ಶನಿವಾರ, ಸೆಪ್ಟೆಂಬರ್ 28, 2019

*ಸೆಕ್ಯುಲರ್ ರಾಷ್ಟ್ರಕ್ಕೆ ಸೆಕ್ಯುಲರ್ ಭಾಷೆ ಮಲೆಯಾಳಂ ಅನ್ನು ರಾಷ್ಟ್ರಭಾಷೆಯನ್ನಾಗಿ ಮಾಡಬೇಕಂತೆ. -"ಹಾಸ್ಯ ಬರಹ"*

*ಸೆಕ್ಯುಲರ್ ರಾಷ್ಟ್ರಕ್ಕೆ ಸೆಕ್ಯುಲರ್ ಭಾಷೆ ಮಲೆಯಾಳಂ ಅನ್ನು ರಾಷ್ಟ್ರಭಾಷೆಯನ್ನಾಗಿ ಮಾಡಬೇಕಂತೆ. -"ಹಾಸ್ಯ ಬರಹ"*



ಉತ್ತರಭಾರತದ ಒಂದು ಹೈವೆಯಲ್ಲಿ ಡ್ರೈವ್ ಮಾಡಿಕೊಂಡು ಹೋಗುತ್ತಿರುವಾಗ, ಸತತ ಡ್ರೈವ್ ಮಾಡಿ ತುಂಬ ಸುಸ್ತಾಗಿದ್ದಿದ್ದರಿಂದ, ಒಂದು ಡಾಬಾ  ಕಡೆ ಟೀ ಕುಡಿಯೋಣ ಅಂತ ನಿಲ್ಲಿಸಿ, ಟೀ ಕುಡಿಯಲು ಹೋದೆ. ಟೀ ಕುಡಿಯುತ್ತ ಹಾಗೆ ಸುತ್ತಲೂ ನೋಡುತ್ತಿರುವಾಗ, ಕ್ಯಾಷಿಯರ್ ಪಕ್ಕದಲ್ಲಿ ನೇತು ಹಾಕಿದ್ದ ಒಂದು ಫೋಟೋ ಗಮನ ಸೆಳೆಯಿತು.
ಟೀ ಕುಡಿದು ಹಣ ಕೊಡಲು ಅವನ ಹತ್ತಿರ ಹೋಗಿ ವಿಚಾರಿಸಿದೆ., ಏನ್ ಗುರು ಯಾವ ಊರು, ನಿನ್ನನ್ನ ನೋಡೀದರೆ ನಮ್ಮ ಕೇರಳ ಕಡೆ ಯವನ ತರಹ ಕಾಣ್ತೀಯಲ್ಲ ಅಂತ ಕೇಳಿದೆ.
ಹೌದು ಸಾರ್ ನಂದು ಕೇರಳ, ನಿಮ್ಮದು ಯಾವ ಕಡೆ,.
- ನನ್ನದು ಕರ್ನಾಟಕ, ಅದೇನು ಕೇರಳದಿಂದ ಇಷ್ಟು ದೂರ ಬಂದಿದ್ದೀಯಲ್ಲ ಹೇಗೆ ಎಂದೆ.
ಸಾರ್, ಬೆಂಗಳೂರಿನಲ್ಲಿ ಕೆಲ ವರ್ಷಗಳ ಕಾಲ ಕೆಲಸ ಮಾಡ್ತಾಯಿದ್ದೆ. ನಂತರ ತುಮಕೂರ್ ರಸ್ತೆಯಲ್ಲಿ ಒಂದು ಕಾಕಾ ಹೋಟೆಲ್ ಶುರು ಮಾಡಿದೆ. ಎರಡು ಮೂರು ವರ್ಷ ಚೆನ್ನಾಗಿ ನಡೀತಾಯಿತ್ತು.  ನಮ್ಮ ಪಕ್ಕದಲ್ಲಿ ಇನ್ನೂ ಒಂದು ದಾಬಾ ಶುರುವಾಯಿತು, ಅದರಿಂದ ನಮ್ಮ ವ್ಯಾಪಾರ ಸಹ ಸ್ವಲ್ಪ ಡಲ್ ಹೊಡೆಯಲಿಕ್ಕೆ ಶುರು ಮಾಡಿತು. ನಮ್ಮ ಹೋಟೆಲ್ ಗೆ  ಡೆಲ್ಲಿ ಕಡೆಯಿಂದ ಆಗಾಗ್ಗೆ ಒಬ್ಬ ಲಾರಿಯವನು ಬರ್ತಾಯಿದ್ದ, ಬಹಳಷ್ಟು ಸಾರಿ ಬಂದಿದ್ದರಿಂದ ಪರಿಚಯ ಆಗಿತ್ತು. ಅರೇ ಭಾಯಿ ನೀನು ನಮ್ಮ ಕಡೆ ಬಂದು ಅಲ್ಲಿ ಹೋಟೆಲ್ ಶುರು ಮಾಡು, ಈ ನಿನ್ನ ಅಡಿಗೆ ಟೇಸ್ಟಿಗೆ ಒಳ್ಳೆ ವ್ಯಾಪಾರ ಆಗುತ್ತೆ ಅಂತ ಯಾವಾಗಲು ಹೇಳ್ತಾಯಿದ್ದ. ಒಂದು ದಿನ ಅವನ ಲಾರಿಯಲ್ಲಿ ಸಾಮಾನು ಹಾಕಿಕೊಂಡು ಬಂದು ಇಲ್ಲಿ ಸೆಟ್ಲ್ ಆಗಿಬಿಟ್ಟೆ ಅಂತ ಹೇಳಿದ. ಸುತ್ತ ಮುತ್ತ ಸುಮಾರು ಜನ ಕೇರಳದವರು ಇದ್ದಾರೆ, ಆದ್ದರಿಂದ ಎಲ್ಲ ಚೆನ್ನಾಗಿ ನಡೀತಾಯಿದೆ.
- ಇದೇನು ಇಷ್ಟು ದೊಡ್ಡವರ ಜತೆ ಪೋಟೋ ತೆಗೆಸಿಕೊಡಿದೀಯಾ?
ಅವನು ಹೌದು ಸಾರ್,  ಅದೇನಾಯಿತು ಅಂದ್ರೆ, ಒಂದು ದಿನ ನಾಲ್ಕೈದು ದೊಡ್ಡ ದೊಡ್ಡ ಕಾರುಗಳು ಬಂದವು, ಅದರಲ್ಲಿದ್ದ ಗನ್ ಮ್ಯಾನ್ ಗಳು ಹೊರ ಬಂದು ಅದೇನೋ ಮಾತನಾಡಿಕೊಂಡು ಕಾರ್ ಸುತ್ತ ಮುತ್ತ ನಿಂತು ಕೊಂಡರು., ನಮ್ಮ ಹೋಟೇಲ್ ಗೂ ಸಹ ಕೆಲ ಜನ ಬಂದು ನಿಂತು ಕೊಂಡರು. ನಾವು ಏನಾಗ್ತಾಯಿದೆಯಪ್ಪಾ ಅಂತ ಭಯ ಬಿದ್ದಿವಿ. ಆಮೇಲೆ ಗೊತ್ತಾಗಿದ್ದು ಏನೆಂದರೆ, ರಾಹುಲ್ ಗಾಂಧಿಯವರು ಎಲ್ಲೋ ಹೊರಟಿದ್ದರಂತೆ, ಅವರಿಗೆ ಟೀ ಕುಡಿಬೇಕೆನಿಸಿತಂತೆ ಹೀಗಾಗಿ ನಮ್ಮ ಹೋಟೆಲ್ ನೋಡಿ ಗಾಡಿ ನಿಲ್ಲಿಸಿ ಟೀ ಕುಡಿದು ಹೋದರು. ಆ ಖುಷಿಗಾಗಿ ತೆಗೆದ ಫೋಟೋ ಇದು.
ಇನ್ನೊಂದು ವಿಷಯ ಗೊತ್ತಾ, ಈಗ ಅವರು ನಮ್ಮ ಕೇರಳದ ಎಂಪಿ ಗೊತ್ತಾ ಅಂದ.
- ಗೊತ್ತು ಕಣ್ರೀ, ಮುಂದೇನಾಯಿತು?
ಹಾಂ!! ಮೊನ್ನೆ ಬಂದಾಗ ಅವರಿಗೆ ಒಂದು ಪ್ರಪೋಸಲ್ ಕೊಟ್ಟಿದೀನಿ.
- ನನಗೆ ಆಶ್ಚರ್ಯ ಆಯಿತು, ಏನಾದರು ಮದುವೆ ಪ್ರಪೋಸಲ್ ಕೊಟ್ಟಿದ್ದಾನಾ ಅಂತ ಕೇಳೀದೆ. ಏನು ಮದುವೆ ಪ್ರಪೋಸಲ್ಲಾ?
"ಅಲ್ಲ ಭಾಯ್, ಸೆಕ್ಯುಲರ್ ಇಂಡಿಯಾಗೆ ಸೆಕ್ಯುಲರ್ ಭಾಷೆ ಯಾಗಿರೋ ಮಲೆಯಾಳಂ ಅನ್ನು ರಾಷ್ಟ್ರಭಾಷೆ ಮಾಡಿ ಅಂತ."
- ಅವನ ಮಾತು ಕೇಳಿ ನನಗೆ ತಲೆ ತಿರುಗಿ ನೆಲಕ್ಕೆ ಬೀಳೋದೊಂದೇ ಬಾಕಿ. ಸ್ವಲ್ಪ ಸಾವರಿಸಿಕೊಂಡು, ಯಾಕೆ ಸಿವಾ ಬೇರೆ ಏನ್ ಐಡಿಯಾ ಸಿಗಲಿಲ್ವೆ ನಿಂಗೆ?
- ಭಾಯ್, ಸ್ವಲ್ಪ ಯೋಚನೆ ಮಾಡಿ ನೋಡು. ನಾವು ಗಳು ಒಂಥರಾ ಸರ್ವಂತಾರಯಾಮಿ ಇದ್ದಂಗೆ. ನಿಮ್ಮ ಬೆಂಗಳೂರಿನಿಂದ ಡೆಲ್ಲಿ ವರೆಗೂ ಯಾವುದೇ ಸಿಟಿಗೆ ಹೋಗಿ, ಮಲೆಯಾಳಿಗಳು ಸಿಕ್ಕೇ ಸಿಗ್ತಾರೆ. ಮಲೆಯಾಳಿಗಳು ಇಲ್ಲದ ಸಿಟಿಗಳು, ಸ್ಟೇಟ್ ಗಳು, ದೇಶಗಳು ಇಲ್ಲ. ಈಗ ನೀವು ಯಾವುದೇ ಹಾಸ್ಪಿಟಲ್ ಗೆ ಹೋಗಿ, ಮಲೆಯಾಳಿ ನರ್ಸ್ ಅನ್ನು ಕಾಣ್ತಿರಿ ಅಲ್ವೆ. ಮಿಲಿಟರಿ ನಲ್ಲಿ ನಮ್ಮ ಕೇರಳದವರು ಎಷ್ಟೊಂದು ಜನ ಇದ್ದಾರೆ ನೋಡಿ.
ಗಲ್ಫ್ ರಾಷ್ಟ್ರಗಳಲ್ಲಿ, ಅಲ್ಲಿನ ಅರಬ್ಬರಿಗಿಂತ ಮಲೆಯಾಳಿಗಳು ಅಧಿಕರಾಗಿದ್ದಾರೆ ಗೊತ್ತಲ್ವ. ಗಲ್ಫ್ ರಾಷ್ಟ್ರಗಳಲ್ಲಿ, ನೀವು ಇಂಡಿಯಾದವರ ಅಂದ್ರೆ, ಕೇರಳದವರಾ ಅಂತ ಕೇಳ್ತಾರೆ.
ಒಂದು ಜೋಕ್ ಗೊತ್ತಲ್ಲ ನಿಂಗೆ. ಚಂದ್ರ ನ ಮೇಲೆ ನೀಲ್ ಆರ್ಮ್ ಸ್ಟ್ರಾಂಗ್ ಕಾಲು ಇಟ್ಟಾಗ, ಚಾಯ್, ಕಾಫೀ, ಟೀ ಅಂತ ಕೇಳಿ ಬಂತಂತೆ. ನೀಲ್ ಆರ್ಮ್ ಸ್ಟ್ರಾಂಗ್ ಗೆ ಯಾವನಪ್ಪ ಇವನು ನನಗಿಂತ ಮುಂಚೇನೆ ಇಲ್ಲಿ ಕಾಲಿಟ್ಟಿರೋನು? ಅಂತ ತಿರುಗಿ ನೋಡಿದರೆ ಹಿಂದೆ ಮಲೆಯಾಳಿ ಕಾಕ ಹೋಟೆಲ್........

ಅದೆಲ್ಲ ಸರಿ, ಈ ಸೆಕ್ಯುಲರ್ ಮದ್ಯೆ ಯಾಕೆ ಬಂತು?

- ನೋಡಿ ಭಾಯ್ ನಮ್ಮ ಸ್ಟೇಟ್ ಮಾತ್ರ ಸ್ಪೆಶಿಯಲ್, ನಿಮ್ಮ ಸ್ಟೇಟ್ ನಲ್ಲಿ ಮುಸ್ಲಿಮ್ಸ್ ಉರ್ದು ಮಾತಾಡ್ತಾರೆ. ಮಂಗಳೂರಿಗೆ ಹೋದರೆ ಬ್ಯಾರಿ ಮಾತಾಡ್ತಾರೆ. ಹಿಂದುಗಳು, ಕನ್ನಡ, ತುಳು ಕೊಂಕಣಿ ಮಾತಾಡ್ತೀರಿ. ಆದರೆ ನಮ್ಮ ಕೇರಳದ ಎಲ್ಲ ಧರ್ಮದವರೂ ಮಲೆಯಾಳಿಯನ್ನೆ ಮಾತಾಡ್ತೀವಿ, ಈಗ ಹೇಳಿ, ನಾವು ಸೆಕ್ಯುಲರ್ ತಾನೆ.
ಇಡೀ ಇಂಡಿಯಾದಲ್ಲಿ, ಬಿಜೆಪಿ ಸ್ಟ್ರಾಂಗ್ ಆಗಿದೆ.  ಆದರೆ ನಮ್ಮ ಕಡೆ ಯಾವಾಗಲು LDF ಅಥವ UDF ನಡುವೇ ಫೈಟ್. ಕೇರಳದಲ್ಲಿ ಮಾತ್ರ ಬಿಜೆಪಿ ಇನ್ನೂ ಬೆಳೆದಿಲ್ಲ. ಹೀಗಾಗಿ ನಾವು ಸೆಕ್ಯುಲರ್ ತಾನೆ.
 ಅದೂ ಅಲ್ಲದೆ, ಎಲ್ಲ ಧರ್ಮದವರೂ ಬೀಫ್ ತಿಂತೀವಿ. ಬೇರೆಯವರ ತರಹ ಭೇದ ಭಾವ ಮಾಡಲ್ಲ.  ಆದರೆ, ನೀವು?
ಹಿಂದಿನ ಸುಪ್ರೀಂ ಕೋರ್ಟ್ ನ್ಯಾಯಾದೀಶರಾಗಿದ್ದ ಮಾರ್ಕಂಡೇಯ ಕಾಟ್ಜು ಹೇಳಿದ್ರಲ್ಲ, ಮಲೆಯಾಳಿಗಳು ನಿಜವಾದ ಭಾರತೀಯರು ಅಂತ.
ಅಂತಹ ದೊಡ್ಡವರೇ ಹೇಳಿದ್ ಮೇಲೆ, ನಾವು ಸೆಕ್ಯುಲರ್ ಇಂಡಿಯಾದ ನಿಜವಾದ ಪ್ರಜೆಗಳು ಅಲ್ವೆ.

ಅಯ್ಯೋ, ಇದೇನ್ ತಲೆ ನೋವು. ಇವನೇನ್ ಎಲ್ಲಿಂದ ಎಲ್ಲಿಗೆ ಸಂಭಂದ ಕಲ್ಪಿಸ್ತಾನಲ್ಲ? ಅದೆಲ್ಲ ಸರಿ, ಮಲೆಯಾಳಂ ಅನ್ನೇ ರಾಷ್ಟ್ರ ಭಾಷೆ ಯಾಕೆ ಮಾಡಬೇಕು.
ಆಗಲೇ ಹೇಳಿದೆನಲ್ಲ ಸಾರ್, ಮುಸ್ಲಿಮರು ಕುರಾನ್ ಅನ್ನು ಮಲೆಯಾಳಂ ಅಲ್ಲಿ ಪಠಣ ಮಾಡ್ತೀವಿ, ಹಿಂದು ಗಳು ಮಲೆಯಾಳಂ ನಲ್ಲಿಯೇ ಪೂಜೆ ಮಾಡ್ತಾರೆ, ಅದೇ ರೀತಿ ಕ್ರಿಶ್ಚಿಯನ್ ರು ಮಲೆಯಾಳಂ ನಲ್ಲಿ ಮಲೆಯಾಳಂ ನಲ್ಲಿ ಪ್ರೇಯರ್ ಮಾಡ್ತಾರೆ... ಅದಕ್ಕೆ ಮಲೆಯಾಳಂ ಸೆಕ್ಯುಲರ್ ಭಾಷೆ ಅನ್ನೋದು. ಧರ್ಮ ಭೇದ ಇಲ್ಲ. ಇಂತಹ ಭಾಷೆಯನ್ನ ರಾಷ್ಟ್ರಭಾಷೆ ಮಾಡೋದ್ರಲ್ಲಿ ತಪ್ಪೇನಿದೆ?
ಎಲ್ಲ ಕಡೆ ಮಲೆಯಾಳಿಗಳು ಇರೋದ್ರಿಂದ, ನೀವೆಲ್ಲ ಮಲೆಯಾಳಂ ಮಾತಾಡಿದ್ರೆ ವ್ಯವಹಾರ ಮಾಡೋಕೆ ಸಲೀಸಾಗುತ್ತೆ. ಇದರಿಂದ ನಿಮಗೆ ಅನುಕೂಲ ಅಲ್ವೆ. ಮಲೆಯಾಳಂ ಗೊತ್ತಿದ್ದ್ರೆ ಮಲೆಯಾಳಿಗಳು ಮಲೆಯಾಳಂ  ಅಲ್ಲಿ ಬೈಯೋಕೆ ಆಗಲ್ಲ. ಸುಂದರವಾಗಿರುವ ಮಲೆಯಾಳಿ ಕುಟ್ಟಿಗಳನ್ನು ನಿಮ್ಮ ಹುಡುಗರು ಮದುವೆ ಯಾಗಬಹುದು. ಹೀಗೆ, ರಾಜ್ಯಗಳ ಭಾಂಧವ್ಯ ಬೆಸೆಯುತ್ತ ಹೋಗುತ್ತೆ. ಒಂದು ರಾಷ್ಟ್ರ, ಒಂದು ಭಾಷೆ ಕಲ್ಪನೆ ಅಧ್ಭುತ ವಾಗಿರುತ್ತೆ.

ಇದೆಲ್ಲ ಸರಿ, ಅದಕ್ಕೆ ದೊಡ್ಡವರು ಏನ್ ಹೇಳಿದರು.

- ಅವರಿಗೆ ನನ್ನ ವಾದ ಕೇಳಿ ಖುಷಿ ಯಾಗೋಯ್ತು. ಮಲೆಯಾಳಿಗಳು ಈಗಾಗಲೆ ಎಲ್ಲ ಸ್ಟೇಟ್ ಗಳನ್ನು ಹೈವೆ ರೋಡ್, ರೈಲ್ವೇ ನೆಟ್ ವರ್ಕ್ ತರಹ ಬೆಸೆದು ಬಿಟ್ಟಿದ್ದೀರಿ. ಎಲ್ಲಿ ಹೋದರು ಮಲೆಯಾಳಿಗಳು. ತುಂಬಾ ಗ್ರೇಟ್ ಇದ್ದೀರಿ ನೀವು ಅಂದರು. ಅದಕ್ಕೆ ಸಾರ್ ಎಲ್ಲ ಸ್ಟೇಟ್ ಗಳಲ್ಲಿ ಮಲಯಾಳಂ ಕಲಿಸಿ ಸರ್ರೇ,  ಎಂದು ಕೇಳಿದ್ವಿ.
ಆಯ್ತು ನೋಡೋಣ ಅಂತ ಹೇಳಿ ಹೋದರು.

ನಮ್ಮ ರಾಜ್ಯದಲ್ಲಿ ಈಗಾಗಲೇ ಹಿಂದಿ ಹೇರಿಕೆ ಬೇಡ ಅಂತ ಹೋರಾಟ ಮಾಡ್ತಾ ಯಿದ್ದಾರೆ, ಅದರಲ್ಲಿ ಇದೇನಪ್ಪ ಹೊಸ ತಲೆನೋವು. ನಮ್ಮ ಜನರಿಗೆ ಈಗಲೇ ಅರಿವು ಮೂಡಿಸಬೇಕು. ನಾಳೆ ಟೌನ್ ಹಾಲ್ ಅಲ್ಲಿ ಹೋರಾಟ ಮಾಡಬೇಕು. ಮಲೆಯಾಳಂ ಹೇರಿಕೆ ಬೇಡ ಅಂತ.
ಆದರೆ ಸೆಕ್ಯುಲರ್ ಭಾಷೆ ಕಲಿಯೋದೇನು ತಪ್ಪು ಅಂತ ನಮ್ಮ ಜನ ಹೋರಾಟ ಮಾಡ್ತಾರ ಅಂತ ನನಗೆ ಯೋಚನೆ ಶುರು ಆಯಿತು, ಒಂದೊಂದ್ ಸಾರಿ ಸ್ಪಷ್ಟ ಕನ್ನಡ ಮಾತನಾಡೋಕೆ ನಾಲಿಗೆ ಹೊರಳಲ್ಲ, ಅಂತದ್ರಲ್ಲಿ, ಮಲೆಯಾಳಂ ಮಾತನಾಡಬೇಕೆನಪ್ಪ, ಎಂದ ದೈವಮೇ..........
ನ್ಯಾನ್ ಮಲೆಯಾಳಂ ಕಲಿಯಲ್ಲ ಚೇಟಾ, ಇದ್ ಎಂದಾಣೋ ನಂಗೆ ಇದೋಡ ಸಾವಸಂ ವೇಂಡ.......
ರೀ ರೀ ಅಂತ ಕರೆದಂಗಾಯ್ತು, ಅದ್ರೆ ನಂಗೆ ಚೇಟಾ, ಚೇಟಾ ಅಂತ ........
ರೀ ಆಫೀಸ್ ಇಲ್ವೇನ್ರಿ, ಅಂದ್ರೆ,, ಆಫೀಸ್ ಇಲ್ಲಿಯೋ....... ಅಂತ ಕೇಳಿಸಿದ ಹಾಗಿತ್ತು.....
ಎದ್ದು ಕಣ್ಣು ಬಿಟ್ಟು ನೋಡಿದ್ರೆ, ಮನೆಯಲ್ಲಿದ್ದೀನಿ.
ಅಬ್ಬಾ,,, ಇಷ್ಟೊತ್ತು ನೋಡಿದ್ದು ಕನಸೋ.....   ಬದುಕಿದೆ ಬಡಜೀವ, ಮಲೆಯಾಳಂ ಕಲಿಯೋದು ತಪ್ಪಿತು....ಸದ್ಯ ಕನಸಾಗಿದ್ದು ಒಳ್ಳೇದಾಯ್ತು ಅಂತ ದಡಬಡಸಿ ಎದ್ದೆ.

ಬರಹ: ಪಿ.ಎಸ್.ರಂಗನಾಥ.

ಶನಿವಾರ, ಜುಲೈ 20, 2019

ಅಶೋಕ ಸಿದ್ದಾಪುರ


ಈ ಬಾರಿ ರಜೆಗೆ ಊರಿಗೆ ಹೋಗಿದ್ದಾಗ, ನಮ್ಮ ಊರಿನ ಎಂಟತ್ತು ಕಿ.ಮಿ. ಸಮೀಪದಲ್ಲೆ ಇದ್ದ ಐತಿಹಾಸಿಕ ಸ್ಥಳಕ್ಕೆ ಭೇಟಿ ನೀಡಿದ್ದೆ. ನಮ್ಮ ಸುತ್ತಮುತ್ತಲಿನ ಊರುಗಳು ಸಾವಿರಾರು ವರ್ಷಗಳ ಇತಿಹಾಸವಿರುವುದು ಆಶ್ಚರ್ಯ ವೆನಿಸುತ್ತದೆ.

ನಮ್ಮ ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರೇಕ್ಷಣೀಯ ಹಾಗೂ ಐತಿಹಾಸಿಕ ಸ್ಥಳಗಳಿಗೆ ಕೊರತೆ ಇಲ್ಲ. ಇದಕ್ಕೆ ಒತ್ತು ನೀಡಿರುವ ಸಾಕಷ್ಟು ಐತಿಹಾಸಿಕ ಸ್ಥಳಗಳನ್ನು ನಮ್ಮ ಮೊಳಕಾಲ್ಮುರು ತಾಲ್ಲೂಕಿನಲ್ಲಿ ಕಾಣ ಸಿಗುತ್ತವೆ. ಅದೂ ನಮ್ಮ ಹೋಬಳಿಯಲ್ಲಿ.

ಬೆಂಗಳೂರು-ಬಳ್ಳಾರಿ ರಾಜ್ಯಹೆದ್ದಾರಿಯಲ್ಲಿನ ರಾಂಪುರಕ್ಕಿಂತ ಮುಂಚೆ  ಸಿಗುವುದೇ ಅಶೋಕ ಸಿದ್ದಾಪುರ ಕ್ರಾಸ್. ಹೆದ್ದಾರಿಯಿಂದ 8 ಕಿ.ಮೀ. ದೂರ ಸಾಗಿದರೆ ರಸ್ತೆ ಬಲಭಾಗದಲ್ಲಿ ಅಶೋಕ ಶಾಸನ ಇರುವ ಕಲ್ಲಿನ ಕಟ್ಟಡವನ್ನು ಕಾಣಬಹುದಾಗಿದೆ. ಕ್ರಿ.ಪೂ. 3ನೇ ಶತಮಾನದಲ್ಲಿ ಅಶೋಕ ಮಹಾರಾಜ ಆಡಳಿತ ಅವಧಿಯಲ್ಲಿ ಈ ಸ್ಥಳದಲ್ಲಿ `ಇಸಿಲಾ~ ಪಟ್ಟಣ ಇತ್ತು ಎಂದು ಶಾಸನದಲ್ಲಿ ಉಲ್ಲೇಖಿಸಲಾಗಿದೆ. ಸರ್ ಮಾರ್ಟಿಮರ್ ವೀಲರ್, ಎಚ್.ಎಂ. ಕೃಷ್ಣ ಮುಂತಾದ ಇತಿಹಾಸಕಾರರು ನಡೆಸಿದ ಉತ್ಖನನ ವೇಳೆ ಈ ಸ್ಥಳದಲ್ಲಿ 2500 ವರ್ಷದ ಹಿಂದೆ ಇದ್ದ ಜನವಸತಿ ಪ್ರದೇಶ ಶಿಷ್ಟ ಸಂಸ್ಕೃತಿ ಹೊಂದಿತ್ತು ಎಂದು ತಿಳಿದುಬಂದಿದೆ.

ಬ್ರಹ್ಮಗಿರಿ, ಸಿದ್ದಾಪುರ ಮತ್ತು ಜಟಿಂಗರಾಮೇಶ್ವರ ಸ್ಥಳಗಳಲ್ಲಿ ದೊರೆತ ಅಶೋಕ ಸಮ್ರಾಟನ ಶಾಸನಗಳಿಂದ ಮೌರ್ಯರ ಆಡಳಿತ ಮೈಸೂರಿನವರೆಗೂ ವಿಸ್ತರಿಸಿತ್ತು ಎಂದು ಗೊತ್ತಾಗುತ್ತದೆ.






1884ರಲ್ಲಿ ಮೈಸೂರು ಸರ್ಕಾರದ ಕಾರ್ಯದರ್ಶಿ ಮತ್ತು ಪುರಾತತ್ವನಿರ್ದೇಶಕರಾಗಿದ್ದ ಪ್ರಸಿದ್ಧ ವಿದ್ವಾಂಸ ಲೂಯಿ ರೈಸ್ ಹಳೆಯ ಮೈಸೂರು ಸಂಸ್ಥಾನ ಮತ್ತು ಕೊಡಗು ಪ್ರದೇಶದಲ್ಲಿ ದೊರೆಯುವ ಅನೇಕ ಶಾಸನಗಳನ್ನು ಸಂಗ್ರಹಿಸಿ ಒಂದು ದೊಡ್ಡ ಗ್ರಂಥವನ್ನು ಹೊರತಂದಿದ್ದಾರೆ.

ಚಿತ್ರದುರ್ಗಕ್ಕಿಂತ 5000 ವರ್ಷಗಳ ಮೊದಲೇ ಜನವಸತಿಯುಳ್ಳ ಮೊಳಕಾಲ್ಮುರು ಪಾಳೆಪಟ್ಟದಲ್ಲಿ ದಾವಣಗೆರೆಯು ಒಂದು ಕೇವಲ ಗ್ರಾಮವಾಗಿತ್ತು. ಅಶೋಕ ಚಕ್ರವರ್ತಿ ಆಳ್ವಿಕೆಯ ಕಾಲದಲ್ಲಿ ಪ್ರಮುಖ ಪಟ್ಟಣವಾಗಿದ್ದ ಇಸಿಲಾ ನಗರವು ಇಂದಿನ ಅಶೋಕ ಸಿದ್ದಾಪುರವಾಗಿದೆ.

ಅಶೋಕ ಸಿದ್ದಾಪುರದಲ್ಲಿನ ಶಿಲಾಶಾಸನಗಳು ಸಂಶೋಧಕ ಬಿ.ಎಲ್‌.ರೈಸ್‌ ತಿಳಿಸುವವರೆಗೂ ಪತ್ತೆಯಾಗಿರಲಿಲ್ಲ. ನಳಂದ ವಿವಿಗೆ ತಾಲೂಕು ಹಿಂದೆಯೇ ನೇರ ಸಂಪರ್ಕ ಹೊಂದಿತ್ತು
ಕುಮಾರ ರಾಯನ ರಾಜಧಾನಿಯಾಗಿದ್ದ ಈ ತಾಲೂಕಿನಲ್ಲಿ ಹೊಯ್ಸಳ ಶೈಲಿಯ ಲಕ್ಷ್ಮಿ ದೇವಿಯ ವಿಗ್ರಹವು ಇಂದಿಗೂ ಕಾಣಬಹುದಾಗಿದೆ



ಅಶೋಕ ಮಹಾರಾಜ ಅವಧಿಯಲ್ಲಿ ಧರ್ಮ ಪ್ರಚಾರ ವೇಳೆ ಬೃಹತ್ ಕಲ್ಲುಬಂಡೆ ಮೇಲೆ ಶಾಸನ ಕೆತ್ತಲಾಗಿದೆ. ಗಾಳಿ, ಮಳೆ ಪರಿಣಾಮ ಅವನತಿ ಹಾದಿಯಲ್ಲಿದ್ದ ಈ ಶಾಸನಕ್ಕೆ ಈಚೆಗೆ ಪ್ರವಾಸೋದ್ಯಮ ಇಲಾಖೆ ಕಲ್ಲಿನ ಕಟ್ಟಡ ನಿರ್ಮಿಸಿದೆ. ಆದರೆ, ಕಟ್ಟಡ ಆವರಣದಲ್ಲಿ ಮೂಲಸೌಕರ್ಯ ಸೂಕ್ತವಾಗಿಲ್ಲ. ಹೊರರಾಜ್ಯ ಹಾಗೂ ಬೌದ್ಧ ಧರ್ಮ ಅನುಯಾಯಿ ದೇಶಗಳ ಪ್ರವಾಸಿಗಳು ಇಲ್ಲಿಗೆ ಹೆಚ್ಚಿನ ಪ್ರಮಾಣದಲ್ಲಿ ಬಂದು ಹೋಗುತ್ತಿದ್ದಾರೆ.

*`ಇಸಿಲಾ* ಜನವಸತಿ ಪ್ರದೇಶದಲ್ಲಿ ಆರಂಭದಲ್ಲಿ ಬೌದ್ಧ ಅನುಯಾಯಿಗಳು ಹೆಚ್ಚಾಗಿದ್ದು, ಇವರ ಅವನತಿ ನಂತರ ಇಲ್ಲಿ ಜೈನಧರ್ಮ ಪ್ರವರ್ಧಮಾನಕ್ಕೆ ಬಂದಿತು ಎಂದು ಅಶೋಕ ಶಾಸನಕ್ಕೆ ಸಮೀಪವಿರುವ ಅಕ್ಕತಂಗಿ ಗುಡಿ ಬಳಿ ಇರುವ ನಿಷಧಿ ಕಲ್ಲುಗಳು, ಜೈನಬಸದಿಗಳು, ಸಮೀಪದ ಬೆಟ್ಟದ ಮೇಲಿರುವ ತ್ರಿಶಂಕೇಶ್ವರ ದೇವಾಲಯ, ಭಾಗ್ಯಲಕ್ಷ್ಮೀ ದೇವಸ್ಥಾನ ಸಾಕ್ಷಿಯಾಗಿದೆ.

ಜೈನಧರ್ಮಕ್ಕೆ ಸೇರಿದ ಇಬ್ಬರು ಅಕ್ಕತಂಗಿಯರು ದೇವಸ್ಥಾನಗಳನ್ನು ನಿರ್ಮಿಸಲು ಉದ್ದೇಶಿಸಿ ಕಾರ್ಯ ಆರಂಭಿಸಿದರಂತೆ. ಈ ಸಮಯದಲ್ಲಿ ಅಕ್ಕ ನನ್ನ ದೇವಸ್ಥಾನ ಚೆನ್ನಾಗಿರಬೇಕು ಎಂಬ ಆಸೆಯಿಂದ ತಂಗಿಯನ್ನು ತವರುಮನೆಗೆ ಕಳುಹಿಸಿ ನಿರ್ಮಾಣ ಆರಂಭಿಸಿದಾಗ ಈ ಸಂಗತಿ ತಿಳಿದು ತಂಗಿ ಅಕ್ಕನ ದೇವಸ್ಥಾನ ಪಕ್ಕದಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಅಡಿಪಾಯ ಹಾಕಿದ್ದರೂ ಅದನ್ನು ಸ್ಥಗಿತಗೊಳಿಸಿ ಸುಮಾರು 1.5. ಕಿ.ಮೀ. ದೂರದಲ್ಲಿ ದೇವಸ್ಥಾನ ನಿರ್ಮಿಸಿದಳು ಎಂದು ಶಾಸನಗಳಲ್ಲಿ ಉಲ್ಲೇಖವಾಗಿದೆ.

*ರಾಜ್ಯದಲ್ಲಿ 17 ಶಾಸನಗಳು*: ಅಶೋಕನ ಒಟ್ಟು 155 ಶಾಸನಗಳು ಲಭ್ಯವಾಗಿದ್ದು, ಅದರಲ್ಲಿ 17 ನಮ್ಮ ರಾಜ್ಯದಲ್ಲಿ ದೊರೆತಿವೆ. ಅದರಲ್ಲಿ ಮೂರು ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿ, ಸಿದ್ದಾಪುರ, ಜಟಿಂಗರಾಮೇಶ್ವರದಲ್ಲಿವೆ. ಶಾಸನಗಳೆಲ್ಲ ಬ್ರಾಹ್ಮಿ ಮತ್ತುಖರೋಷ್ಠಿ ಲಿಪಿಗಳಲ್ಲಿವೆ. ಬ್ರಾಹ್ಮಿ ಬರಹವನ್ನು ಎಡಗಡೆಯಿಂದ ಬಲಗಡೆಗೂ ಖರೋಷ್ಠಿಯನ್ನು ಈಗಿನ ಉರ್ದು ಭಾಷೆಯಂತೆ ಬಲದಿಂದ ಎಡಕ್ಕೂ ಓದಬೇಕು. ರಾಜ್ಯದ ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿ ಶಾಸನದ ಕೊನೆಯ ಪಂಕ್ತಿ ಖರೋಷ್ಠಿಯಲ್ಲಿದೆ.

*ಹೋಯ್ಸಳರು ಆಳಿದ್ದ ಊರುಗಳು*: ಹೊಯ್ಸಳ ಬಲ್ಲಾಯರಾಯನ ಕಾಲದಲ್ಲಿ ನಿರ್ಮಿತವಾದ ಶ್ರೀ ಸಿದ್ದೇಶ್ವರ ದೇವಾಲಯ. ಬಹುಶಃ ಈ ದೇವಸ್ಥಾನಗಳನ್ನು 11ನೇ ಶತಮಾನದಲ್ಲಿ ಹೊಯ್ಸಳರ  ಅಡಳಿತದಲ್ಲಿ ನಿರ್ಮಿಸಲಾಗಿದೆ. ಈ ದೇವಸ್ಥಾನಗಳ ಗರ್ಭಗುಡಿಗಳಲ್ಲಿ ಯಾವುದೇ ದೇವರ ಮೂರ್ತಿಗಳು ಇಲ್ಲ. ರಕ್ಷಣೆ ಕೊರತೆ ಎದುರಿಸುತ್ತಿರುವ ಆಕರ್ಷಕ ಕೆತ್ತನೆ ಹೊಂದಿರುವ ಈ ಎರಡೂ ದೇವಸ್ಥಾನಗಳು ಅವಸಾನ ಹಂತದಲ್ಲಿವೆ.


ಕಾಡುಸಿದ್ದಾಪುರದಲ್ಲಿ ಇರುವ ಮತ್ತೊಂದು ವಿಸ್ಮಯ ಎಂದರೆ ಸಿದ್ದೇಶ್ವರ ಸ್ವಾಮಿ ಆವರಣದಲ್ಲಿ ಇರುವ ಒಂದೇ ಗುಂಡಿಯಲ್ಲಿ ಗ್ರಾಮದ ಯಾರೇ ಮೃತಪಟ್ಟರೂ ಶವಸಂಸ್ಕಾರ ಮಾಡಲಾಗುತ್ತಿದೆ. ಇದಕ್ಕೆ ಕೆಲನಿಯಮ ವಿಧಿಸಲಾಗಿದೆ. ಇಂತಹ ಭಿನ್ನ ಸಂಸ್ಕೃತಿ ಬೇರೆ ಕಡೆ ಇರುವ ಸಾಧ್ಯತೆ ಕ್ಷೀಣ. ಇದರ ಸಮೀಪದಲ್ಲಿ ರೊಪ್ಪ ಗ್ರಾಮದಲ್ಲಿ ಹತ್ತಾರು ಶಿಲಾಯುಗ ಕಾಲದ ಸಮಾಧಿಗಳನ್ನು ನೋಡಬಹುದಾಗಿದೆ. ಇಂತಹ ಹಲವು ಪ್ರೇಕ್ಷಣೀಯ ಸ್ಥಳಗಳನ್ನು ಕೇವಲ ಐದು ಕಿಮೀ ವ್ಯಾಪ್ತಿಯಲ್ಲಿ ನೋಡಬಹುದಾಗಿದೆ. ಇದಕ್ಕೆ ಸಂಬಂಧಪಟ್ಟ ಇಲಾಖೆ ಪ್ರಚಾರ ಕೈಗೊಳ್ಳುವ ಜತೆಗೆ, ಕ್ಷೇತ್ರಗಳ ಅಭಿವೃದ್ಧಿಗೆ ಮುಂದಾಗಬೇಕಿದೆ.


*ಶಿಲಾಯುಗದ ಚಿತ್ರಗಳು*: ಇಲ್ಲಿ ಕಾಣುವ ಆನೆಯ ಚಿತ್ರ,  ಇದು ಶಿಲಾಯುಗದ ಕಾಲದಲ್ಲಿ ಮಾನವನಿಂದ ಕೆತ್ತನೆಯ ಚಿತ್ರ . ಬಹುಶಃ ೧೩ ಅಡಿಯ ಎತ್ತರದ ಬಂಡೆಯ ಮೇಲೆ ಆನೆಯ ಚಿತ್ರ ಸ್ಪಷ್ಟವಾಗಿ ಕಾಣುತ್ತದೆ















ಜಟಿಂಗರಾಮೇಶ್ವರ ಬೆಟ್ಟ



#Ashoka_siddapura #rampura #molakalmuru #chitradurga #Ashoka_Shilashasana
#ಮೊಳಕಾಲ್ಮುರು #ರಾಂಪುರ #ಅಶೋಕ_ಸಿದ್ದಾಪುರ  #ಅಶೋಕ_ಶಿಲಾಶಾಸನ

ಬುಧವಾರ, ಜೂನ್ 5, 2019

ಕುಂವೀ ಯವರ ಸಾಮಾಜಿಕ ಕಾಳಜಿ ಕೇವಲ ಭಾಷಣಕ್ಕೆ ಸೀಮಿತವೇ?

ಕುಂವೀ ಯವರ ಸಾಮಾಜಿಕ ಕಾಳಜಿ ಕೇವಲ ಭಾಷಣಕ್ಕೆ ಸೀಮಿತವೇ?





ಕುಂವೀಯವರು ಕನ್ನಡದ ಹೆಸರಾಂತ ಸಾಹಿತಿಗಳು. ಕರ್ನಾಟಕ ಸಾಹಿತ್ಯ ಅಕಾಡೆಮಿ, ರಾಜ್ಯೋತ್ಸವ ಪ್ರಶಸ್ತಿ,  ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಹೀಗೆ ಹಲವಾರು ಪ್ರಶಸ್ತಿ ಪುರಸ್ಕಾರ ಪಡೆದ ಮಹನೀಯರು.  ಇವರ ಹಲವು ಕಥೆ ಕಾದಂಬರಿಗಳು ಸಿನಿಮಾಗಳಾಗಿ ಬಂದಿರುವುದು ಎಲ್ಲರಿಗೂ ತಿಳಿದ ವಿಷಯ.
ಇವರು ಶಿಕ್ಷಕವೃತ್ತಿಯಲ್ಲಿದ್ದು ಈ ಸಾಧನೆ ಮಾಡಿರುವುದು ಗಮನಾರ್ಹ. ಎಷ್ಟೊಂದು ಜನ, ತಾವಾಯಿತು ತಮ್ಮ ಕೆಲಸವಾಯಿತು ಅಂತ ತಮ್ಮ ಸೇವೆಯಲ್ಲಿ ಮಗ್ನರಾಗಿ ನಿವೃತ್ತಿ ಹೊಂದಿದ್ದಾರೆ. ಆದರೆ ಇವರು ಹಾಗಲ್ಲ. ಒಂದಿಲ್ಲೊಂದು ಸಾಹಿತ್ಯ ಕೃಷಿಯಲ್ಲಿ ತೊಡಗಿ ಹೊಸ ಹೊಸ ಕೃತಿಗಳನ್ನು ಹೊರತಂದಿದ್ದಾರೆ.
ಅಂದಹಾಗೆ, ಇವರು ಸೇವೆ ಸಲ್ಲಿಸಿದ್ದು ಕರ್ನಾಟಕದಲ್ಲಲ್ಲ. ಬದಲಿಗೆ ಪಕ್ಕದ ಆಂಧ್ರದ ಗಡಿನಾಡಿನ ರಾಯಲಸೀಮ ಪ್ರಾಂತ್ಯದ ಕನ್ನಡ ಶಾಲೆಗಳಲ್ಲಿ. ಇವರು ತಮ್ಮ ವೃತ್ತಿ ಅನುಭವದಲ್ಲಿ ಸೇವೆ ಸಲ್ಲಿಸಿದ ಗಡಿನಾಡಿನ ಆಂಧ್ರದ ಹಳ್ಳಿಗಳಲ್ಲಿ ತಾವು ಕಂಡ ಅನುಭವಗಳನ್ನ ರೋಚಕವಾಗಿ ವರ್ಣಿಸಿ ಹಲವಾರು ಕಥೆ ಕಾದಂಬರಿಗಳನ್ನ ರಚಿಸಿದ್ದಾರೆ.

ಆದರೆ, ಈ ಅನುಭವ ಅವರ ಕಥೆ ಕಾದಂಬರಿಗಳ ಸರಕಾಗಿದ್ದಾವೆ ಹೊರತು, ಈ ಭಾಗದ ಅಭಿವೃದ್ದಿಗೆ ಏನೂ ಉಪಯೋಗವಾಗಲಿಲ್ಲ. ಈವತ್ತಿನ ತನಕ ಈ ಭಾಗದ ಅಭಿವೃದ್ದಿಗಾಗಿ, ಕನ್ನಡ ಶಾಲೆಗಳ ಉಳಿವಿಗಾಗಿ, ಇಲ್ಲಿನ ಕನ್ನಡಿಗರಿಗೆ ಸರ್ಕಾರಿ ಸೌಲಭ್ಯ ಕ್ಕಾಗಿ, ಕುಂವೀಯವರು ಯಾವುದೇ ಹೋರಾಟ ಮಾಡಲಿಲ್ಲ.  ಸರ್ಕಾರಕ್ಕೆ ಮನವಿ ಮಾಡಿ, ಒತ್ತಡ ಹೇರಿ, ಈ ಗಡಿ ನಾಡಿನ ಹಳ್ಳಿಗಳಿಗೆ ಸೌಲಭ್ಯ ದೊರಕಿಸಿಕೊಡಲಿಲ್ಲ. ತಮ್ಮ ವೃತ್ತಿ ಜೀವನದ ಸಮಯದಲ್ಲೂ ಸಹ ಅಂತಹ ಸಾಮಾಜಿಕ ಬದಲಾವಣೆಗಾಗಿ ಪ್ರಯತ್ನ ನಡೆಸಿಲ್ಲ. ಆ ಹಳ್ಳಿಗಳು ಆಗ ಹೇಗಿದ್ದವೂ ಈಗಲೂ ಹಾಗೆಯೆ ಇವೆ.

ನಿಮಗೆ ಗೊತ್ತಿರುವ ಹಾಗೆ, ಕರ್ನೂಲ್ ಜಿಲ್ಲೆಯ ಎಮ್ಮಿಗನೂರು ಆಲೂರು, ಆದೋನಿ, ಅನಂತಪುರ ಜಿಲ್ಲೆಯ, ಗುಂತಕಲ್, ರಾಯದುರ್ಗ, ಕಲ್ಯಾಣದುರ್ಗ ಇನ್ನು ಮುಂತಾದ ತಾಲೂಕಿನ ಹಳ್ಳಿ ಗಳು ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ಪ್ರದೇಶಗಳು. ರಾಜ್ಯ ವಿಭಜನೆಯ ನಂತರ ಈ ತಾಲೂಕ್ ಗಳು ಆಂಧ್ರಕ್ಕೆ ಸೇರ್ಪಡೆಯಾದವು.  ಕರ್ನಾಟಕ ರಾಜ್ಯದಿಂದ ಬೇರ್ಪಟ್ಟರೂ ಸಹ, ಇಲ್ಲಿನ ಜನ ಕರ್ನಾಟಕದೊಂದಿಗೆ ಅವಿನಾಭಾವ ಸಂಭಂದ ವನ್ನು ಹೊಂದಿದ್ದಾರೆ.  ವ್ಯಾವಹಾರಿಕ ಕಾರಣಗಳಿಗೆ ಪಕ್ಕದ ಬಳ್ಳಾರಿ ಜಿಲ್ಲೆಯನ್ನು ಅವಲಂಬಿಸಿದ್ದಾರೆ. ಹಾಗೂ ಉದ್ಯೋಗಾವಕಾಶದ ಕಾರಣದಿಂದ ಕರ್ನಾಟಕದ ಬಳ್ಳಾರಿ, ಬೆಂಗಳೂರು ಸೇರಿದಂತೆ ಹಲವಾರು ಕಡೆ ಸಾವಿರಾರು ಜನ ನೆಲೆಸಿದ್ದಾರೆ.

ನಿಜ ಹೇಳಬೇಕೆಂದರೆ,  ಆಂಧ್ರದ ಈ ಗಡಿನಾಡಿನ ಹಳ್ಳಿಗಳಿಗೂ ಅದಕ್ಕೆ ಹೊಂದಿಕೊಂಡಿರುವ ನಮ್ಮ ಕರ್ನಾಟಕದ ಹಳ್ಳಿಗಳಿಗೂ ಬಹಳ ವ್ಯತ್ಯಾಸವೇನೂ ಇಲ್ಲ. ಬಳ್ಳಾರಿ ತಾಲೂಕಿನ ಸುತ್ತಮುತ್ತಲಿನ ಪರಿಸರದ ಹಾಗೆಯೇ ಇಲ್ಲೂ ಇದೆ.  ಲಿಂಗಾಯಿತರು, ಕುರುಬರು, ಬೇಡರು, ನಾಯಕರು, ಗೊಲ್ಲರು, ಮುಂತಾದ ಎಲ್ಲ ಹಿಂದುಳಿದವರು.  ಅಲ್ಪಸಂಖ್ಯಾಂತರು ಸೇರಿದಂತೆ ಬಳ್ಳಾರಿ ತಾಲೂಕಿನಲ್ಲಿರುವಂತೆ  ಎಲ್ಲ ಜಾತಿ ಜನಾಂಗದವರೂ ಅಲ್ಲಿಯೂ ಇದ್ದಾರೆ. ಈ ಎರಡು ಪ್ರದೇಶಗಳನ್ನು ಗಡಿ ರೇಖೆ ಮಾತ್ರ ವಿಭಜಿಸಿದೆ, ಮಿಕ್ಕುಳಿದಂತೆ ಎಲ್ಲದಕ್ಕೂ ಕರ್ನಾಟಕವನ್ನೇ ಅವಲಂಬಿಸಿದ್ದಾರೆ.

ಆಂಧ್ರದಲ್ಲಿದ್ದರೂ, ಇಲ್ಲಿನ ಜನರ ಕನ್ನಡ ಅಭಿಮಾನವೇನು ಕಡಿಮೆಯಾಗಿಲ್ಲ. ಈ ಗಡಿ ಪ್ರದೇಶಗಳಲ್ಲಿ, ಬಹುತೇಕ ಕನ್ನಡ  ಮಾತನಾಡುವ ಕುಟುಂಬಗಳು ಇದ್ದ ಕಾರಣದಿಂದ ಇಲ್ಲಿನ ಆಂಧ್ರ ಸರ್ಕಾರಗಳು,  ಸ್ವಾತಂತ್ರ್ಯ ಪೂರ್ವದಿಂದಲೇ ಇದ್ದ ಕನ್ನಡ ಶಾಲೆ ಗಳನ್ನು ಹಾಗೆಯೆ ಉಳಿಸಿಕೊಂಡು ಮತ್ತು ೬೦-೮೦ರ  ದಶಕದಲ್ಲಿ ಕೆಲ ಹೊಸ ಕನ್ನಡ ಮಾಧ್ಯಮ ಶಾಲೆಗಳನ್ನು ಪ್ರಾರಂಭಿಸಿ  ಇಲ್ಲಿನ ಜನರ ಮಾತೃಭಾಷೆ ಕನ್ನಡದ ಮೂಲಕವೇ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ನೀಡುತ್ತ ಬಂದಿದ್ದಾರೆ. 

ಆದರೆ, ಕರ್ನಾಟಕದ ಸರ್ಕಾರ ಗಡಿನಾಡು ಕನ್ನಡಿಗರನ್ನು ದಶಕಗಳಿಂದಳೂ ಆಲಕ್ಷಿಸುತ್ತ ಬಂದಿದ್ದರಿಂದ, ಜನರಿಗೆ ಕರ್ನಾಟಕದ ಸರ್ಕಾರದ ಮೇಲೆ ಯಾವುದೇ ವಿಶ್ವಾಸ ಉಳಿದಿಲ್ಲ.
ಹತ್ತನೇ ತರಗತಿಯವರಿಗೂ ಕನ್ನಡ ಮಾಧ್ಯಮದಲ್ಲಿ ಕಲಿತರೂ, ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗ ದೊರೆಯುತ್ತಿಲ್ಲ. ಉನ್ನತ ವ್ಯಾಸಂಗಕ್ಕೆ ಮೀಸಲಾತಿ ಇಲ್ಲ. ಸರ್ಕಾರಿ ಹಾಸ್ಟೆಲ್ ಗಳಲ್ಲಿ ಪ್ರವೇಶವಿಲ್ಲ. ದುಬಾರಿ ಶುಲ್ಕ ತೆತ್ತು ಬಳ್ಳಾರಿಯಲ್ಲಿ ಖಾಸಗಿ ವಿದ್ಯಾ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯಲು ಖಾಸಗಿ ಹಾಸ್ಟೆಲ್ ಗಳಲ್ಲಿ ಉಳಿದುಕೊಂಡು ಓದಿ ಪದವಿ ಪಡೆದರೂ ಉದ್ಯೋಗ ಖಾತರಿಯಿಲ್ಲ.

ಉದಾಹರಣೆಗೆ, ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಆಲೂರು ತಾಲೂಕಿನ ಗೂಳ್ಯಂ ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಪ್ರೌಡಶಾಲೆ  ಒಂದು ಶತಮಾನ ಪೂರೈಸಿದೆ. ಶತಮಾನದ ಹೊಸ್ತಿಲನ್ನು ಕಂಡಂತಹ ಇಂತಹ ಕನ್ನಡ ಶಾಲೆಗಳನ್ನು ಮುಚ್ಚಲು ಕೆಲ ಪಟ್ಟ ಭದ್ರ ಹಿತಾಸಕ್ತಿಯುಳ್ಳ ಜನರು ಶತಪ್ರಯತ್ನ ಮಾಡುತಿದ್ದಾರೆ. ಊರಿನ ಕನ್ನಡ ಯುವಕ ಸಂಘದ ಸದಸ್ಯರು ಗಡಿನಾಡಿನಲ್ಲಿರುವ ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳಲು ಹರ ಸಾಹಸ ಪಡುತಿದ್ದಾರೆ.

ಗೂಳ್ಯಂನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 480ಕ್ಕೂ ಹೆಚ್ಚು ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ.  ಬಳ್ಳಾರಿಯು, ಗೂಳ್ಯಂನಿಂದ  ಸುಮಾರು 40 ಕಿ.ಮೀ. ದೂರಯಿದ್ದು, ಸಾರಿಗೆ ವ್ಯವಸ್ಥೆ ಇಲ್ಲದೆ ಹೆಣ್ಣುಮಕ್ಕಳ ಶಿಕ್ಷಣ ಅರ್ಧಕ್ಕೆ ಮೊಟಕಾಗುವಂತಾಗಿದೆ. ಹೆಚ್ಚಿನ ಶಿಕ್ಷಣಕ್ಕೆ ಬಳ್ಳಾರಿಗೆ ಹೋಗಿಬರಲು, ಸರ್ಕಾರಿ ಬಸ್ಸಿನ ಅವಶ್ಯಕತೆಯೂ ಇದೆ.  ವಿದ್ಯಾರ್ಥಿಗಳು ಸಾರಿಗೆ ಸೌಲಭ್ಯ ಹಾಗೂ ಉಚಿತ ಬಸ್‍ಪಾಸ್ ಒದಗಿಸಿಕೊಡುವಂತೆ ಬೇಡಿಕೆ ಇದೆ.

ಬಳ್ಳಾರಿಯಿಂದ ಗೂಳ್ಯಂಗೆ ಬರಲು ಎರಡು ಮಾರ್ಗಗಳಿವೆ. ಒಂದು, ಹಾಲಹರವಿ ಮುಖಾಂತರ ನಲವತ್ತು ಕಿ.ಮಿ. ದೂರ. ಎರಡನೆಯದು, ಬಸರಕೋಡು ಮುಖಾಂತರ ಮೂವತ್ತು ಕಿ.ಮಿ ದೂರ. “ಬಸರಕೋಡು ಗ್ರಾಮವು ಬಳ್ಳಾರಿ ಜಿಲ್ಲೆಯ ಬಳ್ಳಾರಿ ತಾಲೂಕಿನಲ್ಲಿದೆ. ಗೂಳ್ಯಂ ಗ್ರಾಮವು ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿದೆ. ಈ ಎರಡೂ ಗ್ರಾಮಗಳ ಮಧ್ಯೆ ವೇದಾವತಿ ನದಿಯು(ಹಗರಿ) ಹರಿದು ಹೋಗುತ್ತದೆ ಬಸರಕೋಡಿನಿಂದ ಗೂಳ್ಯಂ ಗ್ರಾಮಕ್ಕೆ ಹೋಗುವ ವಾಹನಗಳಾಗಲೀ ಪಾದಾಚಾರಿಗಳಾಗಲೀ, ಈ ನದಿಯ ನೀರಿನಲ್ಲಿ ಒಂದು ಕಿ.ಮಿ. ಅಂತರವನ್ನು ಕ್ರಮಿಸಬೇಕಾಗುತ್ತದೆ.
ಜೊತೆಗೆ ಹಗರಿಯು ಮರಳು ( ಉಸುಕಿ)ನಿಂದ ಕೂಡಿರುವುದರಿಂದ ಈ ಒಂದು ಕಿ.ಮಿ. ದಾರಿಯನ್ನು ಕಾಲ್ನಡಿಗೆಯಿಂದ ದಾಟಿ ಹೋಗಲು ಹರಸಾಹಸ ಪಡ ಬೇಕು.  ಕಾಲುಸಿಕ್ಕಿ ಹಾಕಿಕೊಳ್ಳುತ್ತದೆ. ವೃದ್ಧರು, ಮಕ್ಕಳು ಮತ್ತು ಮಹಿಳೆಯರು ಈ ಒಂದು ಕಿ.ಮಿ. ದಾಟುವುದರಲ್ಲಿ ಸುಸ್ತಾಗಿ ಹೋಗುತ್ತಾರೆ.

ಕರ್ನಾಟಕದ ಪಕ್ಕದ ಹಳ್ಳಿಗಳಿಗೆ ದಿನನಿತ್ಯ ನೂರಾರು ಜನ ಬಸರಕೋಡು ಹಗರಿ  ನದಿಯ ಮುಖಾಂತರವೇ ಸಾಗಬೇಕಾಗಿದೆ. ಆಂಧ್ರದ ಕರ್ನೂಲು ಜಿಲ್ಲೆಯಿಂದ ಗೂಳ್ಯಂ ಮಾರ್ಗವಾಗಿ ಬಳ್ಳಾರಿಗೆ ಬರುವ ಅನೇಕ ಬಡಜನರು ಸರ್ಕಾರಿ ಆಸ್ಪತ್ರೆ ಹಾಗೂ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಹಗರಿಯನ್ನು ದಾಟಿ ಬರಬೇಕು. ಹಾಗೂ ಗೂಳ್ಯಂ ಈ ಭಾಗದ ಜನತೆಗೆ ಪುಣ್ಯಕ್ಷೇತ್ರವಾಗಿರುವುದರಿಂದ ವರ್ಷಕ್ಕೊಮ್ಮೆ ಜರುಗುವ ಶರಣ ಶ್ರೀ ಗಾದಿಲಿಂಗಪ್ಪ ತಾತನವರ ಜಾತ್ರಾ ಸಂದರ್ಭದಲ್ಲಿ ಸಾವಿರಾರು ಜನರು ಈ ನದಿಯನ್ನು ದಾಟಿಕೊಂಡು ಹೋಗಬೇಕಾಗುತ್ತದೆ. ಆದ್ದರಿಂದ ಈ ನದಿಗೆ ಅಡ್ಡವಾಗಿ ಒಂದು ಸೇತುವೆಯನ್ನು ನಿರ್ಮಾಣ ಮಾಡಬೇಕೆಂಬುದು ಈ ಭಾಗದ ಜನತೆಯ ಬಹುವರ್ಷಗಳ ಬೇಡಿಕೆಯಾಗಿದೆ. ಅನೇಕ ವರ್ಷಗಳ ಹಿಂದೆಯೇ ಈ ಸೇತುವೆ ನಿರ್ಮಾಣಕ್ಕೆ ಯೋಜನೆ ಮಾಡಿದ್ದರೂ ಅದು ನೆನೆಗುದಿಗೆ ಬಿದ್ದಿದೆ .

ಕುಂವೀ ಮತ್ತು ಗೂಳ್ಯಂ ನಂಟು:  ಅಂದಾಜು ಹದಿನೈದು ವರುಷಗಳ ಕಾಲ ಕುಂವೀ ಯವರು ಆಂಧ್ರದ ಗೂಳ್ಯಂ ನಲ್ಲಿ ಕನ್ನಡ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ತದ ನಂತರ ಹತ್ತಿರದ ಕೆಲ ಕನ್ನಡ ಶಾಲೆಗಳಿಗೆ ವರ್ಗಾವಣೆ ಮಾಡಿಸಿಕೊಂಡು, ಕೆಲವರ್ಷಗಳ ಕಾಲ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದರು. ಗೂಳ್ಯಂನಲ್ಲಿ ಹದಿನೈದು ವರ್ಷಗಳ ಕಾಲ ಕೆಲಸ ಮಾಡಿದ್ದರೂ, ಕನ್ನಡ ಸಾಹಿತ್ಯ ದಲ್ಲಿ ಬಹಳ ಹೆಸರುಗಳಿಸಿ, ಹಲವಾರು ಪ್ರಶಸ್ತಿಗಳನ್ನು ಗಳಿಸಿದ್ದರೂ ಸಹಿತ  ಗೂಳ್ಯಂನ ಜನರಿಗೆ ಕುಂವಿಯವರ ಮೇಲೆ ಬಹಳಷ್ಟು ಅಸಮಧಾನವಿದೆ.

ಮಕ್ಕಳಿಗೆ ಶಿಕ್ಷಣ ನೀಡುವ ಸಮಯದಲ್ಲಿ ತಿಂಗಳುಗಳಕಾಲ ರಜೆ ಹಾಕಿ, ಧಾರವಾಡ, ಬೆಂಗಳೂರು ಮೈಸೂರು ಮತ್ತಿತರ ಕಡೆ ಹೊರಟು ಬಿಡುತಿದ್ದರು.  ಇವರ ಬಹುತೇಕ ಸಮಯ, ಕಥೆ, ಕಾದಂಬರಿ, ಸಿನಿಮಾ ಸಾಹಿತ್ಯ ಬರೆಯುವುದರಲ್ಲಿ ಮೀಸಲಿಡುತಿದ್ದರಿಂದ. ಮಕ್ಕಳಿಗೆ ಸರಿಯಾಗಿ ಪಾಠ ಮಾಡುತ್ತಿರಲಿಲ್ಲ ಹಾಗೂ ಉತ್ತಮ ಶಿಕ್ಷಣ ಕೊಡಲಿಲ್ಲ ಎನ್ನುವ ಅಪವಾದವಿದೆ. ಇದರಿಂದಾಗಿಯೆ, ಊರವರ ಜತೆ ಕೆಲ ಸಮಯ ಜಗಳಗಳಾಗಿದ್ದುಂಟು.
ಅವರ ವಿಧ್ಯಾರ್ಥಿಗಳು ಹೇಳುವಂತೆ " ಅವರ ಸಾಹಿತ್ಯ, ಪಾಂಡಿತ್ಯ ನಮ್ಮ ಶಿಕ್ಷಣಕ್ಕೆ ಉಪಯೋಗವಾಗಲಿಲ್ಲ.  ನಮ್ಮ ಊರು, ನಮ್ಮ ಜನರ ಕಥೆಗಳನ್ನು ಬರೆದು ಬರೆದು ಅದರಿಂದ ಹೆಸರು ಗಳಿಸಿದರೆ ವಿನಃ ನಮ್ಮ ಊರುಗಳಿಗೆ ನಮ್ಮ ಜನರಿಗೆ ಕಿಂಚಿತ್ತು ಉಪಯೋಗವಾಗಲಿಲ್ಲ. ಇವರ ಶಿಕ್ಷಕ ವೃತ್ತಿಯಲ್ಲಿ ಸಾವಿರಾರು ಜನ ವಿಧ್ಯಾರ್ಥಿಗಳು ಶಿಕ್ಷಣ ಪಡೆದಿದ್ದಾರೆ. ಆದರೆ, ಅದರಲ್ಲಿ ನೂರು ಜನ ತಮ್ಮ ಗುರುವಿನ ದೆಸೆಯಿಂದ ನಮ್ಮ ಭವಿಷ್ಯವನ್ನು ರೂಪಿಸಿಕೊಂಡಿದ್ದೇವೆ ಎಂದು ಹೇಳಲು ಸಿಗುವುದಿಲ್ಲ ಎನ್ನುತ್ತಾರೆ.

ನಮ್ಮಲ್ಲಿ ಹಲವಾರು ಜ್ವಲಂತ ಸಮಸ್ಯೆಗಳಿವೆ, ತಾವು ಕರ್ತ್ಯವ್ಯ ಗೈದ ಕನ್ನಡ ಶಾಲೆಗಳನ್ನು ಮುಚ್ಚುವ ಹಂತಕ್ಕೆ ಬಂದು ನಿಂತಿವೆ. ಊರಿನ ಜನ ಗುಳೆ ಹೊರಟುಹೋಗಿದ್ದಾರೆ. ರಾಯಲಸೀಮಾದ ನಮ್ಮ ಗ್ರಾಮಗಳಲ್ಲಿ ಫ್ಯಾಕ್ಷನಿಸಂ ಬಗ್ಗೆ ಅವರಿಗೆ ಅರಿವಿದೆ. ಈಗ ಪತ್ರಿಕೆಗಳಲ್ಲಿ, ಟಿವಿ ಗಳಲ್ಲಿ ಕುಂವೀಯವರು ಪ್ರಚಂಡ ಭಾಷಣ ಮಾಡುತ್ತಾರಲ್ಲ, ಅವರು ನಿಜವಾದ ವಿಚಾರವಾದಿಯಾಗಿದ್ದರೆ, ನಮ್ಮ ಜನರ ಧೈನಂದಿನ ಕಷ್ಟ ಕೋಟಲೆಗಳ ಮೇಲೆ ಕಥೆ ಕಾದಂಬರಿ ಬರೆದು ಹೆಸರು ಮಾಡುವುದಲ್ಲ, ನಮಗೆ ಹೆಗಲು ಕೊಟ್ಟು ನಮ್ಮ ಸಮಸ್ಯೆಗಳಿಗೆ ಪರಿಹಾರ ಕೊಡಿಸಲಿ. ಅದು ಬಿಟ್ಟು ಬೇಕಾಬಿಟ್ಟಿ ಮಾತನಾಡಿದರೆ ಏನು ಪ್ರಯೋಜನ.

ಕಳೆದ ಎಂಟಂತ್ತು ವರ್ಷಗಳಿಂದ ಕುಂವೀ ಯವರು, ಸಭೆ ಸಮಾರಂಭಗಳಲ್ಲಿ, ರಾಜಕೀಯ ಪಕ್ಷವೊಂದನ್ನು ಗುರಿ ಮಾಡಿಕೊಂಡು ಒಂದಲ್ಲ ಒಂದು ಹೇಳಿಕೆಗಳನ್ನು ನೀಡುತ್ತ ಬಂದಿದ್ದಾರೆ. ಬಹುಶಃ ಇಂತಹ ಹೇಳಿಕೆಗಳಿಂದ ಅವರಿಗೆ ಪ್ರಚಾರ ಸಿಗುತ್ತದೆ ಎಂದು ಭಾವಿಸಿದ್ದರೆ, ಅದು ಅವರ ಭ್ರಮೆ.  ತಮ್ಮ ಕಥೆಗಳಲ್ಲಿ ಬರೆದಂತೆ, ರಾಯಲಸೀಮ ಪ್ರಾಂತ್ಯದ ಹಳ್ಳಿ ಜನರ ಜೀವನ ಮಟ್ಟ ಸುಧಾರಣೆ ಮಾಡುವುದರ ಬಗ್ಗೆ, ಅವರಿಗೆ ಉತ್ತಮ ಶಿಕ್ಷಣ, ಮುಂತಾದ ಸೌಲಭ್ಯಗಳ ದೊರಕಿಸುವುದರ ಬಗ್ಗೆ ಹೋರಾಟ ಮಾಡಲೇ ಇಲ್ಲ. ಇಲ್ಲಿನ ಕನ್ನಡಿಗರ ಕಷ್ಟಗಳನ್ನ ಕೇಳಲೇ ಇಲ್ಲ. ವಾಗಿಲಿ, ಗೂಳ್ಯಂ ಮುಂತಾದ ಊರುಗಳಲ್ಲಿ ಕುಂವೀ ಯವರು ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ, ಅಲ್ಲಿಗೆ ಒಂದು ಸಾರಿ ಭೇಟಿ ನೀಡಿದರೆ ಅಲ್ಲಿನ ಜನರ ಸಂಕಷ್ಟ ಗಳ ಬಗ್ಗೆ ಗೊತ್ತಾಗುತ್ತದೆ.

ಕುಂವೀ ಯವರು ಸೇವೆ ಸಲ್ಲಿಸಿದ ಗೂಳ್ಯಂನ ಕನ್ನಡ ಶಾಲೆ ಮುಚ್ಚುವ ಹಂತಕ್ಕೆ ಬಂದು ನಿಂತಿದೆ., ಕರ್ನಾಟಕ ಮತ್ತು ಆಂಧ್ರವನ್ನು ಬೆಸೆಯುವ ಹಗರಿ ನದಿ ಸೇತುವೆ ಕಟ್ಟುವ ಯೋಜನೆ ದಶಕಗಳಿಂದಲೂ ನೆನೆಗುದಿಗೆ ಬಿದ್ದಿದೆ. ಇಲ್ಲಿನ ಜನಕ್ಕೆ, ಬಳ್ಳಾರಿ ಗೂಳ್ಯಂಗೆ ನೇರ ಬಸ್ ಸೌಲಭ್ಯ ಕ್ಕಾಗಿ ಒತ್ತಾಯಿಸುತಿದ್ದಾರೆ. ವಿಧ್ಯಾರ್ಥಿಗಳಿಗಾಗಿ, ಉಚಿತ ಬಸ್ ಬಾಸ್ ಬೇಡಿಕೆ ಇದೆ. ಕನ್ನಡಶಾಲೆಗೆ ಕನ್ನಡ ಮಾಧ್ಯಮದ ಪುಸ್ತಕಗಳ ಬೇಡಿಕೆ ಯಿದೆ.  ಇಂತಹ ಹಲವಾರು ಸಮಾಜ ಮುಖಿ ಕಾರ್ಯಗಳಿಗೆ ಕುಂವೀಯವರು ಹೆಗಲು ಕೊಡಬಹುದಲ್ಲವೇ?

ಇವರಿಗೆ ನಿಜಕ್ಕೂ ಸಾಮಾನ್ಯ ಜನರ ಮೇಲಿನ ಕಾಳಜಿ ಇದ್ದರೆ, ಬಳ್ಳಾರಿ ತಾಲೂಕಿಗೆ ಅಂಟಿಕೊಂಡಂತೆ, ಗೂಳ್ಯಂನಂತಹ ಹಲವಾರು ಕುಗ್ರಾಮಗಳಿವೆ, ಅಲ್ಲಿನ ಸಾಮಾಜಿಕ ಬದಲಾವಣೆಗೆ ಮುನ್ನುಡಿ ಬರೆಯಲಿ.  ಬೇಕಾಬಿಟ್ಟಿ ಹೇಳಿಕೆಕೊಟ್ಟು ಮಾಧ್ಯಮಗಳಲ್ಲಿ ಪ್ರಚಾರ ಪಡೆಯುವುದರಿಂದ ಏನು ಪ್ರಯೋಜನವಿದೆ?

ಕಥೆ: ಅಸ್ಥಿ ಭಾಗ-2

ಕಥೆ: ಅಸ್ಥಿ ಭಾಗ-2

ಮುಂದುವರಿದ ಭಾಗ.......
ಮತ್ತೆ ಮಸ್ಕತ್ ನಿಂದ ಫೋನ್ ಬಂತು,
ಇಲ್ಲಿ ಎಲ್ಲ ಪ್ರಕ್ರಿಯೆ ಮುಗಿದು ದೇಹವನ್ನು ಕಳುಹಿಸುವುದಕ್ಕೆ, ಇನ್ನು ನಾಲ್ಕೈದು ದಿನ ಬೇಕಾಗಬಹುದು. ಅಂತ ಹೇಳಿದರು.
ಸಾರ್, ನನ್ನ ಮಕ್ಕಳ ಭವಿಷ್ಯದ ದೃಷ್ಟಿಯಿಂದ ನಾನೊಂದು ನಿರ್ಧಾರಕ್ಕೆ ಬಂದಿದ್ದೀನಿ., ಅವರ ಅಂತ್ಯಕ್ರಿಯೆಯನ್ನು ಅಲ್ಲಿಯೇ ಮಾಡಿ, ಅವರ ಅಸ್ಥಿಯನ್ನ ಮಾತ್ರ ಕಳುಹಿಸಿಕೊಡಿ, ..... ದೇಹ ತರುವುದಕ್ಕೆ, ಎಷ್ಟು ಹಣ ಖರ್ಚಾಗುತ್ತೋ ಆ ಹಣವನ್ನು ನನ್ನ ಮಕ್ಕಳ ಹೆಸರಿನಲ್ಲಿ ಫಿಕ್ಸ್ ಡ್ ಡಿಪಾಸಿಟ್ ಮಾಡಿಬಿಡಿ ಸಾರ್. ಎಂದು ಹೇಳೀ ಜೋರಾಗಿ ಅಳುವುದಕ್ಕೆ ಶುರುಮಾಡಿದಳು.
ಆ ನಿರ್ಧಾರವನ್ನು ಕೇಳಿ ಎಲ್ಲರೂ ಆಶ್ಚರ್ಯಕ್ಕೊಳಗಾದರು, ಯಾರ ಬಾಯಿಯಿಂದಲೂ ಮಾತು ಬರಲಿಲ್ಲ....
ಇವಳಿಗೇನು ಬಂತು ಇಂತಹ ಬುದ್ದಿ, ಕನಿಷ್ಟ ಪಕ್ಷ ಗಂಡನ ಮುಖವನ್ನ ಕೊನೇ ಸಾರಿ ನೋಡಬೇಕು ಅನ್ನೋ ಭಾವನೆ ಇಲ್ಲವಲ್ಲ, ಎಂತಹ ಕಠಿಣ ಮನಸ್ಸು ದೇವರೇ ಅಂತ ಅಲ್ಲಿರುವ ಜನ ಮಾತನಾಡತೊಡಗಿದರು. ಆದರೆ, ಮಕ್ಕಳ ಭವಿಷ್ಯದ ದೃಷ್ಟಿ ಹಾಗು ವಯಸ್ಸಾದ ಅತ್ತೆಯ ಪರಿಸ್ಥಿತಿ ಯನ್ನು ಮನಸ್ಸಲ್ಲಿಟ್ಟುಕೊಂಡು ಆಲೋಚನೆ ಮಾಡಿದ್ದು ಯಾರಿಗೂ ಅರ್ಥವಾಗಲಿಲ್ಲ.
ಕೆಲವರು, ನೋಡಮ್ಮ ನಿನ್ನ ನಿರ್ಧಾರ ತಪ್ಪು ನಿನ್ನ ದೃಷ್ಟಿಯಿಂದ ಸರಿ ಇರಬಹುದು, ಆದರೆ ಇಲ್ಲಿ ತಾಯಿ, ಮಕ್ಕಳು, ಬಂಧು ಬಳಗ, ಸ್ನೇಹಿತರು ಇವರೆಲ್ಲರಿಗೂ ಮುಖವನ್ನ ಕೊನೇ ಸಾರಿ ತೋರಿಸಿ ಇಲ್ಲಿಯೇ ಅಂತ್ಯಕ್ರಿಯೆ ಮಾಡುವುದು ಒಳ್ಳೆಯದು ಅಂತ ವಿವರಿಸಿದರು...
ಆದರೆ ಮೀನಾಕ್ಷಿ ಮಾತ್ರ ತನ್ನ ನಿರ್ಧಾರ ಬದಲಿಸಲಿಲ್ಲ.
*****
ಒಂದು ದಿನ ಕಳೆಯಿತು,
ಮಸ್ಕತ್ ನಲ್ಲಿ, ಜನರಿಂದ ಜನರಿಗೆ ಈ ವಿಷಯ ತಿಳಿಯುತ್ತ ಹೋಯಿತು. ಕೆಲವರು ಒಳ್ಳೆ ನಿರ್ಧಾರ ಅಂತ ಅಂದುಕೊಂಡರೆ, ಇನ್ನೂ ಕೆಲವರಿಗೆ ಹೆಂಡತಿಗೆ ಗಂಡನ ದೇಹ ಬೇಡವಂತೆ ಹಣ ಮಾತ್ರ ಬೇಕು ಎನ್ನುವ ನೆಗಟೀವ್ ವ್ಯಾಖ್ಯಾನ ಮಾಡತೊಡಗಿದರು. ಕೆಲ ಸಮಾಜ ಸೇವೆಯಲ್ಲಿ ತೊಡಗಿದ್ದ ಜನರಿಗೂ ಸಹ ಈ ವಿಷಯ ಗೊತ್ತಾಯಿತು. ಇಂತಹ ಸಂಧಿಗ್ದ ಪರಿಸ್ಥಿತಿಯಲ್ಲಿ ಸುಮಾರು ಜನರಿಗೆ ಸಹಾಯ ಹಸ್ತ ಚಾಚಿದ್ದ ಸಮಾಜ ಸೇವಕರಾದ ನಾಗರಾಜ್ ಶೆಟ್ಟರು, ಶಶಿಕಾಂತ್ ಶೆಟ್ಟರು ಮತ್ತಿತರಿಗೆ ವಿಷಯ ಗೊತ್ತಾಗಿ, ಇದೇನಿದು ಈ ಕೇಸ್ ವಿಚಿತ್ರ ವಾಗಿದೆಯಲ್ಲ ಅಂತ, ಸರಿ ಇದರ ಮೂಲ ಕಾರಣ ತಿಳಿದುಕೊಳ್ಳೋಣ ಹಾಗೂ ಸತ್ಯಾಸತ್ಯತೆ ತಿಳಿಯಲು ಅಂತ ಊರಿನಲ್ಲಿ ತಮ್ಮ ಪರಿಚಯಸ್ತರ ಮುಖಾಂತರ ವಿಚಾರಿಸಲು ಹೇಳಿದರು. ಸಂಜೆ ಒಳಗೆ, ಊರಿನಿಂದ ಸಂಪೂರ್ಣ ಮಾಹಿತಿ ಬಂತು. ಅವರಿಗೆ ಯಾವುದೇ ಆಸ್ತಿ, ಹೊಲ ಗದ್ದೆ, ಇಲ್ಲ, ಇಬ್ಬರು ಹೆಣ್ಣು ಮಕ್ಕಳು, ವಯಸ್ಸಾದ ತಾಯಿ ಮಾತ್ರ ಇದ್ದಾರೆ, ಮನೆಗೆ ಆಧಾರವಾಗಿದ್ದದ್ದು ಮಾತ್ರ ರಮೇಶಣ್ಣ ಎನ್ನುವ ಸತ್ಯ ತಿಳಿಯಿತು. ಮುಂದೆ ಏನು ಮಾಡಬೇಕು ಎನ್ನುವ ಯೋಜನೆಯನ್ನು ರೂಪಿಸಿದರು, ಆಗಲೇ ಎರಡು ದಿನ ಕಳೆದಿತ್ತು, ಮುಂದಿನ ದಿನ, ಸ್ಥಳೀಯ ಪೋಲೀಸರಿಂದ ದೇಹ ದೊರೆಯುವುದಲಿತ್ತು, ತಕ್ಷಣ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಅಂದೇ ಧೀರ್ಘವಾಗಿ ಆಲೋಚಿಸ ತೊಡಗಿದರು.
ಕಂಪನಿಯವರು ಬೇರೆ ರೀತಿಯಲ್ಲಿ ಆಲೋಚಿಸತೊಡಗಿದ್ದರು, ಮನೆಯವರ ನಿರ್ಧಾರಕ್ಕೆ ನಾವು ಸಹಮತ ಕೊಡುವುದಿಕ್ಕಾಗುವುದಿಲ್ಲ. ಅವರ ಮನೆಯವರು ಸೂಚಿಸಿದವರಿಗೆ ದೇಹವನ್ನು ಹಸ್ತಾಂತರಿಸಲು ನಿರ್ಧರಿಸಿದರು.
*****
ಸ್ನೇಹಿತರು ಮತ್ತು ಬಂಧುಗಳಿಗೆ ಮೀನಾಕ್ಷಿಯ ನಿರ್ಧಾರ ಅಷ್ಟೊಂದು ಸರಿ ಬರಲಿಲ್ಲ. ಕೆಲವರು ನೇರವಾಗಿ ಹೇಳಿದರೆ, ಇನ್ನು ಕೆಲವರು ಮೆತ್ತಗೆ ಗೊಣಗಾಡುತಿದ್ದರು. ಹೀಗೆ ಮಾತಿಗೆ ಮಾತು ಬೆಳೀತ ಇತ್ತು, ಜನರ ಮಾತು ಕೇಳಿ ಬೇಸರದಿಂದ ಮನೆಯಿಂದ ಹೊರಗೆ ಬಂದು, ನೋಡೀ, ನನ್ನ ಕಷ್ಟ ಅರ್ಥ ಮಾಡಿಕೊಂಡಿದ್ದಿದ್ದರೆ, ನೀವೆಲ್ಲ ಹೀಗೆ ಬಾಯಿಗೆ ಬಂದಂಗೆ ಮಾತಾಡ್ತಾಯಿರಲಿಲ್ಲ. ನಿಮ್ಮಲ್ಲಿ ಯಾರಾದರು, ನನ್ನ ಅತ್ತೆ, ನನ್ನ ಮಕ್ಕಳನ್ನ ನೋಡಿಕೊಂಡು, ಅವರನ್ನು ಚೆನ್ನಾಗಿ ಓದಿಸಿ, ಒಳ್ಳೆ ಮನೆತನದ ಸಂಭಂದ ಹುಡುಕಿ ಅವರಿಗೆ ಮದುವೆ ಮಾಡಿಕೊಡ್ತೀನಿ  ಅಂತ ಯಾರಾದರು ಮುಂದೆ ಬಂದರೆ, ನಾನು ಅವರ ಮನೆ ಹೊಲ ಗದ್ದೆ ಕೆಲಸ ಮಾಡಿಕೊಂಡು ಜೀತದ ಆಳಾಗಿ ದುಡಿತೀನಿ.
ಯಾರಾದರು ನೋಡ್ಕೋತೀರ................ ಹಾಗಿದ್ರೆ ಹೇಳಿ...
ಹೀಗೆ ರಪ್ಪಂತ ಮುಖದ ಮೇಲೆ ಹೊಡೆದಂತೆ, ಮಾತಾಡಿದ ಮೀನಾಕ್ಷಿಯನ್ನ ಕಂಡ ಜನ ಸುಮ್ಮನಾದರು. ಹಳ್ಳಿ ಜನ, ಬಡತನ ದಿಂದ ಬಳಲಿ ಬೆಂಡಾದವರು, ಯಾರೂ ಸಹಾಯ ಮಾಡುವ ಪರಿಸ್ಥಿತಿಯಲ್ಲಿಲ್ಲದವರು, ಯಾವುದೇ ಉತ್ತರ ಕೊಡಲು ಸಾಧ್ಯವಿರಲಿಲ್ಲ. ಕೆಲವರು, ಹುಟ್ಟಿದ ದೇವರು ಹುಲ್ಲು ತಿನ್ನಿಸಲ್ಲ, ಹೇಗಾದರು ಹಾಗೇ ಆಗುತ್ತೆ, ಇಷ್ಟೊಂದು ಯೋಚನೆ ಮಾಡೋ ಪರಿಸ್ಥಿತಿ ಯಾಕಮ್ಮ ಎಂದು ಕೇಳಿದರೆ..............
ನಾನು ಕಷ್ಟವನ್ನ ಇವತ್ತು ನೋಡ್ತೀಲ್ಲ. ನಮ್ಮ ಅಪ್ಪ ಸತ್ತ ಮೇಲೆ, ನಮ್ಮ ಅಮ್ಮ ನಮ್ಮನ್ನ ಎಷ್ಟು ಕಷ್ಟದಿಂದ ಬೆಳೆಸಿದಾಳೆ. ಓದಿ ವಿದ್ಯಾವಂತೆ ಯಾಗಲೂ ಸಾಧ್ಯವಿರಲಿಲ್ಲ. ಅದೇ ಪರಿಸ್ಥಿತಿ ಇವತ್ತು ನನ್ನ ಮುಂದಿದೆ, ಆ ಕಷ್ಟ ನನ್ನ ಮಕ್ಕಳಿಗೆ ಬೇಡ. ಅವರನ್ನ ಚೆನ್ನಾಗಿ ಓದಿಸಬೇಕು, ವಿದ್ಯಾವಂತರನ್ನಾಗಿ ಮಾಡಿ ಅವರಿಗೆ ಒಂದು ಒಳ್ಳೆಯ ಭವಿಷ್ಯ ರೂಪಿಸ ಬೇಕೆನ್ನುವುದೇ ನನ್ನ ಆಸೆ.........
ಹೀಗೆ ಮಾತಿಗೆ ಮಾತು ಬೆಳಿತಾ ಇತ್ತು, ಆದರೆ, ಭವಿಷ್ಯದ ಬಗ್ಗೆ ಯಾರಿಗೆ ಏನು ಗೊತ್ತು?
*****
ಕಂಪನಿಯ ಸಹದ್ಯೋಗಿಗಳು, ರಮೇಶಣ್ಣ ನ ಅಂತ್ಯಕ್ರಿಯೆ ಮಾಡಲು ಬೇಕಾದ ವ್ಯವಸ್ಥೆ ಮಾಡಿಕೊಳ್ಳತೊಡಗಿದ್ದರು. ಅಂತ್ಯಕ್ರಿಯೆಯ ನಂತರ, ಅಸ್ಥಿ ಯನ್ನ ಕಳಿಸಿಕೊಡುವುದಕ್ಕೆ, ಒಬ್ಬರನ್ನು ಸಜ್ಜು ಗೊಳಿಸಿದರು. ಈ ಪ್ರಕ್ರಿಯೆಯಲ್ಲಿ ತೊಡಗಿರುವಾಗ, ಯಾರೋ ಒಬ್ಬರು, ಏರ್ ಪೋರ್ಟ್ ನಲ್ಲಿ  ಏನಾದರು ಪ್ರಾಬ್ಲಮ್ ಆದರೆ ಏನ್ ಮಾಡ್ತೀರ? ತಗೊಂಡು ಹೋದೋರು ಸಿಕ್ಕಿ ಹಾಕಿಕೊಳ್ತಾರೆ, ವಿಚಾರಣೆ ಅದೂ ಇದೂ ಅಂತ ಸಮಯ ಹಾಳಾಗುತ್ತೆ,  ರಿಸ್ಕ್ ಯಾಕೆ ತೆಗೆದುಕೊಳ್ತೀರ, ಇದನ್ನೆಲ್ಲ ಮಾಡಬೇಡಿ ಸುಮ್ಮನೆ ಬಾಡಿನ ಕಳುಹಿಸಿಬಿಡಿ. ಅಂತ ಹೆದರಿಸಿದ್ರೆ, ಮತ್ತಿತರು ಸಂಭವನೀಯ ಸಾಧ್ಯತೆಗಳು ಹಾಗೂ ಮುಂಜಾಗ್ರತೆ ಕ್ರಮಗಳ ಬಗ್ಗೆ ಯೋಚಿಸ ತೊಡಗಿದರು.
*****
ಊರಲ್ಲಿನ ರಾಜಕೀಯ ಮುಖಂಡರುಗಳು, ಮೀನಾಕ್ಷಿ ಮನೆಗೆ ಬಂದು, ವಿಷಯ ಗೊತ್ತಾಯಿತು, ನೀನೇನು ಯೋಚಿಸಬೇಡ, ನಾವೆಲ್ಲ ಇದ್ದೀವಿ, ಸರ್ಕಾರದಿಂದ ನಿನಗೆ ಸಿಗಬೇಕಾದ ಸೌಲಭ್ಯ ದೊರಕಿಸಿಕೊಡ್ತೀವಿ. ಎಲ್ಲರೂ ಹೇಳಿದಂತೆ ಮಾಡು. ಸುಮ್ಮನೆ ಎಲ್ಲರ ವಿರೋಧ ಯಾಕೆ ಕಟ್ಟಿಕೊಳ್ತೀಯಾ....
ಅಣ್ಣಾ ನೀವು ಹೇಳಿದಂಗೆ ಆಗಲಿ,ಆದರೆ ಈ ನಮ್ಮ ಹಳ್ಳಿಗೆ, ಯಾವ ಸರ್ಕಾರಿ ಸೌಲಭ್ಯ ಸರಿಯಾಗಿ ಸಿಗ್ತಿದೆ ಹೇಳಿ?, ಕುಡಿಯುವುದಿಕ್ಕೆ ಸರಿಯಾಗಿ ನೀರು ಸಿಗ್ತಿಲ್ಲ, ಈ ನಮ್ಮ ಕಾಲೋನಿಗೆ ಈವತ್ತಿನವರೆಗೂ ರಸ್ತೆ ಹಾಕ್ಸಿಲ್ಲ, ವಿದ್ಯುತ್ ಸರಿಯಾಗಿ ಇರಲ್ಲ, ರೇಶನ್ ಕಾರ್ಡ್ ನಿಂದ ಸಾಮಾನು ತರೋದಿಕ್ಕೆ, ನಾಲ್ಕು ಕಿ.ಮಿ. ದೂರ ಹೋಗಿಬರಬೇಕು, ಅದೂ ಅಲ್ಲದೆ ಅಲ್ಲಿ ದೊರೆಯುವ ಸಾಮಾನುಗಳ ಗುಣಮಟ್ಟ ಹೇಗಿದೆ ಅಂತ ನಿಮಗೆ ಗೊತ್ತ? ಮಕ್ಕಳು ಶಾಲೆಗೆ ಹೋಗಿ ಬರೋದಿಕ್ಕೆ ಯಾವ ಬಸ್ಸು ಸಮಯಕ್ಕೆ ಸರಿಯಾಗಿ ಬರುತ್ತೆ ಹೇಳಿ? ಬರೀ ಚುನಾವಣೆ ಭರವಸೆ ಕೊಡೋದೆ ಆಯಿತು, ಕೆಲಸ ಮಾತ್ರ ಮಾಡಲ್ಲ. ಸರಿ, ಅವರು ಹೇಗೋ ಶಾಲೆಗೆ ಹೋಗಿ ಬಂದು ಮಾಡಿ, ಸ್ವಲ್ಪ ತಮ್ಮ ಬುದ್ದಿ ಮಟ್ಟಕ್ಕೆ ತಕ್ಕಂತೆ ಮಾರ್ಕ್ಸ್ ತೆಗೆದು ಕೊಂಡರೆ, ಅವರಿಗೆ ಒಳ್ಳೆ ಕಾಲೇಜಲ್ಲಿ ಸೀಟ್ ಯಾರು ಕೊಡ್ತಾರೆ, ಆ ಕಾಲೇಜಿನ ಡೊನೇಶನ್, ಫೀಜ್ ಯಾರು ಕೊಡ್ತಾರೆ. ಅವರ ವಿದ್ಯಭ್ಯಾಸ ಮುಗಿದ ಮೇಲೆ ಅವರಿಗೆ ಒಂದು ಸರ್ಕಾರಿ ಉದ್ಯೋಗ ಕೊಡಿಸುವುದಕ್ಕೆ ನಿಮ್ಮ ಕೈಲಿ ಆಗುತ್ತ? ಇದೆಲ್ಲದನ್ನ ಮಾಡಿ ಕೊಡ್ತೀನಿ ಅಂತ ನನಗೆ ಒಂದು ಕಾಗದ ಬರೆದು ಕೊಡಿ, ನಾನು ಇವರೆಲ್ಲ ಮಾತಿಗೆ ಒಪ್ಪಿಕೊಳ್ತೀನಿ.
ಅಯ್ಯೋ ಸರ್ಕಾರದ ಕೆಲಸ ನೀನು ಅಂದುಕೊಂಡಂಗೆ ಆಗಲ್ಲಮ್ಮ, ಈದಿನ ನೀನಿ ಕೇಳ್ತೀಯ, ನಾಳೆ ಇನ್ನೊಬ್ಬರು ಕೇಳ್ತಾರೆ, ಎಲ್ಲರಿಗೂ ಇದೇ ರೀತಿ ಮಾಡಿಕೊಡೋದಿಕ್ಕೆ ಆಗುತ್ತಾ.....
ನಿನಗೆಲ್ಲ ಅರ್ಥ ಆಗಲ್ಲ, ಸರಿ ನಿನ್ನಿಷ್ಟ ನೀನೇನಾದರು ಮಾಡ್ಕೋ, ಈ ಹೆಣ್ನುಮಗಳು ಬಹಳ ಹುಷಾರಿದ್ದಾಳೆ, ಅಂತ ಅಲ್ಲಿಂದ ಕಾಲ್ಕಿತ್ತರು.
ಇತ್ತ ಮಸ್ಕತ್ ನಲ್ಲಿ, ಸಮಾಜ ಸೇವಕರಾದ ನಾಗರಾಜ್ ಶೆಟ್ಟಿ ಶಶಿಕಾಂತ್ ಶೆಟ್ಟಿ ಮತ್ತಿತರು ಮೃತ ರಮೇಶಣ್ಣ ಕಂಪನಿಯ ಸ್ನೇಹಿತರನ್ನು ಸಂಪರ್ಕಿಸಿ, ನೋಡಿ ನಮಗೆ ರಮೇಶಣ್ಣ ಅವರ ಮನೆ ಪರಿಸ್ಥಿತಿ ಬಗ್ಗೆ ಅರಿವಿದೆ. ಈಗ ನೀವು ಮಾಡಬೇಕಿರುವ ಅಂತ್ಯಕ್ರಿಯೆಯ ಕಾರ್ಯಕ್ರಮ ಹಾಗೂ ಅವರ ಅಸ್ಥಿಯನ್ನು ಕಳುಹಿಸಿ ಕೊಡುವ ಜವಬ್ದಾರಿಯನ್ನು ನಮಗೆ ಕೊಡಿ, ಮುಂದಿನ ಕಾರ್ಯಕ್ರಮವನ್ನು ನಾವು ಮಾಡ್ತೀವಿ ಎಂದು ಅವರನ್ನು ಒಪ್ಪಿಸಿದರು.
***
ಮಾರನೇದಿನ, ಸ್ಥಳೀಯ ಪೋಲೀಸರಿಂದ ಬಾಡಿ ಕ್ಲಿಯರೆನ್ಸ್ ಸಿಗುತ್ತದೆ, ಸಂಜೆಯ ವೇಳೆಗೆ ದೇಹವನ್ನು ಹಸ್ತಾಂತರಿಸಲಾಗುತ್ತದೆ.
ನಾಳೆ ಇಲ್ಲಿ ಅಂತ್ಯಕ್ರಿಯೆ ಮುಗಿಸಿ ಆದಷ್ಟು ಬೇಗ ಅವರ ಅಸ್ಥಿಯನ್ನು ಕಳುಹಿಸಿ ಕೊಡುತ್ತೇವೆ, ಎರಡು ದಿನ ಕಳೆದ ನಂತರ ಊರಿಗೆ ಪಾರ್ಸೆಲ್ ತೆಗೆದುಕೊಂಡು ಒಬ್ಬರು ಬರುತ್ತಾರೆ ಎಂದು ಊರಿಗೆ ಫೋನ್ ಮಾಡಿ ವಿಷಯ ತಿಳಿಸುತ್ತಾರೆ.
***
ಅದರಂತೆ, ಅಂದು ಪಾರ್ಸೆಲ್ ಗಾಗಿ ಎಲ್ಲರೂ ಕಾಯುತ್ತಿರುತ್ತಾರೆ, ಮುಂಚೆ ತಿಳಿಸಿದಂತೆ ಒಬ್ಬರು ಪಾರ್ಸೆಲ್ ತೆಗೆದು ಕೊಂಡು ಬರುತ್ತಾರೆ. ಅವರು ಬಂದಿಳಿಯುತಿದ್ದಂತೆ, ಮನೆ ಮಂದಿಯೆಲ್ಲ ಜೋರಾಗಿ ಬಾಯಿ ಬಡಿದುಕೊಂಡು ಅಳುತ್ತಾರೆ. ಮನೆ ಮುಂದೆ ನೋಡು ನೋಡುತಿದ್ದಂತೆ ಸುತ್ತಮುತ್ತಲಿನ ಜನರೆಲ್ಲ ಸೇರುತ್ತಾರೆ. ಮೀನಾಕ್ಷಿ ಕೈಗೆ ಪಾರ್ಸೆಲ್ ಕೊಡುತ್ತಾರೆ. ಜೋರಾಗಿ ಅಳುತಿದ್ದ ಆಕೆ ಯನ್ನು ಸಮಾಧಾನ ಮಾಡುತಿದ್ದ ಜನರಲ್ಲೊಬ್ಬರು ಪಾರ್ಸೆಲ್ ತೆರೆಯುತ್ತಾರೆ. ಅದರೊಳಗಿದ್ದ ಬಟ್ಟೆ ಯಿಂದ ಮುಚ್ಚಿದ್ದ ತಾಮ್ರದ ಬಿಂದಿಗೆಯನ್ನು ತೆಗೆದು, ಅದನ್ನು ಮೀನಾಕ್ಷಿ ಕೈಗೆ ಕೊಡುತ್ತಾರೆ. ಹಗುರವಾಗಿದ್ದ ಬಿಂದಿಗೆಯನ್ನು ಮುಟ್ಟಿದ ಮೀನಾಕ್ಷಿ ತನ್ನ ಅಳು ನಿಲ್ಲಿಸುತ್ತಾಳೆ. ಬಟ್ಟೆಯನ್ನು ತೆಗೆದು ನೋಡಿದರೆ, ಒಳಗೆ ಖಾಲಿ ಖಾಲಿ, ಅದರಲ್ಲೊಂದು ಪತ್ರ......
ಏನಿದು, ಅಸ್ಥಿ ಬರುತ್ತದೆ ಎಂದು ಹೇಳಿ, ಇದೇನಿದು ಖಾಲಿ ಇದೆ? ಎಲ್ಲರೂ ಆಶ್ಚರ್ಯದಿಂದ ನೋಡುತ್ತಾರೆ. ಅಳುತಿದ್ದ ಜನ ಸುಮ್ಮನಾಗುತ್ತಾರೆ. ಒಬ್ಬರು ಆ ಪತ್ರವನ್ನು ತೆಗೆದು ಓದುತ್ತಾರೆ.
ಸಹೋದರಿ ಮೀನಾಕ್ಷೀ ಯವರಿಗೆ ವಂದನೆಗಳು,
ನಿಮ್ಮ ಪತಿಯ ಅಗಲಿಕೆಗೆ ನಮ್ಮ ವಿಷಾದವಿದೆ. ಅವರ ಅಗಲಿಕೆ ನಿಮ್ಮ ಜೀವನದಲ್ಲಿ ತುಂಬಲಾರದ ನಷ್ಟ, ನೀವಿರುವ ಪರಿಸ್ಥಿತಿ, ನಿಮ್ಮ ಜವಬ್ದಾರಿ ಇದೆಲ್ಲವನ್ನು ಯೋಚಿಸಿ ಇಂತಹ ಪರಿಸ್ಥಿತಿಯಲ್ಲಿ, ಧೈರ್ಯಗೆಡದೆ ನೀವು ತೆಗೆದುಕೊಂಡ ನಿರ್ಧಾರಕ್ಕೆ ನಿಮ್ಮ ಎದೆಗಾರಿಕೆಗೆಯನ್ನು ಮೆಚ್ಚಲೇಬೇಕು. ಪ್ರತಿಯೊಬ್ಬರ ಮನೆಯಲ್ಲೂ ಒಂದಲ್ಲ ಒಂದು ಸಂಧಿಗ್ದ ಪರಿಸ್ಥಿತಿ ಬಂದೇ ಬರುತ್ತದೆ, ಆ ಸಮಯ ಸಂಧರ್ಭ ನೋಡಿ ಆಲೋಚನೆ ಮಾಡಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದೇ ಬುದ್ದಿವಂತರ ಜಾಣತನ.
ಅಸಹಾಯಕರಿಗೆ ಯಾರಾದರು ಸಹಾಯ ಮಾಡಲಿ ಎಂದು ದೇವರು ಯಾರಾದರೊಬ್ಬರನ್ನು ಸೃಷ್ಟಿ ಮಾಡಿಯೇ ಮಾಡಿರುತ್ತಾನೆ. ಭವಿಷ್ಯದ ಬಗ್ಗೆ ಹೆದರಬೇಕಾದ ಅಗತ್ಯವಿಲ್ಲ.
ಯಾವುದಾದರು ಒಂದು ರೂಪದಲ್ಲಿ ಸಹಾಯ ಬಂದೇ ಬರುತ್ತದೆ. ನಿಮಗೆ ಸಹಾಯ ಮಾಡಲು ನೂರಾರು ಜನ ಮುಂದೆ ಬಂದಿದ್ದಾರೆ, ನಾವು ಕೇವಲ ಮುಂದಾಳತ್ವ ವಹಿಸಿದ್ದೇವೆ ಅಷ್ಟೇ. ನಿಮ್ಮ ಮಕ್ಕಳನ್ನು ಅವರ ವಿದ್ಯಭ್ಯಾಸ ಮುಗಿಯುವವರೆಗೆ ಉಚಿತವಾಗಿ ಓದಿಸಲು, ಕೆಲ ಸಂಸ್ಥೆಗಳು ಮುಂದೆ ಬಂದಿವೆ. ಅವರು ನಿಮ್ಮ ಮಕ್ಕಳಿಗೆ ಉತ್ತಮ ವಿದ್ಯಭ್ಯಾಸ ನೀಡಿ ಮುಂದಿನ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಪತಿಯ ಕಂಪನಿಯಿಂದ ಬರುವ ಹಣ ,ಇನ್ಸುರೆನ್ಸ್ ಹಣ, ಅವರ ಸ್ನೇಹಿತರು, ಸಹದ್ಯೋಗಿಗಳು, ಮತ್ತು ನಮ್ಮ ಸಮಾಜ ಸೇವೆ ಸಂಘಟನೆಯಿಂದ ಸಂಗ್ರಹಿಸಿದ ಹಣವನ್ನು ನಿಮ್ಮ ಅಕೌಂಟಿಗೆ ಕಳುಹಿಸಿಕೊಡುತ್ತೇವೆ. ಇದೂ ಅಲ್ಲದೆ, ಆಸ್ಪತ್ರೆ, ಚಿಕಿತ್ಸೆ ಅಥವ ಬೇರೆ ಏನಾದರು ಸಹಾಯ ಬೇಕಿದ್ದರೆ, ಈ ಪಾರ್ಸೆಲ್ ತಂದಿರುವ ವ್ಯಕ್ತಿಯನ್ನು ಸಂಪರ್ಕಿಸಿ, ನಾವೆಲ್ಲರೂ ನಿಮಗೆ ಸಹಾಯ ಮಾಡುತ್ತೇವೆ. ನೀವು ಯಾವುದೇ ಚಿಂತೆ ಮಾಡುವ ಅಗತ್ಯವಿಲ್ಲ.
ಇನ್ನು, ನಿಮ್ಮ ಪತಿಯ ದೇಹವನ್ನು ನಾವು ಅಲ್ಲಿ ಅಂತ್ಯಕ್ರಿಯೆ ಮಾಡಲಿಲ್ಲ. ಇನ್ನುಕೆಲವೇ ನಿಮಿಷಗಳಲ್ಲಿ ಅವರ ದೇಹ ಬರುತ್ತದೆ. ನಿಮ್ಮ ಬಂಧು ಭಾಂದವರು, ಸ್ನೇಹಿತರು, ಹಿತೈಷಿಗಳು, ಕೊನೆ ಸಾರಿ ನೀವೆಲ್ಲರೂ ಅವರ ಮುಖವನ್ನು ನೋಡಿ, ನಿಮ್ಮ ಸಂಪ್ರದಾಯದ ಪ್ರಕಾರ ಪೂಜೆ ಗಳನ್ನು ಮಾಡಿ ಅವರನ್ನು ಸಂತೋಷದಿಂದ ಕಳುಹಿಸಿ ಕೊಡಿ. ಅವರ ಆತ್ಮಕ್ಕೆ ಶಾಂತಿ ಸಿಗಬಹುದು.
ನಾವ್ಯಾರೋ ಗುರುತು ಪರಿಚಯವಿಲ್ಲದವರು ಅವರ ಅಂತ್ಯಕ್ರಿಯೆ ಮಾಡಿದರೆ ಅವರ ಆತ್ಮಕ್ಕೆ ಶಾಂತಿ ಸಿಗುವುದಿಲ್ಲ ಎನ್ನುವುದು ನಮ್ಮ ಭಾವನೆ. ಹೀಗಾಗಿ ಅವರ ದೇಹವನ್ನು ನಿಮಗೆ ಕಳುಹಿಸುತಿದ್ದೇವೆ. ಅದಕ್ಕೆ ತಗಲುವ ವೆಚ್ಚವನ್ನು ನಾವೆಲ್ಲ ಭರಿಸಿದ್ದೇವೆ. ಈಗ ಮುಂದೆ ಆಗಬೇಕಿರುವ ಕಾರ್ಯದ ಬಗ್ಗೆ ತಾವೆಲ್ಲ ಗಮನವಹಿಸಿತ್ತೀರೆಂದು ನಾವು ಭಾವಿಸುತ್ತೇವೆ.
ಎಲ್ಲರಿಗೂ ಒಳ್ಳೆಯದಾಗಲಿ
ಓಂ ಶಾಂತಿ.
ಇಂತಿ.
ನಾಗರಾಜ್ ಶೆಟ್ಟಿ, ಶಶಿಕಾಂತ್ ಶೆಟ್ಟಿ ಮತ್ತು ಸ್ನೇಹಿತರು.
*****
ಪತ್ರ  ಓದಿ, ಮೀನಾಕ್ಷೀ ಕಣ್ಣಲ್ಲಿ ದುಖಃದ ಕಟ್ಟೆ ಒಡೆದು ನೀರು ಬಳ ಬಳನೆ ಹರಿಯಿತು........
ತನ್ನಕುಟುಂಬದ ಬಗ್ಗೆ, ಅದೂ ಸಾವಿರಾರು ಕಿಲೋ ಮೀಟರ್ ದೂರದಲ್ಲಿ ಕೆಲವರಾದರು ಯೋಚಿಸ್ತಾರಲ್ಲ, ನಮಗೆ ಸಹಾಯ ಮಾಡಬೇಕು ಅಂತ ಪ್ರೇರಣೆ ಯಾಗುತ್ತದೆ ಎಂದರೆ ಅದು ದೈವ ಚಿತ್ತವಲ್ಲದೇ ಮತ್ತೇನು ಅಲ್ಲ. ಅಂದರೆ, ನಾನು ನಿರ್ಧಾರ ತೆಗೆದುಕೊಂಡಿದ್ದು, ಈ ರೀತಿ ಆಲೋಚಿಸಲು, ಹೀಗೇ ಆಗಬೇಕು ಎಂದು ನಡೆದಿದ್ದು, ಇದೂ ಸಹ ದೈವ ಚಿತ್ತವಾ!
ದೇವರೇ, ನೀನು ನಮ್ಮ ಮುಂದೆ ಕಾಣದೆ ಇದ್ದರೂ, ಎಲ್ಲೋ ಮರೆಯಲ್ಲಿ ನಿಂತು, ಒಂದಲ್ಲ ಒಂದು ರೂಪದಲ್ಲಿ ನಮ್ಮೆಲ್ಲರಿಗೂ ಸಹಾಯ ಮಾಡ್ತಾಯಿದ್ದೀಯ. ನೀನು ಇದೀಯ ಅಂತ ಪದೇ ಪದೇ ಸಾಬೀತು ಮಾಡ್ತಯಿದ್ದೀಯ ತಂದೆ. ನಿನಗೆ ನಾನು ಚಿರರುಣಿ ಭಗವಂತ.
ತನಗೆ ಸಹಾಯ ಹಸ್ತ ಚಾಚಿದ ಎಲ್ಲರಿಗೂ ಮತ್ತು ನೈತಿಕ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದಗಳು.  ದೇವರೇ ಇವರಿಗೆಲ್ಲರಿಗೂ ಒಳ್ಳೆಯದಾಗಲಿ. ನಿನ್ನ ಆಶಿರ್ವಾದ, ಕೃಪೆ ಸದಾ ಇವರೆಲ್ಲರ ಮೇಲಿರಲಿ ಭಗವಂತ ಎಂದು ದೇವರನ್ನು ಬೇಡಿಕೊಂಡಳು.
*****
ಸ್ವಲ್ಪ ಹೊತ್ತಿನಲ್ಲಿಯೆ, ವ್ಯಾನ್ ನಲ್ಲಿ ರಮೇಶಣ್ಣನ ದೇಹ ಮನೆ ತಲುಪಿತು.
ಅವರ ಸಂಪ್ರದಾಯದಂತೆ, ಅಂತ್ಯಕ್ರಿಯೆಗೆ ಸಿದ್ದತೆ ನಡೆಯಿತು.
xxxxxx

ಗುರುವಾರ, ಮೇ 16, 2019

ಕಥೆ: ಅಸ್ಥಿ ಭಾಗ-೧


ನೈಜಘಟನೆಯಾದಾರಿತ ಕಥೆ: ಪಿ.ಎಸ್.ರಂಗನಾಥ.
..................................................
ಆಗ ಮಸ್ಕತ್ ನಲ್ಲಿ ರಮದಾನ್ ಮಾಸದ ಈದ್ ರಜೆಯ ಸಮಯ, ಸುಮಾರು ಎಂಟು ದಿನಗಳ ರಜೆ. ಕಂಪನಿಗಳಲ್ಲಿ ಕೆಲಸ ಜಾಸ್ತಿ ಇರುವ ಸಮಯದಲ್ಲಿ, ಆಫೀಸ್ ನ ಕೆಲವರಿಗೆ ವಾರ ಪೂರ್ತಿ ರಜೆ ಕೊಟ್ಟರೆ, ಕಾರ್ಮಿಕರಿಗೆ, ಕಟ್ಟಡ ನಿರ್ಮಾಣ ಕೆಲಸಗಾರರಿಗೆ  ಒಂದು ಅಥವ ಎರಡು ದಿನ ಮಾತ್ರ ರಜೆ, ಉಳಿದ ದಿನಗಳಲ್ಲಿ ಕೆಲಸ.
ಅಂತಹ ಒಂದು ಕಂಪನಿಯಲ್ಲಿ, ರಮೇಶ್ ಎನ್ನುವ ಕೆಲಸಗಾರರೊಬ್ಬರು, ಈದ್ ಹಬ್ಬದ ಎರಡುದಿನ ರಜೆಯ ನಂತರ ಕೆಲಸಕ್ಕೆ ಮರಳಿದ್ದರು. ಆದರೆ ಸಂಜೆ ಕ್ಯಾಂಪ್ ಗೆ ವಾಪಾಸ್ ಬಂದಿರಲಿಲ್ಲ. ವಾರ ಪೂರ್ತಿ ರಜೆ ಇದೆ, ಹಾಗಾಗಿ ಎಲ್ಲೋ ಹೊರಗಡೆ ಹೋಗಿರಬಹುದೆಂದು ಕ್ಯಾಂಪ್ ನಲ್ಲಿರುವ ಇತರೆ ಕೆಲಸಗಾರರು ನಂಬಿದ್ದರು.
ಎರಡು ದಿನವಾದರು ಮರಳಿರಲಿಲ್ಲ.....
ಕಂಪನಿಯ ಸ್ಟೋರ್ ಪಕ್ಕದಲ್ಲಿ, ಒಂದು ರೂಮ್ ಕಾಲಿ ಇತ್ತು. ಕೆಲವರು ಮಧ್ಯಾನದ ವೇಳೆ ನಿದ್ರೆ ಮಾಡುವುದಕ್ಕೆ ಆ ಸ್ಥಳ ವನ್ನು ಉಪಯೋಗಿಸುತಿದ್ದರು.
ಸ್ಟೋರ್ ನಲ್ಲಿ ಕೆಲಸ ಮಾಡುವವರೊಬ್ಬರು, ಆದಿನ ಸ್ಟೋರ್ ಬಾಗಿಲು ತೆಗೆದು ತಮ್ಮ ಕೆಲಸ ಶುರು ಮಾಡಿದ್ದರು. ಸ್ವಲ್ಪ ಹೊತ್ತಿನಲ್ಲಿ, ಇಲ್ಲಿ ಏನೋ ಸಮಸ್ಯೆ ಆಗಿದೆ ಅಂತ ಅವರ ಮನಸ್ಸಿಗೆ ಅನ್ನಿಸಿತು.
ಸ್ಟೋರ್ ಎಲ್ಲ ಚೆಕ್ ಮಾಡಿದರು, ಅಂತದ್ದೇನೂ ಕಾಣಲಿಲ್ಲ. ಪಕ್ಕದ ರೂಮ್ಗೆ ಹೋಗಿ ನೋಡಿದರು.
ರಮೇಶಣ್ಣ ಅಲ್ಲಿ ಮಲಗಿದ್ದರು.
ಯಾಕೆ ಇನ್ನೂ ಎದ್ದಿಲ್ಲ, ಎಂದು ಅವರನ್ನು ಏಳಿಸಲು ಪ್ರಯತ್ನಿಸಿದ"ಅಣ್ಣಾ, ಯಾಕೆ ಏನಾಯ್ತು ಇನ್ನೂ ಮಲಗಿದ್ದೀರಾ? ಹುಷಾರಿಲ್ವ ಏನಾಯ್ತು? ........ ಏನೂ ಉತ್ತರ ಬರಲಿಲ್ಲ.

ಹತ್ತಿರ ಹೋಗಿ, ಅಣ್ಣಾ ಏಳೂ ಏನಾಯ್ತು? ಯಾಕೆ ಇನ್ನೂ ಮಲಗಿದ್ದೀಯಾ, ಅಂತ ಅವರನ್ನು ಮುಟ್ಟಿ ಅಲ್ಲಾಡಿಸಿದ. ಮೈ ತಣ್ಣಗಿತ್ತು. ಅನುಮಾನ ಬಂದು, ಅವರ ಉಸಿರಾಟ ಗಮನಿಸಿದ, ಉಸಿರು ನಿಂತಿತ್ತು, ಎದೆ ಬಡಿತ ಇರಲಿಲ್ಲ, ನಾಡಿ ಹಿಡಿದ, ಪ್ರತಿಕ್ರಿಯೆ ಸಿಗಲಿಲ್ಲ. ರಮೇಶಣ್ಣ ಇನ್ನಿಲ್ಲ ಅಂತ ಮನದಟ್ಟಾಯಿತು.
ತಕ್ಷಣವೇ ಅವರ ಮ್ಯಾನೇಜರ್  ಮತ್ತು ಕಂಪನಿಯ ಇನ್ನುಳಿದವರಿಗೆ ಫೋನ್ ಮಾಡಿ ವಿಷಯ ತಿಳಿಸಿದರು.
ಎಲ್ಲ ಕೆಲಸಗಾರರಿಗೆ  ರಮೇಶಣ್ಣ ಹೋಗಿಬಿಟ್ಟಿದ್ದಾರೆ, ಅವರು ಇನ್ನಿಲ್ಲ....ಎಂದು ಹೇಳಿದ. ಎಲ್ಲರೂ ರೂಮ್ ಒಳಗೆ ಹೋಗಿ ನೋಡಿದರು. ಅವರ ದೇಹ ನೋಡಿ ಎಲ್ಲರೂ ಮರುಗಿದರು, ದುಖಃ ಮಡುಗಟ್ಟಿತು.
****
ರಮೇಶಣ್ಣ, ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಕಾಪುವಿನ ಸಮೀಪ ಹೊಸಕಟ್ಟೆ ಗ್ರಾಮದವರು. ಸುಮಾರು ೭-೮ ವರ್ಷಗಳಿಂದ ಮಸ್ಕತ್ ನ ಆ ಕನ್ಸ್ ಟ್ರಕ್ಷನ್ ಕಂಪನಿಯಲ್ಲಿ ಕೆಲಸ ಮಾಡುತಿದ್ದರು. ಬಿಲ್ಡಿಂಗ್ ಕನ್ಸ್ ಟ್ರಕ್ಷನ್ ಕೆಲಸಕ್ಕೆ ಅಂತ ಸೇರಿ,  ಸರಿಯಾದ ವಿದ್ಯಾಭ್ಯಾಸ ಇಲ್ಲದಿದ್ದರು ಸಹ ಆ ಕಂಪನಿಯ ಫೋರ್ ಮ್ಯಾನ್ ಆಗಿ ದುಡಿಯುವ ಮಟ್ಟಕ್ಕೆ ಬಂದಿದ್ದರು.

ಕಂಪನಿಯ ಎಲ್ಲ ಸಹದ್ಯೋಗಿಗಳೊಂದಿಗೆ ಆತ್ಮೀಯತೆ ಯಿಂದ ಬೆರೆತು ತಮ್ಮ ಜವಬ್ದಾರಿಯನ್ನರಿತು ಉತ್ತಮ ಕೆಲಸ ನಿರ್ವಹಿಸುತಿದ್ದರು. ತಮ್ಮ ಈ ಉತ್ತಮ ನಡವಳಿಕೆಯಿಂದ, ಸಹದ್ಯೋಗಿಗಳ ಪ್ರೀತಿ ವಿಶ್ವಾಸ ಸಂಪಾದಿಸಿದ್ದ ಅವರನ್ನು ಎಲ್ಲರೂ ಪ್ರೀತಿಯಿಂದ ರಮೇಶಣ್ಣ ಎಂದು ಗೌರವ ಕೊಟ್ಟು ಕರೆಯುತಿದ್ದರು. ಅವರ ಈ ಅಕಾಲಿಕ ಮರಣ ಆ ಒಂದು ಕ್ಷಣ ಎಲ್ಲರನ್ನು ದಂಗು ಬಡಿಸಿತ್ತು. ಕೆಲಸಗಾರರ ಕ್ಯಾಂಪ್ ನಲ್ಲಿ ಸ್ಮಶಾನ ಮೌನ ಆವರಿಸಿ, ಅಲ್ಲಿ ಸೇರಿದ್ದ ಜನರೆಲ್ಲರಲ್ಲಿ ದುಖಃ ಮಡುಗಟ್ಟಿತ್ತು. ಕೆಲ ಆತ್ಮೀಯರ ರೋಧನೆ ಮುಗಿಲು ಮುಟ್ಟಿತ್ತು.
****
ಅಷ್ಟರಲ್ಲಿ ಕಂಪನಿಯ ಅಧಿಕಾರಿಗಳು ಅಲ್ಲಿಗೆ ಧಾವಿಸಿದರು. ಮುಂದೆ ಆಗಬೇಕಾದ ಕೆಲಸಗಳ ಕುರಿತು ಚರ್ಚಿಸಿ, ಪೋಲಿಸ್ ಠಾಣೆಗೆ ಮಾಹಿತಿ ತಲುಪಿಸಿದರು. ಊರಿಗೆ ವಿಷಯ ತಿಳಿಸುವ ಮುನ್ನ, ಅವರ ಕುಟುಂಬದಲ್ಲಿ ಯಾರ್ಯಾರಿದ್ದಾರೆ ಎಂದು ಮಾಹಿತಿ ಕಲೆ ಹಾಕಿ ನಂತರ ವಿಷಯ ತಿಳಿಸುವ ಯೋಚನೆ ಮಾಡಿದರು. ಕಂಪನಿಯಲ್ಲಿ ಕೆಲಸ ಮಾಡುತಿದ್ದ ಕೆಲ ಉಡುಪಿ ಮತ್ತು ಮಂಗಳೂರಿನ ಉದ್ಯೋಗಿಗಳಿಗೆ ಕುಟುಂಬದ ಕುರಿತು ಸಂಪೂರ್ಣ ಮಾಹಿತಿಯಿತ್ತು.

ಅವರಲ್ಲಿ ಪ್ರಭಾಕರ್ ಶೆಟ್ಟಿ ಎನ್ನುವವರು ಅಧಿಕಾರಿಗಳಿಗೆ ಮಾಹಿತಿ ನೀಡಿದರು. ರಮೇಶಣ್ಣನಿಗೆ ವಯಸ್ಸಾದ ತಾಯಿ, ಹೆಂಡತಿ ಮತ್ತು ಇಬ್ಬರು ಹೆಣ್ಣು ಮಕ್ಕಳು ಒಟ್ಟಿಗೆ ಒಂದೇ ಮನೆಯಲ್ಲಿ ವಾಸವಿದ್ದರು. ಒಬ್ಬ ತಂಗಿ ಮತ್ತು ಅವರ ಕುಟುಂಬ ಕಾರ್ಕಳ ಸಮೀಪ ವಾಸಿಸುತಿದ್ದರು. ಹತ್ತಿರದ ಬಂಧು ಬಳಗ ಕಾಪು, ಸೂರತ್ಕಲ್ ಸಮೀಪ ಇದ್ದರು. ತಾಯಿ, ಮಡತಿ ಮತ್ತು ಮಕ್ಕಳ ಜವಬ್ದಾರಿಯಿದ್ದಿದ್ದರಿಂದ, ಮನೆ ಕಡೆ ಸಹಜವಾಗಿ ಯಾವಾಗಲು ಯೋಚಿಸುತಿದ್ದರು. ಇದನ್ನೆಲ್ಲ ಅಧಿಕಾರಿಗಳಿಗೆ ಪ್ರಭಾಕರ್ ಶೆಟ್ಟಿಯವರು ವಿವರಿಸುತ್ತಿರುವಾಗ, ಪೋಲಿಸರ ಆಗಮನ ವಾಯಿತು.

ಪೋಲಿಸರು ಸ್ಥಳದ ಮಹಜರ್ ನಡೆಸಿ, ರಮೇಶಣ್ಣರವರ ದೇಹವನ್ನು ಅಂಬುಲೆನ್ಸ್ ನಲ್ಲಿ ಪೋಸ್ಟ್ ಮಾರ್ಟಮ್ ಗೆ ತೆಗೆದು ಕೊಂಡು ಹೋಗಲು ವ್ಯವಸ್ಥೆ ಮಾಡಿ, ತನಿಖೆಯನ್ನು ಪ್ರಾರಂಭಿಸಿದರು, ಕಡೆಯ ಬಾರಿ ಯಾರ ಜತೆ ಮಾತನಾಡಿದರು, ಊರಿನಲ್ಲಿ ಏನಾದರು ಸಮಸ್ಯೆ ಯಿತ್ತಾ ಅಥವ ಇಲ್ಲಿ ಏನಾದರು ತೊಂದರೆಯಿತ್ತಾ ಹೀಗೆ ವಿವಿಧ ಕೋನಗಳಲ್ಲಿ ತಮ್ಮ ತನಿಖೆ ನಡೆಸಿದರು. 
****
ಊರಿನಲ್ಲಿರುವ ಮಡದಿ ಮೀನಾಕ್ಷಿಗೆ ವಿಷಯ ತಿಳಿಸಲು ಕಂಪನಿಯ ಅಧಿಕಾರಿಗಳು ಮುಂದಾದರು, ಪ್ರಭಾಕರ್ ಶೆಟ್ಟಿ ಯವರಿಗೆ ಈ ಜವಬ್ದಾರಿಯನ್ನು ಕೊಡಲಾಯಿತು. ಮೊಬೈಲ್ ನಿಂದ ಕಾಲ್ ಮಾಡಿ, "ಹಲೋ, ನಾನು ಪ್ರಭಾಕರ್, ರಮೇಶಣ್ಣ ನವರ ಕಂಪನಿಯಿಂದ ಫೋನ್ ಮಾಡ್ತಯಿದ್ದೇನೆ ಎಂದು ಹೇಳಿದರು ಅದಕ್ಕೆ ಉತ್ತರವಾಗಿ ಆ ಕಡೆಯಿಂದ "ಹಾಂ!!! ಹೇಳಿ ಅಣ್ಣ, ಹೇಗಿದ್ದೀರ, ಏನ್ ಇಷ್ಟೊತ್ತಿನಲ್ಲಿ ಫೋನ್ ಮಾಡಿದ್ದೀರ ಎಂದು ಕೇಳಿದರು. ಆದರೆ ಗದ್ಗದಿತರಾಗಿದ್ದ ಅವರಿಗೆ ಮಾತನಾಡಲು ಆಗಲಿಲ್ಲ. ಇನ್ನೊಬ್ಬ ಹಿರಿಯರಾದ ಗಣೇಶ್ ಪೂಜಾರಿ ಯವರನ್ನು ಕೇಳಲಾಯಿತು. ಅದಕ್ಕೆ ಅವರು ಒಪ್ಪಿಗೆ ಸೂಚಿಸಿ, ಮಾತನಾಡಲು ಮುಂದಾದರು. "ಅಮ್ಮ ನಾನು ಗಣೇಶ್ ಪೂಜಾರಿ, ಒಂದು ವಿಷಯ ಹೇಳ್ತೀನಿ. ಸ್ವಲ್ಪ ಧೈರ್ಯ ಮಾಡಿಕೊಳ್ಳಿ.
ಯಾಕೆ ಅಣ್ಣ ಏನಾಯ್ತು?
ರಮೇಶಣ್ಣ ನಿಗೆ ರಾತ್ರಿ ಮಲಗಿದ್ದಾಗ ಹಾರ್ಟ್ ಅಟ್ಯಾಕ್ ಆಗಿದೆ. ನಮ್ಮನ್ನೆಲ್ಲ ಬಿಟ್ಟು ಮತ್ತೆ ಇನ್ನೆಂದೂ ಮರಳಿ ಬಾರದಂತ ದೂರದ ಲೋಕಕ್ಕೆ ಹೊರಟು ಹೋಗಿದ್ದಾರೆ.......
ವಿಷಯ ಕೇಳಿ ಮೀನಾಕ್ಷಿ ಕುಸಿದು ಹೋದಳು.
ಕಣ್ಣಿಂದ ನೀರು ಬಳಬಳನೆ ಸುರಿಯುತಿತ್ತು. ಅಮ್ಮನ ಅವಸ್ಥೆ ಕಂಡು, ಮಕ್ಕಳು ಓಡಿ ಬಂದು ಅಮ್ಮಾ ಏನಾಯ್ತು, ಯಾಕೆ ಅಳ್ತಾಯಿದ್ದೀಯ? ಅಪ್ಪ ಫೋನ್ ಮಾಡಿದ್ದಾರ? ಒಂದೇ ಸಮನೆ ಪ್ರಶ್ನೆಗಳ ಸುರಿಮಳೆ. ಅಮ್ಮ ಮಾತನಾಡದೆ ಇದ್ದದ್ದನ್ನು ಕಂಡು ಕೈಯಲ್ಲಿದ್ದ ಫೋನ್ ಅನ್ನು ಹಿಡಿದು "ಅಪ್ಪಾ ಹೇಗಿದ್ದೀರ?".....
ಆ ಕಡೆಯಿಂದ, ಮಗು, ನಾನು ನಿಮ್ಮ ಅಪ್ಪನ ಕಂಪನಿಯಿಂದ ಮಾತನಾಡುತಿದ್ದೇನೆ. ನಿಮ್ಮ ಅಪ್ಪ ಇಲ್ಲ, ತೀರಿಕೊಂಡು ಬಿಟ್ಟಿದ್ದಾರೆ..
ಮಗಳು ವಿಷಯ ತಿಳಿದು ಜೋರಾಗಿ ಅಳಲು ಶುರು ಮಾಡಿದರು.
ಅಮ್ಮ ಮಕ್ಕಳು  ಅಳುವುದನ್ನು ಕೇಳಿ, ಅತ್ತೆ ರಾಜಮ್ಮ ಗಾಬರಿಗೊಂಡು ಓಡಿ ಬಂದು ಸುದ್ದಿ ತಿಳಿದು ಕೊಂಡರು, ಹೀಗೆ ಮನೆಯವರೆಲ್ಲ ಅಳುವ ಶಬ್ದ ಜೋರಾಗಿ, ಸುತ್ತ ಮುತ್ತಲಿನವರೆಲ್ಲ ಓಡೋಡಿ ಬಂದರು. ಸುದ್ದಿ ಎಲ್ಲರಿಗೂ ತಿಳಿದು ಹೋಯಿತು...
ಫೋನ್ ನಲ್ಲಿ ಬರೀ ಅಳುವ ಶಬ್ದ ಕೇಳಿ, ಭಾವುಕರಾದ ಗಣೇಶ್ ಪೂಜಾರಿ ಫೋನ್ ಕಟ್ ಮಾಡಿದರು...
ಮುಂದೆ ಏನು ಮಾಡುವುದು, ಮನೆಯವರನ್ನು ಹೇಗೆ ಸಂಭಾಳಿಸ ಬೇಕು ಎಂದು ಅಧಿಕಾರಿಗಳು ಚರ್ಚೆ ನಡೆಸಿದರು.
****
ಇತ್ತ ಊರಿನಲ್ಲಿ,
ಊರಿನ ಜನ, ಮನೆಗೆ ಬಂದ ನೆಂಟರು, ಹೀಗೆ ಪ್ರತಿಯೊಬ್ಬರು ಸಾಂತ್ವನ ಹೇಳಲಿಕ್ಕೆ ಮನೆಗೆ ಭೇಟಿ ನೀಡುವುದಕ್ಕೆ ಶುರು ಮಾಡಿದರು.
ಎಂತ ಕೆಲಸ ಆಗಿ ಹೋಯ್ತಲ್ಲ ನೋಡಿ, ಇಬ್ಬರು ಹೆಣ್ಣುಮಕ್ಕಳು, ಅವರ ವಿದ್ಯಭ್ಯಾಸ, ಮದುವೆ ಇನ್ನು ಏನೆಲ್ಲ ಇದೆ, ಇಷ್ಟು ಬೇಗ ಇವರನ್ನೆಲ್ಲ ಅನಾಥ ಮಾಡಿ ಹೋಗಿಬಿಟ್ಟನಲ್ಲ
ಈ ಮನೆಯಲ್ಲಿ ದುಡಿಯುವ ಗಂಡಸು ಅಂತ ಇದ್ದವನೊಬ್ಬನೆ. ಅವನೇ ಇಲ್ಲ ಅಂದರೆ, ಇವರ ಸಂಸಾರಕ್ಕೆ ಯಾರು ದಿಕ್ಕು?
ಎಂಥ ದುರ್ವಿಧಿ ಅಂತ ಜನರೆಲ್ಲ ಮಾತನಾಡುತಿದ್ದರು.
ಇನ್ನುಮುಂದೆ ಹೆಂಗೆ, ಏನು ಮಾಡೋದು, ಮಕ್ಕಳ ಭವಿಷ್ಯ ಏನು, ಎಂದು ಮೀನಾಕ್ಷಿ ಯೋಚಿಸುವುದಕ್ಕೆ ಶುರು ಮಾಡಿದಳು. ಮನೆ ಪರಿಸ್ಥಿತಿ ಈಗ ತಾನೆ ಬದಲಾಗುವ ಸ್ಥಿತಿಯಲ್ಲಿತ್ತು, ಅಂತಹುದರಲ್ಲಿ, ಬರಸಿಡಿಲಿನಂತೆ ಈ ಸುದ್ದಿ ಬಂದೆರಗಿತ್ತು.
****
ಅತ್ತ ಮಸ್ಕತ್ ನಲ್ಲಿ,
ಪೋಸ್ಟ್ ಮಾರ್ಟಮ್, ರಾಯಭಾರಿ ಕಛೇರಿಯ ಕೆಲಸ, ಪೋಲೀಸ್ ಕ್ಲಿಯರೆನ್ಸ್ ಮತ್ತಿತರ ಕೆಲಸಗಳಿಗಾಗಿ ಇನ್ನೂ ಎರಡು ಮೂರು ದಿನ ಕಾಯಬೇಕಾಗಿತ್ತು. ಹೀಗಾಗಿ, ದೇಹವನ್ನು ಕಳುಹಿಸಲು ಸಾಧ್ಯವಿರಲಿಲ್ಲ. ಕನಿಷ್ಟ ಏನೆಂದರೂ ಒಂದು ವಾರದ ನಂತರ ದೇಹ ಊರಿಗೆ ತಲುಪುವ ಅಂದಾಜಿತ್ತು.
ಇಲ್ಲಿನ ಪ್ರಕ್ರಿಯೆಗಳ ಕುರಿತು ಮನೆಯವರಿಗೆ ತಿಳಿಸಿಬಿಡೋಣ ಅಂತ ಊರಿಗೆ ಫೋನ್ ಮಾಡಿದರು.
ಮಡದಿ ಮೀನಾಕ್ಷಿಗೆ ಇದೆಲ್ಲವನ್ನು ವಿವರಿಸಿದರು.....
ಸಾರ್ ಒಂದು ವಿಷಯ,
ಏನಮ್ಮ?
ನಾನು ಒಬ್ಬ ಅಸಹಾಯಕಿ, ನನಗಿಬ್ಬರು ಹೆಣ್ಣು ಮಕ್ಕಳು ಮತ್ತು ಅತ್ತೆ.... ನಮ್ಮ ಜೀವನಕ್ಕೆ ದಾರಿ ಅಂತ ಇದ್ದವರೊಬ್ಬರೆ, ಅವರೇ ಇಲ್ಲ ಅಂದ ಮೇಲೆ, ನಮಗೆ ಬದುಕು ಯಾಕೆ ಅಂತ ಅನಿಸುತ್ತದೆ.
ಅಯ್ಯೋ ಯಾಕಮ್ಮ ಯೋಚನೆ ಮಾಡ್ತೀಯ, ನಿನ್ನ ಮಕ್ಕಳ ಭವಿಷ್ಯಕ್ಕೆ ನಾವೆಲ್ಲ ಹಣ ಹೊಂದಿಸಿ ಕಳುಹಿಸ್ತೀವಿ. ಇಂತಹ ಸಮಯದಲ್ಲಿ, ಧೈರ್ಯ ಕಳೆದುಕೊಳ್ಳಬೇಡಿ, ದೇವರು ಇದ್ದಾನೆ ಎಲ್ಲ ಸರಿಹೋಗುತ್ತೆ.
ಎಲ್ಲಿಂದ ಧೈರ್ಯ ಬರುತ್ತೆ ಸಾರ್, ಮುಂದಿನ ಜೀವನವನ್ನ ಊಹಿಸಿಕೊಳ್ಳುವುದಕ್ಕೆ ಕಷ್ಟ ಆಗ್ತಿದೆ. ನಾವಿರುವ ಹಳ್ಳಿಯಲ್ಲಿ, ಏನು ಸಂಪಾದನೆ ಮಾಡಬಹುದು ನಾನು? ಮಕ್ಕಳನ್ನ ಹೇಗೆ ಓದಿಸಲಿ, ಅವರಿಗೆ ಮದುವೆ ಹೇಗೆ ಮಾಡಲಿ, ಸಾರ್ ಒಂದು ಪ್ರಶ್ನೆ, ನಮ್ಮವರು ಊರಿಗೆ ಬರೋದಿಕ್ಕೆ ಟಿಕೆಟ್ ಅಂತ ಸಾವಿರಾರು ರೂಪಾಯಿಯನ್ನ ಖರ್ಚು ಮಾಡುತಿದ್ದರು. ಈಗ ಅವರ ದೇಹ ತರುವುದಕ್ಕೆ, ಎಷ್ಟು ಖರ್ಚಾಗಬಹುದು?
ಲಕ್ಷಗಳ ಮೇಲೆ ಖರ್ಚಾಗುತ್ತದೆ, ಅದಕ್ಕೆ ನೀವೇನು ಯೋಚನೆ ಮಾಡಬೇಡಿ, ಅದನ್ನು ನಾವೆ ವ್ಯವಸ್ಥೆ ಮಾಡಿ ಕಳುಹಿಸ್ತೀವಿ......
ಸರಿ ಮತ್ತೆ ಫೋನ್ ಮಾಡ್ತೀವಿ ಅಂತ ಫೋನ್ ಕಟ್ ಮಾಡಿದರು.
ಮೀನಾಕ್ಷೀಗೆ, ತನ್ನ ಮಕ್ಕಳ ಭವಿಷ್ಯದ ಬಗ್ಗೆ, ಚಿಂತೆ ಹತ್ತಿತು. ಗಂಡು ದಿಕ್ಕಿಲ್ಲದ ಮನೆ, ಅವರದು ಸರ್ಕಾರಿ ಕೆಲಸ ಅಲ್ಲ, ಪೆನ್ಶನ್, ಪಿಂಚಣಿ ಅಂತ ಏನು ಸಿಗಲ್ಲ. ನನಗೂ ಸಹ ಅಂತಹ ದೊಡ್ಡ ವಿದ್ಯೆ ಏನು ಇಲ್ಲ, ಮುಂದೆ ಹೇಗೆ?
ಸಂಜೆಯವರೆಗೂ ಇದೇ ಯೋಚನೆಯಲ್ಲಿ ಕಾಲ ಕಳೆದಿದ್ದಳು.
****
ಮತ್ತೆ ಮಸ್ಕತ್ ನಿಂದ ಫೋನ್ ಬಂತು,
ಇಲ್ಲಿ ಎಲ್ಲ ಪ್ರಕ್ರಿಯೆ ಮುಗಿದು ದೇಹವನ್ನು ಕಳುಹಿಸುವುದಕ್ಕೆ, ಇನ್ನು ನಾಲ್ಕೈದು ದಿನ ಬೇಕಾಗಬಹುದು. ಅಂತ ಹೇಳಿದರು.
ಸಾರ್, ನನ್ನ ಮಕ್ಕಳ ಭವಿಷ್ಯದ ದೃಷ್ಟಿಯಿಂದ ನಾನೊಂದು ನಿರ್ಧಾರಕ್ಕೆ ಬಂದಿದ್ದೀನಿ., ಅವರ ಅಂತ್ಯಕ್ರಿಯೆಯನ್ನು ಅಲ್ಲಿಯೇ ಮಾಡಿ, ಅವರ ಅಸ್ಥಿಯನ್ನ ಮಾತ್ರ ಕಳುಹಿಸಿಕೊಡಿ, ..... ದೇಹ ತರುವುದಕ್ಕೆ, ಎಷ್ಟು ಹಣ ಖರ್ಚಾಗುತ್ತೋ ಆ ಹಣವನ್ನು ನನ್ನ ಮಕ್ಕಳ ಹೆಸರಿನಲ್ಲಿ ಫಿಕ್ಸ್ ಡ್ ಡಿಪಾಸಿಟ್ ಮಾಡಿಬಿಡಿ ಸಾರ್. ಎಂದು ಹೇಳೀ ಜೋರಾಗಿ ಅಳುವುದಕ್ಕೆ ಶುರುಮಾಡಿದಳು.
ಆ ನಿರ್ಧಾರವನ್ನು ಕೇಳಿ ಎಲ್ಲರೂ ಆಶ್ಚರ್ಯಕ್ಕೊಳಗಾದರು, ಯಾರ ಬಾಯಿಯಿಂದಲೂ ಮಾತು ಬರಲಿಲ್ಲ....

ಮುಂದುವರಿಯುವುದು......

Click below headings