ಸೋಮವಾರ, ಮೇ 31, 2021

ದುಬಾಯಿ ಸೀನ



 ತಾಲೂಕ್ ಆಫೀಸ್ ನಿಂದ ಹೊರಗಡೆ ಬರುತಿದ್ದ ಅವರನ್ನು ನೋಡಿದ ರಾಜ, ಅರೇ ಇವ್ರು ದುಬಾಯಿ ಸೀನನ ಅಮ್ಮ ಸಾವಿತ್ರಮ್ಮ ಅಲ್ವೇನೋ? ಎಂದು ಗೆಳೆಯನನ್ನ ಕೇಳಿದ. ಅವನು ಅವರತ್ತ ನೋಡಿ, ಹೌದು ಅವರೇ ಎಂದು ಹೇಳಿದ.  ಇಲ್ಯಾಕೆ ಬಂದಿದಾರೆ? ಎಂದು ಯೋಚಿಸುತ್ತ ಅವರು ಅಲ್ಲಿಂದ ಹೊರಟು ಹೋದ ಮೇಲೆ, ರಾಜಾ  ತಾಲೂಕ್ ಆಫೀಸಿನ ಒಳಗೆ ಬಂದು ಅಲ್ಲಿರುವ ಗುಮಾಸ್ತನ ಹತ್ತಿರ, ಈಗ ಲಕ್ಷ್ಮೀಪುರದಿಂದ ಒಬ್ಬ ಹೆಂಗಸು ಬಂದಿದ್ರಲ್ಲಾ, ಅವರು ಇಲ್ಲಿಗೆ ಯಾಕೆ ಬಂದಿದ್ದು ಅಂತ ವಿಚಾರಿಸಿದ. ಆ ಗುಮಾಸ್ತ, ಬಸವನಪುರದ ಒಂದು ಇಪ್ಪತ್ತೈದೆಕರೆ ಜಮೀನು ರಿಜಿಸ್ಟರ್ ಮಾಡ್ಸಿಕೊಳ್ಳೋಕೆ ಬಂದಿದ್ರು ಅಂತ ಹೇಳಿದ.


 ಆ ವಿಷಯ ಕೇಳಿ, ರಾಜನಿಗೆ ಈರ್ಷ್ಯೇ ಉಂಟಾಯಿತು. ತಿನ್ನೋಕೆ ಗತಿ ಇಲ್ಲದೆ ಇದ್ದ ಈ ಜನ ಇವತ್ತು ಇಷ್ಟೊಂದು ಆಸ್ತಿ ಮೇಲೆ ಆಸ್ತಿ ಮಾಡ್ತಾಯಿದಾರಲ್ಲ? ಈ ದುಬಾಯಿ ಸೀನ, ಏನ್ ವ್ಯವಹಾರ ಮಾಡ್ತಿದ್ದಾನೋ ಹೆಂಗೆ ಹಣ ಸಂಪಾದಿಸ್ತಾಯಿದಾನೋ? ದೇವರೇ ಬಲ್ಲ. ದುಬಾಯಿಗೆ ಹೋಗಿ ದುಡಿದು ಬಂದವರು ಸುಮಾರು ಜನರಿದ್ದಾರೆ ಎಲ್ಲೋ ಒಂದು ಕಡೆ ಮನೆ ಕಟ್ಟಿಕೊಂಡು ಅಲ್ಪ ಸ್ವಲ್ಪ ಜಮೀನು ತಗಂಡು ಇರೋದು ನೋಡಿದ್ದೀನಿ. ಆದರೆ ಇಷ್ಟೊಂದು ಮೆರೆದವರನ್ನ ನೋಡಿಲ್ಲ,ಎಂದು ಮನಸ್ಸಿನಲ್ಲಿ ಮಂಡಿಗೆ ಮುರಿಯತೊಡಗಿದ. 



ರಾಜ ಮತ್ತು ಸೀನ ಒಂದೇ ಓರಗೆಯವರು, ರಾಜನ ಮನೆಯವರು ಉತ್ತಮ ಸ್ಥಿತಿವಂತರಾಗಿದ್ದರು. ಊರಿನಲ್ಲಿ ಶ್ರೀಮಂತ ಕುಟುಂಬ ಅವರದ್ದೊಂದೆ ಇತ್ತು., ರಾಜ ತನ್ನ ಶಿಕ್ಷಣ ಮುಗಿಸಿದ ಮೇಲೆ ತಂದೆಯ ಜತೆ ವ್ಯವಹಾರ ನೋಡಿಕೊಳ್ಳುತ್ತ,  ರಾಜಕೀಯದ ಜತೆ ನಂಟನ್ನೂ ಇಟ್ಟುಕೊಂಡು, ಚಿಕ್ಕ ಪುಟ್ಟ ಕಾಂಟ್ರಾಕ್ಟ್ ಗಳನ್ನ ಮಾಡಿಕೊಂಡಿದ್ದ.  ಸೀನ ಒಬ್ಬ ಕೂಲಿಕಾರನ ಮಗ, ದುಡಿದಿದ್ದು ಕೈ ಬಾಯಿಗೆ ಅನ್ನುವಷ್ಟು ಮಾತ್ರ, ಬಹಳ ಬಡ ಕುಟುಂಬ. ಆದರೆ ಸೀನ ಬುದ್ದಿವಂತ ಹುಡುಗ. ಹತ್ತನೇ ತರಗತಿ ಮುಗಿದ ಮೇಲೆ ಮುಂದೆ ಓದಲು ಸಾಧ್ಯವಾಗದೆ, ಅಪ್ಪನ ಜತೆ ಕೂಲಿ ಕೆಲಸ, ಮನೆ ಕಟ್ಟುವ ಕೆಲಸ ಎಂದು ದುಡಿಯಲು ಹೋಗುತಿದ್ದ. ಯಾರೋ ಒಬ್ಬ ಏಜೆಂಟ್ ಹಿಡಿದು ಪಾಸ್ ಪೋರ್ಟ್  ವೀಸಾ ಮಾಡಿಸಿಕೊಂಡು ಸುಮಾರು ಹತ್ತು ವರ್ಷಗಳ ಹಿಂದೆ ದುಬಾಯಿಯಲ್ಲಿ ಕೆಲಸ ಹುಡುಕಿಕೊಂಡು ಹೊರಟು ಹೋದ ಮೇಲೆ ಅವನ ನಸೀಬು ಬದಲಾಗಿತ್ತು. ಸೀನ ಅತ್ಯಂತ ಕಷ್ಟಪಟ್ಟು ದುಡಿದು ತನ್ನ ಸುಂದರ ಜೀವನವನ್ನ ರೂಪಿಸಿಕೊಂಡಿದ್ದ. ಊರಿನಲ್ಲಿ, ಒಂದು ಮನೆ, ಬಸ್ಟಾಂಡ್ ನಲ್ಲೊಂದು ಕಾಂಪ್ಲೆಕ್ಸ್, ನೂರಾರು ಎಕರೆ ಜಮೀನು, ಊರಿನಲ್ಲಿ ಅವನ ವ್ಯವಹಾರ ನೋಡಿಕೊಳ್ಳುವುದಕ್ಕೆ ನೂರಾರು ಜನ ಕೆಲಸದಾಳುಗಳು ಇಟ್ಟುಕೊಂಡಿದ್ದ, ಇಂತಹುದೆಲ್ಲ ನೋಡಿ ಸ್ವಾಭಾವಿಕವಾಗಿ ರಾಜನಿಗೆ ಕಣ್ಣು ಕುಕ್ಕುವಂತೆ ಮಾಡಿತ್ತು. ದಿನಕಳೆದಂತೆ ಸೀನ ಆರ್ಥಿಕ ವಾಗಿ ಮತ್ತು ಸಾಮಾಜಿಕವಾಗಿ ಬೆಳೆದಿದ್ದು ರಾಜನಿಗೆ ಸಹಿಸಲಾರದಾಯಿತು. ಅಸೂಯೆ ಮೂಡುತ್ತ ಬಂತು. ರಾಜಕೀಯ ಜತೆ ನಂಟು ಇತ್ತು, ನೂರಾರು ಜನರ ಪರಿಚಯ  ಇದ್ದಿದ್ದರಿಂದ ಏನಾದರು ಕೆಡುಕು ಮಾಡಲೇ ಬೇಕು ಎಂದು ಆಲೋಚಿಸುತಿದ್ದ. ಅದರಂತೆ ಒಂದು ಪ್ಲಾನ್ ಮಾಡಿದ. ತನ್ನ ಫಾರ್ಮ್ ಹೌಸ್ ನಲ್ಲಿ ಒಂದು ಪಾರ್ಟಿ ಆಯೋಜಿಸಿ, ತನಗೆ ಪರಿಚಯವಿದ್ದ ಆ ಊರಿನ ಪೋಲೀಸ್ ಇನ್ಸಪೆಕ್ಟರ್ ವಿಲ್ಸನ್ ರವರನ್ನ ಆ ಪಾರ್ಟಿಗೆ ಕರೆದ. ಪಾರ್ಟಿಯಲ್ಲಿ ಅವರಿಗೆ ತನ್ನ ಮನಸ್ಸಿನಲ್ಲಿರುವುದನ್ನ ಹೇಳಿದ. "ಸಾರ್, ಒಬ್ಬ ಯಕಶ್ಚಿತ್ ಕೂಲಿ ಮಾಡೋ ಮನುಷ್ಯ ಈವತ್ತು ಕೋಟಿ ಕೋಟಿ ಆಸ್ತಿ ಮಾಡಿದಾನೆ ಅಂದರೆ ಈ ಊರಿನಲ್ಲಿ ಯಾರಿಗೂ ನಂಬಿಕೆ ಬರ್ತಿಲ್ಲ. ಅವನು ಈ ಮಟ್ಟಕ್ಕೆ ಬೆಳೆದಿದಾನೆ ಅಂದರೆ, ಅವನು ದುಬಾಯಿಯಲ್ಲಿ ಯಾವುದೋ ದಂಧೆ ಮಾಡ್ತಾಯಿದಾನೆ. ಆ ಅಕ್ರಮದ ಹಣವನ್ನ ತಂದು ಇಲ್ಲಿ ಸುರಿತಾಯಿದಾನೆ. ನೀವು ನಿಮಗೆ ಇರೋ ಪವರ್ ಉಪಯೋಗಿಸಿ, ಅವನಿಗೆ ಸರಿಯಾಗಿ ಬುದ್ದಿ ಕಲಿಸಬೇಕು. ಹೀಗೇ ಪ್ರತಿಯೊಂದನ್ನು ಹೇಳುತ್ತಾ ಹೋದ. ಎಲ್ಲವನ್ನ ವಿವರವಾಗಿ ಕೇಳಿಸಿಕೊಂಡ  ಇನ್ಸಪೆಕ್ಟರ್ ವಿಲ್ಸನ್, ಪೋಲೀಸ್ ಎನ್ ಕ್ವೈರಿ ಮಾಡೋದು ಸುಲಭ, ಆದರೆ ಅವನ ಅಪರಾಧ ಚಟುವಟಿಕೆಗಳನ್ನ ರುಜುವಾತು ಮಾಡೋದು ಅಷ್ಟು ಸುಲಭವಲ್ಲ. ಸಾಮಾನ್ಯವಾಗಿ ಇಂತಹ ಕೇಸ್ ಗಳಲ್ಲಿ, ಸ್ವಲ್ಪ ಧಮಕಿ ಹಾಕಿದರೆ, ಅಮೌಂಟ್ ಕೊಟ್ಟು ಸೆಟಲ್ ಮಾಡಿಕೊಳ್ಳೋಕೆ ಟ್ರೈ ಮಾಡ್ತಾರೆ. ಅಷ್ಟೇ. ನಾವೇನು ಮಾಡಲಿಕ್ಕೆ ಆಗುವುದಿಲ್ಲ ಎಂದು ಬಿಟ್ಟರು.


ಸಾರ್, ನೀವು ಸ್ವಲ್ಪ ದೊಡ್ಡದಾಗಿ ಯೋಚಿಸಿ, ಇನ್ಕಮ್ ಟ್ಯಾಕ್ಸ್ ರೈಡ್, ಅಂತಹದ್ದನ್ನೇನಾದರು ಟ್ರೈ ಮಾಡಿ, ಒಳ್ಳೇ ಅಮೌಂಟ್ ಡೀಲ್ ಮಾಡಿಕೊಳ್ಳಿ, ಮುಂದೆ ಅವನ ಮಾನ ಹರಾಜಾಗೋ ಕೆಲಸವನ್ನ ನಾನು ನೋಡ್ಕೋತೀನಿ. ಅವರೆಲ್ಲ ಊರು ಬಿಟ್ಟು ಹೋಗೋ ತರಹ ಮಾಡ್ತೀನಿ. ಒಟ್ಟಿನಲ್ಲಿ ಅವನ ದೊಡ್ಡಸ್ತಿಕೆ ಪೆಟ್ಟು ಬಿಳಬೇಕು ನೋಡಿ. ಆಗ ಇನ್ಸಪೆಕ್ಟರ್ ವಿಲ್ಸನ್, ಇನ್ಕಮ್ ಟ್ಯಾಕ್ಸ್ ರೈಡ್ ಇದು ಒಳ್ಳೇ ಉಪಾಯ, ಸಿಕ್ಕಾಬಟ್ಟೆ ಡೀಲ್ ಮಾಡಬಹುದು. ಸರಿ ನಾನು ಯೋಚಿಸ್ತೀನಿ ಎಂದು ಹೇಳಿದ. 

ಇದಾದ ಕೆಲದಿನಗಳಲ್ಲಿ, ಇನ್ಕಮ್ ಟ್ಯಾಕ್ಸ್ ಡಿಪಾರ್ಟ್ಮೆಂಟ್ ನಲ್ಲಿ ತನ್ನ ಪರಿಚಯದವರೊಬ್ಬರ ಮುಖಾಂತರ ಸುಕುಮಾರ್ ಅನ್ನುವವರ ಬಳಿ ದುಬಾಯಿ ಸೀನನ ವಿಷಯ ಹೇಳಿ, ಒಂದು ರೈಡ್ ಮಾಡುವುದಕ್ಕೆ ಕೇಳ್ತಾನೆ. ಆದರೆ ಅವರು, ಇಂಥ ಎನ್ನಾರೈ ಕೇಸ್ ಗಳನ್ನ ನಾವು ಡೀಲ್ ಮಾಡುವುದಿಲ್ಲ. ಅದು ಸೆಂಟ್ರಲ್ ಗವರ್ನ್ಮೆಂಟ್ ಈಡಿ ಡಿಪಾರ್ಟ್ಮೆಂಟ್ ಮಾಡುವ ಕೆಲಸ.  ಆದರೂ, ನಾವು ಇಲ್ಲಿ ಅವರು ಗಳಿಸ್ತಾಯಿರೋ ಆದಾಯದ ಬಗ್ಗೆ ವಿಚಾರಣೆ ಮಾಡಬಹುದು. ಆ ಊರಿನ ಯಾರಿಂದಾದರು ಒಬ್ಬರ ಕೈಯಲ್ಲಿ ಕಂಪ್ಲೇಂಟ್ ಕೊಡಿಸಿ, ಮುಂದೆ ನೋಡೋಣ ಎಂದು ಹೇಳ್ತಾರೆ. ಆಗ ಇನ್ಸಪೆಕ್ಟರ್ ವಿಲ್ಸನ್, ಸಾರ್, ಇದನ್ನ ಅನ್ ಅಫಿಶಿಯಲ್ ಆಗಿ ಡೀಲ್ ಮಾಡೋಣ. ದುಬಾಯಿ ಪಾರ್ಟಿ ಭಾರಿ ಇದಾನೆ, ಒಳ್ಳೇ ಅಮೌಂಟ್ ಸಿಗುತ್ತೆ ಎಂದು ಆಮಿಷ ಒಡ್ಡುತ್ತಾನೆ. 

ಆಮಿಷದ ಆಸೆಗೆ ಸುಕುಮಾರ್ ಕೇಳುತ್ತನೆ, ಸರಿ, ಮನುಷ್ಯ ಹೆಂಗೆ? ಬಲೆಗೆ ಬಿಳ್ತಾನಾ?

ಬೀಳಬಹುದು ಸಾರ್, ಜಾಸ್ತಿ ಓದಿಲ್ಲ, ಕೂಲಿ ಕೆಲಸ ಅದೂ ಇದೂ ಮಾಡಿಕೊಂಡು ದುಬಾಯಿ ವೀಸಾ ಸಿಕ್ಕಿದ ಮೇಲೆ ಅಲ್ಲಿ ಕೆಲಸ ಮಾಡಿ ಒಳ್ಳೆ ಹಣ ಸಂಪಾದನೆ ಮಾಡಿದ್ದಾನೆ. ಪೊಲಿಟಿಕಲೀ ಅಂಥ ಏನು ಸ್ಟ್ರಾಂಗ್ ಇಲ್ಲ. ಜನ ಬೆಂಬಲ ಅಲ್ಪ ಸ್ವಲ್ಪ ಬಿಟ್ಟರೆ, ಅಷ್ಟೇನಿಲ್ಲ. ನೀವು ನಿಮ್ಮ ವಿಚಾರಣೆ ಮಾಡಿ, ನಾನು ನನ್ನ ಧಾಟಿಯಲ್ಲಿ ಮಾಡ್ತೀನಿ. ಕೊನೆಗೆ ಡೀಲ್ ಮಾಡೋಣ. ಬಂದಿದ್ದಷ್ಟು ಬಾಚಿಕೊಳ್ಳೋಣ, ಏನಂತೀರಾ?

ಅವರು, ಆಲೋಚಿಸುತ್ತಾ,....ಓಕೆ ಮಾಡೋಣ. ಅವನ ಆಸ್ತಿ ವಿವರ ಎಲ್ಲ ಕಲೆ ಹಾಕಿ, ಮುಂದೆ ಮಾತಾಡೋಣ ಎನ್ನುತ್ತಾರೆ.

ತದನಂತರ, ದುಬಾಯಿ ಸೀನನ ಆಸ್ತಿ ವಿವರ ಎಲ್ಲ ಸಿಗುತ್ತದೆ. ನೂರಾರು ಎಕರೆ ಜಮೀನು, ಒಂದೆರೆಡು ಮನೆ, ಕಾರು, ಒಂದು ಕಾಂಪ್ಲೆಕ್ಸ್ ಹೀಗೆ ಎಲ್ಲ ವಿವರವನ್ನ ಸಂಗ್ರಹಿಸಿ ರಾಜ, ಇನ್ಸ್ ಪೆಕ್ಟರ್ ಗೆ ಕೊಡುತ್ತಾನೆ. ಅದನ್ನು ಪರಿಶೀಲಿಸಿ, ಆದಾಯ ತೆರಿಗೆ ಇಲಾಖೆ ಅಧಿಕಾರಿಗೆ ಕಳುಹಿಸಿಕೊಡುತ್ತಾರೆ. ಇದಾಗಿ ಒಂದು ತಿಂಗಳ ನಂತರ ಸೀನ ದುಬಾಯಿಯಿಂದ ಬರುತ್ತಿರುವ ಮಾಹಿತಿ ಸಿಗುತ್ತದೆ. ಇತ್ತ, ಇದೇ ಸಮಯಕ್ಕಾಗಿ ಕಾಯುತಿದ್ದ ರಾಜ ಮತ್ತು ಇನ್ಸ್ ಪೆಕ್ಟರ್, ಅವನ ಮನೆ ರೈಡ್ ಮಾಡಲು ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತಾರೆ. ಸೀನನನ್ನು ಹೆದರಿಸಿ ಹಣ ವಸೂಲು ಮಾಡುವ ಉದ್ದೇಶದಿಂದ  ಅನ್ ಅಫಿಶಿಯಲ್ ಆಗಿ ರೈಡ್ ಮಾಡುವ ಯೋಜನೆ ಇದ್ದದ್ದರಿಂದ ಮೇಲಾಧಿಕಾರಿಗಳಿಗೆ ಯಾವುದೇ ಮಾಹಿತಿ ನೀಡುವುದಿಲ್ಲ. 



ದುಬಾಯಿನಿಂದ ಸೀನ ಊರಿಗೆ ಬಂದಿರುತ್ತಾನೆ, ರಾಜನಿಗೆ ವಿಷಯ ತಿಳಿಯುತ್ತದೆ. ಇನ್ಸ್ ಪೆಕ್ಟರ್ ಗೆ ಫೋನ್ ಮಾಡಿ, ಸಾರ್ ನೀವು ಆದಷ್ಟು ಬೇಗ ಬಂದು ಬಿಡಿ, ರೈಡ್ ಮಾಡುವುದಕ್ಕೆ ಇದು ಸರಿಯಾದ ಸಮಯ ಎಂದು ಹೇಳುತ್ತಾನೆ. ಇನ್ಸ್ ಪೆಕ್ಟರ್ ಮತ್ತು ಐಟಿ ಆಫೀಸರ್ ಮಾತನಾಡಿಕೊಂಡು ಸೀನನ ಊರಿಗೆ ಬರುತ್ತಾರೆ. ಸೀನ ಬಂದಿದ್ದರಿಂದ ಅವನನ್ನ ಮಾತನಾಡಿಸಲು ಹಲವಾರು ಜನ ಬಂದಿರುತ್ತಾರೆ. ಅವರನ್ನೆಲ್ಲ ನೋಡಿ, ಎಲ್ಲರೂ ಇಲ್ಲಿಂದ ಹೊರಟು ಹೋಗಿ. ಸೀನನನ್ನ ವಿಚಾರಣೆ ಮಾಡಬೇಕಿದೆ, ಮನೆಹತ್ರ ಯಾರೂ ಇರಬಾರದು ಅಂತ ಅಲ್ಲಿದ್ದ ಜನರನ್ನೆಲ್ಲ ಚದುರಿಸುತ್ತಾರೆ. ಮನೆ ಮುಂದೆ ಒಂದಿಬ್ಬರು ಪೋಲೀಸರು ಕಾವಲಿಗೆ ನಿಂತು ಕೊಳ್ಳುತ್ತಾರೆ. ಹಟಾತ್ತನೆ ಪೋಲೀಸ್ ಬಂದಿದ್ದರಿಂದ, ಊರಿನ ಜನರಿಗೆ ವಿಷಯ ಮುಟ್ಟುತ್ತದೆ. ಇದೇ ಸಂಧರ್ಭಕ್ಕಾಗಿ ಕಾಯುತಿದ್ದ, ರಾಜ ತನ್ನ ಅನುಚರರ ಮುಖಾಂತರ, ಸೀನನ ಕುರಿತ ಸುಳ್ಳುಸುದ್ದಿ ಹರಿಯಬಿಡುತ್ತಾನೆ. ಸೀನ ಸ್ಮಗ್ಲಿಂಗ್ ಮಾಡ್ತಾಯಿದ್ದಾನೆ, ಬೇರೆ ಏನೋ ಅವ್ಯವಹಾರಗಳು ನಡೆಸ್ತಾಯಿದ್ದಾನೆ, ಆ ವ್ಯವಹಾರಗಳಿಂದ ಬಂದಿರುವ ಲಾಭದಲ್ಲಿ ಈ ಹತ್ತನ್ನೆರೆಡು ವರ್ಷದಲ್ಲಿ ಇಷ್ಟೊಂದು ಆಸ್ತಿ ಮಾಡಿದ್ದಾನೆ. ಆದಾಯ ತೆರಿಗೆ ಬೇರೆ ಕಟ್ಟಿಲ್ಲ. ಸರ್ಕಾರಕ್ಕೆ ಮಣ್ಣೆರೆಚ್ತಾಯಿದ್ದಾನೆ ಅಂತ ಪೋಲೀಸರಿಗೆ ಮಾಹಿತಿ ಯಿತ್ತು ಅದಕ್ಕಾಗಿ ಇನ್ಕಮ್ ಟ್ಯಾಕ್ಸ್ ಜತೆ ಬಂದಿದ್ದಾರೆ. ಹೀಗೆ ಸುಳ್ಳು ಸುದ್ದಿ ಊರಿಗೆಲ್ಲ ಹರಡಿದಮೇಲೆ, ಜನರು ಮನೆಹತ್ರ ಬಂದು ಗುಂಪುಸೇರುವುದು ಜಾಸ್ತಿಯಾಗುತ್ತದೆ. 

ಮನೆ ಒಳಗೆ ಬಂದ ಇನ್ಸ್ ಪೆಕ್ಟರ್ ಮತ್ತು ಐಟಿ ಆಫೀಸರ್, ತಮ್ಮ ಐಡಿ ಕಾರ್ಡ್ ತೋರಿಸಿ, ಬಂದಿರುವ ಉದ್ದೇಶ ತಿಳಿಸುತ್ತಾರೆ. ಎಲ್ಲವನ್ನೂ ಸಮಾಧಾನ ಚಿತ್ತದಿಂದ ಆಲಿಸಿದ ಸೀನ, ಬನ್ನಿ ಸಾರ್. ವಿಚಾರಣೆ ಮಾಡಿ, ನಿಮಗೆ ಯಾವ ಮಾಹಿತಿ ಬೇಕೋ ಅದನ್ನೆಲ್ಲ ತೆಗೆದುಕೊಳ್ಳಬಹುದು. ಎಲ್ಲವೂ ಇಲ್ಲಿದೆ ಎಂದು ಹೇಳುತ್ತಾನೆ.

ಮನೆಯಲ್ಲಿದ್ದ ಎಲ್ಲರನ್ನೂ ಇಲ್ಲಿ ಒಂದು ಕಡೆ ಕುಳಿತುಕೊಳ್ಳೋಕೆ ಹೇಳಿ, ಎಲ್ಲರ ಬಳಿಯಿದ್ದ ಮೊಬೈಲ್ ಗಳನ್ನು ತೆಗೆದುಕೊಳ್ಳುತ್ತಾರೆ. ಮನೆಯಲ್ಲಿರುವ ಎಲ್ಲ ಕೋಣೆಗಳು ಮತ್ತು ಲಾಕರ್ ಗಳ ಬೀಗದಕೈಗಳನ್ನು ಕೇಳುತ್ತಾರೆ. ಮನೆಯಲ್ಲಿದ್ದ ಒಂದೇ ಒಂದು ಗೋದ್ರೇಜ್ ಕಪಾಟುವಿನ ಬೀಗದ ಕೈ ಅನ್ನು ಕೋಡುತ್ತ, ಸಾರ್ ನಮ್ಮದು ಇದೊಂದೇ ಲಾಕರ್, ಹಾಗೇ ನಮ್ಮ ಮನೆಯ ಯಾವುದೇ ರೂಮ್ ಗಳನ್ನು ಲಾಕ್ ಮಾಡಲ್ಲ. ನಿಮಗೆ ಏನು ಬೇಕೋ ಅದನ್ನೆಲ್ಲ ಯಾವುದೇ ಅಭ್ಯಂತರವಿಲ್ಲದೆ ನೋಡಬಹುದು ಎಂದು ಸಲೀಸಾಗಿ ಹೇಳುತ್ತಾನೆ. 

ಸಾಮಾನ್ಯವಾಗಿ ಜನ ಇಂತಹ ರೈಡ್ ಗಳಾದಾಗ ಹೇಗೆಲ್ಲಾ ವರ್ತಿಸುತ್ತಾರೆ ಅಂತ ನೂರಾರು ಐಟಿ ರೈಡ್ ಮಾಡಿದ್ದ ಐಟಿ ಆಫೀಸರ್ಗೆ ನಿರ್ಲಿಪ್ತ ಭಾವನೆಯ ಸೀನನನ್ನ ನೋಡಿ ಆಶ್ಚರ್ಯವಾಗುತ್ತದೆ. ಏನಿದು ಇವನು ಇಷ್ಟು ನಿರುಮ್ಮಳವಾಗಿದ್ದಾನೆ? ಅಂದರೆ, ಇವನ ಆದಾಯದ ಮೂಲ ಎಲ್ಲ ಸರಿಯಾಗಿದೆ ಎಂದು ಅರ್ಥವೇ? ಇವನು ಅಂತಹ ಆಸ್ತಿ ಮಾಡಿಲ್ಲವೆಂದು ಅರ್ಥವೇ. ಅದೆಲ್ಲಾ ಪಕ್ಕಕ್ಕಿಟ್ಟು, ಮನೆಯ ಇಂಚಿಂಚನ್ನೂ ಹುಡುಕೋಣ, ಏನಾದರು ಸಿಗಬಹುದು ಎಂದು ತಾನು ಮತ್ತು ತನ್ನ ಸಹಚರರು ಮನೆ ಎಲ್ಲ ಶೋಧನೆ ಮಾಡುತ್ತಾರೆ. ಮನೆಯಲ್ಲಿ ಹಲವಾರು ದಾಖಲೆ ಪತ್ರ ಮತ್ತು ಹಣ ಒಡವೆ ಎಲ್ಲವೂ ಸಿಗುತ್ತದೆ. ಬ್ಯಾಂಕಿನ ಪಾಸ್ ಬುಕ್ ಗಳು ದೊರೆಯುತ್ತವೆ. ಮನೆ ಸಂಪೂರ್ಣವಾಗಿ ಹುಡುಕಾಡಿದರು, ಮತ್ತೇನು ಸಿಗುವುದಿಲ್ಲ. ಬಹುಶಃ ಇಷ್ಟೇ ಇರಬಹುದು ಎಂದು, ಹೊರಗೆ ಬಂದು ಸೀನನ ಹತ್ರ ಮಾತನಾಡುತ್ತಾರೆ. ನಿಮ್ಮ ಬೇರೆ ಬೇರೆ ಮನೆ ಆಸ್ತಿಗಳು ಎಲ್ಲೆಲ್ಲಿವೆ, ಅಲ್ಲಿ ಎಲ್ಲ ಹುಡುಕಾಡಬೇಕು. ಬನ್ನಿ ಎಲ್ಲ ವಿಷಯತಿಳಿಸಿ. 

ಸಾರ್, ಇಲ್ಲಿರೋ ದಾಖಲೆ ಪತ್ರಗಳಲ್ಲಿ, ನನ್ನ ಎಲ್ಲ ಆಸ್ತಿ ಮತ್ತು ಮನೆಯವರ ಆಸ್ತಿ ಪತ್ರಗಳಿವೆ. ಆದು ಬಿಟ್ಟು, ಮತ್ತೇನು ಇಲ್ಲಿ ಇಲ್ಲ. ನಾವು ಎಲ್ಲ ಈ ಮನೆಯಲ್ಲಿಯೇ ವಾಸ ಮಾಡುವುದು. ಅದು ಬಿಟ್ಟರೆ, ಬೇರೆ ಮನೆ ಅಂತ ಏನು ಇಲ್ಲ.  ಸೀನನನ್ನ ದಿಟ್ಟಿಸುತ್ತ, ಅವನ ಮಾತುಗಳಲ್ಲಿನ ಪ್ರಾಮಾಣಿಕತೆಯನ್ನ ಪರೀಕ್ಷೀಸುತ್ತ, ನೀವೇನು ಇಲ್ಲ ಅಂತ ಹೇಳೋದು ರಾಜ್ ಕುಮಾರ್,  ನಾವು ಐಟಿ ಯವರು, ಎಲ್ಲ ಮೂಲೇನು ಜಾಲಾಡ್ತೀವಿ. ಅದರ ಬಗ್ಗೆ ಯೋಚನೆ ಮಾಡಬೇಡಿ... ಸುಮ್ಮನೆ ಮಾತಿಗೆ ಕೇಳಿದೆ. 


ಸಾರ್ ನಾನು ಸಹ ಮಾತಿಗೆ ಕೇಳ್ತೀನಿ, ನಾನು ಒಬ್ಬ ಭಾರತೀಯ ಪ್ರಜೆಯಾಗಿ ಇಲ್ಲಿ ನನಗೆ ಹೇಳಿಕೊಳ್ಳುವಂತಹ ಉದ್ಯೋಗ ಸಿಗದೆ ಇದ್ದಾಗ, ನನ್ನ ಉತ್ತಮ ಭವಿಷ್ಯಕ್ಕಾಗಿ ಏಜೆಂಟ್ ಮುಖಾಂತರ ದುಬಾಯಿ ಯಲ್ಲಿ ಕೆಲಸ ಹುಡುಕಿಕೊಂಡು ಅಲ್ಲಿ ನಾನು ಬೆಳೆಯುತ್ತಾ ಹೋದೆ. ನನ್ನ ಆದಾಯದ ಮೂಲ ದುಬಾಯಿ. ಹೀಗಿರುವಾಗ ನಿಮಗೆ, ಇನ್ ಕಮ್ ಟ್ಯಾಕ್ಸ್ ಡಿಪಾರ್ಟ್ಮೆಂಟ್ ನವರಿಗೆ ನನ್ನ ವಿಚಾರಣೆ ಮಾಡುವ ಅಧಿಕಾರ ಹೇಗೆ ಬರುತ್ತದೆ?

ನಿರೀಕ್ಷಿಸದೆ ಇದ್ದ ಪ್ರಶ್ನೆ ಕೇಳಿ ಸುಕುಮಾರನ್ ಗೆ ಗಂಟಲಲ್ಲಿ ಏನೋ ಸಿಕ್ಕಿ ಹಾಕಿಕೊಂಡಂತಾಯ್ತು. ಮುಖದ ಚಹರೆ ಬದಲಾಗಿದ್ದನ್ನ ಕಂಡ ರಾಜ, ಯಾಕೆ ಸಾರ್? ನನ್ನ ಪ್ರಶ್ನೆ ಸರಿಯಾಗಿಲ್ಲವೇ?

ಇಲ್ಲ ಹಾಗೇನಿಲ್ಲ, ಬ್ಯಾಂಕ್ ವ್ಯವಹಾರಗಳಲ್ಲಿ ಅತಿ ಹೆಚ್ಚಿನ ಹಣ ವರ್ಗಾವಣೆ ನಡೆದರೆ ನಮಗೆ ಮಾಹಿತಿ ಬರುತ್ತದೆ, ನಮಗೆ ಅನುಮಾನ ಬಂದರೆ ಅಂತಹವರ ಮೇಲೆ ನಾವು ಕಣ್ಣು ಇಟ್ಟಿರುತ್ತೇವೆ, ಹೀಗಾಗಿ ನಿಮ್ಮ ಅಕೌಂಟ್ ಬಗ್ಗೆ ಅನುಮಾನ ಬಂದಿತ್ತು. ಅದೂ ಅಲ್ಲದೆ, ಇಲ್ಲಿ ನೀವು ಬಹಳಷ್ಟು ವ್ಯವಹಾರ ಮಾಡಿದ್ದೀರಿ.......

ನನ್ನದು NRE ಅಕೌಂಟ್, ಹೀಗಾಗಿ ಹಣದ ವ್ಯವಹಾರ ಜಾಸ್ತಿ ಇರುತ್ತದೆ ಅಲ್ಲವೇ ಸರ್?

ಹೌದು, ....

ಹಾಗಿದ್ದರೆ, ಅನುಮಾನ ಪಡುವಂತಹದ್ದು ಏನಿದೆ? ಹೋಗ್ಲಿ ಬಿಡಿ, ಇಲ್ಲಿರೋ ದಾಖಲೆಗಳ ಪ್ರಕಾರ, ಎಷ್ಟು ಹಣ ಇದೆ ಮತ್ತು ಎಷ್ಟು ಆಸ್ತಿ ಇದೆ ಅಂತ ಲೆಕ್ಕ ಮಾಡಿ......ಒಬ್ಬ ಭ್ರಷ್ಟ ಸರ್ಕಾರಿ ಅಧಿಕಾರಿ ಅಥವ ಒಬ್ಬ ಭ್ರಷ್ಟ ರಾಜಕಾರಣಿಯ ಒಂದು ಹತ್ತು ಪರ್ಸೆಂಟ್ ಏನಾದರು ಇದೆಯಾ? ಇಲ್ಲಿ ಅಂತ ಅನುಮಾನ ಪಡುವಂತಹದ್ದು ಏನಿದೆ? 

ಎಲ್ಲವನ್ನೂ ಲೆಕ್ಕ ಮಾಡಿದರೂ ಅಂತಹ ದೊಡ್ಡ ಮೊತ್ತದ ಆಸ್ತಿಯೇನು ಪತ್ತೆ ಯಾಗಲಿಲ್ಲ. ಅದೂ ಅಲ್ಲದೆ, ಎಲ್ಲ ವ್ಯವಹಾರಗಳೂ ಸಕ್ರಮವಾಗಿ ಕಂಡು ಬಂದಿತ್ತು. ಸುಕುಮಾರನ್ ಗೆ ತಲೆ ಕೆಡುತ್ತಾ ಬಂತು, ಸುಮ್ ಸುಮ್ಮನೆ ಇಲ್ಲಿ ಬಂದು ಸಿಕ್ಕಿ ಹಾಕಿಕೊಂಡೆವಾ ಅಂತ ಭಯ ಶುರುವಾಯಿತು. ಅವರ ಆತಂಕವನ್ನು ಗಮನಿಸಿದ ರಾಜ, ಸಾರ್ ನೀವು ಅನುಮತಿಕೊಟ್ಟರೆ ನನ್ನ ಕೈಯಾರೆ ಕಡಕ್ ಟೀ ಮಾಡಿಕೊಂಡು ಬರ್ತೀನಿ, ದುಬಾಯಿ ಯಲ್ಲಿ ಈ ಕಡಕ್ ಚಹಾ ತುಂಬಾ ಫೇಮಸ್,.....

ಆಯ್ತು ಮಾಡಿ. ಕುಡಿಯೋಣ. ಎಂದು ಸುಕುಮಾರನ್ ಹೇಳುತ್ತಾರೆ.

ಮನೆಯಲ್ಲಿದ್ದ ತಾಜಾ ಹಾಲನ್ನು ಉಪಯೋಗಿಸಿ, ತುಂಬಾ ರುಚಿಕಟ್ಟಾದ ಟೀ ಅನ್ನು ತಯಾರಿಸುತ್ತಾನೆ. ಅದರ ಪರಿಮಳ ಮನೆ ತುಂಬಾ ಹರಡುತ್ತೆ. ಅಲ್ಲಿದ್ದವರಿಗೆಲ್ಲ,  ಆ ಟೀಯನ್ನು ಕುಡಿಯುವ ಮನಸ್ಸಾಗುತ್ತದೆ. ಎಲ್ಲರಿಗೂ ಟೀ ಕೊಡುತ್ತಾನೆ.  ಇನ್ಸ್ ಪೆಕ್ಟರ್ ಮತ್ತು ಐಟಿ ಆಫೀಸರ್ ಟೀ ತೆಗೆದುಕೊಳ್ಳುತ್ತಾರೆ. ಮೊದಲ ಗುಟುಕನ್ನು ಹೀರುತ್ತಾ ಟೀಯನ್ನು ಆಹ್ವಾದಿಸುತ್ತಾರೆ. ಆದರೆ ರಾಜ, ಪಳಪಳ ಹೊಳೆಯುವ ಬೆಳ್ಳಿಲೋಟದಲ್ಲಿ ಟೀಯನ್ನು ಕುಡಿಯುತ್ತ ಕುಳಿತುಕೊಳ್ಳುತ್ತಾನೆ. ಸುಕುಮಾರನ್ ಗೆ ತಾನು ಕುಡಿಯಿತಿದ್ದ ಕಪ್ ನೋಡುತ್ತಾನೆ. ಹಳೆಯ ಮಾಸಿಹೋಗಿದ್ದ ಪಿಂಗಾಣಿ ಕಪ್ ಒಂದು ತುದಿ ಚಿಕ್ಕದಾಗಿ ಹೊಡೆದಿತ್ತು. ಮತ್ತೊಂದು ಕಡೆ ಸಣ್ಣದಾಗಿ ಸೀಳು ಬಿಟ್ಟಿತ್ತು. ಆದರೆ ರಾಜನ ಬೆಳ್ಳಿಲೋಟ ಅವರ ಕಣ್ಣು ಕುಕ್ಕಿತ್ತು. ತಮ್ಮ ಟೀ ಕಪ್ ನೋಡಿ ಅವರಿಗೆ ವಾಕರಿಕೆ ಬಂದಂತಾಯ್ತು. ತಟ್ಟನೇ ತಮ್ಮ ಕಪ್ ಅನ್ನು ನೆಲದ ಮೇಲೆ ಕುಕ್ಕಿದರು.   


ಯಾಕೆ ಸಾರ್ ಟೀ ಚೆನ್ನಾಗಿಲ್ಲವೇ?

ಟೀ ಇರಲಿ, ಮೊದಲು ಕೆಲಸ ನೋಡೋಣ. ನಿಮ್ಮ ಪ್ಯಾನ್ ಕಾರ್ಡ್ ಕೊಡಿ, ಇನ್ಕಮ್ ಟ್ಯಾಕ್ಸ್ ಪೈಲ್ ಮಾಡಿದ್ದ ಡಾಕ್ಯುಮೆಂಟ್ಸ್ ಕೊಡಿ. ಎಷ್ಟೆಲ್ಲಾ ಐಟಿ ರಿಟರ್ನ್ಸ್ ಮಾಡಿದ್ದೀರಿ ಎಲ್ಲ ಡಿಟೈಲ್ಸ್ ಕೊಡಿ ಎಂದು ಕೋಪದಿಂದ ಕೇಳುತ್ತಾರೆ. 

ಇರಲಿ ಬಿಡಿ ಸಾರ್, ಕಷ್ಟ ಪಟ್ಟು ರುಚಿಯಾಗಿ ಮಾಡಿದ ಟೀ ಗಿಂತ ನನ್ನ ಕೈನಲ್ಲಿದ್ದ ಪಳಪಳ ಹೊಳೆಯುವ ಬೆಳ್ಳಿಲೋಟ ನಿಮಗೆ ಅಸೂಯೆ ಮೂಡಿಸಿತು ಅಲ್ಲವೇ. ಪ್ರಪಂಚ ಹೀಗೆ ನೋಡಿ ಸಾರ್, ನಾನು ಹೇಗೆ ಕಷ್ಟಪಟ್ಟು ಹಣ ಸಂಪಾದನೆ ಮಾಡಿದೆ ಅನ್ನುವುದಕ್ಕಿಂತ ನನ್ನ ಆಸ್ತಿಗಳ ಮೇಲೆ ಜನರ ಕಣ್ಣು ಬಿತ್ತು, ಅಂತವರು ನಿಮಗೆ ಸುಳ್ಳು ಮಾಹಿತಿ ಕೊಟ್ಟು, ಇಲ್ಲಿಗೆ ಕರೆಸಿದ್ದಾರೆ.  

ಸೀನ ತನ್ನ ಮನೆಯಲ್ಲಿದ್ದ, ಕಪಾಟಿನಿಂದ ಕೆಲ ಫೈಲ್ ಗಳನ್ನ ತೆಗೆದುಕೊಡುತ್ತ, ನೋಡ್ಕೊಳ್ಳಿ ಸಾರ್, ಇದರಲ್ಲಿ ಎಲ್ಲ ಇದೆ.

ಸುಕುಮಾರನ್ ಗೆ ಯಾವುದೇ ತಪ್ಪುಗಳು ಸಿಗಲಿಲ್ಲ. ಇನ್ನು ಇಲ್ಲಿ ಕುಳಿತು ಸಮಯ ವ್ಯರ್ಥಮಾಡಿಕೊಳ್ಳೋದು ಬೇಡ ಎಂದು, ಈಗ ನಾವು ಹೊರಡ್ತೀವಿ, ಇನ್ನೂ ಕೆಲ ವಿಚಾರಣೆ ಮಾಡೋದಿದೆ, ಫೋನ್ ಮಾಡಿ ಹೇಳ್ತೀನಿ. ಆದರೆ ಮನಸ್ಸಿನಲ್ಲಿ,  ಇಷ್ಟು ದೂರ ಬಂದಿದ್ದಕ್ಕೆ ಏನಾದರು ಮಾಡಿ ಸ್ವಲ್ಪ ನಾದರು ಹಣ ಕೀಳಬೇಕು ಎಂದು, ನಿಮ್ಮ ಹತ್ರ ಮಾತನಾಡಬೇಕು ಸ್ವಲ್ಪ ಈ ಕಡೆ ಬನ್ನಿ ಎಂದು ಪಕ್ಕಕ್ಕೆ ಕರೆಯುತ್ತಾನೆ.

ನೋಡ್ರಿ ಸೀನ, ಅಲ್ಪಕಾಲದಲ್ಲಿ ನೀವು ಮಾಡಿರೋ ಆಸ್ತಿ ತುಂಬಾ ಜಾಸ್ತಿ ಇದೆ. IT, ED ಅಂತ ಹೋದರೆ, ತುಂಬಾ ತೊಂದರೆ ಯಾಗುತ್ತೆ. ಮುಂದೆ ಬಹಳಷ್ಟು ಕಷ್ಟ ಎದುರಿಸಬೇಕಾಗುತ್ತೆ. ನೀವು ಮತ್ತೆ ದುಬೈ ಗೆ ಹೋದರೆ, ಇಲ್ಲಿ ಮನೇಲಿರುವವರಿಗೆ ತೊಂದರೆಯಾಗುತ್ತೆ. ಏರ್ ಪೋರ್ಟ್ ನಲ್ಲಿ ನಿಮ್ಮ ಪ್ರಯಾಣಕ್ಕೆ ಸಹ ತೊಂದರೆಯಾಗಬಹುದು. ಸರಿ ಬರ್ತೀನಿ ಎಂದು ನಿಧಾನಕ್ಕೆ ಹೆಜ್ಜೆ ಹಾಕಿದರು. ಈ ಮಾತುಗಳಿಗೆ, ಸೀನ ಏನಾದರು ಹೆದರಿ, ಡೀಲ್ ಮಾಡುವುದಕ್ಕೆ ಬರಬಹುದು ಎಂದು ಯೋಚಿಸುತ್ತ ಹೆಜ್ಜೆ ಹಾಕುತ್ತ ಪೋಲೀಸ್ ಇನ್ಸಪೆಕ್ಟರ್ ವಿಲ್ಸನ್ ಹತ್ತಿರ ಬರುತ್ತಾನೆ. ಆದರೆ, ಸೀನ ಯಾವುದನ್ನ ಕೇರ್ ಮಾಡದೆ ತನ್ನ ಪಾಡಿಗೆ ಮನೆಯವರ ಜತೆ ಕುಳಿತು ಮಾತನಾಡುತಿದ್ದ. 

ಬಂದ ದಾರಿಗೆ ಸುಂಕವಿಲ್ಲ ಎಂದು, ಸುಮ್ಮ ಸುಮ್ಮನೆ ಶ್ರಮವನ್ನ ವ್ಯರ್ಥ ಮಾಡಿದ ರಾಜನನ್ನ ಶಪಿಸುತ್ತ ಸುಕುಮಾರನ್ ಮತ್ತು ವಿಲ್ಸನ್ ಅಲ್ಲಿಂದ ಹೊರಡುತ್ತಾರೆ. ಇತ್ತ ಊರಿನಲ್ಲಿ ಸುದ್ದಿ ಹರಡಿದ್ದರಿಂದ, ಊರಿನ ಜನ ಮನೆ ಮುಂದೆ ಜಮಾಯಿಸುರುತ್ತಾರೆ. ಬರೀ ಕೈಲಿ ಹೋಗಿದ್ದನ್ನ ಕಂಡ ಜನ ಸೀನನ ಮನೆಯಲ್ಲಿ ಏನು ಸಿಗಲಿಲ್ಲ ಎಂದು ಮಾತನಾಡಿಕೊಳ್ಳುತ್ತಾರೆ.  ಜಿಲ್ಲಾ ಪತ್ರಿಕೆ ವರದಿಗಾರರಾದ ಸಾವಿತ್ರಿ ಯಾವುದೋ ಒಂದು ಕೆಲಸದ ಮೇಲೆ ಆ ಕಡೆ ಹೋಗುತ್ತಿರುವಾಗ, ಮನೆ ಮುಂದೆ ಜನ ಇರುವುದನ್ನ ನೋಡಿ ಅವರೂ ಸಹ ಜನರ ಮದ್ಯೆ ನಿಂತು ಇದನ್ನೆಲ್ಲವನ್ನ ಗಮನಿಸುತ್ತಾರೆ. ಯಾವುದಕ್ಕೂ ಇರಲಿ ಎಂದು ಅಲ್ಲಿ ನಡೆದ ಕೆಲ ಘಟನೆಗಳನ್ನ ತಮ್ಮ ಕ್ಯಾಮೆರದಲ್ಲಿ ಸೆರೆ ಹಿಡಿದಿರುತ್ತಾರೆ, ಜತೆಗೆ ಸುಕುಮಾರನ್ ಮತ್ತು ವಿಲ್ಸನ್ ಅವರ ಫೋಟೋ ಸಹ ತೆಗೆಯುತ್ತಾರೆ. ಅವರೆಲ್ಲ ಮನೆಯಿಂದ ಹೊರಟ ಮೇಲೆ, ಸೀನನ ಆತ್ಮೀಯರು, ಸ್ನೇಹಿತರು ಜತೆಗೆ ಸಾವಿತ್ರಿ ಸಹ ಮನೆ ಒಳಗೆ ಹೋಗುತ್ತಾರೆ. 

ಎಲ್ಲರೂ ಬಂದಿದ್ದೂ ನೋಡಿ, ಅಯ್ಯೋ, ನೀವೆಲ್ಲ ಯಾಕೆ ಬರೋಕೆ ಹೋದ್ರಿ. ಅಂತಹದ್ದೇನು ಆಗಿಲ್ಲ. ಆದಾಯ ತೆರಿಗೆ ಇಲಾಖೆಯವರು ತಮ್ಮ ಕರ್ತವ್ಯ ಮಾಡೋಕೆ ಬಂದಿದ್ರು ಅಷ್ಟೇ. ಎಲ್ಲ ಸರಿ ಇದೆ, ಎಂದು ಎಲ್ಲರನ್ನೂ ಸಮಧಾನಿಸಿದ. ಜನ ಒಬ್ಬಬ್ಬರಾಗಿ ಹೊರಟು ಹೋದರು, ಪತ್ರಕರ್ತೆ ಸಾವಿತ್ರಿ, ಹೊರಗಡೆ ಸೀನನ ಬಗ್ಗೆ ಬಹಳಷ್ಟು ಕೇಳಿದ್ದಳು. ಒಂದು ಲೇಖನ ಬರೆಯುವುದಕ್ಕೆ ಏನಾದರು ಮಾಹಿತಿ ಸಿಗಬಹುದು ಎಂದು ಸೀನನ ಹತ್ರ ಮಾತುಕತೆ ಶುರು ಮಾಡಿದಳು. 

ಶ್ರೀನಿವಾಸ್ ಅವರೇ, ನಿಮ್ಮ ಬಗ್ಗೆ ಇಲ್ಲಿನ ಜನರ ಹತ್ರ ಬಹಳಷ್ಟು ಕೇಳಿದೆ, ಎಲ್ಲರೂ ನಿಮ್ಮ ಬಗ್ಗೆ ಉತ್ತಮ ಅಭಿಪ್ರಾಯ ಕೊಡ್ತಾಯಿದ್ದಾರೆ. ನೀವು ಒಬ್ಬ ಸಾಮಾನ್ಯ ಕೆಲಸಗಾರನಾಗಿ ಈವತ್ತು ಈ ಮಟ್ಟಕ್ಕೆ ಬೆಳೆದಿದ್ದೀರಿ, ಬಹಳಷ್ಟು ಯುವಕರಿಗೆ ಸ್ಪೂರ್ತಿ ಯಾಗಬೇಕಾದ ವ್ಯಕ್ತಿತ್ವ ನಿಮ್ಮಲ್ಲಿದೆ. ದಯವಿಟ್ಟು ನೀವು ಬೆಳೆದು ಬಂದ ರೀತಿಯಬಗ್ಗೆ ಮಾಹಿತಿಕೊಡಿ. ನಮ್ಮ ಪತ್ರಿಕೆಯಲ್ಲಿ ಪ್ರಕಟಿಸುತ್ತೀನಿ ಎಂದು ಕೇಳುತ್ತಾಳೆ. 

ನನ್ನ ಕಥೆ ಇನ್ನೊಬ್ಬರಿಗೆ ಸ್ಪೂರ್ತಿ ಯಾಗುತ್ತೆ ಅಂದರೆ, ಬೇಡ ಅನ್ನೋಕೆ ಆಗುತ್ತ್ಯೆ? ಖಂಡಿತಾ ಹೇಳ್ತೀನಿ ಎಂದು ತಾನು ಬೆಳೆದ ಬಂದ ಬಗೆ ಹೇಳುತ್ತಾ ಹೋದ....


ಆಗ ನಮ್ಮ ಮನೆಯಲ್ಲಿ ತುಂಬಾ ಕಷ್ಟ ಇತ್ತು, ನಾನು ದುಡಿಯೋದು ಯಾವುದಕ್ಕೂ ಸಾಲುತ್ತಿರಲಿಲ್ಲ. ಅಂತಹ ಸಂಧರ್ಭದಲ್ಲಿ, ಪತ್ರಿಕೆಯೊಂದರಲ್ಲಿ ದುಬೈಗೆ ಕೆಲಸಗಾರರು ಬೇಕಾಗಿದ್ದಾರೆ ಅಂತ ಜಾಹೀರಾತು ಬಂದಿತ್ತು. ಪ್ರಯತ್ನ ಮಾಡೋಣ ಎಂದು, ವಿವರಗಳನ್ನ ಕಳುಹಿಸಿಕೊಟ್ಟೆ. ತಿಂಗಳೊಳಗೆ, ಅಲ್ಲಿಂದ ಕರೆ ಬಂತು. ಬೆಂಗಳೂರಿಗೆ ಹೋಗಿ ಇಂಟರ್ ವೀವ್ ಕೊಟ್ಟು, ಸೆಲೆಕ್ಟ್ ಆಯಿತು ಆದರೆ ಅಲ್ಲಿನ ಒಬ್ಬ ಏಜೆಂಟ್ಗೆ ಕಮೀಷನ್ ಹಣ, ವೀಸಾ, ವಿಮಾನದ ಟಿಕೆಟ್ ಎಲ್ಲ ಖರ್ಚನ್ನು ಭರಿಸಬೇಕಾಗಿತ್ತು.  ನನ್ನ ಸ್ನೇಹಿತರಿಗೆ ಹೇಳಿದ ತಕ್ಷಣ,   ಊರಿನಲ್ಲಿ ಬಹಳಷ್ಟು ಜನ ಸಹಾಯ ಮಾಡಿದ್ರು, ಅದನ್ನು ಏಜೆಂಟ್ ಗೆ ಕೊಟ್ಟು, ದುಬಾಯಿಗೆ ಪ್ರಯಾಣ ಬೆಳೆಸಿದೆ. ಆದರೆ, ಅಲ್ಲಿಗೆ ಹೋದ ಮೇಲೆ ನನಗೆ ಸಿಕ್ಕ ಕೆಲಸ ಮಾತ್ರ ಬೇರೆಯದ್ದು.   ಆಯಿಲ್ ಟ್ಯಾಂಕರ್ ತೊಳೆಯೋದು, ಸ್ಕ್ರಾಪ್ ಕ್ಲೀನ್ ಮಾಡೋದು, ಮೆಟೀರಿಯಲ್ ಲೋಡ್ ಅನ್ ಲೋಡ್, ಹೀಗೆ ಏನೇನೋ ಕೆಲಸ. ನಾನು ಮನೆ ಕಟ್ಟುವ ಕೆಲಸ ಬಿಟ್ಟು  ಮತ್ತಿನ್ನೆಲ್ಲ ಕೆಲಸ ಮಾಡಬೇಕಾಗಿತ್ತು. ಅದ್ಯಾವುದೂ ಪರ್ಮನೆಂಟ್ ಆಗಿರಲಿಲ್ಲ. ಒಂದೊಂದು ಕಡೆ ಒಂದೊಂತರಹ ಕೆಲಸ. ನಾನು ಆಸೆ ಪಟ್ಟಿದ್ದು ಬಹಳ ನಿರಾಶೆಯಾಯ್ತು. ಒಪ್ಪಿಕೊಂಡಿದ್ದ ಸಂಭಳವೂ ಸಿಗುತ್ತಿರಲಿಲ್ಲ. ಊರಲ್ಲಿ ದುಡ್ಡು ತೆಗೆದು ಕೊಂಡಿದ್ದು, ವಾಪಾಸ್ ಕೊಡಬೇಕಾಗಿತ್ತು. ಹೀಗಾಗಿ ಕೆಲಸ ಬಿಟ್ಟು ಬರುವ ಹಾಗಿರಲಿಲ್ಲ. ಹಾಗೂ ಹೀಗೂ ಎರಡು ವರ್ಷ ತಳ್ಳಿದೆ. ತದನಂತರ ವಾಪಾಸ್ ಮನೆಗೆ ಬರುವವನಿದ್ದೆ. ಒಂದು ದಿನ ಬರ್ ದುಬೈ ನಲ್ಲಿ ನನ್ನ ರೂಮ್ ಗೆ ಹೋಗಲು ಬಸ್ ಗಾಗಿ ಕಾಯುತ್ತ ಕುಳಿತಿದ್ದೆ., ಸೀನಾ ಅಂತ ಕೂಗಿದಂತಾಯ್ತು. ಯಾರು ಅಂತ ನೋಡಿದ್ರೆ, ನಾನು ಊರಲ್ಲಿದ್ದಾಗ, ನಾನು ಮೇಸ್ತ್ರಿಯಾಗಿ ಮನೆ ಕಟ್ಟಿದ ಆ ಯಜಮಾನ. ಅವರನ್ನ ನೋಡಿ ಖುಶಿಯಾಯ್ತು. ಅವರಿಗೆ ನನ್ನ ಪರಿಸ್ಥಿತಿ ಎಲ್ಲ ಹೇಳಿದೆ. ಇನ್ನೂ ಒಂದೆರೆಡು ತಿಂಗಳಲ್ಲಿ, ಊರಿಗೆ ವಾಪಾಸ್ ಹೋಗ್ತಾಯಿದ್ದೀನಿ ಅಂತ ಹೇಳಿದ್ದೆ. ಕೆಲವಾರಗಳು ಕಳೆದ ಮೇಲೆ, ಅವರಿಂದ ಫೋನ್ ಬಂತು, ಅರ್ಜೆಂಟ್ ಆಗಿ ಭೇಟಿ ಯಾಗಬೇಕಿದೆ ಬಾ ಅಂದ್ರು... ಅಂದು ಭಾಗ್ಯದ ಬಾಗಿಲು ತೆರೆಯಿತು ನೋಡಿ. ನನಗಿಷ್ಟವಾದ ಮೇಸ್ತ್ರಿ ಕೆಲಸ ಸಿಗ್ತು., ಸಂಭಳ ಸಹ ಜಾಸ್ತಿ. ವಾಪಾಸ್ ಹೋಗೋ ಯೋಚನೇ ಬಿಟ್ಟೋಯ್ತು. ಹೊಸ ಕಂಪನಿ ಕೆಲಸಕ್ಕೆ ಸೇರಿದೆ. ಕಷ್ಟ ಪಟ್ಟು ನಿಯತ್ತಾಗಿ ದುಡಿದೆ. ಅರಬ್ಬಿಗಳ ಕೆಲ ಪ್ರಾಜೆಕ್ಟ್ ಗಳನ್ನ ಚೆನ್ನಾಗಿ ಮಾಡಿ ಮುಗಿಸಿದೆ. ನನ್ನ ಹಣಕಾಸಿನ ಪರಿಸ್ಥಿತಿ ಸುಧಾರಿಸಿತು. ಕೆಲಸದಲ್ಲಿ ತೃಪ್ತಿ ಸಿಗ್ತಾಯಿತ್ತು. ಹೀಗಿರುವಾಗ, ನಾನು ಪ್ರಾಜೆಕ್ಟ್ ಮುಗಿಸಿದ್ದ ಒಬ್ಬ ಅರಬ್ಬಿ ಕಸ್ಟಮರ್  ನನ್ನನ್ನು ಕರೆದು, ತನ್ನ ಸಂಭಂದಿಕರ ಒಂದು ವೇರ್ ಹೌಸ್ ಅನ್ನು ಅತಿ ಕಡಿಮೆ ಬಂಡವಾಳದಲ್ಲಿ ಮುಗಿಸಿಕೊಡ್ತಿಯಾ ಅಂತ ಕೇಳಿದ್ರು. ತಮ್ಮ ಒಂದು ಕಂಪನಿಯಲ್ಲಿ ನನಗೆ ಕೆಲಸ ಕೊಟ್ರು, ಅಲ್ಲಿದ್ದು ನಾನೇ, ಖುದ್ದಾಗಿ ಅಂಗಡಿಯಿಂದ ಸಾಮಾನುಗಳನ್ನು ಖರೀದಿ ಮಾಡಿ ಅವರು ಕೇಳಿದ್ದ ಬಡ್ಜೆಟ್ ನಲ್ಲಿ ಮುಗಿಸಿಕೊಟ್ಟೆ, ಅದೇ ರೀತಿ, ಒಂದೆರೆಡು ಮನೆಗಳನ್ನ ಕಟ್ಟುವ ಕೆಲಸ ಬಂತು. ಅವರು ಆ ಕಂಪನಿಯನ್ನು ನನಗೆ ಕೊಟ್ಟು, ನೀನೇ ನಡೆಸಿಕೊಂಡು ಹೋಗು ಅಂತಹೇಳಿದ್ರು. ಆವತ್ತು ಶುರು ಮಾಡಿದ ಕಂಪನಿ ಇಂದು ನೂರಾರು ಪ್ರಾಜೆಕ್ಟ್ ಗಳನ್ನ ಮಾಡಿಮುಗಿಸಿದ್ದೀವಿ. ನಾನು ವಾಸ ಮಾಡುತಿದ್ದ ಏರಿಯಾದಲ್ಲಿ, ಹೋಟೆಲ್ ಒಂದನ್ನು ಬಾಡಿಗೆಗೆ ಪಡೆದೆ. ಅಲ್ಲಿ ನಮ್ಮ ಜನರನ್ನ ಇಟ್ಟುಕೊಂಡು ಅದನ್ನ ಸಹ ನಡೆಸಿಕೊಂಡು ಹೋಗ್ತಾಯಿದ್ದೆ. ಅಂತಹದ್ದೇ ಮತ್ತೆರೆಡು ಹೋಟೆಲ್ ಗಳನ್ನ ಶುರು ಮಾಡಿದೆ. ನಮಗೊಂದು ಬಿಲ್ಡಿಂಗ್ ಮೆಟಿರಿಯಲ್ಸ್ ಅಂಗಡಿಯ ಅವಶ್ಯಕತೆ ಯಿತ್ತು.  ಒಂದು ಅಂಗಡಿಯನ್ನು ತೆರೆದೆ, ನಮ್ಮ ಪ್ರಾಜೆಕ್ಟ್ ಗೆ  ಬೇಕಾಗಿದ್ದ ಸಾಮಾನುಗಳನ್ನ ಅಲ್ಲಿಂದ ಸಪ್ಲೈ ಮಾಡುವಂತಾಯ್ತು. ಹೀಗೆ ಒಂದರಿಂದ ಒಂದು ಬಿಜಿನೆಸ್ ಮಾಡ್ತಾ ಬಂದೆ. ಇದೆಲ್ಲದಕ್ಕೂ ಹಲವರ ಸಹಕಾರ ಬೇಕಾಗಿತ್ತು, ನನ್ನ ಹಳೆಯ ಕಂಪನಿಯ ಕೆಲಸಗಾರರು ಕೈ ಜೋಡಿಸಿದರು. ನಮ್ಮ ಪ್ರಾಜೆಕ್ಟ್ ಇಂಜಿನಿಯರ್ ಸಹ ನನ್ನ ಜತೆ ಬಂದರು. ಒಬ್ಬ ವಿದ್ಯಾವಂತೆ, ವ್ಯವಹಾರ ಜ್ಞಾನ ಇರುವ ಹುಡುಗಿಯನ್ನ ಮದುವೆಯಾದೆ, ಆಕೆ ಜತೆಯಾಗಿದ್ದು ನನ್ನ ಅದೃಷ್ಟ. ವ್ಯವಹಾರದಲ್ಲಿ ತುಂಬಾ ನಿಪುಣಳು. ಹೀಗೆ ಎಲ್ಲರೂ ಕೈ ಜೋಡಿಸಿದ್ದರಿಂದ ಬಿಜಿನೆಸ್ ಬೆಳಿತಾ ಬಂತು. ಅಲ್ಲಿ ದುಡಿದಿದ್ದನ್ನ ಇಲ್ಲಿ ಸ್ವಲ್ಪ ಸಮಾಜ ಸೇವೆ ಕೆಲಸಕ್ಕೆ ಉಪಯೋಗಿಸ್ತಾಯಿದ್ದೀನಿ. ನಮ್ಮ ಊರಿನ ಕೆಲವರು ನನ್ನಲ್ಲಿ ಕೆಲಸ ಮಾಡ್ತಾಯಿದ್ದಾರೆ. ಇದಕ್ಕಿಂತ ಬೇರೇ ಏನು ಮಾಡಲು ಸಾಧ್ಯ ಹೇಳೀ?

ಸೀನನ ಕಥೆ ಕೇಳಿದ, ಸಾವಿತ್ರಿಗೆ ತುಂಬಾ ಖುಷಿಯಾಯ್ತು. ಒಂದು ಚೆಂದದ ಲೇಖನ ಬರೆದು ಪತ್ರಿಕೆಯಲ್ಲಿ ಪ್ರಕಟಿಸುವುದಕ್ಕೆ ಸಿದ್ದಮಾಡಿಕೊಂಡಳು. ಅದಕ್ಕೂ ಮುಂಚೆ, ಆದಾಯತೆರಿಗೆ ಇಲಾಖೆಯಲ್ಲಿ, ಸೀನನ ಕೇಸ್ ಕುರಿತು ವಿಚಾರಿಸಿದಳು. ಆದರೆ ಅಲ್ಲಿ ಇಂತಹ ಪ್ರಕರಣಗಳು ದಾಖಲಾಗುವುದಿಲ್ಲ ಎನ್ನುವ ಮಾಹಿತಿ ದೊರೆಯಿತು. ತನ್ನ ಮೂಲಗಳ ಪ್ರಕಾರ, ಆದಾಯ ತೆರಿಗೆ ದಾಳಿಯ ಸತ್ಯಾಸತ್ಯತೆಯನ್ನ ತಿಳಿದುಕೊಳ್ಳುವ ಪ್ರಯತ್ನ ನಡೆಸಿದಳು. ಅದೊಂದು ನಕಲಿ ದಾಳಿ ಎನ್ನುವ ವಿಷಯ ಗೊತ್ತಾಯಿತು. ಲೇಖನಕ್ಕೆ ಮತ್ತೊಂದು ರೂಪ ಕೊಟ್ಟು, ಕಟ್ಟಡ ಕಟ್ಟುವ ಮೇಸ್ತ್ರೀ ಕೋಟ್ಯಾಧಿಪತಿ ಯಾದ ಕಥೆ. ಡೀಲ್ ನಡೆಸಲು ಆದಾಯತೆರಿಗೆ ಇಲಾಖೆಯ ಭ್ರಷ್ಟ ಅಧಿಕಾರಿ ನಕಲಿ ದಾಳಿ ಎನ್ನುವ ಸುಧೀರ್ಘ ಲೇಖನವನ್ನು ಸಿದ್ದಪಡಿಸಿ ಪ್ರಕಟಿಸಿದಳು. ಲೇಖನ ಪ್ರಕಟವಾದೊಡನೆ, ಆದಾಯತೆರಿಗೆ ಇಲಾಖೆ, ಸುಕುಮಾರನ್ ನನ್ನು ವಿಚಾರಣೆ ನಡೆಸಿ ಮತ್ತು ಅದೇ ಕೃತ್ಯದಲ್ಲಿ ಭಾಗಿಯಾದ, ಪೋಲೀಸ್ ಇನ್ಸ್ಪೆಕ್ಟರ್ ವಿಲ್ಸನ್ ನನ್ನು ಅಮಾನತು ಗೊಳಿಸಲಾಯಿತು.


ರಾಜನ ಅಸೂಯೆಗೆ, ಅನಾವಶ್ಯಕವಾಗಿ ಈ ಪ್ರಕರಣವನ್ನ ಮೈಮೇಲೆ ಎಳೆದುಕೊಂಡು ತಮ್ಮ ಕೆಲಸಕ್ಕೆ ಕುಂದು ತಂದುಕೊಂಡ ಸುಕುಮಾರನ್ ಮತ್ತು ವಿಲ್ಸನ್ ರಿಗೆ ರಾಜನ ಮೇಲೆ ವಿಪರೀತ ಕೋಪ ಬಂದಿತ್ತು. ಅವನಿಗೆ ಸರಿಯಾಗಿ ಬುದ್ದಿ ಕಲಿಸಬೇಕೆಂದು ತೀರ್ಮಾನಿಸಿ, ಅವನನ್ನ ಹುಡುಕುತ್ತ ಊರಿಗೆ ಹೋದರು. ಊರ ಹೊರಗೆ ಅವನನ್ನ ಕರೆಸಿಕೊಂಡು, ತಮ್ಮ ಕೋಪವನ್ನೆಲ್ಲ ಅವನನ್ನ ತೀರಿಸಿಕೊಂಡರು. ಅಷ್ಟಕ್ಕೆ ಸುಮ್ಮನಾಗದೆ, ಲಕ್ಷಗಟ್ಟಲೆ ಹಣಕ್ಕಾಗಿ ಬೇಡಿಕೆಯನ್ನಿಟ್ಟರು. ಹಣ ಕೋಡದೆ ಇದ್ದರೆ, ಜೀವ ಸಹಿತ ಇರಲು ಬಿಡೆವು ಎಂದು ಹೆದರಿಸಿ, ಹಣ ಪಡೆಯಲು ಅವನ ಜತೆ ತಮ್ಮ ವಾಹನದಲ್ಲಿ ಹೊರಟರು.  ರಸ್ತೆಯಲ್ಲಿ ಹೋಗುತ್ತಿರುವಾಗ, ಆಗ ಮಳೆಗಾಲ ಇದ್ದಕ್ಕಿದ್ದಂತೆ ಬಿರುಗಾಳಿ, ಮಳೆ ಶುರುವಾಯಿತು. ಅದೇ ಸಮಯದಲ್ಲಿ ಬೆಟ್ಟವೊಂದು ಕುಸಿದು ಕಲ್ಲು ಮಣ್ಣು ರಭಸವಾಗಿ ಇವರು ಸಂಚರಿಸುತಿದ್ದ ವಾಹನದ ಮೇಲೆ ಬಿದ್ದಿತು. ಅವರ ವಾಹನ ಪಲ್ಟಿಯಾಗಿ ರಸ್ತೆಯ ಪಕ್ಕ ಇದ್ದ ಒಂದು ಹಳ್ಳದಲ್ಲಿ. ಬಿದ್ದಿತು, ಒಂದು ದಿನವೆಲ್ಲ, ಆ ಮಣ್ಣಿನಡಿಯಲ್ಲಿ ಸಿಲುಕಿ, ಸಾವು ಬದುಕಿನ ಹೋರಾಟ ನಡೆಸಬೇಕಾಯ್ತು.

ಘಟನೆಯ ವಿವರ ತಿಳಿದ ಸಾವಿತ್ರಿ, ಸೀನನಿಗೆ ಫೋನ್ ಮಾಡಿ ಮಾಹಿತಿ ನೀಡಿದಳು. ಆಗ ಸೀನ, "ಮೇಡಂ ದೊಡ್ಡವರು ಹೇಳಿದ್ದ ಮಾತು ಸತ್ಯ ನೋಡಿ, ನೀವು ಒಳ್ಳೆಯದನ್ನ ಮಾಡ್ತಾಯಿದ್ದರೆ ನಿಮಗೆ ಒಳ್ಳೆಯದೇ ಆಗುತ್ತೆ, ನೀವು ಕೆಟ್ಟದ್ದನ್ನ ಮಾಡಿದರೆ, ಅದರಿಂದ ನೀವು ತಪ್ಪಿಸಿಕೊಳ್ಳಲಾಗುವುದಿಲ್ಲ ಅಂತ. ಅದು ಅವರ ಮಾಡಿದ್ದ ಕರ್ಮ, ಅವರು ಅನುಭವಿಸ್ತಾರೆ. ನಮ್ಮ ಕೆಲಸಗಳು ಬೇಕಾದಷ್ಟಿವೆ. ಅದರ ಬಗ್ಗೆ ಗಮನ ಕೊಡೋಣ ಮೇಡಂ. ಧನ್ಯವಾದಗಳು ಎಂದು ಫೋನ್ ಕರೆ ಕಡಿತಗೊಳಿಸಿದ. 

ಕಥೆಗಾರರು:  ಪಿ.ಎಸ್. ರಂಗನಾಥ್. ಮಸ್ಕತ್

ಬದುಕು ವರ್ಣರಂಜಿತ

 *ಬದುಕು ವರ್ಣರಂಜಿತ*

ನಮ್ಮಲ್ಲಿಹುದು
ಸತ್ವ ರಜ ತಮೋ ತ್ರಿಗುಣ
ಒಂದೊಂದಕ್ಕೂ
ಒಂದೊಂದು ಬಣ್ಣ
ಬದುಕಿನ ಚಿತ್ರಪಟದೊಳಗೆ
ರಜ ತಮೋ ಬಣ್ಣಗಳ ಪ್ರಮಾಣ
ಅವುಗಳ ಇತಿಮಿತಿಯಲ್ಲಿದ್ದರೆ
ಬದುಕು ವರ್ಣರಂಜಿತ
ತಮ, ರಜ ಮನೋಗುಣವ
ನಿಯಂತ್ರಿಸಿ ಸತ್ವ ಗುಣವ
ಮೈಗೂಡಿಸಿಕೊಂಡರೆ
ಬದುಕು ವರ್ಣರಂಜಿತ
ಬದುಕಿನ ಗುಟ್ಟು
ಸಂಪದ್ಭರಿತವಾದ ಪ್ರಕೃತಿಯ
ಯಲ್ಲಿದೆ, ಒಮ್ಮೆ ನೋಡು
ಈ ಚಿತ್ರ ಪಟವ.
ಬದುಕು ವರ್ಣರಂಜಿತ
- ರಚನೆ
ಪಿ.ಎಸ್.ರಂಗನಾಥ
ನಮ್ಮ ಬದುಕು ಒಂತರಾ ಕ್ಯಾನ್ವಾಸ್ ಇದ್ದಂತೆ,
ಅದರಲ್ಲಿ ನಮಗೆ ಬೇಕಾದ ಬಣ್ಣಗಳನ್ನು ಬಳಿಯುತ್ತ ಹೋಗಬಹುದು.
ಅದು ಸುಖ, ದುಃಖ, ಕಷ್ಟ ನಷ್ಟ, ಕಾಮ ಕ್ರೋಧ ಮದ ಮತ್ಸರ, ಅಸೂಯೆ ಅಹಂಕಾರ.
ಆ ಕ್ಯಾನ್ವಾಸ್ ನಲ್ಲಿ ನಮ್ಮ ಪ್ರತಿಬಿಂಬವೇ ಕಾಣುತ್ತದೆ.
ಎಲ್ಲವನ್ನು ನಿಗ್ರಹಿಸಿ ಒಂದು ಸುಂದರ ಬದುಕನ್ನು ರೂಪಿಸಿಕೊಳ್ಳುವುದು ನಮ್ಮಿಂದ ಸಾಧ್ಯ.
ಎನ್ನುವುದು‌ ಈ‌ ಕವನದ ಸಾರಾಂಶ

ಭಾನುವಾರ, ಮೇ 2, 2021

ಪಾತ್ರಧಾರಿ

 


ಒಂದು ವಸ್ತ್ರದ ಕಥೆ

 ಕನ್ನಡ ಪ್ರಭ ಪತ್ರಿಕೆಯ NRI Edition ನಲ್ಲಿ ಸುಂದರ ವಾದ ವರ್ಣ ಚಿತ್ರದೊಂದಿಗೆ ನಾನು ಬರೆದ ಕಥೆ "ಒಂದು ವಸ್ತ್ರದ ಕಥೆ" ಪ್ರಕಟವಾಗಿದೆ.

ಕಥೆಗೆ ಪೂರಕವಾದ ವರ್ಣಚಿತ್ರವನ್ನು ರಚಿಸಿ ಮತ್ತು ಕಥೆಯನ್ನು ಪ್ರಕಟಿಸಿದ್ದಕ್ಕಾಗಿ ಕನ್ನಡಪ್ರಭ ಪತ್ರಿಕೆಯವರಿಗೆ ತುಂಬು ಹೃದಯದ ಧನ್ಯವಾದಗಳು.🙏💐💐💐
https://kpepaper.asianetnews.com/3079416/NRI-EDITION/NRI-EDITION#page/9/1



Click below headings