ಶನಿವಾರ, ಫೆಬ್ರವರಿ 28, 2015

"ದೇವರು ಅಷ್ಟೊಂದು ಕ್ರೂರಿನಾ?" ಸಣ್ಣ ಕಥೆ ಯನ್ನು ಕುರಿತು


"ದೇವರು ಅಷ್ಟೊಂದು ಕ್ರೂರಿನಾ?" ಈ ಸಣ್ಣ ಕಥೆ ಯಲ್ಲಿ ಸಮಾಜ ಮತ್ತು ಬದುಕಿನ ಹಲವಾರು ಮುಖ ಗಳನ್ನು ಕಾಣುವ ಪ್ರಯತ್ನ ಇಲ್ಲಿ ಮಾಡಬಹುದು. ಇಲ್ಲಿ ದೇವರ ಅಸ್ತಿತ್ವದ ಪ್ರಶ್ನೆ ಸಹ ಉಧ್ಭವ ವಾಗುತ್ತೆ. ಜೀವನಾಧಾರಕ್ಕೆ ವ್ಯವಸಾಯವನ್ನು ಅವಲಂಬಿಸಿರುವ ರೈತರ ಬದುಕಿನ ಅನಾವರಣ ಸಹ ಆಗುತ್ತೆ. ಹಲವಾರು ವರ್ಷಗಳಿಂದ ದೇಶ ವನ್ನು ಕಾಡುತ್ತಿರುವ ರೈತರ ಆತ್ಮಹತ್ಯೆ ಯಂತಹ ಗಂಭೀರ ಸಮಸ್ಯೆ ಸಹ ಈ ಕಥೆ ಸ್ಪರ್ಶಿಸುತ್ತೆ ಅನ್ನುವುದು ವಿಶೇಷ. ಮುಗ್ಧ ಮನಸ್ಸಿನ ಮಗುವಿನ ಪ್ರಶ್ನೆ ಹಲವಾರು ವಿಷಯಗಳ ಚಿಂತನೆಗೆ ಕಾರಣ ಸಹ ಆಗುತ್ತೆ. 


ಹಳ್ಳಿಯ ರೈತಾಪಿ  ಜನರು ಎದುರಿಸುವ ಸಮಸ್ಯೆ ಯ ಒಂದು ಸಣ್ಣ ಎಳೆ ಸಾಕು ಅಲ್ಲಿರುವ ಸಮಸ್ಯೆ ಗಳನ್ನು ಅರ್ಥ ಮಾಡಿಕೊಳ್ಳುವುದಕ್ಕೆ. ಸರ್ಕಾರಗಳು ಏನೆಲ್ಲ ಯೋಜನೆಗಳನ್ನು ತಂದರೂ ಸಹ ಸಂಪೂರ್ಣವಾಗಿ ಸಮಸ್ಯೆಗಳನ್ನು ಬಗೆಹರಿಸಲು, ಎಲ್ಲರನ್ನು ಸಂತೋಷವಾಗಿಡಲು ಸರ್ಕಾರ, ಜನಸಾಮಾನ್ಯ, ಹಾಗು ದೇವರಿಂದಾಗಲಿ ಸಾಧ್ಯವಿಲ್ಲವೇನು ಎನ್ನುವುದು ಎನ್ನುವುದು ಕಟು ವಾಸ್ತವ.

ನಮ್ಮ ಸಮಾಜದಲ್ಲಿ  "ಕ್ಷಮೆ, ಕರುಣೆ, ಸ್ಪಂದನೆ, ತ್ಯಾಗ" ಮನುಷ್ಯನಿಗೆ ಸಂಭಂಧಿಸಿದ ಇನ್ನು ಮುಂತಾದವುಗಳ ಬಗ್ಗೆ ಬಲು ಬೆಲೆಯಿದೆ, ಆದರೆ ಪೂರ್ವ ಜನ್ಮದ ಕರ್ಮ ಫಲ ವಿಷಯದ ಕುರಿತು ಕಳೆದ ಜನ್ಮದ ಪಾಪದ ಫಲದ ವನ್ನು  "ಈ ಒಂದು ಸಂಪೂರ್ಣ ವಾಸ್ತವಿಕ ಜೀವನ" ದಲ್ಲಿ ಅನುಭವಿಸಬೇಕು ಎನ್ನುವುದು ಸಹೃದಯ ಹೊಂದಿದ ನಾಗರೀಕ ಸಮಾಜದ ಸಂಭಾವಿತರಿಗೂ ಸಹ ಅಯ್ಯೊ ಎನ್ನಿಸದೆ ಇರದು ಆದರೆ ದೇವರಿಗೆ ಇದು ಎಷ್ಟು ಸರಿ ಎನ್ನಿಸುತ್ತೆ, ಕ್ಷಮೆ ಅನ್ನುವುದಕ್ಕೆ ಬೆಲೆ ಇಲ್ಲವೆ?  ಈ ಎಲ್ಲ ವಿಷಯಗಳು ನಮ್ಮನ್ನು  ಚಿಂತನೆಗೆ ಹಚ್ಚಿಸುವುದಕ್ಕೆ ಕಾರಣವಾಗುತ್ತವೆ.

ಒಂದು ಕುಟುಂಬ, ಒಂದು ಊರು, ಹಾಗೆಯೆ ಸಾವಿರಾರು ಕುಟುಂಬ ಮತ್ತು ಸಾವಿರಾರು ಊರು ವಲಸೆ ಹೋದರೆ "ಹಳ್ಳಿಗಳೇ ಈ ದೇಶದ ಬೆನ್ನೆಲುಬು" ಎನ್ನುವ ವಾಸ್ತವ ಪರಿಕಲ್ಪನೆಗೆ ಕೊಡಲಿಪೆಟ್ಟು ಬಿಳುವುದಿಲ್ಲವೆ. ಸ್ಥಿತಿವಂತರ ಮಕ್ಕಳು ಅದು ಹಳ್ಳಿ, ಪಟ್ಟಣ, ತಾಲೂಕು, ಜಿಲ್ಲೆ, ನಗರ, ಹೀಗೆ ಯಾವುದೇ ಪ್ರದೇಶದ ಮಕ್ಕಳು ಓದಿ ವಿದ್ಯಾವಂತರಾಗಿ ದೇಶ ವಿದೇಶಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡುತಿದ್ದರೆ, ಬಡ ರೈತರ ಮಕ್ಕಳ ಗತಿ ಯೇನು? ತಿನ್ನುವುದಕ್ಕೆ ಅನ್ನವೆಲ್ಲಿಂದ ಬರಬೇಕು?

ಸ್ಪಂದಿಸುವ ಸಮಾಜ, ತ್ಯಾಗ ಮನೋಭಾವ, ಹಂಚಿಕೊಂಡು ತಿನ್ನುವ ಸಹೃದಯ ನಾವೆಲ್ಲಿಯವರೆವಿಗೂ ಕಲಿಯುವುದಿಲ್ಲವೋ ಅಲ್ಲಿಯವರೆಗೆ ಊರು ಇರಲಿ, ನಮ್ಮ ಅಕ್ಕ ಪಕ್ಕದ ಕುಟುಂಬಗಳು ಸಹ ಉದ್ದಾರ ವಾಗದೆ ಇರದು. ಈ ಸಣ್ಣ ಕಥೆ ನಮ್ಮಲ್ಲಿ ಹಲವಾರು ಯೋಚನೆಗಳನ್ನು ಹುಟ್ಟು ಹಾಕುತ್ತೆ, ನಾವು ಯೋಚಿಸುವ ದಿಕ್ಕನ್ನು, ನಮ್ಮ ನಂಬಿಕೆಯನ್ನು, ನಮ್ಮ ಸ್ವಾರ್ಥವನ್ನು ಹಾಗು ನಮ್ಮ ವೈಚಾರಿಕ ಸಿದ್ಧಾಂತ ವನ್ನು ಸಹ ಬದಲಾಯಿಸಬಹುದೇನೋ?


ಶುಕ್ರವಾರ, ಫೆಬ್ರವರಿ 27, 2015

ದೇವರು ಅಷ್ಟೊಂದು ಕ್ರೂರಿನಾ?

ಆಟ ಆಡಿ ತಡವಾಗಿ ಮನೆಗೆ ಬಂದ ಮಗನನ್ನು ಕಂಡು, ಇಷ್ಟೊತ್ತು ಎಲ್ಲಿ ಹೋಗಿದ್ದೆ ?

ಅಮ್ಮ, ಪಕ್ಕದಮನೆಗೆ ಬಂದಿದ್ದ ಆ ಹುಡುಗನ ಜೊತೆ ಆಟ ಆಡೋಕೆ ಹೋಗಿದ್ದೆ. 

ಓಹ್ ಹೌದಾ,  ನಿಮ್ಮಪ್ಪ ಬರೋ ತನಕ ಸ್ವಲ್ಪ ಹೊತ್ತು ಕಾಯ್ತ ಇರು. ಇನ್ನು ಅಡುಗೆ ಆಗಿಲ್ಲ.

ನೀನು ಯಾವಗಲು ಹೀಗೆ ಯಾಕೆ ಮಾಡ್ತೀಯ. ಮನೇಲಿ ಏನ್ ಸಾಮಾನು ಇರೋದಿಲ್ಲೆನು? ಅಪ್ಪ ತಂದ್ರೆ ಮಾತ್ರ ಅಡುಗೆ ಮಾಡೋದಾ?

ಹೌದಪ್ಪ, ಮನೆ ನಲ್ಲಿ ಯಾವ ಸಾಮಾನು ಇಲ್ಲ, ಈ ವರ್ಷ ಸಹ ಮಳೆ ಕೈ ಕೊಡ್ತು. ಬೆಳೆ ಬರಲಿಲ್ಲ. ನಿಮ್ಮಪ್ಪ ಏನಾದರು ಕೂಲಿ ಮಾಡಿಕೊಂಡು ಬಂದ್ರೆ, ಅಂಗಡಿಯಿಂದ ಸಾಮಾನು ತಂದು ಅಡುಗೆ ಮಾಡ್ತೀನಿ.

ಅಂದ್ರೆ, ಈ ಊರಿನಲ್ಲಿ ತುಂಬ ಜನರ ಮನೆಯಲ್ಲಿ ಇದೇ ಸಮಸ್ಯೆನ?

ಹೌದು, ಊರಲ್ಲಿ ಮಳೆ ಬೆಳೆ ಆಗದಿದ್ರೆ, ಇದೇ ಸಮಸ್ಯೆ ಎಲ್ಲರ ಮನೆ ಯಲ್ಲಿ ಇರುತ್ತೆ.

ಮತ್ತೆ ದೇವರು ಯಾಕಮ್ಮ ಸಹಾಯ ಮಾಡಲ್ಲ, ಜನರ ಕಷ್ಟ ನಿವಾರಿಸೋಕೆ ದೇವರು ಬೇರೆ ಬೇರೆ ರೀತಿಯಲ್ಲಿ ಸಹಾಯ ಮಾಡ್ತಾರೆ ಅಂತ ಕಥೆ ಗಳನ್ನು ಹೇಳ್ತೀಯಾ. ನಮ್ಮ ಊರಿನಲ್ಲಿ ಕೆರೆ ಬಾವಿಗಳಲ್ಲಿ ನೀರಿಲ್ಲ, ನದಿಗಳಿಲ್ಲ. ಯಾಕಮ್ಮ ಹಿಂಗೆ. ಪಕ್ಕದ ಮನೆಗೆ ಬಂದಿದಾನಲ್ಲ ಆ ಹುಡುಗನ, ಊರು ತುಂಬಾ ದೂರ ಅಂತೆ, ನಮ್ಮ ದೊಡ್ಡಮ್ಮನ ಊರು ಇದೆಯಲ್ಲ ಹಾಗೆ ಇದೆ ಅಂತೆ ಅವನ ಊರು, ಅಲ್ಲಿ ನದಿ, ಬೆಟ್ಟ, ಜಲಪಾತ, ಕಾಡು, ಅಡವಿ ಪ್ರಾಣಿಗಳು, ಇನ್ನು ಏನೇನೋ ಇದೆಯಂತೆ., ಕಾಡಿಗೆ ಹೋದರೆ, ತಿನ್ನೋದಿಕ್ಕೆ ಎಷ್ಟೊಂದು ರೀತಿಯ ಹಣ್ಣುಗಳು ಸಿಗುತ್ತವೆ ಅಂತೆ. ನೀರಲ್ಲಿ ಆಟ ಆಡೋದಿಕ್ಕೆ ಎಲ್ಲಕಡೆ ಯಾವಗಲು ನೀರು ಇರುತ್ತಂತೆ. ಅವರ ಊರು ತುಂಬಾ ಚೆನ್ನಾಗಿದೆಯಂತೆ, ಅವನಿಗೆ ಇಲ್ಲಿ ಬಂದು ಬೇಜಾರಾಗಿದೆ ಮತ್ತೆ ವಾಪಾಸ್ಸು ಹೋಗಬೇಕು ಅಂತ ಅನ್ನಿಸುತ್ತಿದೆಯಂತೆ,  

ಈ ಊರಲ್ಲಿ, ಏನು ಇಲ್ಲ, ಸರಿಯಾಗಿ ತಿನ್ನೋದಿಕ್ಕೆ ಸಹ ಸಿಗಲ್ಲ, ಯಾವಗಲು ಬಿಸಿಲು, ಊರು, ಹೊಲ,ಗದ್ದೆ ಎಲ್ಲ ಬಟಾ ಬಯಲು ಎಂತ ದರಿದ್ರದ ಊರು ಇದು ಅಂತ ಬೈತಾಯಿದ್ದ. ನನಗೊಂದು ಪ್ರಶ್ನೆ, ದೇವರು ಯಾಕೆ ಹೀಗೆ ಮಾಡ್ತಾನೆ, ಒಂದು ಊರನ್ನು ಚೆನ್ನಾಗಿ, ಇನ್ನೊಂದು ಊರನ್ನು ಕೆಟ್ಟದಾಗಿ ಯಾಕೆ ಸೃಷ್ಟಿ ಮಾಡಿದ್ದಾನೆ. ಈ ಊರಿನ ಜನರು ಬದುಕೋಕೆ ತಿನ್ನೊ ಅನ್ನಕ್ಕಾಗಿ ಎಷ್ಟೊಂದು ಕಷ್ಟ ಪಡಬೇಕು. ಹಾಗಾದರೆ ದೇವರು ಅಷ್ಟೊಂದು ಕ್ರೂರಿನಾ?ಮಗನ ಮುಗ್ಧ ಪ್ರಶ್ನೆ ಗಳಿಗಾಗಿ, ಅಮ್ಮ ನ ಕಣ್ಣಲ್ಲಿ ನೀರು ಜಿನುಗಿತ್ತು. ಅಂಥ ಊರುಗಳಲ್ಲಿ ನಾವ್ಯಾಕೆ ಹುಟ್ಟಲಿಲ್ಲ, ಹಾಗಾದ್ರೆ ದೇವರು ಪಕ್ಷಪಾತಿನ?  ಯಾಕೆ ದೇವರು ಹೀಗೆ ಮಾಡ್ತಾನೆ. ಪೂರ್ವ ಜನ್ಮದ ಕರ್ಮ ಫಲ ಅಂತ, ಯಾವುದೋ ಒಂದು ಜನ್ಮದಲ್ಲಿ ಮಾಡಿದ ತಪ್ಪಿಗೆ ಈ ಜನ್ಮದಲ್ಲಿ ಈ ಪರಿ ಶಿಕ್ಷೆ ಯಾ? ನಮ್ಮ ಒಂದು ಸಂಪೂರ್ಣ ಜನ್ಮವನ್ನು ಕಷ್ಟದಲ್ಲಿ ಕಳೆಯೋದಿಕ್ಕೆ ನಮ್ಮನ್ನು ಹೀಗೆ ಸೃಷ್ಟಿ ಮಾಡಿ ಬಿಡೋದಿಕ್ಕೆ ನಿಜವಾಗಲು ದೇವರು ಅಷ್ಟೊಂದು ಕ್ರೂರಿನಾ? ಕ್ಷಮೆ ಅನ್ನೋದೆ ಇಲ್ವ. ಛೇ ನಮ್ಮದು ಒಂದು ಬದುಕೇ? 

ಮನಸ್ಸು ಆತ್ಮಹತ್ಯೆ ಕಡೆ ಯೊಚಿಸುತಿತ್ತು. ಆದರೆ ಮಗನ ಉತ್ತಮ ಭವಿಷ್ಯಕ್ಕಾಗಿ ಬದುಕಬೇಕು ಅಂತ ತಿರ್ಮಾನಿಸಿ ಆತ್ಮಹತ್ಯೆ ನಿರ್ಧಾರ ಕೈ ಬಿಡುವಂತಾಯಿತು.

Photo Courtesy: Internet source.