ಬುಧವಾರ, ಜೂನ್ 5, 2019

ಕಥೆ: ಅಸ್ಥಿ ಭಾಗ-2

ಕಥೆ: ಅಸ್ಥಿ ಭಾಗ-2

ಮುಂದುವರಿದ ಭಾಗ.......
ಮತ್ತೆ ಮಸ್ಕತ್ ನಿಂದ ಫೋನ್ ಬಂತು,
ಇಲ್ಲಿ ಎಲ್ಲ ಪ್ರಕ್ರಿಯೆ ಮುಗಿದು ದೇಹವನ್ನು ಕಳುಹಿಸುವುದಕ್ಕೆ, ಇನ್ನು ನಾಲ್ಕೈದು ದಿನ ಬೇಕಾಗಬಹುದು. ಅಂತ ಹೇಳಿದರು.
ಸಾರ್, ನನ್ನ ಮಕ್ಕಳ ಭವಿಷ್ಯದ ದೃಷ್ಟಿಯಿಂದ ನಾನೊಂದು ನಿರ್ಧಾರಕ್ಕೆ ಬಂದಿದ್ದೀನಿ., ಅವರ ಅಂತ್ಯಕ್ರಿಯೆಯನ್ನು ಅಲ್ಲಿಯೇ ಮಾಡಿ, ಅವರ ಅಸ್ಥಿಯನ್ನ ಮಾತ್ರ ಕಳುಹಿಸಿಕೊಡಿ, ..... ದೇಹ ತರುವುದಕ್ಕೆ, ಎಷ್ಟು ಹಣ ಖರ್ಚಾಗುತ್ತೋ ಆ ಹಣವನ್ನು ನನ್ನ ಮಕ್ಕಳ ಹೆಸರಿನಲ್ಲಿ ಫಿಕ್ಸ್ ಡ್ ಡಿಪಾಸಿಟ್ ಮಾಡಿಬಿಡಿ ಸಾರ್. ಎಂದು ಹೇಳೀ ಜೋರಾಗಿ ಅಳುವುದಕ್ಕೆ ಶುರುಮಾಡಿದಳು.
ಆ ನಿರ್ಧಾರವನ್ನು ಕೇಳಿ ಎಲ್ಲರೂ ಆಶ್ಚರ್ಯಕ್ಕೊಳಗಾದರು, ಯಾರ ಬಾಯಿಯಿಂದಲೂ ಮಾತು ಬರಲಿಲ್ಲ....
ಇವಳಿಗೇನು ಬಂತು ಇಂತಹ ಬುದ್ದಿ, ಕನಿಷ್ಟ ಪಕ್ಷ ಗಂಡನ ಮುಖವನ್ನ ಕೊನೇ ಸಾರಿ ನೋಡಬೇಕು ಅನ್ನೋ ಭಾವನೆ ಇಲ್ಲವಲ್ಲ, ಎಂತಹ ಕಠಿಣ ಮನಸ್ಸು ದೇವರೇ ಅಂತ ಅಲ್ಲಿರುವ ಜನ ಮಾತನಾಡತೊಡಗಿದರು. ಆದರೆ, ಮಕ್ಕಳ ಭವಿಷ್ಯದ ದೃಷ್ಟಿ ಹಾಗು ವಯಸ್ಸಾದ ಅತ್ತೆಯ ಪರಿಸ್ಥಿತಿ ಯನ್ನು ಮನಸ್ಸಲ್ಲಿಟ್ಟುಕೊಂಡು ಆಲೋಚನೆ ಮಾಡಿದ್ದು ಯಾರಿಗೂ ಅರ್ಥವಾಗಲಿಲ್ಲ.
ಕೆಲವರು, ನೋಡಮ್ಮ ನಿನ್ನ ನಿರ್ಧಾರ ತಪ್ಪು ನಿನ್ನ ದೃಷ್ಟಿಯಿಂದ ಸರಿ ಇರಬಹುದು, ಆದರೆ ಇಲ್ಲಿ ತಾಯಿ, ಮಕ್ಕಳು, ಬಂಧು ಬಳಗ, ಸ್ನೇಹಿತರು ಇವರೆಲ್ಲರಿಗೂ ಮುಖವನ್ನ ಕೊನೇ ಸಾರಿ ತೋರಿಸಿ ಇಲ್ಲಿಯೇ ಅಂತ್ಯಕ್ರಿಯೆ ಮಾಡುವುದು ಒಳ್ಳೆಯದು ಅಂತ ವಿವರಿಸಿದರು...
ಆದರೆ ಮೀನಾಕ್ಷಿ ಮಾತ್ರ ತನ್ನ ನಿರ್ಧಾರ ಬದಲಿಸಲಿಲ್ಲ.
*****
ಒಂದು ದಿನ ಕಳೆಯಿತು,
ಮಸ್ಕತ್ ನಲ್ಲಿ, ಜನರಿಂದ ಜನರಿಗೆ ಈ ವಿಷಯ ತಿಳಿಯುತ್ತ ಹೋಯಿತು. ಕೆಲವರು ಒಳ್ಳೆ ನಿರ್ಧಾರ ಅಂತ ಅಂದುಕೊಂಡರೆ, ಇನ್ನೂ ಕೆಲವರಿಗೆ ಹೆಂಡತಿಗೆ ಗಂಡನ ದೇಹ ಬೇಡವಂತೆ ಹಣ ಮಾತ್ರ ಬೇಕು ಎನ್ನುವ ನೆಗಟೀವ್ ವ್ಯಾಖ್ಯಾನ ಮಾಡತೊಡಗಿದರು. ಕೆಲ ಸಮಾಜ ಸೇವೆಯಲ್ಲಿ ತೊಡಗಿದ್ದ ಜನರಿಗೂ ಸಹ ಈ ವಿಷಯ ಗೊತ್ತಾಯಿತು. ಇಂತಹ ಸಂಧಿಗ್ದ ಪರಿಸ್ಥಿತಿಯಲ್ಲಿ ಸುಮಾರು ಜನರಿಗೆ ಸಹಾಯ ಹಸ್ತ ಚಾಚಿದ್ದ ಸಮಾಜ ಸೇವಕರಾದ ನಾಗರಾಜ್ ಶೆಟ್ಟರು, ಶಶಿಕಾಂತ್ ಶೆಟ್ಟರು ಮತ್ತಿತರಿಗೆ ವಿಷಯ ಗೊತ್ತಾಗಿ, ಇದೇನಿದು ಈ ಕೇಸ್ ವಿಚಿತ್ರ ವಾಗಿದೆಯಲ್ಲ ಅಂತ, ಸರಿ ಇದರ ಮೂಲ ಕಾರಣ ತಿಳಿದುಕೊಳ್ಳೋಣ ಹಾಗೂ ಸತ್ಯಾಸತ್ಯತೆ ತಿಳಿಯಲು ಅಂತ ಊರಿನಲ್ಲಿ ತಮ್ಮ ಪರಿಚಯಸ್ತರ ಮುಖಾಂತರ ವಿಚಾರಿಸಲು ಹೇಳಿದರು. ಸಂಜೆ ಒಳಗೆ, ಊರಿನಿಂದ ಸಂಪೂರ್ಣ ಮಾಹಿತಿ ಬಂತು. ಅವರಿಗೆ ಯಾವುದೇ ಆಸ್ತಿ, ಹೊಲ ಗದ್ದೆ, ಇಲ್ಲ, ಇಬ್ಬರು ಹೆಣ್ಣು ಮಕ್ಕಳು, ವಯಸ್ಸಾದ ತಾಯಿ ಮಾತ್ರ ಇದ್ದಾರೆ, ಮನೆಗೆ ಆಧಾರವಾಗಿದ್ದದ್ದು ಮಾತ್ರ ರಮೇಶಣ್ಣ ಎನ್ನುವ ಸತ್ಯ ತಿಳಿಯಿತು. ಮುಂದೆ ಏನು ಮಾಡಬೇಕು ಎನ್ನುವ ಯೋಜನೆಯನ್ನು ರೂಪಿಸಿದರು, ಆಗಲೇ ಎರಡು ದಿನ ಕಳೆದಿತ್ತು, ಮುಂದಿನ ದಿನ, ಸ್ಥಳೀಯ ಪೋಲೀಸರಿಂದ ದೇಹ ದೊರೆಯುವುದಲಿತ್ತು, ತಕ್ಷಣ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಅಂದೇ ಧೀರ್ಘವಾಗಿ ಆಲೋಚಿಸ ತೊಡಗಿದರು.
ಕಂಪನಿಯವರು ಬೇರೆ ರೀತಿಯಲ್ಲಿ ಆಲೋಚಿಸತೊಡಗಿದ್ದರು, ಮನೆಯವರ ನಿರ್ಧಾರಕ್ಕೆ ನಾವು ಸಹಮತ ಕೊಡುವುದಿಕ್ಕಾಗುವುದಿಲ್ಲ. ಅವರ ಮನೆಯವರು ಸೂಚಿಸಿದವರಿಗೆ ದೇಹವನ್ನು ಹಸ್ತಾಂತರಿಸಲು ನಿರ್ಧರಿಸಿದರು.
*****
ಸ್ನೇಹಿತರು ಮತ್ತು ಬಂಧುಗಳಿಗೆ ಮೀನಾಕ್ಷಿಯ ನಿರ್ಧಾರ ಅಷ್ಟೊಂದು ಸರಿ ಬರಲಿಲ್ಲ. ಕೆಲವರು ನೇರವಾಗಿ ಹೇಳಿದರೆ, ಇನ್ನು ಕೆಲವರು ಮೆತ್ತಗೆ ಗೊಣಗಾಡುತಿದ್ದರು. ಹೀಗೆ ಮಾತಿಗೆ ಮಾತು ಬೆಳೀತ ಇತ್ತು, ಜನರ ಮಾತು ಕೇಳಿ ಬೇಸರದಿಂದ ಮನೆಯಿಂದ ಹೊರಗೆ ಬಂದು, ನೋಡೀ, ನನ್ನ ಕಷ್ಟ ಅರ್ಥ ಮಾಡಿಕೊಂಡಿದ್ದಿದ್ದರೆ, ನೀವೆಲ್ಲ ಹೀಗೆ ಬಾಯಿಗೆ ಬಂದಂಗೆ ಮಾತಾಡ್ತಾಯಿರಲಿಲ್ಲ. ನಿಮ್ಮಲ್ಲಿ ಯಾರಾದರು, ನನ್ನ ಅತ್ತೆ, ನನ್ನ ಮಕ್ಕಳನ್ನ ನೋಡಿಕೊಂಡು, ಅವರನ್ನು ಚೆನ್ನಾಗಿ ಓದಿಸಿ, ಒಳ್ಳೆ ಮನೆತನದ ಸಂಭಂದ ಹುಡುಕಿ ಅವರಿಗೆ ಮದುವೆ ಮಾಡಿಕೊಡ್ತೀನಿ  ಅಂತ ಯಾರಾದರು ಮುಂದೆ ಬಂದರೆ, ನಾನು ಅವರ ಮನೆ ಹೊಲ ಗದ್ದೆ ಕೆಲಸ ಮಾಡಿಕೊಂಡು ಜೀತದ ಆಳಾಗಿ ದುಡಿತೀನಿ.
ಯಾರಾದರು ನೋಡ್ಕೋತೀರ................ ಹಾಗಿದ್ರೆ ಹೇಳಿ...
ಹೀಗೆ ರಪ್ಪಂತ ಮುಖದ ಮೇಲೆ ಹೊಡೆದಂತೆ, ಮಾತಾಡಿದ ಮೀನಾಕ್ಷಿಯನ್ನ ಕಂಡ ಜನ ಸುಮ್ಮನಾದರು. ಹಳ್ಳಿ ಜನ, ಬಡತನ ದಿಂದ ಬಳಲಿ ಬೆಂಡಾದವರು, ಯಾರೂ ಸಹಾಯ ಮಾಡುವ ಪರಿಸ್ಥಿತಿಯಲ್ಲಿಲ್ಲದವರು, ಯಾವುದೇ ಉತ್ತರ ಕೊಡಲು ಸಾಧ್ಯವಿರಲಿಲ್ಲ. ಕೆಲವರು, ಹುಟ್ಟಿದ ದೇವರು ಹುಲ್ಲು ತಿನ್ನಿಸಲ್ಲ, ಹೇಗಾದರು ಹಾಗೇ ಆಗುತ್ತೆ, ಇಷ್ಟೊಂದು ಯೋಚನೆ ಮಾಡೋ ಪರಿಸ್ಥಿತಿ ಯಾಕಮ್ಮ ಎಂದು ಕೇಳಿದರೆ..............
ನಾನು ಕಷ್ಟವನ್ನ ಇವತ್ತು ನೋಡ್ತೀಲ್ಲ. ನಮ್ಮ ಅಪ್ಪ ಸತ್ತ ಮೇಲೆ, ನಮ್ಮ ಅಮ್ಮ ನಮ್ಮನ್ನ ಎಷ್ಟು ಕಷ್ಟದಿಂದ ಬೆಳೆಸಿದಾಳೆ. ಓದಿ ವಿದ್ಯಾವಂತೆ ಯಾಗಲೂ ಸಾಧ್ಯವಿರಲಿಲ್ಲ. ಅದೇ ಪರಿಸ್ಥಿತಿ ಇವತ್ತು ನನ್ನ ಮುಂದಿದೆ, ಆ ಕಷ್ಟ ನನ್ನ ಮಕ್ಕಳಿಗೆ ಬೇಡ. ಅವರನ್ನ ಚೆನ್ನಾಗಿ ಓದಿಸಬೇಕು, ವಿದ್ಯಾವಂತರನ್ನಾಗಿ ಮಾಡಿ ಅವರಿಗೆ ಒಂದು ಒಳ್ಳೆಯ ಭವಿಷ್ಯ ರೂಪಿಸ ಬೇಕೆನ್ನುವುದೇ ನನ್ನ ಆಸೆ.........
ಹೀಗೆ ಮಾತಿಗೆ ಮಾತು ಬೆಳಿತಾ ಇತ್ತು, ಆದರೆ, ಭವಿಷ್ಯದ ಬಗ್ಗೆ ಯಾರಿಗೆ ಏನು ಗೊತ್ತು?
*****
ಕಂಪನಿಯ ಸಹದ್ಯೋಗಿಗಳು, ರಮೇಶಣ್ಣ ನ ಅಂತ್ಯಕ್ರಿಯೆ ಮಾಡಲು ಬೇಕಾದ ವ್ಯವಸ್ಥೆ ಮಾಡಿಕೊಳ್ಳತೊಡಗಿದ್ದರು. ಅಂತ್ಯಕ್ರಿಯೆಯ ನಂತರ, ಅಸ್ಥಿ ಯನ್ನ ಕಳಿಸಿಕೊಡುವುದಕ್ಕೆ, ಒಬ್ಬರನ್ನು ಸಜ್ಜು ಗೊಳಿಸಿದರು. ಈ ಪ್ರಕ್ರಿಯೆಯಲ್ಲಿ ತೊಡಗಿರುವಾಗ, ಯಾರೋ ಒಬ್ಬರು, ಏರ್ ಪೋರ್ಟ್ ನಲ್ಲಿ  ಏನಾದರು ಪ್ರಾಬ್ಲಮ್ ಆದರೆ ಏನ್ ಮಾಡ್ತೀರ? ತಗೊಂಡು ಹೋದೋರು ಸಿಕ್ಕಿ ಹಾಕಿಕೊಳ್ತಾರೆ, ವಿಚಾರಣೆ ಅದೂ ಇದೂ ಅಂತ ಸಮಯ ಹಾಳಾಗುತ್ತೆ,  ರಿಸ್ಕ್ ಯಾಕೆ ತೆಗೆದುಕೊಳ್ತೀರ, ಇದನ್ನೆಲ್ಲ ಮಾಡಬೇಡಿ ಸುಮ್ಮನೆ ಬಾಡಿನ ಕಳುಹಿಸಿಬಿಡಿ. ಅಂತ ಹೆದರಿಸಿದ್ರೆ, ಮತ್ತಿತರು ಸಂಭವನೀಯ ಸಾಧ್ಯತೆಗಳು ಹಾಗೂ ಮುಂಜಾಗ್ರತೆ ಕ್ರಮಗಳ ಬಗ್ಗೆ ಯೋಚಿಸ ತೊಡಗಿದರು.
*****
ಊರಲ್ಲಿನ ರಾಜಕೀಯ ಮುಖಂಡರುಗಳು, ಮೀನಾಕ್ಷಿ ಮನೆಗೆ ಬಂದು, ವಿಷಯ ಗೊತ್ತಾಯಿತು, ನೀನೇನು ಯೋಚಿಸಬೇಡ, ನಾವೆಲ್ಲ ಇದ್ದೀವಿ, ಸರ್ಕಾರದಿಂದ ನಿನಗೆ ಸಿಗಬೇಕಾದ ಸೌಲಭ್ಯ ದೊರಕಿಸಿಕೊಡ್ತೀವಿ. ಎಲ್ಲರೂ ಹೇಳಿದಂತೆ ಮಾಡು. ಸುಮ್ಮನೆ ಎಲ್ಲರ ವಿರೋಧ ಯಾಕೆ ಕಟ್ಟಿಕೊಳ್ತೀಯಾ....
ಅಣ್ಣಾ ನೀವು ಹೇಳಿದಂಗೆ ಆಗಲಿ,ಆದರೆ ಈ ನಮ್ಮ ಹಳ್ಳಿಗೆ, ಯಾವ ಸರ್ಕಾರಿ ಸೌಲಭ್ಯ ಸರಿಯಾಗಿ ಸಿಗ್ತಿದೆ ಹೇಳಿ?, ಕುಡಿಯುವುದಿಕ್ಕೆ ಸರಿಯಾಗಿ ನೀರು ಸಿಗ್ತಿಲ್ಲ, ಈ ನಮ್ಮ ಕಾಲೋನಿಗೆ ಈವತ್ತಿನವರೆಗೂ ರಸ್ತೆ ಹಾಕ್ಸಿಲ್ಲ, ವಿದ್ಯುತ್ ಸರಿಯಾಗಿ ಇರಲ್ಲ, ರೇಶನ್ ಕಾರ್ಡ್ ನಿಂದ ಸಾಮಾನು ತರೋದಿಕ್ಕೆ, ನಾಲ್ಕು ಕಿ.ಮಿ. ದೂರ ಹೋಗಿಬರಬೇಕು, ಅದೂ ಅಲ್ಲದೆ ಅಲ್ಲಿ ದೊರೆಯುವ ಸಾಮಾನುಗಳ ಗುಣಮಟ್ಟ ಹೇಗಿದೆ ಅಂತ ನಿಮಗೆ ಗೊತ್ತ? ಮಕ್ಕಳು ಶಾಲೆಗೆ ಹೋಗಿ ಬರೋದಿಕ್ಕೆ ಯಾವ ಬಸ್ಸು ಸಮಯಕ್ಕೆ ಸರಿಯಾಗಿ ಬರುತ್ತೆ ಹೇಳಿ? ಬರೀ ಚುನಾವಣೆ ಭರವಸೆ ಕೊಡೋದೆ ಆಯಿತು, ಕೆಲಸ ಮಾತ್ರ ಮಾಡಲ್ಲ. ಸರಿ, ಅವರು ಹೇಗೋ ಶಾಲೆಗೆ ಹೋಗಿ ಬಂದು ಮಾಡಿ, ಸ್ವಲ್ಪ ತಮ್ಮ ಬುದ್ದಿ ಮಟ್ಟಕ್ಕೆ ತಕ್ಕಂತೆ ಮಾರ್ಕ್ಸ್ ತೆಗೆದು ಕೊಂಡರೆ, ಅವರಿಗೆ ಒಳ್ಳೆ ಕಾಲೇಜಲ್ಲಿ ಸೀಟ್ ಯಾರು ಕೊಡ್ತಾರೆ, ಆ ಕಾಲೇಜಿನ ಡೊನೇಶನ್, ಫೀಜ್ ಯಾರು ಕೊಡ್ತಾರೆ. ಅವರ ವಿದ್ಯಭ್ಯಾಸ ಮುಗಿದ ಮೇಲೆ ಅವರಿಗೆ ಒಂದು ಸರ್ಕಾರಿ ಉದ್ಯೋಗ ಕೊಡಿಸುವುದಕ್ಕೆ ನಿಮ್ಮ ಕೈಲಿ ಆಗುತ್ತ? ಇದೆಲ್ಲದನ್ನ ಮಾಡಿ ಕೊಡ್ತೀನಿ ಅಂತ ನನಗೆ ಒಂದು ಕಾಗದ ಬರೆದು ಕೊಡಿ, ನಾನು ಇವರೆಲ್ಲ ಮಾತಿಗೆ ಒಪ್ಪಿಕೊಳ್ತೀನಿ.
ಅಯ್ಯೋ ಸರ್ಕಾರದ ಕೆಲಸ ನೀನು ಅಂದುಕೊಂಡಂಗೆ ಆಗಲ್ಲಮ್ಮ, ಈದಿನ ನೀನಿ ಕೇಳ್ತೀಯ, ನಾಳೆ ಇನ್ನೊಬ್ಬರು ಕೇಳ್ತಾರೆ, ಎಲ್ಲರಿಗೂ ಇದೇ ರೀತಿ ಮಾಡಿಕೊಡೋದಿಕ್ಕೆ ಆಗುತ್ತಾ.....
ನಿನಗೆಲ್ಲ ಅರ್ಥ ಆಗಲ್ಲ, ಸರಿ ನಿನ್ನಿಷ್ಟ ನೀನೇನಾದರು ಮಾಡ್ಕೋ, ಈ ಹೆಣ್ನುಮಗಳು ಬಹಳ ಹುಷಾರಿದ್ದಾಳೆ, ಅಂತ ಅಲ್ಲಿಂದ ಕಾಲ್ಕಿತ್ತರು.
ಇತ್ತ ಮಸ್ಕತ್ ನಲ್ಲಿ, ಸಮಾಜ ಸೇವಕರಾದ ನಾಗರಾಜ್ ಶೆಟ್ಟಿ ಶಶಿಕಾಂತ್ ಶೆಟ್ಟಿ ಮತ್ತಿತರು ಮೃತ ರಮೇಶಣ್ಣ ಕಂಪನಿಯ ಸ್ನೇಹಿತರನ್ನು ಸಂಪರ್ಕಿಸಿ, ನೋಡಿ ನಮಗೆ ರಮೇಶಣ್ಣ ಅವರ ಮನೆ ಪರಿಸ್ಥಿತಿ ಬಗ್ಗೆ ಅರಿವಿದೆ. ಈಗ ನೀವು ಮಾಡಬೇಕಿರುವ ಅಂತ್ಯಕ್ರಿಯೆಯ ಕಾರ್ಯಕ್ರಮ ಹಾಗೂ ಅವರ ಅಸ್ಥಿಯನ್ನು ಕಳುಹಿಸಿ ಕೊಡುವ ಜವಬ್ದಾರಿಯನ್ನು ನಮಗೆ ಕೊಡಿ, ಮುಂದಿನ ಕಾರ್ಯಕ್ರಮವನ್ನು ನಾವು ಮಾಡ್ತೀವಿ ಎಂದು ಅವರನ್ನು ಒಪ್ಪಿಸಿದರು.
***
ಮಾರನೇದಿನ, ಸ್ಥಳೀಯ ಪೋಲೀಸರಿಂದ ಬಾಡಿ ಕ್ಲಿಯರೆನ್ಸ್ ಸಿಗುತ್ತದೆ, ಸಂಜೆಯ ವೇಳೆಗೆ ದೇಹವನ್ನು ಹಸ್ತಾಂತರಿಸಲಾಗುತ್ತದೆ.
ನಾಳೆ ಇಲ್ಲಿ ಅಂತ್ಯಕ್ರಿಯೆ ಮುಗಿಸಿ ಆದಷ್ಟು ಬೇಗ ಅವರ ಅಸ್ಥಿಯನ್ನು ಕಳುಹಿಸಿ ಕೊಡುತ್ತೇವೆ, ಎರಡು ದಿನ ಕಳೆದ ನಂತರ ಊರಿಗೆ ಪಾರ್ಸೆಲ್ ತೆಗೆದುಕೊಂಡು ಒಬ್ಬರು ಬರುತ್ತಾರೆ ಎಂದು ಊರಿಗೆ ಫೋನ್ ಮಾಡಿ ವಿಷಯ ತಿಳಿಸುತ್ತಾರೆ.
***
ಅದರಂತೆ, ಅಂದು ಪಾರ್ಸೆಲ್ ಗಾಗಿ ಎಲ್ಲರೂ ಕಾಯುತ್ತಿರುತ್ತಾರೆ, ಮುಂಚೆ ತಿಳಿಸಿದಂತೆ ಒಬ್ಬರು ಪಾರ್ಸೆಲ್ ತೆಗೆದು ಕೊಂಡು ಬರುತ್ತಾರೆ. ಅವರು ಬಂದಿಳಿಯುತಿದ್ದಂತೆ, ಮನೆ ಮಂದಿಯೆಲ್ಲ ಜೋರಾಗಿ ಬಾಯಿ ಬಡಿದುಕೊಂಡು ಅಳುತ್ತಾರೆ. ಮನೆ ಮುಂದೆ ನೋಡು ನೋಡುತಿದ್ದಂತೆ ಸುತ್ತಮುತ್ತಲಿನ ಜನರೆಲ್ಲ ಸೇರುತ್ತಾರೆ. ಮೀನಾಕ್ಷಿ ಕೈಗೆ ಪಾರ್ಸೆಲ್ ಕೊಡುತ್ತಾರೆ. ಜೋರಾಗಿ ಅಳುತಿದ್ದ ಆಕೆ ಯನ್ನು ಸಮಾಧಾನ ಮಾಡುತಿದ್ದ ಜನರಲ್ಲೊಬ್ಬರು ಪಾರ್ಸೆಲ್ ತೆರೆಯುತ್ತಾರೆ. ಅದರೊಳಗಿದ್ದ ಬಟ್ಟೆ ಯಿಂದ ಮುಚ್ಚಿದ್ದ ತಾಮ್ರದ ಬಿಂದಿಗೆಯನ್ನು ತೆಗೆದು, ಅದನ್ನು ಮೀನಾಕ್ಷಿ ಕೈಗೆ ಕೊಡುತ್ತಾರೆ. ಹಗುರವಾಗಿದ್ದ ಬಿಂದಿಗೆಯನ್ನು ಮುಟ್ಟಿದ ಮೀನಾಕ್ಷಿ ತನ್ನ ಅಳು ನಿಲ್ಲಿಸುತ್ತಾಳೆ. ಬಟ್ಟೆಯನ್ನು ತೆಗೆದು ನೋಡಿದರೆ, ಒಳಗೆ ಖಾಲಿ ಖಾಲಿ, ಅದರಲ್ಲೊಂದು ಪತ್ರ......
ಏನಿದು, ಅಸ್ಥಿ ಬರುತ್ತದೆ ಎಂದು ಹೇಳಿ, ಇದೇನಿದು ಖಾಲಿ ಇದೆ? ಎಲ್ಲರೂ ಆಶ್ಚರ್ಯದಿಂದ ನೋಡುತ್ತಾರೆ. ಅಳುತಿದ್ದ ಜನ ಸುಮ್ಮನಾಗುತ್ತಾರೆ. ಒಬ್ಬರು ಆ ಪತ್ರವನ್ನು ತೆಗೆದು ಓದುತ್ತಾರೆ.
ಸಹೋದರಿ ಮೀನಾಕ್ಷೀ ಯವರಿಗೆ ವಂದನೆಗಳು,
ನಿಮ್ಮ ಪತಿಯ ಅಗಲಿಕೆಗೆ ನಮ್ಮ ವಿಷಾದವಿದೆ. ಅವರ ಅಗಲಿಕೆ ನಿಮ್ಮ ಜೀವನದಲ್ಲಿ ತುಂಬಲಾರದ ನಷ್ಟ, ನೀವಿರುವ ಪರಿಸ್ಥಿತಿ, ನಿಮ್ಮ ಜವಬ್ದಾರಿ ಇದೆಲ್ಲವನ್ನು ಯೋಚಿಸಿ ಇಂತಹ ಪರಿಸ್ಥಿತಿಯಲ್ಲಿ, ಧೈರ್ಯಗೆಡದೆ ನೀವು ತೆಗೆದುಕೊಂಡ ನಿರ್ಧಾರಕ್ಕೆ ನಿಮ್ಮ ಎದೆಗಾರಿಕೆಗೆಯನ್ನು ಮೆಚ್ಚಲೇಬೇಕು. ಪ್ರತಿಯೊಬ್ಬರ ಮನೆಯಲ್ಲೂ ಒಂದಲ್ಲ ಒಂದು ಸಂಧಿಗ್ದ ಪರಿಸ್ಥಿತಿ ಬಂದೇ ಬರುತ್ತದೆ, ಆ ಸಮಯ ಸಂಧರ್ಭ ನೋಡಿ ಆಲೋಚನೆ ಮಾಡಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದೇ ಬುದ್ದಿವಂತರ ಜಾಣತನ.
ಅಸಹಾಯಕರಿಗೆ ಯಾರಾದರು ಸಹಾಯ ಮಾಡಲಿ ಎಂದು ದೇವರು ಯಾರಾದರೊಬ್ಬರನ್ನು ಸೃಷ್ಟಿ ಮಾಡಿಯೇ ಮಾಡಿರುತ್ತಾನೆ. ಭವಿಷ್ಯದ ಬಗ್ಗೆ ಹೆದರಬೇಕಾದ ಅಗತ್ಯವಿಲ್ಲ.
ಯಾವುದಾದರು ಒಂದು ರೂಪದಲ್ಲಿ ಸಹಾಯ ಬಂದೇ ಬರುತ್ತದೆ. ನಿಮಗೆ ಸಹಾಯ ಮಾಡಲು ನೂರಾರು ಜನ ಮುಂದೆ ಬಂದಿದ್ದಾರೆ, ನಾವು ಕೇವಲ ಮುಂದಾಳತ್ವ ವಹಿಸಿದ್ದೇವೆ ಅಷ್ಟೇ. ನಿಮ್ಮ ಮಕ್ಕಳನ್ನು ಅವರ ವಿದ್ಯಭ್ಯಾಸ ಮುಗಿಯುವವರೆಗೆ ಉಚಿತವಾಗಿ ಓದಿಸಲು, ಕೆಲ ಸಂಸ್ಥೆಗಳು ಮುಂದೆ ಬಂದಿವೆ. ಅವರು ನಿಮ್ಮ ಮಕ್ಕಳಿಗೆ ಉತ್ತಮ ವಿದ್ಯಭ್ಯಾಸ ನೀಡಿ ಮುಂದಿನ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಪತಿಯ ಕಂಪನಿಯಿಂದ ಬರುವ ಹಣ ,ಇನ್ಸುರೆನ್ಸ್ ಹಣ, ಅವರ ಸ್ನೇಹಿತರು, ಸಹದ್ಯೋಗಿಗಳು, ಮತ್ತು ನಮ್ಮ ಸಮಾಜ ಸೇವೆ ಸಂಘಟನೆಯಿಂದ ಸಂಗ್ರಹಿಸಿದ ಹಣವನ್ನು ನಿಮ್ಮ ಅಕೌಂಟಿಗೆ ಕಳುಹಿಸಿಕೊಡುತ್ತೇವೆ. ಇದೂ ಅಲ್ಲದೆ, ಆಸ್ಪತ್ರೆ, ಚಿಕಿತ್ಸೆ ಅಥವ ಬೇರೆ ಏನಾದರು ಸಹಾಯ ಬೇಕಿದ್ದರೆ, ಈ ಪಾರ್ಸೆಲ್ ತಂದಿರುವ ವ್ಯಕ್ತಿಯನ್ನು ಸಂಪರ್ಕಿಸಿ, ನಾವೆಲ್ಲರೂ ನಿಮಗೆ ಸಹಾಯ ಮಾಡುತ್ತೇವೆ. ನೀವು ಯಾವುದೇ ಚಿಂತೆ ಮಾಡುವ ಅಗತ್ಯವಿಲ್ಲ.
ಇನ್ನು, ನಿಮ್ಮ ಪತಿಯ ದೇಹವನ್ನು ನಾವು ಅಲ್ಲಿ ಅಂತ್ಯಕ್ರಿಯೆ ಮಾಡಲಿಲ್ಲ. ಇನ್ನುಕೆಲವೇ ನಿಮಿಷಗಳಲ್ಲಿ ಅವರ ದೇಹ ಬರುತ್ತದೆ. ನಿಮ್ಮ ಬಂಧು ಭಾಂದವರು, ಸ್ನೇಹಿತರು, ಹಿತೈಷಿಗಳು, ಕೊನೆ ಸಾರಿ ನೀವೆಲ್ಲರೂ ಅವರ ಮುಖವನ್ನು ನೋಡಿ, ನಿಮ್ಮ ಸಂಪ್ರದಾಯದ ಪ್ರಕಾರ ಪೂಜೆ ಗಳನ್ನು ಮಾಡಿ ಅವರನ್ನು ಸಂತೋಷದಿಂದ ಕಳುಹಿಸಿ ಕೊಡಿ. ಅವರ ಆತ್ಮಕ್ಕೆ ಶಾಂತಿ ಸಿಗಬಹುದು.
ನಾವ್ಯಾರೋ ಗುರುತು ಪರಿಚಯವಿಲ್ಲದವರು ಅವರ ಅಂತ್ಯಕ್ರಿಯೆ ಮಾಡಿದರೆ ಅವರ ಆತ್ಮಕ್ಕೆ ಶಾಂತಿ ಸಿಗುವುದಿಲ್ಲ ಎನ್ನುವುದು ನಮ್ಮ ಭಾವನೆ. ಹೀಗಾಗಿ ಅವರ ದೇಹವನ್ನು ನಿಮಗೆ ಕಳುಹಿಸುತಿದ್ದೇವೆ. ಅದಕ್ಕೆ ತಗಲುವ ವೆಚ್ಚವನ್ನು ನಾವೆಲ್ಲ ಭರಿಸಿದ್ದೇವೆ. ಈಗ ಮುಂದೆ ಆಗಬೇಕಿರುವ ಕಾರ್ಯದ ಬಗ್ಗೆ ತಾವೆಲ್ಲ ಗಮನವಹಿಸಿತ್ತೀರೆಂದು ನಾವು ಭಾವಿಸುತ್ತೇವೆ.
ಎಲ್ಲರಿಗೂ ಒಳ್ಳೆಯದಾಗಲಿ
ಓಂ ಶಾಂತಿ.
ಇಂತಿ.
ನಾಗರಾಜ್ ಶೆಟ್ಟಿ, ಶಶಿಕಾಂತ್ ಶೆಟ್ಟಿ ಮತ್ತು ಸ್ನೇಹಿತರು.
*****
ಪತ್ರ  ಓದಿ, ಮೀನಾಕ್ಷೀ ಕಣ್ಣಲ್ಲಿ ದುಖಃದ ಕಟ್ಟೆ ಒಡೆದು ನೀರು ಬಳ ಬಳನೆ ಹರಿಯಿತು........
ತನ್ನಕುಟುಂಬದ ಬಗ್ಗೆ, ಅದೂ ಸಾವಿರಾರು ಕಿಲೋ ಮೀಟರ್ ದೂರದಲ್ಲಿ ಕೆಲವರಾದರು ಯೋಚಿಸ್ತಾರಲ್ಲ, ನಮಗೆ ಸಹಾಯ ಮಾಡಬೇಕು ಅಂತ ಪ್ರೇರಣೆ ಯಾಗುತ್ತದೆ ಎಂದರೆ ಅದು ದೈವ ಚಿತ್ತವಲ್ಲದೇ ಮತ್ತೇನು ಅಲ್ಲ. ಅಂದರೆ, ನಾನು ನಿರ್ಧಾರ ತೆಗೆದುಕೊಂಡಿದ್ದು, ಈ ರೀತಿ ಆಲೋಚಿಸಲು, ಹೀಗೇ ಆಗಬೇಕು ಎಂದು ನಡೆದಿದ್ದು, ಇದೂ ಸಹ ದೈವ ಚಿತ್ತವಾ!
ದೇವರೇ, ನೀನು ನಮ್ಮ ಮುಂದೆ ಕಾಣದೆ ಇದ್ದರೂ, ಎಲ್ಲೋ ಮರೆಯಲ್ಲಿ ನಿಂತು, ಒಂದಲ್ಲ ಒಂದು ರೂಪದಲ್ಲಿ ನಮ್ಮೆಲ್ಲರಿಗೂ ಸಹಾಯ ಮಾಡ್ತಾಯಿದ್ದೀಯ. ನೀನು ಇದೀಯ ಅಂತ ಪದೇ ಪದೇ ಸಾಬೀತು ಮಾಡ್ತಯಿದ್ದೀಯ ತಂದೆ. ನಿನಗೆ ನಾನು ಚಿರರುಣಿ ಭಗವಂತ.
ತನಗೆ ಸಹಾಯ ಹಸ್ತ ಚಾಚಿದ ಎಲ್ಲರಿಗೂ ಮತ್ತು ನೈತಿಕ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದಗಳು.  ದೇವರೇ ಇವರಿಗೆಲ್ಲರಿಗೂ ಒಳ್ಳೆಯದಾಗಲಿ. ನಿನ್ನ ಆಶಿರ್ವಾದ, ಕೃಪೆ ಸದಾ ಇವರೆಲ್ಲರ ಮೇಲಿರಲಿ ಭಗವಂತ ಎಂದು ದೇವರನ್ನು ಬೇಡಿಕೊಂಡಳು.
*****
ಸ್ವಲ್ಪ ಹೊತ್ತಿನಲ್ಲಿಯೆ, ವ್ಯಾನ್ ನಲ್ಲಿ ರಮೇಶಣ್ಣನ ದೇಹ ಮನೆ ತಲುಪಿತು.
ಅವರ ಸಂಪ್ರದಾಯದಂತೆ, ಅಂತ್ಯಕ್ರಿಯೆಗೆ ಸಿದ್ದತೆ ನಡೆಯಿತು.
xxxxxx

2 ಕಾಮೆಂಟ್‌ಗಳು:

Click below headings