ಭಾನುವಾರ, ಏಪ್ರಿಲ್ 17, 2022

ನೇಕಾರರ ಮೇಲಿನ ಬ್ರಿಟೀಷರ ಕ್ರೌರ್ಯ

  


ನೇಕಾರರ ಮೇಲಿನ ಬ್ರಿಟೀಷರ ಕ್ರೌರ್ಯ

ಕೇರಳದ ಸಂಸದರಾದ ಶಶಿ ತರೂರ್ ಅವರು 2015 ರಲ್ಲಿ ಸಂಸತ್ತಿನಲ್ಲಿ ಭಾಷಣ ಮಾಡುತ್ತ, ನೇಕಾರರ ಮೇಲಿನ ಬ್ರಿಟೀಷರ ಕ್ರೌರ್ಯ ದ ಕುರಿತು ಪ್ರಸ್ತಾಪಿಸಿದ್ದರು. ಬಹುಶಃ  ಇತಿಹಾಸದ ಈ ಕ್ರೌರ್ಯ ಘಟನೆ ಕುರಿತು ಬಹುತೇಕ ಎಲ್ಲರೂ ಮರೆತಿದ್ದರು. ಬ್ರಿಟೀಷರು ನೇಕಾರರ ಕೈಯನ್ನು ಕತ್ತರಿಸಿದರು, ಹೆಬ್ಬೆರೆಳನ್ನ ಕತ್ತರಿಸಿದರು ಎನ್ನುವ ಘಟನೆ ಕುರಿತು ಹಲವಾರು ಕಾಲಘಟ್ಟದಲ್ಲಿ ಪ್ರಸ್ತಾಪಿಸಲಾಗಿದೆ. ಇದು ನಿಜ ಘಟನೆಯಾ ಎನ್ನುವ ಕುರಿತು ಹಲವಾರು ಚರ್ಚೆಗಳು ನಡೆದಿವೆ. ಆದರೂ ಬೆಂಕಿ ಇಲ್ಲದೆ ಹೊಗೆ ಆಡುವುದಿಲ್ಲ ಅಲ್ಲವೇ, ಅದಲ್ಲದೇ ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧ ಅಸಹ್ಯಕರ, ತಾರತಮ್ಯ ಮತ್ತು ನಿರ್ಲಜ್ಜ ದೌರ್ಜನ್ಯಗಳನ್ನು ನಡೆಸಿ ಲಕ್ಷಾಂತರ ಜನರನ್ನ ಹಿಂಸಿಸಿ ಹತ್ಯೆ ಮಾಡಿದ ಕುಖ್ಯಾತಿ ಬ್ರಿಟೀಷರ ಮೇಲಿದೆ. ಯಾರು ಏನೇ ಹೇಳಲಿ,  ಈ ಘಟನೆ ನಡೆದೇ ಇಲ್ಲವೆಂದು ಹೇಳಲು ಸಾಧ್ಯವೇ  ಇಲ್ಲ. ಈ ಘಟನೆ ಏನು, ಎಲ್ಲಿ ನಡೆಯಿತು, ಇದರ ಕುರಿತು ಈ ಲೇಖನದಲ್ಲಿ ತಿಳಿಯೋಣ. 

ಭಾರತಕ್ಕೆ ಕಾಲಿಟ್ಟ ಬಹುತೇಕ ಪಾಶ್ಚ್ಯಾತರು ಅದರಲ್ಲೂ ಬ್ರಿಟೀಷರು ತಮ್ಮಲ್ಲಿನ ಉತ್ಪನ್ನಗಳನ್ನ ಇಲ್ಲಿ ಮಾರಾಟ ಮಾಡಲು ಬಹಳ ಪ್ರಯತ್ನ ಪಡುತಿದ್ದರು. ಮೊದ ಮೊದಲಿಗೆ ಇಲ್ಲಿನ ತಂತ್ರಜ್ನಾನ, ಕರಕುಶಲಗಾರಿಕೆ, ವಿದ್ಯೆನೀಡುವ ಗುರುಕುಲಗಳನ್ನ ಹೀಗೆ ಇಲ್ಲಿನ ದೇಶಿಯ ಮೂಲದ ಪ್ರತಿವಿಷಯವನ್ನ ಮೂಲೆಗುಂಪು ಮಾಡುವುದು ಮತ್ತು ತಮ್ಮ ಶ್ರೇಷ್ಟತೆಯನ್ನಜನರ ಮನಸಲ್ಲಿ ತುಂಬುವುದು. ಅವರು ಬಳಸುವ ವಸ್ತುಗಳು ಅತಿ ಶ್ರೇಷ್ಟ ಎಂದು ಜನರ ಮನಸ್ಸಿನಲ್ಲಿ ಬಿತ್ತುವುದು. ಅದು ಸಾಧ್ಯವಾಗದೇ ಇದ್ದಾಗ, ಇಲ್ಲಿನ ಮೂಲತನವನ್ನೇ ನಾಶಮಾಡುವುದು ಇಂತಹ ಹಲವಾರು ಪ್ರಯೋಗಗಳನ್ನ ಮಾಡುತ್ತ, ವಿರೋಧಿಸಿದವರನ್ನ ಹಿಂಸಿಸಿ, ಹತ್ಯೆ ಮಾಡಿ ಜನರನ್ನು ಭಯಭೀತರನ್ನಾಗಿ ಮಾಡಿ ಸುಮಾರು ಮೂರು ಶತಮಾನಗಳ ಕಾಲ ಭಾರತವನ್ನಾಳಿದ ನಮ್ಮ ಮುಂದಿದೆ.

 

ವ್ಯವಸ್ಥಿತ ಸಂಚು: ಮೊದಲನೆಯದಾಗಿ, ಘಟನೆ ನಡೆಯಲು ಕಾರಣ ಏನು ತಿಳಿಯೋಣ.  ಇಂಗ್ಲೆಂಡಿನಲ್ಲಿ ಜಿನ್ನಿಂಗ್ ಚಕ್ರದ ಆವಿಷ್ಕಾರದ ನಂತರ, ಅವುಗಳ ಉತ್ಪಾದನಾ ಸಾಮರ್ಥ್ಯವು ಹಲವು ಪಟ್ಟು ಹೆಚ್ಚಾಗುತ್ತದೆ. ಬ್ರಿಟಿಷರ ಉತ್ಪನ್ನಗಳಿಗೆ ಭಾರತವನ್ನು ಮಾರುಕಟ್ಟೆಯಾಗಿಸಬೇಕಿತ್ತು. ಅದಕ್ಕಾಗಿ ಭಾರತೀಯ ಜನರು ಬ್ರಿಟಿಷ್ ಜವಳಿಗಳನ್ನು ಖರೀದಿಸಲು ಮತ್ತು ಭಾರತೀಯ ಗುಡಿ ಕೈಗಾರಿಕೆಯನ್ನು ಶಾಶ್ವತವಾಗಿ ತೆಗೆದುಹಾಕಲೇ ಬೇಕಿತ್ತು. ಈ ಆದೇಶ ಬ್ರಿಟನ್ ನಿಂದ ಆಗಿಂದಾಗ್ಗೆ ರವಾನೆಯಾಗುತಿತ್ತು.  ಬ್ರಿಟಿಷ್ ವ್ಯಾಪಾರಿಗಳಿಗೆ ಭಾರತದ ಬೃಹತ್ ಜನಸಂಖ್ಯೆಯು ಒಂದು ದೊಡ್ಡ ಆಸ್ತಿಯಾಗಿತ್ತು, ಅದೊಂದ್ದು ದೊಡ್ಡ ಮಾರುಕಟ್ಟೆ ಎಂದೇ ಭಾವಿಸಿದ್ದರು. ಬ್ರಿಟಿಷರ ಉತ್ಪನ್ನಗಳನ್ನು ಭಾರತದ ಮೂಲೆ ಮೂಲೆಗಳಿಗೆ ಕೊಂಡೊಯ್ಯಲು ಬ್ರಿಟಿಷ್ ಆಡಳಿತಗಾರರು ಸ್ಥಳೀಯ ಗುಡಿ ಕೈಗಾರಿಕೆಗಳನ್ನು ಎಲ್ಲ ರೀತಿಯಲ್ಲಿ ವಿರೋಧಿಸುವುದಿಕ್ಕೆ ಪ್ರಾರಂಭಿಸಿದ್ದರು.  ಅಂದಿನ ಕಾಲದಲ್ಲಿ ಬಂಗಾಳ ಸೇರಿದಂತೆ ಭಾರತದಲ್ಲಿ  ಮಸ್ಲಿನ್ ವಸ್ತ್ರಗಳು (ಅತಿಸೂಕ್ಷ್ಮ ನೆಯ್ಗೆಯ ಹತ್ತಿಯ ಬಟ್ಟೆ) ಬಹಳ ಪ್ರಖ್ಯಾತಿ ಪಡೆದಿದ್ದವು. 

ಬ್ರಿಟೀಷರು ತಂದ ಬಟ್ಟೆಗಳನ್ನ ಇಲ್ಲಿ ಕೊಳ್ಳುವವರೇ ಇರಲಿಲ್ಲ. ಬ್ರಿಟಿಷರು ತಮ್ಮ ಜವಳಿಗಳನ್ನು ಭಾರತದಲ್ಲಿ ಸುರಿಯಲು ಹೆಚ್ಚು ಉತ್ಸುಕರಾಗಿದ್ದರು ಮತ್ತು ಜವಳಿಗಳ ಸ್ಥಳೀಯ ಉತ್ಪಾದನೆಯನ್ನು ಬಹುತೇಕವಾಗಿ ವಿರೋಧಿಸುತಿದ್ದರು.  ಮೊದಲನೆಯ ಪ್ರಯತ್ನವಾಗಿ,  ಜನರು  ದೇಶೀಯ ಮಸ್ಲಿನ್ ಬಟ್ಟೆಗಳನ್ನು ಕೊಳ್ಳುವುದು ಕಡಿಮೆ ಮಾಡಬೇಕು  ಮತ್ತು ಮಸ್ಲಿನ್ ಬಟ್ಟೆಗಳ ಮೇಲಿನ ಅವಲಂಬನೆ ಕಡಿಮೆಯಾಗಬೇಕೆಂದು ಎನ್ನುವ ಉದ್ದೇಶದಿಂದ ಈ  ವಸ್ತ್ರಗಳ ಮೇಲೆ ಸರಿ ಸುಮಾರು 70-80% ತೆರಿಗೆಯನ್ನು ಹೇರುತ್ತಾರೆ. ಇಂತಹ ಅತಿ ದೊಡ್ಡ ತೆರಿಗೆಯಿಂದ ಜನರು ಸ್ವಾಭಾವಿಕವಾಗಿ ಈ ವಸ್ತ್ರಗಳನ್ನ ಕೊಳ್ಳುವುದಿಲ್ಲ.  ಅದಕ್ಕೆ ಪರ್ಯಾಯವಾಗಿ ಬ್ರಿಟನ್‌ನಿಂದ ಆಮದು ಮಾಡಿಕೊಂಡ ಫ್ಯಾಕ್ಟರಿ-ನಿರ್ಮಿತ  ಬಟ್ಟೆಗಳ ಮೇಲೆ ಅತಿಕಡಿಮೆ 2-4% ತೆರಿಗೆಯನ್ನು ವಿಧಿಸಿ ಮಾರುಕಟ್ಟೆಗೆ ತರುತ್ತಾರೆ. ಜನರಿಗೆ ಕಡಿಮೆ ವೆಚ್ಚದಲ್ಲಿ ಇಂಗ್ಲೇಡ್ ಮೂಲದಿಂದ ಬಟ್ಟೆಗಳು ಸಿಗುವಾಗ ಮಸ್ಲಿನ್ ಬಟ್ಟೆಗಳನ್ನ ಯಾಕೆ ಕೊಳ್ಳುತ್ತಾರೆ. 

ಈ ಮೂಲಕ ಮಸ್ಲಿನ್ ಉತ್ಪಾದನೆಯನ್ನು ಬ್ರಿಟೀಷರು ವ್ಯವಸ್ಥಿತವಾಗಿ ನಾಶಪಡಿಸುತ್ತಾರೆ.  ಇಂತಹ ಕಠೋರ ನೀತಿಗಳ ಪರಿಣಾಮವಾಗಿ, ಮಸ್ಲಿನ್ ಉತ್ಪಾದನೆಯು ಗುಣಮಟ್ಟ ಮತ್ತು ಪ್ರಮಾಣದಲ್ಲಿ ಬಹಳವಾಗಿ ಕುಸಿತ ಕಂಡು ಕೊಳ್ಳುತ್ತದೆ, ಅದು ಎಷ್ಟರ ಮಟ್ಟಿಗೆ ಎಂದರೆ, ಮತ್ತೆಂದಿಗೂ ಆ ಉದ್ಯಮ ಚೇತರಿಸಿಕೊಳ್ಳುವುದೇ ಇಲ್ಲ. ಇದರ ನೇರ ಪರಿಣಾಮ ಅನುಭವಿಸಿದವರು ಬಂಗಾಳದ ನೇಕಾರರು ಮಾತ್ರ. ಅವರ ಬಳಿಯಿದ್ದ ಏಕೈಕ ಕೌಶಲ್ಯವೆಂದರೆ ಮಸ್ಲಿನ್ ನೇಯ್ಗೆ, ಬ್ರಿಟೀಷರ ಇಂತಹ ಕಠಿಣ ನಿರ್ಧಾರದಿಂದ ನೇಕಾರರು ಕಡು ಬಡತನದಲ್ಲಿ ಮುಳುಗಿದರು ಮತ್ತು ಮಸ್ಲಿನ್ ನೇಯ್ಗೆಯ ಉದ್ಯಮವು ಸಂಪೂರ್ಣವಾಗಿ ನಾಶವಾಗುತ್ತದೆ. ಇಲ್ಲಿಗೆ ಬ್ರಿಟೀಷರ ಸಂಚು ವ್ಯವಸ್ಥಿತವಾಗಿ ಕಾರ್ಯಗತಕ್ಕೆ ಬಂದಿರುತ್ತದೆ 

 

ಕ್ರೌರ್ಯದ ಪರಮಾವಧಿ: ಬ್ರಿಟೀಷ್ ಆಳ್ವಿಕೆಯಲ್ಲಿ ಸ್ಥಳೀಯರ ವಿರುದ್ಧ ಬ್ರಿಟಿಷ್ ಆಡಳಿತ, ನಿರ್ದಿಷ್ಟವಾಗಿ, ರೈತರು ಮತ್ತು ನೇಕಾರರ ವಿರುದ್ಧ ಅಸಹ್ಯಕರ, ತಾರತಮ್ಯ ಮತ್ತು ನಿರ್ಲಜ್ಜ ದೌರ್ಜನ್ಯಗಳನ್ನು ನಡೆಸುತ್ತಿದ್ದರು ಎನ್ನುವ ವಿಷಯ ಹಲವು ಕಡೆ ದಾಖಲಾಗಿವೆ. ಇಂಥಹ ಕಾರ್ಯಕ್ಕೆ ಬ್ರಿಟೀಷ್ ಆಡಳಿತ ಮತ್ತೊಮ್ಮೆ ಮುಂದಾಗುತ್ತದೆ. ನೇಕಾರರಿಗೆ ಅಳಿವು ಉಳಿವಿನ ಪ್ರಶ್ನೆಯಾಗಿದ್ದರಿಂದ ಅತಿ ಸೂಕ್ಷ್ಮ ಮಸ್ಲಿನ್ ನೇಯ್ಗೆ ನಶಿಸಿ ಹೋಗಬಾರದು ಎನ್ನುವ ಉದ್ದೇಶದಿಂದ ನೇಕಾರರು ಅಲ್ಲಲ್ಲಿ ನೇಯ್ಗೆ ಕೆಲಸ ಮಾಡುತಿದ್ದರು. ಇಂತಹ ಘಟನೆಗಳು ಬ್ರಿಟೀಷರಿಗೆ ಕಿರಿಕಿರಿ ಉಂಟು ಮಾಡುತಿದ್ದವು. ಇದಕ್ಕೆ ಅಂತ್ಯ ಕಾಣಿಸಲೇ ಬೇಕೆಂದು ಬಹುಶಃ ನಿರ್ಧರಿಸಿದ್ದರೆನಿಸುತ್ತದೆ ಹೀಗಾಗಿ, ಮುಂದೆಂದೂ ಮಸ್ಲಿನ್ ಉತ್ಪನ್ನಗಳನ್ನು ನೇಯಲು ಸಾಧ್ಯ ವಾಗಬಾರದು ಎನ್ನುವ ಉದ್ದೇಶದಿಂದ 1769 ರ ಮಾರ್ಚ್ 17 ರಂದು, ಬ್ರಿಟಿಷ್ ಸರ್ಕಾರವು  ಬಡವರ ಬಗ್ಗೆ ಯಾವುದೇ ಕರುಣೆ ಇಲ್ಲದೆ,  ಬಂಗಾಳದ ಮಸ್ಲಿನ್ ನೇಕಾರರ ಹೆಬ್ಬೆರಳನ್ನು ಕತ್ತರಿಸಲು ಪ್ರಾರಂಭಿಸಿತು. ಈ ಘಟನೆ ನಡೆಯಲು ಶುರುವಾದಾಗಿನಿಂದ, ನೇಕಾರರು ದೇಶದ ವಿವಿಧಭಾಗಗಳಿಗೆ ದಿಕ್ಕಾಪಾಲಾಗಿ ಓಡಿ ಹೋದರು.

ಈ ಘಟನೆಯ ಸಮಯದಲ್ಲಿ ಮುರ್ಷಿದಾಬಾದ್ ಮತ್ತು ನಾಡಿಯಾದಿಂದ  ನೇಕಾರರ ಕುಟುಂಬಗಳು ಅವಧ್‌ಗೆ ಓಡಿ ಹೋಗುತ್ತಾರೆ, ಅಲ್ಲಿನ ನವಾಬ್ಬ್ ಅವರನ್ನು ಮಹುವಾ ದಬಾರ್‌ ಎನ್ನುವ ಪ್ರದೇಶದಲ್ಲಿ ಪುನರ್ವಸತಿ ಮಾಡಿ ಕೊಡುತ್ತಾರೆ ಮತ್ತು ಅವರ ಜೀವನೋಪಾಯವನ್ನು ಮುಂದುವರಿಸಲು ಅವಕಾಶ ಮಾಡುತ್ತಾರೆ. ಮೊದಲ ತಲೆಮಾರಿನ ಅನೇಕ ನೇಕಾರರು ಈಗಾಗಲೇ ತಮ್ಮ ಕೈಗಳನ್ನು ಕಳೆದುಕೊಂಡಿದ್ದರು, ನಂತರ ಅವರು ತಮ್ಮ ಪುತ್ರರಿಗೆ ಕರಕುಶಲತೆಯನ್ನು ಕಲಿಸುತ್ತಾರೆ. ಸುಮಾರು 5,000 ಜನರ ಆ ಸಣ್ಣ ಪಟ್ಟಣವು ಮತ್ತೆ ಕೈಮಗ್ಗ ಕೇಂದ್ರವಾಗಿ ಪ್ರಸಿದ್ದವಾಗುತ್ತದೆ.

 

ಆರದ ಕಿಚ್ಚು:  ದಶಕಗಳು ಕಳೆದರು ಆ ಘಟನೆಯ ಕಿಚ್ಚು ಮಾತ್ರ ಆರಿರರಿಲ್ಲ.  ಬಂಗಾಳದಿಂದ ವಲಸೆ ಬಂದ ಕುಟುಂಬದ ಕುಡಿಯೊಂದು, ಒಂದು ದಿನ ಆ ಪಟ್ಟಣದ  ಮನೋರಮಾ ನದಿಯ (ಘಾಗ್ರಾದ ಉಪನದಿ) ಕೆಳಗೆ ಬರುತ್ತಿರುವ ದೋಣಿಯನ್ನು ಗಮನಿಸುತ್ತಾನೆ. ಬ್ರಿಟೀಷರನ್ನ ಕಂಡ ಆ ಸಮಯದಲ್ಲಿ ತನ್ನ ಮನದ ಮೂಲೆಯಲ್ಲಿದ್ದ ಕಿಚ್ಚು ಬೆಂಕಿಯಂತಾಗುತ್ತದೆ. ಅದು ಮೊದಲೇ 1857 ರ ಪ್ರಕ್ಷುಬ್ಧತೆಯ (ಸಿಪಾಯಿ ದಂಗೆ) ಸಮಯ.  ಸಂತ್ರಸ್ತರ ಮೊಮ್ಮಕ್ಕಳು ಮತ್ತು ಸಂಬಂಧಿಕರು ಹೆಚ್ಚಾಗಿ ಅವಧ್‌ನ ಮಹುವಾ ದಬರ್‌ನ ನೇಕಾರರು ಎಲ್ಲರೂ ಒಟ್ಟಾಗಿ ಸೇರಿ, ಪ್ರತೀಕಾರ ತೀರಿಸಿಕೊಳ್ಳಲು ಮುಂದಾಗುತ್ತಾರೆ.  ಆರು ಬ್ರಿಟೀಷ ಯೋಧರು ಲೆಫ್ಟಿನೆಂಟ್ ಟಿ.ಇ. ಲಿಂಡ್ಸೆ, ಲೆಫ್ಟಿನೆಂಟ್ W.H. ಥಾಮಸ್, ಲೆಫ್ಟಿನೆಂಟ್ G.L. ಕಾಲ್ಟಿ, ಸಾರ್ಜೆಂಟ್ ಎಡ್ವರ್ಡ್ಸ್ ಮತ್ತು  A.F. ಇಂಗ್ಲೀಷ್ ಮತ್ತು T.J. ರಿಚಿ ಎನ್ನುವ ಕೆಲವು ಬ್ರಿಟಿಷ್ ತಲೆಗಳನ್ನು ಕತ್ತರಿಸಿ ಬಿಸಾಕುತ್ತಾರೆ.  ಎಂದು ಇತಿಹಾಸಕಾರರ ವರದಿಯಲ್ಲಿ ದಾಖಲಾಗುತ್ತದೆ.  ತದನಂತರ ಈ ಘಟನೆಯ ಪ್ರತಿಕಾರವಾಗಿ ಜೂನ್ 20, 1857 ರಂದು ಬ್ರಿಟೀಷರ ಅಶ್ವಸೈನ್ಯವು ಪಟ್ಟಣವನ್ನು ಸುತ್ತುವರೆಯುತ್ತದೆ, ಆ ಪಟ್ಟಣದ ನೂರಾರು ಜನರನ್ನು ಕೊಲ್ಲುತ್ತಾರೆ. ಮತ್ತು ಎಲ್ಲಾ ಮನೆಗಳಿಗೆ ಬೆಂಕಿ ಹಚ್ಚಿ, ಅಂದಿನಿಂದ ಈ ಸ್ಥಳದಲ್ಲಿ ಯಾರೂ ವಾಸಿಸುವಂತಿಲ್ಲ ಎಂದು ಆದೇಶಿಸುತ್ತಾರೆ. ಬಂಡವಾಳಶಾಹಿಯ ಕ್ರೌರ್ಯ ಮತ್ತು ಅನಾಗರಿಕತೆಗೆ ಆ ಕಾಲದಲ್ಲಿ ಕೊನೆಯಿರಲೇಇಲ್ಲ.

 





ಈ ಎಲ್ಲಾ ಘಟನೆಗಳ ಕುರಿತು ಹಲವಾರು ಲೇಖಕರು ವಿವಿಧ ದಾಟಿಯಲ್ಲಿ ದಾಖಲಿಸಿದ್ದಾರೆ.  ಬ್ರಿಟೀಷ್ ವ್ಯಾಪಾರಿ ವಿಲಿಯಂ ಬೋಲ್ಟ್ಸ್  ತನ್ನ "ಕನ್ಸಿಡರೇಶನ್ಸ್ ಆನ್ ಇಂಡಿಯಾ ಅಫೇರ್ಸ್" ಪುಸ್ತಕದಲ್ಲಿ ನೇಕಾರರ ಬೆರಳುಗಳನ್ನು ಕತ್ತರಿಸುವುದು ಸೇರಿದಂತೆ ತೀವ್ರ ಕ್ರೌರ್ಯದ ನಿದರ್ಶನಗಳನ್ನು ದಾಖಲಿಸಿದ್ದಾರೆ.   Economic transition in the Bengal presidency, 1793-1833 - ಹರಿ ರಂಜನ್ ಘೋಸಲ್ ಎನ್ನುವ ಲೇಖಕರು ಸಹ ದಾಖಲಿಸಿದ್ದಾರೆ. ಇನ್ನೂ ಹಲವಾರು ಲೇಖಕರು ಇದರ ಕುರಿತು ದಾಖಲಿಸುತ್ತಾ ಬಂದಿದ್ದಾರೆ. ಬ್ರಿಟೀಷರು ಮಾತ್ರ ಇದ್ಯಾವುದೂ ನಡೆದೇ ಇಲ್ಲ ಎನ್ನುವಂತೆ ವರ್ತಿಸುತ್ತಾ ಬಂದಿದ್ದಾರೆ.

#Weavers #British #nekara #Bengal_Weavers

ಶುಕ್ರವಾರ, ಸೆಪ್ಟೆಂಬರ್ 10, 2021

ಎಣ್ಣೇ ಎಂತ ಮಾಯಾವಿ ನೀನು?

 ಅಮವಾಸ್ಯೆ ರಾತ್ರಿಯಲ್ಲಿ

ಚಂದಿರನ ಕಾಣಿಸುವೆ ನೀನು


ತಂಪಾದ ರಾತ್ರಿಯಲ್ಲಿ

ಬೆಚ್ಚಗಾಗಿಸುವೆ ನೀನು


ಮೈ ಮನ ಬಳಲಿ ಬೆಂಡಾದಾಗ

ದಣಿವರಿಸುವೆ ನೀನು


ಕಷ್ಟ ದುಖಃ ಬಂದಾಗ

ಎಲ್ಲವನ್ನು ಮರೆಸುವೆ ನೀನು



..


..


..


..


..


..


..


..


..


..


..


..


..


..


..


..


..


..


..


..


..


..


..


..


ಎಣ್ಣೇ ಎಂತ ಮಾಯಾವಿ ನೀನು?

ಚುಟುಕು ಕವನ: ಕೊನೆಗೂ ಎದ್ದು ಬಿಟ್ಟೆ

 ಕೊನೆಗೂ ಎದ್ದು ಬಿಟ್ಟೆ


30 ಸಾಕು ಅಂದುಕೊಂಡೆ

ಮೊದಲಿಗೆ 30  ಆಯಿತು

ಮನಸ್ಸಿಗೆ ಸಮಾಧಾನವಾಗಲಿಲ್ಲ


ಅದಕ್ಕೆ ಮತ್ತೆ 30 ಸೇರಿಸಿದೆ

60  ಆಯಿತು

ಆಗಲೂ ಖುಷಿಯಾಗಲಿಲ್ಲ


ಮತ್ತೊಂದು 30 ಸೇರಿಸಿದೆ

90 ಆಯಿತು

ಇನ್ನೂ ಜಾಸ್ತಿಯಾದರೆ

ಮಡದಿಯು ಸುಮ್ಮನೆ ಬಿಡುವಳೇ ಎಂದು

..

..

..

..

..

..

..

..

..

..

..

..

..

..

..

..

..

..

..

..

..

..

..

..

..

..

..

..

..

..

..

..

..

..

..

..

..

..

..

..

ಮೊಬೈಲ್ ಅಲಾರ್ಮ್ ಅನ್ನು

ಮತ್ತೊಮ್ಮೆ SNOOZ ಮಾಡದೆ DISMISS ಮಾಡಿ

ಭಾರವಾದ ಮನಸ್ಸಿನಿಂದ

ಕೊನೆಗೂ ಎದ್ದು ಬಿಟ್ಟೆ 😀😀😀

ಭಾನುವಾರ, ಆಗಸ್ಟ್ 22, 2021

ಕವಿರತ್ನ ಶ್ರೀ ಡಾ. ವಿ.ನಾಗೇಂದ್ರ ಪ್ರಸಾದ್ ಅವರ ಆತ್ಮೀಯ ಸಂವಾದ

 ಒಮಾನ್ ಕನ್ನಡಿಗರೊಂದಿಗೆ ಕನ್ನಡ ಚಿತ್ರರಂಗದ ಹೆಮ್ಮೆಯ ಹೆಸರಾಂತ ಚಿತ್ರಸಾಹಿತಿ, ಸಂಗೀತ ಸಂಯೋಜಕರು, ಚಿತ್ರನಿರ್ದೇಶಕ ಮತ್ತು ಸಂಭಾಷಣಕಾರರು ಆದ ಕವಿರತ್ನ ಶ್ರೀ ಡಾ. ವಿ.ನಾಗೇಂದ್ರ ಪ್ರಸಾದ್ ಅವರ ಆತ್ಮೀಯ ಸಂವಾದ ಕಾರ್ಯಕ್ರಮವನ್ನು ಶನಿವಾರ 21/08/2021, Google meet (ಗೂಗಲ್ ಮೀಟ್ ) ಮುಖಾಂತರ ಆಯೋಜಿಸಲಾಗಿತ್ತು.

ಸುಮಾರು ಎರಡು ಗಂಟೆಗಳಕಾಲ ನಡೆದ ಈ ಕಾರ್ಯಕ್ರಮದಲ್ಲಿ ಶ್ರೀ ಡಾ. ವಿ.ನಾಗೇಂದ್ರ ಪ್ರಸಾದ್ ಅವರು ತಮ್ಮ ಬಾಲ್ಯ, ಶಾಲಾ ಕಾಲೇಜು ನಂತರ ಚಿತ್ರರಂಗದ ಅನೇಕ ಅನುಭವಗಳನ್ನ ಮತ್ತು  ಡಾ. ರಾಜ್ ಕುಮಾರ್, ಡಾ. ವಿಷ್ಣುವರ್ಧನ್, ಅಭಿನಯ ಚಕ್ರವರ್ತಿ ಸುದೀಪ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಂತಾದ ನಟರೊಂದಿಗಿನ ತಮ್ಮ ಒಡನಾಟದ ಕುರಿತು ಅವರು ಮಾತನಾಡಿದರು. ಹಾಡು ರಚನೆ ಬಗ್ಗೆ, ಸಾಮಾಜಿಕ ಜವಬ್ದಾರಿ ಮತ್ತು ಸಮಾಜ ಸೇವೆ, ಮುಂತಾದ ವಿಷಯಗಳ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.

ಹಲವಾರು ಒಮಾನ್ ಕನ್ನಡಿಗರು ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು, ಎಲ್ಲರ ಪ್ರಶ್ನೆಗಳಿಗೆ ಉತ್ತರಿಸಿದ ಶ್ರೀ ನಾಗೇಂದ್ರ ಪ್ರಸಾದ್ ಅವರು, ಕನ್ನಡ ಚಿತ್ರರಂಗ, ಚಿತ್ರಸಾಹಿತ್ಯದ ಹಲವಾರು ವಿಷಯಗಳ ಕುರಿತು ಮನ ಬಿಚ್ಚಿ ಮಾತನಾಡಿದರು.

ಕಾರ್ಯಕ್ರಮದ ಮಧ್ಯದಲ್ಲಿ ಒಮಾನ್ ನಲ್ಲಿ ನೆಲೆಸಿರುವ ಕನ್ನಡಿಗರು, ಅವರ ಚಿತ್ರದ ಹಾಡುಗಳನ್ನ ಹಾಡಿ ಕಾರ್ಯಕ್ರಮಕ್ಕೆ ಮೆರುಗುನೀಡಿದರು. ಕಾರ್ಯಕ್ರಮದಲ್ಲಿ, ಶ್ರೀ ಡಾ. ವಿ.ನಾಗೇಂದ್ರ ಪ್ರಸಾದ್ ಅವರಿಗೆ ಶಾಲು ಹೊದಿಸಿ ಪೇಟ ಮತ್ತು ಹೂವಿನ ಹಾರ ಹಾಕಿ ಸನ್ಮಾನಿಸಲಾಯಿತು.

ಮಸ್ಕತ್ ನಿಂದಲ್ಲದೆ, ಕರ್ನಾಟಕದಿಂದ ಹಲವಾರು ಕನ್ನಡಿಗರು ಕಾರ್ಯಕ್ರಮವನ್ನು ಆನ್ ಲೈನ್ ಮುಖಾಂತರ ವೀಕ್ಷೀಸಿದರು. 












ಶನಿವಾರ, ಆಗಸ್ಟ್ 21, 2021

ಒಮಾನ್ ನಲ್ಲಿ ಕನ್ನಡಿಗರು.

ಒಮಾನ್ ನಲ್ಲಿ ಕನ್ನಡಿಗರು.

ಪಿ.ಎಸ್.ರಂಗನಾಥ.

ಮಸ್ಕತ್.

 Udayavani NRI Edition 21-08-2021


ನಾವು ಭಾರತೀಯರು, ವಿಶ್ವದ ಯಾವುದೇ ಮೂಲೆಗೆ ಹೋದರೂ, ಅಲ್ಲೊಂದು ಮಿನಿ ಭಾರತವನ್ನ ಸೃಷ್ಟಿ ಮಾಡಿಕೊಳ್ಳುವ ಗುಣವನ್ನು ಹೊಂದಿದ್ದೇವೆ. ಮೊದಲಿಗೆ ಹತ್ತಾರು ಜನರು ಜತೆಗೂಡುತ್ತೇವೆ, ಕ್ರಮೇಣ ಅದು ನೂರಾಗುತ್ತದೆ, ಸಾವಿರ ದಾಟುತ್ತದೆ, ಹೀಗೆ ಸಂಖ್ಯೆ ಬೆಳೆಯುತ್ತ ಹೋಗುತ್ತದೆ. ನಮ್ಮ ಊರು, ನಮ್ಮ ರಾಜ್ಯ, ನಮ್ಮ ಭಾಷೆ ಆಡುವವರನ್ನ ಜತೆಗೂಡಿಸಿಕೊಂಡು ಸಂಘ ಸಂಸ್ಥೆಗಳನ್ನ ಮಾಡಿಕೊಳ್ಳುತ್ತೇವೆ.   ಎಲ್ಲರೂ ಸೇರಿ ಒಂದಿಲ್ಲೊಂದು ಕಾರ್ಯಕ್ರಮ ಮಾಡುತ್ತೇವೆ. ನಾಡಿನಿಂದ ದೂರ ಇದ್ದರೂ ನಮ್ಮ ದೇಶ/ರಾಜ್ಯಾಭಿಮಾನವನ್ನ ಮೆರೆಯುವುದನ್ನ ನಾವು ಕಂಡಿದ್ದೇವೆ.  ಎಲ್ಲಾದರು ಇರು ಹೇಗಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಎನ್ನುವ ಕವಿ ವಾಣಿಯಂತೆ, ಕನ್ನಡಿಗರು ರಾಜ್ಯ, ದೇಶದ ಗಡಿ ದಾಟಿದರೂ ಕನ್ನಡಭಿಮಾನವನ್ನ ಎಂದಿಗೂ ಮರೆಯುವುದಿಲ್ಲ.

 

ಇನ್ನು ಗಲ್ಫ್ ರಾಷ್ಟ್ರಗಳಾದ ದುಬೈ, ಕುವೈತ್, ಬಹರೈನ್ ಮತ್ತು ಒಮಾನ್ ದೇಶಗಳಲ್ಲಿ ಲಕ್ಷಾಂತರ ಭಾರತೀಯರು ನೆಲೆಸಿದ್ದಾರೆ. ಈ ಎಲ್ಲ ರಾಷ್ಟ್ರಗಳು ಭಾರತದಿಂದ ಕೇವಲ ಎರಡು ಮೂರು ಗಂಟೆಗಳ ವಿಮಾನ ಪ್ರಯಾಣದ ದೂರ ಅಷ್ಟೇ. ಬೆಂಗಳೂರಿನಿಂದ ಕೊಲ್ಕತ್ತಾ ಅಥವ ದೆಹಲಿಗೆ ವಿಮಾನದಲ್ಲಿ ಪ್ರಯಾಣಿಸಿದಷ್ಟು ದೂರ. ಇಲ್ಲಿ ಭಾರತದ ಹಲವಾರು ಮುಖ್ಯ ನಗರಗಳಿಗೆ ದಿನನಿತ್ಯ ಸಂಚರಿಸುವ ವಿಮಾನಗಳು. ಹಾಗಾಗಿ ಗಲ್ಫ್ ನಲ್ಲಿ ಇದ್ದಷ್ಟು ದಿನ ಭಾರತದಿಂದ ದೂರ ಇದ್ದಂತೆ ಅನ್ನಿಸುವುದಿಲ್ಲ. ಇಲ್ಲಿ ಮೂಲೆ ಮೂಲೆಗಳಲ್ಲೂ ಭಾರತೀಯರು ಸಿಗುತ್ತಾರೆ. ನೂರಾರು ಭಾರತೀಯ ಹೋಟೆಲ್ ಗಳಿವೆ, ಇಲ್ಲಿನ ಶಾಪಿಂಗ್ ಮಾಲ್ ನಲ್ಲಿ ನಮ್ಮ ದೇಶದಲ್ಲಿ ಸಿಗುವ ಬಹುತೇಕ ಎಲ್ಲ ವಸ್ತುಗಳು ಇಲ್ಲಿ ಸಿಗುತ್ತವೆ. ಇಲ್ಲಿ ಯಾವುದಕ್ಕೂ ಕೊರತೆಯಿಲ್ಲ.  ಬಹುತೇಕ ಎಲ್ಲ ಖಾಸಗಿ ಕಛೇರಿಗಳಲ್ಲು, ಭಾರತೀಯರೇ ಕೆಲಸ ಮಾಡುತ್ತಾರೆ. ಹೀಗಾಗಿ, ಇಲ್ಲಿನ ಪರಿಸರ ನಮ್ಮನ್ನ ಕಾಡುವ ಊರ ನೆನಪನ್ನ ದೂರ ಮಾಡುತ್ತವೆ.  ಇನ್ನು ದುಬೈ ಮತ್ತು ಒಮಾನ್ ದೇಶವಂತೂ ನಮ್ಮ ಎರಡನೇ ಮನೆಯಿದ್ದಂತೆ. ಅಷ್ಟರಮಟ್ಟಿಗೆ ದೇಶಿ ಸಂಸ್ಕೃತಿಯನ್ನ ಅಲ್ಲಿ ನಾವು ಕಾಣಬಹುದು.

 

ಭಾರತೀಯರು ಎಂದ ಮೇಲೆ, ಕನ್ನಡಿಗರು ಇರಬೇಕಲ್ಲವೆ. ಹೌದು, ಈ ಎಲ್ಲ ದೇಶಗಳಲ್ಲಿ ದಂಡಿಯಾಗಿ ಕನ್ನಡಿಗರಿದ್ದಾರೆ. ನಾನಿರುವ ಒಮಾನ್ ದೇಶದಲ್ಲಿ ಒಂದು ಅಂದಾಜಿನ ಪ್ರಕಾರ ಸುಮಾರು ಇಪ್ಪತ್ತು ಸಾವಿರಕ್ಕೂ ಹೆಚ್ಚಿನ ಕನ್ನಡಿಗರಿದ್ದಾರೆ. ಹಲವಾರು ಸಂಘ ಸಂಸ್ಥೆಗಳಿವೆ. ಸುಮಾರು ಮೂರು ದಶಕಗಳ ಹಿಂದೆಯೇ ಅಧಿಕೃತವಾಗಿ ಇಲ್ಲಿ ಮಸ್ಕತ್ ಕನ್ನಡ ಸಂಘ ಪ್ರಾರಂಭವಾಗಿದೆ. ಹಲವಾರು ಸಾಂಸ್ಕೃತಿಕ, ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳು ಇಲ್ಲಿ ನಡೆದಿವೆ. ಕಳೆದ ಹದಿನೈದು ವರ್ಷಗಳಿಂದ ಮಸ್ಕತ್ ಕನ್ನಡ ಸಂಘದ ಸಹಯೋಗ ದೊಂದಿಗೆ ಕನ್ನಡಿಗರ ಮಕ್ಕಳಿಗೆ ಕನ್ನಡ ಕಲಿಸಲಾಗುತ್ತಿದೆ. ಈ ಕಾರ್ಯವನ್ನ ಹಲವಾರು ಕನ್ನಡಿಗರು ಸ್ವಯಂ ಪ್ರೇರಿತರಾಗಿ ಯಾವುದೇ ವೇತನವಿಲ್ಲದೆ ಮಾಡುತಿದ್ದಾರೆ.

 

ಭಾರತೀಯ ಸಾಮಾಜಿಕ ವೇದಿಕೆ ಮಸ್ಕತ್ ಮತ್ತು ಸಲಾಲ್ಹ. ಸೋಹಾರ್ ಕನ್ನಡ ಬಳಗ, ಸ್ಪಂದನ, ಓಂಕಾರ ಸಮಿತಿ ಮತ್ತಿತರ ಸಂಘ ಸಂಸ್ಥೆಗಳ ವತಿಯಿಂದ ಆಯೋಜಿಸಿದ ಹಲವಾರು ಕಾರ್ಯಕ್ರಮಗಳಿಗೆ ನಾಡಿನಿಂದ ಹೆಸರಾಂತ ಕಲಾವಿದರು ಇಲ್ಲಿಗೆ ಆಗಮಿಸಿ  ಕಾರ್ಯಕ್ರಮಗಳನ್ನ ಇಲ್ಲಿ ನೀಡಿದ್ದಾರೆ.  ಈ ಕಾರ್ಯಕ್ರಮಗಳನ್ನ ಆಯೋಜಿಸಲು ಪ್ರಾಯೋಜಕ ಸಹಕಾರ ಬಹಳ ಮುಖ್ಯ. ಅದರಲ್ಲೂ  ಕರ್ನಾಟಕ ಮೂಲದ ಕನ್ನಡಿಗ ಪ್ರಾಯೋಜಕರು ಸಂಘ ಸಂಸ್ಥೆಗಳಿಗೆ ಧಾರಾಳವಾಗಿ ದಾನವನ್ನ ನೀಡಿದ್ದಾರೆ.  ಇದರ ನಿರಂತರ ಉಪಯೋಗ ಪಡೆಯುವ ಸಂಘದ ಸದಸ್ಯರುಗಳು, ಕನ್ನಡ ರಾಜ್ಯೋತ್ಸವ, ಯುಗಾದಿ ಸಂಭ್ರಮ, ದಸರಾ ಕಾರ್ಯಕ್ರಮ,  ಪಿಕ್ ನಿಕ್, ಸ್ಪೋರ್ಟ್ಸ್ ಡೇ ಯಲ್ಲಿ ಒಳಾಂಗಣ ಮತ್ತು ಹೊರಾಂಗಣ ಆಟಗಳು, ಅಂತ್ಯಾಕ್ಷರಿ, ಸಂಗೀತ ಸ್ಪರ್ಧೆ, ಹೀಗೆ  ವರ್ಷ ಪೂರ್ತಿ ಒಂದಿಲ್ಲೊಂದು ಕಾರ್ಯಕ್ರಮದಲ್ಲಿ ಭಾಗಿಯಾಗಿ ಎಲ್ಲ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದಾರೆ.

 

ಬ್ಯಾಂಕ್ ಮಸ್ಕತ್ ನ ಅನಿವಾಸಿ ವಿಭಾಗದ ಮುಖ್ಯಸ್ಥರಾದ ಶ್ರೀ ಜಿ. ರಾಮಕೃಷ್ಣ ಅವರು ಮಸ್ಕತ್ ಕನ್ನಡ ಸಂಘಕ್ಕೆ ಪ್ರಾಯೋಜಕರಾಗಿ ನೀಡಿರುವ ಕೊಡುಗೆ ಅತ್ಯಮೂಲ್ಯವಾದದ್ದು.  ಮಸ್ಕತ್ ಫಾರ್ಮಸಿ, ಎಸ್ಟಿಎಸ್ ಸಂಸ್ಥೆ, ಟಾವೆಲ್, ಮಲ್ಟಿಟೆಕ್, ಅರೀಜ್ ವೆಜಿಟೇಬಲ್ಸ್, ಅಲ್ ಮಹಾ ಪೆಟ್ರೋಲಿಯಂ ಮತ್ತಿತರ  ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಮೂಲದವರು ಪ್ರತಿವರ್ಷವೂ ದೇಣಿಗೆ ನೀಡಿ ಕನ್ನಡ ಸಂಘ ಸಂಸ್ಥೆಗಳನ್ನ ಪೋಷಿಸುತಿದ್ದಾರೆ. ಹಲವಾರು ಕನ್ನಡಿಗರು ಇಲ್ಲಿ ಉದ್ಯಮಗಳನ್ನ ಕಟ್ಟಿ ಬೆಳೆಸಿದ್ದಾರೆ. ಇಲ್ಲಿನ ಶಾಲೆಗಳಲ್ಲಿ ಸಾವಿರಾರು ಮಕ್ಕಳು ಶಿಕ್ಷಣ ಪಡೆಯುತಿದ್ದಾರೆ.

 

ಮಸ್ಕತ್ ಕನ್ನಡ ಸಂಘದ ಅಧ್ಯಕ್ಷರಾಗಿ, ಶ್ರೀ ರಾಮಚಂದ್ರರಾವ್, ಶ್ರೀ ಯೋಗಾನಂದ್, ಶ್ರೀ ಅನಿಲ್ ಭಾಸಗಿ, ಶ್ರೀ ಜಾನಕೀನಾಥ್, ಶ್ರೀ ಕರುಣಾಕರ್ ರಾವ್ ಕಾರ್ಯ ನಿರ್ವಹಿಸಿದ್ದರು. ಈಗ ಶ್ರೀ S.D.T. ಪ್ರಸಾದ್ ಆಗಿ ಆಯ್ಕೆಯಾಗಿದ್ದಾರೆ.

 

ಇನ್ನು ಕನ್ನಡದ ಸಾಹಿತ್ಯ ಸೇವೆ ಹಲವಾರು ಒಮಾನ್ ಕನ್ನಡಿಗರಿಂದ ನಿರಂತರವಾಗಿ ನಡೆಯುತ್ತಿದೆ. ಶ್ರೀ ಶಿವ ಪ್ರಕಾಶ್, ಶ್ರೀ ಸುರೇಶ್, ಶ್ರೀಮತಿ ಜಯಾ ಛಬ್ಬಿ, ಶ್ರೀಮತಿ ಸುಧಾ ಶಶಿಕಾಂತ್, ಡಾ. ನಾಗರಾಜ್, ಶ್ರೀ ನಿರಂಜನ್ ಮತ್ತಿತರು ಕಥೆ, ಲೇಖನ, ಕವಿತೆ ಬರೆಯುವ ಮೂಲಕ ವಿದೇಶದಿಂದಲೂ ಕನ್ನಡ ಸಾಹಿತ್ಯಕ್ಕೆ ತಮ್ಮ ಕೊಡುಗೆ ನೀಡುತಿದ್ದಾರೆ.  ಶ್ರೀಮತಿ ಕವಿತಾ ರಾಮಕೃಷ್ಣ ಅವರದು ಬಹುಮಖ ಪ್ರತಿಭೆ, ಸಂಸ್ಕೃತ ಶಿಕ್ಷಣ, ಯೋಗ, ತಂಜಾವೂರು ಶೈಲಿ ಚಿತ್ರಕಲೆ ಮತ್ತು ಸಾಹಿತ್ಯ ಹೀಗೆ ವಿವಿಧ ಪ್ರಾಕಾರಗಳಲ್ಲಿ ತಮ್ಮ ಪ್ರತಿಭೆಯನ್ನ ಅನಾವರಣಗೊಳಿಸಿದ್ದಾರೆ. ಅವರು ನಾ ಕಂಡ ಮಸ್ಕಟ್ ಎನ್ನುವ ಪುಸ್ತಕವನ್ನು ಬರೆದಿದ್ದಾರೆ. ಅವರ ಸಾಧನೆಯ ಬಗ್ಗೆ ಇಲ್ಲಿನ ದಿನ ಪತ್ರಿಕೆಗಳಲ್ಲಿ ಹಲವು ಬಾರಿ ವರದಿಯಾಗಿದೆ.

 

ಸಾಮಾಜಿಕ ಸೇವೆ ವಿಚಾರದಲ್ಲೂ ಕನ್ನಡಿಗರು ಹಿಂದೆ ಬಿದ್ದಿಲ್ಲ. ಒಮಾನ್ ನಲ್ಲಿ ಮತ್ತು ಊರಿನಲ್ಲಿ ಸಂಕಷ್ಟಕ್ಕೆ ಸಿಲುಕಿದವರಿಗೆ ತಮ್ಮ ಸಹಾಯ ಹಸ್ತ ಚಾಚಿದ್ದಾರೆ.  ಶ್ರೀ ನಾಗೇಶ್ ಶೆಟ್ಟಿ, ಶ್ರೀ ದಿವಾಕರ್ ಶೆಟ್ಟಿ, ಶ್ರೀ ಭೀಮ್ ನೀಲಕಂಠ ರಾವ್, ಶ್ರೀ ಪ್ರಕಾಶ್ ನಾಯ್ಕ್ ಮತ್ತು ಇನ್ನು ಹಲವರು ಎಲೆಮರೆ ಕಾಯಿಯಂತೆ ಸೇವೆ ಸಲ್ಲಿಸುತಿದ್ದಾರೆ.

 

ಒಮಾನ್ ಕನ್ನಡಿಗರು ತಾವು ನಾಡಿನಿಂದ ದೂರ ಇದ್ದರು ಸಹ, ಸಾಹಿತ್ಯ, ಸಂಗೀತ, ಸಾಂಸ್ಕೃತಿಕ, ಧಾರ್ಮಿಕ, ಆಧ್ಯಾತ್ಮ, ಯೋಗ ಮತ್ತಿತರ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ದೇಶ ಮತ್ತು ವಿದೇಶದ ನಡುವಿನ ಅಂತರವನ್ನ ಕಡಿಮೆಗೊಳಿಸುವುದುರಲ್ಲಿ ನಿರಂತರ ಪ್ರಯತ್ನ ಮಾಡುತಿದ್ದಾರೆ.

 

ಹೊಸದಾಗಿ ವಿದೇಶಕ್ಕೆ ಬಂದಾಗ ನಾವು ಮೊದಲು ಹುಡುಕುವುದು ನಮ್ಮ ದೇಶೀ ಆಹಾರ,  ನಂತರ ಅಲ್ಲಿ ನೆಲೆಸಿರುವ ಭಾರತೀಯರ ಗೆಳೆತನ, ಹಾಗೇ ನಮ್ಮ ಭಾಷೆ ಮಾತನಾಡುವ ಜನರು,  ನಮ್ಮ ಜಿಲ್ಲೆಯವರು, ಕೊನೆ ಕೊನೆಗೆ ನಮ್ಮ ಊರಿನ ನಂಟನ್ನು ಸಹ ಹುಡುಕುತ್ತಿರುತ್ತೇವೆ. ಈ ಊಟದ ವಿಷಯಕ್ಕೆ ಬಂದರೆ, ಒಮಾನ್ ನಲ್ಲಿ ಕನ್ನಡನಾಡಿನ ಹೋಟೇಲ್ ಗಳು ಕಡಿಮೆ ಏನಿಲ್ಲ. ಅನ್ನಪೂರ್ಣ, ಉಡುಪಿ ಹೋಟೆಲ್, ಒಮಾನ್ ಎಕ್ಸ್ ಪ್ರೆಸ್, ಸಾಗರ್ ರೆಸ್ಟೋರೆಂಟ್, ಗೋಕುಲ್, ಕಾಮತ್, ಇನ್ನು ಹಲವು ಹೋಟೆಲ್ ಗಳು ಇಲ್ಲಿ ಪ್ರಸಿದ್ದ. ರುಚಿಕರವಾದ ಕನ್ನಡ ನಾಡಿನ ಖಾದ್ಯಗಳನ್ನು ಇಲ್ಲಿ ಸವಿಯಬಹುದಾಗಿದೆ.

 

ಒಮಾನ್ ಮತ್ತು ಕರ್ನಾಟಕದ ನಡುವಿನ ದೂರ ತುಂಬ ಜಾಸ್ತೀ ಏನಿಲ್ಲ. ಪ್ರಪಂಚ ಭೂಪಟದಲ್ಲಿ ಅರಬ್ಬಿ ಸಮುದ್ರದ ಒಂದು ಬದಿಯಲ್ಲಿ ಕರ್ನಾಟಕವನ್ನ ನೋಡಿದರೆ, ಮತ್ತೊಂದು ಬದಿಯಲ್ಲಿ ಒಮಾನ್ ದೇಶವನ್ನ ಕಾಣಬಹುದು. ಅಂದಾಜು ಎರಡುವರೆ ಸಾವಿರ ಕಿ.ಮಿ. ದೂರ ಅಷ್ಟೇ.  ಸದ್ಯ ಕೋವಿಡ್ ನಿರ್ಭಂಧದಿಂದಾಗಿ ಭಾರತ ಮತ್ತು ಒಮಾನ್ ನಡುವಿನ ಸಂಚಾರಕ್ಕೆ ಕಡಿವಾಣ ಬಿದ್ದಿದೆ. ಸಾಮಾನ್ಯ ದಿನಗಳಲ್ಲಿ ಮಸ್ಕತ್ ನಿಂದ ಬೆಂಗಳೂರಿಗೆ ಪ್ರತಿ ದಿನ ಒಮಾನ್ ಏರ್ ಸಂಚರಿಸುತ್ತದೆ. ಏರ್ ಇಂಡಿಯಾದಿಂದ ವಾರಕ್ಕೆರೆಡು ಬಾರಿ ಬೆಂಗಳೂರು ಮತ್ತು  ಮಂಗಳೂರಿಗೆ ವಿಮಾನ ಸೌಲಭ್ಯವಿದೆ. ಅದಲ್ಲದೆ ಕರ್ನಾಟಕ ವನ್ನು ತಲುಪಲು ಪಕ್ಕದ ಕೇರಳ, ಗೋವಾ, ಹೈದರಬಾದ್, ಮುಂಬಯಿ ಚೆನ್ನೈ ಮುಂತಾದ ವಿವಿಧ ಮಾರ್ಗಗಳ ಮುಖಾಂತರ ವಿವಿಧ ನಗರಗಳಿಗೆ ಪ್ರತಿನಿತ್ಯ ಹಲವಾರು ವಿಮಾನಗಳು ಸಂಚರಿಸುತ್ತವೆ. ಈಗ ಹೇಳಿ, ಇಷ್ಟೆಲ್ಲ ಸೌಕರ್ಯಗಳಿದ್ದ ಮೇಲೆ ಕರ್ನಾಟಕದಿಂದ ನಾವೇನಾದರು ದೂರ ಇದ್ದಂತೆ ಅನಿಸುವುದೇ? ಖಂಡಿತಾ ಇಲ್ಲ.

 

ಒಮಾನ್ ಒಂದು ಸುಂದರವಾದ ದೇಶ. ನೈಸರ್ಗಿಕವಾಗಿ ನಿರ್ಮಿತವಾದ ಹಲವಾರು ಪ್ರವಾಸಿ ತಾಣಗಳು ಇಲ್ಲಿವೆ. ಇಲ್ಲಿ ಹಲವಾರು ಹಿಂದಿ, ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡ ಚಲನ ಚಿತ್ರಗಳಿಗಾಗಿ ಶೂಟಿಂಗ್ ಮಾಡಲಾಗಿದೆ. ಯುರೋಪ್ ನಿಂದ ಸಾವಿರಾರು ಜನ ಇಲ್ಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಾರೆ.

ಬುಧವಾರ, ಜುಲೈ 21, 2021

ಚಂದ್ರನ ಒಂದು ತುಂಡು ಇಲ್ಲಿ ಬಿದ್ದಿತಂತೆ

ಚಂದ್ರನ ಒಂದು ತುಂಡು ಇಲ್ಲಿ ಬಿದ್ದಿತಂತೆ.

 ಪಿ.ಎಸ್.ರಂಗನಾಥ. ಮಸ್ಕತ್





 

ಅದು ಸಮತಟ್ಟವಾದ ಭೂಮಿ,  ಅಲ್ಲೊಂದು ಕಡೆ ಮಾತ್ರ  ಸುಮಾರು 50 x 70 ಮೀಟರ್ ಸುತ್ತಳತೆ ಮತ್ತು 20 ಮೀಟರ್ ಆಳದ ದೊಡ್ಡದಾದ ಕುಳಿ. ಆ ಜಾಗವನ್ನ ಕಂಡೊಡನೆ ನಮಗನಿಸುವುದು, ಇಲ್ಲಿ ಯಾವುದೋ ಒಂದು ಆಕಾಶಕಾಯ ಮೇಲಿನಿಂದ ಬಿದ್ದಹಾಗಿದೆಯಲ್ಲ? ಅದು ಬಿದ್ದರೆ  ಉಂಟಾಗುವ ಒಂದು ತಗ್ಗಿನ ಹೊಂಡದಂತೆ ಇದೆಯಲ್ಲ ಆ ಜಾಗ!!!

ಚಂದ್ರನ ತುಂಡೋ, ಧೂಮಕೇತುವೋ ಅಥವ ಯಾವುದೋ ಒಂದು ಆಕಾಶಕಾಯ ಬಿದ್ದಿರಬಹುದೇನೋ ಎಂದು ಅನಿಸುತ್ತೆ. ಅಂತಹ ವಸ್ತು ಬಿದ್ದರೆ ಹೇಗಿರಬಹುದು ಎಂದು ನೋಡುವುದಕ್ಕೆ ಇದು ಒಂದು ಸೂಕ್ತವಾದ ಸ್ಥಳ. ಆ ಜಾಗವನ್ನೊಮ್ಮೆ ನೋಡಿದರೆ, ವಾವ್ ಎನ್ನುವ ಉದ್ಗಾರ ಬರದೇ ಇರದು. ಕೆಲವೆಡೆ ಬಟಾ ಬಯಲು ಪ್ರದೇಶ, ಪಕ್ಕದಲ್ಲಿ ಗುಡ್ಡದ ಸಾಲು, ಸ್ವಲ್ಪ ಮುಂದೆ ವಿಶಾಲವಾದ ಅರಬ್ಬಿ ಸಮುದ್ರ. ಹೀಗೇ ಎಲ್ಲವೂ ಒಟ್ಟಿಗೆ ನೋಡಿದರೆ, ದಿನನಿತ್ಯದ ಜಂಜಾಟದ ನಡುವೆ ಈ ನಯನ ಮನೋಹರ ಪ್ರದೇಶ ಕಣ್ತಂಪು ಮಾಡುವುದು ಖಂಡಿತ.

 

ಅಂದ ಹಾಗೆ ಇದು ಇರುವುದು ಒಮಾನ್ ದೇಶದಲ್ಲಿ. ರಾಜಧಾನಿ ಮಸ್ಕತ್ ನಿಂದ ಸೂರ್ ರಸ್ತೆಯಲ್ಲಿ ಕುರಿಯತ್ ಮಾರ್ಗವಾಗಿ ಸುಮಾರು 130 ಕಿ.ಮಿ. ದೂರದಲ್ಲಿ "ಬಿಮ್ಮ ಸಿಂಕ್ ಹೋಲ್" ಎಂಬಲ್ಲಿದೆ ಈ ಸ್ಥಳ. ಮಸ್ಕತ್ ನಿಂದ ಸೂರ್ ರಸ್ತೆ ಮಾರ್ಗವಾಗಿ ಸಂಚರಿಸಿದರೆ ದಿಬಾಬ್ ಮತ್ತು ಹವಿಯತ್ ನಜ್ಮ್ ಪಾರ್ಕ್ ಸೂಚನಾ ಫಲಕ ಕಾಣಿಸುತ್ತೆ. ಪಾರ್ಕ್ ಒಳಗೆ ಸ್ವಲ್ಪ ನಡೆದು ಹೋದರೆ ಅತಿ ಸುಂದರ ಆಳವಾದ ನೀರಿನ ಹೊಂಡ ಕಾಣಿಸುತ್ತೆ. ನೀಲಿ ಬಣ್ಣದ ನೀರು, ಸ್ವಲ್ಪ ಹಸಿರು ಮಿಶ್ರಿತ ಹಾಗೂ ಕಡು ನೀಲಿ ಪದರ ದಂತೆ ಕಾಣುವ ನೀರು ಬಹಳ ಆಕರ್ಷಕ ವಾಗಿದೆ.

 

ಅರಬ್ಬೀ ಸಮುದ್ರ ತೀರದಿಂದ ಸುಮೂರು 600 ಮೀಟರ್ ದೂರದಲ್ಲಿ ರುವುದರಿಂದ, ಸಮುದ್ರದ ಉಪ್ಪು ನೀರು ಹಾಗು ಇಲ್ಲಿನ ಅಂತರ್ಜಲ ಎರಡು ಮಿಶ್ರಿತ ವಾಗಿರುವುದರಿಂದ ನೀರು ತುಂಬಾ ಆಕರ್ಷಕ ಬಣ್ಣ ದಲ್ಲಿ ಕಾಣುತ್ತೆ.

 

ಸ್ಥಳೀಯರ ಪ್ರಕಾರ ಇಲ್ಲಿ ಆಕಾಶಕಾಯವೊಂದು ಬಿದ್ದಿದೆ.  ಕೆಲವರು ಚಂದ್ರನ ಒಂದು ತುಂಡು ಬಿದ್ದು ಹೀಗೆ ಆಗಿದೆ ಎನ್ನುತ್ತಾರೆ. ಆದರೆ ಭೂಗರ್ಭ ಶಾಸ್ತ್ರಜ್ನರ ಪ್ರಕಾರ ಇಲ್ಲಿರುವ ಅತಿ ಹೆಚ್ಚು ಸುಣ್ಣದಕಲ್ಲು ಗಳು ಸವೆದು ಸವೆದು ನೆಲದ ಪದರ ಜರುಗಿ ಭೂಮಿ ಕುಸಿದಿರಬಹುದೆಂದು ಅಂದಾಜಿಸಿದ್ದಾರೆ. ಒಮಾನ್ ನಲ್ಲಿ ಸುಣ್ಣದಕಲ್ಲಿನ ಪ್ರದೇಶಗಳನ್ನ ಯಥೇಚ್ಚವಾಗಿ ಕಾಣಬಹುದು.  ಹೀಗಾಗಿ ಹಲವೆಡೆ, ಭೂ ಸವಕಳಿಯಂತಹ ಪ್ರದೇಶಗಳು ಇಲ್ಲಿ ಸಿಗುತ್ತವೆ. ಇದೊಂದು ನೈಸರ್ಗಿಕ ಕ್ರಿಯೆ. ಸಾವಿರಾರು ವರ್ಷಗಳಿಂದ ನಡೆದಿರಬಹುದಾಗಿದೆ.

 

ಒಮಾನ್ ನಲ್ಲಿ ನಿಸರ್ಗ ನಿರ್ಮಿತ ಪ್ರವಾಸಿ ತಾಣಗಳಿಗೆ ಕೊರತೆ ಏನು ಇಲ್ಲ. ಪಕ್ಕದ ದುಬೈ ನಲ್ಲಿ ಮಾನವನಿರ್ಮಿತ ಪ್ರವಾಸಿ ತಾಣಗಳಿದ್ದರೆ, ಒಮಾನ್ ನಲ್ಲಿ  ನೋಡೋದಿಕ್ಕೆ ನೈಸರ್ಗಿಕ ನಿರ್ಮಿತ ಹಲವಾರು ಪ್ರದೇಶಗಳು ಇವೆ. ಇವುಗಳಲ್ಲಿ  ಪ್ರಸಿದ್ದ ವಾದ ಒಂದು ಪ್ರವಾಸಿ ತಾಣ "ಬಿಮ್ಮ ಸಿಂಕ್ ಹೋಲ್".

 

ಪ್ರವಾಸಿಗರು ಈ ಹೊಂಡದಲ್ಲಿ ಈಜುತ್ತಾರೆ, ಡೈವ್ ಹೊಡೆಯುತ್ತಾರೆ, ಆಟವಾಡುತ್ತಾರೆ, ದಡದಲ್ಲಿರುವ ನೀರಿನಲ್ಲಿ ಕಾಲಿಟ್ಟು ಸಣ್ಣ ಸಣ್ಣ ಮೀನುಗಳಿಂದ  ಕಾಲ್ಬೆರಳುಗಳನ್ನು ಕಚ್ಚಿಸಿಕೊಳ್ಳುತ್ತಾರೆ, ಇದು ಒಂಥರಾ ದುಡ್ಡು ಕೊಡದೆ ಫಿಶ್ ತೆರಪಿ ಮಾಡಿಸಿ ಕೊಂಡ ಹಾಗಿರುತ್ತೆ.

 

ಸಿಂಕ್ ಹೋಲ್ ನ ಒಳಗೆ ಇಳಿಯಲು ಮೆಟ್ಟಿಲುಗಳನ್ನು ಮಾಡಲಾಗಿದೆ, ಮೇಲೆ ಸುರಕ್ಷೆ ಗಾಗಿ 4 ಅಡಿಯ ರಕ್ಷಣಾ ಗೋಡೆ ಯಿದೆ. ಸುಸಜ್ಜಿತ  ಶೌಚಾಲಯ ಸಹಿತ ಉದ್ಯಾನವನ, ಹತ್ತಿರದಲ್ಲಿ ಸುಂದರ ಸಮುದ್ರ ತೀರ, ಒಟ್ಟಿನಲ್ಲಿ ಸುಂದರ ಸಂಜೆ ಕಳೆಯಲು ಹೇಳಿ ಮಾಡಿಸಿದ ಜಾಗವಿದು.

 

ಬಹುತೇಕ ವಿದೇಶಿ ಪ್ರವಾಸಿಗರು ಅದರಲ್ಲೂ ಯುರೋಪಿಯನ್ನರು ಇಲ್ಲಿಗೆ ಅತಿ ಹೆಚ್ಚು ಭೇಟಿ ಕೊಡುತ್ತಾರೆ, ಇಲ್ಲಿನ ನಗರ ಪಾಲಿಕೆ ಯವರು ವಿಹಾರಕ್ಕಾಗಿ ಒಂದು  ಉದ್ಯಾನವನ ಮಾಡಿದ್ದಾರೆ.  ವಾರ ಪೂರ್ತಿ ಕೆಲಸದ ದಣಿವನ್ನು ನಿವಾರಿಸುಕೊಳ್ಳುವುದಕ್ಕೆ ಒಂದು ದಿನದ ಹೊರ ಸಂಚಾರವನ್ನು ಯೋಜಿಸಿದಲ್ಲಿ,  ಹತ್ತಿರದಲ್ಲಿ ವಾದಿ ಶಾಬ್, ವಾದಿ ತಿವಿ ಸ್ಥಳಗಳಿದ್ದು, ಮಾರ್ಗ ಮಧ್ಯದಲ್ಲಿ ಸಿಂಕ್ ಹೋಲ್ ಗೆ ಬೇಟಿ ನೀಡುವ ಯೋಜನೆ ಹಾಕಿ ಕೊಂಡರೆ ಒಂದು ದಿನದ ಪ್ರವಾಸ ಮನಕ್ಕೆ ಮುದ ನೀಡುವುದರಲ್ಲಿ ಸಂಶಯವಿಲ್ಲ.

 

ಒಮಾನ್ ದೇಶಕ್ಕೆ ಭೇಟಿ ನೀಡಿದಾಗ ಈ ಸಿಂಕ್ ಹೋಲ್ ನೋಡುವುದನ್ನ ಮರೆಯಬೇಡಿ. ಒಮಾನ್ ನಲ್ಲಿ ಏಪ್ರಿಲ್ ನಿಂದ ಸೆಪ್ಟೆಂಬರ್ ವರೆಗೆ ಬೇಸಿಗೆ ಕಾಲವಿರುತ್ತದೆ. ನಂತರ ನಾಲ್ಕೈದು ತಿಂಗಳು ತಂಪಾದ ಹವಾಮಾನ ವಿರುತ್ತದೆ. ಹೀಗಾಗಿ ಅಕ್ಟೋಬರ್ ನಿಂದ ಮಾರ್ಚ್ ನ ಮಧ್ಯೆ ಯಾವಾಗಲಾದರೊಮ್ಮೆ ಭೇಟಿ ನೀಡಿದರೆ ಇನ್ನೂ ಚೆನ್ನ. ಇಲ್ಲದೆ ಇದ್ದರೆ, ಈ ಬಿರು ಬೇಸಿಗೆ ಸೆಖೆ ನಮ್ಮ ಮೈಯಲ್ಲಿರುವ ನೀರನ್ನೆಲ್ಲ ಹಿಂಡಿ ಬೆವರಿನ ರೂಪದಲ್ಲಿ ಹೊರ ಹಾಕುವುದು ನಿಶ್ಚಿತ.

 

ಪ್ರಪಂಚದ ಕೆಲವೇ ಕೆಲವು ಇಂತಹ ಸಿಂಕ್ ಹೋಲ್ ಗಳಲ್ಲಿ ಒಮಾನ್ ದೇಶದ "ಬಿಮ್ಮ ಸಿಂಕ್ ಹೋಲ್" ಸಹ ಇದರಲ್ಲಿ ಒಂದು ಎನ್ನುವುದು ಒಮಾನಿಗಳಿಗೆ ಹೆಮ್ಮೆಯಿದೆ. ಇದು ಅತಿ ಪುರಾತನವಾದದ್ದರಿಂದ, ಇಲ್ಲಿನ ಸರ್ಕಾರ ಇದನ್ನು ಸಂರಕ್ಷಿಸಿ, ಒಮಾನ್ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಇದನ್ನು ಸೇರಿಸಲಾಗಿದೆ.

 

ಪ್ರಪಂಚದಲ್ಲಿರುವ ಕೆಲ ದೊಡ್ಡದಾದ ಸಿಂಕ್ ಹೋಲ್ ಗಳು ಈ ಕೆಳಗಿನಂತಿವೆ.

 

1. ಈಜಿಪ್ಟ್ ದೇಶದ ಖಟ್ಟಾರ ಡಿಪ್ರೆಶನ್ (Qattara Depression, West of Cairo, Egypt)

2. ರಷ್ಯ ದೇಶದ ಬೆರೆಜ಼ಿಕಿ (Berezniki, Russia)

3. ಗ್ವಾಟಿಮಾಲ (Guatemala City)

4. ಟೆಕ್ಸಾಸ್ ನ ಡೆವಿಲ್ ಸಿಂಕ್ ಹೋಲ್ (Texas Devil’s Sinkhole)

5. ವೆನೆಜ಼ುವೆಲಾ ಸರಿಸಾರಿನಾಮ ಸಿಂಕ್ ಹೋಲ್ಸ್,  (Sarisarinama Sinkholes, Venezuela)

6.  ಒಮಾನ್ ಬಿಮ್ಮ ಸಿಂಕ್ ಹೋಲ್ (Bimmah sinkhole, Oman)

7. ಫ್ಲೋರಿಡಾದ ಆಗ್ರಿಕೋ ಜಿಪ್ಸಮ್ ಸ್ಟಾಕ್ (Agrico Gypsum Stack, Florida)

8. ಮ್ಯಾಕುಂಗಿ ಸಿಂಕ್‌ಹೋಲ್, ಪೆನ್ಸಿಲ್ವೇನಿಯಾ (Macungie Sinkhole, Pennsylvania)

9. ಡೈಸೆಟ್ಟಾ ಸಿಂಕ್‌ಹೋಲ್, ಟೆಕ್ಸಾಸ್ (Daisetta Sinkhole, Texas)

ಸೋಮವಾರ, ಜೂನ್ 14, 2021

ಅರಬ್ಬರ ಮಲೆನಾಡು.

ಲೇಖನ: ಪಿ.ಎಸ್.ರಂಗನಾಥ ಮಸ್ಕತ್.

 


ಎಲ್ಲರಿಗೂ ಗೊತ್ತಿರುವಂತೆ, ಅರಬ್ಬರು ವಾಸಿಸುವ ಅರೇಬಿಯಾ ಸುತ್ತಮುತ್ತಲೂ, ಬಹುತೇಕ ಭೂ ಪ್ರದೇಶ ಮರುಭೂಮಿಯಿಂದ ಕೂಡಿದೆ, ಇಲ್ಲಿ ತೈಲ ನಿಕ್ಷೇಪ ಗಳಿವೆ, ಯಥೇಚ್ಚವಾಗಿ ಬೆಳೆಯುವ ಖರ್ಜೂರದ ಮರಗಳಿವೆ,  ಅತಿ ಹೆಚ್ಚು ಬಿಸಿಲು ಮತ್ತು  ಮಳೆ ಕಡಿಮೆ ಇರುವ ಜಾಗ ಸಹ ಇದು. ಸ್ವಾಭಾವಿಕವಾಗಿ ನೀರಿನ ಕೊರತೆ ಇಲ್ಲಿದೆ ಎನ್ನುವುದು ಗೊತ್ತಿದೆ. ಭಾರತದಂತೆ ವೈವಿಧ್ಯಮಯವಾದ ವಾತಾವರಣವಿಲ್ಲ ಎನ್ನುವುದು ತಿಳಿದಿರುವಂತಹದ್ದೆ. ಇಲ್ಲಿ ನಾವು ಕಾಣುವುದು ಒಂದು ಬೇಸಿಗೆ ಕಾಲ ಇನ್ನೊಂದು ಚಳಿಗಾಲ (ಕಡಿಮೆ ಬೇಸಿಗೆ ಕಾಲ ಅಂತನೂ ಕರಿಯಬಹುದು). ಈ ಬೇಸಿಗೆ ಸಮಯದಲ್ಲಿ (ಏಪ್ರಿಲ್ ರಿಂದ ಸೆಪ್ಟೆಂಬರ್) ಅತ್ಯಧಿಕ ತಾಪಮಾನ ಇಲ್ಲಿ ದಾಖಲಾಗುತ್ತದೆ. ಹಲವಾರು ಬಾರಿ ಐವತ್ತು ಡಿಗ್ರಿ ಸೆಲ್ಶಿಯಸ್ ಅನ್ನು ದಾಟಿ ಬಿಡುತ್ತದೆ. ಭಾರತದಲ್ಲಿ, ಮಾರ್ಚ್ ನಿಂದ ಮೇ ವರೆಗೂ ಬೇಸಿಗೆಕಾಲವಿದ್ದರೆ,  ಇಲ್ಲಿ ಏಪ್ರಿಲ್ ರಿಂದ ಸೆಪ್ಟೆಂಬರ್ ಅಂತ್ಯದವರೆಗೂ ಕಡು ಬೇಸಿಗೆ ಯಿರುತ್ತದೆ, ಅಕ್ಟೋಬರ್ ತಿಂಗಳಿನಿಂದ ತಾಪಮಾನ ಕಡಿಮೆಯಾಗುತ್ತ ಬರುತ್ತದೆ. ಇಲ್ಲಿ ಮಳೆ ಬಹಳ ಅಪರೂಪ. ಇಂತಹ ಬಿರುಬಿಸಿಲಿನ ಜಾಗದಲ್ಲಿ ಇರುವ ಗಿಡ ಮರಗಳಿಗೆ ಸಾಕಷ್ಟು ನೀರನ್ನು ಕೊಡದೆ ಹೋದರೆ, ಅವು ಒಣಗಿ ಹೋಗುತ್ತವೆ.

 

ವಸ್ತು ಸ್ಥಿತಿ ಹೀಗಿರುವಾಗ ಇಲ್ಲಿ ಹೇಗೆ ಮಲೆನಾಡು ಸೃಷ್ಟಿಯಾಗುತ್ತದೆ? ಅದು ಹೇಗೆ ಸಾಧ್ಯ? ಎಲ್ಲೋ ಒಂದು ಕಡೆ ಕೃತಕ ಅರಣ್ಯ ಸೃಷ್ಟಿಸಿ ಅದನ್ನ ಮಲೆನಾಡು ಅಂತ ತಮಾಷೆ ಮಾಡ್ತಿದ್ದೀರಿ, ಎಂದು ನಿಮಗನಿಸಬಹುದು. ಯಾಕೆಂದರೆ, ಮಲೆನಾಡು ಎಂದಾಕ್ಷಣ ನಮ್ಮ ಕಣ್ಮುಂದೆ ಪಶ್ಚಿಮಘಟ್ಟ, ಹಲವಾರು ನದಿಗಳು, ನೂರಾರು ಜಲಪಾತಗಳು ಸದಾ ಹಸಿರು ತುಂಬಿರುವ ಗಿರಿಶ್ರೇಣಿಗಳು, ದಟ್ಟ ಕಾನನಗಳು ಸುಳಿಯುತ್ತವೆ. ಆದರೆ ಈ ಹಸಿರಿಗು ಮತ್ತು ಮರಳುಗಾಡಿಗು ಎತ್ತಣಿಂದೆತ್ತಣ ಸಂಬಂಧ?

 

ಅಂತಹ ನೈಸರ್ಗಿಕ ನಿರ್ಮಿತ ಮಲೆನಾಡಿನಂತಹ ರಮ್ಯ ರಮಣೀಯ ಪ್ರದೇಶ ಒಮಾನ್ ದೇಶದ ದೋಫಾರ್ ಪ್ರಾಂತ್ಯದಲ್ಲಿದೆ. ಇದು ಅರಬ್ಬರ ಸ್ವರ್ಗ ಎಂದೇ ಕರೆಯಲಾಗುತ್ತದೆ. ಜೂನ್ ತಿಂಗಳಿಂದ ಆಗಸ್ಟ್ ಕೊನೆಯವರೆಗೂ ಮುಂಗಾರು ಸಮಯದಲ್ಲಿ ಈ ಪ್ರಾಂತ್ಯದಲ್ಲಿ ಸುಮಾರು 10,000 ಚದರ ಕಿ.ಮಿ. ಕ್ಕೂ ಹೆಚ್ಚು ಜಾಗ  ನಮ್ಮ ಕರ್ನಾಟಕ ಕುದುರೆಮುಖದ ಬೆಟ್ಟಗಳ ಶ್ರೇಣಿಯಂತೆ ಹಚ್ಚ ಹಸಿರಿನಿಂದ ಆವೃತ್ತವಾಗುತ್ತದೆ. ಆ ಸ್ಥಳಗಳನ್ನ ನೋಡುತಿದ್ದಾಗ ನಾವು ಮಲೆನಾಡಿನ ಚಿಕ್ಕಮಗಳೂರು ಜಿಲ್ಲೆ ಅಥವ ಕೊಡಗಿನಲ್ಲಿದ್ದೇವೆ ಎನ್ನುವಂತೆ ಭಾಸವಾಗುತ್ತದೆ. ಬೆಟ್ಟಗಳ ರಾಶಿಯಲ್ಲಿ, ಎಲ್ಲೆಲ್ಲೂ ಹಚ್ಚ ಹಸಿರು. ಬೆಟ್ಟಗಳ ಬದಿಯಲ್ಲಿಯೇ ಇರುವ ವಿಶ್ವದರ್ಜೆಯ ಕಡಲ ತೀರಗಳು. ಅಲ್ಲಲ್ಲಿ ಹರಿಯುವ ನದಿಗಳು, ಚಿಕ್ಕ ಪುಟ್ಟ ಜಲಪಾತಗಳು, ನದಿ ತೊರೆಗಳು, ಮುಂತಾದವೆಲ್ಲವೂ ನಮ್ಮ ಕರಾವಳಿ ಮತ್ತು ಮಲೆನಾಡನ್ನು ಜ್ಞಾಪಿಸುತ್ತವೆ.  

 

ದೋಫರ್ ಪ್ರಾಂತ್ಯದ ಪ್ರಮುಖ ಪಟ್ಟಣ ಸಲಾಲ್ಹ ಎನ್ನುವ ನಗರ. ಇದು ಒಮಾನ್ ದೇಶದ ಎರಡನೇ ವಾಣಿಜ್ಯ ನಗರ. ರಾಜಧಾನಿ ಮಸ್ಕತ್ ನಿಂದ 1,000 ಕಿಲೋ ಮೀಟರ್ ದೂರದಲ್ಲಿದೆ. ಇಲ್ಲಿ ಕರೀಫ್ ಸೀಸನ್ ಎಂದು ಕರೆಯಲ್ಪಡುವ ಮುಂಗಾರು ಹಬ್ಬ ಬಹು ಜನಪ್ರಿಯ. ಸುತ್ತ ಮುತ್ತಲಿನ ಅರಬ್ ದೇಶಗಳಾದ ಸೌದಿ ಅರೇಬಿಯ, ಯುಎಇ, ಕತಾರ್, ಬಹ್ರೇನ್, ಕುವೈತ್ ಮತ್ತಿತರ ಅರಬ್ ದೇಶಗಳ ಪ್ರಜೆಗಳು ಬೇಸಿಗೆಯಲ್ಲಿ, ಅಂದರೆ ಜೂನ್ ನಿಂದ ಸೆಪ್ಟೆಂಬರ್ ವರೆಗೂ, ಅಲ್ಲಿನ ಬಿಸಿ ವಾತಾವರಣದಿಂದ ತಪ್ಪಿಸಿಕೊಳ್ಳಲು ಸಲಾಲ್ಹದಲ್ಲಿನ ತಂಪಾದ ಹವೆ ಮತ್ತು ವಾತಾವರಣವನ್ನು ಸವಿಯಲು  ಭೇಟಿಯಿಡುತ್ತಾರೆ. ಪ್ರವಾಸಿಗರ ಬೇಸಿಗೆ ರಜೆ ಕಳೆಯಲು ಮತ್ತು ಹಿತಕರವಾದ ಹವಾಮಾನ ಆನಂದಿಸಲು ದೋಫಾರ್ ಗವರ್ನ್ಮೆಂಟ್ ಆಫ್ ಸಲಾಲ ಉತ್ಸವ ನಡೆಸಿ  ಸಂಗೀತ , ನೃತ್ಯ , ಚಿತ್ರಕಲಾ ಪ್ರದರ್ಶನಗಳನ್ನು ಹಮ್ಮಿಕೊಳ್ಳುವ ಮೂಲಕ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ದೂರದೂರುಗಳಿಂದ ಪ್ರವಾಸಿಗರು ಇಲ್ಲಿ ಬಂದು ಟೆಂಟ್ ಗಳನ್ನು ಹಾಕಿಕೊಂಡು ತಿಂಗಳುಗಳ ಕಾಲ ಇಲ್ಲಿ ವಾಸಿಸುತ್ತ, ಸುತ್ತಮುತ್ತಲಿನ ಎಲ್ಲ ಪ್ರವಾಸಿತಾಣಗಳಿಗೆ ಭೇಟಿ ನೀಡಿ ತಮ್ಮ ರಜಾದಿನಗಳನ್ನ ಕಳೆಯುತ್ತಾರೆ. ಈ ಮೂರುನಾಲ್ಕು ತಿಂಗಳುಗಳು ಇಲ್ಲಿನ ಪ್ರವಾಸಿಗರಿಗೆ ಇದು ಸ್ವರ್ಗವೇ ಸರಿ.

 

ಒಮಾನ್ ದೇಶದ ದಕ್ಷಿಣ ಭೂಭಾಗದಲ್ಲಿ ಹಿಂದೂ ಮಹಾಸಾಗರಕ್ಕಂಟಿಕೊಂಡಿರುವ ಈ ಪ್ರದೇಶ, ನಮ್ಮ ಭಾರತದಲ್ಲಿ ಮುಂಗಾರು ಪ್ರಾರಂಭಗೊಳ್ಳುವ  ಸಮಯದಲ್ಲಿ ಇಲ್ಲೂ ಸಹ ಮುಂಗಾರು ಪ್ರಾರಂಭವಾಗುತ್ತದೆ. ಮುಂಗಾರು ಮಾರುತಗಳು ಈ ಪ್ರದೇಶದ ಮೂಲಕ ಹಾದುಹೋಗುವುದರಿಂದ, ಇಲ್ಲಿನ ಮರಗಿಡಗಳೆಲ್ಲವೂ ಜೀವಕಳೆ ಪಡೆಯುತ್ತವೆ. ಮೋಡ ಮುಚ್ಚಿದ ವಾತಾವರಣ. ಸತತವಾಗಿ ಬೀಳುವ ಇಬ್ಬನಿ, ತಂಪಾದ ಗಾಳಿ. ಇವೆಲ್ಲವೂ ಸೇರಿ ಈ ಭೂ ಪ್ರದೇಶದ ಎಲ್ಲ ಗಿಡಮರಗಳನ್ನ ಹಚ್ಚ ಹಸಿರಾಗಿಸುತ್ತದೆ.  ಪ್ರತಿ ವರ್ಷ ಮಳೆಯಾಗುತ್ತದೆ ಎನ್ನುವ ಭರವಸೆ ಇಲ್ಲ.

ಮುಂಗಾರು ಕಳೆದ ನಂತರ ಈ ಹಚ್ಚ ಹಸಿರಿನ ಗಿಡ ಮರಗಳು, ಹುಲ್ಲು ಎಲ್ಲವೂ ಒಣಗಿಹೋಗುತ್ತವೆ. ಕರೀಫ್ ಸೀಸನ್ ನಲ್ಲಿ ನೋಡಿದ ಹಸಿರು ಪ್ರದೇಶ ಒಮ್ಮೆಲೆ ಅಕ್ಟೋಬರ್ ತಿಂಗಳಲ್ಲಿ ಒಣ ಹುಲ್ಲಿನಂತಾಗುತ್ತದೆ. ಯಾವಾಗಲು ಮಂಜು ಕವಿತಿದ್ದ ರಸ್ತೆಗಳು ಇದ್ದಕ್ಕಿದ್ದ ಹಾಗೆ ಬಟಾ ಬಯಲಿನಂತೆ ಕಾಣತೊಡಗುತ್ತದೆ. ಅಲ್ಲಲ್ಲಿ ಹರಿಯುತಿದ್ದ ಚಿಕ್ಕ ಚಿಕ್ಕ ಝರಿಗಳು ಬತ್ತತೊಡಗುತ್ತವೆ.  ಎಲ್ಲ ಗಿರಿಶಿಖಿರಗಳು ಬೋಳು ಗುಡ್ಡದಂತೆ ಕಾಣುತ್ತವೆ. ಅಲ್ಲಿಗೆ ಕರೀಫ್ ಸೀಸನ್ ಮುಗಿಯುತ್ತದೆ. ಮುಂದಿನ ಜೂನ್ ತಿಂಗಳುವರೆಗೂ ಪ್ರವಾಸಿಗರು ಇತ್ತ ತಲೆ ಹಾಕುವುದು ಕಡಿಮೆ.

 

ಕರೀಫ್ ಸಮಯದಲ್ಲಿ ಬೆಟ್ಟ ಗುಡ್ಡಗಳ ಮೇಲೆ, ಘಟ್ಟ ಪ್ರದೇಶದಲ್ಲಿ 8 - 10 ಡಿಗ್ರಿ ಉಷ್ಣಾಂಶ ವಿದ್ದರೆ, ಬೆಟ್ಟ ಇಳಿದು ಸಲಾಲಃ ನಗರಕ್ಕೆ ಬಂದರೆ, 20 -28 ಡಿಗ್ರಿಯಷ್ಟು ತಾಪಮಾನದ ಅನುಭವ ವಾಗುತ್ತದೆ. ಇದೇ ಸಮಯದಲ್ಲಿ ಒಮಾನ್ ದೇಶ ಮತ್ತು ಇತರೆ ಅರಬ್ ದೇಶಗಳಲ್ಲಿ 45-50 ಡಿಗ್ರಿ ತಾಪಮಾನವಿರುತ್ತದೆ.

ಅರಬ್ಬಿ ಸಮುದ್ರದ ಕಿನಾರೆಯಲ್ಲಿರುವ ಸಲಾಲಃ ಪಟ್ಟಣ ನಮ್ಮ ಪಶ್ಚಿಮ ಘಟ್ಟದ ಕೆಳಗಿನ ಒಂದು ನಗರದಂತೆ ಇದೆ. ಇಲ್ಲಿನ ತೋಟಗಳು, ಹೊಲಗಳು, ಮಂಡ್ಯ ಜಿಲ್ಲೆಯಲ್ಲಿರುವಂತೆ  ಕಾಣುತ್ತದೆ. ಸಲಾಲಃ ಬಾಳೆಹಣ್ಣು, ಎಳೆನೀರು, ಹಾಗೂ ಇನ್ನಿತರೆ ತರಕಾರಿಗಳು ಇಲ್ಲಿ ಪ್ರಸಿದ್ದ. ತೆಂಗಿನ ಮರಗಳು ಮತ್ತು ಬಾಳೆಗಿಡಗಳನ್ನ ಯಥೇಚ್ಚವಾಗಿ ಕಾಣ ಬಹುದು. ಈ ಪ್ರದೇಶ ದಲ್ಲಿ ಬೋರ್ವೆಲ್ ಪಂಪ್ ಗಳಿಂದ ವ್ಯವಸಾಯ ಮಾಡುವುದರಿಂದ ವರ್ಷ ಪೂರ್ತಿ ಸಲಾಲಃ ಭಾಗದಲ್ಲಿ ಹಚ್ಚ ಹಸಿರನ್ನ ಕಾಣಬಹುದು

 

ಸಲಾಲಃ ಬಳಿಯಿರುವ ವಾದಿ ದರ್ಬಾತ್ ನಲ್ಲಿ ಜಲಪಾತವನ್ನ ಕಾಣಬಹುದು. ಈ ಜಲಪಾತದಲ್ಲಿ ಯಾವಾಗಲೂ ನೀರು ಹರಿಯುವುದಿಲ್ಲ, ಆದರೆ ಧೋಫಾರ್ ಬೆಟ್ಟ ಗುಡ್ಡಗಳಲ್ಲಿ ಅತಿ ಹೆಚ್ಚು ಮಳೆಯಾದಾಗ ಇಲ್ಲಿ ನೀರನ್ನು ನಾವು  ಕಾಣಬಹುದು. ಸಾಮನ್ಯವಾಗಿ "ಕರೀಫ್ ಸೀಸನ್" ನಲ್ಲಿ ಮಾತ್ರ ಸ್ವಲ್ಪ ಜಾಸ್ತಿ ಮಳೆಯಾಗುತ್ತದೆ. ಆ ಸಮಯದಲ್ಲಿ ಮಾತ್ರ ಕೆಲ ದಿನಗಳ ಮಟ್ಟಿಗೆ, ಮಳೆ ಬಂದಾಗ ಈ ಜಲಪಾತವನ್ನು ಕಾಣಬಹುದು.

ಅಂದಾಜು ನೂರು ಮೀಟರ್ ಉದ್ದ ವಿರುವ ಈ ಜಲಪಾತ ನಾಲ್ಕೈದು ಕವಲಾಗಿ ಒಡೆದು ನೀರು ಕೆಳಗೆ ಬೀಳುತ್ತದೆ. ಕಡಿದಾದ ಬಂಡೆಯನ್ನು ಸುತ್ತುವರಿದಿರುವ ಹಚ್ಚ ಹಸಿರು ಮರಗಿಡಗಳ ನಡುವೆ ಬಾಗಿ ಬಳುಕುತ್ತಾ ಧುಮುಕುವುದನ್ನು ನೋಡುವುದೇ ಒಂದು ರೋಮಾಂಚಕ ಅನುಭವ. ನೀರು ಬಂಡೆಗೆ ತಾಗಿ ಮುತ್ತು ಚೆಲ್ಲಿದಂತೆ ಚದುರಿ ಬೀಳುತ್ತಿರುವ ಸುಂದರ ನೋಟ.ಎಷ್ಟೊಂದು ಜಲಧಾರೆಗಳು ಅದನ್ನು ನೋಡಿಯೇ ಸೌಂದರ್ಯವನ್ನು ಸವಿಯಬೇಕು. ಈ ವಾದಿ ದರ್ಬಾತ್  ಪೂರ್ವಾಭಿಮುಖವಾಗಿ ಹರಿದು ಅರಬ್ಬಿ ಸಮುದ್ರ ವನ್ನು ಸೇರುತ್ತದೆ.

 

ಸಲಾಲಃ ಸುತ್ತ ಮುತ್ತಲು ಹಲವಾರು ಪ್ರವಾಸಿ ಸ್ಥಳಗಳಿವೆ, ಅವುಗಳಲ್ಲಿ ಪ್ರಮುಖವಾದವು, ಮಗಸೇಲ್ ಕಡಲ ತೀರ, ವಾದಿ ದರ್ಬಾತ್, ಸುಮರಂ, ಅಲ್ ಬಲೀದ್ ಪುರಾತತ್ವ ಉದ್ಯಾನವನ, ತವಿ ಅಟ್ಟೈರ್ ಸಿಂಕ್ ಹೋಲ್, Anti Gravity Point,  ತಾಖಾ ಕ್ಯಾಸೆಲ್,   ದಾಲ್ಖೂಟ್, ರಾಯ್ಖೂಟ್,  ಇನ್ನು ಹಲವಾರು ನಯನ ಮನೋಹರ ಸ್ಥಳಗಳು ಇಲ್ಲಿವೆ.

 

ಒಮಾನ್ ಗೆ ಭೇಟಿ ನೀಡಿದಾಗ, ಕರೀಫ಼್ ಸೀಸನ್ ನಲ್ಲಿ ಸಲಾಲಃಕ್ಕೆ ಭೇಟಿ ನೀಡುವುದನ್ನ ಮರೆಯಬೇಡಿ.

 













Click below headings