"ಮತ್ತೆ ಹುಟ್ಟಿ ಬಾ ಮಗಳೇ"
ನೀನು ಇನ್ನಿಲ್ಲ ಎಂದು ನಂಬಲು ಸಾಧ್ಯವಾಗುತ್ತಿಲ್ಲ. ನಿನ್ನ ಈ ಆತುರದ ನಿರ್ಧಾರ ನಮ್ಮೆಲ್ಲರನ್ನು ದಂಗುಬಡಿಸಿದೆ. ನಿನ್ನ ಕಷ್ಟಗಳಿಗೆ ನಾವೆಲ್ಲ ಕಿವಿಯಾಗುತಿದ್ದೆವು, ಆದರೆ ಅದೆಲ್ಲವನ್ನು ಮುಚ್ಚಿಟ್ಟು ಎಂತಹ ಕೆಲಸಮಾಡಿಕೊಂಡೆ.
ನೀನು ಎಂದಿಗೂ ಯಾರಿಗೂ ಹೊರೆಯಾಗಿರಲಿಲ್ಲ. ಆದರೆ ಆಸರೆ ಯಾಗುವತ್ತ ಬೆಳೆದಿದ್ದೆ. ವಿದ್ಯಾವಂತೆ, ಸುಗುಣೆ ನೀನು, ನಾಲ್ಕಾರು ಜನರಿಗೆ ಸಾಂತ್ವನ ಹೇಳುವಷ್ಟು ದೊಡ್ಡ ಗುಣ ನಿನ್ನಲ್ಲಿತ್ತು. ಆದರೆ ನಿನ್ನ ಕಷ್ಟದ ಸಮಯದಲ್ಲಿ ಸಾಂತ್ವನ ಹೇಳಲು ಹತ್ತಿರದಲ್ಲಿರಲಿಲ್ಲ ನಾವು, ದಯವಿಟ್ಟು ಕ್ಷಮಿಸು ನಮ್ಮನ್ನು.
ನೀನು ಮದುವೆಯಾಗಿ ಚೆನ್ನಾಗಿದ್ದೀಯ ಎಂದೇ ನಂಬಿದ್ದೆವು, ಆದರೆ ಆ ಮದುವೆ ನಿನಗೆ ಉರುಳಾಗುತ್ತೆ ಎಂದೆಣಿಸರಲಿಲ್ಲ. ಒಂದೇ ಒಂದು ಸಾರಿ, ನಮ್ಮೆಲ್ಲರ ಜತೆ ಮುಕ್ತ ಮನಸ್ಸಿನಿಂದ ಮಾತನಾಡಿದ್ದರೆ, ನಿಜಕ್ಕೂ ಇಂತಹ ಸ್ಥಿತಿ ನಿನಗೆ ಬರುತ್ತಿರಲಿಲ್ಲ. ನಿನ್ನನ್ನು ಉಳಿಸಿಕೊಳ್ಳುವುದಕ್ಕೆ ನಾವೆಲ್ಲ ಶತಪ್ರಯತ್ನ ಮಾಡುತಿದ್ದೆವು.
ಈ ಮರ್ಯಾದೆ, ದೊಡ್ಡಸ್ಥಿಕೆ ಮತ್ತು ಒಣ ಅಹಂ ಗಳು, ನಿನ್ನನ್ನು ಕಾಪಾಡಲಾಗಲಿಲ್ಲ. ಅದೆಲ್ಲಕ್ಕೂ ಅಂಜಿ ಬದುಕುವುದಕ್ಕೆ ನಿನ್ನ ಮನಸ್ಸು ಒಪ್ಪಲಿಲ್ಲ ಎಂದೇ ನಾನು ಭಾವಿಸುತ್ತೇನೆ. ಈ ಚಿಕ್ಕ ವಯಸ್ಸಿಗೆ ಅದಿನ್ನೆಂತ ಮಾನಸಿಕ ತೊಳಲಾಟಗಳನ್ನು ಅನುಭವಿಸಿದ್ದೀಯಾ ನೀನು.
ನಿನ್ನ ಪ್ರತಿಯೊಂದು, ನಡೆ ನುಡಿ ಗಳು ನಮ್ಮಿಂದ ಎಂದೂ ಮರೆಯಲಾಗಲ್ಲ. ನಮ್ಮ ಜತೆ ಜತೆಗೆ ಬೆಳೆದು ನಮ್ಮ ಮನೆಯ ಮಗುವಾಗಿದ್ದೆ ನೀನು. ದುಖಃವನ್ನು ಹಿಡಿದಿಟ್ಟುಕೊಳ್ಳಲಾಗುತ್ತಿಲ್ಲ ಪುಟ್ಟಿ. ನಿನ್ನ ಆತ್ಮಕ್ಕೆ ಶಾಂತಿ ದೊರಕಲಿ, ಭಗವಂತ ಸದ್ಗತಿಯನ್ನು ಕೊಡಲಿ ಎಂದು ಪ್ರಾರ್ಥಿಸುವೆ
"ಮತ್ತೆ ಹುಟ್ಟಿ ಬಾ ಮಗಳೇ".
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ