ಕೆಲವೊಂದು ಊರಿನ ಹೆಸರುಗಳು ಬಹಳ ವಿಚಿತ್ರವಾಗಿರುತ್ತವೆ, ಅದರ ಹಿನ್ನೆಲೆ ಗೊತ್ತಿರದ ನಾವು ಇದೇನಿದು ಎಂತಹ ವಿಚಿತ್ರ ಹೆಸರನ್ನಿಟ್ಟದ್ದಾರಲ್ಲ ಅಂತ ನಮಗೆ ಅನಿಸುವುದು ಸಹಜ. ಆದರೆ ಅದರ ಹಿನ್ನೆಲೆ ಅರಿತಾದ ಮೇಲೆ, ಈ ಹೆಸರಿಗೂ ಒಂದು ಇತಿಹಾಸ ಇದೆಯಾ ಅಂತ ಅನಿಸುತ್ತದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನಲ್ಲಿರುವ ದಾಬಸ್ ಪೇಟೆ. ಇಂದು ಕೇವಲ ಒಂದು ಪ್ರಮುಖ ಸಾರಿಗೆ ಜಂಕ್ಷನ್ ಆಗಿ ಉಳಿದಿಲ್ಲ. ಇದು ಕರ್ನಾಟಕದ ವೇಗವಾಗಿ ಬೆಳೆಯುತ್ತಿರುವ ಕೈಗಾರಿಕಾ ಹಬ್ ಮತ್ತು ಐತಿಹಾಸಿಕ ಪರಂಪರೆಯ ಸಂಗಮ ಕ್ಷೇತ್ರವಾಗಿರುವುದು ವಿಶೇಷ.
ಈ ಪ್ರದೇಶದ ಮೂಲ ಹೆಸರು "ಸೋಂಪುರ". ಇಂದಿಗೂ ಇಲ್ಲಿನ ಕೈಗಾರಿಕಾ ಪ್ರದೇಶವನ್ನು 'ಸೋಂಪುರ ಕೈಗಾರಿಕಾ ಪ್ರದೇಶ' ಎಂದೇ ಕರೆಯಲಾಗುತ್ತದೆ. ಆದರೆ, ಈ ಊರಿಗೆ 'ದಾಬಸ್ ಪೇಟೆ' ಎಂಬ ಹೆಸರು ಬರಲು ಕಾರಣ ಬ್ರಿಟಿಷ್ ಅಧಿಕಾರಿ ಮೇಜರ್ ಜನರಲ್ ರಿಚರ್ಡ್ ಸ್ಟೀವರ್ಟ್ ಡಾಬ್ಸ್ (Richard Stewart Dobbs). ಹಾಗೆ ನೋಡಿದರೆ ಇಂಗ್ಲೀಷ್ ಭಾಷೆಯಲ್ಲಿ ಡಾಬ್ಸ್‌ಪೇಟೆ ,(Dobbspet) ಎಂದಾಗಿತ್ತು, ಜನರ ಆಡುಮಾತಿನಲ್ಲಿ ಇಂದು ದಾಬಸ್ ಪೇಟೆ ಯಾಗಿದೆ
ರಿಚರ್ಡ್ ಸ್ಟೀವರ್ಟ್ ಡಾಬ್ಸ್ (10 ಮೇ 1808 – 26 ಸೆಪ್ಟೆಂಬರ್ 1888) ಅವರು ಬ್ರಿಟಿಷ್ ಭಾರತದ ಆಡಳಿತದಲ್ಲಿ ಸೇವೆ ಸಲ್ಲಿಸಿದ ಪ್ರಮುಖ ಬ್ರಿಟಿಷ್ ನಾಗರಿಕ ಅಧಿಕಾರಿಯಾಗಿದ್ದರು. 1834ರಿಂದ 1861ರವರೆಗೆ ಮೈಸೂರು ಸಂಸ್ಥಾನದ ಚಿತ್ರದುರ್ಗ ವಿಭಾಗದ ಪ್ರಥಮ ಸೂಪರಿಂಟೆಂಡೆಂಟ್ ಆಗಿ ಕಾರ್ಯನಿರ್ವಹಿಸಿದರು. ಆ ಕಾಲದಲ್ಲಿ ತುಮಕೂರು ಈ ವಿಭಾಗದ ಪ್ರಧಾನ ಕಚೇರಿಯಾಗಿತ್ತು. ನಂತರ ಅವರು ಮದ್ರಾಸ್ ಸ್ಥಳೀಯ ಪದಾತಿ ದಳದ 9ನೇ ರೆಜಿಮೆಂಟ್‌ನಲ್ಲಿ ಮೇಜರ್ ಜನರಲ್ ಹುದ್ದೆಯನ್ನು ಅಲಂಕರಿಸಿದರು.
ಡಾಬ್ಸ್ ಅವರ ಸೇವೆ: 1834 ರಿಂದ ಸುಮಾರು 20 ವರ್ಷಗಳ ಕಾಲ ತುಮಕೂರು ಜಿಲ್ಲೆಯ ಕಲೆಕ್ಟರ್ ಆಗಿ ಸೇವೆ ಸಲ್ಲಿಸಿದ ಡಾಬ್ಸ್, ತಮ್ಮ ಆಡಳಿತಾವಧಿಯಲ್ಲಿ ಈ ಭಾಗದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದರು.
ರಿಚರ್ಡ್ ಡಾಬ್ಸ್ ಅವರು ಕೇವಲ ಅಧಿಕಾರಿಯಾಗಿರದೆ, ಸ್ಥಳೀಯರ ಕಷ್ಟಗಳಿಗೆ ಸ್ಪಂದಿಸುವ ಜನಪರ ನಾಯಕರಾಗಿದ್ದರಂತೆ ಎಂದು ಇತಿಹಾಸದಲ್ಲಿ ದಾಖಲಾಗಿದೆ. ಥಾಮಸ್ ಮನ್ರೋ ಜಾರಿಗೆ ತಂದ 'ರೈತರಿಗೆ ಅನುಕೂಲವಾಗುವ' ವ್ಯವಸ್ಥೆಯನ್ನು ಡಾಬ್ಸ್ ಇಲ್ಲಿ ಸಮರ್ಥವಾಗಿ ಅನುಷ್ಠಾನಗೊಳಿಸಿದರು. ಇದರಿಂದ ಮಧ್ಯವರ್ತಿಗಳ ಕಾಟ ತಪ್ಪಿ, ರೈತರು ನೇರವಾಗಿ ಸರ್ಕಾರಕ್ಕೆ ಕಂದಾಯ ಪಾವತಿಸುವಂತಾಯಿತು.
ಡಾಬ್ಸ್ ಅವರ ಆಡಳಿತಾವಧಿಯಲ್ಲಿ ಚಿತ್ರದುರ್ಗ–ತುಮಕೂರು ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೃತ್ತಿಪರ ದರೋಡೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಯಿತು. ದರೋಡೆಕೋರ ಗುಂಪುಗಳನ್ನು ಬಂಧಿಸುವಲ್ಲಿ ಅವರು ಯಶಸ್ಸು ಸಾಧಿಸಿದ್ದಾಗಿ ದಾಖಲಿಸಲಾಗಿದೆ.
ಅವರು ಶಿಕಾರಿಯಲ್ಲಿಯೂ ಅಪಾರ ಆಸಕ್ತಿ ಹೊಂದಿದ್ದರು. ದೇವರಾಯನದುರ್ಗ ಬೆಟ್ಟ ಹಾಗೂ ಅದರ ಸುತ್ತಲಿನ ಕಾಡು ಪ್ರದೇಶಗಳಲ್ಲಿ ಅವರು ಆಗಾಗ ಬೇಟೆಯಾಡುತ್ತಿದ್ದರು. ತಮ್ಮ ಬರಹಗಳಲ್ಲಿ ದೇವರಾಯನದುರ್ಗ ಪ್ರದೇಶದಲ್ಲಿ ಹುಲಿಗಳು, ಜಿಂಕೆಗಳು (ಅಂದು ಬ್ರಿಟಿಷರು “ಎಲ್ಕ್” ಎಂದು ಕರೆಯುತ್ತಿದ್ದರು) ಮತ್ತು ಕೃಷ್ಣಮೃಗಗಳು ಸಮೃದ್ಧವಾಗಿದ್ದವು ಎಂದು ಉಲ್ಲೇಖಿಸಿದ್ದಾರೆ. ತುಮಕೂರು ಮಾರುಕಟ್ಟೆಯಲ್ಲಿ ನಾಲ್ಕು ಆಣೆಗಳಿಗೆ ಸಂಪೂರ್ಣ ಕೃಷ್ಣಮೃಗವನ್ನು ಖರೀದಿಸಬಹುದಾಗಿತ್ತು ಎಂಬುದನ್ನೂ ಅವರು ದಾಖಲಿಸಿದ್ದಾರೆ. ದೇವರಾಯನದುರ್ಗದ ಸುತ್ತಮುತ್ತ ಕೃಷ್ಣಮೃಗಗಳು ಅಷ್ಟೊಂದು ಹೆಚ್ಚಾಗಿದ್ದವು ಎಂದರೆ, ಒಬ್ಬ ಬ್ರಿಟಿಷ್ ಅಧಿಕಾರಿ ಕೆಲವೇ ದಿನಗಳಲ್ಲಿ ಸುಮಾರು 200 ಕೃಷ್ಣಮೃಗಗಳನ್ನು ಬೇಟೆಯಾಡಿದ್ದಾನೆ ಎಂದು ಅವರು ಬರೆದಿದ್ದಾರೆ.
ಆ ಕಾಲದಲ್ಲಿ ಆ ಪ್ರದೇಶದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗಿದ್ದ ಕಾರಣ, ಅವುಗಳನ್ನು ಬಲೆಗೆ ಬೀಳಿಸುವ ಹೊಸ ವಿಧಾನವನ್ನೂ ಡಾಬ್ಸ್ ರೂಪಿಸಿದ್ದರು ಎಂದು ಹೇಳಲಾಗಿದೆ. ನಿರಂತರ ಬೇಟೆಯ ಪರಿಣಾಮವಾಗಿ ಹುಲಿಗಳು ಮತ್ತು ಚಿರತೆಗಳ ಸಂಖ್ಯೆ ಕಡಿಮೆಯಾಗಿದ್ದು, ಅದರ ಪರಿಣಾಮವಾಗಿ ಕಾಡುಹಂದಿಗಳ ಸಂಖ್ಯೆ ಹೆಚ್ಚಾಗಿ ಕಬ್ಬಿನ ತೋಟಗಳಿಗೆ ಹಾನಿಯುಂಟಾಯಿತು ಎಂಬುದನ್ನೂ ಅವರು ವಿವರಿಸಿದ್ದಾರೆ. ತುಮಕೂರು ನಗರದಿಂದ ಸುಮಾರು ನಾಲ್ಕು ಮೈಲು ದೂರದಲ್ಲಿ ಕೊಲ್ಲಲ್ಪಟ್ಟ ಒಂದು ಹುಲಿಯ ಚರ್ಮವನ್ನು ಸುಲಿದು, ಸ್ಕಾಟ್ಲೆಂಡ್‌ನಲ್ಲಿದ್ದ ಕುಟುಂಬ ಸ್ನೇಹಿತರಿಗೆ ಉಡುಗೊರೆಯಾಗಿ ಕಳುಹಿಸಲಾಗಿತ್ತು.
ದೇವರಾಯನದುರ್ಗ ಬೆಟ್ಟದ ಮೇಲ್ಭಾಗದಲ್ಲಿ ಡಾಬ್ಸ್ ನಿರ್ಮಿಸಿದ್ದ ಬಂಗಲೆಯನ್ನು ನಂತರ ಪೊಲೀಸ್ ವೈರ್‌ಲೆಸ್ ಸಂವಹನ ಕೇಂದ್ರವಾಗಿ ಬಳಸಲಾಯಿತು.
ಡಾಬ್ಸ್ ಅವರು ನಿವೃತ್ತಿಯ ನಂತರ ತಮ್ಮ ತಾಯ್ನಾಡಾದ ಐರ್ಲೆಂಡ್‌ಗೆ ಮರಳಿದರೂ, ಅವರ ನೆನಪಿಗಾಗಿ ಸ್ಥಳೀಯರು ಒಂದು ದೊಡ್ಡ ಕಲ್ಲನ್ನು ಸ್ಥಾಪಿಸಿ ಅದನ್ನು ಗೌರವದಿಂದ ಕಾಣುತ್ತಿದ್ದರು. ಇದನ್ನು ಸ್ಥಳೀಯರು "ಡಾಬ್ಸ್ ಗುಂಡು" ಅಥವಾ "ಡಾಬ್ಸ್ ಸಮಾಧಿ" ಎಂದು ಕರೆಯುತ್ತಿದ್ದರು (ವಾಸ್ತವವಾಗಿ ಅವರ ನಿಧನವಾದದ್ದು ಐರ್ಲೆಂಡ್‌ನಲ್ಲಿ). 1990ರ ದಶಕದಲ್ಲಿ ರಾಷ್ಟ್ರೀಯ ಹೆದ್ದಾರಿ 4ರ ವಿಸ್ತರಣೆಯ ಸಂದರ್ಭದಲ್ಲಿ ಈ ಸ್ಮಾರಕವು ತೆರವುಗೊಂಡಿತು.
ರಿಚರ್ಡ್ ಸ್ಟೀವರ್ಟ್ ಡಾಬ್ಸ್ ಅವರು 1834ರ ಏಪ್ರಿಲ್ 18ರಂದು ಜೇನ್ ಮಾರ್ಗರೇಟ್ ಕ್ಯಾಥ್‌ಕಾರ್ಟ್ (15 ಏಪ್ರಿಲ್ 1811 – 24 ಜನವರಿ 1892) ಅವರನ್ನು ವಿವಾಹವಾದರು. ಈ ದಂಪತಿಗೆ ಒಟ್ಟು ಹನ್ನೊಂದು ಮಕ್ಕಳು ಜನಿಸಿದರು — ಎಂಟು ಗಂಡು ಮಕ್ಕಳು ಹಾಗೂ ಮೂವರು ಹೆಣ್ಣು ಮಕ್ಕಳು.
ಡಾಬ್ಸ್ ಅವರ ಮೃತದೇಹವನ್ನು ಐರ್ಲೆಂಡ್‌ನ ಕೌಂಟಿ ವಿಕ್ಲೋದಲ್ಲಿರುವ ಗ್ರೇಸ್ಟೋನ್ಸ್‌ನ ರೆಡ್‌ಫೋರ್ಡ್ ಸಮಾಧಿಸ್ಥಳದಲ್ಲಿ ಸಮಾಧಿ ಮಾಡಲಾಗಿದೆ.
ದಕ್ಷಿಣ ಕಾಶಿ: ಶಿವಗಂಗೆಯನ್ನು 'ದಕ್ಷಿಣ ಕಾಶಿ' ಎಂದು ಕರೆಯಲಾಗುತ್ತದೆ. ದಾಬಸ್ ಪೇಟೆಯಿಂದ ಕೇವಲ 6 ಕಿ.ಮೀ ದೂರದಲ್ಲಿರುವ ಈ ಕ್ಷೇತ್ರವು ಧಾರ್ಮಿಕ ಮತ್ತು ಚಾರಣದ ದೃಷ್ಟಿಯಿಂದ ಅತ್ಯಂತ ಪ್ರಸಿದ್ಧ.
ಇಲ್ಲಿನ ಗವಿ ಗಂಗಾಧರೇಶ್ವರ ದೇವಾಲಯ ಮತ್ತು 'ತುಪ್ಪವನ್ನು ಹಚ್ಚಿದರೆ ಬೆಣ್ಣೆಯಾಗುವ' ಪವಾಡ ಇಂದಿಗೂ ಪ್ರವಾಸಿಗರನ್ನು ಆಕರ್ಷಿಸುತ್ತದೆ.
ಇಂದು ದಾಬಸ್ ಪೇಟೆ ತನ್ನ ಹಳೆಯ ಕೃಷಿ ಪ್ರಧಾನ ಮುಖವನ್ನು ಕಳಚಿ, ಬೃಹತ್ ಕೈಗಾರಿಕಾ ವಲಯವಾಗಿ ರೂಪಾಂತರಗೊಂಡಿದೆ.
ಕೈಗಾರಿಕಾ ಪ್ರದೇಶ (KIADB): ಇಲ್ಲಿನ ಸೋಂಪುರ ಕೈಗಾರಿಕಾ ಪ್ರದೇಶದಲ್ಲಿ ನೂರಾರು ಸಣ್ಣ ಮತ್ತು ಬೃಹತ್ ಕೈಗಾರಿಕೆಗಳಿವೆ. ವಿಶೇಷವಾಗಿ ಇಂಜಿನಿಯರಿಂಗ್, ಕೆಮಿಕಲ್ಸ್ ಮತ್ತು ಟೆಕ್ಸ್ಟೈಲ್ ಘಟಕಗಳು ಇಲ್ಲಿ ಹೆಚ್ಚಾಗಿವೆ.
ಈ ಪಟ್ಟಣವು NH-48 (ಬೆಂಗಳೂರು-ಪುಣೆ) ಮತ್ತು NH-648 (ದೊಡ್ಡಬಳ್ಳಾಪುರ-ಹೊಸೂರು) ರಸ್ತೆಗಳನ್ನು ಸಂಪರ್ಕಿಸುವ ಮಹತ್ವದ ಕೊಂಡಿಯಾಗಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹತ್ತಿರವಿರುವುದು ಈ ಪ್ರದೇಶದ ಆರ್ಥಿಕತೆಗೆ ದೊಡ್ಡ ಬಲ ನೀಡಿದೆ.
ದಾಬಸ್ ಪೇಟೆ ಎನ್ನುವುದು ಕೇವಲ ಹೆದ್ದಾರಿಯ ನಡುವಿನ ಒಂದು ಜಂಕ್ಷನ್ ಅಲ್ಲ. ಇದು ಬ್ರಿಟಿಷ್ ಕಾಲದ ಆಡಳಿತ ಸುಧಾರಣೆ, ಶಿವಗಂಗೆಯ ಆಧ್ಯಾತ್ಮಿಕ ಕಂಪನ್ನು ಸಾರುವ ನೆಲೆ ಮತ್ತು ಕರ್ನಾಟಕದ ಕೈಗಾರಿಕಾ ಪ್ರಗತಿಗೆ ವೇಗ ನೀಡುತ್ತಿರುವ ಪ್ರಮುಖ ತಾಣ. ಇತಿಹಾಸದ ಸವಿನೆನಪು ಮತ್ತು ಭವಿಷ್ಯದ ಬೆಳವಣಿಗೆಗಳ ನಡುವೆ ದಾಬಸ್ ಪೇಟೆ ಸಮತೋಲನ ಕಾಯ್ದುಕೊಂಡಿದೆ.
ಬರಹ: ಪಿ.ಎಸ್.ರಂಗನಾಥ
ಮಸ್ಕತ್, ಒಮಾನ್ ರಾಷ್ಟ್ರ



ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ