ಕೆಲದಿನಗಳ ಹಿಂದೆ ನಮ್ಮ ಆಫೀಸಿನ ಕೆಲಸಕ್ಕೆ ಸಂಭಂಧಿಸಿದಂತೆ ಆಫ್ರಿಕಾದ ಗ್ಯಾಂಬಿಯಾ ದೇಶದಿಂದ ಅಥಿತಿಯೊಬ್ಬರು ನನ್ನನ್ನು ಭೇಟಿ ಮಾಡಲು ಬಂದಿದ್ದರು. ಬಿಜಿನೆಸ್ ಗೆ ಸಂಭಂಧಿಸಿದಂತೆ ಮಾತುಕತೆಗಳು ಮುಗಿದಾದ ಮೇಲೆ, ಅವರ ಗ್ಯಾಂಬಿಯಾ ದೇಶದ ಕುರಿತಾಗಿ ತಿಳಿದುಕೊಳ್ಳಲು ಅವರೊಂದಿಗೆ ಮಾತುಕತೆ ನಡೆಸಿದೆ. ಅ ಸಂವಾದದಲ್ಲಿ ಹಲವಾರು ಕುತೂಹಲಕಾರಿ ವಿಷಯಗಳನ್ನು ತಿಳಿದುಕೊಳ್ಳುವಂತಾಯಿತು.
ಯೂರೋಪಿನ ವಸಾಹತುಶಾಹಿಗಳು ಪ್ರಪಂಚದ ಹಲವು ದೇಶಗಳನ್ನ ವಸಾಹತುಗಳನ್ನಾಗಿ ಮಾಡಿಕೊಂಡು, ಅಲ್ಲಿ ಸಾರ್ವಭೌಮತ್ವ ಸ್ಥಾಪಿಸಿ, ಅಧಿಕಾರ ನಡೆಸಿದ್ದಲ್ಲದೆ, ಸ್ಥಳೀಯವಾಗಿ ದೊರೆಯುವ ಹೇರಳವಾದ ಸಂಪತ್ತನ್ನ ತಮ್ಮ ದೇಶಗಳಿಗೆ ಸಾಧಿಸಿದ್ದಲ್ಲದೆ, ತಮ್ಮ ಭಾಷೆ, ವಿಚಾರ, ಸಂಸ್ಕೃತಿ ಇತ್ಯಾದಿಗಳನ್ನ ಈ ದೇಶಗಳಲ್ಲಿ ಹೇರಿದ್ದು ನಮಗೆಲ್ಲ ಗೊತ್ತಿರುವ ಇತಿಹಾಸ. ಇದೆಲ್ಲದರ ಜತೆಗೆ ಬ್ರಿಟೀಷರು ಮತ್ತು ಐರೋಪಿನ ರಾಷ್ಟ್ರಗಳ ಕುತಂತ್ರಿತನಕ್ಕೆ ಹಲವಾರು ದೇಶಗಳು ಒಡೆದು ಚೂರಾಗಿವೆ.
ಗ್ಯಾಂಬಿಯಾ ಎನ್ನುವ ರಾಷ್ಟ್ರ ಪಶ್ಚಿಮ ಆಫ್ರಿಕಾದ ಸೆನೆಗಲ್ ಬಳಿ ಇದೆ, ಇದೊಂದು ಚಿಕ್ಕ ಎನ್ ಕ್ಲೇವ್ ರಾಷ್ಟ್ರ, ಈ ದೇಶದ ಸುತ್ತಲೂ ಮತ್ತೊಂದು ದೇಶವಾದ ಸೆನೆಗಲ್ ಆವರಿಸಿದೆ ಎಂದು ಅಥಿತಿಗಳು ಹೇಳಿದರು. ಕುತೂಹಲ ಜಾಸ್ತಿಯಾಯಿತು. ಮಾತುಕತೆ ಮುಂದುವರಿಸಿದೆವು, ಹಲವಾರು ಕುತೂಹಲಕಾರಿ ವಿಷಯಗಳು ಈ ಮಾತುಕತೆಯಲ್ಲಿ ತಿಳಿದುಬಂತು. ಗ್ಯಾಂಬಿಯ ಎಷ್ಟು ಚಿಕ್ಕ ದೇಶ ಎಂದರೆ, ಇದರ ಅಗಲ ಕೇವಲ 30 ಕಿಲೋಮೀಟರ್ ಗಳು ಇದ್ದರೆ, ಉದ್ದ 300 ಕಿಲೋಮೀಟರ್ ಗಳು ಮಾತ್ರ. ಇವರ ದೇಶದ ಉತ್ತರ, ಪೂರ್ವ ಮತ್ತು ದಕ್ಷಿಣ ದಿಕ್ಕುಗಳಲ್ಲಿ ಸೆನೆಗಲ್ ದೇಶದಿಂದ ಸುತ್ತವರಿದಿದ್ದು ಪಶ್ಚಿಮಕ್ಕೆಅಟ್ಲಾಂಟಿಕ್ ಮಹಾಸಾಗರವಿದೆ.
ಈ ರಾಷ್ಟ್ರ ಎನ್ಕ್ಲೇವ್ ಹೇಗಾಯ್ತು ಅಂತ ಕೇಳಿದ್ದಕ್ಕೆ, ಈ ಪ್ರದೇಶವನ್ನು ಬ್ರಿಟೀಷರು ಆಳಿದ್ದರಂತೆ, ಸುತ್ತುವರೆದಿರುವ ಸೆನೆಗಲ್ ರಾಷ್ಟ್ರವನ್ನು ಫ್ರೆಂಚರು ಆಳಿದ್ದರು. 1960 ರಲ್ಲಿ ಫ್ರಾನ್ಸ್‌ನಿಂದ ಸೆನೆಗಲ್ ಸ್ವತಂತ್ರ ವಾಯಿತು ನಂತರ 1965ರಲ್ಲಿ ಗ್ಯಾಂಬಿಯಾ ದೇಶ ಬ್ರಿಟಿಷರ ಆಡಳಿತದಿಂದ ಸ್ವತಂತ್ರ ವಾಯಿತು. ಹೀಗಾಗಿ ಅವೆರೆಡು ಬೇರೆ ಬೇರೆ ದೇಶಗಳಾಗಿ ಹಾಗೆಯೇ ಉಳಿದು ಹೋಗಿವೆ. ಎರಡು ದೇಶ ಒಂದುಗೂಡಲು ಸಾಧ್ಯವಾಗಲಿಲ್ಲವೇ ಎಂದು ಕೇಳಿದ್ದಕ್ಕೆ, 1981 ರಲ್ಲಿ ಆ ಪ್ರಯತ್ನ ನಡೆಯಿತು ಆದರೆ ಅದು ಸಫಲವಾಗಲಿಲ್ಲ ಎಂದರು.
ಬ್ರಿಟೀಷರು ಮತ್ತು ಫ್ರೆಂಚರ ಆಳ್ವಿಕೆಯಿಂದಾಗಿ ಎರಡು ಬೇರೆ ದೇಶಗಳಾಗಿವೆಯೇ ವಿನಃ, ಮೂಲತಃ ಗ್ಯಾಂಬಿಯಾ ಮತ್ತು ಸೆನೆಗಲ್ ದೇಶದ ಜನರುಗಳು ಒಂದೇ ಬುಡಕಟ್ಟಿನವರು, ಸಾಂಸ್ಕೃತಿಕವಾಗಿ ಒಂದೇ ರೀತಿ ಇದ್ದಾರೆ. ಆಚಾರ ವಿಚಾರ ಎಲ್ಲದರಲ್ಲೂ ಹೋಲಿಕೆಯಿದೆ. ಎರಡೂ ಕಡೆ ಸಂಭಂದಿಕರು ಇದ್ದಾರೆ. ಎರಡು ದೇಶಗಳು ಒಂದಾಗಲು, ರಾಜಕೀಯ ಇಚ್ಛಾಶಕ್ತಿಯಿಂದ ಮಾತ್ರ ಸಾಧ್ಯ.ವಿದೆ. ಎರಡು ದೇಶಗಳ ನಡುವೆ ಅಧಿಕೃತ ಭಾಷೆಗಳನ್ನು ಹೊರತುಪಡಿಸಿ ಯಾವುದೇ ವ್ಯತ್ಯಾಸವಿಲ್ಲ. ಸೆನೆಗಲ್‌ನಲ್ಲಿ ಫ್ರೆಂಚ್ ಮತ್ತು ಗ್ಯಾಂಬಿಯಾದಲ್ಲಿ ಇಂಗ್ಲಿಷ್ ಆಡಳಿತ ಭಾಷೆಯಾಗಿದೆ. ಜನರು ಒಂದೇ, ದೇಶೀಯ ಭಾಷೆ ಒಂದೇ, ಆಹಾರವೂ ಒಂದೇ, ಧರ್ಮಗಳು ಒಂದೇ, ಆಚಾರವಿಚಾರವು ಒಂದೇ.
ಈ ದೇಶದ ಮಧ್ಯಭಾಗದಲ್ಲಿ ಗ್ಯಾಂಬಿಯಾ ನದಿ ಹರಿಯುತ್ತದೆ. ಇಂಗ್ಲಿಷ್ ಇಲ್ಲಿನ ಭಾಷೆ. ಕೃಷಿ ಇಲ್ಲಿನ ಆರ್ಥಿಕತೆಯ ಬೆನ್ನೆಲುಬು. ನೆಲಗಡಲೆಯನ್ನು ಇಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ಇದನ್ನು ಅತಿ ಹೆಚ್ಚಾಗಿ ರಫ್ತು ಮಾಡಲಾಗುತ್ತದೆ. ಬಂಜುಲ್ (Banjul) ಈ ದೇಶದ ರಾಜಧಾನಿ. 96.4% ಜನ ಇಸ್ಲಾಂ ಅನ್ನು, (Islam) 3.5% ಕ್ರಿಶ್ಚಿಯಾನಿಟಿ (Christianity) ಯನ್ನು ಮತ್ತು 0.1% ಜನರು ಇತರೆ ಧರ್ಮವನ್ನು ಅನುಸರಿಸುತ್ತಾರೆ.
ಇಂಗ್ಲಿಷ್ ಗ್ಯಾಂಬಿಯಾದ ಅಧಿಕೃತ ಭಾಷೆಯಾಗಿದ್ದು ಇದನ್ನು ಶಿಕ್ಷಣ ಮತ್ತು ಸರ್ಕಾರದ ದಾಖಲೆಗಳಲ್ಲಿ ಬಳಸಲಾಗುತ್ತದೆ. ಇತರ ಭಾಷೆಗಳಲ್ಲಿ ಮಂಡಿಂಕಾ, ವೋಲೋಫ್, ಫುಲಾ, ಸೇರರ್, ಸೋನಿಂಕೆ, ಕ್ರಿಯೋ, ಜೋಲಾ ಮತ್ತು ಇತರ ಸ್ಥಳೀಯ ಭಾಷೆಗಳು ಸಹ ಇಲ್ಲಿ ಉಪಯೋಗದಲ್ಲಿವೆ. ಆಫ್ರೀಕಾದ ಇತರೆ ದೇಶಗಳಲ್ಲಿದ್ದಂತೆ ಫ್ರೆಂಚ್ ಭಾಷೆಯ ಜ್ಞಾನವು ಸಹ ಜನರಿಗೆ ಇದೆ. ದೇಶದ 38% ಜನರು ಮಂಡಿಂಕಾವನ್ನು ಮೊದಲ ಭಾಷೆಯಾಗಿ ಮಾತನಾಡುತ್ತಾರೆ, 21% ಪುಲಾರ್, 18% ವೊಲೊಫ್, 9% ಸೋನಿಂಕೆ, 4.5% ಜೊಲಾ, 2.4% ಸೆರೆರ್, 1.6% ಮಂಜಾಕ್ ಮತ್ತು ಬೈನೌಕ್, ಪೋರ್ಚುಗೀಸ್ ಕ್ರಿಯೋಲ್ 1%, ಮತ್ತು ಇಂಗ್ಲಿಷ್ 0.5%. ಹಲವು ಇತರೆ ಭಾಷೆಗಳನ್ನು ಸಹ ಜನರು ಮಾತನಾಡುತ್ತಾರೆ.
ಇಲ್ಲಿನ ಸರಾಸರಿ ತಾಪಮಾನವು 29 ° C ಮತ್ತು 34 ° C ನಡುವೆ ಇರುತ್ತದೆ. ವರ್ಷಪೂರ್ತಿ ಇಲ್ಲಿ ಬೇಸಿಗೆ ಅಂತ ಹೇಳಬಹುದು. ಸೂರ್ಯನ ಬಿಸಿಲು ವರ್ಷಪೂರ್ತಿ ಇರುತ್ತದೆ. ಬೇಸಿಗೆಯ ತಿಂಗಳುಗಳಲ್ಲಿ, ಸೆಖೆ ಜಾಸ್ತಿ, ಆರ್ದ್ರತೆಯ ವಾತಾವರಣ ಜಾಸ್ತಿ. ಮಳೆ ಮತ್ತು ಚಳಿಗಾಲದಲ್ಲಿ, ಆರ್ದ್ರತೆ ಕಡಿಮೆ ಇರುತ್ತದೆ, ಮಳೆ ಬಂದರೆ ಬಂತು ಇಲ್ಲದೆ ಇದ್ರೆ ಇಲ್ಲ ಎನ್ನಬಹುದು. ಪ್ರವಾಸಿಗರು ಭೇಟಿ ನೀಡಲು ಚಳಿಗಾಲದ ಸಮಯ ಸೂಕ್ತವಾಗಿದೆ.
ಯುರೋಪಿಯನ್ನರು ಇಲ್ಲಿಗೆ ಆಗಮಿಸುವ ಮುಂಚೆ, ಸ್ಥಳೀಯ ರಾಜವಂಶಗಳು ಇಲ್ಲಿ ಆಡಳಿತ ನಡೆಸುತಿದ್ದವು. ಹನ್ನೊಂದನೇ ಶತಮಾನದಲ್ಲಿ ಇಲ್ಲಿಗೆ ಇಸ್ಲಾಂ ಆಗಮನವಾಗುತ್ತದೆ. ಅಂದಿನ ತಕ್ರೂರ್ ರಾಜ ವಂಶ ಇಸ್ಲಾಂ ಧರ್ಮವನ್ನು ಸ್ವೀಕರಿಸಿ, ಪ್ರಜೆಗಳನ್ನು ಮತಾಂತರಿಸುತ್ತಾರೆ. ಅರೇಬಿಕ್ ಶಾಲೆಗಳನ್ನು ತೆರೆಯಲಾಗುತ್ತದೆ. ಶರಿಯಾ ಕಾನೂನು ಜಾರಿಗೆ ಬಂದು ಇಲ್ಲಿ ಶರಿಯಾ ನ್ಯಾಯಾಲಯ ಆರಂಭಗೊಳ್ಳುತ್ತವೆ. ಕ್ರಿ.ಶ. 1455 ರಲ್ಲಿ, ಪೋರ್ಚುಗೀಸರು ಗ್ಯಾಂಬಿಯಾವನ್ನು ಆಕ್ರಮಿಸುತ್ತಾರೆ. ಇಲ್ಲಿನ ಕಡಲತೀರದಲ್ಲಿ ನೆಲೆ ನಿಂತು ಸಮುದ್ರ ವ್ಯಾಪಾರವನ್ನು ನಿಯಂತ್ರಿಸಲು ಪ್ರಯತ್ನಿಸುತ್ತಾರೆ. ಪೋರ್ಚುಗೀಸರು ಗ್ಯಾಂಬಿಯಾಗೆ ಪ್ರವೇಶಿಸಿದ ಮೊದಲ ಯುರೋಪಿಯನ್ನರಾಗಿದ್ದರು ಸಹ, ಅಲ್ಲಿ ಹೇಳಿಕೊಳ್ಳುವಂತಹ ಗಮನಾರ್ಹವಾದ ವ್ಯಾಪಾರ ವಹಿವಾಟು ಅವರಿಗೆ ನಡೆಸಲಾಗಲಿಲ್ಲ. ಪರಿಣಾಮವಾಗಿ ಇಲ್ಲಿ ಹರಿಯುವ ಗ್ಯಾಂಬಿಯಾ ನದಿಯ ಮೇಲಿನ ವ್ಯಾಪಾರ ವಹಿವಾಟು ನಡೆಸುವ ಹಕ್ಕುಗಳನ್ನು ಇಂಗ್ಲಿಷ್ ವ್ಯಾಪಾರಿಗಳಿಗೆ ಮಾರುತ್ತಾರೆ. ತದನಂತರ ಇಲ್ಲಿನ ಕೆಲ ದ್ವೀಪಗಳನ್ನು ಯುರೋಪಿನ ಕೆಲ ರಾಷ್ಟ್ರಗಳು ಖರೀದಿಸುತ್ತವೆ.
17 ನೇ ಶತಮಾನದ ಕೊನೆಯಲ್ಲಿ ಮತ್ತು 18 ನೇ ಶತಮಾನದುದ್ದಕ್ಕೂ, ಸೆನೆಗಲ್ ನದಿ ಮತ್ತು ಗ್ಯಾಂಬಿಯಾ ನದಿಯ ಪ್ರದೇಶಗಳಲ್ಲಿ ರಾಜಕೀಯ ಮತ್ತು ವಾಣಿಜ್ಯ ಪ್ರಾಬಲ್ಯಕ್ಕಾಗಿ ಬ್ರಿಟಿಷ್ ಸಾಮ್ರಾಜ್ಯ ಮತ್ತು ಫ್ರೆಂಚ್ ಸಾಮ್ರಾಜ್ಯವು ನಿರಂತರವಾಗಿ ಹೋರಾಟ ನಡೆಸಿದವು. 1758 ರಲ್ಲಿ ಸೆನೆಗಲ್ ಅನ್ನು ವಶಪಡಿಸಿಕೊಂಡ ನಂತರ ಅಗಸ್ಟಸ್ ಕೆಪ್ಪೆಲ್ ನೇತೃತ್ವದ ಪಡೆ ಗ್ಯಾಂಬಿಯಾವನ್ನು ಆಕ್ರಮಿಸಿತು. 1783ರಲ್ಲಿ ನಡೆದ ವರ್ಸೈಲ್ಸ್ ಒಪ್ಪಂದ ಪ್ರಕಾರ, ಗ್ರೇಟ್ ಬ್ರಿಟನ್ ಗ್ಯಾಂಬಿಯಾ ನದಿ ಮತ್ತು ಸುತ್ತಲಿನ ಭೂಪ್ರದೇಶ ಬ್ರಿಟೀಷರ ಆಳ್ವಿಕೆಗೆ ಒಳಪಡುತ್ತದೆ. ಗ್ಯಾಂಬಿಯಾ ನದಿಯ ಉತ್ತರದಲ್ಲಿರುವ ಅಲ್ಬ್ರೆಡಾದಲ್ಲಿ ಒಂದು ಸಣ್ಣ ಎನ್‌ಕ್ಲೇವ್ ಅನ್ನು ಫ್ರೆಂಚರು ಉಳಿಸಿಕೊಳ್ಳುತ್ತಾರೆ. ಅಂತಿಮವಾಗಿ ಈ ದ್ವೀಪ ಒಳನಾಡನ್ನು 1856 ರಲ್ಲಿ ಯುನೈಟೆಡ್ ಕಿಂಗ್‌ಡಮ್‌ಗೆ ನೀಡಲಾಗುತ್ತದೆ.
ಆಫ್ರಿಕಾದ ಗುಲಾಮ ವ್ಯಾಪಾರ:
ಯುರೋಪಿಯನ್ನರು ಆಫ್ರಿಕಾ ಮತ್ತು ಇಂಡಿಯಾ ದಂತಹ ಪ್ರದೇಶಗಳಿಗೆ ವ್ಯಾಪಾರಕ್ಕಾಗಿ ಬಂದವರು ಇಲ್ಲಿ ಮಾಲೀಕರಾಗಿದ್ದಲ್ಲದೆ ಸ್ಥಳೀಯರನ್ನು ತಮ್ಮ ಫಿರಂಗಿ ಮತ್ತು ಬಂದೂಕುಗಳನ್ನು ಜನರ ಮುಂದಿರಿಸಿ ಆಳ್ವಿಕೆ ನಡೆಸಲು ಪ್ರಾರಂಭಿಸಿತ್ತಾರೆ. ಮೂರ್ನಾಲ್ಕು ದಶಕಗಳ ಅಲ್ಪ ಸಮಯದಲ್ಲಿ ಇಡೀ ಆಫ್ರಿಕಾಖಂಡ ಯೂರೋಪಿಯನ್ನರ ವಸಾಹತುಗಳಾಗಿಬಿಟ್ಟಿತು. ಸ್ಥಳೀಯರನ್ನು ಗುಲಾಮರನ್ನಾಗಿ ಮಾಡಿಕೊಂಡು ವಸಾಹತುಶಾಹಿಗಳು ಆಫ್ರಿಕಾ ದೇಶದ ಅಗಾಧ ಖನಿಜ ಸಂಪತ್ತನ್ನು ಲೂಟಿ ಹೊಡೆಯುತ್ತಿದ್ದರು. ಮುಖ್ಯವಾಗಿ ತಾಮ್ರ, ಹತ್ತಿ, ರಬರ್, ಪಾಮ್ ಎಣ್ಣೆ, ಕೋಕೋ, ವಜ್ರ, ಟೀ ಮತ್ತು ಟಿನ್ ಲೋಹ, ಚಿನ್ನ - ಇವುಗಳ ನಿಧಿಯಾಗಿತ್ತು ಆಫ್ರಿಕಾ ಖಂಡ. ಒಂದು ಕೋಟಿಗೂ ಹೆಚ್ಚು ಆಫ್ರಿಕನ್ನರು ಅಲ್ಲೇ ಗುಲಾಮರಾಗಿ ದುಡಿದರು. ಸುಮಾರು ಅಷ್ಟೇ ಜನರು ಬೇರೆ ದೇಶಗಳಿಗೆ ಗುಲಾಮರಾಗಿ ಮಾರಲ್ಪಟ್ಟರು! ಗ್ಯಾಂಬಿಯಾ, ಸೆನೆಗಲ್ ನಂತಹ ರಾಷ್ಟ್ರಗಳು ಸಹ ಹೊರತಾಗಿರಲಿಲ್ಲ. ಸ್ಥಳೀಯರನ್ನು ಯುರೋಪ್ ಅಮೇರಿಕ ಮುಂತಾದ ರಾಷ್ಟ್ರಗಳಿಗೆ ಮಾರಲಾಯಿತು. ಲಕ್ಷಾಂತರ ಜನರನ್ನ ಸ್ಥಳೀಯವಾಗಿ ದುಡಿಸಿಕೊಂಡರು.
1807 ರಲ್ಲಿ, ಬ್ರಿಟೀಷರು ತಮ್ಮ ಸಾಮ್ರಾಜ್ಯದಾದ್ಯಂತ ಗುಲಾಮರ ವ್ಯಾಪಾರವನ್ನು ರದ್ದುಗೊಳಿಸಿದರು. ಆದರೂ ವ್ಯಾಪಾರಿಗಳು ಕದ್ದು ಮುಚ್ಚಿ ಗುಲಾಮರ ವ್ಯಾಪಾರವನ್ನು ಮಾಡುತಿದ್ದರು. ಅಟ್ಲಾಂಟಿಕ್ ಸಮುದ್ರದಲ್ಲಿ ಹಡಗುಗಳಲ್ಲಿ ಜನರನ್ನು ಸಾಗಿಸುತಿದ್ದರು. ಇಂತಹ ಹಡಗುಗಳನ್ನ ಬ್ರಿಟೀಷರ ರಾಯಲ್ ನೇವಿಯವರು ತಡೆದು, ತಪಾಸಣೆ ನಡೆಸಿ ಗುಲಾಮರ ಹಡಗುಗಳನ್ನು ಗ್ಯಾಂಬಿಯಾಕ್ಕೆ ಮರಳಿ ಕಳುಹಿಸುತಿದ್ದರಂತೆ. ಬ್ರಿಟಿಷರು 1816 ರಲ್ಲಿ ಬಾಥರ್ಸ್ಟ್ (ಈಗ ಬಂಜುಲ್)ನಲ್ಲಿ ಮಿಲಿಟರಿ ಪೋಸ್ಟ್ ಅನ್ನು ಸ್ಥಾಪಿಸಿ, ಗುಲಾಮರ ಸಾಗಾಟವನ್ನು ತಡೆಹಿಡಿಯಲು ಪ್ರಯತ್ನಿಸಿದರು. ಹಡಗುಗಳಲ್ಲಿದ್ದ ಜನರನ್ನು ಬಿಡುಗಡೆಗೊಳಿಸಿ ಮ್ಯಾಕ್‌ಕಾರ್ಥಿ ಎನ್ನುವ ದ್ವೀಪದಲ್ಲಿ ಅವರಿಗೆ ಹೊಸ ಬದುಕನ್ನು ಕಟ್ಟಿಕೊಳ್ಳಲು ಅವಕಾಶ ನೀಡಿದ್ದರು.
ಗ್ಯಾಂಬಿಯಾಗೇ 1965ರಲ್ಲಿ ಸ್ವಾತಂತ್ರ್ಯ:
1960ರಲ್ಲಿ ಫ್ರಾನ್ಸ್‌ನಿಂದ ಸೆನೆಗಲ್ ಸ್ವತಂತ್ರವಾಗಿತ್ತು, ಹೀಗಾಗಿ, ಬ್ರಿಟೀಷರು ತಾವು ಆಳುತಿದ್ದ ಗ್ಯಾಂಬಿಯಾ ದೇಶಕ್ಕೂ 18 ಫೆಬ್ರವರಿ 1965 ರಂದು ಸ್ವಾತಂತ್ರ್ಯವನ್ನು ನೀಡುತ್ತಾರೆ. 1965 ರಿಂದ 1994 ರವರೆಗೆ, ಪೀಪಲ್ಸ್ ಪ್ರೋಗ್ರೆಸ್ಸಿವ್ ಪಾರ್ಟಿಯ (ಪಿಪಿಪಿ) ದವ್ಡಾ ಜವರ (Dawda Jawara) ಅವರು ದೇಶವನ್ನು ಆಳುತ್ತಾರೆ. ಈ ಸಮಯದಲ್ಲಿ ಯಾವುದೇ ವಿಪಕ್ಷವಿಲ್ಲದೆ ಎಲ್ಲಾ ಪಕ್ಷದವರು ಸೇರಿ (multi-party liberal democracy) ಆಳ್ವಿಕೆ ನಡೆಸುತ್ತಾರೆ. ಈ ಸಮಯದಲ್ಲಿ ಯಾವುದೇ ಚುನಾವಣೆ ನಡೆಯುವುದಿಲ್ಲ.
1981 ಆಂತರಿಕ ದಂಗೆ:
ಪ್ರಮುಖ ರಾಜಕಾರಣಿಗಳ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಮತ್ತು ದೇಶದಲ್ಲಿ ದುರ್ಬಲಗೊಂಡ ಆರ್ಥಿಕತೆ ಇದರಿಂದ ಬೇಸತ್ತ ಜನತೆಯಿಂದ 29 ಜುಲೈ 1981 ರಂದು ಆಂತರಿಕ ದಂಗೆ ನಡೆಯುತ್ತದೆ. ಅಧ್ಯಕ್ಷ ಜವಾರಾ ಅವರು ಪಕ್ಕದ ರಾಷ್ಟ್ರ ವಾದ ಸೆನೆಗಲ್ ನ ಮಿಲಿಟರಿ ಸಹಾಯವನ್ನು ಕೋರುತ್ತಾರೆ. ಆಗಸ್ಟ್ 6 1981ರಲ್ಲಿ , ಸುಮಾರು 2,700 ಸೆನೆಗಲೀಸ್ ಸೈನಿಕರನ್ನು ನಿಯೋಜಿಸಲಾಗುತ್ತದೆ, ಬಂಡಾಯವೆದ್ದ ಪಡೆಯನ್ನು ಸೆನೆಗಲ್ ಸೈನಿಕರ ಜತೆಗೂಡಿ ಸೋಲಿಸಲಾಗುತ್ತದೆ, ದಂಗೆ ಮತ್ತು ನಂತರದ ಹಿಂಸಾಚಾರದ ಸಮಯದಲ್ಲಿ 500 ರಿಂದ 800 ಜನರು ಕೊಲ್ಲಲ್ಪಡುತ್ತಾರೆ. ನಂತರ, ಸೆನೆಗಲ್ ಮತ್ತು ದಿ ಗ್ಯಾಂಬಿಯಾ ರಾಷ್ಟ್ರಗಳು, ಒಕ್ಕೂಟದ ಒಪ್ಪಂದಕ್ಕೆ ಸಹಿ ಹಾಕುತ್ತವೆ. ಸೆನೆಗಾಂಬಿಯಾ ಒಕ್ಕೂಟ ವೇರ್ಪಡುತ್ತದೆ. ಒಂದೇ ಮಿಲಿಟರಿ ಆರ್ಮಿ, ದೇಶದ ಆರ್ಥಿಕತೆ ಬಲನೀಡುವುದು, ಎರಡು ರಾಷ್ಟ್ರಗಳಿಗೂ ಒಂದೇ ಕರೆನ್ಸಿ ನೋಟು ಮತ್ತು ನಾಣ್ಯ ಬಳಸುವ, ಹೀಗೆ ಹಲವಾರು ವಿಷಯಗಳ ಕುರಿತು ಒಪ್ಪಂದ ವೇರ್ಪಡುತ್ತದೆ. ಕೇವಲ ಏಳು ವರ್ಷಗಳ ನಂತರ, ಗ್ಯಾಂಬಿಯಾ 1989 ರಲ್ಲಿ ಒಕ್ಕೂಟದಿಂದ ಶಾಶ್ವತವಾಗಿ ಹೊರಬಂದು, ಉಭಯ ರಾಷ್ಟ್ರಗಳ ಒಪ್ಪಂದ ಮುರಿದು ಬೀಳುತ್ತದೆ..
1994 ಮಿಲಿಟರಿ ದಂಗೆ:
1994 ರಲ್ಲಿ, ಮಿಲಿಟರಿ ದಂಗೆ ನಡೆಯುತ್ತದೆ. ಆರ್ಮ್ಡ್ ಫೋರ್ಸಸ್ ಪ್ರಾವಿಶನಲ್ ರೂಲಿಂಗ್ ಕೌನ್ಸಿಲ್ (AFPRC) ಎಂದು ಕರೆಯಲಾಗುವ "ಮಿಲಿಟರಿ ಅಧಿಕಾರಿಗಳ ಆಯೋಗ" ಅಧಿಕಾರಕ್ಕೆ ಬರುತ್ತದೆ. ಎರಡು ವರ್ಷಗಳ ನೇರ ಆಡಳಿತದ ನಂತರ, ಹೊಸ ಸಂವಿಧಾನವನ್ನು ಬರೆಯಲಾಯಿತು. 1996 ರಲ್ಲಿ, AFPRC ನ ನಾಯಕ ಯಾಹ್ಯಾ ಜಮ್ಮೆ (Yahya Jammeh) ಅಧ್ಯಕ್ಷರಾಗಿ ಆಯ್ಕೆಯಾಗಿ 2016 ರ ಚುನಾವಣೆಯವರೆಗೂ ಸರ್ವಾಧಿಕಾರಿ ಶೈಲಿಯಲ್ಲಿ ಆಡಳಿತ ನಡೆಸುತ್ತಾರೆ. ಚುನಾವಣೆಯಲ್ಲಿ ಆಡಮಾ ಬಾರೋ (Adama Barrow) ವಿಜಯಿಯಾಗಿ ಇಲ್ಲಿಯವರೆಗೂ (2024) ಅವರೇ ಅಧಿಕಾರ ನಡೆಸುತಿದ್ದಾರೆ.
ಪ್ರಮುಖ ಪ್ರವಾಸಿ ತಾಣಗಳು:
1. ಬಂಜುಲ್ ರೋಮನ್ ಕ್ಯಾಥೋಲಿಕ್ ಕ್ಯಾಥೆಡ್ರಲ್ (Banjul Roman Catholic Cathedral), 2. ಕಚಿಕಲ್ಲಿ ಕ್ರೊಕೊಡೈಲ್ ಪೂಲ್ (Kachikally Crocodile Pool): ಮೊಸಳೆ ಕೊಳ, 3. ಬಿಜಿಲೋ ರಾಷ್ಟ್ರೀಯ ಉದ್ಯಾನವನ (Bijilo National Park), 4. ಬಿಜಿಲೋ ಮಂಕಿ ಪಾರ್ಕ್ (Bijilo Monkey Park), 5. ಗ್ಯಾಂಬಿ ನದಿ (River Gambie), 6. ಬಿಜಿಲೋ ಫಾರೆಸ್ಟ್ ಪಾರ್ಕ್ (Bijilo Forest Park), 7. ಸ್ಟೋನ್ ಸರ್ಕಲ್ಸ್ ಆಫ್ ಗ್ಯಾಂಬಿಯಾ (Stone Circles of Gambia), 8. ಗ್ಯಾಂಬಿಯಾದ ರಾಷ್ಟ್ರೀಯ ವಸ್ತುಸಂಗ್ರಹಾಲಯ (National Museum of the Gambia), 9. ಆರ್ಕ್ 22 (Arch 22) ಕಮಾನು, 10. ಬಕೌ ಕ್ರಾಫ್ಟ್ ಮಾರುಕಟ್ಟೆ (Bakau craft market)
ಭಾರತದೊಂದಿಗಿನ ಭಾಂದವ್ಯ:
ಗ್ಯಾಂಬಿಯಾ ಮತ್ತು ಭಾರತದೊಂದಿಗಿನ ಭಾಂದವ್ಯ ಉತ್ತಮವಾಗಿದೆ. ಎರಡೂ ರಾಷ್ಟ್ರಗಳು ಬ್ರಿಟೀಷರ ಆಳ್ವಿಕೆಗೆ ಒಳಪಟ್ಟಿದ್ದರಿಂದ ಭಾವನಾತ್ಮಕವಾಗಿ ಭಾರತೀಯರ ಕುರಿತು ಇಲ್ಲಿನ ಜನರಿಗೆ ಒಲವಿದೆ. ಭಾರತದಿಂದ ಹಲವಾರು ಸಾಮಗ್ರಿಗಳನ್ನು ಇಲ್ಲಿಗೆ ರಫ್ತು ಮಾಡಲಾಗುತ್ತಿದೆ. ಗ್ಯಾಂಬಿಯಾಕ್ಕೆ ಭಾರತ ಆರ್ಥಿಕ ಸಹಾಯ ಸಹ ನೀಡಿದೆ.
ಗಾಂಬಿಯಾಕ್ಕೆ ಭಾರತವು ರಫ್ತು ಮಾಡುವ ಪ್ರಮುಖ ಸರಕುಗಳೆಂದರೆ ಹತ್ತಿ ನೂಲು, ಬಟ್ಟೆಗಳು, ಮೇಕಪ್ ಸಾಧನಗಳು , ಸೌಂದರ್ಯವರ್ಧಕಗಳು, ಶೌಚಾಲಯ ಸಾಮಗ್ರಿಗಳು, ಔಷಧಗಳು, ಕಬ್ಬಿಣ ಮತ್ತು ಉಕ್ಕಿನ ಉತ್ಪನ್ನಗಳು. ಗ್ಯಾಂಬಿಯಾದಿಂದ ಭಾರತವು ಆಮದು ಮಾಡಿಕೊಳ್ಳುವ ಪ್ರಮುಖ ಸರಕುಗಳೆಂದರೆ ಕಚ್ಚಾ ಗೋಡಂಬಿ ಮತ್ತು ಹತ್ತಿ.
ಸುಮಾರು 3000 ಭಾರತೀಯ ನಾಗರಿಕರು (2023 ರ ಹೊತ್ತಿಗೆ, ) ಗ್ಯಾಂಬಿಯಾದಲ್ಲಿ ವಾಸಿಸುತಿದ್ದು, ಅವರು ಪ್ರಾಥಮಿಕವಾಗಿ ವ್ಯಾಪಾರ ಮತ್ತು ನಿರ್ಮಾಣ ಕ್ಷೇತ್ರ ಸೇರಿದಂತೆ ಖಾಸಗಿ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ದೇಶಕ್ಕೆ ನಮ್ಮ ಭಾರತದ ಹರಿಯಾಣದ ಔಷಧೀಯ ಸಂಸ್ಥೆಯಾದ ಮೇಡನ್ ಫಾರ್ಮಾದಿಂದ ಸರಬರಾಜು ಮಾಡಲಾಗಿದ್ದ ಕೆಮ್ಮು-ಶೀತ ಸಿರಪ್ ಸೇವಿಸಿದ 66 ಮಕ್ಕಳ ಸಾವಾಗಿತ್ತು. ಆಗ ಗ್ಯಾಂಬಿಯಾ ದೇಶದ ಬಗ್ಗೆ ನಮ್ಮ ಭಾರತದ ಮಾಧ್ಯಮಗಳಲ್ಲಿ ಸುದ್ದಿ ಹರಿದಾಡಿತ್ತು.
ಭಾರತದಲ್ಲಿ ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ 700ಕ್ಕೂ ಹೆಚ್ಚು ಗ್ಯಾಂಬಿಯನ್ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಭಾರತದಲ್ಲಿರುವ ಗ್ಯಾಂಬಿಯಾದ ಹೈ ಕಮಿಷನರ್ H.E ಮುಸ್ತಫಾ ಜವಾರ ಅವರು ಇತ್ತೀಚೆಗೆ, ಮಂಗಳೂರಿನ ಯೆನೆಪೊಯ ವಿಶ್ವವಿದ್ಯಾಲಯದೊಂದಿಗೆ ಎಂಒಯುಗೆ ಸಹಿ ಹಾಕಿದರು. 28 ಗ್ಯಾಂಬಿಯನ್ ವಿದ್ಯಾರ್ಥಿಗಳು ಇಲ್ಲಿ ಅಧ್ಯಯನ ಮಾಡಲಿದ್ದಾರೆ.