ಶನಿವಾರ, ಡಿಸೆಂಬರ್ 5, 2015

ಕಿರುಕತೆ: ತಲ್ಲಣ


"ಚಿನ್ನು ಈದ್ ರಜೆ ಅನೌನ್ಸ್ ಮಾಡಿದ್ದಾರೆ ರಜೆಯಲ್ಲಿ ಊರಿಗೆ ಬರ್ತಾ ಯಿದ್ದೀನಿ. ಇಲ್ಲಿಂದ ಏನಾದ್ರು ತರೋದಿದ್ರೆ ಹೇಳು" ಎಂದು  ವಾಟ್ಸಪ್ ನಲ್ಲಿ ಮೆಸ್ಸೇಜ್ ಮಾಡಿದರು.  
ಏನೂ ಬೇಡ, ನೀವು ಬಂದರೆ ನಿಮ್ಮತ್ರ ನಾನು ಮಾತಾನಾಡಬೇಕು. 
ಏನ್ ವಿಷಯ?
ಒಂದು ಹುಡುಗ ನನಗೆ ಪ್ರಪೋಸ್ ಮಾಡಿದ್ದಾನೆ. 
ಓಹ್ ಹೌದಾ!!!, ಅದೆಲ್ಲ ಕಾಮನ್. ಅದರ ಬಗ್ಗೆ ಚಿಂತೆ ಬೇಡ. ನಿನ್ನ ಪಾಡಿಗೆ ನೀನು ಓದಿನ ಕಡೆ ಗಮನ ಕೊಡು.
ಸರಿ ಪಪ್ಪ, ಆದರೆ.......
ಪ್ಲೀಸ್..... ಈಗ ಅದೆಲ್ಲ ಬೇಡ. ಇನ್ನು ಒಂದು ವರ್ಷ ನಿನ್ನ ಮೆಡಿಕಲ್ ಮುಗಿಯುತ್ತೆ, ಆಮೇಲೆ ಎಮ್ ಎಸ್ ಗೆ ಪ್ಲಾನ್ ಮಾಡ ಬೇಕು. ಮಗಳೇ... ನಿಮ್ಮಮ್ಮನ ಕನಸನ್ನು ನಾನು ನನಸು ಮಾಡಬೇಕು. ದಯವಿಟ್ಟು, ಈಗ ವಿದ್ಯಾಭ್ಯಾಸದ ಬಗ್ಗೆ ಗಮನ ಕೊಡು.
ಸರಿ ಪಪ್ಪ.
ಓಕೆ.. ಬೈ,
----

ಮಗಳು ಪ್ರಸ್ತಾಪಿಸಿದ ವಿಷಯ ಅವರ ಮನಸ್ಸನ್ನು ಸ್ವಲ್ಪ ಗಲಿಬಿಲಿ ಗೊಳಿಸಿತು. ಇದೆಲ್ಲ ಈಗ ಸಾಮಾನ್ಯ, ದಿನಗಳು ಕಳೆದ ಮೇಲೆ ಅದನ್ನು ಅರ್ಥ ಮಾಡ್ಕೋತ್ತಾಳೆ ಎಂದು ತಮ್ಮನ್ನು ತಾವೆ ಸಂತೈಸಿಕೊಂಡರು. ಮಗಳು ಹೇಳಿದ ವಿಚಾರದ ಕುರಿತು, ಬಂಧುಮಿತ್ರರಲ್ಲಿ ಹೇಳಿಕೊಳ್ಳೋಣ ವೆಂದು ಅನಿಸಿದರೂ ಸಹ, ಅನವಶ್ಯಕವಾಗಿ ಇದೊಂದು ದೊಡ್ಡ ವಿಷಯವಾಗಿಸಿ ಸಮಸ್ಯೆ ಮಾಡಿಕೊಳ್ಳೋದು ಬೇಡ ಅಂತ ಸುಮ್ಮನಾದರು.
ಸುಮಾರು ೧೫ ವರ್ಷಗಳಿಂದ ಮಸ್ಕತ್ ನಲ್ಲಿ ಅವರು ಉದ್ಯೋಗ ಮಾಡುತಿದ್ದರು. ಮಗಳು ಮಸ್ಕತ್ ನ ಭಾರತೀಯ ಶಾಲೆಯಲ್ಲಿ ಎಂಟನೇ ತರಗತಿ ಓದುತ್ತಿರುವಾಗ ಹೆಂಡತಿ ಅನಾರೋಗ್ಯಕ್ಕೆ ತುತ್ತಾಗಿ ಮರಣ ಹೊಂದಿದ್ದರು. ನಂತರ ಮಗಳ ಪಾಲನೆಯ ಸಂಪೂರ್ಣ ಜವಬ್ದಾರಿಯನ್ನು ಅವರು ಹೊತ್ತು, ಮಗಳ ಮುಂದಿನ ಭವಿಷ್ಯದ ಕುರಿತು ಅವಳ ಪ್ರತಿಯೊಂದು ವಿಷಯಗಳಲ್ಲಿ ಗಮನವಿಟ್ಟು, ಅವಳನ್ನು ಚೆನ್ನಾಗಿ ನೋಡಿಕೊಳ್ಳುತಿದ್ದರು. ಮಗಳು ಮಸ್ಕತ್ ನಲ್ಲಿಯೆ ಪಿಯುಸಿ ಮುಗಿಸಿದ್ದಳು. ನಂತರ ಉನ್ನತ ಶಿಕ್ಷಣಕ್ಕಾಗಿ ಬೆಂಗಳೂರಿನಲ್ಲಿ ವೈದ್ಯಕೀಯ ಕಾಲೇಜೊಂದರಲ್ಲಿ  ಸೇರಿಸಿದ್ದರು. ಕಳೆದ ನಾಲ್ಕು ವರ್ಷಗಳಿಂದ ಬೆಂಗಳೂರಿನ ಹಾಸ್ಟೆಲ್ ನಲ್ಲಿ ಮಗಳು ಮತ್ತು ಮಸ್ಕತ್ ನಲ್ಲಿ ಇವರು ವಾಸ ಮಾಡುತಿದ್ದರು. ಕೆಲ ಬಂಧುಮಿತ್ರರು ಆಗಾಗ್ಗೆ ಮಗಳ ಹಾಸ್ಟೆಲ್ ಕಡೆ ಹೋಗಿ, ಮಗಳ ಚಟುವಟಿಕೆಗಳ ಬಗ್ಗೆ ಗಮನವಿಟ್ಟಿದ್ದರು. ರಜೆಗಾಗಿ ವರ್ಷಕ್ಕೊಮ್ಮೆ ಇವರು ಬೆಂಗಳೂರಿಗೆ ಹೋಗಿ ಬರುತಿದ್ದರು ಹಾಗೆಯೆ ಮಗಳು ಸಹ ರಜೆಯಲ್ಲಿ ವರ್ಷಕ್ಕೊಮ್ಮೆ ಮಸ್ಕತ್ ಗೆ ಬರುವುದು ರೂಡಿಯಾಗಿತ್ತು...
---

ಅಂದುಕೊಂಡ ಹಾಗೆ ಊರಿಗೆ ಹೋಗುವ ದಿನ ಬಂದೇ ಬಿಟ್ಟಿತು, ಮಗಳಿಗೆ ಫೋನ್ ಮಾಡಿ  ಸಂಜೆ ಬೆಂಗಳೂರನ್ನು ತಲುಪ್ತಿನಿ ಎಂದು ಹೇಳಿದರು. ಸರಿ ಏರ್ ಪೋರ್ಟಿಗೆ ಬರ್ತಿನಿ ಅಂತ ಮಗಳು ಹೇಳಿದಳು. ಬೇಡ ಎಂದು ಒತ್ತಾಯ ಮಾಡಿದರು ಸಹ ಮಗಳು ಹಟ ಹಿಡಿದು ಬರ್ತಿನಿ ಅಂತ ಹೇಳಿ, ಫೋನ್ ಕಟ್ ಮಾಡಿದಳು.
ಸಂಜೆ ಹೊತ್ತಿಗೆ ಮಸ್ಕತ್ ಫ್ಲೈಟ್ ಬೆಂಗಳೂರು ತಲುಪಿತ್ತು. ಇವರು ಇಮಿಗ್ರೇಶನ್ ಮತ್ತು  ಕಸ್ಟಮ್ಸ್ ತಪಾಸಣೆ ಮುಗಿಸಿ  ಹೊರಬಂದರು, ಮಗಳು ಅಲ್ಲಿ ಕಾಯುತ್ತ ನಿಂತಿದ್ದಳು.  ಹಾಯ್ ಪಪ್ಪ ಎನ್ನುತ್ತ ಮಗಳು ಅವರ ಕಡೆ ಕೈ ತೋರಿಸಿದಳು. ಮಗಳನ್ನು ನೋಡಿ ಕೈ ತೋರಿಸಿ ಮಗಳ ಸನಿಹಕ್ಕೆ ಬಂದರು. ಉಭಯ ಕುಶಲೋಪರಿ ವಿಚಾರಿಸಿಕೊಂಡು ಟ್ಯಾಕ್ಸಿ ಸ್ಟಾಂಡ್ ಕಡೆ ಹೊರಟರು. ಆಗ ಮಗಳು ಆ ಯುವಕನನ್ನು ತೋರಿಸಿ ತನ್ನ ಕಾಲೇಜಿನ ಸಹ ವಿದ್ಯಾರ್ಥಿ ಎಂದು ಪರಿಚಯಿಸಿದಳು. 
---

ನಿರೀಕ್ಷಿಸದೇ ಇದ್ದ ಈ ಬೆಳವಣಿಗೆ ಕಂಡು ಅವರು ಮೂಕ ವಿಸ್ಮಿತರಾದರು. ಬಾಯಿಂದ ಮಾತೇ ಹೊರಡಲಿಲ್ಲ. ಏನು ಮಾತನಾಡಬೇಕು ಎಂದು ಗೊತ್ತಾಗಲೇ ಇಲ್ಲ. ಟ್ಯಾಕ್ಸಿಯ ಮುಂಬದಿಯಲ್ಲಿ ಇವರು ಮತ್ತು ಹಿಂಬದಿಯಲ್ಲಿ ಮಗಳು ಮತ್ತು ಯುವಕ. ಟ್ಯಾಕ್ಸಿ ಏರ್ಪೋರ್ಟ್ ನಿಂದ ಹೊರಟಿತು. ಅವರಿಬ್ಬರು ಕಾಲೇಜಿನ ವಿಷಯ, ಹಾಸ್ಟೆಲ್ ನ ವಿಚಾರ ಇನ್ನು ಅನೇಕ ವಿಷಯಗಳನ್ನು ಮಾತನಾಡುತಿದ್ದರು. ಆದರೆ ಇವರು ಅದನ್ನೆಲ್ಲ ಕೇಳಿಸಿಕೊಳ್ಳುತ್ತಿರಲಿಲ್ಲ. ಕಾರಿನ ಕಿಟಕಿಯಿಂದ ತಂಪಾದ ಗಾಳಿ ಬರುತಿತ್ತು. ಮಸ್ಕತ್ ನ ಹವಮಾನಕ್ಕೂ ಮತ್ತು ಬೆಂಗಳೂರಿನ ಹವಮಾನಕ್ಕೂ ಅಜಗಜಾಂತರ ವ್ಯತ್ಯಾಸ. ಮಸ್ಕತ್ ನಲ್ಲಿ ೪೭-೪೮ ಟೆಂಪರೇಚರ್ ಇದ್ದರೆ, ಬೆಂಗಳೂರಿನಲ್ಲಿ ೨೭-೨೮ ರ ಆಸುಪಾಸಿನಲ್ಲಿತ್ತು. ವಾಹನ ರಸ್ತೆಯಲ್ಲಿ ಚಲಿಸುತಿದ್ದಂತೆ ತಣ್ಣನೆ ಗಾಳಿ ಕಾರಿನೊಳಗೆ ಪ್ರವಹಿಸಲು ಪ್ರಾರಂಭಿಸಿತು. ಆ ತಂಪಾದ ವಾತಾವರಣ, ಮನಸ್ಸನ್ನು ಪ್ರಫುಲ್ಲ ಗೊಳಿಸುವ ಬದಲು ಆ ಯುವಕ ಅವರ ಮನಸ್ಸನ್ನು ವಿಚಲಿತಗೊಳಿಸಿದ್ದ. ಮಗಳು ಇಷ್ಟು ಬೇಗ ಬದಲಾಗುತ್ತಾಳೆಂದು ಅವರು ಎಣಿಸಿರಲಿಲ್ಲ. ಮಗಳನ್ನು ಅರ್ಥಮಾಡಿಕೊಳ್ಳುವುದರಲ್ಲಿ ನಾನು ಎಡವಿದ್ದೀನಾ ಅಂತ ಅವರಿಗನಿಸಿತ್ತು. 
ಪತ್ನಿ ಅಗಲಿ ೮ ವರ್ಷವಾಗಿತ್ತಷ್ಟೆ ತನಗೆ ಅಂತ ಇರೋದು ಮಗಳೊಬ್ಬಳೆ. ಆ ಮಗಳು ತನ್ನಿಂದ ದೂರವಾಗ್ತಾಯಿದಾಳೆನೋ ಎಂದು ಯೋಚಿಸಲಾರಂಬಿಸಿದರು. ಅವರು ಮಸ್ಕತ್ ನಲ್ಲಿರುವಾಗ ಮಗಳಿಗಾಗಿ ತಮ್ಮ ಅರ್ಧದಷ್ಟು ಸಮಯ ವನ್ನು ಅವಳ ಏಳಿಗೆ ಗಾಗಿ ಮೀಸಲಿಟ್ಟಿದ್ದರು, ಸಾಂಸ್ಕೃತಿಕ ಚಟುವಟಿಕೆಗಳಾದ ಭರತನಾಟ್ಯ ಮತ್ತು ಸಂಗೀತದೆಡೆಗೆ ಆಸಕ್ತಿ ಸಹ ಬೆಳೆಸಿಕೊಳ್ಳಲಿ ಎಂದು ಪತ್ನಿ ಆಶಿಸಿದಾಗ, ಮಸ್ಕತ್ ನ ಅಲ್ ಖುವೇರ್ ನಲ್ಲಿ ವಾರಕ್ಕೆರಡು ಬಾರಿ ಸಂಗೀತ ತರಗತಿಗಳಿಗೆ ಮತ್ತೆ ಇನ್ನೆರಡು ಬಾರಿ ಭರತನಾಟ್ಯ ತರಗತಿಗಳಿಗೆ ವಾದಿಕಬೀರ್ ನಿಂದ ಅಲ್ ಖುವೇರ್ ಗೆ ಹಾಗೂ ಹತ್ತನೇ ತರಗತಿಯಿಂದ ಪಿಯುಸಿ ವರೆಗೆ ಟ್ಯೂಶನ್ ಗಾಗಿ ತಮ್ಮ ಕಾರಿನಲ್ಲಿ ಪಿಕಪ್ ಮತ್ತು ಡ್ರಾಪ್ ಮಾಡುತಿದ್ದರು. ಮಗಳ ಇಷ್ಟಾರ್ಥ ಗಳನ್ನು ತಪ್ಪದೆ ಪೂರೈಸಲು ಹಿಂದೆಮುಂದೆ ಯೋಚಿಸುತ್ತಲೆ ಇರಲಿಲ್ಲ. ಯಾವುದೇ ಕೊರತೆ ಇಲ್ಲದೆ ಮಗಳನ್ನು ಚೆನ್ನಾಗಿ ನೋಡಿಕೊಂಡಿದ್ದರು.
ಒಂದೊಮ್ಮೆ ಹೊಟ್ಟೆ ನೋವು ಎಂದು ಶಾಲೆಗೆ ಹೋಗುವುದಕ್ಕೆ ಆಗಲ್ಲ ಎಂದು ಮಲಗಿದ್ದಳು, ಚೆನ್ನಾಗಿ ವಿಶ್ರಾಂತಿ ತೆಗೆದುಕೊ ಎಂದು ಹೇಳಿ ಇವರು ಎಂದಿನಂತೆ ಕಛೇರಿಗೆ ಹೊರಟಿದ್ದರು. ಆದರೆ ಸಂಜೆ ಮನೆಗೆ ಬಂದು ನೋಡಿದರೆ ಇನ್ನು ಮಲಗಿಯೇ ಇದ್ದಳು. ಸರಿ ಡಾಕ್ಟರ್ ಹತ್ತಿರ ಹೋಗೋಣ ಬಾರಮ್ಮ ಎಂದು ಏಳಿಸಿ ಕರೆದು ಕೊಂಡು ಹೋಗಿದ್ದ್ರು. ಆ ಡಾಕ್ಟರ್ "ಇವರಮ್ಮ ಎಲ್ಲಿ" ಎಂದು ಕೇಳಿದರೆ, ಅವರು ಅಗಲಿ ೨ ವರ್ಷ ಆಗ್ತಾಯಿದೆ ಡಾಕ್ಟರ್, ಏನು ವಿಷಯ ಎಂದು ಗಾಬರಿಗೊಂಡು ಕೇಳಿದರು.
ಗಾಬರಿಗೊಳ್ಳುವ ಅವಶ್ಯಕತೆ ಇಲ್ಲ "ನಿಮ್ಮ ಮಗಳು ದೊಡ್ಡವಳಾಗಿದ್ದಾಳೆ" 
ವಿಷಯ ಕೇಳಿ ಸಂತೋಷ ವೇ ಆಯಿತು. ಛೇ ಎಂಥ ಪೆದ್ದ ನಾನು, ಹಿಂದೆ ಮುಂದೆ ವಿಚಾರಿಸದೆ ಕರೆದು ಕೊಂಡು ಬಂದಿದ್ದೀನಿ. ಇಂತಹ ವಿಷಯಗಳಲ್ಲಿ ಎಂತಹ ಅಲ್ಪ ಜ್ನಾನಿ ನಾನು ಎಂದು ಮರುಗಿದ್ದರು. ಮಗಳ ಕುರಿತು ಅತೀವ ಕಾಳಜಿ ವಹಿಸಿದ್ದ ಅವರಿಗೆ, ಇಂದು ಯಾರೋ ಒಬ್ಬನು ಬಂದು ಮಗಳನ್ನು ತಮ್ಮಿಂದ ಕಿತ್ತು ಕೊಳ್ತಾಯಿದ್ದಾನೆ ಎನ್ನುವುದನ್ನು ಅವರ ಮನಸ್ಸು ಒಪ್ಪಿಕೊಳ್ಳಲು ತಯಾರಿರಲಿಲ್ಲ. ಅವನ ಕಡೆ ಒಮ್ಮೆ ನೋಡಿದರು, ಅವನು ಒಬ್ಬ ರಾಕ್ಷಸ ತರಹ ಕಾಣಿಸುತಿದ್ದ. ಕೀಚಕನ ಹಾಗೆ ಕಿತ್ತುಕೊಳ್ಳಲು ಬಂದಿದ್ದಾನಾ ಎಂದು ಅನಿಸಿತ್ತು. ಹೆಣ್ಣು ಹೆತ್ತವರ ಸಂಕಟ ಸುಮ್ಮನೆ ಅಲ್ಲ ಅಂತ ಎಲ್ಲರೂ ಹೇಳೋದು ನಿಜ ಅಂತ ಗೊತ್ತಾಗ್ತ ಯಿದೆ. ನನ್ನವರು ಅಂತ ಯಾರು ಇಲ್ಲ, ಹೆತ್ತ ಅಪ್ಪ ಅಮ್ಮ ಇಲ್ಲ. ಕಟ್ಟಿಕೊಂಡ ಮಡದಿ ಸಹ ಇಲ್ಲ. ಬಂಧು ಬಳಗದವರೂ ಅಷ್ಟಕ್ಕಷ್ಟೇ. ಆಗಲೇ ಮುಕ್ಕಾಲು ಆಯಸ್ಸು ಮುಗಿದಿತ್ತು, ಮಗಳ ವಿದ್ಯಭ್ಯಾಸ ಮುಗಿದು ಅವಳೊಂದು ಉದ್ಯೋಗದಲ್ಲಿದ್ದಿದ್ದರೆ ಯೋಚಿಸುವ ಅಗತ್ಯ ವಿರಲಿಲ್ಲ ಅಂತ ಅನಿಸಿತ್ತು.
ಚಿನ್ನು ತಂದೆಯನ್ನು ನೋಡಿದಳು, ಅವರು ಚಿಂತಾಕ್ರಾಂತಗೊಂಡಿರುವುದು ಚಿನ್ನುಗೆ ಮರುಕವನ್ನುಂಟು ಮಾಡಿತು. ಅವರ ಸಂಕಟ ಇವಳಿಗೆ ಅರ್ಥವಾಯಿತು, ಜತೆಗೆ ತನ್ನ ಕ್ಲಾಸ್ ಮೇಟ್ ಬೇರೆ ಕಾರಲ್ಲಿ ಕುಳಿತಿದ್ದಾನೆ. ತಂದೆಯ ತಲ್ಲಣಕ್ಕೆ ಕಾರಣ ಗೊತ್ತಾಯಿತು.  ತನ್ನ ಒಳಿತಿಗಾಗಿ ಅಪ್ಪ ಎಷ್ಟೊಂದು ಕಷ್ಟ ಪಟ್ಟಿದ್ದಾರೆ. ತಾನು ಬಯಸಿದ್ದು ಎಂದೂ ಇಲ್ಲ ಎಂದು ಹೇಳಿಲ್ಲ. ಇಂತಹ ತಂದೆಯನ್ನು ಪಡೆಯಲು ತಾನು ಎಷ್ಟೊಂದು ಪುಣ್ಯ ಮಾಡಿದ್ದೆ ಎಂದು ಮನಸ್ಸಿನಲ್ಲಿಯೆ ಮೆಚ್ಚುಗೆ ವ್ಯಕ್ತ ಪಡಿಸಿದಳು. ನನ್ನ ಕಾಳಜಿ ಕುರಿತು ಯೋಚಿಸುವುದು ಸಹಜ ಅಂತ ಅನ್ನಿಸಿತವಳಿಗೆ.
---

ಚಿನ್ನು ಮತ್ತು ಆ ಯುವಕನ ಮಾತು, ನಗು ಇವರಿಗೆ ಕಿರಿಕಿರಿಯನ್ನುಂಟು ಮಾಡುತಿತ್ತು. ತಡೆಯಲಾರದೇ ಏನು ಚಿನ್ನು ನೀನು ಈ ತರಹ ಬದಲಾಗ್ತೀಯ ಅಂತ ನಾನು ಅಂದ್ಕೊಂಡಿರಲಿಲ್ಲ. ನನ್ನ ಮಾತು ನೀನು ಮೀರಲ್ಲ ಅಂದುಕೊಂಡಿದ್ದೆ. ಛೇ,... 
"ನೋಡಿ ಪಪ್ಪ. ಇದರಲ್ಲಿ ಏನು ತಪ್ಪು. ನನ್ನ ಸ್ಥಾನದಲ್ಲಿ ಇದ್ದಿದ್ದ್ರೆ ಎಲ್ಲರೂ ಇದನ್ನೆ ಮಾಡ್ತಾ ಇದ್ದರು. ಏನ್ ಮಹಾ!!!"
ಮಗಳ ಉತ್ತರ ಕೇಳಿ, ಅವರಿಗೆ ಗೊಂದಲವಾಯಿತು. "ಅಲ್ಲ ಯಾವುದಕ್ಕೂ ಒಂದು ಮಾತು ನನ್ನಲ್ಲಿ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳಬಹುದಾಗಿತ್ತು".
"ಕೆಲವು ಆಯ್ಕೆಗಳನ್ನು ಮತ್ತು ನಿರ್ಧಾರ ಗಳನ್ನು ನಾನು ತೆಗೆದುಕೊಳ್ಳಬಹುದು. ಅದಕ್ಕೆ ನಿಮ್ಮಿಂದ ಒಪ್ಪಿಗೆ ತಗೊಳ್ಳಕ್ಕಾಗಲ್ಲ". 
"ಏನು ಈ ತರಹ ಉತ್ತರ ಕೊಡ್ತಾಯಿದೀಯ?  ಉದ್ದಟತನದ ಮಾತು ಗಳು. ನಿಂದು ಜಾಸ್ತಿ ಯಾಯಿತು".
"ನೋಡಿ, ನೀವು ಹೀಗೆಲ್ಲ ಮಾತಾಡಾಬಾರದು. ಈಗ ನಾನು ಯುವತಿ,  ಯೋಚನೆ ಮಾಡುವ ಮನಸ್ಥಿತಿಯನ್ನು ನಾನು ಹೊಂದಿದ್ದೇನೆ. ಯಾವುದು ಸರಿ ತಪ್ಪು ಎಂದು ನಿರ್ಧಾರ ಮಾಡುವ ಪ್ರೌಡಿಮೆಯನ್ನು ನಾನು ಹೊಂದಿದ್ದೇನೆ. ಯಾವಾಗಲೂ ನಿಮ್ಮ ನಿಯಂತ್ರಣಕ್ಕೆ ಒಳಪಡುವುದಕ್ಕೆ ಆಗುವುದಿಲ್ಲ"......
ಮಗಳ ಮಾತು ಗಳನ್ನು ಕೇಳಿ, ನನ್ನ ಸಂಕಟವನ್ನ ಅರ್ಥ ಮಾಡಿಕೊಳ್ಳದೆ ಇವಳು ಈ ರೀತಿ ನಡೆದುಕೊಳ್ಳುತಿದ್ದಾಳೆ, ಇವಳು ನಾನು ಸಾಕಿದ ಮಗಳಾ ಎಂದು ಅನಿಸಿತು. ಎದುರುತ್ತರ ಕೊಡುತಿದ್ದಾಳೆ.  ನನ್ನ ಮಾತನ್ನು ಮೀರುತಿದ್ದಾಳೆ. ಮಕ್ಕಳು ದೊಡ್ಡವರಾದಾಗಲೆಲ್ಲ ನಮ್ಮಿಂದ ದೂರ ಆಗ್ತಾರೆ ಅಂತ ಕೇಳಿದ್ದು ನಿಜ ಅಂತ ಅನಿಸ್ತಾ ಇದೆ ಇಂದು. ಒಂದು ಹುಡುಗ ಸಿಕ್ಕಿದ ಮೇಲೆ, ತಂದೆ ತಾಯಿ ಬೇಡವಾ? ಇವಳಮ್ಮ ಆದರು ಈ ಸಮಯದಲ್ಲಿ ಇದ್ದಿದ್ದರೆ, ಇವಳನ್ನು ಹದ್ದು ಬಸ್ತಿನಲ್ಲಿಡುತಿದ್ದಳೇನೋ.  ಮಸ್ಕತ್ ನಲ್ಲಿ ಒಂಟಿ ಬದುಕು ನಡೆಸ್ತಾ, ಮಗಳಿಗಾಗಿ ಜೀವನವನ್ನೆ ಮುಡಿಪಾಗಿಟ್ಟಿದ್ದೀನಿ, ಅಂತದ್ರಲ್ಲಿ ಇವಳು ಈ ತರಹ ನಡ್ಕೊತಿದ್ದಾಳೆ ಛೇ.. ಎಂತಹ ಶಿಕ್ಷೆ ದೇವರೆ ನನಗೆ... ಕಣ್ಣಲ್ಲಿ ನೀರು ಜಿನುಗಿತ್ತು.  ದುಖಃ ಉಮ್ಮಳಿಸಿಬಂತು. ಅಳುವುದೊಂದೆ ಬಾಕಿ. ಮಗಳ ಈ ಆಟವನ್ನು ನೋಡಲು ಮಸ್ಕತ್ ನಿಂದ ಬರಬೇಕಿತ್ತಾ.......
ಇಬ್ಬರ ಮಧ್ಯೆ ಮಾತು ನಿಂತಿತು........
ಒಂದು ಕ್ಷಣ ಮೌನ ಆವರಿಸಿತ್ತು.
---

ಅಷ್ಟರಲ್ಲಿ ಆ ಯುವಕ, "ರೀ ಸ್ವಲ್ಪ ಕಾರ್ ನಿಲ್ಲಿಸಿ" ಎಂದು ಹೇಳಿದನು. ಕಾರ್ ನಿಂತೊಡನೆ, " ಥ್ಯಾಂಕ್ ಯು ಚಿನ್ನು ಫಾರ್ ಡ್ರಾಪಿಂಗ್, ಥ್ಯಾಂಕ್ ಯು ಅಂಕಲ್, ಬೈ ಎಂದು ಹೇಳಿ ಹೊರಟನು.
ಮಗಳು ತಂದೆಯ ಕಡೆ ನೋಡುತ್ತ......ಪಪ್ಪ...ಕಷ್ಟದಲ್ಲಿರೋರಿಗೆ ಸಹಾಯ ಮಾಡೋದು ತಪ್ಪಾ!!
ಹ್ಞೂ....... ಇಲ್ಲ....ಇಲ್ಲ.
ಅವನು ನನ್ನ ಕ್ಲಾಸ್ ಮೇಟ್, ಅವನ ರಿಲೇಟಿವ್ ಒಬ್ಬರು ಯುಎಸ್ ಎ ಗೆ ಹೋಗ್ತಾಯಿದ್ದರು ಅವರನ್ನು  ಸೆಂಡ್ ಆಫ್ ಮಾಡಲು ಬಂದಿದ್ನಂತೆ. ವಾಪಾಸ್ ಹೋಗಲು ಜೇಬು ತಡಕಾಡಿದ್ರೆ ಪರ್ಸ್ ಇಲ್ಲ. ಮರೆತು ಬಂದಿದ್ನೊ ಅಥವ ಕಳೆದು ಕೊಂಡನೋ ಗೊತ್ತಿಲ್ಲ. ಮನೆಗೆ ವಾಪಾಸ್ ಹೇಗೆ ಹೋಗೋದು ಅಂತ ಯೋಚಿಸುತ್ತಿರುವಾಗ ನನ್ನ ನೋಡಿದ್ನಂತೆ. ನಾನು ಹಣ ಕೊಟ್ರೆ, ಬೇಡ ಅಂದ. ನೀನು ಆಕಡೆ ಹೋಗ್ತಾಯಿದಿಯ, ನನಗೆ ಡ್ರಾಪ್ ಮಾಡು ಸಾಕು ಅಂತ ಹೇಳಿದ. 
 ಇಷ್ಟೊತ್ತು ತಂದೆಯ ಮನಸ್ಸಿನಲ್ಲಾಗುತಿದ್ದ ಭಾವನೆಗಳ ತಾಕಲಾಟಗಳನ್ನು ಗಮನಿಸಿ, ಈಗ ಹೇಳೀ ಪಪ್ಪ ನನ್ನ ನಿರ್ಧಾರ ತಪ್ಪಾ!!! ಎಂದು ಜೋರಾಗಿ ನಗುತ್ತ ಕೇಳಿದಳು,  
ಓಹ್ ಹಾಗೋ ವಿಷಯ, ನಾನು ಬೇರೆ ಇನ್ನೇನೋ ಯೋಚಿಸುತ್ತಾಯಿದ್ದೆ. ತಪ್ಪು ಅಲ್ಲ ಮಗಳೆ. ನನಗೆ ಒಳ್ಳೆ ಟೆನ್ಶನ್ ಕೊಟ್ಟೆ ನೀನು. ಅವನು ನಿನ್ನ ಲವ್ ಮಾಡ್ತಾ ಇರುವ ಹುಡುಗ, ಅವನನ್ನು ಪರಿಚಯ ಮಾಡಿಕೊಡಲು ಏರ್ ಪೋರ್ಟ್ ಗೆ ಕರೆದು ಕೊಂಡುಬಂದಿದ್ದೀಯ ಅಂತ ನಾನು ಎಣಿಸಿದೆ.
ನಿಮ್ಮ ಟೆನ್ಶನ್ ನೋಡಿ ಸ್ವಲ್ಪ ಮಜಾ ತಗೊಳ್ಳೋಣ ಅಂತ ಸುಮ್ಮನೆ ಇದ್ದೆ. ಹಾಗಾಗಿ ಹುಷಾರಾಗಿ ಜಾಣತನದಿಂದ ಉತ್ತರ ಕೊಟ್ಟೆ. ನನ್ನ ಉತ್ತರದಲ್ಲಿ ಎಲ್ಲೂ ಆ ಹುಡುಗನ ಮತ್ತು ಲವ್ ವಿಷಯದ ಪ್ರಸ್ತಾಪವಿಲ್ಲ, ಹೇಗಿತ್ತು ನನ್ನ ವಾಗ್ವೈಭವ.
ಹೇ ಕಳ್ಳಿ, ನೀನು ಭಲೇ ಇದ್ದೀಯಾ. ನೀನು ಈತರಹ ಎಲ್ಲ ತಮಾಷೆ ಮಾಡ್ತೀಯ ಅಂತ ನನಗೆ ಗೊತ್ತಿರಲಿಲ್ಲ... ತುಂಬ ಜಾಣೆ ಕಣೆಮ್ಮ ನೀನು. ಸಾರಿ ಪುಟ್ಟಾ..... ನಿನ್ನ ಬಗ್ಗೆ ನಾನು ತಪ್ಪಾಗಿ ಯೋಚಿಸಿಬಿಟ್ಟೆ. ಕ್ಷಮಿಸಿಬಿಡು ನನ್ನನ್ನು.
ಸಾರಿ ಪಪ್ಪ, ಅನವಶ್ಯಕವಾಗಿ ನಾನು ನಿಮಗೆ ತೊಂದರೆ ಕೊಟ್ಟುಬಿಟ್ಟೆ. 
ಇಲ್ಲ ಮಗಳೆ, ಸಾರಿ ಕೇಳ್ಬೇಡ. ಇಂದಲ್ಲ ನಾಳೆ ನೀನು ಇನ್ನೊಬ್ಬರ ಮನೆ ಸೊಸೆ ಯಾಗಿ ಹೋಗಲೇಬೇಕು. ಅದರ ಅರಿವಿಲ್ಲದೆ ನಾನು ತುಂಬಾ ಸ್ವಾರ್ಥಿಯಾಗಿ ಯೋಚಿಸುತಿದ್ದೆ. ನನ್ನ ಜವಬ್ದಾರಿಯನ್ನು ಎಚ್ಚರಿಸಿದ್ದಕ್ಕೆ ತುಂಬ ಥ್ಯಾಂಕ್ಸ್. 
ಛೆ ಹಾಗೇನಿಲ್ಲಪ್ಪ. ತಮಾಷೆ ಮಾಡಿ ತುಂಬಾ ದಿನ ಆಗಿತ್ತು, ಇವತ್ತು ಅವಕಾಶ ತುಂಬಾ ಚೆನ್ನಾಗಿತ್ತು ಹಾಗಾಗಿ ಅದನ್ನು ಬಳಸಿಕೊಂಡೆ...
ಇಬ್ಬರು ನಗ್ತಾ  ನಗ್ತಾಯಿದ್ದರು. 
ಸರಿ, ಯಾರು ಪ್ರಪೋಸ್ ಮಾಡಿದ್ದು, ಏನ್ ವಿಷಯ ಹೇಳು.
ಅಯ್ಯೋ ಬಿಡಪ್ಪ, ನೀನು ಏನು ಯೋಚನೆ ಮಾಡಬೇಡ. ಅವನು ಪ್ರಪೋಸ್ ಮಾಡಿದ. ನಾನು ಆಗಲ್ಲ ಅಂತ ಹೇಳಿದೆ. ಅವನು ಸುಮ್ನೆ ಹೊರಟು ಹೋದ ಅಷ್ಟೇ.
ಮಗಳ ನಿರ್ಧಾರ ಕೇಳಿ, ತುಂಬಾ ಖುಷಿ ಆಯಿತು. ಮಗಳು ತಾನು ಭಾವಿಸಿದ್ದಕ್ಕಿಂತ ತುಂಬಾ ಪ್ರಭುದ್ದತೆ ಹೊಂದಿದ್ದಾಳೆ ಅಂತ ಮೆಚ್ಚುಗೆ ಯಾಯಿತು.
ತಂದೆಯ ಹಣೆಯ ಮೇಲಿದ್ದ ಚಿಂತೆ ಯ ಗೆರೆಗಳು ಮಾಯವಾದವು. ಅವರು ತನ್ನನ್ನು ಎಷ್ಟು ಕಾಳಜಿ ವಹಿಸಿ ತನ್ನ ಒಳಿತು ಕೆಡುಕುಗಳ ಕಡೆ ಯಾವಾಗಲು ಚಿಂತಿಸುತ್ತಾರಲ್ಲ ಎಂದು ತಂದೆಯ ಬಗ್ಗೆ ಹೆಮ್ಮೆ ಯಾಯಿತು.
--xxx--

ಸೋಮವಾರ, ಜುಲೈ 27, 2015

ನೀತಿಕಥೆ ಮರಳು ಮತ್ತು ಕಲ್ಲು

ರಾಮ ಮತ್ತು ಶಾಮ ಎನ್ನುವ ಇಬ್ಬರು ಸ್ನೇಹಿತರು ಒಂದು ಮರುಭೂಮಿಯಲ್ಲಿ ನಡೆದು ಕೊಂಡು ಹೋಗುತಿದ್ದರು, ಮನಸ್ಸಿಗೆ ತೋಚಿದ್ದನ್ನ ಹರಟುತ್ತ ಸಾಗುತಿದ್ದರು. ಹೀಗೆ ಒಂದು ವಿಷಯದ ಬಗ್ಗೆ ಚರ್ಚಿಸುವಾಗ ಇಬ್ಬರ ನಡುವೆ ವಾಗ್ವಾದ ನಡೆಯಿತು.
ವಾಗ್ವಾದ ಜೋರಾದಾಗ,ರಾಮನ ಕೆನ್ನೆಗೆ ಶಾಮ ಜೋರಾಗಿ ಬಾರಿಸಿದ. ಹೊಡೆಸಿಕೊಂಡ ಸ್ನೇಹಿತ ಮನಸ್ಸಿನಲ್ಲಿ ನೋವನ್ನು ಅನುಭವಿಸುತ್ತ ಏನನ್ನೂ ಹೇಳದೆ ಒಂದು ಕಡೆ ಮರಳಿನ ಮೇಲೆ ಇಂದು ನನ್ನ ಆತ್ಮೀಯ ಸ್ನೇಹಿತ ಶಾಮ ನನ್ನ ಕೆನ್ನೆಗೆ ಹೊಡೆದ” ಎಂದು ಬರೆದನು.
ಮರುಭೂಮಿಯಲ್ಲಿ ನೀರು ಸಿಗುವವರೆಗೂ ಹಾಗೇಯೆ ನಡೆಯುತ್ತ ಸಾಗುತಿದ್ದರು, ಒಂದು ಕಡೆ ನೀರಿನ ಕೊಳ ಕಾಣಿಸಿತು, ಮರಳುಗಾಡಿನಲ್ಲಿ ನೀರನ್ನು ಕಂಡ ತಕ್ಷಣ ನೀರಲ್ಲಿ ಆಟವಾಡಲು ಶುರುಮಾಡಿದರು.
ಹೀಗೆ ಆಟವಾಡುತ್ತಿರುವಾಗ ಕಪಾಳಕ್ಕೆ ಹೊಡೆಸಿಕೊಂಡಿದ್ದ ರಾಮ ನೀರಲ್ಲಿ ಮುಳುಗಲಾರಂಬಿಸಿದ. ಅದನ್ನು ಕಂಡು ಶಾಮ ಅವನನ್ನು ಅಪಾಯದಿಂದ ಪಾರುಮಾಡಿ ದಡದ ಮೇಲೆ ತಂದು, ಹೊಟ್ಟೆಯ ಮೇಲ್ಭಾಗವನ್ನು ಜೋರಾಗಿ ಅಮುಕಿ, ಕುಡಿದಿದ್ದ ನೀರನ್ನು ಬಾಯಿಯಿಂದ ಹೊರ ತೆಗೆಸಿದ. ಸ್ವಲ್ಪ ಸಮಯದ ನಂತರ ಅಪಾಯದಿಂದ ಪಾರಾದ ರಾಮ ಎಚ್ಚರಗೊಂಡು, ಶಾಮನಿಗೆ ಧನ್ಯವಾದ ವನ್ನು ಅರ್ಪಿಸಿ, ಅಲ್ಲಿಯ ಬಂಡೆಯೊಂದರ ಮೇಲೆ “ಇಂದು ನನ್ನ ಸ್ನೇಹಿತ ಶಾಮ ನನ್ನನ್ನು ಸಾವಿನ ದವಡೆಯಿಂದ ಕಾಪಾಡಿದ” ಎಂದು ಕಲ್ಲಿನಿಂದ ಕೆತ್ತಿದ. ಇದನ್ನು ಗಮನಿಸಿದ ಶಾಮ “ನಿನಗೆ ನೋವಾಗುವ ಹಾಗೆ ನಿನ್ನನ್ನು ಹೊಡೆದಿದ್ದನ್ನು  ಅಲ್ಲಿ ಯಾಕೆ ಮರಳಿನ ಮೇಲೆ ಬರೆದೆ, ಆದರೆ ಇಲ್ಲಿ ಯಾಕೆ ಕಲ್ಲಿನ ಮೇಲೆ ಬರೆದಿದ್ದೀಯಾ?
ಅದಕ್ಕೆ ರಾಮ ನಸುನಗುತ್ತ ಉತ್ತರಿಸಿದ “ನಮ್ಮನ್ನು ನೋಯಿಸಿದವರ, ಘಾಸಿ ಗೊಳಿಸಿದವರ, ಹೊಡೆದವರ, ಮೋಸ ಮಾಡಿದವರ ಅಥವ ತೊಂದರೆ ಮಾಡಿದವರ ಕುರಿತು ಮರಳಿನ ಮೇಲೆ ಬರೆಯಬೇಕು, ಕ್ಷಮೆ ಎನ್ನುವ ಗಾಳಿ ಅದನ್ನೆಲ್ಲ ಅಳಿಸಿ ಹಾಕುತ್ತೆ,  
ಆದರೆ ನಮಗೆ ಒಳ್ಳೆಯದನ್ನು ಮಾಡಿದವರ ಕುರಿತು ಕಲ್ಲಿನ ಮೇಲೆ ಬರೆದರೆ ಮಳೆ ಬಿರುಗಾಳಿ ಸಿಡಿಲು ಎಂಥದೇ ಬಂದರೂ ಅದು ಅಳಿಸಿ ಹೋಗುವುದಿಲ್ಲ”.  
ನೀತಿ: ನಿಮ್ಮ ನೋವುಗಳನ್ನು ಮರಳಿನ ಮೇಲೆ ಬರೆಯಿರಿ ಮತ್ತು ಲಾಭಗಳನ್ನು ಕಲ್ಲಿನ ಮೇಲೆ ಬರೆಯುವುದನ್ನು ಕಲಿಯಿರಿ



ಭಾವಾನುವಾದ: ಪಿ.ಎಸ್.ರಂಗನಾಥ

ಭಾನುವಾರ, ಮೇ 17, 2015

ಗಣಿನಾಡಿನ ಮಲೆನಾಡು

****ಗಣಿನಾಡಿನ ಮಲೆನಾಡು****
ಬಳ್ಳಾರಿ ಯೆಂದರೆ ಸಾಮಾನ್ಯವಾಗಿ ಎಲ್ಲರ ಮನದಲ್ಲಿ ಮೂಡುವುದು ಗಣಿ ಧೂಳು ಮತ್ತು ಬಿರು ಬಿಸಿಲು ಮಾತ್ರ. ಆದರೆ ಅಲ್ಲಿನ ಪ್ರಾಕೃತಿಕ ಸೌಂದರ್ಯದ ಬಗ್ಗೆ ಬಹಳಷ್ಟು ಜನರಿಗೆ ತಿಳಿದಿಲ್ಲ. ಬಳ್ಳಾರಿ ಕೋಟೆ, ತುಂಗಭದ್ರಾ ಕಾಲುವೆ, ಬೆಟ್ಟ ಗುಡ್ಡ ಗಳು. ಹತ್ತಿರದಲ್ಲಿರುವ ದೋಣಿಮಲೈ, ತಾರಾನಗರ, ನಾರಿಹಳ್ಳ ಡ್ಯಾಮ್, ಸಂಡೂರು, ಹಂಪೆ, ತುಂಗಭದ್ರ ಡ್ಯಾಂ, ಕನಕಗಿರಿ, ದರೋಜಿ, ಹಸಿರಿನಿಂದ ಕಂಗೊಳಿಸುವ ಹೊಲ ಗದ್ದೆಗಳು, ಹಗರಿ ನದಿ, ಒಂದೇ ಎರಡೇ ಹೀಗೆ ಹಲವಾರು ಪ್ರವಾಸಿ ಸ್ಥಳಗಳು ಹತ್ತಿರದಲ್ಲಿಯೆ ಇವೆ. ಆದರೆ ಇವೆಲ್ಲ ಗಣಿವಹಿವಾಟಿನ ಅಬ್ಬರದಲ್ಲಿ ಮರೆಯಾಗಿವೆ. ಇತ್ತೀಚಿಗೆ ಕೆಲವರ್ಷಗಳ ಕಾಲ ನಡೆದ ರಾಜಕೀಯ ಬೆಳವಣಿಗೆಗಳಿಂದ ಬಳ್ಳಾರಿ ಅಪಖ್ಯಾತಿಗೆ ಗುರಿಯಾಗಿದ್ದೆ ಹೆಚ್ಚು.

















































Photo Courtesy: Internet 

ಶುಕ್ರವಾರ, ಏಪ್ರಿಲ್ 10, 2015

ಒಮಾನ್ ನಲ್ಲಿ ಸಂಭ್ರಮಾಚರಣೆ








ಒಮಾನ್ ರಾಷ್ಟ್ರದ ಸುಲ್ತಾನ್ ಖಾಬೂಸ್ ಬಿನ್ ಅಲ್ ಸೈಯೀದ್ ರವರು ಎಂಟು ತಿಂಗಳು ಜರ್ಮನಿಯಲ್ಲಿ ಧೀರ್ಘ ಕಾಲದ ಚಿಕಿತ್ಸೆ ಪಡೆದು ಸಂಫೂರ್ಣ ಗುಣಮುಖರಾಗಿ ಇತ್ತೀಚೆಗೆ ಮಸ್ಕತ್ ಗೆ ಹಿಂತಿರುಗಿದ್ದಾರೆ. ಅವರು ಹಿಂದಿರುಗಿ ಬಂದ ದಿನದಿಂದ ಸತತವಾಗಿ ಒಮಾನ್ ನ ಎಲ್ಲಡೆ ಸಂಭ್ರಮಾಚರಣೆ ನಡೆಯುತ್ತಿದೆ. ಸರಕಾರಿ ಕಛೇರಿಗಳು, ಖಾಸಗಿ ಕಂಪನಿಗಳು, ಶಾಲಾ ಕಾಲೇಜು ಗಳು, ಒಮಾನ್ ನ ವಿವಿಧ ಪಟ್ಟಣಗಳಲ್ಲೆಡೆ ಒಂದಲ್ಲ ಒಂದು ರೀತಿಯಲ್ಲಿ ಸಂಭ್ರಮ ವನ್ನು ಜನರು ಆಚರಿಸುತಿದ್ದಾರೆ.

ತಮ್ಮ ಸರಳ ವ್ಯಕ್ತಿತ್ವ, ನಡೆ ನುಡಿ ಯಿಂದ ಸುಲ್ತಾನ್ ಖಾಬೂಸ್ ಒಮಾನ್ ಪ್ರಜೆಗಳಲ್ಲದೆ, ಭಾರತೀಯರು, ಇಲ್ಲಿ ವಾಸಿಸುತ್ತಿರುವ ಬೇರೆ ವಿದೇಶಿಯರು ಮತ್ತು ಪಕ್ಕದ ಜಿ.ಸಿ.ಸಿ. ರಾಷ್ಟ್ರಗಳ ಜನರಿಗೆ ಅಚ್ಚುಮೆಚ್ಚು, ೧೯೭೦ ರಿಂದ ಒಮಾನ್ ಆಡಳಿತದ ಚುಕ್ಕಾಣಿ ಹಿಡಿದಿರುವ ೭೪ ವರ್ಷದ ಸುಲ್ತಾನ್ ರವರ ಆರೋಗ್ಯದ ಕುರಿತು ಒಮಾನಿ ಪ್ರಜೆಗಳಲ್ಲದೆ, ಅನಿವಾಸಿ ಪ್ರಜೆಗಳ ಸಹಿತ ಬಹುತೇಕ ಎಲ್ಲರು ಚಿಂತಿತರಾಗಿದ್ದರು. ಜನಾನುರಾಗಿ ಯಾಗಿ ಆಡಳಿತ ನಡೆಸುತ್ತಿರುವ ಸುಲ್ತಾನ್ ರವರು ಕೇವಲ ಒಮಾನ್ ಪ್ರಜೆಗಳಲ್ಲದೆ ಬೇರೆ ದೇಶಗಳಿಂದ ಇಲ್ಲಿಗೆ ಉದ್ಯೋಗಕ್ಕಾಗಿ ಬಂದಿರುವ ಪ್ರತಿಯೊಬ್ಬರಿಗೆ ಪ್ರೀತಿಪಾತ್ರರಾಗಿದ್ದಾರೆ. ಅವರ ನಾಯಕತ್ವದಲ್ಲಿ ಒಮಾನ್ ರಾಷ್ಟ್ರ ಸತತ ಅಭಿವೃದ್ದಿ ಕಾಣುತ್ತಿದೆ, ದೇಶ ಅನೇಕ ಕಠಿಣ ಸವಾಲು ಗಳನ್ನು ಎದುರಿಸಿ ಪ್ರಗತಿಯತ್ತ ಸಾಗಿದೆ. ಸಂಪೂರ್ಣ ಒಮಾನ್ ನ ವಿವಿಧ ಪ್ರಾಂತ್ಯದ ಪ್ರಜೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಳ್ಳೆಯ ಆಡಳಿತ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

ಇಡೀ ಮಧ್ಯ ಪ್ರಾಚ್ಯದಲ್ಲಿ ಕೆಲ ರಾಷ್ಟ್ರಗಳ ಸರ್ವಾಧಿಕಾರಿ ಧೋರಣೆ ಖಂಡಿಸಿ ಒಂದಲ್ಲ ಒಂದು ಕಡೆ ದಂಗೆ ಗಳು, ಯುದ್ಧಗಳು, ಸರ್ಕಾರ ಮತ್ತು ಬಂಡುಕೋರರ ಯುದ್ಧ ಭೀತಿ ವಾತಾವರಣ ನಿರ್ಮಾಣವಾಗಿರುವ ಸನ್ನಿವೇಶದಲ್ಲೂ ಸಹ ಒಮಾನ್ ದೇಶದಲ್ಲಿ ಅಂತಹ ಚಟುವಟಿಕೆ ಗಳಿಗೆ ಆಸ್ಪದ ಕೊಡದೆ ಜನರ ಒಳಿತಿಗಾಗಿ ಹಲವಾರು ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿ ಜನ ಮನ್ನಣೆ ಗಳಿಸಿದ್ದಾರೆ.

೩ ಲಕ್ಷ ಚದರ ಕಿಮಿ ವಿಸ್ತೀರ್ಣ ದ ಒಮಾನ್ ರಾಷ್ಟ್ರದಾದ್ಯಂತ ಅಂತರಾಷ್ಟ್ರೀಯ ದರ್ಜೆಯ ರಸ್ತೆ ಮತ್ತು ಹೆದ್ದಾರಿಗಳ ನಿರ್ಮಾಣ ಗಳು ಪ್ರಪಂಚದ ಅತ್ಯುತ್ತಮ ೧೦ ರಾಷ್ಟ್ರಗಳ ಪಟ್ಟಿಯಲ್ಲಿ ಒಮಾನ್ ಗೆ ಸ್ಥಾನ ಸಿಗುವಂತೆ ಮಾಡಿದೆ. ಪ್ರಜೆಗಳಿಗೆ ಮೂಲ ಭೂತ ಸೌಕರ್ಯ ಗಳಾದ, ವಸತಿ, ರಸ್ತೆ, ನೀರು, ವಿದ್ಯುತ್, ಶಾಲಾ ಕಾಲೇಜುಗಳು, ಆಸ್ಪತ್ರೆ ಇನ್ನು ಮುಂತಾದವುಗಳನ್ನು ಒಮಾನ್ ರಾಷ್ಟ್ರದ ಎಲ್ಲೆಡೆ ದೊರಕುವಂತೆ ಮಾಡಿದ್ದಾರೆ. ಬೇರೆ ರಾಷ್ಟ್ರಗಳಲ್ಲಿ ದೊರಕುವಂತೆ, ಇಲ್ಲಿ ಅನಿಲ ಮತ್ತು ಪೆಟ್ರೋಲ್ ಉತ್ಪನ್ನ ಸಂಪನ್ಮೂಲ ಗಳು ಇಲ್ಲಿ ಕಡಿಮೆ. ಆದರೂ ಅದರಲ್ಲಿ ಬರುವ ಆದಾಯ ದಿಂದ ಒಮಾನ್ ಆದ್ಯಂತ ಹಲವಾರು ಯೋಜನೆ ಗಳನ್ನು ರೂಪಿಸಿ ಸಂಫೂರ್ಣ ಸಶಕ್ತ ರಾಷ್ಟ್ರ ನಿರ್ಮಾಣಕ್ಕೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ.

೨೦೧೧ ರಲ್ಲಿ  ಹಲವು ದೇಶಗಳಲ್ಲಿ ನಡೆದ ಬಂಡುಕೋರರ ದಂಗೆ ಗಳಿಂದ ಪ್ರೇರಿತರಾದ ಕೆಲವರು ಸರ್ಕಾರಕ್ಕೆ ಹಲವು ಸವಾಲು ಗಳನ್ನು ಒಡ್ಡಿದರು. ಅವೆಲ್ಲವನ್ನು ಸಕಾರಾತ್ಮಕವಾಗಿ ಸ್ವೀಕರಿಸಿ, ಆಡಳಿತದಲ್ಲಿ ಬಹುತೇಕ ಬದಲಾವಣೆ ಯನ್ನು ತಂದು, ಸ್ಥಳೀಯರಿಗೆ ಉದ್ಯೋಗದಲ್ಲಿ ಮೀಸಲಾತಿ, ಕನಿಷ್ಟ ವೇತನ, ಉಚಿತ ವೈದ್ಯಕೀಯ ಸೌಲಭ್ಯ, ಉಚಿತ ಶಿಕ್ಷಣ ಇನ್ನು ಮುಂತಾದ ಕಾಯ್ದೆ ಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದಾರೆ.
 










ತಮ್ಮ ಆಡಳಿತ ವೈಖರಿ ಯಿಂದ ಸದಾ ಜನಾನುರಾಗಿಯಾಗಿರುವ ಸುಲ್ತಾನ್ ರವರು ದೇಶ ವಿದೇಶಗಳಲ್ಲಿ ಹೆಸರು ಪಡೆದಿದ್ದು ಅಲ್ಲದೆ  ನೆರೆ ರಾಷ್ಟ್ರಗಳೊಂದಿಗೆ ಅತ್ಯುತ್ತಮ ಸಂಭಂದ ವನ್ನು ಹೊಂದಿ ಈ ಮಟ್ಟದ ಹೆಸರು ಗಳಿಸುವುದಕ್ಕೆ ಈ ಕೆಳಗಿನವು   ಅತ್ಯಂತ ಪ್ರಮುಖ ಕಾರಣಗಳು.
ಸದಾ ಜನರ ಏಳಿಗೆಗೆ ಚಿಂತಿಸುವ ಪ್ರವೃತ್ತಿ.
ದೇಶದ ಪ್ರಜೆಗಳಿಗಾಗಿ ವಿಶಾಲವಾಗಿ ಯೋಚಿಸುವ ಹಾಗೂ ದೂರ ದೃಷ್ಟಿ ಯನ್ನು ಹೊಂದಿರುವ ನಾಯಕತ್ವದ ಗುಣ.
ದೇಶದ ಹಿತಾಸಕ್ತಿಗೆ ತಮ್ಮ ಮೊದಲ ಗಮನ.
ದೇಶದ ಪ್ರಜೆಗಳಿಗಾಗಿ ಮತ್ತು ಅನಿವಾಸಿ ಪ್ರಜೆಗಳಿಗಾಗಿ ಒಂದೇ ಕಾನೂನು.
ರಾಷ್ಟ್ರಾಭಿವೃದ್ದಿಗೆ ವೈಯುಕ್ತಿಕವಾಗಿ ತೊಡಗಿಕೊಂಡಿರುವುದು. ಉತ್ತಮ ಆಡಳಿತ ನೀಡುವಲ್ಲಿ ಯಶಸ್ವಿ.
ಧರ್ಮ ಸಹಿಷ್ಣುತೆ, ಸಮಾನತೆ, ಶಾಂತಿ ಮತ್ತು ಮಾನವೀಯತೆಯ ಪ್ರತೀಕ.
ಕೂಲಂಕುಶ ವಾಗಿ ಯೋಚಿಸದೆ, ಚಿಂತಿಸದೆ, ಯಾವುದೇ ಜಾಗತಿಕ ನಾಯಕರನ್ನು ಹಿಂಬಾಲಿಸುವುದು ಮತ್ತು ಓಲೈಸಿ ಕೊಳ್ಳುವ ಗೊಡವೆಗೆ ಹೋಗದೆ ಇರುವ ಅವರ ಗುಣ.
ಗಲ್ಫ್ ರಾಷ್ಟ್ರಗಳಲ್ಲಿ (ಜಿಸಿಸಿ) ಸಣ್ಣ ಪುಟ್ಟ ಭಿನ್ನಬಿಪ್ರಾಯ ಅಥವ ಯಾವುದಾದರು ಸಮಸ್ಯೆ ಉಧ್ಬವಿಸಿದಾಗ ಮುಂದಾಳತ್ವ ವಹಿಸಿ ಎಲ್ಲವನ್ನು ಬಗೆಹರಿಸಿ ಎಲ್ಲರನ್ನು ಒಂದು ಮಾಡಿ ಒಟ್ಟಿಗೆ ಕರೆದೊಯ್ಯುವ ನಾಯಕತ್ವದ ಗುಣ ಎಲ್ಲರ ಮೆಚ್ಚುಗೆಗೆ ಪಾತ್ರ ವಾಗಿದೆ.
ಪ್ರಾಮಾಣಿಕತೆಗೆ ಮತ್ತು ಬದ್ದತೆ ಗೆ ಹೆಸರುವಾಸಿ.
ಜಾತಿ ಧರ್ಮ, ಬಡವ ಶ್ರೀಮಂತ, ಮೇಲು ಕೀಳು ಎನ್ನದೆ ಎಲ್ಲ ಪ್ರಜೆಗಳಲ್ಲಿ ಸಮಾನತೆ ತರುವಲ್ಲಿ ಪ್ರಮುಖ ಪಾತ್ರ.
ಪ್ರತಿಯೊಬ್ಬರಿಗೂ ಸುರಕ್ಷತೆ ನೀಡುವಲ್ಲಿ ಯಶಸ್ವಿ.
ಮೂಲಭೂತ ಸೌಕರ್ಯ ಗಳಾದ, ವಸತಿ, ರಸ್ತೆ, ನೀರು, ವಿದ್ಯುತ್, ಶಾಲಾ ಕಾಲೇಜುಗಳು, ಆಸ್ಪತ್ರೆ ಇನ್ನು ಮುಂತಾದವುಗಳನ್ನು ಒಮಾನ್ ರಾಷ್ಟ್ರದ ಎಲ್ಲೆಡೆ ದೊರಕುವಂತೆ ಮಾಡಿದ್ದಾರೆ.
ಎಲ್ಲ ರಾಷ್ಟ್ರಗಳೊಂದಿಗೆ ಉತ್ತಮ ಭಾಂದವ್ಯ.

ಮೇಲಿನವು ಕೆಲವೇ ಕಾರಣಗಳಿರಬಹುದು, ಸ್ಥಳೀಯ ಜನರಲ್ಲದೆ ಇತರೆ ದೇಶದ ಪ್ರಜೆಗಳು ಸಹ ವೈಯುಕ್ತಿಕವಾಗಿ ಗೌರವಿಸಲ್ಪಡುವ ಕೆಲವೇ ಕೆಲವು ಜಾಗತಿಕ ನಾಯಕರಲ್ಲಿ ಸುಲ್ತಾನ್ ರವರೊಬ್ಬರು ಎನ್ನುವುದು ಉತ್ಪ್ರೇಕ್ಷೇ ಯಾಗಲಾರದು.
 
ಸುಲ್ತಾನ್ ಖಾಬೂಸ್ ರವರು ಒಮಾನ್‌ನ ಸಲಾಲದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಬಳಿಕ ಮಾಧ್ಯಮಿಕ ಶಿಕ್ಷಣ ಪಡೆದಿರುವುದು ಪೂನಾದಲ್ಲಿ. ಅವರು ಮಾಜಿ ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮಾ ಅವರ ಶಿಷ್ಯ ರಾಗಿದ್ದರು ಎನ್ನುವುದಕ್ಕೆ ಭಾರತೀಯರಿಗೆ ಹೆಮ್ಮೆ ಯಿದೆ.  ಒಮಾನ್ ರಾಷ್ಟ್ರ ಧರ್ಮ ಸಹಿಷ್ಣುತೆಗೆ ಹೆಸರುವಾಸಿ, ಇಲ್ಲಿ ಮಸೀದಿಗಳಲ್ಲದೆ, ಚರ್ಚ್ ಮತ್ತು ದೇವಾಲಯಗಳು ಸಹ ಇವೆ. ಅದಾಜು ೪೦ ಲಕ್ಷ ಜನಸಂಖ್ಯೆ ಯಿದ್ದು ಅದರಲ್ಲಿ ೧೭ ಲಕ್ಷ ಅನಿವಾಸಿ ಉದ್ಯೋಗಿಗಳಿದ್ದಾರೆ. ಅವರಲ್ಲಿ ೪೦% ಭಾರತೀಯರಿದ್ದು ಹೆಚ್ಚಿನವರು ಕೇರಳ ಕ್ಕೆ ಸೇರಿದವರಿದ್ದಾರೆ. ಉಳಿದಂತೆ, ತಮಿಳುನಾಡು, ಆಂಧ್ರ, ಕರ್ನಾಟಕ, ಗುಜರಾತ್, ಮತ್ತಿತರ ರಾಜ್ಯದವರಿದ್ದಾರೆ.

ಪಕ್ಕದ ದುಬೈ, ಅಭುದಾಭಿ, ಕತಾರ್, ಬಹರೈನ್, ಕುವೈತ್ ಗಳಲ್ಲಿ ಸಾವಿರಾರು ಕಿಲೋ ಮೀಟರ್ ಗಳ ವಿಸ್ತೀರ್ಣದಲ್ಲಿ  ಮಾನವ ನಿರ್ಮಿತ ಆಕಾಶ ಮುಖಿ ಬಹುಮಹಡಿ ಕಟ್ಟಡಗಳು , ಪ್ರವಾಸಿ ತಾಣಗಳಿಗೆ ಕೊರತೆಯಿಲ್ಲ. ಆದರೆ ಒಮಾನ್ ನಲ್ಲಿ ನಿಸರ್ಗ ನಿರ್ಮಿತ ಪ್ರವಾಸಿ ತಾಣಗಳಿಗೆ ಕೊರತೆ ಯಿಲ್ಲ, ಅವುಗಳನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿ ಪಡಿಸಿ, ಹಲವು ದೇಶಗಳಲ್ಲಿ ಒಮಾನ್ ಪ್ರವಾಸದ ಬಗ್ಗೆ ಸತತ ಪ್ರಚಾರ ನೀಡುತಿದ್ದು, ಅದರ ಫಲವಾಗಿ ಅಕ್ಟೋಬರ್ ನಿಂದ ಮಾರ್ಚ್ ನವರೆಗೆ ಲಕ್ಷಾಂತರ ವಿದೇಶಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಮರಳುಗಾಡಿನ ಮಲೆನಾಡು ಎಂದೇ ಪ್ರಸಿದ್ದವಾಗಿರುವ ದೋಫಾರ್ ಪ್ರಾಂತ್ಯದ ಸಲಾಲ ಕ್ಕೆ ಜೂನ್ ಮಧ್ಯ ಭಾಗದಿಂದ ಸೆಪ್ಟ್ಂಬರ್ ರವರೆಗೆ  ಮಧ್ಯಪ್ರಾಚ್ಯ ರಾಷ್ಟ್ರಗಳಿಂದ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುತ್ತಾರೆ. ಪ್ರವಾಸೋಧ್ಯಮ ಅಭಿವೃದ್ದಿ ಯಿಂದ ಸ್ಥಳೀಯರಿಗೆ ವಿವಿಧರೀತಿಯಲ್ಲಿ ಲಾಭಗಳಾಗಿವೆ.
 
ಸುಲ್ತಾನ್ ರವರ ಆರೋಗ್ಯದ ಕುರಿತು ಕೇವಲ ಒಮಾನಿಗಳಲ್ಲದೆ ಇಲ್ಲಿ ವಾಸಿಸುತ್ತಿರುವ ಎಲ್ಲ ದೇಶಗಳ ಪ್ರಜೆಗಳಲ್ಲಿ ಸಹ ಆತಂಕಕ್ಕೆ ಕಾರಣವಾಗಿತ್ತು. ಹಲವು ಕಡೆ ಸತತ ಪ್ರಾರ್ಥನೆ ಗಳು ನಡೆಯುತಿದ್ದವು. ನಮ್ಮ ಕರ್ನಾಟಕದ ಉಧ್ಯಮಿ ಅನಿವಾಸಿ ಭಾರತೀಯರಾಗಿರುವ ಕೊಡ್ಯಡ್ಕ ಜಯರಾಂ ಹೆಗ್ಡೆ ಅವರು ಹೊಸನಾಡು ಕೊಡ್ಯಡ್ಕ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಸುಲ್ತಾನ್ ರವರ ಆರೋಗ್ಯ ಸುಧಾರಣೆಗಾಗಿ ನೂರಾರು ಭಕ್ತರ ಸಮ್ಮುಖದಲ್ಲಿ ಚಂಡಿಕಾ ಮಹಾಯಾಗ ಮತ್ತು ಸಾಮೂಹಿಕ ಪ್ರಾರ್ಥನಯೊಂದಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಸಿದ್ದರು.
 
ನಂತರ ಬರ್ಕಾದ ಫಾರ್ಮ್ ಹೌಸ್ ಒಂದರಲ್ಲಿ ನ.೭ ರಿಂದ ೯ ರವರೆಗೆ ಸುಲ್ತಾನ್ ರವರ ಆರೋಗ್ಯ ವೃದ್ಧಿಗಾಗಿ ಬೆಂಗಳೂರಿನ ಅಂತಾರಾಷ್ಟ್ರೀಯ ವಾಸ್ತು ತಜ್ಞರು, ಆಧ್ಯಾತ್ಮಿಕ ಚಿಂತಕರು, ವೈಜ್ಞಾನಿಕ ಜ್ಯೋತಿಷ್ಯರಾಗಿರುವ ಶ್ರೀ ಚಂದ್ರಶೇಖರ ಸ್ವಾಮೀಜಿಯವರ ನೇತೃತ್ವದಲ್ಲಿ ಮಹಾಧನ್ವಂತರಿ ಯಾಗ, ಪೂರ್ಣ ನವಗ್ರಹ ಶಾಂತಿ, ಮಹಾಮೃತ್ಯುಂಜಯಯಾಗ, ಮಹಾವಿಷ್ಣುಯಾಗ ನಡೆಸಿದ್ದರು.
 

ಒಮಾನ್ ನಲ್ಲಿ ಸಂತೋಷ ಮರುಕಳಿಸಿದೆ, ಸುಲ್ತಾನ್ ರವರ ಆರೋಗ್ಯ ದಲ್ಲಿ ಚೇತರಿಕೆ ಕಂಡಿದೆ. ಎಂದಿನಂತೆ ಆಡಳಿತ ಕಡೆ ಗಮನ ವಹಿಸಿದ್ದಾರೆ. ನಿನ್ನೆ ಬೈತ್ ಅಲ್ ಬರ್ಕಾ ಪ್ಯಾಲೇಸ್ ನಲ್ಲಿ ಆಡಳಿತ ವರ್ಗದ ಎಲ್ಲ  ಮಂತ್ರಿ ಗಳು ಪ್ರಮುಖರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದರು. ಅಲ್ಲಾಹು ರವರ ಕೃಪೆಯಿಂದ ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ ಬಗ್ಗೆ ಅತೀವ ಸಂತಸ ವನ್ನು ವ್ಯಕ್ತ ಪಡಿಸಿತಮ್ಮ ಆರೋಗ್ಯದ ಕುರಿತು ಕಾಳಜಿವಹಿಸಿದ, ಪ್ರಾರ್ಥನೆಗಳನ್ನು ಸಲ್ಲಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ಅರ್ಪಿಸಿದರು. ತಮ್ಮ ಅನುಪಸ್ಥಿತಿಯಲ್ಲಿ ದೇಶದ ಪ್ರಗತಿ ಯಲ್ಲಿ ಕುಂಠಿತವಾಗದಂತೆ ಆಡಳಿತದಲ್ಲಿ ಪ್ರಮುಖ ಪಾತ್ರ ವಹಿಸಿದ ಎಲ್ಲರಿಗು ಧನ್ಯವಾದಗಳನ್ನು ಹೇಳಿದರು. ಕಳೆದ ೮ ತಿಂಗಳಲ್ಲಿ ನಡೆದ ಅಭಿವೃದ್ದಿ ಯ ಕುರಿತು ಮಾಹಿತಿಯನ್ನು ಪಡೆದರು. ಮಧ್ಯ ಪ್ರಾಚ್ಯ ದಲ್ಲಿನ ಆಗುಹೋಗು ಗಳ  ಬಗ್ಗೆ ಚರ್ಚೆಯನ್ನು ನಡೆಸಿದರು.

ಜನರ ಒಳಿತಿಗಾಗಿ ಚಿಂತಿಸುವ, ಇಂತಹ ಶಾಂತಿಪ್ರಿಯ ಮಹಾನ್ ನಾಯಕರಿಗೆ ದೇವರು ನೂರಾರು ವರ್ಷಗಳ ಆಯಸ್ಸು ಆರೋಗ್ಯಗಳನ್ನು ದಯಪಾಲಿಸಲಿ ಜನರೆಲ್ಲ ಪ್ರಾರ್ಥಿಸುತಿದ್ದಾರೆ, ಇನ್ನು ಮುಂದೆ ಯಾವುದೇ ತೊಂದರೆಗಳು ಬಾರದಂತೆ  ಸುಲ್ತಾನ್ ರವರಿಗೆ ಒಳ್ಳೆಯದಾಗಲಿ ಎಂದು ನಾವೆಲ್ಲ ಆಶಿಸೋಣ.

Photo courtesy: Internet


Click below headings