ಮತ್ತೊಂದು ನವೆಂಬರ್ ೧ ಬಂದು ಹೋಯಿತು, ಕೆಲ ನವೆಂಬರ್ ಕನ್ನಡ ವೀರರಿಗೆ, ಕನ್ನಡ ಮತ್ತು ಕರ್ನಾಟಕ ದ ಬಗ್ಗೆ ಎಷ್ಟು ಅರಿವಿದೆಯೋ ಗೊತ್ತಿಲ್ಲ, ಆದರೆ ರಾಜ್ಯೋತ್ಸವ ಆಚರಣೆ ಬಗ್ಗೆ ಅವರ ಉತ್ಸಾಹ ಹೇಳತೀರದು. ಆದರೆ ಬರೀ ಕರ್ನಾಟಕ ರಾಜ್ಯೋತ್ಸವ ಆಚರಣೆ ಸಾಲದು, ಕರ್ನಾಟಕ ರಾಜ್ಯದ ಬಗ್ಗೆ, ಕನ್ನಡದ ನುಡಿ, ವಿವಿಧ ಪ್ರಾಂತ್ಯದ ಆಡುನುಡಿ ಗಳ ಬಗ್ಗೆ ಅರಿವುಗಳು ಇರುವುದು ಅಷ್ಟೇ ಮುಖ್ಯ. ನಮ್ಮ ನಡುವೆ ಯಿರುವ ಬೇರೆ ಬೇರೆ ಜಿಲ್ಲೆ ಯವರನ್ನು ನಾವು ಹೇಗೆ ನಡೆಸಿಕೊಂಡಿದ್ದೀವಿ, ನಮ್ಮ ರಾಜ್ಯದಲ್ಲಿ ರುವ ವಿವಿದ ಭಾಗಗಳ ಆಚಾರ ವಿಚಾರ, ಆಹಾರ, ಉಡುಗೆ ತೊಡುಗೆ ಮತ್ತು ಅಲ್ಲಿನ ಭಾಷೆ ಗಳಿಗೆ ನಾವೆಲ್ಲರು ಎಷ್ಟು ಬೆಲೆ ಕೊಟ್ಟಿದ್ದೀವಿ ಎಂದು ಚಿಂತಿಸುವುದು ಮುಖ್ಯ ವಾಗಿದೆ.
ಈ ಮಾತು ಯಾಕೆ ಹೇಳ್ತಾಯಿದೀನಿ ಅಂದ್ರೆ, ಮೂರು ವರ್ಷಗಳ ಹಿಂದೆ ನಾನು ಕುವೈತ್ ನಲ್ಲಿರುವಾಗ ಒಂದು ರಜಾ ದಿನದಂದು ನನ್ನ ಕಂಪನಿಯ ಒಬ್ಬ ತೆಲುಗು ಸ್ನೇಹಿತ ನ ಮನೆಗೆ ಹೋಗಿದ್ದೆ. ಅವರ ಜತೆಯಲ್ಲಿ ಮಂಗಳೂರಿನವರೊಬ್ಬರು ರೂಮ್ ಷೇರ್ ಮಾಡಿಕೊಂಡಿದ್ದರು. ನನಗೆ ನಮ್ಮ ಕರ್ನಾಟಕದ ವರನ್ನು ಕಂಡ ಮೇಲೆ ತುಂಬಾ ಖುಷಿ ಯಾಯಿತು, ಅತಿ ಉತ್ಸಾಹದಿಂದ ಮಾತನಾಡತೊಡಗಿದ್ದೆ. ಆದರೆ ಆ ಮನುಷ್ಯ ನಿಗೆ ನಾನು ಕರ್ನಾಟಕದವ್ರು, ಕನ್ನಡದವರು ಮತ್ತು ಬೆಂಗಳೂರಿನಲ್ಲಿ ವಾಸವಿರುವವರು ಅಂತ ಗೊತ್ತಾದರು ಅಷ್ಟೊಂದು ಮಾತನಾಡಲು ಆಸಕ್ತಿ ತೋರಲಿಲ್ಲ. ನಾನು ಸುಮ್ಮನಾದೆ. ನನ್ನ ತೆಲುಗು ಸ್ನೇಹಿತನ ಜತೆ ಹಾಗೆ ಸುಮ್ಮನೆ ಹರಟುತ್ತ ಇದ್ದೆ. ತದ ನಂತರ ಆ ಮನುಷ್ಯ ನನ್ನ ಸ್ವಂತ ಊರು ಕೇಳಿದ, ನಾನು ನಮ್ಮ ಊರು ಚಿತ್ರದುರ್ಗ ಜಿಲ್ಲೆ ಯಲ್ಲಿ ಅಂತ ಹೇಳಿದೆ. ಆಮೇಲೆ ಅವರು ನನ್ನ ಜತೆ ಮಾತನಾಡಲು ಶುರು ಮಾಡಿದರು.
ಕುವೈತ್ ಗೆ ಬರುವ ಮುಂಚೆ, ಮುಂಬಯಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ರಂತೆ. ಹಾಗೆ ಸುಮ್ಮನೆ ನಾನು ಕೇಳಿದೆ ಬೆಂಗಳೂರಿನಲ್ಲಿ ಮನೆ ಅಥವ ಸೈಟ್ ಏನಾದರು ಮಾಡಿದ್ದೀರ ಎಂದಿದ್ದಕ್ಕೆ. ಅದಕ್ಕೆ ಅವರು ಇಲ್ಲ ಸಾರ್ "ಬೆಂಗಳೂರಿನಲ್ಲಿ ಅಂತ ಯೋಚನೆ ನಾನು ಎಂದಿಗೂ ಮಾಡುವುದಿಲ್ಲ" ಅಂತ ಅಂದರು. ಆಶ್ಚರ್ಯದಿಂದ ನಾನು ಯಾಕೆ ಅಂತ ಕೇಳಿದೆ. ಬೆಂಗಳೂರೂ ಮೈಸೂರಿನಲ್ಲಿ ಜನ ಬೇರೆ ಜಿಲ್ಲೆ ಯವರಿಗೆ ಮರ್ಯಾದೆ ಕೊಡಲ್ಲ, ಹಂಗಿಸೋದು, ಆಡಿಕೊಳ್ಳೋದು ಇಲ್ಲವೆ ಅವಹೇಳನ ಮಾಡೋದು ಜಾಸ್ತಿ ಅಂತ ಅಂದರು. ಅದಕ್ಕೆ ನಾನು ಇಲ್ಲವಲ್ಲ ಹಾಗೇನು ಇಲ್ಲ, ನಾನು ೧೫ ವರ್ಷಗಳಿಂದ ಬೆಂಗಳೂರಿನಲ್ಲಿದ್ದೀನಿ ಅಂತಹದ್ದು ಏನು ನಡೆದಿಲ್ಲ, ಒಂದು ವೇಳೆ ತಮಾಷೆ ಅಂತ ಮಾಡಿದರು ಸಹ ಅದು ಆ ಹೊತ್ತಿಗೆ ತಮಾಷೆಗೆ ಮಾತ್ರ, ಅದನ್ನು ಗಂಭೀರ ವಾಗಿ ಬೆಳೆಸೋದು ಇಲ್ಲ. ಇದೇ ಮೊದಲ ಬಾರಿಗೆ ನಿಮ್ಮ ಬಾಯಿಂದ ಕೇಳಿದ್ದು ಅಂತ ಹೇಳಿದೆ. ಅವರು ಇಲ್ಲ ಸಾರ್ ನಾನು ಮುಂಚೆ ೧೯೯೫ ರಲ್ಲಿ ಪೀಣ್ಯ ದಲ್ಲಿ ಕೆಲಸ ಮಾಡ್ತಾಯಿದ್ದೆ, ಮಹಾಲಕ್ಷ್ಮಿ ಲೈಔಟಿನಲ್ಲಿ ರೂಮ್ ಮಾಡಿಕೊಂಡಿದ್ದೆ. ಅಲ್ಲಿಯೇ ಹತ್ತಿರದಲ್ಲಿ ನಮ್ಮ ಮಂಗಳೂರಿನವರ ಒಂದು ಬೇಕರಿ ಯಿತ್ತು, ರಾತ್ರಿ ಸ್ವಲ್ಪ ಹೊತ್ತು ಅಲ್ಲಿ ಇದ್ದು ಹರಟೆ ಹೊಡೆದು ಮತ್ತೆ ಮನೆಗೆ ಹಿಂತಿರುಗುತಿದ್ದೆ. ಅಲ್ಲಿನ ಒಂದು ಹುಡುಗರ ಗುಂಪಿಗೆ ನಮ್ಮ ಬೇಕರಿ ಒಂದು ಅಡ್ಡೆ ಯಾಗಿತ್ತು, ಹೀಗೆ ಒಂದು ಸಾರಿ ಆ ಗುಂಪಿನ ಜತೆಗೆ ನಮ್ಮ ಭಾಷೆ ಬಗ್ಗೆ ವಾಗ್ವಾದ ನಡೆಯಿತು, ತದ ನಂತರ ನಮ್ಮ ನ್ನು ಆಡಿ ಕೊಳ್ಳೋದಿಕ್ಕೆ ಶುರು ಮಾಡಿದರು. ಬರ್ತಾ ಬರ್ತಾ ಜಗಳ ಜಾಸ್ತಿ ಮಾಡಿ ಕೊನೆಗೆ ನಮ್ಮನ್ನ ಆ ಮನೆಯಿಂದ ಖಾಲಿ ಮಾಡಿಸಿದರು. ಆ ಅವಮಾನಕ್ಕೆ ನಾನು ವಾಪಾಸ್ಸು ಊರಿಗೆ ಹೋಗಿ ನಂತರ ಮುಂಬಯಿಯಲ್ಲಿ ಕೆಲಸಕ್ಕೆ ಸೇರಿಕೊಂಡೆ, ತದನಂತ ಕುವೈತ್ ಗೆ ಬಂದೆ. ಅದಕ್ಕೆ ಈ ಬಗ್ಗೆ ನನಗೆ ಸ್ವಲ್ಪ ಬೇಜಾರು, ಅಷ್ಟೇ.
ಅವರು ಹೇಳಿದ ಈ ಮಾತು ಗಳು, ನಾನು ಕಣ್ಣಾರೆ ಕಂಡ ಕೆಲ ಘಟನೆ ಗಳು ಮತ್ತು ನನ್ನ ಕೆಲ ಸ್ನೇಹಿತರು ಹೇಳಿದ ಕೆಲ ಘಟನೆಗಳು ನನ್ನನ್ನು ಇಂದಿಗೂ ಚಿಂತಿಸುವಂತೆ ಮಾಡಿವೆ. ರಾಜ್ಯದ ಒಂದು ಪ್ರದೇಶಕ್ಕೆ ಸೇರಿದ ನಾವುಗಳು ನಮ್ಮ ರಾಜ್ಯದ ಇನ್ನೊಂದು ಪ್ರದೇಶಕ್ಕೆ ಸೇರಿದವರನ್ನು ಹೇಗೆ ನಡೆಸಿಕೊಂಡಿದ್ದೀವಿ ಅಂತ ಯೋಚಿಸಬೇಕಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಯಾವುದಾದರು ಪ್ರದೇಶಕ್ಕೆ ಪ್ರವಾಸ ಕ್ಕೆ ಹೋದಾಗ, ಕೀಟಲೆಗಂತಲೆ ಕೆಲವರು ಆಟೋ ಗಳು, ಅಂಗಡಿಗಳಲ್ಲಿ ಮತ್ತು ಹೋಟೆಲ್ ಗಳಲ್ಲಿ ತಮಗೆ ಬಂದಂಥ "ಮಂಗಳೂರಿನ ಮಾರಾಯ್ರೆ" ಭಾಷೆ ಯನ್ನು ಉಪಯೋಗಿಸಿ ಅವರಿಂದ ಬೈಸಿಕೊಳ್ಳುವುದನ್ನು ಕಣ್ಣಾರೆ ನಾನು ಕಂಡಿದ್ದೇನೆ. ಇನ್ನು ಉತ್ತರದ ಕಡೆ ಹೊರಟಾಗ ಬೇಕು ಅಂತಲೆ ಆ ಊರಿನ ಭಾಷೆ ಉಪಯೋಗಿಸುವುದಕ್ಕೆ ಪ್ರಯತ್ನಿಸುತ್ತಾರೆ, ಅದನ್ನು ಗುರುತಿಸುವ ಕೆಲವರು ಸ್ವಾಮಿ "ನೀವು ನಿಮ್ಮ "ಅಲ್ವಾ" ಭಾಷೆ ಉಪಯೋಗಿಸ್ರಿ, ನಮಗೆ ಹಲ್ವ ಭಾಷೆ ಅರ್ಥ ಆಗುತ್ತೆ. ಅಂತಾರೆ.
ಬಳ್ಳಾರಿ, ಕೊಪ್ಪಳ, ರಾಯಚೂರು ಕಡೆ "ಸೂ.. ಮಗನೆ" ಸ್ವಲ್ಪ ಜಾಸ್ತಿ ಉಪಯೋಗಿಸುತ್ತಾರೆ, ಆದರೆ ಅಲ್ಲಿನವರ ಪ್ರಕಾರ ಅದು ಒಂದು ಪ್ರೀತಿಯ ಬೈಗುಳ. ಬೆಂಗಳೂರಿನಲ್ಲಿ ಕೆಲ ಶಬ್ದಗಳನ್ನು ಉಪಯೋಗಿಸಿದರೆ ನಗೋದಂತು ಗ್ಯಾರಂಟಿ.
" ಮೈ ತಿಂಡಿ ಆಗ್ತಿದೆ -ಅಂದ್ರೆ, ಮೈಯಲ್ಲಿ ತಿಂಡಿ ಹೆಂಗೋ ಆಗುತ್ತೆ? ಸ್ಟವ್ ಮೇಲೆ ತಾನೆ ಆಗೋದು"
" ಹನ್ನೆರಡುನೂರು ಅಥವ ಹದಿಮೂರುನೂರು ಆಗ್ತದೆರಿ - ಅಂದ್ರೆ ರೀ ಅದನ್ನೆ ಸರಿಯಾಗಿ ಸಾವಿರದ ಇನ್ನೂರು ಅಥವ ಮುನ್ನೂರು ಅನ್ನೋಕಾಲ್ವೇ"
"ಎಂಥ ಹಲ್ಕಟ್ ನನ್ಮಗ ಇದ್ದೀ ನೋಡೂ - ಲೋ ಅವನು ಹಲ್ಲು ಕಟ್ಟೋನು ಅಲ್ಲ ಕಣೋ"
ಇನ್ನೂ ಮಂಡ್ಯ ಜಿಲ್ಲೆ ಯ ಆಡು ಭಾಷೆ ಯ ಬಗ್ಗೆ ಯೂ ಕೆಲವರು ಆಡಿಕೊಳ್ಳುವುದನ್ನು ಕಂಡಿದ್ದೇನೆ. ಇನ್ನೂ ಸ್ವಲ್ಪ ಪೆದ್ದಾಗಿ ನಡೆದು ಕೊಂಡಾಗ, ಒಳ್ಳೆ ಕುಣಿಗಲ್ ಕಣೋ ಅಂತ ಹೇಳೋದನ್ನು ಕೇಳಿದ್ದೇನೆ. ಬಳ್ಳಾರಿಯ ಆಡು ಭಾಷೆ ಕೇಳಿದವರಿಗೆ ಒರಟು ಎನಿಸ ಬಹುದು, ಆದರೆ ಅದು ಏಕವಚನವಾದರು ಪ್ರೀತಿ ತುಂಬಿದ ಮಾತುಗಳು ಅವು. ಪ್ರತಿಯೊಂದು ಜಿಲ್ಲೆ ಯ ಪ್ರತಿಯೊಂದು ಊರಿನ ಅಲ್ಲಿನ ಆಡುಭಾಷೆ ಅಲ್ಲಿನವರಿಗೆ ಅದು ಹೆಚ್ಚು ಅದು ಅವರ ಅಗ್ಗಳಿಕೆ. ಅದಕ್ಕೆ ಅವಮಾನವಾದರೆ ಅದನ್ನು ಸಹಿಸಿಕೊಳ್ಳುವುದಿಲ್ಲ. ಸಹ ಕನ್ನಡಿಗನನ್ನು ಈ ರೀತಿ ಹಂಗಿಸಿ, ಅವಮಾನಿಸಿದರೆ ಕೀಳರಿಮೆ ಉಂಟಾಗಿ ಹಿಂದಿ ಮತ್ತು ಇಂಗ್ಲೀಷ್ ಭಾಷೆ ಯಲ್ಲಿ ವ್ಯವಹರಿಸಿದರೆ ಅದಕ್ಕೆ ಹೊಣೆ ನಾವಾಗುತ್ತೇವೆ. ಎಲ್ಲರಿಗೂ ತಮ್ಮದೇ ಶ್ರೇಷ್ಟ ಅನ್ನುವ ಭಾವನೆ.
ದೂರದ ಬೀದರ್, ಬಿಜಾಪುರ ಅಥವ ಇನ್ಯಾವುದೋ ಉತ್ತರಕರ್ನಾಟಕದ ಜನರು ಯಾವುದಾದರು ಕಾರ್ಯನಿಮಿತ್ತ ಬೆಂಗಳೂರು ಮೈಸೂರು ಅಥವ ದಕ್ಷಿಣ ಕನ್ನಡ ಯಾತ್ರ ಸ್ಥಳಗಳಿಗೆ ಪ್ರವಾಸಕ್ಕಾದರು ಬಂದಿರುತ್ತಾರೆ, ಬರುವಾಗ ಅವರ ಊರಿನಿಂದ ಇಲ್ಲಿಯವರೆಗೆ ಅವರ ಮನದಲ್ಲಿ ಒಂದು ಬೌಗೋಳಿಕ ಚಿತ್ರಣ ಮೂಡಿರುತ್ತೆ. ಆದರೆ ಕೆಲ ದಕ್ಷಿಣ ಜಿಲ್ಲೆಗಳ ಜನರಿಗೆ ದೂರದ ಉತ್ತರ ಕರ್ನಾಟಕ ಜಿಲ್ಲೆಗಳಿಗೆ ಹೋಗುವ ಅವಕಾಶ ಕಡಿಮೆ ಇರುತ್ತೆ ಆದ್ದರಿಂದ ಆ ಊರುಗಳ ಬೌಗೋಳಿಕ ಚಿತ್ರಣ ಅವರ ಮನದಲ್ಲಿ ಮೂಡುವುದು ಕಷ್ಟ. ಹೀಗೆ ಒಂದು ಸಾರಿ ಮಂಡ್ಯದ ಬನ್ನೂರಿನ ಕೆಲ ರೈತ ರೊಂದಿಗೆ ವ್ಯವಹರಿಸುತ್ತಿರುವಾಗ ನಮ್ಮ ಊರಿನ ಬಗ್ಗೆ ಹೇಳುತ್ತಿದ್ದೆ. ಆದರೆ ಆದರೆ ನಮ್ಮ ಊರನ್ನು ಅವರು ಗುರುತಿಸಿಕೊಂಡಿದ್ದು ಬಾಗಲಕೋಟೆ ಯತ್ತಿರ, ಹಾಗೆ ನೋಡಿದರೆ ನಮ್ಮ ಊರಿನಿಂದ ಬಾಗಲಕೋಟೆ ಸುಮಾರು ೩೫೦ - ೪೦೦ ಕಿ.ಮಿ ದೂರದಲ್ಲಿದೆ, ಆದರೆ ಬೆಂಗಳೂರು ಕೇವಲ ೨೫೦ ಕಿ.ಮಿ. ದೂರ, ಎಷ್ಟೊಂದು ಅಜಗಜಾಂತರ, ಇದಕ್ಕೆ ಕಾರಣ ಕರ್ನಾಟಕದ ಬೌಗೋಳಿಕ ಚಿತ್ರಣದ ಅರಿವಿನ ಕೊರತೆ.
ಈಟಿವಿಯಲ್ಲಿ ಪ್ರಸಾರವಾದ ಒಂದು ಮೂಡಲ ಮನೆ ಧಾರವಾಹಿ, ಸುವರ್ಣ ನ್ಯೂಸ್ ನಲ್ಲಿ ಪ್ರಸಾರ ವಾಗುವ ಚಹಾಚೂಡ ಸುದ್ದಿ ನೋಡ ಅಲ್ಲಿನ ಪ್ರಾಂತ್ಯದವರಿಗೆ, ನಮ್ಮೂರ ಭಾಷೆ ಟಿವಿ ನಾಗ್ ಬರ್ತದ ಅನ್ನುವ ಖುಷಿ. ಇತ್ತೀಚಿಗೆ ಬರುತ್ತಿರುವ ಕೆಲ ಧಾರವಾಹಿಗಳಲ್ಲಿ, ಕುಂದಗನ್ನಡ, ಮಂಗಳೂರಿನ ಕನ್ನಡ ಮತ್ತು ಉತ್ತರ ಕರ್ನಾಟಕ ಭಾಷೆಯ ಸಂಭಾಷಣೆ ಗಳು ಅಲ್ಲಲ್ಲಿ ಕಾಣುತ್ತಿವೆ.
ಸಿನಿಮಾಗಳಲ್ಲಿ ಉತ್ತರ ಕರ್ನಾಟಕ ಮತ್ತು ಮಂಗಳೂರಿನ ಭಾಷೆ ಯನ್ನು ಕೇವಲ ಹಾಸ್ಯಕ್ಕೆ ಉಪಯೋಗಿಸಿಕೊಂಡಿದ್ದೀವಿ, ಆ ಹಾಸ್ಯವನ್ನಾದರು ಸರಿಯಾಗಿ ಮಾಡ್ತಾರಾ, ಅದೂ ಇಲ್ಲ.
ಬಳ್ಳಾರಿ ನಾಗ ಚಿತ್ರದಲ್ಲಿ ಬಳ್ಳಾರಿ ಬಾಷೆ ಯನ್ನು ಚೆನ್ನಾಗಿ ಬಳಸುವ ಅವಕಾಶವಿತ್ತು ಆದರೆ ಅಲ್ಲಿನವರಿಗೆ ಅದು ನಮ್ಮೂರಿನ ಭಾಷೆ ಎಂದು ಅನಿಸಲೇ ಇಲ್ಲ. ಪ್ರಾದೇಶಿಕ ಆಡು ಭಾಷೆಗೆ ಯಾರು ಬೆಲೆ ಕೊಟ್ಟಿದ್ದಾರೆ? ಒಂದು ವರ್ಷಕ್ಕೆ ಬಿಡುಗಡೆಯಾಗುವ ೧೦೦ ರಿಂದ ೧೫೦ ಸಿನಿಮಾಗಳಲ್ಲಿ, ಒಂದೆರಡಾದರು ಆ ಪ್ರಾಂತೀಯ ಭಾಷೆ ಯ ಸೊಗಡಿನಲ್ಲಿವೆಯ? ಎಲ್ಲೋ ಒಂದು ಹುಲಿಯಾ, ನಾಗಮಂಡಲ, ಇತ್ತೀಚಿಗೆ ಬಂದ ಭೀಮಾ ತೀರದಲ್ಲಿ ಹುಬ್ಬಳ್ಳಿ ಭಾಷೆ, ನಮ್ಮೂರ ಮಂದಾರ ಹೂವೆ ಚಿತ್ರದಲ್ಲಿ ಉತ್ತರ ಕನ್ನಡ ಆಡುನುಡಿ , ಗುಲಾಬಿ ಟಾಕೀಸಿನ ಕುಂದ ಗನ್ನಡ, ಎಷ್ಟು ಚಂದದ ಆ ಪ್ರಾಂತೀಯ ಆಡು ಭಾಷೆಯಲ್ಲಿ ಈ ಸಿನಿಮಾಗಳು ಅಲ್ಲಿನ ಸುಂದರ ಪರಿಸರದೊಂದಿಗೆ ಮೂಡಿ ಬಂದಿವೆ. ನೋಡುವುದಕ್ಕೆ ಖುಶಿ ಕೊಡುತ್ತವೆ. ಇಂತಹ ಪ್ರಯತ್ನ ಗಳು ಪ್ರೇಕ್ಷಕರಿಗೆ ಹೊಸ ಅನುಭವ ಕಟ್ಟಿಕೊಡುವಲ್ಲಿ ಮತ್ತು ಹೊಸ ಅರಿವು ಮೂಡಿಸುವಲ್ಲಿ ಸಫಲವಾಗುವುದರಲ್ಲಿ ಖಂಡಿತ ಅನುಮಾನವಿಲ್ಲ. ಸಿನಿಮಾ ಮಂದಿಯ ಜವಾಬ್ದಾರಿ ಇರುವುದು ಇಲ್ಲೇ. ಇಂತಹ ಪ್ರಯತ್ನ ಗಳ ಮೂಲಕ ಆ ಪ್ರದೇಶಗಳ ಭಾಷೆಗೂ ಮೌಲ್ಯ ಮತ್ತು ಘನತೆ ಯನ್ನು ಒದಗಿಸಿಕೊಟ್ಟಂತೆ ಆಗುತ್ತದೆ. ಆ ಆಡು ನುಡಿಯ ಜನರ ಪ್ರೀತಿ-ವಿಶ್ವಾಸಗಳಿಸುವ ಮೂಲಕ ಅವರ ಹೃದಯದಲ್ಲಿ ವಿಶಿಷ್ಟವಾದ-ಸ್ಥಾನಮಾನ ಆಚಿತ್ರದ ನಿರ್ದೇಶಕ, ನಿರ್ಮಾಪಕ ಪಡೆಯುತ್ತಾನೆ. ಇತ್ತೀಚಿಗಿನ ಚಿತ್ರ ಗಳಲ್ಲಿನ ಭಾಷ ಪ್ರಯೋಗ, ಮಚ್ಚಾ, ಲಾಂಗ್, ಅಮ್ಮನ್, ಅಕ್ಕನ್, ಕುರ್ಪು, ಪೊರ್ಕಿ ಈ ಶಬ್ದಗಳಿಂದ ಇವರು ಯಾರನ್ನು ಮೆಚ್ಚಿಸಲು ಪ್ರಯತ್ನಿಸುತಿದ್ದಾರೆ? ಭಿನ್ನ ಸಂಸ್ಕೃತಿ, ವಿಭಿನ್ನ ಆಚರಣೆ ಕನ್ನಡ ಬಾಷಾ ಚಿತ್ರರಂಗ ತನ್ನದೆಂದು ಯಾವತ್ತಿಗೂ ಪರಿಗಣಿಸಿಲ್ಲ, ಆ ನಿಟ್ಟಿನಲ್ಲಿ ಮೊದಲು ಕೆಲಸ ಆಗಬೇಕಿದೆ.
ಇತ್ತೀಚಿಗೆ ಉಮೇಶ್ ಕತ್ತಿ ಯವರು ಕೊಟ್ಟ ಹೇಳಿಕೆಗೆ ಎಲ್ಲ ಕಡೆಯಿಂದ ಬಹಳ ಪ್ರತಿಭಟನೆ ವ್ಯಕ್ತ ವಾಯಿತು. ಉಮೇಶ ಕತ್ತಿಯವರ ಹೇಳಿಕೆಯಲ್ಲಿ ಸದುದ್ದೇಶ ಎಷ್ಟಿತ್ತೊ ಇಲ್ವೋ ಅದು ಅವರಿಗೆ ಗೊತ್ತು. ನಮ್ಮ ಕನ್ನಡ, ನಮ್ಮ ಅಖಂಡ ಕರ್ನಾಟಕ ಅಂತ ಗಂಟಲು ಹರಕೊಂಡು ಕೂಗಾಡಿದರೆ ಸಾಲದು, ಪ್ರತಿಯೊಬ್ಬರು ಪ್ರತಿಯೊಬ್ಬರ ಆಡುನುಡಿ ಯನ್ನು ಗೌರವಿಸಿ ಅದಕ್ಕೆ ಸಲ್ಲಬೇಕಾದ ಗೌರವವನ್ನು ಕೊಟ್ಟರೆ ಸಾಕು ಕನ್ನಡ ಭಾಷೆ ತನ್ನಷ್ಟಕ್ಕೆ ತಾನೆ ಬೆಳೆಯುತ್ತೆ.
Photo courtesy: Internet