ಅಭಿಮಾನಿಯೂ ಅಲ್ಲ, ಒಬ್ಬ ಸಾಮಾನ್ಯ ಪ್ರಜೆಯಾಗಿ ನನ್ನ ಮನಸ್ಸಿನ ಭಾವನೆಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.
ನಾನು ಕಂಡಂತೆ ಸಿದ್ದರಾಮಯ್ಯ ತುಂಬಾ ಚಾಣಾಕ್ಷ ವ್ಯಕ್ತಿ. ಯಾವುದನ್ನು ಹೇಗೆ ಪಡೆಯಬೇಕು, ಯಾವ ರೀತಿ ಪಡೆಯಬೇಕು ಎಂದು ತುಂಬಾ ಬುದ್ಧಿವಂತಿಕೆಯಿಂದ ನಿಭಾಯಿಸತಕ್ಕಂತಹ ವ್ಯಕ್ತಿ.
ಕೆಲವೊಮ್ಮೆ ಉಡಾಫೆ ಇಂದ ಮಾತಾನಾಡುವುದು, ಹುಂಬನಂತೆ ವರ್ತಿಸುವುದು, ದರ್ಪ, ಗತ್ತು ಗೈರತ್ತಿನಿಂದ ಮಾತನಾಡುವುದು ಇವೆಲ್ಲವೂ ಅವರ ವ್ಯಕ್ತಿತ್ವದಲ್ಲಿ ಕಾಮನ್. ಅದೇ ಗತ್ತು ಗೈರತ್ತು ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರ ಬಳಿ ಇರುವುದಿಲ್ಲ, ವಿಧೇಯ ವಿದ್ಯಾರ್ಥಿಯಂತೆ ವಿನಯತೆಯಿಂದ ನಡೆದುಕೊಳ್ತಾರೆ.
Do you know Kannada Mr. Governor ಎಂದು ಗುಜರಾತಿನಿಂದ ಬಂದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್ ಅವರನ್ನು ಕೇಳುತ್ತಾರೆ ಎಂದರೆ, ಅದರ ಉದ್ದೇಶ ಸ್ಪಷ್ಟ. ಯಾವಾಗ ಏನು, ಎಲ್ಲಿ ಹೇಗೆ ಮಾತನಾಡಬೇಕು ಎಂದು ತಿಳಿದಿರುವ ಅತ್ಯಂತ ಚಾಣಾಕ್ಷ ರಾಜಕಾರಣಿ.
11/07/2021 ರಂದು ವಿಶ್ವವಾಣಿ ಕ್ಲಬ್ ಹೌಸ್ ಸಂವಾದದಲ್ಲಿ ಅಂದು ಸಿದ್ದರಾಮಯ್ಯರವರ ಜೊತೆ ಸಂವಾದ ಇತ್ತು. ಆ ಸಂವಾದದಲ್ಲಿ, ಅವರು ಬೆಳೆದು ಬಂದ ಹಾದಿ ಬಗ್ಗೆ ಸವಿಸ್ತಾರವಾಗಿ ಹೇಳುತ್ತಾ ಬಂದರು. ಸುದೀರ್ಘವಾಗಿ ಎರಡುವರೆ ಗಂಟೆಗಳ ಕಾಲ ತಮ್ಮ ಅನುಭವವನ್ನು ಹಂಚಿಕೊಂಡರು. ನಂತರ ಪ್ರಶ್ನೋತ್ತರ ಕಾರ್ಯಕ್ರಮ ಇತ್ತು, ಶೋತೃಗಳು ಪ್ರಶ್ನೆ ಕೇಳುವ ಅವಕಾಶ ಇತ್ತು.
ನಾನು ಸಹ ಒಂದು ಪ್ರಶ್ನೆಯನ್ನು ಕೇಳಿದೆ. ಶ್ರೀ ದೇವೇಗೌಡ ಅವರು ಪ್ರಧಾನ ಮಂತ್ರಿಯಾದ ನಂತರ ತಾವು ಮುಖ್ಯಮಂತ್ರಿಯಾಗಲು ಬಯಸಿದ್ದಿರಿ. ಆದರೆ ಅದೇ ಸಮಯದಲ್ಲಿ ಹಲವಾರು ಸೀನಿಯರ್ ರಾಜಕಾರಣಿಗಳು ಇದ್ದರು. ಆದರೂ ಅವರೆಲ್ಲರ ಮಧ್ಯೆ ತಾವು ಮುಖ್ಯಮಂತ್ರಿಯಾಗಲು ಹಟ ಹಿಡಿದಿದ್ದು ಏಕೆ ಎಂದು ಪ್ರಶ್ನೆ ಮಾಡಿದೆ.
ಅದಕ್ಕೆ ವಿಚಲಿತರಾಗದೆ ಉತ್ತರ ನೀಡಿದ ಶ್ರೀ ಸಿದ್ದರಾಮಯ್ಯ ನವರು, ದೇವೇಗೌಡರು ಪ್ರಧಾನ ಮಂತ್ರಿಯಾದ ನಂತರ ಬಹುತೇಕ ಶಾಸಕರೆಲ್ಲರೂ ನನ್ನ ಬೆಂಬಲವಾಗಿ ನಿಂತುಕೊಂಡಿದ್ದರು ಸುಮಾರು 87 ಜನ ಶಾಸಕರು ನಾನು ಮುಖ್ಯಮಂತ್ರಿಯಾಗಲು ಬಯಸಿದ್ದರು. ಅದು ಅಲ್ಲದೆ ಮಂತ್ರಿಗಳಾದ ಜಾಲಪ್ಪನವರು ಮತ್ತಿತರರು, ನಾನು ಹಿಂದುಳಿದ ವರ್ಗಕ್ಕೆ ಸೇರಿದವನು, ನನ್ನಂತವರಿಗೆ ಅವಕಾಶ ಕೊಡಬೇಕು ಎಂದು ಒತ್ತಾಯ ಮಾಡಿದರು.ಆ ಒಂದು ಕಾರಣದಿಂದ ನಾನು ಮುಖ್ಯಮಂತ್ರಿ ಆಗುವ ವ್ಯಕ್ತಪಡಿಸಿ ನನ್ನ ಹಕ್ಕನ್ನು ಮಂಡಿಸಿದೆ ಎಂದು ಉತ್ತರ ನೀಡಿದರು.
ಇಂತಹ ಸಮಯದಲ್ಲಿ ಬೇರೆ ಯಾರೇ ಆಗಿದ್ದರೂ, ಮೊದಲು ಸೀನಿಯರ್ ಲೀಡರ್ ಗಳಿಗೆ ಅವಕಾಶ ಕೊಡುವ ಬಗ್ಗೆ ಮಾತನಾಡುತಿದ್ದರು. ಆದರೆ, ಸಿದ್ದರಾಮಯ್ಯ ನವರಂತಹ ಮಹತ್ವಾಕಾಂಕ್ಷಿ ರಾಜಕಾರಣಿ, ಅವಕಾಶ ಬಂದಾಗ ಕಣ್ಣುಮುಚ್ಚಿಕೂರುವ ರಾಜಕಾರಣಿ ಅಲ್ಲ ಅಂತ ಅಂದು ಪ್ರಪಂಚಕ್ಕೆ ತೋರಿಸಿಬಿಟ್ಟರು.
ಧರ್ಮ ಸಿಂಗ್ ಮುಖ್ಯಮಂತ್ರಿಯಾಗಿ ಅಧಿಕಾರ ಹಿಡಿಯುವ ಸಂಧರ್ಭದಲ್ಲಿಯೂ ಸಹ, ತಾವು ಮುಖ್ಯಮಂತ್ರಿ ಯಾಗಬೇಕು ಎಂದು ಹಠ ಹಿಡಿದಿದ್ದರು, ಆದರೆ ದೇವೆಗೌಡರು ತಮ್ಮದೇ ಆದ ಕಾರಣಗಳಿಂದ ಧರ್ಮ ಸಿಂಗ್ ಅವರನ್ನು ಮುಖ್ಯಮಂತ್ರಿ ಮಾಡಲು ಕಾಂಗ್ರೆಸ್ ಗೆ ಬೆಂಬಲ ನೀಡಿದ್ದರು.
ತಾವು ಅಂದುಕೊಂಡಿದ್ದನ್ನ ಸಾಧಿಸಬೇಕು ಎನ್ನುವ ಉದ್ದೇಶದಿಂದ ಎಂತಹ ನಿರ್ಧಾರವನ್ನು ತೆಗೆದುಕೊಳ್ಳಲು ಹಿಂದೆ ಮುಂದೆ ನೋಡಲ್ಲ. ಅವರು ನಂಬಿಕೊಂಡಿದ್ದೆ ಸರಿ, ಅವರು ಮಾಡಿದ್ದೆ ಸರಿ ಎನ್ನುವ ಮನೋಭಾವ. ಸಿದ್ದರಾಮಯ್ಯನವರದ್ದು. ಹಠ ಹಿಡಿದು ತಮಗೆ ಬೇಕಾಗಿದ್ದನ್ನ ಪಡೆದೇ ತೀರುತ್ತಾರೆ.
೨೦೧೩ ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕಾರಣ ರಾಜ್ಯದ ಜನತೆಗೆ ಗೊತ್ತು, ಯಡಿಯೂರಪ್ಪ ಮತ್ತು ಶ್ರೀರಾಮುಲು ಇಬ್ಬರೂ ಬಿಜೆಪಿಯನ್ನು ಬಿಟ್ಟು ಬೇರೆ ಬೇರೆ ಪಕ್ಷಗಳನ್ನು ಕಟ್ಟಿ ಬಿಜೆಪಿಯ ವೋಟ್ ಬ್ಯಾಂಕನ್ನು ಹೊಡೆದಿದ್ದರ ಪರಿಣಾಮ ಕಾಂಗ್ರೆಸ್ ಗೆ ಬಹುಮತ ಸಾಧ್ಯವಾಯಿತು.
ಆದರೆ ಅವರು ತಿಳಿದುಕೊಂಡಿರುವುದು, ಗಣಿ ರೆಡ್ಡಿಗಳ ವಿರುದ್ಧ ತಾವು ಮಾಡಿದ ಹಲವಾರು ಹೋರಾಟಗಳಿಂದ ಅಧಿಕಾರಕ್ಕೆ ಬರುವಂತಾಯಿತು ಎಂದು. ಇಂತಹುದೇ, ಹಲವಾರು ವಿಚಾರಗಳನ್ನು ಅವರು ನಂಬಿಕೊಂಡಿದ್ದಾರೆ.
ಅವಕಾಶ ಇದ್ದಾಗ ಯಾಕೆ ಬಿಡಬೇಕು ಎನ್ನುವುದು ಇವರ ಧರ್ಮ. ಅದೆಂತಹದೇ ಕಷ್ಟ ಆದರೂ ಹಠ ಹಿಡಿದು ಅದನ್ನ ಸಾಧಿಸಿಕೊಳ್ಳುವ ಜಾಯಮಾನ ಇವರದ್ದು. ತನ್ನ ಸಂಘಟನಾ ಶಕ್ತಿಯನ್ನ ದೇವೇಗೌಡರಿಗೆ ತೋರಿಸಲು ಅಹಿಂದ ಚಳುವಳಿಯನ್ನು ಹುಟ್ಟುಹಾಕಿ ಅದರಿಂದ ದೊಡ್ಡದಾದ ಮೈಲೇಜ್ ಪಡೆದು ಒಂದು ಬಾರಿ ಮುಖ್ಯಮಂತ್ರಿಯಾಗಿದ್ದಲ್ಲದೆ ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಅವಕಾಶವನ್ನ ಪಡೆದುಕೊಂಡರು.
ಎರಡನೇ ಬಾರಿಗೆ ಮುಖ್ಯಮಂತ್ರಿಯಾಗುವ ಅವಕಾಶವೇನಿತ್ತು, ಆದರೂ ಹಠ ಬಿಡದ ಛಲದಿಂದ ಆ ಕುರ್ಚಿ ಮೇಲೆ ಕುಳಿತಿಯೇ ಬಿಟ್ಟರು. ಇವತ್ತು ಕುರ್ಚಿ ಬಿಟ್ಟು ಕೊಟ್ಟಿದ್ದಾರೆ. ಅದಕ್ಕೂ ಒಂದು ಲೆಕ್ಕಾಚಾರ ಇದ್ದೇ ಇರುತ್ತೆ. ಕಾರಣ ಸಿಂಪಲ್: ಇವತ್ತು ಕಾಂಗ್ರೆಸ್ ಸರ್ಕಾರಕ್ಕೆ ಅದರಲ್ಲೂ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಜನರ ಬೆಂಬಲ ಕಡಿಮೆಯಾಗ್ತಾ ಇದೆ. ಇವರ ಸ್ಕೀಮ್‌ಗಳಿಂದ ಜನರು ರೋಸಿಹೋಗಿದ್ದಾರೆ. ಅಭಿವೃದ್ಧಿ ಕಾರ್ಯಗಳು ಯಾವುದು ನಡೆಯುತ್ತಿಲ್ಲ. ಇದೆಲ್ಲವನ್ನು ಮನಗಂಡು ಇವರು ಕುರ್ಚಿಯಿಂದ ಕೆಳಗೆ ಇಳಿದಿದ್ದಾರೆ ಹೊರತು ಬೇರೆ ಯಾವುದೇ ಕಾರಣ ಅಲ್ಲ. ಕಳೆದ ಬಾರಿ ಚುನಾವಣೆಯಲ್ಲಿ ಸೋತಂತೆ ಇವರು ಐದು ವರ್ಷ ಮುಂದುವರೆದಿದ್ದರೆ, ಈ ಸಾರಿಯೂ ಸಹ ಸೋತು ಹೋಗುತ್ತಿದ್ದರು. ಅಂತಹ ಮುಜುಗರ ತಪ್ಪಿಸಿಕೊಳ್ಳಲು ಇವರು ರಾಜೀನಾಮೆ ಕೊಟ್ಟಿದ್ದಾರೆ ಹೊರತು ಅದರ ಹಿಂದೆ ಬೇರೆ ಯಾವ ಕಾರಣವೂ ಇಲ್ಲ. ಇದು ಸಹ ಕಾಂಗ್ರೆಸ್ ವರಿಷ್ಠರಿಗೆ ಗೊತ್ತಿದೆ.
ಎಂಟು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಮತ್ತು ೧೬ ಸಾರಿ ಬಜೆಟ್ ಮಂಡನೆ ಮಾಡಿದ್ದಾರೆ. ಆದರೆ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಕರ್ನಾಟಕ ರಾಜ್ಯಕ್ಕೆ ಅಭಿವೃದ್ಧಿಯ ಕೊಡುಗೆ ಏನೂ ಇಲ್ಲ. ಭಾಗ್ಯಗಳು ಮತ್ತು ಗ್ಯಾರಂಟಿ ಸ್ಕೀಮ್‌ಗಳಿಂದಲೇ ಇವರ ಜನಪ್ರಿಯತೆ ಇದೆ ಹೊರತು, ಅಭಿವೃದ್ಧಿ ವಿಷಯಗಳಲ್ಲಿ ನೂರ್ಕಾಲ ನೆನಪಿನಲ್ಲಿ ಇಟ್ಟುಕೊಳ್ಳುವಂತಹ ಯಾವುದೇ ಕೆಲಸಗಳನ್ನು ಅವರು ಮಾಡಿಲ್ಲ ಎಂದು ಜನರ ಭಾವನೆ.
ಗ್ಯಾರಂಟಿ ಭಾಗ್ಯಗಳು ಇಂದು ಇರುತ್ತವೆ, ನಾಳೆ ಹೋಗುತ್ತವೆ. ಆದರೆ ಸರ್ಕಾರಗಳು, ಜನಗಳು ನೆನಪಿನಲ್ಲಿ ಇಟ್ಟುಕೊಳ್ಳುವಂತಹ ಕೆಲಸವನ್ನು ಅವರು ಮಾಡಬೇಕಿತ್ತು ಎಂದು ನನ್ನ ಭಾವನೆ.
ಅಭಿವೃದ್ಧಿ ವಿಷಯಕ್ಕೆ ಬಂದಾಗ ನೂರೆಂಟು ಕೆಲಸಗಳು ಮಾಡುವಷ್ಟಿದೆ, ಆದರೆ ಇವರು ಅದ್ಯಾವುದನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ. ಉತ್ತರ ಕರ್ನಾಟಕದ ಜಿಲ್ಲೆಗಳು ಇಂದಿಗೂ ಅಭಿವೃದ್ಧಿ ಹೊಂದಲು ಸಾಧ್ಯವಾಗಲಿಲ್ಲ, ಅಲ್ಲಿಗೆ ದೀರ್ಘಾವಧಿ ಯೋಜನೆಗಳನ್ನು ಇವರು ತರಲೇ ಇಲ್ಲ.ಪಕ್ಕ ರಾಜ್ಯದ ಚಂದ್ರಬಾಬು ನಾಯ್ಡು ಅವರು ಧೀರ್ಘಾವದಿ ಯೋಜನೆಗಳನ್ನು ಅನುಷ್ಠಾನಗೊಳಿಸುವುದರಲ್ಲಿ ಎತ್ತಿದ ಕೈ., ಅದೇ ರೀತಿ ಸ್ಟಾಲಿನ್ ಕುರಿತಾದ ಮಾತು ಇದೆ.
ಇಂದು ಸಿದ್ದರಾಮಯ್ಯ ರಾಜೀನಾಮೆ ಕೊಟ್ಟಿದ್ದಾರೆ, ಅದರ ಹಿಂದೆಯೂ ದೊಡ್ಡದಾದ ಲೆಕ್ಕಾಚಾರ ಇದ್ದೇ ಇರುತ್ತದೆ. ಮುಂದಿನ ದಿನಗಳಲ್ಲಿ ಖಂಡಿತ ಗೊತ್ತಾಗುತ್ತದೆ, ಕಾದು ನೋಡಬೇಕು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ