ಶನಿವಾರ, ಏಪ್ರಿಲ್ 24, 2021
ಸೋಮವಾರ, ಏಪ್ರಿಲ್ 19, 2021
ಭಾನುವಾರ, ಏಪ್ರಿಲ್ 11, 2021
ಒಂದು ವಸ್ತ್ರದ ಕಥೆ
ಅದು ಮಗ್ಗದ ಮನೆ. ಅಲ್ಲಿ ಬಣ್ಣ ಬಣ್ಣದ ವಿವಿಧ ರೀತಿಯ ವಸ್ತ್ರಗಳು ತಯಾರಾಗುತಿದ್ದವು. ಬಾಲಕ ಈರಯ್ಯ ಆ ಮನೆಗೆ ಬಂದಿದ್ದ, ಅಲ್ಲಿ ನೂಲನ್ನು ಬಣ್ಣದಲ್ಲಿ ಅದ್ದಿ ಹಾಕುತಿದ್ದುದನ್ನು ತದೇಕಚಿತ್ತದಿಂದ ನೋಡುತಿದ್ದ, ತರಹೇವಾರಿ ಬಣ್ಣಗಳು, ಬಣ್ಣದ ನೂಲಿನ ದಾರಗಳು, ಬಣ್ಣ ಬಣ್ಣದ ಬಟ್ಟೆಗಳನ್ನು ನೋಡಿ ಸಂತೋಷಿಸುತಿದ್ದ.
ಯಾಕ ಈರ?
ಬಣ್ಣಗಳನ್ನ ಹೊಸದಾಗಿ ನೋಡ್ತಾಯಿದಿಯೇನು? ಎಂದು ಮಗ್ಗದ
ಮನೆಯ ನಾಗಮ್ಮ ಕೇಳಿದರು.
ಹಂಗೇನಿಲ್ಲ
ಅಕ್ಕಯ್ಯಾ, ಈ ಬಣ್ಣಗಳನ್ನ ನೋಡ್ತಾಯಿದ್ದರೆ ಬಾಳ ಖುಷಿಯಾಗ್ತದೆ.
ಬಣ್ಣ ನೋಡೋಕೆ
ಮಾತ್ರ ಚೆಂದ, ಚೆನ್ನಾಗಿದೆ ಅಂತ ಬಾಯಲ್ಲಿ ಇಟ್ಟುಕೊಂಡರೆ ವಿಸ ಕಣಪ್ಪಾ, ಯಾವುದನ್ನ ಹೇಗೆ ಎಲ್ಲಿ
ಬಳಸಬೇಕೋ ಎನ್ನುವುದನ್ನ ಸರಿಯಾಗಿ ತಿಳಿದುಕೊಳ್ಳಬೇಕು.



ಅಂದ ಹಾಗೆ, ಈ ಈರ ಒಬ್ಬ ರೈತ ಕುಟುಂಬದ ಹುಡುಗ, ಆ ಊರಿನ ಹೆಸರು ರಾಮಪುರ. ಸುಮಾರು ನೂರಾರು ವರ್ಷಗಳ ಹಿಂದೆ ಆಗಿನ್ನೂ ಪರಕೀಯರ ದಾಳಿ ನಮ್ಮ ದೇಶದ ಮೇಲೆ ಆಗಿರಲಿಲ್ಲ.ಆಧುನಿಕ ತಾಂತ್ರಿಕತೆ ಇನ್ನೂ ನಮ್ಮ ದೇಶದಲ್ಲಿ ಕಾಲಿಟ್ಟಿರಲಿಲ್ಲ. ಎಲ್ಲವೂ ಸ್ಥಳೀಯವಾಗಿ, ತಮಗೆ ಗೊತ್ತಿದ್ದ ವಿಧಾನಗಳಲ್ಲಿ ವಸ್ತುಗಳನ್ನು, ಬೆಳೆಗಳನ್ನು ಉತ್ಪಾದನೆ ಮಾಡಿ, ಮಾರಾಟ ಮಾಡಿ ಸಂತೋಷವಾಗಿ ಜೀವಿಸುತಿದ್ದ ಆ ದಿನಗಳು. ಆ ಊರು ರಾಮಪುರ ಸುತ್ತಮುತ್ತಲಿನ ಹಳ್ಳಿಗಳಿಗೆ ಪ್ರಮುಖ ವಾಣಿಜ್ಯ ಕೇಂದ್ರ ವಾಗಿತ್ತು. ಎಲ್ಲತರಹದ ಕುಶಲಕರ್ಮಿಗಳು ಅಲ್ಲಿ ನೆಲೆಗೊಂಡಿದ್ದರು. ಅಲ್ಲಿ ವಾರಕ್ಕೊಮ್ಮೆ ಸಂತೆ ನಡೆಯುತಿದ್ದರಿಂದ, ನೂರಾರು ಜನ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ತಾವು ಬೆಳೆದಿದ್ದ ಬೆಳೆಗಳನ್ನು ಅಲ್ಲಿ ತಂದು ಮಾರುತಿದ್ದರು ಹಾಗೂ ದೂರದ ಊರುಗಳಿಂದ ವ್ಯಾಪಾರಿಗಳು ಸಹ ಅಲ್ಲಿಗೆ ಬರುತಿದ್ದರು. ರಾಮಪುರದಲ್ಲಿ, ನೇಕಾರರು, ಕುಂಬಾರರು, ಚಮ್ಮಾರರು, ಅಕ್ಕಸಾಲಿಗರು ಎಲ್ಲ ತರಹದ ಕರಕುಶಲಗಾರರು ಅಲ್ಲಿದ್ದರಿಂದ, ಹಳ್ಳಿಗರು ಒಮ್ಮೆ ಆ ಊರಿಗೆ ಬಂದರೆ, ತಮಗೆ ಬೇಕಾದ ವಸ್ತುಗಳನ್ನು ಕೊಂಡು ಕೊಳ್ಳುವುದರಿಂದ ಹಿಡಿದು ತಾವು ತಂದಿದ್ದ ವಸ್ತುಗಳನ್ನು ಅಲ್ಲಿ ಮಾರಿ ಮತ್ತು ತಮ್ಮ ಅಗತ್ಯವಿದ್ದ ಎಲ್ಲ ಕೆಲಸಗಳನ್ನು ಅಲ್ಲಿ ಮುಗಿಸಿಕೊಂಡು ತಮ್ಮ ಹಳ್ಳಿಗಳಿಗೆ ಮರಳುತಿದ್ದರು. ರಾಮಪುರದಲ್ಲಿ ಜನರೆಂದರೆ, ಸುತ್ತಮುತ್ತಲಿನ ಹಳ್ಳಿಗಳಿಗೆ ಹಾಗೂ ದೂರದ ಊರುಗಳಿನ ಜನರಿಗೆ ವಿಶೇಷವಾದ ಗೌರವ.





ವೀರಯ್ಯನ ತಾಯಿ ತನ್ನ ತವರೂರಿಗೆ ಹಬ್ಬಕ್ಕಾಗಿ ಹೋಗುವ ಸಂಧರ್ಭ ಬಂದಿತ್ತು, ವೀರಯ್ಯ ಸಹ ತಾಯಿಯ ಜತೆ ಊರಿಗೆ ಹೊರಟು ಹೋದ. ಸುಮಾರು ಮೈಲುಗಳ ದೂರದ ದಾರಿ, ಎತ್ತಿನಗಾಡಿಯಲ್ಲಿ ಬೆಳಿಗ್ಗೆ ಪ್ರಯಾಣ ಶುರುಮಾಡಿ ಹಳ್ಳಿ ತಲುಪುವ ಹೊತ್ತಿಗೆ ಸಂಜೆಯಾಗಿತ್ತು. ಹಳ್ಳಿಯಲ್ಲಿದ್ದ ತಾತ ಅಜ್ಜಿ ಮಾಮನವರನ್ನ ನೋಡಿ ವೀರಯ್ಯನಿಗೆ ಖುಷಿಯಾಗಿತ್ತು. ಅಂದು ರಾತ್ರಿ ಎಲ್ಲರೊಂದಿಗೆ ಕುಳಿತು ಊಟ ಮಾಡಿ ಸಂತೋಷ ಪಟ್ಟಿದ್ದ.

ಮರುದಿನ ಬೆಳಿಗ್ಗೆ ಎದ್ದು, ಮನೆಯೆಲ್ಲ ಮತ್ತು ಮನೆಯ ಹೊರಗಡೆಯೆಲ್ಲ ಸುತ್ತಾಡಿದ. ಹಾಗೆಯೇ ಹಳ್ಳಿಯ ಮುಖ್ಯ ಬೀದಿಯ ಕಡೆ ಹೊರಟು ಬಂದ. ಒಟ್ಟಿನಲ್ಲಿ ಅವನಿಗೆ ಆ ಹಳ್ಳಿಯಲ್ಲಿ ವಿಶೇಷವಾದದ್ದು ಏನು ಕಾಣಲಿಲ್ಲ. ರಾಮಪುರಕ್ಕಿಂತ ಚಿಕ್ಕದಾಗಿತ್ತು ಆ ಹಳ್ಳಿ. ಸಪ್ಪೆ ಮೋರೆ ಹಾಕಿಕೊಂಡು ಮನೆಗೆ ವಾಪಾಸ್ಸು ಮರಳಿದ. ಯಾಕೋ ಹೀಂಗೆ ಸಪ್ಪಗಿದೀಯಾ ಎಂದು ಅವರ ಮಾಮ ಕೇಳಿದ. ಈ ಊರಲ್ಲಿ, ಏನು ವಿಶೇಷ ಇಲ್ಲ, ನಮ್ಮ ರಾಮಪುರದಲ್ಲಿ ಏನೆಲ್ಲ ಇದೆ ಗೊತ್ತಾ, ಎಂದು ಮರು ಪ್ರಶ್ನೆ ಹಾಕಿದ.

ಮತ್ತೆ ನಿಮ್ಮ
ಊರಿನಲ್ಲಿ ಅದೆಲ್ಲ ಯಾಕಿಲ್ಲ!!!
ಅವನ
ಪ್ರಶ್ನೆಗೆ, ನಸು ನಕ್ಕು ಅವನನ್ನ ಹೊರಗಡೆ ಕರೆದು ಕೊಂಡು ಹೋದ, ಸ್ವಲ್ಪ ದೂರದಲ್ಲಿ ಸ್ನೇಹಿತ
ಮತ್ತು ಬಂಧುಗಳ ಮನೆಯಲ್ಲಿ ಮಕ್ಕಳಿದ್ದರು. ಅವರಿಗೆ ವೀರಯ್ಯನನ್ನ ಪರಿಚಯ ಮಾಡಿಕೊಟ್ಟು ಅವನ ಜತೆ
ಆಟವಾಡಲು ಹೇಳಿದ.
ಮಕ್ಕಳನ್ನ ಕಂಡ
ವೀರಯ್ಯ ಖುಷಿಯಿಂದ ಅವರ ಜತೆ ಆಟವಾಡಲು ಹೋದ. ಎಲ್ಲರೂ ಸೇರಿ ತುಂಬ ಹೊತ್ತು ಆಟವಾಡಿದರು,
ನಲಿದಾಡಿದರು, ಕುಣಿದು ಕುಪ್ಪಳಿಸಿದರು. ತದ ನಂತರ ಹತ್ತಿರದ ಹೊಲದಲ್ಲಿದ್ದ ಸಣ್ಣದಾಗಿ
ಹರಿಯುತಿದ್ದ ನೀರಿನ ತೊರೆಯಲ್ಲಿ ಆಟವಾಡಿ ಹರಟುತ್ತ ಕುಳಿತರು. ತನ್ನ ಊರಾದ ರಾಮಪುರದ ಬಗ್ಗೆ
ಎಲ್ಲವನ್ನು ಹೇಳಿದ. ಆ ಊರಿನಲ್ಲಿ ಸಿಗದೆ ಇರುವ ವಸ್ತುಗಳಿಲ್ಲ, ತಿನ್ನಲು ಸಿಗದೆ ಇರುವ
ತಿಂಡಿಗಳಿಲ್ಲ. ಕುಲುಮೆಯಲ್ಲಿ ತಯಾರಾಗುವ ವಸ್ತುಗಳು, ಮಣ್ಣಿನಲ್ಲಿ ಸಿದ್ದವಾಗುತಿದ್ದ
ವಿವಿಧರೀತಿಯ ಮಡಿಕೆಗಳು, ಮಗ್ಗಗಳಲ್ಲಿ ತಯಾರಾಗುತಿದ್ದ ಬಣ್ಣ ಬಣ್ಣದ ಬಟ್ಟೆಗಳು, ಮಿಠಾಯಿ
ಅಂಗಡಿಯಲ್ಲಿ ತಯಾರಾಗುತಿದ್ದ ಬಗೆ ಬಗೆಯ ತಿಂಡಿಗಳು, ದೇವಸ್ಥಾನ ದಲ್ಲಿ ನಡೆಯುತಿದ್ದ ಪೂಜೆಗಳು,
ಅಲ್ಲಿನ ಕೊತ್ವಾಲ, ಸೇನಾಧಿಪತಿ, ಸೈನಿಕರು ಮುಂತಾದವರು ವಾಸಿಸುತಿದ್ದ ರಾಜಬೀದಿಯ ಮನೆಗಳು,
ಅದೆಲ್ಲದರ ಬಗ್ಗೆ ಸೊಗಸಾಗಿ ವಿವರಿಸುತಿದ್ದ. ಅವನು ಹೇಳುತಿದ್ದೆಲ್ಲವನ್ನು ಆಸಕ್ತಿಯಿಂದ ಕೇಳುತ್ತ
ರಾಮಪುರವನ್ನ ತಮ್ಮದೇ ರೀತಿಯಲ್ಲಿ ಊಹಿಸಿಕೊಳ್ಳುತಿದ್ದರು. ತನಗೆ ಇಷ್ಟವಾಗಿದ್ದ ನೇಕಾರರ ಮಗ್ಗದ
ಮನೆ, ಬಣ್ಣ ಬಣ್ಣದ ವಸ್ತ್ರಗಳ ಕುರಿತು ಮತ್ತು ಅಲ್ಲಿನ ನೇಕಾರರು ಬಟ್ಟೆಗಳನ್ನು ತಯಾರಿಸುತಿದ್ದ ಬಗ್ಗೆ
ಬಹಳಷ್ಟು ವಿವರಿಸಿದ. ಎಲ್ಲವು ಮುಗಿದ ಮೇಲೆ, ಆ ಹುಡುಗರಲ್ಲಿ ಒಬ್ಬ, ಈರಯ್ಯ, ನಿನಗೆ ಮಿರ ಮಿರ
ಮಿಂಚುವ ಬಣ್ಣ ಬಣ್ಣದ ರಾಜ ಪೋಷಾಕುಗಳು ಸುಲಭವಾಗಿ ಸಿಗುತ್ತವಲ್ಲವೇ, ಹಾಗಿದ್ದರೆ ಅಂತಹ
ಬಟ್ಟೆಗಳನ್ನ ಹುಟ್ಟುಕೊಂಡಿದ್ದೀಯಲ್ಲವೇ.
ಆ ಪ್ರಶ್ನೆ,
ವೀರಯ್ಯ ನನ್ನು ವಿಚಲಿತನನ್ನಾಗಿ ಮಾಡಿತು. ಮಾತು ತಡವರಿಸುತ್ತ, ಹೌದು, ಹಬ್ಬಗಳು ಬಂದಾಗ ನಾನು
ಬಣ್ಣ ಬಣ್ಣದ ಬಟ್ಟೆಗಳನ್ನು ಧರಿಸಿದ್ದೇನೆ. ಅವನ ಮನಸ್ಸು ಬಾಯಿಂದ ಸುಳ್ಳು ಹೇಳಿಸಿತು.
ಅಲ್ಲಿಂದ ಮನೆಗೆ
ವಾಪಾಸ್ಸು ಬಂದ ಮೇಲೆ, ಮನಸ್ಸು ಮಿರ ಮಿರ ಮಿಂಚುವ ಝರಿ ಬಣ್ಣದ ಬಟ್ಟೆಯ ಬಗ್ಗೆ ಆಲೋಚಿಸುತಿತ್ತು,
ರಾಜ ಬೀದಿಯಲ್ಲಿನ ಮಕ್ಕಳು ಉಡುತಿದ್ದ ಅಂತಹ ಬಟ್ಟೆಗಳನ್ನು ನಾನು ಉಟ್ಟಿಲ್ಲವಲ್ಲ. ಅಂತಹ ಹಲವಾರು
ಬಟ್ಟೆಗಳನ್ನ ಅಲ್ಲಿ ನೋಡಿದ್ದೀನಿ, ಅಂತಹ ಬಟ್ಟೆಯನ್ನು ನಾನೊಮ್ಮೆ ಉಡಬೇಕಲ್ಲ ಎನ್ನುವ
ಆಸೆಯಾಯಿತು.
ದಿನಗಳು
ಕಳೆದವು, ಊರಿಗೆ ಮರಳಬೇಕಿತ್ತು. ಹೆಂಡತಿ ಮತ್ತು ಮಗನನ್ನ ಕರೆದುಕೊಂಡು ಹೋಗಲು ಅವನ ಅಪ್ಪ
ಅಲ್ಲಿಗೆ ಬಂದ. ಒಂದೆರೆಡು ದಿನಗಳು ಕಳೆದ ನಂತರ ಊರಿಗೆ ಎಲ್ಲರೂ ಮರಳಿದರು.
ಊರಿಗೆ ಬಂದ
ಮೇಲೆ ಮಗ್ಗದ ಮನೆಗೆ ವೀರಯ್ಯ ಹೋದ, ಅಲ್ಲಿ ಸಾಧಾರಣ ಬಟ್ಟೆಗಳು ತಯಾರಾಗುತಿದ್ದವು. ತನ್ನ
ಮನಸ್ಸಿನಲ್ಲಿದ್ದ ಮಿರ ಮಿರ ಮಿಂಚುವ ಝರಿ ಬಣ್ಣದ ಬಟ್ಟೆ ಅಲ್ಲೆಲ್ಲೂ ಕಾಣಲಿಲ್ಲ. ಏನಿದು, ಯಾಕೆ
ಯಾವ ಬಟ್ಟೆಗಳು ಇಲ್ಲಿಲ್ಲವಲ್ಲ. ಬಹುಶಃ ಯಾವುದಾದರು ಕಪಾಟುವಿನಲ್ಲಿ ಎತ್ತಿಟ್ಟರಬಹುದೆಂದು
ಸುಮ್ಮನಾದ. ಒಂದಲ್ಲ ಒಂದು ದಿನ ಅಂತಹ ಬಟ್ಟೆ ಸಿಗಬಹುದು ಎಂದು ಕಾಯುತಿದ್ದ. ಒಂದು ದಿನ ಜಟಕಾ
ಬಂಡಿಯೊಂದು ಅಲ್ಲಿ ನಿಂತಿತ್ತು. ಯಾರೋ ವ್ಯಾಪಾರಿಯೊಬ್ಬ ಬಂದಿರಬಹುದು ಎಂದು ಭಾವಿಸಿ, ಮನೆಯೊಳಗೆ
ಹೋದ. ಕಪಾಟಿನೊಳಗಿದ್ದ ಬಟ್ಟೆಗಳನ್ನು ಅವನ ಮುಂದೆ ಇಟ್ಟು ಎಲ್ಲವನ್ನು ತೋರಿಸುತ್ತ ವ್ಯಾಪಾರ
ನಡೆಸುತಿದ್ದರು. ತನಗೆ ಬೇಕಾದ ಬಟ್ಟೆ ಅಲ್ಲಿಯಾವುದಾದರು ಇದೆಯೇ ಎಂದು ಕಣ್ಣು ಹಾಯಿಸಿದ. ಝರಿ
ಬಟ್ಟೆಗಳಿದ್ದರೂ ಅವನಿಗೆ ತಕ್ಕುದಾದ ಬಟ್ಟೆಗಳು ಅಲ್ಲಿರಲಿಲ್ಲ. ಆ ವ್ಯಾಪಾರಿ, ವೀರಯ್ಯನನ್ನ
ತೋರಿಸುತ್ತ ಈ ವಯಸ್ಸಿನ ಹುಡುಗನ ಎತ್ತರಕ್ಕೆ ತಕ್ಕಂತೆ, ಒಂದೆರೆಡು ಅಳತೆಯ ಬಟ್ಟೆಗಳನ್ನು
ತಯಾರಿಸಿ ಕೊಡಿ ಮುಂದಿನ ಸಾರಿ ಬಂದಾಗ ತೆಗೆದು ಕೊಂಡು ಹೋಗುತ್ತೀನಿ ಎಂದು ಹೇಳಿದ. ಆ ಮಾತನ್ನ
ಕೇಳಿದ ವೀರಯ್ಯನಿಗೆ ಖುಷಿಯಾಯಿತು,
ಆ ಮಗ್ಗದ
ಮನೆಯಲ್ಲಿ, ಹಲವಾರು ನೇಕಾರರು ಕೆಲಸ ಮಾಡುತಿದ್ದರು. ವಿವಿಧ ರೀತಿಯ ವಸ್ತ್ರಗಳು ಅಲ್ಲಿ
ತಯಾರಾಗುತಿದ್ದವು. ತದನಂತರ ಅದನ್ನ ಜೋಡಿಸಿ ಹೊಲಿಗೆ ಹಾಕುವುದಕ್ಕೆ ಕೆಲ ಕೆಲಸಗಾರರು ಅಲ್ಲಿಗೆ
ಬರುತಿದ್ದರು. ಆ ವಸ್ತ್ರವನ್ನು ತಯಾರಿಸುವವರು ಒಮ್ಮೆಯಾದರು ನನ್ನನ್ನು ಕರೆಯಬಹುದು ಎನ್ನುವ
ಆಸೆಯಿಂದ ದಿನಕ್ಕೊಮ್ಮೆ ಅಲ್ಲಿಗೆ ಬಂದು ಹೋಗಿ ಮಾಡುತಿದ್ದ. ವಸ್ತ್ರಗಳು ತಯಾರಿಸಬೇಕಾದರೆ ಹಲವಾರು
ದಿನಗಳು ಬೇಕಾಗುತಿದ್ದವು. ಹೀಗಾಗಿ ಅವನ ಆಸೆ ಅಷ್ಟು ಬೇಗ ನೆರವೇರಲಿಲ್ಲ. ದಿನಗಳು ಉರುಳಿದಂತೆ ಆ
ಅಸೆ ಅವನಿಂದ ಮರೆಯಾಯಿತು. ಎಂದಿನಂತೆ ತನ್ನ ಆಟ ಪಾಠ, ಕೆಲಸಗಳಲ್ಲಿ ನಿರತನಾಗಿಬಿಟ್ಟ.
ಒಮ್ಮೆ, ಮಗ್ಗದ
ಮನೆಗೆ ಹಾಲು ಕೊಡಲು ತಾಯಿ ಬರಬೇಕಾಗಿತ್ತು, ಆದರೆ ಆ ದಿನ ಅವರು ಬರುವುದಿಕ್ಕೆ ಆಗಲಿಲ್ಲ. ವೀರಯ್ಯ
ಹಾಲು ಹಾಕಲು ಬಂದ, ವಸ್ತ್ರ ನಿರ್ಮಾಣ ಮಾಡುತ್ತಿರುವುದನ್ನು ನೋಡಿ ತನ್ನ ಹಿಂದಿನ ಆಸೆ ಮತ್ತೊಮ್ಮೆ
ಮರುಜನ್ಮ ಪಡೆಯಿತು. ಆಗ ಮೂಲೆಯಲ್ಲಿದ್ದ ಕಪಾಟಿನ ಬಳಿ ಬಂದ, ಅಲ್ಲಿ ಬಟ್ಟೆಗಳನ್ನು
ಜೋಡಿಸುಡುತಿದ್ದರು. ಅವರು ವೀರಯ್ಯನನ್ನ ನೋಡಿ ಏನೋ ಈರಾ ಬಟ್ಟೆಗಳನ್ನ ನೋಡಿಲ್ಲವೇನೋ?
ಇದು
ರಾಜಬೀದಿಯವರು ಉಡುವ ಬಟ್ಟೆಗಳು ಅಲ್ಲವೇ.
ಹೌದು, ನೀನು ಈ
ಬಟ್ಟೆ ಉಡಬೇಕೆ.
ಆಸೆಕಂಗಳಿಂದ
ಹೌದು ಎನ್ನಲು ಹೊರಟ, ಆದರೆ ತಡವರಿಸುತ್ತ ಇಲ್ಲ ಇಲ್ಲ ಎಂದ.
ಅವನ ಆಸೆ
ಕಂಗಳನ್ನು ನೋಡಿದ ಆ ತಾಯಿ, ಸರಿ ಬಾ ಇಲ್ಲಿ ಎಂದು ಅಲ್ಲಿನ ಒಂದು ಬಟ್ಟೆಯನ್ನು ಅವನಿಗೆ ಕೊಟ್ಟರು,
ಇದನ್ನು ಉಟ್ಟು ನೋಡು.
ಬಟ್ಟೆ ಕೈಗೆ
ಬಂದಿದ್ದೇ ತಡ, ತಟ್ಟನೆ ತನ್ನ ಉಡುಪನ್ನು ಕಳಚಿ ಆ ಹೊಸ ವಸ್ತ್ರವನ್ನು ಧರಿಸಿದ. ಬಹುದಿನಗಳ ಆಸೆ
ನೆರವೇರಿತು ಎನ್ನುವ ಖುಷಿಯಿಂದ ಅಲ್ಲಿಇದ್ದ ಕನ್ನಡಿಯಲ್ಲಿ ತನ್ನ ರೂಪವನ್ನು ನೋಡಿಕೊಂಡ.
ರಾಜಕುಮಾರನಂತೆ ಕಾಣುತಿದ್ದ. ಆ ಮನೆಯೆಲ್ಲ ಸುತ್ತಾಡಿದ, ಹಾಡು ಹಾಡಿದ. ಹೇಳತೀರದ ಆ ಸಂತೋಷ
ಅವನಲ್ಲಿ ಎದ್ದು ಕಾಣುತಿತ್ತು.

ಅಪ್ಪ ಅಮ್ಮನಿಗೆ
ಮಗನ ಧಿರಿಸನ್ನು ಕಂಡು ಬಹಳ ಖುಷಿಯಾಯಿತು. ಮಗ ರಾಜಕುಮಾರನಂತೆ ಕಂಡು ಬಂದ. ಮಗನ ಹೊಸರೂಪವನ್ನು
ಕಾಣುತ್ತ ತಮ್ಮ ಮೈ ಮರೆತರು. ತಕ್ಷಣ ವಾಸ್ತವಕ್ಕೆ ಮರಳಿದ ಅವರು, ಮಗಾ ನಮಗೆ ಅವಶ್ಯಕತೆ ಇಲ್ಲದೆ
ಇರುವ ಈ ವಸ್ತ್ರ ನಮಗೆ ಬೇಡ. ಅವರಿಗೆ ಮರಳಿಸಿ ಬಂದು ಬಿಡು ಎಂದು ಹೇಳಿದರು.
ಮನಸ್ಸು
ಒಪ್ಪಲಿಲ್ಲ. ನನಗೆ ಇದು ಬೇಕು ನಾನು ಇದನ್ನು ಕೊಡಲ್ಲ ಎಂದು ಹಠ ಹಿಡಿದ. ಅವನ ತಂದೆ ತಾಯಿ ಮಗಾ ಇದು
ಸರಿಯಲ್ಲ, ಈ ತರಹ ಸಂಸ್ಕಾರ ನಮ್ಮಲ್ಲಿಲ್ಲ. ಅದನ್ನು ಅವರಿಗೆ ಮರಳಿಸಿ ಬಂದು ಬಿಡು ಎಂದರು.
ಒಲ್ಲದ
ಮನಸ್ಸಿನಿಂದ ಮಗ್ಗದ ಮನೆಗೆ ಹೊರಡಲು ಸಿದ್ದನಾದ. ಆದರೆ ಇನ್ನೂ ಒಂದೆರೆಡು ದಿನ ನಾನು ಇಟ್ಟುಕೊಂಡು
ಕೊಡುತ್ತೀನಿ ಎಂದು ಹೇಳಿದ. ಸರಿ ಎಂದು ಎಲ್ಲರೂ ಹೇಳಿದರು.
ಆಗ ಮಗ್ಗದಮನೆಗೆ
ಈರಯ್ಯನ ತಾಯಿ ಹೋಗಿ, ಮಗ ಹಠ ಹಿಡಿದಿದ್ದನ್ನು ಹೇಳಿದಳು. ನಾಳೆ ನಾನೇ ಅವನಿಗೆ ಗೊತ್ತಿಲ್ಲದೆ
ವಸ್ತ್ರವನ್ನು ತಂದು ನಿಮಗೆ ಹಿಂದಿರುಗಿಸುತ್ತೀನಿ ಎಂದು ಒಪ್ಪಿಸಿದಳು.
ಒಂದೆರೆಡು
ದಿನಗಳು ಕಳೆದವು, ಎಲ್ಲರೂ ಅವರವರ ಕೆಲಸದಲ್ಲಿ ಮಗ್ನರಾಗಿದ್ದರಿಂದ ಆ “ವಸ್ತ್ರದ” ಬಗ್ಗೆ ಎಲ್ಲರೂ
ಮರೆಯಲಾರಂಬಿಸಿದರು. ವೀರಯ್ಯ ಯಾರಿಗೂ ಕಾಣದೆ ಹಾಗೆ ವಸ್ತ್ರವನ್ನು ಬಚ್ಚಿಟ್ಟಿದ್ದನು, ತನಗೆ ನೋಡ
ಬೇಕೆನಿಸಿದಾಗ ಅದನ್ನು ಎತ್ತಿ ನೋಡುತಿದ್ದ. ವಾರದ ಮೇಲೆ ಆಯಿತು, ಮಗ್ಗದ ಮನೆ ಕಡೆ ತಲೆ
ಹಾಕಲಿಲ್ಲ.

ಮನೆಗೆ ಮರಳಿದ
ಮೇಲೆ, ಕೋಪದಿಂದ ವೀರಯ್ಯನನ್ನು ಪ್ರಶ್ನಿಸಿದರು. ಆ ಬಟ್ಟೆಯನ್ನು ಅವರಿಗೆ ಮರಳಿಸಿ ಬಾ ಎಂದಿದ್ದೆ.
ಮರಳಿಸದೆ ಹಾಗೆ ಇದ್ದೀಯಲ್ಲ. ಎಂತಹ ಕೆಲಸ ಮಾಡಿಬಿಟ್ಟೆ ನೀನು, ನಮಗೆ ಅವಮಾನ ವಾಗುವಂತೆ ಮಾಡಿಬಿಟ್ಟೆಯಲ್ಲ.
ತಾಯಿಯ ಕೋಪ ಅವನಲ್ಲಿ ಭಯವನ್ನು ತರಿಸಿತು. ವಾಪಾಸ್ ಕೊಡಲು ಹೋದರೆ ತನಗೂ ಅವಮಾನ ವಾಗುವುದು
ಅಲ್ಲವೇ ಅವರನ್ನು ಹೇಗೆ ಎದುರಿಸಲಿ, ಇದು ನನ್ನಿಂದಾಗದ ಕೆಲಸ ಎಂದು ಅಳುತ್ತ ನಿಂತ.
ಅವನ ತಾಯಿ, ಅಳುವುದು
ನಿಲ್ಲಿಸಿ ಈಗಲೇ ಅವರಮನೆಗೆ ಹೋಗಿ ಕೊಟ್ಟು ಬಾ, ಇಲ್ಲದೆ ಇದ್ದರೆ ನಿನ್ನ ಅಪ್ಪನಿಗೆ ಹೇಳುತ್ತೀನಿ.
ಒಲ್ಲದ ಮನಸ್ಸಿನಿಂದ
ವಸ್ತ್ರವನ್ನ ತೆಗೆದು ಕೊಂಡು ಮಗ್ಗದ ಮನೆಗೆ ಹೊರಟು ನಿಂತ.
ಮಗ್ಗದ ಮನೆಯ
ನಾಗಮ್ಮ ಅವನು ಅಳುತ್ತ ಬಂದಿದ್ದು, ಸಂಕೋಚದಿಂದ ವಸ್ತ್ರವನ್ನು ಹಿಂತಿರುಗಿಸಿದ್ದನ್ನು ನೋಡಿ, ಅವನ
ಕೈಯನ್ನು ಹಿಡಿದು ಹತ್ತಿರ ಕೂರಿಸಿಕೊಂಡು ತಲೆ ನೇವರಿಸುತ್ತ., ಯಾಕೋ ರಾಜ ಇಷ್ಟು ದಿನ ಮನೆ ಕಡೆ
ಬರಲಿಲ್ಲ...
ಆದಿನ ಮರಳಿ ಬರುತ್ತೇನೆಂದು
ಹೋಗಿ ಮತ್ತೆ ಯಾಕೆ ಬರಲಿಲ್ಲ. ಬಟ್ಟೆ ಹಿಂತಿರುಗಿಸಲು ಮನಸ್ಸಿರಲಿಲ್ಲವೇ
ಅದಕ್ಕೂ
ಉತ್ತರವಿಲ್ಲ.
ನೀನು ಹಿಂತಿರುಗಿಸಿದಿದ್ದರೆ
ನಿನ್ನನ್ನು ಬೈಯುತ್ತೇವೆಂದು ಹೆದರಿದ್ದೆಯಾ?
ಬಳಬಳನೆ ಕಣ್ಣಿಂದ
ನೀರು ಬಂತು, ಅಳುವುದಿಕ್ಕೆ ಶುರು ಮಾಡಿದ.
ಅಯ್ಯೊ ಅಳಬೇಡ ಏನಾಯ್ತು ಅಂತ ಅಳ್ತಾಯಿದೀಯಾ, ನಾವು ಬಯ್ಯಲ್ಲ, ಹೊಡೆಯುವುದು ಇಲ್ಲ. ಸುಮ್ಮನೆ ಇರು., ಬಾ ಎಂದು ಅವನನ್ನ ಅಪ್ಪಿಕೊಂಡು ಸಮಾಧಾನ ಮಾಡಿದರು.
ನೋಡಪ್ಪ, ನಾವು
ನೇಕಾರರು ಜನರ ಮಾನ ಮುಚ್ಚುವ ಕೆಲಸ ಮಾಡುವವರು. ಮಾನ ಹರಾಜು ಹಾಕುವವರಲ್ಲ. ಇಂಥಹ ನೂರಾರು ಬಟ್ಟೆಗಳನ್ನ
ತಯಾರಿಸ್ತೀವಿ. ಒಂದು ಬಟ್ಟೆಯಿಂದ ನಮಗೆ ಅಂತಹ ದೊಡ್ಡ ನಷ್ಟ ಆಗಲ್ಲ. ಈ ಬಟ್ಟೆಯನ್ನ ನೀನೇ ಇಟ್ಟುಕೊ.
ಉಟ್ಟುಕೊಂಡು ಖುಷಿಯಾಗಿರು. ಅಳಬೇಡ ಮಗನೇ ಎಂದು ಸಮಾಧಾನ ಮಾಡಿದರು.

ಅವನ ಮನದಲ್ಲಿದ್ದ
ಹೆದರಿಕೆ, ಭಯ ಎಲ್ಲವೂ ಹೊರಟುಹೋಗಿತ್ತು. ಮಾತುಗಳಲ್ಲಿ ಪ್ರೌಡಿಮೆ ಎದ್ದು ಕಾಣುತಿತ್ತು.