ಒಮಾನ್ ರಾಷ್ಟ್ರದ ಅದೊಂದು ಸುಂದರ ಸಮುದ್ರ ಕಿನಾರೆ
ಅಂದು ಬೆಳಗಿನ ನಾಲ್ಕು ಘಂಟೆಯ ನಸುಕಿನ ಸಮಯ ವಿರಬಹುದು.
ಎಲ್ಲರೂ ಮಲಗಿರುವ ಸಮಯ,
ಅಲೆಗಳು ಮೆಲ್ಲಗೆ ದಡಕ್ಕೆ ಅಪ್ಪಳಿಸುವ ಸದ್ದು ಬಿಟ್ಟರೆ, ಬೇರೆ ಯಾವುದೇ ಶಬ್ದವಿಲ್ಲದ ನಿರ್ಜನ ಪ್ರದೇಶ.
ಕಾರ್ಗತ್ತಲು. ಒಂದೇ ಒಂದು ಬೆಳಕಿನ ಕಿರಣವಿರದಿದ್ದ ಆ
ಪ್ರದೇಶದಲ್ಲಿ,
ಸಮುದ್ರದ ಒಡಲೊಳಲಿಂದ ಒಂದೊಂದೆ ಆಮೆಗಳು ದಡದ ಹತ್ತಿರ
ದಾಂಗುಡಿಯಿಡುತಿದ್ದವು. ತಮ್ಮ ಹೊಟ್ಟೆಯಲ್ಲಿದ್ದ ಹೊಸ ಜೀವವನ್ನು ಹೊರ ಜಗತ್ತಿಗೆ ಹೊರತರಲು, ವಿವಿಧ ದೇಶಗಳಿಂದ ಆಮೆಗಳು ಅಲ್ಲಿಗೆ
ಬರುತಿದ್ದವು.
ಈ ವಿಸ್ಮಯವನ್ನು ನೋಡಲು, ನಮ್ಮ ಕನ್ನಡನಾಡಿನಿಂದ ಪ್ರಸಿದ್ದ ಪತ್ರಕರ್ತ ರಾದ ಶ್ರೀ ವಿಶ್ವೇಶ್ವರ್ ಭಟ್ , ಶ್ರೀ ರವಿ ಹೆಗ್ಡೆ ಮತ್ತು ಸಂಗಡಿಗರು
ತಮ್ಮ ದೈನಂದಿನ ಕೆಲಸದೊತ್ತಡದ ನಡುವೆಯೂ ಸ್ವಲ್ಪ ಸಮಯವನ್ನು ಬಿಡುವು ಮಾಡಿಕೊಂಡು ಒಮಾನ್ ಗೆ
ಪ್ರವಾಸ ಕೈಗೊಂಡಿದ್ದರು. ಅದರ ಭಾಗವಾಗಿ ಒಮಾನ್ ನ ಸೂರ್ ಎಂಬ್ ಊರಿನ ಟರ್ಟಲ್ ಬೀಚ್ ಗೆ
ಮಧ್ಯರಾತ್ರಿ ತಲುಪಿದ್ದರು.
ಈ ಆಮೆಗಳನ್ನು ನೋಡುತ್ತ, ಬಹುಶಃ ಅವರ ಮನಸ್ಸಿನಲ್ಲಿ ಈ ಹಾಡು
ಹೀಗೆ ಬಂದಿರಬಹುದು ಅನ್ನಿಸುತ್ತೆ.
ಆಮೆ ಬಂತೊಂದಾಮೆ,
ಯಾವ ಊರಿನ ಆಮೆ,
ದೇಶ ವಿದೇಶದ ಆಮೆ
ಇಲ್ಲಿಗ್ಯಾಕೆ ಬಂತು
ಮೊಟ್ಟೆ ಇಡೋಕೆ ಬಂತು.....
ಒಮಾನ್ ನ ವಿವಿಧ ಪ್ರವಾಸಿ ತಾಣಗಳಲ್ಲಿ, ಟರ್ಟಲ್ ಬೀಚ್ ಸಹ ಒಂದು ವಿಶಿಷ್ಟ ಪ್ರವಾಸಿ ತಾಣ. ಅತಿ ಹೆಚ್ಚು ವಿದೇಶಿ ಪ್ರವಾಸಿಗರು ತಪ್ಪದೇ ಭೇಟಿ
ನೀಡುವ ಸ್ಥಳ.
ಬಹುಭಾಷ ಚಿತ್ರನಟ ರಮೇಶ್ ಅರವಿಂದ್ ಸಹ ಹಿಂದೊಮ್ಮೆ ಈ ಸ್ಥಳಕ್ಕೆ
ತಾವು ಭೇಟಿ ನೀಡಿದ್ದನ್ನು, ಇಲ್ಲಿನ ವಿಶೇಷತೆ ಕುರಿತು
ಕೆಲವು ಸಾರಿ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ.
ಮಧ್ಯ ಪ್ರಾಚ್ಯ ದ ಹಲವಾರು ಅರಬ್ ದೇಶಗಳಿಗೆ ಹೋಲಿಸಿದರೆ ಒಮಾನ್
ದೇಶ ವೈವಿಧ್ಯತೆಗಳಿಂದ ಕೂಡಿದ ದೇಶ. ಬೇರೆ ಕೊಲ್ಲಿ ರಾಷ್ಟ್ರ ಗಳಲ್ಲಿ ಮಾನವ ನಿರ್ಮಿತ ಪ್ರವಾಸಿ
ತಾಣಗಳಿದ್ದರೆ, ಒಮಾನ್ ನಲ್ಲಿ ನಿಸರ್ಗ ನಿರ್ಮಿತ
ಹಲವಾರು ಪ್ರವಾಸಿ ತಾಣಗಳನ್ನು ಕಾಣಬಹುದು. ಈ ಬಗ್ಗೆ ಕೇಳಿ ತಿಳಿದಿದ್ದ ಈ ಪತ್ರಕರ್ತ ದ್ವಯರು,
ಒಮಾನ್ ಗೆ ಭೇಟಿ ನೀಡುವ ಅವಕಾಶಕ್ಕಾಗಿ ಕಾಯುತಿದ್ದರು.
ವಿವಿಧ ಕಾರಣಗಳಿಗಾಗಿ ಬಹ್ರೈನ್ ಮತ್ತು ದುಬಾಯಿಗೆ ಪ್ರವಾಸ
ಕೈಗೊಂಡಿದ್ದ ಅವರು. ಅದರ ಜತೆಗೆ ಒಮಾನ್ ಪ್ರವಾಸ
ಸಹ ಕೈಗೊಳ್ಳುವಂತೆ ಅವರ ಗೆಳೆಯರಾದ ಬಹರೈನ್ ನ
ಶ್ರೀ ಕಿರಣ್ ಉಪಧ್ಯಾಯ ರವರು ಅವರ ಮನವೊಲಿಸಿ ನಾಲ್ಕುದಿನ ಒಮಾನ್ ನಲ್ಲಿ ತಂಗುವಂತೆ ವ್ಯವಸ್ಥೆ
ಮಾಡಿದ್ದರು.
ಬಹರೈನ್ ನಿಂದ, ರಸ್ತೆ ಮಾರ್ಗವಾಗಿ ದುಬಾಯಿ ಮತ್ತು ಒಮಾನ್ ತಲುಪಿ ಸುಮಾರು ಮೂರುವರೆ ಸಾವಿರ ಕಿಲೋಮೀಟರ್
ದೂರದಷ್ಟು ಪ್ರಯಾಣ ಮಾಡಿ, ನಾಲ್ಕು ದಿನದಲ್ಲಿ, ಒಮಾನ್ ನ ಉದ್ದಗಲಕ್ಕೂ ಸಂಚರಿಸಿದರು.
ಬಹುಶಃ ಅವರ ಜೀವನದಲ್ಲಿ ಅತೀ ಕಡಿಮೆ ಸಮಯದಲ್ಲಿ ಇಷ್ಟೊಂದು ದೂರದ ರಸ್ತೆ ಸಂಚಾರ ಮಾಡಿದ್ದು ಇದೇ
ಮೊದಲಿರಬಹುದೇನೋ.
ಮರಳುಗಾಡಿನ ಮಲೆನಾಡು ಎಂದೇ ಪ್ರಖ್ಯಾತವಾದ ಸಲಾಲ್ಹಕ್ಕೆ ಮಸ್ಕತ್
ನಿಂದ ಒಂದು ಸಾವಿರ ಕಿ.ಮಿ ದೂರ ಪ್ರಯಾಣ, ಅಲ್ಲಿ ಎರಡು ದಿನ ಕಳೆದು, ಅಲ್ಲಿನ ಪ್ರವಾಸಿ ತಾಣಗಳನ್ನು
ನೋಡಿದ ನಂತರ, ನಿಜ್ವ, ಸೂರ್ ಟರ್ಟಲ್ ಬೀಚ್,
ವಾದಿ ಶಾಬ್, ಕುರಿಯತ್ ಸಿಂಕ್ ಹೋಲ್ ಮತ್ತು ಮಸ್ಕತ್
ನಲ್ಲಿನ ಪ್ರವಾಸಿ ಸ್ಥಳಗಳನ್ನು ವೀಕ್ಷಣೆ ಮಾಡಿ ವಾಪಾಸ್ ಬೆಂಗಳೂರಿಗೆ ಹಿಂತಿರುಗಿದರು.
ಶನಿವಾರ ೦೮-೧೨-೨೦೧೮ ರ ಸಂಜೆ,
ಸ್ಪಂದನ ಸಂಘದ ವತಿಯಿಂದ ವಿಶ್ವವಾಣಿ ಮಾಲೀಕರು ಮತ್ತು ಸಂಪಾದಕರು ಆದ ಶ್ರೀ
ವಿಶ್ವೇಶ್ವರ್ ಭಟ್, ಕನ್ನಡಪ್ರಭ ಮತ್ತು ಸುವರ್ಣ ವಾಹಿನಿಯ ಪ್ರಧಾನ
ಸಂಪಾದಕರಾದ ಶ್ರೀ ರವಿ ಹೆಗಡೆ, ವಿಶ್ವವಾಣಿಯ ಸಹ ಸಂಪಾದಕರಾದ ಶ್ರೀ
ಮೋಹನ್ ಕುಮಾರ್ ಮತ್ತು ಬಹರೈನ್ ನ ಕನ್ನಡ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರಾದ ಶ್ರೀ ಕಿರಣ್
ಉಪಾಧ್ಯಾಯ ರವನ್ನು ಉಡುಪಿ ಹೋಟೇಲ್ ನ ಸಭಾಂಗಣದಲ್ಲಿ ಸನ್ಮಾನಿಸಲು ಕಾರ್ಯಕ್ರಮವನ್ನು
ಏರ್ಪಡಿಸಲಾಗಿತ್ತು.
ಸ್ಪಂದನ ಸಂಸ್ಥೆಯ ಮುಖ್ಯ ಅಥಿತಿಗಳಾಗಿ ಒಮಾನ್ ನ ಕೆಲ ಗಣ್ಯ
ವ್ಯಕ್ತಿಗಳಾದ ಶ್ರೀ ಜೀ. ವಿ. ರಾಮಕೃಷ್ಣ, ಶ್ರೀ ಎಸ್.ಕೆ .ಪೂಜಾರಿ, ಶ್ರೀ ಗಣೇಶ್ ಹೆಗಡೆ, ಶ್ರೀ
ಲಕ್ಷ್ಮಿ ನಾರಾಯಾಣ ಆಚಾರ್ಯ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸ್ವಾಗತ ಭಾಷಣ: ಸ್ಪಂದನ ತಂಡದ ಸಂಸ್ಥಾಪಕರಾದ ಶ್ರೀ ಕೋಣೀ ಪ್ರಕಾಶ್
ನಾಯಕ್ ರವರು ಸ್ವಾಗತ ಭಾಷಣ ಮಾಡಿ ಅತಿಥಿಗಳಿಗೆ ಸ್ವಾಗತ ಕೋರಿ, ಶ್ರೀ ಲಕ್ಷ್ಮಿ ನಾರಾಯಣ ಆಚಾರ್ಯರವರು ದೇವರ
ಶ್ಲೋಕ ದ ಮೂಲಕ ಕಾರ್ಯಕ್ರಮದ ಶುಭಾರಂಭ ಮಾಡಿದರು.
ಶ್ರೀಯುತ ವಾಲ್ಟರ್ ಮೆಂಡೋನ್ಸ ರವರು, ತಮ್ಮ ವಿಭಿನ್ನ ಶೈಲಿಯಲ್ಲಿ ನಿರೂಪಣೆ
(ಆಂಕರಿಂಗ್) ಮಾಡುವ ಮೂಲಕ ಕಾರ್ಯಕ್ರಮವನ್ನು ಸೊಗಸಾಗಿ ನಡೆಸಿಕೊಟ್ಟರು. ಸಂಧರ್ಭಕ್ಕೆ ತಕ್ಕಂತೆ
ಹಲವು ಉದಾಹರಣೆಗಳನ್ನು ನೀಡುತ್ತ ತಮ್ಮ ಲಘು ಹಾಸ್ಯ ದೊಂದಿಗೆ ಸಭಿಕರನ್ನು ಹಾಗೂ ಅಥಿತಿಗಳನ್ನು
ಮನರಂಜಿಸಿದರು.
ಸ್ಪಂದನ ಪರವಾಗಿ ಮಸ್ಕತ್ ಬ್ಯಾಂಕ್ ನ ಶ್ರೀ ಜೀ. ವಿ. ರಾಮಕೃಷ್ಣ, ಶ್ರೀ ಎಸ್.ಕೆ ಪೂಜಾರಿ, ಶ್ರೀ ಗಣೇಶ್ ಹೆಗಡೆ ಯವರು ಮತ್ತು
ಶ್ರೀ ಲಕ್ಷ್ಮಿನಾರಾಯಣ್ ಆಚಾರ್ಯರವರು
ಅತಿಥಿಗಳಿಗೆ ಶಾಲು ಹೊದಿಸಿ ಸನ್ಮಾನಿಸಿದರು.
ರಾಜ್ ಸನಿಲ್, ವಿಜಯ್ ಸಾಲಿಯಾನ್, ಆರ್.ಕೆ.ನಿರಂಜನ್, ಮತ್ತು ಶ್ರೀಮತಿ ಕವಿತಾ ರಾಮಕೃಷ್ಣ
ರವರುಗಳು ಸ್ವಾದ ಭರಿತ ಒಮಾನ್ ನ ಡೇಟ್ಸ್ ನ್ನು ಉಡುಗೊರೆಯನ್ನಾಗಿ ಹಾಗೂ,
ಶ್ರೀ ಕೋಣೀ ಪ್ರಕಾಶ್ ನಾಯಕ್,
ನಾಗೇಶ್ ಶೆಟ್ಟಿ, ಜುಬೇರ್ ಅಹಮದ್ ಮತ್ತು ಉಮೇಶ್
ಬಂಟ್ವಾಳ್ ರವರು ಒಮಾನ್ ನ ಲಾಂಛನ ಎಂದು ಪರಿಗಣಿಸಲ್ಪಡುವ ಖಂಜಾರ್ ಅನ್ನು ಸ್ಮರಣಿಕೆಯಾಗಿ
ನೀಡಿದರು.
ಮಸ್ಕತ್ ಬ್ಯಾಂಕ್ ನ ಶ್ರೀ ಜೀ.ವಿ. ರಾಮಕೃಷ್ಣ ಮತ್ತು ಶ್ರೀಮತಿ
ಕವಿತಾ ರಾಮಕೃಷ್ಣ ರವರು ತಾವು ತಯಾರಿಸಿದ ತಂಜಾವೂರು ಶೈಲಿ ಯ ಕಲಾಕೃತಿಯನ್ನು ಅಥಿತಿಗಳಿಗೆ ನೀಡಿ
ಅವರನ್ನು ಗೌರವಿಸಿದರು.
ಶ್ರೀಮತಿ ಕವಿತಾ ರಾಮಕೃಷ್ಣ ರವರು ಅಥಿತಿಗಳ ಪರಿಚಯ ಮಾಡಿಕೊಡುತ್ತ, ಶ್ರೀ ವಿಶ್ವೇಶ್ವರ್ ಭಟ್, ಶ್ರೀ ರವಿ ಹೆಗಡೆ ಯವರ ಮತ್ತು
ಶ್ರೀ ಮೋಹನ್ ಕುಮಾರ್ ರವರ ಕುರಿತು ಸವಿವರವಾದ ಮಾಹಿತಿ, ಜತೆಗೆ ಬಹರೈನ್
ಕನ್ನಡಿಗರಾದ ಶ್ರೀ ಕಿರಣ್ ಉಪಧ್ಯಾಯ್ ರವರ ಕುರಿತು, ಅವರ ಸಮಾಜ ಸೇವೆ ಹಾಗೂ
ಬಹರೈನ್ ನಲ್ಲಿ ಅವರ ಕನ್ನಡಸೇವೆ ಕುರಿತು ಸಭಿಕರಿಗೆ ವಿವರವಾದ ಮಾಹಿತಿ ನೀಡಿದರು.
ಸಂವಾದ: ಅಥಿತಿಗಳೊಂದಿಗೆ, ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈರ್ವರು ತಮ್ಮ ಬಾಲ್ಯ, ಕಾಲೇಜು ವಿದ್ಯಾಭ್ಯಾಸ, ವೃತ್ತಿ ಜೀವನದ ಮೊದಲ ದಿನಗಳು,
ತಮ್ಮ ಪತ್ರಿಕಾಪಯಣದ ಅನುಭವದ
ಬುತ್ತಿಯನ್ನು ಸಭಿಕರೊಂದಿಗೆ ಹಂಚಿಕೊಂಡರು. ತಾವು ಬೆಳೆದು ಬಂದ ಹಾದಿ, ಆ
ಹಾದಿಯಲ್ಲಿನ ತೊಡರುಗಳು, ಸವಾಲುಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು.
ಈರ್ವರ ಪತ್ರಿಕಾ ರಂಗದ ಆಕರ್ಷಣೆ, ವೃತ್ತಿ ಹೇಗೆ ಶುರುವಾಯಿತು
ಎನ್ನುವದರಿಂದ ಹಿಡಿದು, ಮುಂದಿನ ಪೀಳಿಗೆಗೆ ಮುಂದಿನ ಸಾಲಿನಲ್ಲಿ
ನಿಲ್ಲುವ ಪತ್ರಕರ್ತರಾರು ಎನ್ನುವಲ್ಲಿಗೆ ಚರ್ಚೆ ನಡೆಯಿತು.
ತಾವು ಪತ್ರಕರ್ತರಾಗಿದ್ದಾಗಿನ ದಿನಗಳಲ್ಲಿ, ಅಂದಿನ ಸಂಪಾದಕರಾದ, ವೈ
ಎನ್ ಕೆ, ಶ್ಯಾಮರಾವ್ ಮತ್ತಿತರ ಕುರಿತು ತಮ್ಮ ಅನುಭವಗಳನ್ನು ಹಂಚಿ
ಕೊಂಡರು.
ಓದುಗರೂ ಸಹ ಪತ್ರಕರ್ತರೇ:- ಪತ್ರಕರ್ತ ರಾಗಲು ಯಾವುದೇ ಪದವಿಯ ಅವಶ್ಯಕತೆ ಯಿಲ್ಲ, ಪ್ರಚಲಿತ ವಿದ್ಯಮಾನ, ಸ್ವಲ್ಪ ಐತಿಹಾಸಿಕ, ಭೂಗೋಳ ಹಾಗೂ ಸಾಮಾನ್ಯ ಜ್ಞಾನ ಹೊಂದಿರುವ
ಯಾವುದೇ ವೃತ್ತಿಯವರು ಸಹ ಪತ್ರಕರ್ತರಾಗಲು ಅಡ್ಡಿಯಿಲ್ಲ. ರಾಜಕಾರಣಿ ಗಳು ಹಾಗೂ ಪತ್ರಕರ್ತರು
ಇಬ್ಬರೂ ಒಂದೇ, ಯಾವಾಗ ಬೇಕಾದರು ವೃತ್ತಿ ಶುರು ಮಾಡಬಹುದು ಹಾಗೇಯೇ
ಇಬ್ಬರಿಗೂ ನಿವೃತ್ತಿ ಎಂಬುವುದು ಇಬ್ಬರಿಗೂ ಇಲ್ಲ. ಇದಕ್ಕೆ ತಕ್ಕಂತೆ ಹಲವಾರು ಹಿರಿಯ
ಪತ್ರಕರ್ತರನ್ನು ಹಾಗೂ ಸಂಪಾದಕರನ್ನು ಉದಾಹರಣೆಯನ್ನಾಗಿ ಶ್ರೀ ವಿಶ್ವೇಶ್ವರ್ ಭಟ್ ರವರು
ನೀಡಿದರು.
ಹೊಸ ತಂತ್ರಜ್ಞಾನ: ಪ್ರಿಂಟ್ ಮಶಿನ್ ನ ಅಚ್ಚುಮೊಳೆ ಯಿಂದ ಕಂಪ್ಯೂಟರ್ ವರೆವಿಗೂ ಆದ
ಬದಲಾವಣೆ, ಆರ್ಕುಟ್ ನಿಂದ,.... ಫೇಸ್ ಬುಕ್, ವಾಟ್ಸ್
ಅಪ್, ಇನ್ಸ್ಟಾಗ್ರಾಮ್ ವರೆಗಿನ ಇಂದಿನ ಬದಲಾವಣೆ ನೋಡೀ, ಪ್ರತಿಯೊಬ್ಬರು, ಜೀವನದಲ್ಲಿ ಹೊಸತನ್ನು ಅಳವಡಿಸಿಕೊಳ್ಳುತ್ತ
ಮುನ್ನುಗ್ಗಬೇಕು,
ಅಂದಿನ ಕಾಲದಲ್ಲಿ, ಕಂಪ್ಯೂಟರ್ ಗಳು ಪತ್ರಿಕಾ ಕಛೇರಿಗೆ ಲಗ್ಗೆ
ಇಡುತಿದ್ದ ಸಂಧರ್ಭದಲ್ಲಿ, ಅಂದಿನ ಹಳೆ ತಲೆಮಾರಿನ ಜನ ಮೊದಮೊದಲು ಅದರ
ಅಳವಡಿಕೆಗೆ ವಿರೋಧಿಸಿದ್ದು, ತದನಂತರ ಅದನ್ನು ಒಗ್ಗಿಸಿಕೊಳ್ಳಲಾಗದೆ
ಕೆಲವರು ಪತ್ರಿಕಾರಂಗವನ್ನು ತೊರೆದಿದ್ದನ್ನು ನೆನಪಿಸಿದರು. ಅಂದಿನಿಂದ ಇಂದಿನವರೆಗೂ ಶ್ರೀ ವಿಶ್ವೇಶ್ವರ್ ಭಟ್ ಮತ್ತು ಶ್ರೀ ರವಿ ಹೆಗಡೆ
ಯವರು ಸದಾ ಹೊಸ ತಂತ್ರಜ್ಞಾನ ವನ್ನು
ಅಳವಡಿಸಿಕೊಳ್ಳುತ್ತ ತಮ್ಮನ್ನು ತಾವು ನಿಂತ ನೀರಾಗಲು ಬಿಡದೆ ಹೊಸತನ ದೊಂದಿಗೆ ತಾವು
ಬೆಳೆದಿದ್ದನ್ನು ಎಳೆ ಎಳೆಯಾಗಿ ಸಭಿಕರ ಮುಂದೆ ತೆರೆದಿಟ್ಟರು.
ಕನ್ನಡ ಪತ್ರಿಕೋದ್ಯಮದಲ್ಲಿ 3D
ತಂತ್ರಜ್ಞಾನ ವನ್ನು ತೆಗೆದು ಕೊಂಡು ಬರಲು ವಹಿಸಿದ ಶ್ರಮದ ಕುರಿತು ಶ್ರೀ ರವಿ
ಹೆಗಡೆ ಯವರು ಮಾಹಿತಿ ಹಂಚಿಕೊಂಡರು.
ಸ್ಪಂದನ ಬಗ್ಗೆ ಶ್ಲಾಘನೆ:- ಸ್ಪಂದನ ತಂಡವೂ ಇದುವರೆವಿಗೂ
ನಡೆಸಿಕೊಟ್ಟ ಮನರಂಜನ ಕಾರ್ಯಕ್ರಮಗಳೂ, ರಕ್ತದಾನ ಶಿಬಿರ ಮತ್ತು ಸಮಾಜ ಸೇವೆ ಕಾರ್ಯಕ್ರಮಗಳ ವೀಡಿಯೊ ನೋಡಿದ ಅಥಿತಿಗಳು ಸ್ಪಂದನ
ತಂಡದ ಕಾರ್ಯಶೈಲಿಯನ್ನು ಕೊಂಡಾಡಿದರು.
ಮಸ್ಕತ್ ಕನ್ನಡಿಗರನ್ನು ಹೆಮ್ಮೆಯಿಂದ ಹೊಗಳಿ, ಬೆಂಗಳೂರಿನಲ್ಲಿ ಕನ್ನಡಿಗರು ಕನ್ನಡ
ಮಾತನಾಡುವುದಕ್ಕೆ ಹಿಂಜರಿದರೆ, ಇನ್ನೂ ಒಮಾನ್ ನಲ್ಲಿ ನೀವೆಲ್ಲ ಅಚ್ಚ
ಕನ್ನಡವನ್ನು ಸೊಗಸಾಗಿ ಮಾತನಾಡಿ ನಮ್ಮ ಭಾಷೆಯನ್ನು ಉಳಿಸುತಿದ್ದೀರಿ. ಮಕ್ಕಳಿಗೆ ಸಹ ಕನ್ನಡವನ್ನು
ತಪ್ಪದೆ ಕಲಿಸಿ ಮುಂದಿನ ಪೀಳಿಗೆಗೆ ಕನ್ನಡವನ್ನು ಕೊಂಡೊಯ್ಯಲು ಮರೆಯದಿರಿ ಎನ್ನುವ ಹಿತವಚನವನ್ನು
ಸಹ ನೀಡಿ ತಮ್ಮ ಕಳಕಳಿ ವ್ಯಕ್ತಪಡಿಸಿದರು.
ಒಮಾನ್ ದೇಶ ಹಾಗೂ ಇಲ್ಲಿನ ರಾಜರ ಕುರಿತು ಮೆಚ್ಚುಗೆ ವ್ಯಕ್ತ
ಪಡಿಸಿ, ಒಂದೇ ದೇಶದಲ್ಲಿ, ಹಲವು ರೀತಿಯ ವೈವಿಧ್ಯತೆಯನ್ನು ನಾವು ಕಾಣಬಹುದು. ಬೆಟ್ಟ ಗುಡ್ಡಗಳು, ವಿಶಾಲವಾದ ಸಮುದ್ರ, ನದಿಗಳು, ಕಣಿವೆಗಳು,
ಮರುಭೂಮಿ, ಸಲಾಲ್ಹ ದಂತಹ ಚಿಕ್ಕ ಮಲೆನಾಡು ಪ್ರದೇಶ,
ಪಕ್ಕದ ಅರಬ್ ರಾಷ್ಟ್ರಗಳಿಗೆ ಹೋಲಿಸಿದರೆ ಒಮಾನ್ ವಿಭಿನ್ನ ರೀತಿಯಾಗಿದೆ. ಇಂತಹ
ಸುಂದರ ದೇಶವನ್ನು ವೀಕ್ಷಿಸಲು ಇಷ್ಟುದಿನ ಯಾಕೆ ತಡಮಾಡಿದೆವು ಎನ್ನುವ ಭಾವನೆ ಈಗ ಮೂಡುತಿದೆ ಎಂದು
ಹೇಳಿದರು.
ಸಂಗೀತ ಆಲ್ಬಂ ಬಿಡುಗಡೆ:- ಈ ಹಿಂದೆ, ಒಮಾನ್ ಪ್ರವಾಸ ಕೈಗೊಂಡಿದ್ದ ಪ್ರಸಿದ್ದ ಸಂಗೀತ ನಿರ್ದೇಶಕ, ನಿರ್ಮಾಪಕ
ಮತ್ತು ನಿರ್ದೇಶಕರಾದ ಶ್ರೀ ರವಿ ಬಸ್ರೂರ್ ರವರು
ಬರೀ ಮೂರು ದಿನಗಳಲ್ಲಿ ಸಾಹಿತ್ಯ ರಚಿಸಿ, ರಾಗ ಸಂಯೋಜನೆ ನೀಡಿ
ಸ್ಥಳೀಯ ಕಲಾವಿದ ರಿಂದ ಹಾಡಿಸಿ ಸಿದ್ದ ಪಡಿಸಿದ ಕನ್ನಡ ಮತ್ತು ತುಳು ಹಾಡುಗಳ "ಉಲ್ಲಾಸ
ಮತ್ತು ಉತ್ಸಾಹ" (Zeal & Zest)
ಎನ್ನುವ ಸಂಗೀತ ಆಲ್ಬಂ ಅನ್ನು ಅಥಿತಿಗಳು ಅಧಿಕೃತವಾಗಿ ಬಿಡುಗಡೆ ಗೊಳಿಸಿದರು.
ಕರವೋಕೆ
ಹಾಡು ಮತ್ತು ಭೋಜನ:- ಕಾರ್ಯಕ್ರಮದ ಕೊನೆಯಲ್ಲಿ, ಸ್ಥಳೀಯ ಹಾಡುಗಾರರಿಂದ ಕರವೋಕೆ ಹಾಡುಗಾರಿಕೆ ಏರ್ಪಡಿಸಿದ್ದರು ಮತ್ತು ಉಡುಪಿ
ಹೋಟೆಲ್ ನ ಸವಿ ಭೋಜನವನ್ನು ಕಾರ್ಯಕ್ರಮಕ್ಕೆ ಬಂದ ಎಲ್ಲ ಅಥಿತಿಗಳಿಗೆ ನೀಡಲಾಯಿತು. ಸಭಿಕರೆಲ್ಲರು, ಸುಮಧುರ ಸಂಗೀತದೊಂದಿಗೆ ಸವಿ ಭೋಜನ ಸವಿದರು.
ಮರುದಿನ
ಬೆಳಿಗ್ಗೆ, ಮಸ್ಕತ್ ಪ್ರವಾಸ ಕೈಗೊಂಡು, ಇಲ್ಲಿನ
ದೇವಸ್ಥಾನಗಳು, ಅರಮನೆ, ಮಥ್ರ ಕಾರ್ನಿಷ್, ಗ್ರಾಂಡ್ ಮಾಸ್ಕ್, ಒಪೇರ
ಹೌಸ್, ಶಾಂಘ್ರಿಲ ಬೀಚ್, ಬರ್
ಅಲ್ ಝ್ಹಿಸಾ. ಮುಂತದ ಪ್ರೇಕ್ಷಣೀಯ ಸ್ಥಳಗಳನ್ನು
ವೀಕ್ಷಿಸಿ, ಬೆಂಗಳೂರಿಗೆ ಹಿಂತಿರುಗಿದರು.
ಕೊನೆಮಾತು: ಶ್ರೀ ವಿಶ್ವೇಶ್ವರ್ ಭಟ್ ಮತ್ತು ಶ್ರೀ ರವಿ ಹೆಗಡೆ ರವರ
ಒಮಾನ್ ಪ್ರವಾಸ ಮಾಡಲು ಇಚ್ಚಿಸಿರುವ ಮಾಹಿತಿ ದೊರೆತ ತಕ್ಷಣ, ಸ್ಪಂದನ
ಸಂಸ್ಥೆಯ ಸಂಚಾಲಕರಾದ ಶ್ರೀ ಕೋಣೀ ಪ್ರಕಾಶ್ ನಾಯಕ್ ರವರು ಮತ್ತು ನಾಗೇಶ್ ಶೆಟ್ಟಿಯವರು ಅಥಿತಿಗಳ
ಒಮಾನ್ ಪ್ರವಾಸ ಕ್ಕೆ ಬೇಕಾದ ವ್ಯವಸ್ಥೆಗಳನ್ನು ಅತಿ ಕಡಿಮೆ ಸಮಯದಲ್ಲಿ ವ್ಯವಸ್ಥೆ ಮಾಡಿ ಯಾರಿಗೂ
ಯಾವುದೇ ಕುಂದುಬರದಂತೆ ಶ್ರಮ ವಹಿಸಿ ತಮ್ಮ ಕಾರ್ಯ ನಿರ್ವಹಿಸಿ ಎಲ್ಲರ ಶ್ಲಾಘನೆಗೆ ಗುರಿಯಾದರು. ಬಹುತೇಕ ಸಭಿಕರು, ಮತ್ತೊಮ್ಮೆ
ಶ್ರೀ ವಿಶ್ವೇಶ್ವರ್ ಭಟ್ ಮತ್ತು ಶ್ರೀ ರವಿ ಹೆಗಡೆ ಯವರು ಒಮಾನ್ ಪ್ರವಾಸಕ್ಕೆ ಬರಬೇಕೆಂದು
ಇಚ್ಚಿಸಿದರು.
ವರದಿ. ಪಿ.ಎಸ್.ರಂಗನಾಥ
Photos Credit: 1.) Vishweshar Bhat Face book Wall, 2.) Internent source 3) Felicitation Photos: P.S.Ranganath