ಭಾನುವಾರ, ಆಗಸ್ಟ್ 23, 2020

ಆರೋಗ್ಯ ಅಥವಾ ಭಾಗ್ಯ

 


ಪ್ರಪಂಚ ಮತ್ತು ನಮ್ಮ ಆಧುನಿಕ ಜೀವನ ದಿನೇ ದಿನೇ ಬದಲಾಗುತ್ತಿರುವದನ್ನ ನಾವು ಕಾಣುತಿದ್ದೇವೆ

ಇವತ್ತಿನ ಪ್ರಸ್ತುತ ಪರಿಸ್ಥಿತಿಯಲ್ಲಿ ಆರೋಗ್ಯ ಮತ್ತು ಭಾಗ್ಯ ಎರಡು ಬೇಕಾಗಿವೆ. ನಾವು ತಿನ್ನುತ್ತಿರುವ ಬಹುತೇಕ ಆಹಾರ ಪದಾರ್ಥಗಳನ್ನು ರಾಸಾಯನಿಕಗಳನ್ನು ಉಪಯೋಗಿಸಿ ‌ಬೆಳೆಯುತಿದ್ದು, ಉತ್ತಮ ಗುಣಮಟ್ಟದ ಆಹಾರ ಪದಾರ್ಥಗಳು ಸಿಗುವುದು ಅಪರೂಪವಾಗಿದೆ. ಇಂತಹ ಆಹಾರ ಸೇವನೆಯಿಂದ ಮನುಷ್ಯನ ಜೀವಿತಾವಧಿ ಕಡಿಮೆಯಾಗಿದೆ ಎಂದೇ ಹೇಳಬಹುದು.

ಒಂದು ಕಾಲದ ಶ್ರೀಮಂತರ ಕಾಯಿಲೆ ಎಂದು ಹೆಸರಾಗಿದ್ದ ಬಿಪಿ ಮತ್ತು ಸಕ್ಕರೆ ಕಾಯಿಲೆಗಳು ಇಂದು ಬಡವ-ಬಲ್ಲಿದ, ನಗರಗಳು ಮತ್ತು ಹಳ್ಳಿಗಳು ಎನ್ನುವ ಭೇದವಿಲ್ಲದೆ ಪ್ರತಿಯೊಬ್ಬರ ನ್ನು ಕಾಡುತ್ತಿವೆ. ಅವೊಂದೇ ಅಲ್ಲ, ಹಲವಾರು ಮಾರಣಾಂತಿಕ ಕಾಯಿಲೆಗಳೂ ಸಹ ಇಂದು ಎಲ್ಲೆಡೆ ದಾಂಗುಡಿ ಇಟ್ಟಿವೆ.

ಇತ್ತೀಚೆಗೆ ನಾನು ಕಂಡಂತೆ ಹಲವಾರು ಜನರು ಅದರಲ್ಲೂ ನಲವತ್ತು ವರ್ಷಗಳ ಆಸುಪಾಸಿನ ಜನರು ಅಕಾಲಿಕ ಮೃತ್ಯುವೀಡಾಗಿದ್ದಾರೆ.

ಅಂದು ಅವಿಭಕ್ತ ಕುಟುಂಬದ ಒಂದೊಂದು ಮನೆಯಲ್ಲಿ ಎಂಟಂತ್ತು ಜನ ಒಟ್ಟೊಟ್ಟಿಗೆ ವಾಸಿಸುತಿದ್ದರು.
ಮನೆಯಲ್ಲಿ ಯಾರಾದರೂ ಕಾಯಿಲೆ ಬಿದ್ದರೆ ಒಬ್ಬರಲ್ಲ ಒಬ್ಬರು ಸೇವೆ ಮಾಡುತಿದ್ದರು.
ಕಾಲಕ್ರಮೇಣ ನ್ಯೂಕ್ಲಿಯರ್ ಫ್ಯಾಮಿಲಿ ಗಳಾಗಿ ಇಂದು ಒಂದು ಎರಡು ಮಕ್ಕಳಿಗೆ ನಿಯಂತ್ರಣ ಮಾಡಿಕೊಂಡು ಅದ್ಯಾವೂದೋ ಜಾಲಕ್ಕೆ ಬಲಿಯಾಗಿ ಆರೋಗ್ಯದ ಕಡೆ ಗಮನ ಕೊಡದೆ
ದುಡಿಮೆಯ ಹಿಂದೆ ಬಿದ್ದಿದ್ದೇವೆ.
ಜನರ ಮೈಯಲ್ಲಿ ಶಕ್ತಿ ಇರುವವರಿಗೆ ದುಡಿಯುತ್ತಾರೆ, ವಯಸ್ಸಾದ ಮೇಲೆ ಯಾರ ಮೇಲೆ ಅವಲಂಬಿತರಾಗದೆ ಜೀವನ ನಡೆಸಲು ಮತ್ತು ಕೊನೆಕಾಲದಲ್ಲಿ ಆರೋಗ್ಯ ಕೈ ಕೊಟ್ಟಾಗ ಕನಿಷ್ಟ ಪಕ್ಷ ಭಾಗ್ಯ (ಹಣ) ವಿದ್ದರೆ ಯಾರ ನೆರವಿಲ್ಲದೆ ಖರ್ಚುಗಳನ್ನ ನಿಭಾಯಿಸಿ ಕೊಳ್ಳಬಹುದು.
ಒಳ್ಳೆಯ ಆರೋಗ್ಯ ವಿಟ್ಟುಕೊಂಡು ಸಾಯುವವರೆಗೆ ದುಡಿದು ತಿನ್ನುತ್ತೇನೆ ಎನ್ನುವುದು ಇಂದಿನ ಕಾಲದಲ್ಲಿ ಬಾಲಿಶವೆನ್ನ ಬಹುದು. ಇಷ್ಟೊಂದು ವೃದ್ದಾಶ್ರಮಗಳು ಇಂದು ಸ್ಥಾಪನೆಯಾಗುತ್ತಿರಲಿಲ್ಲ.

ಪ್ರತಿದಿನವೂ ಹೇಳುವ ಮೃತ್ಯುಂಜಯ ಮಂತ್ರ
ಮೃತ್ಯುವನ್ನು ಜಯಿಸುವ ಕಾರಣಕ್ಕಾಗಿ ಅಲ್ಲ. ಮೃತ್ಯುವು ಸುಲಭವಾಗಿ, ರೋಗ ರುಜಿನಗಳಿಲ್ಲದೆ ಅನಾಯಾಸವಾಗಿ ಬರಲಿ ಎಂಬ ಅರ್ಥ. ಅದನ್ನೇ ಇಂದಿನ ಕಾಲದಲ್ಲಿ ಎಲ್ಲರೂ ಬಯಸುವುದು.

ಏನೇ ಇರಲಿ, ಆರೋಗ್ಯವೂ ಬೇಕು ಭಾಗ್ಯವೂ ಬೇಕು, ಯಾರ ಅರವಲಂಬನೆ ಇಲ್ಲದೆ ಬಾಳಿ ಬದುಕಿ ಮುಂದಿನ ಪೀಳಿಗೆಗೆ ನಮ್ಮ ಜೀವನದ ಮೌಲ್ಯಗಳನ್ನು ಬಿಟ್ಟು ಹೋಗಬೇಕಿದೆ.
--
Written by P.S.Ranganataha(ಪಿ.ಎಸ್.ರಂಗನಾಥ)
#p.s.ranganatha

ಶುಕ್ರವಾರ, ಆಗಸ್ಟ್ 7, 2020

ಚೋಲುಟೆಕ ಸೇತುವೆಯೂ ಮತ್ತು ನಮ್ಮ ಮನಸ್ಥಿತಿಯೂ

 ಚೋಲುಟೆಕ ಸೇತುವೆಯೂ ಮತ್ತು ನಮ್ಮ ಮನಸ್ಥಿತಿಯೂ

ಲೇಖನ: ಪಿ.ಎಸ್.ರಂಗನಾಥ

ನೀವು ಎಂದಾದರೂ ಚೋಲುಟೆಕ ಸೇತುವೇ ಬಗ್ಗೆ ಕೇಳಿದ್ದೀರ? ನಾನಂತು ಇದುವರೆಗೂ ಕೇಳಿಲ್ಲ.  ಮಧ್ಯ ಅಮೇರಿಕದ ಹೊಂಡುರಾಸ್ ಎನ್ನುವ ದೇಶದ ಚೋಲುಟೆಕ ನಗರದಲ್ಲಿ ಸುಮಾರು 484 ಮೀಟರ್ ಉದ್ದವಿದೆ ಸೇತುವೆ. ಈ ಪ್ರದೇಶ ಬಿರುಗಾಳಿ ಮತ್ತು ಚಂಡಮಾರುತಗಳಿಗೆ ಕುಖ್ಯಾತಿ ಪಡೆದಿದೆ. 

ಎಂತಹಾ ಬಿರುಗಾಳಿ ಮತ್ತು ಚಂಡಮಾರುತಗಳು ಬಂದರೂ ತಡೆದುಕೊಳ್ಳುವಂತಹ ಒಂದು ಉತ್ತಮ ಸೇತುವೆಯನ್ನು ನಿರ್ಮಾಣ ಮಾಡಲು ಇಲ್ಲಿನ ಸ್ಥಳೀಯ ಆಡಳಿತ ನಿರ್ಧಾರ ಮಾಡುತ್ತದೆ. ಎಂತಹುದೇ ಪ್ರಕೃತಿ ವಿಕೋಪ ಬಂದರೂ ಅದನ್ನು ತಡೆದು ಕೊಳ್ಳುವ ಶಕ್ತಿಯಿರುವ ಉತ್ತಮವಾದ ಗಟ್ಟಿಮುಟ್ಟಾದ ಸೇತುವೆಯನ್ನು ನಿರ್ಮಾಣ ಮಾಡಲು 1996 ರಲ್ಲಿ ಜಪಾನ್ ಕಂಪನಿಯೊಂದಕ್ಕೆ ಗುತ್ತಿಗೆಯನ್ನು ಕೊಡುತ್ತಾರೆ. 

ಅತ್ಯಾಧುನಿಕ ತಂತ್ರಾಜ್ಞಾನದ ವಿನ್ಯಾಸ ದೊಂದಿಗೆ ನಿರ್ಮಾಣವಾದ ಈ ಸೇತುವೆ 1998 ರಲ್ಲಿ ಲೋಕಾರ್ಪಣೆಗೊಳ್ಳುತ್ತದೆ. ನದಿಯ ಆಕಡೆ ದಂಡೆಯಿಂದ ಈ ಕಡೆ ದಂಡೆಯನ್ನು ದಾಟಲು ಸೇತುವೆಯನ್ನು ಬಳಸಲು ಪ್ರಾರಂಭಿಸುತ್ತಾರೆ. ಅತ್ಯದ್ಬುತ ಸೇತುವೆ ನಮ್ಮ ದೇಶದಲ್ಲಿ ನಿರ್ಮಾಣವಾಗಿದೆ ಎನ್ನುವ ಹೆಮ್ಮೆ ಜನರ ಮನಸ್ಸಿನಲ್ಲಿ ಮೂಡುತ್ತದೆ. ಸಂತೋಷದಿಂದ ಬೀಗುತ್ತಿರುತ್ತಾರೆ.  ಆದರೆ ಸಂಭ್ರಮ ಹೆಚ್ಚು ಕಾಲ ಇರುವುದಿಲ್ಲ.


ಅದೇ ವರ್ಷ ಅಕ್ಟೋಬರ್ ತಿಂಗಳಲ್ಲಿ, "ಮಿಚ್" ಎನ್ನುವ ಚಂಡಮಾರುತ ಹೊಂಡುರಾಸ್ ದೇಶಕ್ಕೆ ಅಪ್ಪಳಿಸುತ್ತದೆ.  ಕೇವಲ ನಾಲ್ಕು ದಿನಗಳಲ್ಲಿ ಸುಮಾರು 75 ಇಂಚುಗಳಷ್ಟು ಮಳೆಯಾಗುತ್ತದೆ. ಅಂದರೆ,  ಆರು ತಿಂಗಳುಗಳ ಕಾಲ ಆಗುವ ಮಳೆಯ ಸಮಪ್ರಮಾಣವಾಗಿರುತ್ತದೆ.  ಚೋಲುಟೆಕ ನದಿಯ ಪ್ರವಾಹದಿಂದಾಗಿ ಹೊಂಡೂರ ದೇಶದ ಸುಮಾರು ಭೂ ಪ್ರದೇಶಗಳು ನಾಶವಾಗುತ್ತದೆ. ಸುಮಾರು 7000 ಜನರು ಪ್ರಾಣವನ್ನ ಕಳೆದು ಕೊಳ್ಳುತ್ತಾರೆ. ಆ ಒಂದು ಸೇತುವೆಯನ್ನು ಬಿಟ್ಟು ಹಲವಾರು ಸೇತುವೆಗಳು ನಾಶವಾಗುತ್ತವೆ. ಆ ಹೊಸ ಚೋಲುಟೆಕ ಸೇತುವೆ ಮಾತ್ರ ಗಟ್ಟಿಮುಟ್ಟಾಗಿರುತ್ತದೆ, ಅದಕ್ಕೆ ಏನು ಹಾನಿಯಾಗಿರುವುದಿಲ್ಲ. ಅಬ್ಬಾ ಎಂತಹ ಗಟ್ಟಿಮುಟ್ಟಾದ ಸೇತುವೆ ಎಂದು ಎಲ್ಲರೂ ಉದ್ಘರಿಸುವವರೇ.......


ಆದರೆ, ಅಲ್ಲೊಂದು ಸಮಸ್ಯೆ ಇರುತ್ತದೆ. ಆ ಸೇತುವೆ ಮಾತ್ರ ಒಂದಿಂಚೂ ಕದಲಿರುವುದಿಲ್ಲ ಮತ್ತು ಯಾವುದೇ ಹಾನಿಗೊಳಗಾಗದೆ ಸುಭದ್ರ ವಾಗಿರುತ್ತದೆ.  ಆದರೆ ಆ ಬದಿಯ ಮತ್ತು ಈ ಬದಿಯ ಎರಡೂ ರಸ್ತೆಗಳು ಮಳೆಗೆ ಕೊಚ್ಚಿಹೊಗಿರುತ್ತವೆ. ಅಲ್ಲೊಂದು ರಸ್ತೆಯಿತ್ತು ಎನ್ನುವ ಒಂದು ಕುರುಹೂ ಇರುವುದಿಲ್ಲ. ಆ ಪ್ರವಾಹದ ರಭಸಕ್ಕೆ ಆ ನದಿಯು ತನ್ನ ಹರಿಯುವ ದಿಕ್ಕನ್ನೂ ಸಹ ಬದಲಿಸಿಕೊಂಡಿರುತ್ತದೆ.  ಸೇತುವೆ ಕೆಳಗೆ ಹರಿಯುವುದನ್ನ ಬಿಟ್ಟು ಸೇತುವೆ ಪಕ್ಕದಲ್ಲಿ ಹೊಸದಾದ ಮಾರ್ಗವನ್ನು ರಚಿಸಿಕೊಂಡು ಹರಿಯಲು ಶುರು ಮಾಡುತ್ತದೆ. 

ಆದರೆ, ಅಷ್ಟೊಂದು ಗಟ್ಟಿ ಮುಟ್ಟಾದ ಸೇತುವೆ, ಎಂತಹುದೇ ಚಂಡ ಮಾರುತ ಬಂದರೂ ತಡೆದುಕೊಳ್ಳುವ ಶಕ್ತಿಯಿರುವಂತಹ ಸೇತುವೆ ಇದ್ದಕ್ಕಿದ್ದಂತೆ ಯಾವುದೇ ಉಪಯೋಗಕ್ಕೆ ಬಾರದಂತಾಗುತ್ತದೆ.  ಯಾವುದಕ್ಕೂ ಸಂಪರ್ಕ ಕಲ್ಪಿಸಲು ಸಾಧ್ಯವಿರದ ಸೇತುವೆ ಯಂತಾಗುತ್ತದೆ.

ಇದು 22 ವರ್ಷಗಳ ಹಿಂದೆ ನಡೆದ  ಘಟನೆ. ಚೋಲುಟೆಕ ಸೇತುವೇ ಯಿಂದ ಕಲಿಯ ಬೇಕಾದ ಪಾಠ ಆವತ್ತಿಗಿಂತ ಈವತ್ತು ತುಸು ಹೆಚ್ಚೇ ಇದೆ.  ನಾವು ಊಹಿಸಿಕೊಳ್ಳದ್ದಕ್ಕಿಂತ ಹೆಚ್ಚಾಗಿ ಪ್ರಪಂಚ ಬದಲಾಗುತ್ತಿದೆ

ಚೋಲುಟೇಕ ಸೇತುವೆ ವಿಷಯದಲ್ಲಿ ಇದ್ದಕ್ಕಿದ್ದಂತೆ ಆದ ಭಯಂಕರ ಬದಲಾವಣೆ  ನಮ್ಮಲ್ಲೂ ಆಗುತ್ತದೆ. ನಮ್ಮ ಸುತ್ತ ಮುತ್ತಲಿನ ಪ್ರಪಂಚ ಪರಿವರ್ತನೆ ಅಥವ ಬದಲಾವಣೆ ಗೊಂಡಾಗ  ನಮ್ಮ ಭವಿಷ್ಯ, ಉದ್ಯೋಗ, ವ್ಯಾಪಾರ, ನಮ್ಮ ಧೈನಂದಿನ ಜೀವನ ಮತ್ತೊಂದು ಮಗದೊಂದರ ಮೇಲೆ ಪರಿಣಾಮ ಬೀರುತ್ತದೆ.  

ಪ್ರಪಂಚದಲ್ಲಿ ಆಗುವಂತಹ ಎಂತಹುದ್ದೇ ಬದಲಾವಣೆಯನ್ನೂ ಜೀವನದಲ್ಲಿ ಅಳವಡಿಸಿಕೊಂಡು ಮುನ್ನುಗ್ಗುವ ಮನಸ್ಥಿತಿಯನ್ನು ರೂಡಿಸಿಕೊಳ್ಳಬೇಕಿದೆ. ಇಲ್ಲದೇ ಇದ್ದರೆ, ನಿಂತ ನೀರಾಗಿ ಪಾಚಿ ಹಿಡಿದು ಹಾಳಾಗುವುದು ನಿಶ್ಚಿತ.

ನಿಮ್ಮ ವೃತ್ತಿಜೀವನವನ್ನು ನೀವು ನೋಡುವಾಗ, ನೀವು ಇನ್ನೂ ಒಂದು ಹೆಚ್ಚಿನ ಜ್ಞಾನಗಳಿಸುವ  ಕೋರ್ಸ್ ತೆಗೆದುಕೊಳ್ಳುವ ಮೊದಲು ಮತ್ತೊಮ್ಮೆ ಯೋಚಿಸಿ ಅದು ನಿಮ್ಮ ಪರಿಣತಿಯನ್ನು ಇನ್ನಷ್ಟು ಪರಿಣತರನ್ನಾಗಿ ಮಾಡಬಹುದು. ಆದರೆ, ಆ ಪರಿಣತಿಯು ಶೀಘ್ರದಲ್ಲೇ ಅನಗತ್ಯವಾಗಬಹುದು.

ನಿಮ್ಮ ಹಳೆಯ ಕಚೇರಿಯನ್ನು ನವೀಕರಿಸಲು ಹಣವನ್ನು ಖರ್ಚು ಮಾಡುವ ಮೊದಲು, ಯೋಚಿಸಿ.

ದೇಶದ ಮೂಲೆ ಮತ್ತು ಮೂಲೆಯಲ್ಲಿ ಹೆಚ್ಚಿನ ಶಾಖೆಗಳನ್ನು ತೆರೆಯುವ ಬಗ್ಗೆ ಯೋಚಿಸುತ್ತಿದ್ದೀರಾ?

ಇನ್ನೊಮ್ಮೆ ಆಲೋಚಿಸಿ.

work from home, concept ಶುರುವಾಗಿರುವ ಈ ಹೊತ್ತಿನಲ್ಲಿ,  ಕಚೇರಿ ಸ್ಥಳಗಳು ಶೀಘ್ರದಲ್ಲೇ ಹಳೆಯ ವಿಷಯವಾಗಬಹುದು.

ನಾವು ಒಂದು ನಿರ್ದಿಷ್ಟ ಸಮಸ್ಯೆಗೆ ಅತ್ಯುತ್ತಮ ಪರಿಹಾರವನ್ನು  ಸೃಷ್ಟಿಸುವ ಬಗ್ಗೆ ಕೇಂದ್ರೀಕರಿಸುತ್ತೇವೆ ಆದರೆ, ಆ ಸಮಸ್ಯೆ ಯೂ ಬದಲಾಗಬಹುದು ಎನ್ನುವದನ್ನ ಮರೆತುಬಿಡುತ್ತೇವೆ. 

ನಾವೆಲ್ಲರೂ  ಅತ್ಯಾಧುನಿಕ ಉತ್ಪನ್ನ ಅಥವಾ ಸೇವೆಯನ್ನು ನಿರ್ಮಿಸುವತ್ತ ಗಮನ ಹರಿಸುತ್ತಿದ್ದೇವೆ. ಕಾಲಕ್ರಮೇಣ ಆ ವಸ್ತುವು ಅಥವ ಆ ಸೇವೆ ಜನ ಮಾನಸ ದಿಂದ ಕಣ್ಮರೆಯಾಗುವ ಸಾಧ್ಯತೆಯ ಬಗ್ಗೆ ಯೋಚಿಸುವುದಿಲ್ಲ. ಮಾರುಕಟ್ಟೆ ಬದಲಾಗಬಹುದು. ಜನರ ಅಗತ್ಯತೆ ಬದಲಾಗಬಹುದು. 

ನಾವು ಅತ್ಯುತ್ತಮ ಗಟ್ಟಿ ಮುಟ್ಟಾದ ಸೇತುವೆ ನಿರ್ಮಾಣದ ಬಗ್ಗೆ ನಮ್ಮ ಶಕ್ತಿಯನ್ನು  ಕೇಂದ್ರೀಕರಿಸುತ್ತೇವೆ ಮತ್ತು ಕೆಳಗಿರುವ ನದಿಯು ತನ್ನ ಮಾರ್ಗವನ್ನು ಬದಲಾಯಿಸುವ ಸಾಧ್ಯತೆಯನ್ನು ನಿರ್ಲಕ್ಷಿಸುತ್ತೇವೆ.  

ನಿಜಕ್ಕೂ ಅದರ ಬಗ್ಗೆ ಯೋಚಿಸಬೇಕಿದೆ . 

ಚೋಲುಟೇಕ ನದಿಯ ಅಷ್ಟೊಂದು ಗಟ್ಟಿ ಮುಟ್ಟಾದ ಸೇತುವೆ, ಎಂತಹುದೇ ಚಂಡ ಮಾರುತ ಬಂದರೂ ತಡೆದುಕೊಳ್ಳುವ ಶಕ್ತಿಯಿರುವಂತಹ ಸೇತುವೆ ಇದ್ದಕ್ಕಿದ್ದಂತೆ ಬಂದ ಪ್ರವಾಹದಿಂದ ನದಿಯ ಪಾತ್ರ ಬದಲಾಗಿ ಅಲ್ಲಿದ್ದ ರಸ್ತೆಗಳೆಲ್ಲ ಕೊಚ್ಚಿ ಹೋಗಿ ಆ ಸೇತುವೆ ಯಾವುದೇ ಉಪಯೋಗಕ್ಕೆ ಬಾರದಂತಾಗುತ್ತದೆ.  ಯಾವುದಕ್ಕೂ ಸಂಪರ್ಕ ಕಲ್ಪಿಸಲು ಸಾಧ್ಯವಿರದ ಸೇತುವೆ ಯಂತಾಗುತ್ತದೆ.

ನಮ್ಮ ಜೀವನವೂ ಹಾಗಾಗಬಾರದು ಎನ್ನುವಂತಿದ್ದರೆ ನಿಮ್ಮ ವೃತ್ತಿಜೀವನ ಅಥವ ವ್ಯಾಪಾರ ದಲ್ಲಿ ಆಗುವ ಎಂತಹುದ್ದೇ ಬದಲಾವಣೆಯನ್ನೂ ಅಳವಡಿಸಿಕೊಂಡು ಮುನ್ನುಗ್ಗುವ ಮನಸ್ಥಿತಿಯನ್ನು ರೂಡಿಸಿಕೊಳ್ಳಲು  ಚೋಲುಟೇಕ ಸೇತುವೆಯು ನಮ್ಮನ್ನು ಎಚ್ಚರಿಸುತ್ತದೆ.


 ಶ್ರೀ ಪ್ರಕಾಶ್ ಐಯರ್ ಅವರ ಲೇಖನದ ಸ್ಪೂರ್ತಿ.

ಲೇಖನ: ಪಿ.ಎಸ್.ರಂಗನಾಥ

#choluteca 

#cholutecabridge

#ಚೋಲುಟೆಕ

#ಚೋಲುಟೆಕಸೇತುವೇ

#honduras

#ಹೊಂಡುರಾಸ್

Click below headings