ಬುಧವಾರ, ಸೆಪ್ಟೆಂಬರ್ 27, 2023

ಸುಝೋ: ಚೀನಾದ ವೆನಿಸ್

ನಾನು ಕೆಲಸ ಮಾಡುವ ಒಮಾನ್ ರಾಷ್ಟ್ರದ ಆಫೀಸಿನ ಬಿಜಿನೆಸ್ ಗೆ ಸಂಭಂದ ಪಟ್ಟಂತೆ ಒಮ್ಮೆ ಚೈನಾ ಪ್ರವಾಸಕ್ಕೆ ಹೋಗಿದ್ದೆ. ಈ ಪ್ರವಾಸದಲ್ಲಿ ಪ್ರಮುಖ ನಗರಗಳಾದ ಬೀಜಿಂಗ್, ಶಾಂಘೈ ಮತ್ತು ಸುಝೋ ನಗರಗಳಲ್ಲಿ ಭೇಟಿ ನೀಡುವ ಅವಕಾಶ ಒದಗಿಬಂದಿತ್ತು. ಒಟ್ಟು ಒಂದು ವಾರದ ಕೆಲಸ. ಮಸ್ಕತ್ ಗೆ ವಾಪಾಸು ಹಿಂದಿರುಗುವ ದಿನ ನಮ್ಮ ಆಥಿತೇಯ ಕಂಪನಿಯವರು ಪ್ರಾಚೀನ ಐತಿಹಾಸಿಕ ನಗರವಾದ ಸುಝೋ ನಗರದ ಪ್ರವಾಸವನ್ನು ಆಯೋಜಿಸಿದ್ದರು. ಸುಝೋ ನಗರ ಚೀನಾದ ಅತಿ ಪುರಾತನವಾದ ಸಾಂಸ್ಕೃತಿಕ ನಗರ. ಪೂರ್ವ ಚೀನಾದ ಜಿಯಾಂಗ್ಸು ಪ್ರಾಂತ್ಯದಲ್ಲಿ ಈ ನಗರವಿದೆ. ಕ್ರಿ.ಪೂ.514ರಲ್ಲಿ ಈ ನಗರವನ್ನು ನಿರ್ಮಾಣಮಾಡಿದ್ದರು ಎಂದು ಹೇಳಲಾಗುತ್ತಿದೆ. 15ನೇ ಶತಮಾನದ ಅಂತ್ಯದಿಂದ 19 ನೇ ಶತಮಾನದವರೆಗೆ, ಸುಝೋ ನಗರ ಚೀನಾದ ಆರ್ಥಿಕ, ಸಾಂಸ್ಕೃತಿಕ ಮತ್ತು ವಾಣಿಜ್ಯ ಕೇಂದ್ರವಾಗಿತ್ತು. ಈ ನಗರ ಇಂದಿಗೂ ಪ್ರವಾಸಿಗರ ನೆಚ್ಚಿನ ತಾಣ. ಇಲ್ಲಿನ ಐತಿಹಾಸಿಕ ಪುರಾತನ ನೀರಿನ ಕಾಲುವೆಗಳು, ಕಲ್ಲಿನ ಸೇತುವೆಗಳು, ಪಗೋಡಗಳು ಮತ್ತು ಸುಂದರ  ಉದ್ಯಾನವನಗಳು ಪ್ರಮುಖ ಪ್ರವಾಸಿ ಆಕರ್ಷಣೆಗಳು.

 

ಈ ನಗರವನ್ನು ಸಾಮಾನ್ಯವಾಗಿ "ವೆನಿಸ್ ಆಫ್ ದಿ ಈಸ್ಟ್" ಅಥವಾ "ವೆನಿಸ್ ಆಫ್ ಚೀನಾ" ಎಂದು ಕರೆಯಲಾಗುತ್ತದೆ. ಇದಕ್ಕೆ ಕಾರಣವೇನೆಂದರೆ, ಯುರೋಪಿನ ವೆನೀಸ್ ನಗರದಲ್ಲಿರುವಂತೆ ಇಲ್ಲಿಯೂ ಸಹ ಭಾಗಶಃ ನಗರ ನೀರಿನೊಳಗೆ ಇದೆ. ಇಲ್ಲಿನ ಕಾಲುವೆಗಳಲ್ಲಿ  ಸಂಚರಿಸಲು ದೋಣಿಗಳ ವ್ಯವಸ್ಥೆಯಿದೆ. ಕಾಲುವೆಯ ಇಕ್ಕೆಲಗಳಲ್ಲಿ ಮನೆಗಳಿವೆ, ಅಂಗಡಿಗಳಿವೆ, ಹೋಟೇಲ್ ರೆಸ್ಟಾರೆಂಟ್ ಗಳಿವೆ. ಈ ಪ್ರದೇಶದ ಸೌಂದರ್ಯವನ್ನು ಅನುಭವಿಸಲು  ದೋಣಿಯಲ್ಲಿಯೇ ಪ್ರಯಾಣಿಸಬೇಕು. ನಮ್ಮ ಪ್ರವಾಸದ ಸಮಯದಲ್ಲಿ ಈ ಕಾಲುವೆಯಲ್ಲಿ ನಾವು ಪ್ರಯಾಣಿಸುವಾಗ, ಇದರ ಕುರಿತು ಹಲವಾರು ಕುತುಹಲಕಾರಿ ವಿಷಯಗಳನ್ನು ತಿಳಿದುಕೊಂಡೆವು. ಈ ಕಾಲುವೆಗಳೆಲ್ಲ ದೊಡ್ಡದಾದ ಗ್ರ್ಯಾಂಡ್ ಕೆನಾಲ್ ಅನ್ನು ಸಂಪರ್ಕಿಸುತ್ತವೆ. ಸುಝೋ ನಗರದ ಕೆಲ ಭಾಗ ಈ ಬೃಹತ್ ನೀರಿನ ಕಾಲುವೆ ಆಕ್ರಮಿಸಿದೆ. ಈ ಕಾಲುವೆಗೆ ಸುಧೀರ್ಘವಾದ ಇತಿಹಾಸವಿದೆ. ಶತಶತಮಾನಗಳ ಹಿಂದೆ ಸುಲಭವಾಗಿ ಸರಕು ಸರಂಜಾಮುಗಳನ್ನು ಸರಬರಾಜು ಮಾಡಲು ಈ ಕಾಲುವೆಯನ್ನು ಕಟ್ಟಲಾಗಿದೆ ಎಂದು ಹೇಳುತ್ತಾರೆ. ಆದರೆ ಕೆಲವರ ಪ್ರಕಾರ ಅಂದಿನ ರಾಜಪರಿವಾರದವರಿಗೆ ನೂರಾರು ಕಿ.ಮಿ. ದೂರದ ಊರುಗಳಿಗೆ ರಸ್ತೆ ಮೂಲಕ ಪ್ರಯಾಣದಲ್ಲಿ ಕುದುರೆ, ಎತ್ತಿನಗಾಡಿ ಮುಂತಾದವುಗಳಲ್ಲಿ ಪ್ರಯಾಣಿಸಿದರೆ ವಿಪರೀತವಾದ ಮೈ ನೋವು ಬರುತಿತ್ತು, ಸುಸ್ತಾಗುತಿತ್ತು. ಇಂತಹ  ಧೀರ್ಘವಾದ ಪ್ರಯಾಣವನ್ನು ರಾಜಪರಿವಾರದ ಅದರಲ್ಲೂ ರಾಜ, ರಾಣಿ, ರಾಜಕುಮಾರಿ ಮತ್ತಿತರು ಕಾಲುವೆ ಮುಖಾಂತರ ಸುಲಭವಾಗಿ ಪ್ರಯಾಣ ಮಾಡಲು ನಿರ್ಮಿಸಲಾಯಿತು ಎಂದು ಹೇಳುತ್ತಾರೆ. ಅದೇನೆ ಇರಲಿ, ಈ ಕಾಲುವೆಯ ಉಪಯೋಗದಿಂದ ಚೀನಾದ ಆರ್ಥಿಕ ಪರಿಸ್ಥಿತಿ ತುಂಬಾ ಬಲಗೊಂಡಿತ್ತು ಎಂದು ಹಲವಾರು ಕಾಲಘಟ್ಟದಲ್ಲಿ ದಾಖಲಾಗಿದೆ.

 

ಈ ಕಾಲುವೆಯ ಉದ್ದ ಸುಮಾರು 1776 km (ಕಿ.ಮಿ) ನಷ್ಟು (ಬೀಜಿಂಗ್‌ನಿಂದ ಝೆಜಿಯಾಂಗ್ ಪ್ರಾಂತ್ಯದವರೆಗೆ), ಉದ್ದವಿದೆ. ಇದು ವಿಶ್ವದ ಅತಿ ಉದ್ದದ ದೊಡ್ಡ ಕಾಲುವೆಯಾಗಿದ್ದು, ಮಾನವ ನಿರ್ಮಿತ ಕೃತಕ ನದಿಯಾಗಿದೆ. ಬೀಜಿಂಗ್‌ನಿಂದ ಪ್ರಾರಂಭಿಸಿ,  ಟಿಯಾಂಜಿನ್ ಮತ್ತು ಹೆಬೈ, ಶಾಂಡೊಂಗ್, ಜಿಯಾಂಗ್ಸು ಮತ್ತು ಝೆಜಿಯಾಂಗ್ ಪ್ರಾಂತ್ಯಗಳ ಮೂಲಕ ಹಾಂಗ್‌ಝೌ ನಗರದವರೆಗೆ ಸಂಪರ್ಕ ಕಲ್ಪಿಸುತ್ತದೆ. ಕ್ರಿ.ಪೂ. 5 ನೇ ಶತಮಾನದಲ್ಲಿ ಇದನ್ನು ಮೊದಲು ಕಟ್ಟಲು ಪ್ರಾರಂಭಿಸಿದರು, ನಂತರ ಕ್ರಿ.ಶ. 581–618 ರಲ್ಲಿ ಮತ್ತು ಕ್ರಿ.ಶ. 1271–1633, ಹೀಗೆ ವಿವಿಧ ಕಾಲಘಟ್ಟದಲ್ಲಿ ಇಲ್ಲಿನ ರಾಜಮನೆತನಗಳು ಇದನ್ನು ವಿಸ್ತರಿಸುತ್ತ ಬಂದಿದ್ದಾರೆ.  ಈ ಕಾಲುವೆ  ಯುನೆಸ್ಕೋ (UNESCO) ವಿಶ್ವ ಪರಂಪರೆಯ ತಾಣವಾಗಿದೆ. ಈ ಕಾಲುವೆಯಲ್ಲಿ ಪ್ರಮುಖವಾಗಿ ಆಹಾರಧಾನ್ಯಗಳನ್ನು ಸಾಗಿಸಲಾಗುತಿತ್ತು. ಸೇನಾ ತುಕಡಿಗಳನ್ನು ಒಂದುಕಡೆ ಇನ್ನೊಂದು ಕಡೆಗೆ ಸಾಗಿಸಲು ಸಹ ಇದನ್ನ ಬಳಸುತಿದ್ದರು.  ಈ ಕಾಲುವೆಯಲ್ಲಿ ಸಂಚರಿಸಲು, ಅಂದಿನ ಕಾಲದಲ್ಲಿಯೇ ತಂತ್ರಜ್ನಾನವನ್ನು ಉಪಯೋಗಿಸಿ ಪ್ರಯಾಣಕ್ಕೆ ಸೂಕ್ತವಾದ ದೋಣಿಗಳನ್ನು ನಿರ್ಮಿಸುತಿದ್ದರು. ಸಾಗಾಣೆದಾರರು ಅಂದಿನ ಆಡಳಿತಗಾರರಿಗೆ, ಸುಂಕವನ್ನ ನೀಡಬೇಕಿತ್ತು. ಇದೊಂದು ಉತ್ತಮವಾದ ಆದಾಯವಾಗಿತ್ತು. ಈ ಸಾಗಾಟದ ಸಮಯದಲ್ಲಿ ದರೋಡೆಕೋರರು, ಲೂಟಿಕೋರರು ದಾಳಿಯಿಡುತಿದ್ದರಂತೆ, ಅವರಿಂದ ರಕ್ಷಿಸಲು ಅಲ್ಲಲ್ಲಿ ಸೈನಿಕರ ತುಕಡಿಗಳನ್ನ ನಿಯೋಜಿಸುತಿದ್ದರು. ಆದರೂ ಸಂಧರ್ಭ ನೋಡಿ, ಈ ದಾಳಿಕೋರರು ಆಹಾರಧಾನ್ಯಗಳು ಸೇರಿದಂತೆ ಮತ್ತಿತರ ವಸ್ತುಗಳನ್ನ ದರೋಡೆ ಮಾಡುತಿದ್ದರು.

 

ಒಂದು ಕಾಲದಲ್ಲಿ ಪ್ರತಿವರ್ಷ 8000 ಕ್ಕೂ ಹೆಚ್ಚಿನ ದೋಣಿಗಳು ಸಂಚರಿಸುತಿದ್ದ 1776 km (ಕಿ.ಮಿ) ಉದ್ದದ ಈ ಐತಿಹಾಸಿಕ ಕಾಲುವೆ ಕಾಲನ ಹೊಡೆತಕ್ಕೆ ಸಿಕ್ಕಿ, ಇಂದು ಹಾಳಾಗಿದೆ. ಕೆಲೆವೆಡೆ ಇದರ ಗುರುತುಗಳೇ ನಾಶವಾಗಿವೆ. ಕೆಲೆವೆಡೆ ಕಾಲುವೆ ಮುಚ್ಚಿ ಹೋಗಿದೆ. ಇಂದಿನ ಆಧುನಿಕ ಯುಗದಲ್ಲಿ ರಸ್ತೆ ರೈಲು ಮಾರ್ಗವನ್ನು ಯಥೇಚ್ಚವಾಗಿ ಉಪಯೋಗಿಸುತ್ತಿರುವುದರಿಂದ, ಎಲ್ಲೆಲ್ಲಿ ಅತಿ ಹೆಚ್ಚು ನೀರು ಇದೆಯೋ ಮತ್ತು ಸಂಪರ್ಕಯೋಗ್ಯವಿದೆಯೋ ಆ ಕಾಲುವೆ/ನದಿ ಮಾತ್ರ ಬಳಕೆಯಲ್ಲಿದೆ, ಮಿಕ್ಕಿದ್ದು ಹೂಳು ತುಂಬಿ ಮುಚ್ಚಿ ಹೋಗಿದೆ. ಕೆಲೆವೆಡೆ ಗುರುತೇ ಸಿಗದಷ್ಟು ಹಾಳಾಗಿದೆ. 12ನೇ ಶತಮಾನದ ಪ್ರಸಿದ್ದ ಪ್ರವಾಸಿಗ ಮಾರ್ಕೋಪೋಲೋ ಸೇರಿದಂತೆ ವಿವಿಧ ವಿದೇಶಿ ಪ್ರವಾಸಿಗರು ಈ ಐತಿಹಾಸಿಕ ಕಾಲುವೆ ಕುರಿತು ದಾಖಲಿಸಿದ್ದಾರೆ.

 

ಸುಝೋದಲ್ಲಿ, ಈ ಕಾಲುವೆ ಪ್ರಯಾಣದ ನಂತರ ವಿವಿಧ ಪ್ರವಾಸಿತಾಣಗಳಿಗೆ ನಮ್ಮ ಕರೆದುಕೊಂಡು ಹೋದರು. ಎಲ್ಲ ಸ್ಥಳಗಳು ಒಂದಕ್ಕಿಂತ ಒಂದು ಅದ್ಭುತವಾಗಿದ್ದವು. ಈ ಎಲ್ಲಾ ಸ್ಥಳಗಳು ನೂರಾರು ವರ್ಷಗಳ ಹಿಂದೆ ಕಟ್ಟಿದಂತಹವು. ಅವುಗಳನ್ನ ಇಂದಿಗೂ ಮೂಲ ಸ್ವರೂಪದಲ್ಲಿಯೇ ಉಳಿಸಿಕೊಂಡಿರುವುದು ಇಲ್ಲಿನ ವೈಶಿಷ್ಟ್ಯ. ಸುಝೋ ನಗರದ ಈ ಸ್ಥಳಗಳನ್ನ ನೋಡಿದೊಡನೆ, ಪುರಾತನ ಚೀನಾದ ನಗರವೊಂದನ್ನು ನೋಡಿದಂತಹ ಅನುಭವವಾಗುತ್ತದೆ.

 

*ಪ್ಯಾನ್ಮೆನ್ (ಪ್ಯಾನ್ ಗೇಟ್)*. ಪ್ಯಾನ್ಮೆನ್ ಎನ್ನುವ ಈ ರಮಣೀಯ ಪ್ರದೇಶವನ್ನು ಶಾಸ್ತ್ರೀಯ ಉದ್ಯಾನಗಳ ವಾಸ್ತುಶಿಲ್ಪದ ರಚನೆಯನ್ನು ಬಳಸಿಕೊಂಡು ಕೆಲವು ಐತಿಹಾಸಿಕ ತಾಣಗಳ ಆಧಾರದ ಮೇಲೆ ನಿರ್ಮಿಸಲಾಗಿದೆ. ಇಲ್ಲಿ  "ಮೂರು ಸುಂದರ ದೃಶ್ಯಾವಳಿಗಳನ್ನು" ನೋಡಬಹುದು. 1) ಪನ್ಮೆನ್ ಗೇಟ್, 2) ವೂ ಮೆನ್ ಸೇತುವೆ ಮತ್ತು 3) ರುಯಿಗುವಾಂಗ್ ಪಗೋಡಾ. ಪ್ಯಾನ್ಮೆನ್ ಗೇಟ್ ಸುಝೌನಲ್ಲಿ 2500 ವರ್ಷಗಳ ಇತಿಹಾಸವನ್ನು ಹೊಂದಿರುವ ಪ್ರಸಿದ್ಧ ಐತಿಹಾಸಿಕ ಹೆಗ್ಗುರುತಾಗಿದೆ. ಇಂದಿಗೂ ಪ್ರಾಚೀನ ಕೋಟೆಗಳಲ್ಲಿ ಒಂದಾಗಿ ಇದು ಉಳಿದಿದೆ.  ಆಕರ್ಷಕವಾದ "ವು ಮೆನ್" ಸೇತುವೆಯು ಸುಝೌದಲ್ಲಿ ಅತಿ ಎತ್ತರವಾದ ಪುರಾತನ ಸೇತುವೆಯಾಗಿದೆ.  ಇದು ಸಾಂಗ್ ರಾಜವಂಶದ (ಕ್ರಿ.ಶ. 960-1279) ಸಮಯದಲ್ಲಿ ನಿರ್ಮಾಣ ಮಾಡಲಾಗಿದೆ. ಏಳು ಅಂತಸ್ತಿನ ಪಗೋಡವನ್ನು ಮರದ ವೇದಿಕೆಗಳೊಂದಿಗೆ ಇಟ್ಟಿಗೆಯಿಂದ ನಿರ್ಮಿಸಲಾಗಿದ್ದು, ಇಲ್ಲಿನ ಕಿರಿದಾದ ಮೆಟ್ಟಿಲುಗಳ ಮೇಲೆ ಹತ್ತಿದ ನಂತರ, ಸುಝೋ ನಗರದ ಹೃದಯಭಾಗವನ್ನು ನೋಡಬಹುದು. ಹಚ್ಚ ಹಸಿರಿನ ಸುಂದರವಾದ ಉದ್ಯಾನವನಗಳು, ನೀರಿನ ಕಾಲುವೆಗಳು ಇತ್ಯಾದಿಗಳನ್ನ ಕಣ್ತುಂಬಿಕೊಳ್ಳಬಹುದು.

 

*ಟೈಗರ್ ಹಿಲ್:* ಟೈಗರ್ ಹಿಲ್ ಸುಝೋ ನಗರದ ಒಂದು  ಪ್ರವಾಸಿಗರ ಆಕರ್ಷಣೆಯಾಗಿದೆ. ಇದಕ್ಕೆ 2500 ವರ್ಷಗಳ ಇತಿಹಾಸವಿದೆ. ಇಲ್ಲಿಯೂ ಸಾಕಷ್ಟು  ಪುರಾತನ ವಾಸ್ತುಶಿಲ್ಪಗಳನ್ನು ನೋಡಬಹುದು. 2500 ವರ್ಷಗಳ ಹಿಂದೆ ಇಲ್ಲಿನ ಒಂದು ಯುದ್ದದಲ್ಲಿ ಈ ಪ್ರಾಂತ್ಯದ ರಾಜನೊಬ್ಬ  ಮರಣಹೊಂದುತ್ತಾನೆ. ಅವನ ಮಗ "ಫೂ ಚಾಯ್",  ಅವನನ್ನು ಸರ್ಜಿಂಗ್ ಸೀ ಹಿಲ್‌ ಎನ್ನುವ ಈ ಪ್ರದೇಶದಲ್ಲಿ ಸಮಾಧಿ ಮಾಡುತ್ತಾನೆ. ಮೂರು ದಿನಗಳ ನಂತರ ಇಲ್ಲಿಗೆ  ಬಿಳಿ ಹುಲಿಯೊಂದು  ಬಂದಿತು ಎಂಬ ಐತಿಹ್ಯವಿದೆ. ಆದ್ದರಿಂದ ಜನರು ಅಂದಿನಿಂದ ಅದನ್ನು ಟೈಗರ್ ಹಿಲ್ ಎಂದು ಮರುನಾಮಕರಣ ಮಾಡಿದ್ದಾರೆ.

 



*ಹನ್ಶನ್ ದೇವಾಲಯ:* ಹನ್ಶನ್ ದೇವಾಲಯ, ಸುಝೌನಲ್ಲಿರುವ ಬೌದ್ಧ ದೇವಾಲಯವಾಗಿದೆ. ಲಿಯಾಂಗ್ ರಾಜವಂಶದಲ್ಲಿ (A.D. 502-557) ಮೊದಲು ನಿರ್ಮಿಸಲಾದ ದೇವಾಲಯಕ್ಕೆ ಟ್ಯಾಂಗ್ ರಾಜವಂಶದ ಕವಿ-ಸನ್ಯಾಸಿಯ ಹೆಸರನ್ನು ಇಡಲಾಗಿದೆ. ಇಲ್ಲಿ ಹಿಂದೂ ಧರ್ಮದ ಪದ್ದತಿಯಂತೆ ಮೂರ್ತಿ ಪೂಜೆಯನ್ನ ಕಾಣಬಹುದು. ಬುದ್ದನಿಗೆ ದೂಪ, ಫಲ ಪುಷ್ಫ ಇತ್ಯಾದಿಗಳನ್ನ ಅರ್ಪಿಸುತ್ತಾರೆ. ದೇವಾಲಯದ ಪ್ರಾಂಗಣ, ಗಂಟೆ, ಗರ್ಭಗುಡಿ, ಎಲ್ಲವೂ ಭಾರತದಲ್ಲಿನ ದೇವಾಲಯದಂತೆ ಚೈನೀಸ್ ಶೈಲಿಯಲ್ಲಿ ಕಟ್ಟಿರುವುದು ವಿಶೇಷ. ಚೀನಾದಲ್ಲಿ ಕಮ್ಯುನಿಸ್ಟ್ ಸರ್ಕಾರ ಆಡಳಿತಕ್ಕೆ ಬಂದಾಗ, ಈ ಪುರಾತನ ದೇವಾಲಯ ಸೇರಿದಂತೆ ದೇಶದ ಎಲ್ಲಾ ದೇವಾಲಯ, ಚರ್ಚ್ ಮತ್ತು ಮಸೀದಿಗಳನ್ನ 1950 ರಿಂದ 1979ರವರೆಗೆ ಕಾಲ ಮುಚ್ಚಿದ್ದರು.

 

ಸುಝೌವನ್ನು *"ಉದ್ಯಾನಗಳ ನಗರ"* ಎಂದು ಸಹ ಕರೆಯಲಾಗುತ್ತದೆ. 16ನೇ ಶತಮಾನದಲ್ಲಿ 170 ಉದ್ಯಾನಗಳು ಈ ನಗರದಲ್ಲಿವಂತೆ. ಈಗ ಅಂದಾಜು 50 ಖಾಸಗಿ ಮತ್ತು ಸರ್ಕಾರಿ ಉದ್ಯಾನವನಗಳಿವೆ. ಈ ಎಲ್ಲಾ ಉದ್ಯಾನವನಗಳನ್ನು ತೋಟಗಾರಿಕೆಯ ವಿಶ್ವ ಇತಿಹಾಸದಲ್ಲಿ ಶ್ರೇಷ್ಠ ಮೇರುಕೃತಿಗಳು ಎಂದು ಗುರುತಿಸಲಾಗಿದೆ. ಅವುಗಳಲ್ಲಿ ಒಂಬತ್ತು ಉದ್ಯಾನವನಗಳನ್ನು ವಿಶ್ವ ಸಾಂಸ್ಕೃತಿಕ ಪರಂಪರೆಗಳಲ್ಲಿ ಪಟ್ಟಿ ಮಾಡಲಾಗಿದೆ. ಚೀನೀ ಉದ್ಯಾನ ಸಂಸ್ಕೃತಿಯ ಹೆಮ್ಮೆಯೆಂದು ಗುರುತಿಸಲ್ಪಡುವ  ಹಂಬಲ್ ಅಡ್ಮಿನಿಸ್ಟ್ರೇಟರ್ಸ್ ಗಾರ್ಡನ್ ಮತ್ತು ಲಿಂಗರಿಂಗ್ ಗಾರ್ಡನ್  ಇಂದಿಗೂ ಪ್ರವಾಸಿಗರ ಮೆಚ್ಚಿನ ತಾಣಗಳಾಗಿವೆ.

 

*ಹಂಬಲ್ ಅಡ್ಮಿನಿಸ್ಟ್ರೇಟರ್ಸ್ ಗಾರ್ಡನ್* ಅನ್ನು ಕ್ರಿ.ಶ 1509 ರಲ್ಲಿ ನಿರ್ಮಿಸಲಾಯಿತು.  ಇದು ಸುಝೋದಲ್ಲಿನ ಅತಿದೊಡ್ಡ ಶಾಸ್ತ್ರೀಯ ಸಾಂಪ್ರದಾಯಿಕ ಉದ್ಯಾನವನವಾಗಿದೆ. ಇಡೀ ಉದ್ಯಾನವು ನೀರಿನ ಕೊಳ, ಕಾಲುವೆಗಳಿಂದೆ, ಆಕರ್ಷಕ ಕಲ್ಲು ಬಂಡೆಗಳು, ಮಂಟಪಗಳು, ವಿವಿಧ ರೀತಿಯ ಸುಂದರವಾದ ಹೂವಿನ ಗಿಡಗಳು, ಆಕರ್ಷಕ ಮರಗಿಡಗಳಿಂದ ಕೂಡಿದ ಇಲ್ಲಿನ ದೃಶ್ಯಾವಳಿ ಮನಸ್ಸಿಗೆ ಮುದ ನೀಡುತ್ತವೆ. ಅಂಕುಡೊಂಕಾದ ಹಾದಿಯಲ್ಲಿ ನಡೆಯುತ್ತಾ ಮುಂದೆ ಹೋದಂತೆ , ಪ್ರತಿಯೊಂದು ಹೆಜ್ಜೆಗೂ ವಿಭಿನ್ನ ದೃಶ್ಯಾವಳಿಗಳು ಗೋಚರಿಸುತ್ತವೆ.  ರಮಣೀಯ ಮತ್ತು ಶಾಂತಿಯುತ, ಉದ್ಯಾನದಲ್ಲಿ  ಪ್ರತಿಯೊಂದು ವಸ್ತುವೂ  ಹಿಂದಿನ ಕಥೆಯನ್ನು ಹೇಳುತ್ತದೆ.

 

*ಲಿಂಗರಿಂಗ್ ಗಾರ್ಡನ್* (ಲಿಯುವಾನ್ ಗಾರ್ಡನ್) ಚೀನಾದಲ್ಲಿ ಅತಿ ದೊಡ್ಡ ಪ್ರಮಾಣದ ಕ್ಲಾಸಿಕಲ್ ಖಾಸಗಿ ಉದ್ಯಾನವಾಗಿದ್ದು, 23300 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿದೆ, ಇದು ಕ್ವಿಂಗ್ ರಾಜವಂಶದ ಶೈಲಿಯ ವಿನ್ಯಾಸವನ್ನು ಪ್ರತಿನಿಧಿಸುತ್ತದೆ.  ಸೊಗಸಾದ ವಾಸ್ತುಶಿಲ್ಪ ಕಲೆ, ಭವ್ಯವಾದ ಸಭಾಂಗಣಗಳು ಮತ್ತು ಸುಂದರವಾದ ಗಾರ್ಡೆನ್ ಅಂಗಳಗಳಿಗೆ ಹೆಸರುವಾಸಿಯಾಗಿದೆ. ಈ ಗಾರ್ಡನ್ ಅನ್ನು ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದೆ. ಪೂರ್ವದಲ್ಲಿ ಮುಖ್ಯವಾಗಿ ವಾಸ್ತುಶಿಲ್ಪ, ಮಧ್ಯದಲ್ಲಿ ವಿಶಾಲವಾದ ಉದ್ಯಾನವನ, ಪಶ್ಚಿಮವು ಕಲ್ಲು ಬಂಡೆಗಳಿಂದ ಕೂಡಿದ ಮತ್ತು ಉತ್ತರಕ್ಕೆ ಗ್ರಾಮೀಣ ದೃಶ್ಯಾವಳಿಗಳು ಕಾಣುವಂತೆ ವಿನ್ಯಾಸಗೊಳಿಸಲಾಗಿದೆ.

 

*ರೇಷ್ಮೆ ನಗರಿ:-* ಸಾವಿರಾರು ವರ್ಷಗಳಿಂದ, ಸುಝೋ ನಗರದ ಜನರು ಅದ್ಭುತವಾದ ರೇಷ್ಮೆಬಟ್ಟೆಗಳನ್ನುತಯಾರಿಸುವ ಕೌಶಲ್ಯಗಳನ್ನು ಕರಗತ ಮಾಡಿಕೊಂಡಿದ್ದರು ಎಂದು ಹೇಳಲಾಗುತ್ತಿದೆ. 4700 ವರ್ಷಗಳ ಹಿಂದೆ ಇಲ್ಲಿ ರೇಷ್ಮೆ ಉಪಯೋಗದಲ್ಲಿತ್ತು ಎಂದು ಉತ್ಖನನದ ವೇಳೇ ದೊರೆತ ಅವಶೇಷಗಳಿಂದ ಸಾಬೀತು ಪಡಿಸಲಾಗಿದೆ. ಹೀಗಾಗಿ ಸುಝೋ ನಗರವನ್ನು ಸಿಲ್ಕ್ ಸಿಟಿ ಎಂದು ಕರೆಯುವುದಲ್ಲದೆ ಇಲ್ಲಿ ಸಿಲ್ಕ್ ರೋಡ್ ಇತ್ತು ಎಂದು ಹೇಳಲಾಗುತ್ತಿದೆ. 1991 ರಲ್ಲಿ ನಿರ್ಮಿಸಲಾದ ಸುಝೋ ಸಿಲ್ಕ್ ಮ್ಯೂಸಿಯಂ ಚೀನಾದಲ್ಲಿ ರೇಷ್ಮೆಯ ಕುರಿತಾದ ಮೊದಲ ವಸ್ತು ಸಂಗ್ರಹಾಲಯವಾಗಿದೆ. ಇಲ್ಲಿ ಚೀನಾದ 7000 ವರ್ಷಗಳ ರೇಷ್ಮೆ ಇತಿಹಾಸವನ್ನು ತಿಳಿದುಕೊಳ್ಳಬಹುದು, ರೇಷ್ಮೆ ಹುಳುಗಳ ಜೀವನ, ಸಾಂಪ್ರದಾಯಿಕ ರೇಷ್ಮೆ ನೇಯ್ಗೆ ಕೌಶಲ್ಯವನ್ನು ವೀಕ್ಷಿಸಬಹುದು.

 

ಹೀಗೆ ಚೀನಾದ ಪ್ರವಾಸದ ವೇಳೆ ಹಲವಾರು ವಿಷಯಗಳನ್ನು ತಿಳಿದುಕೊಳ್ಳುವ ಅವಕಾಶ ನಮಗೆ ಒದಗಿಬಂತು.  ಚೀನಾದ ಹಳೆಯ ಚಲನ ಚಿತ್ರಗಳಲ್ಲಿ ಚೈನಾದ ಸಾಂಪ್ರದಾಯಿಕ  ಊರುಗಳು, ಕಟ್ಟಡಗಳನ್ನು ನೋಡಿದ್ದ ನಮಗೆ ಪ್ರತ್ಯಕ್ಷವಾಗಿ ಸುಝೋದಲ್ಲಿ ಅಂತಹ ಸ್ಥಳಗಳನ್ನು ಕಾಣುವಂತಾಯಿತು. ಒಂದೆಡೆ ಗಗನಚುಂಬಿ ಆಧುನಿಕ ಕಟ್ಟಡಗಳು, ಮೆಟ್ರೋ ಟ್ರೈನ್, ಮೋನೋ ರೈಲ್, ಎಕ್ಸ್ಪ್ರೆಸ್ ಹೆದ್ದಾರಿ, ದೊಡ್ಡದಾದ ಫ್ಲೈ ಓವರ್ ಗಳು ಮತ್ತೊಂದೆಡೆ ಸಾಂಪ್ರದಾಯಿಕ ಶೈಲಿಯ ಪುರಾತನ ನಗರ ಜೀವನವನ್ನು ಕಣ್ತುಂಬಿಕೊಳ್ಳುವ ಅನುಭವಾಯಿತು.

 

ಬರಹ:- ಪಿ.ಎಸ್.ರಂಗನಾಥ

ಮಸ್ಕತ್ - ಒಮಾನ್ ರಾಷ್ಟ್ರ

 

 

 































ಕೃಷಿ ಸ್ವಾವಲಂಬನೆಯತ್ತ ಅರಬ್ ರಾಷ್ಟ್ರಗಳು



ಅರಬ್ ರಾಷ್ಟ್ರಗಳಾದ ಸೌದಿ ಅರೇಬಿಯಾ, ಕುವೈತ್, ಕತಾರ್, ಒಮಾನ್, ಬಹರೈನ್, ಯುಏಇ ಮತ್ತಿತರ ರಾಷ್ಟ್ರಗಳು ನಮ್ಮ ಭಾರತದಂತೆ ವೈವಿಧ್ಯಮಯ ಭೂಪ್ರದೇಶವನ್ನು ಹೊಂದಿಲ್ಲ ಇಲ್ಲಿನ ಬಹುತೇಕ ಜಾಗ ಮರುಭೂಮಿಯಿಂದ ಆವೃತವಾಗಿದೆ, ಮಳೆ ಬಹಳ ವಿರಳ, ನದಿ ಸರೋವರಗಳು ಇಲ್ಲಿ ಬಹಳ ಕಡಿಮೆ.  ಏಳೆಂಟು ತಿಂಗಳು ಬೇಸಿಗೆ ಕಾಲ, ಆ ಸಮಯದಲ್ಲಿ ಅತಿ ಹೆಚ್ಚು ಎಂದರೆ 40-55 ಡಿಗ್ರಿ .ಸೆಲ್ಶಿಯಸ್ ನಷ್ಟು ತೀಕ್ಷ್ಣವಾದ ಬಿಸಿಲು. ಇಂತಹ ವೈರುಧ್ಯಮಯವಾದ ವಾತಾವರಣದಲ್ಲಿ ಬೆಳೆ ಬೆಳೆಯುವುದು ಬಹಳ ಕಷ್ಟ. ಇಲ್ಲಿ ತೈಲ ಆವಿಷ್ಕಾರ ವಾಗುವವರೆಗೂ ನೂರಾರು ವರ್ಷಗಳಿಂದ ಇಲ್ಲಿನ ಜನರು ಭಾರತದಂತಹ ರಾಷ್ಟ್ರಗಳನ್ನ ಅಗತ್ಯ ವಸ್ತುಗಳಿಗಾಗಿ  ಅವಲಂಬಿಸಿದ್ದರು. ಆದರೆ, ಇಪ್ಪತ್ತನೇ ಶತಮಾನದಲ್ಲಿ ತೈಲದ ಆವಿಷ್ಕಾರದ ನಂತರ ಇಲ್ಲಿಯ ಬದುಕಿನ ಚಿತ್ರಣ ಸಂಪೂರ್ಣವಾಗಿ ಬದಲಾಗಿದೆ. ತೈಲದ ಬೇಡಿಕೆ ದಿನೇ ದಿನೇ ಹೆಚ್ಚಿದಂತೆಲ್ಲ ತೈಲ ಉತ್ಪಾದನೆ ಹೆಚ್ಚಾಯಿತು. ಈ ತೈಲ ಮಾರಿ ಬಂದ ಹಣದಲ್ಲಿ ಇಲ್ಲಿನ ಮೂಲ ಭೂತ ಸೌಕರ್ಯಗಳನ್ನ ಅಭಿವೃದ್ದಿ ಪಡಿಸಿದ್ದಲ್ಲದೆ, ದೇಶಕ್ಕೆ ಬೇಕಾದ ಎಲ್ಲ ರೀತಿಯ ಸುಸಜ್ಜಿತ ವ್ಯವಸ್ಥೆಗಳನ್ನ ನಿರ್ಮಿಸಿ ಕೊಳ್ಳುತ್ತ ಬಂದಿದ್ದಾರೆ. ಜನರಿಗೆ ಬೇಕಾದ ಎಲ್ಲಾ ರೀತಿಯ ಅಗತ್ಯ ಉತ್ಪನ್ನಗಳನ್ನು  ಪ್ರಪಂಚದ ಮೂಲೆ ಮೂಲೆಗಳಿಂದ ಮಾತ್ರವಲ್ಲದೆ ಅಮೇರಿಕ, ಆಸ್ಟ್ರೇಲಿಯಾ, ಯೂರೋಪ್ ರಾಷ್ಟ್ರಗಳ ಉತ್ತಮ ಗುಣಮಟ್ಟದ ಹಣ್ಣು ತರಕಾರಿ, ದಿನಸಿ ವಸ್ತುಗಳನ್ನು ಆಮದು ಮಾಡಿಕೊಳ್ಳುತಿದ್ದಾರೆ. ಇಲ್ಲಿನ ಸೂಪರ್ ಮಾರ್ಕೆಟ್ ಗಳು, ಮಾಲ್ ಗಳಲ್ಲಿ ದೇಶ ವಿದೇಶಗಳ ವಸ್ತುಗಳು ದೊರೆಯುತ್ತಿವೆ.

 

ಅರಬ್ ರಾಷ್ಟ್ರಗಳಲ್ಲಿ ಕೇವಲ ಮರುಭೂಮಿ ಮತ್ತು ತೈಲ ನಿಕ್ಷೇಪಗಳು ಮಾತ್ರವಲ್ಲದೆ ಕೆಲ ಪ್ರದೇಶಗಳಲ್ಲಿ ಫಲವತ್ತಾದ ಕೃಷಿ ಭೂಮಿಗಳು ಸಹ ಇವೆ. ಹೀಗಾಗಿ ಅಲ್ಲಿನ ಹವಾಮಾನಕ್ಕೆ ತಕ್ಕಂತೆ ಬೆಳೆಯುವ ಬೆಳೆಗಳನ್ನು ಬೆಳೆಯುತಿದ್ದಾರೆ. ಕೆಲೆವೆಡೆ ಕೃಷಿ ಭೂಮಿ ಸೇರಿದಂತೆ, ಹೈನುಗಾರಿಕೆ, ಕೋಳಿ ಸಾಕಾಣಿಕೆ ಕೇಂದ್ರಗಳಲ್ಲಿ ಅತ್ಯುನ್ನತ ತಂತ್ರಜ್ನಾನವನ್ನು ಉಪಯೋಗಿಸುತಿದ್ದಾರೆ. ಇವೆಲ್ಲವನ್ನ ಕಣ್ಣಾರೆ ನೋಡಿದಾಗ ಕೃಷಿಯನ್ನು ಹೀಗೂ ಮಾಡಬಹುದಾ ಎಂದು ಆಶ್ಚರ್ಯವಾಗುತ್ತದೆ.

 ಮರುಭೂಮಿಯಲ್ಲಿ ಅದ್ಭುತವಾದ ಬೆಳೆ ತೆಗೆಯುತ್ತಿರುವ ಸೌದಿ ಅರೇಬಿಯಾ

ಸೌದಿ ಅರೇಬಿಯಾದ ಭೂಪ್ರದೇಶದ ಸುಮಾರು 1.5% ಮಾತ್ರ ಕೃಷಿ ಮಾಡಲು ಯೋಗ್ಯವಾಗಿದೆ. ಹೀಗಾಗಿ ದೇಶದ ಅಗತ್ಯ ಆಹಾರ ಪೂರೈಕೆಯ 80% ಕ್ಕಿಂತ ಹೆಚ್ಚು ಆಮದು ಮಾಡಿಕೊಳ್ಳುತ್ತಿದೆ. ಆದರೆ ಮುಂದೊಂದು ದಿನ ಜಾಗತಿಕ ಆಹಾರ ಪೂರೈಕೆ ಜಾಲದಲ್ಲಿ ಏನಾದರು ಕುಸಿತ ಕಂಡರೆ ದೇಶ ಅಪಾಯಕ್ಕೆ ಸಿಲುಕುವ ಸಂಭವನೀಯತೆ ಹೆಚ್ಚಿರುತ್ತದೆ. ಹೀಗಾಗಿ ಜಾಗತಿಕ ಆಹಾರ ಪೂರೈಕೆ ಜಾಲದ ಸಂಭವನೀಯ ಅಪಾಯಗಳನ್ನು ಮನಗಂಡು ಆಹಾರ ಭದ್ರತೆ ಗಾಗಿ ಅತ್ಯುನ್ನತ ವಿದೇಶಿ ತಂತ್ರಜ್ನಾನವನ್ನು ಉಪಯೋಗಿಸಿ ಮರುಭೂಮಿಯನ್ನು ಕೃಷಿಭೂಮಿಯನ್ನಾಗಿ ಸೌದಿ ಅರೇಬಿಯಾ ಪರಿವರ್ತಿಸುತ್ತಿದೆ.  ಇದರ ಪರಿಣಾಮ ಕೆಲೆವೆಡೆ ನೂರಾರು ಕಿ.ಮಿ.ಗಳಷ್ಟು ಉದ್ದಕ್ಕೂ ಕೃಷಿ ಚಟುವಟಿಕೆಯನ್ನು ಇಂದು ಕಾಣಬಹುದಾಗಿದೆ. ಇದರಿಂದಾಗಿ ಆಹಾರಕ್ಕಾಗಿ ಸಂಪೂರ್ಣ ಸುಸ್ಥಿರ ಸ್ವಾವಲಂಬನೆಯತ್ತ ಹೆಜ್ಜೆಹಾಕುತ್ತಿದೆ.

 

ತುಬರ್ಜಲ್  ಎನ್ನುವ ಪ್ರದೇಶದಲ್ಲಿ ಲಕ್ಷಾಂತರ ಎಕರೆ ಮರುಭೂಮಿ ಇಂದು ಕೃಷಿಭೂಮಿಯಾಗಿ ಪರಿವರ್ತಿತ ಗೊಂಡಿದೆ. 300 ರಿಂದ 500 ಮೀಟರ್ ತ್ರಿಜ್ಯದ ವೃತ್ತಾಕಾರದಲ್ಲಿ ಈ ಕೃಷಿ ಭೂಮಿಗಳಿವೆ. ಗೂಗಲ್ ಮ್ಯಾಪ್ ನಲ್ಲಿ ನೋಡಿದರೆ ಚುಕ್ಕಿಗಳಂತೆ ಕಾಣುವ ಈ ಪ್ರದೇಶ ಸಾವಿರಾರು ಚದರ ಕಿ.ಮಿ. ನಷ್ಟು ಹರಡಿಕೊಂಡಿದೆ ಎಂದರೆ ನಂಬಲು ಸಾಧ್ಯವಾಗುವುದಿಲ್ಲ. ಇಲ್ಲಿ ಕೃಷಿ ಚಟುವಟಿಕೆಗೆ ಬೇಕಾದ ನೀರಿಗಾಗಿ ಬೋರ್ ವೆಲ್ ಗಳನ್ನು ಕೊರೆಯಲಾಗಿದೆ. ಇದರಿಂದ ಭೂಮಿಯ ಆಳದಲ್ಲಿರುವ ನೀರನ್ನು ತೆಗೆದು 300 ಮೀಟರ್ ರಿಂದ 500 ಮೀಟರ್ ತ್ರಿಜ್ಯದಲ್ಲಿ ವೃತ್ತಾಕಾರದ ಸಿಂಪರಣಾ ವ್ಯವಸ್ಥೆಯ ಮುಖಾಂತರ ಅಥವಾ ಸೆಂಟರ್-ಪಿವೋಟ್ ನೀರಾವರಿ ಪದ್ದತಿಯಿಂದ ಬೆಳೆಗಳಿಗೆ ನೀರನ್ನು ಪೂರೈಸಲಾಗುತ್ತಿದೆ. ಅಷ್ಟೇ ಅಲ್ಲದೆ ಹನಿ ನೀರಾವರಿ ಪದ್ದತಿ, ಸ್ಪ್ರಿಂಕ್ಲರ್ ಇನ್ನು ಮುಂತಾದ ತಂತ್ರಜ್ನಾನವನ್ನು ಉಪಯೋಗಿಸಿ ಬೆಳೆಗಳಿಗೆ ನೀರುಣಿಸುತಿದ್ದಾರೆ. ಬಹುತೇಕ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಇಲ್ಲಿ ಉಪಯೋಗಿಸುವುದರಿಂದ ಹೆಚ್ಚಿನ ಕೃಷಿ ಕಾರ್ಮಿಕರ ಅಗತ್ಯತೆ ಕಂಡು ಬರುತ್ತಿಲ್ಲ. ನೀರಿನ ಬಳಕೆಯೂ ಇಲ್ಲಿ ಕಡಿಮೆ. ಇಲ್ಲಿ, ವಿವಿಧ ರೀತಿಯ ಹಣ್ಣು, ಹೂವು ತರಕಾರಿ, ಖರ್ಜೂರ, ಧವಸ ಧಾನ್ಯಗಳಾದ ಗೋಧಿ, ಬಾರ್ಲಿಯನ್ನು ಬೆಳೆಯಲಾಗುತ್ತಿದೆ. ಇಲ್ಲಿ ಬೆಳೆಯುವ 100% ಎಲ್ಲಾ ಕೃಷಿ ಉತ್ಪನ್ನಗಳು ದೇಶದೊಳಗೆ ಸರಬರಾಜಾಗುತಿದ್ದು, ಹೆಚ್ಚುವರಿ ಉತ್ಪನ್ನಗಳನ್ನ ಪಕ್ಕದ ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತಿದೆ. ಸಾಂಪ್ರದಾಯಿಕ ಕೃಷಿಯ ಜತೆಗೆ, ನೂತನ ತಂತ್ರಜ್ನಾನಗಳಾದ ಹೈಡ್ರೋಪೋನಿಕ್ಸ್ ಮತ್ತು ಏರೋಪೋನಿಕ್ಸ್ ಅನ್ನು ಕೆಲೆವೆಡೆ ಅಳವಡಿಸಿಕೊಂಡು ಕೃಷಿಮಾಡಲಾಗುತ್ತಿದೆ.

 ಒಮಾನ್ ರಾಷ್ಟ್ರವೂ ಸಹ ಕೃಷಿ ಸ್ವಾವಲಂಬನೆಯತ್ತ ದಾಪುಗಾಲು ಹಾಕುತ್ತಿದೆ.

 ಒಮಾನ್ ನಲ್ಲಿಯೂ ಸಹ ವಿವಿಧ ತರಹದ ಹೂ, ಹಣ್ಣು ಸೊಪ್ಪುಗಳನ್ನ ಬೆಳೆಯಲಾಗುತ್ತಿದೆ. ಇಲ್ಲಿಯೂ ಲಕ್ಷಾಂತರ ಎಕರೆಯಷ್ಟು ಕೃಷಿ ಭೂಮಿಯಿದೆ. ಈ ತೋಟಗಳಲ್ಲಿ ಗೋಧಿ, ಬಾರ್ಲಿ, ಖರ್ಜೂರ, ಬಾಳೆಹಣ್ಣು, ಮಾವಿನಹಣ್ಣು, ಸೀಬೆ ಹಣ್ಣು, ಸಪೋಟ, ಪಪ್ಪಾಯ, ಕಲ್ಲಂಗಡಿ ಹಣ್ಣು, ದಾಳಿಂಬೆ, ಕರಭೂಜ, ಸೋರೆಕಾಯಿ, ಕುಂಬಳ್ಕಾಯಿ,  ತೆಂಗಿನಕಾಯಿ, ಕೊತ್ತಂಬರಿ, ಪುದಿನ, ಲೆಟ್ಟ್ಯೂಸ್, ಬದನೆಕಾಯಿ, ಟೊಮಾಟೋ, ಕ್ಯಾಪ್ಸಿಕಮ್, ನಿಂಬೆಹಣ್ಣು, ನುಗ್ಗೆಕಾಯಿ, ಆಲೂಗಡ್ಡೆ ಮುಂತಾದವಗಳನ್ನು ಇಲ್ಲಿ ಬೆಳೆಯುತ್ತಾರೆ. ಉತ್ಸಾಹಿ ಒಮಾನಿ ಕೃಷಿಕರು ವಿವಿಧ ರೀತಿಯ ಪ್ರಯೋಗಗಳನ್ನ ನಡೆಸುತ್ತಿರುವುದು ವಿಶೇಷ. ಮಲೆನಾಡಿನಲ್ಲಿ ಬೆಳೆಯುವ ಹಲಸಿನ ಹಣ್ಣನ್ನು ಸಹ ಇಲ್ಲಿ ಬೆಳೆದು ಯಶಸ್ಸು ಕಂಡಿದ್ದಾರೆ. ಅಷ್ಟು ಮಾತ್ರವಲ್ಲದೆ ಅಂಜೂರದ ಹಣ್ಣುಗಳು, ಏಪ್ರಿಕಾಟ್ಗಳು, ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ಸಹ ಬೆಳೆಯುತ್ತಿರುವುದು ವಿಶೇಷವಾಗಿದೆ, ಯಾಕೆಂದರೆ ಇಲ್ಲಿನ ವಾತಾವರಣ ಅತಿ ಬಿಸಿಲಿನಿಂದ ಕೂಡಿದ್ದು, ಇಂತಹ ಅತಿ ಕಡಿಮೆ ಮಳೆ ಪ್ರದೇಶದಲ್ಲಿ ಇಂತಹವುಗಳನ್ನ ಬೆಳೆಯಲು ಸಾಧ್ಯವಾಗಿದ್ದೆ ವಿಶೇಷವೆಂದೇ ಹೇಳಬೇಕು.

 

ಕೆಲೆವೆಡೆ ಹನಿ ನಿರಾವರಿ ಪದ್ದತಿ, ಸ್ಪ್ರಿಂಕ್ಲರ್ ವ್ಯವಸ್ಥೆ, ವೃತ್ತಾಕಾರದ ಸಿಂಪರಣಾ ವ್ಯವಸ್ಥೆಯ ಜತೆಗೆ ಕೆಲೆವೆಡೆ ಹೈಡ್ರೋಪೋನಿಕ್ಸ್ ಮತ್ತು ಏರೋಪೋನಿಕ್ಸ್ ನಂತಹ ತಂತ್ರಜ್ನಾನಗಳನ್ನು ಉಪಯೋಗಿಸಲಾಗುತ್ತಿದೆ. ಇಲ್ಲಿ ಗಮನಿಸಬೇಕಾದ ಇನ್ನೊಂದು ವಿಷಯವೇನೆಂದರೆ, ತಂತ್ರಜ್ನಾನವನ್ನು ಉಪಯೋಗಿಸಿ ಈ ರಾಷ್ಟ್ರಗಳಲ್ಲಿ ಬೆಳೆಯುವ ಕೃಷಿ ಉತ್ಪನ್ನಗಳು ಅತ್ಯುತ್ತಮ ಗುಣಮಟ್ಟದ್ದಾಗಿವೆ.

 

ಒಮಾನ್ ರಾಷ್ಟ್ರದ ಬೆಟ್ಟ ಗುಡ್ಡಗಾಡು ಪ್ರದೇಶಗಳ ಬುಡದಲ್ಲಿ ವರ್ಷಪೂರ್ತಿ ನೈಸರ್ಗಿಕವಾಗಿ ಹರಿಯುವ ಸಾವಿರಾರು ನೀರಿನ ಝರಿಗಳಿವೆ, ಈ ನೀರನ್ನು ಕೃಷಿಗಾಗಿ ಬಳಕೆ ಮಾಡಲಾಗುತ್ತಿದ್ದು, ಮಿಕ್ಕ ಕೆಲೆವೆಡೆ ಬೋರ್ ವೆಲ್ ಗಳನ್ನು ಕೊರೆದು ಕೃಷಿಗಾಗಿ ನೀರನ್ನು ಬಳಸಿಕೊಳ್ಳಲಾಗುತ್ತಿದೆ. ದುಬೈ ನಿಂದ ಒಮಾನ್ ರಾಷ್ಟ್ರದ ಮಸ್ಕತ್ ಗೆ ರಸ್ತೆಯಲ್ಲಿ ಪ್ರಯಣಿಸುವಾಗ ರಸ್ತೆಯ ಇಕ್ಕೆಲಗಳಲ್ಲಿ ನೂರಾರು ಕಿ.ಮಿ. ದೂರದಷ್ಟು ಹಚ್ಚ ಹಸಿರಿನಿನ ತೋಟಗಳನ್ನು ಕಾಣಬಹುದು, ಇದೇ ರೀತಿ ಸಲಾಲ್ಹ, ಸೂರ್, ನಿಜ್ವ ಮುಂತಾದ ಪ್ರದೇಶಗಳಲ್ಲಿಯೂ ಸಹ ಹೊಲಗದ್ದೆಗಳಿವೆ. ಸಲಾಲ್ಹ ಪ್ರದೇಶವಂತೂ ನಮ್ಮ ಸಹ್ಯಾದ್ರಿ ತಪ್ಪಲಿನ ಒಂದು ಪಟ್ಟಣದಂತೆ ಇದೆ. ರಾಜಧಾನಿ ಮಸ್ಕತ್ ಸೇರಿದಂತೆ ಇತರೆ ನಗರಗಳಾದ ಸಲಾಲ್ಹ, ಸೋಹಾರ್, ಸೂರ್ ಮುಂತಾದೆಡೆ ಮುಖ್ಯರಸ್ತೆ ಬದಿಯಲ್ಲಿರುವ ಹಚ್ಚ ಹಸಿರಿನ ಉದ್ಯಾನವನಗಳು, ಕೈತೋಟಗಳು, ಗಿಡ ಮರಗಳನ್ನು ನೋಡಿದೊಡನೆ, ಪ್ರವಾಸಿಗರಿಗೆ ಆಶ್ಚಯವಾಗುವುದು ಖಂಡಿತ. ಒಮಾನಿನ ಕೆಲೆವೆಡೆ ಮಣ್ಣು ಫಲವತ್ತಾಗಿದೆ, ಇಲ್ಲಿನ ಗಿಡ ಮರಗಳಿಗೆ ಸೂಕ್ತ ಪ್ರಮಾಣದ ನೀರನ್ನು ಪೂರೈಸಿದರೆ, ಗಿಡ ಮರಗಳು ಸೊಂಪಾಗಿ ಬೆಳೆಯುತ್ತವೆ. ಮನೆಮುಂದಿನ ಜಾಗಗಳಲ್ಲಿ ಬಹುತೇಕ ಜನರು ವಿವಿಧ ರೀತಿಯ ತರಕಾರಿಗಳನ್ನು ಬೆಳೆಯುವುದಲ್ಲದೆ, ಅಲಂಕಾರಿಕ ಗಿಡಗಳನ್ನು ಬೆಳೆಸುತ್ತಾರೆ.

 

ಈ ಅರಬ್ ರಾಷ್ಟ್ರಗಳಲ್ಲಿ ತ್ಯಾಜ್ಯನೀರನ್ನ ಸಂಸ್ಕರಿಸಿ ಆ ನೀರನ್ನು ಈ ಉದ್ಯಾನವನಗಳಿಗೆ ಸರಬರಾಜು ಮಾಡಲಾಗುತ್ತದೆ. ಹನಿ ನೀರಾವರಿ ಪದ್ದತಿ, ಸ್ಪ್ರಿಂಕ್ಲರ್ ಪದ್ದತಿ ಮುಖಾಂತರ ಗಿಡಗಳಿಗೆ ಅಗತ್ಯವಾದ ನೀರನ್ನು ಪೂರೈಸಲಾಗುತ್ತಿದೆ. ಇಲ್ಲಿನ ತ್ಯಾಜ್ಯ ನೀರು ಸಂಸ್ಕರಣ ಘಟಕಗಳಿಂದ ಉತ್ಪಾದನೆಯಾಗುವ ತ್ಯಾಜ್ಯವನ್ನು ಸಂಸ್ಕರಿಸಿ ಗೊಬ್ಬರವನ್ನಾಗಿ ಪರಿವರ್ತಿಸಿ ಉದ್ಯಾನವನಗಳಿಗೆ ಪೂರೈಸಲಾಗುತ್ತಿದೆ.

 

ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ಪಡೆಯುವುದರ ಜತೆಗೆ ಕೃಷಿ ಕ್ಷೇತ್ರವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಾತ್ಮಕವಾಗಿಸಲು ಕೆಲಸ ಮಾಡುವುದು ಮಾತ್ರವಲ್ಲದೆ, ಕೃಷಿಯನ್ನು ಸಹ ಒಂದು ಉದ್ಯಮವನ್ನಾಗಿ ಪರಿಗಣಿಸಿ, ಕೃಷಿ ಚಟುವಟಿಕೆಗೆ ಬೇಕಾದ ಅಗತ್ಯವಾದ ಸೌಕರ್ಯಗಳನ್ನು ಅರಬ್ ರಾಷ್ಟ್ರಗಳು ಕಲ್ಪಿಸಿಕೊಡುತ್ತಿವೆ.  ಕೃಷಿ ವಲಯದಲ್ಲಿ ಹೂಡಿಕೆ ಮಾಡುವ ಸಲುವಾಗಿ ವಿದೇಶಿ ಹೂಡಿಕೆದಾರರನ್ನು ಪ್ರೋತ್ಸಾಹಿಸಲು ಕೃಷಿ ಉಪಕರಣಗಳ ಆಮದು ಸುಂಕ  ವಿನಾಯಿತಿ, ಕಡಿಮೆ ಬಡ್ಡಿದರದ ಸಾಲ ಇತ್ಯಾದಿ ಸೌಕರ್ಯಗಳನ್ನು ನೀಡಲಾಗಿದೆ. ಕೃಷಿಯ ಜತೆಗೆ ಅತ್ಯಾಧುನಿಕ ತಂತ್ರಜ್ನಾನದ ಸುಸಜ್ಜಿತ ಹೈನುಗಾರಿಕೆ ಫಾರಂಗಳು, ಕೋಳಿ ಸಾಕಾಣಿಕೆ ಕೇಂದ್ರಗಳು ಸಾಕಷ್ಟಿವೆ. ಇಲ್ಲಿ ಉತ್ಪಾದನೆಯಾಗುವ ಉತ್ತಮ ಗುಣಮಟ್ಟದ ಹಾಲು, ಮೊಸರು, ಬೆಣ್ಣೆ, ತುಪ್ಪ ದೇಶದೆಲ್ಲೆಡೆ ಬಳಕೆಯಾಗುವುದಲ್ಲದೆ ಇತರೆ ರಾಷ್ಟ್ರಗಳಿಗೂ ಸಹ ರಫ್ತು ಮಾಡಲಾಗುತ್ತಿದೆ.

 ಇಲ್ಲಿನ ಮಣ್ಣಿನಲ್ಲಿ ಬೆಳೆಯುವ ಕೃಷಿ ಉತ್ಪನ್ನಗಳ ಜತೆಗೆ ನಾಗರೀಕರ ಅಗತ್ಯಕ್ಕೆ ತಕ್ಕಂತೆ ಬೇಕಾದ ಕುರಿ ಕೋಳಿ ಮುಂತಾದವುಗಳನ್ನ ಇಲ್ಲಿ ಬೆಳೆಸಿ  ಸ್ವಾವಲಂಬನೆಯತ್ತ ಹೆಜ್ಜೆ ಹಾಕುತ್ತಿರುವುದು ಒಂದು ಉತ್ತಮ ಬೆಳವಣಿಗೆ. ಯಾವುದೇ ಒಂದು ರಾಷ್ಟ್ರ, ಆಹಾರದಂತಹ ವಿಷಯದಲ್ಲಿ ಬೇರೆಯವರ ಅವಲಂಬನೆಯಲ್ಲಿರುವುದು ಸರಿಯಲ್ಲ. ಈಗ ಸಾಕಷ್ಟು ಹಣ ಇದೆ ಎಂದು ಬೇಕಾದದ್ದನ್ನು ರಫ್ತು ಮಾಡಿಕೊಂಡು ಜೀವಿಸುವುದು ಸಹ ಉತ್ತಮ ನಿರ್ಧಾರವಲ್ಲ, ಮುಂದಿನ ಕನಿಷ್ಟ ಐವತ್ತು ವರ್ಷಗಳಿಗೆ ಮತ್ತು ಮುಂದಿನ ಪೀಳಿಗೆಗೆ ಬೇಕಾದ ಸೂಕ್ತ ಯೋಜನೆಗಳನ್ನ ಹಾಕಿಕೊಂಡು ಮುಂದಡಿಯಿಡುವುದು ಉತ್ತಮ ಲಕ್ಷಣ. ಆ ನಿಟ್ಟಿನಲ್ಲಿ, ಅರಬ್ ರಾಷ್ಟ್ರಗಳು ಮುಂದಾಲೋಚನೆಯಿಂದ ಸ್ವಾವಲಂಬನೆಯತ್ತ ಎಚ್ಚರಿಕೆಯ ಹೆಜ್ಜೆಇಡುತ್ತಿರುವುದು ಇತರೆ ರಾಷ್ಟ್ರಗಳಿಗೆ ಒಂದು ಪಾಠ ಎಂದು ಹೇಳಬೇಕು.

ಬರಹ:- ಪಿ.ಎಸ್.ರಂಗನಾಥ

ಮಸ್ಕತ್ - ಒಮಾನ್ ರಾಷ್ಟ್ರ

ಗುರುವಾರ, ಆಗಸ್ಟ್ 24, 2023

ತ್ರಿವಿಕ್ರಮನ ಚಂದ್ರಯಾನಕ್ಕೆ ಅರಬ್ ರಾಷ್ಟ್ರಗಳಿಂದಲೂ ಅಭಿನಂದನೆಗಳ ಸುರಿಮಳೆ








ಚಂದ್ರಯಾನ - 3 ಯೋಜನೆಯ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ವಿಕ್ರಮ್‌ ಮತ್ತು  ರೋವರ್‌ ಪ್ರಗ್ಯಾನ್ ಯಶಸ್ವಿಯಾಗಿ ಇಳಿಯುವ ಐತಿಹಾಸಿಕ ಕ್ಷಣವನ್ನು ನೋಡಲು ದೇಶ ವಿದೇಶಗಳಾದ್ಯಾಂತ ಕೋಟ್ಯಾಂತರ ಜನರು ಬುಧವಾರದಂದು ಟೀವಿ ಪರದೆಗಳಿಗೆ ಅಂಟಿ ಕುಳಿತಿದ್ದರು. ಯಾವಾಗ ಚಂದ್ರನ ಮೇಲೆ ವಿಕ್ರಮ್ ಸೇಫಾಗಿ ಲ್ಯಾಂಡ್ ಆಯಿತೋ ನೋಡಿ ಭಾರತ ದೇಶವು  ಇತಿಹಾಸ ನಿರ್ಮಿಸಿದ್ದಲ್ಲದೆ, ಇಡೀ ಜಗತ್ತೇ ಭಾರತದ ಇಸ್ರೋ ವಿಜ್ನಾನಿಗಳ ಸಾಧನೆಯನ್ನ ಸಂಭ್ರಮಿಸಿ ಕೊಂಡಾಡಿದ್ದಲ್ಲದೆ, ವಿಶ್ವದಾದ್ಯಂತದಿಂದ ಭಾರತಕ್ಕೆ ಭರಪೂರ ಅಭಿನಂದನೆಗಳ ಸುರಿಮಳೆಯಾಗುತ್ತಿದೆ. #congratulationsindia ಎನ್ನುವ ಹ್ಯಾಶ್ ಟ್ಯಾಗ್ ಕೋಟ್ಯಾಂತರ ಜನರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.  


ಅರಬ್ ರಾಷ್ಟ್ರಗಳಲ್ಲಿ, ಪ್ರಮುಖ ವಾಗಿ ಯುನೈಟೆಡ್ ಅರಬ್ ಸಂಸ್ಥಾನದ ಇಲ್ಲಿನ ಅಧ್ಯಕ್ಷರು ಮತ್ತು ಅಬುಧಾಬಿಯ ಆಡಳಿತಗಾರರು ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್, ಮತ್ತು ಯುಎಇ ಉಪಾಧ್ಯಕ್ಷರು ಮತ್ತು ಪ್ರಧಾನ ಮಂತ್ರಿ ಮತ್ತು ದುಬೈ ಆಡಳಿತಗಾರರು ಆದ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರು, ಒಮಾನಿನ ವಿದೇಶಾಂಗ ಸಚಿವರು ಸೇರಿದಂತೆ ಬಹುತೇಕರು ಭಾರತದ ಇಸ್ರೋ ವಿಜ್ನಾನಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.


ದುಬೈ ಆಡಳಿತಗಾರರು ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರು "ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿದ್ದಕ್ಕಾಗಿ ಭಾರತದ ನಮ್ಮ ಸ್ನೇಹಿತರಿಗೆ ಅಭಿನಂದನೆಗಳು. ಸತತ ಪರಿಶ್ರಮಗಳ ಮೂಲಕ ಸಶಕ್ತ  ರಾಷ್ಟ್ರಗಳನ್ನು ಕಟ್ಟಲಾಗುತ್ತಿದೆ, ಯಾವಾಗಲೂ ಭಾರತವು ಇತಿಹಾಸವನ್ನು ನಿರ್ಮಿಸುತ್ತಲೇ ಇದೆ" ಎಂದು ಕೊಂಡಾಡಿದ್ದಾರೆ.


ಯುಏಇ ಯ ಅಧ್ಯಕ್ಷರು ಮತ್ತು ಅಬುಧಾಬಿಯ ಆಡಳಿತಗಾರರು ಆದ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು

ಚಂದ್ರನ ಮೇಲೆ ಭಾರತದ ಚಂದ್ರಯಾನ-3 ಬಾಹ್ಯಾಕಾಶ ನೌಕೆಯ ಯಶಸ್ವಿ ಲ್ಯಾಂಡಿಂಗ್ ಸಾಮೂಹಿಕ ವೈಜ್ಞಾನಿಕ ಪ್ರಗತಿಯ ಮಹತ್ವವನ್ನು ಪ್ರತಿನಿಧಿಸುತ್ತದೆ. ಮನುಕುಲದ ಸೇವೆಯಲ್ಲಿನ ಈ ಐತಿಹಾಸಿಕ ಸಾಧನೆಗಾಗಿ ನಾನು ಪ್ರಧಾನ ಮಂತ್ರಿ @ನರೇಂದ್ರ ಮೋದಿ ಮತ್ತು ಭಾರತದ ಜನತೆಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ" ಎಂದಿದ್ದಾರೆ.


ಒಮಾನ್  ರಾಷ್ಟ್ರದ ವಿದೇಶಾಂಗ ಸಚಿವರು ಚಂದ್ರಯಾನ-3 ಯಶಸ್ವಿಯಾಗಿ ಚಂದ್ರನ ಮೇಲೆ ಇಳಿಯಲು ಭಾರತವನ್ನು ಅಭಿನಂದಿಸಿದ್ದಾರೆ. “ಚಂದ್ರನ ಮೇಲೆ ಯಶಸ್ವಿಯಾದ ಸಾಫ್ಟ್ ಲ್ಯಾಂಡಿಂಗ್‌ಗಾಗಿ ಭಾರತಕ್ಕೆ ಅಭಿನಂದನೆಗಳು. ಭಾರತದ ಬಾಹ್ಯಾಕಾಶ ಯಾನದಲ್ಲಿ ಒಂದು ಮೈಲಿಗಲ್ಲು. ಹೊಸ ಆವಿಷ್ಕಾರಗಳು ಮತ್ತು ವೈಜ್ಞಾನಿಕ ಪ್ರಗತಿಯನ್ನು ನಾವು ಎದುರು ನೋಡುತ್ತಿದ್ದೇವೆ” ಎಂದು ಒಮಾನ್‌ನ ವಿದೇಶಾಂಗ ಸಚಿವ ಬದ್ರ್ ಅಲ್ ಬುಸೈದಿ ತಮ್ಮ ತಿಳಿಸಿದ್ದಾರೆ.


ಗಲ್ಫ್ ರಾಷ್ಟ್ರಗಳಲ್ಲಿ, ಚಿಕ್ಕ ಪುಟ್ಟ ಕೆಲಸ ಮಾಡುವುವರಿಂದ ಹಿಡಿದು ಕೋಟ್ಯಾಂತರ ಆಸ್ತಿ ಹೊಂದಿರುವ ವಿವಿಧ ವರ್ಗದ ಐವತ್ತು ಲಕ್ಷಕ್ಕೂ ಹೆಚ್ಚಿನ ವಿವಿಧ ರಾಜ್ಯಗಳ  ಭಾರತೀಯ ಪ್ರಜೆಗಳಿದ್ದಾರೆ.  ಚಂದ್ರಯಾನದ ಯಶಸ್ಸು ಪ್ರತಿಯೊಬ್ಬ ಭಾರತೀಯರಿಗೂ ಅತೀವ ಸಂತಸವನ್ನುಂಟು ಮಾಡಿದ್ದಲ್ಲದೆ, ಭಾರತೀಯರ ಮೇಲಿನ ಗೌರವವನ್ನು ಇಮ್ಮಡಿ ಗೊಳಿಸಿದೆ. ಭಾರತಕ್ಕೆ ಮತ್ತು ವಿಶ್ವಕ್ಕೆ ಮಹತ್ವದ ದಿನ. ಈ ಸಾಧನೆಯನ್ನು ಸಾಧಿಸಿದ ವಿಶ್ವದ ನಾಲ್ಕನೇ ದೇಶ ನಮ್ಮದು. ಚಂದ್ರನ ದಕ್ಷಿಣ ಧ್ರುವದ ಬಳಿ ಬಾಹ್ಯಾಕಾಶ ನೌಕೆಯನ್ನು ಇಳಿಸಿದ ವಿಶ್ವದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಂತಹ ನಿರ್ಣಾಯಕ ಮತ್ತು ಕಷ್ಟಕರವಾದ ಮಿಷನ್ ಅನ್ನು ಸಾಕಾರ ಗೊಳಿಸಿದಿದ್ದಕ್ಕಾಗಿ ನಮ್ಮ ಅದ್ಭುತ ವಿಜ್ಞಾನಿಗಳು ಮತ್ತು ಇಸ್ರೋಗೆ ಹ್ಯಾಟ್ಸ್ ಆಫ್ ಎಂದು ಪ್ರತಿಯೊಬ್ಬರು ಅಭಿನಂದನೆಗಳನ್ನು ವಿನಿಮಯ ಮಾಡಿಕೊಂಡರು. ವಾಟ್ಸಪ್ ಗ್ರೂಪ್ ಗಳು, ಫೇಸ್ ಬುಕ್ ಗಳು ಸೇರಿದಂತೆ ಹಲವಾರು ಸಾಮಾಜಿಕ ಜಾಲತಾಣದಲ್ಲಿ ಅಭಿನಂದನೆಗಳ ಮೆಸ್ಸೇಜ್ ಗಳು ತುಂಬಿ ತುಳುಕಾಡುತ್ತಿವೆ. ಭಾರತೀಯರಂತೆ ವಿವಿಧ ದೇಶಗಳ ವಲಸಿಗರು ಕೊಲ್ಲಿ ರಾಷ್ಟ್ರಗಳಲ್ಲಿ ನೆಲೆಸಿ ಕೆಲಸ ಮಾಡುತಿದ್ದಾರೆ, ಅದರಲ್ಲಿ ವಿಶೇಷವಾಗಿ ಪಾಕಿಸ್ತಾನಿಗಳು ಸಹ ಭಾರತೀಯರನ್ನು ಅಭಿನಂದಿಸಿದ್ದು ವಿಶೇಷವಾಗಿತ್ತು. ಕೊಲ್ಲಿ ರಾಷ್ಟ್ರಗಳಲ್ಲಿನ ವಿವಿಧ ಭಾರತೀಯ ಸಾಂಸ್ಕೃತಿಕ ಸಂಘಟನೆಗಳು, ಸಂಘ ಸಂಸ್ಥೆಗಳು ಸಂಭ್ರಮಾಚರಣೆಯನ್ನ ನಡೆಸಿದವು. ಬಹುತೇಕರು ಡಿಪಿಗಳಲ್ಲಿ ತಮ್ಮ ಫೋಟೋವನ್ನ ಇಸ್ರೋ ಗೆ ಅಭಿನಂದಿಸುವ ಮೂಲಕ ಬದಲಾಯಿಸಿಕೊಂಡಿದ್ದರು. 


ವಿದೇಶಿ ಮಾಧ್ಯಮಗಳ ಸಾಮಾಜಿಕ ಜಾಲತಾಣಗಳಲ್ಲೂ ಸಹ ಚಂದ್ರಯಾನ ಕುರಿತು ಸತತವಾಗಿ ವಿವಿದ ಬಗೆಯ ಪೋಸ್ಟ್ ಗಳನ್ನ ಹಾಕುತಿದ್ದರು. ಸಾಮಾನ್ಯವಾಗಿ ಭಾರತದ ಬಗೆಗಿನ ಋಣಾತ್ಮಕ ಸುದ್ದಿಗಳನ್ನ ಪೋಸ್ಟ್ ಮಾಡುತಿದ್ದ ಇವರು, ಇಂದು ಚಂದ್ರಯಾನ ಕುರಿತು ಸುದ್ದಿ ಪ್ರಸಾರ ಮಾಡಿ ತಮ್ಮ ನ್ಯೂಸ್ ವೀವರ್ಸ್ ಅನ್ನು ಹೆಚ್ಚಿಸಿಕೊಂಡಿದ್ದನ್ನ ಕಾಣಬಹುದಾಗಿತ್ತು. ಬಿಬಿಸಿ ನ್ಯೂಸ್  ನ ವೆಬ್ ಪೇಜ್ ನಲ್ಲೂ ಕಾಮೆಂಟ್ ಸೆಕ್ಶನ್ ನಲ್ಲಿ ಕೆಲವರು, ಭಾರತದಲ್ಲಿ ಊಟವಿಲ್ಲದೆ ನರಳುತ್ತಿರುವ ಲಕ್ಷಾಂತರ ಜನರಿರುವಾಗ ಈ ತರಹದ ಶೋಕಿ ಭಾರತಕ್ಕೆ ಬೇಕಿತ್ತ ಎಂದು ಕೆಟ್ಟ ಕಾಮೆಂಟ್ ಮಾಡುತಿದ್ದವರಿಗೆ, ನಮ್ಮ ಭಾರತೀಯರು ಸರಿಯಾಗಿಯೇ ಗುನ್ನ ಇಡುತ್ತಿರುವುದು ಕಂಡು ಬಂತು. ನೀವು ಬ್ರಿಟೀಷರು, ಮುನ್ನೂರು ವರ್ಷಗಳ ಕಾಲ ಕೊಳ್ಳೆ ಹೊಡೆದು ಬಡ ರಾಷ್ಟ್ರವನ್ನಾಗಿ ಮಾಡಿ ಹೋದಿರಿ, ಅದರಿಂದ ನಿಮಗೆ ನಾಚಿಕೆಯಾಗಬೇಕಿದೆ ಹೊರತು ನಮಗಲ್ಲ. ಅಂತಹ ಬಡತನದ ಸ್ಥಿತಿಯಿಂದ ದೇಶ ಈವತ್ತು ಪ್ರಪಂಚದ ಪ್ರಮುಖ ಆರ್ಥಿಕ ಶಕ್ತಿಯಾಗುವ ಮಟ್ಟಕ್ಕೆ ಭಾರತ ಬೆಳೆದು ನಿಂತಿದೆ, ಅದಕ್ಕೆ ಹೊಟ್ಟೆಕಿಚ್ಚು ಪಡದೆ ಸಂಭ್ರಮಿಸಿ ಎಂದು ಹಲವರು ಕಾಮೆಂಟಿಸುತಿದ್ದರು.  ಅದೇ ಇರಲಿ ಭಾರತ ರಾಷ್ಟ್ರಕ್ಕೂ ಮತ್ತು ಎಲ್ಲ ಭಾರತೀಯರಿಗೂ ಇದೊಂದು ಹೆಮ್ಮೆಯ ಕ್ಷಣ. 


ಬರಹ :- ಪಿ.ಎಸ್.ರಂಗನಾಥ

ಮಸ್ಕತ್, ಒಮಾನ್ ರಾಷ್ಟ್ರ





ಗುರುವಾರ, ಆಗಸ್ಟ್ 17, 2023

ಯುಏಇ ರಾಷ್ಟ್ರದ ಒಳಗೆ ಒಮಾನ್, ಒಮಾನ್ ಒಳಗೆ ಯುಏಇ


ನಮ್ಮ ಕರ್ನಾಟಕದ ಹಳ್ಳಿಯೊಂದು ಮಹಾರಾಷ್ಟ್ರದ ರಾಜ್ಯದ ಒಳಗೆ ಇದೆ ಎಂದರೆ ನಿಮಗೆ ಆಶ್ಚರ್ಯ ಆಗಬಹುದಲ್ಲವೆ. ಅದು ಹೇಗೆ ಎಂದರೆ, ಹಳ್ಳಿ ಕರ್ನಾಟಕದ್ದೇ ಆದರೂ ಹಳ್ಳಿಯ ಸುತ್ತಮುತ್ತಲಿನ ಭೂಪ್ರದೇಶ ಮಹಾರಾಷ್ಟ್ರ ರಾಜ್ಯಕ್ಕೆ ಸೇರಿದ್ದು. ವಿದ್ಯುತ್ ಸೌಲಭ್ಯ ಸಹ ಮಹಾರಾಷ್ಟ್ರ ನೀಡುತ್ತದೆ. ಆದರೆ ಆ ಹಳ್ಳಿ ಮಾತ್ರ ಕರ್ನಾಟಕ ರಾಜ್ಯದ ನಿಯಂತ್ರಣದಲ್ಲಿದೆ. ರಾಜ್ಯಗಳ ಗಡಿ ಗುರುತಿಸುವ ಸಂಧರ್ಭದಲ್ಲಿ ಅಲ್ಲಿನ ಜನ ಕರ್ನಾಟಕದೊಂದಿಗೆ ಇರಲು ಬಯಸಿದ್ದರಿಂದ ಅಂದಿನಿಂದ ಆ ಹಳ್ಳಿ ಕರ್ನಾಟಕದಲ್ಲಿದೆ. ಆ ಹಳ್ಳಿಯ ಹೆಸರೇ ಚೋಂಡೀ ಮುಖೇಡ್. ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ವ್ಯಾಪ್ತಿಯಲ್ಲಿ ಈ ಪ್ರದೇಶವಿದೆ. ಇದನ್ನು ಕರ್ನಾಟಕದ ಭೂಪ್ರದೇಶ ದ್ವೀಪ ಎಂದು ಕರೆಯುತ್ತಾರೆ.

 

ಇಂತಹದೇ ಇನ್ನೊಂದು ವಿಶೇಷ ಸಂಗತಿ ಅರಬ್ ರಾಷ್ಟ್ರಗಳಾದ ಒಮಾನ್ ಮತ್ತು ಯುನೈಟೆಡ್ ಅರಬ್ ಸಂಸ್ಥಾನ (ಯುಏಇ) ದಲ್ಲಿದೆ. ಆದರೆ ಇಲ್ಲಿ ವಿಷಯ ಸ್ವಲ್ಪ ಸಂಕೀರ್ಣ. ಅದು ಏನಪ್ಪ ಎಂದರೆ, ಯುಏಇ ದೇಶದೊಳಗೆ ಒಮಾನ್ ದೇಶದ ಪ್ರದೇಶ, ಆ ಪ್ರದೇಶದೊಳಗೆ ಮತ್ತೆ ಯುಏಇ ಯ ಒಂದು ಗ್ರಾಮ. ಇಲ್ಲಿನ ಆ ಎರಡು ಪ್ರದೇಶಗಳ ಜನರ ಭಾವನೆಗಳು ಮತ್ತು ನಿರ್ಧಾರಕ್ಕೆ ಬೆಲೆ ಕೊಟ್ಟು ಎರಡು ದೇಶಗಳ ಸರ್ಕಾರಗಳು ಆ ಎರಡು ಹಳ್ಳಿಗಳ ಜನರನ್ನು ಅವರ ಇಚ್ಚೆಯಂತೆಯೇ ಇರಲು ಅವರನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ಇನ್ನೊಂದು ವಿಶೇಷವೆಂದರೆ, ಇಲ್ಲಿ ಯಾವುದೇ ತರಹದ ಅಂತರಾಷ್ಟ್ರಿಯ ಗಡಿಗಳು ಇಲ್ಲ. ಪ್ರಪಂಚದಲ್ಲಿ ಈ ತರಹದ ಭೂ ಪ್ರದೇಶದ ದ್ವೀಪಗಳು ಬಹಳ ಅಪರೂಪ. ನೆದರ್ಲ್ಯಾಂಡ್ ಮತ್ತು ಬೆಲ್ಜಿಯಮ್ ರಾಷ್ಟ್ರಗಳಲ್ಲಿ ಸಹ ಈ ತರಹದ ಪ್ರದೇಶವಿದೆ. ಒಂದು ದೇಶದ ಭೂಭಾಗವನ್ನು ಇನ್ನೊಂದು ದೇಶವು ಸುತ್ತುವರಿದಿದ್ದರೆ ಮತ್ತು ಆ ಭಾಗವನ್ನು ಮತ್ತೊಂದು ದೇಶವು ಸುತ್ತುವರಿದಿದ್ದರೆ ಅದನ್ನು ಎಕ್ಸ್‌ಕ್ಲೇವ್‌ ಮತ್ತು ಎನ್‌ಕ್ಲೇವ್‌ ಎಂದು ಕರೆಯುತ್ತಾರೆ.

     ಇಂತಹ ವಿಶಿಷ್ಟವಾದ ಪ್ರದೇಶಗಳ ಹೆಸರು  "ಮಾಧಾ" ಮತ್ತು "ನಹ್ವಾ". ಮಾಧಾ ಒಮಾನ್ ರಾಷ್ಟ್ರಕ್ಕೆ ಸೇರಿದ್ದಾದರೆ, ನಹ್ವಾ ಯುನೈಟೆಡ್ ಅರಬ್ ಎಮಿರೇಟ್ಸ್ ಗೆ ಸೇರಿದೆ. ಇನ್ನು ಮಾದಾ ಪ್ರದೇಶದ ಜನರು ತಮ್ಮ ರಾಷ್ಟ್ರವಾದ ಒಮಾನಿನ ರಾಜಧಾನಿಯನ್ನು ಸಂಪರ್ಕಿಸಲು ಯುಏಇ ನ ಮುಖಾಂತರ ಹೋಗಬೇಕು. ಅದೇ ರೀತಿ  "ನಹ್ವಾ" ಪ್ರದೇಶದ ಜನರು ಯುಏಇಯನ್ನು ಸಂಪರ್ಕಿಸಲು ಒಮಾನಿನ ಮುಖಾಂತರ ಸಂಚರಿಸಬೇಕು.

     ಈ ತರಹ ಜನ ಯಾಕೆ ಆಯ್ದುಕೊಂಡರು ಎನ್ನುವ ಹಿನ್ನೆಲೆ ಹೀಗಿದೆ; 1930 ರ ದಶಕದ ಕೊನೆಯಲ್ಲಿ ಅಥವಾ 1940 ರ ದಶಕದ ಆರಂಭದಲ್ಲಿ, ಮುಸಂದಮ್ ಪರ್ಯಾಯದ್ವೀಪವನ್ನು ಆಳಿದ ನಾಲ್ಕು ಪ್ರಮುಖ ಕುಟುಂಬಗಳ ನಾಯಕರು (ರಾಸ್ ಅಲ್ ಖೈಮಾದ ಅಲ್ ಖಾಸಿಮಿ, ಶಾರ್ಜಾದ ಅಲ್ ಖಾಸಿಮಿ, ಫುಜೈರಾದ ಅಲ್ ಶಾರ್ಕಿ ಮತ್ತು ಒಮಾನ್‌ನ ಬು ಸೈದ್ ಮನೆತನ) ಒಂದು ದಿನ ಇಲ್ಲಿನ ಹಲವಾರು ಹಳ್ಳಿಗಳ ಜನರನ್ನು ಸಬೆಗೆ ಕರೆದು ನೀವು ಯಾವ ಶೇಖ್‌ ಪ್ರಭುತ್ವ ದ ಆಳ್ವಿಕೆಯಲ್ಲಿ ಇರಲು ಬಯಸುತ್ತೀರಿ ಎಂಬ ಪ್ರಶ್ನೆಯನ್ನು ಮುಂದಿಟ್ಟರು. ಮಾಧಾ ಸುತ್ತಲಿನ ಎಲ್ಲಾ ಇತರ ಹಳ್ಳಿಗಳು ಮತ್ತು ಪಟ್ಟಣಗಳು  ಶಾರ್ಜಾ, ಫುಜೈರಾ ಮತ್ತು ರಾಸ್ ಅಲ್ ಖೈಮಾದ ಆಡಳಿತ ಕುಟುಂಬಗಳ ಜತೆ ಇರಲು ಇಚ್ಚಿಸಿದರು, ಆದರೆ ಮಾಧಾ ಪ್ರದೇಶದ ಜನರು ಒಮಾನಿನ ಸುಲ್ತಾನರ ಜತೆ ಇರಲು ಒಪ್ಪಿಗೆ ಸೂಚಿಸಿದರು. ಆ ದಿನಗಳಲ್ಲಿ ಒಮಾನ್ ಶ್ರೀಮಂತ ರಾಷ್ಟ್ರವಾಗಿತ್ತು, ಆಫ್ರಿಕದ ಜಂಜೀಬಾರ್ ಸೇರಿದಂತೆ ಅರಬ್ಬಿ ಸಮುದ್ರದ ಬಹುತೇಕ ಬಂದರುಗಳು ಒಮಾನಿ ಸುಲ್ತಾನರ ವಶದಲ್ಲಿತ್ತು. ಹೀಗಾಗಿ ಸಶಕ್ತ ಸರ್ಕಾರವನ್ನು ಹೊಂದಿರುವ ಒಮಾನ್ ಸುಲ್ತಾನರು ಇಲ್ಲಿಯ ಜನರಿಗೆ ಅಗತ್ಯವಾದ ರಕ್ಷಣೆ ಜತೆಗೆ ನೀರಿನ ಸೌಕರ್ಯವನ್ನು ನೀಡುವರು ಎನ್ನುವ ದೃಢ ನಂಬಿಕೆಯಿಂದ ಮಾಧಾ ಜನತೆ ಒಮಾನ್ ಅನ್ನು ಆಯ್ಕೆ ಮಾಡಿದರು. ಇನ್ನು ಇದೇ ಪ್ರಾಂತ್ಯದ ಒಳಗಿರುವ ಇನ್ನೊಂದು ಗ್ರಾಮ "ನಹ್ವಾ" ದ ಜನತೆಯು ಯುಏಇಯ ಜತೆಗೆ ಇರಲು ಇಷ್ಟಪಟ್ಟರು, ಅದರಂತೆ ಶಾರ್ಜಾದ ಅಲ್ ಖಾಸಿಮಿಯವರ ಆಡಳಿತಕ್ಕೆ ಈ ಗ್ರಾಮವು ಒಳಪಟ್ಟಿತು.

 

ಸುಮಾರು ನಲವತ್ತು ವರ್ಷಗಳ ನಂತರ, ಬ್ರಿಟಿಷ್ ಪ್ರತಿನಿಧಿಯಾದ ಜೂಲಿಯನ್ ಎಫ್. ವಾಕರ್  ಈ ಎಲ್ಲಾ ಪ್ರಾಂತ್ಯಗಳ ಪ್ರತಿನಿಧಿಗಳು, ಸ್ಥಳೀಯ ಬುಡಕಟ್ಟು ಪ್ರದೇಶದ ಜನರು ಮತ್ತು ನಡುವಿನ ಧೀರ್ಘವಾದ ಸಮಾಲೋಚನೆಗಳ ನಂತರ 1969 ರಲ್ಲಿ ಅಂತರಾಷ್ಟ್ರೀಯ ಗಡಿಯನ್ನು ನಿರ್ಧರಿಸಲಾಯಿತು. ಅಂದಿನಿಂದ ಈ ಎಲ್ಲಾ ಪ್ರಾಂತ್ಯಗಳನ್ನು ಆ ರಾಷ್ಟ್ರಗಳು ಅಭಿವೃದ್ದಿ ಪಡಿಸುತ್ತಿವೆ. ಈ ಪ್ರದೇಶಗಳ ಪ್ರವೇಶದ ಸ್ಥಳದಲ್ಲಿ ಆಯಾ ರಾಷ್ಟ್ರಗಳ ಪೋಲೀಸ್ ಚೆಕ್ಪೋಸ್ಟ್ ಗಳಿವೆ. ಒಮಾನ್ ರಾಷ್ಟ್ರವು, "ನ್ಯೂ ಮಾಧಾ" ಎನ್ನುವ ಒಂದು ಪಟ್ಟಣವನ್ನು ನಿರ್ಮಿಸಿ ಅಲ್ಲಿ ಸಾಕಷ್ಟು ಅಭಿವೃದ್ದಿಕಾರ್ಯಗಳನ್ನ ಕೈಗೊಂಡಿದೆ. ರಸ್ತೆಗಳು, ಶಾಲೆ, ಅಂಚೆ ಕಛೇರಿ, ಈದ್ ಮೈದಾನ, ಪೋಲೀಸ್ ಸ್ಟೇಷನ್, ಒಮಾನಿ ಬ್ಯಾಂಕ್, ವಿದ್ಯುತ್ ಮತ್ತು ನೀರು ಸರಬರಾಜು, ಏರ್‌ಸ್ಟ್ರಿಪ್ ಅನ್ನು ನಿರ್ಮಿಸಿದೆ. ಅಂದಾಜು 3000 ರಷ್ಟು ಜನಸಂಖ್ಯೆ ಇದೆ.ಮಾಧಾ ಒಳಗಿನ ಯುಏಇ ನಿಯಂತ್ರಣದಲ್ಲಿರುವ ನಹ್ವಾ ಪ್ರದೇಶದಲ್ಲಿ ಜನಸಂಖ್ಯೆ ಆಸುಪಾಸು 500 ರಷ್ಟಿದೆ. ಅಲ್ಲಿ ಯುಏಇ ರಾಷ್ಟ್ರವು ಅಲ್ಲಿನ ಜನರಿಗೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನ ನೀಡಿದೆ

     ಈ ವಿಶಿಷ್ಟವಾದ "ಮಾಧಾ ಮತ್ತು ನಹ್ವ" ಪ್ರದೇಶಕ್ಕೆ ವಾರಾಂತ್ಯಗಳಲ್ಲಿ ಸಾಕಷ್ಟು ಪ್ರವಾಸಿಗರು ಭೇಟಿ ನೀಡುತ್ತಾರೆ. ಬೆಟ್ಟಗಳಿಂದ ಆವೃತ್ತವಾದ ಒಮಾನಿನ ಮಾಧಾ ಪ್ರದೇಶದಲ್ಲಿ ಹೇರಳವಾದ ಖರ್ಜೂರದ ತೋಟಗಳಿವೆ. ಇಲ್ಲಿ ಕೆಲವು ನೀರಿನ ಬುಗ್ಗೆಗಳಿವೆ, ದಿನಪೂರ್ತಿ ನೈಸರ್ಗಿಕವಾಗಿ ಭೂಮಿಯಿಂದ ನೀರು ಹೊರಬರುತ್ತಿರುತ್ತದೆ. ಹದಿನೇಳನೇ ಶತಮಾನದಲ್ಲಿ ಒಮಾನಿ ಯಾರುಬಿ ಸುಲ್ತಾನಿಗಳು ನಿರ್ಮಿಸಿದ ಕೋಟೆ ಯೊಂದಿದೆ. ಸರೂಜ್ ಅಣೆಕಟ್ಟೆಯು ಈ ಪ್ರದೇಶದ ಪ್ರಮುಖ ಆಕರ್ಷಣೆ.

     ಇಲ್ಲಿನ ಪ್ರಮುಖ ನಾಯಕರಾಗಿದ್ದ ಮುಹಮ್ಮದ್ ಬಿನ್ ಸಲೇಮ್ ಅಲ್ ಮದನಿಯವರು ನಿರ್ಮಿಸಿದ ವಸ್ತುಸಂಗ್ರಹಾಲಯವು ಇದ್ದು, ಇದರಲ್ಲಿ ಪುರಾತನ ಕಾಲದ ವಸ್ತುಗಳನ್ನು ಸಂಗ್ರಹಿಸಿಡಲಾಗಿದೆ. ಹತ್ತನೇ ಶತಮಾನದ AD ವರೆಗಿನ ಹಲವಾರು ದಾಖಲೆಗಳು, ಹಸ್ತಪ್ರತಿಗಳು ಅಲೆಕ್ಸಾಂಡರ್ ದಿ ಗ್ರೇಟ್ ಆಳ್ವಿಕೆಯಲ್ಲಿ ಬಳಸಲಾದ ಗ್ರೀಕ್ ಬೆಳ್ಳಿ ನಾಣ್ಯ, ಎರಡೂ ಬದಿಗಳಲ್ಲಿ ಕಲ್ಲಿನಿಂದ ಮಾಡಿದ ನಕ್ಷತ್ರವನ್ನು ಹೊಂದಿರುವ ಅತ್ಯಂತ ಚಿಕ್ಕ ನಾಣ್ಯ , ಮತ್ತು ಉಮಯ್ಯದ್ ಮತ್ತು ರಾಜ್ಯ ಯುಗಗಳಲ್ಲಿ ಮುದ್ರಿಸಲಾದ ನಾಣ್ಯಗಳು, ಶಿಲಾ ಶಾಸನಗಳು, ಬಾಣಗಳ ತುಣುಕುಗಳು, ಈಟಿಗಳು, ಇತರ ಪುರಾತನ ಆಯುಧಗಳು, ಗಡಿಯಾರಗಳು, ಕುಂಬಾರಿಕೆಯ ಮಡಿಕೆ ಬಿಂದಿಗೆ, ನಾಣ್ಯ ಮತ್ತು ಕೃಷಿ ಉಪಕರಣಗಳನ್ನು ಒಳಗೊಂಡಂತೆ ಕ್ರಿಸ್ತ ಪೂರ್ವಕಾಲದ ಹಿಂದಿನ ಹಲವಾರು ವಸ್ತುಗಳು ಮತ್ತು ಪ್ರಾಚೀನ ವಸ್ತುಗಳನ್ನು ವಸ್ತುಸಂಗ್ರಹಾಲಯದಲ್ಲಿ ಕಾಣಬಹುದು.


 ಬರಹ:- ಪಿ.ಎಸ್.ರಂಗನಾಥ

ಮಸ್ಕತ್ - ಒಮಾನ್ ರಾಷ್ಟ್ರ

ಶುಕ್ರವಾರ, ಆಗಸ್ಟ್ 4, 2023

ಅರಬ್ ರಾಷ್ಟ್ರ ಒಮಾನ್ ನಲ್ಲಿ ಕಂಡು ಬಂದ ಹರಪ್ಪ ನಾಗರೀಕತೆಯ ಕುರುಹುಗಳು



ಪ್ರಪಂಚದ ಅತ್ಯಂತ ಪ್ರಾಚೀನ ನಾಗರೀಕತೆಯ ಸಂಸ್ಕೃತಿಗಳಲ್ಲಿ ಒಂದಾದ ಹರಪ್ಪ ಮತ್ತು ಮೆಹೆಂಜೋದಾರೋ ನಾಗರೀಕತೆ ಬಗ್ಗೆ ಭಾರತೀಯರಾದ ನಮಗೆ ಬಹಳಷ್ಟು ಹೆಮ್ಮೆ ಯಿದೆ. ಕಾರಣ ಏನೆಂದರೆ ಕ್ರಿ.ಪೂ 3000 ವರ್ಷಗಳ ಹಿಂದಿನ ಆ ಕಾಲದಲ್ಲಿಯೇ ಯೋಜನಾಬದ್ದವಾಗಿ  ನಿರ್ಮಾಣಗೊಂಡ ನಗರಗಳು, ರಕ್ಷಣಾ ಕೋಟೆಗಳು, ರಸ್ತೆಗಳು, ಕುಡಿಯುವ ನೀರಿನ ಬಾವಿಗಳು, ಒಳಚರಂಡಿ ವ್ಯವಸ್ಥೆ. ಸ್ನಾನಗೃಹಗಳು. ಇತ್ಯಾದಿ. ಆಗಿನ ಜನರ ಉತ್ತಮ ಸಾಮಾಜಿಕ ಜೀವನ, ಆರ್ಥಿಕ ಜೀವನ, ಕಲೆ, ಧಾರ್ಮಿಕ ಆಚರಣೆ, ಬರಹಗಳು, ಇವೆಲ್ಲವೂ ಹರಪ್ಪ ಸಂಸ್ಕೃತಿಯ ವಿಶಿಷ್ಟತೆಯನ್ನು ಎತ್ತಿ ಹಿಡಿಯುತ್ತವೆ. ಸಿಂಧೂ ಮತ್ತು ಅದರ ಉಪನದಿಗಳ ಬಯಲಿನಲ್ಲಿ ಈ ನಾಗರೀಕತೆ ಪ್ರಸ್ತುತದಲ್ಲಿದ್ದರಿಂದ ಇದನ್ನು  ಸಿಂಧೂ ಬಯಲಿನ ನಾಗರೀಕತೆ ಎಂದು ಕರೆಯಲಾಗುತ್ತದೆ. ಆದರೆ ಕಾಲನ ಹೊಡೆತಕ್ಕೆ ಸಿಕ್ಕಿ ಈ ಜನ ಜೀವನ ಕಣ್ಮರೆಯಾಗಿದ್ದುದು ಬಹಳ ವಿಷಾದದ ಸಂಗತಿ. ಅತಿವೃಷ್ಟಿ, ಅನಾವೃಷ್ಟಿ, ನೆರೆ, ಬರ ಇತ್ಯಾದಿಗಳ ಕಾರಣದಿಂದ ಇಲ್ಲಿನ ಜನರು ಈ ನಗರಗಳನ್ನು ತೊರೆದಿರಬಹುದು ಇಲ್ಲವೇ ಬೇರೆಡೆ ವಲಸೆ ಹೋಗಿರಬಹುದು ಎಂದು ಪುರಾತತ್ವ ಸಂಶೋಧಕರು ಊಹಿಸಿದ್ದಾರೆ.


ಒಂದು ಶತಮಾನದ ಹಿಂದೆ ಬ್ರಿಟೀಷರು, ಈ ಹರಪ್ಪ ನಾಗರಿಕತೆ ಬಗ್ಗೆ ಸಂಶೋಧನೆಗಳನ್ನು ಆರಂಭಿಸಿದ್ದರು. ಅಂದು ಶುರುವಾದ ಸಂಶೊಧನೆಗಳು ಇಂದಿಗೂ ವಿವಿಧ ದೇಶಗಳ ಪ್ರಖ್ಯಾತ ಪುರಾತತ್ವ ಸಂಶೋಧಕರು ಅನ್ವೇಷಣೆ ನಡೆಸುತಿದ್ದಾರೆ. ಈ ಸಂಶೋಧನೆಗಳಲ್ಲಿ ಸಿಂಧೂ ನದಿಬಯಲಿನ ಆಚೆಗೂ ಈ ನಾಗರೀಕತೆಯ ನೆಲೆಗಳು ಹರಡಿದ್ದವು ಎಂದು ತಿಳಿಯಲಾಯಿತು. ಅದೇ ರೀತಿ ಕಳೆದ ಒಂದು ದಶಕದಲ್ಲಿ ಒಮಾನಿನ ಒಳನಾಡಿನಲ್ಲಿ ಉತ್ಖನನ ನಡೆಸಿದ ಕೆಲಸ್ಥಳಗಳಲ್ಲಿ ದೊರೆತ ಪುರಾವೆಗಳಿಂದ ಅರಬ್ ರಾಷ್ಟ್ರವಾದ ಒಮಾನ್ ದೇಶದಲ್ಲೂ ಸಹ ಹರಪ್ಪ ನಾಗರೀಕತೆ ಹರಡಿತ್ತು ಎಂದು ಗೊತ್ತಾಗಿದೆ.

 ಒಮಾನ್ ದೇಶ (ಅಧಿಕೃತ ಹೆಸರು ಸುಲ್ತಾನೇಟ್ ಆಫ್ ಒಮಾನ್), ಇದು ಪಶ್ಚಿಮ ಏಷ್ಯಾದಲ್ಲಿನ ಅರಬ್  ರಾಷ್ಟ್ರ.  ಈ ದೇಶವು ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಯೆಮೆನ್ ನೊಂದಿಗೆ ಭೂ ಗಡಿಗಳನ್ನು ಹಂಚಿಕೊಂಡಿದೆ. ಉತ್ತರದಲ್ಲಿ ಪರ್ಶಿಯನ್ ಕೊಲ್ಲಿ, ಪೂರ್ವಕ್ಕೆ ಅರಬ್ಬಿ ಸಮುದ್ರ, ದಕ್ಷಿಣಕ್ಕೆ ಹಿಂದೂ ಮಹಾ ಸಾಗರವಿದೆ, ಇರಾನ್ ಮತ್ತು ಪಾಕಿಸ್ತಾನದೊಂದಿಗೆ ಸಮುದ್ರದ ಗಡಿಗಳನ್ನು ಹಂಚಿಕೊಂಡಿವೆ. 

 

ಭೌಗೋಳಿಕವಾಗಿ, ಒಮಾನ್ ರಾಷ್ಟ್ರವು ಭಾರತದಿಂದ ಅಷ್ಟೇನು ದೂರದಲ್ಲಿಲ್ಲ. ಸಮುದ್ರ ಮಾರ್ಗದ ಮುಖಾಂತರ ಗುಜರಾತಿನ ಬಂದರಿನಿಂದ ಒಮಾನಿನ ಮಸ್ಕತ್ ಪೋರ್ಟ್ ಗೆ ಕೇವಲ 1000 ನಾಟಿಕಲ್ ಮೈಲಿ ಮಾತ್ರ. ಹೀಗಾಗಿ ಹರಪ್ಪರು, ಕಡಲಾಚೆಗೂ ಇರುವ  ಅರಬ್ ರಾಷ್ಟ್ರಗಳಾದ ಒಮಾನ್, ಯುಏಇ ಮತ್ತಿತರ ದೇಶಗಳೊಂದಿಗೆ ವ್ಯಾವಹಾರಿಕ ಸಂಬಂಧಗಳನ್ನು ಹೊಂದಿರುವುದಕ್ಕೆ ಸಾಕಷ್ಟು ಸಾಧ್ಯತೆಗಳಿವೆ.

 

ಒಮಾನ್ ರಾಷ್ಟ್ರದ ಅಲ್ ವತ್ತಾಯ ಪ್ರದೇಶದಲ್ಲಿ ಕ್ರಿ.ಪೂ. 10000  ವರ್ಷಗಳ ಹಿಂದೆಯೇ ಜನವಸತಿಯಿತ್ತು ಎಂದು ಪುರಾತತ್ವ ಸಂಶೋಧನೆಗಳಿಂದ ತಿಳಿದು ಬಂದಿದೆ.  ಕ್ರಿ.ಪೂ 3000 ವರ್ಷಗಳ ಹಿಂದೆ ಗ್ರೀಕ್ ರೊಂದಿಗೆ ಎರಿಥ್ರಿಯನ್ ಸಮುದ್ರದಲ್ಲಿ ಕಡಲ ಮಾರ್ಗದ ಮೂಲಕ ವ್ಯಾವಹಾರಿಕ ಸಂಭಂದ ಕುರಿತು ಮಾಹಿತಿ ದೊರೆತಿದೆ. ಅಷ್ಟೇ ಅಲ್ಲದೆ ಕ್ರಿ.ಪೂ 3000 ವರ್ಷಗಳ ಹಿಂದೆಯೂ ಜನಜೀವನ ಇದ್ದ ಕೆಲ ಕುರುಹುಗಳು ಕಂಡಿವೆ. ಹೀಗೆಯೇ ಮುಂದುವರಿದ ಇತ್ತೀಚಿನ ಹಲವು ಸಂಶೋಧನೆಗಳು ಹರಪ್ಪ ನಾಗರೀಕತೆಯು ಇಲ್ಲಿಯವರೆಗೂ ಹರಡಿದ್ದ ಪ್ರಮುಖ  ಸುಳಿವನ್ನು ನೀಡಿದೆ. ಒಮಾನ್ ಮತ್ತು ಭಾರತದ ಮಧ್ಯೆಯಿದ್ದ ವ್ಯವಾಹಾರಿಕ, ಧಾರ್ಮಿಕ, ಕಲೆ, ಸಾಮಾಜಿಕ ಸಂಭಂಧಗಳ ಬಗ್ಗೆ ಈ ಪುರಾವೆಗಳು ಮತ್ತಷ್ಟು ಬೆಳಕು ಚೆಲ್ಲಲಿವೆ.

 

 ಸಿಂಧೂ ಬಯಲಿನಿಂದ ಹರಪ್ಪ ಮತ್ತು ಮೆಹೆಂದಾಜಾರೋ ನಗರದ ಜನರು ಸಮುದ್ರದಾಚೇಗೂ  ಸಂಪರ್ಕ ಸಾಧಿಸಿದ್ದರು ಎಂದರೆ ಅವರಲ್ಲಿದ್ದ ವ್ಯಾವಹಾರಿಕ ಜ್ಞಾನದ ಕುರಿತು ತಲೆದೂಗಲೇಬೇಕು. ಜತೆಗೆ ಒಮಾನಿ ನ ಪ್ರಜೆಗಳೊಂದಿಗೆ ವ್ಯಾವಹಾರಿಕ ಸಂಪರ್ಕವನ್ನು ಹೊಂದಿದ್ದರು ಎಂದರೆ, ಈ ಅರಬ್ ರಾಷ್ಟ್ರಗಳಲ್ಲಿ ಜನಜೀವನ ಅಸ್ತಿತ್ವದಲ್ಲಿತ್ತು ಎಂದು ವಿಷ್ಲೇಶಿಸಬಹುದು. ಹೀಗಾಗಿ ಆ ಹಿಂದಿನ ಜನಜೀವನ ಪದ್ದತಿಯ ಕುರಿತು ಸಹ ಅನ್ವೇಷಣೆ ನಡೆಯುತ್ತಿದೆ.

 

ಇದುವರೆಗೂ ಒಮಾನಿನ ಹಲೆವೆಡೆ ಹರಪ್ಪರ ಕಾಲದ ಹಲವಾರು ವಸ್ತುಗಳು ದೊರೆತಿವೆ.  ಪುರಾತತ್ತ್ವ ಶಾಸ್ತ್ರದ ಸ್ಥಳ ಎಂದು ಗುರುತಿಸಿರುವ ಉತ್ತರ ಅಲ್ ಬತಿನಾದಲ್ಲಿರುವ ದಹ್ವಾ, ಒಮಾನ್‌ನಲ್ಲಿ ಇದುವರೆಗೆ ಪತ್ತೆಯಾದ ಅತ್ಯಂತ ಹಳೆಯ ವಸಾಹತು. ಇದು ಹಜಾರ್ ಪರ್ವತ ಶ್ರೇಣಿಗಳ ಅಂಚಿನಲ್ಲಿರುವ ಸಹಮ್‌ನ ವಿಲಾಯತ್‌ನ ಪಶ್ಚಿಮಕ್ಕೆ 24 ಕಿಲೋಮೀಟರ್‌ಗಳಷ್ಟು ದೂರದಲ್ಲಿದೆ. ಈ ತಾಣವು ಕಂಚಿನ ಯುಗದ ನಾಗರೀಕತೆಯ ಉಮ್ ಅಲ್ ನಾರ್ ನ ನಾಗರೀಕತೆಗಿಂತ ಹಿಂದಿನದು (ಸುಮಾರು 2500 ರಿಂದ 2000 BC). ಈ ಸ್ಥಳದಲ್ಲಿನ ಪುರಾತತ್ತ್ವ ಶಾಸ್ತ್ರದ ಸಂಶೋಧನೆಗಳು ಕ್ರಿ,ಪೂ ಮೂರನೇ ಸಹಸ್ರಮಾನದಲ್ಲಿನ ಮಜಾನ್ ನಾಗರೀಕತೆ ಮತ್ತು ಹರಪ್ಪನ್ ಅಥವಾ  ಸಿಂಧೂ ಕಣಿವೆಯ ನಾಗರೀಕತೆಯ ನಿವಾಸಿಗಳ ನಡುವಿನ ವಾಣಿಜ್ಯ ಮತ್ತು ಸಾಂಸ್ಕೃತಿಕ ಸಂಬಂಧಗಳ ಕುರಿತು ಮಹತ್ವದ ಸಾಕ್ಷಿಗಳನ್ನು ಒದಗಿಸಿವೆ. ಈ ಸ್ಥಳವನ್ನು ಉತ್ಖನನ ಮಾಡಿದಾಗ ಇಲ್ಲಿ ಮಣ್ಣಿನ ಜಾಡಿ, ಮಣಿಗಳು,  ಕಲ್ಲಿನ ಒಲೆಗಳು ಇತ್ಯಾದಿ ದೊರೆತಿವೆ, ಇವೆಲ್ಲವೂ ಹರಪ್ಪನ ನಾಗರೀಕತೆಯಲ್ಲಿ ಬಳಕೆಯಲ್ಲಿದ್ದ ವಸ್ತುಗಳು. ಈ ಜಾಡಿಗಳು ಸಿಂಧೂ ನದಿಯಾಚೆಗಿನ ಜನರಿಂದ ಇಲ್ಲಿಗೆ ಸರಬರಾಜಿಗೆ ಎಂದು ಅನ್ವೇಷಿಸಲಾಗಿದೆ.

 

ಸಾಲುಟ್ ಪ್ರದೇಶದಲ್ಲಿ ಹರಪ್ಪ ಮಾದರಿಯಲ್ಲಿ ಕುಂಬಾರಿಕೆ ನಡೆಸುತಿದ್ದ ಜಾಗ ಪತ್ತೆಯಾಗಿದೆ. ಇಲ್ಲಿ ಮಣ್ಣಿನ ಮಡಿಕೆಗಳು, ಜಾಡಿಗಳು, ಇತ್ಯಾದಿಗಳು ಪತ್ತೆಯಾಗಿವೆ. ಇವೆಲ್ಲವೂ ಜೇಡಿ ಮಣ್ಣಿನಿಂದ ಮಾಡಲಾಗಿದೆ.

 

ಇನ್ನೊಂದು ಪುರಾತತ್ತ್ವ ಶಾಸ್ತ್ರದ ಸ್ಥಳ ರಾಸ್ ಅಲ್ ಹದ್‌ನಲ್ಲಿ ಪತ್ತೆಯಾದ ಮಣ್ಣಿನ ಮಡಿಕೆ, ಜಾಡಿ, ಆಭರಣಗಳು ಮತ್ತು 5000 ವರ್ಷಗಳಷ್ಟು ಹಳೆಯದಾದ ಬುಟ್ಟಿಗಳು, ಹಗ್ಗಗಳು, ಬಲೆಗಳು ಮತ್ತು ಈ ಪ್ರದೇಶದ ಜನರು ತಮ್ಮ ದೈನಂದಿನ ಜೀವನೋಪಾಯಕ್ಕಾಗಿ ಬಳಸುತ್ತಿದ್ದ ಇತರೆ ವಸ್ತುಗಳನ್ನು ಈ ಪ್ರದೇಶದಲ್ಲಿ ಕಂಡುಹಿಡಿಯಲಾಗಿದೆ. ಇವುಗಳು ಕ್ರಿ.ಪೂ 3100 BC ಮತ್ತು 2400 BC ವರ್ಷಗಳ ನಡುವಿನ ಆರಂಭಿಕ ಕಂಚಿನ ಯುಗದ ಹಿಂದಿನವು ಎಂದು ಹೇಳಲಾಗುತ್ತದೆ.

 

ಇನ್ನು ಕಲ್ಹಟ್ ಮತ್ತು ದಿಲ್ಮುನ್ ಪ್ರದೇಶದಲ್ಲಿಯೂ ಸಹ ಹರಪ್ಪರ ಲಿಪಿಯ ನಾಣ್ಯಗಳು, ಜಾಡಿಗಳು ಅಲಂಕಾರಿಕ ಒಡವೆಗಳು ಇತ್ಯಾದಿ ದೊರೆತಿವೆ.  ಈ ಪ್ರದೇಶವೂ ಸಹ ಪ್ರಮುಖ ಪುರಾತತ್ತ್ವ ಶಾಸ್ತ್ರದ ಸ್ಥಳ ವಾಗಿದೆ.

 

ರಾಸ್ ಅಲ್ ಜಿಂಜ್ ಪ್ರದೇಶದಲ್ಲಿ, ಕೆಲವು ತಾಮ್ರದ ವಸ್ತುಗಳು ಪತ್ತೆಯಾಗಿವೆ. ಕೊಡಲಿ, ಈಟಿ ಗಳು ದೊರೆತಿವೆ, ಅಷ್ಟೇ ಅಲ್ಲದೆ ಬಾಚಣಿಕೆ ಕೂಡ ಪತ್ತೆಯಾಗಿದೆ. ಕೆಲವಸ್ತುಗಳ ಮೇಲೆ ಹರಪ್ಪರ ಲಿಪಿಗಳು ಇವೆ.

 

ಒಮಾನಿನಲ್ಲಿ ದೊರೆತ ಹರಪ್ಪನ್ ನಾಗರೀಕತೆಯ ಈ ವಸ್ತುಗಳು  ಆರಂಭಿಕ ಕಂಚಿನ ಯುಗದಲ್ಲಿ ಒಮಾನ್ ಮತ್ತು ಸಿಂಧ್ ನಡುವೆ ಚಾಲ್ತಿಯಲ್ಲಿದ್ದ ವ್ಯಾಪಾರ ಚಟುವಟಿಕೆಯ ವ್ಯಾಪ್ತಿಯನ್ನು ಸೂಚಿಸುತ್ತದೆ.  ಸಿಂಧ್‌ನಿಂದ ಏನನ್ನು ಆಮದು ಮಾಡಿಕೊಳ್ಳಲಾಗಿತ್ತು ಮತ್ತು ಈ ಜಾಡಿಗಳಲ್ಲಿ ಸಾಗಿಸಲಾದ ವಸ್ತುಗಳ ಸ್ವರೂಪವನ್ನು ಇನ್ನೂ ಗುರುತಿಸಲಾಗಿಲ್ಲ. ಮಣ್ಣಿನ ಜಾಡಿಗಳ ಕುರಿತು ಇನ್ನೂ ಹೆಚ್ಚಿನ ಸಂಶೋಧನೆ ನಡೆಯುತ್ತಿದೆ. ಹರಪ್ಪರ ಕಾಲದ ಜನರು ಭಾರತದಿಂದ ಒಮಾನಿಗೆ ಕೆಲ ಪ್ರಮುಖ ವಸ್ತುಗಳನ್ನು ಕಳುಹಿಸಲು ಈ ಜಾಡಿಗಳನ್ನು ಬಳಸಿದ್ದರು ಎನ್ನಲಾಗಿದೆ.

 

ಒಮಾನ್ ಮತ್ತು ವಾಯುವ್ಯ ಭಾರತದ ಸಿಂಧೂ ಬಯಲಿನ ಮಧ್ಯೆ ನೇರವಾದ ಯಾವುದೇ ರಸ್ತೆ ಮಾರ್ಗಗಳಿಲ್ಲ.  ಅರಬ್ಬಿ ಸಮುದ್ರ, ನಂತರ ಇಂದಿನ ಪಾಕಿಸ್ತಾನದ ಸಿಂಧ್ ಮತ್ತು ಪಂಜಾಬ್ ಪ್ರಾಂತ್ಯ ನಂತರ ದೊಡ್ಡದಾದ ಸಿಂಧೂ ನದಿ ಮತ್ತು ಕಣಿವೆಮಾರ್ಗಗಳು. ಇವೆಲ್ಲವೂಗಳ ಮಧ್ಯೆ ಸಾವಿರಾರು ಕಿ.ಮಿ.ಗಳ ಅಂತರವಿದೆ. ಇಂತಹ ಕಷ್ಟಕರವಾದ ಮಾರ್ಗವನ್ನು ಹೇಗೆ ತಲುಪಿರಬಹುದು ಎಂದು ವಿಷ್ಲೇಶಿಸಿದಾಗ, ಮೊದಲು ಸಿಂಧೂ ನದಿಯನ್ನು ದಾಟಲು ಮೊದಲಿಗೆ ಚಿಕ್ಕ ಚಿಕ್ಕ ದೋಣಿಗಳನ್ನು ಬಳಸಿ ನದಿಯನ್ನು ದಾಟಿ ಅಲ್ಲಿಂದ ರಸ್ತೆ ಮಾರ್ಗವಾಗಿ ಬಂದರನ್ನು ತಲುಪುತಿದ್ದರು. ಅಲ್ಲಿಂದ ಒಮಾನಿನ ಸಮುದ್ರದ ಬಂದರುಗಳನ್ನು ತಲುಪುತಿದ್ದರು ಎನ್ನಲಾಗಿದೆ.

 

ಭಾರತದ ಪಶ್ಚಿಮ ಕರಾವಳಿ ಮತ್ತು ಒಮಾನ್ ಸಮುದ್ರದ ಉದ್ದಕ್ಕೂ ಇರುವ ಪಟ್ಟಣಗಳು ಮತ್ತು ವ್ಯಾಪಾರ ಬಂದರುಗಳ ನಡುವೆ ಪ್ರಯಾಣಿಕರು, ವ್ಯಾಪಾರಸ್ಥರು ಸಂಚರಿಸುತಿದ್ದರು ಎನ್ನುವುದಿಕ್ಕೆ ಹಲವಾರು ಸಾಕ್ಷಾಧಾರಗಳು ದೊರೆತಿವೆ. ಕೊಲ್ಲಿ ರಾಷ್ಟ್ರಗಳ ಸಮುದ್ರತೀರಗಳು ಮತ್ತು ಭಾರತೀಯ ಕರಾವಳಿ ತೀರಗಳು  ಸಾವಿರಾರು ವರ್ಷಗಳಿಂದ  ಸಂಪರ್ಕದಲ್ಲಿದ್ದರಿಂದ ಇಂದಿನ ಒಮಾನ್‌ನ ಉತ್ತರ ಕರಾವಳಿಯ ಬಂದರುಗಳಿಗೆ ಮೊದಲು ಸರಕು ಸರಂಜಾಮುಗಳು ರವಾನೆಯಾಗುತಿದ್ದವು. ಅಲ್ಲಿಂದ ಮರುಭೂಮಿಯ ಒಳಭಾಗಕ್ಕೆ, ಹಾಗೆಯೇ ಮುಂದೆ ಆಫ್ರಿಕಾ ಮತ್ತು ಮೆಡಿಟರೇನಿಯನ್‌ಗೆ ಸಮುದ್ರಕ್ಕೆ ಸಾಮಗ್ರಿಗಳನ್ನು ಸರಬರಾಜು ಮಾಡಲಾಗುತಿದ್ದರಿಂದ ಅರಬ್ಬರ ನಾಡಿಗೆ ಒಮಾನಿನ ಬಂದರುಗಳು ಪ್ರವೇಶದ್ವಾರವಾಗಿದ್ದವು ಎನ್ನಬಹುದು.

 

ಐದಾರು ಸಾವಿರ ವರ್ಷಗಳ ಹಿಂದಿನಿಂದಲೂ ಇದ್ದ ಆ ವ್ಯಾವಹಾರಿಕ ಸಂಭಂಧಗಳು ಇಂದಿಗೂ ಅಷ್ಟೇ ಸೌಹಾರ್ದತೆಯಿಂದ ಮುಂದುವರಿದಿರುವುದು ವಿಶೇಷ.  ಅರಬ್ ರಾಷ್ಟ್ರಗಳಿಗೆ ವಿವಿಧ ದೇಶಗಳಿಂದ ಆಮದಾಗುವ ಸರಕು ಸರಂಜಾಮುಗಳಿಗೆ ಹೋಲಿಸಿದರೆ ಭಾರತ ದೇಶವು ಅಗ್ರಸ್ಥಾನದಲ್ಲಿದೆ.




Click below headings