ಗುರುವಾರ, ಡಿಸೆಂಬರ್ 20, 2018

ಲೈಪ್ಜಿಗ್ (ಜರ್ಮನಿ) ಪ್ರವಾಸ ಕಥನ-೧

ಲೈಪ್ಜಿಗ್ (ಜರ್ಮನಿ) ಪ್ರವಾಸ ಕಥನ-೧

ಫ್ರೆಂಚ್ ಚಕ್ರವರ್ತಿ ನೆಪೋಲಿಯನ್ ಬೋನಾಪಾರ್ಟೆ, ಸೋಲಿಲ್ಲದ ಸರದಾರ ಎನ್ನುವ ಖ್ಯಾತಿ ಹೊಂದಿದ್ದ.
1804 ರಿಂದ 1814 ರವರೆಗೆ ಫ್ರಾನ್ಸ್ ನ ಚಕ್ರವರ್ತಿಯಾಗಿದ್ದ, ಅವನು ಯೂರೋಪಿನ ಇತಿಹಾಸದಲ್ಲಿ ವಿಶಿಷ್ಟಸ್ಥಾನ ಪಡೆದ ಮಹಾವೀರ. ತನ್ನ ಅಧಿಕಾರಾವಧಿಯಲ್ಲಿ ಅನೇಕ ಯುದ್ಧಗಳನ್ನು ಮಾಡಿ ಯಶಸ್ವಿಯಾಗಿದ್ದರಿಂದ, ಹಾಗೂ ಫ್ರೆಂಚ್ ನಲ್ಲಿನ ಕ್ರಾಂತಿಕಾರಕ ಬದಲಾವಣೆಗಳಿಗೆ ಕಾರಣಿಭೂತನಾಗಿದ್ದ ಅವನು  ಫ್ರಾನ್ಸ್‌ನ ಇತಿಹಾಸದಲ್ಲಿ ಅಧಿಪತಿಯಾಗಿ ತುಂಬಾ ಹೆಸರು ಗಳಿಸಿದ್ದ.

ಅಂತಹ ಚಕ್ರವರ್ತಿ ನೆಪೋಲಿಯನ್ನಿಗೆ ಇಡೀ ಜಗತ್ತನ್ನೇ ಗೆಲ್ಲಬೇಕೆಂಬ ಆಸೆಯಿತ್ತು. ಯುರೋಪ್ ರಾಷ್ಟ್ರಗಳನ್ನು ಹಲವಾರು ಯುದ್ದದಲ್ಲಿ  ಗೆದ್ದು ಚಕ್ರವರ್ತಿ ಯಾಗಿ ಬೀಗಿದ್ದ.  ಆದರೆ, ಸೋಲು ಎನ್ನುವುದು ಅವನಿಗೂ ತಪ್ಪಿರಲಿಲ್ಲ. ಜರ್ಮನ್, ರಷಿಯನ್ಸ್, ಸ್ವೀಡನ್, ಆಸ್ಟ್ರಿಯನ್ಸ್ ರ ಎದುರು 1813 ರಲ್ಲಿ ನಡೆದ ಮಹಾಯುದ್ದ ದಲ್ಲಿ  (Battle of Leipzig) ಅವನು ಸೋತು ಶರಣಾಗಿದ್ದ. 

ಪ್ರಪಂಚ ಗೆಲ್ಲಬೇಕೆನ್ನುವ ನೆಪೋಲಿಯನ್ ಆಸೆ ಪೂರ್ಣವಾಗಲು, ಒಂದು ಯುದ್ಧ ತಡೆಯಾಯಿತು. ಅದು ಜರ್ಮನ್ ದೇಶದ ಲೈಪ್ಜಿಗ್ ನಲ್ಲಿ ನಡೆದ ಮಹಾಯುದ್ದ. ನೆಪೋಲಿಯನ್ ಯುದ್ದ ದಾಹದಿಂದ ತೊಂದರೆಗೀಡಾಗಿದ್ದ ಜರ್ಮನ್ ಮತ್ತು ಸುತ್ತ ಮುತ್ತಲಿನ ದೇಶಗಳು ಒಂದಾಗಿ ಫ್ರೆಂಚ್ ರ ವಿರುದ್ದ ಸೆಣೆಸಿದ್ದವು.

 ನೆಪೋಲಿಯನ್ ನ ಮೊದಲನೇ ಸೋಲನ್ನು ನೋಡಿ ಅವನನ್ನು ಎಲ್ಬಾ ಎನ್ನುವ ದ್ವೀಪಕ್ಕೆ ಗಡಿಪಾರು ಮಾಡಲಾಯಿತು.

ಜರ್ಮನ್ ಮತ್ತು ಸಹರಾಷ್ಟ್ರಗಳು ನೆಪೋಲಿಯನ್  ವಿರುದ್ದ ಯುದ್ದ ಗೆದ್ದ ನೆನಪಿಗಾಗಿ ಸ್ಮಾರಕ ವೊಂದನ್ನು ಜರ್ಮನ್ ದೇಶದ ಲೈಪ್ಜಿಗ್ ನಗರದಲ್ಲಿ ನಿರ್ಮಿಸಿದ್ದಾರೆ.  ಕೆಲ ದಿನಗಳ ಹಿಂದೆ ಜರ್ಮನಿಗೆ ಭೇಟಿ ನೀಡಿದಾಗ ಈ ಪ್ರದೇಶಕ್ಕೆ ಹೋಗಿ ಬಂದದ್ದು.

ಯುದ್ದದಲ್ಲಿ ಗೆದ್ದ ನೆನಪಿಗಾಗಿ ನೂರು ವರ್ಷಗಳ ನಂತರ, ತುಂಬ ವಿಶಾಲವಾದ ಜಾಗದಲ್ಲಿ ಈ ಸ್ಮಾರಕ ನಿರ್ಮಾಣವಾಗಿದೆ. ಉದ್ದ 80 metres (260 ft), ಅಗಲ, 70 metres (230 ft), ಎತ್ತರ 91 metres (299 ft). 18 October 1898 ರಂದು ಕಟ್ಟಲು ಶುರುಮಾಡಿ, ಹನ್ನೆರೆಡು ವರ್ಷಗಳಲ್ಲಿ ಸ್ಮಾರಕ ಪೂರ್ಣಗೊಂಡು 18 October 1913 ರಂದು ಉದ್ಘಾಟನೆ ಗೊಂಡಿತು.

ಶನಿವಾರ, ಡಿಸೆಂಬರ್ 15, 2018

ಮೇಲ್ ಅನ್ನೋ ರಾಮಾಯಣ

"*ಮೇಲ್ ಅನ್ನೋ ರಾಮಾಯಣ*"
ಚುಟುಕು ಹಾಸ್ಯ: ಪಿ.ಎಸ್ .ರಂಗನಾಥ.

ಇತ್ತೀಚೆಗೆ ಕನ್ನಡವನ್ನು ಶಾರ್ಟ್ ಕಟ್ ಆಗಿ ಉಪಯೋಗಿಸುವುದನ್ನು ನಾವೆಲ್ಲ ಕಾಣುತಿದ್ದೇವೆ. ಅದೂ ಅಲ್ಲದೆ, ಬೆಂಗಳೂರಿಗೆ, ಬೇರೆ ಬೇರೆ ರಾಜ್ಯಗಳಿಂದ ಜನ ಬಂದ ಮೇಲೆ ಅಂತೂ, ಕನ್ನಡ ತುಂಬಾ ಬದಲಾಗಿದೆ.

ನಾವೆಲ್ಲ ಸಾಮಾನ್ಯವಾಗಿ, ಮೇಲ್ ಹೋಗಿ, ಮೇಲ್ ಕಳಿಸಿ, ಮೇಲ್ ಮಾಡಿ ಅಂತ ದಿನಾಲೂ ಕೇಳ್ತಿರ್ತೀವಿ.
ಉದಾ:- ಮೇಲ್ ಹೋಗಿ ಅಂದರೆ,
ಏನಂತ ತಿಳ್ಕೊಳ್ಳಬೇಕು?
ಅವನು ಯಾವ ಉದ್ದೇಶದಿಂದ ಹೇಳಿದ ಅಂತ, ಸ್ವಲ್ಪ ಗಮನ ಇಟ್ಟು ಅವನನ್ನ ಗುರಾಯಿಸಿ ಕ್ಲಾರಿಫಿಕೇಶನ್ ಗಾಗಿ ಕಾಯಬೇಕು.,
ಮಹಡಿ ಹತ್ತಿ ಅಂತನಾ?
ಅಲ್ಲ, Male (ಗಂಡಸರು) ಹೋಗಿ ಅಂತಾನ?
ಅದೆಲ್ಲ ಬಿಟ್ಟು,......
ಮ್ಯಾಗಡೆ, ಮ್ಯಾಕೆ ಹೋಗಪ್ಪ (ಹೊಗೆ ಹಾಕಿಸಿಕೊಳ್ಳೋದು) ಅಂತಾನ?

ಕೆಲವೊಂದು ಸಾರಿ, ಮನೆಗೆ ಸೇಲ್ಸ್ ಮ್ಯಾನ್ ಬಂದಾಗ, ನಮ್ಮನ್ನ ನೋಡಿ, "ಮೇಲ್ ಯಾರು ಇಲ್ವಾ ಸಾರ್" ಎಂದರೆ, ನಖಶಿಕಾಂತ ಉರ್ದೋಹೋಗುತ್ತೆ. ಮೀಸೆ ದಾಡಿ ಬಿಟ್ಕೊಂಡು ಬರ್ಮುಡ ಹಾಕಿಕೊಂಡು ಸ್ಟೈಲಾಗಿ ನಿಂತ್ರೆ,,, ಕಳ್ ನನ್ ಮಗ ಮೇಲ್ ಯಾರು ಇಲ್ವ ಅಂತ ಕೇಳ್ತಾನಲ್ಲ,.....
ಹೆಂಡತಿ ಬಂದು, ಇಲ್ಲ ಖಾಲಿ ಮಾಡ್ಕೊಂಡು ಹೋಗಿದ್ದಾರೆ ಅಂದರೆ, ಓಹ್ ಆ ಆರ್ಥದಲ್ಲಿ ಕೇಳಿದ್ನಾ ಅಂತ ಸಮಾಧಾನ ಮಾಡ್ಕೊಳ್ಳಬೇಕಾಗುತ್ತೆ.....

ಇನ್ನು ಮೇಲ್ ಕಳಿಸಿ ಅಂದರೆ,
ಯಾರನ್ನಾದರು ಮೇಲಕ್ಕೆ ಕಳುಹಿಸೋದು ಅಂತಾನಾ
ಅಲ್ಲ, ಈ ಮೇಲ್ ಕಳುಹಿಸೋದು ಅಂತಾನ?
ಏನಂತ ತಿಳ್ಕೋಳ್ಳೋದು?

ಆಸ್ಪತ್ರೆ ಹೋಗಿರ್ತೀವಿ,
ಅಲ್ಲಿ ಡಾಕ್ಟರ್ ಅಥವ ನರ್ಸ್ ಯಾರೋ ಒಬ್ಬರು,
 "ಅವರನ್ನ ಮೇಲ್ ಕಳಿಸಿ" ಅಂದರೆ,
ಹೆಂಗಾಗಿರಬೇಡ....
ಹುಷಾರಿಲ್ಲ, ತೋರಿಸಿಕೊಂಡು ಹೋಗೋಣ ಅಂತ ಬಂದರೆ.
ನಾವು ಕಳುಹಿಸುವವರನ್ನ ಗುರಾಯಿಸಿ ನೋಡಿ,
ನನ್ನ ಮೇಲೆ ಕಳುಹಿಸೋಕೆ ಏನಾದರು ಸ್ಕೆಚ್ ಹಾಕಿದ್ದಾನ ಅಂತ ಯೋಚಿಸಿ......
ನೀವ್ಯಾರಿ ನಮ್ಮನ್ನ ಮೇಲೆ ಕಳುಹಿಸೋಕೆ, ಅಂತ ಗುರಾಯಿಸಿ ಲುಕ್ ಕೊಟ್ಟು,
ನನ್ಮಗನೆ, ನನ್ನನ್ನ ಅಲ್ಲ ಕಣೋ ಕಳುಹಿಸೋದು,
ನಿನ್ನನ್ನು ಎರಡು ತದಕಿ ಕಳುಹಿಸಬೇಕು ಅನ್ನೋ ಕೋಪ ಬರುತ್ತೆ ಅಲ್ಲವೇ.
ಸಾರ್.......ಬ್ಲಡ್ ಚೆಕ್ ಅಪ್ ಗೆ ಮೇಲೆ ಹೋಗಿ........
ಓಹ್ ಹಂಗೇ.......................

ಹೆಂಡತಿ ಜತೆಗಿದ್ದಾಗ,  ಮೇಲ್ ಮಾತ್ರ ಹೋಗಿ ಅಂದರೆ,
ಮೇಲೆ ಹೋಗಿ ಅಂತ ಅರ್ಥಾನೋ, ಅಥವ Male (ಗಂಡಸರು) ಮಾತ್ರ ಹೋಗಿ ಅಂತಾನೋ?
ಮೇಲೆ ಮಾತ್ರ ಹೋಗಿ, ಬೇರೆಲ್ಲೂ ಹೋಗಬೇಡೀ ಅಂತಾನೋ, ಅಂತ ಯೋಚಿಸಬೇಕಾಗುತ್ತೆ..
ಆಗ ಹೆಂಡತಿ, ನೋಡ್ರಿ ನಿಮ್ಮನ್ನ ಕರೀತಾರೆ ಅಂದ್ರೆ.....
ನಾವು ಮನಸ್ಸಿನಲ್ಲಿ,  ಸದ್ಯ ಈಗಲಾದರು ನಮ್ಮ ಐಡೆಂಟಿಟಿ ಸಿಗ್ತು ಖುಷಿ ಪಟ್ಕೊಂಡು, ಸದ್ಯ ಅಂಗಡಿಯವನು ಗಂಡಸು ಹೆಂಗಸು ಗುರ್ತು ಹಿಡಿದುಬಿಟ್ಟ....
ಆಗ ನಾವೇನಾದ್ರು, ಸರಿ ಇಲ್ಲೇ ಇರು ನಾನು ಹೋಗಿ ಬರ್ತೀನಿ ಅಂತ ಹೊರಟರೆ,....
ಅಂಗಡಿಯವನು,
ಸಾರ್, ನಾನು ಹೇಳಿದ್ದು, ಮೇಲೆ ಹೋಗಿ ಚೆಕ್ ಮಾಡಿ ಅಂತ...
ಅಯ್ಯೊ ಮುಂಡೇದೆ, ಅದನ್ನ ಸರಿಯಾಗಿ ಹೇಳೋಕಾಗಲ್ವೆ?

ಉತ್ತರಭಾರತೀಯನೊಬ್ಬ "ಮೇಲ್ ಏಳಿ" ಅಂದರೆ,
ಮೇಲೆ ಎದ್ದೇಳಿ ಅಂತಾನೋ, ಮೇಲ್(ಗಂಡಸು) ಮಾತ್ರ ಹೇಳಿ ಅಥವಾ ಮೇಲೆ ಹೋಗಿ ಹೇಳಿ ಅಂತಾನೋ ಕ್ಲಾರಿಫಿಕೇಶನ್ ಕೇಳ್ಬೇಕಾಗುತ್ತೆ.

*ಮೇಲ್ ಮಾಡಿ.......*
ಗುಂಡ ಮತ್ತು ರೀಟಾ ಆಫೀಸಿ ನಲ್ಲಿ ಗುಸು ಗುಸು ಮಾತನಾಡುತ್ತಿರುವಾಗ, 
ಸಡನ್ನಾಗಿ ಅವರ ಬಾಸ್ ಬಂದು,
ಮೇಲ್ ಮಾಡಿ ಅಂತ ಹೇಳಿದ್ನಲ್ಲಾ.....
ಗುಂಡ ಮನಸ್ಸಿನೊಳಗೆ, "ಸಾರ್, ಅದಕ್ಕೆ ಅವಕಾಶನೇ ಸಿಗ್ತಿಲ್ಲಾ” ಅಂದರೆ
ಜಗ್ಗೇಶ್, ಕಾಶೀನಾಥ ಸಿನಿಮಾಗಳಲ್ಲಿದ್ದಂತೆ, ಛೀ ಏನು ಪೋಲಿ ಮಾತುಗಳಪ್ಪ,  ಅಂತ ಕಿಸಿತೀವಿ.

ಗುಂಡ, ಮೇಲೆ ಇರೋ ಫೈಲ್ ಕಪಾಟು ಓಪೆನ್ ಮಾಡಿ, ಫೈಲ್ ತೆಗೆದು ಕೊಳ್ಳೋಕೆ ಹೋದರೆ,
ರೀಟಾ, ರೀ........ ಗುಂಡಣ್ಣ, ಎಷ್ಟು ಸಾರಿ ಹೇಳಿದ್ದೀನಿ..
*ಮೇಲ್ ಮಾತ್ರ ಕೈ ಹಾಕಬೇಡಿ* ಅಂತ,
ಸುತ್ತ ಮುತ್ತ ಇದ್ದೋರೆಲ್ಲ, ಗುಂಡಣ್ಣ ಯಾವುದಕ್ಕೆ ಕೈ ಹಾಕಿದ ಅಂತ ಪಿಳಿ ಪಿಳಿ ನೋಡ್ತಿದ್ರೆ,
ಗುಂಡಣ್ಣ,..... ಎಲಾ ಬಡ್ಡಿ ಮಕ್ಕಳ, ಏನ್ ರಸಿಕರು ಕಣ್ರೋ ನೀವೆಲ್ಲ, ಹೆಂಗೆ ಕಣ್ಣು ಮಿಟುಕಿಸದೆ ನೋಡ್ತೀರಾ? ಅಂತ ಮನಸ್ಸಿನೊಳಗೆ ಅಂದು ಕೊಳ್ತಾನೆ.

ಇನ್ನೂ.... ಮೇಲ್ ಮೇಲೆ ಮಾಡೀ ಅಂದರೆ......
...
...
...
...
ಏನೆಲ್ಲ ಅವಾಂತರ ಸೃಷ್ಟಿ ಯಾಗಬಹುದು ಅಂತ
ನೀವೇ ಊಹಿಸಿ ಕೊಳ್ಳಿ.......
ಸ್ವಲ್ಪ ನಗಿ ... ಹಾಗೆ, ಇದನ್ನು ಫಾರ್ ವರ್ಡ್ ಮಾಡಿ ಬೇರೆಯವರನ್ನೂ ನಗಿಸಿ....
ಧನ್ಯವಾದಗಳು.
#kannadajokes  #ps.ranganatha 

ಗುರುವಾರ, ಡಿಸೆಂಬರ್ 13, 2018

ಒಮಾನ್: ಕೂರ್ಮನ ಮರ್ಮ ಅರಿಯಲು ಬಂದ ಮಾಧ್ಯಮ ಲೋಕದ ದಿಗ್ಗಜರು


ಒಮಾನ್ ರಾಷ್ಟ್ರದ ಅದೊಂದು ಸುಂದರ ಸಮುದ್ರ ಕಿನಾರೆ
ಅಂದು ಬೆಳಗಿನ ನಾಲ್ಕು ಘಂಟೆಯ ನಸುಕಿನ ಸಮಯ ವಿರಬಹುದು.
ಎಲ್ಲರೂ ಮಲಗಿರುವ ಸಮಯ,
ಅಲೆಗಳು ಮೆಲ್ಲಗೆ ದಡಕ್ಕೆ ಅಪ್ಪಳಿಸುವ ಸದ್ದು ಬಿಟ್ಟರೆ, ಬೇರೆ ಯಾವುದೇ ಶಬ್ದವಿಲ್ಲದ ನಿರ್ಜನ ಪ್ರದೇಶ.
ಕಾರ್ಗತ್ತಲು. ಒಂದೇ ಒಂದು ಬೆಳಕಿನ ಕಿರಣವಿರದಿದ್ದ ಆ ಪ್ರದೇಶದಲ್ಲಿ,
ಸಮುದ್ರದ ಒಡಲೊಳಲಿಂದ ಒಂದೊಂದೆ ಆಮೆಗಳು ದಡದ ಹತ್ತಿರ ದಾಂಗುಡಿಯಿಡುತಿದ್ದವು. ತಮ್ಮ ಹೊಟ್ಟೆಯಲ್ಲಿದ್ದ ಹೊಸ ಜೀವವನ್ನು ಹೊರ ಜಗತ್ತಿಗೆ ಹೊರತರಲು, ವಿವಿಧ ದೇಶಗಳಿಂದ ಆಮೆಗಳು ಅಲ್ಲಿಗೆ ಬರುತಿದ್ದವು.




  ಈ ವಿಸ್ಮಯವನ್ನು ನೋಡಲು, ನಮ್ಮ ಕನ್ನಡನಾಡಿನಿಂದ ಪ್ರಸಿದ್ದ ಪತ್ರಕರ್ತ ರಾದ ಶ್ರೀ ವಿಶ್ವೇಶ್ವರ್ ಭಟ್ , ಶ್ರೀ ರವಿ ಹೆಗ್ಡೆ  ಮತ್ತು ಸಂಗಡಿಗರು ತಮ್ಮ ದೈನಂದಿನ ಕೆಲಸದೊತ್ತಡದ ನಡುವೆಯೂ ಸ್ವಲ್ಪ ಸಮಯವನ್ನು ಬಿಡುವು ಮಾಡಿಕೊಂಡು ಒಮಾನ್ ಗೆ ಪ್ರವಾಸ ಕೈಗೊಂಡಿದ್ದರು. ಅದರ ಭಾಗವಾಗಿ ಒಮಾನ್ ನ ಸೂರ್ ಎಂಬ್ ಊರಿನ ಟರ್ಟಲ್ ಬೀಚ್ ಗೆ ಮಧ್ಯರಾತ್ರಿ ತಲುಪಿದ್ದರು.
ಈ ಆಮೆಗಳನ್ನು ನೋಡುತ್ತ,  ಬಹುಶಃ ಅವರ ಮನಸ್ಸಿನಲ್ಲಿ ಈ ಹಾಡು ಹೀಗೆ ಬಂದಿರಬಹುದು ಅನ್ನಿಸುತ್ತೆ.

ಆಮೆ ಬಂತೊಂದಾಮೆ,
ಯಾವ ಊರಿನ ಆಮೆ,
ದೇಶ ವಿದೇಶದ ಆಮೆ
ಇಲ್ಲಿಗ್ಯಾಕೆ ಬಂತು
ಮೊಟ್ಟೆ ಇಡೋಕೆ ಬಂತು.....

ಒಮಾನ್ ನ ವಿವಿಧ ಪ್ರವಾಸಿ ತಾಣಗಳಲ್ಲಿ, ಟರ್ಟಲ್ ಬೀಚ್ ಸಹ ಒಂದು  ವಿಶಿಷ್ಟ ಪ್ರವಾಸಿ ತಾಣ.  ಅತಿ ಹೆಚ್ಚು ವಿದೇಶಿ ಪ್ರವಾಸಿಗರು ತಪ್ಪದೇ ಭೇಟಿ ನೀಡುವ ಸ್ಥಳ.
ಬಹುಭಾಷ ಚಿತ್ರನಟ ರಮೇಶ್ ಅರವಿಂದ್ ಸಹ ಹಿಂದೊಮ್ಮೆ ಈ ಸ್ಥಳಕ್ಕೆ ತಾವು ಭೇಟಿ ನೀಡಿದ್ದನ್ನು, ಇಲ್ಲಿನ ವಿಶೇಷತೆ ಕುರಿತು ಕೆಲವು ಸಾರಿ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ.
ಮಧ್ಯ ಪ್ರಾಚ್ಯ ದ ಹಲವಾರು ಅರಬ್ ದೇಶಗಳಿಗೆ ಹೋಲಿಸಿದರೆ ಒಮಾನ್ ದೇಶ ವೈವಿಧ್ಯತೆಗಳಿಂದ ಕೂಡಿದ ದೇಶ. ಬೇರೆ ಕೊಲ್ಲಿ ರಾಷ್ಟ್ರ ಗಳಲ್ಲಿ ಮಾನವ ನಿರ್ಮಿತ ಪ್ರವಾಸಿ ತಾಣಗಳಿದ್ದರೆ, ಒಮಾನ್ ನಲ್ಲಿ ನಿಸರ್ಗ ನಿರ್ಮಿತ ಹಲವಾರು ಪ್ರವಾಸಿ ತಾಣಗಳನ್ನು ಕಾಣಬಹುದು. ಈ ಬಗ್ಗೆ ಕೇಳಿ ತಿಳಿದಿದ್ದ ಈ ಪತ್ರಕರ್ತ ದ್ವಯರು, ಒಮಾನ್ ಗೆ ಭೇಟಿ ನೀಡುವ ಅವಕಾಶಕ್ಕಾಗಿ ಕಾಯುತಿದ್ದರು.

ವಿವಿಧ ಕಾರಣಗಳಿಗಾಗಿ ಬಹ್ರೈನ್ ಮತ್ತು ದುಬಾಯಿಗೆ ಪ್ರವಾಸ ಕೈಗೊಂಡಿದ್ದ ಅವರು.  ಅದರ ಜತೆಗೆ ಒಮಾನ್ ಪ್ರವಾಸ ಸಹ ಕೈಗೊಳ್ಳುವಂತೆ  ಅವರ ಗೆಳೆಯರಾದ ಬಹರೈನ್ ನ ಶ್ರೀ ಕಿರಣ್ ಉಪಧ್ಯಾಯ ರವರು ಅವರ ಮನವೊಲಿಸಿ ನಾಲ್ಕುದಿನ ಒಮಾನ್ ನಲ್ಲಿ ತಂಗುವಂತೆ ವ್ಯವಸ್ಥೆ ಮಾಡಿದ್ದರು. 
ಬಹರೈನ್ ನಿಂದ, ರಸ್ತೆ ಮಾರ್ಗವಾಗಿ ದುಬಾಯಿ ಮತ್ತು ಒಮಾನ್ ತಲುಪಿ ಸುಮಾರು ಮೂರುವರೆ ಸಾವಿರ ಕಿಲೋಮೀಟರ್ ದೂರದಷ್ಟು ಪ್ರಯಾಣ ಮಾಡಿ,  ನಾಲ್ಕು ದಿನದಲ್ಲಿ, ಒಮಾನ್ ನ ಉದ್ದಗಲಕ್ಕೂ ಸಂಚರಿಸಿದರು. ಬಹುಶಃ ಅವರ ಜೀವನದಲ್ಲಿ ಅತೀ ಕಡಿಮೆ ಸಮಯದಲ್ಲಿ ಇಷ್ಟೊಂದು ದೂರದ ರಸ್ತೆ ಸಂಚಾರ ಮಾಡಿದ್ದು ಇದೇ ಮೊದಲಿರಬಹುದೇನೋ.
  




 

ಮರಳುಗಾಡಿನ ಮಲೆನಾಡು ಎಂದೇ ಪ್ರಖ್ಯಾತವಾದ ಸಲಾಲ್ಹಕ್ಕೆ ಮಸ್ಕತ್ ನಿಂದ ಒಂದು ಸಾವಿರ ಕಿ.ಮಿ ದೂರ ಪ್ರಯಾಣ, ಅಲ್ಲಿ ಎರಡು ದಿನ ಕಳೆದು, ಅಲ್ಲಿನ ಪ್ರವಾಸಿ ತಾಣಗಳನ್ನು ನೋಡಿದ ನಂತರ, ನಿಜ್ವ, ಸೂರ್ ಟರ್ಟಲ್ ಬೀಚ್, ವಾದಿ ಶಾಬ್, ಕುರಿಯತ್ ಸಿಂಕ್ ಹೋಲ್ ಮತ್ತು ಮಸ್ಕತ್ ನಲ್ಲಿನ ಪ್ರವಾಸಿ ಸ್ಥಳಗಳನ್ನು ವೀಕ್ಷಣೆ ಮಾಡಿ ವಾಪಾಸ್ ಬೆಂಗಳೂರಿಗೆ ಹಿಂತಿರುಗಿದರು.

ಶನಿವಾರ ೦೮-೧೨-೨೦೧೮ ರ ಸಂಜೆ, ಸ್ಪಂದನ ಸಂಘದ ವತಿಯಿಂದ ವಿಶ್ವವಾಣಿ ಮಾಲೀಕರು ಮತ್ತು ಸಂಪಾದಕರು ಆದ ಶ್ರೀ ವಿಶ್ವೇಶ್ವರ್ ಭಟ್, ಕನ್ನಡಪ್ರಭ ಮತ್ತು ಸುವರ್ಣ ವಾಹಿನಿಯ ಪ್ರಧಾನ ಸಂಪಾದಕರಾದ ಶ್ರೀ ರವಿ ಹೆಗಡೆ, ವಿಶ್ವವಾಣಿಯ ಸಹ ಸಂಪಾದಕರಾದ ಶ್ರೀ ಮೋಹನ್ ಕುಮಾರ್ ಮತ್ತು ಬಹರೈನ್ ನ ಕನ್ನಡ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರಾದ ಶ್ರೀ ಕಿರಣ್ ಉಪಾಧ್ಯಾಯ ರವನ್ನು ಉಡುಪಿ ಹೋಟೇಲ್ ನ ಸಭಾಂಗಣದಲ್ಲಿ ಸನ್ಮಾನಿಸಲು ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಸ್ಪಂದನ ಸಂಸ್ಥೆಯ ಮುಖ್ಯ ಅಥಿತಿಗಳಾಗಿ ಒಮಾನ್ ನ ಕೆಲ ಗಣ್ಯ ವ್ಯಕ್ತಿಗಳಾದ ಶ್ರೀ ಜೀ. ವಿ. ರಾಮಕೃಷ್ಣ,  ಶ್ರೀ  ಎಸ್.ಕೆ .ಪೂಜಾರಿ, ಶ್ರೀ  ಗಣೇಶ್ ಹೆಗಡೆ, ಶ್ರೀ ಲಕ್ಷ್ಮಿ ನಾರಾಯಾಣ ಆಚಾರ್ಯ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸ್ವಾಗತ ಭಾಷಣ:  ಸ್ಪಂದನ ತಂಡದ ಸಂಸ್ಥಾಪಕರಾದ ಶ್ರೀ ಕೋಣೀ ಪ್ರಕಾಶ್ ನಾಯಕ್ ರವರು ಸ್ವಾಗತ ಭಾಷಣ ಮಾಡಿ ಅತಿಥಿಗಳಿಗೆ ಸ್ವಾಗತ ಕೋರಿ, ಶ್ರೀ ಲಕ್ಷ್ಮಿ ನಾರಾಯಣ ಆಚಾರ್ಯರವರು ದೇವರ ಶ್ಲೋಕ ದ ಮೂಲಕ ಕಾರ್ಯಕ್ರಮದ ಶುಭಾರಂಭ ಮಾಡಿದರು.
ಶ್ರೀಯುತ ವಾಲ್ಟರ್ ಮೆಂಡೋನ್ಸ ರವರು, ತಮ್ಮ ವಿಭಿನ್ನ ಶೈಲಿಯಲ್ಲಿ ನಿರೂಪಣೆ (ಆಂಕರಿಂಗ್) ಮಾಡುವ ಮೂಲಕ ಕಾರ್ಯಕ್ರಮವನ್ನು ಸೊಗಸಾಗಿ ನಡೆಸಿಕೊಟ್ಟರು. ಸಂಧರ್ಭಕ್ಕೆ ತಕ್ಕಂತೆ ಹಲವು ಉದಾಹರಣೆಗಳನ್ನು ನೀಡುತ್ತ ತಮ್ಮ ಲಘು ಹಾಸ್ಯ ದೊಂದಿಗೆ ಸಭಿಕರನ್ನು ಹಾಗೂ ಅಥಿತಿಗಳನ್ನು ಮನರಂಜಿಸಿದರು.

ಸ್ಪಂದನ ಪರವಾಗಿ ಮಸ್ಕತ್ ಬ್ಯಾಂಕ್ ನ ಶ್ರೀ ಜೀ. ವಿ. ರಾಮಕೃಷ್ಣ,  ಶ್ರೀ ಎಸ್.ಕೆ ಪೂಜಾರಿ, ಶ್ರೀ ಗಣೇಶ್ ಹೆಗಡೆ ಯವರು ಮತ್ತು ಶ್ರೀ ಲಕ್ಷ್ಮಿನಾರಾಯಣ್ ಆಚಾರ್ಯರವರು  ಅತಿಥಿಗಳಿಗೆ ಶಾಲು ಹೊದಿಸಿ ಸನ್ಮಾನಿಸಿದರು.










ರಾಜ್ ಸನಿಲ್,  ವಿಜಯ್ ಸಾಲಿಯಾನ್, ಆರ್.ಕೆ.ನಿರಂಜನ್, ಮತ್ತು ಶ್ರೀಮತಿ ಕವಿತಾ ರಾಮಕೃಷ್ಣ ರವರುಗಳು ಸ್ವಾದ ಭರಿತ ಒಮಾನ್ ನ ಡೇಟ್ಸ್ ನ್ನು ಉಡುಗೊರೆಯನ್ನಾಗಿ ಹಾಗೂ,
ಶ್ರೀ ಕೋಣೀ ಪ್ರಕಾಶ್ ನಾಯಕ್, ನಾಗೇಶ್ ಶೆಟ್ಟಿ, ಜುಬೇರ್ ಅಹಮದ್ ಮತ್ತು ಉಮೇಶ್ ಬಂಟ್ವಾಳ್ ರವರು ಒಮಾನ್ ನ ಲಾಂಛನ ಎಂದು ಪರಿಗಣಿಸಲ್ಪಡುವ ಖಂಜಾರ್ ಅನ್ನು ಸ್ಮರಣಿಕೆಯಾಗಿ ನೀಡಿದರು.
ಮಸ್ಕತ್ ಬ್ಯಾಂಕ್ ನ ಶ್ರೀ ಜೀ.ವಿ. ರಾಮಕೃಷ್ಣ ಮತ್ತು ಶ್ರೀಮತಿ ಕವಿತಾ ರಾಮಕೃಷ್ಣ ರವರು ತಾವು ತಯಾರಿಸಿದ ತಂಜಾವೂರು ಶೈಲಿ ಯ ಕಲಾಕೃತಿಯನ್ನು ಅಥಿತಿಗಳಿಗೆ ನೀಡಿ ಅವರನ್ನು ಗೌರವಿಸಿದರು.

ಶ್ರೀಮತಿ ಕವಿತಾ ರಾಮಕೃಷ್ಣ ರವರು ಅಥಿತಿಗಳ ಪರಿಚಯ ಮಾಡಿಕೊಡುತ್ತ,  ಶ್ರೀ ವಿಶ್ವೇಶ್ವರ್ ಭಟ್, ಶ್ರೀ ರವಿ ಹೆಗಡೆ ಯವರ ಮತ್ತು ಶ್ರೀ ಮೋಹನ್ ಕುಮಾರ್ ರವರ ಕುರಿತು ಸವಿವರವಾದ ಮಾಹಿತಿ, ಜತೆಗೆ ಬಹರೈನ್ ಕನ್ನಡಿಗರಾದ ಶ್ರೀ ಕಿರಣ್ ಉಪಧ್ಯಾಯ್ ರವರ ಕುರಿತು, ಅವರ ಸಮಾಜ ಸೇವೆ ಹಾಗೂ ಬಹರೈನ್ ನಲ್ಲಿ ಅವರ ಕನ್ನಡಸೇವೆ ಕುರಿತು ಸಭಿಕರಿಗೆ ವಿವರವಾದ ಮಾಹಿತಿ ನೀಡಿದರು.

ಸಂವಾದ:  ಅಥಿತಿಗಳೊಂದಿಗೆ, ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈರ್ವರು ತಮ್ಮ ಬಾಲ್ಯ, ಕಾಲೇಜು ವಿದ್ಯಾಭ್ಯಾಸ, ವೃತ್ತಿ ಜೀವನದ ಮೊದಲ ದಿನಗಳು, ತಮ್ಮ  ಪತ್ರಿಕಾಪಯಣದ ಅನುಭವದ ಬುತ್ತಿಯನ್ನು ಸಭಿಕರೊಂದಿಗೆ ಹಂಚಿಕೊಂಡರು. ತಾವು ಬೆಳೆದು ಬಂದ ಹಾದಿ, ಆ ಹಾದಿಯಲ್ಲಿನ ತೊಡರುಗಳು, ಸವಾಲುಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು. ಈರ್ವರ ಪತ್ರಿಕಾ ರಂಗದ ಆಕರ್ಷಣೆ, ವೃತ್ತಿ ಹೇಗೆ ಶುರುವಾಯಿತು ಎನ್ನುವದರಿಂದ ಹಿಡಿದು, ಮುಂದಿನ ಪೀಳಿಗೆಗೆ ಮುಂದಿನ ಸಾಲಿನಲ್ಲಿ ನಿಲ್ಲುವ ಪತ್ರಕರ್ತರಾರು ಎನ್ನುವಲ್ಲಿಗೆ ಚರ್ಚೆ ನಡೆಯಿತು.
ತಾವು ಪತ್ರಕರ್ತರಾಗಿದ್ದಾಗಿನ ದಿನಗಳಲ್ಲಿ, ಅಂದಿನ ಸಂಪಾದಕರಾದ, ವೈ ಎನ್ ಕೆ, ಶ್ಯಾಮರಾವ್ ಮತ್ತಿತರ ಕುರಿತು ತಮ್ಮ ಅನುಭವಗಳನ್ನು ಹಂಚಿ ಕೊಂಡರು.

ಓದುಗರೂ ಸಹ ಪತ್ರಕರ್ತರೇ:- ಪತ್ರಕರ್ತ ರಾಗಲು ಯಾವುದೇ ಪದವಿಯ ಅವಶ್ಯಕತೆ ಯಿಲ್ಲ, ಪ್ರಚಲಿತ ವಿದ್ಯಮಾನ, ಸ್ವಲ್ಪ ಐತಿಹಾಸಿಕ, ಭೂಗೋಳ ಹಾಗೂ ಸಾಮಾನ್ಯ ಜ್ಞಾನ ಹೊಂದಿರುವ ಯಾವುದೇ ವೃತ್ತಿಯವರು ಸಹ ಪತ್ರಕರ್ತರಾಗಲು ಅಡ್ಡಿಯಿಲ್ಲ. ರಾಜಕಾರಣಿ ಗಳು ಹಾಗೂ ಪತ್ರಕರ್ತರು ಇಬ್ಬರೂ ಒಂದೇ, ಯಾವಾಗ ಬೇಕಾದರು ವೃತ್ತಿ ಶುರು ಮಾಡಬಹುದು ಹಾಗೇಯೇ ಇಬ್ಬರಿಗೂ ನಿವೃತ್ತಿ ಎಂಬುವುದು ಇಬ್ಬರಿಗೂ ಇಲ್ಲ. ಇದಕ್ಕೆ ತಕ್ಕಂತೆ ಹಲವಾರು ಹಿರಿಯ ಪತ್ರಕರ್ತರನ್ನು ಹಾಗೂ ಸಂಪಾದಕರನ್ನು ಉದಾಹರಣೆಯನ್ನಾಗಿ ಶ್ರೀ ವಿಶ್ವೇಶ್ವರ್ ಭಟ್ ರವರು ನೀಡಿದರು.

ಹೊಸ ತಂತ್ರಜ್ಞಾನ: ಪ್ರಿಂಟ್ ಮಶಿನ್ ನ ಅಚ್ಚುಮೊಳೆ ಯಿಂದ ಕಂಪ್ಯೂಟರ್ ವರೆವಿಗೂ ಆದ ಬದಲಾವಣೆ,  ಆರ್ಕುಟ್ ನಿಂದ,.... ಫೇಸ್ ಬುಕ್, ವಾಟ್ಸ್ ಅಪ್, ಇನ್ಸ್ಟಾಗ್ರಾಮ್ ವರೆಗಿನ ಇಂದಿನ ಬದಲಾವಣೆ ನೋಡೀ, ಪ್ರತಿಯೊಬ್ಬರು, ಜೀವನದಲ್ಲಿ ಹೊಸತನ್ನು ಅಳವಡಿಸಿಕೊಳ್ಳುತ್ತ ಮುನ್ನುಗ್ಗಬೇಕು,
 ಅಂದಿನ ಕಾಲದಲ್ಲಿ, ಕಂಪ್ಯೂಟರ್ ಗಳು ಪತ್ರಿಕಾ ಕಛೇರಿಗೆ ಲಗ್ಗೆ ಇಡುತಿದ್ದ ಸಂಧರ್ಭದಲ್ಲಿ, ಅಂದಿನ ಹಳೆ ತಲೆಮಾರಿನ ಜನ ಮೊದಮೊದಲು ಅದರ ಅಳವಡಿಕೆಗೆ ವಿರೋಧಿಸಿದ್ದು, ತದನಂತರ ಅದನ್ನು ಒಗ್ಗಿಸಿಕೊಳ್ಳಲಾಗದೆ ಕೆಲವರು ಪತ್ರಿಕಾರಂಗವನ್ನು ತೊರೆದಿದ್ದನ್ನು ನೆನಪಿಸಿದರು. ಅಂದಿನಿಂದ ಇಂದಿನವರೆಗೂ  ಶ್ರೀ ವಿಶ್ವೇಶ್ವರ್ ಭಟ್ ಮತ್ತು ಶ್ರೀ ರವಿ ಹೆಗಡೆ ಯವರು ಸದಾ ಹೊಸ  ತಂತ್ರಜ್ಞಾನ ವನ್ನು ಅಳವಡಿಸಿಕೊಳ್ಳುತ್ತ ತಮ್ಮನ್ನು ತಾವು ನಿಂತ ನೀರಾಗಲು ಬಿಡದೆ ಹೊಸತನ ದೊಂದಿಗೆ ತಾವು ಬೆಳೆದಿದ್ದನ್ನು ಎಳೆ ಎಳೆಯಾಗಿ ಸಭಿಕರ ಮುಂದೆ ತೆರೆದಿಟ್ಟರು.
ಕನ್ನಡ ಪತ್ರಿಕೋದ್ಯಮದಲ್ಲಿ 3D ತಂತ್ರಜ್ಞಾನ ವನ್ನು ತೆಗೆದು ಕೊಂಡು ಬರಲು ವಹಿಸಿದ ಶ್ರಮದ ಕುರಿತು ಶ್ರೀ ರವಿ ಹೆಗಡೆ ಯವರು ಮಾಹಿತಿ ಹಂಚಿಕೊಂಡರು.


ಸ್ಪಂದನ ಬಗ್ಗೆ ಶ್ಲಾಘನೆ:- ಸ್ಪಂದನ ತಂಡವೂ ಇದುವರೆವಿಗೂ ನಡೆಸಿಕೊಟ್ಟ ಮನರಂಜನ ಕಾರ್ಯಕ್ರಮಗಳೂ, ರಕ್ತದಾನ ಶಿಬಿರ ಮತ್ತು ಸಮಾಜ ಸೇವೆ ಕಾರ್ಯಕ್ರಮಗಳ ವೀಡಿಯೊ ನೋಡಿದ ಅಥಿತಿಗಳು ಸ್ಪಂದನ ತಂಡದ ಕಾರ್ಯಶೈಲಿಯನ್ನು ಕೊಂಡಾಡಿದರು.

ಮಸ್ಕತ್ ಕನ್ನಡಿಗರನ್ನು ಹೆಮ್ಮೆಯಿಂದ ಹೊಗಳಿ, ಬೆಂಗಳೂರಿನಲ್ಲಿ ಕನ್ನಡಿಗರು ಕನ್ನಡ ಮಾತನಾಡುವುದಕ್ಕೆ ಹಿಂಜರಿದರೆ, ಇನ್ನೂ ಒಮಾನ್ ನಲ್ಲಿ ನೀವೆಲ್ಲ ಅಚ್ಚ ಕನ್ನಡವನ್ನು ಸೊಗಸಾಗಿ ಮಾತನಾಡಿ ನಮ್ಮ ಭಾಷೆಯನ್ನು ಉಳಿಸುತಿದ್ದೀರಿ. ಮಕ್ಕಳಿಗೆ ಸಹ ಕನ್ನಡವನ್ನು ತಪ್ಪದೆ ಕಲಿಸಿ ಮುಂದಿನ ಪೀಳಿಗೆಗೆ ಕನ್ನಡವನ್ನು ಕೊಂಡೊಯ್ಯಲು ಮರೆಯದಿರಿ ಎನ್ನುವ ಹಿತವಚನವನ್ನು ಸಹ ನೀಡಿ ತಮ್ಮ ಕಳಕಳಿ ವ್ಯಕ್ತಪಡಿಸಿದರು.

ಒಮಾನ್ ದೇಶ ಹಾಗೂ ಇಲ್ಲಿನ ರಾಜರ ಕುರಿತು ಮೆಚ್ಚುಗೆ ವ್ಯಕ್ತ ಪಡಿಸಿ, ಒಂದೇ ದೇಶದಲ್ಲಿ, ಹಲವು ರೀತಿಯ ವೈವಿಧ್ಯತೆಯನ್ನು ನಾವು ಕಾಣಬಹುದು. ಬೆಟ್ಟ ಗುಡ್ಡಗಳು, ವಿಶಾಲವಾದ ಸಮುದ್ರ, ನದಿಗಳು, ಕಣಿವೆಗಳು, ಮರುಭೂಮಿ, ಸಲಾಲ್ಹ ದಂತಹ ಚಿಕ್ಕ ಮಲೆನಾಡು ಪ್ರದೇಶ, ಪಕ್ಕದ ಅರಬ್ ರಾಷ್ಟ್ರಗಳಿಗೆ ಹೋಲಿಸಿದರೆ ಒಮಾನ್ ವಿಭಿನ್ನ ರೀತಿಯಾಗಿದೆ. ಇಂತಹ ಸುಂದರ ದೇಶವನ್ನು ವೀಕ್ಷಿಸಲು ಇಷ್ಟುದಿನ ಯಾಕೆ ತಡಮಾಡಿದೆವು ಎನ್ನುವ ಭಾವನೆ ಈಗ ಮೂಡುತಿದೆ ಎಂದು ಹೇಳಿದರು.

ಸಂಗೀತ ಆಲ್ಬಂ ಬಿಡುಗಡೆ:- ಈ ಹಿಂದೆ, ಒಮಾನ್ ಪ್ರವಾಸ ಕೈಗೊಂಡಿದ್ದ ಪ್ರಸಿದ್ದ ಸಂಗೀತ ನಿರ್ದೇಶಕ, ನಿರ್ಮಾಪಕ ಮತ್ತು ನಿರ್ದೇಶಕರಾದ ಶ್ರೀ ರವಿ ಬಸ್ರೂರ್ ರವರು  ಬರೀ ಮೂರು ದಿನಗಳಲ್ಲಿ ಸಾಹಿತ್ಯ ರಚಿಸಿ, ರಾಗ ಸಂಯೋಜನೆ ನೀಡಿ ಸ್ಥಳೀಯ ಕಲಾವಿದ ರಿಂದ ಹಾಡಿಸಿ ಸಿದ್ದ ಪಡಿಸಿದ ಕನ್ನಡ ಮತ್ತು ತುಳು ಹಾಡುಗಳ "ಉಲ್ಲಾಸ ಮತ್ತು ಉತ್ಸಾಹ" (Zeal & Zest) ಎನ್ನುವ ಸಂಗೀತ ಆಲ್ಬಂ ಅನ್ನು ಅಥಿತಿಗಳು ಅಧಿಕೃತವಾಗಿ ಬಿಡುಗಡೆ ಗೊಳಿಸಿದರು.

ಕರವೋಕೆ ಹಾಡು ಮತ್ತು ಭೋಜನ:- ಕಾರ್ಯಕ್ರಮದ ಕೊನೆಯಲ್ಲಿ, ಸ್ಥಳೀಯ ಹಾಡುಗಾರರಿಂದ ಕರವೋಕೆ ಹಾಡುಗಾರಿಕೆ ಏರ್ಪಡಿಸಿದ್ದರು ಮತ್ತು ಉಡುಪಿ ಹೋಟೆಲ್ ನ ಸವಿ ಭೋಜನವನ್ನು ಕಾರ್ಯಕ್ರಮಕ್ಕೆ ಬಂದ ಎಲ್ಲ ಅಥಿತಿಗಳಿಗೆ ನೀಡಲಾಯಿತು. ಸಭಿಕರೆಲ್ಲರು, ಸುಮಧುರ ಸಂಗೀತದೊಂದಿಗೆ ಸವಿ ಭೋಜನ ಸವಿದರು.

ಮರುದಿನ ಬೆಳಿಗ್ಗೆ, ಮಸ್ಕತ್ ಪ್ರವಾಸ ಕೈಗೊಂಡು, ಇಲ್ಲಿನ ದೇವಸ್ಥಾನಗಳು, ಅರಮನೆ, ಮಥ್ರ ಕಾರ್ನಿಷ್, ಗ್ರಾಂಡ್ ಮಾಸ್ಕ್, ಒಪೇರ ಹೌಸ್, ಶಾಂಘ್ರಿಲ ಬೀಚ್, ಬರ್ ಅಲ್ ಝ್ಹಿಸಾ.  ಮುಂತದ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಿ, ಬೆಂಗಳೂರಿಗೆ ಹಿಂತಿರುಗಿದರು.








ಕೊನೆಮಾತು:  ಶ್ರೀ ವಿಶ್ವೇಶ್ವರ್ ಭಟ್ ಮತ್ತು ಶ್ರೀ ರವಿ ಹೆಗಡೆ ರವರ ಒಮಾನ್ ಪ್ರವಾಸ ಮಾಡಲು ಇಚ್ಚಿಸಿರುವ ಮಾಹಿತಿ ದೊರೆತ ತಕ್ಷಣ, ಸ್ಪಂದನ ಸಂಸ್ಥೆಯ ಸಂಚಾಲಕರಾದ ಶ್ರೀ ಕೋಣೀ ಪ್ರಕಾಶ್ ನಾಯಕ್ ರವರು ಮತ್ತು ನಾಗೇಶ್ ಶೆಟ್ಟಿಯವರು ಅಥಿತಿಗಳ ಒಮಾನ್ ಪ್ರವಾಸ ಕ್ಕೆ ಬೇಕಾದ ವ್ಯವಸ್ಥೆಗಳನ್ನು ಅತಿ ಕಡಿಮೆ ಸಮಯದಲ್ಲಿ ವ್ಯವಸ್ಥೆ ಮಾಡಿ ಯಾರಿಗೂ ಯಾವುದೇ ಕುಂದುಬರದಂತೆ ಶ್ರಮ ವಹಿಸಿ ತಮ್ಮ ಕಾರ್ಯ ನಿರ್ವಹಿಸಿ ಎಲ್ಲರ ಶ್ಲಾಘನೆಗೆ ಗುರಿಯಾದರು.  ಬಹುತೇಕ ಸಭಿಕರು, ಮತ್ತೊಮ್ಮೆ ಶ್ರೀ ವಿಶ್ವೇಶ್ವರ್ ಭಟ್ ಮತ್ತು ಶ್ರೀ ರವಿ ಹೆಗಡೆ ಯವರು ಒಮಾನ್ ಪ್ರವಾಸಕ್ಕೆ ಬರಬೇಕೆಂದು ಇಚ್ಚಿಸಿದರು.






ವರದಿ. ಪಿ.ಎಸ್.ರಂಗನಾಥ

Photos Credit: 1.) Vishweshar Bhat Face book Wall, 2.) Internent source 3) Felicitation Photos: P.S.Ranganath

ಸೋಮವಾರ, ಮೇ 14, 2018

ಪರದೇಶದಲ್ಲಿ ಪರದೇಸಿಯಾಗಬೇಕಾಗಿಲ್ಲ

 ನಾ ಬರೆದ ಲೇಖನ, ವಿಶ್ವವಾಣಿ ಪತ್ರಿಕೆಯಲ್ಲಿ ಇಂದು (14/05/2018) ಪ್ರಕಟವಾಗಿದೆ

#Rampura, #jobsinabroad #Muscat #Oman #Kuwait, #ಪಿ.ಎಸ್.ರಂಗನಾಥ #p.s.ranganatha

ಭಾನುವಾರ, ಮೇ 6, 2018

ಎಂತ ಮಾಯಾವಿ ನೀನು

ಅಮವಾಸ್ಯೆ ರಾತ್ರಿಯಲ್ಲಿ
ಚಂದಿರನ ಕಾಣಿಸುವೆ ನೀನು

ತಂಪಾದ ರಾತ್ರಿಯಲ್ಲಿ
ಬೆಚ್ಚಗಾಗಿಸುವೆ ನೀನು

ಮೈ ಮನ ಬಳಲಿ ಬೆಂಡಾದಾಗ
ದಣಿವರಿಸುವೆ ನೀನು

ಕಷ್ಟ ದುಖಃ ಬಂದಾಗ,
ಎಲ್ಲವನ್ನು ಮರೆಸುವೆ ನೀನು

"ಎಣ್ಣೇ" ಎಂತ ಮಾಯಾವಿ ನೀನು

ಮೋದಿ: ಮದ್ಯಪಾನ ನಿಷೇದ

ಚುನಾವಣೆ ಪ್ರಚಾರಕ್ಕಾಗಿ ಕರ್ನಾಟಕ  ಮೋದಿ ಬಂದಾಗ, ಗುಂಡ ಮೋದಿಯವರನ್ನು ಭೇಟಿ ಮಾಡೋಕೆ ಹೋಗಿದ್ದ.  ಅಷ್ಟರಲ್ಲಿ, ಸೆಕ್ಯುರಿಟಿಯವರು ಗುಂಡನನ್ನ ತಡೆದರು. ನಾನು ಮೋದಿಯವರನ್ನು ಮೀಟ್ ಮಾಡಬೇಕಲೆ ಬೇಕು ಅಂದ. ಅಂಗೆಲ್ಲ ಆಗಲ್ಲ... ಪರ್ಮಿಶನ್ ಬೇಕು....
ಗುಂಡ ದರಣಿ ಕೂತ್ಕೊಂಡ, ವಿಷಯವನ್ನ ಮೋದಿಗೆ ಹೋಗಿ ಹೇಳಿದರು. ನಂತರ ಬೇಟಿಯ ವ್ಯವಸ್ಥೆಯಾಯಿತು.
ಮೋದಿಗೆ ಪ್ರಶ್ನೆ ಕೇಳಿದ, ನೀವು ನೋಟ್ ಬ್ಯಾನ್ ಮಾಡಿ ನನ್ನ ಲಕ್ಷಾಂತರ ದುಡ್ಡು ಲಾಸ್ ಮಾಡಿಬಿಟ್ಟಿರಿ, ಅದು ಬೇರೆ ಹದಿನೈದು ಲಕ್ಷ ಕೊಡ್ತಿನಿ ಅಂತ ಹೇಳಿದ್ದಿರಿ. ಅದನ್ನೂ ಹಾಕಲಿಲ್ಲ. ನಿಮ್ಮಿಂದ ನನಗೆ ತುಂಬಾ ನಷ್ಟವಾಗಿದೆ ಎಂದು ಹೇಳಿದ.....
ಮೋದಿಯವರು, ಗುಂಡನನ್ನ ಮೇಲಿಂದ ಕೆಳಗಿನವರೆಗೆ ಒಮ್ಮೆ ನೋಡಿ, ಈ ಬಾರಿ ಮತ್ತೊಂದು ಬ್ಯಾನ್ ಗೆ ದೊಡ್ಡ ಪ್ಲಾನ್ ನಡೀತಾ ಯಿದೆ.....
ಗುಂಡ: ಓಹ್ ಈ ಸಾರಿ ೨೦೦೦ ರೂಪಾಯಿ ಡಮಾರಾ...
ಮೋದಿ: ಅಲ್ಲ....
ಗುಂಡ:  ಓಹ್ ಬೇನಾಮಿ ಆಸ್ತಿ ನಾ......
ಮೋದಿ: ಅಲ್ಲ....
ಗುಂಡ: ಮತ್ತೆ......
ಮೋದಿ:  ಮದ್ಯಪಾನ ನಿಷೇದ....🍺✖
......
......
......
......

ದುಖಃ ತಡಿಲಾರದೆ......
ದೊರೆ, ಭಗವಂತ, ದೇವರೆ, ಮೋದಿ ಸಾಬ್ ನಿನಗೆ ಕೈ ಮುಗಿತೀನಿ🙏, ಬೇಕಿದ್ರೆ, ಸಿದ್ದರಾಮಯ್ಯ, ದೇವೆಗೌಡ, ಕುಮಾರಸ್ವಾಮಿ, ಡಿಕೆಶಿವಕುಮಾರ್ ಅವರೆಲ್ಲರ ಓಟ್ ಹಾಕಿಸಿಬಿಡ್ತಿನಿ, ದಯವಿಟ್ಟು 🍺🥂ಎಣ್ಣೆಗೆ ಮಾತ್ರ ಕೈ ಹಾಕಬೇಡಪ್ಪ. ಗೋಳೋ ಅಂತ ಕಣ್ಣೀರಿಟ್ಟ........😭😭😭

ಅಂದು ಅಮ್ಮ ನನ್ನ ಹೆಂಡತಿಯ ಕೈ ಹಿಡಿದು,

ಅಂದು ಅಮ್ಮ ನನ್ನ ಹೆಂಡತಿಯ ಕೈ ಹಿಡಿದು,
ಇವನನ್ನ ಮೂವತ್ತು ವರ್ಷ ಸಾಕಿ ಮುತ್ತಿನಂತೆ ನೋಡಿಕೊಂಡಿದ್ದೀನಿ. ಈಗ ಇನ್ಮುಂದೆ ಚೆನ್ನಾಗಿ ನೋಡಿಕೊಳ್ಳೊದು ನಿನ್ನ ಜವಬ್ದಾರಿ ಎಂದು ಹೇಳಿದ್ದಳು

ಇಂದು ನನ್ನ ಹೆಂಡತಿ ನನ್ನ ಸೊಸೆ ಕೈ ಹಿಡಿದು, ನೋಡು ನಿಮ್ಮ ಮಾವನನ್ನ ಮೂವತ್ತು ವರ್ಷ ಸಾಕಿದ್ದೀನಿ, ಈಗ ಇನ್ಮುಂದೆ ಅವರ ಕೊನೆ ಉಸಿರಿರುವವರಗೂ ಚೆನ್ನಾಗಿ ನೋಡಿಕೊಳ್ಳೊದು ನಿನ್ನ ಜವಬ್ದಾರಿ ಎಂದಳು.

ನನ್ನ ಕಣ್ತುಂಬಿ ಬಂತು......
ಮಗಳೇ ಊಟಕ್ಕೆ ಮುಂಚೆ, ಮರಿಯದೆ
 ಒಂದು 90, ನೆಂಚಿಕೊಳ್ಳೋಕೆ ಚಿಪ್ಸ್ ಅಥವಾ ಉಪ್ಪಿನಕಾಯಿ ಕೊಡೋದನ್ನ ಮರಿಬೇಡಮ್ಮ 🙏

ಗುರುವಾರ, ಏಪ್ರಿಲ್ 19, 2018

ವಿದೇಶದಲ್ಲಿ ಉದ್ಯೋಗ, ಗಗನ ಕುಸುಮವಲ್ಲ!

ನನ್ನ ಲೇಖನ ಸೂರ್ಯಪ್ರಭ ವಾರ ಪತ್ರಿಕೆ ಯಲ್ಲಿ.
#Rampura, #Molakalmuru #jobsinabroad #Muscat #Oman
#ಪಿ.ಎಸ್.ರಂಗನಾಥ

ಸೋಮವಾರ, ಜನವರಿ 8, 2018

ಕೂಪ ಮಂಡೂಕಗಳ ಯೋಚನೆ ಮತ್ತು ಉದ್ಯೋಗ ಸಮಸ್ಯೆ



ಕೂಪ ಮಂಡೂಕಗಳ ಯೋಚನೆ ಮತ್ತು ಉದ್ಯೋಗ ಸಮಸ್ಯೆ
********************** 
ಕಳೆದ ಬಾರಿ ರಾಂಪುರಕ್ಕೆ  ಹೋಗಿದ್ದಾಗ ೩ ದಿನಗಳ ಕಾಲ ಅಲ್ಲಿಯೆ ಉಳಿದಿದ್ದೆ, ಅಲ್ಲಿಯೇ ಬೆಳೆದು ಓದಿ ದೊಡ್ಡವನಾದ ನನಗೆ ರಾಂಪುರ ಅಂದರೆ ಬಿಡಿಸಿಲಾರದ ಬಂಧ. ಕಳೆದು ಹೋದ ಆ ಬಾಲ್ಯ ನೆನೆಸಿಕೊಂಡು ನಾನು ಓದಿದ ಸರ್ಕಾರಿ ಪ್ರಾಥಮಿಕ, ಮಾಧ್ಯಮಿಕ ಹಾಗು ಪ್ರೌಡ ಶಾಲೆ ಗಳ ಸುತ್ತಮುತ್ತ ಅಡ್ಡಾಡಿ ಬಂದೆ.




ಕೆಲ ಸಹಪಾಠಿ ಗಳನ್ನು ಸಹ ಭೇಟಿಯಾಗಿ ಉಭಯ ಕುಶಲೋಪರಿಯನ್ನು ಹಂಚಿಕೊಂಡೆವು. ನಮ್ಮ ಬಾಲ್ಯದ ಹಳೆಯ ನೆನಪೆಲ್ಲವನ್ನು ಒಂದು ಬಾರಿ ಮೆಲುಕು ಹಾಕಿ, ನನ್ನ ಬೆಂಗಳೂರು, ದುಬೈ, ಕುವೈತ್ ಮತ್ತು ಮಸ್ಕತ್ ಜೀವನದ ಅನುಭವ ವನ್ನು ಜತೆಗೆ ಕೆನಡ, ತೈವಾನ್, ಚೈನಾ ಪ್ರವಾಸ ಸಹ ಹಂಚಿಕೊಂಡೆ.






ಈಗ ರಾಂಪುರ ತುಂಬಾ ದೊಡ್ಡದಾಗಿದೆ, ೫೦೦೦೦ ಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ ಅಂತ ಗೊತ್ತಾಯಿತು. ನಾವಿದ್ದಾಗ ಒಂದೇ ಹೈಸ್ಕೂಲು ಇತ್ತು ಹಾಗು ಆಗ ತಾನೆ ಪಿಯುಸಿ ಕಾಲೇಜು ಶುರುವಾಗಿತ್ತು. ಈಗ ಒಟ್ಟು ೪ ಪ್ರೌಡಶಾಲೆಗಳು ಅದರಲ್ಲಿ ಒಂದು ಆಂಗ್ಲ ಮಾಧ್ಯಮ ಶಾಲೆಯಿದೆ. ೪ ಐಟಿಐ ಕಾಲೇಜು, ೧ ಪದವಿ ಕಾಲೇಜು ಶುರುವಾಗಿದೆ. ಇದರ ಜತೆಗೆ ನೂರಾರು ವಿಧ್ಯಾರ್ಥಿಗಳು ೩೫ ಕಿ.ಮಿ. ದೂರದ ಬಳ್ಳಾರಿ ಮತ್ತು ೨೫ ಕಿ.ಮಿ ದೂರದ ಮೊಳಕಾಲ್ಮೂರಿಗೆ ಕಾಲೇಜುಗಳಿಗೆ ಸೇರಿದ್ದಾರೆ. ಹಾಗೂ ವೃತ್ತಿ ಪರ ಶಿಕ್ಷಣಕ್ಕಾಗಿ ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಹುಬ್ಬಳ್ಳಿ ಮತ್ತು ಬೆಂಗಳೂರಿನ ಕಾಲೇಜುಗಳಲ್ಲಿ ಓದುತಿದ್ದಾರೆ ಅಂತ ತಿಳಿಯಿತು.



ಊರು ತುಂಬ ಬದಲಾಗಿದ್ದು, ಈಗ ಕುಬೇರ ನಗರ, ಬಸವೇಶ್ವರ ನಗರ ಮತ್ತು ಹಳೇ ಊರಿನ ವ್ಯಾಪ್ತಿಯು ದೊಡ್ಡದಾಗಿದೆ.  ರಾಂಪುರದ ಮೂಲ ನಿವಾಸಿಗಳ ಆರ್ಥಿಕ ಹಾಗು ಸಾಮಾಜಿಕ ಪರಿಸ್ಥಿತಿ ಅಂತಹ ಬದಲಾವಣೆ ಯಾಗಿಲ್ಲ. ಆದರೆ ಬೇರೆ ಊರಿನಿಂದ ಬಂದು ನೆಲೆಸಿರುವವರ ಪರಿಸ್ಥಿತಿ ಮಾತ್ರ ಆಗಾಧ ಬದಲಾವಣೆ ಯಾಗಿದೆ.


ರಾಂಪುರದಲ್ಲಿ ಸೈಟ್ ಗಳ ಬೆಲೆ ಗಗನಕ್ಕೇರಿದೆ, ಸೈಟ್ ಕೊಳ್ಳಲಿಕ್ಕೆ ೨೦-೨೫ ಲಕ್ಷ ವ್ಯಯಿಸಬೇಕಾಗುತ್ತೆ ಅನ್ನುವುದು ಬದಲಾಗಿರುವ ರಾಂಪುರದ ಇಂದಿನ ಪರಿಸ್ಥಿತಿಗೆ ಜ್ವಲಂತ ನಿದರ್ಶನ. ಊರಿನಲ್ಲಿ ಒಂದು ಶಾಶ್ವತ ನೀರಾವರಿ ಯೋಜನೆ ಯಿಲ್ಲ, ಹೊಲಗದ್ದೆಗಳೆಲ್ಲ ಬರಡಾಗಿವೆ ಜನರಲ್ಲಿ ದುಡಿಯುವುದಿಕ್ಕೆ ಹೊಸ ಮಾರ್ಗಗಳಿಲ್ಲ, ಬಸ್ಟಾಂಡಿನಲ್ಲಿ, ರಥಬೀದಿಯಲ್ಲಿ ನೂರಾರು ಅಂಗಡಿಗಳಾಗಿವೆ ಇದರಿಂದ ಕೆಲವರ ಪರಿಸ್ಥಿತಿ ಸುಧಾರಿಸಿದೆ ಅನ್ನುವುದು ಸಮಾಧಾನದ ಸಂಗತಿ.



ಊರಿನಲ್ಲಿ ನೂರಾರು ಜನ ಪದವಿಧರರಾಗಿದ್ದಾರೆ, ಇಂಜಿನೀಯರಿಂಗ್, ಡಾಕ್ಟರ್ ಮತ್ತೆಲ್ಲೋ ಕೆಲವರು ಬಿಬಿಎಮ್, ಡಿಪ್ಲೊಮಾ, ಎಮ್ಸಿಎ ಮಾಡಿಕೊಂಡ ಕೆಲವರು ಬೆಂಗಳೂರು, ಮೈಸೂರು ಮುಂತಾದ ಕಡೆ ಕೆಲಸದಲ್ಲಿದ್ದು, ಬಿಎ ಬಿಎಡ್, ಬಿಕಾಮ್, ಬಿಎಸ್ಸಿ, ಎಮ್ ಎ, ಡಿಎಡ್, ಡಿಪ್ಲೊಮಾ, ಐಟಿಐ ಶಿಕ್ಷಣ ಮುಗಿಸಿದ ೫೦೦ ಕ್ಕೂ ಹೆಚ್ಚು ನಿರುದ್ಯೋಗಿಗಳಿದ್ದಾರೆ ಎನ್ನುವ ಭಯಾನಕ ಸತ್ಯ ಕೇಳಿ, ಕಣ್ಣಾರೆ ಕಂಡ ಹುಡುಗರನ್ನು ನೋಡಿದಾಗ ನಂಬದೇ ಇರಲಾಗಲಿಲ್ಲ. ರಾಂಪುರ ಒಂದು ಊರಲ್ಲಿಯೆ ಇಷ್ಟೊಂದು ಜನ ಇರಬೇಕಾದರೆ, ಬೇರೆ ಊರುಗಳಲ್ಲಿ ಇನ್ನು ಎಷ್ಟಿರಬಹುದು? ಎಲ್ಲರೂ ಕನ್ನಡ ಮಾಧ್ಯಮದಲ್ಲಿ ಓದಿ ಶಿಕ್ಷಣ ಪಡೆದವರೇ, ಇವರಿಗೆಲ್ಲ ಯಾರು ಕೆಲಸ ಕೊಡ್ತಾರೆ, ಇವರ ಭವಿಷ್ಯವೇನು? ನಮ್ಮ ಶಿಕ್ಷಣ ವ್ಯವಸ್ಥೆ, ಕಾಲೇಜುಗಳು ವಿಧ್ಯಾರ್ಥಿಗಳನ್ನು ಪದವಿದರ ರನ್ನಾಗಿ ತಯಾರು ಮಾಡುವ ಫ್ಯಾಕ್ಟರಿಗಳಾಗಿಬಿಟ್ಟರೆ ಇವರಿಗೆಲ್ಲ ಬದುಕು ಕಟ್ಟಿಕೊಳ್ಳುವುದನ್ನು ಕಲಿಸಿ ಕೊಡುವವರು ಯಾರು.




ನಾನು ಬೆಂಗಳೂರಿಗೆ ಬಂದು ೨೦ ವರ್ಷಗಳಾಗುತ್ತ ಬಂತು, ಮೊದಲಿಗೆ ಬಂದಾಗ ಬೆಂಗಳೂರಿನಲ್ಲಿ ಹೇಗೆ ಬದುಕಬಹುದು ಬದುಕುವುದಿಕ್ಕೆ ಏನೇನು ಮಾರ್ಗ ಗಳಿವೆ ಜೀವನದಲ್ಲಿ ಮುಂದೆ ಬರುವುದು ಹೇಗೆ? ಒಂದು ನೆಲೆ ಕಂಡು ಕೊಳ್ಳುವುದು ಹೇಗೆ ಅಂತ ನೂರಾರು ಜನ ಯೋಚಿಸುತ್ತ ವರ್ಷಗಳೇ ಕಳೆದು ಹೋಗಿಬಿಡುತ್ತೆ. ಐಕ್ಯು ಜಾಸ್ತಿ ಇದ್ದವರು ಹೇಗೇಗೊ ದಾರಿ ಕಂಡು ಕೊಂಡು ಬಿಡುತ್ತಾರೆ. ಮೊದಮೊದಲಿಗೆ ಬೆಂಗಳೂರಿಗರ ತರಹ ಮಾತನಾಡುವುದನ್ನು ರೂಡಿ ಮಾಡಿಕೊಳ್ಳುತ್ತಾರೆ. ನಂತರ ಇಂಗ್ಲೀಷ್, ಹಿಂದಿ, ತಮಿಳ್, ತೆಲುಗು ಸಹ ಜತೆ ಜತೆಗೆ ಕಲಿತುಕೊಂಡು ಬಿಡುತ್ತಾರೆ. ಉತ್ತಮ ಅವಕಾಶ ದೊರೆತಾಗ, ಊರು ಬಿಟ್ಟು ಬೇರೋಂದು ಊರಿಗೆ ಹೋಗಿ ಅಲ್ಲಿ ನೆಲೆಸುತ್ತಾರೆ. ನಾನು ಸುಮಾರು ಊರುಗಳನ್ನು ಸುತ್ತಿದ್ದೇನೆ. ಭಾರತವಿರಲಿ, ಹೊರದೇಶವಿರಲಿ, ಎಲ್ಲಕಡೆಯಲ್ಲು ಹಲವಾರು ಕನ್ನಡಿಗರನ್ನು ಕಂಡಿದ್ದೇನೆ. ಬದುಕುವುದಕ್ಕೆ ಒಂದು ದಾರಿಬೇಕು, ಅದನ್ನು ಹೇಗಾದರು ಕಂಡು ಕೊಂಡುಬಿಡುತ್ತಾರೆ. ಈ ವಿಷಯದಲ್ಲಿ ಮಲೆಯಾಳಿಗಳು ಬಹಳ ಹುಷಾರು. ನಾನು ಗಲ್ಫ್ ರಾಷ್ಟ್ರಗಳಲ್ಲಿ ಲಕ್ಷಾಂತರ ಜನ ಮಲಯಾಳಿಗಳನ್ನು ನೋಡಿದ್ದೇನೆ. ಅವರ ಭವಿಷ್ಯಕ್ಕೆ ಅವರ ಬದುಕಿಗೆ ಅವರ ಜೀವನಕ್ಕೆ ಕೇವಲ ಕೇರಳ ಅಥವ ಮಲೆಯಾಳಿ ಭಾಷೆ ಮಾತ್ರ ಕಾರಣವಲ್ಲ ಅವರ ಭಾಷೆ ಮೇಲೆ ಯಿರುವ ಅಭಿಮಾನವಲ್ಲ, ಅವರ ಜೀವನೋತ್ಸಾಹ. ಬರೀ ದುಡಿಬೇಕು, ಬದುಕಬೇಕು ಅನ್ನೋ ಅಚಲ ನಿರ್ಧಾರ.




ಸೋಶಿಯಲ್ ಮೀಡಿಯದಲ್ಲಿ ನೆಟ್(ಅಂತರ್ಜಾಲ) ಕನ್ನಡ ಹೋರಾಟ ಗಾರರ ಒಂದು ಗುಂಪು ಇದೆ. ಅವರ ಗೋಡೆಗಳ ಮೇಲೆ ಕನ್ನಡ ಅಭಿಮಾನದ ನೂರಾರು ಪೋಸ್ಟ್ ಗಳನ್ನು ಹಾಕ್ತಿರ್ತಾರೆ. ಪ್ರತಿಯೊಂದರಲ್ಲೂ ಕನ್ನಡಭಿಮಾನದ ಅಭಿಯಾನ ಶುರುಮಾಡೋದಿಕ್ಕೆ ಪ್ರಯತ್ನಿಸುತ್ತಿರುತ್ತಾರೆ. ಮಾಲ್ ಗಳಲ್ಲಿ ಕನ್ನಡ, ರೈಲ್ವೆ ನಲ್ಲಿ ಕನ್ನಡ, ಬ್ಯಾಂಕ್, ಮೆಟ್ರೊ, ಬಸ್, ವಿಮಾನ ನಿಲ್ದಾಣ ಹಾಗೂ ಬೆಂಗಳೂರಿಗೆ ಬರುವ ಎಲ್ಲ ವಿಮಾನಗಳಲ್ಲೂ ಕನ್ನಡ ಬಳಕೆ ಬಗ್ಗೆ ಅರಿವು ಮೂಡಿಸುತ್ತಿರುತ್ತಾರೆ. ನ್ಯಾಯಾಲಯ ಕನ್ನಡ ಮಾಧ್ಯಮ ಶಿಕ್ಷಣ ಕುರಿತು ತೀರ್ಪು ನೀಡಿದಾಗ ಹಲವಾರು ಜನ ಅವರವರ ರೀತಿಯಲ್ಲಿ ಪ್ರತಿಕ್ರಿಯೆ ಅಭಿಪ್ರಾಯ ನೀಡಿದರು.

ಸಂತೋಷ, ಇದೆಲ್ಲ ಸರಿ ಆದರೆ, ಈಗ ನಮ್ಮ ಊರಿನ ಹಾಗೂ ರಾಜ್ಯದ ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿ ನಿರುದ್ಯೋಗಿಗಳಾಗಿರುವ ಸಾವಿರಾರು ಜನರ ಕಥೆ ಏನು? ಅವರಿಗೆಲ್ಲ ಮುಂದಿನ ದಾರಿಯೇನು? ಇವರಿಗೆಲ್ಲ, ಉದ್ಯೋಗವನ್ನ ಈ ಕನ್ನಡ ಅಭಿಮಾನ ಸಂಘ ಗಳು, ಸೋಶಿಯಲ್ ಮೀಡಿಯದಲ್ಲಿ ಕನ್ನಡ ನೆಟ್ ಹೋರಾಟ ಗಾರರು ಕೊಡ್ತಾರಾ? ಈ ಜನಕ್ಕೆ ಒಳ್ಳೋಳ್ಳೆ ಸಾಫ್ಟ್ ವೇರ್ ಕಂಪನಿ,  ಎಮ್ ಎನ್ ಸಿ, ಇತ್ತೀಚಿನ ಮಾಧ್ಯಮ ಗಳು, ಆಡ್ ಏಜೆನ್ಸಿ ಇನ್ನು ಮುಂತಾದಕಡೆ ಗಳಲ್ಲಿ ಲಕ್ಷಾಂತರ ಸಂಭಳ ಸಿಗುತ್ತೆ. ಇನ್ನು ಕನ್ನಡ ಸಂಘಗಳು ಆರ್ಥಿಕ ವಾಗಿ ಬಲಾಡ್ಯವಾಗಿವೆ. ಸರ್ಕಾರ ಗಾಡ ನಿದ್ರೆ ಯಲ್ಲಿದೆ. ಟಿವಿ ಮಾಧ್ಯಮಗಳಿಗೆ, ಟಿ ಆರ್ ಪಿ ಇರುವ ವಿಷಯ ಸಿಕ್ಕರೆ ಎರಡು ಮೂರು ದಿನಕ್ಕಾಗುವಷ್ಟು ಸರಕು ಸಿಕ್ಕಂತಾಗುತ್ತೆ. ಅವರೆಲ್ಲ ಇಂತಹ ಉದ್ಯೋಗ ಸಮಸ್ಯೆ ಬಗ್ಗೆ ಬೆಳಕು ಚೆಲ್ಲೋ ಪ್ರಯತ್ನ ಖಂಡಿತ ಮಾಡೋದಿಲ್ಲ. ಪರಿಸ್ಥಿತಿ ಹೀಗಿರುವಾಗ ಕನ್ನಡ ಮಾಧ್ಯಮದಲ್ಲಿ ಓದಿ   ಬಿಎ, ಬಿಎಡ್, ಬಿಕಾಮ್, ಬಿಎಸ್ಸಿ, ಎಮ್ ಎ, ಮುಗಿಸಿ ಕೆಲಸ ವಿಲ್ಲದೆ ಕುಳಿತಿರುವ ಜನರ ಕುರಿತು ಯಾರು ಯೋಚಿಸ್ತಾರೆ.



ಕರ್ನಾಟಕದಲ್ಲಿ ಅಧಿಕಾರ ನಡೆಸಿದ ಪ್ರತಿಯೊಬ್ಬರು ಕರ್ನಾಟಕದಲ್ಲಿ ಹುಟ್ಟಿ ಬೆಳೆದವರೇ, ಆದರೂ ವರ್ಷದಿಂದ ವರ್ಷಕ್ಕೆ ನಿರುದ್ಯೋಗ ಸಮಸ್ಯೆ ಬೆಳೆಯುತ್ತ ಇದೆ ಇದಕ್ಕೆ ಪರಿಹಾರ ಸಿಗುವ ಲಕ್ಷಣ ಕಾಣುತ್ತಿಲ್ಲ. ಇಂತಹ ಸಮಯದಲ್ಲಿ ಸರಕಾರವನ್ನು ದೂಷಿಸಿ ಪ್ರಯೋಜನವೇನು? ನಮ್ಮ ದಾರಿ ನಾವು ಕಂಡು ಕೊಳ್ಳಬೇಕು.




ಮಾಧ್ಯಮಿಕ ಶಾಲೆ ಯಿಂದ ಹೈಸ್ಕೂಲ್ ಗೆ ಸೇರಿದಾಗ ೮ ನೇ ತರಗತಿಯಲ್ಲಿ ಮೊದಲನೆ ದಿನದ ಇಂಗ್ಲೀಷ್ ವಿಷಯದ ಬಗ್ಗೆ ನಮ್ಮ ಗುರುಗಳಾದ ಕೆಜಿಎನ್ ಮೇಷ್ಟ್ರು ಇಂಗ್ಲೀಷ್ ಭಾಷೆ ಯ ಪ್ರಾಮುಖ್ಯತೆ ಯನ್ನು ವಿವರಿಸಿದಿದ್ದು ಇಂದಿಗೂ ಸಹ ಬಹಳ ಚೆನ್ನಾಗಿ ನೆನಪಿದೆ. ಸಂವಹನ ನಡೆಸಲು ಇಂಗ್ಲೀಷ್ ಭಾಷೆ ಎಷ್ಟು ಮುಖ್ಯ ಎನ್ನುವುದನ್ನು ನನ್ನ ಉದಾಹರಣೆ ಕೊಟ್ಟು ವಿವರಿಸಿದ್ದರು. "ಬಸ್ಟಾಂಡಿನಲ್ಲಿ ರಂಗನಾಥ ನ ಅಂಗಡಿಯಿದೆ, ಅಲ್ಲಿ ಒಂದು ಕಾರು ಬಂದು ನಿಲ್ಲಿಸಿ ಕೆಲವರು ವಿಳಾಸದ ಬಗ್ಗೆ ವಿಚಾರಿಸಲು ರಂಗನಾಥನ ಅಂಗಡಿ ಬಳಿ ಬರುತ್ತಾರೆ, ಆದರೆ ಅವರಿಗೆ ಕನ್ನಡ ಬರಲ್ಲ ಇಂಗ್ಲೀಶ್ ಅಥವ ಹಿಂದಿ ಬರುತ್ತೆ ಅಂದ್ಕೊಳ್ಳಿ, ಆಗ ರಂಗನಾಥ ನಿಗೆ ಕನ್ನಡ ಬಿಟ್ಟು ಬೇರೆ ಭಾಷೆ ಬರದೆ ಇದ್ದರೆ ಭಾಷಾ ಸಮಸ್ಯೆ ಎದುರಾಗುತ್ತೆ ಅವರಿಗೆ ಸರಿಯಾಗಿ ಉತ್ತರ ಕೊಡಲಿಕ್ಕೆ ಆಗದೆ ತಡಬಡಾಯಿಸುತ್ತಾನೆ, ಅಥವ ವಿದೇಶ ಪ್ರವಾಸದ ಅವಕಾಶ ಸಿಕ್ಕಾಗ ಅಲ್ಲಿ ಕಮ್ಯುನಿಕೇಶನ್ ಗೆ ಇಂಗ್ಲೀಷ್ ಅತ್ಯಗತ್ಯ, ಹೀಗೆ ಎಲ್ಲ ಕಾರಣದಿಂದ ಇಂಗ್ಲೀಷ್ ಗೆ ತನ್ನದೇ ಆದ ಪ್ರಾಮುಖ್ಯತೆ ಇದೆ, ಆದ್ದರಿಂದ ತಾವೆಲ್ಲರು ಮನಸಿಟ್ಟು ಅಭ್ಯಸಿಸಿದರೆ ಮುಂದೆ ಇದರ ಪ್ರಯೋಜನ ಖಂಡಿತ ಅಂತ ಹೇಳಿದ್ದು ಇನ್ನು ನನಗೆ ಚೆನ್ನಾಗಿ ನೆನಪಿದೆ. ಅದರ ಅನುಭವ ಈಗ ಆಗ್ತಾಯಿದೆ. ಕೂಪ ಮಂಡೂಕ ತರಹ ನಾನು ಬೇರೆ ರೀತಿಯಲ್ಲಿ ಆಲೋಚಿಸಿದಿದ್ದರೆ ಇಷ್ಟೆಲ್ಲ ಜೀವನಾನುಭವ ಖಂಡಿತ ನನಗೆ ಆಗ್ತಾಯಿರಲಿಲ್ಲ.




ಕನ್ನಡಮಾಧ್ಯಮದಲ್ಲಿ ಕಲಿತು ವಿಜ್ನಾನಿಗಳಾಗಿದ್ದಾರೆ, ಇಂಜಿನೀಯರ್ ಗಳಾಗಿದ್ದಾರೆ, ಡಾಕ್ಟರ್ ಗಳಾಗಿದ್ದಾರೆ ಅಂತ ಯಾವಾಗಲು ಹೇಳ್ತಾರೆ, ಆದರೆ ಅವರ ಹೆಸರನ್ನು ಹೆಸರಿಸಿ ಅಂದರೆ, ಸರ್ ಎಂ. ವಿಶ್ವೇಶ್ವರಯ್ಯ, ಸಿ.ಎನ್.ಆರ್ ರಾವ್ ಇನ್ನು ಮುಂತಾದ ಖ್ಯಾತ ನಾಮರ ಹೆಸರು ಮಾತ್ರ ಹೇಳ್ತಾರೆ. ಅಲ್ಲ ಸ್ವಾಮಿ ನಾವು ಕನ್ನಡಿಗರು ೬ ಕೋಟಿ ಜನ ಇದೀವಿ, ಉದಾಹರಣೆ ಕೊಡಿ ಅಂದರೆ ೨೦-೩೦ ಹೆಸರು ಮಾತ್ರ ಹೇಳ್ತಿರಾ! ಆದರೆ ಮಿಕ್ಕ ಜನರ ಬಗ್ಗೆ ಯಾಕೆ ಏನ್ ಹೇಳಲ್ಲ?

ಒಂದು ಗ್ರಾಮದಲ್ಲಿ  ೧೦೦-೨೦೦ ಜನ ಹೈಸ್ಕೂಲ್ ವಿಧ್ಯಾರ್ಥಿ ಗಳಲ್ಲಿ ಬೆರಳಣಿಕೆ ಯಷ್ಟು ಮಾತ್ರ ಉನ್ನತ ಶಿಕ್ಷಣಕ್ಕೆ ಹೋಗ್ತಾರೆ. ಕಾರಣ ಪಿಯುಸಿ ಪಿ.ಸಿ.ಎಮ್.ಬಿ ನಲ್ಲಿ ಅತಿ ಹೆಚ್ಚಿನ ಜನ ಫ಼ೇಲ್ ಆಗುತ್ತಾರೆ. ಮುಂದೆ ಶಿಕ್ಷಣ ಮುಂದುವರೆಸಿಲಿಕ್ಕೆ ಆಗದೆ ಬಿಕಾಮ್ ಅಥವ ಬಿಎ ಮಾಡ್ತಾರೆ. ನಂತರ ಉದ್ಯೋಗ ವಿಲ್ಲದೆ ಪರದಾಡುತ್ತಾರೆ. ಒಂದು ಜಿಲ್ಲೆಯಿಂದ ಪ್ರತಿ ವರ್ಷ ೧೦೦-೨೦೦ ಜನ ಪ್ರತಿಭಾನ್ವಿತ ವಿಧ್ಯಾರ್ಥಿಗಳು ಮಾತ್ರ ಉನ್ನತ ಶಿಕ್ಷಣ ವ್ಯಾಸಂಗ ಮಾಡಿ ಅವರ ಭವಿಷ್ಯ ರೂಪಿಸಿ ಕೊಳ್ತಾರೆ, ಮಿಕ್ಕವರು ಏನೋ ಮಾಡಿಕೊಂಡು ಅವರ ಬದುಕಿನ ದಾರಿಯನ್ನು ಕಂಡು ಕೊಳ್ತಾರೆ.







ಕೇರಳದಲ್ಲಿ ಕೈಗಾರಿಕ ಉದ್ದಿಮೆ ಗಳು ಬಹು ಕಡಿಮೆ, ಜನ ಉದ್ಯೋಗಕ್ಕಾಗಿ ಸರ್ಕಾರಿ ಕೆಲಸವನ್ನು ನೆಚ್ಚಿ ಕುಳಿತುಕೊಳ್ಳುವುದಿಲ್ಲ. ಉದ್ಯೋಗ ಅರಸಿ ವಲಸೆ ಹೋಗುತ್ತಾರೆ. ಗಲ್ಫ್ ರಾಷ್ಟ್ರ ಗಳಲ್ಲಿ ಕೇರಳದ ಜನ ವಿಜ್ನಾನಿ ಯಿಂದ ಹಿಡಿದು ಡ್ರೈವರ್ ಕೆಲಸದವರೆಗೆ ಎಲ್ಲ ರೀತಿಯ ಕ್ಷೇತ್ರಗಳಲ್ಲಿ ಅವಕಾಶ ಹುಡುಕಿಕೊಂಡು ಲಕ್ಷಾಂತರ ಜನ ಕೆಲಸ ಮಾಡ್ತಿದ್ದಾರೆ. ಇವರಿಗೆ ಹೋಲಿಸಿದರೆ ನಮ್ಮ ಕರ್ನಾಟಕದ ಜನ ಪ್ರತಿಶತಃ ೪-೭ ರಷ್ಟಿರಬಹುದು. ಅದೂ ಮಂಗಳೂರು, ಉಡುಪಿ ಯವರು ಮಾತ್ರ. ಮಿಕ್ಕವರು ಅಪ್ಪ ಹಾಕಿದ ಆಲದ ಮರ ಅಂದು ಕೊಂಡು ಹುಟ್ಟಿದ ಊರಿನಲ್ಲಿ ಏನೋ ಕೆಲಸ ಮಾಡಿಕೊಂಡು ಆರಕ್ಕೇರದೇ ಮೂರಕ್ಕಿಳಿಯದೆ ಇದ್ದೇವೆ.




ಕರ್ನಾಟಕದ ಮೂಲೆ ಮೂಲೆಯಲ್ಲು ಒಂದು ಕಾಕ ಅಂಗಡಿಯನ್ನು ಕಾಣಬಹುದು, ಇಲ್ಲ ಅಂದರೆ ಒಂದು ಬೇಕರಿಯನ್ನು ನೋಡಬಹುದು. ಮಲೆಯಾಳಿ ಗಳನ್ನು ನಾವು ಕಲಿಯುವುದು ಬಹಳಷ್ಟಿದೆ.




ವಿಜ಼್ನಾನ, ಗಣಿತ ವನ್ನು ನಾವು ಕನ್ನಡದಲ್ಲಿ ಕಲಿತು ಸಾಧಿಸ ಬೇಕಾದದ್ದು ಏನು ಇಲ್ಲ. ಜಾಗತಿಕರಣದ ಜಗದಲ್ಲಿ ನಾವು ಪ್ರವಾಹದೊಂದಿಗೆ ಮುನ್ನುಗಬೇಕು. ಅದಕ್ಕಾಗಿ ವಿಶಾಲ ಮನೋಭಾವ ವನ್ನು ಹೊಂದಿ, ಯಾವುದೇ ಸಮಯ ಸಂಧರ್ಭ ಯಾವುದೇ ಪ್ರದೇಶದಲ್ಲಿ ಕೆಲಸ ಮಾಡುವ ಮನಸ್ಥಿತಿ ಯನ್ನು ರೂಪಿಸಿಕೊಳ್ಳಬೇಕು. ಸಂಕುಚಿತ ಮನಸ್ಸಿನಿಂದ ಆಲೋಚಿಸಿ ನಮ್ಮ ಭವಿಷ್ಯವನ್ನು ನಾವು ಹಾಳುಮಾಡಿ ಕೊಳ್ಳುವುದು ಬೇಡ. ಇದೆಲ್ಲ ಹೊಟ್ಟೆ ತುಂಬಿದ ಜನರಿಗೆ ಅರ್ಥವಾಗಲ್ಲ.

#p.s.ranganatha

Click below headings