ಬುಧವಾರ, ಅಕ್ಟೋಬರ್ 12, 2022

ಗುಜರಾತಿನ ಮಹಾರಾಣಿ ಕನ್ನಡತಿ ಮೈನಾಳದೇವಿ

 

ಗುಜರಾತಿನ ಮಹಾರಾಣಿ ಕನ್ನಡತಿ ಮೈನಾಳದೇವಿ

ಬರಹ:- ಪಿ.ಎಸ್.ರಂಗನಾಥ. ಮಸ್ಕತ್

 



ಶತಶತಮಾನಗಳ ಇತಿಹಾಸವನ್ನ ನಾವು ಇಂದು ಅರಿಯಲು ಸಾಧ್ಯವಾಗಿದ್ದು, ಅಂದಿನ ರಾಜ ಮಹರಾಜರು, ಮಹಾರಾಣಿಯರು ಕಟ್ಟಿಸಿದ ಅರಮನೆಗಳು, ಪಾರಂಪಾರಿಕ ಕಟ್ಟಡಗಳು, ಸ್ಮಾರಕಗಳು, ಕೋಟೆ ಕೊತ್ತಲುಗಳು, ಕೆರೆ ಕಟ್ಟೆಗಳು, ಶಿಲಾಶಾಸನ, ತಾಮ್ರ ಪತ್ರ ಮತ್ತು ತಾಳೆಗರಿ ಪತ್ರಗಳು, ಮೌಖಿಕ ಸಾಹಿತ್ಯ, ಮಹಾಕಾವ್ಯಗಳು, ನಾಟಕ ಇನ್ನು ಮುಂತಾದವುಗಳ ಮುಖಾಂತರ ನಾವು ನೂರಾರು ವರ್ಷಗಳ ಇತಿಹಾಸವನ್ನ ಇಂದು ತಿಳಿಯುತಿದ್ದೇವೆ. ಈ ಲೇಖನದಲ್ಲಿ ಪ್ರಸ್ತುತ ಪಡಿಸಿರುವ ಮಹಾರಾಣಿಯ ಮೈನಾಳದೇವಿಯವರ ಒಂಬೈನೂರು ವರ್ಷಗಳ ಹಿಂದಿನ ಮಾಹಿತಿ ದೊರೆಯಲು ಕಾರಣವಾಗಿದ್ದು ಅವರು ಆಡಳಿತ ನಡೆಸಿದ ಸಮಯದಲ್ಲಿ ಕಟ್ಟಿಸಿದ ಕೆಲ ಸರೋವರಗಳು, ಗುಡಿ ಗೋಪುರಗಳು ಮತ್ತು ಅವರ ಆಸ್ಥಾನದಲ್ಲಿದ್ದ ಕೆಲ ಕವಿಗಳು ರಚಿಸಿದ ಸಾಹಿತ್ಯದಿಂದ ಅವರ ಬಗೆಗಿನ ಮಾಹಿತಿ ಜನರಿಗೆ ಲಭ್ಯವಾಯಿತು.

ಗುಜರಾತಿನಲ್ಲಿ ಈಗಲೂ ಒಂದು ಮಾತು ಜನಜನಿತವಾಗಿದೆ. ನಿಮಗೆ "ನ್ಯಾಯ ಅಂದರೆ ಏನು ಅಂತ ನೋಡಬೇಕೆಂದರೆ, ಧೋಲ್ಕಾಗೆ ಹೋಗಿ ಮಾಲ್ವಾ ತಲಾವ್ (ಮಾಲ್ವ ಸರೋವರ) ಅನ್ನು ನೋಡಿ" ಎಂದು ಹೇಳುತ್ತಾರೆ. ಈ ಮಾತಿಗೆ, ಹನ್ನೊಂದನೇ ಶತಮಾನದಲ್ಲಿ ನಡೆದ ಒಂದು ಕುತುಹಲಕಾರಿ ಘಟನೆ ಕಾರಣವಾಯಿತು. ಗುಜರಾತ್ ರಾಜ್ಯ ಬಹಳಷ್ಟು ಭಾಗ ಒಣ ಭೂಮಿಯನ್ನು ಹೊಂದಿರುವ ಪ್ರದೇಶ. ಬಿರು ಬೇಸಿಗೆಯಲ್ಲಿ ನೀರಿನ ಅಭಾವ ಹೆಚ್ಚಾಗಿ ಕಾಡುತ್ತಿರುತ್ತದೆ. ಜನಕಲ್ಯಾಣದಲ್ಲಿ ನಂಬಿಕೆ ಇಟ್ಟಿದ್ದ ರಾಜಮಾತೆ ಆ ಭಾಗದಲ್ಲಿ ಆಳ್ವಿಕೆ ನಡೆಸುತಿದ್ದ ಚಾಲುಕ್ಯ ರಾಜಮನೆತನ ಕೆರೆ ಕಟ್ಟೆಗಳನ್ನ ಕಟ್ಟುವ ಯೋಜನೆ ಯೊಂದನ್ನ ರೂಪಿಸುತ್ತಾರೆ.



ಮಾಲ್ವಾ ತಲಾವ್

ಸೂಕ್ತ ಪ್ರದೇಶವನ್ನ ನೋಡಿ ಅಲ್ಲಲ್ಲಿ ಕೆರೆ, ಸರೋವರಗಳನ್ನ ಕಟ್ಟಲು ಪ್ರಾರಂಭಿಸುತ್ತಾರೆ. ಈ ಸರೋವರ, ಬಾವಿ, ಕೊಳಗಳನ್ನ ಕಟ್ಟುವಾಗ ಒಂದು ಸುಂದರ ರೂಪವನ್ನ ಕೊಟ್ಟು ಕಟ್ಟಿಸಲು ಯೋಜನೆ ಹಾಕುತ್ತಾರೆ. ಅದರಂತೆ ದೋಲ್ಕಾ ಪ್ರದೇಶದಲ್ಲಿನ ಮಾಲ್ವಾ ಊರಿನಲ್ಲಿ ವರ್ತುಲಾಕಾರದಲ್ಲಿ ಸರೋವರ ಕಟ್ಟಲು ತಯಾರಿ ನಡೆಸುತ್ತಾರೆ. ಆ ಸ್ಥಳದಲ್ಲೊಂದು ಒಬ್ಬ ಮಹಿಳೆಯ ಮನೆಯಿರುತ್ತದೆ.  ಆ ಕೊಳಕ್ಕೆ ವರ್ತುಲಾಕಾರದ ಆಕಾರ  ಬರಬೇಕಾದರೆ, ಆ ಮನೆಯನ್ನು ತೆರವು ಗೊಳಿಸಬೇಕಾಗಿರುತ್ತದೆ. ಆದ ಕಾರಣ ಆ ಮಹಿಳೆಗೆ ಮನೆ ತೆರವು ಮಾಡಲು ಸೂಚಿಸುತ್ತಾರೆ. ಆದರೆ ಆ ಮಹಿಳೆ ಅಲ್ಲಿಂದ ಸ್ಥಳ ಖಾಲಿ ಮಾಡಲು ಒಪ್ಪುವುದಿಲ್ಲ. ಪರಿಹಾರವಾಗಿ ಆ ಮಹಿಳೆಗೆ ದೊಡ್ಡ ಮೊತ್ತದ ಹಣವನ್ನು ನೀಡಲು ರಾಣಿಯು  ಮುಂದಾಗುತ್ತಾಳೆ.  ಆ ಮಹಿಳೆ ಆ ಹಣವನ್ನ ನಿರಾಕರಿಸಿ, ನಿಮ್ಮ ಹಣ ನನಗೆ ಬೇಡವೇ ಬೇಡ. ಒತ್ತಡದಿಂದ ನನ್ನ ಮನೆಯನ್ನು ತೆರವು ಮಾಡಿಸಲು ಯತ್ನಿಸಿದರೆ ನನ್ನ ಪ್ರಾಣವನ್ನು ತ್ಯಾಗ ಮಾಡುವೆ, ಇದರಿಂದ. "ನೀವು ಕಟ್ಟುತ್ತಿರುವ ಕೆರೆ ನನ್ನ ಹೆಸರಿನಿಂದ ಪ್ರಸಿದ್ಧವಾಗಲಿ" ಎಂದು ಬೆದರಿಕೆ ಹಾಕುತ್ತಾಳೆ.


Malav Talav Google Map View

ಮಹಾರಾಣಿ ಆ ಮಹಿಳೆಯನ್ನು ಬಲವಂತ ಮಾಡಲಿಕ್ಕೆ ಹೋಗುವುದಿಲ್ಲ. ಆದರೆ ಆ ಮನೆಗೆ ಸೂಕ್ತ ಜಾಗವನ್ನ ಬಿಟ್ಟು, ಅದಕ್ಕೊಂದು ಸುಂದರ ರೂಪ ಕೊಟ್ಟು, ಸರೋವರವನ್ನ ನಿರ್ಮಾಣ ಮಾಡುತ್ತಾರೆ. ಈ ಘಟನೆ ಗುಜರಾತಿನೆಲ್ಲೆಡೆ ಸುದ್ದಿಯಾಗುತ್ತದೆ. ಈ ಕಾರ್ಯದಿಂದ ಮಹಾರಾಣಿ ನ್ಯಾಯಯುತ ಆಡಳಿತಗಾರಳು ಎಂದು ಗುಜರಾತಿನಲ್ಲೆಡೆ ಪ್ರಸಿದ್ದಿಯಾಗುತ್ತಾಳೆ.  "ನಿಮಗೆ ನ್ಯಾಯ ಅಂದರೆ ಏನು ಅಂತ ನೋಡಬೆಕೆಂದರೆ ಧೋಲ್ಕಾಗೆ ಹೋಗಿ ಮಾಲ್ವಾ ಸರೋವರವನ್ನು ನೋಡಿ", ಎನ್ನುವ ಮಾತು ಸುಪ್ರಸಿದ್ದವಾಗುತ್ತದೆ. ಇದು ಹನ್ನೊಂದನೇ ಶತಮಾನದ ಘಟನೆ, ಇಂದಿಗೂ ಆ ಕೆರೆ ಉಳಿದಿದೆ, ಅಲ್ಲಿ ನಿರ್ಮಿಸಿದ ಚಾಲುಕ್ಯರ ವಾಸ್ತುಶೈಲಿಯಲ್ಲಿನ ಮಂಟಪವೂ ಹಾಗೆಯೇ ಇದೆ. ಸುಮಾರು ಒಂಬೈನೂರು ವರ್ಷಗಳ ಹಿಂದಿನ ಘಟನೆ, ಆ ಮಹಾರಾಣಿಯ ಕಾರ್ಯಗಳು ಇಂದಿಗೂ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿವೆ ಎಂದರೆ ಅವರು ಯಾವ ಮಟ್ಟಕ್ಕೆ ಜನಪರ ಕೆಲಸ ಕಾರ್ಯಗಳು ಮಾಡಿದ್ದಿರಬಹುದು ಅಲ್ಲವೇ? ಮುನ್ಸಾರ್ ಲೇಕ್ ಎನ್ನುವ ಇನ್ನೊಂದು ಸುಂದರವಾದ ಕೊಳವನ್ನ ಅಹಮದಾಬಾದಿನ ವಿರಂಗಂ ನಲ್ಲಿ ಅವರು ನಿರ್ಮಿಸಿದ್ದಾರೆ. ಅದಕ್ಕೆ ಮಾನ್ ಸರೋವರ ಎನ್ನುವ ಹೆಸರಿದೆ. ಅದರ ಸುತ್ತಲೂ ಮುನ್ನೂರಕ್ಕೂ ಹೆಚ್ಚಿನ ಚಿಕ್ಕ ಚಿಕ್ಕ ದೇವಸ್ಥಾನಗಳು ನಿರ್ಮಾಣವಾಗಿವೆ.

 

Munsar Lake

 ಬನವಾಸಿ ಕದಂಬರ ಉಪಶಾಖೆ: ಅಂದಹಾಗೆ, ಆ ಮಹಾರಾಣಿಯ ಹೆಸರು "ಮೈನಾಳ ದೇವಿ(ಮಿನಾಲ್ ದೇವಿ)". ಇವರು ಕರ್ನಾಟಕ ಮೂಲದವರು ಎನ್ನುವುದು ವಿಶೇಷ ಸಂಗತಿ.  ಹನ್ನೊಂದನೇ ಶತಮಾನದಲ್ಲಿ ಗೋವಾ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯ ಕೆಲ ಭಾಗವನ್ನ ಆಳುತಿದ್ದ ಗೋವಾ ಕದಂಬ ವಂಶದ ರಾಜಾ ಒಂದನೆ ಜಯಕೇಶಿಯ ಮಗಳು ಇವರು. ಮೈನಾಳ ಎನ್ನುವ ಗ್ರಾಮ ಉತ್ತರಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನಲ್ಲಿದೆ. ಈ ಗೋವಾ ಕದಂಬರು ಬೇರೆ ಯಾರೂ ಅಲ್ಲ, ಬನವಾಸಿ ಕದಂಬ ಮನೆತನದ ಒಂದು ಟಿಸಿಲು(ಉಪ ಶಾಖೆ). ಇವರ ಆಡಳಿತ ಹೇಗೆ ಶುರುವಾಯಿತೆಂದರೆ, ಹತ್ತನೇ ಶತಮಾನದಲ್ಲಿ  ರಾಷ್ಟ್ರಕೂಟರು ಕೊಂಕಣಿ ಪ್ರದೇಶವನ್ನ ಆಳುತಿದ್ದರು. ಈ ಪ್ರದೇಶವನ್ನ ತಮ್ಮ ತೆಕ್ಕೆಗೆ ಪಡೆಯಲು ಬಾದಾಮಿ ಚಾಲುಕ್ಯರು ಸರಿಯಾದ ಸಮಯಕ್ಕಾಗಿ ಕಾಯುತಿದ್ದರು. ಅದು ರಾಷ್ಟ್ರಕೂಟ ಸಾಮ್ರಾಜ್ಯದ ಅಂತಿಮ ದಿನಗಳು. ಆಗ ಕದಂಬರ ಕುಡಿ ಷಷ್ಟದೇವನ ಸಹಾಯದಿಂದ ರಾಷ್ಟ್ರಕೂಟರನ್ನ ಕೊಂಕಣ ಪ್ರದೇಶದಲ್ಲಿ ಮಣಿಸಿ ಅಲ್ಲಿ ಷಷ್ಟದೇವನನ್ನ ಗೋವಾದ ಮಹಾಮಂಡಳೇಶ್ವರನನ್ನಾಗಿ ಸ್ಥಾಪಿಸುತ್ತಾರೆ (960CE). ಆಗಿನಿಂದ ಗೋವಾ ಕದಂಬ ಮನೆತನ ಆ ಪ್ರದೇಶವನ್ನ ಆಳುತ್ತಾರೆ. ಇವರ ಆಡಳಿತ ಭಾಷೆ ಸಂಸ್ಕೃತ ಮತ್ತು ಕನ್ನಡವಾಗಿತ್ತು. ಗೋವದ ಕದಂಬ ಮನೆತನ ಬನವಾಸಿ ಕದಂಬ ಮನೆತನದ ಉಪಶಾಖೆಗಳಲ್ಲೊಂದಾಗಿತ್ತು ಎಂದು ತಿಳಿದು ಬರುತ್ತದೆ

 


ಗೋವ ಕದಂಬ ವಂಶದ ನಾಲ್ಕನೇ ತಲೆಮಾರಿನ ರಾಜ ಒಂದನೇ ಜಯಕೇಶಿ. ಈತ ಪರಾಕ್ರಮಿಯೂ,  ದೂರ ದೃಷ್ಟಿಯ ವಿಚಾರವಂತನೂ ಆಗಿದ್ದನು, ಆಗಿನ ಕಾಲದಲ್ಲಿ ನಡೆಯುತಿದ್ದ ರಾಜಮನೆತನಗಳ ನಡುವಿನ ಕಾಳಗಗಳನ್ನ, ರಕ್ತಪಾತಗಳನ್ನ ತಪ್ಪಿಸಿ ಶಾಂತಿ ನೆಲೆಸುವ ಬಗ್ಗೆಯೇ ಬಹಳ ಯೋಚಿಸುತಿದ್ದನು. ಆತನಿಗೆ ಶಾಂತಿ, ನೆಮ್ಮದಿ, ರಾಜ್ಯಾಭಿವೃದ್ದಿ, ಪ್ರಜೆಗಳ ಕ್ಷೇಮಾಭಿವೃದ್ದಿಯೇ ಮುಖ್ಯವಾಗಿತ್ತು. ತನ್ನ ಚಿಕ್ಕದಾದ ಗೋವಾ ಸಾಮ್ರಾಜ್ಯಕ್ಕೆ  ಮುಂದೆ ಚಾಲುಕ್ಯರಿಂದ ಯಾವುದೇ ತೊಂದರೆ ಬರಬಾರದು ಎನ್ನುವ ದೂರಾಲೋಚನೆಯಿಂದ, ಕದಂಬ ಮತ್ತು ಚಾಲುಕ್ಯ ರಾಜಮನೆತನಗಳ ಭಾಂದವ್ಯ ಬೆಳೆಸುವ ಬಗ್ಗೆ ಯೋಚಿಸಿ  ತನ್ನ ಇಬ್ಬರ ಮಕ್ಕಳಲ್ಲಿ ಒಬ್ಬ ಮಗಳನ್ನ ಕಲ್ಯಾಣಿ ಚಾಳುಕ್ಯ ವಿಕ್ರಮಾದಿತ್ಯನಿಗೆ ಮತ್ತು ಇನ್ನೊಬ್ಬ ಮಗಳನ್ನೂ ಗುಜರಾತಿನ ಅನಿಲ್ವಾಡದ (ಈಗಿನ ಪಾಠಣ್) ಚಾಲುಕ್ಯ ಒಂದನೇ ಕರ್ಣ ದೇವನಿಗೆ ಕೊಟ್ಟು ವಿವಾಹ ಮಾಡಿಕೊಡುತ್ತಾನೆ. ಗುಜರಾತಿನ ಪೂರ್ವ ಮತ್ತು ದಕ್ಷಿಣ ಪ್ರಾಂತ್ಯವನ್ನ ಗುಜರಾತಿನ ಚಾಲುಕ್ಯರು ( ಅಲ್ಲಿ ಸೋಳಂಕಿ ಎಂದು ಗುರುತಿಸುತ್ತಾರೆ) ಆಳುತ್ತಿರುತ್ತಾರೆ. ಹೀಗೆ ರಾಜ ಒಂದನೆ ಜಯಕೇಶಿ ಕದಂಬ ಸಂತತಿಯ ಪ್ರಭಾವವನ್ನು ವಿಸ್ತರಿಸುತ್ತಾನೆ.

 ಮೈನಾಳ ದೇವಿ ಮದುವೆಯಾಗಿ ಗುಜರಾತಿಗೆ ಬರುತ್ತಾರೆ. ಅಲ್ಲಿ ಮಿನಾಲ್ ದೇವಿ ಎಂದು ಹೆಸರು ಬದಲಾವಣೆಯಾಗುತ್ತದೆ. ರಾಜ ಕರ್ಣ ದೇವ(1064–1092), ಒಮ್ಮೆ ಮಾಳವರು ಕರ್ಣದೇವನ ಮೇಲೆ ಯುದ್ದ ಮಾಡುತ್ತಾರೆ. ಆ ಯುದ್ದದಲ್ಲಿ ಕರ್ಣದೇವ ತೀವ್ರವಾಗಿ ಗಾಯಗೊಳ್ಳುತ್ತಾನೆ. ಯುದ್ದವನ್ನ ಗೆದ್ದನಂತರ, ಗಾಯಗಳಿಂದ ಚೇತರಿಸಿಕೊಳ್ಳದೆ ಅನಾರೋಗ್ಯಕ್ಕೆ ಗುರಿಯಾಗುತ್ತಾನೆ. ಕೇವಲ ಇಪ್ಪತ್ತೆಂಟು ವಯಸ್ಸಿನಲ್ಲಿ ಅಕಾಲಿಕ ಮರಣ ಹೊಂದುತ್ತಾನೆ. ಮಗನಾದ ರಾಜ ಜಯಸಿಂಹ ಸಿದ್ದರಾಜ ವಯಸ್ಸಿನಲ್ಲಿ ತುಂಬಾ ಚಿಕ್ಕವನು. ಈ ಸಂಧರ್ಭದಲ್ಲಿ, ಮಗನ ಪರವಾಗಿ ಮೈನಾಳ್ ದೇವಿ ರಾಜ್ಯಭಾರ ನಡೆಸಬೇಕಾಗುತ್ತದೆ. ಪಕ್ಕದಲ್ಲಿದ್ದ ಮಾಳವರು. ರಜಪೂತರು ಮತ್ತಿತರ ಸಂಸ್ಥಾನಗಳು ಒಬ್ಬರನ್ನೊಬ್ಬರು ಆಕ್ರಮಿಸಿ ತಮ್ಮ ಸಾಮ್ರಾಜ್ಯ ವಿಸ್ತರಿಸಿಕೊಳ್ಳಲು ಕಾಯುತ್ತಿರುತ್ತಾರೆ. ಇಂತಹ ಸಂಧರ್ಭದಲ್ಲಿ, ರಾಣಿ ತನ್ನ ಧೈರ್ಯ, ಶೌರ್ಯ, ಆಡಳಿತದಲ್ಲಿನ ಅಸಾಧಾರಣ ಸಾಮರ್ಥ್ಯ ಚಾಲುಕ್ಯರ ರಾಜ್ಯವನ್ನ ಕಾಪಾಡಿಕೊಳ್ಳುತ್ತಾಳೆ.  ಮುಂದೆ  ಜನಪರ ಕಾರ್ಯಕ್ರಮಗಳಿಂದ ಉತ್ತಮ ಹೆಸರನ್ನ ಸಹ ಸಂಪಾದಿಸುತ್ತಾಳೆ. ಇದಕ್ಕೆಲ್ಲ ಕಾರಣ ತಂದೆ ಒಂದನೇ ಜಯಕೇಶಿ.  ಯಾಕೆಂದರೆ ಒಂದನೆಯ ಜಯಕೇಶಿಯ ಆಳ್ವಿಕೆಯಲ್ಲಿ ತನ್ನ ರಾಜ್ಯ ಸರ್ವತೋಮುಖವಾದ ಅಭಿವೃದ್ಧಿ ಹೊಂದಿ ನೆಮ್ಮದಿಯ ಬೀಡಾಗಿತ್ತು. ತಂದೆಯ ಮಾರ್ಗದರ್ಶನ ಮಗಳು ಉತ್ತಮ ಆಡಳಿತ ನೀಡುವಲ್ಲಿ ಸಹಕಾರಿಯಾಯಿತು.

 ಸೋಮನಾಥ ಯಾತ್ರೆಯ ಒಂದು ಪ್ರಸಿದ್ಧ ಕಥೆ ಗುಜರಾತಿನಲ್ಲಿ ಪ್ರಚಲಿತದಲ್ಲಿದೆ. ಒಮ್ಮೆ ರಾಣಿ, ಸೋಮೇಶ್ವರ ದೇವಸ್ಥಾನಕ್ಕೆ ಹೋಗುವಾಗ ದಾರಿ ಮಧ್ಯ ವಿಶ್ರಾಂತಿ ಪಡೆಯುತ್ತಿರುತ್ತಾಳೆ. ಆಗ ಕೆಲವು ಸಾಧು-ಸಂತರು-ಸನ್ಯಾಸಿಗಳು ಮತ್ತು ಬಡ ಯಾತ್ರಿಕರರು ಅಲ್ಲಿಗೆ ಬಂದು ಬೇಟಿಯಾಗುತ್ತಾರೆ. ಹೇಗಿದ್ದೀಯಪ್ಪ ಸಾಧು ? ಎಲ್ಲಾ ಸೌಖ್ಯವೇ ಎಂದು ಕಷ್ಟ ಸುಖ ಕೇಳುತ್ತಾಳೆ. ಆಗ ಆ ಸಾಧು, ತಾಯಿ ನಮ್ಮಂತವರು ಸೋಮೇಶ್ವರನ ದರ್ಶನ ಮಾಡಲು ಹಣವನ್ನ ಎಲ್ಲಿಂದ ತರಬೇಕು ತಾಯಿ? ಎಂದು ಪ್ರಶ್ನಿಸುತ್ತಾನೆ.  ಯಾತ್ರಿಕರ ತೆರಿಗೆಯನ್ನು ಪಾವತಿಸಲು ಸಾಧ್ಯವಾಗದ ಕಾರಣ ಸೋಮನಾಥ ದೇವರನ್ನು ಮಾಡಲು ಸಾಧ್ಯವಾಗಲಿಲ್ಲ ಎಂದು ಅವರು ರಾಜಮಾತೆ ಮೀನಾಲ್ದೇವಿಗೆ ದೂರು ನೀಡುತ್ತಾರೆ. 


ಆಗಿನ ಕಾಲದಲ್ಲಿ ಸೋಮನಾಥನ ದರ್ಶನ ಪಡೆಯಲು ಹಣವನ್ನ ನೀಡ ಬೇಕಾಗಿರುತ್ತದೆ. ರಾಜಮಾತೆ ಮೀನಾಲ್ ದೇವಿ ಇದನ್ನು ಸಹಿಸಲಾರದೆ ಯೂ ಸೋಮನಾಥನನ್ನು ನೋಡದೆ ಹಿಂದಿರುಗುತ್ತಾಳೆ. ಅರಮನೆಗೆ ಬಂದು ತನ್ನ ಮಗ ಮತ್ತು ರಾಜ ಜೈ ಸಿಂಗ್‌ಗೆ ನಡೆದ ಘಟನೆಯನ್ನ ವಿವರಿಸುತ್ತಾಳೆ. ತಾಯಿಯ ಕೋರಿಕೆಯ ಮೇರೆಗೆ, ಮಹಾರಾಜ್ ಸಿದ್ಧರಾಜ್ ಜೈ ಸಿಂಗ್ ಅವರು ಸೋಮನಾಥ ಯಾತ್ರೆಗೆ ಯಾತ್ರಿಕರ ತೆರಿಗೆಯನ್ನು ರದ್ದುಗೊಳಿಸುತ್ತಾರೆ. ಈ ಯಾತ್ರಿ ತೆರಿಗೆಯಿಂದ ಸುಮಾರು ವಾರ್ಷಿಕ 72 ಲಕ್ಷ ರೂಪಾಯಿಗಳ ಆದಾಯವು ಸ್ಥಗಿತಗೊಳ್ಳುತ್ತದೆ.  ಸೋಮೇಶ್ವರ ದೇವಸ್ಥಾನವನ್ನ ಜೀರ್ಣೋದ್ದಾರವನ್ನ ಸಹ ರಾಣಿ ಮಾಡಿಸುತ್ತಾಳೆ. ಹೀಗೆ ಅನೇಕ ಸುಧಾರಣೆಗಳಿಗೆ, ನ್ಯಾಯಪರ ಆಡಳಿತಕ್ಕೆ ಹೆಸರುವಾಸಿಯಾಗಿದ್ದ ರಾಣಿ ಮೈನಾಳ ದೇವಿ ಇಂದಿಗೂ ಜನ ಮಾನಸದಲ್ಲಿ ನೆಲೆಸಿದ್ದಾಳೆ.  1946 ನೇ ಇಸವಿಯಲ್ಲಿ "ಮಹಾರಾಣಿ ಮಿನಾಲ್ ದೇವಿ" ಎನ್ನುವ ಗುಜರಾತಿ ಚಲನಚಿತ್ರವೂ ಬಿಡುಗಡೆಯಾಗಿದೆ. 

 


Gujarati Movie Maharani Minal Devi

ರಾಣಿಯ ಬಗ್ಗೆ ಹಲವಾರು ಸಂಸ್ಕೃತ ಸಾಹಿತ್ಯ ಮತ್ತು ನಾಟಕಗಳಲ್ಲಿ ಉಲ್ಲೇಖಿಸಿದ್ದಾರೆಸಂಸ್ಕೃತ ಕವಿ ಭಿಲ್ಹಣ ಬರೆದ ಕರ್ಣ ಸುಂದರಿ ಎಂಬ ನಾಟಕದಲ್ಲಿ ಪತಿ ರಾಜ ಒಂದನೇ ಕರ್ಣದೇವ ಮತ್ತು ರಾಣಿಯ ಬಗ್ಗೆ ಪ್ರಸಂಗಗಳಿವೆ. ಇನ್ನೊಂದು ಪ್ರಮುಖವಾದ ಮುದ್ರಿತ ಕುಮುದ ಚಂದ್ರ ಪ್ರಕರಣ ಎಂಬ ಶೀರ್ಷಿಕೆಯ ಸಂಸ್ಕೃತ ನಾಟಕವು ಎರಡು ಪ್ರಮುಖ ಜೈನ ಪಂಥಗಳಾದ ದಿಗಂಬರ ಮತ್ತು ಶ್ವೇತಾಂಬರರ ನಡುವಿನ ವಿವಾದದ ಚಿತ್ರಣವನ್ನ ಹೊಂದಿದೆ. ಈ ವಿವಾದದ ಒಂದು ವಿಷಯವೆಂದರೆ ಮಹಿಳೆ ಮೋಕ್ಷವನ್ನು ಸಾಧಿಸಬಹುದೇ ಎಂಬುದು. ಇಲ್ಲಿರುವ ಶ್ವೇತಾಂಬರರು "ಅಂತರಂಗ ಹಾಗೂ ಬಹಿರಂಗದಲ್ಲಿ ಉತ್ತಮವಾದ ಮನೋಗುಣವನ್ನ ಹೊಂದಿರುವ ಮಹಿಳೆಯರು ಮೋಕ್ಷವನ್ನು ಪಡೆಯಬಹುದು" ಎಂದು ಪ್ರತಿಪಾದಿಸುತ್ತಾರೆ.  ರಾಮಾಯಣದ  ಸೀತಾ ಮಾತೆ ಮತ್ತು ಮಹಾರಾಣಿ ಮಿನಾಲ್ ದೇವಿಯವರನ್ನು ಉದಾಹರಣೆಗಳಾಗಿ ಉಲ್ಲೇಖಿಸುತ್ತಾರೆ.

 


ನಮ್ಮ ಕೋಲಾಟ, ಗರ್ಭಾ ಮತ್ತು ದಾಂಡಿಯ ನೃತ್ಯವಾಗಿದ್ದು: ಮೈನಾಳ್ ದೇವಿ ಸ್ವತಃ ನೃತ್ಯಗಾರ್ತಿಯಾಗಿದ್ದು, ನಾಟ್ಯದಲ್ಲಿ ಆಸಕ್ತಿ ಹೊಂದಿದ್ದಳು ಎಂದು ಇತಿಹಾಸದಲ್ಲಿ ದಾಖಲಾಗಿದೆ. ಮದುವೆಯ ಸಂಧರ್ಭದಲ್ಲಿ ಶಾಸ್ತ್ರೀಯ ಜಾನಪದ ನೃತ್ಯಗಾರರನ್ನ  ಗುಜರಾತಿಗೆ ಕರೆತಂದಿದ್ದಳು ಎಂದು ಹೇಳಲಾಗುತ್ತದೆ. ಆಗ ಕರ್ನಾಟಕದ ಕೋಲಾಟ ವನ್ನು ಗುಜರಾತ್ ಗೆ ಪರಿಚಯಿಸಿ ಮುಂದೆ  ದಾಂಡಿಯಾ ರಾಸ್ ಮತ್ತು ಗರ್ಭಾ ನೃತ್ಯ ವಾಗಿ ರೂಪುಗೊಂಡಿತು ಎನ್ನಲಾಗುತ್ತದೆ.

 

ಸಾಮ್ರಾಟ್ ಪೃಥ್ವಿರಾಜ್ ಚೌಹಾಣ್: ಮೊಹಮ್ಮದ್ ಘೋರಿ ವಿರುದ್ಧ ಹೋರಾಡಿದ ರಜಪೂತ ದೊರೆ ಸಾಮ್ರಾಟ್ ಪೃಥ್ವಿರಾಜ್ ಚೌಹಾಣ್ ಯಾರಿಗೆ ಗೊತ್ತಿಲ್ಲ ಹೇಳಿ? ಭಾರತದ ಇತಿಹಾಸದಲ್ಲಿ ಮರೆಯಲಾರದ ಈ ವೀರ ಸೇನಾನಿ ಬಗ್ಗೆ ಬಹಳಷ್ಟು ಕಥೆಗಳು ಇವೆ. ಸಿನಿಮಾಗಳು ಬಂದಿವೆ. ನಾಟಕಗಳು, ಕಾದಂಬರಿಗಳು. ಇಂದಿಗೂ ಜನರ ಮನಸಲ್ಲಿ ನೆಲೆಸಿದ್ದಾನೆ ಈ ಕೆಚ್ಚೆದೆ ವೀರ. ಈತ ಮೈನಾಳ್ ದೇವಿಯ ಮರಿ ಮೊಮ್ಮಗ ಎನ್ನುವುದು ವಿಶೇಷ.  ಅದು ಹೇಗೆಂದರೆ, ಮೈನಾಳ್ ದೇವಿಯ ಮಗ ರಾಜ ಜಯಸಿಂಹ ಸಿದ್ದರಾಜ ಅವರ ಮಗಳಾದ ಕಾಂಚನದೇವಿ ಯವರನ್ನ ರಜಪೂತ ದೊರೆ ಅರ್ನೋರಾಜ ನಿಗೆ ಮದುವೆ ಮಾಡಿಕೊಡುತ್ತಾರೆ. ಅವರಿಗೆ ಸೋಮೇಶ್ವರ ಎನ್ನುವ ಮಗ ಹುಟ್ಟುತ್ತಾನೆ.  ಈ ಸೋಮೇಶ್ವರ ರವರ ಮಗನೇ ಈ ವೀರ ಕೇಸರಿ ಪರಾಕ್ರಮಿ ಪೃಥ್ವಿರಾಜ್ ಚೌಹಾಣ್ (III).

 

ಸಂಸ್ಕೃತ ಕವಿ ಭಿಲ್ಹಣ: ಮೈನಾಳ್ ದೇವಿಯವರ ಕಥಾನಕದಲ್ಲಿ ಕವಿ ಭಿಲ್ಹಣರ ಪ್ರಸ್ತುತತೆ ಬಹು ಮುಖ್ಯವಾಗುತ್ತದೆ. ಇವರ ಮುಖಾಂತರವೇ ನಮಗೆ ಗುಜರಾತಿನ ಚಾಲುಕ್ಯರು ಮತ್ತು  ಕರ್ನಾಟಕದ ಚಾಲುಕ್ಯರ ನಡುವಿನ ಭಾಂಧವ್ಯದ ಬಗ್ಗೆ ಪರಿಚಯವಾಗುವುದು. ಇವರು ಕಾಶ್ಮೀರದ ಕವಿ. ತಮ್ಮ ವಿಧ್ಯಾಭ್ಯಾಸದ ಬಳಿಕ ಪಾಂಡಿತ್ಯ ಪ್ರದರ್ಶನಕ್ಕಾಗಿ ಭಾರತ ಯಾತ್ರೆ ಮಾಡುತ್ತಾರೆ.  ಕಾಶ್ಮೀರ, ಬೃಂದಾವನ, ಮಥುರಾ, ಕಾಶಿ, ಕನ್ಯಾಕುಬ್ಜ, ಧಾರಾ, ಗುಜರಾತ್ ಮುಂತಾದ ಊರುಗಳಲ್ಲಿ ಸುತ್ತಿ ದಕ್ಷಿಣ ಭಾರತದ ಕಲ್ಯಾಣ ಚಾಲುಕ್ಯ ವಂಶದ ಹೆಸರಾಂತ ದೊರೆ ಆರನೆಯ ವಿಕ್ರಮಾದಿತ್ಯನ ಆಸ್ಥಾನಕ್ಕೆ ಬರುತ್ತಾರೆ. ಇದಕ್ಕೂ ಮೊದಲು ಮೈನಾಳ್ ದೇವಿಯ ಆಸ್ಥಾನದಲ್ಲಿ ಕವಿಯಾಗಿ "ಕರ್ಣ ಸುಂದರಿ" ಎನ್ನುವ ನಾಲ್ಕು ಅಂಕಗಳ ಐತಿಹಾಸಿಕ ನಾಟಕವನ್ನ ಬರೆದಿರುತ್ತಾರೆ. ರಾಜಾ ಜಯಸಿಂಹ ಇವರನ್ನ ಸತ್ಕರಿಸಿ ದಕ್ಷಿಣದೆಡೆಗೆ ಕಲ್ಯಾಣ ಚಾಲುಕ್ಯರ ಆರನೇ ವಿಕ್ರಮಾದಿತ್ಯನ ಆಸ್ಥಾನಕ್ಕೆ ಬರುತ್ತಾನೆ. ಅಲ್ಲಿ, ಕವಿಯ ಪಾಂಡಿತ್ಯವನ್ನ ಗಮನಿಸಿದ ರಾಜ ವಿಕ್ರಮಾದಿತ್ಯ ಈತನನ್ನು ಸತ್ಕರಿಸಿ ವಿದ್ಯಾಪತಿ ಎಂಬ ಉಪಾಧಿ ಕೋಡುತ್ತಾನೆ. ಆಗ ಅಲ್ಲಿ ನೆಲೆನಿಂತು ವಿಕ್ರಮಾಂಕದೇವ-ಚರಿತ ಎನ್ನುವ ಐತಿಹಾಸಿಕ ಕಾವ್ಯವನ್ನ ಕವಿ ರಚಿಸುತ್ತಾರೆ. ಚಾಲುಕ್ಯರಿಂದ ಅತು ಹೆಚ್ಚು ಮಾನ್ಯತೆ ಪಡೆದಿದ್ದ ಭಿಲ್ಹಣನಿಗೆ ಚಾಲುಕ್ಯ ರಾಜವಂಶದ ಯುದ್ದಗಳು, ಕಲ್ಯಾಣ ಕಾರ್ಯಕ್ರಮಗಳು ಅವನ ಕಾವ್ಯದ ವಸ್ತುಗಳಾಗಿದ್ದವು.

 


ಅಂದಾಜು ಒಂಬೈನೂರು ವರ್ಷಗಳಿಗೂ ಹೆಚ್ಚಿನ ಈ ಐತಿಹಾಸಿಕ ಸತ್ಯ ಸಂಗತಿಗಳು ಕನ್ನಡಿಗರಿಗೆ ಹೆಮ್ಮೆ ತರುವ ವಿಷಯಗಳು, ಇಂತಹ ವಿಷಯಗಳ ಕುರಿತು ಹೆಚ್ಚಿನ ಸಂಶೋಧನೆ ನಡೆಸಿ  ನಮ್ಮ ಮುಂದಿನ ಪೀಳಿಗೆಗೆ ಅರಿವು ಮೂಡಿಸುವ ಕೆಲಸವನ್ನ ಸರ್ಕಾರ ಮತ್ತು ಸಂಘ ಸಂಸ್ಥೆಗಳು ಮಾಡಬೇಕಾಗಿದೆ.

 #ಮೈನಾಳದೇವಿ #maynala #minaldevi #mynaldevi #ಮಿನಾಲ್ದೇವಿ #ಮಿನಾಲ್_ದೇವಿ

Click below headings