ಭ್ರಷ್ಟಾಚಾರ ವಿರೋಧಿ ಹೋರಾಟ ಒಂದು ಹಂತಕ್ಕೆ ತಲುಪಿದೆ ಎಂದು ಎಲ್ಲರಿಗೂ ಮನವರಿಕೆಯಾದ ನಂತರ ಜನಮಾನಸದಿಂದ ಎಂದೂ ಮರೆಯಾಗದ ಅಣ್ಣ ಹಜಾರೆ “ಮಾಧ್ಯಮಮಾನಸ” ದಿಂದ ನಿಧಾನವಾಗಿ ಮರೆಯಾಗುತ್ತಿರುವುದನ್ನು ನಾವು ಪತ್ರಿಕಾ ಹಾಗು ಟಿವಿ ಗಳಲ್ಲಿ ಕಾಣಬಹುದು. ಯಾಕೆ ಈ ಮಾತು ಅಂದರೆ ಪತ್ರಿಕೆ ಗಳಲ್ಲಿ ಮೊದಲ ಪುಟದಲ್ಲಿ ವರದಿಯಾಗುತಿದ್ದ ಅಣ್ಣಾ ಕುರಿತ ವರದಿಗಳು ಈಗ ಕೊನೆ ಪುಟ ಸೇರುತ್ತಿದೆ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಸಹ ಅಣ್ಣ ಹಜಾರೆ ಬಗ್ಗೆ ಹೆಚ್ಚಿನ ವರದಿಯಾಗುತ್ತಿಲ್ಲ. ಮಾಧ್ಯಮದ ಗಮನ ಬೇರೆ ಬೇರೆ ವಿಷಯಗಳಲ್ಲಿ ಕೇಂದ್ರೀಕೃತ ವಾಗಿರುವುದರಿಂದ ಅಣ್ಣಾ ವಿಷಯದಲ್ಲಿ ಗಮನ ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ನಾವು ತಿಳಿಯಬಹುದು. ಅಣ್ಣಾ ಚುನಾವಣಾ ಸುಧಾರಣೆ ಹಾಗೂ ರೈತ ಸ್ನೇಹಿ ಭೂ ಸ್ವಾಧೀನ ಕಾನೂನು ಜಾರಿಗೂ ಹೋರಾಡುವುದಾಗಿ ಮತ್ತು ಮುಂದಿನ ದಿನಗಳಲ್ಲಿ ಈ ಹೋರಾಟದ ರೂಪುರೇಶೆಗಳ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸಲಿದ್ದೇವೆ ಎಂದು ತಿಳಿಸಿದ್ದಾರೆ.
ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ ಮುಗಿದ ತಕ್ಷಣ ಕಳೆದ 2000, ನವೆಂಬರ್ 4ರಿಂದ ಅನಿರ್ದಿಷ್ಟಾವಧಿ ಉಪವಾಸ ನಿರತರಾಗಿರುವ ಮಣಿಪುರದ ಇರೋಮ್ ಶರ್ಮಿಳಾ ಚಾನು ಬಗ್ಗೆ ವರದಿಯಾಯಿತು. ಅಷ್ಟು ದಿನ ಸುಮ್ಮನಿದ್ದ ಮಾಧ್ಯಮಗಳು ಒಂದೆರಡು ದಿನ ಸತತವಾಗಿ ಚರ್ಚೆ ನಡೆಸಿ ಯಥಾ ಪ್ರಕಾರ ಬೇರೆ ಸುದ್ದಿಗಳ ಕಡೆ ಗಮನ ವಹಿಸಿದರು.
ಶರ್ಮಿಳ ಚಾನು ಹೀಗೆ ಹೇಳ್ತಾರೆ " ನಾನು ಜೈಲಿನಲ್ಲಿ ಬಂಧಿ ಯಾಗಿರುವುದರಿಂದ ಅಣ್ಣಾ ರವರ ಹಾಗೆ ದೇಶ ಸುತ್ತಿ ದೇಶದ ಪ್ರಜೆಗಳನ್ನು ನನಗೆ ಬೆಂಬಲ ನೀಡಿ ಎಂದು ಕೇಳಲಾಗುವುದಿಲ್ಲ ಆದ್ದರಿಂದ ಅಣ್ಣ ಹಜಾರೆ ಮಣಿಪುರ ಕ್ಕೆ ಬಂದು ಪ್ರಜೆಗಳಿಗೆ ಮಾರಕವಾದ ಆಫ್ಸ್ಪಾ ಕಾಯ್ದೆಯ ವಿರುದ್ದ ಹೋರಾಟನಡೆಸುವ ನನಗೆ ಬೆಂಬಲ ನೀಡಲಿ ಎಂದರು. ನನ್ನ ಹೋರಾಟ ವನ್ನು ಅಣ್ಣಾ ಹಜಾರೆಯವರ ಹೋರಾಟಕ್ಕೆ ಹೋಲಿಸುವುದಕ್ಕೆ ನನಗೆ ಯಾವುದೇ ರೀತಿಯ ಅಸಮಧಾನವಿಲ್ಲ. ಉದ್ದೇಶ ಬೇರೆ ಆದರು ಮಾರ್ಗ ಮಾತ್ರ ಒಂದೇ. ಅಣ್ಣ ಹಜಾರೆ ಯವರ ಭ್ರಷ್ಟಾಚಾರ ಹೋರಾಟ ಕೇವಲ ೧೩ ದಿನಗಳಲ್ಲಿ ಮುಗಿದು ಅದಕ್ಕೆ ತಕ್ಕ ಫಲ ದೊರೆತಿದ್ದರಲ್ಲಿ ನನಗೆ ಸಂತೋಷವಿದೆ, ಆದರೆ ನಾನು ಸತತ ೧೧ ವರ್ಷಗಳಿಂದ ಹೋರಾಟ ನಡೆಸುತಿದ್ದೀನಿ, ನನ್ನ ಹೋರಾಟದ ಬಗ್ಗೆ ಎಲ್ಲರೂ ಚರ್ಚೆ ಮಾಡ್ತಾರೆ ಹೊರತು ಯಾರು ಯಾವುದೆ ರೀತಿಯ ಕ್ರಮಗಳನ್ನು ಕೈತೆಗೆದುಕೊಳ್ತಿಲ್ಲ, ಒಂದು ವೇಳೆ ನಾನು ದಿಲ್ಲಿಯಲ್ಲಿದ್ದಿದ್ದರೆ ಇಷ್ಟೊತ್ತಿಗೆ ಏನಾದರು ಪ್ರತಿಫಲ ಸಿಗುತಿತ್ತೋ ಏನೋ? ಆಣ್ಣಾ ಮತ್ತು ದೇಶದ ಎಲ್ಲ ಪ್ರಜೆಗಳು ನನ್ನ ಅಹಿಂಸಾ ಹೋರಾಟಕ್ಕೆ ಬೆಂಬಲ ನೀಡಲಿ ಎಂದು ನಾನು ಅವರನ್ನು ಮಣಿಪುರಕ್ಕೆ ಅಹ್ವಾನಿಸುತ್ತೇನೆ."
ಈ ವರದಿ ಹೊರಬಿದ್ದ ತಕ್ಷಣ ದೇಶದ ಎಲ್ಲ ಮಾಧ್ಯಮಗಳಲ್ಲಿ ಮತ್ತೆ ಶರ್ಮಿಳ ಚಾನು ಬಗ್ಗೆ ಚರ್ಚೆ ನಡೀತು. ಒಂದೆರಡು ದಿನದ ನಂತರ ಮತ್ತೆ ಎಲ್ಲಾ ಮಾಮೂಲಿ. ಈ ವೇಳೆಗಾಗಲೆ ಅಣ್ಣಾರವರನ್ನು ಸಹ ಮರೆತಿದ್ದರು. ನಂತರ ಶರ್ಮಿಳಾ ಚಾನು ಬಗ್ಗೆ ಮತ್ತೆ ಯಥಾ ಪ್ರಕಾರ ನಿರ್ಲಕ್ಷ್ಯ. ದೆಹಲಿ ಹೈಕೋರ್ಟ್ ನಲ್ಲಿ ಬಾಂಬ್ ಸ್ಪೋಟ, ಅಮರ್ ಸಿಂಗ್ ಬಂಧನ, ಜನಾರ್ಧನ ರೆಡ್ಡಿ ಬಂಧನ, ಹೀಗೆ ಬೇರೆ ವಿಷಯಗಳಲ್ಲಿ ಎಲ್ಲರೂ ಮಗ್ನರಾದರು.
ಅಣ್ಣಾ ಹೋರಾಟವನ್ನು ಪ್ರಶ್ನಿಸಿದವರು ಮತ್ತು ಟೀಕಿಸಿದ ಜನ ಶರ್ಮಿಳಾ ಚಾನು ಬಗ್ಗೆ ವರದಿ ಯಾದ ತಕ್ಷಣ, ಅಣ್ಣಾ ಗೆ ಬೆಂಬಲ ಕೊಟ್ಟ ಕಾರ್ಪೊರೇಟ್ ಜನ, ಬಿಜೆಪಿ, ಆರ್ ಎಸ್ ಎಸ್ ಮತ್ತು ಐಟಿ ಬಿಟಿ ಮಂದಿ ಇತ್ತ ಕಣ್ಣು ಹಾಯಿಸುವರೆ? ಎಂದು ಪ್ರಶ್ನೆ ಕೇಳಿದರು. ಮೊದಲನೆಯದಾಗಿ ಈ ಎರಡು ಹೋರಾಟಗಳನ್ನು ಒಂದೇ ತಕ್ಕಡಿಯಲ್ಲಿ ತೂಗಿ ಹಾಕಿ ನೋಡುವುದು ತಪ್ಪು. ಭ್ರಷ್ಟಾಚಾರ ವಿರುದ್ದ ದ ಹೋರಾಟ ಬೇರೆ ಮತ್ತು ಶರ್ಮಿಳಾ ಚಾನು ನಡೆಸುತ್ತಿರುವ ಹೋರಾಟ ಬೇರೆ.
ಮಣಿಪುರದಲ್ಲಿ ಹೇರಲಾಗಿರುವ ಸಶಸ್ತ್ರ ಪಡೆ (ವಿಶೇಷ ಅಧಿಕಾರ) ಕಾಯ್ದೆ (ಎಎಫ್‌ಎಸ್‌ಪಿಎ) ಕಂಡಲ್ಲಿ ಗುಂಡಿಕ್ಕುವ ಮತ್ತು ವಾರಂಟ್ ಅಥವಾ ಪೂರ್ವಸೂಚನೆ ಇಲ್ಲದೆ ಯಾರನ್ನು ಬೇಕಾದರೂ ಬಂಧಿಸುವ ಅಧಿಕಾರ ಹೊಂದಿದೆ. ಅಲ್ಲಿನ ಜನರ ನಿದ್ದೆಗೆಡಿಸಿರುವುದೂ ಈ ವಿಶೇಷ ಅಧಿಕಾರವೇ. ಸೇನಾ ಪಡೆಯಂತೂ ಅಲ್ಲಿನ ಜನರನ್ನು ಶತ್ರುಗಳಂತೆ ಕಾಣುತ್ತಿದೆ. ಆರ್ಮಿ ಇಲ್ಲಿ ಅಸಂಖ್ಯಾತ ಜನರ ನೋವಿಗೆ, ನೇರ ಸಾವಿಗೆ, ಅತ್ಯಾಚಾರಕ್ಕೆ ಕಾರಣವಾಗಿದೆ. ಇಲ್ಲಿ ಜನರಿಗೆ ತಮ್ಮ ಮೇಲಿನ ಅನ್ಯಾಯದ ವಿರುದ್ಧ ದೂರು ಹೊತ್ತು ಕೋರ್ಟಿಗೆ ಹೋಗುವ ಹಕ್ಕೇ ಇಲ್ಲ. ಎಎಫ್‌ಎಸ್‌ಪಿಎ ಕಾಯ್ದೆಯನ್ನು ೧೯೫೮ ರಲ್ಲಿ ಸಂಸತ್‌ನಲ್ಲಿ ಮಂಡಿಸಿದಾಗ,ಈ ಕಾಯ್ದೆಯು ಗರಿಷ್ಠವೆಂದರೆ ೬ ತಿಂಗಳವರೆಗೆ ಮಾತ್ರ ಜಾರಿಯಲ್ಲಿರುತ್ತದೆ ಎಂದು ಹೇಳಿಕೊಳ್ಳಲಾಗಿತ್ತು. ಆದರೆ ಈ ಮಸೂದೆ ಮಂಡನೆ ಯಾಗಿ ೫೨ ವರ್ಷಗಳಾದ ಬಳಿಕವೂ ಮಣಿಪುರದಲ್ಲಿ ಅದು ಈಗಲೂ ಜಾರಿಯಲ್ಲಿದೆ. ಜನರಿಗೆ ಮಾರಕವಾದ ಕಾಯ್ದೆಯನ್ನು ಪುನರ್ ಪರಿಶೀಲಿಸಲು ಎಷ್ಟು ದಿನ ಬೇಕಾಗುತ್ತೆ.
ಜನಸಾಮಾನ್ಯರನ್ನು ರಕ್ಷಿಸಲು ಇರುವ ನಮ್ಮ ಪೋಲೀಸ್ ವ್ಯವಸ್ಥೆ ಒಮ್ಮೊಮ್ಮೆ ಪರಿಸ್ಥಿತಿಯನ್ನು ನಿಭಾಯಿಸಲು ಗೋಲಿಬಾರ್ ಮಾಡಿದ್ದನ್ನು ನಾವು ಈ ಕೆಳಗಿನ ಘಟನೆಗಳಲ್ಲಿ ಕಾಣಬಹುದು
ಆಗಸ್ಟ್ ೧೧ ೨೦೧೧: ಪುಣೆಯ ಮಾವಲ್ ಎಂಬಲ್ಲಿ ಅಣೆಕಟ್ಟಿನಿಂದ ನೀರು ಸರಬರಾಜು ಸ್ಥಗಿತಗೊಂಡಿದ್ದನ್ನು ವಿರೋಧಿಸಿ ರೈತರು ನಡೆಸುತ್ತಿದ್ದ ಪ್ರತಿಭಟನೆ ಹಿಂಸೆಗೆ ತಿರುಗಿದ್ದರಿಂದ ಗೋಲಿಬಾರ್ ನಡೆಸಲಾಯಿತು. ಈ ಸಂದರ್ಭದಲ್ಲಿ ನಾಲ್ವರು ರೈತರು ಬಲಿಯಾದರು
ಜುಲೈ೧: ೨೦೧೧: ಬಿಹಾರದ ಫೋರಬ್ಸ್ ಗಂಜ್ ವ್ಯಾಪ್ತಿಯ ಭಾಜನಪುರದಲ್ಲಿ ರಸ್ತೆ ಅತಿಕ್ರಮಣದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಗ್ರಾಮಸ್ಥರ ಮೇಲೆ ಗೋಲಿಬಾರ್ ನಡೆಸಿ ಗರ್ಭಿಣಿ ಹೆಂಗಸು , ಆರು ತಿಂಗಳ ಮುಗ್ಧ ಮಗುವಿನ ಸಹಿತ ಒಟ್ಟು ನಾಲ್ಕು ಜನ ಸಾವಿಗೀಡಾದರು
ಮಾರ್ಚ್ ೧ ೨೦೧೦: ಹೋಳಿ ಹಬ್ಬದಂದು ಶಿವಮೊಗ್ಗದಲ್ಲಿ ಕೋಮುಗಲಭೆ ಪರಿಸ್ಥಿತಿ ಕೈಮೀರಿದ್ದರಿಂದ ಪೊಲೀಸರು ನಡೆಸಿದ ಗೋಲಿಬಾರಿನಲ್ಲಿ ಇಬ್ಬರು ಬಲಿ
ಆಗಸ್ಟ್ ೬ ೨೦೦೮: ಅಮರನಾಥ್ ಭೂವಿವಾದ ಹಿನ್ನಲೆಯಲ್ಲಿ ಜಮ್ಮು ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿ ನಡೆದ ಪೊಲೀಸ್ ಗೋಲಿಬಾರ್ ನಲ್ಲಿ ಇಬ್ಬರು ಮೃತಪಟ್ಟು 18 ಮಂದಿ ಗಾಯಗೊಂಡಿದ್ದರು
ಜೂನ್ ೧೦ ೨೦೦೮: ಬಿತ್ತನೆ ಬೀಜ ಮತ್ತು ರಸಗೊಬ್ಬರ ಕೊರತೆಗಾಗಿ ಕುಪಿತಗೊಂಡ ರೈತರು ಹಾವೇರಿ ಜಿಲ್ಲೆಯಾದ್ಯಂತ ತೀವ್ರವಾದ ಪ್ರತಿಭಟನೆಗೆ ನಡೆಸಿದ್ದರು, ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿ ಪ್ರತಿಭಟನೆ ನಡೆಸಿದ ರೈತರ ಮೇಲೆ ಪೋಲಿಸರು ಗೋಲಿಬಾರ್ ನಡೆಸಿದ್ದರು.
ಪ್ರತಿಭಟನೆಯನ್ನು ಹತ್ತಿಕ್ಕಲು ಭ್ರಷ್ಟಾಚಾರದ ವಿರುದ್ದ ದೆಹಲಿಯಲ್ಲಿ ಶಾಂತಿಯುತ ಸತ್ಯಾಗ್ರಹ ಹೂಡಿದ್ದ ಬಾಬಾರಾಮ್‌ದೇವ್ ಹಾಗೂ ಸಾವಿರಾರು ಬೆಂಬಲಿಗರ ಮೇಲೆ ರಾತ್ರೋರಾತ್ರಿ ಅಧಿಕಾರದ ದರ್ಪವನ್ನು ತೋರಿದ್ದರು.ಬಾಬಾರಾಮ್‌ದೇವ್‌ರನ್ನು ಬಂಧಿಸಿ, ಶಾಂತಿಯುತ ಪ್ರತಿಭಟನೆಯನ್ನು ಪಾಲ್ಗೊಂಡು ರಾತ್ರಿಯ ನಿದ್ರೆಗೆ ಜಾರಿದ್ದ ಸಾವಿರಾರು ಅಮಾಯಕ ನಾಗರಿಕರ ಮೇಲೆ ಅಧಿಕಾರದ ಲಾಠಿಯೇಟು ನೀಡಿ ಮಹಿಳೆಯರು, ವೃದ್ಧರು ಸೇರಿದಂತೆ ಸತ್ಯಾಗ್ರಹಿಗಳ ಮೇಲೆ ದೌರ್ಜನ್ಯ ನಡೆಸಿದ್ದರು ದೆಹಲಿ ಪೋಲೀಸರು.
ಪರಿಸ್ಥಿತಿಯನ್ನು ನಿಭಾಯಿಸಲು ಇರುವ ಕಾನೂನು ಗಳ ಚೌಕಟ್ಟಿನಲ್ಲೇ ಮೇಲಿನ ಘಟನೆಗಳು ನಡೆದಿರಬೇಕಾದರೆ, ಸಶಸ್ತ್ರ ಪಡೆ (ವಿಶೇಷ ಅಧಿಕಾರ) ಕಾಯ್ದೆ (ಎಎಫ್‌ಎಸ್‌ಪಿಎ) ಇನ್ನೇಷ್ಟು ಬಲವಾಗಿರಬೇಕು ಅಂತ ನಾವು ಊಹಿಸಬಹುದು. ಅನ್ಯಾಯದ ವಿರುದ್ಧ ದೂರು ಹೊತ್ತು ಕೋರ್ಟಿಗೆ ಹೋಗುವ ಹಕ್ಕೇ ಇಲ್ಲ ಎಂದಾದರೆ ಮಾನವ ಹಕ್ಕುಗಳಿಗೆ ಬೆಲೆ ಎಲ್ಲಿದೆ?
ಕೆಲ ಕಾಯಿದೆಗಳಲ್ಲಿ ಇಂತಹ ವಿಶೇಷ ಅಧಿಕಾರ ಗಳಿರುವುದರಿಂದಲೇ, ಹಾವೇರಿಯಲ್ಲಿ ರೈತರ ಮೇಲೆ ಗೋಲೀಬಾರ್, ಪೂನಾ ಮತ್ತು ಮುಂಬಯಿ ಹೈವೆ ನಲ್ಲಿ ಪ್ರತಿಭಟನೆ ನಡೆಸುತಿದ್ದ ರೈತರ ಮೇಲೆ ಫೈರಿಂಗ್ ಹೀಗೆ ಎಲ್ಲಿ ಬೇಕಾದರಲ್ಲಿ ಸಾಮನ್ಯ ಜನರ ಮೇಲೆ ದಬ್ಬಾಳಿಕೆ ನಡೆಸುವ ಅಧಿಕಾರಗಳಿರುವ ಕಾಯ್ದೆಗಳು ಇದ್ದರೆಷ್ಟು? ಸಮಸ್ಯೆಯ ತೀವ್ರತೆ ಯನ್ನು ಪರಿಗಣನೆಗೆ ತೆಗೆದುಕೊಳ್ಳದೆ ಪರಿಸ್ಥಿತಿ ನಿಯಂತ್ರಣಗೊಳಿಸುವುದಕ್ಕೋಸ್ಕರ ಶಸ್ತ್ರಾಸ್ತ್ರ ರಹಿತ ಅಮಾಯಕ ಜನ ಸಾಮಾನ್ಯರ ಮೇಲೆ ಫೈರಿಂಗ್ ನಡೆಸುವ ಪ್ರವೃತ್ತಿ ಸಹ ಕೊನೆಗೊಳ್ಳಬೇಕು. ಸಮಾಜಕ್ಕೆ ಕಂಟಕ ವಾಗಿರುವ ಉಗ್ರ ಶಕ್ತಿ ಗಳ ದಮನಕ್ಕೆ ವರ್ಷಗಳ ಗಟ್ಟಲೆ ಯಾವುದೇ ನಿರ್ಧಾರ ತೆಗೆದುಕೊಳ್ಳದೆ ಸುಮ್ಮನೆ ಕುಳಿತು ಪ್ರತಿಭಟನೆ ನಡೆಸುವ ಜನರ ಮೇಲೆ ಪರಿಸ್ಥಿತಿ ನಿಯಂತ್ರಣ ದ ಹೆಸರಿನಲ್ಲಿ ದೌರ್ಜನ್ಯ ನಡೆಸುವ ಸರ್ಕಾರದ ರೀತಿ ನೀತಿಗಳ ಬಗ್ಗೆ ಏನೆನ್ನಬೇಕು.
ನಕಲಿ ಎನ್ ಕೌಂಟರ್ ನಡೆಸುವವರಿಗೆ ಗಲ್ಲು ಶಿಕ್ಷೆ ಯನ್ನು ಯಾಕೆ ನೀಡಬಾರದು ಎಂದು ಇತ್ತೀಚಿಗೆ ಸುಪ್ರಿಂ ಕೋರ್ಟ್ ಪ್ರಶ್ನಿಸಿದೆ, ಇದು ಒಂದು ಎಚ್ಚರಿಕೆ. ಸುಪ್ರಿಂ ಇಂತಹ ಚಾಟಿಯೇಟನ್ನು ಆಗಾಗ್ಗೆ ಬೀಸುತ್ತಿರುತ್ತದೆ. ಆಳುವ ಸರ್ಕಾರಗಳು ಎಚ್ಚೆತ್ತುಕೊಂಡು ಪರಿಸ್ಥಿತಿಯನ್ನು ಸೂಕ್ತರೀತಿಯಲ್ಲಿ ನಿಭಾಯಿಸಬೇಕು
ಈಶಾನ್ಯ ರಾಜ್ಯಗಳ ಪರಿಸ್ಥಿತಿ ಪ್ರತಿಯೊಬ್ಬರಿಗೂ ಗೊತ್ತಿದೆ, ಕೆಲ ಉಗ್ರ ಸಂಘಟನೆ ಗಳು ದೇಶದ ಏಕತೆ ಯನ್ನು ಭಂಗಪಡಿಸಲು ಸುಮಾರು ವರ್ಷಗಳಿಂದ ಪ್ರಯತ್ನ ನಡೆಸುತ್ತಿವೆ. ಜತೆಗೆ ಅಕ್ಕ ಪಕ್ಕದಲ್ಲಿರುವ ರಾಷ್ಟ್ರಗಳು ಸಹ ಅಂತಹ ಸಂಘಟನೆಗಳಿಗೆ ಸಹಾಯ ನೀಡುತ್ತಿರುವುದು ಜಗಜ್ಜಾಹೀರಾಗಿದೆ. ರಾಷ್ಟ್ರದ ಒಳಗಿದ್ದು ಇಂತಹ ಮಸಲತ್ತು ಮಾಡುವವರನ್ನು ಬಂಧಿಸಿ ವಿಚಾರಣೆ ನಡೆಸಿ ಕಾನೂನಿನ ಚೌಕಟ್ಟಿನಲ್ಲಿ ಶಿಕ್ಷೆ ಕೊಡಬೇಕು ಇದಕ್ಕೆ ಮೊದಲು ಅಲ್ಲಿ ಆಗ ಬೇಕಾಗಿರುವ ಅಭಿವೃದ್ದಿ ಕಾರ್ಯಗಳು ಮತ್ತು ಸಾಮಜಿಕ ಸುಧಾರಣೆ ಬಗ್ಗೆ ಗಮನ ವಹಿಸಿ ಜನಸಾಮನ್ಯರನ್ನು ಮೆಚ್ಚಿಸುವ ಕೆಲಸ ಮೊದಲು ಮಾಡಬೇಕಾಗಿದೆ. ಅತ್ಯಂತ ಚಿಕ್ಕ ಚೊಕ್ಕ ರಾಜ್ಯ ವಾದ ಮಣಿಪುರದಲ್ಲಿ ಇದು ಅಸಾಧ್ಯವಾದ ಮಾತೇನಲ್ಲ. ಅಪಾರ ನೈಸರ್ಗಿಕ ಸಂಪತ್ತು ಇರುವ ಹಾಗು ಪ್ರಾಕೃತಿಕ ಸೌಂದರ್ಯವಿರುವ ಈ ಪುರಾತನ ನಾಡಿನಲ್ಲಿ ಪ್ರಗತಿ ಸಾಧಿಸುವುದಕ್ಕೆ ಅಲ್ಲಿನ ರಾಜಕಾರಣಿಗಳಿ ಇಚ್ಚಾಶಕ್ತಿ ಬಹುಮುಖ್ಯ ಮತ್ತು ಕೇಂದ್ರದ ಸಹಕಾರ ಸಹ ಅಗತ್ಯ.
ಕಾನೂನಿನ ಸಾಧಕ ಭಾದಕಗಳನ್ನು ಚರ್ಚಿಸಿ ಆದಷ್ಟು ಬೇಗ ಕೆಲವು ನಿಲುವುಗಳನ್ನು ಸಡಿಲಿಸಿ ಇರೋಂ ಶರ್ಮಿಳಾ ಚಾನು ರವರ ಮನಒಲಿಸಿ ಅವರ ಉಪವಾಸ ಸತ್ಯಾಗ್ರಹವನ್ನು ಕೈಬಿಡುವಂತೆ ಮಾಡಬೇಕು. ದೌರ್ಜನ್ಯ ಎಸಗಿದ ಸೈನ್ಯಾಧಿಕಾರಿಗಳನ್ನು ವಿಚಾರಣೆಗೊಳಪಡಿಸಿ ಶಿಕ್ಷೆ ಆಗುವಂತೆ ಮಾಡುವ ಕೆಲಸ ಮೊದಲು ಆಗಬೇಕು.