ಕೂಪ ಮಂಡೂಕಗಳ ಯೋಚನೆ ಮತ್ತು ಉದ್ಯೋಗ ಸಮಸ್ಯೆ
**********************
ಕಳೆದ ಬಾರಿ ರಾಂಪುರಕ್ಕೆ ಹೋಗಿದ್ದಾಗ ೩ ದಿನಗಳ ಕಾಲ ಅಲ್ಲಿಯೆ
ಉಳಿದಿದ್ದೆ, ಅಲ್ಲಿಯೇ ಬೆಳೆದು ಓದಿ ದೊಡ್ಡವನಾದ ನನಗೆ ರಾಂಪುರ ಅಂದರೆ ಬಿಡಿಸಿಲಾರದ ಬಂಧ.
ಕಳೆದು ಹೋದ ಆ ಬಾಲ್ಯ ನೆನೆಸಿಕೊಂಡು ನಾನು ಓದಿದ ಸರ್ಕಾರಿ ಪ್ರಾಥಮಿಕ, ಮಾಧ್ಯಮಿಕ ಹಾಗು ಪ್ರೌಡ ಶಾಲೆ ಗಳ
ಸುತ್ತಮುತ್ತ ಅಡ್ಡಾಡಿ ಬಂದೆ.
ಕೆಲ ಸಹಪಾಠಿ ಗಳನ್ನು ಸಹ ಭೇಟಿಯಾಗಿ ಉಭಯ
ಕುಶಲೋಪರಿಯನ್ನು ಹಂಚಿಕೊಂಡೆವು. ನಮ್ಮ ಬಾಲ್ಯದ ಹಳೆಯ ನೆನಪೆಲ್ಲವನ್ನು ಒಂದು ಬಾರಿ ಮೆಲುಕು ಹಾಕಿ, ನನ್ನ ಬೆಂಗಳೂರು, ದುಬೈ, ಕುವೈತ್ ಮತ್ತು ಮಸ್ಕತ್ ಜೀವನದ ಅನುಭವ
ವನ್ನು ಜತೆಗೆ ಕೆನಡ, ತೈವಾನ್, ಚೈನಾ ಪ್ರವಾಸ ಸಹ ಹಂಚಿಕೊಂಡೆ.
ಈಗ ರಾಂಪುರ ತುಂಬಾ ದೊಡ್ಡದಾಗಿದೆ, ೫೦೦೦೦ ಕ್ಕೂ ಹೆಚ್ಚು ಜನಸಂಖ್ಯೆಯನ್ನು
ಹೊಂದಿದೆ ಅಂತ ಗೊತ್ತಾಯಿತು. ನಾವಿದ್ದಾಗ ಒಂದೇ ಹೈಸ್ಕೂಲು ಇತ್ತು ಹಾಗು ಆಗ ತಾನೆ ಪಿಯುಸಿ
ಕಾಲೇಜು ಶುರುವಾಗಿತ್ತು. ಈಗ ಒಟ್ಟು ೪ ಪ್ರೌಡಶಾಲೆಗಳು ಅದರಲ್ಲಿ ಒಂದು ಆಂಗ್ಲ ಮಾಧ್ಯಮ
ಶಾಲೆಯಿದೆ. ೪ ಐಟಿಐ ಕಾಲೇಜು, ೧ ಪದವಿ ಕಾಲೇಜು ಶುರುವಾಗಿದೆ. ಇದರ ಜತೆಗೆ ನೂರಾರು ವಿಧ್ಯಾರ್ಥಿಗಳು ೩೫
ಕಿ.ಮಿ. ದೂರದ ಬಳ್ಳಾರಿ ಮತ್ತು ೨೫ ಕಿ.ಮಿ ದೂರದ ಮೊಳಕಾಲ್ಮೂರಿಗೆ ಕಾಲೇಜುಗಳಿಗೆ ಸೇರಿದ್ದಾರೆ.
ಹಾಗೂ ವೃತ್ತಿ ಪರ ಶಿಕ್ಷಣಕ್ಕಾಗಿ ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಹುಬ್ಬಳ್ಳಿ ಮತ್ತು ಬೆಂಗಳೂರಿನ
ಕಾಲೇಜುಗಳಲ್ಲಿ ಓದುತಿದ್ದಾರೆ ಅಂತ ತಿಳಿಯಿತು.
ಊರು ತುಂಬ ಬದಲಾಗಿದ್ದು, ಈಗ ಕುಬೇರ ನಗರ, ಬಸವೇಶ್ವರ ನಗರ ಮತ್ತು ಹಳೇ ಊರಿನ
ವ್ಯಾಪ್ತಿಯು ದೊಡ್ಡದಾಗಿದೆ. ರಾಂಪುರದ ಮೂಲ ನಿವಾಸಿಗಳ ಆರ್ಥಿಕ ಹಾಗು
ಸಾಮಾಜಿಕ ಪರಿಸ್ಥಿತಿ ಅಂತಹ ಬದಲಾವಣೆ ಯಾಗಿಲ್ಲ. ಆದರೆ ಬೇರೆ ಊರಿನಿಂದ ಬಂದು ನೆಲೆಸಿರುವವರ
ಪರಿಸ್ಥಿತಿ ಮಾತ್ರ ಆಗಾಧ ಬದಲಾವಣೆ ಯಾಗಿದೆ.
ರಾಂಪುರದಲ್ಲಿ ಸೈಟ್ ಗಳ ಬೆಲೆ
ಗಗನಕ್ಕೇರಿದೆ, ಸೈಟ್ ಕೊಳ್ಳಲಿಕ್ಕೆ ೨೦-೨೫ ಲಕ್ಷ ವ್ಯಯಿಸಬೇಕಾಗುತ್ತೆ ಅನ್ನುವುದು ಬದಲಾಗಿರುವ
ರಾಂಪುರದ ಇಂದಿನ ಪರಿಸ್ಥಿತಿಗೆ ಜ್ವಲಂತ ನಿದರ್ಶನ. ಊರಿನಲ್ಲಿ ಒಂದು ಶಾಶ್ವತ ನೀರಾವರಿ ಯೋಜನೆ
ಯಿಲ್ಲ, ಹೊಲಗದ್ದೆಗಳೆಲ್ಲ ಬರಡಾಗಿವೆ ಜನರಲ್ಲಿ ದುಡಿಯುವುದಿಕ್ಕೆ ಹೊಸ ಮಾರ್ಗಗಳಿಲ್ಲ, ಬಸ್ಟಾಂಡಿನಲ್ಲಿ, ರಥಬೀದಿಯಲ್ಲಿ ನೂರಾರು ಅಂಗಡಿಗಳಾಗಿವೆ
ಇದರಿಂದ ಕೆಲವರ ಪರಿಸ್ಥಿತಿ ಸುಧಾರಿಸಿದೆ ಅನ್ನುವುದು ಸಮಾಧಾನದ ಸಂಗತಿ.
ಊರಿನಲ್ಲಿ ನೂರಾರು ಜನ
ಪದವಿಧರರಾಗಿದ್ದಾರೆ, ಇಂಜಿನೀಯರಿಂಗ್, ಡಾಕ್ಟರ್ ಮತ್ತೆಲ್ಲೋ ಕೆಲವರು ಬಿಬಿಎಮ್, ಡಿಪ್ಲೊಮಾ, ಎಮ್ಸಿಎ ಮಾಡಿಕೊಂಡ ಕೆಲವರು ಬೆಂಗಳೂರು, ಮೈಸೂರು ಮುಂತಾದ ಕಡೆ ಕೆಲಸದಲ್ಲಿದ್ದು, ಬಿಎ ಬಿಎಡ್, ಬಿಕಾಮ್, ಬಿಎಸ್ಸಿ, ಎಮ್ ಎ, ಡಿಎಡ್, ಡಿಪ್ಲೊಮಾ, ಐಟಿಐ ಶಿಕ್ಷಣ ಮುಗಿಸಿದ ೫೦೦ ಕ್ಕೂ
ಹೆಚ್ಚು ನಿರುದ್ಯೋಗಿಗಳಿದ್ದಾರೆ ಎನ್ನುವ ಭಯಾನಕ ಸತ್ಯ ಕೇಳಿ, ಕಣ್ಣಾರೆ ಕಂಡ ಹುಡುಗರನ್ನು ನೋಡಿದಾಗ
ನಂಬದೇ ಇರಲಾಗಲಿಲ್ಲ. ರಾಂಪುರ ಒಂದು ಊರಲ್ಲಿಯೆ ಇಷ್ಟೊಂದು ಜನ ಇರಬೇಕಾದರೆ, ಬೇರೆ ಊರುಗಳಲ್ಲಿ ಇನ್ನು ಎಷ್ಟಿರಬಹುದು? ಎಲ್ಲರೂ ಕನ್ನಡ ಮಾಧ್ಯಮದಲ್ಲಿ ಓದಿ
ಶಿಕ್ಷಣ ಪಡೆದವರೇ, ಇವರಿಗೆಲ್ಲ ಯಾರು ಕೆಲಸ ಕೊಡ್ತಾರೆ, ಇವರ ಭವಿಷ್ಯವೇನು? ನಮ್ಮ ಶಿಕ್ಷಣ ವ್ಯವಸ್ಥೆ, ಕಾಲೇಜುಗಳು ವಿಧ್ಯಾರ್ಥಿಗಳನ್ನು ಪದವಿದರ
ರನ್ನಾಗಿ ತಯಾರು ಮಾಡುವ ಫ್ಯಾಕ್ಟರಿಗಳಾಗಿಬಿಟ್ಟರೆ ಇವರಿಗೆಲ್ಲ ಬದುಕು ಕಟ್ಟಿಕೊಳ್ಳುವುದನ್ನು
ಕಲಿಸಿ ಕೊಡುವವರು ಯಾರು.
ನಾನು ಬೆಂಗಳೂರಿಗೆ ಬಂದು ೨೦
ವರ್ಷಗಳಾಗುತ್ತ ಬಂತು, ಮೊದಲಿಗೆ ಬಂದಾಗ ಬೆಂಗಳೂರಿನಲ್ಲಿ ಹೇಗೆ ಬದುಕಬಹುದು ಬದುಕುವುದಿಕ್ಕೆ ಏನೇನು
ಮಾರ್ಗ ಗಳಿವೆ ಜೀವನದಲ್ಲಿ ಮುಂದೆ ಬರುವುದು ಹೇಗೆ? ಒಂದು ನೆಲೆ ಕಂಡು ಕೊಳ್ಳುವುದು ಹೇಗೆ
ಅಂತ ನೂರಾರು ಜನ ಯೋಚಿಸುತ್ತ ವರ್ಷಗಳೇ ಕಳೆದು ಹೋಗಿಬಿಡುತ್ತೆ. ಐಕ್ಯು ಜಾಸ್ತಿ ಇದ್ದವರು ಹೇಗೇಗೊ
ದಾರಿ ಕಂಡು ಕೊಂಡು ಬಿಡುತ್ತಾರೆ. ಮೊದಮೊದಲಿಗೆ ಬೆಂಗಳೂರಿಗರ ತರಹ ಮಾತನಾಡುವುದನ್ನು ರೂಡಿ
ಮಾಡಿಕೊಳ್ಳುತ್ತಾರೆ. ನಂತರ ಇಂಗ್ಲೀಷ್, ಹಿಂದಿ, ತಮಿಳ್, ತೆಲುಗು ಸಹ ಜತೆ ಜತೆಗೆ ಕಲಿತುಕೊಂಡು
ಬಿಡುತ್ತಾರೆ. ಉತ್ತಮ ಅವಕಾಶ ದೊರೆತಾಗ, ಊರು ಬಿಟ್ಟು ಬೇರೋಂದು ಊರಿಗೆ ಹೋಗಿ
ಅಲ್ಲಿ ನೆಲೆಸುತ್ತಾರೆ. ನಾನು ಸುಮಾರು ಊರುಗಳನ್ನು ಸುತ್ತಿದ್ದೇನೆ. ಭಾರತವಿರಲಿ, ಹೊರದೇಶವಿರಲಿ, ಎಲ್ಲಕಡೆಯಲ್ಲು ಹಲವಾರು ಕನ್ನಡಿಗರನ್ನು
ಕಂಡಿದ್ದೇನೆ. ಬದುಕುವುದಕ್ಕೆ ಒಂದು ದಾರಿಬೇಕು, ಅದನ್ನು ಹೇಗಾದರು ಕಂಡು
ಕೊಂಡುಬಿಡುತ್ತಾರೆ. ಈ ವಿಷಯದಲ್ಲಿ ಮಲೆಯಾಳಿಗಳು ಬಹಳ ಹುಷಾರು. ನಾನು ಗಲ್ಫ್ ರಾಷ್ಟ್ರಗಳಲ್ಲಿ
ಲಕ್ಷಾಂತರ ಜನ ಮಲಯಾಳಿಗಳನ್ನು ನೋಡಿದ್ದೇನೆ. ಅವರ ಭವಿಷ್ಯಕ್ಕೆ ಅವರ ಬದುಕಿಗೆ ಅವರ ಜೀವನಕ್ಕೆ
ಕೇವಲ ಕೇರಳ ಅಥವ ಮಲೆಯಾಳಿ ಭಾಷೆ ಮಾತ್ರ ಕಾರಣವಲ್ಲ ಅವರ ಭಾಷೆ ಮೇಲೆ ಯಿರುವ ಅಭಿಮಾನವಲ್ಲ, ಅವರ ಜೀವನೋತ್ಸಾಹ. ಬರೀ ದುಡಿಬೇಕು, ಬದುಕಬೇಕು ಅನ್ನೋ ಅಚಲ ನಿರ್ಧಾರ.
ಸೋಶಿಯಲ್ ಮೀಡಿಯದಲ್ಲಿ ನೆಟ್(ಅಂತರ್ಜಾಲ)
ಕನ್ನಡ ಹೋರಾಟ ಗಾರರ ಒಂದು ಗುಂಪು ಇದೆ. ಅವರ ಗೋಡೆಗಳ ಮೇಲೆ ಕನ್ನಡ ಅಭಿಮಾನದ ನೂರಾರು ಪೋಸ್ಟ್
ಗಳನ್ನು ಹಾಕ್ತಿರ್ತಾರೆ. ಪ್ರತಿಯೊಂದರಲ್ಲೂ ಕನ್ನಡಭಿಮಾನದ ಅಭಿಯಾನ ಶುರುಮಾಡೋದಿಕ್ಕೆ ಪ್ರಯತ್ನಿಸುತ್ತಿರುತ್ತಾರೆ.
ಮಾಲ್ ಗಳಲ್ಲಿ ಕನ್ನಡ, ರೈಲ್ವೆ ನಲ್ಲಿ ಕನ್ನಡ, ಬ್ಯಾಂಕ್, ಮೆಟ್ರೊ, ಬಸ್, ವಿಮಾನ ನಿಲ್ದಾಣ ಹಾಗೂ ಬೆಂಗಳೂರಿಗೆ
ಬರುವ ಎಲ್ಲ ವಿಮಾನಗಳಲ್ಲೂ ಕನ್ನಡ ಬಳಕೆ ಬಗ್ಗೆ ಅರಿವು ಮೂಡಿಸುತ್ತಿರುತ್ತಾರೆ. ನ್ಯಾಯಾಲಯ ಕನ್ನಡ
ಮಾಧ್ಯಮ ಶಿಕ್ಷಣ ಕುರಿತು ತೀರ್ಪು ನೀಡಿದಾಗ ಹಲವಾರು ಜನ ಅವರವರ ರೀತಿಯಲ್ಲಿ ಪ್ರತಿಕ್ರಿಯೆ
ಅಭಿಪ್ರಾಯ ನೀಡಿದರು.
ಸಂತೋಷ, ಇದೆಲ್ಲ ಸರಿ ಆದರೆ, ಈಗ ನಮ್ಮ ಊರಿನ ಹಾಗೂ ರಾಜ್ಯದ ಕನ್ನಡ
ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿ ನಿರುದ್ಯೋಗಿಗಳಾಗಿರುವ ಸಾವಿರಾರು ಜನರ ಕಥೆ ಏನು? ಅವರಿಗೆಲ್ಲ ಮುಂದಿನ ದಾರಿಯೇನು? ಇವರಿಗೆಲ್ಲ, ಉದ್ಯೋಗವನ್ನ ಈ ಕನ್ನಡ ಅಭಿಮಾನ ಸಂಘ ಗಳು, ಸೋಶಿಯಲ್ ಮೀಡಿಯದಲ್ಲಿ ಕನ್ನಡ ನೆಟ್ ಹೋರಾಟ
ಗಾರರು ಕೊಡ್ತಾರಾ? ಈ ಜನಕ್ಕೆ ಒಳ್ಳೋಳ್ಳೆ ಸಾಫ್ಟ್ ವೇರ್ ಕಂಪನಿ, ಎಮ್ ಎನ್ ಸಿ, ಇತ್ತೀಚಿನ ಮಾಧ್ಯಮ ಗಳು, ಆಡ್ ಏಜೆನ್ಸಿ ಇನ್ನು ಮುಂತಾದಕಡೆ
ಗಳಲ್ಲಿ ಲಕ್ಷಾಂತರ ಸಂಭಳ ಸಿಗುತ್ತೆ. ಇನ್ನು ಕನ್ನಡ ಸಂಘಗಳು ಆರ್ಥಿಕ ವಾಗಿ ಬಲಾಡ್ಯವಾಗಿವೆ.
ಸರ್ಕಾರ ಗಾಡ ನಿದ್ರೆ ಯಲ್ಲಿದೆ. ಟಿವಿ ಮಾಧ್ಯಮಗಳಿಗೆ, ಟಿ ಆರ್ ಪಿ ಇರುವ ವಿಷಯ ಸಿಕ್ಕರೆ ಎರಡು
ಮೂರು ದಿನಕ್ಕಾಗುವಷ್ಟು ಸರಕು ಸಿಕ್ಕಂತಾಗುತ್ತೆ. ಅವರೆಲ್ಲ ಇಂತಹ ಉದ್ಯೋಗ ಸಮಸ್ಯೆ ಬಗ್ಗೆ ಬೆಳಕು
ಚೆಲ್ಲೋ ಪ್ರಯತ್ನ ಖಂಡಿತ ಮಾಡೋದಿಲ್ಲ. ಪರಿಸ್ಥಿತಿ ಹೀಗಿರುವಾಗ ಕನ್ನಡ ಮಾಧ್ಯಮದಲ್ಲಿ ಓದಿ ಬಿಎ, ಬಿಎಡ್, ಬಿಕಾಮ್, ಬಿಎಸ್ಸಿ, ಎಮ್ ಎ, ಮುಗಿಸಿ ಕೆಲಸ ವಿಲ್ಲದೆ ಕುಳಿತಿರುವ ಜನರ
ಕುರಿತು ಯಾರು ಯೋಚಿಸ್ತಾರೆ.
ಕರ್ನಾಟಕದಲ್ಲಿ ಅಧಿಕಾರ ನಡೆಸಿದ
ಪ್ರತಿಯೊಬ್ಬರು ಕರ್ನಾಟಕದಲ್ಲಿ ಹುಟ್ಟಿ ಬೆಳೆದವರೇ, ಆದರೂ ವರ್ಷದಿಂದ ವರ್ಷಕ್ಕೆ ನಿರುದ್ಯೋಗ
ಸಮಸ್ಯೆ ಬೆಳೆಯುತ್ತ ಇದೆ ಇದಕ್ಕೆ ಪರಿಹಾರ ಸಿಗುವ ಲಕ್ಷಣ ಕಾಣುತ್ತಿಲ್ಲ. ಇಂತಹ ಸಮಯದಲ್ಲಿ
ಸರಕಾರವನ್ನು ದೂಷಿಸಿ ಪ್ರಯೋಜನವೇನು? ನಮ್ಮ ದಾರಿ ನಾವು ಕಂಡು ಕೊಳ್ಳಬೇಕು.
ಮಾಧ್ಯಮಿಕ ಶಾಲೆ ಯಿಂದ ಹೈಸ್ಕೂಲ್ ಗೆ
ಸೇರಿದಾಗ ೮ ನೇ ತರಗತಿಯಲ್ಲಿ ಮೊದಲನೆ ದಿನದ ಇಂಗ್ಲೀಷ್ ವಿಷಯದ ಬಗ್ಗೆ ನಮ್ಮ ಗುರುಗಳಾದ ಕೆಜಿಎನ್
ಮೇಷ್ಟ್ರು ಇಂಗ್ಲೀಷ್ ಭಾಷೆ ಯ ಪ್ರಾಮುಖ್ಯತೆ ಯನ್ನು ವಿವರಿಸಿದಿದ್ದು ಇಂದಿಗೂ ಸಹ ಬಹಳ ಚೆನ್ನಾಗಿ
ನೆನಪಿದೆ. ಸಂವಹನ ನಡೆಸಲು ಇಂಗ್ಲೀಷ್ ಭಾಷೆ ಎಷ್ಟು ಮುಖ್ಯ ಎನ್ನುವುದನ್ನು ನನ್ನ ಉದಾಹರಣೆ
ಕೊಟ್ಟು ವಿವರಿಸಿದ್ದರು. "ಬಸ್ಟಾಂಡಿನಲ್ಲಿ ರಂಗನಾಥ ನ ಅಂಗಡಿಯಿದೆ, ಅಲ್ಲಿ ಒಂದು ಕಾರು ಬಂದು ನಿಲ್ಲಿಸಿ
ಕೆಲವರು ವಿಳಾಸದ ಬಗ್ಗೆ ವಿಚಾರಿಸಲು ರಂಗನಾಥನ ಅಂಗಡಿ ಬಳಿ ಬರುತ್ತಾರೆ, ಆದರೆ ಅವರಿಗೆ ಕನ್ನಡ ಬರಲ್ಲ ಇಂಗ್ಲೀಶ್
ಅಥವ ಹಿಂದಿ ಬರುತ್ತೆ ಅಂದ್ಕೊಳ್ಳಿ, ಆಗ ರಂಗನಾಥ ನಿಗೆ ಕನ್ನಡ ಬಿಟ್ಟು ಬೇರೆ
ಭಾಷೆ ಬರದೆ ಇದ್ದರೆ ಭಾಷಾ ಸಮಸ್ಯೆ ಎದುರಾಗುತ್ತೆ ಅವರಿಗೆ ಸರಿಯಾಗಿ ಉತ್ತರ ಕೊಡಲಿಕ್ಕೆ ಆಗದೆ
ತಡಬಡಾಯಿಸುತ್ತಾನೆ, ಅಥವ ವಿದೇಶ ಪ್ರವಾಸದ ಅವಕಾಶ ಸಿಕ್ಕಾಗ ಅಲ್ಲಿ ಕಮ್ಯುನಿಕೇಶನ್ ಗೆ ಇಂಗ್ಲೀಷ್
ಅತ್ಯಗತ್ಯ, ಹೀಗೆ ಎಲ್ಲ ಕಾರಣದಿಂದ ಇಂಗ್ಲೀಷ್ ಗೆ ತನ್ನದೇ ಆದ ಪ್ರಾಮುಖ್ಯತೆ ಇದೆ, ಆದ್ದರಿಂದ ತಾವೆಲ್ಲರು ಮನಸಿಟ್ಟು
ಅಭ್ಯಸಿಸಿದರೆ ಮುಂದೆ ಇದರ ಪ್ರಯೋಜನ ಖಂಡಿತ ಅಂತ ಹೇಳಿದ್ದು ಇನ್ನು ನನಗೆ ಚೆನ್ನಾಗಿ ನೆನಪಿದೆ.
ಅದರ ಅನುಭವ ಈಗ ಆಗ್ತಾಯಿದೆ. ಕೂಪ ಮಂಡೂಕ ತರಹ ನಾನು ಬೇರೆ ರೀತಿಯಲ್ಲಿ ಆಲೋಚಿಸಿದಿದ್ದರೆ
ಇಷ್ಟೆಲ್ಲ ಜೀವನಾನುಭವ ಖಂಡಿತ ನನಗೆ ಆಗ್ತಾಯಿರಲಿಲ್ಲ.
ಕನ್ನಡಮಾಧ್ಯಮದಲ್ಲಿ ಕಲಿತು
ವಿಜ್ನಾನಿಗಳಾಗಿದ್ದಾರೆ, ಇಂಜಿನೀಯರ್ ಗಳಾಗಿದ್ದಾರೆ, ಡಾಕ್ಟರ್ ಗಳಾಗಿದ್ದಾರೆ ಅಂತ ಯಾವಾಗಲು
ಹೇಳ್ತಾರೆ, ಆದರೆ ಅವರ ಹೆಸರನ್ನು ಹೆಸರಿಸಿ ಅಂದರೆ, ಸರ್ ಎಂ. ವಿಶ್ವೇಶ್ವರಯ್ಯ, ಸಿ.ಎನ್.ಆರ್ ರಾವ್ ಇನ್ನು ಮುಂತಾದ
ಖ್ಯಾತ ನಾಮರ ಹೆಸರು ಮಾತ್ರ ಹೇಳ್ತಾರೆ. ಅಲ್ಲ ಸ್ವಾಮಿ ನಾವು ಕನ್ನಡಿಗರು ೬ ಕೋಟಿ ಜನ ಇದೀವಿ, ಉದಾಹರಣೆ ಕೊಡಿ ಅಂದರೆ ೨೦-೩೦ ಹೆಸರು
ಮಾತ್ರ ಹೇಳ್ತಿರಾ! ಆದರೆ ಮಿಕ್ಕ ಜನರ ಬಗ್ಗೆ ಯಾಕೆ ಏನ್ ಹೇಳಲ್ಲ?
ಒಂದು ಗ್ರಾಮದಲ್ಲಿ ೧೦೦-೨೦೦ ಜನ ಹೈಸ್ಕೂಲ್ ವಿಧ್ಯಾರ್ಥಿ ಗಳಲ್ಲಿ ಬೆರಳಣಿಕೆ ಯಷ್ಟು ಮಾತ್ರ
ಉನ್ನತ ಶಿಕ್ಷಣಕ್ಕೆ ಹೋಗ್ತಾರೆ. ಕಾರಣ ಪಿಯುಸಿ ಪಿ.ಸಿ.ಎಮ್.ಬಿ ನಲ್ಲಿ ಅತಿ ಹೆಚ್ಚಿನ ಜನ ಫ಼ೇಲ್
ಆಗುತ್ತಾರೆ. ಮುಂದೆ ಶಿಕ್ಷಣ ಮುಂದುವರೆಸಿಲಿಕ್ಕೆ ಆಗದೆ ಬಿಕಾಮ್ ಅಥವ ಬಿಎ ಮಾಡ್ತಾರೆ. ನಂತರ
ಉದ್ಯೋಗ ವಿಲ್ಲದೆ ಪರದಾಡುತ್ತಾರೆ. ಒಂದು ಜಿಲ್ಲೆಯಿಂದ ಪ್ರತಿ ವರ್ಷ ೧೦೦-೨೦೦ ಜನ ಪ್ರತಿಭಾನ್ವಿತ
ವಿಧ್ಯಾರ್ಥಿಗಳು ಮಾತ್ರ ಉನ್ನತ ಶಿಕ್ಷಣ ವ್ಯಾಸಂಗ ಮಾಡಿ ಅವರ ಭವಿಷ್ಯ ರೂಪಿಸಿ ಕೊಳ್ತಾರೆ, ಮಿಕ್ಕವರು ಏನೋ ಮಾಡಿಕೊಂಡು ಅವರ ಬದುಕಿನ
ದಾರಿಯನ್ನು ಕಂಡು ಕೊಳ್ತಾರೆ.
ಕೇರಳದಲ್ಲಿ ಕೈಗಾರಿಕ ಉದ್ದಿಮೆ ಗಳು ಬಹು
ಕಡಿಮೆ, ಜನ ಉದ್ಯೋಗಕ್ಕಾಗಿ ಸರ್ಕಾರಿ ಕೆಲಸವನ್ನು ನೆಚ್ಚಿ ಕುಳಿತುಕೊಳ್ಳುವುದಿಲ್ಲ.
ಉದ್ಯೋಗ ಅರಸಿ ವಲಸೆ ಹೋಗುತ್ತಾರೆ. ಗಲ್ಫ್ ರಾಷ್ಟ್ರ ಗಳಲ್ಲಿ ಕೇರಳದ ಜನ ವಿಜ್ನಾನಿ ಯಿಂದ ಹಿಡಿದು
ಡ್ರೈವರ್ ಕೆಲಸದವರೆಗೆ ಎಲ್ಲ ರೀತಿಯ ಕ್ಷೇತ್ರಗಳಲ್ಲಿ ಅವಕಾಶ ಹುಡುಕಿಕೊಂಡು ಲಕ್ಷಾಂತರ ಜನ ಕೆಲಸ
ಮಾಡ್ತಿದ್ದಾರೆ. ಇವರಿಗೆ ಹೋಲಿಸಿದರೆ ನಮ್ಮ ಕರ್ನಾಟಕದ ಜನ ಪ್ರತಿಶತಃ ೪-೭ ರಷ್ಟಿರಬಹುದು. ಅದೂ
ಮಂಗಳೂರು, ಉಡುಪಿ ಯವರು ಮಾತ್ರ. ಮಿಕ್ಕವರು ಅಪ್ಪ ಹಾಕಿದ ಆಲದ ಮರ ಅಂದು ಕೊಂಡು ಹುಟ್ಟಿದ
ಊರಿನಲ್ಲಿ ಏನೋ ಕೆಲಸ ಮಾಡಿಕೊಂಡು ಆರಕ್ಕೇರದೇ ಮೂರಕ್ಕಿಳಿಯದೆ ಇದ್ದೇವೆ.
ಕರ್ನಾಟಕದ ಮೂಲೆ ಮೂಲೆಯಲ್ಲು ಒಂದು ಕಾಕ
ಅಂಗಡಿಯನ್ನು ಕಾಣಬಹುದು, ಇಲ್ಲ ಅಂದರೆ ಒಂದು ಬೇಕರಿಯನ್ನು ನೋಡಬಹುದು. ಮಲೆಯಾಳಿ ಗಳನ್ನು ನಾವು
ಕಲಿಯುವುದು ಬಹಳಷ್ಟಿದೆ.
ವಿಜ಼್ನಾನ, ಗಣಿತ ವನ್ನು ನಾವು ಕನ್ನಡದಲ್ಲಿ ಕಲಿತು ಸಾಧಿಸ ಬೇಕಾದದ್ದು ಏನು ಇಲ್ಲ. ಜಾಗತಿಕರಣದ ಈ ಜಗದಲ್ಲಿ ನಾವು ಆ ಪ್ರವಾಹದೊಂದಿಗೆ ಮುನ್ನುಗಬೇಕು. ಅದಕ್ಕಾಗಿ ವಿಶಾಲ ಮನೋಭಾವ ವನ್ನು ಹೊಂದಿ, ಯಾವುದೇ ಸಮಯ ಸಂಧರ್ಭ ಯಾವುದೇ
ಪ್ರದೇಶದಲ್ಲಿ ಕೆಲಸ ಮಾಡುವ ಮನಸ್ಥಿತಿ ಯನ್ನು ರೂಪಿಸಿಕೊಳ್ಳಬೇಕು. ಸಂಕುಚಿತ ಮನಸ್ಸಿನಿಂದ
ಆಲೋಚಿಸಿ ನಮ್ಮ ಭವಿಷ್ಯವನ್ನು ನಾವು ಹಾಳುಮಾಡಿ ಕೊಳ್ಳುವುದು ಬೇಡ. ಇದೆಲ್ಲ ಹೊಟ್ಟೆ ತುಂಬಿದ
ಜನರಿಗೆ ಅರ್ಥವಾಗಲ್ಲ.
#p.s.ranganatha