ಸುಡು ಬಿಸಿಲಿನ ಸೌದಿ ಅರೇಬಿಯಾದಲ್ಲೂ ಇದೆ ತಂಪಾದ ಗಿರಿಶಿಖರಗಳು
ಬರಹ:- ಪಿ.ಎಸ್.ರಂಗನಾಥ, ಮಸ್ಕತ್, ಒಮಾನ್ ರಾಷ್ಟ್ರ.
ಸೌದಿ ಅರೇಬಿಯಾದ ಹೆಚ್ಚಿನ ಭಾಗ ಮರುಭೂಮಿಯಿಂದ ಕೂಡಿದ್ದು ಇಲ್ಲಿ ಅತಿ ಹೆಚ್ಚಿನ ಬಿಸಿಲಿನ ತಾಪಮಾನವಿರುವುದು ಬಹಳಷ್ಟು ಜನರಿಗೆ ಗೊತ್ತಿದೆ. ಪ್ರಪಂಚದ ಅತ್ಯಂತ ದೊಡ್ಡದಾದ ರಬ್ ಅಲ್ ಖಾಲಿ (ಎಂಪ್ಟಿ ಕ್ವಾರ್ಟರ್) ಎಂದು ಕರೆಯಲ್ಪಡುವ ಮರುಭೂಮಿ ಈ ದೇಶದಲ್ಲಿದೆ. ಈ ವಿಶಾಲವಾದ ಮರುಭೂಮಿಯು ದೇಶದ ಹವಾಮಾನ ಮತ್ತು ಪರಿಸರ ವ್ಯವಸ್ಥೆಗಳ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ. ಸೌದಿ ಅರೇಬಿಯಾ ದೇಶವು ಅತ್ಯಂತ ಧೀರ್ಘವಾದ, ಬೇಸಿಗೆಕಾಲ ಮತ್ತು ಅತಿ ಕಡಿಮೆ ಅವಧಿಯ ತಂಪಾದ ಮತ್ತು ಸ್ವಲ್ಪ ಆರ್ದ್ರ ಚಳಿಗಾಲದ ಕಠಿಣ ಮರುಭೂಮಿ ಹವಾಮಾನವನ್ನು ಹೊಂದಿದೆ. ಇಂತಹ ಕಠಿಣ ಹವಮಾನದಿಂದ ದೇಶವನ್ನು ಸಂರಕ್ಷಿಸಿಕೊಳ್ಳಲು, ಇಲ್ಲಿನ ಸರ್ಕಾರವು ಅರಣ್ಯೀಕರಣ, ಸುಧಾರಿತ ಭೂ ನಿರ್ವಹಣಾ ಪದ್ಧತಿಗಳು ಅಳವಡಿಸಿಕೊಳ್ಳುತ್ತಿದೆ. ಬೇಸಿಗೆಯಲ್ಲಿನ ಸುಡು ಬಿಸಿಲಿನಿಂದ ತಪ್ಪಿಸಿಕೊಳ್ಳಲು ಏರ್ ಕಂಡೀಶನರ್ ಗಳಿಲ್ಲದೆ ಜೀವನ ನಡೆಸುವುದು ಬಹಳ ಕಷ್ಟ. ಇಂತಹ ಭೀಕರ ಮರಳುಗಾಡಿನ ಪ್ರದೇಶದಲ್ಲೂ ತಂಪಾದ ಹವಮಾನ ಪ್ರದೇಶಗಳಿರುವುದು ಇಲ್ಲಿನ ವಿಶೇಷ. ಆದರೆ ಇಲ್ಲಿಯೂ ಸಹ ತಂಪಾಗಿರುವ ಪ್ರದೇಶಗಳಿರುವುದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಇಲ್ಲಿನ ತಂಪಾದ ಹವಮಾನವನ್ನು ಅನುಭವಿಸಲು ಬೇಸಿಗೆ ಸೇರಿದಂತೆ, ವಿವಿಧ ರಜಾದಿನಗಳಲ್ಲಿ ಲಕ್ಷಾಂತರ ಜನರು ಈ ಪ್ರದೇಶಗಳಿಗೆ ಪ್ರವಾಸಕ್ಕೆ ಬರುತ್ತಾರೆ.
ತುರೈಫ಼್, ಬ್ಲಾಹಮ್ರ್, ಬಿಲ್ಸಮ್ರ್ ಕೇಂದ್ರ, ಅಲ್ ಬಹಾ, ಅಭಾ, ಅಸೀರ್ ಪ್ರಾಂತ್ಯ ಸೇರಿದಂತೆ ಕೆಲ ಪ್ರದೇಶಗಳಲ್ಲಿ ಈ ಹಿಮಪಾತವಾಗಿದೆ ಎಂದರೆ ನಂಬಲಾಗದು. ವಿಮಾನದಲ್ಲಿ ಪ್ರಯಾಣಿಸುವಾಗ ಮೋಡಗಳು ಪಕ್ಕದಲ್ಲಿ ಸಾಗುವಂತಹ ಅದ್ಭುತ ವಿಹಂಗಮ ದೃಶ್ಯವನ್ನು, ಇಲ್ಲಿ ಸ್ವತಃ ಕಾಣಬಹುದು. ಪಶ್ಚಿಮ ಘಟ್ಟದಲ್ಲಿನ ತಿರುವಿನ ರಸ್ತೆಯಲ್ಲಿ ಪ್ರಯಾಣಿಸುವ ಅನುಭವ, ಕೇಬಲ್ ಕಾರ್ ಪ್ರಯಾಣ, ಸುಂದರ ಉಧ್ಯಾನವನಗಳು, ಒಂದಾ ಎರಡಾ! ಅಲ್ಲ, ಹತ್ತು ಹಲವಾರು ಅದ್ಭುತ ಪ್ರವಾಸಿತಾಣಗಳು ಇಲ್ಲಿವೆ. ಈ ಎಲ್ಲಾ ಸ್ಥಳಗಳು ಬೇಸಿಗೆ ವಿಶ್ರಾಂತಿ ಧಾಮಗಳಾಗಿ ಅದ್ಭುತವಾಗಿ ಅಭಿವೃದ್ದಿ ಹೊಂದಿದ್ದು. ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರು ಇಲ್ಲಿಗೆ ಬೇಟಿ ನೀಡುತ್ತಾರೆ.
ಈ ಲೇಖನದಲ್ಲಿ ಸೌದಿ ಅರೇಬಿಯಾದಲ್ಲಿನ ತಂಪಾದ ಪ್ರದೇಶಗಳ ಕುರಿತು ಒಂದು ಒಳನೋಟ ಇಲ್ಲಿದೆ.
*1). ಅಭಾ(Abha) - ಆಸಿರ್ ಪ್ರಾಂತ್ಯ(Aseer Region):*
ಸೌದಿ ಅರೇಬಿಯಾದ ನೈಋತ್ಯ ಭಾಗದಲ್ಲಿರುವ ಅಭಾ ಪ್ರದೇಶವು ಆಸಿರ್ ಪ್ರಾಂತ್ಯದಲ್ಲಿದೆ. ಇದು ಅಲ್-ಹಿಜಾಜ್ ಪರ್ವತದ ಮೇಲಿದ್ದು ಸುತ್ತಲೂ ಬೆಟ್ಟಗಳಿಂದ ಆವೃತವಾಗಿದೆ. ಈ ಸ್ಥಳವು ಸಮುದ್ರ ಮಟ್ಟದಿಂದ ಸುಮಾರು 2,200 ಮೀಟರ್ ಎತ್ತರದಲ್ಲಿರುವುದರಿಂದ ಇಲ್ಲಿನ ಹವಾಮಾನವು ಬೇಸಿಗೆಯಲ್ಲಿಯೂ ಸಹ ತಂಪಾಗಿರುತ್ತದೆ. ಬೇಸಿಗೆಯಲ್ಲಿ ಇಲ್ಲಿಗೆ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಈ ಪ್ರಾಂತ್ಯದಲ್ಲಿ ಹಲವಾರು ಪ್ರವಾಸಿ ತಾಣಗಳಿವೆ.
*ಆಸೀರ್ ಪ್ರಾಂತ್ಯದಲ್ಲಿನ ಪ್ರಮುಖ ಆಕರ್ಷಣೆಗಳು:*
ಅಭಾ: ಅಸೀರ್ ಪ್ರಾಂತ್ಯದ ರಾಜಧಾನಿ, ಈ ನಗರವು ಆಧುನಿಕ ಸೌಕರ್ಯಗಳನ್ನು ಒಳಗೊಂಡಿದ್ದರೂ, ಪುರಾತನ ಸಾಂಪ್ರದಾಯಿಕ ಶೈಲಿಯನ್ನು ಬಿಟ್ಟುಕೊಟ್ಟಿಲ್ಲ.
ಅಭಾ ಸರೋವರ(Abha Dam Lake): ಈ ಸರೋವರದಲ್ಲಿ ದೋಣಿ ವಿಹಾರ ಮಾಡಲು ವ್ಯವಸ್ಥೆ ಮಾಡಲಾಗಿದೆ, ಇದೊಂದು ಪ್ರಶಾಂತ ಸರೋವರವಾಗಿದ್ದು ವಿಶ್ರಾಂತಿ ಸಮಯವನ್ನು ಇಲ್ಲಿ ಆರಾಮವಾಗಿ ಕಳೆಯಬಹುದು.
ಅಭಾ ಕೇಬಲ್ ಕಾರ್ (New Abha Cable Car): ಈ ಕೇಬಲ್ ಕಾರ್ ಮೂಲಕ ಸಂಚರಿಸುತ್ತ, ಇಲ್ಲಿಯ ಸುತ್ತಮುತ್ತಲಿನ ಪರ್ವತಗಳ ವಿಹಂಗಮ ನೋಟವನ್ನು ಕಣ್ತುಂಬಿಕೊಳ್ಳಬಹುದು.
ಅಲ್ ಮುಫ್ತಾಹಾ ಕಲಾ ಗ್ರಾಮ(Al Muftaha Art Village): ಈ ಸ್ಥಳದಲ್ಲಿ ಇಲ್ಲಿನ ಸ್ಥಳೀಯ ಕಲೆ ಮತ್ತು ಕರಕುಶಲ ವಸ್ತುಗಳ ಪ್ರದರ್ಶನವಿರುವ ವಸ್ತು ಸಂಗ್ರಹಾಲಯವಿದೆ. ಇಲ್ಲಿ ಸೌದಿ ಅರೇಬಿಯಾದ ಪುರಾತನ ಮನೆಗಳನ್ನ ನೋಡಬಹುದು. ಈ ವಸ್ತು ಸಂಗ್ರಹಾಲಯವನ್ನು ನೋಡುತಿದ್ದರೆ, ಯುರೋಪಿನ ಪುರಾತನ ಶೈಲಿಯ ಸಂಗ್ರಹಾಲಯವನ್ನು ನೋಡುತಿದ್ದೇವೆಯಾ ಎನ್ನುವುದು ಭಾಸವಾಗುತ್ತದೆ.
ಆಸೀರ್ ರಾಷ್ಟ್ರೀಯ ಉದ್ಯಾನವನ (Asir National Park): ಇದೊಂದು ಸಂರಕ್ಷಿತ ಅರಣ್ಯ ಪ್ರದೇಶವಾಗಿದೆ. ವನ್ಯಜೀವಿ ವೀಕ್ಷಣೆ, ಟ್ರೆಕಿಂಗ್ ಕ್ಯಾಂಪಿಂಗ್, ಬೆಟ್ಟಗಳ ನಡುವೆ ಹಾದುಹೋಗುವ ಮೋಡಗಳ ವೀಕ್ಷಣೆ ಗಾಗಿ ಈ ಸ್ಥಳ ಪ್ರಸಿದ್ದ. ಪರ್ವತಗಳ ಕಣಿವೆಗಳ ಮಧ್ಯೆಯಿರುವ ಅರಣ್ಯದಲ್ಲಿನ ಟ್ರೆಕಿಂಗ್ ಗಾಗಿರುವ ಕಾಲ್ನಡಿಗೆಯ ಹಾದಿಗಳು ಅದ್ಭುತ ಅನುಭವವನ್ನು ನೀಡುತ್ತವೆ.
ರಿಜಲ್ ಅಲ್ಮಾ ಗ್ರಾಮ (Rijal Almaa Village): ಯುನೆಸ್ಕೋ ವಿಶ್ವ ಪರಂಪರೆಯ ತಾಣ, ಇಲ್ಲಿನ ವಿಶಿಷ್ಟ ವಾಸ್ತುಶಿಲ್ಪ ಮತ್ತು ಸಾಂಪ್ರದಾಯಿಕ ಶೈಲಿಗೆ ಈ ಗ್ರಾಮ ಹೆಸರುವಾಸಿಯಾಗಿದೆ. ಅಭಾದಿಂದ ಪಶ್ಚಿಮಕ್ಕೆ ಸುಮಾರು 50 ಕಿ.ಮೀ ದೂರದಲ್ಲಿದೆ. ಈ ಗ್ರಾಮವು 900 ವರ್ಷಗಳಿಗೂ ಹಳೆಯದಾಗಿದೆ.
ಅಲ್ ಹಬಾಲಾ ಗ್ರಾಮ (Al Habala Village Hanging Village): ಈ ಸ್ಥಳದಲ್ಲಿನ ಬೆಟ್ಟಗಳು, ವಿಶಿಷ್ಟವಾದ ಬಂಡೆಗಳು, ಕಣಿವೆಗಳ ರಮ್ಯ ನೋಟವನ್ನು ಅನುಭವಿಸುತ್ತ ಈ ಸ್ಥಳವನ್ನು ಕೇಬಲ್ ಕಾರ್ ಮೂಲಕ ಪ್ರವೇಶಿಸಬಹುದು. ಇಲ್ಲಿನ ಪ್ರಕೃತಿಯ ನೋಟ ಪ್ರವಾಸಿಗರನ್ನ ಬೆರಗುಗೊಳಿಸುತ್ತದೆ.
ಜಬಲ್ ಸಾವ್ಡಾ (Jabal Sawda): ಆಸಿರ್ ಪರ್ವತ ಶ್ರೇಣಿಯಲ್ಲಿನ ವಿಹಂಗಮ ನೋಟಗಳನ್ನು ಅನುಭವಿಸಲು ಈ ಸ್ಥಳವು ಸೂಕ್ತವಾಗಿದೆ. ಟ್ರೆಕಿಂಗ್ ಮಾಡಲು ಇಲ್ಲಿ ಅವಕಾಶವಿದೆ.
ವಾಟರ್ ಫಾಲ್ ಪಾರ್ಕ್ (Waterfall Park): ಇದೊಂದು ಸುಂದರವಾದ ಉದ್ಯಾನವನವಾಗಿದ್ದು, ಕೃತಕ ಜಲಪಾತ, ಕಾರಂಜಿಗಳು ಮತ್ತು ಮಕ್ಕಳು ಆಟವಾಡಲು ಈ ಉದ್ಯಾನವನ ಸೂಕ್ತವಾಗಿದೆ.
ಮೇಲಿನ ಸ್ಥಳಗಳ ಜತೆಗೆ ಇಲ್ಲಿನ, ಐತಿಹಾಸಿಕ ಶಾದಾ ಅರಮನೆ, ಅಸೀರ್ ಪ್ರಾದೇಶಿಕ ವಸ್ತುಸಂಗ್ರಹಾಲಯಗಳನ್ನು ನೋಡಬಹುದು, ಈ ಪ್ರದೇಶದ ಇತಿಹಾಸ ಮತ್ತು ಸಂಸ್ಕೃತಿಯ ಒಳನೋಟಗಳನ್ನು ಅರಿಯಲು ಈ ಸ್ಥಳ ಸೂಕ್ತವಾಗಿದೆ.
*2). ತೈಫ್* :- ಈ ತೈಫ್ ನಗರವನ್ನು ಗುಲಾಬಿ ನಗರ ಎಂದು ಕರೆಯುತ್ತಾರೆ.
ಸರಾವತ್ ಪರ್ವತಗಳ ಇಳಿಜಾರುಗಳಲ್ಲಿ ನೆಲೆಗೊಂಡಿರುವ ಈ ಸ್ಥಳವು ಸುಂದರವಾದ ಗುಲಾಬಿ ತೋಟಗಳು, ತಾಜಾ ಗಾಳಿ ಮತ್ತು ಪರ್ವತ ನೋಟಗಳಿಗೆ ಹೆಸರುವಾಸಿಯಾಗಿದೆ. ಇದು ಜನಪ್ರಿಯ ಬೇಸಿಗೆಯ ವಿಹಾರ ತಾಣವಾಗಿದೆ. ಈ ಪ್ರಾಂತ್ಯವು ತಂಪಾದ ಹವಾಮಾನಕ್ಕೆ ಹೆಸರುವಾಸಿಯಾಗಿದ್ದು, ಸೌದಿ ಅರೇಬಿಯಾದ ಇತರೆ ಪ್ರದೇಶಗಳಲ್ಲಿನ ಜನರು ಬೇಸಿಗೆಯ ಬಿಸಿಲನ್ನು ತಪ್ಪಿಸಿಕೊಳ್ಳಲು ಈ ಸ್ಥಳಕ್ಕೆ ಸ್ಥಳೀಯರು ಭೇಟಿ ನೀಡುತ್ತಾರೆ. ಸೌದಿ ಅರೇಬಿಯಾದ ಬೇಸಿಗೆಯ ತಾಣವೆಂದು ಗುರುತಿಸಲಾಗಿದೆ.
ತೈಫ್ ನಗರವು ಜೆದ್ದಾ ದಿಂದ 175 ಕಿಲೋಮೀಟರ್ ಮತ್ತು ರಿಯಾದ್ ನಿಂದ 785 ಕಿಲೋಮೀಟರ್ ದೂರವಿದೆ. ತೈಫ್ ತನ್ನ ಪರಿಮಳಯುಕ್ತ ಗುಲಾಬಿಗಳು ಮತ್ತು ಸುಗಂಧ ದ್ರವ್ಯ ಕಾರ್ಖಾನೆಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿನ ಪ್ರಮುಖ ಆಕರ್ಷಣೆಗಳನ್ನು ನೋಡುವುದಾದರೆ, ಅಲ್ ಹದಾ ಪರ್ವತ, ಅದರ ಉದ್ದವಾದ ಕೇಬಲ್ ಕಾರ್ ಸವಾರಿ, ಗುಲಾಬಿ ತೋಟಗಳು ಮತ್ತು ಕಾಲ್ನಡಿಗೆಯ ಹಾದಿಗಳು, ಜೊತೆಗೆ ವಾಟರ್ ಪಾರ್ಕ್ ಮತ್ತು ಟೊಬೊಗನ್ ಸ್ಲೈಡ್ ಅನ್ನು ಹೊಂದಿರುವ ಅಲ್ ಕರ್ ಪ್ರವಾಸಿ ಗ್ರಾಮ ಇಲ್ಲಿವೆ.
*3). ತುರೈಫ್* : ಐತಿಹಾಸಿಕ ಅತ್-ತುರೈಫ್ ಸೌದಿಯ ಉತ್ತರ ಭಾಗದ ಈ ಪ್ರದೇಶ ಅತ್ಯಂತ ತಂಪಾದ ಪ್ರದೇಶವಾಗಿದೆ. ಜೋರ್ಡಾನ್ ದೇಶದ ಉತ್ತರ ಗಡಿ ಪ್ರಾಂತ್ಯದ ಗಡಿಯ ಬಳಿಯಿದೆ. ಜೆದ್ದಾದಿಂದ 1600 ಕಿಲೋಮೀಟರ್ ಮತ್ತು ರಿಯಾದ್ 1400 ಕಿಲೋಮೀಟರ್ ದೂರವಿದೆ. ಈ ಪ್ರದೇಶವನ್ನು ಮೊದಲ ಸೌದಿ ರಾಜ್ಯ (1727-1818) ಎಂದು ಗುರುತಿಸಲಾಗುತ್ತಿದೆ. ಸಾಂಪ್ರದಾಯಿಕ ನಜ್ದಿ ಶೈಲಿಯಲ್ಲಿ ಮಣ್ಣಿನ ಇಟ್ಟಿಗೆಯಿಂದ ರಚಿಸಲಾದ ಇಲ್ಲಿರುವ ರಾಜಮನೆತನದ ಕೋಟೆಯು ಪ್ರಮುಖ ಆಕರ್ಷಣೆಯಾಗಿದೆ. 2010 ರಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿ ಘೋಷಿಸಲ್ಪಟ್ಟಿತು, ಚಳಿಗಾಲದ ಅತಿ ಕಡಿಮೆ (−12.0 °C (10.4 °F)) ತಾಪಮಾನವನ್ನು ಈ ಪಟ್ಟಣದಲ್ಲಿ ಕಾಣಬಹುದು.
*4). ಅಲ್ ಬಹಾ (Al Baha)*:
ಅಲ್ ಬಹಾ ವನ್ನು ಸೌದಿ ಅರೇಬಿಯಾದ ಹಿಡನ್ ಪ್ಯಾರಡೈಸ್ (hidden paradise) ಎಂದು ಕರೆಯುತ್ತಾರೆ. ಇಲ್ಲಿ ಹಲವಾರು ಸುಂದರ ಉಧ್ಯಾನವನಗಳಿವೆ. ಕಾಡುಗಳು, ಕಣಿವೆಗಳು, ಹಳ್ಳಕೊಳ್ಳಗಳು, ಪ್ರಾಚೀನ ಹಳ್ಳಿಗಳು, ಈ ಪ್ರದೇಶದಲ್ಲಿವೆ. ಕೆಲವೊಮ್ಮೆ ಇಲ್ಲಿ ಹಿಮಪಾತವು ಆಗುತ್ತದೆ. ವಿಶೇಷವೇನೆಂದರೆ ವರ್ಷಪೂರ್ತಿ ತಂಪಾದ ಹವಮಾನ ಇಲ್ಲಿರುರುತ್ತದೆ. ಹೀಗಾಗಿ ಎಲ್ಲೆಲ್ಲೀ ಹಚ್ಚ ಹಸಿರನ್ನಕಾಣಬಹುದು.
ಪ್ರವಾಸಿಗಳು ನೋಡಲು ಹಲವಾರು ಸ್ಥಳಗಳಿವೆ. ರಘದನ್ ಫಾರೆಸ್ಟ್ ಪಾರ್ಕ್, ಐನ್ ವಿಲೇಜ್, ಖೈರಾ ಫಾರೆಸ್ಟ್, ಹಲವಾರು ಉದ್ಯಾನವನಗಳು, ಪಿಕ್ನಿಕ್ ತಾಣಗಳು ಮತ್ತು ನಯನ ಮನೋಹರ ಹಚ್ಚ ಹಸಿರಿನ ಅರಣ್ಯ ಪ್ರದೇಶಗಳು. ಹಸಿರು ಹೊದ್ದ ಬೆಟ್ಟಗುಡ್ಡಗಳು, ಹೀಗೆ ವಿವಿಧ ರೀತಿಯ ಪ್ರವಾಸಿ ಸ್ಥಳಗಳು ಇಲ್ಲಿವೆ.
5). ಅಲ್ ಜೌಫ್ - ಆಲಿವ್ ರಾಜಧಾನಿ (Al Jouf – The Olive Capital)
ಉತ್ತರ ಸೌದಿ ಅರೇಬಿಯಾದಲ್ಲಿರುವ ಅಲ್ ಜೌಫ್ ಸ್ಥಳವು, ಆಲಿವ್ ತೋಟಗಳು, ಹಸಿರಿನ ವಾತಾವರಣ ಮತ್ತು ತಂಪಾದ ಹವಮಾನಕ್ಕೆ ಹೆಸರುವಾಸಿಯಾದ ಪ್ರದೇಶವಾಗಿದೆ. ಇಲ್ಲಿನ ಸಕಾಕಾ ನಗರ, ಕೃಷಿ ತೋಟಗಳಿಂದ ಆವೃತವಾಗಿದ್ದು, ಬೇರೆಲ್ಲೆಡೆಗಿಂತ ತಂಪಾದ ಹವಾಮಾನ ಇಲ್ಲಿರುತ್ತದೆ.
ಇಲ್ಲಿ ಆಲೀವ್ ಅನ್ನು ಹೆಚ್ಚಾಗಿ ಬೆಳೆಯುವದರಿಂದ ಚಳಿಗಾಲದಲ್ಲಿ ವರ್ಷಕ್ಕೊಮ್ಮೆ ಆಲಿವ್ ಉತ್ಸವವನ್ನು ಆಚರಿಸಲಾಗುತ್ತದೆ. ಈ ಪ್ರದೇಶದಲಿ ನಡೆಯುವ ಅತಿದೊಡ್ಡ ಉತ್ಸವಗಳಲ್ಲಿ ಒಂದಾಗಿದೆ. ಪುರಾತನ ಜಾಬಲ್ ಕೋಟೆ (Zaabal Castle) ಯಿಂದ ಸುತ್ತಮುತ್ತಲಿನ ಹಸಿರು ತುಂಬಿದ ಸುಂದರವಾದ ತೋಟಗಳನ್ನು ನೋಡಬಹುದು
6.) ತಬೂಕ್ (Tabuk):- ಸೌದಿ ಅರೇಬಿಯಾದ ವಾಯುವ್ಯ ಭಾಗದ ಜೋರ್ಡಾನ್ ಗಡಿಯಲ್ಲಿದೆ. ಈ ಪ್ರದೇಶಕ್ಕೆ ಸುಮಾರು ಐದು ಸಾವಿರವರ್ಷಗಳ ಇತಿಹಾಸವಿದೆ. ಇದೊಂದು ಪುರಾತನ ನಗರವಾಗಿದೆ. ಚಳಿಗಾಲದಲ್ಲಿ ಮೈಕೊರೆಯುವ ಚಳಿ ಈ ಭಾಗದಲ್ಲಿರುತ್ತದೆ. ಬೇಸಿಗೆಕಾಲದಲ್ಲಿ ಬೆಳಿಗ್ಗೆ ಸುಡು ಬಿಸಿ ವಾತಾವಾರಣವಿದ್ದರೂ, ಸಂಜೆಯ ವಾತಾವರಣ ಹಿತದಾಯಕವಾಗಿರುತ್ತದೆ.
ಅತ್ಯಂತ ಧೀರ್ಘ ಇತಿಹಾಸವಿರುವ ಈ ತಾಣ ಪ್ರಾಚೀನ ಪುರಾತತ್ತ್ವ ಶಾಸ್ತ್ರದ ಸ್ಥಳಗಳನ್ನು ಹೊಂದಿದೆ. ಪ್ರವಾದಿ ಮೋಸೆಸ್ ಅವರು ಹತ್ತಾರು ವರ್ಷಗಳ ಕಾಲ ಈ ಸ್ಥಳದಲ್ಲಿ ವಾಸಿಸಿದ್ದರೆಂದು ಹೇಳಲಾಗಿದೆ. ಈ ಪ್ರಾಂತ್ಯವು ಕೆಂಪು ಸಮುದ್ರದ ಕರಾವಳಿ ತೀರವನ್ನು ಹೊಂದಿದೆ. ಹಲವಾರು ಸುಂದರವಾದ ಪಟ್ಟಣಗಳು ಈ ಪ್ರಾಂತ್ಯದಲ್ಲಿದೆ. ಕರಾವಳೀ ತೀರ ಮಾತ್ರವಲ್ಲದೆ, ಮರುಭೂಮಿ, ಎತ್ತರದ ಪರ್ವತಗಳು ಈ ಪ್ರಾಂತ್ಯದಲ್ಲಿವೆ. ತಬೂಕ್ ಪಟ್ಟಣದ ಮಧ್ಯಭಾಗದಲ್ಲಿರುವ ತಬೂಕ್ ಕೋಟೆಯು, ಕ್ರಿ.ಪೂ 3500 ರ ಹಿಂದಿನ ಕೋಟೆಯಾಗಿದೆ ಎಂದು ಹೇಳುತ್ತಾರೆ.
7). ಜಜಾನ್ ಹೈಲ್ಯಾಂಡ್ಸ್ (Jazan highlands) :
ಯೆಮೆನ್ ಗಡಿಯ ಸಮೀಪವಿರುವ ಈ ಪ್ರದೇಶವು ಆಶ್ಚರ್ಯಗಳಿಂದ ತುಂಬಿದೆ. ಕರಾವಳಿ ಬಿಸಿ ಮತ್ತು ಆರ್ದ್ರತೆಯಿಂದ ಕೂಡಿದ್ದರೂ, ಜಜಾನ್ ಹೈಲ್ಯಾಂಡ್ಸ್, ವಿಶೇಷವಾಗಿ ಫೈಫಾ ಪರ್ವತಗಳು ಮುಂಗಾರಿನಲ್ಲಿ ಹಸಿರಿನಿಂದ ಮೈದುಂಬಿ ಕೊಂಡಿರುತ್ತವೆ ಅಷ್ಟೇ ಅಲ್ಲದೆ ಮಳೆಗಾಲದ ಮಂಜನ್ನೂ ಇಲ್ಲಿ ನೋಡಬಹುದು. ಇಲ್ಲಿರುವ ತೋಟಗಳನ್ನು ನೋಡುತಿದ್ದರೆ, ಇದೇನಿದು ಅರೇಬಿಯಾ ದೇಶವೋ, ಅಥವಾ ಆಗ್ನೇಯ ಏಷ್ಯಾದ ಒಂದು ಪ್ರಾಂತ್ಯವೋ ಎನ್ನುವಂತೆ ಭಾಸವಾಗುತ್ತದೆ.
ಬನಿ ಮಲಿಕ್ ಮತ್ತು ಅಲ್-ಡೇಯರ್ ಇಲ್ಲಿರುವ ಹಚ್ಚ ಹಸಿರಿನ ಪರ್ವತ ಪ್ರದೇಶದ ಹಳ್ಳಿಗಳು, ಕಾಫಿ ತೋಟಗಳು ಮತ್ತು ಸಾಂಪ್ರದಾಯಿಕ ಜೀವನಕ್ಕೆ ಹೆಸರುವಾಸಿಯಾಗಿವೆ. ಮಳೆಗಾಲದ ಸಮಯದಲ್ಲಿ ಬೆಟ್ಟಗಳು ಹಸಿರಿನಿಂದ ಕಂಗೊಳಿಸುತ್ತವೆ.
8) ಹೇಲ್ (Hail):- ಇದು ವಾಯುವ್ಯ ಸೌದಿ ಅರೇಬಿಯಾದಲ್ಲಿರುವ ಶಮ್ಮಾರ್ ಪರ್ವತಗಳಾದ ಅಜಾ ಮತ್ತು ಸಲ್ಮಾ ನಡುವೆ ಇರುವ ಒಂದು ನಗರ. ರಿಯಾದ್ ನಿಂದ ಸುಮಾರಿ 571 ಕಿಲೋಮೀಟರ್ ದೂರದಲ್ಲಿದೆ. ದಕ್ಷಿಣದ ಎತ್ತರದ ಪ್ರದೇಶಗಳು ಅಥವಾ ಉತ್ತರದ ಗಡಿಗಳಷ್ಟು ತಂಪಾಗಿಲ್ಲದಿದ್ದರೂ, ಉತ್ತರದಲ್ಲಿ ನೆಲೆಗೊಂಡಿರುವ ಹೈಲ್, ಇತರ ಮರುಭೂಮಿ ಪ್ರದೇಶಗಳಿಗೆ ಹೋಲಿಸಿದರೆ ಹೆಚ್ಚು ಸಮಶೀತೋಷ್ಣ ಹವಾಮಾನ ಇಲ್ಲಿರುತ್ತದೆ.
ಈ ತಾಣವು, ಐತಿಹಾಸಿಕ, ನೈಸರ್ಗಿಕ ಮತ್ತು ಆಧುನಿಕ ಆಕರ್ಷಣೆಗಳ ಮಿಶ್ರಣದ ಅನುಭವನ್ನು ನೀಡುತ್ತದೆ. ಪ್ರಮುಖ ತಾಣಗಳಲ್ಲಿ ಅಲ್-ಕಿಶ್ಲಾ ಅರಮನೆ, ಆರಿಫ್ ಕೋಟೆ, ಅಲ್-ರಾಜಿ ಮಸೀದಿ ಮತ್ತು ಲವೇರಾ ಥೀಮ್ ಪಾರ್ಕ್ ಸೇರಿವೆ. ಪ್ರಕೃತಿ ಪ್ರಿಯರು ಅಲ್ ಸಮ್ರಾ ಪರ್ವತ, ಹತಿಮಾ ಜ್ವಾಲಾಮುಖಿ ಕುಳಿ ಮತ್ತು ಹತ್ತಿರದ ಅಲ್ ನಫುದ್ ಮರುಭೂಮಿಯನ್ನು ಅನ್ವೇಷಿಸಬಹುದು.
9) ಅಲ್ ಉಲಾ (AlUla):
ಅಲ್ಉಲಾ ನಗರವು, ಸೌದಿ ಅರೇಬಿಯಾದ ಮದೀನಾ ಪ್ರಾಂತ್ಯದಲ್ಲಿರುವ ಒಂದು ಪ್ರಾಚೀನ ಅರೇಬಿಯನ್ ಓಯಸಿಸ್ ನಗರ ಮತ್ತು ಗವರ್ನರೇಟ್ ಆಗಿದ್ದು, ಇದು ಮದೀನಾ ನಗರದ ವಾಯುವ್ಯಕ್ಕೆ 350 ಕಿಲೋಮೀಟರ್ ದೂರದಲ್ಲಿದೆ. ಈ ಪ್ರಾಂತ್ಯವು, ಇಲ್ಲಿನ ತಂಪಾದ ಹವಾಮಾನಕ್ಕೆ ಹೆಸರುವಾಸಿಯಾಗಿದೆ. ಇಲ್ಲಿನ ಕಡಿಮೆ ತಾಪಮಾನ ದಿಂದಾಗಿ, ಚಳಿಗಾಲದಲ್ಲಿ ನಡೆಯುವ ಹಲವಾರು ವಿಶಿಷ್ಟ ಹಬ್ಬಗಳು ಮತ್ತು ಹೊರಾಂಗಣ ಕಾರ್ಯಕ್ರಮಗಳಿಂದಾಗಿ ಈ ತಾಣವು ಜನಪ್ರಿಯವಾಗಿದೆ.
ಅಲ್ ಉಲಾ ಐತಿಹಾಸಿಕ ತಾಣಗಳಿಂದ ಹಿಡಿದು ನೈಸರ್ಗಿಕ ಅದ್ಭುತಗಳು ಮತ್ತು ಆಧುನಿಕ ವಾಸ್ತುಶಿಲ್ಪದ ಅದ್ಭುತಗಳವರೆಗೆ ವೈವಿಧ್ಯಮಯ ಆಕರ್ಷಣೆಗಳನ್ನು ಇಲ್ಲಿ ನೋಡಬಹುದು
ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಹೆಗ್ರಾ, ಪ್ರಾಚೀನ ಸಮಾಧಿಗಳು, ಎಲಿಫೆಂಟ್ ರಾಕ್, ಆನೆಯನ್ನು ಹೋಲುವ ಮರಳುಗಲ್ಲಿನ ರಚನೆ, ಮತ್ತು ಬೃಹತ್ ಮರುಭೂಮಿ ಬಂಡೆಯ ಮುಖದಲ್ಲಿ ನಿರ್ಮಿಸಲಾದ ಸಂಗೀತ ಕಚೇರಿ ಸಭಾಂಗಣವಾದ ಮರಾಯಾ, ಇವೆಲ್ಲವೂ ಪ್ರವಾಸಿಗರು ಭೇಟಿ ಮಾಡಬಹುದಾದ ಕೆಲ ಪ್ರಮುಖ ಪ್ರವಾಸಿ ಆಕರ್ಷಣೆಗಳು. ಇದಲ್ಲದೆ, ಪುರಾತನ ನಗರ, ಶರಾನ್ ನೇಚರ್ ರಿಸರ್ವ್ ಮತ್ತು ಜಬಲ್ ಇಕ್ಮಾ ಗೆ ಸಹ ಭೇಟಿ ನೀಡಬಹುದು.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ