ಶನಿವಾರ, ಜುಲೈ 20, 2019

ಅಶೋಕ ಸಿದ್ದಾಪುರ


ಈ ಬಾರಿ ರಜೆಗೆ ಊರಿಗೆ ಹೋಗಿದ್ದಾಗ, ನಮ್ಮ ಊರಿನ ಎಂಟತ್ತು ಕಿ.ಮಿ. ಸಮೀಪದಲ್ಲೆ ಇದ್ದ ಐತಿಹಾಸಿಕ ಸ್ಥಳಕ್ಕೆ ಭೇಟಿ ನೀಡಿದ್ದೆ. ನಮ್ಮ ಸುತ್ತಮುತ್ತಲಿನ ಊರುಗಳು ಸಾವಿರಾರು ವರ್ಷಗಳ ಇತಿಹಾಸವಿರುವುದು ಆಶ್ಚರ್ಯ ವೆನಿಸುತ್ತದೆ.

ನಮ್ಮ ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರೇಕ್ಷಣೀಯ ಹಾಗೂ ಐತಿಹಾಸಿಕ ಸ್ಥಳಗಳಿಗೆ ಕೊರತೆ ಇಲ್ಲ. ಇದಕ್ಕೆ ಒತ್ತು ನೀಡಿರುವ ಸಾಕಷ್ಟು ಐತಿಹಾಸಿಕ ಸ್ಥಳಗಳನ್ನು ನಮ್ಮ ಮೊಳಕಾಲ್ಮುರು ತಾಲ್ಲೂಕಿನಲ್ಲಿ ಕಾಣ ಸಿಗುತ್ತವೆ. ಅದೂ ನಮ್ಮ ಹೋಬಳಿಯಲ್ಲಿ.

ಬೆಂಗಳೂರು-ಬಳ್ಳಾರಿ ರಾಜ್ಯಹೆದ್ದಾರಿಯಲ್ಲಿನ ರಾಂಪುರಕ್ಕಿಂತ ಮುಂಚೆ  ಸಿಗುವುದೇ ಅಶೋಕ ಸಿದ್ದಾಪುರ ಕ್ರಾಸ್. ಹೆದ್ದಾರಿಯಿಂದ 8 ಕಿ.ಮೀ. ದೂರ ಸಾಗಿದರೆ ರಸ್ತೆ ಬಲಭಾಗದಲ್ಲಿ ಅಶೋಕ ಶಾಸನ ಇರುವ ಕಲ್ಲಿನ ಕಟ್ಟಡವನ್ನು ಕಾಣಬಹುದಾಗಿದೆ. ಕ್ರಿ.ಪೂ. 3ನೇ ಶತಮಾನದಲ್ಲಿ ಅಶೋಕ ಮಹಾರಾಜ ಆಡಳಿತ ಅವಧಿಯಲ್ಲಿ ಈ ಸ್ಥಳದಲ್ಲಿ `ಇಸಿಲಾ~ ಪಟ್ಟಣ ಇತ್ತು ಎಂದು ಶಾಸನದಲ್ಲಿ ಉಲ್ಲೇಖಿಸಲಾಗಿದೆ. ಸರ್ ಮಾರ್ಟಿಮರ್ ವೀಲರ್, ಎಚ್.ಎಂ. ಕೃಷ್ಣ ಮುಂತಾದ ಇತಿಹಾಸಕಾರರು ನಡೆಸಿದ ಉತ್ಖನನ ವೇಳೆ ಈ ಸ್ಥಳದಲ್ಲಿ 2500 ವರ್ಷದ ಹಿಂದೆ ಇದ್ದ ಜನವಸತಿ ಪ್ರದೇಶ ಶಿಷ್ಟ ಸಂಸ್ಕೃತಿ ಹೊಂದಿತ್ತು ಎಂದು ತಿಳಿದುಬಂದಿದೆ.

ಬ್ರಹ್ಮಗಿರಿ, ಸಿದ್ದಾಪುರ ಮತ್ತು ಜಟಿಂಗರಾಮೇಶ್ವರ ಸ್ಥಳಗಳಲ್ಲಿ ದೊರೆತ ಅಶೋಕ ಸಮ್ರಾಟನ ಶಾಸನಗಳಿಂದ ಮೌರ್ಯರ ಆಡಳಿತ ಮೈಸೂರಿನವರೆಗೂ ವಿಸ್ತರಿಸಿತ್ತು ಎಂದು ಗೊತ್ತಾಗುತ್ತದೆ.






1884ರಲ್ಲಿ ಮೈಸೂರು ಸರ್ಕಾರದ ಕಾರ್ಯದರ್ಶಿ ಮತ್ತು ಪುರಾತತ್ವನಿರ್ದೇಶಕರಾಗಿದ್ದ ಪ್ರಸಿದ್ಧ ವಿದ್ವಾಂಸ ಲೂಯಿ ರೈಸ್ ಹಳೆಯ ಮೈಸೂರು ಸಂಸ್ಥಾನ ಮತ್ತು ಕೊಡಗು ಪ್ರದೇಶದಲ್ಲಿ ದೊರೆಯುವ ಅನೇಕ ಶಾಸನಗಳನ್ನು ಸಂಗ್ರಹಿಸಿ ಒಂದು ದೊಡ್ಡ ಗ್ರಂಥವನ್ನು ಹೊರತಂದಿದ್ದಾರೆ.

ಚಿತ್ರದುರ್ಗಕ್ಕಿಂತ 5000 ವರ್ಷಗಳ ಮೊದಲೇ ಜನವಸತಿಯುಳ್ಳ ಮೊಳಕಾಲ್ಮುರು ಪಾಳೆಪಟ್ಟದಲ್ಲಿ ದಾವಣಗೆರೆಯು ಒಂದು ಕೇವಲ ಗ್ರಾಮವಾಗಿತ್ತು. ಅಶೋಕ ಚಕ್ರವರ್ತಿ ಆಳ್ವಿಕೆಯ ಕಾಲದಲ್ಲಿ ಪ್ರಮುಖ ಪಟ್ಟಣವಾಗಿದ್ದ ಇಸಿಲಾ ನಗರವು ಇಂದಿನ ಅಶೋಕ ಸಿದ್ದಾಪುರವಾಗಿದೆ.

ಅಶೋಕ ಸಿದ್ದಾಪುರದಲ್ಲಿನ ಶಿಲಾಶಾಸನಗಳು ಸಂಶೋಧಕ ಬಿ.ಎಲ್‌.ರೈಸ್‌ ತಿಳಿಸುವವರೆಗೂ ಪತ್ತೆಯಾಗಿರಲಿಲ್ಲ. ನಳಂದ ವಿವಿಗೆ ತಾಲೂಕು ಹಿಂದೆಯೇ ನೇರ ಸಂಪರ್ಕ ಹೊಂದಿತ್ತು
ಕುಮಾರ ರಾಯನ ರಾಜಧಾನಿಯಾಗಿದ್ದ ಈ ತಾಲೂಕಿನಲ್ಲಿ ಹೊಯ್ಸಳ ಶೈಲಿಯ ಲಕ್ಷ್ಮಿ ದೇವಿಯ ವಿಗ್ರಹವು ಇಂದಿಗೂ ಕಾಣಬಹುದಾಗಿದೆ



ಅಶೋಕ ಮಹಾರಾಜ ಅವಧಿಯಲ್ಲಿ ಧರ್ಮ ಪ್ರಚಾರ ವೇಳೆ ಬೃಹತ್ ಕಲ್ಲುಬಂಡೆ ಮೇಲೆ ಶಾಸನ ಕೆತ್ತಲಾಗಿದೆ. ಗಾಳಿ, ಮಳೆ ಪರಿಣಾಮ ಅವನತಿ ಹಾದಿಯಲ್ಲಿದ್ದ ಈ ಶಾಸನಕ್ಕೆ ಈಚೆಗೆ ಪ್ರವಾಸೋದ್ಯಮ ಇಲಾಖೆ ಕಲ್ಲಿನ ಕಟ್ಟಡ ನಿರ್ಮಿಸಿದೆ. ಆದರೆ, ಕಟ್ಟಡ ಆವರಣದಲ್ಲಿ ಮೂಲಸೌಕರ್ಯ ಸೂಕ್ತವಾಗಿಲ್ಲ. ಹೊರರಾಜ್ಯ ಹಾಗೂ ಬೌದ್ಧ ಧರ್ಮ ಅನುಯಾಯಿ ದೇಶಗಳ ಪ್ರವಾಸಿಗಳು ಇಲ್ಲಿಗೆ ಹೆಚ್ಚಿನ ಪ್ರಮಾಣದಲ್ಲಿ ಬಂದು ಹೋಗುತ್ತಿದ್ದಾರೆ.

*`ಇಸಿಲಾ* ಜನವಸತಿ ಪ್ರದೇಶದಲ್ಲಿ ಆರಂಭದಲ್ಲಿ ಬೌದ್ಧ ಅನುಯಾಯಿಗಳು ಹೆಚ್ಚಾಗಿದ್ದು, ಇವರ ಅವನತಿ ನಂತರ ಇಲ್ಲಿ ಜೈನಧರ್ಮ ಪ್ರವರ್ಧಮಾನಕ್ಕೆ ಬಂದಿತು ಎಂದು ಅಶೋಕ ಶಾಸನಕ್ಕೆ ಸಮೀಪವಿರುವ ಅಕ್ಕತಂಗಿ ಗುಡಿ ಬಳಿ ಇರುವ ನಿಷಧಿ ಕಲ್ಲುಗಳು, ಜೈನಬಸದಿಗಳು, ಸಮೀಪದ ಬೆಟ್ಟದ ಮೇಲಿರುವ ತ್ರಿಶಂಕೇಶ್ವರ ದೇವಾಲಯ, ಭಾಗ್ಯಲಕ್ಷ್ಮೀ ದೇವಸ್ಥಾನ ಸಾಕ್ಷಿಯಾಗಿದೆ.

ಜೈನಧರ್ಮಕ್ಕೆ ಸೇರಿದ ಇಬ್ಬರು ಅಕ್ಕತಂಗಿಯರು ದೇವಸ್ಥಾನಗಳನ್ನು ನಿರ್ಮಿಸಲು ಉದ್ದೇಶಿಸಿ ಕಾರ್ಯ ಆರಂಭಿಸಿದರಂತೆ. ಈ ಸಮಯದಲ್ಲಿ ಅಕ್ಕ ನನ್ನ ದೇವಸ್ಥಾನ ಚೆನ್ನಾಗಿರಬೇಕು ಎಂಬ ಆಸೆಯಿಂದ ತಂಗಿಯನ್ನು ತವರುಮನೆಗೆ ಕಳುಹಿಸಿ ನಿರ್ಮಾಣ ಆರಂಭಿಸಿದಾಗ ಈ ಸಂಗತಿ ತಿಳಿದು ತಂಗಿ ಅಕ್ಕನ ದೇವಸ್ಥಾನ ಪಕ್ಕದಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಅಡಿಪಾಯ ಹಾಕಿದ್ದರೂ ಅದನ್ನು ಸ್ಥಗಿತಗೊಳಿಸಿ ಸುಮಾರು 1.5. ಕಿ.ಮೀ. ದೂರದಲ್ಲಿ ದೇವಸ್ಥಾನ ನಿರ್ಮಿಸಿದಳು ಎಂದು ಶಾಸನಗಳಲ್ಲಿ ಉಲ್ಲೇಖವಾಗಿದೆ.

*ರಾಜ್ಯದಲ್ಲಿ 17 ಶಾಸನಗಳು*: ಅಶೋಕನ ಒಟ್ಟು 155 ಶಾಸನಗಳು ಲಭ್ಯವಾಗಿದ್ದು, ಅದರಲ್ಲಿ 17 ನಮ್ಮ ರಾಜ್ಯದಲ್ಲಿ ದೊರೆತಿವೆ. ಅದರಲ್ಲಿ ಮೂರು ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿ, ಸಿದ್ದಾಪುರ, ಜಟಿಂಗರಾಮೇಶ್ವರದಲ್ಲಿವೆ. ಶಾಸನಗಳೆಲ್ಲ ಬ್ರಾಹ್ಮಿ ಮತ್ತುಖರೋಷ್ಠಿ ಲಿಪಿಗಳಲ್ಲಿವೆ. ಬ್ರಾಹ್ಮಿ ಬರಹವನ್ನು ಎಡಗಡೆಯಿಂದ ಬಲಗಡೆಗೂ ಖರೋಷ್ಠಿಯನ್ನು ಈಗಿನ ಉರ್ದು ಭಾಷೆಯಂತೆ ಬಲದಿಂದ ಎಡಕ್ಕೂ ಓದಬೇಕು. ರಾಜ್ಯದ ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿ ಶಾಸನದ ಕೊನೆಯ ಪಂಕ್ತಿ ಖರೋಷ್ಠಿಯಲ್ಲಿದೆ.

*ಹೋಯ್ಸಳರು ಆಳಿದ್ದ ಊರುಗಳು*: ಹೊಯ್ಸಳ ಬಲ್ಲಾಯರಾಯನ ಕಾಲದಲ್ಲಿ ನಿರ್ಮಿತವಾದ ಶ್ರೀ ಸಿದ್ದೇಶ್ವರ ದೇವಾಲಯ. ಬಹುಶಃ ಈ ದೇವಸ್ಥಾನಗಳನ್ನು 11ನೇ ಶತಮಾನದಲ್ಲಿ ಹೊಯ್ಸಳರ  ಅಡಳಿತದಲ್ಲಿ ನಿರ್ಮಿಸಲಾಗಿದೆ. ಈ ದೇವಸ್ಥಾನಗಳ ಗರ್ಭಗುಡಿಗಳಲ್ಲಿ ಯಾವುದೇ ದೇವರ ಮೂರ್ತಿಗಳು ಇಲ್ಲ. ರಕ್ಷಣೆ ಕೊರತೆ ಎದುರಿಸುತ್ತಿರುವ ಆಕರ್ಷಕ ಕೆತ್ತನೆ ಹೊಂದಿರುವ ಈ ಎರಡೂ ದೇವಸ್ಥಾನಗಳು ಅವಸಾನ ಹಂತದಲ್ಲಿವೆ.


ಕಾಡುಸಿದ್ದಾಪುರದಲ್ಲಿ ಇರುವ ಮತ್ತೊಂದು ವಿಸ್ಮಯ ಎಂದರೆ ಸಿದ್ದೇಶ್ವರ ಸ್ವಾಮಿ ಆವರಣದಲ್ಲಿ ಇರುವ ಒಂದೇ ಗುಂಡಿಯಲ್ಲಿ ಗ್ರಾಮದ ಯಾರೇ ಮೃತಪಟ್ಟರೂ ಶವಸಂಸ್ಕಾರ ಮಾಡಲಾಗುತ್ತಿದೆ. ಇದಕ್ಕೆ ಕೆಲನಿಯಮ ವಿಧಿಸಲಾಗಿದೆ. ಇಂತಹ ಭಿನ್ನ ಸಂಸ್ಕೃತಿ ಬೇರೆ ಕಡೆ ಇರುವ ಸಾಧ್ಯತೆ ಕ್ಷೀಣ. ಇದರ ಸಮೀಪದಲ್ಲಿ ರೊಪ್ಪ ಗ್ರಾಮದಲ್ಲಿ ಹತ್ತಾರು ಶಿಲಾಯುಗ ಕಾಲದ ಸಮಾಧಿಗಳನ್ನು ನೋಡಬಹುದಾಗಿದೆ. ಇಂತಹ ಹಲವು ಪ್ರೇಕ್ಷಣೀಯ ಸ್ಥಳಗಳನ್ನು ಕೇವಲ ಐದು ಕಿಮೀ ವ್ಯಾಪ್ತಿಯಲ್ಲಿ ನೋಡಬಹುದಾಗಿದೆ. ಇದಕ್ಕೆ ಸಂಬಂಧಪಟ್ಟ ಇಲಾಖೆ ಪ್ರಚಾರ ಕೈಗೊಳ್ಳುವ ಜತೆಗೆ, ಕ್ಷೇತ್ರಗಳ ಅಭಿವೃದ್ಧಿಗೆ ಮುಂದಾಗಬೇಕಿದೆ.


*ಶಿಲಾಯುಗದ ಚಿತ್ರಗಳು*: ಇಲ್ಲಿ ಕಾಣುವ ಆನೆಯ ಚಿತ್ರ,  ಇದು ಶಿಲಾಯುಗದ ಕಾಲದಲ್ಲಿ ಮಾನವನಿಂದ ಕೆತ್ತನೆಯ ಚಿತ್ರ . ಬಹುಶಃ ೧೩ ಅಡಿಯ ಎತ್ತರದ ಬಂಡೆಯ ಮೇಲೆ ಆನೆಯ ಚಿತ್ರ ಸ್ಪಷ್ಟವಾಗಿ ಕಾಣುತ್ತದೆ















ಜಟಿಂಗರಾಮೇಶ್ವರ ಬೆಟ್ಟ



#Ashoka_siddapura #rampura #molakalmuru #chitradurga #Ashoka_Shilashasana
#ಮೊಳಕಾಲ್ಮುರು #ರಾಂಪುರ #ಅಶೋಕ_ಸಿದ್ದಾಪುರ  #ಅಶೋಕ_ಶಿಲಾಶಾಸನ

Click below headings