ಶುಕ್ರವಾರ, ಸೆಪ್ಟೆಂಬರ್ 2, 2011

ಮರೆತುಹೋದ ಶಾಸ್ತ್ರೀಯನ್ನು ನೆನಪಿಸಿದ ಅಣ್ಣಾ ಹಜಾರೆ

ಅಣ್ಣಾ ಹಜಾರೆ ಹೆಸರು ಕೇಳದ ಭಾರತೀಯ ಇಲ್ಲ ಹಾಗೂ ಇನ್ನು ಮುಂದೆ ಭಾರತೀಯರಿಗೆ ಆ ಹೆಸರು ಹೊಸದು ಅಲ್ಲ ಮತ್ತು ಹೊಸ ಮುಖವೂ ಅಲ್ಲ. 74ರ ಹರೆಯದ ಗಾಂಧೀವಾದಿ ಇಡೀ ದೇಶದ ಜನರನ್ನು ಒಗ್ಗೂಡಿಸಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ ಖ್ಯಾತಿ ಅವರದು. ಭ್ರಷ್ಟಾಚಾರ ವಿರೋಧಿ ಕಾಯ್ದೆಯಾದ ಜನ ಲೋಕಪಾಲ ಮಸೂದೆ ಜಾರಿಗೆ ಒತ್ತಾಯಿಸಿ ಹೋರಾಟ ನಡೆಸಿದ ಅಣ್ಣಾರಲ್ಲಿ ಹಲವರು ಒಬ್ಬ ನಿಷ್ಕಳಂಕ ಸಮಾಜ ಸುಧಾರಕನನ್ನು ಕಂಡಿದ್ದಾರೆ ಮತ್ತು ಅವರು ಮಾಡಿದ ಹೋರಾಟ ಎರಡನೇ ಸ್ವಾತಂತ್ರ್ಯ ಹೋರಾಟವೆಂದೇ ಎಂದು ಪರಿಗಣಿಸಿದ್ದಾರೆ.

ಅಣ್ಣಾ ಅವರ ಸರಳಾತಿ ಸರಳ ಜೀವನ, ನಿಷ್ಕಳಂಕ ವ್ಯಕ್ತಿತ್ವ, ಪ್ರಾಮಾಣಿಕತೆ, ನೇರವಂತಿಕೆ, ತ್ಯಾಗ ಅಹಿಂಸಾ ಮನೋಭಾವ, ಅವರ ದಿರಿಸು, ಅವರ ನೋಟ, ಅವರ ದೇಶಪ್ರೇಮ, ಇಂದಿನ ದಿನ ಮರೆತೇಹೋಗಿರುವ ಭಾರತದ ಮಾಜಿ ಪ್ರಧಾನಿ ದಿವಂಗತ ಲಾಲ್ ಬಹಾದೂರ್ ಶಾಸ್ತ್ರಿಯ(1904-1966)ವರನ್ನು ಕಣ್ಣಮುಂದೆ ತಂದು ನಿಲ್ಲಿಸುತ್ತದೆ. ಶಾಸ್ತ್ರೀಯವರು 'ಜೈ ಜವಾನ್ ಜೈ ಕಿಸಾನ್' ಅಂದಿದ್ದರೆ, ಅಣ್ಣಾ ಕೂಡ 'ರೈತರಿಲ್ಲದಿದ್ದರೆ ಈ ದೇಶವೇ ಇಲ್ಲ' ಎಂಬ ಸಂದೇಶ ಇಡೀ ದೇಶಕ್ಕೆ ರವಾನಿಸಿದ್ದಾರೆ.. ಶಾಸ್ತ್ರೀಜಿಯಂಥ ವ್ಯಕ್ತಿಯೊಬ್ಬರು ನಮ್ಮ ಕಣ್ಣಮುಂದಿರುವುದು ನಿಜಕ್ಕೂ ನಮ್ಮ ಸೌಭಾಗ್ಯವೇ ಸರಿ.

ಕೆಲ ದಿನಗಳ ನಂತರ ಅಥವಾ ಕೆಲ ವರ್ಷಗಳ ನಂತರ ಲಾಲ್ ಬಹಾದೂರ್ ಶಾಸ್ತ್ರಿಯವರು ಜನಮಾನಸದಿಂದ ಮರೆತುಹೋದಂತೆ ಅಣ್ಣಾ ಹಜಾರೆಯವರು ಕೂಡ ಮರೆತುಹೋದರೆ ಆಶ್ಚರ್ಯವಿಲ್ಲ. ಶಾಸ್ತ್ರೀಜಿಯವರ ಜನುಮದಿನ ಮಹಾತ್ಮಾ ಗಾಂಧೀಜಿಯವರ ಜನುಮದಿನದಂದೇ ಇದೆ ಎಂದು ಎಷ್ಟು ಜನರಿಗೆ ಗೊತ್ತಿದೆ? ಗೊತ್ತಿದ್ದರೂ ಎಷ್ಟು ಜನ ಅಷ್ಟೇ ಶ್ರದ್ಧೆಯಿಂದ ಆಚರಿಸುತ್ತಾರೆ? ಭ್ರಷ್ಟಾಚಾರದ ವಿರುದ್ಧ ಇಡೀ ದೇಶವನ್ನು ಬಡಿದೆಬ್ಬಿಸಿರುವ ಅಣ್ಣಾ ಹಜಾರೆ ವಿಷಯದಲ್ಲಿ ಹಾಗಾಗದಿರಲಿ ಎಂಬುದಷ್ಟೇ ನಮ್ಮ ಆಶಯ

ಶಾಸ್ತ್ರೀಜಿಯವರು ಒಬ್ಬ ಬಡ ಶಾಲಾ ಶಿಕ್ಷಕನ ಮಗನಾಗಿ ಜನಿಸಿ, ಚಿಕ್ಕವಯಸ್ಸಿನಲ್ಲಿ ತನ್ನ ತಂದೆಯವರನ್ನು ಕಳೆದುಕೊಂಡು, ಭ್ರಷ್ಟಾಚಾರ ರಹಿತ ಹಾಗೂ ವಿಶ್ವಾಸ ದ್ರೋಹ ಮಾಡದೆ ಸಂಪೂರ್ಣ ಜೀವನವನ್ನು ಕಳೆದರು. ಒಂದು ಸಾರಿ ವಾರಣಾಸಿಯಲ್ಲಿನ ಗಂಗಾನದಿಯ ದಡದಲ್ಲಿನ ಜಾತ್ರೆಯನ್ನು ನೋಡಲು ಸ್ನೇಹಿತರ ಜತೆ ಹೋಗಿದ್ದರು. ವಾಪಸ್ಸು ಬರುವಾಗ ದೋಣಿಯವನಿಗೆ ಹಣ ಕೊಡಲು ಕೈಯಲ್ಲಿ ಕಾಸಿರಲಿಲ್ಲ. ಸ್ನೇಹಿತರಿಂದ ಕಾಸು ಪಡೆದು ಪ್ರಯಾಣಿಸುವ ಬದಲು ನದಿಯೊಳಗೆ ಧುಮುಕಿ ಈಜಿ ಆಚೆ ದಡವನ್ನು ಸೇರಿದರು. ಶಾಸ್ತ್ರೀಜಿಯವರು ಜೀವನದುದ್ದಕ್ಕೂ ಇಂತಹ ಸರಳತೆಯನ್ನು ನಿರ್ವಹಿಸುತಿದ್ದುದನ್ನು ನಾವು ಕಾಣಬಹುದು.

ಅಣ್ಣಾ ಹಜಾರೆಯವರು ಒಂದು ಸಾರಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದರು. ಆದರೆ ನಂತರ ಮನಸು ಬದಲಾಯಿಸಿ, 15 ವರ್ಷ ಭಾರತೀಯ ಸೈನ್ಯದಲ್ಲಿ ಲಾರಿ ಚಾಲಕನಾಗಿ ಕಾರ್ಯನಿರ್ವಹಿಸಿ ತಮ್ಮ ಜೀವನವನ್ನು ದೇಶ ಸೇವೆಗೆ ಮುಡುಪಾಗಿಟ್ಟಿದ್ದರು. ತಮ್ಮ ನಿವೃತ್ತಿ ಜೀವನದ ನಂತರ ತಮ್ಮ ಸ್ವಂತ ಊರಾದ ಮಹರಾಷ್ಟ್ರದ ಬರ ಪೀಡಿತ ಗ್ರಾಮವಾದ ರಾಲೆಗಾಂವ್ ಸಿದ್ದಿಗೆ ಹೋಗಲು ನಿರ್ಧರಿಸಿದ್ದರು. ತದನಂತರ ರಾಲೆಗಾಂವ್ ಸಿದ್ದಿ ಗ್ರಾಮವನ್ನು ಅಹಮದ್ ನಗರ ಜಿಲ್ಲೆಯಲ್ಲಿ ಮಾದರಿ ಗ್ರಾಮವನ್ನಾಗಿ ಮಾಡಿದರು.

ಕುಡಿತ, ಬಡತನ, ಅನಕ್ಷರತೆಯ ದಾಸ್ಯಕ್ಕೆ ಸಿಲುಕಿ ನರುಳುತ್ತಿದ್ದ ಅಲ್ಲಿಯ ಜನರೊಳಗೆ, ಸಾಕ್ಷರತೆ, ನೈರ್ಮಲ್ಯ, ಮೌಲ್ಯಗಳನ್ನು ತುಂಬಿದ್ದಲ್ಲದೇ ಕುಡಿತದ ಚಟ ಇರುವವರನ್ನು ನಯದಿಂದ ತಿದ್ದಿ, ಬಗ್ಗದವರನ್ನು ಶಿಕ್ಷೆಯಿಂದ ದಾರಿಗೆ ತಂದು ಆದರ್ಶ ಗ್ರಾಮವನ್ನಾಗಿಸಲು ದುಡಿದವರು. ಈಗ ಈ ಪುಟ್ಟ ಗ್ರಾಮ ದೇಶದಲ್ಲೇ ಶ್ರೀಮಂತ ಹಾಗೂ ಮಾದರಿ ಗ್ರಾಮವಾಗಿ ಪ್ರಚಲಿತಗೊಂಡಿದೆ. ಸೌರಶಕ್ತಿಯ ಬಳಕೆಯ ಮೂಲಕ ಇಂಧನ ಉಳಿತಾಯದಂತಹ ಸದುದ್ದೇಶಗಳನ್ನು ಪ್ರೇರೇಪಿಸಿದ ಈ ಸಮಾಜ ಸೇವಕ ಸದಾ ದೇಶದ ಸರ್ವತೋಮುಖ ಏಳಿಗೆಯನ್ನು ಬಯಸಿದವರು

ಶಾಸ್ತ್ರೀಜಿಯವರು ಗಾಂಧಿ ಟೋಪಿ, ಜುಬ್ಬಾ ಮತ್ತು ಧೋತಿ ಧರಿಸಿದರೆ ಅಣ್ಣಾರವರು ಸಹ ಇದೇ ಮಾದರಿಯ ಉಡುಗೆಯನ್ನು ಧರಿಸುತ್ತಾರೆ. ಇತ್ತೀಚೆಗಿನ ಅವರ ಎರಡನೇ ಉಪವಾಸ ಸತ್ಯಾಗ್ರಹದಲ್ಲಿ ಅದೂ ಇಂದಿನ ಐಪಾಡ್, ಲ್ಯಾಪ್ಟಾಪ್ ಮತ್ತು ಲಕ್ಶುರಿ ಸಾಧನಗಳ ನವಯುಗದಲ್ಲಿ ಗಾಂಧಿ ಟೋಪಿ ಒಂದು ಹೊಸ ಫ್ಯಾಶನ್ ಆಗಿ ಯುವ ಜನತೆ ಮತ್ತು ಮಕ್ಕಳಲ್ಲಿ ಕಾಣಿಸಿದೆ. ಎರಡು ವಿಶಿಷ್ಟ ರೀತಿಯ ಪ್ರತಿಭಟನೆಗಳು ಈ ದೇಶದ ಜನತೆಯನ್ನು ಒಗ್ಗೂಡಿಸಿದೆ

"ಜೈ ಜವಾನ್ ಜೈ ಕಿಸಾನ್" ಘೋಷಣೆಯ ಸೃಷ್ಟಿಕರ್ತ ಶಾಸ್ತ್ರೀಜಿ 1965ರಲ್ಲಿ ಪಾಕಿಸ್ತಾನದೊಂದಿಗೆ ಯುದ್ಧ ಸಮಯದಲ್ಲಿ ಭಾರತದ ಆಹಾರ ಉತ್ಪಾದನೆ ಹೆಚ್ಚಿಸುವ ಅಗತ್ಯವಿದೆ ಎಂದು ಒತ್ತು ನೀಡಿದ್ದರು. ಸೆಪ್ಟೆಂಬರ್ 23, 1965ರಲ್ಲಿ ಕದನ ವಿರಾಮ ಘೊಷಣೆ ನಂತರ, ಶಾಸ್ತ್ರೀಜಿ ಮತ್ತು ಪಾಕಿಸ್ತಾನದ ಅಧ್ಯಕ್ಷ ಮಹಮ್ಮದ್ ಅಯೂಬ್ ಖಾನ್ ಜನವರಿ 10, 1966ರಂದು ಶಾಂತಿ ಒಪ್ಪಂದ ಘೋಷಣೆ ಮಾಡಿ ತಾಷ್ಕೆಂಟ್ ನಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ್ದರು.

ಅದೇ ರೀತಿ, ಅಣ್ಣಾ ನಾಲ್ಕು ದಶಕಗಳಿಂದ ಹೆಚ್ಚು ಬೆಳಕಿಗೆ ಬಾರದೆ ಭ್ರಷ್ಟಾಚಾರ ವಿರೋಧಿ ಜನ ಲೋಕಪಾಲ ಮಸೂದೆಯ ಬಗ್ಗೆ ಭಾರತೀಯರಲ್ಲಿ ಅರಿವು ಮೂಡಿಸಿದರು. ಆದರೆ ಸತತ 8 ವ್ಯರ್ಥ ಪ್ರಯತ್ನಗಳ ಹೊರತಾಗಿಯೂ ಮತ್ತು ಪ್ರತಿಬಾರಿ ಮಂಡನೆಗೆ ಒಂದೊಂದು ಹೊಸ ರೀತಿಯ ಆವೃತ್ತಿ ಸಿದ್ದವಾದರೂ ಸಂಸತ್ತಿನಲ್ಲಿ ಮನ್ನಣೆ ಸಿಗಲಿಲ್ಲ. ಜೂನ್ 2011ರಲ್ಲಿ ಅಣ್ಣಾ ತಮ್ಮ ಮೊದಲ ಉಪವಾಸ ಸತ್ಯಾಗ್ರಹದಲ್ಲಿ ಮಸೂದೆಗೆ ಅಂತಿಮ ಕರಡು ರೂಪಿಸುವ ಕೆಲಸ ಮಾಡಲು ಜಂಟಿ ಸಮಿತಿಯನ್ನು ರಚಿಸಲು ಸರ್ಕಾರವನ್ನು ಒತ್ತಾಯಿಸಿದರು.

ಸಿವಿಲ್ ಸೊಸೈಟಿಯ ಬೇಡಿಕೆಗಳಿಗೆ ಕೇಂದ್ರ ಬಗ್ಗದಿದ್ದರಿಂದ ಅಣ್ಣಾ ಮತ್ತೆ ಉಪವಾಸ ಸತ್ಯಾಗ್ರಹ ಕುಳಿತರು. ಕೊನೆಗೆ ತಮ್ಮ ಹೋರಾಟದಲ್ಲಿ ಬಾಗಶಃ ಜಯಗಳಿಸಿದ್ದು ಇರುವ ಅನೇಕ ಇತಿಮಿತಿಗಳ ನಡುವೆಯೂ ಸರಕಾರ, ಅಣ್ಣಾ ಮತ್ತು ಅವರ ತಂಡದ ಬೇಡಿಕೆಗಳನ್ನು ಮಸೂದೆಯಲ್ಲಿ ಜಾರಿಗೊಳಿಸಲು ಒಪ್ಪಿಸುವಂತೆ ಮಾಡಿದ್ದಾರೆ.

ದೇಶದ ಪಿತಾಮಹ ಮಹಾತ್ಮ ಗಾಂಧೀಜಿಯವರು ಆರಂಭಿಸಿದ ಅಹಿಂಸಾ ಮಾರ್ಗದಲ್ಲಿ ಶಾಸ್ತ್ರೀಜಿ ಮತ್ತು ಅಣ್ಣಾರವರು ನಂಬಿಕೆ ಇಟ್ಟಿದ್ದರು, ಎಂದು ಇವರು ನಡೆಸಿದ ಚಳವಳಿ ಮುಖಾಂತರ ನಮಗೆ ಗೊತ್ತಾಗುತ್ತದೆ. ಗಾಂಧಿಯವರ 1921ರ ಅಸಹಕಾರ ಚಳವಳಿಯಲ್ಲಿ ಶಾಸ್ತ್ರೀಜಿಯವರು ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದರು. ನಿಷೇದಾಜ್ಞೆ ಸ್ಥಳದಲ್ಲಿ ಮೆರವಣಿಗೆಯಲ್ಲಿ ಬಾಗವಹಿಸಿದ್ದ ಅವರನ್ನು ಬಂಧಿಸಲಾಗಿತ್ತು. ಬಂಧಿತರಾದ ಅವರನ್ನು ಚಿಕ್ಕ ವಯಸ್ಸಿನ ಬಾಲಕ ಎಂದು ಬಿಡುಗಡೆ ಮಾಡಿದರು. ನಂತರ 1930ರಲ್ಲಿ ಮಹಾತ್ಮ ಗಾಂಧಿಯವರ ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿ ತಮ್ಮ ಜೀವನವನ್ನು ಸ್ವಾತಂತ್ರ್ಯ ಹೋರಾಟಕ್ಕೆ ಮುಡುಪಾಗಿಟ್ಟರು. ಆಗ ಅವರಿಗೆ 2 ವರ್ಷ 6 ತಿಂಗಳು ಜೈಲುವಾಸವಾಗಿತ್ತು.

ಆದರೆ, ಅಣ್ಣಾ ರಾಮಲೀಲಾ ಮೈದಾನದಲ್ಲಿ ತಮ್ಮ 12 ದಿನದ ಉಪವಾಸ ಸತ್ಯಾಗ್ರಹದ ಸರ್ಕಾರದ ವಿರುದ್ಧ ಪ್ರತಿಭಟನೆ ಸಂದರ್ಭದಲ್ಲಿ ರಾಷ್ಟ್ರವ್ಯಾಪಿ ತಮ್ಮ ಅನುಯಾಯಿಗಳನ್ನು ನಿಯಂತ್ರಿಸುವ ಮೂಲಕ ಶಾಂತಿ ಕಾಪಾಡುವಲ್ಲಿ ಯಶಸ್ವಿಯಾದರು. ದೇಶದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿಯ ಜನರೂ ಈ ಗಾಂಧೀವಾದಿ ತೋರಿಸಿಕೊಟ್ಟ ಮಾರ್ಗದಲ್ಲಿ ನಡೆದು ಅವರ ಕಾರ್ಯಕ್ಕೆ ಕೈ ಜೋಡಿಸಿದರು.

ಈ ಮೇಲಿನ ಕೆಲ ಹೋಲಿಕೆಗಳ ನಂತರವೂ ಅಣ್ಣ ಮತ್ತು ಶಾಸ್ತ್ರೀಜಿ ದೇಶದ ಜನರಿಂದ ಎರಡು ವಿಭಿನ್ನ ಪ್ರತಿಕ್ರಿಯೆಗಳು ಎದುರಿಸಿರಬಹುದಾಗಿದೆ ಎಂದು ನಂಬಬಹುದು. ಆಧುನಿಕ ಮಾಧ್ಯಮ ಮತ್ತು ತಂತ್ರಜ್ಞಾನದ ಸಹಾಯದಿಂದ ಅಣ್ಣಾ ಸಾಮೂಹಿಕವಾಗಿ ರಾಷ್ಟ್ರವ್ಯಾಪ್ತಿ ತಲುಪಿದ್ದಾರೆ. ಜನರು ಅಣ್ಣಾ ಹಜಾರೆಯವರನ್ನು ಪೂಜಿಸಲು ಪ್ರಾರಂಭಿಸಿದ್ದು, ಅನೇಕರು ಅಣ್ಣಾ ಹಜಾರೆಗಾಗಿ ಒಂದು ದೇವಾಲಯವನ್ನು ನಿರ್ಮಿಸಲು ಮುಂದಾಗಿದ್ದಾರೆ. ಇದಕ್ಕೆ ಅಣ್ಣಾ ಅವಕಾಶ ನೀಡುವುದಿಲ್ಲ ಅನ್ನುವುದು ಎರಡನೇ ವಿಚಾರ. ಕೆಲ ವರದಿಗಳ ಪ್ರಕಾರ ಅಣ್ಣಾರವರ 12 ದಿನದ ಸುದೀರ್ಘ ಉಪವಾಸದ ಘಟನೆಯನ್ನು ಮುಂಬೈನಲ್ಲಿ ಗಣೇಶ ಪೂಜಾ ಸಮಯದಲ್ಲಿ ನಿರೂಪಣಾ ವಿಷಯವಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ.


ಆದರೆ, ಶಾಸ್ತ್ರೀಜಿಯವರ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ ಹಾಗು ದೇಶದ ಪ್ರಗತಿಗಾಗಿ ಅವರ ಅತ್ಯುನ್ನತ ಕೊಡುಗೆಯ ಹೊರತಾಗಿಯೂ, ಇತರೆ ಸ್ವಾತಂತ್ರ್ಯ ಹೋರಾಟಗಾರರು ಅಥವ ಕೆಲ ರಾಜಕಾರಣಿಗಳು ಪಡೆದ ಮನ್ನಣೆಯನ್ನು ಲಾಲ್ ಬಹಾದುರ್ ಶಾಸ್ತ್ರೀಜಿಯವರೂ ಪಡೆಯಲಿಲ್ಲ ಎನ್ನುವುದು ವಿಷಾದದ ಸಂಗತಿ.


ಅಕ್ಟೋಬರ್ 2ರ ಗಾಂಧಿ ಜಯಂತಿ ಆಚರಿಸುವ ಸಂದರ್ಭದಲ್ಲಿ ಬಹುತೇಕ ಜನರು ಶಾಸ್ತ್ರೀಜಿಯವರನ್ನು ನೆನಪಿಸಿಕೊಳ್ಳುವ ಗೊಡವೆಗೇ ಹೋಗುವುದಿಲ್ಲ. ಗಾಂಧೀಜಿಯವರ ಖ್ಯಾತಿ ಮತ್ತು ಜನಪ್ರಿಯತೆ ಅವರನ್ನು ಮಸುಕಾಗಿಸಿಬಿಟ್ಟಿದೆ. ಒಮ್ಮೆ CNN-IBN ಸಂಪಾದಕ ಹಾಗು ಮುಖ್ಯಸ್ಥ ರಾಜದೀಪ್ ಸರ್ದೇಸಾಯಿ " ಒಂದು ರೀತಿಯಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನವನ್ನು ಗಾಂಧಿಯವರ ಜತೆ ಹಂಚಿಕೊಳ್ಳುತ್ತಿರುವುದು ದುಃಖದ ಸಂಗತಿ. ಮಹಾತ್ಮರವರ ನೆರಳಿನಲ್ಲಿ ಬದುಕುವುದು ಬಹು ಕಷ್ಟ" ಎಂದು ಟ್ವೀಟ್ ಮಾಡಿದ್ದರು.
***********************
೦೨.೦೯.೨೦೧೧ ರಂದು ದಟ್ಸ್ ಕನ್ನಡ ದಲ್ಲಿ ಪ್ರಕಟವಾಗಿದ್ದ ನನ್ನ ಅನುವಾದಿತ ಲೇಖನ
ಮೂಲ ಲೇಖಕರು: ನೈರಿತಾ ದಾಸ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ