ಭಾನುವಾರ, ಆಗಸ್ಟ್ 22, 2021

ಕವಿರತ್ನ ಶ್ರೀ ಡಾ. ವಿ.ನಾಗೇಂದ್ರ ಪ್ರಸಾದ್ ಅವರ ಆತ್ಮೀಯ ಸಂವಾದ

 ಒಮಾನ್ ಕನ್ನಡಿಗರೊಂದಿಗೆ ಕನ್ನಡ ಚಿತ್ರರಂಗದ ಹೆಮ್ಮೆಯ ಹೆಸರಾಂತ ಚಿತ್ರಸಾಹಿತಿ, ಸಂಗೀತ ಸಂಯೋಜಕರು, ಚಿತ್ರನಿರ್ದೇಶಕ ಮತ್ತು ಸಂಭಾಷಣಕಾರರು ಆದ ಕವಿರತ್ನ ಶ್ರೀ ಡಾ. ವಿ.ನಾಗೇಂದ್ರ ಪ್ರಸಾದ್ ಅವರ ಆತ್ಮೀಯ ಸಂವಾದ ಕಾರ್ಯಕ್ರಮವನ್ನು ಶನಿವಾರ 21/08/2021, Google meet (ಗೂಗಲ್ ಮೀಟ್ ) ಮುಖಾಂತರ ಆಯೋಜಿಸಲಾಗಿತ್ತು.

ಸುಮಾರು ಎರಡು ಗಂಟೆಗಳಕಾಲ ನಡೆದ ಈ ಕಾರ್ಯಕ್ರಮದಲ್ಲಿ ಶ್ರೀ ಡಾ. ವಿ.ನಾಗೇಂದ್ರ ಪ್ರಸಾದ್ ಅವರು ತಮ್ಮ ಬಾಲ್ಯ, ಶಾಲಾ ಕಾಲೇಜು ನಂತರ ಚಿತ್ರರಂಗದ ಅನೇಕ ಅನುಭವಗಳನ್ನ ಮತ್ತು  ಡಾ. ರಾಜ್ ಕುಮಾರ್, ಡಾ. ವಿಷ್ಣುವರ್ಧನ್, ಅಭಿನಯ ಚಕ್ರವರ್ತಿ ಸುದೀಪ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಂತಾದ ನಟರೊಂದಿಗಿನ ತಮ್ಮ ಒಡನಾಟದ ಕುರಿತು ಅವರು ಮಾತನಾಡಿದರು. ಹಾಡು ರಚನೆ ಬಗ್ಗೆ, ಸಾಮಾಜಿಕ ಜವಬ್ದಾರಿ ಮತ್ತು ಸಮಾಜ ಸೇವೆ, ಮುಂತಾದ ವಿಷಯಗಳ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.

ಹಲವಾರು ಒಮಾನ್ ಕನ್ನಡಿಗರು ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು, ಎಲ್ಲರ ಪ್ರಶ್ನೆಗಳಿಗೆ ಉತ್ತರಿಸಿದ ಶ್ರೀ ನಾಗೇಂದ್ರ ಪ್ರಸಾದ್ ಅವರು, ಕನ್ನಡ ಚಿತ್ರರಂಗ, ಚಿತ್ರಸಾಹಿತ್ಯದ ಹಲವಾರು ವಿಷಯಗಳ ಕುರಿತು ಮನ ಬಿಚ್ಚಿ ಮಾತನಾಡಿದರು.

ಕಾರ್ಯಕ್ರಮದ ಮಧ್ಯದಲ್ಲಿ ಒಮಾನ್ ನಲ್ಲಿ ನೆಲೆಸಿರುವ ಕನ್ನಡಿಗರು, ಅವರ ಚಿತ್ರದ ಹಾಡುಗಳನ್ನ ಹಾಡಿ ಕಾರ್ಯಕ್ರಮಕ್ಕೆ ಮೆರುಗುನೀಡಿದರು. ಕಾರ್ಯಕ್ರಮದಲ್ಲಿ, ಶ್ರೀ ಡಾ. ವಿ.ನಾಗೇಂದ್ರ ಪ್ರಸಾದ್ ಅವರಿಗೆ ಶಾಲು ಹೊದಿಸಿ ಪೇಟ ಮತ್ತು ಹೂವಿನ ಹಾರ ಹಾಕಿ ಸನ್ಮಾನಿಸಲಾಯಿತು.

ಮಸ್ಕತ್ ನಿಂದಲ್ಲದೆ, ಕರ್ನಾಟಕದಿಂದ ಹಲವಾರು ಕನ್ನಡಿಗರು ಕಾರ್ಯಕ್ರಮವನ್ನು ಆನ್ ಲೈನ್ ಮುಖಾಂತರ ವೀಕ್ಷೀಸಿದರು. 












ಶನಿವಾರ, ಆಗಸ್ಟ್ 21, 2021

ಒಮಾನ್ ನಲ್ಲಿ ಕನ್ನಡಿಗರು.

ಒಮಾನ್ ನಲ್ಲಿ ಕನ್ನಡಿಗರು.

ಪಿ.ಎಸ್.ರಂಗನಾಥ.

ಮಸ್ಕತ್.

 Udayavani NRI Edition 21-08-2021


ನಾವು ಭಾರತೀಯರು, ವಿಶ್ವದ ಯಾವುದೇ ಮೂಲೆಗೆ ಹೋದರೂ, ಅಲ್ಲೊಂದು ಮಿನಿ ಭಾರತವನ್ನ ಸೃಷ್ಟಿ ಮಾಡಿಕೊಳ್ಳುವ ಗುಣವನ್ನು ಹೊಂದಿದ್ದೇವೆ. ಮೊದಲಿಗೆ ಹತ್ತಾರು ಜನರು ಜತೆಗೂಡುತ್ತೇವೆ, ಕ್ರಮೇಣ ಅದು ನೂರಾಗುತ್ತದೆ, ಸಾವಿರ ದಾಟುತ್ತದೆ, ಹೀಗೆ ಸಂಖ್ಯೆ ಬೆಳೆಯುತ್ತ ಹೋಗುತ್ತದೆ. ನಮ್ಮ ಊರು, ನಮ್ಮ ರಾಜ್ಯ, ನಮ್ಮ ಭಾಷೆ ಆಡುವವರನ್ನ ಜತೆಗೂಡಿಸಿಕೊಂಡು ಸಂಘ ಸಂಸ್ಥೆಗಳನ್ನ ಮಾಡಿಕೊಳ್ಳುತ್ತೇವೆ.   ಎಲ್ಲರೂ ಸೇರಿ ಒಂದಿಲ್ಲೊಂದು ಕಾರ್ಯಕ್ರಮ ಮಾಡುತ್ತೇವೆ. ನಾಡಿನಿಂದ ದೂರ ಇದ್ದರೂ ನಮ್ಮ ದೇಶ/ರಾಜ್ಯಾಭಿಮಾನವನ್ನ ಮೆರೆಯುವುದನ್ನ ನಾವು ಕಂಡಿದ್ದೇವೆ.  ಎಲ್ಲಾದರು ಇರು ಹೇಗಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಎನ್ನುವ ಕವಿ ವಾಣಿಯಂತೆ, ಕನ್ನಡಿಗರು ರಾಜ್ಯ, ದೇಶದ ಗಡಿ ದಾಟಿದರೂ ಕನ್ನಡಭಿಮಾನವನ್ನ ಎಂದಿಗೂ ಮರೆಯುವುದಿಲ್ಲ.

 

ಇನ್ನು ಗಲ್ಫ್ ರಾಷ್ಟ್ರಗಳಾದ ದುಬೈ, ಕುವೈತ್, ಬಹರೈನ್ ಮತ್ತು ಒಮಾನ್ ದೇಶಗಳಲ್ಲಿ ಲಕ್ಷಾಂತರ ಭಾರತೀಯರು ನೆಲೆಸಿದ್ದಾರೆ. ಈ ಎಲ್ಲ ರಾಷ್ಟ್ರಗಳು ಭಾರತದಿಂದ ಕೇವಲ ಎರಡು ಮೂರು ಗಂಟೆಗಳ ವಿಮಾನ ಪ್ರಯಾಣದ ದೂರ ಅಷ್ಟೇ. ಬೆಂಗಳೂರಿನಿಂದ ಕೊಲ್ಕತ್ತಾ ಅಥವ ದೆಹಲಿಗೆ ವಿಮಾನದಲ್ಲಿ ಪ್ರಯಾಣಿಸಿದಷ್ಟು ದೂರ. ಇಲ್ಲಿ ಭಾರತದ ಹಲವಾರು ಮುಖ್ಯ ನಗರಗಳಿಗೆ ದಿನನಿತ್ಯ ಸಂಚರಿಸುವ ವಿಮಾನಗಳು. ಹಾಗಾಗಿ ಗಲ್ಫ್ ನಲ್ಲಿ ಇದ್ದಷ್ಟು ದಿನ ಭಾರತದಿಂದ ದೂರ ಇದ್ದಂತೆ ಅನ್ನಿಸುವುದಿಲ್ಲ. ಇಲ್ಲಿ ಮೂಲೆ ಮೂಲೆಗಳಲ್ಲೂ ಭಾರತೀಯರು ಸಿಗುತ್ತಾರೆ. ನೂರಾರು ಭಾರತೀಯ ಹೋಟೆಲ್ ಗಳಿವೆ, ಇಲ್ಲಿನ ಶಾಪಿಂಗ್ ಮಾಲ್ ನಲ್ಲಿ ನಮ್ಮ ದೇಶದಲ್ಲಿ ಸಿಗುವ ಬಹುತೇಕ ಎಲ್ಲ ವಸ್ತುಗಳು ಇಲ್ಲಿ ಸಿಗುತ್ತವೆ. ಇಲ್ಲಿ ಯಾವುದಕ್ಕೂ ಕೊರತೆಯಿಲ್ಲ.  ಬಹುತೇಕ ಎಲ್ಲ ಖಾಸಗಿ ಕಛೇರಿಗಳಲ್ಲು, ಭಾರತೀಯರೇ ಕೆಲಸ ಮಾಡುತ್ತಾರೆ. ಹೀಗಾಗಿ, ಇಲ್ಲಿನ ಪರಿಸರ ನಮ್ಮನ್ನ ಕಾಡುವ ಊರ ನೆನಪನ್ನ ದೂರ ಮಾಡುತ್ತವೆ.  ಇನ್ನು ದುಬೈ ಮತ್ತು ಒಮಾನ್ ದೇಶವಂತೂ ನಮ್ಮ ಎರಡನೇ ಮನೆಯಿದ್ದಂತೆ. ಅಷ್ಟರಮಟ್ಟಿಗೆ ದೇಶಿ ಸಂಸ್ಕೃತಿಯನ್ನ ಅಲ್ಲಿ ನಾವು ಕಾಣಬಹುದು.

 

ಭಾರತೀಯರು ಎಂದ ಮೇಲೆ, ಕನ್ನಡಿಗರು ಇರಬೇಕಲ್ಲವೆ. ಹೌದು, ಈ ಎಲ್ಲ ದೇಶಗಳಲ್ಲಿ ದಂಡಿಯಾಗಿ ಕನ್ನಡಿಗರಿದ್ದಾರೆ. ನಾನಿರುವ ಒಮಾನ್ ದೇಶದಲ್ಲಿ ಒಂದು ಅಂದಾಜಿನ ಪ್ರಕಾರ ಸುಮಾರು ಇಪ್ಪತ್ತು ಸಾವಿರಕ್ಕೂ ಹೆಚ್ಚಿನ ಕನ್ನಡಿಗರಿದ್ದಾರೆ. ಹಲವಾರು ಸಂಘ ಸಂಸ್ಥೆಗಳಿವೆ. ಸುಮಾರು ಮೂರು ದಶಕಗಳ ಹಿಂದೆಯೇ ಅಧಿಕೃತವಾಗಿ ಇಲ್ಲಿ ಮಸ್ಕತ್ ಕನ್ನಡ ಸಂಘ ಪ್ರಾರಂಭವಾಗಿದೆ. ಹಲವಾರು ಸಾಂಸ್ಕೃತಿಕ, ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳು ಇಲ್ಲಿ ನಡೆದಿವೆ. ಕಳೆದ ಹದಿನೈದು ವರ್ಷಗಳಿಂದ ಮಸ್ಕತ್ ಕನ್ನಡ ಸಂಘದ ಸಹಯೋಗ ದೊಂದಿಗೆ ಕನ್ನಡಿಗರ ಮಕ್ಕಳಿಗೆ ಕನ್ನಡ ಕಲಿಸಲಾಗುತ್ತಿದೆ. ಈ ಕಾರ್ಯವನ್ನ ಹಲವಾರು ಕನ್ನಡಿಗರು ಸ್ವಯಂ ಪ್ರೇರಿತರಾಗಿ ಯಾವುದೇ ವೇತನವಿಲ್ಲದೆ ಮಾಡುತಿದ್ದಾರೆ.

 

ಭಾರತೀಯ ಸಾಮಾಜಿಕ ವೇದಿಕೆ ಮಸ್ಕತ್ ಮತ್ತು ಸಲಾಲ್ಹ. ಸೋಹಾರ್ ಕನ್ನಡ ಬಳಗ, ಸ್ಪಂದನ, ಓಂಕಾರ ಸಮಿತಿ ಮತ್ತಿತರ ಸಂಘ ಸಂಸ್ಥೆಗಳ ವತಿಯಿಂದ ಆಯೋಜಿಸಿದ ಹಲವಾರು ಕಾರ್ಯಕ್ರಮಗಳಿಗೆ ನಾಡಿನಿಂದ ಹೆಸರಾಂತ ಕಲಾವಿದರು ಇಲ್ಲಿಗೆ ಆಗಮಿಸಿ  ಕಾರ್ಯಕ್ರಮಗಳನ್ನ ಇಲ್ಲಿ ನೀಡಿದ್ದಾರೆ.  ಈ ಕಾರ್ಯಕ್ರಮಗಳನ್ನ ಆಯೋಜಿಸಲು ಪ್ರಾಯೋಜಕ ಸಹಕಾರ ಬಹಳ ಮುಖ್ಯ. ಅದರಲ್ಲೂ  ಕರ್ನಾಟಕ ಮೂಲದ ಕನ್ನಡಿಗ ಪ್ರಾಯೋಜಕರು ಸಂಘ ಸಂಸ್ಥೆಗಳಿಗೆ ಧಾರಾಳವಾಗಿ ದಾನವನ್ನ ನೀಡಿದ್ದಾರೆ.  ಇದರ ನಿರಂತರ ಉಪಯೋಗ ಪಡೆಯುವ ಸಂಘದ ಸದಸ್ಯರುಗಳು, ಕನ್ನಡ ರಾಜ್ಯೋತ್ಸವ, ಯುಗಾದಿ ಸಂಭ್ರಮ, ದಸರಾ ಕಾರ್ಯಕ್ರಮ,  ಪಿಕ್ ನಿಕ್, ಸ್ಪೋರ್ಟ್ಸ್ ಡೇ ಯಲ್ಲಿ ಒಳಾಂಗಣ ಮತ್ತು ಹೊರಾಂಗಣ ಆಟಗಳು, ಅಂತ್ಯಾಕ್ಷರಿ, ಸಂಗೀತ ಸ್ಪರ್ಧೆ, ಹೀಗೆ  ವರ್ಷ ಪೂರ್ತಿ ಒಂದಿಲ್ಲೊಂದು ಕಾರ್ಯಕ್ರಮದಲ್ಲಿ ಭಾಗಿಯಾಗಿ ಎಲ್ಲ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದಾರೆ.

 

ಬ್ಯಾಂಕ್ ಮಸ್ಕತ್ ನ ಅನಿವಾಸಿ ವಿಭಾಗದ ಮುಖ್ಯಸ್ಥರಾದ ಶ್ರೀ ಜಿ. ರಾಮಕೃಷ್ಣ ಅವರು ಮಸ್ಕತ್ ಕನ್ನಡ ಸಂಘಕ್ಕೆ ಪ್ರಾಯೋಜಕರಾಗಿ ನೀಡಿರುವ ಕೊಡುಗೆ ಅತ್ಯಮೂಲ್ಯವಾದದ್ದು.  ಮಸ್ಕತ್ ಫಾರ್ಮಸಿ, ಎಸ್ಟಿಎಸ್ ಸಂಸ್ಥೆ, ಟಾವೆಲ್, ಮಲ್ಟಿಟೆಕ್, ಅರೀಜ್ ವೆಜಿಟೇಬಲ್ಸ್, ಅಲ್ ಮಹಾ ಪೆಟ್ರೋಲಿಯಂ ಮತ್ತಿತರ  ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಮೂಲದವರು ಪ್ರತಿವರ್ಷವೂ ದೇಣಿಗೆ ನೀಡಿ ಕನ್ನಡ ಸಂಘ ಸಂಸ್ಥೆಗಳನ್ನ ಪೋಷಿಸುತಿದ್ದಾರೆ. ಹಲವಾರು ಕನ್ನಡಿಗರು ಇಲ್ಲಿ ಉದ್ಯಮಗಳನ್ನ ಕಟ್ಟಿ ಬೆಳೆಸಿದ್ದಾರೆ. ಇಲ್ಲಿನ ಶಾಲೆಗಳಲ್ಲಿ ಸಾವಿರಾರು ಮಕ್ಕಳು ಶಿಕ್ಷಣ ಪಡೆಯುತಿದ್ದಾರೆ.

 

ಮಸ್ಕತ್ ಕನ್ನಡ ಸಂಘದ ಅಧ್ಯಕ್ಷರಾಗಿ, ಶ್ರೀ ರಾಮಚಂದ್ರರಾವ್, ಶ್ರೀ ಯೋಗಾನಂದ್, ಶ್ರೀ ಅನಿಲ್ ಭಾಸಗಿ, ಶ್ರೀ ಜಾನಕೀನಾಥ್, ಶ್ರೀ ಕರುಣಾಕರ್ ರಾವ್ ಕಾರ್ಯ ನಿರ್ವಹಿಸಿದ್ದರು. ಈಗ ಶ್ರೀ S.D.T. ಪ್ರಸಾದ್ ಆಗಿ ಆಯ್ಕೆಯಾಗಿದ್ದಾರೆ.

 

ಇನ್ನು ಕನ್ನಡದ ಸಾಹಿತ್ಯ ಸೇವೆ ಹಲವಾರು ಒಮಾನ್ ಕನ್ನಡಿಗರಿಂದ ನಿರಂತರವಾಗಿ ನಡೆಯುತ್ತಿದೆ. ಶ್ರೀ ಶಿವ ಪ್ರಕಾಶ್, ಶ್ರೀ ಸುರೇಶ್, ಶ್ರೀಮತಿ ಜಯಾ ಛಬ್ಬಿ, ಶ್ರೀಮತಿ ಸುಧಾ ಶಶಿಕಾಂತ್, ಡಾ. ನಾಗರಾಜ್, ಶ್ರೀ ನಿರಂಜನ್ ಮತ್ತಿತರು ಕಥೆ, ಲೇಖನ, ಕವಿತೆ ಬರೆಯುವ ಮೂಲಕ ವಿದೇಶದಿಂದಲೂ ಕನ್ನಡ ಸಾಹಿತ್ಯಕ್ಕೆ ತಮ್ಮ ಕೊಡುಗೆ ನೀಡುತಿದ್ದಾರೆ.  ಶ್ರೀಮತಿ ಕವಿತಾ ರಾಮಕೃಷ್ಣ ಅವರದು ಬಹುಮಖ ಪ್ರತಿಭೆ, ಸಂಸ್ಕೃತ ಶಿಕ್ಷಣ, ಯೋಗ, ತಂಜಾವೂರು ಶೈಲಿ ಚಿತ್ರಕಲೆ ಮತ್ತು ಸಾಹಿತ್ಯ ಹೀಗೆ ವಿವಿಧ ಪ್ರಾಕಾರಗಳಲ್ಲಿ ತಮ್ಮ ಪ್ರತಿಭೆಯನ್ನ ಅನಾವರಣಗೊಳಿಸಿದ್ದಾರೆ. ಅವರು ನಾ ಕಂಡ ಮಸ್ಕಟ್ ಎನ್ನುವ ಪುಸ್ತಕವನ್ನು ಬರೆದಿದ್ದಾರೆ. ಅವರ ಸಾಧನೆಯ ಬಗ್ಗೆ ಇಲ್ಲಿನ ದಿನ ಪತ್ರಿಕೆಗಳಲ್ಲಿ ಹಲವು ಬಾರಿ ವರದಿಯಾಗಿದೆ.

 

ಸಾಮಾಜಿಕ ಸೇವೆ ವಿಚಾರದಲ್ಲೂ ಕನ್ನಡಿಗರು ಹಿಂದೆ ಬಿದ್ದಿಲ್ಲ. ಒಮಾನ್ ನಲ್ಲಿ ಮತ್ತು ಊರಿನಲ್ಲಿ ಸಂಕಷ್ಟಕ್ಕೆ ಸಿಲುಕಿದವರಿಗೆ ತಮ್ಮ ಸಹಾಯ ಹಸ್ತ ಚಾಚಿದ್ದಾರೆ.  ಶ್ರೀ ನಾಗೇಶ್ ಶೆಟ್ಟಿ, ಶ್ರೀ ದಿವಾಕರ್ ಶೆಟ್ಟಿ, ಶ್ರೀ ಭೀಮ್ ನೀಲಕಂಠ ರಾವ್, ಶ್ರೀ ಪ್ರಕಾಶ್ ನಾಯ್ಕ್ ಮತ್ತು ಇನ್ನು ಹಲವರು ಎಲೆಮರೆ ಕಾಯಿಯಂತೆ ಸೇವೆ ಸಲ್ಲಿಸುತಿದ್ದಾರೆ.

 

ಒಮಾನ್ ಕನ್ನಡಿಗರು ತಾವು ನಾಡಿನಿಂದ ದೂರ ಇದ್ದರು ಸಹ, ಸಾಹಿತ್ಯ, ಸಂಗೀತ, ಸಾಂಸ್ಕೃತಿಕ, ಧಾರ್ಮಿಕ, ಆಧ್ಯಾತ್ಮ, ಯೋಗ ಮತ್ತಿತರ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ದೇಶ ಮತ್ತು ವಿದೇಶದ ನಡುವಿನ ಅಂತರವನ್ನ ಕಡಿಮೆಗೊಳಿಸುವುದುರಲ್ಲಿ ನಿರಂತರ ಪ್ರಯತ್ನ ಮಾಡುತಿದ್ದಾರೆ.

 

ಹೊಸದಾಗಿ ವಿದೇಶಕ್ಕೆ ಬಂದಾಗ ನಾವು ಮೊದಲು ಹುಡುಕುವುದು ನಮ್ಮ ದೇಶೀ ಆಹಾರ,  ನಂತರ ಅಲ್ಲಿ ನೆಲೆಸಿರುವ ಭಾರತೀಯರ ಗೆಳೆತನ, ಹಾಗೇ ನಮ್ಮ ಭಾಷೆ ಮಾತನಾಡುವ ಜನರು,  ನಮ್ಮ ಜಿಲ್ಲೆಯವರು, ಕೊನೆ ಕೊನೆಗೆ ನಮ್ಮ ಊರಿನ ನಂಟನ್ನು ಸಹ ಹುಡುಕುತ್ತಿರುತ್ತೇವೆ. ಈ ಊಟದ ವಿಷಯಕ್ಕೆ ಬಂದರೆ, ಒಮಾನ್ ನಲ್ಲಿ ಕನ್ನಡನಾಡಿನ ಹೋಟೇಲ್ ಗಳು ಕಡಿಮೆ ಏನಿಲ್ಲ. ಅನ್ನಪೂರ್ಣ, ಉಡುಪಿ ಹೋಟೆಲ್, ಒಮಾನ್ ಎಕ್ಸ್ ಪ್ರೆಸ್, ಸಾಗರ್ ರೆಸ್ಟೋರೆಂಟ್, ಗೋಕುಲ್, ಕಾಮತ್, ಇನ್ನು ಹಲವು ಹೋಟೆಲ್ ಗಳು ಇಲ್ಲಿ ಪ್ರಸಿದ್ದ. ರುಚಿಕರವಾದ ಕನ್ನಡ ನಾಡಿನ ಖಾದ್ಯಗಳನ್ನು ಇಲ್ಲಿ ಸವಿಯಬಹುದಾಗಿದೆ.

 

ಒಮಾನ್ ಮತ್ತು ಕರ್ನಾಟಕದ ನಡುವಿನ ದೂರ ತುಂಬ ಜಾಸ್ತೀ ಏನಿಲ್ಲ. ಪ್ರಪಂಚ ಭೂಪಟದಲ್ಲಿ ಅರಬ್ಬಿ ಸಮುದ್ರದ ಒಂದು ಬದಿಯಲ್ಲಿ ಕರ್ನಾಟಕವನ್ನ ನೋಡಿದರೆ, ಮತ್ತೊಂದು ಬದಿಯಲ್ಲಿ ಒಮಾನ್ ದೇಶವನ್ನ ಕಾಣಬಹುದು. ಅಂದಾಜು ಎರಡುವರೆ ಸಾವಿರ ಕಿ.ಮಿ. ದೂರ ಅಷ್ಟೇ.  ಸದ್ಯ ಕೋವಿಡ್ ನಿರ್ಭಂಧದಿಂದಾಗಿ ಭಾರತ ಮತ್ತು ಒಮಾನ್ ನಡುವಿನ ಸಂಚಾರಕ್ಕೆ ಕಡಿವಾಣ ಬಿದ್ದಿದೆ. ಸಾಮಾನ್ಯ ದಿನಗಳಲ್ಲಿ ಮಸ್ಕತ್ ನಿಂದ ಬೆಂಗಳೂರಿಗೆ ಪ್ರತಿ ದಿನ ಒಮಾನ್ ಏರ್ ಸಂಚರಿಸುತ್ತದೆ. ಏರ್ ಇಂಡಿಯಾದಿಂದ ವಾರಕ್ಕೆರೆಡು ಬಾರಿ ಬೆಂಗಳೂರು ಮತ್ತು  ಮಂಗಳೂರಿಗೆ ವಿಮಾನ ಸೌಲಭ್ಯವಿದೆ. ಅದಲ್ಲದೆ ಕರ್ನಾಟಕ ವನ್ನು ತಲುಪಲು ಪಕ್ಕದ ಕೇರಳ, ಗೋವಾ, ಹೈದರಬಾದ್, ಮುಂಬಯಿ ಚೆನ್ನೈ ಮುಂತಾದ ವಿವಿಧ ಮಾರ್ಗಗಳ ಮುಖಾಂತರ ವಿವಿಧ ನಗರಗಳಿಗೆ ಪ್ರತಿನಿತ್ಯ ಹಲವಾರು ವಿಮಾನಗಳು ಸಂಚರಿಸುತ್ತವೆ. ಈಗ ಹೇಳಿ, ಇಷ್ಟೆಲ್ಲ ಸೌಕರ್ಯಗಳಿದ್ದ ಮೇಲೆ ಕರ್ನಾಟಕದಿಂದ ನಾವೇನಾದರು ದೂರ ಇದ್ದಂತೆ ಅನಿಸುವುದೇ? ಖಂಡಿತಾ ಇಲ್ಲ.

 

ಒಮಾನ್ ಒಂದು ಸುಂದರವಾದ ದೇಶ. ನೈಸರ್ಗಿಕವಾಗಿ ನಿರ್ಮಿತವಾದ ಹಲವಾರು ಪ್ರವಾಸಿ ತಾಣಗಳು ಇಲ್ಲಿವೆ. ಇಲ್ಲಿ ಹಲವಾರು ಹಿಂದಿ, ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡ ಚಲನ ಚಿತ್ರಗಳಿಗಾಗಿ ಶೂಟಿಂಗ್ ಮಾಡಲಾಗಿದೆ. ಯುರೋಪ್ ನಿಂದ ಸಾವಿರಾರು ಜನ ಇಲ್ಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಾರೆ.

Click below headings