ಲೇಬಲ್‌ಗಳು

ಸುದ್ದಿ ಸ್ವಾರಸ್ಯ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಸುದ್ದಿ ಸ್ವಾರಸ್ಯ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಭಾನುವಾರ, ಮಾರ್ಚ್ 24, 2024

ಅನ್ಯಗ್ರಹ ದಂತೆ ಇರುವ ಸೊಕೊಟ್ರಾ ದ್ವೀಪ (Socotra, Yemen)

ಪ್ರಪಂಚದಲ್ಲಿ ಪ್ರತಿಯೊಂದು ಪ್ರದೇಶವು ತನ್ನದೇ ಆದ ವೈಶಿಷ್ಟ್ಯ ವನ್ನು ಹೊಂದಿರುತ್ತದೆ. ಕೆಲ ಜಾಗದಲ್ಲಿನ ವಿಶಿಷ್ಟತೆ ಬೇರೆಲ್ಲಿಯೂ ಇರುವುದಿಲ್ಲ. ಇಂತಹ ಹಲವಾರು ಪ್ರದೇಶಗಳು ಪ್ರಪಂಚದಲ್ಲಿ ಬಹಳಷ್ಟಿವೆ. ಒಮಾನ್ ರಾಷ್ಟ್ರದ ದಕ್ಷ್ಣಿಣ ದಿಕ್ಕಿನಲ್ಲಿರುವ ಸೊಕೊಟ್ರಾ ದ್ವೀಪವು  ತನ್ನದೇ ಆದ ವೈಶಿಷ್ಟತೆಯನ್ನು ಹೊಂದಿದೆ. ಭೂಮಿಯ ಮೇಲಿನ ಅನ್ಯಲೋಕದ ಸ್ಥಳದಂತೆ ಮತ್ತು ಇದು ಯಾವುದೋ ವೈಜ್ಞಾನಿಕ ಕಾಲ್ಪನಿಕ ಚಲನಚಿತ್ರದಂತೆ ಈ ಪ್ರದೇಶವಿರುವುದು ವಿಶೇಷ. ಭೂಮಿಯ ಮೇಲೆ ಈ ತರಹದ ಸ್ಥಳ ಇದೆಯಾ ಎಂದು ಬಹಳಷ್ಟು ಜನ ಆಶ್ಚರ್ಯ ಪಟ್ಟಿದ್ದಾರೆ.  ಈ ದ್ವೀಪಕ್ಕೆ ಸಂಸ್ಕೃತದಲ್ಲಿ ಸುಖಧಾರ ದ್ವೀಪ ಎಂದು ಕರೆಯಲಾಗುತ್ತದೆ. ಅರೇಬಿಕ್ ಪ್ರಕಾರ ಸೊಕೋಟ್ರಾ ಶಬ್ದವು ಎರಡು ಪದಗಳಿಂದ ರೂಪುಗೊಂಡಿದೆ. ಒಂದು ಸೂಕ್ ಮತ್ತೊಂದು ಕೊಟ್ರಾ. ಸೂಕ್ ಎಂದರೆ ಬಜಾರ್. ಕೊಟ್ರಾ ಎಂದರೆ, ಡ್ರಾಗನ್ ಬ್ಲಡ್ ಟ್ರೀಯಿಂದ ತೊಟ್ಟಿಕ್ಕುವ ಅಂಟು ಅಥವ ರಸ ಎನ್ನುವ ಅರ್ಥವಿದೆ.

 


ಭೌಗೋಳಿಕ ವಿವರ:

ಭೌಗೋಳಿಕವಾಗಿ ನೋಡುವುದಾದರೆ, ಹಿಂದೂ ಮಹಾಸಾಗರದಲ್ಲಿನ ಯೆಮೆನ್ ಗಣರಾಜ್ಯದ ಭಾಗವಾಗಿರುವ ಈ ದ್ವೀಪ, ಆಫ್ರಿಕಾದ ಖಂಡದ ಸೋಮಾಲಿಯಾ ದೇಶದ ತುತ್ತ ತುದಿಯಿಂದ ಪೂರ್ವಕ್ಕೆ 240 ಕಿಲೋಮೀಟರ್ (150 ಮೈಲಿ) ಮತ್ತು ಅರೇಬಿಯನ್ ಪೆನಿನ್ಸುಲಾದ ಯೆಮನ್ ರಾಷ್ಟ್ರದ ದಕ್ಷಿಣಕ್ಕೆ 380 ಕಿಲೋಮೀಟರ್ ದೂರದಲ್ಲಿದೆ. ಈ ದ್ವೀಪವು ಸರಿಸುಮಾರು 132 ಕಿಲೋಮೀಟರ್ ಉದ್ದ ಮತ್ತು 49.7 ಕಿಲೋಮೀಟರ್ ಅಗಲವನ್ನು ಹೊಂದಿದೆ.  ಒಟ್ಟು 3796 ಚದರ ಕಿಲೋಮೀಟರ್ ವಿಸ್ತೀರ್ಣವಿದೆ. ಭೌಗೋಳಿಕವಾಗಿ ಈ ಸ್ಥಳವನ್ನು ಮೂರು ಮುಖ್ಯ ವಲಯಗಳಾಗಿ ವಿಂಗಡಿಸಬಹುದು, ಕರಾವಳಿ ಬಯಲು ಪ್ರದೇಶ, ಸುಣ್ಣಕಲ್ಲಿನ ಪ್ರಸ್ಥಭೂಮಿ (limestone plateau) ಮತ್ತು ಹಜೀರ್ / ಹಗ್ಗಿಯರ್ ಪರ್ವತಗಳು (Hajhir / Hagghier mountains). ಯಮೆನ್, ಒಮಾನ್, ಸೌದಿ ಅರೇಬಿಯಾದ ದೇಶಗಳು ಹತ್ತಿರದಲ್ಲಿರುವುದರಿಂದ ಈ ದ್ವೀಪ ಅರೆ ಮರುಭೂಮಿಯ ಹವಾಮಾನವನ್ನು ಹೊಂದಿದೆ ಮತ್ತು ಸರಾಸರಿ ತಾಪಮಾನವು 25 ಡಿಗ್ರಿಗಳಿಗಿಂತ ಹೆಚ್ಚಾಗಿರುತ್ತದೆ. ಅಲ್ಪ ಪ್ರಮಾಣದಲ್ಲಿ ಮಳೆ ಇಲ್ಲಿ ಬೀಳುತ್ತದೆ. ಭಾರತದಂತೆ, ಜೂನ್ ನಿಂದ ಸೆಪ್ಟೆಂಬರ್ ರವರೆಗೂ ಇಲ್ಲಿ ಮುಂಗಾರು ಇರುತ್ತದೆ.

 


ಇಲ್ಲಿನ ಮೂಲನಿವಾಸಿಗಳು ಸೊಕೋಟ್ರಿ ಎನ್ನುವ ಸ್ಥಳೀಯ ಭಾಷೆಯಲ್ಲಿ ಮಾತನಾಡುತಿದ್ದಾರೆ. ಅಂದಾಜು ಎರಡು ಸಾವಿರ ವರ್ಷಕ್ಕೂ ಹೆಚ್ಚಿನ ಇತಿಹಾಸ ಈ ಭಾಷೆಗೆ ಇದೆ. ಈ ಭಾಷೆಗೆ ಯಾವುದೇ ಲಿಪಿಯಿಲ್ಲ. ಇಲ್ಲಿನ ಪ್ರಮುಖ ಪಟ್ಟಣ "ಹದಿಬು". ಜನಸಂಖ್ಯೆ 60000. ಇಲ್ಲಿನ ಜನಾಂಗದ ಬಗ್ಗೆ ಹೇಳುವುದಾದರೆ, ಪ್ರಧಾನವಾಗಿ ಸೊಕೊಟ್ರಿ ಗಳು ಬಹುಸಂಖ್ಯಾತರು, ಮಿಕ್ಕುಳಿದಂತೆ ಅಲ್ಪಸಂಖ್ಯಾತ ಯೆಮೆನಿಗಳು, ಹದರೆಮ್ ಮತ್ತು ಮೆಹ್ರಿಸ್ ಜನಾಂಗದ ಜನರು ಇಲ್ಲಿದ್ದಾರೆ. ಈ ದ್ವೀಪವು ಗಲ್ಫ್ ಆಫ್ ಏಡೆನ್ ಬಳಿ ಆಯಕಟ್ಟಿನ ಸ್ಥಳದಲ್ಲಿದ್ದರೂ, ಸಮುದ್ರ ಪ್ರಯಾಣದ ನ್ಯಾವಿಗೇಶನ್ ಗೆ ಸಂಭಂಧಿಸಿದ ಸಮಸ್ಯೆಗಳಿಂದ ಸೊಕೊಟ್ರಾ ಎಂದಿಗೂ ಪ್ರಮುಖ ವ್ಯಾಪಾರ ಕೇಂದ್ರವಾಗಲಿಲ್ಲ. ಮುಂಗಾರಿನಲ್ಲಿ ಕಡಲ ತೀರಕ್ಕೆ ಅಪ್ಪಳಿಸುವ ರಭಸದ ಅಲೆಗಳಿಂದಾಗಿ ಇಲ್ಲಿನ ಸಮುದ್ರ ತೀರಗಳು ಹಡಗುಗಳನ್ನು ಲಂಗರು ಹಾಕುವುದಿಕ್ಕೆ ಯೋಗ್ಯವಾಗಿರಲಿಲ್ಲ.

 


* ಇಲ್ಲಿನ ವಿಶೇಷ:* ಸೊಕೊಟ್ರಾವು ಕಠಿಣ ಹವಾಮಾನವನ್ನು ಹೊಂದಿದೆ. ಅತ್ಯಂತ ಬಿಸಿ ಮತ್ತು ಶುಷ್ಕ ವಾತಾವರಣವಿರುವುದರಿಂದ ಈ ದ್ವೀಪವು ತುಂಬಾ ವಿಶಿಷ್ಟ ವಾಗಿದೆ. ಇಲ್ಲಿ ಕಂಡು ಬರುವ  ವಿಭಿನ್ನ ಸಸ್ಯ ಮತ್ತು ಪ್ರಾಣಿಗಳ ಜೀವ ವೈವಿಧ್ಯಗಳ ಕಾರಣದಿಂದಾಗಿ ಪ್ರಪಂಚದ ವಿಚಿತ್ರವಾದ ಪ್ರದೇಶ ಎಂದು ಇದನ್ನು ಗುರುತಿಸಲಾಗಿದ್ದು, ಇಲ್ಲಿ ಕಾಣ ಸಿಗುವ ಪ್ರಾಣಿ, ಪಕ್ಷಿ  ಹೂಗಳು ಮತ್ತು ಇಲ್ಲಿರುವ ಸಸ್ಯ ರಾಶಿಗಳ ಮೂರನೇ ಒಂದು ಭಾಗವು  ಪ್ರಪಂಚದ ಇತರ ಭಾಗದಲ್ಲಿ ಕಾಣಸಿಗುವುದಿಲ್ಲ ಎನ್ನುವುದು ಇಲ್ಲಿನ ವಿಶೇಷ. ಈ ಜಾಗ 825 ಸಸ್ಯ ಪ್ರಭೇದಗಳಿಗೆ ನೆಲೆಯಾಗಿದೆ, ಅವುಗಳಲ್ಲಿ 308 (37%) ಸ್ಥಳೀಯವಾಗಿವೆ. ಈ ಜಾತಿಯ ಗಿಡಗಳು ಭೂಮಿಯ ಮೇಲೆ ಎಲ್ಲಿಯೂ ಕಂಡುಬರುವುದಿಲ್ಲ. ಭೂಮಿಯ ಮೇಲೆ ಅನ್ಯಲೋಕದ ಸ್ಥಳವೆಂದೇ ಇದನ್ನು ಗುರುತಿಸಲಾಗುತ್ತಿದೆ. ವಿಶ್ವದ ಅತ್ಯುತ್ತಮ ಅಲೋವೇರ, ಅಂಬರ್, ಕಸ್ತೂರಿ, ಮುತ್ತುಗಳು ಮತ್ತಿತರ ವಸ್ತುಗಳು ಇಲ್ಲಿ ದೊರಕುತ್ತವೆ.  ಕ್ರಿ.ಪೂ 2400 ವರ್ಶಗಳ  ಹಿಂದಿನಿಂದಲೂ  ಸೊಕೊಟ್ರಾ ದ್ವೀಪವು ಸುಗಂಧ ದ್ರವ್ಯ, ಮಿರ್ಹ್ ಮತ್ತು ಅಲೋವೇರ ಮಾತ್ರವಲ್ಲದೆ ಡ್ರ್ಯಾಗನ್‌ ಬ್ಲಡ್ ಮರ ದಿಂದ ಒಸರುವ ಅಂಟನ್ನು ರಫ್ತು ಮಾಡುತಿದ್ದ ಬಗ್ಗೆ ದಾಖಲೆಗಳು ಲಭ್ಯವಿದೆ.  ಡ್ರ್ಯಾಗನ್‌ ಬ್ಲಡ್ ಟ್ರೀ ಮತ್ತು ಸೊಕೊಟ್ರಾದ ಮರುಭೂಮಿ ಗುಲಾಬಿ ಸೇರಿದಂತೆ ವಿಶಿಷ್ಟ ಸಸ್ಯ ಮತ್ತು ಪ್ರಾಣಿಗಳಿಗೆ ಈ ದ್ವೀಪವು ನೆಲೆಯಾಗಿದೆ. ಸಾಂಪ್ರದಾಯಿಕ ಔಷಧಿಗಳಲ್ಲಿ ಚರ್ಮದ ಚಿಕಿತ್ಸೆಯಾಗಿ ಬಳಸಲಾಗುವ ಉತ್ತಮ ಗುಣಮಟ್ಟದ ಅಲೋ ವೆರಾ ಗಿಡಗಳು ನೈಸರ್ಗಿಕವಾಗಿ ಇಲ್ಲಿ ಬೆಳೆಯುತ್ತಿವೆ. ಭೂಮಿಯ ಮೇಲೆ ಕೆಲವೇ ಕೆಲವು ದ್ವೀಪಗಳು ಮಾತ್ರ ಹೆಚ್ಚಿನ ಸಂಖ್ಯೆಯ ಸ್ಥಳೀಯ ಪ್ರಭೇದಗಳನ್ನು ಹೊಂದಿವೆ, ಅವು, "ಸೊಕೋಟ್ರ",  "ಹವಾಯಿ" ಮತ್ತು "ಗ್ಯಾಲಪಗೋಸ್" ದ್ವೀಪಗಳು.

 




ಡ್ರ್ಯಾಗನ್‌ ಬ್ಲಡ್ ಟ್ರೀ:- ಗೇಮ್ ಆಫ್ ಥ್ರೋನ್ಸ್ ನಲ್ಲಿ ಕಂಡು ಬರುವ ಮರಗಳು ಇವೆಯಲ್ಲ, ಅದೇ ತರಹ ಮರಗಳು ಈ ದ್ವೀಪದಲ್ಲಿವೆ. ಅದನ್ನ ಡ್ರ್ಯಾಗನ್‌ ಬ್ಲಡ್ ಟ್ರೀ  ಎಂದು ಕರೆಯುತ್ತಾರೆ. ಸಸ್ಯಶಾಸ್ತ್ರದ ವೈಜ್ನಾನಿಕ ಹೆಸರು Dracaena cinnabari ಎನ್ನುತ್ತಾರೆ. ಈ ಜಾತಿಯ ಮರ ಬೇರೆಲ್ಲಿಯೂ ಬೆಳೆಯುವುದಿಲ್ಲ.  ಈ ಗಿಡದಿಂದ ತೊಗಟೆಯಿಂದ ಒಸರುವ ರಸವು ಔಷದೀಯ ಗುಣ ಮತ್ತು ಮಾಂತ್ರಿಕ ಶಕ್ತಿಯನ್ನು ಹೊಂದಿದೆ ಎಂದು ಸ್ಥಳೀಯರು ನಂಬುತ್ತಾರೆ.  ಮಧ್ಯ ಪ್ರಾಚೀನಯುಗದಲ್ಲಿ ಡ್ರಾಗನ್ ಮರದ ರಕ್ತದಂತಹ ಕೆಂಪು ರಸವನ್ನು ಮಾಂತ್ರಿಕ ಮತ್ತು ರಸಾಯನ ಶಾಸ್ತ್ರದ ವಿದ್ಯೆಯಲ್ಲಿ ಬಳಸಲಾಗುತ್ತಿತ್ತು. ಇಲ್ಲಿನ ದಂತಕಥೆಯ ಪ್ರಕಾರ, ಯುದ್ದದಲ್ಲಿ ಆಗುವ ಗಾಯಗಳನ್ನು ಅತಿ ಬೇಗ ವಾಸಿಮಾಡಿಕೊಳ್ಳುವುದಕ್ಕಾಗಿ ಡ್ರಾಗನ್ ಮರದಿಂದ ಒಸರುವ ಈ ಅಂಟಿನಂತಹ ರಾಳವನ್ನು ಗ್ಲಾಡಿಯೇಟರ್ ಗಳು ಮೈಮೇಲೆ ಉಜ್ಜಿಕೊಳ್ಳುತಿದ್ದರಂತೆ. ಹಿಂದಿನ ಕಾಲದಿಂದಲೂ ಈ ಮರಕ್ಕೆ ಅಮೂಲ್ಯವಾದ ಸ್ಥಾನವಿದ್ದು, ಇಂದಿಗೂ ಇದು ಪ್ರಾಶಸ್ತ್ಯವನ್ನು ಪಡೆದಿದೆ. ಈ ಮರಗಳಲ್ಲಿ ದೊರಕುವ ಅಂಟು, ಹಡಗು ನಿರ್ಮಾಣಕ್ಕೆ ಉಪಯೋಗಿಸಲಾಗುತಿತ್ತಂತೆ, ಈ ಅಂಟಿಗಾಗಿ ಮಧ್ಯಪ್ರಾಚ್ಯ ರಾಷ್ಟ್ರಗಳು ಸೇರಿದಂತೆ ವಿವಿಧ ದೇಶಗಳಿಂದ ಬೇಡಿಕೆಯಿತ್ತು.

 

ಸಾಂಭ್ರಾಣಿ: ಈ ಪ್ರದೇಶದಲ್ಲಿ ಸಾಂಭ್ರಾಣಿ ಮರಗಳು ಇವೆ. ನಮ್ಮ ಲೋಭಾನದ ಅಂಟು ಈ ಮರಗಳಿಂದ ಉತ್ಪತ್ತಿಯಾಗುತ್ತದೆ. ಅದನ್ನು ಇಲ್ಲಿನ ಜನರು ಸಂಗ್ರಹಿಸಿ ಮಾರುತಿದ್ದರಂತೆ. ದೇಶ ವಿದೇಶಗಳಿಂದ ಈ ಪ್ರದೇಶ ದಿಂದ ಹಾದು ಹೋಗುವಾಗ, ಇಲ್ಲಿ ಉತ್ತಮ ದರ್ಜೆಯ ಲೋಭಾನ ಸೇರಿದಂತೆ ಇನ್ನಿತರೆ ವಸ್ತುಗಳ ಮಾರಾಟ ಇಲ್ಲಿ ನಡೆಯುತಿತ್ತು.

 

UNESCO ವಿಶ್ವ ಪರಂಪರೆಯ ತಾಣ: ಈ ದ್ವೀಪದಲ್ಲಿರುವ ವಿಶಿಷ್ಟ ಸಸ್ಯ ಪ್ರಭೇದಗಳು, ಪ್ರಾಣಿ ಪಕ್ಷಿಗಳ ಸಂಕುಲವನ್ನು ಸಂರಕ್ಷಿಸಲು  2008 ರಲ್ಲಿ ವಿಶ್ವ ಪಾರಂಪಾರಿಕ ತಾಣಗಳ ಪಟ್ಟಿಯಲ್ಲಿ ಗುರುತಿಸಲಾಗಿದೆ. 

 


ಭಾರತದೊಂದಿಗಿನ ನಂಟು:

ಈ ದ್ವೀಪಕ್ಕೆ ಸಂಸ್ಕೃತದಲ್ಲಿ ಸುಖಧಾರ ದ್ವೀಪ ಎಂದು ಕರೆಯಲಾಗುತ್ತದೆ, ಕಾಲಕ್ರಮೇಣ ಬಳಕೆಯಲ್ಲಿ ಇಂದು ಅಪಭ್ರಂಶವಾಗಿ ಸೊಕೋಟ್ರಾ ವಾಗಿದೆ. ಸಂಶೋಧಕ ಪೀಟರ್ ಡಿ ಗೀಸ್ಟ್ ನೇತೃತ್ವದಲ್ಲಿ, ಇಲ್ಲಿ ಸಂಶೋದನೆ ನಡೆಸಿದಾಗ ಪ್ರಾಚೀನ ಭಾರತೀಯ ಬ್ರಾಹ್ಮಿ ಮತ್ತು ಖರೋಷ್ಟಿ ಲಿಪಿಗಳಲ್ಲಿನ  ಬರಹಗಳುಳ್ಳ ವಸ್ತುಗಳು ಇಲ್ಲಿ ದೊರೆತಿವೆ.  ಇವು ಎರಡನೇ ಶತಮಾನದಿಂದ ನಾಲ್ಕನೇ ಶತಮಾನದವರೆಗಿನ ಹಿಂದಿನ ಅವಧಿಯವು ಎಂದು ಹೇಳಲಾಗುತ್ತಿದೆ. ಅವರ ಸಂಶೋಧನೆಯ ಪ್ರಕಾರ, ದ್ವೀಪಕ್ಕೆ ಭೇಟಿ ನೀಡಿದ ವಸಾಹತುಗಾರರು, ನಾವಿಕರು ಮತ್ತು ವ್ಯಾಪಾರಿಗಳು ಇಲ್ಲಿನ ಗುಹೆಗಳಲ್ಲಿ ಆಶ್ರಯ ಪಡೆದಿರುವ ಸಾಧ್ಯತೆಗಳಿವೆ  ಎನ್ನಲಾಗಿದೆ. ಈ ಬರಹಗಳಲ್ಲಿ ಗುಹೆಯಲ್ಲಿ ಆಶ್ರಯ ಪಡೆದಿದ್ದ ವಿವಿಧ ನಾವಿಕರು ಮತ್ತು ವಸಾಹತುಗಾರರ ಹೆಸರುಗಳನ್ನು ಒಳಗೊಂಡಿವೆ ಎಂದು ಅನ್ವೇಷಿಸಿದ್ದಾರೆ. ಇವರೆಲ್ಲರ ಹೆಸರು ಮತ್ತು ಊರು ಅಖಂಡ ಭಾರತ ದೇಶಕ್ಕೆ ಸಂಭಂಧಿಸಿದಾಗಿದೆ. ಇಲ್ಲಿನ ಕ್ಯಾಂಬೆ ಕೊಲ್ಲಿಯಲ್ಲಿ ದೊರೆತ ಒಂದು ಬರಹದಲ್ಲಿ,  ಹಸ್ತಕವಪ್ರದ ವಿಷ್ಣುಸೇನ ಎನ್ನುವ ಹೆಸರನ್ನು ಬ್ರಾಹ್ಮಿ ಲಿಪಿಯಲ್ಲಿ ಕೆತ್ತಲಾಗಿದೆ. ಇನ್ನೊಂದು ಬರಹದಲ್ಲಿ ಉಪಶೀಲ ಎನ್ನುವ ಗಾಂಧಾರದ (ಇಂದಿನ ಅಫ್ಘಾನಿಸ್ತಾನ) ವ್ಯಕ್ತಿಯ ಹೆಸರನ್ನು ಖರೋಷ್ಟಿ ಲಿಪಿಯಲ್ಲಿ ಕೆತ್ತಲಾಗಿದೆ.

 


ಭಾರತ, ಆಫ್ರಿಕ ಮತ್ತು ಅರೇಬಿಯಾದ ಕಡಲು ಮಾರ್ಗದ ಆಯಕಟ್ಟಿನ ಜಾಗದಲ್ಲಿ ಈ ಪ್ರದೇಶವಿದ್ದಿದ್ದರಿಂದ ಇಲ್ಲಿ ಭಾರತೀಯ ವ್ಯಾಪಾರಿಗಳು ಸಾವಿರಾರು ವರ್ಷಗಳ ಹಿಂದೆಯೇ ಈ ಪ್ರದೇಶದ ಮುಖಾಂತರ ಹಾದು ಹೋಗುತಿದ್ದರು ಮತ್ತು ಕೆಲವರು ಇಲ್ಲಿ ನೆಲೆಸಲು ಪ್ರಾರಂಭಿಸಿದ್ದರು. ಹಾಗೆಯೇ, ಭಾರತೀಯ ವ್ಯಾಪಾರಿಗಳು ಪಾಶ್ಚಿಮಾತ್ಯ ರಾಷ್ಟ್ರಗಳೊಂದಿಗೆ ವ್ಯಾಪಾರ ವಹಿವಾಟು ನಡೆಸಲು ಅಂದಿನ ಅಖಂಡ ಭಾರತದ ಉತ್ತರದ ವ್ಯಾಪಾರಿಗಳು ಒಳನಾಡಿನಿಂದ ಗುಜರಾತಿನ ಕರಾವಳಿಯಲ್ಲಿರುವ ಭರೂಚ್ ನಗರದಿಂದ ಅರಬ್ಬಿ ಸಮುದ್ರ ಮಾರ್ಗವಾಗಿ ಪಯಣಿಸುತಿದ್ದರೆನ್ನುವುದಕ್ಕೆ ಇಲ್ಲಿ ದೊರೆತ ದಾಖಲೆಗಳು ಬಲವಾದ ಪುರಾವೆ ನೀಡುತ್ತವೆ. ಇದಕ್ಕೆ ಪೂರಕವೆಂಬಂತೆ ಹರಪ್ಪ ಮೆಹಂಜಾದಾರೋ ಸಮಯದಿಂದಲೂ ಅರಬ್ ರಾಷ್ಟ್ರಗಳೊಂದಿಗೆ ಭಾರತೀಯರು ವ್ಯಾಪಾರ ವಹಿವಾಟು ನಡೆಸುತಿದ್ದ ದಾಖಲೆಗಳು ಒಮಾನ್ ನಲ್ಲಿ ದೊರೆತಿವೆ.

 


ದ್ವೀಪದಲ್ಲಿನ ಹೋಕ್ ಗುಹೆಯಲ್ಲಿ 4 ನೇ ಶತಮಾನದ ವಿಗ್ರಹಗಳು ದೊರೆತಿವೆ. ಈ ಗುಹೆಯಲ್ಲಿ ಸಿಕೋಟ್ರಿ ಮಾತ ಎನ್ನುವ ದೇವರನ್ನು ಪೂಜಿಸುತಿದ್ದರು. ಭಾರತೀಯ ನಾವಿಕರು ಮತ್ತು ವ್ಯಾಪಾರಿಗಳು, ಸಮುದ್ರ ಮಾರ್ಗದಿಂದ ಹಾದು ಹೋಗುವಾಗ, ಯಾವುದೇ ಅಡಚಣೆಗಳು ಎದುರಾಗದಿರಲಿ ಎಂದು ಇಲ್ಲಿ ಪ್ರಾರ್ಥಿಸುತಿದ್ದರು. ಚಿಕ್ಕದಾದ ಮರದ ಹಡಗನ್ನು ಪೂಜಿಸಿ ದೇವತೆಯ ಪಾದದಲ್ಲಿಟ್ಟು ನಮಸ್ಕರಿಸುತಿದ್ದರಂತೆ. ಈಗ ಗುಜರಾತಿನಲ್ಲಿ ಕಂಡು ಬರುವ ಸಿಕೋಟ್ರಿ ಮಾತಾ ಎನ್ನುವ ದೇವಸ್ಥಾನಗಳು ಈ ಸೊಕೋಟ್ರಾ ದಲ್ಲಿ ಪ್ರಾರಂಭಿಸಿದ ನಂಬಿಕೆಯಿಂದ ಪೂಜಿಸಲ್ಪಡುತ್ತಿವೆ ಎಂದು ಹೇಳಲಾಗುತ್ತಿದೆ. ಈ ದೇವತೆ, ನಾವಿಕರು ಮತ್ತು ವ್ಯಾಪಾರಿಗಳಿಗೆ ರಕ್ಷಣೆ ನೀಡುತಿದ್ದಳಂತೆ.

 

ಸಾವಿರಾರು ವರ್ಷಗಳ ಹಿಂದಿನಿಂದಲೂ ಭಾರತದೊಂದಿಗಿನ ಸಂಭಂದದ ಕುರಿತಾಗಿ ಹೇಳುವಾಗ, ಒಂದು ಮಹತ್ವದ ವಿಷಯ ಪ್ರಸ್ತಾಪಿಸಬೇಕು. ನಾವು ಧೈನಂದಿನ ಅಡುಗೆಯಲ್ಲಿ ಬಳಸುವ ತುಪ್ಪವನ್ನು ಇಲ್ಲಿಗೆ ಪರಿಚಯಿಸಿದವರು ಭಾರತೀಯರು. ಇಂದು ಅತಿ ಹೆಚ್ಚು, ಉತ್ಕೃಷ್ಟ ಮಟ್ಟದ ತುಪ್ಪ ಇಲ್ಲಿ ತಯಾರಾಗಿ ಪಕ್ಕದ ರಾಷ್ಟ್ರಗಳಿಗೆ ಇಲ್ಲಿಂದ ರಫ್ತು ಮಾಡಲಾಗುತ್ತದೆ.

 


ಪೋರ್ಚೂಗೀಸರ ಆಕ್ರಮಣ:  ಭಾರತದ ಸಂಪತ್ತಿನ ಬಗ್ಗೆ ಇದ್ದ ರೋಚಕ ವಿಷಯಗಳಿಂದ ಆಕರ್ಷಿತರಾಗಿದ್ದ ಪೋರ್ಚುಗೀಸರು, ನಾವಿಕ ವಾಸ್ಕೋಡಗಾಮನ ಮುಖಾಂತರ ಭಾರತಕ್ಕೆ ಸಮುದ್ರ ಮಾರ್ಗವನ್ನ ಕಂಡುಹಿಡಿಯುತ್ತಾರೆ, ನಂತರ, ತಮ್ಮ ದೊಡ್ಡ ಸೈನ್ಯದೊಂದಿಗೆ ಆಫ್ರಿಕಾದಿಂದ ಹಿಡಿದು, ಯಮೆನ್, ಒಮಾನ್, ಪಾಕಿಸ್ತಾನ್, ಭಾರತದ ಕರಾವಳಿ ಪ್ರದೇಶಗಳನ್ನು ತಮ್ಮ ವಶಕ್ಕೆ ಪಡೆಯುತ್ತ ಹೋಗುತ್ತಾರೆ. ಹಿಂದೂ ಮಹಾಸಾಗರ, ಅರಬ್ಬಿ ಸಮುದ್ರದ ಕಡಲುಮಾರ್ಗಗಳ ಮೇಲೆ ಸಂಪೂರ್ಣ ಹಿಡಿತವನ್ನು ಅವರು ಹೊಂದುತ್ತಾರೆ.

     1507 ರಲ್ಲಿ, ಅಫೊನ್ಸೊ ಡಿ ಅಲ್ಬುಕರ್ಕ್ ಅವರೊಂದಿಗೆ ಟ್ರಿಸ್ಟಾವೊ ಡ ಕುನ್ಹಾ ನೇತೃತ್ವದಲ್ಲಿ ಪೋರ್ಚುಗೀಸ್ ನೌಕಾಪಡೆಯು ಸೊಕೊಟ್ರಾ ದಲ್ಲಿ ಇಳಿದು ಅಲ್ಲಿ ಆಳ್ವಿಕೆ ನಡೆಸುತಿದ್ದ ಮೆಹರಾ ಸುಲ್ತಾನರ ವಿರುದ್ಧ ಯುದ್ಧ ಮಾಡಿ ಜಯಿಸಿದ ನಂತರ ಆ ಬಂದರನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುತ್ತಾರೆ. ಭಾರತಕ್ಕೆ ಹೋಗುವ ಮಾರ್ಗದಲ್ಲಿ ಈ ಆಯಕಟ್ಟಿನ ಸ್ಥಳದಲ್ಲಿ ತಮ್ಮ ರಕ್ಷಣಾ ನೆಲೆಯನ್ನು ಸ್ಥಾಪಿಸುವುದು ಅವರ ಉದ್ದೇಶವಾಗಿತ್ತು. ಆದರೆ ಇಲ್ಲಿನ ಸೂಕ್ತ ಬಂದರಿನ ಕೊರತೆ, ಕಠಿಣ ಹವಮಾನ ಮತ್ತು ಬರಡು ಭೂಮಿಯಂತಹ ಪ್ರದೇಶ, ಇವೆಲ್ಲದರ ಕಾರಣದಿಂದ ಇವರ ರಕ್ಷಣಾ ಪಡೆಯು ಕ್ಷಾಮ ಮತ್ತು ಅನಾರೋಗ್ಯಕ್ಕೆ ತುತ್ತಾಯಿತು. ಇಲ್ಲಿ ಲಾಭಕ್ಕಿಂತ, ನಷ್ಟವೇ ಜಾಸ್ತಿಯೆಂದು, ಪೋರ್ಚುಗೀಸರು 1511 ರಲ್ಲಿ ದ್ವೀಪವನ್ನು ತ್ಯಜಿಸುತ್ತಾರೆ.  ಆಗ ಮೆಹರಾ ಸುಲ್ತಾನರು, ದ್ವೀಪದ ನಿಯಂತ್ರಣವನ್ನು ಮರಳಿ ತಮ್ಮ ವಶಕ್ಕೆ ಪಡೆದುಕೊಳ್ಳುತ್ತಾರೆ.

     ಬ್ರಿಟೀಷರ ಆಳ್ವಿಕೆ: ಭಾರತವನ್ನು ವಸಾಹತುವನ್ನಾಗಿ ಬ್ರಿಟೀಷರು ತಮ್ಮ ಕೈವಶ ಮಾಡಿಕೊಂಡಿದ್ದಾಗ, ಹಲವು ಬಾರಿ ಈ ದ್ವೀಪವನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳಲು ಪ್ರಯತ್ನಿಸಿದರು 1834 ರಲ್ಲಿ ಬ್ರಿಟಿಷರು ದ್ವೀಪವನ್ನು ಖರೀದಿಸಲು ಪ್ರಯತ್ನಿಸಿ ವಿಫಲರಾಗುತ್ತಾರೆ. ಅಲ್ಲಿನ ಸುಲ್ತಾನ ಮಾರಾಟಕ್ಕೆ ಒಪ್ಪುವುದಿಲ್ಲ. ಕೊನೆಗೆ 1880 ರ ದಶಕದಲ್ಲಿ, ಇಲ್ಲಿನ ಸುಲ್ತಾನನು, ಬ್ರಿಟಿಷ್ ರಕ್ಷಣೆಯನ್ನು ಪಡೆಯಲು  ಒಪ್ಪಿ ಕರಾರು ಮಾಡಿಕೊಳ್ಳುತ್ತಾನೆ. ಹತ್ತೊಂಬತ್ತನೇ ಶತಮಾನಕ್ಕೂ ಮೊದಲು, ಭಾರತ, ಫೂರ್ವ ಆಫ್ರಿಕ ದೇಶಗಳು ಮತ್ತು ಅರಬ್ ರಾಷ್ಟ್ರಗಳನ್ನು ಸಂಪರ್ಕಿಸಲು ಆಫ್ರಿಕಾ ಖಂಡವನ್ನು ಸುತ್ತಿ ಬಳಸಿ ಭಾರತವನ್ನು ತಲುಪಬೇಕಾಗುತಿತ್ತು. ಕಡಿಮೆ ಸಮಯ ಮತ್ತು ಇಂಧನವನ್ನು ಉಳಿಸುವ ನಿಟ್ಟಿನಲ್ಲಿ  ಈಜಿಪ್ಟ್ ರಾಷ್ಟ್ರದ ಬಳಿ ಸೂಯೆಜ್ ಕಾಲುವೆಯನ್ನು ನಿರ್ಮಿಸಲಾಯಿತು. ಯಾವಾಗ ಸೂಯೇಜ್ ಕಾಲುವೆ ನಿರ್ಮಾಣವಾಯಿತೋ, ಆಗ ಈ ಸೊಕೊಟ್ರಾ  ದ್ವೀಪದ ಮೇಲೆ ಬ್ರಿಟೀಷರು ಹಿಡಿತ ಸಾಧಿಸಿದರು. ಭಾರತಕ್ಕೆ ಸಮುದ್ರ ಮಾರ್ಗವಾಗಿ ತೆರಳುವ ಹಡಗುಗಳನ್ನು ನಿಯಂತ್ರಿಸಲು ದ್ವೀಪವು ನಿರ್ಣಾಯಕ ಪಾತ್ರವಹಿತ್ತದೆ. ಭಾರತದ ಪಶ್ಚಿಮ ಕರಾವಳಿಯಲ್ಲಿ ಮುಂಬಯಿ ಪಟ್ಟಣ ಪ್ರಮುಖ ಲ್ಯಾಂಡಿಂಗ್ ಬಂದರು ಆಗಿದ್ದರಿಂದ, ಸೊಕೊಟ್ರಾ ಬಾಂಬೆ ಪ್ರೆಸಿಡೆನ್ಸಿಯ ಭಾಗವಾಯಿತು ಮತ್ತು ಅಲ್ಲಿಂದ ಬ್ರಿಟಿಷ್ ಭಾರತದ ಭಾಗವಾಗಿ ಆಡಳಿತ ನಡೆಸಲಾಯಿತು. ಇದು 1937 ರವರೆಗೂ ಬಾಂಬೆ ಪ್ರೆಸಿಡೆನ್ಸಿಯ ಭಾಗವಾಗಿತ್ತು. ತದ ನಂತರ, ಈ ದ್ವೀಪವನ್ನು  ಪ್ರತ್ಯೇಕಿಸಿ ಗಲ್ಫ್ ಆಫ್ ಏಡೆನ್ ಪ್ರೊಟೆಕ್ಟರೇಟ್ ಅಡಿಯಲ್ಲಿ ಇರಿಸಲಾಯಿತು. ಭಾರತದಿಂದ ಬ್ರಿಟೀಷರು ಹೊರಟು ಹೋದ ಮೇಲೆ, ಈ ದ್ವೀಪವು ಸಹ ಸ್ವತಂತ್ರಗೊಂಡಿತು.

     ರಷಿಯನ್ನರ ಪ್ರಾಬಲ್ಯ: ಬ್ರಿಟಿಷ್ ಆಳ್ವಿಕೆಯ ಅಂತ್ಯವಾದ ನಂತರ, ಯೆಮನ್ ರಾಷ್ಟ್ರದಲ್ಲಿ ಶೀತಲ ಸಮರ ಪ್ರಾರಂಭ ವಾಯಿತು. ಕೊರಿಯಾ ದೇಶದಂತೆ, ಇಲ್ಲಿಯೂ ದೇಶ ಉತ್ತರ ಯಮೆನ್ ಮತ್ತು ದಕ್ಷಿಣ ಯಮೆನ್ ಎಂದು ಎರಡು ಭಾಗಗಳಾಗಿ ವಿಭಜಿಸಲ್ಪಟ್ಟಿತು. ಎರಡು ಕಡೆಯೂ ವಿಭಿನ್ನ ರಾಜಕೀಯ ಶಕ್ತಿಗಳು ಅಧಿಕಾರ ಪಡೆದವು. . ದಕ್ಷಿಣ ಯೆಮೆನ್, ಸೊಕೊಟ್ರಾ ದ್ವೀಪದ ಜೊತೆಗೆ ಸೋವಿಯತ್ ಪ್ರಭಾವಕ್ಕೆ ಒಳಪಟ್ಟಿತು. ಮಾರ್ಕ್ಸ್‌ವಾದಿಗಳು ಅಧಿಕಾರ ವಹಿಸಿಕೊಂಡಂತೆ, ಪೀಪಲ್ಸ್ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಯೆಮೆನ್ ಅನ್ನು ಘೋಷಿಸಲಾಯಿತು - ವಿಶ್ವದ ಏಕೈಕ ಅರಬ್ ಕಮ್ಯುನಿಸ್ಟ್ ರಾಜ್ಯ ವೆನ್ನುವ ಹೆಸರು ಪಡೆಯಿತು. ರಷಿಯನ್ ರು ಇಲ್ಲಿಗೆ ಬರಲು ಪ್ರಮುಖ ಕಾರಣ, ಈ ಪ್ರದೇಶದಲ್ಲಿದ್ದ ತೈಲ ನಿಕ್ಷೇಪಗಳು ಹಾಗೂ ಪ್ರಪಂಚದ ಪ್ರಮುಖ ಸಮುದ್ರ ಮಾರ್ಗವೆಂದು ಗುರುತಿಸಿದ್ದ ಕಾರಣದಿಂದ ಈ ಮಾರ್ಗದಲ್ಲಿ ಸಂಚರಿಸುವ ಹಡಗುಗಳ ಮೇಲೆ ಕಣ್ಣಿಡಲು ತಮ್ಮ ರಕ್ಷಣಾ ನೆಲೆಯನ್ನು ಇಲ್ಲಿ ಸ್ಥಾಪಿಸಿದರು. ತದನಂತರ ದ್ವೀಪವನ್ನು ಮುಕ್ತ ಜಗತ್ತಿಗೆ ನಿರ್ಭಂದ ಹೇರಿ, ಇದರ ಬಳಕೆಯನ್ನು ಕೇವಲ ಸೋವಿಯತ್ ಮತ್ತು ದಕ್ಷಿಣ ಯೆಮೆನ್ ಮಿಲಿಟರಿಗೆ ಮಾತ್ರ ಸೀಮಿತಗೊಳಿಸಲಾಗುತ್ತದೆ.

 


ಯಮೆನ್ ಗಣ ರಾಜ್ಯ:

ಈ ಮೊದಲು ವಿಭಜನೆಗೊಂಡಿದ್ದ  ಯೆಮೆನ್ ರಾಷ್ಟ್ರ, 1990 ರಲ್ಲಿ ಸೋವಿಯತ್ ರಾಷ್ಟ್ರಗಳ ಒಕ್ಕೂಟದ ಪತನದ ನಂತರ,  ಪುನರ್ ಏಕೀಕರಣ ಗೊಂಡಿತು. ಪುನರೇಕೀಕರಣದ ನಂತರ ಮಾತ್ರ ದ್ವೀಪವನ್ನು ಮತ್ತೊಮ್ಮೆ ಜಗತ್ತಿಗೆ ತೆರೆಯಲಾಯಿತು. ಅಂದಿನಿಂದ ಈ ದ್ವೀಪ, ಪ್ರವಾಸಿಗರನ್ನು,  ಸಂಶೋಧಕರು ಮತ್ತು ಮಾನವಶಾಸ್ತ್ರಜ್ಞರು ಭೇಟಿ ನೀಡಿ ಸಂಶೋಧನೆ ನಡೆಸುತಿದ್ದಾರೆ. ಅದ್ಭುತವಾದ ಸಮುದ್ರ ತೀರಗಳು, ವಿಶಿಷ್ಟ ಜಾತಿಯ ಗಿಡಮರಗಳು ಮತ್ತು ದೊಡ್ಡ ದಾದ ಅತಿ ಸುಂದರ ಕಣಿವೆ ಪ್ರದೇಶಗಳು ಇಲ್ಲಿದ್ದರೂ, ಯಮೆನ್ ನಲ್ಲಿನ ರಾಜಕೀಯ ಅನಿಶ್ಚಿತತೆ, ಆಂತರಿಕ ಯುದ್ದಗಳು  ಮತ್ತು ಪಕ್ಕದ ಸೋಮಾಲಿಯಾ ಕಡಲ್ಗಳ್ಲರ ಹಾವಳಿಯಿಂದ ಪ್ರವಾಸೋಧ್ಯಮದಿಂದ ಈ ದ್ವೀಪವು ಜನರಿಂದ ದೂರವೇ ಉಳಿದಿದೆ. ಅಭಿವೃದ್ದಿಯು ಮರೀಚಿಕೆಯಾಗಿದೆ.






ಬರಹ:-

ಪಿ.ಎಸ್.ರಂಗನಾಥ

ಮಸ್ಕತ್ - ಒಮಾನ್ ರಾಷ್ಟ್ರ

Photo Credit:  Original Owners, Google

Article is just for knowledge sharing only.

#socotra #oman #muscat #kannada #PSR #PS_Ranganatha #ಸೊಕೊಟ್ರಾ #Bangalore #Karnataka #India #Yemen #muscat #sohar #salalah #sur #nizwa #sanaa  

ಗುರುವಾರ, ಆಗಸ್ಟ್ 24, 2023

ತ್ರಿವಿಕ್ರಮನ ಚಂದ್ರಯಾನಕ್ಕೆ ಅರಬ್ ರಾಷ್ಟ್ರಗಳಿಂದಲೂ ಅಭಿನಂದನೆಗಳ ಸುರಿಮಳೆ








ಚಂದ್ರಯಾನ - 3 ಯೋಜನೆಯ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ವಿಕ್ರಮ್‌ ಮತ್ತು  ರೋವರ್‌ ಪ್ರಗ್ಯಾನ್ ಯಶಸ್ವಿಯಾಗಿ ಇಳಿಯುವ ಐತಿಹಾಸಿಕ ಕ್ಷಣವನ್ನು ನೋಡಲು ದೇಶ ವಿದೇಶಗಳಾದ್ಯಾಂತ ಕೋಟ್ಯಾಂತರ ಜನರು ಬುಧವಾರದಂದು ಟೀವಿ ಪರದೆಗಳಿಗೆ ಅಂಟಿ ಕುಳಿತಿದ್ದರು. ಯಾವಾಗ ಚಂದ್ರನ ಮೇಲೆ ವಿಕ್ರಮ್ ಸೇಫಾಗಿ ಲ್ಯಾಂಡ್ ಆಯಿತೋ ನೋಡಿ ಭಾರತ ದೇಶವು  ಇತಿಹಾಸ ನಿರ್ಮಿಸಿದ್ದಲ್ಲದೆ, ಇಡೀ ಜಗತ್ತೇ ಭಾರತದ ಇಸ್ರೋ ವಿಜ್ನಾನಿಗಳ ಸಾಧನೆಯನ್ನ ಸಂಭ್ರಮಿಸಿ ಕೊಂಡಾಡಿದ್ದಲ್ಲದೆ, ವಿಶ್ವದಾದ್ಯಂತದಿಂದ ಭಾರತಕ್ಕೆ ಭರಪೂರ ಅಭಿನಂದನೆಗಳ ಸುರಿಮಳೆಯಾಗುತ್ತಿದೆ. #congratulationsindia ಎನ್ನುವ ಹ್ಯಾಶ್ ಟ್ಯಾಗ್ ಕೋಟ್ಯಾಂತರ ಜನರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.  


ಅರಬ್ ರಾಷ್ಟ್ರಗಳಲ್ಲಿ, ಪ್ರಮುಖ ವಾಗಿ ಯುನೈಟೆಡ್ ಅರಬ್ ಸಂಸ್ಥಾನದ ಇಲ್ಲಿನ ಅಧ್ಯಕ್ಷರು ಮತ್ತು ಅಬುಧಾಬಿಯ ಆಡಳಿತಗಾರರು ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್, ಮತ್ತು ಯುಎಇ ಉಪಾಧ್ಯಕ್ಷರು ಮತ್ತು ಪ್ರಧಾನ ಮಂತ್ರಿ ಮತ್ತು ದುಬೈ ಆಡಳಿತಗಾರರು ಆದ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರು, ಒಮಾನಿನ ವಿದೇಶಾಂಗ ಸಚಿವರು ಸೇರಿದಂತೆ ಬಹುತೇಕರು ಭಾರತದ ಇಸ್ರೋ ವಿಜ್ನಾನಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.


ದುಬೈ ಆಡಳಿತಗಾರರು ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರು "ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿದ್ದಕ್ಕಾಗಿ ಭಾರತದ ನಮ್ಮ ಸ್ನೇಹಿತರಿಗೆ ಅಭಿನಂದನೆಗಳು. ಸತತ ಪರಿಶ್ರಮಗಳ ಮೂಲಕ ಸಶಕ್ತ  ರಾಷ್ಟ್ರಗಳನ್ನು ಕಟ್ಟಲಾಗುತ್ತಿದೆ, ಯಾವಾಗಲೂ ಭಾರತವು ಇತಿಹಾಸವನ್ನು ನಿರ್ಮಿಸುತ್ತಲೇ ಇದೆ" ಎಂದು ಕೊಂಡಾಡಿದ್ದಾರೆ.


ಯುಏಇ ಯ ಅಧ್ಯಕ್ಷರು ಮತ್ತು ಅಬುಧಾಬಿಯ ಆಡಳಿತಗಾರರು ಆದ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು

ಚಂದ್ರನ ಮೇಲೆ ಭಾರತದ ಚಂದ್ರಯಾನ-3 ಬಾಹ್ಯಾಕಾಶ ನೌಕೆಯ ಯಶಸ್ವಿ ಲ್ಯಾಂಡಿಂಗ್ ಸಾಮೂಹಿಕ ವೈಜ್ಞಾನಿಕ ಪ್ರಗತಿಯ ಮಹತ್ವವನ್ನು ಪ್ರತಿನಿಧಿಸುತ್ತದೆ. ಮನುಕುಲದ ಸೇವೆಯಲ್ಲಿನ ಈ ಐತಿಹಾಸಿಕ ಸಾಧನೆಗಾಗಿ ನಾನು ಪ್ರಧಾನ ಮಂತ್ರಿ @ನರೇಂದ್ರ ಮೋದಿ ಮತ್ತು ಭಾರತದ ಜನತೆಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ" ಎಂದಿದ್ದಾರೆ.


ಒಮಾನ್  ರಾಷ್ಟ್ರದ ವಿದೇಶಾಂಗ ಸಚಿವರು ಚಂದ್ರಯಾನ-3 ಯಶಸ್ವಿಯಾಗಿ ಚಂದ್ರನ ಮೇಲೆ ಇಳಿಯಲು ಭಾರತವನ್ನು ಅಭಿನಂದಿಸಿದ್ದಾರೆ. “ಚಂದ್ರನ ಮೇಲೆ ಯಶಸ್ವಿಯಾದ ಸಾಫ್ಟ್ ಲ್ಯಾಂಡಿಂಗ್‌ಗಾಗಿ ಭಾರತಕ್ಕೆ ಅಭಿನಂದನೆಗಳು. ಭಾರತದ ಬಾಹ್ಯಾಕಾಶ ಯಾನದಲ್ಲಿ ಒಂದು ಮೈಲಿಗಲ್ಲು. ಹೊಸ ಆವಿಷ್ಕಾರಗಳು ಮತ್ತು ವೈಜ್ಞಾನಿಕ ಪ್ರಗತಿಯನ್ನು ನಾವು ಎದುರು ನೋಡುತ್ತಿದ್ದೇವೆ” ಎಂದು ಒಮಾನ್‌ನ ವಿದೇಶಾಂಗ ಸಚಿವ ಬದ್ರ್ ಅಲ್ ಬುಸೈದಿ ತಮ್ಮ ತಿಳಿಸಿದ್ದಾರೆ.


ಗಲ್ಫ್ ರಾಷ್ಟ್ರಗಳಲ್ಲಿ, ಚಿಕ್ಕ ಪುಟ್ಟ ಕೆಲಸ ಮಾಡುವುವರಿಂದ ಹಿಡಿದು ಕೋಟ್ಯಾಂತರ ಆಸ್ತಿ ಹೊಂದಿರುವ ವಿವಿಧ ವರ್ಗದ ಐವತ್ತು ಲಕ್ಷಕ್ಕೂ ಹೆಚ್ಚಿನ ವಿವಿಧ ರಾಜ್ಯಗಳ  ಭಾರತೀಯ ಪ್ರಜೆಗಳಿದ್ದಾರೆ.  ಚಂದ್ರಯಾನದ ಯಶಸ್ಸು ಪ್ರತಿಯೊಬ್ಬ ಭಾರತೀಯರಿಗೂ ಅತೀವ ಸಂತಸವನ್ನುಂಟು ಮಾಡಿದ್ದಲ್ಲದೆ, ಭಾರತೀಯರ ಮೇಲಿನ ಗೌರವವನ್ನು ಇಮ್ಮಡಿ ಗೊಳಿಸಿದೆ. ಭಾರತಕ್ಕೆ ಮತ್ತು ವಿಶ್ವಕ್ಕೆ ಮಹತ್ವದ ದಿನ. ಈ ಸಾಧನೆಯನ್ನು ಸಾಧಿಸಿದ ವಿಶ್ವದ ನಾಲ್ಕನೇ ದೇಶ ನಮ್ಮದು. ಚಂದ್ರನ ದಕ್ಷಿಣ ಧ್ರುವದ ಬಳಿ ಬಾಹ್ಯಾಕಾಶ ನೌಕೆಯನ್ನು ಇಳಿಸಿದ ವಿಶ್ವದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಂತಹ ನಿರ್ಣಾಯಕ ಮತ್ತು ಕಷ್ಟಕರವಾದ ಮಿಷನ್ ಅನ್ನು ಸಾಕಾರ ಗೊಳಿಸಿದಿದ್ದಕ್ಕಾಗಿ ನಮ್ಮ ಅದ್ಭುತ ವಿಜ್ಞಾನಿಗಳು ಮತ್ತು ಇಸ್ರೋಗೆ ಹ್ಯಾಟ್ಸ್ ಆಫ್ ಎಂದು ಪ್ರತಿಯೊಬ್ಬರು ಅಭಿನಂದನೆಗಳನ್ನು ವಿನಿಮಯ ಮಾಡಿಕೊಂಡರು. ವಾಟ್ಸಪ್ ಗ್ರೂಪ್ ಗಳು, ಫೇಸ್ ಬುಕ್ ಗಳು ಸೇರಿದಂತೆ ಹಲವಾರು ಸಾಮಾಜಿಕ ಜಾಲತಾಣದಲ್ಲಿ ಅಭಿನಂದನೆಗಳ ಮೆಸ್ಸೇಜ್ ಗಳು ತುಂಬಿ ತುಳುಕಾಡುತ್ತಿವೆ. ಭಾರತೀಯರಂತೆ ವಿವಿಧ ದೇಶಗಳ ವಲಸಿಗರು ಕೊಲ್ಲಿ ರಾಷ್ಟ್ರಗಳಲ್ಲಿ ನೆಲೆಸಿ ಕೆಲಸ ಮಾಡುತಿದ್ದಾರೆ, ಅದರಲ್ಲಿ ವಿಶೇಷವಾಗಿ ಪಾಕಿಸ್ತಾನಿಗಳು ಸಹ ಭಾರತೀಯರನ್ನು ಅಭಿನಂದಿಸಿದ್ದು ವಿಶೇಷವಾಗಿತ್ತು. ಕೊಲ್ಲಿ ರಾಷ್ಟ್ರಗಳಲ್ಲಿನ ವಿವಿಧ ಭಾರತೀಯ ಸಾಂಸ್ಕೃತಿಕ ಸಂಘಟನೆಗಳು, ಸಂಘ ಸಂಸ್ಥೆಗಳು ಸಂಭ್ರಮಾಚರಣೆಯನ್ನ ನಡೆಸಿದವು. ಬಹುತೇಕರು ಡಿಪಿಗಳಲ್ಲಿ ತಮ್ಮ ಫೋಟೋವನ್ನ ಇಸ್ರೋ ಗೆ ಅಭಿನಂದಿಸುವ ಮೂಲಕ ಬದಲಾಯಿಸಿಕೊಂಡಿದ್ದರು. 


ವಿದೇಶಿ ಮಾಧ್ಯಮಗಳ ಸಾಮಾಜಿಕ ಜಾಲತಾಣಗಳಲ್ಲೂ ಸಹ ಚಂದ್ರಯಾನ ಕುರಿತು ಸತತವಾಗಿ ವಿವಿದ ಬಗೆಯ ಪೋಸ್ಟ್ ಗಳನ್ನ ಹಾಕುತಿದ್ದರು. ಸಾಮಾನ್ಯವಾಗಿ ಭಾರತದ ಬಗೆಗಿನ ಋಣಾತ್ಮಕ ಸುದ್ದಿಗಳನ್ನ ಪೋಸ್ಟ್ ಮಾಡುತಿದ್ದ ಇವರು, ಇಂದು ಚಂದ್ರಯಾನ ಕುರಿತು ಸುದ್ದಿ ಪ್ರಸಾರ ಮಾಡಿ ತಮ್ಮ ನ್ಯೂಸ್ ವೀವರ್ಸ್ ಅನ್ನು ಹೆಚ್ಚಿಸಿಕೊಂಡಿದ್ದನ್ನ ಕಾಣಬಹುದಾಗಿತ್ತು. ಬಿಬಿಸಿ ನ್ಯೂಸ್  ನ ವೆಬ್ ಪೇಜ್ ನಲ್ಲೂ ಕಾಮೆಂಟ್ ಸೆಕ್ಶನ್ ನಲ್ಲಿ ಕೆಲವರು, ಭಾರತದಲ್ಲಿ ಊಟವಿಲ್ಲದೆ ನರಳುತ್ತಿರುವ ಲಕ್ಷಾಂತರ ಜನರಿರುವಾಗ ಈ ತರಹದ ಶೋಕಿ ಭಾರತಕ್ಕೆ ಬೇಕಿತ್ತ ಎಂದು ಕೆಟ್ಟ ಕಾಮೆಂಟ್ ಮಾಡುತಿದ್ದವರಿಗೆ, ನಮ್ಮ ಭಾರತೀಯರು ಸರಿಯಾಗಿಯೇ ಗುನ್ನ ಇಡುತ್ತಿರುವುದು ಕಂಡು ಬಂತು. ನೀವು ಬ್ರಿಟೀಷರು, ಮುನ್ನೂರು ವರ್ಷಗಳ ಕಾಲ ಕೊಳ್ಳೆ ಹೊಡೆದು ಬಡ ರಾಷ್ಟ್ರವನ್ನಾಗಿ ಮಾಡಿ ಹೋದಿರಿ, ಅದರಿಂದ ನಿಮಗೆ ನಾಚಿಕೆಯಾಗಬೇಕಿದೆ ಹೊರತು ನಮಗಲ್ಲ. ಅಂತಹ ಬಡತನದ ಸ್ಥಿತಿಯಿಂದ ದೇಶ ಈವತ್ತು ಪ್ರಪಂಚದ ಪ್ರಮುಖ ಆರ್ಥಿಕ ಶಕ್ತಿಯಾಗುವ ಮಟ್ಟಕ್ಕೆ ಭಾರತ ಬೆಳೆದು ನಿಂತಿದೆ, ಅದಕ್ಕೆ ಹೊಟ್ಟೆಕಿಚ್ಚು ಪಡದೆ ಸಂಭ್ರಮಿಸಿ ಎಂದು ಹಲವರು ಕಾಮೆಂಟಿಸುತಿದ್ದರು.  ಅದೇ ಇರಲಿ ಭಾರತ ರಾಷ್ಟ್ರಕ್ಕೂ ಮತ್ತು ಎಲ್ಲ ಭಾರತೀಯರಿಗೂ ಇದೊಂದು ಹೆಮ್ಮೆಯ ಕ್ಷಣ. 


ಬರಹ :- ಪಿ.ಎಸ್.ರಂಗನಾಥ

ಮಸ್ಕತ್, ಒಮಾನ್ ರಾಷ್ಟ್ರ





ಶುಕ್ರವಾರ, ಆಗಸ್ಟ್ 4, 2023

ಅರಬ್ ರಾಷ್ಟ್ರ ಒಮಾನ್ ನಲ್ಲಿ ಕಂಡು ಬಂದ ಹರಪ್ಪ ನಾಗರೀಕತೆಯ ಕುರುಹುಗಳು



ಪ್ರಪಂಚದ ಅತ್ಯಂತ ಪ್ರಾಚೀನ ನಾಗರೀಕತೆಯ ಸಂಸ್ಕೃತಿಗಳಲ್ಲಿ ಒಂದಾದ ಹರಪ್ಪ ಮತ್ತು ಮೆಹೆಂಜೋದಾರೋ ನಾಗರೀಕತೆ ಬಗ್ಗೆ ಭಾರತೀಯರಾದ ನಮಗೆ ಬಹಳಷ್ಟು ಹೆಮ್ಮೆ ಯಿದೆ. ಕಾರಣ ಏನೆಂದರೆ ಕ್ರಿ.ಪೂ 3000 ವರ್ಷಗಳ ಹಿಂದಿನ ಆ ಕಾಲದಲ್ಲಿಯೇ ಯೋಜನಾಬದ್ದವಾಗಿ  ನಿರ್ಮಾಣಗೊಂಡ ನಗರಗಳು, ರಕ್ಷಣಾ ಕೋಟೆಗಳು, ರಸ್ತೆಗಳು, ಕುಡಿಯುವ ನೀರಿನ ಬಾವಿಗಳು, ಒಳಚರಂಡಿ ವ್ಯವಸ್ಥೆ. ಸ್ನಾನಗೃಹಗಳು. ಇತ್ಯಾದಿ. ಆಗಿನ ಜನರ ಉತ್ತಮ ಸಾಮಾಜಿಕ ಜೀವನ, ಆರ್ಥಿಕ ಜೀವನ, ಕಲೆ, ಧಾರ್ಮಿಕ ಆಚರಣೆ, ಬರಹಗಳು, ಇವೆಲ್ಲವೂ ಹರಪ್ಪ ಸಂಸ್ಕೃತಿಯ ವಿಶಿಷ್ಟತೆಯನ್ನು ಎತ್ತಿ ಹಿಡಿಯುತ್ತವೆ. ಸಿಂಧೂ ಮತ್ತು ಅದರ ಉಪನದಿಗಳ ಬಯಲಿನಲ್ಲಿ ಈ ನಾಗರೀಕತೆ ಪ್ರಸ್ತುತದಲ್ಲಿದ್ದರಿಂದ ಇದನ್ನು  ಸಿಂಧೂ ಬಯಲಿನ ನಾಗರೀಕತೆ ಎಂದು ಕರೆಯಲಾಗುತ್ತದೆ. ಆದರೆ ಕಾಲನ ಹೊಡೆತಕ್ಕೆ ಸಿಕ್ಕಿ ಈ ಜನ ಜೀವನ ಕಣ್ಮರೆಯಾಗಿದ್ದುದು ಬಹಳ ವಿಷಾದದ ಸಂಗತಿ. ಅತಿವೃಷ್ಟಿ, ಅನಾವೃಷ್ಟಿ, ನೆರೆ, ಬರ ಇತ್ಯಾದಿಗಳ ಕಾರಣದಿಂದ ಇಲ್ಲಿನ ಜನರು ಈ ನಗರಗಳನ್ನು ತೊರೆದಿರಬಹುದು ಇಲ್ಲವೇ ಬೇರೆಡೆ ವಲಸೆ ಹೋಗಿರಬಹುದು ಎಂದು ಪುರಾತತ್ವ ಸಂಶೋಧಕರು ಊಹಿಸಿದ್ದಾರೆ.


ಒಂದು ಶತಮಾನದ ಹಿಂದೆ ಬ್ರಿಟೀಷರು, ಈ ಹರಪ್ಪ ನಾಗರಿಕತೆ ಬಗ್ಗೆ ಸಂಶೋಧನೆಗಳನ್ನು ಆರಂಭಿಸಿದ್ದರು. ಅಂದು ಶುರುವಾದ ಸಂಶೊಧನೆಗಳು ಇಂದಿಗೂ ವಿವಿಧ ದೇಶಗಳ ಪ್ರಖ್ಯಾತ ಪುರಾತತ್ವ ಸಂಶೋಧಕರು ಅನ್ವೇಷಣೆ ನಡೆಸುತಿದ್ದಾರೆ. ಈ ಸಂಶೋಧನೆಗಳಲ್ಲಿ ಸಿಂಧೂ ನದಿಬಯಲಿನ ಆಚೆಗೂ ಈ ನಾಗರೀಕತೆಯ ನೆಲೆಗಳು ಹರಡಿದ್ದವು ಎಂದು ತಿಳಿಯಲಾಯಿತು. ಅದೇ ರೀತಿ ಕಳೆದ ಒಂದು ದಶಕದಲ್ಲಿ ಒಮಾನಿನ ಒಳನಾಡಿನಲ್ಲಿ ಉತ್ಖನನ ನಡೆಸಿದ ಕೆಲಸ್ಥಳಗಳಲ್ಲಿ ದೊರೆತ ಪುರಾವೆಗಳಿಂದ ಅರಬ್ ರಾಷ್ಟ್ರವಾದ ಒಮಾನ್ ದೇಶದಲ್ಲೂ ಸಹ ಹರಪ್ಪ ನಾಗರೀಕತೆ ಹರಡಿತ್ತು ಎಂದು ಗೊತ್ತಾಗಿದೆ.

 ಒಮಾನ್ ದೇಶ (ಅಧಿಕೃತ ಹೆಸರು ಸುಲ್ತಾನೇಟ್ ಆಫ್ ಒಮಾನ್), ಇದು ಪಶ್ಚಿಮ ಏಷ್ಯಾದಲ್ಲಿನ ಅರಬ್  ರಾಷ್ಟ್ರ.  ಈ ದೇಶವು ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಯೆಮೆನ್ ನೊಂದಿಗೆ ಭೂ ಗಡಿಗಳನ್ನು ಹಂಚಿಕೊಂಡಿದೆ. ಉತ್ತರದಲ್ಲಿ ಪರ್ಶಿಯನ್ ಕೊಲ್ಲಿ, ಪೂರ್ವಕ್ಕೆ ಅರಬ್ಬಿ ಸಮುದ್ರ, ದಕ್ಷಿಣಕ್ಕೆ ಹಿಂದೂ ಮಹಾ ಸಾಗರವಿದೆ, ಇರಾನ್ ಮತ್ತು ಪಾಕಿಸ್ತಾನದೊಂದಿಗೆ ಸಮುದ್ರದ ಗಡಿಗಳನ್ನು ಹಂಚಿಕೊಂಡಿವೆ. 

 

ಭೌಗೋಳಿಕವಾಗಿ, ಒಮಾನ್ ರಾಷ್ಟ್ರವು ಭಾರತದಿಂದ ಅಷ್ಟೇನು ದೂರದಲ್ಲಿಲ್ಲ. ಸಮುದ್ರ ಮಾರ್ಗದ ಮುಖಾಂತರ ಗುಜರಾತಿನ ಬಂದರಿನಿಂದ ಒಮಾನಿನ ಮಸ್ಕತ್ ಪೋರ್ಟ್ ಗೆ ಕೇವಲ 1000 ನಾಟಿಕಲ್ ಮೈಲಿ ಮಾತ್ರ. ಹೀಗಾಗಿ ಹರಪ್ಪರು, ಕಡಲಾಚೆಗೂ ಇರುವ  ಅರಬ್ ರಾಷ್ಟ್ರಗಳಾದ ಒಮಾನ್, ಯುಏಇ ಮತ್ತಿತರ ದೇಶಗಳೊಂದಿಗೆ ವ್ಯಾವಹಾರಿಕ ಸಂಬಂಧಗಳನ್ನು ಹೊಂದಿರುವುದಕ್ಕೆ ಸಾಕಷ್ಟು ಸಾಧ್ಯತೆಗಳಿವೆ.

 

ಒಮಾನ್ ರಾಷ್ಟ್ರದ ಅಲ್ ವತ್ತಾಯ ಪ್ರದೇಶದಲ್ಲಿ ಕ್ರಿ.ಪೂ. 10000  ವರ್ಷಗಳ ಹಿಂದೆಯೇ ಜನವಸತಿಯಿತ್ತು ಎಂದು ಪುರಾತತ್ವ ಸಂಶೋಧನೆಗಳಿಂದ ತಿಳಿದು ಬಂದಿದೆ.  ಕ್ರಿ.ಪೂ 3000 ವರ್ಷಗಳ ಹಿಂದೆ ಗ್ರೀಕ್ ರೊಂದಿಗೆ ಎರಿಥ್ರಿಯನ್ ಸಮುದ್ರದಲ್ಲಿ ಕಡಲ ಮಾರ್ಗದ ಮೂಲಕ ವ್ಯಾವಹಾರಿಕ ಸಂಭಂದ ಕುರಿತು ಮಾಹಿತಿ ದೊರೆತಿದೆ. ಅಷ್ಟೇ ಅಲ್ಲದೆ ಕ್ರಿ.ಪೂ 3000 ವರ್ಷಗಳ ಹಿಂದೆಯೂ ಜನಜೀವನ ಇದ್ದ ಕೆಲ ಕುರುಹುಗಳು ಕಂಡಿವೆ. ಹೀಗೆಯೇ ಮುಂದುವರಿದ ಇತ್ತೀಚಿನ ಹಲವು ಸಂಶೋಧನೆಗಳು ಹರಪ್ಪ ನಾಗರೀಕತೆಯು ಇಲ್ಲಿಯವರೆಗೂ ಹರಡಿದ್ದ ಪ್ರಮುಖ  ಸುಳಿವನ್ನು ನೀಡಿದೆ. ಒಮಾನ್ ಮತ್ತು ಭಾರತದ ಮಧ್ಯೆಯಿದ್ದ ವ್ಯವಾಹಾರಿಕ, ಧಾರ್ಮಿಕ, ಕಲೆ, ಸಾಮಾಜಿಕ ಸಂಭಂಧಗಳ ಬಗ್ಗೆ ಈ ಪುರಾವೆಗಳು ಮತ್ತಷ್ಟು ಬೆಳಕು ಚೆಲ್ಲಲಿವೆ.

 

 ಸಿಂಧೂ ಬಯಲಿನಿಂದ ಹರಪ್ಪ ಮತ್ತು ಮೆಹೆಂದಾಜಾರೋ ನಗರದ ಜನರು ಸಮುದ್ರದಾಚೇಗೂ  ಸಂಪರ್ಕ ಸಾಧಿಸಿದ್ದರು ಎಂದರೆ ಅವರಲ್ಲಿದ್ದ ವ್ಯಾವಹಾರಿಕ ಜ್ಞಾನದ ಕುರಿತು ತಲೆದೂಗಲೇಬೇಕು. ಜತೆಗೆ ಒಮಾನಿ ನ ಪ್ರಜೆಗಳೊಂದಿಗೆ ವ್ಯಾವಹಾರಿಕ ಸಂಪರ್ಕವನ್ನು ಹೊಂದಿದ್ದರು ಎಂದರೆ, ಈ ಅರಬ್ ರಾಷ್ಟ್ರಗಳಲ್ಲಿ ಜನಜೀವನ ಅಸ್ತಿತ್ವದಲ್ಲಿತ್ತು ಎಂದು ವಿಷ್ಲೇಶಿಸಬಹುದು. ಹೀಗಾಗಿ ಆ ಹಿಂದಿನ ಜನಜೀವನ ಪದ್ದತಿಯ ಕುರಿತು ಸಹ ಅನ್ವೇಷಣೆ ನಡೆಯುತ್ತಿದೆ.

 

ಇದುವರೆಗೂ ಒಮಾನಿನ ಹಲೆವೆಡೆ ಹರಪ್ಪರ ಕಾಲದ ಹಲವಾರು ವಸ್ತುಗಳು ದೊರೆತಿವೆ.  ಪುರಾತತ್ತ್ವ ಶಾಸ್ತ್ರದ ಸ್ಥಳ ಎಂದು ಗುರುತಿಸಿರುವ ಉತ್ತರ ಅಲ್ ಬತಿನಾದಲ್ಲಿರುವ ದಹ್ವಾ, ಒಮಾನ್‌ನಲ್ಲಿ ಇದುವರೆಗೆ ಪತ್ತೆಯಾದ ಅತ್ಯಂತ ಹಳೆಯ ವಸಾಹತು. ಇದು ಹಜಾರ್ ಪರ್ವತ ಶ್ರೇಣಿಗಳ ಅಂಚಿನಲ್ಲಿರುವ ಸಹಮ್‌ನ ವಿಲಾಯತ್‌ನ ಪಶ್ಚಿಮಕ್ಕೆ 24 ಕಿಲೋಮೀಟರ್‌ಗಳಷ್ಟು ದೂರದಲ್ಲಿದೆ. ಈ ತಾಣವು ಕಂಚಿನ ಯುಗದ ನಾಗರೀಕತೆಯ ಉಮ್ ಅಲ್ ನಾರ್ ನ ನಾಗರೀಕತೆಗಿಂತ ಹಿಂದಿನದು (ಸುಮಾರು 2500 ರಿಂದ 2000 BC). ಈ ಸ್ಥಳದಲ್ಲಿನ ಪುರಾತತ್ತ್ವ ಶಾಸ್ತ್ರದ ಸಂಶೋಧನೆಗಳು ಕ್ರಿ,ಪೂ ಮೂರನೇ ಸಹಸ್ರಮಾನದಲ್ಲಿನ ಮಜಾನ್ ನಾಗರೀಕತೆ ಮತ್ತು ಹರಪ್ಪನ್ ಅಥವಾ  ಸಿಂಧೂ ಕಣಿವೆಯ ನಾಗರೀಕತೆಯ ನಿವಾಸಿಗಳ ನಡುವಿನ ವಾಣಿಜ್ಯ ಮತ್ತು ಸಾಂಸ್ಕೃತಿಕ ಸಂಬಂಧಗಳ ಕುರಿತು ಮಹತ್ವದ ಸಾಕ್ಷಿಗಳನ್ನು ಒದಗಿಸಿವೆ. ಈ ಸ್ಥಳವನ್ನು ಉತ್ಖನನ ಮಾಡಿದಾಗ ಇಲ್ಲಿ ಮಣ್ಣಿನ ಜಾಡಿ, ಮಣಿಗಳುಕಲ್ಲಿನ ಒಲೆಗಳು ಇತ್ಯಾದಿ ದೊರೆತಿವೆ, ಇವೆಲ್ಲವೂ ಹರಪ್ಪನ ನಾಗರೀಕತೆಯಲ್ಲಿ ಬಳಕೆಯಲ್ಲಿದ್ದ ವಸ್ತುಗಳು. ಈ ಜಾಡಿಗಳು ಸಿಂಧೂ ನದಿಯಾಚೆಗಿನ ಜನರಿಂದ ಇಲ್ಲಿಗೆ ಸರಬರಾಜಿಗೆ ಎಂದು ಅನ್ವೇಷಿಸಲಾಗಿದೆ.

 

ಸಾಲುಟ್ ಪ್ರದೇಶದಲ್ಲಿ ಹರಪ್ಪ ಮಾದರಿಯಲ್ಲಿ ಕುಂಬಾರಿಕೆ ನಡೆಸುತಿದ್ದ ಜಾಗ ಪತ್ತೆಯಾಗಿದೆ. ಇಲ್ಲಿ ಮಣ್ಣಿನ ಮಡಿಕೆಗಳು, ಜಾಡಿಗಳು, ಇತ್ಯಾದಿಗಳು ಪತ್ತೆಯಾಗಿವೆ. ಇವೆಲ್ಲವೂ ಜೇಡಿ ಮಣ್ಣಿನಿಂದ ಮಾಡಲಾಗಿದೆ.

 

ಇನ್ನೊಂದು ಪುರಾತತ್ತ್ವ ಶಾಸ್ತ್ರದ ಸ್ಥಳ ರಾಸ್ ಅಲ್ ಹದ್‌ನಲ್ಲಿ ಪತ್ತೆಯಾದ ಮಣ್ಣಿನ ಮಡಿಕೆ, ಜಾಡಿ, ಆಭರಣಗಳು ಮತ್ತು 5000 ವರ್ಷಗಳಷ್ಟು ಹಳೆಯದಾದ ಬುಟ್ಟಿಗಳು, ಹಗ್ಗಗಳು, ಬಲೆಗಳು ಮತ್ತು ಈ ಪ್ರದೇಶದ ಜನರು ತಮ್ಮ ದೈನಂದಿನ ಜೀವನೋಪಾಯಕ್ಕಾಗಿ ಬಳಸುತ್ತಿದ್ದ ಇತರೆ ವಸ್ತುಗಳನ್ನು ಈ ಪ್ರದೇಶದಲ್ಲಿ ಕಂಡುಹಿಡಿಯಲಾಗಿದೆ. ಇವುಗಳು ಕ್ರಿ.ಪೂ 3100 BC ಮತ್ತು 2400 BC ವರ್ಷಗಳ ನಡುವಿನ ಆರಂಭಿಕ ಕಂಚಿನ ಯುಗದ ಹಿಂದಿನವು ಎಂದು ಹೇಳಲಾಗುತ್ತದೆ.

 

ಇನ್ನು ಕಲ್ಹಟ್ ಮತ್ತು ದಿಲ್ಮುನ್ ಪ್ರದೇಶದಲ್ಲಿಯೂ ಸಹ ಹರಪ್ಪರ ಲಿಪಿಯ ನಾಣ್ಯಗಳು, ಜಾಡಿಗಳು ಅಲಂಕಾರಿಕ ಒಡವೆಗಳು ಇತ್ಯಾದಿ ದೊರೆತಿವೆ.  ಈ ಪ್ರದೇಶವೂ ಸಹ ಪ್ರಮುಖ ಪುರಾತತ್ತ್ವ ಶಾಸ್ತ್ರದ ಸ್ಥಳ ವಾಗಿದೆ.

 

ರಾಸ್ ಅಲ್ ಜಿಂಜ್ ಪ್ರದೇಶದಲ್ಲಿ, ಕೆಲವು ತಾಮ್ರದ ವಸ್ತುಗಳು ಪತ್ತೆಯಾಗಿವೆ. ಕೊಡಲಿ, ಈಟಿ ಗಳು ದೊರೆತಿವೆ, ಅಷ್ಟೇ ಅಲ್ಲದೆ ಬಾಚಣಿಕೆ ಕೂಡ ಪತ್ತೆಯಾಗಿದೆ. ಕೆಲವಸ್ತುಗಳ ಮೇಲೆ ಹರಪ್ಪರ ಲಿಪಿಗಳು ಇವೆ.

 

ಒಮಾನಿನಲ್ಲಿ ದೊರೆತ ಹರಪ್ಪನ್ ನಾಗರೀಕತೆಯ ಈ ವಸ್ತುಗಳು  ಆರಂಭಿಕ ಕಂಚಿನ ಯುಗದಲ್ಲಿ ಒಮಾನ್ ಮತ್ತು ಸಿಂಧ್ ನಡುವೆ ಚಾಲ್ತಿಯಲ್ಲಿದ್ದ ವ್ಯಾಪಾರ ಚಟುವಟಿಕೆಯ ವ್ಯಾಪ್ತಿಯನ್ನು ಸೂಚಿಸುತ್ತದೆ.  ಸಿಂಧ್‌ನಿಂದ ಏನನ್ನು ಆಮದು ಮಾಡಿಕೊಳ್ಳಲಾಗಿತ್ತು ಮತ್ತು ಈ ಜಾಡಿಗಳಲ್ಲಿ ಸಾಗಿಸಲಾದ ವಸ್ತುಗಳ ಸ್ವರೂಪವನ್ನು ಇನ್ನೂ ಗುರುತಿಸಲಾಗಿಲ್ಲ. ಮಣ್ಣಿನ ಜಾಡಿಗಳ ಕುರಿತು ಇನ್ನೂ ಹೆಚ್ಚಿನ ಸಂಶೋಧನೆ ನಡೆಯುತ್ತಿದೆ. ಹರಪ್ಪರ ಕಾಲದ ಜನರು ಭಾರತದಿಂದ ಒಮಾನಿಗೆ ಕೆಲ ಪ್ರಮುಖ ವಸ್ತುಗಳನ್ನು ಕಳುಹಿಸಲು ಈ ಜಾಡಿಗಳನ್ನು ಬಳಸಿದ್ದರು ಎನ್ನಲಾಗಿದೆ.

 

ಒಮಾನ್ ಮತ್ತು ವಾಯುವ್ಯ ಭಾರತದ ಸಿಂಧೂ ಬಯಲಿನ ಮಧ್ಯೆ ನೇರವಾದ ಯಾವುದೇ ರಸ್ತೆ ಮಾರ್ಗಗಳಿಲ್ಲ.  ಅರಬ್ಬಿ ಸಮುದ್ರ, ನಂತರ ಇಂದಿನ ಪಾಕಿಸ್ತಾನದ ಸಿಂಧ್ ಮತ್ತು ಪಂಜಾಬ್ ಪ್ರಾಂತ್ಯ ನಂತರ ದೊಡ್ಡದಾದ ಸಿಂಧೂ ನದಿ ಮತ್ತು ಕಣಿವೆಮಾರ್ಗಗಳು. ಇವೆಲ್ಲವೂಗಳ ಮಧ್ಯೆ ಸಾವಿರಾರು ಕಿ.ಮಿ.ಗಳ ಅಂತರವಿದೆ. ಇಂತಹ ಕಷ್ಟಕರವಾದ ಮಾರ್ಗವನ್ನು ಹೇಗೆ ತಲುಪಿರಬಹುದು ಎಂದು ವಿಷ್ಲೇಶಿಸಿದಾಗ, ಮೊದಲು ಸಿಂಧೂ ನದಿಯನ್ನು ದಾಟಲು ಮೊದಲಿಗೆ ಚಿಕ್ಕ ಚಿಕ್ಕ ದೋಣಿಗಳನ್ನು ಬಳಸಿ ನದಿಯನ್ನು ದಾಟಿ ಅಲ್ಲಿಂದ ರಸ್ತೆ ಮಾರ್ಗವಾಗಿ ಬಂದರನ್ನು ತಲುಪುತಿದ್ದರು. ಅಲ್ಲಿಂದ ಒಮಾನಿನ ಸಮುದ್ರದ ಬಂದರುಗಳನ್ನು ತಲುಪುತಿದ್ದರು ಎನ್ನಲಾಗಿದೆ.

 

ಭಾರತದ ಪಶ್ಚಿಮ ಕರಾವಳಿ ಮತ್ತು ಒಮಾನ್ ಸಮುದ್ರದ ಉದ್ದಕ್ಕೂ ಇರುವ ಪಟ್ಟಣಗಳು ಮತ್ತು ವ್ಯಾಪಾರ ಬಂದರುಗಳ ನಡುವೆ ಪ್ರಯಾಣಿಕರು, ವ್ಯಾಪಾರಸ್ಥರು ಸಂಚರಿಸುತಿದ್ದರು ಎನ್ನುವುದಿಕ್ಕೆ ಹಲವಾರು ಸಾಕ್ಷಾಧಾರಗಳು ದೊರೆತಿವೆ. ಕೊಲ್ಲಿ ರಾಷ್ಟ್ರಗಳ ಸಮುದ್ರತೀರಗಳು ಮತ್ತು ಭಾರತೀಯ ಕರಾವಳಿ ತೀರಗಳು  ಸಾವಿರಾರು ವರ್ಷಗಳಿಂದ  ಸಂಪರ್ಕದಲ್ಲಿದ್ದರಿಂದ ಇಂದಿನ ಒಮಾನ್‌ನ ಉತ್ತರ ಕರಾವಳಿಯ ಬಂದರುಗಳಿಗೆ ಮೊದಲು ಸರಕು ಸರಂಜಾಮುಗಳು ರವಾನೆಯಾಗುತಿದ್ದವು. ಅಲ್ಲಿಂದ ಮರುಭೂಮಿಯ ಒಳಭಾಗಕ್ಕೆ, ಹಾಗೆಯೇ ಮುಂದೆ ಆಫ್ರಿಕಾ ಮತ್ತು ಮೆಡಿಟರೇನಿಯನ್‌ಗೆ ಸಮುದ್ರಕ್ಕೆ ಸಾಮಗ್ರಿಗಳನ್ನು ಸರಬರಾಜು ಮಾಡಲಾಗುತಿದ್ದರಿಂದ ಅರಬ್ಬರ ನಾಡಿಗೆ ಒಮಾನಿನ ಬಂದರುಗಳು ಪ್ರವೇಶದ್ವಾರವಾಗಿದ್ದವು ಎನ್ನಬಹುದು.

 

ಐದಾರು ಸಾವಿರ ವರ್ಷಗಳ ಹಿಂದಿನಿಂದಲೂ ಇದ್ದ ಆ ವ್ಯಾವಹಾರಿಕ ಸಂಭಂಧಗಳು ಇಂದಿಗೂ ಅಷ್ಟೇ ಸೌಹಾರ್ದತೆಯಿಂದ ಮುಂದುವರಿದಿರುವುದು ವಿಶೇಷ.  ಅರಬ್ ರಾಷ್ಟ್ರಗಳಿಗೆ ವಿವಿಧ ದೇಶಗಳಿಂದ ಆಮದಾಗುವ ಸರಕು ಸರಂಜಾಮುಗಳಿಗೆ ಹೋಲಿಸಿದರೆ ಭಾರತ ದೇಶವು ಅಗ್ರಸ್ಥಾನದಲ್ಲಿದೆ.




ಬುಧವಾರ, ಆಗಸ್ಟ್ 2, 2023

ಜೋರ್ಡಾನ್‌ನಲ್ಲಿ ಪತ್ತೆಯಾದ 14400 ವರ್ಷಗಳ ಹಿಂದಿನ ಬ್ರೆಡ್‌(ರೊಟ್ಟಿ)

 




ನಮ್ಮ ಪೂರ್ವ ಇತಿಹಾಸವನ್ನು ಶಿಲಾಯುಗ, ನವ ಶಿಲಾಯುಗ, ಕಂಚಿನ ಯುಗ, ತಾಮ್ರಯುಗ, ಕಬ್ಬಿಣದ ಯುಗ ಹೀಗೆ ಸಾವಿರಾರು ವರ್ಷಗಳ ಇತಿಹಾಸವನ್ನು ವಿಂಗಡಿಸಲಾಗಿದೆ. ಯುಗ ಬದಲಾದಂತೆ ನಾಗರಿಕತೆ ಸಹ ಬೆಳೆದು ಸಾಕಷ್ಟು ಬದಲಾವಣೆಯನ್ನು ನಮ್ಮ ಪ್ರಪಂಚ ಕಂಡಿದೆ. ಇತಿಹಾಸಕಾರರ ಪ್ರಕಾರ ಮಾನವ ತನ್ನ ಧೈನಂಧಿನ ಆಹಾರಕ್ಕಾಗಿ ವಿವಿಧ ಮಾರ್ಗಗಳನ್ನು ಅಳವಡಿಸಿಕೊಂಡಿದ್ದ. ಬೇಟೆಯಾಡುವುದರಿಂದ ಹಿಡಿದು, ಬೆಳೆ ಬೆಳೆದು ಆಹಾರವನ್ನು ಬೇಯಿಸಿಕೊಳ್ಳುವವರೆಗೂ  ಸಾವಿರಾರು ವರ್ಷಗಳಲ್ಲಿ ಸಾಕಷ್ಟು ಬದಲಾವಣೆ ಮಾಡಿ ಕೊಂಡಿದ್ದ ಎಂದು ಸಂಶೋಧಕರು ಹೇಳುತ್ತಾರೆ. ಇದಕ್ಕೆಲ್ಲ ಪುರಾವೆಗಳು ಎಂದರೆ, ವಿವಿಧ ದೇಶಗಳಲ್ಲಿರುವ ಆರ್ಕಿಯಾಲಜಿ (ಪುರಾತತ್ವ) ಇಲಾಖೆಯವರ ಸಂಶೋಧನೆ. ನಿಖರವಾಗಿ ಇಷ್ಟು ವರ್ಷಗಳ ಹಳೆಯದು ಎಂದು ಹೇಳುವಷ್ಟರ ಮಟ್ಟಿಗೆ ಇತ್ತೀಚಿಗಿನ ತಂತ್ರಜ್ನಾನ ಈ ಕೆಲಸವನ್ನು ಸುಲಭಮಾಡಿದೆ.

 


"ಹೊಸ ಶಿಲಾಯುಗ"ಎಂದರೆ "ನಿಯೋಲಿಥಿಕ್" , ಮಧ್ಯಪ್ರಾಚ್ಯದ ಕೆಲವು ಭಾಗಗಳಲ್ಲಿ ಸುಮಾರು 11200 BCE ಯಿಂದ, ನಂತರ ಪ್ರಪಂಚದ ಇತರ ಭಾಗಗಳಲ್ಲಿ, 4500 ಮತ್ತು 2000 BCE ನಡುವೆ ಈ ಯುಗ ಕೊನೆಗೊಂಡಿತು. ಇದು ತಾಂತ್ರಿಕ ಮತ್ತು ಸಾಮಾಜಿಕ ಬೆಳವಣಿಗೆಗಳ ಅವಧಿಯಾಗಿದ್ದು, ಬೆಳೆ ಬೆಳೆಯುವುದು ಮತ್ತು ಪ್ರಾಣಿಗಳ ಪಳಗಿಸುವಿಕೆ ಯಂತಹ ಚಟುವಟಿಕೆಗಳು ಈ ಯುಗದಲ್ಲಿ ಪ್ರಾರಂಭವಾಯಿತು. ಈ ರಾಷ್ಟ್ರಗಳಲ್ಲಿ ಉತ್ಖನನ ಮಾಡಿದಾಗ ದೊರೆತ ಪುರಾವೆಗಳ ಆಧಾರದ ಮೇಲೆ ಆಹಾರಕ್ಕಾಗಿ ಕೃಷಿಯ ಅವಲಂಬನೆ ಹೊಸ ಶಿಲಾಯುಗದಲ್ಲಿ ಆರಂಭವಾಗಿತ್ತು ಎಂದು ಊಹಿಸಲಾಗಿತ್ತು.

 










ಜೋರ್ಡಾನ್ ರಾಷ್ಟ್ರ, ಇಸ್ರೇಲ್, ಈಜಿಪ್ಟ್ ಮುಂತಾದ ರಾಷ್ಟ್ರಗಳಲ್ಲಿ ಸಹಸ್ರಾರು ವರ್ಷಗಳ ಹಿಂದಿನ ಜೀವನ ಪದ್ದತಿ, ಮಾನವನ ನಾಗರಿಕತೆ ಬೆಳವಣಿಗೆ ಕುರಿತು ಇಂದಿಗೂ ಉತ್ಕನನ ನಡೆಯುತ್ತಿದೆ. ಇತಿಹಾಸಕಾರರಿಗೆ, ಪುರಾತತ್ವ ಸಂಶೋಧಕರಿಗೆ ದೊರೆಯುವ ಈ ಪುರಾವೆಗಳು   ಅತ್ಯಮೂಲ್ಯ. ಪ್ರವಾಹ, ಅತಿವೃಷ್ಟಿ, ಅನಾವೃಷ್ಟಿ ಇತ್ಯಾದಿ ಸಮಯದಲ್ಲಿ ಹಲವಾರು ನಾಗರಿಕತೆ ಅಥವಾ ಸಮುದಾಯಗಳು ನಶಿಸಿಹೋಗಿರುವುದನ್ನು ಸಂಶೋಧಕರು ಪತ್ತೆ ಹಚ್ಚಿದ್ದಾರೆ. ಭೂಮಿಯಲ್ಲಿ ಅದೆಷ್ಟು ಸತ್ಯಗಳು ಹುದುಗಿವೆಯೋ ಗೊತ್ತಿಲ್ಲ. ಆದರೆ ಭೂಮಿಯನ್ನು ಬಗೆದಷ್ಟು ಸತ್ಯಗಳು ಹೊರಬರುತ್ತಿರುವುದನ್ನ ನಾವು ಇಂದಿಗೂ ಕಾಣುತಿದ್ದೇವೆ.

 


ಜೋರ್ಡಾನ್ ರಾಷ್ಟ್ರ  ಪಶ್ಚಿಮ ಏಷ್ಯಾದ ಅರಬ್ ಪ್ರದೇಶದಲ್ಲಿನ ಒಂದು ರಾಷ್ಟ್ರ. ಜೋರ್ಡಾನಿನ ಉತ್ತರಕ್ಕೆ ಸಿರಿಯಾ, ಈಶಾನ್ಯಕ್ಕೆ ಇರಾಕ್, ಪಶ್ಚಿಮದಲ್ಲಿ ಇಸ್ರೇಲ್ ಮತ್ತು ವೆಸ್ಟ್ ಬ್ಯಾಂಕ್ ಹಾಗೂ ದಕ್ಷಿಣ ಮತ್ತು ಪೂರ್ವದಲ್ಲಿ ಸೌದಿ ಅರೇಬಿಯಾ ರಾಷ್ಟ್ರಗಳಿವೆ.  ಮಧ್ಯ ಪ್ರಾಚ್ಯದ ಈ ರಾಷ್ಟ್ರವು ಸೇರಿದಂತೆ ಇಸ್ರೇಲ್, ಈಜಿಪ್ಟ್ ಮುಂತಾದ ರಾಷ್ಟ್ರಗಳಲ್ಲಿ ಶಿಲಾಯುಗದ ಕಾಲದ ಅವಶೇಷಗಳು ಪತ್ತೆಯಾಗುತ್ತಲೇ ಇವೆ. ಹತ್ತಾರು ಸಾವಿರ ವರ್ಷಗಳ ಹಿಂದಿನ ಇತಿಹಾಸವನ್ನು ಈ ಪುರಾವೆಗಳು ಒದಗಿಸುತ್ತಿವೆ. ಜನ ಜೀವನವಿಧಾನಗಳಲ್ಲಿ ಉಂಟಾಗುತ್ತಿದ್ದ ಸುಧಾರಣೆಗಳ ಪರಿಚಯ ಈ ಎಲ್ಲ ನೆಲೆಗಳಲ್ಲೂ ನಡೆಸಿದ ಉತ್ಖನನಗಳಿಂದ ದೊರಕುತ್ತದೆ. ಈ ಪ್ರದೇಶದಲ್ಲಿ ಪ್ರಾರಂಭಕಾಲದಿಂದಲೂ ಆದಿ ಮಾನವ ವಾಸಿಸುತ್ತಿದ್ದನೆಂಬುದಕ್ಕೆ ಸಾಕಷ್ಟು ಪುರಾವೆಗಳಿವೆ.

 

ಉತ್ತರ ಅಫ್ರಿಕದಲ್ಲಿ ರೂಢಿಯಲ್ಲಿದ್ದ ಪೂರ್ವಶಿಲಾಯುಗ ಸಂಸ್ಕಂತಿಗಳು ಈಜಿಪ್ಟಿನ ಮಾರ್ಗವಾಗಿ ಜೋರ್ಡನ್ ಪ್ರದೇಶವನ್ನು ಪ್ರವೇಶಿಸಿದ್ದವು. ಇಲ್ಲಿಯ ಅಲ್-ಉಬೇದಿಯ ಎಂಬಲ್ಲಿ ಆಸ್ಟ್ರಲೊ-ಪಿತಿಕಲ್ ವರ್ಗಕ್ಕೆ ಸೇರಿದ ಆದಿಮಾನವನ ದೇಹದ ಪಳೆಯುಳಿಕೆಗಳೂ ಆಗಿನ ಕಲ್ಲಿನಾಯುಧಗಳೂ ದೊರಕಿವೆ. ಜಾರ್ಡನಿನ ಪೂರ್ವ ಮತ್ತು ದಕ್ಷಿಣ ಭಾಗಗಳಲ್ಲಿರುವ ಮರಳ್ಗಾಡು ಪ್ರದೇಶದಲ್ಲಿ ಪೂರ್ವಶಿಲಾಯುಗದ ಬೇಟೆಗಾರರು ಅಲೆದಾಡುತ್ತಿದ್ದುದಕ್ಕೆ ಆಧಾರಗಳಿವೆ.

 


ಮಧ್ಯಪ್ರಾಚ್ಯದ ಪಶ್ಚಿಮ ಏಶಿಯಾದ ರಾಷ್ಟ್ರಗಳಲ್ಲಿ ಆಗಿನ ಮಧ್ಯ ಶಿಲಾಯುಗದ ಬೇಟೆಗಾರರು ಬದಲಾಗುತ್ತಿದ್ದ ಹವಮಾನ ಮತ್ತು ವಾಯುಗುಣಗಳಿಂದಾಗಿ ಅಲೆಮಾರಿ ಜೀವನ ಮತ್ತು ಆಹಾರಸಂಗ್ರಹದ ಹಂತದಿಂದ ಮುಂದುವರಿದು, ಒಂದೆಡೆಯಲ್ಲಿ ನೆಲೆ ನಿಂತು ಆಹಾರ ಉತ್ಪಾದಿಸುವ ಹಂತವನ್ನು ಕ್ರಮೇಣ ತಲುಪಿದರೆಂದು ಗ್ರಾಮೀಣ ಜೀವನವನ್ನು ರೂಢಿಸಿಕೊಂಡರೆಂದೂ ಈ ಶೋಧನೆಗಳಿಂದ ತಿಳಿದುಬರುತ್ತದೆ. ಗುಡಿಸಲು ಮಾದರಿಯ ಕಲ್ಲಿನ ರಕ್ಷಣಾ ಕೋಟೆಗಳನ್ನು ನಿರ್ಮಿಸಿಕೊಂಡು ಅದರಲ್ಲಿ ವಾಸಿಸುತಿದ್ದರು ಮತ್ತು ಆಹಾರ ಸಂರಕ್ಷಣೆಯನ್ನೂ ಸಹ ಮಾಡಿಕೊಳ್ಳುತಿದ್ದರು. ಮೊದಲಿಗೆ ಕಲ್ಲಿನಲ್ಲಿ ಕೊರೆದು ನಿರ್ಮಿಸಿದ ಪಾತ್ರೆಗಳನ್ನು ಬಳಸಿದ ಪುರಾವೆಗಳು ದೊರೆತಿವೆ. ಕಾಲಕ್ರಮೇಣ  ಗ್ರಾಮೀಣ ಜೀವನದಲ್ಲಿ ಹಲವು ಸುಧಾರಣೆಗಳಾದುವು. ಜೇಡಿಮಣ್ಣಿನಲ್ಲಿ ಮಾಡಿ ಸುಟ್ಟ ಮಡಕೆಗಳ ಉಪಯೋಗ ಪ್ರಾರಂಭವಾಯಿತು. ಕೃಷಿ ಚಟುವಟಿಕೆಗಳು ಕ್ರಿ.ಪೂ 9000 ವರ್ಷಗಳ ಹಿಂದೆ ಪ್ರಾರಂಭವಾಗಿರಬಹುದು ಎಂದು ಅಂದಾಜಿಸಲಾಗಿತ್ತು.

 

ಆದರೆ ಇತ್ತೀಚಿಗೆ ಈಶಾನ್ಯ ಜೋರ್ಡಾನ್‌ನ ಕಪ್ಪು ಮರುಭೂಮಿಯಲ್ಲಿ ಪುರಾತತ್ತ್ವಜ್ಞರು ಸಂಶೋಧನೆಗಾಗಿ ಉತ್ಖನನ ಮಾಡಿದಾಗ ದೊರೆತ ಬ್ರೆಡ್‌ನ (ರೊಟ್ಟಿ) ಪುರಾವೆ ಇದುವರೆವಿಗೂ ಬರೆದಿದ್ದ ಇತಿಹಾಸವನ್ನು ತಿದ್ದಬೇಕಾಗಿದೆ ಎನ್ನಬಹುದು. ಈ ಸಂಶೊಧನೆಯಲ್ಲಿ 14400 ವರ್ಷಗಳ ಹಿಂದೆ ಬೇಯಿಸಿದ ರೊಟ್ಟಿಯ ಸುಟ್ಟ ಅವಶೇಷಗಳನ್ನು ಕಂಡುಹಿಡಿಯಲಾಗಿದೆ, ಅಂದರೆ ಕೃಷಿಯ ಆಗಮನಕ್ಕೆ 4000 ವರ್ಷಗಳ ಹಿಂದೆ ಈ ಭಾಗದಲ್ಲಿ ಜನರು ರೊಟ್ಟಿಯನ್ನ ಬೇಯಿಸಿಕೊಂಡು ತಿನ್ನುತಿದ್ದರು ಎನ್ನುವುದು ವಿಶೇಷ.  ರೊಟ್ಟಿಯನ್ನು ಬೇಯಿಸಿಕೊಂಡು ತಿನ್ನುವ ಮಟ್ಟಿಗಿನ ಬುದ್ದಿಶಕ್ತಿ ಇರಬೇಕಾದರೆ, ಧಾನ್ಯಬೆಳೆಯುವ ಕಲೆಯೂ ಗೊತ್ತಿರಬೇಕಲ್ಲವೇ?

 


ಜೋರ್ಡಾನಿನ ಶುಬಾಯ್ಕಾ 1 ಎಂದು ಕರೆಯಲ್ಪಡುವ ನ್ಯಾಟುಫಿಯನ್ ಬೇಟೆಗಾರ-ಸಂಗ್ರಾಹಕ ಸೈಟ್‌ನಲ್ಲಿ ಎರಡು ಬೆಂಕಿಗೂಡುಗಳಲ್ಲಿ 24 (ಇಪ್ಪತ್ತನಾಲ್ಕು) ಪಿಜ್ಜಾ ಬ್ರೆಡ್ ಮಾದರಿಯ ರೊಟ್ಟಿ ಗಳು ದೊರೆತಿವೆ. ಕೇವಲ ಒಂದು ರೊಟ್ಟಿ ಸಿಕ್ಕಿದ್ದರೆ ಅದನ್ನು ನಿರ್ಲಕ್ಷಿಸಬಹುದಿತ್ತು ಆದರೆ, 24 ರೊಟ್ಟಿಗಳು, ಅದನ್ನು ಸುಡುವ ಒಲೆ, ಹಿಟ್ಟನ್ನು ಮಾಡಲು ಉಪಯೋಗಿಸುವ ರುಬ್ಬುವ ಕಲ್ಲುಗಳು ಇತ್ಯಾದಿ ದೊರಕಿವೆ. ಅಲ್ಲಿ ದೊರೆತ ರೊಟ್ಟಿಯನ್ನು ಪರೀಕ್ಷೀಸಿದಾಗ ಗೋಧಿಯಂತಹ ಕಾಳುಗಳನ್ನು ಉಪಯೋಗಿಸಿ ಬೀಸುವ ಕಲ್ಲಿನಲ್ಲಿ ಹಿಟ್ಟನ್ನು ಮಾಡಲಾಗಿದೆ, ಅದಕ್ಕೆ ನೀರನ್ನು ಬೆರೆಸಿ, ಚಪಾತಿ ಮಾದರಿ ಹಿಟ್ಟಿನ ಉಂಡೆಗಳಂತೆ ಮಾಡಿ ಕೈಯಿಂದ ಅದನ್ನು ತಟ್ಟಿ ನಂತರ ಅದನ್ನು ತೆರೆದ ಬೆಂಕಿಯಲ್ಲಿ ಬೇಯಿಸಲಾಗಿದೆ.

 


ಸಾಮಾನ್ಯವಾಗಿ ಆಗಿನಕಾಲದಲ್ಲಿ, ಬೇಟೆಯಾಡಿ ಆಹಾರ ಸೇವಿಸುತಿದ್ದರಿಂದ ಏಕದಳ ಆಧಾರಿತ ಆಹಾರ ಪದಾರ್ಥಗಳನ್ನು ತಯಾರಿಸುವುದು ಕಷ್ಟ ಎಂದು ಆಗಿನ ಜನರಿಗೆ ತಿಳಿದಿತ್ತು ಎಂದು ಕಾಣುತ್ತದೆ. ಹೊಸ ಆಹಾರ, ರುಚಿ ಎಲ್ಲವನ್ನು ಮನಗಂಡು ಆಹಾರ ಪದ್ದತಿ ಬದಲಾಗಿರುವ ಸಂಭವವೂ ಇದೆ. ಜೋರ್ಡಾನಿನಲ್ಲಿ ದೊರೆತಿರುವ ಅವಶೇಷಗಳ ಪ್ರಕಾರ, ಅಥಿತಿಗಳು ಕುಳಿತುಕೊಳ್ಳುವ ಆಸನ, ಅಥಿತಿಗಳಿಗೆ ಆತಿಥ್ಯ ನೀಡಲು  ಈ ಬ್ರೆಡ್ ಅನ್ನು ತಯಾರಿಸುತಿದ್ದುದು ಇತ್ಯಾದಿಗಳನ್ನು ನೋಡಿದರೆ, ಬಹುಷಃ ಆ ಸಮಯದಲ್ಲಿಯೇ ಅಲ್ಲೊಂದು ನಾಗರೀಕತೆ ಬೆಳೆದಿರುವ ಸಂಭವವಿದೆ. ಬಹುಶಃ ಆಗಿನ ಕಾಲದ ರೊಟ್ಟಿತಯಾರಿಕೆಯು ನವಶಿಲಾಯುಗದ ಕೃಷಿ ಕ್ರಾಂತಿಗೆ ಕೊಡುಗೆ ನೀಡಿರಬಹುದು.  ಈ ಹಿಂದೆ, ಬ್ರೆಡ್ ಉತ್ಪಾದನೆಯ ಪುರಾವೆಗಳು ಟರ್ಕಿ ಮತ್ತು ನೆದರ್ಲ್ಯಾಂಡ್ಸ್ನಲ್ಲಿ ನವಶಿಲಾಯುಗದ ಕೊನೆಯ ಸ್ಥಳಗಳಲ್ಲಿ ಕಂಡುಬಂದಿವೆ. ಜೋರ್ಡಾನ್‌ನಲ್ಲಿ ಸುಟ್ಟ ಅವಶೇಷಗಳು ಬ್ರೆಡ್ ಉತ್ಪಾದನೆಯು ಕೃಷಿಗೆ ಮುಂಚಿತವಾಗಿರುವುದಕ್ಕೆ ಮೊದಲ ನೇರ ಸಾಕ್ಷಿಯಾಗಿದೆ.

 

ಜೋರ್ಡಾನಿನ ಈ ಸ್ಥಳದಲ್ಲಿ ಸೂಕ್ಷ್ಮವಾಗಿ ಅವಲೋಕಿಸಿ, ವಿಶ್ಲೇಷಣೆ ಮಾಡಿದಾಗ, ಆಗಿನ ಸ್ಥಳೀಯರು ಸುಮಾರು 95 ವಿವಿಧ ಸಸ್ಯಗಳನ್ನು ಬಳಸಿರುವುದನ್ನು ಕಂಡು ಕೊಳ್ಳಲಾಗಿದೆ. ಹೆಚ್ಚಾಗಿ ಖಾದ್ಯ ಬೇರುಗಳು, ಚಿಗುರುಗಳು, ಬಾರ್ಲಿ, ಓಟ್ಸ್ ಮತ್ತು ಗೋಧಿಯನ್ನು ಸಹ ದೊರಕಿವೆ. ಆದಾಗ್ಯೂ, ಈ ಪ್ರಾಚೀನ ಜನರು ಉದ್ದೇಶಪೂರ್ವಕವಾಗಿ ಧಾನ್ಯಗಳನ್ನು ಬೆಳೆದಿದ್ದಾರೋ ಅಥವಾ ಸಂಗ್ರಹಿಸಿದ್ದರೋ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಇನ್ನು ಈ ರೊಟ್ಟಿಯ ಮಾಡುವ ವಿಧಾನವನ್ನು ಅವರು 14000 ವರ್ಷಗಳ ಹಿಂದೆಯೇ ಕಲಿತು ರೂಡಿಸಿಕೊಂಡಿದ್ದರೆ, ಕೃಷಿ ಚಟುವಟಿಕೆ ಖಂಡಿತವಾಗಿ ಅದಕ್ಕಿಂತ ಹಿಂದೆಯೇ ಇರುವ ಸಾಧ್ಯತೆಯನ್ನು ಅಲ್ಲಗೆಳೆಯಲಾಗದು. ಇಸ್ರೇಲ್ ನಲ್ಲಿ 23000 ವರ್ಷಗಳ ಹಿಂದೆಯೇ ಕೃಷಿ ಚಟುವಟಿಕೆ ಆರಂಭವಾಗಿತ್ತು ಎಂದು ಇನ್ನೊಂದು ಸಂಶೋಧನೆ ಹೇಳುತ್ತದೆ. ವಿಜ್ನಾನ ಮುಂದುವರೆದಂತೆ ಸಂಶೋಧನೆಯ ತೀವ್ರತೆಯೂ ಹೆಚ್ಚಾಗುತ್ತಿದೆ. ಹೊಸ ಹೊಸ ವಿಚಾರಗಳು ಜಗತ್ತಿಗೆ ತಿಳಿಯುತ್ತಿವೆ. ಮುಂಬರುವ ಕಾಲದಲ್ಲಿ ಇನ್ನೂ ಹೆಚ್ಚಿನ ಮಾಹಿತಿ ಪ್ರಪಂಚಕ್ಕೆ ಸಿಕ್ಕರೂ ಸಿಗಬಹುದು.

ಸಾವಿರಾರು ವರ್ಷಗಳ ಹಿಂದೆ ಕಂಡು ಹಿಡಿದ ಈ ಪ್ರಕ್ರಿಯೆಯನ್ನು ನಾವು ಇಂದಿನ ಆಧುನಿಕ ಯುಗದಲ್ಲೂ ಅದೇ ರೀತಿ ಬಳಸುತಿದ್ದೇವೆ. ನಗರದಲ್ಲಿ ರೊಟ್ಟಿ ಮಾಡುವ ವಿಧಾನ ಬದಲಾಗಿರಬಹುದುಆದರೆ ಗ್ರಾಮೀಣ ಭಾಗದಲ್ಲಿ ಅದರಲ್ಲೂ ಅಫ್ಘನಿಸ್ತಾನಪಾಕಿಸ್ತಾನಉತ್ತರ ಭಾರತದ ಹಳ್ಳಿಗಳ ಕಡೆ ಇನ್ನೂ ಹಳೆಯ ಪದ್ದತಿಯನ್ನು ಅಳವಡಿಸಿಕೊಂಡಿರುವುದನ್ನು ನಾವು ಗಮನಿಸಬಹುದು.

 

ಬರಹ:- ಪಿ.ಎಸ್.ರಂಗನಾಥ

ಮಸ್ಕತ್ - ಒಮಾನ್ ರಾಷ್ಟ್ರ


 

 


Click below headings

Articles (28) oman (26) Story (23) Poems (14) History (11) Site Seeing (9) Tour (9) ಸುದ್ದಿ ಸ್ವಾರಸ್ಯ (7) ಹಾಸ್ಯ (7) Politics (6) Health Tips (2)