ಸೋಮವಾರ, ಜನವರಿ 8, 2018

ಕೂಪ ಮಂಡೂಕಗಳ ಯೋಚನೆ ಮತ್ತು ಉದ್ಯೋಗ ಸಮಸ್ಯೆಕೂಪ ಮಂಡೂಕಗಳ ಯೋಚನೆ ಮತ್ತು ಉದ್ಯೋಗ ಸಮಸ್ಯೆ
********************** 
ಕಳೆದ ಬಾರಿ ರಾಂಪುರಕ್ಕೆ  ಹೋಗಿದ್ದಾಗ ೩ ದಿನಗಳ ಕಾಲ ಅಲ್ಲಿಯೆ ಉಳಿದಿದ್ದೆ, ಅಲ್ಲಿಯೇ ಬೆಳೆದು ಓದಿ ದೊಡ್ಡವನಾದ ನನಗೆ ರಾಂಪುರ ಅಂದರೆ ಬಿಡಿಸಿಲಾರದ ಬಂಧ. ಕಳೆದು ಹೋದ ಆ ಬಾಲ್ಯ ನೆನೆಸಿಕೊಂಡು ನಾನು ಓದಿದ ಸರ್ಕಾರಿ ಪ್ರಾಥಮಿಕ, ಮಾಧ್ಯಮಿಕ ಹಾಗು ಪ್ರೌಡ ಶಾಲೆ ಗಳ ಸುತ್ತಮುತ್ತ ಅಡ್ಡಾಡಿ ಬಂದೆ.
ಕೆಲ ಸಹಪಾಠಿ ಗಳನ್ನು ಸಹ ಭೇಟಿಯಾಗಿ ಉಭಯ ಕುಶಲೋಪರಿಯನ್ನು ಹಂಚಿಕೊಂಡೆವು. ನಮ್ಮ ಬಾಲ್ಯದ ಹಳೆಯ ನೆನಪೆಲ್ಲವನ್ನು ಒಂದು ಬಾರಿ ಮೆಲುಕು ಹಾಕಿ, ನನ್ನ ಬೆಂಗಳೂರು, ದುಬೈ, ಕುವೈತ್ ಮತ್ತು ಮಸ್ಕತ್ ಜೀವನದ ಅನುಭವ ವನ್ನು ಜತೆಗೆ ಕೆನಡ, ತೈವಾನ್, ಚೈನಾ ಪ್ರವಾಸ ಸಹ ಹಂಚಿಕೊಂಡೆ.


ಈಗ ರಾಂಪುರ ತುಂಬಾ ದೊಡ್ಡದಾಗಿದೆ, ೫೦೦೦೦ ಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ ಅಂತ ಗೊತ್ತಾಯಿತು. ನಾವಿದ್ದಾಗ ಒಂದೇ ಹೈಸ್ಕೂಲು ಇತ್ತು ಹಾಗು ಆಗ ತಾನೆ ಪಿಯುಸಿ ಕಾಲೇಜು ಶುರುವಾಗಿತ್ತು. ಈಗ ಒಟ್ಟು ೪ ಪ್ರೌಡಶಾಲೆಗಳು ಅದರಲ್ಲಿ ಒಂದು ಆಂಗ್ಲ ಮಾಧ್ಯಮ ಶಾಲೆಯಿದೆ. ೪ ಐಟಿಐ ಕಾಲೇಜು, ೧ ಪದವಿ ಕಾಲೇಜು ಶುರುವಾಗಿದೆ. ಇದರ ಜತೆಗೆ ನೂರಾರು ವಿಧ್ಯಾರ್ಥಿಗಳು ೩೫ ಕಿ.ಮಿ. ದೂರದ ಬಳ್ಳಾರಿ ಮತ್ತು ೨೫ ಕಿ.ಮಿ ದೂರದ ಮೊಳಕಾಲ್ಮೂರಿಗೆ ಕಾಲೇಜುಗಳಿಗೆ ಸೇರಿದ್ದಾರೆ. ಹಾಗೂ ವೃತ್ತಿ ಪರ ಶಿಕ್ಷಣಕ್ಕಾಗಿ ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಹುಬ್ಬಳ್ಳಿ ಮತ್ತು ಬೆಂಗಳೂರಿನ ಕಾಲೇಜುಗಳಲ್ಲಿ ಓದುತಿದ್ದಾರೆ ಅಂತ ತಿಳಿಯಿತು.ಊರು ತುಂಬ ಬದಲಾಗಿದ್ದು, ಈಗ ಕುಬೇರ ನಗರ, ಬಸವೇಶ್ವರ ನಗರ ಮತ್ತು ಹಳೇ ಊರಿನ ವ್ಯಾಪ್ತಿಯು ದೊಡ್ಡದಾಗಿದೆ.  ರಾಂಪುರದ ಮೂಲ ನಿವಾಸಿಗಳ ಆರ್ಥಿಕ ಹಾಗು ಸಾಮಾಜಿಕ ಪರಿಸ್ಥಿತಿ ಅಂತಹ ಬದಲಾವಣೆ ಯಾಗಿಲ್ಲ. ಆದರೆ ಬೇರೆ ಊರಿನಿಂದ ಬಂದು ನೆಲೆಸಿರುವವರ ಪರಿಸ್ಥಿತಿ ಮಾತ್ರ ಆಗಾಧ ಬದಲಾವಣೆ ಯಾಗಿದೆ.


ರಾಂಪುರದಲ್ಲಿ ಸೈಟ್ ಗಳ ಬೆಲೆ ಗಗನಕ್ಕೇರಿದೆ, ಸೈಟ್ ಕೊಳ್ಳಲಿಕ್ಕೆ ೨೦-೨೫ ಲಕ್ಷ ವ್ಯಯಿಸಬೇಕಾಗುತ್ತೆ ಅನ್ನುವುದು ಬದಲಾಗಿರುವ ರಾಂಪುರದ ಇಂದಿನ ಪರಿಸ್ಥಿತಿಗೆ ಜ್ವಲಂತ ನಿದರ್ಶನ. ಊರಿನಲ್ಲಿ ಒಂದು ಶಾಶ್ವತ ನೀರಾವರಿ ಯೋಜನೆ ಯಿಲ್ಲ, ಹೊಲಗದ್ದೆಗಳೆಲ್ಲ ಬರಡಾಗಿವೆ ಜನರಲ್ಲಿ ದುಡಿಯುವುದಿಕ್ಕೆ ಹೊಸ ಮಾರ್ಗಗಳಿಲ್ಲ, ಬಸ್ಟಾಂಡಿನಲ್ಲಿ, ರಥಬೀದಿಯಲ್ಲಿ ನೂರಾರು ಅಂಗಡಿಗಳಾಗಿವೆ ಇದರಿಂದ ಕೆಲವರ ಪರಿಸ್ಥಿತಿ ಸುಧಾರಿಸಿದೆ ಅನ್ನುವುದು ಸಮಾಧಾನದ ಸಂಗತಿ.ಊರಿನಲ್ಲಿ ನೂರಾರು ಜನ ಪದವಿಧರರಾಗಿದ್ದಾರೆ, ಇಂಜಿನೀಯರಿಂಗ್, ಡಾಕ್ಟರ್ ಮತ್ತೆಲ್ಲೋ ಕೆಲವರು ಬಿಬಿಎಮ್, ಡಿಪ್ಲೊಮಾ, ಎಮ್ಸಿಎ ಮಾಡಿಕೊಂಡ ಕೆಲವರು ಬೆಂಗಳೂರು, ಮೈಸೂರು ಮುಂತಾದ ಕಡೆ ಕೆಲಸದಲ್ಲಿದ್ದು, ಬಿಎ ಬಿಎಡ್, ಬಿಕಾಮ್, ಬಿಎಸ್ಸಿ, ಎಮ್ ಎ, ಡಿಎಡ್, ಡಿಪ್ಲೊಮಾ, ಐಟಿಐ ಶಿಕ್ಷಣ ಮುಗಿಸಿದ ೫೦೦ ಕ್ಕೂ ಹೆಚ್ಚು ನಿರುದ್ಯೋಗಿಗಳಿದ್ದಾರೆ ಎನ್ನುವ ಭಯಾನಕ ಸತ್ಯ ಕೇಳಿ, ಕಣ್ಣಾರೆ ಕಂಡ ಹುಡುಗರನ್ನು ನೋಡಿದಾಗ ನಂಬದೇ ಇರಲಾಗಲಿಲ್ಲ. ರಾಂಪುರ ಒಂದು ಊರಲ್ಲಿಯೆ ಇಷ್ಟೊಂದು ಜನ ಇರಬೇಕಾದರೆ, ಬೇರೆ ಊರುಗಳಲ್ಲಿ ಇನ್ನು ಎಷ್ಟಿರಬಹುದು? ಎಲ್ಲರೂ ಕನ್ನಡ ಮಾಧ್ಯಮದಲ್ಲಿ ಓದಿ ಶಿಕ್ಷಣ ಪಡೆದವರೇ, ಇವರಿಗೆಲ್ಲ ಯಾರು ಕೆಲಸ ಕೊಡ್ತಾರೆ, ಇವರ ಭವಿಷ್ಯವೇನು? ನಮ್ಮ ಶಿಕ್ಷಣ ವ್ಯವಸ್ಥೆ, ಕಾಲೇಜುಗಳು ವಿಧ್ಯಾರ್ಥಿಗಳನ್ನು ಪದವಿದರ ರನ್ನಾಗಿ ತಯಾರು ಮಾಡುವ ಫ್ಯಾಕ್ಟರಿಗಳಾಗಿಬಿಟ್ಟರೆ ಇವರಿಗೆಲ್ಲ ಬದುಕು ಕಟ್ಟಿಕೊಳ್ಳುವುದನ್ನು ಕಲಿಸಿ ಕೊಡುವವರು ಯಾರು.
ನಾನು ಬೆಂಗಳೂರಿಗೆ ಬಂದು ೨೦ ವರ್ಷಗಳಾಗುತ್ತ ಬಂತು, ಮೊದಲಿಗೆ ಬಂದಾಗ ಬೆಂಗಳೂರಿನಲ್ಲಿ ಹೇಗೆ ಬದುಕಬಹುದು ಬದುಕುವುದಿಕ್ಕೆ ಏನೇನು ಮಾರ್ಗ ಗಳಿವೆ ಜೀವನದಲ್ಲಿ ಮುಂದೆ ಬರುವುದು ಹೇಗೆ? ಒಂದು ನೆಲೆ ಕಂಡು ಕೊಳ್ಳುವುದು ಹೇಗೆ ಅಂತ ನೂರಾರು ಜನ ಯೋಚಿಸುತ್ತ ವರ್ಷಗಳೇ ಕಳೆದು ಹೋಗಿಬಿಡುತ್ತೆ. ಐಕ್ಯು ಜಾಸ್ತಿ ಇದ್ದವರು ಹೇಗೇಗೊ ದಾರಿ ಕಂಡು ಕೊಂಡು ಬಿಡುತ್ತಾರೆ. ಮೊದಮೊದಲಿಗೆ ಬೆಂಗಳೂರಿಗರ ತರಹ ಮಾತನಾಡುವುದನ್ನು ರೂಡಿ ಮಾಡಿಕೊಳ್ಳುತ್ತಾರೆ. ನಂತರ ಇಂಗ್ಲೀಷ್, ಹಿಂದಿ, ತಮಿಳ್, ತೆಲುಗು ಸಹ ಜತೆ ಜತೆಗೆ ಕಲಿತುಕೊಂಡು ಬಿಡುತ್ತಾರೆ. ಉತ್ತಮ ಅವಕಾಶ ದೊರೆತಾಗ, ಊರು ಬಿಟ್ಟು ಬೇರೋಂದು ಊರಿಗೆ ಹೋಗಿ ಅಲ್ಲಿ ನೆಲೆಸುತ್ತಾರೆ. ನಾನು ಸುಮಾರು ಊರುಗಳನ್ನು ಸುತ್ತಿದ್ದೇನೆ. ಭಾರತವಿರಲಿ, ಹೊರದೇಶವಿರಲಿ, ಎಲ್ಲಕಡೆಯಲ್ಲು ಹಲವಾರು ಕನ್ನಡಿಗರನ್ನು ಕಂಡಿದ್ದೇನೆ. ಬದುಕುವುದಕ್ಕೆ ಒಂದು ದಾರಿಬೇಕು, ಅದನ್ನು ಹೇಗಾದರು ಕಂಡು ಕೊಂಡುಬಿಡುತ್ತಾರೆ. ಈ ವಿಷಯದಲ್ಲಿ ಮಲೆಯಾಳಿಗಳು ಬಹಳ ಹುಷಾರು. ನಾನು ಗಲ್ಫ್ ರಾಷ್ಟ್ರಗಳಲ್ಲಿ ಲಕ್ಷಾಂತರ ಜನ ಮಲಯಾಳಿಗಳನ್ನು ನೋಡಿದ್ದೇನೆ. ಅವರ ಭವಿಷ್ಯಕ್ಕೆ ಅವರ ಬದುಕಿಗೆ ಅವರ ಜೀವನಕ್ಕೆ ಕೇವಲ ಕೇರಳ ಅಥವ ಮಲೆಯಾಳಿ ಭಾಷೆ ಮಾತ್ರ ಕಾರಣವಲ್ಲ ಅವರ ಭಾಷೆ ಮೇಲೆ ಯಿರುವ ಅಭಿಮಾನವಲ್ಲ, ಅವರ ಜೀವನೋತ್ಸಾಹ. ಬರೀ ದುಡಿಬೇಕು, ಬದುಕಬೇಕು ಅನ್ನೋ ಅಚಲ ನಿರ್ಧಾರ.
ಸೋಶಿಯಲ್ ಮೀಡಿಯದಲ್ಲಿ ನೆಟ್(ಅಂತರ್ಜಾಲ) ಕನ್ನಡ ಹೋರಾಟ ಗಾರರ ಒಂದು ಗುಂಪು ಇದೆ. ಅವರ ಗೋಡೆಗಳ ಮೇಲೆ ಕನ್ನಡ ಅಭಿಮಾನದ ನೂರಾರು ಪೋಸ್ಟ್ ಗಳನ್ನು ಹಾಕ್ತಿರ್ತಾರೆ. ಪ್ರತಿಯೊಂದರಲ್ಲೂ ಕನ್ನಡಭಿಮಾನದ ಅಭಿಯಾನ ಶುರುಮಾಡೋದಿಕ್ಕೆ ಪ್ರಯತ್ನಿಸುತ್ತಿರುತ್ತಾರೆ. ಮಾಲ್ ಗಳಲ್ಲಿ ಕನ್ನಡ, ರೈಲ್ವೆ ನಲ್ಲಿ ಕನ್ನಡ, ಬ್ಯಾಂಕ್, ಮೆಟ್ರೊ, ಬಸ್, ವಿಮಾನ ನಿಲ್ದಾಣ ಹಾಗೂ ಬೆಂಗಳೂರಿಗೆ ಬರುವ ಎಲ್ಲ ವಿಮಾನಗಳಲ್ಲೂ ಕನ್ನಡ ಬಳಕೆ ಬಗ್ಗೆ ಅರಿವು ಮೂಡಿಸುತ್ತಿರುತ್ತಾರೆ. ನ್ಯಾಯಾಲಯ ಕನ್ನಡ ಮಾಧ್ಯಮ ಶಿಕ್ಷಣ ಕುರಿತು ತೀರ್ಪು ನೀಡಿದಾಗ ಹಲವಾರು ಜನ ಅವರವರ ರೀತಿಯಲ್ಲಿ ಪ್ರತಿಕ್ರಿಯೆ ಅಭಿಪ್ರಾಯ ನೀಡಿದರು.

ಸಂತೋಷ, ಇದೆಲ್ಲ ಸರಿ ಆದರೆ, ಈಗ ನಮ್ಮ ಊರಿನ ಹಾಗೂ ರಾಜ್ಯದ ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿ ನಿರುದ್ಯೋಗಿಗಳಾಗಿರುವ ಸಾವಿರಾರು ಜನರ ಕಥೆ ಏನು? ಅವರಿಗೆಲ್ಲ ಮುಂದಿನ ದಾರಿಯೇನು? ಇವರಿಗೆಲ್ಲ, ಉದ್ಯೋಗವನ್ನ ಈ ಕನ್ನಡ ಅಭಿಮಾನ ಸಂಘ ಗಳು, ಸೋಶಿಯಲ್ ಮೀಡಿಯದಲ್ಲಿ ಕನ್ನಡ ನೆಟ್ ಹೋರಾಟ ಗಾರರು ಕೊಡ್ತಾರಾ? ಈ ಜನಕ್ಕೆ ಒಳ್ಳೋಳ್ಳೆ ಸಾಫ್ಟ್ ವೇರ್ ಕಂಪನಿ,  ಎಮ್ ಎನ್ ಸಿ, ಇತ್ತೀಚಿನ ಮಾಧ್ಯಮ ಗಳು, ಆಡ್ ಏಜೆನ್ಸಿ ಇನ್ನು ಮುಂತಾದಕಡೆ ಗಳಲ್ಲಿ ಲಕ್ಷಾಂತರ ಸಂಭಳ ಸಿಗುತ್ತೆ. ಇನ್ನು ಕನ್ನಡ ಸಂಘಗಳು ಆರ್ಥಿಕ ವಾಗಿ ಬಲಾಡ್ಯವಾಗಿವೆ. ಸರ್ಕಾರ ಗಾಡ ನಿದ್ರೆ ಯಲ್ಲಿದೆ. ಟಿವಿ ಮಾಧ್ಯಮಗಳಿಗೆ, ಟಿ ಆರ್ ಪಿ ಇರುವ ವಿಷಯ ಸಿಕ್ಕರೆ ಎರಡು ಮೂರು ದಿನಕ್ಕಾಗುವಷ್ಟು ಸರಕು ಸಿಕ್ಕಂತಾಗುತ್ತೆ. ಅವರೆಲ್ಲ ಇಂತಹ ಉದ್ಯೋಗ ಸಮಸ್ಯೆ ಬಗ್ಗೆ ಬೆಳಕು ಚೆಲ್ಲೋ ಪ್ರಯತ್ನ ಖಂಡಿತ ಮಾಡೋದಿಲ್ಲ. ಪರಿಸ್ಥಿತಿ ಹೀಗಿರುವಾಗ ಕನ್ನಡ ಮಾಧ್ಯಮದಲ್ಲಿ ಓದಿ   ಬಿಎ, ಬಿಎಡ್, ಬಿಕಾಮ್, ಬಿಎಸ್ಸಿ, ಎಮ್ ಎ, ಮುಗಿಸಿ ಕೆಲಸ ವಿಲ್ಲದೆ ಕುಳಿತಿರುವ ಜನರ ಕುರಿತು ಯಾರು ಯೋಚಿಸ್ತಾರೆ.ಕರ್ನಾಟಕದಲ್ಲಿ ಅಧಿಕಾರ ನಡೆಸಿದ ಪ್ರತಿಯೊಬ್ಬರು ಕರ್ನಾಟಕದಲ್ಲಿ ಹುಟ್ಟಿ ಬೆಳೆದವರೇ, ಆದರೂ ವರ್ಷದಿಂದ ವರ್ಷಕ್ಕೆ ನಿರುದ್ಯೋಗ ಸಮಸ್ಯೆ ಬೆಳೆಯುತ್ತ ಇದೆ ಇದಕ್ಕೆ ಪರಿಹಾರ ಸಿಗುವ ಲಕ್ಷಣ ಕಾಣುತ್ತಿಲ್ಲ. ಇಂತಹ ಸಮಯದಲ್ಲಿ ಸರಕಾರವನ್ನು ದೂಷಿಸಿ ಪ್ರಯೋಜನವೇನು? ನಮ್ಮ ದಾರಿ ನಾವು ಕಂಡು ಕೊಳ್ಳಬೇಕು.
ಮಾಧ್ಯಮಿಕ ಶಾಲೆ ಯಿಂದ ಹೈಸ್ಕೂಲ್ ಗೆ ಸೇರಿದಾಗ ೮ ನೇ ತರಗತಿಯಲ್ಲಿ ಮೊದಲನೆ ದಿನದ ಇಂಗ್ಲೀಷ್ ವಿಷಯದ ಬಗ್ಗೆ ನಮ್ಮ ಗುರುಗಳಾದ ಕೆಜಿಎನ್ ಮೇಷ್ಟ್ರು ಇಂಗ್ಲೀಷ್ ಭಾಷೆ ಯ ಪ್ರಾಮುಖ್ಯತೆ ಯನ್ನು ವಿವರಿಸಿದಿದ್ದು ಇಂದಿಗೂ ಸಹ ಬಹಳ ಚೆನ್ನಾಗಿ ನೆನಪಿದೆ. ಸಂವಹನ ನಡೆಸಲು ಇಂಗ್ಲೀಷ್ ಭಾಷೆ ಎಷ್ಟು ಮುಖ್ಯ ಎನ್ನುವುದನ್ನು ನನ್ನ ಉದಾಹರಣೆ ಕೊಟ್ಟು ವಿವರಿಸಿದ್ದರು. "ಬಸ್ಟಾಂಡಿನಲ್ಲಿ ರಂಗನಾಥ ನ ಅಂಗಡಿಯಿದೆ, ಅಲ್ಲಿ ಒಂದು ಕಾರು ಬಂದು ನಿಲ್ಲಿಸಿ ಕೆಲವರು ವಿಳಾಸದ ಬಗ್ಗೆ ವಿಚಾರಿಸಲು ರಂಗನಾಥನ ಅಂಗಡಿ ಬಳಿ ಬರುತ್ತಾರೆ, ಆದರೆ ಅವರಿಗೆ ಕನ್ನಡ ಬರಲ್ಲ ಇಂಗ್ಲೀಶ್ ಅಥವ ಹಿಂದಿ ಬರುತ್ತೆ ಅಂದ್ಕೊಳ್ಳಿ, ಆಗ ರಂಗನಾಥ ನಿಗೆ ಕನ್ನಡ ಬಿಟ್ಟು ಬೇರೆ ಭಾಷೆ ಬರದೆ ಇದ್ದರೆ ಭಾಷಾ ಸಮಸ್ಯೆ ಎದುರಾಗುತ್ತೆ ಅವರಿಗೆ ಸರಿಯಾಗಿ ಉತ್ತರ ಕೊಡಲಿಕ್ಕೆ ಆಗದೆ ತಡಬಡಾಯಿಸುತ್ತಾನೆ, ಅಥವ ವಿದೇಶ ಪ್ರವಾಸದ ಅವಕಾಶ ಸಿಕ್ಕಾಗ ಅಲ್ಲಿ ಕಮ್ಯುನಿಕೇಶನ್ ಗೆ ಇಂಗ್ಲೀಷ್ ಅತ್ಯಗತ್ಯ, ಹೀಗೆ ಎಲ್ಲ ಕಾರಣದಿಂದ ಇಂಗ್ಲೀಷ್ ಗೆ ತನ್ನದೇ ಆದ ಪ್ರಾಮುಖ್ಯತೆ ಇದೆ, ಆದ್ದರಿಂದ ತಾವೆಲ್ಲರು ಮನಸಿಟ್ಟು ಅಭ್ಯಸಿಸಿದರೆ ಮುಂದೆ ಇದರ ಪ್ರಯೋಜನ ಖಂಡಿತ ಅಂತ ಹೇಳಿದ್ದು ಇನ್ನು ನನಗೆ ಚೆನ್ನಾಗಿ ನೆನಪಿದೆ. ಅದರ ಅನುಭವ ಈಗ ಆಗ್ತಾಯಿದೆ. ಕೂಪ ಮಂಡೂಕ ತರಹ ನಾನು ಬೇರೆ ರೀತಿಯಲ್ಲಿ ಆಲೋಚಿಸಿದಿದ್ದರೆ ಇಷ್ಟೆಲ್ಲ ಜೀವನಾನುಭವ ಖಂಡಿತ ನನಗೆ ಆಗ್ತಾಯಿರಲಿಲ್ಲ.
ಕನ್ನಡಮಾಧ್ಯಮದಲ್ಲಿ ಕಲಿತು ವಿಜ್ನಾನಿಗಳಾಗಿದ್ದಾರೆ, ಇಂಜಿನೀಯರ್ ಗಳಾಗಿದ್ದಾರೆ, ಡಾಕ್ಟರ್ ಗಳಾಗಿದ್ದಾರೆ ಅಂತ ಯಾವಾಗಲು ಹೇಳ್ತಾರೆ, ಆದರೆ ಅವರ ಹೆಸರನ್ನು ಹೆಸರಿಸಿ ಅಂದರೆ, ಸರ್ ಎಂ. ವಿಶ್ವೇಶ್ವರಯ್ಯ, ಸಿ.ಎನ್.ಆರ್ ರಾವ್ ಇನ್ನು ಮುಂತಾದ ಖ್ಯಾತ ನಾಮರ ಹೆಸರು ಮಾತ್ರ ಹೇಳ್ತಾರೆ. ಅಲ್ಲ ಸ್ವಾಮಿ ನಾವು ಕನ್ನಡಿಗರು ೬ ಕೋಟಿ ಜನ ಇದೀವಿ, ಉದಾಹರಣೆ ಕೊಡಿ ಅಂದರೆ ೨೦-೩೦ ಹೆಸರು ಮಾತ್ರ ಹೇಳ್ತಿರಾ! ಆದರೆ ಮಿಕ್ಕ ಜನರ ಬಗ್ಗೆ ಯಾಕೆ ಏನ್ ಹೇಳಲ್ಲ?

ಒಂದು ಗ್ರಾಮದಲ್ಲಿ  ೧೦೦-೨೦೦ ಜನ ಹೈಸ್ಕೂಲ್ ವಿಧ್ಯಾರ್ಥಿ ಗಳಲ್ಲಿ ಬೆರಳಣಿಕೆ ಯಷ್ಟು ಮಾತ್ರ ಉನ್ನತ ಶಿಕ್ಷಣಕ್ಕೆ ಹೋಗ್ತಾರೆ. ಕಾರಣ ಪಿಯುಸಿ ಪಿ.ಸಿ.ಎಮ್.ಬಿ ನಲ್ಲಿ ಅತಿ ಹೆಚ್ಚಿನ ಜನ ಫ಼ೇಲ್ ಆಗುತ್ತಾರೆ. ಮುಂದೆ ಶಿಕ್ಷಣ ಮುಂದುವರೆಸಿಲಿಕ್ಕೆ ಆಗದೆ ಬಿಕಾಮ್ ಅಥವ ಬಿಎ ಮಾಡ್ತಾರೆ. ನಂತರ ಉದ್ಯೋಗ ವಿಲ್ಲದೆ ಪರದಾಡುತ್ತಾರೆ. ಒಂದು ಜಿಲ್ಲೆಯಿಂದ ಪ್ರತಿ ವರ್ಷ ೧೦೦-೨೦೦ ಜನ ಪ್ರತಿಭಾನ್ವಿತ ವಿಧ್ಯಾರ್ಥಿಗಳು ಮಾತ್ರ ಉನ್ನತ ಶಿಕ್ಷಣ ವ್ಯಾಸಂಗ ಮಾಡಿ ಅವರ ಭವಿಷ್ಯ ರೂಪಿಸಿ ಕೊಳ್ತಾರೆ, ಮಿಕ್ಕವರು ಏನೋ ಮಾಡಿಕೊಂಡು ಅವರ ಬದುಕಿನ ದಾರಿಯನ್ನು ಕಂಡು ಕೊಳ್ತಾರೆ.ಕೇರಳದಲ್ಲಿ ಕೈಗಾರಿಕ ಉದ್ದಿಮೆ ಗಳು ಬಹು ಕಡಿಮೆ, ಜನ ಉದ್ಯೋಗಕ್ಕಾಗಿ ಸರ್ಕಾರಿ ಕೆಲಸವನ್ನು ನೆಚ್ಚಿ ಕುಳಿತುಕೊಳ್ಳುವುದಿಲ್ಲ. ಉದ್ಯೋಗ ಅರಸಿ ವಲಸೆ ಹೋಗುತ್ತಾರೆ. ಗಲ್ಫ್ ರಾಷ್ಟ್ರ ಗಳಲ್ಲಿ ಕೇರಳದ ಜನ ವಿಜ್ನಾನಿ ಯಿಂದ ಹಿಡಿದು ಡ್ರೈವರ್ ಕೆಲಸದವರೆಗೆ ಎಲ್ಲ ರೀತಿಯ ಕ್ಷೇತ್ರಗಳಲ್ಲಿ ಅವಕಾಶ ಹುಡುಕಿಕೊಂಡು ಲಕ್ಷಾಂತರ ಜನ ಕೆಲಸ ಮಾಡ್ತಿದ್ದಾರೆ. ಇವರಿಗೆ ಹೋಲಿಸಿದರೆ ನಮ್ಮ ಕರ್ನಾಟಕದ ಜನ ಪ್ರತಿಶತಃ ೪-೭ ರಷ್ಟಿರಬಹುದು. ಅದೂ ಮಂಗಳೂರು, ಉಡುಪಿ ಯವರು ಮಾತ್ರ. ಮಿಕ್ಕವರು ಅಪ್ಪ ಹಾಕಿದ ಆಲದ ಮರ ಅಂದು ಕೊಂಡು ಹುಟ್ಟಿದ ಊರಿನಲ್ಲಿ ಏನೋ ಕೆಲಸ ಮಾಡಿಕೊಂಡು ಆರಕ್ಕೇರದೇ ಮೂರಕ್ಕಿಳಿಯದೆ ಇದ್ದೇವೆ.
ಕರ್ನಾಟಕದ ಮೂಲೆ ಮೂಲೆಯಲ್ಲು ಒಂದು ಕಾಕ ಅಂಗಡಿಯನ್ನು ಕಾಣಬಹುದು, ಇಲ್ಲ ಅಂದರೆ ಒಂದು ಬೇಕರಿಯನ್ನು ನೋಡಬಹುದು. ಮಲೆಯಾಳಿ ಗಳನ್ನು ನಾವು ಕಲಿಯುವುದು ಬಹಳಷ್ಟಿದೆ.
ವಿಜ಼್ನಾನ, ಗಣಿತ ವನ್ನು ನಾವು ಕನ್ನಡದಲ್ಲಿ ಕಲಿತು ಸಾಧಿಸ ಬೇಕಾದದ್ದು ಏನು ಇಲ್ಲ. ಜಾಗತಿಕರಣದ ಜಗದಲ್ಲಿ ನಾವು ಪ್ರವಾಹದೊಂದಿಗೆ ಮುನ್ನುಗಬೇಕು. ಅದಕ್ಕಾಗಿ ವಿಶಾಲ ಮನೋಭಾವ ವನ್ನು ಹೊಂದಿ, ಯಾವುದೇ ಸಮಯ ಸಂಧರ್ಭ ಯಾವುದೇ ಪ್ರದೇಶದಲ್ಲಿ ಕೆಲಸ ಮಾಡುವ ಮನಸ್ಥಿತಿ ಯನ್ನು ರೂಪಿಸಿಕೊಳ್ಳಬೇಕು. ಸಂಕುಚಿತ ಮನಸ್ಸಿನಿಂದ ಆಲೋಚಿಸಿ ನಮ್ಮ ಭವಿಷ್ಯವನ್ನು ನಾವು ಹಾಳುಮಾಡಿ ಕೊಳ್ಳುವುದು ಬೇಡ. ಇದೆಲ್ಲ ಹೊಟ್ಟೆ ತುಂಬಿದ ಜನರಿಗೆ ಅರ್ಥವಾಗಲ್ಲ.


ಗುರುವಾರ, ಜುಲೈ 27, 2017

"ಮತ್ತೆ ಹುಟ್ಟಿ ಬಾ ಮಗಳೇ"


"ಮತ್ತೆ ಹುಟ್ಟಿ ಬಾ ಮಗಳೇ"

ನೀನು ಇನ್ನಿಲ್ಲ ಎಂದು ನಂಬಲು ಸಾಧ್ಯವಾಗುತ್ತಿಲ್ಲ. ನಿನ್ನ ಈ ಆತುರದ ನಿರ್ಧಾರ ನಮ್ಮೆಲ್ಲರನ್ನು ದಂಗುಬಡಿಸಿದೆ. ನಿನ್ನ ಕಷ್ಟಗಳಿಗೆ ನಾವೆಲ್ಲ ಕಿವಿಯಾಗುತಿದ್ದೆವು, ಆದರೆ ಅದೆಲ್ಲವನ್ನು ಮುಚ್ಚಿಟ್ಟು ಎಂತಹ ಕೆಲಸಮಾಡಿಕೊಂಡೆ. 

ನೀನು ಎಂದಿಗೂ ಯಾರಿಗೂ ಹೊರೆಯಾಗಿರಲಿಲ್ಲ. ಆದರೆ ಆಸರೆ ಯಾಗುವತ್ತ ಬೆಳೆದಿದ್ದೆ. ವಿದ್ಯಾವಂತೆ, ಸುಗುಣೆ ನೀನು, ನಾಲ್ಕಾರು ಜನರಿಗೆ ಸಾಂತ್ವನ ಹೇಳುವಷ್ಟು ದೊಡ್ಡ ಗುಣ ನಿನ್ನಲ್ಲಿತ್ತು. ಆದರೆ ನಿನ್ನ ಕಷ್ಟದ ಸಮಯದಲ್ಲಿ ಸಾಂತ್ವನ ಹೇಳಲು ಹತ್ತಿರದಲ್ಲಿರಲಿಲ್ಲ ನಾವು, ದಯವಿಟ್ಟು ಕ್ಷಮಿಸು ನಮ್ಮನ್ನು.

ನೀನು ಮದುವೆಯಾಗಿ ಚೆನ್ನಾಗಿದ್ದೀಯ ಎಂದೇ ನಂಬಿದ್ದೆವು, ಆದರೆ ಆ ಮದುವೆ ನಿನಗೆ ಉರುಳಾಗುತ್ತೆ ಎಂದೆಣಿಸರಲಿಲ್ಲ. ಒಂದೇ ಒಂದು ಸಾರಿ, ನಮ್ಮೆಲ್ಲರ ಜತೆ ಮುಕ್ತ ಮನಸ್ಸಿನಿಂದ ಮಾತನಾಡಿದ್ದರೆ, ನಿಜಕ್ಕೂ ಇಂತಹ ಸ್ಥಿತಿ  ನಿನಗೆ  ಬರುತ್ತಿರಲಿಲ್ಲ. ನಿನ್ನನ್ನು ಉಳಿಸಿಕೊಳ್ಳುವುದಕ್ಕೆ ನಾವೆಲ್ಲ ಶತಪ್ರಯತ್ನ ಮಾಡುತಿದ್ದೆವು. 

ಈ ಮರ್ಯಾದೆ, ದೊಡ್ಡಸ್ಥಿಕೆ ಮತ್ತು ಒಣ ಅಹಂ ಗಳು, ನಿನ್ನನ್ನು ಕಾಪಾಡಲಾಗಲಿಲ್ಲ. ಅದೆಲ್ಲಕ್ಕೂ ಅಂಜಿ ಬದುಕುವುದಕ್ಕೆ ನಿನ್ನ ಮನಸ್ಸು ಒಪ್ಪಲಿಲ್ಲ ಎಂದೇ ನಾನು ಭಾವಿಸುತ್ತೇನೆ. ಈ ಚಿಕ್ಕ ವಯಸ್ಸಿಗೆ ಅದಿನ್ನೆಂತ ಮಾನಸಿಕ ತೊಳಲಾಟಗಳನ್ನು ಅನುಭವಿಸಿದ್ದೀಯಾ ನೀನು. 
ನಿನ್ನ ಪ್ರತಿಯೊಂದು, ನಡೆ ನುಡಿ ಗಳು ನಮ್ಮಿಂದ ಎಂದೂ ಮರೆಯಲಾಗಲ್ಲ. ನಮ್ಮ ಜತೆ ಜತೆಗೆ ಬೆಳೆದು ನಮ್ಮ ಮನೆಯ ಮಗುವಾಗಿದ್ದೆ ನೀನು. ದುಖಃವನ್ನು ಹಿಡಿದಿಟ್ಟುಕೊಳ್ಳಲಾಗುತ್ತಿಲ್ಲ ಪುಟ್ಟಿ. ನಿನ್ನ ಆತ್ಮಕ್ಕೆ ಶಾಂತಿ ದೊರಕಲಿ, ಭಗವಂತ ಸದ್ಗತಿಯನ್ನು ಕೊಡಲಿ ಎಂದು ಪ್ರಾರ್ಥಿಸುವೆ

"ಮತ್ತೆ ಹುಟ್ಟಿ ಬಾ ಮಗಳೇ".


ಶುಕ್ರವಾರ, ಜೂನ್ 30, 2017

ಕಥೆ:- "ಇಂತವರೂ ಇರ್ತಾರೆ"

ಕಥೆ:- "ಇಂತವರೂ ಇರ್ತಾರೆ"

ಮುಂಬಯಿಯಲ್ಲಿ ನೆಲಸಿದ್ದ ಸಂಜಯ್, ಹಲವಾರು ವರ್ಷಗಳ ನಂತರ ಮಗಳೊಂದಿಗೆ ಕರ್ನಾಟಕಕ್ಕೆ ಬಂದಿದ್ದರು.  ಅದರಲ್ಲೂ ತಾವು ವಿಧ್ಯಾಭ್ಯಾಸ ಪಡೆದ ಹುಬ್ಬಳ್ಳಿಗೆ ಬಂದಿದ್ದರು. ಮೊದಲಿಂದಲೂ ತಮ್ಮ ವಿಧ್ಯಾಭ್ಯಾಸದ ದಿನಗಳ ಕುರಿತು ಮಗಳಿಗೆ ಹೇಳಬೇಕು ಹಾಗು ಅಲ್ಲಿನ ಸ್ಥಳಗಳನ್ನು ತೋರಿಸಬೇಕು ಎಂದು ತುಂಬಾ ಹಂಬಲಿಸಿದ್ದ ಅವರು, ಇಂತಹ ಅವಕಾಶವನ್ನು ತಪ್ಪಿಸಿಕೊಳ್ಳದೆ, ತಾವು ಓದಿದ್ದ ಕಾಲೇಜ್, ವಾಸಿಸುತಿದ್ದ ರೂಮನ್ನು, ಹಾಗು ತಾವು ಆಗಾಗ್ಗೆ ನಾಷ್ಟ ಮತ್ತು ಊಟ ಮಾಡುತಿದ್ದ ಹೋಟೆಲ್/ಮೆಸ್ ಗಳನ್ನು ತೋರಿಸಲೆಂದು ಕಾಲೇಜಿಗೆ ಕರೆದೋಯ್ದರು.

ಮಗಳೇ, ಇದೇ ನೋಡು ನಾನು ಓದಿದ ಕಾಲೇಜು. ೨೫ ವರ್ಷದ ನಂತರ ನಾನು ಬಂದಿರುವುದು ಇದೇ ಮೊದಲ ಬಾರಿ. ಕಾಲೇಜಿನ ಮುಂಭಾಗದಲ್ಲಿದ್ದ ಕಾರಂಜಿ ಹಾಗೂ ಹೋತೋಟ ವಿರುವ ಜಾಗವನ್ನು ತೋರಿಸುತ್ತ, ನೋಡು ಈ ಜಾಗವೇ ನಾವು ಹರಟೆ ಹೊಡೆಯುತಿದ್ದ ಜಾಗ, ಇದು ನಾವು ಓಡಾಡುತಿದ್ದ ಕಾಲೇಜಿನ ಕಾರಿಡಾರ್. ಇದು ನಮ್ಮ ಫಿಸಿಕ್ಸ್ ಲ್ಯಾಬ್, ಇದು ಕೆಮಿಸ್ಟ್ರಿ ಲ್ಯಾಬ್, ಎಲೆಕ್ಟ್ರಿಕಲ್ ಲ್ಯಾಬ್, ಮೆಕಾನಿಕಲ್ ಲ್ಯಾಬ್. ಇಲ್ಲೆ ಮೆಟ್ಟಿಲು ಹತ್ತು, ಮೇಲೆ ಫ಼ರ್ಸ್ಟ್ ಫ಼್ಲೋರಿನಲ್ಲಿ ನಮ್ಮ ಕ್ಲಾಸ್ ರೂಮ್ ಗಳಿವೆ. ನಮ್ಮ ಭವಿಷ್ಯ ರೂಪು ಗೊಂಡಿದ್ದು ಇದೇ ಕ್ಲಾಸ್ ರೂಮ್ ಗಳಿಂದ ಎಂದು ಕೆಲ ಕ್ಲಾಸ್ ರೂಮ್ ಗಳನ್ನು ತೋರಿಸಿದರು.
ಅದನ್ನೆಲ್ಲ ನೋಡಿ ಮಗಳು "ಅಪ್ಪ ನಿಮ್ಮ ಆ ದಿನಗಳನ್ನು ಈಗ  ನೆನಪಿಸಿಕೊಂಡರೆ ತುಂಬಾ ಮಜವಾಗಿರುತ್ತೆ ಅಲ್ವ"?
ಖಂಡಿತ ಮಗಳೇ, ನಿಜವಾಗಲೂ ಅದು ಗೊಲ್ಡನ್ ಡೇಸ್. ಅದನ್ನು ಮರೆಯೋದಕ್ಕೆ ಆಗಲ್ಲ. ಹಲವಾರು ಸ್ನೇಹಿತರನ್ನು ಸಂಪಾದಿಸಿದ್ದು ಇದೇ ಸ್ಥಳ, ಕೆಲವರ ಜತೆ ಕೀಟಲೆ ಗಳು, ಕಿರಿಕ್, ಹುಸಿ ಮುನಿಸು, ಇವುಗಳ ಜತೆ ಶಿಕ್ಷಣ ಹಾಗು ಗುರುಗಳ ಮಾರ್ಗದರ್ಶನ, ನಮ್ಮ ವ್ಯಕ್ತಿತ್ವವನ್ನು ರೂಪಿಸಿದ ಈ ಪರಿಸರ, ಇದು ಮರೆಯಲಾರದ ಅನುಭವ ಎಂದು ತುಂಬಾ ಸಂತೋಷ ದಿಂದ ಹೇಳಿಕೊಳ್ಳುತಿದ್ದರು.
ಕ್ಯಾಂಟೀನ್ ಹತ್ತಿರ ಹೋಗುತ್ತ,  "ಬಾ, ಇಲ್ಲಿಯೆ ಹತ್ತಿರದಲ್ಲಿ ನಮ್ಮ ಕಾಲೇಜ್ ಕ್ಯಾಂಟೀನ್ ಇದೆ. ಕಾಫೀ ಕುಡಿಯುತ್ತ ಮಾತಾಡೋಣ". ಎಂದು ಹೋದರು. ಕಾಫೀ ಕುಡಿಯುತ್ತ, ಅವರ ಮಾತಿನ ಲಹರಿ ಕಾಲೇಜಿನ ಕೆಲ ಪ್ರಮುಖ ಘಟನೆಗಳತ್ತ ಹೊರಟಿತು. ಮನದಲ್ಲಿ ತುಂಬಿದ್ದ ನೆನಪಿನ ಬುತ್ತಿಯನ್ನು ಮಗಳ ಮುಂದೆ ಹಂಚುತ್ತ ತಮ್ಮ ಹಳೆಯ ನೆನಪುಗಳನ್ನು ಮೆಲಕು ಹಾಕುತಿದ್ದರು. ಈ ಮಧ್ಯೆ ಮಗಳು "ಅಪ್ಪ, ಆ ಸ್ನೇಹಿತರಲ್ಲಿ ಈಗ ಯಾರಾದರು ಟಚ್ ಅಲ್ಲಿ ಇದ್ದಾರಾ ಎಂದು ಕೇಳಿದಳು". ಹಾ!!  ಕೆಲವರು ಇದ್ದಾರೆ, ಆಗಾಗ್ಗೆ ಫೋನ್ ನಲ್ಲಿ ಮಾತಾಡ್ತ ಇರ್ತೇವೆ".
ತಂದೆ ಹೇಳಿದ ಮಾತುಗಳನ್ನು ಕೇಳುತ್ತ, ಆಗಾಗ್ಗೆ ಸೆಲ್ಫಿ ತೆಗೆದುಕೊಳ್ಳುತ್ತ, ಚಿಕ್ಕ ಚಿಕ್ಕ ನೋಟ್ ಮಾಡಿಕೊಳ್ಳುತಿದ್ದಳು. "ಅಪ್ಪ, ಈ ಕಾಲೇಜಿನ ದಿನಗಳಲ್ಲಿ ನಿಮಗೆ ಯಾವತ್ತಾದರು ತುಂಬಾ ಸಂತೋಷ ಆಗಿದ್ದ ಅಥವ ತುಂಬಾ ಬೇಸರ ಆಗಿದ್ದ ಸಂಗತಿ ಇದೆಯಾ?"
"ಮಗಳೇ, ಜೀವನ ಅಂದ ಮೇಲೆ ಅದೊಂದು ಸಿಹಿ ಕಹಿಗಳ ನೆನಪಿನ ಬುತ್ತಿ, ಅದರಲ್ಲಿ ಸುಖ ಮತ್ತು ದುಖ ಇರುತ್ತೆ, ಎರಡನ್ನು ಸಮನಾಗಿ ಸ್ವೀಕರಿಸಿ ನಡೆಯಬೇಕು ಅದುವೇ ಮನುಷ್ಯ ನ ಬುದ್ದಿವಂತಿಕೆಯ ಲಕ್ಷಣ"
"ಅಪ್ಪ ನೀವು ಹುಬ್ಬಳಿಯಲ್ಲಿ ಓದು ಮುಗಿಸಿದ ಮೇಲೆ, ಎಷ್ಟೊಂದು ಊರು ಸುತ್ತಿ ಈಗ ಮುಂಬಯಿಯಲ್ಲಿ ನೆಲೆಸಿದ್ದೀರಿ. ಈ ನಿಮ್ಮ ಅನುಭವದಲ್ಲಿ ಯಾವುದಾದರು ಮರೆಯಲಿಕ್ಕೆ ಆಗದ ಒಂದೆರಡು ಘಟನೆಗಳು ನೆನಪಿಸಿ ಕೊಳ್ತೀರಾ?"

ಹಾಂ! ತುಂಬಾ ವಿಷಯಗಳು ಇವೆ. ನಾನು ಓದು ಮುಗಿಸಿದ ಮೇಲೆ, ನಾನು ಬೆಂಗಳೂರಿನಲ್ಲಿ ಸುಮಾರು ಏಳೆಂಟು ವರ್ಷ ಕೆಲಸ ಮಾಡಿದೆ. ಆ ದಿನಗಳು ನನ್ನ ವೃತ್ತಿ ಜೀವನದ ಫ಼ೌಂಡೇಶನ್ ಅನ್ನು ಹಾಕಿದ ಪ್ರಮುಖ ದಿನಗಳು. ಆ ಏಳೇಂಟು ವರ್ಷ ಗಳಲ್ಲಿ ನಾನು ಕೆಲಸದ ಅನುಭವಕ್ಕಾಗಿ, ಹೊಸ ವಿಷಯದ ಕಲಿಕೆ ಹಾಗೂ ಹೆಚ್ಚಿನ ಗಳಿಕೆಗಾಗಿ ಕೆಲವೊಮ್ಮೆ ತುಂಬಾ ಕಠಿಣ ನಿರ್ಧಾರಗಳನ್ನು ತಗೊಳ್ಳುತಿದ್ದೆ. ಇದು ಅಮ್ಮನಿಗೆ ಇಷ್ಟವಾಗುತ್ತಿರಲಿಲ್ಲ. ಪರ್ಮನೆಂಟ್ ಆಗಿ ಒಂದು ಕೆಲಸ ಮಾಡು ಅಂತ ಅಮ್ಮನ ಒತ್ತಾಯ. ಆದರೆ ನಾನು ತುಂಬಾ ಮಹತ್ವಾಕಾಂಕ್ಷಿ, ಜೀವನದಲ್ಲಿ ಏನಾದರು ಸಾಧಿಸಬೇಕು ಎಂದು ಬಯಸುವವ. ಕೆಲಸದ ಅನುಭವಕ್ಕಾಗಿ, ಮತ್ತು ಉತ್ತಮ ಪೊಸಿಶನ್ ಗಾಗಿ ಕೆಲ ಕಂಪನಿಗಳಲ್ಲಿ ಒಂದೆರಡು ವರ್ಷದಲ್ಲಿ ಬದಲಾಯಿಸುತಿದ್ದೆ. ನಿಜಕ್ಕೂ ಆ ಒಂದು ಹಂತಕ್ಕೆ ಬರಲು ನಾನು ತೆಗೆದುಕೊಳ್ಳುತಿದ್ದ ಆ ನಿರ್ಧಾರಗಳೇ ಕಾರಣ.

ಹೀಗಿರುವಾಗ ಒಂದು ಸಾರಿ ಒಂದು ಕಂಪನಿ ಪ್ರಾಜೆಕ್ಟ್ ಕೆಲಸಕ್ಕಾಗಿ ಮಲೇಶಿಯಾ ಕ್ಕೆ ಹೋಗುವ ಅವಕಾಶ ಬಂತು. ಜೀವನದಲ್ಲಿ ಮೊದಲ ಬಾರಿಗೆ, ವಿದೇಶದಲ್ಲಿ ಕೆಲಸ ಮಾಡುವ ಅನುಭವ. ಆದರೆ ಅದೊಂದು ಕಾಂಟ್ರಾಕ್ಟ್ ಪಿರಿಯಡ್ ಕೆಲಸ ಕೆಲವೇ ವರ್ಷಗಳ ಅಗ್ರಿಮೆಂಟ್. ಸರಿ ಎಂದು ಒಪ್ಪಿಕೊಂಡು ಹೊರಟು ಹೋದೆ. ಆದರೆ ನಾವು ಅಂದುಕೊಂಡದ್ದಕ್ಕಿಂತ ಅತಿ ಬೇಗ ಅಂದರೆ ಕೆಲವೇ ತಿಂಗಳು ಗಳಲ್ಲಿ ಪ್ರಾಜೆಕ್ಟ್ ಮುಗಿಯಿತು. ಕಂಪನಿಯವರು ನಮ್ಮನ್ನೆಲ್ಲ ಮರಳಿ ತಾಯ್ನಾಡಿಗೆ ವಾಪಾಸ್ ಕಳಿಸಿಕೊಡುವ ತರಾತುರಿಯಲ್ಲಿದ್ದರು. ಆದರೆ, ನನಗೆ ಅಲ್ಲಿನ ಜೀವನ ಶೈಲಿ, ಉದ್ಯೋಗವಕಾಶ ಎಲ್ಲವನ್ನು ನೋಡಿ ಅಂದು ಊರಿಗೆ ಮರಳುವ ಆಲೋಚನೆ ಮಾಡಲಿಲ್ಲ. ಕೈಯಲ್ಲಿ ಹಣವಿತ್ತು ಹಾಗಾಗಿ ಅಲ್ಲಿಯೇ ಮತ್ತೆ ಉದ್ಯೋಗಕ್ಕಾಗಿ ಪ್ರಯತ್ನಮಾಡಿದೆ. ಈ ವಿಷಯವನ್ನು ಅಮ್ಮನಿಗೆ ನಾನು ತಿಳಿಸಿದೆ. ಅಮ್ಮ ಬೇಸರದಿಂದ. ಬೇಡ ಕಣಪ್ಪ ವಾಪಾಸ್ಸು ಮನೆಗೆ ಬಂದು ಬಿಡು. ಇಲ್ಲಿಯೇ ನೂರಾರು ಅವಕಾಶಗಳು ಸಿಗುತ್ತವೆ. ಇಲ್ಲಿಯೇ ನೆಮ್ಮದಿಯ ಜೀವನ ಮಾಡೋಣ ಬಂದು ಬಿಡು ಎಂದು ತುಂಬಾ ಕೇಳಿದಳು.
ಅದಕ್ಕೆ ನಾನು ಸುತಾರಾಂ ಒಪ್ಪಲಿಲ್ಲ. ಮಲೇಶಿಯಾದಲ್ಲಿ ಹೊಸ ಕೆಲಸ ಹುಡುಕೋದಿಕ್ಕೆ ಶುರು ಮಾಡಿದೆ.....
ಹೀಗೆ, ಕೆಲವು ದಿನಗಳ ನಂತರ, ಅಮ್ಮನ ಆರೋಗ್ಯ ವಿಚಾರಿಸಿ ಫೋನ್ ನಲ್ಲಿ ಮಾತಾನಾಡ್ತಾಯಿದ್ದೆ. ಆಗ ಅಮ್ಮ "ಸಂಜಯ್ ಒಂದು ಮಾತು ಹೇಳ್ತೀನಿ, ಬೇಜಾರು ಮಾಡ್ಕೋಬೇಡ ಎಂದಳು. ಹೇಳಮ್ಮ, ನಾನು ಬೇಜಾರು ಮಾಡ್ಕೋಳಲ್ಲ. ಏನು ವಿಷಯ ಎಂದು ಕೇಳಿದೆ. ಮಹೇಶ ನ ಹತ್ತಿರ ನಿನ್ನ ಬಗ್ಗೆ ಮಾತಾಡಿದ್ದೆ......
ಯಾವ ವಿಷಯದ ಬಗ್ಗೆ, ಏನು ಮಾತಾಡಿದೆ.?
ಏನಿಲ್ಲ, ಬೇಡ ಬಿಡು. ನೀನು ಬೇಜಾರು ಮಾಡ್ಕೋತೀಯ.....
ಅಮ್ಮ ಯಾವುದೋ ವಿಷಯ ಮುಚ್ಚಿಡುವುದಕ್ಕೆ ಪ್ರಯತ್ನ ಪಡ್ತಾ ಯಿದ್ದಾಳೆ ಅಂತ ಅನಿಸಿತ್ತು. ವಿಷಯ ತಿಳ್ಕೊಳ್ಳೋ ಕುತೂಹಲ ದಿಂದ ನಾನು ನಗುತ್ತ, "ಅಮ್ಮ ನಾನು ಬೇಜಾರು ಮಾಡ್ಕೋತೀನಾ.... ಅಯ್ಯೋ... ಅದಕ್ಕೆಲ್ಲ ಚಾನ್ಸ್ ಕೊಡಲ್ಲ. ಎಮೋಶನಲ್ ಫೀಲಿಂಗ್ಸ್ ಗೆ ನನ್ನ ಹೃದಯಲ್ಲಿ ಜಾಗ ಕಡಿಮೆ, ಆದರೆ ನಿನ್ನ ವಿಷಯ ಬಿಟ್ಟು..."
ನೀನು ಇಷ್ಟೊಂದು ಕಷ್ಟ ಪಡ್ತಿರೋದನ್ನ ನೋಡಿ,  ಅದಕ್ಕೆ....ಮಹೇಶ ಎನೋ ಬಿಸಿನೆಸ್ ಮಾಡ್ತಾಯಿದಾನಲ್ಲ, ಅವನಿಗೆ ನಿನ್ನನ್ನ ಸೇರಿಸಿಕೊಂಡು ಇಬ್ಬರು ಏನಾದರು ಮಾಡಬಹುದಲ್ವ ಎಂದು ಕೇಳಿದೆ.
ಅದಕ್ಕೆ ನಾನು ಅಯ್ಯೋ  ಅಮ್ಮ, ಅವನ ಬಿಸಿನೆಸ್ ನಲ್ಲಿ ನಾನು ಹೇಗೆ........ ಅದು ಹಾಗಲ್ಲ. ನಿನಗೆ ಅರ್ಥ ಆಗಲ್ಲ ಬಿಡು. ನನ್ನ ಆಸೆಗಳು ಹಲವಾರು ಇವೆ, ಈಗ ಸದ್ಯಕ್ಕೆ ಬಿಸಿನೆಸ್ ಬೇಡ. ನಾನು ಒಳ್ಳೆ ಕೆಲಸ ಹಿಡಿದು ಸ್ವಲ್ಪ ಹಣ ಸಂಪಾದಿಸಿ, ಮುಂದೆ ಬೇಕಾದರೆ ಯೋಚನೆ ಮಾಡ್ತಿನಿ. ಈಗ ಅಂತ ಅವಸರ ಇಲ್ಲ ಎಂದು ಹೇಳಿದೆ.
ಸರಿ ಕಣಪ್ಪ... ಆದರೆ ಅವನು ನಿನ್ನ ಬಗ್ಗೆ ಹೀಗೆಲ್ಲ ಯೋಚನೆ ಮಾಡಿದಾನೆ ಅಂತ ನಾನು ಕನಸು ಮನಸ್ಸಿನಲ್ಲಿಯು ಸಹ ನಾನೆಣಿಸಿರಲಿಲ್ಲ... ಸ್ನೇಹಕ್ಕೆ ಇಷ್ಟೇನ ಬೆಲೆ?
ನೀನು ಅವನನ್ನು ಹಾಸ್ಟೆಲ್ ನಿಂದ ಬಿಡಿಸಿ, ನಿನ್ನ ರೂಮಿನಲ್ಲಿ ಸೇರಿಸಿಕೊಂಡು, ಅವನಿಗೆ ನೀನು ಪಾಠ ಹೇಳಿಕೊಟ್ಟಿದ್ದೀಯಾ, ನೀನು ತಿನ್ನುವ ಅನ್ನವನ್ನು ಹಂಚಿಕೊಂಡಿದ್ದೀಯಾ, ಅವನ ಕೆಲ ಖರ್ಚುಗಳನ್ನು ನೋಡಿಕೊಂಡಿದ್ದೀಯಾ, ಹೀಗೆ ನೀನು ಎಷ್ಟೆಲ್ಲ ಸಹಾಯ ಮಾಡಿದ್ದೀಯ. ಆದರೆ ಅವನು ಅದೆಲ್ಲ ಮರೆತು, ನಿನ್ನ ಬಗ್ಗೆ ಈ ತರಹ ಮನಸ್ಸಿನಲ್ಲಿ ಎಷ್ಟೋಂದು ಸ್ವಾರ್ಥವಾಗಿ ಯೋಚಿಸಿದ್ದಾನೆ ಕಣಪ್ಪ. ಆ ಮಾತುಗಳನ್ನು ಕೇಳಿ ದುಖಃ ಉಮ್ಮಳಿಸಿ ಬಂತು, ತಡ್ಕೊಳ್ಳೋಕೆ ಆಗಲಿಲ್ಲ ಅದಕ್ಕೆ ನಿನ್ನ ಹೇಳಿಕೊಳ್ಳಬೇಕು ಅನ್ನಿಸಿತು.......

ಅಮ್ಮ ಹೇಳಿದ್ದು ಕೇಳಿ ಯಾಕೋ ಮನಸ್ಸು ವಿಚಲಿತವಾಯಿತು... ಮಹೇಶ ನನ್ನ ಬಗ್ಗೆ ಏನು ಹೇಳಿದ್ದಾನೆ. ನಾನೇನು ಅಂತಹದ್ದು ಮಾಡಬಾರದ್ದು ಅವನಿಗೆ ಮಾಡಿದ್ದೀನಿ. ಯಾಕೆ ಏನಾಯ್ತು ಅಂತ ಮನಸ್ಸಿನಲ್ಲಿ ತಳಮಳ ಶುರುವಾಯಿತು. "ಸರಿ, ಅವನು ಏನು ಹೇಳಿದ ಹೇಳು".
"ನಿನಗೆ ಕೋಪ ಜಾಸ್ತಿ ಅಂತೆ, ಬಾಸ್ ಗಳ ಜತೆ ಜಗಳ ಮಾಡ್ತೀಯ, ಒಂದು ಕಂಪನಿಯಲ್ಲಿ ತುಂಬಾ ದಿನ ಕೆಲಸ ಮಾಡೋದಿಲ್ವಂತೆ, ಒಂದ್ನಿಮಿಷ ಇದ್ದ ಮನಸ್ಸು ಇನ್ನೊಂದ್ನಿಮಿಷ ಇರಲ್ಲ. ಚಂಚಲ ಸ್ವಭಾವ. ಹೀಗೆ ಹಲವಾರು ವಿಷಯಗಳಲ್ಲಿ ಸಂಜಯ್ ಸರಿ ಇಲ್ಲ, ಇಂತಹ ಮನಸ್ಥಿತಿ ಇರುವವನ ಜತೆ ನಾನು ಹೇಗೆ ಬಿಸಿನೆಸ್ ಮಾಡಲಿ. ನಮ್ಮ ಕಂಪನಿ ಹೇಗೆ ಉದ್ದಾರ ಆಗುತ್ತೆ. ಅದೆಲ್ಲ ಸರಿ ಹೋಗಲ್ಲ ಆಂಟಿ ಎಂದು ಉಡಾಫೆಯಿಂದ ಹೇಳಿದಾಗ, ಈ ಮಾತುಗಳು ನಮ್ಮ ಮಹೇಶ ಹೇಳ್ತಾಯಿದ್ದಾನ ಎಂದು ನಂಬಲಿಕ್ಕೆ ಆಗಲಿಲ್ಲ. ಅವನ ಮನಸ್ಸಿನಲ್ಲಿ ಈ ತರಹ ಎಲ್ಲ ಲೆಕ್ಕಾಚಾರ ಹಾಕಿದ್ದಾನ, ಎಷ್ಟೊಂದು ಅಮಾಯಕ ನಾಗಿದ್ದ ಹುಡುಗ ಇಷ್ಟೆಲ್ಲ ಬದಲಾಗಿದ್ದಾನ ಅಂತ ಅನಿಸಿತು......ನನಗೆ ನನ್ನ ಮಗನ ಬಗ್ಗೆ ಗೊತ್ತು, ಅವನು ಏನು ಮಾಡಿದರು ಯಾವ ತಪ್ಪು ಮಾಡಲ್ಲ, ಕೋಪ ಜಾಸ್ತಿ ಇರಬಹದು, ಆದರೆ ಅಷ್ಟೇ ಕರುಣಾಮಯಿ ಅವನು, ಅಯ್ಯೋ ಅಂದವರಿಗೆ ಅವನ ಮನಸ್ಸು ಮಿಡಿಯುತ್ತೆ. ಆದರೆ ಸ್ವಾರ್ಥ ಇಲ್ಲ. ಅಂಥವನನ್ನು ನನ್ನ ಮಗನಾಗಿ ಪಡೆದದ್ದು ನನ್ನ ಅದೃಷ್ಟ ಅಂತ ಮನಸ್ಸಿನಲ್ಲಿ ಅಂದ್ಕೊಂಡೆ......... ಹೋಗಲಿ ಬಿಡು ಮಗಾ... ಮನಸ್ಸಿಗೆ ಹಚ್ಚಿಕೊಂಡು ನೀನು ಚಿಂತಿಸಬೇಡ. ನೀನು ಮಾಡಿದ್ದು ನಿನಗೆ, ಅವನು ಮಾಡಿದ್ದು ಅವನಿಗೆ.

ಅಮ್ಮ ಮಹೇಶ ಹೇಳಿದ್ದನ್ನು ಕೇಳುತಿದ್ದರೆ, ಒಂದು ಕ್ಷಣ ನಂಬಲಿಕ್ಕೆ ಆಗಲಿಲ್ಲ. ನನ್ನ ಅತಿ ಹೆಚ್ಚು ನಂಬುಗೆಯ ಸ್ನೇಹಿತ ನನ್ನ ಬಗ್ಗೆ ಈ ತರಹ ಅಭಿಪ್ರಾಯ ಇಟ್ಟುಕೊಂಡಿದಾನಲ್ಲ ಅಂತ ಆಶ್ಚರ್ಯ ವಾಯಿತು.....  ಮನುಷ್ಯ ಬದಲಾಗುವುದನ್ನು ಸಿನಿಮಾದಲ್ಲಿ ನೋಡಿದ್ದೆ, ಕಥೆ ಕಾದಂಬರಿಯಲ್ಲಿ ಓದಿದ್ದೆ, ಅವರಿವರು ಹೇಳಿದ್ದನ್ನು ಕೇಳಿದ್ದೆ. ಆದರೆ ಇಂದು ನನ್ನ ಮಿತ್ರ ಬದಲಾಗಿದ್ದು ತುಂಬಾ ದುಖಃ ವಾಯಿತು. ಅವನ ಇಂದಿನ ಜೀವನ ಮಟ್ಟಕ್ಕೆ, ನನ್ನ ಒಂದು ಕಿರು ಸಹಾಯ ಕಾರಣ ಅನ್ನೋದನ್ನ ಸಹ ಮರೆತು ಬಿಟ್ಟನಲ್ಲಾ ಈ ಹುಡುಗ.

ಅವನಿಂದ ನಾನೇನು ನಿರೀಕ್ಷಿಸಿರಲಿಲ್ಲ, ನನಗೆ ಸಹಾಯ ಸಹ ಬೇಕಿರಲಿಲ್ಲ. ಆದರೆ, ಈ ತರಹ ಭಿನ್ನಭಿಪ್ರಾಯದ ಬಗ್ಗೆ ನನ್ನಲ್ಲಿ ಒಂದು ದಿನವೂ ಚರ್ಚಿಸಿರಲಿಲ್ಲ. ಅಂದು ನನ್ನನ್ನು ಎಷ್ಟೊಂದು ಗೌರವ ಪ್ರೀತಿಯಿಂದ ಕಾಣುತಿದ್ದ ಹುಡುಗ ಇವನೇನ ಅನ್ನಿಸಿಬಿಟ್ಟಿತ್ತು.  ಸ್ನೇಹಕ್ಕೆ ಇಷ್ಟೇನಾ ಬೆಲೆ? ಅವನು ಓದುವ ಸಮಯದಲ್ಲಿ ನಾನು ನಿಸ್ವಾರ್ಥವಾಗಿ ಅವನಿಗೆ ಎಷ್ಟೆಲ್ಲ ಸಹಾಯ ಮಾಡಿದ್ದೆ, ಆದರೆ ಇಂದು ನನ್ನ ಬಗ್ಗೆ ಈ ತರಹ ಮಾತಾಡಿದ್ದಕ್ಕೆ ತುಂಬ ದುಖಃ ವಾಯಿತು, ನನಗರಿವಿಲ್ಲದಂತೆ ಕಣ್ಣಲ್ಲಿ ನೀರು ಬಂತು...... ಒಬ್ಬ ಸ್ನೇಹಿತನ ಮುಖವಾಡ ಕಳಚಿತ್ತು.......

ಅಮ್ಮ ಈ ವಿಷಯ ಚರ್ಚೆ ಮಾಡಿದ್ದು ಸರಿ ಅನ್ನಿಸಲಿಲ್ಲ....., "ಅಮ್ಮ, ನೀನು ಯಾಕೆ ಬಿಸಿನೆಸ್ ಬಗ್ಗೆ ಕೇಳಿದೆ? ನಾನೇನು ಹೇಳಿದ್ನಾ? ಸುಮ್ ಸುಮ್ನೆ ಈ ಅವಾಂತರ ಯಾಕೆ ಮಾಡಿದೆ? ಇನ್ಮುಂದೆ, ಈ ವಿಷಯದ ಬಗ್ಗೆ ಮಾತಾಡಬೇಡ. ಇದು ಇಲ್ಲಿಗೇ ಮುಗೀತು ಅಂತ ಇಲ್ಲಿಗೆ ಬಿಟ್ಟು ಬಿಡು. ಎಂದು ಹೇಳಿ ಫೋನ್ ಕಟ್ ಮಾಡಿದೆ.

ಇಂದು ಸ್ನೇಹ ಮತ್ತು ವ್ಯವಹಾರದ ಬಗ್ಗೆ ಮಾತಾಡ್ತಾ ಕಟ್ಟುನಿಟ್ಟಾಗಿ ಮಾತಾಡ್ತಯಿರೋದು ನೋಡಿದಾಗ, ಅವನ ಬಗ್ಗೆ ಹೆಮ್ಮೆಯಾಯಿತು. ಆದರೆ ಅಮ್ಮ ಸುಮ್ ಸುಮ್ನೆ ಅವನ ಜತೆ ಬಿಸಿನೆಸ್ ಬಗ್ಗೆ ಯಾಕೆ ಮಾತಾಡಿದರು ಅಂತ ಅವರ ಮೇಲೆ ತುಂಬಾ ಕೋಪ ಬಂತು.
ಆಮೇಲೆ ಮನಸ್ಸು ಮಹೇಶನ ಬಗ್ಗೆ ಯೋಚಿಸುತ್ತಾಯಿತ್ತು. ಕಾಲೇಜಿನ ದಿನಗಳು ಜ್ಞಾಪಕ ವಾಯಿತು.  ಒಂದು ಕ್ಷಣ ಅವನ ಅಂದಿನ ಮುಗ್ಧ ಮುಖ ಕಣ್ಣು ಮುಂದೆ ಹಾದು ಹೋದಂತಾಯಿತು.

"ಅಪ್ಪ ಆ ಮಹೇಶ್ ಅಂದ್ರೆ ಯಾರು?"

"ನಮ್ಮ ಕಾಲೇಜಿನಲ್ಲಿದ್ದ ತುಂಬಾ ಬಡ ವಿಧ್ಯಾರ್ಥಿಯಲ್ಲಿ ಅವನೊಬ್ಬ. ತುಂಬಾ ಮುಗ್ಧ, ಹತ್ತಿರದ ಹಾಸ್ಟೆಲ್ ಒಂದರಿಂದ ಬರ್ತಾ ಯಿದ್ದ. ಅವನನ್ನು ನೋಡಿದರೆ ಯಾರಿಗಾದರೂ ಅಯ್ಯೋ ಅನ್ನಿಸುತಿತ್ತು. ನಮ್ಮ ಸ್ನೇಹಿತರ ಕೂಟದಲ್ಲಿಯೆ ಇದ್ದದ್ದರಿಂದ, ಅವನನ್ನು ನಾವು ಸ್ವಲ್ಪ ಹೆಚ್ಚಾಗಿಯೆ ಆತ್ಮೀಯತೆಯಿಂದ ಕಾಣುತಿದ್ದೆವು. ಅವನಿಗೆ ತುಂಬಾ ಸಂಕೋಚ ಸ್ವಭಾವ. ಅವನಿಗೆ ಏನು ಬೇಕು, ಬೇಡ ಎಂದು ಹೇಳ್ಕೋಳ್ಳೋಕೆ ಹಿಂಜರಿಯುತಿದ್ದ. ನೋಡು ತಮ್ಮಾ...... ನೀನು ಹೀಗೆ  ಇದ್ದರೆ, ಒಂದೆರಡು ವರ್ಷಕ್ಕೆ ಮನೆಗೆ ವಾಪಾಸ್ಸು ಹೋಗ್ತೀಯಾ. ಕಾಲೇಜ್ ವಿಧ್ಯಾಭ್ಯಾಸ ಮುಗಿಯಲ್ಲ. ಸುಮ್ನೆ ದುಡ್ಡು ವೇಸ್ಟ್, ಟೈಮ್ ವೇಸ್ಟ್. ಹೀಗೆ ನಾವು ಯಾವಾಗಲು ಅವನನ್ನು ರೇಗಿಸುತಿದ್ದೆವು.
ನಿಜಕ್ಕೂ ಅವನ ಪರಿಸ್ಥಿತಿ ತುಂಬಾ ಭೀಕರ ವಾಗಿತ್ತು. ಅವನಿದ್ದ ಹಾಸ್ಟೆಲ್ ನಲ್ಲಿ ಸರಿಯಾಗಿ ಊಟ ಸಹ ಕೊಡ್ತಾಯಿರಲಿಲ್ಲ. ಕೊಟ್ಟರೂ ಸಹ ಅದು ಅಷ್ಟಕ್ಕಷ್ಟೆ. ಓದುವುದಕ್ಕೆ ಪೂರಕವಾದ ವಾತಾವರಣ ಅಲ್ಲಿರಲಿಲ್ಲ.  ಅದರಲ್ಲೂ ಅಲ್ಲಿರುವ ವಾರ್ಡನ್ ತುಂಬಾ ಸ್ಟ್ರಿಕ್ಟ್. ಹೊರಗಡೆ ಹೋಗುವುದಕ್ಕೆ ಸಹ ಅನುಮತಿ ಕೊಡ್ತಾಯಿರಲಿಲ್ಲ. ಪ್ರಾರ್ಥನೆ ಸಮಯಕ್ಕೆ ಎಲ್ಲೇ ಇದ್ದರು ಹಾಜರಾಗಬೇಕಿತ್ತು. ತಪ್ಪಿದ್ದರೆ ಊಟ ಕಟ್. ಮೊದಲೇ, ಆ ಊಟ ಅಷ್ಟಕ್ಕಷ್ಟೆ ಆದರೆ ಅದೇ ಕಟ್ ಆದರೆ, ಹೊಟ್ಟೆಗೆ ತಣ್ಣೀರ್ ಬಟ್ಟೆ. ಕಷ್ಟನೋ ನಷ್ಟಾನೋ ಹೇಗಾದರು ಮಾಡಿ ವಿಧ್ಯಾಭ್ಯಾಸ ಮುಗಿಸಿದರೆ ಸಾಕು ಅಂತಿದ್ದ.  ಅದು ಅವನ ಪಾಲಕರ ಅಭಿಲಾಷೆ. ಹಾಸ್ಟೆಲ್ ನ ಕಷ್ಟ ಅರಿವಿದ್ದ ನನಗೆ, ಹಾಸ್ಟೆಲ್ ಬದಲಾಯಿಸುವುದಕ್ಕೆ ಅವನ ಮನವೊಲಿಸಲು ಸಾಕಷ್ಟು ಪ್ರಯತ್ನ ಪಟ್ಟೆ. ಆದರೆ, ಅವನಿಗಿದ್ದ ಹಣಕಾಸಿನ ತೊಂದರೆ, ಮತ್ತಿತರ ಕೊರತೆಗಳ ಬಗ್ಗೆ ಯೋಚಿಸಿ ಅದಕ್ಕೆ ಬೇಡವೆಂದು ಹೇಳುತಿದ್ದ. ತುಂಬಾ ದಿನಗಳ ಕಾಲ ಮನವೊಲಿಕೆಯ ಪರಿಣಾಮ ಕೊನೆಗೂ ಹಾಸ್ಟೆಲ್ ಬಿಟ್ಟು ನನ್ನ ಜತೆ ರೂಮ್ ಮಾಡಲು ಒಪ್ಪಿದ್ದ. ರೂಮಿಗೆ ಬಂದ ಮೇಲೆ, ಅವನಿಗೆ ಹೊಟ್ಟೆ ತುಂಬ ಊಟ ಬಡಿಸ್ತಾಯಿದ್ದೆ. ಅವನು ಖುಶಿಯಿಂದ ಊಟ ಮಾಡೋದು ನೋಡಿ ನನಗೆ ತುಂಬ ಸಂತಸ ವಾಗುತಿತ್ತು. ಕೆಲವೇ ದಿನಗಳಲ್ಲಿ ಅವನ ಒಂದು ಕೊರತೆ ನೀಗಿತ್ತು. ಇನ್ನು ಓದಿನ ವಿಷಯದಲ್ಲಿ, ಅವನಿಗೆ ಅರ್ಥವಾಗದ ಹಲವಾರು ವಿಷಯಗಳ ಬಗ್ಗೆ ಸರಳವಾಗಿ ವಿವರಿಸಿ ಅವನ ಓದಿಗೆ ಬಹಳಷ್ಟು ಸಹಾಯ ಮಾಡಿದೆ. ಕೊನೆಗೆ ಪರೀಕ್ಷೆಯಲ್ಲಿ ಪಾಸ್ ಮಾಡಿ ತನ್ನ ಅಂತಿಮ ವಿಧ್ಯಾಭ್ಯಾಸ ಮುಗಿಸುವುದಕ್ಕೆ ನನ್ನದೊಂದು ಚೂರು ಪರಿಶ್ರಮ ಇದ್ದದ್ದು ನಿಜ. ಎಲ್ಲ ಕಡೆ ಒಟ್ಟಿಗೆ ಹೋಗ್ತಾ ಬರ್ತಾಯಿದ್ವಿ, ಸಿನಿಮಾಗಳನ್ನು ನೋಡಿದ್ವಿ, ಊರುಗಳನ್ನು ಸುತ್ತಿದೆವು. ಅಂದು ನಾನು ಮಾಡಿದ ಎಲ್ಲ ಕೆಲಸಗಳೂ ನಿಸ್ವಾರ್ಥವಾಗಿ ಮಾಡಿದ್ದು, ಆದರೆ ಆ ಪುಣ್ಯಾತ್ಮ ಕೊನೆಗೆ ನನ್ನ ಬಗ್ಗೆ ಒಂದು ಒಳ್ಳೆ ಸರ್ಟಿಫಿಕೆಟ್ ಕೊಟ್ಟ. ಹ್ಮೂ!!!! ಪ್ರಪಂಚದಲ್ಲಿ ಜನ ಹೀಗೆ ಇರ್ತಾರೆ ಅಂತ ನಾನು ಕನಸು ಮನಸ್ಸಿನಲ್ಲಿ ಯೋಚಿಸಿರಲಿಲ್ಲ. ಅದೊಂದು ಒಳ್ಳೆಯ ಅನುಭವ. ತಮಾಷೆ ವಿಷಯ ಅಂದರೆ, ಇವತ್ತಿಗೂ ಸಹ ನಾನು ನಿಸ್ವಾರ್ಥವಾಗಿ ಆ ಕೆಲಸ ಮಾಡ್ತಿದ್ದೀನಿ. ಎಷ್ಟೊಂದು ಜನಕ್ಕೆ, ನನ್ನ ಕೈಲಾದ ಸಹಾಯ ಮಾಡಿದ್ದೀನಿ. ಇಂದಿಗೂ ಹಲವಾರು ಜನರು ನನ್ನ ಸಹಾಯ ನೆನಪಿಸಿ ಕೊಂಡು ಫೋನ್ ಮಾಡ್ತಾರೆ, ಬಂದು ಭೇಟಿಯಾಗ್ತಾರೆ. ನಾನು ಮಾಡಿದ ಸಹಾಯದ ಫಲವೋ ಏನೋ, ಒಂದಲ್ಲ ಒಂದು ರೀತಿಯಲ್ಲಿ ನನ್ನ ಜೀವನದಲ್ಲಿ ಹಲವಾರು ಬಾರಿ ಒಳ್ಳೊಳ್ಳೆ ಘಟನೆಗಳು ನಡೆದಿವೆ."

ಹೀಗೆ ಸಂಜಯ್ ತನ್ನ ಬದುಕಿನಲ್ಲಿ ನಡೆದ ಒಂದು ಕಹಿ ಘಟನೆ ಯನ್ನು ನೆನಪಿಸಿಕೊಂಡಾಗ ಕಣ್ಣಲ್ಲಿ ಎರಡು ಹನಿ ಜಿನುಗಿದ್ದು ನೋಡಿದ ಮಗಳು "ಅಪ್ಪ, ಹೋಗಲಿ ಬಿಡಿ, ಬೇಜಾರು ಮಾಡ್ಕೋಬೇಡಿ. ಆಮೇಲೆ ಮಲೇಶಿಯಾದಲ್ಲಿ ಮತ್ತೆ ಏನ್ ಮಾಡಿದ್ರಿ"

ಓಹ್, ಮರೆತು ಬಿಟ್ಟಿದ್ದೆ, ವಿಷಯಾಂತರ ವಾಯಿತು ನೋಡು. ಅಂದು ಅಮ್ಮನನ್ನು ಒಪ್ಪಿಸಿ, ಮಲೇಶಿಯಾದಲ್ಲಿ ಉದ್ಯೋಗಕ್ಕಾಗಿ ಪ್ರಯತ್ನ ಪಟ್ಟೆ. ಇಂಟರ್ ವೀವ್ ಕೊಟ್ಟ ಹಲವಾರು ಕಂಪನಿಗಳಲ್ಲಿ. ಅನಿರೀಕ್ಷಿತವಾಗಿ ಒಟ್ಟು ಮೂರು ಕಂಪನಿಗಳಲ್ಲಿ ಉದ್ಯೋಗ ಖಾತ್ರಿಯಾಯಿತು. ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕೆಂಬ ಗೊಂದಲದಲ್ಲಿ ನಾನಿದ್ದೆ. ಕೊನೆಗೂ ಸಿಂಗಪೂರ್ ಕಂಪನಿಯೊಂದರಲ್ಲಿ ಸೇರಿಕೊಂಡೆ. ಕೆಲಸಕ್ಕೆ ಸೇರಿದ ನಂತರ ಅಮ್ಮನಿಗೆ ಫೋನ್ ಮಾಡಿ ವಿಷಯ ತಿಳಿಸಿದೆ. ಅಮ್ಮನಿಗೆ ಖುಶಿಯಾಯಿತು ಹಾಗೂ ಸ್ವಲ್ಪ ಬೇಜಾರಿನಲ್ಲಿಯೇ ಇದ್ದಳು, ನಾನು ವಾಪಾಸ್ಸು ಮನೆಗೆ ಬರ್ತೀನಿ ಅಂತ ಯೋಚಿಸುತಿದ್ದಳು. ಆದರೆ ಇಲ್ಲಿರುವ ಸೌಲಭ್ಯಗಳ ಕುರಿತು ಸ್ವಲ್ಪ ವಿವರವಾಗಿ ಹೇಳಿದಾಗ ಆಗ ಸ್ವಲ್ಪ ಮಟ್ಟಿಗೆ ಸಂತೋಷ ವಾಯಿತು. ಸಿಂಗಾಪೂರ್ ನಲ್ಲಿ ಕೆಲಸ ಕ್ಕೆ ಸೇರಿದೆ.  ಕೈತುಂಬಾ ಸಂಭಳ, ಮತ್ತೆ ಬೇರೆ ಎಲ್ಲ ಸೌಲಭ್ಯ ತುಂಬಾ ಚೆನ್ನಾಗಿತ್ತು. ಜೀವನ ಸಂತೋಷದಿಂದ ಸಾಗ್ತಾಯಿತ್ತು. ಕೆಲಸ ಮಾಡುವ ವಾತಾವರಣ ಚೆನ್ನಾಗಿತ್ತು, ನಮ್ಮ ಕಂಪನಿಯ ಕೆಲಸಗಾರರಲ್ಲಿ ಲೋಕಲ್ಸ್, ತಮಿಳಿಯನ್ಸ್ ಹಾಗೂ ಕೆಲ ಹಿಂದಿ ಜನ ಬಿಟ್ಟರೆ ಕನ್ನಡದವರು ಅಂತ ಯಾರೂ ಇರಲಿಲ್ಲ. ಸ್ವಲ್ಪ ಬೇಜಾರಾಗ್ತಯಿತ್ತು, ಹೀಗಿರುವಾಗ ಕೇವಲ ಮೂರು ತಿಂಗಳ ಅವಧಿಯಲ್ಲಿ ಆಂಧ್ರ ದಿಂದ ಶ್ರೀ ವತ್ಸ ಎನ್ನುವ ಒಬ್ಬ ಹಿರಿಯ ಉದ್ಯೋಗಿ ಬಂದು ನಮ್ಮ ಕಂಪನಿಗೆ ಜಾಯಿನ್ ಆದರು.

 ತುಂಬಾ ಅನುಭವಸ್ಥರು, ಸಹೃದಯಿ, ನಿಷ್ಕಲ್ಮಶ ವ್ಯಕ್ತಿತ್ವ. ಅವರ ಜತೆ ಪರಿಚಯವಾಗಿ ನಮ್ಮಿಬ್ಬರ ಮಧ್ಯೆ ಒಂದು ಒಳ್ಳೆ ಗೆಳೆತನ ಮೂಡಿತ್ತು. ಕಷ್ಟ ಸುಖಃಗಳನ್ನು ಹಂಚಿಕೊಳ್ಳುತಿದ್ದೆವು, ಅವರ ಅನುಭವದ ಮಾತುಗಳನ್ನು ಕೇಳಿ ಕೇಳಿ, ಅವರನ್ನೇ ನಾನು ನನ್ನ ಜೀವನದ ಗುರುವನ್ನಾಗಿ ಸ್ವೀಕರಿಸಿದ್ದೆ. ಇಂತಹ ಸ್ನೇಹಿತರು ನನಗೆ ಮೊದಲೇ ಸಿಗಬಾರದಿತ್ತೆ ಎಂದು ಬಹಳ ಸಾರಿ ಅನ್ನಿಸಿತ್ತು.
ಕಂಪನಿ ಕ್ಯಾಂಟೀನ್ ಊಟ ನಮಗೆ ಇಷ್ಟವಾಗದೆ ಇದ್ದದ್ದರಿಂದ ಮನೆಯಿಂದ ನಾನು ಊಟ ತರುತಿದ್ದೆ. ನನ್ನ ಊಟದಲ್ಲಿ ಅರ್ಧ ಊಟವನ್ನು ಅವರೊಂದಿಗೆ ಹಂಚಿಕೊಳ್ಳುತಿದ್ದೆ. ಪ್ರತಿದಿನ ನಾವು ಹೀಗೆ ಹಂಚಿಕೊಳ್ಳುವುದನ್ನು ನೋಡಿದ ಮತ್ತಿಬ್ಬರು ಸಹೋದ್ಯೋಗಿಗಳು  ನಮ್ಮ ಜತೆ ಊಟ ಹಂಚಿ ಕೊಳ್ಳೂವುದಕ್ಕೆ ಶುರು ಮಾಡಿದರು. ಈ ವಿಷಯದ ಕುರಿತು, ಇಂಡಿಯಾದಲ್ಲಿ ಅವರ ಮಡದಿ ಮತ್ತು ಮಕ್ಕಳ ಜತೆ ಪ್ರತಿ ನಿತ್ಯ ಚರ್ಚಿಸುತಿದ್ದರಂತೆ. ನಿಜಕ್ಕೂ ಆ ದಿನಗಳು ತುಂಬಾ ಚೆನ್ನಾಗಿದ್ದವು. ತುಂಬಾ ಸಂತೋಷದಿಂದ ಕಾಲ ದೂಡುತಿದ್ದೆವು. ಹೀಗಿರುವಾಗ ಅವರಿಗೆ ಆಸ್ಟ್ರೇಲಿಯಾದಲ್ಲಿ ಒಳ್ಳೆ ಉದ್ಯೋಗವಕಾಶ ದೊರೆಯಿತು. ಅದಕ್ಕಾಗಿ ನಮ್ಮನ್ನೆಲ್ಲ ತೊರೆದು ಅವರು ಆಸ್ಟ್ರೇಲಿಯಾಕ್ಕೆ ಹೊರಟರು. ಆದರೆ ಅವರೆಂದೂ ನಮ್ಮನ್ನು ಮರೆಯಲಿಲ್ಲ. ಅಲ್ಲಿಂದಲೇ ನಮ್ಮ ಯೋಗ ಕ್ಷೇಮ ವಿಚಾರಿಸುತಿದ್ದರು. ಅವರ ಗೆಳೆತನ ವನ್ನು ಮಾತ್ರ ಯಾವ ಕಾರಣಕ್ಕೂ ನಾನು ಕಳೆದುಕೊಳ್ಳಲಿಲ್ಲ. ಫೋನ್ ನಲ್ಲಿ, ಈಮೇಲ್ ನಲ್ಲಿ ನಮ್ಮ ಸುಖಃ ದುಖಃ ಗಳನ್ನು ಹಂಚಿ ಕೊಳ್ಳುತಿದ್ದೆವು.
ನನಗೆ ಮದುವೇ ಯಾಗಿ ಎರಡು ವರ್ಷವಾಗಿತ್ತು, ಹಾಗೇಯೇ ಸಿಂಗಪೂರ್ ನಲ್ಲಿ ಉದ್ಯೋಗ ಮಾಡ್ತಾ ಮೂರುವರ್ಷ ಆಗಿತ್ತು. ಅಷ್ಟರಲ್ಲಿ ಇಂಡಿಯಾಗೆ ವಾಪಾಸ್ಸು ಹೋಗುವ ಮನಸ್ಸಾಯಿತು. ನನ್ನ ಅಮ್ಮ, ನಿಮ್ಮ ಅಮ್ಮ ಮತ್ತು  ನೀನು, ನಿಮ್ಮೆಲ್ಲರ ಜತೆ ಆರಾಮಾಗಿ ಇರೋಣ ಅಂದ್ಕೊಂಡೆ, ಅದನ್ನು ನನ್ನ ಗುರುಗಳ ಹತ್ತಿರ ಹೇಳಿದೆ. ಅವರು ಕೆಲ ಕಾಲ ಯೋಚನೆ ಮಾಡಿ, ವಾಪಸ್ಸು ಹೋಗಬೇಡ. ನನ್ನ ಜತೆ ಆಸ್ಟ್ರೇಲಿಯಾಕ್ಕೆ ಬಾ, ಇಲ್ಲೆ ಕೆಲಸ ಕೊಡಿಸ್ತೀನಿ ಹಾಗೆ ನಿಮ್ಮ ಫ್ಯಾಮಿಲಿಗೆ ವೀಸಾ ವ್ಯವಸ್ಥೆ ಮಾಡೋಣ. ಜಾಸ್ತಿ ಯೋಚನೆ ಮಾಡದೆ, ನಿನ್ನ ರೆಸ್ಯೂಮ್, ಪಾಸ್ ಪೋರ್ಟ್ ಕಳಿಸು ಅಂತ ಹೇಳಿದರು........ ನನಗೆ ಇದು ನಿಜಾನ ಅಂತ ಅನುಮಾನ ಬಂತು. ಗುರುಗಳೇ, ತಮಾಷೆ ಮಾಡ್ತಿಲ್ಲ ತಾನೆ ಎಂದು ಮರು ಪ್ರಶ್ನೆ ಹಾಕಿದೆ. ಅದಕ್ಕೆ, ಅಯ್ಯೋ ಹುಚ್ಚಪ್ಪ ನಾನ್ಯಾಕೋ ತಮಾಷೆ ಮಾಡಲಿ, ನಿಜವಾಗ್ಲೂ ಸೀರಿಯಸ್ ಆಗಿ ಹೇಳ್ತಾಯಿದ್ದೇನೆ. ಇಷ್ಟು ದಿನ ನೀನು ಬ್ಯಾಚೆಲರ್ ಆಗಿ ಜೀವನ ಮಾಡಿದ್ದು ಸಾಕು. ಈಗ ಫ್ಯಾಮಿಲಿ ಜತೆ ನೆಮ್ಮದಿಯಾಗಿ ಜೀವನ ಮಾಡೋದನ್ನು ಕಲಿ..... ಹೀಗೆ ಅವರು ಒಂದೊಂದು ಮಾತು ಹೇಳ್ತಾಯಿದ್ದರೆ, ನಾನು ಆಕಾಶ ದಲ್ಲಿ ತೇಲಾಡ್ತಾಯಿದ್ದೆ. ನಿಜಕ್ಕೂ ದೇವರು ಒಂದಲ್ಲ ಒಂದು ರೂಪದಲ್ಲಿ ಬಂದು ಸಹಾಯ ಮಾಡ್ತಾಯಿದ್ದಾನೆ ಅಂತ ಅನ್ನಿಸಿತ್ತು.

 ಮರು ಮಾತನಾಡದೆ ಅವರ ಮಾತನ್ನು ಒಪ್ಪಿ ಆಸ್ಟ್ರೇಲಿಯಾಕ್ಕೆ ನಿಮ್ಮೆಲ್ಲರ ಜತೆ ನೆಲೆಸಿ ಅಮ್ಮನ ಜತೆ  ಹಾಗೂ ಅಮ್ಮನ ಜತೆ ಕಳೆದ ಆಕ್ಷಣಗಳನ್ನು ಎಂದೂ ಮರೆಯಲಿಕ್ಕೆ ಸಾಧ್ಯವಿಲ್ಲ.
ಅದಾದ್ಮೇಲೆ, ನಮ್ಮ ಜೀವನದಲ್ಲಿ ಮಹತ್ತರವಾದ ಬದಲಾವಣೆಗಳಾದವು. ನಾನು ಕಂಡ ಕನಸುಗಳೆಲ್ಲ ಸಾಕಾರವಾಗಿದ್ದವು.
ಇದು ನನ್ನ ಜೀವನದಲ್ಲಿ ನಡೆದ ಒಂದು ಪ್ರಮುಖ ಘಟನೆ.
ಈಗ ಮುಂಬಯಿಯಲ್ಲಿ ಬಂದು ಸೆಟ್ಲ್ ಆಗಿದ್ದೀನಿ. ಇದೆಲ್ಲ ಮೆಲುಕು ಹಾಕ್ತಾಯಿದ್ದರೆ, ನಾವು ಯಾವತ್ತೂ ಒಳ್ಳೆ ಕೆಲಸ ಮಾಡೋದನ್ನ ಮಾತ್ರ ಬಿಡಬಾರದು. ಒಂದಲ್ಲ ಒಂದು ದಿನ ಒಂದಲ್ಲ ಒಂದು ರೀತಿಯಲ್ಲಿ ಅದು ನಮ್ಮ ಸಹಾಯಕ್ಕೆ ಬರುತ್ತೆ...  ಇಂದು ಈ ನೆಮ್ಮದಿಯ ಜೀವನಕ್ಕೆ, ನನ್ನ ಕೈ ಹಿಡಿದು ಮುನ್ನೆಡಿಸಿದ ಪ್ರತಿಯೊಬ್ಬರು ಕಾರಣರಾಗಿದ್ದಾರೆ.
ಅಶಕ್ತರಿಗೆ ಸಹಾಯ ಮಾಡಬೇಕು, ನಮ್ಮ ಚಿಕ್ಕ ಸಹಾಯದಿಂದ ಅವರು ಜೀವನದಲ್ಲಿ ಸಂತೋಷವಾಗಿದ್ದರೆ ಅದಕ್ಕಿಂತ ಬೇರೆ ಏನು ನಿರೀಕ್ಷೆ ಬೇಡ.........

"ನಿಜ ಅಪ್ಪ ನಾನು ಎಲ್ಲೋ ಓದಿದ ಮಾತು ನಿಮ್ಮ ಜೀವನಕ್ಕೆ ಅನ್ವಯ ವಾಗುತ್ತೆ. ಬದುಕೆಂಬ ಪಯಣದಲಿ ಅನೇಕ ಜನರು ಜೊತೆಯಾಗುತ್ತಾರೆ, ಕೆಲವರು ಪ್ರೀತಿಸುತ್ತಾರೆ, ಕೆಲವರು ಪರೀಕ್ಷೀಸುತ್ತಾರೆ, ಕೆಲವರು ಆಶೀವ೯ದಿಸುತ್ತಾರೆ. ಇನ್ನೂ ಕೆಲವರು ಬೆಂಬಲವಾಗಿ ನಿಲ್ಲುತ್ತಾರೆ. ಕೆಲವರು ಕಾರಣವಿಲ್ಲದೇ ಬಿಟ್ಟು ಹೋಗುತ್ತಾರೆ. ಆದರೆ ತಾಳ್ಮೆಯುತ ಬದುಕು ನಮ್ಮದ್ದಾಗಲಿ.ಯಾಕೆಂದರೆ ಇಲ್ಲಿ ಕಾರಣವಿಲ್ಲದೇ ಯಾವ ಕಾರ್ಯವೂ ಸಾಗದು."

ಗುಡ್ ಮಗಳೇ, ಒಳ್ಳೇ ಮಾತು ಹೇಳಿದೆ.
ಮಗಳ ಜತೆ ಹಳೆಯ ನೆನಪುಗಳನ್ನು ಹಂಚಿಕೊಂಡು ಖುಷಿಯಿಂದ ಹುಬ್ಬಳ್ಳಿ-ಧಾರವಾಡ ವನ್ನು ಸುತ್ತಿ ಮತ್ತೆ ವಾಪಾಸ್ಸು ಮುಂಬಯಿ ಕಡೆಗೆ ಪ್ರಯಾಣ ಬೆಳೆಸಿದರು.

----- xxx -----

Photo/Image Credit: Internet source
ಲೇಖಕರು: ಪಿ.ಎಸ್.ರಂಗನಾಥ

ಶುಕ್ರವಾರ, ಮಾರ್ಚ್ 24, 2017

ಶ್ರೀ ಜಾನಕಿನಾಥ್: ಎಂದೂ ಬತ್ತದ ಉತ್ಸಾಹದ ಚಿಲುಮೆ


ಶ್ರೀ ಜಾನಕೀನಾಥ್: ಕನ್ನಡ ಮತ್ತು ಸ್ವಾರ್ಥ ರಹಿತ ಸಾಮಾಜಿಕ ಸೇವೆ
ಎಂದೂ ಬತ್ತದ ಉತ್ಸಾಹದ ಚಿಲುಮೆ
ಮಸ್ಕತ್ ನಲ್ಲಿ ಕನ್ನಡ ಮತ್ತು ಸ್ವಾರ್ಥ ರಹಿತ ಸಾಮಾಜಿಕ ಸೇವೆಯ ಇನ್ನೊಂದು ಹೆಸರೇ, ಶ್ರೀ ಜಾನಕೀನಾಥ್

ನಮ್ಮ ಕನ್ನಡ ಸಂಘದ ಅಧ್ಯಕ್ಷ ರಾಗಿದ್ದ ಶ್ರೀ ಜಾನಕೀನಾಥ್ ರವರು ತಮ್ಮ ಹೊಸ ಉದ್ಯೋಗದ ನಿಮಿತ್ತ ಇದೇ ೨೭ ಮಾರ್ಚ್ ೨೦೧೭ ರಂದು ಮಸ್ಕತ್ ನಿಂದ ಬೆಂಗಳೂರಿಗೆ ವಾಪಾಸ್ಸು ಹೋಗುತ್ತಿರುವುದು ಎಲ್ಲರಿಗೂ ತಿಳಿದಿರುವಂತಹದ್ದು. ಇನ್ನು ಮುಂದೆ ಅವರು ಮಸ್ಕತ್ ನಲ್ಲಿ ಇರಲಾರೆದೆಂಬುದು ಬಹು ಬೇಸರದ ಸಂಗತಿಯಾಗಿದೆ. ಕನ್ನಡ ತರಗತಿಗಳು ಮತ್ತು ಕನ್ನಡ ಸಂಘದ ಕಾರ್ಯಗಳಲ್ಲಿ ಅವರು ಮಾಡಿದ ಕೆಲಸ ಗಳು ಬಹುಕಾಲ ನೆನಪಿನಲ್ಲಿಟ್ಟು ಕೊಳ್ಳಬಹುದಾಗಿದ್ದು, 

ಸಮಾಜದ ಒಳಿತಿಗಾಗಿ ಯಾರೇ ಆಗಲಿ ಯಾವುದೇ ಕೆಲಸ ಮಾಡಿದರೂ ಸ್ವಾರ್ಥ ರಹಿತವಾಗಿ ಕೆಲಸ ಮಾಡುವುದು ಇತ್ತೀಚಿನ ದಿನಗಳಲ್ಲಿ ಅದು ವಿರಳವಾಗಿದೆ. ಸ್ವಾರ್ಥ ರಹಿತ ಸಮಾಜ ಸೇವೆ ಮಾಡಿದವರಲ್ಲಿ ನಮ್ಮ ಕನ್ನಡ ಸಂಘದ ಅಧ್ಯಕ್ಷ ರಾಗಿದ್ದ ಶ್ರೀ ಜಾನಕೀನಾಥ್ ರವರು ಒಬ್ಬರಾಗಿದ್ದರು. ಮಸ್ಕತ್ ಕನ್ನಡ ಸಂಘದಲ್ಲಿ ಕಾರ್ಯಕಾರಿ ಸಮಿತಿ ನಿರ್ಧರಿಸಿದ ಎಲ್ಲ ಕಾರ್ಯಕ್ರಮ ಗಳಲ್ಲಿ ತಮ್ಮ ಧೈನಂದಿನ ಕೆಲಸಗಳ ಒತ್ತಡದ ನಡುವೆಯೂ ಅತಿ ಚಟುವಟಿಕೆಯಿಂದ ಸಂಪೂರ್ಣವಾಗಿ ತೊಡಗಿಕೊಂಡು ಯಶಸ್ವಿಗೊಳಿಸುತಿದ್ದರೆನ್ನುವುದರಲ್ಲಿ ಅತಿಶಯೋಕ್ತಿ ಏನಿಲ್ಲ. 

ಕನ್ನಡ ತರಗತಿಗಳು ಮತ್ತು ಕನ್ನಡ ಸಂಘದ ಕೆಲ ನೂತನ ಕಾರ್ಯಕ್ರಮಗಳಿಗೆ ನಾಂದಿ ಹಾಡಿದ್ದು, ಇವರ ಅವಧಿಯಲ್ಲಿ ಕನ್ನಡ ಸಂಘದ ವತಿಯಿಂದ ಅತಿ ಹೆಚ್ಚು ವೈವಿಧ್ಯತೆಯ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿದ್ದು ಇವರ ಕೊಡುಗೆಗೆ ಸಾಕ್ಷಿಯಾಗಿದೆ. ಪಾದರಸದಂತೆ ಚುರುಕಾಗಿ ಓಡಾಡಿ, ಕಾರ್ಯಕ್ರಮ ಗಳನ್ನು ನಿರೂಪಣೆ ಮಾಡಿ ಮಸ್ಕತ್ ನಲ್ಲಿ ಕನ್ನಡದ ವಾತಾವರಣವನ್ನು ನಿರ್ಮಿಸಿದುವುದರಲ್ಲಿ ಅವರ ಶ್ರಮ ತುಂಬಾ ಇದೆ. ಸಂಘದ ಕಾರ್ಯಕಾರಿ ಸಮಿತಿಯ ಸಭೆಗಳಲ್ಲಿ ಎಲ್ಲ ಸದಸ್ಯರ ಮನವೊಲಿಸಿ  ಕಾರ್ಯಕ್ರಮಗಳನ್ನು ರೂಪಿಸಿ ಅವುಗಳನ್ನು ಯಶಸ್ವಿ ಗೊಳಿಸುವುದರಲ್ಲಿ ಅವರದ್ದು ಎತ್ತಿದ ಕೈ. 

ಮಸ್ಕತ್ ನಲ್ಲಿ ಓದುತ್ತಿರುವ ಮಕ್ಕಳಿಗೆ ಕನ್ನಡ ಓದುವುದು ಮತ್ತು ಬರೆಯುವುದನ್ನು ಕಲಿಸುವ ಉದ್ದೇಶ ದಿಂದ ಕನ್ನಡ ಸಂಘವು ಮತ್ತು ಕೆಲ ಸಮಾನ ಮನಸ್ಕರ ಆಸಕ್ತಿಯಿಂದ ಹಲವಾರು ವರ್ಷಗಳ ಹಿಂದೆಯೆ ಕನ್ನಡ ತರಗತಿ ಗಳನ್ನು ಪ್ರಾರಂಭಿಸಿದ್ದರು. ಆದರೆ ಇವರ ಅವಧಿಯಲ್ಲಿ ಅದನ್ನು ಇನ್ನೊಂದು ಹಂತಕ್ಕೆ ಕೊಂಡು ಹೋಗಿದ್ದರಲ್ಲಿ ಇವರ ಪಾಲು ಬಹಳಷ್ಟಿದೆ. ಕನ್ನಡ ತರಗತಿ ಮಕ್ಕಳಲ್ಲಿ,  ಕನ್ನಡ ಮಾತನಾಡುವುದನ್ನು ಪ್ರೊತ್ಸಾಹಿಸಿದ್ದು, ಕರ್ನಾಟಕ ಸರಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಜತೆ ಸಂಪರ್ಕ ಸಾಧಿಸಿ ಕನ್ನಡ ಕಲಿಯುವ ಮಕ್ಕಳಿಗೆ ಸರ್ಟಿಫಿಕೇಟ್ ಕೊಡಿಸಿದ್ದರಲ್ಲಿ ಇವರ ಬಹುತೇಕ ಶ್ರಮವಿದೆ. 

ಕನ್ನಡ ಸದಸ್ಯರಿಗೆ ಕನ್ನಡ ಕಥೆ ಕಾದಂಬರಿಗಳನ್ನು ಓದಲು ಪ್ರೋತ್ಸಾಹಿಸುವ ಉದ್ದೇಶದಿಂದ ಕನ್ನಡ ಲೈಬ್ರರಿ ಯನ್ನು ಪ್ರಾರಂಭಿಸಿ, ಲೈಬ್ರರಿಗಾಗಿ ಸಂಘದ ಸದಸ್ಯರು ಪುಸ್ತಕ ಗಳನ್ನು ಕೊಡುಗೆ ಕೊಟ್ಟಿರುವುದರಲ್ಲಿ ಇವರ ಪಾತ್ರ ದೊಡ್ಡದಿದೆ.ಕನ್ನಡ ಚಿತ್ರಗೀತೆಗಳ ಅಂತ್ಯಾಕ್ಷರಿ, ಕನ್ನಡ ರಸಪ್ರಶ್ನೆ ಕಾರ್ಯಕ್ರಮ ಗಳನ್ನು ಅತ್ಯುತ್ತಮ ವಾಗಿ ರೂಪಿಸಿ ಯಶಸ್ವಿಗೊಳಿಸಿದ್ದು ಮಸ್ಕತ್ ಕನ್ನಡ ಸಂಘದ ಸದಸ್ಯರಲ್ಲಿ ಇಂದಿಗೂ ನೆನಪಿನಲ್ಲಿ ಉಳಿದಿದೆ. 

ಮಸ್ಕತ್ ನಲ್ಲಿ ಕರ್ನಾಟಕ ಮೂಲದ ಯಾರ ಪರಿಚಯ ಆದರೂ ಅವರ ಮನವೊಲಿಸಿ ಅವರನ್ನು ಸಂಘದ ಸದಸ್ಯರನ್ನಾಗಿ ಮಾಡಿಯೇ ಬಿಡುತಿದ್ದರು. ತಮ್ಮ ಅಧಿಕಾರ, ಪದವಿಗೆ ತಕ್ಕಂತೆ, ಕೇವಲ ಗಣ್ಯರೊಂದಿಗೆ ಬೆರೆತು, ಗತ್ತು, ಗೈರತ್ತು, ದರ್ಪ ಗಳನ್ನು ತೋರ್ಪಡಿಸಿಕೊಳ್ಳದೆ, ಸದಸ್ಯರ ಹತ್ತಿರ ಸೌಜನ್ಯದಿಂದ ಅತಿ ವಿನಯದಿಂದ ಮಾತನಾಡಿ ಎಲ್ಲರ ಜತೆ ಒಂದು ಸೌಹಾರ್ಧ ಸಂಭಂದವನ್ನು ಬೆಳೆಸಿ, ತಾವೊಬ್ಬ ಅತಿ ಸಾಮಾನ್ಯ ಮನುಷ್ಯನಂತೆ ಎಲ್ಲರೊಂದಿಗೆ ಬೆರೆಯುತಿದ್ದರು. 

ಸಂಘದ ಸದಸ್ಯರನ್ನು ಯೋಗದ ಕಡೆ ಆಕರ್ಷಿಸಲು, ಆರ್ಟ್ ಆಫ್ ಲಿವಿಂಗ್ ರವರ ಜತೆಗೂಡೀ ಮೂರು ದಿನಗಳ ಕಾಲ ಯೋಗ ದಿನಾಚರಣೆ ಆಚರಿಸಿದ್ದಲ್ಲದೆ, ಕಳೆದ ವರ್ಷ  ಭಾರತೀಯ ರಾಯಭಾರಿ ಕಛೇರಿ ಯವರ ಜತೆಗೂಡಿ ಮತ್ತೆ ಯೋಗ ಕಾರ್ಯಕ್ರಮವನ್ನು ನಡೆಸಿಕೊಟ್ಟರು,  ಸದಸ್ಯರನ್ನು ಯೋಗದ ಕಡೆ ಪ್ರೋತ್ಸಾಹಿಸಿ, ಅವರನ್ನು ಹುರಿದುಂಬಿಸಲು ತಾವೂ ಸತತವಾಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಯೋಗವನ್ನು ವರ್ಷದ ಕೇವಲ ಒಂದು ದಿನದ ಮಟ್ಟಿಗೆ ಮಾಡದೆ, ಇಂದಿಗೂ ಪ್ರತಿದಿನ ತಪ್ಪದೇ ಯೋಗವನ್ನು ಮಾಡುತ್ತ ಬಂದಿದ್ದಾರೆ. 

ಕನ್ನಡ ಕಮ್ಮಟ - ಮಕ್ಕಳ ಚಳಿಗಾಲದ ಶಿಬಿರ ವೆನ್ನುವ ವಿನೂತನ ಕಾರ್ಯಕ್ರಮ ವನ್ನು ಶುರುಮಾಡಿ, ಕನ್ನಡ ಮಕ್ಕಳಿಗೆ ಕರ್ನಾಟಕದ ಬಗ್ಗೆ ಹಲವಾರು ಮಾಹಿತಿಗಳು, ಕನ್ನಡ ನಾಟಕ, ಕನ್ನಡ ಕಲಿ ನಲಿ, ಕನ್ನಡ ಜಾನಪದ ಗೀತೆಗಳು, ನಾಡ ಗೀತೆ, ಆಟ ಪಾಠ ಹೀಗೆ ಹಲವಾರು ಚಿಣ್ಣರ ಕಾರ್ಯಕ್ರಮಗಳನ್ನು ಕನ್ನಡ ತರಗತಿಯ ಶಿಕ್ಷಕರ ಜತೆಗೂಡಿ ಯಶಸ್ವಿಯಾಗಿ ನಡೆಸಿಕೊಟ್ಟು ಮಸ್ಕತ್ ಕನ್ನಡ ಸಂಘದ ಮಕ್ಕಳಲ್ಲಿ ಕನ್ನಡ ಪ್ರಜ್ನೆ ಯನ್ನು ಮೂಡಿಸುವುದರಲ್ಲಿ ಯಶಸ್ವಿಯಾಗಿದ್ದಾರೆ. 

ಕೇವಲ ಹಾಡು, ಕುಣಿತ ಮತ್ತು ಕನ್ನಡವೆನ್ನದೆ ಅಥವ ಮನೊರಂಜನೆ ಕಾರ್ಯಕ್ರಮ ಗಳಲ್ಲದೆ, ಸಾಮಾಜಿಕ ಸೇವೆಗಳನ್ನು ಶುರು ಮಾಡಿ ಮುನ್ನುಡಿ ಬರೆದಿದ್ದಾರೆ. ಒಮಾನ್ ನಲ್ಲಿ ಕರ್ನಾಟಕ ಮೂಲದ ಹಲವಾರು, ಜನರಿಗೆ ತೊಂದರೆ ಯಾದಾಗ ಮುಂದೆ ನಿಂತು ಸಹಾಯ ಮಾಡಿದ್ದಾರೆ. ಹೀಗೆ ಇವರು ಮಾಡಿರುವ ಕಾರ್ಯಕ್ರಮಗಳ ಬಗ್ಗೆ ಬರೆಯುತ್ತ ಹೋದರೆ, ಹಲವಾರು ಪುಟಗಳೇ ಬೇಕಾಗಬಹುದು.
ಇದೇ ರೀತಿ ಅವರ ಮಡದಿ ಶ್ರೀಮತಿ ಪ್ರೇಮಾ ಜಾನಕೀನಾಥ್ ರವರು ಸಹ ಬೆಂಗಳೂರಿನಲ್ಲಿ ಹಲವಾರು ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ಅಲ್ಲಿಂದಲೇ ಅವರು ಜಾನಕೀನಾಥ್ ರವರಿಗೆ ಸಹಕಾರ ನೀಡುತಿದ್ದು, ಕನ್ನಡ ಕ್ವಿಜ಼್ ಮತ್ತು ಅಂತ್ಯಾಕ್ಷರಿ ಕಾರ್ಯಕ್ರಮ ಗಳನ್ನು ರೂಪಿಸಿಕೊಟ್ಟಿದ್ದಾರೆ. ಜಾನಕೀನಾಥ್ ರವರ ಯಶಸ್ಸಿನಲ್ಲಿ ಅವರ ಶ್ರೀಮತಿಯವರ ಪಾತ್ರ ಬಹಳ ದೊಡ್ಡದಿದೆ.
ಶ್ರೀ ಜಾನಕಿನಾಥ್ ರವರು, ಯಾವುದೇ ಕೆಲಸ ಮಾಡಿದರೂ ಶ್ರಧ್ದೆ ಯಿಂದ ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದರಲ್ಲಿ ಮುಂದು. ಅವರೊಂದು ಎಂದೂ ಬತ್ತದ ಉತ್ಸಾಹದ ಚಿಲುಮೆ, ಸೌಮ್ಯ ಸ್ವಭಾವದ, ಉತ್ತಮ ವ್ಯಕ್ತಿತ್ವ ಅವರದು.  ವ್ಯಕ್ತಿಯೊಬ್ಬನ ಸಕಾರಾತ್ಮಕ ಗುಣಗಳನ್ನು ಮಾತ್ರ ಹೆಚ್ಚಾಗಿ ಪರಿಗಣಿಸಿದಾಗ ಆ ವ್ಯಕ್ತಿಯೊಂದಿಗೆ ಉತ್ತಮ ಬಾಂಧವ್ಯ ಇರಿಸಿಕೊಳ್ಳಲು ಸಾಧ್ಯ. ಹಾಗಾಗಿ ಅವರ ಜತೆಗಿನ ಒಡನಾಟದಿಂದಾಗಿ ಅವರ ಸಕಾರಾತ್ಮಕ ಗುಣಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಮ್ಮ ವ್ಯಕ್ತಿತ್ವನ್ನು ರೂಪಿಸಿ ಕೊಳ್ಳುವುದರಲ್ಲಿ ಅವರು ನೆರವಾಗಿದ್ದಾರೆನ್ನುವುದರಲ್ಲಿ ಅಡ್ಡಿಯಿಲ್ಲ. ಅವರ ಮುಂದಿನ ಭವಿಷ್ಯ ಉತ್ತಮವಾಗಿರಲಿ, ಅವರಿಗೆ ದೇವರು ಉತ್ತಮ ಆರೋಗ್ಯ ವನ್ನು ದಯಪಾಲಿಸಲಿ ಎಂದು ಪ್ರಾರ್ಥಿಸುತ್ತ ಈ ಮೂಲಕ ಅವರಿಗೊಂದು ನನ್ನ ಕಡೆಯಿಂದ ಒಂದು ಕಿರು ನುಡಿನಮನ.
ಸಿರಿಗನ್ನಡಂ ಗೆಲ್ಗೆ! ಸಿರಿಗನ್ನಡಂ ಬಾಳ್ಗೆ!!ಶನಿವಾರ, ಡಿಸೆಂಬರ್ 5, 2015

ಕಿರುಕತೆ: ತಲ್ಲಣ


"ಚಿನ್ನು ಈದ್ ರಜೆ ಅನೌನ್ಸ್ ಮಾಡಿದ್ದಾರೆ ರಜೆಯಲ್ಲಿ ಊರಿಗೆ ಬರ್ತಾ ಯಿದ್ದೀನಿ. ಇಲ್ಲಿಂದ ಏನಾದ್ರು ತರೋದಿದ್ರೆ ಹೇಳು" ಎಂದು  ವಾಟ್ಸಪ್ ನಲ್ಲಿ ಮೆಸ್ಸೇಜ್ ಮಾಡಿದರು.  
ಏನೂ ಬೇಡ, ನೀವು ಬಂದರೆ ನಿಮ್ಮತ್ರ ನಾನು ಮಾತಾನಾಡಬೇಕು. 
ಏನ್ ವಿಷಯ?
ಒಂದು ಹುಡುಗ ನನಗೆ ಪ್ರಪೋಸ್ ಮಾಡಿದ್ದಾನೆ. 
ಓಹ್ ಹೌದಾ!!!, ಅದೆಲ್ಲ ಕಾಮನ್. ಅದರ ಬಗ್ಗೆ ಚಿಂತೆ ಬೇಡ. ನಿನ್ನ ಪಾಡಿಗೆ ನೀನು ಓದಿನ ಕಡೆ ಗಮನ ಕೊಡು.
ಸರಿ ಪಪ್ಪ, ಆದರೆ.......
ಪ್ಲೀಸ್..... ಈಗ ಅದೆಲ್ಲ ಬೇಡ. ಇನ್ನು ಒಂದು ವರ್ಷ ನಿನ್ನ ಮೆಡಿಕಲ್ ಮುಗಿಯುತ್ತೆ, ಆಮೇಲೆ ಎಮ್ ಎಸ್ ಗೆ ಪ್ಲಾನ್ ಮಾಡ ಬೇಕು. ಮಗಳೇ... ನಿಮ್ಮಮ್ಮನ ಕನಸನ್ನು ನಾನು ನನಸು ಮಾಡಬೇಕು. ದಯವಿಟ್ಟು, ಈಗ ವಿದ್ಯಾಭ್ಯಾಸದ ಬಗ್ಗೆ ಗಮನ ಕೊಡು.
ಸರಿ ಪಪ್ಪ.
ಓಕೆ.. ಬೈ,
----

ಮಗಳು ಪ್ರಸ್ತಾಪಿಸಿದ ವಿಷಯ ಅವರ ಮನಸ್ಸನ್ನು ಸ್ವಲ್ಪ ಗಲಿಬಿಲಿ ಗೊಳಿಸಿತು. ಇದೆಲ್ಲ ಈಗ ಸಾಮಾನ್ಯ, ದಿನಗಳು ಕಳೆದ ಮೇಲೆ ಅದನ್ನು ಅರ್ಥ ಮಾಡ್ಕೋತ್ತಾಳೆ ಎಂದು ತಮ್ಮನ್ನು ತಾವೆ ಸಂತೈಸಿಕೊಂಡರು. ಮಗಳು ಹೇಳಿದ ವಿಚಾರದ ಕುರಿತು, ಬಂಧುಮಿತ್ರರಲ್ಲಿ ಹೇಳಿಕೊಳ್ಳೋಣ ವೆಂದು ಅನಿಸಿದರೂ ಸಹ, ಅನವಶ್ಯಕವಾಗಿ ಇದೊಂದು ದೊಡ್ಡ ವಿಷಯವಾಗಿಸಿ ಸಮಸ್ಯೆ ಮಾಡಿಕೊಳ್ಳೋದು ಬೇಡ ಅಂತ ಸುಮ್ಮನಾದರು.
ಸುಮಾರು ೧೫ ವರ್ಷಗಳಿಂದ ಮಸ್ಕತ್ ನಲ್ಲಿ ಅವರು ಉದ್ಯೋಗ ಮಾಡುತಿದ್ದರು. ಮಗಳು ಮಸ್ಕತ್ ನ ಭಾರತೀಯ ಶಾಲೆಯಲ್ಲಿ ಎಂಟನೇ ತರಗತಿ ಓದುತ್ತಿರುವಾಗ ಹೆಂಡತಿ ಅನಾರೋಗ್ಯಕ್ಕೆ ತುತ್ತಾಗಿ ಮರಣ ಹೊಂದಿದ್ದರು. ನಂತರ ಮಗಳ ಪಾಲನೆಯ ಸಂಪೂರ್ಣ ಜವಬ್ದಾರಿಯನ್ನು ಅವರು ಹೊತ್ತು, ಮಗಳ ಮುಂದಿನ ಭವಿಷ್ಯದ ಕುರಿತು ಅವಳ ಪ್ರತಿಯೊಂದು ವಿಷಯಗಳಲ್ಲಿ ಗಮನವಿಟ್ಟು, ಅವಳನ್ನು ಚೆನ್ನಾಗಿ ನೋಡಿಕೊಳ್ಳುತಿದ್ದರು. ಮಗಳು ಮಸ್ಕತ್ ನಲ್ಲಿಯೆ ಪಿಯುಸಿ ಮುಗಿಸಿದ್ದಳು. ನಂತರ ಉನ್ನತ ಶಿಕ್ಷಣಕ್ಕಾಗಿ ಬೆಂಗಳೂರಿನಲ್ಲಿ ವೈದ್ಯಕೀಯ ಕಾಲೇಜೊಂದರಲ್ಲಿ  ಸೇರಿಸಿದ್ದರು. ಕಳೆದ ನಾಲ್ಕು ವರ್ಷಗಳಿಂದ ಬೆಂಗಳೂರಿನ ಹಾಸ್ಟೆಲ್ ನಲ್ಲಿ ಮಗಳು ಮತ್ತು ಮಸ್ಕತ್ ನಲ್ಲಿ ಇವರು ವಾಸ ಮಾಡುತಿದ್ದರು. ಕೆಲ ಬಂಧುಮಿತ್ರರು ಆಗಾಗ್ಗೆ ಮಗಳ ಹಾಸ್ಟೆಲ್ ಕಡೆ ಹೋಗಿ, ಮಗಳ ಚಟುವಟಿಕೆಗಳ ಬಗ್ಗೆ ಗಮನವಿಟ್ಟಿದ್ದರು. ರಜೆಗಾಗಿ ವರ್ಷಕ್ಕೊಮ್ಮೆ ಇವರು ಬೆಂಗಳೂರಿಗೆ ಹೋಗಿ ಬರುತಿದ್ದರು ಹಾಗೆಯೆ ಮಗಳು ಸಹ ರಜೆಯಲ್ಲಿ ವರ್ಷಕ್ಕೊಮ್ಮೆ ಮಸ್ಕತ್ ಗೆ ಬರುವುದು ರೂಡಿಯಾಗಿತ್ತು...
---

ಅಂದುಕೊಂಡ ಹಾಗೆ ಊರಿಗೆ ಹೋಗುವ ದಿನ ಬಂದೇ ಬಿಟ್ಟಿತು, ಮಗಳಿಗೆ ಫೋನ್ ಮಾಡಿ  ಸಂಜೆ ಬೆಂಗಳೂರನ್ನು ತಲುಪ್ತಿನಿ ಎಂದು ಹೇಳಿದರು. ಸರಿ ಏರ್ ಪೋರ್ಟಿಗೆ ಬರ್ತಿನಿ ಅಂತ ಮಗಳು ಹೇಳಿದಳು. ಬೇಡ ಎಂದು ಒತ್ತಾಯ ಮಾಡಿದರು ಸಹ ಮಗಳು ಹಟ ಹಿಡಿದು ಬರ್ತಿನಿ ಅಂತ ಹೇಳಿ, ಫೋನ್ ಕಟ್ ಮಾಡಿದಳು.
ಸಂಜೆ ಹೊತ್ತಿಗೆ ಮಸ್ಕತ್ ಫ್ಲೈಟ್ ಬೆಂಗಳೂರು ತಲುಪಿತ್ತು. ಇವರು ಇಮಿಗ್ರೇಶನ್ ಮತ್ತು  ಕಸ್ಟಮ್ಸ್ ತಪಾಸಣೆ ಮುಗಿಸಿ  ಹೊರಬಂದರು, ಮಗಳು ಅಲ್ಲಿ ಕಾಯುತ್ತ ನಿಂತಿದ್ದಳು.  ಹಾಯ್ ಪಪ್ಪ ಎನ್ನುತ್ತ ಮಗಳು ಅವರ ಕಡೆ ಕೈ ತೋರಿಸಿದಳು. ಮಗಳನ್ನು ನೋಡಿ ಕೈ ತೋರಿಸಿ ಮಗಳ ಸನಿಹಕ್ಕೆ ಬಂದರು. ಉಭಯ ಕುಶಲೋಪರಿ ವಿಚಾರಿಸಿಕೊಂಡು ಟ್ಯಾಕ್ಸಿ ಸ್ಟಾಂಡ್ ಕಡೆ ಹೊರಟರು. ಆಗ ಮಗಳು ಆ ಯುವಕನನ್ನು ತೋರಿಸಿ ತನ್ನ ಕಾಲೇಜಿನ ಸಹ ವಿದ್ಯಾರ್ಥಿ ಎಂದು ಪರಿಚಯಿಸಿದಳು. 
---

ನಿರೀಕ್ಷಿಸದೇ ಇದ್ದ ಈ ಬೆಳವಣಿಗೆ ಕಂಡು ಅವರು ಮೂಕ ವಿಸ್ಮಿತರಾದರು. ಬಾಯಿಂದ ಮಾತೇ ಹೊರಡಲಿಲ್ಲ. ಏನು ಮಾತನಾಡಬೇಕು ಎಂದು ಗೊತ್ತಾಗಲೇ ಇಲ್ಲ. ಟ್ಯಾಕ್ಸಿಯ ಮುಂಬದಿಯಲ್ಲಿ ಇವರು ಮತ್ತು ಹಿಂಬದಿಯಲ್ಲಿ ಮಗಳು ಮತ್ತು ಯುವಕ. ಟ್ಯಾಕ್ಸಿ ಏರ್ಪೋರ್ಟ್ ನಿಂದ ಹೊರಟಿತು. ಅವರಿಬ್ಬರು ಕಾಲೇಜಿನ ವಿಷಯ, ಹಾಸ್ಟೆಲ್ ನ ವಿಚಾರ ಇನ್ನು ಅನೇಕ ವಿಷಯಗಳನ್ನು ಮಾತನಾಡುತಿದ್ದರು. ಆದರೆ ಇವರು ಅದನ್ನೆಲ್ಲ ಕೇಳಿಸಿಕೊಳ್ಳುತ್ತಿರಲಿಲ್ಲ. ಕಾರಿನ ಕಿಟಕಿಯಿಂದ ತಂಪಾದ ಗಾಳಿ ಬರುತಿತ್ತು. ಮಸ್ಕತ್ ನ ಹವಮಾನಕ್ಕೂ ಮತ್ತು ಬೆಂಗಳೂರಿನ ಹವಮಾನಕ್ಕೂ ಅಜಗಜಾಂತರ ವ್ಯತ್ಯಾಸ. ಮಸ್ಕತ್ ನಲ್ಲಿ ೪೭-೪೮ ಟೆಂಪರೇಚರ್ ಇದ್ದರೆ, ಬೆಂಗಳೂರಿನಲ್ಲಿ ೨೭-೨೮ ರ ಆಸುಪಾಸಿನಲ್ಲಿತ್ತು. ವಾಹನ ರಸ್ತೆಯಲ್ಲಿ ಚಲಿಸುತಿದ್ದಂತೆ ತಣ್ಣನೆ ಗಾಳಿ ಕಾರಿನೊಳಗೆ ಪ್ರವಹಿಸಲು ಪ್ರಾರಂಭಿಸಿತು. ಆ ತಂಪಾದ ವಾತಾವರಣ, ಮನಸ್ಸನ್ನು ಪ್ರಫುಲ್ಲ ಗೊಳಿಸುವ ಬದಲು ಆ ಯುವಕ ಅವರ ಮನಸ್ಸನ್ನು ವಿಚಲಿತಗೊಳಿಸಿದ್ದ. ಮಗಳು ಇಷ್ಟು ಬೇಗ ಬದಲಾಗುತ್ತಾಳೆಂದು ಅವರು ಎಣಿಸಿರಲಿಲ್ಲ. ಮಗಳನ್ನು ಅರ್ಥಮಾಡಿಕೊಳ್ಳುವುದರಲ್ಲಿ ನಾನು ಎಡವಿದ್ದೀನಾ ಅಂತ ಅವರಿಗನಿಸಿತ್ತು. 
ಪತ್ನಿ ಅಗಲಿ ೮ ವರ್ಷವಾಗಿತ್ತಷ್ಟೆ ತನಗೆ ಅಂತ ಇರೋದು ಮಗಳೊಬ್ಬಳೆ. ಆ ಮಗಳು ತನ್ನಿಂದ ದೂರವಾಗ್ತಾಯಿದಾಳೆನೋ ಎಂದು ಯೋಚಿಸಲಾರಂಬಿಸಿದರು. ಅವರು ಮಸ್ಕತ್ ನಲ್ಲಿರುವಾಗ ಮಗಳಿಗಾಗಿ ತಮ್ಮ ಅರ್ಧದಷ್ಟು ಸಮಯ ವನ್ನು ಅವಳ ಏಳಿಗೆ ಗಾಗಿ ಮೀಸಲಿಟ್ಟಿದ್ದರು, ಸಾಂಸ್ಕೃತಿಕ ಚಟುವಟಿಕೆಗಳಾದ ಭರತನಾಟ್ಯ ಮತ್ತು ಸಂಗೀತದೆಡೆಗೆ ಆಸಕ್ತಿ ಸಹ ಬೆಳೆಸಿಕೊಳ್ಳಲಿ ಎಂದು ಪತ್ನಿ ಆಶಿಸಿದಾಗ, ಮಸ್ಕತ್ ನ ಅಲ್ ಖುವೇರ್ ನಲ್ಲಿ ವಾರಕ್ಕೆರಡು ಬಾರಿ ಸಂಗೀತ ತರಗತಿಗಳಿಗೆ ಮತ್ತೆ ಇನ್ನೆರಡು ಬಾರಿ ಭರತನಾಟ್ಯ ತರಗತಿಗಳಿಗೆ ವಾದಿಕಬೀರ್ ನಿಂದ ಅಲ್ ಖುವೇರ್ ಗೆ ಹಾಗೂ ಹತ್ತನೇ ತರಗತಿಯಿಂದ ಪಿಯುಸಿ ವರೆಗೆ ಟ್ಯೂಶನ್ ಗಾಗಿ ತಮ್ಮ ಕಾರಿನಲ್ಲಿ ಪಿಕಪ್ ಮತ್ತು ಡ್ರಾಪ್ ಮಾಡುತಿದ್ದರು. ಮಗಳ ಇಷ್ಟಾರ್ಥ ಗಳನ್ನು ತಪ್ಪದೆ ಪೂರೈಸಲು ಹಿಂದೆಮುಂದೆ ಯೋಚಿಸುತ್ತಲೆ ಇರಲಿಲ್ಲ. ಯಾವುದೇ ಕೊರತೆ ಇಲ್ಲದೆ ಮಗಳನ್ನು ಚೆನ್ನಾಗಿ ನೋಡಿಕೊಂಡಿದ್ದರು.
ಒಂದೊಮ್ಮೆ ಹೊಟ್ಟೆ ನೋವು ಎಂದು ಶಾಲೆಗೆ ಹೋಗುವುದಕ್ಕೆ ಆಗಲ್ಲ ಎಂದು ಮಲಗಿದ್ದಳು, ಚೆನ್ನಾಗಿ ವಿಶ್ರಾಂತಿ ತೆಗೆದುಕೊ ಎಂದು ಹೇಳಿ ಇವರು ಎಂದಿನಂತೆ ಕಛೇರಿಗೆ ಹೊರಟಿದ್ದರು. ಆದರೆ ಸಂಜೆ ಮನೆಗೆ ಬಂದು ನೋಡಿದರೆ ಇನ್ನು ಮಲಗಿಯೇ ಇದ್ದಳು. ಸರಿ ಡಾಕ್ಟರ್ ಹತ್ತಿರ ಹೋಗೋಣ ಬಾರಮ್ಮ ಎಂದು ಏಳಿಸಿ ಕರೆದು ಕೊಂಡು ಹೋಗಿದ್ದ್ರು. ಆ ಡಾಕ್ಟರ್ "ಇವರಮ್ಮ ಎಲ್ಲಿ" ಎಂದು ಕೇಳಿದರೆ, ಅವರು ಅಗಲಿ ೨ ವರ್ಷ ಆಗ್ತಾಯಿದೆ ಡಾಕ್ಟರ್, ಏನು ವಿಷಯ ಎಂದು ಗಾಬರಿಗೊಂಡು ಕೇಳಿದರು.
ಗಾಬರಿಗೊಳ್ಳುವ ಅವಶ್ಯಕತೆ ಇಲ್ಲ "ನಿಮ್ಮ ಮಗಳು ದೊಡ್ಡವಳಾಗಿದ್ದಾಳೆ" 
ವಿಷಯ ಕೇಳಿ ಸಂತೋಷ ವೇ ಆಯಿತು. ಛೇ ಎಂಥ ಪೆದ್ದ ನಾನು, ಹಿಂದೆ ಮುಂದೆ ವಿಚಾರಿಸದೆ ಕರೆದು ಕೊಂಡು ಬಂದಿದ್ದೀನಿ. ಇಂತಹ ವಿಷಯಗಳಲ್ಲಿ ಎಂತಹ ಅಲ್ಪ ಜ್ನಾನಿ ನಾನು ಎಂದು ಮರುಗಿದ್ದರು. ಮಗಳ ಕುರಿತು ಅತೀವ ಕಾಳಜಿ ವಹಿಸಿದ್ದ ಅವರಿಗೆ, ಇಂದು ಯಾರೋ ಒಬ್ಬನು ಬಂದು ಮಗಳನ್ನು ತಮ್ಮಿಂದ ಕಿತ್ತು ಕೊಳ್ತಾಯಿದ್ದಾನೆ ಎನ್ನುವುದನ್ನು ಅವರ ಮನಸ್ಸು ಒಪ್ಪಿಕೊಳ್ಳಲು ತಯಾರಿರಲಿಲ್ಲ. ಅವನ ಕಡೆ ಒಮ್ಮೆ ನೋಡಿದರು, ಅವನು ಒಬ್ಬ ರಾಕ್ಷಸ ತರಹ ಕಾಣಿಸುತಿದ್ದ. ಕೀಚಕನ ಹಾಗೆ ಕಿತ್ತುಕೊಳ್ಳಲು ಬಂದಿದ್ದಾನಾ ಎಂದು ಅನಿಸಿತ್ತು. ಹೆಣ್ಣು ಹೆತ್ತವರ ಸಂಕಟ ಸುಮ್ಮನೆ ಅಲ್ಲ ಅಂತ ಎಲ್ಲರೂ ಹೇಳೋದು ನಿಜ ಅಂತ ಗೊತ್ತಾಗ್ತ ಯಿದೆ. ನನ್ನವರು ಅಂತ ಯಾರು ಇಲ್ಲ, ಹೆತ್ತ ಅಪ್ಪ ಅಮ್ಮ ಇಲ್ಲ. ಕಟ್ಟಿಕೊಂಡ ಮಡದಿ ಸಹ ಇಲ್ಲ. ಬಂಧು ಬಳಗದವರೂ ಅಷ್ಟಕ್ಕಷ್ಟೇ. ಆಗಲೇ ಮುಕ್ಕಾಲು ಆಯಸ್ಸು ಮುಗಿದಿತ್ತು, ಮಗಳ ವಿದ್ಯಭ್ಯಾಸ ಮುಗಿದು ಅವಳೊಂದು ಉದ್ಯೋಗದಲ್ಲಿದ್ದಿದ್ದರೆ ಯೋಚಿಸುವ ಅಗತ್ಯ ವಿರಲಿಲ್ಲ ಅಂತ ಅನಿಸಿತ್ತು.
ಚಿನ್ನು ತಂದೆಯನ್ನು ನೋಡಿದಳು, ಅವರು ಚಿಂತಾಕ್ರಾಂತಗೊಂಡಿರುವುದು ಚಿನ್ನುಗೆ ಮರುಕವನ್ನುಂಟು ಮಾಡಿತು. ಅವರ ಸಂಕಟ ಇವಳಿಗೆ ಅರ್ಥವಾಯಿತು, ಜತೆಗೆ ತನ್ನ ಕ್ಲಾಸ್ ಮೇಟ್ ಬೇರೆ ಕಾರಲ್ಲಿ ಕುಳಿತಿದ್ದಾನೆ. ತಂದೆಯ ತಲ್ಲಣಕ್ಕೆ ಕಾರಣ ಗೊತ್ತಾಯಿತು.  ತನ್ನ ಒಳಿತಿಗಾಗಿ ಅಪ್ಪ ಎಷ್ಟೊಂದು ಕಷ್ಟ ಪಟ್ಟಿದ್ದಾರೆ. ತಾನು ಬಯಸಿದ್ದು ಎಂದೂ ಇಲ್ಲ ಎಂದು ಹೇಳಿಲ್ಲ. ಇಂತಹ ತಂದೆಯನ್ನು ಪಡೆಯಲು ತಾನು ಎಷ್ಟೊಂದು ಪುಣ್ಯ ಮಾಡಿದ್ದೆ ಎಂದು ಮನಸ್ಸಿನಲ್ಲಿಯೆ ಮೆಚ್ಚುಗೆ ವ್ಯಕ್ತ ಪಡಿಸಿದಳು. ನನ್ನ ಕಾಳಜಿ ಕುರಿತು ಯೋಚಿಸುವುದು ಸಹಜ ಅಂತ ಅನ್ನಿಸಿತವಳಿಗೆ.
---

ಚಿನ್ನು ಮತ್ತು ಆ ಯುವಕನ ಮಾತು, ನಗು ಇವರಿಗೆ ಕಿರಿಕಿರಿಯನ್ನುಂಟು ಮಾಡುತಿತ್ತು. ತಡೆಯಲಾರದೇ ಏನು ಚಿನ್ನು ನೀನು ಈ ತರಹ ಬದಲಾಗ್ತೀಯ ಅಂತ ನಾನು ಅಂದ್ಕೊಂಡಿರಲಿಲ್ಲ. ನನ್ನ ಮಾತು ನೀನು ಮೀರಲ್ಲ ಅಂದುಕೊಂಡಿದ್ದೆ. ಛೇ,... 
"ನೋಡಿ ಪಪ್ಪ. ಇದರಲ್ಲಿ ಏನು ತಪ್ಪು. ನನ್ನ ಸ್ಥಾನದಲ್ಲಿ ಇದ್ದಿದ್ದ್ರೆ ಎಲ್ಲರೂ ಇದನ್ನೆ ಮಾಡ್ತಾ ಇದ್ದರು. ಏನ್ ಮಹಾ!!!"
ಮಗಳ ಉತ್ತರ ಕೇಳಿ, ಅವರಿಗೆ ಗೊಂದಲವಾಯಿತು. "ಅಲ್ಲ ಯಾವುದಕ್ಕೂ ಒಂದು ಮಾತು ನನ್ನಲ್ಲಿ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳಬಹುದಾಗಿತ್ತು".
"ಕೆಲವು ಆಯ್ಕೆಗಳನ್ನು ಮತ್ತು ನಿರ್ಧಾರ ಗಳನ್ನು ನಾನು ತೆಗೆದುಕೊಳ್ಳಬಹುದು. ಅದಕ್ಕೆ ನಿಮ್ಮಿಂದ ಒಪ್ಪಿಗೆ ತಗೊಳ್ಳಕ್ಕಾಗಲ್ಲ". 
"ಏನು ಈ ತರಹ ಉತ್ತರ ಕೊಡ್ತಾಯಿದೀಯ?  ಉದ್ದಟತನದ ಮಾತು ಗಳು. ನಿಂದು ಜಾಸ್ತಿ ಯಾಯಿತು".
"ನೋಡಿ, ನೀವು ಹೀಗೆಲ್ಲ ಮಾತಾಡಾಬಾರದು. ಈಗ ನಾನು ಯುವತಿ,  ಯೋಚನೆ ಮಾಡುವ ಮನಸ್ಥಿತಿಯನ್ನು ನಾನು ಹೊಂದಿದ್ದೇನೆ. ಯಾವುದು ಸರಿ ತಪ್ಪು ಎಂದು ನಿರ್ಧಾರ ಮಾಡುವ ಪ್ರೌಡಿಮೆಯನ್ನು ನಾನು ಹೊಂದಿದ್ದೇನೆ. ಯಾವಾಗಲೂ ನಿಮ್ಮ ನಿಯಂತ್ರಣಕ್ಕೆ ಒಳಪಡುವುದಕ್ಕೆ ಆಗುವುದಿಲ್ಲ"......
ಮಗಳ ಮಾತು ಗಳನ್ನು ಕೇಳಿ, ನನ್ನ ಸಂಕಟವನ್ನ ಅರ್ಥ ಮಾಡಿಕೊಳ್ಳದೆ ಇವಳು ಈ ರೀತಿ ನಡೆದುಕೊಳ್ಳುತಿದ್ದಾಳೆ, ಇವಳು ನಾನು ಸಾಕಿದ ಮಗಳಾ ಎಂದು ಅನಿಸಿತು. ಎದುರುತ್ತರ ಕೊಡುತಿದ್ದಾಳೆ.  ನನ್ನ ಮಾತನ್ನು ಮೀರುತಿದ್ದಾಳೆ. ಮಕ್ಕಳು ದೊಡ್ಡವರಾದಾಗಲೆಲ್ಲ ನಮ್ಮಿಂದ ದೂರ ಆಗ್ತಾರೆ ಅಂತ ಕೇಳಿದ್ದು ನಿಜ ಅಂತ ಅನಿಸ್ತಾ ಇದೆ ಇಂದು. ಒಂದು ಹುಡುಗ ಸಿಕ್ಕಿದ ಮೇಲೆ, ತಂದೆ ತಾಯಿ ಬೇಡವಾ? ಇವಳಮ್ಮ ಆದರು ಈ ಸಮಯದಲ್ಲಿ ಇದ್ದಿದ್ದರೆ, ಇವಳನ್ನು ಹದ್ದು ಬಸ್ತಿನಲ್ಲಿಡುತಿದ್ದಳೇನೋ.  ಮಸ್ಕತ್ ನಲ್ಲಿ ಒಂಟಿ ಬದುಕು ನಡೆಸ್ತಾ, ಮಗಳಿಗಾಗಿ ಜೀವನವನ್ನೆ ಮುಡಿಪಾಗಿಟ್ಟಿದ್ದೀನಿ, ಅಂತದ್ರಲ್ಲಿ ಇವಳು ಈ ತರಹ ನಡ್ಕೊತಿದ್ದಾಳೆ ಛೇ.. ಎಂತಹ ಶಿಕ್ಷೆ ದೇವರೆ ನನಗೆ... ಕಣ್ಣಲ್ಲಿ ನೀರು ಜಿನುಗಿತ್ತು.  ದುಖಃ ಉಮ್ಮಳಿಸಿಬಂತು. ಅಳುವುದೊಂದೆ ಬಾಕಿ. ಮಗಳ ಈ ಆಟವನ್ನು ನೋಡಲು ಮಸ್ಕತ್ ನಿಂದ ಬರಬೇಕಿತ್ತಾ.......
ಇಬ್ಬರ ಮಧ್ಯೆ ಮಾತು ನಿಂತಿತು........
ಒಂದು ಕ್ಷಣ ಮೌನ ಆವರಿಸಿತ್ತು.
---

ಅಷ್ಟರಲ್ಲಿ ಆ ಯುವಕ, "ರೀ ಸ್ವಲ್ಪ ಕಾರ್ ನಿಲ್ಲಿಸಿ" ಎಂದು ಹೇಳಿದನು. ಕಾರ್ ನಿಂತೊಡನೆ, " ಥ್ಯಾಂಕ್ ಯು ಚಿನ್ನು ಫಾರ್ ಡ್ರಾಪಿಂಗ್, ಥ್ಯಾಂಕ್ ಯು ಅಂಕಲ್, ಬೈ ಎಂದು ಹೇಳಿ ಹೊರಟನು.
ಮಗಳು ತಂದೆಯ ಕಡೆ ನೋಡುತ್ತ......ಪಪ್ಪ...ಕಷ್ಟದಲ್ಲಿರೋರಿಗೆ ಸಹಾಯ ಮಾಡೋದು ತಪ್ಪಾ!!
ಹ್ಞೂ....... ಇಲ್ಲ....ಇಲ್ಲ.
ಅವನು ನನ್ನ ಕ್ಲಾಸ್ ಮೇಟ್, ಅವನ ರಿಲೇಟಿವ್ ಒಬ್ಬರು ಯುಎಸ್ ಎ ಗೆ ಹೋಗ್ತಾಯಿದ್ದರು ಅವರನ್ನು  ಸೆಂಡ್ ಆಫ್ ಮಾಡಲು ಬಂದಿದ್ನಂತೆ. ವಾಪಾಸ್ ಹೋಗಲು ಜೇಬು ತಡಕಾಡಿದ್ರೆ ಪರ್ಸ್ ಇಲ್ಲ. ಮರೆತು ಬಂದಿದ್ನೊ ಅಥವ ಕಳೆದು ಕೊಂಡನೋ ಗೊತ್ತಿಲ್ಲ. ಮನೆಗೆ ವಾಪಾಸ್ ಹೇಗೆ ಹೋಗೋದು ಅಂತ ಯೋಚಿಸುತ್ತಿರುವಾಗ ನನ್ನ ನೋಡಿದ್ನಂತೆ. ನಾನು ಹಣ ಕೊಟ್ರೆ, ಬೇಡ ಅಂದ. ನೀನು ಆಕಡೆ ಹೋಗ್ತಾಯಿದಿಯ, ನನಗೆ ಡ್ರಾಪ್ ಮಾಡು ಸಾಕು ಅಂತ ಹೇಳಿದ. 
 ಇಷ್ಟೊತ್ತು ತಂದೆಯ ಮನಸ್ಸಿನಲ್ಲಾಗುತಿದ್ದ ಭಾವನೆಗಳ ತಾಕಲಾಟಗಳನ್ನು ಗಮನಿಸಿ, ಈಗ ಹೇಳೀ ಪಪ್ಪ ನನ್ನ ನಿರ್ಧಾರ ತಪ್ಪಾ!!! ಎಂದು ಜೋರಾಗಿ ನಗುತ್ತ ಕೇಳಿದಳು,  
ಓಹ್ ಹಾಗೋ ವಿಷಯ, ನಾನು ಬೇರೆ ಇನ್ನೇನೋ ಯೋಚಿಸುತ್ತಾಯಿದ್ದೆ. ತಪ್ಪು ಅಲ್ಲ ಮಗಳೆ. ನನಗೆ ಒಳ್ಳೆ ಟೆನ್ಶನ್ ಕೊಟ್ಟೆ ನೀನು. ಅವನು ನಿನ್ನ ಲವ್ ಮಾಡ್ತಾ ಇರುವ ಹುಡುಗ, ಅವನನ್ನು ಪರಿಚಯ ಮಾಡಿಕೊಡಲು ಏರ್ ಪೋರ್ಟ್ ಗೆ ಕರೆದು ಕೊಂಡುಬಂದಿದ್ದೀಯ ಅಂತ ನಾನು ಎಣಿಸಿದೆ.
ನಿಮ್ಮ ಟೆನ್ಶನ್ ನೋಡಿ ಸ್ವಲ್ಪ ಮಜಾ ತಗೊಳ್ಳೋಣ ಅಂತ ಸುಮ್ಮನೆ ಇದ್ದೆ. ಹಾಗಾಗಿ ಹುಷಾರಾಗಿ ಜಾಣತನದಿಂದ ಉತ್ತರ ಕೊಟ್ಟೆ. ನನ್ನ ಉತ್ತರದಲ್ಲಿ ಎಲ್ಲೂ ಆ ಹುಡುಗನ ಮತ್ತು ಲವ್ ವಿಷಯದ ಪ್ರಸ್ತಾಪವಿಲ್ಲ, ಹೇಗಿತ್ತು ನನ್ನ ವಾಗ್ವೈಭವ.
ಹೇ ಕಳ್ಳಿ, ನೀನು ಭಲೇ ಇದ್ದೀಯಾ. ನೀನು ಈತರಹ ಎಲ್ಲ ತಮಾಷೆ ಮಾಡ್ತೀಯ ಅಂತ ನನಗೆ ಗೊತ್ತಿರಲಿಲ್ಲ... ತುಂಬ ಜಾಣೆ ಕಣೆಮ್ಮ ನೀನು. ಸಾರಿ ಪುಟ್ಟಾ..... ನಿನ್ನ ಬಗ್ಗೆ ನಾನು ತಪ್ಪಾಗಿ ಯೋಚಿಸಿಬಿಟ್ಟೆ. ಕ್ಷಮಿಸಿಬಿಡು ನನ್ನನ್ನು.
ಸಾರಿ ಪಪ್ಪ, ಅನವಶ್ಯಕವಾಗಿ ನಾನು ನಿಮಗೆ ತೊಂದರೆ ಕೊಟ್ಟುಬಿಟ್ಟೆ. 
ಇಲ್ಲ ಮಗಳೆ, ಸಾರಿ ಕೇಳ್ಬೇಡ. ಇಂದಲ್ಲ ನಾಳೆ ನೀನು ಇನ್ನೊಬ್ಬರ ಮನೆ ಸೊಸೆ ಯಾಗಿ ಹೋಗಲೇಬೇಕು. ಅದರ ಅರಿವಿಲ್ಲದೆ ನಾನು ತುಂಬಾ ಸ್ವಾರ್ಥಿಯಾಗಿ ಯೋಚಿಸುತಿದ್ದೆ. ನನ್ನ ಜವಬ್ದಾರಿಯನ್ನು ಎಚ್ಚರಿಸಿದ್ದಕ್ಕೆ ತುಂಬ ಥ್ಯಾಂಕ್ಸ್. 
ಛೆ ಹಾಗೇನಿಲ್ಲಪ್ಪ. ತಮಾಷೆ ಮಾಡಿ ತುಂಬಾ ದಿನ ಆಗಿತ್ತು, ಇವತ್ತು ಅವಕಾಶ ತುಂಬಾ ಚೆನ್ನಾಗಿತ್ತು ಹಾಗಾಗಿ ಅದನ್ನು ಬಳಸಿಕೊಂಡೆ...
ಇಬ್ಬರು ನಗ್ತಾ  ನಗ್ತಾಯಿದ್ದರು. 
ಸರಿ, ಯಾರು ಪ್ರಪೋಸ್ ಮಾಡಿದ್ದು, ಏನ್ ವಿಷಯ ಹೇಳು.
ಅಯ್ಯೋ ಬಿಡಪ್ಪ, ನೀನು ಏನು ಯೋಚನೆ ಮಾಡಬೇಡ. ಅವನು ಪ್ರಪೋಸ್ ಮಾಡಿದ. ನಾನು ಆಗಲ್ಲ ಅಂತ ಹೇಳಿದೆ. ಅವನು ಸುಮ್ನೆ ಹೊರಟು ಹೋದ ಅಷ್ಟೇ.
ಮಗಳ ನಿರ್ಧಾರ ಕೇಳಿ, ತುಂಬಾ ಖುಷಿ ಆಯಿತು. ಮಗಳು ತಾನು ಭಾವಿಸಿದ್ದಕ್ಕಿಂತ ತುಂಬಾ ಪ್ರಭುದ್ದತೆ ಹೊಂದಿದ್ದಾಳೆ ಅಂತ ಮೆಚ್ಚುಗೆ ಯಾಯಿತು.
ತಂದೆಯ ಹಣೆಯ ಮೇಲಿದ್ದ ಚಿಂತೆ ಯ ಗೆರೆಗಳು ಮಾಯವಾದವು. ಅವರು ತನ್ನನ್ನು ಎಷ್ಟು ಕಾಳಜಿ ವಹಿಸಿ ತನ್ನ ಒಳಿತು ಕೆಡುಕುಗಳ ಕಡೆ ಯಾವಾಗಲು ಚಿಂತಿಸುತ್ತಾರಲ್ಲ ಎಂದು ತಂದೆಯ ಬಗ್ಗೆ ಹೆಮ್ಮೆ ಯಾಯಿತು.
--xxx--