ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ. ಪ್ರತಿ ವರ್ಷ ಯುಗಾದಿ ಬಂತೆಂದರೆ ಎಲ್ಲರ ಮನೆಮನದಲ್ಲೂ ಹರುಷ ತುಂಬಿ ತುಳುಕಾಡುತ್ತದೆ. ಮರಗಿಡಗಳಲ್ಲಿ ಹಣ್ಣೆಲೆಗಳು ಉದುರಿ, ಹೊಸ ಎಲೆಗಳು ಚಿಗುರುತ್ತವೆ. ಎಲ್ಲರ ಮನೆಗಳಲ್ಲಿ ಹಬ್ಬದ ಸಡಗರ, ಎಣ್ಣೆಸ್ನಾನ ಮಾಡಿ, ಹೊಸ ಬಟ್ಟೆ ಉಟ್ಟು, ದೇವರ ಪೂಜೆ ಮಾಡಿ, ಹೋಳಿಗೆ ಊಟ ಮಾಡಿ, ಬಂಧುಗಳು ಮತ್ತು ಸ್ನೇಹಿತರೊಂದಿಗೆ ಶುಭಾಶಯಗಳ ವಿನಿಮಯ ಮಾಡಿಕೊಳ್ಳುತ್ತೇವೆ. ಸುಖ ದುಃಖಗಳನ್ನ ಸಮನಾಗಿ ಹಂಚಿಕೊಂಡು ಬಾಳಬೇಕು ಎನ್ನುತ್ತ ಬೆವು ಬೆಲ್ಲವನ್ನು ತಿಂದು ಒಟ್ಟಿಗೆ ತಿಂದು ಹಬ್ಬವನ್ನು ಆಚರಿಸುತ್ತೇವೆ, ದಿನಪೂರ್ತಿ ಸಂಭ್ರಮದಿಂದ ಕಳೆಯುತ್ತೇವೆ. ಇಂದು ಜಗತ್ತಿನಾದ್ಯಂತ ಹೊಸವರ್ಷವನ್ನು ಜನವರಿ 1ರಂದು ಆಚರಿಸಲಾಗುತ್ತಿದೆ. ಆದರೆ, ಅಂದು ಪ್ರಕೃತಿಯಲ್ಲಿ ಬದಲಾವಣೆಯೇನು ಆಗುವುದಿಲ್ಲ. ಆದರೆ, ಚೈತ್ರಮಾಸದ ವಸಂತ ಋತುವಿನಲ್ಲಿ ಗಿಡಮರಗಳು ಚಿಗುರುತ್ತವೆ, ಈ ಸಮಯದಲ್ಲಿ ಪ್ರಕೃತಿಯನ್ನು ಕಣ್ತುಂಬಾ ನೋಡಲು ಬಲುಹಿತವೆನಿಸುತ್ತದೆ. ಯುಗಾದಿ ಸಮಯವೆಂದರೆ ಪ್ರಕೃತಿಯಲ್ಲಿ ಬದಲಾವಣೆ ಎಂದೇ ಅರ್ಥೈಸುತ್ತೇವೆ. ಆದರೆ ಯುಗಾದಿ ಹಬ್ಬ, ಎಲ್ಲಾ ಹಿಂದೂಗಳಿಗೆ ಹೊಸವರ್ಷವೇ? ಉತ್ತರ ಮಾತ್ರ ಖಂಡಿತಾವಾಗಿಯೂ ಅಲ್ಲ!!
ಯುಗಾದಿ ಹಬ್ಬವನ್ನು ಬಹಳಷ್ಟು ಜನ ಭಾರತದೇಶದ ಎಲ್ಲಾ ಹಿಂದೂಗಳ ಹೊಸ ವರ್ಷವೆಂದು ತಿಳಿದುಕೊಂಡಿದ್ದಾರೆ. ಕೆಲ ರಾಜ್ಯಗಳಲ್ಲಿ ಮಾತ್ರ ನಾವು ಕನ್ನಡಿಗರು ಆಚರಿಸುವ ಯುಗಾದಿಯಂದು ಹೊಸ ವರ್ಷವೆಂದು ಆಚರಿಸಿದರೆ, ಭಾರತದ ವಿವಿಧ ಭಾಗಗಳಲ್ಲಿ ವಿವಿಧ ದಿನಗಳಂದು ಹೊಸ ವರ್ಷವನ್ನು ಆಚರಿಸುತ್ತಾರೆ. ನಮ್ಮ ಭಾರತದಲ್ಲಿ ಎಲ್ಲಾ ಹಿಂದೂಗಳು ಒಂದೇ ದಿನ ಹೊಸವರ್ಷವನ್ನು ಆಚರಿಸುವುದಿಲ್ಲ. ಕನ್ನಡಿಗರಿಗೆ ಯುಗಾದಿ ಹಬ್ಬ ದೊಡ್ಡ ಹಬ್ಬವಾದರೆ, ಕೆಲ ರಾಜ್ಯಗಳಲ್ಲಿ ಹಿಂದೂ ಹೊಸವರ್ಷಕ್ಕೆ ಅಷ್ಟೊಂದು ಮಹತ್ವವೂ ಇಲ್ಲ ಮತ್ತು ಹೊಸವರ್ಷವನ್ನು ಆಚರಿಸುವುದೂ ಇಲ್ಲ ಎನ್ನುವುದು ಗಮನಾರ್ಹ ಅಂಶ.
ಭಾರತದಲ್ಲಿ ಹಲವಾರು ಕ್ಯಾಲೆಂಡರ್ ಪದ್ದತಿಗಳನ್ನು ಅನುಸರಿಸಲಾಗುತ್ತಿದೆ. ರೋಮನ್ನರ ಹಾಗೂ ಕ್ರೈಸ್ತರ ಕಾಲಗಣನೆಯಂತೆ ಈವತ್ತು ನಾವೆಲ್ಲರೂ ಉಪಯೋಗಿಸುವ ಕ್ರಿಶ್ಚಿಯನ್ ಕ್ಯಾಲೆಂಡರ್ ಪದ್ದತಿಯನ್ನು ಗ್ರೆಗೋರಿಯನ್ ಕ್ಯಾಲೆಂಡರ್ ಎಂದು ಕರೆಯುತ್ತಾರೆ. ಮುಸ್ಲಿಮರು ಧಾರ್ಮಿಕ ವಿಷಯಗಳಿಗಾಗಿ ಬಳಸುವ ಕ್ಯಾಲೆಂಡರ್ ಅನ್ನು ಹಿಜರಿ ಕ್ಯಾಲೆಂಡರ್ ಎನ್ನುತ್ತಾರೆ. ಹಿಂದೂಗಳು ಉಪಯೋಗಿಸುವ ಹಿಂದೂ ಪಂಚಾಗ ಪದ್ದತಿಯಲ್ಲಿ ಎರಡು ಕಾಲಮಾನಗಳಿವೆ, ಒಂದು ಸೌರಮಾನ ಮತ್ತೊಂದು ಚಾಂದ್ರಮಾನ. ಚಂದ್ರನ ಚಲನೆಯನ್ನು ಆಧರಿಸಿ ವರ್ಷದಲ್ಲಿನ ದಿನಗಳನ್ನು ಲೆಕ್ಕಾಚಾರ ಮಾಡುವುದಕ್ಕೆ ಚಾಂದ್ರಮಾನ ಎಂದು ಕರೆಯಲಾಗುತ್ತದೆ. ಚಾಂದ್ರಮಾನವೆಂಬ ಹೆಸರಿದ್ದರೂ, ಅದು ನಿಜವಾಗಿ ಸೂರ್ಯ ಮತ್ತು ಚಂದ್ರ, ಇಬ್ಬರ ಚಲನೆಯನ್ನೂ ಅವಲಂಬಿಸಿದೆ. ಭೂಮಿಯ ಚಲನೆಗೆ ಸಂಬಂಧಿಸಿದಂತೆ ಸೂರ್ಯ ತನ್ನ ಸ್ಥಾನವನ್ನು ಅನುಸರಿಸುವುದನ್ನು ಸೌರಮಾನ ಎಂದು ಕರೆಯಲಾಗುತ್ತದೆ.
ಚಾಂದ್ರಮಾನ ಪದ್ದತಿಯಂತೆ ಪ್ರತಿ ವರ್ಷ ಚೈತ್ರ ಮಾಸ, ಶುಕ್ಲ ಪಕ್ಷದ ಪಾಡ್ಯದ ತಿಥಿಯಂದು, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ ಮಧ್ಯಪ್ರದೇಶ, ಹಾಗೆಯೇ ದಾದ್ರಾ ಮತ್ತು ನಗರ ಹವೇಲಿ ಗೋವಾ ದಮನ್ ಮತ್ತು ಡಿಯು, ತಮಿಳುನಾಡಿನ ಉತ್ತರ ಭಾಗದ ಕೆಲ ತಾಲೂಕುಗಳಲ್ಲಿ (ಕರ್ನಾಟಕ ಮತ್ತು ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿರುವ) ಹೊಸವರ್ಷವನ್ನು ಆಚರಿಸಲಾಗುತ್ತದೆ. ಆಂಧ್ರಪ್ರದೇಶ ಮತ್ತು ತೆಲಂಗಾಣದ ಜನರು ಮತ್ತು ಕರ್ನಾಟಕದಲ್ಲಿನ ಜನರು ಇದನ್ನು ಯುಗಾದಿ ಹಬ್ಬವೆಂದು ಆಚರಿಸಿದರೆ, ಇನ್ನು ಮಹಾರಾಷ್ಟ್ರದ ಜನರು ಇದೇ ಹಬ್ಬವನ್ನು 'ಗುಡಿ ಪಾಡ್ವಾ' ಎಂದು ಆಚರಿಸುತ್ತಾರೆ. ಇದಕ್ಕೊಂದು ಹಿನ್ನೆಲೆಯೂ ಇದೆ. ಕ್ರಿ ಪೂ .230 ರಿಂದ ಕ್ರಿ.ಶ 220 ರ ತನಕ ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ ರಾಜ್ಯಗಳನ್ನು ಶಾತವಾಹನರು ಆಳುತ್ತಾರೆ. ಶಾತವಾಹನರ ರಾಜನಾಗಿದ್ದ ಗೌತಮಿಪುತ್ರ ಶಾತಕರ್ಣಿ ಕ್ರಿ.ಶ. 78 ರಲ್ಲಿ ಶಾಲಿವಾಹನ ಶಕೆಯನ್ನು ಪ್ರಾರಂಭಿಸುತ್ತಾನೆ. ಹೀಗಾಗಿ ಶಾತವಾಹನರು ಆಳ್ವಿಕೆ ನಡೆಸಿದ ರಾಜ್ಯಗಳಲ್ಲಿ ಶಾಲಿವಾಹನ ಶಕೆ ಎನ್ನುವ ಪಂಚಾಂಗ ಪದ್ದತಿಯನ್ನು ಅನುಸರಿಸಲಾಗುತ್ತಿದೆ. ಈ ಕಾರಣದಿಂದಲೇ, ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಚೈತ್ರಮಾಸದ ಮೊದಲ ದಿನದಂದು ಯುಗಾದಿ ಹಬ್ಬವನ್ನು ಆಚರಿಸುತಿದ್ದೇವೆ. ರಾಜ ಶಾಲಿವಾಹನ ಮತ್ತು ಶಕ ಯುಗದ ನಡುವಿನ ಸಂಬಂಧದ ಕುರಿತಾಗಿ ಸೋಮರಾಜನ ಕನ್ನಡ ಕೃತಿ ಉದ್ಭಟಕಾವ್ಯದಲ್ಲಿ ದಾಖಲಾಗಿದೆ.
ನಮ್ಮ ಯುಗಾದಿಯ ದಿನದಂದೇ ಹೊಸವರ್ಷವನ್ನು ಭಾರತದ ಕೆಲಭಾಗಳಲ್ಲಿ ಮತ್ತು ವಿದೇಶದಲ್ಲಿಯೂ ಆಚರಿಸುತ್ತಾರೆ. ಇಂಡೋನೇಶಿಯಾದ ಜಾವಾ ಮತ್ತು ಬಾಲಿಯಲ್ಲಿರುವ ಹಿಂದುಗಳು ಯುಗಾದಿಯಂದೇ ಹೊಸವರ್ಷವನ್ನು ಆಚರಿಸುವುದು ವಿಶೇಷ. ಉತ್ತರ ಭಾರತದ ಸಿಂಧಿ ಜನರು ಯುಗಾದಿಯ ದಿನವನ್ನು ಚೇತಿ ಚಂದ್ ಎಂದು ಆಚರಿಸುತ್ತಾರೆ. ಕೊಂಕಣಿ ಸಮುದಾಯದ ಹಿಂದುಗಳು ವರ್ಷದ ಮೊದಲ ದಿನವನ್ನು "ಸಂವತ್ಸರ ಪಾಡ್ವೋ" ಎಂದು, ಜಮ್ಮು ಕಾಶ್ಮಿರದ ಹಿಂದೂಗಳು ನವ್ರೆಃ ಎಂದು ಆಚರಿಸುತ್ತಾರೆ. ಭಾರತದ ಮಿಕ್ಕ ಪ್ರದೇಶಗಳಲ್ಲಿ ಬೇರೆ ಬೇರೆ ದಿನಗಳಂದು ಹೊಸವರ್ಷವನ್ನು ಆಚರಿಸಲಾಗುತ್ತದೆ.
ಸೌರಮಾನ ಪದ್ದತಿಯಂತೆ ಪ್ರತಿವರ್ಷ ಏಪ್ರಿಲ್ 14 ರಂದು, ಕರ್ನಾಟಕದ ಕರಾವಳಿಯ ಭಾಗ ಸೇರಿದಂತೆ, ತಮಿಳುನಾಡು, ಕೇರಳ, ಪುದುಚೆರಿ, ಒರಿಸ್ಸಾ, ಅಸ್ಸಾಂ, ನೇಪಾಳ, ಪಂಜಾಬ್ ರಾಜ್ಯಗಳಲ್ಲಿ ಹೊಸವರ್ಷವನ್ನು ಆಚರಿಸಲಾಗುತ್ತದೆ. ಮಂಗಳೂರು ಮತ್ತು ಉಡುಪಿಯಲ್ಲಿ ಬಿಸು ಪರ್ಬ ಎಂದು ಆಚರಿಸಲಾಗುವುದು. ಅದೇ ರೀತಿ ಏಪ್ರಿಲ್ 14 ರಂದು ತಮಿಳುನಾಡಿನಲ್ಲಿ 'ವರುಷ ಪಿರಪ್ಪು', 'ಚಿತಿರೈವಿಶು', 'ಪುತಂಡು' ಎಂದು, ಕೇರಳದಲ್ಲಿ ಹೊಸ ವರ್ಷವನ್ನು 'ವಿಷು' ಎಂದು. ಬಂಗಾಳದಲ್ಲಿ 'ಪೊಹೆಲಾ ಬೋಯ್ಷಾಕ್' ಮತ್ತು 'ನಬಾ ಬರ್ಷ' ಎಂದು, ಒರಿಸ್ಸಾದಲ್ಲಿ, 'ಮಹಾ ವಿಷುಬ ಸಂಕ್ರಾಂತಿ' (ಪನ ಸಂಕ್ರಾಂತಿ) ಎಂದು, ಅಸ್ಸಾಂ ನವರು 'ಬೊಹಾಗ್ ಬಿಹು' ಅಥವಾ 'ರೊಂಗಾಲಿ ಬಿಹು' ಎಂದು, ಪಂಜಾಬ್ ನಲ್ಲಿ ಬೈಸಾಖಿ ಎಂದು ಹೊಸ ವರ್ಷವನ್ನು ಆಚರಿಸುತ್ತಾರೆ. ನೇಪಾಳದಲ್ಲೂ ಸಹ ಪ್ರತಿವರ್ಷ ಏಪ್ರಿಲ್ 14 ರಂದು ಹೊಸವರ್ಷವನ್ನು ಆಚರಿಸುತ್ತಾರೆ.
ದೀಪಾವಳಿಯಂದು ಹೊಸವರ್ಷ: ಗುಜರಾತ್ ಮತ್ತು ರಾಜಸ್ಥಾನಗಳಲ್ಲಿ ದೀಪಾವಳಿಯ ನಂತರದ ದಿನವನ್ನು ಹೊಸ ವರ್ಷವೆಂದು ಆಚರಿಸಲಾಗುತ್ತದೆ. ಗುಜರಾತಿಗೆ ಹೊಂದಿಕೊಂಡಂತೆ ಇರುವ ಮಹಾರಾಷ್ಟ್ರ ಕೆಲ ಜಿಲ್ಲೆಗಳಲ್ಲಿ ದೀಪಾವಳಿಯ ಸಮಯದಲ್ಲಿ ಹೊಸವರ್ಷವನ್ನು ಆಚರಿಸಲಾಗುತ್ತದೆ.
ಮಾರ್ಚ 20 ಪಾರ್ಸಿಗಳ ಹೊಸವರ್ಷ: ಭಾರತದಲ್ಲಿ ನೆಲೆಗೊಂಡಿರುವ ಪಾರ್ಸಿಗಳು ನೌರುಜ್ ಎಂದು ಕರೆಯುವ ಹೊಸವರ್ಷವನ್ನು ಮಾರ್ಚ 20 ರಂದು ಆಚರಿಸುತ್ತಾರೆ. ಮಧ್ಯ ಏಷ್ಯಾದ ದೇಶಗಳಾದ ಇರಾನ್ (ಪರ್ಶಿಯಾ) ಇರಾಕ್, ಸಿರಿಯಾ ಮತ್ತು ಟರ್ಕಿಯಲ್ಲಿ ಕುರ್ದಿಗಳು ಅಫ್ಘಾನಿಸ್ತಾನ, ಅಜೆರ್ಬೈಜಾನ್, ಕಝಾಕಿಸ್ತಾನ್, ಉಜ್ಬೇಕಿಸ್ತಾನ್ ಮತ್ತು ತಜಕಿಸ್ತಾನ್ ಮತ್ತು ತುರ್ಕಮೆನಿಸ್ತಾನದಂತಹ ದೇಶಗಳಲ್ಲಿ ಬಹಳಷ್ಟು ಜನರು ಮಾರ್ಚ ೨೦ರಂದು ಹೊಸವರ್ಷವನ್ನು (ನೌರುಜ್) ಆಚರಿಸುತ್ತಾರೆ.
ಈಶಾನ್ಯ ರಾಜ್ಯಗಳಲ್ಲಿ ಹೊಸ ವರ್ಷ: ಇಲ್ಲಿನ ಸಪ್ತ ರಾಜ್ಯಗಳಲ್ಲಿ ಬೇರೆ ಬೇರೆ ದಿನಗಳಂದು ಹೊಸವರ್ಷ ಆಚರಿಸುತ್ತಾರೆ. ಕ್ರಿಶ್ಚಿಯನ್ನರು, ಜನವರಿ ಒಂದನೇ ತಾರೀಖಿನಂದು, ಟಿಬೇಟಿಯನ್ ಬೌದ್ದ ಸಂಪ್ರದಾಯವಾದಿಗಳು ಲೋಸರ್ ಎಂದು ಕರೆಯಲ್ಪಡುವ ಹೊಸವರ್ಷವನ್ನು ಫೆಬ್ರವರಿ ತಿಂಗಳಿನಲ್ಲಿ, ಏಪ್ರಿಲ್ 14ರಂದು, ತ್ರಿಪುರಾ, ಅಸ್ಸಾಂನವರು 'ಬೊಹಾಗ್ ಬಿಹು' ಹಬ್ಬವನ್ನು ಆಚರಿಸುತ್ತಾರೆ. ಆದರೆ ಮಣಿಪುರಿಗಳು ಚೈರೋಬ ಎಂದು ಕರೆಯಲ್ಪಡುವ ಹಬ್ಬವನ್ನು ನಮ್ಮ ಕನ್ನಡಿಗರ ಯುಗಾದಿಯ ದಿನದಂದು ಆಚರಿಸುತ್ತಾರೆ.
ಭಾರತದ ಪ್ರಾಚೀನ ಪರಂಪರೆ, ನೂರಾರು ಭಾಷೆಗಳು, ತರಹೇವಾರಿ ಆಹಾರಗಳು, ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆ, ವಿಭಿನ್ನ ಭೌಗೋಳಿಕ ರಚನೆ, ವೈವಿಧ್ಯಮಯ ಜನ ಸಮುದಾಯ, ವಿಭಿನ್ನ ಸಂಪ್ರದಾಯಗಳು ಮತ್ತು ಆಚರಣೆಗಳು, ಭಾರತ ವೈವಿಧ್ಯಮಯ ದೇಶವೆನ್ನುವುದಕ್ಕೆ ಇಂತಹ ಹಲವಾರು ವಿಷಯಗಳಿವೆ. ಬಹುಶಃ ಪ್ರಪಂಚದ ಇತರೆ ಯಾವುದೇ ದೇಶಗಳಲ್ಲಿ ಇಂತಹ ವೈವಿಧ್ಯತೆಗಳು ಅಪರೂಪ. ಭಾರತದಲ್ಲಿರುವ ನಮಗೆ ಇಂತಹ ಹಲವಾರು ವಿಭಿನ್ನ ವಿಷಯಗಳು ಆಶ್ಚರ್ಯ ಎನಿಸಿದರೆ, ಇನ್ನು ವಿದೇಶಿಯರಿಗೆ ನಮ್ಮ ಭಾರತದ ಕುರಿತು ಇನ್ನೆಷ್ಟು ಕೌತಕ ಎನಿಸಬಹುದು ಅಲ್ಲವೇ?
ಬರಹ:- ಪಿ.ಎಸ್.ರಂಗನಾಥ
ಮಸ್ಕತ್ - ಒಮಾನ್ ರಾಷ್ಟ್ರ.