ಶುಕ್ರವಾರ, ಆಗಸ್ಟ್ 14, 2026

ಸ್ವಾತಂತ್ರ್ಯವೋ ಅಥವಾ ಸ್ವೇಚ್ಛಾಚಾರವೋ?

ಸ್ವಾತಂತ್ರ್ಯದ ಸಾರ್ಥಕತೆ, ಮರೆಯಾದ ವೀರರು ಮತ್ತು ಇಂದಿನ ವಾಸ್ತವ: ಒಂದು ವಿಶ್ಲೇಷಣೆ

ಇಂದು ನಾವು ನಮ್ಮ ದೇಶದ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿದ್ದೇವೆ. ಎಂಟು ದಶಕಗಳ ಈ ಪಯಣ ಕೇವಲ ಸಂಭ್ರಮದ ದಿನವಷ್ಟೇ ಅಲ್ಲ; ಬದಲಾಗಿ, ನಮ್ಮ ದೇಶಕ್ಕಾಗಿ ಪ್ರಾಣತೆತ್ತ ಅಸಂಖ್ಯಾತ ಮಹಾನ್ ನಾಯಕರ ತ್ಯಾಗ, ಬಲಿದಾನ ಮತ್ತು ಹೋರಾಟಗಳನ್ನು ಸ್ಮರಿಸುವ ಪವಿತ್ರ ದಿನ. ಆ ಮಹನೀಯರ ನಿರಂತರ ತ್ಯಾಗದ ಪ್ರತಿಫಲವೇ ಇಂದು ನಾವು ಅನುಭವಿಸುತ್ತಿರುವ ಈ ಸ್ವಾತಂತ್ರ್ಯ. ಆದರೆ, ಈ ಹೊತ್ತಿನಲ್ಲಿ ನಾವು ನಿಜವಾದ ಸ್ವಾತಂತ್ರ್ಯದ ಹಾದಿಯಲ್ಲಿದ್ದೇವೆಯೇ ಅಥವಾ ದಿಕ್ಕು ತಪ್ಪಿದ್ದೇವೆಯೇ ಎಂಬ ಗಂಭೀರ ಪ್ರಶ್ನೆ ನಮ್ಮೆದುರು ನಿಲ್ಲುತ್ತದೆ.

ಇತಿಹಾಸದ ಪುಟಗಳಲ್ಲಿ ಮರೆಯಾದ, ನೇಣುಗಂಬಕ್ಕೇರಿದ ಅನಾಮಧೇಯ ವೀರರು ಸ್ವಾತಂತ್ರ್ಯದ ಇತಿಹಾಸವನ್ನು ಮೆಲುಕು ಹಾಕುವಾಗ ಕೇವಲ ಬೆರಳೆಣಿಕೆಯ ನಾಯಕರ ಹೆಸರುಗಳು ಮಾತ್ರ ಮುನ್ನೆಲೆಗೆ ಬರುತ್ತವೆ. ಆದರೆ, ಯಾವುದೇ ಪ್ರಚಾರದ ಹಂಗಿಲ್ಲದೆ, ಕೇವಲ ಮಾತೃಭೂಮಿಯ ಮೇಲಿನ ಭಕ್ತಿಗಾಗಿ ನಗುನಗುತ್ತಾ ನೇಣುಗಂಬಕ್ಕೇರಿದ ಅದೆಷ್ಟೋ ಮಹನೀಯರಿದ್ದಾರೆ. ಸ್ವಾತಂತ್ರ್ಯದ ಈ ಅಮೃತ ಗಳಿಗೆಯಲ್ಲಿ ಅವರ ತ್ಯಾಗವನ್ನು ಸ್ಮರಿಸುವುದು ನಮ್ಮ ಆದ್ಯ ಕರ್ತವ್ಯ:

  • ನರಗುಂದದ ಬಾಬಾಸಾಹೇಬ (ಭಾಸ್ಕರರಾವ್ ಭಾವೆ): ಬ್ರಿಟಿಷರ ದತ್ತುಮಕ್ಕಳಿಗೆ ಹಕ್ಕಿಲ್ಲ (Doctrine of Lapse) ಎಂಬ ನೀತಿಯನ್ನು ತೀವ್ರವಾಗಿ ವಿರೋಧಿಸಿ ಸಿಡಿದೆದ್ದ ಕರ್ನಾಟಕದ ಅಪ್ರತಿಮ ವೀರ. ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಸಶಸ್ತ್ರ ಹೋರಾಟ ಮಾಡಿದ ಇವರನ್ನು ಸೆರೆಹಿಡಿದ ಬ್ರಿಟಿಷರು, ಬೆಳಗಾವಿಯಲ್ಲಿ ನಿರ್ದಯವಾಗಿ ಗಲ್ಲಿಗೇರಿಸಿದರು.
  • ಹಲಗಲಿಯ ಬೇಡರು: ೧೮೫೭ರಲ್ಲಿ ಬ್ರಿಟಿಷರು ತಂದ 'ನಿಶಸ್ತ್ರೀಕರಣ ಕಾಯ್ದೆ'ಯನ್ನು (ತಮ್ಮ ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳನ್ನು ಒಪ್ಪಿಸುವ ನಿಯಮ) ಧಿಕ್ಕರಿಸಿ, ಪ್ರಾಣದ ಹಂಗುತೊರೆದು ಹೋರಾಡಿದವರು ಮುಧೋಳ ತಾಲೂಕಿನ ಹಲಗಲಿಯ ಬೇಡರು. ಈ ಬಂಡಾಯವನ್ನು ಕ್ರೂರವಾಗಿ ಹತ್ತಿಕ್ಕಿದ ಬ್ರಿಟಿಷರು ಜಡಗ, ಬಾಲ, ರಾಮ ಮುಂತಾದ ಅಮಾಯಕ ವೀರರನ್ನು ಸಾರ್ವಜನಿಕವಾಗಿ ಮರಕ್ಕೆ ನೇತುಹಾಕಿ ಗಲ್ಲಿಗೇರಿಸಿದರು.
  • ಕರ್ತಾರ್ ಸಿಂಗ್ ಸರಾಭಾ: ಭಾರತದ ಸ್ವಾತಂತ್ರ್ಯಕ್ಕಾಗಿ ಅಮೆರಿಕದಲ್ಲಿ 'ಗದರ್ ಪಾರ್ಟಿ' ಕಟ್ಟಿ ಬ್ರಿಟಿಷರ ವಿರುದ್ಧ ಸಿಡಿದೆದ್ದ ಯುವಕ. ಕೇವಲ ೧೯ನೇ ವಯಸ್ಸಿಗೆ ಲಾಹೋರ್ ಜೈಲಿನಲ್ಲಿ ನಗುನಗುತ್ತಾ ನೇಣುಗಂಬ ಏರಿದ ಇವರು, ಕ್ರಾಂತಿಕಾರಿ ಭಗತ್ ಸಿಂಗ್ ಅವರಿಗೇ ಆದರ್ಶ ಗುರುವಾಗಿದ್ದರು ಎಂಬುದು ಬಹುತೇಕರಿಗೆ ತಿಳಿದಿಲ್ಲ.
  • ಮಾಸ್ಟರ್ ದಾ ಸೂರ್ಯ ಸೇನ್: ಬಂಗಾಳದ ಚಿತ್ತಗಾಂಗ್‌ನಲ್ಲಿ ಶಾಲಾ ಶಿಕ್ಷಕರಾಗಿದ್ದ ಇವರು, ಯುವಕರ ಪಡೆಯನ್ನು ಕಟ್ಟಿ ಬ್ರಿಟಿಷರ ಶಸ್ತ್ರಾಸ್ತ್ರಗಳ ಉಗ್ರಾಣದ ಮೇಲೆಯೇ ದಾಳಿ ಮಾಡಿದ ಅಪ್ರತಿಮ ಕ್ರಾಂತಿಕಾರಿ. ಇವರನ್ನು ಸೆರೆಹಿಡಿದ ಬ್ರಿಟಿಷರು, ಹಲ್ಲುಗಳನ್ನು ಕಿತ್ತು, ಮೂಳೆಗಳನ್ನು ಮುರಿದು ಅಮಾನುಷವಾಗಿ ಚಿತ್ರಹಿಂಸೆ ನೀಡಿ, ಪ್ರಜ್ಞಾಹೀನ ಸ್ಥಿತಿಯಲ್ಲೇ ಗಲ್ಲಿಗೇರಿಸಿದರು.
  • ಅಶ್ಫಾಖುಲ್ಲಾ ಖಾನ್ ಮತ್ತು ರಾಮ್ ಪ್ರಸಾದ್ ಬಿಸ್ಮಿಲ್: ಕಾಕೋರಿ ರೈಲು ದರೋಡೆ ಪ್ರಕರಣದಲ್ಲಿ ಬ್ರಿಟಿಷರ ನಿದ್ದೆಗೆಡಿಸಿದ ಈ ಕ್ರಾಂತಿಕಾರಿ ಸ್ನೇಹಿತರನ್ನು ಬ್ರಿಟಿಷರು ಪ್ರತ್ಯೇಕ ಜೈಲುಗಳಲ್ಲಿ ನೇಣಿಗೇರಿಸಿದರು. "ಸರ್ಫರೋಶಿ ಕಿ ತಮನ್ನಾ" ಎಂಬ ಕ್ರಾಂತಿಗೀತೆಯನ್ನು ಹಾಡುತ್ತಾ ಅವರು ಮಾಡಿದ ಬಲಿದಾನ ಇಂದಿಗೂ ರೋಮಾಂಚನಕಾರಿ.

ಸ್ವಾತಂತ್ರ್ಯವೋ ಅಥವಾ ಸ್ವೇಚ್ಛಾಚಾರವೋ? ಇಂತಹ ಅಸಂಖ್ಯಾತ ಅನಾಮಧೇಯ ವೀರರ ರಕ್ತದಿಂದ ಬರೆದ ಈ ಸ್ವಾತಂತ್ರ್ಯವನ್ನು ನಾವಿಂದು ಹೇಗೆ ಬಳಸಿಕೊಳ್ಳುತ್ತಿದ್ದೇವೆ? ಇಂದಿನ ಸಮಾಜವನ್ನು ಸೂಕ್ಷ್ಮವಾಗಿ ಗಮನಿಸಿದರೆ, ನಾವೆಲ್ಲರೂ ಸ್ವಾತಂತ್ರ್ಯದ ಹೆಸರಿನಲ್ಲಿ 'ಸ್ವೇಚ್ಛಾಚಾರ'ದಲ್ಲಿ ಮುಳುಗಿದ್ದೇವೆಯೇನೋ ಎನಿಸುತ್ತದೆ. ನಮ್ಮನ್ನಾಳುತ್ತಿರುವ ಅತಿಯಾದ ಮತ್ತು ಅನಿರ್ಬಂಧಿತ ಸ್ವಾತಂತ್ರ್ಯವು ಸಮಾಜವನ್ನು ಪ್ರಪಾತದತ್ತ ತಳ್ಳುತ್ತಿದೆ. ನಾವು ನಮ್ಮದೇ ವ್ಯವಸ್ಥೆಯನ್ನು ಹೇಗೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದೇವೆ ಎಂಬುದನ್ನು ವಿದೇಶಿಯರು ಸಹ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

ರಾಜಕೀಯ ಮತ್ತು ಭ್ರಷ್ಟಾಚಾರದ ಕರಾಳ ಮುಖ

  • ಜವಾಬ್ದಾರಿರಹಿತ ಅಭಿವ್ಯಕ್ತಿ ಸ್ವಾತಂತ್ರ್ಯ: ಪ್ರಜಾಪ್ರಭುತ್ವದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬೆಲೆ ಇದೆ. ಆದರೆ ಇಂದು ರಾಜಕೀಯ ನಾಯಕರು, ಪ್ರತಿಪಕ್ಷಗಳು ಹಾಗೂ ಕೆಲವು ಹೋರಾಟಗಾರರು ಯಾವುದೇ ಮಿತಿಯಿಲ್ಲದೆ, ಜವಾಬ್ದಾರಿಯಿಲ್ಲದೆ ಮಾತನಾಡುತ್ತಿರುವುದು ವ್ಯವಸ್ಥೆಯ ಅಣಕವಾಗಿದೆ. ಸೈದ್ಧಾಂತಿಕ ವಿರೋಧಗಳನ್ನು ಬಿಟ್ಟು ವೈಯಕ್ತಿಕ ತೇಜೋವಧೆಗೆ ಇಳಿಯುತ್ತಿರುವುದು ವಿಷಾದನೀಯ.
  • ಬೇರೂರಿರುವ ಭ್ರಷ್ಟಾಚಾರ: ಭ್ರಷ್ಟಾಚಾರವು ಸಮಾಜದ ಪ್ರತಿಯೊಂದು ಸ್ತರವನ್ನೂ ವ್ಯಾಪಿಸಿದೆ. ಸರ್ಕಾರಿ ಕಚೇರಿಗಳು, ದಲ್ಲಾಳಿಗಳ ಹಸ್ತಕ್ಷೇಪ, ಗುತ್ತಿಗೆದಾರರ ವ್ಯವಸ್ಥೆ – ಹೀಗೆ ಎಲ್ಲೆಡೆಯೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಎಷ್ಟೇ ಕಠಿಣ ಕಾನೂನುಗಳನ್ನು ತಂದರೂ, ಆ ಕಾನೂನುಗಳ ಕಣ್ಣಿಗೆ ಮಣ್ಣೆರಚಿ ನುಣುಚಿಕೊಳ್ಳುವವರೇ ಹೆಚ್ಚಾಗಿದ್ದಾರೆ.

ಅಧಿಕಾರದ ದರ್ಪ ಮತ್ತು ಅಹಂಕಾರ ಇಂದು ಅಧಿಕಾರದ ಮದ ಮತ್ತು ದರ್ಪ ಜನಸಾಮಾನ್ಯರನ್ನು ಬೆಚ್ಚಿಬೀಳಿಸುತ್ತಿದೆ. ಜನಪ್ರತಿನಿಧಿಗಳು ಹಾಗೂ ಸರ್ಕಾರಿ ಅಧಿಕಾರಿಗಳು ಅಧಿಕಾರದ ಅಹಂಕಾರ ಪ್ರದರ್ಶನವಾಗುತ್ತಿರುವುದು ನಿಜಕ್ಕೂ ಆತಂಕಕಾರಿ. ಇತ್ತೀಚೆಗೆ ಮಾಲೂರಿನಲ್ಲಿ ನಡೆದಂತಹ ಘಟನೆಗಳು ಇದಕ್ಕೆ ತಾಜಾ ಉದಾಹರಣೆಯಾಗಿದ್ದು, ಇವು ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಬುಡಮೇಲು ಮಾಡುತ್ತವೆ.

ಯುವ ಪೀಳಿಗೆಯ ಮೇಲಿರುವ ಜವಾಬ್ದಾರಿ ಖಂಡಿತವಾಗಿಯೂ ನಾವು ಇಂದು ನೋಡುತ್ತಿರುವುದು ಸ್ವಾತಂತ್ರ್ಯವಲ್ಲ, ಅದು ಅತಿಯಾದ ಸ್ವೇಚ್ಛಾಚಾರ. ಈ ವ್ಯವಸ್ಥೆಯನ್ನು ಹೀಗೆಯೇ ಬಿಟ್ಟರೆ ಮುಂದಿನ ದಿನಗಳು ಮತ್ತಷ್ಟು ಕಠಿಣವಾಗಲಿವೆ.

  • ಈ ಅಸಮತೋಲನವನ್ನು ಸರಿಪಡಿಸುವ ಅತಿ ದೊಡ್ಡ ಹೊಣೆಗಾರಿಕೆ ಇಂದಿನ ಯುವ ಪೀಳಿಗೆಯ ಮೇಲಿದೆ.
  • ಸಮಾಜದ ಪ್ರತಿಯೊಬ್ಬ ಪ್ರಜೆಯೂ ಎಚ್ಚೆತ್ತುಕೊಂಡು, ಈ ಸ್ವೇಚ್ಛಾಚಾರವನ್ನು ನಿರ್ಬಂಧಿಸಿ, ಅನಾಮಧೇಯ ಕ್ರಾಂತಿಕಾರಿಗಳು ಕಂಡಿದ್ದ ನೈಜ ಸ್ವಾತಂತ್ರ್ಯದ ಮೌಲ್ಯಗಳನ್ನು ಮರುಸ್ಥಾಪಿಸುವ ಕೆಲಸವನ್ನು ಒಗ್ಗಟ್ಟಿನಿಂದ ಮಾಡಬೇಕಿದೆ.

 ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿದ, ನೇಣುಗಂಬಕ್ಕೆ ಮುತ್ತಿಕ್ಕಿದ ಆ ಎಲ್ಲಾ ಅನಾಮಿಕ ಮಹಾತ್ಮರು ಮತ್ತು ಹುತಾತ್ಮರಿಗೆ ನಮ್ಮ ಕೃತಜ್ಞತಾಪೂರ್ವಕ ನಮನಗಳನ್ನು ಸಲ್ಲಿಸೋಣ. ಕೇವಲ ಆಚರಣೆಗೆ ಸೀಮಿತವಾಗದೆ, ಅವರು ತಂದುಕೊಟ್ಟ ಸ್ವಾತಂತ್ರ್ಯವನ್ನು ಉಳಿಸಿ, ಬೆಳೆಸುವ ಜವಾಬ್ದಾರಿಯುತ ನಾಗರಿಕರಾಗಿ ಸಮಾಜವನ್ನು ತಿದ್ದುವ ಪಣ ತೊಡೋಣ.

ಎಲ್ಲಾ ದೇಶಬಾಂಧವರಿಗೂ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು. ಜೈ ಹಿಂದ್, ಜೈ ಭಾರತ್, ವಂದೇ ಮಾತರಂ!

ಬರಹ:

ಪಿ.ಎಸ್.ರಂಗನಾಥ

ಮಸ್ಕತ್, ಒಮಾನ್ ರಾಷ್ಟ್ರ

ಶನಿವಾರ, ಆಗಸ್ಟ್ 1, 2026

ಚೈನಾ ಪ್ರವಾಸ ಕಥೆ ಭಾಗ-3

ಚೈನಾ ಪ್ರವಾಸ ಕಥೆ ಭಾಗ-3



*ಚೈನಾದವರ ಆಹಾರ ಪದ್ದತಿ:*

ನಮಗೆ ಚೈನಾದಲ್ಲಿ ಆಥಿತ್ಯ ನೀಡಿದ ಅಲ್ಲಿನ ಒಂದು ಕಂಪನಿಯ ಉದ್ಯೋಗಿ ಜತೆ ಹಲವಾರು ಮಾಹಿತಿ ವಿನಿಮಯ ಮಾಡಿಕೊಳ್ಳುತಿದ್ದೆವು, ನನ್ನ ಕುತೂಹಲಕ್ಕಾಗಿ ನೇರವಾಗಿಯೇ ಅವರ ಆಹಾರ ಪದ್ದತಿ ಬಗ್ಗೆ ಪ್ರಶ್ನೆಗಳನ್ನು ಕೇಳಿದೆ.  ನಮ್ಮ ಚೈನಾ ಪ್ರವಾಸದಲ್ಲಿ ಹಲವಾರು ಹೋಟೆಲ್ ಗಳಿಗೆ ಹೋಗಿ ಊಟ ಮಾಡಿದ್ದೇವೆ. ಎಲ್ಲೆಲ್ಲೂ ಸಾಮಾನ್ಯ ಆಹಾರ ಸಿಗುತ್ತಿದೆ, ಎಲ್ಲಿಯೂ ಈ ಹಾವು, ಜಿರಳೆ, ಕೀಟ, ಗೂಬೆ, ಕಪ್ಪೆ, ಇತ್ಯಾದಿ ಪ್ರಾಣಿ ಪಕ್ಷಿಗಳ ಆಹಾರದ ಕುರಿತಾದ ಮೆನು ಕಾಣಿಸಲೇ ಇಲ್ಲ, ನೀವ್ಯಾರು ಈ ತರಹದ್ದು ತಿನ್ನುವುದಿಲ್ಲವೇ ಎಂದು ಮುಜುಗರವಿಲ್ಲದೇ ಪ್ರಶ್ನೆ ಹಾಕಿದೆ. ಅದಕ್ಕೆ ಅವರು ನಗುತ್ತಲೇ, ನಮ್ಮ ಆಹಾರ ಪದ್ದತಿಯಲ್ಲಿ, ಸಸ್ಯಹಾರ ಮತ್ತು ಮಾಂಸಹಾರ (ಕುರಿ, ಕೋಳಿ, ದನದ ಮಾಂಸ ಮತ್ತು ಹಂದಿ ಮಾಂಸ) ಆಹಾರಗಳು ಸಾಮಾನ್ಯವಾಗಿವೆ. ತಿನ್ನಲು ಇಷ್ಟೆಲ್ಲ ಸಿಗಬೇಕಾದರೆ, ನಾವ್ಯಾಕೆ ಈ ಹಾವು, ಜಿರಳೆ, ಕೀಟ, ಗೂಬೆ, ಕಪ್ಪೆ, ಇತ್ಯಾದಿ ಪ್ರಾಣಿ ಪಕ್ಷಿಗಳ ಆಹಾರ ತಿನ್ನಬೇಕು ಎಂದು ನನಗೆ ಮರು ಪ್ರಶ್ನೆ ಹಾಕಿದರು. 

ಹಾಗಲ್ಲ, ನಾವು ಈ ಸಾಮಾಜಿಕ ಜಾಲತಾಣಗಳಲ್ಲಿ, ರೀಲ್ಸ್, ವೀಡಿಯೋಗಳನ್ನ ನೋಡ್ತಿರ್ತೀವಿ ಅದಕ್ಕೆ ಕೇಳಿದೆ.

ನೋ ನೋ, ಅದು ಹಾಗಲ್ಲ. ಚೀನಾದ ಕೆಲವು ಭಾಗಗಳಲ್ಲಿ ಇಂತಹ ಪ್ರಾಣಿ, ಕೀಟ ಮತ್ತು ಪಕ್ಷಿಗಳನ್ನು ತಿನ್ನುವ ಅಭ್ಯಾಸವಿದೆ. ಆದರೆ, ಎಲ್ಲಾ ಚೀನಿಯರೂ ಇವುಗಳನ್ನು ಪ್ರತಿದಿನ ತಿನ್ನುತ್ತಾರೆ ಎಂಬುದು ಒಂದು ದೊಡ್ಡ ತಪ್ಪು ಕಲ್ಪನೆ (Misconception). ಇದು ಚೀನಾದ ದೈನಂದಿನ ಪ್ರಧಾನ ಆಹಾರ ಪದ್ಧತಿಯಲ್ಲ.


ಚೀನಾದ ಇತಿಹಾಸದಲ್ಲಿ ಹಲವು ಬಾರಿ ಭೀಕರ ಬರಗಾಲಗಳು ಬಂದಿದ್ದವು. ಆ ಸಮಯದಲ್ಲಿ ಪ್ರಾಣ ಉಳಿಸಿಕೊಳ್ಳಲು, ಹಸಿವು ನೀಗಿಸಲು ಜನರಿಗೆ ಸಿಕ್ಕಿದ್ದನ್ನೆಲ್ಲಾ (ಕೀಟಗಳು, ಕಾಡು ಪ್ರಾಣಿಗಳು) ತಿನ್ನುವ ಅನಿವಾರ್ಯತೆ ಇತ್ತು. ಅದೇ ಅಭ್ಯಾಸ ಮುಂದೆ ಕೆಲವು ಪ್ರದೇಶಗಳಲ್ಲಿ ಸಂಸ್ಕೃತಿಯ ಒಂದು ಸಣ್ಣ ಭಾಗವಾಗಿ ಉಳಿದುಕೊಂಡಿತು. ಪ್ರತಿಯೊಂದು ಪ್ರಾಣಿ ಅಥವಾ ಕೀಟದ ಭಾಗವು ಒಂದೊಂದು ರೋಗವನ್ನು ವಾಸಿಮಾಡುತ್ತದೆ ಅಥವಾ ದೈಹಿಕ ಶಕ್ತಿ (Yin-Yang) ಹೆಚ್ಚಿಸುತ್ತದೆ ಎಂಬ ಗಾಢವಾದ ನಂಬಿಕೆ ಇವರಲ್ಲಿದೆ.


ಕೋವಿಡ್-19 (COVID-19) ಸಾಂಕ್ರಾಮಿಕದ ನಂತರ, ಚೀನಾ ಸರ್ಕಾರವು ಕಾಡು ಪ್ರಾಣಿಗಳನ್ನು ಮತ್ತು ವನ್ಯಜೀವಿಗಳನ್ನು ತಿನ್ನುವುದನ್ನು ಹಾಗೂ ಮಾರಾಟ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ. ಇಂದಿನ ಚೀನಾದ ಯುವ ಪೀಳಿಗೆಗೆ ಇಂತಹ ವಿಚಿತ್ರ ಕಾಡುಪ್ರಾಣಿಗಳ ಆಹಾರದ ಬಗ್ಗೆ ಆಸಕ್ತಿಯೂ ಇಲ್ಲ, ಒಲವೂ ಇಲ್ಲ, ಅವರು ಹಂದಿ, ಕೋಳಿ, ಮೀನು, (ದನದ ಮಾಂಸ) ಬೀಫ್ ಮತ್ತು ತರಕಾರಿಗಳಂತಹ ಸಾಮಾನ್ಯ ಆಹಾರಗಳನ್ನೇ ಇಷ್ಟಪಡುತ್ತಾರೆ.


ಹಾವಿನ ಮಾಂಸವನ್ನು ಚೀನಾದಲ್ಲಿ ತಿನ್ನುತ್ತಾರೆ. ವಿಶೇಷವಾಗಿ ದಕ್ಷಿಣ ಚೀನಾದಲ್ಲಿ (ಉದಾಹರಣೆಗೆ ಕ್ಯಾಂಟನ್ ಅಥವಾ ಗುವಾಂಗ್‌ಡಾಂಗ್ ಪ್ರಾಂತ್ಯ) ಹಾವಿನ ಸೂಪ್ (Snake Soup) ಅನ್ನು ಚಳಿಗಾಲದಲ್ಲಿ ಕುಡಿಯುವ ಅಭ್ಯಾಸವಿದೆ. ಹಾವಿನ ಮಾಂಸವು ದೇಹವನ್ನು ಬೆಚ್ಚಗಿಡುತ್ತದೆ ಮತ್ತು ರಕ್ತಸಂಚಾರವನ್ನು ಉತ್ತಮಗೊಳಿಸುತ್ತದೆ ಎಂಬುದು ಸಾಂಪ್ರದಾಯಿಕ ಚೀನೀ ಔಷಧೀಯ ನಂಬಿಕೆ


ರೇಷ್ಮೆ ಹುಳುವಿನ ಕೋಶ (Silkworm pupae), ಮಿಡತೆ (Grasshoppers), ಮತ್ತು ಚೇಳುಗಳನ್ನು ಕೆಲವು ಪ್ರಾಂತ್ಯಗಳಲ್ಲಿ (ಉದಾಹರಣೆಗೆ ಯೆನ್ನಾನ್) ಮತ್ತು ಬೀಜಿಂಗ್‌ನಂತಹ ನಗರಗಳ ರಾತ್ರಿ ಮಾರುಕಟ್ಟೆಗಳಲ್ಲಿ (Night Street Food Markets) ಕರಿದು ಮಾರುತ್ತಾರೆ. ಇವು ಪ್ರವಾಸಿಗರನ್ನು ಆಕರ್ಷಿಸಲು ಕೂಡ ಹೆಚ್ಚು ಬಳಕೆಯಾಗುತ್ತವೆ.


ಜಿರಳೆಗಳನ್ನು ಚೀನಾದಲ್ಲಿ ಬೃಹತ್ ಪ್ರಮಾಣದಲ್ಲಿ ಫಾರ್ಮ್‌ಗಳಲ್ಲಿ ಬೆಳೆಸಲಾಗುತ್ತದೆ. ಆದರೆ, ಇವುಗಳನ್ನು ಮುಖ್ಯವಾಗಿ ಸಾಂಪ್ರದಾಯಿಕ ಚೀನೀ ಔಷಧಗಳ (Traditional Medicine) ತಯಾರಿಕೆಯಲ್ಲಿ ಮತ್ತು ಸೌಂದರ್ಯವರ್ಧಕಗಳ ತಯಾರಿಕೆಯಲ್ಲಿ ಬಳಸುತ್ತಾರೆಯೇ ಹೊರತು, ಸಾಮಾನ್ಯ ಊಟದ ತಟ್ಟೆಯಲ್ಲಿ ಅಲ್ಲ. ಆದರೂ, ಕೆಲವು ಕಡೆ ಇವುಗಳನ್ನು ಪ್ರೋಟೀನ್ ಮೂಲವೆಂದು ಕರಿದು ತಿನ್ನುವವರೂ ಇದ್ದಾರೆ.


ಕೆಲವು ಶ್ರೀಮಂತ ವರ್ಗದವರು ಕಾಡು ಪ್ರಾಣಿಗಳ ಮಾಂಸವನ್ನು (ಇದನ್ನು ಚೀನಿ ಭಾಷೆಯಲ್ಲಿ 'ಯೆ ವೀ - Ye Wei' ಅಥವಾ 'Wild Flavors' ಎನ್ನುತ್ತಾರೆ) ತಮ್ಮ ಅಂತಸ್ತಿನ ಸಂಕೇತವಾಗಿ ಮತ್ತು ವಿಶೇಷ ಔಷಧೀಯ ಗುಣಗಳಿಗಾಗಿ ಕದ್ದುಮುಚ್ಚಿ ತಿನ್ನುತ್ತಿದ್ದರು. ಗೂಬೆಯಂತಹ ವನ್ಯಜೀವಿಗಳನ್ನು ತಿನ್ನುವುದು ಚೀನಾದಲ್ಲಿ ಕಾನೂನುಬಾಹಿರ.



*ವಿಶ್ವಮಟ್ಟದ ಅತ್ಯುತ್ತಮ ಸಾರಿಗೆ ವ್ಯವಸ್ಥೆ:*

ಕಲ್ಪನೆಗೂ ಮೀರಿದ ಸಾರಿಗೆ ಜಾಲ (Infrastructure Revolution): ರಸ್ತೆ ಮತ್ತು ಬೃಹತ್ ಸೇತುವೆಗಳು: ಕರಾವಳಿ ನಗರಗಳನ್ನು ಜೋಡಿಸಲು ಸಮುದ್ರದ ಮೇಲೆಯೇ ಮೈಲಿಗಟ್ಟಲೆ ಉದ್ದದ ಬೃಹತ್ ಸೇತುವೆಗಳನ್ನು ಚೀನಾ ನಿರ್ಮಿಸಿದೆ (ಉದಾಹರಣೆಗೆ: ಹಾಂಗ್ ಕಾಂಗ್-ಝುಹೈ-ಮಕಾವೋ ಸೇತುವೆ).


ವಿಶ್ವದ ಅತಿ ದೊಡ್ಡ ಸಬ್‌ವೇ/ಮೆಟ್ರೋ ಜಾಲ: ಶಾಂಘೈ ಮತ್ತು ಬೀಜಿಂಗ್ ನಗರಗಳು ಜಗತ್ತಿನಲ್ಲೇ ಅತ್ಯಂತ ಉದ್ದವಾದ ಮತ್ತು ಹರಡಿಕೊಂಡಿರುವ ಭೂಗತ ಮೆಟ್ರೋ ರೈಲು ಮಾರ್ಗಗಳನ್ನು ಹೊಂದಿವೆ. ಲಕ್ಷಾಂತರ ಜನರು ಪ್ರತಿದಿನ ಟ್ರಾಫಿಕ್ ಇಲ್ಲದೆ ಸಂಚರಿಸುತ್ತಾರೆ.


ಅತಿವೇಗದ ರೈಲು (High-Speed Rail): ಗಂಟೆಗೆ 300-350 ಕಿ.ಮೀ ವೇಗದಲ್ಲಿ ಚಲಿಸುವ ಬುಲೆಟ್ ರೈಲುಗಳು ಚೀನಾದ ಎಲ್ಲಾ ಪ್ರಮುಖ ಆರ್ಥಿಕ ನಗರಗಳನ್ನು ಕೆಲವೇ ಗಂಟೆಗಳಲ್ಲಿ ತಲುಪುವಂತೆ ಬೆಸೆದಿವೆ.


ಚೀನಾದಲ್ಲಿ ಗೂಗಲ್ ಸೇವೆಗಳನ್ನು ನಿರ್ಬಂಧಿಸಿರುವುದರಿಂದ, ಗೂಗಲ್ ಮ್ಯಾಪ್ಸ್‌ಗೆ (Google Maps) ಇರುವ ಹಲವಾರು ಪರ್ಯಾಯ ಆಪ್‌ಗಳು ಇವೆ, ಅವುಗಳಲ್ಲಿ ಪ್ರಮುಖವಾದವು, ಅಮಾಪ್ (Amap / ಗಾವೋಡೆ ಮ್ಯಾಪ್ಸ್), ಬೈದು ಮ್ಯಾಪ್ಸ್ (Baidu Maps), ಮತ್ತು ಆಪಲ್ ಮ್ಯಾಪ್ಸ್ (Apple Maps).  ಈ ಸ್ಥಳೀಯ ಆಪ್‌ಗಳು ನಿಖರವಾದ ರಸ್ತೆ ಮಾರ್ಗಗಳು ಮತ್ತು ಬಸ್/ಮೆಟ್ರೋ ಮಾಹಿತಿಯನ್ನು ನೀಡುತ್ತವೆ. ಇವುಗಳನ್ನ ಮೊಬೈಲ್ ನಲ್ಲಿ ಇನ್ಸ್ಟಾಲ್ ಮಾಡಿಕೊಂಡು, ಚೈನಾದಲ್ಲಿ ಎಲ್ಲಿಬೇಕಾದರು ತಿರುಗಾಡಬಹುದು. ನಗರ ಸಂಚಾರಕ್ಕಾಗಿ ಮೆಟ್ರೋ ಮತ್ತು ಮೋನೋ ರೈಲುಗಳಿವೆ, ಬಸ್, ಟ್ಯಾಕ್ಸಿ ಸೇರಿದಂತೆ ವಿವಿಧ ರೀತಿಯ ವಾಹನ ವ್ಯವಸ್ಥೆಗಳು ಇಲ್ಲಿವೆ. ನಿಗದಿತ ಸಮಯಕ್ಕೆ ತಲುಪುವ ಮತ್ತು ಹೊರಡುವ ಅತಿ ವೇಗದ ರೈಲು ಸಂಚಾರ ವ್ಯವಸ್ಥೆ ಇಲ್ಲಿದೆ. ಜಲಮಾರ್ಗಕ್ಕೆ ಉಪಯೋಗಿಸಲ್ಪಡುವ ಬಾರ್ಜ್, ಹಡಗು, ದೋಣಿಗಳ ವ್ಯವಸ್ಥೆಯು ಇಲ್ಲಿದೆ.  


2012 ರಲ್ಲಿ ಚೈನಾ ದೇಶಕ್ಕೆ ಮೊದಲ ಭೇಟಿ ನೀಡಿದಾಗ ಸ್ವಲ್ಪ ಮಟ್ಟದ ವಿದೇಶಿ ಕಾರುಗಳನ್ನು ನೋಡುತಿದ್ದೆ, ಇತ್ತೀಚಿನ ಭೇಟಿಯಲ್ಲಿ ರಸ್ತೆಗಳಲ್ಲಿ ಬಹುತೇಕ ಚೈನಾ ನಿರ್ಮಿತ ಕಾರುಗಳೇ ಕಾಣುತಿದ್ದವು. ಅದರಲ್ಲೂ ವಿದ್ಯುತ್ ಚಾಲಿತ ಕಾರುಗಳು ಅಧಿಕವಾಗಿದ್ದವು. ಮದ್ಯಪ್ರಾಚ್ಯದ ಇರಾನ್ ಯುದ್ದದ ಸಂಧರ್ಭದಲ್ಲಿ ನಾವು ಗ್ಯಾಸ್ ಮತ್ತು ಪೆಟ್ರೋಲ್ ಗಾಗಿ ಪರದಾಡುತಿದ್ದೆವು, ಆದರೆ ಚೈನಾ ಮಾತ್ರ ಅದರ ಗೊಡವೆಯಿಲ್ಲದೇ ಎಲ್ಲವನ್ನೂ ಸುಸೂತ್ರವಾಗಿ ನಿಭಾಯಿಸುತಿತ್ತು. ಅವರಿಗೆ ಯುದ್ದದ ಬಿಸಿ ತಾಗಿಯೇ ಇರಲಿಲ್ಲ ಎನ್ನಬಹುದು. ಇಲ್ಲಿನ ನಗರ ಪ್ರದೇಶಗಳ ರಸ್ತೆಗಳು ಸುಂದರವಾಗಿದ್ದವು, ಮತ್ತು ಶಿಸ್ತಿನ ನಿಯಮಗಳನ್ನು ಎಲ್ಲರೂ ಪಾಲಿಸುತಿದ್ದರು. ಸೈಕಲ್ ಮತ್ತು ದ್ವಿಚಕ್ರ ವಾಹನ ಸವಾರರಿಗಾಗಿ ರಸ್ತೆಯ ಒಂದು ಬದಿಯನ್ನು ಸಂಪೂರ್ಣವಾಗಿ ಮೀಸಲಿಟ್ಟಿರುವುದನ್ನ ನೋಡಬಹುದು. ಶಿಸ್ತು ಮತ್ತು ನಿಯಮ ಪಾಲನೆ ಇಲ್ಲಿ ಕಡ್ಡಾಯ. ಬಹುತೇಕ ನಗರಗಳಲ್ಲಿ, ನಾನು ಕಂಡಂತೆ ದ್ವಿಚಕ್ರ ಸವಾರಿ ಬಹಳ ಕಡಿಮೆ. ಬಹುತೇಕ ಎಲ್ಲರೂ ತಮ್ಮ ಸ್ವಂತ ಕಾರನ್ನು ಹೊಂದಿದ್ದಾರೆ. ಗ್ರಾಮೀಣ ಪ್ರದೇಶ ಅಥವ ಚಿಕ್ಕ ಚಿಕ್ಕ ನಗರಗಳಲ್ಲಿ ದ್ವಿಚಕ್ರ ಮತ್ತು ಮೂರು ಚಕ್ರದ ವಾಹನಗಳನ್ನು ಬಳಸಲಾಗುತ್ತದೆ. 



*ನಿವೃತ್ತಿಯಾದರೆ ಮುಂದೇನು:*


ಚೀನಾದಲ್ಲಿ ವಯಸ್ಸಾದವರ (60+ ವರ್ಷ) ಜನಸಂಖ್ಯೆ ಬಹಳ ವೇಗವಾಗಿ ಹೆಚ್ಚಾಗುತ್ತಿದ್ದು, 2035ರ ವೇಳೆಗೆ ಇದು 40 ಕೋಟಿ ದಾಟುವ ಅಂದಾಜಿದೆ. ಈ ಸವಾಲನ್ನು ಎದುರಿಸಲು ಚೀನಾ ಸರ್ಕಾರವು ವೃದ್ಧರಿಗಾಗಿ ಹಲವು ಪ್ರಮುಖ ಸೌಲಭ್ಯಗಳನ್ನು ಮತ್ತು ಯೋಜನೆಗಳನ್ನು ಜಾರಿಗೆ ತಂದಿದೆ. ಚೀನಾ ಸರ್ಕಾರವು ವೃದ್ಧರಿಗೆ ನೀಡುತ್ತಿರುವ ಪ್ರಮುಖ ಸೌಲಭ್ಯಗಳ ಮಾಹಿತಿ ಇಲ್ಲಿದೆ:


1. ಬಹು-ಹಂತದ ಪಿಂಚಣಿ ವ್ಯವಸ್ಥೆ (Multi-tier Pension System), ಚೀನಾದ ಪಿಂಚಣಿ ವ್ಯವಸ್ಥೆಯು ನಗರ ಮತ್ತು ಗ್ರಾಮೀಣ ಪ್ರದೇಶದ ವೃದ್ಧರಿಗೆ ಆರ್ಥಿಕ ಭದ್ರತೆ ಒದಗಿಸುತ್ತದೆ. ಮೂಲ ಪಿಂಚಣಿ (Basic Pension): ನಗರದ ಉದ್ಯೋಗಿಗಳಿಗೆ ಮತ್ತು ಗ್ರಾಮೀಣ ನಿವಾಸಿಗಳಿಗೆ ಪ್ರತ್ಯೇಕವಾದ ಮೂಲ ಪಿಂಚಣಿ ವ್ಯವಸ್ಥೆ ಇದೆ. ಜನರು ಸರ್ಕಾರಿ ಅಥವ ಖಾಸಗಿ ವಲಯದಲ್ಲಿ ಕೆಲಸ ಮಾಡುತಿದ್ದರೆ, ಅಲ್ಲಿ ಉದ್ಯೋಗದಾತರ ವಂತಿಗೆಯನ್ನ ಸಂಗ್ರಹಿಸಲಾಗುತ್ತದೆ. ಇದನ್ನು ಉದ್ಯೋಗಿಗಳ ನಿವೃತ್ತಿಯನಂತರ ನೀಡಲಾಗುತ್ತದೆ.  ಸರ್ಕಾರವು ಇತ್ತೀಚೆಗೆ ವೈಯಕ್ತಿಕ ಪಿಂಚಣಿ ಖಾತೆಗಳನ್ನು ಉತ್ತೇಜಿಸುತ್ತಿದ್ದು, ಇದಕ್ಕೆ ತೆರಿಗೆ ವಿನಾಯಿತಿಗಳನ್ನು ನೀಡುತ್ತಿದೆ.


2. ಆರೋಗ್ಯ ಮತ್ತು ವೈದ್ಯಕೀಯ ವಿಮೆ (Medical & Healthcare Insurance): ವಯಸ್ಸಾದವರ ವೈದ್ಯಕೀಯ ವೆಚ್ಚಗಳನ್ನು ಕಡಿಮೆ ಮಾಡಲು ಸರ್ಕಾರವು ವಿಮಾ ಯೋಜನೆಗಳನ್ನು ನೀಡುತ್ತದೆ. ರಾಷ್ಟ್ರೀಯ ಆರೋಗ್ಯ ವಿಮೆ (UEBMI): ಇದು ಉದ್ಯೋಗಿಗಳಿಗೆ ಕಡ್ಡಾಯವಾಗಿದ್ದು, ಆಸ್ಪತ್ರೆಯ ವೆಚ್ಚಗಳ ಬಹುಪಾಲು ಹಣವನ್ನು ಭರಿಸುತ್ತದೆ. ದೀರ್ಘಕಾಲೀನ ಆರೈಕೆ ವಿಮೆ (Long-term Care Insurance - LTCI): 2026ರ ವೇಳೆಗೆ ದೇಶಾದ್ಯಂತ ಜಾರಿಗೆ ಬರುತ್ತಿರುವ ಈ ಯೋಜನೆಯು, ದೈಹಿಕವಾಗಿ ಅಶಕ್ತರಾಗಿರುವ ಅಥವಾ ಸ್ವಂತ ಕೆಲಸ ಮಾಡಿಕೊಳ್ಳಲಾಗದ ವೃದ್ಧರಿಗೆ ಊಟ, ಸ್ನಾನ, ಮತ್ತು ನೈರ್ಮಲ್ಯದಂತಹ ದೈನಂದಿನ ಆರೈಕೆಯ ವೆಚ್ಚವನ್ನು ಭರಿಸುತ್ತದೆ.


3. ಆರೈಕೆ ಸೇವೆಗಳಿಗೆ ನೇರ ಆರ್ಥಿಕ ಸಬ್ಸಿಡಿ (Care Service Vouchers): 2026ರ ಜನವರಿಯಿಂದ ಜಾರಿಗೆ ಬಂದಿರುವ ಹೊಸ ರಾಷ್ಟ್ರೀಯ ಸಬ್ಸಿಡಿ ಕಾರ್ಯಕ್ರಮದಡಿ, ದೈಹಿಕವಾಗಿ ಅಶಕ್ತರಾಗಿರುವ ವೃದ್ಧರಿಗೆ ತಿಂಗಳಿಗೆ 800 ಯುವಾನ್ (ಸುಮಾರು $114 ಅಥವಾ ₹9,500) ಮೌಲ್ಯದ ಎಲೆಕ್ಟ್ರಾನಿಕ್ ವೋಚರ್‌ಗಳನ್ನು ನೀಡಲಾಗುತ್ತದೆ. ಈ ಹಣವನ್ನು ಮನೆಗೆಲಸದ ಸಹಾಯ, ಸ್ನಾನ ಮಾಡಿಸುವಿಕೆ, ಚಿಕಿತ್ಸಾ ನರ್ಸಿಂಗ್, ಅಥವಾ ತುರ್ತು ವೈದ್ಯಕೀಯ ಸಹಾಯ ಪಡೆಯಲು ಬಳಸಬಹುದು.


4. ಮೂರು-ಹಂತದ ಆರೈಕೆ ಜಾಲ (Three-tier Care Network): ಕುಟುಂಬದವರ ಮೇಲೆ ಬೀಳುವ ಹೊರೆಯನ್ನು ಕಡಿಮೆ ಮಾಡಲು ಸರ್ಕಾರವು ಸ್ಥಳೀಯ ಮಟ್ಟದಲ್ಲಿ ವಸತಿ ಸೌಲಭ್ಯಗಳನ್ನು ನಿರ್ಮಿಸಿದೆ, ಕೌಂಟಿ, ಟೌನ್‌ಶಿಪ್ ಮತ್ತು ಗ್ರಾಮ ಮಟ್ಟದಲ್ಲಿ: ವೃದ್ಧಾಶ್ರಮಗಳು ಮತ್ತು ಹಗಲು-ಹೊತ್ತಿನ ಆರೈಕೆ ಕೇಂದ್ರಗಳನ್ನು (Day Care Centers) ಸ್ಥಾಪಿಸಲಾಗಿದೆ. ಮನೆ-ಮನೆಗೆ ಸೇವೆ: 90% ಕ್ಕೂ ಹೆಚ್ಚು ವೃದ್ಧರು ಮನೆಯಲ್ಲೇ ಉಳಿಯಲು ಬಯಸುವುದರಿಂದ, ಸರ್ಕಾರಿ ಬೆಂಬಲಿತ ಸಂಸ್ಥೆಗಳು ಅವರ ಮನೆಗೇ ಹೋಗಿ ಆರೋಗ್ಯ ತಪಾಸಣೆ ಮತ್ತು ಸೇವೆಗಳನ್ನು ನೀಡುತ್ತವೆ.


5. ತಂತ್ರಜ್ಞಾನ ಮತ್ತು 'ಸಿಲ್ವರ್ ಎಕಾನಮಿ' (Technology & Silver Economy): ವೃದ್ಧರ ಆರೈಕೆಗಾಗಿ ಸರ್ಕಾರವು ತಂತ್ರಜ್ಞಾನವನ್ನು ದೊಡ್ಡ ಮಟ್ಟದಲ್ಲಿ ಬಳಸಿಕೊಳ್ಳುತ್ತಿದೆ:


ಆರೈಕೆ ರೋಬೋಟ್‌ಗಳು: ವೃದ್ಧರು ನಡೆಯಲು ಸಹಾಯ ಮಾಡುವ ಎಕ್ಸೋಸ್ಕೆಲಿಟನ್ ರೋಬೋಟ್‌ಗಳು ಮತ್ತು ಅವರೊಡನೆ ಮಾತನಾಡುವ ಕೃತಕ ಬುದ್ಧಿಮತ್ತೆ (AI) ರೋಬೋಟ್‌ಗಳಿಗೆ ಸರ್ಕಾರ ಸಬ್ಸಿಡಿ ನೀಡುತ್ತಿದೆ.


ರಿಮೋಟ್ ಮಾನಿಟರಿಂಗ್: ಸ್ಮಾರ್ಟ್ ಸಾಧನಗಳ ಮೂಲಕ ವೃದ್ಧರ ಹೃದಯದ ಬಡಿತ ಮತ್ತು ರಕ್ತದೊತ್ತಡವನ್ನು ದೂರದಿಂದಲೇ ವೈದ್ಯರು ಗಮನಿಸುವ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ.


ಚೀನಾ ಸರ್ಕಾರವು ಕೇವಲ ಆರ್ಥಿಕ ಸಹಾಯವನ್ನಷ್ಟೇ ಅಲ್ಲದೆ, ವೃದ್ಧರು ತಮ್ಮ ಕೊನೆಯ ದಿನಗಳನ್ನು ನೆಮ್ಮದಿ ಮತ್ತು ಘನತೆಯಿಂದ ಕಳೆಯಲು ಬೇಕಾದ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವತ್ತ ಗಮನಹರಿಸಿದೆ.


*ಚೈನಾದ ಕೃಷಿ ಪದ್ದತಿ:*


ಚೀನಾದಲ್ಲಿ 140 ಕೋಟಿಗೂ ಅಧಿಕ ಜನಸಂಖ್ಯೆಗೆ ಆಹಾರ ಭದ್ರತೆ (Food Security) ಒದಗಿಸುವುದು ಅಲ್ಲಿನ ಸರ್ಕಾರದ ಪ್ರಮುಖ ಆದ್ಯತೆಯಾಗಿದೆದ್ದು, ಇದಕ್ಕಾಗಿಯೇ ಚೀನಾ ಸರ್ಕಾರವು ಪ್ರತಿ ವರ್ಷ ಬಿಡುಗಡೆ ಮಾಡುವ "ನಂ. 1 ಸೆಂಟ್ರಲ್ ಡಾಕ್ಯುಮೆಂಟ್" (No. 1 Central Document) ನೀತಿ ಚೌಕಟ್ಟಿನಲ್ಲಿ ರೈತರಿಗೆ ಮತ್ತು ಗ್ರಾಮೀಣಾಭಿವೃದ್ಧಿಗೆ ಗರಿಷ್ಠ ಪ್ರಾಮುಖ್ಯತೆ ನೀಡುತ್ತದೆ. ಚೀನಾದ ಪ್ರಸ್ತುತ ಕೃಷಿ ನೀತಿಯ ಮುಖ್ಯ ಉದ್ದೇಶ ರೈತರ ಶ್ರಮವನ್ನು ಕಡಿಮೆ ಮಾಡುವುದು, ತಂತ್ರಜ್ಞಾನದ ಸಹಾಯದಿಂದ ಹೆಕ್ಟೇರ್‌ಗೆ ಬರುವ ಇಳುವರಿಯನ್ನು ಹೆಚ್ಚಿಸುವುದು ಮತ್ತು ಹಳ್ಳಿಗಳಲ್ಲೂ ನಗರಗಳಂತೆಯೇ ಆಧುನಿಕ ಜೀವನ ಸೌಕರ್ಯಗಳನ್ನು ಕಲ್ಪಿಸುವುದಾಗಿದೆ. ಉನ್ನತ ದರ್ಜೆಯ ನೀರಾವರಿ ವ್ಯವಸ್ಥೆ ಮತ್ತು ಕೃಷಿ ರಸ್ತೆಗಳ ನಿರ್ಮಾಣವನ್ನು ಇಲ್ಲಿ ಕಾಣಬಹುದು, ನಾನು ಪ್ರತಿಬಾರಿ ಹೇಳಿದಂತೆ, ಚೈನಾ ದೇಶ ಅಭಿವೃದ್ದಿ ವಿಷಯದಲ್ಲಿ, ಇಪ್ಪತ್ತು ಮೂವತ್ತು ವರ್ಷಗಳ ಮುಂದೆ ಇದೆ, ಹಾಗೂ ಈ ವಿಷಯದಲ್ಲಿ ಯಾವುದೇ ರಾಜಿಗೂ ಸಿದ್ದವಿಲ್ಲ. ಹಿಂದೆ ಬಡತನದಲ್ಲಿದ್ದ ರೈತ ಕುಟುಂಬಗಳು ಮತ್ತೆ ಬಡತನಕ್ಕೆ ಜರುಗದಂತೆ ತಡೆಯಲು ಉಚಿತ ಶಿಕ್ಷಣ, ಆರೋಗ್ಯ ಮತ್ತು ಸ್ಥಳೀಯವಾಗಿ ಸಣ್ಣ ಕೈಗಾರಿಕೆಗಳ ಮೂಲಕ ಉದ್ಯೋಗ ತರಬೇತಿ ನೀಡಲಾಗುತ್ತಿದೆ.


ಚೀನಾದಲ್ಲಿ ರೈತರಿಗೆ ಸರ್ಕಾರದಿಂದ ಸಿಗುತ್ತಿರುವ ಪ್ರಮುಖ ಸೌಲಭ್ಯಗಳು ಮತ್ತು ಸಬ್ಸಿಡಿಗಳ ವಿವರ ಇಲ್ಲಿದೆ:


1. ನೇರ ನಗದು ಮತ್ತು ಮಣ್ಣಿನ ರಕ್ಷಣೆ ಸಬ್ಸಿಡಿ (Direct & Area-Based Subsidies): ಚೀನಾ ಸರ್ಕಾರವು ಸಾಂಪ್ರದಾಯಿಕ ಉತ್ಪಾದನಾ ಆಧಾರಿತ ಸಬ್ಸಿಡಿಗಳಿಗಿಂತ, ಪ್ರಸ್ತುತ ಭೂಮಿಯ ವಿಸ್ತೀರ್ಣ ಮತ್ತು ಮಣ್ಣಿನ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ:


ಮಣ್ಣಿನ ಫಲವತ್ತತೆ ರಕ್ಷಣೆ ಸಬ್ಸಿಡಿ: ರೈತರು ತಮ್ಮ ಜಮೀನನ್ನು ಕೃಷಿಗಾಗಿಯೇ ಬಳಸುತ್ತಾ, ಮಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ನೇರವಾಗಿ ಅವರ ಖಾತೆಗೆ ಹಣ ಜಮೆ ಮಾಡಲಾಗುತ್ತದೆ. ಇದು ಬೆಳೆದ ಬೆಳೆಗಿಂತ ಹೆಚ್ಚಾಗಿ, ಅವರು ಕೃಷಿ ಮಾಡುವ ಭೂಮಿಯ ವಿಸ್ತೀರ್ಣದ ಆಧಾರದ ಮೇಲೆ ಸಿಗುತ್ತದೆ.  ಪ್ರಮುಖ ಬೆಳೆಗಳಿಗೆ ಪ್ರೋತ್ಸಾಹ: ದೇಶದ ಆಹಾರ ಭದ್ರತೆಗೆ ಅತ್ಯಗತ್ಯವಾಗಿರುವ ಭತ್ತ (Rice), ಮೆಕ್ಕೆಜೋಳ (Corn) ಮತ್ತು ಸೋಯಾಬೀನ್ (Soybean) ಬೆಳೆಯುವ ರೈತರಿಗೆ ವಿಶೇಷ ಹೆಚ್ಚುವರಿ ಸಬ್ಸಿಡಿಗಳನ್ನು ನೀಡಲಾಗುತ್ತದೆ.


2. ಆಧುನಿಕ ಕೃಷಿ ಯಂತ್ರೋಪಕರಣಗಳ ಸಬ್ಸಿಡಿ (Machinery Subsidies): ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಲು ಮತ್ತು ರೈತರ ದೈಹಿಕ ಶ್ರಮವನ್ನು ಕಡಿಮೆ ಮಾಡಲು ಸರ್ಕಾರವು ಯಂತ್ರಗಳ ಖರೀದಿಗೆ ಭಾರಿ ಆರ್ಥಿಕ ನೆರವು ನೀಡುತ್ತದೆ. ಟ್ರ್ಯಾಕ್ಟರ್‌ಗಳು, ಬಿತ್ತನೆ ಯಂತ್ರಗಳು (Seeders) ಮತ್ತು ಆಧುನಿಕ ಕೊಯ್ಲು ಯಂತ್ರಗಳ (Harvesters) ಖರೀದಿಗೆ ಸಬ್ಸಿಡಿ ಸಿಗುತ್ತದೆ. 


ಇತ್ತೀಚಿನ ವರ್ಷಗಳಲ್ಲಿ, ಕೀಟನಾಶಕ ಸಿಂಪಡಿಸಲು ಮತ್ತು ಬೆಳೆಗಳ ನಿಗಾ ಇಡಲು ಬಳಸುವ ಡ್ರೋನ್‌ಗಳು, ಕೃಷಿ ರೋಬೋಟ್‌ಗಳು ಮತ್ತು ಕೃತಕ ಬುದ್ಧಿಮತ್ತೆ (AI) ಆಧಾರಿತ ಸ್ಮಾರ್ಟ್ ತಂತ್ರಜ್ಞಾನಗಳ ಖರೀದಿಗೆ ಸರ್ಕಾರ ವಿಶೇಷ ಪ್ರೋತ್ಸಾಹಧನ ನೀಡುತ್ತಿದೆ.


3. ಸಬ್ಸಿಡಿ ಹೊಂದಿದ ಕೃಷಿ ವಿಮಾ ವ್ಯವಸ್ಥೆ (Subsidized Agricultural Insurance): ಚೀನಾ ವಿಶ್ವದಲ್ಲೇ ಅತ್ಯಂತ ದೊಡ್ಡ ಕೃಷಿ ವಿಮಾ ಮಾರುಕಟ್ಟೆಗಳಲ್ಲಿ ಒಂದನ್ನು ಹೊಂದಿದೆ. ನೆರೆಹಾವಳಿ, ಬರಗಾಲ, ಚಂಡಮಾರುತ ಅಥವಾ ಕೀಟಗಳ ಬಾಧೆಯಿಂದ ಬೆಳೆ ನಾಶವಾದರೆ ರೈತರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕದಂತೆ ಸರ್ಕಾರವೇ ವಿಮಾ ಪ್ರೀಮಿಯಂನ ಬಹುಪಾಲು ವೆಚ್ಚವನ್ನು ಭರಿಸುತ್ತದೆ. ಇದು ಹವಾಮಾನ ಬದಲಾವಣೆಯ ಈ ದಿನಗಳಲ್ಲಿ ರೈತರಿಗೆ ದೊಡ್ಡ ಸುರಕ್ಷತಾ ಕವಚವಾಗಿದೆ.


4. ಕನಿಷ್ಠ ಬೆಂಬಲ ಬೆಲೆ ಮತ್ತು ಮಾರುಕಟ್ಟೆ ರಕ್ಷಣೆ (Price Support): ರೈತರು ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ತೀವ್ರ ಬೆಲೆ ಕುಸಿತ ಉಂಟಾದಾಗ ನಷ್ಟವಾಗದಂತೆ ತಡೆಯಲು ಸರ್ಕಾರ ಈ ಕ್ರಮಗಳನ್ನು ಕೈಗೊಳ್ಳುತ್ತದೆ. ಗೋಧಿ (Wheat) ಮತ್ತು ಭತ್ತಕ್ಕೆ ಸ್ಥಿರವಾದ ಕನಿಷ್ಠ ಖರೀದಿ ಬೆಲೆ (Minimum Purchase Prices) ಯನ್ನು ಸರ್ಕಾರವೇ ನಿಗದಿಪಡಿಸುತ್ತದೆ. ವಿದೇಶಿ ಕೃಷಿ ಉತ್ಪನ್ನಗಳ ಆಮದಿನ ವೇಗ ಮತ್ತು ಪ್ರಮಾಣವನ್ನು ನಿಯಂತ್ರಿಸುವ ಮೂಲಕ ದೇಶೀಯ ರೈತರ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುವಂತೆ ನೋಡಿಕೊಳ್ಳಲಾಗುತ್ತದೆ.


5. ಗ್ರಾಮೀಣ ಪುನಶ್ಚೇತನ ಮತ್ತು ಆಧುನಿಕ ಜೀವನ ಸೌಲಭ್ಯಗಳು (Rural Revitalization): ರೈತರ ಆದಾಯ ಹೆಚ್ಚಿಸುವುದರ ಜೊತೆಗೆ ಅವರ ಜೀವನಮಟ್ಟ ಸುಧಾರಿಸಲು ಸರ್ಕಾರ "ಗ್ರಾಮೀಣ ಪುನಶ್ಚೇತನ" ಯೋಜನೆಯಡಿ ಹಳ್ಳಿಗಳಿಗೆ ನಗರದ ಮಾದರಿಯ ಸೌಕರ್ಯಗಳನ್ನು ಒದಗಿಸುತ್ತಿದೆ:


ಬರಹ: ಪಿ.ಎಸ್.ರಂಗನಾಥ

ಮಸ್ಕತ್, ಒಮಾನ್ ರಾಷ್ಟ್ರ 

Click below headings