ಶುಕ್ರವಾರ, ಮಾರ್ಚ್ 24, 2017

ಶ್ರೀ ಜಾನಕಿನಾಥ್: ಎಂದೂ ಬತ್ತದ ಉತ್ಸಾಹದ ಚಿಲುಮೆ


ಶ್ರೀ ಜಾನಕೀನಾಥ್: ಕನ್ನಡ ಮತ್ತು ಸ್ವಾರ್ಥ ರಹಿತ ಸಾಮಾಜಿಕ ಸೇವೆ
ಎಂದೂ ಬತ್ತದ ಉತ್ಸಾಹದ ಚಿಲುಮೆ
ಮಸ್ಕತ್ ನಲ್ಲಿ ಕನ್ನಡ ಮತ್ತು ಸ್ವಾರ್ಥ ರಹಿತ ಸಾಮಾಜಿಕ ಸೇವೆಯ ಇನ್ನೊಂದು ಹೆಸರೇ, ಶ್ರೀ ಜಾನಕೀನಾಥ್

ನಮ್ಮ ಕನ್ನಡ ಸಂಘದ ಅಧ್ಯಕ್ಷ ರಾಗಿದ್ದ ಶ್ರೀ ಜಾನಕೀನಾಥ್ ರವರು ತಮ್ಮ ಹೊಸ ಉದ್ಯೋಗದ ನಿಮಿತ್ತ ಇದೇ ೨೭ ಮಾರ್ಚ್ ೨೦೧೭ ರಂದು ಮಸ್ಕತ್ ನಿಂದ ಬೆಂಗಳೂರಿಗೆ ವಾಪಾಸ್ಸು ಹೋಗುತ್ತಿರುವುದು ಎಲ್ಲರಿಗೂ ತಿಳಿದಿರುವಂತಹದ್ದು. ಇನ್ನು ಮುಂದೆ ಅವರು ಮಸ್ಕತ್ ನಲ್ಲಿ ಇರಲಾರೆದೆಂಬುದು ಬಹು ಬೇಸರದ ಸಂಗತಿಯಾಗಿದೆ. ಕನ್ನಡ ತರಗತಿಗಳು ಮತ್ತು ಕನ್ನಡ ಸಂಘದ ಕಾರ್ಯಗಳಲ್ಲಿ ಅವರು ಮಾಡಿದ ಕೆಲಸ ಗಳು ಬಹುಕಾಲ ನೆನಪಿನಲ್ಲಿಟ್ಟು ಕೊಳ್ಳಬಹುದಾಗಿದ್ದು, 

ಸಮಾಜದ ಒಳಿತಿಗಾಗಿ ಯಾರೇ ಆಗಲಿ ಯಾವುದೇ ಕೆಲಸ ಮಾಡಿದರೂ ಸ್ವಾರ್ಥ ರಹಿತವಾಗಿ ಕೆಲಸ ಮಾಡುವುದು ಇತ್ತೀಚಿನ ದಿನಗಳಲ್ಲಿ ಅದು ವಿರಳವಾಗಿದೆ. ಸ್ವಾರ್ಥ ರಹಿತ ಸಮಾಜ ಸೇವೆ ಮಾಡಿದವರಲ್ಲಿ ನಮ್ಮ ಕನ್ನಡ ಸಂಘದ ಅಧ್ಯಕ್ಷ ರಾಗಿದ್ದ ಶ್ರೀ ಜಾನಕೀನಾಥ್ ರವರು ಒಬ್ಬರಾಗಿದ್ದರು. ಮಸ್ಕತ್ ಕನ್ನಡ ಸಂಘದಲ್ಲಿ ಕಾರ್ಯಕಾರಿ ಸಮಿತಿ ನಿರ್ಧರಿಸಿದ ಎಲ್ಲ ಕಾರ್ಯಕ್ರಮ ಗಳಲ್ಲಿ ತಮ್ಮ ಧೈನಂದಿನ ಕೆಲಸಗಳ ಒತ್ತಡದ ನಡುವೆಯೂ ಅತಿ ಚಟುವಟಿಕೆಯಿಂದ ಸಂಪೂರ್ಣವಾಗಿ ತೊಡಗಿಕೊಂಡು ಯಶಸ್ವಿಗೊಳಿಸುತಿದ್ದರೆನ್ನುವುದರಲ್ಲಿ ಅತಿಶಯೋಕ್ತಿ ಏನಿಲ್ಲ. 

ಕನ್ನಡ ತರಗತಿಗಳು ಮತ್ತು ಕನ್ನಡ ಸಂಘದ ಕೆಲ ನೂತನ ಕಾರ್ಯಕ್ರಮಗಳಿಗೆ ನಾಂದಿ ಹಾಡಿದ್ದು, ಇವರ ಅವಧಿಯಲ್ಲಿ ಕನ್ನಡ ಸಂಘದ ವತಿಯಿಂದ ಅತಿ ಹೆಚ್ಚು ವೈವಿಧ್ಯತೆಯ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿದ್ದು ಇವರ ಕೊಡುಗೆಗೆ ಸಾಕ್ಷಿಯಾಗಿದೆ. ಪಾದರಸದಂತೆ ಚುರುಕಾಗಿ ಓಡಾಡಿ, ಕಾರ್ಯಕ್ರಮ ಗಳನ್ನು ನಿರೂಪಣೆ ಮಾಡಿ ಮಸ್ಕತ್ ನಲ್ಲಿ ಕನ್ನಡದ ವಾತಾವರಣವನ್ನು ನಿರ್ಮಿಸಿದುವುದರಲ್ಲಿ ಅವರ ಶ್ರಮ ತುಂಬಾ ಇದೆ. ಸಂಘದ ಕಾರ್ಯಕಾರಿ ಸಮಿತಿಯ ಸಭೆಗಳಲ್ಲಿ ಎಲ್ಲ ಸದಸ್ಯರ ಮನವೊಲಿಸಿ  ಕಾರ್ಯಕ್ರಮಗಳನ್ನು ರೂಪಿಸಿ ಅವುಗಳನ್ನು ಯಶಸ್ವಿ ಗೊಳಿಸುವುದರಲ್ಲಿ ಅವರದ್ದು ಎತ್ತಿದ ಕೈ. 

ಮಸ್ಕತ್ ನಲ್ಲಿ ಓದುತ್ತಿರುವ ಮಕ್ಕಳಿಗೆ ಕನ್ನಡ ಓದುವುದು ಮತ್ತು ಬರೆಯುವುದನ್ನು ಕಲಿಸುವ ಉದ್ದೇಶ ದಿಂದ ಕನ್ನಡ ಸಂಘವು ಮತ್ತು ಕೆಲ ಸಮಾನ ಮನಸ್ಕರ ಆಸಕ್ತಿಯಿಂದ ಹಲವಾರು ವರ್ಷಗಳ ಹಿಂದೆಯೆ ಕನ್ನಡ ತರಗತಿ ಗಳನ್ನು ಪ್ರಾರಂಭಿಸಿದ್ದರು. ಆದರೆ ಇವರ ಅವಧಿಯಲ್ಲಿ ಅದನ್ನು ಇನ್ನೊಂದು ಹಂತಕ್ಕೆ ಕೊಂಡು ಹೋಗಿದ್ದರಲ್ಲಿ ಇವರ ಪಾಲು ಬಹಳಷ್ಟಿದೆ. ಕನ್ನಡ ತರಗತಿ ಮಕ್ಕಳಲ್ಲಿ,  ಕನ್ನಡ ಮಾತನಾಡುವುದನ್ನು ಪ್ರೊತ್ಸಾಹಿಸಿದ್ದು, ಕರ್ನಾಟಕ ಸರಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಜತೆ ಸಂಪರ್ಕ ಸಾಧಿಸಿ ಕನ್ನಡ ಕಲಿಯುವ ಮಕ್ಕಳಿಗೆ ಸರ್ಟಿಫಿಕೇಟ್ ಕೊಡಿಸಿದ್ದರಲ್ಲಿ ಇವರ ಬಹುತೇಕ ಶ್ರಮವಿದೆ. 

ಕನ್ನಡ ಸದಸ್ಯರಿಗೆ ಕನ್ನಡ ಕಥೆ ಕಾದಂಬರಿಗಳನ್ನು ಓದಲು ಪ್ರೋತ್ಸಾಹಿಸುವ ಉದ್ದೇಶದಿಂದ ಕನ್ನಡ ಲೈಬ್ರರಿ ಯನ್ನು ಪ್ರಾರಂಭಿಸಿ, ಲೈಬ್ರರಿಗಾಗಿ ಸಂಘದ ಸದಸ್ಯರು ಪುಸ್ತಕ ಗಳನ್ನು ಕೊಡುಗೆ ಕೊಟ್ಟಿರುವುದರಲ್ಲಿ ಇವರ ಪಾತ್ರ ದೊಡ್ಡದಿದೆ.ಕನ್ನಡ ಚಿತ್ರಗೀತೆಗಳ ಅಂತ್ಯಾಕ್ಷರಿ, ಕನ್ನಡ ರಸಪ್ರಶ್ನೆ ಕಾರ್ಯಕ್ರಮ ಗಳನ್ನು ಅತ್ಯುತ್ತಮ ವಾಗಿ ರೂಪಿಸಿ ಯಶಸ್ವಿಗೊಳಿಸಿದ್ದು ಮಸ್ಕತ್ ಕನ್ನಡ ಸಂಘದ ಸದಸ್ಯರಲ್ಲಿ ಇಂದಿಗೂ ನೆನಪಿನಲ್ಲಿ ಉಳಿದಿದೆ. 

ಮಸ್ಕತ್ ನಲ್ಲಿ ಕರ್ನಾಟಕ ಮೂಲದ ಯಾರ ಪರಿಚಯ ಆದರೂ ಅವರ ಮನವೊಲಿಸಿ ಅವರನ್ನು ಸಂಘದ ಸದಸ್ಯರನ್ನಾಗಿ ಮಾಡಿಯೇ ಬಿಡುತಿದ್ದರು. ತಮ್ಮ ಅಧಿಕಾರ, ಪದವಿಗೆ ತಕ್ಕಂತೆ, ಕೇವಲ ಗಣ್ಯರೊಂದಿಗೆ ಬೆರೆತು, ಗತ್ತು, ಗೈರತ್ತು, ದರ್ಪ ಗಳನ್ನು ತೋರ್ಪಡಿಸಿಕೊಳ್ಳದೆ, ಸದಸ್ಯರ ಹತ್ತಿರ ಸೌಜನ್ಯದಿಂದ ಅತಿ ವಿನಯದಿಂದ ಮಾತನಾಡಿ ಎಲ್ಲರ ಜತೆ ಒಂದು ಸೌಹಾರ್ಧ ಸಂಭಂದವನ್ನು ಬೆಳೆಸಿ, ತಾವೊಬ್ಬ ಅತಿ ಸಾಮಾನ್ಯ ಮನುಷ್ಯನಂತೆ ಎಲ್ಲರೊಂದಿಗೆ ಬೆರೆಯುತಿದ್ದರು. 

ಸಂಘದ ಸದಸ್ಯರನ್ನು ಯೋಗದ ಕಡೆ ಆಕರ್ಷಿಸಲು, ಆರ್ಟ್ ಆಫ್ ಲಿವಿಂಗ್ ರವರ ಜತೆಗೂಡೀ ಮೂರು ದಿನಗಳ ಕಾಲ ಯೋಗ ದಿನಾಚರಣೆ ಆಚರಿಸಿದ್ದಲ್ಲದೆ, ಕಳೆದ ವರ್ಷ  ಭಾರತೀಯ ರಾಯಭಾರಿ ಕಛೇರಿ ಯವರ ಜತೆಗೂಡಿ ಮತ್ತೆ ಯೋಗ ಕಾರ್ಯಕ್ರಮವನ್ನು ನಡೆಸಿಕೊಟ್ಟರು,  ಸದಸ್ಯರನ್ನು ಯೋಗದ ಕಡೆ ಪ್ರೋತ್ಸಾಹಿಸಿ, ಅವರನ್ನು ಹುರಿದುಂಬಿಸಲು ತಾವೂ ಸತತವಾಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಯೋಗವನ್ನು ವರ್ಷದ ಕೇವಲ ಒಂದು ದಿನದ ಮಟ್ಟಿಗೆ ಮಾಡದೆ, ಇಂದಿಗೂ ಪ್ರತಿದಿನ ತಪ್ಪದೇ ಯೋಗವನ್ನು ಮಾಡುತ್ತ ಬಂದಿದ್ದಾರೆ. 

ಕನ್ನಡ ಕಮ್ಮಟ - ಮಕ್ಕಳ ಚಳಿಗಾಲದ ಶಿಬಿರ ವೆನ್ನುವ ವಿನೂತನ ಕಾರ್ಯಕ್ರಮ ವನ್ನು ಶುರುಮಾಡಿ, ಕನ್ನಡ ಮಕ್ಕಳಿಗೆ ಕರ್ನಾಟಕದ ಬಗ್ಗೆ ಹಲವಾರು ಮಾಹಿತಿಗಳು, ಕನ್ನಡ ನಾಟಕ, ಕನ್ನಡ ಕಲಿ ನಲಿ, ಕನ್ನಡ ಜಾನಪದ ಗೀತೆಗಳು, ನಾಡ ಗೀತೆ, ಆಟ ಪಾಠ ಹೀಗೆ ಹಲವಾರು ಚಿಣ್ಣರ ಕಾರ್ಯಕ್ರಮಗಳನ್ನು ಕನ್ನಡ ತರಗತಿಯ ಶಿಕ್ಷಕರ ಜತೆಗೂಡಿ ಯಶಸ್ವಿಯಾಗಿ ನಡೆಸಿಕೊಟ್ಟು ಮಸ್ಕತ್ ಕನ್ನಡ ಸಂಘದ ಮಕ್ಕಳಲ್ಲಿ ಕನ್ನಡ ಪ್ರಜ್ನೆ ಯನ್ನು ಮೂಡಿಸುವುದರಲ್ಲಿ ಯಶಸ್ವಿಯಾಗಿದ್ದಾರೆ. 

ಕೇವಲ ಹಾಡು, ಕುಣಿತ ಮತ್ತು ಕನ್ನಡವೆನ್ನದೆ ಅಥವ ಮನೊರಂಜನೆ ಕಾರ್ಯಕ್ರಮ ಗಳಲ್ಲದೆ, ಸಾಮಾಜಿಕ ಸೇವೆಗಳನ್ನು ಶುರು ಮಾಡಿ ಮುನ್ನುಡಿ ಬರೆದಿದ್ದಾರೆ. ಒಮಾನ್ ನಲ್ಲಿ ಕರ್ನಾಟಕ ಮೂಲದ ಹಲವಾರು, ಜನರಿಗೆ ತೊಂದರೆ ಯಾದಾಗ ಮುಂದೆ ನಿಂತು ಸಹಾಯ ಮಾಡಿದ್ದಾರೆ. ಹೀಗೆ ಇವರು ಮಾಡಿರುವ ಕಾರ್ಯಕ್ರಮಗಳ ಬಗ್ಗೆ ಬರೆಯುತ್ತ ಹೋದರೆ, ಹಲವಾರು ಪುಟಗಳೇ ಬೇಕಾಗಬಹುದು.
ಇದೇ ರೀತಿ ಅವರ ಮಡದಿ ಶ್ರೀಮತಿ ಪ್ರೇಮಾ ಜಾನಕೀನಾಥ್ ರವರು ಸಹ ಬೆಂಗಳೂರಿನಲ್ಲಿ ಹಲವಾರು ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ಅಲ್ಲಿಂದಲೇ ಅವರು ಜಾನಕೀನಾಥ್ ರವರಿಗೆ ಸಹಕಾರ ನೀಡುತಿದ್ದು, ಕನ್ನಡ ಕ್ವಿಜ಼್ ಮತ್ತು ಅಂತ್ಯಾಕ್ಷರಿ ಕಾರ್ಯಕ್ರಮ ಗಳನ್ನು ರೂಪಿಸಿಕೊಟ್ಟಿದ್ದಾರೆ. ಜಾನಕೀನಾಥ್ ರವರ ಯಶಸ್ಸಿನಲ್ಲಿ ಅವರ ಶ್ರೀಮತಿಯವರ ಪಾತ್ರ ಬಹಳ ದೊಡ್ಡದಿದೆ.
ಶ್ರೀ ಜಾನಕಿನಾಥ್ ರವರು, ಯಾವುದೇ ಕೆಲಸ ಮಾಡಿದರೂ ಶ್ರಧ್ದೆ ಯಿಂದ ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದರಲ್ಲಿ ಮುಂದು. ಅವರೊಂದು ಎಂದೂ ಬತ್ತದ ಉತ್ಸಾಹದ ಚಿಲುಮೆ, ಸೌಮ್ಯ ಸ್ವಭಾವದ, ಉತ್ತಮ ವ್ಯಕ್ತಿತ್ವ ಅವರದು.  ವ್ಯಕ್ತಿಯೊಬ್ಬನ ಸಕಾರಾತ್ಮಕ ಗುಣಗಳನ್ನು ಮಾತ್ರ ಹೆಚ್ಚಾಗಿ ಪರಿಗಣಿಸಿದಾಗ ಆ ವ್ಯಕ್ತಿಯೊಂದಿಗೆ ಉತ್ತಮ ಬಾಂಧವ್ಯ ಇರಿಸಿಕೊಳ್ಳಲು ಸಾಧ್ಯ. ಹಾಗಾಗಿ ಅವರ ಜತೆಗಿನ ಒಡನಾಟದಿಂದಾಗಿ ಅವರ ಸಕಾರಾತ್ಮಕ ಗುಣಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಮ್ಮ ವ್ಯಕ್ತಿತ್ವನ್ನು ರೂಪಿಸಿ ಕೊಳ್ಳುವುದರಲ್ಲಿ ಅವರು ನೆರವಾಗಿದ್ದಾರೆನ್ನುವುದರಲ್ಲಿ ಅಡ್ಡಿಯಿಲ್ಲ. ಅವರ ಮುಂದಿನ ಭವಿಷ್ಯ ಉತ್ತಮವಾಗಿರಲಿ, ಅವರಿಗೆ ದೇವರು ಉತ್ತಮ ಆರೋಗ್ಯ ವನ್ನು ದಯಪಾಲಿಸಲಿ ಎಂದು ಪ್ರಾರ್ಥಿಸುತ್ತ ಈ ಮೂಲಕ ಅವರಿಗೊಂದು ನನ್ನ ಕಡೆಯಿಂದ ಒಂದು ಕಿರು ನುಡಿನಮನ.
ಸಿರಿಗನ್ನಡಂ ಗೆಲ್ಗೆ! ಸಿರಿಗನ್ನಡಂ ಬಾಳ್ಗೆ!!



1 ಕಾಮೆಂಟ್‌:

Click below headings