ಗುರುವಾರ, ಜನವರಿ 15, 2026

ಮಸ್ಕತ್ ತಲುಪಿದ ಭಾರತದ ಹೆಮ್ಮೆಯ INSV ಕೌಂಡಿನ್ಯಾ ನೌಕೆ






ನಮ್ಮ ಭಾರತದ ಐಎನ್‌ಎಸ್‌ವಿ ಕೌಂಡಿನ್ಯಾ ಹಡಗು ಒಮಾನ್ ರಾಷ್ಟ್ರದ ರಾಜಧಾನಿ ಮಸ್ಕತ್ ಅನ್ನು ದಿನಾಂಕ 14, ಜನೆವರಿ 2026  ರಂದು ತಲುಪಿದೆ.  ಭಾರತದ ಪ್ರಾಚೀನ ಶಿಲ್ಪತಂತ್ರಗಳೊಂದಿಗೆ ನಿರ್ಮಿಸಲ್ಪಟ್ಟ ಹಡಗು ಇದಾಗಿದೆ. ಈ ಹಡಗಿಗೆ ಯಾವುದೇ ಎಂಜಿನ್ ಇಲ್ಲದೆ, ಲೋಹದ ಮೊಳೆಗಳನ್ನು ಬಳಸದೆ ತಯಾರಿಸಲಾಗಿರುವುದು ಇದರ ವಿಶೇಷ. 

ಡಿಸೆಂಬರ್ 29, 2025 ರಂದು ಗುಜರಾತಿನ ಪೋರಬಂದರ್‌ನಿಂದ ಒಮಾನ್ ನ ಮಸ್ಕತ್‌ವರೆಗೆ ಐತಿಹಾಸಿಕ ಸಮುದ್ರಯಾನ ಕೈಗೊಂಡಿದ್ದ INSV ಕೌಂಡಿನ್ಯ, ಗಾಳಿಯ ಪರಿಸ್ಥಿತಿಯನ್ನು ಅವಲಂಬಿಸಿ ಸುಮಾರು 15 ದಿನಗಳು ಅಥವಾ "ಸುಮಾರು ಎರಡು ವಾರಗಳಲ್ಲಿ" ಪೂರ್ಣಗೊಳ್ಳಬಹುದು ಎಂದು ಅಂದಾಜಿಸಲಾಗಿತ್ತು. ಆರಂಭಿಕ ಅಂದಾಜಿಗಿಂತ ಸುಮಾರು ಮೂರು ದಿನ ತಡವಾಗಿ 18 ದಿನಗಳ ಪ್ರಯಾಣದ ನಂತರ ಜನವರಿ 14, 2026 ರಂದು ಮಸ್ಕತ್ ತಲುಪಿತು. 

ಯಾವುದೇ ಇಂಜಿನ್ ಬಳಸದೆ ಕೇವಲ ಗಾಳಿ ಮತ್ತು ನೌಕಾಯಾನದ ಪರದೆಗಳ (Sails) ಸಹಾಯದಿಂದ ಸಾಗಿದ ಈ ನೌಕೆಯು, "ವಿರುದ್ಧ ದಿಕ್ಕಿನ ಗಾಳಿ, ಗಾಳಿಯಿಲ್ಲದ ಶಾಂತ ಸ್ಥಿತಿ (Dead calms), ಭೋರ್ಗರೆಯುವ ಅಲೆಗಳು ಮತ್ತು ಆಧುನಿಕ ಹಡಗು ಸಂಚಾರ ಮಾರ್ಗಗಳ" ಅಡಚಣೆ ಸೇರಿದಂತೆ ಹಲವು ಸವಾಲುಗಳನ್ನು ಈ ನೌಕೆಯು ಎದುರಿಸಬೇಕಾಯಿತು.  ಇವೆಲ್ಲದರ ನಡುವೆಯೂ ನೌಕೆಯ ಸಿಬ್ಬಂದಿ ಯಶಸ್ವಿಯಾಗಿ ಈ ಮಾರ್ಗವನ್ನು ಕ್ರಮಿಸುವ ಮೂಲಕ, ಮುಕ್ತ ಸಾಗರ ಪ್ರಯಾಣದಲ್ಲಿ ಪ್ರಾಚೀನ ಭಾರತೀಯ ಹಡಗು ನಿರ್ಮಾಣ ಕಲೆ ಮತ್ತು ನೌಕಾಯಾನ ಜ್ಞಾನದ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.

ಈ ಹಡಗಿಗೆ ಕೌಂಡಿನ್ಯ ಎಂದು ಹೆಸರಿಡಲು ಕಾರಣ ಏನು?

ಆಗ್ನೇಯ ಏಷ್ಯಾ ಮತ್ತು ಚೀನೀ ದಾಖಲೆಗಳ ಪ್ರಕಾರ, ಭಾರತದಿಂದ ಸಮುದ್ರಯಾನ ಮಾಡಿ ಹೋಗಿ ಈಗಿನ ಕಾಂಬೋಡಿಯಾ (ಆಗಿನ ಫುನನ್ ಸಾಮ್ರಾಜ್ಯ) ಪ್ರದೇಶದಲ್ಲಿ ಹಿಂದೂ ಸಂಸ್ಕೃತಿಯನ್ನು ಪ್ರಚುರ ಮಾಡಿದ ಭಾರತದ ವೀರ. ಇವರು ಅಲ್ಲಿನ ನಾಗಾ ರಾಜಕುಮಾರಿಯಾದ 'ಸೋಮಾ'ಳನ್ನು ವಿವಾಹವಾಗಿ ಆ ಪ್ರದೇಶದಲ್ಲಿ ದೊಡ್ಡ ಸಾಮ್ರಾಜ್ಯವನ್ನು ಕಟ್ಟಿದರು ಎಂದು ಹೇಳಲಾಗುತ್ತದೆ. ನೌಕಾಯಾನ ಮತ್ತು ಸಮುದ್ರಯಾನದಲ್ಲಿ ಇವರ ಸಾಹಸ ಅಪ್ರತಿಮವಾದುದು. ಕೌಂಡಿನ್ಯನು ಜಾಗತಿಕ ಐತಿಹಾಸಿಕ ಪ್ರಭಾವ ಹೊಂದಿರುವ ಮೊದಲನೆಯ ಭಾರತೀಯ ನಾವಿಕ ಎಂದು ಪರಿಗಣಿಸಲಾಗಿದೆ.



ಈ ಹಡಗು ಒಮಾನ್ ದೇಶಕ್ಕೆ ಸಂಚರಿಸಲು ಕಾರಣವೇನೆಂದರೆ, 

ಒಮಾನ್ ರಾಷ್ಟ್ರವು ಅರಬ್ ರಾಷ್ಟ್ರಗಳನ್ನು ಮತ್ತು ಭಾರತವನ್ನು ಸಂಪರ್ಕಿಸುವ ಅತ್ಯಂತ ಪ್ರಮುಖ ಕೊಲ್ಲಿ ಪ್ರದೇಶವಾಗಿದೆ. ಈ ಎರಡು ದೇಶಗಳಿಗೆ ಸುಮಾರು ಐದು ಸಾವಿರ ವರ್ಷಗಳ ವ್ಯಾವಹಾರಿಕ ಸಂಭಂದವಿರುವುದು ಇತಿಹಾಸದಲ್ಲಿ ದಾಖಲಾಗಿದೆ. ಭಾರತೀಯ ವ್ಯಾಪಾರಿಗಳು ಮತ್ತು ನೌಕಾಯಾನಿಗಳು ಈ ಸಾಗಣಾ ಮಾರ್ಗಗಳನ್ನು ಬಳಸಿಕೊಂಡು ಪಶ್ಚಿಮ ಏಷ್ಯಾ, ಆಫ್ರಿಕಾ ಮತ್ತು ದಕ್ಷಿಣ ಪೂರ್ವ ಏಷ್ಯಾ ದೇಶಗಳೊಂದಿಗೆ ಮಸಾಲೆ, ಜವಳಿ ಇತ್ಯಾದಿ ವ್ಯಾಪಾರವನ್ನು ಈ ಸಮುದ್ರಮಾರ್ಗಗಳ ಮೂಲಕ ಮಾಡುತ್ತಿದ್ದರು. ಹೀಗಾಗಿ ಈ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ನೌಕೆಯ ವಿನ್ಯಾಸ:

ಈ ವಿನ್ಯಾಸವು ಮುಖ್ಯವಾಗಿ ಅಜಂತಾ ಗುಹೆಚಿತ್ರಗಳಲ್ಲಿ ತೋರಿಸಲಾದ ಹಡಗುಗಳನ್ನು ಆಧರಿಸಿದೆ. ಜೊತೆಗೆ ಪ್ರಾಚೀನ ಗ್ರಂಥಗಳು ಮತ್ತು ವಿದೇಶಿ ಪ್ರಯಾಣಿಕರ ದಾಖಲಾತಿಗಳ ವಿವರಣೆಗಳನ್ನು ಅಧರಿಸಿ ಇದನ್ನು ನಿರ್ಮಿಸಲಾಗಿದೆ. ಸುಮಾರು 2000 ವರ್ಷಗಳ ಹಳೆಯ 'ಟಂಕಾ' ವಿಧಾನದಲ್ಲಿ ಈ ನೌಕೆಯನ್ನು ಕಟ್ಟಲಾಗಿದೆ. ಇದರಲ್ಲಿ ಒಂದೇ ಒಂದು ಕಬ್ಬಿಣದ ಮೊಳೆ, ಲೋಹದ ತುಣುಕುಗಳನ್ನು ಬಳಸಿಲ್ಲ! ಮರದ ಹಲಗೆಗಳನ್ನು ತೆಂಗಿನ ನಾರಿನಿಂದ ಹೊಲಿದು ಜೋಡಿಸಲಾಗಿದೆ.ಹೀಗಾಗಿ Hand-stitched Wooden Ship ಈ ಹಡಗನ್ನು ಹೊಲಿದ ಹಡಗು ಎಂದು ಕರೆಯಲಾಗುತ್ತದೆ. ಈ ಹಡಗು ನಮ್ಮ ಪೂರ್ವಜರ ತಂತ್ರಜ್ನಾನಕ್ಕೆ ಸಾಕ್ಷಿ. ಹಡಗಿನ ಒಳಭಾಗವನ್ನು ಮುಚ್ಚಲು ಮತ್ತು ಸಮುದ್ರಯಾನಕ್ಕೆ ಯೋಗ್ಯವಾಗಿಸಲು ನೈಸರ್ಗಿಕ ರಾಳ, ಹತ್ತಿ ಮತ್ತು ಎಣ್ಣೆಗಳನ್ನು ಬಳಸಲಾಗಿದೆ. 

ಈ ಹಡಗಿನ ಹಾಯಿಗಳಲ್ಲಿ (Sails) ನಮ್ಮ ಮೈಸೂರು ಅರಸರ ಲಾಂಛನ ಹಾಗೂ ಕರ್ನಾಟಕ ಸರ್ಕಾರದ ರಾಜ್ಯ ಲಾಂಛನವಾಗಿರುವ ಎರಡು ತಲೆಯ ಪಕ್ಷಿ 'ಗಂಡಭೇರುಂಡ'ದ ಚಿತ್ರವನ್ನು ಮುದ್ರಿಸಲಾಗಿದೆ. ಭಾರತದ ಪ್ರಾಚೀನ ಕಡಲ ಸಂಪ್ರದಾಯವನ್ನು ಜಗತ್ತಿಗೆ ತೋರಿಸುವ ಈ ಹಡಗಿನಲ್ಲಿ, ಕನ್ನಡ ನಾಡಿನ ವೈಭವ ಸಮುದ್ರದಾಚೆಗೂ ತಲುಪಿರುವುದು ನಮ್ಮ ಕನ್ನಡಿಗರಿಗೆ ನಿಜಕ್ಕೂ ಹೆಮ್ಮೆಯ ವಿಚಾರ.

ಐತಿಹಾಸಿಕ ಮಹತ್ವ: ಗಂಡಭೇರುಂಡವು ಎರಡು ತಲೆಗಳನ್ನು ಹೊಂದಿರುವ ಒಂದು ಪೌರಾಣಿಕ ಪಕ್ಷಿಯಾಗಿದ್ದು, ಇದು ಕ್ರಿ.ಶ. ಸುಮಾರು 450ರ ಅವಧಿಯ ಕದಂಬ ರಾಜವಂಶದ ಶಕ್ತಿಯುತ ರಾಜಲಾಂಛನವಾಗಿತ್ತು. ಕದಂಬರು ಶತಮಾನಗಳ ಕಾಲ ಕೊಂಕಣ ಮತ್ತು ಕರ್ನಾಟಕದ ಕರಾವಳಿ ತೀರಗಳನ್ನು ತಮ್ಮ ಆಡಳಿತಕ್ಕೆ ಒಳಪಡಿಸಿಕೊಂಡಿದ್ದರು.

ಗಮನಿಸಬೇಕಾದ ಅಂಶ:  ಗಂಡಭೇರುಂಡವು ವಿಜಯನಗರ ಸಾಮ್ರಾಜ್ಯ ಮತ್ತು ಮೈಸೂರು ಒಡೆಯರ ಕಾಲದಲ್ಲೂ ಪ್ರಮುಖ ಲಾಂಛನವಾಗಿತ್ತು, ಆದರೆ ಇದರ ಅತ್ಯಂತ ಹಳೆಯ ಬಳಕೆಯು ಕದಂಬರ ಕಾಲಕ್ಕೆ ಸೇರಿದ್ದಾಗಿದೆ ಎಂಬುದು ಇಲ್ಲಿನ ವಿಶೇಷ.

ಪ್ರಯಾಣದಲ್ಲಿ ಎದುರಾದ ಹಲವಾರು ಸವಾಲುಗಳು: 

ಭಾರತದ ಪೋರಬಂದರ್‌ನಿಂದ ಓಮನ್‌ನ ಮಸ್ಕತ್‌ವರೆಗೆ ಸಾಗುವ ಹಾದಿಯಲ್ಲಿ INSV ಕೌಂಡಿನ್ಯ ನೌಕೆಯು ಹವಾಮಾನ ಮತ್ತು ಭೌಗೋಳಿಕ ಪರಿಸ್ಥಿತಿಗಳಿಂದಾಗಿ ಹಲವಾರು ಸವಾಲುಗಳನ್ನು ಎದುರಿಸಿತು. 

ಗಾಳಿಯ ಸಮಸ್ಯೆ: ಈ ನೌಕೆಯು ಸಂಪೂರ್ಣವಾಗಿ ಗಾಳಿಯ ಮೇಲೆ ಅವಲಂಬಿತವಾಗಿದ್ದರಿಂದ (ಯಾವುದೇ ಎಂಜಿನ್ ಇರಲಿಲ್ಲ), ಪ್ರಯಾಣದ ಆರಂಭದ 48 ಗಂಟೆಗಳಲ್ಲಿ ಸರಿಯಾದ ದಿಕ್ಕಿನ ಗಾಳಿ ಇಲ್ಲದೆ ತೊಂದರೆ ಎದುರಿಸಿತು. ನಂತರದ ದಿನಗಳಲ್ಲಿ ಗಾಳಿಯೇ ಇಲ್ಲದ "ಸ್ತಬ್ಧ ಸ್ಥಿತಿ" (Dead calms/Glassy seas) ಉಂಟಾಗಿ ನೌಕೆಯು ಸಮುದ್ರದಲ್ಲಿ ಚಲಿಸದೆ ಒಂದೇ ಕಡೆ ನಿಲ್ಲುವಂತಾಗಿತ್ತು.

ಭಾರಿ ಮಳೆ: ಪ್ರಯಾಣದ 13ನೇ ದಿನದ ಸುಮಾರಿಗೆ ನೌಕೆಯು ಭಾರಿ ಮಳೆಯನ್ನು ಎದುರಿಸಿತು. ಇದರಿಂದ ನೌಕೆಯಲ್ಲಿದ್ದ ವಸ್ತುಗಳೆಲ್ಲವೂ ತೇವವಾಗಿದ್ದವು (Damp).

ಅಲೆಗಳ ಅಬ್ಬರ: ಸಮುದ್ರದ ಅಲೆಗಳು ಜೋರಾಗಿದ್ದರಿಂದ ನೌಕೆಯು ಸುಮಾರು 50 ಡಿಗ್ರಿಗಳಷ್ಟು ಅಕ್ಕಪಕ್ಕಕ್ಕೆ ಅಲುಗಾಡುತ್ತಿತ್ತು (Heavy rolling). ಇದು ಸಿಬ್ಬಂದಿಗೆ ದೈಹಿಕವಾಗಿ ಸಾಕಷ್ಟು ಸವಾಲಾಗಿತ್ತು.

Sea-sickness: ಸತತವಾಗಿ ಅಲೆಗಳ ಮೇಲೆ ಸಾಗುತ್ತಿದ್ದರಿಂದ ಸಿಬ್ಬಂದಿ ಸಮುದ್ರದ ಬೇನೆಗೆ (ವಾಂತಿ, ತಲೆಸುತ್ತು) ಒಳಗಾಗಿದ್ದರು.

ಆಧುನಿಕ ಸವಾಲುಗಳು: ನೌಕೆಯು ಅರಬ್ಬಿ ಸಮುದ್ರದ ಅತ್ಯಂತ ಜನದಟ್ಟಣೆಯ ಹಡಗು ಮಾರ್ಗಗಳಲ್ಲಿ (Shipping lanes) ಸಾಗಬೇಕಾಯಿತು. ಅಲ್ಲಿ ಬೃಹತ್ ಆಯಿಲ್ ಟ್ಯಾಂಕರ್‌ಗಳು ಮತ್ತು ಕಂಟೈನರ್ ಹಡಗುಗಳ ನಡುವೆ ಸಣ್ಣದಾದ ಈ ಮರದ ನೌಕೆಯನ್ನು ಸುರಕ್ಷಿತವಾಗಿ ಮುನ್ನಡೆಸುವುದು ದೊಡ್ಡ ಸವಾಲಾಗಿತ್ತು.

ಇವೆಲ್ಲದರ ಸವಾಲಿನ ನಡುವೆ ಈ ನಮ್ಮ ದೇಶದ ಹೆಮ್ಮೆಯ ಹಡಗು ವಿದೇಶಕ್ಕೆ ತಲುಪಿ, ಅಂದಿನ ಕಾಲದ ನಮ್ಮ ಪೂರ್ವಜರ ತಂತ್ರಜ್ನಾನವನ್ನು ಇಂದಿನಕಾಲದ ಜನಮಾನಸಕ್ಕೆ ಪರಿಚಯಿಸುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಬಹುದು. 













ಬರಹ: ಪಿ.ಎಸ್.ರಂಗನಾಥ

ಮಸ್ಕತ್, ಒಮಾನ್ ರಾಷ್ಟ್ರ


#insv #koundinya #muscat #kannada #oman #ranganatha #psranganatha #modi #siddaramaiah #karwar #kadamba #mysore #bangalore #bengaluru 

ಸೋಮವಾರ, ಜನವರಿ 5, 2026

ಮಸ್ಕತ್‌ನಲ್ಲಿ "ಕರ್ನಾಟಕ ರಾಜ್ಯೋತ್ಸವ ವಿಶೇಷಾಂಕ - ೨೦೨೫" ಲೋಕಾರ್ಪಣೆ

 ಮಸ್ಕತ್‌ನಲ್ಲಿ "ಕರ್ನಾಟಕ ರಾಜ್ಯೋತ್ಸವ ವಿಶೇಷಾಂಕ - ೨೦೨೫" ಲೋಕಾರ್ಪಣೆ: ಅರಬ್ಬರ ನಾಡಿನಲ್ಲಿ ಮೊಳಗಿದ ಕನ್ನಡದ ನಾದ


 ಪರದೇಶದಲ್ಲಿದ್ದರೂ ತಾಯ್ನುಡಿಯ ಮೇಲಿನ ಮಮತೆ, ಸಾಹಿತ್ಯದ ಮೇಲಿನ ಒಲವು ಕಿಂಚಿತ್ತೂ ಕುಂದಿಲ್ಲ ಎಂಬುದಕ್ಕೆ ಸಾಕ್ಷಿಯಾಗಿ, ಒಮಾನ್‌ನ ಮಸ್ಕತ್ ನಗರದಲ್ಲಿ ಕನ್ನಡ ಸಾಹಿತ್ಯದ ಕಂಪು ಹರಡಿತು. ಇತ್ತೀಚೆಗೆ ಕರ್ನಾಟಕ ಜಾನಪದ ಪರಿಷತ್ (ಒಮಾನ್ ಘಟಕ) ವತಿಯಿಂದ ಆಯೋಜಿಸಲಾಗಿದ್ದ "ಶಿಶಿರ ಕಾವ್ಯ ಸಂಜೆ" ಕಾರ್ಯಕ್ರಮದಲ್ಲಿ "ಕರ್ನಾಟಕ ರಾಜ್ಯೋತ್ಸವ ವಿಶೇಷಾಂಕ - ೨೦೨೫" ಕೃತಿಯನ್ನು ಅತ್ಯಂತ ಸಡಗರದಿಂದ ಲೋಕಾರ್ಪಣೆ ಮಾಡಲಾಯಿತು.

ಸಾಹಿತ್ಯದ ನವರತ್ನಗಳ ಸಂಗಮ

ಈ ವಿಶೇಷ ಸಂಚಿಕೆಯು ಒಮಾನ್ ಕನ್ನಡಿಗರ ಸಾಹಿತ್ಯ ಬಳಗದ ಹೆಮ್ಮೆಯ ಪ್ರಕಟಣೆಯಾಗಿದ್ದು, ಬಳಗದ ಸಂಚಾಲಕರಾದ ಶ್ರೀ ಪಿ.ಎಸ್. ರಂಗನಾಥ್ ಅವರ ಸಂಪಾದಕತ್ವದಲ್ಲಿ ಮೂಡಿಬಂದಿದೆ. ಈ ಕೃತಿಯಲ್ಲಿ ಒಮಾನ್‌ನಲ್ಲಿ ನೆಲೆಸಿರುವ ಸುಮಾರು 30ಕ್ಕೂ ಹೆಚ್ಚು ಕನ್ನಡಿಗ ಬರಹಗಾರರು ತಮ್ಮ ಭಾವನೆಗಳಿಗೆ ಅಕ್ಷರ ರೂಪ ನೀಡಿದ್ದಾರೆ. ಕಥೆಗಳು, ಮನಮುಟ್ಟುವ ಕವನಗಳು, ವೈಚಾರಿಕ ಲೇಖನಗಳು ಹಾಗೂ ಚುರುಕಾದ ಚುಟುಕುಗಳನ್ನೊಳಗೊಂಡ ಈ ಸಂಚಿಕೆಯು ಓದುಗರಿಗೆ ಸಾಹಿತ್ಯದ ರಸದೌತಣವನ್ನು ಬಡಿಸಲಿದೆ.

ಮುಂದುವರಿದ ಸಾಹಿತ್ಯ ಯಾನ

ಒಮಾನ್ ಕನ್ನಡಿಗರ ಸಾಹಿತ್ಯ ಬಳಗವು ಈ ಹಿಂದೆಯೇ "ಅರಬ್ಬರ ನಾಡಿನಲ್ಲಿ ಕನ್ನಡಿಗರು" ಮತ್ತು "ಬಿಯಾಂಡ್ ದ ಹೊರೈಜನ್" (Beyond the Horizon) ಎಂಬ ಎರಡು ಅದ್ಭುತ ಕೃತಿಗಳನ್ನು ಹೊರತಂದು ಸಾಹಿತ್ಯ ಪ್ರೇಮಿಗಳ ಅಪಾರ ಜನಮನ್ನಣೆ ಗಳಿಸಿತ್ತು. ಆ ಯಶಸ್ವಿ ಪಯಣದ ಮುಂದುವರಿದ ಭಾಗವಾಗಿ ಇಂದು ಈ "ರಾಜ್ಯೋತ್ಸವ ವಿಶೇಷಾಂಕ" ಲೋಕಾರ್ಪಣೆಯಾಗಿದೆ.

ಹೊಸ ಚಿಗುರು - ಹಳೆ ಬೇರು

ಈ ಸಂಚಿಕೆಯ ವಿಶೇಷತೆಯೆಂದರೆ ಇಲ್ಲಿ ಹಿರಿಯ ಅನುಭವಿ ಬರಹಗಾರರ ಜೊತೆಗೆ ಹೊಸ ಪ್ರತಿಭೆಗಳಿಗೂ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಯುವ ಬರಹಗಾರರು ಹಿರಿಯರ ಮಾರ್ಗದರ್ಶನದಲ್ಲಿ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವುದು ಕನ್ನಡದ ಭವಿಷ್ಯದ ದೃಷ್ಟಿಯಿಂದ ಆಶಾದಾಯಕ ಸಂಗತಿಯಾಗಿದೆ.

 "ವಿದೇಶಿ ಮಣ್ಣಿನಲ್ಲಿ ಕೆಲಸದ ಒತ್ತಡದ ನಡುವೆಯೂ ಕನ್ನಡದ ಕಹಳೆಯನ್ನು ಊದುತ್ತಿರುವ ಈ ಬರಹಗಾರರ ಶ್ರಮ ಶ್ಲಾಘನೀಯ. ಈ ಸಂಚಿಕೆಯು ಕೇವಲ ಒಂದು ಪುಸ್ತಕವಲ್ಲ, ಅದು ಅನಿವಾಸಿ ಕನ್ನಡಿಗರ ನಾಡು-ನುಡಿಯ ಪ್ರೇಮದ ಪ್ರತೀಕ."

ಒಟ್ಟಾರೆಯಾಗಿ, ಮಸ್ಕತ್‌ನ "ಶಿಶಿರ ಕಾವ್ಯ ಸಂಜೆ" ಕೇವಲ ಕಾವ್ಯದ ಗಮಲನ್ನು ಹರಡಿದ್ದಲ್ಲದೆ, ಒಂದು ಮೌಲ್ಯಯುತ ಸಾಹಿತ್ಯ ಕೃತಿಯನ್ನು ಕನ್ನಡಿಗರ ಕೈಗಿಡುವ ಮೂಲಕ ಸಾರ್ಥಕವಾಯಿತು. ಕನ್ನಡದ ಕಂಪನ್ನು ವಿಶ್ವದಾದ್ಯಂತ ಪಸರಿಸುತ್ತಿರುವ ಒಮಾನ್ ಕನ್ನಡಿಗರ ಸಾಹಿತ್ಯ ಬಳಗದ ಈ ಪ್ರಯತ್ನಕ್ಕೆ ಸರ್ವತ್ರ ಪ್ರಶಂಸೆ ವ್ಯಕ್ತವಾಗಿದೆ.











ಸೋಮವಾರ, ಡಿಸೆಂಬರ್ 22, 2025

​ಮಸ್ಕತ್‌ನಲ್ಲಿ ಅರಳಿದ ಸಾಹಿತ್ಯದ ಕಂಪು: ಮನಮಿಡಿದ "ಶಿಶಿರ ಕಾವ್ಯ ಸಂಜೆ" ✨


​ಮಸ್ಕತ್‌ನಲ್ಲಿ ಅರಳಿದ ಸಾಹಿತ್ಯದ ಕಂಪು: ಮನಮಿಡಿದ "ಶಿಶಿರ ಕಾವ್ಯ ಸಂಜೆ" ✨

ಮೊನ್ನೆ ಶುಕ್ರವಾರದ ಸಂಜೆ ಮಸ್ಕತ್‌ನಲ್ಲಿ ಕಳೆದ ಆ ಕ್ಷಣಗಳನ್ನು ನೆನೆಸಿಕೊಂಡರೆ ಈಗಲೂ ಮನಸ್ಸು ಹಗುರವೆನಿಸುತ್ತದೆ. ಅದು ಕೇವಲ ನಾಲ್ಕು ಗೋಡೆಗಳ ಮಧ್ಯೆ ನಡೆದ ಕಾರ್ಯಕ್ರಮವಾಗಿರಲಿಲ್ಲ; ಅದು ನೂರಾರು ಮನಸ್ಸುಗಳು, ಭಾವನೆಗಳು ಮತ್ತು ಸಂಬಂಧಗಳು ಒಂದಾದ ಅಪರೂಪದ 'ಭಾವಸಂಗಮ'.

ಆ ಕಾರ್ಯಕ್ರಮ ಮುಗಿಸಿ ಮನೆಗೆ ಬಂದ ಮೇಲೂ, ಆ ಕವಿತೆಗಳ ಸಾಲುಗಳು ಮತ್ತು ಅಲ್ಲಿನ ಆಪ್ತವಾದ ವಾತಾವರಣ ನನ್ನ ಮನಸ್ಸಿನಲ್ಲೇ ಉಳಿದುಬಿಟ್ಟಿದೆ. ನಿಜ ಹೇಳಬೇಕೆಂದರೆ,  ಕೆಲಸದ ಒತ್ತಡದಲ್ಲೋ ಇರುವ ನಮಗೆ, ನಮ್ಮವರ ಜೊತೆ ಕಳೆಯುವ ಇಂತಹ ಕೆಲವೇ ಗಂಟೆಗಳು ಬದುಕಿಗೆ ಹೊಸ ಚೈತನ್ಯ ನೀಡುತ್ತವೆ.

ಕರ್ನಾಟಕ ಜಾನಪದ ಪರಿಷತ್ (ಒಮಾನ್ ಘಟಕ)ದ ಅಧ್ಯಕ್ಷರಾದ ಶ್ರೀ ಶಿವಾನಂದ ಕೋಟ್ಯಾನ್ ಅವರ ಪ್ರೀತಿಯ ಕರೆಯ ಮೇರೆಗೆ ನಡೆದ **"ಶಿಶಿರ ಕಾವ್ಯ ಸಂಜೆ"**ಯಲ್ಲಿ ಪಾಲ್ಗೊಂಡಾಗ ಸಿಕ್ಕ ಆನಂದವನ್ನು ಪದಗಳಲ್ಲಿ ಹಿಡಿದಿಡುವುದು ಕಷ್ಟ. ಅಲ್ಲಿ ಕವಿಗಳಿದ್ದರು, ಕವಿತೆಗಳಿದ್ದವು, ಮುಕ್ತ ನಗು ಇತ್ತು, ಮತ್ತು ಎಲ್ಲಕ್ಕಿಂತ ಮಿಗಲಾಗಿ "ನಾವೆಲ್ಲರೂ ಒಂದು" ಎನ್ನುವ ಕೌಟುಂಬಿಕ ವಾತಾವರಣವಿತ್ತು. 



ನಮ್ಮವರ ಪ್ರತಿಭೆ ಕಂಡು ಮೂಕವಿಸ್ಮಿತನಾದೆ! 🖊️

ನಿಜ ಹೇಳಬೇಕೆಂದರೆ, ನಮ್ಮ ಮಸ್ಕತ್‌ನಲ್ಲಿ ಇಷ್ಟೊಂದು ಜನ ಕವನ, ಕಾವ್ಯ ಮತ್ತು ಚುಟುಕು ಪ್ರೇಮಿಗಳಿದ್ದಾರೆ ಎಂದು ತಿಳಿದದ್ದೇ ಈ ಕಾರ್ಯಕ್ರಮದಿಂದ! 

 ಶ್ರೀ  ಶಿವಾನಂದ ಕೋಟ್ಯಾನ್ ಅವರ ಬಗ್ಗೆ ಮೊದಲು ಹೇಳಲೇಬೇಕು. ಅವರು ಕೇವಲ ಒಂದು ಸಂಸ್ಥೆಯ ಅಧ್ಯಕ್ಷರಾಗಿ ಅಲ್ಲ, ಒಬ್ಬ ಮನೆಯ ಹಿರಿಯನಂತೆ ನಿಂತು ಈ "ಶಿಶಿರ ಕಾವ್ಯ ಸಂಜೆ"ಯನ್ನು ರೂಪಿಸಿದ್ದರು. ಇಂತಹದೊಂದು ಸುಂದರ ವೇದಿಕೆಯನ್ನು ಸೃಷ್ಟಿಸಿ, ನಮ್ಮಲ್ಲಿ ಸುಪ್ತವಾಗಿದ್ದ ಹಿತ್ಯಾಸಕ್ತಿಯನ್ನು ಬಡಿದೆಬ್ಬಿಸಿದ ಅವರಿಗೆ ನನ್ನ ಹೃದಯಾಂತರಾಳದ ಧನ್ಯವಾದಗಳು.

 ಮಸ್ಕತ್‌ನಂತಹ ಕಡಲಾಚೆಯ ನಾಡಿನಲ್ಲಿ ಇಷ್ಟೊಂದು ಜನ ಸಾಹಿತ್ಯ ಪ್ರೇಮಿಗಳು, ಕವಿಗಳು ನಮ್ಮ ಮಧ್ಯೆಯೇ ಇದ್ದಾರೆ ಎಂಬುದು ಒಂದು ದೊಡ್ಡ ಅಚ್ಚರಿ ಮತ್ತು ಖುಷಿಯ ವಿಷಯ!


ಕಾರ್ಯಕ್ರಮದ ಪ್ರತಿಕ್ಷಣವೂ ನನಗನ್ನಿಸಿದ್ದು ಇದು - "ಇದು ನಮ್ಮವರ ನಡುವೆ ನಡೆಯುತ್ತಿರುವ ಸಂಭ್ರಮ" ಎಂದು. ಅಕ್ಷಯ್ ಮೂಡುಬಿದಿರೆ ಅವರ ನಿರೂಪಣೆಯಲ್ಲಿ ಒಂದು ರೀತಿಯ ಆತ್ಮೀಯತೆ ಇತ್ತು. ಅವರು ಮಾತಾಡುತ್ತಿದ್ದರೆ ಅದೊಂದು ಕಾರ್ಯಕ್ರಮ ಎನ್ನುವುದಕ್ಕಿಂತ, ಆತ್ಮೀಯ ಗೆಳೆಯನೊಬ್ಬ ಮನದ ಮಾತುಗಳನ್ನು ಹಂಚಿಕೊಂಡಂತೆಯೇ ಭಾಸವಾಯಿತು.


ಕವಿಮನಸ್ಸುಗಳ ಅನಾವರಣ 🎙️

ಸಾಹಿತ್ಯವೆಂಬುದು ಕೇವಲ ಪುಸ್ತಕದ ಮಾತಲ್ಲ, ಅದು ಬದುಕಿನ ಪ್ರತಿಬಿಂಬ ಎಂಬುದನ್ನು ಅಲ್ಲಿ ನೆರೆದಿದ್ದ ಕವಿಮನಸ್ಸುಗಳು ಸಾಬೀತುಪಡಿಸಿದವು:

ಹಿರಿಯ ಕವಿಗಳಾದ ಶ್ರೀ ಶಿವಪ್ರಕಾಶ್ ಅವರು ತಮ್ಮ ಅನುಭವದ ಮಾತುಗಳಿಂದ ಸಾಹಿತ್ಯ ಸಂಜೆಗೆ ಮೆರಗು ನೀಡಿ ಸಾಹಿತ್ಯದ ಮಹತ್ವವನ್ನು ಒತ್ತಿ ಹೇಳಿ, ಬರಹಗಾರರಿಗೆ ಅಮೂಲ್ಯವಾದ ಸಲಹೆ ನೀಡುತ್ತ.  ಯಾರ ಪ್ರಶಂಸೆಗಾಗಿ ಬರೆಯಲು ಹೋಗಬೇಡಿ  "ಯಾರ ಮೆಚ್ಚುಗೆಯನ್ನೂ ನಿರೀಕ್ಷಿಸಬೇಡಿ, ನಿಮ್ಮ ಆತ್ಮತೃಪ್ತಿಗಾಗಿ ಬರೆಯಿರಿ." ಎಂದು ಕಿವಿ ಮಾತುಹೇಳಿದರು. ಎಷ್ಟು ಸತ್ಯ ಅಲ್ವಾ? 

ಹಾಗೆಯೇ ಶ್ರೀ ಸುರೇಶ್ ಅವರು ಮಸ್ಕತ್‌ನ ಸಂಜೆಯನ್ನೂ ಆ ಶಿಶಿರ ಕಾಲದ ಸೌಂದರ್ಯಕ್ಕೆ ಹೋಲಿಸಿ ವರ್ಣಿಸಿದ್ದು ಅದ್ಭುತವಾಗಿತ್ತು.




ನನ್ನ ಮನಸ್ಸನ್ನು ತುಂಬಾ ಕಾಡಿದ್ದು ಮತ್ತು ಕಣ್ಣಾಲಿಗಳನ್ನು ಒದ್ದೆ ಮಾಡಿದ್ದು ಶ್ರೀಮತಿ ಪ್ಲೇವಿಯ ಅವರ ಮಾತುಗಳು. ತಮ್ಮ ಜೀವನದ ಹೋರಾಟವನ್ನು ಅವರು ಹಂಚಿಕೊಂಡ ರೀತಿ ಎಲ್ಲರನ್ನೂ ಭಾವುಕರನ್ನಾಗಿಸಿತು. ನೋವು ಮತ್ತು ನಗು ಎರಡೂ ಸಾಹಿತ್ಯದ ಭಾಗ ಎಂಬುದಕ್ಕೆ ಆ ಸಂಜೆಯೇ ಸಾಕ್ಷಿ.

​ತುಳು ಮತ್ತು ಕನ್ನಡ ಕವಿತೆಗಳ ಮೂಲಕ ಇಡೀ ಸಭೆಯನ್ನು ನಗೆಗಡಲಲ್ಲಿ ತೇಲಿಸಿದ ಕೀರ್ತಿ ನಮ್ಮ ಆರ್. ಕೆ  ನಿರಂಜನ್ ಅವರಿಗೆ ಸಲ್ಲಬೇಕು.


ಎಪ್ಪತ್ಮೂರು ವಾವಸ್ಸಿನ ಯುವಕ ವಾಲ್ಟ್ ರ್ ಅವರು ತಮ್ಮ ಹಾಸ್ಯಗಳ ಮೂಲಕ ಸಭಿಕರನ್ನು ನಗೆಗಡಲಲ್ಲಿ ತೇಲಿಸಿದರು. 


ಪ್ರಮೋದ್ ಮುದೋಳ್ ಅವರು ತಮ್ಮ ಪತ್ನಿಯ ಕವಿತೆಯನ್ನು ಓದುತ್ತಾ, ತಮ್ಮ ದಾಂಪತ್ಯದ ಆರಂಭದ ದಿನಗಳನ್ನು ಮೆಲುಕು ಹಾಕಿದ ರೀತಿ ತುಂಬಾನೇ ಮುದ್ದಾಗಿತ್ತು. ಸಭಿಕರ ಮುಖದಲ್ಲಿ ಅರಳಿದ ಆ ಮುಗುಳ್ನಗುವೇ ಅದಕ್ಕೆ ಸಾಕ್ಷಿ.


ವಿದೂಷಿ ತೀರ್ಥ ಕಟೀಲ್ ಅವರು ಪ್ರಧಾನಿ ಮೋದಿ ಅವರನ್ನು ಕಂಡ ಆ ಸಂಭ್ರಮವನ್ನು ವಿವರಿಸಿದಾಗ, ನಮಗೂ ಆ ಪುಳಕ ಅನುಭವಕ್ಕೆ ಬಂತು. ಇನ್ನು ಪ್ರಮೋದ್ ಮುದೋಳ್ ಅವರು ತಮ್ಮ ದಾಂಪತ್ಯದ ಸುಂದರ ದಿನಗಳನ್ನು ನೆನೆಯುತ್ತಾ ಪತ್ನಿಯ ಕವಿತೆ ಓದಿದ್ದು ತುಂಬಾ ಮುದ್ದಾಗಿತ್ತು. ರೋಹಿತ್ ಮಂಜೇಶ್ವರ, ಸವಿತಾ ಚೇತನ್, ದೀಪಿಕಾ ಪ್ರಸಾದ್, ರಾಮಕೃಷ್ಣ ಸುಜಿರ್... ಹೀಗೆ ಪ್ರತಿಯೊಬ್ಬರೂ ತಮ್ಮ ಮನದಾಳವನ್ನು ಅಕ್ಷರಗಳ ರೂಪದಲ್ಲಿ ಹರಿಸಿದರು.


ನಾನು ಸಹ ಹನಿಗವಿತೆಗಳನ್ನ ವಾಸಿಸುವ ಮೂಲಕ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸುವ ಕಿರು ಪ್ರಯತ್ನ ಮಾಡಿದೆ. 


ಇದೇ ವೇದಿಕೆಯಲ್ಲಿ ನಮ್ಮ ‌ಒಮಾನ್ ಕನ್ನಡಿಗರ ಸಾಹಿತ್ಯ ಬಳಗದ ವತಿಯಿಂದ ರೂಪುಗೊಂಡ  ಕರ್ನಾಟಕ ರಾಜ್ಯೋತ್ಸವ ವಿಶೇಷಾಂಕ ಈ-ಮ್ಯಾಗ್ಜೀನ್ ಲೋಕಾರ್ಪಣೆಗೊಂಡಿದ್ದು ಸಂಭ್ರಮವನ್ನು ಇಮ್ಮಡಿಗೊಳಿಸಿತು.



 

ಕೊನೆಯಲ್ಲಿ ನನಗನ್ನಿಸಿದ್ದು ಇಷ್ಟೇ - ❤️ 

ನಾವು ಎಲ್ಲೇ ಇರಲಿ, ನಮ್ಮ ಭಾಷೆ ಮತ್ತು ಸಾಹಿತ್ಯ ನಮ್ಮನ್ನು ಒಂದುಗೂಡಿಸುತ್ತದೆ. ಇಂತಹ ಕಾರ್ಯಕ್ರಮಗಳು ಕೇವಲ ಸಾಹಿತ್ಯಕ್ಕೆ ಸೀಮಿತವಾಗದೆ, ನಮ್ಮಂತಹ ಅನಿವಾಸಿ ಕನ್ನಡಿಗರಿಗೆ ಒಂದು 'ತವರು ಮನೆ'ಯ ಅನುಭವ ನೀಡುತ್ತವೆ.

 ​"ಶಿಶಿರ ಕಾವ್ಯ ಸಂಜೆ"  ಇಂತಹ ಸಂಜೆಗಳು ಪದೇ ಪದೇ ಬರುತ್ತಿರಲಿ, ನಮ್ಮ ಮನಸುಗಳು ಹೀಗೆಯೇ ಅಕ್ಷರಗಳ ಮೂಲಕ ಬೆಸೆಯುತ್ತಿರಲಿ. ಎಂದು ಆಶಿಸುತ್ತೇನೆ.

ಕರ್ನಾಟಕ ಜಾನಪದ ಸಾಹಿತ್ಯ ಪರಿಷತ್ ಒಮಾನ್ ನ ಅಧ್ಯಕ್ಷರಾದ ಶ್ರೀಯುತ ಶಿವಾನಂದ್ ಅವರು ಕವಿಗಳಿಗೆ ಒಂದು ಉತ್ತಮ ವೇದಿಕೆ ನೀಡಿದ್ದಕ್ಕೆ ಅವರಿಗೆ ನನ್ನ ತುಂಬು ಹೃದಯದ ಧನ್ಯವಾದಗಳು  

ಮಸ್ಕತ್ ನಲ್ಲಿ ನೆಲೆಸಿರುವ ಸಾಹಿತ್ಯ ಆಸಕ್ತರಿಗೆ ಒಂದು ಒಳ್ಳೆಯ ವೇದಿಕೆ. ಇಂಥಾ ಕಾರ್ಯಕ್ರಮಗಳು ಆಗಾಗ ನಡೆಯುತ್ತಲೇ ಇರಲಿ. ಹೆಚ್ಚಿನ ಸಾಹಿತ್ಯ ಆಸಕ್ತರು ತಮ್ಮ ಮನಸಿನ ಭಾವನೆಗಳನ್ನು ಹೇಳಿಕೊಳ್ಳುವ ಸಮಾನಮನಸ್ಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಲಿ. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲರಿಗೂ ಧನ್ಯವಾದಗಳು 🙏 


​ಎಲ್ಲರಿಗೂ ಶುಭವಾಗಲಿ! 🙏🏻

ಪ್ರೀತಿಯಿಂದ,


ಪಿ.ಎಸ್ ರಂಗನಾಥ 

ಮಸ್ಕತ್ ಒಮಾನ್ 

ಶುಕ್ರವಾರ, ಜೂನ್ 13, 2025

ಸುಡು ಬಿಸಿಲಿನ ಸೌದಿ ಅರೇಬಿಯಾದಲ್ಲೂ ಇದೆ ತಂಪಾದ ಗಿರಿಶಿಖರಗಳು

ಸುಡು ಬಿಸಿಲಿನ ಸೌದಿ ಅರೇಬಿಯಾದಲ್ಲೂ ಇದೆ ತಂಪಾದ ಗಿರಿಶಿಖರಗಳು

ಬರಹ:- ಪಿ.ಎಸ್.ರಂಗನಾಥ, ಮಸ್ಕತ್, ಒಮಾನ್ ರಾಷ್ಟ್ರ.


ಸೌದಿ ಅರೇಬಿಯಾದ ಹೆಚ್ಚಿನ ಭಾಗ ಮರುಭೂಮಿಯಿಂದ ಕೂಡಿದ್ದು ಇಲ್ಲಿ ಅತಿ ಹೆಚ್ಚಿನ ಬಿಸಿಲಿನ ತಾಪಮಾನವಿರುವುದು ಬಹಳಷ್ಟು ಜನರಿಗೆ ಗೊತ್ತಿದೆ. ಪ್ರಪಂಚದ ಅತ್ಯಂತ ದೊಡ್ಡದಾದ ರಬ್ ಅಲ್ ಖಾಲಿ (ಎಂಪ್ಟಿ ಕ್ವಾರ್ಟರ್) ಎಂದು ಕರೆಯಲ್ಪಡುವ ಮರುಭೂಮಿ ಈ ದೇಶದಲ್ಲಿದೆ. ಈ ವಿಶಾಲವಾದ ಮರುಭೂಮಿಯು ದೇಶದ ಹವಾಮಾನ ಮತ್ತು ಪರಿಸರ ವ್ಯವಸ್ಥೆಗಳ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ. ಸೌದಿ ಅರೇಬಿಯಾ ದೇಶವು ಅತ್ಯಂತ ಧೀರ್ಘವಾದ, ಬೇಸಿಗೆಕಾಲ ಮತ್ತು ಅತಿ ಕಡಿಮೆ ಅವಧಿಯ ತಂಪಾದ ಮತ್ತು ಸ್ವಲ್ಪ ಆರ್ದ್ರ ಚಳಿಗಾಲದ ಕಠಿಣ ಮರುಭೂಮಿ ಹವಾಮಾನವನ್ನು ಹೊಂದಿದೆ.  ಇಂತಹ ಕಠಿಣ ಹವಮಾನದಿಂದ ದೇಶವನ್ನು ಸಂರಕ್ಷಿಸಿಕೊಳ್ಳಲು, ಇಲ್ಲಿನ ಸರ್ಕಾರವು ಅರಣ್ಯೀಕರಣ, ಸುಧಾರಿತ ಭೂ ನಿರ್ವಹಣಾ ಪದ್ಧತಿಗಳು ಅಳವಡಿಸಿಕೊಳ್ಳುತ್ತಿದೆ. ಬೇಸಿಗೆಯಲ್ಲಿನ ಸುಡು ಬಿಸಿಲಿನಿಂದ ತಪ್ಪಿಸಿಕೊಳ್ಳಲು ಏರ್ ಕಂಡೀಶನರ್ ಗಳಿಲ್ಲದೆ ಜೀವನ ನಡೆಸುವುದು ಬಹಳ ಕಷ್ಟ. ಇಂತಹ ಭೀಕರ ಮರಳುಗಾಡಿನ ಪ್ರದೇಶದಲ್ಲೂ ತಂಪಾದ ಹವಮಾನ ಪ್ರದೇಶಗಳಿರುವುದು ಇಲ್ಲಿನ ವಿಶೇಷ. ಆದರೆ ಇಲ್ಲಿಯೂ ಸಹ ತಂಪಾಗಿರುವ ಪ್ರದೇಶಗಳಿರುವುದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಇಲ್ಲಿನ ತಂಪಾದ ಹವಮಾನವನ್ನು ಅನುಭವಿಸಲು ಬೇಸಿಗೆ ಸೇರಿದಂತೆ, ವಿವಿಧ ರಜಾದಿನಗಳಲ್ಲಿ ಲಕ್ಷಾಂತರ ಜನರು ಈ ಪ್ರದೇಶಗಳಿಗೆ ಪ್ರವಾಸಕ್ಕೆ ಬರುತ್ತಾರೆ.

 ತುರೈಫ಼್, ಬ್ಲಾಹಮ್ರ್,  ಬಿಲ್ಸಮ್ರ್ ಕೇಂದ್ರ, ಅಲ್ ಬಹಾ, ಅಭಾ, ಅಸೀರ್ ಪ್ರಾಂತ್ಯ ಸೇರಿದಂತೆ ಕೆಲ ಪ್ರದೇಶಗಳಲ್ಲಿ ಈ ಹಿಮಪಾತವಾಗಿದೆ ಎಂದರೆ ನಂಬಲಾಗದು. ವಿಮಾನದಲ್ಲಿ ಪ್ರಯಾಣಿಸುವಾಗ ಮೋಡಗಳು ಪಕ್ಕದಲ್ಲಿ ಸಾಗುವಂತಹ ಅದ್ಭುತ ವಿಹಂಗಮ ದೃಶ್ಯವನ್ನು, ಇಲ್ಲಿ ಸ್ವತಃ ಕಾಣಬಹುದು. ಪಶ್ಚಿಮ ಘಟ್ಟದಲ್ಲಿನ ತಿರುವಿನ ರಸ್ತೆಯಲ್ಲಿ ಪ್ರಯಾಣಿಸುವ ಅನುಭವ, ಕೇಬಲ್ ಕಾರ್ ಪ್ರಯಾಣ, ಸುಂದರ ಉಧ್ಯಾನವನಗಳು,  ಒಂದಾ ಎರಡಾ!  ಅಲ್ಲ, ಹತ್ತು ಹಲವಾರು ಅದ್ಭುತ ಪ್ರವಾಸಿತಾಣಗಳು ಇಲ್ಲಿವೆ.  ಈ ಎಲ್ಲಾ ಸ್ಥಳಗಳು ಬೇಸಿಗೆ ವಿಶ್ರಾಂತಿ ಧಾಮಗಳಾಗಿ ಅದ್ಭುತವಾಗಿ ಅಭಿವೃದ್ದಿ ಹೊಂದಿದ್ದು. ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರು ಇಲ್ಲಿಗೆ ಬೇಟಿ ನೀಡುತ್ತಾರೆ. 

ಈ ಲೇಖನದಲ್ಲಿ ಸೌದಿ ಅರೇಬಿಯಾದಲ್ಲಿನ ತಂಪಾದ ಪ್ರದೇಶಗಳ ಕುರಿತು ಒಂದು ಒಳನೋಟ ಇಲ್ಲಿದೆ. 

*1). ಅಭಾ(Abha) - ಆಸಿರ್ ಪ್ರಾಂತ್ಯ(Aseer Region):* 

ಸೌದಿ ಅರೇಬಿಯಾದ ನೈಋತ್ಯ ಭಾಗದಲ್ಲಿರುವ ಅಭಾ ಪ್ರದೇಶವು ಆಸಿರ್ ಪ್ರಾಂತ್ಯದಲ್ಲಿದೆ. ಇದು ಅಲ್-ಹಿಜಾಜ್ ಪರ್ವತದ ಮೇಲಿದ್ದು ಸುತ್ತಲೂ ಬೆಟ್ಟಗಳಿಂದ ಆವೃತವಾಗಿದೆ. ಈ ಸ್ಥಳವು ಸಮುದ್ರ ಮಟ್ಟದಿಂದ ಸುಮಾರು 2,200 ಮೀಟರ್ ಎತ್ತರದಲ್ಲಿರುವುದರಿಂದ ಇಲ್ಲಿನ ಹವಾಮಾನವು ಬೇಸಿಗೆಯಲ್ಲಿಯೂ ಸಹ ತಂಪಾಗಿರುತ್ತದೆ. ಬೇಸಿಗೆಯಲ್ಲಿ ಇಲ್ಲಿಗೆ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಈ ಪ್ರಾಂತ್ಯದಲ್ಲಿ ಹಲವಾರು ಪ್ರವಾಸಿ ತಾಣಗಳಿವೆ. 

.

*ಆಸೀರ್ ಪ್ರಾಂತ್ಯದಲ್ಲಿನ ಪ್ರಮುಖ ಆಕರ್ಷಣೆಗಳು:*

ಅಭಾ: ಅಸೀರ್ ಪ್ರಾಂತ್ಯದ ರಾಜಧಾನಿ, ಈ ನಗರವು ಆಧುನಿಕ ಸೌಕರ್ಯಗಳನ್ನು ಒಳಗೊಂಡಿದ್ದರೂ, ಪುರಾತನ ಸಾಂಪ್ರದಾಯಿಕ ಶೈಲಿಯನ್ನು ಬಿಟ್ಟುಕೊಟ್ಟಿಲ್ಲ. 

ಅಭಾ ಸರೋವರ(Abha Dam Lake): ಈ ಸರೋವರದಲ್ಲಿ ದೋಣಿ ವಿಹಾರ ಮಾಡಲು ವ್ಯವಸ್ಥೆ ಮಾಡಲಾಗಿದೆ, ಇದೊಂದು ಪ್ರಶಾಂತ ಸರೋವರವಾಗಿದ್ದು ವಿಶ್ರಾಂತಿ ಸಮಯವನ್ನು ಇಲ್ಲಿ ಆರಾಮವಾಗಿ ಕಳೆಯಬಹುದು.

ಅಭಾ ಕೇಬಲ್ ಕಾರ್ (New Abha Cable Car):  ಈ ಕೇಬಲ್ ಕಾರ್ ಮೂಲಕ ಸಂಚರಿಸುತ್ತ, ಇಲ್ಲಿಯ ಸುತ್ತಮುತ್ತಲಿನ ಪರ್ವತಗಳ ವಿಹಂಗಮ ನೋಟವನ್ನು ಕಣ್ತುಂಬಿಕೊಳ್ಳಬಹುದು.

ಅಲ್ ಮುಫ್ತಾಹಾ ಕಲಾ ಗ್ರಾಮ(Al Muftaha Art Village): ಈ ಸ್ಥಳದಲ್ಲಿ ಇಲ್ಲಿನ ಸ್ಥಳೀಯ ಕಲೆ ಮತ್ತು ಕರಕುಶಲ ವಸ್ತುಗಳ ಪ್ರದರ್ಶನವಿರುವ ವಸ್ತು ಸಂಗ್ರಹಾಲಯವಿದೆ. ಇಲ್ಲಿ ಸೌದಿ ಅರೇಬಿಯಾದ ಪುರಾತನ ಮನೆಗಳನ್ನ ನೋಡಬಹುದು. ಈ ವಸ್ತು ಸಂಗ್ರಹಾಲಯವನ್ನು ನೋಡುತಿದ್ದರೆ,  ಯುರೋಪಿನ ಪುರಾತನ ಶೈಲಿಯ ಸಂಗ್ರಹಾಲಯವನ್ನು ನೋಡುತಿದ್ದೇವೆಯಾ ಎನ್ನುವುದು ಭಾಸವಾಗುತ್ತದೆ.

ಆಸೀರ್ ರಾಷ್ಟ್ರೀಯ ಉದ್ಯಾನವನ (Asir National Park): ಇದೊಂದು ಸಂರಕ್ಷಿತ ಅರಣ್ಯ ಪ್ರದೇಶವಾಗಿದೆ. ವನ್ಯಜೀವಿ ವೀಕ್ಷಣೆ,  ಟ್ರೆಕಿಂಗ್ ಕ್ಯಾಂಪಿಂಗ್, ಬೆಟ್ಟಗಳ ನಡುವೆ ಹಾದುಹೋಗುವ ಮೋಡಗಳ ವೀಕ್ಷಣೆ ಗಾಗಿ ಈ ಸ್ಥಳ ಪ್ರಸಿದ್ದ.  ಪರ್ವತಗಳ ಕಣಿವೆಗಳ ಮಧ್ಯೆಯಿರುವ ಅರಣ್ಯದಲ್ಲಿನ ಟ್ರೆಕಿಂಗ್ ಗಾಗಿರುವ ಕಾಲ್ನಡಿಗೆಯ ಹಾದಿಗಳು ಅದ್ಭುತ ಅನುಭವವನ್ನು ನೀಡುತ್ತವೆ. 



ರಿಜಲ್ ಅಲ್ಮಾ ಗ್ರಾಮ (Rijal Almaa Village): ಯುನೆಸ್ಕೋ ವಿಶ್ವ ಪರಂಪರೆಯ ತಾಣ, ಇಲ್ಲಿನ ವಿಶಿಷ್ಟ ವಾಸ್ತುಶಿಲ್ಪ ಮತ್ತು ಸಾಂಪ್ರದಾಯಿಕ ಶೈಲಿಗೆ ಈ ಗ್ರಾಮ ಹೆಸರುವಾಸಿಯಾಗಿದೆ. ಅಭಾದಿಂದ ಪಶ್ಚಿಮಕ್ಕೆ ಸುಮಾರು 50 ಕಿ.ಮೀ ದೂರದಲ್ಲಿದೆ. ಈ ಗ್ರಾಮವು 900 ವರ್ಷಗಳಿಗೂ ಹಳೆಯದಾಗಿದೆ. 


ಅಲ್ ಹಬಾಲಾ ಗ್ರಾಮ (Al Habala Village Hanging Village): ಈ ಸ್ಥಳದಲ್ಲಿನ ಬೆಟ್ಟಗಳು, ವಿಶಿಷ್ಟವಾದ ಬಂಡೆಗಳು, ಕಣಿವೆಗಳ ರಮ್ಯ ನೋಟವನ್ನು ಅನುಭವಿಸುತ್ತ  ಈ ಸ್ಥಳವನ್ನು ಕೇಬಲ್ ಕಾರ್ ಮೂಲಕ ಪ್ರವೇಶಿಸಬಹುದು.  ಇಲ್ಲಿನ ಪ್ರಕೃತಿಯ ನೋಟ ಪ್ರವಾಸಿಗರನ್ನ ಬೆರಗುಗೊಳಿಸುತ್ತದೆ.

ಜಬಲ್ ಸಾವ್ಡಾ (Jabal Sawda):  ಆಸಿರ್ ಪರ್ವತ ಶ್ರೇಣಿಯಲ್ಲಿನ ವಿಹಂಗಮ ನೋಟಗಳನ್ನು ಅನುಭವಿಸಲು ಈ ಸ್ಥಳವು ಸೂಕ್ತವಾಗಿದೆ. ಟ್ರೆಕಿಂಗ್ ಮಾಡಲು ಇಲ್ಲಿ ಅವಕಾಶವಿದೆ. 

ವಾಟರ್ ಫಾಲ್ ಪಾರ್ಕ್ (Waterfall Park): ಇದೊಂದು ಸುಂದರವಾದ ಉದ್ಯಾನವನವಾಗಿದ್ದು, ಕೃತಕ  ಜಲಪಾತ,  ಕಾರಂಜಿಗಳು ಮತ್ತು ಮಕ್ಕಳು ಆಟವಾಡಲು ಈ ಉದ್ಯಾನವನ ಸೂಕ್ತವಾಗಿದೆ.

ಮೇಲಿನ ಸ್ಥಳಗಳ ಜತೆಗೆ ಇಲ್ಲಿನ, ಐತಿಹಾಸಿಕ ಶಾದಾ ಅರಮನೆ, ಅಸೀರ್ ಪ್ರಾದೇಶಿಕ ವಸ್ತುಸಂಗ್ರಹಾಲಯಗಳನ್ನು ನೋಡಬಹುದು, ಈ ಪ್ರದೇಶದ ಇತಿಹಾಸ ಮತ್ತು ಸಂಸ್ಕೃತಿಯ ಒಳನೋಟಗಳನ್ನು ಅರಿಯಲು ಈ ಸ್ಥಳ ಸೂಕ್ತವಾಗಿದೆ.



*2). ತೈಫ್* :- ಈ ತೈಫ್ ನಗರವನ್ನು ಗುಲಾಬಿ ನಗರ ಎಂದು ಕರೆಯುತ್ತಾರೆ.

ಸರಾವತ್ ಪರ್ವತಗಳ ಇಳಿಜಾರುಗಳಲ್ಲಿ ನೆಲೆಗೊಂಡಿರುವ ಈ ಸ್ಥಳವು ಸುಂದರವಾದ ಗುಲಾಬಿ ತೋಟಗಳು, ತಾಜಾ ಗಾಳಿ ಮತ್ತು ಪರ್ವತ ನೋಟಗಳಿಗೆ ಹೆಸರುವಾಸಿಯಾಗಿದೆ. ಇದು ಜನಪ್ರಿಯ ಬೇಸಿಗೆಯ ವಿಹಾರ ತಾಣವಾಗಿದೆ. ಈ ಪ್ರಾಂತ್ಯವು ತಂಪಾದ ಹವಾಮಾನಕ್ಕೆ ಹೆಸರುವಾಸಿಯಾಗಿದ್ದು, ಸೌದಿ ಅರೇಬಿಯಾದ ಇತರೆ ಪ್ರದೇಶಗಳಲ್ಲಿನ ಜನರು ಬೇಸಿಗೆಯ ಬಿಸಿಲನ್ನು ತಪ್ಪಿಸಿಕೊಳ್ಳಲು ಈ ಸ್ಥಳಕ್ಕೆ ಸ್ಥಳೀಯರು ಭೇಟಿ ನೀಡುತ್ತಾರೆ.  ಸೌದಿ ಅರೇಬಿಯಾದ ಬೇಸಿಗೆಯ ತಾಣವೆಂದು ಗುರುತಿಸಲಾಗಿದೆ.

ತೈಫ್ ನಗರವು ಜೆದ್ದಾ ದಿಂದ 175 ಕಿಲೋಮೀಟರ್ ಮತ್ತು ರಿಯಾದ್ ನಿಂದ 785 ಕಿಲೋಮೀಟರ್ ದೂರವಿದೆ. ತೈಫ್ ತನ್ನ ಪರಿಮಳಯುಕ್ತ ಗುಲಾಬಿಗಳು ಮತ್ತು ಸುಗಂಧ ದ್ರವ್ಯ ಕಾರ್ಖಾನೆಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿನ ಪ್ರಮುಖ ಆಕರ್ಷಣೆಗಳನ್ನು ನೋಡುವುದಾದರೆ, ಅಲ್ ಹದಾ ಪರ್ವತ, ಅದರ ಉದ್ದವಾದ ಕೇಬಲ್ ಕಾರ್ ಸವಾರಿ, ಗುಲಾಬಿ ತೋಟಗಳು ಮತ್ತು ಕಾಲ್ನಡಿಗೆಯ ಹಾದಿಗಳು, ಜೊತೆಗೆ ವಾಟರ್ ಪಾರ್ಕ್ ಮತ್ತು ಟೊಬೊಗನ್ ಸ್ಲೈಡ್ ಅನ್ನು ಹೊಂದಿರುವ ಅಲ್ ಕರ್ ಪ್ರವಾಸಿ ಗ್ರಾಮ ಇಲ್ಲಿವೆ. 

*3). ತುರೈಫ್* : ಐತಿಹಾಸಿಕ  ಅತ್-ತುರೈಫ್ ಸೌದಿಯ ಉತ್ತರ ಭಾಗದ ಈ ಪ್ರದೇಶ ಅತ್ಯಂತ ತಂಪಾದ ಪ್ರದೇಶವಾಗಿದೆ. ಜೋರ್ಡಾನ್ ದೇಶದ  ಉತ್ತರ ಗಡಿ ಪ್ರಾಂತ್ಯದ ಗಡಿಯ ಬಳಿಯಿದೆ. ಜೆದ್ದಾದಿಂದ 1600 ಕಿಲೋಮೀಟರ್ ಮತ್ತು ರಿಯಾದ್ 1400 ಕಿಲೋಮೀಟರ್ ದೂರವಿದೆ.  ಈ ಪ್ರದೇಶವನ್ನು ಮೊದಲ ಸೌದಿ ರಾಜ್ಯ (1727-1818)  ಎಂದು ಗುರುತಿಸಲಾಗುತ್ತಿದೆ. ಸಾಂಪ್ರದಾಯಿಕ ನಜ್ದಿ ಶೈಲಿಯಲ್ಲಿ ಮಣ್ಣಿನ ಇಟ್ಟಿಗೆಯಿಂದ ರಚಿಸಲಾದ ಇಲ್ಲಿರುವ ರಾಜಮನೆತನದ ಕೋಟೆಯು ಪ್ರಮುಖ ಆಕರ್ಷಣೆಯಾಗಿದೆ. 2010 ರಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿ ಘೋಷಿಸಲ್ಪಟ್ಟಿತು, ಚಳಿಗಾಲದ ಅತಿ ಕಡಿಮೆ (−12.0 °C (10.4 °F)) ತಾಪಮಾನವನ್ನು ಈ ಪಟ್ಟಣದಲ್ಲಿ ಕಾಣಬಹುದು.  




*4). ಅಲ್ ಬಹಾ (Al Baha)*:

 ಅಲ್ ಬಹಾ ವನ್ನು ಸೌದಿ ಅರೇಬಿಯಾದ ಹಿಡನ್ ಪ್ಯಾರಡೈಸ್ (hidden paradise)  ಎಂದು ಕರೆಯುತ್ತಾರೆ. ಇಲ್ಲಿ ಹಲವಾರು ಸುಂದರ ಉಧ್ಯಾನವನಗಳಿವೆ. ಕಾಡುಗಳು, ಕಣಿವೆಗಳು, ಹಳ್ಳಕೊಳ್ಳಗಳು,  ಪ್ರಾಚೀನ ಹಳ್ಳಿಗಳು, ಈ ಪ್ರದೇಶದಲ್ಲಿವೆ. ಕೆಲವೊಮ್ಮೆ ಇಲ್ಲಿ ಹಿಮಪಾತವು ಆಗುತ್ತದೆ. ವಿಶೇಷವೇನೆಂದರೆ ವರ್ಷಪೂರ್ತಿ ತಂಪಾದ ಹವಮಾನ ಇಲ್ಲಿರುರುತ್ತದೆ. ಹೀಗಾಗಿ ಎಲ್ಲೆಲ್ಲೀ ಹಚ್ಚ ಹಸಿರನ್ನಕಾಣಬಹುದು. 

ಪ್ರವಾಸಿಗಳು ನೋಡಲು ಹಲವಾರು ಸ್ಥಳಗಳಿವೆ. ರಘದನ್ ಫಾರೆಸ್ಟ್ ಪಾರ್ಕ್, ಐನ್ ವಿಲೇಜ್, ಖೈರಾ ಫಾರೆಸ್ಟ್, ಹಲವಾರು ಉದ್ಯಾನವನಗಳು, ಪಿಕ್ನಿಕ್ ತಾಣಗಳು ಮತ್ತು ನಯನ ಮನೋಹರ ಹಚ್ಚ ಹಸಿರಿನ ಅರಣ್ಯ ಪ್ರದೇಶಗಳು. ಹಸಿರು ಹೊದ್ದ ಬೆಟ್ಟಗುಡ್ಡಗಳು, ಹೀಗೆ ವಿವಿಧ ರೀತಿಯ ಪ್ರವಾಸಿ ಸ್ಥಳಗಳು ಇಲ್ಲಿವೆ.




5). ಅಲ್ ಜೌಫ್ - ಆಲಿವ್ ರಾಜಧಾನಿ (Al Jouf – The Olive Capital)

ಉತ್ತರ ಸೌದಿ ಅರೇಬಿಯಾದಲ್ಲಿರುವ ಅಲ್ ಜೌಫ್ ಸ್ಥಳವು, ಆಲಿವ್ ತೋಟಗಳು, ಹಸಿರಿನ ವಾತಾವರಣ ಮತ್ತು ತಂಪಾದ ಹವಮಾನಕ್ಕೆ ಹೆಸರುವಾಸಿಯಾದ ಪ್ರದೇಶವಾಗಿದೆ. ಇಲ್ಲಿನ ಸಕಾಕಾ ನಗರ, ಕೃಷಿ ತೋಟಗಳಿಂದ ಆವೃತವಾಗಿದ್ದು, ಬೇರೆಲ್ಲೆಡೆಗಿಂತ ತಂಪಾದ ಹವಾಮಾನ ಇಲ್ಲಿರುತ್ತದೆ.

ಇಲ್ಲಿ ಆಲೀವ್ ಅನ್ನು ಹೆಚ್ಚಾಗಿ ಬೆಳೆಯುವದರಿಂದ ಚಳಿಗಾಲದಲ್ಲಿ ವರ್ಷಕ್ಕೊಮ್ಮೆ ಆಲಿವ್ ಉತ್ಸವವನ್ನು ಆಚರಿಸಲಾಗುತ್ತದೆ. ಈ ಪ್ರದೇಶದಲಿ ನಡೆಯುವ ಅತಿದೊಡ್ಡ ಉತ್ಸವಗಳಲ್ಲಿ ಒಂದಾಗಿದೆ. ಪುರಾತನ ಜಾಬಲ್ ಕೋಟೆ (Zaabal Castle) ಯಿಂದ ಸುತ್ತಮುತ್ತಲಿನ ಹಸಿರು ತುಂಬಿದ ಸುಂದರವಾದ ತೋಟಗಳನ್ನು ನೋಡಬಹುದು



6.) ತಬೂಕ್  (Tabuk):- ಸೌದಿ ಅರೇಬಿಯಾದ ವಾಯುವ್ಯ ಭಾಗದ ಜೋರ್ಡಾನ್ ಗಡಿಯಲ್ಲಿದೆ. ಈ ಪ್ರದೇಶಕ್ಕೆ  ಸುಮಾರು ಐದು ಸಾವಿರವರ್ಷಗಳ ಇತಿಹಾಸವಿದೆ. ಇದೊಂದು ಪುರಾತನ ನಗರವಾಗಿದೆ.  ಚಳಿಗಾಲದಲ್ಲಿ ಮೈಕೊರೆಯುವ ಚಳಿ ಈ ಭಾಗದಲ್ಲಿರುತ್ತದೆ. ಬೇಸಿಗೆಕಾಲದಲ್ಲಿ ಬೆಳಿಗ್ಗೆ ಸುಡು ಬಿಸಿ ವಾತಾವಾರಣವಿದ್ದರೂ, ಸಂಜೆಯ ವಾತಾವರಣ ಹಿತದಾಯಕವಾಗಿರುತ್ತದೆ. 

 ಅತ್ಯಂತ ಧೀರ್ಘ ಇತಿಹಾಸವಿರುವ ಈ ತಾಣ ಪ್ರಾಚೀನ ಪುರಾತತ್ತ್ವ ಶಾಸ್ತ್ರದ ಸ್ಥಳಗಳನ್ನು ಹೊಂದಿದೆ. ಪ್ರವಾದಿ ಮೋಸೆಸ್ ಅವರು ಹತ್ತಾರು ವರ್ಷಗಳ ಕಾಲ ಈ ಸ್ಥಳದಲ್ಲಿ ವಾಸಿಸಿದ್ದರೆಂದು ಹೇಳಲಾಗಿದೆ. ಈ ಪ್ರಾಂತ್ಯವು ಕೆಂಪು ಸಮುದ್ರದ ಕರಾವಳಿ ತೀರವನ್ನು ಹೊಂದಿದೆ. ಹಲವಾರು ಸುಂದರವಾದ ಪಟ್ಟಣಗಳು ಈ ಪ್ರಾಂತ್ಯದಲ್ಲಿದೆ. ಕರಾವಳೀ ತೀರ ಮಾತ್ರವಲ್ಲದೆ, ಮರುಭೂಮಿ, ಎತ್ತರದ ಪರ್ವತಗಳು ಈ ಪ್ರಾಂತ್ಯದಲ್ಲಿವೆ. ತಬೂಕ್ ಪಟ್ಟಣದ ಮಧ್ಯಭಾಗದಲ್ಲಿರುವ ತಬೂಕ್ ಕೋಟೆಯು,  ಕ್ರಿ.ಪೂ 3500 ರ ಹಿಂದಿನ ಕೋಟೆಯಾಗಿದೆ ಎಂದು ಹೇಳುತ್ತಾರೆ.



 7). ಜಜಾನ್ ಹೈಲ್ಯಾಂಡ್ಸ್ (Jazan highlands) :

ಯೆಮೆನ್ ಗಡಿಯ ಸಮೀಪವಿರುವ ಈ ಪ್ರದೇಶವು ಆಶ್ಚರ್ಯಗಳಿಂದ ತುಂಬಿದೆ. ಕರಾವಳಿ ಬಿಸಿ ಮತ್ತು ಆರ್ದ್ರತೆಯಿಂದ ಕೂಡಿದ್ದರೂ, ಜಜಾನ್ ಹೈಲ್ಯಾಂಡ್ಸ್, ವಿಶೇಷವಾಗಿ ಫೈಫಾ ಪರ್ವತಗಳು ಮುಂಗಾರಿನಲ್ಲಿ ಹಸಿರಿನಿಂದ ಮೈದುಂಬಿ ಕೊಂಡಿರುತ್ತವೆ ಅಷ್ಟೇ ಅಲ್ಲದೆ ಮಳೆಗಾಲದ ಮಂಜನ್ನೂ  ಇಲ್ಲಿ ನೋಡಬಹುದು. ಇಲ್ಲಿರುವ ತೋಟಗಳನ್ನು ನೋಡುತಿದ್ದರೆ, ಇದೇನಿದು ಅರೇಬಿಯಾ ದೇಶವೋ, ಅಥವಾ ಆಗ್ನೇಯ ಏಷ್ಯಾದ ಒಂದು ಪ್ರಾಂತ್ಯವೋ ಎನ್ನುವಂತೆ  ಭಾಸವಾಗುತ್ತದೆ.

ಬನಿ ಮಲಿಕ್ ಮತ್ತು ಅಲ್-ಡೇಯರ್ ಇಲ್ಲಿರುವ ಹಚ್ಚ ಹಸಿರಿನ ಪರ್ವತ ಪ್ರದೇಶದ ಹಳ್ಳಿಗಳು, ಕಾಫಿ ತೋಟಗಳು ಮತ್ತು ಸಾಂಪ್ರದಾಯಿಕ ಜೀವನಕ್ಕೆ ಹೆಸರುವಾಸಿಯಾಗಿವೆ.  ಮಳೆಗಾಲದ ಸಮಯದಲ್ಲಿ ಬೆಟ್ಟಗಳು ಹಸಿರಿನಿಂದ ಕಂಗೊಳಿಸುತ್ತವೆ.

8) ಹೇಲ್ (Hail):-  ಇದು ವಾಯುವ್ಯ ಸೌದಿ ಅರೇಬಿಯಾದಲ್ಲಿರುವ ಶಮ್ಮಾರ್ ಪರ್ವತಗಳಾದ ಅಜಾ ಮತ್ತು ಸಲ್ಮಾ ನಡುವೆ ಇರುವ ಒಂದು ನಗರ. ರಿಯಾದ್ ನಿಂದ ಸುಮಾರಿ 571 ಕಿಲೋಮೀಟರ್ ದೂರದಲ್ಲಿದೆ. ದಕ್ಷಿಣದ ಎತ್ತರದ ಪ್ರದೇಶಗಳು ಅಥವಾ ಉತ್ತರದ ಗಡಿಗಳಷ್ಟು ತಂಪಾಗಿಲ್ಲದಿದ್ದರೂ, ಉತ್ತರದಲ್ಲಿ ನೆಲೆಗೊಂಡಿರುವ ಹೈಲ್, ಇತರ ಮರುಭೂಮಿ ಪ್ರದೇಶಗಳಿಗೆ ಹೋಲಿಸಿದರೆ ಹೆಚ್ಚು ಸಮಶೀತೋಷ್ಣ ಹವಾಮಾನ ಇಲ್ಲಿರುತ್ತದೆ.


ಈ ತಾಣವು,  ಐತಿಹಾಸಿಕ, ನೈಸರ್ಗಿಕ ಮತ್ತು ಆಧುನಿಕ ಆಕರ್ಷಣೆಗಳ ಮಿಶ್ರಣದ ಅನುಭವನ್ನು ನೀಡುತ್ತದೆ. ಪ್ರಮುಖ ತಾಣಗಳಲ್ಲಿ ಅಲ್-ಕಿಶ್ಲಾ ಅರಮನೆ, ಆರಿಫ್ ಕೋಟೆ, ಅಲ್-ರಾಜಿ ಮಸೀದಿ ಮತ್ತು ಲವೇರಾ ಥೀಮ್ ಪಾರ್ಕ್ ಸೇರಿವೆ. ಪ್ರಕೃತಿ ಪ್ರಿಯರು ಅಲ್ ಸಮ್ರಾ ಪರ್ವತ, ಹತಿಮಾ ಜ್ವಾಲಾಮುಖಿ ಕುಳಿ ಮತ್ತು ಹತ್ತಿರದ ಅಲ್ ನಫುದ್ ಮರುಭೂಮಿಯನ್ನು ಅನ್ವೇಷಿಸಬಹುದು.

9) ಅಲ್ ಉಲಾ (AlUla):


ಅಲ್ಉಲಾ ನಗರವು, ಸೌದಿ ಅರೇಬಿಯಾದ ಮದೀನಾ ಪ್ರಾಂತ್ಯದಲ್ಲಿರುವ ಒಂದು ಪ್ರಾಚೀನ ಅರೇಬಿಯನ್ ಓಯಸಿಸ್ ನಗರ ಮತ್ತು ಗವರ್ನರೇಟ್ ಆಗಿದ್ದು, ಇದು ಮದೀನಾ ನಗರದ ವಾಯುವ್ಯಕ್ಕೆ 350 ಕಿಲೋಮೀಟರ್ ದೂರದಲ್ಲಿದೆ. ಈ ಪ್ರಾಂತ್ಯವು, ಇಲ್ಲಿನ ತಂಪಾದ ಹವಾಮಾನಕ್ಕೆ ಹೆಸರುವಾಸಿಯಾಗಿದೆ. ಇಲ್ಲಿನ ಕಡಿಮೆ ತಾಪಮಾನ ದಿಂದಾಗಿ, ಚಳಿಗಾಲದಲ್ಲಿ ನಡೆಯುವ ಹಲವಾರು ವಿಶಿಷ್ಟ ಹಬ್ಬಗಳು ಮತ್ತು ಹೊರಾಂಗಣ ಕಾರ್ಯಕ್ರಮಗಳಿಂದಾಗಿ ಈ ತಾಣವು ಜನಪ್ರಿಯವಾಗಿದೆ.

ಅಲ್ ಉಲಾ ಐತಿಹಾಸಿಕ ತಾಣಗಳಿಂದ ಹಿಡಿದು ನೈಸರ್ಗಿಕ ಅದ್ಭುತಗಳು ಮತ್ತು ಆಧುನಿಕ ವಾಸ್ತುಶಿಲ್ಪದ ಅದ್ಭುತಗಳವರೆಗೆ ವೈವಿಧ್ಯಮಯ ಆಕರ್ಷಣೆಗಳನ್ನು ಇಲ್ಲಿ ನೋಡಬಹುದು



ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಹೆಗ್ರಾ, ಪ್ರಾಚೀನ ಸಮಾಧಿಗಳು, ಎಲಿಫೆಂಟ್ ರಾಕ್, ಆನೆಯನ್ನು ಹೋಲುವ ಮರಳುಗಲ್ಲಿನ ರಚನೆ, ಮತ್ತು ಬೃಹತ್ ಮರುಭೂಮಿ ಬಂಡೆಯ ಮುಖದಲ್ಲಿ ನಿರ್ಮಿಸಲಾದ ಸಂಗೀತ ಕಚೇರಿ ಸಭಾಂಗಣವಾದ ಮರಾಯಾ, ಇವೆಲ್ಲವೂ ಪ್ರವಾಸಿಗರು ಭೇಟಿ ಮಾಡಬಹುದಾದ ಕೆಲ ಪ್ರಮುಖ ಪ್ರವಾಸಿ ಆಕರ್ಷಣೆಗಳು. ಇದಲ್ಲದೆ, ಪುರಾತನ ನಗರ, ಶರಾನ್ ನೇಚರ್ ರಿಸರ್ವ್ ಮತ್ತು ಜಬಲ್ ಇಕ್ಮಾ ಗೆ ಸಹ ಭೇಟಿ ನೀಡಬಹುದು.




ಶನಿವಾರ, ಮಾರ್ಚ್ 29, 2025

ಯುಗಾದಿ ಹಬ್ಬ ಎಲ್ಲಾ ಹಿಂದೂಗಳಿಗೆ ಹೊಸವರ್ಷವೇ?

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ. ಪ್ರತಿ ವರ್ಷ ಯುಗಾದಿ ಬಂತೆಂದರೆ ಎಲ್ಲರ ಮನೆಮನದಲ್ಲೂ ಹರುಷ  ತುಂಬಿ ತುಳುಕಾಡುತ್ತದೆ. ಮರಗಿಡಗಳಲ್ಲಿ ಹಣ್ಣೆಲೆಗಳು ಉದುರಿ, ಹೊಸ ಎಲೆಗಳು ಚಿಗುರುತ್ತವೆ. ಎಲ್ಲರ ಮನೆಗಳಲ್ಲಿ ಹಬ್ಬದ ಸಡಗರ, ಎಣ್ಣೆಸ್ನಾನ ಮಾಡಿ, ಹೊಸ ಬಟ್ಟೆ ಉಟ್ಟು, ದೇವರ ಪೂಜೆ ಮಾಡಿ, ಹೋಳಿಗೆ ಊಟ ಮಾಡಿ, ಬಂಧುಗಳು ಮತ್ತು ಸ್ನೇಹಿತರೊಂದಿಗೆ ಶುಭಾಶಯಗಳ ವಿನಿಮಯ ಮಾಡಿಕೊಳ್ಳುತ್ತೇವೆ. ಸುಖ ದುಃಖಗಳನ್ನ ಸಮನಾಗಿ ಹಂಚಿಕೊಂಡು ಬಾಳಬೇಕು ಎನ್ನುತ್ತ ಬೆವು ಬೆಲ್ಲವನ್ನು ತಿಂದು ಒಟ್ಟಿಗೆ ತಿಂದು ಹಬ್ಬವನ್ನು ಆಚರಿಸುತ್ತೇವೆ, ದಿನಪೂರ್ತಿ ಸಂಭ್ರಮದಿಂದ ಕಳೆಯುತ್ತೇವೆ. ಇಂದು ಜಗತ್ತಿನಾದ್ಯಂತ ಹೊಸವರ್ಷವನ್ನು ಜನವರಿ 1ರಂದು ಆಚರಿಸಲಾಗುತ್ತಿದೆ. ಆದರೆ, ಅಂದು ಪ್ರಕೃತಿಯಲ್ಲಿ ಬದಲಾವಣೆಯೇನು ಆಗುವುದಿಲ್ಲ. ಆದರೆ, ಚೈತ್ರಮಾಸದ ವಸಂತ ಋತುವಿನಲ್ಲಿ ಗಿಡಮರಗಳು ಚಿಗುರುತ್ತವೆ, ಈ ಸಮಯದಲ್ಲಿ ಪ್ರಕೃತಿಯನ್ನು ಕಣ್ತುಂಬಾ ನೋಡಲು ಬಲುಹಿತವೆನಿಸುತ್ತದೆ. ಯುಗಾದಿ ಸಮಯವೆಂದರೆ ಪ್ರಕೃತಿಯಲ್ಲಿ ಬದಲಾವಣೆ ಎಂದೇ ಅರ್ಥೈಸುತ್ತೇವೆ.  ಆದರೆ ಯುಗಾದಿ ಹಬ್ಬ, ಎಲ್ಲಾ ಹಿಂದೂಗಳಿಗೆ ಹೊಸವರ್ಷವೇ? ಉತ್ತರ ಮಾತ್ರ ಖಂಡಿತಾವಾಗಿಯೂ ಅಲ್ಲ!!

ಯುಗಾದಿ ಹಬ್ಬವನ್ನು ಬಹಳಷ್ಟು ಜನ ಭಾರತದೇಶದ ಎಲ್ಲಾ ಹಿಂದೂಗಳ ಹೊಸ ವರ್ಷವೆಂದು ತಿಳಿದುಕೊಂಡಿದ್ದಾರೆ. ಕೆಲ ರಾಜ್ಯಗಳಲ್ಲಿ ಮಾತ್ರ ನಾವು ಕನ್ನಡಿಗರು ಆಚರಿಸುವ ಯುಗಾದಿಯಂದು ಹೊಸ ವರ್ಷವೆಂದು ಆಚರಿಸಿದರೆ, ಭಾರತದ ವಿವಿಧ ಭಾಗಗಳಲ್ಲಿ ವಿವಿಧ ದಿನಗಳಂದು ಹೊಸ ವರ್ಷವನ್ನು ಆಚರಿಸುತ್ತಾರೆ. ನಮ್ಮ ಭಾರತದಲ್ಲಿ ಎಲ್ಲಾ ಹಿಂದೂಗಳು ಒಂದೇ ದಿನ ಹೊಸವರ್ಷವನ್ನು ಆಚರಿಸುವುದಿಲ್ಲ. ಕನ್ನಡಿಗರಿಗೆ ಯುಗಾದಿ ಹಬ್ಬ ದೊಡ್ಡ ಹಬ್ಬವಾದರೆ, ಕೆಲ ರಾಜ್ಯಗಳಲ್ಲಿ ಹಿಂದೂ ಹೊಸವರ್ಷಕ್ಕೆ ಅಷ್ಟೊಂದು ಮಹತ್ವವೂ ಇಲ್ಲ ಮತ್ತು ಹೊಸವರ್ಷವನ್ನು ಆಚರಿಸುವುದೂ ಇಲ್ಲ ಎನ್ನುವುದು ಗಮನಾರ್ಹ ಅಂಶ.   

ಭಾರತದಲ್ಲಿ ಹಲವಾರು ಕ್ಯಾಲೆಂಡರ್ ಪದ್ದತಿಗಳನ್ನು ಅನುಸರಿಸಲಾಗುತ್ತಿದೆ. ರೋಮನ್ನರ ಹಾಗೂ ಕ್ರೈಸ್ತರ ಕಾಲಗಣನೆಯಂತೆ ಈವತ್ತು ನಾವೆಲ್ಲರೂ ಉಪಯೋಗಿಸುವ ಕ್ರಿಶ್ಚಿಯನ್ ಕ್ಯಾಲೆಂಡರ್ ಪದ್ದತಿಯನ್ನು ಗ್ರೆಗೋರಿಯನ್ ಕ್ಯಾಲೆಂಡರ್ ಎಂದು ಕರೆಯುತ್ತಾರೆ.  ಮುಸ್ಲಿಮರು ಧಾರ್ಮಿಕ ವಿಷಯಗಳಿಗಾಗಿ ಬಳಸುವ ಕ್ಯಾಲೆಂಡರ್ ಅನ್ನು ಹಿಜರಿ ಕ್ಯಾಲೆಂಡರ್ ಎನ್ನುತ್ತಾರೆ. ಹಿಂದೂಗಳು ಉಪಯೋಗಿಸುವ ಹಿಂದೂ ಪಂಚಾಗ ಪದ್ದತಿಯಲ್ಲಿ ಎರಡು ಕಾಲಮಾನಗಳಿವೆ, ಒಂದು ಸೌರಮಾನ ಮತ್ತೊಂದು ಚಾಂದ್ರಮಾನ. ಚಂದ್ರನ ಚಲನೆಯನ್ನು ಆಧರಿಸಿ ವರ್ಷದಲ್ಲಿನ ದಿನಗಳನ್ನು ಲೆಕ್ಕಾಚಾರ ಮಾಡುವುದಕ್ಕೆ ಚಾಂದ್ರಮಾನ ಎಂದು ಕರೆಯಲಾಗುತ್ತದೆ. ಚಾಂದ್ರಮಾನವೆಂಬ ಹೆಸರಿದ್ದರೂ, ಅದು ನಿಜವಾಗಿ ಸೂರ್ಯ ಮತ್ತು ಚಂದ್ರ, ಇಬ್ಬರ ಚಲನೆಯನ್ನೂ ಅವಲಂಬಿಸಿದೆ.  ಭೂಮಿಯ ಚಲನೆಗೆ ಸಂಬಂಧಿಸಿದಂತೆ ಸೂರ್ಯ ತನ್ನ ಸ್ಥಾನವನ್ನು ಅನುಸರಿಸುವುದನ್ನು ಸೌರಮಾನ ಎಂದು ಕರೆಯಲಾಗುತ್ತದೆ.



ಚಾಂದ್ರಮಾನ ಪದ್ದತಿಯಂತೆ ಪ್ರತಿ ವರ್ಷ ಚೈತ್ರ ಮಾಸ, ಶುಕ್ಲ ಪಕ್ಷದ ಪಾಡ್ಯದ ತಿಥಿಯಂದು, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ,  ಮಹಾರಾಷ್ಟ್ರ  ಮಧ್ಯಪ್ರದೇಶ, ಹಾಗೆಯೇ ದಾದ್ರಾ ಮತ್ತು ನಗರ ಹವೇಲಿ ಗೋವಾ ದಮನ್ ಮತ್ತು ಡಿಯು, ತಮಿಳುನಾಡಿನ ಉತ್ತರ ಭಾಗದ ಕೆಲ ತಾಲೂಕುಗಳಲ್ಲಿ (ಕರ್ನಾಟಕ ಮತ್ತು ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿರುವ) ಹೊಸವರ್ಷವನ್ನು ಆಚರಿಸಲಾಗುತ್ತದೆ. ಆಂಧ್ರಪ್ರದೇಶ ಮತ್ತು ತೆಲಂಗಾಣದ ಜನರು ಮತ್ತು ಕರ್ನಾಟಕದಲ್ಲಿನ ಜನರು ಇದನ್ನು ಯುಗಾದಿ ಹಬ್ಬವೆಂದು ಆಚರಿಸಿದರೆ, ಇನ್ನು ಮಹಾರಾಷ್ಟ್ರದ ಜನರು ಇದೇ ಹಬ್ಬವನ್ನು 'ಗುಡಿ ಪಾಡ್ವಾ' ಎಂದು ಆಚರಿಸುತ್ತಾರೆ.  ಇದಕ್ಕೊಂದು ಹಿನ್ನೆಲೆಯೂ ಇದೆ.  ಕ್ರಿ ಪೂ .230 ರಿಂದ ಕ್ರಿ.ಶ 220 ರ ತನಕ ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ ರಾಜ್ಯಗಳನ್ನು ಶಾತವಾಹನರು ಆಳುತ್ತಾರೆ. ಶಾತವಾಹನರ ರಾಜನಾಗಿದ್ದ ಗೌತಮಿಪುತ್ರ ಶಾತಕರ್ಣಿ ಕ್ರಿ.ಶ. 78 ರಲ್ಲಿ ಶಾಲಿವಾಹನ ಶಕೆಯನ್ನು ಪ್ರಾರಂಭಿಸುತ್ತಾನೆ.  ಹೀಗಾಗಿ ಶಾತವಾಹನರು ಆಳ್ವಿಕೆ ನಡೆಸಿದ ರಾಜ್ಯಗಳಲ್ಲಿ ಶಾಲಿವಾಹನ ಶಕೆ ಎನ್ನುವ ಪಂಚಾಂಗ ಪದ್ದತಿಯನ್ನು ಅನುಸರಿಸಲಾಗುತ್ತಿದೆ. ಈ ಕಾರಣದಿಂದಲೇ, ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಚೈತ್ರಮಾಸದ ಮೊದಲ ದಿನದಂದು ಯುಗಾದಿ ಹಬ್ಬವನ್ನು ಆಚರಿಸುತಿದ್ದೇವೆ. ರಾಜ ಶಾಲಿವಾಹನ ಮತ್ತು ಶಕ ಯುಗದ ನಡುವಿನ ಸಂಬಂಧದ ಕುರಿತಾಗಿ ಸೋಮರಾಜನ ಕನ್ನಡ ಕೃತಿ ಉದ್ಭಟಕಾವ್ಯದಲ್ಲಿ ದಾಖಲಾಗಿದೆ. 

ನಮ್ಮ ಯುಗಾದಿಯ ದಿನದಂದೇ ಹೊಸವರ್ಷವನ್ನು ಭಾರತದ ಕೆಲಭಾಗಳಲ್ಲಿ ಮತ್ತು ವಿದೇಶದಲ್ಲಿಯೂ ಆಚರಿಸುತ್ತಾರೆ. ಇಂಡೋನೇಶಿಯಾದ ಜಾವಾ  ಮತ್ತು ಬಾಲಿಯಲ್ಲಿರುವ ಹಿಂದುಗಳು ಯುಗಾದಿಯಂದೇ ಹೊಸವರ್ಷವನ್ನು ಆಚರಿಸುವುದು ವಿಶೇಷ. ಉತ್ತರ ಭಾರತದ ಸಿಂಧಿ ಜನರು ಯುಗಾದಿಯ ದಿನವನ್ನು ಚೇತಿ ಚಂದ್ ಎಂದು ಆಚರಿಸುತ್ತಾರೆ. ಕೊಂಕಣಿ ಸಮುದಾಯದ ಹಿಂದುಗಳು ವರ್ಷದ ಮೊದಲ ದಿನವನ್ನು "ಸಂವತ್ಸರ ಪಾಡ್ವೋ" ಎಂದು, ಜಮ್ಮು ಕಾಶ್ಮಿರದ ಹಿಂದೂಗಳು ನವ್ರೆಃ ಎಂದು ಆಚರಿಸುತ್ತಾರೆ. ಭಾರತದ ಮಿಕ್ಕ ಪ್ರದೇಶಗಳಲ್ಲಿ ಬೇರೆ ಬೇರೆ ದಿನಗಳಂದು  ಹೊಸವರ್ಷವನ್ನು ಆಚರಿಸಲಾಗುತ್ತದೆ. 

ಸೌರಮಾನ ಪದ್ದತಿಯಂತೆ ಪ್ರತಿವರ್ಷ  ಏಪ್ರಿಲ್‌ 14 ರಂದು, ಕರ್ನಾಟಕದ ಕರಾವಳಿಯ ಭಾಗ ಸೇರಿದಂತೆ, ತಮಿಳುನಾಡು, ಕೇರಳ, ಪುದುಚೆರಿ, ಒರಿಸ್ಸಾ, ಅಸ್ಸಾಂ, ನೇಪಾಳ, ಪಂಜಾಬ್ ರಾಜ್ಯಗಳಲ್ಲಿ ಹೊಸವರ್ಷವನ್ನು ಆಚರಿಸಲಾಗುತ್ತದೆ. ಮಂಗಳೂರು ಮತ್ತು ಉಡುಪಿಯಲ್ಲಿ  ಬಿಸು ಪರ್ಬ ಎಂದು ಆಚರಿಸಲಾಗುವುದು.  ಅದೇ ರೀತಿ ಏಪ್ರಿಲ್‌ 14 ರಂದು ತಮಿಳುನಾಡಿನಲ್ಲಿ 'ವರುಷ ಪಿರಪ್ಪು', 'ಚಿತಿರೈವಿಶು', 'ಪುತಂಡು' ಎಂದು,  ಕೇರಳದಲ್ಲಿ  ಹೊಸ ವರ್ಷವನ್ನು 'ವಿಷು' ಎಂದು. ಬಂಗಾಳದಲ್ಲಿ 'ಪೊಹೆಲಾ ಬೋಯ್ಷಾಕ್' ಮತ್ತು 'ನಬಾ ಬರ್ಷ' ಎಂದು, ಒರಿಸ್ಸಾದಲ್ಲಿ, 'ಮಹಾ ವಿಷುಬ ಸಂಕ್ರಾಂತಿ' (ಪನ ಸಂಕ್ರಾಂತಿ) ಎಂದು, ಅಸ್ಸಾಂ ನವರು 'ಬೊಹಾಗ್ ಬಿಹು' ಅಥವಾ 'ರೊಂಗಾಲಿ ಬಿಹು' ಎಂದು, ಪಂಜಾಬ್ ನಲ್ಲಿ ಬೈಸಾಖಿ ಎಂದು ಹೊಸ ವರ್ಷವನ್ನು ಆಚರಿಸುತ್ತಾರೆ. ನೇಪಾಳದಲ್ಲೂ ಸಹ ಪ್ರತಿವರ್ಷ ಏಪ್ರಿಲ್‌ 14 ರಂದು ಹೊಸವರ್ಷವನ್ನು ಆಚರಿಸುತ್ತಾರೆ. 

ದೀಪಾವಳಿಯಂದು ಹೊಸವರ್ಷ:  ಗುಜರಾತ್‌ ಮತ್ತು ರಾಜಸ್ಥಾನಗಳಲ್ಲಿ ದೀಪಾವಳಿಯ ನಂತರದ ದಿನವನ್ನು ಹೊಸ ವರ್ಷವೆಂದು ಆಚರಿಸಲಾಗುತ್ತದೆ. ಗುಜರಾತಿಗೆ ಹೊಂದಿಕೊಂಡಂತೆ ಇರುವ ಮಹಾರಾಷ್ಟ್ರ ಕೆಲ ಜಿಲ್ಲೆಗಳಲ್ಲಿ ದೀಪಾವಳಿಯ ಸಮಯದಲ್ಲಿ ಹೊಸವರ್ಷವನ್ನು ಆಚರಿಸಲಾಗುತ್ತದೆ. 

ಮಾರ್ಚ 20 ಪಾರ್ಸಿಗಳ ಹೊಸವರ್ಷ: ಭಾರತದಲ್ಲಿ ನೆಲೆಗೊಂಡಿರುವ ಪಾರ್ಸಿಗಳು ನೌರುಜ್  ಎಂದು ಕರೆಯುವ ಹೊಸವರ್ಷವನ್ನು ಮಾರ್ಚ 20 ರಂದು ಆಚರಿಸುತ್ತಾರೆ. ಮಧ್ಯ ಏಷ್ಯಾದ ದೇಶಗಳಾದ ಇರಾನ್ (ಪರ್ಶಿಯಾ) ಇರಾಕ್, ಸಿರಿಯಾ ಮತ್ತು ಟರ್ಕಿಯಲ್ಲಿ ಕುರ್ದಿಗಳು ಅಫ್ಘಾನಿಸ್ತಾನ, ಅಜೆರ್ಬೈಜಾನ್, ಕಝಾಕಿಸ್ತಾನ್, ಉಜ್ಬೇಕಿಸ್ತಾನ್ ಮತ್ತು ತಜಕಿಸ್ತಾನ್ ಮತ್ತು ತುರ್ಕಮೆನಿಸ್ತಾನದಂತಹ ದೇಶಗಳಲ್ಲಿ ಬಹಳಷ್ಟು ಜನರು ಮಾರ್ಚ ೨೦ರಂದು  ಹೊಸವರ್ಷವನ್ನು (ನೌರುಜ್) ಆಚರಿಸುತ್ತಾರೆ.

ಈಶಾನ್ಯ ರಾಜ್ಯಗಳಲ್ಲಿ ಹೊಸ ವರ್ಷ: ಇಲ್ಲಿನ ಸಪ್ತ ರಾಜ್ಯಗಳಲ್ಲಿ ಬೇರೆ ಬೇರೆ ದಿನಗಳಂದು ಹೊಸವರ್ಷ ಆಚರಿಸುತ್ತಾರೆ. ಕ್ರಿಶ್ಚಿಯನ್ನರು, ಜನವರಿ ಒಂದನೇ ತಾರೀಖಿನಂದು, ಟಿಬೇಟಿಯನ್ ಬೌದ್ದ ಸಂಪ್ರದಾಯವಾದಿಗಳು  ಲೋಸರ್ ಎಂದು ಕರೆಯಲ್ಪಡುವ ಹೊಸವರ್ಷವನ್ನು ಫೆಬ್ರವರಿ ತಿಂಗಳಿನಲ್ಲಿ,  ಏಪ್ರಿಲ್‌ 14ರಂದು, ತ್ರಿಪುರಾ,  ಅಸ್ಸಾಂನವರು 'ಬೊಹಾಗ್ ಬಿಹು' ಹಬ್ಬವನ್ನು ಆಚರಿಸುತ್ತಾರೆ. ಆದರೆ ಮಣಿಪುರಿಗಳು ಚೈರೋಬ ಎಂದು ಕರೆಯಲ್ಪಡುವ ಹಬ್ಬವನ್ನು ನಮ್ಮ ಕನ್ನಡಿಗರ ಯುಗಾದಿಯ ದಿನದಂದು ಆಚರಿಸುತ್ತಾರೆ. 

ಭಾರತದ ಪ್ರಾಚೀನ ಪರಂಪರೆ, ನೂರಾರು ಭಾಷೆಗಳು, ತರಹೇವಾರಿ ಆಹಾರಗಳು, ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆ, ವಿಭಿನ್ನ ಭೌಗೋಳಿಕ ರಚನೆ, ವೈವಿಧ್ಯಮಯ ಜನ ಸಮುದಾಯ, ವಿಭಿನ್ನ ಸಂಪ್ರದಾಯಗಳು ಮತ್ತು ಆಚರಣೆಗಳು, ಭಾರತ ವೈವಿಧ್ಯಮಯ ದೇಶವೆನ್ನುವುದಕ್ಕೆ ಇಂತಹ ಹಲವಾರು ವಿಷಯಗಳಿವೆ. ಬಹುಶಃ ಪ್ರಪಂಚದ ಇತರೆ ಯಾವುದೇ ದೇಶಗಳಲ್ಲಿ ಇಂತಹ ವೈವಿಧ್ಯತೆಗಳು ಅಪರೂಪ. ಭಾರತದಲ್ಲಿರುವ ನಮಗೆ ಇಂತಹ ಹಲವಾರು ವಿಭಿನ್ನ ವಿಷಯಗಳು ಆಶ್ಚರ್ಯ ಎನಿಸಿದರೆ, ಇನ್ನು ವಿದೇಶಿಯರಿಗೆ ನಮ್ಮ ಭಾರತದ ಕುರಿತು ಇನ್ನೆಷ್ಟು ಕೌತಕ ಎನಿಸಬಹುದು ಅಲ್ಲವೇ?


ಬರಹ:- ಪಿ.ಎಸ್.ರಂಗನಾಥ

ಮಸ್ಕತ್ - ಒಮಾನ್ ರಾಷ್ಟ್ರ.





Click below headings