Tour ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
Tour ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶುಕ್ರವಾರ, ಜೂನ್ 13, 2025

ಸುಡು ಬಿಸಿಲಿನ ಸೌದಿ ಅರೇಬಿಯಾದಲ್ಲೂ ಇದೆ ತಂಪಾದ ಗಿರಿಶಿಖರಗಳು

ಸುಡು ಬಿಸಿಲಿನ ಸೌದಿ ಅರೇಬಿಯಾದಲ್ಲೂ ಇದೆ ತಂಪಾದ ಗಿರಿಶಿಖರಗಳು

ಬರಹ:- ಪಿ.ಎಸ್.ರಂಗನಾಥ, ಮಸ್ಕತ್, ಒಮಾನ್ ರಾಷ್ಟ್ರ.


ಸೌದಿ ಅರೇಬಿಯಾದ ಹೆಚ್ಚಿನ ಭಾಗ ಮರುಭೂಮಿಯಿಂದ ಕೂಡಿದ್ದು ಇಲ್ಲಿ ಅತಿ ಹೆಚ್ಚಿನ ಬಿಸಿಲಿನ ತಾಪಮಾನವಿರುವುದು ಬಹಳಷ್ಟು ಜನರಿಗೆ ಗೊತ್ತಿದೆ. ಪ್ರಪಂಚದ ಅತ್ಯಂತ ದೊಡ್ಡದಾದ ರಬ್ ಅಲ್ ಖಾಲಿ (ಎಂಪ್ಟಿ ಕ್ವಾರ್ಟರ್) ಎಂದು ಕರೆಯಲ್ಪಡುವ ಮರುಭೂಮಿ ಈ ದೇಶದಲ್ಲಿದೆ. ಈ ವಿಶಾಲವಾದ ಮರುಭೂಮಿಯು ದೇಶದ ಹವಾಮಾನ ಮತ್ತು ಪರಿಸರ ವ್ಯವಸ್ಥೆಗಳ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ. ಸೌದಿ ಅರೇಬಿಯಾ ದೇಶವು ಅತ್ಯಂತ ಧೀರ್ಘವಾದ, ಬೇಸಿಗೆಕಾಲ ಮತ್ತು ಅತಿ ಕಡಿಮೆ ಅವಧಿಯ ತಂಪಾದ ಮತ್ತು ಸ್ವಲ್ಪ ಆರ್ದ್ರ ಚಳಿಗಾಲದ ಕಠಿಣ ಮರುಭೂಮಿ ಹವಾಮಾನವನ್ನು ಹೊಂದಿದೆ.  ಇಂತಹ ಕಠಿಣ ಹವಮಾನದಿಂದ ದೇಶವನ್ನು ಸಂರಕ್ಷಿಸಿಕೊಳ್ಳಲು, ಇಲ್ಲಿನ ಸರ್ಕಾರವು ಅರಣ್ಯೀಕರಣ, ಸುಧಾರಿತ ಭೂ ನಿರ್ವಹಣಾ ಪದ್ಧತಿಗಳು ಅಳವಡಿಸಿಕೊಳ್ಳುತ್ತಿದೆ. ಬೇಸಿಗೆಯಲ್ಲಿನ ಸುಡು ಬಿಸಿಲಿನಿಂದ ತಪ್ಪಿಸಿಕೊಳ್ಳಲು ಏರ್ ಕಂಡೀಶನರ್ ಗಳಿಲ್ಲದೆ ಜೀವನ ನಡೆಸುವುದು ಬಹಳ ಕಷ್ಟ. ಇಂತಹ ಭೀಕರ ಮರಳುಗಾಡಿನ ಪ್ರದೇಶದಲ್ಲೂ ತಂಪಾದ ಹವಮಾನ ಪ್ರದೇಶಗಳಿರುವುದು ಇಲ್ಲಿನ ವಿಶೇಷ. ಆದರೆ ಇಲ್ಲಿಯೂ ಸಹ ತಂಪಾಗಿರುವ ಪ್ರದೇಶಗಳಿರುವುದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಇಲ್ಲಿನ ತಂಪಾದ ಹವಮಾನವನ್ನು ಅನುಭವಿಸಲು ಬೇಸಿಗೆ ಸೇರಿದಂತೆ, ವಿವಿಧ ರಜಾದಿನಗಳಲ್ಲಿ ಲಕ್ಷಾಂತರ ಜನರು ಈ ಪ್ರದೇಶಗಳಿಗೆ ಪ್ರವಾಸಕ್ಕೆ ಬರುತ್ತಾರೆ.

 ತುರೈಫ಼್, ಬ್ಲಾಹಮ್ರ್,  ಬಿಲ್ಸಮ್ರ್ ಕೇಂದ್ರ, ಅಲ್ ಬಹಾ, ಅಭಾ, ಅಸೀರ್ ಪ್ರಾಂತ್ಯ ಸೇರಿದಂತೆ ಕೆಲ ಪ್ರದೇಶಗಳಲ್ಲಿ ಈ ಹಿಮಪಾತವಾಗಿದೆ ಎಂದರೆ ನಂಬಲಾಗದು. ವಿಮಾನದಲ್ಲಿ ಪ್ರಯಾಣಿಸುವಾಗ ಮೋಡಗಳು ಪಕ್ಕದಲ್ಲಿ ಸಾಗುವಂತಹ ಅದ್ಭುತ ವಿಹಂಗಮ ದೃಶ್ಯವನ್ನು, ಇಲ್ಲಿ ಸ್ವತಃ ಕಾಣಬಹುದು. ಪಶ್ಚಿಮ ಘಟ್ಟದಲ್ಲಿನ ತಿರುವಿನ ರಸ್ತೆಯಲ್ಲಿ ಪ್ರಯಾಣಿಸುವ ಅನುಭವ, ಕೇಬಲ್ ಕಾರ್ ಪ್ರಯಾಣ, ಸುಂದರ ಉಧ್ಯಾನವನಗಳು,  ಒಂದಾ ಎರಡಾ!  ಅಲ್ಲ, ಹತ್ತು ಹಲವಾರು ಅದ್ಭುತ ಪ್ರವಾಸಿತಾಣಗಳು ಇಲ್ಲಿವೆ.  ಈ ಎಲ್ಲಾ ಸ್ಥಳಗಳು ಬೇಸಿಗೆ ವಿಶ್ರಾಂತಿ ಧಾಮಗಳಾಗಿ ಅದ್ಭುತವಾಗಿ ಅಭಿವೃದ್ದಿ ಹೊಂದಿದ್ದು. ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರು ಇಲ್ಲಿಗೆ ಬೇಟಿ ನೀಡುತ್ತಾರೆ. 

ಈ ಲೇಖನದಲ್ಲಿ ಸೌದಿ ಅರೇಬಿಯಾದಲ್ಲಿನ ತಂಪಾದ ಪ್ರದೇಶಗಳ ಕುರಿತು ಒಂದು ಒಳನೋಟ ಇಲ್ಲಿದೆ. 

*1). ಅಭಾ(Abha) - ಆಸಿರ್ ಪ್ರಾಂತ್ಯ(Aseer Region):* 

ಸೌದಿ ಅರೇಬಿಯಾದ ನೈಋತ್ಯ ಭಾಗದಲ್ಲಿರುವ ಅಭಾ ಪ್ರದೇಶವು ಆಸಿರ್ ಪ್ರಾಂತ್ಯದಲ್ಲಿದೆ. ಇದು ಅಲ್-ಹಿಜಾಜ್ ಪರ್ವತದ ಮೇಲಿದ್ದು ಸುತ್ತಲೂ ಬೆಟ್ಟಗಳಿಂದ ಆವೃತವಾಗಿದೆ. ಈ ಸ್ಥಳವು ಸಮುದ್ರ ಮಟ್ಟದಿಂದ ಸುಮಾರು 2,200 ಮೀಟರ್ ಎತ್ತರದಲ್ಲಿರುವುದರಿಂದ ಇಲ್ಲಿನ ಹವಾಮಾನವು ಬೇಸಿಗೆಯಲ್ಲಿಯೂ ಸಹ ತಂಪಾಗಿರುತ್ತದೆ. ಬೇಸಿಗೆಯಲ್ಲಿ ಇಲ್ಲಿಗೆ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಈ ಪ್ರಾಂತ್ಯದಲ್ಲಿ ಹಲವಾರು ಪ್ರವಾಸಿ ತಾಣಗಳಿವೆ. 

.

*ಆಸೀರ್ ಪ್ರಾಂತ್ಯದಲ್ಲಿನ ಪ್ರಮುಖ ಆಕರ್ಷಣೆಗಳು:*

ಅಭಾ: ಅಸೀರ್ ಪ್ರಾಂತ್ಯದ ರಾಜಧಾನಿ, ಈ ನಗರವು ಆಧುನಿಕ ಸೌಕರ್ಯಗಳನ್ನು ಒಳಗೊಂಡಿದ್ದರೂ, ಪುರಾತನ ಸಾಂಪ್ರದಾಯಿಕ ಶೈಲಿಯನ್ನು ಬಿಟ್ಟುಕೊಟ್ಟಿಲ್ಲ. 

ಅಭಾ ಸರೋವರ(Abha Dam Lake): ಈ ಸರೋವರದಲ್ಲಿ ದೋಣಿ ವಿಹಾರ ಮಾಡಲು ವ್ಯವಸ್ಥೆ ಮಾಡಲಾಗಿದೆ, ಇದೊಂದು ಪ್ರಶಾಂತ ಸರೋವರವಾಗಿದ್ದು ವಿಶ್ರಾಂತಿ ಸಮಯವನ್ನು ಇಲ್ಲಿ ಆರಾಮವಾಗಿ ಕಳೆಯಬಹುದು.

ಅಭಾ ಕೇಬಲ್ ಕಾರ್ (New Abha Cable Car):  ಈ ಕೇಬಲ್ ಕಾರ್ ಮೂಲಕ ಸಂಚರಿಸುತ್ತ, ಇಲ್ಲಿಯ ಸುತ್ತಮುತ್ತಲಿನ ಪರ್ವತಗಳ ವಿಹಂಗಮ ನೋಟವನ್ನು ಕಣ್ತುಂಬಿಕೊಳ್ಳಬಹುದು.

ಅಲ್ ಮುಫ್ತಾಹಾ ಕಲಾ ಗ್ರಾಮ(Al Muftaha Art Village): ಈ ಸ್ಥಳದಲ್ಲಿ ಇಲ್ಲಿನ ಸ್ಥಳೀಯ ಕಲೆ ಮತ್ತು ಕರಕುಶಲ ವಸ್ತುಗಳ ಪ್ರದರ್ಶನವಿರುವ ವಸ್ತು ಸಂಗ್ರಹಾಲಯವಿದೆ. ಇಲ್ಲಿ ಸೌದಿ ಅರೇಬಿಯಾದ ಪುರಾತನ ಮನೆಗಳನ್ನ ನೋಡಬಹುದು. ಈ ವಸ್ತು ಸಂಗ್ರಹಾಲಯವನ್ನು ನೋಡುತಿದ್ದರೆ,  ಯುರೋಪಿನ ಪುರಾತನ ಶೈಲಿಯ ಸಂಗ್ರಹಾಲಯವನ್ನು ನೋಡುತಿದ್ದೇವೆಯಾ ಎನ್ನುವುದು ಭಾಸವಾಗುತ್ತದೆ.

ಆಸೀರ್ ರಾಷ್ಟ್ರೀಯ ಉದ್ಯಾನವನ (Asir National Park): ಇದೊಂದು ಸಂರಕ್ಷಿತ ಅರಣ್ಯ ಪ್ರದೇಶವಾಗಿದೆ. ವನ್ಯಜೀವಿ ವೀಕ್ಷಣೆ,  ಟ್ರೆಕಿಂಗ್ ಕ್ಯಾಂಪಿಂಗ್, ಬೆಟ್ಟಗಳ ನಡುವೆ ಹಾದುಹೋಗುವ ಮೋಡಗಳ ವೀಕ್ಷಣೆ ಗಾಗಿ ಈ ಸ್ಥಳ ಪ್ರಸಿದ್ದ.  ಪರ್ವತಗಳ ಕಣಿವೆಗಳ ಮಧ್ಯೆಯಿರುವ ಅರಣ್ಯದಲ್ಲಿನ ಟ್ರೆಕಿಂಗ್ ಗಾಗಿರುವ ಕಾಲ್ನಡಿಗೆಯ ಹಾದಿಗಳು ಅದ್ಭುತ ಅನುಭವವನ್ನು ನೀಡುತ್ತವೆ. 



ರಿಜಲ್ ಅಲ್ಮಾ ಗ್ರಾಮ (Rijal Almaa Village): ಯುನೆಸ್ಕೋ ವಿಶ್ವ ಪರಂಪರೆಯ ತಾಣ, ಇಲ್ಲಿನ ವಿಶಿಷ್ಟ ವಾಸ್ತುಶಿಲ್ಪ ಮತ್ತು ಸಾಂಪ್ರದಾಯಿಕ ಶೈಲಿಗೆ ಈ ಗ್ರಾಮ ಹೆಸರುವಾಸಿಯಾಗಿದೆ. ಅಭಾದಿಂದ ಪಶ್ಚಿಮಕ್ಕೆ ಸುಮಾರು 50 ಕಿ.ಮೀ ದೂರದಲ್ಲಿದೆ. ಈ ಗ್ರಾಮವು 900 ವರ್ಷಗಳಿಗೂ ಹಳೆಯದಾಗಿದೆ. 


ಅಲ್ ಹಬಾಲಾ ಗ್ರಾಮ (Al Habala Village Hanging Village): ಈ ಸ್ಥಳದಲ್ಲಿನ ಬೆಟ್ಟಗಳು, ವಿಶಿಷ್ಟವಾದ ಬಂಡೆಗಳು, ಕಣಿವೆಗಳ ರಮ್ಯ ನೋಟವನ್ನು ಅನುಭವಿಸುತ್ತ  ಈ ಸ್ಥಳವನ್ನು ಕೇಬಲ್ ಕಾರ್ ಮೂಲಕ ಪ್ರವೇಶಿಸಬಹುದು.  ಇಲ್ಲಿನ ಪ್ರಕೃತಿಯ ನೋಟ ಪ್ರವಾಸಿಗರನ್ನ ಬೆರಗುಗೊಳಿಸುತ್ತದೆ.

ಜಬಲ್ ಸಾವ್ಡಾ (Jabal Sawda):  ಆಸಿರ್ ಪರ್ವತ ಶ್ರೇಣಿಯಲ್ಲಿನ ವಿಹಂಗಮ ನೋಟಗಳನ್ನು ಅನುಭವಿಸಲು ಈ ಸ್ಥಳವು ಸೂಕ್ತವಾಗಿದೆ. ಟ್ರೆಕಿಂಗ್ ಮಾಡಲು ಇಲ್ಲಿ ಅವಕಾಶವಿದೆ. 

ವಾಟರ್ ಫಾಲ್ ಪಾರ್ಕ್ (Waterfall Park): ಇದೊಂದು ಸುಂದರವಾದ ಉದ್ಯಾನವನವಾಗಿದ್ದು, ಕೃತಕ  ಜಲಪಾತ,  ಕಾರಂಜಿಗಳು ಮತ್ತು ಮಕ್ಕಳು ಆಟವಾಡಲು ಈ ಉದ್ಯಾನವನ ಸೂಕ್ತವಾಗಿದೆ.

ಮೇಲಿನ ಸ್ಥಳಗಳ ಜತೆಗೆ ಇಲ್ಲಿನ, ಐತಿಹಾಸಿಕ ಶಾದಾ ಅರಮನೆ, ಅಸೀರ್ ಪ್ರಾದೇಶಿಕ ವಸ್ತುಸಂಗ್ರಹಾಲಯಗಳನ್ನು ನೋಡಬಹುದು, ಈ ಪ್ರದೇಶದ ಇತಿಹಾಸ ಮತ್ತು ಸಂಸ್ಕೃತಿಯ ಒಳನೋಟಗಳನ್ನು ಅರಿಯಲು ಈ ಸ್ಥಳ ಸೂಕ್ತವಾಗಿದೆ.



*2). ತೈಫ್* :- ಈ ತೈಫ್ ನಗರವನ್ನು ಗುಲಾಬಿ ನಗರ ಎಂದು ಕರೆಯುತ್ತಾರೆ.

ಸರಾವತ್ ಪರ್ವತಗಳ ಇಳಿಜಾರುಗಳಲ್ಲಿ ನೆಲೆಗೊಂಡಿರುವ ಈ ಸ್ಥಳವು ಸುಂದರವಾದ ಗುಲಾಬಿ ತೋಟಗಳು, ತಾಜಾ ಗಾಳಿ ಮತ್ತು ಪರ್ವತ ನೋಟಗಳಿಗೆ ಹೆಸರುವಾಸಿಯಾಗಿದೆ. ಇದು ಜನಪ್ರಿಯ ಬೇಸಿಗೆಯ ವಿಹಾರ ತಾಣವಾಗಿದೆ. ಈ ಪ್ರಾಂತ್ಯವು ತಂಪಾದ ಹವಾಮಾನಕ್ಕೆ ಹೆಸರುವಾಸಿಯಾಗಿದ್ದು, ಸೌದಿ ಅರೇಬಿಯಾದ ಇತರೆ ಪ್ರದೇಶಗಳಲ್ಲಿನ ಜನರು ಬೇಸಿಗೆಯ ಬಿಸಿಲನ್ನು ತಪ್ಪಿಸಿಕೊಳ್ಳಲು ಈ ಸ್ಥಳಕ್ಕೆ ಸ್ಥಳೀಯರು ಭೇಟಿ ನೀಡುತ್ತಾರೆ.  ಸೌದಿ ಅರೇಬಿಯಾದ ಬೇಸಿಗೆಯ ತಾಣವೆಂದು ಗುರುತಿಸಲಾಗಿದೆ.

ತೈಫ್ ನಗರವು ಜೆದ್ದಾ ದಿಂದ 175 ಕಿಲೋಮೀಟರ್ ಮತ್ತು ರಿಯಾದ್ ನಿಂದ 785 ಕಿಲೋಮೀಟರ್ ದೂರವಿದೆ. ತೈಫ್ ತನ್ನ ಪರಿಮಳಯುಕ್ತ ಗುಲಾಬಿಗಳು ಮತ್ತು ಸುಗಂಧ ದ್ರವ್ಯ ಕಾರ್ಖಾನೆಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿನ ಪ್ರಮುಖ ಆಕರ್ಷಣೆಗಳನ್ನು ನೋಡುವುದಾದರೆ, ಅಲ್ ಹದಾ ಪರ್ವತ, ಅದರ ಉದ್ದವಾದ ಕೇಬಲ್ ಕಾರ್ ಸವಾರಿ, ಗುಲಾಬಿ ತೋಟಗಳು ಮತ್ತು ಕಾಲ್ನಡಿಗೆಯ ಹಾದಿಗಳು, ಜೊತೆಗೆ ವಾಟರ್ ಪಾರ್ಕ್ ಮತ್ತು ಟೊಬೊಗನ್ ಸ್ಲೈಡ್ ಅನ್ನು ಹೊಂದಿರುವ ಅಲ್ ಕರ್ ಪ್ರವಾಸಿ ಗ್ರಾಮ ಇಲ್ಲಿವೆ. 

*3). ತುರೈಫ್* : ಐತಿಹಾಸಿಕ  ಅತ್-ತುರೈಫ್ ಸೌದಿಯ ಉತ್ತರ ಭಾಗದ ಈ ಪ್ರದೇಶ ಅತ್ಯಂತ ತಂಪಾದ ಪ್ರದೇಶವಾಗಿದೆ. ಜೋರ್ಡಾನ್ ದೇಶದ  ಉತ್ತರ ಗಡಿ ಪ್ರಾಂತ್ಯದ ಗಡಿಯ ಬಳಿಯಿದೆ. ಜೆದ್ದಾದಿಂದ 1600 ಕಿಲೋಮೀಟರ್ ಮತ್ತು ರಿಯಾದ್ 1400 ಕಿಲೋಮೀಟರ್ ದೂರವಿದೆ.  ಈ ಪ್ರದೇಶವನ್ನು ಮೊದಲ ಸೌದಿ ರಾಜ್ಯ (1727-1818)  ಎಂದು ಗುರುತಿಸಲಾಗುತ್ತಿದೆ. ಸಾಂಪ್ರದಾಯಿಕ ನಜ್ದಿ ಶೈಲಿಯಲ್ಲಿ ಮಣ್ಣಿನ ಇಟ್ಟಿಗೆಯಿಂದ ರಚಿಸಲಾದ ಇಲ್ಲಿರುವ ರಾಜಮನೆತನದ ಕೋಟೆಯು ಪ್ರಮುಖ ಆಕರ್ಷಣೆಯಾಗಿದೆ. 2010 ರಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿ ಘೋಷಿಸಲ್ಪಟ್ಟಿತು, ಚಳಿಗಾಲದ ಅತಿ ಕಡಿಮೆ (−12.0 °C (10.4 °F)) ತಾಪಮಾನವನ್ನು ಈ ಪಟ್ಟಣದಲ್ಲಿ ಕಾಣಬಹುದು.  




*4). ಅಲ್ ಬಹಾ (Al Baha)*:

 ಅಲ್ ಬಹಾ ವನ್ನು ಸೌದಿ ಅರೇಬಿಯಾದ ಹಿಡನ್ ಪ್ಯಾರಡೈಸ್ (hidden paradise)  ಎಂದು ಕರೆಯುತ್ತಾರೆ. ಇಲ್ಲಿ ಹಲವಾರು ಸುಂದರ ಉಧ್ಯಾನವನಗಳಿವೆ. ಕಾಡುಗಳು, ಕಣಿವೆಗಳು, ಹಳ್ಳಕೊಳ್ಳಗಳು,  ಪ್ರಾಚೀನ ಹಳ್ಳಿಗಳು, ಈ ಪ್ರದೇಶದಲ್ಲಿವೆ. ಕೆಲವೊಮ್ಮೆ ಇಲ್ಲಿ ಹಿಮಪಾತವು ಆಗುತ್ತದೆ. ವಿಶೇಷವೇನೆಂದರೆ ವರ್ಷಪೂರ್ತಿ ತಂಪಾದ ಹವಮಾನ ಇಲ್ಲಿರುರುತ್ತದೆ. ಹೀಗಾಗಿ ಎಲ್ಲೆಲ್ಲೀ ಹಚ್ಚ ಹಸಿರನ್ನಕಾಣಬಹುದು. 

ಪ್ರವಾಸಿಗಳು ನೋಡಲು ಹಲವಾರು ಸ್ಥಳಗಳಿವೆ. ರಘದನ್ ಫಾರೆಸ್ಟ್ ಪಾರ್ಕ್, ಐನ್ ವಿಲೇಜ್, ಖೈರಾ ಫಾರೆಸ್ಟ್, ಹಲವಾರು ಉದ್ಯಾನವನಗಳು, ಪಿಕ್ನಿಕ್ ತಾಣಗಳು ಮತ್ತು ನಯನ ಮನೋಹರ ಹಚ್ಚ ಹಸಿರಿನ ಅರಣ್ಯ ಪ್ರದೇಶಗಳು. ಹಸಿರು ಹೊದ್ದ ಬೆಟ್ಟಗುಡ್ಡಗಳು, ಹೀಗೆ ವಿವಿಧ ರೀತಿಯ ಪ್ರವಾಸಿ ಸ್ಥಳಗಳು ಇಲ್ಲಿವೆ.




5). ಅಲ್ ಜೌಫ್ - ಆಲಿವ್ ರಾಜಧಾನಿ (Al Jouf – The Olive Capital)

ಉತ್ತರ ಸೌದಿ ಅರೇಬಿಯಾದಲ್ಲಿರುವ ಅಲ್ ಜೌಫ್ ಸ್ಥಳವು, ಆಲಿವ್ ತೋಟಗಳು, ಹಸಿರಿನ ವಾತಾವರಣ ಮತ್ತು ತಂಪಾದ ಹವಮಾನಕ್ಕೆ ಹೆಸರುವಾಸಿಯಾದ ಪ್ರದೇಶವಾಗಿದೆ. ಇಲ್ಲಿನ ಸಕಾಕಾ ನಗರ, ಕೃಷಿ ತೋಟಗಳಿಂದ ಆವೃತವಾಗಿದ್ದು, ಬೇರೆಲ್ಲೆಡೆಗಿಂತ ತಂಪಾದ ಹವಾಮಾನ ಇಲ್ಲಿರುತ್ತದೆ.

ಇಲ್ಲಿ ಆಲೀವ್ ಅನ್ನು ಹೆಚ್ಚಾಗಿ ಬೆಳೆಯುವದರಿಂದ ಚಳಿಗಾಲದಲ್ಲಿ ವರ್ಷಕ್ಕೊಮ್ಮೆ ಆಲಿವ್ ಉತ್ಸವವನ್ನು ಆಚರಿಸಲಾಗುತ್ತದೆ. ಈ ಪ್ರದೇಶದಲಿ ನಡೆಯುವ ಅತಿದೊಡ್ಡ ಉತ್ಸವಗಳಲ್ಲಿ ಒಂದಾಗಿದೆ. ಪುರಾತನ ಜಾಬಲ್ ಕೋಟೆ (Zaabal Castle) ಯಿಂದ ಸುತ್ತಮುತ್ತಲಿನ ಹಸಿರು ತುಂಬಿದ ಸುಂದರವಾದ ತೋಟಗಳನ್ನು ನೋಡಬಹುದು



6.) ತಬೂಕ್  (Tabuk):- ಸೌದಿ ಅರೇಬಿಯಾದ ವಾಯುವ್ಯ ಭಾಗದ ಜೋರ್ಡಾನ್ ಗಡಿಯಲ್ಲಿದೆ. ಈ ಪ್ರದೇಶಕ್ಕೆ  ಸುಮಾರು ಐದು ಸಾವಿರವರ್ಷಗಳ ಇತಿಹಾಸವಿದೆ. ಇದೊಂದು ಪುರಾತನ ನಗರವಾಗಿದೆ.  ಚಳಿಗಾಲದಲ್ಲಿ ಮೈಕೊರೆಯುವ ಚಳಿ ಈ ಭಾಗದಲ್ಲಿರುತ್ತದೆ. ಬೇಸಿಗೆಕಾಲದಲ್ಲಿ ಬೆಳಿಗ್ಗೆ ಸುಡು ಬಿಸಿ ವಾತಾವಾರಣವಿದ್ದರೂ, ಸಂಜೆಯ ವಾತಾವರಣ ಹಿತದಾಯಕವಾಗಿರುತ್ತದೆ. 

 ಅತ್ಯಂತ ಧೀರ್ಘ ಇತಿಹಾಸವಿರುವ ಈ ತಾಣ ಪ್ರಾಚೀನ ಪುರಾತತ್ತ್ವ ಶಾಸ್ತ್ರದ ಸ್ಥಳಗಳನ್ನು ಹೊಂದಿದೆ. ಪ್ರವಾದಿ ಮೋಸೆಸ್ ಅವರು ಹತ್ತಾರು ವರ್ಷಗಳ ಕಾಲ ಈ ಸ್ಥಳದಲ್ಲಿ ವಾಸಿಸಿದ್ದರೆಂದು ಹೇಳಲಾಗಿದೆ. ಈ ಪ್ರಾಂತ್ಯವು ಕೆಂಪು ಸಮುದ್ರದ ಕರಾವಳಿ ತೀರವನ್ನು ಹೊಂದಿದೆ. ಹಲವಾರು ಸುಂದರವಾದ ಪಟ್ಟಣಗಳು ಈ ಪ್ರಾಂತ್ಯದಲ್ಲಿದೆ. ಕರಾವಳೀ ತೀರ ಮಾತ್ರವಲ್ಲದೆ, ಮರುಭೂಮಿ, ಎತ್ತರದ ಪರ್ವತಗಳು ಈ ಪ್ರಾಂತ್ಯದಲ್ಲಿವೆ. ತಬೂಕ್ ಪಟ್ಟಣದ ಮಧ್ಯಭಾಗದಲ್ಲಿರುವ ತಬೂಕ್ ಕೋಟೆಯು,  ಕ್ರಿ.ಪೂ 3500 ರ ಹಿಂದಿನ ಕೋಟೆಯಾಗಿದೆ ಎಂದು ಹೇಳುತ್ತಾರೆ.



 7). ಜಜಾನ್ ಹೈಲ್ಯಾಂಡ್ಸ್ (Jazan highlands) :

ಯೆಮೆನ್ ಗಡಿಯ ಸಮೀಪವಿರುವ ಈ ಪ್ರದೇಶವು ಆಶ್ಚರ್ಯಗಳಿಂದ ತುಂಬಿದೆ. ಕರಾವಳಿ ಬಿಸಿ ಮತ್ತು ಆರ್ದ್ರತೆಯಿಂದ ಕೂಡಿದ್ದರೂ, ಜಜಾನ್ ಹೈಲ್ಯಾಂಡ್ಸ್, ವಿಶೇಷವಾಗಿ ಫೈಫಾ ಪರ್ವತಗಳು ಮುಂಗಾರಿನಲ್ಲಿ ಹಸಿರಿನಿಂದ ಮೈದುಂಬಿ ಕೊಂಡಿರುತ್ತವೆ ಅಷ್ಟೇ ಅಲ್ಲದೆ ಮಳೆಗಾಲದ ಮಂಜನ್ನೂ  ಇಲ್ಲಿ ನೋಡಬಹುದು. ಇಲ್ಲಿರುವ ತೋಟಗಳನ್ನು ನೋಡುತಿದ್ದರೆ, ಇದೇನಿದು ಅರೇಬಿಯಾ ದೇಶವೋ, ಅಥವಾ ಆಗ್ನೇಯ ಏಷ್ಯಾದ ಒಂದು ಪ್ರಾಂತ್ಯವೋ ಎನ್ನುವಂತೆ  ಭಾಸವಾಗುತ್ತದೆ.

ಬನಿ ಮಲಿಕ್ ಮತ್ತು ಅಲ್-ಡೇಯರ್ ಇಲ್ಲಿರುವ ಹಚ್ಚ ಹಸಿರಿನ ಪರ್ವತ ಪ್ರದೇಶದ ಹಳ್ಳಿಗಳು, ಕಾಫಿ ತೋಟಗಳು ಮತ್ತು ಸಾಂಪ್ರದಾಯಿಕ ಜೀವನಕ್ಕೆ ಹೆಸರುವಾಸಿಯಾಗಿವೆ.  ಮಳೆಗಾಲದ ಸಮಯದಲ್ಲಿ ಬೆಟ್ಟಗಳು ಹಸಿರಿನಿಂದ ಕಂಗೊಳಿಸುತ್ತವೆ.

8) ಹೇಲ್ (Hail):-  ಇದು ವಾಯುವ್ಯ ಸೌದಿ ಅರೇಬಿಯಾದಲ್ಲಿರುವ ಶಮ್ಮಾರ್ ಪರ್ವತಗಳಾದ ಅಜಾ ಮತ್ತು ಸಲ್ಮಾ ನಡುವೆ ಇರುವ ಒಂದು ನಗರ. ರಿಯಾದ್ ನಿಂದ ಸುಮಾರಿ 571 ಕಿಲೋಮೀಟರ್ ದೂರದಲ್ಲಿದೆ. ದಕ್ಷಿಣದ ಎತ್ತರದ ಪ್ರದೇಶಗಳು ಅಥವಾ ಉತ್ತರದ ಗಡಿಗಳಷ್ಟು ತಂಪಾಗಿಲ್ಲದಿದ್ದರೂ, ಉತ್ತರದಲ್ಲಿ ನೆಲೆಗೊಂಡಿರುವ ಹೈಲ್, ಇತರ ಮರುಭೂಮಿ ಪ್ರದೇಶಗಳಿಗೆ ಹೋಲಿಸಿದರೆ ಹೆಚ್ಚು ಸಮಶೀತೋಷ್ಣ ಹವಾಮಾನ ಇಲ್ಲಿರುತ್ತದೆ.


ಈ ತಾಣವು,  ಐತಿಹಾಸಿಕ, ನೈಸರ್ಗಿಕ ಮತ್ತು ಆಧುನಿಕ ಆಕರ್ಷಣೆಗಳ ಮಿಶ್ರಣದ ಅನುಭವನ್ನು ನೀಡುತ್ತದೆ. ಪ್ರಮುಖ ತಾಣಗಳಲ್ಲಿ ಅಲ್-ಕಿಶ್ಲಾ ಅರಮನೆ, ಆರಿಫ್ ಕೋಟೆ, ಅಲ್-ರಾಜಿ ಮಸೀದಿ ಮತ್ತು ಲವೇರಾ ಥೀಮ್ ಪಾರ್ಕ್ ಸೇರಿವೆ. ಪ್ರಕೃತಿ ಪ್ರಿಯರು ಅಲ್ ಸಮ್ರಾ ಪರ್ವತ, ಹತಿಮಾ ಜ್ವಾಲಾಮುಖಿ ಕುಳಿ ಮತ್ತು ಹತ್ತಿರದ ಅಲ್ ನಫುದ್ ಮರುಭೂಮಿಯನ್ನು ಅನ್ವೇಷಿಸಬಹುದು.

9) ಅಲ್ ಉಲಾ (AlUla):


ಅಲ್ಉಲಾ ನಗರವು, ಸೌದಿ ಅರೇಬಿಯಾದ ಮದೀನಾ ಪ್ರಾಂತ್ಯದಲ್ಲಿರುವ ಒಂದು ಪ್ರಾಚೀನ ಅರೇಬಿಯನ್ ಓಯಸಿಸ್ ನಗರ ಮತ್ತು ಗವರ್ನರೇಟ್ ಆಗಿದ್ದು, ಇದು ಮದೀನಾ ನಗರದ ವಾಯುವ್ಯಕ್ಕೆ 350 ಕಿಲೋಮೀಟರ್ ದೂರದಲ್ಲಿದೆ. ಈ ಪ್ರಾಂತ್ಯವು, ಇಲ್ಲಿನ ತಂಪಾದ ಹವಾಮಾನಕ್ಕೆ ಹೆಸರುವಾಸಿಯಾಗಿದೆ. ಇಲ್ಲಿನ ಕಡಿಮೆ ತಾಪಮಾನ ದಿಂದಾಗಿ, ಚಳಿಗಾಲದಲ್ಲಿ ನಡೆಯುವ ಹಲವಾರು ವಿಶಿಷ್ಟ ಹಬ್ಬಗಳು ಮತ್ತು ಹೊರಾಂಗಣ ಕಾರ್ಯಕ್ರಮಗಳಿಂದಾಗಿ ಈ ತಾಣವು ಜನಪ್ರಿಯವಾಗಿದೆ.

ಅಲ್ ಉಲಾ ಐತಿಹಾಸಿಕ ತಾಣಗಳಿಂದ ಹಿಡಿದು ನೈಸರ್ಗಿಕ ಅದ್ಭುತಗಳು ಮತ್ತು ಆಧುನಿಕ ವಾಸ್ತುಶಿಲ್ಪದ ಅದ್ಭುತಗಳವರೆಗೆ ವೈವಿಧ್ಯಮಯ ಆಕರ್ಷಣೆಗಳನ್ನು ಇಲ್ಲಿ ನೋಡಬಹುದು



ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಹೆಗ್ರಾ, ಪ್ರಾಚೀನ ಸಮಾಧಿಗಳು, ಎಲಿಫೆಂಟ್ ರಾಕ್, ಆನೆಯನ್ನು ಹೋಲುವ ಮರಳುಗಲ್ಲಿನ ರಚನೆ, ಮತ್ತು ಬೃಹತ್ ಮರುಭೂಮಿ ಬಂಡೆಯ ಮುಖದಲ್ಲಿ ನಿರ್ಮಿಸಲಾದ ಸಂಗೀತ ಕಚೇರಿ ಸಭಾಂಗಣವಾದ ಮರಾಯಾ, ಇವೆಲ್ಲವೂ ಪ್ರವಾಸಿಗರು ಭೇಟಿ ಮಾಡಬಹುದಾದ ಕೆಲ ಪ್ರಮುಖ ಪ್ರವಾಸಿ ಆಕರ್ಷಣೆಗಳು. ಇದಲ್ಲದೆ, ಪುರಾತನ ನಗರ, ಶರಾನ್ ನೇಚರ್ ರಿಸರ್ವ್ ಮತ್ತು ಜಬಲ್ ಇಕ್ಮಾ ಗೆ ಸಹ ಭೇಟಿ ನೀಡಬಹುದು.




ಶುಕ್ರವಾರ, ಜನವರಿ 17, 2025

ಗ್ಯಾಂಬಿಯಾ ಎನ್ನುವ ಎನ್ ಕ್ಲೇವ್ ರಾಷ್ಟ್ರ


ಕೆಲದಿನಗಳ ಹಿಂದೆ ನಮ್ಮ ಆಫೀಸಿನ ಕೆಲಸಕ್ಕೆ ಸಂಭಂಧಿಸಿದಂತೆ  ಆಫ್ರಿಕಾದ ಗ್ಯಾಂಬಿಯಾ ದೇಶದಿಂದ ಅಥಿತಿಯೊಬ್ಬರು ನನ್ನನ್ನು ಭೇಟಿ ಮಾಡಲು ಬಂದಿದ್ದರು.  ಬಿಜಿನೆಸ್ ಗೆ ಸಂಭಂಧಿಸಿದಂತೆ ಮಾತುಕತೆಗಳು ಮುಗಿದಾದ ಮೇಲೆ, ಅವರ ಗ್ಯಾಂಬಿಯಾ ದೇಶದ ಕುರಿತಾಗಿ ತಿಳಿದುಕೊಳ್ಳಲು ಅವರೊಂದಿಗೆ ಮಾತುಕತೆ ನಡೆಸಿದೆ. ಅ ಸಂವಾದದಲ್ಲಿ ಹಲವಾರು ಕುತೂಹಲಕಾರಿ ವಿಷಯಗಳನ್ನು ತಿಳಿದುಕೊಳ್ಳುವಂತಾಯಿತು.

ಯೂರೋಪಿನ ವಸಾಹತುಶಾಹಿಗಳು ಪ್ರಪಂಚದ ಹಲವು ದೇಶಗಳನ್ನ ವಸಾಹತುಗಳನ್ನಾಗಿ ಮಾಡಿಕೊಂಡು, ಅಲ್ಲಿ ಸಾರ್ವಭೌಮತ್ವ ಸ್ಥಾಪಿಸಿ, ಅಧಿಕಾರ ನಡೆಸಿದ್ದಲ್ಲದೆ, ಸ್ಥಳೀಯವಾಗಿ ದೊರೆಯುವ ಹೇರಳವಾದ ಸಂಪತ್ತನ್ನ ತಮ್ಮ ದೇಶಗಳಿಗೆ ಸಾಧಿಸಿದ್ದಲ್ಲದೆ, ತಮ್ಮ ಭಾಷೆ, ವಿಚಾರ, ಸಂಸ್ಕೃತಿ ಇತ್ಯಾದಿಗಳನ್ನ ಈ ದೇಶಗಳಲ್ಲಿ ಹೇರಿದ್ದು ನಮಗೆಲ್ಲ ಗೊತ್ತಿರುವ ಇತಿಹಾಸ. ಇದೆಲ್ಲದರ ಜತೆಗೆ ಬ್ರಿಟೀಷರು ಮತ್ತು ಐರೋಪಿನ ರಾಷ್ಟ್ರಗಳ ಕುತಂತ್ರಿತನಕ್ಕೆ ಹಲವಾರು ದೇಶಗಳು ಒಡೆದು ಚೂರಾಗಿವೆ.


ಗ್ಯಾಂಬಿಯಾ ಎನ್ನುವ ರಾಷ್ಟ್ರ ಪಶ್ಚಿಮ ಆಫ್ರಿಕಾದ ಸೆನೆಗಲ್ ಬಳಿ ಇದೆ, ಇದೊಂದು ಚಿಕ್ಕ ಎನ್ ಕ್ಲೇವ್ ರಾಷ್ಟ್ರ, ಈ ದೇಶದ ಸುತ್ತಲೂ ಮತ್ತೊಂದು ದೇಶವಾದ ಸೆನೆಗಲ್ ಆವರಿಸಿದೆ ಎಂದು ಅಥಿತಿಗಳು ಹೇಳಿದರು. ಕುತೂಹಲ ಜಾಸ್ತಿಯಾಯಿತು. ಮಾತುಕತೆ ಮುಂದುವರಿಸಿದೆವು, ಹಲವಾರು ಕುತೂಹಲಕಾರಿ ವಿಷಯಗಳು ಈ ಮಾತುಕತೆಯಲ್ಲಿ ತಿಳಿದುಬಂತು. ಗ್ಯಾಂಬಿಯ ಎಷ್ಟು ಚಿಕ್ಕ ದೇಶ ಎಂದರೆ, ಇದರ ಅಗಲ ಕೇವಲ 30 ಕಿಲೋಮೀಟರ್ ಗಳು ಇದ್ದರೆ, ಉದ್ದ 300 ಕಿಲೋಮೀಟರ್ ಗಳು ಮಾತ್ರ. ಇವರ ದೇಶದ ಉತ್ತರ, ಪೂರ್ವ ಮತ್ತು ದಕ್ಷಿಣ ದಿಕ್ಕುಗಳಲ್ಲಿ ಸೆನೆಗಲ್ ದೇಶದಿಂದ ಸುತ್ತವರಿದಿದ್ದು ಪಶ್ಚಿಮಕ್ಕೆಅಟ್ಲಾಂಟಿಕ್ ಮಹಾಸಾಗರವಿದೆ. 

ಈ ರಾಷ್ಟ್ರ ಎನ್ಕ್ಲೇವ್ ಹೇಗಾಯ್ತು ಅಂತ ಕೇಳಿದ್ದಕ್ಕೆ, ಈ ಪ್ರದೇಶವನ್ನು ಬ್ರಿಟೀಷರು ಆಳಿದ್ದರಂತೆ,  ಸುತ್ತುವರೆದಿರುವ ಸೆನೆಗಲ್ ರಾಷ್ಟ್ರವನ್ನು ಫ್ರೆಂಚರು ಆಳಿದ್ದರು. 1960 ರಲ್ಲಿ ಫ್ರಾನ್ಸ್‌ನಿಂದ ಸೆನೆಗಲ್ ಸ್ವತಂತ್ರ ವಾಯಿತು ನಂತರ 1965ರಲ್ಲಿ ಗ್ಯಾಂಬಿಯಾ ದೇಶ ಬ್ರಿಟಿಷರ ಆಡಳಿತದಿಂದ  ಸ್ವತಂತ್ರ ವಾಯಿತು. ಹೀಗಾಗಿ ಅವೆರೆಡು ಬೇರೆ ಬೇರೆ ದೇಶಗಳಾಗಿ ಹಾಗೆಯೇ ಉಳಿದು ಹೋಗಿವೆ.  ಎರಡು ದೇಶ ಒಂದುಗೂಡಲು ಸಾಧ್ಯವಾಗಲಿಲ್ಲವೇ ಎಂದು ಕೇಳಿದ್ದಕ್ಕೆ, 1981 ರಲ್ಲಿ ಆ ಪ್ರಯತ್ನ ನಡೆಯಿತು ಆದರೆ ಅದು ಸಫಲವಾಗಲಿಲ್ಲ ಎಂದರು. 

ಬ್ರಿಟೀಷರು ಮತ್ತು ಫ್ರೆಂಚರ ಆಳ್ವಿಕೆಯಿಂದಾಗಿ ಎರಡು ಬೇರೆ ದೇಶಗಳಾಗಿವೆಯೇ ವಿನಃ, ಮೂಲತಃ ಗ್ಯಾಂಬಿಯಾ ಮತ್ತು ಸೆನೆಗಲ್ ದೇಶದ ಜನರುಗಳು ಒಂದೇ ಬುಡಕಟ್ಟಿನವರು, ಸಾಂಸ್ಕೃತಿಕವಾಗಿ ಒಂದೇ ರೀತಿ ಇದ್ದಾರೆ. ಆಚಾರ ವಿಚಾರ ಎಲ್ಲದರಲ್ಲೂ ಹೋಲಿಕೆಯಿದೆ. ಎರಡೂ ಕಡೆ ಸಂಭಂದಿಕರು ಇದ್ದಾರೆ. ಎರಡು ದೇಶಗಳು ಒಂದಾಗಲು, ರಾಜಕೀಯ ಇಚ್ಛಾಶಕ್ತಿಯಿಂದ ಮಾತ್ರ ಸಾಧ್ಯ.ವಿದೆ. ಎರಡು ದೇಶಗಳ ನಡುವೆ ಅಧಿಕೃತ ಭಾಷೆಗಳನ್ನು ಹೊರತುಪಡಿಸಿ ಯಾವುದೇ ವ್ಯತ್ಯಾಸವಿಲ್ಲ. ಸೆನೆಗಲ್‌ನಲ್ಲಿ ಫ್ರೆಂಚ್ ಮತ್ತು ಗ್ಯಾಂಬಿಯಾದಲ್ಲಿ ಇಂಗ್ಲಿಷ್ ಆಡಳಿತ ಭಾಷೆಯಾಗಿದೆ. ಜನರು ಒಂದೇ, ದೇಶೀಯ ಭಾಷೆ ಒಂದೇ, ಆಹಾರವೂ ಒಂದೇ, ಧರ್ಮಗಳು ಒಂದೇ, ಆಚಾರವಿಚಾರವು ಒಂದೇ.
ಈ ದೇಶದ ಮಧ್ಯಭಾಗದಲ್ಲಿ ಗ್ಯಾಂಬಿಯಾ ನದಿ ಹರಿಯುತ್ತದೆ.  ಇಂಗ್ಲಿಷ್ ಇಲ್ಲಿನ ಭಾಷೆ. ಕೃಷಿ ಇಲ್ಲಿನ ಆರ್ಥಿಕತೆಯ ಬೆನ್ನೆಲುಬು.  ನೆಲಗಡಲೆಯನ್ನು ಇಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ಇದನ್ನು ಅತಿ ಹೆಚ್ಚಾಗಿ ರಫ್ತು ಮಾಡಲಾಗುತ್ತದೆ. ಬಂಜುಲ್ (Banjul) ಈ ದೇಶದ ರಾಜಧಾನಿ. 96.4% ಜನ ಇಸ್ಲಾಂ ಅನ್ನು, (Islam) 3.5% ಕ್ರಿಶ್ಚಿಯಾನಿಟಿ (Christianity) ಯನ್ನು ಮತ್ತು 0.1% ಜನರು ಇತರೆ ಧರ್ಮವನ್ನು ಅನುಸರಿಸುತ್ತಾರೆ.

ಇಂಗ್ಲಿಷ್ ಗ್ಯಾಂಬಿಯಾದ ಅಧಿಕೃತ ಭಾಷೆಯಾಗಿದ್ದು ಇದನ್ನು  ಶಿಕ್ಷಣ ಮತ್ತು ಸರ್ಕಾರದ ದಾಖಲೆಗಳಲ್ಲಿ ಬಳಸಲಾಗುತ್ತದೆ. ಇತರ ಭಾಷೆಗಳಲ್ಲಿ ಮಂಡಿಂಕಾ, ವೋಲೋಫ್, ಫುಲಾ, ಸೇರರ್, ಸೋನಿಂಕೆ, ಕ್ರಿಯೋ, ಜೋಲಾ ಮತ್ತು ಇತರ ಸ್ಥಳೀಯ ಭಾಷೆಗಳು ಸಹ ಇಲ್ಲಿ ಉಪಯೋಗದಲ್ಲಿವೆ. ಆಫ್ರೀಕಾದ ಇತರೆ ದೇಶಗಳಲ್ಲಿದ್ದಂತೆ ಫ್ರೆಂಚ್ ಭಾಷೆಯ ಜ್ಞಾನವು ಸಹ ಜನರಿಗೆ ಇದೆ. ದೇಶದ 38% ಜನರು ಮಂಡಿಂಕಾವನ್ನು ಮೊದಲ ಭಾಷೆಯಾಗಿ ಮಾತನಾಡುತ್ತಾರೆ, 21% ಪುಲಾರ್, 18% ವೊಲೊಫ್, 9% ಸೋನಿಂಕೆ, 4.5% ಜೊಲಾ, 2.4% ಸೆರೆರ್, 1.6% ಮಂಜಾಕ್ ಮತ್ತು ಬೈನೌಕ್, ಪೋರ್ಚುಗೀಸ್ ಕ್ರಿಯೋಲ್ 1%, ಮತ್ತು ಇಂಗ್ಲಿಷ್ 0.5%. ಹಲವು ಇತರೆ ಭಾಷೆಗಳನ್ನು ಸಹ ಜನರು  ಮಾತನಾಡುತ್ತಾರೆ.

ಇಲ್ಲಿನ ಸರಾಸರಿ ತಾಪಮಾನವು 29 ° C ಮತ್ತು 34 ° C ನಡುವೆ ಇರುತ್ತದೆ. ವರ್ಷಪೂರ್ತಿ ಇಲ್ಲಿ ಬೇಸಿಗೆ ಅಂತ ಹೇಳಬಹುದು. ಸೂರ್ಯನ ಬಿಸಿಲು ವರ್ಷಪೂರ್ತಿ ಇರುತ್ತದೆ. ಬೇಸಿಗೆಯ  ತಿಂಗಳುಗಳಲ್ಲಿ, ಸೆಖೆ ಜಾಸ್ತಿ, ಆರ್ದ್ರತೆಯ ವಾತಾವರಣ ಜಾಸ್ತಿ. ಮಳೆ ಮತ್ತು ಚಳಿಗಾಲದಲ್ಲಿ,  ಆರ್ದ್ರತೆ ಕಡಿಮೆ ಇರುತ್ತದೆ, ಮಳೆ ಬಂದರೆ ಬಂತು ಇಲ್ಲದೆ ಇದ್ರೆ ಇಲ್ಲ ಎನ್ನಬಹುದು. ಪ್ರವಾಸಿಗರು ಭೇಟಿ ನೀಡಲು ಚಳಿಗಾಲದ ಸಮಯ ಸೂಕ್ತವಾಗಿದೆ. 
ಯುರೋಪಿಯನ್ನರ ಪ್ರಾಬಲ್ಯ:
ಯುರೋಪಿಯನ್ನರು ಇಲ್ಲಿಗೆ ಆಗಮಿಸುವ ಮುಂಚೆ, ಸ್ಥಳೀಯ ರಾಜವಂಶಗಳು ಇಲ್ಲಿ ಆಡಳಿತ ನಡೆಸುತಿದ್ದವು. ಹನ್ನೊಂದನೇ ಶತಮಾನದಲ್ಲಿ ಇಲ್ಲಿಗೆ ಇಸ್ಲಾಂ ಆಗಮನವಾಗುತ್ತದೆ. ಅಂದಿನ ತಕ್ರೂರ್ ರಾಜ ವಂಶ ಇಸ್ಲಾಂ ಧರ್ಮವನ್ನು ಸ್ವೀಕರಿಸಿ, ಪ್ರಜೆಗಳನ್ನು ಮತಾಂತರಿಸುತ್ತಾರೆ. ಅರೇಬಿಕ್ ಶಾಲೆಗಳನ್ನು ತೆರೆಯಲಾಗುತ್ತದೆ. ಶರಿಯಾ ಕಾನೂನು ಜಾರಿಗೆ ಬಂದು ಇಲ್ಲಿ ಶರಿಯಾ ನ್ಯಾಯಾಲಯ ಆರಂಭಗೊಳ್ಳುತ್ತವೆ. ಕ್ರಿ.ಶ. 1455 ರಲ್ಲಿ, ಪೋರ್ಚುಗೀಸರು ಗ್ಯಾಂಬಿಯಾವನ್ನು ಆಕ್ರಮಿಸುತ್ತಾರೆ. ಇಲ್ಲಿನ ಕಡಲತೀರದಲ್ಲಿ ನೆಲೆ ನಿಂತು ಸಮುದ್ರ ವ್ಯಾಪಾರವನ್ನು ನಿಯಂತ್ರಿಸಲು ಪ್ರಯತ್ನಿಸುತ್ತಾರೆ. ಪೋರ್ಚುಗೀಸರು ಗ್ಯಾಂಬಿಯಾಗೆ ಪ್ರವೇಶಿಸಿದ ಮೊದಲ ಯುರೋಪಿಯನ್ನರಾಗಿದ್ದರು ಸಹ, ಅಲ್ಲಿ ಹೇಳಿಕೊಳ್ಳುವಂತಹ ಗಮನಾರ್ಹವಾದ ವ್ಯಾಪಾರ ವಹಿವಾಟು ಅವರಿಗೆ ನಡೆಸಲಾಗಲಿಲ್ಲ. ಪರಿಣಾಮವಾಗಿ ಇಲ್ಲಿ ಹರಿಯುವ ಗ್ಯಾಂಬಿಯಾ ನದಿಯ ಮೇಲಿನ ವ್ಯಾಪಾರ ವಹಿವಾಟು ನಡೆಸುವ ಹಕ್ಕುಗಳನ್ನು ಇಂಗ್ಲಿಷ್ ವ್ಯಾಪಾರಿಗಳಿಗೆ ಮಾರುತ್ತಾರೆ. ತದನಂತರ ಇಲ್ಲಿನ ಕೆಲ ದ್ವೀಪಗಳನ್ನು ಯುರೋಪಿನ ಕೆಲ ರಾಷ್ಟ್ರಗಳು ಖರೀದಿಸುತ್ತವೆ. 

17 ನೇ ಶತಮಾನದ ಕೊನೆಯಲ್ಲಿ ಮತ್ತು 18 ನೇ ಶತಮಾನದುದ್ದಕ್ಕೂ, ಸೆನೆಗಲ್ ನದಿ ಮತ್ತು ಗ್ಯಾಂಬಿಯಾ ನದಿಯ ಪ್ರದೇಶಗಳಲ್ಲಿ ರಾಜಕೀಯ ಮತ್ತು ವಾಣಿಜ್ಯ ಪ್ರಾಬಲ್ಯಕ್ಕಾಗಿ ಬ್ರಿಟಿಷ್ ಸಾಮ್ರಾಜ್ಯ ಮತ್ತು ಫ್ರೆಂಚ್ ಸಾಮ್ರಾಜ್ಯವು ನಿರಂತರವಾಗಿ ಹೋರಾಟ ನಡೆಸಿದವು. 1758 ರಲ್ಲಿ ಸೆನೆಗಲ್ ಅನ್ನು ವಶಪಡಿಸಿಕೊಂಡ ನಂತರ ಅಗಸ್ಟಸ್ ಕೆಪ್ಪೆಲ್ ನೇತೃತ್ವದ ಪಡೆ ಗ್ಯಾಂಬಿಯಾವನ್ನು ಆಕ್ರಮಿಸಿತು. 1783ರಲ್ಲಿ ನಡೆದ  ವರ್ಸೈಲ್ಸ್ ಒಪ್ಪಂದ ಪ್ರಕಾರ,  ಗ್ರೇಟ್ ಬ್ರಿಟನ್‌ ಗ್ಯಾಂಬಿಯಾ ನದಿ ಮತ್ತು ಸುತ್ತಲಿನ ಭೂಪ್ರದೇಶ ಬ್ರಿಟೀಷರ ಆಳ್ವಿಕೆಗೆ ಒಳಪಡುತ್ತದೆ. ಗ್ಯಾಂಬಿಯಾ ನದಿಯ ಉತ್ತರದಲ್ಲಿರುವ ಅಲ್ಬ್ರೆಡಾದಲ್ಲಿ ಒಂದು ಸಣ್ಣ ಎನ್‌ಕ್ಲೇವ್ ಅನ್ನು ಫ್ರೆಂಚರು ಉಳಿಸಿಕೊಳ್ಳುತ್ತಾರೆ.  ಅಂತಿಮವಾಗಿ ಈ ದ್ವೀಪ ಒಳನಾಡನ್ನು 1856 ರಲ್ಲಿ ಯುನೈಟೆಡ್ ಕಿಂಗ್‌ಡಮ್‌ಗೆ ನೀಡಲಾಗುತ್ತದೆ.


ಆಫ್ರಿಕಾದ ಗುಲಾಮ ವ್ಯಾಪಾರ:
ಯುರೋಪಿಯನ್ನರು ಆಫ್ರಿಕಾ ಮತ್ತು ಇಂಡಿಯಾ ದಂತಹ ಪ್ರದೇಶಗಳಿಗೆ ವ್ಯಾಪಾರಕ್ಕಾಗಿ ಬಂದವರು ಇಲ್ಲಿ ಮಾಲೀಕರಾಗಿದ್ದಲ್ಲದೆ ಸ್ಥಳೀಯರನ್ನು ತಮ್ಮ ಫಿರಂಗಿ ಮತ್ತು ಬಂದೂಕುಗಳನ್ನು ಜನರ ಮುಂದಿರಿಸಿ ಆಳ್ವಿಕೆ ನಡೆಸಲು ಪ್ರಾರಂಭಿಸಿತ್ತಾರೆ.  ಮೂರ್ನಾಲ್ಕು ದಶಕಗಳ ಅಲ್ಪ ಸಮಯದಲ್ಲಿ ಇಡೀ ಆಫ್ರಿಕಾಖಂಡ ಯೂರೋಪಿಯನ್ನರ ವಸಾಹತುಗಳಾಗಿಬಿಟ್ಟಿತು. ಸ್ಥಳೀಯರನ್ನು ಗುಲಾಮರನ್ನಾಗಿ ಮಾಡಿಕೊಂಡು ವಸಾಹತುಶಾಹಿಗಳು ಆಫ್ರಿಕಾ ದೇಶದ ಅಗಾಧ ಖನಿಜ ಸಂಪತ್ತನ್ನು ಲೂಟಿ ಹೊಡೆಯುತ್ತಿದ್ದರು. ಮುಖ್ಯವಾಗಿ ತಾಮ್ರ, ಹತ್ತಿ, ರಬರ್, ಪಾಮ್ ಎಣ್ಣೆ, ಕೋಕೋ, ವಜ್ರ, ಟೀ ಮತ್ತು ಟಿನ್ ಲೋಹ, ಚಿನ್ನ - ಇವುಗಳ ನಿಧಿಯಾಗಿತ್ತು ಆಫ್ರಿಕಾ ಖಂಡ. ಒಂದು ಕೋಟಿಗೂ ಹೆಚ್ಚು ಆಫ್ರಿಕನ್ನರು ಅಲ್ಲೇ ಗುಲಾಮರಾಗಿ ದುಡಿದರು. ಸುಮಾರು ಅಷ್ಟೇ ಜನರು ಬೇರೆ ದೇಶಗಳಿಗೆ ಗುಲಾಮರಾಗಿ ಮಾರಲ್ಪಟ್ಟರು! ಗ್ಯಾಂಬಿಯಾ, ಸೆನೆಗಲ್ ನಂತಹ ರಾಷ್ಟ್ರಗಳು ಸಹ ಹೊರತಾಗಿರಲಿಲ್ಲ. ಸ್ಥಳೀಯರನ್ನು ಯುರೋಪ್ ಅಮೇರಿಕ ಮುಂತಾದ ರಾಷ್ಟ್ರಗಳಿಗೆ ಮಾರಲಾಯಿತು. ಲಕ್ಷಾಂತರ ಜನರನ್ನ ಸ್ಥಳೀಯವಾಗಿ ದುಡಿಸಿಕೊಂಡರು. 

1807 ರಲ್ಲಿ, ಬ್ರಿಟೀಷರು ತಮ್ಮ  ಸಾಮ್ರಾಜ್ಯದಾದ್ಯಂತ ಗುಲಾಮರ ವ್ಯಾಪಾರವನ್ನು ರದ್ದುಗೊಳಿಸಿದರು. ಆದರೂ ವ್ಯಾಪಾರಿಗಳು ಕದ್ದು ಮುಚ್ಚಿ ಗುಲಾಮರ ವ್ಯಾಪಾರವನ್ನು ಮಾಡುತಿದ್ದರು. ಅಟ್ಲಾಂಟಿಕ್‌ ಸಮುದ್ರದಲ್ಲಿ ಹಡಗುಗಳಲ್ಲಿ  ಜನರನ್ನು ಸಾಗಿಸುತಿದ್ದರು. ಇಂತಹ ಹಡಗುಗಳನ್ನ ಬ್ರಿಟೀಷರ ರಾಯಲ್ ನೇವಿಯವರು ತಡೆದು, ತಪಾಸಣೆ ನಡೆಸಿ  ಗುಲಾಮರ ಹಡಗುಗಳನ್ನು ಗ್ಯಾಂಬಿಯಾಕ್ಕೆ ಮರಳಿ ಕಳುಹಿಸುತಿದ್ದರಂತೆ. ಬ್ರಿಟಿಷರು 1816 ರಲ್ಲಿ ಬಾಥರ್ಸ್ಟ್ (ಈಗ ಬಂಜುಲ್)ನಲ್ಲಿ ಮಿಲಿಟರಿ ಪೋಸ್ಟ್ ಅನ್ನು ಸ್ಥಾಪಿಸಿ, ಗುಲಾಮರ ಸಾಗಾಟವನ್ನು ತಡೆಹಿಡಿಯಲು ಪ್ರಯತ್ನಿಸಿದರು. ಹಡಗುಗಳಲ್ಲಿದ್ದ ಜನರನ್ನು ಬಿಡುಗಡೆಗೊಳಿಸಿ ಮ್ಯಾಕ್‌ಕಾರ್ಥಿ ಎನ್ನುವ ದ್ವೀಪದಲ್ಲಿ ಅವರಿಗೆ ಹೊಸ ಬದುಕನ್ನು ಕಟ್ಟಿಕೊಳ್ಳಲು ಅವಕಾಶ ನೀಡಿದ್ದರು.

ಗ್ಯಾಂಬಿಯಾಗೇ 1965ರಲ್ಲಿ ಸ್ವಾತಂತ್ರ್ಯ:
1960ರಲ್ಲಿ ಫ್ರಾನ್ಸ್‌ನಿಂದ ಸೆನೆಗಲ್ ಸ್ವತಂತ್ರವಾಗಿತ್ತು,  ಹೀಗಾಗಿ, ಬ್ರಿಟೀಷರು ತಾವು ಆಳುತಿದ್ದ ಗ್ಯಾಂಬಿಯಾ ದೇಶಕ್ಕೂ 18 ಫೆಬ್ರವರಿ 1965 ರಂದು ಸ್ವಾತಂತ್ರ್ಯವನ್ನು ನೀಡುತ್ತಾರೆ. 1965 ರಿಂದ 1994 ರವರೆಗೆ, ಪೀಪಲ್ಸ್ ಪ್ರೋಗ್ರೆಸ್ಸಿವ್ ಪಾರ್ಟಿಯ (ಪಿಪಿಪಿ) ದವ್ಡಾ ಜವರ (Dawda Jawara) ಅವರು ದೇಶವನ್ನು ಆಳುತ್ತಾರೆ. ಈ ಸಮಯದಲ್ಲಿ ಯಾವುದೇ ವಿಪಕ್ಷವಿಲ್ಲದೆ ಎಲ್ಲಾ ಪಕ್ಷದವರು ಸೇರಿ (multi-party liberal democracy) ಆಳ್ವಿಕೆ ನಡೆಸುತ್ತಾರೆ. ಈ ಸಮಯದಲ್ಲಿ ಯಾವುದೇ ಚುನಾವಣೆ ನಡೆಯುವುದಿಲ್ಲ. 

1981 ಆಂತರಿಕ ದಂಗೆ:
ಪ್ರಮುಖ ರಾಜಕಾರಣಿಗಳ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಮತ್ತು ದೇಶದಲ್ಲಿ ದುರ್ಬಲಗೊಂಡ ಆರ್ಥಿಕತೆ ಇದರಿಂದ ಬೇಸತ್ತ ಜನತೆಯಿಂದ 29 ಜುಲೈ 1981 ರಂದು ಆಂತರಿಕ ದಂಗೆ ನಡೆಯುತ್ತದೆ.  ಅಧ್ಯಕ್ಷ ಜವಾರಾ ಅವರು ಪಕ್ಕದ ರಾಷ್ಟ್ರ ವಾದ ಸೆನೆಗಲ್ ನ ಮಿಲಿಟರಿ ಸಹಾಯವನ್ನು ಕೋರುತ್ತಾರೆ. ಆಗಸ್ಟ್ 6 1981ರಲ್ಲಿ , ಸುಮಾರು 2,700 ಸೆನೆಗಲೀಸ್ ಸೈನಿಕರನ್ನು  ನಿಯೋಜಿಸಲಾಗುತ್ತದೆ, ಬಂಡಾಯವೆದ್ದ ಪಡೆಯನ್ನು ಸೆನೆಗಲ್ ಸೈನಿಕರ ಜತೆಗೂಡಿ ಸೋಲಿಸಲಾಗುತ್ತದೆ, ದಂಗೆ ಮತ್ತು ನಂತರದ ಹಿಂಸಾಚಾರದ ಸಮಯದಲ್ಲಿ 500 ರಿಂದ 800 ಜನರು ಕೊಲ್ಲಲ್ಪಡುತ್ತಾರೆ.  ನಂತರ, ಸೆನೆಗಲ್ ಮತ್ತು ದಿ ಗ್ಯಾಂಬಿಯಾ ರಾಷ್ಟ್ರಗಳು, ಒಕ್ಕೂಟದ ಒಪ್ಪಂದಕ್ಕೆ ಸಹಿ ಹಾಕುತ್ತವೆ. ಸೆನೆಗಾಂಬಿಯಾ ಒಕ್ಕೂಟ ವೇರ್ಪಡುತ್ತದೆ. ಒಂದೇ ಮಿಲಿಟರಿ ಆರ್ಮಿ, ದೇಶದ ಆರ್ಥಿಕತೆ ಬಲನೀಡುವುದು, ಎರಡು ರಾಷ್ಟ್ರಗಳಿಗೂ ಒಂದೇ ಕರೆನ್ಸಿ ನೋಟು ಮತ್ತು ನಾಣ್ಯ ಬಳಸುವ, ಹೀಗೆ ಹಲವಾರು ವಿಷಯಗಳ ಕುರಿತು ಒಪ್ಪಂದ ವೇರ್ಪಡುತ್ತದೆ.  ಕೇವಲ ಏಳು ವರ್ಷಗಳ ನಂತರ, ಗ್ಯಾಂಬಿಯಾ 1989 ರಲ್ಲಿ ಒಕ್ಕೂಟದಿಂದ ಶಾಶ್ವತವಾಗಿ ಹೊರಬಂದು, ಉಭಯ ರಾಷ್ಟ್ರಗಳ ಒಪ್ಪಂದ ಮುರಿದು ಬೀಳುತ್ತದೆ..

1994 ಮಿಲಿಟರಿ ದಂಗೆ:
1994 ರಲ್ಲಿ, ಮಿಲಿಟರಿ ದಂಗೆ ನಡೆಯುತ್ತದೆ. ಆರ್ಮ್ಡ್ ಫೋರ್ಸಸ್ ಪ್ರಾವಿಶನಲ್ ರೂಲಿಂಗ್ ಕೌನ್ಸಿಲ್ (AFPRC) ಎಂದು ಕರೆಯಲಾಗುವ "ಮಿಲಿಟರಿ ಅಧಿಕಾರಿಗಳ ಆಯೋಗ" ಅಧಿಕಾರಕ್ಕೆ ಬರುತ್ತದೆ.  ಎರಡು ವರ್ಷಗಳ ನೇರ ಆಡಳಿತದ ನಂತರ, ಹೊಸ ಸಂವಿಧಾನವನ್ನು ಬರೆಯಲಾಯಿತು.  1996 ರಲ್ಲಿ, AFPRC ನ ನಾಯಕ ಯಾಹ್ಯಾ ಜಮ್ಮೆ (Yahya Jammeh) ಅಧ್ಯಕ್ಷರಾಗಿ ಆಯ್ಕೆಯಾಗಿ 2016 ರ ಚುನಾವಣೆಯವರೆಗೂ ಸರ್ವಾಧಿಕಾರಿ ಶೈಲಿಯಲ್ಲಿ ಆಡಳಿತ ನಡೆಸುತ್ತಾರೆ. ಚುನಾವಣೆಯಲ್ಲಿ ಆಡಮಾ ಬಾರೋ (Adama Barrow) ವಿಜಯಿಯಾಗಿ ಇಲ್ಲಿಯವರೆಗೂ (2024) ಅವರೇ ಅಧಿಕಾರ ನಡೆಸುತಿದ್ದಾರೆ.  

ಪ್ರಮುಖ ಪ್ರವಾಸಿ ತಾಣಗಳು:
1. ಬಂಜುಲ್ ರೋಮನ್ ಕ್ಯಾಥೋಲಿಕ್ ಕ್ಯಾಥೆಡ್ರಲ್ (Banjul Roman Catholic Cathedral), 2. ಕಚಿಕಲ್ಲಿ ಕ್ರೊಕೊಡೈಲ್ ಪೂಲ್ (Kachikally Crocodile Pool): ಮೊಸಳೆ ಕೊಳ, 3. ಬಿಜಿಲೋ ರಾಷ್ಟ್ರೀಯ ಉದ್ಯಾನವನ (Bijilo National Park), 4. ಬಿಜಿಲೋ ಮಂಕಿ ಪಾರ್ಕ್ (Bijilo Monkey Park), 5. ಗ್ಯಾಂಬಿ ನದಿ (River Gambie), 6. ಬಿಜಿಲೋ ಫಾರೆಸ್ಟ್ ಪಾರ್ಕ್ (Bijilo Forest Park), 7. ಸ್ಟೋನ್ ಸರ್ಕಲ್ಸ್ ಆಫ್ ಗ್ಯಾಂಬಿಯಾ (Stone Circles of Gambia), 8. ಗ್ಯಾಂಬಿಯಾದ ರಾಷ್ಟ್ರೀಯ ವಸ್ತುಸಂಗ್ರಹಾಲಯ (National Museum of the Gambia), 9. ಆರ್ಕ್  22 (Arch 22) ಕಮಾನು, 10. ಬಕೌ ಕ್ರಾಫ್ಟ್ ಮಾರುಕಟ್ಟೆ (Bakau craft market)


ಭಾರತದೊಂದಿಗಿನ ಭಾಂದವ್ಯ:
ಗ್ಯಾಂಬಿಯಾ ಮತ್ತು ಭಾರತದೊಂದಿಗಿನ ಭಾಂದವ್ಯ ಉತ್ತಮವಾಗಿದೆ. ಎರಡೂ ರಾಷ್ಟ್ರಗಳು ಬ್ರಿಟೀಷರ ಆಳ್ವಿಕೆಗೆ ಒಳಪಟ್ಟಿದ್ದರಿಂದ ಭಾವನಾತ್ಮಕವಾಗಿ ಭಾರತೀಯರ ಕುರಿತು ಇಲ್ಲಿನ ಜನರಿಗೆ ಒಲವಿದೆ. ಭಾರತದಿಂದ ಹಲವಾರು ಸಾಮಗ್ರಿಗಳನ್ನು ಇಲ್ಲಿಗೆ ರಫ್ತು ಮಾಡಲಾಗುತ್ತಿದೆ. ಗ್ಯಾಂಬಿಯಾಕ್ಕೆ ಭಾರತ ಆರ್ಥಿಕ ಸಹಾಯ ಸಹ ನೀಡಿದೆ. 

ಗಾಂಬಿಯಾಕ್ಕೆ ಭಾರತವು ರಫ್ತು ಮಾಡುವ ಪ್ರಮುಖ ಸರಕುಗಳೆಂದರೆ ಹತ್ತಿ ನೂಲು, ಬಟ್ಟೆಗಳು, ಮೇಕಪ್‌ ಸಾಧನಗಳು , ಸೌಂದರ್ಯವರ್ಧಕಗಳು, ಶೌಚಾಲಯ ಸಾಮಗ್ರಿಗಳು, ಔಷಧಗಳು, ಕಬ್ಬಿಣ ಮತ್ತು ಉಕ್ಕಿನ ಉತ್ಪನ್ನಗಳು. ಗ್ಯಾಂಬಿಯಾದಿಂದ ಭಾರತವು ಆಮದು ಮಾಡಿಕೊಳ್ಳುವ ಪ್ರಮುಖ ಸರಕುಗಳೆಂದರೆ ಕಚ್ಚಾ ಗೋಡಂಬಿ ಮತ್ತು ಹತ್ತಿ.

ಸುಮಾರು 3000 ಭಾರತೀಯ ನಾಗರಿಕರು (2023 ರ ಹೊತ್ತಿಗೆ, ) ಗ್ಯಾಂಬಿಯಾದಲ್ಲಿ ವಾಸಿಸುತಿದ್ದು, ಅವರು ಪ್ರಾಥಮಿಕವಾಗಿ ವ್ಯಾಪಾರ ಮತ್ತು ನಿರ್ಮಾಣ ಕ್ಷೇತ್ರ ಸೇರಿದಂತೆ ಖಾಸಗಿ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ದೇಶಕ್ಕೆ ನಮ್ಮ ಭಾರತದ ಹರಿಯಾಣದ ಔಷಧೀಯ ಸಂಸ್ಥೆಯಾದ ಮೇಡನ್ ಫಾರ್ಮಾದಿಂದ ಸರಬರಾಜು ಮಾಡಲಾಗಿದ್ದ ಕೆಮ್ಮು-ಶೀತ ಸಿರಪ್ ಸೇವಿಸಿದ  66 ಮಕ್ಕಳ ಸಾವಾಗಿತ್ತು. ಆಗ ಗ್ಯಾಂಬಿಯಾ ದೇಶದ ಬಗ್ಗೆ ನಮ್ಮ ಭಾರತದ ಮಾಧ್ಯಮಗಳಲ್ಲಿ ಸುದ್ದಿ ಹರಿದಾಡಿತ್ತು. 

ಭಾರತದಲ್ಲಿ ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ 700ಕ್ಕೂ ಹೆಚ್ಚು ಗ್ಯಾಂಬಿಯನ್ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಭಾರತದಲ್ಲಿರುವ ಗ್ಯಾಂಬಿಯಾದ ಹೈ ಕಮಿಷನರ್ H.E ಮುಸ್ತಫಾ ಜವಾರ ಅವರು ಇತ್ತೀಚೆಗೆ, ಮಂಗಳೂರಿನ ಯೆನೆಪೊಯ ವಿಶ್ವವಿದ್ಯಾಲಯದೊಂದಿಗೆ ಎಂಒಯುಗೆ ಸಹಿ ಹಾಕಿದರು. 28 ​​ಗ್ಯಾಂಬಿಯನ್ ವಿದ್ಯಾರ್ಥಿಗಳು ಇಲ್ಲಿ ಅಧ್ಯಯನ ಮಾಡಲಿದ್ದಾರೆ.




ಶುಕ್ರವಾರ, ನವೆಂಬರ್ 29, 2024

ಅಜ಼ರ್ಬೈಜಾನ್ ನ ಪುರಾತನ ಹಿಂದೂ ದೇವಾಲಯ


ಬರಹ: ಪಿ.ಎಸ್.ರಂಗನಾಥ, 

ಮಸ್ಕತ್, ಒಮಾನ್ ರಾಷ್ಟ್ರ.

ಅಜ಼ರ್ಬೈಜಾನ್ ಎನ್ನುವ ಮುಸ್ಲಿಂ ದೇಶದಲ್ಲಿ ಪುರಾತನ ಹಿಂದೂ ದೇವಾಲಯವೊಂದಿದೆ. ವಿಶೇಷ ಏನೆಂದರೆ, ಶತಶತಮಾನಗಳಿಂದ ಈ ದೇವಸ್ಥಾನ ಇನ್ನೂ ಹಾಗೆಯೇ ಉಳಿದುಕೊಂಡು ಬಂದಿದೆ. ಇನ್ನೊಂದು ವಿಶೇಷವೇನೆಂದರೆ, ಈ ಪ್ರದೇಶ UNESCO  ವಿಶ್ವದ ಪಾರಂಪಾರಿಕ ತಾಣಗಳ ಪಟ್ಟಿಯಲ್ಲಿ ಸೇರಿರುವುದು. ಅಜ಼ರ್ಬೈಜಾನ್  ದೇಶಕ್ಕೆ ಭೇಟಿ ನೀಡುವ ಅತಿ ಹೆಚ್ಚಿನ ಪ್ರವಾಸಿಗರು ತಪ್ಪದೇ ಭೇಟಿ ನೀಡುವ ಪ್ರದೇಶ ಇದು. ಅತೆಷ್ಗಾ ಎನ್ನುವ ಈ ದೇವಾಲಯವನ್ನು ಅಗ್ನಿ ದೇವಾಲಯ (Fire temple) ಎಂದು ಕರೆಯುತ್ತಾರೆ. ಈ ಸ್ಥಳವನ್ನು ಕೇವಲ ಹಿಂದೂ ಮಾತ್ರವಲ್ಲದೆ, ಸಿಖ್ಖರು, ಜೋರಾಷ್ಟ್ರಿಯನ್ ಪಾರ್ಸಿಗಳು ಸಹ ಪವಿತ್ರ ಸ್ಥಳವೆಂದು ಪರಿಗಣಿಸಿ ಅಂದಿನ ಕಾಲದಲ್ಲಿ ಪೂಜಿಸುತಿದ್ದರು. ದೇವಾಲಯದ ಈ ಪ್ರಾಂಗಣದಲ್ಲಿ ಗಣೇಶ ಮತ್ತು ನಟರಾಜನ ವಿಗ್ರಹವಿದೆ. ವಿಗ್ರಹಗಳ ಜತೆಯಲ್ಲಿ 14 ಸಂಸ್ಕೃತ (ದೇವನಾಗರಿ), ಎರಡು ಪಂಜಾಬಿ (ಗುರುಮುಖಿ) ಮತ್ತು ಒಂದು ಪರ್ಷಿಯನ್ ಶಿಲಾ ಶಾಸನಗಳಿವೆ. ಒಂದು ಶಾಸನದಲ್ಲಿ ಮೊದಲ ಸಾಲು  ಶ್ರೀ ಗಣೇಶಾಯ ನಮಃ ಎಂದು ಪ್ರಾರಂಭವಾಗುತ್ತದೆ. ಇನ್ನೊಂದು ಶಾಸನದಲ್ಲಿ ಸಂಸ್ಕೃತದಲ್ಲಿ ಭಗವಾನ್ ಶಿವನ ಕುರಿತಾಗಿ ಬರೆದ ಸಾಲುಗಳಿವೆ.  ಮತ್ತೊಂದು ಶಾಸನವು ಜ್ವಾಲಾದೇವಿ ಕುರಿತಾಗಿ ಬರೆಯಲಾಗಿದೆ.  

  


 ಈ ದೇವಾಲಯವನ್ನು ಅಗ್ನಿ ದೇವಾಲಯ (Fire temple) ಎಂದು ಯಾಕೆ ಕರೆಯುತ್ತಾರೆ ಎಂದರೆ, ಇಲ್ಲಿರುವ ಸಪ್ತ ರಂಧ್ರಗಳಲ್ಲಿ ಸಹಸ್ರಾರು ವರ್ಷಗಳಿಂದ ಸತತವಾಗಿ ಬೆಂಕಿಯುರಿಯುತ್ತಿದೆ.  ಜೋರಾಷ್ಟ್ರಿಯನ್ ಪಾರ್ಸಿಗಳು ಮತ್ತು ಹಿಂದುಗಳು ಪವಿತ್ರವೆಂದು ಭಾವಿಸಿರುವ ಅಗ್ನಿಯನ್ನು ಪಾರ್ಸಿಗಳು ಮತ್ತು ಹಿಂದುಗಳು ಶತಮಾನಗಳಿಂದ ಪೂಜಿಸಿಕೊಂಡು ಬಂದಿದ್ದಾರೆ. ಬೆಂಕಿಯುಗುಳುವ ಈ ರಂಧ್ರಗಳಿರುವ ಜಾಗವನ್ನು ಇಲ್ಲಿನ ಭಾಷೆಯಲ್ಲಿ ಬಾಕು ಅತೆಷ್ಗಾ (Ateshgah of Baku) ಎಂದು ಹೇಳುತ್ತಾರೆ. ಪರ್ಷಿಯನ್ ಭಾಷೆಯಲ್ಲಿ ‘ಅತೇಶ್’ ಎಂದರೆ ಬೆಂಕಿ ಮತ್ತು ‘ಗಾಹ್’ ಎಂದರೆ ಹಾಸಿಗೆ ಎಂದರ್ಥ. ಅತೇಶ್ಗಾ ಒಂದು ಕಾಲದಲ್ಲಿ ನೈಸರ್ಗಿಕ ಅನಿಲ ಕ್ಷೇತ್ರವನ್ನು ಹೊಂದಿತ್ತು, ಈ ನೈಸರ್ಗಿಕ ಅನಿಲವೇ ಈ ಬೆಂಕಿಗೆ ಕಾರಣವಾಗಿದೆ. ಈ ಸ್ಥಳವನ್ನು ಪವಿತ್ರವೆಂದು ಪರಿಗಣಿಸಲಾಗಿದೆ ಎಂದು 7 ನೇ ಶತಮಾನದ ಅರ್ಮೇನಿಯನ್ ಭೂಗೋಳಶಾಸ್ತ್ರಜ್ಞ ಅನನಿಯಾ ಶಿರಕಾಟ್ಸಿ ಅವರ ಪುಸ್ತಕ ಅಶ್ಖರತ್ ಸುಯಟ್ಸ್  ದಾಖಲಿಸಿದ್ದಾರೆ. ದೇವಾಲಯವಿರುವ ಪಟ್ಟಣವನ್ನು ಸುರಖಾನಿ ಎಂದು ಕರೆಯಲಾಗುತ್ತದೆ, ಇದರರ್ಥ ಟಾಟ್ ಭಾಷೆಯಲ್ಲಿ 'ರಂಧ್ರವಿರುವ ಕಾರಂಜಿ ಎಂದು.  ಟಾಟ್ ಭಾಷೆಯು ಕ್ಯಾಸ್ಪಿಯನ್ ಸಮುದ್ರದ ಸುತ್ತಲಿನ ಟಾಟ್ ಜನರು ಮಾತನಾಡುವ ಪರ್ಷಿಯನ್ ಭಾಷೆಯಾಗಿದೆ. 

 


   ಇನ್ನು ಶಾಸನಗಳ ಬಗ್ಗೆ ಹೇಳುವುದಾದರೆ, ಅಬ್ರಹಾಂ ವ್ಯಾಲೆಂಟೈನ್ ವಿಲಿಯಮ್ಸ್ ಜಾಕ್ಸನ್ ಅವರ ಪುಸ್ತಕವಾದ "ಫ್ರಮ್  'ಕಾನ್ಸ್ಟಾಂಟಿನೋಪಲ್  ಟು ದ ಹೋಮ್ ಆಫ್ ಓಮರ್ ಖಯ್ಯಾಮ್" (From Constantinople to the home of Omar Khayyam)  ಪ್ರಕಾರ, ಶಾಸನಗಳನ್ನು 1668 ಮತ್ತು 1816 AD ನಡುವೆ ಕೆತ್ತಿಸಲಾಗಿದೆ. ಆರ್ಮೇನಿಯನ್ ವಿದ್ವಾಂಸರ ಪ್ರಕಾರ  ಈ ದೇವಾಲಯ ಪ್ರಾಕಾರವು ಎರಡನೇ ಶತಮಾನದಲ್ಲಿ ಪರ್ಶಿಯನ್ ದೊರೆಗಳ ಕಾಲಮಾನದಲ್ಲಿ ನಿರ್ಮಿಸಿರಬಹುದು ಎಂದು ಹೇಳಲಾಗಿದೆ. ಪರ್ಶಿಯನ್  ಸಸಾನಿಯನ್ ಸಾಮ್ರಾಜ್ಯದ ಸ್ಥಾಪಕ ಮೊದಲನೇ ಅರ್ದಾಶಿರ್ (180-242 AD) ಈ ಕಟ್ಟಡವನ್ನು ನಿರ್ಮಿಸಿರಬಹುದೆಂದು ಹೇಳಿದ್ದಾರೆ. ಅಜ಼ರ್ಬೈಜಾನ್ ದೇಶವು ಅಂದಿನ ಸಿಲ್ಕ್ ರೋಡ್ ನ ಭಾಗವಾಗಿದ್ದರಿಂದ ದಕ್ಷಿಣ ಏಶಿಯಾದ ಹಿಂದೂ ವ್ಯಾಪಾರಿಗಳು ಮುಂದೆ ಇದನ್ನ ಅಭಿವೃದ್ದಿ ಪಡಿಸಿ ಜ್ವಾಲಾದೇವಿಯನ್ನು ಆರಾಧಿಸುತಿದ್ದರು. ಜ್ವಾಲಾ ದೇವಿಯೆಂದು ಕರೆಯಲು ಕಾರಣವೇನೆಂದರೆ, ಶತಶತಮಾನಗಳಿಂದ ಇಲ್ಲಿನ ಸಪ್ತ ರಂಧ್ರಗಳು ಸತತವಾಗಿ ಬೆಂಕಿಯುಗುಳುತ್ತಿವೆ. ಇಲ್ಲಿ ದೊರೆಯುತ್ತಿರುವ ನೈಸರ್ಗಿಕ ಅನಿಲದಿಂದ ಒಂದು ದಿನವೂ ಈ ಬೆಂಕಿಯು ಆರುವುದಿಲ್ಲ.

    ಇಸ್ಲಾಂ ಧರ್ಮ ಪರ್ಶಿಯಾಗೆ ಏಳನೇ ಶತಮಾನದಲ್ಲಿ ಆಗಮಿಸಿತು, ಅಲ್ಲಿಯವರೆಗೂ ಈ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪಾರ್ಸಿಗಳು ವಾಸಿಸುತಿದ್ದರು. ಕ್ರಮೇಣ ಇಸ್ಲಾಂ ಧರ್ಮದ ಪ್ರಾಬಲ್ಯ ಹೆಚ್ಚುತಿದ್ದಂತೆ ಪಾರ್ಸಿಗಳು ಕಡಿಮೆಯಾದರೂ ಸಹ ಹತ್ತನೇ ಶತಮಾನದವರೆಗೂ ಈ ಸ್ಥಳದ ಸುತ್ತಮುತ್ತ ವಾಸಿಸುತಿದ್ದರು ಎಂದು ಇಲ್ಲಿನ ಅನೇಕ ದಾಖಲೆಗಳಲ್ಲಿ ಪ್ರಸ್ತಾಪಿಸಲಾಗಿದೆ. ಈ ಪ್ರಾಂತ್ಯದಲ್ಲಿ ಮುಸ್ಲಿಮರ ಪ್ರಾಬಲ್ಯ ಹೆಚ್ಚಿದಂತೆ, ಅಳಿದುಳಿದ ಜೋರಾಷ್ಟ್ರಿಯನ್ ಪಾರ್ಸಿಗಳು ಭಾರತದ ಕಡೆ ವಲಸೆ ಬಂದರು. ಏಳೆಂಟು ಶತಮಾನಗಳು ಪಾರ್ಸಿಗಳು ಈ ಕಡೆ ಮರಳಿ ಬಂದ ಬಗ್ಗೆ ಯಾವುದೇ ದಾಖಲೆಗಳು ಇಲ್ಲದೆ ಇದ್ದರೂ, ಹದಿನೇಳನೇ ಶತಮಾನದ ಅಂತ್ಯ ಭಾಗದಲ್ಲಿ ಮತ್ತೆ ಈ ಪ್ರಾಂತ್ಯಕ್ಕೆ ಬರಲಾರಂಭಿಸಿದರು. ಪಾಶ್ಚಿಮಾತ್ಯ ದೇಶಗಳಿಗೆ ಸಂಪರ್ಕಿಸುವ ಸಿಲ್ಕ್ ರೂಟ್ ನ ಭಾಗವಾಗಿದ್ದ ಈ ಪ್ರದೇಶಕ್ಕೆ ಹಿಂದೂ ಮತ್ತು ಸಿಖ್ ವ್ಯಾಪಾರಿಗಳು ವ್ಯಾಪಾರಕ್ಕಾಗಿ ಬರಲಾರಂಭಿಸಿದರು. 1683 ರಿಂದ 1880 ರವರೆಗೂ ದೊರೆತ ಹಲವಾರು ದಾಖಲೆಗಳಲ್ಲಿ ಈ ಉಲ್ಲೇಖವಿದೆ. ಭಾರತದಲ್ಲಿದ್ದ ಪಾರ್ಸಿಗಳು 1880 ರವರೆಗೆ ಭಾರತದಿಂದ ಪಾರ್ಸಿ ಪುರೋಹಿತರನ್ನು ಈ ಪ್ರದೇಶಕ್ಕೆ ಕಳುಹಿಸಿದ್ದರು ಎನ್ನುವ ಪುರಾವೆ ದೊರೆತಿದೆ. 1925 ರಲ್ಲಿ, ಡಾ. ಸರ್ ಜೀವಂಜಿ ಜಮ್ಶೆಡ್ಜಿ ಮೋದಿ ಎಂಬ ಪಾರ್ಸಿ ಪಾದ್ರಿಯು ಅತೇಶ್ಗಾಗೆ ಭೇಟಿ ನೀಡಿ, ಈ ದೇವಾಲಯವು ಹಿಂದೂ ಧಾರ್ಮಿಕ ಲಕ್ಷಣಗಳನ್ನು ಹೊಂದಿದೆ ಎಂದು ತೀರ್ಮಾನಿಸಿದ್ದರು. 

    ಇಲ್ಲಿ ಯಥೇಚ್ಚವಾಗಿ ದೊರೆಯುತಿದ್ದ ನೈಸರ್ಗಿಕ ಅನಿಲಕ್ಕಾಗಿ, ಅಂದಿನ ರಷ್ಯಾ ಒಕ್ಕೂಟವು ಇಲ್ಲಿ ನೈಸರ್ಗಿಕ ಅನಿಲ ಸ್ಥಾವರವನ್ನು ನಿರ್ಮಿಸಿ ದಶಕಗಳ ಕಾಲ ಸತತವಾಗಿ ಅನಿಲವನ್ನು ಹೊರ ತೆಗೆದರು. 1969 ರವರೆಗೆ ನೈಸರ್ಗಿಕವಾಗಿ ಉರಿಯುತ್ತಿದ್ದ ಜ್ವಾಲೆಯು ಸೋವಿಯೆಟ್ ರಷ್ಯಾದ ಅತಿರೇಕದಿಂದ ಬರಿದಾಯಿತು. ಈಗ ಬಾಕು ನಗರದಿಂದ ಗ್ಯಾಸ್ ಪೈಪ್‌ಲೈನ್‌ ಮುಖಾಂತರ ಉರಿಯುತ್ತಿರುವ ಬೆಂಕಿಗೆ ಇಂಧನವನ್ನು ಸರಬರಾಜು ಮಾಡಲಾಗುತ್ತಿದೆ.  ಅತೇಶ್ಗಾವನ್ನು 1998 ರಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾಣವನ್ನಾಗಿ ಪಟ್ಟಿಮಾಡಿದೆ.


ದೇಶದ ಭೌಗೋಳಿಕ ವಿವರ: 

ಈ ರಾಷ್ಟ್ರವನ್ನು ಅಧಿಕೃತವಾಗಿ  ಅಜೆರ್ಬೈಜಾನ್ ಗಣರಾಜ್ಯ ( Republic of Azerbaijan) ಎಂದು ಕರೆಯಲಾಗುತ್ತದೆ. ಅಜರ್ಬೈಜಾನ್ ಪಶ್ಚಿಮ ಏಷ್ಯಾ ಮತ್ತು ಪೂರ್ವ ಯುರೋಪ್ ಗಳ ಸಮ್ಮಿಲನದ ಜಾಗದಲ್ಲಿ ಇರುವ ಒಂದು ದೇಶ. ಪೂರ್ವಕ್ಕೆ ಕ್ಯಾಸ್ಪಿಯನ್ ಸಮುದ್ರ, ಉತ್ತರಕ್ಕೆ ರಷ್ಯಾ, ಪಶ್ಚಿಮಕ್ಕೆ ಟರ್ಕಿ ಮತ್ತು ಅರ್ಮೇನಿಯ, ಈಶಾನ್ಯಕ್ಕೆ ಜಾರ್ಜಿಯ ಮತ್ತು ದಕ್ಷಿಣಕ್ಕೆ ಇರಾನ್ ದೇಶ ದೊಂದಿಗೆ ಗಡಿಯನ್ನು ಹೊಂದಿದೆ.  ಸೋವಿಯೆಟ್ ರಷ್ಯದ ಒಂದು ಭಾಗವಾಗಿದ್ದ ಈ ರಾಷ್ಟ್ರ 1991ರಲ್ಲಿ ಸ್ವತಂತ್ರವಾಯಿತು. ಈ ದೇಶದ ವಿಸ್ತೀರ್ಣ ಹೇಳಬೇಕೆಂದರೆ, ಉತ್ತರ ದಕ್ಷಿಣವಾಗಿ 385 ಕಿಮೀ ಪೂರ್ವ ಪಶ್ಚಿಮವಾಗಿ 475 ಕಿಮೀ ಇರುವ ಇದರ ಒಟ್ಟು ವಿಸ್ತೀರ್ಣ 86,600 ಚ.ಕಿಮೀ. ಭೌಗೋಳಿಕವಾಗಿ ರಷ್ಯಾ, ಟರ್ಕಿ ಮತ್ತು ಇರಾನ್ ದೇಶಗಳಿಂದ ಆವರಿಸಲ್ಪಟ್ಟಿರುವ ಈ ದೇಶವು, ಸಾಂಸ್ಕೃತಿಕವಾಗಿ ಈ ದೇಶಗಳ ಸಂಸ್ಕೃತಿಯನ್ನು ಮೇಳೈಸಿಕೊಂಡಿದೆ. ಅಂದಾಜು ಒಂದು ಕೋಟಿ ಜನಸಂಖ್ಯೆ ಯನ್ನು ಈ ದೇಶಹೊಂದಿದೆ, ದೇಶದ ಬಹುಪಾಲು ಜನರು ಇಸ್ಲಾಂ ಧರ್ಮವನ್ನ ಪಾಲಿಸುತ್ತಾರೆ.  ಬಹಳಷ್ಟು ಜನರು ಟರ್ಕಿ ಮೂಲದವರು, ತಲಾ ಶೇ.8 ರಷ್ಟು ಜನರು ರಷ್ಯ ಮತ್ತು ಆರ್ಮೇನಿಯ ಮೂಲದವರು. ಜನಸಂಖ್ಯೆಯಲ್ಲಿ ಶೇ. 52 ಭಾಗ ಗ್ರಾಮೀಣದವರು. ಈ ದೇಶವು ಅರೆ ಮರುಭೂಮಿಯ ವಾಯುಗುಣವನ್ನು ಹೊಂದಿದೆ. ಬೇಸಿಗೆ ಅತಿ ಉಷ್ಣದಿಂದ ಕೂಡಿದ್ದು ಚಳಿಗಾಲವು ತಂಪಾಗಿರುತ್ತದೆ. ಕುವೈತ್ ಇರಾಕ್, ಇರಾನ್ ದೇಶಗಳು ಇಂತಹದ್ದೇ ವಾಯುಗುಣವನ್ನು ಹೊಂದಿವೆ. ಕುರಾ ಮತ್ತು ಅರಾಸ್ ನದಿಗಳು ಇಲ್ಲಿನ ಪ್ರಮುಖ ನದಿಗಳು. 

ಭಾಷೆ: 

ಅಜೆರ್ಬೈಜಾನ್‌ನ ಪ್ರಾಥಮಿಕ ಮತ್ತು ಅಧಿಕೃತ ಭಾಷೆ ಅಜೆರ್ಬೈಜಾನಿ ಆಗಿದೆ, ಇದು ತುರ್ಕಿಶ್ ಭಾಷೆ ಎಂದೇ ಹೇಳಬಹುದು ಅಷ್ಟರ ಮಟ್ಟಿಗೆ ಇದು ಆಧುನಿಕ ತುರ್ಕಿಕ್ ಭಾಷೆಗೆ ಬಹುತೇಕ ಹೋಲುತ್ತದೆ. ಟರ್ಕಿ ದೇಶದ ಜತೆಗೆ ನಿಕಟ ಸಂಬಂಧವನ್ನು ಈ ದೇಶ ಹೊಂದಿದೆ. ಈ ಅಜೆರ್ಬೈಜಾನಿ ಭಾಷೆಯು ಟರ್ಕಿಶ್, ತುರ್ಕಮೆನ್ ಮತ್ತು ಗಗೌಜ್ ಸೇರಿದಂತೆ ನೈಋತ್ಯ ತುರ್ಕಿಕ್ ಭಾಷಾ ಕುಟುಂಬದ ಒಗುಜ್ ಶಾಖೆಯ ಒಂದು ಕುಡಿ ಎಂದು ಹೇಳಬಹುದು.

ಅಜೆರ್ಬೈಜಾನ್‌ನ  ಪ್ರವಾಸಿ ಸ್ಥಳಗಳು:

ಅಜೆರ್ಬೈಜಾನ್‌ನಲ್ಲಿ ಬಹಳಷ್ಟು ಪ್ರವಾಸಿತಾಣಗಳಿವೆ. ಮಧ್ಯಪ್ರಾಚ್ಯದ ರಾಷ್ಟ್ರಗಳಿಗೆ ಅತಿ ಹತ್ತಿರವಾಗಿರುವುದರಿಂದ, ಬಹುತೇಕ ಜನರು ಸಾರ್ವಜನಿಕ ರಜಾದಿನಗಳಲ್ಲಿ ಇಲ್ಲಿಗೆ ಭೇಟಿ ನೀಡುತ್ತಾರೆ.  ಡಿಸೆಂಬರ್ ನಿಂದ ಮಾರ್ಚ್ ತಿಂಗಳಿನವರೆಗೆ ಅಜ಼ರ್ಬೈಜಾನ್ ದೇಶದ ಶಹದಾಗ್ ಮತ್ತು ಗಬಾಲಾದಂತಹ ಸ್ಥಳಗಳು ಹಿಮಾವೃತ್ತವಾಗುತ್ತವೆ. ಅತಿ ಹೆಚ್ಚು ಪ್ರವಾಸಿಗರು ಈ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡುತ್ತಾರೆ. 


ಬಾಕು:  

ಅಜೆರ್ಬೈಜಾನ್ ದೇಶದ ರಾಜಧಾನಿ ಬಾಕು. ಅಜೆರ್ಬೈಜಾನ್‌ನಲ್ಲಿ ನೋಡಲು ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿದೆ. ಈ ನಗರವು  ಕ್ಯಾಸ್ಪಿಯನ್‌ ಸಮುದ್ರ(Caspian Sea) ಹಾಗೂ ಕಾಕಸಸ್ ಪರ್ವತ ಪ್ರದೇಶದ ಅತ್ಯಂತ ದೊಡ್ಡ ನಗರವೂ ಹೌದು. ಇಲ್ಲಿಯ ಜನಸಂಖ್ಯೆ ಅಂದಾಜು ೨೦ ಲಕ್ಷ. ಈ ನಗರವು ದೇಶದ ಅತಿದೊಡ್ಡ ನಗರವಾಗಿದ್ದು ವಾಣಿಜ್ಯ ಮತ್ತು ವಿದ್ಯಾಕೇಂದ್ರವಾಗಿದೆ, ಆಧುನಿಕತೆಯನ್ನು ಒಪ್ಪಿಕೊಂಡಿರುವ ಈ ನಗರ, ಯುರೋಪಿನ ನಗರಗಳನ್ನ ಹೋಲುತ್ತದೆ.  ಇಲ್ಲಿನ ವಿಶೇಷವೇನೆಂದರೆ ಆಧುನಿಕ ಗಗನಚುಂಬಿ ಕಟ್ಟಡಗಳ ಜತೆಗೆ ಶತಶತಮಾನಗಳ ಹಳೆಯ ಕಟ್ಟಡಗಳನ್ನ ಹಳೆಯ ನಗರ (Icherisheher) ನೋಡಬಹುದು. ಬೆಂಕಿಯನ್ನು ಹೋಲುವಂತೆ ನಿರ್ಮಿಸಿರುವ ಪ್ರಸಿದ್ಧ ಫ್ಲೇಮ್ ಟವರ್‌ ಗಳು ಇಲ್ಲಿನ ಪ್ರವಾಸಿಗರ ಪ್ರೇಕ್ಷಣೀಯ ತಾಣವಾಗಿದೆ. 900 ಕ್ಕೂ ಹೆಚ್ಚು ಕಲಾಕೃತಿಗಳನ್ನು ಒಳಗೊಂಡಿರುವ ಮ್ಯೂಸಿಯಂ ಆಫ್ ಕಾಂಟೆಂಪರರಿ ಇದರ ಜೊತೆಯಲ್ಲಿ, ನಗರದಲ್ಲಿ ಅನೇಕ ಪ್ರೇಕ್ಷಣೀಯ ಸ್ಥಳಗಳಾದ, ಮೇಡನ್ ಟವರ್, ಶಿರ್ವಾನ್ ಶಾಸ್ ಅರಮನೆ, ಕಾರವಾನ್‌ಸೆರೈ, ಮೆಮೊರಿ ಅಲ್ಲೆ ಶೆಹಿಡ್ಲರ್ ಖಿಯಾಬಾನಿ, ನಿಜಾಮಿ ಸ್ಟ್ರೀಟ್, ಫೌಂಟೇನ್ ಸ್ಕ್ವೇರ್, ನಿಜಾಮಿ ಗಂಜಾವಿ ಸ್ಮಾರಕ, ರಸುಲ್-ಝಾಡೆ ಸ್ಟ್ರೀಟ್, ನ್ಯಾಷನಲ್ ಕಾರ್ಪೆಟ್ಸ್ ಮ್ಯೂಸಿಯಂ. ಬಾಕು ಹೈಲ್ಯಾಂಡ್ ಪಾರ್ಕ್, ಫ್ಲೇಮ್ ಟವರ್ಸ್ ಮತ್ತು ಹೇದರ್ ಅಲಿಯೆವ್ ಸೆಂಟರ್‌ ಹೀಗೆ ಹಲವಾರು ಸ್ಥಳಗಳಿವೆ.


ಗೋಬಸ್ತಾನ್ ರಾಷ್ಟ್ರೀಯ ಉದ್ಯಾನ (Gobustan National Park): 

ಬಾಕುವಿನ ನೈಋತ್ಯಕ್ಕೆ ಸುಮಾರು 64 ಕಿಮೀ ದೂರದಲ್ಲಿರುವ ಈ ರಾಷ್ಟ್ರೀಯ ಉದ್ಯಾನವನವು ತನ್ನ ಶಿಲಾಯುಗದ ಕಲ್ಲಿನ ಕೆತ್ತನೆಗಳು ಮತ್ತು ಮಣ್ಣಿನ ಜ್ವಾಲಾಮುಖಿಗಳಿಗೆ ಹೆಸರುವಾಸಿಯಾಗಿದೆ.

 - ಪೆಟ್ರೋಗ್ಲಿಫ್ಸ್: 10,000 B.C ವರೆಗಿನ 6,000 ಕ್ಕೂ ಹೆಚ್ಚು ಕಲ್ಲಿನ ಕೆತ್ತನೆಗಳು ಪ್ರಾಚೀನ ಮಾನವ ಜೀವನ ಮತ್ತು ವನ್ಯಜೀವಿಗಳ ಚಿತ್ರಣಗಳನ್ನು ಒಳಗೊಂಡಿವೆ.

 - ಮಡ್ ಜ್ವಾಲಾಮುಖಿಗಳು: ಅಜೆರ್ಬೈಜಾನ್ ಪ್ರಪಂಚದಲ್ಲೇ ಅತಿ ಹೆಚ್ಚು ಮಣ್ಣಿನ ಜ್ವಾಲಾಮುಖಿಗಳನ್ನು ಹೊಂದಿದೆ, ಇದು ಅನನ್ಯ ಭೌಗೋಳಿಕ ಅನುಭವವನ್ನು ನೀಡುತ್ತದೆ.




ಶೆಕಿ (Sheki):  

ಗ್ರೇಟರ್ ಕಾಕಸಸ್ ಪರ್ವತಗಳ ತಪ್ಪಲಿನಲ್ಲಿ ನೆಲೆಗೊಂಡಿರುವ ಒಂದು ಆಕರ್ಷಕ ಪಟ್ಟಣ, ಶ್ರೀಮಂತ ಇತಿಹಾಸ ಮತ್ತು ಸುಂದರವಾದ ವಾಸ್ತುಶಿಲ್ಪಕ್ಕೆ ಈ ಪ್ರಾಂತ್ಯ ಹೆಸರುವಾಸಿಯಾಗಿದೆ. ಇಲ್ಲಿರುವ ಶೆಕಿ ಖಾನ್ ಅರಮನೆ ಸಂಕೀರ್ಣವಾದ ಬಣ್ಣದ ಗಾಜು ಮತ್ತು ಟೈಲ್ ಕೆಲಸದಿಂದ ಅಲಂಕರಿಸಲ್ಪಟ್ಟ 18 ನೇ ಶತಮಾನದ ಅದ್ಭುತ ಅರಮನೆ. ಸಾಮಾನ್ಯವಾಗಿ ಪುರಾತನ ನಗರಗಳಲ್ಲಿ, ಸ್ಥಳೀಯ ಕರಕುಶಲ ವಸ್ತುಗಳ ಪ್ರದರ್ಶನ, ಮಾರಾಟ ಸಾಮಾನ್ಯವಾಗಿರುತ್ತದೆ. ಇಲ್ಲಿ ಸಾಂಪ್ರದಾಯಿಕ ಜವಳಿ, ಕುಂಬಾರಿಕೆ ಮತ್ತು ತಾಮ್ರದ ಸಾಮಾನುಗಳನ್ನು ಉತ್ಪಾದಿಸುವುದನ್ನ ಕಾಣಬಹುದು. 



ಗಾಂಜಾ (Ganja): 

ಅಜರ್‌ಬೈಜಾನ್‌ನ ಎರಡನೇ ಅತಿದೊಡ್ಡ ನಗರ, ಪುರಾತನ ಇತಿಹಾಸ ಮತ್ತು ಸಂಸ್ಕೃತಿಯನ್ನು ಇಲ್ಲಿ ನೋಡಬಹುದು. ಪ್ರಸಿದ್ಧ ಪರ್ಷಿಯನ್ ಕವಿ ನಿಜಾಮಿ ಗಂಜಾವಿಗೆ ಸಮರ್ಪಿತವಾಗಿರುವ ನಿಜಾಮಿ ಸಮಾಧಿ (Nizami Mausoleum) ಇಲ್ಲಿದೆ. ಈ ಸಮಾಧಿಯು ಸುಂದರ ವಾಸ್ತುಶಿಲ್ಪವನ್ನು ಹೊಂದಿದೆ. ಈ ನಗರದಲ್ಲಿರುವ ಜಾವದ್ ಖಾನ್ ಸ್ಟ್ರೀಟ್ (Javad Khan Street) ನಲ್ಲಿ ಕೆಫೆಗಳು, ಅಂಗಡಿಗಳು ಮತ್ತು ಐತಿಹಾಸಿಕ ತಾಣಗಳಿವೆ. ಸ್ಥಳೀಯ ಸಂಸ್ಕೃತಿಯಲ್ಲಿ ಅಡ್ಡಾಡಲು ಮತ್ತು ಅರಿತುಕೊಳ್ಳಲು ಈ ಜಾಗ ಸೂಕ್ತವಾಗಿದೆ.

ಕುಬಾ (Quba): 

ಅಜರ್‌ಬೈಜಾನ್‌ನ ಉತ್ತರ ಭಾಗದಲ್ಲಿರುವ ಒಂದು ಸುಂದರವಾದ ಪಟ್ಟಣ, ಇಲ್ಲಿ ಸುಂದರವಾದ ನಯನ ಮನೋಹರವಾದ ಪ್ರಕೃತಿ ಮತ್ತು ಸಾಂಸ್ಕೃತಿಕ ಮಹತ್ವಕ್ಕೆ ಹೆಸರುವಾಸಿಯಾಗಿದೆ. ಇಸ್ಲಾಮಿಕ್ ವಾಸ್ತುಶಿಲ್ಪವನ್ನು ಪ್ರತಿಬಿಂಬಿಸುವ ಸುಂದರವಾದ ಕುಬಾ ಮಸೀದಿ, ಪಟ್ಟಣದ ಕೇಂದ್ರ ಭಾಗದಲ್ಲಿದೆ. 1918ರ ನರಮೇಧದ ಬಲಿಯಾದವರ ನೆನಪಿಗಾಗಿ ನಿರ್ಮಿಸಲಾಗಿರುವ, ಕುಬಾ ಜಿನೊಸೈಡ್ ಮೆಮೋರಿಯಲ್ ಸ್ಮಾರಕ ಸಂಕೀರ್ಣ (Quba Genocide Memorial Complex) ಸ್ಮಾರಕ, ಇಲ್ಲಿ ಐತಿಹಾಸಿಕ ಮಹತ್ವದ ವಿಷಯಗಳ ಕುರಿತು ಆಸಕ್ತಿಯಿರುವವರು ಈ ಸ್ಮಾರಕಕ್ಕೆ ಭೇಟಿ ನೀಡುತ್ತಾರೆ. 

ಗಬಾಲಾ (Gabala) : 

ನೈಸರ್ಗಿಕ ಸೌಂದರ್ಯ ಮತ್ತು ಹೊರಾಂಗಣ ಚಟುವಟಿಕೆಗಳಿಗೆ ಹೆಸರುವಾಸಿಯಾದ ಜನಪ್ರಿಯ ರೆಸಾರ್ಟ್ ಪ್ರದೇಶ, ಬಾಕುದಿಂದ ಸುಮಾರು 225 ಕಿಮೀ ವಾಯುವ್ಯದಲ್ಲಿದೆ. ಟುಫಾಂಡಗ್ ಮೌಂಟೇನ್ ರೆಸಾರ್ಟ್ (Tufandag Mountain Resor) ನಲ್ಲಿ ಚಳಿಗಾಲದ ಸಮಯದಲ್ಲಿ ಸ್ಕೀಯಿಂಗ್ ಕ್ರೀಡೆಯನ್ನಾಡಬಹುದು ಮತ್ತು ಬೇಸಿಗೆಯಲ್ಲಿ ಹೈಕಿಂಗ್ ಮಾಡುವುದಕ್ಕೆ ಸೂಕ್ತ ಪ್ರದೇಶ, ಇಲ್ಲಿರುವ ಪರ್ವತಗಳ ಅದ್ಭುತ ನೋಟವನ್ನು ಸವಿಯುವುದೇ ಒಂದು ಖುಷಿ. ಪ್ರವಾಸಿಗರಿಗೆ ಮತ್ತೊಂದು ಆಕರ್ಷಣೀಯ ಸ್ಥಳ ಗಬಾಲಾ ಶೂಟಿಂಗ್ ಕ್ಲಬ್, ಇಲ್ಲಿ  ಶೂಟಿಂಗ್ ಕ್ರೀಡೆಗಳನ್ನಾಡಲು ಆಧುನಿಕ ಸೌಲಭ್ಯಗಳನ್ನ ರೂಪಿಸಲಾಗಿದೆ

ನಫ್ತಾಲನ್(Naftalan) : 

ಬಾಕುವಿನ ಪಶ್ಚಿಮಕ್ಕೆ ಸುಮಾರು 300 ಕಿಮೀ ದೂರದಲ್ಲಿರುವ ಚಿಕಿತ್ಸಕ ತೈಲ ಸ್ನಾನಗಳಿಗೆ ಪ್ರಸಿದ್ಧವಾದ ವಿಶಿಷ್ಟ ಸ್ಪಾ ಪಟ್ಟಣ. ನಮ್ಮ ಕೇರಳದ ಆಯುರ್ವೇದ ತೈಲ ಮಸಾಜ್ ನಂತೆ ಇಲ್ಲಿನ ಅನೇಕ ರೆಸಾರ್ಟ್ ಗಳಲ್ಲಿ  ವಿಶೇಷವಾಗಿ ಚರ್ಮ ಮತ್ತು ಕೀಲು ಸಮಸ್ಯೆಗಳಿಗೆ ನಫ್ತಾಲನ್ ಆಯಿಲ್ ಟ್ರೀಟ್ಮೆಂಟ್ ನೀಡಲಾಗುತ್ತದೆ.  

ಖಿನಾಲುಗ್ (Khinalug) : 

2,300 ಮೀಟರ್ ಎತ್ತರದಲ್ಲಿರುವ ಅಜೆರ್ಬೈಜಾನ್‌ನ ಅತಿ ಎತ್ತರದ ಮತ್ತು ಅತ್ಯಂತ ದೂರದ ಪರ್ವತ ಹಳ್ಳಿಗಳಲ್ಲಿ ಒಂದಾಗಿದೆ. ಹಳ್ಳಿಯು ಸುತ್ತಮುತ್ತಲಿನ ಪರ್ವತಗಳು ಮತ್ತು ಕಣಿವೆಗಳ ರಮಣೀಯ ದೃಶ್ಯಗಳು ಕಣ್ಮನ ಸೆಳೆಯುತ್ತವೆ.  ಪ್ರವಾಸಿಗರು ಸ್ಥಳೀಯ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಆತಿಥ್ಯದ ಅನುಭವವನ್ನು ಪಡೆಯಬಹುದು. 

 ಲಾಹಿಜ್ (Lahij) : 

ಕುಶಲಕರ್ಮಿಗಳ ಕರಕುಶಲತೆಗೆ ಹೆಸರುವಾಸಿಯಾದ ಐತಿಹಾಸಿಕ ಪರ್ವತ ಗ್ರಾಮ, ವಿಶೇಷವಾಗಿ  ಕರಕುಶಲತೆ ರೂಪಿಸುವ ತಾಮ್ರದ ಸಾಮಾನುಗಳನ್ನು ಇಲ್ಲಿ ನೋಡಬಹುದು. ಸ್ಥಳೀಯ ಕುಶಲಕರ್ಮಿಗಳು ತಮ್ಮ ಕೈಯಾರೆ ಸುಂದರವಾಗಿ ವಸ್ತುಗಳನ್ನು ಉತ್ಪಾದಿಸುವುದನ್ನ ಇಲ್ಲಿ ವೀಕ್ಷಿಸಬಹುದು. ಗ್ರಾಮವು ಸಾಂಪ್ರದಾಯಿಕ ವಾಸ್ತುಶೈಲಿ ಮತ್ತು ಸ್ಥಳೀಯ ಕಲ್ಲಿನಿಂದ ನಿರ್ಮಿಸಲಾದ ಅನನ್ಯ ಮನೆಗಳನ್ನು ಒಳಗೊಂಡಿದೆ. ಗ್ರಾಮದ ಬೀದಿಗಳು ಸಹ ಅಷ್ಟೇ ಸುಂದರವಾಗಿವೆ.

ಕ್ಯಾಸ್ಪಿಯನ್ ಸಮುದ್ರ (The Caspian Sea): 

ಈ ಸಮುದ್ರ ಮಿಕ್ಕ ಸಮುದ್ರಗಳಂತಲ್ಲ. ಇದು ಒಳನಾಡಿನ ಜಲರಾಶಿ, ಅಥವ ಒಳನಾಡಿನ ಜಲ ದ್ವೀಪ ಎನ್ನಬಹುದು. ಈ ಸಮುದ್ರದ ಸುತ್ತಲೂ ಭೂ ಪ್ರದೇಶವಿದೆ. ಈ ಸಮುದ್ರ ಮಿಕ್ಕ ಸಮುದ್ರಗಳಂತೆ ಒಂದನ್ನೊಂದು ಸೇರುವುದಿಲ್ಲ. ಸುಂದರವಾದ ಕಡಲತೀರಗಳು, ಕರಾವಳಿಯುದ್ದಕ್ಕೂ ವಿವಿಧ ರೆಸಾರ್ಟ್‌ಗಳು ಬೀಚ್ ಪ್ರೇಮಿಗಳು ಮತ್ತು ಜಲ ಕ್ರೀಡೆಗಳ ಉತ್ಸಾಹಿಗಳಿಗೆ ಕೈಬೀಸಿ ಕರೆಯುತ್ತವೆ. 

ಅಜರ್‌ಬೈಜಾನ್‌ನ ಸಂಸ್ಕೃತಿ, ಇತಿಹಾಸ ಮತ್ತು ನೈಸರ್ಗಿಕ ಸೌಂದರ್ಯದ ಕುರಿತು ಈ ಮೇಲೆ ತಿಳಿಸಿದ ಪ್ರವಾಸಿ ಆಕರ್ಷಣೆಗಳು ಇಲ್ಲಿರುವ ವೈವಿಧ್ಯಮಯ ಪರಿಸರ, ವಾತವರಣದ ಕುರಿತು  ಪ್ರವಾಸಿಗರನ್ನ ಸೆಳೆಯುತ್ತವೆ.


ಗುರುವಾರ, ಮೇ 23, 2024

ಆಧುನಿಕ ಜಗತ್ತಿನಲ್ಲಿ ಮರೆಯಾಗುತ್ತಿರುವ ಪ್ರಾಚೀನ ಈಜಿಪ್ಟ್


ಈಜಿಪ್ಟ್ ದೇಶದ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ? ಈಜಿಪ್ಟ್  ಎಂದೊಡನೆ ಅಲ್ಲಿನ ಪಿರಮಿಡ್ ಗಳು, ನೈಲ್ ನದಿ, ಪುರಾತನ ನಾಗರೀಕತೆ ಎಲ್ಲರಿಗೂ ನೆನಪಾಗುತ್ತದೆ. ಈಜಿಪ್ಟಿನ ನಾಗರೀಕತೆ ಮತ್ತು ಪುರಾತನ ಪಿರಮಿಡ್ ಗಳು ವಿಶ್ವವಿಖ್ಯಾತ. ಪ್ರಪಂಚದ ಮಹಾ ಅದ್ಭುತಗಳ ಪಟ್ಟಿಯಲ್ಲಿ ಈಜಿಪ್ಟ್‌ನ ಪಿರಮಿಡ್‌ಗಳೂ ಸೇರಿವೆ. ಸಾವಿರಾರು ವರ್ಷಗಳ ಹಿಂದೆ ಕಟ್ಟಿರುವ ದೈತ್ಯಗಾತ್ರದ ಪಿರಮಿಡ್ ಗಳನ್ನು ವೀಕ್ಷಿಸಲು  ಸಾವಿರಾರು ಪ್ರವಾಸಿಗರನ್ನು ದಿನನಿತ್ಯ ಭೇಟಿ ನೀಡುತಿದ್ದಾರೆ.  ಇಲ್ಲಿನ ನೈಲ್ ನದಿ ಈ ದೇಶದ ಜೀವನದಿ. ಎಲ್ಲ ನಾಗರಿಕತೆಗಳಿಗೂ ಸಂಸ್ಕೃತಿಗಳಿಗೂ ನದಿಯೇ ಮೂಲ ಎನ್ನುವಂತೆ, ಅಂದಿನ ಈಜಿಪ್ಟಿನ ಪುರಾತನ ನಾಗರಿಕತೆ ಹುಟ್ಟಿದ್ದು ಈಜಿಪ್ಟಿನ ನೈಲ್ ನದಿ ಹರಿಯುವ ಇಕ್ಕೆಲಗಳಲ್ಲಿ.  ಅಗಾಧವಾದ ಮರುಭೂಮಿಯ ಮಧ್ಯೆ ಜನವಸತಿ ಕೇಂದ್ರೀಕೃತವಾಗಿರುವುದು ಈ ನದಿಯ ಎರಡು ದಂಡೆಗಳ ಬದಿಯಲ್ಲಿ ಹಲವಾರು ಹಳ್ಳಿಗಳು, ಪಟ್ಟಣಗಳು ಜನವಸತಿ ಕೇಂದ್ರಗಳನ್ನು ಕಾಣಬಹುದು. ಮಿಕ್ಕಂತೆ ಕಣ್ಣು ಹಾಯಿಸಿದೆಡೆಯಲ್ಲೆಲ್ಲೂ ಮರುಭೂಮಿ. 

ಕಣ್ಮರೆಯಾದ ಪ್ರಾಚೀನ ಈಜಿಪ್ಟಿನ ಜನಾಂಗ:-

ಕೇವಲ ಇನ್ನೂರೈವತ್ತು ವರ್ಷಗಳ ಹಿಂದೆ ಕಟ್ಟಲ್ಪಟ್ಟ ಅಮೇರಿಕ ದೇಶ ಇಂದು ಪ್ರಪಂಚದಲ್ಲಿ ದೊಡ್ಡಣ್ಣನೆಂದು ಹೆಸರುವಾಸಿ.  ಆಧುನಿಕತೆ, ಆರ್ಥಿಕತೆ, ಮಿಲಿಟರಿ ಶಕ್ತಿ, ಇತ್ಯಾದಿಯಲ್ಲಿ ನಂಬರ್ ಒನ್ ದೇಶ ಎಂದೇ ಗುರುತಿಸಲಾಗುತ್ತಿದೆ. ವಿಷಯ ಹೀಗಿರುವಾಗ ಏಳು ಸಾವಿರ ವರ್ಷಗಳ ಹಿಂದೆಯೇ ಆಧುನಿಕ ನಾಗರೀಕತೆಯನ್ನು ರೂಡಿಸಿಕೊಂಡಿದ್ದ ಈಜಿಪ್ಟ್ ದೇಶ ಹೇಗಿರಬಹುದು ಎನ್ನುವ ಕಲ್ಪನೆ ನಮ್ಮ ಮನದಲ್ಲಿ ಮೂಡಬಹುದು. ಆದರೆ ವಾಸ್ತವ ಸ್ಥಿತಿ ಬೇರೆಯದೇ ಇದೆ. ಅಂದಿನ ಸುವರ್ಣಯುಗ, ಗತ ವೈಭವ ಕೇವಲ ಇಂದು ಪಳೆಯುಳಿಕೆಗಳಾಗಿ ಉಳಿದಿದೆ. 

ಇತ್ತೀಚಿನ ಕೆಲ ವರ್ಷಗಳ ಹಿಂದೆ ಈಜಿಪ್ಟ್ ಪ್ರಜೆಗಳ ಕುರಿತು ಹಲವಾರು DNA  ವರದಿಗಳನ್ನು ಬಿಡುಗಡೆಗೊಳಿಸಿದರು. ಆ ವರದಿಗಳ ಪ್ರಕಾರ  ಮಮ್ಮಿಗಳು ಸೇರಿದಂತೆ, ಅಂದಿನ ಜನರು ಮತ್ತು ಇಂದಿನ ಜನರ ನಡುವೆ ಹೋಲಿಕೆಯೇ ಇಲ್ಲವಂತೆ, ಸಾವಿರಾರು ವರ್ಷಗಳ ಹಿಂದೆ ಇಲ್ಲಿದ್ದ ಮೂಲನಿವಾಸಿಗಳು ಕಾಲಕ್ರಮೇಣ ಕಣ್ಮರೆಯಾಗಿದ್ದಾರೆ. ನಮ್ಮ ಹರಪ್ಪ ಮೆಹೆಂಜದಾರೋ ನಾಗರೀಕತೆಯಂತೆ, ಅಂದಿನ ಜನರು ಬೇರೆ ಬೇರೆ ಪ್ರದೇಶಗಳಿಗೆ ವಲಸೆ ಹೋದಂತೆ, ಇಲ್ಲಿನ ಮೂಲನಿವಾಸಿಗಳು ಬೇರೆಡೆ ವಲಸೆ ಹೋಗಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಅಥವಾ ಆ ಜನಾಂಗ ನಶಿಸಿ ಹೋಗಿದೆಯೋ ಗೊತ್ತಿಲ್ಲ. ಇಂದಿನ ಈಜಿಪ್ಟಿನ ದೇಶದಲ್ಲಿರುವ ಬಹುತೇಕರು ಇತರೆ ದೇಶಗಳಿಂದ ಇಲ್ಲಿಗೆ ಬಂದು ನೆಲೆಸಿದವರು. ಪ್ರಸ್ತುತ ಈಜಿಪ್ಟ್ ಜನರ DNA ಮಧ್ಯಪ್ರಾಚ್ಯ ರಾಷ್ಟ್ರಗಳ ಜನರ ಜನರ ಜತೆ ಹೆಚ್ಚು ಹೋಲಿಕೆಯಾಗುತ್ತದೆಯಂತೆ. ಇನ್ನೂ ಒಂದು ವಿಷಯ ಏನೆಂದರೆ, ಈಜಿಪ್ಟ್ ದೇಶ ಆಫ್ರಿಕಾ ಖಂಡದಲ್ಲಿರುವುದು ಎಲ್ಲರಿಗೂ ಗೊತ್ತಿದೆ. ಆಫ್ರಿಕಾ ಖಂಡದ ಜನಾಂಗಕ್ಕೂ ಈಗಿರುವ ಈಜಿಪ್ಟ್ ದೇಶದ ಜನರಿಗೂ ಹೋಲಿಕೆಯೂ ಬಹಳ ಕಡಿಮೆ 

ಒಂದು ಕಾಲದಲ್ಲಿ ಶ್ರೀಮಂತವಾಗಿ ಮೆರೆದಿದ್ದ ಈಜಿಪ್ಟ್ ರಾಷ್ಟ್ರ, ಈಗ ಬಡ ರಾಷ್ಟ್ರವಾಗಿದೆ. ವರದಿಗಳ ಪ್ರಕಾರ, ಈಜಿಪ್ಟ್ ದೇಶದ 32% ಜನರು ಬಡತನದಲ್ಲಿದ್ದಾರೆ. ದೇಶದ ಆರ್ಥಿಕತೆ ಕುಸಿದಿದ್ದು, ವಿಶ್ವಬ್ಯಾಂಕ್ ಮತ್ತು ಇತರೆ ಅರಬ್ ದೇಶಗಳ ನೆರವಿನಿಂದ ದೇಶವು ಮುನ್ನೆಡೆಯುತ್ತಿದೆ. ಪ್ರವಾಸೋದ್ಯಮದಿಂದ ಅಲ್ಪ ಮಟ್ಟಿನ ಆದಾಯವಿದೆ. ಲಕ್ಷಾಂತರ ಜನರು ಪ್ರವಾಸೋದ್ಯಮವನ್ನು ಅವಲಂಬಿಸಿದ್ದಾರೆ. ವಿದ್ಯಾವಂತ ಜನ ಉದ್ಯೋಗ ಅರಸಿ ಗಲ್ಫ್ ಸೇರಿದಂತೆ ಇತರೆ ರಾಷ್ಟ್ರಗಳಿಗೆ ವಲಸೆ ಹೋಗುತಿದ್ದಾರೆ. ಕೃಷಿಯು ಬಹುತೇಕ ನೈಲ್ ನದಿಯ ಮೇಲೆ ಅವಲಂಬಿತವಾಗಿರುವುದರಿಂದ, ಆಹಾರ ಪದಾರ್ಥಗಳನ್ನ ಆಮದು ಮಾಡಿಕೊಳ್ಳುವ ಪರಿಸ್ಥಿತಿಯಿದೆ. ಸಾವಿರಾರು ವರ್ಷಗಳ ಹಿಂದೆ ಶ್ರೀಮಂತ ರಾಷ್ಟ್ರವಾಗಿದ್ದ ಈಜಿಪ್ಟ್ ಹೀಗೇಕಾಯ್ತು ಎನ್ನುವುದಕ್ಕೆ ನೂರಾರು ಕಾರಣಗಳು ಸಿಗಬಹುದು. 

ಆಧುನಿಕ ಜಗತ್ತಿನಲ್ಲಿ ಮರೆಯಾಗುತ್ತಿರುವ ಪ್ರಾಚೀನ ನಾಗರೀಕತೆ:-

ಅಪರಿಮಿತ ಉತ್ಸಾಹದಿಂದ ಈಜಿಪ್ಟ್ ಪ್ರವಾಸಕ್ಕೆ ಹೋದ ಜನರು, ಮರಳಿ ಬರುವಾಗ ಬೇಸರದಿಂದಲೇ ಮರಳಿ ಬರುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಪ್ರವಾಸಿ ಗೈಡ್ ಗಳು ಎಂದು ಹಲವಾರು ಜನ ಯಾಮಾರಿಸುತ್ತಾರೆ.  ಕ್ಯಾಮೆಲ್ ರೈಡ್ ಬೇಕಾ? ಸಿಗರೇಟ್ ಬೇಕಾ? ಗಾಡಿ ಬೇಕಾ? ಕುದರೆ ಸವಾರಿ ಬೇಕಾ? ಎಂದು ಹಲವರು ನಮ್ಮ ಹಿಂದೆ ಬೀಳುವುದು ಸಾಮಾನ್ಯ, ಅವರೆಲ್ಲರನ್ನೂ ನಿರ್ಲಕ್ಷಿಸಿ ಪ್ರವಾಸಿ ಸ್ಥಳಗಳಿಗೆ ಹೋದರೆ ಅಲ್ಲಿನ ಅವ್ಯವಸ್ಥತೆ ಬೇಸರವನ್ನುಂಟು ಮಾಡುತ್ತದೆ. ಕೆಲವರು ಒಂದಕ್ಕೆ ಎರಡರಷ್ಟು ಹಣ ಪಡೆಯುವುದು ಮಾಮೂಲಿಯಾಗಿದೆ. ಏನೇ ಸಹಾಯ ಬೇಕಿದ್ದರೂ, ಉಚಿತವಾಗಿ ದೊರೆಯುವುದು ಕಡಿಮೆ. ಎಲ್ಲದಕ್ಕೂ ಭಕ್ಷೀಸು ಅಥವ ಟಿಪ್ಸ್ ಕೇಳುವುದು ಸಾಮಾನ್ಯ ಸಂಗತಿ. ಇನ್ನು ಸ್ವಚ್ಚತೆ ವಿಷಯದಲ್ಲಂತೂ ಹೇಳುವುದೇ ಬೇಡ. ಎಲ್ಲಿ ನೋಡಿದರೂ ಕಸದ ರಾಶಿ. ಅದು ಪಿರಮಿಡ್ ಗಳಿರಲಿ, ನೈಲ್ ನದಿಯ ಅಕ್ಕಪಕ್ಕದಲ್ಲಾಗಲಿ, ಲಕ್ಸರ್ ನ ದೇವಾಲಯ ಸುತ್ತಮುತ್ತ, ಎಲ್ಲೇ ಆದರು ಕಸ ಕಡಿಮೆ ಏನಿಲ್ಲ. ಕೈರೋ ನಗರ ಜನಸಾಗರ ದಿಂದ ತುಂಬಿ ಹೋಗಿದೆ, ಇನ್ನು ಐವತ್ತು ವರ್ಷಗಳಲ್ಲಿ ಆ ನಗರದ ಜನಸಂಖ್ಯೆ ದುಪ್ಪಟ್ಟಾಗಲಿದೆ. ಮೈಲುಗಟ್ಟಲೆ ಇರುವ ಅಂದವಿಲ್ಲದ ಅಪಾರ್ಟ್ ಮೆಂಟ್ ಗಳು ನೀರಸವೆನಿಸಿ ಬಿಡುತ್ತವೆ  ರಸ್ತೆಗಳಲ್ಲಿ ಟ್ರಾಫಿಕ್ ಕಿರಿಕಿರಿ ನಮ್ಮ ಪ್ರವಾಸವನ್ನು ದುಸ್ತರಗೊಳಿಸುತ್ತದೆ. ಸಾವಿರಾರು ವರ್ಷಗಳ ಹಿಂದೆ ಆಧುನಿಕ ನಾಗರೀಕತೆ ಹೊಂದಿದ್ದ ಈಜಿಪ್ಟ್ ದೇಶಾನ ಇದು ಎಂದೆನಿಸುತ್ತದೆ. ಡಾಕ್ಟರ್ ಇಂಜಿನಿಯರುಗಳು, ಶಿಕ್ಷಕರು, ಪ್ರೊಫೆಸರ್ ಗಳು ಮುಂತಾದ ಸುಶಿಕ್ಷಿತ ಜನರು ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ವಲಸೆ ಹೋಗಿದ್ದಾರೆ. ಇಂದಿನ ಈಜಿಪ್ಟ್ ನ ಸ್ಥಿತಿಗೆ ಇದು ಒಂದು ಕಾರಣ ಸಹ ಎನ್ನಲಾಗುತ್ತಿದೆ. ಮುಂದೊದು ದಿನ ಬದಲಾಗುವ ರಾಜಕೀಯ ಕಾಲಘಟ್ಟದಲ್ಲಿ ಈಜಿಪ್ಟ್ ತನ್ನ ಗತ ವೈಭವ ಪಡೆಯಬಹುದು ಎನ್ನುವ ಆಶಾಭಾವ ಇಲ್ಲಿಗೆ ಭೇಟಿ ನೀಡಿ ಹಿಂತಿರುಗುವ ಪ್ರವಾಸಿಗರಲ್ಲಿದೆ


ಪ್ರಮುಖ ಪ್ರವಾಸಿ ತಾಣಗಳು:- 

ಇಲ್ಲಿರುವ ಹಲವಾರು ಪ್ರವಾಸಿ ತಾಣಗಳನ್ನು ನೋಡಲು, ಪ್ರತಿವರ್ಷ ಲಕ್ಷಾಂತರ ಜನರು ಈಜಿಪ್ಟ್ ಪ್ರವಾಸ ಕೈಗೊಳ್ಳುತ್ತಾರೆ. ನೋಡುವುದಕ್ಕೆ ಅಸಂಖ್ಯಾತ ತಾಣಗಳಿದ್ದು, ಭರಪೂರ ಮಾಹಿತಿ ಇಲ್ಲಿ ದೊರೆಯುತ್ತದೆ. ಇತಿಹಾಸ ಓದುವ ವಿಧ್ಯಾರ್ಥಿಗಳಿಗೆ ಮತ್ತು ಇತಿಹಾಸದಲ್ಲಿ ಆಸಕ್ತಿಯಿರುವ ಜನರಿಗೆ ಈಜಿಪ್ಟ್ ಪ್ರವಾಸ ಒಂದು ಅದ್ಭುತವಾದ ಅನುಭವವನ್ನೇ ನೀಡುತ್ತದೆ. ಈಜಿಪ್ಟ್ ದೇಶದಲ್ಲಿ ನೋಡುವಂತಹ ಸ್ಥಳಗಳು ಬಹಳಷ್ಟಿವೆ. ಸಾವಿರಾರು ವರ್ಷಗಳ ಹಿಂದೆಯೇ ಏನೆಲ್ಲಾ ತಂತ್ರಜ್ನಾನವನ್ನು ಅಂದಿನ ಕಾಲದಲ್ಲಿ ಅವರು ಉಪಯೋಗಿಸಿದ್ದರು ಅಂತ ಆಶ್ಚರ್ಯವಾಗುತ್ತಿದೆ. ಇವರ ಆರಾಧ್ಯ ದೇವರು "ಸೂರ್ಯ". ಪೂರ್ವ ದಿಕ್ಕು ಸೂರ್ಯ ಉದಯಿಸುವ ದಿಕ್ಕು ಆದ್ದರಿಂದ ಈಜಿಪ್ಟ್ ದೇವತೆಗಳ ಎಲ್ಲ ದೇವಾಲಯಗಳು ನೈಲ್ ನದಿಯ ಪೂರ್ವ ತಟದಲ್ಲಿವೆ. ಸೂರ್ಯ ಮುಳುಗುವುದು ಪಶ್ಚಿಮ ದಿಕ್ಕಿನಲ್ಲಿ, ಹೀಗಾಗಿ ಸತ್ತವರ ಗೋರಿಗಳಿರುವ  ಈಜಿಪ್ಟಿನ ಎಲ್ಲ ಪಿರಮಿಡ್‌ಗಳು ನೈಲ್ ನದಿಯ ಪಶ್ಚಿಮ ಭಾಗದಲ್ಲಿವೆ. ಸೂರ್ಯ ಉದಯಿಸುವಾಗ ಬೆಳಕು, ಹೊಸ ಜೀವನ ಮತ್ತು ಸೂರ್ಯ ಮುಳುಗುವಾಗ ಕತ್ತಲು ಅಥವಾ ಮರಣ ಎಂಬರ್ಥದಲ್ಲಿ ಪಿರಮಿಡ್ ಗಳನ್ನು ಮತ್ತು ದೇವಾಲಯಗಳನ್ನು ನಿರ್ಮಿಸಲಾಗಿದೆ


ಈಜಿಪ್ಟ್ ಪ್ರವಾಸಿ ತಾಣಗಳ ಕುರಿತು ಕಿರು ಚಿತ್ರಣ ಇಲ್ಲಿ ನೀಡಲಾಗಿದೆ.

1. ಗಿಜಾದ ಪಿರಮಿಡ್‌ಗಳು (Pyramids of Giza), : 



ಈಜಿಪ್ಟ್ ಪ್ರಖ್ಯಾತವಾಗಿರುವುದಕ್ಕೆ ಕಾರಣ ಇಲ್ಲಿನ ಪಿರಮಿಡ್ ಗಳು. ಈ ಎಲ್ಲಾ ಪಿರಮಿಡ್‌ಗಳು ಈಜಿಪ್ಟ್‌ನ ರಾಜಮನೆತನದವರ ಗೋರಿಗಳು. ಪ್ರಾಚೀನ ಈಜಿಪ್ಟಿನ ರಾಜರುಗಳನ್ನು ಫೆರೋಗಳು ಎಂದು ಕರೆಯುತ್ತಾರೆ. ಈ ಫೆರೋಗಳ ಮರಣಾನಂತರ ಅವರನ್ನು ಪಿರಮಿಡ್ ಗಳ ಒಳಗೆ ಮಮ್ಮಿಗಳಾಗಿ ಮಾಡಿ ಶವಸಂಸ್ಕಾರ ಮಾಡುತಿದ್ದರು. ರಾಜ ಸತ್ತಮೇಲೆ ಕಳೇಬರವನ್ನು ಸುಗಂಧದ್ರವ್ಯಗಳಿಂದ ಅಲಂಕರಿಸಿ, ರಾಜನಿಗೆ ಪ್ರಿಯವಾದ ವಸ್ತುಗಳ ಜೊತೆಗೆ ಚಿನ್ನಾಭರಣಗಳು, ಅಲಂಕಾರಿಕ ವಸ್ತುಗಳನ್ನು ಇಡಲಾಗುತ್ತಿತ್ತು. ನೆಲದಲ್ಲಿ ಹೂಳಿದ ಮೇಲೆ (ಇದನ್ನೇ ‘ಮಮ್ಮಿ’ ಎನ್ನುವುದು)  ಅದರ ಮೇಲೆ ಪಿರಮಿಡ್‌ ಅನ್ನು ಕಟ್ಟುತ್ತ ಹೋಗುತ್ತಾರೆ. ಫೆರೋ ರಾಜನ ಪ್ರಖ್ಯಾತಿಗೆ ಅನುಗುಣವಾಗಿ ದೊಡ್ಡ ಗಾತ್ರದ ಪಿರಮಿಡ್‌ ಕಟ್ಟುವ ಮೂಲಕ ಗೌರವ ಸೂಚಿಸುತಿದ್ದರಂತೆ. ಕೈರೋ ನಗರದ ಸುತ್ತಮುತ್ತಲೂ ಏನಿಲ್ಲೆಂದರೂ ನೂರಕ್ಕೂ ಹೆಚ್ಚು ಪಿರಮಿಡ್‌ಗಳಿವೆ. ಅತ್ಯಂತ ದೊಡ್ಡ ಪಿರಮಿಡ್ಡ್  ಗಿಜಾ ದಲ್ಲಿದೆ.  ಈ ಪಿರಮಿಡ್ಡ್  481 ಅಡಿ ಎತ್ತರ 146 ಅಡಿ ಅಗಲವನ್ನು ಹೊಂದಿದ್ದು, 13 ಎಕರೆ ಪ್ರದೇಶವನ್ನು ವ್ಯಾಪಿಸಿದೆ.  ಪಿರಮಿಡ್‌ಗಳು ಪ್ರಾಚೀನ ಈಜಿಪ್ಟ್‌ ನಾಗರಿಕತೆಯನ್ನು ಹಾಗೂ ಅಲ್ಲಿ ಆಡಳಿತ ನಡೆಸಿದ ಫೇರೋಗಳ ಪ್ರಾಬಲ್ಯ ಸೂಚಿಸುವ ಅವಿಸ್ಮರಣೀಯ ಸಂಕೇತಗಳಾಗಿವೆ. ಒಂದೊಂದು ಪಿರಮಿಡ್‌ನ ರಚನೆಗೂ ಸುಮಾರು 20 ವರ್ಷಗಳು ಕಾಲ ಸಮಯ ಹಿಡಿದಿದೆ. ಪ್ರಾಚೀನ ಈಜಿಪ್ಟಿನ ಫೆರೋ ರಾಜರು ಪುನರ್ಜನ್ಮದಲ್ಲಿ ನಂಬಿಕೆ ಹೊಂದಿದ್ದರಿಂದ ಮೃತ ಮೃತ ರಾಜನ ಆತ್ಮವು ಇನ್ನೊಂದು ಲೋಕಕ್ಕೆ ಹೋಗಲು ಅನುಕೂಲವಾಗುವಂತೆ ಪಿರಮಿಡ್‌ಗಳ ಒಳಗೆ ಪಿರಮಿಡ್ಡಿನ ತುತ್ತ ತುದಿಯ ಮೂಲಕ ನೇರವಾಗಿ ಆಕಾಶಕ್ಕೆ ಹೋಗಿ ಸ್ವರ್ಗ ಸೇರುವುದು ಎನ್ನುವ ನಂಬಿಕೆ ಅವರಲ್ಲಿತ್ತು.

2. ಲಕ್ಸರ್ ದೇವಾಲಯಗಳು ಮತ್ತು ಗೋರಿಗಳು (Luxor's Temples & Tombs), 

ಇಂದಿನ ಲಕ್ಸರ್ ನಗರವನ್ನು ಪುರಾತನ ಥೀಬ್ಸ್ ನಗರ ಎಂದು ಕರೆಯುತ್ತಾರೆ. ಇದು ಕೈರೊದಿಂದ ಸುಮಾರು 650 ಕಿ.ಮೀ. ದೂರದಲ್ಲಿದೆ. ಈ ನಗರವು ನೈಲ್ ನದಿಯ ಪೂರ್ವ ದಂಡೆಯಲ್ಲಿದೆ.

ಲಕ್ಸರ್‌ ಪಟ್ಟಣ ಕೈರೋಗಿಂತ ತುಂಬ ಚಿಕ್ಕ ನಗರ.  ಪ್ರಾಚೀನ ಕಾಲದಲ್ಲಿ ಈಜಿಪ್ಟ್‌ನ ರಾಜಧಾನಿಯಾಗಿತ್ತಂತೆ. ಈ ಪ್ರದೇಶದಲ್ಲಿ  ಪುರಾತನನ ಈಜಿಪ್ಟ್ ದೇವಾಲಯಗಳ ಸಂಕೀರ್ಣವಿದೆ.  ಫೆರೋಗಳು ಬದುಕಿದ್ದಾಗಲೇ ಗೋರಿಗಳನ್ನ ಇಲ್ಲಿ ನಿರ್ಮಿಸುತಿದ್ದರಂತೆ, ಅಂದರೆ ಜೀವಂತ ಸಮಾಧಿಯಾಗಲು ಅಲ್ಲ. ಮುಂದೊಂದು ದಿನ ಸಾವು ಬಂದೇ ಬರುತ್ತದೆ. ಸತ್ತ ನಂತರ ಅವರ ಹೆಸರು ಮತ್ತು ಘನತೆ ಚಿರಸ್ಥಾಯಿಯಾಗಿಯಿರಲು ಭವ್ಯವಾದ ಮಂದಿರ ನಿರ್ಮಾಣ ಮಾಡುತಿದ್ದರು.  ಈ ದೇವಾಲಯಗಳಿಗೆ ‘ಅಂತ್ಯಸಂಸ್ಕಾರದ ದೇವಾಲಯ’(ಫ್ಯುನರರಿ ಟೆಂಪಲ್) ಎಂದೂ ಕರೆಯುತ್ತಾರೆ. ಮೂರು ಹಂತಗಳಲ್ಲಿ ಹಟ್‌ಶೆಪ್‌ಸುಟ್‌ ರಾಣಿ ಕಟ್ಟಿಸಿದ ಈ ಮಂದಿರ ಆ ಕಾಲದಲ್ಲಿ ಇಡೀ ಈಜಿಪ್ಟ್‌ನಲ್ಲೇ ಅತ್ಯಂತ ಭವ್ಯ ಮತ್ತು ಸುಂದರ ದೇವಾಲಯವಾಗಿತ್ತು. ಈಜಿಪ್ಟಿನಲ್ಲಿ ಕೆಲವು ರಾಣಿಯರು ಹಟ್‌ಶೆಪ್‌ಸುಟ್‌ಗಿಂತ ಮೊದಲು ಮಹಿಳಾ ಫೆರೋ ಆಗಿ ರಾಜ್ಯಭಾರ ಮಾಡಿದ್ದರೂ ಸಹ  21 ವರ್ಷಗಳ ಕಾಲ ಆಳ್ವಿಕೆ ನಡೆಸಿದ ಹಟ್‌ಶೆಪ್‌ಸುಟ್‌ ಎಲ್ಲರಿಗಿಂತ ಹೆಚ್ಚು ಪ್ರಖ್ಯಾತ. ವಿಭಿನ್ನ ಫೆರೋಗಳು ಹಂತ ಹಂತವಾಗಿ ಕಟ್ಟಿಸಿದ ಲಕ್ಸರ್‌ ಮಂದಿರ, ಪುರಾತನ ಈಜಿಪ್ಟ್‌ನ ಅತಿ ದೊಡ್ಡ ದೇವಾಲಯವಾಗಿದೆ. ಸುಮಾರು ಇಪ್ಪತ್ತು ಅಡಿ ಉದ್ದದ 61 ಕಂಬಗಳ ಮೇಲೆ ಹಟ್‌ಶೆಪ್‌ಸುಟ್‌ ರಾಣಿಯ ಅಡಳಿತಾವಧಿಯ ಸಾಧನೆಗಳು, ಹಲವು ದೇವರ ಕತೆಗಳು ಹಾಗೂ ಧರ್ಮಾಚರಣೆಗಳ ಕುರಿತು ವಿವರಗಳನ್ನು ಕೆತ್ತಲಾಗಿದೆ. ಈ ಲಕ್ಸರ್ ನ ನೈಲ್ ನದಿಯ  ಪೂರ್ವ ಮತ್ತು ಪಶ್ಚಿಮ ದಂಡೆಯಲ್ಲಿ ಹಲವಾರು ದೇವಾಲಯಗಳಿವೆ. ಈಜಿಪ್ಷಿಯನ್ನರ ಪ್ರಮುಖ ವಾಸ್ತು ಶಿಲ್ಪ ಹೊಂದಿರುವ ಕಾರ್ನಕ್ ದೇವಾಲಯ ಇದೇ ದಂಡೆಯ ಮೇಲಿದೆ. ಹತ್ತಿರದಲ್ಲಿ, ಲಕ್ಸರ್ ಮ್ಯೂಸಿಯಂ, ಕಾರ್ನಾಕ್ ಟೆಂಪಲ್, ಕೋನ್ಸು ಟೆಂಪಲ್, ಬಿಸಿಗಾಳಿ ಬೆಲೂನ್ ಗಳು ಹಾರಾಡುವ ಸ್ಥಳ, ‘ವ್ಯಾಲೀ ಆಫ್‌ ಕಿಂಗ್ಸ್‌ ಏಂಡ್‌ ಕ್ವೀನ್ಸ್‌’ ಹೀಗೆ ಹಲವಾರು ಪ್ರೇಕ್ಷಣೀಯ ಸ್ಥಳಗಳು ಇಲ್ಲಿ ಕಾಣಬಹುದು. 

3. ನೈಲ್ ಕ್ರೂಸಿಂಗ್ (Cruising the Nile):- 

ಈಜಿಪ್ಟ್ ನ ಜನವಸತಿ ನೈಲ್ ನದಿಗುಂಟ ಹರಡಿಕೊಂಡಿದೆ. ಮರುಭೂಮಿಯ ಮಧ್ಯದಲ್ಲಿ ನೈಲ್ ನದಿ ಮತ್ತು ಎರಡೂ ಕಡೆಯ ದಂಡೆಯ ಮೇಲೆ ಹಸಿರು ಹೊದ್ದ ಹೊಲ ಗದ್ದೆಗಳು ಅಲ್ಲಲ್ಲಿ ಪ್ರಾಚೀನ ದೇವಾಲಯಗಳು ಮತ್ತು ಗೋರಿಗಳು, ಇವೆಲ್ಲವನ್ನು ನದಿಯಲ್ಲಿ ಬೋಟ್ ರೈಡ್ ಮಾಡುತ್ತ ಈ ದೃಶ್ಯಗಳನ್ನ ಕಣ್ ತುಂಬಿಸಕೊಳ್ಳಬಹುದು. ನೈಲ್ ಕ್ರೂಸ್‌ನಲ್ಲಿ ಎರಡು ಜನಪ್ರಿಯ ದೃಶ್ಯಗಳೆಂದರೆ ಕೋಮ್ ಒಂಬೊ ದೇವಾಲಯ ಮತ್ತು ಎಡ್ಫುನಲ್ಲಿರುವ ಹೋರಸ್ ದೇವಾಲಯ, ಅಲ್ಲಿ ಎಲ್ಲಾ ದೊಡ್ಡ ಕ್ರೂಸ್ ದೋಣಿಗಳು ನಿಲ್ಲುತ್ತವೆ.

 4. ಆಸ್ವಾನ್(Aswan), :- 

ಅತ್ಯಂತ ಪ್ರಶಾಂತವಾದ ಪಟ್ಟಣ ಎಂದು ಕರೆಯುತ್ತಾರೆ, ಅಂಕು ಡೊಂಕಾಗಿ ಹರಿಯುವ ನೈಲ್ ನದಿಯ ಸುತ್ತಲೂ ಈ ನಗರ ಹರಡಿಕೊಂಡಿದೆ. ಇಲ್ಲಿ ಚಿಕ್ಕ ಚಿಕ್ಕ ದ್ವೀಪಗಳು ಇವೆ. ಇವುಗಳನ್ನು ಸಂಪರ್ಕಿಸಲು ಬೋಟ್ ಮುಖಾಂತರವೇ ಹೋಗಬೇಕು. ಇಲ್ಲಿ ಹಲವಾರು ಚಟುವಟಿಕೆಗಳಿಗೆ ಪ್ರಸಿದ್ದ, ರಿವರ್ ಬೋಟಿಂಗ್, ಒಂಟೆ ಸವಾರಿ, ಇಲ್ಲಿನ ಹಳ್ಳಿಗಳಲ್ಲಿ ಒಂದು ಸುತ್ತು ಹಾಕಿ ಇಲ್ಲಿನ ಜನಜೀವನದ ಕುರಿತು ತಿಳಿದುಕೊಳ್ಳಬಹುದು.   ಮರುಭೂಮಿಯ ಜತೆಗೆ ನದಿಜೀವನವನ್ನು ಈ  ಕಾಣಬಹುದು.ಇಲ್ಲಿಯೂ ಸಹ ಹಲವಾರು ಪ್ರಾಚೀನ ದೇವಾಲಯಗಳಿವೆ. ನದಿಯ ದಂಡೆಯಲ್ಲಿನ ಖರ್ಜೂರದ ಮರಗಳು, ಮರುಭೂಮಿಯ ಮರಳು ರಾಶಿ ಇವೆಲ್ಲದರ ಜತೆಗೆ ಸುರ್ಯೊದಯ ಮತ್ತು ಸೂರ್ಯಾಸ್ತ ದ ವಿಹಂಗಮ ನೋಟವನ್ನು ಸವಿಯಲು ಸಾವಿರಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ.

5. ಅಬು ಸಿಂಬೆಲ್ (Abu Simbel):- 

ಇದೊಂದು ಪ್ರಮುಖ ಪ್ರವಾಸಿ ತಾಣವಾಗಿದ್ದು. ಕೈರೋ ದಿಂದ 1200 ಕಿ.ಮಿ. ದೂರದಲ್ಲಿ ಈ ನಗರವಿದೆ. ಲಕ್ಸರ್ ಮತ್ತು ಆಸ್ವಾನ್ ನ ಪ್ರವಾಸಿ ತಾಣಗಳನ್ನು ನೋಡಿದ ಬಳಿಕ ಇಲ್ಲಿಗೆ ಭೇಟಿ ನೀಡಬಹುದು. ಇದು ರಾಮ್‌ಸೆಸ್ II ರ ಮಹಾನ್ ದೇವಾಲಯವಾಗಿದ್ದು, ಇದನ್ನು ಕ್ರಿಸ್ತಪೂರ್ವ 1265 ರಲ್ಲಿ ನಿರ್ಮಿಸಲಾಗಿದೆ, ಆಲಯದ ಹೊರಭಾಗದಲ್ಲಿ ಬೃಹದಾಕಾರದ ಪ್ರತಿಮೆಗಳಿಮ್ದ ಅಲಂಕರಿಸಲ್ಪಟ್ಟಿದೆ ಮತ್ತು ಒಳಭಾಗದ ಗೋಡೆಯು ವರ್ಣಚಿತ್ರಗಳಿಂದ ಅಲಂಕರಿಸಲ್ಪಟ್ಟಿದೆ. 

ಆಸ್ವಾನ್ ಅಣೆಕಟ್ಟಿನ ಹಿನ್ನೀರಿನಲ್ಲಿ ಈ ಪ್ರದೇಶ ಮುಳುಗಿ ಹೋಗುತಿತ್ತು, ಇದನ್ನು ಮನಗಂಡ ಯುನೆಸ್ಕೋ, ಮೂರು ಸಾವಿರ ವರ್ಷದಷ್ಟು ಹಳೆಯದಾದ ಈ ಸಂಕೀರ್ಣ ಹಾಳಾಗುವುದನ್ನು ಸಂರಕ್ಷಿಸಲು 1968 ರಲ್ಲಿ ಈ ದೇವಾಲಯವನ್ನು ಸ್ಥಳಾಂತರಿಸಲಾಯಿತು. ಆ ಸಮಯದಲ್ಲಿ ಇದಕ್ಕೆ ತಗುಲಿದ ವೆಚ್ಚ ಅಂದಾಜು US$80 million. ಇದರ ಅರ್ಧದಷ್ಟು ಹಣವನ್ನು ಸುಮಾರು 50 ಕ್ಕೂ ಹೆಚ್ಚು ದೇಶಗಳು ದೇಣಿಗೆ ನೀಡಿದ್ದವು. 

6. ಸಕ್ಕಾರಾ (Saqqara):- 


ಕೈರೋ ನಗರದಿಂದ 30 ಕಿ.ಮಿ. ದೂರದಲ್ಲಿ ಈ ನಗರವಿದೆ. ಇಲ್ಲಿ ಪುರಾತನವಾದ ಪಿರಮಿಡ್ ಗಳನ್ನ ನೋಡಬಹುದು. ಗಿಜಾದಲ್ಲಿನ ಪಿರಮಿಡ್ ಗಳು ಕಟ್ಟುವ ಮುಂಚಿನ ವಿನ್ಯಾಸವನ್ನು ಇಲ್ಲಿ ಕಾಣಬಹುದು, ಬಹುಶಃ  ಪಿರಮಿಡ್ ಗಳನ್ನು ರಚಿಸಲು ಪ್ರಾರಂಭಿಸಿದ ಸಮಯದಲ್ಲಿ, ಈ ಆಕಾರದಲ್ಲಿ ವಿನ್ಯಾಸ ಮಾಡಿ ಕಟ್ಟಲಾಗಿದೆ, ಕಾಲಕ್ರಮೇಣ ಅನುಭವ ಮತ್ತು ಕೌಶಲ್ಯತೆ  ಕರಗತವಾದ ನಂತರ ಗಿಜಾದಲ್ಲಿ ಉನ್ನತಮಟ್ಟದ ಪಿರಮಿಡ್ ಗಳು ರಚನೆಯಾಗಿರಬಹುದು ಎನ್ನಲಾಗಿದೆ.  

7. ಈಜಿಪ್ಟಿನ ವಸ್ತುಸಂಗ್ರಹಾಲಯ(Egyptian Museum):- 

ಪ್ರಾಚ್ಯವಸ್ತು ಸಂಶೋಧನೆ ಮತ್ತು ಇತಿಹಾಸದಲ್ಲಿ ಆಸಕ್ತಿಯಿರುವ ಪ್ರತಿಯೊಬ್ಬರೂ ನೋಡಲೇ ಬೇಕಾದ ಮ್ಯೂಸಿಯಂ ಇದು. ಪ್ರಪಂಚದ  ಅದ್ಭುತಗಳ ಒಂದು ವಸ್ತುಸಂಗ್ರಹಾಲಯ ವೆಂದೇ ಇದನ್ನು ಪರಿಗಣಿಸಲಾಗುತ್ತದೆ. ಈಜಿಪ್ಟ್ ಅನ್ನು ಆಳಿದ ಹಲವು ರಾಜಮನೆತನಗಳ ವಿವರ, ಅವರು ಉಪಯೋಗಿಸಿದ ವಸ್ತುಗಳು, ಫೆರೋಗಳ ಕಾಲದ ಅತ್ಯಮೂಲ್ಯವಸ್ತುಗಳು, ಗೋರಿಗಳನ್ನು ಉತ್ಖನನ ಮಾಡಿದಾಗ, ಮಮ್ಮಿಗಳು ಸೇರಿದಂತೆ ಅವುಗಳ ಜತೆ ದೊರೆತ ಹಲವಾರು ವಸ್ತುಗಳು ಇಲ್ಲಿ ಸಂಗ್ರಹಿಸಲ್ಪಟ್ಟಿವೆ.  

8. ವೈಟ್ ಮರುಭೂಮಿ (White Desert Natioanl Park):- 

ಈ ಪ್ರದೇಶ ಕೈರೋ ನಗರದಿಂದ 425 ಕಿ.ಮಿ. ದೂರದಲ್ಲಿದೆ.  ಮರಳಿನ ಮಧ್ಯೆ ದೊಡ್ಡದಾದ ಮಂಜುಗಡ್ಡೆಗಳ ರೀತಿಯಲ್ಲಿ ಬಿಳಿ ಬಣ್ಣದ ಚಿತ್ರವಿಚಿತ್ರ ಕೆತ್ತನೆಯ ಸುಣ್ಣದ ಕಲ್ಲಿನಲ್ಲಿ ಪ್ರಕೃತಿನಿರ್ಮಿತ ಈ ಆಕೃತಿಗಳು ಪ್ರವಾಸಿಗರ ಕಣ್ ಮನಸೆಳೆಯುತ್ತವೆ.  ಲಕ್ಷಾಂತರವರ್ಷಗಳ ಹಿಂದೆ ಈ ಪ್ರದೇಶ ರೂಪುಗೊಂಡಿದೆ ಎಂದು ಭೂವಿಜ್ನಾನಿಗಳು ಹೇಳುತ್ತಾರೆ.

9. ಅಲೆಕ್ಸಾಂಡ್ರಿಯಾ (Alexandria):- 

ಈಜಿಪ್ಟಿನ ಎರಡನೇ ಅತಿದೊಡ್ಡ ಪಟ್ಟಣ ಇದಾಗಿದ್ದು, ಕೈರೋ ದಿಂದ 240 ಕಿ.ಮಿ.ದೂರದಲ್ಲಿದೆ.  ಗ್ರೀಕ್ ದೊರೆ "ದ ಗ್ರೇಟ್ ಅಲೆಕ್ಸಾಂಡರ್" ನಿರ್ಮಿಸಿದ ನಗರವಿದು. ರಾಣಿ ಕ್ಲಿಯೋಪಾತ್ರಳು ಸಹ ಹುಟ್ಟಿದ್ದು ಇದೇ ನಗರದಲ್ಲಿ.  ಪುರಾತನನಗರವಾದ್ದರಿಂದ ಇಲ್ಲಿ ಐತಿಹಾಸಿಕ ಸ್ಥಳಗಳೇನು ಕಮ್ಮಿಯಿಲ್ಲ. ನಗರವು ಬೆಳೆದು ದೊಡ್ಡದಾಗಿರುವುದರಿಂದ ಬಹುಮುಖ್ಯ ಪ್ರಾಚೀನ ಸಂಗತಿಗಳು ಈ ನಗರದಲ್ಲಿ ಹುದುಗಿಹೋಗಿವೆ. ಸಮುದ್ರದಾಳದಲ್ಲಿ ನಡೆಯುತ್ತಿರುವ ಉತ್ಖನನದಿಂದ ಹಲವು ಪುರಾತನ ವಸ್ತುಗಳು ಆಗಾಗ್ಗೆ ದೊರೆಯುತ್ತಿರುತ್ತವೆ. ಈಜಿಪ್ಟಿನ ಉತ್ತರಭಾಗದಲ್ಲಿರುವ ಮೆಡಿಟೇರಿಯನ್ ಸಮುದ್ರದ ದಂಡೆಯಲ್ಲಿ ಈ ನಗರವಿದ್ದು, ಬೇಸಿಗೆಯಲ್ಲಿ ಸಮುದ್ರದ ಕಡೆಯಿಂದ ಬರುವ ತಂಪಾದಗಾಳಿಯನ್ನು ಸವಿಯಲು ಪ್ರವಾಸಿಗರು ಇಲ್ಲಿಗೆ ಧಾವಿಸುತ್ತಾರೆ. ಪ್ರಪಂಚದ ಅತಿ ಪ್ರಸಿದ್ದ ಗ್ರಂಥಾಲಯ ಈ ನಗರದಲ್ಲಿದೆ. ಇತಿಹಾಸ ಓದುತ್ತಿರುವ ವಿದ್ಯಾರ್ಥಿಗಳಿಗೆ ಭರಪೂರ ಮಾಹಿತಿ ಇಲ್ಲಿ ಲಭಿಸುತ್ತದೆ.  ಈ ನಗರವು ಹಲವಾರು ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿದೆ. ಗ್ರೀಕ್ ಸಾಮ್ರಾಜ್ಯ, ರೋಮನ್ ಆಡಳಿತ, ಒಟ್ಟೋಮನ್ ಆಳ್ವಿಕೆ, ಇಸ್ಲಾಂ ಧರ್ಮ ಆಗಮನ ಹೀಗೆ ಆಯಾ ಕಾಲಘಟ್ಟದಲ್ಲಿ ಪ್ರಮುಖ ಸಂಗತಿಗಳು ಇಲ್ಲಿ ಘಟಿಸಿವೆ. 

10. ಅಬಿಡೋಸ್ ದೇವಾಲಯ, (Abydos Temple) :- 

ಇದು ಒಸಿರಿಸ್ ನ ದೇವಾಲಯ. ಲಕ್ಸರ್ ಪಟ್ಟಣ ದಿಂದ ನೂರೈವತ್ತು ಕಿ.ಮಿ.ದೂರದಲ್ಲಿ ಈ ದೇವಾಲಯವಿದೆ. ಕ್ರಿ.ಪೂ 13ನೇ ಶತಮಾನದಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿದೆ. ಅಂದಿನ ಫೆರೋ ಒಂದನೇ ಸೆಟಿ (Seti-1) ಇದನ್ನು ನಿರ್ಮಿಸಿದ್ದಾನೆ. ಈ ದೇವಾಲಯದಲ್ಲಿ ಕಲಾತ್ಮಕ ಕೆತ್ತನೆಗಳಿವೆ. ಇಲ್ಲಿನ ಗೋಡೆಗಳ ಮೇಲೆ ಅಂದು ಆಳಿದ ರಾಜರುಗಳ ಹೆಸರುಗಳನ್ನ ಸಹ ಕೆತ್ತಲಾಗಿದೆ. 

11. ಸಿವಾ ಓಯಸಿಸ್ (Siwa Oasis):- 

ಕೈರೋ ನಗರದಿಂದ ಪಶ್ಚಿಮ ದಿಕ್ಕಿಗೆ 760ಕಿ.ಮಿ. ದೂರದಲ್ಲಿ ಸಿವಾ ಪಟ್ಟಣದಲ್ಲಿ ಈ ಪ್ರವಾಸಿತಾಣವಿದೆ. ಇಲ್ಲಿನ ವಿಶೇಷವೇನೆಂದರೆ, ಪುರಾತನ ಮಣ್ಣಿನ ಮನೆಗಳು, ಬಿಸಿನೀರಿನ ಬುಗ್ಗೆಗಳು, ಖರ್ಜೂರದ ತೋಟಗಳು, ಹಾಗೂ ಹಲವಾರು ಪ್ರಾಚೀನ ದೇವಾಲಯಗಳು ಇಲ್ಲಿವೆ. ಮರಳುಗಾಡಿನ ಮಧ್ಯದಲ್ಲಿ, ನೀರು ಸಿಗುವ ಫಲವತ್ತಾದ ಪ್ರದೇಶವಾದ್ದರಿಂದ ಈ ಓಯಸಿಸ್ ಅಂದಿನ ಕಾಲದಲ್ಲಿ ಪ್ರಾಮುಖ್ಯತೆಯನ್ನು ಪಡೆದುಕೊಂಡಿತ್ತು.  ಗ್ರೀಕ್ ದೊರೆ "ದ ಗ್ರೇಟ್ ಅಲೆಕ್ಸಾಂಡರ್" ಮತ್ತು ಪರ್ಶಿಯನ್ ದೊರೆಗಳು ಇಲ್ಲಿಗೆ ಭೇಟಿ ನೀಡಿದ್ದರು, 

12. ಸೇಂಟ್ ಕ್ಯಾಥರೀನ್ ಮೊನಸ್ಟೆರಿ  (St. Catherine's Monastery):-  

ಈಜಿಪ್ಟಿನ ಪೂರ್ವಭಾಗದಲ್ಲಿ ಕೈರೋದಿಂದ 440ಕಿ.ಮಿ.ದೂರದಲ್ಲಿರುವ ಸಿನಾಯಿ ಎನ್ನುವ ಪರ್ವತದ ಬುಡದಲ್ಲಿ ಈ ಪ್ರವಾಸಿತಾಣವಿದೆ.  ಆಶ್ಚರ್ಯವೆಂದರೆ, ಮರುಭೂಮಿ ಮತ್ತು ಬೆಟ್ಟಗಳ ಕಡಿದಾದ ಜಾಗದಲ್ಲಿ ನೂರಾರು ಕಿಲೋಮೀಟರ್ ಗಳವರೆಗೂ ಯಾವುದೇ ಜನವಸತಿಯಿಲ್ಲದ ಈ ಪ್ರದೇಶದಲ್ಲಿ ಇದನ್ನು 6ನೇಶತಮಾನದಲ್ಲಿ ನಿರ್ಮಿಸಲಾಗಿದೆ. ಇದು ಕ್ರಿಶ್ಚಿಯನ್ ಮತ ಅನುನಾಯಿಗಳ ಧಾರ್ಮಿಕ ಶ್ರದ್ದಾಕೇಂದ್ರ ವಾಗಿದೆ. ಪ್ರವಾದಿ ಮೋಸೆಸ್ ಅವರು ಇಲ್ಲಿಗೆ ಭೇಟಿನೀಡಿದ್ದರು. ಅಲೆಕ್ಸಾಂಡ್ರಿಯಾದ ಸನ್ಯಾಸಿ ಕ್ಯಾಥರೀನ್ ಗಾಗಿ ಈ ಮೊನೆಸ್ಟರಿಯನ್ನು ಅಂದಿನ ಈಜಿಪ್ಟಿನ ಪೂರ್ವ ಪ್ರಾಂತ್ಯದ ಚಕ್ರವರ್ತಿ ಜಸ್ಟಿನಿಯನ್ ಕಟ್ಟಿಸಿದ್ದ.

ಈಜಿಪ್ಟಿನಲ್ಲಿ ಪ್ರವಾಸಿ ತಾಣಗಳಿಗೆ ಕೊರತೆಯಿಲ್ಲ. ಒಂದೊಂದು ಪಟ್ಟಣದಲ್ಲೂ ಹಲವಾರು ಪ್ರವಾಸಿತಾಣಗಳಿವೆ. ದಿನನಿತ್ಯ ಸಾವಿರಾರು ಪ್ರವಾಸಿಗರು ಪ್ರಾಚೀನ ಈಜಿಪ್ಟಿನ ಇತಿಹಾಸವನ್ನು, ಅಂದಿನ ಕಾಲದ ಕಟ್ಟಡಗಳು, ದೇವಾಲಯಗಳು, ಪಿರಮಿಡ್ ಗಳು, ನೈಲ್ ನದಿ,  ಕೆಂಪು ಸಮುದ್ರದ ಕಡಲತೀರಗಳು (Red Sea Beaches),  ಪುರಾತನ  ಕಾಪ್ಟಿಕ್ ಕೈರೋ (Coptic Cairo), ಇತ್ಯಾದಿ ಸ್ಥಳಗಳಿಗೆ ಭೇಟಿ ನೀಡುತಿದ್ದಾರೆ.

ಈಜಿಪ್ಟಿನ ಕೆಲ ವಿಶೇಷತೆಗಳು:-

1. ಹನ್ನೊಂದು ಕೋಟಿ ಜನರಿರುವ ಈಜಿಪ್ಟ್ ದೇಶ ಅರಬ್ ಜಗತ್ತಿನಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದೆ ಮತ್ತು ನೈಜೀರಿಯಾ ಮತ್ತು ಇಥಿಯೋಪಿಯಾದ ನಂತರ ಆಫ್ರಿಕಾದಲ್ಲಿ ಮೂರನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದೆ. ಪ್ರಾಚೀನ ಈಜಿಪ್ಟಿನವರು ತಮ್ಮ ತಾಯ್ನಾಡನ್ನು ಕೆಮೆಟ್ ಎಂದು ಕರೆಯುತಿದ್ದರು, ಇದರರ್ಥ "ಕಪ್ಪು ಭೂಮಿ". ಇದು ನೈಲ್ ನದಿಯ ಪ್ರವಾಹದ ನಂತರ ಉಳಿದಿರುವ ಫಲವತ್ತಾದ ಮಣ್ಣನ್ನು ಸೂಚಿಸುತ್ತದೆ.

2. ಪ್ರಪಂಚದ ಏಳು ಅದ್ಭುತಗಳಲ್ಲಿ ಗಿಜಾದ ಗ್ರೇಟ್ ಪಿರಮಿಡ್ ಒಂದು. ಈ ಪಿರಮಿಡ್ಡ್ ನ ವ್ಯಾಸ - 481 ಅಡಿ ಎತ್ತರ 146 ಅಡಿ ತಳ ಹಾಗೂ 13 ಎಕರೆ ಪ್ರದೇಶವನ್ನು ವ್ಯಾಪಿಸಿದೆ

 ಇದು 3,800 ವರ್ಷಗಳ ಹಿಂದೆ ಕಟ್ಟಿದ ಏಕೈಕ ವಿಶ್ವದ ಅತಿ ಎತ್ತರದ ಮಾನವ ನಿರ್ಮಿತ ಪುರಾತನ ರಚನೆಯಾಗಿದೆ. ಈ ಪಿರಮಿಡ್ಡಿನ ರಚನಾಕಾರರು - ಚಿಯೋಪ್ಸ್ ದೊರೆ

3. ಕೈರೋನಗರದಲ್ಲಿ ಅತ್ಯಂತ ಹಳೆಯ ಪಿರಮಿಡ್ ಪತ್ತೆಯಾಗಿತ್ತು. 

4. ಈಜಿಪ್ಷಿಯನ್ನರು ಕಳೆಬರವನ್ನ ಸಂಗ್ರಹಿಸಲು ಬಳಸುತ್ತಿದ್ದ ಸಾಧನ - ಮಮ್ಮಿ ಹಾಗೂ ಪಿರಮಿಡ್ಡ್

5. ಈಜಿಪ್ಟಿನ ನಾಗರಿಕತೆಯು ವಿಶ್ವದಲ್ಲೇ ಅತ್ಯಂತ ಪುರಾತನವಾಗಿದ್ದು, 7,000 ವರ್ಷಗಳಷ್ಟು ಹಿಂದಿನದ್ದು ಎಂದು ಹೇಳಲಾಗುತ್ತಿದೆ.

6. ವಿಶ್ವದ ಅತ್ಯಂತ ಹಳೆಯ ಉಡುಗೆಯಾದ "ತರ್ಖಾನ್" ಈಜಿಪ್ಟ್‌ನಲ್ಲಿ ಕಂಡುಬಂದಿದೆ. ಇದು ಅಂದಾಜು 5,000 ವರ್ಷಗಳಷ್ಟು ಹಳೆಯದ್ದಾಗಿದೆ.

7. ಪ್ರಾಚೀನ ಈಜಿಪ್ಟಿನವರು ಉಪ್ಪು, ಮೆಣಸು, ನೀರು ಮತ್ತು ಪುದೀನ ಎಲೆಗಳಿಂದ ಮಾಡಿದ ಪೇಸ್ಟ್ ಅನ್ನು ಬಳಸಿಕೊಂಡು ಹಲ್ಲು ಉಜ್ಜುತಿದ್ದರಂತೆ. ವಿಶ್ವದ ಮೊಟ್ಟ ಮೊದಲ ಪೇಸ್ಟ್ ಇದಾಗಿತ್ತು ಎಂದು ಹೇಳಲಾಗುತ್ತಿದೆ.

8. ಈಜಿಪ್ಟಿನ ಮಹಿಳೆಯರು ವ್ಯಾಪಕವಾದ ವೈಯುಕ್ತಿಕ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳನ್ನು ಹೊಂದಿದ್ದರು. ಅಂದಿನ ಕಾಲದಲ್ಲಿಯೇ ಅವರು ಆಸ್ತಿಯನ್ನು ಖರೀದಿಸಬಹುದಿತ್ತು ಮತ್ತು ಮಾರಾಟ ಮಾಡಬಹುದಾಗಿತ್ತಲ್ಲದೆ, ನ್ಯಾಯಾಂಗ ವ್ಯವಸ್ಥೆಯಲ್ಲಿ ಸೇವೆಯನ್ನೂ ಸಲ್ಲಿಸಬಹುದಾಗಿತ್ತು. 

9. ಆಪ್ರಿಕಾ ಖಂಡದ ಮಹಾನದಿ ಎಂದು ನೈಲ್ ನದಿಯನ್ನು ಕರೆಯುತ್ತಾರೆ. ನೈಲ್ ನದಿ, ವಿಶ್ವದ ಅತಿ ಉದ್ದದ ನದಿಯಾಗಿದ್ದು, ಪ್ರಾಚೀನ ಈಜಿಪ್ಟಿನವರು ಕೃಷಿಯಲ್ಲಿ ಈ ನದಿಯು ಪ್ರಮುಖ ಪಾತ್ರ ವಹಿಸಿದ್ದರಿಂದ ಜೀವನಾಡಿಯೆಂದೇ ಪರಿಗಣಿಸಲಾಗಿದೆ.

10. ನೈಲ್ ನದಿಯ ವಾರ್ಷಿಕ ಪ್ರವಾಹವನ್ನು ಊಹಿಸಲು ಅಂದಿನ ಈಜಿಪ್ಟಿನವರು 365-ದಿನಗಳ ವರ್ಷದ ಕ್ಯಾಲೆಂಡರ್ ಅನ್ನು ಕಂಡುಹಿಡಿದಿದ್ದರು. ಮತ್ತು ಜಲಗಡಿಯಾರವನ್ನು ಕಂಡು ಹಿಡಿದಿದ್ದರು. 

11. ಈಜಿಪ್ಟ್‌ನ ಸೂಯೆಜ್ ಕಾಲುವೆಯು ವಿಶ್ವದ ಪ್ರಮುಖ ಜಲಮಾರ್ಗಗಳಲ್ಲಿ ಒಂದಾಗಿದೆ, ಮೆಡಿಟರೇನಿಯನ್ ಸಮುದ್ರವನ್ನು ಕೆಂಪು ಸಮುದ್ರಕ್ಕೆ ಸಂಪರ್ಕಿಸುತ್ತದೆ ಮತ್ತು ಯುರೋಪ್ ಮತ್ತು ಏಷ್ಯಾದ ನಡುವಿನ ಸಮುದ್ರ ಪ್ರಯಾಣವನ್ನು ಕಡಿಮೆ ಮಾಡುತ್ತದೆ.

12.  ಪ್ರವಾಹ ನಿಯಂತ್ರಿಸುವುದಕ್ಕಾಗಿ ಕಟ್ಟಿದ ಅಸ್ವಾನ್ ಹೈ ಅಣೆಕಟ್ಟು, 1970 ರಲ್ಲಿ ಪೂರ್ಣಗೊಂಡಿತು. ಈ ಅಣೆಕಟ್ಟಿನಿಂದ ಕೃಷಿ ಉತ್ಪಾದನೆ ಅಧಿಕವಾಗಿದೆ. ಇಲ್ಲಿ ಜಲವಿದ್ಯುತ್ ಶಕ್ತಿಯನ್ನು ಉತ್ಪಾದಿಸಲಾಗುತ್ತಿದೆ. ಈ ಅಣೆಕಟ್ಟು ಕಟ್ಟಿದ ಪರಿಣಾಮ ಹಲವಾರು ಪ್ರಾಚೀನ ಐತಿಹಾಸಿಕ ಸ್ಥಳಗಳು ಜಲಸಮಾಧಿಯಾಗಿವೆ.

13. ಈಜಿಪ್ಟ್ ಒಂದು ಖಂಡಾಂತರ ದೇಶವಾಗಿದ್ದು, ಏಷ್ಯಾ ಮತ್ತು ಆಫ್ರಿಕಾ ಖಂಡದ ಎರಡರಲ್ಲೂ ತನ್ನ ಪ್ರದೇಶವನ್ನು ಹೊಂದಿದೆ. 

14. ನೈಲ್ ನದಿಯ ಕಣಿವೆಯಲ್ಲಿ ಬಳೆಯುವ ಸಸ್ಯದ ಹೆಸರು "ಪ್ಯಾಕ್ಸ್"

15. ಪುರಾತನ ನಗರವಾದ ಥೀಬ್ಸ್ (ಈಗ ಲಕ್ಸರ್) ಒಮ್ಮೆ ಈಜಿಪ್ಟ್‌ನ ಧಾರ್ಮಿಕ ರಾಜಧಾನಿಯಾಗಿತ್ತು.

16. ಗ್ರೀಕ್ ದೊರೆ "ದ ಗ್ರೇಟ್ ಅಲೆಗ್ಸಾಂಡರ್" ಈಜಿಪ್ಟ್ ನಲ್ಲಿ ಅಲೆಕ್ಸಾಂಡ್ರಿಯಾ ನಗರವನ್ನು ನಿರ್ಮಿಸಿದ ಮತ್ತು ಟಾಲೆಮಿ ರಾಜಮನೆತನವನ್ನು ಸ್ಥಾಪಿಸಿ ಅಲ್ಲಿನ ಆಡಳಿತವನ್ನು ಅವರ ಕೈಗೆ ನೀಡಿದ್ದ.  

17. ಈಜಿಪ್ಟಿನ ಪ್ರಮುಖ ಪಟ್ಟಣಗಳು:-  ಕೈರೋ, ಹುರ್ ಗಡಾ, ಅಲೆಕ್ಸಾಂಡ್ರಿಯಾ, ಶರಮ್ ಅಲ್ ಶೇಖ್ ಮತ್ತು ಲಕ್ಸರ್. ಟಿಲ್ ಅಮರ್ನಾ

18. ನೈಲ್ ನದಿಯ ದಕ್ಷಿಣ ಭಾಗದಲ್ಲಿರುವ ಪ್ರಾಚೀನ ನಗರಗಳು - ಆಸ್ಪಾನ್, ಲಕ್ಸರ್ ಹಾಗೂ ಕಾರ್ನಾಕ್

19. ಪುರಾತನ ಈಜಿಪ್ಟ್ನಲ್ಲಿ ಬೆಕ್ಕುಗಳನ್ನು ಪವಿತ್ರವೆಂದು ಪರಿಗಣಿಸಲಾಗಿದೆ, ಕೀಟಗಳನ್ನು ನಿಯಂತ್ರಿಸಲು ಮತ್ತು ರಕ್ಷಣೆಯ ಸಂಕೇತಗಳಾಗಿವೆ. ಆಕಸ್ಮಿಕವಾಗಿಯಾದರೂ ಬೆಕ್ಕನ್ನು ಕೊಲ್ಲುವುದು ಮರಣದಂಡನೆಗೆ ಅರ್ಹವಾದ ಅಪರಾಧವಾಗಿತ್ತು.

20. ಈಜಿಪ್ಟಿನ ಚಿತ್ರಲಿಪಿಗಳು ಪ್ರಪಂಚದ ಅತ್ಯಂತ ಹಳೆಯ ಬರವಣಿಗೆ ವ್ಯವಸ್ಥೆಗಳಲ್ಲಿ ಒಂದು ಎಂದು ಗುರುತಿಸಲಾಗಿದೆ. ಚಿತ್ರಗಳಲ್ಲಿ ಚಿಹ್ನೆಗಳನ್ನು 3,000 ವರ್ಷಗಳಿಂದ ಬಳಸಲಾಗುತ್ತಿತ್ತು.

21. ಇತಿಹಾಸದಲ್ಲಿ ಮೊಟ್ಟ ಮೊದಲ ಕಾರ್ಮಿಕ ಮುಷ್ಕರವು ಈಜಿಪ್ಟ್‌ನಲ್ಲಿ ಸುಮಾರು 1152 BC ಯಲ್ಲಿ ನಡೆದಿದೆ, ಡೀರ್ ಎಲ್-ಮದೀನಾದಲ್ಲಿನ ರಾಯಲ್ ನೆಕ್ರೋಪೊಲಿಸ್‌ನ ಕುಶಲಕರ್ಮಿಗಳು ವೇತನವನ್ನು ನೀಡದ ಕಾರಣ ತಮ್ಮ ಕೆಲಸದಿಂದ ಹೊರನಡೆದಿದ್ದರಂತೆ.

22. ಪ್ರಾಚೀನ ಈಜಿಪ್ಟಿನವರು ವಿವಿಧ ರೋಗಗಳಿಗೆ ಚಿಕಿತ್ಸೆ ನೀಡುವ ವಿಧಾನವನ್ನು ರೂಡಿಸಿಕೊಂಡಿದ್ದರು, ಔಷಧಿ ಗಳನ್ನು ಕಂಡುಹಿಡಿದಿದ್ದರು, ಶಸ್ತ್ರಚಿಕಿತ್ಸೆಯನ್ನು ನಡೆಸುತಿದ್ದರು.

23. ಈಜಿಪ್ಟ್‌ನ ಟಾಲೆಮಿಕ್ ಸಾಮ್ರಾಜ್ಯದ ಕೊನೆಯ ಸಕ್ರಿಯ ಆಡಳಿತಗಾರ ಕ್ಲಿಯೋಪಾತ್ರ VII, ವಾಸ್ತವವಾಗಿ ಗ್ರೀಕ್ ಮೂಲದವನು, ಅಲೆಕ್ಸಾಂಡರ್ ದಿ ಗ್ರೇಟ್‌ನ ಜನರಲ್‌ಗಳಲ್ಲಿ ಒಬ್ಬನಾದ ಪ್ಟೋಲೆಮಿ I ವಂಶದವನು.

24. 1798 ರಲ್ಲಿ ಫ್ರೆಂಚ್ ದೊರೆ ನೆಪೋಲಿಯನ್ ಈಜಿಪ್ಟ್ ನ ಮೇಲೆ ದಾಳಿ ಮಾಡಿದ್ದನಂತೆ

25. 1799 ರಲ್ಲಿ ಪತ್ತೆಯಾದ ರೊಸೆಟ್ಟಾ ಸ್ಟೋನ್, ಈಜಿಪ್ಟಿನ ಚಿತ್ರಲಿಪಿಗಳನ್ನು ಅರ್ಥೈಸುವ ಕೀಲಿಯಾಗಿದೆ. ಇದು ಮೂರು ಲಿಪಿಗಳಲ್ಲಿ ಬರೆಯಲಾದ ಶಾಸನವನ್ನು ಒಳಗೊಂಡಿದೆ: ಚಿತ್ರಲಿಪಿ, ಡೆಮೋಟಿಕ್ ಮತ್ತು ಗ್ರೀಕ್.

26. ಆರಂಭದಲ್ಲಿ ಈಜಿಪ್ಷಿನ್ನರ ಬಳಸಿದ ಲಿಪಿ - ಪಿಕ್ಟೋಗ್ರಾಫ್ ಅಥವಾ ಚಿತ್ರಲಿಪಿ. ನಂತರದಲ್ಲಿ ಈಜಿಪ್ಷಿಯನ್ನರು ಬಳಸಿದ ಲಿಪಿ - ಹಿರೋಗ್ಲಿಪಿಕ್ಸ್. ಹಿರೋಗ್ಲಿಪಿಕ್ಸ್ ಎಂದರೇ - ಪವಿತ್ರ ಲಿಪಿ. ಪವಿತ್ರ ಲಿಪಿಯನ್ನು ಪುರೋಹಿತ ವರ್ಗವು ಬಳಸುತ್ತಿತ್ತು 

27. Paper ಎಂಬ ಪದದ ಮೂಲ ಪದ - ಪ್ಯಾಪಿರಸ್

28. ಈಜಿಪ್ಟಿಯನ್ನರ ಶಾಯಿ ಮಾಡಲು ಬಳಸುತ್ತಿದ್ದ ವಸ್ತು - ವನಸ್ಪತಿಯ ರಸ

29. ಈಜಿಪ್ಟಿಯನ್ನರ ಲೇಖನಿ - ಲಾಳದ ಕಡ್ಡಿ

30. ಬೈಬಲ್ ಪದದ ಅರ್ಥ - ಪುಸ್ತಕ

31. ಮಡಿದವರ ಕುರಿತ ಪುಸ್ತಕವು ಶವ ಪೆಟ್ಟಿಗೆಯ ಎಂದು ಕರೆಯಲ್ಪಡುವ ಮಮ್ಮಿಗಳ ಪೆಟ್ಟಿಗೆಯಲ್ಲಿ ದೊರೆತಿವೆ 

32. ಪ್ರಾಚೀನ ಈಜಿಪ್ಷಿಯನ್ನರು ಗಣಿತ ಹಾಗೂ ರೇಖಾಗಣಿತದಲ್ಲಿ ಮುಂದುವರಿದಿದ್ದರು

33. ಪುರಾತನ ಅಲೆಕ್ಸಾಂಡ್ರಿಯಾದ ಲೈಬ್ರರಿಯು  ಪ್ರಪಂಚದ ಅತಿದೊಡ್ಡ ಮತ್ತು ಅತ್ಯಂತ ಮಹತ್ವದ ಗ್ರಂಥಾಲಯಗಳಲ್ಲಿ ಒಂದಾಗಿದೆ.

34. ಗೀಜಾದ ಗ್ರೇಟ್ ಸಿಂಹನಾರಿ ಪ್ರತಿಮೆಯು ಪ್ರಪಂಚದ ಅತ್ಯಂತ ದೊಡ್ಡ ಮತ್ತು ಹಳೆಯ ಪ್ರತಿಮೆಗಳಲ್ಲಿ ಒಂದಾಗಿದೆ ಆದರೆ ಅದರ ನಿರ್ಮಾಣದ ಮೂಲ ಮತ್ತು ಇತಿಹಾಸವು ನಿಗೂಢವಾಗಿಯೇ ಉಳಿದಿದೆ.

35. ಅತ್ಯಂತ ಎತ್ತರದ  (160 ಅಡಿ) ಮೂರ್ತಿ  "ಸ್ಪಿಂಕ್ಸ್" ಅನ್ನು ರಚಿಸಿದ ಈಜಿಪ್ಟ್ ದೊರೆಯ ಹೆಸರು "ಖಪ್ರೆ" 

36. ಮೂರನೇ ರಾಮೆಸಸ್ ಇತಿಹಾಸ ಪ್ರಸಿದ್ದ ಕಾರ್ನಾಕ್ ದೇವಾಲಯದ ವನ್ನು ಕಟ್ಟಿಸಿದ್ದ 

37. ಪ್ರಾಚೀನ ಈಜಿಪ್ಟಿಯನ್ನರು  ಮೊಟ್ಟ ಮೊದಲು ಅಂಚೆ ವ್ಯವಸ್ಥೆ ಹಾಗೂ ಜನಗಣತಿಯನ್ನು ಜಾರಿಗೆ ತಂದಿದ್ದರು. 

38. ಪ್ರಾಚೀನ ಈಜಿಪ್ಟಿಯನ್ನರು ಗಾಜನ್ನು ಸೌಂದರ್ಯ ವರ್ಧಕ ಸಾಧನಗಳು ಹಾಗೂ ಸೌರಮಾನ ಪಂಚಾಂಗ ಮೊದಲು ತಯಾರಿಸಿದವರು 

39. ಪ್ರಾಚೀನ ಈಜಿಪ್ಟಿಯನ್ನರು ನೆರಳಿನ ಗಡಿಯಾರವನ್ನು ರೂಪಿಸಿದ್ದರು

40. ಸೂರ್ಯ ಪ್ರಾಚೀನ ಈಜಿಪ್ಷಿಯನ್ನರ ಪ್ರಮುಖ ಆರಾಧ್ಯ ದೈವನಾಗಿದ್ದ.  ಸೂರ್ಯನನ್ನು " ರಾ"  ಮತ್ತು ಅಟನ್ ಎನ್ನುವ ಹೆಸರಿನಿಂದ ಕರೆಯುತ್ತಿದ್ದರು.  ಈಜಿಪ್ಷಿಯನ್ನರು ಸೂರ್ಯನ ಜೊತೆಗೆ ಪೂಜಿಸುತ್ತಿದ್ದ ರಾಷ್ಟ್ರೀಯ ದೇವತೆಯ ಹೆಸರು - ಅಮನ್ ರಾ, ಇವರು ವಾಯುದೇವನನ್ನ "ಶು" ಹೆಸರಿನಿಂದ ಕರೆದಿದ್ದಾರೆ. ಇವರ ಕಾಲದ ನ್ಯಾಯ ದೇವರನ್ನ ಒಸಿರಸ್ ಹೆಸರಿನಿಂದ ಕರೆದಿದ್ದಾರೆ. ಸಾವಿನ ದೇವರು ಎಂದು ಹೇಳಲಾಗುತಿತ್ತು. ಭೂ ದೇವಿಯನ್ನ "ಇಸಿಸ್" ಎನ್ನುವ ಹೆಸರಿನಿಂದ ಕರೆಯುತಿದ್ದರು. ಟಗರು" ಅಮನ್ ರಾ ದೇವರ ಪ್ರತೀಕ.  ಪ್ರಾಚೀನ ಈಜಿಪ್ಟಿನವರು 2,000 ಕ್ಕೂ ಹೆಚ್ಚು ದೇವರು ಮತ್ತು ದೇವತೆಗಳನ್ನು ಪೂಜಿಸಿದ್ದರು.

41. ದಿರ್ ಎಲ್ ಬಹಾರಿ ದೇವಾಲಯದ ನಿರ್ಮಾತೃ - ಒಂದನೇ ಥುಟ್ ಮೋಸ್ ಹಾಗೂ ಆತನ ಮಗಳು ರಾಣಿ ಹಟ್ಸೆ ಪ್ಸುತ್,  ಈದೇವಾಲಯದ ಪ್ರಮುಖ ವಾಸ್ತು ಶಿಲ್ಪಿ - ಸೇನ್ ಮುಥ್

42. ಈಜಿಪ್ಷಿಯನ್ನರ ಪ್ರಮುಖ ಮೂರ್ತಿ ಶಿಲ್ಪ - ಸ್ಪಿಂಕ್ಸ್, ಸ್ಪಿಂಕ್ಸ್ ಎಂದರೆ - ಮನುಷ್ಯನ ಮುಖ ಹಾಗೂ ಸಿಂಹದ ಶರೀರ ಹೊಂದಿರುವ ಮೂರ್ತಿ ಶಿಲ್ಪ

43. ರಾಣಿ ಹಟ್ಸೆಪುತ್ಸಳ ವಿಗ್ರಹ ನ್ಯೂಯಾರ್ಕ್ ಮ್ಯೂಸಿಯಂನಲ್ಲಿದೆ  

44. ಈಜಿಪ್ಟಿನ ಫೇರೋಗಳು ಸಾಮಾನ್ಯವಾಗಿ ಹೆಚ್ಚಿನ ತೂಕವನ್ನು ಹೊಂದಿದ್ದರು, ವಾಸ್ತವವಾಗಿ ಚಿತ್ರಪಟಗಳಲ್ಲಿದ್ದಂತೆ, ಉತ್ತಮವಾದ ಮೈಕಟ್ಟಿನ ಯುವಕರ ಚಿತ್ರಗಳಿಗೆ ವಿರುದ್ಧವಾಗಿ ಅವರ ದೇಹವಿತ್ತು. ಅವರ ಆಹಾರದಲ್ಲಿ ಸಕ್ಕರೆ, ಆಲ್ಕೋಹಾಲ್ ಮತ್ತು ಕಾರ್ಬೋಹೈಡ್ರೇಟ್‌ಗಳು ಸಮೃದ್ಧವಾಗಿದ್ದವು ಎಂದು ಸಂಶೋಧನೆಯಿಂದ ತಿಳಿಯಲಾಗಿದೆ .

45.  ರಾಣಿ ಕ್ಲಿಯೋಪಾತ್ರ ಈಜಿಪ್ಟ್ ನ ಇತಿಹಾಸದಲ್ಲಿ ಪ್ರಮುಖ ಪಾತ್ರವಹಿಸಿದ ಮಹಿಳೆ  

46. 3000 ವರ್ಷಗಳ ದೀರ್ಘ ಇತಿಹಾಸದಲ್ಲಿ ಆಳಿದ ರಾಜರು - 31

47. ಅಖ್ನಾಟನ್ ಎಂಬ ಹೆಸರನ್ನು ಹೊಂದಿದ್ದ ಅರಸ - 4 ನೇ ಅಮನ್ ಹೋಟೆಪ್

48. ಈಜಿಪ್ಟ್ ನ ರಾಜರು ಸ್ವಕುಟುಂಬ ವಿವಾಹವನ್ನು ಹೊಂದಿದ್ದವರು - 

49. ಈಜಿಪ್ಟಿಯನ್ನರ ಮೇಧಾವಿ ಅರಸ 4 ನೇ ಅಮನ್ ಹೋಟೆಪ್

50. ಈಜಿಪ್ಟ್ ನ ಕೊನೆಯ ಅರಸ - ರಾಮೆಸಸ್

ಬರಹ:- ಪಿ.ಎಸ್.ರಂಗನಾಥ

ಮಸ್ಕತ್ - ಒಮಾನ್ ರಾಷ್ಟ್ರ

Photo Courtesy: Internet. 
Phot Credit goes to Original Owner of the Photos

Click below headings