ಬುಧವಾರ, ಸೆಪ್ಟೆಂಬರ್ 8, 2010

ಕಾಡುತಿದೆ ನಿಮ್ಮ ನೆನಪು ಪ್ರತಿಕ್ಷಣ

ತಿರುಗಿ ಬರುವರೆ ತೀರಿಹೋದ ಹಿರಿಯರು.

ಕಾಡುತಿದೆ ನಿಮ್ಮ ನೆನಪು ಪ್ರತಿಕ್ಷಣ 
ನೀವಿಲ್ಲದೆ ಕಳೆಯಲಿ ಹೇಗೆ ಅನುದಿನ
ಕರಗಿ ನೀರಾಗಿ ಹೋಯಿತಿಂದು ಈ ಮನ
ಬಳಲಿ ಬೆಂಡಾಗಿ ಕೂತಾಗ, 
ಮನ ಚಿಂತಿಸುವುದು ನಾಳಿನ ಜೀವನ,
ಆದರೆ ಆಶಾವಾದ ತುಂಬಲು ನೀವಿಲ್ಲ ಇಂದು
ಕಾಡುತಿದೆ ನಿಮ್ಮ ನೆನಪು ಸದಾ
ನೆನಪಾಯಿತು ನೀವು ತೋರಿದ ಆ ಪ್ರೀತಿ, ವಾತ್ಸಲ್ಯ
ನೆನಪಾಯಿತು ನೀವು ತೋರಿದ ಆ ಮಮತೆ, ಆ ಪರಿಯ ಆಪ್ಯಾಯತೆ
ಯಾರ ಬಳಿ ಹುಡುಕಲಿ ಇಂದು ಆ ಪ್ರೀತಿ ವಾತ್ಸಲ್ಯ, 
ಕಾಡುತಿದೆ ನಿಮ್ಮ ನೆನಪು ಸದಾ
 
ಎಡವಿ ಬಿದ್ದಾಗ  ಕೈ ಹಿಡಿದು ಮೇಲೆತ್ತಿ 
ಸಾಂತ್ವನ ಹೇಳಿದವರು ನೀವು ಅಂದು 
ಆದರೆ ನಗುವ ಜನರಿರುವವರು ಇಂದು
ತಪ್ಪು ಮಾಡಿದಾಗ ಪ್ರೀತಿಯಿಂದ ಗದರಿಸಿ 
ಬುದ್ದಿ ಹೇಳಿದವರು ನೀವು ಅಂದು
ಆದರೆ ಅಪಹಾಸ್ಯ ಮಾಡುವ 
ಜನರಿರುವವರು ಇಂದು
ನೀವಿಲ್ಲದ ಬದುಕು ದುಸ್ತರ, ಬರ್ಬರ
ನಿಮ್ಮ ನೆನಪೊಂದೆ ಸಾಕು ಜೀವಿಸಲು ಬಹುದಿನ
ಕಾಡುತಿದೆ ನಿಮ್ಮ ನೆನಪು ಸದಾ ಸದಾ
ಕಾಡುತಿದೆ ನಿಮ್ಮ ನೆನಪು ಪ್ರತಿಕ್ಷಣ 
ನೀವಿಲ್ಲದೆ ಕಳೆಯಲಿ ಹೇಗೆ ಅನುದಿನ
ಕರಗಿ ನೀರಾಗಿ ಹೋಯಿತಿಂದು ಈ ಮನ
ಬಳಲಿ ಬೆಂಡಾಗಿ ಕೂತಾಗ, 
ಮನ ಚಿಂತಿಸುವುದು ನಾಳಿನ ಜೀವನ,
ಆದರೆ ಆಶಾವಾದ ತುಂಬಲು ನೀವಿಲ್ಲ ಇಂದು
ಕಾಡುತಿದೆ ನಿಮ್ಮ ನೆನಪು ಸದಾ

ನೆನಪಾಯಿತು ನೀವು ತೋರಿದ ಆ ಪ್ರೀತಿ, ವಾತ್ಸಲ್ಯ
ನೆನಪಾಯಿತು ನೀವು ತೋರಿದ ಆ ಮಮತೆ, ಆ ಪರಿಯ ಆಪ್ಯಾಯತೆ
ಯಾರ ಬಳಿ ಹುಡುಕಲಿ ಇಂದು ಆ ಪ್ರೀತಿ ವಾತ್ಸಲ್ಯ, 
ಕಾಡುತಿದೆ ನಿಮ್ಮ ನೆನಪು ಸದಾ 

ಎಡವಿ ಬಿದ್ದಾಗ  ಕೈ ಹಿಡಿದು ಮೇಲೆತ್ತಿ 
ಸಾಂತ್ವನ ಹೇಳಿದವರು ನೀವು ಅಂದು 
ಆದರೆ ನಗುವ ಜನರಿರುವವರು ಇಂದು
ತಪ್ಪು ಮಾಡಿದಾಗ ಪ್ರೀತಿಯಿಂದ
ಗದರಿಸಿ ಬುದ್ದಿ ಹೇಳಿದವರು ನೀವು ಅಂದು
ಆದರೆ ಅಪಹಾಸ್ಯ ಮಾಡುವ ಜನರಿರುವವರು ಇಂದು

ನೀವಿಲ್ಲದ ಬದುಕು ದುಸ್ತರ, ಬರ್ಬರ
ನಿಮ್ಮ ನೆನಪೊಂದೆ ಸಾಕು ಜೀವಿಸಲು ಬಹುದಿನ
ಕಾಡುತಿದೆ ನಿಮ್ಮ ನೆನಪು ಸದಾ ಸದಾ

ಮಂಗಳವಾರ, ಸೆಪ್ಟೆಂಬರ್ 7, 2010

ಹುಟ್ಟು ಹಬ್ಬದ ದಿನ

ಮೂರು ವರ್ಷಗಳ ಹಿಂದೆ ನಡೆದಿದ್ದು, ಇಂದಿನಂತೆ ಅಂದು ಸಹ ನಾನು ಕುವೈತ್ ನಲ್ಲಿ ಕೆಲಸ ಮಾಡುತಿದ್ದೆ. ಮನೆಯವರೊಟ್ಟಿಗೆ ಸಾಮನ್ಯವಾಗಿ ನಾನು ಯಾಹೂ ವಾಯ್ಸ್ ಮತ್ತು ವೀಡಿಯೊ ಚಾಟ್ ನಲ್ಲಿ ಮಾತನಾಡುತ್ತೇನೆ.  
ಅಂದು ಸೆಪ್ಟೆಂಬರ್ ೯ ನೇ ತಾರಿಖು ನನ್ನ ಮೊದಲನೆ ಮಗನ ಹುಟ್ಟು ಹಬ್ಬದ ದಿನ.  ಮಧ್ಯರಾತ್ರಿಯಂದೆ ನಾನು ಎಸ್ ಎಮ್ ಎಸ್ ಮಾಡಿ ಶುಭಾಶಯ ತಿಳಿಸಿದ್ದೆ. ಅವನಿಗೆ ನನ್ನ ಜತೆ ಮಾತನಾಡಬೇಕು ಹಾಗು ನೋಡಬೇಕು ಅನ್ನುವ ಬಹಳ ಬಯಕೆ. ಬೆಳಿಗ್ಗೆಯಿಂದಾನೆ ಮಿಸ್ಸ್ಡ್ ಕಾಲ್ಸ್ ಬರೋದಿಕ್ಕೆ ಶುರುವಾಯಿತು. ನಮ್ಮ್ ಮಿಸ್ಸ್ ಕಾಲ್ ಗಳ ಅರ್ಥ ಏನಪ್ಪ ಅಂದರೆ ಆನ್ ಲೈನ್ ಗೆ ಬರಬೇಕು ಅಂತ. 
ಅವನು ಬೆಳಿಗ್ಗೆ ಅವರಮ್ಮನೊಟ್ಟಿಗೆ ದೇವಸ್ಥಾನಕ್ಕೆ ಹೋಗಿ ಬಂದು ಶಾಲೆಗೆ ಹೋಗಬೇಕಾಗಿತ್ತು, ಹೋಗುವ ಮುನ್ನ ನನ್ನ ಜತೆ ಮಾತಾನಾಡಬೇಕು ಅನ್ನುವ ಕಾತುರ. ಭಾರತಕ್ಕೆ ಹಾಗು ಕುವೈತ್ ಗೆ ಎರಡುವರೆ ಗಂಟೆ ವ್ಯತ್ಯಾಸ, ಇಲ್ಲಿ ೬ ಗಂಟೆ ಅಂದರೆ ಭಾರತ ದಲ್ಲಿ ೮:೩೦, ಅದು ಅವನು ಶಾಲೆಗೆ ಹೊರಡುವ ಸಮಯ, ನನಗೆ ಹಾಸಿಗೆಯಿಂದ ಏಳುವ ಸಮಯ .
ಅಂತೂ ಅವರ ಅಮ್ಮನ ಜತೆ ಆನ್ ಲೈನ್ಗೆ ಬಂದು "ಪಪ್ಪ ನೀವು ಕಳುಹಿಸಿದ ಮೆಸ್ಸೇಜ್ ನೋಡಿದೆ,  ವಿಶ್ ಮಾಡಿದ್ದಕ್ಕೆ ಥ್ಯಾಂಕ್ಸ್. ಈ ಸಾರಿ ನೀವಿಲ್ಲದೆ ಹುಟ್ಟಿದ ಹಬ್ಬ ಆಚರಣೆ ಮಾಡೊಕೆ ಬೇಸರ ಆಗ್ತಾಯಿದೆ,.. ನಿಮ್ಮನ್ನು ನೋಡಬೇಕು ಆದಷ್ಟು ಬೇಗ ಬನ್ನಿ ಎಂದ..  ಪ್ರತಿ ವರ್ಷ ನಾವೆಲ್ಲ ತುಂಬಾ ಗ್ರಾಂಡ್ ಆಗಿ ಸೆಲೆಬ್ರೇಟ್ ಮಾಡ್ತಾ ಯಿದ್ದಿವಿ ಈ ವರ್ಷ ಮಾಡೋಕೆ ಆಗ್ತಾ ಇಲ್ಲ ಅಂತಾ ನೆನೆಸಿಕೊಂಡು ಬೇಜಾರಾಯಿತು,
ಆಮೇಲೆ ಅವನು "ಪಪ್ಪ ಶಾಲೆಗೆ ಹೋಗಬೇಕು ಟೈಮ್ ಆಯಿತು, ಆರ್ಶಿವಾದ ಮಾಡಿ" ಎಂದ, ನಾನು ಆಯಿತು ಪುಟ್ಟ ದೇವರು ನಿನ್ನ ನೂರ್ಕಾಲ ಚೆನ್ನಾಗಿಟ್ಟರಲಿ, ದೇವರು ನಿನಗೆ ಒಳ್ಳೇದು ಮಾಡಲಿ, ಯಾವಾಗಲು ಸುಖ ಸಂತೋಷದಿಂದ ನೆಮ್ಮದಿಯಾಗಿರಲಿ ನಿನ್ನ ಬದುಕು" ಎಂದೆ. ಇಷ್ಟೆಲ್ಲ  ಹೇಳುತ್ತಿರಬೇಕಾದರೆಆ ಕಡೆ ಯಿಂದ ಸದ್ದೆ ಬರ್ತಾ ಯಿರಲಿಲ್ಲ. ನಾನು ಹಲೋ ಹಲೋ ಅಂತಾ ಯಿದ್ದಿನಿ. ಏನು ಉತ್ತರನೇ ಬರಲಿಲ್ಲ.
ಸ್ವಲ್ಪ ಹೊತ್ತಾದಮೇಲೆ, ನನ್ನ ಶ್ರೀಮತಿ ಹೆಡ್ ಫೋನ್ ತೆಗೆದುಕೊಂಡು ಮಾತಾನಾಡುತ್ತ "ನೋಡ್ರಿ ನಿಮ್ಮ ಮಗ ಕಂಪ್ಯೂಟರ್ ಮುಂದೆ ಅಡ್ಡ ಬಿದ್ದು ನಮಸ್ಕಾರ ಮಾಡ್ತಾಯಿದ್ದಾನೆ" ಎಂದಾಗ, ಒಮ್ಮೆಲೆ ಆಶ್ಚರ್ಯ ವಾಯಿತು ಹಾಗು ಅವನ ಬಗ್ಗೆ ಬಹಳ ಹೆಮ್ಮೆ ಯಾಯಿತು. ತಂದೆ ಎದುರಿಗೆ ಇರಲೇಬೇಕು ಅವರಿಗೆ ನಮಸ್ಕಾರ ಮಾಡೊದಿಕ್ಕೆ ಅನ್ನುವ ಭಾವನೆ ಇಲ್ಲದೆ, ಹತ್ತಿರ ಇದಾರೊ ಇಲ್ಲವೋ ಒಟ್ಟಿನಲ್ಲ್ ಕಂಪ್ಯೂಟರ್ ಮುಂದೆ ಕಾಣಿಸ್ತಾಯಿದಾರೆ ಅಷ್ಟು ಸಾಕು ನಂಗೆ ಅನ್ನುವ ಭಾವ ದೊಂದಿಗೆ ಕಂಪ್ಯೂಟರ್ ಗೆ ಅಡ್ಡ ಬಿದ್ದಿದ್ದ. ಮನೆಯವರಿಗೆಲ್ಲರಿಗೂ ಬಹಳ ಖುಷಿಯಾಗಿತ್ತು ಅಂದು.
ಮಕ್ಕಳಿಗೆ ನಾವು ಹೇಳಿಕೊಡೋ ಸಂಪ್ರದಾಯ ಸಂಸ್ಕಾರ ಆಚಾರ ವಿಚಾರ ಪದ್ದತಿಗಳು ಅವರ ಮೇಲೆ ಯಾವ ರೀತಿ ಒಳ್ಳೆಯ ಪರಿಣಾಮ ಬೀರುತ್ತವೆ ಅವನ ಈ ಪರಿಶುದ್ದವಾದ ಪ್ರೀತಿನೇ ಸಾಕ್ಷಿ. ಅದೊಂದು ಮರೆಯಲಾರದ ಸನ್ನಿವೇಶ ನನ್ನ ಜೀವನದಲ್ಲಿ.
ಇಂದು ನನ್ನ ಎರಡನೇ ಮಗಳ ಹರ್ಷಿಣಿ ಹುಟ್ಟಿದ ದಿನ ನಾಡಿದ್ದು ನನ್ನ ಮಗನ ಹುಟ್ಟಿದ ದಿನ, ಈ ಸಾರಿಯು ಅವರೆಲ್ಲರನ್ನು ಮಿಸ್ ಮಾಡ್ಕೋತಿದ್ದೀನಿ

ಭಾನುವಾರ, ಸೆಪ್ಟೆಂಬರ್ 5, 2010

ರಾಜ್ಯ "ಅಪಾಲರು"

ಮಾನ್ಯರೆ,
ಕೆಳಗಡೆ ಇರುವ ಸುದ್ದಿಗಳು ನಮ್ಮ ಸನ್ಮಾನ್ಯ ರಾಜ್ಯಪಾಲರಾದ ಹೆಚ್.ಆರ್.ಭಾರದ್ವಾಜ್ ಕುರಿತಾದದ್ದು. ಸರಕಾರಕ್ಕೆ ಮಾರ್ಗದರ್ಶನ ನೀಡುವ ಬದಲು ಸಂಘರ್ಷಕ್ಕೆ ಈಡು ಮಾಡಿರುವ ಪ್ರಸಂಗಗಳೆ ಜಾಸ್ತಿ. ಇವರ ಧೀರ್ಘಾಡಳಿತದ ಅನುಭವ ರಾಜ್ಯದ ಜನ ಸಾಮನ್ಯರಿಗೆ ಅನುಕೂಲವಾಗುವಂತಿದ್ದರೆ ಹೇಗಿರುತಿತ್ತು? ರಾಜ್ಯದಲ್ಲಿ ಕಣ್ಣಾಮುಚ್ಚಾಲೆ ಆಡುತ್ತಿರುವ ವಿದ್ಯುತ್ ಸಮಸ್ಯೆಗೆ ಪರಿಹಾರ ಕೊಡಿಸುವುದಾಗಿರಲಿ, ನೆರೆ ಸಂತ್ರಸ್ತರಿಗೆ ಕೇಂದ್ರದಿಂದ ಸಹಾಯ ತರುವುದಾಗಲಿ, ರಾಜ್ಯಕ್ಕೆ ಅನುಕೂಲವಾದ ರೈಲ್ವೆ ಯೋಜನೆ ಗಳನ್ನು ತರುವುದಾಗ್ಲಿ, ಸದ್ಯಕ್ಕೆ ಕಾವೇರಿ ಜಲಾನಯನದಲ್ಲಿ ಅತಿ ಕಡಿಮೆ ಮಳೆಯಾಗಿರುವುದರಿಂದ ತಮಿಳು ನಾಡಿಗೆ ನೀರು ಬಿಡುವುದಕ್ಕೆ ಆಗದೆ ಇರುವ ಪರಿಸ್ಥಿತಿ ಇದೆ, ಅದನ್ನು ತಮಿಳು ನಾಡಿಗೆ ಮನವರಿಕೆ ಮಾಡಿಕೊಡಬಹುದಲ್ವ. ಮಹಾದಾಯಿ ಯೋಜನೆಯಿಂದ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಿಗೆ ಕುಡಿಯುವ ನೀರಿನ ಅನುಕೂಲ ವಾಗುತ್ತದೆ, ಅದನ್ನು ಗೋವಾ ಸರ್ಕಾರಕ್ಕೆ ತಿಳಿ ಹೇಳಿ ಯೋಜನೆಗೆ ಅಸ್ತು ಮಾಡಿಸಬಹುದಾಗಿತ್ತು. ಹೇಳುತ್ತಾ ಹೋದರೆ ನೂರೆಂಟು ಸಮಸ್ಯೆಗಳಿವೆ, ಅದು ಬಿಟ್ಟು, ಈ ತರಹ ಉಪಯೊಗ ವಿಲ್ಲದ ವಿಷಯಗಳಿಗೆ ನಿಮ್ಮ ಸಮಯವನ್ನು ವ್ಯಯಿಸಿದರೆ ಆಗುವ ನಷ್ಟ ಯಾರಿಗೆ? ನಮಗೆ ಸ್ವಾಮಿ, ರಾಜ್ಯದ ಜನಕ್ಕೆ.
ನೀವೇನಂತೀರಾ?

ರಂಗನಾಥ.

23 ಆಗಸ್ಟ್ 2010: ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಜಾರಿಗೆ ಮುಂದಾಗಿರುವ ಆಡಳಿತಾರೂಢ ಭಾರತೀಯ ಜನತಾ ಪಕ್ಷದ ಒಡೆದು ಆಳುವ ನೀತಿಯಾಗಿದೆ ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಮತ್ತೊಮ್ಮೆ ಆಕ್ರೋಶ ವ್ಯಕ್ತಪಡಿಸಿದ್ದು, ಗೋ ಹತ್ಯೆ ನಿಷೇಧ ವಿಧೇಯಕಕ್ಕೆ ಅಂಕಿತ ಹಾಕುವುದು, ಬಿಡುವುದು ರಾಷ್ಟ್ರಪತಿಗೆ ಬಿಟ್ಟ ವಿಚಾರ ಎಂದು ಸ್ಪಷ್ಟಪಡಿಸಿದ್ದಾರೆ.
ಮೈಸೂರು, ಆ. 22: ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ವಿ.ಜಿ.ತಳವಾರ್‌ರನ್ನು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಬಹಿರಂಗವಾಗಿ ತರಾಟೆಗೆ ತೆಗೆದುಕೊಂಡ ಘಟನೆ ಇಂದಿಲ್ಲಿ ನಡೆಯಿತು. ತಮ್ಮ ಅಧಿಕಾರವಧಿಯಲ್ಲಿ ಅಕ್ರಮ ನೇಮಕಾತಿ ನಡೆಸಿರುವರೆನ್ನಲಾದ ವಿಶ್ರಾಂತ ಕುಲಪತಿ ಡಾ.ವಿ.ಜೆ.ಶಶಿಧರ ಪ್ರಸಾದ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಕುರಿತು ರಾಜ್ಯಪಾಲರ ಆದೇಶಕ್ಕೆ ವಿರುದ್ಧವಾಗಿ ಕುಲಪತಿ ಮಾತನಾಡಿದ್ದಾರೆ ಎಂಬುದೇ ಘಟನೆಗೆ ಕಾರಣ.
ಗುರುವಾರ, 29 ಜುಲೈ 2010 : ರಾಜ್ಯ ಸರಕಾರ ತರಲು ಉದ್ದೇಶಿಸಿರುವ ಗೋ ಹತ್ಯೆ ನಿಷೇಧ ಮಸೂದೆಗೆ ಅಂಕಿತ ಹಾಕಲು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ನಿರಾಕರಿಸಿದ್ದಾರೆ. 
ಬುಧವಾರ, 21 ಜುಲೈ 2010:ಗೋಹತ್ಯೆ ನಿಷೇಧ ಕಾಯ್ದೆ ಸೇರಿದಂತೆ ಒಟ್ಟು 12 ಮಸೂದೆಗಳು ನನಗೆ ಇನ್ನೂ ತಲುಪಿಲ್ಲ, ನನ್ನ ಬಳಿ ಬಂದ ನಂತರ ಅಧ್ಯಯನ ನಡೆಸಿ ಅವುಗಳನ್ನು ಅಂಗೀಕರಿಸುವ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ರಾಜ್ಯಪಾಲರು ಸ್ಪಷ್ಟಪಡಿಸಿದ್ದಾರೆ.
ಶನಿವಾರ, 17 ಜುಲೈ 2010: ರಾಜ್ಯ ಸರಕಾರ ಹಾಗೂ ನಾಡಿನ ಹಿತದೃಷ್ಟಿಯಿಂದ ಭ್ರಷ್ಟ ಸಚಿವರನ್ನು ಸಂಪುಟದಿಂದ ಕೈ ಬಿಡಬೇಕು ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಮತ್ತೊಮ್ಮೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ನೇರವಾಗಿ ತಾಕೀತು ಮಾಡಿದ್ದಾರೆ.
ಗುರುವಾರ,15 ಜುಲೈ 2010: ರಾಜ್ಯಪಾಲರು ಕಾಂಗ್ರೆಸ್ ಏಜೆಂಟ್‌ರಂತೆ ವರ್ತಿಸುತ್ತಿದ್ದಾರೆ ಎಂಬ ಬಿಜೆಪಿ ನಾಯಕರ ಟೀಕೆಗಳಿಗೆ ಅಚ್ಚರಿಯ ಪ್ರತಿಕ್ರಿಯೆ ನೀಡಿರುವ ಎಚ್.ಆರ್. ಭಾರದ್ವಾಜ್, ಈ ಕುರಿತು ನನಗೆ ಹೆಮ್ಮೆಯಿದೆ ಎಂದು ಹೇಳಿಕೊಂಡಿದ್ದಾರೆ. ಎಚ್.ಆರ್. ಭಾರದ್ವಾಜ್ ಸಂವಿಧಾನದ ಕಾವಲುಗಾರನಂತೆ ವರ್ತಿಸುವ ಬದಲು ಕಾಂಗ್ರೆಸ್ ಏಜೆಂಟರಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಆಡಳಿತ ಪಕ್ಷ ಬಿಜೆಪಿ ಆರೋಪಿಸಿತ್ತು. ಇದಕ್ಕೆ ದೆಹಲಿಯಲ್ಲಿ ಪ್ರತಿಕ್ರಿಯಿಸಿದ ಅವರು, 'ಹೌದು, ನಾನು ಕಾಂಗ್ರೆಸ್ಸಿಗ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತಿದೆ' ಎಂದಿದ್ದಾರೆ.
ಗುರುವಾರ, 15 ಜುಲೈ 2010: ದೇಶದ ಆರ್ಥಿಕ ಭದ್ರತೆ ಗಮನದಲ್ಲಿಟ್ಟುಕೊಂಡು ಪೆಟ್ರೋಲಿಯಂ ಉತ್ಪನ್ನ ಬೆಲೆ ಏರಿಕೆ ಮಾಡಿರುವುದರಲ್ಲಿ ತಪ್ಪಿಲ್ಲ ಎಂದು ಕೇಂದ್ರ ಸರಕಾರದ ನಿಲುವನ್ನು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಸಮರ್ಥಿಸಿಕೊಂಡಿದ್ದಾರೆ.
ಗುರುವಾರ, 9 ಜುಲೈ 2009: ರಾಜ್ಯಪಾಲನಾಗಿ ಸಂವಿಧಾನ ರಕ್ಷಿಸುವುದು ತಮ್ಮ ಮುಖ್ಯವಾದ ಹೊಣೆಗಾರಿಕೆಯಾಗಿದೆ ಎಂದು ರಾಜ್ಯದ ನೂತನ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಹೇಳಿದ್ದಾರೆ.
ಮಂಗಳವಾರ, 6 ಜುಲೈ 2010: ತಮ್ಮ ಬಗ್ಗೆ ಅನೇಕ ಟೀಕೆಗಳು ಬರುತ್ತಿವೆ. ಕೆಲವರು ತಮ್ಮನ್ನು ಕಾಂಗ್ರೆಸ್ ಏಜೆಂಟ್, ಪ್ರತಿಪಕ್ಷದ ವಕ್ತಾರನಂತೆ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸುತ್ತಿದ್ದು, ಇದಕ್ಕೆಲ್ಲ ತಾನು ಸೊಪ್ಪು ಹಾಕುವುದಿಲ್ಲ ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ತಿರುಗೇಟು ನೀಡಿದ್ದಾರೆ.
ಶುಕ್ರವಾರ, 2 ಜುಲೈ 2010: ರಾಜಕಾರಣಿಗಳು ಜನಸೇವೆ ಮಾಡಬೇಕೆ ವಿನಃ, ವ್ಯವಹಾರವನ್ನಲ್ಲ. ವ್ಯವಹಾರ ಮಾಡಲು ಬೇರೆ ಜನರಿದ್ದಾರೆ ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಮತ್ತೊಮ್ಮೆ ಕೆಲವು ಸಚಿವರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ಶನಿವಾರ, 19 ಜೂನ್ 2010: ಗೋ ಹತ್ಯೆ ನಿಷೇಧ ಮಸೂದೆ ಅಂಗೀಕಾರವಾಗಿಲ್ಲ: ಭಾರದ್ವಾಜ್
 1 ಜೂನ್ 2010: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಮತ್ತು ಜನರ ಮೂಲಭೂತ ಹಕ್ಕುಗಳನ್ನು ರಕ್ಷಿಸುವುದು ನಮ್ಮ ಕರ್ತವ್ಯ ಎಂದಿರುವ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರು ಸರ್ಕಾರ ತನ್ನ ಜವಾಬ್ದಾರಿ ಮರೆತು ನಡೆದರೆ ಸಂವಿಧಾನದಲ್ಲಿನ ರಾಜ್ಯಪಾಲರ ತಾಖತ್ತು ಏನೆಂಬುದನ್ನು ತೋರಿಸಬೇಕಾದೀತು ಎಂದು ಪರೋಕ್ಷವಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆಬುಧವಾರ,
19 ಮೇ 2010: ರಾಜ್ಯದ ವಿಶ್ವವಿದ್ಯಾನಿಲಯಗಳ ಕ್ಯಾಂಪಸ್‌ಗಳಲ್ಲಿ ರಾಜಕೀಯದ ರೋಗ ಬಡಿದಿದ್ದು, ಅದನ್ನು ತಾವು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಗುಡುಗಿದ್ದಾರೆ.
ಸೋಮವಾರ, 17 ಮೇ 2010: ಸಚಿವ ಸಂಪುಟದ ಸಹೋದ್ಯೋಗಿಗಳನ್ನು ಹದ್ದು ಬಸ್ತಿನಲ್ಲಿಟ್ಟುಕೊಂಡು ಅವರ ನಡತೆ ಸರಿಯಾಗಿರುವಂತೆ ನೋಡಿಕೊಳ್ಳಬೇಕೆಂದು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ನೀತಿಪಾಠ ಹೇಳಿದ್ದಾರೆ.
ಶನಿವಾರ, 8 ಮೇ 2010: ರಾಜ್ಯದಲ್ಲಿ ಹಲವಾರು ಸಮಸ್ಯೆಗಳಿದ್ದು ಅದರಿಂದಾಗಿ ಜನ ಸಂಕಷ್ಟದಲ್ಲಿದ್ದಾರೆ. ಆದರೆ ಜನಪ್ರತಿನಿಧಿಗಳು ಹಗರಣಗಳಲ್ಲಿ ತೊಡಗಿ ಜನರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಶನಿವಾರ ಆರೋಪಿಸಿದ್ದಾರೆ.
ಮಂಗಳವಾರ, 9 ಫೆಬ್ರವರಿ 2010: ಸೋಮಣ್ಣ ಅವರು ಬೇರೆ ಪಕ್ಷದಿಂದ ವಲಸೆ ಬಂದವರು ಮತ್ತು ಸಕ್ರಿಯ ರಾಜಕಾರಣದಲ್ಲಿದ್ದಾರೆ. ಹಾಗಾಗಿ ಅವರನ್ನು ವಿಧಾನಪರಿಷತ್ತಿಗೆ ಅವರನ್ನು ನಾಮಕರಣಗೊಳಿಸಲು ನನ್ನ ಮನಸ್ಸು ಒಪ್ಪುತ್ತಿಲ್ಲ ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಸರಕಾರದ ಶಿಫಾರಸನ್ನು ತಿರಸ್ಕರಿಸಿದ್ದರು
ಸೋಮವಾರ, 1 ಫೆಬ್ರವರಿ 2010: ಬಾಬರಿ ಮಸೀದಿ ಧ್ವಂಸ ಪ್ರಕರಣದಿಂದಾಗಿ ಇಡೀ ವಿಶ್ವದಲ್ಲಿಯೇ ಭಾರತೀಯರು ತಲೆ ತಗ್ಗಿಸುವಂತಾಗಿದೆ ಎಂದಿರುವ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಇತ್ತೀಚೆಗೆ ರಾಜ್ಯದಲ್ಲಿ ಮರುಕಳಿಸುತ್ತಿರುವ ಚರ್ಚ್ ದಾಳಿ ಪ್ರಕರಣಗಳ ಬಗ್ಗೆ ಕಿಡಿಕಾರಿದರು.
ಬೆಂಗಳೂರು, ಸೆ. 6 : ರಾಜ್ಯದ ಕೆಲ ಜಿಲ್ಲೆಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ರಾಜ್ಯಪಾಲ ಎಚ್ ಆರ್ ಭಾರದ್ವಾಜ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಗತ್ಯ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಹಿತರಕ್ಷಣೆಗಾಗಿ ದಿಟ್ಟ ನಿಲುವು ತಾಳುವುದಾಗಿ ಹೇಳಿದ್ದಾರೆ.

ಶುಕ್ರವಾರ, ಸೆಪ್ಟೆಂಬರ್ 3, 2010

ಮರಳುಗಾಡಿನಲ್ಲಿ ರಂಜಾನ್ ಆಚರಣೆ

ಇತ್ತೀಚಿಗೆ ದಟ್ಸ್ ಕನ್ನಡದಲ್ಲಿ ಪ್ರಕಟವಾಗಿದ್ದ ನನ್ನ ಬರಹ, 
 'ರಂಜಾನ್'. ಇದು ಸಾಮನ್ಯವಾಗಿ ಭಾರತದಲ್ಲಿ ನಾವು ಉಪಯೋಗಿಸುವ ಶಬ್ದ. ಆದರೆ ಅರಬ್ಬಿಯಲ್ಲಿ ಇದನ್ನು 'ರಮದಾನ್' ಎಂದು ಕರೆಯುತ್ತಾರೆ. ಇಸ್ಲಾಂ ಕ್ಯಾಲೆಂಡರಿನ ಒಂಬತ್ತನೇ ತಿಂಗಳು'ರಮದಾನ್'. ಪ್ರತಿ ಮುಸ್ಲಿಂ ಈ ಮಾಸ ಪೂರ್ತಿ ಉಪವಾಸ ವ್ರತ ಆಚರಿಸಿ ತಿಂಗಳ ನಂತರ ಈದ್-ಉಲ್-ಫಿತರ್ ಎನ್ನುವುದರೊಂದಿಗೆ ಉಪವಾಸ ವ್ರತ ಮುಗಿಸುತ್ತಾನೆ.
ಪವಿತ್ರ ರಂಜಾನ್ ಮಾಸಾಚರಣೆ ಈಗ ಪ್ರಪಂಚದೆಲ್ಲೆಡೆ ಶುರುವಾಗಿದೆ. ದೇಹ ಮತ್ತು ಆತ್ಮ ಶುದ್ದಿಯಿಂದ ಅಲ್ಲಾನಿಗೆ ಹತ್ತಿರವಾಗುವುದು. ಮಾನಸಿಕವಾಗಿ ತಮ್ಮನ್ನು ತಾವು ನಿಗ್ರಹಿಸಿಕೊಂಡು ಪರಿಶುದ್ದ ಮನಸ್ಸಿನಿಂದ ಪರಿಪೂರ್ಣ ವ್ಯಕ್ತಿಯಾಗುವುದು ಆಚರಣೆ ಹಿಂದಿನ ಮೂಲ ಉದ್ದೇಶ. ತಿಂಗಳ ನಂತರ ದೇಹದ ತೂಕ ಇಳಿಸಿಕೊಂಡು ಸಧೃಡ ಶರೀರದಿಂದ ಮತ್ತೆ ತಮ್ಮ ದೈನಂದಿನ ಚಟುವಟಿಕೆಗಳಿಗೆ ತಯಾರಾಗಬೇಕು.
ಅತಿ ಹೆಚ್ಚು ಮುಸ್ಲಿಂ ರಾಷ್ಟ್ರಗಳಿರುವ ಗಲ್ಫ್ ಪ್ರದೇಶ ಹಾಗು ಉತ್ತರ ಆಫ್ರಿಕಾ ಖಂಡದಲ್ಲಿ ಇದರ ಆಚರಣೆ ಬಹು ವೈಶಿಷ್ಟ್ಯದಿಂದ ಕೂಡಿರುತ್ತದೆ. ಪ್ರತಿಯೊಬ್ಬ ಮುಸ್ಲಿಂ, ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಊಟ, ನೀರು, ಕಾಫಿ, ಚಹ, ಫಲಹಾರ ಸೇವನೆ, ಧೂಮಪಾನ, ಕಾಮಕ್ರಿಯೆಗಳು ಮಾಡಬಾರದು. ಸಿಟ್ಟು, ಕೋಪ ತಾಪ, ದರ್ಪ, ದ್ವೇಷ, ಅಸೂಯೆ, ಮೋಸ, ದಗಾ ವಂಚನೆಗಳಿಂದ ದೂರವಿರಬೇಕು.
ಅತಿಮುಖ್ಯ ಆಚರಣೆಗಳು : ಆದಷ್ಟು ಮನಸ್ಸನ್ನು ನಿಗ್ರಹಿಸಿಟ್ಟುಕೊಂಡು ಏಕಾಗ್ರತೆ ಮತ್ತು ಶಾಂತಚಿತ್ತ ಕುರಾನ್ ಪಠಣ ಮಾಡುತ್ತಿರಬೇಕು. ಒಳ್ಳೆಯ ಆಲೋಚನೆಗಳತ್ತ ಮನಸ್ಸನ್ನು ಕೇಂದ್ರೀಕರಿಸಿ, ಬಡವರಿಗೆ ಸಹಾಯಹಸ್ತ ಚಾಚುತ್ತ ಸಮಾಜಕ್ಕೆ ತಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡಬೇಕು. ಯಾವುದೇ ಸ್ವಾರ್ಥವಿಲ್ಲದ ಸೇವೆ ಆ ಭಗವಂತನಿಗೆ ಬಲು ಪ್ರೀತಿ. ಸಾಧ್ಯವಾದಷ್ಟು ಬಂಧು ಬಳಗ, ಸ್ನೇಹಿತರನ್ನು ಭೇಟಿ ಮಾಡುತ್ತಿರಬೇಕು. ಯಾವುದೇ ರೀತಿಯ ಮನೋರಂಜನೆಗಳಿಗೆ ಅವಕಾಶವಿಲ್ಲ. ಸಾರ್ವಜನಿಕವಾಗಿ ಯಾವುದೇ ರೀತಿಯ ಸಂಗೀತವನ್ನು ಹಾಕಬಾರದು ಹಾಗು ಕೇಳಬಾರದು. ಕಳ್ಳತನ, ಮೋಸ, ದ್ರೋಹ, ರೋಷಕ್ಕೆ ಕಡಿವಾಣ ಹಾಕಬೇಕು. ತಾವು ಉಳಿಸಿದ ಹಣದಲ್ಲಿ ಇಂತಿಷ್ಟು ಭಾಗವನ್ನು ಬಡಬಗ್ಗರಿಗೆ ಸಹಾಯ ಮಾಡಲೇಬೇಕು. ಹಾಗು ಬಡ್ಡಿಯ ಹಣದಿಂದ ಜೀವನ ಮಾಡಬಾರದು.
ರಂಜಾನ್ ಮಾಸದಲ್ಲಿ ಕನಿಷ್ಠ ದಿನಕ್ಕೆ 5 ಬಾರಿ ನಮಾಜ್ ಮಾಡಲೇಬೇಕು. ಮಸೀದಿಯಲ್ಲಿ ಸಾಧ್ಯವಾಗದೆ ಇದ್ದರೆ ತಮಗೆ ಅನುಕೂಲವಾದ ಸ್ಥಳದಲ್ಲಿ ಮಾಡಬಹುದು. ಮೇಲಿನವು ಕೆಲ ಅತಿಮುಖ್ಯ ಆಚರಣೆಗಳು. ಸೂರ್ಯಾಸ್ತ ಆದಮೇಲೆ ಸಂಜೆ 6.30 ಸುಮಾರಿನಲ್ಲಿ ನಮಾಜ್ ಮಾಡಿದ ಮೇಲೆ ಕರ್ಜೂರ ಸೇವನೆಯಿಂದ ಉಪವಾಸ ಅಂತ್ಯಗೊಳ್ಳುತ್ತದೆ. ಬಹುತೇಕ ಸಾತ್ವಿಕ ಮುಸಲ್ಮಾನರೆಲ್ಲ ಇದನ್ನು ಕಡ್ಡಾಯವಾಗಿ ಆಚರಣೆ ಮಾಡುತ್ತಾರೆ. ಆಚರಣೆ ಮಾಡದ ಮುಸ್ಲಿಮರನ್ನು ತುಚ್ಚರಾಗಿ ಕಾಣುತ್ತಾರೆ.
ಕಾನೂನು ಕಟ್ಟಳೆ : ಇಲ್ಲಿನ ಸರಕಾರಗಳು ಕೆಲವು ಕಾನೂನುಗಳನ್ನು ಮಾಡಿವೆ. ಯಾವುದೇ ಹೊಟೆಲ್ ಗಳನ್ನು ಸಾಯಂಕಾಲದವರೆಗೆ ತೆರೆಯಬಾರದು. ಮುಸ್ಲಿಮೇತರರೂ ಕೂಡ ಸಾರ್ವಜನಿಕವಾಗಿ ಏನನ್ನೂ ತಿನ್ನಬಾರದು. ಸಂಗೀತ ಕೇಳುವುದು, ನರ್ತನ ಮಾಡುವುದು ನಿಷಿದ್ದ. ಹೀಗೆ ಮಾಡಿದರೆ ಯಾರು ಬೋಕಾದರೂ ಪೋಲೀಸರಿಗೆ ಮಾಹಿತಿ ನೀಡಬಹುದು. ಉಲ್ಲಂಘಿಸಿದವರನ್ನು ಒಂದು ತಿಂಗಳ ತನಕ ಜೈಲಿನಲ್ಲಿ ಇಡಲಾಗುತ್ತದೆ. ಕೆಲ ರಾಷ್ಟ್ರಗಳಲ್ಲಿ ಗಡಿಪಾರು ಸಹ ಮಾಡಲಾಗುತ್ತದೆ. ಉಪವಾಸ ಮಾಡುವವರಿಗೆ ಅನುಕೂಲವಾಗುತ್ತದೆ ಎನ್ನುವ ಉದ್ದೇಶದಿಂದ ಎಲ್ಲ ಸರ್ಕಾರಿ ಹಾಗು ಸರ್ಕಾರೇತರ ಕಛೇರಿಗಳು ಬೆಳಿಗ್ಗೆ 8ರಿಂದ ಮಧ್ಯಾನ್ಹ 2 ಗಂಟೆಯವರೆಗೆ ಮಾತ್ರ ಕೆಲಸ ನಿರ್ವಹಿಸುತ್ತವೆ.
ಒಂದು ಮುಖ್ಯ ಸಂಗತಿಯೆಂದರೆ, ಕಾಯಿಲೆಯಿಂದ ಬಳಲುತಿದ್ದವರು ಉಪವಾಸ ಮಾಡಲೇಬೇಕೆನ್ನುವ ನಿಯಮವಿಲ್ಲ. ಅವರಿಗೆ ವಿನಾಯಿತಿ ನೀಡಲಾಗಿದೆ. ಸಾಮನ್ಯವಾಗಿ ಭಾರತದಲ್ಲಿ ಬಹುತೇಕ ದಿನಗಳು ವಾಸವಿದ್ದ ನಮಗೆ ಇಲ್ಲಿನ ಸಂಪ್ರದಾಯಗಳು ಒಗ್ಗದೇ ಹೋದರೂ, ಇಲ್ಲಿನವರ ಸಂಪ್ರದಾಯಗಳಿಗೆ ಗೌರವ ಕೊಡುವುದು ನಮ್ಮ ಕರ್ತವ್ಯ. ಈ ಎಲ್ಲ ಬಿಗಿ ನಿಯಮಗಳಿಂದ ಮುಸ್ಲಿಂಮೇತರರಿಗೆ ಬಹುತೇಕ ತೊಂದರೆ ಉಂಟಾಗುವುದು ಸಹಜ. ಸಾಮನ್ಯವಾಗಿ ಭಾರತೀಯರು ಹೆಚ್ಚಿನ ಪ್ರತಿರೋಧವಿಲ್ಲದೆ ಎಂಥದೇ ನಿರ್ಬಂಧವಾಗಲೀ ಅದಕ್ಕೆ ಒಗ್ಗಿಕೊಂಡು ಬಾಳುತ್ತಾರೆ.
ಅಷ್ಟೇ ಅಲ್ಲ. ಬೇರೆಯವರ ಆಚರಣೆಗಳಿಗೆ ತೊಂದರೆ ಕೊಡದೆ ಅವರ ವಿಚಾರಗಳಿಗೆ ಗೌರವ ಕೊಟ್ಟು ತಮ್ಮ ಪಾಡಿಗೆ ತಾವು ಇದ್ದು ಬಿಡುತ್ತಾರೆ. ಬಹುತೇಕ ಪಾಶ್ಚಿಮಾತ್ಯರು ಸಹ ಇದೇ ವಿಧಾನವನ್ನು ಅನುಸರಿಸುತ್ತಾರೆ. ಮುಸ್ಲಿಂಜನರ ಭಾವನೆಗಳಿಗೆ ಧಕ್ಕೆ ಬಾರದಂತೆ ನಡೆದುಕೊಳ್ಳುವುದು ಸಹಜವಾದ ವಿಷಯವೇ ಆಗಿರುತ್ತದೆ. ಟಿವಿ ಮತ್ತು ಪತ್ರಿಕಾ ಮಾಧ್ಯಮಕ್ಕೆ ಅಷ್ಟೊಂದು ಸ್ವಾತಂತ್ರ್ಯವಿಲ್ಲದಿರುವದರಿಂದ ಮುಸ್ಲಿಮೇತರ ಹಕ್ಕುಗಳನ್ನು ಯಾರು ಎತ್ತಿ ಹಿಡಿಯುವುದಿಲ್ಲ, ಪ್ರಶ್ನಿಸುವುದಿಲ್ಲ.
ಒಂದುಸಾರಿ ಒಬ್ಬ ಅರಬ್ಬಿ ಮನುಷ್ಯ ನಮಗೆ ಹೇಳಿದ್ದ.
"ನೀವಂದುಕೊಂಡಂತೆ ಕಾನೂನುಗಳು ಅಷ್ಟೊಂದು ಕಠಿಣವಾಗಿಲ್ಲ, ನೀವು ಸಹ ಉಪವಾಸ ಮಾಡಿ ಅಂತ ಕಾನೂನು ಇಲ್ಲ, ಆದರೆ ಎಲ್ಲರೆದುರಿಗೆ ಮಾತ್ರ ತಿನ್ನಬೇಡಿ. ಇದು ಉಪವಾಸ ಮಾಡುತ್ತಿರುವ ವ್ಯಕ್ತಿಯ ಭಾವನೆಗಳನ್ನು ಕೆರಳಿಸುತ್ತದೆ. ಅವನ ಏಕಾಗ್ರತೆಗೆ ಭಂಗ ತಂದು ಹೊಟ್ಟೆ ಹಸಿವಾಗುವ ಲಕ್ಷಣಗಳು ಇರುತ್ತವೆ ಅನ್ನುವ ಉದ್ದೇಶ ದಿಂದ ಇದು ಮಾಡಲಾಗಿದೆ ಅಷ್ಟೆ. ನಿಮ್ಮ ತಿನ್ನುವ ಹಕ್ಕುಗಳನ್ನು ನಾವೇನು ಕಸಿದುಕೊಂಡಿಲ್ಲ."
ತಿನ್ನಬೇಕು ಅನ್ನಿಸಿದರೆ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಆರಾಮವಾಗಿ ತಿನ್ನಿ. ಆದರೆ ಒಬ್ಬ ಯುರೋಪಿಯನ್ ಪ್ರಜೆ ನಮ್ಮ ಸ್ನೇಹಿತರನ್ನು ಕೇಳಿದ್ದ,
"ನೀವು ಇಷ್ಟೆಲ್ಲ ನಿರ್ಭಂಧ ಹೇರಿ ನಮ್ಮ ತಿನ್ನುವ ಹಕ್ಕನ್ನು ಕಸಿದುಕೊಳ್ಳುತ್ತೀರ ಆದರೆ ಮನೆಯಲ್ಲಿ ಸುಮ್ಮನೆ ನೀವೇನು ಕುಳಿತಿರುತ್ತೀರ? ಇಲ್ಲತಾನೆ ಟೀವಿ ನೋಡ್ತೀರ, ಪುಸ್ತಕ ಓದುತ್ತೀರ, ಟೀವಿನಲ್ಲೊ ಪುಸ್ತಕದಲ್ಲೊ ತಿನ್ನುವ ಯಾರದರು ತಿನ್ನುತ್ತಿರುವ ದೃಶ್ಯಗಳು ಬಂದರೆ ಏನು ಮಾಡುತ್ತೀರ? ಒಂದು ವೇಳೆ ರಾತ್ರಿ ಅಡುಗೆಗೆ ಟೀವಿಯಲ್ಲಿ ಹೊಸರುಚಿ  ಅಡುಗೆ ಕಾರ್ಯಕ್ರಮ ಪ್ರಸಾರವಾಗುತಿದ್ದರೆ ಅದನ್ನು ನೋಡಿ ಬರೆದುಕೊಂಡು ಹೊಸರುಚಿ ಅಡುಗೆಗೆ ಪ್ರಯತ್ನ ಪಡುಬಹುದಲ್ಲ?
ಅದನ್ನು ನೋಡಬೇಕಾದರೆ ನಿಮ್ಮ ಮನಸ್ಸಿನ ಭಾವನೆಗಳಿಗೆ ಏನು ಆಗುವುದಿಲ್ಲವೊ? ಪತ್ರಿಕೆಗಳಲ್ಲಿ, ಪುಸ್ತಕದಲ್ಲಿ, ಜಾಹಿರಾತಿನಲ್ಲಿ ತಿನ್ನುವ ವಸ್ತುಗಳ ಬಗ್ಗೆ ಜಾಹಿರಾತು ಕೊಟ್ಟಿರುತ್ತಾರೆ, ಅದನ್ನು ನೋಡಿದಾಗ ನಿಮ್ಮಲ್ಲಿ ಯಾವಭಾವನೆ ಉಂಟಾಗುತ್ತದೆ. ಮಧ್ಯಾಹ್ನದ ಮೇಲೆ ನೀವು ರಾತ್ರಿ ಅಡುಗೆಯ ಬಗ್ಗೆ ಚಿಂತೆ ಮಾಡುವುದಿಲ್ಲವೆ?" ಯಾರಿಂದಾದರು ಸರಿಯಾದ ಉತ್ತರ ಸಿಕ್ಕೀತೆ? ಇಲ್ಲ.. ಒಂದೊಂದುಸಾರಿ ಪ್ರಶ್ನೆ, ಪ್ರಶ್ನೆಗಳಾಗಿಯೆ ಉಳಿದು ಬಿಡುತ್ತವೆ.
ಒಟ್ಟಿನಲ್ಲಿ ನನಗಂತೂ ಪದೇ ಪದೇ ನೆನಪಾಗೋದು ನನ್ನ ಭಾರತ. ಸರ್ವಧರ್ಮೀಯರಿಗೆ ಬದುಕುವ ಹಕ್ಕನ್ನು ಕೊಟ್ಟು ಸಂತೋಷದ ಜೀವನ ನಡೆಸುವಂತ ಅವಕಾಶ ಕೊಟ್ಟಿರುವ ನಮ್ಮ ಭಾರತ ಮಾತೆಗೆ ಸಹಸ್ರ ನಮನ. ವಂದೇ ಮಾತರಂ.

ಗುರುವಾರ, ಸೆಪ್ಟೆಂಬರ್ 2, 2010

ಒಂದು ಕೆಲಸ ಮಾಡಲು ಹೋಗಿ ಇನ್ನೊಂದು ಮಾಡಿದರು

ಅಂದು ಬಾನುವಾರ ರಜಾದಿನವಾದ್ದರಿಂದ ಗುಂಡ ಮನೆಯಲ್ಲಿ ಸುಮ್ಮನೆ ಕುಳಿತಿದ್ದ. ಬೇಜಾರು ಆಗುತ್ತಿದೆ ಏನಾದರು ಕೆಲಸ ಮಾಡಿಕೊಡುತ್ತೇನೆ ಎಂದು ಹೆಂಡತಿ ಗುಂಡಿ ಯನ್ನು ಕೇಳಿದ. ಆದರೆ ಗುಂಡಿಗೆ ಇವರು ಮಾಡುವ ಅವಾಂತರ ಗಳು ಗೊತ್ತಿದ್ದರಿಂದ, ಒಂದು ಕೆಲಸ ಮಾಡಲು ಹೋಗಿ ಇನ್ನೊಂದು ಮಾಡ್ತೀರ ಎರಡೆರಡು ಕೆಲಸಗಳನ್ನು ಕೊಡುತ್ತೀರ, ಏನು ಬೇಡ ಸುಮ್ಮನೆ ಇದ್ದರೆ ಸಾಕು ಎಂದಳು. ಆದರೆ ಗುಂಡ ಸುಮ್ಮನಿರಲಾರದಾದ. "ನೋಡೆ ಗುಂಡಿ ಮನೆ ಮೇಲೆ ಸಿಂಟೆಕ್ಸ್ ಟ್ಯಾಂಕ್ ತೊಳೆದು ವರ್ಷಾನುಗಟ್ಟಲೆ ಆಗಿ ಹೋಗಿದೆ, ಆ ಕೆಲಸನಾದ್ರು ನಾನು ಮಾಡ್ತಿನಿ ಅದಕ್ಕೂ ಬೇಡ ಅನ್ನಬೇಡ" ಎಂದು ಮಹಡಿಯ ಮೇಲೆ ಹೊದ. ಹೌದಲ್ವ ತುಂಬಾ ದಿನ ಆಯಿತು ಕ್ಲೀನ್ ಮಾಡಿ, ಹೋಗಲಿ ಬಿಡು ಅಂತ ಒಪ್ಪಿಗೆ ಕೊಟ್ಟಳು. ಇವರ ಸಂಭಾಷಣೆ ಕೇಳಿಸಿಕೊಂಡಿದ್ದ ಮಗ ಚಿಕ್ಕ್ಗುಂಡ, ನಾನು ಸಹ ಬರ್ತಿನಿ ಎಂದು ಜತೆಯಲ್ಲಿ ಹೊರಟ. ಟ್ಯಾಂಕಿನ ಒಳಗಡೆ ಇಳಿಯೋಣ ವೆಂದು ಪ್ರಯತ್ನಿಸಿದ ಅದರೆ ಅದರ ಬಾಯಿ ಚಿಕ್ಕದಿದ್ದರಿಂದ ಒಳಗಡೆ ಇಳಿಯಲಿಕ್ಕಾಗಲಿಲ್ಲ. ಕೊನೆಗೆ ಯೋಚಿಸಿ ಮಗನಿಗೆ ಇಳಿಯಲು ಹೇಳಿ, ತೊಳೆಯಲು ಸೂಚನೆಗಳನ್ನು ಕೊಟ್ಟರೆ ಕೆಲಸ ಸಲೀಸಾಗಿ ಮಾಡಬಹುದು ಎಂದು ಭಾವಿಸಿ ಮಗನನ್ನು ಅರ್ಧ ತುಂಬಿದ್ದ ಟ್ಯಾಂಕಿನಲ್ಲಿ ಮಗನನ್ನು ಇಳಿಸಿದ, ಎಚ್ಚರಿಕೆಯನ್ನು ಕೊಡುತ್ತ "ಮಗನೇ ಒಂದು ಕೆಲಸ ಮಾಡಲು ಹೋಗಿ ಇನ್ನೊಂದು ಮಾಡಿ. ಎರಡೆರಡು ಕೆಲಸಗಳನ್ನು ಕೊಡಬೇಡ, ಇಲ್ಲದೆ ಇದ್ದರೆ ನಿಮ್ಮ ಅಮ್ಮ ನಿನಗೆ ಸೇರಿಸಿ ನನಗೂ ಬಾರಿಸುತ್ತಾರೆ"ಟ್ಯಾಂಕಿನಲ್ಲಿರುವ ನೀರು ಬಿಸಿಲಿಗೆ ಕಾದಿದ್ದರಿಂದ ಒಳಗಡೆ ಬೆಚ್ಚಗೆಇತ್ತು,  ಚಿಕ್ಕ್ಗುಂಡ ನೀರು ಬೆಚ್ಚಗಿದೆ ಎಂದು ಅದರಲ್ಲಿ ಆಟವಾಡೊದಿಕ್ಕೆ ಶುರು ಮಾಡಿದ. ಅಷ್ಟರಲ್ಲಿ ಗುಂಡಿ ಬಂದು, ಒಂದೆರಡು ಬಿಂದಿಗೆ ನೀರು ತುಂಬಿಸಿಕೊಂಡು ಬಿಡ್ತೀನಿ, ಎನಾದರು ತೊಳೆಯೊದಿಕ್ಕೆ ಬೇಕಾಗಬಹುದು, ಆಮೇಲೆ ಬೇಕಾದರೆ ನೀವು ತೊಳೆದುಕೊಳ್ಳಿ, ಎಂದು ದಡಬಡನೆ ಹೋದಳು. ನೀರು ಕಲಕಿದರೆ ಗಲೀಜಾಗಬಹುದು ಎಂದು ಕೊಂಡು ಗುಂಡ ಮಗನಿಗೆ ಸ್ವಲ್ಪ ಹೊತ್ತು ಸುಮ್ಮನೆ ಕೂತಿರಲು ಹೇಳಿದ. ಒಂದೈದು ನಿಮಿಷ ಹಾಗೆ ನೀರಿನಲ್ಲಿ ಕುಳಿತಿದ್ದರಿಂದ, ಚಿಕ್ಗುಂಡನ ಮೈ ನೊಚ್ಚಗಾಗುತಿತ್ತು. ಆದರೆ ಮೆಲ್ಲಗೆ ಅವನಲ್ಲಿ ಅರ್ಜೆಂಟಾಗಿ ಉಚ್ಚೆ ಹುಯ್ಯಬೇಕು ಅನ್ನಿಸಿತು. ಸ್ವಲ್ಪ ಹೊತ್ತಿನ ನಂತರ ಹೊರಗಡೆ ಹೋಗಿ ಮಾಡಿದರಾಯಿತು ಎಂದು ಕೊಂಡು ಸುಮ್ಮನಾಗುವಷ್ಟರಲ್ಲಿ, ಲೇ ಚಿಕ್ಕ್ಗುಂಡ ಟ್ಯಾಂಕ್ ನೀರಿನಲ್ಲಿ ಒಂದು ಮಾಡೊಕೆ ಹೋಗಿ ಇನ್ನೊಂದು ಮಾಡಿದರೆ ಒದೆ ಬಿಳುತ್ತೆ ನೋಡು" ಎಂದನು. ಚಿಕ್ಕ್ಗುಂಡ ಅದನ್ನು ತಪ್ಪಾಗಿ ಅರ್ಥೈಸಿಕೊಂಡು ಆಯಿತು ಪಪ್ಪ, ಉಚ್ಚೆ ಮಾತ್ರ ಮಾಡ್ತೀನಿ ಕಕ್ಕ ಮಾಡಲ್ಲ, ಎಂದು ತನ್ನ ಪಾಡಿಗೆ ಟ್ಯಾಂಕಿನಲ್ಲಿ ಮೂತ್ರ ವಿಸರ್ಜನೆ ಮಾಡಿದ. ಮಾಡಿದ ಮೇಲೆ, ಆಯಿತು ಪಪ್ಪ ಎಂದನು. ಏನೊ ಆಯಿತು ಎಂದರೆ, ಅದೇ ನೀವು ಹೇಳಿದರಲ್ಲ "ಒಂದು ಮಾತ್ರ ಮಾಡು ಎರಡು ಮಾಡಬೇಡ ಅಂದ್ರಲ್ಲ, ಅದಕ್ಕೆ ಉಚ್ಚೆ ಹುಯಿದೆ". ಅಯ್ಯೊ ಕರ್ಮ ಇವತ್ತು ನಮಗೆ ಗ್ರಹಚಾರ ಕಾದಿದೆ ಅಂದುಕೊಂಡು ದಡಬಡಾಯಿಸಿ ಅಡಿಗೆ ಮನೆಕಡೆ ಓಡಿದ. ಆದರೆ ಅಲ್ಲಿ ಗುಂಡಿ ಸಿಂಕ್ ನಲ್ಲಿ ಬಿಂದಿಗೆ ತುಂಬಿಸಿಕೊಂಡು ಕೈಯಲ್ಲಿ ಹಿಡಿದಿದ್ದಳು. "ನಿನ್ನ ಮಗ ಟ್ಯಾಂಕಿನಲ್ಲಿ ಉಚ್ಚೆ ಹುಯಿದು ಬಿಟ್ಟಿದ್ದಾನೆ, ನೀರೆಲ್ಲ ಗಲೀಜಾಗಿದೆ ನೀರು ತುಂಬಿಸುಬೇಡ ನಿಲ್ಲಿಸು ಎನ್ನಿಸುವಷ್ಟರಲ್ಲಿ, ಕೈಯಲ್ಲಿ ಹಿಡಿದಿದ್ದ ಬಿಂದಿಗೆ ಕೆಳಗೆ ಬಿದ್ದು, ನೀರೆಲ್ಲ ನೆಲದ ಮೇಲೆ ಚೆಲ್ಲಿತ್ತು. ಒಂದು ಮಾಡಲು ಹೋಗಿ ಇನ್ನೊಂದಾಗಿತ್ತು

ಮುದ್ದಿನ ಮಗ

ತಂದೆ ಮಗನ ಮಧುರ ಸಂಬಂಧಗಳು ಸುಪ್ತವಾಗಿರುತ್ತವೆ. ಅದು ಈಚೆ  ಬರಬೇಕಾದರೆ ಸನ್ನಿವೇಶಗಳ ಬೆಂಬಲ ಅಗತ್ಯ ಎಂದು ಸಾರಿಹೇಳುವ ಸಣ್ಣಕಥೆ.
..

೨೬.೧೨.೨೦೦೮ ರಂದು ದಟ್ಸ್ ಕನ್ನಡ ದಲ್ಲಿ  ಪ್ರಕಟವಾಗಿದ್ದ ನನ್ನ ಮತ್ತೊಂದು ಸಣ್ಣಕಥೆ.
ಪ್ರೋತ್ಸಾಹ:  ಶ್ಯಾಮ್ ಸುಂದರ್ -  ದಟ್ಸ್ ಕನ್ನಡ
ರಾತ್ರಿ ಒಂಬತ್ತರ ಸಮಯ, ಟಿವಿ ಯಲ್ಲಿ ಒಂದು ಧಾರವಾಹಿ ಆಗ ತಾನೆ ಶುರುವಾಗಿತ್ತು ಅದನ್ನು ನೋಡೊಣ ಎಂದು ನೆಟ್ಟಕಲ್ಲಪ್ಪನವರು ತಮ್ಮ ಕೆಲಸಗಳನ್ನು ಮುಗಿಸಿ ಟಿವಿ ಮುಂದೆ ಕುಳಿತಿದ್ದರು. ಸ್ವಲ್ಪ ಹೊತ್ತಾಗುವರಲ್ಲಿ ಮೊಬೈಲ್ ಫೋನ್ ರಿಂಗಾಯ್ತು. ರಿಂಗ್ ಸದ್ದು ಕೇಳಿದೊಡನೆ ಅತ್ತಿತ್ತ ಮೊಬೈಲ್ ಕಡೆ ಹುಡುಕಾಡಿದರು. ಕೈಗೆ ಸಿಗದೆ ಇದ್ದರಿಂದ ಮೇಲೆ ಎದ್ದು ಸದ್ದು ಕೇಳಿಸಿದ ಕಡೆಗೆ ಧಾವಿಸಿದರು. ಮುಂಚೆಯಿಂದಲು ಮೊಳಕಾಲು ನೋವಿದ್ದರಿಂದ ಏಳುವಾಗ ಅದರ ತೀವ್ರತೆ ಜಾಸ್ತಿಯಾಗಿ ಯಾತನೆ ಜಾಸ್ತಿಯಾಯಿತು. ಮನಸ್ಸಿನಲ್ಲೆ ಅದನ್ನು ಶಪಿಸುತ್ತ ಮೊಬೈಲ್ ನ್ನು ತೆಗೆದುಕೊಂಡು ಮಾತಾಡತೊಡಗಿದರು. ಅವರ ಮಗ ಮಂಜುನಾಥ ಅಮೇರಿಕ ದಿಂದ ಫೊನ್ ಮಾಡಿದ್ದ.

"ಯಾಕೆ ಪಪ್ಪ ಫೋನ್ ತಗೊಳ್ಳೊಕೆ ತಡ ಮಾಡಿದ್ರಿ, ತುಂಬಾ ಸಾರಿ ಹೇಳಿದ್ದಿನಿ ನಿಮಗೆ ಯಾವಗ್ಲು ಫೊನ್ ಜೇಬಲ್ಲಿ ಇಟ್ಕೊಂಡಿರಿ ಅಂತ. ಆದರೆ ನನ್ನ ಮಾತು ನೀವು ಕೇಳೊದೆ ಇಲ್ಲ. ಅದಿರಲಿ ನಿಮ್ಮ ಆರೊಗ್ಯ ಹೇಗಿದೆ ಹಾಗು ಕಾಲು ನೊವು ಹೇಗಿದೆ?"

ಇವರಿಗೆ ಅವನು ಹೇಳಿದ್ದು ಸರಿಯಾಗಿ ಕೇಳಿಸಲಿಲ್ಲ, "ಮಗಾ ಮಾತುಗಳು ಸರಿಯಾಗಿ ಕೆಳಿಸ್ತಾಇಲ್ಲ ಡಿಸ್ಟರ್ಬನ್ಸ್ ಜಾಸ್ತಿ ಇದೆ, ಇನ್ನೊಂದು ಸಾರಿ ಹೇಳು ಪುಟ್ಟ".

"ಓ.. ಹೌದಾ, ಸಾರಿ ಪಪ್ಪ ನಾನು ಇಂಟರ್ನೆಟ್ [^] ಇಂದ ಮಾತಾಡ್ತಾಯಿದೀನಿ ಸ್ವಲ್ಪ ಟೈಮ್ ಡಿಲೆ ಇದೆ, ಬೇರೆ ಏನು ವಿಶೇಷ? ನಿಮ್ಮ ಆರೊಗ್ಯ ಹೇಗಿದೆ?

"ಚೆನ್ನಾಗಿದ್ದಿನಿ, ಈ ಕಾಲು ನೋವು ಬಿಟ್ರೆ ಬೇರೆ ಏನು ತೊಂದರೆ ಇಲ್ಲ. ಆದರೆ ಎರಡು ದಿನ ದಿಂದ ಕೆಲಸದ ಹುಡುಗಿ ಕೆಲಸಕ್ಕೆ ಬೇರೆ ಬರ್ತಾಇಲ್ಲ. ಅವಳು ಇಲ್ಲದೆ ಇರೊದ್ರಿಂದ ಸ್ವಲ್ಪ ತೊಂದರೆ ಯಾಗ್ತಾಇದೆ".

"ಯಾಕೆ? ಎನಾಯ್ತು?"

"ಅವಳಿಗೆ ಯಾರೊ ಚೆನ್ನಾಗಿ ಕಿವಿಲಿ ಊದಿದ್ದಾರೆ, ಈಗ ಕೊಡುವ ಸಂಬಳದಷ್ಟು ಎರಡು ಪಟ್ಟು ಕೊಡಬೇಕಂತೆ. ಮಗ ಅಮೇರಿಕದಲ್ಲಿ ಕೆಲಸ ಮಾಡ್ತಾಯಿದ್ದಾನೆ, ಎಷ್ಟು ಬೇಕಾದ್ರು ಡಿಮ್ಯಾಂಡ್ ಮಾಡಬಹುದು ಅಂದುಕೊಂಡಿದಾಳೆ. ಅಷ್ಟೊಂದು ಕೊಡೋಕೆ ಅಗಲ್ಲ ಅಂದಿದ್ದಕ್ಕೆ ಕೆಲಸ ಬಿಟ್ಟು ಹೋಗಿದ್ದಾಳೆ, ಅದೆಲ್ಲ ಇರಲಿ, ಹೇಳು ಮತ್ತೆ ನೀನು ಹೇಗಿದಿಯಾ, ಮೀನಾಕ್ಷಿ ಹೇಗಿದಾಳೆ?"

"ನಾವೆಲ್ಲ ಚೆನ್ನಾಗಿದ್ದಿವಿ, ಪಪ್ಪ ದುಡ್ಡು ಹೋದರೆ ಹೋಗಲಿ, ಇಷ್ಟು ದಿನ ನಿಮ್ಮ ಸೇವೆ ಮಾಡಿದ್ದಾಳೆ, ಸ್ವಲ್ಪ ಹೆಚ್ಚು ಕಮ್ಮಿ ಮಾಡಿ ಕೊಟ್ಟಿದ್ರೆ ಆಗ್ತಾ ಇತ್ತು."

"ಪುಟ್ಟ ನೀನು ಅದರ ಬಗ್ಗೆ ಯೋಚನೆ ಮಾಡಬೇಡ ನಾನು ಬೇರೆ ಯಾರನ್ನಾದ್ರು ಹುಡುಕುತ್ತಿನಿ ಬಿಡು, ಎಲ್ಲಿ ತನಕ ಬಂತು ನಿನ್ನ ಪ್ರಾಜೆಕ್ಟ್, ಯಾವಾಗ ಊರಿಗೆ ಬರ್ತಿರ."

"ಇನ್ನೂ ಒಂದು ವರ್ಷ ಆಗಬಹುದು."

"ಏನು ಇನ್ನು ಒಂದು ವರ್ಷನಾ? ಯಾಕೊ ರಾಜಾ ನಾನು ಒಂಟಿಯಾಗಿ ಸಾಯಿಬೇಕ? ತಂದೆ ಬಗ್ಗೆ ಮಮಕಾರ ಇಲ್ವ ನಿಂಗೆ?"

"ಛೆ! ಬಿಡ್ತು ಅನ್ನಿ. ನೀವು ಬೇರೆ ಇಲ್ಲಿಗೆ ಬರಲ್ಲ ಅಂತಿದೀರ, ಮೀನಾಕ್ಷಿಯನ್ನು ಮನೆಯಲ್ಲಿ ಬಿಡ್ತಿನಿ ಅಂದ್ರೆ ಬೇಡ ಅಂತಿರಾ? ಬೇರೆ ನಾನೇನು ಮಾಡ್ಲಿ. ಕೆಲಸ ಬಿಟ್ಟು ಊರಿಗೆ ನಾನು ಬರಬೇಕು ಅಷ್ಟೆ. ಅದೊಂದೇ ಬಾಕಿ ಉಳಿದಿರೋದು."

"ನೊಡೊ ಮೊದಲಿನಿಂದನೂ ನಾನು ನಿನಗೆ ಹೇಳ್ತಾ ಇದೀನಿ, ಇಲ್ಲೆ ಏನಾದ್ರು ಮಾಡಿಕೊಂಡಿರು ಅಂತ. ನೀನು ಬೇರೆ ನನ್ನ ಮಾತು ಕೇಳ್ತಾ ಇಲ್ಲ, ನಿಮ್ಮ ಅಮ್ಮ ಹೋದ ಮೇಲೆ ನನ್ನ ಬದುಕು ತುಂಬಾ ಕಷ್ಟ ಆಗಿಹೋಗಿದೆ. ಒಂಟಿ ಜೀವನ ಬೇಡ ಅಂತ ಅನ್ನಿಸುತ್ತಿದೆ. ಇಷ್ಟು ದಿನ ನಿನ್ನ ಅಮ್ಮ ನನ್ನ ಜತೆಲಿದ್ದಾಗ ಏನು ಅನ್ನಿಸುತ್ತಿರಲಿಲ್ಲ. ಈಗ ನೀನು ಸಹ ನನ್ನ ಜತೆಲಿ ಇಲ್ಲ. ಇಷ್ಟೆಲ್ಲ ಕಷ್ಟ ಯಾಕೆ ಅಂತ ಅನ್ನಿಸುತ್ತಿದೆ" ಮನ ನೊಂದು ಹೇಳುವಾಗ ಗದ್ಗದಿತರಾದರು. ಆಗ ಮಗ ಅವರನ್ನು ಸಮಧಾನಿಸತೊಡಗಿದ. ಅವರು ತುಂಬಾ ಪ್ರೀತಿಸಿದ ಮಡದಿ ಅವರಿಂದ ದೂರವಾಗಿ ಬರೋಬ್ಬರಿ ಒಂದು ವರ್ಷವಾಗಿತ್ತು. ದುಃಖದಲ್ಲಿದ್ದ ಅವರು ಮತ್ತೆ ಮಾತನ್ನು ಮುಂದುವರಿಸಲು ಪ್ರಯತ್ನಿಸಿದರು.

"ನೋಡಿ ಪಪ್ಪ ಇನ್ನು ಒಂದೆರಡು ವರ್ಷದಲ್ಲಿ ನಿಮ್ಮ ಜತೆ ಬಂದಿರುತ್ತಿನಿ. ಅಷ್ಟರತನಕ ನೀವು ಸಹಕರಿಸಿಕೊಂಡು ಹೋದರೆ ನನಗೆ ತುಂಬಾ ಸಹಾಯ ಆಗುತ್ತೆ. ಒಂದು ಕೆಲಸ ಮಾಡಿ, ಚಿಕ್ಕಪ್ಪನ ಮನೆಲಿ ಇರೊದಿಕ್ಕೆ ವ್ಯವಸ್ಥೆ ಮಾಡಿಕೊಂಡರೆ ಹೇಗನ್ನಿಸುತ್ತೆ ನಿಮಗೆ. ಚಿಕ್ಕಪ್ಪ ಚಿಕ್ಕಮ್ಮ ನಿಮ್ಮನ್ನು ಚೆನ್ನಾಗಿ ಗಮನಿಸುತ್ತಾರೆ, ನಾನು ಸಹ ಮಾತನಾಡಿ ಅವರಲ್ಲಿ ವಿನಂತಿಸಿಕೊಳ್ತಿನಿ."

ಅವರು ಒಂದು ನಿಮಿಷ ಯೋಚಿಸಿ, "ಪುಟ್ಟಾ ಅವರಿಗೆ ನಾನು ಹೇಗೆ ಹೊರೆಯಾಗಲಿ? ಮಗ ಮಗಳು ಜತೆ ತುಂಬ ಪ್ರೀತಿಯಿಂದ ಜೀವನ ನಡೆಸುತಿದ್ದಾರೆ. ಅವರ ಮದ್ಯೆ ಹೋಗಿ ಇದ್ರೆ ಏನು ಚೆನ್ನಾಗಿರುತ್ತೆ. ಮೊದಲಿನಿಂದಲು ಅವರ ಜತೆ ಇದ್ದಿದ್ರೆ ಅದಕ್ಕೆ ಒಂದು ಅರ್ಥ ಇರುತಿತ್ತು. ಕೊನೆಗಾಲದಲ್ಲಿ ಅವರ ಹತ್ತಿರ ಹೋದ್ರೆ ಏನು ತಿಳ್ಕೊಳಲ್ಲ? ನಾನು ಕೆಲಸದ ಮೇಲೆ ಆ ಊರು ಈ ಊರು ಅಂತ ಸುತ್ತಾಡಿಕೊಂಡು ಮನೆಯಿಂದ ಬೇರೆ ಬಂದೆ. ಈಗ ಯಾರು ಇಲ್ಲ ಅಂತ ಅವನ ಹತ್ತಿರ ಹೋದ್ರೆ ಎನು ಚೆನ್ನಾಗಿರುತ್ತೆ? ಹೋಗ್ಲಿ ಬಿಡು, ಅದೆಲ್ಲ ಯೋಚನೆ ಮಾಡಿದ್ರೆ ಮನಸ್ಸು ಕೆಡಿಸಿಕೊಬೇಕು ಅಷ್ಟೆ. ದೇವರಿದ್ದಾನೆ ಅವನೆ ಎಲ್ಲ ನೋಡ್ಕೊತ್ತಾನೆ."

"ಪಪ್ಪ, ಒಂದು ಒಳ್ಳೆ ವೃದ್ದಾಶ್ರಮದಲ್ಲಿ ವ್ಯವಸ್ಥೆ ಮಾಡ್ತಿನಿ ಬಿಡಿ. ಯಾವ ತೊಂದರೆ ಇಲ್ಲದೆ ಹಾಗೆ ನೋಡ್ಕೊತೀನಿ. ನಾನು ವಾಪಸು ಬಂದಾಗ ನಿಮ್ಮನ್ನು ಮತ್ತೆ ಮನೆಗೆ ಕರ್ಕೊಂಡು ಬರ್ತಿನಿ. ಈಗೆಲ್ಲ 5 ಸ್ಟಾರ್ ಕ್ವಾಲಿಟಿ ಇರೋ ವೃದ್ದಾಶ್ರಮಗಳಿವೆ. ಅದರ ಬಗ್ಗೆ ವಿಚಾರಿಸಿ ನಿಮಗೆ ಮತ್ತೆ ಹೇಳ್ತಿನಿ."

ಮಗನ ಮಾತು ಕೇಳಿ ಸುಮ್ಮನಾದರು. ಕೆಲ ಕ್ಷಣ ಏನು ಹೇಳಬೇಕು ಅಂತ ಗೊತ್ತಾಗಲಿಲ್ಲ. "ಒಳ್ಳೆ ನಿರ್ಧಾರ ತಗೊಂಡಿದ್ದೀಯ. ನಿನಗೆ ಯಾವ ಕೊರತೆ ಬರದಂತೆ ಬೆಳೆಸಿದ ಹಾಗೆ, ನನಗೂ ಸಹ ಯಾವುದೇ ಕೊರತೆ ಬರಬಾರದು ಅಂತ ವೃದ್ಧಾಶ್ರಮಕ್ಕೆ ಸೇರಿಸೊದು ಒಂದು ಒಳ್ಳೆ ನಿರ್ಧಾರ. ದೇವರು ನಿನಗೆ ಒಳ್ಳೆದು ಮಾಡಲಿ".

"ಪಪ್ಪ ಅಲ್ಲಿ ನಿಮಗೆ ಎಲ್ಲ ರೀತಿಯ ಸೌಕರ್ಯ ಇರುತ್ತೆ, ಒಳ್ಳೆ ಆಹ್ಲಾದಕರ ವಾತವರಣ, ಆರೊಗ್ಯಕರವಾದ ಊಟದ ವ್ಯವಸ್ಥೆ, ಓದುವುದಿಕ್ಕೆ ಲೈಬ್ರರಿ, ಒಬ್ಬ ಡಾಕ್ಟರ್ ಸಹ ಇರ್ತಾರೆ, ನಿಮ್ಮ ಆರೊಗ್ಯದ ಬಗ್ಗೆ ಚಿಂತೆ ಮಾಡೊ ಅಗತ್ಯ ಇರುವುದಿಲ್ಲ. ಒಂದು ಸಾರಿ ನೋಡಿಕೊಂಡು ಬನ್ನಿ. ನಿಮಗೆ ಇಷ್ಟ ಆಯಿತು ಅಂದರೆ ಮುಂದಿನ ವ್ಯವಸ್ಥೆ ಬಗ್ಗೆ ನಾನು ನೋಡ್ಕೊತೀನಿ. ಅಮೇಲೆ ನಾನು ಇಲ್ಲಿ ಒಂದೆರಡು ವರ್ಷ ಆರಾಮವಾಗಿ ಇರಬಹುದು".

ಮಗನ ಮಾತು ಕೇಳಿ ಅವರಿಗೆ ಮತ್ತೆ ಉತ್ತರ ಕೊಡಲು ಮಾತು ಬರಲಿಲ್ಲ. ಕನಸು ಮನಸಿನಲ್ಲೆಂದು ಮಗನ ಬಾಯಲ್ಲಿ ಈ ಮಾತು ಬರುತ್ತೆ ಅಂತ ಅವರೆಂದು ಯೋಚಿಸಿರಲಿಲ್ಲ. ಪ್ರತಿಯೊಂದು ವಿಷಯದಲ್ಲಿ ಕಾಳಜಿ ವಹಿಸಿ ಬೆಳೆಸಿದ ಮಗ ಇಂದು ತನ್ನ ತಂದೆಯನ್ನು ವೃಧ್ದ ಅನಾಥಾಶ್ರಮದಲ್ಲಿ ಇರಿಸೋದಿಕ್ಕೆ ಯೊಚನೆ ಮಾಡ್ತಾ ಇದ್ದಾನೆ. ಆದರೆ ಅವನು ನನ್ನ ಭಾವನೆಗಳನ್ನು ಅರ್ಥಮಾಡಿಕೊಳ್ಳಲಿಲ್ಲವಲ್ಲ ಅನ್ನುವ ಯೋಚನೆಯಿಂದ ಹೇ ದೇವರೆ ಎಂಥ ಕಾಲ ಬಂತಪ್ಪ ಎಂದು ಬೇಸರಿಸಿಕೊಂಡರು, ಮಗ ಹಲೋ ಹಲೋ ಎನ್ನುವ ಕೇಳಿಸುತ್ತಲೆ ಇತ್ತು ಆದರೆ ಬೇರೆ ಏನು ಉತ್ತರಿಸದೆ ಫೋನ್ ಡಿಸ್ಕನೆಕ್ಟ್ ಮಾಡಿದರು.

ತುಂಬಾ ದುಖಿಃತರಾಗಿ ಅವರು ಮಲಗುವ ಕೋಣೆಗೆ ಹೋದರು. ಮನ ನೊಂದಿತ್ತು. ಮುಖದಲ್ಲಿ ಅಳು ತೋರ್ಪಡಲಿಲ್ಲ. ಅದರೆ ಸದ್ದಿಲ್ಲದೆ ಕಣ್ಣಿಂದ ನೀರು ಹೊರ ಬಂದಿತ್ತು. ಹೊರ ಜಗತ್ತಿನ ಪರಿವೆ ಇರಲಿಲ್ಲ. ಫೊನ್ ರಿಂಗ್ ಆಗುತ್ತಲೆ ಇತ್ತು. ಅವರು ನೋಡಬೇಕು ಅಂದಿದ್ದ ಟಿವಿ ಧಾರವಾಹಿ ತನ್ನ ಪಾಡಿಗೆ ತಾನು ಓಡುತಲಿತ್ತು. ಭಾರವಾದ ಮನಸ್ಸಿನಿಂದ ಹೆಜ್ಜೆ ಇಡುತ್ತ, ಕೋಣೆಯಲ್ಲಿದ್ದ ತಮ್ಮ ಪತ್ನಿ ನಾಗಮ್ಮನ ಫೋಟೊದ ಹತ್ತಿರ ಕುಳಿತರು. ನಾಗಮ್ಮನವರ ಮುಗುಳ್ನಗೆಯ ಫೋಟೊ ಅದು. ಇವರನ್ನು ನೋಡಿ ನಗುತ್ತಿರುವಂತೆ ಭಾಸವಾಗುತಿತ್ತು.

"ನಗುತಾ ಇದ್ದಿಯಾ ನಾಗಿ? ನಗು, ಚೆನ್ನಾಗಿ ನಗು. ನನ್ನ ಅವಸ್ಥೆ ನೊಡಿ ನಗು. ನನಗಿಂತ ಬೇಗ ನೀನು ದೇವರ ಹತ್ತಿರ ಸೇರಿಕೊಂಡುಬಿಟ್ಟೆ ಈಗ ನನ್ನ ಪರಿಸ್ಥಿತಿ ನೋಡಿ ನಗುತ್ತಾ ಇದ್ದೀಯಾ? ನೀನೆಂದಾರು ಯೋಚನೆ ಮಾಡಿದ್ಯ ಈ ತರಹ ಪರಿಸ್ಥಿತಿ ಬರುತ್ತೆ ಅಂತ. ನೋಡು ನನ್ನ ಕೈಲಿ ನಂಬೋಕೆ ಆಗ್ತಾಇಲ್ಲ. ನಾನು ಬೆಳಿಸಿದ ಮಗ, ನಮ್ಮ ಸಂಪ್ರದಾಯ, ನಮ್ಮ ಸಂಸ್ಕೃತಿ ದಾಟಿ ಯೋಚನೆ ಮಾಡೊದಿಲ್ಲ ಅಂದುಕೊಂಡಿದ್ದೆ. ಆದರೆ ಇಂದು........?

ಒಂದು ಕ್ಷಣ ಯೋಚನೆ ಮಾಡು, ಅಂದು ಅವನು ಶಾಲೆಗೆ ಬಸ್ಸಲ್ಲಿ ಹೊಗಿ ಬರೊದಿಕ್ಕೆ ತೊಂದರೆಯಾಗುತ್ತೆ ಅಂತ ಶಾಲೆ ಹತ್ತಿರಾನೆ ಬಾಡಿಗೆ ಮನೆ ಮಾಡಿದ್ವಿ. ಕೊನೆಗೆ ಇಂಜಿನೀಯರಿಂಗ್ ಮಾಡೊದಿಕ್ಕೆ ಸೂರತ್ಕಲ್ ನಲ್ಲಿ ಸೀಟ್ ಸಿಕ್ಕಾಗ, ಅವನಿಗೆ ಹಾಸ್ಟೆಲ್ ಊಟದಿಂದ ಆರೊಗ್ಯ ಎಲ್ಲಿ ಹಾಳಗುತ್ತೊ? ಸಹವಾಸ ದೋಷದಿಂದ ಏನು ತೊಂದರೆ ಯಾಗುತ್ತೊ ಅಂತ, ಮತ್ತೆ ರ್‍ಯಾಗಿಂಗ್ ಪಿಡುಗು ಅವನಿಗೆ ಎಲ್ಲಿ ಮಾರಕ ವಾಗುತ್ತೊ ಅನ್ನುವ ಭಯದಿಂದ ಅಲ್ಲೆ ಒಂದು ಚಿಕ್ಕ ಮನೆ ಮಾಡಿ ನಿಮ್ಮಿಬ್ಬರನ್ನು ವಾಸ ಮಾಡೊದಿಕ್ಕೆ ಅನುಕೂಲ ಮಾಡಿ ಕೊಟ್ಟು ನಾನು ತಿಂಗಳಿಗೆ 2 ಬಾರಿ ಓಡಾಡ್ತಾಯಿದ್ದೆ. ಅದನ್ನೆಲ್ಲಮರೆತು ಬಿಟ್ನಾ? ಹುಷಾರಿಲ್ಲದಿದ್ದಾಗ ಅವನನ್ನು ಎತ್ತಿ ಕೊಂಡು ಎಷ್ಟು ಆಸ್ಪತ್ರೆ [^] ಅಲೆದಿಲ್ಲ. ಅವನನ್ನು ಮಗನಂತೆ ಭಾವಿಸದೆ ಸ್ನೇಹಿತನಂತೆ ಕಂಡೆ, ವಿಚಿತ್ರ ಎಂದರೆ ಅದೆಲ್ಲ ಅವನು ಮರೆತುಬಿಟ್ಟಿದ್ದಾನೆ.

ಈಗ ನೀನು ಹೇಳ್ತಾ ಇರೊದು ನನಗೆ ನೆನಪಾಗ್ತಾಯಿದೆ. ಪಾಪ ನೀನು ಎಷ್ಟೊಂದು ಹೇಳಿದೆ ಒಂದು ಹೆಣ್ಣು ಮಗು ಆಗಲಿ ಅಂತ, ಕೊನೆಗಾಲದಲ್ಲಿ ಅಯ್ಯೋ ಪಾಪ ಅಂತ ಅಳೊದಿಕ್ಕೆ ಆ ಹೆಣ್ಣಾದ್ರು ಜತೇಲಿ ಇರುತ್ತೆ ಅಂತ. ಒಂದೇ ಮಗು ಇರಲಿ ಅಂತ ನಾನು ಆದರ್ಶಕ್ಕೆ ಕಟ್ಟು ಬಿದ್ದು ಇನ್ನೊಂದು ಮಗುವನ್ನೇ ಮಾಡಿಕೊಳ್ಳಲಿಲ್ಲ. ಆದರೆ ಇಂದು ಆ ನನ್ನ ಒಣ ಸಿದ್ದಾಂತ ಯಾವ ಪ್ರಯೋಜನಕ್ಕೆ ಬಂತು? ಮಗನಿಗೋಸ್ಕರ ನನ್ನಲ್ಲೇ ನಾನು ಸಾಕಷ್ಟು ಬದಲಾವಣೆ ಮಾಡಿಕೊಂಡು ಅವನ ಭವಿಷ್ಯ ಚೆನ್ನಾಗಿರಲಿ ಅಂತ ಆಸೆ ಪಟ್ಟೆ. ಆದರೆ ಇಂದು ಆದದ್ದೇನು?

ಈ ಹಾಳದ್ದು ಮಂಡಿನೊವು ಹಾಗು ನಿಶ್ಯಕ್ತಿ ನನ್ನ ಪ್ರಾಣವನ್ನು ತಿಂತಾಯಿದೆ. ಇನ್ನು ನಾನು ಯಾರಿಗೋಸ್ಕರ ಬದುಕಬೇಕು ನೀನೆ ಹೇಳು. ನೀನಾದ್ರು ಆಸರೆಯಾಗಿರ್ತಿಯ ಅಂದ್ಕೊಂಡಿದ್ದೆ ಆದರೆ ನೀನೆ ಬೇಗ ಹೋಗಿಬಿಟ್ಟೆ. ಅವನು ನನಗೆ ಕೊನೆಪಕ್ಷ ನಾನು ಬಂದು ನಿಮಗೆ ಆಸರೆಯಾಗಿರ್ತೇನೆ ಅಂತ ಭರವಸೆ ಕೊಟ್ಟಿದ್ರೆ ಚೆನ್ನಾಗಿರ್ತಾಯಿತ್ತು. ಆ ಆಸೆಯಲ್ಲಿ ಕಾಲ ತಳ್ಳುತ್ತಿದ್ದೆ. ಅತ್ಯಂತ ದುಃಖಕರವಾದ ಸಂಗತಿಯೇನಂದರೆ ಯಾರು ಇಲ್ಲದೆ ಅನಾಥನಂತೆ ನನ್ನನ್ನು 5 ಸ್ಟಾರ್ ತರಹ ಇರೋ ವೃದ್ಧಾಶ್ರಮದಲ್ಲಿ ಇರೋದಿಕ್ಕೆ ವ್ಯವಸ್ಥೆ ಮಾಡ್ತಾನಂತೆ. ಅವನ ತರಹ ನಾನು ಸ್ವಾರ್ಥಿಯಾಗಿದ್ರೆ ನಾನು ಇನ್ನೊಂದು ಮಗುವನ್ನು ಮಾಡ್ಕೋಬಹುದಿತ್ತಲ್ವ. ಒಬ್ಬನೇ ಮಗ ಪ್ರೀತಿಯಿಂದ ಬೆಳೀಲಿ, ಅವನ ಜೀವನ ಚೆನ್ನಾಗಿರಲಿ ಅಂತ ಅವನ ಬಗ್ಗೇನೆ ಯೋಚನೆ ಮಾಡಿದೆ ಹೊರತು ನನ್ನ ಬಗ್ಗೆ ಯೋಚನೆ ಮಾಡಲಿಲ್ಲ. ಕೈಯಲ್ಲಿ ಹಣ ಇದೆ, ಇರೋದಿಕ್ಕೆ ಮನೆಯಿದೆ ಆದರೆ ನನ್ನವರು ಅಂತ ಈಗ ಜತೇಲಿ ಯಾರು ಇಲ್ಲವಲ್ಲ ನಾಗಿ. ಏನು ಮಾಡಲಿ ಹೇಳು ನನಗೆ ಬೇರೆ ಏನು ತೋಚ್ತಾಯಿಲ್ಲ ಎಂದು ರೋಧಿಸುತ್ತಿದ್ದರು. ಅವರ ರೋಧನೆಯನ್ನು ಕಾಣಲು ಯಾರು ಇರಲಿಲ್ಲ. ಏಕಾಂಗಿತನ ಅವರನ್ನು ವಿಪರೀತ ರೋಧನೆಗೆ ಗುರಿ ಮಾಡಿತ್ತು. ಆ ವೇಳೆಯಲ್ಲಿ ಜತೆಯಲ್ಲಿ ಯಾರಾದರೂ ಇದ್ದಿದ್ದರೆ ಇವರ ಸ್ಥಿತಿ ಕಂಡು ಬೇರೆಯವರು ತಮ್ಮೆಲ್ಲ ಕೆಲಸ ಕಾರ್ಯಗಳನ್ನು ಬಿಟ್ಟು ನಾನು ನಿಮ್ಮ ಮಗನ ತರಹ ಕೊನೆವರೆಗೂ ಇರುತ್ತೀನಿ ಎಂದು ಹೇಳುತಿದ್ದರೇನೋ. ಆದರೆ ಹಾಗೆ ಹೇಳಲು ಅಲ್ಲಿ ಯಾರು ಇರಲಿಲ್ಲ.

ಅದೇ ಸಮಯದಲ್ಲಿ ಡೋರ್ ಬೆಲ್ ಸದ್ದಾಯಿತು. ಇಷ್ಟೊತ್ತಿನಲ್ಲಿ ಅದ್ಯಾರು ಬಂದಿರಬಹುದು ಎಂದು ತಮ್ಮಲ್ಲೆ ತಾವು ಪ್ರಶ್ನಿಸಿದರು. ಅಲ್ಲಿಂದ ಹೊರಡುವುದಿಕ್ಕೆ ಮೇಲೆ ಏಳುವಾಗ ಕಾಲುನೋವು ಮತ್ತೆ ಬಾಧಿಸಿತು. ಅದೇ ಸಮಯಕ್ಕೆ ಅದ್ಯಾರೊ ಡೋರ್ ಬೆಲ್ ಅನ್ನು ಸತತವಾಗಿ ಬಾರಿಸುತಿದ್ದರು. ಯಾರೂ ಸಹ ಎಂದೂ ಈ ತರಹ ಬಾರಿಸಿರಲಿಲ್ಲ. ಇಲಿಯೊಂದು ಬೆಕ್ಕಿನಿಂದ ತಪ್ಪಿಸಿಕೊಳ್ಳಲು ಕಿರ್ರ್ ಕಿರ್ರ್ ಶಬ್ದ ಮಾಡುತ್ತ ಓಡುತಿತ್ತು, ಆಗಲೇ ಬೆಕ್ಕು ಒಂದು ಪಟ್ಟು ಹಾಕಿ ಪರಚಿ ಗಾಯಮಾಡಿತ್ತು. ಮನೆಯಲ್ಲಿ ಟೀವಿ ಶಬ್ದ, ಕಾಲಿಂಗ್ ಬೆಲ್ ಸದ್ದು, ಬೆಕ್ಕು ಇಲಿಯ ಗಲಾಟೆ ಈ ಹೊತ್ತಿನಲ್ಲಿ ಅವರಿಗೆ ತಲೆನೋವು ಬರುವುದೊಂದೆ ಬಾಕಿ. ಮನಸ್ಸಿನಲ್ಲೆ ಗೊಣಗುತ್ತ ಈ ಸಮಯದಲ್ಲಿ ಮನೆಯಲ್ಲಿ ಯಾರಾದ್ರು ಇದ್ದಿದ್ರೆ ಚೆನ್ನಾಗಿರುತ್ತಿತ್ತು. ಆದರೆ ಏನು ಮಾಡುವುದು ನಾನು ಮಾಡಿದ ಕರ್ಮ ಅನುಭವಿಸಬೇಕಲ್ವ ಎಂದುಕೊಂಡು ಬೇಸರದಿಂದ ಬಾಗಿಲನ್ನು ತೆರೆಯಲು ಹೊರಟರು. ಬಾಗಿಲು ತೆಗೆಯುವ ಮುನ್ನ ಪಕ್ಕದ ಕಿಟಕಿಯಿಂದ ಯಾರು ಎಂದು ನೋಡಿದರು. ಮುಖ ಸರಿಯಾಗಿ ಕಾಣಿಸಲಿಲ್ಲ.

"ಯಾರು ಅದು ಇಷ್ಟೊತ್ತಿನಲ್ಲಿ? ಬೆಲ್ ಯಾಕೆ ಅಷ್ಟೊಂದು ಸಾರಿ ಹೊಡೀತಿದ್ರಿ. ಒಂದೆರಡು ಸಾರಿ ಮಾಡಿದ್ರೆ ಆಗಲ್ವೆ. ಯಾರು ಅದು? ಏನಾಗ್ಬೆಕಿತ್ತು?

ಆ ವ್ಯಕ್ತಿ "ಸಾರ್ ನಾನು ಮಂಜು ಫ್ರೆಂಡ್, ಊರಿಗೆ ಬಂದಿದ್ದೆ ಹಾಗೆ ನಿಮ್ಮನ್ನು ನೋಡಿಕೊಂಡು ಹೋಗೊಣ ಎಂದು ಬಂದೆ."

"ಓ ಹೌದಾ, ಇರಿ ಒಂದ್ನಿಂಷ" ಎಂದು ಹೇಳಿ ಬಾಗಿಲು ತೆಗೆದು "ಬನ್ನಿ ಒಳಗೆ" ಮನೆ ಒಳಗೆ ಆಹ್ವಾನಿಸಿದರು. ಮುಖ ನೋಡಿದ್ರೆ ಅವರಿಗೆ ಆಶ್ಚರ್ಯವಾಯಿತು, ತಮ್ಮ ಕಣ್ಣನ್ನೇ ತಾವೇ ನಂಬದಾದರು. ಎದುರಿಗಿರುವ ವ್ಯಕ್ತಿಯನ್ನು ಹೋಗಿ ಮುಟ್ಟಿ ನೋಡಿದರು ಕನಸು ಕಾಣುತಿಲ್ಲವೆಂದು ಖಾತರಿ ಮಾಡಿಕೊಂಡು, ಬಾಚಿ ತಬ್ಬಿಕೊಂಡು ಮುತ್ತಿಟ್ಟರು.

"ಯಾಕೊ ಇಷ್ಟೊಂದು ಹಿಂಸೆ ಕೊಟ್ಟುಬಿಟ್ಟೆ. ಯಾಕೊ ನನ್ನನ್ನು ಗೋಳು ಹೊಯ್ಕೊಂಡೆ. ಈ ಇಳಿವಯಸ್ಸಿನಲ್ಲಿ ನನ್ನತ್ರ ತಮಾಷೆ ಮಾಡಬೇಕು ಅಂತ ಅನ್ನಿಸುತ್ತ? ಮೀನಾಕ್ಷಿ ಏನಮ್ಮಾ ನೀನು ಸಹ ಇವನ ಜತೆ ಸೇರಿಕೊಂಡು ಬಿಟ್ಟಿಯಾ? ನಿಮ್ಮನ್ನು ನೋಡಿದ ಮೇಲೆ ನನ್ನ ಹೃದಯಭಾರವೆಲ್ಲ ಇಳಿದು ಹೋಯಿತು ಕಣಮ್ಮಾ."

"ಇಲ್ಲ ಮಾವ ಮೊದಲಿನಿಂದಲೂ ನಿಮಗೆ ಸರ್ ಪ್ರೈಸ್ ಕೊಡೋಣ ಎಂದು ಹೇಳಿ ನನ್ನ ಹತ್ತಿರ ಪ್ರಾಮಿಸ್ ತಗೊಂಡಿದ್ದರು, ಇಲ್ಲಿಗೆ ಬಂದ ಮೇಲೆ ಸೈಬರ್ ಕೆಫೆಗೆ ಹೋಗಿ ಅಲ್ಲಿಂದ ಇಂಟರ್ನೆಟ್ ಕಾಲ್ ಮಾಡಿದ್ದ್ರು. ನಾನು ಎಷ್ಟು ಬೇಡ ಅಂತ ಹೇಳಿದ್ರು ನನ್ನ ಮಾತು ಕೇಳಲಿಲ್ಲ."

ಮಂಜು ತಂದೆಯ ಮುಖವನ್ನೆ ದಿಟ್ಟಿಸಿ ನೊಡುತಿದ್ದ. ಕಣ್ಣುಗಳು ಕೆಂಪಗಾಗಿದ್ದವು, ಮುಖದಲ್ಲಿ ನೊವಿನ ಗೆರೆಗಳು ಎದ್ದು ಕಾಣುತಿದ್ದವು. ಆ ನೋವಿನಲ್ಲಿ ಸಹ ಮಗನನ್ನು ನೋಡಿದ ಮೇಲೆ ಅವರಲ್ಲಿ ಮೂಡಿದ್ದ ಚಿಂತೆಯ ಗೆರೆಗಳು ಒಂದೊಂದಾಗಿ ಮಾಯವಾಗುತಿತ್ತು. ತಂದೆಯ ಮುಖದಲ್ಲಿ ಆದ ಬದಲಾವಣೆ ಕಂಡು ಗದ್ಗದಿತನಾದ ಮಂಜು "ಪಪ್ಪ ನಿಮ್ಮ ಮಗ ಕಣಪ್ಪ ನಾನು, ನಾನು ಹೇಗೆ ಬದಲಾಗುತ್ತಿನಿ ಹೇಳಿ? ಪ್ರಾಜೆಕ್ಟ್ ಒಂದು ವರ್ಷದಲ್ಲಿ ಮುಗಿಯುತ್ತೆ ಅಂದುಕೊಂಡಿದ್ದೆ, ಆದರೆ ಅಲ್ಲಿಗೆ ಹೋದ ಮೇಲೆ ಅಲ್ಲಿ ಆದದ್ದೆ ಬೇರೆ. ತುಂಬಾ ದಿನದಿಂದಲೂ ವಾಪಾಸು ಬರೋಣ ಕಾಯ್ತಾ ಇದ್ದೆ, ಆದರೆ ಪ್ರಾಜೆಕ್ಟ್ ಮುಗಿಯುವುದಿಕ್ಕೆ ತುಂಬಾ ತೊಂದರೆಗಳು ಇದ್ದವು, ಅದನ್ನೆಲ್ಲ ಬಗೆಹರಿಸಿಕೊಂಡು ಬರೋದಿಕ್ಕೆ ತಡವಾಯಿತು. ನಿಮ್ಮ ಮನಸ್ಸನ್ನು ತುಂಬಾ ನೋಯಿಸಿದ್ದಕ್ಕೆ ಕ್ಷಮಿಸಿಬಿಡಿ ಪಪ್ಪ. ನಿಮ್ಮ ಬಲವಂತಕ್ಕೆ ತಾನೆ ನಾನು ಮೀನಾಕ್ಷಿಯನ್ನು ಕರೆದುಕೊಂಡು ಹೋಗಿದ್ದು. ಹಾಗೇ ನಿಮ್ಮೊಬ್ಬರನ್ನೆ ಬಿಟ್ಟು ಹೋಗೊದಿಕ್ಕೆ ಖಂಡಿತ ಮನಸಿರಲಿಲ್ಲ. ಇನ್ನೆಂದೂ ನಿಮ್ಮನ್ನು ಬಿಟ್ಟು ಎಲ್ಲೂ ಹೋಗಲ್ಲ ಪಪ್ಪ. ನಿಮ್ಮ ಕಷ್ಟ ನನಗೆ ಅರ್ಥ ಆಗುತ್ತೆ" ಎಂದು ಮಂಜು ಹೇಳುತಿದ್ದರೆ ಮತ್ತೆ ಮಗನನ್ನು ತಬ್ಬಿಕೊಂಡು.

"ಕ್ಷಮೆಯನ್ನು ನಾನು ಕೇಳ್ಬೇಕು ಪುಟ್ಟ, ನಿನ್ನನ್ನು ಅರ್ಥ ಮಾಡಿಕೊಳ್ಳದೆ ನಿನ್ನ ಬಗ್ಗೆ ತಪ್ಪು ತಪ್ಪಾಗಿ ಯೋಚನೆ ಮಾಡಿಬಿಟ್ಟೆ ಮಗು" ಎಂದರು. ಮನಸ್ಸಿನಲ್ಲಿ ಮಗನನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಕ್ಕೆ ತಮ್ಮ ಬಗ್ಗೆ ತಮಗೆ ನಾಚಿಕೆಯಾಗಿತ್ತು. ತಮ್ಮ ಮಗನ ಬಗ್ಗೆ ಇದ್ದ ಹೆಮ್ಮೆ ಇಮ್ಮಡಿಯಾಗಿತ್ತು.

“ಹೌದಲ್ವಾ ನಾವು ಎಂಥಾ ತಪ್ಮಾಡ್ತಾಯಿದೀವಿ“


ದಟ್ಸ ಕನ್ನಡದ ಶ್ಯಾಮ್ ಸುಂದರ ಸರ್ ಅವರ ಪ್ರೋತ್ಸಾಹ ದಿಂದ ನನ್ನ ಮೊದಲ ಕಥೆ ದಟ್ಸ ಕನ್ನಡ.ಕಾಂ ನಲ್ಲಿ ಪ್ರಕಟವಾಯಿತು. ನನ್ನ ಬರಹದ ಪಯಣ ಹೀಗೆ ಮುಂದುವರಿಯಲಿ ಎಂದು ನನ್ನ ಸ್ವಂತ ಬ್ಲಾಗ್ ಒಂದನ್ನು ಪ್ರಾರಂಬಿಸಲಿಚ್ಚಿಸಿದೆ. ಅದರ ಫಲ ಈ “ತುಂತುರು”
ದಟ್ಸ್ ಕನ್ನಡ ದಲ್ಲಿ ಪ್ರಕಟವಾದ ನನ್ನ ಮೊದಲ ಕಥೆ ಯನ್ನು ಈ ಕೆಳಗೆ ಮರು ಪ್ರಕಟಿಸುತಿದ್ದೇನೆ.
ಹೌದಲ್ವಾ ನಾವು ಎಂಥಾ ತಪ್ಮಾಡ್ತಾಯಿದೀವಿ
ಅದೊಂದು ಸರಳ ಸಾಹಿತ್ಯ ಸಮಾರಂಭ. ಆ ಊರಿನ ಕೆಲ ಸಾಹಿತ್ಯಾಸಕ್ತರು, ಪ್ರೌಢಶಾಲೆಯ ಕನ್ನಡ ಪಂಡಿತರು, ಪಕ್ಕದ ಊರಿನ ಕೆಲ ಸಾಹಿತ್ಯಾಸಕ್ತರು, ತಾಲೂಕಿನಲ್ಲಿ ಹೆಸರು ಮಾಡಿದ ಕೆಲ ಸಾಹಿತಿಗಳು ಆಗಮಿಸಿದ್ದರು. ಸುಮಾರು ಜನರು ತುಂಬಿದ್ದ ಆ ಸಮಾರಂಭವನ್ನು ಅದೇ ಊರಿನಲ್ಲಿದ್ದ ರಂಗಮಂಟಪದಲ್ಲಿ ಅಲ್ಲಿಯ ಪಿಯುಸಿ ಕಾಲೇಜಿನ ಪ್ರಾಂಶುಪಾಲರು ಆಯೊಜಿಸಿದ್ದರು. ಆದಿನದ ವಿಶೇಷವೆಂದರೆ ಎಸ್.ಎಲ್. ಭೈರಪ್ಪ ನವರ ಆವರಣ ಕಾದಂಬರಿಯ ಬಗ್ಗೆ ಚರ್ಚೆ. ಪ್ರೇಕ್ಷಕರಾಗಿ ಶಾಲಾಕಾಲೇಜಿನ ಬಹುತೇಕ ಶಿಕ್ಷಕರೆಲ್ಲರು ಆಗಮಿಸಿದ್ದರು. ಅದರಲ್ಲಿ ಕನ್ನಡ ಮೇಷ್ಟ್ರಾದ ಚನ್ನಬಸವಯ್ಯ ಮತ್ತು ವಿಜ್ಞಾನದ ಮೇಷ್ಟ್ರು ರಾಜಶೇಖರಪ್ಪನವರು ಸಹ ಬಂದಿದ್ದರು. ಚರ್ಚೆ ಬಹು ಗಂಭೀರವಾಗಿ ನಡೆಯುತಿತ್ತು. ಕೆಲವೊಂದು ಸಾರಿ ವಾದವಿವಾದಗಳು ತಾರಕಕ್ಕೇರುವ ಸಮಯದಲ್ಲಿ ಕೆಲ ಹಿರಿಯರು ಯಾವುದೇ ಅತಿರೇಕ ಸಂಭವಿಸದಂತೆ ಎಲ್ಲರನ್ನು ಶಾಂತಗೊಳಿಸಿ ಅವರವರ ವಾದ ಮಂಡಿಸಲು ಅವಕಾಶ ಮಾಡಿಕೊಡುತ್ತಿದ್ದರು.
ಚರ್ಚೆ ಹೀಗೆ ಸಾಗುವಷ್ಟರಲ್ಲಿ ರಾಜಶೇಖರ್ ಮೇಷ್ಟ್ರು ಅವರ ವಾದ ಮಂಡಿಸುವ ಸಮಯ ಬಂತು. ಅವರು ತಮಗನಿಸಿದ್ದನ್ನು ಹೇಳುವುದಕ್ಕೆ ಹೊರಟಿದ್ದಾಗ, ಅವರು ಕೈಯಲ್ಲಿ ಹಿಡಿದುಕೊಂಡಿದ್ದ ಮೈಕ್ ಕೆಟ್ಟುಹೋಯಿತು. ಸೂಜಿಮೊನೆ ಕೆಳಗೆಬಿದ್ದಾಗ ಶಬ್ದ ಕೇಳುವಷ್ಟು ನಿಶ್ಯಬ್ದ ಸಭಾಂಗಣದಲ್ಲಿತ್ತು. ಮೈಕ್ ಕಿರಿಕಿರಿ ಶುರುವಾದ ಮೇಲೆ ಜನರ ಮಾತುಗಳು ಜತೆಗೆ ಕೆಲವರಲ್ಲಿ ಅಸಹನೆ ಶುರುವಾಯಿತು. ಎಲ್ಲರ ಗಮನ ಮೈಕ್-ಸೆಟ್ ಒದಗಿಸಿದ್ದ ತಿಪ್ಪೆಸ್ವಾಮಿ ಕಡೆಗೆ, ಆದರೆ ಅವರು ಅದೇನೊ ಕೆಲಸ ಅಂತ ಆಗತಾನೆ ಹೊರಗಡೆ ಹೋಗಿದ್ದರು. ಅಲ್ಲೆ ಮೂಲೆಲಿ ನಿಂತುಕೊಂಡಿದ್ದ ಅವರ ಮಗ ಪ್ರಕಾಶ, ಈ ಚರ್ಚೆಗೆ ತನಗೆ ಎನೂ ಸಂಬಂಧವಿಲ್ಲದಂತೆ ನಿಂತುಕೊಂಡಿದ್ದ.
ಅವನಿಗೆ ಈ ಸಾಹಿತ್ಯ, ಚರ್ಚೆ ಅದೇನೋ ಅರ್ಥವಾಗುತ್ತಿರಲಿಲ್ಲ. ಅಲ್ಲಿದ್ದ ಚನ್ನಬಸವಯ್ಯ ಮೇಷ್ಟ್ರು “ಲೇ ಪ್ರಕಾಶ ನಿಮ್ಮಪ್ಪ ಎತ್ಲಾಗೋದ್ನಲೆ? ಹೋಗಿ ಹುಡುಕ್ಕೊಂಡು ಬಾ” ಎಂದು ಹೇಳಿದಾಗ, ಅವನು ಮರುಮಾತಾಡದೆ ತಲೆ ಬಗ್ಗಿಸಿಕೊಂಡು ಮೈಕ್ ಸೆಟ್ ಕಡೆ ಬಂದ. ಅವನು ಈ ಕಡೆ ಬರುವುದು ನೋಡಿ “ಲೇ ನಿನಗೇ ಹೇಳಿದ್ದು, ನಿಮ್ಮಪ್ಪನ್ನ ಕರಕೊಂಡು ಬಾ ಅಂತ” ಅದಕ್ಕೆ ಉತ್ತರವಾಗಿ ಪ್ರಕಾಶ “ಸಾರ್ ನಾನೆ ನೋಡ್ತಿನಿ ಬಿಡಿ” ಅಂತ ಹೇಳಿ ಕೆಲ ನಿಮಿಷಗಳಲ್ಲಿ ವೈರ್ ಗಳನ್ನು ಚೆಕ್ ಮಾಡಿ ಅದನ್ನು ಸರಿಮಾಡಿ, ಮೈಕ್ ಟೆಸ್ಟಿಂಗ್ 123 ಅಂತ ಕಿರುಚಿದ. ಸರಿಯಾಗಿ ಕೇಳಿಸುತ್ತಾ ಇದೆ ಅಂತ ಖಾತರಿ ಮಾಡಿಕೊಂಡು ರಾಜಶೇಖರ್ ಮೇಷ್ಟ್ರಿಗೆ “ಮಾತಾಡಿ ಸಾರ್” ಅಂದು ಕೊಟ್ಟ. ಚರ್ಚೆ ಮುಂದುವರಿಯಿತು. ಆದರೆ ಚನ್ನಬಸವಯ್ಯ ಮೇಷ್ಟ್ರಿಗೆ “ನನ್ನ ಮಾತು ಕೇಳಲಿಲ್ವಲ್ಲ” ಅನ್ನುವ ಅಸಮಾಧಾನವಿತ್ತು. ಒಟ್ಟಿನಲ್ಲಿ ತೊಂದರೆ ನಿವಾರಣೆಯಾಯಿತಲ್ಲ ಎಂದು ಅಂದುಕೊಂಡು ಸುಮ್ಮನಾದರು.
ಕೆಲವರು ಅವನ ಕಾರ್ಯಕ್ಷಮತೆಯನ್ನು ಮೆಚ್ಚಿ ಶಹಬ್ಬಾಸ್ಗಿರಿಯನ್ನು ಕೊಟ್ಟರು. ಪ್ರಕಾಶನಿಗೆ ಒಳಗೊಳಗೆ ಖುಷಿಯಾಯಿತು. ಮೇಷ್ಟ್ರುಗಳ ಮುಂದೆ ಮತ್ತು ಅಲ್ಲಿನ ಹಿರಿಯರ ಮುಂದೆ ಹೊಗಳಿಸಿಕೊಂಡಿದ್ದಕ್ಕೆ ಉಬ್ಬಿ ಹೋಗಿದ್ದ. ಆ ಖುಷಿಯಲ್ಲಿ ಸಮಾರಂಭ ಮುಗಿದಮೇಲೆ ಆ ಊರಿನ ಟೆಂಟ್ ನಲ್ಲಿ ಹಾಕಿದ್ದ ಕನ್ನಡ ಸಿನಿಮಾ ನೊಡುವುದಕ್ಕೆ ಹೋಗಿದ್ದ.
ಭಾನುವಾರ ರಜೆ ಮುಗಿದು ಸೋಮವಾರ ಎಂದಿನಂತೆ ಶಾಲೆ ಪ್ರಾರಂಭವಾದಾಗ ಎಲ್ಲರಂತೆ ಶಾಲೆಗೆ ಹೋಗಿದ್ದ. ಬೆಳಗಿನ 3 ಪಿರಿಯುಡ್ ಮುಗಿದು 4ನೇ ಪಿರಿಯಡ್ ಕನ್ನಡ ಪಾಠಕ್ಕೆ ಚನ್ನಬಸವಯ್ಯ ಮೇಷ್ಟ್ರು ಬಂದರು. ತಮ್ಮ ಪಾಡಿಗೆ ತಾವು ಪಾಠ ಮಾಡುತ್ತ ಇದ್ದರು. ಇದ್ದಕ್ಕಿದ್ದ ಹಾಗೆ ಅವರ ಗಮನ ಮೂಲೆಲಿ ಇದ್ದ ಪ್ರಕಾಶನ ಕಡೆಗೆ ಹೋಯಿತು. ಅವನು ಬಾಗಿಲಿಂದ ಆಚೆಗೆ ಕಾಣುತ್ತಿದ್ದ ಮರದ ಮೇಲೆ ಇರುವ ಮಂಗಗಳ ಕಡೆ ನೋಡುತ್ತ ಇದ್ದ. ಬೋರ್ಡ್ ಅನ್ನು ಒರೆಸಲು ಉಪಯೋಗಿಸುವ ಡಸ್ಟರ್ ತೆಗೆದುಕೊಂಡು ಅವನ ಮುಖದ ಮೇಲೆ ಹೊಡೆದರು. ಬಾಹ್ಯಲೋಕದಲ್ಲಿ ವಿಹರಿಸುತ್ತಿದ್ದ ಪ್ರಕಾಶ ಮುಖದ ಮೇಲೆ ಡಸ್ಟರ್ ಬಿದ್ದಾಗ ಎಚ್ಚೆತ್ತುಕೊಂಡ. ತಟ್ಟನೆ ಅವರು ಮಾಡುತಿದ್ದ ಪಾಠಕ್ಕೆ ಸಂಬಂಧಿಸಿದಂತೆ ಒಂದು ಪ್ರಶ್ನೆಯನ್ನು ಕೇಳಿದರು.
ಪಾಠದ ಕಡೆಗೆ ಗಮನಕೊಡದಿದ್ದ ಅವನು ಪ್ರಶ್ನೆಗೆ ಎಲ್ಲಿಂದ ಉತ್ತರ ಕೊಟ್ಟಾನು? ಪೆಕರು ಪೆಕರಾಗಿ ನೋಡುತ್ತ ನಿಂತು ಬಿಟ್ಟ. ಅವರಿಗೆ ಬಂದ ಕೋಪದಲ್ಲಿ “ನೀನು ಮೈಕ್-ಸೆಟ್ ರಿಪೇರ್ ಮಾಡೊಕೆ, ಕನೆಕ್ಷನ್ ಕೋಡೊಕೆ ಲಾಯಕ್ಕು ನಿಮಗೆಲ್ಲ ಓದು ಯಾಕೆ ಬೇಕು, ಓದು ಬಿಡಿಸಿ, ಕೆಲಸಕ್ಕೆ ಇಟ್ಟುಕೊಳ್ಳಿ ಅಂತ ನಿಮ್ಮಪ್ಪನಿಗೆ ಹೇಳ್ತಿನಿ ಇರು” ಎಂದು ಸಿಟ್ಟಿನ ಭರದಲ್ಲಿ ಮಾತಾಡಿದರು. ಕೆಲ ನಿಮಿಷಗಳ ತನಕ ಅವರ ಬಯ್ಗುಳ ಹಾಗೆ ಮುಂದುವರಿದಿತ್ತು. ಬೆಳಿಗ್ಗೆಯಿಂದ ಎಲ್ಲರೊಂದಿಗೆ ಖುಷಿಯಾಗಿ ನಗುನಗುತ್ತ ಆಡಿಕೊಂಡು ಇದ್ದವನಿಗೆ ಮೇಷ್ಟ್ರು ಹೇಳಿದ ಮಾತು ಕೇಳಿ ಅವಮಾನ ಆಯಿತು. ಮಧ್ಹ್ಯಾನ ಮನೆಗೆ ಹೋಗಿ ಊಟ ಮಾಡಿಕೊಂಡು ಬಂದು ಮತ್ತೆ ಮಧ್ಹ್ಯಾನದ ಶಾಲೆಗೆ ಹಾಜರಾಗಿದ್ದ. ಅಷ್ಟೊತ್ತಿಗೆ ಅದನ್ನೆಲ್ಲ ಮರೆತು ಮತ್ತೆ ಆಟ ಪಾಠದಲ್ಲಿ ತಲ್ಲೀನನಾಗಿದ್ದ.
ಕೆಲ ವಾರದ ನಂತರ ಹತ್ತಿರದ ಬಳ್ಳಾರಿಯಲ್ಲಿ ಅಮೀರ್ ಖಾನ್ ನಟಿಸಿದ “ತಾರೆ ಜಮೀನ್ ಪರ್” ಚಿತ್ರ ಪ್ರದರ್ಶಿತವಾಗುತ್ತಿತ್ತು. ಹೆಚ್ಚು ಜನಪ್ರಿಯವಾಗಿದ್ದ ಚಿತ್ರ ದೇಶದೆಲ್ಲೆಡೆ ಚರ್ಚಿತವಾಗುತಿತ್ತು. ಈ ವೇಳೆ ಶಾಲೆಯ ಆಫೀಸ್ ರೂಮಿನಲ್ಲಿಯು ಸಹ ಈ ಚಿತ್ರದ ಬಗ್ಗೆ ಚರ್ಚೆ ನಡೆಯುತಿತ್ತು. ಕೊನೆಗೆ ರಾಜಶೇಖರಪ್ಪ ಮತ್ತು ಚನ್ನಬಸವಯ್ಯ ಮೇಷ್ಟ್ರುಗಳು ಒಮ್ಮತದ ನಿರ್ಧಾರಕ್ಕೆ ಬಂದು ತಾವಿಬ್ಬರು ಭಾನುವಾರ ಬಳ್ಳಾರಿಗೆ ಹೋಗಿ ಚಿತ್ರ ನೋಡಿಕೊಂಡು ಬರುವುದೆಂದು ನಿರ್ಧರಿಸಿದರು. ಅಂದುಕೊಂಡಂತೆ ಅವರಿಬ್ಬರು ಬಳ್ಳಾರಿಗೆ ಚಿತ್ರ ನೋಡಲು ಹೊರಟರು.
ಆ ದಿನ ಚಿತ್ರ ನೋಡುತ್ತಿದ್ದಂತೆ ಅವರಲ್ಲಿ ಗಾಢವಾದ ಪರಿಣಾಮ ಬೀರಲಾರಂಭಿಸಿತು, ಬಹುತೇಕ ಅವರಿಬ್ಬರಿಗೆ ಅನಿಸಿದ್ದು ಅದರಲ್ಲಿ ಬರುವ ಆ ಶಿಕ್ಷಕ ಪಾತ್ರಧಾರಿಗಳು ಹಾಗು ಇವರ ಮಧ್ಯೆ ಸಾಮ್ಯತೆ ಇದೆಯಂತ. ಶಾಲೆಯಲ್ಲಿ ಸಹ ಹಾಗೆ ನಡೆದುಕೊಳ್ಳುತಿದ್ದೇವೆ ಅನ್ನೋ ಭಾವನೆ ಅವರಲ್ಲಿ ಉದ್ಭವಿಸಿತ್ತು. ಅಷ್ಟು ವರ್ಷಗಳ ಅವರ ಅನುಭವದಲ್ಲಿ ಅವರೆಂದು ಅಮೀರ್ ಖಾನ್ ತರಹ ಯೋಚಿಸಿರಲಿಲ್ಲ ಹಾಗು ನಡೆದುಕೊಂಡಿರಲಿಲ್ಲ. ಚೆನ್ನಾಗಿ ಓದದ ಮಕ್ಕಳನ್ನು ತುಂಬಾ ತಾತ್ಸಾರದಿಂದ ನಡೆಸಿಕೊಳ್ಳುತಿದ್ದರು. ಅವರ ಪಾಠ ಏನಿದ್ದರೂ ಬುದ್ದಿವಂತ ಮಕ್ಕಳಿಗೆ ಮಾತ್ರ ಅನ್ನುವ ರೀತಿಯಲ್ಲಿ ವರ್ತಿಸುತ್ತಿದ್ದರು. ಚಿತ್ರ ನೋಡುತಿದ್ದಂತೆ ಅವರಲ್ಲಿ ಪಶ್ಚಾತ್ತಾಪದ ಭಾವನೆ ವ್ಯಕ್ತವಾಗಿತ್ತು. ಶಾಲಾ ಮಕ್ಕಳಿಗೆ ಯಾವ್ಯಾವ ರೀತಿಯಲ್ಲಿ ಬೈದಿದ್ದು ಎಂದು ಒಂದು ಸಾರಿ ನೆನೆಸಿಕೊಂಡರು.
ಕ್ಷೌರಿಕ ಈರಣ್ಣನ ಮಗನಾದ ಬಸವರಾಜನಿಗೆ “ನೀನು ನಿಮ್ಮಪ್ಪನಂಗೆ ಗಡ್ಡ ಕೆರೆಯೋಕೆ ಹೋಗು, ಕೊನೆ ಪಕ್ಷ ಹೊಟ್ಟೆಗೆ ಹಿಟ್ಟಾದ್ರು ದಕ್ಕುತ್ತೆ.”
ಡಾಕ್ಟರ್ ಶಿವರುದ್ರಪ್ಪನವರ ಮಗನಿಗೆ “ನಿಮ್ಮಪ್ಪ ನೋಡೊ ಎಷ್ಟು ಕಷ್ಟಪಟ್ಟು ಓದಿಕೊಂಡು ಡಾಕ್ಟರ್ ಆಗಿದ್ದಾರೆ ಅವರ ಮಗ ಅಂತ ಹೇಳೊದಿಕ್ಕೆ ನಾಚಿಕೆ ಯಾಗಬೇಕು ನಿಂಗೆ.”
ರೈತರ ಮಕ್ಕಳಿಗೆ “ನೀವು ಸಗಣಿ ಕಸ ಬಳಿಯೋಕೆ, ಹಸು, ಎಮ್ಮೆ, ದನ ಕಾಯಿಸೋಕೆ ಲಾಯಕ್ಕು.”
ಹೋಟೆಲ್ ಗೋವಿಂದಪ್ಪನವರ ಮಗನಿಗೆ “ನಿನಗೆಲ್ಲ ವಿದ್ಯೆ ಯಾಕೆ, ಹೋಗಿ ಎಂಜಲು ಲೋಟ ತಟ್ಟೆ ತೊಳೆದು ವ್ಯಾಪಾರ ಮಾಡಿಕೊಂಡಿರೋಗು.”
ಮಕ್ಕಳನ್ನು ಬಾಸುಂಡೆ ಬರುವ ಹಾಗೆ ಹೊಡೆದಿದ್ದು, ಶಾಲೆಯ ಗೋಡೆಗೆ ಆಣಿಸಿಕೊಂಡು ನಿಲ್ಲುವ ಶಿಕ್ಷೆ ಕೊಟ್ಟಿದ್ದು, ಶಾಲೆಯ ಸುತ್ತ ಓಡುವ ಶಿಕ್ಷೆ, ಮುಂಗೈ ಬೆರಳುಗಳ ಮೇಲೆ ಬೆತ್ತದಿಂದ ಹೊಡೆದಿದ್ದು. ಹೀಗೆ ಒಂದೇ… ಎರಡೆ… ಎಲ್ಲ ರೀತಿಯಿಂದಲೂ ಮಕ್ಕಳನ್ನು ಗೋಳು ಹೊಯ್ದುಕೊಳ್ಳುತ್ತಿದ್ದರು. ಒಂದೊಂದು ವಿಷಯಗಳನ್ನು ನೆನೆಸಿಕೊಂಡು ಹೋಗ್ತಾ ಇದ್ದರೆ, ಅವರಿಗೆ ಅವರ ಬಗ್ಗೆ ಅಸಹ್ಯ ಹುಟ್ಟಿಸುತಿತ್ತು. ಅಷ್ಟೆಲ್ಲ ಓದಿಕೊಂಡಿದ್ದು, ದೊಡ್ಡ ದೊಡ್ಡ ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದು, ದೇಶದ ಬಗ್ಗೆ ಚರ್ಚೆ ನಡೆಸಿದ್ದು, ದೊಡ್ಡ ದೊಡ್ಡವರ ಸ್ನೇಹ ಗಳಿಸಿದ್ದು, ಎಲ್ಲ ವ್ಯರ್ಥ ಅನ್ನೋ ಭಾವನೆ ಬರತೊಡಗಿತು. ತಾವು ಇಷ್ಟು ದಿನ ಎಂಥ ತಪ್ಪು ಮಾಡುತ್ತ ಇದ್ದೀವಿ ಅನ್ನೊ ಯೋಚನೆ ಅವರಲ್ಲಿ ಕಾಡುವುದಕ್ಕೆ ಶುರುವಾಯಿತು. ಚಲನಚಿತ್ರ ಮುಗಿಯುವುದೊರಳಗೆ ಅವರಲ್ಲಿ ಯಾವುದೋ ಒಂದು ರೀತಿಯ ಬದಲಾವಣೆ ಬಂದಿತ್ತು.
ಚಿತ್ರ ಮುಗಿದ ನಂತರ ಅವರಿಬ್ಬರು ಮತ್ತೆ ಅವರ ಊರಿಗೆ ಹೊರಡಲು ಅನುವಾದರು. ಬಸ್ಟಾಂಡ್ ತನಕ ಚಿತ್ರದ ಕುರಿತು ಮಾತನಾಡುತ್ತ ಹೊರಟರು. ಹಾಗೆ ಸಾಗುತ್ತಿರುವಾಗ ಚನ್ನಬಸವಯ್ಯನವರು “ಮೇಷ್ಟ್ರೆ ನೀವು ಊರಿಗೆ ಹೋಗಿಬಿಡಿ, ನಾನು ಇಲ್ಲೆ ಇರುವ ನಮ್ಮ ಸಂಬಂಧಿಕರ ಮನೆಗೆ ಹೋಗಿ ಬರ್ತಿನಿ, ನಿಮಗೆ ಅಭ್ಯಂತರ ವಿಲ್ಲದಿದ್ದರೆ” ಎಂದಾಗ, ಅದಕ್ಕೆ ಪ್ರತಿಯಾಗಿ ಅವರು ನಸುನಗುತ್ತಾ, “ಇಲ್ಲ ಹಾಗೇನು ಇಲ್ಲ, ನೀವು ಹೋಗಿಬನ್ನಿ ನಾನು ಊರಿಗೆ ಹೋಗ್ತಿನಿ” ಎಂದು ಬಸ್ಟಾಂಡ್ ಕಡೆ ಹೊರಟರು.
INTERMISSION
ಎಂದು ಪರದೆಯ ಮೇಲೆ ಅಕ್ಷರಗಳು ಬೀಳುತಿದ್ದಂತೆ, ಚಿತ್ರಮಂದಿರದ ಒಳಗಡೆ ಇರುವ ದೀಪಗಳು ಉರಿದವು. ಜನರೆಲ್ಲ ವಿರಾಮದ ಸಮಯಕ್ಕೆ ಕಾದವರಂತೆ, ಕೆಲವರು ತಿನ್ನುವುದಕ್ಕೆ, ತಂಪಾದ ಪಾನಿಯಗಳನ್ನು ಕುಡಿಯುವುದಕ್ಕೆ, ಮತ್ತೆ ಕೆಲವರು ತಮ್ಮ ಬಹಿರ್‍ದೆಸೆ ತೀರಿಸುವುಕೊಳ್ಳೊದಿಕ್ಕೆ ಒಂದೇಸಮನೆ ಹೊರಬಂದರು. 10 ನಿಮಿಷ ವಿರಾಮದ ನಂತರ ಚಿತ್ರ ಮತ್ತೆ ಶುರುವಾಯಿತು.
ಎಲ್ಲರನ್ನು ಒಂದೇ ಸಮನೆ ನೋಡಿಸಿಕೊಂಡು ಹೋಗುತಿದ್ದ ಚಿತ್ರ ಮುಗಿಯುವ ಹಂತಕ್ಕೆ ಬಂದಿತ್ತು. ಬಹುತೇಕ ಜನರಿಗೆ ಇನ್ನು ಸ್ವಲ್ಪ ಹೊತ್ತು ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಅಂತ ಅನಿಸುತ್ತಿತ್ತು. ಬಾಗಿಲಿಂದ ತುಂಬಾ ಜನ ಒಟ್ಟೊಟ್ಟಾಗಿ ಹೊರಬರುತ್ತಿದ್ದಾಗ ನೂಕು ನುಗ್ಗಲಿನಲ್ಲಿ ಒಬ್ಬರಿಗೊಬ್ಬರು ತಗುಲಿಸಿಕೊಂಡು, ತಳ್ಳಾಡಿಕೊಂಡು ಹೊರಬರುವ ಸಾಹಸ ಮಾಡುತ್ತಿದ್ದರು. ಆ ತಳ್ಳಾಟದಲ್ಲಿ ಆ ಇಬ್ಬರು ವ್ಯಕ್ತಿಗಳಲ್ಲಿ ಒಬ್ಬರು ತಮಗರಿವಿಲ್ಲದಂತೆ ಕಾಲು ತುಳಿದು, ಕ್ಷಮಿಸಿ ಎಂದು ಹೇಳುತ್ತಿದ್ದಂತೆ, ಇದ್ಯಾವುದು ಪರಿಚಿತರ ಧ್ವನಿ ಇದ್ದಂತೆ ಇದೆಯಲ್ಲ ಎಂದು ಮುಖ ನೋಡಿದರೆ, ಮೇಷ್ಟ್ರು ರಾಜಶೇಖರ್ ಮತ್ತು ಚನ್ನಬಸವಯ್ಯನವರು.
“ಏನ್ರೀ ಯಾರೊ ಮನೆಗೆ ಹೊಗ್ತಿನಿ ಅಂತ ಹೇಳಿದ್ರಿ, ಮತ್ತೆ ಸಿನಿಮಾ ನೋಡೊಕೆ ಬಂದಿದ್ದಿರಾ?” ಎಂದಾಗ “ಇಲ್ಲಾ ಸಾರ್ ಎನೋ ಚೆನ್ನಾಗಿದೆಯಲ್ಲ ಅಂತ ನೋಡೋಣ ಅಂತ ಬಂದೆ, ಹೌದು ತಾವು ಊರಿಗೆ ಹೊಗ್ತಿನಿ ಅಂತೇಳಿ ಬಸ್ಟಾಂಡ್ ಕಡೆ ಹೊದ್ರಲ್ವ? ಮತ್ತೇನ್ ಈ ಕಡೆ” ಎಂದು ಅವರಿಗೆ ಮರು ಪ್ರಶ್ನೆ ಹಾಕಿದಾಗ, “ಅಯ್ಯೊ ಬಿಡಿ ಮಾರಯ್ರೆ ನಿಮ್ಮದು ಯಾವ ತರಹ ಗೋಳೊ ಅದೇ ಗೋಳು ನಂದು ಸಹ ಬನ್ನಿ ಹೋಗೊಣ” ಎಂದು ಬಸ್ಟಾಂಡ್ ಕಡೆ ಹೊರಟರು.
*********
ಚನ್ನಬಸವಯ್ಯ ಮೇಷ್ಟ್ರು ಮರುದಿನ ಶಾಲೆಗೆ ಹೋದಾಗ ಪ್ರತಿ ವಿಭಾಗಕ್ಕೆ ಪಾಠ ಮಾಡುವ ಮೊದಲು ಹೇಳಿದ್ದು, “ಮಕ್ಕಳೆ, ಮೊದಲು ತಾವೆಲ್ಲರು ನನ್ನನ್ನು ಕ್ಷಮಿಸಬೇಕು, ಯಾವುದ್ಯಾವುದೊ ಕಾರಣಕ್ಕೆ ನಿಮಗೆಲ್ಲ ಬೈದಿದ್ದೀನಿ, ಹೊಡೆದಿದ್ದಿನಿ, ಹೊರಗಡೆ ಹಾಕಿದ್ದೀನಿ, ಶಿಕ್ಷೆ ಕೊಟ್ಟಿದ್ದೀನಿ, ನನಗೆ ಹೇಗೆ ಅನ್ನಿಸುತ್ತೊ ಹಾಗೆ ನಿಮ್ಮನ್ನು ದಂಡಿಸಿದ್ದಿನಿ. ಆದರೆ ಅದನ್ನೆಲ್ಲ ಮಾಡಿದ್ದು ನಿಮ್ಮ ಒಳ್ಳೆಯದಕ್ಕೆ ಹೊರತು ನಿಮ್ಮನ್ನು ಅವಮಾನ ಮಾಡಬೇಕು ಅಂಥ ಅಲ್ಲ. ನೀವು ಓದಿ ವಿದ್ಯಾವಂತರಾಗಿ ಒಳ್ಳೆ ನೌಕರಿ ಮಾಡಿಕೊಂಡು ಚೆನ್ನಾಗಿರಲಿ ಎಂದು ಮಾತ್ರ.”
ಮಾತು ನಿಲ್ಲಿಸಿ ಅದೇನನ್ನೊ ಯೋಚಿಸುತ್ತ “ನಿಮ್ಮಲ್ಲಿ ನಾನು ಗಮನಿಸಿರೋದು ಏನಂದ್ರೆ ನನಗಿಸಿದ ಹಾಗೆ ನೀವೆಲ್ಲ ತುಂಬಾ ಬುದ್ದಿವಂತರು, ನನ್ನ ಪ್ರಕಾರ ನಿಮ್ಮತ್ರ ಎನಾದರೊಂದು ಪ್ರತಿಭೆ ಇದ್ದೇ ಇರುತ್ತೆ ಅನ್ನೊ ಭಾವನೆ. ಆದರೆ ಸೂಕ್ತವಾಗಿ ಬಳಸಿಕೊಳ್ಳೊದಿಕ್ಕೆ ಆಗ್ತಾ ಇಲ್ಲ. ವಿದ್ಯೆಯ ಜತೆಗೆ ಪ್ರತಿಭೆಯನ್ನು ಉಪಯೋಗಿಸಿಕೊಳ್ಳುವ ಜಾಣ್ಮೆ ಬೇಕು. ಅದನ್ನು ಬುದ್ದಿವಂತಿಕೆಯಿಂದ ಉಪಯೋಗಿಸಿಕೊಳ್ಳಿ, ಖಂಡಿತವಾಗಿ ವಿದ್ಯೆ ಇದ್ದರೆ ಅದನ್ನು ಸಾಧಿಸಿಕೊಳ್ಳೊದು ಅಷ್ಟು ಕಷ್ಟ ಅಲ್ಲ. ಪ್ರತಿಭೆಯನ್ನು ಯಾವುದೇ ಕಾರಣಕ್ಕೆ ನಶಿಸಿ ಹೊಗೋದಿಕ್ಕೆ ಬಿಡಬೇಡಿ. ನಿಮ್ಮ ತಂದೆ ತಾಯಿಯವರ ಹತ್ತಿರ ಈ ಬಗ್ಗೆ ನಾವು ಸಹ ಮಾತಾಡ್ತಿವಿ, ಜತೆಗೆ ವಿದ್ಯಾಭ್ಯಾಸದ ಬಗ್ಗೆ ಗಮನವಹಿಸಿ ಚೆನ್ನಾಗಿ ಓದಿಕೊಂಡು ವಿದ್ಯಾವಂತರಾಗಿ ಜೀವನದಲ್ಲಿ ಮುಂದೆ ಬನ್ನಿ.” ಈ ತರಹ ಪ್ರತಿ ತರಗತಿಯಲ್ಲಿ ಹಿತವಚನ ಹೇಳುತ್ತಿದ್ದರು.
ಸಂಜೆ ವೇಳೆಗೆಲ್ಲ ಶಾಲೆಯ ತುಂಬಾ ಇದೇ ವಿಷಯ ಚರ್ಚೆ ಯಾಗುತಿತ್ತು. ಈ ವಿಷಯ ಮುಖ್ಯೋಪಾಧ್ಯಾಯರ ಕಿವಿಗೆ ಸಹ ಬಿತ್ತು. ಅವರು ಸಾಯಂಕಾಲ ತಮ್ಮ ಕೋಣೆಗೆ ಚನ್ನಬಸವಯ್ಯ ಮೇಷ್ಟ್ರನ್ನು ಕರೆಯಿಸಿ ಈ ಬಗ್ಗೆ ವಿಚಾರಿಸಿದರು. “ಯಾಕೆ ಮೇಷ್ಟ್ರೆ? ನಿಮ್ಮಲ್ಲಿ ತುಂಬಾ ಬದಲಾವಣೆ ಕಾಣ್ತಾ ಇದೆ, ಏನಾಯ್ತು? ನಾನು ಸಹ ಶಾಲೆಯಲ್ಲಿ ತಾವು ಆಡಿದ ಮಾತುಗಳನ್ನು ಕೇಳಿದ್ದೇನೆ. ನಿಮ್ಮಲ್ಲಿ ಯಾವುದೊ ವಿಷಯ ಗಂಭೀರವಾಗಿ ಕಾಡುತ್ತಯಿದೆ. ನಿನ್ನೆ ಸಿನಿಮಾಗೆ ಹೋಗಿದ್ರಂತೆ ಅಷ್ಟೊಂದು ಚೆನ್ನಾಗಿದೆಯಾ ಆ ಸಿನಿಮಾ.”
ಚನ್ನಬಸವಯ್ಯನವರು ನಗುತ್ತ “ಹೌದು ಸಾರ್, ತುಂಬಾ ಚೆನ್ನಾಗಿದೆ, ನಮ್ಮ ಶಿಕ್ಷಕ ವರ್ಗದವರೆಲ್ಲರು ಹಾಗು ಪ್ರತಿಯೊಬ್ಬ ತಂದೆ ತಾಯಿಗಳು ನೋಡಬೇಕು, ಶಿಕ್ಷಕರಾದ ನಮಗೆ ಅದು ತುಂಬಾ ಪಾಠ ಕಲಿಸಿಕೊಡುತ್ತೆ. ನಾವು ಜೀವನದಲ್ಲಿ ಕಲಿಯೋದು ತುಂಬಾ ಇದೆ, ನಾವು ಇನ್ನೂ ವಿದ್ಯಾರ್ಥಿಗಳು, ಗುರುಗಳು ಆಗೊದಿಕ್ಕೆ ಸಾಕಷ್ಟು ಸಮಯ ಬೇಕು. ನನಗೆ ಅನಿಸಿದ ಹಾಗೆ ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ನಡವಳಿಕೆಯನ್ನು ನಾವು ಬದಲಿಸಿಕೊಳ್ಳಬೇಕು. ಕ್ಷಮಿಸಿ, ನಾವು ಅನ್ನೋದಿಕ್ಕಿಂತ ನಾನು ಅನ್ನೋದೆ ಹೆಚ್ಚು ಸೂಕ್ತ. ನಾನು ಅನ್ನೋ ಅಹಂ, ನಾನು ಶಿಕ್ಷಕ ಅನ್ನೊ ಗರ್ವ, ನಾನೆ ಎಲ್ಲರಿಗಿಂತ ಹೆಚ್ಚು ಅನ್ನೋ ಭಾವನೆ ನಮ್ಮಲ್ಲಿರೋದ್ರಿಂದನೆ ನಮ್ಮ ಶಾಲಾ ಮಕ್ಕಳಿಗೆ ನಾವುಗಳು ಕಲಿಸಿಕೊಡೋದು ಅಷ್ಟರಲ್ಲೆ ಇದೆ. ಈ ವಿಚಾರದಲ್ಲಿ ನಾವು ಮಕ್ಕಳಿಗೆ ತುಂಬಾ ಮೋಸ ಮಾಡ್ತಾ ಇದೀವಿ ಅಂತ ಅನ್ನಿಸುತ್ತೆ. ಪ್ರತಿಯೊಬ್ಬ ಮನುಷ್ಯ ನಾನು ಒಬ್ಬ ವಿದ್ಯಾರ್ಥಿ ಅನ್ನೋ ಭಾವನೆ ಅತ್ಯವಶ್ಯ ಅನ್ನೋದು ನನ್ನ ಅಭಿಪ್ರಾಯ.”
“ಅದೆಲ್ಲ ಸರಿ, ಯಾಕೆ ಇಷ್ಟೊಂದು ಉದ್ವೇಗಕ್ಕೆ ಒಳಗಾಗಿ ಮಾತಾಡ್ತ ಇದೀರ?”
ಸ್ವಲ್ಪ ಮೌನ.. ಹೇಗೆ ಹೇಳಬೇಕಂಬುದೆ ಅವರಿಗೆ ತೋಚಲಿಲ್ಲ. ಕೊನೆಗೆ ಪಶ್ಚತ್ತಾಪದಿಂದ “ಎರಡು ವರ್ಷದ ಹಿಂದೆ, ನನ್ನ ಮಗನಿಗೆ ಒಂದು ಮಾತು ಹೇಳಿದ್ದೆ. ಎಸ್.ಎಸ್.ಎಲ್.ಸಿ.ಯಲ್ಲಿ ಚೆನ್ನಾಗಿ ಮಾರ್ಕ್ಸ್ ತಗೊಂಡು ಬಂದರೆ ಮಾತ್ರ ಮನೆ ಒಳಗೆ ಬಾ. ಇಲ್ಲದೆ ಇದ್ರೆ ಬರಬೇಡ ಅಂತ. ಆದರೆ ಮಾರ್ಕ್ಸ್ ಜಾಸ್ತಿ ಬರಲಿಲ್ಲ, ಅವನು ಭಯದಿಂದ ಅಂದು ಮನೆ ಬಿಟ್ಟು ಹೋದವನು ಇನ್ನೂ ಮನೆಗೆ ಬಂದಿಲ್ಲ. ಎಲ್ಲಿದ್ದಾನೊ? ಏನು ಮಾಡ್ತಾಯಿದ್ದಾನೊ? ಏನೋ ಒಂದು ಗೊತ್ತಿಲ್ಲ. ಅದಕ್ಕೆ ನಾನೇ ಕಾರಣ ಸಾರ್” ಎಂದು ಕಣ್ಣೀರು ಹಾಕಿ ಮಗುವಿನಂತೆ ಅಳುತ್ತ ಗೋಳಾಡುತಿದ್ದರು. ಆ ಪ್ರಸಂಗವನ್ನು ನೋಡಿ ಮುಖ್ಯೋಪಾದ್ಯಾಯರಿಗೆ ಕರಳು ಚುರುಕ್ಕೆಂದಿತು. ಕೊನೆಗೆ ಮನಸ್ಸಿನಲ್ಲೆ ” ಹೌದಲ್ವಾ ನಾವು ಎಂಥ ತಪ್ಪು ಮಾಡ್ತಾ ಇದೀವಿ” ಎಂದು ಅಂದುಕೊಂಡರು.
*******
ಕೆಲದಿನಗಳ ನಂತರ ಶಿಕ್ಷಕ ವರ್ಗದವರೆಲ್ಲ ಸೇರಿ, ಊರಿನ ಕೆಲ ಹಿರಿಯರು, ವಿದ್ಯಾವಂತರು, ಕೆಲ ಸಾಹಿತಿಗಳ ನೆರವಿನೊಂದಿಗೆ ಒಂದು ವಿಚಾರವೇದಿಕೆಯನ್ನು ಏರ್ಪಡಿಸಿ, ಅದರಲ್ಲಿ ಶಿಕ್ಷಣದ ಗುಣಮಟ್ಟ, ವಿದ್ಯಾರ್ಥಿಗಳಲ್ಲಿ ಕಲಿಕೆ ಉತ್ಸಾಹ, ಶಿಕ್ಷಕರಲ್ಲಿ ಕಲಿಸುವ ರೀತಿ, ಹೀಗೆ ನಾನಾ ರೀತಿಯ ವಿಷಯಗಳ ಬಗ್ಗೆ ಚರ್ಚೆ ನಡೆಸಿದರು. ಅದರ ಫಲಿತಾಂಶವನ್ನು ಶಾಲೆಯಲ್ಲಿ ಅಳವಡಿಸಿ, ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಪ್ರಯತ್ನಿಸಿದರು. ಕೊನೆಗೂ ಪ್ರತಿಯೊಬ್ಬರ ಮನದಲ್ಲಿ ಮನೆ ಮಾಡಿದ್ದ ವಿಷಯ “ಹೌದಲ್ವಾ ನಾವು ಎಂಥ ತಪ್ಪು ಮಾಡ್ತಾ ಇದೀವಿ” ಅನ್ನೋದು ಹೋಗಿ ನಾವು ಎಷ್ಟೊಂದು ಬದಲಾಗ್ತಾ ಇದೀವಿ ಅನ್ನೋ ಭಾವನೆ ಜಾಗೃತವಾಗುತ್ತ ಹೋಯಿತು.

Click below headings