ಗುರುವಾರ, ಸೆಪ್ಟೆಂಬರ್ 15, 2011

ಆಗಲೇ ಮರೆತ್ರಾ ಇರೋಂ ಶರ್ಮಿಳಾ ಚಾನುರವರನ್ನು.ಭ್ರಷ್ಟಾಚಾರ ವಿರೋಧಿ ಹೋರಾಟ ಒಂದು ಹಂತಕ್ಕೆ ತಲುಪಿದೆ ಎಂದು ಎಲ್ಲರಿಗೂ ಮನವರಿಕೆಯಾದ ನಂತರ ಜನಮಾನಸದಿಂದ ಎಂದೂ ಮರೆಯಾಗದ ಅಣ್ಣ ಹಜಾರೆ  ಮಾಧ್ಯಮಮಾನಸ ದಿಂದ ನಿಧಾನವಾಗಿ ಮರೆಯಾಗುತ್ತಿರುವುದನ್ನು ನಾವು ಪತ್ರಿಕಾ ಹಾಗು ಟಿವಿ ಗಳಲ್ಲಿ ಕಾಣಬಹುದು. ಯಾಕೆ ಈ ಮಾತು ಅಂದರೆ ಪತ್ರಿಕೆ ಗಳಲ್ಲಿ ಮೊದಲ ಪುಟದಲ್ಲಿ ವರದಿಯಾಗುತಿದ್ದ ಅಣ್ಣಾ ಕುರಿತ ವರದಿಗಳು ಈಗ ಕೊನೆ ಪುಟ ಸೇರುತ್ತಿದೆ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಸಹ ಅಣ್ಣ ಹಜಾರೆ ಬಗ್ಗೆ ಹೆಚ್ಚಿನ ವರದಿಯಾಗುತ್ತಿಲ್ಲ. ಮಾಧ್ಯಮದ ಗಮನ ಬೇರೆ ಬೇರೆ ವಿಷಯಗಳಲ್ಲಿ ಕೇಂದ್ರೀಕೃತ ವಾಗಿರುವುದರಿಂದ ಅಣ್ಣಾ ವಿಷಯದಲ್ಲಿ ಗಮನ ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ನಾವು ತಿಳಿಯಬಹುದು. ಅಣ್ಣಾ ಚುನಾವಣಾ ಸುಧಾರಣೆ ಹಾಗೂ ರೈತ ಸ್ನೇಹಿ ಭೂ ಸ್ವಾಧೀನ ಕಾನೂನು ಜಾರಿಗೂ ಹೋರಾಡುವುದಾಗಿ ಮತ್ತು ಮುಂದಿನ ದಿನಗಳಲ್ಲಿ ಈ ಹೋರಾಟದ ರೂಪುರೇಶೆಗಳ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸಲಿದ್ದೇವೆ ಎಂದು ತಿಳಿಸಿದ್ದಾರೆ.
ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ ಮುಗಿದ ತಕ್ಷಣ  ಕಳೆದ 2000, ನವೆಂಬರ್ 4ರಿಂದ ಅನಿರ್ದಿಷ್ಟಾವಧಿ ಉಪವಾಸ ನಿರತರಾಗಿರುವ ಮಣಿಪುರದ ಇರೋಮ್ ಶರ್ಮಿಳಾ ಚಾನು ಬಗ್ಗೆ ವರದಿಯಾಯಿತು. ಅಷ್ಟು ದಿನ ಸುಮ್ಮನಿದ್ದ ಮಾಧ್ಯಮಗಳು ಒಂದೆರಡು ದಿನ ಸತತವಾಗಿ ಚರ್ಚೆ ನಡೆಸಿ ಯಥಾ ಪ್ರಕಾರ ಬೇರೆ ಸುದ್ದಿಗಳ ಕಡೆ ಗಮನ ವಹಿಸಿದರು.
ಶರ್ಮಿಳ ಚಾನು ಹೀಗೆ ಹೇಳ್ತಾರೆ "  ನಾನು ಜೈಲಿನಲ್ಲಿ ಬಂಧಿ ಯಾಗಿರುವುದರಿಂದ ಅಣ್ಣಾ ರವರ ಹಾಗೆ ದೇಶ ಸುತ್ತಿ ದೇಶದ ಪ್ರಜೆಗಳನ್ನು ನನಗೆ ಬೆಂಬಲ ನೀಡಿ ಎಂದು ಕೇಳಲಾಗುವುದಿಲ್ಲ ಆದ್ದರಿಂದ ಅಣ್ಣ ಹಜಾರೆ ಮಣಿಪುರ ಕ್ಕೆ ಬಂದು  ಪ್ರಜೆಗಳಿಗೆ  ಮಾರಕವಾದ ಆಫ್ಸ್ಪಾ ಕಾಯ್ದೆಯ ವಿರುದ್ದ ಹೋರಾಟನಡೆಸುವ ನನಗೆ ಬೆಂಬಲ ನೀಡಲಿ ಎಂದರು. ನನ್ನ ಹೋರಾಟ ವನ್ನು ಅಣ್ಣಾ ಹಜಾರೆಯವರ ಹೋರಾಟಕ್ಕೆ ಹೋಲಿಸುವುದಕ್ಕೆ ನನಗೆ ಯಾವುದೇ ರೀತಿಯ ಅಸಮಧಾನವಿಲ್ಲ. ಉದ್ದೇಶ ಬೇರೆ ಆದರು ಮಾರ್ಗ ಮಾತ್ರ ಒಂದೇ. ಅಣ್ಣ ಹಜಾರೆ ಯವರ ಭ್ರಷ್ಟಾಚಾರ ಹೋರಾಟ ಕೇವಲ ೧೩ ದಿನಗಳಲ್ಲಿ ಮುಗಿದು ಅದಕ್ಕೆ ತಕ್ಕ ಫಲ ದೊರೆತಿದ್ದರಲ್ಲಿ ನನಗೆ ಸಂತೋಷವಿದೆ, ಆದರೆ ನಾನು ಸತತ ೧೧ ವರ್ಷಗಳಿಂದ ಹೋರಾಟ ನಡೆಸುತಿದ್ದೀನಿ, ನನ್ನ ಹೋರಾಟದ ಬಗ್ಗೆ ಎಲ್ಲರೂ ಚರ್ಚೆ ಮಾಡ್ತಾರೆ ಹೊರತು ಯಾರು ಯಾವುದೆ ರೀತಿಯ ಕ್ರಮಗಳನ್ನು ಕೈತೆಗೆದುಕೊಳ್ತಿಲ್ಲ, ಒಂದು ವೇಳೆ ನಾನು ದಿಲ್ಲಿಯಲ್ಲಿದ್ದಿದ್ದರೆ ಇಷ್ಟೊತ್ತಿಗೆ ಏನಾದರು ಪ್ರತಿಫಲ ಸಿಗುತಿತ್ತೋ ಏನೋ? ಆಣ್ಣಾ ಮತ್ತು  ದೇಶದ ಎಲ್ಲ ಪ್ರಜೆಗಳು ನನ್ನ ಅಹಿಂಸಾ ಹೋರಾಟಕ್ಕೆ ಬೆಂಬಲ ನೀಡಲಿ ಎಂದು ನಾನು ಅವರನ್ನು ಮಣಿಪುರಕ್ಕೆ ಅಹ್ವಾನಿಸುತ್ತೇನೆ."
ಈ ವರದಿ ಹೊರಬಿದ್ದ ತಕ್ಷಣ ದೇಶದ ಎಲ್ಲ ಮಾಧ್ಯಮಗಳಲ್ಲಿ ಮತ್ತೆ ಶರ್ಮಿಳ ಚಾನು ಬಗ್ಗೆ ಚರ್ಚೆ ನಡೀತು. ಒಂದೆರಡು ದಿನದ ನಂತರ ಮತ್ತೆ ಎಲ್ಲಾ ಮಾಮೂಲಿ.  ಈ ವೇಳೆಗಾಗಲೆ ಅಣ್ಣಾರವರನ್ನು ಸಹ ಮರೆತಿದ್ದರು. ನಂತರ ಶರ್ಮಿಳಾ ಚಾನು ಬಗ್ಗೆ ಮತ್ತೆ ಯಥಾ ಪ್ರಕಾರ ನಿರ್ಲಕ್ಷ್ಯ. ದೆಹಲಿ ಹೈಕೋರ್ಟ್ ನಲ್ಲಿ ಬಾಂಬ್ ಸ್ಪೋಟ, ಅಮರ್ ಸಿಂಗ್ ಬಂಧನ, ಜನಾರ್ಧನ ರೆಡ್ಡಿ ಬಂಧನ, ಹೀಗೆ ಬೇರೆ ವಿಷಯಗಳಲ್ಲಿ ಎಲ್ಲರೂ ಮಗ್ನರಾದರು.
ಅಣ್ಣಾ ಹೋರಾಟವನ್ನು ಪ್ರಶ್ನಿಸಿದವರು ಮತ್ತು ಟೀಕಿಸಿದ ಜನ ಶರ್ಮಿಳಾ ಚಾನು ಬಗ್ಗೆ ವರದಿ ಯಾದ ತಕ್ಷಣ, ಅಣ್ಣಾ ಗೆ ಬೆಂಬಲ ಕೊಟ್ಟ ಕಾರ್ಪೊರೇಟ್ ಜನ, ಬಿಜೆಪಿ, ಆರ್ ಎಸ್ ಎಸ್ ಮತ್ತು ಐಟಿ ಬಿಟಿ ಮಂದಿ ಇತ್ತ ಕಣ್ಣು ಹಾಯಿಸುವರೆ? ಎಂದು ಪ್ರಶ್ನೆ ಕೇಳಿದರು. ಮೊದಲನೆಯದಾಗಿ ಈ ಎರಡು ಹೋರಾಟಗಳನ್ನು ಒಂದೇ ತಕ್ಕಡಿಯಲ್ಲಿ ತೂಗಿ ಹಾಕಿ ನೋಡುವುದು ತಪ್ಪು. ಭ್ರಷ್ಟಾಚಾರ ವಿರುದ್ದ ದ ಹೋರಾಟ ಬೇರೆ ಮತ್ತು ಶರ್ಮಿಳಾ ಚಾನು ನಡೆಸುತ್ತಿರುವ ಹೋರಾಟ ಬೇರೆ.
ಮಣಿಪುರದಲ್ಲಿ ಹೇರಲಾಗಿರುವ ಸಶಸ್ತ್ರ ಪಡೆ (ವಿಶೇಷ ಅಧಿಕಾರ) ಕಾಯ್ದೆ  (ಎಎಫ್‌ಎಸ್‌ಪಿಎ) ಕಂಡಲ್ಲಿ ಗುಂಡಿಕ್ಕುವ ಮತ್ತು ವಾರಂಟ್ ಅಥವಾ ಪೂರ್ವಸೂಚನೆ ಇಲ್ಲದೆ ಯಾರನ್ನು ಬೇಕಾದರೂ ಬಂಧಿಸುವ ಅಧಿಕಾರ ಹೊಂದಿದೆ. ಅಲ್ಲಿನ ಜನರ ನಿದ್ದೆಗೆಡಿಸಿರುವುದೂ ಈ ವಿಶೇಷ ಅಧಿಕಾರವೇ. ಸೇನಾ ಪಡೆಯಂತೂ ಅಲ್ಲಿನ ಜನರನ್ನು ಶತ್ರುಗಳಂತೆ ಕಾಣುತ್ತಿದೆ. ಆರ್ಮಿ ಇಲ್ಲಿ ಅಸಂಖ್ಯಾತ ಜನರ ನೋವಿಗೆ, ನೇರ ಸಾವಿಗೆ, ಅತ್ಯಾಚಾರಕ್ಕೆ  ಕಾರಣವಾಗಿದೆ. ಇಲ್ಲಿ ಜನರಿಗೆ ತಮ್ಮ ಮೇಲಿನ ಅನ್ಯಾಯದ ವಿರುದ್ಧ ದೂರು ಹೊತ್ತು ಕೋರ್ಟಿಗೆ ಹೋಗುವ ಹಕ್ಕೇ ಇಲ್ಲ.  ಎಎಫ್‌ಎಸ್‌ಪಿಎ ಕಾಯ್ದೆಯನ್ನು ೧೯೫೮ ರಲ್ಲಿ ಸಂಸತ್‌ನಲ್ಲಿ ಮಂಡಿಸಿದಾಗ,ಈ ಕಾಯ್ದೆಯು ಗರಿಷ್ಠವೆಂದರೆ ೬ ತಿಂಗಳವರೆಗೆ ಮಾತ್ರ ಜಾರಿಯಲ್ಲಿರುತ್ತದೆ ಎಂದು ಹೇಳಿಕೊಳ್ಳಲಾಗಿತ್ತು. ಆದರೆ ಈ ಮಸೂದೆ ಮಂಡನೆ ಯಾಗಿ ೫೨ ವರ್ಷಗಳಾದ ಬಳಿಕವೂ ಮಣಿಪುರದಲ್ಲಿ ಅದು ಈಗಲೂ ಜಾರಿಯಲ್ಲಿದೆ. ಜನರಿಗೆ ಮಾರಕವಾದ ಕಾಯ್ದೆಯನ್ನು ಪುನರ್ ಪರಿಶೀಲಿಸಲು ಎಷ್ಟು ದಿನ ಬೇಕಾಗುತ್ತೆ.
ಜನಸಾಮಾನ್ಯರನ್ನು ರಕ್ಷಿಸಲು ಇರುವ ನಮ್ಮ ಪೋಲೀಸ್ ವ್ಯವಸ್ಥೆ ಒಮ್ಮೊಮ್ಮೆ ಪರಿಸ್ಥಿತಿಯನ್ನು ನಿಭಾಯಿಸಲು ಗೋಲಿಬಾರ್ ಮಾಡಿದ್ದನ್ನು ನಾವು ಈ ಕೆಳಗಿನ ಘಟನೆಗಳಲ್ಲಿ ಕಾಣಬಹುದು
ಆಗಸ್ಟ್ ೧೧ ೨೦೧೧: ಪುಣೆಯ ಮಾವಲ್ ಎಂಬಲ್ಲಿ  ಅಣೆಕಟ್ಟಿನಿಂದ ನೀರು ಸರಬರಾಜು ಸ್ಥಗಿತಗೊಂಡಿದ್ದನ್ನು ವಿರೋಧಿಸಿ ರೈತರು ನಡೆಸುತ್ತಿದ್ದ ಪ್ರತಿಭಟನೆ ಹಿಂಸೆಗೆ ತಿರುಗಿದ್ದರಿಂದ ಗೋಲಿಬಾರ್ ನಡೆಸಲಾಯಿತು. ಈ ಸಂದರ್ಭದಲ್ಲಿ ನಾಲ್ವರು ರೈತರು ಬಲಿಯಾದರು
ಜುಲೈ೧: ೨೦೧೧: ಬಿಹಾರದ ಫೋರಬ್ಸ್  ಗಂಜ್ ವ್ಯಾಪ್ತಿಯ ಭಾಜನಪುರದಲ್ಲಿ ರಸ್ತೆ ಅತಿಕ್ರಮಣದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಗ್ರಾಮಸ್ಥರ ಮೇಲೆ ಗೋಲಿಬಾರ್ ನಡೆಸಿ ಗರ್ಭಿಣಿ ಹೆಂಗಸು , ಆರು ತಿಂಗಳ ಮುಗ್ಧ ಮಗುವಿನ ಸಹಿತ ಒಟ್ಟು ನಾಲ್ಕು ಜನ ಸಾವಿಗೀಡಾದರು
ಮಾರ್ಚ್ ೧ ೨೦೧೦:  ಹೋಳಿ ಹಬ್ಬದಂದು ಶಿವಮೊಗ್ಗದಲ್ಲಿ ಕೋಮುಗಲಭೆ ಪರಿಸ್ಥಿತಿ ಕೈಮೀರಿದ್ದರಿಂದ ಪೊಲೀಸರು ನಡೆಸಿದ ಗೋಲಿಬಾರಿನಲ್ಲಿ ಇಬ್ಬರು ಬಲಿ
ಆಗಸ್ಟ್ ೬ ೨೦೦೮: ಅಮರನಾಥ್ ಭೂವಿವಾದ ಹಿನ್ನಲೆಯಲ್ಲಿ ಜಮ್ಮು ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿ ನಡೆದ ಪೊಲೀಸ್ ಗೋಲಿಬಾರ್ ನಲ್ಲಿ ಇಬ್ಬರು ಮೃತಪಟ್ಟು 18 ಮಂದಿ ಗಾಯಗೊಂಡಿದ್ದರು
ಜೂನ್ ೧೦ ೨೦೦೮: ಬಿತ್ತನೆ ಬೀಜ ಮತ್ತು ರಸಗೊಬ್ಬರ ಕೊರತೆಗಾಗಿ ಕುಪಿತಗೊಂಡ ರೈತರು  ಹಾವೇರಿ ಜಿಲ್ಲೆಯಾದ್ಯಂತ ತೀವ್ರವಾದ ಪ್ರತಿಭಟನೆಗೆ ನಡೆಸಿದ್ದರು, ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿ ಪ್ರತಿಭಟನೆ ನಡೆಸಿದ ರೈತರ ಮೇಲೆ ಪೋಲಿಸರು ಗೋಲಿಬಾರ್ ನಡೆಸಿದ್ದರು.
ಪ್ರತಿಭಟನೆಯನ್ನು ಹತ್ತಿಕ್ಕಲು ಭ್ರಷ್ಟಾಚಾರದ ವಿರುದ್ದ ದೆಹಲಿಯಲ್ಲಿ ಶಾಂತಿಯುತ ಸತ್ಯಾಗ್ರಹ ಹೂಡಿದ್ದ ಬಾಬಾರಾಮ್‌ದೇವ್ ಹಾಗೂ ಸಾವಿರಾರು ಬೆಂಬಲಿಗರ ಮೇಲೆ ರಾತ್ರೋರಾತ್ರಿ ಅಧಿಕಾರದ ದರ್ಪವನ್ನು ತೋರಿದ್ದರು.ಬಾಬಾರಾಮ್‌ದೇವ್‌ರನ್ನು ಬಂಧಿಸಿ, ಶಾಂತಿಯುತ ಪ್ರತಿಭಟನೆಯನ್ನು ಪಾಲ್ಗೊಂಡು ರಾತ್ರಿಯ ನಿದ್ರೆಗೆ ಜಾರಿದ್ದ ಸಾವಿರಾರು ಅಮಾಯಕ ನಾಗರಿಕರ ಮೇಲೆ ಅಧಿಕಾರದ ಲಾಠಿಯೇಟು ನೀಡಿ  ಮಹಿಳೆಯರು, ವೃದ್ಧರು ಸೇರಿದಂತೆ ಸತ್ಯಾಗ್ರಹಿಗಳ ಮೇಲೆ ದೌರ್ಜನ್ಯ ನಡೆಸಿದ್ದರು ದೆಹಲಿ ಪೋಲೀಸರು.
ಪರಿಸ್ಥಿತಿಯನ್ನು ನಿಭಾಯಿಸಲು ಇರುವ ಕಾನೂನು ಗಳ ಚೌಕಟ್ಟಿನಲ್ಲೇ ಮೇಲಿನ ಘಟನೆಗಳು ನಡೆದಿರಬೇಕಾದರೆ, ಸಶಸ್ತ್ರ ಪಡೆ (ವಿಶೇಷ ಅಧಿಕಾರ) ಕಾಯ್ದೆ  (ಎಎಫ್‌ಎಸ್‌ಪಿಎ) ಇನ್ನೇಷ್ಟು ಬಲವಾಗಿರಬೇಕು ಅಂತ ನಾವು ಊಹಿಸಬಹುದು. ಅನ್ಯಾಯದ ವಿರುದ್ಧ ದೂರು ಹೊತ್ತು ಕೋರ್ಟಿಗೆ ಹೋಗುವ ಹಕ್ಕೇ ಇಲ್ಲ ಎಂದಾದರೆ ಮಾನವ ಹಕ್ಕುಗಳಿಗೆ ಬೆಲೆ ಎಲ್ಲಿದೆ?
ಕೆಲ ಕಾಯಿದೆಗಳಲ್ಲಿ ಇಂತಹ ವಿಶೇಷ ಅಧಿಕಾರ ಗಳಿರುವುದರಿಂದಲೇ, ಹಾವೇರಿಯಲ್ಲಿ ರೈತರ ಮೇಲೆ ಗೋಲೀಬಾರ್, ಪೂನಾ ಮತ್ತು ಮುಂಬಯಿ ಹೈವೆ ನಲ್ಲಿ ಪ್ರತಿಭಟನೆ ನಡೆಸುತಿದ್ದ ರೈತರ ಮೇಲೆ ಫೈರಿಂಗ್ ಹೀಗೆ ಎಲ್ಲಿ ಬೇಕಾದರಲ್ಲಿ ಸಾಮನ್ಯ ಜನರ ಮೇಲೆ ದಬ್ಬಾಳಿಕೆ ನಡೆಸುವ ಅಧಿಕಾರಗಳಿರುವ ಕಾಯ್ದೆಗಳು ಇದ್ದರೆಷ್ಟು? ಸಮಸ್ಯೆಯ ತೀವ್ರತೆ ಯನ್ನು ಪರಿಗಣನೆಗೆ ತೆಗೆದುಕೊಳ್ಳದೆ ಪರಿಸ್ಥಿತಿ ನಿಯಂತ್ರಣಗೊಳಿಸುವುದಕ್ಕೋಸ್ಕರ ಶಸ್ತ್ರಾಸ್ತ್ರ ರಹಿತ ಅಮಾಯಕ ಜನ ಸಾಮಾನ್ಯರ ಮೇಲೆ ಫೈರಿಂಗ್ ನಡೆಸುವ ಪ್ರವೃತ್ತಿ ಸಹ ಕೊನೆಗೊಳ್ಳಬೇಕು. ಸಮಾಜಕ್ಕೆ ಕಂಟಕ ವಾಗಿರುವ ಉಗ್ರ ಶಕ್ತಿ ಗಳ ದಮನಕ್ಕೆ ವರ್ಷಗಳ ಗಟ್ಟಲೆ ಯಾವುದೇ ನಿರ್ಧಾರ ತೆಗೆದುಕೊಳ್ಳದೆ ಸುಮ್ಮನೆ ಕುಳಿತು ಪ್ರತಿಭಟನೆ ನಡೆಸುವ ಜನರ ಮೇಲೆ ಪರಿಸ್ಥಿತಿ ನಿಯಂತ್ರಣ ದ ಹೆಸರಿನಲ್ಲಿ ದೌರ್ಜನ್ಯ ನಡೆಸುವ ಸರ್ಕಾರದ ರೀತಿ ನೀತಿಗಳ ಬಗ್ಗೆ ಏನೆನ್ನಬೇಕು.
ನಕಲಿ ಎನ್ ಕೌಂಟರ್ ನಡೆಸುವವರಿಗೆ ಗಲ್ಲು ಶಿಕ್ಷೆ ಯನ್ನು ಯಾಕೆ ನೀಡಬಾರದು ಎಂದು ಇತ್ತೀಚಿಗೆ ಸುಪ್ರಿಂ ಕೋರ್ಟ್ ಪ್ರಶ್ನಿಸಿದೆ, ಇದು ಒಂದು ಎಚ್ಚರಿಕೆ. ಸುಪ್ರಿಂ ಇಂತಹ ಚಾಟಿಯೇಟನ್ನು ಆಗಾಗ್ಗೆ ಬೀಸುತ್ತಿರುತ್ತದೆ. ಆಳುವ ಸರ್ಕಾರಗಳು ಎಚ್ಚೆತ್ತುಕೊಂಡು ಪರಿಸ್ಥಿತಿಯನ್ನು ಸೂಕ್ತರೀತಿಯಲ್ಲಿ ನಿಭಾಯಿಸಬೇಕು
ಈಶಾನ್ಯ ರಾಜ್ಯಗಳ ಪರಿಸ್ಥಿತಿ ಪ್ರತಿಯೊಬ್ಬರಿಗೂ ಗೊತ್ತಿದೆ, ಕೆಲ ಉಗ್ರ ಸಂಘಟನೆ ಗಳು ದೇಶದ ಏಕತೆ ಯನ್ನು ಭಂಗಪಡಿಸಲು ಸುಮಾರು ವರ್ಷಗಳಿಂದ ಪ್ರಯತ್ನ ನಡೆಸುತ್ತಿವೆ. ಜತೆಗೆ ಅಕ್ಕ ಪಕ್ಕದಲ್ಲಿರುವ ರಾಷ್ಟ್ರಗಳು ಸಹ ಅಂತಹ ಸಂಘಟನೆಗಳಿಗೆ ಸಹಾಯ ನೀಡುತ್ತಿರುವುದು ಜಗಜ್ಜಾಹೀರಾಗಿದೆ. ರಾಷ್ಟ್ರದ ಒಳಗಿದ್ದು ಇಂತಹ ಮಸಲತ್ತು ಮಾಡುವವರನ್ನು ಬಂಧಿಸಿ ವಿಚಾರಣೆ ನಡೆಸಿ ಕಾನೂನಿನ ಚೌಕಟ್ಟಿನಲ್ಲಿ ಶಿಕ್ಷೆ ಕೊಡಬೇಕು ಇದಕ್ಕೆ ಮೊದಲು ಅಲ್ಲಿ ಆಗ ಬೇಕಾಗಿರುವ ಅಭಿವೃದ್ದಿ ಕಾರ್ಯಗಳು ಮತ್ತು ಸಾಮಜಿಕ ಸುಧಾರಣೆ ಬಗ್ಗೆ ಗಮನ ವಹಿಸಿ ಜನಸಾಮನ್ಯರನ್ನು ಮೆಚ್ಚಿಸುವ ಕೆಲಸ ಮೊದಲು ಮಾಡಬೇಕಾಗಿದೆ. ಅತ್ಯಂತ ಚಿಕ್ಕ ಚೊಕ್ಕ ರಾಜ್ಯ ವಾದ ಮಣಿಪುರದಲ್ಲಿ ಇದು ಅಸಾಧ್ಯವಾದ ಮಾತೇನಲ್ಲ. ಅಪಾರ ನೈಸರ್ಗಿಕ ಸಂಪತ್ತು ಇರುವ ಹಾಗು ಪ್ರಾಕೃತಿಕ ಸೌಂದರ್ಯವಿರುವ ಈ ಪುರಾತನ ನಾಡಿನಲ್ಲಿ ಪ್ರಗತಿ ಸಾಧಿಸುವುದಕ್ಕೆ ಅಲ್ಲಿನ ರಾಜಕಾರಣಿಗಳಿ ಇಚ್ಚಾಶಕ್ತಿ ಬಹುಮುಖ್ಯ ಮತ್ತು ಕೇಂದ್ರದ ಸಹಕಾರ ಸಹ ಅಗತ್ಯ.
ಕಾನೂನಿನ ಸಾಧಕ ಭಾದಕಗಳನ್ನು ಚರ್ಚಿಸಿ ಆದಷ್ಟು ಬೇಗ ಕೆಲವು ನಿಲುವುಗಳನ್ನು ಸಡಿಲಿಸಿ ಇರೋಂ ಶರ್ಮಿಳಾ ಚಾನು ರವರ ಮನಒಲಿಸಿ ಅವರ ಉಪವಾಸ ಸತ್ಯಾಗ್ರಹವನ್ನು ಕೈಬಿಡುವಂತೆ ಮಾಡಬೇಕು. ದೌರ್ಜನ್ಯ ಎಸಗಿದ ಸೈನ್ಯಾಧಿಕಾರಿಗಳನ್ನು ವಿಚಾರಣೆಗೊಳಪಡಿಸಿ ಶಿಕ್ಷೆ ಆಗುವಂತೆ ಮಾಡುವ ಕೆಲಸ ಮೊದಲು ಆಗಬೇಕು.ಸೋಮವಾರ, ಸೆಪ್ಟೆಂಬರ್ 12, 2011

ಒಂದು ವಾರದಲ್ಲಿ ಒಮಾನ್ ದೇಶದಲ್ಲಿ ೨೩೪ ಅಪಘಾತ: ಮೃತರ ಸಂಖ್ಯೆ ೨೮.


ಕಳೆದ ರಮದಾನ್ ಈದ್ ರಜಾದಿನಗಳ ಒಂದು ವಾರದ ಅವಧಿಯಲ್ಲಿ ಒಮಾನ್ ನಲ್ಲಿ ವಿವಿದೆಡೆ ನಡೆದ ೨೩೪ ವಾಹನ ಅಪಘಾತದಲ್ಲಿ ಮೃತಪಟ್ಟವರು ೨೮ ಮಂದಿ ಹಾಗು ಗಾಯಾಳುಗಳು ೩೪೬ ಮಂದಿ ಎಂದು ರಾಯಲ್ ಪೋಲಿಸ್ ಆಫ್ ಒಮಾನ್ ವರದಿಯನ್ನು ಪ್ರಕಟಿಸಿದೆ. ಮೃತಪಟ್ಟವರಲ್ಲಿ ಒಮಾನಿಗಳು ಸೇರಿದಂತೆ ವಲಸೆಗಾರರು ಸಹ ಇದ್ದಾರೆ.

ಅತಿವೇಗ ಮತ್ತು ಅಜಾಗರುಕತೆ ಕಾರಣದಿಂದ ಬಹುತೇಕ ಅಪಘಾತಗಳು ಸಂಭವಿಸಲ್ಪಟ್ಟಿವೆ. ಮುನ್ನೆಚ್ಚರಿಕಾ ಕ್ರಮವಾಗಿ ROP ಕೈಗೊಂಡ ನಿರಂತರ ಸಂಚಾರ ಜಾಗೃತಿ ಅಭಿಯಾನದ ಭಾಗವಾಗಿ ಅಪಘಾತಗಳ ಸಂಖ್ಯೆ ಕಡಿಮೆ ಯಾಗಿದೆ ಕಳೆದ ವರ್ಷದ ಇದೇ ಸಮಯದಲ್ಲಿ ೩೦ ಜನ ಮೃತ ಪಟ್ಟಿದ್ದು ೩೯೪ ಜನ ಗಾಯಗೊಂಡಿದ್ದರು.
೨೫ ಲಕ್ಷ ಜನಸಂಖ್ಯೆ ಯಿರುವ ಇಡೀ ಒಮಾನಿನಲ್ಲಿ  ಒಂದುವಾರದ ಅವಧಿಯಲ್ಲಿ ೨೩೪ ಅಪಘಾತಗಳು ನಡೆಯುವುದು ಸಾಮಾನ್ಯ ಮಾತಲ್ಲ.

ಇಲ್ಲಿನ ಹೆಚ್ಚಿನ ವಾಹನಗಳು ಆಟೋಮ್ಯಾಟಿಕ್ ಗೇರ್ ಟ್ರಾನ್ಸ್ಮಿಶನ್ ವ್ಯವಸ್ಥೆ ಯನ್ನು ಹೊಂದಿದ್ದು, ಗೇರ್ ಬದಲಾಯಿಸುವ ಪ್ರಸಂಗವೇ ಬರುವುದಿಲ್ಲ. ಆ ಕಾರಣದಿಂದ ಒಮ್ಮೆ ಆಕ್ಸಿಲರೇಟರ್ ಮೇಲೆ ಕಾಲಿಟ್ಟರೆ ರಸ್ತೆಯಲ್ಲಿ ಯಾವುದೇ ಅಡೆತಡೆಗಳು ಇಲ್ಲದೆ ಇದ್ದಲ್ಲಿ ಹೆಚ್ಚಿನ ವೇಗದಲ್ಲಿ ವಾಹನ ಚಲಾಯಿಸುವುದು ರೂಡಿಯಾಗಿಬಿಟ್ಟಿದೆ.
ಇತ್ತೀಚಿಗೆ ಸಲಾಲ ದಲ್ಲಿ  ಒಬ್ಬ ಮಲೆಯಾಳಿ ತನ್ನ ಕುಟುಂಬ ಸಮೇತವಾಗಿ ರಸ್ತೆ ದಾಟುವಾಗ ಅತಿ ಹೆಚ್ಚು ವೇಗದಲ್ಲಿ ಬಂದ ವಾಹನ ಅವನಿಗೆ ಡಿಕ್ಕಿ ಹೊಡೆದು ಸ್ಥಳದಲ್ಲೆ ಅವನು ಸಾವನಪ್ಪಿದ ಹಾಗು ಜತೆಯಲ್ಲಿದ ಮಕ್ಕಳು ಗಾಯಗೊಂಡರು. ಇಲ್ಲಿನ ಎಂಬಸಿ ಹಾಗು ಕೆಲ ಸಂಘಗಳ ಸಹಾಯದಿಂದ ೨-೩ ದಿನಗಳ ಅವಧಿಯಲ್ಲಿ ಮೃತ ದೇಹವನ್ನು ಕೇರಳಕ್ಕೆ ಸಾಗಿಸುವ ವ್ಯವಸ್ಥೆ ಮಾಡಲಾಯಿತು. ಕೆಲವೊಮ್ಮೆ ತನ್ನದಲ್ಲದ ತಪ್ಪಿಗಾಗಿ ಅಮಾಯಕರು ಜೀವ ತೆತ್ತ ಉದಾಹರಣೆಗಳಿವೆ.
ಸಲಾಲದ ಕರೀಫ್ ಸೀಸನ್ ನಲ್ಲಿ ಪಕ್ಕದ ಗಲ್ಫ್ ರಾಷ್ಟ್ರಗಳಿಂದ ಅತಿ ಹೆಚ್ಚಿನ ಪ್ರವಾಸಿಗರು ಸಲಾಲಕ್ಕೆ ಬರುತ್ತಾರೆ. ಈ ಸಮಯದಲ್ಲಿ ಹೆಚ್ಚಿನ ಅಪಘಾತ ಗಳಾಗುವುದು ಸಾಮಾನ್ಯ. ಒಮ್ಮೆ ಒಬ್ಬ ವಿದೇಶಿ ಪ್ರವಾಸಿಗ ಹೀಗೆ ಅತಿವೇಗವಾಗಿ ವಾಹನ ಚಲಾಯಿಸುವಾಗ ರಸ್ತೆಯ ಪಕ್ಕದಲ್ಲಿದ್ದ ಕ್ಯಾಮೆರ ವೊಂದು ವಾಹನದ ಫೋಟೊವನ್ನು ಸೆರೆ ಹಿಡಿಯಿತು. ಕೋಪಗೊಂಡ ಆ ವಾಹನದ ಚಾಲಕ ಮತ್ತೆ ವಾಪಾಸ್ಸು ಬಂದು ಆಕ್ಯಾಮೆರವನ್ನು ಪುಡಿ ಪುಡಿ ಮಾಡಿ ಹೋದ. ಸ್ವಲ್ಪ ತನ್ನ ವೇಗವನ್ನು ನಿಯಂತ್ರಿಸಿದಿದ್ದರೆ ಇಂತಹ ಕಷ್ಟ ಪಡುವ ಅವಸ್ಥೆಯೆ ಬರುತ್ತಿರಲಿಲ್ಲ.
ಹಳ್ಳಕೊಳ್ಳ ಉಬ್ಬು ತಗ್ಗು ಗಳಿಲ್ಲದ ರಸ್ತೆಯ ಮೇಲೆ ವಾಹನ ಚಲಾಯಿಸುವುದೆಂದರೆ ಎಂತಬ್ಬೊರಿಗೂ ಖುಶಿಯಲ್ವೆ. ಅತಿಯಾದ ವೇಗ ಅಪಘಾತಕ್ಕೆ ಕಾರಣ ಎನ್ನುವ ಸ್ಲೋಗನ್ ನಮ್ಮ ಕೆ.ಎಸ್.ಆರ್.ಟಿ.ಸಿ ಬಸ್ಸುಗಳಲ್ಲಿ ಹಾಗು ರಸ್ತೆಯ ಅಕ್ಕಪಕ್ಕದಲ್ಲಿಯು ಇಂತಹ ಸೂಚನಫಲಕ ವಿರುವುದನ್ನು ನೋಡಿರ್ತಿವಿ. ಕೊಲ್ಲಿ ರಾಷ್ಟ್ರಗಳಲ್ಲಿ ಅತ್ಯಂತ ಗುಣಮಟ್ಟದ ರಸ್ತೆ ಗಳಿದ್ದು, ಹೈಯ್ ವೇ, ರಿಂಗ್ ರಸ್ತೆ ಹಾಗೂ ಕೆಲ ಮುಖ್ಯ ರಸ್ತೆ ಗಳಲ್ಲಿ ೮೦-೧೦೦ಕ್ಕಿಂತ ಕಡಿಮೆ ವೇಗದಲ್ಲಿ ವಾಹನ ಚಲಾಯಿಸಿದರೆ ಟ್ರಾಫಿಕ್ ಜಾಮ್ ಗೆ ಅವಕಾಶ ಮಾಡಿಕೊಟ್ಟಂಗಾಗುತ್ತೆ ಎಂದು ಪ್ರತಿಯೊಬ್ಬರು ಅಂತಹ ವೇಗವನ್ನು ಕಾಯ್ದುಕೊಳ್ಳಲು ಪ್ರಯತ್ನಿಸುತ್ತಾರೆ. ಕೆಲವರು ತಮಗಿರುವ ಕೆಲಸದ ಅವಸರ ಕಾರಣವಾಗಿ ಅತಿ ವೇಗವಾಗಿ ಚಲಾಯಿಸಿದರೆ ಮತ್ತೆ ಕೆಲವರು ಮೋಜಿಗಾಗಿ ಹೆಚ್ಚಿನ ವೇಗದಲ್ಲಿ ವಾಹನ ಚಲಾಯಿಸುತ್ತಾರೆ.


 ಕೆಲವು ಕಡೆ ಅತಿ ವೇಗವಾಗಿ ವಾಹನಚಲಾಯಿಸುವವರನ್ನು ನಿಯಂತ್ರಿಸಲು ರಾಡಾರ್ ನಿಯಂತ್ರಿತ ಕ್ಯಾಮೆರ ಅಳವಡಿಸಿದ್ದು ವೇಗದ ಮಿತಿ ದಾಟಿದ ವಾಹನಗಳ ಫೋಟೋಗಳನ್ನು ತೆಗೆದು ಮಾಹಿತಿ ಶೇಕರಣೆ ಕಾರ್ಯನಡೆಯುತ್ತದೆ. ತಿಂಗಳಿಗೊಂದು ಅಥವ ಹದಿನೈದು ದಿನಗಳಿಗೊಂದಾವರ್ತಿಯಂತೆ ಮಾಹಿತಿ ಹೊರತೆಗೆದು ನಿಯಮ ಉಲ್ಲಂಘಿಸಿದ ವಾಹನ ಮಾಲೀಕರಿಗೆ ದಂಡವನ್ನು ವಿಧಿಸುತ್ತಾರೆ.
ಸಾಮನ್ಯವಾಗಿ ರಸ್ತೆಯ ಮಧ್ಯೆ ಇಂತಹ ಕ್ಯಾಮೆರಗಳಿರುತ್ತವೆ. ದಿನನಿತ್ಯ ವಾಹನ ಚಲಾಯಿಸುತ್ತಿರುವವರಿಗೆ ಇವುಗಳ ಬಗ್ಗೆ ಗಮನವಿದ್ದು, ಒಂದುವೇಳೆ ನಿಗದಿ ಪಡಿಸಿದ ವೇಗಕ್ಕಿಂತ ಜಾಸ್ತಿಹೋಗುತಿದ್ದರೆ ಕ್ಯಾಮೆರ ಸಮೀಪಿಸುತಿದ್ದಂತೆ ತಮ್ಮ ವೇಗವನ್ನು ನಿಯಂತ್ರಿಸುತ್ತಾರೆ. ಕ್ಯಾಮೆರವನ್ನು ದಾಟಿದ ನಂತರ ಮತ್ತೆ ಮೊದಲಿನ ಸ್ಪೀಡಿಗೆ ಹಿಂತಿರುಗುತ್ತಾರೆ. ತುಂಬಾ ಚೆನ್ನಾಗಿರುವ ರಸ್ತೆಗಳಲ್ಲಿ ೧೬೦ಕ್ಕಿಂತ ಹೆಚ್ಚಿನ ವೇಗದಲ್ಲಿ ವಾಹನಚಲಾಯಿಸುವುದು ಸರ್ವೇ ಸಾಮನ್ಯ.
ಏನೆ ಆಗಲಿ ನಮ್ಮ ಜಾಗ್ರತೆ ಯಲ್ಲಿ ನಾವಿದ್ದು ರಸ್ತೆಯಲ್ಲಿ ಗಮನವಿಟ್ಟು ವಾಹನ ಚಲಾಯಿಸಿ ನಮ್ಮ ಹಾಗು ಬೇರೆಯವರ ಸುರಕ್ಷತೆಗೆ ಜವಬ್ದಾರರಾಗಬೇಕು.

ಭಾನುವಾರ, ಸೆಪ್ಟೆಂಬರ್ 4, 2011

ಮರಳುಗಾಡಿನಲ್ಲಿ ಮಲೆನಾಡು! ಒಮಾನ್ ದೇಶದ ಸಲಾಲ

ಮಲೆನಾಡು ಎಂದಾಕ್ಷಣ ನಮ್ಮ ಕಣ್ಮುಂದೆ  ಪಶ್ಚಿಮ ಘಟ್ಟ,ಹಲವಾರು ನದಿಗಳು,ನೂರಾರು ಜಲಪಾತ ಗಳು ಸದಾ ಹಸಿರು ತುಂಬಿರುವ ಗಿರಿಶ್ರೇಣಿ ಗಳು,ದಟ್ಟ ಕಾನನ ಗಳು ಸುಳಿಯುತ್ತವೆ. ಆದರೆ ಈ ಹಸಿರಿಗು ಮತ್ತು ಮರಳುಗಾಡಿಗು ಎತ್ತಣಿದೆತ್ತಣ ಸಂಭಂದ? ಓಮನ್ ದೇಶದ ದಕ್ಷಿಣ ಭಾಗದ  ದೋಫರ್ ಎನ್ನುವ ಪ್ರಾಂತ್ಯ ಇಂತಹ ಗಿರಿಶಿಖರಗಳಿಂದ ತುಂಬಿದೆ,ಅಲ್ಲಲ್ಲಿ ಹರಿಯುವ ನದಿಗಳು,ಚಿಕ್ಕ ಚಿಕ್ಕ ಜಲಪಾತಗಳು,ನದಿ ತೊರೆಗಳು ನಮ್ಮ ಮಲೆನಾಡನ್ನು ಜ್ನಾಪಿಸುತ್ತವೆ
http://www.gulfkannadiga.com/news-49597.html
ಸಲಾಲ್ಹ ಎನ್ನುವ ನಗರ ದೋಫರ್ ಪ್ರಾಂತ್ಯದ ರಾಜಧಾನಿ ಹಾಗು ಇದು ಒಮಾನ್ ದೇಶದ ಎರಡನೇ ವಾಣಿಜ್ಯ ನಗರ ಮಸ್ಕತ್ ನಿಂದ 1000 ಕಿಲೋ ಮೀಟರ್ ದೂರದಲ್ಲಿದೆ.ಇಲ್ಲಿ ಕರೀಫ್ ಸೀಸನ್ ಎಂದು ಕರೆಯಲ್ಪಡುವ ಮುಂಗಾರು ಹಬ್ಬ ಬಹು ಜನಪ್ರಿಯ.ಸುತ್ತ ಮುತ್ತಲಿನ ಅರಬ್ ದೇಶಗಳಾದ,ಸೌದಿ ಅರೇಬಿಯ,ಯು‌ಏ‌ಇ,ಕತಾರ್,ಬಹ್ರೇನ್,ಕುವೈತ್ ಮತ್ತಿತರ ಅರಬ್ ದೇಶಗಳ ಪ್ರಜೆಗಳು ಅವರ ದೇಶದಲ್ಲಿರುವ ಬಿಸಿವಾತಾವರಣದಿಂದ ತಪ್ಪಿಸಿಕೊಳ್ಳಲು ಸಲಾಲ್ಹ ದಲ್ಲಿನ ತಂಪಾದ ಹವೆ ಮತ್ತು ವಾತಾವರಣ ವನ್ನು ಸವಿಯಲು ಸಾಮನ್ಯವಾಗಿ ಆಗಸ್ಟ್ ಮತ್ತು ಸೆಪ್ಟೆಂಬರ್ ನಲ್ಲಿ ಭೇಟಿಯಿಡುತ್ತಾರೆ.
ಸರಕಾರ ಸಹ ಪ್ರವಾಸಿ ಹಬ್ಬ ವನ್ನಾಗಿ ಆಚರಿಸಿ ಪ್ರೋತ್ಸಾಹ ನೀಡುತ್ತದೆ.ಒಮಾನ್ ದೇಶದಲ್ಲಿ ವಾಸಿಸುತ್ತಿರುವ ಪ್ರತಿಯೊಬ್ಬ ಭಾರತೀಯನಿಗು ಈ ಸ್ಥಳದ ಬಗ್ಗೆ ಅರಿವಿರುತ್ತದೆ ಹಾಗು ಸಾಧ್ಯವಾದವರೆಲ್ಲರು ಭೇಟಿಯಿತ್ತಿರುತ್ತಾರೆ.ಯಾರ ಬಾಯಲ್ಲಿ ಕೇಳಿದರು ಒಮಾನ್ ನಲ್ಲಿ ನೋಡೊದಿಕ್ಕೆ ಏನಿದೆ ಅಂದ್ರೆ ಎಲ್ಲರು ಹೇಳೋದೆ ಸಲಾಲ್ಹ.
ಪ್ರವಾಸಿಗರ ಬೇಸಿಗೆ ರಜೆ ಕಳೆಯಲು ಮತ್ತು ಹಿತಕರವಾದ ಹವಾಮಾನ ಆನಂದಿಸಲು ದೋಫಾರ್ ಗವರ್ನೇಟ್ ಆಫ್ ಸಲಾಲ ಉತ್ಸವ ನಡೆಸಿ ಪ್ರವಾಸಿಗರನ್ನು ಆಕರ್ಷಿಸುತ್ತದೆ.  ಇಲಾಖೆಯ ಅಂಕಿ ಅಂಶಗಳ ಪ್ರಕಾರ,ಈ ಬಾರಿ ಒಂದು ದಶಲಕ್ಷಕ್ಕೂ ಹೆಚ್ಚು ಜನರು ಭೇಟಿ ನೀಡಿದ್ದಾರೆ.
http://thatskannada.oneindia.in/nri/article/2011/0828-salalah-in-oman-malenadu-of-gulf-aid0038.html
ಉತ್ಸವದ ಅಂಗವಾಗಿ ವಸ್ತುಪ್ರದರ್ಶನ, ಸಾಂಪ್ರದಾಯಿಕ ಹಳ್ಳಿ ಜೀವನ ಹಾಗು ಬುಡಕಟ್ಟು ಜನರ ವೈವಿಧ್ಯತೆಯ ಪ್ರದರ್ಶನ,ರಂಗಪ್ರದರ್ಶನ  ಮತ್ತು ಅನೇಕ ಇತರ ಮನರಂಜನೆ ಚಟುವಟಿಕೆಗಳು ಒಂದು ತಿಂಗಳು ನಡೆದವು.ಸರ್ಕಾರದ ಮತ್ತು ಖಾಸಗಿ ಸಂಘ ಸಂಸ್ಥೆಗಳು ಪ್ರವಾಸಿಗರಿಗಾಗಿ ಉಪಯುಕ್ತ ಮಾಹಿತಿ ಮತ್ತು ಸೇವೆಗಳನ್ನು ನೀಡಿದವು.
ಪ್ರವಾಸೊಧ್ಯಮವನ್ನು ಉತ್ತೇಜಿಸುವ ಸಲುವಾಗಿ ಇಲ್ಲಿನ ಒಮಾನ್ ಏರ್ ಹಾಗು ಮೊದಲನೆ ದರ್ಜೆಯ ಹೋಟೆಲ್ ಗಳಾದ ಕ್ರೌನ್ ಪ್ಲಾಜ,ಹಿಲ್ಟನ್ ಮತ್ತು ಮ್ಯಾರಿಯಟ್ ಗಳು ವಿವಿಧ ರೀತಿಯ ಕೊಡುಗೆ ಗಳನ್ನು ನೀಡಿ ಪ್ರವಾಸಿಗರನ್ನು ಆಕರ್ಷಿಸುವುದರಲ್ಲಿ ಹಿಂದೆ ಬೀಳಲಿಲ್ಲ.
ಸುರಕ್ಷತೆ ಮತ್ತು ಪ್ರವಾಸಿಗರಿಗೆ ಭದ್ರತೆ ಖಚಿತಪಡಿಸಲು, ರಾಯಲ್ ಓಮನ್ ಪೊಲೀಸ್ (ROP) ಎಲ್ಲಾ ಸ್ಥಳಗಳಲ್ಲಿ ಉಪಸ್ಥಿತರಿದ್ದರು.ಮಾಮೂಲಿದಿನಗಳಲ್ಲಿ ಕಡಿಮೆ ಯಿದ್ದ ಸಂಚಾರ ಈ ಒಂದು ತಿಂಗಳ ಅವಧಿಯಲ್ಲಿ ಹತ್ತು ಪಟ್ಟು ಹೆಚ್ಚಾಗಿತ್ತು.
ಎಲ್ಲಾ ದಿನ ನಿಯಂತ್ರಣ ಮತ್ತು ಸಂಚಾರ ನಿಯಂತ್ರಿಸಲು RPOಬಹು ಶ್ರಮಿಸಿದರು.ತುರ್ತು ಸಹಾಯ ಮಾಡಲು ಸಿವಿಲ್ ರಕ್ಷಣಾ ಸಿಬ್ಬಂದಿ ಕೂಡ ತುರ್ತು ಸೇವೆಗೆ ಸಿದ್ಧರಾಗಿದ್ದರು
ಮೊಬೈಲ್ ಜಾಲವನ್ನು ಬಲಪಡಿಸಲು Omentalಅತ್ಯಧಿಕ ಗೋಪುರಗಳನ್ನು ನಿರ್ಮಿಸಿತ್ತು. ಬಹುತೇಕ ಇಲ್ಲಿಯ ಎಲ್ಲ ಮಾಧ್ಯಮ ಗಳು ಪ್ರವಾಸೋಧ್ಯಮವನ್ನು ಪ್ರಚಾರ ಮಾಡಲು ಹಿಂದೆ ಬೀಳಲಿಲ್ಲ.
ಸುಲ್ತಾನರ ಮಾಧ್ಯಮ ಉತ್ಸವ ಚಟುವಟಿಕೆಗಳನ್ನು ಪ್ರಚಾರ ಮಾಡ
ಲು ಪ್ರಮುಖ ಪಾತ್ರ ವಹಿಸಿದೆ.ವಿಶೇಷ ಟಿವಿ ಮತ್ತು ರೇಡಿಯೋ ಕಾರ್ಯಕ್ರಮಗಳು ಪ್ರತಿದಿನ ಅರೇಬಿಕ್ ಮತ್ತು ಇಂಗ್ಲೀಷ್ ಪತ್ರಿಕೆಗಳು ’ವರದಿ ಜೊತೆಗೆ ಚಟುವಟಿಕೆಗಳು ಕವರ್ ಮಾಡಲಾಗಿದೆ.
ಟಿವಿ ಕಾರ್ಯಕ್ರಮಗಳು ವೀಕ್ಷಕರನ್ನು ನಿಜವಾದ ಥ್ರಿಲ್ ಮತ್ತು ಮನೋರಂಜನೆಗಾಗಿ Khareet  ಚಟುವಟಿಕೆಗಳು ಮತ್ತು Salalah ಜೊತೆಗಿರುವ ಅನುಭವ ನೀಡುತ್ತದೆ.
ಪ್ರೆಸ್,ಪಬ್ಲಿಕೇಷನ್ ಮತ್ತು ಜಾಹೀರಾತು (OEPPA)ಗೆ ಓಮನ್ ಎಸ್ಟಾಬ್ಲಿಷ್ಮೆಂಟ್,ಅಬ್ಸರ್ವರ್ ಮತ್ತು ಅದರ ಸಹೋದರಿ ಅರೆಬಿಕ್ Dailyಓಮನ್ ನ ಪ್ರಕಾಶಕರು ಘಟನೆಯ ಮಾಧ್ಯಮ ಹೊಣೆಗಾರಿಕೆಯನ್ನು ಹೊತ್ತಿದ್ದರು.

ಶುಕ್ರವಾರ, ಸೆಪ್ಟೆಂಬರ್ 2, 2011

ಮರೆತುಹೋದ ಶಾಸ್ತ್ರೀಯನ್ನು ನೆನಪಿಸಿದ ಅಣ್ಣಾ ಹಜಾರೆ

ಅಣ್ಣಾ ಹಜಾರೆ ಹೆಸರು ಕೇಳದ ಭಾರತೀಯ ಇಲ್ಲ ಹಾಗೂ ಇನ್ನು ಮುಂದೆ ಭಾರತೀಯರಿಗೆ ಆ ಹೆಸರು ಹೊಸದು ಅಲ್ಲ ಮತ್ತು ಹೊಸ ಮುಖವೂ ಅಲ್ಲ. 74ರ ಹರೆಯದ ಗಾಂಧೀವಾದಿ ಇಡೀ ದೇಶದ ಜನರನ್ನು ಒಗ್ಗೂಡಿಸಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ ಖ್ಯಾತಿ ಅವರದು. ಭ್ರಷ್ಟಾಚಾರ ವಿರೋಧಿ ಕಾಯ್ದೆಯಾದ ಜನ ಲೋಕಪಾಲ ಮಸೂದೆ ಜಾರಿಗೆ ಒತ್ತಾಯಿಸಿ ಹೋರಾಟ ನಡೆಸಿದ ಅಣ್ಣಾರಲ್ಲಿ ಹಲವರು ಒಬ್ಬ ನಿಷ್ಕಳಂಕ ಸಮಾಜ ಸುಧಾರಕನನ್ನು ಕಂಡಿದ್ದಾರೆ ಮತ್ತು ಅವರು ಮಾಡಿದ ಹೋರಾಟ ಎರಡನೇ ಸ್ವಾತಂತ್ರ್ಯ ಹೋರಾಟವೆಂದೇ ಎಂದು ಪರಿಗಣಿಸಿದ್ದಾರೆ.

ಅಣ್ಣಾ ಅವರ ಸರಳಾತಿ ಸರಳ ಜೀವನ, ನಿಷ್ಕಳಂಕ ವ್ಯಕ್ತಿತ್ವ, ಪ್ರಾಮಾಣಿಕತೆ, ನೇರವಂತಿಕೆ, ತ್ಯಾಗ ಅಹಿಂಸಾ ಮನೋಭಾವ, ಅವರ ದಿರಿಸು, ಅವರ ನೋಟ, ಅವರ ದೇಶಪ್ರೇಮ, ಇಂದಿನ ದಿನ ಮರೆತೇಹೋಗಿರುವ ಭಾರತದ ಮಾಜಿ ಪ್ರಧಾನಿ ದಿವಂಗತ ಲಾಲ್ ಬಹಾದೂರ್ ಶಾಸ್ತ್ರಿಯ(1904-1966)ವರನ್ನು ಕಣ್ಣಮುಂದೆ ತಂದು ನಿಲ್ಲಿಸುತ್ತದೆ. ಶಾಸ್ತ್ರೀಯವರು 'ಜೈ ಜವಾನ್ ಜೈ ಕಿಸಾನ್' ಅಂದಿದ್ದರೆ, ಅಣ್ಣಾ ಕೂಡ 'ರೈತರಿಲ್ಲದಿದ್ದರೆ ಈ ದೇಶವೇ ಇಲ್ಲ' ಎಂಬ ಸಂದೇಶ ಇಡೀ ದೇಶಕ್ಕೆ ರವಾನಿಸಿದ್ದಾರೆ.. ಶಾಸ್ತ್ರೀಜಿಯಂಥ ವ್ಯಕ್ತಿಯೊಬ್ಬರು ನಮ್ಮ ಕಣ್ಣಮುಂದಿರುವುದು ನಿಜಕ್ಕೂ ನಮ್ಮ ಸೌಭಾಗ್ಯವೇ ಸರಿ.

ಕೆಲ ದಿನಗಳ ನಂತರ ಅಥವಾ ಕೆಲ ವರ್ಷಗಳ ನಂತರ ಲಾಲ್ ಬಹಾದೂರ್ ಶಾಸ್ತ್ರಿಯವರು ಜನಮಾನಸದಿಂದ ಮರೆತುಹೋದಂತೆ ಅಣ್ಣಾ ಹಜಾರೆಯವರು ಕೂಡ ಮರೆತುಹೋದರೆ ಆಶ್ಚರ್ಯವಿಲ್ಲ. ಶಾಸ್ತ್ರೀಜಿಯವರ ಜನುಮದಿನ ಮಹಾತ್ಮಾ ಗಾಂಧೀಜಿಯವರ ಜನುಮದಿನದಂದೇ ಇದೆ ಎಂದು ಎಷ್ಟು ಜನರಿಗೆ ಗೊತ್ತಿದೆ? ಗೊತ್ತಿದ್ದರೂ ಎಷ್ಟು ಜನ ಅಷ್ಟೇ ಶ್ರದ್ಧೆಯಿಂದ ಆಚರಿಸುತ್ತಾರೆ? ಭ್ರಷ್ಟಾಚಾರದ ವಿರುದ್ಧ ಇಡೀ ದೇಶವನ್ನು ಬಡಿದೆಬ್ಬಿಸಿರುವ ಅಣ್ಣಾ ಹಜಾರೆ ವಿಷಯದಲ್ಲಿ ಹಾಗಾಗದಿರಲಿ ಎಂಬುದಷ್ಟೇ ನಮ್ಮ ಆಶಯ

ಶಾಸ್ತ್ರೀಜಿಯವರು ಒಬ್ಬ ಬಡ ಶಾಲಾ ಶಿಕ್ಷಕನ ಮಗನಾಗಿ ಜನಿಸಿ, ಚಿಕ್ಕವಯಸ್ಸಿನಲ್ಲಿ ತನ್ನ ತಂದೆಯವರನ್ನು ಕಳೆದುಕೊಂಡು, ಭ್ರಷ್ಟಾಚಾರ ರಹಿತ ಹಾಗೂ ವಿಶ್ವಾಸ ದ್ರೋಹ ಮಾಡದೆ ಸಂಪೂರ್ಣ ಜೀವನವನ್ನು ಕಳೆದರು. ಒಂದು ಸಾರಿ ವಾರಣಾಸಿಯಲ್ಲಿನ ಗಂಗಾನದಿಯ ದಡದಲ್ಲಿನ ಜಾತ್ರೆಯನ್ನು ನೋಡಲು ಸ್ನೇಹಿತರ ಜತೆ ಹೋಗಿದ್ದರು. ವಾಪಸ್ಸು ಬರುವಾಗ ದೋಣಿಯವನಿಗೆ ಹಣ ಕೊಡಲು ಕೈಯಲ್ಲಿ ಕಾಸಿರಲಿಲ್ಲ. ಸ್ನೇಹಿತರಿಂದ ಕಾಸು ಪಡೆದು ಪ್ರಯಾಣಿಸುವ ಬದಲು ನದಿಯೊಳಗೆ ಧುಮುಕಿ ಈಜಿ ಆಚೆ ದಡವನ್ನು ಸೇರಿದರು. ಶಾಸ್ತ್ರೀಜಿಯವರು ಜೀವನದುದ್ದಕ್ಕೂ ಇಂತಹ ಸರಳತೆಯನ್ನು ನಿರ್ವಹಿಸುತಿದ್ದುದನ್ನು ನಾವು ಕಾಣಬಹುದು.

ಅಣ್ಣಾ ಹಜಾರೆಯವರು ಒಂದು ಸಾರಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದರು. ಆದರೆ ನಂತರ ಮನಸು ಬದಲಾಯಿಸಿ, 15 ವರ್ಷ ಭಾರತೀಯ ಸೈನ್ಯದಲ್ಲಿ ಲಾರಿ ಚಾಲಕನಾಗಿ ಕಾರ್ಯನಿರ್ವಹಿಸಿ ತಮ್ಮ ಜೀವನವನ್ನು ದೇಶ ಸೇವೆಗೆ ಮುಡುಪಾಗಿಟ್ಟಿದ್ದರು. ತಮ್ಮ ನಿವೃತ್ತಿ ಜೀವನದ ನಂತರ ತಮ್ಮ ಸ್ವಂತ ಊರಾದ ಮಹರಾಷ್ಟ್ರದ ಬರ ಪೀಡಿತ ಗ್ರಾಮವಾದ ರಾಲೆಗಾಂವ್ ಸಿದ್ದಿಗೆ ಹೋಗಲು ನಿರ್ಧರಿಸಿದ್ದರು. ತದನಂತರ ರಾಲೆಗಾಂವ್ ಸಿದ್ದಿ ಗ್ರಾಮವನ್ನು ಅಹಮದ್ ನಗರ ಜಿಲ್ಲೆಯಲ್ಲಿ ಮಾದರಿ ಗ್ರಾಮವನ್ನಾಗಿ ಮಾಡಿದರು.

ಕುಡಿತ, ಬಡತನ, ಅನಕ್ಷರತೆಯ ದಾಸ್ಯಕ್ಕೆ ಸಿಲುಕಿ ನರುಳುತ್ತಿದ್ದ ಅಲ್ಲಿಯ ಜನರೊಳಗೆ, ಸಾಕ್ಷರತೆ, ನೈರ್ಮಲ್ಯ, ಮೌಲ್ಯಗಳನ್ನು ತುಂಬಿದ್ದಲ್ಲದೇ ಕುಡಿತದ ಚಟ ಇರುವವರನ್ನು ನಯದಿಂದ ತಿದ್ದಿ, ಬಗ್ಗದವರನ್ನು ಶಿಕ್ಷೆಯಿಂದ ದಾರಿಗೆ ತಂದು ಆದರ್ಶ ಗ್ರಾಮವನ್ನಾಗಿಸಲು ದುಡಿದವರು. ಈಗ ಈ ಪುಟ್ಟ ಗ್ರಾಮ ದೇಶದಲ್ಲೇ ಶ್ರೀಮಂತ ಹಾಗೂ ಮಾದರಿ ಗ್ರಾಮವಾಗಿ ಪ್ರಚಲಿತಗೊಂಡಿದೆ. ಸೌರಶಕ್ತಿಯ ಬಳಕೆಯ ಮೂಲಕ ಇಂಧನ ಉಳಿತಾಯದಂತಹ ಸದುದ್ದೇಶಗಳನ್ನು ಪ್ರೇರೇಪಿಸಿದ ಈ ಸಮಾಜ ಸೇವಕ ಸದಾ ದೇಶದ ಸರ್ವತೋಮುಖ ಏಳಿಗೆಯನ್ನು ಬಯಸಿದವರು

ಶಾಸ್ತ್ರೀಜಿಯವರು ಗಾಂಧಿ ಟೋಪಿ, ಜುಬ್ಬಾ ಮತ್ತು ಧೋತಿ ಧರಿಸಿದರೆ ಅಣ್ಣಾರವರು ಸಹ ಇದೇ ಮಾದರಿಯ ಉಡುಗೆಯನ್ನು ಧರಿಸುತ್ತಾರೆ. ಇತ್ತೀಚೆಗಿನ ಅವರ ಎರಡನೇ ಉಪವಾಸ ಸತ್ಯಾಗ್ರಹದಲ್ಲಿ ಅದೂ ಇಂದಿನ ಐಪಾಡ್, ಲ್ಯಾಪ್ಟಾಪ್ ಮತ್ತು ಲಕ್ಶುರಿ ಸಾಧನಗಳ ನವಯುಗದಲ್ಲಿ ಗಾಂಧಿ ಟೋಪಿ ಒಂದು ಹೊಸ ಫ್ಯಾಶನ್ ಆಗಿ ಯುವ ಜನತೆ ಮತ್ತು ಮಕ್ಕಳಲ್ಲಿ ಕಾಣಿಸಿದೆ. ಎರಡು ವಿಶಿಷ್ಟ ರೀತಿಯ ಪ್ರತಿಭಟನೆಗಳು ಈ ದೇಶದ ಜನತೆಯನ್ನು ಒಗ್ಗೂಡಿಸಿದೆ

"ಜೈ ಜವಾನ್ ಜೈ ಕಿಸಾನ್" ಘೋಷಣೆಯ ಸೃಷ್ಟಿಕರ್ತ ಶಾಸ್ತ್ರೀಜಿ 1965ರಲ್ಲಿ ಪಾಕಿಸ್ತಾನದೊಂದಿಗೆ ಯುದ್ಧ ಸಮಯದಲ್ಲಿ ಭಾರತದ ಆಹಾರ ಉತ್ಪಾದನೆ ಹೆಚ್ಚಿಸುವ ಅಗತ್ಯವಿದೆ ಎಂದು ಒತ್ತು ನೀಡಿದ್ದರು. ಸೆಪ್ಟೆಂಬರ್ 23, 1965ರಲ್ಲಿ ಕದನ ವಿರಾಮ ಘೊಷಣೆ ನಂತರ, ಶಾಸ್ತ್ರೀಜಿ ಮತ್ತು ಪಾಕಿಸ್ತಾನದ ಅಧ್ಯಕ್ಷ ಮಹಮ್ಮದ್ ಅಯೂಬ್ ಖಾನ್ ಜನವರಿ 10, 1966ರಂದು ಶಾಂತಿ ಒಪ್ಪಂದ ಘೋಷಣೆ ಮಾಡಿ ತಾಷ್ಕೆಂಟ್ ನಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ್ದರು.

ಅದೇ ರೀತಿ, ಅಣ್ಣಾ ನಾಲ್ಕು ದಶಕಗಳಿಂದ ಹೆಚ್ಚು ಬೆಳಕಿಗೆ ಬಾರದೆ ಭ್ರಷ್ಟಾಚಾರ ವಿರೋಧಿ ಜನ ಲೋಕಪಾಲ ಮಸೂದೆಯ ಬಗ್ಗೆ ಭಾರತೀಯರಲ್ಲಿ ಅರಿವು ಮೂಡಿಸಿದರು. ಆದರೆ ಸತತ 8 ವ್ಯರ್ಥ ಪ್ರಯತ್ನಗಳ ಹೊರತಾಗಿಯೂ ಮತ್ತು ಪ್ರತಿಬಾರಿ ಮಂಡನೆಗೆ ಒಂದೊಂದು ಹೊಸ ರೀತಿಯ ಆವೃತ್ತಿ ಸಿದ್ದವಾದರೂ ಸಂಸತ್ತಿನಲ್ಲಿ ಮನ್ನಣೆ ಸಿಗಲಿಲ್ಲ. ಜೂನ್ 2011ರಲ್ಲಿ ಅಣ್ಣಾ ತಮ್ಮ ಮೊದಲ ಉಪವಾಸ ಸತ್ಯಾಗ್ರಹದಲ್ಲಿ ಮಸೂದೆಗೆ ಅಂತಿಮ ಕರಡು ರೂಪಿಸುವ ಕೆಲಸ ಮಾಡಲು ಜಂಟಿ ಸಮಿತಿಯನ್ನು ರಚಿಸಲು ಸರ್ಕಾರವನ್ನು ಒತ್ತಾಯಿಸಿದರು.

ಸಿವಿಲ್ ಸೊಸೈಟಿಯ ಬೇಡಿಕೆಗಳಿಗೆ ಕೇಂದ್ರ ಬಗ್ಗದಿದ್ದರಿಂದ ಅಣ್ಣಾ ಮತ್ತೆ ಉಪವಾಸ ಸತ್ಯಾಗ್ರಹ ಕುಳಿತರು. ಕೊನೆಗೆ ತಮ್ಮ ಹೋರಾಟದಲ್ಲಿ ಬಾಗಶಃ ಜಯಗಳಿಸಿದ್ದು ಇರುವ ಅನೇಕ ಇತಿಮಿತಿಗಳ ನಡುವೆಯೂ ಸರಕಾರ, ಅಣ್ಣಾ ಮತ್ತು ಅವರ ತಂಡದ ಬೇಡಿಕೆಗಳನ್ನು ಮಸೂದೆಯಲ್ಲಿ ಜಾರಿಗೊಳಿಸಲು ಒಪ್ಪಿಸುವಂತೆ ಮಾಡಿದ್ದಾರೆ.

ದೇಶದ ಪಿತಾಮಹ ಮಹಾತ್ಮ ಗಾಂಧೀಜಿಯವರು ಆರಂಭಿಸಿದ ಅಹಿಂಸಾ ಮಾರ್ಗದಲ್ಲಿ ಶಾಸ್ತ್ರೀಜಿ ಮತ್ತು ಅಣ್ಣಾರವರು ನಂಬಿಕೆ ಇಟ್ಟಿದ್ದರು, ಎಂದು ಇವರು ನಡೆಸಿದ ಚಳವಳಿ ಮುಖಾಂತರ ನಮಗೆ ಗೊತ್ತಾಗುತ್ತದೆ. ಗಾಂಧಿಯವರ 1921ರ ಅಸಹಕಾರ ಚಳವಳಿಯಲ್ಲಿ ಶಾಸ್ತ್ರೀಜಿಯವರು ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದರು. ನಿಷೇದಾಜ್ಞೆ ಸ್ಥಳದಲ್ಲಿ ಮೆರವಣಿಗೆಯಲ್ಲಿ ಬಾಗವಹಿಸಿದ್ದ ಅವರನ್ನು ಬಂಧಿಸಲಾಗಿತ್ತು. ಬಂಧಿತರಾದ ಅವರನ್ನು ಚಿಕ್ಕ ವಯಸ್ಸಿನ ಬಾಲಕ ಎಂದು ಬಿಡುಗಡೆ ಮಾಡಿದರು. ನಂತರ 1930ರಲ್ಲಿ ಮಹಾತ್ಮ ಗಾಂಧಿಯವರ ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿ ತಮ್ಮ ಜೀವನವನ್ನು ಸ್ವಾತಂತ್ರ್ಯ ಹೋರಾಟಕ್ಕೆ ಮುಡುಪಾಗಿಟ್ಟರು. ಆಗ ಅವರಿಗೆ 2 ವರ್ಷ 6 ತಿಂಗಳು ಜೈಲುವಾಸವಾಗಿತ್ತು.

ಆದರೆ, ಅಣ್ಣಾ ರಾಮಲೀಲಾ ಮೈದಾನದಲ್ಲಿ ತಮ್ಮ 12 ದಿನದ ಉಪವಾಸ ಸತ್ಯಾಗ್ರಹದ ಸರ್ಕಾರದ ವಿರುದ್ಧ ಪ್ರತಿಭಟನೆ ಸಂದರ್ಭದಲ್ಲಿ ರಾಷ್ಟ್ರವ್ಯಾಪಿ ತಮ್ಮ ಅನುಯಾಯಿಗಳನ್ನು ನಿಯಂತ್ರಿಸುವ ಮೂಲಕ ಶಾಂತಿ ಕಾಪಾಡುವಲ್ಲಿ ಯಶಸ್ವಿಯಾದರು. ದೇಶದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿಯ ಜನರೂ ಈ ಗಾಂಧೀವಾದಿ ತೋರಿಸಿಕೊಟ್ಟ ಮಾರ್ಗದಲ್ಲಿ ನಡೆದು ಅವರ ಕಾರ್ಯಕ್ಕೆ ಕೈ ಜೋಡಿಸಿದರು.

ಈ ಮೇಲಿನ ಕೆಲ ಹೋಲಿಕೆಗಳ ನಂತರವೂ ಅಣ್ಣ ಮತ್ತು ಶಾಸ್ತ್ರೀಜಿ ದೇಶದ ಜನರಿಂದ ಎರಡು ವಿಭಿನ್ನ ಪ್ರತಿಕ್ರಿಯೆಗಳು ಎದುರಿಸಿರಬಹುದಾಗಿದೆ ಎಂದು ನಂಬಬಹುದು. ಆಧುನಿಕ ಮಾಧ್ಯಮ ಮತ್ತು ತಂತ್ರಜ್ಞಾನದ ಸಹಾಯದಿಂದ ಅಣ್ಣಾ ಸಾಮೂಹಿಕವಾಗಿ ರಾಷ್ಟ್ರವ್ಯಾಪ್ತಿ ತಲುಪಿದ್ದಾರೆ. ಜನರು ಅಣ್ಣಾ ಹಜಾರೆಯವರನ್ನು ಪೂಜಿಸಲು ಪ್ರಾರಂಭಿಸಿದ್ದು, ಅನೇಕರು ಅಣ್ಣಾ ಹಜಾರೆಗಾಗಿ ಒಂದು ದೇವಾಲಯವನ್ನು ನಿರ್ಮಿಸಲು ಮುಂದಾಗಿದ್ದಾರೆ. ಇದಕ್ಕೆ ಅಣ್ಣಾ ಅವಕಾಶ ನೀಡುವುದಿಲ್ಲ ಅನ್ನುವುದು ಎರಡನೇ ವಿಚಾರ. ಕೆಲ ವರದಿಗಳ ಪ್ರಕಾರ ಅಣ್ಣಾರವರ 12 ದಿನದ ಸುದೀರ್ಘ ಉಪವಾಸದ ಘಟನೆಯನ್ನು ಮುಂಬೈನಲ್ಲಿ ಗಣೇಶ ಪೂಜಾ ಸಮಯದಲ್ಲಿ ನಿರೂಪಣಾ ವಿಷಯವಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ.


ಆದರೆ, ಶಾಸ್ತ್ರೀಜಿಯವರ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ ಹಾಗು ದೇಶದ ಪ್ರಗತಿಗಾಗಿ ಅವರ ಅತ್ಯುನ್ನತ ಕೊಡುಗೆಯ ಹೊರತಾಗಿಯೂ, ಇತರೆ ಸ್ವಾತಂತ್ರ್ಯ ಹೋರಾಟಗಾರರು ಅಥವ ಕೆಲ ರಾಜಕಾರಣಿಗಳು ಪಡೆದ ಮನ್ನಣೆಯನ್ನು ಲಾಲ್ ಬಹಾದುರ್ ಶಾಸ್ತ್ರೀಜಿಯವರೂ ಪಡೆಯಲಿಲ್ಲ ಎನ್ನುವುದು ವಿಷಾದದ ಸಂಗತಿ.


ಅಕ್ಟೋಬರ್ 2ರ ಗಾಂಧಿ ಜಯಂತಿ ಆಚರಿಸುವ ಸಂದರ್ಭದಲ್ಲಿ ಬಹುತೇಕ ಜನರು ಶಾಸ್ತ್ರೀಜಿಯವರನ್ನು ನೆನಪಿಸಿಕೊಳ್ಳುವ ಗೊಡವೆಗೇ ಹೋಗುವುದಿಲ್ಲ. ಗಾಂಧೀಜಿಯವರ ಖ್ಯಾತಿ ಮತ್ತು ಜನಪ್ರಿಯತೆ ಅವರನ್ನು ಮಸುಕಾಗಿಸಿಬಿಟ್ಟಿದೆ. ಒಮ್ಮೆ CNN-IBN ಸಂಪಾದಕ ಹಾಗು ಮುಖ್ಯಸ್ಥ ರಾಜದೀಪ್ ಸರ್ದೇಸಾಯಿ " ಒಂದು ರೀತಿಯಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನವನ್ನು ಗಾಂಧಿಯವರ ಜತೆ ಹಂಚಿಕೊಳ್ಳುತ್ತಿರುವುದು ದುಃಖದ ಸಂಗತಿ. ಮಹಾತ್ಮರವರ ನೆರಳಿನಲ್ಲಿ ಬದುಕುವುದು ಬಹು ಕಷ್ಟ" ಎಂದು ಟ್ವೀಟ್ ಮಾಡಿದ್ದರು.
***********************
೦೨.೦೯.೨೦೧೧ ರಂದು ದಟ್ಸ್ ಕನ್ನಡ ದಲ್ಲಿ ಪ್ರಕಟವಾಗಿದ್ದ ನನ್ನ ಅನುವಾದಿತ ಲೇಖನ
ಮೂಲ ಲೇಖಕರು: ನೈರಿತಾ ದಾಸ್