ್ ಅಲ್ಲ. ಇದು ಬ್ರಿಟಿಷ್ ಕಾಲದ ಆಡಳಿತ ಸುಧಾರಣೆ, ಶಿವಗಂಗೆಯ ಆಧ್ಯಾತ್ಮಿಕ ಕಂಪನ್ನು ಸಾರುವ ನೆಲೆ ಮತ್ತು ಕರ್ನಾಟಕದ ಕೈಗಾರಿಕಾ ಪ್ರಗತಿಗೆ ವೇಗ ನೀಡುತ್ತಿರುವ ಪ್ರಮುಖ ತಾಣ. ಇತಿಹಾಸದ ಸವಿನೆನಪು ಮತ್ತು ಭವಿಷ್ಯದ ಬೆಳವಣಿಗೆಗಳ ನಡುವೆ ದಾಬಸ್ ಪೇಟೆ ಸಮತೋಲನ ಕಾಯ್ದುಕೊಂಡಿದೆ.

ಬರಹ: ಪಿ.ಎಸ್.ರಂಗನಾಥ

ಮಸ್ಕತ್, ಒಮಾನ್ ರಾಷ್ಟ್ರ

#dobbaspet #tunkur #karnataka #kannada #muscat #oman #dobbs #rsdobbs

ಸೋಮವಾರ, ಮೇ 11, 2026

ದೇವರಿಗಿಂತ ಮಿಗಿಲಾದವಳು: ತಾಯಿ


ತಾಯಿ 

ಈ ಎರಡಕ್ಷರದ ಪದದಲ್ಲಿ ಅಡಗಿರುವ ಅರ್ಥದ ಆಳವನ್ನು ಅಳೆಯಲು ಯಾವ ನಿಘಂಟಿನಿಂದಲೂ ಸಾಧ್ಯವಿಲ್ಲ. ಪ್ರತಿ ವರ್ಷ ಮೇ ತಿಂಗಳ ಎರಡನೇ ಭಾನುವಾರ ನಾವು 'ವಿಶ್ವ ತಾಯಂದಿರ ದಿನ'ವನ್ನು ಸಂಭ್ರಮದಿಂದ ಆಚರಿಸುತ್ತೇವೆ. ಆಕೆಯನ್ನು ಗೌರವಿಸುವುದು, ಉಡುಗೊರೆ ನೀಡುವುದು, ಆಕೆಯ ಕೆಲಸಕ್ಕೆ ಅಂದು ಒಂದು ದಿನ ವಿರಾಮ ನೀಡಿ ವಿಶೇಷ ಭೋಜನ ಸವಿಯುವುದು ಇಂದು ರೂಢಿಯಾಗಿದೆ. ಆದರೆ, ಈ ಆಚರಣೆಯ ಹಿಂದೆ ಕೇವಲ ಸಂಭ್ರಮವಿದೆಯೇ ಅಥವಾ ಮರೆಯಾಗುತ್ತಿರುವ ಮನುಷ್ಯತ್ವದ ನೆನಪಿನ ಅನಿವಾರ್ಯತೆ ಇದೆಯೇ?

    ತಾಯಂದಿರ ದಿನದ ಇತಿಹಾಸವನ್ನು ಕೆದಕಿದಾಗ ನಮಗೆ ಸಿಗುವುದು 1908ರ ಅಮೇರಿಕಾ. ಅನ್ನಾ ಜಾರ್ವಿಸ್ ಎಂಬುವವರು ತನ್ನ ತಾಯಿಯ ಸ್ಮರಣಾರ್ಥವಾಗಿ ಮತ್ತು ತಾಯಂದಿರ ತ್ಯಾಗವನ್ನು ಗೌರವಿಸಲು ಈ ದಿನವನ್ನು ಆರಂಭಿಸಿದರು. ಭಾರತಕ್ಕೆ ಈ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ 20ನೇ ಶತಮಾನದ ಅಂತ್ಯದಲ್ಲಿ ಕಾಲಿಟ್ಟಿತು. ಇಂದು ನಗರಗಳಲ್ಲಿ ಇದು ದೊಡ್ಡ ಹಬ್ಬದಂತೆ ಆಚರಿಸಲ್ಪಡುತ್ತಿದೆ.

ದೇವರಿಗಿಂತ ಮಿಗಿಲಾದವಳು: 

    ದೇವರು ಎಲ್ಲೆಡೆ ಇರಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಅಮ್ಮನನ್ನು ಸೃಷ್ಟಿಸಿದನಂತೆ. ಈ ಮಾತಿನಲ್ಲಿ ಅತಿಶಯೋಕ್ತಿಯಿಲ್ಲ. ಮಗು ಮಾಂಸದ ಮುದ್ದೆಯಾಗಿ ಭೂಮಿಗೆ ಬಂದಾಗಿನಿಂದ ಹಿಡಿದು, ಅದರ ಮಲ ಮೂತ್ರ, ಬೆವರು ಯಾವುದನ್ನೂ ಅಸಹ್ಯ ಪಟ್ಟುಕೊಳ್ಳದೆ ಎದೆಯ ಹಾಲಿನೊಂದಿಗೆ ಪ್ರೀತಿಯನ್ನು ಉಣಿಸಿ ಬೆಳೆಸುವವಳು ಅಮ್ಮ. ಒಬ್ಬ ಶಿಲ್ಪಿ ಕಲ್ಲನ್ನು ಕೆತ್ತಿ ಮೂರ್ತಿ ಮಾಡುವಂತೆ, ಅಮ್ಮ ತನ್ನ ಪ್ರೀತಿಯೆಂಬ ಉಳಿಯಿಂದ ಮಕ್ಕಳನ್ನು ಸಮಾಜದ ಉತ್ತಮ ಪ್ರಜೆಯನ್ನಾಗಿ ರೂಪಿಸುತ್ತಾಳೆ. ತನ್ನ ಬಯಕೆಗಳಿಗೆ ತಿಲಾಂಜಲಿ ಇಟ್ಟು, ಹರಿದ ಸೀರೆಯಲ್ಲೇ ದಿನಗಳನ್ನು ಕಳೆಯುತ್ತಾ, ಮಕ್ಕಳ ಹಿತವನ್ನೇ ತನ್ನ ಸುಖ ಎಂದು ಭಾವಿಸುವವಳು ಅವಳು. ಬಿಸಿಲು, ಮಳೆ, ಬಿರುಗಾಳಿ ಬಂದರೂ ತನ್ನ ಮಡಿಲಿನಲ್ಲಿ ಮಕ್ಕಳಿಗೆ ನೆಮ್ಮದಿಯ ಆಶ್ರಯ ನೀಡುವ ಆಲದ ನೆರಳು ಅಮ್ಮ.

        ಇಂದು ನಾವು ಅದ್ದೂರಿಯಾಗಿ ತಾಯಂದಿರ ದಿನವನ್ನು ಆಚರಿಸುತ್ತಿದ್ದೇವೆ ಎಂದರೆ, ಅದಕ್ಕೆ ಕಾರಣ ನಾವು ತಾಯಿಯನ್ನು ಮರೆಯುತ್ತಿದ್ದೇವೆ ಎಂಬ ಕಟು ಸತ್ಯ. 'ಮದರ್ ಇಂಡಿಯಾ' ಎಂದು ನಾವು ಭಾರತದ ಅಮ್ಮನನ್ನು ಪೂಜಿಸುತ್ತೇವೆ, ಆದರೆ ಇಂದು ಎಷ್ಟೋ ತಾಯಂದಿರಿಗೆ ಸ್ವಂತ ಮನೆಯಲ್ಲೇ ನೆಲೆ ಇಲ್ಲದಂತಾಗಿದೆ. ಮಗು ಬೆಳೆದಂತೆ ತಾಯಿಯ ಅಕ್ಕರೆ ಹೆಚ್ಚುತ್ತದೆ, ಆದರೆ ಅದೇ ಮಗು ಬೆಳೆದು ಮನುಷ್ಯನಾದಾಗ ತಾಯಿಯನ್ನೇ ತೊರೆಯಲಾರಂಭಿಸುತ್ತಾನೆ.

  ಮಕ್ಕಳು ತಮ್ಮ ಬದುಕಿನಲ್ಲಿ ಬ್ಯುಸಿಯಾದಂತೆ, ಅಮ್ಮನನ್ನು ವೃದ್ಧಾಶ್ರಮಕ್ಕೆ ದೂಡುತ್ತಿರುವುದು ಇಂದಿನ ಕಾಲದ ದೊಡ್ಡ ವಿಡಂಬನೆ. ಒಂದು ದಿನದ ಉಡುಗೊರೆ ಅಥವಾ ಸ್ಟೇಟಸ್ ಅಪ್‌ಡೇಟ್‌ಗಿಂತ, ಆಕೆಗೆ ಬೇಕಿರುವುದು ಆಕೆಯ ಮುಪ್ಪಿನ ಕಾಲದಲ್ಲಿ ಮಕ್ಕಳ ಪ್ರೀತಿಯ ಸಾಮೀಪ್ಯ. 

ನಮ್ಮ ಕರ್ತವ್ಯ: 

ತಾಯಂದಿರ ದಿನ ಕೇವಲ ಒಂದು ದಿನದ ಫೋಟೋಶೂಟ್ ಆಗಬಾರದು. ಆಕೆಯ ತ್ಯಾಗದ ಋಣ ತೀರಿಸಲು ಯಾರಿಂದಲೂ ಸಾಧ್ಯವಿಲ್ಲ, ಆದರೆ ಆಕೆಯನ್ನು ಗೌರವದಿಂದ ಕಾಣುವುದು ನಮ್ಮ ಕೈಯಲ್ಲಿದೆ. ಆಕೆಯ ಬದುಕಿನ ಸಂಜೆ ಹೊತ್ತು ಒಂಟಿಯಾಗದಂತೆ ನೋಡಿಕೊಳ್ಳುವುದು ನಿಜವಾದ ಆಚರಣೆ. ಕೊನೆಯದಾಗಿ, ಅಮ್ಮ ಎಂಬುದು ಕೇವಲ ಒಂದು ಸಂಬಂಧವಲ್ಲ, ಅದು ಒಂದು ಅನುಭವ. ಆಕೆಯನ್ನು ಪ್ರೀತಿಸೋಣ, ಗೌರವಿಸೋಣ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ನಮ್ಮೊಂದಿಗೆ ಇರಿಸಿಕೊಳ್ಳೋಣ. ಇಂದು ಆಕೆಗೆ ನಿಮ್ಮ ಸಮಯವನ್ನು ನೀಡಿ, ಅದೇ ನೀವು ನೀಡುವ ಅತ್ಯುತ್ತಮ ಉಡುಗೊರೆ.

ಪಿ.ಎಸ್.ರಂಗನಾಥ

ಮಸ್ಕತ್, ಒಮಾನ್ ರಾಷ್ಟ್ರ 


ಶನಿವಾರ, ಮೇ 2, 2026

ಅರಬ್ ಮಣ್ಣಿನಲ್ಲಿ ಅರಳಿದ ಭಾರತೀಯ ಮಾಧುರ್ಯ: ಯೆಮೆನ್ ಮಾವಿನ ಕಥೆ

ಹಣ್ಣುಗಳ ರಾಜ ಹೆಸರಾಗಿರುವ ಮಾವಿನ ಹಣ್ಣಿನ ರುಚಿಗೆ ಮನಸೋತವರು ಯಾರಿಲ್ಲ ಹೇಳಿ? ಮಾವಿನ ಹಣ್ಣಿನ ಸೀಸನ್ ಬಂದೊಡನೆ ಪ್ರತಿ ಊರಿನಲ್ಲೂ ಮಾವಿನ ಹಣ್ಣಿನ ಹಬ್ಬ ಅಂತ ಹೇಳಬಹುದು, ಮಾರುಕಟ್ಟೆಯ ಬೀದಿಬೀದಿಗಳಲ್ಲೂ ತರಹೇವಾರಿ ಮಾವಿನ ಹಣ್ಣನ್ನು ಮಾರುತ್ತಾರೆ. ಅಷ್ಟೇ ಅಲ್ಲದೆ ಹಲವಾರು ದೇಶಗಳಿಗೆ ನಮ್ಮ ಭಾರತದಿಂದ  ಹಣ್ಣುಗಳು ರಫ್ತಾಗುತ್ತವೆ. ಕೋಟ್ಯಾಂತರ ರೂಪಾಯಿಗಳ ವ್ಯವಹಾರ ನಡೆಯುತ್ತದೆ. ಪ್ರಪಂಚದಲ್ಲಿ ಅತಿ ಹೆಚ್ಚು ಮಾವಿನ ಹಣ್ಣುಗಳನ್ನು ಬೆಳೆಯುವ ದೇಶದಲ್ಲಿ ಭಾರತವು ಮೊದಲನೆಯ ಸ್ಥಾನದಲ್ಲಿದೆ.


ಒಮಾನ್ ನಲ್ಲಿ ನೆಲೆಸಿರುವ ನಾವು ಪ್ರತಿ ವರ್ಷದ ಮಾವಿನ ಹಣ್ಣಿನ ಸೀಸನ್ ನಲ್ಲಿ ಭಾರತದಿಂದ ರಫ್ತು ಮಾಡಲ್ಪಟ್ಟ  ಹಣ್ಣುಗಳನ್ನು ಖರೀದಿಸಿ ತಿನ್ನುವುದು ರೂಡಿ. ಸುಮಾರು ಹದಿನಾರು ವರ್ಷಗಳ ಹಿಂದೆ  ಮಸ್ಕತ್ ಗೆ ಮೊದಲು ಬಂದಾಗ, ಮಾರುಕಟ್ಟೆಯಲ್ಲಿ ದೊರೆಯುತಿದ್ದ ಅತಿ ಹೆಚ್ಚು ಬೆಲೆಯ ಮಾವಿನ ಹಣ್ಣಗಳನ್ನು ಕೊಳ್ಳಲು ಹಿಂದೆ ಮುಂದೆ ಯೋಚಿಸುತಿದ್ದೆವು. ಸಾಮಾನ್ಯವಾಗಿ ಭಾರತದಿಂದ ಆಮದಾಗುವ ವಸ್ತುಗಳು ಇಲ್ಲಿ ಹೆಚ್ಚಿನ ಬೆಲೆಗೆ ಮಾರಲ್ಪಡುತ್ತವೆ. ವ್ಯಾಪಾರಿಗಳು ಮತ್ತು ದಲ್ಲಾಳಿಗಳ ಲಾಭಾಂಶ, ಸಾಗಣೆ ವೆಚ್ಚ ಇತ್ಯಾದಿ ಸೇರಿ, ವಸ್ತುಗಳ ಬೆಲೆ ದುಪ್ಪಟ್ಟಾಗುವುದು ಸಹಜ. ಊರಿನಲ್ಲಿ ನೂರು ರೂಪಾಯಿಗೆ ದೊರೆಯುವ ವಸ್ತುಗಳು ಇನ್ನೂರಕ್ಕೂ ಹೆಚ್ಚಿನ ಬೆಲೆಗೆ ಮಾರುತ್ತಾರೆ.  ಒಮಾನಿನ ಮಾರ್ಕೆಟ್ ಗಳಲ್ಲಿ ನಾವು ಯಾವುದೇ ವಸ್ತುಗಳನ್ನು ಖರೀದಿಸುವಾಗ, ಭಾರತ ಮೂಲದ ಆಹಾರ ಪದಾರ್ಥಗಳಿಗೆ ಯಾವಾಗಲು ಮೊದಲ ಪ್ರಾಶಸ್ತ್ಯ ನೀಡುತ್ತೇವೆ. ಕೇಜಿಗೆ ಬೆಲೆ ದುಪ್ಪಟ್ಟಾದರು ನೂರಾರು ರೂಪಾಯಿ ಕೊಟ್ಟು ಹಲವಾರು ಬಾರಿ ಹೀಗಾಗಿ ನಮ್ಮೆಲ್ಲರ ಅಚ್ಚು ಮೆಚ್ಚಿನ ಮಾವಿನ ಹಣ್ಣನ್ನು ಪ್ರತಿ ಸೀಸನ್ ನಲ್ಲಿ ಖರೀದಿಸಿ ತಂದು, ಅದರ ಸ್ವಾದವನ್ನು ಅನುಭವಿಸುತ್ತಿರುತ್ತೇವೆ. ಒಮ್ಮೊಮ್ಮೆ, ತುಂಬಾ ಇಷ್ಟ ಪಟ್ಟು, ಜಾಸ್ತಿ ದುಡ್ಡು ಕೊಟ್ಟು ತಂದ ಹಣ್ಣುಗಳಲ್ಲಿ ಕೆಲವೊಂದು ತಳಿಗಳು ನೋಡಲು ಸುಂದರವಾಗಿದ್ದರೂ ಅಷ್ಟೊಂದು ರುಚಿ ನೀಡುತ್ತಿರುತ್ತಿಲ್ಲ. ಹೀಗಾಗಿ ಒಳ್ಳೆ ರುಚಿಯಾದ ಹಣ್ಣಿಗಾಗಿ ವಿವಿಧ ತಳಿಗಳನ್ನು ಟ್ರೈ ಮಾಡುವುದು ನಮ್ಮ ಅಭ್ಯಾಸ. ಒಮ್ಮೆ ಟ್ರೈ ಮಾಡೋಣ ಎಂದು  ಯೆಮೆನ್ ಮಾವಿನ ಹಣ್ಣನ್ನು ಖರೀದಿಸಿ ತಂದು ರುಚಿ ನೋಡಿದೆವು. ಅಬ್ಬಾ! ಆ ಹಣ್ಣಿನ ರುಚಿಗೆ ನಾನೊಬ್ಬನೆ ಮಾತ್ರವಲ್ಲ, ಮನೆಯಲ್ಲಿ ಎಲ್ಲರೂ ಮನಸೋತು ಹೋದೆವು.  ಬಾಯಲ್ಲಿ ಇಟ್ಟ ತಕ್ಷಣ ಆ ಮಾವು ಕರಗಿ ಹೋಗುವಂತಹ ಅನ್ಬುಭವ. ಜೇನುತುಪ್ಪದಂತಹ ಸಿಹಿ, ಜೊತೆಗೆ ಬಾಯಲ್ಲಿ ಉಕ್ಕುವ ರಸ. ಮಾವಿನ ಹಣ್ಣಿನಲ್ಲಿ ನಾರೇ ಇರಲಿಲ್ಲ. ಚಾಕುವಿನಿಂದ ಹಣ್ಣನ್ನು ಕತ್ತರಿಸಿದಾಗ ಅದು ಬೆಣ್ಣೆಯನ್ನು ಕತ್ತರಿಸಿದ ಅನುಭವ ನೀಡಿತ್ತು. ಆಗ ನನಗನಿಸಿದ್ದು, ನಾವ್ಯಾಕೆ ಇಷ್ಟು ದಿನ ಈ ಹಣ್ಣನ್ನು ತಿನ್ನಲೇ ಇಲ್ಲವಲ್ಲ ಅಂತ! ಈ ಹಣ್ಣಿನ ರುಚಿಗೆ ಮಾರು ಹೋಗದವರು ಯಾರು ಇಲ್ಲ. ಮಾರ್ಕೆಟ್ ನಲ್ಲಿ ಯೆಮೆನ್ ಮಾವಿನ ಹಣ್ಣುಗಳು ಬಂದೊಡನೆ, ಅತಿ ಶೀಘ್ರವಾಗಿ ಖಾಲಿಯಾಗಿ ಬಿಡುತ್ತವೆ. ನನ್ನ ಸ್ನೇಹಿತರೂ ಸಹ ಇದೇ ಮಾತನ್ನು ಹೇಳುತಿದ್ದರು. 


*ಮರುಭೂಮಿಯಲ್ಲಿ ಕೃಷಿ*:

ಹಳ್ಳ ಕೊಳ್ಳ, ನದಿ, ಹೊಲ,ಗದ್ದೆ, ಕೆರೆ ಕಟ್ಟೆ, ಹಸಿರು ಹೊದ್ದ ಬೆಟ್ಟಗಳು ಹೀಗೆ ನಿತ್ಯವೂ ಹಸಿರನ್ನು ನೋಡಿ ಬೆಳೆದ ನಮಗೆ, ಗಲ್ಫ್ ರಾಷ್ಟ್ರಗಳಲ್ಲಿ ಬಹುತೇಕ ಕಡೆ ಮರುಭೂಮಿ, ಬೊಳು ಬೋಳಾಗಿರುವ ಬೆಟ್ಟ ಗುಡ್ಡಗಳು, ಸುಣ್ಣದ ಕಲ್ಲಿನ ಪದರಗಳನ್ನು ಒಳಗೊಂಡ ಭೂ ಪ್ರದೇಶ, ಜಾಲಿ ಮುಳ್ಳು ಬಿಟ್ಟರೆ ಬೇರೇನು ಬೆಳೆಯದ ಭೂಮಿ, ಕಣ್ಣು ಹಾಯಿಸಿದಷ್ಟೂ ದೂರ ಮರಳಿನ ದಿಬ್ಬಗಳು ಹೀಗೆ ಈ ಎಲ್ಲವೂ ನಮ್ಮನ್ನು ಉಲ್ಲಾಸ ಕಳೆದುಕೊಳ್ಳುವಂತೆ ಮಾಡುತ್ತವೆ. ಆದರೆ ವಾದಿಗಳ (ನದಿಗಳು) ಸುತ್ತ ಮುತ್ತಲಿನ ಪ್ರದೇಶಗಳು, ತೋಟಗಳು ಮತ್ತು ಹೊಲಗಳನ್ನು ನೋಡಿದೊಡನೆ ಮನಸ್ಸಿಗೆ ಉತ್ಸಾಹ ತುಂಬುತ್ತವೆ. ತಿಂಗಳಿಗೆ ಒಂದೆರೆಡು ಬಾರಿ ಇಂತಹ ಪ್ರದೇಶಗಳಿಗೆ ಹೋಗಿ ಧೈನಂದಿನ ಏಕತಾನತೆಯನ್ನು ದೂರಮಾಡಿಕೊಂಡು ಮನಸ್ಸನ್ನು ಸಂತೈಸಿಕೊಂಡು ಹಿಂತಿರುವುದು ಇಲ್ಲಿ ನೆಲೆಸೆರಿವು ನಮ್ಮಂತ ವಲಸಿಗರಿಗೆ ಇದು ಸಾಮಾನ್ಯದ ಸಂಗತಿ. ಈ ಮಣ್ಣಿನ ವೈಶಿಷ್ಟ್ಯವೇನೋ ಗೊತ್ತಿಲ್ಲ, ವಾದಿಗಳ (ನದಿಗಳು) ಸುತ್ತ ಮುತ್ತಲಿನ ಪ್ರದೇಶಗಳು, ತೋಟಗಳು ಮತ್ತು ಹೊಲಗಳಲ್ಲಿ ಖರ್ಜೂರದ ಮರಗಳು ಯಥೇಚ್ಚವಾಗಿ ಬೆಳೆದಿರುತ್ತವೆ, ಅಲ್ಲಲ್ಲಿ ಮಾವಿನ ಮರಗಳು, ನಿಂಬೆ ಹಣ್ಣಿನ ಮರಗಳು, ಸೀಬೆ ಹಣ್ಣಿನ ಗಿಡಗಳು, ಕರಿಬೇವಿನ ಸೊಪ್ಪಿನ ಗಿಡ, ನುಗ್ಗೆಕಾಯಿ ಗಿಡಗಳು, ಸಪೋಟ ಗಿಡಗಳು ಇತ್ಯಾದಿ ಮರಗಳು ಸ್ವಾಭಾವಿಕವಾಗಿ ಬೆಳೆಯುತ್ತವೆ. ಇವೆಲ್ಲವನ್ನೂ ನೋಡುವುದು ಮನಸ್ಸಿಗೆ ಮುದ ನೀಡುತ್ತವೆ.



ಈ ಮರುಭೂಮಿಯಲ್ಲೂ ವಿವಿಧ ಹಣ್ಣಿನ ಗಿಡಗಳು ಬೆಳೆಯುವುದಕ್ಕೆ ಕಾರಣ ನಮ್ಮ ಭಾರತ ದೇಶ ಎಂದು ಹೇಳಬಹುದು. ಅನಾದಿಕಾಲದಿಂದಲೂ ನಮ್ಮ ಭಾರತ ಮತ್ತು ಅರಬ್ ರಾಷ್ಟ್ರಗಳ ಮಧ್ಯೆ ವ್ಯಾಪಾರ ವಹಿವಾಟು ನಡೆಯುತಿತ್ತು. ಇಲ್ಲಿ ದೊರೆಯುತ್ತಿದ್ದ ಖರ್ಜೂರ, ಸಾಂಭ್ರಾಣಿ, ನಿಂಬೆಹಣ್ಣು, ಮುತ್ತು ರತ್ನಗಳು ಇತ್ಯಾದಿಗಳನ್ನ ಭಾರತಕ್ಕೆ ರಫ್ತುಮಾಡಿ ಅಲ್ಲಿಂದ ಆಹಾರ ಪದಾರ್ಥಗಳನ್ನು ಆಮದು ಮಾಡಿಕೊಳ್ಳುತಿದ್ದರು. ಹೀಗಾಗಿ ಅಲ್ಲಿಂದ ತರಲಾಗಿದ್ದ ಹಲವಾರು ಧಾನ್ಯಗಳು, ಹಣ್ಣುಗಳ ಬೀಜಗಳನ್ನು ಇಲ್ಲಿ ಬೆಳೆಸಲು ಪ್ರಯತ್ನಿಸಲಾಗಿದೆ. ಈ ಮಣ್ಣಿನ ಗುಣಕ್ಕೆ ಅನುಗುಣವಾಗಿ ವಿವಿಧ ಹಣ್ಣು, ತರಕಾರಿಗಳನ್ನು ಬೆಳೆಯಲು ಪ್ರಾರಂಭಿಸಲಾಗಿದೆ. ಇತ್ತೀಚೆಗಂತೂ ಆಧುನಿಕ ಕೃಷಿ ಪದ್ದತಿಯಲ್ಲಿ ತರಹೇವಾರಿ ಹಣ್ಣುಗಳು, ತರಕಾರಿಗಳು, ಸೊಪ್ಪುಗಳನ್ನು ಒಮಾನಿನಲ್ಲಿ ಬೆಳೆಯಲಾಗುತ್ತಿದೆ. ಕೇವಲ ಇಲ್ಲಿನ ಮಾರುಕಟ್ಟೆಗೆ ಮಾತ್ರವಲ್ಲದೆ, ಪಕ್ಕದ ಅರಬ್ ರಾಷ್ಟ್ರಗಳಿಗೂ ರಫ್ತು ಮಾಡಲಾಗುತ್ತಿದೆ. 

*ಯೆಮೆನ್ ಮಾವಿಗೂ ನಮ್ಮ ಭಾರತಕ್ಕೂ ಅವಿನಾಭಾವ ಸಂಬಂಧವಿದೆ!:-*

ಈ ಯೆಮೆನ್ ಮಾವಿನ ಹಣ್ಣುಗಳು ಮೂಲತಃ ಭಾರತದಿಂದಲೇ ಯೆಮೆನ್‌ಗೆ ಹೋಗಿ ಅಲ್ಲಿನ ಹವಾಮಾನಕ್ಕೆ ತಕ್ಕಂತೆ ವಿಶಿಷ್ಟ ರುಚಿ ಪಡೆದುಕೊಂಡಿವೆ ಎಂಬ ವಿಷಯ ತಿಳಿದಾಗ ಭಾರತೀಯರು ಹೆಮ್ಮೆ ಪಡುತ್ತಾರೆ. ಇತಿಹಾಸದ ದಾಖಲೆಗಳ ಪ್ರಕಾರ, ಸುಮಾರು 200 ವರ್ಷಗಳ ಹಿಂದೆ, ಯೆಮೆನ್‌ನ  ಲಾಹಜ್ (Lahj)  ಪ್ರಾಂತ್ಯದ ಸುಲ್ತಾನರಾದ ಅಹ್ಮದ್ ಬಿನ್ ಅಬ್ದುಲ್ ಕರೀಮ್ ಅಲ್-ಅಬ್ದಾಲಿ (Ahmed bin Abdul Karim) ಮತ್ತು ಅವರ ಉತ್ತರಾಧಿಕಾರಿಗಳು ಭಾರತದೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು. ಈ ಸುಲ್ತಾನರೇ ಲಾಹಜ್‌ನಲ್ಲಿ ಕೃಷಿಯನ್ನು ಅಭಿವೃದ್ಧಿಪಡಿಸಲು ಭಾರತದಿಂದ ವಿವಿಧ ಮಾವಿನ ತಳಿಗಳನ್ನು ತರಿಸಿ ನೆಟ್ಟರು ಎಂದು ಹೇಳಲಾಗಿದೆ. ಮೊದಲು ಈ ಸಸಿಗಳನ್ನು ಲಾಹಜ್‌ನ ಪ್ರಸಿದ್ಧ ಅಲ್-ಹುಸೇನಿ ತೋಟಗಳಲ್ಲಿ (Al-Husseini Gardens) ನೆಟ್ಟರು. ಅಂದಿನಿಂದ ಲಾಹಜ್ ಯೆಮೆನ್‌ನ "ಹಸಿರು ಓಯಸಿಸ್" ಎಂದು ಪ್ರಸಿದ್ಧವಾಯಿತು. ಇಂದಿಗೂ ಯೆಮೆನ್‌ನ ಅತ್ಯುತ್ತಮ ತಳಿಗಳಾದ ತೈಮೂರ್ ಮತ್ತು ಅಲ್ಫಾನ್ಸೋ ಅಲ್ಲಿ ಬೆಳೆಯುತ್ತಿರುವುದಕ್ಕೆ ಅಂದು ಸುಲ್ತಾನರು ಭಾರತದಿಂದ ತಂದ ತಳಿಗಳೇ ಅಡಿಪಾಯವಾಗಿವೆ. ಈ ಸುಲ್ತಾನರ ಪ್ರಯತ್ನದಿಂದಾಗಿ ಇಂದು ಯೆಮೆನ್‌ನ ಮಾವುಗಳು ಅರಬ್ ದೇಶಗಳಲ್ಲಿ ಅತ್ಯಂತ ಜನಪ್ರಿಯವಾಗಿವೆ.  ಅಂದು ಸುಲ್ತಾನರು ಅಕ್ಕರೆಯಿಂದ ನೆಟ್ಟ ಆ ಗಿಡಗಳೇ ಇಂದು ಯೆಮೆನ್ ಅನ್ನು "ಮಾವುಗಳ ನಾಡು" ಎಂಬಂತೆ ಮಾಡಿದೆ. ಯೆಮೆನ್ ಮಾತ್ರವಲ್ಲದೆ, ನೆರೆಯ ಒಮನ್ ರಾಷ್ಟ್ರಕ್ಕೂ ಸಹ ಮಾವು ಭಾರತದಿಂದಲೇ ಪರಿಚಯವಾಗಿತ್ತು. 11ನೇ ಶತಮಾನದ ಸುಮಾರಿಗೆ ನಭಾನಿ ಸುಲ್ತಾನರ (Nabhani Sultans) ಕಾಲದಲ್ಲಿ ಮಾವು ಬಂದಿತ್ತು ಎಂದು ಹೇಳಲಾಗುತ್ತದೆ. ಯೆಮೆನ್‌ನಲ್ಲಿ ಮಾವನ್ನು ಸ್ಥಳೀಯವಾಗಿ 'ಅಂಬಾ' (Amba) ಎಂದು ಕರೆಯುತ್ತಾರೆ. ಇದನ್ನು ಕೇಳಿದಾಗ ನಮಗೆ ಸಂಸ್ಕೃತದ 'ಆಮ್ರ' ಅಥವಾ ಹಿಂದಿಯ 'ಆಮ್' ನೆನಪಾಗದೆ ಇರಲು ಸಾಧ್ಯವೇ ಇಲ್ಲ! ಹೆಸರಿನಲ್ಲೂ ನಮ್ಮ ನಂಟು ಹಾಗೆಯೇ ಉಳಿದುಕೊಂಡಿದೆ.

*ಯೆಮೆನ್ ಮಾವುಗಳ ವೈವಿಧ್ಯತೆ:* ಯೆಮೆನ್‌ನಲ್ಲಿ ಬರೋಬ್ಬರಿ 50ಕ್ಕೂ ಹೆಚ್ಚು ತಳಿಗಳಿವೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ, ತೈಮೂರ್,  'ಖಲ್ಬ್ ಅಲ್-ತೋರ್' ಮಾವು, ಅಬೂ ಸಿನಾರಾ, ಅಬೂ ಸಿನಾರಾ


*ತೈಮೂರ್:*  ದುಂಡನೆಯ ಬೃಹತ್ ಗಾತ್ರದ ಈ ಹಣ್ಣನ್ನು ಕೈಯಲ್ಲಿ ಹಿಡಿದಾಗ ಅದರ ಭಾರವೇ ನಮಗೊಂದು ತೂಕದ ಅನುಭವ ನೀಡುತ್ತದೆ. ಸುಮಾರು ನಾಲ್ಕೈದು ಹಣ್ಣುಗಳಿಗೆ ಒಂದು ಕೇಜಿ ತೂಕ ಬರುತ್ತದೆ.  ಆದರೆ ಈ ಹಣ್ಣಿನ ಅಸಲಿ ಮ್ಯಾಜಿಕ್ ಇರುವುದು ಅದನ್ನು ಕತ್ತರಿಸಿದಾಗ!  ಮಾವಿನ ಹಣ್ಣು ಎಂದರೆ ಸಾಮಾನ್ಯವಾಗಿ ನಾರು (fiber) ಇರುತ್ತದೆ, ಆದರೆ ಈ ಹಣ್ಣು ಬೆಣ್ಣೆಯಂತಹ ಮೃದುತ್ವವನ್ನು ಹೊಂದಿದೆ. ಯಾವುದೇ ನಾರಿನ ಕಿರಿಕಿರಿಯಿಲ್ಲದ ಈ ಮೃದುತ್ವವೇ ಇದರ ದೊಡ್ಡ ಪ್ಲಸ್ ಪಾಯಿಂಟ್. ಹಣ್ಣಿನ ತುಂಡನ್ನು ಬಾಯಲ್ಲಿಟ್ಟರೆ ಸಾಕು, ಅದು ಐಸ್ ಕ್ರೀಂನಂತೆ ಕರಗಿ ಹೋಗುತ್ತದೆ. ಜೇನುತುಪ್ಪದಂತಹ ತೀವ್ರವಾದ ಸಿಹಿ ಮತ್ತು ಬಾಯಲ್ಲಿ ಉಕ್ಕುವ ರಸದ ಸಮ್ಮಿಲನ ಅದ್ಭುತ. ಇದನ್ನು ತಿಂದಾಗಲೇ "ವಿಶ್ವದ ಅತ್ಯುತ್ತಮ ಮಾವುಗಳಲ್ಲಿ ಒಂದು" ಎಂಬ ಕೀರ್ತಿ ಈ ಹಣ್ಣಿಗೆ ಏಕೆ ಬಂದಿದೆ ಎಂಬುದು ನಮಗೆ ಅರ್ಥವಾಗುತ್ತದೆ.


*ಖಲ್ಬ್ ಅಲ್-ತೋರ್:*  ತೈಮೂರ್ ಪಕ್ಕದಲ್ಲೇ ಕಣ್ಣು ಸೆಳೆಯುವ ಮತ್ತೊಂದು ತಳಿ ಅರಬ್ ಮೂಲದ 'ಖಲ್ಬ್ ಅಲ್-ತೋರ್' (Bull's Heart). ನೋಡಲು ಅಚ್ಚುಕಟ್ಟಾದ ಹೃದಯದ ಆಕಾರದಲ್ಲಿರುವ ಈ ಹಣ್ಣುಗಳು ಗಾತ್ರದಲ್ಲಿ ಬಹಳ ದೊಡ್ಡವು. 

ಈ ಯೆಮೆನ್ ಮಾವಿನಹಣ್ಣುಗಳ ವಿಶೇಷತೆ ಏನೆಂದರೆ ಇವುಗಳಲ್ಲಿರುವ ಅತೀವವಾದ ರಸದ ಅಂಶ. ಅತ್ಯಂತ ರಸಭರಿತವಾಗಿರುವ ಕಾರಣದಿಂದಲೇ ಇವುಗಳನ್ನು ಜ್ಯೂಸ್ ಅಥವಾ ಶೇಕ್ ತಯಾರಿಸಲು  ಬಳಸುತ್ತಾರೆ. ಯೆಮೆನ್ ಮಾವುಗಳು ನೈಸರ್ಗಿಕವಾಗಿ ಹಣ್ಣಾಗುತ್ತವೆ ಮತ್ತು ಯಾವುದೇ ರಾಸಾಯನಿಕಗಳಿಲ್ಲದೆ ಸಿಗುತ್ತವೆ ಎಂಬ ನಂಬಿಕೆ ಭಾರತೀಯ ಗ್ರಾಹಕರಲ್ಲಿದೆ. ಹೀಗಾಗಿ, ಗಲ್ಫ್ ರಾಷ್ಟ್ರಗಳಲ್ಲಿ ಭಾರತೀಯ ಮಾವು ಸಿಗದ ಸಮಯದಲ್ಲಿ ಯೆಮೆನ್ ಮಾವಿಗೆ ಮೊದಲ ಆದ್ಯತೆ ನೀಡುತ್ತಾರೆ. ಕೆಲವೊಮ್ಮೆ ಭಾರತೀಯ ಮಾವುಗಳಿಗಿಂತ ಯೆಮೆನ್ ಮಾವುಗಳು ಗಲ್ಫ್ ಮಾರುಕಟ್ಟೆಯಲ್ಲಿ ತುಸು ದುಬಾರಿಯಾಗಿದ್ದರೂ, ಅದರ ರುಚಿಗಾಗಿ ಭಾರತೀಯರು ಇದನ್ನು ಖರೀದಿಸಲು ಹಿಂಜರಿಯುವುದಿಲ್ಲ. ಯೆಮೆನ್ ಮಾವುಗಳು ಸಾಮಾನ್ಯವಾಗಿ ಜನವರಿಯಿಂದ ಆಗಸ್ಟ್ ತಿಂಗಳವರೆಗೆ ಲಭ್ಯವಿರುತ್ತವೆ.  ಮುಖ್ಯವಾಗಿ ಯೆಮೆನ್‌ನಲ್ಲಿ ಬೆಳೆದರೂ, ಇವುಗಳನ್ನು ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಮತ್ತು ಒಮಾನ್‌ನಂತಹ ಮಧ್ಯಪ್ರಾಚ್ಯದ ಮಾರುಕಟ್ಟೆಗಳಲ್ಲಿ ವ್ಯಾಪಕವಾಗಿ ಮಾರಾಟ ಮಾಡಲಾಗುತ್ತದೆ. 


ಮತ್ತೆ ಕೆಲ ತಳಿಗಳಿವೆ ಅದರಲ್ಲಿ ಅಬೂ ಸಿನಾರಾ ಹಣ್ಣುಗಳು ತೆಳುವಾದ ಸಿಪ್ಪೆಯಿಂದ ಕೂಡಿದ್ದು ಇದು ವಿಶಿಷ್ಟ ರುಚಿಯನ್ನು ಹೊಂದಿದೆ. ಅಲ್ಫಾನ್ಸೋ ಮಾವಿನಹಣ್ಣು ಭಾರತ ಮೂಲದ್ದಾದರೂ ಯೆಮೆನ್ ಮಣ್ಣಿನಲ್ಲಿ ಈಗ ಯಶಸ್ವಿಯಾಗಿ ಬೆಳೆಯುತ್ತಿದೆ. ಮತ್ತೊಂದು ತಳಿಯಾದ ಸುಡಾನಿ ಹಣ್ಣು ತನ್ನದೇ ಆದ ವಿಶಿಷ್ಟ ಸುವಾಸನೆಗೆ ಪ್ರಸಿದ್ಧವಾಗಿದೆ. 

ಮಾವು ಮೂಲತಃ ನಮ್ಮ ಭಾರತದ್ದೇ ಆಗಿರಬಹುದು, ಆದರೆ ಯೆಮೆನ್  ದೇಶದಲ್ಲಿ ತನ್ನದೇ ಆದ ವಿಶಿಷ್ಟ ಶೈಲಿಯಲ್ಲಿ ಬೆಳೆಸಿ ಅದಕ್ಕೊಂದು ಹೊಸ ಆಯಾಮ ನೀಡಿದೆ. ನೀವು ಎಂದಾದರೂ ಗಲ್ಫ್ ರಾಷ್ಟ್ರಗಳಿಗೆ ಹೋದರೆ ಅಥವಾ ಮಾರುಕಟ್ಟೆಯಲ್ಲಿ ಯೆಮೆನ್ ಮಾವು ಕಂಡರೆ ಖಂಡಿತಾ ಮಿಸ್ ಮಾಡಬೇಡಿ. ಅದು ಕೇವಲ ಹಣ್ಣಲ್ಲ, ಎರಡು ಸಂಸ್ಕೃತಿಗಳನ್ನು ಜೋಡಿಸುವ ಒಂದು 'ಸಿಹಿ' ಕೊಂಡಿ!


ಬರಹ:

ಪಿ.ಎಸ್.ರಂಗನಾಥ

ಮಸ್ಕತ್, ಒಮಾನ್ ರಾಷ್ಟ್ರ


Click below headings