ಗುರುವಾರ, ಸೆಪ್ಟೆಂಬರ್ 3, 2026

ಪ್ರೇಕ್ಷಣೀಯ ಸ್ಥಳಗಳ ಆಗರ ಮೊಳಕಾಲ್ಮೂರು

ಆಂಧ್ರಪ್ರದೇಶ ಗಡಿಯಲ್ಲಿರುವ ಮೊಳಕಾಲ್ಮುರು ತಾಲ್ಲೂಕು ತನ್ನ ಮಡಿಲಲ್ಲಿ ಹಲವು ಪ್ರವಾಸಿ ತಾಣಗಳನ್ನು ಹುದುಗಿಸಿಟ್ಟುಕೊಂಡಿದೆ. ಹೊರ ಜಗತ್ತಿಗೆ ತಿಳಿಯದ ಹಲವು ತಾಣಗಳು ಇಲ್ಲಿದ್ದು ಇಡೀ ತಾಲ್ಲೂಕು ಹುಡುಕಾಟದ ತಾಣವಾಗಿದೆ.

ಪ್ರಾಚೀನ ಕಾಲದ ಹಲವು ಪ್ರವಾಸಿ ತಾಣಗಳು ಜಿಲ್ಲೆಯಲ್ಲಿ ಪ್ರಾಗೈತಿಹಾಸಿಕ ಹಿನ್ನೆಲೆ ಹೊಂದಿವೆ. ಪ್ರಾಚೀನ ಶಿಲಾಯುಗ ಕಾಲಘಟ್ಟದ ಅನೇಕ ಐತಿಹ್ಯ ಘಟನೆಗಳಿಗೆ ತಾಲ್ಲೂಕು ಸಾಕ್ಷಿಯಾಗಿದೆ. ಇಲ್ಲಿನ ಬೆಟ್ಟಗಳಲ್ಲಿ ಶಿಲಾಯುಗದಲ್ಲಿ ಮಾನವನ ಜನವಸತಿ ಇದ್ದ ಸತ್ಯ ಹುದುಗಿದೆ. ಇಂತಹ ಪ್ರಾಗೈತಿಹಾಸ ಹೊಂದಿರುವ ಈ ತಾಣ ಏಷ್ಯಾದಲ್ಲೇ 2ನೇ ಸ್ಥಾನ ಪಡೆದಿದೆ. ಅಶೋಕ ಸಿದ್ದಾಪುರದಲ್ಲಿರುವ ಅಶೋಕ ಶಾಸನ, ಜೈನಬಸದಿಗಳು ಇಲ್ಲಿಯ ವಿಶೇಷ. ಆಗಿನ ಕಾಲದಲ್ಲಿ ನಡೆಯುತ್ತಿದ್ದ ವಾಣಿಜ್ಯ ಚಟುವಟಿಕೆಗಳು ತಾಲ್ಲೂಕಿನ ಹೆಮ್ಮೆಯನ್ನು ದುಪ್ಪಟ್ಟು ಮಾಡಿವೆ. ಪಠ್ಯಗಳಲ್ಲಿ ಈ ಸ್ಥಳದ ಉಲ್ಲೇಖವಾಗಿದೆ.

‘ಹೊಸ ತಾಣಗಳನ್ನು ಅರಸಲು ವಿದೇಶಿ ಪ್ರವಾಸಿಗರು ಇಲ್ಲಿಗೆ ಬಂದು ಹೋಗುವುದು ಈ ಸ್ಥಳದ ಶ್ರೀಮಂತಿಕೆಗೆ ಹಿಡಿದ ಕನ್ನಡಿಯಾಗಿದೆ’ ಎನ್ನುತ್ತಾರೆ ಸಾಹಿತಿ ರಾಂಪುರದ ರಂಗನಾಥ್‌.


ಕೊಂಡ್ಲಹಳ್ಳಿಯಲ್ಲಿರುವ ಬಿಳಿನೀರು ಚಿಲುಮೆ ಪುಣ್ಯಕ್ಷೇತ್ರವು ನಾಯಕನಹಟ್ಟಿಗೆ ಗುರು ತಿಪ್ಪೇರುದ್ರಸ್ವಾಮಿಯವರು ಆಂಧ್ರಪ್ರದೇಶದಿಂದ ಹೋಗುವಾಗ ಊಟಕ್ಕೆ ತಂಗಿದ್ದ ಸ್ಥಳವಾಗಿದೆ. ಕುಡಿಯುವ ನೀರಿಗಾಗಿ ಬೆತ್ತದಿಂದ ನೆಲಮೀಟಿ ನೀರು ಹೊರ ತೆಗೆದರು ಎಂಬ ಐತಿಹ್ಯವಿದ್ದು ಈ ಸ್ಥಳದಲ್ಲಿ ಪುಷ್ಕರಣಿ ಕಟ್ಟಿಸಿ ಪೂಜೆ ಮಾಡಲಾಗುತ್ತಿದೆ. ದೇವಸ್ಥಾನವೂ ಉತ್ತಮವಾಗಿದ್ದು ನಿತ್ಯ ನೂರಾರು ಭಕ್ತರು ಭೇಟಿ ನೀಡುತ್ತಾರೆ. ಇಲ್ಲಿನ ಕಂಬಳಿ, ರೇಷ್ಮೆಸೀರೆ ನೇಯ್ಗೆ ರಾಷ್ಟ್ರ ಖ್ಯಾತಿ ಪಡೆದಿವೆ.

ಮೊಳಕಾಲ್ಮುರು ಪಟ್ಟಣ ಬಳಿ ಗೋಲಗುಂಬಸ್‌ ತರಹದ ಕೂಗು ಬಂಡೆಯಿದ್ದು ಕೂಗಿದಲ್ಲಿ ಮೂರು ಭಾರಿ ಪ್ರತಿಧ್ವನಿ ಕೇಳುತ್ತದೆ. ಪ್ರಕೃತಿದತ್ತವಾಗಿ ದೊರೆಯುವ ಸೀತಾಫಲ ಇಲ್ಲಿನ ಮೋಹಕ ಕುಟ್ಟು ರೇಷ್ಮೆಸೀರೆಯಷ್ಟೇ ಖ್ಯಾತಿ ಪಡೆದಿದೆ. ಇಲ್ಲಿ ಸಿಗುವ ರುಚಿಕರವಾದ, ಬುಟ್ಟಿ ಲೆಕ್ಕದ ಸೀತಾಫಲ ರುಚಿ ಬಲು ವಿಶೇಷವಾದುದು. ಪಟ್ಟಣದಿಂದ 7 ಕಿ.ಮೀ ದೂರದಲ್ಲಿ ರಂಗಯ್ಯನದುರ್ಗ ಜಲಾಶಯವಿದ್ದು ಒಂದು ದಿನದ ಪ್ರವಾಸಕ್ಕೆ ಬಲು ಸೂಕ್ತವಾದುದು.

ನುಂಕಿಮಲೆ ಬೆಟ್ಟವು ರಾಷ್ಟ್ರೀಯ ಹೆದ್ದಾರಿ 150ರಲ್ಲಿರುವ ಕಾಟನಾಯಕನಹಳ್ಳಿಯಿಂದ 4 ಕಿ.ಮೀ ಹೋದಲ್ಲಿ ನುಂಕಿಮಲೆ ಬೆಟ್ಟ ಸಿಗುತ್ತದೆ. ಸಿದ್ದೇಶ್ವರ ಸ್ವಾಮಿ ನುಂಕಪ್ಪ ಸ್ವಾಮಿ, ಹರಳಯ್ಯ, ಮಲ್ಲಿಕಾರ್ಜುನ ಸ್ವಾಮಿ, ದೇವಸ್ಥಾನಗಳಿವೆ. ಮಳೆಗಾದಲ್ಲಿ ಮಲೆನಾಡ ‘ಘಾಟ್‌’ಅನುಭವ ಇಲ್ಲಿ ಸಿಗುತ್ತದೆ. ಮಯೂರವರ್ಮ ಆಡಳಿತ ಅವಧಿಯಲ್ಲಿ ಇಲ್ಲಿನ ಜೀರ್ಣೋದ್ಧಾರ ಕಾರ್ಯಗಳಾಗಿ. ‘ನಾಥ’ಪಂಥಕ್ಕೆ ಸೇರಿದ ಮಠದಲ್ಲಿ ಗೋಶಾಲೆಯೂ ಇದೆ. ರಾಜ್ಯದಲ್ಲಿರುವ 2 ಅಶೋಕನ ಶಾಸನಗಳ ಪೈಕಿ ಆಶೋಕ ಸಿದ್ದಾಪುರದಲ್ಲಿ ಒಂದಿದೆ. ದೊಡ್ಡ ಬಂಡೆ ಮೇಲೆ ಶಾಸನ ಕೆತ್ತಲಾಗಿದೆ. ಜತನದಿಂದ ಬಂಡೆ ಸಂರಕ್ಷಣೆ ಮಾಡಲಾಗಿದೆ. ಮಾಹಿತಿ ಫಲಕವನ್ನು ಅಳವಡಿಸಲಾಗಿದೆ. ಅದರ ಸಮೀಪ ಜೈನಬಸದಿಗಳಿವೆ. ಸಮೀಪದ ರೊಪ್ಪದಲ್ಲಿ ಗ್ರಾಮವಿದ್ದು ಶಿಲಾಯುಗ ಅವಧಿಯ ಸಮಾಧಿಗಳಿದ್ದು ಪುರಾತತ್ವ ಇಲಾಖೆ ಸಂರಕ್ಷಣೆ ಮಾಡುವ ಜತೆಗೆ ಇವುಗಳ ವೈಜ್ಞಾನಿಕ ಮಾಹಿತಿಗಾಗಿ ಅಮೆರಿಕ ಸಹಭಾಗಿತ್ವದಲ್ಲಿ ಉತ್ಖನ ಕಾರ್ಯ ನಡೆಯುತ್ತಿದೆ.

ಇಲ್ಲಿಂದ 2 ಕಿ.ಮೀ ದೂರದ ಕಾಡು ಸಿದ್ದಾಪುರದಲ್ಲಿ ಒಂದೇ ಗುಂಡಿಯಲ್ಲಿ ವಿಸ್ಮಯಕಾರಿಯಾಗಿ ಗ್ರಾಮದ ಕಾಡು ಕುರುಬರ ಜನಾಂಗದವರು ಯಾರೇ ಸತ್ತರೂ ಒಂದೇ ಗುಂಡಿಯಲ್ಲಿ ಹೂಳುವ ಅಚ್ಚರಿ ಸಂಗತಿಯಿದೆ. ಇದು ವಿಶ್ವದ ಬೇರೆ ಎಲ್ಲೂ ಕಂಡುಬಂದಿಲ್ಲ. ಸಾವಿನ ಮುನ್ಸೂಚನೆಯೂ ಗುಂಡಿಯಿಂದ ದೊರೆಯುತ್ತದೆ. ದೇವಸಮುದ್ರ ಹೋಬಳಿಯ ರಾಮೇಶ್ವರ ಬೆಟ್ಟವು ರಾಮಾಯಣ ಐತಿಹ್ಯಕ್ಕೆ ಖ್ಯಾತಿಯಾಗಿದೆ.

ರಾವಣ ಸೀತೆಯನ್ನು ಅಪಹರಣ ಮಾಡಿಕೊಂಡು ಹೋಗುವಾಗ ಅಡ್ಡ ಬಂದ ಜಟಾಯು ಪಕ್ಷಿ ಮೇಲೆ ದಾಳಿ ಮಾಡಿದಾಗ ಪಕ್ಷಿಯು ಈ ಬೆಟ್ಟದ ಮೇಲೆ ಬಿದ್ದಿತು. ನಂತರ ರಾಮ ಬಂದು ಪಕ್ಷಿಗೆ ಮೋಕ್ಷ ನೀಡಿದನೆಂದೂ, ಪಕ್ಷಿಯ ಕೋರಿಕೆಯಂತೆ ಲಿಂಗ ಪ್ರತಿಷ್ಠಾಪನೆ ಮಾಡಿದ ಎಂಬ ಐತಿಹ್ಯವಿದೆ. 101 ಸಣ್ಣ ದೇವಸ್ಥಾನಗಳು ಬೆಟ್ಟದ ಮೇಲಿವೆ. ಬೆಟ್ಟಕ್ಕೆ ರೋಪ್‌ ವೇ ಮಾಡುವ ಪ್ರಸ್ತಾವವೂ ಇದೆ. ಆದರೆ ಇಲ್ಲಿಯವರೆಗೆ ಕಾರ್ಯರೂಪಕ್ಕೆ ಬಂದಿಲ್ಲ.

ತಾಲ್ಲೂಕಿನ ಬಾಂಡ್ರಾವಿ ಅರಣ್ಯವು ಸಾವಿರಾರು ಹೆಕ್ಟೇರ್‌ನಲ್ಲಿದ್ದು, ಮಲೆನಾಡ ಅನುಭವ ನೀಡುತ್ತದೆ. ಇಲ್ಲಿನ ವ್ಯೂ ಪಾಯಿಂಟ್‌, ಕೆಳಗಿನ ಕಣಿವೆಯ ಜಲಪಾತ, ಬಾಂಡ್ರಾವಿಯಲ್ಲಿ 8ನೇ ಶತಮಾನದಲ್ಲಿ ವ್ಯಾಸರಾಯರು ಪ್ರತಿಷ್ಠಾಪಿಸಿರುವ ಆಂಜನೇಯ ಸ್ವಾಮಿ ದೇವಸ್ಥಾನ ಹಲವು ಜಿಲ್ಲೆಯಲ್ಲಿ ಭಕ್ತರನ್ನು ಹೊಂದಿದೆ.


Click below headings