ಬುಧವಾರ, ಅಕ್ಟೋಬರ್ 12, 2022

ಗುಜರಾತಿನ ಮಹಾರಾಣಿ ಕನ್ನಡತಿ ಮೈನಾಳದೇವಿ

 

ಗುಜರಾತಿನ ಮಹಾರಾಣಿ ಕನ್ನಡತಿ ಮೈನಾಳದೇವಿ

ಬರಹ:- ಪಿ.ಎಸ್.ರಂಗನಾಥ. ಮಸ್ಕತ್

 



ಶತಶತಮಾನಗಳ ಇತಿಹಾಸವನ್ನ ನಾವು ಇಂದು ಅರಿಯಲು ಸಾಧ್ಯವಾಗಿದ್ದು, ಅಂದಿನ ರಾಜ ಮಹರಾಜರು, ಮಹಾರಾಣಿಯರು ಕಟ್ಟಿಸಿದ ಅರಮನೆಗಳು, ಪಾರಂಪಾರಿಕ ಕಟ್ಟಡಗಳು, ಸ್ಮಾರಕಗಳು, ಕೋಟೆ ಕೊತ್ತಲುಗಳು, ಕೆರೆ ಕಟ್ಟೆಗಳು, ಶಿಲಾಶಾಸನ, ತಾಮ್ರ ಪತ್ರ ಮತ್ತು ತಾಳೆಗರಿ ಪತ್ರಗಳು, ಮೌಖಿಕ ಸಾಹಿತ್ಯ, ಮಹಾಕಾವ್ಯಗಳು, ನಾಟಕ ಇನ್ನು ಮುಂತಾದವುಗಳ ಮುಖಾಂತರ ನಾವು ನೂರಾರು ವರ್ಷಗಳ ಇತಿಹಾಸವನ್ನ ಇಂದು ತಿಳಿಯುತಿದ್ದೇವೆ. ಈ ಲೇಖನದಲ್ಲಿ ಪ್ರಸ್ತುತ ಪಡಿಸಿರುವ ಮಹಾರಾಣಿಯ ಮೈನಾಳದೇವಿಯವರ ಒಂಬೈನೂರು ವರ್ಷಗಳ ಹಿಂದಿನ ಮಾಹಿತಿ ದೊರೆಯಲು ಕಾರಣವಾಗಿದ್ದು ಅವರು ಆಡಳಿತ ನಡೆಸಿದ ಸಮಯದಲ್ಲಿ ಕಟ್ಟಿಸಿದ ಕೆಲ ಸರೋವರಗಳು, ಗುಡಿ ಗೋಪುರಗಳು ಮತ್ತು ಅವರ ಆಸ್ಥಾನದಲ್ಲಿದ್ದ ಕೆಲ ಕವಿಗಳು ರಚಿಸಿದ ಸಾಹಿತ್ಯದಿಂದ ಅವರ ಬಗೆಗಿನ ಮಾಹಿತಿ ಜನರಿಗೆ ಲಭ್ಯವಾಯಿತು.

ಗುಜರಾತಿನಲ್ಲಿ ಈಗಲೂ ಒಂದು ಮಾತು ಜನಜನಿತವಾಗಿದೆ. ನಿಮಗೆ "ನ್ಯಾಯ ಅಂದರೆ ಏನು ಅಂತ ನೋಡಬೇಕೆಂದರೆ, ಧೋಲ್ಕಾಗೆ ಹೋಗಿ ಮಾಲ್ವಾ ತಲಾವ್ (ಮಾಲ್ವ ಸರೋವರ) ಅನ್ನು ನೋಡಿ" ಎಂದು ಹೇಳುತ್ತಾರೆ. ಈ ಮಾತಿಗೆ, ಹನ್ನೊಂದನೇ ಶತಮಾನದಲ್ಲಿ ನಡೆದ ಒಂದು ಕುತುಹಲಕಾರಿ ಘಟನೆ ಕಾರಣವಾಯಿತು. ಗುಜರಾತ್ ರಾಜ್ಯ ಬಹಳಷ್ಟು ಭಾಗ ಒಣ ಭೂಮಿಯನ್ನು ಹೊಂದಿರುವ ಪ್ರದೇಶ. ಬಿರು ಬೇಸಿಗೆಯಲ್ಲಿ ನೀರಿನ ಅಭಾವ ಹೆಚ್ಚಾಗಿ ಕಾಡುತ್ತಿರುತ್ತದೆ. ಜನಕಲ್ಯಾಣದಲ್ಲಿ ನಂಬಿಕೆ ಇಟ್ಟಿದ್ದ ರಾಜಮಾತೆ ಆ ಭಾಗದಲ್ಲಿ ಆಳ್ವಿಕೆ ನಡೆಸುತಿದ್ದ ಚಾಲುಕ್ಯ ರಾಜಮನೆತನ ಕೆರೆ ಕಟ್ಟೆಗಳನ್ನ ಕಟ್ಟುವ ಯೋಜನೆ ಯೊಂದನ್ನ ರೂಪಿಸುತ್ತಾರೆ.



ಮಾಲ್ವಾ ತಲಾವ್

ಸೂಕ್ತ ಪ್ರದೇಶವನ್ನ ನೋಡಿ ಅಲ್ಲಲ್ಲಿ ಕೆರೆ, ಸರೋವರಗಳನ್ನ ಕಟ್ಟಲು ಪ್ರಾರಂಭಿಸುತ್ತಾರೆ. ಈ ಸರೋವರ, ಬಾವಿ, ಕೊಳಗಳನ್ನ ಕಟ್ಟುವಾಗ ಒಂದು ಸುಂದರ ರೂಪವನ್ನ ಕೊಟ್ಟು ಕಟ್ಟಿಸಲು ಯೋಜನೆ ಹಾಕುತ್ತಾರೆ. ಅದರಂತೆ ದೋಲ್ಕಾ ಪ್ರದೇಶದಲ್ಲಿನ ಮಾಲ್ವಾ ಊರಿನಲ್ಲಿ ವರ್ತುಲಾಕಾರದಲ್ಲಿ ಸರೋವರ ಕಟ್ಟಲು ತಯಾರಿ ನಡೆಸುತ್ತಾರೆ. ಆ ಸ್ಥಳದಲ್ಲೊಂದು ಒಬ್ಬ ಮಹಿಳೆಯ ಮನೆಯಿರುತ್ತದೆ.  ಆ ಕೊಳಕ್ಕೆ ವರ್ತುಲಾಕಾರದ ಆಕಾರ  ಬರಬೇಕಾದರೆ, ಆ ಮನೆಯನ್ನು ತೆರವು ಗೊಳಿಸಬೇಕಾಗಿರುತ್ತದೆ. ಆದ ಕಾರಣ ಆ ಮಹಿಳೆಗೆ ಮನೆ ತೆರವು ಮಾಡಲು ಸೂಚಿಸುತ್ತಾರೆ. ಆದರೆ ಆ ಮಹಿಳೆ ಅಲ್ಲಿಂದ ಸ್ಥಳ ಖಾಲಿ ಮಾಡಲು ಒಪ್ಪುವುದಿಲ್ಲ. ಪರಿಹಾರವಾಗಿ ಆ ಮಹಿಳೆಗೆ ದೊಡ್ಡ ಮೊತ್ತದ ಹಣವನ್ನು ನೀಡಲು ರಾಣಿಯು  ಮುಂದಾಗುತ್ತಾಳೆ.  ಆ ಮಹಿಳೆ ಆ ಹಣವನ್ನ ನಿರಾಕರಿಸಿ, ನಿಮ್ಮ ಹಣ ನನಗೆ ಬೇಡವೇ ಬೇಡ. ಒತ್ತಡದಿಂದ ನನ್ನ ಮನೆಯನ್ನು ತೆರವು ಮಾಡಿಸಲು ಯತ್ನಿಸಿದರೆ ನನ್ನ ಪ್ರಾಣವನ್ನು ತ್ಯಾಗ ಮಾಡುವೆ, ಇದರಿಂದ. "ನೀವು ಕಟ್ಟುತ್ತಿರುವ ಕೆರೆ ನನ್ನ ಹೆಸರಿನಿಂದ ಪ್ರಸಿದ್ಧವಾಗಲಿ" ಎಂದು ಬೆದರಿಕೆ ಹಾಕುತ್ತಾಳೆ.


Malav Talav Google Map View

ಮಹಾರಾಣಿ ಆ ಮಹಿಳೆಯನ್ನು ಬಲವಂತ ಮಾಡಲಿಕ್ಕೆ ಹೋಗುವುದಿಲ್ಲ. ಆದರೆ ಆ ಮನೆಗೆ ಸೂಕ್ತ ಜಾಗವನ್ನ ಬಿಟ್ಟು, ಅದಕ್ಕೊಂದು ಸುಂದರ ರೂಪ ಕೊಟ್ಟು, ಸರೋವರವನ್ನ ನಿರ್ಮಾಣ ಮಾಡುತ್ತಾರೆ. ಈ ಘಟನೆ ಗುಜರಾತಿನೆಲ್ಲೆಡೆ ಸುದ್ದಿಯಾಗುತ್ತದೆ. ಈ ಕಾರ್ಯದಿಂದ ಮಹಾರಾಣಿ ನ್ಯಾಯಯುತ ಆಡಳಿತಗಾರಳು ಎಂದು ಗುಜರಾತಿನಲ್ಲೆಡೆ ಪ್ರಸಿದ್ದಿಯಾಗುತ್ತಾಳೆ.  "ನಿಮಗೆ ನ್ಯಾಯ ಅಂದರೆ ಏನು ಅಂತ ನೋಡಬೆಕೆಂದರೆ ಧೋಲ್ಕಾಗೆ ಹೋಗಿ ಮಾಲ್ವಾ ಸರೋವರವನ್ನು ನೋಡಿ", ಎನ್ನುವ ಮಾತು ಸುಪ್ರಸಿದ್ದವಾಗುತ್ತದೆ. ಇದು ಹನ್ನೊಂದನೇ ಶತಮಾನದ ಘಟನೆ, ಇಂದಿಗೂ ಆ ಕೆರೆ ಉಳಿದಿದೆ, ಅಲ್ಲಿ ನಿರ್ಮಿಸಿದ ಚಾಲುಕ್ಯರ ವಾಸ್ತುಶೈಲಿಯಲ್ಲಿನ ಮಂಟಪವೂ ಹಾಗೆಯೇ ಇದೆ. ಸುಮಾರು ಒಂಬೈನೂರು ವರ್ಷಗಳ ಹಿಂದಿನ ಘಟನೆ, ಆ ಮಹಾರಾಣಿಯ ಕಾರ್ಯಗಳು ಇಂದಿಗೂ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿವೆ ಎಂದರೆ ಅವರು ಯಾವ ಮಟ್ಟಕ್ಕೆ ಜನಪರ ಕೆಲಸ ಕಾರ್ಯಗಳು ಮಾಡಿದ್ದಿರಬಹುದು ಅಲ್ಲವೇ? ಮುನ್ಸಾರ್ ಲೇಕ್ ಎನ್ನುವ ಇನ್ನೊಂದು ಸುಂದರವಾದ ಕೊಳವನ್ನ ಅಹಮದಾಬಾದಿನ ವಿರಂಗಂ ನಲ್ಲಿ ಅವರು ನಿರ್ಮಿಸಿದ್ದಾರೆ. ಅದಕ್ಕೆ ಮಾನ್ ಸರೋವರ ಎನ್ನುವ ಹೆಸರಿದೆ. ಅದರ ಸುತ್ತಲೂ ಮುನ್ನೂರಕ್ಕೂ ಹೆಚ್ಚಿನ ಚಿಕ್ಕ ಚಿಕ್ಕ ದೇವಸ್ಥಾನಗಳು ನಿರ್ಮಾಣವಾಗಿವೆ.

 

Munsar Lake

 ಬನವಾಸಿ ಕದಂಬರ ಉಪಶಾಖೆ: ಅಂದಹಾಗೆ, ಆ ಮಹಾರಾಣಿಯ ಹೆಸರು "ಮೈನಾಳ ದೇವಿ(ಮಿನಾಲ್ ದೇವಿ)". ಇವರು ಕರ್ನಾಟಕ ಮೂಲದವರು ಎನ್ನುವುದು ವಿಶೇಷ ಸಂಗತಿ.  ಹನ್ನೊಂದನೇ ಶತಮಾನದಲ್ಲಿ ಗೋವಾ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯ ಕೆಲ ಭಾಗವನ್ನ ಆಳುತಿದ್ದ ಗೋವಾ ಕದಂಬ ವಂಶದ ರಾಜಾ ಒಂದನೆ ಜಯಕೇಶಿಯ ಮಗಳು ಇವರು. ಮೈನಾಳ ಎನ್ನುವ ಗ್ರಾಮ ಉತ್ತರಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನಲ್ಲಿದೆ. ಈ ಗೋವಾ ಕದಂಬರು ಬೇರೆ ಯಾರೂ ಅಲ್ಲ, ಬನವಾಸಿ ಕದಂಬ ಮನೆತನದ ಒಂದು ಟಿಸಿಲು(ಉಪ ಶಾಖೆ). ಇವರ ಆಡಳಿತ ಹೇಗೆ ಶುರುವಾಯಿತೆಂದರೆ, ಹತ್ತನೇ ಶತಮಾನದಲ್ಲಿ  ರಾಷ್ಟ್ರಕೂಟರು ಕೊಂಕಣಿ ಪ್ರದೇಶವನ್ನ ಆಳುತಿದ್ದರು. ಈ ಪ್ರದೇಶವನ್ನ ತಮ್ಮ ತೆಕ್ಕೆಗೆ ಪಡೆಯಲು ಬಾದಾಮಿ ಚಾಲುಕ್ಯರು ಸರಿಯಾದ ಸಮಯಕ್ಕಾಗಿ ಕಾಯುತಿದ್ದರು. ಅದು ರಾಷ್ಟ್ರಕೂಟ ಸಾಮ್ರಾಜ್ಯದ ಅಂತಿಮ ದಿನಗಳು. ಆಗ ಕದಂಬರ ಕುಡಿ ಷಷ್ಟದೇವನ ಸಹಾಯದಿಂದ ರಾಷ್ಟ್ರಕೂಟರನ್ನ ಕೊಂಕಣ ಪ್ರದೇಶದಲ್ಲಿ ಮಣಿಸಿ ಅಲ್ಲಿ ಷಷ್ಟದೇವನನ್ನ ಗೋವಾದ ಮಹಾಮಂಡಳೇಶ್ವರನನ್ನಾಗಿ ಸ್ಥಾಪಿಸುತ್ತಾರೆ (960CE). ಆಗಿನಿಂದ ಗೋವಾ ಕದಂಬ ಮನೆತನ ಆ ಪ್ರದೇಶವನ್ನ ಆಳುತ್ತಾರೆ. ಇವರ ಆಡಳಿತ ಭಾಷೆ ಸಂಸ್ಕೃತ ಮತ್ತು ಕನ್ನಡವಾಗಿತ್ತು. ಗೋವದ ಕದಂಬ ಮನೆತನ ಬನವಾಸಿ ಕದಂಬ ಮನೆತನದ ಉಪಶಾಖೆಗಳಲ್ಲೊಂದಾಗಿತ್ತು ಎಂದು ತಿಳಿದು ಬರುತ್ತದೆ

 


ಗೋವ ಕದಂಬ ವಂಶದ ನಾಲ್ಕನೇ ತಲೆಮಾರಿನ ರಾಜ ಒಂದನೇ ಜಯಕೇಶಿ. ಈತ ಪರಾಕ್ರಮಿಯೂ,  ದೂರ ದೃಷ್ಟಿಯ ವಿಚಾರವಂತನೂ ಆಗಿದ್ದನು, ಆಗಿನ ಕಾಲದಲ್ಲಿ ನಡೆಯುತಿದ್ದ ರಾಜಮನೆತನಗಳ ನಡುವಿನ ಕಾಳಗಗಳನ್ನ, ರಕ್ತಪಾತಗಳನ್ನ ತಪ್ಪಿಸಿ ಶಾಂತಿ ನೆಲೆಸುವ ಬಗ್ಗೆಯೇ ಬಹಳ ಯೋಚಿಸುತಿದ್ದನು. ಆತನಿಗೆ ಶಾಂತಿ, ನೆಮ್ಮದಿ, ರಾಜ್ಯಾಭಿವೃದ್ದಿ, ಪ್ರಜೆಗಳ ಕ್ಷೇಮಾಭಿವೃದ್ದಿಯೇ ಮುಖ್ಯವಾಗಿತ್ತು. ತನ್ನ ಚಿಕ್ಕದಾದ ಗೋವಾ ಸಾಮ್ರಾಜ್ಯಕ್ಕೆ  ಮುಂದೆ ಚಾಲುಕ್ಯರಿಂದ ಯಾವುದೇ ತೊಂದರೆ ಬರಬಾರದು ಎನ್ನುವ ದೂರಾಲೋಚನೆಯಿಂದ, ಕದಂಬ ಮತ್ತು ಚಾಲುಕ್ಯ ರಾಜಮನೆತನಗಳ ಭಾಂದವ್ಯ ಬೆಳೆಸುವ ಬಗ್ಗೆ ಯೋಚಿಸಿ  ತನ್ನ ಇಬ್ಬರ ಮಕ್ಕಳಲ್ಲಿ ಒಬ್ಬ ಮಗಳನ್ನ ಕಲ್ಯಾಣಿ ಚಾಳುಕ್ಯ ವಿಕ್ರಮಾದಿತ್ಯನಿಗೆ ಮತ್ತು ಇನ್ನೊಬ್ಬ ಮಗಳನ್ನೂ ಗುಜರಾತಿನ ಅನಿಲ್ವಾಡದ (ಈಗಿನ ಪಾಠಣ್) ಚಾಲುಕ್ಯ ಒಂದನೇ ಕರ್ಣ ದೇವನಿಗೆ ಕೊಟ್ಟು ವಿವಾಹ ಮಾಡಿಕೊಡುತ್ತಾನೆ. ಗುಜರಾತಿನ ಪೂರ್ವ ಮತ್ತು ದಕ್ಷಿಣ ಪ್ರಾಂತ್ಯವನ್ನ ಗುಜರಾತಿನ ಚಾಲುಕ್ಯರು ( ಅಲ್ಲಿ ಸೋಳಂಕಿ ಎಂದು ಗುರುತಿಸುತ್ತಾರೆ) ಆಳುತ್ತಿರುತ್ತಾರೆ. ಹೀಗೆ ರಾಜ ಒಂದನೆ ಜಯಕೇಶಿ ಕದಂಬ ಸಂತತಿಯ ಪ್ರಭಾವವನ್ನು ವಿಸ್ತರಿಸುತ್ತಾನೆ.

 ಮೈನಾಳ ದೇವಿ ಮದುವೆಯಾಗಿ ಗುಜರಾತಿಗೆ ಬರುತ್ತಾರೆ. ಅಲ್ಲಿ ಮಿನಾಲ್ ದೇವಿ ಎಂದು ಹೆಸರು ಬದಲಾವಣೆಯಾಗುತ್ತದೆ. ರಾಜ ಕರ್ಣ ದೇವ(1064–1092), ಒಮ್ಮೆ ಮಾಳವರು ಕರ್ಣದೇವನ ಮೇಲೆ ಯುದ್ದ ಮಾಡುತ್ತಾರೆ. ಆ ಯುದ್ದದಲ್ಲಿ ಕರ್ಣದೇವ ತೀವ್ರವಾಗಿ ಗಾಯಗೊಳ್ಳುತ್ತಾನೆ. ಯುದ್ದವನ್ನ ಗೆದ್ದನಂತರ, ಗಾಯಗಳಿಂದ ಚೇತರಿಸಿಕೊಳ್ಳದೆ ಅನಾರೋಗ್ಯಕ್ಕೆ ಗುರಿಯಾಗುತ್ತಾನೆ. ಕೇವಲ ಇಪ್ಪತ್ತೆಂಟು ವಯಸ್ಸಿನಲ್ಲಿ ಅಕಾಲಿಕ ಮರಣ ಹೊಂದುತ್ತಾನೆ. ಮಗನಾದ ರಾಜ ಜಯಸಿಂಹ ಸಿದ್ದರಾಜ ವಯಸ್ಸಿನಲ್ಲಿ ತುಂಬಾ ಚಿಕ್ಕವನು. ಈ ಸಂಧರ್ಭದಲ್ಲಿ, ಮಗನ ಪರವಾಗಿ ಮೈನಾಳ್ ದೇವಿ ರಾಜ್ಯಭಾರ ನಡೆಸಬೇಕಾಗುತ್ತದೆ. ಪಕ್ಕದಲ್ಲಿದ್ದ ಮಾಳವರು. ರಜಪೂತರು ಮತ್ತಿತರ ಸಂಸ್ಥಾನಗಳು ಒಬ್ಬರನ್ನೊಬ್ಬರು ಆಕ್ರಮಿಸಿ ತಮ್ಮ ಸಾಮ್ರಾಜ್ಯ ವಿಸ್ತರಿಸಿಕೊಳ್ಳಲು ಕಾಯುತ್ತಿರುತ್ತಾರೆ. ಇಂತಹ ಸಂಧರ್ಭದಲ್ಲಿ, ರಾಣಿ ತನ್ನ ಧೈರ್ಯ, ಶೌರ್ಯ, ಆಡಳಿತದಲ್ಲಿನ ಅಸಾಧಾರಣ ಸಾಮರ್ಥ್ಯ ಚಾಲುಕ್ಯರ ರಾಜ್ಯವನ್ನ ಕಾಪಾಡಿಕೊಳ್ಳುತ್ತಾಳೆ.  ಮುಂದೆ  ಜನಪರ ಕಾರ್ಯಕ್ರಮಗಳಿಂದ ಉತ್ತಮ ಹೆಸರನ್ನ ಸಹ ಸಂಪಾದಿಸುತ್ತಾಳೆ. ಇದಕ್ಕೆಲ್ಲ ಕಾರಣ ತಂದೆ ಒಂದನೇ ಜಯಕೇಶಿ.  ಯಾಕೆಂದರೆ ಒಂದನೆಯ ಜಯಕೇಶಿಯ ಆಳ್ವಿಕೆಯಲ್ಲಿ ತನ್ನ ರಾಜ್ಯ ಸರ್ವತೋಮುಖವಾದ ಅಭಿವೃದ್ಧಿ ಹೊಂದಿ ನೆಮ್ಮದಿಯ ಬೀಡಾಗಿತ್ತು. ತಂದೆಯ ಮಾರ್ಗದರ್ಶನ ಮಗಳು ಉತ್ತಮ ಆಡಳಿತ ನೀಡುವಲ್ಲಿ ಸಹಕಾರಿಯಾಯಿತು.

 ಸೋಮನಾಥ ಯಾತ್ರೆಯ ಒಂದು ಪ್ರಸಿದ್ಧ ಕಥೆ ಗುಜರಾತಿನಲ್ಲಿ ಪ್ರಚಲಿತದಲ್ಲಿದೆ. ಒಮ್ಮೆ ರಾಣಿ, ಸೋಮೇಶ್ವರ ದೇವಸ್ಥಾನಕ್ಕೆ ಹೋಗುವಾಗ ದಾರಿ ಮಧ್ಯ ವಿಶ್ರಾಂತಿ ಪಡೆಯುತ್ತಿರುತ್ತಾಳೆ. ಆಗ ಕೆಲವು ಸಾಧು-ಸಂತರು-ಸನ್ಯಾಸಿಗಳು ಮತ್ತು ಬಡ ಯಾತ್ರಿಕರರು ಅಲ್ಲಿಗೆ ಬಂದು ಬೇಟಿಯಾಗುತ್ತಾರೆ. ಹೇಗಿದ್ದೀಯಪ್ಪ ಸಾಧು ? ಎಲ್ಲಾ ಸೌಖ್ಯವೇ ಎಂದು ಕಷ್ಟ ಸುಖ ಕೇಳುತ್ತಾಳೆ. ಆಗ ಆ ಸಾಧು, ತಾಯಿ ನಮ್ಮಂತವರು ಸೋಮೇಶ್ವರನ ದರ್ಶನ ಮಾಡಲು ಹಣವನ್ನ ಎಲ್ಲಿಂದ ತರಬೇಕು ತಾಯಿ? ಎಂದು ಪ್ರಶ್ನಿಸುತ್ತಾನೆ.  ಯಾತ್ರಿಕರ ತೆರಿಗೆಯನ್ನು ಪಾವತಿಸಲು ಸಾಧ್ಯವಾಗದ ಕಾರಣ ಸೋಮನಾಥ ದೇವರನ್ನು ಮಾಡಲು ಸಾಧ್ಯವಾಗಲಿಲ್ಲ ಎಂದು ಅವರು ರಾಜಮಾತೆ ಮೀನಾಲ್ದೇವಿಗೆ ದೂರು ನೀಡುತ್ತಾರೆ. 


ಆಗಿನ ಕಾಲದಲ್ಲಿ ಸೋಮನಾಥನ ದರ್ಶನ ಪಡೆಯಲು ಹಣವನ್ನ ನೀಡ ಬೇಕಾಗಿರುತ್ತದೆ. ರಾಜಮಾತೆ ಮೀನಾಲ್ ದೇವಿ ಇದನ್ನು ಸಹಿಸಲಾರದೆ ಯೂ ಸೋಮನಾಥನನ್ನು ನೋಡದೆ ಹಿಂದಿರುಗುತ್ತಾಳೆ. ಅರಮನೆಗೆ ಬಂದು ತನ್ನ ಮಗ ಮತ್ತು ರಾಜ ಜೈ ಸಿಂಗ್‌ಗೆ ನಡೆದ ಘಟನೆಯನ್ನ ವಿವರಿಸುತ್ತಾಳೆ. ತಾಯಿಯ ಕೋರಿಕೆಯ ಮೇರೆಗೆ, ಮಹಾರಾಜ್ ಸಿದ್ಧರಾಜ್ ಜೈ ಸಿಂಗ್ ಅವರು ಸೋಮನಾಥ ಯಾತ್ರೆಗೆ ಯಾತ್ರಿಕರ ತೆರಿಗೆಯನ್ನು ರದ್ದುಗೊಳಿಸುತ್ತಾರೆ. ಈ ಯಾತ್ರಿ ತೆರಿಗೆಯಿಂದ ಸುಮಾರು ವಾರ್ಷಿಕ 72 ಲಕ್ಷ ರೂಪಾಯಿಗಳ ಆದಾಯವು ಸ್ಥಗಿತಗೊಳ್ಳುತ್ತದೆ.  ಸೋಮೇಶ್ವರ ದೇವಸ್ಥಾನವನ್ನ ಜೀರ್ಣೋದ್ದಾರವನ್ನ ಸಹ ರಾಣಿ ಮಾಡಿಸುತ್ತಾಳೆ. ಹೀಗೆ ಅನೇಕ ಸುಧಾರಣೆಗಳಿಗೆ, ನ್ಯಾಯಪರ ಆಡಳಿತಕ್ಕೆ ಹೆಸರುವಾಸಿಯಾಗಿದ್ದ ರಾಣಿ ಮೈನಾಳ ದೇವಿ ಇಂದಿಗೂ ಜನ ಮಾನಸದಲ್ಲಿ ನೆಲೆಸಿದ್ದಾಳೆ.  1946 ನೇ ಇಸವಿಯಲ್ಲಿ "ಮಹಾರಾಣಿ ಮಿನಾಲ್ ದೇವಿ" ಎನ್ನುವ ಗುಜರಾತಿ ಚಲನಚಿತ್ರವೂ ಬಿಡುಗಡೆಯಾಗಿದೆ. 

 


Gujarati Movie Maharani Minal Devi

ರಾಣಿಯ ಬಗ್ಗೆ ಹಲವಾರು ಸಂಸ್ಕೃತ ಸಾಹಿತ್ಯ ಮತ್ತು ನಾಟಕಗಳಲ್ಲಿ ಉಲ್ಲೇಖಿಸಿದ್ದಾರೆಸಂಸ್ಕೃತ ಕವಿ ಭಿಲ್ಹಣ ಬರೆದ ಕರ್ಣ ಸುಂದರಿ ಎಂಬ ನಾಟಕದಲ್ಲಿ ಪತಿ ರಾಜ ಒಂದನೇ ಕರ್ಣದೇವ ಮತ್ತು ರಾಣಿಯ ಬಗ್ಗೆ ಪ್ರಸಂಗಗಳಿವೆ. ಇನ್ನೊಂದು ಪ್ರಮುಖವಾದ ಮುದ್ರಿತ ಕುಮುದ ಚಂದ್ರ ಪ್ರಕರಣ ಎಂಬ ಶೀರ್ಷಿಕೆಯ ಸಂಸ್ಕೃತ ನಾಟಕವು ಎರಡು ಪ್ರಮುಖ ಜೈನ ಪಂಥಗಳಾದ ದಿಗಂಬರ ಮತ್ತು ಶ್ವೇತಾಂಬರರ ನಡುವಿನ ವಿವಾದದ ಚಿತ್ರಣವನ್ನ ಹೊಂದಿದೆ. ಈ ವಿವಾದದ ಒಂದು ವಿಷಯವೆಂದರೆ ಮಹಿಳೆ ಮೋಕ್ಷವನ್ನು ಸಾಧಿಸಬಹುದೇ ಎಂಬುದು. ಇಲ್ಲಿರುವ ಶ್ವೇತಾಂಬರರು "ಅಂತರಂಗ ಹಾಗೂ ಬಹಿರಂಗದಲ್ಲಿ ಉತ್ತಮವಾದ ಮನೋಗುಣವನ್ನ ಹೊಂದಿರುವ ಮಹಿಳೆಯರು ಮೋಕ್ಷವನ್ನು ಪಡೆಯಬಹುದು" ಎಂದು ಪ್ರತಿಪಾದಿಸುತ್ತಾರೆ.  ರಾಮಾಯಣದ  ಸೀತಾ ಮಾತೆ ಮತ್ತು ಮಹಾರಾಣಿ ಮಿನಾಲ್ ದೇವಿಯವರನ್ನು ಉದಾಹರಣೆಗಳಾಗಿ ಉಲ್ಲೇಖಿಸುತ್ತಾರೆ.

 


ನಮ್ಮ ಕೋಲಾಟ, ಗರ್ಭಾ ಮತ್ತು ದಾಂಡಿಯ ನೃತ್ಯವಾಗಿದ್ದು: ಮೈನಾಳ್ ದೇವಿ ಸ್ವತಃ ನೃತ್ಯಗಾರ್ತಿಯಾಗಿದ್ದು, ನಾಟ್ಯದಲ್ಲಿ ಆಸಕ್ತಿ ಹೊಂದಿದ್ದಳು ಎಂದು ಇತಿಹಾಸದಲ್ಲಿ ದಾಖಲಾಗಿದೆ. ಮದುವೆಯ ಸಂಧರ್ಭದಲ್ಲಿ ಶಾಸ್ತ್ರೀಯ ಜಾನಪದ ನೃತ್ಯಗಾರರನ್ನ  ಗುಜರಾತಿಗೆ ಕರೆತಂದಿದ್ದಳು ಎಂದು ಹೇಳಲಾಗುತ್ತದೆ. ಆಗ ಕರ್ನಾಟಕದ ಕೋಲಾಟ ವನ್ನು ಗುಜರಾತ್ ಗೆ ಪರಿಚಯಿಸಿ ಮುಂದೆ  ದಾಂಡಿಯಾ ರಾಸ್ ಮತ್ತು ಗರ್ಭಾ ನೃತ್ಯ ವಾಗಿ ರೂಪುಗೊಂಡಿತು ಎನ್ನಲಾಗುತ್ತದೆ.

 

ಸಾಮ್ರಾಟ್ ಪೃಥ್ವಿರಾಜ್ ಚೌಹಾಣ್: ಮೊಹಮ್ಮದ್ ಘೋರಿ ವಿರುದ್ಧ ಹೋರಾಡಿದ ರಜಪೂತ ದೊರೆ ಸಾಮ್ರಾಟ್ ಪೃಥ್ವಿರಾಜ್ ಚೌಹಾಣ್ ಯಾರಿಗೆ ಗೊತ್ತಿಲ್ಲ ಹೇಳಿ? ಭಾರತದ ಇತಿಹಾಸದಲ್ಲಿ ಮರೆಯಲಾರದ ಈ ವೀರ ಸೇನಾನಿ ಬಗ್ಗೆ ಬಹಳಷ್ಟು ಕಥೆಗಳು ಇವೆ. ಸಿನಿಮಾಗಳು ಬಂದಿವೆ. ನಾಟಕಗಳು, ಕಾದಂಬರಿಗಳು. ಇಂದಿಗೂ ಜನರ ಮನಸಲ್ಲಿ ನೆಲೆಸಿದ್ದಾನೆ ಈ ಕೆಚ್ಚೆದೆ ವೀರ. ಈತ ಮೈನಾಳ್ ದೇವಿಯ ಮರಿ ಮೊಮ್ಮಗ ಎನ್ನುವುದು ವಿಶೇಷ.  ಅದು ಹೇಗೆಂದರೆ, ಮೈನಾಳ್ ದೇವಿಯ ಮಗ ರಾಜ ಜಯಸಿಂಹ ಸಿದ್ದರಾಜ ಅವರ ಮಗಳಾದ ಕಾಂಚನದೇವಿ ಯವರನ್ನ ರಜಪೂತ ದೊರೆ ಅರ್ನೋರಾಜ ನಿಗೆ ಮದುವೆ ಮಾಡಿಕೊಡುತ್ತಾರೆ. ಅವರಿಗೆ ಸೋಮೇಶ್ವರ ಎನ್ನುವ ಮಗ ಹುಟ್ಟುತ್ತಾನೆ.  ಈ ಸೋಮೇಶ್ವರ ರವರ ಮಗನೇ ಈ ವೀರ ಕೇಸರಿ ಪರಾಕ್ರಮಿ ಪೃಥ್ವಿರಾಜ್ ಚೌಹಾಣ್ (III).

 

ಸಂಸ್ಕೃತ ಕವಿ ಭಿಲ್ಹಣ: ಮೈನಾಳ್ ದೇವಿಯವರ ಕಥಾನಕದಲ್ಲಿ ಕವಿ ಭಿಲ್ಹಣರ ಪ್ರಸ್ತುತತೆ ಬಹು ಮುಖ್ಯವಾಗುತ್ತದೆ. ಇವರ ಮುಖಾಂತರವೇ ನಮಗೆ ಗುಜರಾತಿನ ಚಾಲುಕ್ಯರು ಮತ್ತು  ಕರ್ನಾಟಕದ ಚಾಲುಕ್ಯರ ನಡುವಿನ ಭಾಂಧವ್ಯದ ಬಗ್ಗೆ ಪರಿಚಯವಾಗುವುದು. ಇವರು ಕಾಶ್ಮೀರದ ಕವಿ. ತಮ್ಮ ವಿಧ್ಯಾಭ್ಯಾಸದ ಬಳಿಕ ಪಾಂಡಿತ್ಯ ಪ್ರದರ್ಶನಕ್ಕಾಗಿ ಭಾರತ ಯಾತ್ರೆ ಮಾಡುತ್ತಾರೆ.  ಕಾಶ್ಮೀರ, ಬೃಂದಾವನ, ಮಥುರಾ, ಕಾಶಿ, ಕನ್ಯಾಕುಬ್ಜ, ಧಾರಾ, ಗುಜರಾತ್ ಮುಂತಾದ ಊರುಗಳಲ್ಲಿ ಸುತ್ತಿ ದಕ್ಷಿಣ ಭಾರತದ ಕಲ್ಯಾಣ ಚಾಲುಕ್ಯ ವಂಶದ ಹೆಸರಾಂತ ದೊರೆ ಆರನೆಯ ವಿಕ್ರಮಾದಿತ್ಯನ ಆಸ್ಥಾನಕ್ಕೆ ಬರುತ್ತಾರೆ. ಇದಕ್ಕೂ ಮೊದಲು ಮೈನಾಳ್ ದೇವಿಯ ಆಸ್ಥಾನದಲ್ಲಿ ಕವಿಯಾಗಿ "ಕರ್ಣ ಸುಂದರಿ" ಎನ್ನುವ ನಾಲ್ಕು ಅಂಕಗಳ ಐತಿಹಾಸಿಕ ನಾಟಕವನ್ನ ಬರೆದಿರುತ್ತಾರೆ. ರಾಜಾ ಜಯಸಿಂಹ ಇವರನ್ನ ಸತ್ಕರಿಸಿ ದಕ್ಷಿಣದೆಡೆಗೆ ಕಲ್ಯಾಣ ಚಾಲುಕ್ಯರ ಆರನೇ ವಿಕ್ರಮಾದಿತ್ಯನ ಆಸ್ಥಾನಕ್ಕೆ ಬರುತ್ತಾನೆ. ಅಲ್ಲಿ, ಕವಿಯ ಪಾಂಡಿತ್ಯವನ್ನ ಗಮನಿಸಿದ ರಾಜ ವಿಕ್ರಮಾದಿತ್ಯ ಈತನನ್ನು ಸತ್ಕರಿಸಿ ವಿದ್ಯಾಪತಿ ಎಂಬ ಉಪಾಧಿ ಕೋಡುತ್ತಾನೆ. ಆಗ ಅಲ್ಲಿ ನೆಲೆನಿಂತು ವಿಕ್ರಮಾಂಕದೇವ-ಚರಿತ ಎನ್ನುವ ಐತಿಹಾಸಿಕ ಕಾವ್ಯವನ್ನ ಕವಿ ರಚಿಸುತ್ತಾರೆ. ಚಾಲುಕ್ಯರಿಂದ ಅತು ಹೆಚ್ಚು ಮಾನ್ಯತೆ ಪಡೆದಿದ್ದ ಭಿಲ್ಹಣನಿಗೆ ಚಾಲುಕ್ಯ ರಾಜವಂಶದ ಯುದ್ದಗಳು, ಕಲ್ಯಾಣ ಕಾರ್ಯಕ್ರಮಗಳು ಅವನ ಕಾವ್ಯದ ವಸ್ತುಗಳಾಗಿದ್ದವು.

 


ಅಂದಾಜು ಒಂಬೈನೂರು ವರ್ಷಗಳಿಗೂ ಹೆಚ್ಚಿನ ಈ ಐತಿಹಾಸಿಕ ಸತ್ಯ ಸಂಗತಿಗಳು ಕನ್ನಡಿಗರಿಗೆ ಹೆಮ್ಮೆ ತರುವ ವಿಷಯಗಳು, ಇಂತಹ ವಿಷಯಗಳ ಕುರಿತು ಹೆಚ್ಚಿನ ಸಂಶೋಧನೆ ನಡೆಸಿ  ನಮ್ಮ ಮುಂದಿನ ಪೀಳಿಗೆಗೆ ಅರಿವು ಮೂಡಿಸುವ ಕೆಲಸವನ್ನ ಸರ್ಕಾರ ಮತ್ತು ಸಂಘ ಸಂಸ್ಥೆಗಳು ಮಾಡಬೇಕಾಗಿದೆ.

 #ಮೈನಾಳದೇವಿ #maynala #minaldevi #mynaldevi #ಮಿನಾಲ್ದೇವಿ #ಮಿನಾಲ್_ದೇವಿ

ಗುರುವಾರ, ಸೆಪ್ಟೆಂಬರ್ 8, 2022

ನೆಪೋಲಿಯನ್ ನ ಅಂತ್ಯ ಹಾಡಿದ ಜರ್ಮನಿಯ ಲೈಪ್ ಜ಼ಿಗ್ ಯುದ್ದ

 ಉದಯವಾಣಿ NRI Edition ನಲ್ಲಿ ನಾನು ಬರೆದ ಪ್ರವಾಸಿ ಲೇಖನ ಇಂದು ಪ್ರಕಟವಾಗಿದೆ.



Thanks to Udayavani 🙏
ಪ್ರವಾಸಿ ಕಥನ: ನೆಪೋಲಿಯನ್ ನ ಅಂತ್ಯ ಹಾಡಿದ ಜರ್ಮನಿಯ ಲೈಪ್ ಜ಼ಿಗ್ ಯುದ್ದ (Battle of Leipzig)
ಬರಹ:- ಪಿ.ಎಸ್.ರಂಗನಾಥ.
ಮಸ್ಕತ್. ಒಮಾನ್ ರಾಷ್ಟ್ರ.
ಕಛೇರಿಯ ಕೆಲಸದ ನಿಮಿತ್ತ ಜರ್ಮನಿಗೆ ಇದುವರೆವಿಗೂ ಮೂರು ಬಾರಿ ಭೇಟಿ ನೀಡಿದ್ದೇನೆ, ಪ್ರತಿ ಬಾರಿ ಭೇಟಿ ನೀಡಿದಾಗಲೂ ಒಂದಿಲ್ಲೊಂದು ಪ್ರವಾಸಿ ತಾಣಗಳನ್ನ ನೋಡುವುದು ಹವ್ಯಾಸ. ಈ ಬಾರಿ ನಾನು ಪ್ರಯಾಣಿಸಿದ್ದು ಜರ್ಮನಿಯ ಲೈಪ್ ಜ಼ಿಗ್ ಎನ್ನುವ ನಗರಕ್ಕೆ. ಇದು ಫ್ರಾಂಕ್ ಫರ್ಟ್ ನಿಂದ ಸುಮಾರು 395 ಕಿ.ಮಿ. ದೂರದಲ್ಲಿದೆ. ಇದು ಒಂದು ವಾಣಿಜ್ಯ ನಗರವಾಗಿದ್ದರೂ ಸಹ ಜರ್ಮನಿಯ ಇತಿಹಾಸದ ಪುಟದಲ್ಲಿ ಈ ನಗರಕ್ಕೆ ಒಂದು ಪ್ರಮುಖ ಸ್ಥಾನ ಇದೆ. ಫ್ರೆಂಚ್ ಸಾಮ್ರ್ಯಾಜ್ಯಕ್ಕೆ ಮಣ್ಣು ಮುಕ್ಕಿಸಿದ ಖ್ಯಾತಿ ಈ ನಗರಕ್ಕಿದೆ. ಅಲ್ಲೊಂದು ದೊಡ್ಡದಾದ ಯುದ್ದ ಸ್ಮಾರಕವಿತ್ತು, ಅದನ್ನ ನೋಡೋಣ ಎಂದು ಅಂದು ಸಂಜೆ ಅಲ್ಲಿಗೆ ಹೋಗಿದ್ದೆವು. ಆ ಸ್ಥಳಕ್ಕೆ ಹೋದ ಮೇಲೆ, ಆ ನಗರದಲ್ಲಿ ನಡೆದ ಭೀಕರ ಯುದ್ದವೊಂದರ ಮಾಹಿತಿ ದೊರೆಯಿತು.
ನಮ್ಮ ಕರ್ನಾಟಕದಲ್ಲಿ ಟಿಪ್ಪು ಸುಲ್ತಾನ್ ವಿಚಾರ ಬಂದಾಗ ಫ್ರೆಂಚ್ ಸೈನ್ಯ, ನೆಪೋಲಿಯನ್ ವಿಚಾರ ಕುರಿತು ಚರ್ಚೆಯಾಗುವುದು ನಾವು ಗಮನಿಸಿರಬಹುದು. ಟಿಪ್ಪು ಸುಲ್ತಾನ್ ಫ್ರೆಂಚ್ ಕ್ರಾಂತಿಯ ವಿಚಾರಗಳು ಮತ್ತು ತತ್ವಶಾಸ್ತ್ರಗಳನ್ನು ಓದಿಕೊಂಡಿದ್ದರಿಂದ ಫ್ರೆಂಚ್ ಕ್ರಾಂತಿಯ ಬಗ್ಗೆ ಪ್ರಭಾವಿತನಾಗಿದ್ದನಂತೆ. ಅಷ್ಟೇ ಅಲ್ಲದೆ ಬ್ರಿಟೀಷರಿಗೆ ಪ್ರಬಲ ಪೈಪೋಟಿ ಒಡ್ಡಿದ್ದ ಫ್ರೆಂಚ್ ಆಡಳಿತಗಾರರು ಮತ್ತು ಸೈನ್ಯಾಧಿಕಾರಿಗಳೊಡನೆ ಒಳ್ಳೆಯ ಸಂಬಂಧ ಬೆಳೆಸಿದ್ದ ಹಾಗೂ ಅವರ ಮೂಲಕ ತನ್ನ ಸೈನ್ಯಕ್ಕೆ ತರಬೇತಿಯನ್ನೂ ಕೊಡಿಸಿದ್ದ ಹೀಗೆ ಹಲವಾರು ವಿಷಯಗಳನ್ನ ನಮ್ಮ ಇತಿಹಾಸಕಾರರು ದಾಖಲಿಸಿದ್ದಾರೆ. ಇತಿಹಾಸ ಅರಿತಿರುವ ಎಲ್ಲರಿಗೂ, ಫ್ರೆಂಚ್ ಸಾಮ್ರ್ಯಾಜ್ಯ, ಫ್ರೆಂಚ್ ಚಕ್ರವರ್ತಿ ನೆಪೋಲಿಯನ್ ಬೋನಾಪಾರ್ಟೆ ಬಗ್ಗೆ ಗೊತ್ತಿರಬಹುದು. ಮೈಸೂರು ಆಂಗ್ಲೋ ಯುದ್ದದ ಸಮಯದಲ್ಲಿ ಫ್ರೆಂಚ್ ಸೈನ್ಯದ ನೆರವು ಪಡೆಯಲು ಟಿಪ್ಪು ಸುಲ್ತಾನ್ ಸಹ ನೆಪೋಲಿಯನ್ ನನ್ನ ಸಂಪರ್ಕಿಸಿದ್ದ ವಿಷಯವನ್ನ ಕೇಳಿದ್ದೇವೆ.
ಅಸಾಧರಣ ಬುದ್ದಿಮತ್ತೆ, ಯುದ್ದಗಳನ್ನ ಗೆಲ್ಲುವ ಕೌಶಲ್ಯತೆಯನ್ನ ಹೊಂದಿದ್ದ, ಸೋಲಿಲ್ಲದ ಸರದಾರ ಎನ್ನುವ ಖ್ಯಾತಿ ಹೊಂದಿದ್ದ ನೆಪೋಲಿಯನ್, ತನ್ನ ಅಧಿಕಾರಾವಧಿಯಲ್ಲಿ ಅನೇಕ ಯುದ್ಧಗಳನ್ನು ಮಾಡಿ ಯಶಸ್ವಿಯಾಗಿದ್ದರಿಂದ, ಅವನು ಫ್ರಾನ್ಸ್‌ನ ಇತಿಹಾಸದಲ್ಲಿ ಅಧಿಪತಿಯಾಗಿ ತುಂಬಾ ಹೆಸರು ಗಳಿಸಿದ್ದ. ಅಷ್ಟೇ ಅಲ್ಲದೆ ಯೂರೋಪಿನ ಇತಿಹಾಸದಲ್ಲಿ ವಿಶಿಷ್ಟ ಸ್ಥಾನವನ್ನ ನೀಡಲಾಗಿದೆ.
ಜನಪರ ಆಡಳಿತಗಾರನಾಗಿದ್ದ ಆತ, ತನ್ನ ಆಳ್ವಿಕೆಯಲ್ಲಿ ಪ್ರಗತಿಪರ ಚಿಂತನೆಗಳನ್ನು ಫ್ರಾನ್ಸ್ ಸೇರಿದಂತೆ ಯೂರೋಪಿನಾದ್ಯಂತ ಹರಡಿದ. ಇದರ ಫಲವಾಗಿ, ಯೂರೋಪಿನ ಅನೇಕ ರಾಷ್ಟ್ರಗಳು ಹಲವು ಸುಧಾರಣೆಗಳನ್ನು ಕಂಡವು. ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೆ ತಂದಿದ್ದಲ್ಲದೆ, ಮಧ್ಯಮ ವರ್ಗದ ಹಿತ ಕಾಯುವುದಕ್ಕಾಗಿ ಕಾಯಿದೆಗಳನ್ನು ರೂಪಿಸಿ, ಜಾರಿಗೆ ತಂದನು. ಧಾರ್ಮಿಕ ಅಲ್ಪಸಂಖ್ಯಾತರಾದಂತ ಯಹೂದಿಗಳು ಮತ್ತಿತರನ್ನ ಗುಲಾಮಗಿರಿಯಿಂದ ಬಿಡುಗಡೆ ಮಾಡಿದ್ದಲ್ಲದೆ, ಅವರಿಗೆ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುವುದಕ್ಕೆ, ಅವಕಾಶಗಳನ್ನ ಕಲ್ಪಿಸಿಕೊಟ್ಟನು. ಯೂರೋಪಿನಾದ್ಯಂತ ಬೇರುಬಿಟ್ಟಿದ್ದ ಊಳಿಗಮಾನ್ಯ ವ್ಯವಸ್ಥೆಯನ್ನು ಕಿತ್ತೊಗೆಯಲು ಅವನ ಆಡಳಿತ ಪ್ರೇರಣೆ ನೀಡಿತು. ನ್ಯಾಯಾಂಗ ವ್ಯವಸ್ಥೆಯಲ್ಲೂ ಅಪಾರ ಸುಧಾರಣೆಗಳನ್ನು ತಂದಿದ್ದಲ್ಲದೇ, ಇಂದಿಗೂ ಆತನ ನ್ಯಾಯ ಸುಧಾರಣೆಗಳನ್ನು ನೆಪೋಲಿಯನಿಕ್ ಕೋಡ್’ ಎಂದು ಫ್ರಾನ್ಸ್ ನಲ್ಲಿ ಕರೆಯಲಾಗುತ್ತದೆ. ಈ ನ್ಯಾಯಾಂಗ ಸುಧಾರಣೆಗಳನ್ನು ಜಗತ್ತಿನಾದ್ಯಂತ ಇಂದಿಗೂ ಬಳಸಿಕೊಳ್ಳುತ್ತಿದ್ದಾರೆ.
ನೆಪೋಲಿಯನ್ ಬೋನಾಪಾರ್ಟೆ 1804 ರಿಂದ 1814 ರವರೆಗೆ ಫ್ರಾನ್ಸ್ ನ ಚಕ್ರವರ್ತಿಯಾಗಿ ಆಳ್ವಿಕೆ ಮಾಡಿದ್ದನು. ಫ್ರೆಂಚ್ ಚಕ್ರವರ್ತಿಯಾಗುವ ಮೊದಲು ಫ್ರೆಂಚರ ಸೈನ್ಯದಲ್ಲಿ ಅತಿ ದೊಡ್ಡದಾದ ಸ್ಥಾನವನ್ನ ಹೊಂದಿದ್ದ. ಆ ಸ್ಥಾನಮಾನ ಸುಮ್ಮನೆ ಸಿಕ್ಕಿದ್ದಲ್ಲ. ಅವನಿಗೆ ಫ್ರೆಂಚ್ ರಾಜಮನೆತನದ ಹಿನ್ನೆಲೆ ಯಿರಲಿಲ್ಲ. ಸಾಮಾನ್ಯ ಕುಟುಂಬದಲ್ಲಿ ಜನಿಸಿದ ನೆಪೋಲಿಯನ್, ಹಂತ ಹಂತವಾಗಿ ಬೆಳೆದು ಯುರೋಪಿನಲ್ಲಿ ಫ್ರೆಂಚ್ ಸಾಮ್ರಾಜ್ಯವನ್ನ ಉತ್ತುಂಗಕ್ಕೆ ಕೊಂಡೋಯ್ದಿದ್ದಲ್ಲದೇ, ಫ್ರಾನ್ಸ್ ನಲ್ಲಿ ನಡೆದ ಕ್ರಾಂತಿಕಾರಕ ಬದಲಾವಣೆಗಳಿಗೆ ಕಾರಣೀ ಭೂತನಾಗಿದ್ದ. ಯುರೋಪ್ ರಾಷ್ಟ್ರಗಳನ್ನು ಹಲವಾರು ಯುದ್ದದಲ್ಲಿ ಗೆದ್ದು ಚಕ್ರವರ್ತಿ ಯಾಗಿ ಬೀಗಿದ್ದ. ಅಂತಹ ಚಕ್ರವರ್ತಿ ನೆಪೋಲಿಯನ್ನಿಗೆ ಇಡೀ ಜಗತ್ತನ್ನೇ ಗೆಲ್ಲಬೇಕೆಂಬ ಆಸೆಯಿತ್ತು. ಆದರೆ, ಸೋಲು ಎನ್ನುವುದು ಅವನಿಗೂ ತಪ್ಪಿರಲಿಲ್ಲ. ಜರ್ಮನ್ನರು, ರಷಿಯನ್ನರು, ಸ್ವೀಡನ್ನರು, ಆಸ್ಟ್ರಿಯನ್ನರ ಒಕ್ಕೂಟದ ಎದುರು 16 ಮತ್ತು19ರ ಅಕ್ಟೋಬರ್ 1813 ರಲ್ಲಿ ನಡೆದ ಮಹಾಯುದ್ದ ದಲ್ಲಿ (Battle of Leipzig) ಅವನು ಸೋತು ಶರಣಾಗಿದ್ದ. ಪ್ರಪಂಚ ಗೆಲ್ಲಬೇಕೆನ್ನುವ ನೆಪೋಲಿಯನ್ ಆಸೆ ಪೂರ್ಣವಾಗಲು, ಒಂದು ಯುದ್ಧ ತಡೆಯಾಯಿತು. ಅದು ಜರ್ಮನ್ ದೇಶದ ಲೈಪ್ಜಿಗ್ ನಲ್ಲಿ ನಡೆದ ಮಹಾಯುದ್ದ. ನೆಪೋಲಿಯನ್ ಯುದ್ದ ದಾಹದಿಂದ ತೊಂದರೆಗೀಡಾಗಿದ್ದ ಜರ್ಮನ್ ಮತ್ತು ಸುತ್ತ ಮುತ್ತಲಿನ ದೇಶಗಳು ಒಂದಾಗಿ ಫ್ರೆಂಚ್ ರ ವಿರುದ್ದ ಸೆಣೆಸಿದ್ದವು.
ನೆಪೋಲಿಯನ್ ನ ಮೊದಲನೇ ಸೋಲನ್ನು ನೋಡಿ ಅವನನ್ನು ಕ್ರೋಶಿಯಾ ಮತ್ತು ಇಟಲಿಯ ಮಧ್ಯೆ ಇರುವ ಎಲ್ಬಾ ಎನ್ನುವ ದ್ವೀಪಕ್ಕೆ ಗಡಿಪಾರು ಮಾಡಲಾಯಿತು. ಅಲ್ಲಿ ಕೆಲ ತಿಂಗಳುಗಳ ಕಾಲ ಜೀವಿಸಿದ್ದ. ಆದರೆ ಆ ಯುದ್ದದ ಸೋಲನ್ನು ಅವನು ಅರಗಿಸಿಕೊಳ್ಳಲಿಕ್ಕೆ ಆಗಿರಲಿಲ್ಲ. ಮತ್ತೊಮ್ಮೆ ಪ್ರಪಂಚವನ್ನ ಗೆಲ್ಲಬೇಕು ಎನ್ನುವ ಅವನ ಆಸೆ ಮತ್ತೆ ಮತ್ತೆ ಚಿಗುರುತಿತ್ತು. ಹೀಗಾಗಿ ಅಲ್ಲಿಂದ ತಪ್ಪಿಸಿಕೊಂಡು ಮರಳಿ ಪ್ರಾನ್ಸ್ಗೆ ವಾಪಸ್ ಬಂದನು. ಮತ್ತೊಮ್ಮೆ ಫ್ರೆಂಚ್ ಸಾಮ್ರಾಜ್ಯವನ್ನ ತನ್ನ ಹಿಡಿತಕ್ಕೆ ತೆಗೆದುಕೊಂಡು ಸುಮಾರು 100 ದಿನಗಳ ಕಾಲ ಫ್ರಾನ್ಸ್ ದೇಶವನ್ನ ಮತ್ತೊಮ್ಮೆ ಆಳಿದನು. ಈ ಬಾರಿ ಎಲ್ಲ ದೇಶಗಳು ಏಳನೇ ಬಾರಿಗೆ ಒಕ್ಕೂಟವನ್ನ ರಚಿಸಿಕೊಂಡು, ವಾಟರ್ಲೂ ನಲ್ಲಿ ಮತ್ತೊಮ್ಮೆ ಯುದ್ದ ನಡೆಯಿತು. ಆ ಯುದ್ಧದಲ್ಲಿ ಮಗದೊಮ್ಮೆ ನೆಪೋಲಿಯನ್ ಭಾರಿ ಸೋಲನ್ನೇ ಅನುಭವಿಸಿದ. ಈ ಬಾರಿ ಬ್ರಿಟೀಷರು ನೆಪೋಲಿಯನ್ ನನ್ನ ಸೈಂಟ್ ಹೆಲೆನ ದ್ವೀಪಕ್ಕೆ ಗಡಿಪಾರು ಮಾಡುತ್ತಾರೆ. ವಾಟರ್ಲೂ ಅವನ ಕೊನೆಯ ಯುದ್ಧ. ಸೈಂಟ್ ಹೆಲೆನ ದ್ವೀಪದಲ್ಲಿ ಆರು ವರ್ಷಗಳ ಕಾಲ ಕಳೆಯುತ್ತಾನೆ ನಂತರ ಮೇ 5 1821 ರಂದು ಹೊಟ್ಟೆಯ ಕ್ಯಾನ್ಸರ್ ನಿಂದಾಗಿ ನೆಪೋಲಿಯನ್ ಮರಣ ಹೊಂದುತ್ತಾನೆ. ನೆಪೋಲಿಯನ್ ಬದುಕಿದ್ದು ಕೇವಲ 51 ವರ್ಷಗಳು ಮಾತ್ರ. ಅದರಲ್ಲಿ, ಆರು ವರ್ಷಗಳ ಕಾಲ ಗಡಿಪಾರು ಜೀವನ. ಒಬ್ಬ ಸಾಮಾನ್ಯ ಯುವಕ ಕೇವಲ ನಲವತ್ತೈದು ವರ್ಷಗಳ ಜೀವನದಲ್ಲಿ ಚಕ್ರವರ್ತಿಯಾಗುವ ಹಂತಕ್ಕೆ ಬೆಳೆದಿದ್ದು ಕಡಿಮೆ ಸಾಧನೆ ಏನಲ್ಲ. ಯುದ್ದಗಳ ಗೆಲುವಿನಿಂದ ಬೀಗಿ ಫ್ರೆಂಚ್ ಚಕ್ರವರ್ತಿಯಾದ ನೆಪೋಲಿಯನ್, ಒಂದೆರೆಡು ಯುದ್ದಗಳ ಸೋಲಿನ ಬಳಿಕ ಗಡಿಪಾರಾಗಿ ಮರಣ ಹೊಂದಿದ್ದು ದುರದೃಷ್ಟಕರವಾದ ಸಂಗತಿ.
ಜರ್ಮನ್ ಮತ್ತು ಇತರೆ ಸ್ನೇಹಿತ ರಾಷ್ಟ್ರಗಳಿಗೆ ಇದು ಮರೆಯಲಾರದ ನೆನಪು. ಅವರೆಲ್ಲರೂ ನೆಪೋಲಿಯನ್ ವಿರುದ್ದ ಯುದ್ದ ಗೆದ್ದ ನೆನಪಿಗಾಗಿ ಸ್ಮಾರಕ ವೊಂದನ್ನು ಜರ್ಮನ್ ದೇಶದ ಲೈಪ್ಜಿಗ್ ನಗರದಲ್ಲಿ ನಿರ್ಮಿಸಿದ್ದಾರೆ. ನೂರು ವರ್ಷಗಳ ನಂತರ, ತುಂಬ ವಿಶಾಲವಾದ ಜಾಗದಲ್ಲಿ ಈ ಸ್ಮಾರಕ ನಿರ್ಮಾಣವಾಗಿದೆ. ಉದ್ದ 80 metres (260 ft), ಅಗಲ, 70 metres (230 ft), ಎತ್ತರ 91 metres (299 ft). 18 October 1898 ರಂದು ಕಟ್ಟಲು ಶುರುಮಾಡಿ, ಹನ್ನೆರೆಡು ವರ್ಷಗಳಲ್ಲಿ ಸ್ಮಾರಕ ಪೂರ್ಣಗೊಂಡು 18 October 1913 ರಂದು ಉದ್ಘಾಟನೆ ಗೊಂಡಿತು.
ಜರ್ಮನಿಯ ಈ ಪ್ರದೇಶಕ್ಕೆ ಭೇಟಿ ನೀಡಿದಾಗ ಇತಿಹಾಸದ ಆ ಘಟನೆಗಳು ಕಣ್ ಮುಂದೆ ಬಂದಂತೆ ಭಾಸವಾಯಿತು. ಜರ್ಮನಿಯಲ್ಲಿ ಯುರೋಪಿಯನ್ನರ ನಡುವೆ ಹಲವಾರು ಯುದ್ದಗಳು ನಡೆದಿವೆ. ಒಂದಲ್ಲ ಒಂದು ನಗರವು ಯಾವುದಾದರೊಂದು ಯುದ್ದವನ್ನ ಕಂಡಿದೆ.

ಬದುಕಿಗೊಂದು ಪಾಠ. ಚೋಲುಟೇಕ ಸೇತುವೆ.

ಬದುಕಿಗೊಂದು ಪಾಠ. ಚೋಲುಟೇಕ ಸೇತುವೆ.

ಬಿರುಗಾಳಿಗೂ ಜಗ್ಗದ, ಪ್ರವಾಹಕ್ಕೂ ಬಗ್ಗದ ಸೇತುವೆ ಕಥೆ,
ಉದಯವಾಣಿ ದೇಸಿಸ್ವರದ 49ನೇ ಸಂಚಿಕೆ, NRI Edition. 04/09/2022 ನಲ್ಲಿ ಲೇಖನ ಪ್ರಕಟವಾಗಿದೆ.

https://bit.ly/3KUaD3t

Thanks to Udayavani for publishing Article.




 

ದೋಫಾರ್: ಲ್ಯಾಂಡ್ ಆಫ್ ಫ್ರಾಂಕಿನ್ಸೆನ್ಸ್

 UNESCO ಯಿಂದ ಪಾರಂಪಾರಿಕ ತಾಣ ಎಂದು ಗುರುತಿಸಲ್ಪಟ್ಟಿರುವ ಒಮಾನಿನ ಸಲಾಲಃ ಪ್ರಾಂತ್ಯದ ವಿಶೇಷವಾದ ಲೋಭಾನ/ಸಾಂಭ್ರಾಣಿ ಕುರಿತ ಮಾಹಿತಿ ಇಂದಿನ ಕನ್ನಡ ಪ್ರಭದ NRI ಅಂಕಣದಲ್ಲಿ ಪ್ರಕಟವಾಗಿದೆ.

Thanks to Kannadaprabha.
01/09/2022.




ದೋಫಾರ್: ಲ್ಯಾಂಡ್ ಆಫ್ ಫ್ರಾಂಕಿನ್ಸೆನ್ಸ್
ಬರಹ: ಪಿ.ಎಸ್.ರಂಗನಾಥ
ಮಸ್ಕತ್- ಒಮಾನ್ ರಾಷ್ಟ್ರ.
ಒಮ್ಮೆ ಒಮಾನ್ ದೇಶದ ಸಲಾಲಃದ ಬೆಟ್ಟ ಪ್ರದೇಶದಲ್ಲಿ ಸ್ನೇಹಿತನ ಜತೆ ಹೋಗುತ್ತಿರುವಾಗ, ಅವರು ಫ್ರಾಂಕಿನ್ಸೆನ್ಸ್ ಮರವೊಂದನ್ನ ತೋರಿಸಿ, ಈ ಮರದ ವಿಶೇಷ ಏನು ಗೊತ್ತ ಅಂತ ಕೇಳಿದರು. ನಾನು ಹೌದು, ಈ ಫ್ರಾಂಕಿನ್ಸೆನ್ಸ್ ಮರಗಳಿಂದ ಈ ಸುಗಂಧದ್ರವ್ಯಗಳನ್ನ (ಸೆಂಟ್ ಮತ್ತು ಅತ್ತರ್) ತಯಾರಿಸುತ್ತಾರೆ ಅಂತ ಹೇಳಿದೆ. ಆಗ ಅವರು, ಆ ಮರದ ತೊಗಟೆಯಿಂದ ಬರುವ ಅಂಟನ್ನ ತೋರಿಸುತ್ತ ಇದನ್ನ ಸಾಂಭ್ರಾಣಿ ಅಥವ ಲೋಬಾನ ಎನ್ನುತ್ತಾರೆ ಎಂದು ಹೇಳಿದರು. ಮೊಟ್ಟ ಮೊದಲ ಬಾರಿಗೆ ಕಣ್ಣು ಮುಂದೆ ಲೋಬಾನ ವನ್ನ ಗಿಡದಲ್ಲಿ ನೋಡಿದಾಗ ಆಶ್ಚರ್ಯ ಆಯಿತು, ಸುಮಾರು ಮೂವತ್ತು ವರ್ಷಗಳ ಹಿಂದೆ ನನ್ನ ಕಾಲೇಜಿನ ದಿನಗಳಲ್ಲಿ ನಮ್ಮ ಲೆಕ್ಚರರ್ ಒಬ್ಬರು ಈ ಲೋಬಾನ ಹೇಗೆ ತಯಾರಿಸುತ್ತಾರೆ ಎಂದು ಕೇಳಿದ್ದರು. ಅಂಗಡಿಯಲ್ಲಿ ದುಡ್ಡು ಕೊಟ್ಟು ದೂಪ ಹಾಕುವಾಗ ಬಳಸುವ ಈ ಲೋಬಾನವನ್ನ ಅಂಗಡಿಯಲ್ಲಿ ಖರೀದಿಸಿ ತರುತಿದ್ದ ನಾವು ಉತ್ತರ ಗೊತ್ತಿಲ್ಲದೆ ಸುಮ್ಮನಾಗಿದ್ದೆವು.
ಲೋಬಾನ ಅಥವ ಸಾಂಭ್ರಾಣಿ ಬಹುಶಃ ಎಲ್ಲರಿಗೂ ಗೊತ್ತಿರುವುದಂತಹದ್ದು. ಬಹುಶಃ ತಿಳಿಯದ ಜನರಿರುವುದು ಬಹಳ ವಿರಳ. ಈ ಲೋಬಾನವನ್ನು ಹಸುವಿನ ಬೆರಣಿಯ ಮೇಲೆ ಅಥವಾ ಉರಿಯುವ ಕೆಂಡದ ಮೇಲಿಟ್ಟು ಸುಡುವುದನ್ನ ದೂಪ ಹಾಕುವುದು ಎನ್ನುತ್ತಾರೆ. ಆ ಸಮಯದಲ್ಲಿ ಬರುವ ಹೊಗೆಯಿಂದ ಬಹಳಷ್ಟು ಉಪಯೋಗಗಳಿವೆ ಎಂದು ಎಲ್ಲರಿಗೂ ಗೊತ್ತಿರುವಂತಹದ್ದು.
ಸಾಮಾನ್ಯವಾಗಿ ಪೂಜೆ ಮಾಡುವ ಸಮಯದಲ್ಲಿ, ಧೂಪದಲ್ಲಿ ಸಾಂಬ್ರಾಣಿ ಹಾಕುವುದು ವಾಡಿಕೆ. ಆಗ ಹೊರಬರುವ ಸುಗಂಧ ಭರಿತವಾದ ವಾಸನೆ ಪೂಜೆಯಲ್ಲಿ ನಮ್ಮ ಮನಸ್ಸನ್ನು ಪ್ರಶಾಂತಗೊಳಿಸಿ, ಗಮನ ಕೇಂದ್ರೀಕರಿಸಲು ನೆರವಾಗುತ್ತದೆ. ಹಾಗಾಗಿ ಪೂಜೆಯ ಸಮಯದಲ್ಲಿ ಅವನ್ನು ಹಚ್ಚಲಾಗುತ್ತದೆ. ಅದೇ ರೀತಿ ದರ್ಗಾಗಳಲ್ಲಿ ಸಹ ಸಾಂಭ್ರಾಣಿ ಹಾಕುತ್ತಾರೆ. ಇದರ ಹಿಂದಿನ ವೈಜ್ಞಾನಿಕ ಕಾರಣ ವೇನೆಂದರೆ, ನಾವು ಅದರ ಸುಗಂಧವನ್ನು ಆಸ್ವಾದಿಸಿದಾಗ, TRPV3 ಪ್ರೋಟೀನ್ ಅನ್ನು ನಮ್ಮ ಮೆದುಳಿಗೆ ಪ್ರಚೋದಿಸುತ್ತದೆ. ಇದರಿಂದ ನಮ್ಮ ಇಂದ್ರಿಯಗಳೆಲ್ಲ ಸಡಿಲಗೊಂಡು, ಒತ್ತಡ ಕಡಿಮೆಯಾಗುತ್ತದೆ. ವಾಸ್ತು ಪ್ರಕಾರ ಸಹ ಮನೆಯಲ್ಲಿನ ನಕಾರಾತ್ಮಕ ಶಕ್ತಿ ನಿವಾರಿಸಲು ದೂಪ ಹಾಕುವುದಕ್ಕೆ ಹೇಳುತ್ತಾರೆ. ಧೂಪದ್ರವ್ಯಗಳು ಗಾಳಿಯಲ್ಲಿರುವ ಹಾನಿಕಾರಕ ಕಂಪನಗಳನ್ನು ತಟಸ್ಥಗೊಳಿಸುವ ಮೂಲಕ ಸಕಾರಾತ್ಮಕತೆಯನ್ನು ಹರಡುತ್ತವೆ. ಜೊತೆಗೆ ಹಾನಿಕಾರಕ ಕೀಟಾಣುಗಳೂ ನಾಶವಾಗಲಿ ಎನ್ನುವ ಉದ್ದೇಶದಿಂದ ಮನೆಯಲ್ಲಿ ದೂಪ ಹಾಕುವ ಪದ್ದತಿ ನಮ್ಮ ಭಾರತೀಯರಲ್ಲಿದೆ. ಅಷ್ಟೇ ಅಲ್ಲದೆ ಎಳೆಕೂಸಿಗೆ ಎಣ್ಣೆಹಚ್ಚಿ ಸುಡುನೀರಲಿ ಮೀಯಿಸಿ ಲೋಬಾನ ಹಾಕಿ, ಕಾಡಿಗೆ ಹಚ್ಚಿ ಬಿಸಿಲಿಗೆ ಮೈಯನೊಡ್ಡುವುದು ಹಾಗೂ ಕೆಲವೆಡೆ ಬಾಣಂತಿಯರಿಗೂ ಸ್ನಾನದ ನಂತರ ಕಡಾಯಿಯಲ್ಲಿ ಕಾಯಿಸಿದ ಬೆಂಕಿಯ ಕೆಂಡದ ಮೇಲೆ ಲೋಬಾನ ಹಾಕುವುದು ಇಂದಿಗೂ ಹಳ್ಳಿಗಳಲ್ಲಿ ರೂಡಿಯಲ್ಲಿದೆ.
ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿನ ಒಮಾನ್ ಒಂದು ಅಚ್ಚರಿಯ ಮತ್ತು ವಿಭಿನ್ನ ದೇಶ, ಭೌಗೋಳಿಕವಾಗಿ ಕರ್ನಾಟಕಕ್ಕಿಂತ ಒಂದೂವರೆ ಪಟ್ಟು ಮಾತ್ರ ದೊಡ್ಡದು ಅಷ್ಟೇ. ಆದರೆ ಇಲ್ಲಿ ಅಚ್ಚರಿಯ ಸಂಗತಿಗಳಿಗೆ ಕೊರತೆ ಏನಿಲ್ಲ. ಒಮಾನಿನ ಪ್ರವಾಸೋಧ್ಯಮ ಇಲಾಖೆ ಒಮಾನಿನಲ್ಲಿರುವ ವಿಶೇಷ ಸ್ಥಳಗಳನ್ನ ಗುರುತಿಸಿ ಅದನ್ನ ಅಚ್ಚುಕಟ್ಟಾಗಿ ಅಭಿವೃದ್ದಿ ಪಡಿಸುವುದಲ್ಲದೆ ಅತ್ಯುತ್ತಮವಾಗಿ ನಿರ್ವಹಿಸುವುದನ್ನ ನಾವು ಇಲ್ಲಿ ಕಾಣಬಹುದು. ಮಿಕ್ಕ ಅರಬ್ ರಾಷ್ಟ್ರಗಳು ಮರುಭೂಮಿಯಂತೆ ಗೋಚರಿಸಿದರೆ, ಒಮಾನ್ ನಲ್ಲಿ ಮಾತ್ರ ಪ್ರಕೃತಿ ನಿರ್ಮಿತ ಪ್ರವಾಸಿ ತಾಣಗಳಿಂದ ಹಿಡಿದು ಹಲವಾರು ವಿಷಯಗಳಲ್ಲಿ ವಿಶೇಷವಾದ ಸಂಗತಿಗಳನ್ನ ನಾವು ಇಲ್ಲಿ ಕಾಣುತ್ತೇವೆ. ಇಡೀ ಒಮಾನ್ ನ 25% ಭಾಗ ಮರುಭೂಮಿಯಂತಿದ್ದರೆ, 25% ಜಾಗ ಕಲ್ಲು ಗುಡ್ಡ, ಮತ್ತು ಬೆಟ್ಟಗಳ ಸಾಲು, ಸುಣ್ಣದಕಲ್ಲಿನ ಪ್ರದೇಶವನ್ನ ಹೊಂದಿದೆ 30% ಜಾಗ ಸಮತಟ್ಟಾಗಿದೆ ಇನ್ನುಳಿದ ಪ್ರದೇಶ ಒಮಾನ್ ನ ದಕ್ಷಿಣದ ಭಾಗವಾದ ದೋಫಾರ್ ಪ್ರಾಂತ್ಯ ನಮ್ಮ ಕರಾವಳಿ ಹಾಗು ಪಶ್ಚಿಮ ಘಟ್ಟದ ಪ್ರದೇಶ ದಂತಿದೆ. ಈ ಸ್ಥಳದಲ್ಲಿ, ಸಾವಿರಾರು ಎಕರೆಯ ಪ್ರದೇಶದಲ್ಲಿ ತೆಂಗಿನ ತೋಟಗಳು, ಬಾಳೆಗಿಡಗಳು ಹಾಗು ತರಕಾರಿ ಬೆಳೆಯುವ ತೋಟಗಳಿವೆ. ಘಟ್ಟ ಪ್ರದೇಶ ಮತ್ತು ಕರಾವಳಿಯ ಕೆಲ ಭಾಗದಲ್ಲಿ ಫ್ರಾಂಕಿನ್ಸೆನ್ಸ್ ಅಥವಾ ಬೋಸ್ವೆಲಿಯಾ ಸ್ಯಾಕ್ರ ಎಂದು ಕರೆಯಲ್ಪಡುವ ಈ ಸುಗಂಧ ಜಾತಿಯ ಫ್ರಾಂಕಿನ್ಸೆನ್ಸ್ ಮರಗಳನ್ನ ಕಾಣ ಬಹುದು.
ದೋಫಾರ್ ಪ್ರಾಂತ್ಯದ ಸಲಾಲಃ ನಗರದ ಉತ್ತರ ಭಾಗದಲ್ಲಿನ ಬೆಟ್ಟಗುಡ್ಡಗಳಲ್ಲಿ ಬೆಳೆಯುತ್ತವೆ. ಈ ಭಾಗವನ್ನ ಲ್ಯಾಂಡ್ ಆಫ್ ಫ್ರಾಂಕಿನ್ಸೆನ್ಸ್ ಎಂದು ಕರೆಯುತ್ತಾರೆ. ಈ ಸ್ಥಳವನ್ನು 2000 ಇಸವಿಯಲ್ಲಿ ಫ್ರಾಂಕಿನ್ಸೆನ್ಸ್ ಟ್ರಯಲ್ ಎಂದು ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಘೋಷಿಸಲಾಯಿತು ಮತ್ತು 2005 ರಲ್ಲಿ ಲ್ಯಾಂಡ್ ಆಫ್ ಫ್ರಾಂಕಿನ್ಸೆನ್ಸ್ ಎಂದು ಮರುನಾಮಕರಣ ಮಾಡಲಾಯಿತು. ಇಷ್ಟೇ ಅಲ್ಲದೆ, ಇಲ್ಲೊಂದು ದೊಡ್ಡದಾದ ಮ್ಯೂಸಿಯಂ ಕೂಡ ಇದೆ. ಒಮಾನ್ ದೇಶದ ಸರ್ಕಾರವು, ಅಲ್-ಬಲೀದ್ ಪುರಾತತ್ವ ಉದ್ಯಾನವನದ ಸಹಯೋಗದೊಂದಿಗೆ ಮ್ಯೂಸಿಯಂ ಆಫ್ ಲ್ಯಾಂಡ್ ಆಫ್ ಫ್ರಾಂಕಿನ್ಸೆನ್ಸ್ ಅನ್ನು ಅಭಿವೃದ್ದಿ ಪಡಿಸಿದೆ. ವಿದೇಶಗಳಿಂದ ಬರುವ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡದೆ ಮರಳುವುದಿಲ್ಲ.
ಪ್ರಾಚೀನ ಕರಾವಳಿ ನಗರವಾದ ಸುಮ್ಹುರಾಮ್‌ನಲ್ಲಿ (ಈಗ ಖೋರ್ ರೋರಿ) ಈ ಫ್ರಾಂಕಿನ್ಸೆನ್ಸ್ ನ ಉತ್ಪನ್ನಗಳ ವ್ಯಾಪಾರ ನಡೆಯುತ್ತಿತ್ತು. ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಿದ್ದ ಈ ಜಾಗ ಇಂದು ಅಳಿದು ಹೋಗಿದೆ. ಆದರೂ ಅಂದು ವಾಣಿಜ್ಯ ವಹಿವಾಟು ನಡೆಯುತಿದ್ದ ಪ್ರದೇಶದ ಕುರುಹುಗಳನ್ನ ನಾವು ಇಂದಿಗೂ ಕಾಣ ಬಹುದು. ಈಗ ವಾಣಿಜ್ಯ ವಹಿವಾಟಿಗೆ ಅಂತರಾಷ್ಟ್ರೀಯ ಗುಣಮಟ್ಟದ ಹಲವಾರು ಬಂದರು ಪ್ರದೇಶಗಳು ಒಮಾನ್ ನಲ್ಲಿವೆ. ಹಲವಾರು ವಾಣಿಜ್ಯ ಕೇಂದ್ರಗಳು ಸರ್ಕಾರಿ ಮತು ಖಾಸಗಿ ಸಂಸ್ಥೆಗಳ ಮುಖಾಂತರ ಇಲ್ಲಿನ ಉತ್ಪನ್ನಗಳನ್ನ ವಿವಿಧರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತಿದೆ. ಅರಬ್ ರಾಷ್ಟ್ರಗಳು ಮತ್ತು ಭಾರತದಲ್ಲಿ ಯತೇಚ್ಚವಾಗಿ ಲೋಬಾನವನ್ನ ಬಳಸಲಾಗುತ್ತದೆ. ಫ್ರಾಂಕಿನ್ಸೆನ್ಸ್ ಗಿಡಗಳಿಂದ ಉತ್ಪತ್ತಿಯಾಗುವ ಈ ಅಂಟನ್ನು ಸುಗಂಧದ್ರವ್ಯಗಳು, ಕೆಲವು ಬಗೆಯ ಧೂಪದ್ರವ್ಯಗಳು, ಮತ್ತು ಔಷಧಿಯಲ್ಲಿ ಬಳಸಲಾಗುತ್ತದೆ. ಕೇವಲ ಒಮಾನ್ ಮಾತ್ರವಲ್ಲ ಇತರೆ ಅರಬ್ ರಾಷ್ಟ್ರಗಳಲ್ಲಿ ಕೆಲವೆಡೆ ಹಾಗೂ ಪರ್ಶಿಯನ್ ಕೊಲ್ಲಿಯಲ್ಲಿ ಈ ಸಾಂಭ್ರಾಣಿಯನ್ನು ಸಂಗ್ರಹಿಸಿ ಮಾರಾಟ ಮಾಡಲಾಗುತ್ತದೆ.
ಇನ್ನು ಫ್ರಾಂಕಿನ್ಸೆನ್ಸ್ ಮರಗಳು ಹವಾಮಾನ ಮತ್ತು ವಾತಾವರಣಕ್ಕೆ ತಕ್ಕಂತೆ ವಿವಿಧ ಗುಣಮಟ್ಟದ ಅಂಟನ್ನ ಉತ್ಪಾದಿಸುತ್ತವೆ. ಅಷ್ಟೇ ಅಲ್ಲದೆ ಅಂಟನ್ನ ತೆಗೆಯುವ ಋತು, ಸಮಯ ಮತ್ತು ಕೃಷಿಕನ ಕೌಶಲ್ಯಗಳನ್ನು ಅವಲಂಬಿಸುತ್ತದೆ. ಮುಂಗಾರು ಸಮಯದಲ್ಲಿ ಬೀಸುವ ತಂಪಾದ ಗಾಳಿಯು ಧೋಫರ್‌ನ ಮಾನ್ಸೂನ್ ಪರ್ವತಗಳ ಹಿಂದೆ ಹಾದು ಹೋಗುತ್ತದೆ. ಅಲ್ಲಿರುವ ಎತ್ತರದ ಶುಷ್ಕ ಪ್ರದೇಶದಲ್ಲಿ ಮತ್ತು ಸುಣ್ಣದ ಕಲ್ಲುಗಳಿಂದ ಸಮೃದ್ಧವಾಗಿರುವ ಕಲ್ಲಿನ ಮಣ್ಣು ವ್ಯಾಪ್ತಿಯಲ್ಲಿರುವ ಈ ಗಿಡಗಳು ಈ ವಾತಾವರಣಕ್ಕೆ ಒಗ್ಗಿ ಕೊಂಡಿರುವುದರಿಂದ ಉತ್ತಮ ಗುಣಮಟ್ಟದ ಅಂಟನ್ನ ಉತ್ಪಾದಿಸುತ್ತವೆ.
ಈ ಸುಗಂಧ ದ್ರವ್ಯಕ್ಕೆ ಬಳಸುವ ಈ ಸಾಂಬ್ರಾಣಿ ಅಥವ ಲೋಬಾನದಲ್ಲಿ ವಿವಿಧ ಗುಣಮಟ್ಟದ ನಾಲ್ಕು ವಿಧಗಳಿವೆ. ಅತ್ಯುತ್ತಮ ಗುಣಮಟ್ಟದ ಸಾಂಬ್ರಾಣಿಯನ್ನ"ಅಲ್-ಹೊಜಾರಿ" , ಇದನ್ನ ಬೇಸಿಗೆ ಕಾಲದಲ್ಲಿ ಕೋಯ್ಲು ಮಾಡುತ್ತಾರೆ."ಅನ್ನಜ್ಡಿ" ಎನ್ನುವ ವಿಧವನ್ನ ಮಾನ್ಸೂನ್ ನಂತರದ ತಿಂಗಳುಗಳಲ್ಲಿ ಕೋಯ್ಲು ಮಾಡುತ್ತಾರೆ.
ಕೋಯ್ಲು ಆರಂಭಿಸುವ ಋತುವಿನ ಮೊದಲ ಬಾರಿಗೆ ಕಟಾವು ಮಾಡುವುದನ್ನ"ಅಶಾಜ್ರಿ" ಎನ್ನುತ್ತಾರೆ. ಕೊನೆಯ ಬಾರಿಗೆ ಕಟಾವು ಮಾಡುವುದನ್ನ ಅಶಾಬಿ" ಇದನ್ನು "ಅಸ್ಸಾಹಿಲಿ" ಎಂದೂ ಕರೆಯುತ್ತಾರೆ, ಇದನ್ನು ಚಳಿಗಾಲದಲ್ಲಿ ಕೊಯ್ಲು ಮಾಡಲಾಗುತ್ತದೆ.
ಕರಾವಳಿ ಪ್ರದೇಶದಿಂದ ಅತಿ ದೂರದಲ್ಲಿ ರುವ ಅತಿ ಎತ್ತರದ ಬೆಟ್ಟ ಗುಡ್ಡಗಳಲ್ಲಿ ಶುಷ್ಕ ವಾತಾವರಣದ ಬೆಳೆಯುವ ಮರಗಳಿಂದ "ಅಲ್-ಹೊಜಾರಿ" ಅಂಟನ್ನ ತೆಗೆಯುತ್ತಾರೆ. ಈ ಪ್ರದೇಶದಲ್ಲಿ, ಮುಂಗಾರು ಮೋಡಗಳು, ಮಂಜು ತೇವಾಂಶ, ಆರ್ದ್ರತೆ ಕಡಿಮೆ ಇರುವುದಿಲ್ಲ.
ಇನ್ನು "ಆಶಾಬಿ" ಫ್ರಾಂಕಿನ್ಸೆನ್ಸ್ ಅತ್ಯಂತ ಕಡಿಮೆ ಬೆಲೆಬಾಳುವದು, ಮರಗಳು ಸಮುದ್ರದ ಸಮೀಪದಲ್ಲಿ ಬೆಳೆಯುವುದರಿಂದ ಮತ್ತು ಮಾನ್ಸೂನ್ ಮಳೆಯಿಂದ ಪ್ರಭಾವಿತವಾಗಿರುವ ಕಾರಣದಿಂದ ಇದು ಅತಿ ಕಡಿಮೆ ಗುಣಮಟ್ಟದ್ದಾಗಿರುತ್ತದೆ.
ಫ್ರಾಂಕಿನ್ಸೆನ್ಸ್ ಗಿಡಗಳನ್ನ ನೆಟ್ಟು ಎಂಟು ಹತ್ತು ವರ್ಷಗಳ ಬಳಿಕ ಅಂಟನ್ನ ಉತ್ಪಾದಿಸಲು ಪ್ರಾರಂಭಿಸುತ್ತವೆ. ಅದರ ನಂತರ ವಾತಾವರಣ ಸೂಕ್ತವಾಗಿದ್ದರೆ ಅತಿ ವೇಗವಾಗಿ ಬೆಳೆಯುತ್ತವೆ. ಈ ಮರಗಳ ಎತ್ತರ ಐದು ಮೀಟರ್ ಗಳಿಷ್ಟುರುತ್ತವೆ. ಹಾಗೂ ಒಂದೇ ಒಂದು ಬೇರನ್ನು ಹೊಂದಿರುತ್ತದೆ. ಗಿಡ ಬೆಳೆದಂತೆ ತೊಗಟೆಯ ಕೆಳಗೆ ಸಣ್ಣ ಗುಂಪುಗಳಲ್ಲಿ ಗಮ್ ರಾಳದ ಗ್ರಂಥಿಗಳು ಬೆಳೆಯುತ್ತವೆ, ಎಲೆಗಳ ರೂಪದಲ್ಲಿ ತೊಗಟೆಯಿಂದ ಈಚೆ ಬಂದು ಬೆಳೆಯುತ್ತವೆ. ಮರದ ಕೊಂಬೆಗಳು ಚಿಕ್ಕದಾಗಿದ್ದು ಮತ್ತು ದಟ್ಟವಾಗಿರುತ್ತವೆ. ಎಲೆಗಳು ಅವುಗಳ ಬದಿಗಳಲ್ಲಿ ಬೆಳೆಯುತ್ತವೆ. ದ್ರಾಕ್ಷಿಯ ಗೊಂಚಲಿನಂತೆ ಗುಂಪಾದ ಆಕಾರವನ್ನು ಹೊಂದಿರುವ ಸಣ್ಣ ಹೂವುಗಳು ರೆಂಬೆಗಳ ಬದಿಗಳಲ್ಲಿ ಸಂಗ್ರಹವಾಗುತ್ತ ಹೋಗುತ್ತದೆ. ಹೂ ಬಿಡುವ ಅವಧಿಯ ನಂತರ, ಒಣ ಬೀಜಗಳು ಹಸಿರು ಬಣ್ಣದಿಂದ ಕಪ್ಪು ಬಣ್ಣಕ್ಕೆ ತಿರುಗುತ್ತವೆ ಮತ್ತು ನಂತರ ಬೀಳುತ್ತವೆ. ಪ್ರಾಚೀನ ಕಾಲದಲ್ಲಿ ಮರದ ಎಲ್ಲಾ ಭಾಗಗಳನ್ನು ಬಳಸಲಾಗುತ್ತಿತ್ತು. ತೊಗಟೆಯನ್ನು ಹತ್ತಿ ಬಟ್ಟೆಗೆ ಬಣ್ಣವಾಗಿ, ಎಲೆಗಳು ಪ್ರಾಣಿಗಳ ಮೇವಾಗಿ ಮತ್ತು ಮೊಗ್ಗುಗಳು, ಹೂವುಗಳು ಮತ್ತು ಹಣ್ಣುಗಳು ಜೀರ್ಣಾಂಗ ವ್ಯವಸ್ಥೆಯನ್ನು ಶುದ್ಧೀಕರಿಸಲು ಮತ್ತು ಬಾಯಿಯ ವಾಸನೆಯನ್ನು ಹೊರಹಾಕಲು ಟಾನಿಕ್ ಆಗಿ ಬಳಸಲಾಗುತಿತ್ತು.
ಇಲ್ಲಿನ ಸ್ಥಳೀಯ ಸರ್ಕಾರ, ಹೀಗೆ ಇಂತಹ ಹಲವಾರು ವಿಶೇಷಗಳನ್ನ ಗುರುತಿಸಿ ಅದನ್ನ ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೋಯ್ಯುವ ಕೆಲಸವನ್ನ ಮಾಡುತ್ತದೆ. ಅಷ್ಟೇ ಅಲ್ಲದೆ ಆ ಪ್ರದೇಶಗಳನ್ನ ಅಭಿವೃದ್ದಿ ಪಡಿಸುವುದಲ್ಲದೆ ಅತ್ಯುತ್ತಮವಾಗಿ ನಿರ್ವಹಿಸುವುದನ್ನ ಮರೆಯುವುದಿಲ್ಲ ಹಾಗು ಜನ ಜಾಗೃತಿ ಮಾಡುವುದರಲ್ಲಿ ಮುಂಚೂಣಿಯಲ್ಲಿರುತ್ತದೆ.











ಶನಿವಾರ, ಜುಲೈ 16, 2022

ಸೀತಾಫಲಕ್ಕೂ ಜಟಿಂಗ ರಾಮೇಶ್ವರ ಬೆಟ್ಟ ಮತ್ತು ರಾಮಾಯಣದ ನಂಟಿನ ಕಥೆ

ಸೀತಾಫಲಕ್ಕೂ ಜಟಿಂಗ ರಾಮೇಶ್ವರ ಬೆಟ್ಟ ಮತ್ತು ರಾಮಾಯಣದ ನಂಟಿನ ಕಥೆ.



ನಮ್ಮೂರು ರಾಂಪುರದ ಸುತ್ತಮುತ್ತಲಿನ ಪ್ರದೇಶಗಳು ರಾಮಾಯಣದೊಂದಿಗೆ ನಂಟನ್ನು ಹೊಂದಿವೆ ಎಂದು ಬಹಳ ಹಿಂದೆ ಒಂದು ಲೇಖನ ಬರೆದಿದ್ದೆ. ಶ್ರೀರಾಮ ಈ ಪ್ರದೇಶದ ಮೂಲಕ ಹೋಗಿದ್ದರಿಂದ ನಮ್ಮೂರಿಗೆ ರಾಂಪುರ ಎನ್ನುವ ಹೆಸರು ಬಂದಿದೆ. ಪ್ರಾರ್ಥನೆ ಮಾಡುವ ಸಲುವಾಗಿ  ಬೆಟ್ಟದಲ್ಲಿ ಲಿಂಗವನ್ನ ಪ್ರತಿಷ್ಟಾಪಿಸಿ ಪೂಜಿಸಿದ್ದರಿಂದ ರಾಮೇಶ್ವರ ಎನ್ನುವ ಹೆಸರು ಬಂದಿದೆ.

 ರಾವಣ ಸೀತಾಮಾತೆಯನ್ನ ಹೊತ್ತೋಯ್ಯುವಾಗ ಜಟಾಯು ಪಕ್ಷಿಯು ಅಡ್ಡಿಯುಂಟುಮಾಡುತ್ತದೆ. ಆಗ ರಾವಣ ಮತ್ತೆ ಜಟಾಯುವಿನೊಂದಿಗೆ ಯುದ್ದವಾಗುತ್ತದೆ. ಆ ಯುದ್ದವಾದ ಜಾಗ ಮತ್ತು ಜಟಾಯು ಗಾಯಗೊಂಡ ಜಾಗವೇ ಜಟಿಂಗ ರಾಮೇಶ್ವರ ಬೆಟ್ಟ ಎಂದು ಮುಂದೆ ಪ್ರಸಿದ್ದವಾಯಿತು.  

ಐತಿಹಾಸಿಕ ಪುರಾಣಪ್ರಸಿದ್ದ ಸ್ಥಳದ ಈ ಕಥೆ ಇಲ್ಲಿನ ಸ್ಥಳೀಯರಲ್ಲಿ ಜನಜನಿತವಾಗಿದೆ. 

ರಾಮಾಯಣದ ಕಥೆಯ ಪ್ರಕಾರ, ಜನಕರಾಜನ ಅರಮನೆಯ ಹತ್ತಿರ ಯಜ್ಞದ ಸಲುವಾಗಿ ನೇಗಿಲಿನಿಂದ ನೆಲವನ್ನು ಊಳುತ್ತಿದ್ದ ನೇಗಿಲಗುಳಕ್ಕೆ ಪೆಟ್ಟಿಗೆ ಸಿಕ್ಕಿಕೊಂಡಿತಂತೆ. ಆಗ ಜನಕರಾಜ ಪೆಟ್ಟಿಗೆಯನ್ನು ತೆಗೆದು ನೋಡಿದರೆ ಒಳಗೆ ಒಂದು ಹೆಣ್ಣು ಶಿಶು, ಆ ಮಗುವನ್ನು ಕಂಡು ಅರಮನೆಗೆ  ಕೊಂಡೊಯ್ದು ತನ್ನ ಮಗಳಂತೆ ಸಾಕುತ್ತಾನೆ. ನೇಗಿಲ ಗುಳಕ್ಕೆ ಸಿಕ್ಕು ಲಭಿಸಿದ್ದರಿಂದ ಸೀತೆ ಎಂದು ಹೆಸರಿಡುತ್ತಾರೆ.

ಈ ಕಥೆಯ ಪ್ರಕಾರ ನೋಡಿದರೆ, ಜನಕರಾಜ ಕೃಷಿ ಮಾಡುತಿದ್ದ ಎಂದು ನಾವು ತಿಳಿದುಕೊಳ್ಳಬಹುದು, ಕೆಲವರ ಪ್ರಕಾರ ಜನಕರಾಜ ಕೃಷಿಯಲ್ಲಿ ಬಹಳ ಸಾಧನೆಗೈದಿದ್ದನಂತೆ ವಿವಿಧ ರೀತಿಯ ಪ್ರಯೋಗಳನ್ನ ಕೈಗೊಂಡು ಕೃಷಿಯ ಆಳ ಅಗಲವನ್ನ ಅರಿತಿದ್ದನಂತೆ,  ಹೀಗಾಗಿ ಸೀತಾ ಮಾತೆಯು ಸಹ ತಂದೆಯ ವಿದ್ಯೆಯನ್ನ ಕೈವಶಮಾಡಿಕೊಳ್ಳುತ್ತಾಳೆ.  ಹೀಗೇ ಪ್ರಯೋಗ ಮಾಡುತ್ತ ವಿವಿಧರೀತಿಯ ಫಲ ಕೊಡುವ ಬೀಜಗಳ ತಳಿಗಳನ್ನು ಉತ್ಪಾದಿಸುತ್ತಾಳೆ. ಆ ಬೀಜಗಳನ್ನ ಶ್ರೀ ರಾಮನ ಜತೆ ವಿವಾಹವಾದ ಮೇಲೆ ಅಯೋಧ್ಯೆಗೆ ತರುತ್ತಾಳೆ.

 ಮುಂದೆ ವನವಾಸಕ್ಕೆ ಹೊರಟಾಗ ಬರಿಗೈಯಲ್ಲಿ ಬರದೇ ವಿವಿಧ ರೀತಿಯ ಬೀಜಗಳನ್ನ ತಂದು ಕಾಡಿನಲ್ಲಿ ನೆಡುತ್ತಾಳೆ. ಆ ಪ್ರಯೋಗದ ಕೆಲ ಫಲಗಳೇ  ಈ ಸೀತಾಫಲ, ರಾಮಫಲ, ಲಕ್ಷ್ಮಣಫಲ, ಹನುಮಫಲ. 

ಸೀತಾಮಾತೆ ಶ್ರೀರಾಮಚಂದ್ರನೊಂದಿಗೆ ವನವಾಸದಲ್ಲಿರುವಾಗ, ರಾವಣ ಸೀತಾಮಾತೆಯನ್ನ ಹೊತ್ತೊಯ್ಯುತ್ತಾನೆ, ರಾವಣನ ಮೋಸದಾಟಕ್ಕೆ ಬಲಿಯಾದ ಸೀತಾದೇವಿ  ಹೀಗೆ ಹೋಗುವಾಗ, ತನ್ನ ಸೆರಗಿನಲ್ಲಿದ್ದ ಹಣ್ಣಿನ ಬೀಜಗಳನ್ನ  ಪುಷ್ಪಕ ವಿಮಾನದ ಹಾದಿಯುದ್ದಕ್ಕೂ ಉದುರಿಸುತ್ತಾ ಹೋಗುತ್ತಾಳೆ. ಒಂದಲ್ಲ ಒಂದು ದಿನ ಈ ಹಣ್ಣುಗಳಿಂದ ಶ್ರೀರಾಮನಿಗೆ ತನ್ನ ಸುಳಿವು ಸಿಗಬಹುದು ಎನ್ನುವ ಆಶಾವಾದದಿಂದ ಕಣ್ಣೀರಿಡುತ್ತಾಳೆ.

ಕಾಲ ಕಳೆದ ಮೇಲೆ, ಈ ಬೀಜಗಳು ಮೊಳಕೆಹೊಡೆದು ಸಸಿಯಾಗಿ ಹಣ್ಣಿನ ಮರವಾಗಿ ಫಲ ಕೊಡುತ್ತವೆ. ಶ್ರೀರಾಮ ಸೀತೆಯನ್ನ ಹುಡುಕುತ್ತ ಉತ್ತರದಿಂದ ದಕ್ಷಿಣಕ್ಕೆ ಬರುವಾಗ ಒಂದು ಕಡೆ ಮಂಗಗಳು ಸೀತಾಫಲದ ಹಣ್ಣನ್ನ ತಿನ್ನುತ್ತ ಖುಷಿಯಿಂದಿರುತ್ತವೆ. ಸೀತಾಮಾತೆಯ ಕೃಷಿಯ ಬಗ್ಗೆ ಅರಿವಿದ್ದ ಶ್ರೀರಾಮ, ಮಂಗಗಳು ತಿನ್ನುವ ಹಣ್ಣುಗಳನ್ನ ಕಂಡೊಡನೇ,  ಅರೇ ಲಕ್ಷ್ಮಣ ಈ ಹಣ್ಣುಗಳು ಸೀತಾದೇವಿಯ ಕೈ ಚಳಕದಿಂದ ಬಿಟ್ಟಿರುವಂತಹದ್ದು. ಎಂದು ಹೇಳುತ್ತಾನೆ. ಆಗ ಹಂಪೆಯ ಮಾರ್ಗವಾಗಿ ಲಂಕೆಗೆ ಹೋಗಿರುವ ಸುಳಿವು ದೊರೆಯುತ್ತದೆ. 

ಅದರಂತೆ ಶ್ರೀರಾಮ, ಹಂಪೆಯಿಂದ ಜಟಿಂಗ ರಾಮೇಶ್ವರ ಬೆಟ್ಟಕ್ಕೆ ಬರುತ್ತಾನೆ, ಅಲ್ಲಿ ಜಟಾಯುವಿನ ಕುರುಹು ಸಿಗುತ್ತದೆ. ನಂತರ ಲೇಪಾಕ್ಷಿ, ತದನಂತರ ರಾಮೇಶ್ವರ. ಹೀಗೆ ಶ್ರೀರಾಮನ ಪ್ರಯಾಣ ಸಾಗುತ್ತದೆ.

ಅಂದು ಸೀತಾಮಾತೆ ಬೀಜಗಳನ್ನ ಉದುರಿಸಿದ್ದರ ಫಲ, ನಮ್ಮ ಮೊಳಕಾಲ್ಮೂರು ತಾಲೂಕಿನಲ್ಲಿ ಅತಿ ಹೆಚ್ಚಿನ ಸೀತಾಫಲದ ಗಿಡಗಳನ್ನ ಕಾಡಿನಲ್ಲಿ ಕಾಣಬಹುದು. ಕಾಲಕ್ರಮೇಣ ಈ ಹಣ್ಣುಗಳನ್ನ ಎಲ್ಲ ಕಡೆ ಬೆಳೆಯುವಂತಾಯಿತು. ಕೆಲ ರೈತರು ತಮ್ಮ ಹೊಲದಲ್ಲಿ ಬೆಳೆಸುತಿದ್ದರೆ, ನಮ್ಮ ತಾಲೂಕಿನಲ್ಲಿ ಕಾಡಿನಲ್ಲಿ ಅಸಂಖ್ಯಾತ ಗಿಡಗಳು ಬೆಳೆದು ದೊಡ್ಡದಾಗಿವೆ.
ಪುರಾಣ ಪ್ರಸಿದ್ದವಾದ ಈ ಪ್ರದೇಶವನ್ನ ಸಂರಕ್ಷಿಸಿ ಮುಂದಿನ ಪೀಳಿಗೆಗೆ ಈ ಸ್ಥಳದ ಮಹತ್ವವನ್ನ ಅರಿವು ಮೂಡಿಸುವ ಜವಬ್ದಾರಿ ಇಲ್ಲಿನ ಪ್ರತಿಯೊಬ್ಬ ಪ್ರಜೆಯ ಮೇಲಿದೆ.

ಬರಹ:- ಪಿ.ಎಸ್.ರಂಗನಾಥ.





#ramayana #rampura #jatayu #jatinga #jatngarameshwara #seethamathe #srirama #seethadevi #ranganatha.p.s #p.s.ranganatha

ಮಂಗಳವಾರ, ಮೇ 24, 2022

ಮನುಜ ನೀನು ಮರದಂತೆ ಜೀವಿಸು

 


ಕವಿತೆ: ಮರದಂತೆ ಜೀವಿಸು

ಜನರಿಗೆ ನೆರಳಾಗಿ
ಬಳ್ಳಿಗೆ ಆಸರೆಯಾಗಿ
ಪ್ರಾಣಿ ಪಕ್ಷಿಗಳಿಗೆ
ಹಸಿವು ನೀಗಿಸುವ
ಫಲವ ನೀಡುವ
ಮರದಂತೆ ಜೀವಿಸು 

ಫಲ ತಿಂದವರು
ಮರದ ನೆರಳಲ್ಲಿ 
ನಲಿದು ಕುಪ್ಪಳಿಸಿದವರು
ಕೊಡಲಿ ಹಾಕಿದರೂ
ಏನು ಆಗಲೇ ಇಲ್ಲ ಎನ್ನುವ
ಮರದಂತೆ ಜೀವಿಸು 

ಕೊರಡು ಅವರಿಗೆ
ಆಸರೆಯಾದೀತು
ಕಟ್ಟಿಗೆ ಅವರು ತಿನ್ನುವ
ಅನ್ನಕ್ಕಾಯಿತು ಎನ್ನುವ 
ಮರದಂತೆ ಜೀವಿಸು 

ನಿನ್ನ ಸಂಭ್ರಮಕ್ಕೆ ಯಾರು
ಜತೆಯಾಗದಿದ್ದರೂ
ನಿನ್ನ ಕಷ್ಟ ಸುಖ ಯಾರು
ವಿಚಾರಿಸದೇ ಇದ್ದರೂ
ನಿನ್ನ ಕಾಯಕದಲ್ಲಿ
ನಿರತನಾಗಿ
ಮರದಂತೆ ಜೀವಿಸು 
 
ಕೊರಗಿ ಕೊರಗಿ
ಕೃಶವಾಗಬೇಡ
ಯಾವುದೂ ಶಾಶ್ವತವಲ್ಲ
ಎಲ್ಲರಿಗೂ ಒಂದು ದಿನ
ಕೊನೆಯೆಂಬುದಿದೆ ಎಂದು
ಅರಿತು
ಮರದಂತೆ ಜೀವಿಸು 

ಚೈತ್ರದ ಚಿಗುರೇ
ನಿನ್ನ ಸಂಭ್ರಮವೆಂಬಂತೆ
ಕಡಿದರೂ ಮತ್ತೆ ಮತ್ತೆ 
ಚಿಗುರೊಡೆಯುತ
ನಳನಳಿಸುವ
ಮರದಂತೆ ಜೀವಿಸು 
ಮನುಜ ನೀನು
ಮರದಂತೆ ಜೀವಿಸು 


-ಪಿ.ಎಸ್.ರಂಗನಾಥ






ಭಾನುವಾರ, ಏಪ್ರಿಲ್ 17, 2022

ನೇಕಾರರ ಮೇಲಿನ ಬ್ರಿಟೀಷರ ಕ್ರೌರ್ಯ

  


ನೇಕಾರರ ಮೇಲಿನ ಬ್ರಿಟೀಷರ ಕ್ರೌರ್ಯ

ಕೇರಳದ ಸಂಸದರಾದ ಶಶಿ ತರೂರ್ ಅವರು 2015 ರಲ್ಲಿ ಸಂಸತ್ತಿನಲ್ಲಿ ಭಾಷಣ ಮಾಡುತ್ತನೇಕಾರರ ಮೇಲಿನ ಬ್ರಿಟೀಷರ ಕ್ರೌರ್ಯ ದ ಕುರಿತು ಪ್ರಸ್ತಾಪಿಸಿದ್ದರು. ಬಹುಶಃ  ಇತಿಹಾಸದ ಈ ಕ್ರೌರ್ಯ ಘಟನೆ ಕುರಿತು ಬಹುತೇಕ ಎಲ್ಲರೂ ಮರೆತಿದ್ದರು. ಬ್ರಿಟೀಷರು ನೇಕಾರರ ಕೈಯನ್ನು ಕತ್ತರಿಸಿದರುಹೆಬ್ಬೆರೆಳನ್ನ ಕತ್ತರಿಸಿದರು ಎನ್ನುವ ಘಟನೆ ಕುರಿತು ಹಲವಾರು ಕಾಲಘಟ್ಟದಲ್ಲಿ ಪ್ರಸ್ತಾಪಿಸಲಾಗಿದೆ. ಇದು ನಿಜ ಘಟನೆಯಾ ಎನ್ನುವ ಕುರಿತು ಹಲವಾರು ಚರ್ಚೆಗಳು ನಡೆದಿವೆ. ಆದರೂ ಬೆಂಕಿ ಇಲ್ಲದೆ ಹೊಗೆ ಆಡುವುದಿಲ್ಲ ಅಲ್ಲವೇಅದಲ್ಲದೇ ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧ ಅಸಹ್ಯಕರತಾರತಮ್ಯ ಮತ್ತು ನಿರ್ಲಜ್ಜ ದೌರ್ಜನ್ಯಗಳನ್ನು ನಡೆಸಿ ಲಕ್ಷಾಂತರ ಜನರನ್ನ ಹಿಂಸಿಸಿ ಹತ್ಯೆ ಮಾಡಿದ ಕುಖ್ಯಾತಿ ಬ್ರಿಟೀಷರ ಮೇಲಿದೆ. ಯಾರು ಏನೇ ಹೇಳಲಿ,  ಈ ಘಟನೆ ನಡೆದೇ ಇಲ್ಲವೆಂದು ಹೇಳಲು ಸಾಧ್ಯವೇ  ಇಲ್ಲ. ಈ ಘಟನೆ ಏನುಎಲ್ಲಿ ನಡೆಯಿತುಇದರ ಕುರಿತು ಈ ಲೇಖನದಲ್ಲಿ ತಿಳಿಯೋಣ. 

ಭಾರತಕ್ಕೆ ಕಾಲಿಟ್ಟ ಬಹುತೇಕ ಪಾಶ್ಚ್ಯಾತರು ಅದರಲ್ಲೂ ಬ್ರಿಟೀಷರು ತಮ್ಮಲ್ಲಿನ ಉತ್ಪನ್ನಗಳನ್ನ ಇಲ್ಲಿ ಮಾರಾಟ ಮಾಡಲು ಬಹಳ ಪ್ರಯತ್ನ ಪಡುತಿದ್ದರು. ಮೊದ ಮೊದಲಿಗೆ ಇಲ್ಲಿನ ತಂತ್ರಜ್ನಾನಕರಕುಶಲಗಾರಿಕೆವಿದ್ಯೆನೀಡುವ ಗುರುಕುಲಗಳನ್ನ ಹೀಗೆ ಇಲ್ಲಿನ ದೇಶಿಯ ಮೂಲದ ಪ್ರತಿವಿಷಯವನ್ನ ಮೂಲೆಗುಂಪು ಮಾಡುವುದು ಮತ್ತು ತಮ್ಮ ಶ್ರೇಷ್ಟತೆಯನ್ನಜನರ ಮನಸಲ್ಲಿ ತುಂಬುವುದು. ಅವರು ಬಳಸುವ ವಸ್ತುಗಳು ಅತಿ ಶ್ರೇಷ್ಟ ಎಂದು ಜನರ ಮನಸ್ಸಿನಲ್ಲಿ ಬಿತ್ತುವುದು. ಅದು ಸಾಧ್ಯವಾಗದೇ ಇದ್ದಾಗಇಲ್ಲಿನ ಮೂಲತನವನ್ನೇ ನಾಶಮಾಡುವುದು ಇಂತಹ ಹಲವಾರು ಪ್ರಯೋಗಗಳನ್ನ ಮಾಡುತ್ತವಿರೋಧಿಸಿದವರನ್ನ ಹಿಂಸಿಸಿಹತ್ಯೆ ಮಾಡಿ ಜನರನ್ನು ಭಯಭೀತರನ್ನಾಗಿ ಮಾಡಿ ಸುಮಾರು ಮೂರು ಶತಮಾನಗಳ ಕಾಲ ಭಾರತವನ್ನಾಳಿದ ನಮ್ಮ ಮುಂದಿದೆ.

 

ವ್ಯವಸ್ಥಿತ ಸಂಚು: ಮೊದಲನೆಯದಾಗಿಘಟನೆ ನಡೆಯಲು ಕಾರಣ ಏನು ತಿಳಿಯೋಣ.  ಇಂಗ್ಲೆಂಡಿನಲ್ಲಿ ಜಿನ್ನಿಂಗ್ ಚಕ್ರದ ಆವಿಷ್ಕಾರದ ನಂತರಅವುಗಳ ಉತ್ಪಾದನಾ ಸಾಮರ್ಥ್ಯವು ಹಲವು ಪಟ್ಟು ಹೆಚ್ಚಾಗುತ್ತದೆ. ಬ್ರಿಟಿಷರ ಉತ್ಪನ್ನಗಳಿಗೆ ಭಾರತವನ್ನು ಮಾರುಕಟ್ಟೆಯಾಗಿಸಬೇಕಿತ್ತು. ಅದಕ್ಕಾಗಿ ಭಾರತೀಯ ಜನರು ಬ್ರಿಟಿಷ್ ಜವಳಿಗಳನ್ನು ಖರೀದಿಸಲು ಮತ್ತು ಭಾರತೀಯ ಗುಡಿ ಕೈಗಾರಿಕೆಯನ್ನು ಶಾಶ್ವತವಾಗಿ ತೆಗೆದುಹಾಕಲೇ ಬೇಕಿತ್ತು. ಈ ಆದೇಶ ಬ್ರಿಟನ್ ನಿಂದ ಆಗಿಂದಾಗ್ಗೆ ರವಾನೆಯಾಗುತಿತ್ತು.  ಬ್ರಿಟಿಷ್ ವ್ಯಾಪಾರಿಗಳಿಗೆ ಭಾರತದ ಬೃಹತ್ ಜನಸಂಖ್ಯೆಯು ಒಂದು ದೊಡ್ಡ ಆಸ್ತಿಯಾಗಿತ್ತುಅದೊಂದ್ದು ದೊಡ್ಡ ಮಾರುಕಟ್ಟೆ ಎಂದೇ ಭಾವಿಸಿದ್ದರು. ಬ್ರಿಟಿಷರ ಉತ್ಪನ್ನಗಳನ್ನು ಭಾರತದ ಮೂಲೆ ಮೂಲೆಗಳಿಗೆ ಕೊಂಡೊಯ್ಯಲು ಬ್ರಿಟಿಷ್ ಆಡಳಿತಗಾರರು ಸ್ಥಳೀಯ ಗುಡಿ ಕೈಗಾರಿಕೆಗಳನ್ನು ಎಲ್ಲ ರೀತಿಯಲ್ಲಿ ವಿರೋಧಿಸುವುದಿಕ್ಕೆ ಪ್ರಾರಂಭಿಸಿದ್ದರು.  ಅಂದಿನ ಕಾಲದಲ್ಲಿ ಬಂಗಾಳ ಸೇರಿದಂತೆ ಭಾರತದಲ್ಲಿ  ಮಸ್ಲಿನ್ ವಸ್ತ್ರಗಳು (ಅತಿಸೂಕ್ಷ್ಮ ನೆಯ್ಗೆಯ ಹತ್ತಿಯ ಬಟ್ಟೆ) ಬಹಳ ಪ್ರಖ್ಯಾತಿ ಪಡೆದಿದ್ದವು. 

ಬ್ರಿಟೀಷರು ತಂದ ಬಟ್ಟೆಗಳನ್ನ ಇಲ್ಲಿ ಕೊಳ್ಳುವವರೇ ಇರಲಿಲ್ಲ. ಬ್ರಿಟಿಷರು ತಮ್ಮ ಜವಳಿಗಳನ್ನು ಭಾರತದಲ್ಲಿ ಸುರಿಯಲು ಹೆಚ್ಚು ಉತ್ಸುಕರಾಗಿದ್ದರು ಮತ್ತು ಜವಳಿಗಳ ಸ್ಥಳೀಯ ಉತ್ಪಾದನೆಯನ್ನು ಬಹುತೇಕವಾಗಿ ವಿರೋಧಿಸುತಿದ್ದರು.  ಮೊದಲನೆಯ ಪ್ರಯತ್ನವಾಗಿ,  ಜನರು  ದೇಶೀಯ ಮಸ್ಲಿನ್ ಬಟ್ಟೆಗಳನ್ನು ಕೊಳ್ಳುವುದು ಕಡಿಮೆ ಮಾಡಬೇಕು  ಮತ್ತು ಮಸ್ಲಿನ್ ಬಟ್ಟೆಗಳ ಮೇಲಿನ ಅವಲಂಬನೆ ಕಡಿಮೆಯಾಗಬೇಕೆಂದು ಎನ್ನುವ ಉದ್ದೇಶದಿಂದ ಈ  ವಸ್ತ್ರಗಳ ಮೇಲೆ ಸರಿ ಸುಮಾರು 70-80% ತೆರಿಗೆಯನ್ನು ಹೇರುತ್ತಾರೆ. ಇಂತಹ ಅತಿ ದೊಡ್ಡ ತೆರಿಗೆಯಿಂದ ಜನರು ಸ್ವಾಭಾವಿಕವಾಗಿ ಈ ವಸ್ತ್ರಗಳನ್ನ ಕೊಳ್ಳುವುದಿಲ್ಲ.  ಅದಕ್ಕೆ ಪರ್ಯಾಯವಾಗಿ ಬ್ರಿಟನ್‌ನಿಂದ ಆಮದು ಮಾಡಿಕೊಂಡ ಫ್ಯಾಕ್ಟರಿ-ನಿರ್ಮಿತ  ಬಟ್ಟೆಗಳ ಮೇಲೆ ಅತಿಕಡಿಮೆ 2-4% ತೆರಿಗೆಯನ್ನು ವಿಧಿಸಿ ಮಾರುಕಟ್ಟೆಗೆ ತರುತ್ತಾರೆ. ಜನರಿಗೆ ಕಡಿಮೆ ವೆಚ್ಚದಲ್ಲಿ ಇಂಗ್ಲೇಡ್ ಮೂಲದಿಂದ ಬಟ್ಟೆಗಳು ಸಿಗುವಾಗ ಮಸ್ಲಿನ್ ಬಟ್ಟೆಗಳನ್ನ ಯಾಕೆ ಕೊಳ್ಳುತ್ತಾರೆ. 

ಈ ಮೂಲಕ ಮಸ್ಲಿನ್ ಉತ್ಪಾದನೆಯನ್ನು ಬ್ರಿಟೀಷರು ವ್ಯವಸ್ಥಿತವಾಗಿ ನಾಶಪಡಿಸುತ್ತಾರೆ.  ಇಂತಹ ಕಠೋರ ನೀತಿಗಳ ಪರಿಣಾಮವಾಗಿಮಸ್ಲಿನ್ ಉತ್ಪಾದನೆಯು ಗುಣಮಟ್ಟ ಮತ್ತು ಪ್ರಮಾಣದಲ್ಲಿ ಬಹಳವಾಗಿ ಕುಸಿತ ಕಂಡು ಕೊಳ್ಳುತ್ತದೆಅದು ಎಷ್ಟರ ಮಟ್ಟಿಗೆ ಎಂದರೆಮತ್ತೆಂದಿಗೂ ಆ ಉದ್ಯಮ ಚೇತರಿಸಿಕೊಳ್ಳುವುದೇ ಇಲ್ಲ. ಇದರ ನೇರ ಪರಿಣಾಮ ಅನುಭವಿಸಿದವರು ಬಂಗಾಳದ ನೇಕಾರರು ಮಾತ್ರ. ಅವರ ಬಳಿಯಿದ್ದ ಏಕೈಕ ಕೌಶಲ್ಯವೆಂದರೆ ಮಸ್ಲಿನ್ ನೇಯ್ಗೆಬ್ರಿಟೀಷರ ಇಂತಹ ಕಠಿಣ ನಿರ್ಧಾರದಿಂದ ನೇಕಾರರು ಕಡು ಬಡತನದಲ್ಲಿ ಮುಳುಗಿದರು ಮತ್ತು ಮಸ್ಲಿನ್ ನೇಯ್ಗೆಯ ಉದ್ಯಮವು ಸಂಪೂರ್ಣವಾಗಿ ನಾಶವಾಗುತ್ತದೆ. ಇಲ್ಲಿಗೆ ಬ್ರಿಟೀಷರ ಸಂಚು ವ್ಯವಸ್ಥಿತವಾಗಿ ಕಾರ್ಯಗತಕ್ಕೆ ಬಂದಿರುತ್ತದೆ 

 

ಕ್ರೌರ್ಯದ ಪರಮಾವಧಿ: ಬ್ರಿಟೀಷ್ ಆಳ್ವಿಕೆಯಲ್ಲಿ ಸ್ಥಳೀಯರ ವಿರುದ್ಧ ಬ್ರಿಟಿಷ್ ಆಡಳಿತನಿರ್ದಿಷ್ಟವಾಗಿರೈತರು ಮತ್ತು ನೇಕಾರರ ವಿರುದ್ಧ ಅಸಹ್ಯಕರತಾರತಮ್ಯ ಮತ್ತು ನಿರ್ಲಜ್ಜ ದೌರ್ಜನ್ಯಗಳನ್ನು ನಡೆಸುತ್ತಿದ್ದರು ಎನ್ನುವ ವಿಷಯ ಹಲವು ಕಡೆ ದಾಖಲಾಗಿವೆ. ಇಂಥಹ ಕಾರ್ಯಕ್ಕೆ ಬ್ರಿಟೀಷ್ ಆಡಳಿತ ಮತ್ತೊಮ್ಮೆ ಮುಂದಾಗುತ್ತದೆ. ನೇಕಾರರಿಗೆ ಅಳಿವು ಉಳಿವಿನ ಪ್ರಶ್ನೆಯಾಗಿದ್ದರಿಂದ ಅತಿ ಸೂಕ್ಷ್ಮ ಮಸ್ಲಿನ್ ನೇಯ್ಗೆ ನಶಿಸಿ ಹೋಗಬಾರದು ಎನ್ನುವ ಉದ್ದೇಶದಿಂದ ನೇಕಾರರು ಅಲ್ಲಲ್ಲಿ ನೇಯ್ಗೆ ಕೆಲಸ ಮಾಡುತಿದ್ದರು. ಇಂತಹ ಘಟನೆಗಳು ಬ್ರಿಟೀಷರಿಗೆ ಕಿರಿಕಿರಿ ಉಂಟು ಮಾಡುತಿದ್ದವು. ಇದಕ್ಕೆ ಅಂತ್ಯ ಕಾಣಿಸಲೇ ಬೇಕೆಂದು ಬಹುಶಃ ನಿರ್ಧರಿಸಿದ್ದರೆನಿಸುತ್ತದೆ ಹೀಗಾಗಿಮುಂದೆಂದೂ ಮಸ್ಲಿನ್ ಉತ್ಪನ್ನಗಳನ್ನು ನೇಯಲು ಸಾಧ್ಯ ವಾಗಬಾರದು ಎನ್ನುವ ಉದ್ದೇಶದಿಂದ 1769 ರ ಮಾರ್ಚ್ 17 ರಂದುಬ್ರಿಟಿಷ್ ಸರ್ಕಾರವು  ಬಡವರ ಬಗ್ಗೆ ಯಾವುದೇ ಕರುಣೆ ಇಲ್ಲದೆ,  ಬಂಗಾಳದ ಮಸ್ಲಿನ್ ನೇಕಾರರ ಹೆಬ್ಬೆರಳನ್ನು ಕತ್ತರಿಸಲು ಪ್ರಾರಂಭಿಸಿತು. ಈ ಘಟನೆ ನಡೆಯಲು ಶುರುವಾದಾಗಿನಿಂದನೇಕಾರರು ದೇಶದ ವಿವಿಧಭಾಗಗಳಿಗೆ ದಿಕ್ಕಾಪಾಲಾಗಿ ಓಡಿ ಹೋದರು.

ಈ ಘಟನೆಯ ಸಮಯದಲ್ಲಿ ಮುರ್ಷಿದಾಬಾದ್ ಮತ್ತು ನಾಡಿಯಾದಿಂದ  ನೇಕಾರರ ಕುಟುಂಬಗಳು ಅವಧ್‌ಗೆ ಓಡಿ ಹೋಗುತ್ತಾರೆಅಲ್ಲಿನ ನವಾಬ್ಬ್ ಅವರನ್ನು ಮಹುವಾ ದಬಾರ್‌ ಎನ್ನುವ ಪ್ರದೇಶದಲ್ಲಿ ಪುನರ್ವಸತಿ ಮಾಡಿ ಕೊಡುತ್ತಾರೆ ಮತ್ತು ಅವರ ಜೀವನೋಪಾಯವನ್ನು ಮುಂದುವರಿಸಲು ಅವಕಾಶ ಮಾಡುತ್ತಾರೆ. ಮೊದಲ ತಲೆಮಾರಿನ ಅನೇಕ ನೇಕಾರರು ಈಗಾಗಲೇ ತಮ್ಮ ಕೈಗಳನ್ನು ಕಳೆದುಕೊಂಡಿದ್ದರುನಂತರ ಅವರು ತಮ್ಮ ಪುತ್ರರಿಗೆ ಕರಕುಶಲತೆಯನ್ನು ಕಲಿಸುತ್ತಾರೆ. ಸುಮಾರು 5,000 ಜನರ ಆ ಸಣ್ಣ ಪಟ್ಟಣವು ಮತ್ತೆ ಕೈಮಗ್ಗ ಕೇಂದ್ರವಾಗಿ ಪ್ರಸಿದ್ದವಾಗುತ್ತದೆ.

 

ಆರದ ಕಿಚ್ಚು:  ದಶಕಗಳು ಕಳೆದರು ಆ ಘಟನೆಯ ಕಿಚ್ಚು ಮಾತ್ರ ಆರಿರರಿಲ್ಲ.  ಬಂಗಾಳದಿಂದ ವಲಸೆ ಬಂದ ಕುಟುಂಬದ ಕುಡಿಯೊಂದುಒಂದು ದಿನ ಆ ಪಟ್ಟಣದ  ಮನೋರಮಾ ನದಿಯ (ಘಾಗ್ರಾದ ಉಪನದಿ) ಕೆಳಗೆ ಬರುತ್ತಿರುವ ದೋಣಿಯನ್ನು ಗಮನಿಸುತ್ತಾನೆ. ಬ್ರಿಟೀಷರನ್ನ ಕಂಡ ಆ ಸಮಯದಲ್ಲಿ ತನ್ನ ಮನದ ಮೂಲೆಯಲ್ಲಿದ್ದ ಕಿಚ್ಚು ಬೆಂಕಿಯಂತಾಗುತ್ತದೆ. ಅದು ಮೊದಲೇ 1857 ರ ಪ್ರಕ್ಷುಬ್ಧತೆಯ (ಸಿಪಾಯಿ ದಂಗೆ) ಸಮಯ.  ಸಂತ್ರಸ್ತರ ಮೊಮ್ಮಕ್ಕಳು ಮತ್ತು ಸಂಬಂಧಿಕರು ಹೆಚ್ಚಾಗಿ ಅವಧ್‌ನ ಮಹುವಾ ದಬರ್‌ನ ನೇಕಾರರು ಎಲ್ಲರೂ ಒಟ್ಟಾಗಿ ಸೇರಿಪ್ರತೀಕಾರ ತೀರಿಸಿಕೊಳ್ಳಲು ಮುಂದಾಗುತ್ತಾರೆ.  ಆರು ಬ್ರಿಟೀಷ ಯೋಧರು ಲೆಫ್ಟಿನೆಂಟ್ ಟಿ.ಇ. ಲಿಂಡ್ಸೆಲೆಫ್ಟಿನೆಂಟ್ W.H. ಥಾಮಸ್ಲೆಫ್ಟಿನೆಂಟ್ G.L. ಕಾಲ್ಟಿಸಾರ್ಜೆಂಟ್ ಎಡ್ವರ್ಡ್ಸ್ ಮತ್ತು  A.F. ಇಂಗ್ಲೀಷ್ ಮತ್ತು T.J. ರಿಚಿ ಎನ್ನುವ ಕೆಲವು ಬ್ರಿಟಿಷ್ ತಲೆಗಳನ್ನು ಕತ್ತರಿಸಿ ಬಿಸಾಕುತ್ತಾರೆ.  ಎಂದು ಇತಿಹಾಸಕಾರರ ವರದಿಯಲ್ಲಿ ದಾಖಲಾಗುತ್ತದೆ.  ತದನಂತರ ಈ ಘಟನೆಯ ಪ್ರತಿಕಾರವಾಗಿ ಜೂನ್ 201857 ರಂದು ಬ್ರಿಟೀಷರ ಅಶ್ವಸೈನ್ಯವು ಪಟ್ಟಣವನ್ನು ಸುತ್ತುವರೆಯುತ್ತದೆಆ ಪಟ್ಟಣದ ನೂರಾರು ಜನರನ್ನು ಕೊಲ್ಲುತ್ತಾರೆ. ಮತ್ತು ಎಲ್ಲಾ ಮನೆಗಳಿಗೆ ಬೆಂಕಿ ಹಚ್ಚಿಅಂದಿನಿಂದ ಈ ಸ್ಥಳದಲ್ಲಿ ಯಾರೂ ವಾಸಿಸುವಂತಿಲ್ಲ ಎಂದು ಆದೇಶಿಸುತ್ತಾರೆ. ಬಂಡವಾಳಶಾಹಿಯ ಕ್ರೌರ್ಯ ಮತ್ತು ಅನಾಗರಿಕತೆಗೆ ಆ ಕಾಲದಲ್ಲಿ ಕೊನೆಯಿರಲೇಇಲ್ಲ.

 





ಈ ಎಲ್ಲಾ ಘಟನೆಗಳ ಕುರಿತು ಹಲವಾರು ಲೇಖಕರು ವಿವಿಧ ದಾಟಿಯಲ್ಲಿ ದಾಖಲಿಸಿದ್ದಾರೆ.  ಬ್ರಿಟೀಷ್ ವ್ಯಾಪಾರಿ ವಿಲಿಯಂ ಬೋಲ್ಟ್ಸ್  ತನ್ನ "ಕನ್ಸಿಡರೇಶನ್ಸ್ ಆನ್ ಇಂಡಿಯಾ ಅಫೇರ್ಸ್" ಪುಸ್ತಕದಲ್ಲಿ ನೇಕಾರರ ಬೆರಳುಗಳನ್ನು ಕತ್ತರಿಸುವುದು ಸೇರಿದಂತೆ ತೀವ್ರ ಕ್ರೌರ್ಯದ ನಿದರ್ಶನಗಳನ್ನು ದಾಖಲಿಸಿದ್ದಾರೆ.   Economic transition in the Bengal presidency, 1793-1833 - ಹರಿ ರಂಜನ್ ಘೋಸಲ್ ಎನ್ನುವ ಲೇಖಕರು ಸಹ ದಾಖಲಿಸಿದ್ದಾರೆ. ಇನ್ನೂ ಹಲವಾರು ಲೇಖಕರು ಇದರ ಕುರಿತು ದಾಖಲಿಸುತ್ತಾ ಬಂದಿದ್ದಾರೆ. ಬ್ರಿಟೀಷರು ಮಾತ್ರ ಇದ್ಯಾವುದೂ ನಡೆದೇ ಇಲ್ಲ ಎನ್ನುವಂತೆ ವರ್ತಿಸುತ್ತಾ ಬಂದಿದ್ದಾರೆ.

#Weavers #British #nekara #Bengal_Weavers

Click below headings